ನಾಗರಹೊಳೆ ವನಧಾಮದಲ್ಲಿ ಉಲ್ಲಾಸರ ಗೆಳೆತನದಿಂದ ನಾನೂ ಒಂದು ವಾರ ಕಾಲ ಪ್ರಾಣಿಗಣತಿಕಾರನಾಗಿ ದುಡಿದೆ. ಅಲ್ಲಿದ್ದದ್ದು ಏಳೇ ದಿನವಾದರೂ ಗಳಿಸಿದ ವನ್ಯದ ಆಪ್ತ ಪರಿಚಯ, ಉಲ್ಲಾಸ್ ಮತ್ತು ಚಿಣ್ಣಪ್ಪನವರ ಒಡನಾಟ ನನ್ನನ್ನೂ ವನ್ಯದ ವಕ್ತಾರನನ್ನಾಗಿಸಿದ್ದು ತಮಾಷೆಯೇ ಸರಿ, ಆದರೂ ನಿಜ. ಕಾನೂನಿನ ದಂಟೆ ಹಿಡಿದು, ಪರಿಸರ ಮೇಯುವ ತೊಂಡುಗಳನ್ನು ನಿರುತ್ತೇಜನಗೊಳಿಸುವುದು ಕಷ್ಟ. ಬದಲು ತಾಕತ್ತಿದ್ದಷ್ಟು ಆಯಕಟ್ಟಿನ ನೆಲವನ್ನು ಕೊಂಡು ಕಾಪಿಡುವುದು ಸುಲಭ ಮತ್ತು ಸಂತೋಷದಾಯಕ.
ಹೀಗೆ ವನ್ಯ ಪುನರುಜ್ಜೀವನದ ಮಾತುಗಳನ್ನು ಪ್ರಾಯೋಗಿಕ ನೆಲೆಯಲ್ಲಿ ಕಂಡುಕೊಳ್ಳಲು ೧೯೯೦ರ ದಶಕದ ಕೊನೆಯ ಭಾಗದಲ್ಲಿ ನಾನು ಶುದ್ಧ ವೈಯಕ್ತಿಕ ಆರ್ಥಿಕ ಮಿತಿಯಲ್ಲಿ ಮಂಗಳೂರ ಆಸುಪಾಸಿನಲ್ಲಿ ಜಾಗ ಹುಡುಕತೊಡಗಿದೆ. ಕೃಷಿ ಭೂಮಿ ಬೇಡ. ಪ್ರಾಕೃತಿಕ ಸ್ಥಿತಿಗೆ ಹತ್ತಿರದ, ಸಾಕಷ್ಟು ನಾಗರಿಕ ಮಾಲಿನ್ಯ ದೂರವಾದ ಮತ್ತು ಯಾವುದೇ ಕಾರಣಕ್ಕುಆಧುನಿಕ ಅಭಿವೃದ್ಧಿಯ ಹೆದ್ದೆರೆಗಳ ಹೊಡೆತಕ್ಕೆ ಸಿಗದ ನೆಲ ಬೇಕಿತ್ತು. ಎಲ್ಲೂ ಅಲ್ಲದ ಗುಡ್ಡದ ಓರೆಯ ಅರ್ಧ ಎಕ್ರೆ ನೆಲ, ಹಾಳು ಬಿದ್ದ ತೆಂಗಿನ ತೋಟ, ನನ್ನ ಮಂಗಳೂರು ಮನೆಯ ಹಿತ್ತಲಿನಲ್ಲೇ ಕಾಡುಬೆಳೆದ ನೆಲ ಎಲ್ಲವನ್ನೂ ವಿಚಾರಿಸುತ್ತಲೇ ಇದ್ದೆ. ಪತ್ರಿಕಾ ಜಾಹೀರಾತಿನಲ್ಲಿ ಓರ್ವ ಮಲೆಯಾಳೀ ದಲ್ಲಾಳಿ ಇಲ್ಲೇ ನೀರ್ಮಾರ್ಗದ ಬಳಿ ಕಚ್ಚಾ ಗುಡ್ಡೆಯನ್ನು ಬೇಕಾದ ಅಳತೆಗೆ ಮನೆ ನಿವೇಶನ ಮಾಡಿಕೊಡುವುದಾಗಿ ಹೇಳಿಕೊಂಡಿದ್ದ. ಹಿಂಜರಿಯಲಿಲ್ಲ - ಹೋದರೆ ಒಂದು ಮಾತು, ಬಂದರೆ ಒಂದು ಒಳ್ಳೆಯ ನೆಲವೆಂದು ಕೇಳಿಯೇಬಿಟ್ಟೆ. ಅದರ ವಾಣಿಜ್ಯ ದರ ನನ್ನ ನಿಲುಕಿಗೆ ಬಲು ದೂರ. ಆದರೆ ಆತ ನನ್ನ ಅಗತ್ಯವನ್ನು ತಿಳಿದು ತನ್ನದೇ ಹಳಸಿದ ಸಂಬಂಧವೊಂದು ಇದೆ, ಬಲು ಕಡಿಮೆ ಬೆಲೆಗೆ ತಾನು ಕಳಚಿಕೊಳ್ಳಲು ತಯಾರೆಂದೂ ಅದೊಂದು ಆದಿತ್ಯವಾರ ಕರೆದೊಯ್ದ.
