05 April 2011

ತಾಮ್ರ ಧ್ವಜ ಕಾಳಗ ಸಂಕ್ಷಿಪ್ತ ‘ಪೂರ್ವರಂಗದೊಡನೆ’

ಶಿವರಾಮ ಕಾರಂತರು ದೂರದ ಪುತ್ತೂರಿನಲ್ಲಿ ನೆಲೆಸಿದ್ದರೂ ತನ್ನ (ಹತ್ತುಮುಖಗಳಲ್ಲಿ) ಯಕ್ಷಮುಖದ ಉಬ್ಬರಗಳಿಗೆ ಬಹುತೇಕ ಉಡುಪಿ, ಬ್ರಹ್ಮಾವರ ಎಂದು ಅಲೆದಾಡುತ್ತಿದ್ದ ಕಾಲವದು. ಅವರಿಗೆ ಬಹು ಸಮರ್ಪಕ ಮತ್ತು ಗಟ್ಟಿ ನೆಲೆ ಕಾಣಿಸಿದವರು ಕುಶಿ ಹರಿದಾಸ ಭಟ್ಟ; ಸಂಸ್ಥೆ - ಎಂ.ಜಿ.ಎಂ ಕಾಲೇಜು, ಉಡುಪಿ. ಹಾಗೆ ನೆಲೆಗೊಂಡ ಯಕ್ಷಗಾನ ಕೇಂದ್ರ (ಎಂ.ಜಿ.ಎಂ ಕಾಲೇಜು, ಉಡುಪಿ) ತನ್ನ ನಲ್ವತ್ತನೇ ವಾರ್ಷಿಕ ಹಬ್ಬವನ್ನು ಮೊನ್ನೆ (೨೭-೩-೧೧, ಆದಿತ್ಯವಾರ) ಸರಳವಾಗಿ ಆಚರಿಸಿಕೊಂಡಿತು. ಸರದಿಯೋಟದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶನ ಪದವಿಯನ್ನು ನೇರಾನೇರ ಕುಶಿಯವರಿಂದ ಹೆರಂಜೆ ಕೃಷ್ಣಭಟ್ಟರು ವಹಿಸಿಕೊಂಡರು. ಕಾಲೇಜಿನ ಹಿತ್ತಲಿನಿಂದ ಸಂಸ್ಥೆ ಸುಂದರ ಸ್ವಂತ ವಠಾರ (ಯಕ್ಷಗುರುಕುಲ ಶಿಕ್ಷಣ ಟ್ರಸ್ಟ್ (ರಿ) ಎಂಬ ಸ್ವಾಯತ್ತ ಸಂಸ್ಥೆಯೂ ಆಗುವುದರೊಂದಿಗೆ), ಅನುಕೂಲದ ಕಟ್ಟಡಕ್ಕೆ ಏರಿದ್ದೇ ದೊಡ್ಡ ಕಥೆ. ಸಂಸ್ಥೆಯ ಮುಖ್ಯ ಗುರುಪದದ ಪರಂಪರೆಗೆ ವೀರಭದ್ರ ನಾಯಕರು ಹಾಕಿದ ಅಡಿಪಾಯಕ್ಕೆ ಇಂದು ಸುವರ್ಣ ಕಳಶವಾಗಿ, ಯಕ್ಷಗಾನವನ್ನೇ ಮೆರೆಸುತ್ತಿದ್ದಾರೆ ಬನ್ನಂಜೆ ಸಂಜೀವ ಸುವರ್ಣ. (ಇವರ ಕುರಿತ ಹೆಚ್ಚಿನ ವಿವರಗಳಿಗೆ ಇಲ್ಲೇ ನನ್ನ ಹಳೆಯ ಯಕ್ಷ ಲೇಖನಗಳನ್ನು ನೋಡಿ)


