04 April 2012

ಅತ್ರಿ ಜಾಲತಾಣಕ್ಕೊಂದು ಹೊಸ ಮುನ್ನುಡಿ


ಸುಮಾರು ನಾಲ್ಕು ವರ್ಷಗಳ ಹಿಂದೆ ನನ್ನ ಈ ಜಾಲತಾಣ ಸುರುವಾದಾಗ ಜಾಲಿಗನ ನೆಲೆ ಅಥವಾ ಹೋಂ ಪೇಜೊಂದನ್ನು ಬರೆದುಕೊಂಡಿದ್ದೆ. ಅದನ್ನೇನು, ಯಾವುದೇ ಜಾಲತಾಣದಲ್ಲೂ ಆ ಪುಟದಲ್ಲಿ ಕೋಷ್ಠಕ ಮಾದರಿಯನ್ನು (ಅರ್ಥಾತ್ ಬಯ್ಯೋದಾತಾ ಅಥವಾ ಬಯೋ ಡಾಟಾ) ಮೀರಿ ಬರೆದ ಮಾತುಗಳನ್ನು ಬಹುತೇಕ ಮಂದಿ ಓದುವುದೇ ಇಲ್ಲ ಎಂದು ನನ್ನಂದಾಜು. (ನನಗಿಲ್ಲಿಯವರೆಗೆ ಅದರ ಪ್ರತಿಕ್ರಿಯಾ ಅಂಕಣದಲ್ಲಾಗಲೀ ಅದರ ಉಲ್ಲೇಖದೊಡನೆ ವೈಯಕ್ತಿಕವಾಗಿಯೇ ಆಗಲಿ ಒಂದೂ ಪತ್ರ ಬಂದದ್ದಿಲ್ಲ!)  ಆದರೂ ಪವಿತ್ರ ಕರ್ತವ್ಯ ಎನ್ನುವಂತೆ ಕಳೆದ ನಾಲ್ಕು ವರ್ಷಗಳಲ್ಲಿ ಅದನ್ನು ಕಾಲಕಾಲಕ್ಕೆ ಪರಿಷ್ಕರಿಸುತ್ತಲೇ ಬಂದಿದ್ದೇನೆ. ಅದರಲ್ಲೂ ಈಗ ನನ್ನ ಜೀವನರಂಗ ಬಹು ಮುಖ್ಯ ತಿರುವು ತೆಗೆದುಕೊಂಡಿರುವುದರಿಂದ ಅನಿವಾರ್ಯವಾಗಿ ಹೊಸ ಆವೃತ್ತಿಯನ್ನೇ ಬರೆದಿದ್ದೇನೆ. ಸದ್ಯ ಇದನ್ನು ಇಲ್ಲಿ ಒಂದು ವಾರಕ್ಕೆ ತೆರೆದಿಟ್ಟು, ನಿಮ್ಮೊಡನೆ ಚರ್ಚೆಯಲ್ಲಿ (ಅವಶ್ಯವಾದರೆ) ಪರಿಷ್ಕರಿಸಿ, ಹಳತನ್ನು ಕಿತ್ತುಹಾಕಿ, ಇದನ್ನು ಅಲ್ಲಿಗೆ ಏರಿಸುತ್ತೇನೆ. ನಿಮ್ಮ ತೌಲನಿಕ ಅವಗಾಹನೆಗಾಗಿ ಮೊದಲು ಸದ್ಯ ಚಾಲ್ತಿಯಲ್ಲಿರುವ ಹಳೆ ನೆಲೆಯನ್ನು ಲಗತ್ತಿಸಿದ್ದೇನೆ.


ಅತ್ರಿ, ಅಶೋಕ, ಆರೋಹಣ

ಅತ್ರಿ: ನನ್ನ (ಜಿ. ಎನ್. ಅಶೋಕವರ್ಧನನ) ವಿದ್ಯಾರ್ಥಿ ದೆಸೆಯ ಒಂದು ಹವ್ಯಾಸವಾಗಿ ತೊಡಗಿದ ಪುಸ್ತಕ ವ್ಯಾಪಾರ ವೃತ್ತಿಯಾಗಿಯೇ ಕುದುರಿದ್ದಕ್ಕೆ ಸಾಕ್ಷಿ ಅತ್ರಿ ಬುಕ್ ಸೆಂಟರ್. ಮೈಸೂರಿನ ಬೀದಿಗಳಲ್ಲಿ, ಆಸುಪಾಸಿನ ಊರುಗಳಲ್ಲೂ ಮನೆಮನೆಗೆ ಪುಸ್ತಕ ಒಯ್ದು ಮಾರಾಟ ಮಾಡಿದ ಅನುಭವ, ಒಂದೂವರೆ ತಿಂಗಳ ಮುಂಬೈ ಮತ್ತು ಪುಣೆ ವ್ಯಾಪಾರಕ್ಕೂ ಮುಂದಿನ ವಿದ್ಯಾರ್ಥಿ ದೆಸೆಯುದ್ದಕ್ಕೂ ಅಂಚೆ ಪುಸ್ತಕ ವ್ಯಾಪಾರಕ್ಕೂ ಧೈರ್ಯ ತುಂಬಿತು. ೧೯೭೫ರಲ್ಲಿ ಮಂಗಳೂರಿನಲ್ಲಿ ಅತ್ರಿ ಮಳಿಗೆ ಮೊದಲ ಬಾರಿಗೆ ಸಾರ್ವಜನಿಕಕ್ಕೆ ತೆರೆದುಕೊಂಡಾಗ ಕೇವಲ ತಾಪೇದಾರಿಯನ್ನು (ತಿಂಗಳ ಕೊನೆಯಲ್ಲಿ ಸಂಬಳಕ್ಕೆ ಯಾರದೋ ಎದುರು ದೀನನಾಗುವ ಸ್ಥಿತಿ) ನಿರಾಕರಿಸುವ ವೃತ್ತಿಯಾಗಿ ಭಾವಿಸಿದ್ದೆ. ನನ್ನ ಹಿನ್ನೆಲೆಗೆ ಮತ್ತು ಓದಿಗೆ ನಿಲುಕುವ ವ್ಯವಹಾರ ಎಂದಷ್ಟೇ ನೆಚ್ಚಿಕೊಂಡೆ. ಆದರೆ ಬಲು ಬೇಗನೆ ಜ್ಞಾನಪಾರಾವಾರದಲ್ಲಿ ನನ್ನ ಪುಟ್ಟ ದೋಣಿಯ ಮಿತಿಯನ್ನು ಶಕ್ತಿಯಾಗಿಸಿಕೊಂಡೆ. ‘ಕೇವಲ ಓದುವ ಪುಸ್ತಕಗಳು’ ಎಂದಿದ್ದ ವಿಶೇಷಣ ಸಂಕೀರ್ಣಗೊಳ್ಳುತ್ತಾ ವೈದ್ಯಕೀಯ ಪುಸ್ತಕಗಳಿಲ್ಲ, ತಂತ್ರಜ್ಞಾನ, ಶಾಲೆ ಕಾಲೇಜುಗಳ ಪಠ್ಯ, ಗೈಡು, ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿ ಇಲ್ಲಾ ಇಲ್ಲ. ಹೀಗೆ ಹಲವು ಇಲ್ಲಾಗಳಿಂದ ಮೊನಚುಪಡೆದು ಸಾಮಾನ್ಯರ ಓದಿಗೆ ‘ಎಲ್ಲೂ ಇಲ್ಲದ್ದು ಇಲ್ಲಿದೆ, ಇಲ್ಲಿಲ್ಲದ್ದು ಎಲ್ಲೂ ಇಲ್ಲ’ ಎಂದು ಸಾಧಿಸುವ ಪ್ರಯತ್ನ ನಿರಂತರ ನಡೆಸಿದ್ದೇನೆ.

