01 January 2013

ನೈಸರ್ಗಿಕ ಸಂಪನ್ಮೂಲಗಳು - ಹದಿಮೂರು


[ಭವಿಷ್ಯ ವಿಜ್ಞಾನ - ಲೇಖಕ ಜಿ.ಟಿ. ನಾರಾಯಣ ರಾವ್
೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ ಮುದ್ರಣ ೧೯೮೧. ಪುಟ ಸುಮಾರು ೯೦ ಬೆಲೆ ರೂ ೧೨]
[ನಾಲ್ಕನೇ ಕಂತು]

ನಿಸರ್ಗದ ಸಂಪನ್ಮೂಲಗಳಲ್ಲಿ ವ್ಯಾಪಕವಾಗಿ ಎರಡು ವರ್ಗಗಳನ್ನು ಗುರುತಿಸಬಹುದು. ಪುನರಾವರ್ತನಶೀಲ ಸಂಪನ್ಮೂಲಗಳು, ಅಪುನರಾವರ್ತನಶೀಲ ಸಂಪನ್ಮೂಲಗಳು. ಪ್ರಾಣಿ, ಗಿಡ, ಮರ, ನೀರು, ವಾಯು ಮುಂತಾದವು ಮೊದಲನೆಯ ವರ್ಗಕ್ಕೆ ಸೇರುತ್ತವೆ. ಏಕೆಂದರೆ ಇವನ್ನು ರೂಪಿಸಲು ವಿನಿಯೋಗವಾಗುವ ವಿವಿಧ ಧಾತುಗಳು, ವಸ್ತುಗಳು ಉಪಯೋಗದಿಂದ ಇಲ್ಲವೇ ಸಾವಿನಿಂದ ಕೊನೆಗೊಂಡ ಬಳಿಕ, ಮತ್ತೆ ನಿಸರ್ಗಕ್ಕೆ ಅವೇ ಧಾತುಗಳಾಗಿ ಸೇರಿಹೋಗುತ್ತವೆ. ಉದಾಹರಣೆಗೆ ಯಾವುದೇ ಪ್ರಾಣಿಯನ್ನು ಪರಿಶೀಲಿಸಬಹುದು. ನೀರು, ಸಾರಜನಕ, ಮೇದಸ್ಸು, ಶರ್ಕರ ಮತ್ತು ಹಲವಾರು ಖನಿಜಲವಣಗಳ ಸಂಕೀರ್ಣ ಮೇಳನವದು - ಅರ್ಥಾತ್ ಹೈಡ್ರೋಜನ್, ಆಕ್ಸಿಜನ್, ನೈಟ್ರೋಜನ್ ಮತ್ತು ವಿವಿಧ ಖನಿಜಲವಣಗಳು ನಿರ್ದಿಷ್ಟ ಅಲೇಖ್ಯಾನುಸಾರ ಸಂಯೋಗಗೊಂಡು ಪ್ರಾಣಿ ಮೈದಳೆದಿರುತ್ತದೆ. ಅದರ ಮರಣಾನಂತರ ನೈಸರ್ಗಿಕ ಕಾರಕಗಳ ಸತತ ಕ್ರಿಯೆಯ ಪರಿಣಾಮವಾಗಿ ದೇಹ ವಿಘಟಿಸಲ್ಪಟ್ಟು ವಿವಿಧ ಧಾತುಗಳು ಬೇರ್ಪಟ್ಟು ನಿಸರ್ಗದಲ್ಲಿ ಲೀನವಾಗುತ್ತವೆ; ಹಾಗೂ ನಿಸರ್ಗದ ಮಹಾಪ್ರಯೋಗಮಂದಿರದಲ್ಲಿ ಉಪಯೋಗಕ್ಕೆ ಪುನಃ ಲಭಿಸುತ್ತವೆ. ಫಾಸಿಲ್ ಇಂಧನ (ಕಲ್ಲಿದ್ದಲು, ಪೆಟ್ರೋಲ್ ಇತ್ಯಾದಿ) ಹೀಗಲ್ಲ. ಅಂತೆಯೇ ಲೋಹ ಹಲವಾರು ಖನಿಜಗಳು, ಪ್ಲ್ಯಾಸ್ಟಿಕ್, ಕೃತಕನಾರು, ಸಂಶ್ಲೇಷಿತ ರಾಸಾಯನಿಕಗಳು ಮುಂತಾದವು ಕೂಡ. ಉಪಯೋಗಾನಂತರ ನಿಸರ್ಗಕ್ಕೆ ಜಮಾವಣೆ ಆಗುವ ಇವುಗಳ ಶೇಷ ಪದಾರ್ಥಗಳು ನಿಸರ್ಗದಲ್ಲಿ ಸುಲಭವಾಗಿ ಆಗಲಿ ಕ್ಷಿಪ್ರವಾಗಿ ಆಗಲಿ ಲೀನವಾಗುವುದಿಲ್ಲ. ಸಾವಿರಾರು ವರ್ಷಗಳ ಕಾಲ ಇವು ಪ್ರತ್ಯೇಕವಾಗಿಯೇ ಉಳಿದಿರುತ್ತವೆ. ಏಕೆಂದರೆ ಇವನ್ನು ಶೀಘ್ರವಾಗಿ ವಿಘಟಿಸಬಲ್ಲ ಸಾಮರ್ಥ್ಯಯುತ ನೈಸರ್ಗಿಕ ಕಾರಕಗಳಿಲ್ಲ. ಇತ್ತ ವಿಕಿರಣಪಟು ಧಾತುಗಳ ಬಳಕೆಯಿಂದ ಪರಮಾಣು ಶಕ್ತಿಯನ್ನು ಹಿಂಡುವ ತಂತ್ರವಿದ್ಯೆಯ ಉಪೋತ್ಪನ್ನ ಪದಾರ್ಥಗಳು ಶತಮಾನಪರ್ಯಂತ ವಿಕಿರಣಪಟುಗಳಾಗಿಯೇ ಉಳಿದಿದ್ದು ಜೀವಿಗಳಿಗೆ ಮಾರಕವಾಗುತ್ತವೆ. ಒಟ್ಟಾರೆ, ನಿಸರ್ಗದಿಂದ ಒಮ್ಮೆ ಬಸಿಯಲಾದ ಫಾಸಿಲ್ ಇಂಧನ ಮೊದಲಾದ ಸಂಪನ್ಮೂಲಗಳು ಸನಿಹದ ಭವಿಷ್ಯದಲ್ಲೇನೂ ಅದರ ಮಹಾ ಪ್ರಯೋಗಮಂದಿರಕ್ಕೆ ಮರುಬಳಕೆಗೆ ಲಭಿಸುವುದಿಲ್ಲ ಎಂಬುದಂತೂ ಖರೆ. ಹೀಗಾಗಿ ಅಷ್ಟರಮಟ್ಟಿಗೆ ಪ್ರಪಂಚ ಕಚ್ಚಾ ಸಾಮಗ್ರಿಗಳ ಕೊರತೆಯಿಂದ ನರಳಬೇಕಾಗುತ್ತದೆ.

ಜನಸಂಖ್ಯೆ - ತಂತ್ರವಿದ್ಯೆ - ಶಕ್ತಿ ತ್ರಿಭುಜದ ಸಲೆ ನಿಸರ್ಗ ಭರಿಸಬಹುದಾದ ಸಂಪನ್ಮೂಲಗಳ ಪರಿಮಿತಿಯೊಳಗೆ ಇರುವಾಗ ತ್ರಿಭುಜದ ಇರವಿನ ಅರಿವು ಮಾನವನಿಗೆ ಆಗುವುದಿಲ್ಲ. ಇಂಥ ನಿರ್ಣಾಯಕ ಪರಿಮಿತಿಯನ್ನು - ದೇಹಲಿ (= ಹೊಸ್ತಿಲು) ಪರಿಮಿತಿಯನ್ನು - ಪ್ರಪಂಚ ೧೯೫೦ರ ಅಂದಾಜಿಗೆ ಅಡ್ಡ ಹಾಯ್ದದಂತೆ ತೋರುತ್ತದೆ. ಆಗ ಪರಿಸರಮಾಲಿನ್ಯ ಪಿಡುಗಾಗಿ ತನ್ನ ಅಸ್ತಿತ್ವವನ್ನು ಪ್ರದರ್ಶಿಸತೊಡಗಿತು. ಜೀವನ ಗುಣಮಟ್ಟದ ಮೇಲೆ, ಉಳ್ಳವರನ್ನೂ ಉಳ್ಳದವರನ್ನೂ ಸಮಾನವಾಗಿಯೇ ಒಳಗೊಂಡಂತೆ, ದುಷ್ಪರಿಣಾಮ ಬೀರತೊಡಗಿತು.

