04 May 2012

ಶಿಲಾರೋಹಿಯ ಕಡತ


ಅತ್ರಿ ಜಾಲತಾಣದಲ್ಲಿ ನಾನು ಚದುರಿದಂತೆ ಬರೆದ, ಮುಖ್ಯವಾಗಿ ಶಿಲಾರೋಹಣ ಸಾಹಸಗಳ ಸಂಕಲನ, ಈಗ ಸುಂದರ ಮುಖಪುಟ ಹೊತ್ತು ‘ಶಿಲಾರೋಹಿಯ ಕಡತ’ ಎಂಬ ಪುಸ್ತಕವಾಗಿ ಬಂದಿದೆ. ಇದನ್ನು ಬೆಂಗಳೂರಿನ ಬರಹ ಪಬ್ಲಿಷಿಂಗ್ ಹೌಸ್ ಅಥವಾ ಪ್ರಗತಿ ಗ್ರಾಫಿಕ್ಸಿನ ಡಾ| ಎಂ. ಭೈರೇಗೌಡರು ಬಯಸಿ ಪಡೆದು, ಪ್ರಕಟಿಸಿದ್ದಾರೆ. ಸುಮಾರು ನೂರಾಮೂವತ್ತು ಪುಟಗಳ, ಸುಂದರ ಮುದ್ರಣದ ಸಚಿತ್ರ ಪುಸ್ತಕ ರೂಪಾಯಿ ನೂರರ ಬೆಲೆಯಲ್ಲಿ ಪುಸ್ತಕಮಳಿಗೆಗಳಲ್ಲಿ ನಿಮ್ಮ ಕೈ ಸೇರಲು ಕಾದಿವೆ. ಅಲ್ಲಿ ನಿರಾಶೆಯಾದರೆ ನೇರ ನನಗೆ ಅದರ ಪೂರ್ಣ ಮೊತ್ತವನ್ನು (ರೂ. ನೂರು) ಮನಿಯಾರ್ಡರ್ ಮೂಲಕ ಕಳಿಸಿಕೊಟ್ಟರೆ, ಅಂಚೆ ವೆಚ್ಚ ನಾನೇ ಭರಿಸಿಕೊಂಡು ಕಳಿಸಿಕೊಡಬಲ್ಲೆ. ಮಾರ್ಚಿನಲ್ಲಿ ಹೀಗೇ ಅಭಿನವ ಪ್ರಕಾಶನದಿಂದ ಪ್ರಕಟವಾದ ನನ್ನ ಇನ್ನೊಂದು ಕೃತಿ - ದ್ವೀಪ ಸಮೂಹದ ಕಥೆ (ಅಂಡಮಾನ್ ಮತ್ತು ಲಕ್ಷದ್ವೀಪಗಳ ಪ್ರವಾಸ ಕಥನ) ರೂ ಎಪ್ಪತ್ತೈದು ಮತ್ತು ಸದ್ಯ ಅತ್ರಿ ಪ್ರಕಾಶನದಲ್ಲೇ ದಾಸ್ತಾನು ಉಳಿದಿರುವ ಯಾವವು ಬೇಕಿದ್ದರೂ (ಕೊನೆಯಲ್ಲಿ ಪಟ್ಟಿ ಲಗತ್ತಿಸಿದ್ದೇನೆ) ಕೇವಲ ಮುದ್ರಿತ ಬೆಲೆಯನ್ನು ಮಾತ್ರ ಸೇರಿಸಿ ಕಳಿಸಿ, ಸಾಗಣೆ ವೆಚ್ಚ ನಾನೇ ವಹಿಸಿಕೊಂಡು ಕಳಿಸುತ್ತೇನೆ.


ಶಿಲಾರೋಹಿಯ ಕಡತದಲ್ಲಿ ಪ್ರವೇಶಿಕೆಯಾಗಿ ಸಾಹಸ ಪ್ರೇಮದ ಕುರಿತು ವೈವಿಧ್ಯಮಯ ಸೋದಾಹರಣ ಬರಹವಿದೆ. ಇದು ವೈಚಾರಿಕ ಮಥನಕ್ಕಿಂತಲೂ ಮುಖ್ಯವಾಗಿ ನನ್ನದೇ ಸಾಹಸಾನುಭವಗಳ ನೆಲೆಗಟ್ಟಿನ ಮೇಲೆ ವಿಕಸಿಸಿದೆ. ಸಹಜವಾಗಿ ವಿಶೇಷ ಸಲಕರಣೆ, ಸವಲತ್ತುಗಳ ಹೇರಿಕೆಯಿಲ್ಲದೆ ಪ್ರಾಕೃತಿಕ ಅನುಸಂಧಾನಗಳ ಹಲವು ಸಾಧ್ಯತೆಗಳನ್ನೂ ಇಲ್ಲಿ ತೆರೆದು ತೋರಿದ್ದೇನೆ. ಕಣ್ಕಪ್ಪಡಿ ಕಟ್ಟಿಕೊಂಡು ಸಾಂಪ್ರದಾಯಿಕ ಬದುಕೇ ಸರ್ವಸ್ವ ಎಂದುಕೊಂಡವರಿಂದ ಭಿನ್ನವಾಗಿ ಜೀವನವನ್ನು ಶೋಧಿಸಲು ಇದು ಅವಕಾಶ ಮಾಡಿಕೊಡುತ್ತದೆ ಎಂದೇ ನಾನು ನಂಬಿದ್ದೇನೆ. ಇದನ್ನು ಮೂಲತಃ ಯಾವುದೋ ಯುವಜನೋತ್ಸವದ ವಿಶೇಷ ಸಂಚಿಕೆಗಾಗಿ ಬರೆದಿದ್ದೆ. ಮತ್ತೆ ಕಾಲಕಾಲಕ್ಕೆ ಪರಿಷ್ಕರಿಸುತ್ತ ಪತ್ರಿಕೆ ಹಾಗೂ ಇಲ್ಲೇ ಜಾಲತಾಣದಲ್ಲೂ ಪ್ರಕಟಿಸಿದ್ದೇನೆ. ಅದರ ಅತ್ಯಂತ ಹೊಸ ಆವೃತ್ತಿ ಈ ಪುಸ್ತಕದಲ್ಲಿ ಲಭ್ಯ. 

ದಕ ಜಿಲ್ಲೆಯೊಳಗಿನ ಎರಡು ಮಹಾಬಂಡೆ ಶಿಖರ ಜಮಾಲಾಬಾದ್ ಮತ್ತು ಕೊಡಂಜೆಕಲ್ಲು. ಇವುಗಳೊಡನೆ ನನ್ನ ಬಳಗದ ಬಹುಮುಖೀ ಅನುಸಂಧಾನವನ್ನು ಓದುವ ರುಚಿಗಾಗಿ ಪ್ರತ್ಯೇಕ ಅಧ್ಯಾಯಗಳಲ್ಲಿದ್ದರೂ ಏಕಸೂತ್ರಕ್ಕೆ ಇಲ್ಲಿ ತಂದಿದ್ದೇನೆ. ಇಂದು ಜಮಾಲಾಬಾದ್ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಭಾಗವಾಗಿದೆ. ಸಹಜವಾಗಿ ಶಿಬಿರವಾಸದಿಂದ ತೊಡಗಿ ಹಲವು ಮುಖದ ಅನುಭವಗಳಿಗೆ ಇಂದು ಜಮಾಲಾಬಾದಿನಲ್ಲಿ ನಿರ್ಬಂಧ ಕಾಡಬಹುದು. ಆದರೆ ಅಂಥ ಕೊರತೆಗಳನ್ನು ನೀಗಲು ಕೊಡಂಜೆಕಲ್ಲು ಇದೆ. ಅನಿವಾರ್ಯವಾದರೆ ವಿಶೇಷವಾದ ಶೋಧ ಅನುಮತಿಯನ್ನು ವನ್ಯ ಇಲಾಖೆಯಿಂದ ಗಳಿಸಿ ಜಮಾಲಾಬಾದಿನಲ್ಲೂ ಮುಂದುವರಿಯಬಹುದು ಎನ್ನುವುದಕ್ಕೆ ನನ್ನ ಹಳೆಯ ಅನುಭವ - ತಾತಾರ್ ಶಿಖರಾರೋಹಣ ಅವಶ್ಯ ಓದಬೇಕು. ಅದನ್ನೂ ಇಲ್ಲಿ ಪ್ರತ್ಯೇಕ ಅಧ್ಯಾಯದಲ್ಲಿ ಬಿಡಿಸಿಟ್ಟಿದ್ದೇನೆ. 

