28 June 2013

ಸುಬ್ಬಪ್ಪನ ದಯೆ

(ಸಣ್ಣ ಕತೆ೧೯೪೭ ಜಿ.ಟಿ. ನಾರಾಯಣ ರಾವ್)

[ಜಿಟಿ ನಾರಾಯಣ ರಾವ್ (ನನ್ನ ತಂದೆ) ೧೯೪೬ ರಿಂದ ೧೯೫೨ರ ನಡುವೆ ಕೆಲವು ಸಣ್ಣ ಕತೆಗಳನ್ನು ಬರೆದು, ಆ ಕಾಲದ ಕೆಲವು ನಿಯತಕಾಲಿಕಗಳಲ್ಲಿ ಪ್ರಕಟಿಸಿದ್ದರು. ಅವುಗಳಲ್ಲಿ ಕೆಲವನ್ನು ತಂದೆಯ ವಿದ್ವಾನ್ ಮಿತ್ರ ಶ್ರೀನಿವಾಸ ಉಡುಪರು ತಮ್ಮ ವಸಂತಮಾಲಿಕೆಯಲ್ಲಿ ವನಸುಮ ಮತ್ತು ಕೊಡಗಿನ ಕತೆಗಳು ಎಂಬ ಎರಡು ಸಂಕಲನವಾಗಿಯೂ ಪ್ರಕಟಿಸಿದ್ದರು. ಅವನ್ನು ಮತ್ತು ಹಾಗೆ ಬರದೇ ಉಳಿದವನ್ನೂ ಸೇರಿಸಿ ೧೯೯೩ರಲ್ಲಿ ಕೊಡಗಿನ ಸುಮಗಳು ಹೆಸರಿನಲ್ಲಿ ನಾನೂ (ಅತ್ರಿ ಬುಕ್ ಸೆಂಟರ್ ಹೆಸರಿನಲ್ಲಿ) ಪ್ರಕಟಿಸಿದ್ದೆ. ಇಂದು ತಂದೆ ದೇಹ ಕಳೆದ ದಿನ (೨೮--೨೦೦೮).  ಅವರ ಸ್ಮೃತಿಗೆ ಈಗ ಇಲ್ಲಿ ಕೊಡಗಿನ ಸುಮಗಳಿಂದ ಒಂದು ಕತೆಯನ್ನು ಕೊಡುತ್ತಿದ್ದೇನೆ. ಮುಂದೆ ಉಳಿದವನ್ನು ಅನಿಯತವಾಗಿ ಪ್ರಕಟಿಸಿ, ಕೊನೆಯಲ್ಲಿ ವಿ-ಪುಸ್ತಕವಾಗಿಯೂ ಸಾರ್ವಜನಿಕಕ್ಕೆ ಮುಕ್ತಗೊಳಿಸಲಿದ್ದೇನೆ - ಅಶೋಕವರ್ಧನ]

ನಮ್ಮೂರ ಹೊಲೆಯರ ವಾಲಗ ತಮಟೆಗಳನ್ನು - ತಾಳವಾದ್ಯ ಕಛೇರಿಯನ್ನು - ನೀವೆಂದಾದರೂ ಕೇಳಿರುವಿರಾ? ಇದು ಬಹಳ ವಿನೋದವಾಗಿದೆ. ವಾಲಗ ಬಾರಿಸುವವನು, ಶ್ರುತಿ ಕೊಂಬು ಊದುವವರು, ತಮಟೆ ಬಡಿಯುವವರು ಹೀಗೆ ಇಷ್ಟು ಜನರ ಸಮ್ಮೇಳನ ಇಲ್ಲಿ ನಡೆಯುವುದು. ಶ್ರುತಿಗಾರ ಪ್ಞೆರಞೇ ಎಂದು ನಾದ ತುಂಡು ಮಾಡದೇ ಏಕಾಗ್ರತೆಯಿಂದ ಊದುತ್ತಿರುತ್ತಾನೆ. ಅವನು ಕಲ್ಲಿನ ಪ್ರತಿಮೆಯಂತೆ ನಿಶ್ಚಲ. ಆದರೆ ಕೆನ್ನೆಗಳು ಮಾತ್ರ ಉಬ್ಬುತ್ತ ಚಪ್ಪಟೆಯಾಗುತ್ತ ಇರುತ್ತವೆ. ವಾಲಗದವನು ನಾನಾ ವಿಧದ ಹಾಡುಗಳನ್ನು ಬಾರಿಸುತ್ತಾನೆ. ಎಲ್ಲವೂ ಅಪಸ್ವರಮಯ - ಆ ಅಪಸ್ವರದಿಂದಲೇ ಒಂದು ವಿನೋದವಾಗುವುದು. ಇನ್ನು ತಮಟೆಯವರದು ಎಲ್ಲ ಹಾಡುಗಳಿಗೂ ಒಂದೇ ಅಚ್ಚು. ಪೇಟೆಂಟು ತಾಳ - ಡಂಗಡಕ ಎಂದು ಹೊಡೆಯುತ್ತಿರುತ್ತಾರೆಕೊಂಬಿನವರು ಅರ್ಧ ವೃತ್ತಾಕಾರದ ಆ ವಾದ್ಯವನ್ನು ಆಗಾಗ ಗಂಭೀರವಾಗಿ ಮೇಲೆತ್ತಿ ಚೂಪಾದ ಕೊನೆಯನ್ನು ತುಟಿಯ ಮೇಲಿರಿಸಿ, ಈ ಸಂಗೀತಸೌಧಕ್ಕೆ ಕಳಸವಿಡುವಂತೆ, ದಿಗ್ಭಿತ್ತಿಗಳನ್ನು ಭೇದಿಸುವಂತೆ ಮೊಳಗಿಸುತ್ತಾರೆ! ಅಂತೂ ಏನೋ ಒಂದು ಗಲಭೆ, ಒಂದು ಗದ್ದಲ ನಡೆಯುತ್ತಿರುತ್ತದೆ; ಅದನ್ನು ಸಂಗೀತವೆನ್ನಿ, ಹರಟೆಯೆನ್ನಿ. ಅದನ್ನು ಕೇಳುತ್ತ ನಿಂತರೆ ಒಂದು ವಿಧದ ಆನಂದವೇ ಆಗುತ್ತದೆ. ಕಾಲುಗಳು ಫಕ್ಕನೆ ತಾಳಕ್ಕೆ ಸರಿಯಾಗಿ ಹೆಜ್ಜೆಯಿಡಲು ತೊಡಗುತ್ತವೆ. ಸಣ್ಣ ಮಕ್ಕಳು, ಕೆಲಸಗಾರರು ಮೊದಲಾದವರು ಈ ವಾದ್ಯ ಸಂಭ್ರಮ ನಡೆಯುವಾಗ ಮೇಳಗಾರರ ಸುತ್ತಲೂ ಕುಣಿಯುವುದುಂಟು. ಇದು ಭರತನಾಟ್ಯ ಶಾಸ್ತ್ರಕ್ಕೆ ಸರಿಯಾದ ನೃತ್ಯ ಎಂದು ಇಂದಿಗೂ ಕೆಲವರು ಸಾಧಿಸುತ್ತಿದ್ದಾರೆ! ನೀವು ಬೇರೆ ವಿಷಯದಲ್ಲಿ ತಲ್ಲೀನರಾಗಿದ್ದರೆ, ಸ್ವಲ್ಪ ಹೊತ್ತಿನಲ್ಲಿಯೇ ಇದೊಂದು ವಾದ್ಯಗೋಷ್ಠಿ ನಡೆಯುತ್ತಿದೆ ಎಂದೇ ತಿಳಿಯುವುದಿಲ್ಲ. ಆದರೆ ಈಸಂಗೀತಫಕ್ಕನೆ ನಿಂತರೆ, ಜಡಿಮಳೆ ಸುರಿದು ನಿಂತಾಗ ಆಗುವ ಅನುಭವವೇ ಆಗುವುದು. ಈ ಹೊಲೆಯರು ಹಳ್ಳಿಯಲ್ಲಿ ಹುಟ್ಟಿ, ವಿದ್ಯೆಯ ಯಾವ ಗಂಧವೂ ಇಲ್ಲದೆ ಬೆಳೆದು, ಅಲ್ಲಿಯೇ ಮಣ್ಣುಗೂಡುವವರು ಎಂದು ತಿಳಿದರೆ ನಮಗೆ ಈ ವಾದ್ಯಗಾರರ ವಿಷಯದಲ್ಲಿ ತಿರಸ್ಕಾರ, ತಾತ್ಸಾರ ಮತ್ತು ಕುಚೇಷ್ಟೆ ಉಂಟಾಗುವುದೇ ಇಲ್ಲ. ಬದಲು ಆದರ, ಕುತೂಹಲ, ವಿನೋದ ಜನಿಸುತ್ತವೆ. ತಂಜಾವೂರಿನ ನಾಗಸ್ವರ ವಿದ್ವಾಂಸರ ಗುರುಕುಲಕ್ಕೆ ಸೇರಿದವರಲ್ಲ ಈ ಹರಿಜನರು. ಸರಿಗಮವೆಂದರೇನೆಂದು ಅರಿಯದವರು. ಶ್ರುತಿ ಹೊಂದಿಸುವುದು ಹೇಗೆ, ಏನು ಎಂದು ತಿಳಿಯದಿದ್ದರೂ ಇವರ ವಾಲಗಕ್ಕೆ ಒಂದು ಶ್ರುತಿಯಿದೆ. ಇನ್ನು ತಾಳಾದ ತದ್ಧಿತ್ತೋಂನ್ನಂಗಳ ವೈಖರಿಯಾಗಲೀ, ರಾಗದ ಮೇಳಕರ್ತ ವಿಭಾಗಗಳಾಗಲೀ ಇವರಿಗೆ ತಿಳಿಯದು. ನಮ್ಮೂರಿನ ಜನರು ಸರಳ ಹೃದಯಿಗಳು. ಅಂತೆಯೇ ಮದುವೆಮುಂಜಿಗಳಿಗೆ ಹುತ್ತರಿ ಕುಣಿತ, ಸಾವಿನ ಮೆರವಣಿಗೆ ಮುಂತಾದ ಶುಭ, ಸಂತೋಷ, ಅಶುಭ ಕಾರ್ಯಗಳಿಗೆಲ್ಲ ಈ ಡಂಗಡಕ ವಾದ್ಯವನ್ನೇ ಕರೆಯಿಸುತ್ತಾರೆ. ಈ ಸಂದರ್ಭದಲ್ಲಿ ಮುಖ್ಯವಾಗಿ ಬೇಕಾದುದು ಗಲಭೆ, ಕಿವಿಗೆ ತಾಗುವ ಸ್ವರ, ಏನೋ ಸಮಾರಂಭ ನಡೆಯುತ್ತಿದೆ ಎಂದು ಅರಿಯಲು. ಮೈಸೂರು, ತಂಜಾವೂರು ಸಂಗೀತದ ಚಾಕಚಕ್ಯ ಅನಾವಶ್ಯಕ. ಆದರೂ ಈಚೆಗೆ ಕೆಲವರು ಈ ತತ್ತ್ವಕ್ಕೆ ಭಂಗ ತರುತ್ತಿದ್ದಾರೆ. ಮೈಸೂರಿನಿಂದ ವಾಲಗದವರನ್ನು ಕರೆಯಿಸಿ, ಅವರಿಗೆ ಒಂದಕ್ಕೆ ನಾಲ್ಕು ತೆತ್ತು, ಅವರು ಬಾರಿಸುವಉತ್ತಮ ರೀತಿಯ ಅಪಸ್ವರಕ್ಕೆ ಶಾಭಾಸ್ಗಿರಿಯನ್ನೂ ಬಹುಮಾನವನ್ನೂ ಕೊಟ್ಟು ಕಳಿಸುತ್ತಾರೆ. ಆದರೆ ಅಪೂರ್ವ. ಹೆಚ್ಚಿನ ಎಲ್ಲ ಶುಭಾಶುಭ ಕಾರ್ಯಗಳಿಗೆ ಪುರೋಹಿತರ ಮಂತ್ರದಂತೆ (ಈಗ ಇದೂ ಮರೆಯಾಗುತ್ತ ಬರುತ್ತಿದೆ) ಹೊಲೆಯರ ವಾದ್ಯವೂ ಆವಶ್ಯಕ.


ಬಲಗೈ ನಿಂಗನು ಮಡಿಕೇರಿಯ ಹೊಲೆಯರ ಪೈಕಿ ಅನುಭವಸ್ಥನಾದ ವಾದ್ಯಗಾರ (ವಾಲಗ ಬಾರಿಸುವವನು) ಎಂದು ಹೆಸರು ಪಡೆದಿದ್ದನು. ಇದಕ್ಕೆ ರುಜುವಾತಾಗಿ ಕೋದಂಡ ಕುಟ್ಟಯ್ಯ ದೊರೆಗಳ ಮದ್ವೆಗೆ ನನ್ನೇ ಕರ್ಸಿದ್ರು ಬುದ್ದೀ. ಇಲ್ನೋಡಿ ಅವ್ರು ನಂಗೆ ಇನಾಂ ಕೊಟ್ಟ ಕೋಟೂಎನ್ನುತ್ತ ಒಂದು ಹಳೆಯ ಕೋಟನ್ನು ಹೆಮ್ಮೆಯಿಂದ ತೋರಿಸುತ್ತಿದ್ದನು. ಮಡಿಕೇರಿ ಪೇಟೆಯ ದೊಡ್ಡ ಮನುಷ್ಯರ ಮನೆಯ ಮುಖ್ಯ ಕಾರ್ಯಗಳಿಗೆಲ್ಲ ನಿಂಗನದೇ ವಾದ್ಯ ಖಾಯಂ ಆಗಿತ್ತು. ಪಕ್ಕ ವಾದ್ಯಗಳಿಗೆ, ಅಂದರೆ ಮೋರಿ ಹಿಡಿಯಲು (ಶ್ರುತಿ ಊದಲು), ತಮಟೆ ಬಡಿಯಲು ಇತ್ಯಾದಿಗಳಿಗೆ ಉಕ್ಕಡದ ಇತರ ಹೊಲೆಯರನ್ನು ಕರೆದುಕೊಂಡು ಹೋಗುತ್ತಿದ್ದನು. ಇವರಿಗೆಲ್ಲ ಭಕ್ಷೀಸು, ಹೊಟ್ಟೆ ತುಂಬ ಊಟ, ಬಟ್ಟೆ ಎಲ್ಲ ದೊರೆಯುತ್ತಿದ್ದುವು. ಆದರೆ ಮದುವೆ ಮುಂತಾದವುಗಳು ಇಡಿಯ ವರ್ಷದಲ್ಲಿ ಇರುವುದಿಲ್ಲ. ಉಳಿದ ಸಮಯದಲ್ಲಿ ಕೂಲಿಗೆಲಸ ಮಾಡಿ ಹೊಟ್ಟೆ ಹೊರೆಯುತ್ತಿದ್ದರು.