ಜನಸಂಖ್ಯೆಯ ಬೆಳೆವಣಿಗೆ - ಹದಿನಾಲ್ಕು

ಕ್ರಿಸ್ತಪೂರ್ವ ೮೦೦೦ದ ಅಂದಾಜಿಗೆ ನವಶಿಲಾಯುಗ ಪ್ರಾರಂಭವಾಯಿತು. ಮೊದಲು ಕಾಡು ಪ್ರಾಣಿಗಳಿಗಿಂತ ತೀರ ಬೇರೆಯವನೇನೂ ಆಗಿರದಿದ್ದ ಆದಿಮಾನವ (ನೈಸರ್ಗಿಕವಾಗಿ ದೊರೆತ ಪ್ರಾಣಿ ಹಾಗೂ ಸಸ್ಯಗಳಿಂದ ಹೊಟ್ಟೆ ಹೊರೆಯುವುದು ಮತ್ತು ನಿಸರ್ಗದ ಪ್ರತಿಕೂಲ ಬಲಗಳ ಎದುರು ಬದುಕಿ ಉಳಿಯುವುದು ಇವೆರಡೇ ಆದಿಮಾನವನ ಬದುಕಿನ ಘನೋದ್ದೇಶಗಳಾಗಿದ್ದುವು) ವೇಳೆಗೆ ಬೇಸಾಯಕ್ಕೆ ಕಾಲಿರಿಸಿದ್ದ, ಸಾಕುಪ್ರಾಣಿಗಳ ಸೇವೆ ಪಡೆಯತೊಡಗಿದ್ದ. ತತ್ಪರಿಣಾಮವಾಗಿ ಅಲೆಮಾರಿ ಮಾನವ ಒಂದೆಡೆ ನೆಲೆಯೂರಿದವನಾದ. ಇದು ಆತನಿಗೆ ಒಂದು ತೆರನಾದ ನೆಮ್ಮದಿಯ ಬಾಳನ್ನು ಒದಗಿಸಿತು. ಕಾರಣದಿಂದಾಗಿ ಜನಸಂಖ್ಯೆಯ ಬೆಳವಣಿಗೆಗೆ ಕೊಂಚ ಕುಮ್ಮಕ್ಕು ದೊರೆಯಿತು. ಆಗಿನ ಪ್ರಪಂಚದ ಜನಸಂಖ್ಯೆ ಸುಮಾರು ಎಂಬತ್ತು ಲಕ್ಷ.

ಆದಿಮಂತ್ರವಿದ್ಯೆಯ ಪ್ರವೇಶ - ಹದಿನೈದು

ಕ್ರಿಸ್ತಪೂರ್ವ ೩೦೦೦ದ ಅಂದಾಜಿಗೆ ಮಾನವ ಕಂಚುಯುಗಕ್ಕೆ ಕಾಲಿರಿಸಿದ. ಅಂದು ತಿಳಿದಿದ್ದ ಆದಿಮಂತ್ರ ವಿದ್ಯೆಯನ್ನು ನಿಸರ್ಗಕ್ಕೆ ಅನ್ವಯಿಸಿ ಚಿನ್ನ, ಬೆಳ್ಳಿ, ತಾಮ್ರ, ತವರ, ಸೀಸ ಎಂಬ ಐದು ಬೇರೆ ಬೇರೆ ಲೋಹಗಳನ್ನು ಸಂಸ್ಕರಿಸಬಲ್ಲವನಾಗಿದ್ದ. ಆತನ ಆದಿಮ ಕುಲುಮೆಗೆ ಯಥೇಚ್ಛವೆನಿಸುವಷ್ಟು ಕಟ್ಟಿಗೆ ಸ್ಥಳೀಯವಾಗಿಯೇ ದೊರೆಯುತ್ತಿತ್ತು. ತಾತ್ತ್ವಿಕವಾಗಿ ಸಿದ್ಧಿಯ ಅರ್ಥವಿಷ್ಟು: ಶಕ್ತಿಯ ಒಂದು ರೂಪವಾದ ಉಷ್ಣವನ್ನು ಅದುರಿನ ಮೇಲೆ ಹೇರಿ ಲೋಹ ಸಂಸ್ಕರಣೆ ಮಾಡಬಹುದಾಗಿತ್ತು. ಹೀಗೆ ಪಡೆದ ಲೋಹ ಮಾನವನಿಗೆ ಅಧಿಕ ತ್ರಾಣ ಕೊಡಬಲ್ಲದಾಗಿತ್ತು. ಇದರ ಪರಿಣಾಮವಾಗಿ ಆತನ ಬದುಕು ಅಷ್ಟರಮಟ್ಟಿಗೆ ಸುಗಮವಾಗುತ್ತಿತ್ತು. ಲೋಹದಿಂದ ಆಯುಧಗಳನ್ನೂ ಹತ್ಯಾರುಗಳನ್ನೂ ಮಾನವ ತಯಾರಿಸಬಲ್ಲವನಾಗಿದ್ದ.

ಕ್ರಿಸ್ತಪೂರ್ವ ೮೦೦೦ದಲ್ಲಿದ್ದ ಎಂಬತ್ತು ಲಕ್ಷ ಜನಸಂಖ್ಯೆ ಕ್ರಿಸ್ತಶಕಾರಂಭವಾಗುವಾಗ ಸುಮಾರು ಮೂವತ್ತು ಕೋಟಿಗೆ ಏರಿತ್ತು. ಆಧಾರವರ್ಷದ ಜನಸಂಖ್ಯೆ x ಇದ್ದು ಸರಾಸರಿ ವಾರ್ಷಿಕ ಜನಸಂಖ್ಯಾವೃದ್ಧಿದರ ಶೇಕಡ r ಇದ್ದರೆ n ವರ್ಷಾನಂತರ ಜನಸಂಖ್ಯೆ yಯನ್ನು ಮುಂದಿನ ಸಮೀಕರಣ ಕೊಡುತ್ತದೆy = x[1+ r/100]n ಇದರಲ್ಲಿ x = ೮೦ ಲಕ್ಷy = ೩೦ ಕೋಟಿ, n = ೮೦೦೦ ಆದೇಶಿಸಿ r ಬೆಲೆಯನ್ನು ಗಣಿಸಬಹುದು. r = .೦೩೬ ದೊರೆಯುತ್ತದೆ.

ಹೀಗೆ ಇತಿಹಾಸಪೂರ್ವ ವರ್ಷಗಳಲ್ಲಿ ಸರಾಸರಿ ವಾರ್ಷಿಕ ಜನಸಂಖ್ಯಾ ವೃದ್ಧಿದರ (r) ಶೇಕಡ .೦೩೬ರಷ್ಟು ಕಡಿಮೆ ಇತ್ತು. ಅಂದರೆ ಯಾವುದೇ ವರ್ಷ ಲಕ್ಷವಿದ್ದ ಜನಸಂಖ್ಯೆಗೆ ಮರುವರ್ಷದ ವೇಳೆಗಾಗುವಾಗ ೩೬ ಜನರು ಸೇರ್ಪಡೆ ಆಗಿರುತ್ತಿದ್ದರು. ಇಲ್ಲಿ ಒಂದು ಅಂಶವನ್ನು ನೆನಪಿನಲ್ಲಿಡಬೇಕು. ದಿನಗಳಂದು ಜನನದರ  ಸಾಕಷ್ಟು ಉನ್ನತವಾಗಿಯೇ ಇತ್ತು. ಆದರೆ ಹೀಗೆ ಹುಟ್ಟಿದ ಮಕ್ಕಳೆಲ್ಲರೂ ಬಹುಕಾಲ ಬದುಕಿ ಉಳಿಯುತ್ತಿರಲಿಲ್ಲ. ಅಲ್ಲದೇ ದೊಡ್ಡವರಾದರೂ ನೈಸರ್ಗಿಕ ಅಪಘಾತ, ವ್ಯಾಧಿ, ಕಾಳಗ ಮೊದಲಾದವುಗಳಿಗೆ ತುತ್ತಾಗಿ ಪೂರ್ಣಾಯುಷ್ಯ ತುಂಬುವ ಮೊದಲೇ ಮಡಿಯುತ್ತಿದ್ದರು. ಹೀಗೆ ಉನ್ನತ ಜನನದರವನ್ನು ಉನ್ನತ ಮರಣದರ ಹೆಚ್ಚುಕಡಿಮೆ ಸಮತೋಲಿಸಿ ಒಟ್ಟಾರೆ ಜನಸಂಖ್ಯಾವೃದ್ಧಿದರ ತೀರ ಅಲ್ಪ ಪ್ರಮಾಣದಲ್ಲಿರುತ್ತಿತ್ತು.

