08 November 2011

ಅರಳಿದ ಗರಿ ಮುರಿಯಿತು


(ಕರಾವಳಿಗೆ ಹೊಸ ಸಾಹಸ ಕ್ರೀಡೆ - ಭಾಗ ಎರಡು)

ಅಮೆರಿಕಾದ ಫ್ರಾನ್ಸಿಸ್ ಎಂ. ರೊಗೆಲ್ಲೋ ಎಂಬ ವೈಮಾನಿಕ ಸಂಶೋಧಕ ಹ್ಯಾಂಗ್ ಗ್ಲೈಡರ್ ಅರ್ಥಾತ್ ನೇತು ತೇಲುವ ರೆಕ್ಕೆಯ (೧೯೫೧) ಜನಕ. ಮಡಚಿದಾಗ ಒಬ್ಬನೂ ಹೊತ್ತೊಯ್ಯಬಹುದಾದಷ್ಟು ಹಗುರ, ಸರಳ ಈ ರೆಕ್ಕೆ. ಯಾವುದೇ ಮಾಲಿನ್ಯ (ಶಬ್ದ, ವಾಯು) ಉಂಟುಮಾಡದ, ನಿರ್ವಹಣಾ ವೆಚ್ಚ (ಪೆಟ್ರೊಲ್, ಬ್ಯಾಟರಿ) ಕೇಳದ, ಸುಸಂಬದ್ಧವಾಗಿ ನಿರ್ವಹಿಸಿದರೆ ಅರ್ಥಾತ್ ಆಕಾಶ ನಮ್ಮ ಮಾಧ್ಯಮವಲ್ಲ ಎಂಬ ಮಿತಿಯನ್ನು ಮರೆಯದೆ ವಿಹರಿಸಿದರೆ ಈ ‘ಹಾರಾಟ’ ನಿರಂತರ ಇಳಿಜಾರಿನ ದಾರಿಯಲ್ಲಿ (ಪೆಡಲ್ ಒತ್ತುವ ಶ್ರಮವೂ ಇಲ್ಲ!) ಸೈಕಲ್ ಸವಾರಿಯಷ್ಟೇ ಸರಳ. ನಮ್ಮ ವಲಯದಲ್ಲಿ ಪರಿಕರಗಳ ಮತ್ತು ಪರಿಣತಿಯ ವಿರಳತೆಯಿಂದಷ್ಟೇ ಇದು ದುಬಾರಿಯೆನಿಸಬಹುದು. ಇಲ್ಲವಾದರೆ ನಿಜಕ್ಕೂ ರೈಟ್ ಸೋದರರ ಕನಸು - ಸಾಮಾನ್ಯನಿಗೆ ಹಾರುವ ಸಾಧ್ಯತೆಯನ್ನು ಸಾಕಾರಗೊಳಿಸಿದ ಕ್ರೀಡೆ. ಇಲ್ಲೂ ದಾಖಲೆಯ ಬೆನ್ನು ಹತ್ತಿದವರು ತೇಲುತ್ತಲೇ ಇಪ್ಪತ್ನಾಲ್ಕು ಗಂಟೆಯ ಮಿತಿಯನ್ನು ಮೀರಿದ್ದು, ವಿಮಾನಗಳ ಹಾರಾಟದ ಔನ್ನತ್ಯವನ್ನು (ಇಪ್ಪತ್ತು ಸಾವಿರ ಅಡಿಗೂ ಮಿಕ್ಕು) ಸಾಧಿಸಿದ್ದು, ದುರ್ಗಮ ಸ್ಥಳ ಮತ್ತು ಪರಿಸ್ಥಿತಿಗಳಲ್ಲಿ ಅನಿವಾರ್ಯವಾಗಿ ಒದಗಿಬಂದದ್ದು ಇತ್ಯಾದಿ ಪಟ್ಟಿ ೧೯೮೦ರ ದಶಕಕ್ಕೇ ಬಲು ದೊಡ್ಡದಿತ್ತು. ಇನ್ನು ಈಗದರ ಕಥೆ ಜಾಲಾಡಲಿಳಿದರೆ ಅಕ್ಷರಶಃ ಪಾರಾವಾರ.


ನಾನು ಹಿಂದಿನ ಕಂತಿನಲ್ಲಿ ಹೇಳಿದಂತೆ ಭಾರತಕ್ಕೆ ಅಧಿಕೃತವಾಗಿ ವಿವೇಕ್ ಮುಂಡ್ಕೂರ್ ಇದನ್ನು ಪರಿಚಯಿಸಿದರೂ ಸ್ವತಂತ್ರವಾಗಿ ರೂಢಿಸಿದವರೂ ಇಲ್ಲದಿಲ್ಲ. ಮೈಸೂರಿನಲ್ಲಿ ಇನ್ನೋರ್ವ ಎನ್.ಸಿ.ಸಿ ಅಧಿಕಾರಿ ಚಂದ್ರನ್ ಎನ್ನುವವರು ಸಣ್ಣಪುಟ್ಟ ಹಾರಾಟ ನಡೆಸಿದ್ದು, ಪ್ರದರ್ಶನ ಕೊಟ್ಟದ್ದು ಧಾರಾಳ ಕೇಳಿದ್ದೇನೆ. ಊಟಿಯಲ್ಲಿ ಜೊಯೆಲ್ ಎಂಬೊಬ್ಬ ವಿದೇಶೀಯ ರಾಜಹಂಸ ಎಂಬ ಹೆಸರಿನಲ್ಲಿ ನೇತು ತೇಲಾಟದ ಸಲಕರಣೆಗಳನ್ನು ಮಾರುವುದರೊಡನೆ ಪರಿಣತ ತರಬೇತಿ ಶಾಲೆಯನ್ನೇ ನಡೆಸತೊಡಗಿದ್ದು (೧೯೮೦) ಸಣ್ಣ ಮಾತಲ್ಲ. ಇನ್ನು ಯಂತ್ರ ಚಾಲಿತ ನೇತು ತೇಲಾಟವನ್ನು ಮೈಸೂರಿನ ಓರ್ವ ರ‍್ಯಾಲೀ ಪಟು (ಹೆಸರು ಮರೆತಿದ್ದೇನೆ, ಅಪ್ಪಟ ಕನ್ನಡಿಗ --- ಸಿಂಗ್) ಹಗಲು ರಾತ್ರಿಯೆನ್ನುವಂತೆ ಮಾಡುತ್ತಾ ಆಸಕ್ತರಿಗೆಲ್ಲಾ ‘ಜಾಲಿ ರೈಡ್’ ಕೊಡುತ್ತಿದ್ದದ್ದು, ಬೆಂಗಳೂರಿನ ರಾಮನ್ ಇನ್‌ಸ್ಟಿಟ್ಯೂಟಿನ ಹಿರಿಯ ವಿಜ್ಞಾನಿ ಓರ್ವರು (ಪ್ರೊ| ರಾಧಾಕೃಷ್ಣನ್?) ಬೆಂಗಳೂರು - ಹೈದರಾಬಾದೋ ಮುಂಬೈಯೋ ಹೋಗಿ ಬರುತ್ತಿದ್ದದ್ದು ಎಲ್ಲಾ ಆ ಕಾಲಕ್ಕೇ ಹಳೇ ಕತೆಯಾಗಿಬಿಟ್ಟಿತ್ತು. ಅವನ್ನೆಲ್ಲ ಮರೆಸುವ ಛಲತೊಟ್ಟ ನಾವು, ವೀರ ಅಬ್ಬಕ್ಕಬ್ಬೆಯ ನಾಡಿನವರು ಮುಂದೇನ ಮಾಡಿದೆವು ಎಂದು ತಿಳಿಯಲು...

ಕರ್ನಲ್ ಸೈರಸ್ ದಲಾಲ್, ಎನ್ಸಿಸಿ ಗ್ರೂಪ್ ಕಮಾಂಡರ್, ಮಂಗಳೂರು - ನಮ್ಮ ಹಾರುಗುರು, ಸುಮ್ಮನೆ ಕೂರುವ ಜಾತಿಯಲ್ಲ. ಜಮಾಲಾಬಾದ್ ಪ್ರದರ್ಶನದ ಬೆನ್ನಿಗೇ ಬಂದ ಆದಿತ್ಯವಾರದಂದು, ನಮ್ಮನ್ನು ಬೆಂಜನಪದವಿಗೆ ಹೊರಡಿಸಿಯೇ ಬಿಟ್ಟರು. ಮಂಗಳೂರು-ಬಂಟ್ವಾಳ ದಾರಿಯಲ್ಲಿ ಫರಂಗಿಪೇಟೆ ಕಳೆದ ಮೇಲೆ ಎಡಕ್ಕೆ ಸಿಗುವ ಪೊಳಲಿ ಕವಲಿನಲ್ಲಿ ಮುಂದುವರಿದರೆ ಸ್ವಲ್ಪ ಏರು ಮತ್ತೆ ಜಲ್ಲಿ ಕಿತ್ತ ದಡಬಡ ದಾರಿಯಲ್ಲಿ ಸುಮಾರು ಒಂದೆರಡು ಕಿಮೀಯಲ್ಲಿ ಸಿಗುವ ಯಾರಿಗೂ ಬೇಡದ ಸ್ಥಳ, ಅಂದಿನ ಬೆಂಜನಪದವು. ಅಪರೂಪಕ್ಕೆ ಕೆಂದೂಳಿ ಎಬ್ಬಿಸುತ್ತಾ ನೀರುಮಾರ್ಗದತ್ತಣಿಂದ ಖಾಸಗಿ ಸರ್ವಿಸ್ ಬಸ್ ಬಂದು ಈ ದಾರಿ ಸೇರಿ ಪದವಿನ ಪೂರ್ವ ಕೊನೆಯಲ್ಲಿ ಡುರುಕಿ ಹೊಡೆಯುತ್ತಾ ನಿಂತರದು ಜೂನಿಯರ್ ಕಾಲೇಜು ಸ್ಟಾಪ್. ಅದುವೇ ಕೊಳ್ಳದ ಬಂಟ್ವಾಳ ಜೋಡುಮಾರ್ಗದಿಂದ ಏರಿಬರುವ ಮತ್ತಷ್ಟು ಬಸ್ಸುಗಳ ಸಂಗಮಸ್ಥಾನವೂ ಹೌದು. ದಾರಿ ಮುಂದುವರಿದು ಪೊಳಲಿಗಾಗಿ ಮೂಡಬಿದ್ರೆ ದಾರಿಯತ್ತ ಓಡುತ್ತದಾದರೂ ನಮ್ಮ ಆಸಕ್ತಿ ಜೂನಿಯರ್ ಕಾಲೇಜಿಗೂ ಮೊದಲೇ ಸಿಗುವ ಪುಟ್ಟ ದಿಬ್ಬಕ್ಕೇ ಮುಗಿದಿತ್ತು. [ಅಂದು, ತಲೆಹೊಟ್ಟಿ ಹೋಗುವ ಬಿಸಿಲಿಗೆ ಮುಳಿಹುಲ್ಲಲ್ಲಿ ಹುಡುಕಬೇಕಿತ್ತು ಪ್ರಾಕೃತಿಕ ನೆರಳು! ಬಾಯಾರಿಕೆ ಹಸಿವುಗಳಿಗೆ ಎಲ್ಲಿಂದಲೋ ಹೊತ್ತು ತಂದರುಂಟು ಬುತ್ತಿ, ಚೊಂಬು ನೀರು. ಅಲ್ಲಿ ಇಲ್ಲಿ ಚದುರಿದ ಹೊಂಡಗಳಲ್ಲಿ ಈಚಲ ಗರಿಯೋ ತಟ್ಟಿಯ ಮರೆಯೋ ನೆಚ್ಚಿಕೊಂಡ ಕೌಪೀನಧಾರಿಗಳು “ಚಕ ಚಕ” ಎಂದು ಮುರಕಲ್ಲು ಕೆತ್ತುವುದು ಒಂದೇ ಈ ವಲಯದ ಮನುಷ್ಯ ಚಟುವಟಿಕೆ. ಅದೇ ಇಂದು, ಎರಡೆರಡು ಇಂಜಿನಿಯರಿಂಗ್ ಕಾಲೇಜೂ ತತ್ಸಂಬಂಧೀ ಇನ್ನೇನೇನೇನೋ ಬಂದು, ಕೌಪೀನಗಳು ಕಂಠಕ್ಕೇರಿ, ಓಡಾಡುವ ವಾಹನಗಳನ್ನು ನೋಡಿದರೆ ಯಾರೂ ಹೇಳಿಯಾರು ಇದು BENZನಪದವು!]

