08 February 2013

ಪ್ರಕೃತಿ ಸಂಸ್ಕೃತಿ

(ಚಕ್ರವರ್ತಿಗಳು - ಒಂಬತ್ತನೆಯ ಸುತ್ತು)
ಜೀವನ ವ್ಯಾಪಾರದಲ್ಲಿ ನಾವು ಪ್ರಕೃತಿ - ಸಹಜ ಪರಿಸರವನ್ನು ಜೀವಿ ಪರಿಸರಕ್ಕೆ ಸದಾ ಪಳಗಿಸುತ್ತಲೇ ಇರುತ್ತೇವೆ, ಅದೇ ಸಂಸ್ಕೃತಿ. ಈ ಹೋರಾಟದಲ್ಲಿ ವಿವೇಚನೆ ತಗ್ಗಿದ್ದೆಲ್ಲಾ ವಿಕೃತಿ, ಪರಿಸರ ಮಾಲಿನ್ಯ. ಇಲ್ಲಿ ಆಗುವ ಹಾನಿ ವ್ಯಕ್ತಿ ಮಿತಿಯನ್ನು ಮೀರುತ್ತದೆ, ಜೀವಿ ಪರಿಸರಕ್ಕೆ - ನೆನಪಿರಲಿ ಬರಿಯ ಮನುಷ್ಯ ಅಲ್ಲ, ಅದು ಜೀವಿ ಪರಿಸರಕ್ಕೇ ಹಾನಿಯುಂಟುಮಾಡುತ್ತದೆ. ಪ್ರಕೃತಿಯ ಹೋರಾಟದ ಕಣದಲ್ಲಿ ಮುಂದಿನ ತಲೆಮಾರನ್ನು ಅನೈಜ ನೆಲೆಗೆ ಕೆಡೆದಿರುತ್ತೇವೆ. ಇದಕ್ಕೆ ಉದಾಹರಣೆಯಾಗಿ ನನ್ನ ಅನುಭವಕ್ಕೆ ನಿಲುಕಿದ ಕೆಲವು ಟಿಪ್ಪಣಿಗಳು.

ಭೀಮೇಶ್ವರ
ಭಟ್ಕಳದಿಂದ ಜೋಗಕ್ಕೆ ಹೋಗುವ ದಾರಿ ಕೋಗಾರು ಘಾಟಿ. ಇದರಲ್ಲಿ ಸುಮಾರು ೩೦ ಕಿಮೀ ಸಾಗಿದರೆ ಸಿಗುವ ದಟ್ಟ ಕಾಡಿನ ಗರ್ಭದಲ್ಲಡಗಿರುವ ಕ್ಷೇತ್ರ ಭೀಮೇಶ್ವರ. ಅದೊಂದು ಶಿವರಾತ್ರಿಯಂದು (--೧೯೮೯) ನಮ್ಮ ತಂಡ ಅಲ್ಲಿಗೆ ಸ್ವಂತ ವಾಹನದಲ್ಲಿ ಭೇಟಿಕೊಟ್ಟಿತು. ಡಾಮರು ದಾರಿಯಿಂದ ಎಡದ ಕೊಳ್ಳಕ್ಕಿಳಿಯಲು ಮಣ್ಣುದಾರಿ ಇದ್ದರೂ ಸಾಮಾನ್ಯ ವಾಹನಗಳಿಗೆ ಇದು ಕಷ್ಟ ಸಾಧ್ಯ. ನಾವು ನಡೆದೆವು. ದಾರಿ ಕೊಳ್ಳದಲ್ಲಿ ಕಾಲ್ದಾರಿಯಾಗಿ, ಸಣ್ಣ ತೊರೆ ದಾಟಿ, ಗದ್ದೆ ಅಂಚಿನಲ್ಲಿ ಸಾಗಿ ಮತ್ತೆ ಕಾಡು ಸೇರುತ್ತದೆ. ಮುಂದೆ ಹತ್ತೇ ಮಿನಿಟಿನಲ್ಲಿ  ಭೀಮೇಶ್ವರನ ಗುಡಿ - ಸುಮಾರು ೪೦ಮೀ ಎತ್ತರದ ಪ್ರಾಕೃತಿಕ ಬಂಡೆಗೋಡೆಯ ಇರುಕನ್ನು ಹೊಂದಿಸಿಕೊಂಡು ರಚಿಸಿದ ಆರಾಧನಾ ಕೇಂದ್ರ ತೆರೆದುಕೊಳ್ಳುತ್ತದೆ. ಒತ್ತಿನಲ್ಲೆ ಪ್ರಕೃತಿಸಹಜವಾಗಿ ಆ ಬಂಡೆಯ ಎತ್ತರದಿಂದ ಇಳಿಯುವ ಕಿರು ಜಲಪಾತ. ಇವೆಲ್ಲವನ್ನೂ ಮುಚ್ಚಲು ಕಾತರಿಸುವ ಮರ, ಗಿಡ, ಬಳ್ಳಿ.

ಆದರೇನು! ಭೀಮೇಶ್ವರ ಅಂದು (೧೯೮೯) ತೀವ್ರ ಅಭಿವೃದ್ಧಿಯ ಸೆಳವಿನಲ್ಲಿತ್ತು. ಎರಡಾಳು ಮೂರಾಳು ತಬ್ಬಬಹುದಾದ ಮಹಾಮರಗಳು ವಿದ್ಯುತ್ ಸಂಪರ್ಕದ ನೆಪದಲ್ಲಿ ಧರೆಗೆ ಒರಗಿ ಇನ್ನೂ ಹಸಿಯಾಗಿಯೇ ಇದ್ದುವು. ಗುಡಿಯ ಸಮೀಪದಲ್ಲಿ ಎರಡು ವಿಶಾಲ ಅಂಗಳಗಳಷ್ಟು ಕಾಡು ಸೌದೆಯಲ್ಲಿ ಅಡಗಿ, ದಿಬ್ಬ ತೆಮರುಗಳು ಮೈದಾನ ಮಾಡಿ ತಡಿಕೆ ಅಂಗಡಿ ಮತ್ತು ಜೋಪಡಿ ಹೋಟೆಲುಗಳಿಗೆ ಅವಕಾಶ ಮಾಡಿಕೊಟ್ಟು ಜಾತ್ರೆಯನ್ನು ಸಾಂಗಗೊಳಿಸಿತ್ತು. ಜಲಪಾತ ತನ್ನ ಪಾತ್ರೆ ಬಿಟ್ಟು ಕೊಳವೆಗಳಲ್ಲಿ ನುಸುಳಿ ಜನಜಾತ್ರೆಯ ಕೊಳೆ ತೊಳೆಯಲು ಸಜ್ಜಾಗಿತ್ತು. ಕೈಲಾಸವಾಸ ಗೌರೀಶ ಈಶನಿಗೆ ಶಿವರಾತ್ರಿಯ ವಿಶೇಷ ಮೊರೆ ಮುಟ್ಟಿಸಲು ಮೈಕುಗಳು ಶಕ್ತಿ ಮೀರಿ ದುಡಿಯುತ್ತಿದ್ದುವು. ಸ್ವಯಂ ಸೇವಕ ವೃಂದ ಮತ್ತು ನಾಮಫಲಕ ರಾಶಿ ಸ್ಥಳಮಹಿಮೆಯನ್ನು ಸ್ಫುಟಗೊಳಿಸಲು ಹೆಣಗುತ್ತಿದ್ದುವು. ಪ್ರಾಕೃತಿಕ ಬಂಡೆಗೆ ಮಾನವ ನಿರ್ಮಿತಿಯ ಮುಚ್ಚಿಗೆ ಸೇರಿಗುಹಾದ್ವಾರವಾಗಿತ್ತು. ನಾಳೆ ಜಲಪಾತ ಅಮರಗಂಗೆಯಾಗಬಹುದು, ಕಾಡ ಕೋತಿಗಳು...