ಕ್ರಿಸ್ತಶಕಾರಂಭವಾಗುವ ವೇಳೆಗೆ ಮಾನವ ಕಬ್ಬಿಣಯುಗದ ಕೊಡಿ ತಲಪಿದ್ದ. ಬಂಗಾರವನ್ನು ಕೃತಕವಾಗಿ ನಿರ್ಮಿಸಲು ರಸವಾದಿಗಳು ಬಗೆಬಗೆಯ ಧಾತು ಕಷಾಯಗಳನ್ನೂ ಮಂತ್ರ ಮೋಡಿಗಳನ್ನೂ ಪ್ರಯೋಗಿಸುತ್ತಿದ್ದರು. ಅವರ ಉದ್ದೇಶವೇನೂ ಕೈಗೂಡಲಿಲ್ಲ. ಆದರೆ ಪ್ರಯೋಗಗಳ ಉಪೋತ್ಪನ್ನಗಳಾಗಿ ರಸಾಯನ ವಿಜ್ಞಾನವೂ ಲೋಹತಂತ್ರವಿದ್ಯೆಯೂ ಚೆನ್ನಾಗಿ ಬೆಳೆದು ಅಭಿವೃದ್ಧಿಸಿದವು. ಸರಿ, ಯಥಾಪ್ರಕಾರ ನಿಸರ್ಗದ ಮೇಲೆ ಶಕ್ತಿಯ ಅಧಿಕ ಪ್ರಯೋಗದಿಂದ ಅಧಿಕ ತ್ರಾಣ ಗಳಿಸುವ ಮತ್ತು ಹೆಚ್ಚಿನ ಹತೋಟಿ ಸಾಧಿಸುವ ಆಟ (ಅಥವಾ ಲೂಟಿ?) ಮುನ್ನಡೆಯಿತು. ಸಹಜವಾಗಿ ಜನಸಂಖ್ಯೆ ವೃದ್ಧಿ ಆಗುತ್ತ, ಹಿಂದೆ ಹೇಳಿದಂತೆ, ಕ್ರಿಸ್ತಶಕ ೧ರಲ್ಲಿ ಮೂವತ್ತು ಕೋಟಿ ತಲಪಿತು.

ಮುಂದಿನ ೧೭೫೦ ವರ್ಷಗಳಲ್ಲಿ ಜನಸಂಖ್ಯೆ ಅತಿ ಮಂದ ದರದಿಂದ ವಾರ್ಷಿಕವಾಗಿ ಶೇಕಡ .೦೫೬ ದರದಲ್ಲಿ ಬೆಳೆದು ಕ್ರಿಸ್ತಶಕ ೧೭೫೦ರ ವೇಳೆಗೆ ಎಂಬತ್ತು ಕೋಟಿ ಆಯಿತು. ಇಷ್ಟಾಗುವಾಗ ಮಾನವನಿಗೆ ಹೊಸದೊಂದು ಶಕ್ತಿಮೂಲ ಲಭಿಸಿತು. ಉನ್ನತ ಸಂಮರ್ದದಲ್ಲಿ ಸಂಗ್ರಹಿಸಿದ ಉಗಿಯನ್ನು ಬಗೆಬಗೆಯ ಕಾರ್ಯನಿರ್ವಹಿಸಲು ನಿಯೋಜಿಸಬಹುದು ಎಂಬ ಉಗಿ ಯಂತ್ರದ ತತ್ತ್ವ ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಕರಗತವಾಯಿತು. ಸಹಜವಾಗಿ ಇದರಿಂದ ವಿಜ್ಞಾನ ಮತ್ತು ತಂತ್ರವಿದ್ಯೆಗೆ ಹೆಚ್ಚಿನ ನೂಕುಬಲ ಒದಗಿತು. ಉತ್ಪಾದನೆ, ವ್ಯಾಪಾರ, ಸಂಚಾರ, ಜನಾರೋಗ್ಯ, ಸಾಮಾಜಿಕ ವ್ಯವಹಾರ, ಸರ್ಕಾರಗಳ ಕಾರ್ಯಕಲಾಪ, ಯುದ್ಧ ಮುಂತಾದ ವಿವಿಧ ರಂಗಗಳಲ್ಲಿ ತಂತ್ರವಿದ್ಯೆ ತನ್ನ ಖಚಿತ ಮುದ್ರೆ ಒತ್ತಿ ಮಾನವಜೀವನದ ಸಮಸ್ತಸ್ತರಗಳನ್ನೂ ವ್ಯಾಪಿಸಿತು. ಇಷ್ಟಾಗುವಾಗ ಇಸವಿಪಟ್ಟಿ ೧೮೦೦ನ್ನು ತೋರಿಸುತ್ತಿತ್ತು. ಜನಸಂಖ್ಯೆ ನೂರು ಕೋಟಿಯನ್ನು ದಾಟಿತ್ತು. ೧೭೫೦ರಿಂದ ೧೮೦೦ ತನಕದ ವಾರ್ಷಿಕ ಜನಸಂಖ್ಯಾವೃದ್ಧಿದರ ಶೇಕದ .೪೪.

