15 October 2012

ಕಣ್ಮರೆಯಾದರೂ ಮನದಲ್ಲುಳಿದವರು - ಕುರಿಯ ವಿಠಲ ಶಾಸ್ತ್ರಿಗಳು


(ವಿಠಲ ಶಾಸ್ತ್ರಿಗಳ ೯೧ ನೇ ಜಯಂತಿಯ ಸಂದರ್ಭ ಬರೆದದ್ದು)
ಮೂರ್ತಿ ದೇರಾಜೆ, ವಿಟ್ಲ
[೧೯೬೯ ಮೈಸೂರು ಮಹಾರಾಜ ಕಾಲೇಜಿನಲ್ಲಿ ನಾನು (ಇಂಗ್ಲಿಷ್ ಮತ್ತು) ಕನ್ನಡ ಐಚ್ಛಿಕ ವಿಷಯದ ವಿದ್ಯಾರ್ಥಿ. ಅಸಂಖ್ಯ ಸಹಪಾಠಿಗಳಲ್ಲಿ ಇಂದಿಗೂ ನೆನಪಲ್ಲುಳಿದ ಹೆಸರುಗಳು ಕೆಲವು, ಒಡನಾಟದಲ್ಲುಳಿದ ಸ್ನೇಹಗಳು ಇನ್ನಷ್ಟು ಕಡಿಮೆ. ಈ ವಿರಳರ ಗುಂಪಿನಲ್ಲಿ ಅಂದಿನಿಂದ ಇಂದಿನವರೆಗೂ ಯಮಳರಂತೆ ಬಳಕೆಯಿರುವ ಹೆಸರು, ವ್ಯಕ್ತಿಗಳು - ಶಂಕರ್, ಮೂರ್ತಿ. “ನಮ್ಮ ಸಹಪಾಠಿಗಳಂತೆ, ದಕ ಜಿಲ್ಲೆಯವರಂತೆ, ಹಾಸ್ಟೆಲ್ ವಾಸಿಗಳಂತೆ, ಶತಮಾನೋತ್ಸವ ಭವನದಲ್ಲಿ ಮ್ಯಾಜಿಕ್ ಪ್ರದರ್ಶನ ನೀಡ್ತಾರಂತೆ” ಹೀಗೇನೋ ನನಗಿವರ ಮೊದಲ ಪರಿಚಯ. ವಾಸ್ತವದಲ್ಲಿ ಈ ‘ಯಕ್ಷಿಣಿ ಯಮಳ’ರು ಕೇವಲ ಚಡ್ಡಿದೋಸ್ತರು (ಇಬ್ಬರೂ ಸುಮಾರು ಏಳನೇ ತರಗತಿಯಲ್ಲಿ ಓದುತ್ತಿದ್ದ ಕಾಲದಲ್ಲಿ ಮೂರ್ತಿಯ ಅಪ್ಪ - ದೇರಾಜೆ ಸೀತಾರಾಮಯ್ಯನವರು ಶಂಕರನ ಅಪ್ಪನ ಮನೆಯ ಬಳಿ ಆಸ್ತಿ ಮಾಡಿ ನೆಲೆಸಿದ್ದರಿಂದ ತೊಡಗಿದ್ದಂತೆ). ಮತ್ತೆ ಸಾಂಪ್ರದಾಯಿಕ ಓದಿನ ಹೊರಗಿನ ನೂರೆಂಟು ‘ಬೇಡಂಗಟ್ಟೆ’ಗಳಲ್ಲಿ ಸಮಾನಾಸಕ್ತರು. ಸಹಜವಾಗಿ ಆ ಎಳವೆಯಲ್ಲೆ ಶಂಕರ್ ‘ಗಿಲಿ ಗಿಲಿ ಮ್ಯಾಜಿಕ್’ ಎಂದದ್ದೂ ಮೂರ್ತಿ ತಟ್ಟೆ ತಪಲೆಯಲ್ಲಿ ‘ಮ್ಯೂಜಿಕ್ ಬೊಟ್ಟಿ’ದ್ದೂ ನನ್ನ ಬಗೆಗಣ್ಣಿಗೆ ಕಾಣಿಸುತ್ತದೆ! ಮಹಾರಾಜದದಿಂದ ಕನ್ನಡ, ಮನಶಾಸ್ತ್ರದಲ್ಲಿ ಇವರೀರ್ವರು ಸ್ನಾತಕರು. ಸಿಂಡಿಕೇಟ್ ಬ್ಯಾಂಕಿನಲ್ಲಿ ಸ್ವಯಂ ನಿವೃತ್ತಿ ಯೋಗ ಒದಗುವವರೆಗೂ ನೌಕರರು. ಆದರೆ ಆ ಕಾಲಕ್ಕೆ ತಮಾಷೆಯ ವಿಷಯವೆಂದರೆ ಇವರ ಬ್ಯಾಂಕಿನ ಹುದ್ದೆ ಯಕ್ಷಿಣಿಯದ್ದೇ; ಬ್ಯಾಂಕಿನ ಪ್ರಚಾರ ವಿಭಾಗದಲ್ಲಿ ಇವರದು ‘ಮಾಯಾ ಮಂತ್ರ.’

