03 August 2012

ಜೈಲ್ ನಾಟಕ ಮತ್ತು ಔಚಿತ್ಯ!

ಸಮಯ ಪರಿಪಾಲನೆ ಮತ್ತು ಔಚಿತ್ಯ!
ಕಾಲಪುರುಷನೇ ಈ ವರ್ಷ ಸಮಯಪರಿಪಾಲನೆಯಲ್ಲಿ ಹಿಂದೆ ಬಿದ್ದಿದ್ದಾನೆ. ಮುಸಲಧಾರೆಯಲ್ಲಿ ನೆಲ ಹದಗೊಳಿಸಬೇಕಿದ್ದ ಮಳೆರಾಯ ಪ್ರವೇಶದ ಅಬ್ಬರತಾಳವನ್ನು ನಿರಾಕರಿಸಿ ಚೌಕಿಯಲ್ಲೇ ಬಿದ್ದುಕೊಂಡಿರುವಾಗ ನನಗೆ ತಾಳಮದ್ದಳೆಯ ಆಕರ್ಷಣೆ ಹಿತವಾಯ್ತು. ಪ್ರಸಂಗ - ಸುಭದ್ರಾರ್ಜುನ ಮತ್ತು ಕೃಷ್ಣಾರ್ಜುನ. ಪಟ್ಟಿಯಲ್ಲಿನ ಕಲಾವಿದರ ಹೆಸರುಗಳೂ ಒಳ್ಳೊಳ್ಳೆಯವೇ. ಸಂಘಟಕರು ಕಾಲಮಿತಿಯಲ್ಲಿ ಅರ್ಥ ಬಳಲದಂತೆ ರಾತ್ರಿ ಒಂಬತ್ತರಿಂದ ಬೆಳಕು ಹರಿಯುವವರೆಗೂ ಅವಕಾಶ ತೆರೆದಿಟ್ಟಂತೇ ಇತ್ತು. ನನಗೆ ಸಣ್ಣ ಕೊರತೆ ಕಾಡಿದ್ದು - ಮೂಲ್ಕಿ-ಮೂಡಬಿದ್ರೆಯ ನಡುವಣ ಪುಟ್ಟಪೇಟೆ ಅಶ್ವತ್ಥಪುರಕ್ಕೆ ಸಾರ್ವಜನಿಕ ವಾಹನ ಸಂಚಾರ ಹೇಗುಂಟೋ! ಆದರೆ ಸಂಘಟಕರು ದೊಡ್ಡ ಸಂಖ್ಯೆಯಲ್ಲೇ ಹೊರ ಊರಿನ ರಸಿಕರನ್ನು ನಿರೀಕ್ಷಿಸಿದಂತಿತ್ತು. ಸಹಜವಾಗಿ ತಮ್ಮ ಪತ್ರಿಕಾ ಜಾಹೀರಾತಿನ ಕೊನೆಯಲ್ಲಿ ‘ಮೂಡಬಿದ್ರೆಯಿಂದ ಅಶ್ವತ್ಥಪುರಕ್ಕೆ ಕೊನೆಯ ಬಸ್ಸು ಎಂಟು ಗಂಟೆಗಿದೆ’ ಎಂದು ಸೇರಿಸಿದ ಮೇಲಂತೂ ನಾನು ನಿಶ್ಚಿಂತ. ಮಂಗಳೂರಿನಿಂದ ಆರೂವರೆ ಸುಮಾರಿಗೆ, ಕೊಡೆ ಬೆನ್ನಿಗೆ ನೇಲಬಿಟ್ಟು ಬಸ್ಸು ಹಿಡಿಯಲು ಬಂಟರ ಹಾಸ್ಟೆಲ್ ನಿಲ್ದಾಣ ತಲಪುತ್ತಿದ್ದಂತೆ ಬಸ್ಸೇನೋ ಬಂತು. ಆದರೆ ನಾನಿನ್ನು ನೆಲದ ಕಾಲು ಎತ್ತುವ ಮುನ್ನ, ಕೆಳಗಿದ್ದ ಸಮಯಪರಿಪಾಲಕನ ಬೊಬ್ಬೆ, ಸಿಳ್ಳೆ, ಬಸ್ ಕೈಯಲ್ಲಿ ಬಡಿದದ್ದೆಲ್ಲ ನೋಡಿದಾಗ ನಿಜಕ್ಕೂ ಗಾಬರಿಯಾಯ್ತು. ಬಸ್ ಮುಂದುವರಿದಂತೆ, ಟಿಕೆಟ್ ಪಡೆಯುವಾಗ ತಿಳಿಯಿತು, ಈ ಬಸ್ ಹಿಂದಿನ ಬಸ್ಸಿನವನ ‘ಜನಮಾಡುವ’ ಎರಡು ಮಿನಿಟಿನ ಮೇಲೆ ಕಾಲಾತಿಕ್ರಮಣ ಮಾಡಿತ್ತು! ನನಗೆ ತುಂಬ ಕುಶಿಯಾಯ್ತು. ಇಲ್ಲಿ ಕಾರಣವೇನೇ ಇರಲಿ, ತಡ ಎರಡೇ ಮಿನಿಟಾದರೂ ಜಬರ್ದಸ್ತಿನಲ್ಲಿ ಕೇಳುವವರಿದ್ದಾರೆ.

ಮಳೆ ಚಿರಿಪಿರಿಗುಟ್ಟುತ್ತಿದ್ದಂತೆ ಏಳೂವರೆಗೇ ನಾನು ಮೂಡಬಿದ್ರೆ ತಲಪಿದ್ದೆ. ಅಶ್ವತ್ಥಪುರದ ಕಡೆಗೆ ಹೋಗುವ ಬೇರೆಯೂ ಬಸ್ಸೊಂದು ಇತ್ತಂತೆ. ಆದರೆ “ಆದಿತ್ಯವಾರ ಸ್ವಾಮೀ, ಜನ ಆಗುದಿಲ್ಲ” ಎಂದು ಏಜಂಟ್ ಗೊಣಗಿದ್ದಕ್ಕೆ ಸರಿಯಾಗಿ, ಅದು ರದ್ದಾಗಿತ್ತು. ಇನ್ನು ಹೀಗೇ ಎಂಟು ಗಂಟೇದೂ ಇಲ್ಲವಾದರೆ ಎನ್ನುವ ಆತಂಕ ನನ್ನದು. [ನಿಲ್ದಾಣದಲ್ಲಿ ನಿಗದಿತ ಸಮಯಕ್ಕೆ ಖಡಕ್ ಮಲಬಾರ್ ಎಕ್ಸ್‌ಪ್ರೆಸ್ ಬಂತು. ನಿಲ್ದಾಣದಲ್ಲಿ ಭಾರೀ ಸಮಯದಿಂದ ಬೀಡು ಬಿಟ್ಟಂತಿದ್ದವರು ಗೊಣಗುತ್ತಾ ಹಿಂದಿನ ದಿನಕ್ಕೆ ರಿಸರ್ವ್ಡ್ ಟಿಕೆಟ್‌ನ್ನು ‘ಪಾಸ್’ ಮಾಡಿಸಿಕೊಂಡು ಏರಿದರು!] ಪುಣ್ಯಕ್ಕೆ ಹಾಗಾಗಲಿಲ್ಲ, ಐದಾರು ಮಿನಿಟಲ್ಲಿ ಬಂದ ‘ಎಂಟು ಗಂಟೆ’ಯ ಬಸ್ಸೇರಿ ಕುಳಿತೆ. ಖ್ಯಾತ ಅರ್ಥದಾರಿ ವಿಟ್ಲ ಶಂಭುಶರ್ಮರೂ ಸಿಕ್ಕಿ ಪಟ್ಟಾಂಗದಲ್ಲಿ ಮುಳುಗಿದ್ದಂತೆ, ಬಸ್ಸಿಗೆ ನಾಲ್ಕೆಂಟು ಜನ ಆಯ್ತು. ನಿಧಾನಕ್ಕೆ ಬಸ್ ನಿಲ್ದಾಣವನ್ನೂ ಬಿಟ್ಟಿತು. ಆಗ ನನ್ನ ಚರವಾಣಿಯಲ್ಲಿ ಹೆಂಡತಿ ದೇವಕಿಯ ಕರೆ. “ಏನು ಇನ್ನೂ ತಲಪ್ಲಿಲ್ವಾ? ಹೊರಟು ಗಂಟೆ ಎರಡಾಯ್ತು...” ಬಸ್ಸು ತಡವಾಗಿ ಬರಬಹುದಾದವರ ಅನುಕೂಲಕ್ಕೆ ಅರ್ಧ ಗಂಟೆ ತಡವಾಗಿ ಹೊರಟಿತ್ತು.

ಅಶ್ವತ್ಥಪುರಕ್ಕೆ ಹತ್ತಿಪ್ಪತ್ತೇ ಮಿನಿಟಿನ ದಾರಿ. ಅಲ್ಲಿಳಿಯುವಾಗ ವರುಣಾಸುರ ಅಬ್ಬರತಾಳಕ್ಕೆ ಹೆಜ್ಜೆ ಜೋಡಿಸಲು ಸುರು ಮಾಡಿದ್ದ. ಕೊಡೆಯರಳಿಸಿ ಸಭಾಂಗಣ ಸೇರಿದೆ. ಅಗತ್ಯದ ಕಲಾವಿದರೇನೋ ಮುಟ್ಟಿದ್ದರು. ಆದರೆ ಸಂಘಟಕರನ್ನು ಕಳೆದರೆ ರಸಿಕರು ಎರಡಂಕಿ ಮುಟ್ಟುವಷ್ಟೂ ಇರಲಿಲ್ಲ. ಕೆಸರಿನ ನೆಲಕ್ಕೆ ಝಿಂಕ್ ಶೀಟಿನ ಚಪ್ಪರ ಹಾಕಿದ್ದರು. ಪ್ರಸಂಗ ಏನೇ ಇರಲಿ, ಗುತ್ತಿನವರ ಹರಿಕೆಯಲ್ಲಿ (ಬ್ಯಾಂಡ್ ಗರ್ನಾಲ್ ಸಹಿತ) ದೇವಿ ಮಹಾತ್ಮ್ಯೆ ನೋಡಿದಂತಾಗುವುದು ಗ್ಯಾರಂಟಿ ಎಂದನ್ನಿಸಿತು. ಗಂಟೆ ಎಷ್ಟಾಯ್ತೂಂತ ನೋಡಿದರೆ ಕೈಗಡಿಯಾರ ನೀರು ಕುಡಿದು ಒಂಬತ್ತಕ್ಕೆ ನಿಂತೇ ಹೋಗಿತ್ತು. ಆದರೂ ಗಂಟೆ ಒಂಬತ್ತೂ ಮುಕ್ಕಾಲಕ್ಕೆ ಲಂಬಿಸುವವರೆಗೂ ವೇದಿಕೆಯಲ್ಲಿ ಜೀವ ಸ್ಪಂದನವಿರಲಿಲ್ಲ. ಅನಂತರ ಸಭಾ ಕಲಾಪ. ಯಕ್ಷ-ಚೈತನ್ಯದ ವಾರ್ಷಿಕ ವರದಿ, ಊರ ಪ್ರತಿಭೆ ಹಾಗೂ ಯಕ್ಷ ಪ್ರತಿಭೆಗಳಿಗೆ ಸಮ್ಮಾನ, ಗಹನ ವಿಷಯವಿಲ್ಲದೆಯೂ ನಾಲ್ಕೈದು ಭಾಷಣಗಳೆಲ್ಲ ಮುಗಿದು “ಗಜಮುಖದವಗೆ ಗಣಪಗೇಏಏ” ಕೇಳಬೇಕಾದರೆ ಗಂಟೆ ಹನ್ನೊಂದೂ ಕಾಲು! ತಡ ರಾತ್ರಿಗೆ ಆ ಹಳ್ಳಿ ಮೂಲೆಯಲ್ಲಿ ನಾನು ಯಾವ ಸಾರ್ವಜನಿಕ ಸಾರಿಗೆಯನ್ನೂ ನಿರೀಕ್ಷಿಸುವಂತಿರಲಿಲ್ಲ. ಸ್ವಂತ ವಾಹನವನ್ನೇನಾದರೂ ಒಯ್ದಿದ್ದರೆ ಖಂಡಿತವಾಗಿ ಆ ಹೊತ್ತಿಗೆ ನಾನು ಮನೆ ಸೇರಿ ಮೊದಲ ಜಾಮದ ನಿದ್ರೆ ಮುಗಿಸಿರುತ್ತಿದ್ದೆ.

ಹತ್ತು ಸಮಸ್ತರಿಂದ ಸಹಾಯ ಪಡೆದದ್ದನ್ನು ನಿವೇದಿಸಿಕೊಳ್ಳಲು, ಸಾರ್ವಜನಿಕರ ಸಮ್ಮುಖದಲ್ಲಿ ಕೃತಜ್ಞತೆಯನ್ನು ಮುಟ್ಟಿಸಲು ಸಭಾಕಲಾಪ ಅನಿವಾರ್ಯ ಇರಬಹುದು. ಆದರೆ ಅದು ಮುಖ್ಯ ಕಾರ್ಯಕ್ರಮದ ಸಮಯದ ಮೇಲೆ ಅಪಾಯಕಾರಿಯಾಗಿ ಲಂಬಿಸುವುದು ತಪ್ಪು. ಇನ್ನು ಇಂಥ ಸಂದರ್ಭಗಳಲ್ಲಿ ಭಾಷಣಕಾರರಾಗಿ ಭಾಗವಹಿಸುವವರಿಗೆಲ್ಲ ಸನ್ನಿವೇಶದ ಪೂರ್ಣ ಅರಿವಿರುತ್ತದೆ. ಆಗ ಔಪಚಾರಿಕ ಅಗತ್ಯಕ್ಕಷ್ಟೇ ಮಾತು (‘ಅವರೇ’ ಕಾಳು ತಿನ್ನದೇ ಒಬ್ಬೊಬ್ಬರೂ ಎರಡೇ ಮಾತು) ಬಳಸಿ ಸಭೆಯನ್ನು ಚಂದಗಾಣಿಸಲು ಪ್ರಯತ್ನಿಸದಿರುವುದು ದೊಡ್ಡ ತಪ್ಪು. ಇಷ್ಟೆಲ್ಲ ಆಗಿಯೂ ತಾವು ವೇದಿಕೆಯಲ್ಲಿರುವುದನ್ನು ಮಾತಿನ ಹೂರಣದಲ್ಲಾದರೂ ಸಮರ್ಥಿಸಿಕೊಳಲು ಆಗದವರು ಅತಿಥಿಗಳಲ್ಲ, ಅಪರಾಧಿಗಳು. ಎಲ್ಲೆಲ್ಲಿನ ಓದು, ಕೇಳ್ಮೆ, ವರದಿ, ಪರಿಚಯಗಳ ಎಳೆ ಹಿಡಿದು, ಅನುಭವ ಹೊತ್ತು, ಖರ್ಚು ಮಾಡಿ ರಸಿಕರು ಬರುತ್ತಾರೆ. ಇವರು ಗುಣ ಖಾತ್ರಿ ಅನ್ನಿಸಿದರೆ ದುಬಾರಿ ಟಿಕೆಟ್ಟಿಗೂ ಕೈ ಗಿಡ್ಡ ಮಾಡುವವರಲ್ಲ. ಅಂಥವರನ್ನು ‘ಎದುರು’ ಹಾಕಿಕೊಂಡು ಇನ್ನು ಇನ್ನೂ ಯಕ್ಷಗಾನ ಎಂದರೇನು, ಬಾಸಾಸುದ್ದಿಗೆ ಯಕ್ಸಗಾನದ ಕೊಡಿಗೆ, ಖಲೆ ಸಂಸ್ಕ್ರುತಿಯ ಮಹತ್ವ, ಬಾಲ್ಯದಲ್ಲೆಲ್ಲೋ ತಪ್ಪಿ ನೋಡಿದ ಯಾವುದೋ ಪ್ರದರ್ಶನದ ಅಬದ್ಧ (ವಿಕೃತ?) ಸ್ಮೃತಿ, ಏನೋ ಶ್ಲೋಕಾರ್ಥವನ್ನು ಸನ್ನಿವೇಶಕ್ಕೆ ಹೊಂದಿಸಲು ತಿಣುಕುವುದು ಮುಂತಾದವನ್ನು ಸೋರಿಹೋಗುವ ಸಮಯದ ಬೆಲೆಯಿಲ್ಲದೆ ನಡೆಸುತ್ತಲೇ ಇರಬೇಕೇ?


