26 July 2013

ರಘುರಾಮಾಭಿನಂದನಮ್ - ತಪ್ಪಿದ ಒತ್ತು

ರಘುರಾಮಾಭಿನಂದನಮ್ - ತಪ್ಪಿದ ಒತ್ತು
(ಕಲೌಚಿತ್ಯ ಮೀರಿದ ಕಲಾವಿದ ಗೌರವ?)ಹೊಳ್ಳರ ಆಯ್ಕೆಯ ವಿಶಿಷ್ಟ ತುಣುಕುಗಳು: ಪೂರ್ವರಂಗದ ಬಾಲಗೋಪಾಲ (ವಸಂತ ಗೌಡ ಕಾಯರ್ತಡ್ಕ ಮತ್ತು ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ), ನಲದಮಯಂತೀ ಪ್ರಸಂಗದ ದಮಯಂತೀ ಪ್ರಾಕಟ್ಯ (ಅಂಬಾಪ್ರಸಾದ ಪಾತಾಳ, ಈಶ್ವರಪ್ರಸಾದ ಧರ್ಮಸ್ಥಳ ಮತ್ತು ವಸಂತಗೌಡ ಕಾಯರ್ತಡ್ಕ), ಕೃಷ್ಣಾವತಾರಕ್ಕೂ ಪೂರ್ವದ ಕಂಸ ಶೃಂಗಾರ (ಜಗದಭಿರಾಮ ಪಡುಬಿದ್ರಿ, ಸಂತೋಷ್ ಕುಮಾರ್ ಹಿಲಿಯಾಣ ಮತ್ತು ರಕ್ಷಿತ್ , ಕೃಷ್ಣಾರ್ಜುನ ಕಾಳಗದ ಸುಭದ್ರಾ ರಾಯಭಾರ (ಗೋವಿಂದ ಭಟ್,  ಕೋಳ್ಯೂರು) ಮತ್ತು ಉತ್ತರ ರಾಮಾಯಣದ ಸೀತಾಪರಿತ್ಯಾಗದ ಅರ್ಧದವರೆಗೆ (ಕುಂಬಳೆ ಶ್ರೀಧರ ರಾವ್, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಬೇಗಾರ್ ಶಿವಕುಮಾರ್ ಮತ್ತು ಮಹೇಶ ಮಣಿಯಾಣಿ) ನಾನು ಈ ಕಲಾಪಕ್ಕೆ ಹಾಜರಿದ್ದೆ.
ಆದಿಯಲ್ಲಿ ಪ್ರಾರ್ಥನೆ ಹಾಗೂ ಅಂತ್ಯದಲ್ಲಿ ಮಂಗಳವನ್ನು ಭಾಗವತ ಪದ್ಯಾಣ ಗಣಪತಿ ಭಟ್ಟರೊಡನೆ ಭೀಷ್ಮ ಪಾತ್ರಧಾರಿಯಾಗಲಿದ್ದ ದಿನೇಶ ಅಮ್ಮಣ್ಣಾಯ ಹಂಚಿಕೊಂಡರು.
ಕಥಾರಂಭವನ್ನು ಭಾಗವತರು (ಪದ್ಯಾಣ) ಮಾಡಿಕೊಟ್ಟ ಮೇಲೆ ಕಾಶೀರಾಜನಾದ ಪ್ರತಾಪಸೇನ (ರವಿಚಂದ್ರ ಕನ್ನಡಿಕಟ್ಟೆ - ತೆಂಕು ತಿಟ್ಟು) ಮಂತ್ರಿಯಲ್ಲಿ ನಿತ್ಯದ ಮಾತುಗಳೊಡನೆ ತನ್ನ ಮೂವರು ಪುತ್ರಿಯರ ಸ್ವಯಂವರ ಘೋಷಣೆಯನ್ನು ನಾಲ್ದೆಸೆಯ ರಾಜರುಗಳಿಗೆ ಪ್ರಸರಿಸಲು ಆದೇಶಿಸುತ್ತಾನೆ. ಜೊತೆಗೆ ತನಗೆ ಪ್ರಿಯವಲ್ಲದ ಪ್ರಬಲ ಕುರುಸಾಮ್ರಾಜ್ಯ ಹಾಗೂ ರಾಜವಂಶಗಳಲ್ಲಿ ಪೂರ್ಣ ಸಲ್ಲದ ಸೌಭದೇಶದ ಸಾಲ್ವನನ್ನು ಉಪೇಕ್ಷಿಸಲೂ ಸೂಚಿಸುತ್ತಾನೆ.
ಸ್ವಯಂವರದಲ್ಲಿ ಭಾಗಿಗಳಾಗಲು ಬಂದ ರಾಜರುಗಳ ಕ್ಷೇಮ ಸಮಾಜಾರವನ್ನು ಕಾಶೀರಾಜ ವಿಚಾರಿಸಿಕೊಳ್ಳುತ್ತಾನೆ.
ಇತ್ತ ಸಾಲ್ವನಿಗೆ (ನಗರ ಸುಬ್ರಹ್ಮಣ್ಯ ಆಚಾರ್ - ಬಡಗು ತಿಟ್ಟು) ಗೂಢಚರರಿಂದ ಕಾಶೀ ರಾಜಕುವರಿಯರ ಸ್ವಯಂವರದ ಸುದ್ದಿ ಸಕಾಲದಲ್ಲೇ ಸಿಕ್ಕಿರುತ್ತದೆ. ತನ್ನ ಶೌರ್ಯ ಮತ್ತು ರಾಜತ್ವದ ಪ್ರತಿಷ್ಠೆಗೆ ಬಂದ ಕೊಳೆಯನ್ನು ನಿವಾರಿಸುವ ಸಲುವಾಗಿ ಆತ ಕಾಶಿಯತ್ತ ನಡೆಯುತ್ತಾನೆ.
ಹಾಗೇ ಕಾಶಿರಾಜಕುಮಾರಿ ಅಂಬೆ (ಪುತ್ತಿಗೆ ರಘುರಾಮ ಹೊಳ್ಳ - ತೆಂಕು ತಿಟ್ಟು) ಸ್ವಯಂವರಕ್ಕೂ ದಿನ ಮುಂಚಿತವಾಗಿ, ಬೇಸರ ಕಳೆಯಲು ಗೆಳತಿಯರ ಕೂಟದಲ್ಲಿ ವನವಿಹಾರಕ್ಕೆ ಹೋಗಿರುತ್ತಾಳೆ. ಸಾಲ್ವ ಅಲ್ಲಿಗೆ ಬರುತ್ತಾನೆ.
ಸಾಲ್ವನಿಗೆ ಕಾಶೀ ಪ್ರವೇಶದ ಮೊದಲು ಆಕಸ್ಮಿಕವಾಗಿ ವನವಿಹಾರದ ಅಂಬೆಯಾದಿ ವಧುದರ್ಶನವಾದದ್ದು ಮಂಗಳಮಯವಾಗಿ ಕಾಣುತ್ತದೆ. ಮುಂದುವರಿದು ತನ್ನ ಪರಿಚಯ ಕೊಟ್ಟು, ತರುಣಿಯರನ್ನು ವಿಚಾರಿಸುತ್ತಾನೆ, ಪ್ರೇಮಯಾಚನೆ ಮಾಡುತ್ತಾನೆ.

ಆಸ್ಥಾನದಲ್ಲಿ ನೆರೆದ ಆಮಂತ್ರಿತ ರಾಜರುಗಳ ಸಮಕ್ಷಮದಲ್ಲಿ ಕಾಶೀರಾಜನಿಂದ ‘ಪಣ ಗೆಲಿದವರಿಗೆ ಪುತ್ರಿಯರನ್ನು ವಿವಾಹದಲ್ಲಿ ಕೊಡುವ ಘೋಷಣೆಯಾಗುತ್ತದೆ. ಆಹ್ವಾನ ಇಲ್ಲದೆ ಸ್ವಯಂವರ ಭವನವನ್ನು ಪ್ರವೇಶಿಸಿದ ಸಾಲ್ವ, ಪ್ರತಿಭಟಿಸಿ ಶೌರ್ಯವನ್ನೇ ಪಣವಾಗಿಟ್ಟು ಕನ್ಯೆಯರನ್ನು ವಶೀಕರಿಸಿಕೊಳ್ಳಲು ಮುಂದಾಗುತ್ತಾನೆ.
ಕಾಶೀರಾಜ ಮುಖಭಂಗವನ್ನು ಅನುಭವಿಸಿ, ಸಾಲ್ವನ ಪಂಥಾಹ್ವಾನವನ್ನು ಸ್ವೀಕರಿಸುವಂತೆ ಉಳಿದ ರಾಜರುಗಳಲ್ಲಿ ವಿನಂತಿಸಿಕೊಳ್ಳುತ್ತಾನೆ.
ಈ ಹಂತದಲ್ಲಿ ಇನ್ನೋರ್ವ ಅನಾಹ್ವಾನಿತ ಮತ್ತು ಅತಿ ಪ್ರಬಲ ಭೀಷ್ಮನ (ದಿನೇಶ ಅಮ್ಮಣ್ಣಾಯ) ಪ್ರವೇಶ. ಆಹ್ವಾನ ನಿರಾಕರಣೆಗೆ ಕಾಶಿರಾಜನನ್ನು ಮಾತಿನಲ್ಲಿ ಭಂಗಿಸುತ್ತಾನೆ. ಮುಂದುವರಿದು ವೀರಪಣದಲ್ಲಿ ತಮ್ಮನಿಗಾಗಿ ತಾನು ಕನ್ಯಾಕಾಂಕ್ಷಿಯಾಗಿರುವುದನ್ನು ಸ್ಪಷ್ಟಪಡಿಸಿ, ಬಾಲೆಯರನ್ನು ರಥವೇರಿಸುತ್ತಾನೆ. ಸಾಲ್ವ ಪ್ರತಿಭಟಿಸುತ್ತಾನೆ.
ಸಮನಿಸಿದ ಯುದ್ಧದಲ್ಲಿ ಸಾಲ್ವ ಸೋಲುತ್ತಾನೆ. ಭೀಷ್ಮ ಉಳಿದ ರಾಜರನ್ನೂ ಧಿಕ್ಕರಿಸಿ, ಕನ್ಯೆಯರನ್ನು ಹಸ್ತಿನಾವತಿಗೆ ಒಯ್ಯುತ್ತಾನೆ.
ಹಸ್ತಿನಾವತಿಯಲ್ಲಿ ಭೀಷ್ಮ ಮೂರೂ ಕನ್ಯೆಯರನ್ನು ಎದುರಿಟ್ಟುಕೊಂಡು ತನ್ನ ಮನದಿಂಗಿತವನ್ನು ಸ್ಪಷ್ಟಪಡಿಸುತ್ತ, ತಮ್ಮನನ್ನು ವರಿಸುವಲ್ಲಿ ಅವರ ಅಭಿಪ್ರಾಯ ಕೇಳುತ್ತಾನೆ. ತಂಗಿಯಂದಿರು ಸಮ್ಮತಿಸುತ್ತಾರೆ. ಅಂಬೆ ತನ್ನ ಸಾಲ್ವ ಪ್ರೀತಿಯನ್ನು ನಿವೇದಿಸಿ ಸೌಭ ದೇಶಕ್ಕೆ ಕಳಿಸಿಕೊಡಲು ಪ್ರಾರ್ಥಿಸುತ್ತಾಳೆ. ಭೀಷ್ಮ ಒಪ್ಪುತ್ತಾನೆ.
ಅಂಬೆಯನ್ನು ಸೌಭದೇಶಕ್ಕೆ ಮುಟ್ಟಿಸುವ ಸಲುವಾಗಿ ಭೀಷ್ಮ ವೃದ್ಧ ಬ್ರಾಹ್ಮಣನನ್ನು (ಶಂಕರ ಪೈ - ಉಭಯ ತಿಟ್ಟುಗಳಲ್ಲಿ ನಿರ್ವಹಿಸಿದರು) ನಿಯುಕ್ತಿಗೊಳಿಸುತ್ತಾನೆ. ಆತ ಮಾರ್ಗಕ್ರಮಣದಲ್ಲಿ ಹೆಚ್ಚಿನ ದಕ್ಷಿಣೆಯ ಆಸೆಗಾಗಿ ತಾನು ನಡೆಯಲಾರೆ ಎಂಬಿತ್ಯಾದಿ ನೆಪಗಳನ್ನೊಡ್ಡಿ ಅಂಬೆಯನ್ನು ಸತಾಯಿಸಲು ತೊಡಗುತ್ತಾನೆ.
ಅಂಬೆ ಆತನ ಠಕ್ಕನ್ನು ಅರಿತು ಅಸಹಾಯಕತೆಯಲ್ಲಿ ಸಾಲ್ವನಿಂದ ಹೆಚ್ಚಿನ ಸಂಭಾವನೆ ಕೊಡಿಸುವ ಆಶ್ವಾಸನೆ ಕೊಟ್ಟು ಮುಂದುವರಿಸುತ್ತಾಳೆ.
ಸೌಭ ದೇಶಕ್ಕೆ ಬಂದ ಅಂಬೆಯನ್ನು ಸಾಲ್ವ ತಿರಸ್ಕರಿಸುತ್ತಾನೆ. ಆತನೆದುರು ಹಸ್ತಿನಾವತಿಯ ಕಲಾಪಗಳಿಗೆ ಸಾಕ್ಷಿಯೂ ಮರಳಿ ಹೋಗುವ ದಾರಿಗೆ ಆಪತ್ಭಾಂಧವನೂ ಆಗಬೇಕಾದ ವೃದ್ಧ ಬ್ರಾಹ್ಮಣ ಕೈಚೆಲ್ಲಿದಾಗ ಅಂಬೆ ಅನಾಥೆಯಾಗುತ್ತಾಳೆ.
ಕಾಡಿನಲ್ಲಿ ದಿಕ್ಕು ತಪ್ಪಿದ ಸ್ಥಿತಿಯಲ್ಲಿದ್ದ ಅಂಬೆಗೆ ವನಚರನಾದ ಏಕಲವ್ಯನ (ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ- ತೆಂಕು ತಿಟ್ಟು) ಭೇಟಿಯಾಗುತ್ತದೆ. ಏಕಲವ್ಯ ಭೀಷ್ಮನೆದುರು ಸಂಧಾನಕಾರನೋ ಸಮರವೀರನೋ ಆಗುವಲ್ಲಿ ಸೋಲುತ್ತಾನೆ. ಅಂಬೆ ಅನಿವಾರ್ಯತೆಯಲ್ಲಿ ತಪಸ್ಸಿಗೆ ಮನಮಾಡುತ್ತಾಳೆ.
ವನದಲ್ಲಿದ್ದ ಋಷಿ ಶೈಖಾವತ್ಯ (ಕುಬಣೂರು ಶ್ರೀಧರ ರಾವ್ - ತೆಂಕು ತಿಟ್ಟು) ಅಂಬೆಯ ಪರಿಚಯ ಕೇಳಿ, ತಪಸ್ಸು ನಿನಗೆ ಹೇಳಿದ್ದಲ್ಲ. ಮರಳಿ ತಂದೆಯಲ್ಲಿಗೆ ಹೋಗಿ ತಾರುಣ್ಯಕ್ಕೊಪ್ಪುವಂತೆ ಇನ್ನೊಂದೇ ಮದುವೆಯಾಗು ಎಂದಿತ್ಯಾದಿ ಬುದ್ಧಿಮಾತುಗಳನ್ನು ಹೇಳುತ್ತಾನೆ. ಆಕೆ ಒಪ್ಪುವುದಿಲ್ಲ. ತತ್ಸಮಯದಲ್ಲಿ ಪರಮರ್ಷಿ ಮೈತ್ರೇಯರ ಶಿಷ್ಯ ಅಕೃತವ್ರಣನ ಪ್ರವೇಶವಾಗುತ್ತದೆ.