ಸ್ವಾಗತಕಾರ ಬರುತ್ತಿದ್ದವರ ಹೆಸರು, ನೆಲೆ ಪಟ್ಟಿಮಾಡಿಕೊಳ್ಳುತ್ತ, ವಾಪಾಸಾಗುತ್ತಿದ್ದವರ ಅಭಿಪ್ರಾಯ ಮತ್ತು ಸಲಹೆಗಳನ್ನು ದಾಖಲಿಸಿಕೊಳ್ಳುತ್ತಾ ಕ್ಷೇತ್ರದ ಮಹಿಮೆ ವರ್ಧಿಸುತ್ತಿದ್ದ. “ತೀರ್ಥ (ಜಲಪಾತ) ಬೆಳಿಗ್ಗೆ ಕಿರುಬೆರಳ ಗಾತ್ರದಲ್ಲಿತ್ತು. ಜನ ಬರುತ್ತಿದ್ದಂತೆಯೇ ಈಗ ನೋಡಿ, ಎಷ್ಟು ತೋರವಾಗಿದೆ! ಇನ್ನು ಇಲ್ಲಿಯ ಮಂಗಗಳು ಎಷ್ಟು ಗಂಭೀರ ಅಂತೀರಿ (ಎಷ್ಟಿದ್ದರೂ ಭೀಮನ ಸೋದರ ಸಂಬಂಧಿಗಳಲ್ಲವೇ) ಅವಕ್ಕೆ ತಂಟೆ ಮಾಡದವರಿಗೆ, ನಿಜ ಭಕ್ತರಿಗೆ...” ರೈಲು ಹೋಗುತ್ತಲೇ ಇತ್ತು. ಪುಸ್ತಕದಲ್ಲಿ ನಮೂದಾಗಿದ್ದ ಸಲಹೆಗಳ ಪಟ್ಟಿಯಲ್ಲಿ ಹೋಟೆಲು, ಛತ್ರ, ಮಾರ್ಗ, ಬಸ್ಸು ಇತ್ಯಾದಿ ಢಾಳಾಗಿ ಕಾಣಿಸುತ್ತಿತು. ಸ್ವಾಗತಕಾರನೂ ಅತ್ಯುತ್ಸಾಹದಲ್ಲಿ  “ಏನೋ ಸ್ವಾಮಿ ದಯೆ! ಈ ವರ್ಷ ವಿದ್ಯುತ್ ಸಂಪರ್ಕ ಬಂತು. ಭೀಮೇಶ ನಡೆಸಿಕೊಟ್ಟರೆ ಬರುವ ವರ್ಷ ಬುಲ್ಡೋಜರ್ ತರಿಸಿ ಮಾರ್ಗ ಸರಿ ಮಾಡಿಸಬೇಕೆಂದಿದ್ದೇವೆ. ಮತ್ತೇ...” ಹೆಚ್ಚಿನ ಕಲ್ಲಿದ್ದಲು ತುಂಬಿ ಬುಸುಗುಡುತ್ತಲೇ ಇದ್ದ. ತೀರಾ ಅಪಸ್ವರ ಎನ್ನಿಸಬಹುದಾದ ನಾಲ್ಕೇ ಮಾತುಗಳನ್ನು ನಾನು ದಾಖಲಿಸಿದರೂ ಆತನ ಲಹರಿ ಭಂಗಗೊಳ್ಳಲೇ ಇಲ್ಲ. ಆ ಸಲಹೆಗಳು ಪುಸ್ತಕದ ನಮೂದು ಮೀರಿ ಅನುಷ್ಠಾನಕ್ಕೆ ಬರುವ ಯಾವ ಸಾಧ್ಯತೆಗಳೂ ಇಲ್ಲವಾದ್ದರಿಂದ ನೀವಾದರೂ ಓದಿಕೊಳ್ಳಿ ಎಂದು ಇಲ್ಲಿಯೂ ದಾಖಲಿಸುತ್ತಿದ್ದೇನೆ : ಪ್ರಕೃತಿಯೇ ಇಲ್ಲಿ ದೇವರು. ಕಾಡು, ಬಂಡೆ, ಜಲಪಾತಗಳ ಪರಿಸರವನ್ನು ಹಾಗೇ ಉಳಿಸಿಕೊಳ್ಳುವುದು ಇಲ್ಲಿ ಪೂಜೆ. ಭಕ್ತಿಯ ನೆಪಕ್ಕೆ ದುಡಿಯುವ ಇನ್ನೊಂದು ವಾಣಿಜ್ಯ ಕೇಂದ್ರ ಭೀಮೇಶ್ವರ ಆಗದಿರಲಿ.

ಶಿಶಿಲದ ಕೂಪು

ಶಿಶಿಲದಿಂದ ಎತ್ತಿನ ಭುಜ ಶಿಖರಕ್ಕೆ ದಾರಿ ಹುಡುಕುತ್ತ ನಮ್ಮ ನಾಲ್ಕು ಬೈಕುಗಳು ಅಪ್ಪಟ ಕಾಡು ದಾರಿಯಲ್ಲಿ ಓಡಿದ್ದವು. ಕೂಪು (ಕಾಡು ಕಟುಕರ ಅಧಿಕೃತ ವಲಯ) ದಾರಿಯ ಗೊಂದಲ ಬಿಡಿಸುತ್ತ ಅಸಾಧಾರಣ ಗುಂಡಿ, ತಿರುವು, ಏರು ಹಾಯ್ದು ಇನ್ನು ಪ್ರಗತಿ ಅಸಾಧ್ಯ ಎನ್ನುವಷ್ಟು ತೀವ್ರ ಏರಿನ ಬುಡದಲ್ಲಿ ಬೈಕ್ ಬಿಟ್ಟೆವು. ಆದರೆ ದಾರಿ ಬೆಟ್ಟದ ಏಣಿನ ಗೋಣನ್ನು ಮುರಿದು, ಕಣಿವೆಯ ಹೊಟ್ಟೆಯನ್ನೇ ಬಗೆದು, ಬೆಟ್ಟದ ಓರೆಯಲ್ಲಿ ಮತ್ತೂ ಮೇಲಕ್ಕೆ ಸಾಗಿದ್ದನ್ನು ಆಶ್ಚರ್ಯ ಮಿಶ್ರಿತ ಕುತೂಹಲದಲ್ಲೇ ನಡೆದು ಅನುಭವಿಸಿದೆವು.

ಕಟುಕರ ಭಾಷೆಯಲ್ಲಿ ಕನಿಷ್ಠ ನಾಲ್ಕು ಹಲಗೆ ಯೋಗ್ಯತೆಯುಳ್ಳ ಮರಗಳುಜಾತಿಯವೆಂದೂ ಉಳಿದವೆಲ್ಲಕಾಡುಎಂದು ಕೀಳೆಣಿಸಲ್ಪಡುತ್ತವೆ. ಕಾಡು ಬದುಕಿದ್ದೇ ವ್ಯರ್ಥ ಎನ್ನುವುದು ಇವರ ಧೋರಣೆ! ಹಾಗಾಗಿ ಹಲವೆಡೆಗಳಲ್ಲಿ ದಾರಿಯ ಕೆಳ ಅಂಚಿನಕಾಡುಮರಗಳನ್ನು ಮೇಲಂಚಿನ ಮಟ್ಟಕ್ಕೆ ಬರುವಂತೆ ಮಂಡಿ, ಸೊಂಟ, ತಲೆ ಮಟ್ಟಗಳಿಂದ ಕಡಿದು, ಅವುಗಳದೇ ಸೌದೆಯನ್ನು ಬುಡದಲ್ಲಿ ಬಿಗಿಯಾಗಿ ಜೋಡಿಸಿದ್ದರು. ಮತ್ತೆ ಮೇಲಿನಿಂದ ಕಾಡು ಕಲ್ಲು ಮಣ್ಣು ಹಾಕಿ ಲಾರಿ ಓಡಲು ದಾರಿ ಅಂಚು ಬಿಗಿ ಮಾಡಿದ್ದರು. ಒಂದೆರಡು ವರ್ಷದ ಉಪಯೋಗಕ್ಕಷ್ಟೇ ಬೇಕಾಗುವ ದಾರಿಗಾಗಿ ಸೈಜು ಕಲ್ಲು ಮಾಡಿ, ಅಡಿಪಾಯದಿಂದ ಕಟ್ಟಿಕೊಂಡು ಕೂರುವ ವೃಥಾ ಶ್ರಮ ಮತ್ತು ಖರ್ಚು ಪೂರ್ತಿ ಉಳಿಸಿದ್ದರು. ಈ ಹುಡಿಯಾದ ನೆಲ, ನಾಶವಾದ ಕಾಡೆಲ್ಲಕ್ಕೂ ಘನ ಸರಕಾರ ತನ್ನ ಔದಾರ್ಯದಲ್ಲಿಸಾಗಣೆಯ ಅನಿವಾರ್ಯವೆಂದು ಕಣ್ಣುಮುಚ್ಚುತ್ತದೆ.

