20 November 2012

ಜಲಜಾಗೃತಿಗೊಂದು ಬೀದಿ ನಾಟಕ


ಮಂಗಳೂರಿನ ಮಣ್ಣಗುಡ್ಡೆಯ ಗಾಂಧಿ ಪಾರ್ಕೊಳಗೆ ಸಂಜೆ, ಹಿರಿಯರು ಹರಡಿ ಬಿದ್ದ ಬೆಂಚು ಬಿಸಿಮಾಡಿ, ಎಂದಿನ ಶುದ್ಧ ಹವಾ ಸೇವಿಸಿ ಹೋಗುವಂತಿರಲಿಲ್ಲ. ನಡು ವಿಸ್ತರಿಸಿದವರು ಬೆಲ್ಟಿನ ಒಂದು ತೂತು ಕಡಿಮೆ ಮಾಡಲು ಅಷ್ಟೂ ಪುಟ್ಟಪಥಗಳಲ್ಲಿ ಬಿರುಸಿನ ಹೆಜ್ಜೆ ಹಾಗಿ ಮುಗೀತು ಎನ್ನಲಾಗದಂತೆ ಒಳಗೊಂದು ವ್ಯಾನು ಬಂದು ಅಡ್ಡಿ ಮಾಡಿತ್ತು. ಸೂರಕ್ಕ ಮೊನ್ನೆ ನೀರಿಗೆ ಹೋಪಾಗ ಜಾರೀ ಬಿದ್ದಳಂತೇ...ಗೆ (ಕಾರಂತರ ಗೀತನಾಟಕ) ಹೊಸ ಚರಣ ಸೇರಿಸಲು, ಕಾರಂಜಿ ಕಟ್ಟೆಗೆ ಒರಗಿ ಒಂದೂವರೆ ಕಾಲಿನಲ್ಲಿ ನಿಂತವರ ಪಿಸುಮಾತಿಗೆ ವ್ಯಾನಿನೊಳಗಿನ ವಿದ್ಯುಜ್ಜನಕ ಗಲಾಟೆ ಮಾಡಿತು. ಹುಲ್ಲ ಹಾಸಿನ ಮೇಲೆ ವಿಹರಿಸುವ ಜೋಡಿಗಳಿಗೆ ಅಂಚಿನ ಕಟ್ಟೆ ತೋರಿ, ಆರೆಂಟು ಜನ ಮೈಕ್ ಕೋಲು ನಿಲ್ಲಿಸಿ, ಏನೇನೋ ತತ್ಕಾಲೀನ ಪತಾಕೆಗಳನ್ನು ಊರಿ ಗಡಿಬಿಡಿ ನಡೆಸಿದ್ದರು. ಪೊದರ ನೆರಳಿನಲ್ಲಿ ಪ್ರೇಮಕಥನ ಬಿಡಿಸುವವರು ಸಾರ್ವಜನಿಕವಾದ ಬೇರೊಂದೇ ದುರಂತಕಥನಕ್ಕೆ ಸಾಕ್ಷಿಯಾಗಬೇಕಾಯ್ತು. ಹಗ್ಗ ಸೇತುವೆ, ಉಯ್ಯಾಲೆ, ಜಾರುಬಂಡೆಯನ್ನೆಲ್ಲಾ ಆಕ್ರಮಿಸಿದ್ದ ಕಪಿಸೈನ್ಯಕ್ಕಂತು ಇಲ್ಲೇನೋ ರಾಗ, ಡೋಲು, ಬೊಬ್ಬೆ, ಮಣಿತಗಳ ಚೋದ್ಯ ಬನ್ರಪ್ಪೋ ಬನ್ನೀ, ಕೇಳ್ರಪ್ಪೋ ಕೇಳೀ.

