28 September 2012

ಮುದ್ದಣ ಲೋಕಂ, ಶ್ರಾವ್ಯ ಸುಖಕ್ಕೆ ಮತ್ತು ವಿಲ್ಲಿ ಡಿ ಸಿಲ್ವರ ಚಿಂತನೆ, ದರ್ಶನ ಸಹಿತ!

೧೯೬೯ರಲ್ಲಿ ಬೆಂಗಳೂರು ಸರಕಾರೀ ಕಾಲೇಜಿನಿಂದ ಪದವಿಪೂರ್ವ ‘ಪಾಸ್’ ಎನಿಸಿಕೊಂಡು ಹೊಸದಾಗಿ ಮೈಸೂರು ಕಂಡವನು, ಮಹಾರಾಜಾ ಕಾಲೇಜಿನಲ್ಲಿ ಸ್ನಾತಕ ಪದವಿಗೆ ದಾಖಲಾದೆ. ನಾನು ವಿಶೇಷ ಯೋಜನೆಯೇನೂ ಇಲ್ಲದೆ ಕನ್ನಡವನ್ನೂ ಒಂದು ಐಚ್ಛಿಕ ವಿಷಯವನ್ನಾಗಿ (ಇನ್ನೊಂದು ಐಚ್ಛಿಕ ಅರ್ಥಾತ್ ಮೇಜರ್ರು ಇಂಗ್ಲಿಷ್, ಅಮುಖ್ಯ ಅರ್ಥಾತ್ ಮೈನರ್ರು ಅರ್ಥಶಾಸ್ತ್ರ) ಆರಿಸಿಕೊಂಡಿದ್ದೆ. ಅದು ತಿಳಿದ, ಅದೇ ಕಾಲೇಜಿನ ಕನ್ನಡ ಅಧ್ಯಾಪಕರೂ ನಮ್ಮ ಕುಟುಂಬ ಮಿತ್ರರೂ ಆಗಿದ್ದ ಕೆ. ರಾಘವೇಂದ್ರ ರಾಯರು ನನ್ನನ್ನು ತಮ್ಮ ಮನೆಗೆ ಕರೆಸಿಕೊಂಡರು. (ಅಲ್ಲೇ ಅವರ ಓರ್ವ ಹಿರಿಯ ಮತ್ತು ಪ್ರಿಯ ವಿದ್ಯಾರ್ಥಿ ಪಂಡಿತಾರಾಧ್ಯರ ಪರಿಚಯವನ್ನೂ ಮಾಡಿದ್ದರು.) ತರಗತಿಗಳು ಪ್ರಾರಂಭವಾಗಲು ಇನ್ನೂ ಸಮಯವಿದ್ದುದರಿಂದ, ಹಳಗನ್ನಡ ಕಾವ್ಯಗಳ ಓದನ್ನು ಗಟ್ಟಿ ಮಾಡಿಕೊಳ್ಳುವತ್ತ ನನ್ನ ಗಮನ ಸೆಳೆದು, ಮುದ್ದಣನನ್ನು ವಿಶೇಷವಾಗಿ ಪರಿಚಯಿಸಿದರು. ಅನಂತರ ನಾನು ಯಾವುವನ್ನೆಲ್ಲಾ ಓದಿದೆ, ಎಷ್ಟು ಅರ್ಥ ಮಾಡಿಕೊಂಡೆ ಎಂದು ಇಂದು ನೆನಪಿಲ್ಲ. ಆದರೆ ಓದಿನ ಸಾರವಾಗಿ ನನ್ನ ಚಿಕ್ಕಪ್ಪ ರಾಘವೇಂದ್ರನಿಗೆ ಬಹಳ ಉದ್ದದ ‘ಮುದ್ದಣ ಪರಿಚಯ ಪತ್ರ’ ಬರೆದದ್ದಂತೂ ನೆನಪಿದೆ. ಮತ್ತದರ ಬಲದಲ್ಲಿ ಕಾಲೇಜಿನ ವಾರ್ಷಿಕ ಮ್ಯಾಗಜೀನಿಗೆ ವಿಶೇಷ ಲೇಖನ ಕೊಟ್ಟು ಅದು ಪ್ರಕಟವಾದದ್ದು ಹೆಮ್ಮೆಯ ನೆನಪಾಗಿಯೂ (ಸಂಗ್ರಹದಲ್ಲೂ) ಇದೆ.

ಮಂಗಳೂರಿನಲ್ಲಿ, ಅದೂ ಪುಸ್ತಕ ವ್ಯಾಪಾರಿ ಎಂದಾದ ಮೇಲೆ ಸಹಜವಾಗಿ ನಾನು ಜಿಲ್ಲೆಯವನೇ ಆದ ಮುದ್ದಣ-ವಲಯ ಸೇರಿದವನೇ ಆಗಿಬಿಟ್ಟೆ. ಕುಶಿ ಹರಿದಾಸ ಭಟ್ಟರ ಕಾಲದಲ್ಲೇ ಉಡುಪಿಯ ಎಂ.ಜಿ.ಎಂ ಕಾಲೇಜಿನ ಬಯಲು ರಂಗಮಂಚಕ್ಕೆ ‘ಮುದ್ದಣ ಮಂಟಪ’ ಹೆಸರು ಬಂತು. ಕುಶಿಯವರ ಕಾರ್ಯವೈಖರಿಯಲ್ಲಿ ಅದು ಕಾಲೇಜು ಮೀರಿದ ತನ್ನ ಬಹುಮುಖೀ ಚಟುವಟಿಕೆಗಳಿಂದ ಪರೋಕ್ಷವಾಗಿ ಮಹಾಕವಿಯನ್ನು ಕಾಲೇಜು ಉಡುಪಿ ಮಾತ್ರವಲ್ಲ, ಹೊರ ಊರುಗಳಲ್ಲೂ ನೆನೆಯುವಂತೆ ಮಾಡುತ್ತಲೇ ಇದೆ. ಆದರೆ ಅದೇ ಉಡುಪಿಯಲ್ಲಿ ದಾರಿಗೆ ಬಿದ್ದ ಮುದ್ದಣ ‘ಕೆಎಂ ರೋಡು’ ಆಗಿ ಕಳೆದು ಹೋದ. ಅಲ್ಲೇ ಒಂದು ಸ್ಮರಣ ಮಂಟಪ ನಗರಾಭಿವೃದ್ಧಿಯ ಕಲಾಪಗಳಿಗೆ ಬಾಧಕವಾಗಿ, ಅರ್ಥಹೀನ ಮುಂದುವರಿಕೆಯಲ್ಲಿ ಆಡಳಿತಕ್ಕೆ ಬಾಧ್ಯತೆಯಾಗಿ ಕಾಡುತ್ತಲೇ ಇದೆ. ಇಂಥಾ ಋಣಾತ್ಮಕ ಅಂಶಗಳನ್ನು ಬಿಟ್ಟು, ನನಗೆ ತಿಳಿದ ಕೆಲವು ಧನಾತ್ಮಕ ಬಿಡಿಚಿತ್ರಗಳನ್ನಷ್ಟೇ ತುಸು ವಿಸ್ತರಿಸುತ್ತೇನೆ. 

ಪಡುಬಿದ್ರೆಯಿಂದ ಕಾರ್ಕಳಕ್ಕೆ ಹೋಗುವ ದಾರಿಯಲ್ಲಿ ಕವಲೊಡೆಯುವ ‘ನಂದಳಿಕೆ ದಾರಿ’, ನನ್ನ ನೆನಪಿಗೆ ಮೀಟುಗೋಲು ಕೊಡುತ್ತಿತ್ತು. ಆದರೆ “ಹೋಗಲೇನಿದೆ” ಎಂಬ ಭಾವವೂ ಜತೆಗಿರುತ್ತಿತ್ತು. ಹುಟ್ಟಿನ ಆಕಸ್ಮಿಕ ಮುದ್ದಣನನ್ನು ನಂದಳಿಕೆಯವನನ್ನಾಗಿಸಿದರೂ ಆತನ ಬಡತನ ಅಲ್ಲಿ ಅವನದ್ದೇನೂ ಉಳಿಸಿರಲಾರದು. ಸ್ಮರಣಿಕೆಯ ಮಟ್ಟದಲ್ಲೇನಾದರೂ ಉಳಿದಿದ್ದರೆ ಮುಖ್ಯವಾಗಿ ಆತನ ಕೃತಿಗಳು. ಇನ್ನೇನಾದರೂ ಇದ್ದರೆ ಆತನ ವೃತ್ತಿ ಕ್ಷೇತ್ರವಾದ ಉಡುಪಿ, ಕುಂದಾಪುರಗಳಲ್ಲಷ್ಟೇ ಎನ್ನುವುದು ನನ್ನ ಭಾವ. ವೃತ್ತಿ ಸಂಬಂಧವಾಗಿ ಆತ ಹಾಜರುಪಡಿಸಿದ ಅರ್ಹತಾ ಪತ್ರಗಳಿಂದ ಕೇವಲ ಡ್ರಿಲ್ ಮಾಸ್ತರನಾಗಿದ್ದ. ಆದರೆ ಯೋಗ್ಯತೆಯಲ್ಲಿ ತುಂಬಾ ಎತ್ತರದವನಾಗಿ, ಕನ್ನಡ ಪಂಡಿತ ಎನ್ನಿಸಿಕೊಂಡವ ಈ ಮಹಾಕವಿ. ಮುಂದುವರಿದು ವಿವಿ ನಿಲಯದ ಅಧ್ಯಾಪನಕ್ಕೂ ಈತ ಸೈ ಎಂದು ಲೋಕ ಗುರುತಿಸುವುದರೊಳಗೆ, ಅಂದರೆ ಇನ್ನೂ ಮೂವತ್ತೊಂದರ ತಾರುಣ್ಯದಲ್ಲೇ ಕ್ಷಯಪೀಡಿತನಾಗಿ ಲೋಕವನ್ನೇ ಅಗಲಿದ ಪ್ರತಿಭಾವಂತ ಮುದ್ದಣ. ಅಷ್ಟರೊಳಗೆ ಆತ ಅರೆಬರೆ ಲೋಕಾರ್ಪಣೆಗೊಂಡದ್ದು ವೃತ್ತಿ ನೆಪದಲ್ಲಿ ನೆಲೆಸಿದ ಆ ಎರಡು ಊರುಗಳಲ್ಲಿ, ಎನ್ನುವುದು ನನಗಿದ್ದ ತಿಳುವಳಿಕೆ. 

