05 July 2013

ಸುದರ್ಶನೋಪಖ್ಯಾನ

‘ಸಾಧ್ಯೋ ನಾರಾಯಣೋ ಹರಿ:’ ಎಂಬ ಘೋಷ ಉಕ್ತಿಯೊಡನೆ ಕಟೀಲಿನಲ್ಲಿ ಆಯೋಜಿತವಾದ ತಾಳಮದ್ದಳೆ ಸಪ್ತಾಹದಲ್ಲಿ ೨೦-೬-೨೦೧೩ರಂದು ಸುದರ್ಶನೋಪಖ್ಯಾನ ಎಂಬೊಂದು ಕಥಾನಕಕ್ಕೆ ನಾನು ಸಾಕ್ಷಿಯಾಗಿದ್ದೆ. ನನ್ನ ರಸಿಕ ಮನಸ್ಸು ಮತ್ತು ಕೈಯಲ್ಲಿದ್ದ ಪುಟ್ಟ ಸ್ಥಿರ ಕ್ಯಾಮರಾವನ್ನು ಪ್ರದರ್ಶನದ ಉದ್ದಕ್ಕೂ ಚುರುಕಾಗಿಟ್ಟಿದ್ದೆ. ಹಾಗೆ ನಾನು ಗ್ರಹಿಸಿದ ಕಥಾ ಎಳೆಯಲ್ಲಿ, ನಾನೇ ದಾಖಲಿಸಿದ ಸ್ಥಿರ ಹಾಗೂ ವಿಡಿಯೋ ತುಣುಕುಗಳನ್ನು ಪೋಣಿಸುವ ಕೆಲಸವನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ. ಈ ಪರಿಯ ದಾಖಲಾತಿ ಪೂರ್ವ ಯೋಜಿತವಲ್ಲ. ಮತ್ತೆ ಈಗಲೂ ನಾನು ಆಯ್ಕೆ ಅಥವಾ ಪರಿಷ್ಕರಣೆಗಳನ್ನು ಅಳವಡಿಸಿಯೂ ಇಲ್ಲ. ವಿಮರ್ಶೆಯ ದೃಷ್ಟಿಕೋನವನ್ನೂ ಬದಿಗಿರಿಸಿ, ಪ್ರದರ್ಶನವನ್ನು ಯಥಾಸಾಧ್ಯ ಸಾರ್ವಜನಿಕದಲ್ಲಿ ಹಂಚಿಕೊಳ್ಳಲು ಇದೊಂದು ಕಿರುಪ್ರಯತ್ನ. ಇಲ್ಲಿ ಮೂಡಿರುವ ‘ಅರ್ಥ’ದಲ್ಲಿ ಗುಣವಿದ್ದರೆ ಭಾಗಿಗಳಾದ ಕಲಾವಿದರದ್ದು, ಕೊರತೆಗಳಿದ್ದರೆ ನನ್ನ ಗ್ರಹಿಕೆಯ ಮಿತಿಯದ್ದು ಎಂದು ಭಾವಿಸಬೇಕಾಗಿ ಮೊದಲಲ್ಲೇ ಕೇಳಿಕೊಳ್ಳುತ್ತೇನೆ.


ಪ್ರಸಂಗದ ಮೊದಲ ಅವಧಿಗೆ ಹಿಮ್ಮೆಳದಲ್ಲಿ ಭಾಗವತರಾಗಿ ಪುತ್ತೂರಿನ ರಮೇಶ ಭಟ್ಟರಿದ್ದರೆ ಅನಂತರದಲ್ಲಿ ಬಲಿಪ ಪ್ರಸಾದ ಭಟ್ಟರಿದ್ದರು. ಉಳಿದಂತೆ ಉದ್ದಕ್ಕೂ ಮದ್ದಳೆಯಲ್ಲಿ ಲಕ್ಷ್ಮೀಶ ಅಮ್ಮಣ್ಣಾಯರೂ ಚಂಡೆಯಲ್ಲಿ ಮೋಹನ ಶೆಟ್ಟಿಗಾರರೂ ಸಹಕರಿಸಿದರು. ಚಕ್ರತಾಳದ ಕಲಾವಿದರು ವೇದಿಕೆಯ ಮೇಲಾಗಲೀ ಸಂಘಟಕರ ನಾಮಸ್ಮರಣೆಯಲ್ಲಾಗಲೀ ನನಗೆ ಸಿಗಲಿಲ್ಲ. ಮೊದಲಲ್ಲಿ ಕಲಾವಿದರನ್ನೆಲ್ಲ ಒಮ್ಮೆಗೆ ವೇದಿಕೆಗೆ ಕರೆಸಿ, ಕ್ಷೇತ್ರದ ಅರ್ಚಕರಲ್ಲೊಬ್ಬರಾದ ಕಮಲಾದೇವಿ ಆಸ್ರಣ್ಣನವರು ‘ದೇವಿಯ ಶೇಷವಸ್ತ್ರ’ವನ್ನು ಪ್ರದಾನಿಸಿ ಗೌರವಿಸಿದರು. ಹಾಗೇ ಪ್ರಾರ್ಥನಾ ಪದ್ಯಕ್ಕೆ ಹಿರಿಯ ಕಲಾವಿದರಷ್ಟೇ ಉಪಸ್ಥಿತರಿದ್ದಂತೆ ಕಥಾಮುಖಕ್ಕೆ ನಾಂದಿ ಹಾಡಲಾಯಿತು.