ಅಂತೂ ನಿಂಗನಿಗೆ ಏನೂ ತೊಂದರೆಯಿರಲಿಲ್ಲ. ಆದರೆ ಅವನಿಗೆ ಮಕ್ಕಳೇ ಇರಲಿಲ್ಲ. ಹೊಲತಿ ಪುಟ್ಟಿಯೂ ಎತ್ತಿಕೊಳ್ಳಲು, ಆಡಿಸಲು ಒಂದು ಮಗುವಿಲ್ಲವಲ್ಲ ಎಂದು ಪೇಚಾಡುತ್ತಿದ್ದಳು. ದಿನಗೂಲಿಗೆ ಪೇಟೆಗೆ ಹೋಗುವಾಗ ವಾಂಕಾರಪ್ಪನಿಗೆ (ಓಂಕಾರೇಶ್ವರ ದೇವಾಲಯ) ದೂರದಿಂದ ನಮಸ್ಕಾರ ಮಾಡಿ ಹೋಗುತ್ತಿದ್ದಳು. ಮೋರಿ ಹಿಡಿಯಲು, ಮುಂದೆ ಜತೆಯಲ್ಲಿ ಕೆಲಸ ಮಾಡಲು, ಹಿಂದಿನಿಂದ ಬಂದ ವಾಲಗದ ವಿದ್ಯೆಯನ್ನು ಮುಂದುವರಿಸಲು ಒಬ್ಬ ಮಗನಿಲ್ಲವಲ್ಲ ಎಂದು ನಿಂಗನು ಕೊರಗುತ್ತಿದ್ದನು. ಮಕ್ಕಳೆಂದರೆ ವೃದ್ಧಾಪ್ಯದಲ್ಲಿ ತಮಗೆ ಅನ್ನ ಕೊಡುವವರು, ಮನೆಗೆ ಭೂಷಣರು ಎಂದು ಮುಂತಾದಉದಾತ್ತಭಾವನೆಗಳು ಅವರಲ್ಲಿರಲಿಲ್ಲ. ಈ ರೀತಿ ಅಭಿಪ್ರಾಯವಿದ್ದು ಮುಂದೆ ಹಾಗಾಗದಿದ್ದರೆ ಆಗುವ ಹತಾಶೆಯೂ ಅವರಿಗಿರಲಿಲ್ಲ. ನೆರೆಕರೆಯ ಗುಡಿಸಲಿನ ಮಕ್ಕಳೆಲ್ಲರೂ ದೊಡ್ಡವರಾದರು. ಆದರೆ ನಿಂಗನ ಗುಡಿಸಲು ಮಾತ್ರ ತಣ್ಣಗೆ ಉಳಿಯಿತು.
ಮುದುಕ ಹೊಲೆಯನೊಬ್ಬನು ಸೂಚಿಸಿದನು ನಿಂಗಣ್ಣಾ ನೀನ್ಯಾಕೆ ಆ ಸುಬ್ಬಪ್ಪಯ್ಯನಿಗೆ ಹರ್ಕೆ ಹೇಳೋದಿಲ್ಲ? ಹಿಂದೆಟ್ಟೋ ಸಲ ಆ ದೇವ್ರು ಬ್ಯಾರೆಯವ್ರಿಗೆ ಒಲ್ದಿದ್ದಾನೆ.”
ನಿಂಗನಿಗೆ ಇದು ಹೌದೆಂದು ಅನ್ನಿಸಿತು. ಆದರೆ ಸುಬ್ರಹ್ಮಣ್ಯ ಸ್ವಾಮಿಗೆ ಏನೆಂದು ಹರಕೆ ಹೇಳಿಕೊಳ್ಳುವುದು? ರಥೋತ್ಸವ ಮಾಡಿಸುತ್ತೇನೆ ಎಂದೇ, ಚಿನ್ನದ ನೇವಳವನ್ನು ತೊಡಿಸುತ್ತೇನೆ ಎಂದೇ? ದೇವರದರ್ಶನವೂ ಹೊಲೆಯರಿಗಿರಲಿಲ್ಲ. “ಸ್ವಾಮೀ ಸುಬ್ಬಪ್ಪಾ! ಒಬ್ಬ ಮಗನ್ನ ಕೊಡು. ವರ್ಸ ವರ್ಸ ನಿನ್ನಲ್ಲಿಗೆ ಬಂದು ಸೇವೆ ಮಾಡಿ ಬರ್ತೇನೆಎಂದು ನಿಂಗನು ಭಕ್ತಿಯಿಂದ ಪ್ರಾರ್ಥಿಸಿಕೊಂಡನು. ಬಡವರ ಪ್ರಾರ್ಥನೆ ದೇವರಿಗೆ ಶೀಘ್ರವಾಗಿ ತಲಪುವುದು. ಮುಂದೆ ಒಂದು ವರ್ಷದಲ್ಲಿಯೇ ನಿಂಗನಿಗೊಂದು ಗಂಡು ಮಗುವಾಯಿತು - ಕೃಷ್ಣವರ್ಣದ ಪುತ್ರರತ್ನ ಜನಿಸಿತು. ಆ ಗಂಡ ಹೆಂಡಿರ ಸಂತೋಷಕ್ಕೆ ಪಾರವೇ ಇಲ್ಲ. ಕತ್ತಲೆಯಿಂದ ಮುದುರಿದ್ದ ಗುಡಿಸಲು ಬೆಳಕಿನಿಂದ ಮಿನುಗಿತು. ನಿಂಗನು ವಾಲಗವನ್ನು ಊದಿದನು. ಕಪ್ಪು ಕಲ್ಲುಗುಂಡಿನಂತಿದ್ದ ಆ ಮಗು ಕಿರೋಎಂದು ಅರಚಿತು. ಸುಬ್ರಹ್ಮಣ್ಯದ ಸುಬ್ಬಪ್ಪನ ದಯೆಯಿಂದ ಹುಟ್ಟಿದ ಮಗುವಾದುದರಿಂದ ಅದಕ್ಕೆ ಸುಬ್ಬ ಎಂದು ಹೆಸರಿಟ್ಟರು.

ಸುಬ್ಬನು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದನು. ಅವನ ಪುಂಡು ಕೂಡ ಅಂತೆಯೇ ಹೆಚ್ಚುತ್ತಿತ್ತು. ಯಾವ ಸಣ್ಣ ವಸ್ತುವನ್ನೂ ನೆಲದ ಮೇಲೆ ಇಡುವಂತಿರಲಿಲ್ಲ. ಗೂಡಿನಲ್ಲಿಯೋ ಗೋಡೆಯ ಮೇಲೆಯೋ ಅವನ್ನೆಲ್ಲ ಇಡಬೇಕಾಗುತ್ತಿತ್ತು. ಸುಬ್ಬನು ಹುಟ್ಟಿದ ವರ್ಷವೇ ನಿಂಗನು ಸುಬ್ರಹ್ಮಣ್ಯ ಷಷ್ಟಿಗೆ ಸುಬ್ರಹ್ಮಣ್ಯಕ್ಕೆ ನಡೆದುಕೊಂಡು ಹೋದನು. ಮಡಿಕೇರಿಯಿಂದ ಒಂದು ದಿವಸ ಹಾದಿ. ವಾಲಗವನ್ನು ಜೊತೆಯಲ್ಲೇ ಒಯ್ದಿದ್ದನು. ಅಲ್ಲಿ ಜಾತ್ರೆಯ ಜನಜಂಗುಳಿಯಲ್ಲಿ ಇವನಿಗೆ ವಾಲ ಬಾರಿಸಲು ಬಿಡುವರೇ? ಅಸ್ಪೃಶ್ಯರು ದೂರ ನಿಂತಿರಬೇಕಾಗುತ್ತಿತ್ತು. ರಥೋತ್ಸವ ನಡೆಯುವಾಗ ಬಹುದೂರದಿಂದ ಹೊಲೆಯರ ಗುಂಪಿನಲ್ಲಿ ನಿಂತು ನೋಡಬಹುದಾಗಿತ್ತು. ಆದರೆ ಸರ್ವಾಂತರ್ಯಾಮಿ ದೇವರ ಸೇವೆ ಮಾಡಲು ರಥದ ಮುಂದೆಯೇ ಜನರ ಗುಂಪು ಇರುವಲ್ಲಿಯೇ ನಿಲ್ಲಬೇಕಾಗಿಲ್ಲವಷ್ಟೆ. ದೇವಾಲಯದ ಉತ್ತರ ಭಾಗದಲ್ಲಿ ಜನರಿಲ್ಲದ ಕಡೆಗೆ ಹೋಗಿ ನಿಂಗನು ವಾಲಗ ಊದಿ ಬರುತ್ತಿದ್ದನು. ಇವನ ಹಾಗೆಯೇ ಇತರ ಹೊಲೆಯರು ಅಲ್ಲಿ ಬಂದು ಸೇರುತ್ತಿದ್ದರು. ಎಲ್ಲರೂ ತಮಗೆ ಬೇಕಾದ ಹಾಗೆ ಹಾಡುಗಳನ್ನು ಬಾರಿಸಿ ದೇವರ ಸೇವೆ ಮಾಡುತ್ತಿದ್ದರು. ಅವರ ಭಕ್ತಿಯೇ ಅಲ್ಲಿ ಮುಖ್ಯ. ವಾಲಗದಲ್ಲಿ ಇದ್ದ ಇಂಪಲ್ಲ. ಇವರ ಭಕ್ತಿಗೆ ಮೆಚ್ಚಿಯೋ ಎಂಬಂತೆ ಒಂದು ನಾಗರಹಾವು ಅಲ್ಲೇ ದೂರದಲ್ಲಿ ಹರಿದುಹೋಗುತ್ತಿದ್ದುದನ್ನು ನೋಡುತ್ತಿದ್ದರು. “ಸ್ವಾಮೀ ಸುಬ್ಬಪ್ಪಾಎಂದು ಭಕ್ತಿಯಿಂದ ಅಡ್ಡಬೀಳುತ್ತಿದ್ದರು.

ನಿಂಗನು ಹೀಗೆ ಪ್ರತಿವರ್ಷವೂ ಸುಬ್ರಹ್ಮಣ್ಯ ಜಾತ್ರೆಗೆ ಹೋಗಿ ತನ್ನ ಸೇವೆ ಸಲ್ಲಿಸಿ ಬರುತ್ತಿದ್ದನುಸುಬ್ಬನು ಈಗ ದೊಡ್ಡ ಹುಡುಗ. ನಿಂಗನೂ ವಾಲಗ ಬಾರಿಸುವಾಗ ಮೋರಿ ಹಿಡಿಯುತ್ತಿದ್ದನು. ಒಂದು ದಿನ ವಾಲಗವನ್ನು ಊದಲು ಪ್ರಾರಂಭಿಸಿದನು. ಆದರೆ ಬಹಳ ಹೊತ್ತು ಇದನ್ನು ಉರುಗಲು ಆಗುತ್ತಿರಲಿಲ್ಲ, ಎಳೆಯ ಎದೆಯಾದುದರಿಂದ. ಈ ವಾಲಗದ ವಿದ್ಯೆ ವಂಶ ಪರಂಪರೆಯಾಗಿ ಬಂದದ್ದು - ನಿಂಗನಿಗೆ ಅವನ ತಂದೆಯಿಂದ, ಅವನಿಗೆ ಅವನ ತಂದೆಯಿಂದ, ಹೀಗೆ. ಆದರೆ ತ್ಯಾಗರಾಜರ ಗುರುಕುಲಕ್ರಮವೇನೂ ಇಲ್ಲಿ ಇಲ್ಲ. ದೇಹ ಬಲಿತಾಗ ವಾಲಗ ಹಿಡಿದು ಇಷ್ಟ ಬಂದಂತೆ ಉರುಗುವುದೇ ಇದರ ಕ್ರಮ. ಗಟ್ಟಿಯಾಗಿ, ಬಹಳ ಹೊತ್ತು ಪ್ಞೇಪ್ಞೇ ಮಾಡಲು ಶಕ್ತನಾದವನೇ ಯಶಸ್ವಿ. ಹಲವು ವರ್ಷಗಳ ಅನುಭವದಿಂದ ಅನೇಕ ಹಳ್ಳಿ ಹಾಡುಗಳ ಅಪಭ್ರಂಶಗಳನ್ನು ಬಾರಿಸುತ್ತಿದ್ದರು. ಸಂಗೀತವೆಂದರೇನೆಂದು ಅರಿಯದವರು ವಿದ್ಯೆಯ ಗಂಧವಿಲ್ಲದವರು ಇಷ್ಟು ಕಲಿಯುವುದು ವಿಶೇಷವಲ್ಲವೇ? ಸುಬ್ಬನು ವಾಲಗವನ್ನು ಅರಚಿಸಲು ತೊಡಗಿದನು. ನಿಂಗನಿಗೆ ತನ್ನ ಮಗನು ತನ್ನ ಮಟ್ಟಕ್ಕೆ ಬರುವುದನ್ನು ನೋಡಿ ಬಲು ಸಂತೋಷ. ಮದುವೆ ಮನೆಗಳಿಗೆ ಹೋಗುವಾಗಲೆಲ್ಲ ಮಗನನ್ನು ಶ್ರುತಿಯೂದಲು ಕರೆದುಕೊಂಡು ಹೋಗುತ್ತಿದ್ದನು.

ಆಗ ಸಿನೆಮಾ ಇನ್ನೂ ಬಂದಿರಲಿಲ್ಲ. ಬಸ್ಸೇ ಅಪೂರ್ವ. ಬೇಸಗೆಯಲ್ಲಿ ನಾಟಕ ಕಂಪೆನಿಗಳು ಮಡಿಕೇರಿಗೆ ಬಂದು ಒಂದೆರಡು ತಿಂಗಳುಗಳಿದ್ದು ಹೋಗುತ್ತಿದ್ದುವು. ನಮ್ಮೂರಿನ ಜನರಿಗೆ ಇದೇ ಅತಿ ಸಂಭ್ರಮದ ಸಮಯ. ಬೆಳೆ ಕೆಲಸ ಮುಗಿದು ಜನರ ಜೇಬಿನಲ್ಲಿ ದುಡ್ಡು ಸೇರುತ್ತಿತ್ತು. ವಿರಾಮವೂ ಇರುತ್ತಿತ್ತು. ಒಂದು ನಾಟಕವನ್ನಾದರೂ ನೋಡದ ಜನರೇ ಮಡಿಕೇರಿಯಲ್ಲಿರಲಿಲ್ಲ. ನಾಟಕದವರು ತಮ್ಮೊಡನೆ ವಾಲಗದವರನ್ನು ಕರೆದು ತರುತ್ತಿದ್ದರು. ನಾಟಕ ಕಂಪೆನಿಯು ಬರಲಿದೆ ಎಂದು ಸುದ್ದಿ ಹಬ್ಬುವಾಗಲೇ ಪೇಟೆಯ ಹುಡುಗರೆಲ್ಲ ಆ ಬಯಲಿನಲ್ಲಿ ಹಾಜರು. ಸ್ಥಳ ಪರೀಕ್ಷೆ ಮಾಡಿ ಧರ್ಮಾರ್ಥ ತಮ್ಮ ಅಮೂಲ್ಯ ಅಭಿಪ್ರಾಯವನ್ನು ಕೊಡುತ್ತಿದ್ದರು! ನಾಟಕ ಕಂಪೆನಿಯು ಬಂದು ಡೇರೆ ಹಾಕಿದ ಮೇಲೆ ಪ್ರತಿದಿನವೂ ಆ ಬಯಲಿನಲ್ಲಿ ಮಹಾಸಭೆಗಳನ್ನು ನಡೆಯಿಸುತ್ತಿದ್ದರು. ಆ ಡೇರೆಯ ಸುತ್ತ ಆಡುವುದು, ಚಿತ್ರಗಳನ್ನು ಅಣಕಿಸುವುದು, ಅಲ್ಲೆ ಬಯಲಿನಲ್ಲಿ ಗೋಲಿ, ಚಿಣ್ಣೀಕೋಲು ಮುಂತಾದವುಗಳನ್ನು ಆಡುವುದು ಹೀಗೆ ಮಾಡುತ್ತ ಸಮಯ ಕಳೆಯುತ್ತಿದ್ದರು. ಸುಬ್ಬನೂ ಅವನ ಉಕ್ಕಡದ ಸಂಗಾತಿಗಳೊಡನೆ ಅಲ್ಲಿಗೆ ಹೋಗುತ್ತಿದ್ದನು. ಸಾಯಂಕಾಲವಾದೊಡನೇ ವಾಲಗದವರು ಹಾಡುಗಳನ್ನು ಬಾರಿಸಲು ತೊಡಗುತ್ತಿದ್ದರು.

ಒಂದನೆಯ ದಿನವೇ - ಈ ಹಾಡನ್ನು ಮೊದಲನೆಯ ಸಲ ಕೇಳಿದಾಗ - ಸುಬ್ಬನಿಗೆ ಮೈಯೆಲ್ಲ ರೋಮಾಂಚನವಾದ ಹಾಗಾಯಿತು. ಜತೆ ಹುಡುಗರು ಆಡಲು ಕರೆದರೆ ಹೋಗದೆ ಅಲ್ಲಿಯೇ ನಿಂತುಬಿಟ್ಟನು. ವಾಲಗದವನನ್ನೇ ನೆಟ್ಟ ದೃಷ್ಟಿಯಿಂದ ನೋಡುತ್ತಿದ್ದನು. ಅವನಿಗೆ ಸಂತೋಷ, ಉತ್ಸಾಹ ಎಲ್ಲ ಮೇರೆ ಮೀರುವಂತಾದುವು. ನಾಟಕ ಪ್ರಾರಂಭವಾಗುವುದು ಹತ್ತು ಘಂಟೆ ರಾತ್ರಿಯಲ್ಲಿ. ಕತ್ತಲಾದೊಡನೇ ಜತೆ ಹುಡುಗರು ಹೊರಟು ಸುಬ್ಬನನ್ನು  ಕರೆಯಲು ತಾನೀಗ ಬರುವುದಿಲ್ಲ ಎಂದು ಹೇಳಿ ಕಳಿಸಿದನು. ಆ ವಾಲಗವನ್ನು ಎಷ್ಟು ಕೇಳಿದರೂ ತೃಪ್ತಿಯಿಲ್ಲದೇ ಅಲ್ಲಿಗೇ ನಿಂತನು. ತಾನೊಂದು ಹೊಸ ಲೋಕದಲ್ಲಿಯೇ ತಿರುಗುತ್ತಿರುವಂತೆ ಅವನಿಗಾಯಿತು. ಅಲ್ಲಿ ಎಲ್ಲರೂ ಒಳ್ಳೆಯ ಬಟ್ಟೆಗಳನ್ನು ಹಾಕಿಕೊಂಡಿದ್ದರು. ಎಲ್ಲರೂ ಸಂಗೀತ ಹಾಡುವವರೇ. ಇವನಿಗೆ ಏನು ಬೇಕಾದರೂ ದೊರೆಯುವಂತೆ ಇತ್ತು. ಅಷ್ಟರಲ್ಲೇ ನಡೀ ಹೈದ ಮನೆಗೆಎಂದು ಬೆನ್ನ ಮೇಲೆ ಯಾರೋ ಹೊಡೆದರು. ಸುಬ್ಬನು ಸಂಗೀತ ಪ್ರಪಂಚದಿಂದ ಕೆಳಕ್ಕೆ ಬಿದ್ದನು. ಮಗನನ್ನು ಹುಡುಕಿಕೊಂಡು ನಿಂಗನೇ ಅಲ್ಲಿಗೆ ಬಂದಿದ್ದನು. ಸುಬ್ಬನು ಬೆಚ್ಚಿಬಿದ್ದನು. ಆದರೆ ಬಾಯಿಯಿಂದ ಮಾತ್ರ ಅದೆಷ್ಟು ಚಂದ ಅಪ್ಪಾ, ಆ ವಾಲಗಎಂಬ ಉದ್ಗಾರ ಹೊರಟಿತು.
ಮತ್ತೆ ಅವ್ರು ಪೇಟೆ ಪಟ್ನದಿಂದ ಬರೋವ್ರು, ಇದ್ಯೆ ಕಲ್ತವ್ರು.”
ಇನ್ನೊಮ್ಮೆ ಕೇಳ್ಬೇಕು.”
ನಮ್ಗ್ಯಾಕೆ ಅದೆಲ್ಲ ಹಾಡುಗೀಡು! ದೊಡ್ಮನ್ಸರ ಹಾಡು ಅದು. ಹೊತ್ತಾಯ್ತು ಮನೀಗೆ ಹೊರಡು.”
ಅಪ್ಪನ ಮಾತನ್ನು ಮೀರಲಾರದೇ ಸುಬ್ಬನು ಹೊರಟನು. ಅವರಿಬ್ಬರೂ ಗುಡಿಸಲು ಕಡೆಗೆ ನಡೆದರು. ಆದರೆ ಸುಬ್ಬನ ಮನಸ್ಸು ಮಾತ್ರ ಆ ಬಯಲಿನಲ್ಲಿಯೇ ಉಳಿಯಿತು. ಅರ್ಧ ಮೈಲು ದೂರಕ್ಕೂ ಆ ವಾಲಗ ಕೇಳಿಸುತ್ತಿತ್ತು. ಆಲಿಸುತ್ತ, ಮೆಲುಕುತ್ತ ಅವನು ಭಾರವಾದ ಹೆಜ್ಜೆಗಳಿಂದ ಮುಂದೆ ನಡೆದನು.
ಇದೇನಾಗಿರಬಹುದು, ಇದೇನಾಗಿರಬಹುದುಎಂದೇ ಸುಬ್ಬನ ಯೋಚನೆ. ಅವನಿಗೆ ರುಚಿಯಾದ ಊಟ ಮಾಡಿದಂತೆ, ಮೈಗೆ ಎಣ್ಣೆ ಸವರಿಕೊಂಡು ಬಿಸಿ ನೀರು ಸ್ನಾನಮಾಡುವ ಮುಂಚೆ ಸುಟ್ಟ ಹಲಸಿನ ಬೇಳೆಗಳನ್ನು ತಿನ್ನುವಾಗಿನ ಆನಂದದಂತೆ, ಆಟದಲ್ಲಿ ತಾನು ಗೆದ್ದಾಗ ಆಗುವ ಸಂತೋಷದಂತೆ - ಆ ವಾಲಗ ಕೇಳಿದಾಗ ಆನಂದವಾಗಿತ್ತು.
ಮರುದಿವಸದಿಂದ ಪ್ರತಿ ಸಾಯಂಕಾಲವೂ ಸುಬ್ಬನು ಆ ನಾಟ್ಕದ ಡೇರೆಯ ಸಮೀಪ ಹಾಜರು. ಒಂದು ರಾತ್ರಿ ನಿಂಗನು ಸುಬ್ಬನನ್ನು ಯಾವುದೋ ನಾಟಕಕ್ಕೆ ಕರೆದುಕೊಂಡು ಹೋದನು. ಅಲ್ಲಿಯ ಸಂಗೀತ, ವಾದ್ಯ ಎಲ್ಲ ಕೇಳಿ ಇದೇ ಒಂದು ಹೊಸ ಲೋಕ. ತಾನೂ ಅಲ್ಲಿಗೆ ಹೋಗಲೇಬೇಕು ಎಂದು ಸುಬ್ಬನಿಗೆ ಅನಿಸಿತು.
ಅದೆಂಥ ಸಂಗೀತ ಅಪ್ಪಾ?”
ಅದು ದೊಡ್ಮನ್ಸರ ಸಂಗೀತ, ನಂಗೊತ್ತಿಲ್ಲ.”
ನಾನೂ ಕಲೀಬೈದಾ?”
ಸರಿಯಾಯ್ತು ಹೇಳು. ನಮ್ಗ್ಯಾಕೆ ಅದೆಲ್ಲ?”
ಸುಬ್ಬನ ಆಸೆ ಆಗ ಅಲ್ಲೇ ಮುರಿಯಿತು. ಆದರೆ ಮರುದಿವಸದಿಂದ ಅಪ್ಪನ ವಾಲಗ ಹಿಡಿದು, ತಾನು ಕೇಳಿ ನೆನಪಿನಲ್ಲಿ ಉಳಿದ ಕೆಲವು ರಾಗಗಳನ್ನು ಬಾರಿಸಲು ಪ್ರಯತ್ನಿಸುತ್ತಿದ್ದನು. ಆದರೆ  ಆ ವಾಲಗ ಏನೇನೂ ಮಾಡಿದರೂ ರ್ಞೊಯ್ಞೋ ಎಂದೇ ಅರಚುತ್ತಿದ್ದಿತು. ಮನಸ್ಸಿನಲ್ಲಿ ರಾಗವಿದೆ, ಆದರೆ ವಾಲಗದಲ್ಲಿ ಮಾತ್ರ ಏನೋ ಒಂದು ರೋಗ. ಬೆಟ್ಟುಗಳನ್ನು ಹೇಗೆ ಹೇಗೆ ಆಡಿಸಿದರೂ ಗಾಳಿಯನ್ನು ಯಾವ ರೀತಿಯಲ್ಲಿ ಊದಿದರೂ ಅದು ಮಾತ್ರ ಅರಚುತ್ತಲೇ ಇತ್ತು. ಸುಬ್ಬನು ಹತಾಶನಾದನು. ಮರುದಿವಸ ಪುನಃ ತೆಗೆದುಕೊಂಡನು. ಇಲ್ಲ, ಮೂರನೆಯ ದಿವಸ, ಪುನಃ ಅಪಸ್ವರವೇ. ಹೀಗೆ ಪ್ರತಿ ದಿನವೂ ಪ್ರಯತ್ನಪಟ್ಟನು. ಪ್ರತಿ ಸಾಯಂಕಾಲವೂ ಡೇರೆಯ ಸಮೀಪ ಹೋಗಿ ರಾಗಗಳನ್ನು ಕೇಳಿ ಅವನ್ನೇ ಯೋಚಿಸುತ್ತ ಬರುತ್ತಿದ್ದನು. ಮತ್ತೆ ಬೆಳಗ್ಗಿನಿಂದ ಸಾಯಂಕಾಲದವರೆಗೆ ಬಿಡುವಿದ್ದಾಗಲೆಲ್ಲ ಆ ರಾಗದ ಅಭ್ಯಾಸ.
ಮಳೆಗಾಲ ಸಮೀಪವಾಯಿತು. ಮೋಡಗಳು ಕವಿದುವು. ಬಿಬ್ರಿಗಳು ರೊಂಯೋ ರೊಂಯೋಎಂದು ಅರಚಿ ಮಳೆಯನ್ನು ಕರೆದುವು. ಮದುವೆಗಳು ಮುಗಿದುವು. ನಾಟಕದ ಕಂಪೆನಿಯು ಡೇರೆ ಕಿತ್ತು ಬೇರೆಲ್ಲಿಗೋ ಸಾಗಿತು. ಅಲ್ಲಿ ಕೇಳಿದ ಮಧುರ ರಾಗಗಳು ಮಾತ್ರ ಸುಬ್ಬನ ಮನಸ್ಸಿನಲ್ಲಿ ಮಿಡಿಯುತ್ತಿದ್ದುವು. ಇನ್ನೆಂದು ಆ ಸಂಗೀತ ಕೇಳುವುದೋ? ಸುಬ್ಬನ ವಾಲಗ ಮಾತ್ರ ಏನೇನು ಮಾಡಿದರೂ ಅಳುವಂತೆ ಅರಚುತ್ತಿತ್ತು. ಅವನೇನು ಬಾರಿಸಿದರೂ ಮಗನಿಗೆ ಸಂಗೀತ ಬಂದೇ ಬಿಟ್ಟಿತು ಎಂದು ನಿಂಗನು ಸಂತೋಷಪಡುತ್ತಿದ್ದನು. ಬೇರೆಯವರಿಗೆ ತನ್ನ ಮಗನ ವಿಷಯ ಹೆಮ್ಮೆಯಿಂದ ಹೇಳುತ್ತಿದ್ದನು.
ಮತ್ತೆ ನಿನ್ನ ಅಜ್ಜ, ಅಪ್ಪ ಇವರಿಂದ ಬಂದ ಇದ್ಯ ಇವ್ನಿಗೂ ಬರ್ದೇಹೋದೀತಾ?” ಎಂದನು ಇನ್ನೊಬ್ಬ.
ಮಳೆ ಸುರಿದು ನೆಲವನ್ನು ತಂಪು ಮಾಡಿತು. ಮೋಡಗಳು ದೂರ ಸರಿದು ಆಕಾಶವು ನೀಲವಾಯಿತು. ಚಳಿಯು ಏರುತ್ತಿತ್ತು. ಸುಬ್ರಹ್ಮಣ್ಯ ಷಷ್ಠಿಯು ಸಮೀಪವಾಗುತ್ತಿತ್ತು. ಈ ವರ್ಷ ಮಗನನ್ನೂ ಕರೆದುಕೊಂಡು ಅಲ್ಲಿಗೆ ಹೋಗಬೇಕೆಂದು ನಿಂಗನು ನಿಶ್ಚಯಿಸಿದನು. ಸುಬ್ಬನು ಸಂತೋಷದಿಂದ ಕುಣಿದನು. ತಂದೆತಾಯಿ  ಜತೆಯಲ್ಲಿ ದೂರದ ಊರಿಗೆ ಹೋಗುವುದೆಂದರೆ ಯಾವ ಮಗುವಿಗೂ ಸಂತೋಷವೇ.
ಅಲ್ಲಿ ನಾಟಕ ಬರ್ತದಾ, ಅಪ್ಪ?”
ಬರ್ತದೆ.”
ಇಲ್ಲಿ ಬಾರ್ಸಿದ್ರಲ್ಲ - ಹಾಂಗೆ ವಾಲಗ?”
ಅದೂ ಬರ್ತದೆ, ಇನ್ನೂ ಭಾರೀ ಲಾಯಕ್ಕು ವಾಲಗಾನೂ ಬರ್ತದೆ.”
ಇನ್ನೇಟು ದಿನ ಉಂಟು ಹೊರಡ್ಲಿಕ್ಕೆ?”
ನಾಡಿದ್ದು ಬೇಸ್ತಾರಕ್ಕೆ (ಗುರುವಾರ ) ಇಪ್ಪತ್ತೊಂದರಲ್ಲಿ.”
ಇನ್ನು ಮೂರನೆಯ ಗುರುವಾರದ ತನಕ ಕಾಯುವುದು ಸುಬ್ಬನಿಗೆ ಬಲು ಕಠಿಣದ ಭಾರವಾಯಿತು. ಯಾವಾಗ ಅಲ್ಲಿಗೆ ಹೋಗುವುದು, ಯಾವಾಗ ಆ ವಾಲಗವನ್ನು ಪುನಃ ಕೇಳುವುದು ಎಂದೇ ಅವನ ಆಲೋಚನೆಯಾಯಿತು. ಸಮಯ ನಿಧಾನವಾಗಿ ಹರಿಯಿತು. ಆ ಗುರುವಾರ ಬರಬೇಕಾದ ವಾರವೂ ಬಂದಿತು. ಆದರೆ ಹಠಾತ್ತಾಗಿ ನಿಂಗನಿಗೆ ಕಾಲಿಗೊಂದು ಮುಳ್ಳು ತಗಲಿ, ಅದು ನಂಜಾಗಿ ಕಾಲು ಬಾತುಕೊಂಡಿತು. ಅವನಿಗೆ ಗುಡಿಸಲೊಳಗೆ ನಡೆಯುವುದೂ ಸಾಧ್ಯವಾಗಲಿಲ್ಲ. ಇನ್ನು ಸುಬ್ರಹ್ಮಣ್ಯಕ್ಕೆ ಹೋಗುವುದು ಹೇಗೆ? ಗಾಡಿ ಮಾಡಿ ಹೋಗುವಷ್ಟು ಹಣವಿಲ್ಲ - ಅದು ದೊಡ್ಡ ಮನುಷ್ಯರ ಮರ್ಜಿ!
ಅಯ್ಯೋ ಸುಬ್ಬಪ್ಪಾ, ಈ ವರ್ಷ ನನ್ಸೇವೆ ಬೇಡಾಂತ ನಿರಾಕರ್ಸಿದ್ಯಾ?” ಎಂದು ನಿಂಗನು ಕೊರಗಿದನು.
ಹಾಂಗ್ಯಾಕೆ ನಿಂಗಣ್ಣಾ. ಇಲ್ಲೇ ನಡ್ಸು ಸೇವೇನ. ದ್ಯಾವ್ರಿಗೆ ಎಲ್ಲಿದ್ರೇನು? ಬರ್ವ ವರ್ಸ ಅಲ್ಗೇ ಹೋಗಿ ಇನ್ನು ಪಸಂದಗಿ ನಡ್ಸಿದ್ರಾಯ್ತುಎಂದನು ಇನ್ನೊಬ್ಬ.
ನಾನು ಹೋಗೋದು ಬೇಡಾಂತ ದೇವ್ರು ಮಾಡಿದ್ಹಂಗೆ ತೋರ್ತದೆ. ಸುಬ್ಬನಾದ್ರೂ ಹೋಗ್ಲಿ. ಇಲ್ವಾದ್ರೆ ದೇವ್ರು ಕೋಪಿಸ್ಕೊಂಡ್ರೆ?”
ಅಪ್ಪನಿಗೆ ಕಾಲು ನೋವೆಂದಾದ ಕೂಡಲೇ ಸುಬ್ಬನಿಗೆ ಅಳು ಬರುವಂತಾಗಿತ್ತು. ಮನಸ್ಸು ಮುದುರಿತ್ತು. ಇನ್ನು ತಾನು ಹೋಗುವಂತಿಲ್ಲ. ಆ ವಾಲಗ ಕೇಳುವಂತಿಲ್ಲ ಎಂದು ದುಃಖ ಹೆಚ್ಚಿತ್ತು. ಒಂದು ಆಸೆಯೇ ಇಲ್ಲದಿರುವಾಗ, ಅದನ್ನು ಹುಟ್ಟಿಸಿ ಮಣ್ಣುಗೂಡಿಸುವುದೆಂದರೆ ತುಂಬ ವೇದನೆಯ ವಿಷಯ. ತಾನೊಬ್ಬನೇ ಬೇರೆಯವರ ಜತೆಯಲ್ಲಿ ಹೋಗುತ್ತೇನೆ ಎಂದು ಹೇಳುವ ಧೈರ್ಯ ಅವನಿಗಿರಲಿಲ್ಲ. ನಿಂಗನ ಈ ಉತ್ಸಾಹಜನಕ ಮಾತನ್ನು ಸುಬ್ಬನು ಮರೆಯಿಂದ ಆಲಿಸಿದನು. ಮುಂದಕ್ಕೆ ನೆಗೆದು ಹಾರಿ, “ಅಪ್ಪಾ ನಾನು ಹೋಗುತ್ತೇನೆ. ದೇವ್ರ ಸೇವೆ ಮಾಡ್ತೇನೆಎಂದು ಒಂದೇ ಸಲ ಕೂಗಿ ಹೇಳಿದನು.
ಗುರುವಾರ ನಸುಕು ಹರಿಯಿತು.
ಹೋಗಿ ಬಾ ಸುಬ್ಬ. ದೇವ್ರ ಸೇವೆ ಮಾಡು. ಒಳ್ಳೇದ್ಮಾಡ್ತಾನೆ. ದೊಡ್ಡಣ್ಣನ ಜತೆಯಲ್ಲಿಯೇ ಇರು. ಜನ ಭಾಳ ತುಂಬ, ಆನೆಯುಂಟು, ಕಾಡುಂಟು. ನೋಡ್ಕೊ ದೊಡ್ಡಣ್ಣ ಇವನ್ನ, ನಿನ್ನ ಜತೇಲೆ ಇರಲಿ ಹುಸಾರುಎಂದನು ನೋವಿನಿಂದ ನರಳುತ್ತಿದ್ದ ನಿಂಗ.
ಹೊಳೇಗೆ ಇಳೀಬೇಡ ಸುಬ್ಬ. ನೋಡ್ಕೋ ದೊಡ್ಡಣ್ಣಎಂದಳು ಪುಟ್ಟಿ.
ಸುಬ್ಬ, ದೊಡ್ಡಣ್ಣ, ಇತರ ಹೊಲೆಯರು ಎಲ್ಲರೂ ಸುಬ್ರಹ್ಮಣ್ಯಕ್ಕೆ ಹೊರಟರು. ದಾರಿಯಿಡೀ ಸುಬ್ಬನಿಗೆ ವಾಲಗದ ಕನಸು. ಅದನ್ನು ಪುನಃ ಕೇಳಲಿದೆಯೆಂದು ಸಂತೋಷ. ಬೆಟ್ಟಗಳ ತಪ್ಪಲಿಗಾಗಿ, ಗದ್ದೆಗಳ ಅಂಚಿಗಾಗಿ, ರಬ್ಬರು ತೋಟಗಳ ನಡುವಿಗಾಗಿ ನಡೆದರು. ದಾರಿಯಲ್ಲಿ ಅಡ್ಡ ಸಿಗುವ ಸಣ್ಣ ತೊರೆಗಳಲ್ಲಿ ದಾಹವನ್ನು ನೀಗಿಸಿಕೊಂಡು ಮುಂದುವರಿದರು. ಮಧ್ಯಾಹ್ನವಾಗುವಾಗ ಯಾವುದೋ ಹೊಳೆಯ ಕರೆಯಲ್ಲಿ ರುಚಿಕರವಾದ ಬುತ್ತಿಯೂಟ. ದೂರ ನಡೆಯುವಾಗ ಹಾದಿ ಬದಿಯ ಮರದ ನೆರಳಿನಲ್ಲಿ ಹೊಳೆಯ ತಡಿಯಲ್ಲಿ ಬುತ್ತಿಯೂಟ ಮಾಡುವಾಗ ದೊರೆಯುವ ತೃಪ್ತಿ, ಆನಂದ ಮೃಷ್ಟಾನ್ನ ಭೋಜನದಲ್ಲಿಯೂ ಇಲ್ಲ. ಹಸಿವು, ವಾತಾವರಣಗಳೇ ರುಚಿಕರವಾದ ಮೇಲೋಗರಗಳು. ಕತ್ತಲೆ ಸಂಪೂರ್ಣ ಕವಿದ ಮೇಲೆ ಅವರು ಸುಬ್ರಹ್ಮಣ್ಯಕ್ಕೆ ತಲಪಿದರು. ಇದುವರೆಗೂ ಸುಬ್ಬನು ಅಷ್ಟು ಜನಜಂಗುಳಿಯನ್ನು ಎಲ್ಲಿಯೂ ನೋಡಿರಲಿಲ್ಲ. ಎಲ್ಲಿ ನೋಡಿದರೂ ಜನ, ಗಲಭೆ, ನೂಕುನುಗ್ಗಲು. ಹಿಂದಿನ ದಿವಸವೇ ಮಳೆ ಸುರಿದು ನೆಲವೆಲ್ಲ ಕೆಸರು, ಮಣ್ಣು, ನೀರಿನಿಂದ ತುಂಬಿತ್ತು. ಆಗಲೇ ಸುಬ್ಬನ ಕಿವಿಗಳನ್ನೂ ಮನವನ್ನೂ ಸೆಳೆಯಿತು, ಸ್ವಾಗತಿಸಿತು - ದೂರದಿಂದ ವಾಲಗದ ಅಮೃತ ಸ್ವರ. ಹಸಿದವನಿಗೆ ಮೃಷ್ಟಾನ್ನ ದೊರೆಯಿತು. ಬಿಸಿಲಿನಿಂದ ಒಣಗಿ ಗಾರಾದ ಭೂಮಿಗೆ ಮಳೆ ಸುರಿಯಿತುಆದರೆ ಆ ಇಂಚರ ಜನಿಸುವ ತಾಣಕ್ಕೆ ಅಷ್ಟು ಜನರ ನಡುವೆ ಹಾದು ಹೋಗುವುದು ಹೇಗೆ?