ಪಶ್ಚಿಮ-ಪೂರ್ವವಾಗಿ ಓಡುವ ದಾರಿಯ ದಕ್ಷಿಣ ಬದಿ, ಅಂದರೆ ಬಲಬದಿ, ಯಾರದೋ ಖಾಸಗಿನೆಲ, ನಮ್ಮ ಹಾರುಭೂಮಿ. ತಪ್ಪಿ ಬಂದಂತೆ ಒಂದೆರಡು ಕುರುಚಲು ಗಿಡ, ತೆಳು ಮುಳಿಹುಲ್ಲ ಲೇಪ ಬಿಟ್ಟರೆ ಅಪ್ಪಟ ಮುರಕಲ್ಲ ನೆಲ; ಸೂರೆ ಹೋಗುವಂಥದ್ದು ಇನ್ನೇನೂ ಇರಲಿಲ್ಲ. ಆದರೂ ಜಾಗದ ಅಜ್ಞಾತ ಯಜಮಾನ, ಸ್ವಾಭಾವಿಕವಾಗಿ ಚದುರಿಬಿದ್ದ ಲಭ್ಯ ಕಾಡು ಕಲ್ಲುಗುಂಡುಗಳನ್ನೇ ಹೆಕ್ಕಿ (ಪುಣ್ಯಾತ್ಮ, ನಮ್ಮ ಅನುಕೂಲಕ್ಕೆ ನೆಲ ತೆರವುಗೊಳಿಸಿದ್ದಿರಬಹುದೇ?), ದಾರಿಬದಿಗೆ ಮೂರಡಿ ಎತ್ತರದ ಮೋಟು ಪೌಳಿ ಕಟ್ಟಿದ್ದ! ರೆಕ್ಕೆ ಕಟ್ಟನ್ನು ನನ್ನ ಯೆಜ್ದಿ ಬೈಕಿನ ಕ್ರ್ಯಾಶ್ ಗಾರ್ಡಿನ ಹೊರ ಅಂಚು ಹಾಗೂ ಹಿಂದಿನ ದೊಡ್ಡ ಡಬ್ಬೆಯ ಮೇಲೆ ಬರುವಂತೆ ಭದ್ರವಾಗಿ ಕಟ್ಟಿ ಸಾಗಿಸುತ್ತಿದ್ದೆವು. (ಮುಂದುವರಿದ ಕಾಲದಲ್ಲಿ ನೆವಿಲ್ ರೆಕ್ಕೆ ಸಾಗಿಸಲು, ಬೈಕ್ ಎಳೆದೊಯ್ಯುವಂತ ದ್ವಿಚಕ್ರಿ ಗಾಡಿಯೊಂದನ್ನೇ ರೂಪಿಸಿದ್ದ, ಚಿತ್ರ ನೋಡಿ) ಬೈಕಿನ ಹಿಂದೂ ಮುಂದೂ ಸುಮಾರು ಹತ್ತತ್ತಡಿ ಚಾಚಿಕೊಳ್ಳುತ್ತಿದ್ದ ಆ ಕಟ್ಟನ್ನು ಸಾಗಿಸುತ್ತಿದ್ದ ಕಥೆಗಳನ್ನು ಹೇಳಹೊರಟರೆ ಅದೇ ಒಂದು ಪುರಾಣವಾದೀತು, ಬಿಡಿ. ಗೋಡೆ ಹಾರಿ, ಕಟ್ಟನ್ನು ಒಳಹೊತ್ತು, ಅರಳಿಸುತ್ತಿದ್ದೆವು. ಮೂರೋ ನಾಲ್ಕೋ ಆದಿತ್ಯವಾರಗಳಂದು ನಮ್ಮ ಕಸರತ್ತು ನಡೆದಿರಬೇಕು. ಆ ದಿನಗಳಲ್ಲಿ ದಲಾಲ್ (ನೆನಪಿರಲಿ, ಐವತ್ತರ ಮೇಲಿನ ಪ್ರಾಯದವರು) ನಮ್ಮದೇ ಇನ್ನೊಂದು ಉಡಾಳ ಗೆಳೆಯನಂತೇ ಭಾಗವಹಿಸುತ್ತಿದ್ದರು. ಅದರಲ್ಲೂ ಒಂದು ದಿನ ಯುಗಾದಿ ಬಂದಿತ್ತು. “ಹ್ಯಾಪೀ ಉಗ್ಡೀ” ಎಂದು ಅವರು ನಮ್ಮ ಒಬ್ಬೊಬ್ಬರಿಗೂ ಕೊಟ್ಟ ಬಿಸುಪಿನ ಶುಭಾಶಯ ನನ್ನ ನೆನಪಿನಲ್ಲಿ ಇನ್ನೂ ಆರದುಳಿದಿದೆ. ಅವರು ಸೂರ್ಯನ ಕುಲುಮೆಯಲ್ಲಿ ಕೆಂಪಗೆ ಕುದಿಯುತ್ತಾ ಧಾರಾಕಾರ ಬೆವರೊರೆಸುತ್ತಾ ನೀರು ಕುಡಿಯುತ್ತಾ ಕಲ್ಲುಮುಳ್ಳಿನ ತರಚು ಗಾಯಗಳ ಲೆಕ್ಕ ಮರೆಯುತ್ತಾ ನಮಗೆ ಅವಿರತ ಕೊಟ್ಟ ಸೂಚನೆ, ಆದೇಶ, ಶಭಾಸ್ಗಿರಿ ನೆನೆಸುವಾಗ ಇಂದಿಗೂ ಮನಸ್ಸು ಕೃತಜ್ಞತೆಯಿಂದ ಭಾರವಾಗುತ್ತದೆ.

ರೆಕ್ಕೆಯ ರೂಪ, ತಾಂತ್ರಿಕ ರಚನೆಯ ವಿವರಗಳು ಇಂದು ಇನ್ನಷ್ಟು ಪರಿಷ್ಕಾರವಾಗಿ ಅಂತರ್ಜಾಲದಲ್ಲಿ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಧಾರಾಳ ಇರುವುದರಿಂದ ನಾನು ಕಥನವನ್ನು ಆ ದಿಕ್ಕಿನಲ್ಲಿ ವಿಸ್ತರಿಸುವುದಿಲ್ಲ. ದಿಬ್ಬದ ಕೊಡಿಯಿಂದ ಸುಮಾರು ಎಂಟು-ಹತ್ತಡಿ ಅಡಿ ಕೆಳಗೆ ‘ಹಾರುವಯ್ಯ’ ಸಜ್ಜುಗೊಳ್ಳುತ್ತಿದ್ದ. ದಿಬ್ಬದ ಮೇಲಕ್ಕೇರಿ ಬರುತ್ತಿದ್ದ ಬೀಸುಗಾಳಿಯ ವೇಗ ಅನುಕೂಲವೆಂದು ಕಂಡಾಗ, ಸರಿ ವಿರುದ್ಧ ದಿಕ್ಕಿಗೆ ರೆಕ್ಕೆಯ ಮೂಗನ್ನು ತುಸುವೇ ಎತ್ತಿ ಒಡ್ಡಿ, (ದಲಾಲ್ ಆದೇಶ:) “ಓಡಿ ಓಡೀ!” ರೆಕ್ಕೆಯ ಪಕ್ಕೆ ತುಂಬಿಕೊಳ್ಳುತ್ತಿದ್ದಂತೆ (ನಿಯಂತ್ರಕ ದಂಡವನ್ನು) “ನೂಕಿ ನೂಕೀ.” ಆಹಾ ಮೇಲೇರಿದೆ ಎಂದು ಮೈಮರೆಯುವ ಹಾಗಿಲ್ಲ. ಗಾಳಿಯ ಬಲ ಸೋತರೆ (ದಂಡವನ್ನು) “ಎಳಿ ಎಳೀ”, ಓರೆಯಾದರೆ “ಎಡ ಎಡಾ” (ಅಥವಾ “ಬಲ ಬಲಾ”). ಗಾಳಿ ಸ್ತಬ್ದವೇ ಆಗಿಬಿಟ್ಟರೆ, ಮಾತೃಭೂಮಿ ಬರಸೆಳೆದು ಅಪ್ಪಿಕೊಳ್ಳಲು ಧಾವಿಸುತ್ತಿರುತ್ತದೆ “ಓಡು ಓಡೂ.” ಎಲ್ಲ ಕ್ಷಣಾರ್ಧಗಳ ಮಿಂಚು ಕಾರ್ಯಾಚರಣೆಗಳು. ಓಡುವಲ್ಲಿ ಕಾಲು ತೊಡರುವುದು, ಮುನ್ನೂಕಿದ್ದು ಹೆಚ್ಚಾಗಿ ಕುಸಿಯುವುದು (stall), ರೆಕ್ಕೆಯ ಮೂಗೋ ಪಕ್ಕೆಯೋ ನೆಲ ಉಜ್ಜುವುದು, ಇಳಿಯೋಟದಲ್ಲಿ ಹಿಡಿತ ಸಿಗದೇ ಕಾಲುಳುಕು, ಕೈ ತರಚು, ಬಟ್ಟೆ ಹರಕು ಲೆಕ್ಕ ಇಟ್ಟವರಿಲ್ಲ.

ಅರುಣ್ ನಾಯಕ್ ಒಮ್ಮೆ ಅರ್ಧ ಹಲ್ಲನ್ನೇ ಕಳೆದುಕೊಳ್ಳಬೇಕಾಯ್ತು! ಇನ್ನೊಮ್ಮೆ ಶರತ್ ಗಾಳಿಗೇರಿದ ಸಂಭ್ರಮದಲ್ಲಿ ದಾರಿಯಂಚಿನ ವಿದ್ಯುತ್ ಸರಿಗೆ ಮರೆತಾಗ ನಾವೆಲ್ಲಾ ಆತನ ಪರವಾಗಿ “ಹಾ ಲಕ್ಷ್ಮಣಾ” ಹೇಳಿ ಆಗಿತ್ತು. ಅವನ ದುರದೃಷ್ಟಕ್ಕೆ, ಚಿತ್ರಗುಪ್ತ ಮುಂದಿನ ಜನ್ಮದ ಟಿಕೆಟ್ ನಿರಾಕರಿಸಿಬಿಟ್ಟ; ತಂತಿಯ ಸಂಪರ್ಕವಾಗಲಿಲ್ಲ! (ಇಂದಾದರೆ ಸವಿತಾಳ ತಾಳಿ ಭಾಗ್ಯ ಎನ್ನಬಹುದಿತ್ತು. ಆದರೆ ಆಗ ಶರತ್ ಇನ್ನೂ Eligible Bachelor!) ಶಿವರಾಂ ಪಾದ ಉಳುಕಿಸಿಕೊಂಡು, ಬಹುಕಾಲ ದೂರವೇ ಉಳಿಯಬೇಕಾಯ್ತು. ಹಾರಾಟ ಎತ್ತರಕ್ಕೇರಿದರೆ ವಿದ್ಯುತ್ ತಂತಿ, ಉದ್ದಕ್ಕೆ ಹೋದರೆ ಮೋಟು ಗೋಡೆ. ದಾರಿಯಾಚಿನ ಬದಿ ಮತ್ತೆ ದಿಬ್ಬವೇ ಇದ್ದುದರಿಂದ ಗಾಳಿಯ ಚಲನೆ ಏಕಮುಖದಲ್ಲಿ ಸ್ಥಿರವಾಗುಳಿಯುತ್ತಿರಲಿಲ್ಲ. ‘ಕುಣಿಯಲು ಬಾರದವ ಅಂಗಳ ದೂರಿದ’ ಗಾದೆ ನೆನಪಿಸಿಕೊಳ್ಳಬೇಡಿ! ವಾಸ್ತವದಲ್ಲಿ ನಮ್ಮ ಬೆಂಜನಪದವು ಹಾರುದಾಣವೇ ಸರಿಯಾದ ಆಯ್ಕೆಯಾಗಿರಲಿಲ್ಲ. ಅಂಥದ್ದರಲ್ಲೂ ಅರುಣ್ ನಾಯಕ್, ಶರತ್ ಮೊದಲ ಎರಡು ಭರವಸೆಯ ಹಾರಾಟಗಾರರು ಎನಿಸಿಕೊಂಡರೆ, ಮೂರನೆಯವನಾಗಿ ನಾನೂ ಇದ್ದೆ.

