21 May 2013

ಮುಂದಿನ ಕತೆ


(ಮಾನವ, ಚಂದ್ರನ ಮೇಲೆ ಕಂತು ೮)

ಅಪೊಲೊ ೧೧ರ ಜಯಭೇರಿ ನೆನಪಿನ ನೇಪಥ್ಯಕ್ಕೆ ನಿರ್ಗಮಿಸುವ ಮೊದಲೇ ಅಪೊಲೊ ೧೨ ಮೊಳಗು ಕೇಳಿಸಿತು. ಹೀಗಾಗಿ ಹಿಂದಿನ ನಾಟಕೀಯತೆ ನವ್ಯತೆ ರೋಮಾಂಚಕತೆ ಇದಕ್ಕೆ ಲಭಿಸಲಿಲ್ಲ. ಆದ ಮಾತ್ರಕ್ಕೆ ಇದು ಸಾಧಿಸಿದ ವಿಜಯ ಕಡಿಮೆ ಎಂದು ಭಾವಿಸಬಾರದು. ಸ್ಥೂಲವಿವರ ಹೀಗಿದೆ. ಯಾನಿಗಳು ಮೂವರು. ನಾಯಕ ಚಾರ್ಲ್ಸ್ ಕಾನ್ರಾಡ್ (೩೯). ಆಕಾಶಮಾನವರಲ್ಲಿ ಬಲು ಕುಳ್ಳನಾದ ಇವನು ಚಂದ್ರನ ಮೇಲೆ ಕಾಲಿಟ್ಟೊಡನೆ “ನನಗೆ ಬಲು ದೊಡ್ಡವನೆಂದೆನಿಸಿತು” ಎಂದು ಉದ್ಗರಿಸಿದ; ಮುಂದುವರಿಯುತ್ತ “ಅದು ನೀಲ್‌ನಿಗೆ ಪುಟ್ಟ ಹೆಜ್ಜೆ. ಆದರೆ ನನಗೆ ಬಲು ಉದ್ದವಾದದ್ದು” ಎಂದು ನೀಲ್ ಆರ್ಮ್‌ಸ್ಟ್ರಾಂಗ್‌ನ ಮೊದಲ ಮಾತಿನ ಅಣಕ ಮಾಡಿದ. ಅಲನ್ ಎಲ್.ಬೀನ್ (೩೭) ಕಾನ್ರಾಡನ ಹಿಂದೆ ಕಾಲೂರಿದ (ಈ ಸಲ ಎರಡನೆಯ ಒಟ್ಟಾಗಿ ನಾಲ್ಕನೆಯ) ಆಕಾಶಮಾನವ. ರಿಚರ್ಡ್ ಎಫ್. ಗಾರ್ಡನ್ (೪೦) ಮಾತೃ ನೌಕೆಯ ಚಾಲಕ. ಆದ್ದರಿಂದ ಅವನು ಚಂದ್ರ ಕಕ್ಷೆಯಲ್ಲಿಯೇ ಇದ್ದ.

ಈ ಮಹಾಯಾನ ಪ್ರಾರಂಭವಾದದ್ದೇ ಒಂದು ಪವಾಡ. ಹೊರಡುವ ಮೊದಲು ಗಮನಿಸಿದ ಇಂಧನ ಜಿನುಗು ಇಡೀ ಯೋಜನೆಯನ್ನೇ ಮುಂದುವರಿಸಬೇಕೇ ಎಂಬ ಚಿಂತೆಗೆ ಎಡೆ ಮಾಡಿತು. ಅದನ್ನು ಸರಿಪಡಿಸಿ ಕೊನೆಯೆಣಿಕೆಯನ್ನು ಮುಂದುವರಿಸಿದರು. ಹೊರಡುವ ಮುಹೂರ್ತ ಸಮೀಪಿಸಿದಂತೆ ಆಕಾಶದಲ್ಲಿ ಮೋಡಗಳು ದಟ್ಟೈಸಿ ಘೋರ ವಾತಾವರಣ ಕಲ್ಪಿಸಿದುವು. ಆದರೆ ವಿಜ್ಞಾನಿಗಳು ಜಗ್ಗಲಿಲ್ಲ. ಸ್ವಯಂಚಾಲಕ ವ್ಯವಸ್ಥೆಯಿಂದ ನಿಯಂತ್ರಿತವಾದ ಉಡಾವಣೆ ಕಾರ್ಯಕ್ರಮದಂತೆ ಮುಂದುವರಿಯಿತು.

ಉಡಾವಣೆ ನವಂಬರ್ ೧೪, ೧೯೬೯ರಂದು ೨೧೫೨ ಗಂಟೆಗೆ (ಭಾರತೀಯ ಕಾಲಮಾನ) ಯಾನದ ಇತರ ವಿವರ ಹಿಂದಿನಂತೆಯೇ. ಅವರು ಚಂದ್ರನ ಮೇಲೆ ಇಳಿದದ್ದು ೧೯ರಂದು ೧೨೨೪ ಗಂಟೆಗೆ, ಪ್ರದೇಶದ ಹೆಸರು ಓಶನ್ ಆಫ್ ಸ್ಟಾರ್ಮ್ಸ್ (ಚಂಡಮಾರುತದ ಸಮುದ್ರ). ಗುರಿಯ ಮೇಲೆ ಬಿಂದು ಮಾತ್ರವೂ ವ್ಯತ್ಯಾಸವಾಗದಂಥ ಪರಿಷ್ಕೃತವಾದ ಇಳಿಕೆ. ಅಪೊಲೊ ೧೧ರ ಯಾನಿಗಳಂತೆಯೇ ಇವರೂ ನಡೆದರು, ನೆಗೆದರು. ಇನ್ನೂ ಹೆಚ್ಚಿನ ಪ್ರಯೋಗ ನಡೆಸಿದರು. ೧೮೦ ಮೀ ದೂರದಲ್ಲಿದ್ದ, ೧೯೬೭ರಲ್ಲಿ ಚಂದ್ರನ ಮೇಲೆ ಮೆತ್ತಗೆ ಇಳಿಸಿದ್ದ ಸರ್ವೇಯರ್ ಎಂಬ ಹೆಸರಿನ ಗಣಕಚಾಲಿತ ವೀಕ್ಷಣಾಲಯದವರೆಗೆ ನಡೆದು ಹೋದರು. “ಸೂರ್ಯ ಇದನ್ನು ಚೆನ್ನಾಗಿ ಬೇಯಿಸಿದ್ದಾನೆ!” ಎನ್ನುತ್ತ ಅದರ ಪ್ರಮುಖ ಬಿಡಿಭಾಗಗಳನ್ನು ಸಂಗ್ರಹಿಸಿದರು. ಅಮೆರಿಕಾ ರಾಷ್ಟ್ರ ಧ್ವಜವನ್ನು “ಹಾರಿಸಿದರು” ಮತ್ತು ತಮ್ಮ ರುಜುಗಳು, “ಅಪೊಲೊ ೧೨, ನವಂಬರ್ ೧೯೬೯” ಎಂಬ ಬರೆಹವಿದ್ದ ಫಲಕವನ್ನು ಇಳಿಘಟ್ಟದ ಕಾಲಿಗೆ ಕಟ್ಟಿದರು. ಅವರು ಚಂದ್ರನ ಮೇಲೆ ನಡೆದಾಡಿದ್ದು ಸುಮಾರು ನಾಲ್ಕು ಗಂಟೆ ಕಾಲ. ಒಂದು ಸಲ ಕಾನ್ರಾಡ್ ಎಡವಿ ಬಿದ್ದ (ನಡೆವರೆಡಹದೆ...), ಎದ್ದ, ಅಪಾಯವಾಗಲಿಲ್ಲ. ಉಡುಪಿನಲ್ಲಿ ತೂತವೇನಾದರೂ ಆಗಿದ್ದರೆ ಒಳಗಿನ ಕೃತಕ ವಾಯುಮಂಡಲ ಆ ಕ್ಷಣ ಚಂದ್ರನ ನಿರ್ವಾತ ಪ್ರದೇಶಕ್ಕೆ ತಪ್ಪಿಸಿಕೊಂಡು ಹೋಗುತ್ತಿತ್ತು, ತತ್‌ಕ್ಷಣ ಸಾವು. ೨೦ರಂದು ೧೯೫೫ ಗಂಟೆಗೆ ಅವರು ಏರು ಘಟ್ಟದಿಂದ ತಮ್ಮ ಅಮೂಲ್ಯ ಸಂಗ್ರಹಗಳ ಸಮೇತ ಚಂದ್ರ ಕಕ್ಷೆಗೆ ನೆಗೆದರು; ೨೦೦೨ ಗಂಟೆಗೆ ಮಾತೃನೌಕೆಯನ್ನು ಸೇರಿಕೊಂಡರು. ಮುಂದೆ ಬೇಡವಾದ ಏರುಘಟ್ಟವನ್ನು ಪ್ರಯೋಗಾರ್ಥವಾಗಿ ಚಂದ್ರ ತಲದ ಮೇಲೆ ಡಿಕ್ಕಿ ಹೊಡೆಯಲು ಎಸೆಯಲಾಯಿತು.  ೨೧ರಂದು ೦೩೪೬ ಗಂಟೆಗೆ ಅದರ ಹರಾಕಿರಿ ಪೂರ್ಣವಾಯಿತು. ಅದರಿಂದ ಉಂಟಾದ ಚಂದ್ರ ಕಂಪ ವಿಸ್ಮಯಗೊಳಿಸುವಂತೆ ೩೦ ಮಿನಿಟುಗಳ ಕಾಲವಿತ್ತು. ಚಂದ್ರನ ರಚನೆಯನ್ನು ಕುರಿತು ಹೊಸ ಊಹಾಪೋಹಗಳಿಗೆ ಈ ದೀರ್ಘ ಕಂಪನ ಎಡೆಯಿತ್ತಿದೆ.