ತಾತಾರ್ ಶಿಖರ ಉದಕಮಂಡಲ ಗಿರಿಶ್ರೇಣಿಯ, ಮುದುಮಲೈ ವನಧಾಮದ ಒಂದು ಭಾಗ. ಅದನ್ನು ನಾನು ಸುಮಾರು ನಲ್ವತ್ತು ವರ್ಷಗಳ ಹಿಂದೆ ಅಂದರೆ ಕಾಲೇಜು ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ಏರಿದ್ದೆ. ಅದರ ಅನುಭವದ ತೀವ್ರತೆಯಲ್ಲಿ ನಾನು ರಾತ್ರಿ ಬೆಳಗಾಗುವುದರೊಳಗೆ ಒಂದು ಪುಸ್ತಕವನ್ನೇ ಬರೆದುಬಿಟ್ಟಿದ್ದೆ! ಹೌದು, ನಾಲ್ಕು ನಿದ್ದೆಗೇಡೀ ರಾತ್ರಿ, ಏಳು ಸಾವಿರ ಅಡಿಗೂ ಮಿಕ್ಕ ಶಿಖರವೊಂದರ ದುರ್ಗಮ ಮೈಯಲ್ಲಿ ಚಾರಣ, ವಿಪರೀತ ಹವಾಮಾನದ ಹೊಡೆತಗಳೆಲ್ಲವನ್ನು ಅನುಭವಿಸಿ ಮನೆಗೆ ಬರುವಾಗ ಅದೊಂದು ಮಧ್ಯಾಹ್ನವೇ ಆಗಿತ್ತು. ಮರುದಿನಕ್ಕೆ ಸಾಹಸಭಾಗಿಗಳ ಅನೌಪಚಾರಿಕ ಸಭೆ ನಿಗದಿಯಾಗಿತ್ತು. ಸಭೆಯಲ್ಲಿ ಎಲ್ಲರೂ ತಮ್ಮ ಖಾಸಾ ಸಂತೋಷ, ನೋವುಗಳಿಗೆ ಮಾತಿನ ರೂಪ ಕೊಡಲು ಕಷ್ಟಪಡುತ್ತಿದ್ದರು (ಸಾಹಸಿಗಳು ವಾಗ್ಮಿಗಳಾಗಬೇಕಿಲ್ಲ). ಆದರೆ ನಾನೋ ಹಿಂದಿನ ದಿನ ತೀರಾ ಆವಶ್ಯಕ ಕೆಲಸಗಳಷ್ಟನ್ನೇ ಪೂರೈಸಿ, ಯಾವುದೇ ಪೂರ್ವಾನುಭವ ಮತ್ತು ಯೋಜನೆ ಇಲ್ಲದೆ ಬರೆಯಲು ಕುಳಿತವನು, ಸಭೆಗೆ ಬಹುತೇಕ ಮುಗಿಸಿದ ಪ್ರವಾಸ ಕಥನವನ್ನೇ ಒಯ್ದು, ಓದಿಬಿಟ್ಟಿದ್ದೆ! (ತೀರಾ ದೊಡ್ಡ ಹೋಲಿಕೆಗೆ ಮೊದಲೇ ಕ್ಷಮೆಕೋರಿ) ಶೋಕತೀವ್ರತೆಯಲ್ಲಿ ಬಂದ ಮಾತುಗಳು ರಾಮಾಯಣ ಮಹಾಕಾವ್ಯಕಾರಣವಾದ ಹಾಗೇ ತಾತಾರ್ ಶಿಖರಾರೋಹಣ ಅನಾವರಣಗೊಂಡಿತ್ತು! ಆ ಬರವಣಿಗೆ ಪ್ರಖ್ಯಾತ ಲೇಖಕರಾದ ಎನ್. ಪ್ರಹ್ಲಾದರಾಯರ ಶಿಫಾರಸು ಹೊತ್ತು, ಜಾವಾ ಮೋಟರ್ ಸೈಕಲ್ ಕಾರ್ಖಾನೆಯ ಮಾಲಿಕ ಎಫ್.ಕೆ ಇರಾನಿಯವರ ಧನಸಹಾಯ ಪಡೆದು ಪುಸ್ತಕವಾಯ್ತು. ಕುಲಪತಿ ದೇಜಗೌ ಅದನ್ನು ಅನಾವರಣ ಮಾಡುತ್ತಾ ಮುಕ್ತವಾಗಿ ಹೊಗಳಿ ಅಟ್ಟಕ್ಕಿಟ್ಟದ್ದು, ಡಿವಿಕೆ ಮೂರ್ತಿಯವರ ವಿತರಣಾ ಬಲದಲ್ಲಿ ಕನ್ನಡಿಗರ ಮನೆಮನೆ ಸೇರಿದ್ದು, ಎಲ್ಲಕ್ಕೂ ಮುಖ್ಯವಾಗಿ ನನ್ನನ್ನು ‘ಲೇಖಕ’ನನ್ನಾಗಿಸಿದ್ದು ಮರೆಯುವಂತದ್ದೇ ಅಲ್ಲ. ಅದರ ಮುಖ್ಯಾಂಶಗಳನ್ನು ಮೂಲಸ್ಥಿತಿಯ ಸೊಗಡು ಮಾಸದಂತೆ ಸಂಗ್ರಹಿಸಿ ಇಂದಿನ ಶಿಲಾರೋಹಿಯ ಕಡತದಲ್ಲಿ ಸೇರಿಸಿದ್ದೇನೆ.

ತಾತಾರ್ ಶಿಖರ ನನಗೆ ಉದಕಮಂಡಲ ಶ್ರೇಣಿಗೆ ಪ್ರವೇಶಿಕೆಯೊದಗಿಸಿದ್ದು ನಿಜ. ಆದರೆ ಹತ್ತರೊಡನೆ ಒಂದಾಗಿ ಅದನ್ನು ಅನುಭವಿಸಿದವನಿಗೆ ಸ್ವತಂತ್ರ ಸಾಹಸದ ಮತ್ತು ಎಂದಿಗೂ ಮರೆಯಲಾಗದ ಅನುಭವವನ್ನು ಕೊಟ್ಟ ನಿಟ್ಟಿನಲ್ಲಿ ನೆನೆಯುವುದೇ ಆದರೆ ರಂಗನಾಥ ಸ್ತಂಭಕ್ಕೆ ಸಾಟಿಯಿಲ್ಲ. ಒಮ್ಮೆ ತಮ್ಮ ಆನಂದ ಹತ್ತಿ ಬಂದ, ಮತ್ತೊಮ್ಮೆ ನಮ್ಮ ದಕ್ಷಿಣ ಭಾರತದ ಬೈಕ್ ಯಾತ್ರೆಯಲ್ಲಿ ನಾನು ನೋಡಿಯೇ ನಿಂತಂತೆ ಗೆಳೆಯರಿಬ್ಬರು ಹತ್ತಿಳಿದರು, ಮಗುದೊಮ್ಮೆ ಊಟಿ ಬೈಕ್ ಯಾತ್ರೆಯಲ್ಲಿ ಕೇವಲ ದರ್ಶನಲಾಭವಷ್ಟೇ ದಕ್ಕಿತು. ಇಷ್ಟು ಸತಾಯಿಸಿದ ಈ ಎರಡು ಸಾವಿರ ಅಡಿಗೂ ಮಿಕ್ಕ ಕೋಡುಗಲ್ಲನ್ನು ಯೋಜನೆ ಹಾಕಿ, ತಂಡ ಕಟ್ಟಿ ಏರಿಳಿದ ಅನುಭವ ನಿಜದಲ್ಲಿ ಮಾತುಗಳಿಗೆ ಮೀರಿದ್ದು. ಆದರೂ ಅದನ್ನು ಮೊದಲು ಉದಯವಾಣಿ ಪತ್ರಿಕೆಗೂ ಅನಂತರ ಇಲ್ಲೇ ಜಾಲತಾಣದಲ್ಲೂ ಧಾರಾವಾಹಿಯಾಗಿ ಹರಿಸಿದ್ದೆ. ಅದನ್ನು ಇನ್ನಷ್ಟು ಪರಿಷ್ಕರಿಸಿ ಈಗ ಈ ಪುಸ್ತಕಕ್ಕೂ ಸೇರಿಸಿದ್ದೇನೆ. ಇಷ್ಟೆಲ್ಲಾ ಆಗಿಯೂ...

