20 January 2012

ಅತ್ರಿ ಬುಕ್ ಸೆಂಟರ್ ಮುಚ್ಚಿ, ವಾನಪ್ರಸ್ಥ!


ದೇವಕಿ ಹಾಗೂ ನಾನು
ವೃತ್ತಿ ಜೀವನದ ಸರಣಿಯೋಟದಲ್ಲಿ ನಾನು ತಂದೆಯಿಂದ (ಅಧ್ಯಾಪನದ) ಕೈಕೋಲು ಪಡೆದವನಲ್ಲ, ಮಗನಿಗೆ (ಸಿನಿಮಾ ನಿರ್ದೇಶಕ) ಕೊಡಬೇಕಾಗಿಯೂ ಇಲ್ಲ. ಮೂವತ್ತಾರು ವರ್ಷಗಳ ಪುಸ್ತಕೋದ್ಯಮದಲ್ಲಿ ನನ್ನ ನಿರ್ವಹಣೆ ಬಗ್ಗೆ ಧನ್ಯತೆಯಿದ್ದರೂ ನನ್ನನ್ನು ಬೆಳೆಸಿದ ಮತ್ತು ನನ್ನ ಭವಿಷ್ಯಕ್ಕೆ ಭದ್ರತೆಯನ್ನೂ ಒದಗಿಸುತ್ತಿರುವ ಈ ವೃತ್ತಿಯ ಬಗ್ಗೆ ಸಂತೋಷವಿದ್ದರೂ ಮುಖ್ಯವಾಗಿ ಕನ್ನಡ ಮತ್ತೆ ಪುಸ್ತಕೋದ್ಯಮದ ಭವಿಷ್ಯದ ಬಗ್ಗೆ ನಿರಾಶೆಯಲ್ಲಿ ನಿವೃತ್ತನಾಗುತ್ತಿದ್ದೇನೆ. ಹೆಚ್ಚು ಕಡಿಮೆ ಶೂನ್ಯ ಬಂಡವಾಳದಿಂದ ತೊಡಗಿದ ಈ ಮಳಿಗೆಗೆ ಡಿವಿಕೆ ಮೂರ್ತಿಯವರು ಪ್ರಧಾನ ಪ್ರೇರಕರು ಮತ್ತು ಶುದ್ಧ ವ್ಯಾವಹಾರಿಕವಾಗಿ ಪೋಷಕರು. ಉಳಿದಂತೆ ನನ್ನ ತಂದೆಯ ನಾಮದ ಬಲದಲ್ಲಿ ಕನ್ನಡದ ಹೆಚ್ಚು ಕಡಿಮೆ ಎಲ್ಲಾ ಮತ್ತು ಇಂಗ್ಲಿಷಿನ ಕೆಲವು ಪ್ರಕಾಶಕರೂ ವಿತರಕರೂ ಬೇಕಾದ ಪುಸ್ತಕಗಳನ್ನು ಕೊಟ್ಟು, ನಾನು ಅನಿರ್ದಿಷ್ಟ ಕಾಲಾನಂತರ ಪಾವತಿ ಕೊಟ್ಟಂತೆ ಒಪ್ಪಿಸಿಕೊಂಡು ಸಹಕರಿಸಿದ್ದಾರೆ. ಮೈಸೂರಿನಲ್ಲಿ ಕುಳಿತು, ಕರ್ನಾಟಕ ಮಟ್ಟದಲ್ಲಿ ಯೋಚಿಸಿ ನಾನು ಮಂಗಳೂರು ಆಯ್ದುಕೊಂಡಾಗ ನೆನಪಾದ ಏಕೈಕ ಹೆಸರು ಬಿ.ವಿ ಕೆದಿಲಾಯರದ್ದು. ಅವರು ಮತ್ತು ಹಾಗೇ ಪ್ರೀತಿಯೊಂದೇ ಕಾರಣವಾದ ಪುತ್ತೂರಿನ ಅಜ್ಜನ ಮನೆಯ ಸಂಬಂಧಿಕರು, ತಂದೆಯ ಅಸಂಖ್ಯ ಗುರು, ಮಿತ್ರ ಮತ್ತು ಶಿಷ್ಯ ಬಳಗ (ತಂದೆ ಹಿಂದೆ ಇಲ್ಲಿ ವಿದ್ಯಾರ್ಥಿಯಾಗಿಯೂ ಅಧ್ಯಾಪಕನಾಗಿಯೂ ಸ್ವಲ್ಪ ಕಾಲ ದುಡಿದಿದ್ದರು), ನನ್ನದೇ ಮಿತ್ರ ಬಳಗ, ಸಂಬಂಧಿಕರೆಲ್ಲ ನನಗೊದಗಿದ ವಿಶೇಷವರ್ಗವೆಂದೇ ಹೇಳಬೇಕು. ಇತ್ತ ಹೊರಳಿದರೆ, ನಾಲ್ಕಾಣೆ ಸ್ತೋತ್ರಕ್ಕಾಗಿ ಬಂಗಾಡಿ ಮೂಲೆಯಿಂದ ಅಂಗಡಿಗೆ ಧಾವಿಸಿ ಬರುವವರಿಂದ ಹಿಡಿದು, ಇಂದು ಇಡಿಯ ಅಂಗಡಿ ಕೊಳ್ಳುವವರವರೆಗೆ ವ್ಯಕ್ತಿ, ಸಂಸ್ಥೆಗಳು ಪ್ರೋತ್ಸಾಹಿಸಿದ್ದಾರೆ. ಒಳಗೆ ನೋಡಿದರೆ ಇದ್ದು, ಬಿಟ್ಟ, ಮುರಳೀಧರ, ಮಂಜುನಾಥ, ದಿವಾಕರ, ಪ್ರಕಾಶರಾದಿ ಮಸಕು ಮುಖಗಳ ಎದುರು ಹಲವು ವರ್ಷಗಳಿಂದ ಇಂದಿನವರೆಗೂ ವಿಶೇಷವಾಗಿ ನಿಂತಿರುವ ಶಾಂತಾರಾಮನವರೆಗೆ ಸಹಾಯಕರ ಪ್ರೀತಿಯ ದುಡಿಮೆ ಕಾಣುತ್ತದೆ. ನನ್ನಷ್ಟೇ ಅತ್ರಿಯ ಮತ್ತು ನನ್ನ ಜೀವನದ ಭಾಗವೇ ಆಗಿರುವ ನನ್ನ ಅಪ್ಪ, ಅಮ್ಮ, ವಿಶೇಷವಾಗಿ ಹೆಂಡತಿ - ದೇವಕಿ, ಮತ್ತೆ ಮಗ - ಅಭಯರ ಬಗ್ಗೆ ಹೇಳಿದರೆ ಆತ್ಮಸ್ತುತಿಯಾದೀತು, ಹೇಳದಿದ್ದರೆ ಸ್ವಾರ್ಥವಾದೀತು! ಅವರೆಲ್ಲರ ಸವಿವರ ಸ್ಮರಣೆ ಒಂದು ಉದ್ಯಮದ ಆರೋಗ್ಯಪೂರ್ಣ ಬೆಳವಣಿಗೆಯ ದಾಖಲೀಕರಣಕ್ಕೆ ಅವಶ್ಯವೆಂಬ ಅರಿವು ನನಗಿದೆ. ಸಮಯಾನುಕೂಲ ನೋಡಿಕೊಂಡು ಮುಂದೆಂದಾದರೂ ಇಲ್ಲೇ ಕಂತುಗಳಲ್ಲೋ ಇಡಿಯಾಗಿಯೋ ಕೊಡಲು ಪ್ರಯತ್ನಿಸುತ್ತೇನೆ ಎಂಬ ಆಶ್ವಾಸನೆ ಮಾತ್ರ ಕೊಡುತ್ತಾ ೩೧-೩-೨೦೧೨ರಂದು ಅತ್ರಿ ಬುಕ್ ಸೆಂಟರ್ ಅನ್ನು ಖಾಯಂ ಮುಚ್ಚುತ್ತಿದ್ದೇನೆ.


ಜಿ.ಟಿ. ನಾರಾಯಣ ರಾವ್ ಹಾಗೂ ಲಕ್ಷ್ಮೀ ದೇವಿ
ಸ್ನಾತಕೋತ್ತರ ಪದವೀಧರನಾಗಿಯೂ ತಾಪೇದಾರಿಯನ್ನು (ಸಂಬಳಕ್ಕಾಗಿ ಇನ್ಯಾರದೋ ಕೆಳಗೆ ದುಡಿಯುವುದು) ನಿರಾಕರಿಸಿ ಸ್ವೋದ್ಯೋಗ ಆರಿಸಿಕೊಂಡೆ; ಪುಸ್ತಕ ವ್ಯಾಪಾರಿಯಾದೆ. “ನಾರಾಯಣ ರಾಯರಿಗೆ ಮಗನಿಗೊಂದು ಲೆಕ್ಚರರ್ ಕೆಲಸ ಕೊಡಿಸಕ್ಕಾಗಲಿಲ್ಲವೇ” ಎಂದವರಿಗೇನೂ ಕೊರತೆಯಿಲ್ಲ. ಅಂಥ ಮಾತುಗಳಿಂದೇನೂ ವಿಚಲಿತರಾಗದೆ ಅವರು “ಎಂದೂ ಸೋತೆ ಎನಿಸಿದರೆ ತಿಳಿಸು. ನಿನ್ನ ಪದವಿಗೆ ತಕ್ಕ ಕೆಲಸ ಕೊಡಿಸಿಯೇನು” ಕೊಟ್ಟ ಆಶ್ವಾಸನೆ ನನ್ನ ಬೆನ್ನಿಗೆ ಇದ್ದೇ ಇತ್ತು! ದಿನದ ಹನ್ನೆರಡು ಗಂಟೆ, ವಾರದ ಆರೂ ದಿನ ಪಟ್ಟು ಹಿಡಿದು ರೂಢಿಸಿದೆ. ಇಡೀ ದಿನ ಕುಳಿತು ಕೇವಲ ಹದಿಮೂರು ರೂಪಾಯಿ ವ್ಯಾಪಾರ ಮಾಡಿದ್ದಿತ್ತು. (ಈಚೆಗೆ ಕಡ್ಡಾಯ ರಜಾದಿನಗಳಲ್ಲೂ ಅನ್ಯ ಕೆಲಸಗಳಿಗೆಂದು, ಅರ್ಧ ಗಂಟೆ ಅರೆ ಬಾಗಿಲು ತೆರೆದರೂ ಸಾವಿರ ರೂಪಾಯಿ ವ್ಯಾಪಾರ ಆಗುವಲ್ಲಿಯವರೆಗೆ ವಿಕಸಿಸಿದೆ.) ಪುಸ್ತಕದ ಅಂಗಡಿ ಎಂದರೆ ಶಿಕ್ಷಣ ಸಂಸ್ಥೆಗಳ ಎಲ್ಲಾ ಅಗತ್ಯಗಳನ್ನು ಪೂರೈಸುವ ಮಳಿಗೆ ಎನ್ನುವ ಈ ವಲಯದ ಕಲ್ಪನೆಯನ್ನು ಮೀರಿ ನಿಂತೆ. ಸಾಮಾನ್ಯ ಓದಿಗೆ ಒದಗುವ ವೈವಿಧ್ಯಮಯ ಪುಸ್ತಕಗಳನ್ನು ಮುಖ್ಯವಾಗಿ ಕನ್ನಡ, ಇಂಗ್ಲಿಶ್ ಭಾಷೆಗಳಲ್ಲಿ ಆಯ್ದು ಸೇರಿಸುತ್ತಲೇ ಅವಶ್ಯಕತೆ ನೋಡಿಕೊಂಡು ಮರುಪೂರಣ ನಡೆಸುತ್ತಲೇ ವೈಯಕ್ತಿಕ ಬೇಡಿಕೆಗಳನ್ನು ಶೋಧಿಸಿ ಪೂರೈಸುವ ಪ್ರಯತ್ನ ಮಾಡುತ್ತಲೇ ಬೆಳೆದೆ. ಹಾಗೇ ಬಂದವರ ಇಷ್ಟಾನಿಷ್ಟಗಳನ್ನು ವಿಚಾರಿಸಿ, ಪುಸ್ತಕಗಳನ್ನು ಸೂಚಿಸುವ ಕೆಲಸವನ್ನೂ ಪ್ರೀತಿಯಿಂದ ಸ್ವಲ್ಪ ಸ್ವಲ್ಪ ಮಾಡಿದ್ದೇನೆ. ಗೈಡುಗಳು, ಪಠ್ಯ ಪುಸ್ತಕಗಳು, ಪಾಠಪಟ್ಟಿಗಳಲ್ಲೇ ಉಲ್ಲೇಖಿತ ನೇರ ಗ್ರಂಥಾಲಯ ತುಂಬುವ ಆಕರ ಗ್ರಂಥಗಳು ಇತ್ಯಾದಿ ಸುಲಭ ವ್ಯಾಪಾರದ ದಾರಿ ನಾನು ಅನುಸರಿಸಲಿಲ್ಲ. (ಈ ಧೋರಣೆಯ ಮುಂದುವರಿಕೆಯಾಗಿಯೇ ಬಹುಶಃ ನಾನು ಪ್ರಕಾಶನಕ್ಕಿಳಿದಾಗ ಸರಕಾರದ ಸಗಟು ಖರೀದಿಯನ್ನು ಸ್ವಂತಕ್ಕೆ ನಿರಾಕರಿಸಿದೆ, ಸಾರ್ವಜನಿಕದಲ್ಲಿ ಖಂಡಿಸಿದೆ) ಮತ್ತೆ ಮಳಿಗೆಯಲ್ಲಿ ವ್ಯಾಪಾರದ ಮಾತನ್ನು ಮೀರಿ ನನ್ನ ಹವ್ಯಾಸಿ ಆಸಕ್ತಿಗಳಿಂದ ಹಿಡಿದು, ಲೋಕದ ಎಲ್ಲಾ ವಿಚಾರಗಳನ್ನೂ ನೈಜ ಆಸಕ್ತಿಯಿಂದ ಚರ್ಚೆಗೆ ತರುತ್ತಿದ್ದೆ. ಬಿಡುವಿನ ವೇಳೆಗಳಲ್ಲಿ, ಎಷ್ಟೋ ಬಾರಿ ಏನೆಲ್ಲಾ ಸರ್ಕಸ್ ಮಾಡಿ ಸಮಯ ಹೊಂದಿಸಿಕೊಂಡು ಅನ್ಯ ಚಟುವಟಿಕೆ ಮತ್ತು ಬರವಣಿಗೆಗಳಲ್ಲಿ ತೊಡಗಿಕೊಳ್ಳುತ್ತಲೂ ಬಂದೆ. ಸಹಜವಾಗಿ ವ್ಯಾಪಾರ ವಿಕಸಿಸಿತು, ನಾನೂ ಬೆಳೆದೆ.