೨೫ರಂದು ೦೨೨೭ ಗಂಟೆಗೆ ಸರಿಯಾಗಿ ಪೆಸಿಫಿಕ್ ಸಾಗರದ ನಿಯೋಜಿತ ಸ್ಥಳದಲ್ಲಿ ಅಪೊಲೊ ೧೨ರ ಸೀಎಮ್ ಬಂದಿಳಿದಾಗ... ಈ ದಶಕದ (೧೯೬೦-೬೯) “ಮಾನವ, ಚಂದ್ರನ ಮೇಲೆ” ಯೋಜನೆ ಯಶಸ್ವಿಯಾಗಿ ಸಮಾಪ್ತವಾಯಿತು; ಭೂಮಿಯ ಈ ಕ್ಷೀಣ ಚೌಕಟ್ಟು (ಮಾನವ) ಆಕಾಶದ ಕ್ರೂರ ಮಹಾಬಲಗಳನ್ನು ಅಳವಡಿಸಿ ಬದುಕಬಲ್ಲುದು ಎಂದು ಸಿದ್ಧವಾಯಿತು; ವಿಶ್ವದ ಶೋಧನೆಗೆ ಒಂದು ಪ್ರಮುಖ ಕಿಟಿಕಿ ತೆರೆದಂತಾಯಿತು. ಮತ್ತು ಕವಿ ಜಿ.ಎಸ್. ಶಿವರುದ್ರಪ್ಪನವರ ವಾಣಿಯಲ್ಲಿ: 

ಅಯ್ಯಾ ಚಂದ್ರ, ಈಗ ನೀನೊಂದು ಸವೆದ ಖೋಟಾ ನಾಣ್ಯ!
ನಿನ್ನ ಪುರಾಣ ಪ್ರಾಪ್ತ ಸಂಪತ್ತು ಷೋಡಶ ಕಲೆಯ ಮಹತ್ತು 
ಇನ್ನು ನೀನೊಂದು ಉಸಿರಿರದ ಹಸುರಿರದ ಬಂಜೆ ಬಯಲೆಂಬ ಸತ್ಯಾಂಶ
ಹೊರಬಿದ್ದ ಮೇಲೆ ಸಲ್ಲುವುದಿಲ್ಲಯಾವ ಕವಿಯೂ ನಿನ್ನನ್ನು 
ಇನ್ನು ನಲ್ಲೆಯ ಮುಖಕ್ಕೆ ಹೋಲಿಸಿ ಸುಖವಾಗಿ ಬದುಕಲಾರ.
ಈ ಮುಂದೆ ಬರುವ ಕಂದಮ್ಮಗಳು 
ನಿನ್ನನ್ನು ಚಂದಮಾಮಾ ಎಂದು ಕರೆಯುವುದೂ ಸಂದೇಹವೇ
ಇದುವರೆಗು ಕಂಡ ಮೃಗಲಾಂಛನದ ಜತೆಗೆ, 
ಅಮೆರಿಕದಬೂಟ್ಸಿನ ಗುರುತು ನಿನ್ನ ಕೆನ್ನೆಯ ಮೇಲೆ ಕಾಣಿಸುವಾಗ
ಶಿವನ ಜಡೆಮುಡಿಯಿಂದ ಭಕ್ತರಿಳಿಸುತ್ತಾರೆ ನಿನ್ನನ್ನು ಕೆಳಗೆ
ಪುರೋಹಿತರು ನವಗ್ರಹ ಪೂಜೆಯ ವೇಳೆ ದಬ್ಬುತ್ತಾರೆ ಹೊರಗೆ
ಆದರೂ ನನಗೆ ನಿನ್ನನ್ನು ಕುರಿತ ಗೌರವವೀಗ ಎರಡರಷ್ಟಾಯ್ತು!
ಒಂದು, ಬೆಂದ ನಮ್ಮೆದೆಗಳಿಗೆ ನೀಸುರಿವ ಬೆಳುದಿಂಗಳಿನ ಸಂತೋಶಕ್ಕೆ
ಇದೆಲ್ಲದರಿಂದ ಇಲ್ಲ ಏನೂ ಧಕ್ಕೆ 
ಎರಡು, ಏನಾದರೂ ನಿನಗಿಂತ ನಮ್ಮ ಈ ನೆಲವೇ ಚೆಲುವೆಂಬ ಅನುಭವವನ್ನು ಕೊಟ್ಟುದಕ್ಕೆ!