ನಾನು ಕುರಿತು ಲೇಖಕನಲ್ಲ. ಆದರೆ ವಿದ್ಯಾರ್ಥಿ ದೆಸೆಯಿಂದಲೂ ಅಂದಂದಿನ ವಿಶೇಷಪಟ್ಟ ಅನುಭವಗಳನ್ನು ಹತ್ತು ಜನರೊಡನೆ ಹಂಚಿಕೊಳ್ಳುತ್ತಲೇ ಇದ್ದೆ. (ಇದರಿಂದಾಗಿಯೇ ನನ್ನಂಗಡಿಗೆ ಬಂದ ಎಷ್ಟೋ ಗಿರಾಕಿಗಳು ಹವ್ಯಾಸದಲ್ಲಿ ಗೆಳೆಯರೂ ಆಗುವುದು ಸಾಧ್ಯವಾಯ್ತು.) ಆ ಅನುಭವ ಹತ್ತು ಜನಕ್ಕೆ ದಕ್ಕುವಂತಾಗಲು ಆತ್ಮೀಯರಿಗೆ ಪತ್ರಗಳನ್ನೂ ಪತ್ರಿಕೆಗಳಿಗೆ ಲೇಖನಗಳನ್ನೂ ಬರೆಯುತ್ತ ಬಂದೆ. (ನನ್ನ ವ್ಯಾಪಾರೀ ಪತ್ರಗಳೂ ನನ್ನ ಹವ್ಯಾಸದ ಅನುಭವವನ್ನು ಪ್ರಸರಿಸುತ್ತಿದ್ದವು) ಆದರೆ ಬರಬರುತ್ತಾ ಮುದ್ರಣ ಮಾಧ್ಯಮ ಪ್ರಾಯೋಜಿತ ಸುದ್ದಿ, ಪ್ರಚಾರ-ಲೇಖನಗಳಿಗೆ ನಿರ್ಲಜ್ಜವಾಗಿ ತೆತ್ತುಕೊಳ್ಳುತ್ತಿದೆ, ಇಲ್ಲವೇ ಸ್ಪಷ್ಟ ಜಾಹೀರಾತುಗಳಿಗೆ ಜಾಗ ಹೊಂದಿಸುವಲ್ಲಿ ವೈಚಾರಿಕ ಅಭಿವ್ಯಕ್ತಿಗೆ (ಯೋಗ್ಯತಾನುಸಾರ) ಪೂರ್ಣ ಅವಕಾಶಕೊಡಲಾಗದ ಪಾರತಂತ್ರ್ಯದಲ್ಲಿದೆ ಎನ್ನುವುದು ಕಾಣತೊಡಗಿತು. ಕತ್ತಿಗಿಂತ ಲೇಖನಿ ಸಮರ್ಥ ಎನ್ನುತ್ತಿದ್ದವರೆಲ್ಲಾ ಆ ಶಕ್ತಿಯನ್ನು ಹಣದ ಎದುರು ಕಳೆದು ಕೂರುವುದು ಸಾಮಾನ್ಯವಾಗತೊಡಗಿತು. ಒಂದು ಸಣ್ಣ ಉದಾಹರಣೆ.

ನನಗೆ ಲೇಖನವನ್ನು ನಾಲ್ಕೆಂಟು ಸಲ ಪರಿಷ್ಕರಿಸಿ, ಇನ್ನೊಂದು ಸಾಲೂ ತೆಗೆಯಲಾಗದು ಎನ್ನುವ ಸ್ಥಿತಿಯಲ್ಲೇ ಪತ್ರಿಕೆಗೆ ಕಳಿಸಿಕೊಡುವ ದುರಭ್ಯಾಸ. ಆದರೂ ಲೇಖನಗಳು ‘ಸಂಪಾದಕೀಯ ಸ್ವಾತಂತ್ರ್ಯದ’ ಹೆಸರಿನಲ್ಲಿ, ಮುದ್ರಣಕ್ಕೆ ಹೋಗುವ ಕೊನೆಯ ಗಳಿಗೆಯಲ್ಲಿ ಯಾರದೋ ಶುಭಾಶಯ ಪತ್ರಕ್ಕೋ ಪುಣ್ಯ ತಿಥಿಸ್ಮರಣೆಯ ಜಾಹೀರಾತಿಗೋ ಜಾಗ ಮಾಡಿಕೊಡಲು ಅಂಗವಿಕಲವಾಗುತ್ತಿದ್ದವು. ನಾನು ಲೇಖನ ಕೇಳಿದ ಮಿತ್ರರಿಗೆ ‘ಒಂದು ಪದವನ್ನೂ ಬದಲಿಸದ’ ಆಶ್ವಾಸನೆ ಪಡೆದೇ ಮುಂದುವರಿದ ದಿನಗಳಿದ್ದವು. ಹಾಗೇ ಸುಮಾರು ಹದಿನೈದು ವರ್ಷಗಳ ಹಿಂದೆ ಉತ್ತರಕನ್ನಡದ ಜಲಪಾತಗಳನ್ನು ಮೂರೋ ನಾಲ್ಕೋ ದಿನದ ಸಾಹಸಯಾನದಲ್ಲಿ ಅನುಭವಿಸಿ, ಅದ್ಭುತ ಚಿತ್ರಗಳ ಸಮೇತ ದೀರ್ಘ ಬರಹವೊಂದನ್ನು ಪತ್ರಿಕೆಯೊಂದಕ್ಕೆ ಕಳಿಸಿಕೊಟ್ಟೆ. ಪರಿಚಿತ ಮುಖ್ಯ ಸಂಪಾದಕರು (ಲೆಕ್ಕಕ್ಕೆ ಪತ್ರಿಕೆಯ ಪರಮಾಧಿಕಾರಿ) ಅದನ್ನು ಬಹುವಾಗಿ ಮೆಚ್ಚಿಕೊಂಡರು. ಅಂದು ನನ್ನಲ್ಲಿ ಗಣಕವಿರಲಿಲ್ಲ, ಬರವಣಿಗೆಯೆಲ್ಲಾ ಮಾನುಷಕೃತಿಗಳೇ (ಮ್ಯಾನುಸ್ಕ್ರಿಪ್ಟೂ). ಸಂಪಾದಕ ಮಿತ್ರರು ಅಗತ್ಯಕ್ಕೆ ತಕ್ಕಂತೆ ಲೇಖನವನ್ನು ಮುದ್ರಣಲಿಪಿಗೆ ತಂದು, ಚಿತ್ರಗಳೆಲ್ಲವನ್ನೂ ನೆಗಟಿವ್ ಮಾಡಿಸಿಯೂ ಆಗಿತ್ತು. ವಿಶೇಷ ಸಂಚಿಕೆಗೆ ಪ್ರಯತ್ನಿಸಿ, ಸೋತು, ದೈನಿಕದಲ್ಲಿ ಸಾಪ್ತಾಹಿಕ ಧಾರಾವಾಹಿಯಾಗಿಸಲು ದಿನ ನಿಶ್ಚೈಸಿದ್ದರು. ಆದರೆ ಒಂದು ಜಾಹೀರಾತೂ ತರದ ಅಥವಾ ಪತ್ರಿಕೆಯ ಜಾಹೀರಾತುದಾರರ ಹಿತ ಎತ್ತಿ ಆಡದ ಲೇಖನಕ್ಕೆ ಪತ್ರಿಕೆಯ ಹಣದಾತರು ದಿನ ಮುಂದೂಡುತ್ತಾ ಬಂದರು. ವರ್ಷ ಕಳೆದಮೇಲೆ ನನ್ನ ಒತ್ತಾಯಕ್ಕೆ ಸಂಪಾದಕ ಮಹಾಶಯರು ಕ್ಷಮಾಪೂರ್ವಕವಾಗಿ ಮೂಲಬರಹ, ಚಿತ್ರಗಳು, ಮುದ್ರಿತ ಪುಟಗಳು ಮತ್ತು ಅವರಿಗೆ ನಿರುಪಯುಕ್ತವಾದ ನೆಗೆಟಿವ್‌ಗಳನ್ನೂ (ತಪ್ದಂಡ?) ನನಗೇ ಕಳಿಸಿಕೊಟ್ಟರು!


