(ಜಲಪಾತಗಳ ದಾರಿಯಲ್ಲಿ ಭಾಗ ಐದು)

ಕೆಂಜಳಿಲಿಗೆ ಕಿವಿಯಾಗುವಂತೆ ಮಾಡಿ, ಜಗತ್ತಿನ ಅತಿ ಎತ್ತರದ ಜಲಪಾತ ಚಿರಿಪಿರಿಯಡಿಯಲ್ಲಿ ನಿಮ್ಮನ್ನು ವಾರಕಾಲ ಮಾತ್ರ ಕಾಯಲು ಬಿಟ್ಟವನು ಸುಮಾರು ಹದಿನೈದು ದಿನದ ಮಟ್ಟಿಗೆ ದಾರಿ ತಪ್ಪಿ ಹೋದೆ. ವಾಸ್ತವದಲ್ಲಿ ಯಲ್ಲಾಪುರ ದಾರಿಯಂಚಿನಲ್ಲಿ ನಿಂತ ನಮ್ಮನ್ನು ಮಳೆ, ಅಲ್ಲಲ್ಲ ಜಲಪಾತ ಬೇಗನೇ ಬಿಡುಗಡೆ ಮಾಡಿತ್ತು. ಆದರೆ ನಮ್ಮ ಒಟ್ಟಾರೆ ಓಡಾಟದ ಫಲವಾಗಿ ನಾವು ಎಷ್ಟು ಚುರುಕಾಗಿ ಮುಂದುವರಿದು ಯಲ್ಲಾಪುರ ತಲಪಿದರೂ ಹೋಟೆಲುಗಳಲ್ಲಿ ಊಟಾ ಖೋತಾ ಆಗಿತ್ತು. ಅವಸರವಸರವಾಗಿ ಏನೋ ಒಂದಿಷ್ಟು ಹೊಟೆಲ್ ತಿನಿಸುಗಳನ್ನು (ಜಡ್ಡಿಗದ್ದೆಯ ವಿರಹದಲ್ಲೇ) ಹೊಟ್ಟೆಗೆ ಜಡಿದು, ರಾತ್ರಿಯ ಊಟ-ವಾಸಕ್ಕಿದ್ದ ಅನಿಶ್ಚಿತತೆಯನ್ನು ನಿವಾರಿಸಲು ಮಾಗೋಡಿನತ್ತ ದೌಡಾಯಿಸಿದೆವು.
ಉತ್ತರಕನ್ನಡದಲ್ಲಿ (ಸರಕಾರೀ ಭಾಷೆ) ‘ಸುಮ್ಮನೇ ಸಮುದ್ರ ಸೇರುವ ನೀರನ್ನು ಜನೋಪಯೋಗಿ ಮಾಡುವ ಅಥವಾ ಜನಜೀವನಕ್ಕೇನೂ ಬಾಧೆಯಾಗದಂತೆ ಬರಿಯ ಕಾಡು ಮಾತ್ರ ಮುಳುಗಿಸಿ’ ವಿದ್ಯುತ್ ಬಸಿಯುವ ಭಾರೀ ಯೋಜನೆಗಳು ಬಹು ಪ್ರಚಾರದಲ್ಲಿದ್ದ ಕಾಲವದು. (ಈಗ ಅಭಿವೃದ್ಧಿ ಸಮಷ್ಟಿಗಾಗಿ ವ್ಯಕ್ತಿ ಎಂದು ಘೋಷಿಸಿ, ಪ್ರತಿಯೊಬ್ಬರನ್ನೂ ಒಂದಲ್ಲಾ ಒಂದು ಯೋಜನೆಯಲ್ಲಿ ಹುತಾತ್ಮರನ್ನಾಗಿಸುವಷ್ಟು ಮುಂದುವರಿದಿದೆ. ಕೆಲವೊಮ್ಮೆ ನೀವು ಯಜಮಾನರಾಗಿದ್ದ ನೆಲದಲ್ಲೇ ಕಾಯಿಲಸ್ಥ ಗುಮಾಸ್ತನೋ ಪ್ಯಾದೆಯೋ ಆಗಿ ಉಳಿಯುವಷ್ಟು ಔದಾರ್ಯವನ್ನು ತೋರಿಸುವುದೂ ಇದೆ!) ಸೋಂದಾ ಸ್ವರ್ಣವಲ್ಲಿ ಮಠದ ಸ್ವಾಮಿಗಳು ಇವೆಲ್ಲವುಗಳ ಪ್ರಬಲ ವಿರೋಧೀ ಚಳವಳಿಯ ಮುಂದಾಳ್ತನವನ್ನು ವಹಿಸಿಕೊಂಡು ಮಾಧ್ಯಮಗಳಲ್ಲೆಲ್ಲಾ ರಾರಾಜಿಸುತ್ತಿದ್ದ ಕಾಲವೂ ಹೌದು. ಆಗ ನಾನು ಕೇಳಿದಂತೆ ಒಂದೋ ಜಲಸಮಾಧಿಯಾಗುವ ಅಥವಾ ಜೋಗದಂತೆ ಕೇವಲ ಗತವೈಭವವಾಗುಳಿಯುವ ದೊಡ್ಡ ಹೆಸರು ಮಾಗೋಡು ಅಬ್ಬಿ. ಉ.ಕದಲ್ಲಿ ಪ್ರವಾಸಿಗಳನ್ನೇ ನೆಚ್ಚಿ ಅಂದ ಕಾಲತ್ತಿಲೇ ‘ಅಭಿವೃದ್ಧಿ’ಗೊಂಡ ಏಕೈಕ ಪ್ರಾಕೃತಿಕ ತಾಣ ಈ ಮಾಗೋಡು ಅಬ್ಬಿ. ಆದರೆ ಎಲ್ಲಾ ಸರಕಾರೀ ಯೋಜನೆಗಳಂತೆ ಇಲ್ಲೂ ಹೂಡಿಕೆಯ ತೋರಿಕೆಗೇ ಪ್ರಾಶಸ್ತ್ಯ. ‘ಬಾಳ್ತನ’ ಅಥವಾ ‘ಊರ್ಜಿತ’ ಎಂಬ ಶಬ್ದಗಳು ಸರಕಾರೀ ಕೋಶದಲ್ಲಿ ಎಂದೋ ಅಪಮೌಲ್ಯಗೊಂಡಿರುವುದಕ್ಕೆ ಸ್ಪಷ್ಟ ಸಾಕ್ಷಿ ಇಲ್ಲಿ ಕಾಣಬಹುದಿತ್ತು. ಹುಬ್ಬಳ್ಳಿ ಬಿಟ್ಟ ಹೆದ್ದಾರಿ ಯಲ್ಲಾಪುರ ದಾಟಿ ಕರಾವಳಿಯ ಅಂಕೋಲೆಯತ್ತ ಕೊಳ್ಳ ಹಾರಿಕೊಳ್ಳುವ ಮುನ್ನ ನಾವು ಎಡದ ಕವಲು ಹಿಡಿದೆವು. ಆರೇಳು ಕಿಮಿ ಅಂತರದಲ್ಲಿ ನಿರ್ವಸಿತಗೊಂಡ ಪೊಲೀಸ್ ತರಬೇತಿ ಕೇಂದ್ರ (ಬರಲಿದ್ದ ಅಣೆಕಟ್ಟೆಯ ಮುಳುಗಡೆ ವಲಯವಾದ್ದರಿಂದ ಈಚೆಗಷ್ಟೇ ಸ್ಥಳಾಂತರಗೊಂಡಿತ್ತು) ಮುಂದೆ ಯಾವುದೋ ಹಳ್ಳಿಯತ್ತ ಸಾಗುವ ದಾರಿಯನ್ನು ಬಲಕ್ಕೆ ಬಿಟ್ಟು ನೇರ ಅಬ್ಬಿವಲಯಕ್ಕೊಳಪಟ್ಟೆವು.