ನಂದಳಿಕೆಯ ಬಾಲಚಂದ್ರ ರಾಯರ ಯೋಚನಾಲಹರಿಯ ಜಾಡು ಇನ್ನೊಂದೇ. ಅವರಿಗೆ ಮುದ್ದಣನ ಮನಸ್ಸನ್ನು ಶ್ರೀಮಂತಗೊಳಿಸಿದ್ದು ತನ್ನದೂ ‘ಹುಟ್ಟುನೆಲ’ವಾದ ನಂದಳಿಕೆ ಎಂಬ ಅತೀವ ಅಭಿಮಾನ. ಆ ನಿಟ್ಟಿನಲ್ಲಿ ಮೂರು ದಶಕಗಳಿಗೂ ಮಿಕ್ಕು ದುಡಿಯುತ್ತಿರುವ ಬಾಲಚಂದ್ರ ರಾಯರಿಗೆ ಹಿಡಿದ ಮುದ್ದಣನ ಗಿರ ಭಾರೀ ದೊಡ್ಡದು. ಇವತ್ತಿಗೂ ಎಲ್ಲಾದರೂ ಮುದ್ದಣನ ಬಗ್ಗೆ ಸ, ಸು ಕೇಳಿದರೂ ತಗುಲಿಕೊಳ್ಳುವ ರಾಯರನ್ನು ನಾನು ಪ್ರೀತಿಯಲ್ಲೇ ‘ಬಂದಳಿಕೆ’ ಬಾಲಚಂದ್ರರಾಯರೆಂದೇ ಹೇಳುವುದುಂಟು! ವೃತ್ತಿಯಲ್ಲಿ ಕರ್ನಾಟಕ ಬ್ಯಾಂಕಿನ ನೌಕರನಾಗಿ ಎಲ್ಲೆಲ್ಲೋ ಬಿಡಾರ ಮಾಡಿದರೂ ಊರಿನಲ್ಲಿ ಮುದ್ದಣ ಮಿತ್ರ ಮಂಡಳಿ ಕಟ್ಟಿ, ವಿವಿಧ ಇಲಾಖೆಗಳೊಡನೆ ಅಪೂರ್ವ ಪತ್ರ ಸಮರವನ್ನು ವರ್ಷಗಟ್ಟಳೆ ನಡೆಸಿ ಅಲ್ಲೊಂದು ಸ್ಮಾರಕ ಭವನ ರಚಿಸಿ, ಗ್ರಂಥ ಭಂಡಾರ ಸಂಘಟಿಸಿದರು. ಅವಧಾನಿ ಕಬ್ಬಿನಾಲೆ ವಸಂತ ಭಾರದ್ವಾಜರು ನಂದಳಿಕೆಯಲ್ಲಿ ನಡೆಸಿ ಕೊಟ್ಟ ಸರ್ವಪ್ರಥಮ ತುಳು ಅಷ್ಠಾವಧಾನದ ಹಿಂದಿನ ಸಂಘಟನಾ ವ್ಯವಸ್ಥೆ ಇದೇ ರಾಯರದ್ದು ಮತ್ತು ಅವರ ಮಿತ್ರ ಮಂಡಳಿಯದ್ದು. ಕಾರ್ಯಕ್ರಮಕ್ಕೆ ಪ್ರೇಕ್ಷಕನಾಗಿ ಹೋದ ಭಾಗ್ಯದಲ್ಲಿ ನಾನು ಮುದ್ದಣ ಸ್ಮಾರಕ ಮಂಡಳಿಯ ಚಟುವಟಿಕೆಯ ಒಂದು ಸಣ್ಣ ದರ್ಶನವನ್ನೂ ಪಡೆದಿದ್ದೆ. ಮುದ್ದಣನಿಂದ ಮತ್ತು ಆತನ ಕುರಿತ ಪುಸ್ತಕ ಪ್ರಕಟಣೆ, ಧ್ವನಿಮುದ್ರಿಕೆಗಳು, ವಿಡಿಯೋ ದಾಖಲೆಗಳು, ವೈವಿಧ್ಯಮಯ ಸ್ಮರಣಿಕೆಗಳು, ವೈವಿಧ್ಯಮಯ ಕಲಾಪಗಳಿಗೆಲ್ಲ ಯಾರೂಂತ ಕೇಳಿದ್ದೀರಿ, ಎಂದರೆ ಧಾರಾಳ ಕೈ ತೋರಿಸಬಹುದಾದ ಏಕೈಕ ವ್ಯಕ್ತಿ ನಂದಳಿಕೆ ಬಾಲಚಂದ್ರ ರಾವ್.  

ಸುಮಾರು ನಾಲ್ಕು ದಶಕಗಳ ಹಿಂದಿನ ಕಥೆ. ಆಗ ಮುಂಬೈನ ತಾತಾ ಇನ್ಸ್‌ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚಿನ ಗ್ರಂಥಪಾಲರಾಗಿದ್ದ ಶ್ರೀನಿವಾಸ ಹಾವನೂರರು ತಮ್ಮ ‘ಹೊಸಗನ್ನಡದ ಅರುಣೋದಯ’ (ಎಂಬ ಸಂಶೋಧನಾ ಪ್ರಬಂಧ) ಘೋಷಿಸಿಯಾಗಿತ್ತು. ಭಾರತಕ್ಕೆ ಗಣಕ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಬರುತ್ತಿದ್ದ ಕಾಲ. ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ಅಧ್ಯಾಪಕ ನಾ. ದಾಮೋದರ ಶೆಟ್ಟರು ಹಾವನೂರರ ಮಾರ್ಗದರ್ಶನದಲ್ಲಿ ಮುದ್ದಣನ ಕೃತಿಗಳನ್ನು ಗಣಕಕ್ಕೇರಿಸಿದರು. ಹೊಸಗನ್ನಡದ ಮುಂಗೋಳಿ ಎಂದೇ ಖ್ಯಾತನಾದ ಆ ಕವಿಯ ಪದಪ್ರಯೋಗದ ವೈಲಕ್ಷಣ್ಯವನ್ನು ಸ್ಫುಟಗೊಳಿಸುವುದರೊಡನೆ, ನಾದಾ ತಮ್ಮ ಸಂಶೋಧನಾ ಪ್ರಬಂಧವನ್ನೇ ಮಂಡಿಸಿದರು. (ಆ ಪ್ರಬಂಧವನ್ನು ಪ್ರಕಟಿಸಿ, ಸಾರ್ವಜನಿಕಗೊಳಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೇಜವಾಬ್ದಾರಿಯಿಂದ ತೊಡಗಿಕೊಂಡ ಕೆಟ್ಟ ಕಥೆ ಇಲ್ಲಿ ಬೇಡ) ನಮ್ಮ ಬಹುತೇಕ ‘ಸಂಶೋಧಕ’ರು ‘ಡಾಕ್ಟರ್’ ತಗುಲಿದ ಮೇಲೆ ತಮ್ಮ ಸಾರ್ವಜನಿಕ ಜೀವನದಲ್ಲಿನ ಇದ್ದಬದ್ದ ಉತ್ಸಾಹವನ್ನು ಕಳಚಿಕೊಂಡು ಬಿಡುತ್ತಾರೆ. ‘ಡಾ.ನಾದಾ’ ಹಾಗಲ್ಲ. ಶಾಲಾ ಅಧ್ಯಾಪನದಿಂದ ತೊಡಗಿದ ಇವರ ವೃತ್ತಿ ವಿಕಸನದಲ್ಲಿ ಕಾಲೇಜು ಅಧ್ಯಾಪನ ಮತ್ತು ನಿವೃತ್ತಿ ಎಂಬ ಪ್ರಧಾನ ಕಾಂಡಕ್ಕೆ ಅಸಂಖ್ಯ ಶಾಖೆಗಳು. ನಟ (ಸಿನಿಮಾವೂ ಸೇರಿದಂತೆ), ನಿರ್ದೇಶಕ, ಲೇಖಕ (ನಾಟಕ, ಕವಿತೆ, ಕತೆ, ಕಾದಂಬರಿ, ಅನುವಾದ ನನಗೆ ತಿಳಿದಂತೆ ಇವರ ಪ್ರಕಟಿತ ಪ್ರಕಾರಗಳು) ಎಲ್ಲಕ್ಕು ಮಿಗಿಲಾಗಿ ಎಲ್ಲರೂ ಬೇಕೆನ್ನುವ, ಎಲ್ಲರಿಗೂ ಒದಗುವ ಸಂಘಟಕ, ಬಲುದೊಡ್ಡ ಮಿತ್ರ. ಇಂಥ ನಾದಾರಿಗೆ ಸಂಶೋಧನೆಗೆ ವಸ್ತುವಾಗಿ, ಎಷ್ಟೂ ಪಾಠಪಟ್ಟಿಗೆ (ಶಾಲಾ, ಪದವಿಪೂರ್ವ, ಸ್ನಾತಕ, ಐಚ್ಛಿಕ ಇತ್ಯಾದಿ) ವಿಷಯವಾಗಿ, ರಂಗರೂಪಗಳಲ್ಲಿ ಪಾತ್ರವಾಗಿ ಮುದ್ದಣನ ಕೃತಿಗಳು ಒದಗುವುದನ್ನು ನಾವು ಧಾರಾಳ ಅಂದಾಜಿಸಬಹುದು. ಆದರೆ  ನಾದಾ ಸ್ವತಃ ಮುದ್ದಣ ಆಗುವ ಸನ್ನಿವೇಶ ಕೇಳಲು ಈಗ ನಿಮ್ಮನ್ನು ಒಯ್ಯಲಿದ್ದೇನೆ.