ಕೃತಯುಗದ ಮುಸ್ಸಂಜೆಯಲ್ಲೋ ತ್ರೇತಾಯುಗದ ಮುಂಗೋಳಿ ಕೂಗುವಲ್ಲೋ ವೈಕುಂಠಪತಿ - ವಿಷ್ಣು (ಕುಂಬಳೆ ಸುಂದರ ರಾವ್), ಪತ್ನಿ ಲಕ್ಷ್ಮಿಯೊಡನೆ (ಎಂ.ಕೆ ರಮೇಶಾಚಾರ್) ದಿವ್ಯ ಜಿಜ್ಞಾಸೆಗಿಳಿದಿದ್ದ. ಕ್ಷೀರಸಾಗರ ಮಥನ ಕಾಲದಲ್ಲಿ ಬುದ್ಬುದಿಸಿದ ಸುವಸ್ತುಗಳಲ್ಲಿ ಕನ್ಯಾರತ್ನವಾಗಿ ಮೂಡಿದವಳು ಲಕ್ಷ್ಮಿ. ಚಾಂಚಲ್ಯಕ್ಕೆ ಪರ್ಯಾಯನಾಮವೂ ಆದ ಈಕೆಯನ್ನು ಬಯಸಿ ದೇವದಾನವರು ಮೇಲಾಟಕ್ಕಿಳಿಯುವವರಿದ್ದರು. ಆಗ ನಿಯತಿಯಲ್ಲಿ ಲಯಕಾರಿಯಾದ ಪರಶಿವನು ಸರ್ವಪಕ್ಷಗಳಿಗೆ ಸಮ್ಮತವಾಗುವಂತೆ ಆಕೆಗೆ ಸ್ವಯಂವರವನ್ನು ಏರ್ಪಡಿಸಿದನಂತೆ. ಸಾಗರರಾಜ ಮಗಳ ಕೈಗೆ ವರಣಮಾಲಿಕೆಯನ್ನು ಇತ್ತು ಶುಭಕೋರಿದ್ದ. ಆಗ “ನೀನ್ಯಾಕೆ ನನ್ನನ್ನು ಆರಿಸಿದೆ. ನಿನ್ನ ಅಂದಿನ ಆಶಯಗಳಿಗೆ ಇಂದೂ ನಾನು ಪ್ರಸ್ತುತನೇ” ಎನ್ನುವುದು ವಿಷ್ಣುವಿನ ಸಂದೇಹ. ಪ್ರತಿಯಾಗಿ ಲಕ್ಷ್ಮಿಯ ನಿವೇದನೆ ತೊಡಗುತ್ತದೆ.

ಜಲಾಧಿದೇವನಿತ್ತುದರಿಂದ ವರುಣಮಾಲಿಕೆ ಎಂದರೂ ಸರಿ ಎಂದು ಒಪ್ಪಿ, ಹಿಡಿದು, ನೆರೆದವರನ್ನು ಲಕ್ಷ್ಮಿ ನೋಡುತ್ತಾಳೆ. ಆಕೆಗೆ ಮೊದಲು ಸಕಲ ದೇವದಾನವರ ಮಹಾಸಭೆಯಲ್ಲಿ ತನ್ನ ಕುರಿತಾಗಿ ಕಾಣಿಸಿದ ಮೋಹಪರವಶತೆಯಲ್ಲಿ ಅಭದ್ರತೆ ಕಾಡುತ್ತದೆ. ಪೌರುಷವಂತನೂ ಅನುರೂಪನೂ ಆದ ವರನನ್ನು ಅರಸಲು ಮುಂದಾಗುತ್ತಾಳೆ. ಆಗ ಸಾಮವನ್ನು ಬೋಧಿಸಿದ ಶಿವನಲ್ಲಿ ಪಿತೃಭಾವ, ಬ್ರಹ್ಮನಲ್ಲಿ ಅನಿರ್ವಚನೀಯವಾದ ಪುತ್ರ ಭಾವ, ರಕ್ಕಸರಲ್ಲಿ ಬಾಲಭಾವ ದೇವತೆಗಳಲ್ಲಿ ಸಾಹೋದರ್ಯವಷ್ಟೇ ಮೂಡುತ್ತದೆ. ಇವುಗಳೆಲ್ಲದರಿಂದ ದೂರವಾಗಿ ನಿಂತ, ನಿರ್ಲಿಪ್ತಿಯನ್ನಾಂತ ಶ್ರೀಮನ್ನಾರಾಯಣನಲ್ಲಿ ಮಾತ್ರ ಭರವಸೆ ಮೂಡುತ್ತದೆ. ಆದಿಮಾಯೆ ಸೃಷ್ಟಿ, ಸ್ಥಿತಿ, ಲಯಾಧಿಕಾರಿಗಳಾಗಿ ಮೂರು ಮೂರ್ತಿಗಳನ್ನು ನಿಲ್ಲಿಸಿದ್ದೇನೋ ನಿಜ. ಆದರೆ ಏನೂ ಇಲ್ಲದಾಗ, ಎಲ್ಲವೂ ನೀರೇ ಆಗಿದ್ದಾಗ, ಆಲದ ಎಲೆಯ ಮೇಲೆ ಮಲಗಿದ್ದ ಶಿಶುವಾದರೂ ಹರಿ ಸೃಷ್ಟಿಸಿದ್ದಕ್ಕಲ್ಲವೇ ಮೇದಿನಿ. ತಮಾಸುರಾದಿ ಹಲವು ಮಹಾ ದಾನವರನ್ನು ನಿಗ್ರಹಿಸುವಲ್ಲಿ ಹರಿಯೇ ಲಯಕರ್ತ. ಹೀಗೆ ಮೂರು ಮೂರ್ತಿಗಳೂ ಏಕೀಭವಿಸಿದ ವಿಷ್ಣುವನ್ನು ಒಲಿದು ಅರಸಿಯಾದವಳು ಲಕ್ಷ್ಮಿ. ಆಕೆಗೆ ಪುರುಷೋತ್ತಮನ ಅದಟನ್ನು, ಮಹಿಮೆಯನ್ನು ಸ್ತುತಿಸುವಲ್ಲಿ ನಾಲಗೆ ಈಗಲೂ ತಡವರಿಸುವುದಿಲ್ಲ, ವಿರಮಿಸುವುದೂ ಇಲ್ಲ.

