21 December 2012

ಮಂಗಳೂರಿನ ಆದಿ ಉರಗೋದ್ಯಾನ!


ತಿಂಗಳೆ ಕಣಿವೆಯ ಜಲಪಾತಗಳು - ಭಾಗ ಒಂದು

ಆಗುಂಬೆಯ ದಾರಿ ಬದಿಯಲ್ಲಿ ಒನಕೆ ಅಬ್ಬಿ ಉತ್ತರ ದಿಕ್ಕಿಗಾದರೆ ಬರ್ಕಣ ದಕ್ಷಿಣಕ್ಕೆ. ಬರ್ಕಣ ದೂರದರ್ಶನದಲ್ಲಿ ದಕ್ಕಿದ್ದರೂ ಅದರ ತಲೆ ತಳ ನೋಡಲು ಇನ್ನೊಮ್ಮೆಬರ್ಕಣ್ಣಾಎಂಬುದು ನಮ್ಮ ದೊಡ್ಡ ಯೋಜನೆಗೆ ಪಲ್ಲವಿಯೇ ಆಗಿತ್ತು. ಯಾಕೆಂದರೆ ಕಣ್ಣಿಗೆ ಕಾಣುವಂತೆಯೂ, ಸರ್ವೇಕ್ಷಣ ಭೂಪಟ ಹೇಳುವಂತೆಯೂ ಕಣಿವೆ ಸೀತಾ ನದಿಯ ಬಲು ಮುಖ್ಯ ಜಲಾನಯನ ಪ್ರದೇಶ. ಅದನ್ನು ಗುರುತಿನ ಸೌಕರ್ಯಕ್ಕಾಗಿ ಕಣಿವೆಯ ಹೆಚ್ಚು ಕಡಿಮೆ ಕೇಂದ್ರದಲ್ಲಿರುವ ಹಳ್ಳಿಯೊಡನೆ ಗುರುತಿಸಿ ತಿಂಗಳೆ ಕಣಿವೆ ಎನ್ನಬಹುದು. ಅಲ್ಲಿ ಘಟ್ಟ ಮಾಲೆ ತೆಗೆದುಕೊಂಡ ತೀವ್ರ ತಿರುವಿನಲ್ಲಿ ಹಲವು ಜಲಪಾತಗಳೇ ಹುದುಗಿದ್ದವು. ಬರ್ಕಣ ಅವುಗಳಲ್ಲಿ ಒಂದು. ಆದರೆ ಅವರಿವರ ಸೂಚನೆಯಂತೆ ಕಣಿವೆಯಾಳದ ಕಾಡಿನಲ್ಲಿ ನಿಜ ದರ್ಶನೀಯ ಜಲಪಾತವೆಂದರೆ ಕೂಡ್ಲುತೀರ್ಥ. ಮತ್ತದಕ್ಕೆ ಹೋಗಲು ಸ್ಪಷ್ಟ ಮಾರ್ಗದರ್ಶನ ಕೊಡಬಹುದಾದ ವ್ಯಕ್ತಿ ತಿಂಗಳೆಯ ಯಜಮಾನ (ಜಮೀನ್ದಾರ) ರವೀಂದ್ರ ಹೆಗ್ಡೆ (ಇಂದು ನಮ್ಮೊಂದಿಗಿಲ್ಲ). ಹೀಗೆ ಅಂದಾಜುಗಳಿಗೆ ಆಧಾರ ಸಿಕ್ಕ ಮೇಲೆ ಮುಹೂರ್ತ ನೋಡಲಿಲ್ಲ.

ಅದೊಂದು ಭರ್ಜರಿ ಮಳೆಗಾಲದ ಆದಿತ್ಯವಾರ (೧೮--೧೯೮೨). ಬೆಳ್ಳಂ ಬೆಳಗ್ಗೆ ಎನ್ನುವಂತಿಲ್ಲದ ಆರುಗಂಟೆ, ಕರ್ಮೋಡ ಕುಟ್ಟಿ ಧೋ ಎನ್ನುವ ಹೊತ್ತಿಗೆ ಮಂಗಳೂರು ಬಿಟ್ಟೆವು. ಮಂಗಳೂರಿನಲ್ಲಿ ನೆಲೆಸಿದ ಬಾಲ್ಯದಲ್ಲಿ ನನ್ನ ಕಾಡು ಸುತ್ತುವ ಹುಚ್ಚಿಗೆ ಸಂಪರ್ಕಸಾಧನಗಳ ಕೊರತೆಯಿತ್ತು. ಆದರೆ ೧೯೮೦ರಲ್ಲಿ ಬೈಕ್ ಕೊಂಡ ಮೇಲೆ ನಾನು ಲಗಾಮಿಲ್ಲದ ಕುದುರೆ. (ಎಸ್.ಆರ್. ವಿಜಯಶಂಕರ ತಾರುಣ್ಯದಲ್ಲಿ ಹೊಸಾ ಸ್ಕೂಟರ್ ಕೊಂಡಾಗ ನನ್ನಲ್ಲಿ ಹೇಳಿದ್ದರು ನಾನೀಗ ಉಚ್ಚೆಗೂ ಸ್ಕೂಟರ್ರೇ ಎಂದದ್ದು ನನಗೆ ತುಂಬಾ ಹಿಡಿಸಿದ ಮಾತು!) ನನ್ನ ಬೈಕಿಗೆ ಇನ್ನೆರಡು ಜೊತೆಗೊಟ್ಟವು. ಸಾಲದ್ದಕ್ಕೆ ಒಂದು ಜೀಪು ಬಿರಿಯುವಷ್ಟು ಮಂದಿಯನ್ನೂ ತುಂಬಿ ಹೊರಟದ್ದಕ್ಕೆ ನಮ್ಮ ಸೈನ್ಯದ ಬಲ ಹದಿನೈದು! ನನ್ನ ಸಹವಾರ ಮಾವನ ಮಗ ಚಂದ್ರಶೇಖರ. ಇನ್ನೂ ಎಸ್ಸೆಸ್ಸಲ್ಸಿಯಲ್ಲಿದ್ದಾಗಲೇ (ನನ್ನ ಪ್ರಥಮ) ಕುಮಾರಪರ್ವತ ಚಾರಣದಿಂದ ಕಾಡು ಸುತ್ತುವ ಗೀಳು ಹಿಡಿಸಿಕೊಂಡವ. ಅನಂತರ ಇಂಜಿನಿಯರ್ ಆಗಿ, ಕೇವಲ ಅನುಭವ ಗಳಿಕೆಗಾಗಿ ಮಂಗಳೂರಿನಲ್ಲಿದ್ದವ ಅಂದಿನಗಳಲ್ಲಿ ನನ್ನೆಲ್ಲ ಕಾರ್ಯಕ್ರಮಕ್ಕೂ ಜೊತೆಗೊಡುತ್ತಿದ್ದವ. ಇನ್ನೊಂದು ಬೈಕ್ ಅರುಣ್ ನಾಯಕರದ್ದು. ದೀರ್ಘ ಬುಲೆಟ್ ಸವಾರಿಗೆ ಜೊತೆಗೊಟ್ಟು ದಿಕ್ಕು ತೋರಿಸುವವರಿದ್ದರೆ ಚಂದ್ರ ಲೋಕಕ್ಕೂ ಸೈ ಎನ್ನುವ ಉಮೇದು ಇವರದು. ಅಲ್ಲಿಗೆ ದಾರಿಯಿದ್ದೀತೋ ನಾನು ನೋಡುವಂತದ್ದಿದೆಯೋ ಎಂಬೆಲ್ಲಾ ವಿವರಗಳ ಬಗ್ಗೆ ಅರುಣ್ ತಲೆ ಕೆಡಿಸಿಕೊಂಡವರಲ್ಲ! ಈತ ನಮ್ಮೊಡನೆ ವರಂಗ, ತೀರ್ಥಳ್ಳಿ ದಾರಿಯಲ್ಲಿ ಬಂದಷ್ಟೇ ನಿರ್ಮೋಹದಿಂದ ಜಡಿಮಳೆಯಲ್ಲೂ ಹೊರಟಿದ್ದರು. ಅವರ ಬೆನ್ನಿಗೆ ನನ್ನಂಗಡಿಯ ಸಹಾಯಕ - ಪ್ರಕಾಶ ನಾಟೇಕರ್. ಈತನ ಮೂಲ ಗೆರಸೊಪ್ಪೆ. ಉದ್ಯೋಗಾಕಾಂಕ್ಷೆ ಇವನಿಗೆ ಪೇಟೆ ಕಾಣಿಸಿದರೂ ಪ್ರಜ್ಞೆಯೆಲ್ಲ ದಟ್ಟಡವಿ, ಕುತ್ತೇರು, ಮಲೆನಾಡಿನದೇ. ಹಾಗಾಗಿ ಪ್ರಕಾಶ ನನ್ನ ಹವ್ಯಾಸಗಳಲ್ಲೂ ಸ್ವತಂತ್ರವಾಗಿ, ಧಾರಾಳವಾಗಿ ಭಾಗಿಯಾಗುತ್ತಿದ್ದ. ಮೂರನೇ ಬೈಕಿನಲ್ಲಿ ಎಂಸಿಎಫಿನ ಈರ್ವರು ಗೆಳೆಯರು ಮಂಜಪ್ಪ ಮತ್ತು ಸುಬ್ಬನ್. (ಪ್ರಕಾಶ ಸೇರಿದಂತೆ ಮೂವರ ಹೆಚ್ಚಿನ ಪರಿಚಯಕ್ಕೆ ಇಲ್ಲಿಚಿಟಿಕೆ ಹೊಡೆದು ಮಧುಚುಂಬನ ಲೇಖನ ನೋಡಿ.) 

