16 April 2013

ಆರ್ಮ್‌ಸ್ಟ್ರಾಂಗ್ ಸಂಗಡಿಗರು

(ಮಾನವ, ಚಂದ್ರನ ಮೇಲೆ - ಆರನೇ ಕಂತು)

ನೀಲ್ ಎ. ಆರ್ಮ್‌ಸ್ಟ್ರಾಂಗ್ (೩೮) ಅಪೊಲೊ ೧೧ರ ನಾಯಕ. ಮೈಕಲ್ ಕಾಲಿನ್ಸ್ (೩೪) ಸಹಯಾನಿ. ಇವನು ಸಿಯೆಮ್ಮಿನ ಚಾಲಕ. ಎಡ್ವಿನ್ ಈ. ಅಲ್ಡ್‌ರಿಚ್ (೩೯) ಎಲ್ಲೆಮ್ಮಿನ ಚಾಲಕ. ನೌಕೆ ಎಷ್ಟು ಜಟಿಲ ರಚನೆಯೋ ಅಷ್ಟೇ ಜಟಿಲ ವಿಷಯ ಇವರ ಆರಿಸುವಿಕೆ ಮತ್ತು ಶಿಕ್ಷಣ. ಸಾಮಾನ್ಯತೆ ಅಸಾಮಾನ್ಯತೆಯ ಶಿಖರ ಏರಬೇಕಾದರೆ ಅಸಾಧಾರಣ ಮನೋದೈಹಿಕ ದಾರ್ಢ್ಯ ಮತ್ತು ಉದ್ದೇಶಪೂರ್ವಕ ಕ್ರಮಬದ್ಧ ಶಿಕ್ಷಣಗಳು ಮೇಳೈಸಬೇಕು - ಯೋಜನೆಯ ಮಾನವಾಂಶ ಇಲ್ಲಿದೆ. ಆಕಾಶನೌಕೆ ಎಷ್ಟೇ ಪರಿಷ್ಕಾರ ರಚನೆ ಆಗಿರಲಿ, ಗಣಕ ಯಂತ್ರಗಳೂ ನೆಲದ ಮೇಲಿನ ವಿಜ್ಞಾನಿಗಳ ತಂಡವೂ ಎಷ್ಟೇ ಉತ್ಕೃಷ್ಟವಾಗಿ ಪಥ ನಿರ್ದೇಶನ ಮಾಡಲಿ - ಆಕಾಶದ ಅನಂತ ವಿಸ್ತಾರದಲ್ಲಿ ಕೊನೆಯ ನಿರ್ಧಾರ ಯಾನಿಗಳದ್ದೇ. ಯಂತ್ರದ ಹಿಂದಿನ ಮನುಷ್ಯನ ಪಾತ್ರ ಬಲು ಮಹತ್ವದ್ದು. ನಿನ್ನ ಆಯುಧ ಅರಿತುಕೊ, ಸೈನಿಕಾ! ಎಂಬುದು ಸೈನ್ಯದ ಪ್ರಥಮ ಪಾಠ. ಆದ್ದರಿಂದ ಯಾನಿ - ನೌಕೆ- ಪರಿಸರ ಈ ಮೇಳ ನಿಷ್ಕೃಷ್ಟವಾಗಬೇಕು. ಇಲ್ಲಿ ಪರಿಸರದ ಮೇಲೆ ಮನುಷ್ಯನ ನಿಯಂತ್ರಣ, ಅಂಕೆ ಸಾಧ್ಯವಿಲ್ಲ. ಅಂದರೆ, ಗುರುತ್ವಾಕರ್ಷಣಬಲ, ವಾಯುಮಂಡಲ, ಚಂದ್ರನ ದೂರ, ಯಂತ್ರ ರಚನೆಗೆ ಲಭ್ಯವಾಗಿರುವ ಲೋಹಗಳು ಇತ್ಯಾದಿಗಳು ಪರಿಸರ. ಯಾನಿಯ (ಅಂದರೆ ಮನುಷ್ಯನ) ಇತಿಮಿತಿಗಳನ್ನು  ಲಕ್ಷ್ಯದಲ್ಲಿಟ್ಟುಕೊಂಡು, ಪರಿಸರವನ್ನು ಹೊಂದಿ ನೌಕೆಯ ರಚನೆ ಆಗಬೇಕು. ನೌಕೆಯ ವಿವರಗಳು ಈಗಾಗಲೇ ಹೇಳಿದೆ. ಯಾನಿಗಳು ಅನುಭವೀ ವಿಮಾನ ಚಾಲಕರಾಗಿರಬೇಕು (ಪೈಲಟ್‌ಗಳು). ಅತಿದೂರದ ಮಹಾವೇಗದ ವಾಯುಯಾನದ ಮನೋದೈಹಿಕ ಸಮಸ್ಯೆಗಳು, ಅಪಾಯಗಳು, ಪರಿಹಾರಗಳು ಅವರಿಗೆ ಮಾತ್ರ ತಿಳಿದಿರುತ್ತವೆ. ಇಂಥವರಿಗೆ ಮುಂದಿನ ಶಿಕ್ಷಣ ನೀಡುತ್ತಾರೆ.ಅತಿವೇಗ, ವಾಯುಸಂಮರ್ದದ ಮತ್ತು ಗುರುತ್ವಾಕರ್ಷಣಬಲದ ತೀವ್ರ ವ್ಯತ್ಯಾಸಗಳು, ದೀರ್ಘ ಏಕಾಂತತೆ ಈ ಮೂರು ಸನ್ನಿವೇಶಗಳು ಆಕಾಶ ಯಾನದಲ್ಲಿ ಮನುಷ್ಯನ ಮುಂದೆ ಹಲವಾರು ಸಮಸ್ಯೆಗಳನ್ನು ಒಡ್ಡುತ್ತವೆ.