ಪೆಟ್ರೋಲಿಯಮ್ ಚಿಲುಮೆ - ಹದಿನಾರು

ತಂತ್ರವಿದ್ಯೆಯ ಸರ್ವತೋಮುಖ ಅಭಿವರ್ಧನೆಗೆ ಹೊಸ ಆಯಾಮ ಲಭಿಸಿದ್ದು ಪೆಟ್ರೋಲಿಯಮ್ ಉತ್ಪನ್ನಗಳ ವಾಣಿಜ್ಯ ಗಾತ್ರದ ಶೋಧನೆ, ಸಂಸ್ಕರಣೆ, ಸಾಗಣೆ ಹಾಗೂ ಸಂಗ್ರಹಣೆ ವ್ಯಾಪಕವಾಗಿಯೂ ವ್ಯವಸ್ಥಿತವಾಗಿಯೂ ಆಗತೊಡಗಿದ ಮೇಲೆ. ಕ್ರಿ.ಪೂ ೩೦೦೦ದಷ್ಟು ಹಿಂದೆಯೇ ಮಾನವ ಉಪ್ಪುನೀರಿನ ಬಾವಿಗಳನ್ನು ಅಗೆದು ಇಲ್ಲವೆ ಜವುಗು ನೆಲಗಳಲ್ಲಿ ಮೇಲಕ್ಕೆ ಒಸರಿ ಬರುತ್ತಿದ್ದ ಪಸೆಯನ್ನು ಬಗೆದು ಪೆಟ್ರೋಲಿಯಮ್ ಎಣ್ಣೆ ಮತ್ತು ನೈಸರ್ಗಿಕಾನಿಲಗಳನ್ನು  ಸಂಗ್ರಹಿಸುತ್ತಿದ್ದನೆಂದು ತಿಳಿದಿದೆ. ಹೀಗಿದ್ದರೂ ೧೯ನೆಯ ಶತಮಾನಾರಂಭದ ತನಕವೂ ಅಮೆರಿಕದಂಥ ತಂತ್ರವಿದ್ಯಾತ್ಮಕವಾಗಿ ಪ್ರಗತಿ ಕಂಡಿದ್ದ ದೇಶದಲ್ಲಿ ಕೂಡ, ಮನೆ ಬೆಳಗಲು ಹಣತೆಯುಗದ ವಿಧಾನಗಳೇ ಬಳಕೆಯಲ್ಲಿದ್ದುವು. ವೇಳೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನೂ ಜೀವನ ಸೌಕರ್ಯಗಳನ್ನೂ ಅರಸುತ್ತ ಜನರು ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರಗಳಿಗೂ ಕೈಗಾರಿವಲಯಗಳಿಗೂ ವಲಸೆ ಹೋದರು. ಹೀಗೆ ನಗರಗಳು ಮೈದಳೆದು ಬೆಳೆಯಲಾರಂಭಿಸಿದುವು. ಸಹಜವಾಗಿ ಮನೆ, ಕಾರ್ಖಾನೆ, ಅಂಗಡಿ, ಬೀದಿ ಮುಂತಾದವನ್ನು ಬೆಳಗಲು, ಯಂತ್ರ ಸಂಕುಲಗಳಿಗೆ ಊಡಲು ಮತ್ತು ಸಂಚಾರಸಾಧನಗಳನ್ನು ಸುಲಭವಾಗಿ ಚಾಲೂಗೊಳಿಸಲು ಹೊಸ ಇಂಧನಗಳೂ ಸ್ನೇಹನಗಳೂ (ಲ್ಯೂಬ್ರಿಕೆಂಟ್ಸ್) ಆವಶ್ಯವಾದುವು. ೧೯ನೆಯ ಶತಮಾನದ ಮಧ್ಯಭಾಗದಲ್ಲಿ ಕೆರೊಸೀನಿನ (ಕಲ್ಲೆಣ್ಣೆ, ಸೀಮೆಯೆಣ್ಣೆ) ಬಳಕೆ ಯುರೋಪ್ ಮತ್ತು ಅಮೆರಿಕ ದೇಶಗಳಲ್ಲಿ ಸರ್ವೆ ಸಾಮಾನ್ಯವಾಗಿತ್ತು. ಕಲ್ಲಿದ್ದಲನ್ನು ಆಸವಿಸಿ ಇದನ್ನು ಪಡೆಯುತ್ತಿದ್ದರು. ೧೮ನೆಯ ಶತಮಾನದಲ್ಲಿ ವಿಶೇಷ ವೇಗೋತ್ಕರ್ಷ ಪಡೆದು ಪ್ರವರ್ಧಿಸುತ್ತಿದ್ದ ಕೈಗಾರಿಕಾಕ್ರಾಂತಿ ತನ್ನ ಬಹುಬಾಹುಗಳನ್ನು (ಕಬಂಧ ಬಾಹುಗಳನ್ನು?) ನವ ಇಂಧನಾಕರಗಳ ಶೋಧನೆಗೆ ನಿಯೋಜಿಸಿತು. ಅಗ್ಗವಾಗಿಯೂ ಯಥೇಚ್ಛವಾಗಿಯೂ ದೊರೆಯಬಲ್ಲ ಎಣ್ಣೆಯ ಹಾಗೂ ಸ್ನೇಹನದ ಆವಶ್ಯಕತೆ ಹಿಂದೆಂದಿಗಿಂತಲೂ ಆಗ ಅತಿ ತೀವ್ರವಾಗಿತ್ತು.

೧೮೫೯ರಲ್ಲಿ .ಎಲ್ ಡ್ರೇಕ್ ಎಂಬಾತ ಪೆನ್ಸಿಲ್ವೇನಿಯಾದಲ್ಲಿ ಮೊದಲ ಎಣ್ಣೆ ಬಾವಿ ಕೊರೆದಾಗ ಪೆಟ್ರೋಲಿಯಂ ಉದ್ಯಮ ಆಧುನಿಕ ಕೈಗಾರಿಕಾಯುಗವನ್ನು ಆವಾಹಿಸಿತು. ಫಾಸಿಲ್ ಇಂಧನದ ವ್ಯಾಪಕೋಪಯೋಗ ಪ್ರಪಂಚದ ಮುಖವನ್ನು, ನಾಗರಿಕತೆಯ ಆರಂಭದಿಂದ ತನಕ ಕಾಣದಿದ್ದ ರೀತಿಯಲ್ಲಿ, ಶಾಶ್ವತವಾಗಿ ಬದಲಾಯಿಸಿಬಿಟ್ಟಿತು.

ಕೈಗಾರಿಕಾ ಕ್ರಾಂತಿಯ ಫಲವಾಗಿ ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಸ್ವಯಂಚಲಿ - ಫಾಸಿಲ್ ಇಂಧನ ಸಂಬಂಧ ಅವಿಭಾಜ್ಯವಾಯಿತು. ಪೆಟ್ರೋ ರಾಸಾಯನಿಕ ಕೈಗಾರಿಕೆಯಲ್ಲಿ ಅತಿ ಪ್ರಮುಖ ಕಚ್ಚಾ ಸಾಮಗ್ರಿಯಾದ ಪೆಟ್ರೋಲಿಯಂ, ಸ್ವಯಂಚಲಿಗಳಿಗೆ ಶಕ್ತಿ ಪೂರೈಕೆ ಮಾಡುವ ಇಂಧನವಾಯಿತು. ಗರಿಷ್ಠ ಶಕ್ತಿಯನ್ನು ಉತ್ಪಾದಿಸಬಲ್ಲ ಅಕ್ಷಯ ಪಾತ್ರೆಯೇ ಇದಾಯಿತು. ಇದನ್ನು ಆಧರಿಸಿಯೇ ಮಾನವ ಸಮುದಾಯದ ವರ್ತಮಾನ ಹಾಗೂ ಭವಿಷ್ಯ ನಿಂತುವು.

೧೮೦೦ರಿಂದ ಈಚೆಗಿನ ಸುಮಾರು ೧೯೦ ವರ್ಷಗಳಲ್ಲಿ ವಿಜ್ಞಾನ ಮತ್ತು ತಂತ್ರವಿದ್ಯೆಯಲ್ಲಿ ಮಾನವ ಸಾಧಿಸಿರುವ ಪ್ರಗತಿ, ಗಳಿಸಿರುವ ಹಿರಿಮೆ ಮತ್ತು ಏರಿರುವ ಎತ್ತರ ಎಷ್ಟು ಎಂಬುದನ್ನು ಒಂದೇ ವಾಕ್ಯದಲ್ಲಿ ಹೇಳುವುದಾದರೆ ಆತನ ಜ್ಞಾನವಿಂದು ಪರಮಾಣುವಿನ ಅನಂತಾಲ್ಪಹೂರಣದಿಂದ ತೊಡಗಿ ಬ್ರಹ್ಮಾಂಡದ ವ್ಯೋಮ ಬೃಹದ್ವಿಸ್ತಾರದವರೆಗೂ ಹಬ್ಬಿದೆ. ಜನನ ಮರಣಗಳ ಮೇಲೆ ಹಿಂದೆ ಎಂದೂ ಇದ್ದಿಲ್ಲದಷ್ಟು ಹತೋಟಿಯನ್ನು ಇಂದು ಆತ ಗಳಿಸಿದ್ದಾನೆ, ನವಶಕ್ತಿ ಮೂಲಗಳನ್ನು ಕಂಡುಕೊಂಡಿದ್ದಾನೆ. ಸಮಗ್ರವಾಗಿ ಹೇಳುವುದಾದರೆ ಆಧುನಿಕ ಮಾನವ ಶಕ್ತಿಯನ್ನು, ಉದಾಹರಣೆಗೆ ವಿದ್ಯುಚ್ಛಕ್ತಿಯನ್ನು, ತನಗೆ ಬೇಕಾದಂತೆ ಕಾರ್ಯವೆಸಗಲು ವಿಧಿಸಬಲ್ಲವನಾಗಿದ್ದಾನೆ. ಶಕ್ತಿರಹಿತ ಜೀವನ ಇಂದು ಊಹಾತೀತವಾಗಿದೆ ಎಂದೇ ಆತ ಶಕ್ತಿಯ ಪ್ರಭುವೂ ಹೌದು, ದಾಸನೂ ಹೌದು.