ದಲ್ಲಾಳಿ ಅಜ್ಜಿಗೆ ಇಪ್ಪತ್ತು ಸಾವಿರ ಮುಂಗಡ ಕೊಟ್ಟು, ಒಟ್ಟಾರೆ ನೆಲವನ್ನು ಒಂದು ಲಕ್ಷಕ್ಕೆ ಒಪ್ಪಂದ ಮಾಡಿಸಿಕೊಂಡಿದ್ದ. ಆದರೆ ಒಪ್ಪಂದದ ಅವಧಿ ಮುಗಿದರೂ ದಲ್ಲಾಳಿಗದನ್ನು ವ್ಯಾವಹಾರಿಕ ಯಶಸ್ಸಿಗೆ ಮುಟ್ಟಿಸಲು ಆಗಿರಲಿಲ್ಲ. ಈಗ ಆಕಸ್ಮಿಕವಾಗಿ ಸಿಕ್ಕ ನನಗೆ ಅದನ್ನು ಎರಡು ಲಕ್ಷದ ಒಳಗೆ ಮಾಡಿಕೊಡುವ ಭರವಸೆ ಕೊಟ್ಟ. ದಲ್ಲಾಳಿಗೆ ತನ್ನ (ಅವಧಿ ಮೀರಿದ) ಮುಂಗಡ ವಾಪಾಸಾತಿಯಾದರೆ ಸಾಕಿತ್ತು. ಸಾಂಕೇತಿಕ ಮುಂಗಡ ಕೊಟ್ಟು ಅಜ್ಜಿಯೊಡನೆ ಪ್ರತ್ಯೇಕ ಕರಾರು ಮಾಡಿಕೊಂಡು ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವಂತೆ ಒತ್ತಾಯಿಸತೊಡಗಿದ. ಒಂದೂವರೆ ಎರಡು ಲಕ್ಷಕ್ಕೆ ಹತ್ತೆಕ್ರೆ ಎಂಥದ್ದೇ ಭೂಮಿ, ಆ ವಲಯದಲ್ಲಿ, ಆ ಕಾಲಕ್ಕೂ ಕಡಿಮೆ ಬೆಲೆಯದ್ದೇ ಸರಿ. ಆದರೆ ನನಗೆ ಅವಸರದಲ್ಲಿ ವ್ಯಾಜ್ಯವನ್ನೂ ಕಟ್ಟಿಕೊಳ್ಳುವ ಉತ್ಸಾಹವಿರಲಿಲ್ಲ! ಪರಿಚಿತ ಸರ್ವೇಕ್ಷಣ ಹಾಗೂ ಭೂದಾಖಲೆಗಳ ಪರಿಣತರನ್ನು ಜೊತೆಮಾಡಿಕೊಂಡು ನಾನು ಇಡಿಯ ನೆಲವನ್ನು ಒಂದು ದಿನ ಅಳೆದೂ ವಕೀಲ ಮಾವ - ಗೌರಿಶಂಕರರ ಮೂಲಕ ದಾಖಲೆಗಳನ್ನು ಪರಿಶೀಲಿಸಿಯೂ ತೃಪ್ತಿಪಟ್ಟುಕೊಂಡದ್ದೂ ಆಯ್ತು. ಆದರೆ ಇಂದೋ ನಾಳೆಯೋ ಎನ್ನುವ ಮುದುಕಿ, ಅಜ್ಞಾತ ಮಗ ಮತ್ತು ಮಗಳು ಅಥವಾ ಆಕೆಯ ಅಧಿಕಾರ ಪತ್ರ ಹಿಡಿದು ವ್ಯವಹರಿಸುವ ಮಲಮಗನೊಡನೆ ಉತ್ತರಾಧಿಕಾರದ ಕಾಗದಪತ್ರಗಳನ್ನು ನೇರ್ಪುಗೊಳಿಸುವಲ್ಲಿ ದಲ್ಲಾಳಿ ಸೋತ. ದಿನಗಳೆದವು. ಅಜ್ಜಿಯ ಕಾಲವೂ ಮುಗಿಯಿತು.
ಸುಮಾರು ಒಂದು ವರ್ಷವೇ ಕಳೆದ ಮೇಲೆ ಅದೊಂದು ದಿನ ಮಲಮಗ ಚಿಕ್ಕಮ್ಮನಿಂದ ದತ್ತವಾದ ಅಧಿಕಾರ ದಂಡ ತಿರುವುತ್ತಾ ನೇರ ನನ್ನ ಸಂಪರ್ಕಕ್ಕೆ ಬಂದ. ಒಂದು ಲಕ್ಷ ಕೊಟ್ಟು ಬಿಡಿ, ನೆಲ ಸ್ವಾಧೀನಕ್ಕೆ ತೆಗೆದುಕೊಳ್ಳಿ ಎಂದ. ಈತ ವಿಕ್ಷಿಪ್ತ ಮನಸ್ಕ ಅಥವಾ ದುರಾಸೆಯವ. ದಲ್ಲಾಳಿ ತನ್ನ ಮುಂಗಡ ವಾಪಾಸಾತಿಗೆ ವ್ಯಾಜ್ಯ ಹೂಡಿದ್ದ. ಮಲಮಗ ಆತನಿಗೇನೂ ದಕ್ಕುವುದಿಲ್ಲ ಎಂದನಾದರೂ ಕಾನೂನು ಕ್ರಮ ಪೂರ್ಣಗೊಳಿಸಿರಲಿಲ್ಲ. ಅಜ್ಜ ಕಟ್ಟಿದ್ದ ಭದ್ರ ಕಾಡುಕಲ್ಲಿನ ಗೋಡೆಯನ್ನಷ್ಟೂ ಕಳಚಿ ಕಲ್ಲನ್ನು ಯಾರಿಗೋ ಮಾರಿಬಿಟ್ಟಿದ್ದ. ಆದರೆ ಜಾಗ ಅಕ್ರಮ ಒಕ್ಕಲಾಗದಂತೆ ನೋಡಿಕೊಳ್ಳಲು ಸ್ಥಳೀಯ ಕುಟುಂಬ ಒಂದನ್ನು ನಿಲ್ಲಿಸಿದ್ದ. ಈಗ ಕೊಂಡರೆ ಆ ಒಕ್ಕಲನ್ನು ‘ಎಬ್ಬಿಸುವ’ ಜವಾಬ್ದಾರಿ ನನಗೇ ಬರಲಿತ್ತು. ಎಲ್ಲಕ್ಕೂ ಮಿಗಿಲಾಗಿ ಇನ್ಯಾರೋ ಹೆಚ್ಚಿನ ದರಕ್ಕೆ ಬರುವ ಒತ್ತಾಯ ತರುತ್ತಿದ್ದಾರೆಂದು, ದಿನಕ್ಕೊಂದು ದರ ಹೇಳತೊಡಗಿದ. ನಾನು ವ್ಯಾಜ್ಯ ಕೊಳ್ಳುವ ಉತ್ಸಾಹದಲ್ಲಿರಲಿಲ್ಲ. ಕುಶಿವಾಸಿ ಹಣ ಎಸೆಯಲು ನಾನು ನೋಟಿನ ಮರವನ್ನೂ ಬೆಳೆಸಿರಲಿಲ್ಲ. ಸ್ವಲ್ಪ ಹತಾಶೆಯಲ್ಲೆ ಪೂರ್ಣ ಕಳಚಿಕೊಂಡೆ. ಸುಮಾರು ಎರಡು ವರ್ಷಗಳನಂತರ ಕುತೂಹಲಕ್ಕೆ ಅತ್ತ ಹೋಗಿದ್ದೆ. ಅದನ್ಯಾರೋ ಭಾರೀ ಬೆಲೆಗೇ ಕೊಂಡು, ಅಷ್ಟಕ್ಕೂ ಏಳೆಂಟು ಅಡಿ ಎತ್ತರದ ಕಗ್ಗಲ್ಲ ಗೋಡೆ ಕಟ್ಟಿಸಿ, ಮೇಲೆ ಮುಳ್ಳತಂತಿ ಬೇಲಿ ಹಾಕಿಸಿ, ಭಾರಿ ಕೋಟೆ ಬಾಗಿಲಿನಂಥಾ ಪಡಿ ಮುಚ್ಚಿ, ಶಿಸ್ತಿನ ಕಾವಲು ಇಟ್ಟದ್ದು ಕಂಡು ಗಾಬರಿಗೆಟ್ಟು ಹೋದೆ. (ಈಗ ಯೋಚಿಸುವಾಗ, ಅಬ್ಬೊಟಾಬಾದಿನ ಲಾದೆನ್ ನಿವಾಸವೂ ಇಷ್ಟು ಬಲವಾಗಿದ್ದಿರಲಾರದು ಎಂದೇ ಅನಿಸುತ್ತದೆ) ಆ ನೆಲದೊಡನೆ ನನ್ನ ಪರಿಚಯ ಹೇಳಿಕೊಂಡು ಕಾವಲುಗಾರನನ್ನು ಮಾತಾಡಿಸಿದೆ. ಅಷ್ಟಕ್ಕೆ ಒಂದೇ ವಾರದಲ್ಲಿ ಅದರ ವರ್ತಮಾನದ ಯಜಮಾನರಿಂದಲೂ ನನಗೆ “ಜಾಗ ಬೇಕಾ”ಂತ ವಿಚಾರಣೆ ಬಂದದ್ದು (ದರ ಮಾತ್ರ ಸುಮಾರು ಐವತ್ತು ಲಕ್ಷದ ಮೇಲೆ!) ನಿಜಕ್ಕೂ ತಮಾಷೆಯೇ ಸರಿ.
ಕಾಲಕೋಶದಲ್ಲಿ ಇನ್ನೂ ಸ್ವಲ್ಪ ಹಿಂದೆ ಬನ್ನಿ. ನಾನಾಗ ಮಂಗಳೂರಿನಲ್ಲಿ ಪುಸ್ತಕ ಮಳಿಗೆ ತೆರೆಯಲು ಜಾಗ ಹುಡುಕುತ್ತಾ ಇದ್ದವನು ಹೀಗೇ ಬೆಳ್ಳಾರೆಯ ಚಿಕ್ಕಮ್ಮನ ಮನೆಗೆ ಹೋಗಿದ್ದೆ. ಅಲ್ಲಿ ಚಿಕ್ಕಪ್ಪ - ಮಠತಡ್ಕ ಕೇಶವ ಭಟ್ಟರ ಆತ್ಮೀಯ ಜೋಯಿಸರೊಬ್ಬರು ನನ್ನ ಜಾತಕ ನೋಡಿ “ಈತ ಕೃಷಿಯಲ್ಲಿ ನೆಲೆಸುತ್ತಾನೆ” ಎಂದೇ ಭವಿಷ್ಯ ನುಡಿದಿದ್ದರು! ಈಗ ನಾನು ಜಾಗ ಹುಡುಕುತ್ತಿರುವುದು ನೋಡಿದಾಗ ನನ್ನ ಸಂಬಂಧಿಕರೆಲ್ಲರ (ಹೆಚ್ಚಿನವರು ಕೃಷಿಕರೇ) ಮುಖದ ಮೇಲೂ ಸಣ್ಣ ತುಂಟ ನಗೆ - ಅಶೋಕ ಜೋಯಿಸರ ನುಡಿಯಂತೆ ಕೊನೆಗೂ ಆಸ್ತಿ ಮಾಡ್ತಾನೆ! ಹಾಗೇ ಅಷ್ಟೆಕ್ರೆ ತೋಟ, ಇಷ್ಟು ಅಡಿಕೆ, ಮತ್ತಷ್ಟು ತೆಂಗು, ಮೇಲೆ ಗೇರುಗುಡ್ಡೆ, ಗಟ್ಟಿಮನೆ, ತೋಡು, ಕೆರೆ ಬಿಡುನೀರು ಎಂದೆಲ್ಲಾ ಲೆಕ್ಕಗಳು ಬರತೊಡಗಿದವು. ನಾನು ಅಂಥವನ್ನು ಕೊಂಡರೂ ಮತ್ತೆ ‘ಹಾಳುಬೀಳಿಸುವ’ ಯೋಚನೆ ಉಳಿಸಿಕೊಂಡೇ ನೋಡಿದರೂ ಎಲ್ಲ ನನ್ನ ಆರ್ಥಿಕ ತಾಕತ್ತಿಗೆ ತುಂಬಾ ಮೀರಿದವೇ ಇರುತ್ತಿದ್ದವು. ಆಗ ಅದೃಷ್ಟಕ್ಕೆ ನನ್ನ ಇನ್ನೊಂದೇ ಚಿಕ್ಕಮ್ಮ - ಭವಾನಿಯ (ಚಿಕ್ಕಪ್ಪ - ಗೋಪಾಲ ಭಟ್ಟರ) ನೆಲದ ಒಂದಂಚು ಅಂದರೆ ಇಂದಿನ ನನ್ನ ‘ಅಭಯಾರಣ್ಯ’ದ ನೆಲ ದಕ್ಕಿತು.