ಇಂಥವೆಲ್ಲದರ ಸಣ್ಣ ಸಣ್ಣ ಅಂಶ ಅಶ್ವತ್ಥಪುರದಲ್ಲಿ ಸಂಗಮಿಸಿ, ವ್ಯಗ್ರಮನಸ್ಕನಾಗಿಯೇ ರಾತ್ರಿ ಕಳೆದೆ. ಹಾಗಾಗಿ ಮುಖ್ಯ ಕಲಾಪದ ಕುರಿತ ನನ್ನ ಮಿತಿಯ ಮಾತುಗಳನ್ನು ನಾನಿಲ್ಲಿ ವಿಸ್ತರಿಸುವುದಿಲ್ಲ. ಬದಲು ಹೀಗೇ ನನ್ನ ಅನುಭವಕ್ಕೆ ಒದಗಿದ ತುಂಬಾ ಒಳ್ಳೆಯ ಆದರೂ ತುಸು ಔಚಿತ್ಯ ಮೀರಿದ ಇನ್ನೆರಡು ಪ್ರಸಂಗಗಳನ್ನು ವಿಸ್ತರಿಸುತ್ತೇನೆ.

ಜೈಲಿನಿಂದ ಜೈಲಿಗೆ ರಂಗ ಯಾತ್ರೆ

ಜೈಲಿನಿಂದ ಜೈಲಿಗೆ ರಂಗ ಯಾತ್ರೆ - ನಮಗೆ ನಾಲ್ಕು ದಿನ (ಇದೇ ಜುಲೈ೨, ೩, ೪ ಮತ್ತು ೫ ಮಂಗಳೂರಿನ ಪುರಭವನದಲ್ಲಿ ಪ್ರತಿ ಸಂಜೆ ಆರು ಗಂಟೆಯಿಂದ.) ಅಕ್ಷರಶಃ ಅಪೂರ್ವ ರಂಗಾನುಭವ. ಇದು ಎದೆ ತುಂಬಿ ಬಂದ ಸನ್ನಿವೇಶವೂ ಹೌದು. ಸಂಕಲ್ಪ ಮೈಸೂರು ಮತ್ತು ಕರ್ನಾಟಕ ಕಾರಾಗೃಹಗಳ ಇಲಾಖೆಯ ಸಹಯೋಗದಲ್ಲಿ ನಡೆದ ನಾಟಕೋತ್ಸವಕ್ಕೆ ಇನ್ಯಾವುದೇ ರಂಗಪ್ರದರ್ಶನಗಳಿಗಿಂತ ತೀರಾ ಭಿನ್ನವಾದ ಲಕ್ಷ್ಯವಿತ್ತು ಮತ್ತು ಅದನ್ನು ಅಷ್ಟೇ ಯಶಸ್ವಿಯಾಗಿ ಅದು ಸಾಧಿಸಿದೆ ಎಂದು ಘಂಟಾಘೋಷವಾಗಿ ಹೇಳುವಲ್ಲಿ ನನ್ನೊಡನೆ ಬಂದ ಕುಟುಂಬ ಸದಸ್ಯರು, ಮಿತ್ರ ಬಳಗವೆಲ್ಲ ನಿರ್ವಿವಾದವಾಗಿ ಒಕ್ಕೊರಲಾಗುತ್ತದೆ.

ಮನುಷ್ಯ ಪ್ರಕೃತಿಯ ಒಂದು ರೂಪ. ಈ ರೂಪಕ್ಕೆ ವಿಶಿಷ್ಟವಾದ ‘ಬುದ್ಧಿ’ ವಿಕಾಸಗೊಂಡಿರುವುದರಿಂದ ಮನುಷ್ಯನೇ ಸಂಸ್ಕೃತಿ, ಸಮಾಜವನ್ನು ರೂಪಿಸಿಕೊಂಡ. ಆದರೆ ಕಾಲಪ್ರವಾಹದಲ್ಲಿ ‘ನೆಲ’ ಮತ್ತು ‘ಪ್ರಭಾವ’ಗಳು ಎಲ್ಲ ವ್ಯಕ್ತಿಗಳಿಗೂ ಒಂದೇ ರೀತಿಯಲ್ಲಿ ಸಿಗುವುದಿಲ್ಲ. ಸಹಜವಾಗಿ ಮಹಾ ಹರಿವಿನಲ್ಲಿ ಕೆಲವು ಸಿಡಿದ ಹನಿಗಳು ಸಂಸ್ಕೃತಿಗೆ ಎರವಾದಂತೆ, ಸಮಾಜಕ್ಕೆ ವಿರೋಧಿಯಾದಂತೆ ಕಾಣುವುದಿವೆ. ಅವರೇ ಈ ಖೈದಿಗಳು. ಈ ಕಾಲ್ಪನಿಕ ಹೊಳೆಯಲ್ಲಿ ಹುಗಿದು ಕುಳಿತ ಬಂಡೆಗಳು, ಕರಗದುಳಿದ ಕಸ ಬೊಡ್ಡೆಗಳು, ವಿಷ ಕಲ್ಮಶಗಳು, ದುರ್ಬಲಗೊಂಡ ದಂಡೆಗಳು, ಸಮಾಜವೇ ಎಳಸೆಳಸಾಗಿ ಮಾಡಿದ ನೂರೆಂಟು ಚೇಷ್ಟೆಗಳನ್ನೆಲ್ಲಾ ಪಟ್ಟಿ ಮಾಡುವ ಸಮಯ ಇದಲ್ಲ. ಹಾಗೆ ದೂರಾದವರನ್ನು ‘ಶುದ್ಧಾಂತರಂಗ’ದಿಂದ, ಕೆಳದಂಡೆಯಲ್ಲಿ ಬರುವ ಕಿರು ತೊರೆಗಳಂತೆ, ಮತ್ತೆ ಸೇರಿಸಿಕೊಳ್ಳುವ ತುರ್ತನ್ನು ನೆನಪಿಸುವ ಮಹಾ ಕೆಲಸವಾಗಿ ಈ ಜೈಲಿನಿಂದ ಜೈಲಿಗೆ ರಂಗಯಾತ್ರೆ ನಮ್ಮನ್ನು ತಟ್ಟಿದೆ. ಉಳಿದೆಲ್ಲಾ ರಂಗಪ್ರಯೋಗಗಳಲ್ಲಿ ಒಂದೋ ಹವ್ಯಾಸಿ ಇಲ್ಲವೇ ವೃತ್ತಿಪರ ಕಲಾವಿದರು ತಮ್ಮೆಲ್ಲ ಪ್ರತಿಭೆ ತೊಡಗಿಸಿ ಜನಮನ ರಂಜಿಸುವುದೂ ಪರೋಕ್ಷವಾಗಿ ಸಾಮಾಜಿಕ ಪರಿವರ್ತನೆಗೆ ಕಾರಣವಾಗುವುದೂ ತಿಳಿದೇ ಇದೆ. ಆದರಿಲ್ಲಿ ರಂಗಪ್ರಯೋಗ ಸ್ಪಷ್ಟವಾಗಿ ಪರಿವರ್ತನೆಯ ಚಿಕಿತ್ಸೆಯೇ ಆಗಿದೆ. ಪ್ರೇಕ್ಷಕವರ್ಗ ಅರ್ಥಾತ್ ಸಮಾಜ ಅದನ್ನು ಮನಗಂಡು ಒಪ್ಪಿಸಿಕೊಳ್ಳುವ, ಔದಾರ್ಯದ ಕೈಗಳನ್ನು ಚಾಚಿ ಅಪ್ಪಿಕೊಳ್ಳುವ ಬಲುದೊಡ್ಡ ಅವಕಾಶ ತೆರೆದಿದೆ. ಇಂಥ ಒಂದು ಯೋಜನೆಯ ಹೊಳಹು ಹಾಕಿ, ಅವಿರತ ಹನ್ನೆರಡು ವರ್ಷ ಅದರಲ್ಲಿ ಸಕುಟುಂಬ ತೊಡಗಿ, ಮುಂದೆಯೂ ನಡೆಸಲಿರುವ ಹುಲಗಪ್ಪ ಕಟ್ಟೀಮನಿ ಎಂಬ ವ್ಯಕ್ತಿ (ರಂಗಾಯಣದ ಹಿರಿಯ ಕಲಾವಿದ ಎನ್ನುವುದು ಕೇವಲ ಅವರ ವೃತ್ತಿಸೂಚಕ) ಅಕ್ಷರಶಃ ಮುರಿದ ಮನಿ/ನೆಗಳನ್ನು. ಕುಸಿದ ಮನಗಳನ್ನು ಕಟ್ಟುತ್ತಿದ್ದಾರೆ. ಸಾಮಾನ್ಯ ಜೀವಾವಧಿ ಶಿಕ್ಷೆಯ ಅವಧಿಯನ್ನೇ ಇವರ ಕುಟುಂಬ, ಯಾವ ತಪ್ಪೂ ಮಾಡದೆ ಸ್ವಯಂವಿಧಿಸಿಕೊಂಡು ಜೈಲಿನೊಳಗೆ ಕಳೆದಿದ್ದಾರೆ! ಅವರ ‘ಸಂಕಲ್ಪ, ಮೈಸೂರು’ ಒಂದು ಸಾಂಸ್ಥಿಕನಾಮವಲ್ಲ, ಅವರಿಟ್ಟುಕೊಂಡ ಬಲುದೊಡ್ಡ ಲಕ್ಷ್ಯದ ಸುಘೋಷ. 

ಮೈಸೂರು ಕಾರಾಗೃಹ ವಾಸಿಗಳು ಪ್ರಯೋಗಿಸಿದ್ದು ಶೇಕ್ಸ್‌ಪಿಯರನ ಕನ್ನಡ ರೂಪದ ‘ಕಿಂಗ್ ಲಿಯರ್.’ ಹೊಗಳು ಭಟ್ಟಂಗಿತನವೇ ವಾಸ್ತವದ ಪ್ರೀತಿ ಎಂಬ ತಪ್ಪು ತಿಳುವಳಿಕೆಯ ರಾಜನೊಬ್ಬ ಕೊನೆಯಲ್ಲಿ ಪಶ್ಚಾತ್ತಾಪದಲ್ಲಿ ಬೇಯುವುದನ್ನು ಇದು ತೋರಿಸಿತು. ಬೆಂಗಳೂರು ಸೆರೆಮನೆಯವರು ಡಿ.ಆರ್ ನಾಗರಾಜರ ‘ಕತ್ತಲೆ ದಾರಿ ದೂರ’ವನ್ನು ಪ್ರಭಾವಿ ಅಭಿವ್ಯಕ್ತಿಯಲ್ಲಿ ಜನಮನಕ್ಕೆ ಸನಿಹಗೊಳಿಸಿದರು. ಆ ನಾಟಕ ನಾವು ಭ್ರಮಿಸುವ ‘ಸಾಮಾಜಿಕ ಸ್ವಾಸ್ಥ್ಯ’ವನ್ನೇ ಬಲು ದಿಟ್ಟವಾಗಿ ಒರೆಗೆ ಹಚ್ಚಿತ್ತು. ಹಿಂಡಲಗಾದ ಕತ್ತಲ ಕೂಪದಿಂದೆದ್ದವರು ಚಂದ್ರಶೇಖರ  ಕಂಬಾರರ ‘ಶಿವರಾತ್ರಿ’ಯ ಕಾರಿರುಳನ್ನೇ ಆಯ್ದುಕೊಂಡರೂ ‘ಮಹಾಮನೆಯ’ ಮಹೋಜ್ವಲ ಬೆಳಕನ್ನು ಹರಿಸಿದರು. ಧಾರವಾಡದ ಬಂಧೀಖಾನೆಯವರು ಮೂರು ದಿನಗಳ ಗಾಂಭೀರ್ಯದ ಹೊರೆ ಇಳಿಸುವಂತೆ ಚಂದ್ರಶೇಖರ ಪಾಟೀಲರ ‘ಗೋಕರ್ಣದ ಗೌಡಶಾನಿ’ಯನ್ನು ಕರೆ ತಂದಿದ್ದರು! ಒಂದೆಡೆ ಪುರಾಣದಿಂದ ವರ್ತಮಾನದವರೆಗಿನ ಯಾವುದನ್ನೂ ಬಿಡದ ವ್ಯಂಗ್ಯ ನಗೆಚಾಟಿಕೆಯ ಚಮತ್ಕಾರ. ಜೊತೆಜೊತೆಗೆ ‘ತನ್ನ ಮುಂದುವರಿಸುವ’ ಜೀವತುಡಿತದ ಆಶಯವನ್ನು ನಿರ್ಭಿಡೆಯಿಂದ ಸ್ಥಾಪಿಸಿತು. ಇದು ನಾಟಕದ ಹೊರಗಿನ ಅಂದರೆ, ನಾಲ್ಕು ದಿನಗಳ ಉತ್ಸವ ಸಮಾಪನದ ಮಾತುಗಳಿಗೂ ಬಲಕೊಟ್ಟಿತು ಎನ್ನಲೇಬೇಕು.