ಮೇಲೆ ಇರಬಾರದೇ ಎಂದು ಕೆಳಗೆ ಹಂಬಲಿಸಿಕೊಂಡಿರುವುದು, ಕೆಳಗೆ ಇರಬಾರದೇ ಎಂದು ಮೇಲೆ ಹಂಬಲಿಸಿಕೊಂಡಿರುವುದಕ್ಕಿಂತ ಅದೆಷ್ಟೋ ಉತ್ತಮ ಎಂಬುದು ಚಿರಪರಿಚಿತ ಉದ್ಗಾರ. ನೆಲದ ಫಲ ಮನುಷ್ಯ. ಭಿನ್ನ ಪರಿಸರ ಅವನಿಗೆ ಮನೋದೈಹಿಕವಾಗಿ  ಹಿತಕರ ಅಲ್ಲ. ಅತಿವೇಗದಿಂದ ದೈಹಿಕ ವ್ಯಾಪಾರಗಳಲ್ಲಿ ವ್ಯತ್ಯಾಸಗಳು ಉಂಟಾಗುತ್ತವೆ. ಕಾಲಪ್ರಜ್ಞೆ ತಪ್ಪುಗಾಲಿಕ್ಕುತ್ತದೆ. ಇವುಗಳಿಂದ ಮನಸ್ಸಿನ ಸಮತೋಲ ಕೆಡುವುದು. ಮನುಷ್ಯ ವಾಯುಸಮುದ್ರದ ತಳದಲ್ಲಿ ಬೆಳೆದು ಬಾಳುತ್ತಿರುವ ಮೀನು. ಅಂದರೆ ಈ ಪರಿಸರದ ವಾಯುಮಂಡಲದ ಸಂಮರ್ದ ಅವನನ್ನು ಅದುಮುತ್ತದೆ, ಅವನ ಮೇಲೆ ಹೇರಿರುವ ಭಾರ ಅದು. ಅದನ್ನು ವಿರೋಧಿಸಿ ದೇಹ, ದೇಹದೊಳಗಿನ ಅಂಗಗಳು ರೂಪುಗೊಂಡಿವೆ. ಈ ಸಂಮರ್ದವಿಲ್ಲದಿದ್ದರೆ? ಉಸಿರಾಟಕ್ಕೆ ಆಕ್ಸಿಜನ್ ಪೂರೈಕೆ ಕೊರೆಯಾಗುವುದರ ಜೊತೆಗೆ ಸಂಮರ್ದರಾಹಿತ್ಯದಿಂದ ರಕ್ತನಾಳಗಳು ಹಿಗ್ಗಿ ಒಡೆದು ಹೋಗುತ್ತವೆ. ಆ ಕ್ಷಣ ಸಾವು. ವಾಯುಮಂಡಲದಷ್ಟೇ ಮನುಷ್ಯ ಜೀವನದ ಇನ್ನೊಂದು ಅವಿಭಾಜ್ಯ ಅಂಶ ಗುರುತ್ವಾಕರ್ಷಣಬಲ. ವಾಯು ಸಂಮರ್ದ ಕಾಲಕಾಲಕ್ಕೆ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಾಗುತ್ತದೆ. ಆದರೆ ಗುರುತ್ವಾಕರ್ಷಣಬಲ ಈ ತರಹದ ತೀವ್ರ ಬದಲಾವಣೆಗೆ ಒಳಗಾಗುವುದಿಲ್ಲ. ಕೃತಕ ವಾಯುಮಂಡಲವನ್ನು ಬೇಕಾದಲ್ಲಿ ನಿರ್ಮಿಸಬಹುದು; ಗುರುತ್ವಾಕರ್ಷಣಬಲದ ಮೇಲೆ ಇಂಥ ಪ್ರಭುತ್ವ ನಮಗೆ ಲಭಿಸದು. ಚಂದ್ರಲೋಕಯಾತ್ರಿಕರು ವಾಯುಮಂಡಲವನ್ನು ಸಂಗಡ ಕೊಂಡೊಯ್ಯುತ್ತಾರೆ, ಆದರೆ ಗುರುತ್ವಾಕರ್ಷಣಬಲವನ್ನು ಕೊಂಡೊಯ್ಯಲಾರರು. ಆಕಾಶಯಾನದಲ್ಲಿ ಇದರ ಪರಿಣಾಮ ಘೋರ. ನೀವು ಕುರ್ಚಿಯ ಮೇಲೆ ಕುಳಿತಿರುವ ಒಂದು ಅತಿ ಸ್ವಾಭಾವಿಕ ಘಟನೆಯನ್ನು ಪರಿಶೀಲಿಸಿ. ನೆಲ ನಿಮ್ಮನ್ನು ಎಳೆಯುತ್ತದೆ, ಕುರ್ಚಿಯ ಆಸನ ತದ್ವಿರುದ್ಧ ದಿಕ್ಕಿನಲ್ಲಿ ಸಮಾನ ಬಲದಿಂದ ನೂಕುತ್ತದೆ. ಆದ್ದರಿಂದ ನಿಮ್ಮ ‘ಸುಖಾಸೀನತೆ ಎರಡು ಪರಸ್ಪರ ಸಮಾನ ವಿರುದ್ಧ ಬಲಗಳ ಸಮತೋಲದಿಂದ ಸಾಧ್ಯ. ಇದು ಒಪ್ಪಲು ಕಷ್ಟವಾದರೆ ನೀವು ಕುಳಿತಿರುವಂತೆ ನಿಮಗೆ ಅರಿವಿಲ್ಲದಂತೆ ಕುರ್ಚಿಯನ್ನು ಫಕ್ಕನೆ ಸರಿಸಿಬಿಟ್ಟರೆ ಏನಾಗುವುದೆಂದು ನೋಡಿ (ಬೇರೆಯವರ ಮೇಲೆ ಈ ಪ್ರಯೋಗ ಮಾಡುವುದು ಒಳ್ಳೆಯದು, ಆದರೆ ಕೂಡಲೇ ದೂರ ನೆಗೆಯಲು ಮರೆಯದಿರಿ!) ನೆಲದ ಈ ಸೆಳೆತವನ್ನು (ಗುರುತ್ವಾಕರ್ಷಣಬಲದ ನೆಲದ ಮೇಲಿನ ಬೆಲೆ) ೧Xg  ಅಂದರೆ  ಎಂಬ ಸಂಕೇತದಿಂದ ಸೂಚಿಸುತ್ತೇವೆ. ಚಂದ್ರತಲದ ಮೇಲೆ ಇದರ ಬೆಲೆ ಸುಮಾರು g/೬. ಭೂಮಿಯ  ಪರಿಸರದಲ್ಲಿ ದೈನಂದಿನ ವ್ಯವಹಾರಗಳನ್ನು ಸಹಜವಗಿ ಪ್ರಯತ್ನರಹಿತವಾಗಿ ನಡೆಸಿಕೊಂಡು ಬಂದಿರುವ ಮನುಷ್ಯ ಚಂದ್ರನ g/೬ ಪರಿಸರದಲ್ಲಿ ಹೇಗೆ ವರ್ತಿಸಬಹುದು? ನಿಮ್ಮ ಭಾರ ೧೫೦ ಪೌಂಡು. ಅದನ್ನು ಹೊತ್ತು ನಡೆಯಲು, ಬೆಟ್ಟವೇರಲು, ನಿಲ್ಲಲು, ಕೂರಲು ನೀವು ತಿಳಿದೋ ತಿಳಿಯದೆಯೋ ಒಂದಿಷ್ಟು ಪ್ರಯತ್ನ ಮಾಡುತ್ತೀರಿ. ನಿಮ್ಮ ಭಾರ ಫಕ್ಕನೆ ಅದರ ೧/೬ರಷ್ಟು ಅಂದರೆ ೨೫ ಪೌಂಡು ಆಯಿತೆಂದು ಊಹಿಸಿ. ಆಗ ನಿಮಗೆ ಗಾಳಿಯಲ್ಲಿ ತೇಲುತ್ತಿದ್ದೇನೋ ಎಂದು ಭಾಸವಾಗುವುದು; ಹಿಂದಿನ ಪ್ರಯತ್ನವನ್ನು ಪ್ರಯೋಗಿಸಿದರೆ ನೀವು ಚೆಂಡಿನಂತೆ ಪುಟನೆಗೆಯುತ್ತೀರಿ, ಕುದುರೆಯಂತೆ ಧಾವಿಸುತ್ತೀರಿ, ಹಿಮಾಲಯ ಈಗ ದೊಡ್ಡ ಬೆಟ್ಟವಲ್ಲ! ಇಂಥ ಬದಲಾದ ಪರಿಸ್ಥಿತಿಯಲ್ಲಿ ನಿಮ್ಮ ಮನಸ್ಸು ಹೇಗೆ ವರ್ತಿಸೀತು? ದೇಹದ ಒಳಗಿನ ಇಂದ್ರಿಯ ವ್ಯಾಪಾರ ಹೇಗೆ ನಡೆದೀತು? ಚಂದ್ರತಲದ ಮೇಲೆ ಇಂಥ ಪರಿಸ್ಥಿತಿ ಎದುರಿಸಬೇಕು. ಗುರುತ್ವಾಕರ್ಷಣಬಲದ ಪ್ರಭಾವ ಆಕಾಶಯಾನದ ಸಮಯದಲ್ಲಿ ಬೇರೆ ಒಂದು ರೀತಿ ಇದೆ. ರಾಕೆಟ್ ಪ್ರಥಮವಾಗಿ ಭೂಮಿಯ ತಲದಿಂದ ಮೇಲೆ ನೆಗೆವಾಗ ಯಾನಿಯ ಭಾರ ವಾಸ್ತವಿಕ ಭಾರದ ಐದರಷ್ಟಾಗುವುದು. ಇಂಥ ಪರಿಸ್ಥಿತಿಯಲ್ಲಿ ನಿಂತವನ ಕಾಲುಗಳು ದೇಹದ ಭಾರ ಹೊರಲಾರದೆ ಮುರಿದು ನಜ್ಜುಗುಜ್ಜಾಗುತ್ತವೆ. ಭೂಮಿಯಿಂದ ಮೇಲೆ ಮೇಲೆ ಹೋದಂತೆ  g ಬೆಲೆ ಕಡಿಮೆ ಆಗುತ್ತದೆ. ೨೬೪೦ ಕಿಮೀ ಎತ್ತರದಲ್ಲಿ  ಬೆಲೆ ಸುಮಾರು g/೨; ಮತ್ತೂ ಎತ್ತರದಲ್ಲಿ ಅದರ ಬೆಲೆ ಇನ್ನೂ ಕಡಿಮೆ ಆಗುವುದು. ಇಂಥ ಪ್ರದೇಶದಲ್ಲಿ ಸಾಗುವ ಆಕಾಶ ನೌಕೆಯಲ್ಲಿ ಮನುಷ್ಯನಿಗೆ ಭಾರರಾಹಿತ್ಯದ ಅನುಭವವಾಗುವುದು. ಚೆಲ್ಲಿದ ನೀರು ಅಲ್ಲಿ ತೇಲುತ್ತಿರುತ್ತದೆ; ಆಹಾರ ಸೇವನೆ ವಿಶೇಷ ಪ್ರಯತ್ನ, ವಿಶೇಷ ಸಲಕರಣೆ ಇಲ್ಲದೆ ಸಾಧ್ಯವಾಗದು. ಇವೆಲ್ಲ ಪರಿಸ್ಥಿತಿಗಳನ್ನೂ ಕೃತಕವಾಗಿ ನೆಲದ ಮೇಲೆ ನಿರ್ಮಿಸಿ ಯಾನಿಗಳಿಗೆ ಶಿಕ್ಷಣ ನೀಡುತ್ತಾರೆ. ಮೂವರು ಯಾನಿಗಳನ್ನು ಕಳಿಸುವುದರ ಮೂಲಕ ಅವರಲ್ಲಿ ಕೆಲಸ ಹೊಣೆಗಾರಿಕೆಗಳ ಹಂಚಿಕೆ ಆಗುತ್ತದೆ ಮತ್ತು ಯಾರೊಬ್ಬರಿಗೂ ದೀರ್ಘ ಏಕಾಂತತೆಯಿಂದ ಒದಗಬಹುದಾದ ಮಾನಸಿಕ ಅಸಮತೆಗಳು ಉಂಟಾಗುವುದಿಲ್ಲ.