ಮುಂದುವರಿದಂತೆ ಅಲ್ಲಲ್ಲಿ ದಾರಿಯ ಅಂಚಿನಲ್ಲಿ ಹಲವು ಮಹಾಮರಗಳು ಇನ್ನೇನು ದಾರಿಗುರುಳಲು ಸಿದ್ಧ ಎನ್ನುವಂತೆ ತಮ್ಮ ಬೇರುಜಾಲವನ್ನೆಲ್ಲಾ ಕಳೆದುಕೊಂಡು, ರಥಯಾತ್ರೆ ಮುಗಿದ ಮೇಲೆ ಒಣಗಿದ ತೋರಣ ಮಾಲೆಗಳಂತೆ ಹರಿದು ಬಾಡಿದ ಬಳ್ಳಿ ನೇಲಿಸಿಕೊಂಡು, ಉಳಿದ ಕೆಲವೇ ಕೊಂಬೆಗೈಗಳನ್ನು ಆರ್ತವಾಗಿ ಆಕಾಶಕ್ಕೆ ಚಾಚಿದ್ದವು. ಇನ್ನೊಂದು ಅಂಚಿನಲ್ಲಿ ಮಹಾಮರಮುಂಡಗಳೂ (ಕ್ಷಮಿಸಿ, ಮಾರ್ಮಲೆಯುವ ಹಸಿರಿನ ತಲೆ, ಮಹಾಭುಜಗಳಂತಹ ಕೊಂಬೆಗಳನ್ನು ಕಳೆದುಕೊಂಡವನ್ನು ಇನ್ನೇನನ್ನಲಿ?) ‘ಸಹಜಸಾವಿನ ನಿರೀಕ್ಷೆಯಲ್ಲಿದ್ದವು. ಇವು ಯಾಕೆ ಹೀಗೆ ಎನ್ನುವುದಕ್ಕೆ ಶಾಸನ ಮತ್ತದರ ಅನುಷ್ಠಾನದ ಜಾಣ್ಮೆ ಗಮನಿಸಿ. ಶಾಸನದಲ್ಲಿ ಯಾವುದೇ ಕೂಪನ್ನು ಪೂರ್ಣ ಬೋಳಿಸದಂತೆ ಸ್ಪಷ್ಟ ಸೂಚನೆಗಳಿವೆ. ಅನುಗುಣವಾಗಿ ಪರವಾನಗಿಯಲ್ಲಿ ಹಲವು ಸಸ್ಯ ವೈವಿಧ್ಯಗಳನ್ನು ಹೆಸರಿಸಿ, ಕೆಲವು ಮಹಾಮರಗಳನ್ನಂತೂ ಸ್ಪಷ್ಟ ಇಲಾಖೆಯ ದಾಖಲೆಗೂ ಒಳಪಡಿಸಿ (ಸಂಖ್ಯಾ ನಮೂದು ಮಾಡುತ್ತಾರೆ) ಕೊಡಲಿ ರಿಯಾಯಿತಿಯನ್ನು ಕಡ್ಡಾಯಗೊಳಿಸಿರುತ್ತಾರೆ. ಆದರೆ ಒತ್ತಿನ ಮರ ಬೀಳುವಆಕಸ್ಮಿಕಆಘಾತದಲ್ಲಿ ಅವೂ ಮರಣಿಸಿದರೆ, ದಾರಿಯಂಚಿನ ಕುಸಿತದಿಂದ ಅವು ಮಗುಚಿದರೆ, ಕೂಪು ವಹಿಸಿಕೊಂಡ ಕಂತ್ರಾಟುದಾರನಿಗೆವಿಲೇವಾರಿಮಾಡುವ ಅಧಿಕಾರವನ್ನು ಕಾನೂನು ನಿರಾಕರಿಸುವುದಿಲ್ಲ. ಸಹಜವಾಗಿಜಾಣ ಸಾಗಣೆಯ ದಾರಿಗಳು ಅಂಥಾ ಮಹಾಮರಗಳ ನೇರ ಬುಡದಲ್ಲೇ, ಅಂದರೆ ಅದರ ಆಧಾರದ ಬೇರುಗಳನ್ನೆಲ್ಲ ಕಡಿದೇ ಸಾಗುತ್ತವೆ. (ಅದು ಮಳೆಗಾಲದ ಗಾಳಿ, ದರೆ ಕುಸಿಯುವ ಅಥವಾ ಕೊರೆಯುವ ನೀರ ಮೊತ್ತಕ್ಕೆ ಧರಾಶಾಯಿಯಾಗಲೇಬೇಕು) ಇನ್ನೊಂದು ತಂತ್ರದಲ್ಲಿ, ಅಧಿಕೃತ ಮರಗಳು ಹೆಚ್ಚಾಗಿ ಇಂಥ ರಿಯಾಯ್ತಿ ಪಡೆದ ಮರಗಳ ಮೇಲೇ ಉರುಳುವಆಕಸ್ಮಿಕಗಳೂ ವ್ಯವಸ್ಥೆಯಾಗುತ್ತವೆ!

ಈ ಬರ್ಬರತೆಯ ಎಡೆಯಲ್ಲೂ ಸುಪರಿಚಿತ ಪರಿಮಳ ದಟ್ಟವಾಗಿ ಮೂಗಿಗಡರಿತು. ಹೆಚ್ಚು ಹುಡುಕದೆ ಧಾರಾಳ ಬಿದ್ದು ಕುಂಬಾಗುತ್ತಿದ್ದ ದಾಲ್ಚೀನಿ ಮರದ ತೊಗಟೆಗಳನ್ನು ಗುರುತಿಸಿದೆವು. ವಾಸ್ತವದಲ್ಲಿ ದಾಲ್ಚೀನಿ ಶಾಸನ ಪ್ರಕಾರ ಕೊಡಲಿ ರಿಯಾಯ್ತಿ ಪಡೆದ ಜಾತಿ. ಅದರ ಪರಿಮಳ ಅಡಗಿರುವುದು ಅದರ ತೊಗಟೆಯಲ್ಲೇ. ಅದನ್ನು ಕಳಚಿದ ದಿಂಡನ್ನು ಮಾತ್ರ ಲಾರಿ ಏರಿಸಿದರೆ ತನಿಖಾ ಠಾಣೆಗಳಲ್ಲಿ ಯಾರ ಮೂಗೂ ಅರಳುವುದಿಲ್ಲ; ಪತ್ತೆಯಾಗುವುದಿಲ್ಲ. ಒಂದು ವಲಯದಲ್ಲಿ ಕೊಡಲಿ ಕುಣಿಯುವಾಗ, ಲಾರಿ ನಲಿಯುವಾಗ ಈ ಜಾತಿಯ ಕೆಲವು ಬುಡಗಳನ್ನು ಮಾತ್ರ ಉಳಿಸಿದರೆಸೌದೆಸಂಗ್ರಹದಲ್ಲಿ ಅಷ್ಟು ವೃಥಾ ಕೊರತೆಯಾಗುವುದಿಲ್ಲವೇ ಎನ್ನುವುದು ಕಂತ್ರಾಟುದಾರನ ಸರಳ ತರ್ಕ. ಹಣಕಾಸಿನ ಲೆಕ್ಕದಲ್ಲೇ ಹೇಳಿದರೂ  ಸಾವಿರಾರು ರೂಪಾಯಿ ತೊಗಟೆ ಕುಂಬಾದರೆ ಯಾರದ್ದು ಹೋಯ್ತು, ನೂರಾರು ರೂಪಾಯಿಯ ಮೋಪು ದಕ್ಕಿತಲ್ಲಾ ಎನ್ನುವುದುಕೂಪುನ್ಯಾಯವಂತೆ.’ ಇದನ್ನೇ ರಂಗನಾಥ ಶರ್ಮರು ಸಂಪಾದಿಸಿದಲೌಕಿಕ ನ್ಯಾಯಗಳುಪುಸ್ತಕದಲ್ಲಿ, ಪುರಾಣಿಕರುಆಖ್ವನ್ನ ಪಿಟಕ ನ್ಯಾಯಎನ್ನುತ್ತಾರೆ. ದೊಡ್ಡ ಮಡಿಕೆ ತುಂಬ ಅನ್ನವಿತ್ತು, ತಿರುಗಾಡಿ ನಾಯಿಯೊಂದು ಹಸಿದಿತ್ತು. ಅದು ತನ್ನ ಅಗತ್ಯದ ನಾಲ್ಕು ತುತ್ತಿಗಾಗಿ ಮಡಿಕೆ ಬೀಳಿಸಿ, ಒಡೆದು ಅನ್ನ ಚೆಲ್ಲಾಡುತ್ತದೆ.