ಎರಡನೇ ದಿನ ನಾಟಕಕ್ಕೂ ಮುನ್ನ ಪಿ. ಶೇಷಾದ್ರಿಯವರು ಈ ರಂಗಯಾತ್ರೆಯ ಕುರಿತು ನಿರ್ದೇಶಿಸಿದ ಒಂದು ವಾರ್ತಾಚಿತ್ರವನ್ನೂ ಪ್ರದರ್ಶಿಸಿದ್ದರು. ಅದು ಕರ್ನಾಟಕದ ವಿವಿಧ ಕಾರಾಗೃಹಗಳೊಳಗೆ ಕಳೆದ ಹನ್ನೆರಡು ವರ್ಷಗಳಲ್ಲಿ ಈ ರಂಗ ತರಬೇತಿ ನಡೆದು ಬಂದ ದಾರಿಯನ್ನು ಸುಂದರವಾಗಿ, ಸಂಗ್ರಹವಾಗಿ ಸಾರ್ವಜನಿಕರಿಗೆ ಮುಟ್ಟಿಸುವ ದಾಖಲಾತಿ. ‘ಅಪರಾಧಿ’ಗಳಿಂದ ಕಲಾವಿದರನ್ನು ಆಯ್ಕೆ ಮಾಡುವ ಪ್ರಾಥಮಿಕ ಕ್ರಿಯೆಯೂ ಸಣ್ಣದಲ್ಲ. ಮಂಗಳೂರಿನ ಜೈಲ್ ವರಿಷ್ಠ (ಅಧೀಕ್ಷಕ) ಅಂಬೇಕರ್ ಒಮ್ಮೆ ಖಾಸಾ ಮಾತಿನಲ್ಲಿ ಹೇಳಿದರು “ನಾ ನಟ್ನಾಗ್ಬೇಕು ಎಂದು ಹಂಬಲ್ಸಿ ಬರೋರಿಂದ, ಹತ್ತು ಕಲಿಕೆಗಳ್ನ ಮೈಗೂಡುಸ್ಕೊಂಡಿರೋ ಉತ್ಸಾಹಿಗಳಿಂದ ಆರ್ಸೋದೂ ನಾಟ್ಕ ಮಾಡ್ಸೋದು ವಿಶೇಷವಲ್ಲ. ಆದ್ರೆ ಸಮಾಜ್ದಲ್ಲಿ ಏನೋ ಆಗಿದ್ದೋರು, ಇಲ್ಗ್ಬಂದು ಏನೂ ಬೇಡ, ಹೊರಗಿನ ತಮ್ಮ ಸಂಬಂಧಗಳೇನಾಗುತ್ತೋ ಏನೋ ಎಂದು ಕೊರಗಿನಲ್ಲೇ ಇರ್ತಾರೆ. ಅವ್ರೊಳ್ಗೆ ಆರ್ಸೋದೂ ಮತ್ತವರನ್ನೊಲ್ಸ್ಕೊಂಡು ನಾಟ್ಕಾ ಮಾಡ್ಸೋದು... ಛೆ, ನಿಗದಿತ್ ಡೂಟಿ ಬಿಟ್ರೇ ಏನ್ಬೇಕಾದ್ರೂ ಮಾಡೋ ಸ್ವಾತಂತ್ರ್ಯ ಇರುವ ನಾವೇ, ನಾಟ್ಕನೋ ಇನ್ನೊಂದೋ ಎಂದ್ರೆ ಮಾರು ದೂರ ಹಾರ್ತೀವಿ. ಇನ್ನಿವರನ್ನ ಹಾಕ್ಕೊಂಡು...”

ಚಿತ್ರ ಬರೆಸಿ, ವಿಗ್ರಹ ಮಾಡಿಸಿ, ಹಾಡು ಕಲಿಸಿ, ಕುಣಿಸಿ ಹಂತ ಹಂತದಲ್ಲಿ ಅನ್ಯ ಮನಸ್ಕತೆಯನ್ನು ತೊಡೆದು ನಾಟಕಕ್ಕೆ ಒಲಿಸಬೇಕು. ಇವನು ಬೆಂಗಳೂರು ಕಳ್ಳ, ಮತ್ತೊಬ್ಬ ಬಳ್ಳಾರಿ ಕೊಲೆಗಾರ, ಮಗುದೊಬ್ಬ ತುಮಕೂರು ವಂಚಕ, ಇತ್ಯಾದಿ ಒಂದು ಮುಖ. ಇನ್ನು ಮೂಲ ಸಾಮಾಜಿಕ ಸ್ಥಾನಮಾನ, ಜಾತಿ, ಸಾಂಸ್ಕೃತಿಕ ತರತಮಗಳು, ಎಲ್ಲಕ್ಕೂ ದೊಡ್ಡದಾಗಿ ಬಂಧೀಖಾನೆಗಳಲ್ಲಿ ಪರಸ್ಪರ ಮುಖಾವಲೋಕನವೇ ಇರದ ಗಂಡು ಹೆಣ್ಣು ಇನ್ನೊಂದೇ ಮುಖ. ಇವರ ನಡುವೆ ನಾವೆಲ್ಲ ಅಪರಾಧದ ಕೊಳೆ ಕಳೆಯುವ ಏಕ ಉದ್ದೇಶಕ್ಕೆ ಇಲ್ಲಿರುವ ಒಂದು ಸಮುದಾಯ ಎನ್ನುವ ಸತ್ಯ ಅರಳಿಸಬೇಕು. ಕಟ್ಟೀಮನಿ ಹೇಳಿದ ಬೀಸು ಕಂಸಾಳೆ ರೂಪಕವನ್ನೇ ನೋಡಿ - ಒಂದು ಬೀಸು, ಒಂದು ನಡೆ ತಪ್ಪಿದರೆ ಒಂದೋ ತನಗೇ ಪೆಟ್ಟು, ಇಲ್ಲಾ ಇನ್ಯಾರಿಗೋ ಜಖಂ ಖಾತ್ರಿ. ಆ ಭಾವ ಮೂಡಿ ನಾಟಕ ರೂಪದಲ್ಲಿ ಒಂದು ಭವ್ಯ ಆದರ್ಶವನ್ನು ಅನಾವರಣಗೊಳಿಸುವ ಶ್ರದ್ಧಾವಂತ, ಜವಾಬ್ದಾರಿಯುತ ಕಲಾವಿದರಾಗಿ ಪರಿವರ್ತನೆಗೊಳ್ಳುವುದನ್ನು ಚಿತ್ರದ ಕಾಲಮಿತಿಯಲ್ಲಿ ಶೇಷಾದ್ರಿ ಚೆನ್ನಾಗಿಯೇ ನಿರೂಪಿಸಿದ್ದಾರೆ.

ಉತ್ಸವ ಎಂದ ಮೇಲೆ ಉದ್ಘಾಟನೆ, ಸಮಾರೋಪ ಇರುವಂತದ್ದೇ. ಅದೂ ಕಾರಾಗೃಹವಾಸಿಗಳ ಕಲಾಪ್ರದರ್ಶನದಂಥ ಅಸಾಧಾರಣ ಪ್ರಸ್ತುತಿ ಎಂದಾಗ ಕೇಳಬೇಕೇ. ಉದ್ಘಾಟನೆಗೇನೋ ಹೆಚ್ಚುವರಿ ಎರಡು ಗಂಟೆಗಳನ್ನೇ ಇಟ್ಟುಕೊಂಡಿದ್ದರು. (ಜುಲೈ ಎರಡು) ಸಂಜೆ ನಾಲ್ಕರ ಸುಮಾರಿಗೆ ತೊಡಗಿದ ಸಭಾ ಕಾರ್ಯಕ್ರಮ ಆರೂವರೆಯ ಪ್ರದರ್ಶನಾವಧಿಯ ಮೇಲೂ ತುಸು ಚಾಚಿಕೊಂಡಿತ್ತು. ಅದೃಷ್ಟವಶಾತ್ ನಮ್ಮ ಬಳಗ ಆರು ಗಂಟೆಯ ಸುಮಾರಿಗೇ ಪುರಭವನಕ್ಕೆ ಹೋದದ್ದರಿಂದ ಪ್ರದರ್ಶನಕ್ಕೆ ವಿಶೇಷ ಹೊರೆಯಾಗಲಿಲ್ಲ. ಆದರೆ ಸಮಾರೋಪ ಹೀಗಾಗಲಿಲ್ಲ. 

ಹಿಂದಿನ ದಿನವೇ ಸ್ಪಷ್ಟವಾಗಿ ಆರಕ್ಕೆ ಸುರುಮಾಡಿ, ಅರ್ಧ ಗಂಟೆಯಲ್ಲಿ ಪ್ರದರ್ಶನಕ್ಕೆ ರಂಗವನ್ನು ತೆರವು ಮಾಡುವ ಮಾತಾಡಿದ್ದರು. ಆದರೆ ಸಭೆ ಆರಂಭಗೊಳ್ಳುವಾಗಲೇ ಅರ್ಧ ಗಂಟೆ ತಡ. ಮತ್ತೆ ಏಳೂ ಮುಕ್ಕಾಲರವರೆಗೂ ಲಂಬಿಸಿದ್ದಂತೂ ತಪ್ಪೇ ತಪ್ಪು. ಇದರ ಪರಿಣಾಮಕ್ಕೆ ನನ್ನೊಬ್ಬನ ಅನುಭವಕ್ಕೆ ಬಂದ ಉದಾಹರಣೆ ನೋಡಿ. ನಮ್ಮ ಗೆಳೆಯರೊಬ್ಬರು ರಾತ್ರಿ ಪಾಳಿ ಕೆಲಸಕ್ಕೆ, ಪಣಂಬೂರಿನ ದೂರಕ್ಕೆ ಒಂಬತ್ತು ಗಂಟೆಯ ಸುಮಾರಿಗೆ ತಲಪಲೇ ಬೇಕಿತ್ತು. ಇನ್ನೊಬ್ಬರು ಮನೆಗೆ ಧಾವಿಸಿ, ಊಟ ಮುಗಿಸಿ, ಗಂಟು ಹಿಡಿದು, ಹತ್ತು ಗಂಟೆಯ ಮೈಸೂರು ಬಸ್ಸು ಹಿಡಿಯಲೇ ಬೇಕಿತ್ತು. ಇಬ್ಬರೂ ಮತ್ತವರಿಗೆ ಸಂಬಂಧಿಸಿದವರೂ ನಾಟಕ ಕಳೆಗಟ್ಟುತ್ತಿರುವಂತೆ ಬಿಟ್ಟೋಡಬೇಕಾಯ್ತು. ಈ ಉತ್ಸವ ಬರಿಯ ನಾಟಕದ್ದಲ್ಲ, ಒಂದು ದೊಡ್ಡ ಭಾವಲಹರಿ ಎಂದು ಎಲ್ಲರಿಗೂ ತಿಳಿದಿತ್ತು. ಅದಕ್ಕೂ ಹೆಚ್ಚಿಗೆ ಸಂಘಟಕರಿಗೆ ತಿಳಿದಿರಲೇಬೇಕು. ಕಲಾವಿದರಾಗಿ ಕಾಣಿಸಿಕೊಂಡ ಒಬ್ಬೊಬ್ಬರದೂ ಒಂದೊಂದು ಕಥೆ, ಹೇಳಿ ಮುಗಿಯದ ವ್ಯಥೆ. ನಮಗೆಲ್ಲರಿಗೂ ಕಿವಿಯಾಗುವ, ಹೃದಯವಾಗುವ ತವಕವೂ ಧಾರಾಳ ಇತ್ತು. (ಹಾಗಾಗಿಯೇ ನೋಡಿ ಸಮಯದ ಶಿಸ್ತು ತಪ್ಪಿದಾಗಲೂ ಸಭೆಯಿಂದ ಒಂದು ಅಪಸ್ವರ ಬರಲಿಲ್ಲ) ಆದರೆ ‘ಬಂದೋಬಸ್ತಿ’ಗೆ ನೂರೆಂಟು ಜನ ಮತ್ತು ಕ್ರಮ ತೊಡಗಿಸಿಕೊಂಡಂತೇ ಕಲಾವಿದರ ‘ಆತ್ಮ ನಿವೇದನೆಗೆ’ ಒಂದು ಶಿಸ್ತನ್ನು ಹೇರಿಕೊಳ್ಳಲೇಬೇಕಿತ್ತು. ಖೈದಿ-ಕಲಾವಿದರ ನುಡಿಗಳಷ್ಟೂ ಸಹಜ ಸ್ಫುರಣೆಗಳೆಂದೇ ನಾನು ನಂಬುತ್ತೇನೆ. ಆದರೆ ಅವರು ದೊಡ್ಡ ವಲಯದ ಮತ್ತು ಸರಕಾರದ ಧೋರಣಾತ್ಮಕ ವಿಚಾರಗಳ ಮಿತಿಯನ್ನು ಮೀರಿದ್ದರೆ? ಉದಾಹರಣೆಗೆ ಜೈಲಿನ ಒಳಗಿನ ಆಡಳಿತದ ಬಗ್ಗೆ, ವೈಯಕ್ತಿಕ ಹೆಸರುಗಳನ್ನು ಎತ್ತಿ ಆಡಿದ್ದರೂ ನಾವೇನೋ ಅದೇ ಸಹೃದಯತೆಯಿಂದ ಕೇಳುತ್ತಿದ್ದೆವು. ಆದರೆ ಸಂಘಟನೆ ಒಪ್ಪಿಕೊಳ್ಳುತಿತ್ತೇ? ಅಂಥವು ನುಸುಳದಂತೆ ಖಡಕ್ ಪೂರ್ವಸೂಚನೆಗಳು ಇದ್ದಿರಲಾರದೇ? ಅವೇನಿದ್ದರೂ ಇಲ್ಲದಿದ್ದರೂ ಕನಿಷ್ಠ ಸಮಯದ ಶಿಸ್ತನ್ನು ಉಳಿಸಿಕೊಳ್ಳಲೇಬೇಕಿತ್ತು.
ನಾಟಕೋತ್ಸವದ ಸಮಯಪಾಲನೆಯ ಅಶಿಸ್ತು ಕೇವಲ ಒಂದು ಪ್ರಾದೇಶಿಕ, ಒಂದು ಸನ್ನಿವೇಶದ ಕೊರತೆಯಿರಬಹುದು ಮತ್ತು ಮುಂದಕ್ಕೆ ಯಾರೂ ಸುಲಭದಲ್ಲಿ ತಿದ್ದಿಕೊಳ್ಳುವಂತದ್ದು. ಆದರೆ ಅಲ್ಲಿ ಎಲ್ಲರೂ ರಂಗಪ್ರದರ್ಶನದ ಹೊರಗೆ ಒಂದು ಧ್ವನಿಯಲ್ಲಿ ಎತ್ತಿತೋರಿದ ಮಾನವೀಯ ಸಮಸ್ಯೆ ಒಂದಕ್ಕಾಗಿರುವ ಕೊರತೆ ತುಂಬ ದೊಡ್ಡ ಆಯಾಮದ್ದು, ಅದನ್ನು ಸರಿಪಡಿಸಲು ವಿಚಾರವಂತ ಸಮಾಜ ಧ್ವನಿ ಎತ್ತಲೇ ಬೇಕಾದದ್ದು ಮತ್ತು ಎಲ್ಲಕ್ಕೂ ಮುಖ್ಯವಾಗಿ ಜವಾಬ್ದಾರಿಯುತ ಸರಕಾರ ತುರ್ತಾಗಿ ಕ್ರಿಯಾಶೀಲವಾಗಬೇಕಾದದ್ದು. ಅದಕ್ಕೆ ಪೂರಕವಾಗಿ ನಾನು ಸಂಬಂಧಿಸಿದ ಇಬ್ಬರಿಗೆ ಬರೆದ ಪತ್ರದ ಮುಖ್ಯಾಂಶವನ್ನು ಕೆಳಗೆ ಕೊಡುತ್ತಿದ್ದೇನೆ. ಇದನ್ನು ನೀವೂ ಪೂರ್ಣ ಮನಸ್ಸಿನಿಂದ ಅನುಮೋದಿಸಿ
 • ಶ್ರೀ ಗೋಪಾಲ ಹೊಸೂರು, ಮುಖ್ಯಸ್ಥರು, ರಾಜ್ಯ ಗುಪ್ತ ವಾರ್ತೆ, ಕರ್ನಾಟಕ ಸರಕಾರ, ಬೆಂಗಳೂರು ೫೬೦೦೦೧ ಮತ್ತು
 • ಶ್ರೀ ಗಗನದೀಪ್, ಹೆಚ್ಚುವರಿ ಪೊಲಿಸ್ ಮಹಾ ನಿರ್ದೇಶಕರು, ಕರ್ನಾಟಕ ಸರಕಾರ, ಬೆಂಗಳೂರು ೫೬೦೦೦೧ ಪತ್ರ ಬರೆಯಬೇಕಾಗಿ ಕೇಳಿಕೊಳ್ಳುತ್ತೇನೆ.
ನಿಮ್ಮ ಪತ್ರಗಳು ಇನ್ನಷ್ಟು ಇಂಥ ಸದ್ವಿಚಾರಗಳಿಗೆ ಪ್ರೇರಣೆ ಕೊಡುವಂತಾಗಲು, ಅವುಗಳ ಯಥಾ ಪ್ರತಿಯನ್ನು ಇಲ್ಲೇ ಕೆಳಗಿನ ಪ್ರತಿಕ್ರಿಯಾ ಅಂಕಣಕ್ಕೂ ತುಂಬುವಿರಾಗಿ ನಂಬಿದ್ದೇನೆ.