ಬನ್ನಂಜೆ ಸಂಜೀವ ಸುವರ್ಣರು ಹೆಚ್ಚು ಓದಿದವರಲ್ಲ, ಯಕ್ಷಗಾನದ ಇತಿಹಾಸವನ್ನು ಅಪಾರ ವೈಯಕ್ತಿಕ ಪರಿಶ್ರಮದಲ್ಲಿ ಬುದ್ಧಿಪೂರ್ವಕವಾಗಿ ಮೈಗೂಡಿಸಿಕೊಳ್ಳುತ್ತ ಬಂದವರು. ಪರಂಪರೆಯ ಮೌಲ್ಯಕ್ಕೆ ವರ್ತಮಾನದ ವಿವೇಚನೆಯನ್ನು ಕಸಿಮಾಡಿ ಪ್ರತಿ ಕೊಂಬೆ ರೆಂಬೆಯಲ್ಲಿ ಅದ್ಭುತ ಹೂ ಹಣ್ಣು ಕಾಣಿಸುವವರು. ಸುವರ್ಣ ಸ್ಪರ್ಶ ಪಡೆದ ಪ್ರತಿ ಪ್ರದರ್ಶನ, ಪ್ರಾತ್ಯಕ್ಷಿಕೆ, ಕಮ್ಮಟ ವಿಶಿಷ್ಟವಾಗಿರುವುದು ನಿಶ್ಚಿತ. ನನ್ನ ಅನುಭವದ ಮಿತಿಯಲ್ಲೇ ಪಟ್ಟಿ ಮಾಡುವುದಿದ್ದರೆ ಮೊದಲು ನೆನಪಾಗುವುದು ಅಭಯಸಿಂಹ (ನನ್ಮಗ) ಪುಣೆಯ ಚಲನಚಿತ್ರ ಶಾಲೆಯಲ್ಲಿ ಇನ್ನೂ ವಿದ್ಯಾರ್ಥಿಯಾಗಿದ್ದ ಕಾಲ. ಕಲಿಕೆಯ ಅಂಗವಾಗಿ ಅವರದೇ ಪ್ರಯೋಗಾಲಯದೊಳಗೆ ಕಿರು ಕಥಾ ಚಿತ್ರವೊಂದನ್ನು ಈತ ಮಾಡಬೇಕಾದಾಗ ಆತನೇ ರೂಪಿಸಿಕೊಂಡ ಕಥೆ - ಯಕ್ಷಗಾನ ಹಿನ್ನೆಲೆಯದ್ದು. ಸಹಾಯಕ್ಕೆ ಸಂಜೀವರನ್ನು ಕೇಳಿದೆವು. ಒಂದೇ ಮಾತು, ಯಕ್ಷಗಾನ ಕೇಂದ್ರದ ಗುರುಶ್ರೇಷ್ಠರುಗಳ ಹಿಮ್ಮೇಳ ಮತ್ತು ಅವಶ್ಯ ಸಹ ಕಲಾವಿದರೊಡನೆ ಸ್ವತಃ ಸಂಜೀವರು ಹೆಂಡತಿ ಮಗನನ್ನೂ ಮೇಳ ಮಾಡಿ ಪುಣೆಯಲ್ಲಿ ಮೂರು ದಿನ ಒದಗಿದ್ದು ತುಂಬಾ ದೊಡ್ಡ ಕೊಡುಗೆ.ಸ್ವತಃ ಸಂಜೀವರೇ ಅಭಿಮನ್ಯು ಪಾತ್ರ ವಹಿಸಿದ್ದ ಅಭಿಮನ್ಯು ಕಾಳಗ ದಿಲ್ಲಿಯಲ್ಲಿ ನೋಡಿದ್ದೆ. ನನ್ನ ಪ್ರಕಟಣೆ ಒಂದರ ಔಪಚಾರಿಕ ಬಿಡುಗಡೆಗೊಮ್ಮೆ ಇವರ ಬಳಗದ ಅಂಗುಲಿಮಾಲಾ - ಯಕ್ಷ ನೃತ್ಯರೂಪಕವನ್ನು ಕೇಳಿ ಪಡೆದಿದ್ದೆ. ಇದು ಯಕ್ಷಗಾನವನ್ನು ವೈದಿಕ (ಅಥವಾ ಹಿಂದು ಪುರಾಣಗಳ ಆಚೆಗೆ ಎನ್ನಬಹುದೋ ಏನೋ) ಕಥಾನಕಗಳ ಚೌಕಟ್ಟಿನ ಹೊರಗೂ ಸಮರ್ಥವಾಗಿ ಶೋಧಿಸಿ ತೋರಿಸಿದೆ. ಕಥೆಯಲ್ಲಿ ಯಕ್ಷಗಾನ ಹೆಚ್ಚಾಗಿ ಒಪ್ಪಿಕೊಳ್ಳುವ ತೀವ್ರ ಭಾವಗಳ ಕೊರತೆಯಿದ್ದರೂ (ಮಾತು ಇಲ್ಲದೆಯೂ) ಪ್ರದರ್ಶನ ಎಲ್ಲೂ ಸೋಲಲಿಲ್ಲ. ಪಂಚವಟಿ ಎಂದರೇ ತಾಳಮದ್ದಳೆಯ ಪ್ರಸಂಗ ಎನ್ನುವ ರೂಢಿಗತ ನಂಬಿಕೆಯನ್ನು ಹುಸಿಗೊಳಿಸುವುದಿದ್ದರೆ ಸಂಜೀವರ ಪ್ರದರ್ಶನವೇ ಸೈ. ಅದರಲ್ಲೂ ಪ್ರಾಣಿಪಾತ್ರಕ್ಕೆ (ಹೊನ್ನಜಿಂಕೆ - ಸುವರ್ಣಜಿಂಕೆ?) ಇವರು ತುಂಬಿದ ಯಕ್ಷಚೇತನ ಹೊಸಪ್ರಸಂಗಗಳಿಗೆ ದರ್ಶನ ಮತ್ತು ಚೇತನ ರೂಪಿಸುವಲ್ಲಿ ಆದರ್ಶವಾಗುವುದರಲ್ಲಿ ಸಂಶಯವಿಲ್ಲ.