ಕನ್ನಡದಲ್ಲಿ ಪತ್ರಿಕೆಗಳ ಬೆಳವಣಿಗೆ ಹುಲುಸಾಯ್ತು (ಹೊಲಸು?). ಸಹಜವಾಗಿ ಎಷ್ಟೋ  ಸಂಪಾದಕ ಬಳಗಕ್ಕೆ ನನ್ನ ಪರಿಚಯವೇ ಇರಲಿಲ್ಲ. ಮತ್ತೆ ಅವರ ಮೇಲೆ ಬಿದ್ದು ಲೇಖನ ಕೊಡುವವರು ಧಾರಾಳವಿದ್ದರು, ಪತ್ರಿಕೆಗಳು ಸುಖವಾಗಿ ದಂಧೆ ನಡೆಸಿದ್ದವು. ಮತ್ತವುಗಳಲ್ಲಿ ಹಂಚಿಹೋಗಿದ್ದ ನನ್ನ ಪರಿಚಿತರು, ಸಂಪಾದಕ ಬಳಗದ ಗೆಳೆಯರು ಸಂಕೋಚದಲ್ಲಿ ನನ್ನಿಂದ ಲೇಖನ ಕೇಳುವುದನ್ನೇ ಬಿಟ್ಟರು. ಬರವಣಿಗೆಯೇ ಬೇಸರವಾಗಿದ್ದ ಆ ದಿನಗಳಲ್ಲಿ ಮಗ - ಅಭಯಸಿಂಹ, ಈ ಜಾಲತಾಣ ಒದಗಿಸಿದ. ನನ್ನೊಳಗಿನ ಹಂಚಿಕೊಳ್ಳುವ ತವಕಕ್ಕೆ ಇದು ಬಹುಬೇಗನೆ ಸಮರ್ಥ ಮಾಧ್ಯಮವೆಂದೇ ಕಂಡುಕೊಂಡೆ. ಈಗ ನಾನು ಪೂರ್ಣ ಜಾಲತಾಣಕ್ಕೇ ಸೀಮಿತಗೊಂಡು ಕುಶಿಯಲ್ಲಿದ್ದೇನೆ. ಆದರೆ ವೃತ್ತಿ ಪುಸ್ತಕೋದ್ಯಮದಲ್ಲಿ ಇದ್ದ ತಪ್ಪಿಗೆ, ನನ್ನ ನಡೆಯನ್ನು ಗಮನಿಸುತ್ತಲೇ ಇದ್ದ ಅಭಿನವ ಪ್ರಕಾಶನದ ನ. ರವಿಕುಮಾರ್ ಮೊದಲಿಗೆ ನನ್ನ ಸ್ವಾತಂತ್ರ್ಯ ಹಾಳುಮಾಡಿದರು! “ನೀವು ಪ್ರಕಾಶನ ಮುಚ್ಚಿದ್ದೀರಿ. ಇನ್ನು ನಿಮ್ಮ ಒಂದಾದರೂ ಕೃತಿ ಅಭಿನವದಲ್ಲಿ ಪ್ರಕಟವಾಗಲೇ ಬೇಕು” ಇದು ಅವರ ಒತ್ತಾಯದ ಮನವಿ. ಅರೆ ಮನಸ್ಸಿನಿಂದ ಜಾಲತಾಣದ ನನ್ನೆರಡು ಧಾರಾವಾಹಿಗಳನ್ನು ಸಂಕಲಿಸಿ, ‘ದ್ವೀಪಸಮೂಹದ ಕಥೆ’ ಪುಸ್ತಕರೂಪಕ್ಕೆ ಪರಿಷ್ಕರಿಸಿದ್ದೇನೋ ಆಯ್ತು. ಅಷ್ಟರೊಳಗೆ ನನ್ನ ಗಣಕಕ್ಕೆ ವೈರಿ (ರಸ್) ದಾಳಿಯಾಗಿ ನನ್ನ ಸಂಗ್ರಹದ ಚಿತ್ರಗಳೆಲ್ಲಾ ಮಂಗಮಾಯ. ಆದರೆ ಮಿತ್ರರಾದ ನಿರೇನ್ ಮತ್ತು ಕೃಶಿ (ಅವುಗಳಲ್ಲಿ ಭಾಗಿಗಳೂ ಆಗಿದ್ದುದರಿಂದ) ಸಕಾಲಕ್ಕೆ ಒದಗಿ ಪುಸ್ತಕ ಸುಂದರವಾಗಿ ಬಂತು.

