
ಸರಬರ ಊಟ ಮುಗಿಸಿ ಸೊರಬದ ದಾರಿ ಹಿಡಿದೆವು. ನಮ್ಮ ಧಾವಂತ ನೋಡಿ ನಿಧಾನಿಸಲು ಯಾರೇ ಹೇಳಿದರೂ ಉತ್ತರ ಸಿದ್ಧವಿತ್ತು “ಆರು ಭರ್ಚಿಗಳಲ್ಲಿ ಚುಚ್ಚಿದರೂ ನಮ್ಮ ಗುರಿ ಬನವಾಸಿ ದೇಶ.” ಕಿಮೀ ಕಲ್ಲುಗಳನ್ನು ಎಳೆದೆಳೆದು ಹಿಂದಿಕ್ಕಿದಂತೆ ನಾವು ಸಾಗಿದ್ದರೂ ಮಳೆ ನಮ್ಮಿಂದ ಒಂದು ಕೈ ಮುಂದೆ ಇದ್ದದ್ದು ಒಮ್ಮೆಗೇ ಅರಿವಾಯ್ತು. ಬನವಾಸಿ ಪೇಟೆಯಂಚು ತಲಪುತ್ತಿದ್ದಂತೆ ಬಾನ ಬೋಗುಣಿ ಕವುಚಿದಂತಪ್ಪಳಿಸಿತು ಮಳೆ. ಪುಡಾರಿ ಭಾಷಣದಿಂದ ದಿಕ್ಕೆಟ್ಟು ಓಡಿದಂತೆ ನಾವು ದಾರಿ, ಬೈಕ್ ಬಿಟ್ಟು ಸಿಕ್ಕ ಅಂಗಡಿ, ಮನೆ, ಮರಗಳ ಮರೆಗೆ ಓಡಿದೆವು (ಇಲ್ಲವಾದರೆ ನೆನೆವುದೆಮ್ಮ ದೇಹಂ ಬನವಾಸಿ ದೇಶದಿಂ!). ಅರ್ಧ ಗಂಟೆಯಲ್ಲಿ ಆಕಾಶ ತಿಳಿಯಾದ ಮೇಲೆ ನಮ್ಮ ಸೈನ್ಯವನ್ನು ಮರುಸಂಘಟಿಸಿ ಮಹಾಕವಿ ಪಂಪನನ್ನು ಸ್ಮರಿಸುತ್ತಾ ಬನವಾಸಿಯ ಮಧುಕೇಶ್ವರ ದೇವಾಲಯಕ್ಕೆ ಮುತ್ತಿಗೆ ಹಾಕಿದೆವು.
ಕೊಳಕು ಸುರಿಯುವ ಪರಿಸರ, ಪಂಪನ ಕಾಲದ್ದೇ ದೂಳು ಜಿಡ್ಡುಗಳನ್ನು ಜತನವಾಗಿ ಕಾಪಾಡಿಕೊಂಡ ವಿಗ್ರಹಗಳು (ಐತಿಹಾಸಿಕ ಪ್ರಜ್ಞೆ ಅಷ್ಟೂ ಜಾಗೃತವಿರಬಹುದೇ?), ಕಲಾವಂತಿಕೆಯ ಅರಿವೇ ಇಲ್ಲದಂತೆ ಹೇರಿದ ಆಧುನಿಕ ರಚನೆಗಳು, ಒಡ್ಡುಬಡ್ಡಾದ ರಕ್ಷಣಾಕ್ರಮಗಳು, ಕೊಳಕನ್ನು ಎತ್ತಿ ತೋರಲೆಂಬಂತೆ ಭರ್ಜರಿ ಬೆಳಕಿನ ವ್ಯವಸ್ಥೆ (ಭರ್ಜರಿ ಕಂತ್ರಾಟೇ ಇರಬೇಕು!), ಎಲ್ಲಕ್ಕೂ ಪೂರಕವಾಗಿ ಪರಂಪರೆಯ ಗಂಧವಿಲ್ಲದ ಅರ್ಚಕರು ಮತ್ತು ಐತಿಹಾಸಿಕ ಪ್ರಜ್ಞೆಯಿಲ್ಲದ ಭಕ್ತರು, ಬಹುನಿರೀಕ್ಷೆಯೊಡನೆ ಓಡಿ ಬಂದ ನಮ್ಮನ್ನು ಗೇಲಿ ಮಾಡಿದವು. ಬನವಾಸಿಯ ಕೇಂದ್ರ ಆಕರ್ಷಣೆಯೇ ಹೀಗಾದಮೇಲೆ ಇನ್ನೆಲ್ಲೂ ಸಂತೋಷ ಹುಡುಕುವ ಪ್ರಯತ್ನ ಮಾಡದೆ ಶಿರಸಿಗೆ ಮರಳಿದೆವು. [ಅನಂತರದ ದಿನಗಳಲ್ಲಿ ರಾಜ್ಯ ಸರ್ಕಾರ ‘ಪಂಪ ಪ್ರಶಸ್ತಿ,’ ಮತ್ತದನ್ನು ಕೊಡಮಾಡುವ ಅದ್ದೂರೀ ಸಮಾರಂಭಗಳನ್ನೆಲ್ಲಾ ಈ ವಠಾರಕ್ಕೇ ಹೇರಿದ್ದು ಕೇಳಿದ ಮೇಲಂತೂ ಇನ್ನು ಅತ್ತ ತಲೆ ಹಾಕಿ ಮಲಗಲೂ ಬಾರದು ಎಂದು ನಿರ್ಧರಿಸಿದ್ದೇನೆ.]