ಮುಂದಿನ ಹೆಜ್ಜೆಗಳ ರೂಪರೇಖೆ:
ವಾಯುಮಂಡಲ, ಹವೆ ಸಹಿತವಾದ ಗಾಜಿನ ಮನೆಗಳ ಸ್ಥಾಪನೆ, ಇಂಥವು ವಾಯುಪ್ರತಿಬಂಧಕಗಳಾಗಿಯೂ ಇರಬೇಕು. ಇವು ಚಂದ್ರನ ಮೇಲೆ ಅಲ್ಲಲ್ಲಿ ಸ್ಥಾಪಿಸಿದ ಪುಟ್ಟ “ಭೂಮಿ ದ್ವೀಪಗಳು.”
ದ್ವೀಪಗಳ ಒಳಗೆ ಸಸ್ಯಗಳ ಬೆಳೆವಣಿಗೆ ತನ್ಮೂಲಕ ನೀರಿನ ಶೇಖರಣೆ, ಉಸಿರಾಟದ ಗಾಳಿಯ ಏರ್ಪಾಡು.
ವೀಕ್ಷಣಾಲಯಗಳ, ಯಂತ್ರ ಕಾರ್ಖಾನೆಗಳ ಸ್ಥಾಪನೆ.
ಚಂದ್ರನನ್ನು ಪೂರ್ಣವಾಗಿ ವಸಾಹತುಗೊಳಿಸುವಿಕೆ.

ಅಧ್ಯಾಯ ಆರು - ಚಂದ್ರನನ್ನು ಏಕೆ ಅರಸಬೇಕು?

ಅದು ಅಲ್ಲಿರುವುದರಿಂದ! ಚಂದ್ರ ನಮ್ಮ ಕಲ್ಪನೆ ಬುದ್ಧಿ ವಿಜ್ಞಾನ ಇವುಗಳಿಗೆ ಎಡೆಬಿಡದೆ ಸವಾಲುಗಳನ್ನು ಒಡ್ಡಿದೆ. ನಮ್ಮನ್ನು ಭಾವನಾತ್ಮಕವಾಗಿಯೂ ಬೌದ್ಧಿಕವಾಗಿಯೂ ಆಕರ್ಷಿಸಿದೆ. ನಮ್ಮ ತಾಂತ್ರಿಕ ಪ್ರಗತಿ ನಿರ್ಧರಿಸಲು ಅದು ಒರೆಗಲ್ಲು. ಆಕಾಶದ ಮಹಾಯಾನದಲ್ಲಿ ಅದು ಮೊದಲ ನೈಸರ್ಗಿಕ ನಿಲ್ದಾಣ. ಸೌರವ್ಯೂಹದ ಆದ್ದರಿಂದ ಭೂಮಿಯ ಮತ್ತು ಮನುಷ್ಯನ ಉಗಮದ ಸೂತ್ರ ಅಲ್ಲಿ ದೊರೆಯಬಹುದು.

ಇಷ್ಟೇ ಅಲ್ಲ. ಮೇಲುನೋಟಕ್ಕೆ ಅಬದ್ಧವೆನಿಸುವ ಯಾವುದೇ ಕಾರಣ ನೀಡಿದರೂ ಅದರ ಸಮರ್ಥನೆ ಸಾಧ್ಯ. ಹಾಗಾದರೆ ಕ್ಯಾನ್ಸರ್ ರೋಗ ನಿವಾರಣೆಗೂ ಚಂದ್ರಾನ್ವೇಷಣೆಗೂ ಸಂಬಂಧವಿದೆಯೇ? ಇದೆ! ಈ ರೋಗಾಣುಗಳ ಮೇಲೆ ಚಂದ್ರನ ನಿರ್ವಾತ ಪ್ರದೇಶದಲ್ಲಿ ನೇರವಾಗಿ ಬಡಿಯುವ ಸೂರ್ಯರಶ್ಮಿಯ ಅತಿನೇರಿಳೆ ಕಿರಣಗಳ ಪ್ರಭಾವ ಅಭ್ಯಸಿಸಬಹುದು. ಇದರಿಂದ ರೋಗನಿವಾರಣೆಗೆ ಹೊಸ ವಿಧಾನ ತಿಳಿಯುವ ಸಾಧ್ಯತೆ ಇದೆ.

ತಾತ್ಪರ್ಯವಿಷ್ಟು. ಒಂದು ಸಮಸ್ಯೆ ಇದೆ. ಅದಕ್ಕೆ ಪರಿಹಾರ ಪಡೆಯಲು ಭೂಮಿಯ ಮೇಲೆ ನಡೆಸುವ ಪ್ರತಿ ಪ್ರಯೋಗ ಮತ್ತು ಅದರಿಂದ ಲಭಿಸುವ ಅನುಭವ ಇಲ್ಲಿನ ಪರಿಸರದಿಂದ ಪ್ರಭಾವಿತವಾಗದಿರವು. ಸಮಸ್ಯೆಯ ಇನ್ನೊಂದು ಮುಖವರಿತು ಬಿಡಿಸಿಕೆ ಅರಸಲು ಭಿನ್ನಪರಿಸರದಲ್ಲಿ ನಡೆಸುವ ಪ್ರಯೋಗ ಹೆಚ್ಚು ಉಪಯುಕ್ತ. ಚಂದ್ರ ನಮಗೆ ಸಹಜ, ಸುಲಭ ಮತ್ತು ಸಮೀಪವಾಗಿ [ಆಕಾಶಕಾಯಗಳ ದೂರ ಗಾತ್ರ ಭೌತ ಪರಿಸ್ಥಿತಿ ಇವನ್ನೂ ಮನುಷ್ಯ ದೇಹದ ರಚನೆಯನ್ನೂ ಹೋಲಿಸುವಾಗ ಚಂದ್ರಾನ್ವೇಷಣೆ ಒಡ್ಡುವ ಅಡಚಣೆಗಳು ಕನಿಷ್ಠ ಎಂದು ಅರ್ಥ.] ಸಿಕ್ಕುವ ಬೇರೆ ಪರಿಸರ. ಚಂದ್ರಾನ್ವೇಷಣೆಯಿಂದ ಅದೇ ರೀತಿ ಬೇರೆ ಯಾವುದೇ ಪ್ರಯೋಗದಿಂದ ಪ್ರಾಪ್ತವಾಗುವ ಸೌಕರ್ಯಗಳು (ಅದರಂತೆಯೇ ಸಮಸ್ಯೆಗಳು) ಪ್ರತ್ಯಕ್ಷವಾಗಿಯೂ ಆನುಷಂಗಿಕವಾಗಿಯೂ ಹಲವಾರು. ಇಂಥ ಪ್ರಯೋಗಗಳನ್ನು ಕುರಿತು ಈ ವೆಚ್ಚ ಅಗತ್ಯವೇ, ಮುಂದೂಡಬಾರದೇ, ನೆಲದ ಮೇಲೆ ಬಾಳಲು ಇನ್ನೂ ಕಲಿಯದ ಮಾನವ ಗಗನ ಹಾರಿ ಕಿಸಿಯುವುದೇನು ಎಂದು ಮುಂತಾಗಿ ಪ್ರಶ್ನಿಸುವವರ ಉದ್ದೇಶ ಎಷ್ಟೇ ಪ್ರಾಮಾಣಿಕವಾಗಿದ್ದರೂ ಅವರ ಅರಿವಿನ ಹರವು ಬಲು ಮಿತ ಎನ್ನಬೇಕಾಗುತ್ತದೆ.