ಈಗಾಗಲೇ ಕಾಡು ಕಡಿದದ್ದು ಹೆಚ್ಚಾಯ್ತು ಎನ್ನುವ ಪರಿಸ್ಥಿತಿಯಲ್ಲಿ  ನಾಗರಿಕತೆ ಬಳಲುತ್ತಿದೆ. ಹಾಗಿದ್ದೂ ಕಡಿಯುವಲ್ಲಿ ವಿನಾಯ್ತಿಯನ್ನಾದರೂ ಸರಿಯಾಗಿ ನಡೆಸಿಕೊಡಿ. ತಪ್ಪಿಯೇ ಬಿದ್ದದ್ದಾದರೂ ಬೆಲೆಯರಿತು ಬಳಕೆಗೆ ತನ್ನಿ, ವ್ಯರ್ಥವಾಗಲು ಬಿಡುವಷ್ಟು ಸಮೃದ್ಧರು ನಾವಲ್ಲ ಎನ್ನುವ ಎಚ್ಚರ ಮೂಡಬೇಕು. ಗಾಂಧಿ ಮಾತು - ಪ್ರಕೃತಿ ನಮ್ಮ ಅಗತ್ಯಗಳನ್ನು ಪೂರೈಸುತ್ತದೆ, ದುರಾಸೆ (ಅನಾಚಾರಗಳನ್ನು) ಅಲ್ಲ.

ಬೈಕ್ ಯಾತ್ರೆ


ಮೇ ದಿನಾಚರಣೆಯ (--೧೯೮೯) ರಜೆಯನ್ನು ಹೊಂದಿಸಿಕೊಂಡು ನಾವೊಂದು ಕಿರು ಬೈಕ್ ಯಾತ್ರೆ ನಡೆಸಿದೆವು. ಅದರಲ್ಲಿ ಮೊದಲ ಭೇಟಿ - ಮಂಜರಾಬಾದ್ ಕೋಟೆ: ಮಂಗಳೂರಿನಿಂದ ಶಿರಾಡಿ ಘಾಟಿ ಏರಿ ಮುಗಿಯುತ್ತಾ ಬಂತು, ಇನ್ನೇನು ಸಕಲೇಶಪುರಕ್ಕೆ ಆರೇ ಕಿಮೀ ಎನ್ನುವಾಗ ಬಲಕ್ಕೊಂದು ಕವಲು ದಾರಿ - ಬಿಸಿಲೆಗಾಗಿ ಸುಬ್ರಹ್ಮಣ್ಯಕ್ಕೆ ಒಳದಾರಿಯೂ ಹೌದು. ಈ ಕೂಡುರಸ್ತೆಗೆ ಹೆಸರು ಅಲ್ಲೇ ಮೇಲೆ ಸುವ್ಯವಸ್ಥಿತ ಗುಡ್ಡದಲ್ಲಿ ವಿರಾಜಮಾನವಾಗಿರುವ ಕೋಟೆ ಮಂಜರಾಬಾದಿನದೇ. ಸ್ವಲ್ಪ ಏರು ದಾರಿ ಮತ್ತೆ ಸುಮಾರು ಇನ್ನೂರೈವತ್ತು ಮೆಟ್ಟಿಲ ದಿಬ್ಬದ ಮೇಲಿನ ಅಷ್ಟಕೋನಾಕೃತಿಯ ಕೋಟೆ ಈಗಲೂ ದೃಢವಾಗಿಯೇ ಇದೆ. ಅದರ ಸುತ್ತಣ ಕಂದಕದಲ್ಲಿ ನೀರು  ನಿಲ್ಲಿಸುವವರಿಲ್ಲ, ನೇರ ದೃಷ್ಟಿ ಮತ್ತು ನಡೆಯಿಂದ ಮರೆಸಲ್ಪಟ್ಟ ಮಹಾದ್ವಾರದಲ್ಲಿ ಕಾವಲು ಭಟರಿಲ್ಲ, ಅದನ್ನು ಗೋಪ್ಯವಾಗಿ ಮೇಲುಸ್ತುವಾರಿ ಮಾಡುವಂತೇ ರಚಿಸಿದ ಬುರುಜಿನ ಎತ್ತರದ ಮುಂಚಾಚಿಕೆಯ ಕಂಡಿಯಲ್ಲೂ ಗೃಧ್ರ ದೃಷ್ಟಿ ಬೀರುವವರಿಲ್ಲ. ಹೆಚ್ಚಿನ ಭದ್ರತೆಗಾಗಿ ರಚಿಸಲ್ಪಟ್ಟ ಎರಡನೇ ದ್ವಾರವನ್ನು ಹಾಯ್ದರೆ ಕಾಲದ ಅಗತ್ಯಕ್ಕೆ ತಕ್ಕಂತೆ ವಾಸಕ್ಕೂ ರಕ್ಷಣಾಕ್ರಮಗಳಿಗೂ ಒದಗಿರಬಹುದಾದ ಎಷ್ಟು ರಚನಾವೈವಿಧ್ಯವನ್ನು ಗಮನಿಸಬಹುದು.