ಕೆ. ಮಹಾಲಿಂಗ ಭಟ್ (ಕೊಳಲು ಮಾಂತ್ರಿಕ ಎಂದೇ ಖ್ಯಾತರಾದ ಟಿ. ಆರ್. ಮಹಾಲಿಂಗಂ ಹೆಸರಿನ ಸಾಮ್ಯದೊಡನೆ ಇವರೂ ಮಾಲಿಂಗ/ಮಾಲಿ) ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ಅಧ್ಯಾಪಕ ಎನ್ನುವುದು ಏನೂ ಅಲ್ಲ. ಪಾಠ, ಪ್ರವಚನ ಮತ್ತು ಪೂರಕ ಓದಿನ ಗ್ರಂಥ ಭಂಡಾರ ಕಟ್ಟುವಲ್ಲೆಲ್ಲಾ (ಈಚಿನ ದಿನಗಳಲ್ಲಿ ತೀರಾ ವಿರಳ ಎನ್ನುವ ಮೌಲ್ಯವಿದು) ವಿದ್ವತ್ತೂ ವಿದ್ಯಾರ್ಥಿ ಪ್ರೀತಿಯೂ ಮಾಲಿಂಗರಲ್ಲಿ ಏಕಧಾರೆಯಾಗಿ ಹರಿಯುತ್ತದೆ. ಆಕಾಶವಾಣಿಯ ಅಖಿಲ ಭಾರತ ನಾಟಕ ರಚನಾ ಸ್ಪರ್ಧೆಯಲ್ಲಿ ಹಲವು ಬಾರಿ ವಿಜೇತ ನಾಟಕಕಾರ, ತುಳು ಕಾದಂಬರಿಕಾರ (ಪ್ರಥಮವೋ ಅಲ್ಲವೋ ಎಂಬ ವ್ಯಾಜ್ಯವನ್ನುಳಿದೂ), ಏಕಕಾಲಕ್ಕೆ ಸಂಗೀತ, ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಯಕ್ಷಗಾನ ಲೇಖನ ಸರಣಿಗಳನ್ನು ವಿವಿಧ ಪತ್ರಿಕೆಗಳಲ್ಲಿ ನಡೆಸುತ್ತ ಬಂದ ಅಂಕಣಕಾರ, ‘ವಿಭಿನ್ನ’ ಹೆಸರಿನಲ್ಲಿ ಸಮಾನಾಸಕ್ತ ಮೂರ್ನಾಲ್ಕೇ ಮಿತ್ರರನ್ನು ಕಟ್ಟಿಕೊಂಡು ಸಾರ್ವಜನಿಕರಿಗೆ ಗುಣಪ್ರಧಾನವಾದ (ವಿಭಿನ್ನ ಶಬ್ದಾರ್ಥ ಮೀರಿ ಭಾವಾರ್ಥಕ್ಕೂ ವಿಸ್ತರಿಸುವಂತೆ) ಸಾಂಸ್ಕೃತಿಕ ಚಟುವಟಿಕೆಗಳನ್ನು ತೆರೆಮರೆಯಲ್ಲೇ ಇದ್ದುಕೊಂಡು ನಡೆಸುವ ಸಂಘಟನಾ ಚತುರ ಎಂಬಿತ್ಯಾದಿ ಬಿರುದುಗಳಿದ್ದರೆ ನಮ್ಮೀ ಮಾಲಿಂಗರಿಗೆ ಮಾತ್ರ. ವಿವಿ ನಿಲಯದ ನಿಯಮದ ಮೇರೆಗೆ ಇವರು ಸಂಶೋಧನೆಗೆ ಆಯ್ದುಕೊಂಡ ವಿಷಯಕ್ಕೆ (ಪ್ರಾದೇಶಿಕ ಸಣ್ಣ ಕತೆಗಳ ಕುರಿತು) ಮಿತಿ ವಿಧಿಸಿಕೊಳ್ಳುವುದು ಅನಿವಾರ್ಯ.

ಆದರೆ ಕೊಂಡು ಓದುವ ಹುಚ್ಚು ಹಿಂಗದ, ಭಾಷೆ ಪ್ರಾದೇಶಿಕತೆಗಳ ಗಡಿ ಮೀರಿ ವಿಚಾರಗಳನ್ನು ಕೇಳಿ, ಕಲೆಗಳನ್ನು ಕಂಡು ಅನುಭವಿಸುವ, ನಿಗರ್ವವಾಗಿಯೂ ಮುಕ್ತವಾಗಿಯೂ ಅವನ್ನೆಲ್ಲ ಹಂಚಿಕೊಳ್ಳುವ, ಬರವಣಿಗೆಯ ಹೊಸ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸುವ, ನಿರಂತರ ಸಂಶೋಧಕನಾಗಿಯೇ ಉಳಿದಿರುವ ನಾನು ಕಂಡ ಕೆಲವೇ ವ್ಯಕ್ತಿಗಳಲ್ಲಿ ಈ ಮಾಲಿ ಖಂಡಿತವಾಗಿಯೂ ಒಬ್ಬರು. (ಅಂಥದ್ದೇ ಮಹಾಪ್ರತಿಭೆಯ, ಅನುಭವ ಪ್ರಾಯಗಳಲ್ಲೂ ಹಿರಿಯರಾದ ಕೆ.ಪಿ ರಾವ್ ಮತ್ತು ವಿಲ್ಲಿ ಡಿಸಿಲ್ವಾರನ್ನು ಮಾಲಿಂಗರು ತಮ್ಮ ಅಂಕಣದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಪರಿಚಯಿಸಿದ್ದನ್ನೂ ನಾನಿಲ್ಲಿ ಸ್ಮರಿಸಲೇಬೇಕು) ಸಹಜವಾಗಿ ಮಂಗಳೂರು ಆಕಾಶವಾಣಿ ಕವಿಮುದ್ದಣನ ಕುರಿತು ವಿಶೇಷ ರೂಪಕ ಸರಣಿಯ ಪ್ರಸಾರ ಯೋಜನೆಯನ್ನು ಹಮ್ಮಿಕೊಂಡಾಗ ನಂಬಿದ ಒಂದು ಅನಿವಾರ್ಯ ಹೆಸರು ಕೆ. ಮಹಾಲಿಂಗ ಭಟ್.