“ಮಾನವ, ಚಂದ್ರನ ಮೇಲೆ” ಸಾಧನೆಗಳಲ್ಲಿ ಇದುವರೆಗಿನ (ಫೆಬ್ರುವರಿ ೧೯೭೦) ಪ್ರಗತಿಯ ಸ್ಥೂಲಚಿತ್ರ ಮುಂದಿನ ಕೋಷ್ಟಕದಲ್ಲಿ ತೋರಿಸಿದೆ.


ವಿವರ
ಅಪೋಲೋ ೧೧
ಅಪೋಲ್ಫ್ ೧೨
ನಿರ್ಗಮನ ತಾರೀಕು
೧೬--೧೯೬೯
೧೪-೧೧-೧೯೬೯
ಆಗಮನ ತಾರೀಕು 
೨೪--೧೯೬೯
 ೨೪-೧೧-೧೯೬೯
ಪ್ರಯಾಣಾವಧಿ 
೧೯೫ ಗಂ.೧೮ ಮಿ 
೨೪೪ಗಂ.೩೦ ಮಿ
ಯಾನಿಗಳ ಸಂಖ್ಯೆ   
 
ಚಂದ್ರನ ಮೇಲಿಳಿದವರು 
  
ಪದಾರ್ಪಣೆ ಮಾಡಿದ ತಾರೀಕು
೨೧--೧೯೬೯
 ೧೯-೧೧-೧೯೬೯
ಚಂದ್ರ ತಲದ ಮೇಲೆ ಕಳೆದ ಸಮಯ
ಗಂ.೩೦ ಮಿ 
೮ಗಂ.೪೪ ಮಿ
ಹಿಂದೆ ತಂದ ಸ್ಮಾರಕಗಳ ಭಾರ
ಸು. ೩೦ ಕೆಜಿ 
ಸು. ೫೦ ಕೆಜಿ


ನೈಸರ್ಗಿಕ ಬಲಗಳಿಗೆ ಹೊಂದಿಕೊಂಡು ಎಚ್ಚರಿಕೆಯಿಂದ ಮುಂದುವರಿದರೆ ಮನುಷ್ಯ ಎಂಥ ಪ್ರತಿಕೂಲ ಸನ್ನಿವೇಶವನ್ನೂ ಅನುಕೂಲವನ್ನಾಗಿ ಪರಿವರ್ತಿಸಿಕೊಳ್ಳಬಹುದು ಎಂಬ ಸಿದ್ಧಾಂತಕ್ಕೆ ಅಪೊಲೊ ವಿಜಯಗಳು ಪ್ರತ್ಯಕ್ಷ ಪ್ರಮಾಣಗಳು. ತಾಂತ್ರಿಕ ನೈಪುಣ್ಯ ಪ್ರಗತಿಗೊಂಡಂತೆ ಸೌರವ್ಯೂಹದ ಇತರ ಗ್ರಹಗಳಿಗೆ ಹೋಗಿ ಬರಬಹುದು ಎಂಬ ಧೈರ್ಯ ಈಗ ಮೂಡಿದೆ. ಚಂದ್ರನನ್ನು ಕುರಿತು ಇದುವರೆಗಿದ್ದ ಹಲವಾರು ಮಿಥ್ಯಾಕಲ್ಪನೆಗಳು ನಿಶ್ಶೇಷವಾದುವು. ಕೆಲವು ಆಧಾರ ಭಾವನೆಗಳ ಅಸ್ತಿತ್ವವನ್ನು ಪ್ರಶ್ನಿಸಿದರೆ ಇನ್ನು ಕೆಲವಕ್ಕೆ ಪುಷ್ಟಿ ದೊರೆತಿದೆ.