೧೯೯೦ರಲ್ಲಿ ತಂದೆಯ (ಜಿ.ಟಿ. ನಾರಾಯಣರಾವ್) ನೋಡೋಣು ಬಾರಾ ನಕ್ಷತ್ರದೊಡನೆ ನಾನು ಪ್ರಕಾಶನರಂಗಕ್ಕೂ ಇಳಿದೆ. ಪ್ರಕಾಶನ ಮುಖ್ಯವಾಗಿ ನನ್ನ ತಂದೆಯ ಮತ್ತೆ ನಮಗೆ ತೀರಾ ಆಪ್ತವಾದ ವ್ಯಕ್ತಿಯ ಅಥವಾ ವಿಷಯಗಳ ಬಗ್ಗೆ ಇದುವರೆಗೆ ಐವತ್ತಕ್ಕೂ ಮಿಕ್ಕು ಪ್ರಕಟಿಸಿದೆ, ಮರುಮುದ್ರಿಸಿದೆ. ಪ್ರಕಾಶನ ತಂದೆಯ ಮಾತಿನಲ್ಲಿ ಹೇಳುವುದಾದರೆ “ಸಮಾಜಕ್ಕೆ ನಮ್ಮ ಋಣಸಂದಾಯ.” ಹಾಗಾಗಿ ಪ್ರಕಟಣೆಗಳು ಸದಾ ಕೊಳ್ಳುಗ ಸ್ನೇಹೀ ಬೆಲೆಯಲ್ಲಿರುತ್ತವೆ. ‘ಸೇವಾವ್ರತ’ ನಮ್ಮದಾದ್ದರಿಂದ ಪುಸ್ತಕೋದ್ಯಮದ ಇತರ ವರ್ಗಗಳಿಂದ ತ್ಯಾಗ (ಕಾಗದ, ಮುದ್ರಣ, ಬಿಡಿ ಮಾರಾಟಗಾರರ ವಟ್ಟಾ ಇತ್ಯಾದಿ) ಸರಕಾರವೂ ಸೇರಿದಂತೆ ಅನ್ಯ ಮೂಲಗಳಿಂದ ಸಹಾಯ (ಅನುದಾನ, ಸಗಟು ಖರೀದಿ ಇತ್ಯಾದಿ) ಪಡೆದುದಿಲ್ಲ, ಬಯಸುವುದೂ ಇಲ್ಲ. ಪುಸ್ತಕೋದ್ಯಮದ ಅವನತಿಗೆ ಏಕೈಕ ಕಾರಣ ಸರ್ಕಾರೀಕರಣ.

ಅಶೋಕ: ಜನನ ೧೯೫೨. ತಂದೆ, ತಾಯಿ - ಜಿ.ಟಿ ನಾರಾಯಣ ರಾವ್ ಮತ್ತು ಲಕ್ಷ್ಮೀ ದೇವಿ. ಹೆಂಡತಿ - ದೇವಕಿ, ಮಗ - ಅಭಯಸಿಂಹ, ಸೊಸೆ ರಶ್ಮಿ. ಪ್ರಾಥಮಿಕ ವಿದ್ಯೆ ಮಡಿಕೇರಿ, ಬಳ್ಳಾರಿ. ಪ್ರೌಢ ಶಾಲೆ, ಪದವಿಪೂರ್ವ ಬೆಂಗಳೂರು. ಸ್ನಾತಕ, ಸ್ನಾತಕೋತ್ತರ (ಇಂಗ್ಲಿಶ್) ಮೈಸೂರು. ಕಾಲೇಜು ವಿದ್ಯಾರ್ಥಿ ಜೀವನದಲ್ಲಿ ಏಕೈಕ ಪಠ್ಯೇತರ ಚಟುವಟಿಕೆ ಎನ್.ಸಿ.ಸಿ. ಪ್ರಕಟಿತ ಪುಸ್ತಕಗಳು - ತಾತಾರ್ ಶಿಖರಾರೋಹಣ, ಬೆಟ್ಟಗುಡ್ಡಗಳು, ಪುಸ್ತಕ ಮಾರಾಟ ಹೋರಾಟ.