೩. ಸ್ವಾತಂತ್ರ್ಯೋತ್ಸವಕ್ಕೆ ಅರ್ಥ ಕೊಡಿ

ಮಾನ್ಯರೇ,

ಸಮಾಪನದ ಔಪಚಾರಿಕತೆಯ ಎಡೆಯಲ್ಲಿ ಕೆಲವು (ಖೈದಿತನಕ್ಕೆ ಹೊರತಾಗಿ ಮೆರೆದವರಾದ್ದರಿಂದ) ಕಲಾವಿದರೂ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡರು. ನಾಟಕ ಎಂದರೆ ಬರಿಯ ಉರುಹಚ್ಚುವುದಲ್ಲ, ನಿತ್ಯಕ್ಕೆ ಹೊರತಾದ ಬಣ್ಣ ಬಟ್ಟೆ ಎಳೆದುಕೊಳ್ಳುವುದಲ್ಲ. ಇದು ನೋಡಿದವರಿಗೆಷ್ಟೋ ಆಡಿದವರಿಗೂ ಅಷ್ಟೇ - ರಂಜನೆ, ಶಿಕ್ಷಣ, ಪರಿವರ್ತನೆ. ಈ ಮಹಾಮೌಲ್ಯಗಳಿಗೆ ಅಭಿವ್ಯಕ್ತಿ ಕೊಟ್ಟವರು ನಮ್ಮ ಮನಸ್ಸುಗಳನ್ನು ಅನಿವಾರ್ಯವಾಗಿ ಮತ್ತು ಅಷ್ಟೇ ಗಾಢವಾಗಿ ಆವರಿಸಿಕೊಂಡರು. ಈ ಕಲಾವಿದರು (ಒಬ್ಬಿಬ್ಬರು ಅತಿಥಿ ಕಲಾವಿದರನ್ನು ಹೊರತುಪಡಿಸಿ) ಕೊಲೆ, ದರೋಡೆ, ವಂಚನೆ ಎಂದಿತ್ಯಾದಿ ಹೆಸರಿಸಲಾಗುವ ಏನೇ ಸಮಾಜ ವಿರೋಧೀ ಕೃತ್ಯ ಮಾಡಿದ್ದಿದ್ದರೂ (ಮಾಡದೇ ಅನ್ಯ ಸಾಂದರ್ಭಿಕ ಆಕಸ್ಮಿಕಗಳ ಬಲಿ ಎಂದೇ ಇಟ್ಟುಕೊಂಡರೂ) ಹೊಸ ಪಾತ್ರದ, ಹೊಸ ಚಿಂತನೆಯ ಪಥ ಹಿಡಿದದ್ದು ಎದ್ದು ಕಾಣುತ್ತಿತ್ತು. ನಾಲ್ಕೂ ದಿನಗಳಲ್ಲಿ ಪ್ರದರ್ಶನ ಇಲ್ಲದ ತಂಡಗಳ ಸದಸ್ಯರು ಸಭಾಸದರೊಡನೆ ಯಾವುದೇ ಕಿಸುರಿಲ್ಲದೆ ಒಡನಾಡಿದ್ದರಲ್ಲಿ ಅನುಭವಕ್ಕೂ ಬರುತ್ತಿತ್ತು. ‘ಅನಾರೋಗ್ಯ’ ಕಳಚಿಕೊಂಡದ್ದಕ್ಕೆ ಎಷ್ಟೂ ನಿದರ್ಶನಗಳು (ಸಾಕ್ಷಿ ಎನ್ನುವುದು ತೀರಾ ದುರ್ಬಲ ಮತ್ತು ‘ನಿಂದಿತ’ ಪದ) ಸಿಕ್ಕುತ್ತಿದ್ದವು. ಅವರ ಮಾತು ಮತ್ತು ಎಲ್ಲಾ ಕ್ರಿಯೆಗಳಲ್ಲೂ ಮತ್ತೆ ಮತ್ತೆ ಹಣಿಕುತ್ತಿದ್ದ ಒಂದು ಬಲವತ್ತರವಾದ ಕಾತರ (ಕೊರಗೂ ಹೌದು!), “ನಾನೆಂದು ಸೇರಿಯೇನು, ಸಮಾಜದ ಮುಖ್ಯವಾಹಿನಿಗೆ.” 

ಸಮಾಜ ಮಾಡಿಕೊಂಡ ಕಾನೂನಿನನ್ವಯ ಒಮ್ಮೆಗೆ ಅವರೆಲ್ಲ ಶಿಕ್ಷಾರ್ಹ ಅಪರಾಧಿಗಳೇ ಎಂದು ಒಪ್ಪಿಕೊಳ್ಳೋಣ. ಆದರೆ ಪ್ರಕೃತಿ ಸದಾ ಚಲನಶೀಲ. ಯಾರು ಇಷ್ಟಪಟ್ಟರೂ ಪಡದೇ ಇದ್ದರೂ ಪ್ರತಿ ಕ್ಷಣವೂ ಕಳೆದುಹೋದ ಕ್ಷಣದ ಉತ್ತಮರೂಪಕ್ಕೆ ತುಡಿತವಿರುತ್ತದೆ ಎನ್ನುವುದನ್ನು ಮರೆಯಬಾರದು. ಅಂದರೆ ಇವರೆಲ್ಲ ಶಿಕ್ಷೆಗೊಳಗಾದ ಯಾವುದೋ ಘಟನೆಯ ಮರುಕ್ಷಣದಿಂದ, ವಿಚಾರಣೆಯ ಉದ್ದಕ್ಕೆ, ಇದುವರೆಗೆ ಅನುಭವಿಸಿದ ಶಿಕ್ಷಾವಧಿಯಲ್ಲಿ, ಸಂಪರ್ಕಕ್ಕೆ ಬಂದ ಹೊರಗಿನವರಿಂದ, ಎಲ್ಲಕ್ಕೂ ಮಿಗಿಲಾಗಿ ತನ್ನದೇ ವಿಚಾರಶಕ್ತಿಯಿಂದ ಪರಿವರ್ತನೆಗೆ ಒಳಗಾಗುತ್ತಿದ್ದವರೇ ಸರಿ. ಆ ಎಲ್ಲ ಅಸ್ಪಷ್ಟಗಳಿಗೆ ಖಚಿತ ಮಾತು ರೂಪಗಳನ್ನು ಒದಗಿಸಿದ ಮತ್ತು ತಾವೇ ಅದಾಗಿ ಕಂಡುಕೊಳ್ಳುವ ಅವಕಾಶ ಕೊಟ್ಟ ಈ ನಾಟಕ ಪ್ರಯೋಗಗಳಂತೂ ನಿಸ್ಸಂದೇಹವಾಗಿ ಅವರನ್ನು ಹೊಸ ಮನುಷ್ಯರನ್ನಾಗಿಸಿವೆ. 

ಶಿಕ್ಷೆ ಎಂದಿದ್ದರೂ ಅನುಭವಿಸುವವರಿಗೆ ನೋವೇ ಸರಿ. ಆದರೆ ವಿಧಿಸುವವರ ಸ್ಪಷ್ಟ ಲಕ್ಷ್ಯ - ಪರಿವರ್ತನೆ. ಇದಕ್ಕಾಗಿ ‘ಅಪರಾಧ’ದ ಭಾರ ನಿರ್ಧರಿಸಿ, ಸಮಯ ಮತ್ತು ವಿಧಾನಗಳನ್ನು ಕಾನೂನು ರೂಪಿಸಿದೆ. ಅದರೊಳಗೂ ಉದಾರವಾಗಿ, ನಿರೀಕ್ಷೆ ಮೀರಿದ ‘ಸಾಧನೆ’ಯನ್ನು ಧಾರಾಳ ಪುರಸ್ಕರಿಸುವ ಅವಕಾಶಗಳನ್ನು ತೆರೆದು ಇಟ್ಟಿದೆ. ಅವುಗಳಲ್ಲಿ ಬಹುಮುಖ್ಯವಾದವು ಅವಧಿ ಮುನ್ನದ ‘ಸನ್ನಡತೆ’ಯ ತತ್ಕಾಲೀನ ಬಿಡುಗಡೆ ಮತ್ತು ಖಾಯಂ ಬಿಡುಗಡೆಗಳು. ಆದರೆ ಕಳೆದ ಆರು ವರ್ಷಗಳಿಂದ ಕೇವಲ ಕರ್ನಾಟಕದ ಖೈದಿಗಳಿಗೆ ಇದು ಸಿಕ್ಕಿಯೇ ಇಲ್ಲವೆಂದು ಕೇಳಿ ತೀರಾ ವಿಷಾದವಾಯ್ತು. ಕಾರಣಗಳ ಸಿಕ್ಕುಬಿಡಿಸುವ ಹೊತ್ತು ಇದಲ್ಲ. ‘ಕಾನೂನು ಕತ್ತೆ’ ಎನ್ನುವ ಮಾತಿದೆ. ಅದರ ನೆಪಹಿಡಿದು ಹಿಂಬಾಲಿಸ ಹೊರಟವರಿಗೆ ಒದೆಗಳು ತಿನ್ನುವ ಅವಕಾಶ ಹೆಚ್ಚು. ಆದರೆ ನಿಷ್ಪಾಕ್ಷಿಕ ನಿದರ್ಶನಗಳು ಸ್ಪಷ್ಟ ಇರುವಲ್ಲಿ ಸನ್ನಡತೆಯ ವ್ಯಕ್ತಿಗಳಿಗೆ ಮೊದಲು ಬಿಡುಗಡೆ ಒದಗಿಸಲೇ ಬೇಕು; ಕಾನೂನಿನ ಆಶಯದ ಹಗ್ಗ ಜಗ್ಗಿದರೆ ‘ಕತ್ತೆ’ ಹಿಂಬಾಲಿಸುವುದು ಖಂಡಿತ. ಈ ನಾಟಕ ಪ್ರಯೋಗಗಳಲ್ಲಿ ‘ಲೆಕ್ಕದ ಹೊರಗಿನ’ (ಹೌದು, ಪ್ರದರ್ಶನದ ಹಿಂದಿನ ದಿನ ರಾತ್ರಿ ಹತ್ತೂವರೆಯವರೆಗೂ ಇವರು ಸ್ವಯಿಚ್ಛೆಯಿಂದ ಅಭ್ಯಾಸ ನಡೆಸಿದ್ದು ಸಾಮಾನ್ಯವೇ?) ದೈಹಿಕ ದಂಡನೆ ಇರಬಹುದು. ಆದರೆ ಗಳಿಸಿದ ಮಾನಸಿಕ ಬಲದ, ವಿಶಾಲ ಅರ್ಥದಲ್ಲಿ ಸಮಾಜಹಿತದ ಪಾಠ ವ್ಯರ್ಥವಾಗುವುದು ಸಾಧ್ಯವೇ ಇಲ್ಲ. ನಾಟಕ ನೋಡಿದ ನಾವೆಲ್ಲ, ನೋಡಲು ಸಮಯಾನುಕೂಲವಾಗದೆಯೂ ನಮ್ಮಿಂದ ಕೇಳಿದಷ್ಟಕ್ಕೆ, ಪತ್ರಿಕೆಗಳಲ್ಲಿ ಸೂಕ್ಷ್ಮವಾಗಿಯೇ ಆದರೂ ಓದಿದಷ್ಟಕ್ಕೆ ಕರಗಿದ ವಿಚಾರವಂತ ಸಾರ್ವಜನಿಕರೂ ಒಕ್ಕೊರಲಿನಿಂದ ಒತ್ತಾಯಿಸುತ್ತೇವೆ - “ಖೈದಿಗಳಲ್ಲಿ ಯೋಗ್ಯರನ್ನು ಪುರಸ್ಕರಿಸುವ ಕಾರ್ಯದಲ್ಲಿ ಇನ್ನೂ ವಿಳಂಬ ಮಾಡಬಾರದು. ಸನ್ನಡತೆ ತೋರಿದವರನ್ನು ಆಡಳಿತಾತ್ಮಕ ಬಂಧಗಳಲ್ಲಿ, ಪಕ್ಷರಾಜಕೀಯದ ಕಟ್ಟಿನಲ್ಲಿ, ಸಾಕಷ್ಟು ನವೆಯಿಸಿದ್ದಾಗಿದೆ; ಇನ್ನಾದರೂ ಬಿಡುಗಡೆ ಮಾಡಿ. ಬರುತ್ತಿರುವ ಆಗಸ್ಟ್ ಹದಿನೈದರ ಪಾವಿತ್ರ್ಯಕ್ಕೆ ಅರ್ಥ ತುಂಬುವಂತೆ, ಅರ್ಹ ಸನ್ನಡತೆಯ ಖೈದಿಗಳೆಲ್ಲರಿಗೂ ಸ್ವಾತಂತ್ರ್ಯದ ನಿಜಮೌಲ್ಯ ಅನುಭವವೇ ಆಗುವಂತೆ ಸ್ವಾತಂತ್ರ್ಯ ಕೊಡಿ.