ಕೆದಿಲ್ಲಾಯರು
ಅಂಗಡಿ ತೆರೆದ ಹೊಸದರಲ್ಲಿ ಊರಿನವರ ತಿಳುವಳಿಕೆಗೆ ಅಗತ್ಯವೆಂದು ಕೆಲವು ಪತ್ರಿಕಾ ಜಾಹೀರಾತು ಕೊಟ್ಟದ್ದಿದೆ, ಕೆಲವು ನಮೂನೆಯ ಕರಪತ್ರಗಳನ್ನು ಮಾಡಿ ವಿತರಿಸಿದ್ದೂ ಇತ್ತು. ತಮ್ಮ ಅನಿವಾರ್ಯ ಪ್ರಸರಣ ಸಂಖ್ಯೆಯನ್ನೇ ಓದುಗ ವ್ಯಾಪ್ತಿ ಎಂಬಂತೆ ಬಿಂಬಿಸುತ್ತಾ (“ನಿಮಗೆ ವೈಲ್ಡ್ ಪಬ್ಲಿಸಿಟಿ ಕೊಡ್ತೇವೆ”) ಬರುವ ವಿವಿಧ ಶಾಲೆ ಕಾಲೇಜುಗಳ ವಾರ್ಷಿಕ ಹರಿಕೆಗಳು ಜಾಹೀರಾತು ಕೋರಿ ಮನವಿಗಳನ್ನು ಕಳಿಸುತ್ತಲೇ ಇರುತ್ತವೆ. ಈಚೆಗಂತೂ ವಿಪರೀತಕ್ಕೆ ಮುಟ್ಟಿರುವ ಪ್ರಾಯೋಜಕತೆಗಳು ಮಳಿಗೆಯ ಮಿತಿಯನ್ನು ತಿಳಿಯುವ ಗೋಜಿಗೂ ಹೋಗದೆ (ಕರಾವಿನ ಹಸುವಿನ ಕುರಿತು ಹೇಳಿದಂತೆ) ರಕ್ತವನ್ನೇ ಹಿಂಡುವವರೆಗೂ ಮುಂದುವರಿಯುವುದು ಕಾಣುತ್ತಿದ್ದೇನೆ. ಕೆಲವು ಶಿಕ್ಷಣ ಸಂಸ್ಥೆಗಳು ತಮ್ಮ ಪುಸ್ತಕಾವಶ್ಯಕತೆಗಳನ್ನು ನಾವು ಕೊಡುವ ‘ಸವಲತ್ತಿಗೆ’ (ಜಾಹೀರಾತೋ ಪುಸ್ತಕ ಉಡುಗೊರೆಯೋ ಪ್ರಾಯೋಜಕತ್ವವೋ ಇತ್ಯಾದಿ) ತಳುಕು ಹಾಕುವುದನ್ನು ನಾನು ಭ್ರಷ್ಟಾಚಾರವೆಂದೇ ಖಂಡಿಸಿದ್ದೇನೆ. ನನ್ನಲ್ಲಿ ಬಂದ ಪ್ರಾಂಶುಪಾಲ, ಗ್ರಂಥಪಾಲರಾದಿ ‘ಪ್ರಭಾವಿ’ಗಳನ್ನು ನಾನು ಸಮಾನರನ್ನಾಗಿ ನಡೆಸಿಕೊಂಡಿದ್ದೇನೆ, ಓಲೈಸಿದ್ದಿಲ್ಲ. ಕಾಪಿ ಊಟ ಬಿಡಿ, ಒಂದು ಡೈರಿ ಕ್ಯಾಲೆಂಡರ್ ಕೂಡಾ ಕೊಟ್ಟದ್ದಿಲ್ಲ (ಜಿಪುಣ?). [ನನ್ನ ಪೂರೈಕೆದಾರರಿಗೂ ನಾನು ಸದಾ ತಾಕೀತು ಮಾಡುತ್ತ ಬಂದದ್ದು ಇದನ್ನೇ - ಒಳ್ಳೇ ಪುಸ್ತಕ ಕೊಡಿ, ನ್ಯಾಯದ ವ್ಯಾಪಾರೀ ವಟ್ಟಾ ಕೊಡಿ.] ನಮ್ಮ ಕೆಲಸದಲ್ಲಿನ ಶ್ರದ್ಧೆ ಮತ್ತು ಜನರ ಬಾಯ್ದೆರೆ ಪ್ರಚಾರವೇ ಹೆಚ್ಚು ಪರಿಣಾಮಕಾರಿ ಎಂದು ಈಚಿನ ದಿನಗಳಲ್ಲಿ ಧಾರಾಳ ಕಂಡುಕೊಂಡಿದ್ದೇನೆ. ಆದರೂ ವಿವಿಧ ಸಂಸ್ಥೆಗಳಲ್ಲಿ ನನ್ನ ಸ್ನೇಹಿತ ಬಳಗ ಬೆಳೆದಿರುವುದು ನೋಡುವಾಗ, ಅತ್ರಿ ಆರ್ಥಿಕವಾಗಿ ಎಂದೂ ದುರ್ಬಲವಾಗದೇ ಸೋಲದೇ ನಡೆದದ್ದು ನೋಡುವಾಗ ಲೋಕದ ಒಳ್ಳೆತನದ ಬಗ್ಗೆ ನಂಬಿಕೆ ಗಟ್ಟಿಯಾಗುತ್ತದೆ. ನನ್ನ ತಂದೆಯ ಸಹಪಾಠಿಗಳು, ಗೆಳೆಯರು, ವಿದ್ಯಾರ್ಥಿಗಳು ಪ್ರಭಾವೀ ವ್ಯಕ್ತಿಗಳು ಈ ವಲಯದಲ್ಲಿ ಸಾಕಷ್ಟು ಇದ್ದರೂ ನನ್ನ ವ್ಯಾಪಾರ ವಿಸ್ತರಣೆಗೆ ಎಂದೂ ಅವರನ್ನು ಬಳಸಿಕೊಳ್ಳಲಿಲ್ಲ. ನನ್ನ ಪ್ರಕಾಶನಗಳನ್ನು ಗುಣೈಕ ಬಲದಿಂದ ಮಾರಲು ಪ್ರಯತ್ನ ನಡೆಸಿದಂತೆಯೇ ಪುಸ್ತಕ ಮಾರಾಟವನ್ನೂ ಅಂಗಡಿಯ ದಾಸ್ತಾನು (ಸಂಖ್ಯೆಯಿಂದಲ್ಲ) ವೈವಿಧ್ಯದಿಂದ, ಮರ್ಯಾದೆಯ ವ್ಯವಹಾರವನ್ನಾಗಿಯೇ ಉಳಿಸಿದ ತೃಪ್ತಿ ನನಗಿದೆ.

ತುರ್ತುಪರಿಸ್ಥಿಯ ಕಾಲದಲ್ಲಿ ಆಕಾಶವಾಣಿ ನನ್ನನ್ನು ಯಶಸ್ವೀ ಸ್ವೋದ್ಯೋಗಿಯಾಗಿ ಸಂದರ್ಶನ ಪಡೆದುಕೊಂಡರು. ಆದರೆ ಪ್ರಸರಿಸುವಲ್ಲಿ ಇಂದಿರಾಗಾಂಧಿಯ ಟ್ವೆಂಟಿ ಪಾಯಿಂಟ್ ಪ್ರೋಗ್ರಾಮ್‌ನ ಯಶಸ್ವೀ ಫಲಾನುಭವಿ ಎಂದು ಸುಳ್ಳೇ ಬಳಸಿಕೊಂಡರಂತೆ! (ವಾಸ್ತವದಲ್ಲಿ ನಾನೆಂದೂ ಯಾವುದೇ ಸರಕಾರೀ ಸಹಾಯ, ಸೌಲಭ್ಯಗಳನ್ನು ಬಳಸಿಕೊಂಡಿಲ್ಲ) ಮುಂದೆ ಉದ್ಯಮದಲ್ಲಿ ನನ್ನ ವೈಯಕ್ತಿಕ ಅನುಭವಗಳನ್ನು ಸಾರ್ವತ್ರೀಕರಿಸಿ, ಪತ್ರಿಕೆಗಳ ಓದುಗರ ಅಂಕಣಗಳಿಗೆ ಕಳಿಸುತ್ತ ಬಂದೆ. ಮೈಸೂರು ವಿವಿನಿಲಯ ಪ್ರಸಾರಾಂಗದ ಸುವರ್ಣ ಮಹೋತ್ಸವದ ಕಮ್ಮಟದಲ್ಲಿ ನಾನು ಮಂಡಿಸಿದ ಪ್ರಬಂಧ ‘ಪುಸ್ತಕ ಮಾರಾಟಗಾರನ ಸಮಸ್ಯೆಗಳು’ ನನ್ನ ಲೆಕ್ಕಕ್ಕೆ ಅರ್ರಂಗೇಟ್ರಂ! ಮುಂದೆ ಪ್ರಥಮ ವಿಶ್ವ ಕನ್ನಡ ಸಮ್ಮೇಳನ (ಮೈಸೂರು) ಸೇರಿದಂತೆ ಕೆಲವು ಸಮ್ಮೇಳನಗಳಲ್ಲೂ ಕಮ್ಮಟಗಳಲ್ಲೂ ಸಂಪನ್ಮೂಲ ವ್ಯಕ್ತಿಯೆಂದೇ ಗೌರವ ಕಂಡೆ. ಇವೆಲ್ಲ ಪ್ರಾಮಾಣಿಕವಾಗಿ ನನಗೊಂದು ಆದರ್ಶವನ್ನು ಕಂಡುಕೊಳ್ಳಲು ಅವಕಾಶ ಒದಗಿಸಿತು. ಮಾತು, ಪತ್ರವ್ಯವಹಾರಗಳಲ್ಲಿ ಮಾಡದೇ ಆಡುವವರ ನಡುವೆ, ನಾನು ಸರಳವಾಗಿ ಆಡಲಾಗುವವನ್ನೇ ಮಾಡುತ್ತಾ ಪರಿಷ್ಕರಿಸಿಕೊಳ್ಳುತ್ತಾ ತಾರ್ಕಿಕವಾಗಿ ಹೋರಾಟಗಾರನೇ ಆಗಿಬಿಟ್ಟಿದ್ದೆ. (ಕುಶಿ ಹರಿದಾಸ ಭಟ್ಟರು ಮುಂದಿನ ದಿನಗಳಲ್ಲಿ ಬಂದ ನನ್ನ ಪುಸ್ತಕ ಓದುತ್ತಾ ಓದುತ್ತಾ ಸಂತೋಷ ತಡೆಯಲಾಗದೇ ದಿನಕ್ಕೆರಡು ಬಾರಿ ದೂರವಾಣಿಸಿ “ಒಳ್ಳೇ ಕಾನೂನು ಪುಸ್ತಕದ ಹಾಗೇ ಬರ್ದಿದ್ದೀ.”) ಅಂಥ ನುಡಿ, ಪತ್ರ, ಟಿಪ್ಪಣಿ ಹರಳುಗಟ್ಟಿ, ಲೇಖನವಾಗಿ ಬೆಳೆದು, ಸಂಕಲನದ ಗಾತ್ರಕ್ಕೆ ತಲಪಿದಾಗ, ಈ ವಿಷಯದ ಮೇಲೆ ಇನ್ನೊಂದಿಲ್ಲ ಎನ್ನುವಂತೆ ‘ಪುಸ್ತಕ ಮಾರಾಟ, ಹೋರಾಟ’ ಪುಸ್ತಕವನ್ನೇ ಪ್ರಕಟಿಸಿಬಿಟ್ಟೆ! (ಅಳಿದೂರಿಗೆ ಉಳಿದವನೇ ಗೌಡ!!)

ಆದರ್ಶಕ್ಕೂ ಅನುಷ್ಠಾನಕ್ಕೂ ವ್ಯತ್ಯಾಸ ಬಂದದ್ದು ನನ್ನ ಗಮನಕ್ಕೆ ಅಡ್ಡಿಯಾದಾಗ ಯಾರ ಮುಲಾಜೂ ಇಟ್ಟುಕೊಳ್ಳದೆ ನಾನು ನಡೆಸಿದ ಹೋರಾಟಗಳು ಹುಸಿಯಾದದ್ದಿಲ್ಲ! ಆದರೆ ಈ ಹೋರಾಟಗಳು ನೇರ ನನ್ನ ದಾರಿಯಲ್ಲಿ ಬಾರದಾಗ ಅವುಗಳನ್ನು ನಾನು ಹುಡುಕಿಕೊಂಡು ಹೋಗಿ ಸಾಮಾಜಿಕ ಹೋರಾಟಗಾರನ ಮಟ್ಟದಲ್ಲಿ ತುಡುಕಿದ್ದೂ ಇಲ್ಲ. ಕಾರಣ ಸ್ಪಷ್ಟ - ನನ್ನ ಸುತ್ತಮುತ್ತಲಿದ್ದ ಬಹುತೇಕ ‘ಸಮಾಜ ಸೇವಕರು’ ಒಂದೋ ಕೌಟುಂಬಿಕವಾಗಿ ಬೇಜವಾಬ್ದಾರರೂ ಇಲ್ಲವೇ ಹೋರಾಟದಲ್ಲಿ ‘ವೃತ್ತಿಪರರೂ’ ಆಗಿ ಕಾಣುತ್ತಿದ್ದರು. ಇದಕ್ಕೊಂದು ದೊಡ್ಡ ಕಥೆಯನ್ನು ನಾಲ್ಕೇ ವಾಕ್ಯಗಳಲ್ಲಿ ಹೇಳಿಬಿಡುತ್ತೇನೆ.

ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಪುಸ್ತಕ ನೀತಿಯನ್ನು ರೂಪಿಸಲು ಪ್ರಾಥಮಿಕವಾಗಿ ಅಂಕೋಲದಲ್ಲೊಂದು ಕಮ್ಮಟ ನಡೆಸಿತು. ಅದಕ್ಕೆ ನನಗೆ ಬಂದಿದ್ದ ಔಪಚಾರಿಕ ಆಮಂತ್ರಣವನ್ನು ನಾನು ಉಪೇಕ್ಷಿಸಿಯೇನು ಎಂಬಂತೆ ಸಂಘಟಕರು ನನಗೆ ವೈಯಕ್ತಿಕ ಒತ್ತಾಯವನ್ನೂ ತಂದರು, ನಾ ಭಾಗಿಯಾದೆ. (ಕಲಾಪಗಳ ವಿವರಗಳೆಲ್ಲವನ್ನೂ ಇಲ್ಲೆ ನನ್ನ ಹಳೆಯ ಕಡತ ೩೦-೮-೨೦೧೧ ರ ‘ಪುಸ್ತಕ ನೀತಿಯಲ್ಲ, ನುಂಗಪ್ಪಗಳ ಪಾಕಪಟ್ಟಿ’ಯಲ್ಲಿ ಅವಶ್ಯ ಓದಿ ನೋಡಲು ಇಲ್ಲಿ ಚಿಟಿಕೆ ಹೊಡೆಯಿರಿ) ಅಲ್ಲಿ ಬಾಯ್ದೆರೆ, ಉತ್ತರೋತ್ತರವಾಗಿ ನಾನು ಸವಿವರ ಬರೆದೂ ಕೊಟ್ಟ ಅಭಿಪ್ರಾಯಗಳು ಎಲ್ಲೂ ಚರ್ಚೆಗೆ, ಪ್ರತಿಕ್ರಿಯೆಗೆ ಒಳಗಾಗಲೇ ಇಲ್ಲ. ನಾನು ಪತ್ರ ಮುಖೇನ ಒತ್ತಡ ಹೆಚ್ಚಿಸಿದಾಗ ಅಯಾಚಿತವಾಗಿ ನನಗೆ ‘ಪುಸ್ತಕ ನೀತಿ ಸಲಹಾ ಉಪಸಮಿತಿ’ಯ ಸದಸ್ಯತ್ವ ಪ್ರದಾನಿಸಿದರು. ನಾನದನ್ನು ವಿಷಯಾಂತರವೆಂದೇ ಸಕಾರಣ ತಿರಸ್ಕರಿಸಿ, ನನ್ನ ಶಿಫಾರಸುಗಳ ಬಗ್ಗೆಯೇ ಒತ್ತಡ ಮುಂದುವರಿಸಿದೆ. ಕನಿಷ್ಠ ಅದನ್ನು ಕಪುಪ್ರಾದ ಮುಖವಾಣಿಯಾದ ‘ಪುಸ್ತಕ ಲೋಕ’ದಲ್ಲಿ ಪ್ರಕಟಿಸಿ ಸಾರ್ವಜನಿಕ ಚರ್ಚೆಗಾದರೂ ತೆರೆದಿಡಲು ಕೇಳಿಕೊಂಡೆ. ನಾನೇ ಪತ್ರಿಕೆಗಳಲ್ಲಿ ಅದನ್ನು ಲೇಖನವನ್ನಾಗಿಯೂ ಪ್ರಕಟಿಸಿದೆ. ಏನೂ ಮಾಡದೆ, ನನ್ನನುಕೂಲ ಕೇಳದೆ, ಎರಡೇ ದಿನದ ಮುನ್ಸೂಚನೆಯಲ್ಲಿ ಅದೊಂದು ಕೆಲಸದ ದಿನ ಬೆಂಗಳೂರಿನಲ್ಲಿ ನಡೆಯಲಿದ್ದ ಉಪಸಮಿತಿಯ ಸಭೆಗೆ ಕರೆ ಕಳಿಸಿದರು! ಜೊತೆಗೆ ಪ್ರಯಾಣ, ಊಟ, ವಾಸದ ಖರ್ಚನ್ನೂ ಕೊಡಲಾಗುವುದಿಲ್ಲ ಎಂದೂ ಒಕ್ಕಣಿಸಿದ್ದರು!! ನಾನು ಇತರ ಭಾಗಿಗಳ ವಿವರ ಮತ್ತು ಕೂಟದ ಮುನ್ನೋಟ ಕೇಳಿದೆ. ಏನೂ ಪ್ರತಿಕ್ರಿಯೆ ಬರಲಿಲ್ಲ. ನಾ ಹೋಗಲಿಲ್ಲ. 