ಆರೋಹಣ: ವಾರದ ಆರು ದಿನ ವೃತ್ತಿರಂಗ ನಗರದೊಳಗೆ, ನಾಲ್ಕು ಗೋಡೆಯ ನಡುವೆ ಹಿಡಿದಿಡುವುದಕ್ಕೆ ಎದುರು ಭಾರವಾಗಿ ಬೆಳೆದು ನಿಂತ ಹವ್ಯಾಸಕ್ಕೆ ಹೆಸರು ಆರೋಹಣ ಪರ್ವತಾರೋಹಿಗಳು ಸಾಹಸಿಗಳು. ವಿದ್ಯಾರ್ಥಿ ದೆಸೆಯಲ್ಲಿ ಮೈಸೂರಿನ ದಖ್ಖಣ ಪರ್ವತಾರೋಹಣ ಸಂಸ್ಥೆಯಲ್ಲಿ ವಿ. ಗೋವಿಂದರಾಜರ ಮಾರ್ಗದರ್ಶನದಲ್ಲಿ ದಕ್ಕಿದ ಪರ್ವತಾರೋಹಣ ಶಿಸ್ತಿಗೆ ಸಾಹಸದ ಪುಕ್ಕ ಸಿಕ್ಕಿಸಿದೆ. ಪರಿಸ್ಥಿತಿಯ ಅಗತ್ಯವಾಗಿ ಪರಿಸರಪ್ರೇಮ ವರ್ಧಿಸಿತು, ಉಲ್ಲಾಸ ಕಾರಂತರ ಗೆಳೆತನದಿಂದ ವನ್ಯಸಂರಕ್ಷಣೆಯ ಛಲ ಕುದುರಿತು. ಅವಿಭಜಿತ ದಕ ಜಿಲ್ಲೆಯಲ್ಲಿ ನಮ್ಮ ಬಳಗ ಪಾದ ಊರದ ಶಿಖರವಿಲ್ಲವೆನ್ನುವಷ್ಟು ಪಶ್ಚಿಮ ಘಟ್ಟ ತಿರುಗಿದೆವು. ಬೈಕ್ ಯಾನಗಳು ಅಸಾಂಪ್ರದಾಯಿಕ ಮಾರ್ಗಗಳನ್ನು ಶೋಧಿಸುವುದರೊಡನೆ ಎರಡುಬಾರಿ ಅಖಿಲಭಾರತ, ಒಮ್ಮೆ ದಕ್ಷಿಣ ಭಾರತವನ್ನೂ ಸುತ್ತಿ ಬಂತು. ಗುಹಾಶೋಧಗಳಂತೂ ಕೊನೆಯಿಲ್ಲದ ವಿಚಾರಮಂಥನಕ್ಕೆ ಕಾರಣವಾದ್ದನ್ನು ಇಲ್ಲೇ ನೀವು ನೋಡಬಹುದು. ಕಡಲ ಯಾನ, ಗಗನಗಮನದ ಅಲ್ಪಸ್ವಲ್ಪ ಅನುಭವಗಳೂ ಆರೋಹಣದ ಕಡತದಲ್ಲಿ ಇದ್ದೇ ಇದೆ. ದಕ್ಷಿಣ ಭಾರತದುದ್ದಕ್ಕೆ ನಡೆದ ‘ಪಶ್ಚಿಮ ಘಟ್ಟ ಉಳಿಸಿ’ ಪಾದಯಾತ್ರೆಗೆ ಈ ವಲಯದಲ್ಲಿ ಮಾರ್ಗದರ್ಶಿಸಿದ ಖ್ಯಾತಿ ಆರೋಹಣದ್ದು. ಸುಮಾರು ಹತ್ತು ವರ್ಷಗಳ ಹಿಂದೆ ಸಮೀಪದಲ್ಲೇ ನಾನು ಪ್ರಯೋಗಭೂಮಿಯಾಗಿ ಕೊಂಡ ಒಂದು ಎಕ್ರೆ ಪಾಳುನೆಲ ‘ಅಭಯಾರಣ್ಯ’ ಇಂದು ವನ್ಯ ಪುನರುತ್ಥಾನದ ಸಂಕೇತ. ನೇರ ಪಶ್ಚಿಮ ಘಟ್ಟದಲ್ಲೇ ಕೇವಲ ಸಂರಕ್ಷಣೆಗಾಗಿ ಮಿತ್ರ ಕೃಷ್ಣಮೋಹನ್ ಜತೆ ಕೊಂಡ ಹದಿನೈದು ಎಕ್ರೆ ದಟ್ಟಾರಣ್ಯ ‘ಅಶೋಕವನ’ ನಮ್ಮ ಪರಿಚಿತ ವಲಯಗಳಲ್ಲಿ ಅಪೂರ್ವ. ಮುಖ್ಯವಾಗಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಮತ್ತು ಒಟ್ಟಾರೆ ಈ ವಲಯದ ವನ್ಯಸಂರಕ್ಷಣೆಯ ಗುರುತರವಾದ ಹೊಣೆ ಮತ್ತು ಸಮರ್ಥ ಕಾರುಭಾರು ನಡೆಸುತ್ತಿರುವ ಎಲ್ಲಾ ಸಂಘಟನೆಗಳೊಡನೆ, ವ್ಯಕ್ತಿಗಳೊಡನೆ ಆರೋಹಣದ ಹೆಸರೂ ಅನಿವಾರ್ಯವಾಗಿ ಇದೆ.