ಯಾನಿಗಳ ಉಡುಪೇನು? ಸಿಎಮ್ಮಿನ ಒಳಗೆ ಸಂಮರ್ದ, ಹವೆ, ಉಸಿರಾಟದ ಏರ್ಪಾಡು ಹಿತಕರವಾಗಿ ನಿಯಂತ್ರಿತವಾಗಿವೆ. ಚಲನೆಯ ಮಹಾವೇಗದಿಂದ ಗುರುತ್ವಾಕರ್ಷಣಬಲದ ವ್ಯತ್ಯಾಸಗಳಿಂದ ಜನಿಸುವ ವಿವಿಧ ಬಲಗಳನ್ನು ಪ್ರತಿಕ್ರಿಯೆಗಳನ್ನು ಯಾನಿಗಳು ಯಶಸ್ವಿಯಾಗಿ ಎದುರಿಸಿದರೆ ಸಾಕು. ಆದ್ದರಿಂದ ಇಲ್ಲಿ ಉಡುಪಿನ ಸಮಸ್ಯೆ ಇಲ್ಲ. ಎಲ್ಲೆಮ್ಮಿನ ಬಾಗಿಲು ತೆರೆದು ಚಂದ್ರತಲದೆಡೆಗೆ ಇಳಿವಾಗ, ಇಳಿದು ಅಲ್ಲಿ ಪರೀಕ್ಷೆ ನಡೆಸುವಾಗ ಪರಿಸ್ಥಿತಿ ಬೇರೆ. ಆಕಾಶ ಉಡುಪನ್ನು ಧರಿಸಿಯೇ ಯಾನಿಗಳು ಕಾರ್ಯೋದ್ಯುಕ್ತರಾಗಬೇಕು. ಈ ಉಡುಪು ಒಂದು ಪುಟ್ಟ ಭೂಮಿ - ಹವೆ, ಉಸಿರಾಟದ ಗಾಳಿ, ಸಂಮರ್ದ ಭೂಮಿಯಂತೆ; ಚಂದ್ರಪರಿಸರದ ಉಷ್ಣತೆಯ ತೀವ್ರ ಏರಿಳಿತಕ್ಕೆ ವಿಕಿರಣತೆಗೆ ಉಡುಪು ಪೂರ್ಣ ಅವಾಹಕ; ನಿರಂತರ ಉಲ್ಕಾ ಪ್ರಹಾರದಿಂದ ಯಾನಿಯನ್ನು ರಕ್ಷಿಸುವ ಕರ್ಣಕವಚ ಇದು; ಇದರೊಳಗೆ ಭೂಮಿ - ಯಾನಿ ಪರಸ್ಪರ ರೇಡಿಯೋ ಸಂಪರ್ಕ ವ್ಯವಸ್ಥೆಯೂ ಇದೆ. ಇಷ್ಟೆಲ್ಲ ಇದ್ದರೂ ಉಡುಪು ಹಗುರವಾಗಿರಬೇಕು, ಯಾನಿ ಅದನ್ನು ಹೊತ್ತು ಕೆಲಸ ಮಾಡಲು ಸಮರ್ಥನಾಗಿರಬೇಕು; ಚಲನೆಗೆ ಪ್ರತಿಬಂಧಕವಾಗಿರಬಾರದು. ಉಡುಪಿನ ಭಾರ ಭೂಮಿಯ ಮೇಲೆ ೮೮ ಕಿಗ್ರಾಂ; ಚಂದ್ರನ ಮೇಲೆ ಸುಮಾರು ೧೫ ಕಿಗ್ರಾಂ.