ನಡುವೆ ಸುಳಿವಾತ್ಮ

ಜನಮನದಾಟ, ಹೆಗ್ಗೋಡು ಮಂಗಳೂರಿನಲ್ಲಿ ಪ್ರಸ್ತುತಪಡಿಸಿದ ನಾಟಕ - ನಡುವೆ ಸುಳಿವಾತ್ಮನ ಬದುಕು ಬಯಲು, (೮-೭-೧೨) ಪರಿಪಕ್ವ ಪ್ರದರ್ಶನ ಎನ್ನುವುದರಲ್ಲಿ ಎರಡು ಮಾತಿಲ್ಲ. ಎ. ರೇವತಿಯವರ ಆತ್ಮಕಥೆ ಅಂದರೆ, ಮಂಗಳಮುಖಿಯ (ಹಿಜಡಾ) ಜೀವನ ಚಿತ್ರವೇ ಇದಾದ್ದರಿಂದ ಸಹಜವಾಗಿ ಒದಗಿದ ನಾಟಕೀಯ ಅಂಶಗಳನ್ನು, ಸಾಮಾಜಿಕ ಕಳಕಳಿ ಮತ್ತು ಸ್ಪಷ್ಟ ಸಂದೇಶಗಳನ್ನು ನಿರ್ದೇಶಕ ಗಣೇಶರು ತುಂಬ ಸಮರ್ಥವಾಗಿ, ಅಭಿನಂದನೀಯವಾಗಿ ಬಳಸಿಕೊಂಡಿದ್ದಾರೆ. ನೀನಾಸಂ ಮುದ್ರೆಗೆ ಯಾವ ಕೊರತೆಯೂ ಬಾರದಂತೆ ಕಲಾವಿದರು ಕಟ್ಟಿಕೊಟ್ಟಿದ್ದಾರೆ. ಆದರೆ ನಾನಿಲ್ಲಿ ಈ ಪ್ರದರ್ಶನದ ನೆಪದಲ್ಲಿ ಈಚೆಗೆ ಹೆಚ್ಚಿನ ಕಡೆಗಳಲ್ಲಿ ನಡೆಯುವ ಕಲಾಪ್ರಸ್ತುತಿ ಮತ್ತು ಪ್ರಾದೇಶಿಕ ಸಂಘಟನೆಯ ನಡುವೆ ಸುಳಿವಾತ್ಮನ (ನಿರ್ವಾಹಕ? ಯಜಮಾನ?) ಕುರಿತಾಗಿ ಅಸಹನೀಯವಾದ ನಾಲ್ಕು ಮಾತುಗಳನ್ನು ಬರೆಯಲೇಬೇಕಾಗಿದೆ.

ಟಿಕೆಟ್ ಪ್ರದರ್ಶನದ ಒಂದು ನಾಟಕದ ವಸ್ತುವನ್ನು - ಮಂಗಳಮುಖಿಯರ ಸಮಸ್ಯೆ, ಪೂರ್ವ ಸೂಚನೆಯಿಲ್ಲದೆ ಕೊನೆಯಲ್ಲಿ ವಿಚಾರಸಂಕಿರಣ ಮಾಡಲು ನೋಡಿದ್ದು ಎರಡೂ ಪ್ರಕಾರಗಳಿಗೆ (ನಾಟಕ ಮತ್ತು ಸಾಮಾಜಿಕ ಸಮಸ್ಯೆ) ಮಾಡಿದ ಅವಹೇಳನ. ಸಂಘಟಕರು ನಾಟಕದ ವಸ್ತು ಮಂಗಳಮುಖಿಯರ ಜೀವನಕ್ಕೆ ಸಂಬಂಧಪಟ್ಟದ್ದೆಂದು ಮೊದಲೇ ತಿಳಿದ ಮುನ್ನೆಲೆಯಲ್ಲಿ ಮಂಗಳೂರಿನ ಆ ಸಮುದಾಯಕ್ಕೆ ವಿಶೇಷ ಆಹ್ವಾನ ಕೊಟ್ಟದ್ದನ್ನು, ಫೂರ್ವಭಾವಿಯಾಗಿ ಅವರಿಂದ ಎರಡು ಮಾತಾಡಿಸಿದ್ದನ್ನು ಮಾನವೀಯ ನೆಲೆಯಲ್ಲಿ ಯಾರೂ ಆಕ್ಷೇಪಿಸಲಾರರು. ಸಭೆಯಲ್ಲಿ ಸುಮಾರು ಹತ್ತು ಮಂದಿಯಷ್ಟಿದ್ದ ಅವರು ಪ್ರದರ್ಶನದುದ್ದಕ್ಕೆ ಕಲಾ ಸಂವೇದನೆಯನ್ನು ಮೀರಿ ರಂಗಕ್ರಿಯೆಗಳಿಗೆ ಉತ್ತೇಜಿತರಾಗುತ್ತಿದ್ದದ್ದೂ (ಮಾತು ಮಾತಿಗೆ ಚಪ್ಪಾಳೆ, ಸಂದರ್ಭವಲ್ಲದಲ್ಲೂ ಅನುಮೋದನೆಯ ಉದ್ಗಾರ ಇತ್ಯಾದಿ) ಅರ್ಥವಾಗುತ್ತದೆ. ಅವರು ನಾಟಕಗಳಿಗೆ ತೆರೆದುಕೊಂಡದ್ದೇ ಕಡಿಮೆಯಿರಬಹುದು. ಅಲ್ಲದಿದ್ದರೂ ರಂಗದ ಮೇಲೆ ತಮ್ಮ ದುಃಖಗಳನ್ನೇ ಗುರುತಿಸಿಕೊಂಡು ಭಾವುಕರಾದದ್ದೂ ಇರಬಹುದು, ತಪ್ಪಲ್ಲ. ಆದರೆ ಸ್ಥಳೀಯವಾಗಿ ಅದನ್ನು ಪ್ರಸ್ತುತಪಡಿಸಿದ ಒಂದೇ ಯೋಗ್ಯತೆಯಲ್ಲಿ (ಸಮಾಜ ಸುಧಾರಕತನ ಆರೋಪಿಸಿಕೊಂಡಂತೆ), ನಾಟಕವನ್ನು ಬದಿಗೊತ್ತಿ ವಸ್ತುವನ್ನು ಚರ್ಚೆಗೆ ಎತ್ತಿಕೊಂಡದ್ದು - ಕಾಲಹರಣ ಮತ್ತು ಶುದ್ಧ ತಪ್ಪು. ವಿಚಾರವಂತ ಸಂಘಟನೆಯ ನೆಲೆಯಲ್ಲಿ ಯಾವುದೇ ನಾಟಕದ (ಅಥವ ಇನ್ಯಾವುದೇ) ವಸ್ತುವನ್ನು ಚರ್ಚೆಗೆ ಎತ್ತಿಕೊಳ್ಳಬೇಕಾದರೆ ಪೂರ್ವ ಸಿದ್ಧತೆ ಬೇಕೇಬೇಕು. ಮತ್ತೆ ಅಧ್ಯಯನವಿಲ್ಲದ ಉತ್ಸಾಹ, ಬದ್ಧತೆಯಿಲ್ಲದ ಆವೇಶ ಎಲ್ಲಿಗೂ ಒಯ್ಯುವುದಿಲ್ಲ ಎಂಬ ತಿಳುವಳಿಕೆ ಬೇಕು. ಇಲ್ಲವಾದರೆ ಸರಕಾರವೇ (ಯಾರ್ಯಾರನ್ನೋ ತೃಪ್ತಿಪಡಿಸಲು ಮಾತಿಗೊಂದು ಅಕಾಡೆಮಿ, ಹೇಳಿಕೆಗೊಂದು ಆಯೋಗ ಹೊರಡಿಸಿದಂತೇ) ವಿವೇಚನೆಯಿಲ್ಲದೆ ಮಂಗಳ ಮುಖಿಯರಿಗಾಗಿ ಹೊರಡಿಸಿದ ಅನುದಾನ, ಸವಲತ್ತುಗಳ ಹಾಗೆ ವ್ಯರ್ಥವಾಗುವುದರಲ್ಲಿ ಸಂದೇಹವೇ ಇಲ್ಲ.

ಮಂಗಳೂರು ಪುರಭವನದಲ್ಲೇ ಮೂರು ದಿನಗಳ ಹಿಂದೆ ಸಂಪನ್ನಗೊಂಡ ಕಾರಾಗೃಹವಾಸಿಗಳ ನಾಟಕೋತ್ಸವದ ನೆನಪು ಹಸಿರಾಗುವುದರಿಂದ ಅದರ ಕೆಲವು ಉದಾಹರಣೆಗಳನ್ನೂ ಇಲ್ಲಿ  ಗಮನಿಸಬಹುದು. ‘ಕಿಂಗ್ ಲಿಯರ್’ ನೋಡಿದ್ದೇ ಅಂದು ತಂತಮ್ಮ ತಂದೆತಾಯಿಯರ, ಇಷ್ಟಮಿತ್ರರ ಕುರಿತ ಪ್ರೀತಿಯ ಪುನರ್ಮೌಲ್ಯೀಕರಣ ನಡೆಸದ ಮನಸ್ಸುಗಳಿರಬಹುದೇ. ‘ಕತ್ತಲ ದಾರಿ ದೂರ’ ನಾಟಕ ಮುಗಿದು ಸಭಾಭವನ ಬಿಡುವ ಪ್ರೇಕ್ಷಕರಲ್ಲಿ ‘ಹುಚ್ಚ’ರ ಬಗೆಗಿನ ಅನುಕಂಪದ ಕೊಡ ತುಂಬಿ ಚೆಲ್ಲುತ್ತಿತ್ತು. ಜಾತಿ ರಾಜಕಾರಣ ಕರ್ನಾಟಕವನ್ನು ಹಿಂದೆಂದೂ ಕಾಣದ ಕೊಚ್ಚೆಯಲ್ಲಿ ಮುಳುಗಿಸಿರುವ ಕ್ಷಣಗಳಲ್ಲೂ ‘ಶಿವರಾತ್ರಿ’ಯ ಬಸವಣ್ಣನ ನಡೆನುಡಿಗಳು (ವರ್ತಮಾನದ ಕೊಳಕು ಕನ್ನಡಿಯಲ್ಲಿ ನೋಡಿದರೆ ಲಿಂಗಾಯಿತ ಧರ್ಮದ ಪ್ರವರ್ತಕ) ನಮಗೆ ಕೊಟ್ಟ ಸಾಂತ್ವನ, ಸಾಮೂಹಿಕ ಮತಾಂತರವನ್ನೇ ಮಾಡಿತ್ತು ಎಂದರೆ ಅತಿಶಯೋಕ್ತಿಯಾಗದು! ಆದರೆ ಮರೆಯಬೇಡಿ - ಸಾರ್ವಜನಿಕ ನೆನಪು ಅಲ್ಪಾಯು (public memory is short)! ಇವೆಲ್ಲ ಅವಸರದ ಮಿಶ್ರಣದಲ್ಲಿ ಸೇವ್ಯವಲ್ಲ, ದೀರ್ಘ ಓಟಕ್ಕೆ ದಕ್ಕುವವೂ ಅಲ್ಲ. ಕುದಿಪಾಕಕ್ಕೆ ಕೊಟ್ಟು, ಕೊರತೆಬಿದ್ದ ಸುವಸ್ತುಗಳನ್ನು ಹಿತವಾಗಿ ಸೇರಿಸಿ, ತಳ ಹತ್ತದಂತೆ ಕುದಿಕೊಟ್ಟು, ಕಸ ಬೀಳದಂತೆ ಜೋಪಾನ ಮಾಡಿ, ಎರಿಗಟ್ಟಲು ಕಾಯಲೇಬೇಕು. ಮಂಗಳಮುಖಿಯರ ಪ್ರಸಂಗವಾದರೂ ಅಷ್ಟೇ ಗಂಭೀರವಾದದ್ದು ಎಂಬ ವಿವೇಚನೆ ಇಲ್ಲದೆ ಪ್ರದರ್ಶನದ ಕೊನೆಯಲ್ಲಿ ದಿಢೀರ್ ತೆರೆದ ಅವಕಾಶ - ಸ್ಮಶಾನ ವೈರಾಗ್ಯವನ್ನಷ್ಟೇ ಸ್ಫುರಿಸೀತು.

ಸಾರ್ವಜನಿಕ ಸಂಘಟನೆಗಳು ಪೂರ್ವ ಸೂಚನೆಯಿಲ್ಲದೆ, ಆಕಸ್ಮಿಕಗಳ ಅನಿವಾರ್ಯತೆ ಇಲ್ಲದೆ, ಕೇವಲ ವೈಯಕ್ತಿಕ ಇಷ್ಟಾನಿಷ್ಟಗಳ ನೆಲೆಯಲ್ಲಿ ಸಮಯ ಮತ್ತು ಕಲಾಪಗಳನ್ನು ತಿದ್ದುವುದು ಸರಿಯಲ್ಲ. ಆರೂವರೆಗೆಂದು ಘೋಷಿತ ಕಲಾಪ ಮೊದಲ್ಗೊಂಡದ್ದು ಏಳಕ್ಕೆ. ಅನಂತರವೂ ಪ್ರದರ್ಶನಕ್ಕೆ ಏನೇನೂ ಪೂರಕವಲ್ಲದ ತೀರಾ ಔಪಚಾರಿಕ ವಿಧಿ ಮತ್ತು ಮಾತುಗಳಲ್ಲಿ ಇಪ್ಪತ್ತು ಮಿನಿಟು ಕಳೆದದ್ದು ಮತ್ತೊಂದು ತಪ್ಪು. ಕೊನೆಯಲ್ಲಿ ನಾಟಕದ ಪರಿಣಾಮ ಹರಳುಗಟ್ಟಬೇಕಾದ ಸಮಯದಲ್ಲಿ ಸ್ವತಃ ನಾಟಕದ ನಿರ್ದೇಶಕರೂ ಸೇರಿದಂತೆ “ನಾಟಕ ಪ್ರದರ್ಶನದ ಕುರಿತು ಮಾತು ಬೇಡ. . . .” ಎಂದೆನ್ನುತ್ತ, ಕಲಾವಿದರನ್ನು ‘ಕಟ್ಟಿ ಹಾಕಿ’, ಪ್ರೇಕ್ಷಕವರ್ಗದಿಂದ ಬಲವಂತದ ಅಭಿಪ್ರಾಯಗಳನ್ನು ಹೊರಡಿಸ ತೊಡಗಿದ್ದು ಅಸಹ್ಯ! 