‘ಮುದ್ದಣ ಕಾಲಂ’ ಎಂಬ ರೂಪಕವನ್ನು ಆಕಾಶವಾಣೀ ಎರಡು ಕಂತುಗಳಲ್ಲಿ ಪ್ರಸರಿಸಿತು. ಅದರ ಯಶಸ್ಸಿನಲ್ಲಿ ಭಾಜನರಾದವರನ್ನು, ನನ್ನೊಡನಾಟದ ತಾಕತ್ತಿನಲ್ಲಷ್ಟೇ ಪರಿಚಯಿಸಲು ಪ್ರಯತ್ನಿಸುತ್ತೇನೆ. (ನನ್ನೀ ಬರಹವನ್ನು ‘ಔಪಚಾರಿಕತೆಯ’ ತಕ್ಕಡಿಯಲ್ಲಿ ತೂಗಿ, ಕಡಿಮೆಯಾಗಿದೆ ಎಂದು ದಯವಿಟ್ಟು ಯಾರೂ ಭಾವಿಸಬಾರದು. ಕೊರತೆಯಾಗಿದ್ದರೆ ಅದು ನನ್ನ ಮಿತಿ.) ಇದರಲ್ಲಿ ಮುದ್ದಣನಾಗಿ ನಾನೀಗಾಗಲೇ ಬರೆದುಕೊಂಡಂತೆ ನಾದಾ ಧ್ವನಿ ತುಂಬಿದ್ದಾರೆ. ನಿರೂಪಕನಾಗಿ ಆರ್ ನರಸಿಂಹ ಮೂರ್ತಿ, ಕನ್ನಡ ಅಧ್ಯಾಪಕ (ಗೋಕರ್ಣನಾಥೇಶ್ವರ ಕಾಲೇಜು), ನಟನಾ ಚತುರ. ಮಂಗಳೂರಿನ ಸಾಂಸ್ಕೃತಿಕ ಮುಖವೆಲ್ಲಾ ಮಾರುಕಟ್ಟೆಯ ಮುಖವಾಡಗಳನ್ನು ಎಳೆದುಕೊಳ್ಳಲು ಆರಂಭಿಸಿದ ಕಾಲವದು. (ಅವನ್ನೆಲ್ಲ ನಂಬದೆ ನಡೆಯಲು ಹೋಗಿ ಸತ್ತ - ಸಮುದಾಯ, ಭೂಮಿಕ, ಅಯನ, ಮಂಗಳ ಫಿಲಂ ಸೊಸಾಯಿಟಿ, ರಂಗ ಶೈಲೂಷರು... ಮುಂತಾದವುಗಳ ಲೆಕ್ಕ ಇಟ್ಟವರಿಲ್ಲ.) ‘ಜನಪ್ರೀಯ’ವಲ್ಲದ ನಾಟಕ, ಗಂಭೀರ ಸಾಹಿತ್ಯಕ ಕಲಾಪ, ಅಗಲಿದ ನಿಜ ಸಮಾಜಸೇವಕರಿಗೆ ಎರಡು ಹನಿ ಕಣ್ಣೀರು ಮಿಡಿಯುವುದಕ್ಕೂ ಪ್ರಾಯೋಜಕರೆದುರು ದೀನವಾಗಿ ನಿಲ್ಲಬೇಕಾದ ಸ್ಥಿತಿ. ಆಗ ನಾಲ್ಕೇ ‘ಬಡ ಮೇಸ್ಟ್ರು’ (ಆಗಿನ್ನೂ ಮೇಸ್ಟ್ರುಗಳಿಗೆ ತಲೆತಿರುಗುವ ಸಂಬಳ ಸಿಗುತ್ತಿದ್ದಿಲ್ಲ) ಸ್ವಂತ ಹಣ ಹಾಕಿ (ಮುಂದೆ, ಹಂಗಿನ ಕೊಕ್ಕೆಯಿಡದೆ ಮತ್ತು ಪ್ರಚಾರದ ಹುಚ್ಚಿಲ್ಲದೆ ಬಂದ ದಾನವನ್ನು ಸ್ವೀಕರಿಸಿದ್ದುಂಟು) ಥಣ್ಣನೆ ಪ್ರತಿಭಟನೆಯಾಗಿ ದಾಸಜನ (ಇದೇ ನಾದಾ ಸತ್ಯನಾರಾಯಣ ಮಲ್ಲಿಪಟ್ನ, ನಾಗರಾಜರಾವ್ ಜವಳಿ ಮತ್ತು ನರಸಿಂಹ ಮೂರ್ತಿ) ಕಟ್ಟಿದ್ದರಲ್ಲಿ ಇವರೂ ಸಕ್ರಿಯವಾಗಿ ಇದ್ದರು, ಎಂದರೆ ಕಿರಿದರೊಳ್ ಪಿರಿದರ್ಥಮನ್ ಗ್ರಹಿಸಿಕೊಳ್ಳಿ. 

ನಿರೂಪಕಿಯಾಗಿ ಶ್ರೀಕಲಾ ಉಡುಪ. ಇವರ ರಂಗ ಚಟುವಟಿಕೆ, ಸಾಹಿತ್ಯಕ ಮತ್ತು ಕಲಾ ಕಾರ್ಯಕ್ರಮಗಳ ಪ್ರೀತಿ, ಹಲವು ಮೌಲಿಕ ಚಳವಳಿಗಳಲ್ಲಿನ ಕ್ರಿಯಾಶೀಲತೆ ನೋಡಿದ ಹಲವರಿಗೆ ಗೊತ್ತಿಲ್ಲ, ಇವರು ಕರ್ನಾಟಕ ಬ್ಯಾಂಕಿನ ನೌಕರರೂ ಹೌದು. ಖ್ಯಾತ ಸಿನಿಮಾ ನಿರ್ಮಾಪಕ ಮತ್ತು ನಿರ್ದೇಶಕ ಸದಾನಂದ ಸುವರ್ಣರು ಮಂಗಳೂರಿನಲ್ಲಿ ನೆಲೆಸಿ ಗಂಭೀರ ನಾಟಕಗಳ ತಯಾರಿಗಿಳಿದಾಗ (ಆರ್.ನರಸಿಂಹಮೂರ್ತಿಯವರೂ ತಂಡದ ಭಾಗ) ಮಹಿಳಾ ಪಾತ್ರದ ಕೊರತೆಯನ್ನು ಸಮರ್ಥವಾಗಿ ತುಂಬಿಕೊಟ್ಟವರೂ ಶ್ರೀಕಲಾ.

ಕಾಲಪುರುಷನಾಗಿ  ಚಿನ್ನಾ ಕಾಸರಗೋಡು. ಕಾಸರಗೋಡಿನ ಕಳೆದ ಸುಮಾರು ನಾಲ್ಕು ದಶಕಗಳಿಗೂ ಮಿಕ್ಕು ಕಾಲದ ಹವ್ಯಾಸಿ ನಾಟಕರಂಗ ಸೇರಿದಂತೆ, ಹಲವು ಕನ್ನಡ ಚಟುವಟಿಕೆಗಳ ದಾಖಲೆಗೂ ಇವರೇ ಕಾಲಪುರುಷ! ಇವರ ಉತ್ಸಾಹದ ಕಡಲುಕ್ಕಿ ಲಾರಿನಾಟಕವಾಗಿ ಕರ್ನಾಟಕದ ದಂಡೆ ದಾಟಿ ಬೆಂಗಳೂರುವರೆಗೂ ಕೊರೆದಿತ್ತು. ಸಾಂಪ್ರದಾಯಿಕ ಭಜನಾಮಂಡಳಿಗೆ ಅಭಿನಯದ ತೊಡವು ಕೊಟ್ಟು ರಂಗ ಗೌರವ ಗಳಿಸಿದ್ದು ಚಿನ್ನಾ. ಇವರು ಕೊಂಕಣಿ ಸಿನಿಮಾ ನಿರ್ದೇಶಿಸಿದ್ದಲದೇ ಪ್ರಸ್ತುತ ಕರ್ನಾಟಕ ಸರಕಾರದ ಕೊಂಕಣಿ ಅಕಾಡೆಮಿಗೂ ಅಧ್ಯಕ್ಷ. ನಾದಾರ ಆತ್ಮೀಯ ಗೆಳೆಯ. 

ತುಳುವಿನ ಹವ್ಯಾಸೀ ಮತ್ತು ವೃತ್ತಿ ನಾಟಕಗಳಲ್ಲಿ, ಕೆಲವು ಸಿನಿಮಾಗಳಲ್ಲೂ ಖ್ಯಾತನಾಮರಾದ ಸರೋಜಿನಿ ಶೆಟ್ಟಿ ಈ ರೂಪಕದ ಇತರ ಹೆಣ್ಣು ಧ್ವನಿಗಳಿಗೆ (ಮನೋರಮೆ, ಮಂಡೋದರಿ) ಪಾತ್ರಿಯಾಗಿದ್ದಾರೆ. ರೂಪಕದ ಒಟ್ಟಂದಕ್ಕೆ ಅನಿವಾರ್ಯವಾಗಿ ಸಣ್ಣ ಪಾಲೇ ಕೊಡುವುದಿದ್ದರೂ (ರಾವಣ, ಪರ್ವತ, ಮಳಲಿ ಸುಬ್ಬರಾವ್, ನಾರದ ಮುಂತಾದವು) ಸಣ್ಣವರಲ್ಲದ ಸಂಪೂರ್ಣಾನಂದ ಬಳ್ಕೂರು, ಹರೀಶ ಪೇಜಾವರ, ನಿರ್ಮಾತೃವೂ ಆದ ಶರಭೇಂದ್ರ ಸ್ವಾಮಿ ಮತ್ತು ಸಹಾಯಕ್ಕೊದಗಿದ ಅರವಿಂದ ಕುಡ್ಲರನ್ನು ಹೇಳದಿರುವುದು ಹೇಗೆ! ಸಂತ ಏಗ್ನೆಸಳ ಕಾಲೇಜಿನ ಕನ್ನಡ ಅಧ್ಯಾಪಕ ಸಂಪೂರ್ಣಾನಂದರ ಚಿತ್ರ ಅವರ ಯಕ್ಷಗಾನ ಪರಿಣತಿಯನ್ನೂ ಸಾಹಿತ್ಯ ಪ್ರೀತಿಯನ್ನೂ ಸೇರಿಸಿ ಹೇಳಿದರೇ ಸಂಪೂರ್ಣ! ಬಹುಶಃ ಪದವಿಪೂರ್ವ ತರಗತಿಯಿಂದ ಇಂದಿನವರೆಗೆ ಅಂದ್ರೆ ಸುಮಾರು ಮೂರೂವರೆ ದಶಕಕ್ಕೂ ಮಿಕ್ಕು ಕಾಲ ನನ್ನ ಕಣ್ಣೆದುರೇ ರಂಗಚಟುವಟಿಕೆ, ಸಾಹಿತ್ಯ ಕಿಟಿಪಿಟಿ ಮತ್ತು ಕಾಡುಗುಡ್ಡೆ ಸುತ್ತಾಟಗಳಲ್ಲಿ ಮುಳುಗೇಳುತ್ತಿರುವ ಹರೀಶ್ ಬಗ್ಗೆ ಪುಟಗಟ್ಟಳೆ ಕೊರೆಯಬಲ್ಲೆ; ಇದು ಸಂದರ್ಭವಲ್ಲ!