ಶಕ್ತಿ ಬದುಕನ್ನು ಚುರುಕುಗೊಳಿಸುತ್ತದೆ. ನೂತನಾವಕಾಶಗಳನ್ನು ಅನ್ವೇಷಿಸುವುದರತ್ತ ಮಾನವನನ್ನು ಕ್ರಿಯಾಪ್ರೇರಿಸುತ್ತದೆ. ಇಂಥ ಅನ್ವೇಷಣೆಗೆ ಅಧಿಕ ಶಕ್ತಿ ಅವಶ್ಯ. ಶಕ್ತಿಯ ಬೆನ್ನಟ್ಟಿದ ಮಾನವ ತಂತ್ರ ವಿದ್ಯೆಯನ್ನು ಅಭಿವರ್ಧಿಸುತ್ತಾನೆ. ಒಟ್ಟಾಗಿ ಪ್ರಪಂಚದಲ್ಲಿ ದೂರಗಳು ಕುಗ್ಗುತ್ತವೆ. ಜನರಹಿತ ಪ್ರದೇಶಗಳು ಸಂಕೋಚಿಸುತ್ತವೆ, ಜನಸಂಚಾರ ಜಾಸ್ತಿ ಆಗುತ್ತದೆ. ಒಂದಿಗೇ ಜನಸಂಖ್ಯೆ ವರ್ಧಿಸುತ್ತದೆ. ಆದರೆ ಜನರ ಹಿತ?

ಜನಸಂಖ್ಯಾಸ್ಫೋಟ - ಹದಿನೇಳು

ಜನಸಂಖ್ಯೆ ಕಳೆದ ಶತಮಾನಗಳಲ್ಲಿ ಹೇಗೆ ಬೆಳೆದು ಬಂದಿದೆ ಎಂಬುದನ್ನು ಮುಂದಿನ ಯಾದಿಯಿಂದ ತಿಳಿಯಬಹುದು:
ಇಸವಿ          ಪ್ರಪಂಚ ಜನಸಂಖ್ಯೆ (ಕೋಟಿಗಳಲ್ಲಿ)        ವಾರ್ಷಿಕ ವೃದ್ಧಿದರ(ಶೇಕಡ)
ಕ್ರಿಪೂ ೮೦೦೦            .                                                           --
ಕ್ರಿ.                      ೩೦                                                            .೦೩೬
೧೭೫೦                    ೮೦                                                            .೦೫೬
೧೮೦೦                    ೧೦೦                                                         .೪೪
೧೮೫೦                    ೧೩೦                                                         .೫೨
೧೯೦೦                    ೧೭೦                                                         .೫೪
೧೯೫೦                    ೨೫೦                                                         .೭೯
೧೯೭೦                    ೩೭೫                                                         .
೧೯೮೦                    ೪೫೦                                                         
೧೯೯೦                    ೫೬೦                                                         .
೨೦೦೦                    ೬೪೦                                                         .

೨೦ನೆಯ ಶತಮಾನದಲ್ಲಿ ಜನನಸಂಖ್ಯಾವೃದ್ಧಿದರ (ಸರಾಸರಿಯಲ್ಲಿ) ವಾರ್ಷಿಕವಾಗಿ ಶೇಕಡ .೪ರಲ್ಲಿ ನಿಲ್ಲುವುದೆಂದು ಹೇಳಬಹುದು. ಇದೇನೂ ಸಾಧಾರಣ ದರವಲ್ಲ - ಹಿಂದಿನ ಯಾವ ಶತಮಾನಗಳಲ್ಲೂ ಜನಸಂಖ್ಯಾ ವೃದ್ಧಿದರ ಎತ್ತರವನ್ನು ಐದಿರಲಿಲ್ಲ ಎಂಬುದನ್ನು ಮೇಲಿನ ಯಾದಿ ಸ್ಪಷ್ಟಪಡಿಸುತ್ತದೆ.

ಹಾಲಿ ಜನಸಂಖ್ಯೆ ಯಾವ ದರದಲ್ಲಿ ಬೆಳೆದದ್ದಾದರೆ ಅದು ಎಷ್ಟು ವರ್ಷಗಳಲ್ಲಿ ದ್ವಿಗುಣಿತವಾಗಬಲ್ಲುದು ಎಂಬುದನ್ನು ಗಣಿಸಿ ಜನಸಂಖ್ಯಾ ವೃದ್ಧಿದರವನ್ನು ವಿವರಿಸುವುದು ವಾಡಿಕೆ:

ವಾರ್ಷಿಕ ಜನಸಂಖ್ಯಾವೃದ್ಧಿದರ (ಶೇಕಡ)      ಹಾಲಿ ಜನಸಂಖೆ ದ್ವಿಗುಣಿತವಾಗಲು ಬೇಕಾಗುವ ವರ್ಷಗಳು
.                                                   ...               ೭೫೩
.                                                    ...               ೩೭೬
.                                                    ...               ೨೫೧
.                                                    ...               ೧೭೭
.                                                    ...               ೧೪೩
.                                                    ...               ೧೨೦
.                                                    ...               ೧೦೪
.                                                    ...               ೯೧
.                                                    ...               ೮೧
                                                       ...               ೭೦
.                                                    ...               ೬೪
.                                                    ...               ೫೯
.                                                    ...               ೫೫
.                                                    ...               ೫೦
.                                                    ...               ೪೭
.                                                    ...               ೪೪
.                                                    ...               ೪೨
.                                                    ...               ೪೦
.                                                    ...               ೩೮
                                                        ...               ೩೫

ಅಂಕಿ ಅಂಶಗಳು ಏನೇ ಹೇಳಲಿ ಭವಿಷ್ಯ ವಿಜ್ಞಾನಿಗಳು ಒಂದು ಸಂಗತಿಯನ್ನು ಮಾತ್ರ ಮೇಲಿಂದ ಮೇಲೆ ಒತ್ತಿ ಹೇಳುತ್ತಿದ್ದಾರೆ. ೨೧ನೆಯ ಶತಮಾನವನ್ನು ಸ್ವಾಗತಿಸಲು ಸುಮಾರು ೭೦೦ ಕೋಟಿ ಮನುಷ್ಯರು ಗ್ರಹದಲ್ಲಿ ಇರುವರೆಂದು ನಿರೀಕ್ಷಿಸಬಹುದು. ಅದೇನೂ ದೂರದ ಭವಿಷ್ಯವಲ್ಲ - ಈಗ ಅದು ಕದ ತಟ್ಟುತ್ತಿದೆ. ನೀವು ಪಡಿ ತೆರೆಯದಿರಿ ಅದು ಇಂದು ನಾಳೆ ಎನ್ನುವುದರೊಳಗೆ ನಿಮ್ಮ ಕಿಷ್ಕಿಂಧಾ ಭೂಮಿಯನ್ನು ಪ್ರವೇಶಿಸಿಯೇ ಬಿಡುವುದು ದಿಟ. ಇಳಿಯೆಣಿಕೆ (count down) ಕೇಳುತ್ತಿದೆ ಗಟ್ಟಿಯಾಗಿ: , , ,...., (= ಕ್ರಿ. ೨೦೦೦)

ಆಹಾರ ಪೂರೈಕೆ - ಹದಿನೆಂಟು

ಮಾನವ ಎಲ್ಲೇ ಇರಲಿ, ಯಾವ ಕಾಲದಲ್ಲೇ ಇರಲಿ, ಹೊರನೋಟಕ್ಕೆ ಹೇಗೆಯೇ ತೋರುವ ಆಹಾರ ಪದಾರ್ಥಗಳನ್ನು ಉಣ್ಣಲಿ, ಅಂತಿಮ ವಿಶ್ಲೇಷಣೆಯಲ್ಲಿ ಅವರ ಆಹಾರ ಆರು ಮುಖ್ಯ ಘಟಕಗಳನ್ನು  ಒಳಗೊಂಡಿರಲೇಬೇಕು: ಶರ್ಕರ, ಸಸಾರಜನಕ, ಮೇದಸ್ಸು, ಜೀವಸತ್ತ್ವ, ಖನಿಜಲವಣ ಮತ್ತು ನೀರು. ವ್ಯಕ್ತಿ ಸೇವಿಸುವ ಆಹಾರದಲ್ಲಿ ಇವು ಯುಕ್ತ ಪ್ರಮಾಣದಲ್ಲಿ ಮೇಳೈಸಿಕೊಂಡಿದ್ದು ಆತನಿಗೆ ಸಕಾಲದಲ್ಲಿ ಸೇವನಾರ್ಹ ರೂಪದಲ್ಲಿ ಒದಗಬೇಕು. ಹೀಗಾಗದಿದ್ದರೆ ಮಾನವ ಹಸಿವಿನಿಂದ ಮತ್ತು/ ಅಥವಾ ನ್ಯೂನಪೋಷಣೆಯಿಂದ ನರಳುತ್ತಾನೆ. ಇದರಿಂದ ಆತನ ಆರೋಗ್ಯ ಹದಗೆಡುತ್ತದೆ. ಕಾರ್ಯ ಸಾಮರ್ಥ್ಯ ಕುಗ್ಗುತ್ತದೆ.