ಕೋಟೆಯ ನೆಲೆ ಬಯಲು ಸೀಮೆಯದು. ಯಾವ ಬದಿಯಿಂದಲೂ ವಿಶೇಷ ಪ್ರಾಕೃತಿಕ ಬಂದೋಬಸ್ತು ಒದಗುವಂತಿಲ್ಲ. ಸಹಜವಾಗಿ ಎಂಟು ಭುಜಗಳ ಕೋಟೆಗೆ ಮೂಲೆಗಳಲ್ಲಿ ಮಹಾಬುರುಜುಗಳೂ ಶೋಭಿಸಿದ್ದವು. ಉಳಿದಂತೆ ವಾಸಯೋಗ್ಯ ಕೋಣೆ ಸಾಲುಗಳು, ನೆಲಕೋಣೆಗಳು, ನಾಲ್ಕೂ ದಿಕ್ಕಿನಿಂದ ಇಳಿಯಬಹುದಾದ ನೆಲಬಾವಿಗಳು ನೋಡ ನೋಡುತ್ತ ಯಾರೂ ಅಲ್ಲಿ ನಡೆದಿರಬಹುದಾದ ಐತಿಹಾಸಿಕ ಕಲಾಪಗಳನ್ನು ಕಣ್ಣಿಗೆ ಕಟ್ಟಿಸಿಕೊಳ್ಳಬಹುದು. ಜನಪದದಲ್ಲಿ ಕಿವಿಬಾಯಿಯಿಂದ ಉಳಿದು ಬೆಳೆದ ವಿಚಾರಗಳು, ಕರ್ನಾಟಕದ ವಿಸ್ತೃತ ಇತಿಹಾಸದಲ್ಲಿ ದೊರಕುವ ಪರೋಕ್ಷ ಸೂಚನೆಗಳು, ಭೂ ದಾಖಲೆಗಳು, ಲಭ್ಯ ಶಾಸನಗಳು ಎಲ್ಲವನ್ನೂ ಅಳೆದು ಸುರಿದು ಮಂಜರಾಬಾದ್ ಕೋಟೆಯ ಐತಿಹಾಸಿಕ ಕಾಲವನ್ನು ಸುಮಾರು ಇನ್ನೂರೈವತ್ತು ವರ್ಷಗಳಷ್ಟು ಹಿಂದೆ ನಿಲ್ಲಿಸಬಹುದು. ಯಾವ ಜಮೀನುದಾರನ ಮಹಾಮನೆಯೋ ಅಲ್ಲಾ ಇನ್ಯಾವ ಪಾಳೇಗಾರನ ಶಿಥಿಲಗೊಂಡ ದುರ್ಬಲರಚನೆಯೋ? ಇದ್ದುದನ್ನು ಬಲಪಡಿಸಿದವನು ಯಾರೋ ನವನಿರ್ಮಾಣವನ್ನೇ ಮಾಡಿ, ರೂಢಿಸಿದವನು ಯಾರೋ? ಇಂದಿನ ನೆನಪು ಮತ್ತು ಚಾಲ್ತಿಯಲ್ಲಿರುವ ನಾಮಕರಣವಂತೂ ಕೋಟೆಯ ಇತಿಹಾಸವನ್ನು ಬಹುಖ್ಯಾತ ಟಿಪ್ಪೂ ಸುಲ್ತಾನನ ಸುತ್ತ ಗಟ್ಟಿಯಾಗಿ ಗಿರಕಿ ಹೊಡೆಸುತ್ತಿರುವುದಂತೂ ನಿಜ. ನನ್ನನ್ನು ಇಷ್ಟಾದರೂ ಉಳಿಸಿಕೊಳ್ಳಿ ಎಂಬ ಕೋಟೆಯ ಮೊರೆಯನ್ನು ಅಣಕಿಸುವಂತೆ ಅಸಂಖ್ಯ ನವಶಾಸನ ನಿರ್ಮಾತೃಗಳಲ್ಲಿ ಒಂದು ಹೆಸರು ನನಗೆ ಮೂರು ಕಡೆ ಗೋಚರಿಸಿತು: ‘ಕೋದಂಡರಾಮ, ಶಿಕ್ಷಕ, ಹಾಸನ.’ ಒಂದೂ ಕಾಗುಣಿತ ತಪ್ಪಿಲ್ಲದೆ, ದುಂಡಗಿನ ಅಕ್ಷರಗಳಲ್ಲಿ ಹೆಸರು ಕೊರೆದ ಈ ಮೇಷ್ಟ್ರು ಉತ್ತರ ಪತ್ರಿಕೆಯಲ್ಲಿ ಹೆಚ್ಚುವರಿ ಅಂಕ (ಸುಂದರ ಬರವಣಿಗೆಗೆ ಹೆಚ್ಚಿನ ಅಂಕ ಕೊಡುವ ಕ್ರಮವಿದೆಯಲ್ಲಾ) ಪಡೆಯುವುದು ಖಾತ್ರಿ. ಆದರೆ ಕೋಟೆ ಗೋಡೆಯ ಮೇಲಿನ ಸಾಕ್ಷರರ ಸಂತೆಯಲ್ಲಿದಂಡರಾಮರಿಗೆ ದಂಡ ಹಾಕುವವರು ಬೇಕಾಗಿದೆ!

ಮುಂದಿನ ಭೇಟಿ - ಕಾವೇರಿ ತೀರದ ಪ್ರಸಿದ್ಧ ಕ್ಷೇತ್ರ, ರಾಮನಾಥಪುರ. ದೇವಾಲಯದ ಪುನಾರಚನೆ ನಡೆದಿದೆ (೧೯೮೯). ಆ ನೆಪ ಮೀರಿ ದೇವಸ್ಥಾನದ ಒಳ ಹೊರಗೆ ಕೊಳಕು ತುಂಬಿದೆ. ಸಾಕ್ಷಾತ್ ಗರ್ಭಗುಡಿಯ ಹೊಸ್ತಿಲಲ್ಲೇ ಬಿದ್ದಿದ್ದ ಖಾಲಿ ಸಿಗರೇಟ್ ಪ್ಯಾಕ್, ಒತ್ತಿನ ಆರಾಧನಾ ಸ್ಥಳದಲ್ಲಿ ಸೇರಿದ್ದ ದೂಳು ಕಸ ದೇವಾಲಯದ ಹೊರ್ವಲಯದಲ್ಲಿ ನದಿ ನೀರು ಮುಟ್ಟುವವರೆಗೂ ರಾಶಿ ಬಿದ್ದ ಕಸ ನೋಡಿದರೆ ಬಹುಶಃ ಅಂಧಶ್ರದ್ಧೆ ಎಂದರೆ ಇದೇ ಇರಬೇಕು. ವಿಶಾಲ ಕಾವೇರಿ ನದೀ ಪಾತ್ರದಲ್ಲಿ ಸಾರ್ವಜನಿಕರ ಬಳಕೆಗಾಗಿ ಹಲವು ಕಾಲ್ದಾರಿ ಮಾಡಿದ್ದಾರೆ. ಹಾಸು ಬಂಡೆಗಳು ಯಥೇಚ್ಛವಿರುವ ಈ ತಾಣದಲ್ಲಿ ಸುಂದರ ಕ್ಷಣಗಳನ್ನು ಕಳೆಯೋಣವೆಂದರೆ ಅಲ್ಲೆಲ್ಲೂ ಕೂರಲಾಗದಷ್ಟು ಕೊಳಕು, ಅಸಹ್ಯ, ದುರ್ವಾಸನೆ. ಇಲ್ಲಿ ಮೂಗುಳ್ಳವರ ರಾಮಾಆಅ ನಾಥಾಆಅಉದ್ಗಾರವೇ ರಾಮನಾಥಪುರದ ಮೂಲವಾಗಿರಬಹುದೇ ಎಂಬುದನ್ನು ಸ್ಥಳನಾಮತಜ್ಞರು ಅನ್ವೇಷಿಸುವುದು ಉತ್ತಮ!