‘ಪ್ರಕಟವಾಗದೇ ಪುಸ್ತಕ ಇಲ್ಲ’ ಎಂಬರ್ಥದ ಮಾತನ್ನು ಮೊನ್ನೆಮೊನ್ನೆ ಮಂದ್ರ- ಕಾದಂ-ಸಂಗೀತದ ನಿರೂಪಕ ಶತಾವಧಾನಿ ಗಣೇಶ್, ಪ್ರೊ| ವೆಂಕಟಾಚಲ ಶಾಸ್ತ್ರಿಗಳನ್ನು ಉದ್ಧರಿಸುತ್ತಾ ಹೇಳಿದ್ದು ಈಗ ಸ್ಮರಿಸುವಂತಾಗಿದೆ. ಪುಟಗಟ್ಟಳೆ ನನ್ನ ಜಾಲತಾಣದ ಬರಹಗಳು ಎಷ್ಟು ಪರಿಷ್ಕಾರಗೊಂಡು ಬಂದರೂ ಒಂದು ಕಣ್ಣೋಟಕ್ಕೆ, ವಾರ ಒಂದರ ಅಲ್ಪ ಓದಿನ ತೃಪ್ತಿಗೆ ಮಾತ್ರ ದಕ್ಕುತ್ತದೆ ಎನ್ನುವುದು ನನ್ನ ಅನುಭವಕ್ಕೆ ಬರುತ್ತಲೇ ಇತ್ತು. ಅದೇ ಪುಸ್ತಕವಾದರೆ ಎಲ್ಲ ಕಾಲಕ್ಕು, ಎಲ್ಲ ಸ್ಥಳಕ್ಕು, ಅದರಷ್ಟಕ್ಕೆ ಪರಿಪೂರ್ಣ ಓದನ್ನು ಕೊಡುವ ಮಾಧ್ಯಮವಾಗಿಯೇ ಉಳಿದಿದೆ ಎನ್ನುವುದನ್ನು ನಾನು ಮರೆತಿರಲಿಲ್ಲ. ವಾಸ್ತವದಲ್ಲಿ ಮೂವತ್ತಾರು ವರ್ಷಗಳ ಹಿಂದೆ ನಾನು ಪುಸ್ತಕ ಮಳಿಗೆ ತೆರೆಯುವ ಕಾಲಕ್ಕೇ ಸ್ವತಃ ಪ್ರಕಾಶಕ ಆಗುವ ಕನಸು ಕಟ್ಟಿಕೊಂಡೇ ಬಂದಿದ್ದೆ. ಅದನ್ನು ನಿಧಾನವಾಗಿಯೇ ನನಸಾಗಿಸಿಕೊಂಡೆ. ಐವತ್ತಕ್ಕೂ ಮಿಕ್ಕು ಪ್ರಕಟಣೆಗಳನ್ನೇನೋ ತಂದೆ. ಆದರೆ ಮತ್ತೆ ಬದಲಾದ ಪರಿಸ್ಥಿತಿಗನುಗುಣವಾಗಿ ವರ್ಷದ ಕೆಳಗೆ ಮುಚ್ಚಿದ ಕಥೆಯನ್ನು ಇಲ್ಲೇ ಹಿಂದೆ ನೀವು ಓದಿದ್ದೀರಿ. ಈಗ ಪುಸ್ತಕ ಮಳಿಗೆಯನ್ನೂ ಮುಚ್ಚಿದ್ದಾಗಿದೆ. ಅದರ ಬೆನ್ನಿಗೇ ಅಭಿನವ ನನ್ನೊಂದು ಪುಸ್ತಕ ಪ್ರಕಟಿಸಲು ಅವಕಾಶಪಡೆದದ್ದು ಪ್ರಚಾರಕ್ಕೆ ಬಂತು. ಅದರಿಂದ ಪ್ರಭಾವಿತರಾದ ಇನ್ನೋರ್ವ ಪ್ರಕಾಶಕ ಮಿತ್ರ ಭೈರೇಗೌಡರೂ ಒತ್ತಾಯಿಸಿದ್ದಕ್ಕೆ ಇಂದು ನಿಮ್ಮೆದುರು ‘ಶಿಲಾರೋಹಿಯ ಕಡತ’ವನ್ನು ಹೆಮ್ಮೆಯಿಂದ ಬಿಡಿಸುವಂತಾಗಿದೆ. ಪ್ರಕಾಶನರಂಗದ ಇತಿಮಿತಿಗಳನ್ನು ತಿಳಿದೂ ನನ್ನ ಆಯ್ದ ಬರಹಕ್ಕೆ ಹೀಗೆ ಮತ್ತೊಂದೇ ಪುಸ್ತಕದ ಸ್ಥಾನವನ್ನು ಕೊಟ್ಟ ಭೈರೇ ಗೌಡರಿಗೆ ನಾನು ಕೃತಜ್ಞ.

ಅಭಿನವಕ್ಕೆ ಕೊಟ್ಟಂತೇ ಇಲ್ಲಿನ ಬರಹಗಳೂ ಜಾಲತಾಣದಲ್ಲಿ ಬಂದವೇ. ಆದರೆ ಆ ಎರಡು ದ್ವೀಪಸಮೂಹದ ಪ್ರವಾಸ ಕಥನಗಳಿಗಿದ್ದ ಸ್ಪಷ್ಟ ಏಕರೂಪತೆ, ಬಂಧ ಇಲ್ಲಿರಲಿಲ್ಲ. ವಾರಗಟ್ಟಳೆ ಗಣಕದೆದುರು ಕುಳಿತು (ತುಂಡು ತುಂಡು ಸಮಯಾನುಕೂಲವಾದ ಕಾರಣ) ಮರುಕಳಿಕೆ ನಿವಾರಿಸು, ಸ್ಥಾನಾಂತರಿಸು, ಕತ್ತರಿಸಿ ಕಳೆ, ಕೊರತೆ ತುಂಬುವಂತೆ ಬರೆ ಎಲ್ಲಾ ಮಾಡಿ, ಕೊನೆಗೆ ಒಂದು ಕೀಲಿ ಒತ್ತುವುದರಲ್ಲಿ (ಮಿಂಚಂಚೆ) ಸಾಹಿತ್ಯವನ್ನೇನೋ ಬಹಳ ಸುಲಭವಾಗಿಯೇ ರವಾನಿಸಿಬಿಟ್ಟೆ. ನಿಶ್ಚಿಂತೆಯಿಂದ ನಾನು ಉಸಿರು ಬಿಡುವುದರೊಳಗೆ, ಅಕ್ಷರಶಃ ಮೂರನೇ ದಿನ, ಭೈರೇಗೌಡರು ಅಷ್ಟನ್ನೂ ಬಹುಸುಲಭವಾಗಿ ಮುದ್ರಣದ ಲಿಪಿಗೆ ಪರಿವರ್ತಿಸಿ, ಪುಟದ ಗಾತ್ರಕ್ಕೆ ಅಳವಡಿಸಿ, ಕರಡಚ್ಚಿನ ಪುಟಗಳ ಹೊರೆಯನ್ನೇ ಕೊರಿಯರ್ ಮೂಲಕ ನನಗೆ ರವಾನಿಸಿಬಿಟ್ಟರು. ಅದನ್ನು ತಿದ್ದುವುದು ದೊಡ್ಡ ಕೆಲಸವಾಗಿರಲಿಲ್ಲ. ಅದರ ಜೊತೆಗೆ ನಾನು ಒದಗಿಸಬೇಕಾದ ನಕ್ಷೆ, ಚಿತ್ರಗಳನ್ನು ಸಂಗ್ರಹಿಸುವುದು, ಪರಿಷ್ಕರಿಸುವುದು ನಿಜಕ್ಕೂ ಸಮಸ್ಯೆಯಾಗಿತ್ತು.