ಹಳತರ ಮೋಹದಲ್ಲಿ, ವೃತ್ತಿಪರ ಕಲಾವಿದರ ಕೂಟಗಳಲ್ಲಿ ಪರಂಪರೆಯ ವೇಷ, ಕಲಾಪಗಳನ್ನು ಒಮ್ಮೊಮ್ಮೆ ನಾವು ಕಾಣುವುದುಂಟು. ಅಂಥಲ್ಲೆಲ್ಲ ಕಲಾವಿದ ಅದನ್ನು ಸ್ವತಃ ವಿಶೇಷವೆಂದು ಕಾಪಿಟ್ಟುಕೊಂಡದ್ದಾಗಲೀ ವೈಯಕ್ತಿಕ ಪರಿಶ್ರಮದಲ್ಲಿ ಅದರ ಸಾರ್ವಕಾಲಿಕ ರಂಗ ಯಶಸ್ಸನ್ನು ಮೆರೆಸುವ ಉತ್ಸಾಹವನ್ನಾಗಲೀ ನಾನು ಕಂಡದ್ದಿಲ್ಲ. ವೃಥಾ ಸಮಯಗಳೆಯುವ ಸಾಮಾನ್ಯ ಸಭಾಕ್ಲಾಸ್, ಹನುಮಂತ, ಕೃಷ್ಣ ಮುಂತಾದವರ ನಾಮಬಲದಲ್ಲಿ ಚೇಷ್ಟೆಗಳಷ್ಟೇ ಪ್ರಧಾನವಾಗುವ ತೆರೆಮರೆಯ ಕುಣಿತಗಳು ನಮ್ಮ ಸಹನೆಯನ್ನು ಕಾಡುತ್ತಿರುತ್ತವೆ. ಆದರೆ ಹಿಂದಿನವುಗಳಲ್ಲಿ ಅರ್ಥಪೂರ್ಣವಾದವನ್ನು ಅಪಾರ ಸಂಶೋಧನೆ ಮತ್ತು ಅಧ್ಯಯನದಲ್ಲಿ ಕಂಡುಕೊಂಡು, ಯಕ್ಷ-ಪುನರುಜ್ಜೀವನಕ್ಕೆ ಗಂಭೀರವಾಗಿ ತೊಡಗಿಕೊಂಡ ಕೆಲವೇ ಕೆಲವು ಹೆಸರುಗಳಲ್ಲಿ ಹಿರಿದು ಅಕ್ಷರಗಳಲ್ಲಿ ಕಾಣುವ ಹೆಸರು ಸಂಜೀವ ಸುವರ್ಣ. (ಇನ್ನೋರ್ವ ಸಾಧಕ ರಾಘವ ನಂಬಿಯಾರರಂತೂ ‘ಹಿಮ್ಮೇಳ’ ಎಂಬ ಹೆಬ್ಬೊತ್ತಗೆಯಲ್ಲೂ ತನ್ನ ದರ್ಶನವನ್ನು ಹಿಡಿದಿಟ್ಟಿದ್ದಾರೆ) ಸುವರ್ಣ ಪ್ರಣೀತ (ಪುನರುಜ್ಜೀವಿತ) ಯಕ್ಷಗಾನ ಪೂರ್ವರಂಗವನ್ನು ಮಂಗಳೂರಿನ ಆಸಕ್ತರಿಗೆ ತೋರಿಸಬೇಕು ಎಂಬ ಆಸೆ ನಮ್ಮಲ್ಲಿ (ಡಾ| ಮನೋಹರ ಉಪಾಧ್ಯ ಮತ್ತು ನಾನು) ಮೂಡಿತು. ಮತ್ತೆ ನಮ್ಮದೇ ಆರ್ಥಿಕ ಮಿತಿಯೊಳಗೆ ಅದನ್ನು ಸಮರ್ಥ ವಿಡಿಯೋ ದಾಖಲೀಕರಣಕ್ಕೂ ಒಳಪಡಿಸಬಹುದೆನ್ನುವ ಅಭಯಸಿಂಹನ ಯೋಜನೆಯನ್ನೂ ಸೇರಿಸಿಕೊಂಡೆವು.ಪುಣ್ಯಫಲವಾಗಿ ಮೂಡಿದ ಐದು ಸೀಡೀಗಳ ಅಂದರೆ ಸುಮಾರು ಎರಡೂವರೆ ಗಂಟೆಗಳ ಪ್ರದರ್ಶನಾವಧಿಯ ‘ಪೂರ್ವರಂಗ ಮತ್ತು ಯಕ್ಷೋತ್ತಮ ಕಾಳಗ’ ತನ್ನ ಅಪೂರ್ವ ಸರ್ವಾಂಗೀಣ ಸೌಂದರ್ಯದಿಂದಲೇ ಸಾವಿರಾರು ಕಟ್ಟುಗಳ ಲೆಕ್ಕದಲ್ಲಿ ಮಾರಿಹೋಗಿದೆ ಮತ್ತು ಹೋಗುತ್ತಿದೆ. ತಮ್ಮ ಕೇಂದ್ರದ ಭೋಜನ ನಿಧಿಗೆ ಅದರ ಮಾರಾಟದ ಮೂಲಕ ಅಪಾರ ದ್ರವ್ಯಸಂಚಯಿಸಿದ್ದನ್ನು ಸ್ವತಃ ಸಂಜೀವರೇ ಸಂತೋಷದಿಂದ ಹೇಳಿಕೊಳ್ಳುತ್ತಾರೆ. (ನಿರ್ಮಾಣ ಜವಾಬ್ದಾರಿ ಮತ್ತು ವೆಚ್ಚ ನಮ್ಮ (ಅಭಯ ಸೇರಿ) ಮೂವರದಾದರೂ ಮಾರಾಟ ಮತ್ತಿತರ ಆರ್ಥಿಕ ಸಾಧ್ಯತೆಗಳನ್ನು ಶೋಧಿಸುವ ಎಲ್ಲಾ ಅಧಿಕಾರವನ್ನು ನಾವು ಕೇಂದ್ರಕ್ಕೇ ಬಿಟ್ಟಿದ್ದೇವೆ).