ಅಧ್ಯಾಯ ಐದು
ಮಾನವ ಜನಾಂಗಕ್ಕೆ ಹನುಮಂತ ನೆಗೆತ

(ಭಾರತೀಯ ಕಾಲಮಾನವನ್ನು ರೈಲ್ವೆ ಕ್ರಮದಲ್ಲಿ ಬಳಸಿದೆ. ೦೧೩೦ ಗಂಟೆ ಎಂದರೆ ೧-೩೦ ಗಂಟೆ ಪೂರ್ವಾಹ್ನ; ೧೯೪೫ ಗಂಟೆ ಎಂದರೆ ೭-೪೫ ಗಂಟೆ ಅಪರಾಹ್ನ.)

ಉಡಾವಣೆ

ಜುಲೈ ೧೬, ೧೯೬೯. ಪುನಃ ಕೆನೆಡಿ ಭೂಶಿರ. ನೆಲಕ್ಕೆ ಲಂಬವಾಗಿ ನಿಂತಿದೆ, ತಳದಲ್ಲಿ ಮೂರು ಮಜಲಿನ ಸ್ಯಾಟರ್ನ್-೫ ರಾಕೆಟ್; ಅದರ ಶಿಖರದಲ್ಲಿ ಅಪೊಲೊ ೧೧ ಆಕಾಶ ನೌಕೆ. ಸಮಗ್ರ ವ್ಯವಸ್ಥೆಯ ಭಾರ ೩೦೦೦ ಟನ್, ಎತ್ತರ ೧೦೦ ಮೀ. ಆರು ದಿವಸಗಳ ಹಿಂದೆ ಕೊನೆಯೆಣಿಕೆ ತೊಡಗಿದೆ. ನಾಸಾ (ನ್ಯಾಷನಲ್ ಏರೋನಾಟಿಕ್ಸ್ ಎಂಡ್ ಸ್ಪೇಸ್ ಎಡ್ಮಿನಿಸ್ಟ್ರೇಶನ್ ಎಂಬ ಅಮೆರಿಕ ದೇಶದ ಆಕಾಶಯೋಜನೆ ನಿರ್ವಹಿಸುವ ಸಂಸ್ಥೆಯ ಸಂಕ್ಷೇಪ ನಾಮ) ಅಧಿಕಾರಿಗಳ ಅಭಿಪ್ರಾಯದ ಪ್ರಕಾರ ಅಂದಿನ ಹಾರಾಟದ ಖರ್ಚು ೧೫೦ ದಶಲಕ್ಷ ಡಾಲರುಗಳು.

ಮನುಷ್ಯನ ಈ ಪರಮಸಾಹಸದಲ್ಲಿ ಸಕಲರ ಶುಭಾಶಯ ನಿಮ್ಮೊಡನಿದೆ ಅಧ್ಯಕ್ಷ ನಿಕ್ಸನ್ನರ ಬೀಳ್ಕೊಡುಗೆಯ ಮಾತು. ಆರ್ಮ್‌ಸ್ಟ್ರಾಂಗ್ ಸಂಗಡಿಗರು ಮಾನವ ಜನಾಂಗದ ಪ್ರತಿನಿಧಿಗಳಾಗಿ ಸಿಎಮ್ ಪ್ರವೇಶಿಸಿದರು.

ಇಂದಿಗೆ ೨೪ ವರ್ಷಗಳ ಹಿಂದೆ ಪ್ರಥಮ ಪರಮಾಣು ಬಾಂಬ್ ಸ್ಫೋಟಗೊಂಡದ್ದು ಎಂದು ಒಬ್ಬ ಪತ್ರಿಕಾ ಪ್ರತಿನಿಧಿ ಆ ದಿವಸದ ಐತಿಹಾಸಿಕ ಮಹತ್ತ್ವವನ್ನು ನೆನಪಿಸಿದ. ಅದೊಂದು ಮಹಾತಾಂತ್ರಿಕ ಮೈಲಿಗಲ್ಲು; ಇದು ಇನ್ನೊಂದು.

೧೫ ಮಿನಿಟುಗಳಿವೆ. ಗಣಕಯಂತ್ರಗಳು ಎಲ್ಲ ಭಾಗಗಳ ಪರೀಕ್ಷೆ ನಡೆಸಿ ಅವುಗಳ ಸಾಮರ್ಥ್ಯವನ್ನು ಕುರಿತು ಹಸಿರು ವರದಿ ಸಲ್ಲಿಸಿದುವು. ಜಟಿಲ ಮತ್ತು ಸೂಕ್ಷ್ಮ ಪ್ರಯೋಗಗಳಲ್ಲಿ ಸ್ವಯಂಚಾಲಿತ ಗಣಕಯಂತ್ರಗಳ ಪಾತ್ರ ಪ್ರಧಾನ, ಆ ಕ್ಷಿಪ್ರತೆ ನಿಷ್ಕೃಷ್ಟತೆ ಮನುಷ್ಯನಿಂದ ಸಾಧ್ಯವಲ್ಲ.

ಹತ್ತು ಸೆಕೆಂಡುಗಳು, ಒಂಬತ್ತು, ಸ್ವಯಂಚಾಲಿತ ದಹನ ಕ್ರಿಯಾ ಪರಂಪರೆ ತೊಡಗಿದೆ, ಎಂಟು, ಏಳು, ಆರು, ಐದು, ನಾಲ್ಕು, ಮೂರು, ಎರಡು, ಒಂದು - ಉಡಾವಣೆ! (೧೯೦೨ ಗಂಟೆ).

ಎಂಥ ಮುಹೂರ್ತ. ಮಾನವ ಚಂದ್ರನೆಡೆಗೆ!

