14 December 2012

ನಡೆದು ನೋಡೈ ನೀಂ ಶಿರಾಡಿ ಸೊಬಗಂ!


(ಚಕ್ರವರ್ತಿಗಳು - ಏಳನೆಯ ಸುತ್ತು)

[ಕರಾವಳಿ ಪ್ರದೇಶವಾದ ಅವಿಭಜಿತ ದಕ ಮತ್ತು ಉಕ ಜಿಲ್ಲೆಗಳನ್ನು ಪರಶುರಾಮ ಸೃಷ್ಟಿ ಎನ್ನುವುದುಂಟು. ಕಿನಾರೆ ಮೇಲೆ ಕಡಲಿಗೆದುರಾಗಿ ನಿಂತ ಕೊಡಲಿಗೊರವ ಸಮುದ್ರರಾಜನ ಪ್ರತಾಪವನ್ನು ಧಿಕ್ಕರಿಸಿ ಕೋಪೋನ್ಮತ್ತತೆಯಿಂದ ತನ್ನ ಕುಠಾರಾಯುಧವನ್ನು ಶಕ್ತಿಮೀರಿ ಎಸೆದ. ಅದು ತಲಪಿದ ಬಿಂದುವಿನವರೆಗೆ ನೀರು ಹಿಂದೆ ಸರಿದು ನೆಲ ಎದ್ದಿತು. ಇದು ಜಾನಪದ ಕತೆ. ವಾಸ್ತವವಾಗಿ ಕಬ್ಬಿಣಯುಗದ ಆರಂಭದಲ್ಲಿ ಮಾನವ ಕಾಡು ಕಡಿದು, ನಾಡು ಬೆಳಗಿಸಿದ ಸಾಹಸವನ್ನು ಇದು ಪ್ರತೀಕಿಸುತ್ತದೆ ಎನ್ನುತ್ತಾರೆ ಪುರಾತತ್ತ್ವ ಸಂಶೋಧಕರು. ಇನ್ನು ವಿಶ್ವಾಮಿತ್ರ? ಅಭಿನವ ಬ್ರಹ್ಮ ಈತ. ವಿಶ್ವಾಮಿತ್ರ ಸೃಷ್ಟಿ (ತ್ರಿಶಂಕು ಸ್ವರ್ಗ) ಇನ್ನೊಂದೇ ಸುಪರಿಚಿತ ಜಾನಪದ ನಂಬಿಕೆ. ಇದು ಯಂತ್ರ ಬ್ರಹ್ಮನ ಆಗಮನವನ್ನು ಪ್ರತೀಕಿಸುತ್ತದೆ ಎನ್ನುತ್ತಾರೆ ಮಾನವಶಾಸ್ತ್ರ ವಿದ್ವಾಂಸರು. ಬ್ರಹ್ಮದ್ವಯರ ಹೋರಾಟದ (ಅಥವಾ ಸಹಕಾರದ?) ಆಧುನಿಕ ಫಲವೇ ಹಾಸನ ಮಂಗಳೂರು ರೈಲು. ಪ್ರಸಕ್ತ ಲೇಖನದಲ್ಲಿಯ ನಿರೂಪಣೆ ರೈಲು ಬಿಡುವುದಲ್ಲ, ರೈಲು ದಾರಿ ನೋಡುವುದು - ನಡೆದು ನೋಡೈ ನೀಂ ಬೆಡಗಿನ ಸಡಗರಂ! - ೧೯೯೦ರ ಸಂಪಾದಕೀಯ ಟಿಪ್ಪಣಿ - ಜಿ.ಟಿ.ನಾ]


ಅದ್ಭುತ ಗುಹಾಮಾರ್ಗ, ಸೇತುವೆ, ಉನ್ನತ ಶಿಖರಗಳು, ವೈಭವದ ಜಲಪಾತಗಳು, ಹಸುರಿನ ಸೊಂಪು, ಹೂವಿನ ಕಂಪು, ಸೃಷ್ಟಿ ವೈಚಿತ್ರ್ಯದ ಬಹುರತ್ನ ಮಾಲೆ ಶಿರಾಡಿ ರೈಲುಮಾರ್ಗ. ಇಲ್ಲಿ ರೈಲುಯಾನ ಚಂದ, ನಡಿಗೆ ಬಲು ಅಂದ, ಮಳೆಗಾಲದ ನಡಿಗೆ ಪರಮಾನಂದ ಎನ್ನಲು ಮೂರು ಅನುಭವ ಕಥನಗಳು ಹುರಿಗೊಂಡ ಎರಡು ಚಿತ್ರಗಳು.

ಘಟ್ಟ ಪಳಗಿಸುವ ನೋಟ

ಯಾರದೋ ಕಲ್ಪನೆ, ಇನ್ನಾರದೋ ಯೋಜನೆ, ಮತ್ತೆ ಎಂದೋ ಸರ್ವೇಕ್ಷಣೆ, ಕೊನೆಗೊಮ್ಮೆ ಮಂಜೂರಾತಿ ಎಂದು ಎಷ್ಟೆಷ್ಟೋ ತಲೆ, ವರ್ಷ, ಹಣ ಕೂಡಿ ರೂಢಿಗೆ ಬರುವ ನಮ್ಮ ಬೃಹತ್ ಯೋಜನೆಗಳಿಗೆ ಅಪವಾದವಾಗದ ಆಮೆ ಗತಿಯಲ್ಲಿ ೧೯೭೦ರ ದಶಕದಲ್ಲಿ ಹಾಸನ-ಮಂಗಳೂರು ರೈಲ್ವೇ ಕಾರ್ಯ ಸಾಗಿತ್ತು. ಅಲ್ಲಿ, ಇಲ್ಲಿ ಇಲಾಖೆಯ ಕೃಪಾಪೋಷಿತ ವರದಿಗಳು, ಲೇಖನಗಳೂ ಪ್ರಕಟವಾಗುತ್ತಿದ್ದರೂ ಗೆಳೆಯ ಈಶ್ವರ ದೈತೋಟರ ಉದಯವಾಣಿಯ ವರದಿಯಷ್ಟು ಪರಿಣಾಮಕಾರಿಯಾಗಿ ಯಾವವೂ ನನ್ನನ್ನು ಆಕರ್ಷಿಸಿರಲಿಲ್ಲ. ನನಗೆ ಅಂಕಿ ಸಂಕಿಗಳಲ್ಲಿ ಮಹತ್ತೂ ಬೃಹತ್ತೂ ಹೇಳುವ ಕಡೆಗೆ ವಿಶೇಷ ಗಮನವಿರಲಿಲ್ಲ. ಫಶ್ಚಿಮ ಘಟ್ಟವೆಂಬ ಮಹಾಸರ್ಪದ ಮೈಯಲ್ಲಿ ಹರಿದ ಹುಳುವಿನಂತೆ ಕಾಣಬಹುದಾದ ಮನುಷ್ಯಪ್ರಯತ್ನ, ಘಟ್ಟ ಪಳಗಿಸುವ ನೋಟ ನನ್ನ ಲಕ್ಷ್ಯ. ಅವರಿವರನ್ನು ಸಂಪರ್ಕಿಸಿ ವಿವರ ಸಂಗ್ರಹಿಸಿದೆ.

