10 December 2010

ಏನ್ ಸೈಕಲ್ ಸಾsss ಏನ್ ಸೈಕಲ್ssss

[ಕುಮಾರಧಾರಾವಾಹಿಯ ಎರಡನೇ ಮುಳುಗಿಗೆ ಮೊದಲು ಇಲ್ಲೊಂದು ಹೊರಳು ಸೇವೆಯ (ಮಡೆಸ್ನಾನ?) ವರ್ತಮಾನ ತುರ್ತಾಗಿ ಒದಗಿದೆ. ಇದುಮುಗಿಸಿ ಅಲ್ಲಿಗೆ ಹೋದರಾಗದೇ?]

ಉಯ್ಯಾಲೆಯಾಡಿಸುವ ಮಣ್ಣ ಜಾಡುಗಳಲ್ಲಿ, ಹೊಂಡ ಬಿದ್ದ ದಾರಿಗಳಲ್ಲಿ, ಅಂಚುಗಟ್ಟೆಗಳು ಮೊಳೆಯದ ಕಾಂಕ್ರೀಟ್ ಹಾಸುಗಳಲ್ಲಿ ಹರಿದು ಬಂದವೋ ಬಂದವು. ಝಗಮಗಾಯಿಸುವ ದೀಪಗಳ ಬೆಳಕಿನಲ್ಲಿ, ಕಣ್ಣುಕಿತ್ತು ನೇಲಿದಂಥಾ ಟ್ಯೂಬ್ ಲೈಟುಗಳ ಮಂಕಿನಲ್ಲಿ, ಕತ್ತಲಮೂಟೆಯದೇ ಸೋರಿಕೆಯಲ್ಲೂ ಚಟುಲತೆಯ ಕಿಡಿಯಂತೆ ಸಿಡಿದು ಸೇರಿದವೋ ಸೇರಿದವು. ಅಮ್ಮನ ಕಾರಿನ ಢಿಕ್ಕಿಯಿಂದಿಳಿದು ಬಳುಕುವ ಪುಟಾಣಿಯಾಗಿ, ಅಪ್ಪನ ಬೈಕಿನ ಮುಂದೊತ್ತುವ ನೆರಳಾಗಿ, ಗೆಳೆಯರ ದಂಡಿನ ಸರದಾರನಾಗಿ, ಮುದಿಭ್ರಾಂತು ಒಂಟಿಭೂತವಾಗಿಯೂ ಕೂಡಿಕೂಡಿ ಸಂಕಿ ಅಸಂಕಿಯಾಯ್ತು. ಹತ್ತರಿಂದ ಎಂಬತ್ತರ ವಯೋಮಾನ, ಗಂಡುಹೆಣ್ಣೆನ್ನದ ಏಕೋಭಾವ, ಬುಗ್ಗೆ ಮಾರುವವನಿಂದ ವಿಶ್ವಯಾನಿಯವರೆಗಿನವರೆಲ್ಲಾ ಅಂದು,  ಡಿಸೆಂಬರ್ ಐದರ ಆದಿತ್ಯವಾರ ಬೆಳಕು ಹರಿಯುವ ಮುನ್ನ ಒಟ್ಟಾದದ್ದು ಸೈಕಲ್ ಸವಾರಿಗೆ. ಗೆಳೆಯ ಉಪಾಧ್ಯ ಉದ್ಗರಿಸಿದರು “ಅಯ್ಯಬ್ಬಾ! ಮಂಗ್ಳೂರಲ್ಲಿ ಇಷ್ಟೊಂದು ಸೈಕಲ್ ಇತ್ತಾ!” ಇದು ಆರೆಕ್ಸ್ ಲೈಫ಼್ ಕೊಟ್ಟ ಕರೆ ‘ಹಸುರಿನ ನವೋದಯಕ್ಕೆ ಸೈಕಲ್ ತುಳಿಯಿರಿ’ಗೆ ಬಂದ ಅಪೂರ್ವ ಜನಬಲ. ನಾಲ್ಕು ವರ್ಷದ ಹಿಂದೆ ಸುಮಾರು ಮುನ್ನೂರು, ಮತ್ತಿನ ವರ್ಷಕ್ಕೇರಿ ಬಂತು ಇಮ್ಮಡಿ, ನಿನ್ನೆಯ ವರ್ಷದಲ್ಲಿ ಎಂಟ್ನೂರು, ಇಂದು ಸಾವಿರಾದಿನ್ನೂರಾಚೆ - ಅಸಂಖ್ಯ!

ಮೊನ್ನೆಮೊನ್ನೆ ನನ್ನ ಚಿಕ್ಕಮ್ಮ ಸೀತೆ ತನ್ನ ಕಿರಿಯ ಗೆಳತಿ ವಂದನಾ ನಾಯಕ್ ನೋಡಲು ಹೋಗಿದ್ದರು. ಬಾಯ್ತುಂಬಾ ಮಾತಾಡುವ ವಂದನಾ ಸಣ್ಣ ಕರಪತ್ರ ಕೊಟ್ಟು ಕಳಿಸಿ, ನನ್ನನ್ನು ಕೆಣಕಿದ್ದರು. ಭಾರೀ ಅಲ್ಲ, ಸ್ಪರ್ಧೆಯಿಲ್ಲ, ಪ್ರವೇಶಧನ ಇತ್ಯಾದಿ ದಂಧೆಯೂ ಅಲ್ಲ. ವ್ಯಾಯಾಮದ ದೃಷ್ಟಿಯಲ್ಲೂ ಪರಿಸರ ಸ್ನೇಹದಲ್ಲೂ (ಹೊಗೆ, ಸದ್ದುಗಳಿಲ್ಲ) ಸರಳತೆ, ಅನುಕೂಲ, ವೇಗ, ದೃಢತೆ, ಸುರಕ್ಷೆ ಮುಂತಾದ ನೂರೆಂಟು ಗುಣಗಳಿಗೂ ಸೈಕಲ್ಲನ್ನು ಮೀರಿದ ಸ್ವಯಂಚಲಿ ವಾಹನ ಇನ್ನೊಂದಿಲ್ಲ. ವಾಹನದಿಂದ ವಾಹನಕ್ಕೆ ಬಡ್ತಿಗೊಳ್ಳುವ ನಾಗರಿಕ ಪ್ರಜ್ಞೆಗೆ ತಪ್ಪೊಪ್ಪಿಕೊಳ್ಳುವ ಒಂದು ಸಣ್ಣ ಅವಕಾಶವೇ ಅದರಲ್ಲಿ ‘ಸೈಕಲ್ ಅಭಿಯಾನ’ ಹೆಸರಿನಲ್ಲಿ ತೆರೆದುಕೊಂಡಿತ್ತು. ಬೆಳಿಗ್ಗೆ ಆರೂವರೆಗೆ ಲೇಡಿಹಿಲ್ ವೃತ್ತದಿಂದ ತೊಡಗಿ ಕೊಟ್ಟಾರ, ಕೂಳೂರಿನವರೆಗೆ ಹೆದ್ದಾರಿಯಾನ. ಮತ್ತೆ ಗುರುಪುರ ನದಿಯ ಮಗ್ಗುಲಿಗೆ ಬದಲಿ, ತಣ್ಣೀರುಬಾವಿಗಾಗಿ ಭೂಶಿರ ಬೆಂಗ್ರೆಗೆ, ಅಂದರೆ ಸುಮಾರು ಹದಿನಾಲ್ಕು ಕಿಮೀ ಸವಾರಿ ಮೊದಲ ಹಂತ. ಕಡವಿನಲ್ಲಿ ಸೈಕಲ್ಲುಗಳನ್ನು ಹೇರಿಕೊಂಡು ದೋಣಿ ಸಾಗಲಿ ಹಾಡಿ ಬಂದರ್ ಸೇರಿ ಬಿಯಿಎಂ ಶಾಲೆಗೆ ಮುಕ್ತಾಯ; ಸುಮಾರು ಹದಿನಾರು ಕಿಮೀ ಸಾಂಕೇತಿಕ ಯಾತ್ರೆ. ವಂದನಾ ಜ್ಯೋತಿ ಸೈಕಲ್ ಮಳಿಗೆಯ ಕುಟುಂಬದ ಸದಸ್ಯೆ ಆದರೂ ನಾನು ದೂರವಾಣಿಸಿ ಹೇಳಿದೆ “ಉತ್ಸಾಹ ಉಂಟು. ಆದರೆ ಸೈಕಲ್ ಇಲ್ಲ. ನನ್ನ ಜೀವನ ಕ್ರಮದ ಅನಿವಾರ್ಯತೆಯಲ್ಲಿ ಒಂದು ದಿನದ ಸೈಕಲ್ ಓಟಕ್ಕೆ ಸೈಕಲ್ ಕೊಳ್ಳಲಾರೆ!” ಪುಸ್ತಕ ವ್ಯಾಪಾರಿಯಾದ ನಾನು ‘ಸುಜ್ಞಾನದ ಹೆಬ್ಬಾಗಿಲು - ಪುಸ್ತಕ’ ಎಂದಷ್ಟೇ ಪ್ರಾಮಾಣಿಕವಾಗಿತ್ತು ವಂದನಾರ ಪ್ರತಿಕ್ರಿಯೆ, “ನೀವು ಬರುವುದೇ ನಮಗೆ ಸಂತೋಷ ಸಾರ್. ನಮ್ಮ ಮನೆಯ ಸೈಕಲ್ ನಿಮ್ಮುಪಯೋಗಕ್ಕೆ ಮೀಸಲು.”