ಬುತ್ತಿಯೂಟವನ್ನು  ಮುಗಿಸಿ ರಾತ್ರಿಯ ಸಣ್ಣ ತೇರನ್ನು ನೋಡಲು ಹೊರಟರು. ದೇವಸ್ಥಾನದ ಮುಂದೆ ಒಂದು ಇರುವೆ ಕೂಡ ಹೋಗುವಷ್ಟು ಸ್ಥಳವಿರಲಿಲ್ಲ. ಅಷ್ಟು ಜನರು, ಬದಿಯಲ್ಲಿದ್ದ ಕಟ್ಟಡಗಳಲ್ಲಿ, ಅಂಗಡಿಗಳಲ್ಲಿ ಎಲ್ಲೆಲ್ಲಿಯೂ ಜನರೇ ಜನರು. ದೊಡ್ಡ ರಥವೊಂದು ದೇವಸ್ಥಾನದ ಎದುರು ನಿಂತಿದೆ. ಅಲ್ಲೇ ಬದಿಯಲ್ಲಿ ಚಿಕ್ಕದೊಂದು ಆನೆ ಇದೆ. ಸಿಂಗರಿಸಿದ ಆನೆಯು ಜನರು ಎಸೆಯುವ ತೆಂಗಿನಕಾಯಿ, ಕೊಬ್ಬರಿಯನ್ನು ಜಗಿಯುತ್ತ ಸೊಂಡಿಲಾಡಿಸುತ್ತ ನಿಂತಿದೆ. ವಾಲಗದವರ ಒಂದು ಪಟಾಲಮ್ಮೇ ಅಲ್ಲಿ ನಿಂತು ಹಾಡುಗಳನ್ನು ಬಾರಿಸುತ್ತಿದೆ.

ಸುಬ್ಬ, ದೊಡ್ಡಣ್ಣ ಇವರೆಲ್ಲ ಹೊಲೆಯರ ಗುಂಪಿನಲ್ಲಿ ದೂರದಲ್ಲಿ ನಿಂತಿದ್ದರು. ಹತ್ತಿರ ಹೋಗಲು ಅವರಿಗೆ ಪ್ರವೇಶವಿರಲಿಲ್ಲ. ವಾಲಗದ ಸುಸ್ವರ ಕೇಳುತ್ತ, ಸುಬ್ಬನಿಗೆ ಈ ಜನರ ಪರಿವೆಯೇ ಮರೆತುಹೋಯಿತು. ಅದೇನು ಮಧುರ, ಅದೆಂತಹ ಭಾವ. ಹಿಂದೆ ನಾಟಕ ಕಂಪೆನಿಯ ವಾಲಗದವರು ಬಾರಿಸಿದ ಒಂದೇ ಒಂದು ಹಾಡೂ ಇಷ್ಟು ಇಂಪು ಇರಲಿಲ್ಲ. ಈ ವಾಲಗದವನು ಯಾರೆಂದು ತಿಳಿಯಲು ಕತ್ತನ್ನು ಎಷ್ಟು ಉದ್ದ ಮಾಡಿನೋಡಿದರೂ ಸುಬ್ಬನಿಗೆ ಕಾಣಿಸಲಿಲ್ಲ. ಇಬ್ಬರ ಭೌತಿಕ ಅಂತರ ಹಿರಿದಾಗಿತ್ತು. ಅದೂ ರಾತ್ರಿಯ ದೊಂದಿಯ ಬೆಳಕಿನಲ್ಲಿ ಅಷ್ಟು ದೂರದಿಂದ ವಾಲಗದವನು ಯಾರೆಂದು ಗುರುತಿಸುವುದು ಹೇಗೆ? ಮುಂದೆ ನೂಕಿಕೊಂಡು ಹೋಗಬೇಕೆಂದು ಮನಸ್ಸಾಯಿತು. ಆದರೆ ದೊಡ್ಡಣ್ಣನು ಬಲವಾಗಿ ಕೈ ಹಿಡಿದುಕೊಂಡಿದ್ದನು. “ಅಲ್ಲಿ ನೋಡು ಆ ಬೊಂಬೆ, ಅಲ್ಲಿ ನೋಡು ರಥದ ಚಂದಎಂದು ಮುಂತಾಗಿ ವಾಲಗದ ಹೊರತಾಗಿ ಎಲ್ಲವನ್ನೂ ತೋರಿಸುತ್ತಿದ್ದನು. ವಾಲಗ ಹೇಗಾದ್ರೂ ಇರಬೇಕಾದುದೇ ಅದರಲ್ಲೇನು ವಿಶೇಷ ಎಂದು ಅವನ ಅಭಿಪ್ರಾಯವಾಗಿರಬಹುದು. ದೊಡ್ಡಣ್ಣನ ಮಾತಿಗೆ ಯಾಂತ್ರಿಕವಾಗಿ ಹೂಗುಟ್ಟುತ್ತಿದ್ದ ಸುಬ್ಬ ವಾಲಗದ ಹೊರತು ಬೇರೆ ಯಾವುದರಲ್ಲೂ ಲಕ್ಷ್ಯವಿಡಲಿಲ್ಲ. ತೇರು ಸಾಗಿತ್ತು. ವಾಲಗ ಮೇಳದವರು ಬೇರೆ ಬೇರೆ ಹಾಡುಗಳನ್ನು ಬಾರಿಸುತ್ತ ಹೊರಟರು. ಅವು ಯಾವ ರಾಗ, ಹಾಡುಗಳೆಂದು ಸುಬ್ಬನಿಗೆ ತಿಳಿಯುತ್ತಿರಲಿಲ್ಲ. ಆದರೆ ಅವು ಅವನ ಹೃದಯವೀಣೆಯನ್ನು ಮಿಡಿಯುತ್ತಿದ್ದುವು. ರಥ ಹೊರಟಂತೆ ಜನರ ನೂಕು ನುಗ್ಗಲು ಅಸಾಧ್ಯವಾಯಿತು. ಬದಿಯಲ್ಲಿದ್ದವರು ಚರಂಡಿಗೆ ಇಳಿದರು ಅಥವಾ ಕರೆಗೋಡೆಗೆ ಅಮರಿ ನಿಂತರು. ರಥೋತ್ಸವ, ಪೂಜೆ ಮುಂತಾದವು ಮಧ್ಯರಾತ್ರಿಯ ತನಕವೂ ಸಾಗಿದುವು.

ಹೊಲೆಯರೆಲ್ಲರೂ ಬಡವರಿಗೆ, ಭಿಕ್ಷುಕರಿಗೆ ತಂಗಲು ತಯಾರಿಸಿದ್ದ ತಟ್ಟಿಯ ಛಾವಣಿಗಳ ಕಡೆಗೆ ಮಲಗಲು ಹೋದರು. ಸುಬ್ಬನ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಆ ವಾಲಗದ ಸ್ವರ-ಜೇನು ಹೊಳೆ ಹರಿಯುವಂತೆ ಬರುವ ಆ ಇಂಪು - ಅವನ ಮನಸ್ಸನ್ನು ಸೇಚನ ಮಾಡಿತ್ತು. ಅದು ಮತ್ತೆ ಮತ್ತೆ ಪ್ರತಿಧ್ವನಿಸುತ್ತಿತ್ತು. ನಿದ್ರೆ ಮಾಡಿದರೂ ಅದೇ ವಾಲಗದ ಸ್ವರ, ಅದೇ ರಾಗಾಲಾಪನೆ, ಅದೇ ಸ್ವರ್ಗೀಯ ಸಂಗೀತ, ಅದೇ ಗಾನಾಮೃತಪಾನ!