ಇಂದಿವರ ಯಕ್ಷಿಣಿ ಜೋಡಿ ಸಾಮಾಜಿಕ ಮುಖದಲ್ಲಿ ವಿಶ್ವಖ್ಯಾತಿಯನ್ನೂ ವೈಯಕ್ತಿಕ ಮಟ್ಟದಲ್ಲಿ ಕೌಟುಂಬಿಕ ವ್ಯಾಪ್ತಿಯನ್ನೂ ಪಡೆದು ಧನ್ಯವಾಗಿ ಮುಂದುವರಿದಿದೆ. ಸಣ್ಣದಾಗಿ ಹೇಳುವುದಾದರೆ ಶಂಕರರ ಮಗ, ಮಗಳು ಮೂರ್ತಿಯ ಅಳಿಯ, ಸೊಸೆ. ಇಂದು ಎಲ್ಲರೂ ವೃತ್ತಿ ಮತ್ತು ವಾಸ್ತವ್ಯದ ನೆಲೆಗಳಲ್ಲಿ ಸ್ವತಂತ್ರರೇ ಇದ್ದರೂ ಅಧಿ-ವೃತ್ತಿರಂಗ, ಅರ್ಥಾತ್ ಯಕ್ಷಿಣೀ ಲೋಕದಲ್ಲಿ ಒಂದಾಗಿ, ಬಾಟಲಿ ಬಿಟ್ಟ ಭೂತದಂತೆ ಭೂಮವಾಗಿ ಬೆರಗುಗೊಳಿಸುವುದು ಬಿಟ್ಟಿಲ್ಲ! 

ಮೂರ್ತಿಯ ಯಕ್ಷಿಣಿಗೆ ಅಪ್ಪ - ದೇರಾಜೆ ಸೀತಾರಾಮಯ್ಯನವರ, ಯಕ್ಷನ (ಯಕ್ಷಗಾನ) ಉಪದ್ರ ಕಡಿಮೆಯದ್ದೇನೂ ಅಲ್ಲ. ಮೂರ್ತಿಯ ಸಣಕಲ ಶರೀರ ವೇಷಕ್ಕೆ ಕುಣಿತಕ್ಕೆ ಹೇಳಿದ್ದಲ್ಲ, ನಾದವಿಲ್ಲದ ಶಾರೀರ ಗಾಯನಕ್ಕೆ ಸಲ್ಲ, ಅರ್ಥಧಾರಿಗೆ ಬೇಕಾದ ಕೃಷಿಯನ್ನೂ ಇವರು ಮಾಡಿದ್ದಿಲ್ಲ. ಆದರೆ ಅವೆಲ್ಲವನ್ನೂ ಹೆಚ್ಚಿನದನ್ನೂ ಬೌದ್ಧಿಕವಾಗಿ ಗ್ರಹಿಸಿ, ನಾಟಕರಂಗದ ನೇಪಥ್ಯದ ಕಲಾಪಗಳಲ್ಲಿ, ಮುಖ್ಯವಾಗಿ ನಿರ್ದೇಶನದಲ್ಲಿ ತೊಡಗಿಸಿಕೊಂಡಿರುವುದು ದೇರಾಜೆ ಮೂರ್ತಿತ್ವ. ಇವರು ಈಚೆಗೆ ಕೆಲವು ರಂಗ ಪ್ರಮಾಣಿತ ನಾಟಕಗಳನ್ನು ಬರೆದು ಪ್ರಕಟಿಸುವಷ್ಟೂ ಮುಂದುವರಿದಿದ್ದಾರೆ. ನನ್ನ ಜಾಲತಾಣದ ಓದಿನೊಡನೆ ಇವರು ತನ್ನ ಯಕ್ಷ-ಮುಖವರ್ಣಿಕೆಯನ್ನು ಇಲ್ಲಿ ಕೈಗೆತ್ತಿಕೊಂಡಿದ್ದಾರೆ. ನಮ್ಮೊಳಗಿನ ಮಾತುಕತೆಯಲ್ಲಿ ಮೂರ್ತಿ, ಹೀಗೆ ಎಲ್ಲೋ ಬರೆದ, ಎಂದೋ ಪ್ರಕಟವಾದ ಅಥವಾ ಆಗದ, ಆಪ್ತ ಯಕ್ಷ ವಿವರಗಳ ಬಗ್ಗೆ ಉಲ್ಲೇಖಿಸಿದರು. “ಅಂತರ್ಜಾಲದಲ್ಲಿ ಬರೆದವರಿಗೆ ಮತ್ತು ಪ್ರಕಟಿಸಿದವರಿಗೆ ಆರ್ಥಿಕ ಉಪಯುಕ್ತತೆ ಇಲ್ಲದಿರಬಹುದು. ಆದರೆ ಪ್ರಕಟಣೆಗೆ ವೆಚ್ಚವಿಲ್ಲ, ಸಾರ್ವಜನಿಕ ಉಪಯುಕ್ತತೆಗೆ ಮೇರೆಯಿಲ್ಲ” ಎನ್ನುವ ನನ್ನ ಧೋರಣೆಯಲ್ಲಿ ರುಚಿಕಂಡು ಮೂರ್ತಿ ಒಂದು ಲೇಖನ ಮತ್ತು ಅವರ ಸಂಗ್ರಹದಲ್ಲೇ ಇದ್ದ ಆ ಕಾಲದ ಎರಡು ಸೂಕ್ತ ಚಿತ್ರಗಳನ್ನೂ ಕಳಿಸಿಕೊಟ್ಟಿದ್ದಾರೆ. ಅದನ್ನು ಓದಿ, ಇನ್ನಷ್ಟು ಈ ಮಾಧ್ಯಮವನ್ನು ಸಮೃದ್ಧಗೊಳಿಸುವಂತೆ ನಿಮ್ಮ ಪ್ರತಿ-ಬರಹಗಳನ್ನು ಕೊಡುವಿರಾಗಿ ನಂಬಿದ್ದೇನೆ. ಇನ್ನು ಓದಿ, ದೇರಾಜೆ (ಕೃಷ್ಣ) ಮೂರ್ತಿ...]


