20 February 2012

ಡಾ| ಕಾಕುಂಜೆ ಗೋಪಾಲ ಕೃಷ್ಣ ಭಟ್ (ಅಡ್ಡಹೊಳೆ ಆಸುಪಾಸು ಭಾಗ ಎರಡು)


ಕಳೆದ ಬಾರಿ ಉಲ್ಲಾಸ ಕಾರಂತರನ್ನು ಸಣ್ಣದಾಗಿ ಅಭಿನಂದಿಸಿ, ಅವರು ಪ್ರತಿನಿಧಿಸುವ ವನ್ಯಾಭಿಯಾನವನ್ನೇ ವಿಸ್ತರಿಸಿದ್ದೆ. ಅದರಲ್ಲಿ (ಬಿಸಿಲೆ) ಅಡ್ಡಹೊಳೆ ಆಸುಪಾಸಿನ ಅನುಭವಗಳನ್ನು ವಿಸ್ತರಿಸಲು ಪೀಠಿಕೆ ಹಾಕಿದ್ದೆ. ಆದರೆ ಅದರ ಬೆನ್ನಿಗೇ ಬಂದ ಪತ್ರಿಕಾ ವರದಿಗಳಲ್ಲಿ (ಶಿರಾಡಿ) ಅಡ್ಡಹೊಳೆ ಚಾರಣಕ್ಕೆ ಹೋದ ತಂಡ ಒಂದರ ತರುಣನೋರ್ವನ ದುರ್ಮರಣದ ವಿವರಗಳನ್ನು ಕಂಡು ನನಗೆ ವಿಷಾದವಾಯ್ತು. ಅದಕ್ಕೂ ಮಿಗಿಲಾಗಿ ಆಕಸ್ಮಿಕಗಳು ಘಟಿಸಿದಾಗ ತಮ್ಮ ಚರ್ಮ ಉಳಿಸಿಕೊಳ್ಳಲು ಜಾಗೃತವಾಗುವ ಅರಣ್ಯ ಇಲಾಖೆಯ ಕಲಾಪಗಳು ತೀವ್ರ ಅಸಮಾಧಾನವನ್ನು ಉಂಟುಮಾಡಿತು. ತಮ್ಮ ಸಾರ್ವಜನಿಕ ಶಿಕ್ಷಣ ಜವಾಬ್ದಾರಿಯನ್ನು ದುಬಾರಿ ಆದರೆ ಅದಕ್ಷ ಹೊಟೆಲ್ ಸಂಸ್ಕೃತಿಯಲ್ಲೋ ಅನಾವಶ್ಯಕ ಆದರೆ ಅನ್ಯಾನ್ಯ ಲಾಭಗಳ ಉದ್ದೇಶದ  ಮಾಧ್ಯಮಗಳ ಜಾಹೀರಾತು ಮತ್ತು ಭಾರೀ ಫಲಕಗಳ ಮೆರೆತದಲ್ಲೋ ಕೊನೆಗೆ ತೀರಾ ಅಪರಿಪೂರ್ಣ ‘ಪ್ರವೇಶಧನ’ ಸಂಗ್ರಹದಲ್ಲಷ್ಟೇ ತೊಡಗಿಸಿ, ಕುಂಭಕರ್ಣ ನಿದ್ರೆಗೆ ಜಾರುವುದು ಅರಣ್ಯ ಇಲಾಖೆಯ ಪ್ರಕೃತಿ! ಅರಣ್ಯದೊಳಗಿನ ಅಪಘಾತದ ಸುದ್ದಿಗೆ ಗಡಬಡಿಸಿ ಎದ್ದ ಇಲಾಖೆ, ವಾಸ್ತವದಲ್ಲಿ ತಂಡವನ್ನು ಪಾರುಗಾಣಿಸಿದ ಮತ್ತು ಶವಶೋಧಿಸಿದವರನ್ನು ಅಜ್ಞಾತಕ್ಕೋ (ಹೆಚ್ಚೆಂದರೆ ಎರಡನೇ ಸಾಲಿಗೋ) ತಳ್ಳಿ, ಬದುಕುಳಿದವರ ಮೇಲೆ ಅಕ್ರಮ ಪ್ರವೇಶಕ್ಕೆ ಕಾನೂನಿನ ಕ್ರಮ ಕೈಗೊಳ್ಳುತ್ತಿದೆ. ಖಂಡಿತಕ್ಕೂ ಕಾನೂನು ಬೇಕು. ಆದರೆ ಆಪತ್ಕಾಲದಲ್ಲಿ ಮಾತ್ರ, ಅದೂ ಕಾನೂನಿನ ಅಕ್ಷರಗಳನ್ನಷ್ಟೇ ಬಳಸಿಕೊಳ್ಳುತ್ತ, ಆಶಯಗಳನ್ನು ಗಾಳಿಗೆ ತೂರುವ ಇಲಾಖೆಯ ಧೋರಣೆ ಏನೇನೂ ಆರೋಗ್ಯಕರವಲ್ಲ. ಇದಕ್ಕೆ ನನ್ನದೇ ಅನುಭವವನ್ನು ಪೋಣಿಸುತ್ತಾ ಬಿಸಿಲೆ-ಅಡ್ಡಹೊಳೆಯ ಕಥನವನ್ನು ಮುಂದುವರಿಸುತ್ತೇನೆ.


ನನ್ನ ಅಂಗಡಿ ವ್ಯವಹಾರದೊಳಗೆ ಸಣ್ಣ ಸುಳಿವು ಸಿಕ್ಕರೂ ಚಾರಣ, ವನ್ಯಸಂರಕ್ಷಣೆಯ ಮಾತು ತರುವುದು ಮತ್ತು ನಮ್ಮ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮುಕ್ತ ಆಹ್ವಾನ ಕೊಡುವುದನ್ನು ರೂಢಿಸಿಕೊಂಡಿದ್ದೆ. ಇದರಿಂದ ನನಗೆ ಒಲಿದವರ ಸಂಖ್ಯೆ ನಿಜಕ್ಕೂ ಅಪಾರ. ಹಾಗೆ ಬಂದವರ ಪ್ರಾಯ, ಅನುಭವ ಮತ್ತು ಒಳ್ಳೆಯ ಆಸಕ್ತಿಗಳಿಗೇನೂ ಕೊರತೆಯಾಗದಂತೆ ನಡೆಸಿಕೊಳ್ಳುತ್ತಲೇ ಬಂದಿದ್ದೇನೆ. ಅಂದರೆ ಕೇವಲ ಸಂಘಟನೆಯ ನೆಲೆಯಲ್ಲಷ್ಟೇ ನಾನು ‘ನಾಯಕ.’ ಉಳಿದಂತೆ ನಮ್ಮದು ಸಮಾನ ಕುತೂಹಲವಿರುವ ಗೆಳೆಯರ ಕೂಟ. ಹೀಗೆ ಈಚೆಗೆ ನಮಗೆ ಜೊತೆಗೊಟ್ಟವರಲ್ಲಿ ನೆನೆಸಿಕೊಳ್ಳಲೇ ಬೇಕಾದ ಅಪೂರ್ವ ಜೋಡಿ ಡಾ| ಎನ್.ಎ. ಮಧ್ಯಸ್ಥ ಹಾಗೂ ಡಾ| ಕೆ. ಗೋಪಾಲಕೃಷ್ಣ ಭಟ್ (ಹೃಸ್ವರೂಪ - ಕೇಜಿ ಭಟ್) ಅವರದು.  ಇಬ್ಬರೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರಾಧ್ಯಾಪಕ ಸಹೋದ್ಯೋಗಿಗಳು, ಸದ್ಯ ನಿವೃತ್ತರು ಮತ್ತು ಮಿತ್ರರು. ಇಂದಿನ ಹಿರಿಯ ಪ್ರಾಯದಲ್ಲೂ ತಮ್ಮ ಜೀವಶಾಸ್ತ್ರಜ್ಞತ್ವದ (ಕ್ರಮವಾಗಿ ಪ್ರಾಣಿ ಹಾಗೂ ಸಸ್ಯ) ಆಸಕ್ತಿಗಳನ್ನು ಗಟ್ಟಿಯಾಗಿ ಪ್ರವೃತ್ತಿಯನ್ನಾಗಿಯೇ ಉಳಿಸಿ, ಬೆಳೆಸಿಕೊಳ್ಳುತ್ತಲೇ ಇರುವ ‘ಸಮಾಜ ಸೇವಕರು.’