ಪರಶುರಾಮ (ಹೆರಂಜಾಲು ಗೋಪಾಲ ಗಾಣಿಗ) ಪರಮ ಕರುಣದಲಿ ಅಂಬೆಗೆ ಭೀಷ್ಮ ಸಾಲ್ವರ ನಡುವೆ ಆಯ್ದುಕೊಳ್ಳಲು ಸೂಚಿಸುತ್ತಾನೆ. ಅಂಬೆ ಸಾಲ್ವನ ಕೃತ್ಯಕ್ಕೂ ಕಾರಣನಾದ ಭೀಷ್ಮನಲ್ಲೇ ಛಲ ಉಳಿಸಿಕೊಳ್ಳುತ್ತಾಳೆ. ಪರಶುರಾಮ ಶಿಷ್ಯ ಭೀಷ್ಮನಲ್ಲಿಗೆ ಪ್ರತಿನಿಧಿಯ ಮೂಲಕ ಆದೇಶ ಕಳಿಸುತ್ತಾನೆ.
ಸಕಲಕಲಾವಲ್ಲಭತ್ವ: ಈ ಪ್ರಸಂಗಾವಧಿಯಲ್ಲಿ ಹೊಳ್ಳರು ಬಲಿಪರೊಡನೆ ದ್ವಂದ್ವ ಭಾಗವತಿಕೆ (ಹೊಸದೇನಲ್ಲ), ಮದ್ದಳೆಗಾರಿಕೆ ಮತ್ತು ಚಂಡೆ ವಾದನದ ಪ್ರದರ್ಶನಗಳನ್ನು ಕೊಟ್ಟರು. ಮೊದಲ ದಿನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ| ಮೋಹನ ಆಳ್ವರು ಹೊಳ್ಳರ ಪ್ರತಿಭೆಗೆ ಸಾಕ್ಷಿಯಾಗಿ, ತಮ್ಮ ಸಂಸ್ಥೆಯ ಆವರಣದಲ್ಲಿ ವಂದೇ ಮಾತರಂನ್ನು ಯಕ್ಷಗಾನೀಯ ಶೈಲಿಯಲ್ಲಿ ಹೊಳ್ಳರು ಹಾಡಿದ್ದನ್ನು ಸ್ಮರಿಸಿದ್ದರು. (ಯೂ ಟ್ಯೂಬಿನಲ್ಲಿ ಇದರದೇ ಇನ್ನೊಂದು ಅತಿರೇಕ ರೂಪ, ಭಾಗವತ ಕೊಳಗಿ ಕೇಶವ ಹೆಗಡೆಯವರ ಹಾಡಿಕೆಯಲ್ಲಿದೆ. ಅದರಲ್ಲಿ ವಂದೇಮಾತರಂಗೆ ಯಕ್ಷ-ನೃತ್ಯವನ್ನೂ ನೋಡಬಹುದು!) ಸಾಹಿತ್ಯದ ಅರ್ಥ ವಿಸ್ತರಿಸದ, ಭಾವ ಪ್ರಚೋದಿಸದ ಯಕ್ಷ-ಗಾಯನ ಸೋನಿಯಾಗಾಂಧಿಯ ತಲೆಯ ಮೇಲಿಟ್ಟ ಮುಟ್ಟಾಳೆಯಂತೆ ಉಭಯ ಪ್ರಕಾರಗಳಿಗೆ ಮಾಡುವ ಅವಮಾನ. ಯಕ್ಷ-ಪರಿಚಿತರು ರಾಗ ಬಣ್ಣಗಳ ಪೂರ್ವಾಗ್ರಹಕ್ಕೆ ತುತ್ತಾಗಿ, ಇತರರು ಕೇವಲ ನಾವೀನ್ಯಕ್ಕಾಗಿ ಇಂಥವನ್ನು ಕೊಂಡಾಡುವುದು ಸಹಜವೇ ಇದೆ. ಚಪ್ಪಾಳೆ, ಶಿಳ್ಳೆಗಳ ಗದ್ದಲವನ್ನು ಜನನಾಡಿ ಎಂದು ಗುರುತಿಸಬಾರದು. ಇಂದು ಭಿನ್ನ ಕಾರಣಗಳಿಗೆ ಸಮಾಜದಲ್ಲಿ ‘ಮೇಲೇರಿದವರು ಔಚಿತ್ಯ ಮೀರಿದ ಇಂಥ  ಕಲಾಪಗಳನ್ನು ಪ್ರೋತ್ಸಾಹಿಸುವುದು ನಡೆದೇ ಇದೆ. ಅವರು ಪರಿಶ್ರಮ, ಅನುಭವದ ಸೋಂಕೂ ಇಲ್ಲದ ವಿಚಾರಗಳ ಮೇಲೆ ಅಪ್ಪಣೆ ಕೊಡಿಸುವುದಂತು ಕೇಳುಗರಿಗೆ ನಿತ್ಯ ನರಕ. ಬೀಜದ ಬಲದಿಂದ ಗಿಡ ವಿಕಸಿಸುತ್ತದೆ, ಕೃತಕ ಒಳಸುರಿಗಳಿಂದ ಕೇವಲ ಕೊಬ್ಬುತ್ತದೆ!
ಸಂಧಾನ ರಾವಣ: ನಾನು ಗ್ರಹಿಸಿದಂತೆ, ಯಕ್ಷಗಾನ (ಆಟ, ಕೂಟ ಸೇರಿದಂತೆ) ಪ್ರತಿ ಪ್ರದರ್ಶನವೂ ಒಟ್ಟು ಕತೆಯ ಮೂಲ ಆಶಯ ಮರೆಯದೆ ಅಂದಂದಿನ ಪ್ರಸಂಗದ ವ್ಯಾಪ್ತಿ, ನಡೆಗೆ ನಿಷ್ಠವಾಗಿರಬೇಕು. ಇಲ್ಲಿನದೇ ಉದಾಹರಣೆ ಎತ್ತಿಕೊಳ್ಳುವುದಾದರೆ, ಸಂಪೂರ್ಣ ರಾಮಾಯಣವನ್ನು ಮನಸ್ಸಲ್ಲಿಟ್ಟುಕೊಂಡು ಸೀತಾಪಹಾರ ಪ್ರಸಂಗ ಎತ್ತಿಕೊಳ್ಳಬೇಕು. ಆ ಲೆಕ್ಕದಲ್ಲಿ ಅಂದಿನ ಪ್ರಸಂಗದಲ್ಲಿ ಮೊದಲು ಮಾರೀಚ ಸಂಧಾನದ ರಾವಣನನ್ನು (ಉಡುವೆಕೋಡಿ ಸುಬ್ಬಪ್ಪಯ್ಯ) ಮುಖ್ಯವಾಗಿ, ಅನಂತರ ಸೀತೆಯನ್ನು ಅಪಹರಿಸುವ ರಾವಣನನ್ನು (ಪ್ರಭಾಕರ ಜೋಷಿ. ಒಂದೇ ಪ್ರಸಂಗದ ಮುಂದುವರಿಕೆಯಾದ್ದರಿಂದ) ತುಸು ಪ್ರತ್ಯೇಕವಾಗಿ ನೋಡಬೇಕಾಗುತ್ತದೆ. ಈ ಪ್ರಸಂಗದ ಮುಖ್ಯ ಕಲಾಪ ವಂಚನೆ ಮತ್ತು ಕಳ್ಳತನ. ಈ ಕಲಾಪ ಮತ್ತು ಅದಕ್ಕೆ ಮುಖ್ಯ ಸಹಕಾರಿಯನ್ನು ಗಳಿಸುವ ನಿಟ್ಟಿನಲ್ಲಿ ಸಂಧಾನದ ರಾವಣನ ಪೀಠಿಕೆ ಸೋತಿತು. ಸುಮಾರು ಅರ್ಧ ಅವಧಿಯವರೆಗೆ (ಹದಿನೈದು ಮಿನಿಟಿನ ದೀರ್ಘ ಸ್ವಗತ) ರಾಮಾಯಣದ ಮಹಾ ಕಥನದ ಮುನ್ನೆಲೆಯಲ್ಲಿ ರಾವಣನ ನಿಲವನ್ನು ಸಮರ್ಥಿಸುವಂತಿದೆಯೇ ಹೊರತು ಈ ಕೂಟಕ್ಕೆ ಅಗತ್ಯವಾದ   ಚೂಪನ್ನು (ಸೀತಾಪಹಾರ) ಲಕ್ಷಿಸಿಲ್ಲ. ಮುಂದಿನ ಅವಧಿಯಲ್ಲೂ ‘ಇದುವರೆಗಿನ ಕಥೆಯನ್ನು ಸೂಕ್ಷ್ಮದಲ್ಲಿ ಹೇಳಿದರೂ ‘ವಂಚನೆ, ಕಳ್ಳತನಕ್ಕೊಂದು ತಾರ್ಕಿಕ ಅಡಿಪಾಯವನ್ನು ಕೊಟ್ಟಿಲ್ಲ. ಬದಲಾಗಿ ಸೀತಾ ಸಂಗದಿಂದ (ಗಮನಿಸಿ ಅಪಹರಣವಲ್ಲ) ಉಂಟಾಗುವ ಸ್ವಕುಟುಂಬ ಗೊಂದಲ ನಿವಾರಣೆ (ಮಂಡೋದರಿ, ಅಶೋಕವನ), ಕಳ್ಳತನದ ಅನ್ಯ ಉಲ್ಲೇಖಗಳು (ಇಂದ್ರ ಇತ್ಯಾದಿ), ಅದು ವೈರಿಯ ಮೇಲೆ ಬೀರಬಹುದಾದ ಮಾನಸಿಕ ಒತ್ತಡ ಮುಂತಾದವನ್ನು ವಿವರಗಳಲ್ಲಿ ಹೇಳಿದರೂ ‘ಭುವನ ತಲ್ಲಣ ರಾವಣ ಹಿಂದೆಲ್ಲೂ ಅನುಸರಿಸದ (ಕಳ್ಳ) ನಡೆಗೆ ಮಡಿ ಹಾಸುವುದೇ ಇಲ್ಲ. ಬಹುಶಃ ಈ ಕೊರತೆಯೇ ಮಾರೀಚನ (ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ) ಬಹುತೇಕ ವಾದಗಳಿಗೆ ರಾವಣನಿಂದ ನಿರುತ್ತರವನ್ನೇ ಕಾಣಿಸುತ್ತದೆ! ಕಥಾ ಆಶಯದಲ್ಲಿ ರಾವಣ ಮಾರೀಚನನ್ನು ‘ದಂಡನೆಯ ಭೀತಿಗೊಳಪಡಿಸಿ ಒಪ್ಪಿಸುವುದಿರಬಹುದು. ಆದರೆ ವಾದದ ಶಕ್ತಿಯನ್ನು ಕಳೆದುಕೊಂಡ ಅರ್ಥಗಾರಿಕೆ ಕೂಟದ ನಡೆಯನ್ನು ನೀರಸಗೊಳಿಸಿದ್ದಂತು ನಿಜ.
ಅಪಹರಣ ರಾವಣ: ಪ್ರಸ್ತುತ ಕೂಟದಲ್ಲಿ ಅಪಹರಣದ-ರಾವಣ ಸಂಧಾನ-ರಾವಣನ ಅನುಸಾರಿಯಾದ್ದರಿಂದಲೋ ಎಂಬಂತೆ (ಒಟ್ಟು ಕಲಾಪಕ್ಕೆ ನಿಗದಿಯಾದ ವೇಳೆ ಮೀರಿದ್ದಕ್ಕೂ ಇರಬಹುದು) ವಿಸ್ತಾರ ಪೀಠಿಕೆಯ ಸವಲತ್ತು ಬಳಸಿಲ್ಲ. ಆದರೆ ನಡೆ ಮತ್ತು ಪರಿಣಾಮದ ಅರಿವನ್ನಷ್ಟೇ ಸೂಕ್ಷ್ಮದಲ್ಲಿ ಬಿತ್ತರಿಸುವಾಗ ಪೂರ್ವಪಕ್ಷದಲ್ಲಿ (ಸಂಧಾನ ರಾವಣನ ಅವಕಾಶದಲ್ಲಿ) ‘ವಂಚನೆ ಮತ್ತು ಅಪಹರಣದ ಕುರಿತು ತನ್ನದೇ ತರ್ಕ ಬೇರೇ ಇತ್ತು ಎನ್ನುವುದನ್ನು ಸೂಚಿಸುತ್ತಾನೆ. (ಗಮನಿಸಿ - ಇವರು ಹುಲು ಮಾನವರು, ಮಾರೀಚನನ್ನೂ ಸೇರಿಸಿದಂತೆ ತಾನು ತರ್ಕಿಸಿದ ಮಹತ್ತು ಇಲ್ಲಿಲ್ಲ). ರಾವಣ-ಸನ್ಯಾಸಿ ವೇಷ ಮತ್ತು ಯೋಜನೆಗೆ ಅನುಗುಣವಾಗಿ ನೇರ ಭಿಕ್ಷಾಯಾಚನೆಗಿಳಿಯುತ್ತಾನೆ, ಅಪಹರಣದ ಉದ್ದೇಶದಲ್ಲಿ ಯಶಸ್ವಿಯೂ ಆಗುತ್ತಾನೆ. ಮುಂದುವರಿದು ಜಟಾಯು (ವಿಟ್ಲ ಶಂಭುಶರ್ಮ) ಮುಖಾಮುಖಿ.
ಅಮಲಿನವಾಗಲಿ: ಜಟಾಯು ಅರ್ಥಧಾರಿ ಪ್ರಸಂಗದ ನಡೆಯನ್ನು ಪಾತ್ರ ಪೋಷಣೆಯಿಂದ ತಪ್ಪಿಸಿ, ವೈಯಕ್ತಿಕ ಮಟ್ಟಕ್ಕಿಳಿಸಿದರು. (ವಿಸೂ: ದುರದೃಷ್ಟಕ್ಕೆ ಈ ವಿವಾದಾತ್ಮಕ ಸನ್ನಿವೇಶದ ವಿಡಿಯೋ ದಾಖಲೀಕರಣ ಪೂರ್ಣಗೊಳ್ಳುವ ಮೊದಲು ನನ್ನ ಕ್ಯಾಮರಾ ತುಂಬಿಹೋಗಿತ್ತು.) ವಿಟ್ಲ ಶಂಭು ಶರ್ಮರು ಬಳಸಿದ ಮಾತುಗಳು ಪ್ರಭಾಕರ ಜೋಷಿಯವರನ್ನು ಉದ್ದೇಶಿಸಿದ ನಿಂದಾನುಡಿಗಳಂತೆ ತೋರಿದ್ದು ರಸಭಂಗವನ್ನೇ ಉಂಟು ಮಾಡಿತು. ಶೇಣಿ ಸಾಮಗರ ಕಾಲದಲ್ಲಿ ಆಗೀಗ ನಡೆದಿದೆ ಎಂದಷ್ಟೇ ನಾನು ಕೇಳಿದ್ದ ಸನ್ನಿವೇಶ ಇಲ್ಲಿ ಶರ್ಮರಿಂದ ಏಕಪಕ್ಷೀಯವಾಗಿ ವಿಕಸಿಸಿತ್ತು. ಸಂಧಾನ ರಾವಣ (ಉಡುವೆಕೋಡಿ) ಮಾರೀಚನ (ಮೂಡಂಬೈಲು) ನುಡಿಗಳೆದುರು ಪಾತ್ರಪೋಷಣೆಯಲ್ಲಿ ವಿಫಲನಾದರೂ ಅಪಹರಣ ರಾವಣ (ಜೋಶಿ) ಜಟಾಯುವನ್ನೂ ಅರ್ಥಧಾರಿಯನ್ನೂ (ಶರ್ಮ) ಏಕಕಾಲಕ್ಕೆ ಕಥಾಮುಖಕ್ಕೆ ಎಳೆದು ಸನ್ನಿವೇಶವನ್ನು ಕಾಪಾಡುವಲ್ಲಿ ಯಶಸ್ವಿಯಾದ. ರಾವಣನ ಭಂಡತನ ಕುಟಿಲತೆಗಳನ್ನಷ್ಟೇ ಬಳಸಿ, ಮಾತುಗಳು ಕಡಿವಾಣ ಕಳಚದ ಎಚ್ಚರವಹಿಸಿ ಜೋಶಿ, ಪ್ರಸಂಗಕ್ಕೆ ಮಂಗಳ ಹಾಡಿಸಿದರು. ಸಾವಿರಕ್ಕೆ ಸಮೀಪದ ಸಭೆಯಲ್ಲಿ ಬಂದ ನಾಲ್ಕೆಂಟೇ ಶಿಳ್ಳೆ, ಚಪ್ಪಾಳೆಗಳು ದೊಡ್ಡದಾಗಿಯೇ ಕೇಳಿದ್ದರೂ ಖಂಡಿತಕ್ಕೂ ಬಹುಮತವಲ್ಲ. ಯಾರೂ ಯಕ್ಷಗಾನೇತರ ರೋಚಕತೆಯನ್ನು ಆಟ ಕೂಟಗಳಿಗೆ ತರಬಾರದು, ಉತ್ತೇಜಿಸಬಾರದು. ಯಕ್ಷಗಾನ ಅಮಲಿನವಾಗಬೇಕು (ಅಮಲಿನದ್ದಾಗಬಾರದು)!!
x