ಬಡಗುತಿಟ್ಟಿನ ಪೂರ್ವರಂಗದ ದಾಖಲೀಕರಣ ಒಟ್ಟಾರೆ ಯಕ್ಷಗಾನ ವಲಯದಲ್ಲಿ ತಂದ ಜಾಗೃತಿಯನ್ನು ಮನಗಂಡು ನಮ್ಮ ತ್ರಿಸದಸ್ಯ ತಂಡಕ್ಕೆ ಕರ್ಕಿಶೈಲಿಯ ದಾಖಲೀಕರಣದ ಉಮೇದು ಮೂಡಿತು. ಅದರ ಏಳುಬೀಳುಗಳನ್ನು ನಾನೀಗಾಗಲೇ ಬ್ಲಾಗಿನ ಹಳೆಯ ಪುಟಗಳಲ್ಲಿ ಹೇಳಿಕೊಂಡಿದ್ದೇನಾದರೂ [ನೋಡಿ: ದೀವಟಿಗೆಯ ಕಥಾನಕವನ್ನು ಬಣ್ಣಿಪೆನು ಪೊಡಮಡುತ] ಇಲ್ಲಿ ಯಕ್ಷಗಾನ ಕೇಂದ್ರದ ಜೀವಾಳವಾದ ಸಂಜೀವರ ಪಾತ್ರವನ್ನು ಸ್ವಲ್ಪ ವಿಶೇಷವಾಗಿ ಎತ್ತಿಯಾಡುವುದು ತಪ್ಪಾಗದು. “ಸಂಜೀವರೇ ದಾಖಲೀಕರಣದ ದಿನಗಳಲ್ಲಿ ನಮ್ಮವರಾಗಿ ನೀವಿರಬೇಕು. ಮತ್ತು ರಂಗದ ಹಿನ್ನೆಲೆಯಲ್ಲಿ ಕಟ್ಟಲು ಒಂದು ದೊಡ್ಡ ಪರದೆ ಒದಗಿಸಬೇಕು” ಎಂದು ಎರಡು ಬೇಡಿಕೆ ಇಟ್ಟಿದ್ದೆವು. ನನ್ನನುಭವಕ್ಕೆ ಸಿಕ್ಕ ಬಹುತೇಕ ‘ಪೀಠಸ್ಥ ವಿದ್ವಾಂಸ’ರು (ಗಮನಿಸಿ: ಸಂಜೀವರು ಯಕ್ಷ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ) ಅನೌಪಚಾರಿಕ ನೆಲೆಗಳಲ್ಲಿ ಇನ್ನೊಂದು ವಿದ್ವತ್ ಕೇಂದ್ರದ ಕುರಿತು ದುಡಿಯುವುದಿರಲಿ, ಕುತೂಹಲದ ಓದು, ಕೇಳ್ಮೆಯನ್ನೂ ಸಹಿಸಲಾರರು. (ತಮಗೆ ವೇದಿಕೆಯ ಮೇಲೆ ಸ್ಥಾನವಿಲ್ಲದ ಸಭೆ ವರ್ಜ್ಯ!) ಸಂಜೀವರು ಸರಳವಾಗಿ ಬಂದದ್ದು ಮಾತ್ರವಲ್ಲ, ದಾಖಲೀಕರಣದ ರಂಗಸಜ್ಜಿಕೆಯಲ್ಲಿ ಸ್ವತಃ ಪರದೆ ಕಟ್ಟಿದರು. ಮತ್ತೆ ನಮ್ಮ ಅಂದಾಜು ಮೀರಿದ ಹಿಮ್ಮೇಳ ಮುಮ್ಮೇಳಗಳು ಬಳಸುವ ಎಲ್ಲವನ್ನೂ ‘ಶ್ರುತಿಸಹ್ಯ’ ಮಾಡುವ ಹೊಂದಿಕೆಗಳನ್ನೂ ಮಾಡಿದರು. ದಾಖಲೀಕರಣದ ಉದ್ದಕ್ಕೂ ಚಾಕರಿ ಹುಡುಗನ ಮಟ್ಟದಲ್ಲಿ (ವಿಮರ್ಶೆಯಿಲ್ಲ, ತನ್ನಭಿಪ್ರಾಯದ ಹೇರಿಕೆ ಇಲ್ಲ) ಸಹಕರಿಸಿದ್ದರು!

ಹಾಗೇ ನಾವು ದೀವಟಿಗೆ ಆಟಗಳ ದಾಖಲೀಕರಕ್ಕೆ ಇಳಿದಾಗಲೂ ಯಕ್ಷಗಾನ ಕೇಂದ್ರ ಕೇವಲ ಬಡಗುತಿಟ್ಟಿನ ಪ್ರದರ್ಶನಕ್ಕೆ ಸೀಮಿತವಾಗುಳಿಯಲಿಲ್ಲ. ಅಂದು ಮೇಳಗಳು ತಿರುಗಾಟದಲ್ಲಿದ್ದುದರಿಂದ ವಿವಿಧ ಮೇಳಗಳ ತೆಂಕಿನ ಕಲಾವಿದರು ಪೂರ್ವಭಾವೀ ಅಭ್ಯಾಸಕ್ಕೆ ತಮ್ಮ ಭವನದ ವ್ಯವಸ್ಥೆಗಳನ್ನು ಬಳಸಿಕೊಳ್ಳಲು ಮುಕ್ತವಾಗಿ ಅವಕಾಶ ಮಾಡಿಕೊಟ್ಟರು (ಕಡೇ ಗಳಿಗೆಯ ಅನುಕೂಲಗಳು ಬೇರೇ ಬಂದು ಆ ಕೂಟ ಕಿನ್ನಿಗೋಳಿಯಲ್ಲಾದದ್ದು ಬೇರೇ ಮಾತು). ಒಟ್ಟಾರೆ ರಂಗ ಗುರುತಿಸುವ, ದೀವಟಿಗೆಯಾದಿ ಇತರ ಪೂರ್ವ ತಯಾರಿಗಳನ್ನು ನಿರ್ದುಷ್ಟಗೊಳಿಸುವ ನೆಲೆಯಲ್ಲಿ ಸಂಜೀವರ ನಡೆ ಸ್ನೇಹಪೂರ್ಣ ಮತ್ತು ಸ್ಪಷ್ಟ. ಪ್ರದರ್ಶನದಂದು ದಾಖಲಾದ ಮೂರು  ವಿಡಿಯೋ ಕ್ಯಾಮರಾಗಳ ಫಲವನ್ನು ತನ್ನನುಭವದ ಉತ್ತಮಸ್ತರದಲ್ಲೇ ಒಂದು ಚಿತ್ರವನ್ನಾಗಿ ಸಂಕಲಿಸಿದರೂ ಅಂತಿಮಗೊಳಿಸುವ ಮೊದಲು ಭಾಗವಹಿಸಿದ ತೆಂಕು, ಬಡಗು ಕಲಾವಿದರೆಲ್ಲ ಒಮ್ಮೆ ಕುಳಿತು ನೋಡಿ ಅಭಿಪ್ರಾಯ ಕೊಡಬೇಕೆಂದು ಬಯಸಿದ. ಅದನ್ನೂ ಉಚಿತವಾಗಿ (ಎಲ್ಲರಿಗೆ ಅಯಾಚಿತ ಗಟ್ಟಿ ಕಾಫಿ, ತಿಂಡಿಯೂ ಸೇರಿದಂತೆ) ನಡೆಸಿಕೊಟ್ಟದ್ದು ಯಕ್ಷಗಾನ ಕೇಂದ್ರದ ಕಲಾಪರತೆಗೆ, ಪ್ರಿಯತೆಗೆ ಸಾಕ್ಷಿ.