ಉಪಾಧ್ಯರಿಗೆ ಹೊಡೆದೆ, ನಿರೇನಿಗೆ ಹೊಡೆದೆ, ರೋಹಿತಿಗೆ ಹೊಡೆದೆ, ಪ್ರಸನ್ನನಿಗೂ ಬಿಡದೆ ಹೊಡೆದೆ - ದೂರವಾಣ. ಕರೆ ಒಂದೇ “ನಿದ್ರಿಸದಿರು ವೀರಾ.” ಗೋವಿಂದನಿಗೆ ಕುಟ್ಟಿದೆ, ಪಂಡಿತಾರಾಧ್ಯರಿಗೆ ಕುಟ್ಟಿದೆ, (ಇಂದು ಗಣಕದೆದುರಷ್ಟೇ ಬೆವರಬಲ್ಲ) ಪೆಜತ್ತಾಯರಿಗೂ ಕುಟ್ಟಿದೆ ಮತ್ತೆ ಅಟ್ಟಿದೆ ಮಿಂಚಂಚೆ, “ಓ ಬನ್ನಿ ಬನ್ನಿ ಬನ್ನಿ”. ಎರಡು ದಿನ ಬೆಳಿಗ್ಗೆ ಆರುಗಂಟೆಗೇ ಸೈಕಲ್ಲೇರಿ ಒಂದೂವರೆ ಗಂಟೆ ಮಂಗಳೂರ ಬೀದಿ ಸುತ್ತಿದೆ. ಪಿಂಟೋ ಓಣಿಯ ಸ್ಥಿತಿ ನನ್ನ ಕಾರಿನ ಸೀಟ್ ಹೇಳುವಷ್ಟು ನುಣ್ಣಗಿಲ್ಲ ಎಂದರಿವಾಯ್ತು. ಕದ್ರಿಗುಡ್ಡೆಯ ಚಡಾವಿನಲ್ಲಿ ನನಗೆ ಉಸಿರು ಸಿಕ್ಕಿಕೊಳ್ಳುತ್ತಿದ್ದಾಗ ಐವತ್ತಕ್ಕೂ ಮಿಕ್ಕು ವರ್ಷಗಳಿಂದ ಪತ್ರಿಕೆ ವಿತರಿಸುವ ಸಿಪಿಸಿಯ ಶೆಟ್ಟಿಗಾರ್ ತನ್ನ ಬೆಲ್ ಕಿಣಿಕಿಣಿಸಿ, ಹಿಂದಿಕ್ಕಿದಾಗ ನಕ್ಕಂತಾಯ್ತು. ದಾರಿಯ ಅದುರಾಟಕ್ಕೆ ಹ್ಯಾಂಡಲ್ ಮೇಲೆ ಬಿಗಿಯಾದ ಅಂಗೈ ಹಿಡಿತ ಮತ್ತು ಆ ಕಸರತ್ತಿನಲ್ಲಿ ಹನಿಗಟ್ಟಿದ ಹಣೆ ಜಿಮ್ಮಿನೊಳಗಿನ ಯಾವುದೇ ಯಾಂತ್ರಿಕ ವ್ಯಾಯಾಮದ ಔಪಚಾರಿಕತೆಗೆ ಮೀರಿದ್ದು.