ಅದ್ಭುತ ರಮ್ಯ ಕಥಾನಕಗಳು ಮಕ್ಕಳ ಭಾವ ಪ್ರಪಂಚವನ್ನು ಶ್ರೀಮಂತಗೊಳಿಸುತ್ತವೆ ಎನ್ನುವುದು ಮನೋವಿಜ್ಞಾನದ ಹೇಳಿಕೆ. ಮಗುವಾಗಿದ್ದಾಗ ವಾಸ್ತವವೂ ಕಲ್ಪನೆಯೂ ಒಂದೇ ಆಗಿರುತ್ತದೆ. ಬೆಳೆಯುತ್ತಾ ಬಂದಂತೆ ವಾಸ್ತವ ಮತ್ತು ಕಲ್ಪನೆಯ ಅಂತರ ಅರಿವಾಗುತ್ತಾ ಬಂದರೂ ಬಾಲ್ಯದಲ್ಲಿ ಅನುಭವಿಸಿದ ಅದ್ಭುತ ರಮ್ಯತೆಗಳು ಆತನನ್ನು ಸದಾ ಉಲ್ಲಸಿತನನ್ನಾಗಿಸಲು ಸಹಕಾರಿಯಾಗುತ್ತವೆ ಎನ್ನುವುದು ಬಲ್ಲವರ ನಂಬಿಕೆ.

ನಮ್ಮ ಕರಾವಳಿ ಪ್ರಾಂತ್ಯದ ಜನರಿಗೆ ಇಂತಹ ಅದ್ಭುತ ರಮ್ಯ ಲೋಕವನ್ನು ಪ್ರವೇಶಿಸಲು ಸಹಕಾರಿಯಾದದ್ದು ಯಕ್ಷಗಾನ. ಅಂತಹ ಯಕ್ಷಗಾನರಂಗದಲ್ಲಿ ಹೊಸಮಿಂಚನ್ನು ಹೊಳೆಯಿಸಿ, ನಮ್ಮ ಭಾವ ಪ್ರಪಂಚವನ್ನು ಶ್ರೀಮಂತಗೊಳಿಸಿದವರಲ್ಲಿ ಕುರಿಯ ವಿಠಲ ಶಾಸ್ತ್ರಿಗಳು ಪ್ರಮುಖರು. ಅವರ ಅಭಿನಯದ, ನಾಟ್ಯದ - ವಿಶ್ಲೇಷಣೆ, ವಿಮರ್ಶೆಯ ಉದ್ದೇಶ ನನ್ನದಲ್ಲ. ಅದು ನನ್ನ ಮಿತಿಯೊಳಗೆ ಬರುವಂತಾದ್ದೂ ಅಲ್ಲ. ನನ್ನದೇ ಭಾಷೆಯಲ್ಲಿ ಅವರ ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಷ್ಟೇ ನನ್ನ ಉದ್ದೇಶ.

ತಾಳಮದ್ದಳೆಯ ಅರ್ಥಧಾರಿ ದೇರಾಜೆ ಸೀತಾರಾಮಯ್ಯನವರಿಗೂ ಯಕ್ಷಗಾನ ವೇಷಧಾರಿ  ಕುರಿಯ ವಿಠಲ ಶಾಸ್ತ್ರಿಗಳಿಗೂ ತುಂಬಾ ಅನ್ಯೋನ್ಯ. ಜೊತೆಯಾಗಿ ಅರ್ಥ ಹೇಳಿದವರು, ಜೊತೆಯಾಗಿ ಯಕ್ಷಗಾನ  ನಾಟಕದಲ್ಲಿ ಅಭಿನಯಿಸಿದವರು. ಶಾಸ್ತ್ರಿಗಳ ಕೃಷ್ಣ, ದೇರಾಜೆಯವರ ಮಕರಂದ ತುಂಬಾ ಪ್ರಸಿದ್ಧಿ ಪಡೆದಿತ್ತು. ಪ್ರಾಯಶಃ ದೇರಾಜೆಯವರು ವಾಚಿಕಾಭಿನಯದಲ್ಲಿ ಅತ್ಯುನ್ನತಿಯನ್ನು ಸಾಧಿಸಲು, ವಿಠಲ ಶಾಸ್ತ್ರಿಗಳ ಆಂಗಿಕಾಭಿನಯ ಕಾರಣವಾಗಿದೆ. ವಿಠಲ ಶಾಸ್ತ್ರಿಗಳಿಗೆ, ಆಂಗಿಕಾಭಿನಯದಲ್ಲಿ ಶ್ರೇಷ್ಠತೆಯನ್ನು ಮೆರೆಯಲು ದೇರಾಜೆಯವರ ವಾಚಿಕಾಭಿನಯ ಪ್ರಭಾವ ಬೀರಿದೆ.