ರಘುರಾಮಾಭಿನಂದನಮ್ - ಭಾಗವತ ಪುತ್ತಿಗೆ ರಘುರಾಮ ಹೊಳ್ಳರ ಅಭಿನಂದನ ಕಾರ್ಯಕ್ರಮ ಮಂಗಳೂರು ಪುರಭವನದಲ್ಲಿ ಜುಲೈ ೫, ೬ ಮತ್ತು ೭ರಂದು ಬಹು ವೈಭವದಿಂದಲೇ ನಡೆಯಿತು. ನಾನು ಕಂಡಂತೆ, ಇದಕ್ಕೆ ಸಂವಾದಿಯಾಗಿ ಕೆಲವು ಸಮಯದ ಹಿಂದೆ ಉಡುಪಿಯಲ್ಲಿ ನಡೆದ ಗೋವಿಂದ ವೈಭವ - ಸೂರಿಕುಮೇರು ಗೋವಿಂದ ಭಟ್ಟರ ಅಭಿನಂದನ ಕಾರ್ಯಕ್ರಮ. ಹಾಗೇ ನಾನು ಭಾಗಿಯಾಗದಿದ್ದರೂ ಬಾಯಿಮಾತುಗಳಲ್ಲಿ ಕೇಳಿದಂತೆ, ಪತ್ರಿಕಾ ವರದಿಗಳಲ್ಲಿ ಕಂಡಂತೆ ಕೋಳ್ಯೂರು, ಚಿಟ್ಟಾಣಿ, ಭಾಸ್ಕರಾನಂದ ಕುಮಾರ್ ಮುಂತಾದವರ ‘ವ್ಯಕ್ತಿವಿಶಿಷ್ಟ ಕಲಾಪ ಕೇಂದ್ರಿತ ಬಹುದಿನಗಳ ಸಮ್ಮಾನವೂ ಇಲ್ಲಿ ನೆನೆಸುವುದು ಪ್ರಸ್ತುತವೇ ಇದೆ. ರಘುರಾಮ ಹೊಳ್ಳರು ಅಥವಾ ನಾನು ಹೆಸರಿಸಿದ ಇತರ ಕಲಾವಿದರು ಗೌರವಯೋಗ್ಯರು ಎನ್ನುವುದರಲ್ಲಿ ಎರಡು ಮಾತಿಲ್ಲ. ಸಂಘಟಕರ ಶ್ರಮ (ತನು), ಅಭಿಮಾನ (ಮನ), ಧನ ಯಾವ ಕಾರಣಕ್ಕು ಸಣ್ಣದೂ ಅಲ್ಲ. ಆದರಿದು ಸಮ್ಮಾನಿತ ಕಲಾವಿದರನ್ನು ಸಕಲಕಲಾವಲ್ಲಭ (ಹೊಳ್ಳರು ಮದ್ದಳೆ ಕುಕ್ಕಿದರು, ಚಂಡೆ ಬೊಟ್ಟಿದರು, ಕರ್ನಾಟಕ ಸಂಗೀತಕ್ಕೆ ಕಂಠ ಶೋಷಿಸಿದರು.


ಬಣ್ಣ ಮೆತ್ತಿ ಗೆಜ್ಜೆ ಕಟ್ಟುವುದೊಂದು ಬಾಕಿಯಾಯಿತು!) ಎಂದು ಪ್ರಮಾಣಿಸುವ, ಅವರಿಗಾಗಿ ನಾಮ-ವಿಶೇಷಣಗಳನ್ನು ಸೂರೆಗೊಳ್ಳುವ, ಒಟ್ಟಾರೆ ವ್ಯಕ್ತಿಪೂಜೆ ನಡೆಸುವ ಧೋರಣೆ ತಾಳುವುದು ಆರೋಗ್ಯಕರವಲ್ಲ. ಈ ಕಲಾವಿದರಿಗೆ ಮಾಧ್ಯಮವಾಗಿ ಒದಗಿದ ಮತ್ತು ಜನಧನಗಳನ್ನು ಪ್ರೇರಿಸಿದ (ಮೇಳ ಕಲಾಪ -) ಯಕ್ಷಗಾನ ಇಲ್ಲಿ ಹಿನ್ನಡೆಯನ್ನೇ ಕಾಣುತ್ತದೆ. ವೈಯಕ್ತಿಕ ದೌರ್ಬಲ್ಯಗಳು ಕಲಾಪ್ರಕಾರಕ್ಕೆ ಪ್ರತಿಭಾ ಕೊಡುಗೆಗಳಾಗಿ ಮಾನ್ಯತೆ ಪಡೆಯುತ್ತವೆ; ಮರವನ್ನು ಕೀರ್ತಿಸುವಲ್ಲಿ ಬಂದಣಿಕೆಗೆ ಮಾನ್ಯತೆ ಒದಗಿಸಿದಂತಾಗುತ್ತದೆ. ಆಕಸ್ಮಿಕಗಳು ಸಂಪ್ರದಾಯದ ಭಾಗವೇ ಅಗಿಬಿಡುವ ಅಪಾಯವಿದೆ! ಶಿವರಾಮ ಕಾರಂತ, ಮುಳಿಯ ಮಹಾಬಲ ಭಟ್ಟ, ಕುಶಿ ಹರಿದಾಸ ಭಟ್ಟ, ರಾಘವ ನಂಬಿಯಾರ್, ಅಮೃತ ಸೋಮೇಶ್ವರ, ದಾಮ್ಲೆ-ಶಿಶಿಲ, ರಾ ಗಣೇಶ್‌ರಂಥ ವಿದ್ವಾಂಸ-ಸಂಘಟಕರು ನಡೆಸಿದ ಎಷ್ಟೋ (ಆರ್ಥಿಕವಾಗಿ) ಬಡ ಯಕ್ಷಗಾನೀಯ ಕಲಾಪಗಳು ಇಂದಿಗೂ ಸ್ಮರಣೀಯವಾಗುವುದು ಈ ವಿಭಿನ್ನತೆಯಲ್ಲೇ. ರಘುರಾಮಾಭಿನಂದನಮ್ ಕಾರ್ಯಕ್ರಮದ ಮೂರೂ ದಿನಗಳ ಆಯ್ದ ಕಲಾ ಕಲಾಪಗಳಿಗೆ (ಸಭಾ ಕಲಾಪಗಳನ್ನು ಆದಷ್ಟು ನಿವಾರಿಸಿ) ನಾನು ಹಾಜರಾಗಿದ್ದೆ. ಹಾಗೆ ನಾನು ಅನುಭವಿಸಿದ ಕೆಲವು ಕಲಾಪಗಳ ಕುರಿತು ಸಮೀಕ್ಷಿಸುವುದಾದರೆ...