ವಿಟ್ಲದ ಬಳಿಯ ಹಳ್ಳಿ ನೆಲ್ಯಾರಿನಿಂದ ಗೋವಿಂದ, ಮಗ ಸುನಿಲನೊಡನೆ ತನ್ನ ವಿಶಿಷ್ಟ ಮತ್ತು ಮಗನ ಸಾದಾ ಸೈಕಲ್ಲುಗಳನ್ನು ಕಾರಿನಲ್ಲಿ ಹೇರಿಕೊಂಡು ಬಂದು ಶನಿವಾರವೇ ಮಂಗಳೂರಿನಲ್ಲಿ ಠಿಕಾಣಿ ಹೂಡಿದ್ದ. ಹಾಗೇ ಸಾಲಿಗ್ರಾಮದಿಂದ ಸಂಜೆಯ ಬಸ್ಸೇರಿ ಬಂದ ಉಪಾಧ್ಯರ ಸೈಕಲ್ಲು ಅವರ ಬಗಲಲ್ಲೇ ಇತ್ತು! ಆದಿತ್ಯವಾರ ಬೆಳಿಗ್ಗೆ ಕತ್ತಲು ಹರಿಯುವ ಮುನ್ನವೇ ಬಂದು ಸೇರತೊಡಗಿದ್ದ ಉತ್ಸಾಹಿಗಳನ್ನು ಹೆಚ್ಚುಕಡಿಮೆ ಅಷ್ಟೇ ಸಂಖ್ಯೆಯಲ್ಲಿದ್ದ ಸ್ವಯಂಸೇವಕರ ಸಹಾಯದಲ್ಲಿ ವ್ಯವಸ್ಥಾಪಕರು ಐವತ್ತೈವತ್ತರ ಗುಂಪುಗಳಾಗಿ ವಿಂಗಡಿಸಿ ನಿಲ್ಲಿಸುತ್ತಿದ್ದರು. ವೈಯಕ್ತಿಕ ಗುರುತಿನ ಸಂಖ್ಯೆ, ಸೈಕಲ್ಲಿಗೂ ಅದನ್ನು ವಿಸ್ತರಿಸಲು ಸ್ಟಿಕ್ಕರ್, ಇನ್ನೂ ಮುಖ್ಯವಾಗಿ ಅಭಿಯಾನದ ಉದ್ದೇಶ ಮತ್ತು ಸಾಧನೆಯ ಕ್ರಮವನ್ನು ವಿವರಿಸುವ ಉಭಯ ಭಾಷೀ ಕರಪತ್ರಗಳು ಸಾಲದೇ ಹೋದರೆ ಎನ್ನುವಂತೆ ಧ್ವನಿವರ್ಧಕ ಬಳಸಿ ಘೋಷಣೆಯೂ ನಡೆಯಿತು. “ಇದು ರೇಸ್ ಅಲ್ಲ, ಇಲ್ಲಿ ಸ್ಪರ್ಧೆ ಸಲ್ಲ. ಜಗತ್ತಿನ ತಾಪಮಾನ ಏರುತ್ತಿದೆ. ಅದನ್ನು ಮಿತಿಗೊಳಿಸಲು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೌಲ್ಯವರಿತು ಉಳಿಸಲು ಸೈಕಲ್ ತುಳಿಯೋಣ ಬನ್ನಿ.” ಜೊತೆಗೆ ಭಾಗಿಗಳಿಂದಾಗಬಹುದಾದ ಪರಿಸರ ಹಾನಿಯನ್ನು ತಪ್ಪಿಸಲು ಪರೋಕ್ಷ ದಾರಿಗಳನ್ನೂ ಮಾಡಿಕೊಂಡಿದ್ದರು. “ಅಭಿಯಾನದಲ್ಲಿ ತಿನಿಸುಗಳ ಕಸ ವಿಲೇವಾರಿಯಲ್ಲಿ ಪರಿಸರ ಹಾನಿ ಮಾಡಬೇಡಿ. ಕೊನೆಯಲ್ಲಿ ತಂತಮ್ಮ ‘ಕಸ’ ಹಾಜರುಪಡಿಸಿದವರಿಗೆ ಆಕರ್ಷಕ ಬಹುಮಾನಗಳಿವೆ”. ಸಮೂಹ ಅಭಿಯಾನಗಳಲ್ಲಿ ಆಕಸ್ಮಿಕಗಳನ್ನು ಮುಂಗಾಣುವ ಎಚ್ಚರ ಉದ್ದೇಶದ ಯಶಸ್ಸಿನಲ್ಲಿ ಬಹುದೊಡ್ಡ ಪಾಲು ಪಡೆಯುತ್ತದೆ. ಸೈಕಲ್ಲುಗಳ ಜಖಂ, ಸವಾರರ ಅನಾರೋಗ್ಯಗಳಿಗೆ ಸಾಗಣೆಯ ವಾಹನಗಳು, ವೈದ್ಯರ ದಂಡೂ ದಾರಿಯುದ್ದಕ್ಕೆ ಆಯಕಟ್ಟಿನ ಜಾಗಗಳಲ್ಲಿ ಎಚ್ಚರಿಸಲು ಮತ್ತು ದಿಕ್ಕುಗಾಣಿಸಲು ಸಿಬ್ಬಂದಿಗಳ ವ್ಯವಸ್ಥೆಯೂ ಅಚ್ಚುಕಟ್ಟಾಗಿತ್ತು.

ಆರೂ ಮೂವತ್ತರ ಸುಮಾರಿಗೆ ಜಿಲ್ಲಾ ಪೋಲಿಸ್ ಮುಖ್ಯಸ್ಥ ಸೀಮಂತ್ ಕುಮಾರ್ ಸಿಂಗ್ ಉತ್ಸಾಹದ ಕಟ್ಟೆ ಬಿಚ್ಚಿದರು. ಪೂರ್ಣ ಬೆಳಕಿನ ಹರಿವಿನೊಡನೆ ಹೊಸ ಅರಿವಿನ ಹರಿಕಾರರು ಅಕ್ಷರಶಃ ಸಾವಿರತೆರೆಗಳಂತೆ ದಾರಿಯುದ್ದಕ್ಕೆ ಧಾವಿಸಿದರು. ಅಪ್ಪಿಲಿ, ಅಮ್ಮಿಲಿ, ಸಣ್ಣಿಲಿ, ಚಿಕ್ಕಿಲಿ ಎಂದೆಲ್ಲಾ ಕುವೆಂಪು ಹಾಡಿದ್ದಕ್ಕೆ ಹೊಂದುವಂತಾ ನೂರಾರು ಗಾತ್ರದ, ವೈವಿಧ್ಯದ ಸೈಕಲ್ ಮತ್ತು ಸವಾರರುಗಳು ಏಕ ಭಾವದಲ್ಲಿ ಕೂಳೂರಿನತ್ತ ಪೆಡಲ್ ತುಳಿದರು. ಉಪಾಧ್ಯರ ಉದ್ಗಾರ - ‘ಇಷ್ಟೊಂದು ಸೈಕಲ್. .’ ಹುರುಳಿಲ್ಲದಿಲ್ಲ. ಎಷ್ಟೊಂದು ವರ್ಣ, ವಿನ್ಯಾಸ, ಸಾಮರ್ಥ್ಯ ವೈವಿಧ್ಯಗಳೆಲ್ಲಾ ನಿತ್ಯ ಬಳಕೆಗೆ ದೂರಾಗಿ ಎಲ್ಲೋ ಮನೆಯಂಗಳದಲ್ಲಿ, ಫ್ಲ್ಯಾಟುಗಳ ಆವರಣದೊಳಗೆ, ಹೆಚ್ಚೆಂದರೆ ವಾರಾಂತ್ಯದಲ್ಲಷ್ಟೇ ಮೈದಾನ ಬೀಚುಗಳಲ್ಲಿ ಮೆರೆದವೇ ಜಾಸ್ತಿ. ಸಹಜವಾಗಿ ಕೆಲವು ಸೈಕಲ್‌ಗಳು ಚೈನ್ ಕಡಿದೋ ಕೆಲವು ಸವಾರರು ಮುಕ್ತ ವಾತಾವರಣದಲ್ಲಿ ಲಗಾಮು ಕಳೆದುಹೋಗಿ ಪಲ್ಟಿ ಹೊಡೆದದ್ದೋ ಇಲ್ಲದಿಲ್ಲ. ಆದರೆ ಒಂದೂ ಗಂಭೀರವಾಗಲಿಲ್ಲ, ಒಟ್ಟಾರೆ ಸಾಮಾಜಿಕ ಸ್ವಾಸ್ಥ್ಯ ಹೆಚ್ಚಿಸುವ ಸಂದೇಶ ಹುಸಿಯಾಗಲಿಲ್ಲ.