ನಿರಂಜನ ವಾನಳ್ಳಿ ವೃತ್ತಿಯಲ್ಲಿ ಪತ್ರಕರ್ತ, ಹವ್ಯಾಸದಲ್ಲಿ ಕಾಲೇಜು ಅಧ್ಯಾಪಕ ಎನ್ನುವಷ್ಟರ ಮಟ್ಟಿಗೆ ಸದಾ ಒಂದಲ್ಲೊಂದು ಪತ್ರಿಕೆ, ನಿಯತಕಾಲಿಕಗಳಲ್ಲಿ ವೈವಿಧ್ಯಮಯ ಬರಹಗಳನ್ನು ಪ್ರಕಟಿಸುತ್ತಿದ್ದ ಕಾಲವದು. ಲೆಕ್ಕಕ್ಕಿವರು ಯಾವುದೋ ಒಂದು ಹಂತದಲ್ಲಿ ನನ್ನ ತಮ್ಮನ ಹೆಂಡತಿ - ಜಯಶ್ರೀಯ ಸಹಪಾಠಿ ಎಂದೂ ಉಜಿರೆಯ ಕಾಲೇಜಿನ ಅಧ್ಯಾಪಕನಾದ ಕಾಲಕ್ಕೆ ಪುಸ್ತಕ ಪ್ರೇಮಿಯೆಂದೇ ನನಗೆ ಪರಿಚಯಕ್ಕೆ ಬಂದಿದ್ದರು. ಪ್ರವಾಸೋದ್ಯಮದ ಹಾನಿಕಾರಕ ಅಂಶಗಳು ಅದರಲ್ಲೂ ಮುಖ್ಯವಾಗಿ ಸಮಾಜದ್ರೋಹದ ಕುರಿತು ಬೆಂಗಳೂರಿನಲ್ಲಿ ಮೂರು ದಿನಗಳ ಕಮ್ಮಟವೊಂದು (ಆಯೋಜನೆ, ಈಕ್ವೇಶನ್ಸ್ ಎಂಬ ಸ್ವಯಂ ಸೇವಾ ಸಂಘಟನೆ) ನಡೆದಾಗಂತೂ ನನ್ನ ಆತ್ಮೀಯ ಬಳಗಕ್ಕೇ ಸೇರಿಹೋಗಿದ್ದರು. ನಾನು ಉತ್ತರಕನ್ನಡದ ಜಲಪಾತಗಳ ಅಂದಾಜು ಹಾಕುವಾಗಲೇ ಇವರನ್ನು ಕೇವಲ ಮಾಹಿತಿಗಾಗಿ ಸಂಪರ್ಕಿಸಿದ್ದೆ. ಆದರೆ ಈ ಪುಣ್ಯಾತ್ಮ ನಾವೆಷ್ಟು ಜನ ಬಂದರೂ ತನ್ನ ಮನೆಯಲ್ಲೇ (ಕನಿಷ್ಠ) ಒಂದು ರಾತ್ರಿಗೆ ಉಳಿಸಿಕೊಂಡು ಆಸುಪಾಸಿನ ಜಲಪಾತಗಳ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿ ನನ್ನನ್ನು ದಾಕ್ಷಿಣ್ಯಕ್ಕೆ ಸಿಕ್ಕಿಸಿಹಾಕಿದ್ದರು. ಮತ್ತೆ ಏನೋ ಅರಮನೆಯಂಥ ಮನೆಯಿರಬೇಕು, ಕೈಗೆ ಕಾಲಿಗೆ ಜನಗಳಿರಬಹುದು ಎಂದು ಕೊಂಡು ‘ಅಪರಾಧಿ ಪ್ರಜ್ಞೆಯನ್ನು’ ಕಡಿಮೆ ಮಾಡಿಕೊಂಡು ಆ ರಾತ್ರಿ ಅವರ ಮನೆಗೆ ನಾವು ಹದಿನಾಲ್ಕು ಮಂದಿ ದಾಳಿಯಿಟ್ಟಾಗ ತಿಳಿಯಿತು, ಈ ಪಾಪಾತ್ಮ ತನ್ನ ತಂದೆತಾಯಿಯರನ್ನು ಭಾರೀ ಸಂಕಷ್ಟಕ್ಕೆ ಒಡ್ಡಿಬಿಟ್ಟಿದ್ದರು!