ಪ್ರೊ| ಮಧ್ಯಸ್ಥರು ಜನಪ್ರಿಯ ಲೇಖನ, ಭಾಷಣ, ತಜ್ಞಸಮಿತಿಗಳ ಕಮ್ಮಟ ಕಲಾಪಗಳಲ್ಲಿ ಧಾರಾಳ ತೊಡಗಿಕೊಂಡು ನೇರ ಸಮಾಜಮುಖಿಯಾದವರು. ಮುಂಗಾರಿನ ಝಂಝಾವಾತಕ್ಕೆ ಸಿಕ್ಕಿ ನಲುಗಿದ ‘ವಿಚಿತ್ರ ಪಕ್ಷಿ’ಗಳನ್ನೋ ಮೊರದಗಲದ ಪತಂಗವನ್ನೋ ‘ಭೀಕರ’ ಉರಗವನ್ನೋ (ಹೆಚ್ಚಿನ ಸಲ ನಿರ್ವಿಷ, ನಿರುಪದ್ರವಿಗಳು) ಹಿಡಿದು ಬಂದವರಿಗೆ ಗುರುತು, ಆರೈಕೆ ಮತ್ತು ಬಿಡುಗಡೆ ಸೂಚನೆಗಳನ್ನು ಮುಕ್ತವಾಗಿ ಕೊಡುತ್ತಾ ಸಾರ್ವಜನಿಕ ಶಿಕ್ಷಣದ ನೆಲೆಯಲ್ಲಿ ಮಾಧ್ಯಮಗಳಲ್ಲಿ ಸದಾ ಬೆಳಗುತ್ತ ಬಂದ ಹೆಸರು ಡಾ| ಎನ್.ಎ. ಮಧ್ಯಸ್ಥ. ಒಂದೆರಡು ದಶಕದ ಹಿಂದೆ ಉಕ ಜಿಲ್ಲೆಯ ಹಳ್ಳಿಮೂಲೆ - ನೀರ್ನಳ್ಳಿಯಲ್ಲಿ ಶಿವಾನಂದ ಕಳವೆ ಮತ್ತು ಪಾಂಡುರಂಗ ಹೆಗಡೆಯವರು ಪೂರ್ಣ ಖಾಸಗಿ ಮಟ್ಟದಲ್ಲಿ ಮೂರು ದಿನಗಳ ಪರಿಸರ ಲೇಖಕರ ಕಮ್ಮಟ ನಡೆಸಿದ್ದರು. ಅದರಲ್ಲಿ ಯಾವುದೇ ಪ್ರೊಫೆಸರ‍್ಗಿರಿಯ ಹಮ್ಮು ಇಟ್ಟುಕೊಳ್ಳದೆ, ಕೇವಲ ಉತ್ಸಾಹವನ್ನೇ ಬಂಡುವಾಳ ಮಾಡಿಕೊಂಡವರೊಡನೆ ಭಾಗಿಯಾಗಿದ್ದ ಮಧ್ಯಸ್ಥರನ್ನು ನಾನು ಮೊದಲ ಬಾರಿಗೆ ಕಂಡು, ಒಡನಾಡಿದ್ದೆ. ಅದೇ ಉತ್ಸಾಹದಲ್ಲಿ ಇವರು ಪಶ್ಚಿಮಘಟ್ಟಗಳ ಯಾವುದೇ ದೇಖರೇಖಿಗಳ ಸರಕಾರೀ ಸಮಿತಿಗಳಲ್ಲಿ ಭಾಗಿಯಾಗಿ ಪ್ರಾಮಾಣಿಕವಾಗಿ ತನ್ನ ಇರವನ್ನು ಸಮರ್ಥಿಸಿಕೊಳ್ಳುತ್ತಲೇ ಇದ್ದಾರೆ. ಕುದುರೆಮುಖ ವನ್ಯಜೀವಿ ವಿಭಾಗಕ್ಕೆ ವನ್ಯಜೀವಿಗಳ ಪರಿಚಯಾತ್ಮಕ ಪುಸ್ತಿಕೆ ರಚಿಸುವುದಿರಲಿ, ಮಂಗಳೂರಿನ ಪಿಲಿಕುಳದಲ್ಲಿರುವ ಶಿವರಾಮಕಾರಂತ ಜೀವಧಾಮಕ್ಕೆ ಪಠ್ಯ ತಯಾರಿಸುವುದಿರಲಿ, ವಿಸ್ತೃತ ಗುಂಡ್ಯ ವಿದ್ಯುತ್ ಯೋಜನೆಯ ವಿರುದ್ಧ ಸೆಟೆದು ನಿಲ್ಲುವ ವರದಿ ಬರೆಯುವುರಲ್ಲಿ ಎಲ್ಲಾ ಇವರಿಗೆ ಪ್ರಾಯ ಅಡ್ಡಿಯಾಗದು, ಪರಿಣತಿ ಪೂರ್ಣ ಮೀಸಲು. ಒಣ ಉಪದೇಶದ ಮಿತಿ ಹರಿದುಕೊಂಡು ಯಾವುದೇ ಕಮ್ಮಟ, ಅರಣ್ಯ ಇಲಾಖಾ ನೌಕರರ ತರಬೇತಿಗಳಲ್ಲೆಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ತೀವ್ರವಾಗಿ ತೊಡಗಿಕೊಂಡು ಆದರ್ಶ ಕಾಣಿಸಿದವರು ಮಧ್ಯಸ್ಥರು.

ಡಾ| ಕೇಜಿ ಭಟ್, ಅಂತಾರಾಷ್ಟ್ರೀಯ ಮಟ್ಟದ ಸಸ್ಯ ವರ್ಗೀಕರಣ ತಜ್ಞ. ವಯೋಮಿತಿಯ ಮೇಲೆ ಅಧ್ಯಾಪನ ವೃತ್ತಿಯಿಂದ ನಿವೃತ್ತರಾದರೂ ಇವರ ಸಸ್ಯಶಾಸ್ತ್ರೀಯ ಅನ್ವೇಷಣೆಗಳಿಗೆ ಕೊನೆಯಿಲ್ಲದ್ದು ಕಂಡು, ಕಾಲೇಜಿನ ಆಡಳಿತ ಮಂಡಳಿ ಇವರಿಗೇ ಒಂದು ಪ್ರಯೋಗಶಾಲೆಯ ಸೌಲಭ್ಯವನ್ನು ರೂಪಿಸಿಕೊಟ್ಟಿದೆ. ಅಂತಾರಾಷ್ಟ್ರೀಯ ವಿಜ್ಞಾನ ಪತ್ರಿಕೆಗಳಲ್ಲಿ ಹೂಬಿಡುವ ಸಸ್ಯಗಳು (Flowering plants) ಮತ್ತು ಜರೀಗಿಡಗಳ (Pteridophytes) ಮೇಲೆ ಇವರ ಹಲವು ಸಂಶೋಧನಾ ಪ್ರಬಂಧಗಳು ಪ್ರಕಟವಾಗಿವೆ. ಸಾಲದ್ದಕ್ಕೆ ಅವಿಭಜಿತ ದಕ ವಲಯದ ಜೊಂಡು ಹಾಗೂ ಹುಲ್ಲು (Sedges & grasses - ಪ್ರಾಯಃ ಅಲಭ್ಯ), ಉಡುಪಿ ವಲಯದ ಸಸ್ಯವರ್ಗ (Flora of Udupi - Rs.1200) ಹಾಗೂ ತೀರ ಈಚೆಗೆ ಕರ್ನಾಟಕದ ತಾಳೆವರ್ಗಗಳ (Palms of Karnataka - Rs.500) ಮೇಲಿನ ಪುಸ್ತಕಗಳು,  ಇವರ ಏಕವ್ಯಕ್ತಿ ಅಧ್ಯಯನಕ್ಕೆ ಅಪೂರ್ವ ಸಾಕ್ಷಿಗಳು; (ರೇಖಾ ಹಾಗೂ ಛಾಯಾಚಿತ್ರಗಳ ಸಹಿತ) ಅದ್ವಿತೀಯ ಆಕರ ಗ್ರಂಥಗಳು. ಇಷ್ಟಾದರೂ ಇವರು ಯಾರಿಗೂ ದಕ್ಕುವ ಸರಳ ಮತ್ತು ಸ್ನೇಹಶೀಲ ವ್ಯಕ್ತಿ.