ಹೆದ್ದಾರಿಯ ಒಂದು ಸಣ್ಣಂಶ ಬಿಟ್ಟರೆ ತಣ್ಣೀರುಬಾವಿಯವರೆಗೂ ಜೋಡಿ ದಾರಿಯ ಕಾಂಕ್ರೀಟೀಕರಣ ಪೂರ್ಣಗೊಂಡಿತ್ತು. ಅದರಲ್ಲಿ ಒಂದನ್ನು ಪೂರ್ಣ ಈ ಅಭಿಯಾನಕ್ಕೇ ಮೀಸಲಿಟ್ಟಿದ್ದರು. ಬೆಳಗ್ಗಿನ ವಾಹನ ಸಂಚಾರವೂ ವಿರಳವೇ ಇತ್ತು. ತ್‌ಣ್ಣೀರು ಬಾವಿಯಿಂದ ಬೆಂಗ್ರೆವರೆಗಿನ ದಾರಿ ಮಾತ್ರ ಸಪುರವಿದ್ದರೂ ಹೆಚ್ಚುಕಡಿಮೆ ಪೂರ್ಣ ಸಹಜವಾಗಿಯೇ ವಾಹನ ಮುಕ್ತವಾಗಿತ್ತು. ಅಭಿಯಾನದ ಸವಾರರಲ್ಲಿ ನಾಲ್ಕೈದು ಮಂದಿ ಹಿರಿಯ ನಾಗರಿಕರು. ಪ್ರಾಯದ ಹಿರಿತನದ ಹತ್ತತ್ತಿರವಿದ್ದ ನನ್ನಂಥವರು, ಯುವಕರು ಎನ್ನುವ ಮಟ್ಟದ ಸಣ್ಣವರು ತುಂಬಾ ಕಡಿಮೆಯಿದ್ದರು. ತೀರಾ ಅಲ್ಪ ಸಂಖ್ಯಾಕ ಹುಡುಗಿಯರು, ಒಕ್ಕೈ ಬೆರಳೆಣಿಕೆಗೇ ಸಿಗುವಷ್ಟು ಮಹಿಳೆಯರು. ಆದರೂ ಅಳೆದು ಸುರಿದರೆ ಸಾವಿರದ ನೂರೂ ಹಿರಿಯ ಪ್ರಾಥಮಿಕ ಶಾಲೆಯಿಂದ ತೊಡಗಿ ಪ್ರೌಢಶಾಲಾ ಮಟ್ಟದ ಹುಡುಗರೋ ಹುಡುಗರು. ವ್ಯವಸ್ಥೆಯ ಭಾಗವಾಗಿ ಸ್ಕೂಟರ್, ಮೋಟಾರ್ ಸೈಕಲ್, ಕಾರು, ವ್ಯಾನು, ಲಾರಿಗಳೆಲ್ಲಾ ಇದ್ದಂತೇ ಹಲವು ಮಕ್ಕಳ ಪೋಷಕರ ವಾಹನಗಳೂ ಅತಿ ಎಚ್ಚರದಲ್ಲಿ ಅಭಿಯಾನವನ್ನು ಅನುಸರಿಸಿದ್ದರು. ಬೆಂಗ್ರೆಯ ಮಹಾಜನ ಸಭಾದ ದೋಣಿಗಳೂ ಸ್ವಯಂಸೇವಕರೂ ಸಂಭ್ರಮದ ಭಾಗವಾಗಿ ಅಷ್ಟೂ ಸವಾರರನ್ನು ಸೈಕಲ್ ಸಮೇತ ಗುರುಪುರ ನದಿಯ ಇತ್ತಿಂದತ್ತ ಮಾಡಿದ್ದು ಅಭಿಯಾನಕ್ಕೆ ಒಳ್ಳೆಯ ಅಂತಿಮ ಸ್ಪರ್ಷ ಎನ್ನಲೇಬೇಕು.

ಹಲವು ವರ್ಷಗಳ ಹಿಂದೆ ನೆಲ್ಯಾರಿನ ಕೃಷಿಕ ಗೋವಿಂದ ಇಂಥದ್ದೇ ಸಂದೇಶ ಹೊತ್ತು, ಏಕಾಕಿಯಾಗಿ ಸೈಕಲ್ ಮೇಲೆ ವಿಶ್ವಯಾನದ ಸಾಹಸಕ್ಕೆ ಹೊರಟಿದ್ದ. ವರ್ಷ ಪೂರ್ತಿ ಆತ ಸುತ್ತದ ದೇಶವಿಲ್ಲ, ಸಂಪರ್ಕಿಸದ ಜನವಿಲ್ಲ, ಅನುಭವಿಸದ ವಿಷಯವಿಲ್ಲ. (ಹೆಚ್ಚಿನ ವಿವರಗಳಿಗೆ ಗೋವಿಂದನದೇ ಬ್ಲಾಗ್ ಪ್ರಪಂಚಕ್ಕೆ ಇಲ್ಲಿದೆ ಕೀಲಿಕೈ - ಚಿಟಿಕೆ ಹೊಡೆಯಿರಿ) ದೇಶಕ್ಕೆ ಮರಳಿದ ಗೋವಿಂದನಿಗೆ ಹ್ಯಾಂಗ್ ಗ್ಲೈಡಿಂಗಿನ ಪರಿಷ್ಕೃತ ರೂಪ - ಪವರ್ ಗ್ಲೈಡಿಂಗ್ ಅಂಟಿಕೊಂಡಿತು. ಅಲ್ಲಿನ ಒಂದು ಅವಘಡ ಹೆಚ್ಚು ಕಡಿಮೆ ಒಂದು ವರ್ಷಕಾಲವೇ ಗೋವಿಂದನನ್ನು ಹಾಸಿಗೆ, ಆಸ್ಪತ್ರೆಗಳಲ್ಲಿ ಬಂಧಿಸಿತು. ಹಾಗೂ ಹೀಗೂ ಹೊರಬರುವಾಗ ಬೆನ್ನುಹುರಿಗಾದ ಘಾಸಿ ಜೀವನದುದ್ದಕ್ಕೆ ನೋವು ತಿನ್ನುವ ಅನಿವಾರ್ಯತೆಗೂ ಆತನನ್ನು ಒಳಪಡಿಸಿದೆ. ಆದರೆ ಸುಲಭಕ್ಕೆ ಹಿಂಗದ ಚೈತನ್ಯದ ಚಿಲುಮೆ ಈತ. ಚೈನಾದಿಂದ ಮೋಟಾರ್ ಚಾಲನೆಯ ಸದಾಸಂ (ಸರ್ವ ದಾರಿ ಸಂಚಾರಿ, ATV - all terrain vehicle) ತರಿಸಿ ತನ್ನ ತೋಟದ ಓಡಾಟ ಮತ್ತು ಅನಿವಾರ್ಯ ಸಣ್ಣಪುಟ್ಟ ಸಾಮಾನು ಸಾಗಣೆಗಳನ್ನು ಸುಧಾರಿಸಿದ. ಮತ್ತೂ ಹೆಚ್ಚುಗಾರಿಕೆಯ ಉಮೇದಿನಲ್ಲಿ ಮಂಗಳೂರ ಕಡಲತೀರಕ್ಕೆ ಅದನ್ನು ತಂದು, ಮರಳ ಹಾಸಿನ ಮೇಲೇ ಮಲ್ಪೆ ಸಾಧಿಸಿದ್ದು ಸಣ್ಣ ವಿಷಯವಲ್ಲ. ಈಚೆಗೆ ಗೋವಿಂದನ ಖಯಾಲಿ ಮತ್ತೆ ಸೈಕಲ್ಲಿಗೆ ತಿರುಗಿತು. ಬದಲಾದ ಪರಿಸ್ಥಿತಿಯಲ್ಲಿ ದೇಹದ ಸಮತೋಲನ ಕಾಯಲಾಗದವರಿಗಾಗಿಯೇ ಇರುವ ತ್ರಿಚಕ್ರಿ ಖರೀದಿಸಿದ. ಸೊಂಟದ ಬಲ ನೆಚ್ಚಿ ನೇರ ಪೆಡಲ್ ತುಳಿಯಲಾಗದವರಿಗೆ ಇದರಲ್ಲಿ ಆರಾಮ ಕುರ್ಚಿಯ ವಿನ್ಯಾಸವಿದೆ. ಏರು ಅಸಾಮಾನ್ಯವಾದರೆ, ದಾರಿ ದೀರ್ಘವಾದರೆ ಪೂರಕ ಶಕ್ತಿಯನ್ನೂಡಲು ಸಣ್ಣ ಬ್ಯಾಟರಿ ಚಾಲಿತ ಮೋಟಾರೂ ಇದೆ. ತ್ರಿಚಕ್ರಿ ಬಂದ ಹೊಸತರಲ್ಲಿ ಮಳೆಗಾಲದ ತುರುಸನ್ನೂ ಲಕ್ಷಿಸದೆ ಗೋವಿಂದ ವಿಟ್ಲದ ಆಸುಪಾಸಿನಲ್ಲಿ ಓಡಾಟ ನಡೆಸಿದ. ಅಲ್ಪತೃಪ್ತನಾಗದೇ ಶಿರಾಡಿ ಘಾಟಿಯನ್ನೂ ಉತ್ತರಿಸಿದ. ಮಹತ್ವಾಕಾಂಕ್ಷೆಯ ಅವಸರದಲ್ಲಿ ಮತ್ತೆ ಏಕಾಂಗಿಯಾಗಿ ಕನ್ಯಾಕುಮಾರಿಯಿಂದ ಮಹಾರಾಷ್ಟ್ರದವರೆಗೂ ಹತ್ತು ಹದಿನೈದು ದಿನಗಳ ಮಜಲೋಟ ನಡೆಸಿದ.