ಜಾಲಿಗನ  ಹೊಸ ನೆಲೆ
ಅಶೋಕ, ಆರೋಹಣ, ಇತ್ಯಾದಿ

ವೈಯಕ್ತಿಕ: ಜಿ.ಎನ್.ಅಶೋಕವರ್ಧನ (ಜನನ ೧೯೫೨). ತಂದೆ - ಜಿ.ಟಿ. ನಾರಾಯಣರಾವ್, ತಾಯಿ - ಜಿ.ಎನ್. ಲಕ್ಷ್ಮೀದೇವಿ, ಹೆಂಡತಿ - ಜಿ.ಎ. ದೇವಕಿ, ಮಗ - ಜಿ.ಎ. ಅಭಯ ಸಿಂಹ ಮತ್ತು ಸೊಸೆ - ಎಂ. ರಶ್ಮಿ  ಅಭಯ. ಮಡಿಕೇರಿ, ಬಳ್ಳಾರಿ, ಬೆಂಗಳೂರು ಮತ್ತು ಮೈಸೂರುಗಳಲ್ಲಿನ ವಿದ್ಯಾಭ್ಯಾಸದ ಕೊನೆಗೆ ೧೯೭೪ರಲ್ಲಿ ಮೈ.ವಿ.ವಿ ನಿಲಯದಿಂದ ಇಂಗ್ಲಿಷ್ ಎಂ.ಎ. ತಾಪೇದಾರಿ ಒಲ್ಲದ್ದಕ್ಕೆ, ಹವ್ಯಾಸಕ್ಕೆ ತೊಡಗಿಕೊಂಡಿದ್ದ ಪುಸ್ತಕವ್ಯಾಪಾರ ೧೯೭೫ರಲ್ಲಿ ಮಂಗಳೂರಿನಲ್ಲಿ ಅತ್ರಿ ಬುಕ್ ಸೆಂಟರಾಗಿ ವೃತ್ತಿಗಿಳಿಸಿತು. ಮೂವತ್ತಾರು ವರ್ಷಗಳ ವೃತ್ತಿಜೀವನ ಪುಸ್ತಕದ ಬಿಡಿ ಮಾರಾಟ, ವಿತರಣೆ, ಪ್ರಕಾಶನ ಮತ್ತು ತಾತ್ತ್ವಿಕ ಅನುಸಂಧಾನಗಳಲ್ಲಿ ವಿಕಸಿಸಿತು. ಆದರೆ ಕೊನೆಯಲ್ಲಿ ಪುಸ್ತಕೋದ್ಯಮದ ಬಹು ವ್ಯಾಪ್ತಿಯಂತೇ ಕರಾಳತೆಯೂ ಕಾಣಿಸಿ ವೈಯಕ್ತಿಕ ಹೋರಾಟದ ವೈಫಲ್ಯವನ್ನು ಮನಗಾಣಿಸಿತು. ಪರಸ್ಪರ ಪೋಷಣೆಯಲ್ಲಿ ಸಂಸ್ಥೆ (ಅತ್ರಿ) ಮತ್ತು ವ್ಯಕ್ತಿಗೆ (ಅಶೋಕ) ಆರ್ಥಿಕ ಸಂತೃಪ್ತಿ ಇದ್ದರೂ ಬದಲಾದ ‘ಯುಗಧರ್ಮದಲ್ಲಿ’ ಪ್ರೀತಿ ಉಳಿಯದ್ದಕ್ಕೆ ಅಂಗಡಿ ಮುಚ್ಚಿ, ಸ್ವಯಂ ನಿವೃತ್ತಿ. ಉದ್ದಕ್ಕೂ ಬೆಳೆದು ಬಂದ ಹವ್ಯಾಸೀ ಆಸಕ್ತಿಗಳನ್ನು ಆರ್ಥಿಕ ಆದಾಯದ ಲಕ್ಷ್ಯವಿಲ್ಲದೆ ಸಮಾಜಹಿತಕ್ಕೆ ಹೆಚ್ಚು ಒಡ್ಡಿಸುವಲ್ಲಿ ಪೂರ್ಣಾವಧಿ ಸ್ವಯಂಸೇವೆ.