ಅದೊಂದು ಶನಿವಾರ ರಾತ್ರಿ ನಾವಾರು ಜನ (ಪಂಡಿತಾರಾಧ್ಯ, ಕೆ.ಎಲ್ ರೆಡ್ಡಿ, ಕೃಷ್ಣ ಭಟ್, ನಾಗೇಶ್, ಸುಂದರರಾವ್) ಪುತ್ತೂರು ಬಸ್ಸು ಹಿಡಿದೆವು. ದಿನದ ಕಡೆಯ ಬಸ್ಸು ಅದಾಗಿ ಹತ್ತಿಳಿವ ಅಸಂಖ್ಯ ಜನರನ್ನು ಸುಧಾರಿಸುವಲ್ಲಿ ಎಲ್ಲ ವೇಗ ವ್ಯರ್ಥವಾಗಿ ಪುತ್ತೂರು ತಲಪಿದಾಗ ಗಂಟೆ ಹತ್ತು. ಸ್ಥಳ ಮರ್ಯಾದೆಗೆ ಕುಂದು ಬಾರದಂತೆ ಎಲ್ಲರೂ ಒಂದು ಆಟೋರಾಕ್ಷಸನ (ರಿಕ್ಷಾ) ಗರ್ಭಸ್ಥರಾಗಿ ಆರು ಕಿಮೀ ದೂರದ ನನ್ನಜ್ಜನ ಮನೆ - ಮರಿಕೆ, ಸೇರಿದೆವು. ಮನೆ ಯಜಮಾನ - ನನ್ನ ಸೋದರ ಮಾವ, .ಪಿ. ತಿಮ್ಮಪ್ಪಯ್ಯ, ನನ್ನ ರೂಢಿಗತ ಸಂಬೋಧನೆಯಂತೆ ಅಣ್ಣ ನಮಗೆಲ್ಲಾ ಮುಖಮಂಟಪದಲ್ಲಿ ಮಲಗುವ ವ್ಯವಸ್ಥೆ ಮಾಡಿದ್ದರು. ಬಾನಕನ್ನೆ ಹುಣ್ಣಿಮೆ ಚಂದ್ರನನ್ನು ಗುಡಿಸಿ ತೆಗೆದ ದೂಳನ್ನು ಭೂಮಿಗೆ ಚೆಲ್ಲಿದ್ದಳು. ದಿಗಂತದಲ್ಲೆಲ್ಲೋ ಆಕೆ ಇನ್ನೂ ಗುಡಿಸುತ್ತಿರುವಂತೆಯೂ ಆಕೆಯ ಕೈಬಳೆ ಮಿಂಚು ಬಾನಭಿತ್ತಿಯಲ್ಲಿ ಕಾಣುತ್ತಲೇ ಇತ್ತು. ಅಂಗಳದಲ್ಲಿ ಒಣಗಲು ಹರಡಿದ್ದ ಅಡಿಕೆ ಸಂಜೆಯ ಕಿರುಮಳೆಗೆ ತೊಯ್ದಿತ್ತು. ಸದ್ಯ ಅದನ್ನು ಗುಡ್ಡೆ ಹಾಕಿ, ಸೋಗೆಮುಚ್ಚಿಗೆ ಕೊಟ್ಟಿದ್ದರೂ ಬೀರುತ್ತಿದ್ದ ಬಿಸು ಕಂಪು ಹೆಚ್ಚಿನ ಪಟ್ಟಣಿಗ ಮಿತ್ರರಿಗೆ ಹೊಸ ಪರಿಸರವಾಗಿ ನಿದ್ರೆ ತರಲಿಲ್ಲವಂತೆ. ಬಿಬ್ಬಿರಿಯಿರಿವ, ನಸು ಚಳಿ ಕೊರೆವ, ಕಂಗುಕಮ್ಮಿನ ರಾತ್ರಿ ಇನ್ನೇನು ಕಳೆಯದು ಎನ್ನುವಾಗ ಅಡುಗೆ ಮನೆಯ ತಟಕಟ ಎಚ್ಚರಿಸಿತಂತೆ. ನಾನಂತೂ ಅಜ್ಜನ ಮನೆಯ ಸೊಕ್ಕಿನ ಬೆಕ್ಕಿನಂತೆ ಒಳ್ಳೆಯ ನಿದ್ರೆ ತೆಗೆದೆದ್ದೆ! ಪ್ರಾತರ್ವಿಧಿಗಳನ್ನು ಮುಗಿಸುವುದರೊಳಗೆ ಮಾವನಿಂದಲೇ ತಿಂಡಿಯ ಕರೆ ಬಂತು. ಮತ್ತೆ ನೋಡಿದರೆ ಅತ್ತೆ, ಮಕ್ಕಳೆಲ್ಲ ರಜದಲ್ಲೆಲ್ಲೋ ಹೋಗಿದ್ದರು. ಆದರೆ ನನ್ನ ಮಾವ ಸಕಲಕಲಾವಲ್ಲಭ. ರಾತ್ರಿಯೇ ಉದ್ದುಬೀಸಿ, ಅಕ್ಕಿ ತರಿದು ಹುಳಿಬರಿಸಿಟ್ಟ ಹಿಟ್ಟನ್ನು, ಬಾಳೆಲೆಯ ಕೊಟ್ಟೆಗಳಲ್ಲಿ ತುಂಬಿ, ಕಳಸಿಗೆಯಲ್ಲಿ ಹಬೆಯಾಡಲು ಬಿಟ್ಟಾಗಿತ್ತು. ಅನಂತರ ನಮಗೆಲ್ಲ ಉಪ್ಪಿಟ್ಟು, ಬಾಳೆಹಣ್ಣು, ಕಾಫಿಯ ಸಮಾರಾಧನೆ ನಡೆಸಿದರು. ಹೊರಡುವ ಹೊತ್ತಿಗೆ ತಯಾರಾದ ಕಡುಬು ಮಧ್ಯಾಹ್ನಕ್ಕೆ ಬುತ್ತಿ.

ಯೋಜನೆಯಂತೆ ಮಾವ ಕಾರಿನ ರಾಮಭಟ್ಟರಿಗೆ ಮೊದಲೇ ಹೇಳಿದ್ದರಿಂದ ಐದೂಕಾಲಕ್ಕೇ ನಾವು ಮಾವನನ್ನೂ ಸೇರಿಸಿಕೊಂಡು ಮರಿಕೆ ಬಿಟ್ಟೆವು. ಪುತ್ತೂರು, ಉಪ್ಪಿನಂಗಡಿಗಾಗಿ ಬೆಂಗಳೂರು ದಾರಿ ಹಿಡಿದೆವು. ಕಾರು ಮಂಜಿನ ಪೊರೆ ಸೀಳಿ ಸಾಗುತ್ತಿದ್ದಂತೆ ಉದಯರವಿ ಕುಂಚಗಾರಿಕೆಗೆ ತೊಡಗಿದ. ಸಿಕ್ಕ ತುಂಡುಮೋಡಗಳನ್ನು ಹಿಡಿದು ಮೊದಮೊದಲು ಕಪ್ಪು ಬಿಳುಪಿನಲ್ಲೂ ಅನಂತರ ವಿವಿಧ ವರ್ಣಗಳಲ್ಲೂ ಅಲಂಕರಿಸಿ ಪ್ರದರ್ಶನಕ್ಕಿಡುತ್ತಲೇ ಇದ್ದ. ಸುಮಾರು ಐವತ್ತು ಕಿಮೀ ಪ್ರಯಾಣದಲ್ಲಿ ನಾವು ಪಶ್ಚಿಮ ಘಟ್ಟದ ತಪ್ಪಲಿನ ಕಾಡು ಹಾಯ್ದು, ನಿಜವಾದ ಘಾಟೀದಾರಿ ತೊಡಗುವ ಜಾಗ - ಗುಂಡ್ಯ, ತಲಪಿದೆವು. ಅಲ್ಲಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್, ರೈಲ್ವೇಯವರ ವಿಶ್ರಾಂತಿ ಗೃಹ ಮತ್ತು ನಾಲ್ಕು ಗೂಡಂಗಡಿ ಬಿಟ್ಟರೆ ಸುತ್ತಲೂ ಹಸುರುಕ್ಕುವ ಕಾಡೋ ಕಾಡು.

[ಇಂದಿನ ಭಕ್ತಿ-ಬಿಸಿನೆಸ್ಸಿನಲ್ಲಿ ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯಗಳ ನೇರ ಸಂಪರ್ಕ ದಾರಿಯ ಮಧ್ಯ ಬಿಂದು ಗುಂಡ್ಯವಾದ್ದರಿಂದ ವ್ಯಾಪಾರೀ ಕಟ್ಟಡಗಳು ವಿಪರೀತ ಹೆಚ್ಚಿಕೊಂಡಿವೆ. ಸಹಜವಾಗಿ ಕೊಳೆ, ಗದ್ದಲ ಹೆಚ್ಚಿದೆ. ಕಾಡೆಂಬ ತೋರಿಕೆಗೆ ಭಾರೀ ಮರಗಳ ಮರೆ ಇನ್ನೂ ಪೂರ್ಣ ಮಾಯವಾಗಿಲ್ಲವಾದರೂ ಭಾವಿಸಿ ನೋಡಿದರೆ ವಿಷಾದ ಹೆಚ್ಚುತ್ತದೆ. ಇಲ್ಲಿಂದ ಸುಬ್ರಹ್ಮಣ್ಯಕ್ಕೆ ಹೋಗುವ ಹಳೆಯ ದಾರಿಗೆ ವಿಪರೀತ ಕಾಯಕಲ್ಪವಾಗಿರುವುದನ್ನು ಇಲ್ಲೇ ನನ್ನಹಿಂದಿನಕಥನಗಳಲ್ಲಿನೀವುನೋಡಬಹುದು. ಅರಣ್ಯ ಇಲಾಖೆ ತನ್ನ ದಿವ್ಯ ಜ್ಞಾನದಲ್ಲಿ ಇಲ್ಲಿ ವನ್ಯ ಸಸಿ ಉತ್ಪಾದನಾ ಕೇಂದ್ರದಿಂದ ಕೊಕ್ಕೋ ಪ್ಲಾಂಟೇಶನ್ ವರೆಗೆ, ತೀವ್ರ ಕೃಷಿಯಿಂದ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುವವರೆಗೆ ಏನೆಲ್ಲಾ ಪ್ರಯೋಗ ನಡೆಸುತ್ತಲೇ ಬಂದಿದೆ; ನೈಜಾರಣ್ಯ ಎಂಬುದೇ ತಪ್ಪು ಎನ್ನುವುದನ್ನು ಕಾರ್ಯಗತಗೊಳಿಸುತ್ತಲೇ ಇದೆ. [ಇಂದಿನ ಗುಂಡ್ಯಹೊಳೇ, ಅನ್ವರ್ಥಕ ಕೆಂಪೊಳೇಗುಂಡ್ಯಹೊಳೆಯೋ ರೈಲ್ವೇ ಮಾರ್ಗ ನಿರ್ಮಾಣದ, ಅದರದೇ ವಿಸ್ತರಣೆಯ, ಎಣ್ಣೆ ಕೊಳವೆ ಸಾಲು ಹೂಳುವಲ್ಲಿನ ಮತ್ತು ನಿರಂತರ ಸೋರುವ ಹುಣ್ಣಿನಂಥಾ ಹೆದ್ದಾರಿಯ ಅವ್ಯವಸ್ಥೆಗಳಿಂದ ಸಾಕಷ್ಟು ಹೂಳು ತುಂಬಿಕೊಳ್ಳುತ್ತಾ ಬಳಲಿತ್ತು. ಗುಂಡ್ಯ ಮಿನಿ ಹೈಡೆಲ್ ಎಂದು ಶುರುವಾದ ಪರಿಸರ ಸ್ನೇಹಿ ಎಂದು ಶಬ್ದಾರ್ಥಕ್ಕೇ ಅವಮಾನ ಮಾಡುವ ವಿದ್ಯುಚ್ಛಕ್ತಿ ಯೋಜನೆಯಂತೂ ಇಂದು ಭೀಕರ ಕ್ಯಾನ್ಸರ್ರೇ ಆಗಿದೆ. ಅದರ ಪವರ್ ಲೈನ್ಗೆ ಕಾಡು ಕೀಸಿದ್ದು, ಪೂರಕ ನೀರಿಗೆ ಇನ್ನೊಂದೇ ಶೃಂಗಶ್ರೇಣಿಯನ್ನು ಹುಡಿಹಾರಿಸಿದ್ದು, ಹೊಳೆಯ ಓಟದ ಜಾಡಿನಲ್ಲೇ ಶಕ್ತಿ ಎಂದು ಹೊಳೆಪಾತ್ರೆಯನ್ನೇ ಕಿಮೀಗಟ್ಟಳೆ ಸೀಳಿಹಾಕಿದ್ದು ಲೆಕ್ಕ ತೆಗೆದರೇ ತಲೆ ಹಾಳಾಗುತ್ತದೆ. ಇವು ಸಾಲದೆಂಬಂತೆ ಹೊಂಗಡಳ್ಳದಲ್ಲಿ ತೊಡಗಿ ಇನ್ನೂರು ಮೆಗಾವಾಟಿನ ಮೊದಲ ಹಂತದ ಗುಂಡ್ಯ ವಿದ್ಯುಚ್ಛಕ್ತಿ ಯೋಜನೆ, ನೇತ್ರಾವತಿ ನದಿ ತಿರುವು, ಶವಪೆಟ್ಟಿಗೆಯ ಕೊನೆಯ ಮೊಳೆಯಂತೆ ಎತ್ತಿನಹಳ್ಳ ಎತ್ತು ನೀರಾವರಿ ಯೋಜನೆಗಳೆಲ್ಲವೂ ನೇರ ಗುಂಡ್ಯ ಹೊಳೆಯನ್ನೇ ಆಪೋಷಣೆ ತೆಗೆಯಲಿವೆ.]