ಗೋವಿಂದ ಕಳೆದ ವರ್ಷ ಆರೆಕ್ಸ್ ಲೈಫ಼ಿನವರ ಸೈಕಲ್ ಅಭಿಯಾನದ ಕುರಿತು ಕೇಳುವಾಗ ತಡವಾಗಿತ್ತಂತೆ. ಈ ವರ್ಷ ನನ್ನ ಸೂಚನೆ ಸಿಕ್ಕಿದ್ದೇ ಸಣ್ಣ ಮಗನನ್ನೂ ಸಾಮಾನ್ಯ ಸೈಕಲ್ ಸಮೇತ ಕಾರಿಗೇರಿಸಿಕೊಂಡು ಬಂದ. ಯುವ ಜನತೆಗೆ ಪ್ರೇರಣೆ ಕೊಡಲು, ಪ್ರಾಯ ಸಂದವರಿಗೆ ಉತ್ಸಾಹ ತುಂಬಲು, ವಿಕಲಾಂಗರಿಗೆ ಜೀವನೋತ್ಸಾಹ ಉಕ್ಕಿಸಲು ಗೋವಿಂದ ಬಂದ. ಸಂತೆಯೊಳಗೊಂದಾಗಿ ಲೇಡಿಹಿಲ್-ಬೆಂಗ್ರೆ ಓಡಿ, ಎಲ್ಲರಂತೆ ದೋಣಿ ಸೇರಿ ಮುಕ್ತಾಯದ ಸಭೆಗೆ ಶೋಭೆ ತಂದ. ಕೊನೆಯಲ್ಲಿ ಸಂಘಟಕರು ಸಭೆಯಿಂದಲೇ ಗೋವಿಂದನಿಗೆ ಮೂರು ಉಘೇ ಹಾಕಿಸಿದ್ದು ನಿಜಕ್ಕೂ ಸಾರ್ವಜನಿಕ ಸಮ್ಮಾನವೇ ಸರಿ.