ಹಾಗಿರುವ ಯಕ್ಷಗಾನ ಕೇಂದ್ರದ ನಲ್ವತ್ತನೇ ವಾರ್ಷಿಕೋತ್ಸವದ ಅತಿಥಿಯಾಗಿ ಬಂದ ವಿಧಾನಪರಿಷತ್ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಕೇವಲ ಸಭಾಭೂಷಣನಾಗಿ ಮೆರೆದು ಹೋಗಲಿಲ್ಲ. ಸಾಕಷ್ಟು ಮುಂದಾಗಿ ಬಂದು, ಕೃಷ್ಣ ಭಟ್ಟರ ದಣಿವರಿಯದ ಓಟದೊಡನೆ ಹೆಜ್ಜೆ ಹಾಕಿ ಕೇಂದ್ರದಲ್ಲಿ ಅಪ್ಪಟ ಗುರುಕುಲ ಮಾದರಿಯಲ್ಲಿ ಯಕ್ಷ-ಶಿಕ್ಷಣ ನಡೆದಿರುವುದನ್ನು ಮನಗಂಡರು. ಕಟ್ಟಡ ಸಂಕೀರ್ಣದ ಒಂದಂಶ ವಿದ್ಯಾರ್ಥಿಗಳ ಸಮೂಹ ವಸತಿ, ಊಟಕ್ಕೂ ಇನ್ನೊಂದಂಶ ಗುರು ವೃಂದದ ಐವರಿಗೆ ಸ್ವತಂತ್ರ ವಸತಿ ವ್ಯವಸ್ಥೆಯನ್ನೂ (ಎಲ್ಲ ಉಚಿತ) ಕಲ್ಪಿಸಿದೆ. ಉಳಿದಂತೆ ಮೂರು ಮಾಳಿಗೆಯ ಭವನ ಹಾಗೂ ಅಂಗಳದಲ್ಲಿ ಯಕ್ಷ-ಶಿಕ್ಷಣಕ್ಕವಶ್ಯವಾದ ಸಾಮಗ್ರಿಗಳ ದಾಸ್ತಾನು, ಗ್ರಂಥಾಲಯ, ನೃತ್ಯ ಗಾನ ವಾದನ ಮಾತು ಅಭಿನಯವೇ ಮುಂತಾದ ವಿವಿಧ ಅಂಗಗಳ ಅಭ್ಯಾಸಕ್ಕೆ ಕೊಠಡಿಗಳು, ಚೌಕಿ ಅಥವಾ ಬಣ್ಣದ ಮನೆ, ಆಧುನಿಕ ದಾಖಲೀಕರಣದ ಅಗತ್ಯಗಳಿಗೆ ಒದಗುವ ವ್ಯವಸ್ಥೆಗಳು ಮತ್ತು ಒಳ ಹಾಗೂ ಹೊರ ಪ್ರದರ್ಶನಾಂಗಣಗಳೂ ಸೇರಿ ಏನುಂಟು ಏನಿಲ್ಲ; ಯಕ್ಷಗಾನ ಕೇಂದ್ರ ದೊಡ್ಡ ಜೇನುಗೂಡು!

ಕೋಲ್ಕತ್ತಾದ ವಿಶಿಷ್ಟ ಬೆಳಕಿನ ಸಂಯೋಜನೆಯ ಪ್ರದರ್ಶನಕ್ಕೂ ಬೀಬೀಸಿಯಂತಲ್ಲಿ ಬರಿಯ ಕಲೆಯಲ್ಲ, ಪರಿವೇಷ್ಟಿತ ಸಂಸ್ಕೃತಿಯನ್ನೂ ಸೇರಿಸಿ ಪರಿಚಯಿಸಿಕೊಡಬೇಕಾದ ಅವಸ್ಥೆಯಲ್ಲೂ ರಾಮಚಂದ್ರಾಪುರ ಮಠದಂಗಳದ ಪ್ರಾತ್ಯಕ್ಷಿಕೆಯಲ್ಲೂ ರಾಜಾಂಗಣದ ಭರತನಾಟ್ಯ ಮತ್ತು ಯಕ್ಷಗಾನದ ತುಲನಾತ್ಮಕ ಅಧ್ಯಯನ ಕಮ್ಮಟದಲ್ಲೆದ್ದ ಪದ್ಮಾಸುಬ್ರಹ್ಮಣ್ಯಂ ಸಂಶಯಕ್ಕೂ ಕಲಾಗಂಗೋತ್ರಿಯ ಮಕ್ಕಳ ಯಕ್ಷ-ಕಮ್ಮಟದ ಸವಾಲಿಗೂ ಅನಾಮಧೇಯ ಪತ್ರದ ಟೀಕೆಗೂ ಈ ಯಕ್ಷಗಾನ ಶಾಲೆಯಲ್ಲಿ ಅಧ್ಯಯನಪೂರ್ಣ ಮತ್ತು ಸಮರ್ಥಿಸುವಂತೆ ಪ್ರದರ್ಶನಬಲದ ಸಮಾಧಾನ ಇದ್ದೇ ಇದೆ. ಯಕ್ಷ-ವೃತ್ತಿ ಆಕಾಂಕ್ಷಿಗಳಿಗಿಲ್ಲಿ ಎರಡು ಹಂತದ (ಮತ್ತು ವರ್ಷದ) ಶಿಕ್ಷಣವೂ ಊಟ ವಸತಿಯೊಡನೆ ಉಚಿತವಾಗಿ ಲಭ್ಯ; ಯೋಗ್ಯತೆಯೊಂದೇ ಮಾನದಂಡ. ಈ ವರ್ಷವಂತೂ ಸುಮಾರು ಇಪ್ಪತ್ತೈದು ಮಕ್ಕಳನ್ನು ಇಲ್ಲಿ ಯಕ್ಷ-ಶಿಕ್ಷಣಕ್ಕೆ ಸಾಕುವುದರೊಡನೆ, ಬಡತನದಲ್ಲಿ ಅವರಿಗೆ ಲಭ್ಯವಾಗದ ಸಾಂಪ್ರದಾಯಿಕ ಶಾಲಾ ಶಿಕ್ಷಣದ ಸಂಪೂರ್ಣ ಹೊಣೆಗಾರಿಕೆಯನ್ನೂ ಕೇಂದ್ರ ವಹಿಸಿಕೊಂಡಿದೆ. ಯಕ್ಷಗಾನ ಕಲಾರಂಗದ ಸಹಯೋಗದಲ್ಲಿ ಉಡುಪಿಯ ಶಾಲಾ ಮಕ್ಕಳಿಗೆಲ್ಲಾ ಅಲ್ಲಲ್ಲಿಗೇ ಅವರ ಬಿಡುವಿಗೊದಗುವಂತೆ ಗುರುಗಳನ್ನು ಕಳಿಸಿಕೊಟ್ಟು ಯಕ್ಷಗಾನ ತರಬೇತಿ ಕೊಡುವ ಶಿಬಿರಗಳು, ರಜಾದಿನಗಳ ವಿಶೇಷ ಶಿಬಿರಗಳಿಗೆಲ್ಲಾ ಜೀವದುಂಬುವ ಕ್ರಿಯೆ ಈ ಕೇಂದ್ರದ್ದೇ ಎಂದರೆ ಅತಿಶಯೋಕ್ತಿಯಾಗದು. ಮಹಾಗುರು ಕಾರಂತರನ್ನುದ್ದೇಶಿಸಿ ಅಮೆರಿಕೆಯಿಂದ ಒಬ್ಬ ಮಾರ್ತಾ ಏಷ್ಟನ್ ಬಂದಿದ್ದರೆ ಈಚೆಗೆ ಗುರುಸಂಜೀವರನ್ನೇ ‘ಪಡೆದು’ ಗೆದ್ದವಳು ಜರ್ಮನಿಯ ಕ್ಯಾಥರೀನ್! ಇನ್ನು ಅಕಾಲಿಕವಾಗಿ ಕಾಡುವ ಹವ್ಯಾಸಿಗಳು, ಅರೆ-ಶತಮಾನೋತ್ತರ ಪ್ರಾಯದ ವೈದ್ಯರುಗಳು, ತಾರಾಮೌಲ್ಯಗಳಿಸಿದ ಮೇಲೂ ಪುನರ್ಮನನದ ಎಚ್ಚರ ಉಳಿಸಿಕೊಂಡ ವೃತ್ತಿ ಕಲಾವಿದರು, ಮಹಿಳೆಯರು, ಅಂಧರು ಹೀಗೆ ಪ್ರತಿಯೊಬ್ಬ ಆಸಕ್ತರಿಗೂ ಇಲ್ಲಿ ಸಂಜೀವಿನಿ ಚಿಕಿತ್ಸೆ ಖಾತ್ರಿ.