ಮಂಗಳೂರಿನ ಸಿಟಿ ಬಸ್ಸುಗಳೂ ಓಡಾಡುವ ಸ್ಥಳವಾದರೂ ಬಂಟವಾಳ ತಾಲೂಕಿನ ಪರಿಧಿಯೊಳಗೆ ಬರುವ ನೆಲವಿದು. ಅವರ ಆಸ್ತಿ - ಎಡೆಂಬಳೆಯ ಇನ್ನೊಂದೇ ಕೊನೆಯ ಈ ಮುಳಿಗುಡ್ಡೆಯ ನೆತ್ತಿಯನ್ನು ಹಿಂದೊಮ್ಮೆ ಮುರಕಲ್ಲು ತೆಗೆಯುವವರಿಗೆ ಗುತ್ತಿಗೆ ಕೊಟ್ಟಿದ್ದರು. ಸಾಕಷ್ಟು ಕಲ್ಲು ಹೋದರೂ (ಸಾಕ್ಷಿಯಾಗಿ ನೆಲದಲ್ಲಿ ಆರೆಂಟು ಭಾರೀ ಹೊಂಡಗಳನ್ನು ಈಗಲೂ ನೋಡಬಹುದು) ಅಷ್ಟೇನೂ ಗಟ್ಟಿಯ ಮಾಲಲ್ಲವೆಂದು ಕೈಬಿಟ್ಟರಂತೆ. ಮತ್ತೊಂದು ಕಾಲದಲ್ಲಿ ಭೂಮಿತಿಯ ತೊಂದರೆ ಬಂದೀತೆಂದು ಈ ಕೊನೆಯ ನೆಲವನ್ನು ಕೆಲವು ತುಣುಕು ಮಾಡಿ ಚಿಕ್ಕಪ್ಪ ಮಾರಿದ್ದರು. ಆಗ ಒಬ್ಬ ಸಾಮಾನ್ಯ ಈ ಒಂದೆಕ್ರೆ ಕೊಂಡು ಕೃಷಿ ರೂಢಿಸಲು ಬಹಳ ಹೆಣಗಿದನಂತೆ. ಒಂದು ಕಲ್ಪಣೆಯಾಳದಲ್ಲಿ ಬಾವಿ ತೋಡಿದ್ದ. ಹತ್ತಿಪ್ಪತ್ತಡಿ ಆಳದಲ್ಲಿ ತೆಳು ನೀರು ಸಿಕ್ಕಿದ್ದರೂ ಸೇಡಿ ಮಣ್ಣಿಂದಾಗಿ ಆಳಕ್ಕೆ ಹೋಗಲು, ದಂಡೆ ಕುಸಿತದಿಂದ ಉಳಿಸಿಕೊಳ್ಳಲೂ ಆಗದೆ ಹೆಣಗಿದ್ದ. ನೀರು ಹೇಗಾದರೂ ಮಾಡುತ್ತೇನೆಂಬ ಧೈರ್ಯದ ಮೇಲೆ ಹತ್ತಿಪ್ಪತ್ತು ತೆಂಗಿನ ಸಸಿಯನ್ನೂ ಇಟ್ಟ. ಆದರೆ ಮುರ ಹಾಸಿನ ಮೇಲಿನ ಮಣ್ಣಿನ ಪದರ ಏನೇನೂ ಪ್ರೋತ್ಸಾಹದಾಯಕವಾಗಲಿಲ್ಲ. ಆತ ಛಲಬಿಡದೆ ಬೆವರನ್ನು ನೀರಾಗಿ ಹರಿಸಿ ಸಲಹಿದ ತೆಂಗಿನ ಬುಡಗಳಲ್ಲಿ ಇಂದು ಸುಮಾರು ಹತ್ತು ಬದುಕುಳಿದಿರುವುದೇ ಒಂದು ವಿಶೇಷ (ಅದರಲ್ಲೂ ಮೂರು ನಾಲ್ಕು, ನಾವೇನೂ ಮಾಡದೆ, ವರ್ಷಕ್ಕೆ ಹತ್ತಿಪ್ಪತ್ತು ಕಾಯಿ ಬಿಡುತ್ತಿದೆ!). ಅಲ್ಲಿ ಗೇರು ಬುಡಗಳು ಮೊದಲೇ ಇದ್ದಿರಬೇಕು. ಮತ್ತೆ ಖಾಲಿ ಬಿದ್ದಲ್ಲಿ ಆತ ಸೇರಿಸಿದ್ದೂ ಇರಬೇಕು. ಇಷ್ಟರಲ್ಲಿ (ಎಲ್ಲೋ ಇದ್ದುಕೊಂಡು, ಇನ್ನೇನೋ ವೃತ್ತಿಯಲ್ಲಿ ಹೊಟ್ಟೆಬಟ್ಟೆಸಂಸಾರವೆಂದುಕೊಂಡು ನಿಭಾಯಿಸಿದ) ಆತನ ಆರ್ಥಿಕತೆ ನೆಲಕಚ್ಚಿ ನೆಲ ಮಾರಲು ಪ್ರೇರೇಪಿಸಿರಬೇಕು. ಕಾಲ ಬದಲಾದ್ದರಿಂದ, ಮೊದಲು ಮಾರಿದ್ದ ನನ್ನ ಚಿಕ್ಕಪ್ಪ ಮರಳಿ ಕೊಂಡರು. ಮತ್ತೆ ವರ್ಷ ಕಳೆಯುವುದರೊಳಗೆ, ನಾನು ಒಲವು ತೋರಿದ್ದಕ್ಕೆ, ಕೇವಲ ನನ್ನ ದಾಕ್ಷಿಣ್ಯಕ್ಕೆ ನನಗದನ್ನು ಮಾರಿದರು.