ಅಷ್ಟರೊಳಗೆ ನನ್ನನ್ನು ತಟ್ಟಿದ ವಿಚಾರಗಳು: ೧. “ಕನ್ನಡ ಸಿನಿಮಾರಂಗ ಮಂಗಳಮುಖಿಯರನ್ನು ಎಂದೂ ಗೇಲಿಯ ವಸ್ತುವಿನಿಂದ ಮೇಲೆ ನೋಡಿದ್ದಿಲ್ಲ” - ಗಣೇಶ್. ೨. “ನಮ್ಮ ತುಳು ನಾಟಕವೊಂದರಲ್ಲಿ ಎರಡು ಹಿಜಡಾ ಪಾತ್ರವನ್ನು ಕೇವಲ ಹಾಸ್ಯಕ್ಕಾಗಿ (ಅವಮಾನಕಾರಿಯಾಗಿ ಅಲ್ಲ ಎನ್ನುವುದು ಅವರ ಧ್ವನಿ) ಬಳಸಿಕೊಂಡಿದ್ದೇವೆ” - ತುಳು ರಂಗನಟ. ೩. “ಕರ್ನಾಟಕ ಸರಕಾರದಿಂದ ಮಂಗಳಮುಖಿಯರಿಗಾಗಿ ಲಭ್ಯವಿರುವ ಅನುದಾನ ಸವಲತ್ತುಗಳನ್ನು ಸ್ವಯಂಸೇವಾ ಸಂಸ್ಥೆಯೊಂದು ಬಳಸಿಕೊಳ್ಳುತ್ತಿದ್ದರೂ ಆ ಸಮುದಾಯಕ್ಕೆ ಮುಟ್ಟುವುದು ಬಿಡಿ, ಅದರ ಅರಿವೂ ಇದ್ದಂತಿಲ್ಲ!” - ಓರ್ವ ಸಮಾಜ ಸೇವಕ. ೪.  “ನಮಗೆ ರೇಶನ್ ಕಾರ್ಡಿನಿಂದ ತೊಡಗಿ ಯಾವುದೇ ಪ್ರಜಾಸತ್ತಾತ್ಮಕ ಗುರುತು, ಹಕ್ಕುಗಳು ದಕ್ಕಿದ್ದಿಲ್ಲ. ನಾವು ಭಾರತೀಯರಲ್ಲವೇ?” - ಇಪ್ಪತ್ತು ವರ್ಷಕ್ಕೂ ಮಿಕ್ಕು ಮಂಗಳೂರಿನಲ್ಲೇ ನೆಲೆಸಿರುವ (ತುಮಕೂರು ಮೂಲದ) ರಾಣಿ ಎಂಬ ಮಂಗಳಮುಖಿ. ಹೀಗೇ ನಾಟಕದಲ್ಲೂ ಅಸಂಖ್ಯ ವಿಚಾರಲಹರಿಗಳು, ಪ್ರಶ್ನೆಗಳು ನಮ್ಮನ್ನು ಕೆಣಕಿದ್ದವು, ಅಂತರಂಗವನ್ನು ಕಲಕಿ, ಅವರ ಪರವಾಗಿ ಅಪಾರ ಅನುಕಂಪವನ್ನೂ ಮೂಡಿಸಿದ್ದವು. ಆದರೆ ಅದನ್ನು ಅಷ್ಟು ಅವಸರವಸರವಾಗಿ, ಅಪಕ್ವವಾಗಿ ಚರ್ಚೆಯ ಕಣಕ್ಕೆಳೆದದ್ದು ಮಾತ್ರ ಸರಿಯಲ್ಲ. (ಪ್ರಾಥಮಿಕ ಶಾಲೆಯಲ್ಲಿ ಕಥೆ ಹೇಳಿದ ಕೂಡಲೇ ನೀತಿ ಕೇಳಿದ ಹಾಗೆ.) ನೀನಾಸಂನ ವಾರ್ಷಿಕ ಶಿಬಿರದಲ್ಲಿ ನಿರ್ದಿಷ್ಟ ದೃಷ್ಟಿಕೋನದಲ್ಲಿ ಚಿಂತನೆ, ಮಥನ ನಡೆಸಿದ ಮೇಲೆ, ಕನಿಷ್ಠ ವಾರ ಹತ್ತು ದಿನಗಳ ಪೂರ್ವ ಸಿದ್ಧತೆಗಳೊಡನೆ ಬಂದ ಕಲೆಯನ್ನು ಪ್ರದರ್ಶಿಸಿ ಸಾರ್ವಜನಿಕ ಅಭಿಪ್ರಾಯ ಮಂಡನೆಗೆ, ಚರ್ಚೆಗೆ ಮುಕ್ತಗೊಳಿಸುತ್ತಾರೆ. ಮತ್ತೆ ಬಂದ ಅಭಿಪ್ರಾಯಗಳನ್ನೆಲ್ಲ ಗಂಭೀರವಾಗಿಯೇ ಪರಿಗಣಿಸುತ್ತಾರೆ. ಆದರೆ ಎಲ್ಲೂ ಸಂಘಟಕರ ನೆಲೆಯಲ್ಲಿ ನಿರ್ಧಾರ ಹೇರುವ, ತೀರ್ಪು ಹೊರಡಿಸುವ ಪ್ರಯತ್ನ ಮಾಡದ ವಿನಯ ಉಳಿಸಿಕೊಳ್ಳುತ್ತಾರೆ.

ನಿನ್ನೆ ಮೊನ್ನೆಯವರೆಗೆ ಮಂಗಳೂರಿನಲ್ಲಿ ದಾಸಜನ, ಕಲಾಂಗಣ್ ಸಂಘಟನೆಗಳು ಎಷ್ಟೂ ತಿರುಗಾಟ, ಮರುತಿರುಗಾಟಗಳನ್ನೂ ಇತರ ಹಲವು ನಾಟಕಗಳನ್ನೂ ಕೆರಿಯರಿಸ್ಟ್ ಆಗದ ಎಚ್ಚರದಲ್ಲಿ, ತನ್ನ ತಾ ಬಣ್ಣಿಸಿಕೊಳ್ಳದೆ, ಬಲು ದೊಡ್ಡ ಮತ್ತು ಖಾಯಂ ವೀಕ್ಷಕ ವೃಂದವನ್ನು ಕಟ್ಟಿದ (ಕಲಾಂಗಣ್ ಇನ್ನೂ ನಡೆಸಿದೆ) ಇತಿಹಾಸವನ್ನು ಮರೆಯಬಾರದು. (Class, Mass? ವಾಸ್ತವದಲ್ಲಿ ನವ್ಯ ಭವ್ಯ ಎಂಬ ವರ್ಗೀಕರಣವೇ ಇಲ್ಲ. ಪ್ರದರ್ಶನಗಳಲ್ಲಿ ಎರಡೇ ವಿಧ - ಒಳ್ಳೇದು, ಕೆಟ್ಟದ್ದು! ನೀನಾಸಂ ಗೋಕುಲ ನಿರ್ಗಮನವನ್ನೂ ಕೊಟ್ಟಿದೆ, ಸದಾರಮೆಯನ್ನೂ ಬೆಳಗಿಸಿದೆ. ಕರ್ನಾಟಕದ ರಂಗಕರ್ಮಿಗಳೆಲ್ಲ ಒಕ್ಕೊರಲಿನಿಂದ ಹೊಗಳುವ ಬಿವಿ ಕಾರಂತರು ಬಂದದ್ದು ಗುಬ್ಬಿ ಕಂಪೆನಿಯಿಂದ. ರಂಗದ ಮೇಲೆ ಪ್ರದರ್ಶಿಸುವಲ್ಲಿ ಅವರು ‘ನಾಟಕ’ ಎಂದು ಕರೆಸಿಕೊಳ್ಳುವವನ್ನೆಲ್ಲ ಮೀರಿ, ಕವನ, ಕಥೆ, ಕಾದಂಬರಿ ಬಳಸಿದ್ದು ಇತಿಹಾಸ! ಭೋಪಾಲ, ಮೈಸೂರಿನಲ್ಲಿ ನಾಟಕ ಪ್ರಪಂಚಕ್ಕೆ ಅಪೂರ್ವ ಸಂಸ್ಥೆಗಳನ್ನೇ ಕಟ್ಟಿಕೊಟ್ಟರು. ಆದರೂ ಜೀವನ ಮುಗಿಸಿದ್ದು ಆಂಧ್ರದ ಯಾವುದೋ ಹಳ್ಳಿ ಮೂಲೆಯ, ತೆಲುಗು ಭಾಷೆಯ, ಪಾರಂಪರಿಕ ನಾಟಕ ಕಂಪೆನಿಯಲ್ಲಿ) 

ಪ್ರಸ್ತುತ ಪ್ರದರ್ಶನದಲ್ಲಿ ಇವೆಲ್ಲ ಕೊರತೆಯಾಗಿಯೇ ಕಾಡಿ, ಕೇವಲ ನಾಟಕ ಒಂದೇ ಗೆದ್ದಿತು ಎನ್ನಲು ವಿಷಾದವಾಗುತ್ತದೆ!

6 comments:

 1. ಇದು ತುಂಬಾ ಸೂಕ್ಷ್ಮ ವಿಷಯ. ರಾಷ್ಟ್ರೀಯ ಹಬ್ಬದ ಸಂದರ್ಭಗಳಲ್ಲಿ ಸನ್ನಡತೆ ತೋರಿಸಿದ ಕೈದಿಗಳನ್ನು ಸ್ವತಂತ್ರಗೊಳಿಸುವ ವಾಡಿಕೆ ಇತ್ತು, ಕೆಲವು ವರ್ಷಗಳಿಂದ ಅದು ತಪ್ಪಿ ಹೋಗಿದೆ, ಅದನ್ನು ಮರಳಿ ಜಾರಿಗೆ ತರಬೇಕು ಎಂಬುದು ನಿಮ್ಮ ಕಳಕಳಿ ಎಂದುಕೊಳ್ಳುತ್ತೇನೆ. ಕೈದಿಯೊಬ್ಬ ಕೈದಿಯಾಗಲು ಕಾರಣವೇನು? ಸುಮ್ಮನೆ ಊಹಿಸೋಣ: ಪ್ರೇಮಭಗ್ನಗೊಂಡ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಮುಖ, ಮೈಗಳ ಮೇಲೆ ಆಸಿಡ್ ಚೆಲ್ಲಿದ ಅಪರಾಧಕ್ಕಾಗಿ ಜೈಲೊಳಗಿದ್ದಾನೆ. ಒಂದು ಉದ್ವಿಗ್ನ ಕ್ಷಣದಲ್ಲಿ ಆತ ಈ ಪ್ರಮಾದ ಮಾಡಿದ ಮತ್ತು ನಂತರ ತಪ್ಪು ಅರಿತುಕೊಂಡು ಜೈಲೊಳಗೆ ಸನ್ನಡತೆಯವನಾಗಿಯೇ ಇದ್ದ. ಆತ ತನ್ನ ತಪ್ಪಿಗೆ ಪಶ್ಚಾತ್ತಾಪವನ್ನೂ ಪಡುತ್ತಾನೆ ಎಂದುಕೊಳ್ಳೋಣ. ಅವನನ್ನು ಮಾತ್ರ ಕೇಂದ್ರೀಕರಿಸಿ ನೋಡಿದರೆ ಅವನನ್ನು ಬಿಡುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಅವನಿಂದ ಆಸಿಡ್ ಧಾಳಿಗೆ ಒಳಗಾದ ಹೆಣ್ಣಿನ ದುಃಖಕ್ಕೆ ಏನು ಪರಿಹಾರ? ತನ್ನ ತಪ್ಪೇ ಇಲ್ಲದೆ ತಾನು ಅನುಭವಿಸಿಬೇಕಾಗಿ ಬಂದಿರುವ ದುರವಸ್ಥೆ ಅವಳನ್ನು ಕ್ಷಣಕ್ಷಣವೂ, ಸಾಯುವವರೆಗೂ ಸುಡುವುದಿಲ್ಲವೆ? ಅವನು ತನ್ನ ತಪ್ಪು ತಿದ್ದಿಕೊಂಡದ್ದಕ್ಕೆ ಪರಿಹಾರ ಪಡೆದ. ಅವಳು ತಪ್ಪೇ ಮಾಡದಿದ್ದರೂ, ಜೀವನದುದ್ದಕ್ಕೂ ನೋವು ಅನುಭವಿಸುತ್ತಲೇ ಇರಬೇಕಲ್ಲ? ಈ ಸಮಸ್ಯೆಗೆ ಏನು ಪರಿಹಾರ? ಕರುಣೆಗೆ, ಕ್ಷಮೆಗೆ ಕ್ರಿಶ್ಚಿಯನ್ ಧರ್ಮ ಬಹಳ ಮಹತ್ವ ಕೊಡುತ್ತದೆ. ಆಸಿಡ್ ಹಾಕಿಸಿಕೊಂಡ ಹೆಣ್ಣಿನಿಂದ ಕರುಣೆ, ಕ್ಷಮಾಗುಣಗಳನ್ನು ನಿರೀಕ್ಷಿಸೋಣವೆ? ದಾಸ್ತೋವ್ ಸ್ಕಿ ಬಹುಶಃ ಕ್ರೈಮ್ ಎಂಡ್ ಪನಿಶ್ ಮೆಂಟ್ ಎಂಬ ತನ್ನ ಕಾದಂಬರಿಯ ಮೊದಲಿಗೆ ಹೀಗೊಂದು ವಾಕ್ಯ ಬರೆದಂತೆ ನೆನಪು: "Man is crook and a crook is one who knows he is" ವ್ಯಾಸರ ದುರ್ಯೋಧನ "ಜಾನಾಮ್ಯಧರ್ಮಂ ನ ಚ ಮೇ ನಿವೃತ್ತಿಃ" ಎನ್ನುತ್ತಾನೆ. "ಪಡೆದುಕೊಂಡ ಬಂದ" ಸ್ವಭಾವವನ್ನು ಬದಲಿಸಿಕೊಳ್ಳುವುದು ಮನುಷ್ಯರಿಗೆ ನಿಜವಾಗಿಯೂ ಸಾಧ್ಯವೆ? -ಎಚ್. ಸುಂದರ ರಾವ್...

  ReplyDelete
 2. ನೀವು ಎತ್ತಿಕೊಂಡ ವಿಷಯ ಕ್ರಮೇಣ ಇತರ ದಿನಪತ್ರಿಕೆಗಳಲ್ಲೂ ಪ್ರಕಟವಾಗುತ್ತಿದೆ. ಅಭಿನಂದನೆಗಳು. ಸಾರ್ವಜನಿಕ ಒತ್ತಾಯಗಳಿಂದಾಗಿಯಾದರೂ ಸದ್ವರ್ತನೆಯ ಕೈದಿಗಳಿಗೆ ಬಿಡುಗಡೆ ಆದೀತೆಂದು ಆಶಿಸೋಣ.
  ನಾಗೇಶ ಹೆಗಡೆ

  ReplyDelete
 3. 'ಸನ್ನಡತೆ'ಯನ್ನು ನಿರ್ಧರಿಸುವ ಮಾನದಂಡ ಜ್ಞೇಯನಿಷ್ಠವಾಗಿರದಿದ್ದಲ್ಲಿ, ಇಡೀ ಪ್ರಕ್ರಿಯೆ ಪಾರದರ್ಶಕವಾಗಿರದಿದ್ದಲ್ಲಿ ದುರುಪಯೋಗವಾಗುವ (ಭ್ರಷ್ಟ ಅಧಿಕಾರಿಗಳ ಸಂಖ್ಯೆ ಅಲ್ಲದವರಿಗಿಂತ ಅನೇಕ ಪಟ್ಟು ಹೆಚ್ಚಿರುವುದರಿಂದ)ಸಾಧ್ಯತೆಯೇ ಹೆಚ್ಚು. ಈ ಹಿಂದೆ ನ್ಯಾಯಾಲಯಗಳೂ ಇದನ್ನು ಆಕ್ಷೇಪಿಸಿವೆ. ಪ್ರತಿಭೆಯನ್ನು ಪುರಸ್ಕರಿಸುವದನ್ನು ಅಪರಾಧವನ್ನು ಶಿಕ್ಷಿಸುವ ಪ್ರಕ್ರಿಯೆಗೆ ತಳುಕು ಹಾಕದಿರುವುದೇ ಓಲಿತು

  ReplyDelete
 4. ಸೂಕ್ಷ್ಮ ನಿಜ. ಅಪರಾಧಿ ನಿಜವಾಗಿಯೂ ಪರಿವರ್ತನೆಗೊಂಡು ಕ್ಷಮಾದಾನ ಪಡೆದರೂ ಘಟನೆ ಅಥವಾ ಹಾನಿಗೊಳಗಾದವರ ನೋವು ತಿದ್ದಲಾಗುವುದಿಲ್ಲ ಎನ್ನುವುದೂ ನಿಜವೇ. ಸಾಮಾಜಿಕ ನಿಯಮಗಳಡಿಯಲ್ಲೇ ಸಜೆ, ಶಿಕ್ಷೆ ಎನ್ನುತ್ತಾರೆಯೇ ವಿನಾ ಪರಿವರ್ತನೆಗಾಗಿ ಎನ್ನುವುದಿಲ್ಲ - ಇತ್ಯಾದಿ, ಇನ್ನೂ ಹೆಚ್ಚು ಸರಿಯೇ ಸರಿ. ಆದರೆ.... ನಿನ್ನೆ ರಾತ್ರಿ ಟಿ.ನರಸೀಪುರದ ಸೋಸಲೇ ಗ್ರಾಮದ ಪುಟ್ಟಸ್ವಾಮಿ ದೀನದಾಸ್ ಎನ್ನುವ ಮಾಜೀ ಖೈದಿ ನನಗೆ ದೂರವಾಣಿಸಿದ್ದನ್ನು ಹೇಗೆ ಮರೆಯಲಿ? (ಅವರ ಮಾತನ್ನು ನಂಬುವುದರಲ್ಲಿ ನಷ್ಟವೇನೂ ಇಲ್ಲವಾದ್ದರಿಂದ ಸಂಗ್ರಹಿಸಿ ಹೇಳುತ್ತೇನೆ.)