ಗುಂಡ್ಯದಲ್ಲಿ ನಾವು ಕಾರನ್ನು ಬೀಳ್ಕೊಂಡು ರೈಲ್ವೇ ಇಲಾಖೆಯ ವಿಶ್ರಾಂತಿ ಗೃಹಕ್ಕೆ ಹೋದೆವು. ಅಲ್ಲಿಯ ಅಡುಗೆಯವ ಅಧಿಕಾರಶಾಹಿಗೊಪ್ಪುವ ಅಚ್ಚ ಕೆಳದರ್ಜೆ ನೌಕರನಿಗೊಪ್ಪುವಂತೆ, ಕಾರಿನಲ್ಲಿ ಬಂದ ನಮ್ಮನ್ನು ಮುಖವೆಲ್ಲಾ ಹಲ್ಲಾಗಿ, ಹಲ್ಲೆಲ್ಲಾ ನಾಲಗೆಯಾಗಿ ಸ್ವಾಗತಿಸಿದ. ಕಿರುಮುಂಡು ಉಟ್ಟಿದ್ದರೂ ಅವಲಕ್ಷಣ ಎನ್ನಿಸದಷ್ಟು ಸೊಂಟ ಬಗ್ಗಿಸಿ, ಕೈಮುಗಿದು, ತನ್ನ ಸಕಲ ಭಾಷಾಪ್ರಾವೀಣ್ಯವನ್ನು ಒಂದೇ ವಾಕ್ಯದಲ್ಲಿ (ವ್ಯಾಕರಣ ಬದ್ಧಗೊಳಿಸಿದ್ದರೆ ಬಹುಶಃ ಕಿರು ಪ್ರಬಂಧವೇ ಆಗುತ್ತಿತ್ತು!) ಪ್ರಯೋಗಿಸಿ, ತನ್ನ ಸೇವೆಯನ್ನು ಒಪ್ಪಿಸಿಕೊಂಡ. ಆದರೆ ನಮಗಿದ್ದ ಒಂದೇ ಪ್ರಶ್ನೆ ದಾರಿ ಯಾವುದಯ್ಯಾ ಶಿರಾಡಿ ರೈಲ್ವೇಗೆ? ನಿರ್ಮಾಣದಲ್ಲಿರುವ ದಾರಿ ನೋಡಲು?

ವಿಶ್ರಾಂತಿಗೃಹದ ಹಿಂದೆ ಭಾರೀ ಕೆನ್ನೀರಹೊಳೆಯಾಗಿಯೇ ಕಾಣಿಸುತ್ತಿತ್ತು ಗುಂಡ್ಯ ಹೊಳೆ. ರೈಲ್ವೇ ನಿರ್ಮಾಣಕಾರರು ಲಾರಿ ಸಂಚಾರಕ್ಕಾಗಿ ಕಟ್ಟಿದ ತಾತ್ಕಾಲಿಕ ಸೇತುವೆಯಲ್ಲಿ ಅದನ್ನು ದಾಟಿದೆವು. ಕಂತ್ರಾಟುದಾರರ ಕಬ್ಬಿಣ, ಸಿಮೆಂಟು ದಾಸ್ತಾನುಗಳ ಆವರಣಗಳನ್ನು ಹಾಯ್ದು, ಕಾಡಿನೆಡೆಯಲ್ಲಿ ಬೆಟ್ಟ ಏರುತ್ತಿದ್ದ ಕಚ್ಚಾ ರಸ್ತೆಯನ್ನು ಅನುಸರಿಸಿದೆವು. ಆರಾಧ್ಯ, ರೆಡ್ಡಿ ತಮ್ಮ ಮೈಸೂರು ವಿದ್ಯಾರ್ಥಿ ದಿನಗಳ ನೆನಪು ಮೆಲುಕಿದರು. ಸದ್ಯ ಆರಾಧ್ಯರ ಶಿಷ್ಯ ಸುಂದರ ರಾವ್, ಅಭಿಮಾನೀ ಕೇಳುಗ ಮಾತ್ರ. ಮಾವ ನಡೆಯುತ್ತಲೇ ಕೃಷ್ಣ ಭಟ್ಟರ ವಂಶವೃಕ್ಷವನ್ನು ಏರತೊಡಗಿದರು. ಕೊನೆಗೆ ಉದುರಲಿದ್ದ ಹಣ್ಣೆಲೆ ಮಟ್ಟದಲ್ಲೆಲ್ಲೋ ತಮ್ಮ ಬಾಂಧವ್ಯ ಕೂಡಿದ್ದನ್ನು ಕಂಡು ನನ್ನ ಸೇವೆಗೀಗ ಇಬ್ಬರು ಅಳಿಯಂದಿರು ಎಂದು ಹೆಚ್ಚಿನ ಉತ್ಸಾಹದಲ್ಲಿ ಕಾಲು ಹಾಕಿದರು. ನಾನು ನಾಗೇಶ್ ಪರಿಸರಕ್ಕೆ ಕಣ್ಣು ಕಿವಿ ಮಾತ್ರ ತೆರೆದು ಬಾಯಿ ಬಿಗಿದು ನಡೆದಿದ್ದೆವು. ಕಳೆದ ಎಂಟು ಹತ್ತು ವರ್ಷಗಳಿಂದ ಅಲ್ಲಿ ನಡೆದಿದ್ದ ಸಿಡಿತ, ಕೊರೆತ ಇತ್ಯಾದಿ ಗದ್ದಲದಿಂದ ಘನ ವನ್ಯಜೀವಿಗಳೇನೂ ಉಳಿದಂತಿರಲಿಲ್ಲ. ಬಿಬ್ಬಿರಿ ಇಟ್ಟ ಶ್ರುತಿಗೆ ಪಕ್ಷಿ ಪಲುಕೂ ಅಪರೂಪಕ್ಕೆ ಕೇಳುತ್ತಿತ್ತು. ತೀವ್ರ ಏರುನಡೆಯಲ್ಲಿ ಏಣು ಕಣಿವೆಗಳನ್ನುಸುತ್ತುತ್ತಾ ಗೊಸರು ತಪ್ಪಿಸುತ್ತಾ ಎಲ್ಲೆಲ್ಲೋ ಎಂದೆಂದೋ ಲಾರಿಚಕ್ರ ಹುಗಿದದ್ದಕ್ಕೆ ನಿಗಿದ ಕಾಡುಕಲ್ಲ ಸರಣಿಯಲ್ಲಿ ಕುಪ್ಪಳಿಸುತ್ತಾ ಸುಮಾರು ನಾಲ್ಕು ಕಿಮೀ ಕ್ರಮಿಸಿದೆವು. ಅಲ್ಲಿ ದಾರಿಯೇನೋ ಮುಂದುವರಿದಿತ್ತು. ಆದರೆ ನಮಗೆ ಎಡದ ದರೆಯಲ್ಲೊಂದು ಒಳದಾರಿ ಹೆಚ್ಚು ಆಕರ್ಷಣೀಯವೆನಿಸಿತು. ಸುಮಾರು ನೂರೈವತ್ತು ಮೀಟರ್ ಎತ್ತರದಲ್ಲೊಂದು ರೈಲ್ವೇ ಸೇತುವೆ. ಅಲ್ಲಿಂದ ನಮ್ಮಲ್ಲಿವರೆಗೆ ಒಡೆದ ಭಾರೀ ಕಲ್ಲಚೂರುಗಳು ಸುರಿದು ಬಿದ್ದಿದ್ದವು. ಬದಲಾವಣೆಗೆ ನಾವು ಶಿಲಾಪಾತವನ್ನೇ ನಡೆಮಡಿಯಾಗಿ ಆಯ್ದುಕೊಂಡೆವು. ನೆನಪಿರಲಿ, ಇದು ರೈಲ್ವೇ ಹಳಿಹಚ್ಚಲು ವ್ಯವಸ್ಥಿತವಾಗಿಯೂ ತುಸುವೇ ಏರುಳ್ಳಂತೆ ಒಟ್ಟಿದ ಜಲ್ಲಿ ರಾಶಿಯಲ್ಲ. ಮೇಲೆಲ್ಲೋ ಸುರಂಗ ತೆಗೆದು ಆಚೆಗೆ ನೂಕಿದ ಅಸ್ಥಿರ ಬಂಡೆ ರಾಶಿ ಮತ್ತು ಕಡಿದಾದದ್ದು! ಕಾಲಿಟ್ಟಲ್ಲೆಲ್ಲಾ ಅಲುಗಾಟ, ಉರುಳಾಟ ನಿರೀಕ್ಷಿಸಿಕೊಂಡೇ ಏರಿ, ಸೇತುವೆ ಸೇರಿದೆವು