ಕೊನೆಯ ಭೇಟಿ, ಬೆಟ್ಟದಪುರದ ಬೆಟ್ಟ (ಸಮುದ್ರ ಮಟ್ಟದಿಂದ ೧೩೦೦ ಮೀ). ಸುಮಾರು ೨೮೦೦ ಮೆಟ್ಟಿಲೇರಿ ಬೋಳುಬೆಟ್ಟ್ದ ನೆತ್ತಿ ತಲಪಿದರೆ ಸುತ್ತಲ ತಪ್ಪಲಿನ ಹೊಲಗದ್ದೆಗಳು ಅರಿಶಿನ ಕುಂಕುಮಗಳ ಚೌಕುಳಿ ರಂಗೋಲಿ. ಆದರೆ ಈ ಸೇವೆಯ ಹಕ್ಕುದಾರನಾದ ಶಿಖರವಾಸಿ ಸಿಡಿಲ ಮಲ್ಲಿಕಾರ್ಜುನ ದೇವ ದುರ್ದಿನಗಳಲ್ಲಿದ್ದಾನೆ. ಸಿದಿಲ ಆಘಾತಕ್ಕೆ ಗರ್ಭಗುಡಿಯೇ ಬಿರಿದಿದೆ. ನೆಲ ಅದಿರಿಯೋ ಜಾರಿಯೋ ದೇವಸ್ಥಾನದ ಕಗ್ಗಲ್ಲ ರಚನೆಗಳೆಲ್ಲ ಅಪಾಯಕಾರಿಯಾಗಿ ವಾಲಿ ನಿಂತಿವೆ. ಶಿಖರವಲಯದ ಮೆಟ್ಟಲುಗಳು ಎರಡೂ ಬದಿಯಿಂದ ಅಮುಕಿದಂತೆ ಮಧ್ಯ ಊದಿ ಎದ್ದಿವೆ. ಬೆಟ್ಟದ ಏಕೈಕ ಜಲಾಶ್ರಯವ್ವೆಂದರೆ ನಿಂತನೀರಿನ ಕೊಳಕು ಹೊಂಡ. ಇದೇ ದೇವರಿಗಾದರೆ ಇನ್ನು ಭಕ್ತರಿಗೇನಿದ್ದೀತು!

ಬಿಸಿಲೆ ಘಾಟಿ

ಸುಬ್ರಹ್ಮಣ್ಯ - ಸಕಲೇಶಪುರಗಳ ನಡುವೆ ಸುಂದರ ವನ್ಯ ಪರಿಸರದಲ್ಲಿ ಘಟ್ಟ ಏರಲು ಒಂದು ಮಾದರಿ ದಾರಿಯಿತ್ತು - ಬಿಸಿಲೆಘಾಟಿ. ಅದರ ಅವಶೇಷ ನೋಡಲು ನಾವು ಸ್ವಂತ ವಾಹನಗಳಲ್ಲಿ, ಜಡಿಮಳೆಗಾಲದಲ್ಲಿ ಹೋಗಿದ್ದೆವು. ಘಟ್ಟದ ಕೆಳಗೆ ಕುಳುಕುಂದ, ಮೇಲೆ ಬಿಸಿಲೆಹಳ್ಳಿ. ಅಂತರ ಸುಮಾರು ೨೩ ಕಿಮೀ. ಎಲ್ಲೂ ತೀವ್ರ ಏರಿಲ್ಲ, ಗಳಿಸಿದ ಔನ್ನತ್ಯ ವ್ಯರ್ಥಗೊಳಿಸುವ ಇಳಿಜಾರೂ ಇಲ್ಲ. ಮೊದಲ ನಾಲ್ಕೈದು ಕಿಮೀ ಡಾಮರು, ಉಳಿದದ್ದು ಜಲ್ಲಿ. ಏಳೆಂಟು U ತಿರುಗಾಸು. ಒಂದೇ ಪ್ರಧಾನ ಸೇತುವೆ. ಒಟ್ಟಾರೆ ದಾರಿ ಇಂದಿನ ಅಲಕ್ಷ್ಯ ಸ್ಥಿತಿಯಲ್ಲೂ ತಮ್ಮ ಯೋಜಕರ, ನಿರ್ಮಾತೃಗಳ ದಕ್ಷತೆಗೆ ಸಾಕ್ಷಿಯಾಗುಳಿದಿದೆ.  (ಹಿಂದಿನ ಯಾರೋ ಕಿರಿಯರಸನ ಅಗತ್ಯಕ್ಕೆ ಬ್ರಿಟಿಷರು ರಚಿಸಿದ್ದಂತೆ. ದಾರಿಯುದ್ದಕ್ಕೂ ಬಲ ಬದಿಗೆ ಕುಮಾರಪರ್ವತದ ಶಿಖರಾಗ್ರಗಳು ಮೋಡದ ಮರೆಯಲ್ಲಿ ಅಗೋಚರ ಎತ್ತರಕ್ಕೇರಿದ ದೃಶ್ಯ. ಬೆಟ್ಟದ ಹಸುರುಗಪ್ಪು ಮೈಯಲ್ಲಿ ಬಿಳಿ ಚಿಮ್ಮುವ ಜಲಧಾರೆಗಳ ನೋಟ. ತಪ್ಪಲಿನ ಪ್ರತಿ ಕಣಿವೆಯಲ್ಲೂ ಕುಮಾರಧಾರಾ ನದಿಯ ನೂರೆಂಟು ಉಗಮ, ಹತ್ತೆಂಟು ಸಂಗಮ. ದಾರಿಯ ಎರಡು ಬದಿಯಲ್ಲೂ ಅಖಂಡ ವನಸ್ಪತಿಯ ದಿವ್ಯತೀರ್ಥಗಳಂತೆ ಅಸಂಖ್ಯ ಜಲಧಾರೆಗಳು. ದಾರಿಯಂಚಿಗೆ ಇಳಿಬಿಟ್ಟ ಜಗಮಗಿಸುವ ಪರದೆಯಂತೆ, ಒರಟು ಬಂಡೆಗೆ ಹತ್ತಿ ಹಾಸು ಹೊದೆಸಿದಂತೆ, ವನವೇ ಕುಲುಕುಲಿಸಿ ಸಂಭ್ರಮಿಸಿದಂತೆ ಝರಿ ಜಲಪಾತಗಳು ರಮ್ಯಾತಿರಮ್ಯ. ಇವುಗಳ ಮೊತ್ತವೇ ಭುಸುಗುಡುವಂತೆ ಶುದ್ಧ ಕಾಡುಹೊಳೆ - ಅಡ್ಡಹೊಳೆ, ಈ ಮಾರ್ಗದ ಏಕೈಕ ಪ್ರಧಾನ ಸೇತುವೆಯಡಿಯಲ್ಲಿ ಹಾಯುವುದನ್ನು ನೋಡಲು ಎಂಟೆದೆ ಬೇಕು. ತಿರುಪೇರಿನ ದಾರಿ ಬದಿಯಲ್ಲೇ ನೂರಾರಡಿ ಎತ್ತರದ ಅಖಂಡ ಶಿಲಾಫಲಕ ನಿಲ್ಲಿಸಿರುದಂಥ ಒಂದು ಶಿಖರ ಮತ್ತೆ ಮತ್ತೆ ಪಥಿಕರನ್ನು ಆಕರ್ಷಿಸುತ್ತದೆ. ಕಲ್ಲಿನ ಮೇಲೆ ಜಿನುಗಿ ಇಳಿಯುವ ನೀರು ಅದಕ್ಕೆ ಹೊಳಪು ಮೂಡಿಸುತ್ತದೆ. ಭೂಪಟ ಅದನ್ನು ಕರ್ಣಕಲ್ಲೆಂದು ಯಾವ ಕಾರಣಕ್ಕೇ ದಾಖಲಿಸಿರಲಿ, ವಾಸ್ತವ ಕರ್ಣಾಕರ್ಣಿಕೆಯಾಗಿ ಅದನ್ನಿಂದು ಕನ್ನಡಿಕಲ್ಲೆಂದೇ ಖ್ಯಾತವಾಗಿಸಿದೆ.

ಇಂಥ ಸುಂದರ ದಾರಿಯ ಚರಂಡಿಯ ಹೂಳು ತೆಗೆದು ದಾರಿ ಕೊರೆತ ತಪ್ಪಿಸಿದವರಿಲ್ಲ. ಝರಿಯಬ್ಬರಕ್ಕೆ ಕುಂದ ನಲುಗಿ, ತೊಲೆ ಕುಸಿದು, ಸೇತು ಭಂಗವಾಗುವುದನ್ನು ತಡೆಯಬಂದವರಿಲ್ಲಮರ ಬಿದ್ದು ಬಸ್ಸಿನೋಡಾಟ ರದ್ದಾದರೆ ದದ್ದು ಹಿಡಿದವರಿಲ್ಲ. ಕಳ್ಳ ಬೆತ್ತದ ತಲೆಹೊರೆ ಹಾಡೇ ಹಗಲು ನಡೆದು ಹೋಗುವುದನ್ನು ನೋಡುವವರಿಲ್ಲ. ಮರಗಳ್ಳರು ಎಬ್ಬಿಸಿದ ಕಾಳ್ಗಿಚ್ಚಿನಲ್ಲಿ ಹಸುರಳಿಯುವುದನ್ನು ಉಳಿಸುವವರಿಲ್ಲ.