ಚಿತ್ರ ಕೃಪೆ: ಪಿ. ಮಹಮದ್
ನಾಂದಿ ಪದ್ಯ ಸಾಂಪ್ರದಾಯಿಕ ಗಜವದನನಿಗೆ ನಜರೊಪ್ಪಿಸಲಿಲ್ಲ, ಜಲಮಹತ್ವವನ್ನು ಸ್ತುತಿಸಿತು. ಇಪ್ಪತ್ತೇ ಮಿನಿಟಿನ ಬೀದಿನಾಟಕದ ಆಶಯವನ್ನು ಇಬ್ಬಂದಿಯಿಲ್ಲದ ಮಾತುಗಳಲ್ಲಿ ಪೀಠಿಕೆ ಹೊಡೆದು ಮುಂದುವರಿಸಿತು. ಮೊದಲೊಂದು ಸತ್ಯ ಕಥೆ - ರಾಜಾಸ್ತಾನದ ಹಳ್ಳಿಯೊಂದರಲ್ಲಿ ಮರುಭೂಮಿಯ ಸೋಲು, ನದಿಯೊಂದರ ಪುನರ್ಜನ್ಮ. ನೀತಿ: ಓಡುವ ನೀರನ್ನು ನಿಧಾನಿಸಿ, ನಿಲ್ಲಿಸಿ, ಇಂಗಿಸಿ. ಭೂಲೋಕದಲ್ಲಿರುವ ನೀರಿನ ೯೭ ಶೇಕಡಾ ಸಮುದ್ರಗಳಲ್ಲಿದ್ದು ಉಪ್ಪಾಗಿದೆ. ಶೇಕಡಾ ಎರಡು ಧ್ರುವಪ್ರದೇಶಗಳಲ್ಲಿ ಘನೀಭವಿಸಿ ಇಳಿದು ಬಂದದ್ದೇ ಆದರೆ ಜಲಪ್ರಳಯ ನಿಶ್ಚಿತ. (ಹೀಗನ್ನುವವರು ಧೂರ್ತ ಕವಡೇ ಜೋಯಿಸರಲ್ಲ, ಸ್ವಸ್ಥ ವಿಜ್ಞಾನಿಗಳು.) ಉಳಿದಿರುವ ನೂರರಲ್ಲಿ ಒಂದೇ ಒಂದು ಬಿಂದು ಜಗತ್ತಿನ ಎಲ್ಲಾ ಜನಕ್ಕೆ ಮಾತ್ರ ಅಲ್ಲ, ಬಹುತೇಕ ಜೀವರಾಶಿಗೂ ನಾಗರಿಕತೆಯ ವಿಸ್ತೃತ ಆಶಯಗಳಿಗೂ ಒದಗಲೇ ಬೇಕಾಗಿದೆ. ಬಿಂದಿನ ಬಿಂದು - ಮಂಗಳೂರು ನಗರದ ನೀರು, ಏನಾಗುತ್ತಿದೆ ಗೊತ್ತೇ ಎನ್ನುವುದನ್ನು ಸರಳ ಪದ್ಯದಲ್ಲಿ, ಗಂಭೀರ ದೃಶ್ಯಗಳಲ್ಲಿ, ಮಕ್ಕಳಾಟದಲ್ಲೂ ಭೂತಾಕಾರದಲ್ಲಿ ನಿಲ್ಲಿಸಿದರು. ಹಣ, ಯೋಜಿತ ಯಂತ್ರಸ್ಥಾವರಗಳ ಮೂಲಕವೇ ಬರಬೇಕಾದ ಬೃಹತ್ ಉದ್ದಿಮೆಗಳು ಒಳದಾರಿ ಹಿಡಿದು ಸುಲಭ ನೀರ ಮೂಲವನ್ನೇ ಶೋಷಿಸುತ್ತಿವೆ. ಮಂಗಳೂರಿನ ಕುರಿಗಳು ತುಂಬೆಯ ಕೆಳದಂಡೆಯಲ್ಲಿ ನೀರು ಕುಡಿಯುವಾಗ ಎಮ್ಮಾರ್ಪೀಯೆಲ್ಲಿನಂಥ ತೋಳಗಳು ಸರಪಾಡಿಯ ಮೇಲ್ದಂಡೆಯಲ್ಲಿ ಹೂಂಕರಿಸುತ್ತಿವೆ. ಅದಕ್ಕೇ ಭವಿಷ್ಯವಿಜ್ಞಾನ ಮೂರನೇ ಮಹಾಯುದ್ಧ ನಡೆಯುವುದೇ ಇದ್ದರೆ ಮುಖ್ಯ ಕಾರಣ ನೀರು ಎನ್ನುತ್ತದೆ. ಯುದ್ಧದ ಬೀಜರೂಪ ಇಲ್ಲೇ ಕೆಳದಂಡೆ, ಮೇಲ್ದಂಡೆ ಎಂದು ಮಂಗಳೂರು ಬಂಟ್ವಾಳಗಳ ನಡುವೆ ನಡೆದರೆ ಆಶ್ಚರ್ಯವಿಲ್ಲ ಎಂಬ ಮಾತಿನೊಡನೇ ಬೀದಿನಾಟಕ ಕೊನೆಗೊಳ್ಳುವಾಗ, ಎಲ್ಲರೂ ಬೆಚ್ಚಿಬೀಳುವಂತಾಗಿತ್ತು.


ಐತಿಹಾಸಿಕ ದಿನಗಳಲ್ಲಿ, ವೈಭೋಗದ ಕನಸಿನಲ್ಲಿ, ಮಾನವೀಯತೆ ಮರೆತು ಹಳದಿಲೋಹಕ್ಕೆ ನುಗ್ಗಿದವರ ಕತೆ ಕೇಳಿದ್ದೇವೆ (ಗೋಲ್ಡ್ ರಶ್). ಮತ್ತಿನ ದಿನಗಳಲ್ಲಿ ಕರಿಚಿನ್ನದ ಲೆಕ್ಕದಲ್ಲಿ, ಅಂದರೆ ಪೆಟ್ರೋ-ಸಂಪತ್ತಿಗಾಗಿ ನಡೆಯುತ್ತಿರುವ ಜಾಗತಿಕ ಸಂಚಲನ, ಲಕ್ಷಾಂತರ ಜೀವಹಾನಿ, ದೇಶ ವ್ಯವಸ್ಥೆಗಳ ಉಲ್ಲೋಲಕಲ್ಲೋಲ ಅನುಭವಿಸುತ್ತಲೇ ಇದ್ದೇವೆ. ಇದರಲ್ಲಿ ಅತಿ ಧೂರ್ತ ರಾಜಕೀಯ ಜೂಜುಕೋರನಾಗಿ ಅಮೆರಿಕಾ ಮೆರೆದಿರುವುದನ್ನು ಕಂಡೂ ಕಾಣದ ಸ್ಥಿತಿಯಿಂದ ನಾವಿನ್ನೂ ಹೊರಗೆ ಬಂದಿಲ್ಲ. ಅಷ್ಟರಲ್ಲೇ ಹಳದಿ ಲೋಹ ಸಂಪತ್ತು ಸಂಗ್ರಹ, ಸೀಮಿತ ಇಂಧನ ಮೂಲಗಳ ಮೇಲಿನ ಅಧಿಕಾರ ಮೇಲಾಟದಿಂದಾಚೆ, ಮನುಷ್ಯನ ಅಳಿವು ಉಳಿವಿನ ಬೃಹತ್ ಪ್ರಶ್ನೆಯಾಗಿಯೇ ತಲೆ ಎತ್ತುತ್ತಿದೆ ನೀರ ಸಮಸ್ಯೆ. ಈಗಾಗಲೇ ತೊಡಗಿದೆ ನೀರಿಗಾಗಿ ಧಾವಂತ - ಬ್ಲೂಗೋಲ್ಡ್ (ನೀರು) ರಶ್!! ತೋಟಕ್ಕೆ ಬಿದ್ದ ಬೆಂಕಿಗೆ ಬಾಗಿಲು ಹಾಕಿ ಕೂರುವುದಲ್ಲ - ಜಾಗೃತರಾಗಿ. ಜಾತಿ, ವೃತ್ತಿ, ಪ್ರವೃತ್ತಿ, ಭಾವುಕ ತತ್ತ್ವಗಳಲ್ಲಿ ಕಳೆದುಹೋಗದೆ ನೀರಿಗಾಗಿ ಕ್ರಿಯಾಶೀಲರಾಗಿ. ನಮ್ಮ (ಪ್ರಜಾ) ಪ್ರಭುತ್ವದ ಪಾರಮ್ಯ ಮೆರೆದು, ಸೇವಕರಿಗೆ (ಜನಪ್ರತಿನಿಧಿಗಳು) ಪಾಠ ಕಲಿಸಿ, ಸ್ಥಾನ ತೋರಿಸಿ. ಮತಯಾಚನೆಗೆ ಬಂದಲ್ಲಿ ಮಾತಿನಲ್ಲಿ ಕಟ್ಟಿ ಹಾಕಿ. ಶುದ್ಧ ಗಾಳಿ, ಶುದ್ಧ ನೀರು... ಎಂಬ ಮಾತುಗಳು ಕಡತದೊಳಗಿನ ಅಕ್ಷರಗಳಾಗದಿರಲಿ, ನಿಮ್ಮ ಉಳಿವಿಗೆ ದಿವ್ಯ ಮಂತ್ರಗಳಾಗಲಿ; ನೀರು ನಮ್ಮ ಹಕ್ಕು!