ನಿರ್ದೇಶಕ ಹೆರಂಜೆ ಕೃಷ್ಣಭಟ್ಟರು ಪ್ರಾಸ್ತಾವಿಕ ಮಾತುಗಳಲ್ಲಿ ‘ಒಳ್ಳೇ ಕೆಲಸಕ್ಕೆ ಹಣದ ಕೊರತೆ ಎಂದೂ ಬಾರದು’ ಎಂಬುದನ್ನು ನಂಬಿರುವಷ್ಟೇ ಗಟ್ಟಿಯಾಗಿ ಸಾರ್ವಜನಿಕರೆದುರು ತಮ್ಮ ಮೂಲ ಸಪ್ತಾಕ್ಷರೀ ಮಂತ್ರ - ಭವತಿ ಭಿಕ್ಷಾಂದೇಹಿ, ಜಪಿಸಲು ಮರೆಯಲಿಲ್ಲ. ಯಾವುದೋ ಮಠದಿಂದ ಅಕ್ಕಿ, ಇನ್ನೆಲ್ಲಿಂದಲೋ ಬಟ್ಟೆ, ಮತ್ತೆಲ್ಲಿಂದಲೋ ವಾಹನ ಸೌಕರ್ಯ - ಎಲ್ಲಕ್ಕೂ ಇಲ್ಲಿ ಸುಯೋಗ್ಯ ಪಾತ್ರ ಉಂಟು. ಹಳಗಾಲದ ವಿದ್ಯಾರ್ಥಿಗಳು, ಕೇವಲ ಕಲಾಪ್ರೇಮದಿಂದ ಒಡನಾಟ ಹೆಚ್ಚಿಸಿಕೊಂಡವರು, ಮೌಲ್ಯ ಗೌರವಿಸುವ ಸಾರ್ವಜನಿಕ ಸಂಸ್ಥೆಗಳು ಕಾಲಕಾಲಕ್ಕೆ ಅನಿಯತವಾಗಿ ಹರಿಸುವ ದಾನ, ಅನುದಾನ ಪುರಸ್ಕಾರಗಳು ಈ ಮಹಾಮನೆಗೆ ಬಲವೂಡುತ್ತಲೇ ಇದೆ. ಆದರೆ ಅಷ್ಟೇ ಸಾಲದು ಎಂದು ಎಲ್ಲ ಕಂಡ ವಿಧಾನಪರಿಷತ್ ಸದಸ್ಯ - ಕ್ಯಾ| ಗಣೇಶ್ ಕಾರ್ಣಿಕ್, ಅಯಾಚಿತವಾಗಿ, ತಮ್ಮ ಅಧಿಕಾರದ ಮಿತಿಯ ಪೂರ್ಣ ಅರಿವಿನೊಡನೆ ಘೋಷಿಸಿದರು. “ಈಗ ಕೇಂದ್ರಕ್ಕೆ ರಾಜ್ಯ ಸರಕಾರದಿಂದ ಬರುತ್ತಿರುವ ಐವತ್ತು ಸಾವಿರ ರೂಪಾಯಿ ಅನುದಾನ ಏನೂ ಸಾಲದು. ಇದು ಕನಿಷ್ಠ ಎರಡು ಲಕ್ಷವಾದರೂ ಆಗುವಂತೆ ನಾನು ಶ್ರಮಿಸುತ್ತೇನೆ.”ಕಲಾ ಸಂಸ್ಥೆಯೊಂದರ ಸಭಾಕಲಾಪಕ್ಕೆ ಇರಬೇಕಾದ ಕಾಲಮಿತಿಯನ್ನು ಅತಿಥಿಗಳೂ (ಇನ್ನೋರ್ವ ಅತಿಥಿ - ಉದ್ಯಮಿ ಪ್ರಮೋದ್ ಮಧ್ವರಾಜ್. ಸಭಾಧ್ಯಕ್ಷ ಡಾ| ಪಿ.ಎಲ್.ಎನ್ ರಾವ್. ವರದಿ ವಾಚನ - ಪ್ರಸಾದ ಕುಮಾರ್ ಮೊಗೆಬೆಟ್ಟು) ಸೇರಿದಂತೆ ಎಲ್ಲರೂ ಔಚಿತ್ಯಪೂರ್ಣವಾಗಿ ತೋರಿಕೊಟ್ಟದ್ದಕ್ಕೆ ಅಂದಿನ ಯಕ್ಷಗಾನ ಪ್ರದರ್ಶನ ಕ್ಲಪ್ತ ಕಾಲಕ್ಕೆ ತೊಡಗಿತು. ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಸುಮಾರು ಒಂದೂವರೆ ಗಂಟೆ ಕಾಲದ ಪ್ರಸಂಗ ತಾಮ್ರಧ್ವಜ ಕಾಳಗ ಕಣ್ಮನ ತುಂಬಿತು.