ವ್ಯಾಪಾರವೆಂದರೆ ಲಾಭ ಅಲ್ಲ. ಅದು ಲಾಭವೇ ಆದರೆ ಇಷ್ಟದ ಪುಸ್ತಕ ಪಡೆದವ ನಷ್ಟಿಗನೇ? ಇದು ಪರಸ್ಪರ ಉತ್ತಮಿಕೆಗಾಗಿರುವ ವಹಿವಾಟು; ಅವರಿಗೆ ಮಾಲು, ನಮಗೆ ಹಣ, ಅಷ್ಟೆ. ಲಾಭ ಎಂದು ಗುರುತಿಸಲ್ಪಡುವ ಅಂಶ ವಾಸ್ತವದಲ್ಲಿ ವ್ಯಾಪಾರಿಯ ಪ್ರತಿಫಲ, ಸಂಬಳ, ನ್ಯಾಯದ ಆದಾಯ ಎಂದಿತ್ಯಾದಿ ಹೇಳಬೇಕು. ಗಿರಾಕಿಗಳಿಗೆ ಅಮಿತ ಸವಲತ್ತು ಒದಗಿಸುವುದು ವ್ಯಾಪಾರಿಯ ಕರ್ತವ್ಯ ಎನ್ನುವುದೂ ಸರಿಯಲ್ಲ. ವ್ಯಾಪಕ ಆಸಕ್ತಿಗಳನ್ನು ತಣಿಸುವ ಪುಸ್ತಕಗಳನ್ನು ಸಕಾಲದಲ್ಲಿ ತರಿಸಿ, ಸರಳವಾಗಿ ಪ್ರದರ್ಶಿಸಿ, ಕೊಳ್ಳಲು ಅವಕಾಶ ಮಾಡಿಕೊಡುವುದು ನಿರ್ವಿವಾದವಾಗಿ ಆತನ ಕರ್ತವ್ಯ. ಆಚೆಗೆ ಏನಿದ್ದರೂ ವ್ಯಾಪಾರಿಯ ಔದಾರ್ಯ; ಗಿರಾಕಿಯ ಹಕ್ಕಲ್ಲ. ರಿಯಾಯ್ತಿಯೋ ವಿಶೇಷ ಅಲಂಕರಣಗಳೋ ಮನೆಬಾಗಿಲಿಗೆ ತಲಪಿಸುವುದೋ ಇತ್ಯಾದಿ ಏನನ್ನೂ ಕೇಳುವುದು ತಪ್ಪಲ್ಲ; ಕೊಡದಿದ್ದರೆ ಧರ್ಮಚ್ಯುತಿಯಾದಂತೆ ಭಾವಿಸುವುದು ತಪ್ಪು. ಇವನ್ನೆಲ್ಲ ತಿಳಿಯುವ ಕುತೂಹಲ ಮತ್ತು ತಾಳ್ಮೆ ಇದ್ದವರಿಗೆ ನಾನು ವಿವರಣೆ ಕೊಟ್ಟದ್ದುಂಟು, ಪರ್ಯಾಯ ವ್ಯವಸ್ಥೆ ಸೂಚಿಸುವುದೋ ನನ್ನ ಮಿತಿಯಲ್ಲಿ ಒದಗಿಸುವುದೋ ಮಾಡಿದ್ದೂ ಉಂಟು.

ಈಚಿನ ದಿನಗಳಲ್ಲಿ ಸರಕಾರೀ ಮತ್ತು ಖಾಸಗಿ ಪ್ರಕಾಶನ ರಂಗದ ಬಹುತೇಕರು ವ್ಯಾಪಕವಾಗಿ ವ್ಯಕ್ತಿಗಳನ್ನು ಮುಟ್ಟುವ ವ್ಯವಸ್ಥೆ ಬಗ್ಗೆ ಉದಾಸೀನ ತಾಳುತ್ತಿದ್ದಾರೆ. ಜಾಹೀರಾತಿನ ಬೊಂಬಾಟದಲ್ಲಿ, ಮೇಳಗಳ ಹೆಸರಿನಲ್ಲಿ, ಅಂಕಿಸಂಕಿಗಳ ಡೊಂಬರಾಟದಲ್ಲಿ ಕೊಳ್ಳುಗ ಸಮೂಹವನ್ನು ಸೆರೆ ಹಿಡಿಯುವ, ಓದುಗರನ್ನು ಬಲಿಹಾಕುವ, ತನ್ಮೂಲಕ ರಾತ್ರಿ ಹಗಲಿನೊಳಗೆ ಸಾವಿರಾರು ಪ್ರತಿಗಳನ್ನು ಎತ್ತಿಹಾಕುವ ಉನ್ಮಾದದಲ್ಲಿವೆ. (ಕನ್ನಡ ವಿವಿ ನಿಲಯ, ಹಂಪಿಯವರು ತುಳು ಸಾಹಿತ್ಯ ಚರಿತ್ರೆಯನ್ನು ರೂ ಒಂದು ಸಾವಿರದ ಮುದ್ರಿತ ಬೆಲೆಯಲ್ಲಿ ಪ್ರಕಟಿಸಿದರು. ಮತ್ತೆ ಬೇರೆ ಬೇರೆ ನೆಪ ಹಿಡಿದು ೫೦% ರಿಯಾಯ್ತಿ ದರದಲ್ಲಿ ಮಾರುತ್ತಲೇ ಬಂದಿದ್ದಾರೆ. ಅದಕ್ಕೆ ಮುದ್ರಿತ ಬೆಲೆಯನ್ನೇ ಐದುನೂರು ಇಡಬಹುದಿತ್ತಲ್ಲಾ ಎಂಬ ನನ್ನ ಬೊಬ್ಬೆಗೆ ಎಲ್ಲರದೂ ಜಾಣ ಕಿವುಡು) ಕಪುಪ್ರಾ ನಡೆಸುವ ಯಾವ ಮೇಳದಲ್ಲೂ ಸಾಮಾನ್ಯವಾಗಿ ಎಲ್ಲ ಇಲಾಖಾ ಪ್ರಕಟಣೆಗಳು ಶೇಕಡ ಐವತ್ತರ ರಿಯಾಯ್ತಿ ದರದಲ್ಲಿ ಮಾರಾಟವಾಗುತ್ತವೆ. ಕನ್ನಡ ಸಾಹಿತ್ಯ ಪರಿಷತ್ತಾದಿ ಹಲವು ಸಾಹಿತ್ಯ ಜಾತ್ರೆಗಳ ಸಂಘಟಕರು ಕನಿಷ್ಠ ಶೇಕಡಾ ಇಪ್ಪತ್ತರ ಸಾರ್ವಜನಿಕ ರಿಯಾಯಿತಿ ಘೋಷಣೆ ನಿರೀಕ್ಷಿಸುತ್ತಾರೆ. ಸಗಟು ಖರೀದಿಯ ಎಲ್ಲಾ ಮೂಲಗಳಲ್ಲೂ ಮುದ್ರಿತ ಬೆಲೆ ಏನೇ ಇರಲಿ, ಸರ್ಕಾರೀ ಮೌಲ್ಯಮಾಪನ ಬೇರೆ ಆಗುತ್ತದೆ. ಮತ್ತದರ ಮೇಲೆ ಶೇಕಡಾ ೨೭ರವರೆಗೂ ರಿಯಾಯ್ತಿ ಹೊಡೆತ. ಕಳೆದೆರಡು ವರ್ಷಗಳಿಂದ ಬಹುತೇಕ ಶಾಲೆಗಳಿಗೆ ವಿಶೇಷ ಅನುದಾನ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ. ಮತ್ತದಕ್ಕೆ ಸರಿಯಾಗಿ ಸರಕಾರೀ ಪ್ರಣೀತ ಖಾಸಗಿ ಪ್ರಕಾಶಕರ ಪುಸ್ತಕ ಮೇಳ ಊರೂರಿನಲ್ಲಿ ನಡೆಯುತ್ತದೆ. ಅಲ್ಲಿ ಕಡ್ಡಾಯ ಶೇಕಡಾ ಇಪ್ಪತ್ತರ ದರದಲ್ಲಿ ಶಾಲೆಗಳು ಪುಸ್ತಕ ಖರೀದಿಸುವುದು ಕಡ್ಡಾಯ. ಈ ಪ್ರಪಾತದತ್ತಣ ಧಾವಂತದಲ್ಲಿ ಇಂದು ಖಾಸಗಿ ಪ್ರಕಾಶಕರೂ ಧಾರಾಳ ತೊಡಗಿಕೊಂಡಿದ್ದಾರೆ. ಇಂಗ್ಲಿಷ್ ಮಾರುಕಟ್ಟೆಯಲ್ಲಿ ಫ್ಲಿಪ್ ಕಾರ್ಟ್‌ನಿಂದ ತೊಡಗಿ ಹಲವು ಅಂತರ್ಜಾಲ ವ್ಯಾಪಾರಸ್ಥರು ಒಂದು ಪ್ರತಿಯನ್ನೂ ದಾಸ್ತಾನು, ಪ್ರದರ್ಶನ ಮಾಡದೆ ಯಾವುದೋ ಊರಿನ, ಮೂಲೆ-ಮನೆಯ ಗಣಕದ ಒಂದು ಚಿಟಿಕೆಗೆ ೪೦% ರಿಯಾಯ್ತಿ ದರದಲ್ಲಿ, ಉಚಿತ ಸಾಗಣೆಯಲ್ಲಿ, ಅದ್ಭುತ ಪ್ಯಾಕಿಂಗಿನಲ್ಲಿ ಕೈಯಾರೆ ಪುಸ್ತಕ (ಏನೆಲ್ಲವನ್ನೂ) ತಲಪಿಸಿ, ಅನಂತರ ನಗದು ಪಡೆದು ಹೋಗುತ್ತಾರೆ. ಈ ನೇರ ಓದುಗನನ್ನು ತಲಪುವ ಉತ್ಸಾಹದಲ್ಲಿ ಕನ್ನಡದ ಪ್ರಕಾಶಕ/ವಿತರಕರೂ ಹಿಂದುಳಿದಿಲ್ಲ. ದಿನದ ಹನ್ನೆರಡು ಗಂಟೆ, ಸ್ಥಳಬಾಡಿಗೆಯಿಂದ ತೊಡಗಿ ಎಲ್ಲಾ ಮೂಲಭೂತ ಖರ್ಚುಗಳ ಮೇಲೆ ಕೊಳ್ಳುಗರ ಖಯಾಲಿಯನ್ನು ಅಂದಾಜಿಸಿ ಪ್ರತಿಗಳನ್ನು ತರಿಸಿ, ಪ್ರದರ್ಶಿಸಿ, ದಿನಗಟ್ಟಳೆ ಕಾಯುವ ಬಿಡಿ ಮಾರಾಟಗಾರನಿಗೆ ಪ್ರತಿಯೊಂದರ ಮೇಲೆ ಸರಾಸರಿಯಲ್ಲಿ ಬರುವ ವ್ಯಾಪಾರಿ ವಟ್ಟ ೩೦% ಮಾತ್ರ. ದೇಶದ ಪ್ರಧಾನರನ್ನೇ ಅತೀತರನ್ನಾಗುಳಿಸಿ ಭ್ರಷ್ಟಾಚಾರ ವಿರೋಧೀ ಸಂಸ್ಥೆ ಕಟ್ಟಲು ಹೊರಟ ಹಾಗೇ ಪುಸ್ತಕಲೋಕದ ಈ ಅಸಮಾನತೆಯನ್ನು ಮುಟ್ಟಲೂ ಧೈರ್ಯ ಮಾಡದೆ, (ಸರಕಾರದ ಪರವಾಗಿ) ಕಪುಪ್ರಾ ಪುಸ್ತಕ ನೀತಿ ರೂಪಿಸಿರುವುದು ನಿಜ ಸದಭಿರುಚಿಯ ದುರಂತವೇ ಸರಿ.  

ನಾನು ಜೀವನ ನಿರ್ವಹಣೆಗೆ ಇಷ್ಟಪಟ್ಟು ಪುಸ್ತಕೋದ್ಯಮಕ್ಕೆ ಇಳಿದೆ. ಅದಿಂದು ನನ್ನ ಬಹುತೇಕ ಆರ್ಥಿಕ ಜವಾಬ್ದಾರಿಗಳನ್ನು ನೀಗಿಸಿದೆ. ಜೊತೆಗೆ ನಾನು ಬಯಸಿದ ಮತ್ತು ಧಾರಾಳ ಪಡೆದ ಸಾರ್ವಜನಿಕ ಉಪಯುಕ್ತತೆ, ಇಂದು ಕಾಲಧರ್ಮದಲ್ಲಿ ಅರ್ಥ ಕಳೆದುಕೊಳ್ಳುತ್ತಿದೆ. ಈಚೆಗೆ ದಿನದಿನವೂ ನಾನಿಲ್ಲಿ ಹನ್ನೆರಡು ಗಂಟೆ ವ್ಯರ್ಥವಾಗುತ್ತಿದ್ದೇನೆ ಎಂಬ ಭಾವ ಬಲಿಯುತ್ತಿದೆ. ಇಲ್ಲೇನಿದೆ ಎಂದು ನೋಡುವ ಕುತೂಹಲ ಮತ್ತು ಸಮಯ ಇಟ್ಟುಕೊಂಡ ಜನಗಳು ಕಳೆದುಹೋಗಿದ್ದಾರೆ. ಬರುವ ಬಹುತೇಕರೂ ಬೇರೆಲ್ಲೂ ಸಿಗದ ನಿರ್ದಿಷ್ಟ ಕೃತಿಯನ್ನಷ್ಟೇ ಅರಸುತ್ತಿರುತ್ತಾರೆ. ಅವರಲ್ಲೂ ಹಲವರು ಕೇವಲ ಚರವಾಣಿ ಹಿಡಿದ ಸೂತ್ರದ ಗೊಂಬೆಗಳು; “ಹಾಂ, ನಾ ಅತ್ರಿಯಲ್ಲಿದ್ದೇನೆ. ಯಜಮಾನರಿಗೆ ಕೊಡ್ತೇನೆ...” ಎಂಬ ಸಂಪರ್ಕ ಸೇತುಗಳು! (ನನ್ನಲ್ಲಿ ಚರವಾಣಿ ಇಲ್ಲ ಮತ್ತು ಅನ್ಯರದ್ದನ್ನು ನಾನು ಬಳಸುವುದಿಲ್ಲ) ಅಂಗಡಿಯ ನಾವು ಉಂಟು, ಇಲ್ಲ ಎಂದರೆ ಸುಲಭದಲ್ಲಿ ನಂಬುವವರಲ್ಲ. ‘ಕಂಪ್ಯೂಟರಿಗೆ ಹಾಕಿ’ (ನನ್ನ ಗಣಕದಲ್ಲಿ ಲೆಕ್ಕಾಚಾರದ ದಾಖಲೆಗಳು ಮಾತ್ರ ಇವೆ), (ಇವರ ಒಂದು ಪ್ರತಿಯ ಅಗತ್ಯಕ್ಕೆ) ‘ಮರುಮುದ್ರಣ ಮಾಡಿ’, (ಬೆಲೆ ಹೆಚ್ಚು ಎಂದನ್ನಿಸಿದಾಗ) ‘ಹಳೇ ಪ್ರಿಂಟ್ ಇಲ್ವಾ’ ಅಥವಾ ‘ಆನ್ ಲೈನ್ ದರ...’ ಉಲ್ಲೇಖಿಸುವ ಮೋಸ್ಟ್ ಮಾಡರ್ನ್‌ಗಳು! ಔಟ್ ಡೇಟೆಡ್ ವ್ಯವಸ್ಥೆಯಾಗಿ, ಕೇವಲ ಹಳಬರ ಸ್ವೀಟ್ ಮೆಮೊರೀಸ್ ಸಂಕೇತವಾಗಿ ಉಳಿಯುವ ಬದಲು, ಸಾರ್ವಜನಿಕ ವೃತ್ತಿರಂಗದಲ್ಲಿರುವ ‘ಸ್ವಯಂ ನಿವೃತ್ತಿ’ಯನ್ನು ನಾನೂ ಬಯಸಿದ್ದೇನೆ!

ನಿವೃತ್ತಿ ಎನ್ನುವುದು ನಿಷ್ಕ್ರಿಯೆಗೆ ಸಮಾನ ಪದವೆಂದು ನಾನು ತಿಳಿದಿಲ್ಲ. ಪರ್ವತಾರೋಹಣವೇ ಮುಂತಾದ ಸಾಹಸ ಕ್ರೀಡೆಗಳ ಹವ್ಯಾಸದಲ್ಲಿದ್ದ ನನಗೆ ಉಲ್ಲಾಸ ಕಾರಂತರ ‘ಸಂಪರ್ಕ ದೋಷ’ದಲ್ಲಿ ವನ್ಯ ಸಂರಕ್ಷಣೆಯ ಒಲವು ಹೆಚ್ಚುತ್ತಾ ಬಂತು. ಸುಮಾರು ಹದಿಮೂರು ವರ್ಷದ ಹಿಂದೆ ಶುರು ಮಾಡಿದ ‘ಅಭಯಾರಣ್ಯ’, ಹಾಗೇ ನಾಲ್ಕು ವರ್ಷದ ಹಿಂದಣ ‘ಅಶೋಕವನ’ ಇನ್ನಿಲ್ಲದ ಆನಂದ ನೀಡುತ್ತಲೇ ಇದ್ದವು. ಗೆಳೆಯ ನಿರೇನ್ ಜೈನ್ (ಆರ್ಕಿಟೆಕ್ಟ್) ತನ್ನ ತೀವ್ರ ವೃತ್ತಿ ಒತ್ತಡದ ನಡುವೆಯೂ ಅಸಾಧಾರಣವಾಗಿ ವನ್ಯ ಸಂರಕ್ಷಣೆಯ ಕೆಲಸ ನಡೆಸಿದ್ದಾರೆ. ಆತ ಪ್ರಾಯದಲ್ಲಿ ನನಗೆ ಕಿರಿಯನಾದರೂ ವನ್ಯ ಸಂರಕ್ಷಣೆಯ ಪ್ರಾವೀಣ್ಯದಲ್ಲಿ ಮತ್ತು ದುಡಿಮೆಯಲ್ಲಿ ತುಂಬಾ ಮುಂದೆ ಇದ್ದಾರೆ. ಅವರ ಜೊತೆ ಚೂರುಪಾರು ಕೈಜೋಡಿಸುತ್ತಿದ್ದ ನಾನು ಸುಮಾರು ಮೂರು ವರ್ಷದ ಹಿಂದೆ ಮೊದಲ ಬಾರಿಗೆ ಪುಸ್ತಕ ವ್ಯಾಪಾರದಿಂದ ನಿವೃತ್ತನಾಗುವ, ಪೂರ್ಣಾವಧಿ ವನ್ಯ ಸಂರಕ್ಷಣೆಯಲ್ಲಿ ತೊಡಗಿಕೊಳ್ಳುವ ಮಾತಾಡಿದ್ದೆ. ಈಗ ಅದನ್ನು ನಿಜ ಮಾಡುವ ಅವಕಾಶ ತಂದುಕೊಳ್ಳುತ್ತಿದ್ದೇನೆ. ಸರಕಾರ ಪ್ರಣೀತ ಅಭಿವೃದ್ಧಿಗಿಂದು ಗಾಂಧಾರಿ ಕುರುಡು. ಸಹಜವಾಗಿ ವನ್ಯಕ್ಕೂ (ಅದಕ್ಕೂ ಮಿಕ್ಕು ಆವಶ್ಯಕವಾದ) ಕೃಷಿಗೂ ಮುಗಿಯದ ಹುರುಡು. ಬಿಸಿಲೆ ಘಾಟಿಯಲ್ಲಿ ವನ್ಯದ ಅಖಂಡತೆ ಉಳಿಸಿಕೊಳ್ಳಲು ನಾವು ‘ಸ್ಥಾಪಿಸಿದ’ ಅಶೋಕವನದ (ವಿವರಗಳಿಗೆ ಹಳೆ ಕಡತ ‘ಕಾನನದೊಳಗಿಂದೆದ್ದು ಬಂದವನಾವನಿವನ್’ ನೋಡಲು ಇಲ್ಲಿ ಚಿಟಿಕೆ ಹೊಡೆಯಿರಿ) ಸಾಂಕೇತಿಕತೆಯನ್ನು ವಿಸ್ತರಿಸುವ ನೆಲೆಯಲ್ಲಿ ನಾನೊಬ್ಬ ಸ್ವಯಂಸೇವಕನಾಗಲಿದ್ದೇನೆ.