ಇಷ್ಟೂ ಇನ್ನಷ್ಟೂ ಹೊಳೆಯಿಸಿದ್ದು ಅದೇ ಗಾಂಧೀ ಪಾರ್ಕೊಳಗೆ, -೧೧-೧೨ರಂದು ನಡೆದ ಬೀದಿನಾಟಕ! ಗೆಳೆಯ ನಟೇಶ್ ಉಳ್ಳಾಲರ ಹೆಂಡತಿ - ವಿದ್ಯಾ ದಿನಕರ್, ಇದೇ ಮೂರನೇ ತಾರೀಕಿನಂದು ಹಿಂದೆ ಒಂದು ಮಿಂಚಂಚೆ ಕಳಿಸಿದ್ದರು. ಜಲಜಾಗೃತಿಗಾಗಿ ಇಂದು ಜಿಲ್ಲಾಧಿಕಾರಿ ಕಛೇರಿ ಎದುರಿನಿಂದ ತೊಡಗಿದ ನಮ್ಮ ಬೀದಿನಾಟಕದ ಪ್ರದರ್ಶನ ದಿನವಿಡೀ ವಿವಿಧ ಕೇಂದ್ರಗಳಲ್ಲಿ ನಡೆಯಿತು. ನೀರು ನಮ್ಮ ಹಕ್ಕು ಎಂಬ ನಮ್ಮ ಆವೇಶಕ್ಕೆ ವಾಮಂಜೂರಿನಲ್ಲಿ ಸಿಕ್ಕ ಪ್ರೋತ್ಸಾಹವಂತೂ ನನ್ನನ್ನು ಹೆಚ್ಚು ಉತ್ತೇಜಿಸಿದ್ದರಿಂದ ನಾಳೆಯ ಪ್ರದರ್ಶನಗಳ ಸ್ಥಳ ಮತ್ತು ವೇಳಾಪಟ್ಟಿ ಲಗತ್ತಿಸಿದ್ದೇನೆ. ಅನುಕೂಲವಿದ್ದಲ್ಲಿ ನಮ್ಮನ್ನು ಸೇರಿಕೊಳ್ಳಿ. ಸುಮಾರು ಮೂರು ತಿಂಗಳ ಹಿಂದೆ ಮೈಸೂರಿನಿಂದ ಬಂದ ಕ್ಷಿತಿಜರಾಜ್ ಅರಸು ಎಂಬವರ ಬಗ್ಗೆ ನಾನು ಇಲ್ಲೇ ಉಲ್ಲೇಖಿಸಿದ್ದು, ಅವರ ಮಾತುಗಳನ್ನು ಉದ್ಧರಿಸಿದ್ದು ನಿಮಗೆ ನೆನಪಿವೆ ಎಂದು ಭಾವಿಸುತ್ತೇನೆ. (ನೋಡಿ - ನಗರ ತುಣುಕುಗಳು). ಅವರ ಬಳಗ ಮೈಸೂರಿನಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ನೀರು, ನೆಲಗಳ ಅಧ್ಯಯನ ಮತ್ತು ಹೋರಾಟ ನಡೆಸುತ್ತ, ಸಾಮಾಜಿಕ ಅರಿವು ಹೆಚ್ಚಿಸುತ್ತ ಬಂದಿದೆ. ಮೈಸೂರಿನಲ್ಲಿ ವಾಣೀವಿಲಾಸ್ ವಾಟರ್ ವರ್ಕ್ಸ್ ಎಂಬ ಸಾರ್ವಜನಿಕ ಜಲ ಮಂಡಳಿ, ಶತಮಾನಕ್ಕೂ ಮಿಕ್ಕು ಕಾಲದಿಂದ ಸಾಕಷ್ಟು ಸಮರ್ಥವಾಗಿಯೇ ನಗರ ನೀರು ಸರಬರಾಜುವನ್ನು ನಡೆಸಿಕೊಂಡು ಬಂದಿತ್ತು. ಅದನ್ನು ಕೆಲವರು ಖಾಸಾ ಆರ್ಥಿಕ ಮತ್ತು ರಾಜಕೀಯ ಲಾಭಗಳಿಗಾಗಿ ಪರಭಾರೆ ಮಾಡುವ ಕುತಂತ್ರ ನಡೆಸಿದರು. ಜನಪ್ರತಿನಿಧಿಗಳನ್ನು ಅವರದೇ ಭ್ರಮಾಲೋಕದಲ್ಲಿ ಬಿಟ್ಟು, ವಾಸ್ತವದ ಜಲನಿರ್ವಹಣೆಯ ಅನುಭವ ಮತ್ತು ಸಮರ್ಥ ಸಿಬ್ಬಂದಿಯೂ ಇಲ್ಲದ ಟಾಟಾ ಕಂಪೆನಿಗೆ ಹೆಚ್ಚು ಕಮ್ಮಿ ಕೊಟ್ಟು ಕೈಮುಗಿದಿದ್ದರು! ಕ್ಷಿತಿಜ್ರಾಜ್ ಅರಸ್ನಂಥ ಜಾಗೃತರ ಬಳಗ ಅದನ್ನು ಪ್ರಪಾತದಾಚೆಯಿಂದ ಉಳಿಸಿ ತಂದದ್ದು ಸಣ್ಣ ಸಾಹಸವಲ್ಲ. ಕಥನ ಬರಿಯ ಶಿಬಿರಾಗ್ನಿ ಎದುರು ಕುಳಿತು ಕೇಳಿದ ಕಾಲಕ್ಷೇಪವಾಗಲಿಲ್ಲ. ಅವರನ್ನು ಕರೆಸಿ, ಸಭೆ ಸಂಘಟಿಸಿದ ಉತ್ಸಾಹಿಗಳಲ್ಲಿ ಮುಖ್ಯರು ವಿದ್ಯಾ ದಿನಕರ್. ಈಕೆ ಎಸ್..ಜ಼ೆಡ್., ಎಂ.ಎಸ್.. ಜ಼ೆಡ್ನಂಥ ನೆಲನುಂಗುವ ಬಕಾಸುರರನ್ನು ತುಡುಕಿದ ಅನುಭವಿ. ಅಷ್ಟು ನೆಲ ನುಂಗುವವರಿಗೆ ಇನ್ನಷ್ಟೇ ನೀರೂ ಬೇಡವೇ? ಬಹುಶಃ ಆಗ ಇವರಿಗೆ ಕ್ಷಿತಿಜರಾಜ್ ಕಾಣಿಸಿರಬೇಕು. ಬೃಹತ್ ಉದ್ದಿಮೆಗಳ ದಾಹಕ್ಕೆ ಮಂಗಳೂರಿನ ನೀರಿನ ಸ್ಥಿತಿ ಸಾಟಿಯಾಗುವುದು ಅಸಾಧ್ಯ. ಇದನ್ನು ನೆನಪಿಸುವ ಕೆಲಸಕ್ಕೆ ಅಂದು ಇಳಿದ ವಿದ್ಯಾ, ಇನ್ನೂ ಮಾಡುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಬೀದಿನಾಟಕ.

ಸಾಂಪ್ರದಾಯಿಕ ವ್ಯವಸ್ಥೆಗಳಲ್ಲಿ ಸ್ಥಿತಿಸ್ಥಾಪಕ ಗುಣ ಸಹಜವಾಗಿರುತ್ತದೆ ಮತ್ತು ತುಂಬಾ ಸಮರ್ಥವಾಗಿಯೂ ಇರುತ್ತದೆ. ಆದರೆ ಹೆಚ್ಚು ಕಡಿಮೆ ಸುಧಾರಿಸಿಕೊಂಡು ಹೋಗುವ ಮಾತು ಆಧುನಿಕ ಉದ್ದಿಮೆಗಳಲ್ಲಿ ಇರುವುದೇ ಇಲ್ಲ. ಅವು ಯೋಜನೆ, ಕಾನೂನು ಮತ್ತು ಲೆಕ್ಕಾಚಾರಗಳೊಡನೆ ಕನಿಷ್ಠ ವೆಚ್ಚದಲ್ಲಿ ಗರಿಷ್ಠ ಆದಾಯವನ್ನೇ ಲಕ್ಷಿಸುತ್ತವೆ. ಸಹಜವಾಗಿ ಎಮ್.ಸಿ.ಎಫ್., ಎಮ್ಮಾರ್ಪೀಯೆಲ್ ಮುಂತಾದ ಉದ್ದಿಮೆ ಬಳಗ ನಗರದ ಜೀವನಾಡಿಯ ಬಗ್ಗೆ ಜಾಣ ನಿಸ್ಪಂದವನ್ನು ಮೆರೆಯುತ್ತವೆ. ಹೊರಗಿನ ಅಸಂಘಟಿತ ಧ್ವನಿಯನ್ನು ಅಲ್ಲಲ್ಲೇ ಅದುಮುತ್ತಿರುತ್ತವೆ. ತಮ್ಮ ಬಲು ಸಣ್ಣ ಕೊರಗನ್ನೂ ದೇಶದ ಆರ್ಥಿಕತೆಗೆ ಭರಿಸಲಾಗದ ನಷ್ಟ ಎಂಬಂತೆ ಬಿಂಬಿಸುವಲ್ಲಿ ಇವು ಅವಕಾಶಗಳನ್ನು ತಪ್ಪಿಸಿಕೊಂಡದ್ದೇ ಇಲ್ಲಇದಕ್ಕೆಲ್ಲ ಎಷ್ಟೂ ಉದಾಹರಣೆಗಳು ಇವೆ ಆದರೆ ಎದುರಿಸಲು ಅದೇ ಮಟ್ಟದ ಸಂಘಟನಾತ್ಮಕ ಬಲ ಇಲ್ಲ. (ಪ್ರಸ್ತುತ ಬೀದಿ ನಾಟಕದ ಒಂದು ದೃಶ್ಯದಲ್ಲಿ, ಅಷ್ಟು ಸಂಪತ್ತನ್ನು ಮಧ್ಯೆ ಗುಡ್ಡೆ ಹಾಕಿ ಐದು ಮಂದಿಗೆ ಬಾಚಿಕೊಳ್ಳಲು ಸಮಾನ ಅವಕಾಶ ಕೊಡುತ್ತಾರೆ. ಮೂವರು ಅಂದರೆ, ಬಹುಸಂಖ್ಯಾತರು ಸೋಲುತ್ತಾರೆ. ಶಕ್ತಿ, ಪ್ರಭಾವಗಳ ಬಲದ ಇಬ್ಬರು ಮಾತ್ರ ಎಲ್ಲಾ ತಮ್ಮೊಳಗೇ ಬಾಚಿ ಮುಗಿಸುತ್ತಾರೆ) ಎಮ್ಮಾರ್ಪೀಯೆಲ್ಲಿನ ಹೊರವಲಯದ ಬಾವಿಗಳು ಜೀವವೈರಿಗಳಾದರೂ ಊರ ಉತ್ಸವಕ್ಕೆ ಉದಾರ ದೇಣಿಗೆ ಕೊಟ್ಟು ಉಪಶಮನ ಮಾಡಬಲ್ಲರು. ವಿಷ ಕಾರ್ಖಾನೆಯ ದೂಳಿನಲೆಯಲ್ಲಿ ಪ್ರಾಣಹಿಂಡುವ ಗೂರಲು ಕಾಡುವವರೂ ಇವರ ಪ್ರಾಯೋಜನೆಯ ಸಾಂಸ್ಕೃತಿಕ ಕಲಾಪವನ್ನು ಮುಗ್ಧವಾಗಿ ಅನುಭವಿಸಿ ಮನಸ್ವೀ ಚಪ್ಪಾಳೆ ತಟ್ಟುತ್ತಾರೆ. ಅದೇ ಮಂಗಳೂರಿಗೆ ನೀರಿಲ್ಲವಾದಾಗ, ತುಂಬೆ ಕಟ್ಟೆಯಲ್ಲಿ ಇನ್ನೊಂದೇ ವಾರಕ್ಕೆ ನೀರು ಎಂಬರ್ಥದ ಘೋಷಣೆ ಅಧಿಕಾರ ಪೀಠದಿಂದಲೇ ಬಂದಾಗ ಸಹಜವಾಗಿ ಎಲ್ಲರ ಗಮನ ಅದೇ ನೇತ್ರಾವತಿಯ ಇನ್ನೂ ಮೇಲ್ದಂಡೆಯ (ಸರಪಾಡಿಯಲ್ಲಿ ಎಮ್ಮಾರ್ಪೀಯೆಲ್ ಹಾಕಿದ್ದು) ಅಣೆಕಟ್ಟೆಯ ಮೇಲಿರುತ್ತದೆ. ಆದರೆ ಅದಕ್ಕೆ ಹೊರೆಯಾಗದಂತೆ ಕಾಪಾಡುವಲ್ಲಿ ಅತ್ಯಂತ ಕೆಳಸ್ತರದ ಜನಪ್ರತಿನಿದಿಯಿಂದ ಕೇಂದ್ರದ ಸಚಿವರವರೆಗೆ, ಯಾವುದೇ ಸಾರ್ವಜನಿಕ ಕಛೇರಿಯ ಚಪರಾಸಿಯಿಂದ ರಾಜ್ಯದ ಮುಖ್ಯ ಕಾರ್ಯದರ್ಶಿಯವರೆಗೆ ಎಲ್ಲರೂ ತೀವ್ರವಾಗಿ ತೊಡಗಿಕೊಳ್ಳುತ್ತಾರೆ.