“ಬಿಸಿಲೆ ವಲಯದ ನಮ್ಮ ಕಾಡು ನೋಡಲು ಬನ್ನಿ” ಎಂಬ ನನ್ನ ಒಂದು ಮಾತಿಗೆ ಇವರಿಬ್ಬರೂ ಒಲಿದು (ಶನಿವಾರ ಅಪರಾತ್ರಿ ಉಡುಪಿಯಿಂದ ಸಿಕ್ಕ ಯಾವುದೋ ಬಸ್ಸು ಹಿಡಿದು ಮಂಗಳೂರಿಸಿ, ಆದಿತ್ಯವಾರ ಬೆಳಿಗ್ಗೆ, ಆರು ಗಂಟೆಗೆ ಹೊರಡುವ) ನಮ್ಮ ಅನುಕೂಲಕ್ಕೆ ಹೊಂದಿಕೊಂಡದ್ದು ಅವರ ವಸ್ತುನಿಷ್ಠತೆಗೆ ಸಾಕ್ಷಿ ಎನ್ನಲೇಬೇಕು. ಮತ್ತೆ ಇವರ ಅನುಭವಕ್ಕೆ, ಹಿರಿತನಕ್ಕೆ ಸಲ್ಲಲೇಬೇಕಾದ ‘ಟೀಯೇ ಡೀಯೇ ರೆಮ್ಯೂನರೇಶನ್’ ಮಾತು ಬಿಟ್ಟು ನಮ್ಮ ತಂಡದ ಎಲ್ಲಾ ಸದಸ್ಯರಂತೆ ತಮ್ಮ ಖರ್ಚನ್ನೂ ಕೊಟ್ಟು ನಡೆದುಕೊಂಡದ್ದು ಸಾಮಾನ್ಯ ಮಾತಲ್ಲ. ಮಧ್ಯಸ್ಥರಿಗೆ ಹೃದಯ ಚಿಕಿತ್ಸೆಯಾಗಿರುವುದರಿಂದ ಒಮ್ಮೆ ಮಾತ್ರ ಭಾಗಿಯಾಗಿದ್ದರು. ಅದರಲ್ಲೂ ಮಳೆಗಾಲದ ಹವಾ ವೈಪರೀತ್ಯ, ತೀವ್ರ ಏರಿಳಿಯುವ ಚಾರಣಗಳನ್ನು ಒಪ್ಪಿಕೊಳ್ಳಲಾಗದೇ ಹಿಂದುಳಿದದ್ದು ಅರ್ಥವಾಗುವಂತದ್ದು.  ಇವರು ಹಿಂದೆಂದೋ ಡಾ| ಮಾಧವ ಗಾಡ್ಗೀಳರ ಸಮಿತಿಯೊಂದರ ಜೊತೆ ಈ ವಲಯದಲ್ಲಿ ಕೇವಲ ವಾಹನದಲ್ಲಿ ಹಾದುಹೋದದ್ದನ್ನು ನೆನಪಿಸಿಕೊಳ್ಳುತ್ತಿದ್ದರು. ನಾವು ಘಾಟೀ ದಾರಿಯುದ್ದಕ್ಕೆ ಅಲ್ಲಲ್ಲಿ ನಿಂತು ಸಣ್ಣಪುಟ್ಟ ವೀಕ್ಷಣೆ ನಡೆಸಿದ ಕೊನೆಯಲ್ಲಿ ಮಧ್ಯಸ್ಥರು ಸ್ಪಷ್ಟವಾಗಿ ಘೋಷಿಸಿದರು “ಇಷ್ಟು ಅದ್ಭುತ ಕಾಯ್ದಿರಿಸಿದ ಅರಣ್ಯ ಸಹಜವಾಗಿ ಪುಷ್ಪಗಿರಿ ವನಧಾಮಕ್ಕೆ ಸೇರಲೇಬೇಕು.”
     
ಹೌದು, ಯಾವುದೋ ಕೃಷಿಕರ ದಾನದಲ್ಲೋ ಈಗಾಗಲೇ ವನ್ಯ ಹಾವಳಿಯಿಂದ ಸಂತ್ರಸ್ತರಾಗಿ ಪರಿಹಾರ ಹುಡುಕುವವರನ್ನು ಶಾಸನದ ಬಲದಲ್ಲಿ ಒಕ್ಕಲೆಬ್ಬಿಸಿಯೋ ‘ಆನೆ ಓಣಿ’, ‘ಹುಲಿ ಸಾಮ್ರಾಜ್ಯ’, ವನಧಾಮ ವಿಸ್ತರಿಸುವ ಕಷ್ಟ ಇಲ್ಲಿಲ್ಲ. ಪುಷ್ಪಗಿರಿ ವನಧಾಮದ್ದೇ ಮುಂದುವರಿಕೆಯಾದ, ಸ್ಪಷ್ಟವಾಗಿ ಖಾಸಗಿ ಕೃಷಿ ಅಥವಾ ವಸತಿ ಆಸಕ್ತಿಗಳೇನೂ ತೊಡಗಿಕೊಳ್ಳದ ಬಿಸಿಲೆ ರಕ್ಷಿತಾರಣ್ಯಕ್ಕೆ ಕೂಡಲೇ ‘ವನ್ಯ’ದ ಔಪಚಾರಿಕ ರಕ್ಷಾ-ಘೋಷಣೆ ಸರಕಾರದಿಂದ ಆಗಬೇಕು. ನಾವು ಐದು ವರ್ಷಗಳ ಹಿಂದೆ ಇಲ್ಲಿ ಕಾಡು ಕೊಂಡ ಕಥೆ (ಇಲ್ಲೇ ಹಳೆ ಲೇಖನ - ಕಾನನದಿಂದ ಬಂದವನಾವನಿವನ್) ನಿಮಗೆ ಗೊತ್ತೇ ಇದೆ. ಅದು ದಾಖಲೆಗಳಲ್ಲಿ ಏಲಕ್ಕಿ ಮಲೆ ಎಂದಿದೆ. ಹಾಗೇ ಇನ್ನೂ ಕೆಲವು ಖಾಸಗಿ ಏಲಕ್ಕಿ ಮಲೆಗಳು, ಬೀಳುಬಿದ್ದ ಗದ್ದೆಗಳು  (ತೀರಾ ಸಣ್ಣ ಸಣ್ಣ ಹಿಡುವಳಿಗಳು) ಈ ವಲಯದಲ್ಲಿ ನೋಡಿಕೊಳ್ಳುವವರಿಲ್ಲದೆ, ಕನಿಷ್ಠ ಸವಕಲು ಜಾಡೂ ಇಲ್ಲದಂತೇ ಹರಡಿವೆ. ಅಲ್ಲಿ ಸಹಜವಾಗಿ ವಿಕಸಿಸಿರುವ ಅರಣ್ಯ ಮತ್ತು ಅವನ್ನಾವರಿಸಿದಂತಿರುವ ದೊಡ್ಡವ್ಯಾಪ್ತಿಯ ರಕ್ಷಿತಾರಣ್ಯ ಇಂದು ಮೊದಲನೆಯದಾಗಿ ವಾಣಿಜ್ಯ ಮತ್ತೆ ರಾಜಕೀಯ ಹುನ್ನಾರಗಳಲ್ಲಿ ಭಾರೀ ಅಪಾಯಕ್ಕೊಳಗಾಗಿವೆ. ಎಲ್ಲೋ ದೂರದ ಹಳ್ಳಿಯಿಂದ ಜನ ಮಾಡಿಕೊಂಡು ಬಂದು, ವಿಪರೀತ ಹವಾಮಾನಗಳಲ್ಲಿ, ಜಿಗಣೆ ಹಾವು ಆನೆಗಳ ಭಯದಲ್ಲಿ ಏಲಕ್ಕಿ ಕೃಷಿ ವಿಸ್ತರಿಸುವ, ಕನಿಷ್ಠ ಊರ್ಜಿತದಲ್ಲಿಡುವ ಉತ್ಸಾಹ ಇಲ್ಲಿ ಯಾರಿಗೂ ಉಳಿದಿಲ್ಲ. ಸಹಜವಾಗಿ ಇದ್ದದ್ದನ್ನು ‘ಮರ ತಿನ್ನುವವರ’ ಆಮಿಷಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆ. ನಂಬಿದರೆ ನಂಬಿ, ಕೆಲವು ದಿನಗಳಲ್ಲಿ ನಲ್ವತ್ತಕ್ಕೂ ಮಿಕ್ಕು ಲಾರಿ ತುಂಬಾ ಮರಗಳ ಶವಯಾತ್ರೆ ನಡೆದುದಕ್ಕೆ ಬಿಸಿಲೆ ಹಳ್ಳಿ ಸಾಕ್ಷಿ ನುಡಿಯುತ್ತದೆ!