ಪರಿಸರವನ್ನು ಒಳಗೊಂಡು ಅಭಿವೃದ್ಧಿಯನ್ನು ಹಾರೈಸದ ಎಲ್ಲಾ ಸರಕಾರೀ ವಠಾರದ್ದೇ ದೃಶ್ಯ. ಜಲ್ಲಿ ಕಿತ್ತು, ಪೊದರು ಮುಕ್ಕುವ ದಾರಿಯಲ್ಲಿ ಹಾರುಹೊಡೆದ ಒಂದು ತುಕ್ಕುಹಿಡುಕಲು ಗೇಟು. ಸುಂದರ ವಿನ್ಯಾಸದ ಯಾತ್ರೀ ನಿವಾಸಗಳ ಬಾಗಿಲ ಪಡಿಗಳು ಹಾರುಹೊಡೆದಿದ್ದವು. ಅವುಗಳಲ್ಲೂ ಕಿಟಕಿಗಳಲ್ಲೂ ಶೋಭಿಸಬೇಕಾಗಿದ್ದ ಕನ್ನಡಿಗಳು ತೂತುಳಿಸಿ, ಸುಂದರ ಮೊಸಾಯಿಕ್ ನೆಲವನ್ನು ಚಿತ್ರಮಯವಾಗಿಸಿದ್ದವು! ವಿದ್ಯುತ್ ಸ್ವಿಚ್ ಬೋರ್ಡುಗಳು ನೇಣು ಶಿಕ್ಷೆಗೊಳಗಾಗಿದ್ದರೆ ದೀಪಗಳಿರಬೇಕಾದ ಕೊನೆಯಲ್ಲಿ ಖಾಲೀ ವಯರು. ಗೋಡೆಯಂತೂ ವೀರವಾಕ್ಕು, ಪ್ರೇಮ ನಿವೇದನೆಗಳ ಸಾಹಿತ್ಯದೊಡನೆ ಭಿತ್ತಿ ಚಿತ್ರಗಳ ವೈವಿಧ್ಯದಿಂದ ಸಮೃದ್ಧವಾಗಿ ಅವಜ್ಞೆಯ ಪ್ರಪಾತದಂಚಿನಲ್ಲಿದ್ದವು. (ಇದು ಬರಿಯ ಗೂಂಡಾಗಿರಿ ಎಂದು ನನಗನ್ನಿಸುವುದಿಲ್ಲ, ಬಹು ನಿರೀಕ್ಷೆಯಿಟ್ಟುಕೊಂಡು ಬಂದ ಪ್ರವಾಸಿಗಳ ಅಸಹನೆಯ ಅಭಿವ್ಯಕ್ತಿಯ ಒಂದಂಶವೂ ಇರಬಹುದು) ನಾವು ಇದ್ದದ್ದರಲ್ಲಿ ಸುಸ್ಥಿತಿಯ ಒಂದು ಬಂಗ್ಲೆ ಆಯ್ದುಕೊಂಡು, ರಾತ್ರಿಗೆ ಸಜ್ಜಾಗತೊಡಗಿದೆವು. ಎಷ್ಟೋ ಹೊತ್ತಿನ ಮೇಲೆ ಎಲ್ಲಿಂದಲೋ ಬಂದವನೊಬ್ಬ ತಾನು ವಾಚ್ಮನ್ ಅಂದ (ನಾವು ಒಪ್ಪಿಕೊಂಡೆವು). ಆತ ನಾವು ಬಂದ ದಾರಿಯಂಚಿನಲ್ಲೇ (ಸುಮಾರು ಅರ್ಧ ಕಿಮೀ ಅಂತರ) ಕಾಡಿನೊಳಗಿದ್ದ ಒಂದು ಝರಿಯನ್ನು ನೀರಿನಾಸರೆಯಾಗಿ ತೋರಿದ್ದಲ್ಲದೆ ನಮಗೆ ಶಿಬಿರದಲ್ಲಿ ಸಂಗ್ರಹಿಸಿಟ್ಟುಕೊಳ್ಳಲು ಕೊಡಪಾನವನ್ನೂ ದಯಪಾಲಿಸಿದ. ಊಟಕ್ಕೆ ಪೊಲೀಸ್ ಕೇಂದ್ರದಲ್ಲಿ ಇನ್ನೂ ಉಳಿದಿರುವ ಕ್ಯಾಂಟಿನ್, ಬಿಟ್ಟರೆ ಯಲ್ಲಾಪುರವೇ ಗತಿ ಎಂದೂ ಸ್ಪಷ್ಟಪಡಿಸಿದ.