ಪ್ರಪಂಚದ ಆಹಾರಪೂರೈಕೆಯ ಬಗ್ಗೆ ಖಚಿತ ಅಂಕೆ ಅಂಶಗಳನ್ನು ಒದಗಿಸುವುದು ಅತಿ ಕಷ್ಟ. ಪ್ರಾಯಶಃ ಎಂದೂ ಕೈಗೂಡದು. ವೈಜ್ಞಾನಿಕ ತರ್ಕವನ್ನು ಆಧರಿಸಿ ಅಂದಾಜನ್ನು ಮಾತ್ರ ಮಾಡಬಹುದು ಅಷ್ಟೆ. ನಿಜಕ್ಕೂ ಪ್ರಪಂಚದ ಆಹಾರಪರಿಸ್ಥಿತಿ ಅಪಾಯದ ಹಂತದಲ್ಲಿದೆ. ಆಹಾರೋತ್ಪಾದನೆಗೆ ಸಂಬಂಧಿಸಿದ ಸಮಸ್ತ - ಸಮಸ್ಯೆಗಳನ್ನೂ ಅವು ಎಷ್ಟೇ ಜಟಿಲವಾಗಿರಲಿ - ಪರಿಹರಿಸಲು ಮಾನವ ತಂತ್ರವಿದ್ಯಾತ್ಮಕವಾಗಿ ಸಾಮರ್ಥ್ಯಗಳಿಸಿರುವ ದಿನಗಳಲ್ಲಿ ಇಂಥ ಉಲ್ಬಣತೆ ತಲೆಹಾಕಿರುವುದೊಂದು ಐತಿಹಾಸಿಕ ವಿಪರ್ಯಾಸ. ಪ್ರಪಂಚದ ಏರು ಜನಸಂಖ್ಯೆ ನಾಗಾಲೋಟದೊಡನೆ ಆಹಾರೋತ್ಪಾದನೆಯ ಮಾಮೂಲಿ ಇರ್ಕಾಲೋಟಕ್ಕೆ ಹೊಂದಿಕೊಳ್ಳಲಾಗುತ್ತಿಲ್ಲ. ಜನಸಂಖ್ಯೆ ಘಾತೀಯವಾಗಿ ಅಂದರೆ , , , , ೧೬, ೩೨, ೬೪... ಮೊಲಜಿಗಿತಗಳಲ್ಲಿ ವೃದ್ಧಿಸುತ್ತದೆ; ಆಹಾರೋತ್ಪಾದನೆಯಾದರೋ ರೇಖೀಯವಾಗಿ, ಅಂದರೆ , , , ,... ಆಮೆ ನಡಿಗೆಯಲ್ಲಿ ಏರುತ್ತದೆ - ಹೀಗಾಗಿ ಎರಡರ ನಡುವೆ ಅಗಳು ಏರ್ಪಡುವುದು ಮಾತ್ರವೇ ಅಲ್ಲ ಅದು ಅಗಲ ಅಗಲವೂ ಆಗುತ್ತದೆ. ೧೯೦೦ರಲ್ಲಿ ೧೭೦ ಕೋಟಿ ಇದ್ದ ಜನಸಂಖ್ಯೆ ೧೯೩೦ರಲ್ಲಿ ೨೨೦ ಕೋಟಿಗೆ ಜಿಗಿದು ೧೯೬೦ರಲ್ಲಿ ೩೧೦ ಕೋಟಿ ತಲಪಿತ್ತು. ಪ್ರಸಕ್ತ ಶತಮಾನ ಮುಗಿಯುವ ವೇಳೆಗೆ ಪ್ರಪಂಚದ ಜನಸಂಖ್ಯೆ ೭೦೦ ಕೋಟಿ - ೧೯೬೦ರಲ್ಲಿ ಇದ್ದುದರ ಎರಡರಷ್ಟಕ್ಕಿಂತಲೂ ಹೆಚ್ಚು - ಆಗುವುದೆಂದು ಅಂದಾಜು. ಕೃಷಿರಂಗದಲ್ಲಿ ಭಾರತವನ್ನೂ ಒಳಗೊಂಡಂತೆ ಅನೇಕ ರಾಷ್ಟ್ರಗಳು ಸಾಧಿಸುರುವ ಹಸುರು ಕ್ರಾಂತಿ, ದವಸ ಧಾನ್ಯಗಳ ಉತ್ಪಾದನೆಯನ್ನು ಹಿಂದೆಂದೂ ಕಾಣದಿದ್ದ ಎತ್ತರಕ್ಕೆ ಒಯ್ದಿದೆ. ಅಂತೆಯೇ ಮಾಂಸೋದ್ಯಮ, ಕ್ಷೀರೋದ್ಯಮ, ಮತ್ಸೋದ್ಯಮ, ತರಕಾರಿ ಹಣ್ಣು ಮುಂತಾದವುಗಳ ಕೃಷಿ ಕೂಡ ಉಚ್ಛ್ರಾಯ ಸ್ಥಿತಿಯಲ್ಲಿದೆ, ನಿಜ. ಆದರೆ ಇವೆಲ್ಲವೂ ಶಾಶ್ವತ ಪರಿಹಾರವನ್ನು ಒದಗಿಸಬಹುದೆಂದಾಗಲಿ ಈಗಿನ ಉಚ್ಛ್ರಾಯ ಸ್ಥಿತಿಯಲ್ಲಿಯೇ ಉಳಿದಾವೆಂದಾಗಲಿ ನಿರೀಕ್ಷಿಸುವುದು ಪೂರ್ತಿ ಸಾಧುವಾಗದೆಂದು ವಿಜ್ಞಾನಿಗಳ ಅಭಿಮತ.

ಆಹಾರೋತ್ಪಾದನೆ ಯಾವ ಉನ್ನತ ಮಟ್ಟದಲ್ಲಿಯೇ ಇದ್ದರೂ ಆಹಾರ ವಿತರಣೆ ಏಕ ರೀತಿ ಆಗದೆ ಪ್ರಪಂಚ, ಉಳ್ಳವರು ಉಳ್ಳದವರು, ಅಥವಾ ಹಸಿವಿಲ್ಲದವರು ಹಸಿವಿರುವವರು ಎಂಬ ಎರಡು ಬಣಗಳಾಗಿ ಒಡೆದುಹೋಗಿದೆ. ಪ್ರಪಂಚ ಜನಸಂಖ್ಯೆಯಲ್ಲಿ ಎಂಟನೆಯ ಒಂದರಷ್ಟು ಮಂದಿಗೆ ಸಮರ್ಪಕ ಆಹಾರ ಒದಗದೆ ಅವರು ಹಸಿವು ಹಾಗೂ ನ್ಯೂನಪೋಷಣೆಗಳಿಂದ ಬಾಧಿತರಾಗಿದ್ದಾರೆಂದು ಅಂದಾಜು ಮಾಡಲಾಗಿದೆ. ಅದೇ ವೇಳೆ ಅತ್ಯಲ್ಪಾಂಶ ಮಂದಿ ಅತಿಪೋಷಣೆಯಿಂದ ಅಗ್ನಿಮಾಂದ್ಯ, ಅಜೀರ್ಣ, ಮಧುಮೇಹ ಮೊದಲಾದ ಶ್ರೀಮಂತ ವ್ಯಾಧಿಗಳಿಂದ ನರಳುತ್ತಿದ್ದಾರೆಂದೂ ತಿಳಿದಿದೆ. ಪ್ರಪಂಚದ ಪರಿಸ್ಥಿತಿ ೧೯೭೫ರಲ್ಲಿ ಎಷ್ಟು ತೀವ್ರವಾಗಿತ್ತೆಂಬುದನ್ನು ಮುಂದಿನ ಅಂಕೆ ಅಂಶಗಳಿಂದ ತಿಳಿಯಬಹುದು:

