08 June 2012

ನಗರ ತುಣುಕುಗಳು

ಮಂಗಳೂರಿನಲ್ಲಿದ್ದಾಗ ಸಂಜೆ ನಾವಿಬ್ಬರು ಸುಮಾರು ಒಂದು ಗಂಟೆಯ ಸಮಯಮಿತಿ ಹಾಕಿಕೊಂಡು, ದಿನಕ್ಕೊಂದು ದಿಕ್ಕಿನಲ್ಲಿ ಆದಷ್ಟು ಬಿರುಸಿನ ನಡಿಗೆ ಹೋಗುತ್ತೇವೆ. ದಿನವಿಡೀ ನಡೆಯುವ ‘ನಮ್ಮನೆ’ಯ ಚಟುವಟಿಕೆಯಲ್ಲಿ ಅನಿವಾರ್ಯವಾಗಿರುವ ಬಾಧ್ಯತೆ ಕಳಚಿಕೊಂಡು, ಮುಕ್ತವಾಗಿ ಮತ್ತು ಮೌನವಾಗಿ ತರಹೇವಾರಿ ಮನೆ, ಮನಗಳ ರೂಪ ಆಶಯಗಳನ್ನು ಗ್ರಹಿಸಿಕೊಳ್ಳುತ್ತಾ ಸಾಗುತ್ತೇವೆ. ಎಷ್ಟೋ ಪರಿಚಿತ ಹೆಸರುಗಳೂ (ಮನೆಯೆದುರಿನ ನಾಮ ಫಲಕಗಳಲ್ಲಿ) ವ್ಯಕ್ತಿಗಳೂ ಸಿಗುತ್ತಾರೆ. ಎಲ್ಲಕ್ಕೂ ಮುಖ್ಯವಾಗಿ ನಗರ ಸಮಸ್ಯೆಗಳ ಬಹುಮುಖ ದರ್ಶನವಾಗುತ್ತಿರುವುದರಲ್ಲಿ ಕೆಲವನ್ನು ಇಲ್ಲಿ ಸಂಕಲಿಸುತ್ತಿದ್ದೇನೆ. ಇವು ಸಾರ್ವಜನಿಕ ಜಾಗೃತಿಗೆ ಕಾರಣವಾಗಬೇಕು ಎಂಬ ಆಶಯದಲ್ಲಿ ಮೊದಲು ಪತ್ರಿಕೆಗಳಿಗೆ ಕಳಿಸಿದ್ದೆ. ಹಾಗೆ ಪ್ರಕಟವಾದವನ್ನು ಇಲ್ಲಿ ಮತ್ತಷ್ಟು ಪರಿಷ್ಕರಿಸಿ (-ಅದಕ್ಕೂ ಹೆಚ್ಚಿನ ಸ್ವಾತಂತ್ರ್ಯ ಉಂಟಲ್ಲಾ!) ಕೆಳಗೆ ಪೋಣಿಸುತ್ತೇನೆ.

ಯುದ್ಧ ಸ್ಮಾರಕವೋ? ಸ್ಪ್ರಿಂಗ್ ಪ್ರದರ್ಶನವೋ?

ಇದು ಮಂಗಳೂರು ಕದ್ರಿ ಗುಡ್ಡೆಯ ಮೇಲಿರುವ ಅತ್ಯಂತ ಪ್ರತಿಷ್ಠಿತ ಸರಕಾರೀ ಅತಿಥಿ ಗೃಹದ ಎದುರು, ಆಕಾಶವಾಣಿಯ ಹಿತ್ತಿಲಿನಲ್ಲಿರುವ ವೀರಯೋಧ ಸ್ಮಾರಕ ಆವರಣದ ಹೊರಗೆ, ಸಾರ್ವಜನಿಕ ದಾರಿಯಲ್ಲಿನ ದೃಶ್ಯ. ಹಲವು ಕಾಲದಿಂದ ಇಲ್ಲಿ ಪ್ರತಿಷ್ಠಾಪನೆಗೊಂಡೇ ಇರುವ ಈ ಲಾರಿ ಯಾವುದೋ ಯುದ್ಧ ಭಾಗಿ ಇರಬಹುದೇ? ಹೌದಾದಲ್ಲಿ ಅದರ ಇತಿಹಾಸವನ್ನು ನಾಮಫಲಕದಲ್ಲಿ ದಾಖಲಿಸಿ, ಹೆಚ್ಚು ಭದ್ರವೂ ಪರಿಸರಕ್ಕೆ ಸೂಕ್ತವೂ ಆದ ಅಡಿಪಾಯದೊಡನೆ ಯೋಧ ಸ್ಮಾರಕ ಆವರಣದೊಳಗೆ ಸೇರಿಸಬೇಕು. ಅಲ್ಲಾ ಎಂದಾದರೆ ಎರಡನೇ ಅವಕಾಶ ಯೋಧ ಸ್ಮಾರಕದ ಪ್ರಾಯೋಜಕ ಸಂಸ್ಥೆ - ಕೆನರಾ ಸ್ಪ್ರಿಂಗ್ಸಿನದ್ದು. ‘ಲಾರಿ ಎಷ್ಟು ಮುಕ್ಕಾದರೂ ನಮ್ಮ ಸ್ಪ್ರಿಂಗ್ಸ್ ಅಮರ’ ಎಂಬುದನ್ನು ಸಾರುವಂತಿರುವ ಈ ಪ್ರದರ್ಶಿಕೆಯನ್ನು ಅವರದೇ ಕಾರ್ಖಾನೆಯ ಪ್ರದರ್ಶನಾಂಗಣಕ್ಕೆ ವರ್ಗಾಯಿಸಿಕೊಳ್ಳುವುದು ಉಚಿತ. ಇಲ್ಲವಾದರೆ ಮೌಲ್ಯಗಳು ಅದಲುಬದಲಾಗಿ ಇಲ್ಲಿನ ಸ್ಪ್ರಿಂಗ್ ಪ್ಲೇಟುಗಳು ಕಳಚಿ ಲಾಂಗು, ಮಚ್ಚುಗಳಾದಾವು. ಭವ್ಯ ಭಾರತೀಯ ಸಂಸ್ಕೃತಿಯ ಸ್ವಘೋಷಿತ ಉತ್ತರಾಧಿಕಾರಿಗಳು, ಅಪರೂಪಕ್ಕೆ (ರೆಸಾರ್ಟ್‌ಗಳೆಲ್ಲಾ ವಿವಿಧ ಭಿನ್ನಮತೀಯರಿಂದ ತುಂಬಿ ಹೋದದ್ದಕ್ಕೆ?) ಈ ಅತಿಥಿಗೃಹಕ್ಕೆ ಬರುವುದುಂಟು. ಆಗ ತಮ್ಮ ‘ಕುಟುಂಬ ಕಲಹ’ವನ್ನು ಲೋಕೋತ್ತರವಾಗಿಸುವ ಮಹಾಯಾನದಲ್ಲಿ, ಇದೇ ಲಾಂಗು ಮಚ್ಚುಗಳನ್ನು ತಮ್ಮ ‘ಕುರುಕ್ಷೇತ್ರ’ಗಳಲ್ಲಿ ಬಳಸಿಬಿಟ್ಟಾರು. ಯೋಧ ಸ್ಮಾರಕಕ್ಕೆ ಹೊಸಹೊಸ ಸ್ವಾತಂತ್ರ್ಯ ಸಮರ  ಸೇನಾನಿಗಳ ಹೆಸರುಗಳು ಸೇರುವ ಅಪಾಯವೂ ಇದೆ! (ಪ್ರಜಾವಾಣಿ)

ರಿಯಲ್ ಎಸ್ಟೇಟ್ ಏಜಂಟ್ ಉ. ಶ್ರೀ. ಮಲ್ಯ

ಹೊಸ ಮಂಗಳೂರು ವಿಕಸಿಸಲು ಬೇಕಾದ ಮೂಲಭೂತ ಅಭಿವೃದ್ಧಿಗಳೆಡೆಗೆ ಸಂಸದನಾಗಿ ಪ್ರಾಮಾಣಿಕ ದುಡಿಮೆ ಕೊಟ್ಟ ಉಳ್ಳಾಲ ಶ್ರೀನಿವಾಸ ಮಲ್ಯರ ಸ್ಮರಣೆಗೆ ಇಲ್ಲೊಂದು ಪುಟ್ಟ ಉದ್ಯಾನವನ ಮೀಸಲು. ಕದ್ರಿಗುಡ್ಡೆ ಮೇಲಿನ ಆಕಾಶವಾಣಿ ವಠಾರದ ಪೂರ್ವ ಕೊನೆಯಲ್ಲಿ, ರಾಷ್ಠ್ರೀಯ ಹೆದ್ದಾರಿಯ ಒತ್ತಿನಲ್ಲಿರುವ ಈ ಸುಂದರ ಹಸಿರು ತುಣುಕಿನ ಕೇಂದ್ರದಲ್ಲಿ ಸಾಕ್ಷಾತ್ ಮಲ್ಯರದೇ ಅಭಿವೃದ್ಧಿಯ ನೀಲನಕ್ಷೆ ಹಿಡಿದು ನಿಂತ ಪುತ್ಥಳಿ ಇದೆ. ಆದರೆ ಅಭಿವೃದ್ಧಿಯ ಧಾವಂತದಲ್ಲಿ ನಾವು ಕಳೆದುಕೊಂಡಿರುವ ಸೌಂದರ್ಯಪ್ರಜ್ಞೆಗೆ, ಸಂಯಮಕ್ಕೆ, ಸಮಗ್ರತೆಯ ದೃಷ್ಟಿಕೋನಕ್ಕೆ ಸಾಕ್ಷಿಯೂ ಇಲ್ಲೇ ದೊರೆಯುವುದು ದೊಡ್ಡ ವ್ಯಂಗ್ಯ.