ಆರೋಹಣ: ತಂದೆಯಿಂದ ಎನ್.ಸಿ.ಸಿ ಮೂಲವಾಗಿ ಮೊಳೆತ ಪರ್ವತಾರೋಹಣ ಆಸಕ್ತಿಗೆ ಕಾಲೇಜು ದಿನಗಳಲ್ಲಿ ಮೈಸೂರಿನಲ್ಲಿ ವಿ. ಗೋವಿಂದರಾಜರು (ದಖ್ಖಣ ಪರ್ವತಾರೋಹಣ ಸಂಸ್ಥೆ) ಶಿಸ್ತಿನ ಕೃಷಿಕೊಟ್ಟು ಗಟ್ಟಿಮಾಡಿದರು. ವೃತ್ತಿರಂಗದಲ್ಲಿ ವಾರದ ಆರುದಿನ ನಗರದೊಳಗೆ ಅದೂ ಅಂಗಡಿಯ ಕುರ್ಚಿಗೇ ಅಂಟಿದ್ದಕ್ಕೆ ಪ್ರತಿಯಾಗಿ ‘ಆರೋಹಣ ಪರ್ವತಾರೋಹಿಗಳು ಸಾಹಸಿಗಳು’ ಹೆಸರಿನ ಅನೌಪಚಾರಿಕ ತಂಡ ಮೂವತ್ತಾರು ವರ್ಷದುದ್ದಕ್ಕೆ ವಿಕಸನಗೊಂಡಿತ್ತು. ವೃತ್ತಿಗೆ ರಜಾದಿನಗಳಲ್ಲಿ ಅವಿಭಜಿತ ದಕ ಜಿಲ್ಲೆಯ ಅಳವಿಯೊಳಗಿನ ಪಶ್ಚಿಮಘಟ್ಟದಲ್ಲಿ ಇದರ ಸದಸ್ಯರು ಪಾದ ಊರದ ಶಿಖರವಿಲ್ಲ, ನುಗ್ಗದ ಕಾಡಿಲ್ಲ! ಗುಹಾಶೋಧನೆ, ಬೈಕ್ ಯಾತ್ರೆಗಳು ವ್ಯಾಪಕವಾಗಿಯೂ, ಕಡಲಯಾನ, ಗಗನಗಮನಗಳು ಕೆಲವೂ ಸೇರಿ ಪ್ರಕೃತಿಪರ ಕುತೂಹಲ ನಿರಂತರವಾಯ್ತು, ಅವುಗಳ ಪ್ರಾಕೃತಿಕ ಸ್ವರೂಪವನ್ನು ಕಾಪಾಡಿಕೊಳ್ಳುವಲ್ಲಿ ಕೆಲಸಕ್ಕೆ ಪ್ರೇರಣೆಯೂ ಬಂತು. ಸಹಜ ಸಸ್ಯ ಪುನರುತ್ಥಾನದ ಪ್ರಯೋಗಭೂಮಿಯಾಗಿ ‘ಅಭಯಾರಣ್ಯ’ ಹುಟ್ಟಿಕೊಂಡಿತು. ಉಲ್ಲಾಸ ಕಾರಂತ, ಕೆ.ಎಂ. ಚಿಣ್ಣಪ್ಪರ ಗೆಳೆತನ, ಸ್ಥಳೀಯವಾಗಿ ನಿರೇನ್ ಜೈನರ ಆಪ್ತ ಒಡನಾಟದಿಂದ ‘ಅಶೋಕವನ’ದ ರಚನೆಯಾಯ್ತು. ಮುಂದಿನ ಪರಮ ಲಕ್ಷ್ಯವಾಗಿ ವನ್ಯಸಂರಕ್ಷಣೆ ಕಾದಿದೆ.