ಅಭಯಾರಣ್ಯಕ್ಕೆ ಎದುರಿನ ದಾರಿ ಬದಿಗೆ ಬಲವಾದ ಗೇಟು ಸಹಿತ, ಉಳಿದಂತೆ ಎಡ ಮತ್ತು ಹಿಮ್ಮಗ್ಗುಲಿನ ಖಾಸಗಿ ಜಮೀನುಗಳ ನಡುವೆ ಸ್ಪಷ್ಟ ನಾಲ್ಕಡಿ ಎತ್ತರದ ಮುರಕಲ್ಲ ಆವರಣ ಕಟ್ಟಿಸಿದೆ. ಚಿಕ್ಕಮ್ಮನ ನೆಲದ ಕಡೆಗೆ ಅಂದರೆ, ತೆರೆದುಕೊಂಡ ನಾಲ್ಕನೇ ಬದಿಗೆ ಹಿಂದಿನವನು ತೋಡಿಸಿದ ಸಣ್ಣ ಅಗಳೂ ಚದುರಿದಂತಾ ಹಸಿರು ಬೇಲಿಯನ್ನೇ ಉಳಿಸಿಕೊಂಡೆ. ಬಾವಿಯ ಅವಶೇಷಕ್ಕೆ ಅನಿವಾರ್ಯವಾಗಿ ಕಾಂಕ್ರೀಟ್ ರಿಂಗುಗಳನ್ನು ಇಳಿಸಿ ಸುಮಾರು ನಲವತ್ತೆರಡು ಅಡಿ ಆಳದಲ್ಲಿ ನಮ್ಮ ಪ್ರಯೋಗಕ್ಕೆ ಸಾಕೆನ್ನುವಷ್ಟು ನೀರು (ಬಾವಿಗೆ ಹೆಸರು - ಮೃಗಜಲ!) ಕಂಡುಕೊಂಡೆ. ಆ ಕಲ್ಪಣೆಯ ಮೇಲಂಚಿನಲ್ಲೇ ‘ಕಾಡ್ಮನೆ’ಯ ಹೊಳಹೂ ಹಾಕಿದೆ. ಅಲ್ಲಿದ್ದ ಒಂದು ದಡ್ಡಾಲ, ಸ್ವಲ್ಪ ಅಂತರಬಿಟ್ಟು ಸುಂದರ ಬಳುಕಿನ ಎಂಜಿರ ಹಾಗೂ ಒಂದು ಕಾಟುಮಾವಿನ ಸಹಯೋಗದ ಪೊದರಿಗೆ ಹಾನಿಯಾಗದಂತೆ ಮನೆಯ ಎದುರಂಚಿನ ಗೀಟೆಳೆದೆವು. ಮುಳ್ಳಹೊಂಗಾರೆ, ಗೇರು, ಕುಂಟಾಲ ಮತ್ತು ಎಂಜಿರ ಬುಡಗಳನ್ನಾವರಿಸಿಕೊಂಡು ಹಬ್ಬಿದ್ದ ಹುತ್ತಕ್ಕೆ ಬಾಧೆಯಾಗದಂತೆ ಎಡ ಅಂಚಿನ ಗೀಟು. ಹಾಗೇ ಹಿತ್ತಿಲ ಗೀಟಿನ ಬಲ ಕೊನೆ ನಿರ್ಧರಿಸಲು ಇನ್ನೊಂದು ಕುಂಟಾಲ, ಎಂಜಿರಗಳ ಬುಡದೊಡನೆ ಹುತ್ತ ಒದಗಿತು. ಬಲ ಅಂಚು ನಮ್ಮ ಮಿತಿಯಲ್ಲಿ ಮುಕ್ತವೇ ಇತ್ತು. ನೆಲ ಹೆಚ್ಚು ಕಡಿಮೆ ಸಮತಟ್ಟಾಗಿಯೇ ಇದ್ದುದರಿಂದ ಕೆತ್ತುವ ಕೆಲಸ ಉಳಿಯಿತು. ಮಣ್ಣು ಗೀರಿದರೂ ಸ್ಪಷ್ಟ ಮುರಕಲ್ಲಿನ ಹಾಸೇ ಇದ್ದುದರಿಂದ ಅಡಿಪಾಯಕ್ಕೂ ಹೆಚ್ಚು ತೋಡುವುದು ಅನಗತ್ಯವಿತ್ತು. ಈ ಪಾಕೃತಿಕ ಸತ್ಯಗಳೇ ನಮ್ಮ (ಈ ವಿಚಾರಗಳಲ್ಲೆಲ್ಲ ನನ್ನ ಹೆಂಡತಿ ದೇವಕಿಯದು ಎಂದೂ ಭಿನ್ನಾಭಿಪ್ರಾಯವಿರಲೇ ಇಲ್ಲ) ವಾಸ್ತು. ಇಂಜಿನಿಯರುಗಳನ್ನು ಕಂಡದ್ದಿಲ್ಲ, ಜೋಯಿಸರನ್ನು ಕೇಳಿದ್ದಿಲ್ಲ. ಮೂರು ಗೀಟು ಅಡ್ಡಕ್ಕೆ, ಮೂರು ಉದ್ದಕ್ಕೆ. ಒಳಗೆ ಒಂದೆರಡು ಕುಸುರಿ, ಮೇಲೊಂದು ಮುಚ್ಚಿಗೆ; ಅಡಿಕೋಲು, ಪೆನ್ಸಿಲ್ ಹಿಡಿದು ನಾನು ಕಾಗದ ತುಂಬಿದ್ದೇ ನಕ್ಷೆ. ಮಳೆಗಾಲದ ತೀವ್ರತೆ ಇಳಿದ ಒಂದು ಆದಿತ್ಯವಾರ ಬೆಳಿಗ್ಗೆಯೇ ಸುಮುಹೂರ್ತ - ನೇರಾನೇರ ನಮ್ಮ ಕಾರ್ಯಾರಂಭ.