ಶಿಲಾರೋಹಿಯ ಕಡತದ ಅನುಭವಗಳು ಒಂದೇ ಕಾಲಘಟ್ಟದವಲ್ಲ. ಈ ವಲಯದ ನನ್ನ ಮೂವತ್ತಾರು ವರ್ಷಗಳ ಉದ್ದಕ್ಕೂ ಹಂಚಿಹೋಗಿದ್ದ ಇವುಗಳಿಗೆ ಯೋಗ್ಯ ಚಿತ್ರ ಸಂಗ್ರಹಿಸಿ ಕೊಡುವುದು ಕೊನೆಗೂ ನನಗಾಗಲೇ ಇಲ್ಲ. ಜಾಲತಾಣದ ವಿದ್ಯುನ್ಮಾನ ಮಾಧ್ಯಮದಲ್ಲಿನ ಸಾಧ್ಯತೆಗಳು ಮುದ್ರಣ ಮಾಧ್ಯಮದಲ್ಲಿ ದಕ್ಕುವುದಿಲ್ಲ ಎನ್ನುವುದು ನಮ್ಮನ್ನು ಬಹುವಾಗಿ ಕಾಡಿತು. ಅಲ್ಲಿ ಸುಲಭವಾಗಿ ದಾಟಿಹೋದ ಚಿತ್ರಗಳು ಪುಸ್ತಕದಲ್ಲಿ ಸೋತಿದ್ದಾವೆ ಎನ್ನಲು ನನಗೆ ಬೇಸರವಾಗುತ್ತದೆ. ಕನಿಷ್ಠ ರೇಖಾಚಿತ್ರಗಳಾದರೂ ಸಹಾಯಕ್ಕೊದಗೀತು ಎಂಬ ಎಚ್ಚರದಲ್ಲಿ ಮಿತ್ರರಿಗೆ ಸ್ಪಷ್ಟ ಸೂಚನೆ ಕೊಟ್ಟಿದ್ದೆ. “ಜಾಲತಾಣಕ್ಕೆ ನಾನು ಕೈಯಾರೆ ಬರೆದ ನಕ್ಷೆಗಳು ಕೇವಲ ದಿಕ್ಸೂಚಿಗಳು. ನೀವು ಚಿತ್ರ ಕಲಾವಿದನನ್ನು ಹಿಡಿದು ಇದನ್ನು ಮುದ್ರಣಕ್ಕೆ ಮರುರೇಖಿಸಬೇಕು.” ಇದು ಆಗಿಲ್ಲ ಎನ್ನುವುದಕ್ಕೆ ನನಗೆ ವಿಷಾದವಿದೆ. ನನ್ನ ದುರ್ಬಲ ರೇಖೆ ಮತ್ತು ಅಸ್ಪಷ್ಟ ಅಕ್ಷರಗಳನ್ನೊಳಗೊಂಡ ನಕ್ಷೆಗಳು ಕನಿಷ್ಠ ಪುಟದ ಗಾತ್ರಕ್ಕಾದರೂ ಹಿಗ್ಗಬೇಕಿತ್ತು. ವ್ಯತಿರಿಕ್ತವಾಗಿ ಸ್ಟ್ಯಾಂಪು ಗಾತ್ರಕ್ಕೆ ಇಳಿದದ್ದು ಪುಸ್ತಕದ ಸೋಲೇ ಸರಿ. ಆ ಕಾಲದ ಪತ್ರಿಕಾ ತುಣುಕುಗಳ ಬರವಣಿಗೆಗಳನ್ನು ಓದುವ ಸೌಕರ್ಯಕ್ಕೆ ತಕ್ಕ ಗಾತ್ರದಲ್ಲಿ ತರದೇ ಕೇವಲ ಕಣ್ಕಟ್ಟಿಗೆ ಪ್ರಕಟಿಸಿದಂತಾಗಿರುವುದೂ ಇನ್ನೊಂದು ಅವಗುಣವೇ. ಈ ಒಂದೆರಡು ತಾಂತ್ರಿಕ ಕೊರತೆಗಳನ್ನು ಮರೆತರೆ ಒಳ್ಳೆಯ ಓದಿಗೆ ಖಂಡಿತಾ ಮೋಸ ಇಲ್ಲ ಎಂಬ ಭರವಸೆಯೊಡನೆ ಶಿಲಾರೋಹಿಯ ಕಡತವನ್ನು ಲೋಕಾರ್ಪಣೆ ಮಾಡಿದ್ದೇನೆ. ನಿಮ್ಮ ಓದಿನ ಸಂತೋಷವನ್ನು (ಅಥವಾ ಕೊರಗೂ ಕೂಡಾ) ಇಲ್ಲೂ ಪತ್ರದ ಮೂಲಕ ನೇರ ನನಗೂ ಧಾರಾಳ ಬರೆಯುತ್ತೀರಿ ಎಂದು ಕಾದಿರುತ್ತೇನೆ.

ಅತ್ರಿಯ ಲಭ್ಯ ಪುಸ್ತಕಗಳ ಪಟ್ಟಿ:
 1. ಆಲ್ಬರ್ಟ್ ಐನ್ಸ್ಟೈನ್ ಬಾಳಿದರಿಲ್ಲಿ ರೂ. ಎಪ್ಪತ್ತು (ವಿಖ್ಯಾತ ವಿಜ್ಞಾನಿಯ ಸವಿವರ ಜೀವನ ಸಾಧನೆಯ ಕಥನ, ಪುಟ ೩೪೦)
 2. ಎನ್ಸಿಸಿ ದಿನಗಳು ರೂ. ಐವತ್ತೈದು (ಎನ್ಸಿಸಿ ಅಧಿಕಾರಿಯ ಹದಿನೇಳು ವರ್ಷಗಳ ರೋಚಕ ಆತ್ಮಕಥನ, ಪುಟ ೪೫೦)
 3. ವಿಜ್ಞಾನ ಸಪ್ತರ್ಷಿಗಳು ರೂ ಮೂವತ್ತೈದು (ವರಾಹಮಿಹಿರ, ಸಿವಿ ರಾಮನ್, ಶ್ರೀನಿವಾಸರಾಮಾನುಜನ್, ಗೌಸ್, ಲೈಪ್ನಿಟ್ಸ್, ಆಯ್ಲರ್, ಪುಟ ೨೦೦)
 4. ಕೃಷ್ಣವಿವರಗಳು ರೂ. ಮೂವತ್ತು (ಬ್ಲ್ಯಾಕ್ ಹೋಲಿನ ಅಪ್ಪಟ ಕನ್ನಡ ಕಥನ, ಪುಟ ೨೫೦)
 5. ಕೊಪರ್ನಿಕಸ್ ಕ್ರಾಂತಿ ರೂ ಮೂವತ್ತು (ಸೂರ್ಯನ ಸ್ಥಾನ ತೋರಿಸಿದ ವಿಜ್ಞಾನಿಯ ಜೀವನ ಸಾಧನೆ, ಪುಟ ೧೮೦)
 6. ಸಪ್ತ ಸಾಗರದಾಚೆಯೆಲ್ಲೋ ರೂ. ಅರವತ್ತು (ಎಸ್. ಚಂದ್ರಶೇಖರ್ ಸಂದರ್ಶನದ ಜೊತೆ ಅಮೆರಿಕಾ ಪ್ರವಾಸಕಥನ, ಪುಟ ೩೩೦)
 7. Crossing the dateline Rs. 40  (ಸಪ್ತಸಾಗರದಾಚೆಯೆಲ್ಲೋ ಪುಸ್ತಕದ ಸ್ವತಂತ್ರ ಮತ್ತು ಸಂಕ್ಷಿಪ್ತ ಇಂಗ್ಲಿಷ್ ಆವೃತ್ತಿ, ಪುಟ ೧೨೦)
 8. ಕುವೆಂಪು ದರ್ಶನ, ಸಂದರ್ಶನ ರೂ ನಲವತ್ತೈದು (ಕುವೆಂಪು ವೈಜ್ಞಾನಿಕ ದೃಷ್ಟಿಕೋನದ ಕುರಿತ ವಿಶಿಷ್ಟ ಲೇಖನಗಳ ಸಂಕಲನ, ಫುಟ ೧೫೦)
 9. ಅತ್ರಿಸೂನು ಉವಾಚ - ರೂ ಮೂವತ್ತು, (ಮಂಕುತಿಮ್ಮನ ಕಗ್ಗದ ಛಾಯೆಯ ಚೌಪದಿಗಳ ಸಂಕಲನ, ಪುಟ ೫೦)
 10. ಫರ್ಮಾ ಯಕ್ಷಪ್ರಶ್ನೆ - ರೂ ಅರವತ್ತು (ಗಣಿತ ಮತ್ತು ವಿಜ್ಞಾನ ಬಿಡಿ ಲೇಖನಗಳ ಸಂಕಲನ, ೨೪೮)
 11. ಜಾತಕ, ಭವಿಷ್ಯ - ರೂ ಹದಿನೈದು (ಫಲ ಭವಿಷ್ಯದ ಹುಸಿಯನ್ನು ನಿರುದ್ವಿಗ್ನತೆಯಲ್ಲಿ, ಶುದ್ಧ ಕಾರ್ಯಕಾರಣ ಸಂಬಂಧಗಳಿಂದ ಬಿಡಿಸಿಡುತ್ತದೆ, ಪುಟ ೮೦)
 12. ಸಂಗೀತ ರಸನಿಮಿಷಗಳು - ರೂ ಅರವತ್ತು (ಸಾಮಾನ್ಯ ಶ್ರೋತೃವಿಗೆ ಸಂಗೀತ ರಸಸ್ವಾದನೆಯ ಅಪೂರ್ವ ಮಾರ್ಗದರ್ಶಿ, ಪುಟ ೧೫೦)
 13. ಬಾನಬಯಲಾಟ ಗ್ರಹಣ - ರೂ. ಹತ್ತು (ಗ್ರಹಣಗಳ ಕುರಿತು ಸಾದ್ಯಂತ ವಿವರವಿರುವ ಕೈಹೊತ್ತಗೆ, ಪುಟ ೬೦)
 14. With great minds Rs. 30 (ವಿಜ್ಞಾನಿಗಳಾದ ರಾಮಾನುಜನ್, ಸಿವಿರಾಮನ್, ಎಸ್.ಚಂದ್ರಶೇಖರ್ ಮತ್ತು ಕಲಾವಿದರಾದ ಮುರಳೀಧರ ರಾವ್, ಬಿ.ಎನ್.ಸುರೇಶರ ಜೀವನ ಸಾಧನೆಯ ಇಂಗ್ಲಿಷ್ ಲೇಖನಗಳು, ಪುಟ ೮೮)
 15. ಆಲ್ಬರ್ಟ್ ಐನ್ಸ್ಟೈನ್ ಮಾನವೀಯ ಮುಖ - ಅನುವಾದ ರೂ ಐವತ್ತು (ಮಹಾ ವಿಜ್ಞಾನಿಯ ಮಾನವೀಯ ಸ್ಪಂದನಗಳ ಕುರಿತು ಇಂಗ್ಲಿಷಿನ ಸಂಕಲನದ ಅನುವಾದ, ಪುಟ ೨೦೦)
 16. Scientific temper Rs 15 (ವೈಜ್ಞಾನಿಕ ಮನೋಧರ್ಮದ ಕುರಿತು ಇಂಗ್ಲಿಷ್ನಲ್ಲಿ ಆಪ್ತಪರಿಚಯ ಕೊಡಬಲ್ಲ ಕೃತಿ, ಪುಟ ೧೧೦)