ಹಳೆಮನೆ ಬಿಚ್ಚಿಯಾಗಿತ್ತು. ಹೊಸಮನೆ ಅರೆಬರೆ ಕೆಲಸ ನಡೆದೇ ಇದ್ದಂತೆ ಇವರು ವಾಸ್ತವ್ಯ ಹೂಡಿಯಾಗಿತ್ತು. ಮಾಮೂಲಿನಂತೆ ಇಬ್ಬರೇ ಹೆಚ್ಚೆಂದರೆ (ನಿರಂಜನ ಮತ್ತವರ ಬೆಂಗಳೂರಿನಲ್ಲಿ ಕಲಿಯುತ್ತಿದ್ದ ತಮ್ಮ, ಅಂದು ಅಲ್ಲಿರಲಿಲ್ಲ) ನಾಲ್ವರನ್ನು ಸುಧಾರಿಸಿಕೊಳ್ಳಬಹುದಾದ ಆ (ಅ)ವ್ಯವಸ್ಥೆಯಲ್ಲಿ ನಮ್ಮ ಹದಿನಾಲ್ಕೂ ಮಂದಿಗೆ ಬಿಸಿನೀರ ಸ್ನಾನ, ಸುಗ್ರಾಸ ಭೋಜನ, ಮಲಗುವ ಜಾಗ ಮತ್ತು ಸಾಹಿತ್ಯವನ್ನು, ಬೆಳಗ್ಗಿನ ತಿಂಡಿ ತೀರ್ಥವನ್ನೂ ಏನೂ ಹೆಚ್ಚುಗಾರಿಕೆ ಮೆರೆಸದೇ ಕೊರತೆಯೂ ಆಗದಂತೆ ಒದಗಿಸಿದ ಆ ಕುಟುಂಬದ ಪ್ರೀತಿ (ನೆನಪಿಡಿ, ಅಡಿಗೆಗೆ, ಮನೆ ಕೆಲಸಕ್ಕೆ ಅವರಲ್ಲಿ ಪ್ರತ್ಯೇಕ ಜನವಿರಲಿಲ್ಲ) ಪಂಚತಾರಾ ಹೋಟೆಲ್ ಸಂಸ್ಕೃತಿಗೆ ಮಾರುಹೋಗುವ ನಮ್ಮಲ್ಲಿನ ಬಹುತೇಕ ನಾಗರಿಕರಿಗೆ ಬಿಡಿಸಲಾಗದ ಒಗಟೇ ಆಗಿಯೋಯ್ತು! (ಅವರ ಅಪ್ಪಿ ಮಿಡಿಯ ರುಚಿ ಹತ್ತಿದ ಕೆಲವರು ಅದನ್ನು ಸಾಂಬಾರು ಪಲ್ಯದಂತೆ ಊಟದೊಡನೆ ಮೇದದ್ದಲ್ಲದೇ ಬೆಳಗ್ಗಿನ ತಿಂಡಿಗೂ ಹಾಕಿಸಿಕೊಂಡು ಅವರ ವರ್ಷಕ್ಕಿದ್ದ ದಾಸ್ತಾನೆಲ್ಲವನ್ನೂ ಖಾಲಿ ಮಾಡಿದ್ದು ಶುದ್ಧ ನಾಚಿಕೆಗೇಡೇ ಆದರೂ ಅವರು ಸಮ್ಮಾನವೆಂದೇ ಸ್ವೀಕರಿಸಿದ್ದು ನಾನಂತೂ ಮರೆಯಲಾರೆ)
ಮೊದಲೇ ನಿಶ್ಚಯವಾಗಿದ್ದಂತೆ ನಮ್ಮ ಮೂರನೇ ದಿನದ ಪೂರ್ವಾಹ್ನದ ಟೂರ್ ಮ್ಯಾನೇಜರ್ ನಿರಂಜನವಾನಳ್ಳಿ. ಇನ್ನೂ ಹತ್ತರ ಹುಡುಗನಾಗಿದ್ದ ಅಭಯನನ್ನು ನನ್ನ ಬೈಕಿನಲ್ಲೇ ಹೊಂದಿಸಿಕೊಂಡು ನಿರಂಜನರನ್ನು ಕೃಷ್ಣಮೋಹನ್ ಬೆನ್ನಿಗೇರಿಸಿದ್ದಾಯ್ತು. ರಾತ್ರಿ ಬಂದ ಮಣ್ಣು ದಾರಿಯದ್ದೇ ಮುಂದುವರಿಕೆಯಲ್ಲಿ ಸುಮಾರು ಹತ್ತು ಕಿಮೀ ಸಾಗಿದೆವು. ವಾನಳ್ಳಿಯವರೆಗಿದ್ದ ಜಲ್ಲಿ ಹಾಸೂ ಇಲ್ಲದ ಅಗಲಕ್ಕಿಂತ ಉದ್ದ ಹೆಚ್ಚಿದ್ದ ಕಾಡು ತೆರವಾದ ಜಾಗವನ್ನು ದಾರಿಯೆಂದು ನಂಬುವ ಸ್ಥಿತಿ. ಅದರಲ್ಲೂ ಎಲ್ಲೂ ಅಲ್ಲದೊಂದೆಡೆ, ಅಂದರೆ ತೋರಿಕೆಗೊಂದು ಕೈಕಂಬ ವಿಚಾರಣೆಗೊಂದು ನರಹುಳವೂ ಇಲ್ಲದ ಜಾಗದಲ್ಲಿ ಎಡ ಕಾಡಿಗೇ ನುಗ್ಗಿಸಿದರು ನಿರಂಜನ್. ಎಷ್ಟೋ ದಶಕಗಳ ಹಿಂದೆ ಕಾಡು ಹೊರುವ ಲಾರಿ ಅಲ್ಲಿ ನುಗ್ಗಿದ್ದ ಲಕ್ಷಣವಿತ್ತು. ತೀವ್ರ ಇಳುಕಲಿನ ಸಪುರ ಜಾಡು ಬಿಟ್ಟು ಉಳಿದೆಲ್ಲವನ್ನು ಮರಗಿಡ ಬಳ್ಳಿ ನಾಟಿ ನೇಯ್ಗೆಯಲ್ಲಿ ಮುಚ್ಚಿತ್ತು. ಬಹುಶಃ ಈ ಮುಚ್ಚಿಗೆಯೇ ನಮಗೆ ಕೊಳ್ಳದಾಳದ ಭಯವಿಲ್ಲದೆ ಬೈಕ್ ನುಗ್ಗಿಸಲು ಪ್ರೇರಣೆ ಕೊಟ್ಟಿರಬೇಕು. ಆದರೆ ಸುಮಾರು ಒಂದು ಕಿಮೀಯೊಳಗೆ ಫಸ್ಟ್ ಗೇರ್, ಎರಡೂ ಬ್ರೇಕ್ ಹಿಡಿತ ಮೀರಿ ತರಗೆಲೆ ಮೊತ್ತ ನೂಕಿಕೊಂಡೂ ಬೈಕ್ ಇಳಿಯುತ್ತಿದೆ ಎಂದನ್ನಿಸತೊಡಗಿದಲ್ಲಿ ಬೈಕ್ ಇಳಿದೆವು. ನೆಪಕ್ಕೊಂದು ಭಾರೀ ಮರ ಅಡ್ಡಬಿದ್ದಿತ್ತು, ಅಷ್ಟೇನೂ ನೀರಿಲ್ಲದ ಝರಿಯನ್ನೂ ದಾಟುವುದಿತ್ತು. ಹಿಂದಿನ ಮೆತ್ತನೆ ಸೀಟಿನಲ್ಲಿ ಕುಳಿತು, ಸವಾರರ ಕೌಶಲದಲ್ಲೇ ಬಚಾವಾದರೂ ತಮ್ಮ ಬಿಟ್ಟಿ ಸಲಹೆಗಳ ಪಟ್ಟು ಬಿಡದೇ ವಾದಿಸುವ ಸಹವಾರರಿಗೀಗ ಸ್ವಂತ ತಾಕತ್ತನ್ನು ಒರೆಗೆ ಹಚ್ಚುವ ಸ್ಥಿತಿ. ಕಾಲಿನ ಗ್ರಿಪ್ಪು, ಮೀನಖಂಡದ ಬ್ರೇಕು, ಅಸಡ್ಡಾಳ ದೇಹದ ಬ್ಯಾಲೆನ್ಸೂ ಪರೀಕ್ಷೆಗೊಳಗಾದವು. ಗಿಡಬಳ್ಳಿ ಹಿಡಿದು ನೇತದ್ದು, ಅಲ್ಲಿ ಜಾರಿದ್ದು, ಇಲ್ಲಿ ಕುಕ್ಕರಿಸಿದ್ದು ಕಥೆಯೋ ಕಥೆ.

ಇಳಿಯುವಾಗ ಅಂಡೂರಿದವರು ಮರಳುವಾಗ ನಾಲ್ಗಾಲರು! (ಮತ್ತೆ ಡಾರ್ವಿನ್ ಹೇಳಿಲ್ಲವೇ- ಹರಿದಾಡುವ ಜೀವಿಗಳಿಂದ ಓತಿಗಳು ಬಂತೂಂತ!) ಸಡಿಲ ಮಣ್ಣು, ತರಗೆಲೆ ರಾಶಿಗಳ ನಡುವೆ ದೃಢ ಹೆಜ್ಜೆಗೆ ಪರದಾಟ, ಕೈಯಾಧಾರಕ್ಕೆ ಹುಡುಕಾಟ. ಗಟ್ಟಿಯೆಂದು ಹಿಡಿದ ಬಂಡೆ ಮೈಮೇಲೇ ಜಾರುವಾಗ ತಪ್ಪಿಸಿಕೊಳ್ಳುತ್ತಾ ಕೋಲೆಂದು ಊರಿದ್ದು ಕುಂಬು ಪುಡಿಯಾದಾಗ ಮುಗ್ಗರಿಸುತ್ತಾ ಬಳ್ಳಿಯಾಧಾರ ಎಂದು ಬಾಚಿದ್ದು ಮುಳ್ಳ ಸರಿಗೆಯಾದಾಗ ಸಾವರಿಸಿಕೊಳ್ಳುತ್ತಾ ಹೆಜ್ಜೆ ಕಿತ್ತು ಹೆಜ್ಜೆ ಪೇರಿಸುತ್ತಾ ಬಂದು ಬೈಕ್ ಮುಟ್ಟಿದರೂ ಪೂರ್ತಿ ಮುಗಿದಂತಲ್ಲ. ಸವಾರ ಇಂಜಿನ್ ಚಾಲೂ ಮಾಡಿ, ಶಕ್ತಿಯೂಡಿದರೂ ನೆಲ ಕಚ್ಚಿಕೊಳ್ಳದು ಹಿಂದಿನ ಚಕ್ರ. ಬೇರಗಟ್ಟೆ, ಹುಡಿಮಣ್ಣಿನ ಅಡ್ಡ ಸೆಳೆತಗಳಲ್ಲಿ ನೇರ ಹಿಡಿದಿಡಲಾಗದ ಹ್ಯಾಂಡಲ್. ಉಂಚಳ್ಳಿಯಲ್ಲಿ ಪ್ರಾಥಮಿಕ ಪಾಠ ಪಡೆದಿದ್ದ ಸಹವಾರರೆಲ್ಲ ಇಲ್ಲಿ ಪರಿಣತ ಬೈಕ್ ನೂಕರು! ಸಾಲದೆನ್ನುವಂತೆ ಕೆಲವು ಬಾರಿ ಇಬ್ಬಿಬ್ಬರು ಅಕ್ಕಪಕ್ಕಕ್ಕೆ ನಿಂತು ಬೈಕಿನ ಕ್ರ್ಯಾಶ್ ಗಾರ್ಡ್ ಎಳೆದು ಪಾರುಗಾಣಿಸಿದ್ದೂ ಆಗಿ ಮೇಲೆ ಬರುವಾಗ ನಮ್ಮ ಲೋಕ ದೃಷ್ಟಿಯೇ ಬದಲಿತ್ತು! ‘ಎಲ್ಲೂ ಅಲ್ಲದೊಂದೆಡೆ’ ಈಗ ನಮಗೆ ‘ಎಂಥ ಸುಂದರ ಮೈದಾನ!!’