ಕಾಡುಗಿಡಗಳ ಪೊರಕೆ ಮಾಡಿ ಗಾಜುಗುಡಿಸಿ, ನಮ್ಮನ್ನು ಹರಡಿಕೊಂಡೆವು. ಕೆಲವರು ಝರಿಗೆ ಹೋಗಿ ಸ್ನಾನದ ಮಝಾ ಅನುಭವಿಸಿ ಕುಡಿಯುವ ನೀರೂ ತಂದಿಟ್ಟರು. ಅರವಿಂದ (ರಾವ್ ಕೇದಗೆ) ಅಧ್ಯಯನದಲ್ಲಿ ಜೀವವಿಜ್ಞಾನದ ಸ್ನಾತಕೋತ್ತರರಾದರೂ ಸ್ವಂತ ಒಲವು ಮತ್ತು ತಾಕತ್ತಿನಿಂದ ಯಾವುದೇ ಪ್ರಯೋಗಾಲಯಗಳ ಸಂಕೀರ್ಣ ಸಲಕರಣೆಗಳ ದುರಸ್ತಿಯ ಕಾಯಕ ನಡೆಸಿದ್ದರು (ಕಮಲಜೀತ್ ಲ್ಯಾಬೊರೇಟರಿ ಸರ್ವಿಸಸ್). ಹಾಗೆ ಸಹಜವಾಗಿ ದೊರಕಿಸಿಕೊಂಡಿದ್ದ ಅದೇನೋ ಬಿಲ್ಲೆ (ಇಂದಿನ ಐದು ರೂಪಾಯಿ ನಾಣ್ಯದ್ದೇ ಗಾತ್ರ, ದಪ್ಪದಲ್ಲಿ ಮಾತ್ರ ಎರಡರಷ್ಟಿದ್ದಿರಬೇಕು) ಒಂದೆರಡು ಉರಿಸಿ ನಮಗೆಲ್ಲರಿಗೂ ‘ಚುಡುಚುಡು ಚಾಯ್’ ಕೊಟ್ಟರು. ಮೂರ್ನಾಲ್ಕು ಮಂದಿ ಮಾಜೀ ಪೊಲೀಸ್ ಲೈನ್ವರೆಗೆ ಬೈಕೋಡಿಸಿ ಕ್ಯಾಂಟೀನಿನಲ್ಲಿ ರಾತ್ರಿ ಹದಿನಾಲ್ಕು ಊಟ ಗಟ್ಟಿ ಮಾಡಿ ಬಂದರು.

ಸರದಿಯ ಮೇಲೆ ಎರಡು ಗುಂಪುಗಳಲ್ಲಿ (ಬಾಗಿಲು, ಬೀಗಕ್ಕೆಲ್ಲ ಅಲ್ಲಿ ಅರ್ಥವಿರಲಿಲ್ಲ. ಕೆಲವರೆಲ್ಲ ದೇವರ ಮೇಲೆ ಭಾರ ಹಾಕುವುದು ಕೇಳಿದ್ದೇನೆ. ಆದರೆ ನನ್ನ ಅಚಲ ನಂಬಿಕೆ ಪ್ರಕಾರ ಕಳ್ಳ ಸರ್ವಂತರ್ಯಾಮಿ! ಮತ್ತಿಲ್ಲಿ ನಮಗೆ ಸಂಶಯಿಸಲು ವಾಚ್ಮನ್ ಇದ್ದನಲ್ಲ!) ಎಲ್ಲರೂ ಕ್ಯಾಂಟೀನಿಗೆ ಹೋಗಿ, ಊಟ ಮುಗಿಸಿ ಬಂದೆವು. ಮೊಂಬತ್ತಿ ಬೆಳಕಿನಲ್ಲಿ ಹಾಡು, ಹಾಸ್ಯ ಧಾರಾಳ ಹರಿಸಿದೆವು. ದೇಹಾಲಸ್ಯ ಹೆಚ್ಚುತ್ತಿದ್ದಂತೆ ಅಬ್ಬಿಯ ಮೊರೆತ, ಬಿಬ್ಬಿರಿ ಜೀರು, ಮಿತ್ರರ ಗೊರಕೆಗಳೊಂದರೊಳಗೊಂದಾಗಿ ನಿದ್ರೆ ಬಂತು. ನಿರಾತಂಕವಾಗಿ ರಾತ್ರಿ ಕಳೆಯಿತು.

ಯಲ್ಲಾಪುರದ ಹೋಟೆಲಿನಲ್ಲಿ ‘ಉಪವಾಸ ಮುರಿದು’, ಶಿರಸಿಯ ದಾರಿ ಹಿಡಿದೆವು. ಮೊದಲೇ ಹೇಳಿದಂತೆ ದಾರಿಯ ಈ ಮಗ್ಗುಲಿನಲ್ಲೂ ದರ್ಶನ ಕೊಡುವ ಸಹಸ್ರಲಿಂಗದಲ್ಲಿ(ಗಳ ನಡುವೆ) ಒಂದಷ್ಟು ಸಮಯ ಕಳೆದು ಶಿರಸಿ ಸೇರಿದೆವು. ಮುಂದಿನೂರು ಸಿದ್ಧಾಪುರವಾದರೂ ಏಳೇ ಕಿಮೀ ಅಂತರದಲ್ಲಿನ ಯಡಳ್ಳ್ಳಿಯಲ್ಲೊಂದು ಗಳಿಗೆ ಗಾಢ ಗೆಳೆತನಕ್ಕೊಂದು ಸುಂಕ ಕೊಡದೇ ಮುಂದುವರಿಯುವಂತಿರಲಿಲ್ಲ. ಹುಲಿಮನೆಯ ಜಿ.ಎಸ್ ಹೆಗಡೆಯವರಿಗೆ ಸಂಸ್ಕೃತ ಎಂ.