ವಿಖ್ಯಾತ ಛಾಯಾ ಚಿತ್ರಗ್ರಾಹಕ ಯಜ್ಞ (ಪೂರ್ಣ ನಾಮಧೇಯ ಯಜ್ಞೇಶ್ವರ ಆಚಾರ್ಯ ಎಂದರೆ ಯಾರಿಗೂ ಗುರುತು ಹತ್ತದು), ನನ್ನ ಒಳ್ಳೆಯ ಗೆಳೆಯ, ದಿನಗಳಲ್ಲಿ ಬಿಡುವಿದ್ದಾಗೆಲ್ಲಾ ನಮ್ಮ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಂತೆ ಅಂದೂ ಬಂದಿದ್ದರು. ಉಳಿದೆಡೆಗಳಲ್ಲಿ ಯಜ್ಞರಿಗೆ ಪ್ರಯಾಣ ವ್ಯವಸ್ಥೆ ಮತ್ತು ಗೌರವಧನ ಕೊಟ್ಟು ಕರೆಸಿಕೊಂಡು ತಮಗೆ ಬೇಕಾದ ಚಿತ್ರ ತೆಗೆಸಿಕೊಳ್ಳುತ್ತಾರೆ. ನಮ್ಮಲ್ಲಿ ಅವರೇ ಖರ್ಚುಹಾಕಿಕೊಂಡು ಬಂದು ಮತ್ತವರಿಗೇ ಕುಶಿ ಕಂಡದ್ದನ್ನು ಸೆರೆ ಹಿಡಿದುಕೊಳ್ಳುತ್ತಿದ್ದರು. (ಕೊನೆಯಲ್ಲಿ ನಮಗೆ ಕುಶಿ ಕಂಡವನ್ನು ನಾವು ಅವರಿಂದ ಧಾರಾಳ ಖರೀದಿಸಬಹುದಿತ್ತು)

ಜಯಂತ ಕೇವಲ ರಸಾಯನ ಶಾಸ್ತ್ರದ ಅಧ್ಯಾಪಕ ಎಂದರೆ ಏನೂ ಅಲ್ಲ. ಕುಟುಂಬದ ಆಸಕ್ತಿಯಲ್ಲೇ ರೂಢಿಸಿಕೊಂಡ ಕರ್ನಾಟಕ ಸಂಗೀತ, ನನ್ನೊಡನೆ ಸೇರಿಕೊಂಡು ಪರ್ವತಾರೋಹಣ ಸಾಹಸದ ಎಲ್ಲ ಮುಖಗಳು, ನಕ್ಷತ್ರ ವೀಕ್ಷಣೆ (ಇಂದು ಮಂಗಳೂರು ವಲಯದ ರಾತ್ರಿಯಾಗಸದಲ್ಲಿ ಏನೇ ವಿಶೇಷಗಳಿದ್ದರೂ ಸೂಕ್ತ ಪ್ರಚಾರದೊಡನೆ ಯಾವುದೋ ವಠಾರದಲ್ಲಿ, ಆಸಕ್ತರನ್ನು ಒಟ್ಟು ಮಾಡಿಕೊಂಡು, ದುರ್ಬೀನಿಟ್ಟು, ನಿದ್ದೆಗೆಟ್ಟು ಯಾರಾದರೂ ಮುಕ್ತವಾಗಿ ಮಾರ್ಗದರ್ಶನ ಕೊಡುತ್ತಿದ್ದಾರೆಂದರೆ ಅದು ಜಯಂತರೇ ಇರಬೇಕು) ಸಾಹಿತ್ಯ, ನಾಟಕ, ಸಿನಿಮಾ ಇತ್ಯಾದಿ ಎಲ್ಲದರಲ್ಲೂ ಸಕ್ರಿಯ ಭಾಗಿ ಜಯಂತ. (ಅವರು ಮಹಿಳಾ ಕಾಲೇಜಿನಲ್ಲಿರುವುದರಿಂದ ಸದಾ ಹೆಸರನ್ನು ಸ್ಪಷ್ಟ ಸ್ವರಾಂತ - ಜಯಂ-, ಬಳಸುವುದನ್ನೇ ಅಪೇಕ್ಷಿಸುತ್ತಾರೆ. ಹಿಂದೆ ಸಾರ್ವಜನಿಕವಾಗಿ ಯಾರೋ ಮಿತ್ರ ಇವರ ಉಪಸ್ಥಿತಿಯನ್ನು ಗೌರವಪುರಸ್ಸರವಾಗಿ ಗುರುತಿಸುತ್ತಾ ಪ್ರೀತಿಪೂರ್ವಕವಾಗಿ ಜಯಂತಿಲ್ಲಿಗೆ ಬಂದಿದ್ದಾರೆ ಎಂದಾಗ, ಸಭೆಯಲ್ಲಿದ್ದ ಅಪರಿಚಿತರು ಮುಸಿಮುಸಿ ನಗುತ್ತಾ ಆಚೀಚೆ ಕತ್ತು ತಿರುಗಿಸಿ ಜಯಂತಿಎಂಬ ತರುಣಿಯನ್ನು ಹುಡುಕಿದ್ದರಂತೆ!) ಶಿವರಾಮ್ ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿ. ನನ್ನ ಹಾರುವ ಹುಚ್ಚಿಗೆ ಹತ್ತಿರವಾದವರು. ಮುಂದೆ ಅದು ವಲಯಕ್ಕೇ ದಕ್ಕಲಿಲ್ಲ. ಆದರಿವರು ಉನ್ನತ ವ್ಯಾಸಂಗದ ದೃಷ್ಟಿಯಿಂದ ಅಮೆರಿಕಾಕ್ಕೆ ವಲಸೆ ಹೋದ ಮೆಲೆ ಎಲ್ಲವನ್ನೂ ಈಡೇರಿಸಿಕೊಂಡರಂತೆ!

ಹೀಗೇ ಇನ್ನೊಂದು ಸೇರ್ಪಡೆ - (ಕಾವೂರು) ಪ್ರಸನ್ನ (ಭಟ್). ಆಯಿಲ್ ಭಟ್ರ (= ರಾಮನಾಥ ಆಯಿಲ್ ಟ್ರೇಡರ್ಸ್ ಮಾಲಕ, ನನ್ನ ಗೌರವಾನ್ವಿತ ಹಿರಿಯ ಗೆಳೆಯರೂ ಆದ ರಾಮಚಂದ್ರ ಭಟ್ಟರ ಜನಪದ ಸಂಬೋಧನೆ.) ಹಿರಿಯ ಮಾಣಿ ಪ್ರಸನ್ನ ಇನ್ನೂ ಆರೋ ಏಳೋ ತರಗತಿಯಲ್ಲಿದ್ದಾಗ, ನನ್ನಂಗಡಿಗೆ ಮೊದಲ ಭೇಟಿ ಕೊಟ್ಟ ನೆನಪು. ನನ್ನ ತಿರುಗುವ ಹುಚ್ಚು ಕೇಳಿದ್ದ ಹುಡುಗನಿಗೋ ತನ್ನ (ಬಹುಶಃ) ತಿರುಪತಿ ಪ್ರವಾಸದ ಅನುಭವ ಹೇಳಲು ಉತ್ಸಾಹ. ಆದರೆ ನಾನು ಅವನ ಕತೆ ಕೇಳಿದ್ದಕ್ಕಿಂತ ಅದನ್ನು ಅವನಿಗೆ ಪ್ರಬಂಧದ ರೂಪದಲ್ಲಿ ಬರೆದು ಕೊಡಲು ಪೀಡೆ ಕೊಟ್ಟದ್ದೇ ಹೆಚ್ಚು! ಅವನು ಎಷ್ಟೋ ದಿನ ಬಿಟ್ಟು ಏನೋ ಬರೆದು ತಂದದ್ದು, ನಾನು ತಿದ್ದಿ, ಸೂಚನೆ ಕೊಟ್ಟದ್ದು ಎಲ್ಲಾ ದೊಡ್ಡ ಸಂಗತಿಯಲ್ಲ. ಅದಕ್ಕೂ ಮಿಗಿಲಾಗಿ ಆತ ನನ್ನ ಬಗ್ಗೆ ನಿರುತ್ಸಾಹಿಯಾಗಿ ದೂರ ಸರಿಯದೇ ಪ್ರಾಕೃತಿಕ ವೈಶಿಷ್ಟ್ಯಗಳನ್ನು ನಮ್ಮೊಡನೆ ತಿರುಗಿ ನೋಡುವಲ್ಲಿ ಸದಾ ಅತ್ಯುತ್ಸಾಹೀ ಸಂಗಾತಿಯಾದದ್ದು ದೊಡ್ಡದು.