ಅವರು ಎಲ್ಲಾ ರೀತಿಯ ವೇಷಗಳನ್ನು ಮಾಡುತ್ತಿದ್ದವರು. ನವರಸಗಳಲ್ಲೂ ಸಿದ್ಧಿಯನ್ನು ಪಡೆದವರು ಎನ್ನುವುದನ್ನು ಕೇಳಿದ್ದೇನೆ. ಬಹಳಷ್ಟನ್ನು ನೋಡಿದ್ದೇನಾದರೂ ಎಲ್ಲವೂ ನೆನಪಾಗುತ್ತಿಲ್ಲ. ಆದರೆ ಅವರ ಕೃಷ್ಣ, ಕಂಸ, ಈಶ್ವರ, ಹನುಮಂತ ಮಾತ್ರ ಇಂದಿಗೂ ನನ್ನ ಕಣ್ಣ ಮುಂದೆ ಇದೆ. ನನ್ನ ಅಪ್ಪಯ್ಯನ ಶರ್ಟಿನ ತುದಿ ಹಿಡಿದುಕೊಂಡು ಅವರೊಂದಿಗೆ ಬಯಲಾಟ ನೋಡಿದ ನೆನಪು ಇಂದಿಗೂ ಉಳಿದಿರುವುದು ಕುರಿಯ ವಿಠಲ ಶಾಸ್ತ್ರಿಗಳಿಂದ. ಬೆಳ್ಳಾರೆಯ ಸುತ್ತಮುತ್ತ ಎಲ್ಲಿ ಆಟ ಆದರೂ ವಿಠಲಣ್ಣ ಆಟ ಮುಗಿಸಿ ಸೀದಾ ದೇರಾಜೆ ಭಾವನ ಮನೆಗೆ. ರಾತ್ರಿ ಮತ್ತೆ ಭಾವನನ್ನು ಹೊರಡಿಸಿಕೊಂಡು ಆಟಕ್ಕೆ. ನೀನು ಬಪ್ಪಲೆ ಇಲ್ಲೆಯೋ!...  ಎಂದು ನನ್ನಲ್ಲಿ ತುಂಟತನದ ಪ್ರಶ್ನೆ. ಅವರು ಕೇಳುವ ಮೊದಲೇ ನಾನು ಹೊರಟಾಗಿರುತ್ತಿತ್ತು. ಆಟ ನೋಡುವ ಆಸೆಗಿಂತಲೂ, ಅವರ ಜೊತೆ ಅವರ ಹಳೇ ‘ಚವರ್ಲೆಟ್’ ಕಾರಿನಲ್ಲಿ ಡ್ರೈವ್ ಮಾಡುವ ಅವರ ಬಳಿಯಲ್ಲೇ ಕುಳಿತುಕೊಳ್ಳುವ ಆಸೆ. ‘ಸ್ಟೇರಿಂಗ್’ನ್ನು ಮುಟ್ಟುವ ಆಸೆ. ಸೀಟಿನಲ್ಲಿ ಕುಳಿತರೆ ರಸ್ತೆ ಕಾಣುತ್ತಿರಲಿಲ್ಲ ಅಷ್ಟು ಉದ್ದ ‘ಮುಸುಡು’ ಅದರದ್ದು. ನನ್ನ ಕಣ್ಣು ಸ್ಟೇರಿಂಗಿನ ಮೇಲೆ, ಸ್ಟೇರಿಂಗಿಗೆ ತಾಗಿರುತ್ತಿದ್ದ ಅವರ ಹೊಟ್ಟೆಯ ಮೇಲೆ. ಸ್ಟೇರಿಂಗಿಗೆ ಒತ್ತಿದ ಹೊಟ್ಟೆಯಮೇಲೆ ದೊಡ್ಡ ನೆರಿಗೆ...

ಆಟಕ್ಕೆ ಹೋಗಿ ಬಾಲಗೋಪಾಲ, ಕೋಡೆಂಗಿ, ಸ್ತ್ರೀವೇಷ ಮುಗಿಯುವಾಗ, ಹುರಿಕಡ್ಲೆ, ಚರುಮುರಿಗಳೂ ಮುಗಿದು ನಾನು ನಿದ್ರೆಗೆ ಜಾರಿಯಾಗಿರುತ್ತಿತ್ತು. ಕೃಷ್ಣಲೀಲೆಯ ಕೃಷ್ಣನ ಪ್ರವೇಶ ಆದಾಗ ನನ್ನಮ್ಮ... ಏಳು, ಏಳು ಅಕೋ... ವಿಠಲಮಾವನ ವೇಷ... ಎನ್ನುವಾಗ ಪಕ್ಕನೆ ಕಣ್ಣು ಬಿಡುತ್ತಿದ್ದೆ. ಮೈ ಬಿಟ್ಟ ಪುಟ್ಟ ಕೃಷ್ಣ....  ಕೂಡಲೇ ಹೋಗಿ ಇವನೊಟ್ಟಿಗೆ ಆಟ ಆಡ್ತೇನೆ ಎನ್ನುವ ಆಸೆ... ಆದರೆ  ಈ ಕೃಷ್ಣ .. ವಿಠಲಮಾವನೇ ಎಂದು ನಂಬಿಕೆಯಾಗುತ್ತಿರಲಿಲ್ಲ. ಯಾಕೆಂದರೆ... ಕಾರಿನ ಸ್ಟೇರಿಂಗಿಗೆ ತಾಗಿರುತ್ತಿದ್ದ ಆ ದೊಡ್ಡ ಹೊಟ್ಟೆ ಎಲ್ಲಿ ಹೋಯ್ತು..!! ಎನ್ನುವುದೇ ನನ್ನ ಸಮಸ್ಯೆ. ನನಗೆ ಇಂದಿಗೂ ನಿಗೂಢ ಎನಿಸುವುದು ಇದೇ..... ಬಾಲಕೃಷ್ಣನಾಗಿ ಬರುವಾಗ ಪುಟ್ಟ ಹುಡುಗನಂತೆ ಕಾಣುವ ಈ ಮನುಷ್ಯ ..... ಕಂಸ ಮಾಡಿದರೆ ದೈತ್ಯನಂತೆ ಕಾಣುವುದು ಹೇಗೆ......!! ಕಂಸ ಕನಸುಕಂಡು ಹೆದರಿ ಮಂಚದಿಂದ ಬಿದ್ದಾಗ ನಾನೇ ಕುರ್ಚಿಯಿಂದ ಬಿದ್ದಹಾಗೆ ಆಗ್ತಿತ್ತು.