ಕೋಟಿ ಮಕ್ಕಳು ನ್ಯೂನಪೋಷಣೆಯಿಂದ ಪೀಡಿತರಾಗಿ ಅವರ ಬೆಳೆವಣಿಗೆ ಕುಂಠಿತವಾಗಿತ್ತು;
೪೦ ಕೋಟಿ ಜನ ಉಪವಾಸದ (ಸ್ಟಾರ್ವೇಶನ್) ಅಂಚಿನಲ್ಲಿ ಬದುಕುತ್ತಿದ್ದರು;
೧೦೦ ಕೋಟಿ ಜನ ಹಸಿವು ಹಾಗೂ ನ್ಯೂನಪೋಷಣೆಗಳಿಂದ ಬಾಧಿತರಾಗಿದ್ದರು;
೧೨೦೦೦ ಮಂದಿ ಪ್ರತಿದಿನ ಹಸಿವಿನಿಂದ ಮಡಿಯುತ್ತಿದ್ದರು.
೧೯೯೩ರ ಪರಿಸ್ಥಿತಿ ಖಂಡಿತ ಸುಧಾರಿಸಿಲ್ಲ ಮಾತ್ರವಲ್ಲ ಉಲ್ಬಣಿಸುತ್ತಿರುವುದರ ಸೂಚನೆ ಕಂಡುಬರುತ್ತಿದೆ ಎನ್ನುತ್ತಾರೆ ಪರಿಣತರು.

ದೇಹದ ಬೆಳವಣಿಗೆಗೆ ಹಾಗೂ ಅಭಿವರ್ಧನೆಗೆ ಆವಶ್ಯವಾದ ಶರ್ಕರಾದಿ ಘಟಕಗಳು ಯುಕ್ತ ಪ್ರಮಾಣಗಳಲ್ಲಿ ಪೂರೈಕೆ ಆಗದಿರುವುದೇ ನ್ಯೂನಪೋಷಣೆ. ವ್ಯಕ್ತಿ ಹೊಟ್ಟೆ ತುಂಬ ಆಹಾರ ತಿಂದಾಗಲೂ - ಅಂದರೆ ಆತ ಉಪವಾಸ ಪೀಡಿತನಾಗಿರದಾಗಲೂ - ನ್ಯೂನಪೋಷಣೆಯಿಂದ ನರಳುವುದು ಸಾಧ್ಯ.

ಯಂತ್ರ ಚಾಲೂ ಆಗಲು ಇಂಧನ ಹೇಗೊ ದೇಹ ಕೆಲಸ ಮಾಡಲು ಆಹಾರ ಹಾಗೆ. ಇಂಧನ ದಹಿಸಿದಾಗ ಶಕ್ತಿ ಉತ್ಪಾದನೆ ಆಗಿ ಅದರ ನೆರವಿನಿಂದ ಯಂತ್ರ ಕಾರ್ಯ ಪ್ರವೃತ್ತವಾಗುತ್ತದೆ. ಆಹಾರ ಜೀರ್ಣವಾಗಿ ರಕ್ತಗತವಾಗಿ ಕೋಶಗತವಾಗಿ ಬಳಸಲ್ಪಟ್ಟಾಗ (ಅಂತಿಮ ಘಟ್ಟದಲ್ಲಿ ಕ್ರಿಯೆಯೂ ದನವೇ - ಕಾರ್ಬನ್ ಮತ್ತು ಹೈಡ್ರೋಜನ್ ಆಕ್ಸಿಜನ್ನಿನೊಡನೆ ದೇಹದ ಹಿತೋಷ್ಣತೆಯಲ್ಲಿ ಸಂಯೋಗವಾಗುವ ಉತ್ಕರ್ಷಣಕ್ರಿಯೆ) ಶಕ್ತಿ ಬಿಡುಗಡೆ ಆಗಿ ದೇಹ ವಿವಿಧ ಚಟುವಟಿಕೆಗಳಲ್ಲಿ ನಿರತವಾಗುತ್ತದೆ. ಆದ್ದರಿಂದ ಜನಸಂಖ್ಯೆ ವೃದ್ಧಿಸಿದಂತೆ ಶಕ್ತಿ ಬೇಡಿಕೆಯೂ ವೃದ್ಧಿಸುತ್ತದೆ.

ಮಾನವನ ಸಮಸ್ತ ಆಹಾರವೂ ಸಸ್ಯಗಳಿಂದಲೇ ಒದಗಬೇಕಾಗುತ್ತದೆ. ಶುದ್ಧ ಮಾಂಸಾಹಾರಿ ಪ್ರಾಣಿಗಳಾದರೂ ಸಸ್ಯಾಹಾರಿ ಅಥವಾ ಮಿಶ್ರಾಹಾರಿ ಪ್ರಾಣಿಗಳನ್ನು ತಿಂದು ಬದುಕುವುದು ನಿಸರ್ಗ ನಿಯಮ. ಸಸ್ಯರಹಿತ ನಾಡು ಆಹಾರಶೂನ್ಯ ಬೆಂಗಾಡು. ಸಸ್ಯಗಳು ಬೆಳೆಯಲು ನೆಲ, ಜಲ, ವಾಯು ಮತ್ತು ಸೂರ್ಯಪ್ರಕಾಶ ಬೇಕು. ದ್ಯುತಿ ಸಂಶ್ಲೇಷಣೆ ಎಂಬ ಸಸ್ಯಗಳಿಗೆ ಮಾತ್ರ ವಿಶಿಷ್ಟವಾದ ಸಂಯಂತ್ರದ ಮೂಲಕ ಸಸ್ಯಗಳು ಸೌರಶಕ್ತಿಯನ್ನು ಉಪಯೋಗಿಸಿಕೊಂಡು ನೀರನ್ನು ಕಾರ್ಬನ್ಡೈಆಕ್ಸೈಡಿನೊಡನೆ ಸಂಯೋಗಿಸಿ ಪಿಷ್ಟವನ್ನೂ ಸಕ್ಕರೆಯನ್ನೂ (ಸಮಗ್ರವಾಗಿ ಶರ್ಕರಗಳನ್ನು) ಸಂಶ್ಲೇಷಿಸುತ್ತವೆ. ಆದ್ದರಿಂದ ಆಹಾರದ ಮೂಲಕ ದೇಹಕ್ಕೆ ದೊರೆಯುವ ಶಕ್ತಿಯಾದರೂ ಸೆರೆಹಿಡಿಯಲ್ಪಟ್ಟ ಸೌರಶಕ್ತಿಯೇ.