ಈ ವಲಯದ ಭಾವಗಾನ, ಗಮಕಗಳ ಗಂಡುಕಂಠದಲ್ಲಿ ಚಂದ್ರಶೇಖರ ಕೆದ್ಲಾಯ ಅದ್ವಿತೀಯರು. ಎಷ್ಟೋ ಸಂಗೀತ ಕೂಟಗಳೂ ರಂಗ ರೂಪಕಗಳೂ ತಮ್ಮ ಯಶಸ್ಸಿನ ಬಲುಭಾಗವನ್ನು ಕೆದ್ಲಾಯರ ಕಂಠಶ್ರೀಯಲ್ಲೇ ಗಳಿಸುವುದು ಸುಳ್ಳಲ್ಲ. ಪ್ರಸ್ತುತ ರೂಪಕದಲ್ಲೂ ಕೆದ್ಲಾಯರ ಪುರುಷ ಕಂಠದ ನಾದಸುಖ ಮುದ್ದಣಲೋಕದಲ್ಲೂ ತುಂಬಿ ಬಂದಿದೆ. ಅದಕ್ಕೆ ಅಷ್ಟೇ ಸಂವಾದಿಯಾಗಿ ಮಂಜುಳ ಸುಬ್ರಹ್ಮಣ್ಯ ಸ್ತ್ರೀಕಂಠವನ್ನು ತುಂಬಿದ್ದಾರೆ. ವ್ಯಕ್ತಿ ಮತ್ತು ಕಲಾವಿದೆಯಾಗಿ ಮಂಜುಳರ ಬಗ್ಗೆ ನಾನೇನೂ ತಿಳಿದುಕೊಂಡಿರದಿದ್ದರೂ ಕೃತಿಗೆ ಮಣಿವೆಂ.

ಶರಭೇಂದ್ರ ಸ್ವಾಮಿಯವರು ಆಕಾಶವಾಣಿಯ ಹಿರಿಯ ತಲೆಗಳಲ್ಲೊಬ್ಬರು. ಶ್ರಾವ್ಯ ಮಾಧ್ಯಮದ ಪರಂಪರೆಗೆ ಪೂರಕ ಪ್ರಯೋಗಗಳ ಶೃಂಗಾರದಲ್ಲಿ ನಿತ್ಯ ನಿರತರು, ಪ್ರಸ್ತುತ ಪ್ರಯೋಗದ ಯಶಸ್ಸಿನಲ್ಲಿ ಮುಖ್ಯ ಹೆಸರು. ಇದರ ಕಂಠದಾನದಲ್ಲೂ ಸ್ವಾಮಿಯವರ ಸಣ್ಣ ಕೊಡುಗೆ ಇದೆ. ವರ್ಷಪೂರ್ತಿ ಮುದ್ದಣನ ಬಹುಮುಖೀ ಸ್ಮರಣೆಯನ್ನು ಆಯೋಜಿಸಿದ ಸ್ವಾಮಿಯವರ ಸುಗಂಧಮಾಲೆಯಲ್ಲಿ ಮುದ್ದಣಲೋಕಂ ಒಂದು ಸೌಗಂಧಿಕಾ. ಏನೆಲ್ಲಾ ಮಾಡಿಯೂ ಮಾಡದವನ ಸ್ಥಿತಿ ಸಹಾಯಕನದು. ಕುಡ್ಲದಲ್ಲಿ ಮನೆ, ಕಳಸದಲ್ಲಿ ಮಾಸ್ಟ್ರು. ಅಲ್ಲಿ ವಿದ್ಯಾರ್ಥಿ ವೃಂದಕ್ಕೆ ಮೆಚ್ಚು, ಇವರಿಗೋ ಖಾಯಂ ವಾರಾಂತ್ಯದ ಭೇಟಿ ಮೀರಿ ಘಟ್ಟ ಇಳಿಯುವಷ್ಟು ಸಾಹಿತ್ಯ ಕಲೆಗಳ ಹುಚ್ಚು. ಹೆಚ್ಚು ಮಾತೇಕೆ, ಕೆಳಗಿನ ವಿಲ್ಲಿ-ಚಿಂತನೆಯ ಪೀಠಿಕೆಯಲ್ಲಿ ಸ್ವತಃ ಅರವಿಂದರನ್ನು ನೋಡಿ, ಕೇಳಿ.

ಸದ್ಯ ಮಹಾಲಿಂಗ ಭಟ್ಟರ ರಚನೆಯೂ ಮಂಗಳೂರು ಆಕಾಶವಾಣಿಯ ತಯಾರಿಯೂ ಆದ ಅದ್ಭುತ ಲೋಕವನ್ನು ಮನದುಂಬಿಕೊಳ್ಳಲು ಈ ಧ್ವನಿ ಮುದ್ರಿಕೆಯನ್ನು ಕೇಳಿ.

ಈ ನಾಟಕವನ್ನು ವಿರಾಮದಲ್ಲಿ ಕೇಳುವುದಕ್ಕೆ ಇಳಿಸಿಟ್ಟುಕೊಳ್ಳಲು ಇಲ್ಲಿ ಚಿಟಿಕೆ ಹೊಡೆಯಿರಿ.
(ಈ ಲೇಖನ ಹಳೆಯದಾದರೂ, ನಾಟಕ ಇದೇ ಬ್ಲಾಗಿನ ಧ್ವನಿ ವಿಭಾಗದಲ್ಲಿ ಇರುತ್ತದೆ.)

****

ಮುದ್ದಣನ ಅದೇ ಕಾರ್ಕಳಕ್ಕೆ ಸೇರಿದ ಆದರೆ ಇಂದು ನಮ್ಮೊಡನೆಯೇ ಇರುವ ಇನ್ನೊಂದು ಅದ್ಭುತ ಪ್ರತಿಭೆ ವಿಲ್ಲಿ ಡಿ ಸಿಲ್ವಾ. ೧೯೭೫ರಿಂದ, ಅಂದರೆ ನಾನು ಅತ್ರಿ ತೆರೆದ ಕಾಲದಿಂದ ನನಗೆ ಗುರುತು ಇದೆ, ಆದರೆ ಪರಿಚಯ ಇದೆ ಎನ್ನಲು ಧೈರ್ಯ ಬಾರದ ವ್ಯಕ್ತಿತ್ವ - ವಿಲ್ಲಿ ಡಿ ಸಿಲ್ವ. ಫಾದರ್ (ಪಾದ್ರಿ ಎನ್ನುವ ಅರ್ಥದಲ್ಲಿ) ಎನ್ನಿ, ಓ ಎನ್ನುತ್ತಾರೆ. ಪ್ರೊಫೆಸರ್ ಎನ್ನಿ ಕಿವಿಗೊಡುತ್ತಾರೆ. ಗುರುತನ ಇವರಲ್ಲಿ ಪ್ರಚಂಡ ಎನ್ನುವ ಮಟ್ಟದಲ್ಲಿದೆ. ನನ್ನ ವಾಲಿಕುಂಜ ಶಿಖರ ಇವರಿಗೆ ಅಪರಿಚಿತವಲ್ಲ, ನನ್ನಷ್ಟೇ ಕುತೂಹಲೈಕ ದೃಷ್ಟಿಯಿಂದ ಶಬರಿಮಲೈಯನ್ನೂ ಇವರು ಕಂಡು ಬಂದವರೇ. ಅಂಗಡಿಗೆ ಬಂದು ಡೆಡ್ ಸೀ ಸ್ಕ್ರಾಲ್ಸ್ ಪುಸ್ತಕ ಹಿಡಿದು ಬೈಬಲ್ಲಿನ ಪ್ರಕ್ಷಿಪ್ತಗಳ ಬಗ್ಗೆ ನನ್ನಲ್ಲಿ ಮಾತಾಡುತ್ತಾರೆ. ದ್ವೈತಾದ್ವೈತಗಳ ಬಗ್ಗೆ (ಧಾರಾಳ ತಿಳಿದಿದ್ದರೂ) ಹೇಳಿ ತನ್ನ ‘ಅನ್ಯಧರ್ಮಗಳ ಪ್ರಕಾಂಡ ಓದಿ’ನ ಪ್ರಚಾರ ಮಾಡುವ ಚಟವಿಲ್ಲ. ಶೆಲ್ಫ್ ನೋಡುವಾಗ ಪಕ್ಕದಲ್ಲೇ ನಿಂತ ಶಾಂತಾರಾಮನಿಗೆ (ಅಂಗಡಿ ಸಹಾಯಕ) ಕಾಫ್ಕಾನ ಪುಸ್ತಕ ಕಂಡಾಗ ಅದರ ಕಥಾಸ್ವಾರಸ್ಯದ ಬಗ್ಗೆ ಹೇಳುತ್ತಾರೆ. ಇವರಿಗೆ ಗೊತ್ತಿದೆ, ಜ್ಞಾನಕ್ಕೆ ಪದವಿ ಅಂತಸ್ತುಗಳ ಹಂಗಿಲ್ಲ. ಮತ್ತೆ ಅವರೇ ಪ್ರಕಾಶನ ನಡೆಸಿ, ಪುಸ್ತಕದಂಗಡಿ ತೆರೆದು ಸೋತ ಅನುಭವಗಳು ಸಾಂದರ್ಭಿಕ ಉಲ್ಲೇಖಗಳಾಗಿ ಬರಬಹುದೇ ವಿನಾ ಕೊರಗಿನ ಕಥನವಾಗಿ ನಾನು ಕೇಳಿದ್ದಿಲ್ಲ.