ಒಂದು ಕ್ಷಣ ಮಲ್ಯರ ಸ್ಮರಣೆ ಮರೆತು ಬಲಕ್ಕೆ ನೋಡಿ. ಹೆದ್ದಾರಿ ಚತುಷ್ಪಥೀಕರಣದ ಅವಸರದಲ್ಲಿ ನುಣ್ಣನೆ ರಸ್ತೆ, ಉದ್ದಕ್ಕೂ ಮರೆಗಿಡಗಳ ಸಹಿತವಾದ ನಡುಗಡ್ಡೆ, ಆವಶ್ಯಕ ಸಂಕೇತಗಳ ಫಲಕಗಳು ಎಲ್ಲವೂ ಇಲ್ಲಿದೆ. ಆದರೆ ಅಂಚು? ಉದ್ದಕ್ಕೂ ಚೆಲ್ಲಿದ ಸಿಮೆಂಟ್ ದ್ರಾವಣ, ಕಟ್ಟಡಗಳನ್ನು ಕೆಡವಿ ತಂದ ಹಾಳಮೂಳದ ಗುಡ್ಡೆಗಳು ನಾಗರಿಕರಿಗೆ ಅವರವರ ಮನೆಯ ಪ್ಲ್ಯಾಸ್ಟಿಕ್ ಕಸಾಂತರ್ಗತ ಎಲ್ಲ ಕೊಳೆತದ್ದನ್ನೂ ಮುಕ್ತವಾಗಿ ಚೆಲ್ಲಿಹೋಗಲು ಕರೆ ನೀಡುತ್ತಲೇ ಇವೆ. ಎಷ್ಟಾದರೂ ಗೋಡೆ ಕಂಡಲ್ಲೆಲ್ಲ ವರ್ಣರಂಜಿತವಾಗಿ  ಉಗಿಯುವ, ಗೋಡೆಮೂಲೆ ಕಂಡಲ್ಲೆಲ್ಲ ಉಚ್ಚೆಹೊಯ್ಯುವ, ನಮ್ಮಂಗಳದ ಹೊರಗಿನದೆಲ್ಲಾ ನಮ್ಮದೇ ವಿಸ್ತೃತ ಕಸಬುಟ್ಟಿ ಎಂದು ತಿಳಿಯದಿದ್ದರೆ ‘ನಾಗರಿಕ’ ಆಗಿ ಬದುಕುವುದು ಹೇಗೆ! ಒಂದು ಕುಟುಂಬ, ಸಿನಿಮಾ ಮಂದಿರದೊಳಗೆ ಜಂಕ್ ಫುಡ್ ಮೇಯ್ತಾ ಇತ್ತಂತೆ. ಪ್ರದರ್ಶನ ಮುಗಿದು ಹೊರಡುವಾಗ ಪ್ಲ್ಯಾಸ್ಟಿಕ್, ಬಾಟಲ್ (ತಿನ್ನುವಾಗ ಚೆಲ್ಲಾಡಿದ್ದು ಬೇರೇ ಕತೆ ಬಿಡಿ!) ಕಸ ಬಿಟ್ಟಾಗ ಕಾಳಜಿವಂತರೊಬ್ಬರು, ಪಾಪ ಮರೆತಿರಬಹುದು, ಎಂದುಕೊಂಡು ಎಚ್ಚರಿಸಿದರಂತೆ. ಯಜಮಾನ ಘಟ್ಟಿಸಿ ಹೇಳಿದನಂತೆ, “ಥೇಟರಿನವರು ಒಬ್ಬೊಬ್ಬರಿಂದ ನೂರಿಪ್ಪತ್ತೈದು ರೂಪಾಯಿ ತೆಗೆಯುದಿಲ್ಲವಾ. ಕ್ಲೀನ್ ಮಾಡ್ಲಿ.”)

ದಾರಿ ಬಗ್ಗೆ ಇಲ್ಲೇ ಸ್ವಲ್ಪ ಹೆಚ್ಚಿನ ಮಾತು. ರಸ್ತೆಯಂಚಿನ ಕಥೆ ಬರಿಯ ಹೆದ್ದಾರಿಯದಲ್ಲ. ಊರಿನ ಯಾವುದೇ ಹೊಸ ಕಾಂಕ್ರಿಟೀಕರಣದ ರಸ್ತೆಗಳ ಅಂಚಿನಲ್ಲೂ ಇರುವಂಥವೇ. ಇವು ಮೊದಲನೆಯದಾಗಿ ಪಾದಚಾರಿಗಳನ್ನು ಸಂಪೂರ್ಣ ನಿರ್ಲಕ್ಷಿಸುತ್ತವೆ. ಸಣ್ಣ ಉದಾಹರಣೆ ನೋಡಿ. ಬಿಜೈಯಿಂದ ಕದ್ರಿಗುಡ್ಡೆಗೇರಿ ಬರುವಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಅಂಚಿನ ದರೆಯ ನಡುವಣ ಕಿಷ್ಕಿಂದೆಯಲ್ಲಿ ಒಬ್ಬರು ಸಂಜೆಯ ‘ವಾಕ್’ ನಡೆಸಿದ್ದರು. ಅಲ್ಲೇ ಜೆಸಿಬಿ ದವಡೆಗೆ ಮೋಸ ಮಾಡಿದ ಒಂದು ಹಳೆಯ ವಿದ್ಯುತ್ ಕಂಬದ ಆಧಾರ ಸರಿಗೆ, ತುಕ್ಕು ಹಿಡಿದುಕೊಂಡು ಕೂತಿದ್ದದ್ದು ವಾಕ್-ಪ್ರೇಮಿಗಳಿಗೆ ಟಾಂಗ್ ಕೊಟ್ಟಿತು. ಆಗ ಪಲ್ಟಿ ಹೊಡೆದವರ ಕತೆ ಸುಖಾಂತವಾದದ್ದು ಡಾಕ್ಟರರ ಇಂಜಕ್ಷನ್, ಬ್ಯಾಂಡೇಜ್ ಬಿಲ್ ಕೊಟ್ಟಮೇಲೇ! ಅಭಿವೃದ್ಧಿ ಸಾಮಾನ್ಯರನ್ನು ದುರ್ಲಕ್ಷಿಸುತ್ತದೆ ಎಂದರೂ ತಪ್ಪಿಲ್ಲ. ಹೆದ್ದಾರಿ ಅಂಚೂ ಸದ್ಯ ತೆರವಾಗುವುದಿಲ್ಲ. ಇದು ಬರಲಿರುವ ಮಳೆಗಾಲದಲ್ಲಿ ನೀರಿನ ಸಹಜ ಹರಿವಿಗೆ ಅಡ್ಡಿ ಮಾಡಿ ಹೆದ್ದಾರಿಯನ್ನು ಹೆದ್ದೊರೆ ಮಾಡುವುದು, ಪರೋಕ್ಷವಾಗಿ ಆ ದಾರಿಯೂ ಹಾಳಾಗಿ, ಸಾರ್ವಜನಿಕ ವಿನಿಯೋಗ ವ್ಯರ್ಥವಾಗುವುದು ನಿಶ್ಚಯ.