ಸಾಲಿಗ್ರಾಮದ ವೆಂಕಟ್ರಮಣ ಉಪಾಧ್ಯ, ವೃತ್ತಿಯಲ್ಲಿ ಹಳ್ಳಿಮೂಲೆಯ ಸಕಲ ಸರಂಜಾಮು ಅಂಗಡಿಯ (ಮಂಟಪ ಬ್ರದರ್ಸ್) ಕಿರಿಯ ಪಾಲುದಾರ. ಹವ್ಯಾಸದಲ್ಲಿ ಸಕಲಾಸಕ್ತಿಯ ಸರದಾರ. (ತುಸು ಹೆಚ್ಚಿನ ಪರಿಚಯಕ್ಕೆ ಇಲ್ಲಿ ಚಿಟಿಕೆ ಹೊಡೆದು ನನ್ನ ರಂಗನಾಥ ಸ್ತಂಭದ ಲೇಖನ ನೋಡಿ) ಇವರದೇನಿದ್ದರೂ ಸ್ವಾಂತ ಸುಖಾಯ, ಮೇಲೆ ಬಿದ್ದ ಕುತೂಹಲಿಗಳಿಗೆ ಮಾತ್ರ ಆಪಾತ ನಿರೂಪಿಸುವ ನಿಸ್ವಾರ್ಥ. ನನ್ನ ಯಾವುದೇ ದೊಡ್ಡ ಪ್ರಕೃತಿ ಅನ್ವೇಷಣಾ ಯಾತ್ರೆ ಹೊರಡುವುದಿದ್ದರೂ ಉಪಾಧ್ಯ ಸ್ಮರಣೆ ಮತ್ತು ಹೆಚ್ಚಾಗಿ ಭಾಗಿದಾರಿ ಇಲ್ಲದಿಲ್ಲ. ಇವರು ವಾರ ಹತ್ತು ದಿನಕ್ಕೊಮ್ಮೆ ಅಂಗಡಿಯ ಸಾಮಾನು ಪೂರೈಕೆಗೆ ಉಡುಪಿಗೋ ಮಂಗಳೂರಿಗೋ ಬಂದು ದಿನಪೂರ್ತಿ ಗಲ್ಲಿ ಗಲ್ಲಿ ಅಲೆಯುತ್ತಿದ್ದರು. ‘ನಾಯಿ ತಿರುಗಿದ ಹಾಗೆ ಸುತ್ತಿ, ಯಾಕೆ ಬೇಕೂ’ ಅಂತನ್ನಿಸುವ ಸ್ಥಿತಿಯಲ್ಲಿ ಇವರಿಗೆ ಹಿಂದೆ ಊರಲ್ಲಿ ಬಳಸುತ್ತಿದ್ದ ಸೈಕಲ್ ಆಸೆ ಮೊಳೆಯುತ್ತಿತ್ತಂತೆ. ಆದರೆ ನಗರ-ರಕ್ಕಸನ ಇಂಧನ ಸುಡು-ಹಸಿವಿನಲ್ಲಿ ಬಾಡಿಗೆ ಸೈಕಲ್ ಅಂಗಡಿಗಳು ದಿವಾಳಿ ಎದ್ದ ಮೇಲೆ ವಾರಕ್ಕೊಮ್ಮೆಯಷ್ಟೇ ಮೂಡುವ ಇವರ ಸೈಕಲ್ ಬಯಕೆಗೆ ಪೂರೈಕೆದಾರರೇ ಇಲ್ಲ ಎನ್ನುವ ಹತಾಶಾ ಸ್ಥಿತಿಯಲ್ಲಿ ಈ ಮಡಿಚುವ, ಹಗುರ ಸೈಕಲ್ ಇವರ ಬಗಲು ಸೇರಿತು. ಈಚಿನ ಮೂರು ನಾಲ್ಕು ಬಾರಿ ಇವರು ಮಂಗಳೂರು ಬಸ್ಸೇರುವಾಗ ಅಥವಾ ಸಾಲಿಗ್ರಾಮಕ್ಕೆ ಮರಳುವಾಗ ಇವರ ಬಗಲಿನ ಸುಮಾರು ಹನ್ನೆರಡೇ ಕಿಲೋ ತೂಕದ ಮಾಸಲು ಚೀಲ ರಸ್ತೆಯ ಮೇಲೆ ಹದಿನಾಲ್ಕೇ ಸೆಕೆಂಡಿನಲ್ಲಿ ಸುದೃಢ ಸೈಕಲ್ ಆಗಿ ಅರಳುವುದನ್ನು ಕುರಿತು ನೋಡದವರಿಗೆ ಛೂ ಮಂತ್ರವಾಗಿ ಕಾಣಿಸೀತು. ರ‍್ಯಾಲೀ ಉದ್ದಕ್ಕೆ ಕೇಳಿದಷ್ಟೂ ಮಂದಿಗೆ ಇವರು ಸೈಕಲ್ ಮಡಿಚೀ ಬಿಡಿಚೀ ನನಗೆ ಬಿಡಿಚಿದರೂ “ನಾನು ಬಂದದ್ದೇ ಅದಕ್ಕೆ” ಎನ್ನುತ್ತಿದ್ದ ಉಪಾಧ್ಯರ ಉತ್ಸಾಹದಲ್ಲಿ ಸೈಕಲ್ಲಿನ ಬಹುಮುಖವನ್ನು ಪರಿಚಯಿಸಿ ಅಷ್ಟೂ ಮಂದಿಗೆ ಪ್ರೇರಣೆ ಕೊಟ್ಟ ತೃಪ್ತಿಯಿತ್ತು.

ಬೆಟ್ಟ ಬಂಡೆಗಳನ್ನೇರುವ ಮೌಂಟನ್ ಬೈಕ್ ಹಿಡಿದ ಮೋಹಿತ್, ಸಭಾಕಲಾಪದ ಗೌಜಿಗೆ ಮನಕೊಡದೇ ಹದಿನಾರು ಕಿಮೀ ಸುತ್ತಿದ್ದರ  ಪರಿವೇ ಇಲ್ಲದಂತೆ ಶಾಲಾ ಕಾಂಕ್ರೀಟು ನೆಲದಲ್ಲಿ ತಂತಮ್ಮ ಮೋಹದ ಕುದುರೆ ಏರಿ ವೀಲೀ (ಮುಂದಿನ ಚಕ್ರ ಗಾಳಿಗೆತ್ತಿ ಚಲಿಸುವ ಪರಿ) ಬ್ರೇಕೀ (ವೀಲೀಯ ಉಲ್ಟಾ, ಹಿಂದಿನ ಚಕ್ರ ಎತ್ತುವುದು) ನಡೆಸಿದ್ದ ಹತ್ತೆಂಟು ಪುಟಾಣಿಗಳು, ಸಂಘಟಕರ ಒತ್ತಾಯಕ್ಕೆ ವೇದಿಕೆಯ ಮೇಲೆ ಕಾಣಿಸಿಕೊಂಡರೂ ರ‍್ಯಾಲಿ ಸವಾರಿಯ ಬಳಲಿಕೆ ನಿರಾಕರಿಸಿ ನಿಂತ, ಎಂಬತ್ತರ ಹರಯದ ರಾಮಚಂದ್ರರಾಯರೂ ಹೀಗೆ ನನ್ನ ತೋರಗಾಣ್ಕೆಗೇ ಸಿಕ್ಕ (ನಾನು ಕುರಿತು ಹತ್ತು ಮಂದಿಯನ್ನು ಸಂದರ್ಶನ ತೆಗೆದುಕೊಂಡಿದ್ದರೆ ಇನ್ನಷ್ಟು ಸಿಗಬಹುದಾಗಿದ್ದ) ಉದಾಹರಣೆಗಳೆಲ್ಲಾ ಚೇತೋಹಾರಿಗಳೇ ಆಗಿದ್ದವು. ರ‍್ಯಾಲಿಯ ಆವಶ್ಯಕತೆ ಹಾಗೂ ಯಶಸ್ಸನ್ನು ಏಕಕಾಲಕ್ಕೆ ಸಾರುತ್ತಲೂ ಇದ್ದವು.