ಸ್ಯಾಟರ್ನ್ ವಾಹನದ (ಒಂದನೆಯ ಅಂದರೆ ತಳದ) ಮಜಲಿನ ಜೀವಸ್ಪಂದಿಸಿತು. ಜ್ವಾಲೆ ಕಾರಿತು. ಮಹಾಸ್ಫೋಟ. ಅದು ಉಗಿದ ಹೊಗೆಬೆಟ್ಟ ವ್ಯವಸ್ಥೆಯನ್ನೇ ಸ್ವಾಹಾಕರಿಸಿದಂತೆ ತೋರಿತು. ಜನಿಸಿದ ನೂಕುಬಲ ೩,೪೦೦ ಟನ್. ಹೊಗೆಯ ನಡುವಿಂದ ಹೊಸ ಆಸೆ ಚಿಗುರಿತು, ಅಳುವ ಕಡಲಿನಲಿ ತೇಲಿ ಬರುತಲಿದೆ ನಗೆಯ ಹಾಯಿದೋಣಿ. ಮೊದಲ ೧೦ ಸೆಕೆಂಡುಗಳಲ್ಲಿ ೧೦೦ ಮೀಟರ್‌ಗಳಷ್ಟು ಮಾತ್ರ ನೇರ ಚಲನೆ, ಅಂದರೆ ವ್ಯವಸ್ಥೆಯ ಉದ್ದದಷ್ಟು ಮೇಲೇರಿದಂತಾಯಿತು. ಸೆಕೆಂಡಿಗೆ ೧೩.೬ ಟನ್ ಇಂಧನ ನುಂಗುವ ಬಕಾಸುರನ ಭಾರ ಅದೇ ಪ್ರಮಾಣದಲ್ಲಿ ಕಡಿಮೆಯೂ ಆಗುವುದು. ೨.೫ ಮಿನಿಟು ಗತಿಸುವಾಗ ವ್ಯವಸ್ಥೆ ೬೪ ಕಿಮೀ ಎತ್ತರದಲ್ಲಿತ್ತು. ಇಲ್ಲಿ ಒಂದನೆಯ ಮಜಲಿನ ಆಯುಷ್ಯ ತೀರಿ ಅದರ ಅವಶೇಷಗಳು ವಾಯುಮಂಡಲದಲ್ಲಿ ಚದರಿ ಹೋದುವು. ವ್ಯವಸ್ಥೆಯ ಪಥ ಪೂರ್ವಕ್ಕೆ ಹೊರಳಿತು. ಭೂಮಿಯ ಆವರ್ತನೆ ಪಶ್ಚಿಮದಿಂದ ಪೂರ್ವಕ್ಕೆ. ಆದ್ದರಿಂದ ಮೇಲೆ ಹಾರಿದ ವ್ಯವಸ್ಥೆಗೆ ಈ ಆವರ್ತನೆಯ ವೇಗದ ಕೊಡುಗೆ ಹೆಚ್ಚಿಗೆ ಸಿಕ್ಕಿದ ಲಾಭ, ಓಡುತ್ತಿರುವ ವಾಹನದಿಂದ ಅದೇ ದಿಕ್ಕಿಗೆ ಹಾರಿದರೆ ಹಾರಿದವನಿಗೆ ಹೆಚ್ಚು ವೇಗ ಲಭಿಸುವಂತೆ. ಒಂದನೆಯ ಮಜಲು ಮುಗಿದಂತೆ ಎರಡನೆಯದರ ಹೊಣೆ. ಇದರ ಐದು ಇಂಜಿನ್ನುಗಳು ಉರಿದು ೫೦೦ ಟನ್ ನೂಕುಬಲ ಉತ್ಪಾದಿಸಿದುವು. ಪಥ ಪರಿಷ್ಕರಣ ಅಗತ್ಯವೆನಿಸಲಿಲ್ಲ. ಸ್ವಯಂಚಾಲಿತೋಪಕರಣಗಳು (ನೆಲದ ಮೇಲೆಯೂ ವ್ಯವಸ್ಥೆಯಲ್ಲಿಯೂ) ಅಷ್ಟು ನಿಖರವಾಗಿ ಕೆಲಸ ಮಾಡಿದ್ದುವು. ಮೇಲೇರಿದ ವ್ಯವಸ್ಥೆ ವಕ್ರ ರೇಖೆಯಲ್ಲಿ ಚಲಿಸಿ ದೂರದ ದಿಗಂತದಲ್ಲಿ (ಕೆನೆಡಿ ಭೂಶಿರದಲ್ಲಿ ನಿಂತು ನೋಡುತ್ತಿದ್ದವರಿಗೆ) ಮರೆಯಾಯಿತು. ಮನೆ ಮನೆಗಳ ಹಂಬಲ ಪ್ರಾರ್ಥನೆಗಳು ಆ ಕಾಣದ, ಆದರೆ ರೇಡಿಯೋ ವರದಿ ಮೂಲಕ ಕೇಳುವ ಚುಕ್ಕಿಯ ಒಳಗೆ ಮಿಡಿಯುತ್ತಿದ್ದ ಮೂವರು ಸ್ವಜಾತಿ ಬಾಂಧವರ ಯೋಗಕ್ಷೇಮವೊಂದನ್ನೇ ಕೋರಿದುವು. ನಿಸರ್ಗದ ಮುಂದೆ ಅದರ ಅನಂತ ಸೂಕ್ಷ್ಮ ಕೃತಿ ಮನುಷ್ಯ. ಅವನ ಇಸ್ಪೀಟ್ ಎಲೆ ರಚನೆಗಳು ತೀರ ಅಸಮಾನ. ಆದರೂ ಈತನ ಸಾಹಸ ಅಸಾಮಾನ್ಯ.