ನಮಗೆ ಬೃಹತ್ ಯೋಜನೆಗಳೇನು, ಒಂದು ಸಣ್ಣ ಚರಂಡಿ ರಿಪೇರಿ ಮಾಡುವುದಿದ್ದರೂ ಅನ್ಯ ವ್ಯವಸ್ಥೆಗಳನ್ನು ಅವಹೇಳನ ಮಾಡುವುದು ರಕ್ತಗತವಾಗಿದೆ. ವಿದ್ಯುತ್ ತಂತಿ ಸವರುವ ಗೆಲ್ಲುಗಳನ್ನು ಕಡಿದು ಎಲ್ಲಂದರಲ್ಲಿ ಬಿಡುತ್ತದೆ ಮೆಸ್ಕಾಂ. ಕಸ ಒಟ್ಟುಮಾಡಿ ಕಿಚ್ಚಿಕ್ಕುವ ಕೆಲಸ ಮೂರು ದಿನ ಕಳೆದರೂ ಸರಿ, ನಗರಪಾಲಿಕೆಗೇ ಮೀಸಲು. ಇದರ ಬೆಂಕಿ ಝಳಕ್ಕೆ ದೂರವಾಣಿ ಕೇಬಲ್ ಕರಗಿದರೆ ಮತ್ತೆ ಇಲಾಖೆಗೆ ವಾರ-ಹತ್ತು ದಿನ. ತಂತಿ ಇಲಾಖೆ ನೆಲ ಅಗೆಯುವ ಗದ್ದಲದಲ್ಲಿ ಶುದ್ಧ ನೀರ ಕೊಳವೆ ಒಡೆದರೆ ಮತ್ತೊಂದೇ ಇಲಾಖೆಯ ರಾಮಾಯಣ ಎಂದಿತ್ಯಾದಿ ನಾನು ಬೆಳೆಸಿದರೆ ನೀವ್ಯಾರೂ ಅವಾಸ್ತವವೆನ್ನಲಾರಿರಿ, ಆದರೆ ಇಲ್ಲಿ ಬೇಡ. ನಗರದಂತಹ ಸೂಕ್ಷ್ಮಪ್ರದೇಶಗಳಲ್ಲೇ ಹೀಗಾದರೆ ಜನ ಸುಳಿಯದ ಕಗ್ಗಾಡಿನಲ್ಲಿ ಹೇಗಿದ್ದರೆ ಏನು ಎಂಬ ಧೋರಣೆಯೇ ರೈಲ್ವೇ ಕಂಬಿ ಹೋಗುವ ಜಾಡಿನಿಂದ ಕೆಳಗಿನುದ್ದಕ್ಕೂ ಧಾರಾಳ ನಡೆದಿತ್ತು. ಅಲ್ಲಿ ಹಾಳಾದ ಜೀವ ಸಂಪತ್ತು ಇರಲಿ, ಕನಿಷ್ಠ ಕೈಯಾರೆ ತಳ್ಳಿದ ಕಲ್ಲು ಮಣ್ಣನ್ನಾದರೂ ಪ್ರಾಮಾಣಿಕವಾಗಿ ಇನ್ನೊಂದೆಡೆ ಬಳಸುವ ವಿವೇಚನೆ ಇಲಾಖೆ ಮಾಡಿರಬಹುದು ಎಂದು ನನಗನ್ನಿಸುವುದಿಲ್ಲ. ಇದೇ ಕಲ್ಲನ್ನು ಅಲ್ಲೇ ಪುಡಿ ಮಾಡಿ ಕಂಬಿ ಹಾಸಿಗೆ ಮಾಡಬಹುದಲ್ಲವೇ ಎಂದೊಮ್ಮೆ ನಾನು ಅಧಿಕಪ್ರಸಂಗ ಮಾತಾಡಿದ್ದೆ. ಆಗ “debris clearing, jelly providing, land fillingಗಳಿಗೆಲ್ಲಾ ಪ್ರತ್ಯೇಕ ಖಾತೆಗಳೂ ಪ್ರತ್ಯೇಕ ಹಣವೂ ಉಂಟು ಸಾರ್! ಎಂದೊಬ್ಬ ಪ್ರಸಿದ್ಧ ಕಂತ್ರಾಟುದಾರ ಹುಳಿ ನಗೆ ಬೀರಿದ್ದ. ಆತ ಮುಂದುವರಿಸಿ, ಮರುಬಳಕೆ ಮಾಡಿದರೆ ಎರಡು ಖಾತೆಗಳೇ ಖೋತಾವಾಗುತ್ತಲ್ಲಾ! ಆಡಿಟ್ ಆಬ್ಜೆಕ್ಷನ್ನಂತೂ ಗ್ಯಾರಂಟೀ.

[ನನ್ನಂಗಡಿ ಎದುರು ದಾರಿ ಅಗಲೀಕರಣ ಕಾಲದ ಒಂದು ಸಣ್ಣ ಉದಾಹರಣೆ ನೋಡಿ. ಕಟ್ಟಡದ ಯಜಮಾನರು ಮಾಡಿಸಿದ ಮೋರಿ, ಕಾಂಕ್ರೀಟಿನ ಮುಚ್ಚು ಹಲಗೆಗಳು, ಪುಟ್ಟಪಥಕ್ಕೆ ನಾವು ನಾವೇ ಹಾಸಿಕೊಂಡ ಕಲ್ಲ ಚಪ್ಪಡಿಗಳನ್ನೆಲ್ಲ ಜೆಸಿಬಿ ಬಳಸಿ ಟಿಪ್ಪರ್ ತುಂಬ ತೊಡಗಿದ್ದರು. ವಿಚಾರಿಸುವಾಗ ತಿಳಿಯಿತು - ಎಲ್ಲವನ್ನೂ ನಗರ ಹೊರವಲಯದಲ್ಲಿ ಬರಲಿರುವ ಬಸ್ ನಿಲ್ದಾಣದ ಜಾಗವನ್ನು (ಫಲವತ್ತಾದ ಗದ್ದೆ, ತೋಟ!) ನಿಗಿಯಲು ಬಳಸುತ್ತಿದ್ದರು. ಕಟ್ಟಡದ ಯಜಮಾನರು ಕನಿಷ್ಠ ಕಾಂಕ್ರೀಟ್ ಹಲಗೆಗಳನ್ನು ತಮ್ಮ ಸಂಗ್ರಹಕ್ಕೆ ಒಟ್ಟಿಸಿಕೊಂಡರು. ಇಂದು ಅವು ಅಲ್ಲಿನ ವಾಹನ ನಿಲುಗಡೆ ತಾಣಕ್ಕೆ ಉಚಿತ ನೆಲಹಾಸಾಗಿ ಒದಗಿವೆ. ನಾನು ಕನಿಷ್ಠ ನನ್ನಂಗಡಿಯೆದುರಿನ ಕಲ್ಲ ಚಪ್ಪಡಿಗಳನ್ನು ವಶಪಡಿಸಿಕೊಂಡೆ. ಇಂದು ಅವು ಮನೆಯಂಗಳದ ಅನಿವಾರ್ಯ ಭಾಗದಲ್ಲಿ ನಾನು ಬಳಸಿ, ಕನಿಷ್ಠ ಐದಾರು ಸಾವಿರ ರೂಪಾಯಿಯನ್ನೇ ಉಳಿಸಿದ್ದೇನೆ. ಇವೆಲ್ಲಕ್ಕೂ ಮುಖ್ಯವಾಗಿ ಕಲ್ಲು, ಮರಳೆಂಬ ಮನುಷ್ಯರಿಂದ ಸೃಷ್ಟಿಸಲಾಗದ ಖನಿಜ ಸಂಪತ್ತನ್ನೂ ಉಳಿಸಿದ್ದೇನೆ, ಎಂದರೆ ನಗುವವರೇ ಹೆಚ್ಚು! ನೀವು?]