ಹೀಗೇ ಪ್ರಾಕೃತಿಕವಾಗಿ ಕಲ್ಲುಗಳು ಗಿಡಿದ ನದಿ ಪಾತ್ರೆಗೆ ಮನುಷ್ಯ ಸಂಸ್ಕಾರ ಸಿಕ್ಕರೇನಾಗಬಹುದು ಎನ್ನುವುದಕ್ಕೆ ನಾವು ಅಂದೇ ನಿರಂಜನರನ್ನು ಬಿಟ್ಟು ಮುಂದುವರಿದಾಗ ಬಲಕ್ಕೆ ಕವಲಾಗಿ ಒಂದು ದಂಡೆಯಿಂದಲೂ ಮಾರಣೇ ದಿನ ಯಲ್ಲಾಪುರ ಶಿರಸಿ ದಾರಿಯಲ್ಲಿ ಬರುವಾಗಲೂ ಬಲಕ್ಕೆ ಕವಲೊಡೆದು ಎದುರು ದಂಡೆಯಿಂದಲೂ ನೋಡಿದ ಸಹಸ್ರಲಿಂಗ ಒಳ್ಳೆಯ ಉದಾಹರಣೆ. ಇಲ್ಲೂ ಶಾಲ್ಮಲಾ ನದಿ ಪಾತ್ರೆಯ ಕಲ್ಲ ಹಾಸುಗಳಲ್ಲಿ, ಗುಂಡುಗಳಲ್ಲಿ ಪ್ರಾಚೀನ ಕಾಲದ ಭಕ್ತಾದಿಗಳು (ಆಧುನಿಕರೂ ಇರಬಹುದು) ವಿವಿಧ ಗಾತ್ರದ ಮತ್ತು ರೂಪದ ಶಿವಲಿಂಗ ಮತ್ತು ನಂದಿಯರನ್ನು ಕಟೆದು ಇಟ್ಟಿದ್ದಾರೆ. ಇಲ್ಲಿ ನೀರ ಹರಿವು ಇಳಿಯುತ್ತಿದ್ದಂತೆ ಅನಾವರಣಗೊಳ್ಳುವ ದೇವಬಿಂಬಗಳ ಸಂಖ್ಯೆ ಏರುತ್ತಾ ಹೋಗುತ್ತದಂತೆ. ಮಳೆಗಾಲದ ಸೊಕ್ಕನ್ನೂ ಮೀರಿ ನಿಂತ ಬೃಹದೀಶ್ವರ, ಮೆಟ್ಟುಗಲ್ಲಿನಂತೆಯೂ ಒದಗಿ ಪೂಜಿಸಲ್ಪಡುವ ಕಣ್ಣಪ್ಪಪ್ರಿಯ, ನೀರ ಸೆಳವಿಗೆ ಮುಗ್ಗರಿಸಿದವರ ತಬ್ಬುಗೆಗೊದಗುವ ಮಾರ್ಕಾಂಡೇಯ ಬಂಧು, ಬರಿದೆ ಹೊಳೆನೀರ ಮೊಗೆದು ಎರಚಿದರೂ ಸಾಕೆನ್ನುವ ಭೋಳೇ ಶಂಕರ, ಹೊತ್ತುಗೊತ್ತಿಲ್ಲದೆ ಬಂದು ಅರ್ಚಿಸುವವರ ಕಾಲಾತೀತ ಪುರುಷ, ಪುರೋಹಿತರನ್ನಿಟ್ಟು ವೇದೋಕ್ತ ಅರ್ಚನೆಯನ್ನು ಸ್ವೀಕರಿಸುವ ಪುರಾಣಮಹಿಮರೂ ಇಲ್ಲಿದ್ದಾರೆ. ಮಳೆ ನೀರೇ ಅರ್ಚನೆ, ಹಕ್ಕಿ ಹಿಕ್ಕೆಯೇ ಗಂಧ, ಯಾವುದೋ ಉದುರೆಲೆಯೇ ಪತ್ರೆ ಎಂದೂ ಒಪ್ಪಿಕೊಳ್ಳುವ ಈ ಬಯಲು ಆಲಯ, ಸಹಸ್ರಲಿಂಗ ಕ್ಷೇತ್ರ ನಮಗೆ ಪ್ರಿಯವಾಯ್ತು. ಇಲ್ಲಿ ದೇವದರ್ಶನ ಮತ್ತು ಆರಾಧನೆಗಳಿಗೆ ಸಾಮಾನ್ಯವಾಗಿ ಯಾವುದೇ ವಿಧಿ ನಿಷೇಧಗಳೂ ಇಲ್ಲ. ಅದೆಲ್ಲವನ್ನೂ ಬಯಸುವ ಔಪಚಾರಿಕ ದೇವಳವೊಂದು ಅಲ್ಲೇ ದಂಡೆಯಲ್ಲಿದ್ದರೂ ನಮಗದರ ಗರ್ಜು ಮೂಡದ್ದು ಯಾಕೋ ಶಿವನೇ ಬಲ್ಲ.