ಅಂಗಡಿ ಮುಚ್ಚಬಾರದು. ಪಾಲುದಾರಿಕೆಯಲ್ಲೋ ನಿರ್ವಾಹಕನನ್ನಿಟ್ಟೋ ಮುಂದುವರಿಯ ಬೇಕು ಎನ್ನುವ ಎಷ್ಟೂ ಸಲಹೆಗಳು, ಒತ್ತಾಯಗಳು ಬರುತ್ತಲೇ ಇವೆ. ನನ್ನಿಂದಲೂ ಮೊದಲು, ಅನಂತರವೂ ಸ್ಥಳೀಯ ಪುಸ್ತಕ ಅಗತ್ಯಗಳ ಪೂರೈಕೆ ನಡೆದಿದೆ, ನಡೆಯುತ್ತದೆ. ಹೆಸರಿನ ಮೋಹ ನನಗೆ ಎಂದೂ ಇರಲಿಲ್ಲ (ಅತ್ರಿ, ಪುಸ್ತಕಪ್ರೇಮಿಗಳ ಕಿಸೆಗೆ ಕತ್ರಿ’ ಎಂದು ನಾನೇ ಕೆಲವೊಮ್ಮೆ ಲಘುವಾಗಿ ಹೇಳುವುದಿದೆ). ಬ್ರಹ್ಮಕಪಾಲದ ನೋವು ಅನುಭವಿಸಿ ಈಶ್ವರನಂತೆ ನಟಿಸುವ ಮೇಳದ ಯಜಮಾನನಿಗೆ (ಕೆರೆಮನೆ ಶಂಭು ಹೆಗಡೆಯವರನ್ನು ಸ್ಮರಿಸಿ) ಸ್ಫೂರ್ತಿ ಭಾವುಕ ಪ್ರೇಕ್ಷಕ ಎಸೆದ ನಾಣ್ಯಕ್ಕೆ ಹುಡಿಯಾದ ಹ್ಯಾಲೋಜೆನ್ ಲೈಟ್, ಎಂಬಂತಿದೆ ನನ್ನ ಸ್ಥಿತಿ. ಕ್ಷಮಿಸಿ, ವೇಷ ಕಳಚುವ ಸಮಯ ಬಂದಿದೆ. ಕನ್ನಡ ಪುಸ್ತಕೋದ್ಯಮದ ಒಂದು ಸಂಕ್ರಮಣ ಕಾಲದಲ್ಲಿದ್ದ ನಾನು ದೃಢ ನಿರ್ಧಾರದಲ್ಲಿ ವೃತ್ತಿ ರಂಗದ ಮೌಲ್ಯಗಳ ಶೈಥಿಲ್ಯದ ಎದುರು ಪ್ರತಿಭಟಿಸುತ್ತ, ಓದುಗ ಸಂಸ್ಕೃತಿ ನಶಿಸುತ್ತಿರುವ ಬಗ್ಗೆ ಆತಂಕದಿಂದ, ಸಾಮಾಜಿಕ ಹಿತ ಸಾಧಿಸಬೇಕಾದ ಸರಕಾರ ವ್ಯಕ್ತಿ ಸ್ವಾರ್ಥಗಳಿಗಾಗಿ ಸಮಷ್ಟಿಯ ಹಣ ಪೋಲು ಮಾಡುವ ಪರಿಗೆ ಹೇವರಿಕೆಯಿಂದ, ಪ್ರಶಸ್ತಿ ಸಮ್ಮಾನಗಳ ಬಟವಾಡೆಯ ಕುರಿತು ತಿರಸ್ಕಾರದಿಂದ, ಬೆಳೆದು ಬಂದ ಆತ್ಮೀಯ ಸಂಬಂಧಗಳ ಕುರಿತು ಸಂತೋಷದಿಂದ, ಅನಿವಾರ್ಯವಾಗಿ ಗಳಿಸಿದ ವೈರಗಳ ನೆನಪಿನಲ್ಲಿ ಮುದುಡುತ್ತ, ಭವಿಷ್ಯದ ಯೋಜನೆಗಳ ಕನಸಿನಲ್ಲಿ ಮುದಗೊಳ್ಳುತ್ತ, ಕೌಟುಂಬಿಕವಾಗಿ ಸಂತೃಪ್ತಿಯಿಂದ,  (ಉಕ್ತಿ ಸೌಂದರ್ಯದ ಚಾಪಲ್ಯದಲ್ಲಿ ಲೇಖನ ಉದ್ದವಾದ್ದಕ್ಕೆ ಸಂತಪಿಸುತ್ತ!) ಅತ್ರಿ ಬುಕ್ ಸೆಂಟರನ್ನು ಖಾಯಂ ಮುಚ್ಚುತ್ತಿದ್ದೇನೆ; ವಿರಮಿಸುತ್ತಿಲ್ಲ, ಹೊಸ ಆವೇಶದ ವಾನಪ್ರಸ್ಥಕ್ಕೆ ಇಳಿಯುತ್ತಿದ್ದೇನೆ.
ಹೊಗಳಿಕೆಯ ಭಾರದಲಿ ತಿಣುಕಿದನು ಅಶೋಕರಾಯ 
"ನಾನು ತಪ್ಪು ದಾರಿಯಲ್ಲಿ ನಡೆದಿಲ್ಲ ಎಂದು ಸುಂದರವಾಗಿ ಪ್ರಮಾಣಿಕರಿಸಿದ್ದಕ್ಕೆ ಕೃತಜ್ಞತೆಗಳು" ಎಂದು ಇಂಥ ಸಂದರ್ಭದಲ್ಲಿ ನನ್ನ ತಂದೆ ಹೇಳುತ್ತಿದ್ದದ್ದನ್ನು ಮರುಜಪಿಸುವುದು ಬಿಟ್ಟು ಬೇರೇನೂ ಹೇಳಲಾಗುತ್ತಿಲ್ಲ ನನಗೆ. ಅತ್ರಿ ಬುಕ್ ಸೆಂಟರ್ ಮುಚ್ಚುವ ಸುದ್ದಿ ತಿಳಿದಾಗ ಬಂದ ಪ್ರೀತಿಯ, ವಿಶ್ಚಾಸದ ನುಡಿಗಳಲ್ಲಿ ಕೆಲವು ಇಲ್ಲಿ...
The Hindu ಪತ್ರಿಕಾ ವರದಿ (ಓದಲು ಇಲ್ಲಿ ಚಿಟಿಕೆ ಹೊಡೆಯಿರಿ)
ಕರಾವಳಿ ಅಲೆ
Deccan Herald (ಓದಲು ಇಲ್ಲಿ ಚಿಟಿಕೆ ಹೊಡೆಯಿರಿ)
ಸಂವರ್ಥನ ಬ್ಲಾಗು ಬರಹ (ಓದಲು ಇಲ್ಲಿ ಚಿಟಿಕೆ ಹೊಡೆಯಿರಿ)
That's kannada ಅಂತರ್ಜಾಲ ಪುಟದ ವರದಿ (ಓದಲು ಇಲ್ಲಿ ಚಿಟಿಕೆ ಹೊಡೆಯಿರಿ)
ಪ್ರೊ| ಬಿ.ಎ. ವಿವೇಕರೈ ಅವರ ಬ್ಲಾಗು ಬರಹ (ಓದಲು ಇಲ್ಲಿ ಚಿಟಿಕೆ ಹೊಡೆಯಿರಿ)
ಎಲ್ಲ ಮಹನೀಯರುಗಳಿಗೆ, ಸಂವಹನ ಮಾಧ್ಯಮಗಳಿಗೆ, ಹೇಳಲಾಗದ ಎಲ್ಲಾ ಓದುಗರಿಗೂ ಅನಂತ ಧನ್ಯವಾದಗಳು.

68 comments:

 1. Dear Sir,
  Let your Vanaprastha Life give more light to others too. Hope you will share your experiences in your new venture whenever and wherever you feel like sharing. There is no greater contentment than this kind of new venture. Good Luck Sir.
  This afternoon, I came to know that your decision to handover all the books and the business dealings to a worthy publisher with a worthy cause. Let the light shine for ever.
  Bedre Manjunath
  http://bedrefoundation.blogspot.com

  ReplyDelete
 2. ಪ್ರಿಯ ಅಶೋಕವರ್ಧನರಿಗೆ
  ನಿಮ್ಮ ಲೇಖನ, ವೃತ್ತಿ, ಮಾತು - ಎಲ್ಲವೂ ಒಂದೇ ಥರ ಇರುವುದು ಹೇಗೆ ಮಾರಾಯ್ರೆ!! ಏನೇ ಇರಲಿ, ನೀವು ನಮಗೆಲ್ಲ ವಸ್ತುನಿಷ್ಠತೆಯ ಪಾಠವನ್ನು ಕಲಿಸಿದ್ದೀರಿ (ಕಲಿತಿದ್ದೇವೆಯೋ ಇಲ್ಲವೋ ತಿಳಿಯದು). ನಿಮ್ಮ ಪರಿಸರ ಕಾಯಕಕ್ಕೆ ಶುಭ ಹಾರೈಕೆಗಳು. ಬದುಕಿನ ಚಾರಣದ ಹೊಸ ಕವಲುದಾರಿಗೆ ಹೊರಳಿದ್ದೀರಿ, ಅಭಿನಂದನೆಗಳು!!!

  ReplyDelete
 3. ಪ್ರೀತಿಯ ಅಶೋಕ ದೇವಕಿಯರಿಗೆ ನಮಸ್ಕಾರಗಳು.
  ನಾನು ಈಗ ಬರೆದಿದ್ದ ಪ್ರತಿಕ್ರಿಯೆಯನ್ನು ಕಳುಹಿಸಲು ನೋಡಿದಾಗ ನೀವು ವರ್ಡ್ ಪ್ರೆಸ್ ಗೆ ಲಾಗ ಹಾಕಿಲ್ಲ ಎಂಬ ಸಂದೇಶ ಬಂದಿತು. ಹಾಕಿದರೆ ನನ್ನ ಸಂದೇಶವೇ ಮಾಯಾ!
  ಅತ್ರಿಯ ಆರಂಭದಿಂದ ಅದರೊಡನೆ ಒಡನಾಡಿದ(ಒಡನೋದಿದ)ನನಗೆ ಅದು ಮುಚ್ಚಿಹೋಗುವುದನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತಿತ್ತು. ಈಗ ಅದು ಪುಸ್ತಕದ ಅಂಗಡಿಯಾಗಿಯೇ ಮುಂದುವರೆಯುವುದು ಅಷ್ಟರಮಟ್ಟಿಗೆ ಸಮಾಧಾನದ ಸಂಗತಿ.
  ಮೈಸೂರಿನ ಪೀಪಲ್ಸ್ ಬುಕ್ ಹೌಸ್ ಅನ್ನು ಡಿ ಆರ್ ಕೃಷ್ಣಮೂರ್ತಿಯವರು ಮುಚ್ಚಿದಾಗ ದಿನಸಿ ಅಂಗಡಿಯಾದ ಅದರ ಮುಂದೆ ಓಡಾಡುವಾಗ ಬೇಸರವಾಗುತ್ತಿತ್ತು. ಪುಸ್ತಕ ಪ್ರಿಯರಿಗೆ ಸಹಜವಾಗಿ ಹಾಗಾಗಬಹುದು. ಆದರೆ ಈಗ ಪುಸ್ತಕ ಹಿಂದಿನ ಅನಿವಾರ್ಯತೆಯನ್ನು ಉಳಿಸಿಕೊಳ್ಳಲಾರದು ಎನಿಸುತ್ತದೆ. ಅಂತರಜಾಲ ಮಾರಾಟ, ಪುಸ್ತಕದ ಮಾಲ್ ಸಂಸ್ಕೃತಿ ಮೈಸೂರು ಮಂಗಳೂರುಗಳಂಥ ಚಿಕ್ಕ ಊರುಗಳಿಗೂ ಧಾಳಿಮಾಡಿವೆ. ವಿದ್ಯನ್ಮಾನ ಪುಸ್ತಕಗಳ ಕಾಲದಲಲ್ಇ ಸಾಂಪ್ರದಾಯಿಕ ಪುಸ್ತಕಗಳ ಅಸ್ತಿತ್ವ ಅನಿವಾರ್ಯವಾಗಿ ಉಳಿಯಲಾರದು. ಕಾಲಾನುಗುಣವಾಗಿ ಒಪ್ಪಿಕೊಂಡು ಹೋಗುವುದುಷ್ಟೇ ನಮಗೆ ಇರುವ ಆಯ್ಕೆ.
  ಪುಸ್ತಕ ತಯಾರಿಗೆ ನಷ್ಟವಾಗುವ ಅಮೂಲ್ಯ ಕಾಡನ್ನು ಸಂರಕ್ಷಿಸುವ ನಿಮ್ಮ ನಿಲುವು ಮೆಚ್ಚುವಂಥದು. ಸಾಪ್ರದಾಯಿಕವಾಗಿ ವಯಸ್ಸಾದವರು 'ಊರು ಹೋಗು ಅನ್ನುತ್ತಿದೆ, ಕಾಡು ಬಾ ಅನ್ನುತ್ತಿದೆ' ಎಂದು ಹಲುಬುವುದಕ್ಕೆ ನೀವು ಹೊಸ ಇತ್ಯಾತ್ಮಕ ಅರ್ಥ ಕೊಟ್ಟು ವನ ಪ್ರಸ್ಥಾನ ಮಾಡುವುದು ಸಂತೋಷದ ಸಂಗತಿ. ನಿಮಗೆ ಪ್ರೀತಿಯ ಶುಭಾಶಯಗಳು
  ಪಂಡಿತಾರಾಧ್ಯ ಮೈಸೂರು

  ReplyDelete
 4. ಅಶೋಕರೇ ನೀವು ಅತ್ರಿಯಿಂದ ನಿವೃತ್ತಿ ಹೊಂದುತ್ತಿರಿ ಎಂದು ಅಧಿಕೃತವಾಗಿ ತಿಳಿದು ಖುಷಿಯಾಯಿತು! ನೀವು ನಿವೃತ್ತಿ ಬಯಸಿ ಅತ್ರಿ ಪುಸ್ತಕದ ಅಂಗಡಿ ಮುಚ್ಚಿ ಹೋಗುತ್ತದೆ ಎಂದು ಮಾತ್ರ ಬೇಸರವಾಗಿತ್ತು. ಆದರೆ ಈಗ ತಮ್ಮದನ್ನಾಗಿ ನಡೆಸಲು ನವಕರ್ನಾಟಕ ಪಬ್ಲಿಕೇಶನ್ಸ್ ಮುಂದೆ ಬಂದದ್ದು ಸಂತೋಷದ ಸುದ್ದಿ. 2 ವರ್ಷದ ಹಿಂದೆ ನೀವು ಮಾಡಬೇಕೆಂದಿರುವ ಕಾರ್ಯಗಳನ್ನೆಲ್ಲ ಮುಂದೂಡಿ ಪುಸ್ತಕ ಅಂಗಡಿಯನ್ನು ನವೀಕರಿಸುವ ಸಮಯದಲ್ಲಿ ಯಾಕಾಗಿ ಮತ್ತೆ ಆ ಅಂಗಡಿಯನ್ನು ಸುಧಾರಿಸುತ್ತೀರಿ ಎಂಬ ಸಂಶಯ ಬಂದಿತ್ತು. ಅತ್ತ ನಿಮ್ಮ ಪ್ರವೃತ್ತಿಗೂ ಇತ್ತ ತಮ್ಮ ವೃತ್ತಿಗೂ ಸಮಯ ಹೊಂದುಗೂಡಿಸಲಾಗದಂತಹ ಪರಿಸ್ತಿತಿ ನಿಮ್ಮದಾಗಿತ್ತು ಎಂದು ಕಂಡು ಬಲ್ಲೆ. ನಿಷ್ಕ್ರಿಯವಾಗಿ ಕುಳಿತುಕೊಳ್ಳುವ ಜಾಯಮಾನ ನಿಮ್ಮದಲ್ಲ. ಹಾಗಾಗಿ ಈ ನಿವೃತ್ತಿ ಬರೀ ಒಂದು ಬದಲಾವಣೆ ಅಷ್ಟೇ. ಪೂರ್ಣಾವಧಿ ವನ್ಯ ಸಂರಕ್ಷಣೆಯಲ್ಲಿ ತೊಡಗಿಕೊಳ್ಳುವ ಅಶೋಕವಾನಪ್ರಸ್ಥಕ್ಕೆ ಶುಭಕಾಮನೆಗಳು. ಎಂದಿನಂತೆ ನಿಮ್ಮ ಎಲ್ಲಾ ಹುಚ್ಚು ಸಾಹಸಕ್ಕೆ ಸಹಕಾರಿಯಾಗಿರುತ್ತೇನೆ.
  ಇಂತೀ
  ಕೃಷ್ಣಮೋಹನ