ರೈಲ್ವೇ ನಿರ್ಮಾಣದ ಅಂದಾಜಿನಲ್ಲಿ ಘಾಟಿ ವಿಭಾಗ ೪೯ ಕಿಮೀ. ಅಂದರೆ ಇದು ನಿಯತ ತಿರುಗಾಸು ಮತ್ತು ಏರುಕೋನಗಳಲ್ಲಿ ಸುಮಾರು ೯೦೦ ಮೀಟರ್ ಔನ್ನತ್ಯವನ್ನು ರೈಲು ಸಾಧಿಸುವಲ್ಲಿ ಕ್ರಮಿಸುವ ಅಂತರ. ಒಂದೆಡೆ ತುಂಬಾ ನುಸುಲು ನೆಲ, ಮತ್ತೊಂದೆಡೆ ಕಗ್ಗಲ್ಲ ಕಾಠಿಣ್ಯ. ಅಸಾಧಾರಣ ಮಳೆಗಾಲ, ಸಹಜವಾಗಿ ಕೊರೆಯುವ ಕುಟ್ಟಿಕೆಡೆಯುವ ಝರಿ ಜಲಪಾತಗಳು. ನಿರ್ದಿಷ್ಟ ಎತ್ತರದಲ್ಲಿ ಒಮ್ಮೆಲೆ ಪಾತಾಳಕ್ಕೆ ರಹದಾರಿ ಎನ್ನುವಂತಹ ಕಮರಿ, ಕಳೆದು ಮುಗಿಸಿದರೆ ಆಕಾಶವನ್ನೇ ಹೊತ್ತ ಗೋಡೆಯಂತಹ ಬೆಟ್ಟ. ಇವೆಲ್ಲ ಮನುಷ್ಯ ನಿರ್ಮಿತಿಯನ್ನು ಗರಿಷ್ಠ ಪರೀಕ್ಷೆಗೆ ಒಡ್ಡುತ್ತವೆ. ಘಟ್ಟದ ಕಣಿವೆಗಳು, ಅದರಲ್ಲೂ ಮಳೆಗಾಲದಲ್ಲಿ ನಿಶ್ಚಯವಾಗಿ ಬಿರುಸಿನ ತೊರೆಗಳು. ಮೇಲಿನ ಬೆಟ್ಟದಲೆಗಳ ವ್ಯಾಪ್ತಿ ಪ್ರತಿ ತೊರೆಯ ವಿಭಿನ್ನ ಸೊಕ್ಕಿನ ಬಂಡವಾಳ. ಕಣಿವೆಯಾಳ ಅಳೆಯಲು ಬಿಸಿಲಕೋಲುಗಳು ಇಳಿಯುವಾಗ, ಶಿಖರದಲ್ಲಿ ಮಳೆ ಸೊಕ್ಕಿ ಆಳೆತ್ತರದ ಪ್ರವಾಹ ಉಂಟಾಗಬಹುದು. ಶಿಖರದಲ್ಲಿ ಬಿಸಿಲು ಗಿಡಮರಗಳೊಡನೆ ಉಜ್ವಲ ಹಸುರು ಸಂವಾದ ನಡೆಸುತ್ತಿದ್ದಂತೆ, ಕಣಿವೆಯಲ್ಲಿ ಮಳೆರಾಯ ಮೊಕ್ಕಾಂ ಹೂಡಲೂಬಹುದು. ಸಹಜವಾಗಿ ವಲಯಗಳಲ್ಲಿ ಯಾವ ತೊರೆಯನ್ನೂ ಇಷ್ಟೇ ಎಂದು ಉಡಾಫೆ ಮಾಡುವಂತಿರಲಿಲ್ಲ.

ನಾವು ತಲಪಿದ ಸೇತುವೆ ಮಿತ ಏರುಕೋನದಲ್ಲೇ ಸಣ್ಣ ಕಣಿವೆಯನ್ನು ಅಡ್ಡ ಹಾಯುತ್ತಿತ್ತು. ಆಚೆಗೊಂದು ಸುರಂಗ. ಮುಂದುವರಿದರೆ ಹಾಸನ. ಹಾಗೇ ಕೆಳದಿಕ್ಕಿನಲ್ಲೂ ತುಸು ದೀರ್ಘವೇ ಎನ್ನಬಹುದಾದ ದೂರದಲ್ಲಿ ಇನ್ನೊಂದು ಸುರಂಗ. ಮುಂದುವರಿದರೆ ಮಂಗಳೂರು. ಝರಿಯ ಇಳಿದಿಕ್ಕಿನ ಎಡಗವಲಿಗೆ ಕಾಡುಕಲ್ಲುಗಳ ಒಡ್ಡು ಮಾಡಿ, ನೀರು ನಿಲ್ಲಿಸಿದ್ದರು. ಆಚೀಚೆ ಸಣ್ಣ ತಟ್ಟುಗಳಲ್ಲಿ ಕೂಲಿಕಾರರಿಗೆ ಜಿಂಕ್ ಶೀಟಿನ ತತ್ಕಾಲೀನ ವಸತಿ ವ್ಯವಸ್ಥೆ. ಹಳಿಹಾಸುವ ಜಾಡಲ್ಲದೆ ತುಸು ವಿಸ್ತರಿಸಿ ಕೆಲಸ ನಡೆದಿದ್ದ ಜಾಗ ಮುಂದೆ ಸಿರಿಬಾಗಿಲು ನಿಲ್ದಾಣವಾಗಿ ವಿಕಸಿಸಲಿತ್ತು. ನರಹುಳುಗಳು ಎಲ್ಲೆಲ್ಲೂ ಕಾರ್ಯನಿರತವಾಗಿದ್ದವು! ನಮ್ಮ ನಡಿಗೆ ಹಾಸನದೆಡೆಗೆ.

ನಮ್ಮ ಮುಂದೆ ದಾರಿಗಳು ಎರಡು ತೆರ. ಸುತ್ತು ಬಳಸಿನ, ವಿಪರೀತ ಏರಿಳಿತವೂ ಇರಬಹುದಾದ ಬಹುತೇಕ ಅಖಂಡ ಲಾರಿ ದಾರಿ ಒಂದು. ಇನ್ನೊಂದು ಗುಹೆ, ಸೇತುವೆಗಳ ಸರಮಾಲೆಯಲ್ಲಿ ಮುಂದೆಂದೋ ರೈಲನ್ನೇ ಹೊರಲು ಅಣಿಗೊಳ್ಳುತ್ತಿದ್ದ ಜಾಡು. ಮೊದಲನೆಯದರಲ್ಲಿ ಹೋದರೆ ಚಾರಣ ಯಶಸ್ವಿ, ಶ್ರಮ ಜಾಸ್ತಿ, ಆದರೆ ದರ್ಶನ ಅಪೂರ್ಣ. ನಾವು ಮರುಭೂಮಿಯಲ್ಲಿ ನೀರು ಹುಡುಕಿದಂತೆ, ಜಲರಾಶಿಯಲ್ಲಿ ನೆಲ ಅರಸಿದಂತೆ, ಬೆಟ್ಟಕಾಡಿನ ನಡುವೆ ಸಾಧ್ಯವಾದ ಮಟ್ಟಿಗೆ ಮಟ್ಟಸ ಜಾಡು, ದಿಟ್ಟಿಗೆ ತೆರೆದ ರಚನೆಗಳನ್ನೇ ಆಯ್ದುಕೊಳ್ಳುತ್ತ ನಡೆದೆವು. ಎರಡೂ ಕೊನೆಗಳಲ್ಲಿ ನೆಲ ಮುಟ್ಟಿದ ಸೇತುವೆ, ಇನ್ನೊಂದು ಕೊನೆಯಲ್ಲಿ ಬೆಳಕು ಕಾಣಿಸುವ ಸುರಂಗಗಳನ್ನು ಅನುಸರಿಸುತ್ತ ಉಳಿದಂತೆ ಲಾರಿಗಳ ಬಳಸಂಬಟ್ಟೆ ಹಿಡಿದೆವು.