ಹೀಗೆ ಊರು ಹಾಳಾಗುತ್ತಿರುವ ವಿಷಾದದೊಡನೆ ಪುನಃ ಮೊದಲ ಚಿತ್ರವನ್ನೇ ನೋಡಿ. ‘ನಿಮಗೊಂದು ಅದ್ದೂರಿಯ ಮನೆ ನಮ್ಮಲ್ಲಿದೆ’ ಎಂಬ ಭಾರೀ ಜಾಹಿರಾತು ಫಲಕ ಮಲ್ಯರ ಪುತ್ಥಳಿಗೆ ಹಿನ್ನೆಲೆ ಕೊಡುವುದು ಕಾಣುತ್ತದೆ. ಇದು ನಮ್ಮ ಸೌಂದರ್ಯಪ್ರಜ್ಞೆಗೂ ಸಂದ ಹಿರಿಯರ ಬಗೆಗೆ ನಮಗಿರುವ ಗೌರವಕ್ಕೂ ಹಿಡಿದ ಕನ್ನಡಿ; ನಾಚಿಕೆಗೇಡು. ಸರಳ ಪಂಚೆ, ಜುಬ್ಬಾ ಮತ್ತು ಶಾಲುಹೊತ್ತ ಆ ವಿಗ್ರಹ “ನನ್ನ ಹಾಗಲ್ಲಾ Lead your life in style” (ಹಿನ್ನೆಲೆಯ ಫಲಕದಲ್ಲಿರುವ ಮಾತು) ಎಂದು ಹೇಳುತ್ತಾ ಬಿಜಿನೆಸ್ ಪ್ರೊಪೊಸಲ್ ಹಿಡಿದೇ ನಿಂತ ಚಪರಾಸಿಯೋ ಎಂದು ಯಾರಾದರೂ ಸಂಶಯಿಸಿದರೆ ಏನೂ ತಪ್ಪಿಲ್ಲ! (ಪ್ರಜಾವಾಣಿ)

ಕದ್ರಿ ಕಣಿವೆ ಪೂರ್ತಿ ಕೆಟ್ಟಿಲ್ಲ!

ಮೇ ತಿಂಗಳ ಬರ ಪರಿಸ್ಥಿತಿಯಲ್ಲಿ ಮಂಗಳೂರ ನಾಗರಿಕ ಪ್ರಜ್ಞೆಯೆಲ್ಲಾ ತುಂಬೆಯ ನೇತ್ರಾವತಿ ಅಣೆಕಟ್ಟೆಯ ಆಳ ಸೂಚ್ಯಂಕದ ಬಗ್ಗೆ ಆತಂಕಿಸುತ್ತಿದೆ. ಆದರೆ ಈಗಲೂ ಕದ್ರಿ ದೇವಸ್ಥಾನದ ಮೂಲೆಯಿಂದ ತೊಡಗಿ ಕಂಬಳ, ಕೊಡಿಯಾಲಗುತ್ತಾಗಿ ಸಮುದ್ರದವರೆಗೂ ವಿಸ್ತರಿಸುವ ಕಣಿವೆಯಲ್ಲಿನ ಭೂಜಲದ ಸಮೃದ್ಧಿ ಕಡಿಮೆಯಾಗಿಲ್ಲ. ಗಮನಿಸಿ, ಇದು ತೂತು ಬಾವಿಯ ಆಳದ ನೀರಲ್ಲ, ತೊರೆಯಾಗಿ ಹರಿಯುವ, ಬಾವಿ ತೆಗೆದರೆ ಸಿಗುವ ಭೂಜಲ. ಕಂಬಳ ವಲಯದ ಅಸಂಖ್ಯ ಟ್ಯಾಂಕರುಗಳು, ಪ್ರತಿ ಮನೆ ಹಿತ್ತಲಿನ ಡೀಜಲ್ ಪಂಪುಗಳು ಊರಿಗೆಲ್ಲಾ ಸಾರುತ್ತಿವೆ (ಅವಿರತ ಪ್ರಸರಿಸುತ್ತಲೂ ಇವೆ) “ನೀರು, ನೀರು, ನೀರು!” ಆದರೆ ಈ ಚಿತ್ರದಲ್ಲಿ ಕಾಣಿಸಿದಂಥ ಸಾರ್ವಜನಿಕ ಬಾವಿಗಳು, ಹಳೆಗಾಲದ ಅನಿವಾರ್ಯತೆಯಲ್ಲಿ ಉಳಿದುಕೊಂಡ ಬಹುತೇಕ ಖಾಸಗಿ ಬಾವಿಗಳೂ ನಲ್ಲಿನೀರಿನ ಸೌಕರ್ಯಕ್ಕಾಗಿ ಅವಹೇಳನವಾಗುತ್ತಿವೆ, ನಿಗಿದೂ ಹೋಗುತ್ತಿವೆ. ಮೊದಲೇ ಹೇಳಿದಂತೆ ಎಲ್ಲೋ ಕೆಲವು ಮಾತ್ರ ಝಣಝಣ ಹಣವಾಗುತ್ತಿವೆ!

ಐತಿಹಾಸಿಕ ದಿನಗಳಲ್ಲಿ ವೈಯಕ್ತಿಕ ಸಂಪತ್ತು ಸಂಚಯದ ಹುಚ್ಚಿನಲ್ಲಿ ನಿಜ ಚಿನ್ನದ ಧಾವಂತ (ಗೋಲ್ಡ್ ರಶ್) ಏರ್ಪಟ್ಟಿತ್ತಂತೆ. ಮುಂದುವರಿದ ದಿನಗಳಲ್ಲಿ ಕೊಲ್ಲಿ ರಾಷ್ಟ್ರಗಳ ನೈಸರ್ಗಿಕ ಸಂಪತ್ತನ್ನು ಗಮನದಲ್ಲಿಟ್ಟುಕೊಂಡು ಅಂತಾರಾಷ್ಟ್ರೀಯ ಮಟ್ಟದ ದೇಶಗಳು (ಅಮೆರಿಕಾ, ಯುರೋಪ್ ದೇಶಗಳು, ಚೀನಾ, ರಶ್ಯಾ ಮುಂತಾದವು) ಬೆಳೆಸಿದರು ಬ್ಲ್ಯಾಕ್-ಗೋಲ್ಡ್ (ಪೆಟ್ರೋಲ್) ರಶ್. ಇಂದು ಸಂಪತ್ತು, ಅಧಿಕಾರಗಳನ್ನು ಮೀರಿ ಸಾರ್ವಜನಿಕ ಆವಶ್ಯಕತೆಯಾಗಿಯೇ ಭೀಕರಾಕೃತಿಯಲ್ಲಿ ರೂಪುಗೊಳ್ಳುತ್ತಿದೆ ಬ್ಲೂಗೋಲ್ಡ್ (ನೀರು) ರಶ್!! ಮೊನ್ನೆ ತಾನೇ ಮೈಸೂರಿನಿಂದ ಬಂದ ನೀರು, ನೆಲಗಳ ಸಾಮಾಜಿಕ ಅರಿವು ಮೂಡಿಸುವ ಕಾರ್ಯಕರ್ತ ಕ್ಷಿತಿಜ್ ಅರಸು ಮೇಲಿನ ಮಾತು ಹೇಳಿದ್ದರು.

ಆ ಸಂಜೆ, ಕ್ಷಿತಿಜ್ ಅರಸು ಇಲ್ಲಿನ ಜಾಗೃತ ಸಾರ್ವಜನಿಕರನ್ನು (ಸಂಯೋಜನೆ - ಸಿಟಿಜೆನ್ಸ್ ಫಾರಂ, ಸ್ಥಳ - ರೋಶನಿ ನಿಲಯ, ಪತ್ರಿಕೆಗಳಲ್ಲೂ ಸೂಚಿಸಿದಂತೆ ಸಾರ್ವಜನಿಕರಿಗೆ ಪ್ರವೇಶ ಮುಕ್ತವಿತ್ತು.) ಉದ್ದೇಶಿಸಿ ಸುಮಾರು ಎರಡು ಗಂಟೆಗಳ ಕಾಲ ನಡೆಸಿಕೊಟ್ಟ ಸಂವಾದದಲ್ಲಿ ಅಷ್ಟೇ ಬಲವಾಗಿ ಎದ್ದ ಇನ್ನೊಂದು ಅಭಿಪ್ರಾಯ ಜಲನಿರ್ವಹಣೆಯ ಕುರಿತಾದದ್ದು. (ನಮ್ಮವರೇ ಆದ ಶ್ರೀಪಡ್ರೆ ಯಾವ ಕಾಲದಿಂದ ಹೇಳುತ್ತಿದ್ದಾರೆ, “ಕೊರತೆ ನೀರಿನದ್ದಲ್ಲ, ಸಮರ್ಥವಾದ ನಿರ್ವಹಣೆಯದ್ದು.”) ಮೂವತ್ತಕ್ಕೂ ಮಿಕ್ಕು ವರ್ಷಗಳಿಂದ ಮಂಗಳೂರು ಜಲಮಂಡಳಿಯಲ್ಲೇ ದುಡಿಯುತ್ತಿದ್ದವರೊಬ್ಬರು ಗಟ್ಟಿಯಾಗಿ ಹೇಳಿದರು “ತುಂಬೆ ಸೂಚ್ಯಂಕ ಆತಂಕ ತರಬಾರದು. ನೇತ್ರಾವತಿಯಲ್ಲಿ ಈಗಲೂ ಮಂಗಳೂರಿಗೆ ಪೂರೈಸುವಲ್ಲಿ ನೀರು ಧಾರಾಳವಿದೆ. ಸ್ಥಳೀಯ ಸಂಪತ್ತನ್ನು (ಕದ್ರಿ ಕಣಿವೆ ಒಂದು ಉದಾಹರಣೆ) ಒಳಗೊಂಡು ವಿತರಿಸುವ ಜಾಣ್ಮೆಯದ್ದೇ ಕೊರತೆ, ನೀರಿನ ಬೆಲೆಯರಿತು ಬಳಸುವವರದ್ದೇ ಕೊರತೆ.”