ಲಕ್ಷ್ಮಿಯ ಅಭದ್ರತೆಯನ್ನು ನೀಗಿಸುವಲ್ಲಿ ಶ್ರೀರಮಣ ತನ್ನ ವಕ್ಷಸ್ಥಳವನ್ನೇ ತೆರೆದಿಟ್ಟ. ಕೇವಲ ಮದುವೆಯಲ್ಲ, ಉಳಿದಂತೆಯೂ ವಿಶಿಷ್ಟ ವರಬಲಾನ್ವಿತರಾದ ರಕ್ಕಸರನ್ನು ಸದೆಬಡಿಯುವಲ್ಲಿ ವಿಷ್ಣು ತಳೆದ ಮತ್ಸ್ಯ, ಕೂರ್ಮ, ವರಾಹ, ನರಸಿಂಹ ಮತ್ತು ವಾಮನಾವತಾರಗಳು (ನೆನಪಿರಲಿ, ಲಕ್ಷ್ಮಿ ಮಾತಾಡುತ್ತಿರುವುದು ಇನ್ನೂ ದಶಾವತಾರಗಳು ಪೂರ್ಣಗೊಳ್ಳದ ಕಾಲ) ಅಸಾಮಾನ್ಯವೇ ಸರಿ. ಪತಿದೇವನ ಅದ್ವೀತೀಯ ಸ್ವಾಮಿತ್ವಕ್ಕೂ ಶೌರ್ಯಕ್ಕೂ ಸಾಟಿಯಿಲ್ಲ. ಹೀಗೆ ‘ತಾನು ಧನ್ಯಳು’ ಎಂಬ ಭಾವವನ್ನು ಲಕ್ಷ್ಮಿ ಬಗೆ ತರದಲ್ಲಿ ಪ್ರಕಟಪಡಿಸುತ್ತಾಳೆ. ಸಾಮಾನ್ಯವಾಗಿ ಕಾಣುವಂತೆ ಇಷ್ಟೂ ದಂಪತಿಯ ನಡುವಣ ಖಾಸಾ ಸಂವಾದ. ಆದರೆ ಕಥಾಹಂದರ ದಾಂಗುಡಿಸಲು ಸಿಗುವ ಮೂರನೇ ‘ಕೇಳುಗ’ ಆಧಾರವೊಂದು ಈ ಹಂತದಲ್ಲಿ ಅನಾವರಣಗೊಳ್ಳುತ್ತದೆ. ಹರಿಕರಾಲಂಕೃತ ಆಯುಧವೆಂದೇ ಪರಿಗಣಿತವಾದ ಸುದರ್ಶನ ಚಕ್ರ ವ್ಯಕ್ತಿ ರೂಪದಲ್ಲಿ (ಎಂ. ಪ್ರಭಾಕರ ಜೋಶಿ) ಪ್ರಕಟವಾಗುತ್ತದೆ. 