ನನಗೊಂದು ಆನುವಂಶಿಕ ದುರ್ಬುದ್ಧಿ - ಸ್ವಂತ ಅನುಭವಕ್ಕೆ ದಕ್ಕಿದವನ್ನೆಲ್ಲ ಇತರರಲ್ಲಿ ಹಂಚಿಕೊಳ್ಳುವುದು, ಕೆಲವೊಮ್ಮೆ ಅಪಾತ್ರರಿಗೂ ಹೇರುವುದು! ಅದಕ್ಕೆ ನನ್ನಂಗಡಿಯಲ್ಲಿ ಅವಕಾಶವೂ ಸಾಕಷ್ಟು ಒದಗುತ್ತಿತ್ತು. ಹಾಗೇ ಹಿಂದಿನ ದಿನ ದಿಲ್ಲಿಯ ವಿಕಾಸ್ ಪ್ರಕಾಶನ ಸಂಸ್ಥೆಯ ಪ್ರತಿನಿಧಿಯಾಗಿ ಅಂಗಡಿಗೆ ಬಂದಿದ್ದ .ಬಿ. ಖಾನ್ ಎಂಬ (ಕೇರಳ ಮೂಲದ ಬೆಂಗಳೂರಿನ) ತರುಣನೂ ನಮ್ಮ ತಂಡಕ್ಕೆ ಸೇರ್ಪಡೆಗೊಂಡಿದ್ದ. ನನ್ನ ಅಪರಿಪೂರ್ಣ ದಾಖಲೆ ಹೇಳುವಂತೆ ಜೀಪ್ ತಂಡದಲ್ಲಿ ಮತ್ತೂ ಮೂವರು - ಶ್ಯಾಮಸುಂದರ, ಹರೀಶ್ ಭಟ್ ಮತ್ತು ದಿನೇಶ್ ಇದ್ದರು. ಆದರೆ ಇಂದು ನಾನವರ ಪರಿಚಯ ಮರೆತಿದ್ದೇನೆ. [ಇದರ ಓದುಗರಲ್ಲಿ ಅವರಿದ್ದರೆ ಅಥವಾ ಪರಿಚಿತರು ತಿಳಿಸಿದರೆ ಸಂತೋಷ] ತಂಡದ ಇನ್ನೋರ್ವ ಸದಸ್ಯ - ಸೂರ್ಯನ ಬಗ್ಗೆ ಮುಂದೆ ಹೇಳುತ್ತೇನೆ.

ಕಾರ್ಕಳದಲ್ಲಿ ಹೊಟ್ಟೆಪಾಡು ಮುಗಿಸಿ, ಮಧ್ಯಾಹ್ನಕ್ಕೆ ಬುತ್ತಿ ಕಟ್ಟಿಸಿಕೊಂಡು ಆಗುಂಬೆ ದಾರಿಯಲ್ಲಿ ಮುಂದುವರಿದೆವು. ವರಂಗ, ಮುದ್ರಾಡಿ ಕಳೆದರೆ ಸೀತಾನದಿಯ ದಂಡೆ ಸೇರುತ್ತೇವೆ. ಅಲ್ಲಿ ಸುಮಾರು ಒಂದೂವರೆ ಕಿಮೀ ಮುಂದೆ ಅಂದರೆ, ಸೋಮೇಶ್ವರಕ್ಕಿಂತ ಸುಮಾರು ಎರಡು ಕಿಮೀ ಮೊದಲೇ ಬಲಕ್ಕೊಂದು ಹಳ್ಳಿಗಾಡಿನ ಮಣ್ಣು ದಾರಿ, ಅದರ ಕೊನೆಯಲ್ಲಿ ತಿಂಗಳೆ ಎಂಬ ಹಳ್ಳಿ - ನಮ್ಮ ಲಕ್ಷ್ಯ. ತಿಂಗಳೆಯ ಮಹತ್ತ್ವ ತಿಳಿದಿರದ ಕಾಲದಲ್ಲೊಮ್ಮೆ ದಾರಿಯನ್ನು ನಾನು ಸ್ವಲ್ಪ ಬಳಸಿದ್ದನ್ನು ಇಲ್ಲಿ ಸಾದ್ಯಂತ ಹೇಳುವುದು ಉಚಿತ ಎಂದೇ ಭಾವಿಸುತ್ತೇನೆ. ಪ್ರಸ್ತುತ ತಂಡದ ಪರಿಚಯದಲ್ಲಿ ಬಾಕಿಯಾದ ಸೂರ್ಯ ಅಥವಾ ಸೂರ್ಯನಾರಾಯಣ ರಾವ್ ಅಡ್ಡೂರು ಹಿಂದೆ ಇಲ್ಲೆ ಸೂಕ್ಷ್ಮವಾಗಿ ಪರಿಚಯಿಸಿದ ಮಂಗಳೂರಿನ ಸರ್ವ ಪ್ರಥಮ ಉರಗ ಸಂಗ್ರಹಾಲಯದ ರೂವಾರಿಗಳಲ್ಲೊಬ್ಬ; (ವಿವರಗಳಿಗೆ ಇಲ್ಲಿ ಚಿಟಿಕೆ ಹೊಡೆಯಿರಿ) ಉರಗಮಿ-ತ್ರಯವಾದ ಶರತ್ ಮತ್ತು ಚಾರ್ಲ್ಸ್ ಸಹಪಾಠಿ. ಅಂದ ಕಾಲತ್ತಿಲೆ...

ಸಂತ ಅಲೋಶಿಯಸ್ ಕಾಲೇಜಿನ ಮೂರು ಬಿಎಸ್ಸಿ ಹುಡುಗರಿಗೆ ಹಾವುಗಳ ಬಗ್ಗೆ ಅಪಾರ ಉತ್ಸಾಹ ಇತ್ತು. ಆದರೆ ಜೀವ ವಿಜ್ಞಾನ ವಿಭಾಗದ ಅಧ್ಯಾಪಕ ವರ್ಗದಲ್ಲಿ ಯಾರಿಗೂ ಜೀವ ಇದ್ದಂತಿರಲಿಲ್ಲ. ಆಗ ಇಂಗ್ಲಿಷ್ ಅಧ್ಯಾಪಕ ಸನ್ನಿ ತರಪ್ಪನ್ ಇವರನ್ನು ವಹಿಸಿಕೊಂಡರು. ಇವರೇ ಗುರುಶಿಷ್ಯರು ಸೇರಿ, ಮಂಗಳೂರು ವೈಲ್ಡ್ ಲೈಫ಼್ ಟ್ರಸ್ಟ್ ಕಟ್ಟಿ ಹಾವುಗಳ ವಿಚಾರದಲ್ಲಿ ತುಂಬಾ ಹೆಣಗಿದರು. ವಿಷವಿಲ್ಲದ ಹಾವುಗಳನ್ನೇನೋ ಹುಡುಗರು ಕದ್ದು, ಮುಚ್ಚಿ ತಂತಮ್ಮ ಮನೆಗಳಿಗೊಯ್ದು ಸಾಕುವುದು ಆಯ್ತು. ಆದರೆ ನಾಗರ? ಕನ್ನಡಿ? ಕಟ್ಟಬಳಕಡಿ? ಕಾಳಿಂಗ? ಇಂದಿಗೂ ಹೆಚ್ಚು ಬದಲಾಗದ ಪೋಷಕರ (ಶೋಷಕರ?) ಒತ್ತಡಗಳು - ವಿಷ ಜಂತುಗಳನ್ನೆಲ್ಲಾ ಮಕ್ಕಳಿಗೆ ಯಾಕೆ ಬಿಡುದು? ನಾವೆಲ್ಲಾ ಶಾಲೆ ಕಾಲೇಜು ಮಾಡಿಲ್ಲವಾ? ಹೀಗೇ ತರಹೇವಾರಿ. ಮುಜುಗರ ನಿವಾರಿಸಲು ಸಂಸ್ಥೆಯ ವರಿಷ್ಠರನ್ನು ಪುಸಲಾಯಿಸಿ, ಅಲೋಶಿಯಸ್ಸಿನ ಪ್ರೌಢಶಾಲೆಯ ಹಳೆಯ ಮಾಳಿಗೆಯೊಂದರಲ್ಲಿ ಮೊದಲು, ಮತ್ತೆ ಅವರದೇ ಪಾಳುಬಿದ್ದ ಇನ್ನೊಂದೇ ಕಟ್ಟಡದಲ್ಲೂ ಸಂಗ್ರಹಿಸಿದರು. ಕಟ್ಟಡಗಳೆಲ್ಲಾ ಅಭಿವೃದ್ಧಿಯಅಲೆಗೆ ಸಿಕ್ಕುತ್ತಿದ್ದಂತೆ, ಇವರ ಉರಗ ಪರಿವಾರವೂ ವಿಸ್ತರಿಸುತ್ತಿದ್ದಂತೆ ನೆಲೆ ಹುಡುಕುವ ಸಂಕಟವೂ ಹೆಚ್ಚಿತು. ವರ್ಷಕ್ಕೊಂದು ಬಾರಿಯಂತೆ ಎರಡೋ ಮೂರೋ ಬಾರಿ ಅವರಿವರ ಪ್ರಾಯೋಜನ ಪಡೆದು, ಪ್ರವೇಶ ಶುಲ್ಕ ಇಟ್ಟು, ವಾರ ಕಾಲದ ಉರಗ ಪ್ರದರ್ಶನ ಮಾಡಿ ಏನೋ ಒಂದು ಚೂರು ದುಡ್ಡು ಮಾಡಿದರು. ಆದರೆ ಉಳಿದ ಸಮಸ್ಯೆಗಳು? ಕಾಲೇಜಿನಿಂದ ಹೊರದೂಡಿಸಿಕೊಂಡ ಮೇಲೆ ಪಡೀಲು ಬಳಿ ಸಿಕ್ಕಿದ್ದು ಯಾಕೂ ಬೇಡದ ಒಂದು ಶೆಡ್ಡು. ಮಳೆಗಾಲದಲ್ಲಂತೂ ಅಲ್ಲಿನ ಸೋರುವಿಕೆ, ಕೊಚ್ಚೆಗಳ ನಡುವೆ ಹುಡುಗರ ಹೆಣಗಾಟ ಹೇಳಿ ಪ್ರಯೋಜನ ಇಲ್ಲ.