ನೇತ್ರಾವತಿ ಬತ್ತುವುದರೊಡನೆ ಮಂಗಳೂರು ಮರುಭೂಮಿಯಯ್ತೇ ಎಂದು ಸಂಶಯಿಸುವ ದಿನಗಳಲ್ಲೂ ಕದ್ರಿ ದೇವಳ ಪರಿಸರದಲ್ಲಿ (ಮತ್ತೂ ಕೆಲವು ಉನ್ನತ ಪದವುಗಳ ತಪ್ಪಲಿನ ಕಣಿವೆಗಳಲ್ಲಿ) ಪ್ರಾಕೃತಿಕವಾಗಿ ಉಕ್ಕುವ ಒರತೆಗಳು ಕೇಳುವವರಿಲ್ಲದೆ, ಅಸಂಖ್ಯ ಕೊಳಚೆ ಉಪನದಿಗಳ ಸಂಗದಲ್ಲಿ ಹರಿದು ಸಮುದ್ರ ಸೇರುತ್ತಲೇ ಇತ್ತು. ಕದ್ರಿ ಕಂಬಳದ ಅಸಂಖ್ಯ ಟ್ಯಾಂಕರ್ ಸರ್ವೀಸ್ ಗಡಿಯಾರದ ಪೂರ್ಣ ಸುತ್ತಿನಲ್ಲೂ ದುಡಿದೇ ಇದ್ದವು. (ಕಷ್ಟವೋ ಸುಖವೋ) ಹೆಚ್ಚಿನ ಹೋಟೆಲುಗಳ ನಲ್ಲಿಗಳು ಗಾಳಿ ಬಿಡುತ್ತಿರಲಿಲ್ಲ; ನೀರೂಡುತ್ತಲೇ ಇದ್ದವು! ಬಹಳ ಹಿಂದೆಯೇ ಗೆಳೆಯ ಶ್ರಿಪಡ್ರೆ ಜಲ ಸ್ವಾವಲಂಬಿಯಾಗಲು ಎಷ್ಟೂ ಉದಾಹರಣೆಗಳನ್ನು ಸ್ಥಳೀಯವಾಗಿಯೂ ದೇಶ ವಿದೇಶಗಳಿಂದಲೂ ಸಂಗ್ರಹಿಸಿ, ಸ್ಪಷ್ಟವಾಗಿ ಬಿಡಿಸಿಟ್ಟಿದ್ದಾರೆ. (ನಾಟಕದ ಶುರುವಿನ ಕಥೆಯೂ ಹರಿದದ್ದು ಇಲ್ಲಿಂದ.) ಹಾಗೇ ಇನ್ನೊಬ್ಬ ಗೆಳೆಯ ಸುಂದರರಾಯರು ನೇತ್ರಾವತಿ ತಿರುಗಿಸುವವರ ಪ್ರವಾಹದ ಎದುರು ಈಜಿಗಿಳಿದರು. ಪ್ರಾಕೃತಿಕ ಸತ್ಯಗಳನ್ನು ಅರ್ಥ ಮಾಡಿಕೊಳ್ಳುವ ಮೊದಲು ತೀರ್ಮಾನ ಹೇರುವುದು ಇವರಿಗೆ ಹಿಡಿಸದು. ತಿರುಗಿಸುವ ಪ್ರಯತ್ನದ ಅಪ್ರಾಯೋಗಿಕತೆಯನ್ನಷ್ಟೇ ಪ್ರಮಾಣಿಸಲು ತೊಡಗಿದರು. ಈಗ ಬಯಸದೇ ಅಪ್ರಾಮಾಣಿಕತೆ, ಅದಕ್ಷತೆ, ಸ್ವಾರ್ಥ ರಾಜಕೀಯಗಳೇ ಮೊದಲಾದ ಹಲವು ಸುಳಿ, ಸೆಳವುಗಳ ಜಾಲ ಬಿಡಿಸುತ್ತಲೇ ಇದ್ದಾರೆ. ಇವರ ಲೇಖನಗಳು ಪರ್ಯಾಯವಾಗಿ ಮತ್ತೆ ಮತ್ತೆ ನಮ್ಮ ಜಲಸಮಸ್ಯೆಯ ಮೂಲಗಳನ್ನು ಶೋಧಿಸುತ್ತಲೇ ಇವೆ, ಸಾರ್ವಜನಿಕರ ವಿಚಾರಶಕ್ತಿಯನ್ನು ಪ್ರಚೋದಿಸುತ್ತಲೇ ಇವೆ. ಸರಣಿಗೆ ಮೂರನೇ ಸೇರ್ಪಡೆಯಾಗಿ ವಿದ್ಯಾ ದಿನಕರ್, ಇಲ್ಲಿ ಬೀದಿನಾಟಕದ ಅಭಿಯಾನದೊಡನೆ ಕಾಣಿಸುತ್ತಾರೆ. ಮಂಗಳೂರ ನೀರ ಕೊರಗಿನ ಕಾರಣಗಳನ್ನು ತೋರಿಸುತ್ತಾರೆ, ಪರಿಹಾರಕ್ಕಿರುವ ದಾರಿಗಳನ್ನು ಶೋಧಿಸುತ್ತಾರೆ. ನೀರೆಂಬುದು ಬಯಸಿದಾಗೆಲ್ಲಾ ಸಿಗುವ ಮಾಯಾವಸ್ತುವಲ್ಲ, ಜನರಧ್ವನಿ ದೃಢವಾದರೆ ಮಾತ್ರ  ದಕ್ಕುವ ಆವಶ್ಯಕತೆ.