ವಿಷ್ಣು ಸ್ವತಃ ಬಯಸಿ ಲಕ್ಷ್ಮಿಯಿಂದ ಸ್ತುತಿಯನ್ನು ಪಡೆಯುತ್ತಿದ್ದಾನೆಂಬ ಭಾವ ಸುದರ್ಶನನಿಗೆ ಮುಜುಗರವನ್ನುಂಟು ಮಾಡುತ್ತದೆ. ಆಕೆ ಹೇಳುವ ಘಟನೆಗಳೆಲ್ಲ ನಿಜವೇ. ಆದರೆ ಆರೋಪಿಸುವ ಗುಣಗಳೆಲ್ಲಕ್ಕೆ ವಿಷ್ಣು ಪಾತ್ರನಲ್ಲ ಎಂಬ ಬಂಡಾಯದ ನಡೆ ಸುದರ್ಶನನದು. ಲಕ್ಷ್ಮಿಯ ಓಲೈಕೆಯೆಲ್ಲವೂ ನಿಜಕಾರಣವನ್ನು ಮರೆಸಿದ ಸತ್ಯವೆಂದು ದಿಟ್ಟವಾಗಿ ಭಂಗಿಸುತ್ತಾನೆ. ಮತ್ಸ್ಯದ ರೆಕ್ಕೆಗಳಂಚಿನ ಅಲುಗಾಗಿ, ಕೂರ್ಮನ ಚಿಪ್ಪಿನ ದೃಢತೆಯಾಗಿ, ವರಾಹನ ದಾಡೆಯಾಗಿ, ನರಸಿಂಹನ ನಖವಾಗಿ, ವಾಮನನ ಅಡಿಯಾಗಿ ನಿಂತ ನಿಜ ದುಷ್ಟ ಶಿಕ್ಷಕ ತಾನೆಂದು ಸ್ಪಷ್ಟಪಡಿಸುತ್ತಾನೆ. ಲಕ್ಷ್ಮಿಯ ಬಗೆತರದ ಭಾವನಿಷ್ಠೆಯನ್ನು ಘಾಸಿಮಾಡುತ್ತಾನೆ, ವಿಷ್ಣುವಿನ ಸ್ವಾಮಿತ್ವವನ್ನೇ ಧಿಕ್ಕರಿಸಿ ಹೊರ ನಡೆಯುತ್ತಾನೆ. ಈ ಹಂತದಲ್ಲಿ ಲೀಲಾವಿನೋದಿಯಾದ ನಾರಾಯಣ ಲಕ್ಷ್ಮಿಯ ವಿಶ್ವಾಸವನ್ನು ಪುಷ್ಟಿಗೊಳಿಸುತ್ತಾನೆ. ಅನಾವರಣಗೊಳ್ಳಲಿರುವ ಹೊಸದೇ ‘ನಾಟಕ’ವನ್ನು ಪ್ರತೀಕ್ಷಿಸಲು  ಮುನ್ನುಡಿಯುತ್ತಾನೆ.

ಕಥಾಮುಖವಿಲ್ಲಿ ದೇವಸ್ತರದಿಂದ ಜೀವಸ್ತರಕ್ಕಿಳಿಯುತ್ತದೆ. ಲೋಹವತೀ ನಗರದಲ್ಲಿ ಶತ್ರುಪ್ರಸೂದನನೆಂಬ (ನಾರಾಯಣ ಯಾಜಿ) ರಕ್ಕಸನು ಮಹತ್ವಾಕಾಂಕ್ಷಿಯಾಗಿ ರೂಪುಗೊಳ್ಳುತ್ತಾನೆ.

ಶತಮಖ ಮಾಡಿದ ದೇವೇಂದ್ರಾದಿ ದೇವತೆಗಳು ಸದಾ ‘ಕೆಳಗಿನವರ’ ಅಂತರವನ್ನು ಜತನದಿಂದ ಕಾಯುವುದರಲ್ಲೇ ಕಳೆಯುತ್ತಾರೆ. ತುರ್ತು ಬಂದಲ್ಲಿ ಮೂರುಮೂರ್ತಿಗಳ ಮೊರೆಹೊಕ್ಕು ಸ್ಥಾನ ಕಾಪಿಟ್ಟುಕೊಳ್ಳುತ್ತಾರೆ. ಆದರೆ ದಾನವರಾದ ತಾವೋ ಸದಾ ಮೇಲ್ಮುಖರಾಗಿ ಶಿವ, ಬ್ರಹ್ಮರನ್ನು ಒಲಿಸಿಕೊಂಡು ದೇವಲೋಕದ ಸ್ವಾಧೀನಕ್ಕೆ ಅಂದರೆ ಅಧೋಲೋಕದ ಉನ್ನತಿಕೆಗೆ ತುಡಿಯುತ್ತಲೇ ಇರುತ್ತೇವೆ. ವೈಯಕ್ತಿಕವಾಗಿ ಶತ್ರುಪ್ರಸೂದನ ಬ್ರಹ್ಮನನ್ನು ತಪೋಬಲದಿಂದ ಮೆಚ್ಚಿಸಿ ಅಮರತ್ವ ಕೋರುತ್ತಾನೆ. ಆತ, ಅಜ - ಹುಟ್ಟು ನಿವಾರಿಸಲಾಗದವರಿಗೆ ಮರಣ ತಪ್ಪಿದ್ದಲ್ಲ ಎಂಬ ಅನಿವಾರ್ಯತೆಯನ್ನು ಮುಂದೊಡ್ಡುತ್ತಾನೆ. ಅಮರತ್ವ ನಿರಾಕರಿಸಿ ಮರಣ ಕಾರಣಗಳನ್ನಷ್ಟೇ ಆಯ್ದುಕೊಳ್ಳಲು ಸೂಚಿಸುತ್ತಾನೆ. ಶತ್ರುಪ್ರಸೂದನ ಬಲು ಜಾಣ್ಮೆಯಲ್ಲಿ ತರ್ಕಿಸುತ್ತಾನೆ. ಮೀನಾಗಿ, ಉಭಯಚರಿಯಾಗಿ, ಮೃಗವಾಗಿ, ಅರೆಮನುಜನಾಗಿ, ಕುಬ್ಜ ಮನುಜನೇ ಆಗಿ ಅವತರಿಸಿದ ಲೀಲಾಮೂರ್ತಿಯನ್ನು ಗಮನದಲ್ಲಿಟ್ಟೋ ಎಂಬಂತೆ  ‘ಜೀವಿ ಮಾತ್ರದಿಂದ ಮರಣ ಬಾರದ’ ವರ ಪಡೆಯುತ್ತಾನೆ.