ಗುಂಡುಸೂಜಿ ಗುರುತಿನಷ್ಟು ನಿಖರವಾಗಿ ಚಂದ್ರನ ಮೇಳೆ ಇಳಿಯುವುದು ಸಾಧ್ಯ. ಸಮರ್ಪಕ ಮತ್ತು ಸುಲಭವಾಗಿ ಬಳಸಲಾಗುವ ಆಕಾಶ ಉಡುಪಿನ ರಕ್ಷಣೆ ಪಡೆದ ಮಾನವ ಚಂದ್ರನ ಮೇಲೆ ನಿಯೋಜಿತ ಕಾರ್ಯಗಳನ್ನು ಚೆನ್ನಾಗಿ ನಿರ್ವಹಿಸಬಲ್ಲ; ಭೂಮಿಯ ಗುರುತ್ವಾಕರ್ಷಣ ಬಲ ಮತ್ತು ವಾಯುಮಂಡಲದ ಸಂಮರ್ದಗಳ ನಡುವೆ ವಿಕಸಿಸಿರುವ ಮನುಷ್ಯದೇಹ, ಮನಸ್ಸು ಚಂದ್ರಲೋಕದ ಕಡಿಮೆ ಗುರುತ್ವಾಕರ್ಷಣ ಬಲ (ಭೂಮಿಯ ೧/೬ರಷ್ಟು) ಮತ್ತು ನಿರ್ವಾತ ಪ್ರದೇಶಗಳಲ್ಲಿ (ಎಂದರೆ ವಾಯುಮಂಡಲದ ಸಂಮರ್ದ ಶೂನ್ಯ) ನಿಲ್ಲುವುದು, ನಡೆಯುವುದು, ಹಾರುವುದು ಪ್ರತಿಯೊಂದೂ ಹೊಸದಾಗಿ ಕಲಿತು ಸಾಧಿಸಬೇಕಾದ ಸಾಹಸ. ಇವೆಲ್ಲವನ್ನೂ ಮಾನವ ಮಾಡಬಲ್ಲ, ಮಾತ್ರವಲ್ಲ “ನಡೆವಾಗ ಎಡಹಿದರೆ ನಿಲ್ಲಬಲ್ಲ” ಎಂಬುದೂ ರುಜುವಾತಾಯಿತು. ಅಪೊಲೊ ೧೨ರ ಯಾನಿ ಕೊನ್ರಾಡ್ ಚಂದ್ರನ ಮೇಲೆ ನಡೆಯುವಾಗ ಬಿದ್ದ. ಆಕಾಶ ಉಡುಪಿಗೆ ರಂಧ್ರವಾಯಿತೇ, “ಭೂಮಿ” ಅದರೊಳಗಿನಿಂದ ವಿಮೋಚನೆಗೊಂಡು ಅವನಿಗೆ ಪ್ರಾಣಾಪಾಯ ಸಂಭವಿಸಿರಬಹುದೇ ಎಂದು ಭಯಗ್ರಸ್ತರಾದವರಿಗೆ ಅಭಯ ಪ್ರದಾನ ಮಾಡುವಂತೆ ಒಂದು ಕೈಯ್ಯಿಂದ ನೆಲವನ್ನು ತಳ್ಳಿ ಪುಟಿದು ಮೇಲೆದ್ದ. “ಇಲ್ಲಿ ಬೀಳುವುದು ಬಲು ನಿಧಾನ! ಆದ್ದರಿಂದ ಅಪಾಯದಿಂದ ಪಾರಾಗಲು ನಮಗೆ ಸಾಕಷ್ಟು ಸಮಯ ದೊರೆಯುವುದು” ಯಾನಿಗಳ ಮಾತು. ಚಂದ್ರನ ಮೇಲೆ ಮಾನವನ ಕ್ರಿಯಾ ಸಾಮರ್ಥ್ಯ, ಆರೋಗ್ಯ, ಮಾನಸಿಕೋಲ್ಲಾಸ ಉತ್ತಮ ಮಟ್ಟದಲ್ಲಿರುತ್ತವೆಂಬುದು ಸ್ಥಿರವಾಯಿತು. ಚಂದ್ರನ ಹೊರಮೈ ಹಲವಾರು ಕಿಲೋಮೀಟರ್ ಆಳದ ದೂಳಿನ ರಾಶಿಯಾಗಿರಬಹುದು, ಅಲ್ಲಿ ಇಳಿದವರು ಗೊಸರು ಭೂಮಿಗೆ ಕಾಲಿಕ್ಕಿದವರಂತೆ ಮುಳುಗಿ ಹೋಗಬಹುದು ಎಂಬ ಊಹೆ ಸರಿ ಎನಿಸಲಿಲ್ಲ. ಆಕಾಶನೌಕೆ ಚಂದ್ರ ಸ್ಪರ್ಶ ಮಾಡುವಾಗ ಜನಿಸುವ ಬಲಗಳ ಪರಿಣಾಮವಾಗಿ ಭೀಕರ ಕಂಪಗಳೂ ಆಸ್ಫೋಟನೆಗಳೂ ಚಂದ್ರನಲ್ಲಿ ಜನಿಸಬಹುದೆಂದು ಹಿತನುಡಿದವರ ಎಚ್ಚರಿಕೆ ನಿರಾಧಾರವೆನಿಸಿತು. ಇನ್ನು ಚಂದ್ರಲೋಕದ ಆ ಮೃತ್ಯುಕೂಪಗಳು! ಅಂಚಿಗೆ ನಡೆದವನನ್ನು ಅವು ಕುಸಿದು ನೀರ ಮಡುವಿನಂತೆ ಹೀರಿಬಿಡಲಾರವೇ ಎಂಬ ಶಂಕೆ ನಿಜವಾಗಲಿಲ್ಲ. ಇಂಥ ಒಂದು ಕೂಪದಲ್ಲಿ ಸರ್ವೆಯರ್ ೩ ಇತ್ತು. (೧೯೬೭ರಲ್ಲಿ ಚಂದ್ರನ ಮೇಲೆ ಮೆತ್ತಗೆ ಇಳಿಸಿದ್ದ ಮಾನವರಹಿತ ಆಕಾಶನೌಕೆ). ಅಪೊಲೊ ೧೨ರ ಯಾನಿಗಳು ಆ ಕೂಪಕ್ಕೆ ಇಳಿದು ಸರ್ವೆಯರಿನ ಬಿಡಿಭಾಗಗಳನ್ನು ಬೇರ್ಪಡಿಸಿ ಹಿಂದೆ ತರುವುದರಲ್ಲಿ ಯಶಸ್ವಿಗಳಾದರು. ಕೂಪ ಕುಸಿಯಲಿಲ್ಲ.

ಸೌರವ್ಯೂಹದ ಪರಮಾಶ್ಚರ್ಯ, ಚಂದ್ರ

ಇಂಥ ಚಂದ್ರನನ್ನು ಕುರಿತು ಈ ಮೊದಲು ಏನು ತಿಳಿದಿತ್ತು? ಚಂದ್ರ ಭೂಮಿಯ ಉಪಗ್ರಹ. ಸೌರವ್ಯೂಹದಲ್ಲಿ ಇದುವರೆಗೆ ತಿಳಿದಿರುವಂತೆ ಒಟ್ಟು ೩೨ ಉಪಗ್ರಹಗಳಿವೆ.  ಅವುಗಳ ವಿತರಣೆ ಮುಂದೆ ತೋರಿಸಿದೆ: ಬುಧ, ಶುಕ್ರಗಳಿಗೆ ಉಪಗ್ರಹಗಳಿಲ್ಲ; ಭೂಮಿಗೆ ಒಂದು, ಮಂಗಳಕ್ಕೆ ಎರಡು, ಗುರುವಿಗೆ ಹನ್ನೆರಡು, ಶನಿಗೆ ಹತ್ತು, ಯುರೇನಸ್‌ಗೆ ಐದು, ನೆಪ್ಚೂನಿಗೆ ಎರಡು (ಕೊನೆಯ ‘ಗ್ರಹ’ ಪ್ಲೂಟೋವಿಗೆ ಉಪಗ್ರಹವಿಲ್ಲ). ಇವುಗಳ ಪೈಕಿ ೨೫ ಬಲು ಕಿರಿಯವು. ಆದ್ದರಿಂದ ನಮ್ಮ ಮುಂದಿನ ಪರಿಶೀಲನೆಯಿಂದ ಅವುಗಳನ್ನು ವಜಾ ಮಾಡಬಹುದು. ಉಳಿದ ೭ ಉಪಗ್ರಹಗಳ ಕೆಲವು ಗಮನಾರ್ಹ ಅಂಶಗಳನ್ನು ಪರಿಶೀಲಿಸಬೇಕು.ಉಪಗ್ರಹದ ಹೆಸರು
ಮೂಲಗ್ರಹದ ಹೆಸರು
ಉಪಗ್ರಹದ ವ್ಯಾಸ
ಮೂ.ಗ್ರ=೧
ಉಪಗ್ರಹದ ದ್ರವ್ಯರಾಶಿ
ಮೂ.ಗ್ರ=೧
ಉಪಗ್ರಹಕ್ಕೆ ಮೂಲಗ್ರಹದಿಂದ ದೂರ
ಚಂದ್ರ
ಭೂಮಿ
೦.೨೮
೦.೦೧
೩೦
ಅಯೋ
ಗುರು
೦.೦೨
೦.೦೦೦೦೫
ಯುರೋಪಾ
ಗುರು
೦.೦೨
೦.೦೦೦೦೩
ಗನಿಮೀಡ್
ಗುರು
೦.೦೪
೦.೦೦೦೦೮
ಕಲಿಸ್ಟೋ
ಗುರು
೦.೦೩
೦.೦೦೦೦೫
೧೩
ಟಿಟಾನ್
ಶನಿ
೦.೦೪
೦.೦೦೦೨
೧೧
ಟ್ರೈಟನ್
ನೆಪ್ಚೂನ್
೦.೦೮
೦.೦೦೦೧

“ನೀರಿಳಿಯದ ಗಂಟಲೊಳ್...!” ಈ ಕೋಷ್ಟಕವನ್ನು ಅರ್ಥವಿಸಲು ಆಧುನಿಕ ಬೀಜಗಣಿತದ ಚೈನೀ ಸಂಕೇತಗಳ ದುರ್ಬೀನು ಖಂಡಿತ ಬೇಡ, ಸಂತೆ ಲೆಕ್ಕದ (ನಮಗೆ ಲಾಭವಾಗದಿದ್ದರೂ ಪರ್ವಾ ಇಲ್ಲ, ನಷ್ಟವಾಗಬಾರದು) ಜ್ಞಾನ ಸಾಕು.