ಸಂದ ತಪ್ಪುಗಳ ಇಂದಿನ ಕೂಸು ನಾವು. ಗತಮೌಲ್ಯಗಳನ್ನು ಉಪೇಕ್ಷಿಸುವ, ತೀರ್ಮಾನಕ್ಕೊಳಪಡಿಸುವ ಅತಿರೇಕಕ್ಕಿಂಥ ವರ್ತಮಾನದ ವಿವೇಚನೆಗೊಳಪಡಿಸಿ, ಉಳಿಸಿಕೊಳ್ಳುವುದು ಚಂದ. ಬಿಸಿಲೆ ಘಾಟಿ ಉಳಿಯುವುದೇ ಚಂದ!

[ಒಂದು ಸುಂದರ ದಾರಿಯ ಕಥೆ, ವ್ಯಥೆ! ಎಂದೇ ಇದು ಪ್ರಜಾವಾಣಿ ೨೪-೧೧-೧೯೮೫ರಂದು ಪ್ರಕಟವಾಗಿದೆ. ಇದು ಒಂದು ಕಾಲಘಟ್ಟದ ಭೂ ಮತ್ತು ನನ್ನ ವೈಯಕ್ತಿಕ ಧೋರಣೆಯ ದಾಖಲೆಯಾಗಿ ಮಾತ್ರ ಇಲ್ಲಿ ಯಥಾಪ್ರತಿಯನ್ನು ಪ್ರಸ್ತುತಪಡಿಸಿದ್ದೇನೆ. ವರ್ತಮಾನದ ವಸ್ತುಸ್ಥಿತಿ ಮತ್ತು ನನ್ನಲ್ಲಿ ವಿಕಾಸಗೊಂಡ ವನ್ಯಸಂರಕ್ಷಣೆಯ ಹೊಣೆಗಾರಿಕೆ ರೂಪಿಸಿದ ವರ್ತಮಾನದ ಚಿತ್ರಣಕ್ಕೆ ಅವಶ್ಯ ನನ್ನ ಜಾಲತಾಣದಲ್ಲಿ  ಈ ಹಿಂದೆಯೇ ಪ್ರಕಟವಾದ ಮತ್ತು ಪುಸ್ತಕರೂಪದಲ್ಲೂ ಸದ್ಯದಲ್ಲೆ ಬರಲಿರುವಕುಮಾರಪರ್ವತದ ಆಸುಪಾಸು ಓದಿ.]

ಹನುಮನ ಗುಂಡಿ

ಒಂದು ಪುಟ್ಟ ಜಲಪಾತದ ಬಗ್ಗೆ ಅತಿರಂಜಿತ ಲೇಖನವೊಂದು ಸ್ಥಳೀಯ ಪತ್ರಿಕೆಯಲ್ಲಿ ಬಂತು. ಕುತೂಹಲದಲ್ಲಿ ಎರಡು ವಾರ ಕಳೆದು ನಾವೂ ಅಲ್ಲಿಗೆ ಹೋದೆವು. ಕಾರ್ಕಳ-ಮಲ್ಲೇಶ್ವರ (ಕುದುರೆಮುಖ ಅದುರು ಯೋಜನಾಕೇಂದ್ರ) ದಾರಿಯಲ್ಲಿ ೧೯ನೇ ಕಿಮೀ ಕಲ್ಲಿನಿಂದ ಸುಮಾರು ತುಸು ಮುಂದೆ ಒಂದು ವೀಕ್ಷಣಾ ಕಟ್ಟೆಯಿದೆ. ಅದರ ನೇರ ಕೆಳಗೆ ದಟ್ಟ ಹಸುರಿನ ಮುಚ್ಚಿಗೆಯಲ್ಲಿ ಕಂಡೂ ಕಾಣದಂತಿರುವ, ಶಬ್ದ ಮಾತ್ರದಲ್ಲಿ ಸ್ಪಷ್ಟವಾಗುವ ಅಬ್ಬರದ ಝರಿ ಹನುಮನ ಗುಂಡಿ. ಕಟ್ಟೆಯ ಒತ್ತಿನಲ್ಲಿರುವ ಕೊಳ್ಳದತ್ತಣ ಮೆಟ್ಟಿಲಸಾಲು, ಮುಂದುವರಿದ ಅಂಕುಡೊಂಕಿನ ಸವಕಲು ಜಾಡು ಐದು ಮಿನಿಟಿನ ಸಾಹಸಿ ಇಳಿನಡಿಗೆಯಲ್ಲಿ ಅಬ್ಬಿಯ ಮಡಿಲನ್ನು ತೋರುತ್ತವೆ. ಅಲ್ಲಿ ಗಿರಿಝರಿಯ ಅಚ್ಛೋದದಲ್ಲಿ ಮುಳುಗೇಳುವ, ಶುಭ್ರವಾಹಿನಿಯಲ್ಲಿ ಹೊರಳಾಡುವ, ಪುಟ್ಟಬ್ಬಿಗೆ ಮೈಯೊಡ್ಡಿ ನೀವಿಸಿಕೊಳ್ಳುವ ಕಲ್ಪನೆಗಳನ್ನು ಹತ್ತಿಕ್ಕಿ ಇನ್ನಷ್ಟು ಕಣ್ಣರಳಿಸಿದೆವು. ಸಹಜವಾಗಿ ಬೇಡ, ಇನ್ನು ಪ್ರಚಾರ ಬೇಡಎಂಬ ಉದ್ಗಾರ ಬಂತು. ಬಳಸಿ ಎಸೆದ ಹರಕು ಬಟ್ಟೆಗಳು, ಸ್ಯಾನ್ ಪೀಟರ್ ರಟ್ಟಿನ ಪೆಟ್ಟಿಗೆಗಳು, ಸಿಗರೇಟು ಮೋಟು, ಖಾಲಿ ಪ್ಯಾಕುಗಳು, ಪಾಲಿಥೀನ್ ತೊಟ್ಟೆ ಒಡಕು ಬಾಟಲಿಗಳು ಎಲ್ಲೆಲ್ಲೂ ಹರಡಿದ್ದುವು. ಕೈಗೆಟಕುವ ಒಣ ಬಂಡೆ, ಮರದ ಬೊಡ್ಡೆಯ ಮೇಲೆಲ್ಲ ಹುಸಿಗವನಗಳು, ಕಪಿಕುಲತಿಕಲರ ನಾಮಧೇಯಗಳು ರಾರಾಜಿಸುವುದು ಕಂಡಾಗ ನಾಗರಿಕತೆ, ಸಾಕ್ಷರತೆಗಳ ಬಗ್ಗೇ ನಾಚಿಕೆಯಾಗುತ್ತದೆ.
ಮೇಲ್ಕಾಣಿಸಿದ ಟಿಪ್ಪಣಿಯನ್ನು ೧೯--೧೯೮೯ರ ಉದಯವಾಣಿಯಲ್ಲಿ ಪ್ರಕಟಿಸಿದ್ದೆ. ಅನಂತರದ ದಿನಗಳಲ್ಲಿ ಈ ವಲಯವೆಲ್ಲ ನ್ಯಾಯಯುತವಾಗಿಯೇ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಭಾಗವಾದಮೇಲೆ ಇಲಾಖೆ ಇದನ್ನು ರಕ್ಷಿಸುವ  ನೆಪದಲ್ಲಿ ಹೇರಿದ ರಚನೆಗಳ ಭಾರವನ್ನು ಜೀರ್ಣಿಸುವಲ್ಲಿ ಪ್ರಕೃತಿ ಬಳಲಿದೆ. ಹನುಮನಗುಂಡಿ ನೋಡಬರುವ ಪ್ರಾಮಾಣಿಕ ವನ್ಯಾಸಕ್ತರಿಗಿಂದು ವನ್ಯ ಇಲಾಖೆ ಇಂಗ್ಲಿಶ್ ಗಾದೆ ಮಾತಿನಂತೆ, ಮೆದೆಯ ಮೇಲಿನ ನಾಯಿಯಾಗಿದೆ!
ಪ್ರಕೃತಿಯೊಡನೆ ಮನುಷ್ಯವಿವೇಕ ಬೆರೆತರೆ, ಪ್ರಕೃತಿ ಮನುಷ್ಯ ಬುದ್ಧಿಯಿಂದ ಸೊಗಯಿಸಿದರೆ ಅದೇ ಸಂಸ್ಕೃತಿ ಎನ್ನುತ್ತದೆ ಡಿವಿಜಿವಾಣಿ. ಮೇಲಿನುದಾಹರಣೆಗಳೆಲ್ಲ ಇದಕ್ಕೆ ಅಪವಾದ ಎಂದು ಅನ್ನಿಸುವುದಿಲ್ಲವೇ?