ಸಮಯ ಸುಸ್ತು! (ಶಿಸ್ತು?): ರಾತ್ರಿಯಿಡೀ ನಡೆಯುವ ಯಕ್ಷಗಾನ ಬಯಲಾಟಗಳು ಇಂದು ಜನಮನ್ನಣೆ (ಅನುಕೂಲ) ಕಳೆದುಕೊಂಡಿವೆ. ಸಹಜವಾಗಿ ಕಾಲಮಿತಿಯ ಆಟಗಳು ರೂಢಿಸಿವೆ. ಒಟ್ಟಾರೆ ಸಮಯದ ಶಿಸ್ತು ಇಂದು ಯಾವುದೇ ಕಲಾಪಕ್ಕೆ ಅನಿವಾರ್ಯ ಸಂಗಾತಿ. ಆದರೆ ಕಾಲದ ಪರಿವೆಯೇ ತಮಗಿಲ್ಲವೆಂಬಂತೆ ಮೂರು ದಿನದ ಎಲ್ಲಾ ಕಲಾಪಗಳು ನಡೆದುವು. ವಿಪರೀತ ತಡವಾಗಿ ಶುರುವಾಗುವುದು, ಯಾವುದೇ ತಾರ್ಕಿಕ ಕಾರಣ, ಗುಣಾತ್ಮಕ ಕಡಿವಾಣವಿಲ್ಲದೆ ಲಂಬಿಸುವುದು ಅಸಹನೀಯವಾಗಿತ್ತು. ಮೊದಲ ದಿನ ಹೊಳ್ಳರ ಆಯ್ಕೆಯ ವಿಶಿಷ್ಟ ತುಣುಕುಗಳ ಪ್ರದರ್ಶನ ನಡೆಯಬೇಕಾದ ಸಮಯ (ನಾನು ಆಮಂತ್ರಣ ಪತ್ರಿಕೆಯನ್ನಷ್ಟೇ ಆಧರಿಸಿ ಹೇಳುತ್ತಿದ್ದೇನೆ) ಸಂಜೆ ಆರೂವರೆಯಿಂದ ಹತ್ತು. ಅದು ಶುರುವಾದ ಸಮಯ ಏಳೂವರೆ. ಉದ್ಘಾಟನಾ ಸಭೆಯ ನೆಪದಲ್ಲಿ ಐದೂವರೆ ಗಂಟೆಯಿಂದಲೇ ಕುಳಿತಿದ್ದ ನನ್ನ ಸಹನೆ ಹತ್ತೂವರೆ ಗಂಟೆಗೆ (ಮತ್ತೂ ಮೂರು ತುಣುಕುಗಳು ಬಾಕಿಯಿರುವುದು ಕಂಡು) ಕಡಿಯಿತು; ಸಭಾತ್ಯಾಗ ಮಾಡಿದೆ. ಮರುದಿನ ತಿಳಿದಂತೆ ಅದು ಹನ್ನೆರಡೂವರೆಯವರೆಗೂ ಲಂಬಿಸಿತಂತೆ. ಎರಡೂವರೆ ಗಂಟೆಯಲ್ಲಾಗಬೇಕಿದ್ದುದನ್ನು ದುಪ್ಪಟ್ಟು ಸಮಯದಲ್ಲಿ ‘ಚಂದಗಾಣಿಸಿದ್ದರು. ಇವು ಮುಖ್ಯ ಕಲಾವಿದ - ಹೊಳ್ಳರ ಆರೋಗ್ಯದ ಮೇಲೂ ಹಿಂಬಾಲಿಸಿದ ಕಲಾಪಗಳ ಮೇಲೂ ಪರಿಣಾಮ ಬೀರಿದ್ದು ಕಂಡಂತೆಯೇ ಇದೆ.

ಎರಡನೇ ದಿನದ ಗಾನತಾಳಮದ್ದಳೆಗೆ ನಿಗದಿತ ಸಮಯ ಬೆಳಗ್ಗೆ ಒಂಬತ್ತರಿಂದ ಹನ್ನೆರಡೂವರೆ. ಅದು ನಡೆದದ್ದು ಹತ್ತೂಕಾಲರಿಂದ ಎರಡೂ ಮುಕ್ಕಾಲು! ಮೂರನೆಯ ದಿನದ ತಾಳಮದ್ದಳೆಗೆ ನಿಗದಿತ ಸಮಯ ಮಧ್ಯಾಹ್ನ ಒಂದೂವರೆಯಿಂದ ಸಂಜೆ ನಾಲ್ಕೂವರೆ. ಅದು ನಡೆದದ್ದು ಎರಡೂವರೆಯಿಂದ ರಾತ್ರಿ ಏಳು. ಇಲ್ಲಿ ಇನ್ನೊಂದು ತಮಾಷೆ - ಅಭಿನಂದನ ಸಮಿತಿಯೇ ಆ ದಿನ ಕೊಟ್ಟ ಒಂದು ಪತ್ರಿಕಾ ಜಾಹೀರಾತು ಒಂದೂವರೆಯಿಂದ ನಾಲ್ಕೂವರೆಯವರೆಗೆ ತಾಳಮದ್ದಳೆಯನ್ನು ಸರಿಯಾಗಿಯೇ ತೋರಿಸಿದರೂ ಐದೂವರೆಯಿಂದ ಏಳರ ತನಕ ನಡೆಯಬೇಕಿದ್ದ ಗೌರವಾರ್ಪಣೆಯನ್ನು ಮೂರೂವರೆಯಿಂದ ಆರೂವರೆಯವರೆಗೆ ಘೋಷಿಸಿತ್ತು. ಒಂದೇ ವೇದಿಕೆಯಲ್ಲಿ ಒಂದೇ ಸಮಯದಲ್ಲಿ ಎರಡು ವಿಭಿನ್ನ ಕಲಾಪಗಳು! ಸಾವಿರಾರು ರೂಪಾಯಿ ಮೌಲ್ಯದ ಜಾಹೀರಾತಿನ ತಪ್ಪನ್ನು ಕೇವಲ ‘ಕಣ್ತಪ್ಪು ಎಂದೋ ಸಭೆಯಲ್ಲಿ ಕ್ಷಮಾಯಾಚನೆ ಮೂಲಕವೋ ಹಗುರಮಾಡಬಹುದೇ?


ಕಾಲಮಿತಿಯ ಮತ್ತು ನವರಸ ಬಿಂಬಿಸುವ ಯಾವುದೇ ಒಂದು ಪ್ರಸಂಗ ಪ್ರಸ್ತುತಿಯನ್ನು ಮೀರಿಸಿದ ಸಾಧನೆ ಈ ‘ಚುಟುಕುಚೂರುಗಳಲ್ಲಿ ಏನೂ ಕಾಣಿಸಲಿಲ್ಲ. ಉದ್ಗ್ರಂಥಗಳಲ್ಲಿ ಸಾರ್ವತ್ರೀಕೃತ ಅಥವಾ ಸಾರ್ವಕಾಲಿಕ ಸತ್ಯಗಳನ್ನು ಧ್ವನಿಸುವ ವಾಕ್ಯಗಳನ್ನು ಆಣಿಮುತ್ತುಗಳೆಂಬಂತೆಯೋ ಗಾದೆಮಾತಾಗಿಯೋ ಲೋಕ ಸ್ವೀಕರಿಸುವುದು ಒಂದು ಬಗೆ. ಕೇವಲ ಶೈಕ್ಷಣಿಕ ಆವಶ್ಯಕತೆಗಾಗಿ ಯಾವುದೇ ಬರಹದಿಂದ ಉದ್ಧರಿಸಿದ ಮಾತುಗಳು ಬಹುಮುಖ್ಯ (ಪರೀಕ್ಷಾ ದೃಷ್ಟಿಯಿಂದ) ಎನ್ನಿಸಿಕೊಳ್ಳುವುದು ಇನ್ನೊಂದು ಬಗೆ. ಇಲ್ಲಿನ ಆಯ್ಕೆಗಳೆಲ್ಲ ಸಾರ್ವಜನಿಕ ಸಮ್ಮಾನಿತ ಮಹೋನ್ನತನ ಆಯ್ಕೆಯೇ ಹೊರತು ಯಾವುದೋ ಸೀಮಿತ ‘ಪದೋನ್ನತಿಗೆ ಅಲ್ಲ ಎಂಬ ಅರಿವು ನನ್ನನ್ನು ನಿರಾಶೆಗೊಳಿಸಿತು. ಕಲಾವಿದರು ನಿರ್ವಹಣೆಯಲ್ಲಿ ಉದಾಸೀನರಾಗಿರಲಿಲ್ಲ, ತಿಳಿದದ್ದನ್ನು ಕೊಡುವಲ್ಲಿ ಕೊರತೆಯನ್ನು ಮಾಡಿದರೆಂದೂ ಅಲ್ಲ. ಅಭಿನಂದನ ಸಭೆಯ ಅಂಗವಾಗಿ ಬರುವ ಪ್ರಯೋಗಗಳು ಎಂಬ ನನ್ನ ನಿರೀಕ್ಷೆಯೇ (ಸಂಯೋಜನಾ ನಾವೀನ್ಯ, ವಿಶಿಷ್ಟ ತರಬೇತಿ ಇತ್ಯಾದಿ) ದೊಡ್ಡದಾಯ್ತೋ ಏನೋ. (ಅರಗಿನ ಮನೆ ಪ್ರಸಂಗವನ್ನು ದೀವಟಿಗೆ ಬೆಳಕಿನಲ್ಲಿ ಶುದ್ಧ ವಿಡಿಯೋ ದಾಖಲೀಕರಣಕ್ಕೊಳಪಡಿಸಲಿದ್ದಾರೆ ಎಂದಾಗ ಉಡುಪಿ ಯಕ್ಷಗಾನ ಕೇಂದ್ರದ ಗುರು ಸಂಜೀವ ಸುವರ್ಣರು ಕಲಾವಿದರಿಗೆ ಕನಿಷ್ಠ ಒಂದು ವಾರದ ತರಬೇತಿ ನಡೆಸಿದ್ದರಂತೆ. ಸಾಲದ್ದಕ್ಕೆ ದಾಖಲೀಕರಣದಂದು ಸ್ವತಃ ಸಣ್ಣ ವೇಷ ಮುಗಿಸಿ ನೇಪಥ್ಯ ನಿರ್ದೇಶನಕ್ಕೆ ಗಟ್ಟಿಯಾಗಿ ನಿಂತಿದ್ದರು. ಈ ಶ್ರದ್ಧೆ, ಶ್ರಮ ಕಳಚಿಕೊಂಡು ‘ಯಕ್ಷಗಾನ ಆಯಾ ಕ್ಷಣದ ಸೃಷ್ಠಿ ಎಂಬ ಭ್ರಮೆಯ ಬೆನ್ನು ಹತ್ತಿದರೆ ಕಲೆ ಉದ್ಧಾರವಾಗದು).

ನಾನು ಕಂಡಷ್ಟು ಅಭಿವ್ಯಕ್ತಿಗಳ ಬಗ್ಗೆ ಎರಡೇ ನುಡಿ: ೧. ಎರಡು ಮೂರು ದಶಕಗಳ ಕಾಲ ಕಲಾಸೇವೆಯಲ್ಲಿ ಮುಂದುವರಿದ ಇಬ್ಬರು ಹಿರಿಯ ಕಲಾವಿದರು, ಪ್ರಾಥಮಿಕ ಪಾಠದ ಅಂಗವಾದ ‘ಬಾಲಗೋಪಾಲವನ್ನು ಶ್ರದ್ಧೆಯಿಂದ ನಡೆಸಿಕೊಟ್ಟದ್ದು ಅಭಿನಂದನೀಯ. ಮತ್ತು ೨. ಸುಭದ್ರಾ ರಾಯಭಾರದಲ್ಲಿ ಎಲ್ಲ ಬಲ್ಲ ಕೋಳ್ಯೂರರು ಭಾವೋತ್ಕಟತೆಯನ್ನು ಸಿನಿಮೀಯತೆಯಿಂದ ಯಕ್ಷಗಾನೀಯತೆಗೆ ತರುವುದು ಅವಶ್ಯ.  

ಗಾನತಾಳಮದ್ದಳೆ: ಹೀಗೊಂದು ಪ್ರದರ್ಶನ ಹಿಂದೆ ಕೆಲವು ನಡೆದದ್ದಿದೆಯಾದರೂ ನನಗೆ ಇದೇ ಪ್ರಥಮ ಅನುಭವ. ತಾಳಮದ್ದಳೆಗೆ ಆಯ್ದ ಪ್ರಸಂಗ - ಅಂಬಾ ಶಪಥ. ಇದರ ಕಥಾನಿರ್ವಹಣೆಯ ಪದ್ಯಗಳಿಗೆ ಭಾಗವತನೇ ಆಗಿ ಪದ್ಯಾಣ ಗಣಪತಿ ಭಟ್ (ತೆಂಕು ತಿಟ್ಟು). ಪಾತ್ರಧಾರಿಗಳಾಗಿ ಬಂದ ಭಾಗವತರುಗಳನ್ನು ಅಲ್ಲಲ್ಲೇ ಪರಿಚಯಿಸುತ್ತೇನೆ. ಪಾತ್ರ ಹಂಚಿಕೆಯಲ್ಲಿ ತಿಟ್ಟು ಬೇಧವನ್ನು ಗಣನೆಗೆ ತೆಗೆದುಕೊಳ್ಳಲಿಲ್ಲವಾದರೂ ಮದ್ದಳೆ, ಚಂಡೆಗಳನ್ನು ಹಾಡಿಕೆಗನುಗುಣವಾಗಿ - ತೆಂಕುತಿಟ್ಟಿನಲ್ಲಿ ಪದ್ಮನಾಭ ಉಪಾಧ್ಯಾಯ, ಪದ್ಯಾಣ ಶಂಕರನಾರಾಯಣ ಭಟ್, ಲಕ್ಷ್ಮೀಶ ಅಮ್ಮಣ್ಣಾಯ, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿಯವರೂ ಬಡಗುತಿಟ್ಟಿನಲ್ಲಿ ಎ.ಪಿ. ಪಾಠಕ್, ಇಡಗುಂಜಿ ಕೃಷ್ಣ ಯಾಜಿಯವರೂ ಹಂಚಿಕೊಂಡು ನಿರ್ವಹಿಸಿದರು.