ಎ ಪದವಿ ಸುಳ್ಯದ ಕಾಲೇಜಿನಲ್ಲಿ ಅಧ್ಯಾಪನ ವೃತ್ತಿ ಕೊಟ್ಟದ್ದಿರಬಹುದು. ಆದರೆ ರಕ್ತಗತವಾದ ಯಕ್ಷಗಾನದ ಹುಚ್ಚು ವಿಶ್ವವ್ಯಾಪಕತ್ವ ತಂದುಕೊಟ್ಟಿತು. ವಿವಿನಿಲಯದ ಮಾರ್ಗಸೂಚೀ ಮಟ್ಟದಲ್ಲಿ ಯಕ್ಷಗಾನದಲ್ಲಿ ಹಸ್ತ ಮುದ್ರೆಗಳನ್ನು ಸಂಶೋಧನಾ ವಿಷಯವನ್ನಾಗಿಸಿಕೊಂಡು ಇವರು ಗಳಿಸಿದ ಡಾಕ್ಟರೇಟ್ ಬರಿಯ ಉಪೋತ್ಪನ್ನ. ಇವರ ನಿಜ ‘ಯಕ್ಷ-ಅಪ್ಪುಗೆಯಲ್ಲಿ’ ಯಕ್ಷಗಾನ ಮತ್ತು ಸೋದರ ಕಲೆಗಳು, ಕಲಾವಿದರಲ್ಲದೆ ಅದರ ಕುರಿತು ನಾಲ್ಕು ತೇಲಿಕೆಯ ಮಾತಾಡಬಲ್ಲಂತ ನನ್ನಂತಹವರೂ ಬಂಧಿತರೇ. ಹಾಗಾಗಿ ಹುಲಿಮನೆಗೆ (ಗಾಬರಿಯಾಗಬೇಡಿ - ಇದು ಹೆಗಡೆಯವರ ಮನೆಯ ಹೆಸರು ಅಷ್ಟೇ) ಒಮ್ಮೆ ಇಣುಕಿ ಓಡುವ ಪ್ರಯತ್ನ ಮಾಡಿದೆವು. ಅದು ಅವಿಭಕ್ತ ಕುಟುಂಬ. ಮತ್ತೆ ಮನೆಯಾದರೋ ಯಾವುದೇ ತೋರಿಕೆಗಳಿಲ್ಲದೆ ಊದ್ದಕ್ಕೆ ಯಾವುದೋ ಕಾರ್ಮಿಕ ವಸತಿಸಾಲಿನಂತೇ ಕಾಣುತ್ತಿತ್ತು. ಆದರೆ ಮನೆಯವರ ಉತ್ಸಾಹ, ಉಪಚಾರಕ್ಕೆ ನಮ್ಮವರೆಲ್ಲರೂ ದಂಗುಬಡಿದು ಹೋದರು. ಹರಟಿದ್ದೇನು, ತಿಂದದ್ದೇನು, ಕುಡಿದದ್ದೇನು ಎಂದು ಲೆಕ್ಕ ಹಿಡಿಯಲಾಗದೇ ಮಧ್ಯಾಹ್ನದ ಊಟದ ಯೋಚನೆಯಿರಲಿ, ರಾತ್ರಿಗೆ ಬುತ್ತಿಯ ಹೊರೆಯನ್ನೂ ಹೆಚ್ಚುಕಮ್ಮಿ ಅವರು ಹೊರಿಸಿಬಿಟ್ಟರು. ನಾವು ಅಪ್ಪಿತಪ್ಪಿ ಬೈಕಿನ ಬದಲು ಇನ್ನೊಂದೇ ದೊಡ್ಡ ವಾಹನ ಒಯ್ದಿದ್ದರೆ ಊರಿಗೆ ಮರಳಿದ ಮೇಲೂ ನಮಗೆ ನಾಲ್ಕು ದಿನಕ್ಕಾಗುವ ಊಟ ತಿಂಡಿ ಖರ್ಚು ಉಳಿಸುವ ಹುನ್ನಾರ ಅವರದಿತ್ತು! ನನ್ನ ಸಮಯಪಾಲನೆ, ಶಿಸ್ತು ಇತ್ಯಾದಿ ಆಪತ್ಕಾಲೀನ ರಕ್ಷಣಾ ಮಾತುಗಳನ್ನು ಧಾರಾಳ ಬಳಸಿ, ಅಲ್ಲಿಂದ ಹಾಗೂ ಹೀಗೂ ಬಿಡಿಸಿಕೊಂಡು (ಇಲ್ಲವಾದರೆ ರಾತ್ರಿ ಉಳಿಸಿಬಿಡುತ್ತಿದ್ದರು!) ಓಡಿದೆವು, ಅಲ್ಲಲ್ಲ, ಸವಾರಿ ಮುಂದುವರಿಸಿದೆವು.
ಶಿರಸಿ-ಸಿದ್ಧಾಪುರವೆಂದೇ ಖ್ಯಾತವಾದ ಸಿದ್ಧಾಪುರವನ್ನು ಬರಿದೇ ದಾಟಿದೆವು. ಈ ದಾರಿಯಿಂದಲೂ ಊಂಚಳ್ಳಿ ಅಬ್ಬಿಯನ್ನು ಸೇರಬಹುದೆಂದು ಬೋರ್ಡುಗಳು ದಿಟ್ಟವಾಗಿ ಸಾರಿದರೂ ನಮ್ಮ ಕಾಲಪುರುಷಂಗೆ ಗುಣ ಸ್ವಲ್ಪವೂ ಇರಲಿಲ್ಲ! ಹೊನ್ನಾವರದಿಂದ ಸ್ವತಂತ್ರವಾಗಿ ಘಟ್ಟ ಏರಿಬರುವ ದಾರಿಯನ್ನು ಮಾವಿನಗುಂಡಿ ಎಂಬಲ್ಲಿ ಸಂಗಮಿಸುವವರೆಗೂ ನಮ್ಮ ಓಟ ಅವಿರತ. ಮತ್ತೆ ಕಿಮೀ ಅಂತರದಲ್ಲಿ ಜೋಗವೆಂದರೆ (ಶಬ್ದಾರ್ಥದಲ್ಲಿ ಜೋಗ = ಜಲಪಾತ) ಗೆರಸೊಪ್ಪೆಯದ್ದೊಂದೇ ಎನ್ನುವಷ್ಟು ವಿಶ್ವ ಖ್ಯಾತವಾದ ಜಲಪಾತವನ್ನು ನೋಡಲು ತೊಡಗಿದೆವು. ಶರಾವತಿ ಕೊಳ್ಳ ಹಾರಿಕೊಳ್ಳುವ ಅಂಚಿನಲ್ಲಿ ನಮಗೆ ಮೊದಲು ಸಿಗುವ ಬಲದಂಡೆಗೆ ವೀಕ್ಷಣಾ ತಾಣದಲ್ಲಿ ಹಳೆಯ ಪ್ರವಾಸಿ ಬಂಗ್ಲೆಯೂ ಇದ್ದು, ಬಾಂಬೇ ಹೌಸ್ ಎಂದೇ ಖ್ಯಾತವಾಗಿದೆ. ಅಲ್ಲಿ, ಮೆಟ್ಟಿಲ ಸರಣಿ ಇಳಿದು, ಕಟಕಟೆಯ ಅಂಚಿಗೇ ಸೀಮಿತಗೊಂಡು ವೀಕ್ಷಿಸಿ ಮರಳಿದೆವು. ಮುಂದೆ ಮುಖ್ಯ ವೀಕ್ಷಣಾ ತಾಣ, ಅಂದರೆ ತುಸು ದೂರದಿಂದಷ್ಟೇ ವೀಕ್ಷಣಾ ಅವಕಾಶ ಒದಗುವ ಎಡದಂಡೆದಲ್ಲೂ ಹತ್ತು ಮಿನಿಟು ಕಳೆದೆವು. ಮಳೆಗಾಲದ ಅಂಚಿನಲ್ಲೇ ಇದ್ದ ಜೋಗ ಪ್ರಚಾರಪತ್ರಗಳು ಹೇಳುವ ನಾಲ್ಕಕ್ಕಿಂತಲೂ ಹೆಚ್ಚಿನ ಧಾರೆಗಳಲ್ಲಿ ಶೋಭಿಸುತ್ತಿತ್ತು. ನಮ್ಮಲ್ಲಿ ಮೊದಲು ಜೋಗ ನೋಡದವರ ಸಹಜ ಕುತೂಹಲ ಅಲ್ಲಿ ಇಲ್ಲಿ ಹಣಿಕಿ, ದೃಶ್ಯವನ್ನು ತೆಳ್ಳಗೆ ಆವರಿಸಿ, ಮುಕ್ತಗೊಳಿಸಿ ಆಡುವ ಮಂಜಿನ ಸೆರಗು ಬೇಕುಬೇಡಗಳನ್ನು ಚರ್ಚಿಸಿ (ಫಲಿತಾಂಶವನ್ನು ಆಕಾಶ ಎಂದೂ ಕಾದು ಕುಳಿತದ್ದಿಲ್ಲ ಬಿಡಿ), ಕೊಳ್ಳದಾಳಕ್ಕೂ ಇಳಿದರೆ ಹೇಗೆ ಎನ್ನುವ ಹಂತಕ್ಕೆ ಬರುವಾಗ ನಾನು ಮುಂದಿನ ದಾರಿಯ ಉದ್ದ ಜ್ಞಾಪಿಸಲೇ ಬೇಕಾಯ್ತು. ಅಷ್ಟೆಲ್ಲಾ ಹೇಳುವ ನನ್ನ ಮೊದಲ ಜೋಗ ಭೇಟಿಯಾದರೂ ಬಹಳ ವಿರಾಮದಲ್ಲಿ ಆಗಿರಲಿಲ್ಲ! ಅದೆಂಥ ಕಥೇಂತ ಹೇಳುವುದಿದ್ದರೇ. . . . .
ನನ್ನ ವಿವಾಹಪೂರ್ವ ಯುಗ. ಸನ್ ಸಾವಿರದೊಂಬೈನೂರಾ ಎಪ್ಪತ್ತೊಂಬತ್ತರ ಸೆಪ್ಟೆಂಬರ್ ಎಂಟು, ಶನಿವಾರ ಅಸ್ತಮಿಸಿದ ರಾತ್ರಿಯಲ್ಲಿ (ಮತ್ತೆ ಕುಮಟೆ ಬಸ್ ನಿಲ್ದಾಣದಲ್ಲಿ ರಾತ್ರಿ ಬೆಳಗು ಮಾಡಿ ಮೊದಲ ಬಸ್ಸಿಡಿದು) ಪಯಣಿಸಿ ಜೋಗ ತಲುಪಿದ ನಿದ್ದೆಗೇಡಿಗಳೇನು ಸಾಮಾನ್ಯರೇ! ಎಂ.ಎನ್.ವಿ.ಪಿ ಪಂಡಿತಾರಾಧ್ಯ - ಮಂಗಳಗಂಗೋತ್ರಿಯ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡಕ್ಕೆ ಯಾರೂಂತ ಕೇಳಿದ್ದೀರಿ. ಗಾಂಧೀದಾಸ್ - ಭವರೋಗ ಧನ್ವಂತರಿ, ಕೆ.ಎಂ.ಸಿಯಲ್ಲಿ ಇನ್ನೂ ಯಮ ಬೀಬಿ ಎಸ್ ವಿದ್ಯಾರ್ಥಿ. ಶ್ರೀಕಂಠಯ್ಯ ಕಾಡುಬೆಟ್ಟಗಳಲ್ಲಿ ವಿಪರೀತ ಆಸಕ್ತ ಜಲಚರ, ಕ್ಷಮಿಸಿ - ಮೀನುಗಾರಿಕಾ ಕಾಲೇಜಿನ ಅಧ್ಯಾಪಕ. ಸುಬ್ರಾಯ ಕಾರಂತನೆಂಬ ಕವಿಮಿತ್ರನೂ ಶಿವಶಂಕರನೆಂಬ ನನ್ನ ಚಿಕ್ಕಮ್ಮನ ಮಗನೂ ಒಂದು ಸುಳ್ಳು ಹೇಳಲೂ ಗೊತ್ತಿಲ್ಲದಷ್ಟು ನಿಷ್ಪ್ರಯೋಜಕರು; ಯಾವ ವಿಶೇಷಣಗಳಿಗೂ ಸಿಕ್ಕದಷ್ಟು ಮೌನಿಗಳು. ಕೊನೆಯಲ್ಲಿ ನಾನು, ಕಬಡ್ಡಿ ಟೀಮಿನ ಕ್ಯಾಪ್ಟನ್! (ಯಾವುದರ ವೀಕ್ಷಣೆಗೆ ನಿಂತು ಉಸಿರು ಬಿಡುವ ಮೊದಲು ಮುಂದಿನ ಹೆಜ್ಜೆಗೆ ಅವಸರಿಸುವವನೆಂದು ಮಿತ್ರರು ದಯಪಾಲಿಸಿದ ಬಿದಿರು!)