ಮೇಲಿನಷ್ಟು ಪುಸ್ತಕಗಳು ಜಿ.ಟಿ. ನಾರಾಯಣ ರಾಯರ ಕೃತಿಗಳು. ಉಳಿದಂತೆ
 1. ನೃತ್ಯಲೋಕ - ಲೇಖಕ ಮುರಳೀಧರ ರಾವ್ - ರೂ ಮುನ್ನೂರು (ಭರತ ನಾಟ್ಯ ಕುರಿತಂತೆ ಅಪೂರ್ವ ರೇಖಾ ಹಾಗೂ ಛಾಯಾಚಿತ್ರ ಸಹಿತ ಬೃಹತ್ ಆಕರ ಗ್ರಂಥ, ಪುಟ ೫೦೫)
 2. ದುಃಖಾರ್ತರು - ಅನುವಾದ: ಎ.ಪಿ. ಸುಬ್ಬಯ್ಯ, ರೂ ಎಪ್ಪತ್ತು (ಖ್ಯಾತ ಫ್ರೆಂಚ್ ಲೇಖಕ ವಿಕ್ಟರ್ ಹ್ಯೂಗೋನ ಲೇ ಮಿಸರೆಬಲ್ಸಿನ ಅನುವಾದ, ಪುಟ ೩೨೦)
 3. ಸಂಜೆ ಬಿಸಿಲು - ಎ.ಪಿ. ಮಾಲತಿ - ರೂ ೬೦ (ಸಾಮಾಜಿಕ ಕಥಾ ಸಂಕಲನ, ಪುಟ ೧೬೦)
 4. ದೀವಟಿಗೆ - ರಾಘವ ನಂಬಿಯಾರ್ ರೂ ೬೦ (ಯಕ್ಷಗಾನದ ಪುನರುಜ್ಜೀವನದ ಅಪೂರ್ವ ಸಂಶೋಧನಾ ಕೃತಿ, ಸಚಿತ್ರ ಪುಟ ೮೫)
 5. ಮಾರಿಷಾ ಕಲ್ಯಾಣ - ಕಾವ್ಯ ಅಮೃತ ಸೋಮೇಶ್ವರ, ಅರ್ಥ ವಿವಿಧ ಕಲಾವಿದರು, ರೂ ೧೮ (ಪರಿಸರ ಕುರಿತಂತೆ ಪೌರಾಣಿಕ ಸತ್ತ್ವದ್ದೇ ಯಕ್ಷ ಪ್ರಸಂಗ ಮತ್ತು ವಾಗ್ವಿಲಾಸವಾಗಿಯೇ ಮೂಡಿದ ಅರ್ಥ ಸಹಿತ ಪುಟ ೭೦)
 6. ಪಾರ್ತಿಸುಬ್ಬನ ಯಕ್ಷಗಾನ (ಸಮಗ್ರ ಪ್ರಸಂಗಗಳು) - ಸಂ. ಕುಕ್ಕಿಲ ಕೃಷ್ಣ ಭಟ್, ರೂ ೧೮೦ (ಅಪೂರ್ವ ಪೂರಕ ಲೇಖನಗಳ ಸಹಿತ ಸಂಪೂರ್ಣ ರಾಮಾಯಣ ಯಕ್ಷ ಪ್ರಸಂಗಗಳು, ಪುಟ ೭೮೦)
 7. ಅಕ್ಷಮಾಲಾ - ರುಕ್ಮಿಣಿಮಾಲಾ ರೂ ೨೦ (ಮಕ್ಕಳ ಕಥಾ ಸಂಕಲನ, ಪುಟ ೭೦)

ವಿಶೇಷ ಸೂಚನೆ: ಅತ್ರಿ ಪ್ರಕಾಶನ ಮುಚ್ಚಿರುವುದರಿಂದ, ಮೇಲೆ ಕಾಣಿಸಿದ ಪ್ರಕಟಣೆಗಳು ಸೀಮಿತ ಸಂಖ್ಯೆಯಲ್ಲಷ್ಟೇ ಉಳಿದಿರುವುದರಿಂದ, ಎಲ್ಲಕ್ಕೂ ಮುಖ್ಯವಾಗಿ ಇಷ್ಟು ಕಡಿಮೆ ಬೆಲೆಯಲ್ಲಿ ಇನ್ನೆಂದೂ ಬರಲು ಸಾಧ್ಯವಿಲ್ಲದುದರಿಂದ ಕೂಡಲೇ ನಿಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಿ.