ಮರುದಿವಸವೇ ಸುಬ್ರಹ್ಮಣ್ಯ ಷಷ್ಠಿ - ಗರುಡ ಬರುವುದು, ಮುಖ್ಯ ರಥೋತ್ಸವ, ಭೋಜನ ಮುಂತಾದವುಗಳು. ಬೆಳಗ್ಗೆ ನಾಲ್ಕು ಗಂಟೆಗೆ ಪುನಃ ವಾಲಗ ತಮಟೆಗಳು ಪ್ರಾರಂಭವಾದುವು. ಸಂಗೀತ ಸುಧಾವಾಹಿನಿ ಪ್ರವಹಿಸತೊಡಗಿತು. ಶಾಂತ ವಾತಾವರಣ. ಕುಳಿರ್ಗಾಳಿಯ ಮೃದುವಾದ ತೀಟ, ಮಂಗಳಕರ ಗೀತ - ಭೂಪಾಳ, ಅಮೃತವರ್ಷಿಣಿ, ವಸಂತ, ಮೋಹನ, ಧೇನುಕ ಈ ರಾಗಗಳಲ್ಲಿ ಆಲಾಪನೆ, ರಾಗಮಾಲಿಕೆ. ದಣಿದು ಮಲಗಿದ್ದ ಸುಬ್ಬನನ್ನು ಏಳಪ್ಪಾ ಮಗು, ಇನ್ನೂ ನಿದ್ರೆ ಮಾಡುತ್ತೀಯಲ್ಲ!” ಎಂದು ಮೃದುವಾಗಿ ಯಾರೋ ನೇವರಿಸಿ ಮೈಸವರಿ ಎಬ್ಬಿಸಿದಂತೆ ಆಯಿತು. ಸುಬ್ಬನು ಫಕ್ಕನೆ ಎದ್ದು ಕುಳಿತನು. ಉಳಿದವರು ಚಳಿಗೆ ಮದುರಿ ಮಲಗಿ ಗೊರಕೆ ಹೊಡೆಯುತ್ತಿದ್ದರು. ಎಚ್ಚರದಲ್ಲಿರುವೆನೋ ಸ್ವಪ್ನದಲ್ಲಿರುವೆನೋ ಎಲ್ಲಿಂದ ಈ ಸಂಗೀತ ಕೇಳಿದ ಹಾಗಾಗುತ್ತದೆ ಎಂದು ಅವನಿಗೆ ಭ್ರಮೆಯಾಯಿತು. ಅದೇ ವಾಲಗದ ಇನಿದನಿಯ ಹಾಲಿನ ಹೊಳೆ ಹರಿದು ಬರುತ್ತಿದೆ. ಸುಬ್ಬನಿಗೆ ರೋಮಾಂಚನವಾಯಿತು. ಕೂಡಲೇ ಗುಡಿಸಲಿನಿಂದ ಹೊರಬಿದ್ದು ದೇವಾಲಯದ ಕಡೆಗೆ ಓಡತೊಡಗಿದನು. ನದೀಮೂಲವನ್ನು ತಲಪಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ದೇವಾಲಯದ ಮುಂದೆ, ಹಣತೆಗಳ ಬೆಳಕಿನಲ್ಲಿ, ಧೂಪ ಗಂಧ ಪುಷ್ಪಗಳ ಪರಿಮಳದಲ್ಲಿ ವಾಲಗದವರು ಸಾಲಾಗಿ ಕುಳಿತು ದೇವರಿಗೆ ಉದಯ ಗೀತೆಗಳನ್ನು ಬಾರಿಸುತ್ತಿದ್ದರು. ಸುಬ್ಬನು ಅದೇ ಪ್ರಥಮತಃ ಅವರನ್ನು ಹತ್ತಿರದಿಂದ ನೋಡಿದುದು. ಅವರು ಯಾವ ರಾಗವನ್ನು ಬಾರಿಸುತ್ತಿದ್ದರು ಎಂಬುದು ಅವನಿಗೆ ತಿಳಿಯಲಿಲ್ಲ. ಆದರೆ ಅವೆಲ್ಲವೂ ಚಿರಪರಿಚಿತವಾಗಿದ್ದಂತೆ ಇದ್ದುವು. ಪ್ರತಿಯೊಂದೂ ಇಂಪುಗಡಲನ್ನು ಕಡೆದು ತೆಗೆದ ಬೆಣ್ಣೆಯಂತೆ ಮೃದು ಮಧುರವಾಗಿ ಇತ್ತು. ಸುಬ್ಬನು ತನ್ನನ್ನು ತಾನು ಮರೆತು ಈ ರಾಗ ಸಮುದ್ರದಲ್ಲಿ ಮುಳುಗಿದನು, ತಲ್ಲೀನನಾದನು. ಮುಂದೆ ಸ್ವಲ್ಪ ಹೊತ್ತಿನಲ್ಲಿಯೇ ವಾಲಗದವರು ಎದ್ದರು. ಉದಯರಾಗ ಮುಗಿಯುವಾಗ ಪೂರ್ವದಿಗಂತ ರಕ್ತರಾಗ ತಾಳುತ್ತಿದ್ದಿತು. ಜನರು ಹೆಚ್ಚು ಹೆಚ್ಚು ಓಡಾಡಲು ತೊಡಗಿದರು. ನೀಲಾಕಾಶದಲ್ಲಿ ಕಾಗೆಗಳು ಕರ್ಕಶವಾಗಿ ಕೂಗುತ್ತ ಹಿಂಡುಹಿಂಡಾಗಿ ಹಾರಲು ಪ್ರಾರಂಭಿಸುದುವು. ತಾಯಿಯ ಮಡಿಲಿನಲ್ಲಿ ಸುಖವಾಗಿ ಮಲಗಿದಂತಿದ್ದ ಸುಬ್ಬನು ಎಚ್ಚರಗೊಂಡು ಎದ್ದನು. ಶಾಂತ ವಾತಾವರಣದ ಈ ಮಂಗಳ ಗೀತ ಅವನ ಮೇಲೆ ಅಪೂರ್ವ ಪರಿಣಾಮ ಮಾಡಿತ್ತು. ಸುಪ್ತ ಚೇತನವೊಂದು ಮನಸ್ಸಿನ ಅಂತರಾಳದಿಂದ ಉದಯಿಸಿ ಬಿಡಬೇಡ ಮುಂದೆ ಹೋಗುಎನ್ನುವಂತೆ ಅವನನ್ನು ಪ್ರೇರಿಸುತ್ತಿತ್ತು. ಧಮನಿಗಳಲ್ಲಿ ರಕ್ತವು ನವಚೈತನ್ಯದಿಂದ ಪ್ರವಹಿಸುತ್ತಿತ್ತು. ಅಷ್ಟರಲ್ಲಿಯೇ ದೊಡ್ಡಣ್ಣನ ನೆನಪಾಯಿತು. ಅವನಿಗೆ ತಾನು ಅಲ್ಲಿ ಇಲ್ಲದಿರುವುದು ತಿಳಿದರೆ ಎಲ್ಲಿ ಹುಡುಕುತ್ತಾನೋ, ಏನು ತಿಳಿಯುತ್ತಾನೋ ಎಂದು ಸುಬ್ಬನು ಛಾವಣಿಯ ಕಡೆಗೆ ಓಡಿದನು.
ಗುಡಿಸಲಿನ ಹತ್ತಿರದಲ್ಲಿಯೇ ಗಾಬರಿಯಿಂದ ಬರುತ್ತಿದ್ದ ದೊಡ್ಡಣ್ಣನು ಎದುರಾದನು. “ಎಲ್ಲಿಗೆ ಹೋಗಿದ್ದೆ?”
ಇಲ್ಲೆ ಹೊಳೆ ಕರೆಗೆ.”
ಇನ್ಮುಂದೆ ಒಬ್ನೆ ಹಾಗೆಲ್ಲ ಹೋಗ್ಬೇಡ. ಅಲ್ಲಿ ಮೊಸಳೆ ಉಂಟು.”
ಸುಬ್ಬನ ಮನಸ್ಸು ವಾಲಗದವನ ಮೇಲೆ - ಕಪ್ಪಾದ ದೇಹ, ಪುಷ್ಠಿಯಾಗಿ ಬೆಳೆದಿದೆ. ಬಿಳಿಯ ಪಂಚೆ ಉಟ್ಟು ಭರ್ಜರಿ ಶಾಲು ಹೊದ್ದಿದ್ದಾನೆ. ತಲೆಯಲ್ಲಿ ಬಿಗಿದು ಕಟ್ಟಿದ ನರೆತ ಜುಟ್ಟು. ಹಣೆಯ ಮೇಲೆ ಎದ್ದು ತೋರುವ ವಿಭೂತಿಯ ಮೂರು ಪಟ್ಟಿಗಳು. ಕೈಯಲ್ಲಿ ಹೊಳೆಯುವ ಉಂಗುರಗಳು. ಬೆಳ್ಳಿಯ ಕಟ್ಟು ಹಾಕಿದ ಕರಿಬಣ್ಣದ ವಾಲಗ. ಶ್ರುತಿ ಉರುಗುವವನು ಒಬ್ಬ ಹುಡುಗ. ಆ ಶ್ರುತಿಯಲ್ಲಿ ಒಂದು ಹೊಸ ಕ್ರಮವಿದ್ದಿತು. ವಾಲಗದ ಸ್ವರದೊಡನೆ ಅದು ಸಮಮಿಶ್ರವಾಗಿ, ಮೃದು ಮಧುರವಾಗಿ ಬೆರೆಯುತ್ತಿತ್ತು. ತಮಟೆ ಹೊಡೆಯುವವನು ಬಲಗೈ ಬೆರಳುಗಳಿಗೆ ಬಿಳಿಯ ಟೊಪ್ಪಿಗಳನ್ನು ಹಾಕಿಕೊಂಡಿದ್ದು ತಮಟೆಯಲ್ಲಿಯೇ ಹಾಡನ್ನು ಬಾರಿಸುತ್ತಿದ್ದಾನೋ ಎಂಬಂತೆ ನುಡಿಸುತ್ತಿದ್ದನು. ಮಳೆಗಾಲದಲ್ಲಿ ಮನೆಯ ಸೂರಿನ ದಂಬೆಯಿಂದ ಒಂದೇ ಸಮನೆ ನೀರು ಸುರಿಯುವಂತೆ ಇರುವ ಡಂಗಡಕ ತಾಳವೇ ಅಲ್ಲಿ ಇರಲಿಲ್ಲ. “ಬಿಡಬೇಡ ಮುಂದೆ ಹೋಗುಎಂದು ಮನಸ್ಸು ಹೇಳುತ್ತಿತ್ತು. ಎಲ್ಲಿಗೆ ಹೋಗುವುದು, ಹೇಗೆ ಹೋಗುವುದು?
ಜಾತ್ರೆಯ ದಿವಸ ಜನರು ಇನ್ನೂ ಕಿಕ್ಕಿರಿದು ಸೇರಿದರು. ರಥೋತ್ಸವವನ್ನು ದೂರದಿಂದ ನಿಂತು ನೋಡುವುದೂ ಹೊಲೆಯರಿಗೆ ಸಾಧ್ಯವಾಗಲಿಲ್ಲ - ಅಷ್ಟು ಮಂದೆಉತ್ತಮ ಜಾತಿಯ ಭಕ್ತರು ಸೇರಿದ್ದರು. ಒಂದು ಕಡೆ ಹೊಲೆಯರ ಸೇವೆ, ವಾದ್ಯರೂಪದಲ್ಲಿರೊಂಯೋ ಡಂಗಡಕಎಂದು ಆಗುತ್ತಿತ್ತು. ದೇವಾಲಯದ ಮುಂದೆ ಈ ವಾಲಗದವರು ಎಡೆಬಿಡದೆ ಹಾಡುಗಳನ್ನು ಬಾರಿಸುತ್ತಿದ್ದರು. ದೇವಾಲಯದ ಒಳಕ್ಕೆ ಒಂದು ಕಡೆಯಿಂದ ಜನರು ಪ್ರವಾಹದಂತೆ ನುಗ್ಗುತ್ತಿದ್ದರು. ಇನ್ನೊಂದು ಕಡೆಯಿಂದ ಹಾಗೆಯೇ ಹಿಂತಿರುಗುತ್ತಿದ್ದರು. ಶಂಖ ಜಾಗಟೆಗಳ ಸ್ವರ, ಜನರ ಬೊಬ್ಬೆ ದೂರಕ್ಕೆ ಅದೊಂದು ಹುಣ್ಣಿಮೆ ರಾತ್ರಿಯ ಸಮುದ್ರಘೋಷ. ಆ ಹರಟೆಯ ಮಧ್ಯೆ ಸುಬ್ಬನು ವಾಲಗದ ಸ್ವರವನ್ನೇ ಆಲಿಸುತ್ತಿದ್ದನು. ಹೊತ್ತು ಏರಿತು. ಗರುಡ ನೆತ್ತಿಯ ಮೇಲೆ ಬಂದು ಮೂರು ಪ್ರದಕ್ಷಿಣೆ ಮಾಡಿ, ಕುಮಾರಪರ್ವತದೆಡೆಗೆ ಹಾರಿತು. ದೊಡ್ಡ ರಥ ಹೊರಟಿತು, ಜನರು ರಥವನ್ನು ಎಳೆದರು. ಆನೆಯು ಹಿಂದಿನಿಂದ ನೂಕಿತು. ವಾಲಗದವರು ಹಾಡು ಬಾರಿಸುತ್ತ ಮುಂದೆ ನಡೆದರು. ರಥೋತ್ಸವ ಮುಗಿಯಿತು. ಮಧ್ಯಾಹ್ನದ ಮಹಾಭೋಜನವನ್ನುಂಡು ಭಕ್ತರು ತೇಗಿದರು. ಶೂದ್ರರಿಗೆ ಹೊರಗೆ ಅನ್ನ, ಮೇಲೋಗರ, ಪಾಯಸ, ಭಕ್ಷ್ಯ - ಇವೆಲ್ಲವನ್ನೂ ಹಂಚಿದರು. ಸುಬ್ಬ, ದೊಡ್ಡಣ್ಣ ಇವರೆಲ್ಲ ಹೊಟ್ಟೆ ತುಂಬ ದೇವರ ಪ್ರಸಾದ ಉಂಡು ತೃಪ್ತರಾದರು. ಆದರೆ ಸುಬ್ಬನ ಮನಸ್ಸು ಮಾತ್ರ ಬಿಡಬೇಡ, ಮುಂದೆ ಹೋಗು, ಅದನ್ನು ಕಲಿಎಂದು ಎಡೆಬಿಡದೆ ಹೇಳತೊಡಗಿತು. ಆ ರಾತ್ರಿಯ ಪೂಜೆಗೂ ವಾಲಗವಿತ್ತು. ಆದರೆ ಮುಖ್ಯೋತ್ಸವ ಮುಗಿದು ಹೋಗಿತ್ತು. ಮರುದಿನ ಕುಮಾರಧಾರಾ ನದಿಗೆ ದೇವರನ್ನು ಸ್ನಾನ ಮಾಡಿಸಲು ವಿಜೃಂಭಣೆಯಿಂದ ಕೊಂಡೊಯ್ದರು. ವಾಲಗಸಹಿತ ಮೆರವಣಿಗೆಯಾಯಿತು. ಈ ಉತ್ಸವವನ್ನು ದೊಡ್ಡಣ್ಣ, ಸುಬ್ಬ, ಮುಂತಾದ ಹೊಲೆಯರೆಲ್ಲರೂ ನೋಡಿದರು. ದೇವರಿಗಿಂತ ಬಹಳ ದೂರದಲ್ಲಿ ಬದಿಯಲ್ಲಿ ನಡೆದು ನದೀ ತೀರವನ್ನು ಸೇರಿದರು. ಮತ್ತೆ ಆ ದಿವಸದ ಕಾರ್ಯಕ್ರಮ ಮುಗಿಯಿತು. ಸುಬ್ಬನು ಮಾತ್ರ ಆನಂದ ಪರವಶತೆಯಿಂದ ಮುಂದೇನು ಮಾಡುವುದು ಎಂದು ತಿಳಿಯದೇ ಮನಸ್ಸಿನ ಗೊಂದಲ - ಇವುಗಳಿಂದೆಲ್ಲ ಕೂಡಿ ದೊಡ್ಡಣ್ಣನೊಡನೆ ಯಾಂತ್ರಿಕವಾಗಿ ನಡೆದನು. “ಬಿಡಬೇಡ, ಮುಂದೆ ಹೋಗುಎಂದು ಅಂತರ್ವಾಣಿ ನುಡಿಯುತ್ತಲೇ ಇತ್ತು.

ಅದರ ಮರುದಿವಸ ಬೆಳಿಗ್ಗೆ ಎಲ್ಲರೂ ಮಡಿಕೇರಿಗೆ ಹಿಂತಿರುಗುವುದು ಎಂದು ನಿಶ್ಚಯಿಸಿದರು. ಆ ರಾತ್ರಿ ಅಲ್ಲೊಂದು ಬಯಲಾಟವನ್ನು ನೋಡಲು ಹೊಲೆಯರು ಹೊರಟರು. ಆದರೆ ಸಾಯಂಕಾಲ ಪುನಃ ವಾಲಗದವರು ಎಲ್ಲಿಯಾದರೂ ಹಾಡು ಬಾರಿಸಿದರೆ, ಅದನ್ನು ಕೇಳಲೇಬೇಕು. ಇನ್ನು ಯಾವಾಗ ಇದನ್ನು ಪುನಃ ಕೇಳುವುದೋ ಏನೋ ಎಂದು ಸುಬ್ಬನು ಯೋಚಿಸಿ ನಾನು ಬರುವುದಿಲ್ಲ ಇಲ್ಲಿಯೇ ಇರುತ್ತೇನೆಎಂದನು. ದೊಡ್ಡಣ್ಣನು ಎಷ್ಟು ಒತ್ತಾಯಿಸಿದರೂ ಸುಬ್ಬನು ಒಪ್ಪಲೇ ಇಲ್ಲ. ನಿಜ ಕಾರಣವನ್ನು ಹೇಳಲೂ ಇಲ್ಲ. “ಹಾಗಾದರೆ ಇಲ್ಲಿಯೇ ಇರು. ನಾನು ಬೇಗನೆ ಬರ್ತೇನೆ, ಎಲ್ಲಿಗೂ ಹೋಗ್ಬೇಡಎಂದು ದೊಡ್ಡಣ್ಣನು ಬಯಲಾಟಕ್ಕೆ ಹೋದನು.