ನದಿ ಪಾತ್ರೆಯ ರಚನೆಯ ಭಿನ್ನರೂಪವನ್ನು ಹೇಳುವ ಭರದಲ್ಲಿ ಗಣೇಶನಿಂದ ಅವನಪ್ಪನವರೆಗೆ ಕುರುಹುಳಿಸದೆ ಹಾರಿದ್ದೆ. ಈಗ ಸರಿ ಮಾಡ್ತೇನೆ. ಗಣೇಶಫಾಲದಿಂದ ನಾವು ಮತ್ತೆ ವಾನಳ್ಳಿ ಮುಖರಾದೆವು. ಬೆಳಿಗ್ಗೆ ಹೊರಡುವಾಗ ನಿರಂಜನರ ಅಮ್ಮ ನಮ್ಮ ಹೊಟ್ಟೆಗೇನೂ ಕಡಿಮೆ ಮಾಡಿರಲಿಲ್ಲ. ಆದರೆ ಅಪ್ಪಟ ಗ್ರಾಮೀಣ ಹೋಟೇಲಿನ ಒಂದು ರುಚಿ ತೋರಿಸುವ ಸಲುವಾಗಿಯೇ ನಿರಂಜನ್ ದಾರಿ ಬದಿಯ ಕುಗ್ರಾಮ - ಜಡ್ಡಿಗದ್ದೆ ಎಂಬಲ್ಲಿ ಒಂದು ಸೋಗೇ ಮಾಡಿನ ಹೋಟೆಲಿಗೆ ನುಗ್ಗಿಸಿದರು. “ನಮಗೇನೂ ಬೇಡಾ” ಎನ್ನುತ್ತಾ ಒಳಗೆ ಹೋದವರು ಅಲ್ಲಿನ ತಾಜಾ ರುಚಿಗೆ, ಅಪ್ಪಟ ಗ್ರಾಮೀಣ ಸೊಗಡಿಗೆ ನಾಲಿಗೆ ಸೋತು, ಕೊನೆಯಲ್ಲಿ ಗಣೇಶನ ಹೊಟ್ಟೆ ಹೊತ್ತು ಹೊರಟದ್ದು ಹೇಳದಿದ್ದರೆ ಅನ್ಯಾಯವಾದೀತು. (ಆಗ ತಾನೇ ಗಣೇಶ ಫಾಲ ಬಿಟ್ಟುಬಂದ ನೆನಪಿನಲ್ಲಿ ಪುರಾಣಲೋಕದಲ್ಲಿ ಹೊಟ್ಟೆಭಾರಕ್ಕೆ ಗಣೇಶ ಬಿದ್ದದ್ದು ಅರ್ಥಾತ್ ಗಣೇಶಾಸ್ ಫಾಲನ್ನು ನೆನೆಸಿಕೊಂಡು ಜಾಗೃತರಾಗಿದ್ದೆವು). ವಾನಳ್ಳಿಯಲ್ಲಿ ನಿರಂಜನ್ ಮತ್ತು ಕುಟುಂಬದವರಿಂದ ಮುಂದಿನ ದಾರಿಗೆ ಸಲಹೆಗಳನ್ನು ಪಡೆದು, ವಿದಾಯ ಹೇಳಿದೆವು. ಅಂದು ಕೆಂಗಣ್ಣಿನಿಂದ ಬಳಲುತ್ತಿದ್ದ ನಿರಂಜನ್ ದಾರಿಯ ದೂಳಿಗೋ ಬೈಕಿನ ಹೊಗೆಗೋ ಕಣ್ಣೀರಿಟ್ಟದ್ದು ಇರಬಹುದು. ಆದರೆ ನಮಗಂತೂ ಅವರ ಕುಟುಂಬದ ಆತ್ಮೀಯತೆಗೆ ಎದೆ ತುಂಬಿ ಕಣ್ಣು ಮಂಜಾಗಿತ್ತು.
ಹುಲೇಕಲ್ಲಿನಿಂದ ನಾವು ಶಿರಸಿ ದಾರಿ ಬಿಟ್ಟು ಎಡದ ಯಲ್ಲಾಪುರದ ದಾರಿ ಹಿಡಿದೆವು. ವಾಸ್ತವವಾಗಿ ಅದು ಶಿರಸಿ-ಯಲ್ಲಾಪುರಗಳ ನಡುವಣ ಮುಖ್ಯ ದಾರಿಗೆ ವಾನಳ್ಳಿ, ಹುಲೇಕಲ್ಲು ವಲಯದವರಿಗೊಂದು ಒಳದಾರಿ. ಇದರಲ್ಲಿ ನಾಲ್ಕು ಕಿಮೀ ಅಂತರದಲ್ಲಿ ಬಲಕ್ಕೆ ನಮಗೆ ಸಿಕ್ಕಿದ ದೇವಳ ಹುಣಸೇಹೊಂಡ. ಆದರೇನು ಅದಿಂದು (ರುಚಿ ಅರ್ಥಾತ್ ಹುಳಿ ಕಳೆದುಕೊಂಡು) ಚಪ್ಪೆ! ದೊಡ್ಡ ಖಾಲೀ ಮೈದಾನದ ಅಂಚಿನಲ್ಲಿರುವ ರಚನೆ ಪ್ರಾಚೀನ ಮತ್ತು ದೃಢವೇ ಇದ್ದರೂ ಜನರ ಅನಾಸ್ಥೆಯಿಂದ ಜೀರ್ಣ ಸ್ಥಿತಿಗೆ ತಲಪಿತ್ತು. ದೇವರು, ಭಕ್ತಿಯೂ ಕಾಲಕ್ಕೆ ತಕ್ಕಂತೆ (ಹೊಸತು