9 comments:

 1. ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ಇರುವವರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವ ಲೇಖನ

  ReplyDelete
 2. ನಾನು ಮ೦ಗಳೂರಿನಲ್ಲಿದ್ದಾಗ ಕೆನರಾ ಕಾಲೇಜಿನ ಪ್ರಾ೦ಗಣದಲ್ಲಿ ನೀವು ಆಯೋಜಿಸಿದ ಯಕ್ಷಗಾನ ನೋಡಿದ ನೆನಪಿದೆ. ಆದರೆ ಯಕ್ಷಗಾನದಲ್ಲಿ ಇಷ್ಟು ಆಳವಾಗಿ ನಿಮ್ಮನ್ನು ತೊಡಗಿಸಿಕೊ೦ಡಿರುವುದು ನಿಮ್ಮ ಬ್ಲಾಗ್ ಓದಿದಾಗಲೆ ತಿಳಿಯಿತು.
  ಧನ್ಯವಾದಗಳು.
  ರಾಮ
  ಬೆ೦ಗಳೂರು

  ReplyDelete
 3. S Raghavendra Bhatta05 April, 2011 14:36

  Dear Sri Ashok,
  It is such honest recollection of the dedication of such selfless persons whose humble but solid contribution, if properly acknowledged and thanked for will surely make us free from the category of ungrateful lot -- hoLe daaTisida ambigana bamdhugaLu !! ( Got it, Ashok ? )
  S R Bhatta

  ReplyDelete
 4. ಪಂಡಿತಾರಾಧ್ಯ05 April, 2011 16:14

  ಪ್ರೀತಿಯ ಅಭಯ ವರ್ಧನರಿಗೆ ನಮಸ್ಕಾರಗಳು.
  ನಿಮ್ಮ ಸಣ್ಣ ಅನಾರೋಗ್ಯ ಈಗ ಸುಧಾರಿಸಿದೆ ಎಂದು ಭಾವಿಸುವೆ.
  ನೀವು ಎಡೆ ತಿನಿಸಾಗಿ ನೀಡಿರುವ ದೃಶ್ಯ ತುಣುಕು ಸಹಿತ
  ತಾಮ್ರಧ್ವಜಕಾಳಗ ದ ಜಾಲಚರಿಯನ್ನು ಓದಿ ಸಂತೋಷವಾಯಿತು.
  ಎಡೆ ತಿನಿಸು ಇಷ್ಟವಾಯಿತು. ಅದನ್ನು ಮೇಲೋಗರ, ಪಕ್ಕಖಾದ್ಯ ಎಂದೂ ಹೇಳಬಹುದು!
  ಅಭಯ ದಾಖಲಿಸಿರುವ ಯಕ್ಷೋತ್ತಮ ಪೂರ್ವರಂಗಗಳೂ ಮನಸೆಳೆದವು.
  ಸಂಜೀವ ಸುವರ್ಣರ ಪರಿಶ್ರಮವನ್ನು ಸಾರ್ಥಕವಾಗಿ ನಿರೂಪಿಸಿದ್ದೀರಿ.
  ಅವರ ಗುರುಕುಲಕ್ಕೆ ಕಾಣಿಕೆ, ಕೊಡುಗೆ ಪದಗಳನ್ನು ಬಳಸದೆ,
  ಯಕ್ಷೋತ್ತಮ ಪೂರ್ವರಂಗಗಳ ಅಡಕ ತಟ್ಟೆಗಳನ್ನು
  ದಯವಿಟ್ಟು ನನಗೆ ಕಳುಹಿಸಿಕೊಡಿ ಎಂದು ಕೋರುವೆ.
  ಎಂದಿನಂತೆ ಬ್ಯಾಂಕಿನಲ್ಲಿ ಪಾವತಿಸುವೆ.

  ReplyDelete
 5. 2 ವಿಷಯ.
  1. ಆಟದ ಚಿತ್ರ ಮತ್ತು ವಿಡಿಯೋ ತುಣುಕುಗಳು ಹೊಟ್ಟೆ ಉರಿಸಿದವು, ಆಟಕ್ಕೆ ಹೋಗಲಾಗಲಿಲ್ಲವಲ್ಲಾ ಎಂದು.
  2. ಬನ್ನಂಜೆ ಸಂಜೀವರ ಬಗ್ಗೆಯೇ ದಾಖಲಾತಿ ಆಗಬೇಕಾಗಿದೆ.ಅದೂ ತುರ್ತಾಗಿ.ಅವ್ರು ೨೧ ಜನ ಗುರುಗಳಿಂದ ಕಲಿತದ್ದು, ಅವರ ಸ್ವಂತದ್ದು ವಿಷೆಶಗಳನ್ನೆಲ್ಲ ವೇಷ ಸಹಿತ , ವೇಷ ರಹಿತ ದಾಖಲಾತಿ ಆದಷ್ಟು ಬೇಗ ಆಗಲೆಂಬ ಹಾರೈಕೆ.ಸರಕಾರ, ಅಕಾಡೆಮಿ ಎಂದು ಕಾಯುವ ಬದಲು ಒಂದೈವತ್ತು ಜನ ಒಟ್ಟು ಸೇರುವುದು ಕಷ್ಟ ಅಲ್ಲ ಅನಿಸುತ್ತದೆ. ಇದು ಬಂನಂಜೆಯನ್ತವರಿಗೆ ಬೇಕಾಗದೆ ಇರಬಹುದು, ಖುಷಿಯೂ ಆಗಬಹುದು.ಆದರೆ ಯಕ್ಷಗಾನಕ್ಕೆ ಬೇಕು.