ಶಿವನನ್ನೂ ಒಲಿಸಿಕೊಂಡು ಅಸಾಧಾರಣ ಬಲದ ಶಕ್ತ್ಯಾಯುಧವನ್ನೂ ಸಂಗ್ರಹಿಸುತ್ತಾನೆ. ಹಿಂಬಾಲಿಸಿದಂತೆ ಸ್ವರ್ಗಕ್ಕೆ ಲಗ್ಗೆ ಹಾಕುತ್ತಾನೆ.

ದೇವೇಂದ್ರ (ಸೇರಾಜೆ ಸೀತಾರಾಮ ಭಟ್) ವರಬಲಾನ್ವಿತರೊಡನೆ ಸಂಪ್ರದಾಯ ಎನ್ನುವಂತೆ ಸೋತು ಓಡುತ್ತಾನೆ. ಇದು ವರಪ್ರದಾನಿಸಿದ ಮೂರು ಮೂರ್ತಿಗಳ ಪ್ರಭೆಗೆ ತಗ್ಗಿ ನಡೆವ ಕ್ರಮವೂ ಇರಬಹುದು! ಆತ ಸಹಜವಾಗಿ ದೈತ್ಯನಿಗೆ ವರ ಕೊಟ್ಟ ಬ್ರಹ್ಮನಲ್ಲಿಗೂ ಮುಂದೆ ಲಯಕಾರೀ ಶಿವನಲ್ಲಿಗೂ ಅಹವಾಲು ಒಯ್ಯುತ್ತಾನೆ. ಅವರು ತಂತಮ್ಮ ಶಾಸನವನ್ನೇ ಮೀರಲಾಗದ ಸಂಕಟದಲ್ಲಿ ಇಂದ್ರನೊಡನೆ ಹರಿಗೆ ಶರಣಾಗುತ್ತಾರೆ. ವಿಷ್ಣು ಚಕ್ರಾಯುಧವಿಲ್ಲದೇ ಶತ್ರುಪ್ರಸೂದನನ್ನು ಎದುರಿಸಿ ಸೋಲನುಭವಿಸುತ್ತಾನೆ. ಪರೋಕ್ಷವಾಗಿ ತನ್ನ ಪ್ರತ್ಯೇಕತೆಯನ್ನು ಅಥವಾ ವೈಯಕ್ತಿಕತೆಯನ್ನು ಘೋಷಿಸಿಕೊಂಡ ಸುದರ್ಶನನಿಗೆ ‘ಸಾಮರ್ಥ್ಯವನ್ನು’ ಸಾಬೀತುಪಡಿಸುವ ಅವಕಾಶವೂ ಅನಿವಾರ್ಯತೆಯೂ ಸ್ಫುಟಗೊಳ್ಳುತ್ತದೆ. ಆಯುಧವೇ (ನಿರ್ಜೀವಿ) ಮೈವೆತ್ತು ಬಂದ ಸುದರ್ಶನನಿಗೆ ಶತ್ರುಪ್ರಸೂದನನ ಎದುರು ವಿಜಯ ವಿಧಿಲಿಖಿತ. ಆತನ ವಧೆಯಾಗುತ್ತದೆ. ಆದರೆ ಇವೆಲ್ಲ ಲೀಲಾವಿನೋದಿಯ ನಾಟಕದಲ್ಲಿ ಇನ್ನೊಂದೇ ಅಂಕವೆಂಬುದನ್ನು ಸುದರ್ಶನ ಮನಗಾಣುವುದಿಲ್ಲ. ಗರ್ವದಲ್ಲಿ ಮೈಮರೆತು ವಿಷ್ಣುವಿನ ಶಾಪಕ್ಕೆ ತುತ್ತಾಗುತ್ತಾನೆ; ಮತ್ತೊಂದೇ ಅಂಕಕ್ಕೆ ಮುನ್ನುಡಿಯನ್ನೇ ಬರೆಯುತ್ತಾನೆ.

ವಿಷ್ಣು ಸುದರ್ಶನನಿಗೆ ಭೂಲೋಕದಲ್ಲಿ ಮನುಷ್ಯನಾಗಿ ಜನಿಸುವಂತೆ ಶಪಿಸಿರುತ್ತಾನೆ.