ಇನ್ನು ಅವುಗಳ ಹೊಟ್ಟೆ ಹೊರೆಯುವುದು, ಆರೈಕೆಗಳ ಸಮಸ್ಯೆ ಗಂಭೀರ. ಹೆಬ್ಬಾವಿಗೆ ವಾರಕ್ಕೊಂದಾದರೂ ಕೋಳಿಕೇರೆ ನಾಗರಕ್ಕೆ ಕಪ್ಪೆ ಇಲಿ ಆಗಾಗ, ಪುಟ್ಟ ಗಾತ್ರದವಕ್ಕೆ ಅರಣೆ ಹಲ್ಲಿ, ಎಲ್ಲ ಸಜೀವ ಪೂರೈಕೆಯಾಗಬೇಕು. [ಮುಂದೊಂದು ಕಾಲದ ಉದಾಹರಣೆಗೆ ನಮ್ಮನೆ ಕತೆಯೇ ನೋಡಿ: ಆಗಿನ್ನೂ ಯಮ.ಬಿ.ಬಿಎಸ್ ವಿದ್ಯಾರ್ಥಿಯಾಗಿದ್ದ ಕೃಶಿ ಕೈಗೂಸಾಗಿ ಒಂದು ಪುಟ್ಟ ಹಾವನ್ನು ಸಾಕಿದ್ದರು. ಅದಕ್ಕವರ ಕೋನೆಯಲ್ಲಿ ಆಹಾರದ ಕೊರತೆ ಬಂದಾಗ, ಒಂದು ರಾತ್ರಿ ನನ್ನ ಮನೆಯ ಗೋಡೆಗಳಲ್ಲಿ ಅಸಂಖ್ಯ ಓಡಾಡಿಕೊಂಡಿದ್ದ ಹಲ್ಲಿಗಳ ಸಜೀವ ಬೇಟೆಗಿಳಿದರು. ಮೊದಲು ಒಂದೆರಡು ಸಿಕ್ಕಿದವು. ಅಷ್ಟರಲ್ಲಿ ಉರಗ ಜಗತ್ತಿನಲ್ಲಿ ಬ್ರೇಕಿಂಗ್ ನ್ಯೂಸ್ ಹರಡಿತೋ ಏನೋ ಮತ್ತೆ ಎಲ್ಲವೂ ನಾಪತ್ತೆ. ಮತ್ತೆ ಬಹು ಕಾಲ ನಾವೇನು ಮಾಡದಿದ್ದರೂ ನಮ್ಮ ಗೋಡೆಗಳ ಮೇಲೆ, ನಮ್ಮ ಸಮಕ್ಷಮದಲ್ಲಿ ಹಲ್ಲಿಗಳ ಚಟುವಟಿಕೆಯೇ ಶೂನ್ಯವಾಗಿತ್ತು!] ಶರತ್ ಪರಿಚಿತ ಜಿನಸಿನ ಅಂಗಡಿ ಮತ್ತು ಮನೆಗಳಲ್ಲಿ ಕೆಲವು ಸಂಜೆ ಇಲಿಬೋನು ಇಟ್ಟು ಬರುತ್ತಿದ್ದ. ಬೆಳಿಗ್ಗೆ ಹೋಗಿ ಬೇಟೆಯಾಗಿದ್ದರೆ ಸಂಗ್ರಹಿಸಿ, ಉರಗಗಳ ಅಗತ್ಯ, ಯೋಗ್ಯತಾನುಸಾರ ಬೋನುಗಳ ಒಳಗೆ ಬಿಡಬೇಕಾಗುತ್ತಿತ್ತು. ಒಂದು ರಾತ್ರಿ ನಮ್ಮ ಮನೆಯಲ್ಲಿ ಮೇಲಿಂದ ಮೇಲೆ ನಾಲ್ಕು ಇಲಿ ಸಿಕ್ಕಿತು. ಸಿಕ್ಕಿದಂತೆ ಅವನ್ನು ಖಾಲಿ ಸೀಮೆಣ್ಣೆ ಡಬ್ಬಿಯೊಂದಕ್ಕೆ ಹಾಕಿ ಬಾಯಿ ಮುಚ್ಚಿಟ್ಟೆವು. ಮರು ಹಗಲು ಬರಬೇಕಿದ್ದ ಶರತ್ ಪರೀಕ್ಷೆಯ ನೆಪದಲ್ಲಿ ಮೂರು ನಾಲ್ಕು ದಿನ ನಾಪತ್ತೆ. ಮೊದಲು ಮುಕ್ತ ದಾಂಧಲೆ ನಡೆಸಿದ್ದ ಇಲಿಗಳು ಈಗ ನಮ್ಮಲ್ಲಿ ಅಧಿಕೃತ ಅತಿಥಿಗಳು! ರೇಶನ್ ಅಕ್ಕಿ ತುಂಬಿಸಲೆಂದೇ ಕೊಂಡು ತಂದಿದ್ದ ಡಬ್ಬಿಯಂತೂ ಇಲಿಗಳ ಉಚ್ಚಿಷ್ಟದಲ್ಲಿ ತುಕ್ಕು ಹಿಡಿದು ಮತ್ತೆ ನಮಗೆಂದೂ ದಕ್ಕಲಿಲ್ಲ! ಹಾಗೇ ಉರಗಗಳ ಆರೈಕೆ ಹುಡುಗಾಟಿಕೆ ಮಾತಲ್ಲ. ತುಕ್ಕು ಹಿಡಿದ ತಂತಿ ಬಲೆಗಳಿಗೆ ಹರಕು ಮುರುಕು ರೀಪು ಬಡಿದು, ಮಾಡಿದ ಗೂಡುಗಳಿಂದ ತಪ್ಪಿಸಿಕೊಂಡ ಅದ್ಭುತ ಮಾದರಿಗಳನ್ನು ಮರಳಿ ಮನೆ ಸೇರಿಸಿದ ಎಷ್ಟೂ ಸಾಹಸ ಕಥನಗಳು (ಕೆಲವು ಕಳೆದು ಹೋಗಿ ಘಟಿಸಿದ ಸಣ್ಣಪುಟ್ಟ ಉತ್ಪಾತಗಳೂ) ತರುಣರ ಭಂಡಾರದಲ್ಲಿವೆ.