ಮುಂಜಾವಿನ ನಸುಚಳಿಯಲ್ಲಿ ಬಸ್ಸಿಳಿದವರಿಗೆ ಎಡದಂಡೆಯ ಪ್ರವಾಸೀ ಬಂಗ್ಲೆಯೆದುರಿನ ವೀಕ್ಷಣಾ ಕಟ್ಟೆಯಲ್ಲೆಲ್ಲಾ ಎಷ್ಟು ಅಡ್ಡಾಡಿದರೇನು ಕಣ್ಣುಕ್ಕಿಸುವ ನೀರ ಬೀಳು ಕಾಣಿಸಲಿಲ್ಲ, ಕಿವಿದುಂಬುವ ಮೊರೆತವೂ ಇಲ್ಲ. ಕಣಿವೆಯ ಆಳಕ್ಕೆ ಮೆಟ್ಟಿಲಿಳಿದೆವು. ಕಾಡುಕಲ್ಲಿನ ಕಚ್ಚಾ ಜಾಡು, ಹುಲ್ಲು ಪೊದರು ಮುಚ್ಚಿ ಬರುವಂತಿತ್ತು. ಪ್ರವಾಸೀ ಕಚ್ಚಡ (ಇಂದಿನ ಧಾರಾಳವಿರಲಿಲ್ಲ!), ಇಬ್ಬನಿ ಹಾಸು, ಮತ್ತಲ್ಲಲ್ಲಿ ಕಲ್ಲು ಕಿತ್ತು ಮಣ್ಣು ಕೆಸರಾಗಿ ಜಾರುಗುಪ್ಪೆಯೇ ಆಗಿದ್ದರೂ ಎಲ್ಲವನ್ನು ಹಗುರಾಗಿಯೇ ನಿಭಾಯಿಸುತ್ತ ದೌಡಾಯಿಸಿದೆವು (ನೆನಪಿರಲಿ, ನಿಧಾನ ವಿಶ್ರಾಂತಿ ಎಂಬಿತ್ಯಾದಿ ಶಬ್ದಗಳೇ ನನ್ನ ಕೋಶದಲ್ಲಿಲ್ಲದ ಕಾಲವದು). ಜಲಪಾತದ ತಳ ಸಹಸ್ರಾರು ವರ್ಷಗಳಿಂದ ನೀರು ಕುಟ್ಟಿ ಹದಗೊಂಡ ನೆಲ. ಹೆಚ್ಚು ಕಡಿಮೆ ಮಟ್ಟಸವಾದ, ಸುವಿಸ್ತಾರ ಪಾತ್ರೆಯಲ್ಲಿ ಚದುರಿದಂತೆ ಕೆಂದೂಳ ಹೊದಿಕೆ ಹೊದ್ದು ಅನಾಥವಾಗಿ ಕಾಣುವ ಸಣ್ಣ ಪುಟ್ಟ ಬಂಡೆಗುಂಡುಗಳು; ಧ್ಯಾನಸ್ಥ ಅಹಲ್ಯೆಯರಂತೆ. ಎಡೆಯಲ್ಲಿ ಅಲ್ಲೊಂದು ಇಲ್ಲೊಂದು ಪುಟ್ಟ ಕಾಡಗಿಡ ಅಸ್ತಿತ್ವ ಸಾರಿದರೂ ನೀರು, ಚೈತನ್ಯದ ಸಂಕೇತವಾಗಿ ಕಾಣಲಿಲ್ಲ. ಲಿಂಗನಮಕ್ಕಿ ಅಣೆಕಟ್ಟೆ ಬರುವ ಮುನ್ನಿನ ವೈಭವವೇನಿದ್ದಿರಬಹುದು ಎಂದು ಊಹಿಸಲಾಗದ ರಿಕ್ತತೆ ಇಡೀ ಪರಿಸರವನ್ನು ಆವರಿಸಿತ್ತು. ದೂರದ ಮೂಲೆಯಲ್ಲಿ ಹಿತ್ತಿಲ ನಲ್ಲಿ ಸೋರಿದಂತೆ ಒಂದೆಡೆ ಹುಡಿ ನೀರು, ಪುಟ್ಟ ಕೆನ್ನೀರ ಮಡುವನ್ನು ಕಲಕುತ್ತಿತ್ತು. (ಇಲ್ಲಿನ ಖ್ಯಾತ ಜಲಧಾರೆಗಳು ರಾಜ, ರಾಣಿ, ರಾಕೆಟ್, ರೋರರ್ ಎಲ್ಲೋ ಮಳೆಗಾಲದ ಕೆಲವು ವಾರಾಂತ್ಯಗಳಲ್ಲಿ ನಲಿಯುತ್ತವಂತೆ; ೨೦-೨೦ರ ಚೀರ್ ಗರ್ಲ್ಸಿನ ಹಾಗೆ!)