ಇಲ್ಲಿ ನಿಲ್ಲಬೇಡ, ಮುಂದೆ ಹೋಗು, ವಾಲಗವನ್ನು ಕಲಿಎಂದು ಒಂದೇ ಸಮನೆ ಮನಸ್ಸು ಹೇಳುತ್ತಿತ್ತು. ಏನು ಮಾಡುವುದೆಂದು ತಿಳಿಯದೇ ಸುಬ್ಬನು ಅಲ್ಲಿಯೇ ಕುಳಿತುಕೊಂಡ. ಹಿಂದಿನ ದಿನದ ರಾಗಗಳನ್ನು ನೆನಪು ಮಾಡಿಕೊಳ್ಳುತ್ತಿದ್ದನು. ಅವನ ಊಹೆ ಸರಿಯಾಯಿತು. ಆಗಲೇ ದೇವಸ್ಥಾನದ ಬದಿಯಿಂದ ಪುನಃ ವಾಲಗ ಕೇಳಿಸಿತು, ತಮಟೆಯ ನಿನಾದ ಕರ್ಣ ಮೃದಂಗವನ್ನು ಅಲುಗಿಸಿತು. ಸುಬ್ಬನ ಮೈಯಲ್ಲಿ ವಿದ್ಯುತ್ಸಂಚಾರವಾದ ಹಾಗಾಯಿತು. ಕೂಡಲೇ ಆ ಕಡೆಗೆ ನೆಗೆದು ಓಡಿದನು. ಜನಜಂಗುಳಿ ಹೆಚ್ಚು ಇರಲಿಲ್ಲ. ಬಹುಮಂದಿ ಆಗಲೇ ತಮ್ಮ ತಮ್ಮ ಮನೆಗಳಿಗೆ ಹೋಗಿದ್ದರು. ಉಳಿದವರು ಹೊರಡುತ್ತಿದ್ದರು. ಸುಬ್ಬನು ದೇವಾಲಯದ ಹತ್ತಿರ ತಲಪುವಾಗಲೇ ವಾಲಗದವರು ವಾದ್ಯ ನಿಲ್ಲಿಸಿ ಹೊರಡುತ್ತಿದ್ದರು. ಸುಬ್ಬನು ಅವರ ಹತ್ತಿರ ಹೋಗಿ ನಿಂತನು. ಅಲ್ಲಿ ಬೇರೆ ಕೆಲವರು ಹುಡುಗರು, ಅವರು ತಮ್ಮ ವಾದ್ಯಗಳನ್ನು ಕಟ್ಟುವುದನ್ನು ನೋಡುತ್ತ ನಿಂತಿದ್ದರು. ಇನ್ನೆರಡು ನಿಮಿಷಗಳಲ್ಲಿಯೇ ಅವರು ಅಲ್ಲಿಂದ ಹೊರಟು ನಡೆದರು. ಆ ಹುಡುಗರು ಬೇರೆ ಬೇರೆ ಕಡೆಗೆ ಹೋದರು. ಸುಬ್ಬನು ಮಾತ್ರ ಮಂತ್ರಮುಗ್ಧ ಸರ್ಪದಂತೆ ವಾಲಗದವರನ್ನು ಅನುಸರಿಸಿದನು.

ಆ ವಾದ್ಯಕಾರರು ತಮ್ಮ ಕೆಲಸ ಮುಗಿಸಿ ಊರಿನ ಕಡೆಗೆ ಹೊರಟು ನಡೆಯುತ್ತಿದ್ದರು. ಅವರ ಹಿಂದೆಯೇ ಬೇರೇನನ್ನೂ ಯೋಚಿಸದೇ ಯಾಂತ್ರಿಕವಾಗಿ ಸುಬ್ಬನೂ ನಡೆಯುತ್ತಿದ್ದನು. ಅವರಲ್ಲಿ ಯಾರೂ ಇವನನ್ನು ವಿಶೇಷವಾಗಿ ಗಮನಿಸಲಿಲ್ಲ. ನೋಡಿದರೂ ಅಲ್ಲಿ ಯಾವುದೋ ಹಳ್ಳಿಗೆ ಹೋಗುವ ಹೈದನಿರಬಹುದೆಂದು ಅವನನ್ನು ಮಾತಾಡಿಸಲಿಲ್ಲ. ಸಾಯಂಕಾಲ ಮುಗಿದು ಬೇಗನೆ ಕತ್ತಲಾಯಿತು. ಅವರು ಅಲ್ಲಿ ಒಂದು ಹೊಳೆಕರೆಯಲ್ಲಿ ಅಡುಗೆ ಮಾಡಲು ನಿಂತರು. ಸುಬ್ಬನೂ ಅಲ್ಲಿ ನಿಂತನು. ನೆರಳಿನಂತೆ ಅವನು ಅವರ ಹಿಂದೆ ಹೋಗುತ್ತಿದ್ದನು. ಆಗ ವಾಲಗದವರು ಇವನನ್ನು ನೋಡಿ ಕುತೂಹಲದಿಂದ ಎಂಗೆ ಪೋಹಬೇಕುಎಂದು ಅರ್ಧ ಅರವ, ಅರ್ಧ ಕನ್ನಡ ಭಾಷೆ ಆಡಿದನು. ಸುಬ್ಬನಿಗೆ ಅರ್ಥವಾಗಲಿಲ್ಲ. “ಎಲ್ಲಿಕೆ ಹೋಕಬೇಕುಎಂದು ಇನ್ನೊಬ್ಬನು ವಿವರಿಸಿ ಕೇಳಿದನು.
ಗೊತ್ತಿಲ್ಲಎಂದನು ಸುಬ್ಬ.
ಎಂಗಳ ಒಡನೆ ವರೆಯಾ?” ವಾಲಗದವನ ಪ್ರಶ್ನೆ.
ನಮ್ಮ ಚತೇಲಿ ಪರ್ತಿಯಾ?” ಕನ್ನಡ ಜ್ಞಾನಿ ಕೇಳಿದನು.
ಹೌದುಎಂದನು ಸಂತೋಷದಿಂದ ಸುಬ್ಬ.
ಅರೆ, ನಾವು ಕೊಯಂಬತ್ತೂರಿಕೆ ಹೋಕುವುದು. ಅಲ್ಲಿಕೆ ಪರ್ತಿಯಾ?”
ಕೊಯಂಬತ್ತೂರೆಂದರೆ ಏನೆಂದೇ ಸುಬ್ಬನಿಗೆ ಗೊತ್ತಿಲ್ಲ. “ಹ್ಞೂಎಂದನು.
ನಿನಕೆ ತಂದೆತಾಯಿ ಯಾರೂ ಇಲ್ಲವಾ?”
ಇದಕ್ಕೇನು ಉತ್ತರ ಹೇಳಬೇಕೆಂದು ತಿಳಿಯಲಿಲ್ಲ. ಬಾಯಿಂದ ಮಾತ್ರ ಇಲ್ಲಎಂದು ಹೇಳಿಹೋಯಿತು.
ನಮ್ಮ ಚತೇಲಿ ಬಂತು ಏನು ಮಾಡ್ತಿಯಾ?”
ನೀವ್ಹೇಳಿದ್ದು ಮಾಡ್ತೇನೆ.”
ಮುಂದೆ ಹೋಗು ಹೆದರಬೇಡಎಂದು ತಳ್ಳಿತು ಮನಸ್ಸು.
ವರಟು! ವೇಲೆ ಶೆಯ್ಯರಂತಕು ಒರು ಪಯ್ಯನಾಚಿಎಂದು ವಾಲದವನು ಈ ಸಂಭಾಷಣೆಯನ್ನು ಮುಗಿಸಿದನು.
ಮತ್ತೆ ಅವರು ಅವನನ್ನು ಏನೂ ಪ್ರಶ್ನಿಸಲಿಲ್ಲ. ಆ ರಾತ್ರಿ ಅವನಿಗೂ ಅನ್ನವನ್ನು ಕೊಟ್ಟರು. ಸುಬ್ಬನಿಗೆ ಬಲು ಸಂತೋಷವಾಯಿತು. ರಾತಿಯೂಟ ಮಾಡಿ ಮುಂದೆ ಹೊರಟರು. ಕೆಲವು ಗಂಟುಗಳನ್ನು ಹೊತ್ತು ಕೊಳ್ಳಲು ಸುಬ್ಬನಿಗೆ ಕೊಟ್ಟರು. ಅವನು ಭಕ್ತಿಯಿಂದ ಅವನ್ನು ಹೊತ್ತು ಕೊಂಡನು.
ಹೀಗೆ ಅವರು ಮುಂದೆ ಮುಂದೆ ನಡೆಯುತ್ತ ಸಾಗಿದರು. ದಾರಿಯಲ್ಲಿ ಅಲ್ಲಲ್ಲಿ ಎದುರಾದ ದೇವಾಲಯಗಳಲ್ಲಿ ವಿಶ್ರಾಂತಿ ಪಡೆದುಕೊಂಡು, ಅಲ್ಲಿ ನಾಗಸ್ವರ ಸೇವೆ ಸಲ್ಲಿಸಿ ಮುಂದೆ ಹೋದರು. ಮೈಸೂರು ಸೀಮೆ ದಾಟಿ, ಕೊಯಮತ್ತೂರನ್ನು ಸೇರಿದರು.

****
ಸುಬ್ಬನಲ್ಲಿ ಹುದುಗಿದ್ದ ಸಂಗೀತ ಪ್ರೇಮವನ್ನು ಅರಿಯಲು, ಅಡಗಿದ್ದ ಚಿನ್ನವನ್ನು ಹೊರದೆಗೆಯಲು ಆ ನಾಗಸ್ವರ ವಿದ್ವಾಂಸರಿಗೆ ಹೆಚ್ಚು ದಿವಸ ಹಿಡಿಯಲಿಲ್ಲ. ಸುಬ್ಬನು ಮುನಿಸ್ವಾಮಿ ಪಿಳ್ಳೆಯ ಮನೆಯಲ್ಲಿಯೇ ಕೆಲಸಕ್ಕೆ ಇದ್ದನು. ಪಿಳ್ಳೆಯು ಬಲು ಯೋಗ್ಯ ವ್ಯಕ್ತಿಯಾಗಿದ್ದನು. ಆಚಾರವಂತನೂ ದೇವರಲ್ಲಿ ಅತಿ ಭಕ್ತಿಯುತನೂ ಆಗಿದ್ದನು. ಅವನ ಮನೆಯಲ್ಲಿ ಅವನೂ ಅವನ ಹೆಂಡ್ತಿ ಇಬ್ಬರೇ ಇದ್ದರು. ಮತ್ತೆ ವಾಲಗ ಕಲಿಯಲು ಅನೇಕ ಶಿಷ್ಯರಿದ್ದರು. ಅವರೆಲ್ಲರನ್ನೂ ತನ್ನ ಮಕ್ಕಳಂತೆ ನೋಡಿಕೊಳ್ಳುತ್ತ, ನಾಗಸ್ವರವನ್ನು ಹೇಳಿಕೊಡುತ್ತಿದ್ದನು ಮುನಿಸ್ವಾಮಿ. ಸುಬ್ಬನಿಗೆ ಬೆಳಗ್ಗಿನಿಂದ ಸಾಯಂಕಾಲದವರೆಗೆ ಈ ಗಾನಾಮೃತಪಾನ. ಆದರೆ ಕಲಿಯುವವರು ಮಾಡುತ್ತಿದ್ದ ಹರಟೆ ಮಾತ್ರ ಅವನಿಂದ ಸಹಿಸಲಾಗುತಿದ್ದಿಲ್ಲ.

ಒಂದು ದಿನ ಶಂಕರಾಭರಣ ರಾಗವನ್ನು ಒಬ್ಬ ಶಿಷ್ಯನಿಗೆ ಪಿಳ್ಳೆಯು ಹೇಳಿಕೊಡುತ್ತಿದ್ದನು. ‘ಸ್ವರರಾಗಸುಧಾಎಂಬ ಕೀರ್ತನೆ. ಆದರೆ ಅದರ ಪಲ್ಲವಿಯಲ್ಲೇ ಆ ಶಿಷ್ಯನು ತಪ್ಪಿ ಬೀಳುತ್ತಿದ್ದನು. ‘ಸ್ವರರಾಗಸುಧಾಎಂದು ಬಾರಿಸಿ ಒಂದು ದೀರ್ಘ ಅಲುಗು ಇದೆ. ಅದನ್ನು ಬಾರಿಸುವಾಗ ಅಪಸ್ವರ ಬಂದು ಕಿವಿಗೆ ಕಾದ ಸೀಸದ ರಸ ಹೊಯ್ದಂತೆ ಆಗುತ್ತಿತ್ತು. ಅ ಹಾಡನ್ನು ಒಳ್ಳೆಯ ನಾಗಸ್ವರದಿಂದ ಸುಬ್ಬನು ಲೆಕ್ಕವಿಲ್ಲದಷ್ಟು ಸಲ ಕೇಳಿದ್ದನು. ಆ ಹಾಡಿಗೆ ಬೆಟ್ಟುಗಳು ಹೇಗೆ ಓಡಬೇಕೆಂದು ಕೂಡ ಸುಬ್ಬನಿಗೆ, ಸೂಕ್ಷ್ಮಗ್ರಾಹಿಯಾದ ನಾಗಸ್ವರ ಪ್ರೇಮಿಗೆ ತಿಳಿದಿತ್ತು. ಆ ಶಿಷ್ಯನ ಈ ದಡ್ಡತನ ಸುಬ್ಬನಿಗೆ ತಡೆಯಲಾಗಲಿಲ್ಲ.

ನಾನು ಬಾರಿಸುತ್ತೇನೆಎಂದು ಒಂದೇ ಸಲ ಮುಂದೆ ಬಂದನು. ಅವನ ಉತ್ಸಾಹ ಹೋಗು ಮುಂದೆ ಹೋಗುಎಂದು ನೂಕುತ್ತಿದ್ದಿತು. ಅವನ ಸಂಗೀತಪ್ರೇಮ, ಆ ಸುಪ್ತ ಶಕ್ತಿ ಆಗ ನಿದ್ದೆಯಿಂದೆದ್ದು ನಾನಿದ್ದೇನೆಎಂದು ಸಾಧಿಸಲು ಹೊರಗೆ ಬಂದಿತು. ಇವನ ರೀತಿಯನ್ನು ನೋಡಿ ಶಿಷ್ಯನಿಗೆ ನಗು ಬಂದಿತು. ಪಿಳ್ಳೆಯು ಆಶ್ಚರ್ಯದಿಂದ, ಕುತೂಹಲದಿಂದ ನೀ ವಾಶಿಕ್ಕರೆಯಾ? ಎಡುತುಕೋಎಂದು ಇನ್ನೊಂದು ನಾಗಸ್ವರವನ್ನು ಕೊಟ್ಟನು.