ನಮ್ಮ ಸರ್ಕಸ್ ನೋಡುವುದಕ್ಕೆ (ನನ್ನ ಹೆಂಡತಿ) ದೇವಕಿ, (ನನ್ನ ಮಗ ಇನ್ನೂ ಮೂರು-ನಾಲ್ಕರ ಪೋರ) ಅಭಯ ಬರುತ್ತಿದ್ದರು. ದೇವಕಿ ಎಲ್ಲರ ಒತ್ತಾಯಕ್ಕೆ ಒಂದೆರಡು ಬಾರಿ ರೆಕ್ಕೆಗೆ ಬಂಧಿಯಾಗಿ ಅರೆಮನಸ್ಸಿನ ಪ್ರಯತ್ನ ನಡೆಸಿದ್ದೂ ಇತ್ತು. ಅಭಯ ವಾಪಾಸು ಮನೆಗೆ ಬಂದ ಮೇಲೆ ಲಹರಿ ಬಂದಾಗೆಲ್ಲಾ ಕೈಗೆ ಸಿಕ್ಕ ಕೋಲೋ ಕೊರಡೋ ಹಿಡಿದು, “ಓಡಿ ಓಡೀ, ಹಾರಿ ಹಾರೀ” ಹೇಳಿಕೊಂಡು ದೊಪ್ಪನೆ ನೆಲಕ್ಕುರುಳುತ್ತಿದ್ದದ್ದು ನಮ್ಮ ಸಾಧನೆಯ ನಿಜ ಅಭಿವ್ಯಕ್ತಿಯಾಗಿತ್ತು! ಸಾಲಿಗ್ರಾಮದ ಗೆಳೆಯ ವೆಂಕಟ್ರಮಣ ಉಪಾಧ್ಯರು ಒಂದೋ ಎರಡೋ ಬಾರಿ ಬಂದು, ಕೇವಲ ನೋಡಿ ಹೋದರು. ರೆಕ್ಕೆಗೆ ಸಾವಿರಾರು ರೂಪಾಯಿ, ಪ್ರತಿ ಅಭ್ಯಾಸಕ್ಕೆ ಮಂಗಳೂರಿನಾಚಿನ ದೂರಕ್ಕೆ ಬಂದು ಹೋಗುವುದು ‘ಆಪುದಲ್ಲ ಹೋಪುದಲ್ಲ’ ಎಂದುಕೊಂಡು ಮನಸ್ಸಲ್ಲೇ ಬೇರೇ ಲೆಕ್ಕ ಹಾಕಿದರು. ಅವರಂಗಡಿಗೆ ಪ್ಯಾಕಿಂಗಿನಲ್ಲಿ ಬರುತ್ತಿದ್ದ ವೈವಿಧ್ಯಮಯ ಗಟ್ಟಿ ಪ್ಲ್ಯಾಸ್ಟಿಕ್ ಹಾಳೆಗಳಲ್ಲಿ (ಎಚ್.ಡಿ.ಪಿ.ಇ) ಒಳ್ಳೆಯವನ್ನು ಆಯ್ದು, ಗಟ್ಟಿ ಬಿದಿರು ದೆಬ್ಬೆಗೆ ಹೊಂದಿಸಿ ಖಾಸಗಿ ರೆಕ್ಕೆ ಮಾಡಿಯೇ ಬಿಟ್ಟರು. ಇನ್ನು ಹಾರುನೆಲ ಅರಸಿಕೊಂಡು ಆಸುಪಾಸಿನ ಒಂದೊಂದೇ ದಿಬ್ಬ ನೆನಪಿಸಿಕೊಂಡು ಕುದುರೆ (ಮೊಪೆಡ್) ಏರಿಯೇ ಬಿಟ್ಟರು. ‘ಇಲ್ ತಂತಿ ಬತ್ತ್, ಅಲ್ ಸೊಸಿ ಇತ್ತ್’ ಎಂದಿತ್ತಿಂದತ್ತಾ ಹೆದ್ದಾರಿ ಹೊಕ್ಕು ಬಳಸುವುದರಲ್ಲಿ ರಸ್ತೆ ಅಪಘಾತಕ್ಕೆ ಸಿಕ್ಕಿ ದಿನಗಟ್ಟಳೆ ಆಸ್ಪತ್ರೆಯಲ್ಲಿ ಮಲಗಿ, ತಿಂಗಳಾನುಗಟ್ಟಳೆ ನೋವು ತಿನ್ನುವಂತಾದದ್ದು ನಿಜಕ್ಕೂ ವಿಷಾದನೀಯ. [‘ರಂಗನಾಥ ಸ್ತಂಭ’ ಏರುವಾಗ ಅದೇ ಕಾಲು ಅವರಿಗೆ ಕೈಕೊಟ್ಟಿತ್ತು.]

ನಮ್ಮ ತರಬೇತಿಯ ದಿನಗಳು ಮೂರೋ ನಾಲ್ಕರಲ್ಲೋ ಅನಿರೀಕ್ಷಿತ ಮುಕ್ತಾಯ ಕಂಡಿತ್ತು. ಎನ್.ಸಿ.ಸಿ ದಲಾಲರ ಹಾರು-ಶಕ್ತಿಯನ್ನು ಅಖಿಲ ಭಾರತ ಮಟ್ಟದಲ್ಲಿ ಬಳಸಿಕೊಳ್ಳುವ ಮನಸ್ಸು ಮಾಡಿತು. ಅನಿವಾರ್ಯವಾಗಿ ದಲಾಲ್ ಅವರ ರೆಕ್ಕೆ ಹಿಡಿದುಕೊಂಡು ಹೋದರು. ಇತ್ತ ನಮ್ಮ ಸ್ವಂತದ ರೆಕ್ಕೆಗೆಂದು ಮುಂಗಡ ಪಡೆದು ಹೋದ ಮಧುರಾಯ್ಕರ್ ಒಳ್ಳೆ ಕತೆಗಾರನಾಗಿ ಕಾಡತೊಡಗಿದ! ನಮ್ಮ ಅನ್ಯ ಓಡಾಟಗಳಲ್ಲಿ ಕಂಡ ಪ್ರಾಕೃತಿಕ ಇಳಿಜಾರುಗಳನ್ನೆಲ್ಲಾ ಹಾರೋ ನೆಲಕ್ಕೆ ಸಮೀಕರಿಸಿ ನೋಡುವುದು, ಮೆಟ್ಟಿದ ಪರ್ವತಾಗ್ರಗಳಲ್ಲೆಲ್ಲಾ ದುರ್ಗಮ ದಿಕ್ಕಿನಲ್ಲಿ ಹಾರಿ ಕಣಿವೆ ಸುತ್ತಿದಂತೆ ಕನಸುವುದಷ್ಟೇ ನಮಗುಳಿಯಿತು! ಆಗ ಬೆಂಗಳೂರಿನಿಂದ ಬಂತು ಪ್ರಿಯ ದಲಾಲರ ಕರೆ. “ಎನ್.ಸಿ.ಸಿಯಿಂದ ಆಯ್ದ ತರುಣ ಅಧಿಕಾರಿಗಳಿಗೆ (ಎಂಟೋ ಹತ್ತೋ ದಿನದ) ಎರಡು ಶಿಬಿರ ಪೂರ್ತಿ ಮಾಡಿಸಿದ್ದೇನೆ. ಪ್ರಗತಿ ವೀಕ್ಷಿಸಲು ನಾಡಿದ್ದು ದೇಶದ ಎನ್.ಸಿ.ಸಿ-ವರಿಷ್ಠ ಬರುತ್ತಿದ್ದಾರೆ. ಪ್ರದರ್ಶನದ ಯಶಸ್ಸಿಗೆ ನಿಮ್ಮ ಸಾಹಚರ್ಯವೂ ಇದ್ದರೆ ಸಂತೋಷ.” ನಮ್ಮ ಬಹುತೇಕ ವೃತ್ತಿಪರರಂತೆ ದಲಾಲರ ಅಧಿಕೃತ ಶಿಷ್ಯರು ‘ಭಾಗವಹಿಸಿದ ಪ್ರಮಾಣ ಪತ್ರಕ್ಕಷ್ಟೇ’ ದುಡಿದಿದ್ದರು. ಅವರನ್ನು ನಂಬಿದರೆ ಪ್ರದರ್ಶನ ಠುಸ್ ಎಂದು ದಲಾಲ್ ಸ್ಪಷ್ಟ ಬಾಯಿಬಿಟ್ಟು ಹೇಳಿದ್ದರು. ಅರುಣ್, ಶರತ್ ರೈಟ್ ಎಂದರು. ನಾನೂ ದಿನಗಳನ್ನು ಹೇಗೋ ಹೊಂದಿಸಿಕೊಂಡು ಹೋಗಿಯೇ ಬಿಟ್ಟೆ. ಆ ಸಮಯಕ್ಕೆ (ನನ್ನ ತಮ್ಮ) ಆನಂದ ವರ್ಧನ ಬೆಂಗಳೂರಿನಲ್ಲಿದ್ದ. ಅವನ ಮನೆಗೆ ನುಗ್ಗಿದ ಶಾಸ್ತ್ರ ಮಾಡಿ, ದಲಾಲರು ಸೂಚಿಸಿದ ಸ್ಥಳದಲ್ಲಿ ಇತರ ಮಿತ್ರರನ್ನು ಸೇರಿಕೊಂಡೆ.

ಬೆಂಗಳೂರಿನ ಹೊರವಲಯದಲ್ಲಿರುವ ಬನ್ನೇರು ಘಟ್ಟದ, ಸುಮಾರು ಇನ್ನೂರು-ಮುನ್ನೂರಡಿ ಎತ್ತರದ ಬಂಡೆಯ ಕಡಿದಾದ ಅಂಚಿನಿಂದ ಆ ಸಂಜೆ ಹಾರಿ, ಕೆಲವು ಮಿನಿಟುಗಳ ತೇಲಾಟ ಪ್ರದರ್ಶಿಸಿ, ಕೆಳಗಿನ ವಿಸ್ತಾರ ಹೊಲದಲ್ಲಿ ಇಳಿಯುವುದು ಅಧಿಕೃತ ಕಾರ್ಯಕ್ರಮ. ಉನ್ನತ ಅಧಿಕಾರಿ ಆ ಹೊಲಗಳಾಚಿನ ಡಾಮರು ದಾರಿಯಲ್ಲಿ ನಿಂತು, ಪ್ರದರ್ಶನ ನೋಡುವುದೆಂದೂ ನಿರ್ಧಾರವಾಗಿತ್ತು. ಎರಡು ಪೂರ್ಣಾವಧಿ ಶಿಬಿರ (ಸುಮಾರು ಇಪ್ಪತ್ತು ದಿನ) ದಾಟಿ ಬಂದ ಹತ್ತೆಂಟು ತರುಣ ಅಧಿಕಾರಿಗಳು ಹಾರುವುದಿರಲಿ, ಸರಿಯಾಗಿ ದಿಬ್ಬದಂಚಿನಲ್ಲಿ ನಿಲ್ಲುವ ಛಾತಿಯೂ ಗಳಿಸಿರಲಿಲ್ಲ. ನಾವು ಪಳಗಿದ ಪರ್ವತಾರೋಹಿಗಳೇ ಆದ್ದರಿಂದ ಬನ್ನೇರು ಘಟ್ಟದ ಬಂಡೆಯಂಚು ನಮಗೆ ಲೆಕ್ಕಕ್ಕೇ ಇರಲಿಲ್ಲ. ಮತ್ತೆ ಅದಮ್ಯ ಬಯಕೆ, ಛಲಗಳ ಹೊರೆ ಹೊತ್ತಿದ್ದುದರಿಂದ, ದಲಾಲ್ ನರಕದಂಚಿನಲ್ಲಿ ರೆಕ್ಕೆ ಕಟ್ಟಿ “ಹಾರು” ಎಂದರೆ ಎರಡನೇ ಯೋಚನೆ ಮಾಡದವರು! ವಾಸ್ತವದಲ್ಲಿ ವರಿಷ್ಠನೆದುರು ಎನ್.ಸಿ.ಸಿ ಅಧಿಕಾರಿಗಳ ಮುಸುಕಿನಲ್ಲಿ ನಮ್ಮನ್ನು ಹಾರಿಸಿ ಒಟ್ಟಾರೆ ಶಿಬಿರದ ಯಶಸ್ಸು ಸಾರುವುದು ದಲಾಲರ ತಂತ್ರವಾಗಿತ್ತು. (ನೇತು ತೇಲಾಟ ಇನ್ನಷ್ಟು ವ್ಯಾಪಕವಾಗಿ ಎನ್.ಸಿ.ಸಿ ಮೂಲಕ ದೇಶದ ಯುವಜನತೆಗೆ ಮುಟ್ಟಿಸಬೇಕೆಂಬ ಮಹದಾಸೆ ಮಾತ್ರ ದಲಾಲರದು. ಹಣಕಾಸಿನ ದುರುದ್ದೇಶಗಳೇನೂ ಇರಲಿಲ್ಲ.) ಪ್ರದರ್ಶನಕ್ಕೆ ಮುನ್ನ ಒಟ್ಟು ತಂಡದ ಕಲಿಕೆಗೆ ಇನ್ನಷ್ಟು ಹೊಳಪು ಕೊಡಲು ದಲಾಲ್ ಪ್ರತ್ಯೇಕ ವ್ಯವಸ್ಥೆ ಮಾಡಿದ್ದರು.