ಪ್ರಸಂಗ ಸಂಯೋಜಕರ ನೆಲೆಯಲ್ಲಿ (ಯಾರೆಂದು ನನಗೆ ತಿಳಿದಿಲ್ಲ) ವಿವಿಧ ಪಾತ್ರಗಳಿಗೆ ಪದ್ಯಗಳನ್ನು ಹಂಚಿ, ಮುದ್ರಿಸಿಕೊಟ್ಟದ್ದು ನನ್ನ ಅರಿವಿಗೆ ಬಂತು. ವೈಯಕ್ತಿಕವಾಗಿ ಪ್ರತಿಯೊಬ್ಬರೂ ಸ್ವತಂತ್ರವಾಗಿ ಇಡಿಯ ಪ್ರಸಂಗವನ್ನು ಹಾಡಿ, ನಡೆಸಿದ ಅನುಭವಿಗಳೇ ಇರಬಹುದು. ಆದರೆ ತಿಟ್ಟು, ಪ್ರಾದೇಶಿಕತೆ, ಗುರುಪಾಠಗಳ ವಿಭಿನ್ನತೆಯಲ್ಲಿ ಪ್ರಸಂಗದ ನಡೆ ಭಿನ್ನವಿರುವುದು ತಪ್ಪೇನಲ್ಲ. ಹಾಗಾಗಿ ಇಲ್ಲಿನ ಒಟ್ಟಂದಕ್ಕೆ ಅವಶ್ಯವಾದ ಒಂದು ಪಾತ್ರಾನುಕ್ರಮವನ್ನು ಹಂಚಿದಂತೆ ಕಾಣಲಿಲ್ಲ. ಅಥವಾ ಹಂಚಿದ್ದರೂ ಪ್ರದರ್ಶನ ಪೂರ್ವ ಎಲ್ಲ ಒಟ್ಟು ಕುಳಿತು ಸ್ಪಷ್ಟಪಡಿಸಿಕೊಳ್ಳದ ಕೊರತೆಯೂ ಇದಾಗಿರಬಹುದು. ಕೆಲವೆಡೆಗಳಲ್ಲಿ ಸಣ್ಣ ಗೊಂದಲವೂ ವೃಥಾ ವೇಳೆಗಳೆದದ್ದೂ ಸೇರಿ ಒಂದು ಕಲಾಕೃತಿಯಾಗಿ ಕಳೆಗಟ್ಟುವಲ್ಲಿ ಕೊರತೆಯೇ ಆಯಿತು.

ಇನ್ನೊಂದು ಅನಿಸಿಕೆ, ಪ್ರಸ್ತುತ ಸಂದರ್ಭದಲ್ಲಿ (ಪದ್ಯಾಣದವರನ್ನುಳಿದು) ಭಾಗವತರುಗಳು ನಿತ್ಯದ ಸ್ಥಿತಪ್ರಜ್ಞೆಯನ್ನು ಕಳಚಿಕೊಂಡು ಪಾತ್ರಭಾವ ಹೆಚ್ಚು ತಾಳಬೇಕಿತ್ತು. (ಕುಬಣೂರು ಶ್ರೀಧರರಾಯರು ಇದ್ದ ಸಣ್ಣ ಅವಕಾಶದಲ್ಲಿ ಇದನ್ನು ಚೆನ್ನಾಗಿಯೇ ತೋರಿಕೊಟ್ಟರು.) ಎಂದಿಗಿಂತ ಹೆಚ್ಚಿನ (ಸಾಹಿತ್ಯದ) ಉಚ್ಚಾರಣಾ ಶುದ್ಧಿ, ಕಡಿಮೆ ಕುಣಿತದ ನಡೆಗಳನ್ನು ಕೊಡುವುದೂ ಅಪೇಕ್ಷಣೀಯವಿತ್ತು. ಅವುಗಳ ಕೊರತೆಯಲ್ಲಿ ಇದು ಯಕ್ಷಗಾನ ರಾಗ ವೈವಿಧ್ಯ ಎಂದೇ ಕೆಲವೆಡೆಗಳಲ್ಲಿ ಪ್ರಚಾರದಲ್ಲಿರುವ ಇನ್ನೊಂದೇ ಪ್ರಯೋಗ-ಪ್ರದರ್ಶನದಿಂದ ಭಿನ್ನವಾಗಿ ನಿಲ್ಲಲಿಲ್ಲ. ಒಂದೆರಡು ಕಡೆಗಳಲ್ಲಿ ಕೇವಲ ಹಿಮ್ಮೇಳ ಅಂದರೆ - ಚಂಡೆ ಮದ್ದಳೆ, ಚಕ್ರತಾಳಗಳನ್ನು, ತುಸು ಮೆರೆಸುವ ಉದ್ದೇಶಕ್ಕೆ ತನಿ ನುಡಿಕೆಗೆ ಅವಕಾಶ ಮಾಡಿದ್ದು ಔಚಿತ್ಯಪೂರ್ಣವಾಗಿತ್ತು. (ಇದನ್ನೇ ಆಟದಲ್ಲಿ ಕೊಟ್ಟು ವೇಷಧಾರಿಗಳನ್ನು ‘ಬಳಲಿಸಿ ಕೊಲ್ಲುವ ಕ್ರಮ ನನಗೆ ಹಿಡಿಸದು.)

ಗಾನತಾಳಮದ್ದಳೆಯ ಪ್ರಸಂಗದ ನಡೆ ಅನುಭವಿಸದವರ ಅನುಕೂಲಕ್ಕೆ ಈಗ ನನ್ನ ಟಿಪ್ಪಣಿಗಳೊಂದಿಗೆ ವಿಡಿಯೋ ತುಣುಕುಗಳು: (ವಿಡಿಯೋ ಸಮಗ್ರವಲ್ಲದ್ದಕ್ಕೆ, ಸಂಬಂಧ ಕಲ್ಪಿಸುವ ಮಾತುಗಳನ್ನು ನಾನು ಗ್ರಹಿಸಿದಂತೆ, ಗದ್ಯದಲ್ಲಿ ಹೆಣೆದಿದ್ದೇನೆ. ಇದು ಪ್ರದರ್ಶನದಲ್ಲಿರಲಿಲ್ಲ. ಉತ್ತಮ ಅರ್ಥಧಾರಿಗಳಿಗೆ ಇರಲೇಬೇಕಾದ ಪದ್ಯಗಳ ಪೂರ್ವ ಪರಿಚಯ ನನಗಿಲ್ಲ. ಪ್ರಸ್ತುತ ಕಲಾಪದಲ್ಲಿ ಬಳಸಿದ ಪದ್ಯಗಳ ಮುದ್ರಿತ ಪ್ರತಿಯನ್ನು ಸಂಗ್ರಹಿಸಿ, ನನ್ನ ಕಥನವನ್ನು ಪರಿಷ್ಕರಿಸುವ ನನ್ನ ಉದ್ದೇಶವೂ ಈಡೇರಲಿಲ್ಲ - ವಿಷಾದಗಳು.)


ಅಂಬೆ ತನಗಾದ ಸ್ಮರಹತಿಯನ್ನು ನೆನೆಸಿಕೊಳ್ಳುತ್ತ ಸ್ವಪರಿಚಯ ನೀಡುತ್ತಾಳೆ. ಮುಂದುವರಿದು ತನ್ನ ತಂದೆ ನಡೆಸಲಿರುವ ಸ್ವಯಂವರದಲ್ಲಿ ಸಾಲ್ವ ಭಾಗಿಯಾಗಿ ತನ್ನನ್ನು ವರಿಸಬೇಕಾಗಿಯೂ ಕೋರುತ್ತಾಳೆ. ಸಾಳ್ವ ಒಡಂಬಡುತ್ತಾನೆ.


ಅಕೃತವ್ರಣನ (ಸಿರಿಬಾಗಿಲು ರಾಮಕೃಷ್ಣ ಮಯ್ಯ - ತೆಂಕು ತಿಟ್ಟು) ಬುದ್ಧಿಮಾತುಗಳೂ ನಡೆಯದಾಗುತ್ತದೆ. ಆತ ಗುರು ಪರಶುರಾಮರಲ್ಲಿ ನ್ಯಾಯ ಕೋರುವಂತೆ ತಿಳಿಸಿ, ಅಂಬೆಯನ್ನು ಜೊತೆಗೊಯ್ಯುತ್ತಾನೆ.
ಅಕೃತವ್ರಣ ಪರಶುರಾಮರ ಆಜ್ಞೆ ವಿವಾಹ ಸಿದ್ಧತೆಯೊಡನೆ ಬಾ ಇಲ್ಲವೇ ಯುದ್ಧ ಮುಖೇನ ಮರಣದಂಡನೆಯನ್ನೇ ಎದುರಿಸು ಇದನ್ನು ಭೀಷ್ಮನಿಗೆ ಮುಟ್ಟಿಸುತ್ತಾನೆ.


ಎದುರಾದ ಭೀಷ್ಮನನ್ನು ಪರಶುರಾಮರು (ಹೆರಂಜಾಲು ಗೋಪಾಲ ಗಾಣಿಗ - ಬಡಗು ತಿಟ್ಟು) ಭಂಗಿಸಿ, ಮದುವೆಗೆ ಒಪ್ಪಿಸಲು ನೋಡುತ್ತಾರೆ. ಭೀಷ್ಮ ಸವಿನಯ ಬ್ರಹ್ಮಚರ್ಯವ್ರತದ ಪ್ರತಿಜ್ಞೆಗೆ ನಿಷ್ಠನಾಗುತ್ತಾನೆ. ಪರಶುರಾಮ ಯುದ್ಧಕ್ಕಿಳಿಯುತ್ತಾನೆ. ಗುರುಭಕ್ತಿ, ಗೌರವಗಳೊಡನೆ ಭೀಷ್ಮ ಎದುರಿಸುತ್ತಾನೆ.


ಯುದ್ಧದಲ್ಲಿ ಭೀಷ್ಮ ಮೂರ್ಛೆ ತಪ್ಪಿ ಧರಾಶಾಯಿಯಾದಲ್ಲಿಗೆ ತಾಯಿ ಗಂಗೆ (ಗಣಪತಿ ಭಟ್ - ಬಡಗು ತಿಟ್ಟು) ಬಂದು ಪರಿಪರಿಯಾಗಿ ವಿಲಪಿಸುತ್ತಾಳೆ.


ಚೇತರಿಸಿಕೊಂಡ ಭೀಷ್ಮನಿಗೆ ಮುಂದುವರಿದ ಯುದ್ಧದಲ್ಲಿ ಗಂಗೆ ಸ್ವತ: ಸಾರಥ್ಯವಹಿಸಿ ಸಹಕರಿಸುತ್ತಾಳೆ. ಯುದ್ಧ ಬಹು ದೀರ್ಘ ಕಾಲ (೨೩ ದಿನಗಳು) ನಡೆದು ಎರಡೂ ಪಕ್ಷಗಳಿಗೆ ಸೋಲು ಅಸಾಧ್ಯವಾದ ಸ್ಥಿತಿ ಬರುತ್ತದೆ. ಭೀಷ್ಮ ಅಜೇಯತ್ವದ ಕುರಿತು ಅಶರೀರವಾಣಿಯ ಮೊಳಗಿನೊಡನೆ ಪರಶುರಾಮ ನಿವೃತ್ತನಾಗುತ್ತಾನೆ. ಹತಾಶೆಗೊಂಡ ಅಂಬೆ ಜನ್ಮಾಂತರದಲ್ಲಾದರೂ ಭೀಷ್ಮನನ್ನು ಮಣಿಸುವ ಶಪಥದೊಂದಿಗೆ ಅಗ್ನಿಪ್ರವೇಶ ಮಾಡುತ್ತಾಳೆ. ಭೀಷ್ಮ ಸ್ತ್ರೀಹತ್ಯೆಯಾದ ವಿಷಾದದೊಂದಿಗೆ ಮರಳುತ್ತಾನೆ. ಅಂಬಿಕೆ ಅಂಬಾಲಿಕೆಯರನ್ನು ವಿಚಿತ್ರವೀರ್ಯನಿಗೆ ಮದುವೆ ಮಾಡಿಸುವುದರೊಂದಿಗೆ ಪ್ರಸ್ತುತ ಪ್ರಸಂಗ ಮಂಗಳ ಕಾಣುತ್ತದೆ.