ಮೇಲೋಡಿದೆವು. ಸ್ವಲ್ಪ ಆಚೆಯೇ ಇದ್ದ ಮಹಾತ್ಮಾ ಗಾಂಧೀ ವಿದ್ಯುದಾಗರಕ್ಕಿಳಿಯುವ ತೊಟ್ಟಿಲ ಸೇವೆ ಬಳಸಿದೆವು. ಮಂದ್ರ ಶ್ರುತಿಯ ಬ್ರಿಟಿಷರ ಕಾಲದ ಗುಮ್ಮಟಗಳು, ಆಚೆಗೆ ಅಸಂಖ್ಯ ಕಂಬಗಳ ಹಂದರ, ತಂತಿಗಳ ಜಾಲ, ಕೃತಕೃತ್ಯತೆಯೊಡನೆ ಮತ್ತೆ ನದಿಪಾತ್ರೆಯಲ್ಲಿ ಕಲಕಲಿಸುವ ಶರಾವತಿ. ಸರದಿಯಲ್ಲಿ ಮತ್ತೆ ತೊಟ್ಟಿಲನ್ನು ಕಾದು ಮೇಲೆ ಬಂದೆವು. ನಮ್ಮೆಲ್ಲ ಹಾರಾಟದ ಕೊನೆಯಲ್ಲಿ ಒಂದು ಸಮೃದ್ಧ ಕ್ಯಾಂಟೀನ್ ಕಾಣಿಸುತ್ತದೆಂದು ಹುಡುಕಿ ಸೋತರೂ ಭವ್ಯ ಈಜುಕೊಳದ ಬೋರ್ಡು ಕಾಣಿಸಿ ಭರ್ಜರಿ ನಗೆ ಬಂತು. ಸೈಕಲ್ಲೋ ಗಾಡಿಯಂಗಡಿಗಳದ್ದೋ ಹರಕುಮುರುಕು ತಿಂದು ಸಿಕ್ಕ ಬಸ್ಸಿಡಿದು ಮತ್ತೆ ಕರಾವಳಿಯ ಹೆದ್ದಾರಿಗೇನೋ ಬಂದು ಬಿದ್ದೆವು. ಕುಮಟೆಯಲ್ಲಿ ನಿಲ್ದಾಣ, ಏನಲ್ಲದಿದ್ದರೂ ಕಾಲುಚಾಚಲು ನಾಲ್ಕು ಸಿಮೆಂಟ್ ಬೆಂಚುಗಳಿದ್ದವು. ಆದರೀಗ ಬಂದದ್ದು ಹೊನ್ನಾವರ - ಸುಸಜ್ಜಿತ ನಿಲ್ದಾಣವಿಲ್ಲದ ದಿಕ್ಕೇಡಿ, ಅಕ್ಷರಶಃ ಹೆದ್ದಾರಿ ಬದಿಯಲ್ಲೇ ಠಳಾಯಿಸುವ ಸ್ಥಿತಿ. ಉತ್ತರದಿಂದ ಬಂದ ಬಸ್ಸಿಗೆಲ್ಲಾ ಕೈಚಾಚುವುದು, ನಿಧಾನಿಸಿದರೆ ನಮ್ಮೂರನ್ನೇ ಹರಾಜಿಗಿಟ್ಟಂತೆ ‘ಮಂಗಳೂರೂ’ಂತ ಬೊಬ್ಬೆ ಹಾಕುವುದು. ಗಿಜಿಗುಡುವ ಬಸ್ಸು ಬೆವರಿನ ಹಬೆಯಾಡುತ್ತಾ ನಿಂತುಗಿಂತು ಬಿಟ್ಟಾಗ ಮರ್ಯಾದೆ ಮುಷ್ಠಿಯೊಳಗಿಟ್ಟು ಕಂಡಕ್ಟರ್ ಎದುರು ಹಲ್ಲುಗಿಂಜಿದ್ದೂ ಜೀವ ಪಣಕ್ಕಿಟ್ಟು ಒಳನುಗ್ಗಿದ್ದೂ ಇತ್ಯಾದಿ ಮೂವತ್ತು ವರ್ಷದ ಹಿಂದಿನ ವಿವರಗಳನ್ನು ಹೇಳಿ ನಿಮ್ಮ ತಲೆ ಯಾಕೆ ಕೆಡಿಸುವುದಿಲ್ಲ, ಅಂತೂ ಯಾವುದೋ ಒಂದು ಬಸ್ಸಿನಲ್ಲಿ ಆಗಲೇ ನಡು ಓಣಿಯ ಸರಳ ಹಿಡಿಕೆಗೆ ನೇತುಬಿದ್ದ ಹತ್ತು ಹನ್ನೆರಡು ಮಂದಿಯ ನಡುವೆ ನಮಗೂ ಪಾದ ಊರಲು ಅವಕಾಶ ಕಲ್ಪಿಸಿಕೊಟ್ಟ ಕಂಡಕ್ಟರ್ನಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ಎರಡು ರಾತ್ರಿಯ ನಿದ್ರಾಬಾಕಿ, ದಿನದ ತುರುಸಿನ ಓಡಾಟದ ಶ್ರಮ ಎಲ್ಲರನ್ನೂ ಬೇಗನೇ ಇದ್ದಿದ್ದಲ್ಲೇ ನೆಲದಲ್ಲಿ ಕುಳಿತುಕೊಳ್ಳುವಂತೆ ಮಾಡಿತು. ಅಷ್ಟೇ ಸಾಕಿತ್ತು, ನಿದ್ರೆ ಮತ್ತೆಲ್ಲವನ್ನೂ ಸುಧಾರಿಸುತ್ತಿತ್ತು. ಆದರೆ ಔಷಧೀಯ ಉಪಚಾರದ ಮೇಲೆ ಮೂಢ ನಂಬಿಕೆಯ ಆರಾಧ್ಯರೂ ವೈದ್ಯತನದ ಅತ್ಯುತ್ಸಾಹೀ ಗಾಂಧೀದಾಸರೂ ಮಾತಾಡಿಕೊಂಡದ್ದೂ ಅವರಿಬ್ಬರೇ ಏನೋ ಮಾತ್ರೆ ನುಂಗಿದ್ದೂ ಆಯ್ತು. ಮುಂದೆ ಅವರಿವರ ಕಾಲು, ಸೂಟ್ ಕೇಸು ಲೆಕ್ಕ ಹಾಕದೇ ಇಬ್ಬರೂ ಮೈಚೆಲ್ಲಿದ್ದು ನೋಡಿ ಎಲ್ಲರಿಗೂ ಗಾಬರಿ. ನಮಗಂತೂ ಮಂಪರು ಹರಿದಾಗೆಲ್ಲಾ ಅವರಿಬ್ಬರು ಯಾವ ಸೀಟಿನ ಅಡಿಗೆ ಅನಾಥ ಚಪ್ಪಲಿಯಂತೆ ಸಿಕ್ಕಿಕೊಳ್ತಾರೋ ಎಂದು ಸುಧಾರಿಸುವುದೇ ಆಯ್ತು. ಮಂಗಳೂರು ಸೇರಿದ ಮೇಲೂ ಅಮಲುಕೋರರಂತೇ ಬನ್ನಪಡುತ್ತಾ ಆರಾಧ್ಯರು ತಾನು ನುಂಗಿದ ಮಾತ್ರೆಯ ಇತಿಹಾಸ ಕೆದಕಿದರು. ಮಂಕುಮಂಡೆ ಕೊಡಹುತ್ತಾ ಜಿಬರುಗಣ್ಣು ಉಜ್ಜುತ್ತಾ ಇದ್ದ ಯಮ ಬೀಬಿ (?) ಎಸ್ (!) ಇನ್ ಮೇಕಿಂಗ್, ಶಸ್ತ್ರ ಚಿಕಿತ್ಸೆಗೊಳಗಾದ ಗರ್ಭಿಣಿಯರಿಗೆ ಕೊಡುವ ತೀವ್ರತರ ಮಾತ್ರೆಯ ಪ್ರಯೋಗ ಮತ್ತು ಪರಿಣಾಮವನ್ನು ಸ್ವಾಂಗೀಕರಿಸಿಕೊಂಡು ಪೆಚ್ಚುನಗೆ ಬೀರುತ್ತಿದ್ದರು!