ಬೆಂಗಳೂರಿನ ಇನ್ಯಾವುದೋ ಮೂಲೆಯಲ್ಲಿದ್ದ ಗ್ರಾಂಡ್ ವಿಲ್ ನಾರ್ಟನ್ ಎಂಬ ಯಾವುದೋ ಉದ್ದಿಮೆಯ ಹಿತ್ತಲಿನ ಹಾಳುಬಿದ್ದ ದಿಬ್ಬ ನಮ್ಮ ತರಬೇತಂಗಳ. ಆ ಭಾರೀ ಮಣ್ಣಿನ ಗುಪ್ಪೆಯಲ್ಲಿ ಚದುರಿದಂತೆ ಪೊದರಿದ್ದರೂ ಸಾಕಷ್ಟು ತೆರವಿನ ಇಳಿಜಾರೂ ಅನುಕೂಲದ ಗಾಳಿಯೂ ಇತ್ತು. ಅದು ಬೆಂಜನಪದವಿಗಿಂತ ತುಂಬಾ ಸ್ನೇಹಮಯಿಯಾಗಿ ಒದಗಿ, ನಾವು ಮೂವರಂತೂ “ಇನ್ನು ಎಲ್ಲಿಗೂ ಸೈ” ಎಂದು ಬಿಟ್ಟೆವು. ಅಪರಾಹ್ನ ಬನ್ನೇರು ಘಟ್ಟ. ಮೇಲೂ ಕೆಳಗೂ ಸಾಕಷ್ಟು ಜನ ಸೇರಿದ್ದರು. ಆನಂದ ಸಪತ್ನೀಕನಾಗಿ (ಜಯಶ್ರೀ) ‘ಅಣ್ಣನ ಸಾಹಸ’ ನೋಡಲು ಬಂದಿದ್ದ. ಆದರೆ ಎಂದೂ ಒಳ್ಳೇ ಗಾಳಿಗೆ ಹೆಸರಾದ ಸ್ಥಳ ಅಂದು ಚಪ್ಪೆಯಾಗಿತ್ತು. ಸಾಲದ್ದಕ್ಕೆ ಎನ್.ಸಿ.ಸಿ ವರಿಷ್ಠ ಇನ್ನೇನೋ ಕಾರ್ಯ ಒತ್ತಡದಲ್ಲಿ ಪ್ರದರ್ಶನಕ್ಕೆ ಬರುವುದಿಲ್ಲವೆಂದೂ ತಿಳಿಯಿತು. ಆದರೂ ದಲಾಲಾರಿಗೆ ತನ್ನ ಗುರುತ್ವದ ಪರೀಕ್ಷೆ ನಡೆದೇ ಬಿಡಬೇಕೆಂಬ ಆಸೆ ಹಿಂಗಲಿಲ್ಲ. ತರುಣ ಅಧಿಕಾರಿಗಳು ಹಿಂದೆ ನಿಂತರು. ಅರುಣ್ ನಾಯಕ್ ನಿರ್ಯೋಚನೆಯಿಂದ ಪ್ರಥಮ ಉಡ್ಡಯನ ನಡೆಸಿಯೇ ಬಿಟ್ಟರು. ಚೆನ್ನಾಗಿಯೇ ಪೂರೈಸಿದರು. ಎರಡನೇ ಸ್ಥಾನದಲ್ಲಿ ಎಲ್ಲರ ಒತ್ತಾಯಕ್ಕೆ ಕಟ್ಟುಬಿದ್ದು ಒಬ್ಬ ಅಧಿಕಾರಿ ಬಲಿಪಶುವಿನಂತೇ ಬಂದು ನಿಂತು ರೆಕ್ಕೆ ಕಟ್ಟಿಸಿಕೊಂಡ. ಜೂಜಿನ ಕೋಳಿಜಗಳದಲ್ಲಿ ಹುಂಜಕ್ಕೆ ಮಾಡುವ ಉಪಚಾರಗಳನ್ನು ಎಲ್ಲರೂ ಈತನಿಗೆ ಮಾಡಿದೆವು. ದಲಾಲ್ ಪಾಠವನ್ನು ಪುನರ್ಮನನ ಮಾಡಿಸುತ್ತಾ “ಧುಮುಕುವಿಕೆಯಲ್ಲಿ ರೆಕ್ಕೆಯ ಮೂಗು ಕೆಳಗೆ. ವೇಗೋತ್ಕರ್ಷವಾದಂತೆ ತುಸು ಏರುಕೋನ. ಮತ್ತೆ ಸನ್ನಿವೇಶಕ್ಕೆ ತಕ್ಕಂತೆ ಏರು - ಇಳಿಕೋನಗಳ ಬದಲಾವಣೆಯಲ್ಲಿ ಸಾಗು. ಕೆಳಗಿನ ನೆಲ ಸಮೀಪಿಸಿದಂತೆ ರೆಕ್ಕೆಯನ್ನು ಪೂರ್ಣ ಮುಂದೂಡಿ, ಓಡುತ್ತಾ ನಿಲ್ಲಲು ಸಜ್ಜಾಗಬೇಕು.” ಪುಣ್ಯಾತ್ಮ ಮೋಡಿಗೊಳಗಾದವನಂತೆ ಹೂಂ ಹೂಂ ಎಂದ. “ಓಡು” ಆದೇಶದೊಡನೆ ಕೊಳ್ಳಕ್ಕೆನೋ ಹಾರಿಕೊಂಡ. ಆದರೆ ಇಳಿಮೂಗು ಎತ್ತಲಿಲ್ಲ. ಹಿಂದೆ ನಿಂತ ನಮ್ಮೆಲ್ಲರ ಬೊಬ್ಬೆ ವ್ಯರ್ಥವಾಯ್ತು. ಗಾಳಿಗೂ ಇವನಲ್ಲಿ ಆಸಕ್ತಿಯಿರಲಿಲ್ಲ! ರೆಕ್ಕೆ ಭಾರೀ ಉದುರೆಲೆಯ ಸಹಜತೆಯಲ್ಲಿ ಸ್ವಲ್ಪ ದೂರಕ್ಕೆ ತೊನೆಯುತ್ತಾ ತೇಲಿ ಮೆಲ್ಲನೆ ಬಂಡೆಯತ್ತ ಹೊರಳಿಕೊಂಡಿತು. ದಲಾಲ್ ಅವರ ಎಲ್ಲಾ ಮಿಲಿಟರಿ ಬೈಗುಳ ಖಾಲೀ ಮಾಡಿದರೂ ತರುಣ ಸ್ಪಂದಿಸಲೇ ಇಲ್ಲ. ಆದರೂ ಅದೃಷ್ಟಕ್ಕೆ ರೆಕ್ಕೆ ಸುಮಾರು ನೂರಡಿ ಕೆಳಗೆ ಮೆಲ್ಲಗೆ ಬಂದು ಬಂಡೆಯನ್ನು ಹಗುರಕ್ಕೆ ಒರಸುತ್ತಾ ಪ್ಯಾರಾಚೂಟಿನ ಪರಿಣಾಮದಲ್ಲಿ ಕೆಳಗಿಳಿದು ಬಿತ್ತು. ರೆಕ್ಕೆಯ ಅಂಚು ಮಾತ್ರ ಸ್ವಲ್ಪ ಹಾಳಾಯ್ತು. ಗರಬಡಿದವನಂತಿದ್ದ ಹಾರುವಯ್ಯ ರೆಕ್ಕೆಯ ಕೇಂದ್ರದಲ್ಲೇ ಇದ್ದುದರಿಂದ ತರಚು ಗಾಯಗಳೂ ಇಲ್ಲದೆ ಪಾರಾಗಿದ್ದ. [ಈ ವ್ಯಕ್ತಿ ಕನ್ನಡಿಗನೇ. ಕೆಲವು ವರ್ಷಗಳ ಮೇಲೆ ಸುದ್ದಿ ಸಂಗಾತಿ ಎಂಬ ಪತ್ರಿಕೆಯಲ್ಲಿ, ಲೇಖನದ ಮುಸುಕಿನಲ್ಲಿ ಈತನ ‘ಪ್ರಚಾರ ಪತ್ರ’ ಪ್ರಕಟವಾಯ್ತು. ಅದರಲ್ಲಿ ಈತ ಯಶಸ್ವೀ ಹದಿನೈದು ಸೆಕೆಂಡ್ ಹಾರಾಟ ನಡೆಸಿದಂತೆಯೂ ಹಾಜರಿದ್ದ ಎನ್.ಸಿ.ಸಿ ವರಿಷ್ಠ ಈತನನ್ನು ಗೌರವಿಸಿದಂತೆಯೂ ಕಾಣಿಸಿದ್ದು ತಮಾಷೆಯಾಗಿತ್ತು.]

ಮುಸ್ಸಂಜೆ ಸಮೀಪಿಸಿತ್ತು, ಗಾಳಿ ಹೆಚ್ಚು ಕಡಿಮೆ ಸತ್ತಂತ್ತಿತ್ತು. ಮತ್ಯಾವ ಅಧಿಕಾರಿಯೂ ಹಾರಾಟಕ್ಕೆ ಮುಂದಾಗಲಿಲ್ಲ. ಗೆಳೆಯ ಶರತ್ ಒಂದು ಕೈ ನೋಡಿಯೇಬಿಡುತ್ತೇನೆಂದು ಕಟ್ಟಿಕೊಂಡ. ನಿರೀಕ್ಷೆಯಂತೇ ಬಹಳ ಚೆನ್ನಾಗಿ ನಿರ್ವಹಿಸಿದ. ‘ಡೆಡ್ ವಿಂಡ್’ ಆದರೂ ಗುರುತ್ವಾಕರ್ಷಣೆಯ ಲಾಭದಲ್ಲಿ ವೇಗ ಪಡೆದು, ಹೊಲದ ಬಲುದೂರದ ಅಂಚಿನವರೆಗೂ ದೃಢವಾಗಿ ತೇಲುತ್ತ ಸಾಗಿದ. ಮಿಸುಕುವ ಕುನ್ನಿಯನ್ನು ಕಂಡು ಬಾನೆತ್ತರದಿಂದ ಧುಮುಕುವ ಹದ್ದು ಕರಾರುವಾಕ್ಕಾಗಿ ಉಗುರು ಮುರಿಯದಂತೆ ಕೊಳ್ಳೆಯ ಮೇಲೆ ಕಾಲಿಡುವಂತೇ ಹೊಲದಲ್ಲಿಳಿದ. ದಲಾಲರ ಮುದುಡಿದ ಮನಸ್ಸು ಅರಳಿತು. ಸಹಜವಾಗಿ ದಲಾಲ್ ಮತ್ತು ಎಲ್ಲರ ಗಮನ ಮಂಗಳೂರಿನಿಂದ ಬಂದ ಸಾಹಸಿಗರಲ್ಲಿ ಉಳಿದ ನನ್ನ ಮೇಲೆ ಕೀಲಿಸಿತು.