ಇವೆಲ್ಲ ಕೊನೆಗಂಡದ್ದು ಅರಣ್ಯ ಇಲಾಖೆ ಮನಸ್ಸು ಮಾಡಿ, ಕದ್ರಿ ಗುಡ್ಡೆಯ ಮೇಲೆ ಉರಗ ಉದ್ಯಾನ ತೆರೆದಾಗ. ಅದರ ಔಪಚಾರಿಕ ಉದ್ಘಾಟನೆ ಮತ್ತು ಮೊದಲ ಕೆಲ ಕಾಲ ವೃತ್ತಿಪರ ನಿರ್ವಹಣೆಗೆ ಸ್ವತಃ ರೊಮುಲಸ್ ವಿಟೇಕರ್ ತನ್ನ ಕೆಲವು ಸಿಬ್ಬಂದಿಗಳೊಡನೆ ಬಂದಿದ್ದರು. ಆಗ ಉದ್ಯಾನದ ಉರಗ ಸಂಗ್ರಹಕ್ಕೆ ಕಲಶಪ್ರಾಯವಾಗಿ ಕಾಳಿಂಗ ಸರ್ಪವೊಂದನ್ನು ಹಿಡಿದು ತರಬೇಕೆಂಬ ಆಶಯ ಮೂಡಿತು. ಅಂಥ ಬಿಟ್ಟಿ ಕೆಲಸಕ್ಕೆ ನನಗೆ ಎಲ್ಲಿಲ್ಲದ ಉತ್ಸಾಹ. ನಾನು ಕೈಯಾರೆ ಕೇರೇ ಹಾವನ್ನೂ ಮುಟ್ಟದ ಧೀರನಾದರೂ ವಿಟೇಕರ್ ಜೊತೆಗೊಟ್ಟ ಇರುಳನೊಬ್ಬನಿಗೆ (ತಮಿಳ್ನಾಡಿನ ಒಂದು ವಲಯದ ಹಾವಾಡಿಗ ಆದಿವಾಸಿಗಳು) ಕಾಡು ತೋರಿಸಲು ಮುಂದಾದೆ. ಮಾವನ ಸ್ಕೂಟರ್ ಕಡ ತಂದು, ಇರುಳನನ್ನು ಬೆನ್ನಿಗೇರಿಸಿಕೊಂಡು ಆಗುಂಬೆ ತಪ್ಪಲಲ್ಲಿ ಅಲೆದಾಡಿದೆವು. ಕಾಲದಲ್ಲಿ ಕಾರ್ಕಳದಿಂದ ಮುಂದೆ ಹಲವೆಡೆಗಳಲ್ಲಿ ಶುದ್ಧ ವನ್ಯದ ಪರಿಸರ ಇನ್ನೂ ದಾರಿಯಂಚಿನವರೆಗೂ ಪಸರಿಸಿತ್ತು. ಸಂಶಯ ಬಂದಲ್ಲೆಲ್ಲಾ ನನ್ನನ್ನು ನಿಲ್ಲಿಸಿ, ಇರುಳ ತುಸು ಅತ್ತಿತ್ತ ಸುತ್ತಿ, ನೆಲದ ಲಕ್ಷಣ ನೋಡಿ ಸರೀಸೃಪಗಳ ಚಟುವಟಿಕೆಯ ಬಗ್ಗೆ ಮಾಹಿತಿ ಸಂಗ್ರಹಿಸಿಕೊಳ್ಳುತ್ತಾ ಇದ್ದ. ಮುದ್ರಾಡಿಯಿಂದ ಮುಂದಂತೂ ಅಪರೂಪಕ್ಕೆ ಸಿಕ್ಕ ಹಳ್ಳಿಗರಿಂದ ಸಂಕವಾಳದ ಬಗ್ಗೆ ಧಾರಾಳ ವದಂತಿಗಳನ್ನೂ ಕೇಳಿಕೊಂಡೆವು. ಕೊನೆಗೆ ಹಿಡಿದದ್ದು ಇದೇ ತಿಂಗಳೆ ದಾರಿ.

ಕಾಳಿಂಗನನ್ನು ನೀವು ಕಂಡಿರಾ? ಸಂಕವಾಳದ ಜಾಡು ನಮಗೆ ತೋರಿರಾ ಸಿಕ್ಕಿದವರಲ್ಲೆಲ್ಲಾ ನನ್ನ ವಿಚಾರಣೆ. ಕೋಪಾವೇಶದಲ್ಲಿ ತಾಳೆ ಮರದೆತ್ತರಕ್ಕೆ ನಿಲ್ಲುವ (ತಾಳೆ ಅಷ್ಟು ಗಿಡ್ಡವೇ?), ವಿನಾಕಾರಣ ಬೆನ್ನಟ್ಟಿ ಕಚ್ಚುವ (ಅದೇನು ಪುಡಾರಿಯೇ?), ಕಚ್ಚಿದರೆ ತಿಮಿಂಗಿಲವನ್ನೂ ಕ್ಷಣಮಾತ್ರದಲ್ಲಿ ಪಡ್ಚಮಾಡುವ (ಅದು ಇದಕ್ಕೆಲ್ಲಿ ಸಿಗುತ್ತೋ?) ವಗೈರೆಗಳ ನಿಯಾಮಕನನ್ನು ಬರಿಗೈಯಲ್ಲಿ ಅರಸಿ ಹೊರಟ ನಮ್ಮ ಬಗ್ಗೆ ಅವರಿಗೆಲ್ಲಾ ಅನುಕಂಪ; ಅಪಾಯ ತಲೆಮೇಲೆ ಎಳೆದು ಹಾಕಿಕೊಳ್ತಾರಲ್ಲಾಂತ! ಸುಮಾರು ಎರಡು ಮೂರು ಕಿಮೀ ಒಳಗೆ ಹೋದ ಮೇಲೆ ದಾರಿಯ ಬಲಬದಿಯ ಮುರುಕು ಜೋಪಡಿಯನ್ನೊಬ್ಬ ವಕ್ತಾರ ತೋರಿದ. ದೊಡ್ಡ(ಬಹುತೇಕ ಹಳ್ಳಿಗರು ರಾಜಸರ್ಪದ (ಕಿಂಗ್ ಕೋಬ್ರಾ) ನೇರ ಹೆಸರು ಹೇಳಲೂ ಹೆದರಿ ಹೀಗೆ ಸಂಬೋಧಿಸುತ್ತಾರೆ!) ಅಲ್ಲೇ ಎದುರಿನ ಗದ್ದೆ ಮಾಟೆಯಲ್ಲಿ ಠಿಕಾಣಿ ಹೂಡಿದ್ದನಂತೆ. ಅಲ್ಲಿನ ಏಕೈಕವಾಸಿ - ಓರ್ವ ಮುದುಕಿ ಹೆದರಿ, ತಡಿಕೆ ಬಾಗಿಲೆಳೆದು ಒಂದೆರಡು ದಿನ ಒಳಗೇ ಕೂತಿದ್ದಳಂತೆ. ಅನ್ನಪಾನಗಳಿಲ್ಲ, ಮಿಕ್ಕುಳಿದ ಕ್ರಿಯೆಗಳಾ ಬನ್ನ ಹೇಳಲಾಸಲ್ಲ ಎಂದು ವಕ್ತಾರ ಕೊರೆಯುತ್ತಿದ್ದ. (ಇಂದಾಗಿದ್ದರೆ ನಾನವನಿಗೆ ಕೌಪೀನ ಕಂಠಕ್ಕೇರಿಸಲು ಹೇಳಿ, ಟೀವಿ ನೈನ್ ದಾರಿ ತೋರಿಸುತ್ತಿದ್ದೆ) ಅವನು ದಾರಿಯಲ್ಲೇ ಓಡಲು ಸಜ್ಜಾಗಿ ನಿಂತು ನಮ್ಮ ಮೇಲೆ ಕಣ್ಣಿಟ್ಟಿದ್ದಂತೆ, ಅಜ್ಞಾನಿ ಇರುಳ, ಜೋಪಡಿ, ಮಾಟೆ, ಸುತ್ತಮುತ್ತೆಲ್ಲ ನಿಶ್ಚಿಂತೆಯಲ್ಲಿ ಹುಡುಕಾಡಿ, ಹಳೆಯ ಕೇರೆ ಸಂಚಾರದ ಕುರುಹಷ್ಟೇ ಗುರುತಿಸಿದ. ಕಾಳಿಂಗ ಎಲ್ಲೋ ಊಟ ಹುಡುಕಿಕೊಂಡು ಒಮ್ಮೆ ಅಲ್ಲಿ ಸುಳಿದಿರಬಹುದು ಎಂದಷ್ಟೇ ಅವನು ಹೇಳಿದ. ಅಂದು ಸಂಜೆಯವರೆಗೆ ವಲಯದಲ್ಲಿ ನಮ್ಮೆಲ್ಲಾ ಹುಡುಕಾಟಗಳು ಏನೂ ಫಲಕಾರಿಯಾಗಲಿಲ್ಲ. ಆದರೆ ಕಾಳಿಂಗನ ಕುರಿತು ಸಂದರ್ಶಿಸಿದ ಅಷ್ಟೂ ಹಳ್ಳಿಗರು ನಂಬಿ(ಕೆ) ಕೆಟ್ಟವರೇ ಎಲ್ಲ. ಹೊಟ್ಟೆಹೊರೆ, ಆತ್ಮರಕ್ಷಣೆ ಮತ್ತು ಸಂತತಿ ಮುಂದುವರಿಕೆಯ ಲಕ್ಷ್ಯಗಳಷ್ಟೇ ಇರುವ ಇನ್ನೊಂದು ಭವ್ಯ ಜೀವಿಗೆ ಅದೆಷ್ಟು ಹೊರೆ ಎಂಬ ನನ್ನ ಮಟ್ಟಿನ ಜ್ಞಾನೋದಯವೊಂದೇ ಸತ್ಯ. ಹಾಂ, ಈಗ ನೆನಪಿನ ಪ್ರಾಚೀನದಿಂದ ಕಥನದ ವರ್ತಮಾನಕ್ಕೆ ಬರೋಣ...