ನಾವು ‘ಅಶೋಕವನ’ ಮಾಡಿದ ಹೊಸತರಲ್ಲೇ ನಮ್ಮ ದಾಖಲೆಗಳು ಸ್ಪಷ್ಟವಾಗಿ ಹೇಳುವಂತೆ  ಒತ್ತಿನ ರಕ್ಷಿತಾರಣ್ಯಕ್ಕೆ ‘ಅಧಿಕೃತ’ ಮರ ಕಟುಕರು ಬಂದ  ಸುದ್ದಿ ಸಿಕ್ಕಿತು. ಜಡಿಮಳೆಯಲ್ಲಿ ಆರೆಂಟು ಮಿತ್ರರು ಕಾರೇರಿ ಧಾವಿಸಿದ್ದೆವು. ಕಂತ್ರಾಟುದಾರನ ಕೂಲಿಗಳು, ವಾಸ್ತವದಲ್ಲಿ ಸ್ವಲ್ಪೇ ದೂರದ ಹಿಡುವಳಿ ಒಂದರ ಅನುಮತಿ ಪತ್ರವನ್ನು ರಕ್ಷಿತಾರಣ್ಯಕ್ಕೆ ಅನ್ವಯಿಸಿಕೊಂಡು ಬೋಳಿಸುತ್ತಿದ್ದರು. ಮಾತಿನ ಬಲಾಬಲ ಪರೀಕ್ಷೆ, ಬೊಬ್ಬೆ, ಧರಣಿಗಳ್ಯಾವವೂ ಖಚಿತ ಫಲಿತಾಂಶ ತಂದದ್ದು ನನ್ನ ತಿಳಿವಿನಲ್ಲಿಲ್ಲ. ಮನೆಗೆ ಮರಳಿದವನೇ ನನ್ನ ತುರ್ತು ಮನವಿ, ಭೂ ದಾಖಲೆ ಮತ್ತು ಛಾಯಾಚಿತ್ರಗಳ ಸಹಿತ (ಹಾಸನ) ಜಿಲ್ಲಾಧಿಕಾರಿ, ಜಿಲ್ಲಾ ಅರಣ್ಯಾಧಿಕಾರಿ ಮತ್ತು ಅರಣ್ಯ ತನಿಖಾದಳಗಳಿಗೆ ಹೋಯ್ತು. ಸ್ವೀಕೃತಿ ಪತ್ರ ಮಾತ್ರ ಬಂತು. ತಹತಹ ತಡೆಯಲಾಗದೇ ಕಡಿತ ಮುಗಿಸಿ, ಸಾಗಣೆಯೂ ಪರಿಪೂರ್ಣಗೊಳ್ಳುತ್ತಿದ್ದ ಕಾಲದಲ್ಲಿ ನಾವಲ್ಲಿ ಮತ್ತೆ ಹೋಗಿದ್ದೆವು. ಆಗ ಸಿಕ್ಕ ಕಂತ್ರಾಟುದಾರ ನಮ್ಮ ದಾಖಲಾತಿಯೇ ತಪ್ಪು ಎಂದ. ಮುಂದುವರಿದು “ಡಿಪಾರ್ಟ್‌ಮೆಂಟಿಗೆ  ನೀವು ಕೊಟ್ಟ ದೂರಿನ ಪತ್ರಗಳನ್ನು ನೋಡಿದ್ದೇನೆ” ಎಂದು ವ್ಯಂಗ್ಯ ನಗೆಯಾಡಿದ್ದು ಒಟ್ಟು ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿತ್ತು. ಅಂಚೆ ರಸೀದಿ ಇನ್ನೂ ನನ್ನಲ್ಲಿ ಭದ್ರವಾಗಿದೆ. ಕಾಡುಳಿಯುವುದಿರಲಿ ಒಂದು ಅಧಿಕೃತ ಮಾರೋಲೆಯೂ ಇಂದಿನವರೆಗೆ ನನಗೆ ಬಂದಿಲ್ಲ.

ರಾಜಕೀಯ ಮುಖದಲ್ಲಿ ಈ ವಲಯದ ಮರಿಪುಡಾರಿಯೊಬ್ಬ ಹಳ್ಳಿಗರಲ್ಲಿ ‘ಭಾರಿ ಪ್ರೀತಿ’ಯಿಂದ “ಅನ್ಕೂಲ ನೋಡ್ಕಂಡೂ ಫಾರೆಸ್ಟೊಳಗೆ ಬೇಲಿ ಆಕ್ಕೊಳ್ರೋ. ನಾ ಮಾಡಿಸ್ಕೊಡ್ತೀನಿ” ಎಂದದ್ದಂತೂ ನನಗೆ ಇನ್ನಷ್ಟು ಅಪಾಯದ ಕರೆಯಂತೇ ಕೇಳಿದೆ. ಮರ ತೆಗೆಯುವುದು ಮಾತ್ರವಲ್ಲ, ನಿಧಾನಕ್ಕಾದರೂ ಪ್ರಕೃತಿ ಪುನರುಜ್ಜೀವಿಸಬಹುದಾದ ನೆಲವನ್ನೇ ಇಲ್ಲವಾಗಿಸುವ ಈ ‘ಅಕ್ರಮ ಸಕ್ರಮ’ ನಿಜವಾದದ್ದೇ ಆದರೆ ನಾಳೆ ಪೇಟೆಯ ನಿಮ್ಮಂಗಳಕ್ಕೆ ಎರಡು ಕೋಲು ಹಿಡಿದು ಬರುವವನನ್ನೂ ನೀವು ‘ಅಕ್ರಮಿ’ಯೆಂದೇ ಸಂಶಯಿಸಿ ಕಾರ್ಯಾಚರಣೆಗಿಳಿಯಬೇಕಾದೀತು - ಎಚ್ಚರೆಚ್ಚರ! ‘ಇರುವುದೇನು’ ಎನ್ನುವ ಅರಿವು ಬೆಳೆಸಿಕೊಳ್ಳುವ ಮುನ್ನ ಎಂಥವನ್ನೆಲ್ಲಾ ನಾವು ಕಳೆದುಕೊಳ್ಳುತ್ತಿದ್ದೇವೆ ಎನ್ನುವುದಕ್ಕೆ ನಮ್ಮ ಕಾಡಿನೊಳಗಿನ ಎರಡೋ ಮೂರೋ ಅನ್ವೇಷಕ ಚಾರಣಗಳಲ್ಲಿ ಜೀಕೆ ಭಟ್ಟರು ಕಂಡುಕೊಂಡ ಕೆಲವೇ ಸತ್ಯಗಳನ್ನು ಹೇಳಿ ಸದ್ಯ ವಿರಮಿಸುತ್ತೇನೆ.

ಕಳೆದ ಬೇಸಗೆಯಲ್ಲಿ ನಮ್ಮೊಂದು ತಂಡ ಕೊಡಂಜೆ ಕಲ್ಲು ಹತ್ತಿದ ಕಥೆ ಇಲ್ಲೇ ಹೇಳಿಕೊಂಡಿದ್ದೇನೆ. ಅಲ್ಲಿ ನಮಗೆ ಅದ್ಭುತವಾಗಿ ಕಾಣಿಸಿದ ಒಂದು ಗಿಡದ ಬಗ್ಗೆ ಕುತೂಹಲ ಬೆಳೆದು, ಸಾಮಾನ್ಯ ವಿವರಣೆ ಮತ್ತು ಚಿತ್ರದೊಡನೆ ಕೇಜಿ ಭಟ್ಟರನ್ನು ಮಿಂಚಂಚೆಯಲ್ಲಿ ಸಂಪರ್ಕಿಸಿದೆ. ‘ಮರು-ಟಪಾಲು’ ಎನ್ನುತ್ತಾರಲ್ಲ ಹಾಗೆ ಭಟ್ಟರ ಪ್ರತಿಕ್ರಿಯೆ ಬಂತು. ಇದು ಕಳ್ಳಿ ಮತ್ತಿತರ ಹಾಲು ಸುರಿಸುವ ಗಿಡಗಳ ಜಾತಿಗೆ ಸೇರಿದ್ದು. ಈ ವಲಯದಲ್ಲಿ ಸಾಮಾನ್ಯವಾಗಿ ಕಾಣಬಹುದಾದ ಗಿಡ. ಸ್ಥಳೀಯ ಹೆಸರು, ಜನೋಪಯೋಗ ನನಗೆ ತಿಳಿದಿಲ್ಲ. ವೈಜ್ಞಾನಿಕ ಹೆಸರು: Fagraea Ceilanica. [ನನ್ನ ಅಂಗಡಿಯಲ್ಲಿದ್ದ ಡಾ| ಮಾಗಡಿ ಗುರುದೇವರ ಪುಸ್ತಕ - ಕರ್ನಾಟಕದ ಔಷಧೀಯ ಸಸ್ಯಗಳು, ನೋಡಿದೆ: ಜಿನ್ನುನ್ನು, ಗಿನ್ನುನ್ನು, ಮೆಲಕಳ್ಳಿ, ಹಂಚಳ್ಳಿ ಇದರ ಸ್ಥಳೀಯ ಮತ್ತು ಪರ್ಯಾಯ ಹೆಸರುಗಳೆಂದಿದ್ದರು. ಆ ಪುಸ್ತಕದ ಮಿತಿಯಲ್ಲಿ ಜನೋಪಯೋಗದ ಉಲ್ಲೇಖವಿಲ್ಲ. ಮತ್ತೆ ಆ ಹೆಸರುಗಳಾದರೋ ಘಟ್ಟದ ಮೇಲಿನವೇ ಇರಬೇಕು. ಕರಾವಳಿ ವಲಯದಲ್ಲಿ ಏನಿರಬಹುದು ಎಂದು ಕೊಂಡಿದ್ದವನಿಗೆ ಪರಿಹಾರ ಕೊಟ್ಟವರು ಅಂಗಡಿಗೆ ಗಿರಾಕಿ-ಮಿತ್ರನಾಗಿ ಬರುವ ಡಾ| ಮೋಹನ್ ಕಿಶೋರ್ (ಪ್ರೊಫೆಸರ್, ಕರ್ನಾಟಕ ಆಯುರ್ವೇದ ಕಾಲೇಜು). “ಇದು ಮರಕಾಯಿ ಸೊಪ್ಪು ಅಥವಾ ಹಣ್ಣು ಚಳ್ಳೇ (ಕಾಸರಕ ಜಾತಿ). ತಲೆನೋವು, ಜ್ವರಕ್ಕೆ ಪೋಲ್ಟೀಸು ಮಾಡುವುದಿದೆ.”]


ನಮ್ಮ ಓಡಾಟಗಳಲ್ಲೂ ಕೇಜಿ ಭಟ್ಟರು ಇಷ್ಟೇ ಸಹಜವಾಗಿ ಅವರನ್ನು ಕುರಿತು ಕೇಳಿದ ಎಲ್ಲರ ಎಲ್ಲಾ ಸಂಶಯಗಳಿಗೆ ಉತ್ತರಿಸುತ್ತಿದ್ದರು. ಅಗತ್ಯಬಿದ್ದಲ್ಲಿ ಬಗಲಿನ ಚೀಲದಿಂದಲೇ ಗ್ರಂಥಾಧಾರವನ್ನೂ (ಅನ್ಯ ಲೇಖಕರದ್ದೂ ಇರಬಹುದು) ಹುಡುಕಿ ತೋರುತ್ತಿದ್ದರು. ವಿದ್ಯಾರ್ಥಿ ದೆಸೆಯ ಪಾರಿಸರಿಕ ಒತ್ತಡದಲ್ಲಿ ತಂತಮ್ಮ ಒಲವನ್ನು ಗ್ರಹಿಸಲಾಗದೇ ಇಂದು ಗಣಕ-ಕಾರ್ಖಾನೆಗಳಲ್ಲಿ ‘ಬಂಧಿ’ಗಳಾದ ಹಲವರು ಇಂದು ಭಟ್ಟರ ಏಕಲವ್ಯ ಶಿಷ್ಯರಾಗಿದ್ದಾರೆ; ಇವರು ಮಾತ್ರ ದ್ರೋಣರಲ್ಲ (ಕುರು-ಶಿಷ್ಯರನ್ನುಳಿದಿತರರನ್ನು ದಮನಿಸಿದಂತೆ)! ಕಾರು ನಿಲ್ಲಿಸಿದಲ್ಲೆಲ್ಲಾ ಕಾಡುನುಗ್ಗಿದಲ್ಲೆಲ್ಲಾ ಕುಮಾರಾಧಾರಾ ಕಣಿವೆಯ ವಿಸ್ತಾರದಲ್ಲಿ, ಮರಬಳ್ಳಿಗಳ ಅಗಾಧತೆಯಲ್ಲಿ ಸುಲಭವಾಗಿ ಕಳೆದುಹೋದವರಿಗೆ ಪಕ್ಕದ ಮರದಲ್ಲೇ ಕಣ್ಣುಮುಚ್ಚಾಲೆಯಾಡುವ ಹಸಿರು ಕಾಯಿಗಳ ಮಹತ್ವ ಹೇಳುತ್ತಾರೆ. “ಒಳ್ಳೆ ಉಪ್ಪಿನಕಾಯಿ ಕೂಡಾ ಮಾಡಬಹುದು” ಎಂದರೂ “ಇಲ್ಲಿಂದ ಸಂಗ್ರಹಿಸಿ ಅಲ್ಲ, ನಿಮ್ಮ ಭೂಮಿಗಳಲ್ಲಿ ಕೃಷಿ ಮಾಡಿದಾಗ” ಎಂದು ಸೇರಿಸಲು ಮರೆಯಲಿಲ್ಲ!  ಮಳೆಗಾಲದ ಸೊಕ್ಕಿನಲ್ಲಿ ದಾರಿಬದಿಯ ಝರಿ ಪೂತ್ಕರಿಸುತ್ತಿದ್ದಾಗ ಬದಿಯ ಹಸುರಿನ ಮೇಲೆ ಕಣ್ಣು ಹಾಯಿಸುತ್ತಿದ್ದರು ಭಟ್ಟರು. ಒಮ್ಮೆಗೇ “ನನಗೆ ಹಾವುಗಳ ಭಯ ಜಾಸ್ತಿ. ಆದರೆ ಇದು ಮಾತ್ರ ನಿರುಪದ್ರವಿ ಎಂದು ಗೊತ್ತು” ಎಂದು ಪೂರ್ಣ ನಗುಮುಖದೊಡನೆ ದೊಡ್ಡ ಹಸಿರು ಹಾವು ಹಿಡಿದು, ಒಂದು ಮಿನಿಟು ಪ್ರದರ್ಶಿಸಿ, ಇದ್ದಲ್ಲಿಗೇ ಬಿಟ್ಟದ್ದಂತೂ ಅವರ ಸಹಜ ಅನ್ವೇಷಕ ಬುದ್ಧಿಗೆ ಸ್ಪಷ್ಟ ನಿದರ್ಶನದಂತಿತ್ತು. (ಅಷ್ಟು ಜ್ಞಾನ ನನಗಿದ್ದರೂ ಕೈಯಾರೆ ಹಿಡಿಯುವ ಧೈರ್ಯ ಇಲ್ಲದ್ದಕ್ಕೆ ಕೇವಲ ಚಿತ್ರ ಹಿಡಿದೆ!)