ಮೂಲಗ್ರಹ ಭೂಮಿಯೊಡನೆ ಹೋಲಿಸುವಾಗ ಚಂದ್ರನ ವ್ಯಾಸ ೦.೨೮, ದ್ರವ್ಯರಾಶಿ ೦.೦೧ ಮತ್ತು ದೂರ ೩೦. ಮೂಲಗ್ರಹ ಗುರುವಿನೊಡನೆ ಹೋಲಿಸುವಾಗ ಗನಿಮೀಡ್‌ನ ವ್ಯಾಸ ೦.೦೪, ದ್ರವ್ಯರಾಶಿ ೦.೦೦೦೦೮ ಮತ್ತು ದೂರ ೮. ಎಂದರೆ, ಈ ಹೋಲಿಕೆಯ ಲೆಕ್ಕಾಚಾರದಲ್ಲು ಚಂದ್ರನಿಗೆ ಅಗ್ರಸ್ಥಾನ - ವ್ಯಾಸ ಬಲು ದೊಡ್ಡದು, ದ್ರವ್ಯರಾಶಿ ಅತಿ ಹೆಚ್ಚು, ದೂರ ಗರಿಷ್ಠ! ನಮ್ಮ ಚಂದ್ರ ಅದ್ವಿತೀಯ! (ನಾವೋ?) ಇಲ್ಲೇನೋ ‘ಲೆಕ್ಕದ ಹಿಕ್ಮತ್’ ಆಗಿರಬೇಕು ಎಂದು ನಿಮ್ಮ ಮನಸ್ಸು ನುಡಿದರೆ ಸರಿಯಾದ ವಿಧಾನ ಇದೆಯೇ? ಯಾವುದು? ಇವು ಮುಂದಿನ ಪ್ರಶ್ನೆಗಳು. (‘ಗೊಂಡಾರಣ್ಯ ಕಾಲೇಜಿನ ಶೇಕಡ ೫೦ ಅಧ್ಯಾಪಕಿಯರು ಅದೇ ಕಾಲೇಜಿನ ವಿದ್ಯಾರ್ಥಿಗಳನ್ನು ಮದುವೆಯಾದರು!’ ಈ ಪತ್ರಿಕಾ ವರದಿ ಗೊಂಡಾರಣ್ಯ ಕಾಲೇಜಿನ ಮೇಲೆ ಚಂಡಮಾರುತದಂತೆ ಬಡಿಯಿತು. ವಿಚಾರಿಸಿದಾಗ ತಿಳಿದದ್ದೇನು? ಅಲ್ಲಿದ್ದವರು ಕೇವಲ ಇಬ್ಬರು ಅಧ್ಯಾಪಕಿಯರು ಮಾತ್ರ!) ಉಪಗ್ರಹಗಳನ್ನು ಗಾತ್ರಾನುಸಾರ (‘ಬೆಳದಿಂಗಳ ಪ್ರಸಾರ’ ಗಾತ್ರವನ್ನು ಅವಲಂಬಿಸಿದೆಯಷ್ಟೆ) ಪಂಕ್ತಿಸಿದರೆ ದೊರೆಯುವ ಚಿತ್ರ ಬೇರೆಯೇ.


ಉಪಗ್ರಹದ ಹೆಸರು
ಮೂಲಗ್ರಹದ ಹೆಸರು
ಉಪಗ್ರಹದ ವ್ಯಾಸ
(ಕಿ.ಮೀ)
ಗನಿಮಿಡ್
ಗುರು
೪೯೬೦
ಟಿಟಾನ್
ಶನಿ
೪೭೬೦
ಕಲಿಸ್ಟೋ
ಗುರು
೪೪೮೦
ಚಂದ್ರ
ಭೂಮಿ
೩೪೫೬

ಚತುರ್ಥ ಚಂದ್ರ! ಹೂರಣ ಹೊರಬಿತ್ತು. ವಾಸ್ತವಿಕವಾಗಿ ಚತುರ್ಥ ಸ್ಥಾನದಲ್ಲಿರಬೇಕಾದವನನ್ನು ಪ್ರಥಮ ಸ್ಥಾನಕ್ಕೆ ತಳ್ಳಿದ್ದು ಲೆಕ್ಕದ ದೊಂಬರಾಟವಲ್ಲವೇ? ನಿರಾಶೆ ಬೇಡ, ಗೇಲಿಯೂ ಬೇಡ. ಒಂದು ಉದಾಹರಣೆಯಿಂದ ವಿಷಯವನ್ನು ಪರಿಶೀಲಿಸೋಣ. ೬ ಅಡಿ ಎತ್ತರದ ಗಂಡಸಿನೊಡನೆ ೫ ಅಡಿ ಎತ್ತರದ ಅವನ ಹೆಂಡತಿ ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು, ೫ ಅಡಿ ಎತ್ತರದ ಗಂಡಸಿನೊಡನೆ ೪ ಅಡಿ ೧೦ ಇಂಚು ಎತ್ತರದ ಅವನ ಹೆಂಡತಿ ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಹೋಲಿಸಿ ನೋಡಿ. ಎಷ್ಟು ದೊಡ್ಡ ಹೆಂಡತಿಯಪ್ಪಾ ಎಂದು ನೀವು ಉದ್ಗರಿಸುವುದು ಎರಡನೆಯ ದಂಪತಿಗಳನ್ನು ನೋಡಿಯೇ! ಜೀವನದಲ್ಲಿ ಹೇಗೋ ಆಕಾಶದಲ್ಲಿಯೂ ಹಾಗೆಯೇ ತುಲನೆಯಿಂದಲೇ ಪರಿಸ್ಥಿತಿಯ ಇತ್ಯರ್ಥ. ಆದ್ದರಿಂದ ನಮ್ಮ ಚಂದ್ರ ಅಸಾಧಾರಣ, ಅದ್ವಿತೀಯ. ‘ಇಷ್ಟು’ ಸಣ್ಣ ಮೂಲಗ್ರಹ ಭೂಮಿಗೆ ಅಷ್ಟು ‘ದೊಡ್ಡ’ ಉಪಗ್ರಹ ಚಂದ್ರ ಇರುವುದು ಸೌರವ್ಯೂಹದ ಆಶ್ಚರ್ಯಗಳಲ್ಲೊಂದು. ಬೇರೆ ಒಂದು ಗ್ರಹದಿಂದ ನೋಡುವಾಗ ಚಂದ್ರ-ಭೂಮಿ ಒಂದು ಯಮಳ ಗ್ರಹ ವ್ಯವಸ್ಥೆ ಎಂಬ ಭ್ರಮೆ ಹುಟ್ಟಿಸುವಂತಿದೆ ಈ ದೃಶ್ಯ! ಇನ್ನು ಚಂದ್ರನ ಜನನವನ್ನು ವಿಶ್ಲೇಷಿಸಿದರೆ ಸೌರವ್ಯೂಹದ ಪರಮಾಶ್ಚರ್ಯ ಚಂದ್ರ ಎಂದು ದೃಢವಾಗುವುದು.