ದಕ್ಷಾದ್ವರದ ವೀರಭದ್ರನಾಗಿ ಬಣ್ಣದ ಮಾಲಿಂಗಣ್ಣನ ಅಬ್ಬರಕ್ಕೆ ಗಂಟಲಿನ ಪಸೆ ಆರುತ್ತಿತ್ತು. ರಂಗಸ್ಥಳವನ್ನು ಹುಡಿ ಹುಡಿ ಮಾಡಿ, ದೂಳು ಹಾರಿಸಿ, ತಾಳೇಮರದಂತೆ ಬೆಳೆದು ನಿಂತ ವೀರಭದ್ರನನ್ನು ನೋಡಲು ಹೆದರಿಕೆಯಾಗಿ ಕೈಯಿಂದ ಕಣ್ಣು ಮುಚ್ಚಿ ಬೆರಳಿನ ಎಡೆಯಿಂದ ನೋಡುವುದು. ಅಂತಹ ಭಯಂಕರ ದೃಷ್ಯ... ಮುಂದಿನ ಕ್ಷಣ.... ಮಗನೇ.. ಎನ್ನುವ ಉದ್ಗಾರದೊಂದಿಗೆ ಭಾಗವತರ ಎದುರಿನ ಮರದ ರಥದ ಮೇಲೆ ಹುಲಿಚರ್ಮ ಸೊಂಟಕ್ಕೆ ಬಿಗಿದ, ಬರಿ ಮೈಯ ಈಶ್ವರನಾಗಿ ವಿಠಲ ಶಾಸ್ತ್ರಿಗಳು..... ಆ ಕ್ಷಣ.... ಈ ವೀರಭದ್ರ ಎಲ್ಲಿ ಹೋದ.....!! ಅಂತ ಕಾಣ್ತಾ ಇತ್ತು. ಬಣ್ಣದ ಮಾಲಿಂಗನ ಅಂತಹ ರೌದ್ರಾವತಾರದ ವೀರಭದ್ರ, ಶಾಸ್ತ್ರಿಗಳ ಕೇವಲ ಅಭಿನಯ ಮಾತ್ರದಿಂದಲೇ ಮಸುಕಾಗುತ್ತಿದ್ದ ದೃಷ್ಯ. ಇದೆಲ್ಲಾ ಹೇಗೆ ಸಾದ್ಯ.. ಎಂದು ತೀರಾ ಇತ್ತೀಚೆಗಿನ ವರೆಗೂ ನನಗೆ ಒಗಟಾಗಿತ್ತು. ಬಿವಿಕಾರಂತರು ಹೇಳಿದ ಮಾತು ಸ್ವಲ್ಪ ಮಟ್ಟಿಗೆ ಈ ಒಗಟನ್ನು ಬಿಡಿಸಿ ಕೊಟ್ಟಿದೆ....  ಕೇವಲ ಅಭಿನಯದಿಂದಲೇ ಒಬ್ಬ ಕುಬ್ಜನೂ ರಂಗದ ಮೇಲೆ ದೈತ್ಯನಾಗಬಲ್ಲ,  ದೈತ್ಯನೂ ಕುಬ್ಜನಾಗಬಲ್ಲ..... ಒಬ್ಬ ನರಪೇತಲನೂ ಜಗಜಟ್ಟಿಯಾಗಿ ಕಾಣಿಸಬಲ್ಲ .... ಆದರೆ ಇಡೀ ಇಂಡಿಯಾದಲ್ಲೇ ಅಂತಹ ಬೆರಳೆಣಿಕೆಯ ನಟರು ಇದ್ದಾರಷ್ಟೆ... ಎನ್ನುತ್ತಿದ್ದರು. ಬಂಗಾಳದ ಶಂಭುಮಿತ್ರ,ತೃಪ್ತಿಮಿತ್ರ, ಕರ್ನಾಟಕದ  ಗುಬ್ಬಿ ವೀರಣ್ಣ,ಇತ್ತೀಚೆಗೆ ನಿಧನರಾದ ನಟರಾಜ ಏಣಗಿ ಹೀಗೆ ಕೆಲವರನ್ನು ಅವರು ಹೆಸರಿಸುತ್ತಿದ್ದರು. ಪ್ರಾಯಃ ವಿಠಲ ಶಾಸ್ತ್ರಿಯವರ ಅಭಿನಯ ನನ್ನ ಮನದಲ್ಲಿ ಒತ್ತಿದ ಮುದ್ರೆ, ಬಿವಿಕಾರಂತರ ಈ ಮಾತನ್ನು ನನಗೆ ಅರ್ಥ ಮಾಡಿಸಿದೆ. ವಿಠಲಶಾಸ್ತ್ರಿಯವರು ಒಬ್ಬ ನಿಜವಾದ ನಟ, ನಟ ಸಾರ್ವಭೌಮ.