ಆಹಾರ ಒದಗಿಸುವ ಶಕ್ತಿಯನ್ನು ಕಿಲೊ ಕೆಲೊರಿಗಳಲ್ಲಿ ಅಳೆಯುವುದು ವಾಡಿಕೆ. ನೆಲದಲ್ಲಿ ಬೆಳೆಯುವ ಆಹಾರಪದಾರ್ಥಗಳೆಲ್ಲವೂ ಮಾನವ ಸೇವನೆಗೆ ಒದಗುವುದಿಲ್ಲ ಎಂಬುದು ಕಂಡಂತೆಯೇ ಇದೆ. ಒಂದು ಸ್ಥೂಲ ಅಂದಾಜಿನ ಪ್ರಕಾರ ನೆಲದಲ್ಲಿ ಬೆಳೆಯುವ ಆಹಾರದಿಂದ ಉತ್ಪಾದನೆಯಾಗುವ ಕಿಲೊಕೆಲೊರಿಗಳ ಪೈಕಿ ಹದಿನೈದನೆಯ ಒಂದು ಅಂಶವೂ ಕಡಲಲ್ಲಿ ಬೆಳೆಯುವ ಆಹಾರದಿಂದ ಉತ್ಪಾದನೆಯಾಗುವ ಕಿಲೊಕೆಲೊರಿಗಳ ಪೈಕಿ ಹದಿನೈದನೆಯ ಒಂದು ಅಂಶವೂ ಮಾನವಾಹಾರವಾಗಿ ವಿನಿಯೋಗವಾಗುತ್ತಿದ್ದುವು (೧೯೬೭). ಇಂದು ಬದುಕಿರುವ ಪ್ರತಿಯೊಬ್ಬನಿಗೂ ಯುಕ್ತಹಾರ ಒದಗಿಸಬೇಕಾದಲ್ಲಿ ಮೇಲಿನ ಶೇಕಡ ಸಂಖ್ಯೆಗಳನ್ನು ಇಮ್ಮಡಿಗೊಳಿಸಬೇಕಾದೀತು. ಇನ್ನು ಜನಸಂಖ್ಯೆ ದ್ವಿಗುಣಿತವಾದಂತೆ ಇವನ್ನು ಮತ್ತೆ ಏರಿಸಬೇಕಾಗುತ್ತದೆ. ಅಲ್ಲಿಗೆ ೧೯೯೦ರ ಸುಮಾರಿಗೆ, ಖಂಡಿತವಾಗಿಯೂ ೨೦೦೦ದ ವೇಳೆಗೆ, ನೆಲದ ಮೇಲಿನ ಸಮಸ್ತ ಸಸ್ಯಗಳೂ ಸೆರೆಹಿಡಿದಿಟ್ಟಿರುವ ಸೌರಶಕ್ತಿಯ ಶೇಕಡ ೮೦ನ್ನು ಮಾನವ ಕೇವಲ ಬದುಕಿರಲು ಬಳಸಬೇಕಾದೀತೆಂದು ತೋರುತ್ತದೆ. ಅಂಕೆ ಅಂಶಗಳು ಹೇಳುವ ಕತೆ ನಿಜಕ್ಕೂ ಭೀಕರವಾಗಿದೆ.

೨೦೦೦ದ ಅರುಣೋದಯ (ಮರಣೋದಯ?) ಸಮೀಪವಾದಂತೆ ಮಾನವನ ಸಮಸ್ತ ಚಟುವಟಿಕೆಗಳೂ ಏರುತ್ತಿರುವ ಬಾಯಿಗಳನ್ನು ಸಮಾಧಾನ ಸ್ಥಿತಿಯಲ್ಲಿ ಇಡುವುದರ ಕಡೆಗೇ ಕೇಂದ್ರಿತವಾಗಬೇಕಾದೀತು. ಇದಕ್ಕಾಗಿ ಹೆಚ್ಚು ನೆಲ, ಹೆಚ್ಚು ಬೆಳೆ, (ಮತ್ತು ಅನಿವಾರ್ಯವಾಗಿ) ಹೆಚ್ಚು ಜನ ಎಂಬ ಸೂತ್ರ ಪ್ರಕಾರ ಹೋರಾಡಬೇಕಾದೀತು. ಇಂಥ ಒಂದು ಯೋಜನೆಯಿಂದ ನಿಸರ್ಗದ ಸಮತೋಲಕ್ಕೆ ಅನೇಕ ರೀತಿಗಳಲ್ಲಿ ಭಂಗತಟ್ಟುತ್ತದೆ.

[ಭವಿಷ್ಯವಿಜ್ಞಾನ ಪುಸ್ತಕದ ಮುಂದಿನ ಭಾಗಗಳನ್ನು ಹೀಗೇ ಅಧ್ಯಾಯಗಳ ಅಂತ್ಯದ ಅನುಕೂಲ ನೋಡಿಕೊಂಡು ಕಂತುಗಳಲ್ಲಿ ಪ್ರತಿ ಮಂಗಳವಾರ ಬೆಳಗ್ಗೆ ಪ್ರಕಟವಾಗುವಂತೆ ವ್ಯವಸ್ಥೆ ಮಾಡುತ್ತಿದ್ದೇನೆ. ನಿಮ್ಮ ಪ್ರತಿಕ್ರಿಯೆ, ಚರ್ಚೆಯ ನುಡಿಗಳಿಗೆ ಎಂದಿನಂತೇ ಸ್ವಾಗತವಿದೆ]

5 comments:

 1. ಏರುತ್ತಾ ಇರುವ ಜನಸಂಖ್ಯೆಯ ಇದುರು ಅದಾವ ಸಮೀಕರಣ ನಿಂತೀತು? - ಪೆಜತ್ತಾಯ

  ReplyDelete
 2. Nice one & scientifically narrated in such a way that common man can understand this. Better our TV media read this first & discuss on this issue on the above backdrop!!!!:- Narayan Yaji

  ReplyDelete
 3. "೨೦೦೦ದ ಅರುಣೋದಯ (ಮರಣೋದಯ?) ಸಮೀಪವಾದಂತೆ ಮಾನವನ ಸಮಸ್ತ ಚಟುವಟಿಕೆಗಳೂ ಏರುತ್ತಿರುವ ಬಾಯಿಗಳನ್ನು ಸಮಾಧಾನ ಸ್ಥಿತಿಯಲ್ಲಿ ಇಡುವುದರ ಕಡೆಗೇ ಕೇಂದ್ರಿತವಾಗಬೇಕಾದೀತು". ಎಂಬ ಭವಿಷ್ಯವನ್ನು ಎಲ್ಲರೂ ತಪ್ಪಾಗಿ ಅರ್ಥಮಾಡಿಕೊಂಡಂತಿದೆ! ೨೦೧೩ರ ಅರುಣೋದಯ ಕಾಲದಲ್ಲಿ ಹಿಂತಿರುಗಿ ನೋಡಿದಾಗ ಮಾನವನ ಸಮಸ್ತ ಚಟುವಟಿಕೆಗಳು ಕಾರ್ಪೊರೇಟ್ /ದಲ್ಲಾಳಿ / ರಾಜಕಾರಣಿಗಳ ಬಾಯಿಗಳನ್ನು ಸಮಾಧಾನ ಸ್ಥಿತಿಯಲ್ಲಿ ಇಡುವುದರ ಕಡೆಗೆ ಮಾತ್ರ ಕೇಂದ್ರಿತವಾದಂತೆ ಕಾಣಿಸುತ್ತಿದೆ. ವೈಜ್ಞಾನಿಕಭವಿಷ್ಯದೊಂದಿಗೆ ಕವಡೆ ಮತ್ತು ತಾಳೆ ಗರಿಯ ಚಿತ್ರ ಇಟ್ಟರೆ ಈ ಭವಿಷ್ಯವನ್ನು ಜನ ಗಂಭೀರವಾಗಿ ತಗೊಳ್ಳಬಹುದೇ? - ನಟೇಶ್

  ReplyDelete
 4. ಕ್ರಮೇಣವಾಗಿ ಹೆಮ್ಮರವಾಗಿ ಬೆಳೆದಿರುವ ಜನ ಸಂಖ್ಯೆ, ವಿಜ್ಞಾನ ಮತ್ತು ತಂತ್ರವಿದ್ಯೆಯಲ್ಲಿ ಮಾನವ ಪ್ರಗತಿ ಸಾಧಿಸಿದರೂ ಕೋಟ್ಯಾಂತರ ಮಾನವರು ಇನ್ನೂ ಹಸಿವು, ನ್ಯೂನ್ಯಪೋಷಣೆಯಿಂದ ಪೀಡಿತರಾಗಿ ಬದುಕುತ್ತಿರುವ ಸಂಗತಿಯನ್ನು ಶ್ರೀ ಜಿ.ಟಿ.ನಾ. ರಾವ್ ಇವರು ಸರಳವಾಗಿ ಓದುಗರಿಗೆ ತಮ್ಮ ವೈಜ್ನಾನಿಕ ಲೇಖನ ಮೂಲಕ ನೀಡಿದ್ದಾರೆ. ಶ್ರೀ ಜಿ.ಟಿ.ನಾ. ರಾವ್ ಇವರ ಲೇಖನ ಮಾಲಿಕೆ ಇದೆ ರೀತಿ ಓದುಗರಿಗೆ ನಿಮ್ಮ ಬ್ಲಾಗಿನ ಮೂಲಕ ನೀಡುತ್ತಿರಿ. ಧನ್ಯವಾದಗಳು.

  ReplyDelete
 5. Good one. nijavadla edde undu --m p joshy.

  ReplyDelete