  ೧೯೯೫ರಲ್ಲಿ ಈತ ಇನ್ನೂ ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ಕೊಲೆ ಆರೋಪ ಹೊತ್ತು ಇತರ ಹನ್ನೆರಡು ಮಂದಿಯೊಂದಿಗೆ ಆಜೀವ ಶಿಕ್ಷೆಗೆ ಗುರಿಯಾಗಿದ್ದರು. ವಾಸ್ತವವಾಗಿ ಐದು ಮಂದಿ ಮಾತ್ರ ನಿಜವಾದ ಕೊಲೆಗಾರರು, ತನ್ನನ್ನೂ ಸೇರಿಸಿ ಉಳಿದವರು ನಿರಪರಾಧಿಗಳಾದರೂ ಶಿಕ್ಷೆಗೊಳಗಾದೆವು ಎಂಬ ರೋಷ ಕುದಿಯುತ್ತಿತ್ತಂತೆ. "ನನ್ನ ಮನೆಯವರಿಗೆ ಗೊತ್ತಿತ್ತು - ನಾನು ನಿರಪರಾಧಿ. ಅವರ ಸಂಕಟಕ್ಕೇನು ಪರಿಹಾರ? ರಾಜಕೀಯ ಗಣ್ಯರು, ಉಚ್ಛವರ್ಗದ ಅಪರಾಧಿಗಳ ಸೆರೆವಾಸದ ಬಗ್ಗೆ ಮಾಧ್ಯಮಗಳಲ್ಲಿ ಬರುವ ಮಾತುಗಳೆಲ್ಲ ಪೊಳ್ಳು. ಸಮಾಜದ ಮಧ್ಯಮ ಮತ್ತು ಕೆಳವರ್ಗದ ಖೈದಿಗಳಿಗೆ ಜೈಲು ಸಾಕ್ಷಾತ್ ನರಕ. ವಿಶೇಷಪಟ್ಟ ದಿನಗಳಲ್ಲಿ ಪುಡಾರಿಗಳೋ ಸ್ವಾಮಿಗಳೋ ಬಂದು ಬನ್ನು, ಬಾಳೇಹಣ್ಣು ಕೊಡ್ತಿದ್ದರು. ಆದರೆ ಯಾರೂ ವೈಯಕ್ತಿಕವಾಗಿ ಕಷ್ಟ, ನೋವು ವಿಚಾರಿಸಿದ್ದೇ ಇಲ್ಲ. ಅವಕಾಶ ಒದಗಿದರೆ ಅಲ್ಲೇ ಅಲ್ಲದಿದ್ದರೆ ಹೊರಗೆ ಬಂದ ಮೇಲೆ ಯಾರನ್ನೆಲ್ಲಾ ಹೊಡೆಯಬೇಕೆಂದೂ ನಿಜವಾಗಿ ಕೊಲೆ ಮಾಡಬೇಕೆಂದೂ ಏಳು ವರ್ಷಗಳುದ್ದಕ್ಕೂ ಪುಟ್ಟಸ್ವಾಮಿ ಯೋಜನೆ ಹಾಕುತ್ತಲೇ ಇದ್ದರಂತೆ. ಅಂದಿನ ಜೈಲು ಸಿಬ್ಬಂದಿಗಳನ್ನು ಯಾರೂ ಈಗಲೂ ಕೇಳಬಹುದಂತೆ - ಪುಟ್ಟಸ್ವಾಮಿ ಎಂತಹ ಪುಂಡನೆಂದು. ಆಗ ಬಂದವರು ಹುಲುಗಪ್ಪ ಕಟ್ಟೀಮನಿ. ಕಾರ್ಕೋಟಕ ಕಹಿಯಲ್ಲಿ ಮುಳುಗಿದ್ದ ನನ್ನನ್ನು ಬಲವಂತವಾಗಿ ನಾಟಕಕ್ಕೆ ಎಳೆದರು ಸಾರ್. ನನ್ನ ಮನಸ್ಸಿಗೇ ಕೈ ಹಾಕಿ ಬಿಟ್ಟರು. ನಂದೇ ಸಾಕಾಗಿದೆ, ಇನ್ ಇವನ ನಾಟಕವಂತೆ ಎಂದುಕೊಂಡು ಕಟ್ಟೀಮನಿಯನ್ನು ಅವಕಾಶ ಸಿಕ್ಕಾಗ ಹೊಡೀಬೇಕೆಂದೇ ನಾನು ಒಪ್ಪಿದಂತೆ ಮಾಡಿ, ಮೊದಮೊದಲು ಹೊಂಚುತ್ತಲೇ ಇದ್ದೆ. ಆದರೆ ಅದು ಯಾವ ಮಾಯೆಯಲ್ಲೋ ಯೋಗಾಸನಕ್ಕೆ ಬಗ್ಗಿದೆ, ಭಜನೆಯಲ್ಲಿ ತೊಡಗಿದೆ, ಚಿತ್ರ ಬರೆದೆ, ಮಣ್ಣಿನ ಮೂರ್ತಿ ಮಾಡಿದೆ, ತಲೆದಂಡ ನಾಟಕದ ಸೋವಿದೇವನ ಪಾತ್ರದಲ್ಲಿ, ಮ್ಯಾಕ್ಬೆತ್ ಪಾತ್ರದಲ್ಲಿ ಮಿಂಚಿದೆ. ಮುಂದಿನ ಐದು ವರ್ಷದಲ್ಲಿ ಅಂದರೆ ನಾನು ಕ್ಷಮಾದಾನ ಪಡೆದು ೨೦೦೬ರಲ್ಲಿ ಹೊರಗೆ ಬರುವಾಗ ಮತ್ತು ಈಗಲೂ ಘಂಟಾಘೋಷವಾಗಿ ಹೇಳಬಲ್ಲೆ - ಕಟ್ಟೀಮನಿ ಸಾರ್ ಗ್ರೇಟ್! ಎಲ್ಲೋ ತರಬೇತಿನಲ್ಲಿ ಅವರು ಅಕ್ಷರಶಃ ನನಗೆ (ಇನ್ನು ಕೆಲವರಿಗೂ) ಕಪಾಳಮೋಕ್ಷ ಮಾಡಿದ್ದುಂಟು. ನಂಬಿದರೆ ನಂಬಿ ಸಾರ್, ಅಷ್ಟರೊಳಗೇ ನಾವು ಅದನ್ನು ವಿಚಾರ ಪ್ರಚೋದನೆಗೆ ಸಂಕೇತ ಎನ್ನುವಂತೆ ಸ್ವೀಕರಿಸುವ ಮಟ್ಟಕ್ಕೆ ನಮ್ಮನ್ನವರು ಪರಿವರ್ತಿಸಿದ್ದರು - ಮಹಾತ್ಮ!!

  ಬಾಲಂಗೋಚಿ: ಈತ ಯಾರದೋ ಮೂಲಕ ಕೆಂಡಸಂಪಿಗೆಯಲ್ಲಿ `ಅರ್ಥಪೂರ್ಣ ಸ್ವಾತಂತ್ರ್ಯೋತ್ಸವಕ್ಕಾಗಿ' ಲೇಖನ ನೋಡಿ, ಕಟ್ಟೀಮನಿಯವರನ್ನು ಸಂಪರ್ಕಿಸಿ, ನನ್ನ ದೂರವಾಣಿ ಸಂಖ್ಯೆ ಪಡೆದು ನನ್ನನ್ನು ಸಂಪರ್ಕಿಸಿದ್ದರು. ಇವರು ಕಳೆದ ಆರು ವರ್ಷಗಳಲ್ಲಿ ಸೋಸಲೆಯಲ್ಲೇ ತಮ್ಮನೊಡಗೂಡಿ ಗಾಡಿಹೂಡಿ ಜೀವನ ರೂಢಿಸಿಕೊಂಡಿದ್ದಾರಂತೆ. ಮರಳು ಮಾಫಿಯಾದ ವಿರುದ್ಧ ಇವರು ಶಾಂತಿಪೂರ್ಣ ಪ್ರತಿಭಟನೆಗಿಳಿದಾಗ ಸಚಿವ ರಾಮದಾಸ್ ವಿರುದ್ಧ ತಾನೇ ಕರೆದುಕೊಂಡಂತೆ ಇಂದು ಸೋಸಲೇ ಪುಟ್ಟಸ್ವಾಮಿ ದೀನದಾಸ್.
  ಅಶೋಕವರ್ಧನ

  ReplyDelete
  Replies
  1. ನ್ಯಾಯದಾನದ ಪ್ರಕ್ರಿಯೆಗೆ ಒಂದು ಮಿತಿ ಇರುತ್ತದೆ. ನ್ಯಾಯ ಎಲ್ಲರಿಗೂ ಸಿಗುತ್ತದೆ ಎನ್ನುವಂತಿಲ್ಲ. ನ್ಯಾಯಾಧೀಶ ಸರ್ವಜ್ಞ ಎನ್ನುವಂತೆಯೂ ಇಲ್ಲ. (ಮಾಸ್ತಿಯವರ "ಜೋಗ್ಯೋರ ಅಂಜಪ್ಪ ಕೋಳೀ ಕದ್ದಿದ್ದು" ಕಥೆ ನೆನಪಾಗುತ್ತದೆ). ಆದರೆ, ಈಗಿರುವುದಕ್ಕಿಂತ ಉತ್ತಮ ವ್ಯವಸ್ಥೆ ರೂಪಿಸಿಕೊಳ್ಳುವುದು ಸಾಧ್ಯವಾಗುವವರೆಗೆ, ಈಗಿರುವುದನ್ನು ಒಪ್ಪಿಕೊಂಡು ಅದರಂತೆ ನಡೆಯಲೇಬೇಕಾಗುತ್ತದೆ. (ನ್ಯಾಯದಾನ ವ್ಯವಸ್ಥೆಯನ್ನು ಉತ್ತಮಗೊಳಿಸಬೇಕಾದ್ದು ಪ್ರಜೆಗಳಾದ ನಮ್ಮದೇ ಜವಾಬ್ದಾರಿ ಎನ್ನುವುದನ್ನೂ ಗಮನಿಸಬೇಕು.) ಈ ವ್ಯವಸ್ಥೆಗೆ ನಾಳೆ ನಾನೂ ಬಲಿಯಾಗಬಹುದು ಎಂಬುದನ್ನು ನೆನಪಿಟ್ಟುಕೊಂಡೇ ಈ ಮಾತನ್ನು ಬರೆದಿದ್ದೇನೆ.
   ಇಲ್ಲೊಂದು ವಿರೋಧಾಭಾಸವಿದೆ. ಅಪಚಾರವಾಗುವುದು ಒಬ್ಬನಿಗಾದರೆ ತಪ್ಪನ್ನು ಕ್ಷಮಿಸುವವನು ಇನ್ನೊಬ್ಬ! ಮೊನ್ನೆ ಮೊನ್ನೆ ನಮ್ಮ ರಾಷ್ಟ್ರಪತಿಯವರು, ಕೆಳಗಿಳಿಯಲು ಇನ್ನೇನು ಕೆಲವೇ ದಿನ ಇದೆ ಎನ್ನುವಾಗ, ಸುಮಾರು ೩೫ ಜನರಿಗೆ ಕ್ಷಮಾದಾನ ಮಾಡಿದರಂತೆ. ಅವರೆಲ್ಲ ಎಂಥೆಂಥ ಹೀನ ಅಪರಾಧಗಳನ್ನು ಮಾಡಿದ್ದರೋ? ಹೀಗೆ ಕ್ಷಮಾದಾನ ಮಾಡುವಾಗ, ಅಪರಾಧದ ಬಲಿಪಶುಗಳು ಯಾರಾಗಿದ್ದರೋ ಅವರ ಅಭಿಪ್ರಾಯವನ್ನು ಪಡೆಯಲೇಬೇಕು, ಅವರ ಅಭಿಪ್ರಾಯಕ್ಕೆ ಮೊದಲ ಪ್ರಾಶಸ್ತ್ಯ, ರಾಷ್ಟ್ರಪತಿಯವರ ಅಭಿಪ್ರಾಯಕ್ಕೆ ಎರಡನೇ ಪ್ರಾಶಸ್ತ್ಯ ಕೊಡತಕ್ಕದ್ದು ಎಂದು ಕಾನೂನು ಮಾಡಿಕೊಳ್ಳಬಹುದೋ ಏನೋ. ರಾಜ್ಯಮಟ್ಟದಲ್ಲೂ ಇಂಥದೇ ಕಾನೂನುಗಳನ್ನು ರೂಪಿಸಿಕೊಳ್ಳಬಹುದು.
   ತಮಗಾದ ಅಪಚಾರವನ್ನು ಕ್ಷಮಿಸುವ ಉದಾರಿಗಳು ಎಷ್ಟೋ ಜನ ಇರುತ್ತಾರೆ. ಸುಮಾರು ಎರಡು ವರ್ಷದ ಹಿಂದೆ ಪ್ರಿಯಾಂಕಾ ಗಾಂಧಿಯವರು, ರಾಜೀವಗಾಂಧಿಯ ಕೊಲೆ ಆರೋಪಿಗಳನ್ನು ಮದರಾಸಿನ ಜೈಲಿನಲ್ಲಿ ಭೇಟಿ ಮಾಡಿದ್ದರು ಎಂದು ಪತ್ರಿಕೆಗಳಲ್ಲಿ ಓದಿದ ನೆನಪು.