ಇಂದು ಹಾರದಿದ್ದರೆ ಇನ್ನೆಂದೋ! ಹಾರುಗನಸಿನ ಮೊಟ್ಟೆಗೆ ಕಾವು ಸಾಕೋ ಸಾಲದೋ ವಿನತೆಯ (ಪುರಾಣ ಪ್ರಸಿದ್ಧ ಅರುಣ, ಗರುಡರ ಅಮ್ಮ) ಕಾತರ ನನ್ನದು. ಪರಿಸ್ಥಿತಿಯ ತಿಳಿವು ಮೀರಿದ ಭಂಡ ಧೈರ್ಯವೇ ನನ್ನ ಬಂಡವಾಳ. ಹೆಲ್ಮೆಟ್ ಬಿಗಿ ಮಾಡಿ, ರೆಕ್ಕೆ ಮಧ್ಯದ ಹಾರುಗನ ಜೋಕಾಲಿಗೆ ನನ್ನನ್ನು ಸಿಕ್ಕಿಸಿಕೊಂಡು, ನಿಯಂತ್ರಕ ದಂಡವನ್ನು (ತ್ರಿಕೋಣ) ಎರಡೂ ಕೈಯಲ್ಲಿ ಬಾಚಿಕೊಂಡು, ಮೇಲಿನ ಕೀಲಿಗೆ ತಲೆಯ ಆಧಾರ ಮಾತ್ರ ಕೊಟ್ಟು ನಿಂತೆ. ಅಕ್ಕಪಕ್ಕದಲ್ಲೂ ರೆಕ್ಕೆಯ ಮೂಗನ್ನೂ ಹಿಡಿದವರಿದ್ದಿರಬೇಕು. ಆದರೆ ನನಗೋ ಬಾನಂಗಳಕ್ಕೆ ಧುಮುಕಿ, ಬಾಯ್ಗಳೆವ ಪ್ರಪಾತವನ್ನು ಅಣಕಿಸಿ, ಹೊಲದ ಬಿಸಿಸುಯ್ಲಿನ ಸುರುಳೇಣಿಯಲ್ಲಿ ಏರಿ, ಬಾನದೋಣಿಯಾಗಿ ಅಲೆಯಲೆಯ ಮೇಲೆ ತೂಗಾಡುವ ಕನಸಿನ ಸಾಕ್ಷಾತ್ಕಾರದ ಗಳಿಗೆ. ಬೀಸುಗಾಳಿ ತುಂಬಾ ಕಡಿಮೆಯಿತ್ತು. ಅದೂ ಅಡ್ಡಾತಿಡ್ಡಾ ಸುಳಿಯುತ್ತಿತ್ತು. ರೆಕ್ಕೆಯ ಮೂಗಿನ ನಿಶಾನಿ ತುಸುವೇ ನನ್ನತ್ತ ಚಾಚಿಕೊಳ್ಳುವ ಲಕ್ಷಣ ಕಂಡದ್ದೇ ನನಗೆ ಸಾಕಾಯ್ತು! ಅವಕಾಶ ಕಳೆದುಹೋಗುವ ಆತುರದಲ್ಲಿ ಔಪಚಾರಿಕತೆಗಳನ್ನು ಚುರುಕಾಗಿ ಕಳೆದು ಘಟ್ಟದಂಚು ಉತ್ತರಿಸಿಬಿಟ್ಟೆ. ಹಾರಿದನು ಹನುಮಂತ ಲಂಕೆಗೆ?

ಮೂಗಿಳಿಸಿ ವೇಗ ಗಳಿಸಿ, ತಪ್ಪಲಿನ ಪೊದರು ಪುಡಿಬಂಡೆಗಳನ್ನು ಅಣಕಿಸುತ್ತ ದೂರ ಸರಿದೆ. ಜೊತೆಗೆ ಬಂದ ಬೀಸುಗಾಳಿ ನನ್ನನ್ನು ಹಗುರಕ್ಕೆ ಎತ್ತಿ ನೋಡಿತು. ಅಷ್ಟೇ ಲಘುವಾಗಿ ಎಡಬಲದ ಸುಳಿಗಾಳಿಯೂ ನನ್ನ ಸಮಯಪ್ರಜ್ಞೆಯನ್ನು ಪರೀಕ್ಷಿಸಿ ಹೊಲದ ಮೇಲಕ್ಕೆ ಹಾಯಿಸಿತ್ತು. ಗಗನ ಮಂಡಲದಲ್ಲಿ ಒಡ್ಡೋಲಗ ಕೊಡುವವನಂತೆ ಕಾಲು ಕತ್ತರಿ ಹಾಕಿ, ಜೋಕಾಲಿಯಾಡುತ್ತಾ ಮುಂದುವರಿದೆ. ಕುದುರೆಮುಖ ಶಿಖರದೌನ್ನತ್ಯದಿಂದ ನೆಗೆದು, ಹಸಿರುಗಪ್ಪಾದ ಕಂದರಗಳೆಡೆಯಲ್ಲಿ ಸಾಗಿ, ಗಾಳಿಗಂಡಿಯಲ್ಲಾಡುವ ಬಾನಾಡಿಗಳಿಗೆ ಬೆರಗು ಹುಟ್ಟಿಸಿದೆ. ಹೇವಳದ ಒಕ್ಕಲುಗಳಿಗೆ ಸಾಕ್ಷಾತ್ ದೇವದೂತನ ಆಗಮನವಾಗಿ, ಹಿಂದುಳಿದು ದುರ್ಬೀನು ಕೀಲಿಸಿದವರಿಗೆ ಹಿರಿಮರುದುಪ್ಪೆ ಶಿಖರದ ಮೂಗಿನ ನತ್ತಾಗಿ, ಬಲ್ಲಾಳರಾಯನ ದುರ್ಗದ ಅಗಾಧ ಶಿಲಾಭಿತ್ತಿಯಲ್ಲಿ ಜೀವಂತ ಕಲಾಕುಸುರಾಗಿ ವಿಸ್ತರಿಸುತ್ತಲೇ ಇತ್ತು ನನ್ನ ಹಗಲುಗನಸು. ಇಷ್ಟಮಿತ್ರರ ಮನೆಯಂಗಳದಲ್ಲಿ ಅಚ್ಚರಿಯ ಅತಿಥಿಯಾಗಿ, ಪುಂಡುಪೋಕರಿಗಳಿಗೆ ಆಗಸದಿಂದೆರಗುವ ಸಿನಿಮೀಯ ಸಾಹಸಿಯಾಗಿ, ಅಗಮ್ಯ ತಾಣಗಳಿಗೆ ಸಂಶೋಧಕನಾಗಿ, ಅದು ಇದು ಎದಾಗಿ ಕಲ್ಪನಾಲೋಕದಲ್ಲಿ ಬೆಳೆಯುತ್ತಲೇ ಇದ್ದೆ.

ಹಾಗೆಂದು ವಾಸ್ತವದ ಕಣ್ಣು ಮುಚ್ಚಿರಲಿಲ್ಲ. ಮೊದಲು ಇಡಿಯ ಬೆಂಗಳೂರೇ ನನ್ನ ದಿಗಂತದೊಳಗಿತ್ತು. ಬನ್ನೇರುಘಟ್ಟದ ತಪ್ಪಲಿನ ಪುಡಿಗಲ್ಲು, ಪೊದರು, ಸುವಿಸ್ತಾರ ಹೊಲ ರಮ್ಯ ಇಳಿದಾಣವನ್ನೇ ಬಿಡಿಸಿಟ್ಟಂತಿತ್ತು. ಆದರೆ ಒಮ್ಮೆ ಧುಮುಕಿದ ಮೇಲೆ ಭರದಿಂದ ಬೆಂಗಳೂರು ಮರೆಯಾಗಿ, ಬನ್ನೇರುಘಟ್ಟದ ಹಳ್ಳಿ ವಿಸ್ತರಿಸುತ್ತಾ ಬಂತು. ರಮ್ಯ ಹಸುರೆಲ್ಲಾ ಹೆಮ್ಮರವಾಗಿ, ಪುಡಿಗಲ್ಲು ಹೆಬ್ಬಂಡೆಯಾಗಿ, ಬಹುರಂಗೀ ಮಿದುಹಾಸಿನಂತಿದ್ದ ಹೊಲ ಏರು ತಗ್ಗಿನ ಅಂಕಣಗಳಾಗಿ, ಉತ್ತ ನೆಲ ಎರಡು ಹೆಜ್ಜೆ ಓಡಲೂ ಅಸಾಧ್ಯವಾಗಿ ಕಾಣಿಸಿತು. ರೆಕ್ಕೆಯ ಪಕ್ಕೆ ಉಬ್ಬುವಂತೆ ಕೈ ಪೂರ್ಣ ಮುಂಚಾಚಿದ್ದೆ. ಪಾಠ ಮರೆತಿರಲಿಲ್ಲ, ನೆಲದ ಅಂದಾಜು ಮೀರಿ ಗಾಳಿಯಲ್ಲೇ ಓಟದ ಕಾಲು ಬೀಸಿದ್ದೆ. ಮಣ್ಣಾಂಗಟ್ಟಿ ಸಿಕ್ಕಲಿ, ಮಳೆನೀರಗಂಡಿಯೇ ಅಡ್ಡಗಟ್ಟಲಿ ಬೀಸುಗಾಲು ಹಾಕಿ ಓಡುವ ಮನಸ್ಸು, ತಾಕತ್ತೂ ನನ್ನದು. ಆದರೆ ಬೀಸುಗಾಳಿಯೂ ಇಲ್ಲ, ಇಳಿವೇಗವೂ ದಕ್ಕಲಿಲ್ಲ. ಹೊಲದ ಬದು ರೆಕ್ಕೆಯ ಮೂಗಿಗೆ ತಡೆಗೋಡೆಯಾಗಿ ಸಿಕ್ಕಿ ಆಘಾತದೊಡನೆ ನಾನು ಮುಖಾಡೆ ಬಿದ್ದಿದ್ದೆ. ಹಾರುಗನಸಿನ ಮರಿ ತೇಲಿದ್ದು (ನಲ್ವತ್ತು ಸೆಕೆಂಡುಗಳಂತೆ) ನಿಜ, ಪುಟ್ಟ ಕೊಂಬೆಗೆ ಕಾಲು ಚಾಚಿದ್ದು ನಿಜ, ಆದರದು ಎಟುಕದೇ ನೆಲಕ್ಕೆ ಕೆಡೆದದ್ದೂ ನಿಜ.  ಹಕ್ಕಿಯ ಗರಿ ಮುರಿದಿತ್ತು. ಹೌದು,  ಎಡ ಮೊಣಕೈ ಕೀಲು ತಪ್ಪುವುದರೊಡನೆ ಸಣ್ಣದಾಗಿ ಮುರಿದಿತ್ತು. ನಾನು ತಿಂಗಳೆರಡರಲ್ಲಿ ಯಥಾಪೂರ್ವ ಸ್ಥಿತಿಗೇನೋ ಬಂದೆ. ಆದರೆ ಮುಂದಿನ ದಿನಗಳಲ್ಲಿ ಒಟ್ಟಾರೆ ಕರಾವಳಿಯ ಸಾಹಸಿಗಳ ಹಾರುಗನಸು ಮಾತ್ರ ವಿಕಾಸ ಪಥದಲ್ಲಿ ದೃಢವಾಗಿ ಉಳಿಯಲೇ ಇಲ್ಲ.