ತಿಂಗಳೆ ದಾರಿಯನ್ನು ಅನುಸರಿಸಿದೆವು. ಬಳಕೆ ಕಡಿಮೆಯಿರುವ ಹಳ್ಳಿ ದಾರಿಗಳು ಮಳೆಗಾಲದಲ್ಲಿ ಮಣ್ಣಿನವೇ ಆದರೂ ಸವಾರಿ ಸಮಸ್ಯೆಯಲ್ಲ. ಆದರೆ ಕಿರು ಸೇತುವೆಗಳೇ ಇಲ್ಲದ ಮಳೆನೀರ ತೊರೆಗಳು ಅಡ್ಡ ಬಂದರೆ ಮಾತ್ರ ಜಿಜ್ಞಾಸೆ ತೊಡಗುತ್ತದೆ. ತೊರೆ ಪಾತ್ರೆಯ ದೃಢತೆ ಮತ್ತು ವಿಸ್ತಾರ, ಹರಿನೀರ ಸೆಳೆತಗಳನ್ನು ಸ್ಪಷ್ಟ ಮನಗಾಣದೇ ನುಗ್ಗುವುದು ಮರಣಾಂತಿಕವೂ ಆಗಬಹುದು. ತಿಂಗಳೇ ಮನೆಗೆ ಇನ್ನೇನು ಒಂದು ಕಿಮೀ ಎನ್ನುವ ಹಂತದಲ್ಲಿ ಇಂಥದ್ದೇ ಒಂದು ತೊರೆ ಸಿಕ್ಕಿತು. ಬರಿಯ ಮೂರು ನಾಲ್ಕಡಿ ಅಗಲ ಆದರೆ ಜೀಪಿನ ತಳವೇನು ಒಳನೆಲವೂ ತೊಳೆಯುವಷ್ಟೂ ಆಳದ ಕಂದು ಬಣ್ಣದ ತೊರೆ. ಅರುಣ್ ನಾಯಕ್ಗೆ  ವೇಗೋತ್ಕರ್ಷ ಮಾಡಿ, ಕ್ಷಣಾರ್ಧದಲ್ಲಿ ಸೀಳಿ ಸಾಗುವ ಉತ್ಸಾಹ. ಮುಂದಿನ ಚಕ್ರ ಅಪ್ಪಳಿಸುವ ಬಲಕ್ಕೆ ಪ್ರವಾಹ ಸಿನಿಮೀಯವಾಗಿ ಎರಡು ಹೋಳಾಗಿ ಬೇರ್ಪಟ್ಟು (ಉಕ್ಕುವ ಯಮುನೆ ಶಿಶು ಶ್ರೀಕೃಷ್ಣನ ಪ್ರಭಾವದಲ್ಲಿ ವಸುದೇವನಿಗೆ ದಾರಿ ಬಿಟ್ಟುಕೊಟ್ಟದ್ದೇ ಈತನ ತಲೆಯಲ್ಲಿತ್ತೋ ಏನೋ!) ಸ್ಪಷ್ಟವಾಗಿ ಜಾಡುಮೂಡಿಸಿಕೊಳ್ಳುವ ಕಲ್ಪನೆಅದೃಷ್ಟಕ್ಕೆ (ತೊರೆಯೂ ಸಿನಿಮಾ ನೋಡಿತ್ತೋ ಏನೋ) ಹಾಗೇ ಪಾರುಗಾಣಿಸಿಬಿಟ್ಟ! ಆದರೆ ಆತ ಎದುರು ದಂಡೆಯ ತೀವ್ರ ಏರಿನ ಆಘಾತಕ್ಕೆ ಗಡಬಡಿಸಿದ್ದು ಉಳಿದವರಿಗೆ ತಂತ್ರದ ಮೇಲೆ ವಿಶ್ವಾಸ ಮೂಡಿಸಲಿಲ್ಲ. ನನ್ನ ಲೆಕ್ಕಕ್ಕೆ, ನಿಧಾನವಾಗಿಯೇ ಆದರೆ ದೃಢವಾಗಿ ದಾಟುವಾಗ, ಪ್ರವಾಹದ ನಡುವೆ ಹೊಗೆ ನಳಿಕೆ ಬಂದಾಗಿ ಇಂಜಿನ್ ಕೆಮ್ಮುವ ಸಾಧ್ಯತೆ ಇರುತ್ತದೆ. ಹಾಗೆಂದು ಎಕ್ಸಿಲರೇಶನ್ ಇಳಿಸದೆ, ಇಂಜಿನ್ ಚಾಲೂ ಇರುವುದನ್ನು ನೋಡಿಕೊಳ್ಳಬೇಕು. ಅದು ಬಂದಾಗಿ ಹೋದರೆ ಕಾರ್ಬುರೇಟರಿಗೆ ನೀರು ಸೆಳೆದುಕೊಂಡು, ಪುನಶ್ಚಾಲನೆಗೆ ತಂತ್ರಜ್ಞನನ್ನೇ ಕರೆಯಿಸಬೇಕಾಗುತ್ತಿತ್ತು. ನಾನು ಎರಡೂ ಬದಿಗೆ ಕಾಲಿಳಿಬಿಟ್ಟು, ವೇಗ ನಿಯಂತ್ರಣವನ್ನು ಕ್ಲಚ್ಚಿನಲ್ಲೇ ಸುಧಾರಿಸಿಕೊಂಡು, ಮೊಣಕಾಲಾಳದ ಪ್ರವಾಹಕ್ಕಡ್ಡ ದಾಟಿಯೇ ಬಿಟ್ಟೆ. ಮಂಜಪ್ಪ ಸ್ವಲ್ಪ ಕುಳ್ಳು, ಆದರೆ ಭಾರೀ ಛಲವಂತ. ಅರುಣ್ ತಂತ್ರ ಒಪ್ಪಿಗೆಯಿಲ್ಲ, ನನ್ನ ಹಾಗೇಂದ್ರೆ ಕಾಲು ಎಟಕುವುದಿಲ್ಲ. ಸ್ವಲ್ಪ ಅರುಣ್ ತಂತ್ರ, ಅಡ್ಡ ಬೀಳುವಂತಾದ್ರೇಂತ ಉದ್ದಗಾಲಿನ ಸುಬ್ಬನಿಗೆ ನೋಡಿಕೊಳ್ಳಲು ಹೇಳಿ ತೊರೆ ಪಾರುಗಾಣಿಸಿದರು. ಒಮ್ಮೆ ದಾಟೋದೆಲ್ಲಾ ಸರಿ. ಮಳೇ ಲಕ್ಷಣಾ ನೋಡಿದರೆ ವಾಪಾಸು ಹೋಗೋ ಹೊತ್ತಿಗೆ ನೀರು ಇನ್ನೂ ಹೆಚ್ಚಿದ್ದರೆ.. ಎನ್ನುವ ಸಂಶಯ ಪಿಶಾಚಿಗಳ ಮಾತು ಗಾಳಿಗೇ ಹೋಯ್ತು.