ಒಂದು ಜಿಜ್ಞಾಸೆ: ಈ ಪ್ರಸಂಗದಲ್ಲಿ ಏಕಲವ್ಯನ ಆಗಮನ ಕಾಲಾತಿಕ್ರಮಣವಲ್ಲವೇ? ಈ ಪ್ರಸಂಗ ಮುಗಿದ ಮೇಲೆ ಅಂಬಿಕೆ ಅಂಬಾಲಿಕೆಯರ ವಿವಾಹ, ಪತಿ ವಿಚಿತ್ರವೀರ್ಯನ ಮರಣ, ವ್ಯಾಸರ ನಿಯೋಗ, ಧೃತರಾಷ್ಟ್ರಾದಿಗಳ ಜನನ, ಅವರ ವಿವಾಹ, ಸಂತಾನ ಸಮಸ್ಯೆ, ಪಾಂಡವ ಕೌರವಾದಿಗಳ ಜನನ, ಅವರ ಬಾಲ್ಯದೊಡನೆ ದ್ರೋಣ ಪ್ರವೇಶ ಕಾಲಕ್ಕೆ ಅರ್ಜುನನ ಸಮಕಾಲೀನನಾಗಿ ಕಾಣಿಸುವ ಏಕಲವ್ಯ ಅಂಬಾ ಶಪಥದಲ್ಲಿ ಕಾಣಿಸುವುದು ಕಾಲಾತಿಕ್ರಮಣವೇ ಸರಿ. ಓರ್ವ ಕಿರಾತರಾಜ ಅಥವಾ ‘ಏಕಲವ್ಯ ಎನ್ನುವುದು ಒಂದು ಪಾರಂಪರಿಕ ನಾಮ (ಅಜ್ಜನ ಹೆಸರನ್ನು ಮೊಮ್ಮಕ್ಕಳಿಗೆ ಇಡುವಂತೆ) ಅಥವಾ ಕೇವಲ ಯಕ್ಷಗಾನೀಯ ಪ್ರಕ್ಷಿಪ್ತವೂ ಇರಬಹುದು. (ಪ್ರಸಂಗ ಸಾಹಿತ್ಯದಲ್ಲಿ ಪ್ರಕ್ಷಿಪ್ತ ದೋಷವಲ್ಲ ಎಂದು ಕೇಳಿದ್ದೇನೆ.)

ಸೀತಾಪಹಾರ - ತಾಳಮದ್ದಳೆ: ಇಲ್ಲಿ ತಾಳಮದ್ದಳೆಯ ವಿವರಗಳನ್ನು ನಾನು ವಿಸ್ತರಿಸುವುದಿಲ್ಲ. ಬದಲು ನಾಲ್ಕು ಪಾತ್ರ ವಿಶ್ಲೇಷಣೆಗಳು.

14 comments:

 1. ಸತ್ಯ ಸತ್ಯವೇ ಆಗಿರಬೇಕೆಂಬುದಕ್ಕೆ ಒಂದು ಒಳ್ಳೆಯ ವಿಮರ್ಶೆಯನ್ನು ಕೊಟ್ಟಿದ್ದೀರಿ. ಕೇವಲ ಅಬಿಮಾನದ ವರಸೆಯಲ್ಲಿ ಕಲೆ ಸೋಲುತ್ತಿರುವ ಅನೇಕ ಉದಾಹರಣೆಗಳನ್ನು ನೋಡಬಹುದು. ಈಚೆಗಿನ ಪುರಭವನದಲ್ಲಿ ನಡೆದ ಇಬ್ಬರು ಕಲಾವಿದರ ಕೋಳಿ ಜಗಳ, ಕೆಲ ತಾಳಮದ್ದಳೆಗಳಲ್ಲಿ ನಡೆದ ಭಂಡ ವಾಗ್ವಾದ ಪೋಲಿಸರನ್ನು ಕರೆಸುವಲ್ಲಿಯವರೆಗೆ ಹೋದದ್ದು ಯಕ್ಷಗಾನಕ್ಕೆ ಒಳ್ಳೆಯ ಲಕ್ಷಣವಲ್ಲ. ನಾವು ಈ ಸೀಮಿತ ವಲಯದಲ್ಲಿ ಚಪ್ಪಾಳೆಯಮೂಲಕ ಜನಪ್ರಿಯರೆಂದೆನಿಕೊಂಡಿರಬಹುದು. ಆದರೆ ಸಮಗ್ರ ಕಲೆಯ ದೃಷ್ಟಿಯಿಂದ ನೋಡಿದಾಗ ಇವೆಲ್ಲ ಕಲೆಯ ಸೋಲು ಎನ್ನುವದೂ ಅಷ್ಟೇ ಸತ್ಯ - ನಾರಾಯಣ ಯಾಜಿ

  ReplyDelete
 2. Chennagide, kshamisi kannada typing baruvudilla, kolyurara yaava sannivesha sinimeeyate annisitu tilisabahude?avaru saviraaru subhadre madidavaru, adhayana , chintane maadi , bedaddannu bidutha bekaadannu aaidu patrada volahokku abhinayisuva kalavida, melina yaavude maatu nanna tande emba bhavaneinda heluthilla.haagiruvaaga avara abhinayada kuritu ee vimarshe ?

  ReplyDelete
  Replies
  1. ಅಶೋಕವರ್ಧನ ಜಿ.ಎನ್27 July, 2013 09:15

   ಯಕ್ಷಗಾನದ ಶೈಲಿಗೆ (ಇಲ್ಲಿ ದೈಹಿಕ ಸಂಪರ್ಕಕ್ಕೆ ತುಂಬ ಮಿತಿಯುಂಟಲ್ಲವೇ?) ಇವರ ಅಪ್ಪುಗೆಯ ಸನ್ನಿವೇಶಗಳು ಮುಜುಗರ ತರುತ್ತವೆ, ಸಿನಿಮೀಯವಾಗುತ್ತವೆ.

   Delete
 3. ಎಂ. ಪಿ. ಜೋಶಿ27 July, 2013 09:26

  ಒಂದೆರಡು ಅಭಿಪ್ರಾಯ.
  ೧. ಏಕಲವ್ಯ ಹೆಸರು ಕೇವಲ ಆನುಕೂಲ್ಯದ್ದು ಮಾತ್ರ. ಪ್ರಸಂಗಕರ್ತ ಹಲಸಿನಹಳ್ಳಿ ಅವರ ಕಲ್ಪನೆ.ಅವರು ಕಿರಾತರಲ್ಲಿದ್ದ ಸಾಮಾನ್ಯ ಹೆಸರೆಂದು ಬಳಸಿದ್ದಾರೆ ಅಷ್ಟೆ.
  ೨.ಗಾನ ತಾಳಮದ್ದಲೆಯಂತಹದ್ದನ್ನು ನಡೆಸುವಾಗ ಪರಿಕಲ್ಪನಾತ್ಮಕ ಸಿದ್ಧತೆ ಬೇಕು. ಹೊರತು ಕೆಲವು ಭಾಗವತರನ್ನು ಆಹ್ವಾನಿಸಿ, ಪದ್ಯ ಹಂಚಿ ಹಾಡಿಸಿದರೆ ಆಗದು.

  ReplyDelete
 4. Illi vimarsheya agathya illa.. Abhimani balagadhindha hollarige sandha gowravarpane maathra. Ninne monne bhagavatharige GANA GANDHARVA, GANA CHAKRAVARTHI embella birudhu kottu sammana maaduva ee saamajadhalli 3 dashakagala kaala yaksha rangadhalli minchuva ee prathibheyaanu gowravisudhu samanjasave sari. Sanna putta thappugalu bandirabhagudhu. Aadhakkaage eedi karyakramave thappu embudharalli arthavilla....

  ReplyDelete
 5. ಅಶೋಕವರ್ಧನ ಜಿ.ಎನ್27 July, 2013 16:44

  ವಿಮರ್ಶೆಯೊಲ್ಲದ ಅಭಿಮಾನ ಅಂಧ. ನಾನು ಕಡಿಮೆ ಗೌರವದಿಂದ ಕಲಾಪಗಳಲ್ಲಿ ಭಾಗಿಯಾದವನೂ ಅಲ್ಲ. ಸಹಜ ಯೋಗ್ಯತೆಯಿಂದ ಗಳಿಸಿದ ಸಮ್ಮಾನವನ್ನು ಎಳಸು ಕಲಾವಿದರ ಎದುರು ಗಳಿಸಿದ ಜಯವೆಂಬಂತೆ ಬಿಂಬಿಸುವ ಅನಾಮಧೇಯರೇ ನೀವು ನಿಜವಾಗಿ ಹೊಳ್ಳರಿಗೆ ಅವಮಾನ ಮಾಡುತ್ತಿದ್ದೀರಿ ;-(

  ReplyDelete
 6. ಮಾನ್ಯರೇ ನಿಮ್ಮ ವಿಮರ್ಶೆ ಬಹುತೇಕ ಚೆನ್ನಾಗಿದೆ.ಸಮಯ ಪಾಲನೆ ಮುಖ್ಯ. ಆದರೆ, ರಘುರಾಮರ ಅಭಿಮಾನಿಗಳು ಸೇರಿ ಆಯೋಜಿಸಿದ ಬೃಹತ್ ಕಾರ್ಯಕ್ರಮದಲ್ಲಿ ಬಹಳಷ್ಟನ್ನು ಸೇರಿಸುವ ಅತ್ಯಧಿಕ ಉತ್ಸಾಹವೇ ಈ ವಿಳಂಬಕ್ಕೆ ಕಾರಣ. ಹೊಳ್ಳರ ಕಾರ್ಯಕ್ರಮದಲ್ಲಿ ತುಂಬಾ ಚೆನ್ನಾಗಿ ಮಾಡಬೇಕು ಎನ್ನುವುದು ಪ್ರತಿಯೊಬ್ಬ ಕಲಾವಿದನ ಆಸೆ, ಇವೆರಡಕ್ಕೂ ಸಮಯ ಹಿಡಿಯಿತು ಅಷ್ಟೆ.
  ಹೊಳ್ಳರನ್ನು ಸಕಲ ಕಲಾವಲ್ಲಭ ಎಂದು ಬಿಂಬಿಸುವ ಪ್ರಯತ್ನವಂತೂ ಖಂಡಿತಾ ಇರಲಿಲ್ಲ. ಹಾಗೇನಾದರೂ ಇದ್ದಿದ್ದರೆ, ಎಲ್ಲ ಭಾಗವತರಿಗೂ ಅವರು ಮದ್ದಳೆ ಕುಕ್ಕುತ್ತಿದ್ದರೇನೋ!, ಗಂಟೆಗಳ ಕಾಲ ಚೆಂಡೆ ಬೊಟ್ಟುತ್ತಿದ್ದರೇನೋ! ಹಾಗಾಗಲಿಲ್ಲ. ಭಾಗವತ ಹೊಳ್ಳರು ಚೆಂಡೆ ಮದ್ದಳೆಯನ್ನೂ ಬಾರಿಸಿದ್ದರು ಎಂಬ ದಾಖಲೀಕರಣ ಮಾತ್ರ ನಡೆದಿತ್ತು ಅಷ್ಟೆ. ಮುಂದೆ ಯಾರಾದರೂ ಶೋಧಕರು, ಸಂಶೋಧಕರು ‘’ಹಿಮ್ಮೇಳದ ಅನುಭವ ಇರುವವರ ಭಾಗವತಿಕೆ-ಕಲಾವಿದರನ್ನು ದುಡಿಸುವ ರೀತಿ’ ಇತ್ಯಾದಿ ವಿಷಯಗಳ ಬಗ್ಗೆ ಸಂಶೋಧನೆ ಮಾಡುವಾಗ ಇದೂ ಒಂದು ಗಮನಾರ್ಹ ಅಂಶವಾಗುತ್ತದೆ ಅಲ್ಲವೇ? ಈಗಿನ ಜನಪ್ರಿಯ ಭಾಗವತರಲ್ಲಿ ಒಬ್ಬರಾದ ಪದ್ಯಾಣ ಗಣಪತಿ ಭಟ್ಟರು 1973-75ರಲ್ಲಿ ಚೌಡೇಶ್ವರಿ ಮೇಳದಲ್ಲಿ ಚೆಂಡೆ-ಮದ್ದಳೆ ವಾದಕರಾಗಿ ಎರಡು ವರ್ಷ ತಿರುಗಾಟ ನಡೆಸಿದ್ದರೆಂದು ಈ ಕಾಲದ ಅವರ ಭಾಗವತಿಕೆಯ ಅಭಿಮಾನಿಗಳಿಗೇ ತಿಳಿದಿರಲಿಕ್ಕಿಲ್ಲ! ಅವರು 8 ವರ್ಷಗಳ ಕಾಲ ಚೆಂಡೆ-ಮದ್ದಳೆ ಕ್ಷೇತ್ರದಲ್ಲಿ ಕೃಷಿ ಮಾಡಿದ್ದರೆಂಬುದು ಈಗ ಇತಿಹಾಸ. ಶ್ರೀ ಅಮ್ಮಣ್ಣಾಯರೂ ಸಹ ಹಿಮ್ಮೇಳದ ಅಪಾರ ಅನುಭವ ಹೊಂದಿದವರು. ಆದ್ದರಿಂದ ಸಫಲ ಕಲಾವಿದ ನಡೆದು ಬಂದ ದಾರಿಯನ್ನು ಸಾಂಕೇತಿಕವಾಗಿ ತೋರಿಸಿದರೆ, ಅದು ಸಕಲಕಲಾವಲ್ಲಭರೆಂದು ತೋರಿಸಿದಂತೆ ಖಂಡಿತ ಅಲ್ಲ.
  ತಾಳ ಮದ್ದಳೆಯ ವಿಚಾರದಲ್ಲಿ ನೀವು ಅಂದ ಮಾತು ಮಾತ್ರ ಸತ್ಯ. ಜೋಶಿಯವರು ಮಾತ್ರ ಸಮಯ ಮತ್ತು ಸಂದರ್ಭದ ಒತ್ತಡವನ್ನು ಅದ್ಭುತವಾಗಿ ನಿಭಾಯಿಸಿದ್ದರು. ಸನ್ಯಾಸಿ ರಾವಣ (ಜೋಶಿ)ಮತ್ತು ಸೀತೆ (ಕೋಳ್ಯೂರು) ನನ್ನ ಮನಸ್ಸಿನ ಆಳದಲ್ಲಿ ಉಳಿದುಕೊಂಡರು.
  ಮೂರು ದಿನಗಳ ಕಾರ್ಯಕ್ರಮದಲ್ಲಿ ಹೊಳ್ಳರ ಸ್ವರ ಬೀಳುವಷ್ಟರ ಮಟ್ಟಿಗೆ ದುಡಿಸಲ್ಪಟ್ಟದ್ದು ನಿಜ. ಅಷ್ಟೊಂದು ದುಡಿಸಬಾರದು. ಅದೂ ಸಹ ಹೊಳ್ಳರ ಬಗ್ಗೆ ಆಯೋಜಕರ ಉತ್ಸಾಹ ಹಾಗೂ ತುಸುಮಟ್ಟಿಗೆ ಅನುಭವದ ಕೊರತೆ ಎಂದಷ್ಟೇ ಹೇಳಬಹುದು.
  ಕಲಾವಿಮರ್ಶೆಯ ನಿಮ್ಮ ಬಹುತೇಕ ಮಾತುಗಳನ್ನು ನಾನು ಒಪ್ಪಿಕೊಳ್ಳುತ್ತೇನೆ. ಕೋಳ್ಯೂರರ ನಟನೆ ಸಿನಿಮೀಯ ಎಂದು ನನಗೆ ಅನಿಸಿಲ್ಲ. ದುಃಖ ರಸದಲ್ಲಿ ಅವರು ಪಾತ್ರದ ಒಳಹೊಕ್ಕಾಗ ನನ್ನ ಕಣ್ಣುಗಳಲ್ಲಿಯೂ ನೀರು ಬಂದಿತ್ತು. ಅವರೇನಾದರೂ ಗ್ಲಿಸರೀನ್ ಬಳಸಿದ್ದಿದ್ದರೆ ಅದು ಸಿನಿಮೀಯವಾಗುತ್ತಿತ್ತೇನೋ!
  ಕಲೌಚಿತ್ಯ ಮೀರಿದ ಕಲಾ ಗೌರವ ಅನ್ನುವ ಶೀರ್ಷಿಕೆ ಖಂಡಿತಾ ಸರಿಯಲ್ಲ. ‘ಅರ್ಥ ಪೂರ್ಣ” ಗೌರವ ಅಥವಾ ಶಕ್ತಿ ಮೀರಿದ ಗೌರವ ಎಂದರೂ ತಪ್ಪಲ್ಲ. ಆದರೆ ಒಂದು ಇಂದಿನ ಕಾಲ ಘಟ್ಟದಲ್ಲಿ ಅದು ಸರಿ ಎಂದು ಕಾಣುವುದು ಮುಂದಿನ ದಿನಗಳಲ್ಲಿ. ಅಲ್ಲವೇ?
  ಸರವು ಕೃಷ್ಣ ಭಟ್