  ReplyDelete
 6. ಅಶೋಕವರ್ಧನ ಜಿ.ಎನ್06 April, 2011 06:25

  ಯಕ್ಷೋತ್ತಮ ಎಂಬ ಕಥಾ (ಕಿರು) ಚಿತ್ರ ಯೂ ಟ್ಯೂಬಿಗೇ ಮೀಸಲು
  ಪೂರ್ವರಂಗ ಮತ್ತು ಯಕ್ಷೋತ್ತಮ ಕಾಳಗ - ಐದು ಅಡಕ ತಟ್ಟೆಗಳ ಕಟ್ಟನ್ನು (ಅರಗಿನ ಮನೆ ಮುಂತಾದ ಇನ್ನೂ ಹಲವು ಕೃತಿಗಳ ಜೊತೆಗೆ ಬೇಕಾದರೆ) ನೇರ ಯಕ್ಷಗಾನ ಕೇಂದ್ರ, ಇಂದ್ರಾಳಿ, ಉದುಪಿ ೨ ಇವರನ್ನು ಸಂಪರ್ಕಿಸಿ ಸಂಗ್ರಹಿಸಿಕೊಳ್ಳಬಹುದು.
  ಅಶೋಕವರ್ಧನ

  ReplyDelete
 7. ಪೆಜತ್ತಾಯ ಎಸ್. ಎಮ್08 April, 2011 14:20

  ಕಟ್ಟು ವೇಷಧಾರಿ ಚಿಕ್ಕ ಪುಟಾಣಿ ಮಕ್ಕಳ ಕುಣಿತವನ್ನು ಪುನಃ ಪುನಃ ನೋಡುತ್ತಾ ಇಂದಿನ ಪೂರ್ವಾಹ್ನದ ಅಮೂಲ್ಯ ಸಮಯ ಕಳೆದೆ!
  ನಾನು ಸಮಯ ವ್ಯರ್ಥಮಾಡಿದೆ! - ಅಂತ ಅನ್ನಿಸಲೇ ಇಲ್ಲ!
  ಆ ಸಮಯ ವ್ಯರ್ಥವೂ ಅಲ್ಲ!!
  ಯಕ್ಷಗಾನ ಕಲಾಕೇಂದ್ರದ ಉಗಮ ಮತ್ತು ಬೆಳವಣಿಗೆಗಳ ವಿವರ ಸಿಕ್ಕಿದ್ದು ಸಂತೋಷ ನೀಡಿತು.
  ಶ್ರೀ ಹೇರಂಜೆ ಅವರ ಮತ್ತು ಶ್ರೀ ಸುವರ್ಣರ ಅನುಪಮ ಶ್ರದ್ಧೆಯೇ ಕೇಂದ್ರದ ಜೀವಾಳ ಎಂಬ ವಿಚಾರವೂ ತಿಳಿಯಿತು.
  ಊಟ ವಸತಿ ಮತ್ತು ಸಾಂಪ್ರದಾಯಿಕ ವಿಧ್ಯಾಭ್ಯಾಸದ ಮೇಲೆ ಯಕ್ಷಗಾನ ಕಲೆಯನ್ನು ಕೇಂದ್ರವು ನೀಡುತ್ತಾ ಇರುವುದು ನಿಜವಾಗಲೂ ಶ್ಲಾಘನೀಯ.
  ಕೇಂದ್ರಕ್ಕೆ ಬಹು ಪರಾಕ್!
  ಮೂವರ ಸದಾಕಾಂಕ್ಷೆಯ ಪ್ರಯತ್ನ ಫಲಪ್ರದವಾಗಿ ಕೇಂದ್ರದ ಸಹಾಯಾರ್ಥವಾಗಿ ಹೊರಟ ಸಿ. ಡಿ. ಗಳು ಇಂದು ಕೇಂದ್ರದ ವಿದ್ಯಾರ್ಥಿಗಳ ಭೋಜನ ವ್ಯವಸ್ಥೆಗೆ ಪೂರಕವಾಗಿ ನಿಂತುದು ಎಂದೆಂದಿಗೂ ಅನುಕರಣೀಯ.
  ಇನ್ನೂ ಮೊದಲ ವಿಡಿಯೋ ತೋರಿಸಿದ ಆ ಪುಟಾಣಿಗಳ ಕುಣಿತ ನೋಡಬೇಕು! - ಅನ್ನಿಸುತ್ತಾ ಇದೆ.
  ವಂದನೆಗಳು
  ಪೆಜತ್ತಾಯ ಎಸ್. ಎಮ್.

  ReplyDelete
 8. pritiya asokarige pa nana namanagalu nimma adikavaada (adhika
  alla)prasanga sahityakke dhanyavaadagalu sanjeeva suvarnaradu adbuta
  pratibe avarubengalurina yaksha degulada kaaryakrama dalli
  prathyakshike maadida rithi kannige kattida haage ide kalavidarallira
  bekaada vinaya jaastiye ide avara ola horagu parichayisida nimage
  salaamu takko atriya odeya

  ReplyDelete
 9. Dear Ashok
  Sri Sanjeeva's Yakshagana repertoire needs to be recorded , sooner the better.Please think on this with your son.I may help, if needed. M.L.SAMAGA

  ReplyDelete