8 comments:

 1. Congrats Sir!
  You are back on track of writing. We need your experiences as a trekker and explorer. Your books have always been useful.
  http://bedrefoundation.blogspot.com

  ReplyDelete
 2. ಸರ್
  ನಿಮ್ಮ ಬರೆಹವನ್ನು ಓದಿದೆ. ಮೊದಲು ನಿಮಗೆ ಅಭಿನಂದನೆಗಳು
  ಚಿತ್ರಗಳ ವಿಚಾರದಲ್ಲಿ ನಾನು ಸೋತಿರುವೆ.. ಕ್ಷಮೆಯಿರಲಿ.
  ನನ್ನ ಕೆಲಸಗಳ ಒತ್ತಡವೂ ಇದಕ್ಕೆ ಕಾರಣವಿರಬಹುದು.. ಏನೇ ಆಗಲಿ ತಪ್ಪು ತಪ್ಪೇ... ಮತ್ತೊಮ್ಮೆ ಕ್ಷಮೆ ಯಾಚಿಸುವೆ
  ನಿಮ್ಮ ಬರವಣಿಗೆ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನು ಓದುಗರು ವ್ಯಕ್ತಪಡಿಸಿದ್ದಾರೆ ಇಲ್ಲಿ ನನ್ನ ಗೆಳೆಯರು ಪುಸ್ತಕ ಓದಿ ಪುಸ್ತಕ ಹಿಡಿದು ಪ್ರವಾಸಕ್ಕೆ ಹೊರಟ ಪ್ರಸಂಗವೂ ನಡೆದಿದೆ.
  ಮುಂದಿನ ಪುಸ್ತಕ ಮಾಡುವಾಗ ಎಲ್ಲ ಲೋಪಗಳನ್ನು ಸರಿಪಡಿಸಿ ಹೊರತರುವೆ
  ವಂದನೆಗಳು
  ಬೈರೇಗೌಡ

  ReplyDelete
 3. Dear Ashok

  Glad to know the publication of 'Shilarohiya Kadaka'. Certainly it will be a very useful guide for the trekkers ; real experience behind it.
  Will have the copy certainly.
  Congratulations on sharing your experiences.

  Best regards
  Yoga

  ReplyDelete
 4. please provide address to which MO to be sent

  ReplyDelete
  Replies
  1. ಜಿ.ಎನ್.ಅಶೋಕವರ್ಧನ, ಅಭಯಾದ್ರಿ, ಪಿಂಟೋರವರ ಓಣಿ, ಕರಂಗಲ್ಪಾಡಿ, ಮಂಗಳೂರು ೫೭೫೦೦೧
   ದೂರವಾಣಿ ೦೮೨೪-೨೪೯೨೩೯೭

   Delete
 5. ಅಭಿನಂದನೆಗಳು....
  ಗಿರೀಶ್, ಬಜಪೆ

  ReplyDelete
 6. ಸರ್,

  ನನಗೆ ಕೆಲವು ಪುಸ್ತಕಗಳು ಬೇಕಾಗಿದೆ. ಹಣವನ್ನು ನಿಮ್ಮ accountige E-transfer ಮಾಡಬಹುದೇ? ದಯವಿಟ್ಟು ತಿಳಿಸಿ.

  ವಂದನೆಗಳು,
  ರಾಮಕೃಷ್ಣ

  ReplyDelete
 7. ಪ್ರಿಯ ಅಶೋಕವರ್ಧನ್ ನಮಸ್ಕಾರ
  ನಿಮ್ಮ ಸಾಕ್ಷಾತ್ ಅನುಭವಗಳನ್ನು `ಕಡತ'ದಲ್ಲಿ ಕಟ್ಟಿಕೊಟ್ಟಿದ್ದೀರಿ. ಸ್ವಾನುಭವ ಕಥನವಾದುದರಿಂದ ಅದರಲ್ಲಿ ತ್ಯುಕ್ತಿ, ಉತ್ಪ್ರೇಕ್ಷೆಗಳಿಗೆ ಅವಕಾಶ ಇಲ್ಲ. ಎಲ್ಲವೂ ಸಹಜ ನಿರೂಪಣೆ, ವಸ್ತುನಿಷ್ಠತೆಗೇ ಪ್ರಾಧಾನ್ಯ. ಸಹಜ, ಸರಳ ಎಂಬುದರಿಂದ ರೋಚಕತೆಗೆ ಏನೂ ಚ್ಯುತಿ ಆಗಿಲ್ಲ.
  ಅಲ್ಲಲ್ಲೆ ಸೇರಿರುವ ಚಿತ್ರಗಳು ಪ್ರಾಯಃ ಮೂಲದಲ್ಲಿ ವರ್ಣ ಚಿತ್ರಗಳಿರಬೇಕು. ಕಪ್ಪು ಬಿಳುಪಿನಲ್ಲಿ ಅಚ್ಚಾಗುವಾಗ ಸ್ವಲ್ಪ ಅಸ್ಪಷ್ಟ ಆಗುವುದು ಅನಿವಾರ್ಯ. ಆದರೆ ಚಿತ್ರಗಳನ್ನು ಕೊಂಚ ದೊಡ್ಡದಾಗಿ ಮುದ್ರಿಸುತ್ತಿದ್ದರೆ, ಹೆಚ್ಚು ಸ್ಫುಟವಾಗುತ್ತಿದ್ದವು ಎಂಬುದು ನನ್ನ ಅಭಿಪ್ರಾಯ.
  ನಿಮ್ಮ ತೀರ್ಥರೂಪ - ಜಿಟಿನಾ ಅವರ, ನಕ್ಷತ್ರಲೋಕದಿಂದ ತೊಡಗಿ ಹೆಚ್ಚಿನ ಎಲ್ಲ ವಿಜ್ಞಾನ ಪುಸ್ತಕಗಳು ನನ್ನಲ್ಲಿವೆ. ಅವನ್ನು ಓದಿದ್ದೇನೆ. ಅವರ ಕತೆಗಳನ್ನೂ (ಅವು ನನಗೆ ಪ್ರಿಯ. `ಸುಬ್ಬಪ್ಪನ ದಯೆ'ಯನ್ನು ಕುರಿತು ತರಗತಿಯಲ್ಲಿ - ಎಸ್ಸೆಸ್ಸೆಲ್ಸಿಯಲ್ಲಿ - ನಾನು ಬರೆದ ಪ್ರಬಂಧಕ್ಕೆ ಗರಿಷ್ಠಾಂಕಗಳು ಲಭಿಸಿದ್ದವು!) ಓದಿದ್ದೇನೆ. ಮೊದಮೊದಲು ಸರಳ ಸರಸವಾಗಿದ್ದ ಅವರ ಭಾಷಾಶೈಲಿ ಕ್ರಮೇಣ ಕೊಂಚ ಪೆಡಸಾದವು ಎಂದು ಅವರಿವರು ಹೇಳುವುದನ್ನು ನಾನು ಕೇಳಿದ್ದೇನೆ. ನನಗೂ ಒಮ್ಮೊಮ್ಮೆ ಹಾಗೆ ಎನಿಸಿದ್ದೂ ಇದೆ. ಆದರೆ ಅವರ ಭಾಷಾ ಶೈಲಿಗಳು ಸುಂದರ, ಸ್ಪಷ್ಠ ಎಂಬುದರಲ್ಲಿ ಎರಡು ಮಾತಿಲ್ಲ. ಈ ಮಾತು ನಿಮ್ಮ ಬರವಣಿಗೆಗೂ ಸಲ್ಲುತ್ತದೆ. ಅದರೊಂದಿಗೆ ಶೀಲಸ್ಯ ಇಯಂ ಶೈಲೀ, Sಣಥಿಟe is ಣhe mಚಿಟಿ ಎಂಬುದನ್ನು ನಾನೂ ಒಪ್ಪುತ್ತೇನೆ.
  ಇನ್ನು ಮುಂದೆ ನೀವು ಹೆಚ್ಚು ಹೆಚ್ಚಾಗಿ ಬರಣಿಗೆಯಲ್ಲಿ ಕೈಯಾಡಿಸಬಹುದು ಎಂದು ನಾನು ಭಾವಿಸಿದ್ದೇನೆ; ಹಾಗೆ ಮಾಡಿ ಎಂದು ಕೇಳಿಕೊಳ್ಳುತ್ತೇನೆ. ಪ್ರತ್ಯಕ್ಷಾನುಭವ ಪ್ರೇರಿತರಾಗಿ ಬರೆಯುವವರು ಈಗೀಗ ಕಡಮೆ ಆಗುತ್ತಿದ್ದಾರೆ. ಆ ಕೊರತೆಯನ್ನು ನೀವು ಖಂಡಿತ ತುಂಬಬಹುದು.
  ಎಂ. ರಾಮಚಂದ್ರ

  ReplyDelete