8 comments:

 1. ಜಲ ಜಾಗೃತಿ ಇನ್ನೂ ಜನರ ಮನ ಮುಟ್ಟಿಲ್ಲ. ಇದರ ಪ್ರಾಮುಖ್ಯತೆ ಹೆಚ್ಚಿನವರಿಗೆ ತಿಳಿದಂತೆ ತೋರುವುದಿಲ್ಲಾ. ಈ ಬೀದಿ ನಾಟಕಗಳು ನಿಜಕ್ಕೂ ಪ್ರಶಂಶಾರ್ಹ . ಉತ್ತಮ ಪ್ರಯೋಗ.ಇದು ಎಸ್ತರ ಮಟ್ಟಿಗೆ ಯಶಸ್ಸು ಕಾಣುತ್ತದೋ ಗೊತ್ತಿಲ್ಲಾ. ಆದರೆ ಇದರ ಬಗ್ಗೆ ಪ್ರಚಾರವಿದ್ದಲ್ಲಿ ಇನ್ನೂ ಚುರುಕಾಗಬಹುದು. ಇತ್ತೀಚಿಗೆ "ನುಡಿ ಸಿರಿ" ಯಲ್ಲಿ ಗಿರೀಶ್ ಕಾಸರವಳ್ಳಿಯವರು " ಉತ್ತಮ ಚಲನಚಿತ್ರ ಜನರನ್ನು ಮುಟ್ಟುತ್ತಿಲ್ಲ ಯಾಕೆಂದರೆ ಚಿತ್ರ ಮಂದಿರಗಳು ಪಟ್ಟಭದ್ರರ ಕೈಯಲ್ಲಿ / ಹಿಡಿತದಲ್ಲಿದೆ. ಇದಕ್ಕೆ ಪರ್ಯಾಯವೆಂದರೆ ಸಮಾರಂಭಗಳಲ್ಲಿ, ಸಭೆಗಳಲ್ಲಿ ಉತ್ತಮ ಚಿತ್ರಗಳ ಪ್ರದರ್ಷನವೆರ್ಪಡಿಸುವುದು" ಎಂದು ಹೇಳಿದ್ದಾರೆ. ಹಾಗಾಗಿ ಉತ್ತಮ ಸಂದೇಶವನ್ನು ಜನರಿಗೆ ತಲಪಲು ಜನರ ಮಧ್ಯಕ್ಕೆ ಹೋಗುವಂತಹ ಈ ಕಾರ್ಯಕ್ರಮ ಶ್ಲಾಘನೀಯ. ಆದರೆ ಪ್ರಚಾರಕ್ಕೆ ( ಕಾರ್ಯಕ್ರಮದ ಸೂಚನೆ) ಮಿಂಚಂಚೆ, ಪತ್ರಿಕಾ ಬಿಡುಗಡೆ, ಸಾಮಾಜಿಕ ಜಾಲತಾಣ ಗಳ ಸದುಪಯೋಗ ಮಾಡಬಹುದೇನೋ..?

  ReplyDelete
 2. ಜಲ ಜಾಗೃತಿ ಇನ್ನೂ ಜನರ ಮನ ಮತ್ತು ಮನೆ ಮುಟ್ಟಿಲ್ಲ ..