ತೋಡಿ ಮುಗಿಸಲಾರದಷ್ಟು ದೊಡ್ಡ ಗುಡ್ಡ ಎದುರಾದಲ್ಲಿ, ಹುಡಿಹಾರಿಸಲು ಸುಲಭಸಾಧ್ಯವಲ್ಲದ ಅಗಾಧ ಕಲ್ಲಸ್ತರಗಳು ಅಡ್ಡಗಟ್ಟಿದಲ್ಲಿ, ಅಪಾಯಕಾರೀ ಬೆಟ್ಟದ ಜಾರುಮೈ ಆಯ್ದುಕೊಳ್ಳುವ ಅನಿವಾರ್ಯತೆಯಲ್ಲಿ ಸುರಂಗಗಳನ್ನು ರಚಿಸಿದ್ದರು. ಗಿಡ್ಡದ ಕೆಲವು ನೇರವಿದ್ದಿರಬಹುದು, ಆದರೆ ಹೆಚ್ಚಿನವು ತರಹೇವಾರಿ ಉದ್ದದೊಡನೆ ಬೆಟ್ಟದ ಏರುದಾರಿಯಾದ್ದರಿಂದ ವಕ್ರವೂ ಇರುತ್ತಿತ್ತು. ಸನ್ನಿವೇಶದ ಬಲದಲ್ಲಿ ಕೆಲವು ನುಗ್ಗುವಲ್ಲಿ ಕತ್ತಲಮನೆಯಾದರೂ ಇನ್ನೊಂದು ಕೊನೆಯ ಬೆಳಕು ಧೈರ್ಯ ಕೊಡುತ್ತಿತ್ತು. ವಾಸ್ತವದಲ್ಲಿ ನಡೆಯುವಾಗ ಕಾಲಬುಡಕ್ಕೆ ನಮಗೆ ಟಾರ್ಚ್ ಅನಿವಾರ್ಯ. ಒಂದೆರಡರಲ್ಲಿ ಒಳಗೆ ಮಡುಗಟ್ಟಿದ ನೀರಿನ ಆಳ, ಹರಹು ಅಂದಾಜಿಸಲಾಗದೆ ಮತ್ತೆ ಕೆಲವಲ್ಲಿ ರಾಶಿಬಿದ್ದಿದ್ದ ಕಲ್ಲು ಮಣ್ಣನ್ನು ಉತ್ತರಿಸಲಾಗದೆ ಹಿಂದೆ ಬಂದದ್ದೂ ಉಂಟು. ಜರಿಯುವುದರಲ್ಲಿ ೧೩ನೇ ಕ್ರಮಾಂಕದ ಗುಹೆಯದೇ ಒಂದು ಕತೆಯಂತೆ. ನಾನಿದನ್ನು ಇಲಾಖೆಯಲ್ಲಿ ಖಾತ್ರಿ ಪಡಿಸಿಕೊಂಡಿಲ್ಲ ಹಾಗಾಗಿ ನಂಬಿದರೆ ನಂಬಿ... ಎಂದು ಹೇಳಿಬಿಡುತ್ತೇನೆ. ಇದು ಆರು ಬಾರಿ ದುರಸ್ತಿಗೊಳಗಾದರೂ ಅಂದಾಜು ತಪ್ಪಿಸಿ ಒಂದು ಜೀವಬಲಿಯನ್ನೇ ಪಡೆಯಿತಂತೆ. ಕೆಲಸಗಾರರ ಭಾವಾತ್ಮಕ ಒತ್ತಡಕ್ಕೆ ಮಣಿದು ಇಲಾಖೆ ಸಂಖ್ಯೆ ೧೩ ಅಳಿಸಿ, ೧೨ ಎಂದ ಮೇಲೆ ಭದ್ರವಾಗುಳಿಯಿತಂತೆ. ಆದರೆ ಸಂಖ್ಯೆಯಲ್ಲೇನುಂಟು ಎಂದು ಅಣಕಿಸುವಂತೆ ವಾಸ್ತವದಲ್ಲಿ ಅದು ನಮ್ಮೆದುರೂ ಮುಚ್ಚಿಕೊಂಡೇ ಇತ್ತು! ಇಂಥ ಕೆಲವನ್ನಷ್ಟೇ ಬಿಟ್ಟು ಹೆಚ್ಚಿನವನ್ನು ನಾವು ತಡವರಿಸಿಯಾದರೂ ಹೊಕ್ಕು ಹೊರಟೇ ನಡಿಗೆ ಮುಂದುವರಿಸಿದೆವು. ಹೊರಗಿನ ಬಿಸಿಲ ಹೊಡೆತ ತಪ್ಪಿ, ಒಸರುವ ನೀರ ಪಸೆ ಹೊತ್ತು ಬರುವ ತಣ್ಣನೆ ಗಾಳಿ ನಮ್ಮಲ್ಲಿ ಹೊಸಚೇತನ ತುಂಬುತ್ತಿತ್ತು. ಗಾಢಾಂಧಕಾರದಲ್ಲಿ ಪರಸ್ಪರ ನೋಟಕ್ಕೆ ನಾಚುವ ರೂಢಿ ಬಿಟ್ಟು ಬೊಬ್ಬೆ ಹೊಡೆದದ್ದಿತ್ತು, ಜಾಡು ಕಾಣದ ಅನಿವಾರ್ಯತೆಯಲ್ಲಿ ಪರಸ್ಪರ ಅಂಗಿಯ ಚುಂಗು ಹಿಡಿದು ರೈಲು ಬಿಟ್ಟದ್ದೂ ಇತ್ತು. ನಮ್ಮ ಮಕ್ಕಳಾಟಿಕೆಯನ್ನು ಹೆಚ್ಚು ಹೇಳಿದರೆ ಶಿರಾಡಿಯ ಕಂದರಗಳು ಬೆರಗಿನಲ್ಲಿ ಮತ್ತಷ್ಟು ಅರಳಿ ಸೇತು ಬಂಧ ಪರಿಸ್ಥಿತಿ ಬಿಗಡಾಯಿಸೀತು!

ಒಂದು ನಿರ್ಮಾಣ ಹಂತದಲ್ಲಿದ್ದ ಗುಹೆಯ ಒಳಗಿನಿಂದ ಒಂದು ಕಂಬಿಜೋಡಿ ಈಚೆಗೆ ಹರಿದಿತ್ತು. ಸಾಲದ್ದಕ್ಕೆ ಅದರ ಮೇಲೆ ಸುಲಭದಲ್ಲಿ ನೂರಿನ್ನೂರು ಕೇಜಿ ಹೊರೆ ಹೊರುವ ಟ್ರಾಲಿಯೊಂದೂ ಖಾಲಿ ನಿಂತಿತ್ತು. ಮರ ಸಿಗಿಯುವಲ್ಲಿಗೆ ಬಂದ ಕಾಡಕಪಿಗಳ ಕತೆ ಬಿಟ್ಟಿರಲಿಲ್ಲ ನಮ್ಮ ಸಾಹಸ. ಒಬ್ಬರು ಟ್ರಾಲಿ ಹತ್ತಿದರು, ಇನ್ನೊಬ್ಬರು ಗಾಲಿಯ ಕಟ್ಟೆ ಕಳೆದರು, ಮೂರನೆಯವರು ಅನುಕೂಲದ ಇಳಿಜಾಡಿಗೆ ನೂಕಿನೋಡಿದರು. ಗಡಗಡಾ ಎಂದು ಟ್ರಾಲಿ ಹೊರಟದ್ದೇ ಟಿಕೇಟು, ಶುಭ ವಿದಾಯ, ಮಂಗಳೂರಲ್ಲಿ ಸಿಗೋಣ ಹಾಸ್ಯಕ್ಕೇನು, ಲಂಗುಲಗಾಮಿಲ್ಲ. ಅದೃಷ್ಟವಶಾತ್ ಪೊದರ ಮರೆ ಕಳೆದು ಆಚೆಗೆ, ಅದೇ ಕಂಬಿ ಸಾಲಿನ ಕೊನೆಯಲ್ಲಿ ನಾಲ್ಕನೆಯವ ನಿಂತು ಕಣಿವೆ ಇಣುಕುತ್ತಿದ್ದ. ಸದ್ದು ಕೇಳಿ ತಿರುಗಿ ನೋಡಿದವ ಗಾಬರಿಗೆಟ್ಟು ಬೊಬ್ಬಿಟ್ಟ ಹಾರ್ರೀ ಗಾಡಿಬಿಟ್ಟೂ. ಟ್ರಾಲಿ ಎತ್ತರವೂ ಇರಲಿಲ್ಲ, ಓಟ ವೇಗದ್ದೂ ಇರಲಿಲ್ಲ, ಬಿಟ್ಟಿ ಸವಾರ ಸಕಾಲಕ್ಕಿಳಿದ. ಟ್ರಾಲಿ ಮಾತ್ರ ಪ್ರಪಾತದಂಚಿನಲ್ಲಿದ್ದ ಕಟ್ಟೆಗೆ ಢಿಕ್ಕಿ ಹೊಡೆದು, ಟಿಪ್ಪರ್ ತರಹ ಅದರ ಬಾಣಲೆ ಮಾತ್ರ ಮಗುಚಿ, ಎರಡು ಪುಡಿ ಕಲ್ಲನ್ನು ಪಾತಾಳಕ್ಕೆ ಖಾಲಿ ಮಾಡಿ ಮತ್ತೆ ಚಕ್ರದಚ್ಚಿನ ಮೇಲೆ ಕುಳಿತುಕೊಂಡಿತು! ಉಸ್ಸಪ್ಪಾ, ಬಾಲ ಮತ್ತೊಂದು ಸಿಕ್ಕಿಸಿಕೊಳ್ಳಲಿದ್ದ ಕಪಿಗಳು ಬೆವರೊರೆಸಿಕೊಳ್ಳುತ್ತ ಟ್ರಾಲಿಯನ್ನು ನೂಕಿ ಮೊದಲ ಸ್ಥಾನದಲ್ಲೇ ನಿಲ್ಲಿಸಿದವು.