ನಮ್ಮ ಯಕ್ಷಗಾನದ ಸೀಮಿತ ಪರಿಧಿಯಿಂದಾಗಿ, ನವರಸಗಳಲ್ಲೂ ಸಿದ್ದಿಯನ್ನು ಪಡೆದ ಜಗತ್ತಿನ ಶ್ರೇಷ್ಟ ರಂಗನಟರಲ್ಲಿ ವಿಠಲ ಶಾಸ್ತ್ರಿಗಳೂ ಒಬ್ಬರು ಎನ್ನುವುದು ಲೋಕಕ್ಕೆ ಅರಿವಾಗದೇ ಹೋಯ್ತು... ಶಿವರಾಮಕಾರಂತರು ತೆಂಕುತಿಟ್ಟನ್ನು ಕಡೆಗಣಿಸಿದರು ಎನ್ನುವ ಆರೋಪ ಇದೆ..... ಆದರೆ... ಕಾರಂತರು ತೆಂಕುತಿಟ್ಟಿನಲ್ಲಿ ವಾಚಿಕಾಭಿನಯದಲ್ಲಿ ಮೆಚ್ಚಿಕೊಂಡದ್ದು ದೇರಾಜೆಯವರನ್ನು....ಆಂಗಿಕದಲ್ಲಿ ವಿಠಲಶಾಸ್ತ್ರಿಗಳನ್ನು. ಕಾರಂತರು ವಿಠಲಶಾಸ್ತ್ರಿಗಳನ್ನು ತಮ್ಮ ಯಕ್ಷಬ್ಯಾಲೆಯ ಪ್ರಯೋಗಗಳಿಗೆ ಕರೆಸಿಕೊಳ್ತಾ ಇದ್ರಂತೆ. ಒಮ್ಮೆ.....ಎಲ್ಲಿಯೋ ಒಂದು ಕ್ಯಾಂಪಿನಲ್ಲಿ, ರಾತ್ರಿ ಊಟ ಮುಗಿಸಿ ಎಲ್ಲರೂ ನಿದ್ರೆಗೆ ಅಣಿಯಾಗುತ್ತಿದ್ದಾಗ.... ಶಾಸ್ತ್ರಿಗಳು ಮಾತ್ರ ಅಲಿಲ್ಲ... ಕಾರಂತರು ಅಲ್ಲಿ ಇಲ್ಲಿ ಹುಡುಕಿ ಮತ್ತೆ ಮೇಲೆ ಟೇರೇಸಿಗೆ ಹೋದರೆ.... ಶಾಸ್ತ್ರಿಗಳು ಒಬ್ಬರೇ ಕುಳಿತು ಮೇಲೆ ಹೊಳೆಯುತ್ತಿದ್ದ ಚಂದ್ರನನ್ನು ನೋಡುತ್ತಾ ಇದ್ದರಂತೆ.... ಕಾರಂತರಿಗೆ ಭಾರೀ ಖುಷಿಯಾಯ್ತಂತೆ....  ಹಾಂ...ಕಲಾವಿದ ಅಂದ್ರೆ ಹೀಗೆ... ತನ್ನ ಸುತ್ತ ಮುತ್ತಲಿನ ಸೌಂದರ್ಯವನ್ನು ಹೀರಿ,ಅನುಭವಿಸಿ ಮತ್ತೆ ಅದೆಲ್ಲವನ್ನೂ ತನ್ನ ಮಾದ್ಯಮದ ಮೂಲಕ ಮರುಸೃಷ್ಟಿ ಮಾಡುವಾತ.... ಅಂತ ಹೇಳ್ತಿದ್ರಂತೆ.

ವೇಷ ಧರಿಸಿ ರಂಗಸ್ಥಳದಲ್ಲಿ ಕುಣಿಯುತ್ತಿದ್ದಾಗಲೇ ಕುಸಿದು ಮುಂದೆ ವೇಷ ಧರಿಸದಂತಾದರೂ ಅವರ ಉತ್ಸಾಹ ಕುಂದಿರಲಿಲ್ಲ. ದೇಹಕ್ಕೆ ಆಯಾಸ ಇದ್ದರೂ ಮನಸ್ಸಿಗೆ ಉಲ್ಲಾಸ ಇತ್ತು. ಅವರು ಅನೇಕ ಜನ ಶಿಷ್ಯರನ್ನು ತಯಾರು ಮಾಡಿದ್ದಾರೆ. ಯಕ್ಷಗಾನದ ಹೊಸ ದಾರಿಯನ್ನು ನಿರ್ಮಿಸಿದ್ದಾರೆ. ಯಕ್ಷಗಾನದಲ್ಲದ್ದನ್ನು ಯಕ್ಷಗಾನಕ್ಕೆ ತಂದರು... ಎನ್ನುವ ಆರೋಪ ಅವರ ಮೇಲಿದೆ. ಆದರೆ..... ಕುರಿಯ ವೆಂಕಟ್ರಮಣ ಶಾಸ್ತ್ರಿಗಳ ಮಗ... ಎಂದು ಮಾತ್ರ ತನ್ನನ್ನು ಗುರುತಿಸಿದರೆ ಸಾಲದು, ತನ್ನದೇ ಆದ ಸ್ಥಾನವನ್ನು ಸ್ಥಾಪಿಸಬೇಕು ಎನ್ನುವ ಹಂಬಲ ಅವರದ್ದಾದ್ದರಿಂದ, ಈ ಅದ್ಭುತವಾದ ಸೃಷ್ಟಿಶೀಲ ಮನಸ್ಸು ರೂಪಿಸಿದ ದಾರಿಯಲ್ಲಿ ಬೇಕಾದದ್ದು,ಬೇಡವಾದದ್ದು ಎಲ್ಲಾ ಸೇರಿಕೊಂಡವು. ಅದೆಲ್ಲಾ ಅವರಿಗೆ ಆ ಕಾಲಘಟ್ಟದಲ್ಲಿ ಅನಿವಾರ್ಯವೂ ಆಗಿತ್ತೇನೋ... ಅವರು ಒಂದು ಪರಂಪರೆಯನ್ನೇ ಸೃಷ್ಟಿಸಿದರು. ಆದರೆ...ಆನಂತರದವರು ಅವರ ಅಭಿನಯ, ಕಲೆಗಾರಿಕೆಯನ್ನು ಬಿಟ್ಟು ಉಳಿದ ಅಸಂಬದ್ದಗಳನ್ನು ಮಾತ್ರ ಉಳಿಸಿಕೊಂಡದ್ದು ವಿಠಲ ಶಾಸ್ತ್ರಿಗಳ ದುರಂತ, ಯಕ್ಷಗಾನದ ದುರಂತ, ಯಕ್ಷಗಾನಾಸಕ್ತರ ದುರಂತ.