ತಿಂಗಳೆ ರವೀಂದ್ರ ಹೆಗ್ಡೆ ಮೂಲತಃ ಕೃಷಿಕ, ಆಸಕ್ತಿಯಲ್ಲಿ ಸಾಹಿತ್ಯ, ಲಲಿತ ಕಲೆಗಳೆಲ್ಲದರ ಸದಭಿರುಚಿಯ ರಸಿಕ. ಆದರೆ ಮಾಮೂಲೀ ದಿನಗಳಲ್ಲಿ ಅವರು ಕಗ್ಗಾಡು ಕೊಂಪೆಯಲ್ಲಿ ಮಹತ್ತರದ ಆಶಯವೇನೂ ಇಟ್ಟುಕೊಳ್ಳುವಂತಿರಲಿಲ್ಲ. ಅದಕ್ಕೆ ಸ್ಥಳೀಯ ಭೂತದ ವಾರ್ಷಿಕ ಕಲಾಪದ ನೆಪ ಹಿಡಿದು, ಹೆಗ್ಡೆಯವರು ನಡೆಸುತ್ತಿದ್ದ ಸಾಹಿತ್ಯ, ಸಾಂಸ್ಕೃತಿಕ ಕಲಾಪಗಳ ಹಿರಿಮೆ ಮತ್ತು ಭಾಗಿಗಳಾಗುತ್ತಿದ್ದ ಗಣ್ಯರ ಹೆಸರು ಅಸಾಮಾನ್ಯ. ಅಷ್ಟು ದೊಡ್ಡ ಸಾರ್ವಜನಿಕ ವ್ಯಕ್ತಿ ಅಂದರೆ ಎಲ್ಲೋ ಭಾರೀ ಗತ್ತಿನಲ್ಲಿರಬಹುದು, ಅರಮನೆಯಂಥಾ ಮನೆ ಸಿಗಬಹುದು ಎಂದು ಎಣಿಸಿದ್ದೆವು. ಆದರೆ ಮಲೆಯ ಮೂಲೆಗೆ, ಮಳೆಯ ಬೀಡಿಗೆ ಸಹಜವಾದ ತಗ್ಗುಮಾಡಿನ ಸರಳ ಮನೆಯಲ್ಲಿ, ಬಿಳಿಗೂದಲಿನ ತೆಳು ಒಡಲಿನ, ನಸು ನಗೆಯ ಹೆಗ್ಡೆಯವರು ಸಿಕ್ಕಾಗ ಆಶ್ಚರ್ಯವೇ ಆಗಿತ್ತು. ನಮ್ಮುದ್ದೇಶ ಕೇಳಿದ ಮೇಲೆ ಅವರ ನಗೆಗೆ ಅನುಕಂಪದ ಸಿಂಚನವಾಯ್ತು. ಆವೇಶವಿಲ್ಲದೆ ಕೂಡ್ಲು ತೀರ್ಥದ ಮಳೆಗಾಲದ ವಾಸ್ತವವನ್ನು ಹೇಳಿದರು. ಅವರ ಪ್ರಾಯ ಮತ್ತು ಅನುಭವಕ್ಕೆ ಹೊಂದಿದಂತೆಯೇ ನಿರುತ್ತೇಜಿಸಿದರು. ಮಳೆ, ಮಂಜು, ಹೊಳೆ, ಜಿಗಣೆ, ಹಾವು, ಬೆಟ್ಟ, ಕಾಡು ಇತ್ಯಾದಿ ಪೇಟೆಯವರೇನು ಅಲ್ಲಿನವರೇ ಬಯಸಿ ಹೋಗುವ ಸಮಯವೇ ಇದಲ್ಲ ಎಂದರು. ಕೊನೆಯಲ್ಲಿ ನಮ್ಮ ಸಡಿಲದ ಪಟ್ಟು ನೋಡಿ, ಅನುಭವಿಸಲು ಸಮರ್ಥ ಮಾರ್ಗದರ್ಶಿಯನ್ನೇ ಕೊಟ್ಟು ಕಳಿಸಿದರು.
[ಕುವೆಂಪು ಮಲೆನಾಡನ್ನು ವೈಭವೀಕರಿಸಿದರು. ಅವರಿಗೆ ಬಾಲ್ಯದ ನೆನಪುಗಳು ಬಿಟ್ಟರೆ, ಉಳಿದವೆಲ್ಲ ರಮ್ಯ ಪ್ರವಾಸಿಯ ಭೇಟಿಗಳೇ ಆಗಿರುತ್ತಿದ್ದವು. ಬಹುಶಃ ವಿಚಾರದಲ್ಲಿ ತೇಜಸ್ವಿ ಅಪ್ಪನಿಂದ ಬಲು ದೂರವುಳಿಯುತ್ತಾರೆ, ನನ್ನಂಥವರಿಗೆ ಹೆಚ್ಚು ಆಪ್ತರಾಗುತ್ತಾರೆ. ಶಿವರಾಮ ಕಾರಂತರು ಕರಾವಳಿಯಲ್ಲಿ, ಘಟ್ಟದ ತಪ್ಪಲಿನಲ್ಲಿ ಬಾಲ್ಯ ಕಳೆದರೂ ಸ್ವಭಾವತಃ ಭಾವುಕತೆಯಿಂದ ದೂರ. ಕಾಡು, ಬೆಟ್ಟಗಳ ವಿಚಾರದಲ್ಲಿ ಅವರು ಹೆಚ್ಚು ವಾಸ್ತವವಾದಿಯಾಗಿಯೇ ನನಗೆ ಪ್ರಿಯರಾಗುತ್ತಾರೆ. ಇಂದು ಯೋಚಿಸುವಾಗ ಕಾಣುತ್ತದೆ, ಅಂಥಾ ಕಾರಂತರ ಸ್ನೇಹಾಚಾರವನ್ನು ಗಳಿಸಿದ್ದ ತಿಂಗಳೆಯ ರವೀಂದ್ರ ಹೆಗ್ಡೆಯವರು ಬೇರೆ ಇರಲು ಸಾಧ್ಯವಿರಲಿಲ್ಲ. ಹಾಗಾಗಿ ಹಳ್ಳಿ ಬದುಕಿನ ಸತ್ಯವಾಗಿ ದೈವ, ಆರಾಧನೆ, ನಂಬಿಕೆ, ಎಚ್ಚರಿಕೆಗಳನ್ನು ಅನುಸರಿಸಿದವರಾದರೂ ನಮ್ಮ ವಿಚಾರ, ಛಲವನ್ನು ಗ್ರಹಿಸಿ ಗೌರವಿಸಿದ್ದರು.]
ತೋಟದೊಳಗಿನ ತಚಪಚ, ಪುಟ್ಟ ತೋಡು ನಮಗೇನೂ ಸಮಸ್ಯೆಯಾಗಲಿಲ್ಲ. ಆದರೆ ಸ್ವಲ್ಪ ಅಂತರದಲ್ಲೇ ಅಡ್ಡಲಾಗಿ ಸಿಕ್ಕ ಕೂಡ್ಲು ಹೊಳೆ ಅರ್ಥಾತ್ ಸೀತಾನದಿಯ ಮುಖ್ಯ ಧಾರೆ ಮಾತ್ರ ನಮ್ಮನ್ನು ಒಮ್ಮೆ ಅಧೀರರನ್ನಾಗಿಸಿದ್ದು ನಿಜ. ವಿಸ್ತಾರ ಪಾತ್ರೆಯಲ್ಲಿ ತುಂಬಿದ ಪ್ರವಾಹ ನಮ್ಮ ಎಲ್ಲ ಅಂದಾಜುಗಳನ್ನೂ ಮೀರಿ ಗಂಭೀರವಾಗಿತ್ತು. ಅಬ್ಬರದ ಮಳೆಯೊಡನೆ ತಪ್ಪಲಿನ ತೊರೆ, ತೋಡುಗಳು ಅಸಾಮಾನ್ಯ ಗಾತ್ರ ತಳೆಯುವುದು ನಮಗೇನೂ ಗೊತ್ತಿಲ್ಲದ್ದಲ್ಲ. ಆದರೆ ತಲೆ ಎತ್ತಿ ನೋಡಿದಾಗ ಮಳೆಯಬ್ಬರ, ಮೋಡಗಳ ತಿರುಗಣಿ ಮಡುವಿನ ಎಡೆಯಲ್ಲಿ ಇಣುಕುನೋಟದಲ್ಲಷ್ಟೇ ದಕ್ಕುತ್ತಿದ್ದ ದೃಷ್ಯ ಅವಿಸ್ಮರಣೀಯ. ತೀರಾ ಸಮೀಪದಲ್ಲೇ ಆಕಾಶದೆತ್ತರಕ್ಕೆ ಗೋಡೆಯಂತೇ ನಿಂತ ಪಶ್ಚಿಮ ಘಟ್ಟದ ಮುಖ್ಯ ಸರಣಿ ಲಾಳಾಕೃತಿಯಲ್ಲಿ ನಮ್ಮನ್ನು ಆವರಿಸಿಕೊಂಡಿತ್ತು. ಅಷ್ಟೂ ಮೈ ಹಸುರುಗಪ್ಪಾಗಿ, ಹೆಚ್ಚು ಕಡಿಮೆ ಪ್ರತಿ ಒಳ ತಿರುವಿನಲ್ಲೂ ಬೆಳ್ನೊರೆಗಾರುವ ಭಾರೀ ಜಲಪಾತಗಳನ್ನು ಕಾಣಿಸುತ್ತಿತ್ತು. ಇಲ್ಲಿ ಕೂಡ್ಲು ಹೊಳೆ ಬರಿಯ ತಿಂಗಳೆವಲಯದ ಕೊನೆಯ ಹೆಸರು ಎನ್ನಬಹುದಾದ ಕೂಡ್ಲುತೋಟಕ್ಕೇ ಸೀಮಿತವಲ್ಲ. ಬದಲು ಕಣಿವೆಗೆ ವಾಲಿಕೊಂಡ ಘಟ್ಟದ ಮೇಲಿನ ಅನಂತ ವಿಸ್ತಾರದ ಜಲ ಸಮ್ಮರ್ದದ ಅಭಿವ್ಯಕ್ತಿ. ಕನಿಷ್ಠ ಎರಡಾಳು ಆಳ, ಸುಮಾರು ನೂರಡಿ ಅಗಲದ ಹೊಳೆಯ ಸೆಳವು, ಸುಳಿ, ಕೊಚ್ಚಿ ತರುವ ಮರ ಯೋಚಿಸಿಯೇ ಮರವಟ್ಟೆವು. ಹಾಗೆಂದು ಅಲ್ಲೇ ಪಾತ್ರೆಯಂಚಿನಲ್ಲೂ ಹೆಚ್ಚು ಹೊತ್ತು ಬರಿದೇ ನೋಡುತ್ತಾ ಸ್ವಸ್ಥ ನಿಂತೇವು ಎನ್ನುವ ವಿಶ್ವಾಸವನ್ನೂ ಕೊಡದಂತೆ ಇಡಿಯ ವಾತಾವರಣದಲ್ಲೊಂದು ನಿಗೂಢ ಕಂಪನವಿತ್ತು.