ಎಷ್ಟೋ ದಾರಿಯಗುಂಟ ಹರಿಯುವ ನೀರಿನ ಮೂಲ ನೋಡಿದರೆ ಯಾರದೋ ಅಂಗಳಗಳಲ್ಲಿ ಲಕಲಕಿಸುವ ಕಾರುಗಳು ಕಾಣಿಸುತ್ತವೆ. ಜಡಿಮಳೆ ಬಂದು ಇವರ ಸುವಿಸ್ತಾರ ಕಾಂಕ್ರೀಟ್ ಹಾಸನ್ನೂ ಕಾರನ್ನೂ ದೂಳಿನ ಕಣವಿಲ್ಲದಂತೆ ತೊಳೆದು ಹರಿದುಹೋದ ಭಾವ ಮೂಡಿಸುತ್ತವೆ! ಕಡು ಬೇಸಗೆಯಲ್ಲೂ ಸುಂದರ ಲಾನಿನ, ತೋಟಗಾರಿಕಾ ಇಲಾಖೆಯ ಸ್ಪರ್ಧೆಯಲ್ಲಿ ಉನ್ನತ ಉದ್ಯಾನ ಪ್ರಶಸ್ತಿ ಗೆಲ್ಲುವ ಗುಟ್ಟು ನಲ್ಲಿಯ ನೇತ್ರಾವತಿ. ಗುಡ್ಡೆ ಮನೆಯ ಸುಬ್ಬಜ್ಜಿ ಬೆಳಿಗ್ಗೆದ್ದು “ಸಂಪಿಗೂ ನೀರು ಏರುತ್ತಿಲ್ಲ” ಎಂದು ಕೊರಗುವಾಗ ತಗ್ಗಿನಮನೆ ಸೀತಮ್ಮ “ಅಯ್ಯೋ, ರಾತ್ರಿ ಎಡ ತೆಂಗಿನ ಬುಡಕ್ಕಿಟ್ಟ ನಲ್ಲಿ ಇನ್ನೂ ಬದಲಿಸಿಲ್ಲ” ಅಂತ ಓಡಿದ್ರಂತೆ.

ಕದ್ರಿಯಲ್ಲಿ ದೇವಳದೊಡನೆ ಹೆಸರಾಂತ ಏಳು ಕೆರೆಗಳು ಮಾತ್ರ ಇರುವುದಲ್ಲ. ಆ ವಠಾರದ ಒಳಒಳಗೆ ಹೋದರೆ ಮತ್ತೆಷ್ಟೂ ಕೆರೆಗಳು, ನೀರಕಣ್ಣುಗಳು ಈಗಲೂ ಹರಡಿಕೊಂಡಿವೆ, ಜಿನುಗುತ್ತಲೇ ಇವೆ. ಆದರೆ ವಠಾರದ ನಾಗರಿಕರು, ತಂತಮ್ಮ ಬಳಕೆಯ ಅಗತ್ಯಗಳನ್ನಷ್ಟೇ ಪೂರೈಸಿಕೊಂಡು, ಜಲನಿಧಿಯನ್ನು ಚರಂಡಿಗೆ ಪೋಲುಮಾಡುತ್ತಲೇ ಇದ್ದಾರೆ. ಇಂದೂ ಕದ್ರಿ ಕಣಿವೆಯ ತಗ್ಗಿನಲ್ಲಿ ಪ್ರಾಕೃತಿಕ ಹರಿವಿನ ತೊರೆ ಬತ್ತಿಲ್ಲ. ಅದರಲ್ಲಿನ ನಾಗರಿಕ (ಹೆಸರಿಸಲಾಗದಷ್ಟು ವೈವಿಧ್ಯಮಯ) ಕಲ್ಮಶಗಳೆಲ್ಲವನ್ನು ಕಳಚಿ ಬಳಸುವ ವಿವೇಚನೆ ನಗರಾಡಳಿತಕ್ಕೆ ಪೂರ್ಣ ಸತ್ತುಹೋಗಿದೆ. ಬೆಂಗಳೂರಿನ ಜೀವನದಿಗಳಾಗಿದ್ದ ಅರ್ಕಾವತಿ, ವೃಷಭಾವತಿಯೇ ಮೊದಲಾದವು ಇಂದು ನಾಮಾವಶೇಷವಾಗಿವೆ. ಯಾರೋ ಅಲ್ಪ ಸಂಖ್ಯಾತರು (ಬಹುಮತ ಹೇಳುವಂತೆ ಅಲ್ಪ ಬುದ್ಧಿಯವರು!) ಅವುಗಳ ಪುನರುಜ್ಜೀವನದ ಭ್ರಮೆ ಕಟ್ಟಿಕೊಂಡು ಹೋರಾಡುತ್ತಿದ್ದಾರೆ. ಅದೃಷ್ಟವಶಾತ್ ಕದ್ರಿ ಕಣಿವೆ ಇನ್ನೂ ಆ ಅಧಃಪತನ ಇನ್ನೂ ಕಂಡಿಲ್ಲ. ನಗರಪಿತೃಗಳೇ ನೀರುಮೂರುವವರ (ತಾಳೆಮರದಿಂದ ಕಳಿ ಮೂರುವಂತೆ) ಗದ್ದಲದಲ್ಲಿ ಕಿವುಡಾದ ಕಿವಿ ತೆರೆದು ಕೇಳಿ - ಬರ ನೀರಿನದ್ದಲ್ಲ, ಬುದ್ಧಿಯದ್ದು! (ಉದಯವಾಣಿ?)

ಏನೆಲ್ಲಾ ಹೂಳಬಹುದೇ?

ಹೆದ್ದಾರಿ ಚತುಷ್ಪಥೀಕರಣದಲ್ಲಿ ನೆಲ ತುಂಬಲು ಉಷ್ಣ ವಿದ್ಯುತ್ ಸ್ಥಾವರದಲ್ಲಿ ಸಿಕ್ಕ ಬೂದಿ ಬಳಸಿದ್ದು ಪತ್ರಿಕೆಗಳಲ್ಲಿ ಬಂತು. ಕೂಡಲೇ ಪರಿಸರ ಜಾಗೃತರು ಆ ಬೂದಿಯಲ್ಲಿರುವ ಭಯಾನಕ ಜೀವವಿರೋಧೀ ಪಾದರಸದ ಸಂಯುಕ್ತದ ಕಡೆಗೆ ಆಡಳಿತದಾರರ ಮತ್ತು ಸಾರ್ವಜನಿಕರ ಗಮನ ಸೆಳೆದರು. ಅದು ನಿಧಾನವಿಷ. ಹೆದ್ದಾರಿಯುದ್ದಕ್ಕೆ ಎಷ್ಟೋ ಶತಮಾನದುದ್ದಕ್ಕೆ ಮಳೆಗಾಲಗಳಲ್ಲಿ ಅದು ಸ್ವಲ್ಪ ಸ್ವಲ್ಪವೇ ಕರಗಿ ಆಳಕ್ಕಿಳಿಯುವುದು ನಿಶ್ಚಯ. ಸಹಜವಾಗಿ ಆ ಉದ್ದಕ್ಕೂ ಭೂಜಲ ವಿಷಯುಕ್ತವಾಗುತ್ತಲೇ ಇರುತ್ತದೆ. ಕಣ್ಣೆದುರಿರುವ ಎಂಡೋ ಸಲ್ಫಾನ್ ದುರಂತದ ಭೀಕರ ಚಿತ್ರಕ್ಕೇ ನಾವು ಉತ್ತರ ಹುಡುಕುವಲ್ಲಿ ಪರಡುತ್ತಿರುವಾಗ ಇನ್ನೊಂದು ಬೇಕೇ? ಅದೃಷ್ಟಕ್ಕೆ ಸಂಬಂಧಪಟ್ಟವರು ಜನರ ಪ್ರತಿಭಟನೆಯನ್ನು ಪುರಸ್ಕರಿಸಿ ಅಷ್ಟನ್ನೂ ತೆಗೆಸಿದ ವರದಿ ಕಂಡ ಮೇಲೆ ಸ್ವಲ್ಪ ಮನಸ್ಸು ಹಗುರವಾಯ್ತು. ಆದರೆ. . 