ವಿಠಲಶಾಸ್ತ್ರಿಗಳ ಸಾವು ರಂಗಸ್ಥಳದಲ್ಲಿ ಆಗಲಿಲ್ಲ. ಎಷ್ಟೋ ಜನ ಕಲಾವಿದರು ಪಾತ್ರ ವಹಿಸುತ್ತಲೇಇರುತ್ತಾರೆ ಆದರೆ ಅವರ ಸಾವು ಯಾವತ್ತೋ ಆಗಿರುತ್ತದೆ. ಶಾಸ್ತ್ರಿಗಳ ಸಾವು ಸಾವಲ್ಲ.... ದೇಹಾಂತ್ಯ ಅಷ್ಟೆ. ಡಾಕ್ಟ್ರು,ಹೆಚ್ಚು ಓಡಾಟ ಬೇಡಾ ಅಂದರೂ ತನ್ನ ..ಓಡಾಟ ನಿಲ್ಲಿಸಿರಲಿಲ್ಲ. ಧರ್ಮಸ್ಥಳಕ್ಕೆಂದು ಹೊರಟವರು ....ಯಾಕೋ ಮನಸ್ಸು ಬದಲಾಯಿಸಿ.... ದೇರಾಜೆ ಬಾವನ ಕಂಡಿಕ್ಕಿ ಬತ್ತೆ.... ಅಂತ ವಿಟ್ಲದಲ್ಲಿಳಿದು ನಮ್ಮಲ್ಲಿಗೆ ಬಂದರು. ರಾತ್ರಿಯಿಡೀ...ಗೆಳೆಯರಿಬ್ಬರ ಮಾತುಕತೆ ನಡೆಯಿತು. ಮರುದಿನ ಬೆಳಿಗ್ಗೆ ಅವರಿಗೆ ಆಯಾಸ ಹೆಚ್ಚಿತ್ತು ಆಗಾಗ ದುಃಖ ಉಮ್ಮಳಿಸಿ ಬರ್ತಾ ಇತ್ತು. ಎಂತಾ ಇಂದೆನಗೆ ದುಃಖ ತಡವಲೆಡಿತ್ತಿಲ್ಲೆ.... ಎನ್ನುತ್ತಿದ್ದರು. ಒತ್ತಾಯದಿಂದ ನಾವೇ ಅವರನ್ನು ಡಾಕ್ಟ್ರ ಬಳಿ ಕರಕೊಂಡು ಹೋದೆವು. ಗಾಬರಿ ಏನೂ ಇಲ್ಲ...ಸೀದಾ ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೊಳ್ಳಿ... ಎಂದದ್ದರಿಂದ ಬಾಡಿಗೆ ಟ್ಯಾಕ್ಸಿ ಯಲ್ಲಿ ಅವರನ್ನು ಕುಳ್ಳಿರಿಸಿದೆ. ನೀನು ಇನ್ನು ಮನೆಗೆ ಹೋಗಬ್ಬೋ.....! ಅಪ್ಪನ ಹತ್ತರೆ ಹೇಳು...ಆನು ಹೋವುತ್ತೆ.... ಎಂದು ಹೇಳಿದರು. ಆಗ ಅವರ ಕಣ್ಣಂಚಿನಲ್ಲಿ ನೀರಿತ್ತು. ಮತ್ತೆ ಸಾಯಂಕಾಲ ಅವರ ಮನೆಯಿಂದ ಸುದ್ದಿ ಬಂತು ಆಗ ನಮ್ಮ ಕಣ್ಣಂಚಿನಲ್ಲಿ ನೀರು... ನಾಟ್ಯಮಯೂರಿ ತನ್ನ ನಾಟ್ಯವನ್ನು ನಿಲ್ಲಿಸಿತ್ತು.