ಇತ್ಯಾದಿ: ಯಕ್ಷಗಾನ ಸೇರಿದಂತೆ ವಿವಿಧ ರಂಗಕಲೆಗಳು, ಸಂಗೀತ, ಸಿನಿಮಾ, ಪ್ರವಾಸ, ಓದು ಇತ್ಯಾದಿ ಎಲ್ಲಾ ಒಳ್ಳೆಯದರ ತುಸು ಹೆಚ್ಚೇ ಎನ್ನುವ ಪರಿಚಯ. ಅನಿವಾರ್ಯ ಎಂದು ಕಂಡಾಗ (ಮುಖ್ಯವಾಗಿ ಗೆಳೆಯ ಮಂಟಪ ಮನೋಹರ ಉಪಾಧ್ಯರೊಡನೆ) ಅವುಗಳೊಡನೆ ಔಪಚಾರಿಕ ಬಂಧನಗಳಿಲ್ಲದ ಸಣ್ಣಪುಟ್ಟ ಸಂಘಟನಾತ್ಮಕ ಪ್ರಯೋಗಗಳು. ಕೊನೆಯದಾಗಿ ಎಲ್ಲಕ್ಕೂ ಇಲ್ಲಿ, ಅಂದರೆ ಜಾಲತಾಣದಲ್ಲಿ, ಔಚಿತ್ಯವರಿತು ಪ್ರಸರಣ ನಡೆಸುವುದರಲ್ಲಿ ಅರ್ಥಪೂರ್ಣ ಕಾಲವಿನಿಯೋಗ. ನಾನು ಕಳೆದ ಸುಮಾರು ನಾಲ್ಕು ವರ್ಷದಿಂದ ಹೆಚ್ಚು ಕಡಿಮೆ ವಾರಕ್ಕೊಂದರಂತೆ ಲೇಖನ ಬರೆದು ಈ ಜಾಲತಾಣ ತುಂಬುತ್ತಿದ್ದೇನೆ. ನನ್ನ ಲೆಕ್ಕಕ್ಕೆ ಈ ಮಾಧ್ಯಮ ಅರೆ-ಖಾಸಗಿ ಸಾರ್ವಜನಿಕ ವೇದಿಕೆ. ಹಾಗಾಗಿ ನಾನು ಏನು ತುಂಬಿದರೂ (ಅನಿವಾರ್ಯವಾಗಿ ನನ್ನ ಅನುಭವದ ಮಿತಿಯಲ್ಲಿದ್ದರೂ) ಹತ್ತು ಜನರಿಗೆ ಉಪಯೋಗವಾಗುವವನ್ನು ಮಾತ್ರ ತುಂಬುತ್ತೇನೆ. ಅದಕ್ಕೂ ಹೆಚ್ಚಾಗಿ ಓದುಗರಿಂದ ಉಪಚಾರದ ಮಾತುಗಳ ಬದಲು ಕೇಳುವುದು ಇಷ್ಟೇ ೧. ತಪ್ಪಿದ್ದರೆ ತಿದ್ದಿ ೨. ಇದಕ್ಕೆ ಸಂವಾದಿಯಾಗಿ ನಿಮ್ಮಲ್ಲೇನಾದರೂ ಅನುಭವವಿದ್ದರೆ ದಯವಿಟ್ಟು ಆಯಾ ಲೇಖನದ ಪ್ರತಿಕ್ರಿಯಾ ಅಂಕಣದಲ್ಲಿ ಧಾರಾಳ ತುಂಬಿ. ಪತ್ರಿಕೆಗಳಂತೆ ಇಲ್ಲಿ ಜಾಗದ ಮಿತಿ, ಸಂಪಾದಕನ ಕತ್ತರಿ ಇಲ್ಲ. ಮತ್ತೂ ಮಖ್ಯವಾಗಿ ಭಾಷೆಯ ಬಂಧನವಿಲ್ಲ. ನೀವು ಕನ್ನಡದಲ್ಲೇ ಪ್ರತಿಕ್ರಿಯಿಸಬೇಕೆಂದಿಲ್ಲ. ನಿಮಗನುಕೂಲವಾದಂತೆ ಕನ್ನಡದಲ್ಲಿ, ಶುದ್ಧ ಇಂಗ್ಲಿಷಿನಲ್ಲಿ ಅಥವಾ ಇಂಗ್ಲಿಶ್ ಲಿಪಿಯಲ್ಲಿ ಕನ್ನಡವನ್ನೇ ಬರೆದರೂ ಧಾರಾಳ ನಡೆಯುತ್ತದೆ - ಏನೂ ಸಂಕೋಚಪಟ್ಟುಕೊಳ್ಳದೇ ಬರೆಯಿರಿ.