ಜೆಸಿಬಿ, ಹಿತಾಚಿ, ಟಿಪ್ಪರ್ ಸಾಲು ಆಧಾರಿತ ಅಭಿವೃದ್ಧಿಯ ಹೆದ್ದೆರೆಯಲ್ಲಿಂದು ನಗರವೇನು ಹಳ್ಳಿ ಮೂಲೆಗಳಲ್ಲೂ ಗುಡ್ಡೆ, ಹಳೆರಚನೆಗಳನ್ನು ಸವರುವುದು ಮತ್ತು ತಗ್ಗು, ಕಣಿವೆ ತುಂಬುವುದು ಅವ್ಯಾಹತವಾಗಿ ನಡೆಯುತ್ತಿದೆ. ಮೊದಲೇ ಹೇಳಿದ ಹೆದ್ದಾರಿ ಪ್ರಕರಣ ನೆನೆಸಿಕೊಳ್ಳುವಾಗ, ಇಲ್ಲಿ ತೆಗೆದದ್ದಂತೂ ಹೋಯ್ತು. ಆದರೆ ತುಂಬುತ್ತಿರುವುದೇನು ಎಂಬ ಪ್ರಶ್ನೆ ಬಹಳ ದೊಡ್ಡ ವಿಷಯವಾಗಬೇಕಿತ್ತು - ಗಮನಿಸಿದವರೇ ಇಲ್ಲ! ಈ ಎಲ್ಲ ಚಟುವಟಿಕೆಗಳು ನೂರಕ್ಕೆ ನೂರು ಖಾಸಾ ಅನುಕೂಲಗಳಲ್ಲಷ್ಟೇ ನಡೆದಿದೆ. ಹೀಗೇ ಬೇಟೆಯ ಮೋಜು ಪರಾಕಾಷ್ಟೆಗೆ ಮುಟ್ಟಿದಾಗ ಬೇಟೆ ನಿಯಂತ್ರಣ ತಂದೆವು. ಕಾಡು ಅಳಿದೇ ಹೋಯ್ತು ಎನ್ನುವಾಗ ವನಧಾಮಗಳ ಯೋಚನೆ ಆಮೆಗತಿಯಲ್ಲಿ ರೂಪುಗೊಳ್ಳುತ್ತಾ ಇವೆ. ಊರೆಲ್ಲಾ ಪ್ಲ್ಯಾಸ್ಟಿಕ್ಮಯವಾಗಿ, ಜಾನುವಾರುಗಳು ಮರಣಿಸುವಾಗ ಪ್ಲ್ಯಾಸ್ಟಿಕ್ ನಿಷೇಧಕ್ಕಿಳಿಯುತ್ತಿದ್ದೇವೆ. ಭೂಮ್ಯಂತರ್ಗತ ನೀರಖಜಾನೆಗಳು ಎಟುಕಲಾಗದ ಆಳಕ್ಕಿಳಿದಮೇಲೆ ತೂತುಬಾವಿ ನಿಯಂತ್ರಣ ಯೋಚಿಸುತ್ತಿದ್ದೇವೆ. ಹೀಗೆ ಪಟ್ಟಿ ಮಾಡಲು ಹೋದರೆ ಹನುಮಂತನಬಾಲವಾಗುವಂತೆ ಪ್ರತಿಯೊಂದೂ ಪ್ರಾಕೃತಿಕ ಸತ್ಯಗಳನ್ನು ಅಳಿವಿನಂಚಿಗೆ ತಂದ ಮೇಲೆ ವಿಮರ್ಶಿಸುವ ಮೂರ್ಖತನ ನಮ್ಮದು. ಹೀಗೇ ನಾವು ‘ಹೂಳುತ್ತಿರುವುದೇನು’ ಎಂಬ ಕಟು ವಿಮರ್ಶೆ ಮತ್ತು ನಿಯಂತ್ರಣಕ್ಕೆ ಇನ್ನೊಂದೇ ಸರ್ವನಾಶದ ದಿನ ಕಾದು ಕೂರಬೇಕೇ? ಪ್ರಕೃತಿಯ ನವೀಕರಿಸುವ ಔದಾರ್ಯವನ್ನೂ ಮೀರಿದ ವಿಷ ತುಂಬುವಾಗ ‘ಭೂಮಿ ಹಿಂದಿನವರು ಕೊಟ್ಟ ಬಳುವಳಿ, ಮುಂದಿನವರಿಗೆ ದಾಟಿಸುವ ಜವಾಬ್ದಾರಿ’ ಎನ್ನುವುದನ್ನು ಮರೆಯಬಹುದೇ?

ಎಮ್ಮಾರ್ಪೀಯೆಲ್ ವಲಯದಲ್ಲಿ ಸಹಜ ಕಣಿವೆಗಳನ್ನು ತೋರಿಕೆಗೆ ನಿಗಿದದ್ದಕ್ಕೇ ಇಂದು ಹೊರವಲಯದ (ಹಳ್ಳಿಯ) ಸಹಜ ನೀರಮೂಲಗಳೆಲ್ಲಾ ಕಲುಷಿತಗೊಳ್ಳುತ್ತಿರುವುದನ್ನು ಕೇಳುತ್ತಿದ್ದೇವೆ. ಆರೇಳು ವರ್ಷಗಳ ಹಿಂದೆ ಮಿತ್ರರೊಬ್ಬರು ಎಕ್ಕೂರಿನಿಂದಾಚಿನ ಜವುಗು ಪ್ರದೇಶದಲ್ಲಿ ತಮ್ಮ ಕನಸಿನ ಮನೆ ಕಟ್ಟಿಕೊಂಡರು. ಇವರ ಆವರಣದ ಹೊರಗೆ ಇನ್ನೂ ನಿಗಿಯದ ಆಳಗಳಲ್ಲಿ ವರ್ಷಗಟ್ಟಳೆಯಿಂದ ಪೇರಿದ ಮಂಗಳೂರು ನಗರದ ಕೊಳಚೆ ದುರ್ನಾತ ಬೀರುತ್ತಿತ್ತು. ಸ್ತರಬೇಧ ಸ್ಪಷ್ಟವಾಗಿ ತೋರುವಂತೆ ಮೇಲ್ಮೈಯಲ್ಲಿ ಮಾತ್ರ ಎಲ್ಲೋ ಗುಡ್ಡ ಕಡಿದು ತಂದು ಕೆಮ್ಮಣ್ಣು. ಮಿತ್ರರು ತೆರೆದ ಬಾವಿಯನ್ನೂ ಮಾಡಿಸಿಕೊಂಡಿದ್ದರು. ನೀರೇನೋ ಬಹಳ ಮೇಲೇ ಇತ್ತು. ಆದರೆ ಉಪಯುಕ್ತತೆ?

ನನ್ನೀ ಬರಹಕ್ಕೆ ಹೆಚ್ಚಿನ ಚಿತ್ರ ಸಾಕ್ಷಿಗೆ ಪಂಪ್‌ವೆಲ್ಲಿನಾಚೆ, ಬಸ್ ನಿಲ್ದಾಣ ಬರುವ ಸ್ಥಳವೆಂದೇ ಖ್ಯಾತವಾದ ಗದ್ದೆ ತೋಟದ ಜಾಗಕ್ಕೆ ಹೋಗಿದ್ದೆ. ಹಳೇ ಡಾಮರು ರಸ್ತೆಯ ಭಾರೀ ಹಳಕುಗಳು, ಕಾಂಕ್ರೀಟ್ ಮುರುಕುಗಳು, ಪ್ಲ್ಯಾಸ್ಟಿಕ್ ಚೀಲಗಳು, ಥರ್ಮಾಕೋಲ್, ಹಳೆಚಪ್ಪಲಿ, ತರಹೇವಾರಿ ಪಿಂಗಾಣಿ, ಗಾಜು, ಲೋಹದ ಮತ್ತು ಪ್ಲ್ಯಾಸ್ಟಿಕ್ ಕಸ, ಬಿಸಾಡಿದ ಟಯರು, ಗ್ಯಾರೇಜ್ ವೇಸ್ಟ್, ಮಡ್ಡಿ ಎಣ್ಣೆಯ ಅವಶೇಷವೇ ಮೊದಲಾಗಿ ಹೆಸರಿಸಬಹುದಾದ ಹೆಸರಿಸಲಾಗದ ಸಾವಿರದೆಂಟು ಆದರೆ ಶುದ್ಧ ನಾಗರಿಕ ಕಸದಕುಪ್ಪೆಯನ್ನು ಅಡಿಗಟ್ಟಾಗಿಸಿಕೊಂಡು ಹೆದ್ದಾರಿ ಚತುಷ್ಪಥೀಕರಣ ನೆಲೆ ಕಂಡಿತ್ತು. ಮೇಲ್ಮೈಯಲ್ಲಿ ನುಣ್ಣನೆ ಸೇಡಿ ಮಣ್ಣಿನ ಪದರ ಹೊದ್ದು, ಇಳಿಜಾರಿನ ಅಂಚುಗಳಿಗೆ ಭಾರೀ ‘ಕಗ್ಗಲ್ಲ ಹೊಲಿಗೆ’ ಪಡೆದು ಸಜ್ಜಾಗುತ್ತಿತ್ತು.