ಚಿಕ್ಕಮ್ಮನ ತೋಟದ ಕೆಲಸಕ್ಕೆ ಕೊಡಗಿನ ಮೂಲೆಯಿಂದ ಕೂಲಿಕಾರನಾಗಿ ಬಂದು ಸೇರಿದ್ದ ಅಣ್ಣಪ್ಪ ಉರುಫ್ ಅಣ್ಣು ಎಂಬ ಬಾಲಕ, ಐದಾರೇ ವರ್ಷಗಳಲ್ಲಿ ಸ್ವಂತ ಬುದ್ಧಿ, ಶ್ರಮ, ಕಲಿಕೆಗಳನ್ನು ಹುರಿಮಾಡಿ ಒಳ್ಳೆಯ ಸಿಮೆಂಟ್ ಕೆಲಸಗಾರನಾಗಿ ವಿಕಸಿಸಿದ್ದ. ಇವನೇ ನಮಗೆ ಎಂಜಿನೇರು, ಕಂತ್ರಾಟುದಾರ ಮತ್ತು ಮುಖ್ಯ ಮೇಸ್ತ್ರಿ. ಅವನಣ್ಣ (ಹೆಸರಿನಲ್ಲಿ ಮಾತ್ರ) ಸಣ್ಣಪ್ಪ ಉರುಫ್ ಸಣ್ಣು, ಕೊನೆಯಲ್ಲಿ ಸೇರಿಕೊಂಡ ತಮ್ಮ ಶಂಕರ, ಗೆಳೆಯ ರಾಮಣ್ಣ ಆಗೀಗ ಸೇರಿಕೊಳ್ಳುತ್ತಿದ್ದ ಆ ಈ ಕೂಲಿಕಾರರೇ ನಮ್ಮ ಬಿಲ್ಡರ್ಸ್! ಗೋಡೆ ಸ್ಥಳೀಯ ಮುರಕಲ್ಲಿನದೇ. ಹೊರಗೆ ಗೀಟು, ಒಳಗಿನಿಂದ ಸಾರಣೆ. ಅಲ್ಲಿಲ್ಲಿ ಕೇಳಿದ್ದಕ್ಕೆ ಒಂದೆರಡು ‘ನೋಡಿ’ ಸೇರಿಸಿ ಕುಂದಾಪುರದ ಪ್ರಕಾಶ್ ಟೈಲ್ಸ್ನವರೊಡನೆ ಒಪ್ಪಂದಕ್ಕೆ ಬಂದೆ. ಅವರ ಗುಲ್ವಾಡಿ ಶಾಖೆಯಿಂದ ಹಾಲೋ ಬ್ಲಾಕ್ಸ್ ಮತ್ತು ಅದನ್ನು ಕೂರಿಸುವ ಪರಿಣತ ನಾಗಪ್ಪಯ್ಯ ಮತ್ತೊಬ್ಬ ಸಹಾಯಕ ಮುಂದಾಗಿ ಬಂದು (ಚಿಕ್ಕಮ್ಮನಲ್ಲಿದ್ದುಕೊಂಡು) ಪೂರ್ವತಯಾರಿಯನ್ನೂ ಇನ್ನೊಮ್ಮೆ ಸಕಾಲಕ್ಕೆ ಬಂದು, ಸ್ಥಳೀಯ ಸಹಾಯದೊಡನೆ ತಾರಸಿಯನ್ನೂ ಚೊಕ್ಕ ಮಾಡಿಕೊಟ್ಟರು. ಕಿಟಕಿ ಬಾಗಿಲ ಚೌಕಟ್ಟುಗಳೆಲ್ಲಾ ಕುತ್ತಾರಿನ ರಿಲಯೆನ್ಸ್ನವರ ಕಾಂಕ್ರೀಟು ರಚನೆಗಳು (ಗೆದ್ದಲು ನಿವಾರಣೆಗೆ). ಮುಖ್ಯ ಎರಡು ಬಾಗಿಲಪಡಿಗಳನ್ನು ಕಬ್ಬಿಣದಲ್ಲಿ ಮಂಗಳೂರಿನಲ್ಲಿ ನಾನೇ ಮಾಡಿಸಿದರೆ ಕಿಟಕಿ ಸೇರಿದಂತೆ ಉಳಿದೆಲ್ಲವೂ ರಿಲಯನ್ಸಿನವರದೇ ಫೈಬರ್ ನಿರ್ಮಾಣಗಳು. (ನಿತ್ಯ ಬಳಕೆಯಲ್ಲಿಲ್ಲದೇ ಹವಾ ವೈಪರೀತ್ಯಗಳನ್ನು ಎದುರಿಸಿ ಉಳಿಯಬೇಕೆಂಬ ಉದ್ದೇಶ.) ನೆಲಕ್ಕೆ ಬಚ್ಚಲಿಗೆ ವಿಶೇಷ ನಯಗಾರಿಕೆ ಇಲ್ಲದ ಕಗ್ಗಲ್ಲ ಹಾಸು. ಉಳಿದಂತೆ ಕಡಪ ಕಲ್ಲಿನ ಜೋಡಣೆ. (ಕೂರಿಸಿದ ಮೇಲೆ ಮಶಿನ್ ಪಾಲಿಷ್ ಮಾಡಿಸುವ ಗೋಜಿಗೆ ನಾವು ಹೋಗಲಿಲ್ಲ) ಮೊದಲೇ ಸ್ಪಷ್ಟವಾಗಿ ನಿರ್ಧರಿಸಿದ್ದಂತೆ ವಿದ್ಯುತ್ ಸಂಪರ್ಕ ತೆಗೆದುಕೊಳ್ಳಲಿಲ್ಲ. ಸಹಜವಾಗಿ ಪಂಪು, ಎತ್ತರದ ಟಾಂಕಿ, ನಳ್ಳಿಜೋಡಣೆಗಳ ಅವಶ್ಯಕತೆಯೂ ಬರಲೇ ಇಲ್ಲ. ಹಾಲೋ ಬ್ಲಾಕ್ಸ್ ಮತ್ತು ಪಡಿಜೋಡಣೆಯ ಕೆಲಸಗಳನ್ನುಳಿದು ಮೊದಲ ಪಿಕ್ಕಾಸು ಹೊಡೆತದಿಂದ ತೊಡಗಿ, ಸುಣ್ಣಬಣ್ಣದವರೆಗೆ ಮತ್ತೆಲ್ಲವನ್ನೂ ಚೊಕ್ಕವಾಗಿ ಸ್ವತಃ ಮಾಡಿಕೊಟ್ಟ ಅಣ್ಣು-ಸಣ್ಣು ಬಳಗವನ್ನು ಎಷ್ಟು ಹೊಗಳಿದರೂ ಕಡಿಮೆಯೇ. ಏನು ಹೇಳಿದರೂ ಬಿಟ್ಟರೂ ಅವೆಲ್ಲವೂ ಅಂತಿಮವಾಗಿ ಒಂದು ಹಣಕಾಸಿನ ವಹಿವಾಟು. ಆದರೆ ಸಂಬಂಧದ ಆಕಸ್ಮಿಕಕ್ಕೆ, ಪ್ರೀತಿಯ ಬಂಧಕ್ಕೆ ಈ ಕೆಲಸದುದ್ದಕ್ಕೂ (ಮಂಗಳೂರಿನಲ್ಲಿ ನಿತ್ಯಕರ್ಮ ನಿರತನಾಗಿ, ತೀವ್ರ ಅಗತ್ಯಬಾರದಿದ್ದರೆ ವಾರಕ್ಕೊಮ್ಮೆ ಮಾತ್ರ ಭೇಟಿಕೊಡುತ್ತಿದ್ದ) ನಮ್ಮ ಉಪಸ್ಥಿತಿಯ ಕೊರತೆ ಎಲ್ಲೂ ಕಾಣದಂತೆ, ತಮ್ಮದೇ ಕಾರ್ಯಕ್ರಮ ಎನ್ನುವಂತೆ ಮುಖ್ಯವಾಗಿ ಚಿಕ್ಕಮ್ಮನ ಮಗ (ತಮ್ಮ) ಸತ್ಯನಾರಾಯಣ, ಉರುಫ್ ಸತ್ಯ, ಕುಟುಂಬದೊಳಗೆ ಕರೆಯುವಂತೆ ಪಾಪಣ್ಣ ಮತ್ತು ಚಿಕ್ಕಪ್ಪ - ಗೋಪಾಲ ಭಟ್ಟರು ಪಟ್ಟ ಶ್ರಮಕ್ಕೆ ನನ್ನಲ್ಲಿ ನಿಜಕ್ಕೂ ಮಾತಿಲ್ಲ.
[caption id="" align="alignleft" width="327" caption="ಈ ಆಮಂತ್ರಣದಲ್ಲಿರುವ ಕಾಡ್ಮನೆಯ ಪ್ರವೇಶದ್ವಾರಕ್ಕೂ ಲೇಖನದ ಮೊದಲಲ್ಲಿ ಇರುವ ಚಿತ್ರದಲ್ಲಿ ಕಾಣುತ್ತಿರುವ ಇಂದಿನ ಪ್ರವೇಶದ್ವಾರಕ್ಕೂ ಇರುವ ವನ್ಯ ಬೆಳವಣಿಗೆಯನ್ನು ಗಮನಿಸಿ."]


ಅತ್ರಿ ಬುಕ್ ಸೆಂಟರ್ ಸುರು ಮಾಡಿ ಇಪ್ಪತ್ತೈದು ವರ್ಷವಾದದ್ದು (೧೯೭೫-೨೦೦೦) ಆ ಸಮಾರಂಭಕ್ಕೆ ಒಂದು ನೆಪ. ಹಾಗಾಗಿ “ಜೀವನ ಮಹಾಯಾತ್ರೆಯಲ್ಲಿ ಏಕೆ, ವ್ಯಕ್ತಿಯ ಆಯುಃ ಪ್ರಮಾಣದಲ್ಲೂ ೨೫ ವರ್ಷ ಹಿರಿಯ ಅವಧಿ ಏನೂ ಅಲ್ಲ. ಆದರೆ ನನ್ನದು ಪಥಿಕನ ದೃಷ್ಟಿ. ನಾನು ಅನುಭವಿಸಿದ ನೂರು ಸಾವಿರ ಆಸರೆ ಆರೈಕೆಗಳ ನೆನಪಿನ್ ಹೊರೆ ನನ್ನ ಮೇಲಿದೆ. ಇವನ್ನೆಲ್ಲ ವಿವರಗಳಲ್ಲಿ ನೆನಪಿಡಲು ಆಗದು. ಪಡೆದ ಸಾಲದಂತೆ ತೀರಿಸಬೇಕಾದವೂ ಅಲ್ಲ ಇವು. ಆದರೆ ಎಲ್ಲೋ ಒಮ್ಮೆ ಗುರುತಿಸಿ ಸಂಭ್ರಮಿಸಬೇಕಾದವು ಹೌದು. ಆ ಕಾರಣ ಪ್ರಾತಿನಿಧಿಕವಾಗಿ ಕೆಲವರನ್ನು ಒಂದು ವಿಶಿಷ್ಟ ಆದರೆ ಸರಳ ಸಂತೋಷ ಸಮಾರಂಭಕ್ಕೆ ಕರೆಯುತ್ತಿದ್ದೇವೆ. ಆ ವಿಶಿಷ್ಟರಲ್ಲಿ ಒಬ್ಬರಾದ ನೀವು ಅವಶ್ಯ ಇದೇ ಜನವರಿ ೧೬, ಆದಿತ್ಯವಾರದಂದು (೧೬-೧-೨೦೦೦) ಪ್ರತ್ಯೇಕವಾಗಿ ಕಾಣಿಸಿರುವ ಸ್ಥಳ, ವೇಳೆ ಮತ್ತು ಕಾರ್ಯಕ್ರಮದಲ್ಲಿ ವಿರಾಮದಲ್ಲಿ ಭಾಗಿಯಾಗಲು ಬರಬೇಕೆಂದು ಕೇಳಿಕೊಳ್ಳುತ್ತೇವೆ.”