6 comments:

 1. I am one of the fortunates having seen Kuriya Vittala Shastri's Eshwara in Brahmakapala. It was around 1960. I cannot forget his role even after half a century. My cells of imagination was nurtured by such great performances. I also enjoyed Deraje Seetharamayya's umpteen roles in various talamaddale performances in those days along with Sheni, perla Krishna Bhat, etc. His munching an arecanut piece and talking is still fresh in my memory.
  -Gopalakrishna Pai

  ReplyDelete
 2. sakalika lekhana pramanika anisikegalu dhanyavadagalu

  ReplyDelete
 3. ಕುರಿಯ ಶಾಸ್ತ್ರಿಗಳ ಕುರಿತು ನನ್ನಮ್ಮ (ಆಯಿ) ಯಾವಾಗಲೂ ಹೇಳುತ್ತಿರುತ್ತಾರೆ. ಕೆರಮನೆ ಶಿವರಾಮ ಹೆಗಡೆಯವರ ಮನೆಗೆ ಬರುತ್ತಿದ್ದರಂತೆ.ನನ್ನ ಆಯಿ ಮತ್ತು ಕೆರಮನೆ ಗಜಾನನ ಹೆಗಡೆ ಚಿಕ್ಕವರು. ಶಾಸ್ತ್ರಿಗಳು ಈ ಮಕ್ಕಳೊಟ್ಟಿಗೆ ಬೆರೆತು ಆಡುತ್ತಿದ್ದರಂತೆ. ಕುಳ್ಳಗಿನ ಅವರ ವೇಷ ಅವರಿಗೆ ಸರಿಯಾಗಿ ನೆನಪಿಲ್ಲ. ಆದರೆ ರಂಗದ ಮೇಲಿನ ಹುಲಿ ಚರ್ಮವನ್ನು ಉಟ್ಟುಕೊಂಡು ಬ್ರಹ್ಮ ಕಪಾಲ, ದಕ್ಷಾಧ್ವರದ ಈಶ್ವರ ಮಾತ್ರ ಮರೆಯುವದಕ್ಕಾಗುವದಿಲ್ಲವಂತೆ. ಕಲಾವಿದ ಸ್ಮೃತಿ ಪಟಲದಲ್ಲಿ ಉಳಿಯುವದು ಕಲಾವಿದತನದಿಂದ. ಇಂದಿಗೂ ಬಡಗಿನನಲ್ಲಿ ಆಡುವ ಅನೇಕ ಪ್ರಸಂಗಗಳ ಪಾತ್ರಗಳ ಹಿಂದೆ ಕುರಿಯ ಶಾಸ್ತ್ರಿಗಳ ಪ್ರಭಾವ ಇದೆ ಎನ್ನುವದು ಹಿರಿಯರು ಹೇಳಿಕೊಳ್ಳುವದನ್ನು ಕೇಳಿದ್ದೇನೆ.
  ನಾರಾಯಣ ಯಾಜಿ

  ReplyDelete
 4. ಪ್ರಿಯರೇ, ವಂದೇಮಾತರಮ್.
  1950 ರ ದಶಕದಲ್ಲಿ ಧರ್ಮಸ್ಥಳ ಮೇಳ ಕಲ್ಯಾಣಪುರ ಹೊಳೆ ದಾಟಿ ಅಂದಿನ ಸೌತ್ ಕೆನರಾ ಜಿಲ್ಲೆಯ ಉತ್ತರಕ್ಕೆ ತೆಂಕು ತಿಟ್ಟಿನ ಯಕ್ಶಗಾನ ಪ್ರದರ್ಶನ ನೀಡಲು ಪ್ರಾರಂಬಿಸಿದಾಗ ಅದೊಂದು ಸಡಗರ. ಕುರ್ಯ ವಿಠಲ ಭಟ್ಟರು ಮತ್ತು ಕುಂಬ್ಳೆ ಸುಂದರ ಇವರೀರ್ವರ ಭಸ್ಮಾಸುರ ಮೋಹಿನಿ, ಬ್ರಹ್ಮಕಪಾಲ, ಭಕ್ತ ಪ್ರಹ್ಲಾದ ಇಂದಿಗೂ ಕಣ್ಣಿಗೆ ಕಟ್ಟಿದಂತೆ ಕಾಣುತ್ತದೆ.  Jai Hind,
  K C Kalkura B.A, B.L
  Advocate

  ReplyDelete
 5. ದೇರಾಜೆ ಂಊರ್ತಿಯವರ ಬರವಣಿಗೆ ಕುತೂಹಲದಿಂದ ಓದಿಸಿತು. ಎಪ್ಪತ್ತರ ದಶಕದಲ್ಲಿ ನಾನು ಮಂಗಳಗಂಗೋತ್ರಿಗೆ ಬರುವ ಕಾಲಕ್ಕೆ ಆವರ ದೊಡ್ಡ ಚಿತ್ರಗಳು ನಮ್ಮ ವಿಭಾಗದ ಗೋಡೆಗಳನ್ನು ಆಲಂಕರಿಸಿದ್ದವು. ನನಗೆ ಆವರ ಪ್ರಯೋಗಗಳನ್ನು ನೋಡುವ ಅವಕಾಶವಾಗಲಿಲ್ಲ. ಈಗ ನೀವು ಆರಂಭಿಸಿರುವ ದಾಖಲೀಕರಣ ಸಾರ್ಥಕವಾಗುವುದೆಂದು ಆಶಿಸುವೆ. ಅನುಂಆನವಿಲ್ಲ.

  ReplyDelete
 6. olleya lekhana . inthaha barahagalu aasakthi kudurisalu sahakari-----m p joshy.

  ReplyDelete