ಅಲ್ಲೆಲ್ಲೋ ಅಡಿಯಲ್ಲಿದ್ದ ಸಹಜ ಪುಟ್ಟ ತೊರೆಯೊಂದು ಬೇಸಗೆಯ ಬಡತನದಲ್ಲೂ ದಾರಿ ಹುಡುಕುತ್ತಿತ್ತು. ಅದನ್ನು ತತ್ಕಾಲೀನ ನೆಲ ಕೆದರಿ, ತುಸು ಆಚಿನ ಇನ್ನೊಂದೇ ಸಹಜ ಮತ್ತು ಸ್ವಲ್ಪ ದೊಡ್ಡ ತೋಡಿನೊಡನೆ ಕೂಡಿಕೆ ಮಾಡಿಬಿಟ್ಟಿದ್ದರು. ಆಚಿನ ತೊರೆಯಾದರೋ ಮೇ ತಿಂಗಳಲ್ಲೂ ಅತ್ತ ಗುರುಪುರದ ಪದವುಗಳಿಂದ ಇಲ್ಲಿವರೆಗೂ ವ್ಯವಸ್ಥಿತವಾಗಿ ನೆಲ ಬಸಿದ ಬಲದಿಂದ ಹರಿದೇ ಇತ್ತು. ಆದರೆ ಅವಸರದ ಅಭಿವೃದ್ಧಿಗಾರರು ದಾರಿಯುದ್ದಕ್ಕೆ ಸಿಗುವ ಊರ ಚರಂಡಿಗಳದ್ದೆಲ್ಲಾ ಅದಕ್ಕೆ ಗೆಳೆತನ ಮಾಡಿಸಿದರು. ತೋಡು ಮತ್ತಷ್ಟು ಉದಾರವಾಗಿ, ಯಾರ್ಯಾರೋ ತನ್ನೊಳಗೆ ನುಗ್ಗಿಸಿದ ಅಂಗಳಗಳನ್ನೂ ಸಹಿಸಿಕೊಳ್ಳುತ್ತಾ ಬಂತು. ಮತ್ತವರು ತನ್ನಲ್ಲೆಸೆದ ಹಾಳಮೂಳಗಳನ್ನೆಲ್ಲ ಮಳೆಗಾಲದ ಅನುಕೂಲದಲ್ಲಿ ಸಾಗಿಸಿಕೊಡುವ ಅನೈತಿಕ ಹೊಣೆ ವಹಿಸಿಕೊಳ್ಳುತ್ತಿದೆ. ಅಲ್ಲಲ್ಲಿ ಬೀಳುವ ತೆಂಗಿನ ಗರಿಗಳಿಂದ, ಬೆಳೆದು ನಿಲ್ಲುವ ಮುಳ್ಳು ಪೊದರುಗಳಿಂದ, ಪುಟ್ಟ ದೊಡ್ಡ ಸೇತುವೆಗಳ ಕುಂದದೊಡನೆ ಸಂಭಾಷಿಸುತ್ತಲೇ ಬಾಕಿಯಾದ ಹರಕು ಗೋಣಿಯೇ ಮೊದಲಾದವನ್ನು ಸುಧಾರಿಸಿಕೊಳ್ಳುತ್ತ ಕಪ್ಪಾಗಿ, ಹಸುರುಹಸುರಾಗಿ, ಮಡುಗಟ್ಟಿ, ಜಿಡ್ಡಾಗಿ, ಗೊಸರಾಗಿಯೂ ಹರಿಯುತ್ತಲೇ ಇದೆ. ಅಷ್ಟು ಸಾಲದು ಎಂಬಂತೆ...

ಈ ಕೊನೆಯಲ್ಲಿ ತೋಡಿನ ಪಾತ್ರೆಯ ನಡುವೆಯೇ ಹೊಸ ಯೋಜನೆಯ ಕೊಳಚೆ ಕೊಳವೆ ಸಾಲು ಹೂತಿದ್ದಾರೆ. ಅದಕ್ಕೆ ನಿಶಾನಿ ಎಂಬಂತೆ ಅಲ್ಲಲ್ಲಿ ಆರೇಳಡಿ ಎತ್ತರದ ‘ಮನುಷ್ಯ ಗುಂಡಿ’ ನಿಲ್ಲಿಸಿದ್ದಾರೆ. (ಸದ್ಯವಂತೂ ಹೊರಗೆ ಅದರೆತ್ತರಕ್ಕೆ ಏಣಿ ಇಟ್ಟು ಹತ್ತಿ ಮತ್ತೆ ಒಳಗೂ ಏಣಿ ಬಳಸಬೇಕು.) ನಾಳೆ ಕೊಳವೆ ಸಾಲು ಒಡೆದರೂ ಮನುಷ್ಯಗುಂಡಿ ಉಕ್ಕಿದರೂ (ಕಳಪೆ ಕಾಮಗಾರಿ ಕಣ್ತಪ್ಪೀತು!) ಸಹಜ ತೋಡಿನುದ್ದಕ್ಕೆ ಹೋದೀತೇ ವಿನಾ ಉನ್ನತೀಕರಿಸಿದ ಚತುಷ್ಪಥಕ್ಕೆ ತೊಂದರೆಕೊಡದು ಎಂಬುದು ಯೋಜನೇತರ ಅಭಿಪ್ರಾಯ. ಕೊನೆಯ ಹೊಡೆತವೆಂಬಂತೆ ದಾರಿಯಲ್ಲಿ ಬಿದ್ದ ಮಳೆನೀರನ್ನು ಸಾಗಿಸಲಿರುವ ಚರಂಡಿ ಈ ತೋಡನ್ನು ಸುಮಾರು ಆರಡಿ ಆಳದಲ್ಲಿ ಹೂತು ಹಾಕುವಂತೆ ರೂಪುಗೊಳ್ಳುತ್ತಿರುವುದೂ ಕಾಣುತ್ತದೆ. 

ಈ ಎಲ್ಲದರ ಮೊತ್ತವಾಗಿ ಇನ್ನೇನು ವಾರ, ಎರಡರಲ್ಲಿ ಬರಲಿರುವ ಮಳೆ, ಬಹಳ ಸಂಭ್ರಮದಿಂದ ಹೊಸ ಕಸಕೊಚ್ಚೆಯನ್ನು ಪ್ರತಿ ಕಾಲುಸಂಕ, ಮನುಷ್ಯಗುಂಡಿಗಳ ಸಪುರ ಸಂದುಗಳಲ್ಲಿ ನಿಗಿಯಲಿದೆ. ಆಯಕಟ್ಟಿನ ಜಾಗಗಳಲ್ಲಿ ‘ಸಮ್ಮೇಳನ’ ನಡೆಸಿ, ಇನ್ನೊಂದೇ ಬದಿಗಿರುವ ಬಡಮನೆಗಳಿಗೆ ಬಲವಂತದ ಅತಿಥಿಯಾಗುವುದೂ ತಿಂಗಳುಗಟ್ಟಳೆ ಮೊಕ್ಕಾಂ ಹೂಡುವುದೂ ನಿಶ್ಚಯ. ಮಳೆಗಾಲಕ್ಕೆ ‘ಪೂರ್ಣ ಸಜ್ಜುಗೊಂಡ’ ನರಕಪಾಲಿಕೆ ತನ್ನ (ರಕ್ಷಣಾ) ದೋಣಿಸೇವೆಯ ಉದ್ಘಾಟನೆಯನ್ನು  ಇಲ್ಲೇ ಅನೌಪಚಾರಿಕವಾಗಿ ಮಾಡಲಿದೆ. ನಗರದಲ್ಲಿ ಈ ಋತುವಿನ ನೆರೆಪೀಡಿತರ ಗಂಜಿಕೇಂದ್ರಕ್ಕೆ ಬೋಣಿಯನ್ನೂ ಇಲ್ಲೇ ಸಮೀಪದಲ್ಲಿ ಹಮ್ಮಿಕೊಳ್ಳಲಿದೆ ಖಂಡಿತ.

ಪಡುಬಿದ್ರಿಯ ಬೂದಿ, ಎಮ್ಮಾರ್ಪೀಯೆಲ್ಲಿನ ಸೋರೆಣ್ಣೆ ಬಿಟ್ಟರೆ ಉಳಿದೆಲ್ಲಾ ಹೂಳುವ ‘ನಿರುಪಯುಕ್ತ ವಸ್ತುಗಳು’ ನಿರಪಾಯಕಾರೀ ವಸ್ತುಗಳೇ ಇರಬಹುದೇ? ಏನೆಲ್ಲವನ್ನೂ ಹೂಳಿ ಅದರ ಮೇಲೇ (ಸುಂದರ ಕಾಣಬಹುದು) ಆರೋಗ್ಯಕರ ಮಂಗಳೂರು ಕಟ್ಟಬಹುದೇ? ದೊಡ್ಡ ದ್ವನಿಯಿಲ್ಲದವರ ಜೀವನವನ್ನೂ ಹೂಳಬಹುದೇ? (ಪ್ರಜಾವಾಣಿ ?)

ಅಷ್ಟಿದ್ದೂ ಜೀವವಿಕಾಸ ನಿಂತಿಲ್ಲ!