[ಕಾರ್ಯಕ್ರಮ ಪಟ್ಟಿಯಲ್ಲಿ ಸುಬ್ರಾಯ ಚೊಕ್ಕಾಡಿಯವರಿಂದ ಆಶಯ ಗೀತೆಯ ವಾಚನ. ಖಾಸಗಿ ಕಾಡಿನ ಪರಿಕಲ್ಪನೆಯನ್ನು ಪರಿಚಯಿಸಲಿದ್ದವರು ಶ್ರೀಪಡ್ರೆ. ಸ್ಫೂರ್ತಿಗೀತೆಯಾಗಿ ಗೋಪಾಲಕೃಷ್ಣ ಅಡಿಗರ ರಚನೆಯ ಗಾಯನ ಗುರುರಾಜ ಮಾರ್ಪಳ್ಳಿ ಮತ್ತು ರವಿಕಿರಣ. ಅತ್ರಿಯ ಹೊಸ ಪ್ರಕಟಣೆ - ಸಪ್ತಸಾಗರದಾಚೆಯೆಲ್ಲೋದ ಲೋಕಾರ್ಪಣ ಕೆ. ಕುಶಾಲಪ್ಪ ಗೌಡರಿಂದ. ಕೊನೆಯದಾಗಿ ವನ್ಯಸಂರಕ್ಷಣೆಯ ಸ್ಪಷ್ಟ ಸಂದೇಶವನ್ನು ಕೊಡುವಂತಿದ್ದ ಮಾರಿಷಾ ಕಲ್ಯಾಣ (ಪ್ರಸಂಗ ರಚನೆ - ಅಮೃತ ಸೋಮೇಶ್ವರ) ತಾಳಮದ್ದಳೆ. ಹಿಮ್ಮೇಳದಲ್ಲಿ ಭಾಗವತ - ವೆಂಕಟ್ರಮಣ ಐತಾಳ ಮತ್ತು ಬಳಗ. ಮುಮ್ಮೇಳದಲ್ಲಿ ಪ್ರಭಾಕರ ಜೋಶಿ, ಕುಂಬಳೆ ಸುಂದರರಾವ್, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಎಂ. ಎಲ್ ಸಾಮಗ, ವಿಟ್ಲ ಶಂಭುಶರ್ಮ ಮತ್ತು ಭಾಸ್ಕರ ರೈ ಕುಕ್ಕುವಳ್ಳಿ. ಹೆಚ್ಚಿನ ವಿವರಗಳಿಗೆ ಮುಂದಿನ ಕಂತನ್ನು ತಪ್ಪದೇ ನೋಡಿ.]
(ಮುಂದುವರಿಯಲಿದೆ)
ವನ್ಯ ಪುನರುತ್ಥಾನದ ಸಣ್ಣ ಪ್ರಯೋಗದ ವಿವರಗಳನ್ನು ಓದು ತುಂಬ ಸಂತೋಷವಾಯಿತು.
ReplyDeleteಅಲ್ಪ ಸ್ವಲ್ಪ ಅದರ ಬಗ್ಗೆ ತಿಳಿದಿದ್ದ ವಿಷಯವನ್ನು ವಿವರವಾಗಿ ತಿಳಿಸಿದಾಗ ಅದರ ಆಶಯ, ಸಾಧನೆಗಳು ಅನೇಕರಿಗೆ ಸ್ಫೂರ್ತಿಯಾಗುವುದೆಂಬ ನಂಬಿಕೆ ನನ್ನದು.
ಒಳ್ಳೆಯದಾಗಿದೆ.
ReplyDeleteನಿನ್ನ ಕಾಡ್ಮನೆ ಉರುಫ್ ಅಭಯಾರಣ್ಯದ ಕುರಿತು ಕೊಂದಲಕಾನದ ಶಂಕರನಿಂದ ಅಲ್ಲಸ್ವಲ್ಪ ವರ್ಣನೆ ಕೇಳಿದ್ದೆ. ಅಭಾಯರಣ್ಯದೊಳಗೆ ಒಂದು ಸುತ್ತನ್ನು ಲೇಖನ+ಫೋಟೋಗಳ ಮೂಲಕ ಹಾಕಿಸುವೆ ಎಂದು ನಂಬಿದ್ದೇನೆ.
ReplyDeleteನಿಮ್ಮ ಅಭಯಾರಣ್ಯದ ಬಗ್ಗೆ ಕೇಳಿದ್ದೆ. ನಿಮ್ಮ ಬ್ಲಾಗಿನಲ್ಲಿ ಅದರ ಬಗ್ಗೆ ಓದಿದಾಗ, ನಾನು ಮ೦ಗಳೂರಿನಲ್ಲಿರುವಾಗ ನಿಮ್ಮನ್ನು ಸ೦ಪರ್ಕಿಸದೆ ಅದನ್ನು ನೋಡುವ ಭಾಗ್ಯ ಕಳೆದುಕೊ೦ಡೆ ಎ೦ದೆನಿಸಿತು.
ReplyDeleteನಿಮ್ಮ ಬರಹಗಳು ಬಹಳ ಚೆನ್ನಾಗಿವೆ.
ReplyDeleteಬೇಕಾದಷ್ಟು ಕೆಲಸದವರು ಇದ್ದಾಗ ನಾವು ಅಡಿಕೆ ತೋಟಕ್ಕೆಂದು ಗುಡ್ಡದ ಸೊಪ್ಪು ಬೋಳಿಸುತ್ತಿದ್ದೆವು. ಈಗ ಕತ್ತಿ ಪ್ರಯೋಗ ನಿಂತ ನಂತರ ನನಗೆ ಆಶ್ಚರ್ಯವೆನಿಸುವಂತೆ ಕಾಡು ಬೆಳೆದಿದೆ. ಚಿತ್ರ ಬರಹ ಕುಶಿಯಾಯಿತು.
ReplyDelete