ಸುದರ್ಶನ ಪಶ್ಚಾತ್ತಾಪದಿಂದ ಬೆಂದು, ಕ್ಷಮೆ ಯಾಚಿಸುತ್ತಾನೆ. ಈಗ ನಾರಾಯಣ ಕರುಣಾನಿಧಿ,  ಸುದರ್ಶನನಿಗೆ ಶಾಪದ ಉಪಸಂಹಾರವನ್ನು ತಿಳಿಸಿ, ಸಮಾಧಾನಿಸುತ್ತಾನೆ.  ಸುದರ್ಶನ ಭೂಲೋಕದಲ್ಲಿ (ಚಕ್ರದ ಅಸಂಖ್ಯ ಅರಗಳಿಗೆ ಸಾಮ್ಯ ಕಾಣುವಂತೆ) ಸಹಸ್ರಬಾಹುವಾಗಿ, ಅಸಾಮಾನ್ಯ ಭೂಪಾಲನಾಗಿ ಮೆರೆಯಬೇಕು. ಅದರ ಉಚ್ಛ್ರಾಯದಲ್ಲಿ ಆತ ಮದಾಂಧನಾದಾಗ ಸ್ವತ: ಶ್ರೀಹರಿಯೇ ಮಾನುಷರೂಪಿಯಾಗಿ ಅವತರಿಸಿ ನಿಗ್ರಹಿಸಲಿದ್ದಾನೆ. ಈ ಹಿಂದೆ ಶಾಪಗ್ರಸ್ತರಾದ ಜಯವಿಜಯರನ್ನು ದೇವರದೇವ ಸ್ವತಃ ಅವತರಿಸಿ, ಮೂರೇ ಜನ್ಮಗಳ ಶೀಘ್ರ ಕ್ರಮದಲ್ಲಿ ವೈಕುಂಠಕ್ಕೆ ಮರಳಿಸಿಕೊಳ್ಳುವ ಅವಕಾಶ ತೆರೆದಿಟ್ಟಿದ್ದ. ಹಾಗೇ ಸುದರ್ಶನನ ಒಂದೇ ಜನ್ಮದ ಮೋಕ್ಷಕ್ಕೂ ಭಕ್ತವತ್ಸಲ ಒಂದು ಅವತಾರವನ್ನೇ ಮೀಸಲಿಡುತ್ತಾನೆ!


ಸುದರ್ಶನ ಭೂಲೋಕದಲ್ಲಿ ಕಾರ್ತವೀರ್ಯಾರ್ಜುನನ (ವಿಟ್ಲ ಶಂಭುಶರ್ಮ) ಹೆಸರಿನಲ್ಲಿ ಜನ್ಮವಾಂತು ಮಾಹೀಷ್ಮತೀ ಪುರದರಸನಾಗಿ ಮೆರೆದಿರುತ್ತಾನೆ.  ಆ ಒಂದು ದಿನ ಪ್ರಜಾವರ್ಗದ ವನಚರನೊಬ್ಬ (ಹರೀಶ ಜೋಷಿ) ಕಾರ್ತವೀರ್ಯನಲ್ಲಿಗೆ ಬಂದು, ವನ್ಯಮೃಗಗಳಿಂದ ತಮಗಾಗುವ ನಷ್ಟದ ದೂರು ಸಲ್ಲಿಸುತ್ತಾನೆ. ಈತ ವಿವರಗಳನ್ನು ಕೇಳಿ, ಸಿದ್ಧತೆಯನ್ನು ಪರಿಶೀಲಿಸಿ, ಮೃಗಯಾವಿಹಾರಕ್ಕೆ ಹೊರಡುತ್ತಾನೆ. ಬೇಟೆ ಮಧ್ಯಾಹ್ನದವರೆಗೆ ಮುಂದುವರಿದಂತೆ ಇವರ ಬಳಗ ಆಕಸ್ಮಿಕವಾಗಿ ಜಮದಗ್ನಿ ಮಹರ್ಷಿಗಳ (ಡಿ.ಎಸ್. ಶ್ರೀಧರ) ಆಶ್ರಮವನ್ನು ಸೇರುತ್ತದೆ. ಅಕಾಲಿಕ ಭೇಟಿಯ ಕುರಿತು ಮುನಿ ವಿಚಲಿತನಾಗದಿದ್ದರೂ ಸ್ವತಃ ಮಹಾರಾಜನೇ ಮುಜುಗರಪಟ್ಟುಕೊಳ್ಳುತ್ತಾನೆ. ಹಾಗಾಗಿ ಕೇವಲ ಸಾಂಕೇತಿಕ ಉಪಚಾರವನ್ನಷ್ಟೇ ಸ್ವೀಕರಿಸಿ ಮುಂದುವರಿಯುವುದಾಗಿ ಪ್ರಾಮಾಣಿಕ ನಿವೇದನೆಯನ್ನೇ ಮಾಡುತ್ತಾನೆ.

ಆದರೆ ಮಹರ್ಷಿಯು ಅಷ್ಟೇ ಸೌಜನ್ಯಪೂರ್ಣವಾದ ಮತ್ತು ಸಕಾಲಿಕವಾದ ಊಟೋಪಚಾರದ ಆಹ್ವಾನವನ್ನು ಒತ್ತಾಯಪೂರ್ವಕವಾಗಿ ಕೊಡುತ್ತಾನೆ. ರಾಜನಿಗೆ ನಿರಾಕರಿಸಲು ಆಗುವುದಿಲ್ಲ. ಅವನ ಪರಿವಾರ ಸ್ನಾನಾದಿ ಪ್ರಾಥಮಿಕ ಕಲಾಪಗಳನ್ನು ಮುಗಿಸುವುದರೊಳಗೆ ಮುನಿಪ, ಪತ್ನಿ ರೇಣುಕೆಯ (ನಾ. ಕಾರಂತ ಪೆರಾಜೆ) ಸಹಿತ ಇವರ ಭಾರೀ ಬಳಗಕ್ಕೆ ಪವಾಡ ಸದೃಶವಾಗಿ ಭರ್ಜರಿ ಭೋಜನ ಒದಗಿಸುತ್ತಾನೆ.