(ಮುಂದುವರಿಯಲಿದೆ)

6 comments:

 1. ಯಾವ ಪ್ರೇಕ್ಷಣೀಯ ಸ್ಥಳದಲ್ಲೂ ನಾಮಾಂಕಿತ ಬರೆಯುವ ಮತ್ತು ಹೊಲಸು ಮಾಡುವ ಮನು ಕುಲ ಬಾಂಧವರ ಮೇಲೆ ಸಿಟ್ಟು ಉಕ್ಕಿ ಬರುತ್ತೆ. ನಾವು ಈ ಬಗ್ಗೆ ಮೈ ಪರಚಿಕೊಳ್ಳ ಬೇಕಷ್ಟೇ! ಇನ್ನೇನು ಮಾಡಬಲ್ಲೆವು? - ಪೆಜತ್ತಾಯ ಎಸ್. ಎಮ್.

  ReplyDelete
 2. ಈ ಹನುಮನ ಗುಂಡಿಯನ್ನು ೧೫ ವರ್ಷಗಳ ಹಿಂದೆ ನಾನೂ ನೋಡಿದ್ದೇ.ಈಗ ಅಲ್ಲಿ ಕೆಳಗೆ ಹೋಗಲು ಮೆಟ್ಟಿಲು ಮಾಡಿದ್ದಾರಂತೆ.ನೀವು ಆಗ ನೋಡಿದ ಕಸ,ಕೊಳಕು ಇನ್ನೂ ಜಾಸ್ತಿಯಾಗಿದೆ. ಅಲ್ಲಿ ಹರಿಯುವ ನೀರನ್ನೇ ನಾವು ೬೫ ಕಿ ಮೀ ದೂರದ ತೀರ್ಥಹಳ್ಳಿಯಲ್ಲಿ ಕುಡಿಯುವುದು. ನದಿಗೆ ಏನೆಲ್ಲಾ ಗಲೀಜು ಸೇರಿರಬಹುದು ಎಂದು ಊಹಿಸಿದರೆ ಅಸಹ್ಯವಾಗುತ್ತದೆ. ಪತ್ರಿಕೆಗಳ ಭಾನುವಾರದ ಪುರವಣಿಗಳಲ್ಲಿ ಕಡ್ಡಾಯ ಎನ್ನುವಂತೆ ಯಾವುದೋ ಜಲಪಾತದ ಕುರಿತು ಅತಿಶಯೋಕ್ತಿಯ ಲೇಖನ ಪ್ರಕಟಿಸುವುದನ್ನು ನೋಡಿದರೆ ಸಿಟ್ಟು ಬರುತ್ತದೆ. ಸಾಲದುದಕ್ಕೆ ಸರಕಾರ ಇಲ್ಲಿಗೆ ರಸ್ತೆ, ಹೋಟೆಲ್ ನಿರ್ಮಿಸಬೇಕೆಂಬ ಒತ್ತಾಯ ಬೇರೆ .ನೀವು ಬರೆದಿರುವುದಕ್ಕೆ ನನ್ನ ಸಹಮತವಿದೆ. ಸುಮಿತ್ರಾ

  ReplyDelete
 3. ಸತ್ಯಜಿತ್11 February, 2013 16:07

  ಈಗ ಪರಿಸರ ಎನ್ನುಧು ಕೇವಲ ವಾದ ಮಾಡಲಿಕ್ಕೆ ಹಾಗೂ ಪ್ರಚಾರ ಮಾಡಲಿಕ್ಕೆ ಸೀಮಿತವಾಗಿದೆ.ಉಧಾರಣೆಗೆ ಉದುಪಿಯಿಂದ ಮಣಿಪಾಲಕ್ಕೆ ಹೋಗುವ ದಾರಿ ಕುಂಡಲ ಕಾಡ್ಉ ಅಂತ ಇತ್ತು. ಮೊದಲು ಅಲ್ಲಿ ಹುಲಿಗಳು ಇತ್ತು ಅಂಥ ಸುದ್ದಿ. ಕಾಡು ಪ್ರಾಣಿ, ಪಕ್ಷಿಗಳಿಗೆ ಅದು ವಾಸಸ್ಥಾನವಾಗಿತ್ತು. ಆದರೆ ಈಗ ನಗರೀಕರಣ ಜಾಸ್ತಿ ಆಗಿ ಈಗ ಬಹುಮಹಡಿ ಕಟ್ಟಡ ಕಟ್ಟುತ್ತಾ ಇದ್ದಾರೆ. ಆ ಜಾಗ ಶಿರೂರು ಮಠಕ್ಕೆ ಸೇರಿದ್ದು. ಈಗ ಶಿರೂರು ಮಠದವರ ವಾಣಿಜ್ಯ ಕಟ್ಟಡದಲ್ಲಿ ಹೊಟೆಲ್ ಸುರು ಅಗಿಧೆ. ಹಾಗಾಗಿ ಈಫ಼ ಪರಿಸರ ಎಂಬುದು ಸೆಮಿನಾರ್ ಹಾಗು ವಾದದಲ್ಲಿ ಸೀಮಿತವಾಗಿದೆ ಎಂದು ನನ ಅನಿಸಿಕೆ.

  ಸತ್ಯಜಿತ್

  ReplyDelete
 4. Very tragic! Inthaa vishayagalannu Neevu ellara gamanakke taruttiruvudu tumba olleya kelasa.
  Eega abhivruddhiyendare Sahaja parisara naashave aagi hogide. Thanks for the article.

  ReplyDelete
 5. ಮಂಜರಾಬಾದ್ ಕೋಟೆಯ ವಿವರಗಳನ್ನು ಸುಂದರವಾಗಿ ನೀಡಿರುವಿರಿ. ಧನ್ಯವಾದಗಳು.

  ReplyDelete
 6. ಹಲವಾರು ಬಾರಿ ಆ ರಸ್ತೆಯಲ್ಲಿ ಅಡ್ಡಾಡಿದರೂ ಮಂಜರಾಬಾದ್ ಕೋಟೆ ನೋಡಲಾಗಿಲ್ಲ. ಶಿಲಾಫಲಕ ಕೆತ್ತುವ ಅಭಿನವ ಶಿಲ್ಪಿಗಳು ಪ್ರಪಂಚದಾದ್ಯಂತ ತುಂಬಿಕೊಂಡಿದ್ದಾರೆ ಎನ್ನಿಸಿತ್ತು,ಅಮೆರಿಕದ ನ್ಯಾಷನಲ್ ಪಾರ್ಕ್ ನಲ್ಲೂ ಕಂಡಿದ್ದೇನೆ!!

  ReplyDelete