‘ಸಕ್ಕರೆ’ ಚಿತ್ರೀಕರಣದ ತಂಡದ ಬೆನ್ನುಬಿದ್ದು ಬೈಕ್‌ನಲ್ಲಿದ್ದವನಿಗೆ ಮೂರನೇ ಸಲ ಚರವಾಣಿ ಹೊಡಕೊಳ್ಳುವಾಗ ಎಚ್ಚರವಾಯ್ತು. ಆಚಿನಿಂದ ವೈದ್ಯಮಿತ್ರರೊಬ್ಬರು “ಅಶೋಕರೇ ಇಲ್ಲೊಂದು ಪತ್ರಿಕೆ ಹಾವು ಹಾಲು ಕುಡಿಯುವುದನ್ನು ಪ್ರತ್ಯಕ್ಷದರ್ಶಿಯ ಬಲದಲ್ಲಿ ಪ್ರಚುರಿಸುತ್ತಿದೆ. ಇದು ಸುಳ್ಳಲ್ಲವೇ? ಹಾವು ಹಾಲು ಕುಡಿದರೆ ಸಾಯುತ್ತದಲ್ಲವೇ?” ನಾನು ಉರಗತಜ್ಞನಲ್ಲ. ಆದರೆ ಮಂಗಳೂರಿನ ಉರಗೋದ್ಯಾನದ ಮೂಲಪುರುಷರಾದ ಶರತ್, ಚಾರ್ಲ್ಸ್ ಮತ್ತು ಸೂರ್ಯರಿಂದ ತೊಡಗಿ ಈಚಿನ ಉಡುಪಿಯ ಗುರುರಾಜ ಸನಿಲ್‌ವರೆಗೆ ಹಲವು ಉರಗಮಿತ್ರರ ಮಿತ್ರ. ಅಲ್ಪ ಓದು ಸ್ವಲ್ಪ ಬರಹಗಳಲ್ಲೂ ಹಾವಿನ ವಕಾಲತ್ತು ವಹಿಸಿದ ಬಲದಲ್ಲಿ, “ಹೌದು, ನೀವಂದಂತೆ ಹಾವು ಹಾಲು ಕುಡಿಯುತ್ತದೆಂಬುದು ತಪ್ಪು. ಅವು ಘನ ಮಾಂಸಾಹಾರಿಗಳು. ಸನಿಲ್ ತಮ್ಮ ‘ಹಾವು ನಾವು’ ಪುಸ್ತಕದಲ್ಲಿ (ಆಸಕ್ತರು ಇಲ್ಲೇ ಹಳೇ ಕಡತದಲ್ಲಿ ಇದರ ವಿಮರ್ಶೆ ಓದಬಹುದು)  ಸ್ಪಷ್ಟವಾಗಿ ದಾಖಲಿಸಿದಂತೆ ಹಾವುಗಳು ಪ್ರತ್ಯೇಕ ನೀರೇನೋ ಕುಡಿಯುತ್ತವೆ. ಬಂಧನದಲ್ಲಿ ನೀರು ಸಿಕ್ಕದ ಅನಿವಾರ್ಯತೆಯಲ್ಲಿ ಹಾಲಿಗೆ ಬಾಯಿ ಹಾಕಿದ್ದೋ ಚಪ್ಪರಿಸಿದ್ದೋ ಇರಬಹುದು, ಅಷ್ಟೆ. ಆದರೆ ಹಾಲು ಹಾವಿಗೆ ಮರಣಾಂತಿಕ ಪೇಯವಲ್ಲ. ಬೀದಿ ಬದಿಯ ಹಾವಾಡಿಗರಲ್ಲಿ ಕೆಲವರು (ತಮ್ಮ ಭದ್ರತೆಗಾಗಿ) ಒರಟು ಕ್ರಮಗಳಲ್ಲಿ ತಮ್ಮ ಬಳಿಯಿರುವ ಹಾವಿನ ವಿಷದ ಹಲ್ಲನ್ನು ಕಳಚುತ್ತಾರಂತೆ. (ಆ ಗಾಯಕ್ಕೆ ರೋಗಾಣು ಸಂಪರ್ಕವಾಗಿ ಬೇಗನೇ ಅವು ಸಾಯುವುದೂ ಉಂಟಂತೆ - ಪಾಪ) ಈ ಅಸಹಜ ಸ್ಥಿತಿಯಲ್ಲಿ ತನ್ನ ಸಹಜ ಆಹಾರಸೇವನೆ ಅಸಾಧ್ಯವಾಗಿ ಹಾವು ಬೇಗನೆ ಸತ್ತು ಹೋಗಬಾರದಲ್ಲಾ. ಅದಕ್ಕೆ ಖದೀಮರು ಕೋಳಿ ಮೊಟ್ಟೆಯೊಳಗಿನದನ್ನು ಲೋಟಕ್ಕೆ ಹಾಕಿ, ಚೆನ್ನಾಗಿ ಕಲಕಿ ಹಾವಿನ ಗಂಟಲಿನಲ್ಲಿಳಿಸುತ್ತಾರಂತೆ. ಹೀಗೇ ಬಲವಂತವಾಗಿ ಹಾಲೂ ಕುಡಿಸಬಹುದು. ಅದು ಮೊಟ್ಟೆಯಷ್ಟು ಜೀವಪೋಷಕವಾಗದು; ವಿಷ ಪ್ರಾಶನವಂತೂ ಖಂಡಿತಾ ಆಗದು.”

ನನ್ನ ಮನೆಯಿಂದ ಎರಡು ವಠಾರದಾಚೆಗೆ ಬಹುಮಹಡಿಯ, ಇನ್ನೂರಕ್ಕೂ ಮಿಕ್ಕು ಮನೆಗಳ ಭಾರೀ ವಸತಿ ಸಂಕೀರ್ಣಕ್ಕೆ ಅಡಿಪಾಯದ ಕೆಲಸ ನಡೆಯುತ್ತಾ ಇದೆ. “ಧೋಂಕ್, ಧೋಂಕ್...” ನೆಲನಡುಗಿಸುವ, ಉರಗ ಸಂತತಿ ತಲ್ಲಣಿಸುವ ಗುದ್ದು, ಸದ್ದು ನಿರಂತರವಾಗಿ ಕೇಳುತ್ತಿದ್ದಂತೆ ಉರಗಧ್ಯಾನದಿಂದ ಇನ್ನೇನು ಕಳಚಿಕೊಂಡೆ ಎನ್ನುವಷ್ಟರಲ್ಲಿ ಪಕ್ಕದ್ಮನೆ ಅತ್ತೆ ಧಾವಿಸಿ ಬಂದರು. “ಅಶೋಕಾ ಕ್ಯಾಮರಾ ತಾ. ಕೆದ್ಲಾಯರ ಕಾಂಪೋಂಡಿನಲ್ಲಿ ಹಾವುಗಳು . .” ನನ್ನದು ಪುಟುಗೋಸೀ ಕ್ಯಾಮರವೇ ಆದರೂ ಹಿಡ್ಕೊಂಡೇ ಓಡಿದೆ. ಅವರಂಗಳದಿಂದ ತುಸುವೇ ಎತ್ತರದ ದಾರಿಯ ಬದಿಯಲ್ಲಿ, ಆವರಣದ ಕಟ್ಟೆಗೆ ಕೈಕೊಟ್ಟು ಆಚೀಚೆ ವಠಾರದ ಹಲವರು ಆಗಲೇ ಮೌನ ವೀಕ್ಷಣೆ ನಡೆಸಿದ್ದರು. ನಮ್ಮ ಕಾಲಬುಡದಲ್ಲೇ ಎಂಬಂತೆ ಅವರಂಗಳದಲ್ಲಿ ಎರಡು ಕೇರೇ ಹಾವುಗಳು ಒಂದನ್ನೊಂದು ಸುರುಳಿ ಸುತ್ತುತ್ತಾ ಒಂದರಿಂದ ಎರಡಡಿ ಎತ್ತರಕ್ಕೂ ನುಲಿನುಲಿದು ಏಳುತ್ತ, ಕುಸಿಯುತ್ತಾ ಒಣಮಡಲು, ಹಂಚಿನ ಚೂರು, ಕುರುಚಲು ಹಸಿರನ್ನು careಏ ಮಾಡದೇ ಸಣ್ಣ ವೃತ್ತದಲ್ಲಿ ಸುತ್ತುತ್ತಲೇ ಇದ್ದವು. ಒಂದು ಹಳದಿ, ಮತ್ತೊಂದು ಗಾಢ ಕಂದು ಛಾಯೆಯ ಪುಷ್ಟ ಹಾಗೂ ದೀರ್ಘ ದೇಹಿಗಳು. ಅವುಗಳಿಂದ ಒಂದೆರಡು ಅಡಿಗಳ ದೂರದಲ್ಲಿದ್ದ ನಮ್ಮ ಚಲನವಲನ, ಪಿಸುನುಡಿಗಳನ್ನು ಗಣನೆಗೇ ತಂದುಕೊಳ್ಳದಷ್ಟು ತನ್ಮಯವಾಗಿ, ಜಿದ್ದಿನಲ್ಲೆಂಬಂತೆ ಏದುಸಿರು ಬಿಟ್ಟುಕೊಂಡು, ತಲೆಯಿಂದ ಬಾಲದವರೆಗೆ ಸುರುಳಿ ಬಿಗಿಯುತ್ತಲೇ ಹೊರಳುತ್ತಿದ್ದವು. ಜಾಯಿಂಟೂ, ತಳ್ಕೇ ಹಾಕ್ಕಂಡಿದೇ, ಮಿಲನ ಸಂಭ್ರಮ, ರತಿಸುಖ ಎಂದೆಲ್ಲಾ ಭಾಷಾವಾರು ವಿವರಣೆಗಳು ಕೇಳುತ್ತಲೇ ಇತ್ತು! ನಾನು ಮಾತ್ರ ‘ಹಾವು ನಾವು’ ಪುಸ್ತಕದ ಓದಿನ ನೆನಪಿನಿಂದ ಮೌನಿಯಾಗೇ ಇದ್ದೆ.