ಸೈಕಲ್ ಅಭಿಯಾನದ ನನ್ನ ಅನುಭವವಾದರೂ ಕಡಿಮೆ ಸಂತಸದ್ದೇನೂ ಅಲ್ಲ. ಆದರೆ ಭಾಗಿಗಳ ಅಭಿಪ್ರಾಯದ ಸಂಕಲನ, ವಿಮರ್ಶೆ ಮುಂದಿನ ನಡೆಗೆ ಸಹಕಾರಿ ಎಂಬ ವಿನಯ ಸಂಘಟಕರಲ್ಲಿ ಧಾರಾಳ ಇದೆ ಎಂದು ಭಾವಿಸಿ, ಸವಿನಯ ಎರಡು ಸಣ್ಣ ಅಸಮಾಧಾನಗಳನ್ನು ಇಲ್ಲೇ ದಾಖಲಿಸಿಬಿಡುತ್ತೇನೆ. ೧. ಅಭಿಯಾನದುದ್ದದಲ್ಲಿ ಕ್ಷಣವ್ಯರ್ಥಗೊಳಿಸದಂತೆ ಎರಡು ವ್ಯಾನು ಏರಿ ಬಂದ ಬ್ಯಾಂಡ್ ಸೆಟ್‌ನ ಶಬ್ದ ಮಾಲಿನ್ಯ ಬೇಕಿತ್ತೇ? ಪರಿಸರ ಸ್ನೇಹೀ, ಸರಳತೆಯ ಸಂಕೇತವಾದ ಸೈಕಲ್ ಸ್ವಭಾವತಃ ಸದ್ದಿಲ್ಲದ ವಾಹನ. ಮತ್ತೆ ನಮ್ಮ ಅಭಿಯಾನವಾದರೋ ಗಾಳಿ ಸುಯ್ಗುಡುವ, ತೆರೆ ಮಗುಚುವ, ಹೆಚ್ಚೆಂದರೆ ಹಕ್ಕಿಗಳುಲಿಯಂಥ ಪ್ರಾಕೃತಿಕ ಮೌನದ  ತಣ್ಣೀರು ಬಾವಿ, ಬೆಂಗರೆಯಂಥಲ್ಲಿಗೆ ಈ ಅಬ್ಬರ ಸರಿಯೇ? ನಾಗರಿಕವೇ? ೨. ಉಚಿತ ಕಿತ್ತಳೆ ಹಣ್ಣು, ನೀರು ವ್ಯವಸ್ಥೆ ಮಾಡಿದ್ದು ತುಂಬ ಅರ್ಥಪೂರ್ಣ. ಆದರೆ  (ಜಾಹಿರಾತು ಏನೇ ಹೇಳಲಿ) ದೂರಗಾಮೀ ಪರಿಣಾಮದಲ್ಲಿ ರಾಸಾಯನಿಕಗಳ ದುಷ್ಪ್ರಭಾವವನ್ನಷ್ಟೇ ಉಳಿಸಬಲ್ಲ ಪೊಟ್ಟಣ ಕಟ್ಟಿದ ಪಾನೀಯಗಳನ್ನು ವಿತರಿಸಿದ್ದು ನನಗೆ ಸರಿಕಾಣಲಿಲ್ಲ. ಅದರ ಅಡ್ಡಪರಿಣಾಮವೂ ನಿರಾಶಾದಾಯಕವೇ ಇತ್ತು: ಕರಪತ್ರದ ಪ್ರಕಟಣೆ, ಹೊರಡುವ ಮೊದಲ ಘೋಷಣೆ ಏನೇ ಇದ್ದರೂ ಬೆಂಗ್ರೆಯಲ್ಲಿ ಹಲವು ಮಕ್ಕಳು ಉಚಿತವಾಗಿಯೇ ಸಿಕ್ಕ ಆ ಪಾನೀಯಗಳನ್ನು ಕುಡಿದ ಮೇಲೆ ನಿರ್ಯೋಚನೆಯಿಂದ ಪರಿಸರ ದ್ರೋಹೀ ತೊಟ್ಟೆಗಳನ್ನು ಅಲ್ಲೇ ಬಿಸಾಡಿದ್ದರು. (ಮತ್ತಂಥವರೇ ಮುಕ್ತಾಯದ ಸಭೆಯಲ್ಲಿ “ಖಾಲೀ ಪೊಟ್ಟಣ ಮರಳಿಸಿದವರಿಗೆ ಮುನ್ನೂರು ರೂಪಾಯಿ”  ಘೋಷಣೆ ಕೇಳಿದಾಗ ಹತಾಶೆಯಿಂದ ಶಾಲಾ ವಠಾರದಲ್ಲಿ ಪರದಾಡಿದ್ದು ನಗೆ ತರಿಸಿತು.) ಇದು ಅಭಿಯಾನದ ಆಶಯಕ್ಕೆ ತದ್ವಿರುದ್ಧವಾಗಲಿಲ್ಲವೇ? ನನ್ನ ಲೆಕ್ಕಕ್ಕೆ, ಶಿಕ್ಷೆ-ಶಿಕ್ಷಣದಿಂದ ದೂರವಿದ್ದ ಈ ಅಭಿಯಾನ ತನ್ನ ಮುಂದಿನ ಕಾರ್ಯಕ್ರಮಗಳಲ್ಲಿ ಗದ್ದಲದ ವಾದ್ಯ ಮೇಳ ಮತ್ತು ಈ ತೊಟ್ಟೆಯ ಪ್ರಸಂಗಗಳನ್ನೇ ನಿವಾರಿಸುವುದು ಹೆಚ್ಚಿನ ಶೋಭೆ ತರುತ್ತದೆ.

ಬಿಇಎಂ ಶಾಲೆಯ ವಠಾರದ ಒಳಗೆ ಇಟ್ಟ ಕ್ಯಾಂಟೀನ್ (ತಿಂಡಿಗೆ ಅಡಿಕೆ ಹಾಳೆ ಬಟ್ಟಲುಗಳನ್ನು ಯೋಚಿಸಿದವರು ಚಾ, ಕಾಪಿ, ಪಾನಕಕ್ಕೆ ಬಳಸಿ ಬಿಸಾಡುವ ಲೋಟಗಳನ್ನು ನಿವಾರಿಸುವುದನ್ನೂ ಯೋಚಿಸಬಹುದು), ಭಾಗಿಗಳನ್ನು ಅನೌಪಚಾರಿಕವಾಗಿಯೇ ಆದರೂ ಪೂರ್ಣ ತೊಡಗಿಸಿಕೊಂಡ ಸಭಾ ಕಾರ್ಯಕ್ರಮವಂತೂ ನಿಜಕ್ಕೂ ಅಭಿನಂದನೀಯ. ಸವಾರಿಯಿಂದ ಹರಿದ ಬೆವರು ಹರಳುಗಟ್ಟದಂತೆ, ಏದುಸಿರು ನಿದ್ರೆಗೆ ಜಾರದಂತೆ (ತಲೆಹಣ್ಣಾದವರ ಆಶೀರ್ವಚನಗಳು ಇದ್ದರೆ ಇನ್ನೇನು ಸಾಧ್ಯ?) ಅಭಿಯಾನದ ಆಶಯಗಳನ್ನು ಎಳೆಯ ಮನಸ್ಸುಗಳಿಗೆ ಪರೋಕ್ಷವಾಗಿ ಮನನ ಮಾಡಿಸಿದ ಚಿಕ್ಕಪುಟ್ಟ ಸ್ಪರ್ಧೆ, ಬಹುಮಾನ, ಮಾತಿನ ಒಗ್ಗರಣೆ ಖಂಡಿತವಾಗಿಯೂ ಇನ್ನೊಂದು ಇಂಥದ್ದು ಇನ್ಯಾವಾಗ ಎಂದು ಎಲ್ಲರೂ ಕಾಯುವಂತೆ ಮಾಡಿತು ಎಂದರೆ ಅತಿಶಯೋಕ್ತಿಯಲ್ಲ.

(ಮುಂದಿನ ವಾರಗಳಲ್ಲಿ ಹೆಚ್ಚಿನ ಸೈಕಲ್ ಸಾಹಸಗಳನ್ನೂ ಈ ಪುಟಕ್ಕೆ ಸೇರಿಸಲಿದ್ದೇನೆ. ಓದಲ್ಲಾದರೂ ಜೊತೆ ಕೊಡ್ತೀರಲ್ಲಾ?)