   Delete
 5. ಸ್ವಾತಂತ್ರ್ಯೋತ್ಸವಕ್ಕೆ ಅರ್ಥಕೊಡಿ - ಬರಹ ಮೊದಲು ಕೆಂಡಸಂಪಿಗೆಯಲ್ಲಿ ಪ್ರಕಟವಾಯ್ತು. ಅಲ್ಲಿ ಬಂದ ಅನೇಕ ಪ್ರತಿಕ್ರಿಯೆಗಳಲ್ಲಿ ಒಂದು ಮಾತ್ರ ಆ ಸಮಯ ಮೈಸೂರಿನಲ್ಲೇ ಇದ್ದ ನನ್ನ ತಮ್ಮ ಆನಂದವರ್ಧನನ ಹೆಸರಿನಲ್ಲಿ ಬಂತು:
  ಪ್ರಿಯ ಅಶೋಕವರ್ಧನ, ಚಿಂತನಯೋಗ್ಯ ಬರಹ ಕೊಟ್ಟಿದ್ದಕ್ಕೆ ಧನ್ಯವಾದಗಳು. ಆದರೆ ಸನ್ನಡತೆಯನ್ನು ರೂಪಿಸಲು ಖೈದಿಗಳಿಂದ ನಾಟಕ ಮಾಡಿಸುವುದಕ್ಕಿಂತ ಉತ್ತಮವಾದ ಮಾರ್ಗವಿದೆ . ಖೈದಿಗಳಿಂದ ಸಮಾಜಕ್ಕೆ ಪ್ರಯೋಜನವಾಗುವಂತಹ ಕಾರ್ಯಗಳನ್ನು ಮಾಡಿಸುವುದರಿಂದ ಸಮಾಜಕ್ಕೂ ಖೈದಿಗಳಿಗೂ ಪರಸ್ಪರ ನಂಬಿಕೆ ವಿಶ್ವಾಸ ಹೆಚ್ಚಾಗುತ್ತದೆ. ಇದು ರಸ್ತೆ ಗುಡಿಸುವ ಕೆಲಸ ಇರಬಹುದು, ಗುಂಡಿ ತೋಡುವ ಮುಚ್ಚುವ ಕೆಲಸ ಇರಬಹುದು, ಅಥವಾ ಸಾಲು ಮರಗಳನ್ನು ನೆಡುವ ಕೆಲಸ ಇರಬಹುದು. ಯಾವ ಕೆಲಸದಿಂದ ಸಮಾಜಕ್ಕೆ ನೇರ ಪ್ರಯೋಜನ್ವಾಗುತ್ತದೆಯೋ ಅಂತಹ ಕೆಲಸಗಳನ್ನು ಖೈದಿಗಳಿಂದ ಮಾಡಿಸುವುದು. ಸಮಾಜಘಾತುಕತನವನ್ನು ಮೀರಿ ಸಮಾಜಮುಖಿಯಾಗಳು ಖೈದಿಗಳಿಗೆ ಪ್ರೇರಣೆ ನೀಡುವಂತಹ ಕೆಲಸಗಳನ್ನು ಮಾಡಿಸಬೇಕು. ನಾಟಕ ಮಾಡಿಸುವುದರಿಂದ ಇದು ಸಾಧ್ಯವಿಲ್ಲ. -- ಆನಂದವರ್ಧನ, ಮೈಸೂರು...

  ಆ ಸಮಯದಲ್ಲಿ ನಾನೂ ಮೈಸೂರಿನಲ್ಲಿ ಆನಂದನೊಡನೇ ಇದ್ದುದರಿಂದ, ನನ್ನ ಆಶಯಕ್ಕೆ ವಿರುದ್ಧವಾದ ಅಭಿಪ್ರಾಯ ಬಂದರೂ ಸಂಯಮದಿಂದ ನಾನು ಕೆಂಡ ಸಂಪಿಗೆಯಲ್ಲೇ ಹೀಗೆ ಉತ್ತರಿಸಿದೆ

  ೧. ಪರಿವರ್ತನೆಗೆ ಇದೊಂದೇ ಮಾರ್ಗವೆಂದೂ ಅನ್ಯ ಮಾರ್ಗಗಳ ಶೋಧವಾಗಿಲ್ಲವೆಂದೂ ನಾನು ಅಥವಾ ಕಟ್ಟೀಮನಿಯವರು ಹೇಳಿಲ್ಲ. ೨. "ನಾಟಕದಿಂದ ಸಾಧ್ಯವಿಲ್ಲ" ಎನ್ನುವವರು ಪ್ರದರ್ಶನ ಮತ್ತು ಅಂದು ಮಾತಾಡಿದ ಖೈದಿಗಳ ಭಾವನೆಗಳ ಪ್ರತ್ಯಕ್ಷದರ್ಶನದಿಂದ ವಂಚಿತರು ಎನ್ನುವುದು ಸ್ಪಷ್ಟ. ೩. ದೈಹಿಕ ದುಡಿಮೆ (ಸಮಾಜಕ್ಕೆ ಅನುಕೂಲವಾದದ್ದು), ಬಯಲು-ಬಂಧೀಖಾನೆ ಬಹಳ ಹಿಂದಿನಿಂದಲೂ ನಡೆದೇ ಇದೆ ಎನ್ನುವುದನ್ನು ತಿಳಿಯದೇ ಯಾರೂ ಅಭಿಪ್ರಾಯ ಮಂಡನೆಗೆ ದುಡುಕಬಾರದು. -- ಅಶೋಕವರ್ಧನ

  ತಮ್ಮನ ಹೆಸರಿನಲ್ಲಿ ಮತ್ತೆ ಬಂತು:
  ಪ್ರಿಯ ಅಶೋಕವರ್ಧನ, ೧) ದೈಹಿಕ ದುಡಿಮೆಯೇ ಅನಿವಾರ್ಯ ಅಂತ ನಾನು ಹೇಳಿದೆನೆ?! ನಾನು ಬರೆದದ್ದು "ಸಮಾಜಕ್ಕೆ ಪ್ರಯೋಜನವಾಗುವಂತಹ ಕಾರ್ಯಗಳನ್ನು ಮಾಡಿಸುವುದರಿಂದ ಸಮಾಜಕ್ಕೂ ಖೈದಿಗಳಿಗೂ ಪರಸ್ಪರ ನಂಬಿಕೆ ವಿಶ್ವಾಸ ಹೆಚ್ಚಾಗುತ್ತದೆ" ಅಂತ. ಇಂತಹ ಕೆಲಸಗಳಿಗೆ ಕೆಲವು ಉದಾಹರಣೆಗಳನ್ನು ಕೊಟ್ಟಿದ್ದೇನೆ. ಇವಿಷ್ಟೇ ಯೋಗ್ಯ ಅಂತ ಹೇಳಿಲ್ಲ! ೨) ಸಾಲು ಮರಗಳನ್ನು ನೆಡುವ ಕೆಲಸ ದೈಹಿಕ ನಾಟಕ ಮಾಡುವುದು ಬೌದ್ಧಿಕ ಅಂತ ತಾವು ತಿಳಿದಿದ್ದರೆ ತಪ್ಪು ನನ್ನದಲ್ಲ! ೩) ನಾಟಕ ಮಾಡಿಸುವುದರಿಂದ "ಸಮಾಜಘಾತುಕತನವನ್ನು ಮೀರಿ ಸಮಾಜಮುಖಿಯಾಗಳು ಖೈದಿಗಳಿಗೆ ಪ್ರೇರಣೆ" ಸಿಗುತ್ತದೆ ಎಂದು ನೀವು ವೈಜ್ಞಾನಿಕ ಅಧ್ಯಯನದ ಮೂಲಕ ಸಾಬೀತು ಪಡಿಸುವ ವರೆಗೆ ನಿಮ್ಮ ನಂಬಿಕೆ ಕುರುಡು. -- ಆನಂದವರ್ಧನ, ಮೈಸೂರು

  ನಾನು ತಮ್ಮನಲ್ಲಿ ಮೌಖಿಕವಾಗಿ "ಯಾಕೆ ಹೀಗೆ" ಎಂದು ಕೇಳಿದೆ. ಅವನಿಗೆ ಇದ್ಯಾವುದು ಬಿಟ್ಟು ಕೆಂಡಸಂಪಿಗೆಯ ಪರಿಚಯವೂ ಇರಲಿಲ್ಲ. ನಾನು ಕೊಟ್ಟ ಸೇತು ಬಳಸಿ ಎಲ್ಲ ಓದಿ ಅವನು ಬರೆದ ಪ್ರತಿಕ್ರಿಯೆ ಹೀಗಿದೆ:

  ನಾನು, ಜಿ.ಎನ್. ಆನ೦ದ ವರ್ಧನ ತಾತ್ಕಾಲಿಕವಾಗಿ ಮೈಸೂರಲ್ಲಿ ಉಪಸ್ಥಿತನಿದ್ದೇನೆ. ನನ್ನ ಕಾರ್ಯಸ್ಥಾನ ಅಮೇರಿಕ. ನಾನು ಲೇಖಕನ ಅನುಜ. ಪ್ರಾಜ್ಞರು, ಧೀಮ೦ತರು ಉತ್ತರಿಸಿದ್ದಾರೆ ಅಲ್ಲದೆ ನನ್ನದೇ ನಾಮಧೇಯ ಹಾಗು ಊರಿನ ಮಹನೀಯರಾದ ಶ್ರೀ ಆನ೦ದ ವರ್ಧನ ಎ೦ಬುವವರೂ ಅಣ್ಣನ ಲೇಖನಕ್ಕೆ ಸ್ಪ೦ದಿಸಿದ್ದಾರೆ. ಓದುಗರು ಹಾಗೂ ಆಗ್ರಜ ಶ್ರೀ ಆನ೦ದ ವರ್ಧನರ ಭಾವನೆಗಳು ನನ್ನದೆ೦ದು ಭ್ರಮಿಸಬಾರದು ಎ೦ಬ ಉದ್ದೇಶದಿ೦ದ ಈ ಟಿಪ್ಪಣಿ. ನನ್ನ ೨೫ ವರ್ಷ ಅಮೇರಿಕದ ಸಮಾಜದಲ್ಲಿನ ಬದುಕಿನ ಅನುಭವ ಸಾರದಿ೦ದ ನನ್ನ ಅನಿಸಿಕೆ ಇ೦ತಿದೆ. ಮರ ನೆಟ್ಟರೆ, ಗು೦ಡಿ ತೋಡಿದರೆ, ಇನ್ಯಾವುದೇ ಸಮಾಜ ಉಪಕಾರಿ ಕೆಲಸ ಮಾಡಿದರೆ ಸಮಾಜಕ್ಕೆ ಪ್ರಯೋಜನ ಹೊರತು ಮಾಡಿದವರಿಗೆ ಅ೦ದರೆ ಕೈದಿಗಳಿಗೆ ಯಾವುದೇ ತರಹದ ಪರಿಣಾಮವಿರುವುದಿಲ್ಲ. ನೆಕ್ಕರೆ ಮಾವಿನ ಹಣ್ಣಿನಮರವನ್ನು ನೆಟ್ಟಗೆ ನೆಟ್ಟ ಬ೦ಟ ಎ೦ದು ಯಾರೂ ಆ ಕೈದಿಯನ್ನು ಪ್ರಶ೦ಸಿಸುವುದಿಲ್ಲ. ಬದಲಾಗಿ ಕಲಾತ್ಮಕವಾದ ಯಾವುದೇ ಪ್ರದರ್ಶನ ಕೈದಿ ಗೈದರೆ ಅದು ಸಮಾಜಕ್ಕೆ ಅಲ್ಪ ಪ್ರಯೋಜನವಾದರು ಕೈದಿಗೆ ತು೦ಬಾ ಪ್ರಯೋಜನ. ಮುಖ್ಯವಾಗಿ ಅವನ/ಳಲ್ಲಿ ಆತ್ಮಾಭಿಮಾನ ಬರುತ್ತದೆ. ನಾನೂ ಒಬ್ಬ ಜನ. ನನ್ನ ನಾಟಕದ ಪಾತ್ರವನ್ನು ಮೆಚ್ಚಿದ ಜನರ ಹೊಗಳುವಿಕೆ, ಅವರ ಪ್ರಶ೦ಸೆಗೆ ನಾನು ನಿತ್ಯಜೀವನದಲ್ಲೂ ಪಾತ್ರನಾದರೆ ಎಷ್ಟು ಸೊಗಸು ಆಲ್ಲವೋ ಎ೦ದು ಗ್ರಹಿಸಿ ಅದನ್ನು ಸ೦ಪಾದಿಸಲು ಶ್ರಮಿಸುತ್ತಾನೆ. ನಿನ್ನೆ ಶ್ರೀಮತಿ ಮಾಲಗಿತ್ತಿಯಾವರು ಯಕ್ಷಗಾನದ ವೇದಿಕೆಯಲ್ಲಿ ಅತಿಥಿಯಾಗಿ ಮಾಡಿದ ಅದ್ಭುತವಾದ ಭಾಷಣದ ಸಾರವಾದರೂ ಅದೇ: ಸಮಾಜದಲ್ಲಿ ಮೊದಲ ಪಾಶಸ್ತ್ಯ ಹೊಟ್ಟೆಗೆ, ನ೦ತರ ಉಡುವ ಬಟ್ಟೆಗೆ. ನ೦ತರ ತಲೆ ಮೇಲೊ೦ದು ಮಾಡಿಗೆ. ಕಡೆಯದಾಗಿ ಜುಟ್ಟಿಗೊ೦ದು ಮಲ್ಲಿಗೆ. ಅ೦ದರೆ ನಿತ್ಯ ಜೀವನದ ಗೊ೦ದಲವೆಲ್ಲಾ ಕಳೆದಮೇಲೆ ಬರುವುಸು ಕಲಾರಾಧನೆ. ಯಾವ ದೇಶದಲ್ಲಿ ಕಲೆ ಬಟ್ಟೆಯ ಕಲೆಯಾಗಿ ಉಳಿಯದೆ ನಿಜವಾದ ಕಲೆಯಾಗಿ ರಾರಾಜಿಸುತ್ತದೊ ಅಲ್ಲಿ ದಾನಾರ್ಥಿಗಳ ಕ್ಷೋಬೆ ಖಚಿತ, ಅಲ್ಲಿ ಸುಭಿಕ್ಷೆ ಖ೦ಡಿತಾ. ತಾತ್ಪರ್ಯ ಕೈದಿಗಳು ನಾಟಕದಲ್ಲಿ ಭಾಗವಹಿಸಿದರೆ ಅವರು ನಿತ್ಯ ಜೀವನದ ಜ೦ಝಾಟದಿ೦ದ ಹೊರಬ೦ದು ಸ೦ತೃಪ್ತ ಸಮಾಜದ ದೃಷ್ಟಿಗೆ ಬೀಳುತ್ತಾರೆ ಮತ್ತು ತಾವೂ ಆ ಸಮಾಜದ ಭಾಗ ಆಗಲು ಶ್ರಮಿಸುತ್ತಾರೆ. ಹೀಗೆ ಗು೦ಡಿತೋಡಿದ ಮಣ್ಣನ್ನು ಅಲ್ಲೇ ಬಿಟ್ಟು ಹೋದ ಕೈದಿ ಸಮಾಜದ ಕೃಪಾ ದೃಷ್ಟಿಗೆ ಪಾತ್ರನಾದಾನೆ? -- ಆನೊ೦ದ ವರ್ಧನ, ತಾತ್ಕಲಿಕ ತಾಣ ಮೈಸೂರು...

  ReplyDelete