  ReplyDelete
 3. ಈಗಾಗಲೇ ಜಾಗೃತರಾಗಿರುವವರು ಈ ಬೀದಿನಾಟಕವನ್ನು ನೋಡಿ ಮೆಚ್ಚಿರುವ ಸಾಧ್ಯತೆ ಹೆಚ್ಚು. ಅಂದ ಮಾತ್ರಕ್ಕೆ ಪ್ರಯತ್ನ ಪೂರ್ಣವಾಗಿ ನಿಷ್ಪ್ರಯೋಜಕ ಅನ್ನುವುದಿಲ್ಲ. ಇಂಥ ವಿಷಯಗಳಲ್ಲಿ 1-2 ವರ್ಷ ಕಾಲ ನಿರಂತರವಾಗಿ ಏಕಕಾಲ;ದಲ್ಲಿ ವಿಭಿನ್ನ ತಂತ್ರ ಪ್ರಯೋಗಿಸಿದರೆ ಅಪೇಕ್ಷಿತ ಪರಿಣಾಮ ಉಂಟಾಗಬಹುದು.

  ReplyDelete
 4. ನಮ್ಮ ಹಳ್ಳಿಗಳಲ್ಲಿ ಮಳೆಗಾಲದಲ್ಲಿ ನೀರು ಹರಿವಿಗೆ ಅವಕಾಶ ಮಾಡಿಕೊಡುವುದಿಲ್ಲ. ಅವರಿವರ ತೋಟ ಗದ್ದೆಯಲ್ಲಿ ನೀರು ನಿಂತರೆ ನಮಗೇನು ನಷ್ಟ ಅನ್ನುವ ಮನೋಬಾವ. ಬೇಸಿಗೆಯ ನೀರಿಗಾಗಿ ಕಾಳಜಿಯೂ ವಹಿಸಿಕೊಳ್ಳುವುದಿಲ್ಲ ಅನ್ನುವಾಗ ಬೇಸರವಾಗುತ್ತದೆ. ಈ ಮದ್ಯೆ ಜನರಲ್ಲಿ ಅರಿವು ಮೂಡಿಸಲು ಬೀದಿ ನಾಟಕ ಪ್ರಯತ್ನ ಬಗ್ಗೆ ಕುಶಿಯಾಯ್ತು. ಮುಂದಿನ ಯುದ್ದ ನೀರಿಗಾಗಿ ಅನ್ನುವುದು ಈಗಾಗಲೇ ಖಚಿತಗೊಂಡಿರುವಾಗ, ಮಂಗಳೂರು ಭಂಟವಾಳ ಮದ್ಯೆ ಅನ್ನುವುದೂ ಅರ್ಥಪೂರ್ಣ. ಆಗ ಹೆಚ್ಚು ಬಲಿಷ್ಟವಾಗಿರುವ ಮಂಗಳೂರು ತೋಳನ ಪಾತ್ರ ವಹಿಸಬಹುದೇನೊ ?

  ReplyDelete
 5. ಮಂಗಳೂರು ನಗರದ ಜನರಿಗೆ ಸದ್ಯದಲ್ಲೇ ಒದಗಲಿರುವ ನೇತ್ರಾವತಿ ಜಲಕ್ಷಾಮದ ಬಗ್ಗೆ ಇಂಥ ಬೀದಿ ಜಾಗೃತಿ ಕಾರ್ಯಕ್ರಮಗಳು ಎಷ್ಟು ನಡೆದರೂ ಸಾಲವು. ರಾಜ್ಯ ರಾಜ್ಯಗಳ ಜಲಯುದ್ಧಗಳು ರಾಜ್ಯಗಳ ಒಳಗೇ ಊರು, ಬಡಾವಣೆಗಳ ನಡುವೆ ನಡೆಯುವ ದಿನಗಳು ದೂರವಿಲ್ಲ. ವಿಡಿಯೊ ತುಣುಕುಗಳು ಕಾರ್ಯಕ್ರಮದ ವರದಿಯನ್ನು ಸಂಋದ್ಧಗೊಳಿಸಿವೆ. ನಿಮಗೆ ಧನ್ಯವಾದಗಳು

  ReplyDelete
 6. ಎಸ್.ಎಂ ಪೆಜತ್ತಾಯ20 November, 2012 21:24

  ಜಲಜಮ್ಮ ಮುನಿದೊಡೆ ಬಹು ಕಷ್ಟಂ ಗಡಾ!

  ReplyDelete
 7. ಜಲಜಾಗ್ರತಿಗೆಂದು ಆಡುತ್ತಿರುವ ಬೀದಿ ನಾಟಕ ಪ್ರಶಂಸನೀಯ. ನೀರಿನ ಕೊರತೆಯ ಸಮಸ್ಯೆಯನ್ನು ವಿಶ್ವದಾದ್ಯಂತ ಬಗೆಹರಿಸದೆ ಇದ್ದಲ್ಲಿ ಸಮಸ್ತ ಮಾನವ ಜನಾಂಗಕ್ಕೆ ಇದರ ಬೆಲೆ ನೀಡಬೇಕಾದಿತು. ನಿಮ್ಮ ಲೇಖನ ಸೂಕ್ತವಾಗಿದೆ. ಧನ್ಯವಾದಗಳು. ಆರ್.ಜಿ.ಭಟ್