ಸಂತೃಪ್ತ ಕಾರ್ತವೀರ್ಯಾರ್ಜುನ ಬೆರಗಿನೊಡನೆ ಈ ‘ಪವಾಡ’ದ ಕುರಿತು ತಿಳಿಯಲಿಚ್ಛಿಸುತ್ತಾನೆ. ಗೋಪ್ಯದ ಆವಶ್ಯಕತೆಯನ್ನೇ ಕಾಣದ ಮುನಿಪೋತ್ತಮ ದೇವತೆಗಳು ತನ್ನಲ್ಲಿ ನ್ಯಾಸವಾಗಿಟ್ಟ ಕಾಮಧೇನುವಿನ ಮಹಿಮೆಯನ್ನು ಸವಿನಯ ನಿರೂಪಿಸುತ್ತಾನೆ. ಆಗ ಕಾರ್ತವೀರ್ಯನಲ್ಲಿ ದುರಾಸೆ ಜಾಗೃತವಾಗುತ್ತದೆ. ಧೇನುವನ್ನು ಕೇಳುತ್ತಾನೆ. ಜಮದಗ್ನಿ ಹಾಗೂ ರೇಣುಕರು ಧೇನು ತಮ್ಮದಲ್ಲ, ಅದನ್ನು ಕೊಡಲು ತಾವು ಅಧಿಕಾರಿಗಳಲ್ಲ, ಕೊನೆಯದಾಗಿ ಅದು ಇನ್ಯಾರಿಗೂ ಸಲ್ಲುವುದೂ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ಆದರೆ ಅಸಾಧ್ಯ ದೇಹಬಲದಲ್ಲಿ ಮದಾಂಧನಾದ ಕಾರ್ತವೀರ್ಯನಿಗೆ ಇದು ರುಚಿಸುವುದಿಲ್ಲ.
ಬಲಾತ್ಕಾರದಲ್ಲಿ ಕಾಮಧೇನುವನ್ನು ಸೆಳೆದೊಯ್ಯುತ್ತಾನೆ.

ಜಮದಗ್ನಿಯ ಪುತ್ರಶ್ರೇಷ್ಠ ಪರಶುರಾಮನು (ಶಂಕರಗುಂಡಿ ಗಣಪತಿ ಭಟ್ಟ) ತೀರ್ಥಾಟನೆಯಿಂದ ಉಲ್ಲಸಿತನಾಗಿ ಸ್ವಂತ ಆಶ್ರಮಾಭಿಮುಖನಾಗಿದ್ದಾನೆ. ಆದರೆ ಆಶ್ರಮದ ಪರಿಸರದಲ್ಲಿ ಏನೋ ವಿಷಣ್ಣ ಭಾವ ಅವನನ್ನು ತೀವ್ರವಾಗಿ ತಟ್ಟುತ್ತದೆ.

ಶಿವನಿಂದ ಆರ್ಜಿಸಿದ ವಿದ್ಯೆ ಮತ್ತು ಗಳಿಸಿದ ಆಯುಧ - ಕೊಡಲಿ, ಎಲ್ಲಕ್ಕೂ ಮಿಗಿಲಾಗಿ ಶ್ರೀಹರಿಯ ಆರನೇ ಅವತಾರವೇ ಆದ ಭಾರ್ಗವರಾಮ ಅಪರಿಮಿತ ಕ್ರತುಶಕ್ತಿಯೊಡನೆ ತಂದೆತಾಯಿಯರನ್ನು ಕಾಣುತ್ತಾನೆ.

ಅವರ ದುಃಖಕ್ಕೆ ಕಾರಣ ತಿಳಿಯುತ್ತಾನೆ. ಜಮದಗ್ನಿ ರಾಜದೌಷ್ಟ್ಯ ಹಾಗೂ ಅರಾಜಕತೆಯ ನಡುವಣ ಸೂಕ್ಷ್ಮವನ್ನು ಅರಿತುಕೊಂಡು ಸಾಮ, ದಾನ,  ಭೇದಗಳ ಪ್ರಾಮಾಣಿಕ ಅನುಷ್ಠಾನವನ್ನು ಮಗನಿಗೆ ಸೂಚಿಸುತ್ತಾನೆ. ಪಿತೃವಾಕ್ಯಕ್ಕೆ ಸಹಮತದೊಡನೇ ಪರಶುರಾಮ ಮಾಹೀಷ್ಮತೀಪುರಾಧೀಶನನ್ನು ಸಂಧಿಸುತ್ತಾನೆ. ದಂಡವೆತ್ತುವ ಅನಿವಾರ್ಯತೆ ಬಂದಾಗ, ತನ್ನ ಅವತಾರದ ಒಂದು ಉದ್ದೇಶದ ಈಡೇರಿಕೆಗಾಗಿ ದುಷ್ಟ ಕಾರ್ತವೀರ್ಯನನ್ನು ಕೊಚ್ಚಿ ಕೊಲ್ಲುತ್ತಾನೆ. ತತ್ಪರಿಣಾಮವಾಗಿ ಕಾರ್ತವೀರ್ಯನ ಮನುಷ್ಯ ಕಾಯದಲ್ಲಿದ್ದ ಸುದರ್ಶನ ತನ್ನ ಶಾಪದ ಕೊನೆಯಾಗಿ, ಮೋಕ್ಷವನ್ನೂ ಸಾಧಿಸುತ್ತಾನೆ. 