  ReplyDelete
  Replies
  1. ಅಶೋಕವರ್ಧನ ಜಿ.ಎನ್28 July, 2013 21:17

   ಪ್ರಿಯ ಕೃಷ್ಣಭಟ್ಟರೇ
   ವ್ಯಕ್ತಿ ಪರಿಣತಿಯ ಅಥವಾ ಕಲಾಸಾಧನೆಯ ಅತ್ಯುತ್ತಮ ಸ್ಥಿತಿಯನ್ನು ಮುಂದಕ್ಕೆ ಕಾಪಿಡುವ ಕ್ರಮವನ್ನು ದಾಖಲೀಕರಣವೆಂದು ನಾನು ನಂಬಿದವ. ವಿಡಿಯೋ ಅಥವಾ ಅಡಿಯೋ ಯಂತ್ರಗಳು ಹಿಡಿದಿಟ್ಟವೆಲ್ಲವನ್ನು ದಾಖಲೀಕರಣದ ಪಟ್ಟಿಗೆ ಸೇರಿಸುವುದಾದರೆ ಕೋಟ್ಯಂತರ ಶ್ರೀಸಾಮಾನ್ಯರ ಮದುವೆಯಿಂದ ಹಿಡಿದು ನೂರೆಂಟು ಕಲಾಪಗಳ ಚಿತ್ರಗ್ರಹಣಗಳೆಲ್ಲವೂ ನಮ್ಮನ್ನು ಕಾಡಲಾರವೇ? ಹೊಳ್ಳರ ಪರಿಣತಿ ಯಾವುದರಲ್ಲಿದೆಯೋ ಅದಕ್ಕೆ ಹೊಳಪು ಕೊಟ್ಟು (ಚಿನ್ನಕ್ಕೆ ಪಾಲಿಶ್ ಮಾಡುವುದು ಎನ್ನುತ್ತಾರಲ್ಲ ಹಾಗೆ), ಆದರ್ಶ ಪರಿಸರದಲ್ಲಿ, ಆಯ್ದ ಸನ್ನಿವೇಶಗಳನ್ನು ಕೊಟ್ಟು ಮಾಡಬೇಕಿತ್ತು. ಹೊಳ್ಳ, ಪದ್ಯಾಣ, ಅಮ್ಮಣ್ಣಾಯರೇ ಮುಂತಾದವರಿಗೆ ಅನ್ಯ ಪ್ರಕಾರಗಳಲ್ಲಿ ಪ್ರವೇಶ, ವೃತ್ತಿಪರ ಅನುಭವವಿರುವುದು ಸಂತೋಷವೇ. ಆದರೆ ಅದರ ಕಳಪೆ ರೂಪವನ್ನು ಸಾರ್ವಜನಿಕದಲ್ಲಿ ಪ್ರದರ್ಶಿಸಿ, ‘ದಾಖಲೀಕರಣ’ ಎನ್ನುವುದು, ಸಂಶೋಧಕರಿಗೆ ಆಹಾರ ಎಂದು ಭಾವಿಸುವುದು ಹೆಚ್ಚಾಗಲಿಲ್ಲವೇ? ಆ ಭಾವವನ್ನೇ ಮುಂದುವರಿಸಿ ನಾನು ‘ಬಣ್ಣಮೆತ್ತಿ ಗೆಜ್ಜೆ ಕಟ್ಟುವುದೊಂದು ಬಾಕಿಯಾಯಿತು’ ಎಂದೆ. ಹೊಳ್ಳರ ಸಾಧನೆಯ ಬಗ್ಗೆ ನನಗೇನೂ ಸಂದೇಹವಿಲ್ಲ, ಅದರ ಕುರಿತು ನೀವೆಲ್ಲ ಸೇರಿ ನಡೆಸಿದ ಉತ್ಸವ - ಸಂಭ್ರಮಗಳ ಬಗ್ಗೆ ವಿರೋಧ ಮೊದಲೇ ಇಲ್ಲ ಎಂದು ನಿಮಗೂ ನಾನು ಪ್ರಮಾಣಿಸಬೇಕೇ?

   Delete
 7. ಅಶೋಕ ವರ್ಧನರೇ
  ನಿಮಗ್ ವಯಸ್ಸಾಗಿದೆ. ಎಲ್ಲದರಲ್ಲೂ ತಪ್ಪು ಕಾಣಿಸುವುದು ವಯಸ್ಸಿನ ಧರ್ಮ ಮಾರಾಯ್ರೇ. ನೀವು ಬಾಯಿ ಮುಚ್ಚಿಕೊಂಡು ನಿಮ್ಮ ಮಗನ ಸಿನಿಮಾ ನೋಡಿಕೊಂಡು ಮನೇಲಿ ಕೂತ್ಕೊಳ್ಳಿ. ಅವರೇನೋ ಅಭಿನಂದನೆ ಮಾಡ್ಕೋತಾರೆ. ನಿಮಗೆ ಸಂಕಟ ಯಾಕೆ. ಬೇಕಿದ್ದರೆ ನಿಮಗೂ ಒಂದು ಅಭಿನಂದನೆ ಮಾಡುವ. ಹೀಗೆ ಎಲ್ಲದರಲ್ಲೂ ಕಲ್ಲು ಹುಡುಕಿ, ಅದನ್ನು ಕಾಲ ಮೇಲೆ ಹಾಕಿಕೊಂಡು ಮನಸ್ಸು ಗೊಬ್ಬರ ಮಾಡಿಕೊಂಡು ಬದುಕುವುದು ಬೇಕಾ ನಿಮಗೆ. ಇದನ್ನು ಅರಂಜುವುದು ಎಂದು ನಮ್ಮ ಭಾಷೆಯಲ್ಲಿ ಹೇಳುತ್ತಾರೆ. ನಿಮ್ಮ ಬ್ಲಾಗು ಓದುವುದು ಇವತ್ತಿಗೆ ಬಿಟ್ಟೆ.
  ಎಂಥಾ ಕರ್ಮಕ್ಕೆ ಬರೀತೀರಿ ಮಾರಾಯ್ರೇ ನೀವೆಲ್ಲ.

  ReplyDelete
 8. ಈ ಅಶೋಕಣ್ಣ ಟೀವಿ ನೋಡೋದು ಜಾಸ್ತಿ ಆಯ್ತೋ ಎಂತ. ಟೀವಿ 9 ಥರ ಬೈದಿದ್ದಾರೆ. ತಾಕತ್ತಿದ್ರೆ ಸ್ವಂತ ಮಾಡಿ ತೋರಿಸಬೇಕು. ಲೇಟಾದ್ರೆ ಇವರಿಗೇನಂತೆ. ನೋಡೋರು ನೋಡ್ತಾರೆ., ಇವರಲ್ಲಿಗೆ ಬಂದು ತಡ ಆಯ್ತು ಅಂತ ಯಾರಾದ್ರೂ ದೂರಿದ್ದಾರೋ.. ಈ ಮನುಷ್ಯನಿಗೆ ಮೊದಲಿನಿಂದಲೂ ಸಂಕುಚಿತ ಮನೋಭಾವ. ತಾನೊಬ್ಬ ಸಭ್ಯ ಬೇರೆಯವ್ರು ಫಟಿಂಗರು ಅನ್ನೋ ಥರಾನೇ ಓಡಾಡ್ತಿದ್ದ..

  ReplyDelete
 9. ಕೆ.ಸಿ ಕಲ್ಕೂರಾ29 July, 2013 20:46

  ಆಗಾಗ ಜನರು ನನ್ನನ್ನು ಹೊಗಳಿದಾಗ, "ಈ ಸಂತಾಪ ಈಗಲೇ ಬೇಡ." ಅನ್ನುತ್ತೇನೆ. ಮನುಷ್ಯನನ್ನು ಹೊಗಳುವುದು ಸನ್ಮಾನ ಮತ್ತು ಸಂತಾಪ ಎರಡೇ ಸಂದರ್ಭದಲ್ಲಿ. ಸನ್ಮ್ನಾನ ಮಾಡಿದಾಗ ಶಾಲು ಹೊದೆಸಿ, ಹೂವಿನ ಹಾರ ಹಾಕಿ ಸ್ಮರಣಿಕೆಯನ್ನಿತ್ತು, (ಕೆಲವೊಮ್ಮೆ) ಸಂಭಾವನೆ ಕೊಡುತ್ತಾರೆ. ಸಂತಾಪದಲ್ಲಿ ಛಾಯಾಚಿತ್ರಕ್ಕೆ ಹೂವಿನ ಹಾರ ಹಾಕಿ ಹೊಗಳುವುದು.
  ಸಂ+ತಾಪ = ಸಂತಾಪ. ಸಂ+ಮಾನ. = ಸಮ್ಮಾನಾ ಯಾ ಸನ್ಮಾನ. ಇಂತಹ ಸಂದರ್ಭಗಳಲ್ಲಿ ಹೊಗಳಿಕೆಯೇ ಮುಖ್ಯ. ಕೆಲವೊಮ್ಮೆ ನಾಮವಿಶೇಷಣೆಗಳ ಕೊರತೆಯಿಂದ ಅಲ್ಲಾಡುತ್ತಾರೆ. ಇದೆರಡೂ ಇಲ್ಲದೇ ಹೊಗಳಿದಲ್ಲಿ ಬೇಸರವಾಗುತ್ತದೆ.