ಮೊನ್ನಿನ ಚಳಿಗಾಲದ ನಮ್ಮ ಅಡ್ಡಹೊಳೆ ಅಂಚಿನ ಚಾರಣದಲ್ಲಿ, ತಂಡ ಒಂದು ಹಾಳುಬಿದ್ದಿದ್ದ ಲಾರೀ ಜಾಡು ಅನುಸರಿಸಿತ್ತು. ಇದ್ದಕ್ಕಿದ್ದಂತೆ ನಮ್ಮೊಳಗಿನ ‘ದ್ರೌಪದಿ’ಯೊಬ್ಬನಿಗೆ ಸುಗಂಧವೊಂದು ಮೂಗಿಗೆ ಬಡಿಯಿತು. ಆಗ ನಮ್ಮೊಳಗಿನ (ಮಹಾಭಾರತದಲ್ಲಿ ನಿಜ ದ್ರೌಪದಿಗೆ ಅದೇ ಪ್ರಥಮ ಬಾರಿಗೆ ಸೌಗಂಧಿಕಾಪುಷ್ಪದ ಪರಿಮಳ ಸಿಕ್ಕಿತ್ತಂತೆ. ಆಕೆಗೆ ಹೂವು ಪತ್ತೆ ಮಾಡಿ, ಸಂಗ್ರಹಿಸಲು ನಿಜ. . .) ಭೀಮಣ್ಣ ಕಾರ್ಯಕ್ಕಿಳಿದ! ಬಂಡೆಯೊಂದರ ನೆರಳಿನ ತರಗೆಲೆ, ಒಣಕಡ್ಡಿಗಳ ಮರೆಯಲ್ಲಿ ಇದ್ದೂ ಇಲ್ಲದಂತೆ ನಾಲ್ಕೈದು ಮಾಸಲು ಬಿಳಿ ಕಡ್ಡಿಗಂಟಿದ, ಅದೇ ಬಿಳಿಯ ಹತ್ತೆಂಟು ಹೂವು ಕಾಣಿಸಿತು. ನಮ್ಮ ನಾಗರಿಕ ಜ್ಞಾನಕ್ಕೆ ಎಲ್ಲೋ ನಾಲ್ಕೆಂಟು ಸಸ್ಯ ಬಿಟ್ಟರೆ ಉಳಿದವೆಲ್ಲಾ ಅನಾಮಧೇಯ ಕಾಡು-ಮರ, ಗಿಡ, ಹೂ ಇತ್ಯಾದಿ! ಆದರೆ ಅಂದು ಜೊತೆಗಿದ್ದ ‘ಸಸ್ಯ ವಿಶ್ವಕೋಶ’ (ಕೇಜಿ ಭಟ್ಟರು ಎಂದು ಪ್ರತ್ಯೇಕ ಹೇಳಬೇಕೇ?) ಉದಾರವಾಗಿ ಸಹಾಯಕ್ಕೊದಗಿದರು. ಅದು Epipogeum roseum ಎಂಬ ಆರ್ಕಿಡ್. ಇದು ಸಸ್ಯಾವಶೇಷಗಳ (ಗಮನಿಸಿ, ಜೀವಂತ ಸಸ್ಯಗಳ ಮೇಲಲ್ಲ) ಮೇಲೇ ಅರಳುವ ‘ಸೌಗಂಧಿಕ.’ ಪಶ್ಚಿಮಘಟ್ಟದ ಉದ್ದಗಲಕ್ಕೆ ಹೂ ಹಸಿರುಗಳನ್ನೇ ಹುಡುಕಿಕೊಂಡು ಅಲೆದ ಸ್ವತಃ ಭಟ್ಟರೇ ಇದನ್ನು ಇದೇ ಎರಡನೇ ಬಾರಿ ನೋಡುತ್ತಿದ್ದರು. ಲಾರಿ ದಾರಿ ಕಡಿದವರಿಗೆ, ಅದರ ಮೇಲೆ ‘ಇದೆಲ್ಲಾ ನಾವು ಕಾಣದ್ದೇ’ ಎಂದು ದೂಳೆಬ್ಬಿಸಿ ಜೀಪು ಓಡಿಸಿದ್ದವರಿಗೆ ಇದು/ ಇಂಥದ್ದು ದಕ್ಕಿರಲು ಸಾಧ್ಯವೇ ಇಲ್ಲ! ಈ ವಲಯದ ‘ಹಾಳುಭೂಮಿ’ಯನ್ನು ಉಪಗ್ರಹದೆತ್ತರದಿಂದ ಸರ್ವೇಕ್ಷಣೆ ಮಾಡಿ ‘ನೇತ್ರಾವತಿ ನದಿ’ ತಿರುಗಿಸಿದ್ದೇ ಆದರೆ, ಸಾರ್ವಜನಿಕಕ್ಕೆ ಸುಳ್ಳು ಲಕ್ಷ್ಯ ಇಟ್ಟು, ಖಾಸಗಿ ಉಪೋತ್ಪನ್ನಗಳ ಲಾಭಕ್ಕಾಗಿಯೇ ತೊಡಗುವ ಮಿನಿಜಲವಿದ್ಯುತ್ ಹೆಸರಿನಲ್ಲಿ ಕಣಿವೆ ಕಣಿವೆ ಮುಳುಗಿದ್ದೇ ಆದರೆ, ಸಾರಿಗೆ ಸಂಪರ್ಕ ಸೌಲಭ್ಯಗಳ ಹೆಚ್ಚಳದ ಹುಚ್ಚಿನಲ್ಲಿ ಚತುಷ್ಪಥ, ರೈಲ್ವೇಪಥ, ವಿದ್ಯುತ್ ಸರಿಗೆ, ಎಣ್ಣೆ ಕೊಳವೆಗಳೆಂದು ನೂರೆಂಟು ನೆಪಹಚ್ಚಿ ಘಟ್ಟಗಳೆಲ್ಲವನ್ನೂ ಮಟ್ಟಮಾಡಿದ್ದೇ ಆದರೆ ಇಂಥಾ ನಷ್ಟಗಳ ಲೆಕ್ಕ ಸಾವಿರವಾಗದೇ?

ಅಡ್ಡಹೊಳೆಯಂಚಿನ ಕಾಲ್ದಾರಿಯಲ್ಲೊಮ್ಮೆ ತಂಡದಲ್ಲಿದ್ದ ಗೆಳೆಯ ಮೋಹಿತ್‌ಗೆ ಒಂದು ಸಪುರ ಕೋಲಿನ ತುದಿಗೆ ಸುರುಳಿಯಾಕಾರದಲ್ಲಿ ಅದೇನೋ ಪತಾಕೆ ಸಿಕ್ಕಿಸಿದಂತ ರಚನೆ ಕಾಣಿಸಿತು. ಆತ ಕೂಡಲೇ ನಮ್ಮೊಡನೆಯೇ ಇದ್ದ ಭಟ್ಟರ ಗಮನಕ್ಕಿದನ್ನು ತಂದ. ಅವರ ಕಣ್ಣಿನ ಹೊಳಪು ಹೆಚ್ಚಿತು. “ಓ ಇದು ನಮ್ಮ ಕೇನೇ ಗೆಡ್ಡೆಯದೇ (ಸುವರ್ಣಗೆಡ್ಡೆ) ವನ್ಯ ಸಂಬಂಧಿ! ಹೀಗೊಂದು ಉಂಟೆಂದು ನಾನು ಪುಸ್ತಕಗಳಲ್ಲಿ ನೋಡಿದ್ದೇನೆ, ಓದಿದ್ದೇನೆ, ಇದುವರೆಗೆ ಕಂಡಿರಲಿಲ್ಲ” ಎಂದವರೇ ಅದರ ವೈಜ್ಞಾನಿಕ ಹೆಸರನ್ನೂ ಕ್ಷಣಮಾತ್ರದಲ್ಲಿ ಹೇಳಿದರು. ನಮಗೆ ಕಾಣುತ್ತಿದ್ದ ವಿಚಿತ್ರಾಕಾರ ಅದರ ಹೂವು. ಅದರಿಂದ ತಗ್ಗಿನಲ್ಲಿದ್ದ ಹಸಿರೆಲೆಗಳು ಅದರದ್ದೇ ಎಂದೂ ನಮಗವರು ಪರಿಚಯಿಸಿದರು. (ಶುದ್ಧ ವಿಜ್ಞಾನಿಯ ಹದದಲ್ಲಿ ಆ ಸಸ್ಯದ ಮಾದರಿಯನ್ನೂ ಅವರು ಸಂಗ್ರಹಿಸಿಕೊಂಡರು.) ನಮ್ಮ ಅದೃಷ್ಟಕ್ಕೆ ಆ ಹೂವು ಯಾವುದೇ ‘ಪರಿಮಳ’ ಬೀರಲಿಲ್ಲ. ನಿಜ ಕೇನೇಗೆಡ್ಡೆಯದೇ ಹೂವಾಗಿದ್ದರೆ “ನಾವು ಗುರುತಿಸುತ್ತಿದ್ದೆವು” ಎಂದು ನಾವು ಕೆಲವು ಬುದ್ಧಿವಂತರು ಮುಸಿಮುಸಿ ನಕ್ಕು ಮುಂದುವರಿದಿದ್ದೆವು. ಆದರೆ ಭಟ್ಟರ ವಿಷಯ ನಿಷ್ಠೆ ಅಲ್ಲಿಗೇ ನಿಲ್ಲಲಿಲ್ಲ. ಅಂದಿನ ಕಾರ್ಯಕ್ರಮ ಮುಗಿಸಿ ಊರು ತಲಪಿದ ಮರುದಿನವೇ ಬಂತವರ ಮಿಂಚಂಚೆ:

Dear Shri Ashokavardhana,
I want to bring to your kind notice that yesterday we have seen a very rare plant, namely, Anaphyllum wightii of the family Araceae. This plant has not been recorded from Karnataka so far. I have attached two photos (Basal portion of the plant and Inflorescence) of this plant for your perusal. Yesterday, I have wrongly identified it as Sauromatum pedatum
With best wishes.
Yours sincerely,
K. Gopalakrishna Bhat(ಇದರ ಮೇಲೆ ಟಿಪ್ಪಣಿ ಕೊಡುವಷ್ಟು ದೊಡ್ಡವ ನಾನಲ್ಲ! ಆದರೆ ಒಟ್ಟು ಬರಹದ ಬಗ್ಗೆ ನಿಮ್ಮ ಟಿಪ್ಪಣಿ ಬರದೇ ಇದ್ದರೆ ನಾನು ನಾನಲ್ಲ!!)

11 comments:

 1. (ಇದರ ಮೇಲೆ ಟಿಪ್ಪಣಿ ಕೊಡುವಷ್ಟು ದೊಡ್ಡವ ನಾನಲ್ಲ! ಆದರೆ ಒಟ್ಟು ಬರಹದ ಬಗ್ಗೆ ನಿಮ್ಮ ಟಿಪ್ಪಣಿ ಬರದೇ ಇದ್ದರೆ ನಾನು ನಾನಲ್ಲ!!)- ಹೀಗೆಲ್ಲ ಹೆದರಿಸಿದರೆ 'ಚೆನ್ನಾಗಿದೆ' ಅನ್ನಲೇ ಬೇಕಲ್ಲವೇ?