(ಹೆಚ್ಚಿನ ವಿವರಗಳಿಗೆ ಮತ್ತು ಸಾಕ್ಷಿಗಳಿಗೆ ಜಾಲತಾಣವನ್ನೇ ಶೋಧಿಸಿ)

10 comments:

 1. Happy Blogging!
  We need your experience and wisdom to guide the next generation.
  Bedre Manjunath
  http://bedrefoundation.blogspot.com

  ReplyDelete
  Replies
  1. ಇದನ್ನೇ ಕನ್ನಡದಲ್ಲಿ ಹೇಳಬಾರೆದೆ ಪುಣ್ಯಾತ್ಮರೆ?

   Delete
 2. ಅತ್ರಿ ಅಶೋಕ ಆರೋಹಣ ಎಂಬ ಜಾಲತಾಣದ ಹೆಸರಿನ
  ಅತ್ರಿ ಪುಸ್ತಕ ಮಳಿಗೆ ಜಾಗದಲ್ಲಿ ಅರಣ್ಯ ಬಂದರೆ
  ಅತ್ರಿ(ಅಶೋಕ ಅರಣ್ಯ ಆರೋಹಣ)ಗೆ ಏನೂ ಬಾಧೆ ಇಲ್ಲ!
  ವರುಷಕೊಂದು ಹೊಸತು ಜನ್ಮ
  ವರುಷಕೊಂದು ಹೊಸತು ನೆಲೆಯು
  ಅಖಿಲ ಜೀವಜಾತಕೆ
  ಒಂದೆ ಒಂದು ಬಾಳಿನಲ್ಲಿ
  ಒಂದೆ ಬಾಲ್ಯ ಒಂದೆ ಹರೆಯ
  ನಮಗದಷ್ಟೆ ಏತಕೆ?

  ReplyDelete
 3. Kannada thanrraamsha kelsa madtilla kshamisi..
  nimma bloganoduttiddne 3varshagalinda....
  Atree ondige blogoo muchuviremba digilittu...
  Blog ige itishree haakuvudillavembudu tilidu samtoshavaavide....
  Vamdanegalu
  KaYaNaaVi

  ReplyDelete
 4. Nodide. Aruvattakke arulumarulagade, nivruttaragiddire putaka vyaparadidnda. aadare nimma havyasa blognidda innu mundiyu labhya. olleyadagali.
  S R Vijayashankar

  ReplyDelete
 5. Dear Sir,

  You are inspiration to conserve our nature and culture..

  ReplyDelete
  Replies
  1. Dear Ashokvardhan,
   We are missing you very much at "Athri". But your other interests may bring us together, at least occasionally. I wish you all the best for the "post business" (not retired anyway) life.

   Delete
 6. Dear Sir

  As an all rounder you were the great inspire for the readers, wish the same will continue with us in wild life experience.

  Thanking you.

  sathyajith manipal

  ReplyDelete
 7. ವಾನಪ್ರಸ್ಥಾಗ್ರಣಿ ಅಶೋಕವರ್ಧನ

  ಅಶೋಕವರ್ಧನರ ಅತ್ರಿಯಿಂದ-ಅರಣ್ಯಾಗಮನದ ಬಗ್ಗೆ ಕ್ಯಾರಿಕೇಚರನ್ನು ಬಿಡಿಸಿ ಅದನ್ನು ಅವರ ವಿದಾಯದ ಸಂದರ್ಭದಲ್ಲಿ ನೀಡಲು-ನನ್ನಂತಹಾ ಹಲವಾರು ಜನರಿಗೆ ಸ್ಫೂರ್ತಿ ನೀಡಿದ ಅವರ ಸ್ನೇಹ-ಸಂಪರ್ಕವನ್ನು,\ಸದಾ ಹಸಿರಾಗಿರುವಂತೆ, ಅರ್ಥಪೂರ್ಣವಾಗುವಂತೆ ರಚಿಸಿದ್ದೆ. ಅದನ್ನು ಮೆಚ್ಚಿ ನಿಮ್ಮ ಬ್ಲೋಗ್ ನಲ್ಲಿ ಸ್ಥಾನಕಲ್ಪಿಸಿದ ನಿಮಗೆ ವಂದನೆಗಳು.

  ರಾಘವ

  ReplyDelete
 8. Mysore Na ballal circle idda haage, namage athree book shop
  helikollalagada sambandha.

  But, now to see the board of 20% discount , by navakarnataka
  hits on our face .

  we follow u in your blogs

  great interest to read your articles, and if possible to join
  u in your next trekking journey.

  pl do inform about short trecks if anyin and around mangalore
  so that we can join.

  namaskara

  ss kumar

  ReplyDelete