ಪ್ರಾಯ, ಅನುಭವಗಳಲ್ಲಿ ಮಾಗಿದ ರವೀಂದ್ರ ಹೆಗ್ಡೆಯವರೆದುರಿನ ನಮ್ಮ ವೀರಾವೇಶ ಉಳಿಯಿತೇ? ಅಥವಾ ಇನ್ನೊಮ್ಮೆ ಕಂಡರಾಯ್ತೆಂದು ಮರಳಿದೆವೇ? ಸರಿ ಸುಮಾರು ಮೂವತ್ತು ವರ್ಷಗಳ ಅನುಭವದ ಮೊಟ್ಟೆಗೆ ಇನ್ನೇನು ವಾರ-ಹತ್ತು ದಿನದ ಕಾವು ಕೊಟ್ಟು, ರೆಕ್ಕೆಪುಕ್ಕ ಬಲಿಸಿ ಹಾರಬಿಡುತ್ತೇನೆ. ಅದಕ್ಕೆ ಕಾಯುವುದರೊಂದಿಗೆ ಇದುವರೆಗಿನ ಕಥನಕ್ಕೆ ಕಾಳು ಕೊಡೀ ಕಾಳು ಕೊಡಿ.

8 comments:

 1. ಕಾಳಿಂಗನಿಗೆ "ದೊಡ್ಡ" ಮತ್ತು ಹೆಬ್ಬುಲಿಗೆ " ಮಾಮು" ಎನ್ನುವ ಪರಿಪಾಠ ಕಾಡುತಿರುಗಿ ಕಾಡುತ್ಪತ್ತಿ ಸಂಗ್ರಹಿಸುವ ಜನರಲ್ಲಿ ಬಹು ಸಾಮಾನ್ಯ. ನಾನೂ ತಮ್ಮೊಂದಿಗೇ ಹೆಜ್ಜೆ ಹಾಕಿದೆ! ಮುಂದಿನ ಕಂತಿಗೆ ಕಾಯುವ ಕುತೂಹಲ ನನ್ನಲ್ಲಿ ಈಗ ಉಳಿಸಿಬಿಟ್ಟಿರಿ. ಕಾಯುತ್ತೇನೆ. - ಪೆಜತ್ತಾಯ. ಎಸ್. ಎಮ್.

  ReplyDelete
 2. William Robert Dasilva21 December, 2012 09:14

  I have very fresh memories of those days. I was in what is called student or university student association. Originally catholic or christian, but gradually all students got themselves interested. After Olavinahal'lli this adventure got wind in its wings and flew quite high. But, later, ST's debacle, loss of leadership in Olavinahal'lli etc. got the wind take other personal directions. I remember intervening by taking ST to Pangala, Udupi, to collect saplings or cultivars of jasmine for O-hal'lli. But, to no avail. ST had been oustd unceremoniously from the trust and then came 'dray days.'

  And more...

  ReplyDelete
 3. ಪ್ರಿಯ ಅಶೋಕವರ್ಧನರಿಗೆ ನಮಸ್ಕಾರ,

  ನಿಮ್ಮ ಬರೆಹವೊಂದು ಸುಂದರ ಲಲಿತ ಪ್ರಬಂಧವಾಗಿದೆ. ಇದನ್ನು ಸಶೇಷವಾಗಿಸಿ ನನ್ನ
  ಕುತೂಹಲವನ್ನು ಕಂಗಾಲಾಗಿಸಿದ್ದೀರಿ!!

  ReplyDelete
 4. Dear ashok sir,

  Nemma ella lekanavanu seri ondhu pusthaka roopdalli thandere nammantha odhugarige adhu projana aguthe

  sathyajith

  ReplyDelete
  Replies
  1. ಅಶೋಕವರ್ಧನ21 December, 2012 20:41

   ಪ್ರಿಯ ಸತ್ಯಜಿತ್
   ೧. ಈಗಾಗಲೇ ಅಭಿನವ ಪ್ರಕಾಶನದಿಂದ - ದ್ವೀಪ ಸಮೂಹದ ಕತೆ ಮತ್ತು ಪ್ರಗತಿ ಗ್ರಾಫಿಕ್ಸಿನಿಂದ ಶಿಲಾರೋಹಿಯ ಕಡತ ಸಂಕಲನಗಳು ಪ್ರಕಟವಾಗಿವೆ. ಮತತು ಕುಮಾರಪರ್ವತದ ಆಸುಪಾಸು - ಅಭಿನವದಿಂದ ಪ್ರಕಟಗೊಳ್ಳುವ ಹಂತದಲ್ಲಿದೆ.
   ೨. ಜಾಲತಾಣದಲ್ಲಿ ಇವು ಮುಕ್ತವಾಗಿ ಇದ್ದೇ ಇರುತ್ತವೆ
   ೩. ನಮ್ಮ ಮಿತಿಯ ಜ್ಞಾನವನ್ನು ಮನುಷ್ಯಮಿತಿಯಲ್ಲಿ ಅಮರಗೊಳಿಸುವ ಪ್ರಯತ್ನವಾಗಿ ನನ್ನ ತಂದೆಯ ಕೃತಿಗಳನ್ನೂ ಜಾಲತಾಣದಲ್ಲಿ ನಿಧಾನಕ್ಕೆ ತರುತ್ತಿರುವುದನ್ನು ನೀವು ಗಮನಿಸಿದ್ದೀರೆಂದು ಭಾವಿಸುತ್ತೇನೆ.

   Delete
 5. ನಿರೂಪಣೆ ಮತ್ತು ವಿಷಯ ಅದ್ಭುತ, ಮಲೆನಾಡಿನ ವರ್ಣನೆ ಸುಂದರವಾಗಿದೆ.ನಿಮ್ಮ ಮುಂದಿನ ಪುಟವನ್ನ ಕಾಯುತ್ತಾ ಇದ್ದೇನೆ.

  ReplyDelete
 6. ಮಿತ್ರ ಅಶೋಕ ವರ್ಧನರಿಗೆ, ವಂದೇಮಾತರಮ್.
  ಚಿಕ್ಕಂದಿನ ನೆನಪಿನ ತಾಣವನ್ನು ತೆರಿಯುತ್ತಿದ್ದೀರಿ. ಕೈಯಡಿ ಕಾಲಡಿ ನಾಗರ ಹಾವುಗಳು ಇದ್ದ ಕಾಲ. ಸೀತಾ ನದಿಯ ದಡದ ಬದುಕಿನ ನೆನಪನ್ನು ಕೂಡಾ ತಂದಿದ್ದೀರಿ. ಕೃತಜ್ನತೆಗಳು.
  ಒಮ್ಮೆ ಶಿವರಾಮ ಕಾರಂತರಲ್ಲಿ ಒಂದು ಹುಡುಗಿಯ ಪರಿಚಯ ಮಾಡಿ "ಇವಳಿಗೆ ಒಬ್ಬ ಒಳ್ಳೆ ಹುಡುಗ ಬೇಕು" ಎಂದರೆ,"ಈಗ ನಮ್ಮಲ್ಲಿ ’ಒಳ್ಳೆ’ ’ಕೇರೆ’ ಗಳೆಲ್ಲಾ ಮಾಯವಾಗಿವೆ". ಎಂಬ ಸಹಜವಾದ ಚಟಾಕಿ ಹಾರಿಸಿದ್ದರು.


  Jai Hind,
  K C Kalkura B.A, B.L
  Advocate

  ReplyDelete
 7. ನಾನು ಹತ್ತು ವರ್ಷಗಳ ಹಿಂದೆ ಕೂದ್ಲುತೀರ್ಥ ನೋಡಲು ಹೋದಾಗ ಸೀತಾನದಿ ಸೇತುವೆಯ ಬಳಿ ಕಾರ್ ನಿಲ್ಲಿಸಿ ಅಲ್ಲಿಂದ ಐದು ಕಿ ಮೀ ನಡೆದು ಗುಡ್ಡ ಹತ್ತಿ ಇಳಿದು ಕೂದಲು ತೀರ್ಥದ ಬುಡ ತಲುಪಿ ದಾಗ ಅಲ್ಲಿ ಜನ ಜಾತ್ರೆಯೇ ನೆರೆದಿತ್ತು .ಮಣಿಪಾಲ ,ಉಡುಪಿ ವಿಧ್ಯಾರ್ಥಿಗಳ ಗುಂಪು. ಆದರೂ ಆ ಟ್ರಕಿಂಗ್ ಚೆನ್ನಾಗಿತ್ತು. ಅಲ್ಲಿಂದ ತಂದ ಹೊಳೆಯ ನುಣುಪುಗಲ್ಲು ಈಗ ಬೋನ್ಸಾಯ್ ಗಿಡಕ್ಕೆ ಅಲಂಕಾರ ವಾಗಿದೆ. ಈಗ ತಾರ್ ರಸ್ತೆ ನದಿಯವರೆಗೂ ಇದೆ. ನದಿಗೆ ಬೈಕ್ ಮತ್ತು ಮನುಷ್ಯರು ದಾಟುವ ಕಿರು ಸೇತುವೆ ಇತ್ತು.

  ReplyDelete