ಆಲಾಪನೆ, ಅಲುಗು, ಸ್ವರ ಇವುಗಳ ಅಲಂಕಾರವಿಲ್ಲದೆ ಇದ್ದರೂ ಶುದ್ಧವಾಗಿ ಆ ಹಾಡನ್ನು ಸುಬ್ಬನು ಬಾರಿಸಿದನು. ಗುರುವಿಗೆ ಆಶ್ಚರ್ಯ, ಸಂತೋಷ, ವಿಸ್ಮಯ. ಶಿಷ್ಯನು ತಲೆತಗ್ಗಿಸಿದನು. ಸುಬ್ಬನು ಆನಂದಪುಳಕಿತನಾಗಿದ್ದನು. ವಾಲಗವನ್ನು ಕೆಳಗಿರಿಸಿ ಮೈಮರೆತು ಕುಳಿತಿದ್ದನು.
ಇಷ್ಟು ಚೆನ್ನಾಗಿ ಎಲ್ಲಿ ಕಲಿತೆ?” ಎಂದು ಪಿಳ್ಳೆಯು ತಮಿಳಿನಲ್ಲಿ ಕೇಳಿದನು.
ಏನು ಉತ್ತರ ಕೊಡುವುದು? “ನೀವು ಬಾರಿಸುವುದನ್ನು ಕೇಳಿಎಂದನು ಸುಬ್ಬ. ಬೇರಾವ ಕಾರಣವೂ ಸಮರ್ಪಕವಾಗಿರಲಿಲ್ಲ. ಇದೇ ನಿಜವಾದುದು. ಪಿಳ್ಳೆಗೆ ಇದನ್ನು ನಂಬಲಾಗಲಿಲ್ಲ. ಬೇರೆ ಸುಲಭವಾದ ರಾಗಗಳೆರಡನ್ನು - ಮೋಹನ ಮತ್ತು ಕಲ್ಯಾಣಿ - ಬಾರಿಸಲು ಹೇಳಿದನು. ಅವನ್ನೂ ಸುಬ್ಬನು ಶುದ್ಧವಾಗಿ ನಿರಾಭರಣವಾಗಿ ನುಡಿಸಿದನು. ಸುಬ್ಬನ ಪ್ರತಿಭೆಯ ಅರಿವು ಗುರುವಿಗೆ ಕೂಡಲೇ ಆಯಿತು. ಮಕ್ಕಳಿಲ್ಲದ ತನಗೆ ಇಂತಹ ಶಿಷ್ಯನನ್ನು ಅಯಾಚಿತವಾಗಿ ದಯಪಾಲಿಸಿದ ಮುರುಘನನ್ನು ಮನಸ್ಸಿನಲ್ಲಿಯೇ ತುಂಬ ವಂದಿಸಿದನು.
ಪಿಳ್ಳೆ ಅಂದಿನಿಂದ ಸುಬ್ಬನನ್ನು ತನ್ನ ಶಿಷ್ಯನನ್ನಾಗಿ ಮಾಡಿಕೊಂಡನು. ಅವನು ಮತ್ತೆ ಹೊರಗೆಲಸ ಮಾಡಬೇಕಾಗಿರಲಿಲ್ಲ. ಸುಬ್ಬನ ಆಸೆ ಕೈಗೂಡುವಂತಾಯಿತು. ಅಂದಿನಿಂದ ಸುಬ್ಬನಿಗೆ ಕ್ರಮ ಪ್ರಕಾರ ಪಾಠ ಪ್ರಾರಂಭವಾಯಿತು. ಒಂದು ಸಲ ಹೇಳಿಕೊಟ್ಟರೆ ಅದು ಅವನಿಗೆ ಕೂಡಲೇ ಬರುತ್ತಿತ್ತು. ಅವನು ಹೇಳಿದಂತೆ ನಾಗಸ್ವರವು ನುಡಿಯುತ್ತಿತ್ತು. ಅವನ ಅಪ್ಪನ ನಾಗಸ್ವರದಂತೆ ಅಳುತ್ತಿರಲಿಲ್ಲ. ಆದರೆ ಅಳುವಿನ ಹಿನ್ನೆಲೆಯಿಲ್ಲದಿದ್ದರೆ ನಗುವು ತಿಳಿಯುವುದೇ? ಬೇರೆ ಶಿಷ್ಯರು ವರ್ಷಗಳಲ್ಲಿ ಕಲಿಯುವುದನ್ನು ಸುಬ್ಬನು ತಿಂಗಳುಗಳಲ್ಲಿ ಕಲಿತು ಮುಗಿಸಿದನು. ಪಿಳ್ಳೆಯು ನವೋತ್ಸಾಹದಿಂದ ಈ ಶಿಷ್ಯನಿಗೆ ರಾಗ ಪ್ರಕರಣವೆಲ್ಲವನ್ನೂ ಕಲಿಸಿದನು. ತೋಡಿ, ಭೈರವಿ, ಕಲ್ಯಾಣಿ, ಶಂಕರಾಭರಣ ಮುಂತಾದ ರಾಗಗಳಲ್ಲಿ ಗುರುಶಿಷ್ಯರು ಆಲಾಪನೆ ಮಾಡಲು ತೊಡಗಿದರೆ ಯಾರು ಹೆಚ್ಚು, ಯಾರು ಕಡಿಮೆ ಎಂದೇ ತಿಳಿಯುತ್ತಿದ್ದಿಲ್ಲ. ಪ್ರತಿಯೊಬ್ಬನದೂ ಪ್ರತ್ಯೇಕವಾಗಿ ಕೇಳುವಾಗ ಅವನೇ ಉತ್ತಮನೆಂದು ಅನಿಸುತ್ತಿತ್ತು. ಇಬ್ಬರೂ ಒಟ್ಟಿಗೆ ಬಾರಿಸುವಾಗ ಗುರುವಿನದು ಏಕರೀತಿಯ ಗಂಭೀರವಾದ ಮುನ್ನಡೆ; ಶಿಷ್ಯನು ನೆರಳಿನಂತೆ ಹಿಂಬಾಲಿಸುತ್ತಾ, ಒಮ್ಮೆ ಏರುಸ್ವರದಲ್ಲಿ ಒಮ್ಮೆ ತಗ್ಗು ಸ್ವರದಲ್ಲಿ ಬಾರಿಸುತ್ತ ಕೇಳುವವರಲ್ಲಿ ಆನಂದೋಲ್ಲಾಸವನ್ನು ಕಲ್ಪಿಸುತ್ತಿದ್ದನು. ಹಾಲಿನ ಹೊಳೆಯಲ್ಲಿ ಜೇನಿನ ಪ್ರವಾಹ ಮಿಶ್ರವಾದಂತೆ - ಈ ಎರಡೂ ದ್ರವ ಪದಾರ್ಥಗಳು ಮಿಶ್ರವಾಗುವುದಿಲ್ಲ - ಆದರೂ ಅವುಗಳ ಮಿಶ್ರಣ ಮಧುರ, ಹಿತಕರ, ಆನಂದಕರ. ಹೇಗೂ ಸ್ವರಪ್ರಸ್ತಾರದಲ್ಲಿ (ಹಾಡಿನ ಮಧ್ಯೆ ಸರಿಗಮಪದನಿಗಳನ್ನು ಜೋಡಿಸುವ ಕ್ರಮ) ಗುರುವಿನದೇ ಮೇಲುಗೈ ಆಗಿತ್ತು.

ಹೀಗೆ ಐದಾರು ವರ್ಷಗಳು ಸಲ್ಲುವಾಗ ಸುಬ್ಬನು - ಸುಬ್ರಹ್ಮಣ್ಯ ಪಿಳ್ಳೆ - ಗುರುವಿನ ವಿದ್ಯೆ, ಪಾಂಡಿತ್ಯಗಳನ್ನು ಸಂಪೂರ್ಣ ಸಂಪಾದಿಸಿ, ತನ್ನ ಪ್ರತಿಭೆಯನ್ನೂ ಅದಕ್ಕೆ ಎರಕ ಹೊಯ್ದನು. ಈಗ ಇವರಿಬ್ಬರ ನಾಗಸ್ವರಗಳನ್ನು ಕೇಳಿದವರು ಶಿಷ್ಯನೇ ಉತ್ತಮ ಎನ್ನುತ್ತಿದ್ದರು. ಆದರೆ ಹಳಬರು ಎಷ್ಟಾದರೂ ಮುನಿಸ್ವಾಮಿಯದು ಹಳೇ ಕೈ. ಅವನೇ ಮೇಲುಎಂದು ಹಳೆಯತನಕ್ಕೆ ಶರಣುಹೋಗುತ್ತಿದ್ದರು.

ವಿದ್ಯೆಯನ್ನು ಕಲಿಯುವಾಗ ಸುಬ್ಬನು ಅದರಲ್ಲಿ ಸಂಪೂರ್ಣ ತನ್ಮಯನಾಗಿದ್ದನು. ತಂದೆತಾಯಿಗಳ ಆಲೋಚನೆ ಬಂದಾಗಲೆಲ್ಲ ಮನಸ್ಸು ಮುಂದೆ ಹೋಗು, ಹೆದರಬೇಡಎಂದೇ ಹೇಳುತ್ತಿತ್ತು. ಆದರೆ ಎಷ್ಟು ವರ್ಷ ಹೀಗೆ, ಅವರಿಗೆ ತಾನು ಏನಾದೆ ಎಂದೂ, ಬದುಕಿದ್ದೇನೋ ಸತ್ತಿದ್ದೇನೋ ಎಂದೂ ತಿಳಿಯದೇ ಇರುವುದು? ಈಗ ಅವರು ಹೇಗಿದ್ದಾರೋ? ಈಗ ಸಂಗೀತವನ್ನು ತಕ್ಕಮಟ್ಟಿಗೆ ಕಲಿತಾಯಿತು. ಒಂದು ಸಲವಾದರೂ ಊರಿಗೆ ಹೋಗಿ ಅಪ್ಪ, ಅಮ್ಮ ಇವರನ್ನು ನೋಡಿ ಬರಬೇಕೆಂದು ಸುಬ್ಬನಿಗೆ ಬಲವಾಗಿ ಆಸೆ ಹಿಡಿಯಿತು. ತಂದೆ ತಾಯಿ ಯಾರೂ ಇಲ್ಲವೆಂದು ಅಂದೇ ಗುರುವಿಗೆ ತಿಳಿಸಿದ್ದುದರಿಂದ ಈ ವಿಷಯವನ್ನು ಅವನು ಮುಂದೆ ವಿಚಾರಿಸಲೇ ಇಲ್ಲ. ತನ್ನ ಮಗನೇ ಇವನು ಎಂದು ನೋಡಿಕೊಳ್ಳುತ್ತಿದ್ದನು. ಸುಬ್ಬನ ಮನಸ್ಸಿನಲ್ಲಿ ಮಾತ್ರ ಅಪ್ಪ, ಅಮ್ಮ, ದೊಡ್ಡಣ್ಣನಿಗೆ ಮೋಸ ಮಾಡಿ - ಬೇಕೆಂದು ಅಲ್ಲ - ತಾನು ಓಡಿಬಂದುದು ಈ ಎಲ್ಲ ಚಿತ್ರಗಳು ಮೂಡುತ್ತಿದ್ದುವು. ತನ್ನನ್ನು ನೆನೆದು ಅಪ್ಪನೆಷ್ಟು ಕೊರಗುತ್ತಾನೋ? ಅಮ್ಮನೆಷ್ಟು ಹಂಬಲಿಸುತ್ತಾಳೋ? ಆದರೆ ಎಷ್ಟು ದೂರವೋ ಏನೋ ಮಡಿಕೇರಿ. ಅಲ್ಲಿಗೆ ಹೇಗೆ ಹೋಗುವುದು? ಆದರೆ ಹೋಗಲೇ ಬೇಕು.

ಗುರುವಿಗೆ ಈ ವಿಷಯವನ್ನು ಸುಬ್ಬನು ತಿಳಿಸಿದನು. ಒಂದು ಸಲವಾದರೂ ಊರಿಗೆ ಹೋಗಿಬರಬೇಕೆಂಬ ತನ್ನ ಅಪೇಕ್ಷೆಯನ್ನು ವ್ಯಕ್ತಪಡಿಸಿದನು. ಮುನಿಸ್ವಾಮಿ ಪಿಳ್ಳೆಗೆ ನಿಜಸಂಗತಿ ತಿಳಿದು ಸಂತೋಷವೇ ಆಯಿತು - ತಂದೆತಾಯಿ ಇರುವ ಹುಡುಗ ಎಂದು. ಆದರೆ ತನ್ನನ್ನು ಬಿಟ್ಟು ಹೋಗುವನಲ್ಲ ಎಂದು ವ್ಯಸನವೂ ಆಯಿತು. “ನನಗೆ ಪ್ರಾಯವಾಗುತ್ತಾ ಬಂದಿತು. ಇನ್ನು ಈ ವರ್ಷ ಪುನಃ ಸುಬ್ರಹ್ಮಣ್ಯಕ್ಕೆ ಹೋಗಬೇಕೆಂದು ಉಂಟು. ಈ ಸಲ ಹೋಗದಿದ್ದರೆ ಮುಂದೆ ಹೋಗುವುದು ಸಾಧ್ಯವೇ ಇಲ್ಲ. ನಾವೆಲ್ಲ ಹೋಗುವ, ಮತ್ತೆ ನೀನು ನಿನ್ನ ಊರಿಗೆ ಹೋಗು. ಮುರುಘ ನಿನ್ನನ್ನು ನನಗೆ ದಯಪಾಲಿಸಿದ. ಅವನಲ್ಲೇ ನಿನ್ನನ್ನು ಬಿಟ್ಟು ಬರುತ್ತೇನೆಎಂದು ಪಿಳ್ಳೆಯು ತಮಿಳಿನಲ್ಲಿ ಹೇಳಿದನು.