ದಲಾಲ್ ಪರವೂರಿಗೆ ವರ್ಗಾಯಿಸಲ್ಪಟ್ಟರು. ಅವರು ಮುಂದುವರಿದು, ಯಂತ್ರಚಾಲಿತ ಮುಗ್ಗಾಲಿಯಲ್ಲಿ ಕುಳಿತು ತೇಲುವ ರೆಕ್ಕೆ (Powered hang glider or Trike) ಅಳವಡಿಸಿಕೊಂಡ ಪ್ರಯೋಗಗಳಲ್ಲಿ ನಿರತರಾದರು. ಆದರೆ ಇದರಲ್ಲೊಂದು ಭಾರೀ ಅಪಘಾತಕ್ಕೀಡಾಗಿ, ಬಹುಕಾಲ ಆಸ್ಪತ್ರೆ ವಾಸ ಮತ್ತೆ ನಿವೃತ್ತಿ ಇತ್ಯಾದಿಗಳಿಂದ ನಮ್ಮ ಸಂಪರ್ಕದಿಂದ ಪೂರ್ಣ ಕಳಚಿ ಹೋಗಿದ್ದರು. ಈಚೆಗೆ ಬೆಂಗಳೂರುವಾಸಿ ಮಧುಸೂದನ ಪೆಜತ್ತಾಯರ ಪರಿಚಯ ಬೆಳೆದಾಗ, ಅಸ್ಪಷ್ಟವಾಗಿಯಾದರೂ ದಲಾಲರ ಕ್ಷೇಮವಾರ್ತೆ ತಲಪಿ ಸಂತೋಷವಾಯ್ತು. ಆದರೆ ಹೆಚ್ಚಿನ ಸಂಪರ್ಕ ಮಾತ್ರ ಇನ್ನೂ ಸಾಧ್ಯವಾಗಿಲ್ಲ.

ಮಧುರಾಯ್ಕರ್ ಬಹಳ ಸತಾಯಿಸಿದ. ಶರತ್ ಬಹಳ ಕಷ್ಟದಿಂದ ಬೆಂಗಳೂರಿನಲ್ಲಿ ಆತನಿಂದ ಒಂದು ಸರಳ ರೆಕ್ಕೆಯನ್ನು ಸಂಪಾದಿಸಿಕೊಂಡು ಬಂದದ್ದಷ್ಟೇ ನಮ್ಮ ಸಾಧನೆ. ಈ ಸಮಯಕ್ಕೆ ಶರತ್ ಪುತ್ತೂರು ವಿವೇಕಾನಂದ ಕಾಲೇಜಿಗೆ ಅಧ್ಯಾಪಕನಾಗಿ ಸೇರಿಕೊಂಡಿದ್ದರು. ಅಲ್ಲಿನ ಆಡಳಿತ ಮಂಡಳಿಯ ಔದಾರ್ಯದಲ್ಲಿ ಶರತ್ ಕಾಲೇಜಿನ ‘ಹಾರುವರ ಕೂಟ’ ಕಟ್ಟಿದ. ಮುಂದುವರಿದು ಶರತ್ ಉದಕಮಂಡಲದ ರಾಜಹಂಸ ಸಂಸ್ಥೆಯಲ್ಲಿ ಅರೆಬರೆ ತರಬೇತು ಪಡೆದು ಬಂದು, ಮುಗ್ಗಾಲೀ ರೆಕ್ಕೆಯೊಂದನ್ನು ಕಾಲೇಜಿಗೆ ಖರೀದಿಸಿದ್ದೂ ಆಯ್ತು. ಆದರೆ ಒಂದೆರಡು ಪ್ರಯೋಗಗಳಲ್ಲೇ ಅದರ ಚಕ್ರ ಮುರಿದು ಮೂಲೆಗೆ ಬಿತ್ತು. ಅದಕ್ಕೂ ಮುಖ್ಯವಾಗಿ ವೃತ್ತಿ ಆವಶ್ಯಕತೆಗಳು ಶರತ್ತನ್ನು ಪುತ್ತೂರು ಬಿಡಿಸಿ, ಮೈಸೂರಿಗೂ ಮುಂದೆ ವಿದೇಶಕ್ಕೂ ಒಯ್ಯಿತು. ಈ ವಲಯದ ಹಾರುಗನಸು ಇನ್ನೊಂದು ಕುರುಡುಗಲ್ಲಿ ಸೇರಿತ್ತು.

ಹೀಗೆ ನಮ್ಮ ಪ್ರಯೋಗಗಳ ಕೊನೆಯ ಅಂಕ ಸಮೀಪಿಸುತ್ತಿರುವಾಗ ಮೌನ ವೀಕ್ಷಕನ ನೆಲೆಯಲ್ಲಿ ಸೇರಿಕೊಂಡವನು ನೆವಿಲ್ ರಾಡ್ರಿಗ್ಸ್. ವಿಮಾನದ ಪುಟ್ಟ ಹಾರು-ಮಾದರಿಗಳನ್ನು ತಯಾರಿಸುವುದರಿಂದ ತೊಡಗಿ ಹಾರಿಸುವವರೆಗಿನ ಹವ್ಯಾಸದಲ್ಲಿ ಪರಿಣತ (ಸಹಜವಾಗಿ ವಾಯು ಯಾನದಲ್ಲಿ ನಮಗೆಲ್ಲರಿಗಿಂತಲೂ ಹೆಚ್ಚು ತಿಳಿದವ), ಅದಮ್ಯ ಉತ್ಸಾಹಿ, ಇನ್ನೂ ಮೀಸೆ ಬಲಿಯದ ತರುಣ. ಕಾಡುಗುಡ್ಡೆಯಲ್ಲಿ ಓಡಿ, ಬಿದ್ದು, ಎದ್ದು ಕಲಿಯುವುದಕ್ಕೆ ಪರ್ಯಾಯ ಶಿಕ್ಷಣ ಕ್ರಮ, ಹೆಚ್ಚು ಸಮರ್ಥ ಮತ್ತು ಪೂರ್ಣ ನಿರಪಾಯಕಾರೀ ದಾರಿ ಈತ ಸ್ವಂತ ಜಾಣ್ಮೆಯಲ್ಲಿ ರೂಪಿಸಿಕೊಂಡಿದ್ದ. ತನ್ನ ಮನೆಯ ಜಗುಲಿಯ ಜಂತಿಗೆ ತೇಲುರೆಕ್ಕೆಯ ಕಪಟ ಹಾರನುಭವ ಕೊಡುವ ವ್ಯವಸ್ಥೆ ಮಾಡಿಕೊಂಡು ಕಸರತ್ತು ನಡೆಸಿದ್ದ. ಸಹಜವಾಗಿ ನಮ್ಮ ರೆಕ್ಕೆಯನ್ನು ಇವನಿಗೆ ಉಚಿತವಾಗಿಯೇ ನಾವು ಬಿಟ್ಟುಕೊಟ್ಟೆವು. ಮುಂದುವರಿದು, ನೆವಿಲ್‌ಗೆ ರೆಕ್ಕೆಯನ್ನು ಆತನದೇ ಆಯ್ಕೆಯ ಹೊಸ ತರಬೇತಂಗಳಕ್ಕೆ ಒಯ್ಯುವಲ್ಲೂ ಹಾರಾಟದ ಪ್ರಯೋಗಗಳಿಗೆ ಸಹಕರಿಸುವಲ್ಲೂ ಧಾರಾಳ ಒದಗಿದೆವು. (ಚಿತ್ರ ಒಂದರಲ್ಲಿ ನೇತು ತೇಲಾಟಕ್ಕೆ ಸಜ್ಜುಗೊಂಡ ನೆವಿಲ್. ಇನ್ನೊಂದರಲ್ಲಿ ಅದೇ ರೆಕ್ಕೆಯನ್ನು ಮಡಚಿ, ಬೈಕಿನ ಸಹಾಯದಲ್ಲಿ ಸಾಗಿಸಲು ನೆವಿಲ್ಲೇ ರೂಪಿಸಿದ ಗಾಡಿಯಿದೆ. ಬೈಕ್ ಸವಾರ ನಾನು, ಪಕ್ಕದಲ್ಲಿ ದೇವಕಿ. ರೆಕ್ಕೆಯ ಹಿನ್ನೆಲೆಯಲ್ಲಿ ಸಹಾಯಕರೊಡನೆ ಹ್ಯಾಟ್‌ಧಾರಿಯಾಗಿ ನಿಂತವ ನೆವಿಲ್) ಈತನ ಬರಿಯ ತೇಲುರೆಕ್ಕೆಯ ಪ್ರಯೋಗಗಳು ಗಣನೀಯವಾಗಿ ನಡೆಯಲಿಲ್ಲವಾದರೂ ಮುಂದುವರಿದ ಯಂತ್ರಚಾಲಿತ ತೇಲುರೆಕ್ಕೆಯ ಚಟುವಟಿಕೆಗಳು ನಿಸ್ಸಂದೇಹವಾಗಿ ಆತನನ್ನು ವೃತ್ತಿಪರ ಹಾರಾಟಗಾರನನ್ನಾಗಿ ರೂಪಿಸಿತು. ಆ ಯಾಂತ್ರಿಕ ಹಾರಾಟವನ್ನು ಸಾರ್ವಜನಿಕದಲ್ಲಿ ಪ್ರಚುರಿಸುವಂತೆ ಈತ ಕೊಣಾಜೆ ಸಮೀಪದಿಂದ ಹೊರಟು ಮಣಿಪಾಲದವರೆಗೆ ಹಾರಿದ್ದಂತೂ ಬಲುದೊಡ್ಡ ಸಾಧನೆ.

ನೆವಿಲ್ ವೃತ್ತಿಪರವಾಗಿ ಈ ಕ್ರೀಡೆಯೊಡನೆ ಇಲ್ಲಿ (ಹುಟ್ಟೂರು) ನೆಲೆಸಲು ಮಾಡಿದ ಸರ್ಕಸ್ಸುಗಳು ಅಸಂಖ್ಯ. ಈತ ಪಣಂಬೂರನ್ನು ಹಾರುನೆಲವಾಗಿ ಮಾಡಿಕೊಂಡು ಮಂಗಳೂರಿಗೆ ಹಾಕಿದ ಸುತ್ತುಗಳು ಅಸಂಖ್ಯ. ಸಾಮಾನ್ಯವಾಗಿ ಯಂತ್ರವಿದ್ದ ರೆಕ್ಕೆಗೆ ಇಬ್ಬರನ್ನು ಹೊರುವ ಸಾಮರ್ಥ್ಯವಿರುವುದರಿಂದ, ಸಾರ್ವಜನಿಕರಿಗೆ ‘ನಗರದರ್ಶನ’ (pleasure rides) ಕೊಟ್ಟ. ಇತರರಿಗೆ ಕಲಿಸುವ ಶಾಲೆಯನ್ನು ನಡೆಸಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದ. ನರಸತ್ತ ಸಮಾಜ (ಇದರಲ್ಲಿ ನಾನೂ ಇದ್ದೇನೆ. ಎಲ್ಲಕ್ಕೂ ಮುಖ್ಯವಾಗಿ ಆತನ ಕುಟುಂಬವೂ) ಆತನನ್ನು ಕೀಳ್ಗಣ್ಣಲ್ಲಿ ಸಹಿಸಿಕೊಂಡಿತೇ ವಿನಾ ಬಲ ಕೊಡಲೇ ಇಲ್ಲ. ಆತ ಅಕ್ಷರಶಃ ಊರು ಬಿಟ್ಟು ಅಜ್ಞಾತ ಸ್ಥಳಕ್ಕೆ ಓಡಿಹೋದ!