  ReplyDelete
 8. ಮಿತ್ರ ಅಶೋಕ ವರ್ಧನರಿಗೆ, ವಂದೇಮಾತರಮ್.
  ಚರಿತ್ರೆ ಪುನರಾವೃತವಾಗುತ್ತದೆ. ನಾಗರೀಕತೆ ಹೊಸರೂಪದಲ್ಲಿ ಮರುಕಳಿಸುತ್ತದೆ.
  ಹಗಲು ವೇಷ, ಹರಿಕಥೆ, ಕೊರವಂಜಿ, ಹಾಲಕ್ಕಿ ನರಸಣ್ನ ನವರನ್ನೆಲ್ಲಾ ಪಕ್ಕಕ್ಕೆ ಸರಿಸಿ ನಿಂತಿತು ನಮ್ಮ ನಾಗರೀಕತೆ(ಥೆ.). ಸಿನೆಮಾ ಸೀರಿಯಲ್ಸ್, ಇತ್ಯಾದಿ ಗಳ ಸಾಮ್ರಾಜ್ಯ ಆವರಿಸಿಕೊಂಡಿತು. ನಮ್ಮ ಸಂಪನ್ಮೂಲಗಳ, ನೈಸರ್ಗಿಕ ಸಂಪ
  ತ್ತುಗಳ ರಕ್ಷಣೆಗೆ ಮತ್ತೆ ಬ್ದೀದಿ ನಾಟಕಗಳೇ ಬೇಕಾಗಿವೆ.
  ನಿಮಗೆ ನೆನಪಿರಬಹುದು. 1950 ದಶಕದ ಆದಿಭಾಗದಲ್ಲಿ ಮದ್ರಾಸ್ ರಾಜ್ಯದಲ್ಲಿ (ಆಗ ನಮ್ಮ ಜಿಲ್ಲೆ ಅದಕ್ಕೆ ಸೇರಿದ್ದು) ಮಕ್ಕಳಿಗೆ ಒಂದು ಹೊತ್ತು ಶಾಲೆಯಲ್ಲಿ ಓದಿ ಉಳಿದ ಸಮಯದಲ್ಲಿ ಹುಡುಗರು ಅವರ ಕುಲಕಸಬನ್ನು ಕಲಿಯಬೇಕು. ಅದರಿಂದಾಗಿ ನಮ್ಮ ಸಾಂಸ್ಕೃತಿಕ ಪ್ರಜ್ನೆ ಸಣ್ಣ ವಯಸ್ಸಿನಲ್ಲೇ ಮಕ್ಕಳ ಮನಸ್ಸಿನಲ್ಲಿ ಸ್ವಾಭಾವಿಕವಾಗಿ ಬೆಳಿಯುತ್ತದೆ ಎಂಬ ಉದ್ದೇಶದಿಂದ ಆ ಯೋಜನೆಯನ್ನು ಅಂದಿನ ಮುಖ್ಯಮಂತ್ರಿ ರಾಜಾಜಿ ಯವರು ಪ್ರವೇಶ ವಿಟ್ಟರು. ಬ್ರಾಹ್ಮ್ಣಣರು ತಮ್ಮ ಮಕ್ಕಳು ಕೌಳ್ಗೆ ಸೌಂಟು ಹಿಡಿಯಬಾರದು’ ಅವರು ದೊಡ್ದ ದೊಡ್ಡ್ ಅಧಿಕಾರಿಗಳಾಗಬೇಕು ಎಂದು ವಾದಿಸಿದರೆ, ತಮ್ಮ ಶಾಶ್ವತಾವಾಗಿ ಮಲ ಎತ್ತುವ ಕೆಲಸದಲ್ಲಿ ನಿರತರಾಗಿರುವಂತೆ ಈ ದೇಶದಲ್ಲಿ ವರ್ಣಾಶ್ರಮ ಧರ್ಮವನ್ನು ಶಾಶ್ವತಗೊಳಿಸುವ ಉದ್ದೇಶ ಈ ಬ್ರಾಹ್ಮಣನದ್ದು ಎಂಬ ವಾದವನ್ನು ಮಂಡಿಸಿ, ರಾಜಾಜಿ ಯನ್ನು ಪದವಿಚ್ಯುತರನ್ನಾಗಿ ಮಾಡಿಸಿದೆವು. ಮಕ್ಕಳಿಂದ "Rain, rain, go away" ಎಂತ ಹಾಡಿಸಿದೆವು. ನದಿಗೆ ದೇಗುಲ ಕಟ್ವಿ ವಿಗ್ರಹ
  ಮಾಡಿ ಪೂಜಿಸಿ ಅದರ ದಡದಲ್ಲಿ. ಪಾತ್ರದಲ್ಲಿ ಇರುವ ಎಲ್ಲಾ ಸಂಪನ್ಮೂಲಗಳನ್ನೂ ನಾಶ ಮಾಡಿದೆವು. ’ಜೀವ ನದಿ’ ಎಂದಾಗ ಅದಕ್ಕೂ ಒಂದು ಜೀವವಿದೆ; ಅಂಗಾಂಗಗಳಿವೆ ಎಂಬುದನ್ನು ಮರೆತು ಅವುಗಳ ಚಿತ್ರಹಿಂಸೆ ಮಾಡಿದೆವು.
  ಇದೆಲ್ಲಾ ರಾಜಾಜಿಯವರ ಯೋಜನೆ ಸರಿಯಾಗಿ ಆಚರಣೆಯಲ್ಲಿ ಇದ್ದಿದ್ದಲ್ಲಿ ನಿಲ್ಲುತ್ತಿತ್ತೇ? ಖಂಡಿತವಾಗಿ ಹೇಳಲಾಗದು. ಆಗಲೀ ಒಂದು ಸುವರ್ಣಾವಕಾಶವನ್ನು ಕಳೆದು ಕೊಂಡೆವು ಅಂತ ಮಾತ್ರ ಹೇಳಬಲ್ಲೆ. ಹಿರಿಯರಿಗೆ ಕಲಿಸಲು ಸಾಧ್ಯವೆ?
  ಏನೆ ಇರಲಿ. ನಾವು ಆಶಾವಾದಿಗಳು. ಬೀದಿ ನಾಟಗಳಿಗೆ ಸ್ವಾಗತ. ಬರುವ ತಿಂಗಳು 25,26,27 ರಂದು ತಿರುಪತಿಯಲ್ಲಿ ಪ್ರಪಂಚ ತೆಲುಗು ಮಹಾಸಭೆ ಗೆ ತಯಾರಿಯಾಗುತ್ತಿದೆ. ಅದರಲ್ಲಿ ಇಂತಹ ಪುರಾತನ ಕಲೆಗಳಿಗೆ ಪ್ರಾಧಾನ್ಯತೆ ಕೊಡಬೇಕು ಎಂಬ ಮಾತು ಎಲ್ಲರ ಬಾಯಲ್ಲೂ ಕೇಳಿ ಬರುತ್ತಿದೆ.

  Jai Hind,
  K C Kalkura B.A, B.L
  Advocate

  ReplyDelete