ಬರುವುದೂ ಸೇರಿ) ಪರಿಷ್ಕರಣೆಗೆ ಒಳಪಡಬೇಕಾಗುತ್ತದೆ. ಆದರೆ ಜೀರ್ಣೋದ್ಧಾರಕ್ಕೆ ವಿವೇಚನೆಯ ಲಕ್ಷ್ಮಣ ರೇಖೆ ಸ್ಪಷ್ಟ ಇರಲೇಬೇಕು. ಹಾಗಿಲ್ಲವಾದ್ದಕ್ಕೇ ಮುರುಡೇಶ್ವರದ ಜೀರ್ಣೋದ್ಧಾರ, ಇಸ್ಕಾನಿನ ಭಕ್ತಿಯ ರಚನೆಗಳು ನನಗಂತೂ ವೈಭವವಾಗಿ ತೋರುವುದಿಲ್ಲ; ವಿಕಾರ, ಅತಿರೇಕ. ಮೈಸೂರಿನಲ್ಲಿ ನನ್ನ ತಮ್ಮ - ಅನಂತವರ್ಧನ (ಇವನು ಭಕ್ತಿ ಪಂಥದವನೇನೂ ಅಲ್ಲ) ಕೆ.ಹೆಮ್ಮನ ಹಳ್ಳಿಯ ಮಹಾಲಿಂಗೇಶ್ವರ ದೇವಸ್ಥಾನವನ್ನು ಒಂದು ಸಾಮಾಜಿಕ ಸಂಘಟನೆಯ ಮಟ್ಟದಲ್ಲಿ ಜೀರ್ಣೋದ್ಧಾರ ನಡೆಸಿದ ಕ್ರಮ ನನಗೊಂದು ಆದರ್ಶವಾಗಿ ಕಾಣುತ್ತದೆ. ಅದರ ಕುರಿತು ಎರಡು ಮಾತಿನ ಪರಿಚಯ ತೀರಾ ಅಪ್ರಸ್ತುತವಾಗಲಾರದು ಎಂದು ಭಾವಿಸುತ್ತೇನೆ.

ಮೈಸೂರಿನ ಮಹಾಲಿಂಗೇಶ್ವರ ಮಹಾತ್ಮ್ಯೆಯನ್ನಷ್ಟಕ್ಕೇ ಬಿಟ್ಟು ಮತ್ತೆ ಉತ್ತರಕನ್ನಡದ ಹುಣಸೇಹೊಂಡದಿಂದ ಮುಂದುವರಿಯೋಣ. (ಇಂದಿನ ಹುಣಸೇಹೊಂಡ ಹೇಗಿದೆ ಎನ್ನುವುದನ್ನು ಪ್ರತ್ಯಕ್ಷದರ್ಶಿಗಳು ಪ್ರತಿಕ್ರಿಯಾ ಅಂಕಣದಲ್ಲಿ ತುಂಬಿದರೆ ತಿಳಿದುಕೊಳ್ಳಲು ನಾನೂ ಕಾತರನಾಗಿದ್ದೇನೆ.) ಮುಂದೆರಡು ಕಿಮೀ ಅಂತರದಲ್ಲಿ ಇನ್ನೊಂದು ಬಲಕವಲಿನಲ್ಲಿ ಮೊದಲೇ ಹೇಳಿದ ಸಹಸ್ರಲಿಂಗೇಶ್ವರ ಕ್ಷೇತ್ರ ನೋಡಿ ಮರಳಿದ್ದೂ ಆಯ್ತು. ಶಿರಸಿ-ಯಲ್ಲಾಪುರದ ದಾರಿ ಸೇರಿ ಹೊಸ ನಿರೀಕ್ಷೆಗಳತ್ತ ಧಾವಿಸೋಣವೆಂದರೆ ಅಯ್ಯೋ ಮತ್ತೆ ಪಿರಿಪಿರಿ ಮಳೆ ಕಾಟ! ಏಕ ದಿನ ವಿಶ್ವ ಕಪ್ ಪಂದ್ಯಗಳೇ ಮಳೆ ಬಂದಾಗ ಪಿಚ್ಚಿಗೆ ಹೊದಿಕೆ ಹೊಚ್ಚಿ, ವಟವಟ ಕಾಯಿಸುವಾಗ ತಿರುಗಾಡಿಗಳು ನಾವೇನು ಮಾಡಬಹುದು? ಅದೋ ಪೇಟೆ ಮನೆ ಬಿಟ್ಟು ಹಳ್ಳಿಮೂಲೆಯ ಬಸ್ ಕಾಯುವ ಚಪ್ಪರವೂ ಇಲ್ಲದ ಕಾಡು ದಾರಿ. ಬದಿಯ ಮರಗಳನ್ನು ಆಶ್ರಯಿಸಿ ನಿಂತು, ತೊಟ್ಟಿಕ್ಕುವ ಹನಿಗಳನ್ನು ಲೆಕ್ಕ ಹಾಕುವುದಷ್ಟೇ ಉಳಿಯಿತು. ಅಲ್ಲೇ ಎಲ್ಲೋ ಹೆಬ್ಬಲಸು ಮರದ ಮೇಲೆ ಹಣ್ಣು ಚಪ್ಪರಿಸುವ ಕೆಂಜಳಿಲು ನಮ್ಮ ಇರವಿಗೆ ಬೆದರಿ ಕಾಡೇ ಅನುರಣಿಸುವಂತೆ ಲೊಚಗುಡುವ ಚಂದಕ್ಕೆ ಕಿವಿಯಾಗಿ ಕಾಯುತ್ತಾ ನಿಂತೆವು. ನೀವೂ ಮುಂದಿನ ವಾರದವರೆಗೆ ಕಾಯ್ತೀರಲ್ಲಾ?