ಅವರು ಮೂಲ ಆಕರಗಳಿಂದ ಕೊಂಕಣಿಗೆ ಅನುವಾದಿಸಿ, ಕನ್ನಡ ಲಿಪಿಯಲ್ಲಿ ಎರಡು ಸಾವಿರಕ್ಕೂ ಮಿಕ್ಕು ಪುಟಗಳ ಹೆಬ್ಬೊತ್ತಗೆಯಾಗಿ ತಂದ ಬಾಇಬಲ್‌ನ ಇನ್ನೂ ಸುಮಾರು ಎರಡು ಸಾವಿರ ಪ್ರತಿಗಳು ಮಾರದೇ (ಅವರಿಗೆ ಜಾಗದ ಕೊರತೆಯಾದಾಗ ನಾನೇ ಕೇಳಿ, ನನ್ನ ಮನೆಯಲ್ಲೇ ದಾಸ್ತಾನಾಗಿ) ಉಳಿದವುಗಳ ಬಗ್ಗೆ ಗೀಳಿಲ್ಲ; ಸ್ವತಃ ತಾನೇ ಮನೆಮನೆಗೆ ಒಯ್ದು ಮಾರುವ ಛಲ ಉಳಿಸಿಕೊಂಡಿದ್ದಾರೆ. ರೇಣುಕಾರಾಜ್ ಪತ್ರಿಕಾಲಯದಲ್ಲಿ ಒಂದಷ್ಟು ಗಜೇಟು (ಹಳೇ ಪೇಪರಿಗೆ ಪ್ರಾದೇಶಿಕ ಪರ್ಯಾಯಪದ. ಕೊಳ್ಳುವುದು ಹೊಸ ಪತ್ರಿಕೆ ಎಂದರೂ ಬಹುತೇಕ ದಕ್ಕುವುದು ಗಜೇಟು ಮೌಲ್ಯ ಮಾತ್ರ ಎಂಬರ್ಥದಲ್ಲಿ) ಕೊಳ್ಳುವಾಗ, ಎಡೆಯಲ್ಲಿ ಸಿಗುವ ಮಾಹಿತಿ ಸುಖಗಳ ಬಗ್ಗೆ ಪುಟ್ಟ ಟಿಪ್ಪಣಿ ಪೇಪರ್ ಹುಡುಗನಿಗೆ ಕೊಟ್ಟಾರು. ಆದರೆ ತಾವೇ ಸಂಘಟಿಸಿ, ಪ್ರಕಟಿಸಿದ ಜನವಾಹಿನಿ ಪತ್ರಿಕೆಯ ಸೋಲಿನ ಕಹಿ ಕಾರಲು ಇವರಿಗೆ ಪುರುಸೊತ್ತಿಲ್ಲ.

ಸಂಸ್ಕೃತಿ, ಸಮಾಜ ಶಾಸ್ತ್ರ, ಪ್ರಾಚ್ಯ ಶಾಸ್ತ್ರ, ಮಾನವಶಾಸ್ತ್ರ, ನಿರ್ವಹಣಾ ತಂತ್ರ (ಮ್ಯಾನೇಜ್ ಮೆಂಟ್ ಎನ್ನುವ ಅರ್ಥದಲ್ಲಿ), ಭಾಷಾ ವೈವಿಧ್ಯ, ಸಾಹಿತ್ಯ, ಪತ್ರಿಕೋದ್ಯಮ, ಸಿನಿಮಾ, ಅನುವಾದ ಇತ್ಯಾದಿ ಪಟ್ಟಿ ಮಾಡಿದಷ್ಟೂ ಮುಗಿಯದ ಜ್ಞಾನಶಾಖೆಗಳ ಸ್ವ-ಜಾಹೀರಾತು ಮಾಡಿಕೊಳ್ಳದ ವಕ್ತಾರ ಇವರು. ಅವರೇ ನನಗೆ ನೆನಪಿಸಿಕೊಟ್ಟಂತೆ ಮೊದಲು ಕೊಣಾಜೆಯ ಸ್ನಾತಕೋತ್ತರ ಕೇಂದ್ರದಿಂದ (ಪಂಡಿತಾರಾಧ್ಯರು ಕರೆದು ಹೇಳಿದ್ದರಂತೆ ಹೀಗೊಂದು “ಸದಭಿರುಚಿಯ ಪುಸ್ತಕ ಮಳಿಗೆ ಬಂದಿದೆ, ನೋಡಿ.”), ಅನಂತರ ಜರ್ಮನಿ, ಗೋವಾ, ಅರಬ್ ದೇಶಗಳು, ಪ್ರಾನ್ಸ್, ಕೊಯಮತ್ತೂರು, ಶಿವಮೊಗ್ಗ ಇನ್ನೂ ಎಲ್ಲೆಲ್ಲಿಂದಲೋ ಪರಿವ್ರಾಜನ ನಡೆಸಿ ನನ್ನಲ್ಲಿಗೆ ಬರುತ್ತಲೇ ಇದ್ದರು, ನೆನಪುಗಳ ಹಂಗಿನಲ್ಲಿ ಹೊತ್ತು ಕಳೆಯಲು ಅಲ್ಲ, ಹೊಸಾ ಪುಸ್ತಕಕ್ಕಾಗಿ. ವಿಲ್ಲಿ ಡಿ ಸಿಲ್ವಾರ ಬಗ್ಗೆ ನಾನೇನು, ಸಂಪರ್ಕಕ್ಕೆ ಬಂದವರಿಗೆಲ್ಲಾ ಹೇಳಲು ತುಂಬಾ ಇರಲೇಬೇಕು. ಹಾಗಾಗಿ ಅವನ್ನು ಪ್ರತಿಕ್ರಿಯಾ ಅಂಕಣದಲ್ಲಿ ತುಂಬಲು ನಿಮಗೆ ಬಿಟ್ಟು,  ಸದ್ಯ...

ವಿಖ್ಯಾತ ಕಾದಂಬರಿಕಾರ ಎಸ್.ಎಲ್ ಭೈರಪ್ಪನವರ ಕಾದಂಬರಿ ಮಂದ್ರ ಅದರದ್ದಲ್ಲದ (ಕಲಾವಿದರ ಲೈಂಗಿಕತೆ) ಮೌಲ್ಯಕ್ಕಾಗಿ ಬಹು ಚರ್ಚೆಗೊಳಪಟ್ಟಿತ್ತು. ಆದರೆ ಭಾರತೀಯ ಭಾಷೆಗಳಲ್ಲೇ ಅದ್ವಿತೀಯವಾಗಿ ಸಂಗೀತವನ್ನೇ ಬುದ್ಧಿ ಮತ್ತು ಭಾವಪೂರ್ವಕವಾಗಿ ಮೈಗೂಡಿಸಿಕೊಂಡು ಬಂದ ಕೃತಿ ಇದು ಎಂದು ಸಾರಿದರು ಶತಾವಧಾನಿ ರಾ. ಗಣೇಶ. ಈ ವಾದವನ್ನು ಸೋದಾಹರಣವಾಗಿ ವಿಸ್ತರಿಸುವ ಯೋಜನೆಯನ್ನು ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಹಾಕಿದರು. ಅದಕ್ಕೆ ಸಂಗೀತದ ಬಲ ಕೊಟ್ಟವರು ಉಸ್ತಾದ್ ಫಯಾಜ್ ಖಾನ್. ಹಾರ್ಮೋನಿಯಂ ಸಾಥಿಯಾಗಿ ಪಂಡಿತ್ ರವೀಂದ್ರ ಕಾಟೋಟಿ ಮತ್ತು ತಬಲ್ಜೀಯಾಗಿ ಪಂಡಿತ್ ಗುರುಮೂರ್ತಿ ವೈದ್ಯ ಸಹಕರಿಸಿದರು. ಕಾದಂಬರಿಗೆ ಸಂಗೀತ ವ್ಯಾಖ್ಯಾನವನ್ನೂ ಸಂಗೀತದಿಂದ ಕಾದಂಬರಿಗೆ ಉತ್ತಾರಣವನ್ನೂ ಅಸ್ಖಲಿತವಾಗಿ ಕೊಟ್ಟವರು (ಔಪಚಾರಿಕ ಪ್ರತ್ಯಯಗಳನ್ನೆಲ್ಲ ಮೀರಿದ) ಗಣೇಶ್ ಎಂದು ಪ್ರತ್ಯೇಕ ಹೇಳಬೇಕೇ. ಈ ಅದ್ಭುತ ಬೆಂಗಳೂರಿನಲಾಯ್ತು ಎಂದಾಗಲೇ ನಾವೆಲ್ಲ ಹೋಗಲಾಗದ ಅಸಹಾಯಕತೆಗೆ ಕೈ ಕೈ ಹಿಸುಕಿಕೊಂಡಿದ್ದೆವು. ಮುಂದೆ ಹುಬ್ಬಳ್ಳಿಯಲ್ಲೂ ನಡೆಯಿತು, ಇನ್ನೇನು ಮೈಸೂರಿಗೂ ಬರಲಿದೆ ಎನ್ನುವುದರೊಳಗೆ ಮಂಗಳೂರಿಗೂ ಬರಸೆಳೆದಪ್ಪಿಕೊಂಡಿತು ಇಲ್ಲಿನ ‘ಓದುಗ ಬಳಗ.’