ನೂಕುಬಲ ಚೆನ್ನಾಗಿದೆ. ಎಲ್ಲ ಇಂಜಿನ್ನುಗಳೂ ಸಮರ್ಪಕವಾಗಿವೆ ನಿಯಂತ್ರಣಾಗಾರದ (ಹೂಸ್ಟನ್‌ನಲ್ಲಿದೆ; ಇನ್ನು ಮುಂದೆ ಅದನ್ನು ಹೂಸ್ಟನ್ ಎಂದೇ ಕರೆಯಲಾಗುವುದು) ತೃಪ್ತ ಹೇಳಿಕೆ. ೯೬ ಕಿಮೀ ಎತ್ತರದಲ್ಲಿ ಸಾಗುತ್ತಿದ್ದಂತೆ ಉಡಾವಣೆ ವಿಮೋಚನಾ ಗೋಪುರವನ್ನು ಕಳಚಿ ವಿಮೋಚನೆ ನೀಡಿದರು. ಅದರ ಉಪಯೋಗ ಬೇಕಾಗಲಿಲ್ಲ. ಇನ್ನು ಅಗತ್ಯವಿಲ್ಲ. ವ್ಯವಸ್ಥೆಯ ಭಾರ ಅಷ್ಟು ಕಡಿಮೆಯಾಯಿತು. ಎರಡನೆಯ ಮಜಲು ರಾಕೆಟಿನ ದಹನಾವಧಿ ಸುಮಾರು ೬ ಮಿನಿಟ್. ಇದು ಉರಿದು ಮುಗಿಯುವಾಗ ವ್ಯವಸ್ಥೆಯ ದೂರ ೧೮೩ ಕಿಮೀ, ವೇಗ ಗಂಟೆಗೆ ೨೪,೦೦೦ ಕಿಮೀ. ಆದರೆ ಈ ಬಲವೂ ಸಾಲದು. ಈಗ ಮೂರನೆಯ ಮಜಲಿನ ಸರತಿ. ಇದರ ಏಕಮಾತ್ರ ಇಂಜಿನ್ ಸುಮಾರು ೨ /. ಮಿನಿಟು ಉರಿದು ವ್ಯವಸ್ಥೆಯನ್ನು ಭೂಮಿ ಕಕ್ಷೆಗೆ ನೂಕಿತು. ಅದು ಪೂರ್ಣವಾಗಿ ಉರಿಯಲಿಲ್ಲ. ಭೂಮಿಯನ್ನು ಪರಿಭ್ರಮಿಸುವಾಗ ಅದುವರೆಗೆ ಪಡೆದು ಬಂದ ಬಲವೇ ಸಾಕು. ಹೆಚ್ಚಿನ ನೂಕುಬಲ ಬೇಡ. ಈಗ ವ್ಯವಸ್ಥೆಯ ವೇಗ ಗಂಟೆಗೆ ೨೮,೦೦೦ ಕಿಮೀ. ಭೂಮಿಯಿಂದ ಎತ್ತರ ೧೮೫ ಕಿಮೀ. ಉಡಾವಣೆಯ ಮುಹೂರ್ತದಿಂದ ಕೇವಲ ೧೨ ಮಿನಿಟುಗಳಲ್ಲಿ ಈ ಕ್ರಿಯೆ ನಡೆದು ಹೋಗಿದೆ.  ಕಕ್ಷಾನಿಲ್ದಾಣದಲ್ಲಿ ಪರಿಭ್ರಮಿಸುತ್ತಿದ್ದ ವ್ಯವಸ್ಥೆಯನ್ನು ಹೂಸ್ಟನ್ನಿನ ನಿಯಂತ್ರಕರು ಕೂಲಂಕಷವಾಗಿ ಪರೀಕ್ಷಿಸಿದರು; ನಿರಂತರ ರೇಡಿಯೋ ಟೆಲಿವಿಷನ್ ಸಂಪರ್ಕವಿದೆಯಷ್ಟೆ. ೨ / ಗಂಟೆ ಕಾಲದಲ್ಲಿ ೧ /ಯಷ್ಟು ಭೂಪ್ರದಕ್ಷಿಣೆ ಮುಗಿಯಿತು. ಇದುವರೆಗೆ ಕೇವಲ ಪ್ರಯಾಣಿಕರಾಗಿದ್ದ ಆಕಾಶಯಾನಿಗಳು ಇನ್ನು ಮುಂದೆ ಸಕ್ರಿಯವಾಗಿ ಭಾಗಿಗಳಾಗಬೇಕು; ಚಾಲಕ, ಸಂಪರ್ಕ ವ್ಯವಸ್ಥೆಗಳನ್ನು ಹತೋಟಿಗೆ ತೆಗೆದುಕೊಳ್ಳಬೇಕು. ಭೂಮಿ ಕಕ್ಷೆಯಿಂದ ಚಂದ್ರನೆಡೆಗೆ ಚಲನೆಯ ದಿಕ್ಕನ್ನು ಬದಲಾಯಿಸುವುದೊಂದು ಜಟಿಲ, ಸೂಕ್ಷ್ಮ ಮತ್ತು ಕಠಿಣ ಕ್ರಿಯೆ. ವ್ಯವಸ್ಥೆ ಅದರ ಚಲನೆಯಲ್ಲಿ ನಿರ್ದಿಷ್ಟ ಸ್ಥಾನಕ್ಕೆ ಬಂದಾಗ ನಿಷ್ಕೃಷ್ಟ ವೇಗವನ್ನು ನಿಶ್ಚಿತ ಗುರಿಯಲ್ಲಿ ನೀಡಬೇಕು. ಇಲ್ಲಿ ಎಂಥ ಸೂಕ್ಷ್ಮ ವ್ಯತ್ಯಾಸವೂ ಯಾವ ಬಿಡಿ ಕ್ರಿಯೆಯಲ್ಲಿಯೂ ಒದಗಬಾರದು. ಹಾಗೇನಾದರೂ ಆದರೆ ಇಡೀ ಪ್ರಯತ್ನ ವಿಫಲವಾಗುತ್ತದೆ. ಚಂದ್ರನಿಲ್ಲದ ಆಕಾಶದ ಆಳಕ್ಕೆ ಹೋಗಿ ಸಾಧಿಸುವುದೇನನ್ನು? ವೇಗ ಸಾಕಷ್ಟು ಏರದಿದ್ದರೆ ಭೂಮಿಕಕ್ಷೆಯಿಂದ ಬಿಡುಗಡೆಯೇ ಆಗಲಾರದು.