ಭೂಮಿ ಪಡೆದ ಚಂದ್ರ

ಭೂಮಿ ಚಂದ್ರನನ್ನು ಹೇಗೆ ಪಡೆದಿರಬಹುದೆಂಬುದನ್ನು  ಹಿಂದೆ ಚಂದ್ರನ ಜನನ ಪರಿಚ್ಛೇದದಲ್ಲಿ ಸಂಕ್ಷೇಪವಾಗಿ ಹೇಳಿದೆ. ಮೂರನೆಯ ‘ಸೆರೆಪಿಡಿ’ ಊಹೆಯನ್ನು ಸ್ವಲ್ಪ ವಿಸ್ತರಿಸುವುದು ಇಂದಿನ ವೈಜ್ಞಾನಿಕ ಸಂಶೋಧನೆಗಳನ್ನು ಚೆನ್ನಾಗಿ ತಿಳಿಯಲು ಆವಶ್ಯ. ಮಂಗಳ ಮತ್ತು ಗುರು ಗ್ರಹಗಳ ಕಕ್ಷೆಗಳ ನಡುವಿನ ವಲಯದಲ್ಲಿ ಒಂದಾನೊಂದು ಕಾಲದಲ್ಲಿ ಇದ್ದಿರಬಹುದಾದ ಒಂದು ಗ್ರಹ ಒಡೆದು ವಿವಿಧ ಗಾತ್ರಗಳ ಅಸಂಖ್ಯಾತ ಖಂಡಗಳಾದುವು. ಇದೊಂದು ಲೆಕ್ಕವಿಲ್ಲದಷ್ಟು ಕ್ಷುದ್ರ ಗ್ರಹಗಳ ಸಡಿಲ ಒಕ್ಕೂಟ. ಇದು ಸರಿಸುಮಾರಾಗಿ ಆ ವಲಯದಲ್ಲೇ ಸೂರ್ಯನ ಸುತ್ತಲೇ ಪರಿಭ್ರಮಿಸುತ್ತಿದೆ. ಆದರೆ ಬಿಡಿ ಖಂಡಗಳಿಗೆ ಸಾಕಷ್ಟು ಸ್ವಾತಂತ್ರ್ಯ ಉಂಟು. ಒಮ್ಮೊಮ್ಮೆ ಯಾವುದೋ ಒಂದು ಖಂಡ ಈ ಸ್ವಾತಂತ್ರ್ಯವನ್ನು ಮಿತಿ ಮೀರಿ ಬಳಸಿಕೊಂಡಾಗ ಅದು ಒಕ್ಕೂಟದ ಸಡಿಲ ಹಿಡಿತದಿಂದ ಸಿಡಿದು ನೆರೆಗ್ರಹದ ಉಕ್ಕಿನ ಹಿಡಿತಕ್ಕೆ ಸಿಕ್ಕಿ ಹಾಕಿಕೊಳ್ಳುವುದು (ವಾಸ್ತವಿಕವಾಗಿ ಶುದ್ಧ ಸ್ವಾತಂತ್ರ್ಯ ಎಲ್ಲಿಯೂ ಇಲ್ಲ). ನಮ್ಮ ಹಿರಿಯಣ್ಣ ಚಂದ್ರನಿಗೆ ಇಂಥ ಒಂದು ಅಹಂಕಾರದ ಮುಹೂರ್ತ ಒದಗಿ ಬಂದಿರಬೇಕು. ಕೂಟದಿಂದ ಹೊರಗೆ ಸಿಡಿದಾಗ ಅಲ್ಲಿಯೇ ಭೂಮಿ ಸಾಗುತ್ತಿದ್ದಿರಬೇಕು. ಅಂದಿನಿಂದ ಚಂದ್ರನಿಗೆ ಭೂಮಿಯ ಸುತ್ತಲೂ ಪರಿಭ್ರಮಿಸುವ ಶಿಕ್ಷೆ. ಪ್ರತಿಯಾಗಿ ಭೂಮಿಯಿಂದ ಅದಕ್ಕೆ ರಕ್ಷೆ.  ಎಂದರೆ, ಭೂಮಿ ಹುಟ್ಟಿ ಬಹು ಕಾಲಾನಂತರದ ಮೇಲೆ ಅದು ಚಂದ್ರನನ್ನು ಪಡೆದಿರಬೇಕು ಎಂದು ಕೆಲವು ವಿಜ್ಞಾನಿಗಳ ಮತ. ಭೂಮಿ ಸೆರೆ ಹಿಡಿದದ್ದು ದಕ್ಕಿಸಿಕೊಳ್ಳಲು ಕಷ್ಟವಾಗುವಂಥ ಒಂದು ಮಹಾಗಾತ್ರವನ್ನೇ. ಇದರಿಂದ ಭೂಮಿಯ ಮೇಲೆ ಚಂದ್ರನಿಂದ (ಅದೇ ರೀತಿ ಚಂದ್ರನ ಮೇಲೆ ಭೂಮಿಯಿಂದ) ವಿಪ್ಲವ ಪರಂಪರೆಗಳೇ ಸಂಭವಿಸಿರಬೇಕು. ಭೂಮಿ ತೊಗಟೆಯ ವಿವಿಧ ಪ್ರದೇಶಗಳ ವಿವಿಧ ಸ್ತರಗಳ ನಮೂನೆಗಳನ್ನು ತರಿಸಿ ಅಭ್ಯಸಿಸಿದ್ದಾರೆ. ಇದರ ಪ್ರಕಾರ ಲಭ್ಯವಾಗಿರುವ ಸಂಗತಿ ಇಷ್ಟು. ಭೂಮಿಯ ಪ್ರಾಯ ಸುಮಾರು ೫X೧೦ ವರ್ಷಗಳು. [೧೦ = ೧,೦೦೦,೦೦೦,೦೦೦ (೧ ಬರೆದು ೯ ಸೊನ್ನೆಗಳನ್ನು ಬರೆದರೆ ದೊರೆಯುವ ಸಂಖ್ಯೆ). ೧೦೦ ಕೋಟಿ, ೫X೧೦ ಎಂದರೆ ೫೦೦ ಕೋಟಿ.] ಸುಮಾರು ೪X೧೦ ವರ್ಷಗಳ ಹಿಂದೆ (ಎಂದರೆ ಭೂಮಿ ಹುಟ್ಟಿ ಸುಮಾರು ೧೦೦ ಕೋಟಿ ವರ್ಷಗಳ ಅನಂತರ) ಒಂದು ಭೀಕರ ಆಕಾಶ ಘಟನೆ ಸಂಭವಿಸಿದುದಕ್ಕೆ ಪುರಾವೆಗಳು ದೊರೆತಿವೆ. ಇದು ಚಂದ್ರನನ್ನು ಸೆರೆಹಿಡಿದದ್ದರಿಂದ ಆಗಿರಬಹುದೇ ಎಂಬುದು ಇನ್ನೂ ತಿಳಿದಿಲ್ಲ. ಚಂದ್ರ ತೊಗಟೆಯ ವಿವಿಧ ಪ್ರದೇಶಗಳ ವಿವಿಧ ಸ್ತರಗಳ ಅಭ್ಯಾಸ ಇದಕ್ಕೆ ಆವಶ್ಯ. ಬಲವಿಜ್ಞಾನ ಈ ‘ಆಗಿರಬಹುದಾದ ವಿಪ್ಲವ’ವನ್ನು ಅಭ್ಯಸಿಸಿದೆ. ಚಂದ್ರ ಗಾತ್ರದ ಕಾಯವನ್ನು ಕ್ಷುದ್ರ ಗ್ರಹಗಳ ವಲಯದಿಂದ ಹೊರ ತಳ್ಳಿದ ಬಾಹ್ಯಬಲ ಯಾವುದು, ಆಗ ಭೂಮಿಯ ಸ್ಥಾನವೇನಿತ್ತು, ಚಂದ್ರನನ್ನು ಸೆರೆ ಹಿಡಿಯಲು ಭೂಮಿಗೆ ಬೇಕಾದ ಕಾಲವೆಷ್ಟು ಇವನ್ನು ವಿಶ್ಲೇಷಿಸಿದ್ದಾರೆ. ಇಲ್ಲಿ ಎದುರಾಗಿರುವ ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ದೊರೆತಿಲ್ಲ. ಚಂದ್ರನನ್ನು ಕ್ಷುದ್ರಗ್ರಹಗಳ ವಲಯದಿಂದ ಹೊರಸೆಳೆದದ್ದು ಸೌರಶಕ್ತಿ ಎಂದು ಹಲವರ ವಾದ. ಈ ವಾದದ ಪ್ರಕಾರ ಸೂರ್ಯನ ಒಂದು ಮಹಾ ಸ್ಫೋಟನೆಯಿಂದ (ಆಗ ಬೆಳಕು ಉಷ್ಣ ಮುಂತಾದ ಶಕ್ತಿಯ ವಿಸರಣೆ ಈಗಿನದರ ೧೦೦ರಷ್ಟು ಏರಿರಬೇಕು) ಚಂದ್ರ ಹೊರಗೆ ಸಿಡಿದಿರಬಹುದು; ಇಂಥ ಸ್ಫೋಟನೆಯ ಪರಿಣಾಮ ವಾಯುಮಂಡಲ ಜಲರಾಶಿಗಳಿಂದ ಕೂಡಿದ ಮತ್ತು ನಿರಂತರ ಆಂತರಿಕ ಬಲಗಳಿಂದ ಪ್ರಭಾವಿತವಾಗುತ್ತಿರುವ ಭೂಮಿಯ ಮೇಲೆ ಉಳಿದಿರುವುದು ಕಷ್ಟ; ಅದರ ಪರಿಣಾಮವನ್ನು ಚಂದ್ರನ ಮೇಲೂ ಕಾಣಬಹುದೆಂದು ಈ ವಾದ ಹೇಳುತ್ತದೆ.