  ReplyDelete
 5. Dear Ashok,
  I'll visit Mangalore soon to revisit and savour those moments spent at Athree two decades ago and of course buy some books!
  Best
  Mahesh

  ReplyDelete
 6. ನಮಸ್ತೆ
  ಅತ್ರಿ ಬುಕ್ ಸೆಂಟರ್ ಮುಚ್ಚುವ ವಿಷಯ ಕೇಳಿ ದುಗುಡವಾಯಿತು. ಮಂಗಳೂರಿಗೆ ನಾನು ಬಂದಾಗಲೆಲ್ಲ ಅವಶ್ಯಕ ಭೇಟಿ ನೀಡುವ ಮಂದಿರವಾಗಿತ್ತಿದ್ದು. ಹಾಗಾಗಿ ಭಾವನಾತ್ಮಕ ನಂಟು ಬೆಸೆದಿತ್ತು. ಇನ್ನು ಮುಂದೆ ಅತ್ರಿ ಬುಕ್ ಸೆಂಟರ್ ಸ್ಥಳದಲ್ಲಿ ಬೇರೇನೂ ಬಾರದೆ ಪುಸ್ತಕಗಳೇ ಇರುತ್ತವೆ ಎನ್ನುವುದು ತುಸು ಸಮಾಧಾನಕರ ಸಂಗತಿ. ಮುಂದಿನ ನಿಮ್ಮ ಯೋಜನೆಗೆ ನನ್ನ ಶುಭ ಹಾರೈಕೆ.
  ವಂದನೆಗಳೊಂದಿಗೆ
  ಕುಮಾರ ರೈತ
  ಪತ್ರಕರ್ತ, ಬೆಂಗಳೂರು

  ReplyDelete
 7. Dear Sir,
  It took a while for me to digest the fact that Athree Book Centre was going to shut. It has been an amazing experience visiting the book shop, experiencing the warmth of people there, and getting some additional information on various social issues. I also fondly remember the gesture of including me in the Kadmane camp. After I moved to Bangalore, Athree for me became virtual, as all my email equities were promptly responded to.

  I wish your next innings all the very best.

  Warmest regards

  Anil J Pinto

  ReplyDelete
 8. ಬಹಳ ಬೇಸರವಾಯಿತು. ಶಬ್ದಗಳಿಲ್ಲ.

  ReplyDelete
 9. ವಾನಪ್ರಸ್ಥಾಶ್ರಮದಲ್ಲಿ ಕೈಗೊಳ್ಳುವ ಚಟುವಟಿಕೆಗಳು 'ನಿಷ್ಕಾಮಕರ್ಮ' ಎಂದು ಕರೆಯಿಸಿಕೊಳ್ಳಲು ತಕ್ಕವು ಆಗಿದ್ದು ಆತ್ಮತೃಪ್ತಿ ನೀಡಲಿ ಎಂದು ಹಾರೈಸುತ್ತೇನೆ. ಈ ತನಕದ ಜೀವನ ನಾಟಕದಲ್ಲಿ ನೋಡಿದ, ಅನುಭವಿಸಿದ 'ಕಹಿ'ಗಳನ್ನು ಹೆಚ್ಚು ಮೆಲುಕು ಹಾಕದಿರುವುದೇ ಒಳ್ಳೆಯದು. ಶುಭವಾಗಲಿ.

  ReplyDelete
 10. I'll never forget the statement "this is not a library ...if you want to buy the book ... BUY IT" ... and then i went on to buy books worth in hundreds of Rupees by paying installments of 25p, 50p, 10p ...over a period of months and years. A true story that could happen only at Athree Book Centre.
  My first book "The Book of Soviet Aircrafts". only at ABC...inspite of some big banner shops in mangalore ... at that time (25 years ago) .... and i dare say EVEN TODAY !!!!!!!! and after March 2012 ... NEVER AGAIN.
  I am witness to many such hardened pioneers and incredible pioneering efforts over my life time ... What we need is TORCH BEARERS ... to continue the journey ... do we have one ? a good question i guess.
  Ashok has always made the right decision. CHEERS and A WHOLE LOT OF LOVE TO HIM and his family.

  ReplyDelete
 11. ನನ್ನಂತೆಯೇ ಹೆಚ್ಚಿನವರಿಗೆ ಅತ್ರಿ ಕೇವಲ ಪುಸ್ತಕದ ಮಟ್ಟಿಗೆ ಮುಖ್ಯವಾಗಿರಲಿಲ್ಲ. ವೈಯಕ್ತಿಕ ಲೇಪದ ನಿವೃತ್ತಿಯ ತರ ಕಾಣುವ ಈ ಮುಚ್ಚುಗಡೆ ನೀವಂದುಕೊಂಡಷ್ಟು ವೈಯಕ್ತಿಕವಲ್ಲ ಎಂಬುದು ಸ್ವತಃ ನಿಮಗೂ ಈ ಹೊತ್ತಿಗಾಗಲೇ ತಿಳಿದಿದೆ. ಹಾಗಾಗಿ ಹೆಚ್ಚೇನೂ ಹೇಳುವುದಕ್ಕಿಲ್ಲ. ಬದುಕಿನಲ್ಲಿ ಒಂದೊಂದನ್ನೇ ಗಳಿಸುತ್ತ ಸಾಗುವ ಕಾಲವಿರುವ ಹಾಗೆಯೇ ಒಂದೊಂದನ್ನೇ ಕಳೆದುಕೊಳ್ಳುತ್ತ ಹೋಗುವ ಕಾಲವನ್ನೂ ಹಾಯಲೇ ಬೇಕಲ್ಲ....ಕಳೆದುಕೊಂಡು ಗಳಿಸುವುದರತ್ತ ಹೊರಟ ನಿಮ್ಮದೇ ಹಾದಿಯಲ್ಲಿ ನಾವೆಲ್ಲರೂ ಇದ್ದೇ ಇದ್ದೇವೆ, ನಿಮಗೆ ಒಳ್ಳೆಯದಾಗಲಿ, ಎಲ್ಲರಿಗೂ ಒಳ್ಳೆಯದಾಗಲಿ.

  ReplyDelete
 12. ನಿಮ್ಮ ಲೇಖನ ಓದಿದೆ.ನನ್ನ ಮತ್ತು ಅತ್ರಿಯ ಸಂಬಂಧ 37 ವರ್ಷಗಳಸ್ಟು ಹಳೆಯದು. ಬಹಳ ಬೇಸರವಾಗುತ್ತಿದೆ. ನಿಮ್ಮ ಪನ್, ಧರ್ಯ, ಪ್ರಾಮಾಣಿಕತೆ, ಬದ್ಡತೆ, ವೀಶಿಷ್ಟತೆ ನನಗೆ ಮರೆಯಲಾಗದ ಸಂಗತಿಗಳು. ವ್ಯಾಪಾರ ಮುಂದುವರಿಸಿ ಎಂದು ನಿಮಗೆ ಬುದ್ಡಿ ಹೇಳುವುದು ಅರ್ಥವಿಲ್ಲದ ಮಾತು. ನಿಮಗೆ ಶುಭವಾಗಲಿ. ನಿಮ್ಮ ಕ್ರಿಯಾಶೀಲತೆ ಮಾಸದಿರಲಿ.

  ReplyDelete
 13. Dear Ashoka Vardhana,
  The services you have done for prorogation of Kannada Books is a great service to the Kannada Land. Our Publications of Ramayana- Mahabharatha - Bhagavatha - Harivamsha - Markandeya Purana and the Books in Characters of Mahabharatha, Ramayana etc. are made to reach the South Kanara (SK) people through your book shop. Hats off to you and ATREE BOOK CENTRE- Keshava Kumar, Bharatha Darshana, Bangalore

  ReplyDelete
 14. Dear Mr Vardana

  I have seen your mail of Jan 19 that you have decided to close Athree Book Centre permanently. While I commend your decision to devote time towards wildlife conservation, I am also disappointed at the closing of your bookshop. To me, and I dare say to many of my colleagues at Orient Paperbacks, Athree Book Centre and Mangalaore were synonymous; for over four decades, the time I have spent in book publishing, Mangalore has always been Athree – the strength of the association is so strong. We will miss you.

  Book publishing and book selling are passing through a very critical phase. I hope you will continue to share your accumulated wisdom about the ‘world of books’ with others who may want to benefit from it. You represented the quintessential ‘bookman’ and will always continue to be one (to me).

  Best wishes for your new equally worthwhile career of service.

  Sudhir Malhotra
  Orient Paperbacks

  ReplyDelete
 15. I am very happy that atri book centre is some how restored for the book culture it self and in this regard, i congratulate navakaranaataka. Any way, the fact that all the book lovers are going to miss the most familiar man with a beaming pair of spectacles and an imposing mush which is merrily incapable of hiding the honest and friendly smile.!! This is a personal loss to me too. Any way, the greater world of learning and culture, nature and adventure will be benefited more....
  Ganesh R
  avadhani

  ReplyDelete
 16. When the whole of Mangalore is mourning at the news of closing of Athree Book Centre. Probably, I am the only one being silently happy about it :)

  Thank You for freeing yourself and committing to work for the cause of Forest/Wildlife Conservation, which you already have in a great way, by your decades of trekking expeditions conducted in a disciplined yet very enjoyable manner to people interested in nature and by constantly keeping their interest and concern alive to support for the cause.

  Your energy and spirits to 'fight' for your values in life, have always inspired me.

  We have a real 'tiger' with us now to fight for the cause !!!

  Warm Regards,
  NIREN

  ReplyDelete
 17. Namaskara Ashokanna.....
  Neevu "Athree Book Centre" muchuva vishaya thiliyithu.... adara hinde iruva kaarana thilidu besaravaayithu..... nimma mundina hejjege...All the best
  G.N. shriharirao

  ReplyDelete
 18. ಪ್ರೀತಿಯ ಅಶೋಕವರ್ಧನರಿಗೆ ನಮಸ್ಕಾರಗಳು,
  ನನ್ನ ಪುಸ್ತಕ ಭಂಡಾರದ ಬಹಳಷ್ಟು ಹೊತ್ತಗೆಗಳ ಆಕರ ಅತ್ರ್ರಿ .ನವಕರ್ನಾಟಕ ,ಹಾಸನದ ಗೌತಮ್ ಬುಕ್ ಹೌಸ್ ,ಹುಬ್ಬಳ್ಳಿಯ ಸಾಹಿತ್ಯ ಭಂಡಾರ ಗಳನ್ನೂ ಸ್ಮರಿಸುತ್ತೇನೆ.ನಿಮ್ಮ ಅನುಪಸ್ತಿತಿಯಲ್ಲಿ ಜಿ ಟಿ ಏನ್ ರವರನ್ನು ಮಾತನಾಡಿಸುವ ಭಾಗ್ಯವೂ ಸಿಕ್ಕಿತ್ತು . ಮಂಗಳೂರಿನ ಅನೇಕ ಸಾಮ್ಸ್ಕಿಥಿಕ ಚಟುವಟಿಕೆ ಗಳ ಆಹ್ವಾನವು ನಿಮ್ಮಿಂದ ಸಿಕ್ಕಿತ್ತು.
  ವೇಗವಾಗಿ ಬದಲಾಗುತ್ತಿರುವ ಮಂಗಳುರೆಂಬ ಕಾ೦ಕ್ತ್ರಿಟ್ ಕಾಡಿನಲ್ಲಿ ಅಳಿದು ಹೋಗುತ್ತಿರುವ ಲ್ಯಾಂಡ್ ಮಾರ್ಕುಗಳ ಬಗ್ಗೆ ನೆನಪಿಡೋದೇ ಕಷ್ಟ .
  ವಂದನೆಗಳು ಡಾ ಎ ಪಿ ಭಟ್

  ReplyDelete
 19. I personlly miss athri book center... it's v sad news for me.

  ReplyDelete
 20. Favourite Athree book centre closed? I cannot believe.

  ReplyDelete
 21. Benefit of thirty six years' tapasya can still be made available to even a larger number of persons who seek your father's expertise if he chooses to start a blog of his own. Abhaya and other book-loving admirers can jointly extend him any help he initially may need to start this new method of using his expertise and he too can find a new way of extending his old love, perhaps with lesser amount of time and energy. He will also find time and energy to his desire to write and work for promoting environmental awareness. 'Never say die' is a good quality and adaptation a necessity perhaps.

  ReplyDelete
 22. You deserves this break to do more and more crazy things! Look forward to all that new beginnings!! Wish you all the best!!!

  ReplyDelete
 23. ಹೊಸಹಾದಿಯ ಅನ್ವೇಷಣೆಯಲ್ಲಿ...

  ಹುಟ್ಟಿಬೆಳೆದದ್ದು...ವಿದ್ಯಾಭ್ಯಾಸ ಘಟ್ಟದಾಚೆ... ಬದುಕುವ್ಯವಹಾರ ಅರಳಿದ್ದು ಕಡಲತಡಿಯ ಮಂಗಳೂರಿನಲ್ಲಿ. ಕಲಿತದ್ದು ಇಂಗ್ಲೀಷ್ ಸಾಹಿತ್ಯ... ಓದುಗರಿಗೆ ಕುಡಿಸಿದ್ದು...ಬರೆದದ್ದು ಕನ್ನಡದಲ್ಲಿ. ಬದುಕಿನ ಆರೋಹಣದ ಚಪಲದಲ್ಲಿ ದೈಹಿಕ ನೋವುಗಳನ್ನು ಲೆಕ್ಕಿಸದೆ, ಬಾನಗಲದಲ್ಲಿ ಹಾರಾಡಿ ಬಿದ್ದರೂ... ಗುಹೆಗಳನ್ನೂ ನುಗ್ಗಿ ಬರುವ ಜೀವನೋತ್ಸಾಹ.
  ಒಂದು ಕಾಲದಲ್ಲಿ ನಮ್ಮ ಎಳೆಯಕಣ್ಣುಗಳನ್ನು ವಿಸ್ಮಯದಿಂದ ಬಟ್ಟಬಯಲಾಗಿಸಿದ ಆ ಸಾಹಸಿ ಚಾರಣಿಗ. ಇಂದು ಹೊಸ ಅಸ್ತಿತ್ವದ ಅನ್ವೇಷಣೆಯಲ್ಲಿ...ತಾನು ನೆಟ್ಟು ಬೆಳೆಸಿದ ಅತ್ರಿಯ ವಿಶಾಲ ವೃಕ್ಷವನ್ನು ತೊರೆದು ಇಂತಹ ಸಾವಿರಾರು ವೃಕ್ಷಗಳ ಆಸರೆಯಲ್ಲಿ ಹೊಸ ಬದುಕಿಗೆ ತೆರೆದುಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾರೆ.
  ಅವರಿಗೆ ನಮ್ಮ ಹಾರೈಕೆಗಳ ಹೆಚ್ಚು ಅಗತ್ಯವಿರುವುದಿಲ್ಲ... ಅದರೆ ಅವರ ಒಡನಾಟದ ಅಗತ್ಯ ನಮಗಿದೆ.
  ಅವರೇನು ಮಾಡಿದರೂ ಅದು ಸಂಕಲ್ಪಶಕ್ತಿಯಿಂದ ಹೊಸ ಭರವಸೆಗಳಿಂದ, ಪ್ರಾಮಾಣಿಕ ಭಾವನೆಗಳಿಂದ ಕೂಡಿರುತ್ತದೆ. ಅವರ ಬದುಕು ಹಾಗಿದೆ. ಅಶೋಕವರ್ಧನರಂತವರು ಅದಕ್ಕೇ ನಮಗೆ ಹೆಚ್ಚು ಆಪ್ತರಾಗಿ ಉಳಿಯುತ್ತಾರೆ.