  ReplyDelete
 10. ನಮಸ್ಕಾರ ಅಶೋಕವರ್ಧನರಿಗೆ
  ತುಂಬಾ ಚೆನ್ನಾಗಿ ಬರೆದಿದ್ದೀರಿ. ನಿಮ್ಮ ಅನಿಸಿಕೆಗಳಲ್ಲಿ ಯತಾರ್ಥವಿದೆ. ಇಷ್ಟು ಮುಕ್ತವಾಗಿ ಕಲೆಯ ಬಗ್ಗೆ, ಕಲಾವಿದರ ಬಗ್ಗೆ ಮಾತನಾಡುವ ಶಕ್ತಿ ಬಹುಷಃ ನಾನು ಕಂಡಂತೆ ಡಾ. ರಾ. ಗಣೇಶರಿಗೆ ಬಿಟ್ಟರೆ ನಿಮ್ಮಲ್ಲೇ ಅನಿಸುತ್ತ್ದದೆ. ಇದು ಉತ್ರ್ಪೇಕ್ಷೆಯ ಮಾತು ಖಂಡಿತಾ ಅಲ್ಲ. ನನಗನಿಸಿದ್ದು ಹೇಳಿದೆ ಅಷ್ಟೇ.
  ಯಾವುದೇ ಕಾರ್ಯಕ್ರಮ ಅಥವಾ ಮಾತುಗಳೆಲ್ಲದಕ್ಕೂ ಅದರದ್ದೇ ಆದ ಆಯುಷ್ಯವಿರುತ್ತದೆ. ಆ ಆಯುಷ್ಯ ತೀರಿದ ನಂತರ ನೆನಪಿಸಿದರೂ ಜನ ನೆನಪು ಮಾಡಿಕೊಳ್ಳಲಾರರು. ಆದರೆ ಒಂದಂತೂ ನಿಜ; ಬರೆಹ, ಅನಿಸಿಕೆಗಳಲ್ಲಿ ಪ್ರಾಮಾಣಿಕತೆಯಿರುವುದನ್ನು ಖಂಡಿತವಾಗಿಯೂ ಯಾವುದೇ ಕ್ಷೇತ್ರಗಳೂ ದೀರ್ಘಕಾಲದ ವರೆಗೆ ನೆನಪಿಟ್ಟುಕೊಳ್ಳುತ್ತವೆ. ಕಲೆಯ ಹರಹು ದೊಡ್ಡದು. ಒಳ್ಳೆಯದನ್ನು ಖಂಡಿತಾ ಉಳಿಸಿಕೊಳ್ಳುತ್ತದೆ. ಸತ್ತ್ವವಿಲ್ಲದುದನ್ನು ತೂರಿಬಿಡುತ್ತದೆ. ಯಾರು ಎಷ್ಟೇ ಬಾಯಿ ಬಡಿದುಕೊಂಡು ಹೊಗಳಿದರೂ ಕಲೆ ತನಗೆ ಬೇಕಿರುವುದನ್ನು ಮಥನ ಮಾಡಿಕೊಳ್ಳುತ್ತಲೇ ಇರುತ್ತದೆ.ಈ ನಿಟ್ಟಿನಲ್ಲಿ ಒಳ್ಳೆಯ ವಿಮರ್ಶೆಯೆನ್ನುವುದು ಅದರ ಸತ್ತ್ವಾಸತ್ತ್ವಗಳನ್ನು ನಿರ್ಧರಿಸಿ ಕಾಣ್ಕೆ ನೀಡುವ ಒಂದು ರೂವಾರಿ. ಅದನ್ನು ನಿಷ್ಠೆಯಿಂದ ಮಾಡುವ ಎಲ್ಲರಿಗೂ ಕೃತಕೃತ್ಯತೆಗಳು ಸಲ್ಲುತ್ತವೆ. ಅಷ್ಟಕ್ಕೂ ಮುಕ್ತ ವಿಮರ್ಶೆಯ ಪ್ರೀತಿ ಇಲ್ಲದ ಯಾವುದೇ ಕಲಾವಿದ ಅಥವಾ ಅಭಿಮಾನಿ ಕೇವಲ ಸ್ವವ್ಯಕ್ತಿತ್ವದ ಆರಾಧಕರೇ ವಿನಾ ಕಲೆಯ ಆರಾಧಕರರಾಗಲಾರರು. ಅವರ ಬಗ್ಗೆ ನಮಗೆ ಬೇಕಾಗಿರುವುದು ಕೇವಲ ಅನುಕಂಪವಷ್ಟೇ.

  ಇನ್ನು ನೀವು ಹೇಳಿದ ಅಭಿನಯದ ಕುರಿತ ಅನಿಸಿಕೆ ಸರಿ. ಅತಿರೇಕವಾದ ಯಾವುದೇ ವಿಚಾರಗಳೂ ಅಸಹ್ಯವೇ ಸರಿ. ಅದು ಅಭಿನಯಕ್ಕೂ ಸಲ್ಲುತ್ತದೆ. ಭಾವ ತಲ್ಲೀನತೆ ಎಂದುಕೊಂಡು ಓವರ್ ಆಕ್ಟಿಂಗ್ ಮಾಡಿ ಔಚಿತ್ಯವನ್ನು ಮರೆತರೆ ಅದು ಯಾವುದೇ ಪ್ರಜಾವಂತ, ಸಹೃದಯ ಪ್ರೇಕ್ಷಕರಲ್ಲಿ ಯಾವುದೇ ರಸವನ್ನೂ ದೀಪ್ತಗೊಳಿಸಲಾರದು. ಒಂದು ವೇಳೆ ರಸ ದೀಪ್ತವಾದರೂ ಅದು ಭಾವಾಭಿನಯಕ್ಕೆ ಹೊಂದಿಕೊಳ್ಳದೆ ವಿರೋಧಾಭಾಸವಾದ ವೈಯಕ್ತಿಕ ನಿಟ್ಟಿನ ರಸವನ್ನೇ ತರುತ್ತದೆ. ಉದಾಹರಣೆಗೆ: ಅತಿಯಾದ ಶೃಂಗಾರಾಭಿನಯ ಪ್ರೇಕ್ಷಕರಲ್ಲಿ ಸ್ಥಾಯಿ ಭಾವಕ್ಕೆ ಪೋಷಕವಾಗದೆ ಪ್ರೇಕ್ಷಕನೇ ಸ್ವತಃ ಉದ್ರೇಕದಲ್ಲಿ ಮುಳುಗುವಂತೆಯೋ ಅಥವಾ ಭೀಭತ್ಸ ಅಸಹ್ಯವನ್ನೋ)ವನ್ನೋ ಉಂಟುಮಾಡುವಂತೆಯೋ ಆಗುತ್ತದೆ.
  ಹಾಗೆಂದು ಸಂಭೋಗ ಶೃಂಗಾರ ಅಭಿನಯ ತಪ್ಪೆಂದು ನಾನು ಹೇಳುತ್ತಿಲ್ಲ. ಆದರೆ ಅದಕ್ಕೂ ಔಚಿತ್ಯದ ಚೌಕಟ್ಟಿದೆ; ಅದು ಕಲಾವಿದನ ಸತ್ತ್ವ ಎಷ್ಟರಮಟ್ಟಿನದ್ದು, ಪಾತ್ರದ ನಿರೀಕ್ಷೆ ಎಲ್ಲಿಯ ವರೆಗೆ ಎಂಬಲ್ಲಿ ನಿರ್ಧಾರವಾಗುತ್ತದೆ. ಸ್ತ್ರೀ ಪುರುಷರ ಪಾತ್ರಗಳಲ್ಲಿ ಶೃಂಗಾರವೋ, ಕರುಣದ ಭಾವವೋ ಇರಬಹುದು. ಆದರೆ ಅದರ ಸಾನ್ನಿಧ್ಯ ಸಹೃದಯ ಪ್ರೇಕ್ಷಕರಿಗೆ ಅಪ್ಯಾಮಾನವಾಗುವಂತೆ ಇರಬೇಕೇ ವಿನಾ ಮುಜುಗರವನ್ನೋ, ಹಾಸ್ಯವನ್ನೋ ತರುವಂತಿದ್ದರೆ ಆ ಅಭಿನಯ ಪಕ್ವಯುತವಾದದ್ದು ಖಂಡಿತಾ ಅಲ್ಲ. ಗಂಡ ಹೆಂಡತಿಯರ ಪಾತ್ರಗಳಾದರೂ ನಿಜಜೀವನದ ಎಲ್ಲವನ್ನೂ ರಂಗದಲ್ಲಿ ತರುತ್ತೇನೆ ಎಂದರೆ ’ಅವಸ್ಥಾನುಕೃತಿಯಾಗಿ ನಾಟ್ಯವಿರುವುದಿಲ್ಲ. ಬದಲಾಗಿ ಕಲಾವಿದರ ಮನೋಭೂಮಿಕೆಗೆ ಹಿಡಿವ ಅನುಕರಣೆಯಾಗಿರುತ್ತದೆ’ ಅಷ್ಟೇ. ನಿಜಜೀವನದ ಕೊಲೆಗೂ, ರಂಗದ ಮೇಲೆ ನಡೆವ ವಧೆಗೂ ವ್ಯತ್ಯಾಸ ಎಷ್ಟಿರುವುದೋ ಹಾಗೆಯೇ ಉಳಿದ ವಿಚಾರಗಳೂ ಕೂಡಾ. ನಿಜಜೀವನದ ದ್ವೇಷ, ರತಿ, ಕರುಣ, ಪ್ರೀತಿ, ಮತ್ಸರಕ್ಕೆ ಕಲೆಯ ಭೂಮಿಕೆ ವೇದಿಕೆಯಾದರೆ ಅದು ಕಲೆಯಾಗಿ ಖಂಡಿತಾ ಇರಲಾರದು. ಅಂತೆಯೇ ಉದ್ವೇಗದ ಅಭಿನಯ ಉದ್ರೇಕ ತರಬಹುದೇ ವಿನಾ ಔದಾರ್ಯದ ಆನಂದವನ್ನಲ್ಲ.
  ಕಲಾವಿದ ಎಷ್ಟೇ ಹಿರಿಯವನಾದರೂ, ಯಾರೇ ಆದರೂ; ಪಾತ್ರದ ಮುಂದೆ, ಕಲೆಯ ಮುಂದೆ ಅವರು ಕಲೆಗಿಂತ ದೊಡ್ಡವರಲ್ಲ. ಅಭಿನಯ ಸಾಮರ್ಥ್ಯ ಅನುಭವದ ಆಧಾರದಲ್ಲಿ ಮಾಗುತ್ತದೆ ನಿಜ. ಆದರೆ ಔಚಿತ್ಯವನ್ನು ಅರಿಯುವ ಸಾಮರ್ಥ್ಯ ಎಲ್ಲದಕ್ಕಿಂತ ವಿಶಿಷ್ಟ ಸಂಸ್ಕಾರ.ಅದಕ್ಕೆ ವಯಸ್ಸಿನ ಮೇಲರಿಮೆ, ಕೀಳರಿಮೆಗಳಿಲ್ಲ. ಅರ್ಹತೆ,ಪದವಿಗಳ ಗಣ್ಯ ಅದಕ್ಕಿಲ್ಲ. ಇದು ಕಾಳಿದಾಸನಿಂದ ಮೊದಲ್ಗೊಂಡು ಎಲ್ಲಾ ಕವಿ-ಕಾವ್ಯ-ರಂಗಪ್ರಪಂಚದಲ್ಲಿ ಅನ್ವಯ. ಒಮ್ಮೆ ಪೂರ್ವಿಕರ ರಸಸಿದ್ಧಾಂತ, ಸೌಂದರ್ಯ ಮೀಮಾಂಸೆ,ಕಾವ್ಯಕಲ್ಪಗಳನ್ನು ಕುತೂಹಲಕ್ಕಾದರೂ ಕಲಾವಿದರು ನಿಜಕ್ಕೂ ತೆರೆದು ಅಷ್ಟಿಷ್ಟಾದರೂ ನೋಡಿದರೆ ಪೊಳ್ಳು ಆರಾಧನೆಗಳು, ಸ್ವಯಂ ವಿಜೃಂಭಣೆಗಳಿಗೆ ಕಡಿವಾಣ ಬೀಳುತ್ತದೆ. ಆದರೆ ಅದಾಗುವುದು ಅಷ್ಟು ಸುಲಭವೇ???

  ReplyDelete
 11. taranatha vorkady29 August, 2013 17:37

  Ashokavardhanare, nimma abhipraya sathyakke dooravadaddalla. Adakke banda prathikriyegalalli noopura bhramariya abhipraya athyuttamavagittu. Nanna 25 varshagala odanatadalli aathmasakshige sariyagi heluvudiddare aa vyakthiya dodda yogyatheyendare swara mathra. Prasanga jnana, rangada krama avarige gottide embudu nanaganthoo sarvathaa gottagilla. Yavudoo ondu sandharbhadalli kevala avaralli mathadiddannu photo thegedu kalavida avara margadarshanadalli thayaraguttiddane endu jagate emba english yakshagana patrikeyalli bhavachithra prakatavagithu. bhaktharu iruvalli kallu bhagavanthanaguvudu sahajavashte? bekadare kalavidaralli guttininda kelidare sathyavannu tiliyabahudu. Nimagondu maathu gottalla-samanya chithrakke chinnada chaukattu! Abhimanigala kaiyalli manmatha hanumanthanagabahudu, hanumantha manmathanagabahudu.Inthaha viparyasagalannu kandee naanu mela bittaddu. Prajaprabhuthvadalli enu bekadaroo maadabahudu bennige jana iddarayithu ashte. Nimmanthaha nirbheetha, sathyapriya vimarshaka prekshakaru eshtu mandi iddare heli? Sadyakke prajnavanthara mundiruva dari sahane maathra. Aadare ondu indina daakhale munde ithihasa. Ee karanadinda inthaha prahasanagalu ithihasakke thappu mahithiyannu niduthade embudashte nanna vishada.

  ReplyDelete