ಚಂದ್ರಾಭಿಮುಖ ಚಲನೆ

ಭೂಮಿಯಿಂದ ಚಂದ್ರನ ಸರಾಸರಿ ದೂರ ೩,೮೪,೦೦೦ ಕಿಮೀ. ಕಕ್ಷೆಯಿಂದ ಆ ಕಡೆಗೆ ನೆಗೆಯಲು ಬೇಕಾಗುವ ವೇಗ ಗಂಟೆಗೆ ೩೯,೨೬೦ ಕಿಮೀ. ನೌಕೆ ಬಂತು, ಮಹಾವಿಸ್ತಾರದಲ್ಲಿ ಭೂಮಿ - ಚಂದ್ರರ ನಡುವೆ ತೆರೆದಿದ್ದ ಕಿಟಕಿಯನ್ನು ಸಮೀಪಿಸಿತು. ನೌಕೆಯ ಗಣಕಯಂತ್ರ, ಹೂಸ್ಟನ್ ಸಹಕರಿಸಿ ಹಸಿರು ಕಂದೀಲು ಹಿಡಿದುವು. ಮೂರನೆಯ ಮಜಲಿನ ಉಳಿದ ಭಾಗವನ್ನು ಕ್ಲುಪ್ತ ಸೆಕೆಂಡಿನಲ್ಲಿ ಯಾನಿಗಳು ಹೊಟ್ಟಿಸಿದರು. ಅಪೊಲೊ ನೌಕೆ ಈಗ ಚಂದ್ರನೆಡೆಗೆ ಪಥ ಬದಲಾಯಿಸಿತು. ಚಂದ್ರನೆಡೆಗೆ ಮಾನವನ ಯುಗಪ್ರವರ್ತಕ ಮಾರ್ಗ ವಿಸ್ತರಿಸುತ್ತ ಹೋಯಿತು. ಇದೇ ವೇಳೆಯಲ್ಲಿ, ಅಂದರೆ ಮೂರನೆಯ ಮಜಲು ಪೂರ್ಣ ಉರಿದು ನಾಶವಾಗುವ ಮೊದಲೇ, ಯಾನಿಗಳು ಒಂದು ಕಠಿಣ ಅಂತರಿಕ್ಷ ವಿನ್ಯಾಸವನ್ನು ನೆರವೇರಿಸಿದರು. ಇದರ ಸ್ಪಷ್ಟ ಕಲ್ಪನೆ ಮೂಡಲು ಇನ್ನೊಮ್ಮೆ ಅಪೊಲೊ ನೌಕೆಯ ಸಮಗ್ರ ಚಿತ್ರವನ್ನು ಸ್ಮರಿಸುವುದು ಒಳ್ಳೆಯದು. ಸಿಎಮ್ಮಿನ ಚೂಪುಭಾಗ (ಸುರಂಗದ್ವಾರವಿಲ್ಲಿದೆ) ಮುಂದೆ ಅಂದರೆ ಚಲನೆಯ ದಿಕ್ಕಿನಲ್ಲಿದೆ (ವಿಮೋಚನಾ ಗೋಪುರವನ್ನು ಈಗಾಗಲೇ ಕಳಚಿ ಹಾಕಲಾಗಿದೆಯಷ್ಟೆ). ಅದಕ್ಕೆ ಅಂಟಿಕೊಂಡು ಹಿಂದೆ ಎಸ್ಸೆಮ್ ಮತ್ತು ಕವಚರಕ್ಷಿತ ಎಲ್ಲೆಮ್ ಅದೇ ಕ್ರಮದಲ್ಲಿವೆ. ಯಾನಿಗಳ ರಕ್ಷಣೆ ಮತ್ತು ಉಡಾವಣೆಯ ಸೌಕರ್ಯ ಇವುಗಳನ್ನು ಲಕ್ಷಿಸಿ ಈ ಏರ್ಪಾಡು. ವಾಯುಮಂಡಲವನ್ನು ದಾಟಿ ಮುಂದಿನ ಉದ್ದೇಶ ಸಾಧನೆಗೆ ಗಮಿಸುವಾಗ ಇದು ಅನುಪಯುಕ್ತ. ಎಲ್ಲೆಮ್ಮಿನ ರಕ್ಷಣಾಕವಚವೂ ಇಲ್ಲಿನ ನಿರ್ವಾತ ಪ್ರದೇಶದಲ್ಲಿ ಅನಾವಶ್ಯಕ. ಈಗಿರುವಂತೆ ಯಾನಿಗಳಿಗೆ ಎಲ್ಲೆಮ್ಮನ್ನು (ಚಂದ್ರಲೋಕದ ‘ಟ್ಯಾಕ್ಸಿ) ಪ್ರವೇಶಿಸುವುದು ಸಾಧ್ಯವಿಲ್ಲ. ಸಿಎಮ್ಮಿನ ಸುರಂಗದ್ವಾರದಿಂದ ನಿರ್ಗಮಿಸಿ ಎಲ್ಲೆಮ್ಮಿನ ಸುರಂಗದ ಮೂಲಕ ಎಲ್ಲೆಮ್ ಪ್ರವೇಶ ಮಾಡಬೇಕು. ಅಂದರೆ ಸಿಎಮ್ಮಿನ ಸುರಂಗದ್ವಾರವೂ ಎಲ್ಲೆಮ್ಮಿನ ಸುರಂಗ ಮುಖವೂ ಜೋಡಣೆಗೊಳ್ಳಬೇಕು. ಈ ಕ್ರಿಯೆಯೇ ಅಂತರಿಕ್ಷ ವಿನ್ಯಾಸ. ಯಾನಿಗಳ ನಾಯಕ ಒಂದು ಕಿರಿಯ ಸ್ಫೋಟಕ ಹೊಟ್ಟಿಸಿದ. ಎಸ್ಸೆಮ್ಮ್ - ಎಲ್ಲೆಮ್ ಜೋಡಣೆ ಭಾಗದಲ್ಲಿರುವ ನಾಲ್ಕು ಫಲಕಗಳು ತೆರೆದುಕೊಂಡವು ಮತ್ತು ಆ ಕೂಡಲೇ ಅವರ ಎರಡು ಕೋಶಗಳೂ ಬೇರ್ಪಟ್ಟವು. ಈಗ ಸಿಎಮ್ - ಎಸ್ಸೆಮ್ ಜೋಡಣೆ ಮುಂದೆ, ಪ್ರತ್ಯೇಕವಾಗಿ ತೆರೆದ ಕವಚದೊಳಗಿರುವ ಎಲ್ಲೆಮ್ ಹಿಂದೆ ಒಂದೇ ಪಥದ ಮೇಲೆ ಒಂದೇ ವೇಗದಿಂದ ಚಲಿಸುತ್ತಿವೆ. ಸಿಎಮ್ಮಿನ ಹೊರಮೈ ಸುತ್ತ ಜೋಡಿಸಿರುವ ೧೬ ಪುಟ್ಟ ರಾಕೆಟ್‌ಗಳನ್ನು ನಾಯಕ ಸ್ಫೋಟಿಸಿದ. ಚೂಪುಭಾಗ (ಸುರಂಗದ್ವಾರ) ಮುಂದೆ ಇರುವ ಸಿಎಮ್- ಎಸ್ಸೆಮ್ ಜೋಡಣೆ ಆಕಾಶದಲ್ಲಿ ಒಂದು U ಆಕಾರದ ಸುತ್ತು ತಿರುಗಿತು. ಪರಿಣಾಮವಾಗಿ ಎಸ್ಸೆಮ್ಮಿನ ಬುದ್ಧಿವಂತ ಭಾಗ ಮುಂದೆ (ಚಲನೆಯ ದಿಕ್ಕಿನೆಡೆಗೆ) ಮತ್ತು ಸಿಎಮ್ಮಿನ ಚೂಪುಭಾಗ ಹಿಂದೆ ಆದುವು. ಇದರ ಹಿಂದೆ ತೆರೆದ ಫಲಕಗಳೊಳಗಿನ ಕವಚ ರಕ್ಷಿತ ಎಲ್ಲೆಮ್ ಬರುತ್ತಿದೆ. ಮುಂದಿನ ಕ್ರಿಯೆ ಸುರಂಗದ್ವಾರ ಮತ್ತು ಎಲ್ಲೆಮ್ಮಿನ ಸುರಂಗ ಮುಖ ಇವುಗಳ ಸಮರ್ಥ ಹೊಂದಾಣಿಕೆ ಜೋಡಣೆ. ರಾವುತ ಕುದುರೆಯನ್ನು ಜಗ್ಗುವಂತೆ ನಾಯಕ ಸಿಎಮ್ಮನ್ನು ಜಗ್ಗಿ ಈ ಒಂದುಗೂಡಿಕೆಯನ್ನು ಯಶಸ್ವಿಯಾಗಿ ಮಾಡಿದ. ಇದೇನೂ ಕಟ್ಟುಕತೆ ಅಲ್ಲ: ನಡೆಸಿದ ವಾಸ್ತವಿಕ ತಾಂತ್ರಿಕ ಸಾಹಸ. ಒಂದನೆಯ ಆಕಾಶ ವಿನ್ಯಾಸ ಇಲ್ಲಿಗೆ ಮುಗಿಯಿತು. ಇದರಲ್ಲೇನಾದರೂ ದೋಷ ಉಂಟಾಗಿದ್ದರೆ ಈ ಒಂದುಗೂಡಿಕೆ ಆಗುತ್ತಿರಲಿಲ್ಲ. ಯಾನಿಗಳಿಗೆ ಚಂದ್ರನ ಮೇಲೆ ಇಳಿಯಲು ಟ್ಯಾಕ್ಸಿಯೇ ಇರುತ್ತಿರಲಿಲ್ಲ - ಅಪೊಲೊ ೮ ರ ಪುನರಾವರ್ತನೆ ಆಗುತ್ತಿತ್ತಷ್ಟೆ. ಇನ್ನು ಎಲ್ಲೆಮ್ಮಿನ ಕವಚ ಅನಾವಶ್ಯಕ ಭಾರ. ಆದ್ದರಿಂದ ಅದನ್ನೂ ಇದುವರೆಗೆ ಸಂಗಾತಿಯಾಗಿದ್ದ ಮೂರನೆಯ ಮಜಲಿನ ಉಳಿದ ಅಂಶವನ್ನೂ ಯಾನಿಗಳು ತ್ಯಜಿಸಿದರು. ಈಗ ಎಸ್ಸೆಮ್-ಸಿಎಮ್-ಎಲ್ಲೆಮ್ ಜೋಡಣೆ ಅದೇ ಕ್ರಮದಲ್ಲಿ, ಎಸ್ಸೆಮ್ಮಿನ ಬುದ್ಧಿವಂತ ಭಾಗ ಮುಂದೆ ಇರುವಂತೆ ಸಾಗುತ್ತಿದೆ.