  ReplyDelete
 24. ಪ್ರೀತಿಯ ಅಶೋಕ ವರ್ಧನರೇ!
  ತಮ್ಮ ಸ್ವಂತ ನಿರ್ಧಾರಗಳನ್ನು ಗೌರವಿಸುತ್ತೇನೆ.
  ಶುಭ ಹಾರೈಕೆಗಳು.
  ಪ್ರೀತಿಯಿಂದ
  ಪೆಜತ್ತಾಯ ಎಸ್. ಎಮ್.

  ReplyDelete
 25. I was really shocked.Its a very very bad news. Every time I visit Mangalore Athree Book Centre was my favourite destination. Huge loss for Mangalore

  ReplyDelete
 26. ದುಃಖದಲ್ಲೂ ಒಂದು ಸಂತೋಷದ ಸಂಗತಿ ಎಂದರೆ.. ನವಕರ್ನಾಟಕ ಪಬ್ಲಿಕೇಶನ್ ನವರ ಆಸಕ್ತಿ. ಕಾಲ ಬದಲಾಗುತ್ತಿದೆ ಬದಲಾಗುವ ಕಾಲ ಪ್ರವಾಹದಲ್ಲಿ ಮಂಗಳೂರು ಹಲವು ರೀತಿಯಲ್ಲಿ ಬದಲಾವಣೆ ಕಂಡಿದೆ. ನಮ್ಮ ಬಾಲ್ಯದ ಹೆಮ್ಮೆಯ ಮಂಗಳೂರು ಇಂದು ಅದಾಗಿ ಇಲ್ಲ. ಅದಾಗ್ಯೂ ಹಳೆಯದನ್ನು ನೆನಪಿಸುವ ಅತ್ರಿ ಬುಕ್ ಸೆಂಟರ್ ಇನ್ನು ನೆನಪು ಮಾತ್ರ ಎಂದರೆ ನಂಬುವುದು ಕಷ್ಟ. ..
  Raj kumar

  ReplyDelete
 27. My dear Ashoka Vardhana,
  My wife and I wish you and your wife all the best
  in your new life free of ATHRRE Book Centre.
  We have visited ATHREE many times and enjoyed
  looking at the sea of books and buying one or two
  sometimes.
  Once again, find happiness in whatever you are doing.
  I was so happy to read the Hindu writing about you.
  Affectionately yours
  MS Bhat

  ReplyDelete
 28. Yaake/ Yaake? Yaake? why?why?why?
  Athree books namage beeku. I am sad for that.
  Inneelaa odabekasthe.
  S R Vijayashankar

  ReplyDelete
  Replies
  1. It is always better to retire
   while people keep asking why?
   rather why not?

   Delete
 29. A big thank you to Athree Book Center. Its because of Athree, I have been able to participate in many treks and have ben fortunate enough learn a lot on conservation. I got to know wonderful people like Ashok, Niren and many others because of Athree book center. One may ask how? Two years ago by chance,me and my friend visited Athree book center to get a book on Flora and Fauna of Udupi. That was it, We became friends with Ashok sir and then every thing happened. So, I would like to thank Athree Book center for introducing me to such wonderful people and All the very best to Ashok Sir. :)

  Regards,
  Sandeep

  ReplyDelete
 30. 21.02.2012 21:18

  Dear sir,
  You did tell me last month when I visited your book centre during my visit to M'lore that you were thinking of retiring and I thought you were joking.But now you have decided to do so all the best for you.Your centre helped me a lot gain knowledge and I hope it will help me to be a human being.Majority of my knowledge I gained came from your books I got from your place. May GOD bless you and all the best.

  Thanking you,
  With kind regards,
  Nagesh.

  ReplyDelete
 31. ಪ್ರಿಯ ಅಶೋಕವರ್ಧನರಿಗೆ ನಮಸ್ಕಾರ
  ನಿನ್ನೆ ರಾತ್ರಿ ನಿಮ್ಮ ಬ್ಲಾಗ್ ಬರಹ ಓದಿದೆ.
  ಇವತ್ತು ನನ್ನ ಬ್ಲಾಗ್ ನಲ್ಲಿ ಒಂದು ಚಿಕ್ಕ ಬರಹ ಹಾಕಿದ್ದೇನೆ.ಅವಸರದಲ್ಲಿ ಬೆಳಗ್ಗೆ ವಿವಿಗೆ ಹೋಗುವ ಮೊದಲು ಬರೆದದದ್ದು.ಎಲ್ಲವನ್ನೂ ಹೇಳಲು ಆಗಿಲ್ಲ.ಬಿಡುವಿನಲ್ಲಿ ನೋಡಿರಿ.
  ನಿಮ್ಮ ಬ್ಲಾಗಿನಲ್ಲಿ ಕನ್ನಡದಲ್ಲಿ ಪ್ರತಿಕ್ರಿಯೆ ಬರೆಯಲು ಪ್ರಯತ್ನಿಸಿದೆ .ಆಗಲಿಲ್ಲ.
  ಫೆಬ್ರವರಿ ೧೧ ಕ್ಕೆ ಮಂಗಳೂರಿಗೆ ಬರುತ್ತೇನೆ.ಅತ್ರಿಯಲ್ಲಿ ಸಿಗುತ್ತೇನೆ.
  ವಿಶ್ವಾಸದಿಂದ
  ವಿವೇಕ ರೈ
  www.wordpress.cbavivekrai.om/2012/01/21/ಅತ್ರಿ-ಬುಕ್-ಸೆಂಟರ್-ಮತ್ತು-ಅ/#respond

  ReplyDelete
 32. Namaskara Ashoka Vardhanaravare,

  We enjoyed our visits to ABC during our stay in Mangalore over the years. Congratulations for
  achieving your goals and for promoting Kannada culture, and wish you the very best for a happy
  and fulfilling retired life!
  Raja Kailar

  ReplyDelete
 33. Laxminarayana Bhat P.22 January, 2012 08:17

  ಪ್ರಿಯ ಅಶೋಕವರ್ಧನರಿಗೆ ನಮಸ್ಕಾರಗಳು. Facebookನಲ್ಲಿ ನನ್ನ ಪ್ರತಿಕ್ರಿಯೆ ದಾಖಲಿಸಿದ್ದೇನೆ. ಪ್ರೊ| ವಿವೇಕ ರೈ ಅವರ ಬ್ಲಾಗಲ್ಲಿ ನಿಮ್ಮ ಬಗ್ಗೆ, ನಿಮ್ಮ ನಿರ್ಧಾರದ ಬಗ್ಗೆ ಬಹಳ ಆತ್ಮೀಯವಾಗಿ ಬರೆದಿದ್ದಾರೆ. ಜೀವನದ ಯಾವುದೇ ಮಹತ್ವದ ಆಯ್ಕೆ ಸುಲಭದ್ದಲ್ಲ ಮತ್ತು ಅದಕ್ಕೆ ಬಹು ಆಯಾಮಗಳಿರುತ್ತವೆ. ನಿಮ್ಮ ಆಯ್ಕೆಯನ್ನು ಗೌರವಿಸುವುದೇ ಅತ್ಯಂತ ಸೂಕ್ತ ಪ್ರತಿಕ್ರಿಯೆ ಎಂದಷ್ಟೇ ಹೇಳಬಲ್ಲೆ. ಮಂಗಳೂರಿನ ಪುಸ್ತಕ ವ್ಯಾಪಾರ ಚರಿತ್ರೆಯಲ್ಲಿ ನಿಮ್ಮದು ಶಾಶ್ವತವಾದ, ನೆನಪಿಡಬೇಕಾದ ಸಾಧನೆಯಾಗಿ ದಾಖಲಾಗಿದೆ. ಅದರ ಬಗ್ಗೆ ನನಗೆ ಹೆಮ್ಮೆ ಇದೆ. ನಿಮ್ಮ ಮುಂದಿನ ಬದುಕು ನಿಮ್ಮೆಲ್ಲಾ ಆಶೋತ್ತರಗಳನ್ನು ಈಡೇರಿಸಲಿ ಎಂಬ ಶುಭಾಕಾಮನೆಗಳೊಂದಿಗೆ ಮತ್ತೊಮ್ಮೆ ಪ್ರೀತಿಯ ನೆನಪುಗಳೊಂದಿಗೆ... ಲಕ್ಷ್ಮೀನಾರಾಯಣ ಭಟ್ ಪಿ.

  ReplyDelete
 34. This is indeed a great loss to our City Mangalore. I still remember coming back from Coorg just to purchase those WISDEN Cricket books from Athree.

  Ashokvardhanji, I would like you to read our user comments on your book stall. Here it goes: www.facebook.com/mangalore.city/posts/330412820326766

  ReplyDelete
 35. January 23, 2012 at 10:12 am
  ತಾನೇನು ಮಾಡಬೇಕು ಅನ್ನುವುದು ಖಂಡಿತ ಪ್ರತಿಯೊಬ್ಬನ ಹಕ್ಕು ಮತ್ತು ಸ್ವಾತಂತ್ರ್ಯ, ಆದರೆ ಮಂಗಳೂರಿಗೆ ಬಂದಾಗ, ಶರಾವತಿ ಬಿಲ್ಡಿಂಗ್ ಮುಂದೆ ಹಾದುಹೋಗುವಾಗ ಅತ್ರಿಯ ನೆನಪು ಕಾಡಲಿದೆ, ಅಂತೂ ಹುರಿಮೀಸೆಯ ಹಿರಿಸಿಂಹ ಕಾಡಲ್ಲಿ ಘರ್ಜಿಸಲಿದೆ… ಆಲ್ ದ ಬೆಸ್ಟ್…
  ಪ್ರಸಾದ್ ರಕ್ಷಿದಿ

  ReplyDelete
 36. January 23, 2012 at 4:56 pm
  ಪ್ರಿಯ ಅಶೋಕ್ವರ್ಧನ್ ರವರಿಗೆ ನಮಸ್ಕಾರ. ನಿಮ್ಮ ನಿರ್ಧಾರ ನೋವಿನ ಸಂಗತಿಯಾದರೂ, ಈ ವಯಸ್ಸಿನಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರ ಎಂದು ನಾನು ಭಾವಿಸಿದ್ದೇನೆ. ಒಭ್ಭ ಲೇಖಕನಾಗಿ, ಪತ್ರಕರ್ತನಾಗಿ ನಾನು ನಿಮ್ಮ ಅಂಗಡಿಗೆ ಬರಲಾಗದ ನೋವು ನನ್ನನ್ನು ಕಾಡುತ್ತಿದೆ. ಇರಲಿ ನಿಮ್ಮ ಮನೆಗೆ ಬಂದು ನಿಮ್ಮ ಜೊತೆ ಮಾತನಾಡಿ ಒಂದು ಚಹಾ ಕುಡಿದರೆ ನನ್ನ ನೋವಿಗೆ ಮದ್ದು ಸಿಗಬಹುದು. ನಿಮ್ಮ ಮುಂದಿನ ಖಾಸಾಗಿ ಬದುಕು ಸುಖಮಯವಾಗಿರಲಿ.
  ಜಗದೀಶ್ ಕೊಪ್ಪ, ಧಾರವಾಡ.

  ReplyDelete
 37. ಅತ್ರಿಯನ್ನ ಮುಚ್ಚುವ ಕಹಿ ಸುದ್ದಿಯನ್ನ ನೀಡುತ್ತಿದ್ದೀರಲ್ಲಾ..
  ಛೇ.... :(
  ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯುತ್ತಿಲ್ಲ..
  ಅತ್ರಿ ಬುಕ್ ಸೆಂಟರ್ ಇಲ್ಲದ ಮಂಗಳೂರನ್ನ ಚಿಂತಿಸುವುದು ಪುಸ್ತಕ ಪ್ರೇಮಿ ಪುಸ್ತಕ
  ಸಂಸ್ಕೃತಿಯನ್ನ ಗೌರವಿಸುವ ಮಂಗಳೂರು ಹಾಗೂ ಸುತ್ತಮುತ್ತಲಿನವರಿಗೆ ಕಷ್ತಸಾಧ್ಯವೇನೋ...

  ವಂದನೆಗಳೊಂದಿಗೆ,
  ವಿನಾಯಕ

  ReplyDelete
 38. ನಮಸ್ಕಾರ,
  ತಾವು ಹೊಂದಿರುವ ಅಥವಾ ಈಗ ಪಡೆದಿರುವ ಮನಸ್ಥಿತಿ ಸಾಮಾನ್ಯಕ್ಕೆ ಎಲ್ಲರಿಗೂ ದಕ್ಕುವಂತಹದ್ದಲ್ಲ..
  ಒಂದು ಹಂತಕ್ಕೆ ಜೀವನದಲ್ಲಿ ಸಾಧಿಸುವ ಕೊಳ್ಳುವ ’ ತೃಪ್ತ ಭಾವ ’ ಸುಲಭ ಸಾಧ್ಯವಲ್ಲ.
  ಅದನ್ನು ತಾವು ಹೊಂದಿರುವದು ನಿಜಕ್ಕೂ ತುಂಬಾ ಸಂತೋಷದ ಸಂಗತಿ....
  ಇನ್ನು ಪುಸ್ತಕದ ಅಂಗಡಿ ವಿಚಾರ ಯಾರಾದ್ರೂ ನಡೆಸ್ತಾರೆ..ಅಥವಾ ನಾವು ಒಂದು ಅಂಗಡಿ ಮುಚ್ಚಿದ್ರೆ
  ಜನಕ್ಕೆ ಪುಸ್ತಕಗಳು ದೊರೆಯುವುದಿಲ್ಲ ಅಂತೇನೂ ಆಗುವುದಿಲ್ಲವಲ್ಲಾ..!!
  ಇರಲಿ ..ನಿಮ್ಮ ಜೀವನದ ಒಂದು ಪ್ರಮುಖ ಘಟ್ಟವನ್ನು ಏರುತ್ತಿದ್ದೀರಿ..
  ಮುಂದಿನ ಮಜಲಿನಲ್ಲೂ ನಿಮಗೆ ಯಶಸ್ಸು,ಶಾಂತಿ ನೆಮ್ಮದಿ, ಆನಂದ,ತೃಪ್ತಿ ದೊರೆಯಲಿ.
  ಬರವಣಿಗೆಯಲ್ಲೂ ಇನ್ನು ನೀವು ಹೆಚ್ಚು ತೊಡಗಿಕೊಳ್ಳ ಬಹುದು..
  ವಂದನೆಗಳೊಡನೆ ಪ್ರೀತಿಯಿಂದ...
  ವೆಂಕಟಕೃಷ್ಣ

  ReplyDelete
 39. preetiya Ashoka Vardhana,
  ella odide. . . .
  deshakaalada kurita lekhanavannoo.
  enu helali. eno sankata sankata.
  nimma,
  vaidehi

  ReplyDelete
 40. Whenever I use to get down in Jyothi, its my habit to peep into
  athree..Its really tough to imagine here afterwards it is
  Navkarnataka. I think I miss Athree....
  :(

  Manorama

  ReplyDelete
 41. shyam prasad pare

  Sir, I was shocked to see the Hindu other day reading that news. Couldn't believe it for a second. Later that evening when I called my Bhava in Bangalore, - who makes it a point to visit your store every time he is around - was surprised that even he knew about it.! More surprising was he was told by his sister who is a scientist in Germany.! I know both of them love books and surely anybody who loves books surely cant hate Athree.
  Sir, I read the article you were referring to by Mr. Samvartha. Couldn't agree more with himwhen he refers to you as the 'scary man in moushtach'. I always used to look at you with awe and respect and it grew manyfolds once I came to know your interests in environment (especialy buying some land in Bisle for the sake of preserving natural forest - i am heard-), experiments with Yakshagana, trecking adventures etc etc.. I still remember my visits to your shop as a child along with my Appa. He always used to give a book as a birthday present to me and my sister. And sir, I can say with pride that each one of those books are from Athree!. I know I am runninig the risk of sounding like a fanatic when I say that, but I mean it.
  I always thought that i'll present my son - who is just 2 and half years old now - with books for his birthdays when he grows up; and I will. But I would have been immensely happier had those also were bought from Athree, with you in that chair.
  Sir we understand that there might be practical problems in running the shop. And we respect your decision. Weather we get or not the books that used to be there in Athree elsewhere I can't say. But the human touch that you used to give, the wisecracks that you used to crack, the frank straightforward opinions that you had on a book and above all You - the person- we surely will miss there at Athree. I hope you keep continuing writing in your blogs. I pray to God (I don't know wheather you belive or not!) that he gives you the health, peace of mind and wish you success for all your future plans.

  Wth regards

  ReplyDelete
 42. http://www.udayavani.com/news/124127L15-%E0%B2%A8%E0%B2%A8-%E0%B2%A8-%E0%B2%95%E0%B2%A5----%E0%B2%A8%E0%B2%AE-%E0%B2%AE-%E0%B2%95%E0%B2%A5-%E0%B2%AA-%E0%B2%B8-%E0%B2%A4%E0%B2%95-%E0%B2%AC-%E0%B2%A1-%E0%B2%97%E0%B2%A1-.html

  ReplyDelete
 43. sumithra.l c says:
  ಅಶೋಕ ವರ್ಧನ್ ಅವರ ನಿವೃತ್ತಿಜೀವನ ಪ್ರಕೃತಿಯ ಮಡಿಲಲ್ಲಿ ನೆಮ್ಮದಿಯಿಂದಿರಲಿ.
  ತೀರ್ಥಹಳ್ಳಿಯಿಂದ ಮಂಗಳೂರಿಗೆ ಹೋಗುವ ಮಿನಿಬಸ್ ಡ್ರೈವರ್ ಮೂಲಕ ಅತ್ರಿಯಿಂದ ಪುಸ್ತಕ ತರಿಸುತ್ತಿದ್ದುದು
  ನೆನಪಿನಿಂದ ಮಾಸುವುದಿಲ್ಲ.