ಗುಹೆಗಳಂತೇ ಇಲ್ಲಿ ಸೇತುವೆಗಳ ನಿರ್ಮಾಣವೂ ಅಷ್ಟೇ ಸವಾಲಿನದೂ ಅಗಾಧವೂ ಇತ್ತು. ಇವು ಭೀಕರ ಕೊರಕಲನ್ನೋ ತೊರೆ ಝರಿಗಳನ್ನೋ ಉತ್ತರಿಸುವುದು ಮಾತ್ರವಲ್ಲ, ಕೆಲವೆಡೆಗಳಲ್ಲಿ ಒಂದು ಗುಹಾ ಬಾಗಿಲಿನಿಂದ ಇನ್ನೊಂದರ ಬಾಗಿಲಿಗೆ ಔನ್ನತ್ಯ ಕಳೆಯದಂತೆ ಸಂಪರ್ಕಿಸುವ ಸಾಧನವೂ ಆಗುತ್ತಿತ್ತು. ಮೋಟಿನಿಂದ ಭಾರೀ (ನೂರಾರು ಅಡಿ ಎತ್ತರದವು) ಕುಂದಗಳು, ಹಲವಕ್ಕೆ ನೆತ್ತಿಯಲ್ಲಿ ಭೀಮಗಾತ್ರದ ಉಕ್ಕಿನ ತೊಲೆಗಳು. ರೈಲೋಡುವ ಕಂಬಿ, ತನಿಖೆ ಮಾಡುವವರು ನಡೆಯುವ ಹಾದಿ ಬಿಡಿ, ಹೆಚ್ಚಿನವಕ್ಕಿನ್ನೂ ನೆತ್ತಿಯ ಹಂದರವೇ ಪೂರ್ಣಗೊಂಡಿರಲಿಲ್ಲ. ಎತ್ತರ ಹೆಚ್ಚಿದ್ದಲ್ಲಿ ಅಳ್ಳೆದೆಯವರು ಕೊಳ್ಳಕ್ಕಿಳಿದೇ ದಾಟಿದರು. ಮೇಲೆ ಒಂದಡಿ ಅಗಲದಲ್ಲೇ ಹೆಜ್ಜೆಯಿಕ್ಕಿ ಜಯಿಸಿದವರಿಗೆ ರಚನೆಯ ಅಗಾಧತೆಯನ್ನು ಮೆಚ್ಚಿಕೊಳ್ಳುವ ಅವಕಾಶದೊಡನೆ ಕೊಳ್ಳದ ವಿಹಂಗಮ ದೃಶ್ಯವೂ ದಕ್ಕುತ್ತಿತ್ತು. ಕಾಡಿನ ಶ್ರುತಿಯಲ್ಲಿ ನೀರಬ್ಬರದ ಗಾನಕ್ಕೆ ತಾಳ ಹಿಡಿದಂತೆ ಹಕ್ಕಿಯುಲಿ ಎಲ್ಲರಿಗೂ ಉಚಿತ. ವಿಭಾಗದ ಅತಿ ಉದ್ದದ ಗುಹಾಸಂಖ್ಯೆ ನಾಲ್ಕಾದರೆ ಅತಿ ಎತ್ತರದ ಸೇತುವೆ ಕೇರಿಹಳ್ಳದ್ದಂತೆ. ಇವೆರಡನ್ನೂ ಅಂದೇ ನೋಡುವ ಅಂದಾಜುಮಾಡಿ, ಜಪ ನಡೆಸುತ್ತಲೇ ಇದ್ದುದರಿಂದ ವಲಯದ ಅತಿ ವೆಚ್ಚದ ಅಂದರೆ ಮಹಾನ್ ಸೇತುವೆ ಕಳೆದದ್ದನ್ನು ನಡೆದೇ ದಾಟಿದರೂ ಗುರುತಿಸದಾದೆವು! [ಅಂದು ಸ್ಪಷ್ಟಗೊಳ್ಳದ ವಿಚಾರ - ಬೆಟ್ಟ ಹತ್ತುವ ಸಂತೋಷವನ್ನು ಶಿಖರದ ಹಪಹಪಿಯಲ್ಲಿ ಕಳೆಯಬಾರದು.]

ಲಾರಿದಾರಿಗಳು ರೈಲ್ವೇ ನಿರ್ಮಾಣಕಾಲದ ತತ್ಕಾಲೀನ ಆವಶ್ಯಕತೆಗಷ್ಟೇ ರೂಪುಗೊಂಡವಾದರೂ ಅವುಗಳ ಸಾಧನೆ ಸಣ್ಣದೇನಲ್ಲ. ಬರಿಯ ಸೊಪ್ಪು ಸವರಿ ನೆಲ ಕೆದರಿದಲ್ಲಿಂದ ದರೆ ಕಡಿದು ಓಣಿ ಬಿಡಿಸಿಕೊಡುವವರೆಗೂ ಭಾರೀ ಮರ ಉರುಳಿಸಿ ದಾರಿ ಕಾಡ ದಿಮ್ಮಿಗಳನ್ನೇ ಅಡ್ಡ ಹಾಕಿ, ಮೊಳೆಯಲ್ಲಿ ಬಡಿದು ಮಾಡಿದ್ದೂ ಇದೆ. ಝರಿ ನೀರಿಗೆ ಕೊಳವೆಯಿಟ್ಟು ಒಟ್ಟಸಿದ ಕಾಡಕಲ್ಲ ಕಟ್ಟೆಯಿಂದ ಕಲ್ಲ ಕುಂದ ನಿಲ್ಲಿಸಿ ದಪ್ಪದ ತಗಡು ಹಾಸಿದ ಸೇತುವೆಯವರೆಗೂ ರಚನೆಗಳಿವೆ. ದಾರಿ ಮಣ್ಣಿನದೇ ಆದರೂ ಅಗತ್ಯಬಿದ್ದಂತೆಲ್ಲಾ ಚಕ್ರ ಹೂಳುವಲ್ಲಿ ಕಾಡುಕಲ್ಲು ನಿಗಿದಿದ್ದರು, ದರಿ ಜರಿಯುವಂತಲ್ಲಿ ಗಟ್ಟಿ ಆಧಾರ ಕಲ್ಪಿಸಿದ್ದರು. ಸಣ್ಣಪುಟ್ಟ ಹೊರೆ ಇಳಿಸಲು ಮತ್ತು ಕೆಲವೊಂದು ಉಪ-ವೃತ್ತಿಗಳಿಗೆ ತಟ್ಟುಗಳು, ಮಣ್ಣು ತರಲು, ತೋಡಿದ್ದನ್ನು ಚೆಲ್ಲಲು, ನೀರು ದಾಟಿಸಲು, ರಚನೆಯೊಂದರ (ಗುಹೆ ಅಥವಾ ಸೇತುವೆ ಅನ್ನಿ) ವಿವಿಧ ಮಗ್ಗುಲುಗಳನ್ನು ತಲುಪಲು ಎಂದಿತ್ಯಾದಿ ವೈವಿಧ್ಯಮಯ ಸಾಧನೆಗೆ ನಾವು ಬೆರಗೊಂದೇ ಪ್ರಜ್ಞೆಯಾದ ಸಾಕ್ಷಿಗಳು. ರೈಲು ಮಾರ್ಗವೆಂಬ ಆಳದ ಕಡಿತವನ್ನು ಖಾಯಂಗೊಳಿಸಲು ಅದೆಷ್ಟು ಗೀರುಗಾಯಗಳು. ಬಹುಶಃ ಹೀಗಾಗಿ ಮೇಲೆ ಎತ್ತಿನಹೊಳೆ, ಕೆಳಗೆ ಗುಂಡ್ಯದ ಹೊಳೆನಡುವೆ ಮಾತ್ರ ಕೆಂಪು-ಹೊಳೆ!

ನಾವು ನಡೆದಂತೆಲ್ಲಾ ಗುಹೆ, ಸೇತುವೆ ಮತ್ತೆ ಗುಹೆ ಎಂದು ಹೇಳುತ್ತಾ ಹೋದರೆ ಓದುವ ನಿಮಗೆ ಏಕತಾನತೆ ಬರಬಹುದು. ಆದರೆ ನಿಜದ ಚಾರಣದ ಮಜಾ ಬೇರೇ. ಎಡಕೊಳ್ಳದಲ್ಲಿ ಹೆಚ್ಚು ಕಡಿಮೆ ನಮಗೆ ಸಮಾನಾಂತರದಲ್ಲಿ ಡಾಮರು ಮಾರ್ಗ ಹರಿದದ್ದು ಕಾಡಿನ ಮರೆ ಹರಿದಲ್ಲೆಲ್ಲಾ ಕಾಣಿಸುತ್ತಿತ್ತು. ಅದರಿಂದಾಚೆಗೆ ಮತ್ತೆ ಬೆಟ್ಟ ಸಾಲು, ಕಣ್ಣು ಹಾಯಿಸಿದಲ್ಲೆಲ್ಲಾ ನೀರು, ಹಸುರು, ಮುಡಿತೊಡವಿನಂತೆ ಮಾಯಾ ಮೋಡ. ಎಲ್ಲೋ ಒಂದು ಝರಿಯ ಬುಡದಲ್ಲಿ ಬುತ್ತಿಯೂಟಕ್ಕೆ ಕುಳಿತೆವು. ಬೆಳಿಗ್ಗೆ ಹೊರುವಾಗ ಭಾರೀ ಕಟ್ಟಾಗಿ ಕಾಣಿಸಿದ್ದ ಅಷ್ಟೂ ಕಡಬನ್ನು ಶುದ್ಧ ನಾಟೀ ಜೇನು ಮತ್ತು ತುಪ್ಪದಲ್ಲಿ ಮುಳುಗಿಸಿ ಮೆದ್ದೆವು, ಮಾಧುರ್ಯ ನೆನಪಿನಲ್ಲುಳಿಯುವಂತೆ ಕಾಯಿಚಟ್ನಿಯಲ್ಲಿ ಮುಗಿಸಿಯೇಬಿಟ್ಟೆವು. ಲಿಂಬೇ ಶರಬತ್ತನ್ನು ಎಡೆಸೇವೆಗಿಳಿಸಿ, ಮೋಸುಂಬಿಯ ಬೂಚು ಹಾಕುವಾಗ ಎಲ್ಲರೂ ಒಂದೊಂದು ಗುಡಾಣರೇ! ಅನ್ನ ದೇವರ ಮುಂದೆ ಇನ್ನು ದೇವರುಂಟೇ ಎನ್ನುವವರಿದ್ದಂತೆ, ಇಲ್ಲದ ಕಂಬಿಯ ಮೇಲೆ ಈಗಲೇ ರೈಲು ಬರಬಾರದೇ ಎಂದು ಹಾರೈಸಿದವರೂ ಕಡಿಮೆಯಿಲ್ಲ!