ಅತ್ರಿ ಬುಕ್ ಸೆಂಟರ್ ಮುಚ್ಚುವ ವೇಳೆಗೆ ‘ಓದುಗ ಬಳಗ’ದ ಹೆಸರಿನಲ್ಲಿ ಮುಖ್ಯವಾಗಿ ಮಾಲಿಂಗ ಮತ್ತು ಮನೋಹರ ಉಪಾಧ್ಯರು (ಒಳಗಿನಿಂದ ‘ವಿಭಿನ್ನ’ ಕೂಟದ ಎಲ್ಲಾ ಆತ್ಮೀಯರೂ ಆಂಶಿಕವಾಗಿ ನನ್ನ ಕುಟುಂಬವೂ ಕೈಗೂಡಿಸಿ) ಮಾರ್ಚ್ ೧೮, ೨೦೧೨ ಆದಿತ್ಯವಾರದ ಸಂಜೆ ಎರಡು ಕಲಾಪಗಳ ಒಂದು ಕಾರ್ಯಕ್ರಮವನ್ನು ವಿವಿ ನಿಲಯ ಕಾಲೇಜು ವಠಾರದಲ್ಲಿ ನಡೆಸಿತು. ಅದರ ಪ್ರಧಾನ ಕಲಾಪವಿದ್ದದ್ದು ಮಂದ್ರ ಕಾದಂ-ಸಂಗೀತ.  ಈ ಸರಿಸುಮಾರು ಮೂರು ಗಂಟೆಯ ಕಲಾಪಕ್ಕೆ ಪೀಠಿಕೆಯಾಗಿ ಓದುಗ ಬಳಗ ನೇರ ಪುಸ್ತಕಕ್ಕೇ ಸಂಬಂಧಪಟ್ಟಂತೆ ಹಮ್ಮಿಕೊಂಡ ಏಕೈಕ ವಿಶೇಷ ಉಪನ್ಯಾಸ ವಿಲ್ಲಿ ಡಿ ಸಿಲ್ವಾರದ್ದು. ವಿಷಯ - ಜ್ಞಾನ ಸಂಪಾದನೆ ಮತ್ತು ಪುಸ್ತಕದ ಮನೆ; ಮಾಹಿತಿ ಮಾಧ್ಯಮದ ಶತಮಾನಗಳು ಮತ್ತು ಅರಿವಿನ ಪಲ್ಲಟ. ಸಭೆಯಲ್ಲಿ ಅಕರ್ಮಕ ಬಂಧಗಳನ್ನು ಚೊಕ್ಕವಾಗಿ ನಿವಾರಿಸಿದ್ದುದರಿಂದ, ನಾನೂ ನಿಮ್ಮನ್ನು ನಿರ್ವಹಣೆಯ ಹೊಣೆಗಾರ (ಮೊದಲೇ ಹೇಳಿದಂತೆ) ಅರವಿಂದ ಕುಡ್ಲರಿಗೆ ಒಪ್ಪಿಸುತ್ತಿದ್ದೇನೆ.

‘ಮಾಹಿತಿ ಮಾಧ್ಯಮದ ಶತಮಾನಗಳು ಮತ್ತು ಅರಿವಿನ ಪಲ್ಲಟ’ ವಿಚಾರ ಮಂಡನೆಯನ್ನು ವೀಡಿಯೋದಲ್ಲಿ ಇಲ್ಲಿ ನೋಡಬಹುದು.


ಕೇವಲ ಧ್ವನಿಯನ್ನು ಇಲ್ಲಿ ಕೇಳಿ.ಈ ವಿಚಾರ ಮಂಡಣೆಯನ್ನು ವಿರಾಮದಲ್ಲಿ ಕೇಳುವುದಕ್ಕೆ ಇಳಿಸಿಟ್ಟುಕೊಳ್ಳಲು ಇಲ್ಲಿ ಚಿಟಿಕೆ ಹೊಡೆಯಿರಿ.
(ಈ ಲೇಖನ ಹಳೆಯದಾದರೂ, ಈ ವಿಚಾರ ಮಂಡಣೆ  ಇದೇ ಬ್ಲಾಗಿನ ಧ್ವನಿ ವಿಭಾಗದಲ್ಲಿ ಇರುತ್ತದೆ.)

5 comments:

 1. ಪ್ರೀತಿಯ ಅಶೋಕವರ್ಧನರಿಗೆ ನಮಸ್ಕಾರಗಳು.
  ನೆನಪುಗಳ ಮೆರವಣಿಗೆಯಂತಿರುವ ಧ್ವನಿ, ವಿಡಿಯೊ ತುಣುಕುಗಳ ಜೊತೆಯಲ್ಲಿರುವ ನಿಮ್ಮ ಲೇಖನ ಮುದನೀಡಿ ನಮಗೆ ದೊರೆತ ಅಪರೂಪದ ವ್ಯಕ್ತಿತ್ವಗಳ ಸಂಪರ್ಕಭಾಗ್ಯವನ್ನು ಮತ್ತೊಮ್ಮೆ ಅನುಭವಿಸಲು ಅವಕಾಶ ಮಾಡಿಕೊಟ್ಟಿತು. ಈ ಬೆಳಗಿನ ಸಮಯದ ಈ ಅನುಭವವನ್ನೇ ಪ್ರಾತಃಸ್ಮರಣೆ ಎನ್ನುತ್ತಾರಲ್ಲವೆ!
  ಪ್ರೀತಿಯಿಂದ
  ಪಂಡಿತಾರಾಧ್ಯ

  ReplyDelete
 2. ಎಸ್.ಎಂ ಪೆಜತ್ತಾಯ28 September, 2012 06:20

  ಪ್ರೀತಿಯ ಪ್ರೊ. ಮಹಾಲಿಂಗ ಭಟ್ ಅವರಿಗೆ
  ಶಿಕ್ಷಕರ ದಿನದ ಶುಭಾಶಯಗಳು ಮತ್ತು ವಂದನೆಗಳು.
  ಅದ್ಭುತವಾದ ಒಂದು ಶಬ್ದ ನಿರೂಪಕ ಬರೆದು ನಮ್ಮ ಮುದ್ದಣ ಮಾಸ್ಟರಿಗೆ ಒಂದು ಸೂಕ್ತ ಗೌರವದ ಮಾಲೆಯನ್ನು ಅರ್ಪಿಸಿದ್ದೀರಿ. ಅದನ್ನು ಸಂಪೂರ್ಣವಾಗಿ ಕೇಳುವ ಸೌಭಾಗ್ಯ ನನಗೆ ಒದಗಿ ಬಂತು. ಪದ್ಯದಿಂ ಒಂದು ಬರವಣಿಗೆಯನ್ನು ಪ್ರಾರಂಭ ಮಾಡಿ ಅದನ್ನು ಗದ್ಯದಲ್ಲಿ ಕೊನೆಗೊಳಿಸಿದ ಅವರ ಸಾಹಿತ್ಯಿಕ ಛಾತಿಯನ್ನು ನಮಗೆ ತಿಳಿಸಿ ಕೊಟ್ಟಿದ್ದೀರಿ. ಅವರು ಕನ್ನಡದ ಗದ್ಯ ಸಾಹಿತ್ಯವನ್ನು ಜನಪ್ರಿಯಗೊಳಿಸಿದರು. ಸಾಮಾನ್ಯ ಅಕ್ಷರ ಜ್ಞಾನ ಇರುವ ಕನ್ನಡಿಗನೊಬ್ಬ ಉದಾ: ಐಗಳ ಮಠದಲ್ಲಿ ಬರೇ ಎರಡನೇ ಈಯತ್ತೆ ಓದಿದ ಒಬ್ಬ ಸಾಮಾನ್ಯ ರೈತಾಪಿ ಕನ್ನಡಿಗನೂ ಅವರ ಗ್ರಂಥಗಳನ್ನು ಓದಿ ಅರ್ಥೈಸಿಕೊಳ್ಳುವ ಮಹಾ ಅವಕಾಶವನ್ನು ಕನ್ನಡ ಜನಸಮುದಾಯಕ್ಕೆ ಮುದ್ದಣ ಕವಿ ನೀಡಿದರು.

  ತಮ್ಮ ರೂಪಕದಲ್ಲಿ "ಕಾಲಸೂಚಿ" ಆಗಿ ನಮ್ಮನ್ನು ಮುದ್ದಣ ಕಾಲಕ್ಕೆ ಕೊಂಡು ಹೋದ "ಕಾಲದ ಗಡಿಯಾರದ ಮುಳ್ಳು" ಮುಂದಕ್ಕೆ ಕಾಲ ಪುರುಷನೇ ಆಗಿ ಬೆಳೆದು ಗಹಗಹಿಸುತ್ತಾನೆ. ಮುದ್ದಣನ ಸಾವನ್ನು ಬಹಳ ಸಹಜವಾದ ಸಾವು ಎಂಬಂತೆ ಪರಿಗಣಿಸುವ ಕಾಲಪುರುಷ ನಿಜವಾಗಿಯೂ ಧರ್ಮರಾಯನ ಅಪ್ಪ? ಕಾಲ? ತಾನೇ! - ಎಂದು ಕೇಳುವವರಿಗೆ ಗೋಚರಿಸಿ ಕೊಳ್ಳುತ್ತಾನೆ.