ತೀರ ಈಚೆಗೆ ಇನ್ನೊಂದು ಸ್ವರವೂ ಕೇಳಿಸುತ್ತಿದೆ. ಅದರ ಪ್ರಕಾರ ಗ್ರಹಗಳನ್ನು ಕಟ್ಟಿದ ಇಟ್ಟಿಗೆ ತುಂಡುಗಳು ಕ್ಷುದ್ರಗ್ರಹಗಳು. ಎಲ್ಲ ಗ್ರಹಗಳೂ ಮೂಲತಃ ಕ್ಷುದ್ರ ಗ್ರಹಗಳ ಒಕ್ಕೂಟಗಳೇ. ಹಲವಾರು ಇಟ್ಟಿಗೆ ತುಂಡುಗಳು ಒಟ್ಟುಗೂಡಿ ದೊಡ್ಡ ಗ್ರಹವಾಯಿತು. ಉಳಿದ ಚೂರುಪಾರು ಆಯಾ ಗ್ರಹಗಳ ಉಪಗ್ರಹಗಳಾಗಿ ಉಳಿದುವು. ಆದರೆ ಏನೋ ಕಾರಣದಿಂದ (ಪ್ರಾಯಶಃ ಆ ಮೊದಲೇ ರೂಪ ತಾಳಿದ್ದ ಬಲಿಷ್ಠ ಗ್ರಹ ಗುರುವಿನ ಪ್ರಬಲಾಕರ್ಷಣೆಯಿಂದ) ಹೀಗೆ ಒಂದುಗೂಡಲಾಗದ ಇಟ್ಟಿಗೆಗಳ ಸಮುದಾಯ ಕ್ಷುದ್ರ ಗ್ರಹಗಳಾಗಿಯೇ ಉಳಿದಿವೆ.

ಆಧಾರ ಭಾವನೆ ಯಾವುದೇ ಇರಲಿ - ಚಂದ್ರ ಅಲ್ಲಿದೆ, ಅತಿ ದೊಡ್ಡದಾಗಿಯೇ ಇದೆ! ಆಕಾಶಕ್ಕೆ ಯಾರೋ ನೀಡಿದ ಈ ‘ಬಂಗಾರದ ಮೆಡಲು’ ನಮ್ಮ ಜೀವನದ ಅವಿಭಾಜ್ಯ ಅಂಶವಾಗಿ ನಮ್ಮೊಡನೆ ಬೆಳೆದು ಬಂದಿದೆ; ಅದನ್ನು ಪೂರ್ಣವಾಗಿ ಅಭ್ಯಸಿಸಿ ಅರಿಯುವುದು ಮಾನವ ಪ್ರಾಚೀನ ಕಾಲದಿಂದಲೂ ಎದುರಿಸಿ ಬಂದಿರುವ ಸವಾಲು.

(ಮುಂದುವರಿಯಲಿದೆ)

[ಮುಂದಿನ ಕಂತು - ಕೊನೆಯ ಕಂತು. ‘ಮಾನವ, ಚಂದ್ರನ ಮೇಲೆ ಪ್ರಯೋಗಗಳ ಫಲಿತಾಂಶಗಳು ಮತ್ತು ಮುಂಗಾಣ್ಕೆಗಳ ಕುರಿತು ವಿವರಗಳನ್ನು ಕೊಡುವುದರೊಡನೆ ಜಿಟಿನಾ ತಮ್ಮ ಈ ಪುಸ್ತಕವನ್ನು ಮುಗಿಸಿದ್ದಾರೆ]

2 comments:

  1. ಚಂದ್ರನ ಮೇಲೆ ಮಾನವ ಕಾಲಿಟ್ಟ ನಂತರ ಕವಿ ಜಿ.ಎಸ್. ಶಿವರುದ್ರಪ್ಪನವರ ಚಂದ್ರನ ಬಗ್ಗೆ ಬರೆದ ಕವನ ಸೂಕ್ತವಾಗಿದೆ. ಅಪೊಲೊ ೧೨ ಯಾನದ ಸ್ಥೂಲವಿವರ ಲೇಖನದಲ್ಲಿ ಸೂಕ್ತವಾಗಿ ನೀಡಲಾಗಿದೆ. ಧನ್ಯವಾದಗಳು.

    ReplyDelete
  2. tumba cennagide. odade heluvavaru buddivantharu ennabeda. odi barede e baraha!

    ReplyDelete