ಸಂಜೆ ನಾಲ್ಕು ಗಂಟೆಯವರೆಗೂ ಇನ್ನಷ್ಟು ಉಪಕತೆಗಳೊಡನೆ ನಮ್ಮ ನಡಿಗೆ ಮುಂದುವರಿಯಿತು. ಕೇರಿಹಳ್ಳಿ ಸೇತುವೆ ನಮಗೆ ಅಂದಿಗೆ ದಕ್ಕದ ಲಕ್ಷ್ಯವೆಂದು ಸ್ಪಷ್ಟವಾಯ್ತು. ಶಿಬಿರ ಹೂಡುವ ಉದ್ದೇಶ ಮತ್ತು ಸಿದ್ಧತೆ ನಮ್ಮಲ್ಲಿರಲೂ ಇಲ್ಲ. ನಿರುತ್ತೇಜನದ ಕೊನೆಯ ಅಂಶವಾಗಿ ರೈಲ್ವೇ ಜಾಡು ಡಾಮರು ಮಾರ್ಗದಿಂದ ದೂರ ಸರಿಯುವುದೂ ನಮ್ಮರಿವಿಗೆ ಬಂದ ಮೇಲೆ ಶೋಧ ಬಿಟ್ಟೆವು. ಕಣಿವೆಯತ್ತ ಇಳಿಯುವ ಮೊದಲ ಲಾರಿ ದಾರಿ ಹಿಡಿದೆವು. ಮುಖ್ಯಾಮುಖ್ಯ ಕವಲುಗಳು ಏನಿದ್ದರೂ ಸುಮಾರು ಐದು ಕಿಮೀ ಕಳೆದು ಕೆಂಪೊಳೆ ದಂಡೆಗೆ ಬರುವಾಗ ಒಮ್ಮತ ಮೂಡಿತ್ತು. ಅಲ್ಲಿನ ದೃಢವಾದ ಸೇತುವೆ ದಾಟಿದ್ದೇ ಹೆದ್ದಾರಿ. ಮತ್ತೂ ಸಂತಸದ ವಿಚಾರ, ಕೂಡಲೇ ಹಾಸನ-ಮಂಗಳೂರು ಎಕ್ಸ್ಪ್ರೆಸ್ ಬಸ್ ಬಂದು ನಮ್ಮನ್ನು (ರಿಯಾಯ್ತಿಯಲ್ಲೇ) ಹತ್ತಿಸಿಕೊಂಡೊಯ್ಯಿತು.


10 comments:

 1. ಇದಕ್ಕಿಂತ ವಿವರವಾಗಿ ಪರಿಸರ ಮತ್ತು ಯಾಂತ್ರೀಕೃತ ಯುಗದ ಕಥೆ ಯಾರಿಂದ ಬರೆಯಲು ಸಾಧ್ಯ - ಪೆಜತ್ತಾಯ ಎಸ್. ಎಮ್.

  ReplyDelete
 2. ನಾನೂ ನೋಡಿದ್ದೇನೆ ಶಿರಾಡಿ ಸೊಬಗಂ, ಹಗಲು ರೈಲಿನಲ್ಲಿ ಕುಳಿತು. ಅಂತರಂಗದಲ್ಲಿ ಹುಡುಕಬೇಕಾದ ಸುಖಶಾಂತಿಯನ್ನು ಬಾಹ್ಯ ಸಾಧನಗಳ ಮುಖೇನ ಗಳಿಸಲು ಯತ್ನಿಸಿದಾಗ ಆಗಬೇಕಾದದ್ದು ಆಗುತ್ತಿದೆ.

  ReplyDelete
 3. ನಾವು ನೋಡಿದ ಪ್ರಕೃತಿಯ ನೆಲೆ ಶಿರಾಡಿಯಲ್ಲಿ ಈಗ ಶಿರವಿಲ್ಲದೆ ರಾಡಿಯೇ ಉಳಿದಿರುವುದು ವಿಷಾದವೆನಿಸಿತು.
  ಆಗ ತೆಗೆದ ಕಪ್ಪು ಬಿಳುಪಿನ ಚಿತ್ರಗಳು ಈಗಲೂ ಬಣ್ನದ ನೆನಪುಗಳಾಗಿ ನನ್ನಲ್ಲಿವೆ. ಆದರೂ ಈಗ ರೈಲಿನಲ್ಲಿ ಹೋಗುವವರಿಗೆ ನೋಡುವ ಭಾಗ್ಯವಾಗಿ ಇಷ್ಟಾದರೂ ಉಳಿದಿರುವುದು ಸಮಾಧಾನದ ಸಂಗತಿ. ಅಂದು ಕೆಂಪುಹೊಳೆಯಿಂದ ಉಪ್ಪಿನಂಗಡಿಗೆ ಬಸ್ಸಿನಲ್ಲಿ ಹಿಂದಿರುಗುವಾಗ ಪಶ್ಚಿಮದ ಆಕಾಶದಲ್ಲಿ ಕಮ್ಯುನಿಷ್ಟರ ಕುಡುಗೋಲು, ತುದಿಯಲ್ಲಿ ನಕ್ಷತ್ರದಂತೆ ಚಂದ್ರ, ಶುಕ್ರರು ಇದ್ದುದನ್ನು ಮರೆಯಲಾರೆ.

  ReplyDelete
 4. Reading this Article reminded me of Walden By Thoreau which I had read sometime back. I am quoting a passage from the same which I believe relates very well to this article,

  "As with our colleges, so with a hundred "modern improvements"; there is an illusion about them; there is not always a positive advance. The devil goes on exacting compound interest to the last for his early share and numerous succeeding investments in them. Our inventions are wont to be pretty toys, which distract our attention from serious things. They are but improved means to an unimproved end, an end which it was already but too easy to arrive at; as railroads lead to Boston or New York. We are in great haste to construct a magnetic telegraph from Maine to Texas; but Maine and Texas, it may be, have nothing important to communicate. Either is in such a predicament as the man who was earnest to be introduced to a distinguished deaf woman, but when he was presented, and one end of her ear trumpet was put into his hand, had nothing to say. As if the main object were to talk fast and not to talk sensibly. We are eager to tunnel under the Atlantic and bring the Old World some weeks nearer to the New; but perchance the first news that will leak through into the broad, flapping American ear will be that the Princess Adelaide has the whooping cough. After all, the man whose horse trots a mile in a minute does not carry the most important messages; he is not an evangelist, nor does he come round eating locusts and wild honey. I doubt if Flying Childers ever carried a peck of corn to mill. "

  ReplyDelete
  Replies
  1. A very interesting one sir... We can always expect usages such as "..ಆಟೋರಾಕ್ಷಸನ..." from you, which made it quite a nice read..

   Delete
  2. ashokavardhana gn15 December, 2012 12:40

   This comment has been removed by a blog administrator.

   Delete
 5. ಶಿರಾಡಿ ಬೆಟ್ಟದ ಹೊಟ್ಟೆಯನ್ನು ಕೊರೆದು ರೈಲು ಮಾರ್ಗ ಮಾಡಿದ ಕಥೆ ಓದಿ ಖುಶಿ ಆಯಿತು. ಧನ್ಯವಾದಗಳು.

  ReplyDelete
 6. ಮಾನ್ಯರೇ,
  ಥೇಟ್ ನನ್ನ ಅನುಭವಗಳಂತೆ ಹಿತವೆನಿಸಿತು. ಗುಂಡು ಹಾಕಲೆಂದೇ ಹೊಡೆಯಲೆಂದೇ ಹೋಗುವವರೂ ಇದ್ದಾರಂತೆ ನೀಚರು ! ತಮ್ಮದು, ಒಂದು ಕಾಲದ ಜೀವಮಾನ ಪದ್ಧತಿಯನ್ನು ಭಾಷಾ ಸೊಗಡಿನೊಂದಿಗೆ ಕಟ್ಟಿಕೊಟ್ಟ ಅನುಭವ ಲೇಖನ. ಅಭಿನಂದನೆಗಳು. ಧನ್ಯವಾದಗಳು. ಶುಭಾಶಯಗಳನ್ನೂ ಸೇರಿಸಿಬಿಡಲೇ ?

  ಧನಂಜಯ್
  ಮೈಸೂರು
  96863 13696

  ReplyDelete
 7. ಈಗ ನೆನೆದರೆ ಖುಷಿ ಬೇಜಾರುಎಲ್ಲಒಟ್ಟಿಗೇಆಗ್ತದೆ.

  ReplyDelete
 8. ತುಂಬ ಅಪ್ಯಾಯಮಾನವಾದ ಉದ್ದರಣೆ. ವಾಲ್ದನ್ ಸರೋವರದ ತಟಿಯ ಋಷಿ ಹೆನ್ರಿ ಡೇವಿದ್ ಥೊರೊ ನಮ್ಮೆಲ್ಲಾ ವನ್ಯ ಶಿಬಿರಗಳಲ್ಲು ನನ್ನ ಮನಸನ್ನು ಕಾಡುತ್ತಲೆ ಇರುತ್ತಾನೆ

  ReplyDelete