ಹದಿನೈದು ಇಪ್ಪತ್ತು ಮಿನಿಟಿನ ಉದ್ದಕ್ಕೆ ಕೆಲವು ಸ್ಥಿರ ಮತ್ತೆ ಕೆಲವು ಚರ ಚಿತ್ರಗಳನ್ನು ಹಿಡಿದುಕೊಂಡೆ. ಕೊನೆಯಲ್ಲಿ ಎರಡೂ ಸ್ಪಲ್ಪ ಬೇರ್ಪಟ್ಟಾಗ ಒಂದು ಕೆದ್ಲಾಯರ ಮನೆಯ ಬಾಗಿಲಿನತ್ತಲೇ ಪಲಾಯನ ಹೂಡಿದಂತೆಯೂ ಇನ್ನೊಂದು ಬೆನ್ನಟ್ಟುವಂತೆಯೂ ಕಂಡಿತು. ಅದುವರೆಗೂ ಬಹಳ ಕಷ್ಟದಿಂದ ಸಹಿಸಿಕೊಂಡಿದ್ದ ಮನೆಯವರು ಈಗ ಮನೆ ಬಾಗಿಲಿಕ್ಕಿ ಗದ್ದಲ ಮಾಡಿದರು. ಅವು ಬೇರೆ ಬೇರೆ ದಿಕ್ಕು ಹಿಡಿದು ಓಡಿಹೋದವು. (ಗುರುರಾಜ ಸನಿಲ್ ಅಭಿಪ್ರಾಯ ಪಡುವಂತೆ) ಎರಡೂ ಗಂಡು ಹಾವುಗಳೇ ಇದ್ದಿರಬೇಕು. ನಮಗೆ ಅಲ್ಲಿ ಕಾಣಲು ಸಿಗದ ಇನ್ನೊಂದೇ ಹೆಣ್ಣು ಹಾವನ್ನು ಕೂಡುವ ಸ್ಪರ್ಧೆಗಿಳಿದವೇ ಇರಬೇಕು. ಅಷ್ಟು ಹೊತ್ತು ಮರೆತಂತಿದ್ದ ‘ಧೋಂಕ್ ಧೋಂಕ್’ ಎಚ್ಚರಿಸಿತು. ಹಾಗಿದ್ದೂ ಜೀವವಿಕಾಸ ನಡೆದೇ ಇದೆಯಲ್ಲ ಎಂಬ ಸಂತಸದಲ್ಲಿ ಕಥೆ ಬಿಲ ಸೇರಿತ್ತು, ನಾವು ಪ್ರತಿಕ್ರಿಯಾ ಅಂಕಣ ಸೇರೋಣವೇ? (ವಿಜಯವಾಣಿ ?)

6 comments:

 1. namma sutta muttalina prapanchavannu taavu avalokisuva pari ananya, Lekhana khushi niditu. dhanyvadagalu
  Arehole Sadashiva Rao

  ReplyDelete
 2. ಲೇಖನ ಚೆನ್ನಾಗಿದೆ. ಇಂದಿನ ದಿನಗಳಲ್ಲಿ ಈ ಕುರಿತು ಚಿಂತಸಬೇಕಾದದ್ದು ವಿಶ್ವ ಪರಿಸರ ದಿನದಂದು ಮಾತ್ರ!

  ReplyDelete
 3. ಮ೦ಗಳೂರಿನ ನಗರ ಪರಿಷತ್ತು ಬೆ೦ಗಳೂರಿನ ನಗರ ಪರಿಷತ್ತಿಗಿ೦ತ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎ೦ದು ಎಣಿಸಿದ್ದೆ. ನನ್ನ ಗ್ರಹಿಕೆ ನಿಮ್ಮ ಲೆಖನ ಓದಿದಾಗ ತಪ್ಪಾಯಿತು. ಮ೦ಗಳೂರಿನ ಪರಿಸರ ಮಾಲಿನ್ಯ ಓದಿ ಖೇದ ವಾಯಿತು. ಹಾವಿಗಳ ಸರಸಾಟವನ್ನು ಸು೦ದರವಾಗಿ ಸೆರೆ ಹಿಡಿದಿರುವಿರಿ. ಧನ್ಯವಾದಗಳು.

  ReplyDelete
 4. priya ashokavardhanaravare ,

  yella sari, namgelrigu gottide ,gottillada vishayagalannu neevu sahita anekara taraavari madhyamada mulaka janarige manadattu maaduttiddare..


  aadaru yello ondu kade badalavane ( dhanaatmaka ) aaguttillaa anistide..samasye galige parihaara yenu??nijavaaglu bereyavarige maadari aaguva kelasa,swachhate mlr nagara torbahude?

  ReplyDelete
 5. ಅಶೋಕ ವರ್ಧನರಿಗೆ, ವಂದೇಮಾತರಮ್.
  ಈ ಶಾಲೆ ನನ್ನದಲ್ಲ; ಈ ಸಂಸ್ಥೆ ಸರಕಾರದ್ದು; ಈ ರಸ್ತೆ ನಗರಪಾಲಕ ಸಂಸ್ಥೆಯದ್ದು; ಈ ವಸ್ತು ಪರರದ್ದು; ಈ ನಗರಕ್ಕೂ ನನಗೂ ಸಂಬಂಧ ಪರಿಮಿತವಾದದ್ದು; ಸಮಾಜಕ್ಕೆ ನಾನು ಕೊಡಬೇಕಾದ್ದು ಏನೂ ಇಲ್ಲ; ನನಗೆ ಸಕಲ ಸವಲತ್ತುಗಳನ್ನು ಒದಗಿಸ ಬೇಕಾದ ಬಾಧ್ಯತೆ ಸಮಾಜದ್ದು; ಇತ್ಯಾದಿ, ಇತ್ಯಾದಿ." ಈ ಭಾವನೆ ಅಮೇರಿಕಾ, ಸಿಂಗಾಪೂರಗಳಲ್ಲಿ ಸಾಧ್ಯವೆ?" ಪ್ರಶ್ನಿಸುತ್ತಾರೆ, ಮಾಜಿ ರಾಷ್ಟ್ರಪತಿ ಡಾ. ಕಲಾಮ್. "Educated" ಸಂಖ್ಹ್ಯೆ ಜಾಸ್ತಿಯಾದಂತೆ ಇಂತಹ ಆಲೋಚನೆಗಳು, ಅನಾಹುತಗಳು ಜಾಸ್ತಿಯಾಗುತ್ತಾ ಇವೆಯಲ್ಲವೇ? "ನಾನು, ನನ್ನದು ನನ್ನವರೆನ್ನದ ಜ್ನಾನನಿಧಿಗೆ ಶರಣು".

  Jai Hind,
  K C Kalkura B.A, B.L
  Advocate

  ReplyDelete
 6. ನಮಸ್ಕಾರಗಳು..'ನಮ್ಮ ಕುಡ್ಲ'ಡ ಸೊಬಗನ್ನು(!) ತುಂಬಾ ಚೆನ್ನಾಗಿ ಚಿತ್ರಿಸಿದ್ದೀರಿ . ನಮ್ಮ ಘನ ಮಹಾನಗರಪಾಲಿಕೆ (ನರಕ ಪಾಲಿಕೆ !!) ಕುಂಭಕರ್ಣ ನಂತೆ ನಿದ್ರಿಸುತ್ತಿದೆ.. ಜೊತೆಗೆ ನಾಗರಿಕರು ತುಂಬಾ ಬೇಜವಾಬ್ದಾರಿ ಯಿಂದಲೇ ವರ್ತಿಸುತ್ತಿದ್ದಾರೆ...
  ಲೇಖನಕ್ಕಾಗಿ ಅಭಿನಂದನೆಗಳು..
  ವಿದ್ಯಾಲಕ್ಷ್ಮಿ

  ReplyDelete