  ReplyDelete
 2. dear sir
  thaavu thamma thanda kaigolluva pravasagaa anubhava Oduvaaga Romanchanavaaguthade. Idarondige sasyavargagala guruthisuvike bahala olleya kaarya. pilikuladalli Deshiya gida sasigalannu nettu belesuva kaarya kaigondiddare. nimma thandada anubhava, documentationgalu pilikulada sangrahakke sahakariyaagalive. Thammantha thandada mattu pilikulada diseyinda deshiyarige deshiya mara gidagala parichaya munduvariyali. koduge, documentation sadaa munduvariyali yembude nanna anisike.
  yours
  benet g.a

  ReplyDelete
 3. ನಾವೆಲ್ಲ ನಮಗರಿಯದಂತೆ ನಮ್ಮ ವನ್ಯ ಸಂಪತ್ತನ್ನು ಹೇಗೆ ಕಳೆದುಕೊಳ್ಳುತ್ತಾ ಇದ್ದೇವೆ ಎನ್ನುವುದನ್ನು ಉದಾಹರಣೆ ಸಹಿತ ತಿಳಿಸಿ ಕೊಟ್ಟಿದ್ದೀರಿ. ಡಾ| ಎನ್.ಎ. ಮಧ್ಯಸ್ಥ ಹಾಗೂ ಡಾ| ಕೆ. ಗೋಪಾಲಕೃಷ್ಣ ಭಟ್ ಅವರ ಅಪಾರ ಪಾಂಡಿತ್ಯವನ್ನು ಸವಿಯುವ ಅವಕಾಶವನ್ನು ಆ ದಿವಸ ಕಳೆದುಕೊಂಡದಕ್ಕಾಗಿ ಪಶ್ಚಾತ್ತಾಪ ಪಡುತ್ತಿದ್ದೇನೆ.

  ReplyDelete
 4. ಮೋಹಿತ್20 February, 2012 12:19

  ನೀವು ಸಾರ್ವಜನಿಕವಾಗಿ ’ಬೆದರಿಕೆ’ ಹಾಕಿದ ಮೇಲೆ ಪ್ರತಿಕ್ರಿಯೆ ತೋರದಿದ್ದರೆ ನಮಗೆ ಉಳಿಗಾಲವುಂಟೇ? :)
  ಅವತ್ತಿನ ಬಿಸಿಲೆ ಚಾರಣ ನಿಜವಾಗಿಯೂ ಮರೆಯಲಾಗದಂಥದ್ದು. ಸಸ್ಯಶಾಸ್ತ್ರಜ್ನ ಡಾ. ಕೆ.ಜಿ ಭಟ್ ರವರ ಉಪಸ್ಥಿತಿಯಿಂದಾಗಿ ನಮ್ಮ ಅರಿವಿಗೆ ಬಾರದೇ ಹೋಗುತ್ತಿದ್ದ ಎಷ್ಟೋ ಅಪೂರ್ವ ಸಸ್ಯಜಾತಿಗಳ ಬಗ್ಗೆ ಮಾಹಿತಿ ದೊರೆಯಿತು.
  ಇನ್ನೊಂದು ಸ್ವಾರಸ್ಯಕರ ಸಂಗತಿ ಆ ’ಸುವರ್ಣ ಗೆಡ್ಡೆ ಸಂಬಂಧಿ’ ಗಿಡದ್ದು.
  ಅದರ ಹೂವಿನ ಪರಿಮಳವನ್ನು ಆಘ್ರಾಣಿಸಲೆಂದು ಹತ್ತಿರ ಹೋದ ನನಗೆ ಅಡರಿದ್ದು ಕೊಳೆತ ಮಾಂಸದ ವಾಸನೆ. ಲೋಟದಾಕಾರದ ಹೂವಿನ ಒಳಗೆ ಎನಾದರೂ ಸತ್ತು ಬಿದ್ದಿದೆಯೇ ಎಂದು ನೋಡಿದರೆ ಅದೂ ಇಲ್ಲ! ’ಹೀಗೂ ಉಂಟೇ!’ ಆಗಬಹುದಿದ್ದ ಆ ರಹಸ್ಯವನ್ನು ಬೇಧಿಸಿದ್ದು ಕೆ.ಜಿ ಭಟ್ ರವರು. ಆ ಹೂವು ಪರಿಮಳದ ಬದಲು ನಾತ ಸೂಸುವ ಕಾರಣವೇನೆಂದರೆ ಆ ಹೂವಿನ ಪರಾಗಸ್ಪರ್ಶ ಮಾಡುವ ಜವಾಬ್ದಾರಿ ಹೊತ್ತವರು ನೊಣ ಮಹಾಶಯರುಗಳು!
  ಪರಿಮಳ ಸೂಸಿದರೆ ನೊಣಗಳು ಆ ಕಡೆ ತಲೆ ಕೂಡಾ ಹಾಕಲ್ಲ ಎಂದು ಆ ಗಿಡಕ್ಕೆ ಕಲಿಸಿದವರಾರೋ!!?

  ReplyDelete
 5. ಅಶೋಕ ವರ್ಧನರೇ!
  ಲೇಖನವನ್ನು ಓದುತ್ತಾ ತಮ್ಮ ಚಾರಣದಲ್ಲಿ ನಾನು ಕೂಡಾ ಭಾಗಿ ಆದೆ!
  ಮಾನ್ಯ ಡಾ. ಕೇಜಿ ಭಟ್ಟರಂತೆ ಇರುವ ಸತ್ಯವಂತರು ಮತ್ತು ವಿಜ್ಞಾನ ನಿಷ್ಟರು ಇಂದು ಕಾಣಲು ಸಿಗುವುದೇ ಅಪರೂಪ.
  ಅವರಿಗೆ ನನ್ನ ಹಾರ್ದಿಕ ವಂದನೆಗಳು.
  ಪ್ರೀತಿಯಿಂದ
  ಪೆಜತ್ತಾಯ ಎಸ್. ಎಮ್.

  ReplyDelete
 6. ಪ್ರಿಯ ಅಶೋಕವರ್ಧನರಿಗೆ ನಮಸ್ಕಾರಗಳು.
  ಎನ್ ಎ ಅಧ್ಯಸ್ಥ, ಕೆ ಗೊಪಾಲಕೃಷ್ಣ ಭಟ್ ಅವರೊಟ್ಟಿಗಿನ ನಿಮ್ಮ ಸೌಗಂಧಿಕಾ ವಿಹಾರ ಮುದನೀಡಿತು. ಭಟ್ಟರ ಹೆಸರನ್ನು ಹ್ರಸ್ವ(ಹೃಸ್ವ ಅಲ್ಲ) ಮಾಡುವ ಅಗತ್ಯ, ಔಚಿತ್ಯ ಇಲ್ಲ. ಅವರನ್ನು ಗೋಪಾಲಕೃಷ್ಣರು ಅಥವಾ ಭಟ್ಟರು ಎಂದರೆ ಸಾಕೇನೊ. ಅವರಂಥ ವಿಷಯ ತಜ್ಞರಿಗೇ ಒಂದನೆಯ, ಎರಡನೆಯ ಬಾರಿ ಮಾತ್ರ ನೋಡಲು ಸಿಕ್ಕಿದ ಅಪರೂಪದ ಸಸ್ಯ ಸಂಪತ್ತು ಅವಿವೇಕಿಗಳ ಕೈಯಲ್ಲಿ ನಾಶವಾಗುತ್ತಿರುವುದು ದುರಂತ. ಇದನ್ನು ತಡೆಯಲು ನೀವು ಮಾರ್ಚಿ ಕೊನೆಯವರೆಗೂ ಕಾಯಬೇಕಿಲ್ಲವೆನ್ನುವ ತುರ್ತು ಇದೆ. ನಿಮ್ಮ ಅಹವಾಲುಗಳನ್ನು ಇಲಾಖೆಯವರು ಅರಣ್ಯ ರೋದನದಂತೆ ನಿರ್ಲಕ್ಷಿಸುವುದು ಗಂಭೀರವಾಗಿ ಪರಿಗಣಿಸಬೇಕಾದ ವಿಷಯ. ಹಸಿರು ಹಾವಿನ ಚಿತ್ರ ಸೊಗಸಾಗಿದೆ.

  ReplyDelete
 7. ನಮಸ್ಕಾರ..ಚಾರಣದ ಲೇಖನ ಚೆನ್ನಾಗಿದೆ. plant taxonomy ಕಲಿಯಲೆಂದು ಕೆ.ಜಿ ಭಟ್ ಸರ‍್ ರವರನ್ನು ನಾನು ಆಗಾಗ ಬೇಟಿಯಾಗುತ್ತಿರುತ್ತೇನೆ.ಅವರ ನಡೆ ನುಡಿಗಳ ಮೇಲಿನ ಹಿಡಿತ ಹಾಗೂ ಜ್ಞಾನ ಅಗಾಧ..