ಕೆಲವು ವರ್ಷಗಳ ಮೇಲೊಂದು ದಿನ ಹೈದರಾಬಾದಿನಲ್ಲಿ ಭಾರೀ ಮಳೆ ಬಂತು. ಹಲವು ಮನೆಗಳು ನೆರೆ ಆವೃತ್ತಗೊಂಡ ಕಾಲಕ್ಕೆ, ಸರಕಾರೀ ಸಹಾಯಗಳು ಜಡಕಳೆಯುವ ಮುನ್ನ, ತರುಣನೊಬ್ಬ ತನ್ನದೇ ತೆಪ್ಪ ಮಾಡಿಕೊಂಡು ಹಲವು ಸಂತ್ರಸ್ತರನ್ನು ಪಾರುಗಾಣಿಸಿದ. ಅದು ಎಲ್ಲೂ ದೊಡ್ಡ ಸುದ್ದಿಯಾಗಲಿಲ್ಲ. ಆದರೆ ಹಾಗೆ ಪಾರಾದವರೊಬ್ಬರ ಮೂಲಕ - ಮೂಲಕ ಸಮಾಚಾರ ನನ್ನನ್ನು ತಡವಾಗಿ ತಲಪಿದಾಗ ನೆವಿಲ್ ರಾಡ್ರಿಗ್ಸ್ ಪತ್ತೆಯಾಗಿ ನನ್ನ ಹೃದಯ ತುಂಬಿ ಬಂತು. ಆತ ಇಲ್ಲಿದ್ದಾಗ ಹಾರಾಟದೊಡನೆ ಹಲವು ಸಾಹಸ ಕ್ರೀಡೆಗಳ ವೃತ್ತಿ ಸಾಧ್ಯತೆಯನ್ನೂ ಶೋಧಿಸಿದ್ದ. ಆಗ ಕೂಳೂರು ಸೇತುವೆಯಿಂದ ಆಚೆ ಹೊಳೆದಂಡೆಯಲ್ಲಿ ತನ್ನದೇ ದಕ್ಕೆ ಮಾಡಿಕೊಂಡದ್ದು, ಸಾರ್ವಜನಿಕರಿಗೆ ಸರಳ ದೋಣಿ ವಿಹಾರದಿಂದ ತೊಡಗಿ ವಿವಿಧ ಜಲಕ್ರೀಡೆಗಳನ್ನು ರೂಢಿಸಲೂ ಇನ್ನಿಲ್ಲದ ಪ್ರಯತ್ನ ಮಾಡಿ ಸೋತದ್ದೂ ಸ್ಮೃತಿಪಟಲದಲ್ಲಿ ಹಾದುಹೋಯ್ತು. ಆ ಸಮಯದಲ್ಲೇ ಮಳೆಗಾಲದ ಉತ್ತುಂಗದಲ್ಲೊಂದು ದಿನ ಶಿರಾಡಿ ಘಾಟಿಯ ಕೆಂಪೊಳೆಯಲ್ಲಿ ಯಾರೋ ಬಯಲು ಸೀಮೆಯವರು ತೀರಾ ಬಾಲಿಶವಾಗಿ ‘ಸಾಹಸೀ ದೋಣಿ ಸವಾರಿಗೆ’ ಹೊರಟು ಪ್ರಾಣ ಕಳಕೊಂಡರು. ಅವರ  ಹೆಣ ಹುಡುಕುವಲ್ಲಿ ನೆವಿಲ್ ಸ್ವಂತ ಉತ್ಸಾಹ ಮತ್ತು ಅನುಭವದಲ್ಲಿ ಹೆಣಗಿದ್ದು, ಒಂದು ಶವ ಹುಡುಕಿ ಎಳೆದು ಹಾಕಿದ್ದಂತೂ ಸದಾ ನನ್ನನ್ನು ಕಾಡುತ್ತಲೇ ಇರುತ್ತಿತ್ತು. ಹೈದರಾಬಾದ್ ಘಟನೆ ಅದನ್ನು ಇನ್ನಷ್ಟು ಪ್ರಖರ ಬೆಳಕಿನಲ್ಲಿ ಎತ್ತಿ ತೋರಿಸಿತು.

ಈಚೆಗೆ (ಅಂದರೆ ಹಲವು ವರ್ಷಗಳ ಮೇಲೆ) ನೆವಿಲ್ ಅದೇ ಹೈದರಾಬಾದಿನಿಂದ ತೀರಾ ಅನಿರೀಕ್ಷಿತವಾಗಿ, ಕೇವಲ ಹಳೆಯ ಪ್ರೀತಿಗಾಗಿ ನನಗೆ ದೂರವಾಣಿಸಿದ್ದ. ಆಗ ಬಹಳ ಕಷ್ಟಗಳನ್ನು ಹಾಯ್ದು, ಸದ್ಯ ಅದೇ ಸಾಹಸ-ವೃತ್ತಿ ಮತ್ತು ತಾನೇ ಕಟ್ಟಿಕೊಂಡ ಕುಟುಂಬದಲ್ಲಿ (ಹೆಂಡತಿ, ಎರಡು ಮಕ್ಕಳು) ಸ್ಥಿರತೆ ಸಾಧಿಸಿರುವುದನ್ನು ಹೆಮ್ಮೆಯಿಂದ ಹೇಳಿಕೊಂಡ. ತನ್ನ ಪತ್ತೆಯನ್ನು (ವಿಳಾಸ ಅಥವಾ ದೂರವಾಣಿ) ಬಿಟ್ಟುಕೊಡದಿದ್ದರೂ ತಾನು ಇನ್ನಷ್ಟೂ ಗಟ್ಟಿಯಾದ ಮೇಲೆ ಮಂಗಳೂರಿಗೆ ಭೇಟಿಕೊಡುವ ಆಸೆ ತೋಡಿಕೊಂಡ. ಅದರಲ್ಲಿ ಸೇಡಿನ ವಾಸನೆ ಇರಲಿಲ್ಲ, ಹುಟ್ಟೂರಿನ ಮೋಹ, ಸಾಧನೆಯ ಹೆಮ್ಮೆಯಿತ್ತು.

ನಮ್ಮ ಕರಾವಳಿಯ ಹಾರುಗನಸಿನ ಕೊನೆಯ ಕಿಡಿ ಉಳಿದದ್ದು ನಗ್ರಿಮೂಲೆ (ಈಗ ಪ್ರಚಾರದಲ್ಲಿರುವಂತೆ ನೆಲ್ಯಾರು) ಗೋವಿಂದನಲ್ಲಿ (ಭಟ್ಟ್). ಇವನ ತಂದೆಯ ಕಾಲದಿಂದಲೇ ನಮ್ಮದು ಕುಟುಂಬ ಮೈತ್ರಿ. ಪ್ರಾಯದಲ್ಲೂ ಈತ ನನಗಿಂತ ಆರೆಂಟು ವರ್ಷ ಕಿರಿಯನೆಂದು ನಾನು ಸದರ ವಹಿಸುವುದಿದೆ. ಆದರೆ ನಿಜದಲ್ಲಿ ಈತ ವಿಶ್ವಯಾನಿ; ಬರಿಯ ಸೈಕಲ್ಲೇರಿ ಈತ ಸುತ್ತದ ದೇಶವಿಲ್ಲ. ನಮ್ಮ ಹಾರುವ ಹುಚ್ಚಿನ ಕೊನೆಯ ಪಾದದಲ್ಲಿ ಗೋವಿಂದ ವಿಶ್ವಯಾನ ಮುಗಿಸಿ ಬಂದದ್ದರಿಂದ, ಅವನ ಹಾರುವ ಕನಸು ಪೂರ್ಣ ಸ್ವತಂತ್ರವೇ ಆಗಬೇಕಾಯ್ತು. ಕೃಷಿಕನಾದ ಗೋವಿಂದನ ಆರ್ಥಿಕತೆ ನಮ್ಮೆಲ್ಲರದಕ್ಕಿಂತಲೂ ಹೆಚ್ಚು ಬಲವಾದದ್ದು. ಸಹಜವಾಗಿ ಈತ ಊಟಿಗೆ ಹೋಗಿ ರಾಜಹಂಸದಿಂದ ಯಾಂತ್ರೀಕೃತ ರೆಕ್ಕೆಯನ್ನೂ ಪ್ರಾಥಮಿಕ ಹಾರು ತರಬೇತಿಯನ್ನೂ ಪಡೆದುಕೊಂಡು ಬಂದ. ಆದರೆ ಪ್ರಾಯೋಗಿಕ ರಂಗದಲ್ಲಿ ಸ್ವತಂತ್ರವಾಗಿ ತೊಡಗಿಕೊಳ್ಳಲು ಅಷ್ಟೇ ಸಾಕಾಗಲಿಲ್ಲ. ಆಗ ಒದಗಿದವನು ನೆವಿಲ್ ರಾಡ್ರಿಗ್ಸ್. ನೆವಿಲ್ ಸ್ವಂತಕ್ಕೆಷ್ಟು ಪ್ರಯೋಗಶೀಲನೋ ಶಿಕ್ಷಣಕ್ಕೆ ಅಷ್ಟೇ ಅಧ್ಯಯನಶೀಲನೂ ಹೌದು. ನೆವಿಲ್ ಬಲದಲ್ಲಿ ಗೋವಿಂದನ ಹಾರಾಟ ಚೆನ್ನಾಗಿಯೇ ಇತ್ತು. ಆದರೆ ಒಂದು ದೊಡ್ಡ ತೇಲವಧಿಯ ಕೊನೆಯಲ್ಲಿ ಘಟಿಸಿದ ಸಣ್ಣ ಅಪಘಾತದಲ್ಲಿ ಗೋವಿಂದನ ಜೀವ ಉಳಿದದ್ದು ದೊಡ್ಡದು. ಅದರ ಕಾರಣವನ್ನು ಸ್ವಂತ ಅಸಾಮರ್ಥ್ಯವೆನ್ನುವಲ್ಲಿ ಗೋವಿಂದ ಏನೂ ಮುಚ್ಚಿಡುವುದಿಲ್ಲ. ಆದರದು ಆತನ ಬೆನ್ನಹುರಿಗೆ ಜೀವಮಾನಕ್ಕಾಗುವಂತೆ ಜಖಂ ಮಾಡಿತ್ತು. ಎಲ್ಲಕ್ಕೂ ಮುಖ್ಯವಾಗಿ ಕರಾವಳಿಯ ಹಾರುಗನಸಿನ ಒಂದು ಬಲವತ್ತರವಾದ ಸಂಚಲನ ಪೂರ್ಣ ವಿರಾಮ ಕಂಡಿತ್ತು!

10 comments:

 1. ನಮ್ಮ ಕರಾವಳಿಯ 'ಹಾರುವ ಕನಸಿನ' ಪ್ರವರ್ತಕರ 'ಏಳು ಬೀಳು' ಅಥವಾ 'ಹಾರಿ ಬೀಳಿನ ನಿಜ ಕಥನ' ಇದು.
  ಕರ್ನಲ್ ಸೈರಸ್ ದಲಾಲ್, BENZ ಪದವು,ನೆವಿಲ್ ರಾಡ್ರಿಗ್ಸ್, ಗುರು ಗೋವಿಂದ (ಅರ್ಥಾತ್ ನಮ್ಮ ನೆಲ್ಯಾರು ಗೋವಿಂದ ಭಟ್)ಹಾಗೂ ನಮ್ಮ ಮೀಸೆ ವರ್ಧನರ ಟೀಮ್ ವಹಿಸಿದ ಪಾತ್ರವನ್ನು ಮರೆಯಲು ಸಾಧ್ಯವಿಲ್ಲ. ಈ ಪ್ರಯತ್ನಗಳನ್ನು 'ಅಧಿಕೃತವಾಗಿ' ದಾಖಲಿಸುವ ವ್ಯವಸ್ಥೆ ಇದ್ದರೆ ಅದೆಷ್ಟು ಚೆನ್ನಾಗಿತ್ತು!
  ಅಶೋಕ ವರ್ಧನರೇ!
  ಆ ಕಾಲದಲ್ಲಿ ಕಳಸದ ಕಾಡುಗಳಲ್ಲಿ ಕಾಫಿ ನೆಡುತ್ತಾ ಇದ್ದ ನನ್ನನ್ನು ಯಾಕೆ ಪರಿಚಯ ಮಾಡಿಕೊಳ್ಳಲಿಲ್ಲ? - ಅಂತ ಬಹು ಬೇಸರ ಆಗುತ್ತದೆ.
  ಅದಿರಲಿ.
  ನೆವಿಲ್ ಅವರ ಸಾತ್ಬಿಕ ಛಲ ಮತ್ತು ಪರೋಪಕಾರಿ ಬುದ್ಧಿ ನಮಗೆಲ್ಲಾ ಆದರ್ಶ ಆಗಿರಲಿ.
  ವಂದನೆಗಳು.

  ಪೆಜತ್ತಾಯ ಎಸ್. ಎಮ್.