  ReplyDelete
 44. vasanth says:
  Very Sad. Book industry need people like you sir. I work in a library i know how difficult to take stand on not to sale textbooks. Wish you a great success in your new endeavor sir.

  ReplyDelete
 45. RG BHAT says:
  ೩೧-೩-೨೦೧೨ ಕ್ಕೆ ಅತ್ರಿ ಬುಕ್ ಸೆಂಟರ್ ಖಾಯ೦ ಆಗಿ ಮುಚ್ಚುತ್ತಿರುವ ಸ೦ಗತಿ ಓದಿ ಖೇದವಾಯಿತು. ಮ೦ಗಳೂರಿನಲ್ಲಿ ಬಲಮಟ್ಟಾ ರಸ್ತೆಯಲ್ಲಿ ಹೋಗುವಾಗ ಕಣ್ಣು ತನ್ನಿ೦ದ ತಾನೆ ಅತ್ರಿ ಬುಕ್ ಸೆಂಟರ್ ಗೆ ಹೋಗುವುದು ಸಹಜ. ೩೧-೩-೨೦೧೨ ರ ನ೦ತರ ಅತ್ರಿ ಬುಕ್ಕ್ ಸೆ೦ಟರ್ ಇನ್ನು ಮು೦ದೆ ಕಾಣಲಿಕ್ಕೆ ಸಿಗುವುದಿಲ್ಲ ಎ೦ದರೆ ನ೦ಬಲಸಾಧ್ಯ. ಅತ್ರಿ ಬುಕ್ಕ್ ಸೆ೦ಟರ್ ಗೆ ಜೀವ ನೀಡಿದವರೂ ತಾವೇ. ಅದರ ಜೀವಿತದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕೂ ನಿಮಗೇ ಸೇರಿದ್ದು. ನಿಮ್ಮ ಮು೦ದಿನ ಹೊಸ ಆವೇಶದ ನಿವ್ರುತ್ತ / ವಾನಪ್ರಸ್ತಾಶ್ರಮದ ಜೀವನ ಸುಖಮಯ ಹಾಗೂ ನೆಮ್ಮದಿಯಿ೦ದ ತು೦ಬಿರಲಿ ಎ೦ದು ಭಗವ೦ತನಲ್ಲಿ ಪ್ರಾರ್ತಿಸುವೆ.

  ReplyDelete
 46. Dear Mr. Ashokavardhan,
  Some time back I got a news that you are closing your shop. I thought
  how you have thought of stopping this activity of book relationship.
  Any way some body is going to continue this for the public. I will
  come and meet you to talk about other activities that were goin on at
  Athree.
  With regards,
  JAYANTHA HIRANYA

  ReplyDelete
 47. ’ಅತ್ರಿಯಲ್ಲಿ ಪ್ರಥಮ ದಿನಗಳಲ್ಲಿ ಕೂತದ್ದು ಇನ್ನೂ ಹಸಿರಾಗಿದೆ ನನ್ನ ಮನ್ಹ ಪಟಲದಲ್ಲಿ!! ಹೋಸ್ಟಲ್ಲನಲ್ಲಿ ನಾನು ನೀನು ಇದ್ದದ್ದು, ಕೆದ್ಲಾಯರ ಹಳೇ ಮನೆಯಲ್ಲಿ ಉದಯಪ್ಪಗ ಇಡ್ಲಿ ತಿ೦ದದ್ದು .... ೩೦ ಚಿಲ್ಲರೆ ವರ್ಷ ಆಯ್ದಲ್ಲ!! ನಿನ್ನ ಹಿ೦ದು ಲೇಖನ ಅಭಯ ಕಾಳಿಸಿದ್ದ ಓದಿ ಕಣ್ಣೀರು ಹಾಕಿದೆ, ನ೦ತರ ಅನರ್ಘ್ಯ್ಯ ಸಹ ಕಳಿಸಿದ್ದಳು. ಜೀವನದಲ್ಲಿ ಒ೦ದು ಘಟ್ಟ ಮುಗಿಯಿತು ನಿನ್ನದು ಇನ್ನೆ ವನಪ್ರಸ್ತ ಏಷ್ಟು ಸೂಕ್ತವಾಗಿದೆ!! ನಾನೂ ಇನ್ನು ೬ ವರ್ಷದಲ್ಲಿ ವನಪ್ರಸ್ತಿ ಆಗುವವನೆ!!

  ಅ೦ಬಗ ಕಾ೦ಬ
  ಆನ೦ದ ಭಾವ

  ReplyDelete
 48. ದೇವಕಿ,
  ನೀವು ಮದುವೆಯಾದ ಹೊಸದರಲ್ಲಿ ಅತ್ರಿಯನ್ನು ನೋಡಲು ಬಂದಿದ್ದಾಗ ಅಲ್ಲಿ ಆನಂದವರ್ಧನನ ಧ್ವನ್ಯಾಲೋಕ ಪುಸ್ತಕವನ್ನು ನೋಡಿ ಮುಗ್ಧವಾಗಿ ಆನಂದ ಬಾವನ ಪುಸ್ತಕ! ಎಂದು ಬೆರಗಾದಾಗ ಅಲ್ಲೇ ಇದ್ದ ಆನಂದ ಬಾವ ಹೌದು ಆಗೆಲ್ಲ ನಾನು ಸಂಸ್ಕೃತದಲ್ಲಿ ಬರೆಯುತ್ತಿದ್ದೆ! ಎಂದು ಬೀಗಿದ್ದು ಇನ್ನೂ ಹಸಿರಾಗಿದೆ!
  ಪಂಡಿತಾರಾಧ್ಯ ಮೈಸೂರು

  ReplyDelete
 49. Ravishankar Rao25 January, 2012 21:04

  There is something so singular about closure that anything you say comes dangerously close to becoming cliche. And so it is with the deeply distressing news that Ashok is closing down Athree. Retrieval of memory is perhaps the only salve, the only grace available.

  It was as a kid of seventeen that I first stepped into Athree, to buy books for my proficiency prizes at St Aloysius College. Since then, Athree has become an eclectic kind of place, not only in the fascinating range of books (some, like Bhalla's single volume edition of short stories, then not easily available elsewhere), but also in the range of do-able things there. Apart from being Mangalore's most vibrant bookseller, Athree was also the most homely of places. One could drop in to buy a book, or to participate in discussions that carried the burden of the world, or to find out the latest cultural in town, or to leave a message/parcel/whatever for someone to pick up the next day or week, or simply a place where you could keep your luggage before you caught your bus or train! That a bookshop could do all this was more precious than playing piped music or serving hot coffee!

  As Athree prepares to close down, these memories serve as a balm to lessen the pain. When the fated day comes, one thing will be for sure: never again will there be a bookstore so personal, so warm, so genuine in its love for books, so intellectually stimulating, so local, so special, as Athree Book Centre.

  Dr Ravishankar Rao, Associate Professor, Department of English, Mangalore University

  ReplyDelete
 50. ೩೧-೩-೨೦೧೨ ಕ್ಕೆ ಅತ್ರಿ ಬುಕ್ ಸೆಂಟರ್ ಖಾಯ೦ ಆಗಿ ಮುಚ್ಚುತ್ತಿರುವ ಸ೦ಗತಿ ಓದಿ ಖೇದವಾಯಿತು. ಅತ್ರಿ ಬುಕ್ಕ್ ಸೆ೦ಟರ್ ಗೆ ಜೀವ ನೀಡಿದವರೂ ತಾವೇ. ಅದರ ಜೀವಿತದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕೂ ನಿಮಗೇ ಸೇರಿದ್ದು. ನಿಮ್ಮ ಮು೦ದಿನ ಹೊಸ ಆವೇಶದ ನಿವ್ರುತ್ತ / ವಾನಪ್ರಸ್ತಾಶ್ರಮದ ಜೀವನ ಸುಖಮಯ ಹಾಗೂ ನೆಮ್ಮದಿಯಿ೦ದ ತು೦ಬಿರಲಿ ಎ೦ದು ಭಗವ೦ತನಲ್ಲಿ ಪ್ರಾರ್ತಿಸುವೆ.

  ReplyDelete
 51. Preethiya dodappa nimma ee lekhana hrudayasparshiyaadudu. oodutta naanu bhaavukaLaade. idu nijakku santhosha mattu beejaara taruva vishayavee.. Athree book centreannu kandithavaagi miss madteene.. :(( athree book centrenalli kaleda nenapugaLannu marayalaaree.. bill counternalli koothu pustaka kottu billge sign hakiddu( sign haakalu baari istaa sannavaLiruvaaga!), nimmodane nimma chambernalli koothu harate hodedaddu, mettila meele kuLithu pustaka oodiddu, neevu keetale maduttiddudu, woodlandsge hooddu ellavu hachcha hasiraagide... Miss you athree book centre. March 31ra modalu koneya athree book centre darshana maadalu prayathnisuttene.. haageye nimma mundina hejjege nanna shubhaashayagaLu.. mundina jeevana nimmistadanthe nadeyali endu haarysuttene.
  Akshari

  ReplyDelete
 52. "ನನ್ನಿಂದಲೂ ಮೊದಲು, ಅನಂತರವೂ ಸ್ಥಳೀಯ ಪುಸ್ತಕ ಅಗತ್ಯಗಳ ಪೂರೈಕೆ ನಡೆದಿದೆ, ನಡೆಯುತ್ತದೆ"

  ಅಶೋಕ್ ಮಾತ್ರ ಹೀಗೆ ಹೇಳಬಲ್ಲರು. ಅವರ ನಿರ್ಧಾರವೂ ಮತ್ತು ಅದನ್ನು ಹಂಚಿಕೊಂಡ ಶೈಲಿಯೂ ಅಶೋಕರದ್ದೆ! ಅತ್ರಿ ಬುಕ್ ಸೆಂಟರ್ ಮಂಗಳೂರಿನ ಲ್ಯಾಂಡ್ ಮಾರ್ಕ್ ಗಳಲ್ಲೊಂದು. ಹಾಗೆಯೇ ಉಳಿಯುತ್ತದೆಂದು ಕೇಳಿ ಸಂತೋಷವಾಯಿತು.
  ಆ ಲ್ಯಾಂಡ್ ಮಾರ್ಕ್ ನ ಭಾಗವಾಗಿದ್ದ ಮೀಸೆ ಮತ್ತು ಕನ್ನಡಕ ಇನ್ನು ಅಲ್ಲಿರುವುದಿಲ್ಲ ಎನ್ನುವುದು ಒಪ್ಪಿಕೊಳ್ಳಲಿಕ್ಕೆ ಆಗದ ಸತ್ಯ. ಪಶ್ಚಿಮ ಘಟ್ಟದ ಮರ ಗಿಡಗಳು, ಪ್ರಾಣಿ ಪಕ್ಷಿಗಳ ಅದೃಷ್ಟ, ಈಗ ಅವುಗಳಿಗೆ ಫುಲ್ ಟೈಮ್ ರಕ್ಷಕ ದೊರೆಯುತ್ತಿದ್ದಾನೆ.
  All the best Ashok for all your future endeavors.

  Natesh

  ReplyDelete
 53. ಪುಸ್ತಕೋದ್ಯಮದಿಂದ ವಿಶ್ರಾಂತಿ, ನಿಮ್ಮ ಆಸಕ್ತಿಗಳಿಗೆ ಅವಕಾಶ; ಸುಖವಾಗಿ ಅನುಭವಿಸಿ.
  ನಿಮ್ಮದು ಅಂಗಡಿಯಾಗಿರಲಿಲ್ಲ, ಅದು ಪುಸ್ತಕಗಳ ಆಲಯವಾಗಿತ್ತು. ಪುಸ್ತಕಗಳನ್ನು ಖರೀದಿಸುವುದು ಅಷ್ಟೇ ಅಲ್ಲ, ವರ್ತನೆಗಳನ್ನು ಕಲಿಯುವುದಕ್ಕಿತ್ತು. ಈಗ ಅದನ್ನು ಮುಚ್ಚುತ್ತಿರುವುದಕ್ಕೆ ಇರುವ ಕಾರಣ ಹಿತವಾದುದಲ್ಲ. ಇನ್ನು ಕೆಲವೇ, ಅಂದರೆ ಬೆರಳೆಣಿಕೆಯಷ್ಟು ವರ್ಷಗಳಲ್ಲಿ, ನಮ್ಮ ಕನ್ನಡ ಮಾಧ್ಯಮ ಶಾಲೆಯದ್ದೂ ಇದೇ ಕತೆಯಾದೀತೇನೋ ಎಂಬ ಸುಳಿವು ಸಿಗುತ್ತಿದೆ. ಶಿಕ್ಷಣ ಎಂದರೇನೆಂದು ಅರ್ಥಮಾಡಿಕೊಂಡವರು ಕಮ್ಮಿ. ಕನ್ನಡ ಮಧ್ಯಮದ ಬಗ್ಗೆ ಅಪಾರ್ಥ ಮಾಡಿಕೊಳ್ಳದವರು ಕಮ್ಮಿಯಾಗುತ್ತಿರುವುದು ಅನುಭವಕ್ಕೆ ಬರುತ್ತಿದೆ. ಇನ್ನು ಮಾರ್ಚ್ ೩೧ರ ಬಳಿಕ ಏನಾದರೂ ಕಾರ್ಯಕ್ರಮಕ್ಕೆ ಕರೆದರೆ ನೀವು ಅಂಗಡಿಯ ನೆಪ ಹೇಳಿ ತಪ್ಪಿಸಿಕೊಳ್ಳುವಂತಿಲ್ಲ :-)
  ಇಂತುಇ ನಮಸ್ಕಾರ
  ಚಂದ್ರಶೇಖರ ದಾಮ್ಲೆ

  ReplyDelete
 54. ಮಂಗಳೂರಿಂದ ಬಂದು, ಕೋಣೆಯಲ್ಲಿ ಹೋಗಿ ಕೂತರೆ ಅಪ್ಪ ಕೂಡಲೇ ನಿಸ್ಸಂಶಯವಾಗಿ ಹೇಳುತ್ತಿದ್ದರು ‘ಅವ ಅತ್ರಿ ಬುಕ್ ಸೆಂಟರ್ಗೆ ಹೋದಿಕ್ಕು.. ಒಳವೇ ಕೂಯ್ದ; ಮಂಗಳೂರಿಗೆ ಹೋಗಿ ಅಲ್ಲಿಗೆ ಹೋಗದ್ದರೆ ಕಳಿಯ ಇದಾ...!’ ಅಂಥದ್ದೊಂದು ಅಪ್ಯಾಯಮಾನತೆಗೆ, ಒಂದು ಒಡನಾಟ, ಮಾತುಕತೆ, ಸಂಬಂಧಗಳಿಗೆ, ಪುಸ್ತಕ ಪ್ರೀತಿಗೆ ಅತ್ರಿಗೆ ಹೋಗುತ್ತಿದ್ದೆ. ನೀವು ಅಂಗಡಿ ಮುಚ್ಚುತ್ತೀರಿ ಎಂಬುದನ್ನು ನಂಬಲಾಗುತ್ತಿಲ್ಲ.. ನೀವು ಅತ್ರಿ ಅಂಗಡಿ ಬೋರ್ಡ್ ತೆಗೆಯಬಹುದು. ಆದರೆ ಬಹುಶಃ ನನ್ನ ಮನಸ್ಸಿಂದ ತೆಗೆಯಲು ಸಾಧ್ಯವಿಲ್ಲ. ಅತ್ರಿ ಮುಚ್ಚುತ್ತಿರುವುದಕ್ಕೆ ಒಂದು ಸಣ್ಣ ಬೇಸರ.. ಪರಿಸರದ ಕೆಲಸಕ್ಕೆ ತೊಡಗಿಕೊಳ್ಳುವ ನಿಮ್ಮ ನಿರ್ಧಾರಕ್ಕೆ ಒಂದು ಖುಷಿ ಇದೆ. ಶುಭಹಾರೈಕೆಗಳು. ಮಂಗಳೂರಿಗೆ ಬಂದಾಗ ನಿಮ್ಮಲ್ಲಿಗೆ ಬರುತ್ತೇನೆ.

  ಈಶ್ವರಚಂದ್ರ

  ReplyDelete
 55. ನಿಮ್ಮ ಪ್ರಕಾಶನದ ಮುಚ್ಚಳಕೆ Facebookನಲ್ಲಿ ಉಂಟಾದ ಪ್ರತಿಕ್ರಿಯೆಗಳು
  .http://www.facebook.com/mangalore.city
  ನಿಜಕ್ಕೂ ಇದು 'End of an era'.