  ನಿಮ್ಮ ತಂಡಕ್ಕೆ ನಾನೂ ಸೇರಲೇ

  ReplyDelete
 8. ಎಚ್. ಸುಂದರ ರಾವ್21 February, 2012 10:17

  (ಶಿರಾಡಿ) ಅಡ್ಡಹೊಳೆಯ ಚಾರಣಕ್ಕೆ ಹೋದ ಹುಡುಗನ ಮರಣಕ್ಕೆ ಶೇ. 90 ಜವಾಬ್ದಾರಿ ಅರಣ್ಯ ಇಲಾಖೆಯದೇ ಎಂದು ನನಗನಿಸುತ್ತದೆ. ಯಾರು ಅರಣ್ಯ ನುಗ್ಗಿದರೂ, ಯಾರು ಮರ ಕಡಿದು ಸಾಗಿಸಿದರೂ, ಯಾರು ಶಿಕಾರಿ ಮಾಡಿದರೂ, ಯಾರು ಅರಣ್ಯ ಉತ್ಪನ್ನಗಳನ್ನು ಸಾಗಿಸಿದರೂ, ಯಾರು ಅಮೂಲ್ಯ ಹರಳು ಕಲ್ಲುಗಳನ್ನು ಸಾಗಿಸಿದರೂ, ಇಲಾಖೆ ನಿರ್ಲಿಪ್ತ, ನಿಶ್ಚಲ! ಹುಡುಗ ತೀರಿಕೊಂಡ ಮೇಲೆ, ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಆ ಕಾಡಿನಲ್ಲಿ ನಡೆದು ಹೋಗುತ್ತಿದ್ದುದನ್ನು ಟಿವಿಯಲ್ಲಿ ನೋಡಿದೆ. ಆಗ ನನಗೆ ಪ್ರಾಮಾಣಿಕವಾಗಿ ಅನ್ನಿಸಿದ್ದು: "ಸದ್ಯ ಈ ನ್ಯವದಲ್ಲಾದರೂ ಇಲಾಖೆ ಅಧಿಕಾರಿ ಕಾಡೊಳಗೆ ಹೋದರಲ್ಲ!" ಅಂತ. ಭಾನುವಾರವೆಂದರೆ ಎಷ್ಟು ಜನ ಕಾಡೊಳಗೆ ಚಾರಣ ಹೋಗುವವರು! ಒಬ್ಬರನ್ನಾದರೂ ಹಿಡಿದು ನಿಲ್ಲಿಸಿ, ಎಲ್ಲಿಗೆ ಹೋಗುತ್ತೀರಿ, ಎಲ್ಲಿದೆ ಅನುಮತಿ ಎಂದು ಅರಣ್ಯ ಇಲಾಖೆ ವಿಚಾರಿಸಿದ್ದುಂಟೆ? ಅಕ್ರಮ ಪ್ರವೇಶದ ಅಪರಾಧಕ್ಕಾಗಿ ಯಾರನ್ನಾದರೂ ಬಂಧಿಸಿದ್ದುಂಟೆ? ಅರಣ್ಯ ಪ್ರವೇಶ ಮಾಡಲು ಅನುಮತಿ ಅಗತ್ಯ ಎಂಬ ನಿಯಮಕ್ಕೆ ಕಿಂಚಿತ್ತಾದರೂ ಪ್ರಚಾರ ಕೊಟ್ಟದ್ದುಂಟೆ? ಯಾವುದು ರಕ್ಷಿತ ಅರಣ್ಯ ಎಂಬುದಕ್ಕೆ ಬೇಲಿ ಗೀಲಿ ಏನಾದರೂ ಮಾಡಿ ಸೂಚಿಸಿದ್ದುಂಟೆ? ತಾವು ಮಾಡಬೇಕಾದ ಯಾವ ಕರ್ತವ್ಯವನ್ನೂ ಮಾಡದೆ, ಅಮಾಯಕ ಹುಡುಗನೊಬ್ಬ, ತನ್ನ ಹುಡುಗಾಟಿಕೆಗೆ ಸಹಜವಾದ ಏನೋ ಮಾಡಿದ್ದಕ್ಕೆ ಬಲಿಯಾಗಿ ಹೋದಾಗ ಇಲಾಖೆಗೆ ಇದ್ದಕ್ಕಿದ್ದಂತೆ ಕಾನೂನು ನೆನಪಾಗಿ ಬಿಡುತ್ತದೆ! ಚಾರಣ ಹೊರಟ ಈ ಹುಡುಗರ ಜೊತೆ ಅರಣ್ಯ ಇಲಾಖೆಯ ಒಬ್ಬ ಸಿಬ್ಬಂದಿ ಇದ್ದಿದ್ದರೆ, ಈ ಅವಘಡ ಸಂಭವಿಸುತ್ತಿರಲಿಲ್ಲವೋ ಏನೋ?
  ಕಣ್ಣೆದುರಿಗೇ ಮರಗಳ ನಾಶವಾಗುತ್ತಿದ್ದರೂ ಕಾಣದಂತೆ ಸುಮ್ಮನೆ ಕೂರುವ, ಹಾಗೆ ಕೂತು ಪ್ರತೀ ತಿಂಗಳೂ ಯಾವ ಪಾಪಪ್ರಜ್ಞೆಯೂ ಇಲ್ಲದೆ ನೀಟಾಗಿ ಸಂಬಳ ತಿನ್ನುವ ಈ ಇಲಾಖೆಯ ಅಧಿಕಾರಿಗಳಿಂದ ಕಾಡು ಉಳಿಯುತ್ತದೆ ಎಂದು ನಿರೀಕ್ಷಿಸುವ ನಾವೇ ಮೂರ್ಖರು ಎನಿಸುತ್ತದೆ.
  ನಿರೇನ್ ಹೇಳಿದ ಮಾತು ನನಗೆ ಯಾವಾಗಲೂ ನೆನಪಾಗುತ್ತದೆ: "ಮನಸ್ಸಿಗೆ ಒಂದಿಷ್ಟು ಸಂತೋಷವಾಗಲೆಂದು ನಾವು ಚಾರಣಕ್ಕೆ ಬರುವುದು; ಇಲ್ಲಿ ಬಂದರೆ ತಲೆಬಿಸಿಯೇ ಜಾಸ್ತಿ"

  ReplyDelete
 9. ಡಾ|ಭಟ್ಟರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅವರ ತುಂಬಿದರೂ ತುಳುಕದ ಜ್ನಾನಕ್ಕೆ ಒಂದು ಉದಾಹರಣೆ.

  Flora of Udupi ಮುಖಪುಟದಲ್ಲಿರುವ photographically ಅಷ್ಟೊಂದೇನೂ ಚೆನ್ನಾಗಿಲ್ಲದ (out-of-focus) ಚಿತ್ರವನ್ನು ಯಾಕಾದರೂ ಹಾಕಿದ್ದಾರೊ ಎಂದು ನಾನೆಂದುಕೊಳ್ಳುತ್ತಿದ್ದಾಗ, ಅದು ಒಂದು ಅಪೂರ್ವ ಗಿಡ ಎಂದು ಒಳಪುಟದಲ್ಲಿ ಅವರ ದಾಖಲಾತಿ ಕಾಣಿಸಿತು. ಆದರೂ ಅದರ second name 'ಭಟಿ' ಅವರದೇ ಎಂದು ಅವರು ಬರೆದುಕೊಂಡಿಲ್ಲ. ಮೊನ್ನೆ ಅವರೊಂದಿಗೆ ಮಾತನಾಡುತ್ತಿದ್ದಾಗ ಮಾತಿನ ಮಧ್ಯದಲ್ಲಿ ಅವರಿಗೇ ತಿಳಿಯದಂತೆ ಈ ವಿಚಾರ ಹೊರಬಿದ್ದಾಗಲಷ್ಟೇ ಅವರ ಹೆಸರಿನಲ್ಲೊಂದು ಗಿಡವಿದೆ ಎಂದು ತಿಳಿದದ್ದು. ಅದನ್ನೂ ಯಾರೋ ಬೇರೆಯವರು ಅವರ ಮೇಲಿನ ಗೌರವದಿಂದ ಇಟ್ಟಿದ್ದಾರೆ!.

  ವಂದನೆಗಳು,
  ವಸಂತ್ ಕಜೆ

  ReplyDelete
 10. Also visit: http://kaje.in/node/54
  Vasanth Kaje

  ReplyDelete
 11. Keshava Chandra K (sasyakesha)10 March, 2012 10:12

  Keshava Chandra K
  I am very happy by reading the article which was published by you about the Veteran Personality 'WALKING ENCYCLOPEDIA OF TAXONOMY' & Legendary Taxonomist Dr.K.G.Bhat Sir, a man of simple living and high thinking and my memory dates back to 3 months back when I visited his house and interacted with him and also am proud to tell that I know the above said Jewel Gem
  Yesterday after speaking with you my mind is not willing to accept that such a best book house is closing shortly.
  I wish I could be a part of your team.

  ReplyDelete