  ReplyDelete
 2. ‎83 ರಲ್ಲಿ ಜಮಲಾಬಾದ್ ಶಿಖರಕ್ಕೆ ಹ್ಯಾ೦ಗ್ ಗ್ಲೈಡರ್ ಹೊರಲು ಹೆಗಲು ಕೊಟ್ಟವರಲ್ಲಿ ನಾನೂ ಒಬ್ಬ, ಬಳಿಕ ನೆವಿಲ್ ನ್ ಐತಿಹಾಸಿಕ ಕೊಣಾಜೆ - ಮಣಿಪಾಲ ಯಾತ್ರೆಗೆ ಬಾವುಟ ಬೀಸಿ ಬೀಳ್ಕೊಟ್ಟ ತ೦ಡದಲ್ಲೂ ನಾನಿದ್ದೆ. ಇದ್ಹು ಕರಾವಳಿಯ ಹಾರುವ ಹುಚ್ಚಿಗೆ ನನ್ನ ಅಳಿಲ ಸೇವೆ ! ಬೆರಗನ್ನು ಖಚಿತ ವಿವರಗಳೊ೦ದಿಗೆ ಹ೦ಚಿಕೊ೦ಡಿದ್ದಾರಿಲ್ಲಿ. ಅವರು ಸೈರಸ್ ದಲಾಲ್ ಭಲೇ ಭ೦ಡ, ಕಾಲಿನ ಮೂಳೆ ಭರ್ಜರಿ ಮುರಿದಿದ್ದಾಗಲೂ, ಬ್ಯಾ೦ಡೇಜ್ ಧಾರಿಯಾಗಿ, ಟಿವಿಎಸ್ ಮೊಪೆಡ್ ಸವಾರಿಯಲ್ಲಿ ಮ೦ಗಳೂರು ಪೇಟೆ ವಿಹರಿಸುತ್ತಿದ್ದರು.

  ReplyDelete
 3. ಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ದುಬಾರಿ ಮತ್ತು ಅಪಾಯಕರ ಎಂಬ ನನ್ನ ನಂಬಿಕೆಯನ್ನು ಪುಷ್ಟೀಕರಿಸತು ಈ ಲೇಖನ. ಅಪಾಯಗಳ ಅರಿವಿದ್ದೂ ಈ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವವರಿಗೆ ದೂರದಿಂದಲೇ ಗೌರವಯುಕ್ತ'ಸಲಾಂ'

  ReplyDelete
 4. @ avg rao, ದುಬಾರಿ ಮತ್ತು ಅಪಾಯಕಾರಿ ಎ೦ದು ಹೆದರಿ ದೂರ ಉಳಿಸುವ೦ತಾಗದಿರಲಿ ! ಸಹಜ ಆಸಕ್ತಿ ಛಲ ಸಾಮರ್ಥ್ಯ ಉಳ್ಳವರಿಗೆ ಇದರ ಸಮಗ್ರ ಪರಿಚಯವಿದ್ದಾಗ ಚೇತೋಹಾರಿ ಆಗಬಲ್ಲದು. ದಲಾಲ್ ಮತ್ತು ನೆವಿಲ್ ನನಗನ್ನಿಸುವ೦ತೆ, ಸಮಗ್ರ ಸಮತೋಲನ ದೃಷ್ಟಿಯಿ೦ದಾಗಿಯೇ,ತುಸು ಸಾ೦ದರ್ಭಿಕ ಅನುಕೂಲದಿ೦ದಾಗಿ, ಈ ಕಥಾನಕದ ಇತರರ೦ತೆ ತೊ೦ದರೆ ಅನುಭವಿಸುವ೦ತಾಗಲಿಲ್ಲ. ಸಾಹಸ ಕ್ರೀಡೆಗಳು ಪ್ರಕೃತಿಯನ್ನು ಜಯಿಸುವುದು ಎ೦ಬುದು ತಪ್ಪು ಕಲ್ಪನೆ, ಅದನ್ನು ಪ್ರಕೃತಿಯನ್ನು ಇನ್ನೂ ಹತ್ತಿರದಿ೦ದ ನೋಡುವುದು, ಅನುಭವಿಸುವುದು ಎನ್ನಬಹುದೇ ? ಅ೦ತೆಯೇ, ಸಾಹಸ ಕ್ರೀಡೆಗಳಲ್ಲಿ ತೊಡಗಿ, ದೈಹಿಕವಾಗಿ ಕಷ್ಟ ನಷ್ಟ ಅನುಭವಿಸದ, ಮಾನಸಿಕವಾಗಿ ಸಶಕ್ತರಾದ ಹಲವಾರು ಜನರೂ ಇಲ್ಲವೇ ? ಆದರೆ ತನ್ನ ಮಿತಿಯ ಸ್ಪಷ್ಟ ಅರಿವು ಸದಾ ಇರಬೇಕು, ಮತ್ತು ಹಠಕ್ಕೆ ಬಿದ್ದು ದೇಹ ಗುದ್ದಿಸಿಕೊಳ್ಳುವುದು ಸರ್ವಥಾ ಸಲ್ಲ !

  ReplyDelete
 5. ನಾನು ಮಂಗಳೂರಿನಲ್ಲಿದ್ದಾಗ ಪರ್ವತಾರೋಹಿಗಳು ಸಾಹಸಿಗಳು ಆಗಿದ್ದ ಆರೋಹಣ ನಾನು ಮೈಸೂರಿಗೆ ಹಿಂದಿರುಗಿದ ಅನಂತರ ಹಾರೋಹಣ ಆಗಿದ್ದು ಸಂತೋಷದ ಸಂಗತಿ. ಆಗ ನಾನಿರಲಿಲ್ಲವಲ್ಲ ಎಂಬ ಕೊರತೆಯಂತೂ ಇದ್ದದ್ದೆ.
  ಅತ್ರಿಯ ಹೊಸ ಜಾಲತಾಣ ಸರಳವಾಗಿ ಸುಂದರವಾಗಿದೆ.

  ReplyDelete
 6. ನಮ್ಮ ಸಮಾಜದಲ್ಲಿ ಬಳಸದ ದಾರಿಯಲ್ಲಿ ನಡೆಯುವುದು ಸಾಹಸವೇ ಸರಿ. ನೆವಿಲ್ ಅವರಂತೆ ನಾನೂ ಅಸಹನೆ ಅಸೂಯೆ ಕಿರಿಕಿರಿ ಅನುಭವಿಸಿದ್ದೇನೆ. ಕೆಲವೊಮ್ಮೆ ಈ ಅನುಬವಗಳ ಹಂಚಿಕೊಳ್ಳಲೂ ಬೇಡವೆನಿಸುತ್ತದೆ. ಮುಂದಿನ ಜನಾಂಗದವರಿಗೆ ಪ್ರಯೋಗಗಳ ವಿರುದ್ದ ಬೆದರಿಸಿದಂತಾಗುವುದೋ ? ಆದರೆ ಹೆಚ್ಚಿನ ಇಂದಿನ ಜನಾಂಗದವರು ಹೊಡಿ ಬಡಿ ಕಡಿ ಎಂದು ಸಚಿನಿಗೆ ಶಿವರಾಜ್ ಕುಮಾರಿಗೆ ಹೇಳುವುದರಲ್ಲೇ ತೃಪ್ತರು.

  ಹಾರುವುದೂ ಪರೀಶ್ರಮ ಏಕಾಗ್ರತೆ ಸತತ ಅಬ್ಯಾಸ ಬೇಕಾಗುವ ಕಲೆ. ನಮ್ಮಲ್ಲಿ ಒಂದಿಬ್ಬರು ಚೆನ್ನಾಗಿ ಪರಿಣತಿ ಹೊಂದಿದ್ದರೆ ಇಂದಿಗೂ ಇದು ಇಲ್ಲಿ ಮುಂದುವರಿಯುವ ಸಾದ್ಯತೆ ಇತ್ತು. ಸಫಲತೆಯ ಸನೀಹದಲ್ಲಿಯೇ ನಾವದರಿಂದ ವಿಮುಖರಾದೆವು ಎಂದೂ ಒಮ್ಮೊಮ್ಮೆ ಅನಿಸುತ್ತದೆ.

  ಅಂದ ಹಾಗೆ ಇಪ್ಪತ್ತು ವರ್ಷ ಮಂಗಳೂರಿನಿಂದ ದೂರವುಳಿದ ನೆವಿಲ್ ಈಗ ಬಂದರೆ ರಿಪ್ ವಾನ್ ವಿಂಕಲ್ ಅನುಭವ ಅವರಿಗಾಗುವುದೋ?

  ReplyDelete
 7. ಮೈಸೂರಿನ ವ್ಯಕ್ತಿ ಸೋಮೇಂದರ್ ಸಿಂಗ್. ಜೊಲ್ ಮೈಸೂರಿನಲ್ಲಿ ಕಾರ್ಖಾನೆ ತೆರೆಯಲು ಇವರೂ ಒಂದು ಕಾರಣ ಅನಿಸುತ್ತದೆ.

  ಅನಂತರ ಜೋಲ್ ಅವರ ಪಾಟ್ನರ್ ಕೊಯಮುತ್ತೂರಿನ ರಾಲಿ ಪಟು ಲಕ್ಷ್ಮಿ ಮಿಲ್ಲಿನ ಯಜಮಾನ ಕರಿವರದನ್ ಲಘು ವಿಮಾನದಲ್ಲಿ ತೀರಿಕೊಂಡದ್ದು ಒಂದು ಲೆಕ್ಕದಲ್ಲಿ ಈ ಕ್ರೀಡೆಗೆ ಹಿನ್ನೆಡೆ. ವಿಮಾನ ಏರುತ್ತಿರುವಾಗ ರಿಸರ್ವ್ ಟಾಂಕಿನ ಟಾಪ್ ಮುಚ್ಚಲು ಮರೆತು ಇಂದನ ಆಕಾಶದಲ್ಲಿಯೇ ಸೋರಿ ಹೋಗಿ ವಿಮಾನ ಒಮ್ಮೆಲೆ ನೆಲಕ್ಕಪ್ಪಳಿಸಿತು.

  ನಮ್ಮಲ್ಲಿ ಅಪಾರ ಅವಕಾಶ ಇದ್ದರೂ ಗುರುತಿಸುವ ಕಣ್ಣಿಲ್ಲ. ನಮ್ಮ ಮನೆಯ ಪಕ್ಕದಲ್ಲಿರುವ ತೋಡು ಸಮುದ್ರ ಸೇರುವುದು ೪೦ ಕಿಮಿ ದೂರದ ಉಪ್ಪಳದಲ್ಲಿ. ಕಳೆದ ವರ್ಷ ಬೇಸಿಗೆ ಕೊನೆಯಲ್ಲಿ ಕಟ್ಟ ತೆಗೆದ ನಂತರ ಎರಡು ಸದಾಸಂಗಳಲ್ಲಿ ಸಾಗಲು ತಯಾರಿ ನಡೆಸಿದ್ದೆ.

  Cheers

  Govind

  ReplyDelete
 8. I remembered the Benjanpadavu flight of mine which lasted for about 10 seconds and also the early morning dragging journey of mine taking Nevil's flying kit to flying site through my bike in those days.
  Glad to hear about Nevil after so many years

  ReplyDelete
 9. swalpa swalpa artha aaithu... 1% ...LOL
  modha-lay kannada barauvudu-illa .... adhara-melay marthu hogide .... adadhananthara nanu VOODHI ARTHA MADABEKAA !!!!!!?????
  VERY GOOD LOL LOL
  Neville Rodrigues

  ReplyDelete
 10. ಅಶೋಕಣ್ಣನ ಸಾಹಸದ ಅಭಿಮಾನಿ ಪ್ರೇಕ್ಷಕನಾಗಿ ಆ ಸಂದರ್ಭದಲ್ಲಿ ನಾನು ಈ ಎಲ್ಲಾ ಚಟುವಟಿಕೆಗಳಲ್ಲೂ ನಾನು ಭಾಗವಹಿಸಿದ್ದೆ. ನೆಲದಲ್ಲಿ ಇಳಿಯುವ ಬದಲು ಇಳಿದದ್ದು ಒಂದು ಗುಂಡಿಯೊಳಗೆ. ಆಗ ಕಲ್ಲಿಗೆ ಕೈ ಬಡೆದು ಕೀಲು ತಪ್ಪಿ ಹೋದದ್ದು.ಎರಡು ದಿನದ ಸಂಭ್ರಮಕ್ಕೆ ಆತಂಕದ ತೆರೆ ಬಿದ್ದಿತ್ತು.
  ಚಂದ್ರಶೇಖರ

  ReplyDelete