  ಬೆನಗಲ್ ರಾಮರಾಯರು ನೀಡಿದ ಹುದ್ದೆಯನ್ನು ಸ್ವೀಕರಿಸಲು ಅದೇ ಅಂತಕನ ದೂತ ಅನ್ನಿಸಿಕೊಳ್ಳುವ ಕೆಟ್ಟ ಕಾಯಿಲೆ ಮುದ್ದಣರಿಗೆ ಅವಕಾಶ ನೀಡುವುದಿಲ್ಲ. ಬೆನಗಲ್ ರಾಮರಾಯರನ್ನೊಮ್ಮೆ ಕಣ್ಣಾರೆ ಕಾಣುವ ಸಣ್ಣ ಆಸೆಯನ್ನೂ ಮುದ್ದಣ ಅವರ ವಿಧಿ ನೆರವೇರಲು ಬಿಡುವುದಿಲ್ಲ. ಮುದ್ದಣ ಮಾಸ್ತರು ಟಿ. ಬಿ. ಕಾಯಿಲೆಯಿಂದ ತೀರಿಹೋಗಿರಬೇಕು. ಆಗ ಇಂದಿನಂತೆ ಟೆಟ್ರಾಸೈಕ್ಲಿನ್ ಇದ್ದಿದ್ದರೆ?
  ನನ್ನ ತಂದೆ ಅವರೂ ಟಿ. ಬಿ. ಕಾಯಿಲೆಯಿಂದ ಯುವ ಪ್ರಾಯದಲ್ಲೇ ತೀರಿಕೊಂಡರು. ಈ ಅಕಾಲ ಮರಣಗಳನ್ನು " ವಿಧಿಯ ಆಟ" ಅನ್ನಲೇ? ಬರೇ ಮೂವತ್ತ ಒಂದು ವರುಷದ ಬಾಳಿನಲ್ಲಿ ಮುದ್ದಣ ಸಾಧಿಸಿದ್ದು ಅಪಾರ. ಆತನು ಬದುಕುದ ಎರಡರಷ್ಟು ಕಾಲ ++ ನಾನು ಬದುಕಿ ಅದೆಷ್ಟು ಸಾಧಿಸದ್ದೇನೆ? - ಎಂಬ ಪ್ರಶ್ನೆ ಮೂಡಿತು. ಸ್ವಲ್ಪ ನಾಚಿಕೆಯೂ ಆಯಿತು. ಆ ಮೇಲೆ ದೊಡ್ಡ ನಗುವೂ ಬಂತು!

  ಏಸು, ಪೈಗಂಬರ್ ಮೊದಲಾದವರು ಮೂವತ್ತರ ಆಸುಪಾಸಿನಲ್ಲೇ ಸಂದರಂತೆ. ಯಾಕೆ ಕಾಲ ಪುರುಷನ "ವಿಧಿ ನಿಯಮ" ಅಷ್ಟು ನಿಷ್ಟುರ? ಬೆನಗಲ್ ರಾಮರಾಯರ ಪ್ರಸ್ತಾಪದಿಂದ ಮುದ್ದಣ ಮಾಸ್ತರು ಕೇಳುಗರಿಗೆ ಇನ್ನೂ ಹತ್ತಿರಕ್ಕೆ ಬರುತ್ತಾರೆ. ಮುಂದಕ್ಕೊಂದು ದಿನ ಬೆನಗಲ್ ರಾಮರಾಯರು ರಿಜರ್ವ್ ಬ್ಯಾಂಕ್ ಗವರ್ನರರಾಗುತ್ತಾರೆ. ಸ್ವಾತಂತ್ರ್ಯ ನಂತರದ ಕಾಲದಲ್ಲಿ ಛಾಪಿತವಾದ ಹತ್ತು ರೂಪಾಯಿಗಳ ನೋಟುಗಳ ಮೇಲೆ ಬಿ. ರಾಮರಾವ್ ಎಂಬ ಸಹಿಯನ್ನು ಕಂಡ ನೆನಪು ನನ್ನಲ್ಲಿ ಇನ್ನೂ ಹಸಿಯಾಗಿ ಉಳಿದಿದೆ. ಕಾಲ ನಿಯಮ ಯಾರನ್ನೂ ಬಿಡದು. ಕೃತಿಮಾತ್ರ ಶಾಶ್ವತ!

  ಮುದ್ದಣ ಮಾಸ್ತರ ಕೃತಿಗಳಲ್ಲಿ ಒಂದು "ಸ್ವಾರಸ್ಯ" ಕೊನೆಯವರೆಗೂ ಜತೆಗೆ ಇದ್ದು ಕೃತಿಯ ಕೊನೆಯಲ್ಲಿ ತೆರೆದು ಕೊಳ್ಳುತ್ತವೆ. ಮುದ್ದಣರ ಚರಮ ಗೀತೆ ಕೇಳಿದ ನನಗೆ ಕಣ್ಣೀರೇ ಬಂತು. ಪ್ರೊ. ಮಹಾಲಿಂಗರ ನಿರೂಪಕಕ್ಕೆ ಒಬ್ಬ ಕಾಡುಮನುಷ್ಯನನ್ನೂ ಅಳಿಸುವ ಶಕ್ತಿ ಇದೆ! - ಇದು ಸತ್ಯಂ! ಇದಕ್ಕಿಂತ ಹೆಚ್ಚಿಗೆ ನಾನು ಬರೆಯಲು ಶಕ್ತನಲ್ಲ. ಮುದ್ದಣ ಕವಿ ಅವರು ಕೆಲಸ ಮಾಡಿದ ಹೈಸ್ಕೂಲಿನಲ್ಲೇ ಓದಿ ಅವರು ತಿರುಗಾಡಿದ ಜಾಗೆಗಳಲ್ಲಿ ತಿರುಗಾಡಿದ ನಾನು ಇದಕ್ಕಿಂತ ಹೆಚ್ಚಿಗೆ ಬರೆಯಲಾರೆ.

  ಮುದ್ದಣ ಕಾಲಂಗೆ ನಾನು ಆಭಾರಿ. ಧನ್ಯವಾದಗಳು.
  ಪ್ರೀತಿಯಿಂದ
  ಪೆಜತ್ತಾಯ

  ReplyDelete
 3. ಲೇಖನ ಬಲು ಚೆನ್ನಾಗಿದೆ.

  ReplyDelete
 4. ಕೆ.ಸಿ. ಕಲ್ಕೂರ28 September, 2012 10:23

  ಪ್ರಿಯ ಅಶೋಕಗಾರಿಕಿ, ವಂದೇಮಾತರಮ್.
  ಶಿವರಾಮ ಕಾರಂತರ ಚೋಮ, ಪ್ರೇಮ್ ಚಂದರ ಹೋರಿರಾಮ, ಗುರ್ರಮ್ ಜಾಶುವಾರ ಗಬ್ಬಿಲಮ್. ಪ್ರಿಯದರ್ಶನ್ (?) ವೆಂಗಡನ್ ( ಕಂಚೀವರಮ್ ಸಿನೆಮಾ ಖ್ಯಾತಿಯ 1932 ರ ತಮಿಳ್ ಕಾದಂಬರಿ - ಪ್ರಕಾಶ್ ರಾಜ್ - 2009, ರಾಷ್ಟ್ರದ ಅತ್ಯುತ್ತಮ ನಾಯಕ) ಇತ್ಯಾದಿಗಳು ಸೃಷ್ಟಿ ಆಗುವುದಕ್ಕೆ ಸುಮಾರು ಮೂರು ದಶಕಗಳ ಹಿಂದೆಯೇ ಮುದ್ದಣ ಮನೋರಮೆ ರಂಗದಲ್ಲಿದ್ದ್ದರು. ಉಳಿದವರೆಲ್ಲರೂ ನಮ್ಮನ್ನು ಕಣ್ಣೀರು ಬಿಡಿಸಿದರೆ, ಮುದ್ದಣ ಮನೋರಮೆ ಹೊಟ್ಟೇ ಹುಣ್ಣಾಗವಷ್ಟು ನಗಿಸಿದರು. ತಾವು ತಾಳಲಾರದ ನೋವನ್ನುಂಡು, ನಗದೆ ಅಳದೆ, ಇತರರನ್ನು ನಗಿಸಿದ ಬೆರಳೆಣಿಕೆಯ ಪ್ರಂಪಂಚದ ಬರಹಗಾರರಲ್ಲಿ ಮುದ್ದಣನ ಸ್ಥಾನ ಶಾಶ್ವತವಾದದ್ದು.
  ಕೆ. ಚಂದ್ರಶೇಖರ ಕಲ್ಕೂರ

  ReplyDelete
 5. ಎಸ್.ಎಂ ಪೆಜತ್ತಾಯ01 October, 2012 16:26

  ಪ್ರೀತಿಯ ಅಶೋಕವರ್ಧನ
  ರೆ. ಫಾ. ಡಾ. ವಿಲ್ಲಿ ಡಿ ಸಿಲ್ವಾ ಅವರ ಭಾಷಣ ಸುಮಾರು ಐದು ಬಾರಿ ವೀಡಿಯೋ ನೋಡಿದೆ.
  ಪ್ರತೀ ಬಾರಿ ಕೇಳುವಾಗಲೂ ಹೊಸತನದ ಹೊಳಹುಗಳು ಅಲ್ಲಲ್ಲಿ ಮಿಂಚುತ್ತಾ ಗೋಚರಿಸಿದವು.
  ಅಂತಹ ಮಹಾ ಪಂಡಿತರ ಭಾಷಣ, ಅವರ ವಾಗ್ಝರಿ ಕೇಳುತ್ತಾ ನನಗೆ ಹೇಗೆ ಅನ್ನಿಸಿತು ಗೊತ್ತೇ?
  ನಾಮ್ಚೆ ಬಜಾರಿನಿಂದ ಹಿಮವಂತನ ತಲೆಯ ಕಡೆ ದಿಟ್ಟಿಸಿ ನೋಡಿದ ಅನುಭವ! ಎತ್ತರದ ಮನುಷ್ಯನ ವಿಚಾರವಂತಿಕೆ ಕರಾರುವಾಕ್ಕಾದ ವಿವರಣೆ, ವಿನಯ ಮತ್ತು ಅಪಾರ ಜ್ಞಾನ ಇವು ನನ್ನನ್ನು ನಿಬ್ಬೆರಗಾಗಿಸಿದುವು.
  ಡಾ. ಸಿಲ್ವ ಎಂಬ ಜ್ಞಾನ ಪರ್ವತಕ್ಕೆ ನನ್ನ ದೀರ್ಘದಂಡ ನಮಸ್ಕಾರಗಳು.
  ಪ್ರೀತಿಯಿಂದ
  ಪೆಜತ್ತಾಯ ಎಸ್. ಎಮ್.

  ReplyDelete