8 comments:

 1. Thank you, Ashoka Vardhana.
  Vandane.
  - Shyamala.

  ReplyDelete
 2. ನಾಗೇಶ ಹೆಗಡೆ05 July, 2013 14:10

  ಈ ಕಥಾಪ್ರಸಂಗ ನಿಮ್ಮನ್ನು ನಿಜಕ್ಕೂ ಪರವಶಗೊಳಿಸಿತ್ತೆಂದು ಕಾಣುತ್ತದೆ. ಏನು ಪದಸಮೃದ್ಧಿ, ಅದೇನು ಭಾಷಾಲಾಲಿತ್ಯ, ಅದೇನು ವಣ೯ನಕೌಶಲ!

  ReplyDelete
 3. ಯಕ್ಷಗಾನ ಪ್ರಸಂಗಗಳಲ್ಲಿ ಅರ್ಥಹೇಳಲು ಕುಳಿತಾಗ ಕತೆ ಕಟ್ಟುವದಕ್ಕಿಂತ ವಾದಗಾರರಾಗುವದೇ ಹೆಚ್ಚು! ಅನೇಕ ಸಂದರ್ಭಗಳಲ್ಲಿ ಕವಿಯ ಮೂಲ ಆಶಯಗಳಿಗಿಂತ ವಿತಂಡವಾದವನ್ನೇ ಮಂಡಿಸಿ ಪೋಲೀಸರ ರಕ್ಷಣೆಯಲ್ಲಿ ಅ(ನ)ರ್ಥದಾರಿಗಳು ಹೋದದ್ದೂ ಉಂಟು. ಇನ್ನು ವಿದ್ವಾಂಸರೆನಿಸಿಕೊಂಡವರಂತೂ ಶಬ್ಢ ಶಬ್ಧಗಳನ್ನೇ ಎಳೆದು ಎದುರಾಳಿಯನ್ನು ಸೋಲಿಸುವದೇ ತಮ್ಮ ಹೆಚ್ಚುಗಾರಿಕೆ ಎಂದು ಮಾಡುವ ಶಬ್ಧಾಡಂಬರಗಳಲ್ಲಿ ಅರ್ಥಹೇಳಲು ಕುಳಿತ ನಾವುಗಳೂ ಹಳಿತಪ್ಪುವದುಂಟು. ನಿರ್ದಾಕ್ಷಿಣ್ಯವಾದ ನಿಮ್ಮಂತಹ ವಿಮರ್ಶೆಗಳು ಬಂದರೆ ಅರ್ಥಗಾರರಿಗೆ ಅದು ಕಡಿವಾಣವಾದೀತು! ನಿಮ್ಮ ವಿಮರ್ಶೆಯ ಒರಗಲ್ಲಿನಲ್ಲಿ ಇಡೀ ಕಥಾಭಾಗವನ್ನು ಹಚ್ಚುತ್ತೀರೆಂದು ನಿರೀಕ್ಷಿಸಿದ್ದೆ. ನಾರಾಯಣ ಯಾಜಿ

  ReplyDelete
 4. Dear Ashok,
  I have been enjoying reading,for the last few days, your various experiences.
  The flow of your language , the sincierity and your humility is something 'ADVITHIYA'
  It is ,indeed,a great asset you have earned.
  Cheers.

  ReplyDelete
 5. Good concept > Good summary.

  ReplyDelete
 6. ವಿಮರ್ಶೆ ಚೆನ್ನಾಗಿದೆ. ಯಕ್ಶಗಾನ ಹಾಗೂ ತಾಳಮದ್ದಳೆಗಳಲ್ಲಿ ಈಗೀಗ ಪ್ರಸಂಗಗಳಿಗಿಂತ ಅಧಿಕಪ್ರಸಂಗಗಳೇ ವಿಜ್ರಂಭಿಸುವುದು ಜಾಸ್ತಿಯಾಗಿದೆ. ಕೆಲ ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಒಂದು ಕಿರು ಯಕ್ಷಗಾನ (ಪ್ರಸಂಗ – ಸುದರ್ಶನ ಗರ್ವಭಂಗ) ದಲ್ಲಿ ಕೊನೆಗೆ ಸೋಲೊಪ್ಪಬೇಕಾದ ಸುದರ್ಶನನು ಅದನ್ನೂ ಒಂದು ಗೆಲುವೆನ್ನುವ ರೀತಿಯಲ್ಲಿ ಪ್ರದರ್ಶಿಸಿದ್ದು ಅಭಾಸವೆನಿಸಿತ್ತು.
  ಗಿರೀಶ್, ಬಜಪೆ

  ReplyDelete
 7. ಸುಂದರವಾದ ವೀಡಿಯೊ ನೀಡಿರುವಿರಿ. ಯಕ್ಷಗಾನವನ್ನು ಪ್ರತ್ಯಕ್ಷ ನೋಡಿದಷ್ಟೆ ಆನಂದವಾಯಿತು. ಧನ್ಯವಾದಗಳು.

  ReplyDelete
 8. ಅತ್ಯುತ್ತಮ ದಾಖಲೀಕರಣ.ತಾಳಮದ್ದಲೆ ತುಂಬಾ ಚೆನ್ನಾಗಿದೆ. ಧನ್ಯವಾದಗಳು.

  ReplyDelete