[ಘಟ್ಟದ ಮೇಲೊಂದು ಸಾಗರ! ಅದರಾಚೆಗೊಬ್ಬ ಭಗೀರಥನ ಧ್ಯಾನದೊಡನೆ ಈ ಸರಣಿಯ ನನ್ನ ಅಂತಿಮ ಕಂತಿಗೆ ಮುಂದಿನವಾರದವರೆಗೆ ಕಾಯ್ತೀರಲ್ಲಾ?]
ಈ ಸ್ಥಳಗಳು ಈಗಲೂ ಲೇಖನದಲ್ಲಿ ವರ್ಣಿಸಿದಂತೆಯೇ ಉಳಿದಿವೆಯೇ? ಅಥವ 'ಅಭಿವೃದ್ಧಿ' ಆಗಿವೆಯೇ?.
ReplyDeleteಈ ಸಾಲುಗಳು ಬೇಸಿಗೆ ಕಾಲದ ಪ್ರವಾಸಿಗಳು ನೆನಪಿಡಬೇಕಾದ ಸಾಲುಗಳು - "ಇಲ್ಲಿನ ಖ್ಯಾತ ಜಲಧಾರೆಗಳು ರಾಜ, ರಾಣಿ, ರಾಕೆಟ್, ರೋರರ್ ಎಲ್ಲೋ ಮಳೆಗಾಲದ ಕೆಲವು ವಾರಾಂತ್ಯಗಳಲ್ಲಿ ನಲಿಯುತ್ತವಂತೆ; ೨೦-೨೦ರ ಚೀರ್ ಗರ್ಲ್ಸಿನ ಹಾಗೆ! ".
ReplyDeleteತಮ್ಮ ಮಾತು ಸತ್ಯ.
ನಾನೂ ಹಲವು ಸಲ ಬೇಸಿಗೆಯ ಜೋಗದ ಗುಂಡಿ ನೋಡಿ ಬಂದಿದ್ದೇವೆ.
ಪದೇ ಪದೇ ಪ್ರತೀ ಮಳೆಗಾಲದಲ್ಲಿ ಹಠ ಬಿಡದೆ ತ್ರಿವಿಕ್ರಮನಂತೆ ಭಾನುವಾರಗಳಲ್ಲೇ ಜೋಗಕ್ಕೆ ಹೋದಾಗ ಒಮ್ಮೆ " ಅಚಾನಕ್ ಆಗಿ " ತಮ್ಮ ಲೇಖನದಲ್ಲಿ ವರ್ಣಿಸಿದ ಚೀಯರ್ ಗರ್ಲ್ಸ್ ಸಿಕ್ಕಿದ್ದರು!
ಆ ನೆನಪು ಮಾತ್ರ ಅವಿಸ್ಮರಣೀಯ!
ಪ್ರೀಯರೆ,
ReplyDeleteನಿಮ್ಮ ಕಥೆಗೆ ಉಪಕಥೆಯಂತೆ ಚೀಯರ್ ಗರ್ಲ್ ಗಳ ಜೊತೆ ನನ್ನನ್ನೂಎ ನೆನಪಿಸಿಕೊಂಡಿದ್ದೀರಿ.
ಎರಡು ದಿನ ನಿದ್ದೆಗೆಟ್ಟಿದ್ದರೂ ಮರುದಿನ ಬೆಳಗ್ಗೆ ಪಾಠಮಾಡಲು ಸಾಧ್ಯವಾಗುವಂತೆ ನಿದ್ರೆ ಮಾತ್ರೆ ಕೊಡುವುದಾಗಿ ಹೇಳಿ ಶಸ್ತ್ರ್ತಚಿಕಿತ್ಸೆಯ ಅನಂತರ ಚೇತರಿಸಕೊಳ್ಳು ನೀಡುವ ಮಂಪರಿನ ಮಾತ್ರೆ ನೀಡಿ ಬಸ್ ನಲ್ಲಿ ಅಡ್ಡಾದಿಡ್ಡಿ ಉರುಳಿಕೊಂಡರೂ ಅರಿವೆಗೆ ಬಾರದಂತೆ ಪ್ರಜ್ಞೆ ತಪ್ಪಿದ ಅನುಭವವನ್ನು ಈಗ ನೆನೆದರೂ ಪ್ರಜ್ಞೆ ತಪ್ಪುವಂತಾಗುತ್ತದೆ!
ವೈದ್ಯ ವಿದ್ಯಾರ್ಥಿ ನಮಸ್ತುಭ್ಯಂ ಯಮರಾಜ ಸಹೋದರ!
ಎಂದು ಪ್ರಾರ್ಥಿಸುವಂತಾಗುತ್ತದೆ!
ಹಲವು ವರ್ಷಗಳ ನ೦ತರ ಕಳೆದ ವರ್ಷ ಸಾಗರದ ಮೇಲಿ೦ದ ಜೋಗ ಕ್ಕೆ ನಾನು ನನ್ನ ಸ್ನೇಹಿತ ಹೋಗಿ ಧಭೆ-ಧಭೆಯ ಆನ೦ದ ಅನುಭವಿಸಿದೆವು. ನಿಮ್ಮ ಬರವಣಿಗೆ ಓದಿದಾಗ ನಮ್ಮ ಆನ೦ದ ಮರುಕಳಿಸಿದ ಹಾಗಾಯಿತು. ಧನ್ಯವಾದಗಳು
ReplyDeleteDear Sir,
ReplyDeleteGood article.
I am now your fan.