ನಿರ್ವಾತ ಪ್ರದೇಶ. ಭಾರರಾಹಿತ್ಯದ ಅನುಭವ. ಪ್ರತಿಯೊಂದು ಕ್ರಿಯೆಗೂ ಹೊಸ ಅರ್ಥ ಹೊಸ ವ್ಯಾಪ್ತಿ. ಅಖಂಡ ವಿಸ್ತಾರದಲ್ಲಿ ಸುದೀರ್ಘ ಚಲನೆ. ಅನಂತ ದೂರದ ಅನಾದಿ ಕಾಲದ ಮಹಾನಕ್ಷತ್ರಗಳು ಆಕಾಶದ ಮೆತ್ತಿದ ಕಪ್ಪನ್ನು ಕೊರೆದ ವಜ್ರ ರಂಧ್ರಗಳಂತೆ ಕಂಡವು. ಸೂರ್ಯನೆಡೆಗೆ ತಿರುಗಿದ ನೌಕೆಯ ಮೈಮೇಲೆ ನಿರಂತರ ಉಷ್ಣ ಪ್ರಹಾರ; ಉಳಿದ ಭಾಗ ಕೋರೈಸುವ ಆಕಾಶದ ಶೀತದಲ್ಲಿ. ಇಂಥ ತೀವ್ರ ವ್ಯತ್ಯಾಸ ನೌಕೆಗೆ ಹಿತಕರವಲ್ಲ. ಇದರ ನಿವಾರಣೆಗಾಗಿ ನೌಕೆಯನ್ನು ನಿಯತಕಾಲಿಕವಾಗಿ ಆವರ್ತಿಸುವಂತೆ ವಿಧಿಸಲಾಗಿದೆ. ಇದರಿಂದ ನೌಕೆಯ ಪ್ರತಿಪಾರ್ಶ್ವವೂ ಬಿಸುಗದಿರನ ಸ್ಪರ್ಶಸುಖ ಪಡೆಯುವುದು.

ಚಂದ್ರ ಭೂಮಿಯ ಗುರುತ್ವಾಕರ್ಷಣ ಕ್ಷೇತ್ರದಲ್ಲಿಯೇ ಇರುವುದರಿಂದ ನೌಕೆ ಬಿಡುಗಡೆಯ ವೇಗದಿಂದ ಧಾವಿಸಬೇಕಾಗಿಲ್ಲ. ಭೂಮಿಯಿಂದ ದೂರ ದೂರ ಸಾಗಿದಂತೆ ಅದರ ಆಕರ್ಷಣ ಪ್ರಭಾವ ಕ್ಷೀಣವಾಗುವುದು. ಅದೇ ವೇಳೆಯಲ್ಲಿ ಚಂದ್ರನ ಪ್ರಭಾವ ಏರುತ್ತದೆ. ಒಂದು ಗಡಿಯಲ್ಲಿ (ಚಂದ್ರನಿಂದ ಸುಮಾರು ೬೪,೦೦೦ ಕಿಮೀ ದೂರದಲ್ಲಿ) ನೌಕೆ ಭೂಮಿ ಪ್ರಭಾವಲಯದಿಂದ ಚಂದ್ರ ಪ್ರಭಾವಲಯಕ್ಕೆ ಉತ್ತರಿಸಿರುತ್ತದೆ. ನೌಕೆಯ ಪ್ರಾರಂಭದ ವೇಗ (ಗಂಟೆಗೆ ೩೯,೨೬೦ ಕಿಮೀ) ಈ ಗಡಿ ತಲುಪುವಾಗ ಗಂಟೆಗೆ ೩,೪೦೦ ಕಿಮೀಗೆ ತಗ್ಗಿದೆ. ಜುಲೈ ೧೭, ೧೮ರ ಕತೆ ಇದು. ಯಾನಿಗಳ ಆರೋಗ್ಯ ಚಟುವಟಿಕೆ ಉತ್ಕೃಷ್ಟ ಮಟ್ಟದಲ್ಲಿದ್ದುವು.

(ಮುಂದುವರಿಯಲಿದೆ)

1 comment:

  1. ಮೈ ನಡುಗಿಸುವ ಚಂದ್ರಯಾನದ ವಾಸ್ತವ ವಿವರಣೆಗಳು. ಸರ್ GTN ಅವರು ಎದುರುಕುಳಿತು ವಿವರಿಸಿದಂತೆಯೇ ಮನವರಿಕೆ ಆಯಿತು.
    ಅಶೋಕ ವರ್ಧನರೇ! ಓದಲಿಕ್ಕೆ ಕೊಟ್ಟಿದ್ದಕ್ಕೆ ತಮಗೆ ಧನ್ಯವಾಗಳು.
    - ಪೆಜತ್ತಾಯ ಎಸ್. ಎಮ್.

    ReplyDelete