(ಮುಂದುವರಿಯಲಿದೆ)
'ಆರಂಕುಸಮಿಟ್ಟೊಡಂ ನೆನೆದಿರೆಲ್ಲಾ ಬನವಾಸಿ ಮಳೆಯೊಳ್' ಓದಿ
ReplyDeleteಮಲೇಯಲ್ಸಂಲಿ ನಾನೇ ನೆನೆದಷ್ಟು ಸಂತೋ ಷವಾಯಿತು.
ವಾನಳ್ಳಿಯ ಮನೆಯುಪಚಾರದಿಂದ ತೊಡಗಿ ಶಿವಗಂಗೆ ಜಲಪಾತದ ತನಕದ ಬರಹವನ್ನು ಒಂದೇ ಓಟದಲ್ಲಿ ಮುಗಿಸಿದೆ.
ReplyDeleteಜಲಪಾತದ ಚಿತ್ರ ಅದರ ಸೌಂದರ್ಯವನ್ನೆಲ್ಲ ಕಟ್ಟಿಕೊಡುತ್ತದೆ.
ಈಗ ಆ ಜಲಪಾತದ ಸ್ಥಿತಿ ಹೇಗಿದೆ? ತಿಳಿದಿದೆಯೇ?
ರಾಧ
ಹೀಗೇನೆ ಅಂತ ಹೇಳಲಾರೆ, ಲೇಖನ ಮತ್ತು ಚಿತ್ರಗಳು ಬಹಳ ಖುಷಿ ಕೊಟ್ಟವು
ReplyDeleteನಟೇಶ್
ದಿನಕ್ಕೆರಡು ಜಲಪಾತಗಳು, ವಾನಲ್ಲಿಯವರ ಆತಿಥ್ಯ, ಅಲ್ಲಿಯ ಅಪ್ಪೆ ಮಿಡಿ ಉಪ್ಪಿನಕಾಯಿ, ಗಣೇಶ ಫಾಲಾ ಎಲ್ಲವನ್ನೂ ಮತ್ತೆ ನೆನಪು ಮಾಡಿಕೊಟ್ಟದಕ್ಕೆ ಧನ್ಯವಾದ. ಇನ್ನೊಮ್ಮೆ ಹೋಗೋಣ ಎಂದೆನಿಸುತ್ತಿದೆ ;)
ReplyDeleteನಮ್ಮ ಮಲೆನಾಡಿನ ಭಾಷೆಯಲ್ಲಿ ಫಾಲ ಅಂದರೆ ನಡೆದು ದಾಟಬಹುದಾದ ಪುಟ್ಟ ಸೇತುವೆ ಎಂಬ ಅರ್ಥ ಬರುತ್ತೆ. ದಿನಕ್ಕೆರಡು ಜಲಪಾತಗಳ ದರುಶನ! ಪ್ರಕೃತಿ ದೇವಿಯ ಭಕ್ತರಿಗೆ ಇನ್ನೇನು ಬೇಕು? ( ವಾನಳ್ಳಿಯವರ ಮನೆಯ ಅಪ್ಪೆಮಿಡಿ ಉಪ್ಪಿನಕಾಯಿ ಮೆದ್ದ ತಾವೇ ಧನ್ಯರು!)
ReplyDeleteAhok,
ReplyDeleteLekhana bahala chennaagide. Nimma nenapige namaskaara Indigu shivaganga joga haage ide. Monne namma aivaru vidyaarthigalu hodavaru mele baralaagade oddaadidru! Ganesh falls -shivaganga jalapaatadindaagiye aa heasaru bandirabeku
NV
ಈ ಸ್ಥಳಗಳ ಪೈಕಿ ಕೆಲವನ್ನು ಬಲು ಹಿಂದೆ ನೋಡಿದ್ದೇನೆ. ಈಗ ಹೇಗಿದೆಯೋ?
ReplyDeleteGood one. jalapaatha darshana , shivappoje matthu varnane vivara balu chenna
ReplyDeletejoshy.
ಅಶೋಕರಿಗೆ ನಮಸ್ಕಾರಗಳು,
ReplyDeleteಹಳೆಯ ನೆನಪುಗಳನ್ನು, ಅಂದಿನ ನಮ್ಮ ಚಾರಣದ ಉತ್ಸಾಹ ವನ್ನು, ಪಡೆದ ಆನಂದವನ್ನು ಮತ್ತೆ ನೆನಪಿಸಿದ ನಿಮಗೆ ಅಭಿವಂದನೆಗಳು. ನಿರಂಜನ ವಾನಳ್ಳಿ ಯವರ ಆಥಿತ್ಯ ಹಾಗೂ ಆತ್ಮೀಯತೆ ಮತ್ತೊಮ್ಮೆ ನೆನಪಿಗೆ ಬಂತು - ಅರವಿಂದ ರಾವ್
veera sharadhi harivanthe, morevanthe................salina mathitharthavannu nimma lekhanadha moolaka aragisikonde...................thrupthiya theginondige............mugisidhe
ReplyDeleteAhok,
ReplyDeletelekhana khushikottitu. Matte nammibbarannu hattira tanditu.
Matte baritene
NV
Namastheji
ReplyDeleteArticle was nice ,read fully.Nice pictures. ""pooje maadiro.. sahasaralingake pooje maadiro.... "photo who took? .
Ramesh kainthaje
ನಿಮ್ಮ ಪ್ರವಾಸ ಕಥನಗಳು ರೋಚಕ, ಅನುಭವದಾಯಕ. ಅಭಿವಂದನೆಗಳು ಧನ್ಯವಾದಗಳು.
ReplyDeletesuper travel story.
ReplyDelete