ಮುಂದಿನ ಏಳೆಂಟು ತಿಂಗಳುಗಳಲ್ಲಿ ಸುಬ್ರಹ್ಮಣ್ಯ ಷಷ್ಠಿಯು ಬರುವುದರಲ್ಲಿತ್ತು. ಎರಡು ತಿಂಗಳುಗಳ ಮುಂಚೆ, ಮುನಿಸ್ವಾಮಿ ಪಿಳ್ಳೆಯ ಪಂಗಡ ಹೊರಟಿತು. ಆರು ವರ್ಷಗಳ ಹಿಂದೆ ಬಂದಂತೆಯೇ ಸಾಗಿದರು. ಈಗ ಪಿಳ್ಳೆಯು ಸ್ವಲ್ಪ ಬಲಕುಂದಿದವನಾಗಿದ್ದನು. ಆದರೆ ಅವನ ಜತೆಯಲ್ಲಿ ಅವನ ಮಗನಂತೆ, ಪ್ರತಿರೂಪನಂತೆ ಇದ್ದ, ದೇಹದಲ್ಲಿ ಬಲವಾಗಿ ಬೆಳೆದಿದ್ದ, ವಿದ್ಯೆಯಲ್ಲಿ ಸಂಪೂರ್ಣ ಪಾಂಡಿತ್ಯ ಪಡೆದಿದ್ದ ಸುಬ್ಬನು ಇದ್ದನು. ಜಾತ್ರೆಗೆ ಒಂದು ವಾರದ ಮೊದಲೇ ಇವರು ಸುಬ್ರಹ್ಮಣ್ಯವನ್ನು ತಲಪಿದರು. ದೂರದೂರದ ಯಾತ್ರಿಕರು ಆಗಲೇ ಅಲ್ಲಿಗೆ ಬಂದು ಸೇರಲು ಪ್ರಾರಂಭಿಸಿದ್ದರು. ಪ್ರತಿ ದಿನವೂ ಜನಸಮೂಹ ಬೆಳೆಯುತ್ತಲೇ ಇತ್ತು. ಪಿಳ್ಳೆಯ ಕಡೆಯ ನಾಗಸ್ವರ ಪ್ರತಿದಿನವೂ ಬೆಳಗ್ಗೆ ಸಂಜೆ ದೇವಾಲಯದ ಮುಂದೆ ನಡೆಯುತ್ತಿತ್ತು. ಎಷ್ಟೋ ಜನರು ಆರು ವರ್ಷದ ಹಿಂದೆ ಇವನನ್ನು ಕೇಳಿದ್ದೆವು. ಇಷ್ಟು ಚೆನ್ನಾಗಿ ಬಾರಿಸುವವನನ್ನು ನಾವು ಮತ್ತೆ ಕೇಳಲಿಲ್ಲ. ಈಗ ಅವನಷ್ಟೇ ಕಲಿತ ವಿದ್ವಾಂಸನನ್ನು ಕರೆದು ತಂದಿದ್ದಾನೆಎಂದು ಅಲ್ಲಿ ನಿಂತು ಮಾತಾಡಿಕೊಳ್ಳುತ್ತಿದ್ದರು. ಬಹುಮಂದಿ, “ವಾಲಗ ಹೇಗೂ ಇರಬೇಕಾದುದೇಎಂದು ಯಾರು ಬಾರಿಸುವುದು ಎಂದು ಸಹ ನೋಡದೆ ಹೋಗುತ್ತಿದ್ದರು. ಸುಬ್ಬನಿಗೊಂದೇ ಚಿಂತೆ: ನಿಂಗನು ವರ್ಷ ವರ್ಷದಂತೆ ಸೇವೆ ಸಲ್ಲಿಸಲು ಈ ವರ್ಷವೂ ಬಂದಾನೋ, ಬಂದರೆ ಅಲ್ಲಿಯೇ ನೋಡಿ ಮಡಿಕೇರಿಗೆ ಒಟ್ಟಿಗೆ ಹೋಗಬಹುದಲ್ಲ ಎಂದು. ಹೊಲೆಯರು ತಂಗಲು ಕಟ್ಟುತ್ತಿದ್ದ ಛಾವಣಿಗಳು ಇರುವಲ್ಲಿ ಈಗ ಹೊಸ ಕಟ್ಟಡಗಳು ಎದ್ದಿದ್ದುವು. ಇನ್ನೂ ದೂರದಲ್ಲಿ ಅವನ್ನು ಕಟ್ಟುತ್ತಿದ್ದರು. ಅಲ್ಲಿಗೆ ಪ್ರತಿ ದಿನವೂ ಸಾಯಂಕಾಲ ಸುಬ್ಬನು ಒಬ್ಬನೇ ಹೋಗಿ ನೋಡಿ ಬರುತ್ತಿದ್ದನು. ಆದ್ರೆ ಯಾರೂ ಅಲ್ಲಿಗೆ ಬಂದಿರಲಿಲ್ಲ. ಸುಬ್ಬನಿಗೆ ಹಿಂದಿನ ಚಿತ್ರವೆಲ್ಲವೂ ನೆನಪಾಗುತ್ತಿತ್ತು. ಅದೊಂದು ಸಂತೋಷದ ವಿಷಯ. ಆದರೆ ಅವನ ಪ್ರಾರ್ಥನೆಯೊಂದೇ ಮನೆಯಲ್ಲಿ ಎಲ್ಲರೂ ಸೌಖ್ಯವಾಗಿರಲಿಎಂದು.
ಷಷ್ಠಿಯ ಹಿಂದಿನ ರಾತ್ರಿಯೂ ಸುಬ್ಬನು ಆ ಛಾವಣಿಗೆ ಹೋಗಿ ನೋಡಿದನು. ಅನೇಕ ಹೊಲೆಯರು ಅಲ್ಲಿ ಸೇರಿದ್ದರೂ ಅವನ ಪರಿಚಿತರು ಮಡಿಕೇರಿಯವರಾರೂ ಬಂದಿರಲಿಲ್ಲ. ಬಹುಷಃ ತಡವಾಗಿ ಬರುತ್ತಾರೋ ಏನೋ?
ರಾತ್ರಿ ದೇವರ ಸೇವೆಗೆ, ಸಣ್ಣ ರಥೋತ್ಸವಕ್ಕೆ ನಾಗಸ್ವರ ಬಾರಿಸಲು ಗುರುಶಿಷ್ಯರು ಹೊರಟರು. ಮೈಸೂರಿನಿಂದ ಬಂದಿದ್ದ ನಾಗಸ್ವರದವನು ಈ ಕೊಯಮತ್ತೂರಿನ ವಿದ್ವಾಂಸರ ಪಾಂಡಿತ್ಯ ನೋಡಿ, ತನ್ನ ವಾಲಗವನ್ನು ಮೂಲೆಯಲ್ಲಿಟ್ಟು ಇವರನ್ನು ಕೇಳಲು ನಿಂತಿದ್ದನು. ಶ್ರೀರಾಗದಲ್ಲಿ ಆಲಾಪನೆ ನಡೆದಿತ್ತು. ಕಿವಿಯಿದ್ದವರು ಇದೇನು ಅದ್ಭುತವಪ್ಪಾ ಎಂದು ದಂಗುಬಡಿದು ಅಲ್ಲಿಯೇ ನಿಂತು ಕೇಳಿದರು. ಈ ಗುರುಶಿಷ್ಯ ಸಂವಾದವನ್ನು, ಮಧುರ ಸ್ಪರ್ಧೆಯನ್ನು. ಆಲಾಪನೆಯೇ ಎಷ್ಟೋ ಹೊತ್ತು, ಮತ್ತೆಎಂದುರೋ ಮಹಾನುಭಾವುಲುಎಂಬ ತ್ಯಾಗರಾಜರ ಪಂಚರತ್ನ ಕೀರ್ತನೆಯನ್ನು ನಿಧಾನಗತಿಯಲ್ಲಿ ಪ್ರಾರಂಭಿಸಿದರು. ಒಂದು ವಾಲಗವನ್ನು ಏರುಸ್ವರದಲ್ಲಿ, ಇನ್ನೊಂದನ್ನು ತಗ್ಗು ಸ್ವರದಲ್ಲಿ (ಶಿಷ್ಯನದು) ಬಾರಿಸುತ್ತಿದ್ದರು. ಒಂದು ಸುಖಾಂತ ನಾಟಕವನ್ನಾಡಿ ತೋರಿಸುತ್ತಿದ್ದಂತೆ, ಒಂದು ಸುಂದರ ಚಿತ್ರವನ್ನು ಅನಾವರಣ ಮಾಡಿ ತೋರಿಸುತ್ತಿದ್ದಂತೆ ಆ ಸಂಗೀತವಿತ್ತು. ಕಿವಿಯಿಲ್ಲದಿದ್ದವರೂ ಇದೇನು ವಿಶೇಷವಪ್ಪಾ ಈ ವರ್ಷ ಎಂದು ನಿಂತು ಆಲಿಸಿದರು. ಸುಬ್ಬನು ಈಗ ಆಲಾಪನೆ, ಪಲ್ಲವಿ, ಸ್ವರ ಪ್ರತಿಯೊಂದರಲ್ಲಿಯೂ ಗುರುವಿಗಿಂತಲೂ ಒಂದು ಹೆಜ್ಜೆ ಮುಂದುವರಿದಿದ್ದನು. ಮೈಮರೆತು ಅವರಿಬ್ಬರೂ ಆ ಹಾಡನ್ನು ಬಾರಿಸಿದರು. ಡೋಲಿನವರು ಅದ್ವಿತೀಯವಾಗಿ ವಾಜಿಸಿದರು. ರಥವು ಮುಂದುವರಿಯಿತು. ಜನರು ಇವರನ್ನು ನೂಕಿದರು, ಹಾಗೆಯೇ ಇವರೂ ಮುಂದುವರಿದರು. ನಾಗಸ್ವರದಲ್ಲಿ ಲೀನರಾಗಿ ತ್ಯಾಗರಾಜರ ವಿದ್ವತ್ಸಮುದ್ರದಲ್ಲಿ ಶ್ರೀರಾಗದ ಮಾಧುರ್ಯಶ್ರೀಯನ್ನರಸುತ್ತಾ ಅವರು ಬಾಹ್ಯ ಜ್ಞಾನವನ್ನೇ ಮರೆತರು. ಜನಪ್ರವಾಹದಲ್ಲಿ ಸಂಗೀತಾಮೃತವಾಹಿನಿ ಮಿಶ್ರವಾಗಿ ದಿಗಂತಕ್ಕೆ ಹರಿಯಿತು. ಸಾಂದ್ರ ತಮಸ್ಸಿಗೆ ಜ್ಯೋತಿಸ್ವರೂಪವಾಯಿತು.
ರಥವು ಮುಂದುವರಿಯುವಾಗಲೇ, “ಸುಬ್ಬ, ಸುಬ್ಬ, ನನ್ನ ಸುಬ್ಬ, ಬಂದ್ಯಾ ಮಗ್ನೇಎಂದು ಕಿರಿಚುತ್ತ, ಆ ಜನರನ್ನು ನೂಕುತ್ತ ಯಾರೋ ಮುಂದೆ ಓಡಿದರು. ಆತ್ಮಶಕ್ತಿಯ ಮುಂದೆ ಬೇರೆಲ್ಲ ಶಕ್ತಿಗಳೂ ನೇಸರ ಮುಂದಿನ ಸೊಡರುಗಳು; ನಿಂಗನು ಹೀಗೆ ಓಡಿದಾಗ ಜನರೆಲ್ಲರೂ ಅಡ್ಡ ಸರಿದು ದಾರಿ ಮಾಡಿದರು. ನಿಂಗನು ಓಡಿ ಹೋಗಿ ಮಗನನ್ನು ಆಲಿಂಗಿಸಿದರು. ಸುಬ್ಬನು ಭಾವ ಸಮಾಧಿಯಿಂದ ಫಕ್ಕನೆ ಇಳಿದು ಅಪ್ಪಾ ಬಂದ್ಯಾ?” ಎಂದು ಅವನನ್ನು ಅಪ್ಪಿಕೊಂಡನು. ವಾಲಗ ಕೆಳಗೆ ಬಿತ್ತು, ಹತ್ತಿರವಿದ್ದ ಜನರು ಇದೇನು ಎಂದು ಆಶ್ಚರ್ಯದಿಂದ ನೋಡುತ್ತಿದ್ದರು. ವಿಷಯ ತಿಳಿದಿದ್ದ ಗುರುವಿಗೆ ಸಂತೋಷದಿಂದ ಆನಂದ ಬಾಷ್ಪ ಸುರಿಯಿತು. “ಮುರುಘಾ ಕೃಪೆಶೈದೆಯಾ!” ಎಂದು ಅವನು ಆ ರಾಗವನ್ನು ಭಕ್ತಿಯಿಂದ ಮುಂದುವರಿಸಿದನು. ಹಿಂದಿನ ಜನರಿಗೆ ರಾಗ ತುಂಡಾದುದೇ ತಿಳಿಯಲಿಲ್ಲ.
ಎಂದುರೋ ಮಹಾನುಭಾವುಲುಮುಂದುವರಿಯಿತು. ಆ ಮಹಾನುಭಾವರಿಗೆಲ್ಲಾ ವಂದನೆ!

10 comments:

 1. -ಮೂರ್ತಿ ದೇರಾಜೆ28 June, 2013 10:47

  ಹಿಂದೊಮ್ಮೆ ಓದಿದ್ದೆ.....ಪುಸ್ತಕವೂ ನನ್ನಲಿದೆ.....ಅಂದಿಗಿಂತಲೂ ಇಂದು ಹೆಚ್ಚು ಆನಂದವಾದಂತೆ.....ಭಾಸವಾಯ್ತು........ Thanks..........

  ReplyDelete
 2. ’ಕೊಡಗಿನೆ ಸುಮಗಳು’ ನನ್ನೊಡನೆ ಇದೆ. ಅಂದು ಓದಿದ್ದೆ, ಮತ್ತೊಮ್ಮೆ ಓದುತ್ತೇನೆ. ನಿಮ್ಮ ತಂದೆಯವರ ದೇಹತ್ಯಾಗ ಮಾಡಿದ ದಿನ,. ೨೮-೬-೨೦೦೮ರಂದು ನನ್ನ ಮಗನ ಮನೆಯಲ್ಲ್ ಅಮೇರಿಕಾದ ಬೊಸ್ಟನ್ ನಗರದಲ್ಲಿ ಇದ್ದೆ. ಇಂದು ಇನ್ನೊಂದು ವಿಶೇಷ ದಿನ. ದಕ್ಷಿಣ ಭಾರತದ ಪ್ರಪ್ರಥಮ ಭಾರತ ಪ್ರಧಾನಿ ಬಹು ಬಾಷಾ ಪಂಡಿತ ಪಾಮುಲಪರ್ತಿ ವೆಂಕಟ ನರಸಿಂಹ ರಾಯರ ಜನ್ಮ ದಿನ. (೨೮-೬-೧೯೨೧). ಈ ದಿನವನ್ನು ಸ್ಮರಿಸಿಕೊಂಡು ಆಂಧ್ರ ಪ್ರದೇಶ ಸರ್ಕಾರ "ತೆಲುಗು ಗೌರವ ದಿನ" ಆಚರಿಸಬೇಕಿಂದು ಪ್ರಕಟಿಸಿದೆ. ಅದು ಯಾರಿಗೂ ಗೊತ್ತಿಲ್ಲ. ಅಕಸ್ಮಾತ್ತಾಗಿ ಒಬ್ಬಿಬ್ಬ ತೆಲುಗು ಅಭಿಮಾನಿಗಳು ನಿನ್ನೆ ತಿಳಿದು, ಇಂದು ನಮ್ಮ ಭಾರತೀಯ ರೈಲ್ವೇ ಶಾಖಾ ಸಹಾಯಾಮಾತ್ಯರಾದ ಕೋಟ್ಳ ಜಯಸೂರ್ಯಪ್ರಕಾಶ ರೆಡ್ಡಿಯವರಿಂದ ತೆಲುಗು ತಲ್ಲಿ (ತೆಲುಗು ಮಾತೆ) ವಿಗ್ರಹಕ್ಕೆ , ನರಸಿಂಹರಾಯರ ಛಾಯಾಚಿತ್ರಕ್ಕ್ಕೆ ಹೂವಿನ ಹಾರ ಹಾಕಿ ಹರಕೆ ತೀರಿಸಿಕೊಂಡೆವು.

  ReplyDelete
 3. ಪ್ರಿಯ ಅಶೋಕವರ್ಧನ ಅವರಿಗೆ: ನಮಸ್ಕಾರ. ಇಂದು ನಿಮ್ಮ ತಂದೆಯದೇ ಒಂದು ಕಥೆಯನ್ನು ನೀವು ನಮಗೆಲ್ಲಾ ಓದಲು ಕೊಟ್ಟಿದ್ದೀರಿ; ತುಂಬಾ ಸಂತೋಷವಾಯಿತು. ಜಿಟಿಎನ್ ಕಥೆಗಳನ್ನೂ ಬರೆದಿದ್ದಾರೆಂದು ಗೊತ್ತಿರಲಿಲ್ಲ; ಈಗ ಈ ಕಥೆಯನ್ನು ಓದಿ, ನೀವು ಮುಂದೆ ಕೊಡಲಿರುವ ಕಥೆಗಳನ್ನು ಕುತೂಹಲದಿಂದ ಕಾಯುವಂತಾಗಿದೆ. ಕಥೆ ಅನಕೃ, ಎಮ್. ಎನ್. ಕಾಮತ್ ಮುಂತಾದವರ ಪ್ರಗತಿಶೀಲ ಕಥೆಗಳನ್ನು ನೆನಪಿಸುತ್ತದೆ. ಬಹು ಹಿಂದೆ (ನಾನು ಹೈಸ್ಕೂಲಿನಲ್ಲಿ ಇದ್ದಾಗ ಓದಿದ ಒಂದು ಕಥೆ, "ನೀನೇ ನನ್ನ ಮುದ್ದುಕೃಷ್ಣ," ನೆನಪಿಗೆ ಬಂತು; ಅದರ ಲೇಖಕರು ಯಾರೋ ಮರೆತುಹೋಗಿದೆ.) ಆದರೆ, ಈ ಕಥೆಯ ಹೆಣಿಗೆಯಲ್ಲಿರುವ ಶಾಸ್ತ್ರೀಯ ಸಂಗೀತದ ಎಳೆಗಳು ಮಾತ್ರ ’ಜಿಟಿಎನ್ ಸ್ಪೆಶಲ್.’
  ವಂದನೆಗಳು. ರಾಮಚಂದ್ರನ್

  ReplyDelete
 4. ಅಂದಿನ ದಿನಗಳಲ್ಲಿ ನನ್ನನ್ನು ಬಹು ಆಕರ್ಷಿಸಿದ ಕತೆಗಳು ಇವು

  ReplyDelete
 5. ಎಂದುರೋ ಮಹಾನುಭಾವುಲು’idannu odalu avakaasha kottaddakke dhanyvadagalu.
  Shailaja

  ReplyDelete
 6. ಸಣ್ಣತಿದ್ದುಪಡಿ. ಜಿ.ಟಿ.ಎನ್ ನಮ್ಮನ್ನೆಲ್ಲ ಅಗಲಿದ ದಿನ ೨೭-೬-೨೦೦೮
  ಮಾಲಾ

  ReplyDelete
 7. Laxminarayana Bhat P03 July, 2013 16:52

  Dear Ashokavardhana,

  Namaskara. I wonder why gnerally musicians have a common name - Subba, Subbanna etc., Quite a moving story and enjoyed reading it. Thanks for the e-book and best wishes for your e-book project.

  ReplyDelete
 8. ನಿಮ್ಮ ಪೂಜ್ಯ ತಂದೆಯವರಾದ ಜಿ.ಟಿ.ನಾರಯಣ ರಾವ ರ ಕತೆಗಳನ್ನು ಓದುಗರ ಮುಂದೆ ಇಟ್ಟದ್ದಕ್ಕೆ ಧನ್ಯವಾದಗಳು.

  ReplyDelete