  ಇಂತಿ
  ಅನೂಪ್ ಆಸ್ರಣ್ಣ

  ReplyDelete
 56. Books, Newspapers as a medium of documenting and sharing experiences should gradually take backseat for environmental and space reasons and give way to newer medium likes computers, e-blogs, which I presume are more environmental friendly, easy to access and convenient because of their search Engine. So there is no reason to lament on the turn of events that Athree Book Centre is closing the shop. So going by the same no-nonsense (Nishtura) yardsticks, Shri Ashok Vardhan applied to his way of running the business, I think there was very less value-add in recent years, except for a few who could find those rare books. So the decision to wind up the business is most welcome, and more particularly for pursuing interests which is closer to Shri Ashok Vardhan's heart in Ashoka Vana. The experiences gained there and shared at regular intervals through e-medium may open new vistas of life for others. Wish you all the best, Sir in your future endeavours - Madhusudhan Bhat, State Bank of India, Camp: Hyderabad

  ReplyDelete
 57. Dear Ashok,
  I read the news with mixed feelings (happy and sad together).
  Happy because it will give you more time to focus on activities that are close to your heart. Sad because although it is only once or twice a year that we meet, the common meeting place that was a fixture will be not the same anymore! That will be sorely missed indeed.
  Wish you all the best for a “retirement” into a different set of activities!!
  Regards,
  -Prakash kumar (Pallatadka from Singapore)

  ReplyDelete
 58. preethiya ashokavardanare,

  balmattadalli thavu pusthaka maartagaararu maathra alla pusthaka guide kuda aagiddiri. thavu matthu thamma sahapati saviraru odugarige saviraru samshodakarige guide aagi thamma pusthaka save maadiddiri. balmatta bittaru thamma pusthaka seve matthu guide munduvaridu sarvarige sahakari aagali

  benet amanna
  ktc archives.

  ReplyDelete
 59. ಡಾ| ರಾಮಚಂದ್ರ ದೇವ ಅವರ ಜಾಲತಾಣದಲ್ಲಿ ಬರೆಯುತ್ತಾರೆ:
  ಅತ್ರಿ ಬುಕ್ ಸೆಂಟರ್
  Posted: 28 Jan 2012 06:05 PM PST
  ಅತ್ರಿ ಬುಕ್ ಸೆಂಟರ್ ಮುಚ್ಚುವ ನಿರ್ಧಾರವನ್ನು ಅದರ ಮಾಲೀಕ ಅಶೋಕ ವರ್ಧನ ತೆಗೆದುಕೊಂಡಿದ್ದಾರೆ. ಚೆನ್ನಾಗಿ ಬದುಕಿದವನಿಗೆ ಮಾತ್ರ ಅದನ್ನು ಬಿಟ್ಟುಕೊಡಲು ಹೆದರಿಕೆಯಿರುವುದಿಲ್ಲ ಎಂಬ ಒಂದು ಮಾತಿದೆ. ಹಾಗೆ ಚೆನ್ನಾಗಿ ಈ ಪುಸ್ತಕದಂಗಡಿ ನಡೆಸಿದ ಅಶೋಕ್ ಗೆ ಅದನ್ನು ಮುಚ್ಚುವ ಹೆದರಿಕೆ ಇಲ್ಲ. ಬೇಡ, ಇನ್ನು ಇದರಲ್ಲಿ ಸ್ವಾರಸ್ಯ ಇಲ್ಲ ಅನ್ನಿಸಿದಾಗ ಅವರು ಅದನ್ನು ಮುಚ್ಚಿ ತಮ್ಮ ಜೀವನ ಬೇರೆ ಯಾವ ರೀತಿ ಸೃಜನಶೀಲ ಆಗಬಹುದು ಎಂದು ಹುಡುಕಲು ಹೊರಟಿದ್ದಾರೆ. ಅನೇಕರು ಇಂಥಾ ಸಂದರ್ಭದಲ್ಲಿ ಮಾಡುವ ಹಾಗೆ ಅಷ್ಟು ಪ್ರಮುಖ ಸ್ಥಳದಲ್ಲಿರುವ ಆ ಜಾಗದಲ್ಲಿ ಹೆಚ್ಚು ಲಾಭ ಬರಬಹುದಾದ ಹಾರ್ಡ್ ವೇರ್ ಶಾಪು ಅಥವಾ ಐಸ್ ಕ್ರೀಂ ಪಾರ್ಲರ್ ಇತ್ಯಾದಿ ತೆರೆಯಲು ಅವರು ಹೊರಟಿಲ್ಲ. ತಮ್ಮ ಕನ್ವಿಕ್ಷನ್ನಿಗೆ ಅನುಗುಣವಾಗಿ ಮುಚ್ಚುವಾಗಲೂ .... (ಹೆಚ್ಚಿನ ಓದಿಗೆ ಮುಂದಿನ ಸೇತು ಬಳಸಿಕೊಳ್ಳಿ) http://devasaahitya.blogspot.in/

  ReplyDelete
 60. ಆತ್ಮೀಯರಿಗೆ ವಂದನೆಗಳು. ನಿನ್ನೆಯ ಉದಯವಾಣಿಯ ಪ್ರಕಟಣೆ, ಇವತ್ತಿನ ನಿರಂಜನ ವಾನಳ್ಳಿಯವರ ಲೇಖನಗಳನ್ನು ಓದಿದ ಬಳಿಕ ಈ ಬ್ಲಾಗು ತೆರೆದೆ. ಪುಸ್ತಕ ಮಾರಾಟಕ್ಕೆ ಒಂದು ವೃತ್ತಿ ಗೌರವವನ್ನು ತಂದುಕೊಟ್ಟ ನಿಮ್ಮ ತೀರ್ಮಾನವನ್ನು ಮೆಚ್ಚಿ ಅಭಿನಂದಿಸುತ್ತೇನೆ. ಹಳಿ ತಪ್ಪಿದ ಸರಕಾರದ ನೀತಿ, ಕುಸಿಯುತ್ತಿರುವ ಜನ ಸಾಮಾನ್ಯರ ಪುಸ್ತಕ್ ಪ್ರೀತಿ ಈ ಎಲ್ಲ ವಿಷಮ ಪರಿಸ್ಥಿತಿಗಳ ಮಧ್ಯೆ ನಿಂತು ಹೋರಾಡುವುದಕ್ಕಿಂತ ಶಸ್ತ್ರ ಸಂನ್ಯಾಸ ಮಾಡಿ, ನಿಮ್ಮಿಷ್ತದ ಇತರ ಆಸಕ್ತಿಗಳನ್ನು ಬೆಳೆಸುವುದಕ್ಕೆ ನೀವು ಮಾಡಿಕೊಂಡ ಸಿದ್ಧತೆ ನಿಜವಾಗಿಯೂ ಪ್ರಶಂಸನೀಯ. ನೀರೇಜ್ ಜೈನ್ ತಾನೊಬ್ಬನೇ ಸಂತೋಷಪಟ್ಟುಕೊಂಡೆ ಎಂದು ಬರೆದಿದ್ದಾರೆ. ನಿಮ್ಮ ಅಭಿರುಚಿ, ಆಸಕ್ತಿಗಳ ಬಗ್ಗೆ ಗೊತ್ತಿದ್ದ ಎಲ್ಲರೂ ಮೆಚ್ಚುತ್ತಾರೆಂಡು ನನ್ನ ಭಾವನೆ. ಆದರೆ ಒಂದೇ ಒಂದು ಕೊರತೆ,ನಮ್ಮನ್ನು ಕೊರಗುವಂತೆ ಮಾಡುತ್ತಿದೆ. ಅದನ್ನು ಹೇಳಿಯೇಬಿಡುತ್ತೇನೆ. ಬೇರಾವ ಪುಸ್ತಕದಂಗಡಿಗಳಲ್ಲಿ ಇಲ್ಲದ ಆತ್ಮೀಯತೆ ಅತ್ರಿಗೆ ಬಂದಾಗ ಲಭಿಸುತ್ತಿತು.
  ಈ ಮಣ್ಣಿನ ಕಲೆ ಮತ್ತು ಸತ್ತ್ವವನ್ನು ಅರಿತು ಅದರೊಂದಿಗೆ ಅನೇಕ ವರ್ಷಗಳಿಂದ ಅನುಸಂಧಾನ ನಡೆಸುತ್ತಿರುವ ನಿಮಗೆ ಈಗ ಬಂಧಮುಕ್ತರಾದಂತಹ ಅನುಭವವಾಗಬಹುದು. ನಿಮ್ಮ ಮತ್ತು ದೇವಕಿಯವರ ಸರಳ ಮತ್ತು ಉದಾತ್ತ ಚಿಂತನೆಗಳು ಸಾಕಾರಗೊಳ್ಳಲು ನಿಮ್ಮ ಸಮಯದ ಸದುಪಯೋಗವಾಗುತ್ತದೆ ಎನ್ನುವುದೇ ಖುಶಿಯ ವಿಷಯವಲ್ವಾ!
  ಇತಿ ಕೃತಜ್ಞತೆಗಳು
  ಬಿ.ಎಂ ರೋಹಿಣಿ

  ReplyDelete
 61. ಪ್ರಿಯ ಅಶೋಕ್
  ನೀವು ವೃತ್ತಿಯಿಂದ ನಿವೃತ್ತರಾಗುವ ಸುದ್ದಿ, ಛೆ, ಏನೋ ಕಸಿವಿಸಿ.... ವ್ಯಾಪಾರವನ್ನು ಒಂದು ಕಲೆಯ ಮಟ್ಟಕ್ಕೆ ಏರಿಸಲು ಸಾಧ್ಯ ಎಂದು ಹೇಳಬಹುದೋ ಏನೋ. ಆದರೆ ಭಗವದ್ಗೀತೆಯಲ್ಲಿ ಕ್ರುಷ್ಣ ಉಲ್ಲೇಖಿಸುವ ಕೌಶಲ್ಯ ಪದದ ವಿವರಣೆ ತೋಳ್ಪಾಡಿಯವರು ನೀಡುವಾಗ ನನಗೆ ನಿಮ್ಮನ್ನು ಕೂಡಾ ನೆನಪಾದದ್ದು ಹೌದು.ಒಂದು Model ಎನ್ನುವುದು ಸದಾ ಕಣ್ಣಮುಂದಿರಬೇಕು ಎನ್ನುವುದು ಸರಿ ಅಲ್ಲವಾದರೂ ಹಾಗೆ ಕಾಣುವುದಕ್ಕೆ ಏನು ಮಾಡುವುದು!! ಆದರೂ ಬಹಳ ಮೊದಲೇ ಸ್ವಯಂ ನಿವೃತ್ತಿ ಪಡೆದ ನಾನು ನಿಮಗೆ ನಿವೃತ್ತಿ ಯಾಕೆ ಎಂದು ಕೇಳುವುದು ಸರಿಯಾದೀತೇ! ಅದೂ ಅಲ್ಲದೆ ದೇರಾಜೆಯ್ವರ ಮಗನಾಗಿ, ಅಭಿಮಾನಿಯಾಗಿ ನಾನು ಈ ಕಾರಣಕ್ಕೆ ನಿಮ್ಮನ್ನು ಅಭಿನಂದಿಸದೇ ಇರುವುದು ಹೇಗೆ!! ಪ್ರೀತಿ ಇರಲಿ
  ಮೂರ್ತಿ ದೇರಾಜೆ

  ReplyDelete
 62. ಅಶೋಕವರ್ಧನರೇ,
  ಸುಮಾರು ಎರಡೂವರೆ ವರ್ಷಗಳ ಹಿಂದೆ ನಿಮ್ಮ ಪುಸ್ತಕದಂಗಡಿ ದಾರಿಯಲ್ಲಿ ಎಡವಿದ್ದು ಆಕಸ್ಮಿಕ. ಪುಸ್ತಕ ಓದುವ ಹವ್ಯಾಸ ಸ್ವಲ್ಪಮಟ್ಟಿಗೆ ಇದ್ದವನಿಗೆ ನಿಮ್ಮ ಪುಸ್ತಕದಂಗಡಿ ಕಲ್ಲುಸಕ್ಕರೆಯ ಅಂಗಡಿಯಂತೆ ಕಂಡದ್ದು ಉತ್ಪ್ರೇಕ್ಷೆ ಅಲ್ಲ... ಅಂದಿನಿಂದ ನನಗೆ ಬಿಡುವಾದಾಗ ಅಥವಾ ಅನ್ನಿಸಿದಾಗೆಲ್ಲ ನಿಮ್ಮ ಅಂಗಡಿ ನಿಮ್ಮ ನೇರ ಸ್ಪಷ್ಟ ಮಾತು ಎದುರಿಗೆ ನಿಲ್ಲುತ್ತಿದ್ದವು. ನಿಮ್ಮ ಅಂಗಡಿ ಮಾರ್ಚ್ ಅಂತ್ಯಕ್ಕೆ ಸೇವೆಯನ್ನು ನಿಲ್ಲುಸುತ್ತಿದೆ ಎಂದು ವೃತ್ತಪತ್ರಿಕೆಯಲ್ಲಿ ಓದಿದವನಿಗೆ ಏನೋ ಕಳವಳ ಸಂಕಟ ಅಂದೇ ನಿಮ್ಮನ್ನು ಭೇಟಿಯಾಗಲು ಬಂದಿದ್ದೆ ನೀವು ಸಿಕ್ಕಿರಲಿಲ್ಲ. ನಿಮ್ಮ ಜೀವ ಚಿಲುಮೆ ನಿಜಕ್ಕೂ ಆದರ್ಶಮಯ ನಿಮ್ಮ ಮುಂದಿನ ದಿನಗಳು ಹೀಗೆ ನಾವಿನ್ಯವಾಗಿರಲೆಂದು ನನ್ನ ಆಶಯ ...:)
  ನಿಮ್ಮೊಂದಿಗೆ ಚಾರಣಕ್ಕೆ ಹೋಗಬೇಕು ಪ್ರಕೃತಿಯ ಸೊಬಗ ಸವಿಯಬೇಕೆಂಬುದು ನನ್ನ ಬಹುದಿನಗಳ ಬಯಕೆ ನೀವುಗಳು ಹೊರಡುವಾಗ ತಿಳಿಸಿ ಬಂದು ಸೇರುತ್ತೇನೆ!
  ಇಂತು ವಿಶ್ವಾಸಿ ,
  ಪದ್ಮಹಾಸ

  ReplyDelete
 63. ಮೋಹಿತ್20 February, 2012 13:06

  ನಿಮಗೆ ಸಲಹೆ ಸೂಚನೆ ಕೊಡುವಷ್ಟು ಅರ್ಹತೆ ನನಗಿಲ್ಲ. ನಿಮ್ಮ ಮುಂದಿನ ಕಾರ್ಯ ಸಾಧನೆಗಳಿಗೆ ನನ್ನಿಂದ ಸಾಧ್ಯವಾಗುವ ಎಲ್ಲಾ ರೀತಿಯ ಸಹಕಾರವನ್ನು ನೀಡುವ ಭರವಸೆಯನ್ನಷ್ಟೇ ನೀಡಬಲ್ಲೆ.

  ReplyDelete
 64. ಕರ್ನಾಟಕಕ್ಕೆ ಇದು ಕೆಟ್ಟ ಕಾಲ. ಒಳ್ಳೆಯ ಪತ್ರಿಕೆಗಳು, ನಿಯತಕಾಲಿಕಗಳು ಮುಚ್ಚುತ್ತಿವೆ. ಪುಸ್ತಕದ ಅಂಗಡಿಗಳು ಬಾಗಿಲು ಹಾಕುತ್ತಿವೆ.ಅಂದು ಬೆಂಗಳೂರಿನ ಪ್ರಿಮಿಯರ್ ಬುಕ್ ಹೌಸ್. ನಾಚಿಕೊಳ್ಳುವುದನ್ನು ಬಿಟ್ಟು ನಾವೇನು ಮಾಡಬಲ್ಲೆವು?
  ಶ್ರೀ ಅಶೋಕವರ್ಧನ ಅವರು ನಾನು ನೋಡಿರುವ ಅತ್ಯಂತ ತತ್ವನಿಷ್ಠ, ಪ್ರಾಮಾಣಿಕ ವ್ಯಕ್ತಿಗಳಲ್ಲಿ ಒಬ್ಬರು. ಪುಸ್ತಕವ್ಯಾಪಾರಿಯಾಗಿ ಮಾತ್ರವಲ್ಲ, ಮನುಷ್ಯರಾಗಿ ಕೂಡ. ಅನಿಸಿದ್ದನ್ನು ಹೇಳುವ ಅವರ ಧೈರ್ಯ ಅಪರೂಪದ್ದು. ಅವರ ವಿಷಾದ ಮತ್ತು ಕೋಪ ನಮ್ಮೆಲ್ಲರದೂ ಆಗಬೇಕು. ಆಗುವುದಿಲ್ಲ.
  ಅವರ ಮುಂದಿನ ಬಾಳು ಚಂದವಾಗುವುದೆಂದು ನನಗೆ ಗೊತ್ತು. ಖಾಲಿಯಾಗುವುದು ಅವರಲ್ಲ, ಮಂಗಳೂರು.
  - ‘ಅವಧಿ’ಯಲ್ಲಿ ಡಾ| ಎಚ್.ಎಸ್. ರಾಘವೇಂದ್ರ ರಾವ್

  ReplyDelete