15 comments:

 1. ಮಾನ್ಯ ಸೈಕಲ್ ಪ್ರಿಯರೆ,
  ಮಂಗಳೂರಿನ ಸೈಕಲ್ ಯಾನವನ್ನು ಸಚಿತ್ರವಾಗಿ ನೋಡಿದೆ. ಚಿತ್ರಗಳು ಇನ್ನಷ್ಟು ಸ್ಪಷ್ಟವಿರಬಹದಿತ್ತು.
  ನಾನು ನಿಮ್ಮೊಂದಿಗೆ ನೆಲ್ಲಿತೀರ್ಥ, ಬೆಂದ್ರತೀರ್ಥಗಳಿಗೆ ಸೈಕಲಿಸಿದ್ದು ನೆನಪಾಯಿತು.
  'ಅವಸರವೂ ಸಾವಧಾನದ ಬೆನ್ನೇರಿ' ಸಾಗುವ ಸೈಕಲ್ ಯಾನ ಏಕಾಂತ, ಚಿಂತನೆಗಳ ಸಹಚರಿ. ನೀರವದಲ್ಲಿ ಸೈಕಲ್ ಮೇಲೆ ಸಾಗುವುದೇ ಒಂದು ಬೇರೆ ಬಗೆಯ ಸಂತೋಷ.
  ಈ ಯಾನದಲ್ಲಿ ಮೂರು ಚಕ್ರದ ಬೈಸಿಕಲ್ ಯಾನಿಗಳು ಭಾಗವಹಿಸಿದ್ದು ವಿಶೇಷ.
  ಪರಿಸರಯಾನದಲ್ಲಿ ಸವಾರರಿಗೆ ಆಹಾರ,ಪಾನೀಯ ವಿತರಿಸುವಾಗ ಸ್ಪಚ್ಛತೆಯ ಬಗ್ಗೆ ಇನ್ನಷ್ಟು ಎಚ್ಚರವಹಿಸುವುದು ಅಗತ್ಯ.
  ಮುಂದಿನ ವಾರದ ಕಂತಿಗೆ ಕಾಯುವೆ

  ReplyDelete
 2. Unimaginably magnificent, both the story and the participation.

  ReplyDelete
 3. ಈ ಸೈಕಲ್ ಅಭಿಯಾನಗಳ ಸುದ್ದಿ, ಅನುಭವ ಕಥನ ಓದುವಾಗಲೆಲ್ಲ 'ನಗೆಯು ಬರುತಿದೆ ಎನಗೆ ನಗೆಯು ಬರುತಿದೆ' ಕಾರಣ ನನಗೆ ನೆನಪಿರುವಂತೆ ಕಳೆದ ಶತಮಾನದ ೫೦ರ ದಶಕದ ಕನೆಯ ತನಕವೂ ಎಲ್ಲ ಮಧ್ಯಮ ವರ್ಗದವರ ಹತ್ತಿರ ಇರುತ್ತಿದ್ದ ಖಾಸಗಿ ವಾಹನ ಸೈಕಲ್. ನಾನು ವಿದ್ಯಾರ್ಥಿಯಾಗಿದ್ದಾಗ ಕೊಡಗಿನ ಮೂರ್ನಾಡುವಿನಿಂದ ಮುಂಜಾನೆ ಹೊರಟು, ಮಡಿಕೇರಿಯಲ್ಲಿ ಒಂದು ಚಾ ಕುಡಿದು ಸುಂಟಿಕೊಪ್ಪಕ್ಕಾಗಿ ಜಿ ಎಮ್ ಮಂಜನಾಥಯ್ಯನವರ ಮನೆಯಲ್ಲಿ ಮಧ್ಯಾಹ್ನದ ಭೋಜನ ಮುಗಿಸಿ, ಪುನಃ ಸಂಜೆಯ ವೇಳೆಗೆ ಮೂರ್ನಾಡಿಗೆ ಹಿಂದಿರುಗುತ್ತಿದ್ದದ್ದು, ರಜಾ ದಿನಗಳಲ್ಲಿ ಮಡಿಕೇರಿಯಿಂದ ಸಂಪಾಜೆಯ ವರೆಗೆ ಸೈಕಲ್ ನಲ್ಲಿ ಪಯಣಿಸಿ ಹಿಂದಿರುಗುತ್ತಿದ್ದದ್ದು ಇತ್ಯಾದಿ ಇತ್ಯಾದಿಯಾಗಿ ನನ್ನ ಅನೇಕ ಸೈಕಲ್ ಯಾತ್ರೆಗಳ ನೆನಪುಗಳು ಪುನಃ ಮನಃಪಟಲದಲ್ಲಿ ಮೂಡುವಂತೆ ಮಾಡಿತು ಈ ಲೇಖನ. ಧನ್ಯವಾದಗಳು.

  ReplyDelete
 4. ಅಶೋಕ ವರ್ಧನರೇ!
  ಇಂದು ತಾವು ಸೈಕಲ್ ವರ್ಧನರಾಗಿ ಶೋಭಿಸಿದ ನಂತರ ಬರೆದ "ಸೈಕಲಿಸಿದಂ ನಮ್ಮ್ಮ್ಮ ಮೀಸೆ ಪತಾಕಂ" ಪುರವಣಿ ಬಹು ಇಷ್ಟ ಆಯಿತು.
  ಪರಿಸರ ಕಾಳಜಿಯ ಬಗ್ಗೆ ಪುಟಾಣಿಗಳಿಗೆ ಬಹುಮಾನ ಇತ್ತುದು ತುಂಬಾ ಸಂತಸ ಇತ್ತಿತು.
  ( ಎಚ್ಚರಿಕೆ: ಮುಂದಿನ ಬಾರಿ ಟೆಟ್ರಾಪ್ಯಾಕ್‍ಗಳ ದೊಡ್ಡ ಗುಜರಿಯೇ ಸಭಾಂಗಣದಲ್ಲಿ ಹಾಜರಾಗಬಹುದು )

  ಗೋವಿಂದ ಭಟ್ಟರ ಮತ್ತು ಮಂಟಪ ಉಪಾದ್ಯರ ಸಹನ ಶೀಲತೆ ಮತ್ತು ಸೈಕಲ್ ಪ್ರೀತಿಯ ಉದಾಹರಣೆ ಸಂತಸ ನೀಡಿತು.

  ಹೆಚ್ಚೆಚ್ಚು ಸೈಕಲ್‍ಗಳು ಬೀದಿಗಿಳಿಯಲಿ! ಪರಿಸರ ಪ್ರೀತಿ ಬೆಳೆಯಲಿ.
  ಇನ್ನೊಂದು ಸಂತಸದ ಸಂಗತಿ! ನಾನೂ ಪರೋಕ್ಷವಾಗಿ ತಮ್ಮೊಂದಿಗೆ ಇದ್ದೆ!
  ಇಂತೀ
  ಮ್ಯಾಜಿಕ್ ಕಾರ್ಪೆಟ್ ಸವಾರ
  ಪೆಜತ್ತಾಯ ಎಸ್. ಎಮ್.

  ReplyDelete
 5. namaste Ashokavardhana Sir,
  nimma cycle rally anubhavagaLannu odi santoshavayithu...makkaLa "Nasik band"gaddalada bagge nimma anisike praamaNika haagoo sahaja...aadare idannu Rally ya sanghatakaru aayojisiddalla...nanna magaLa classmates swa iccheyinda "band set"gaLondige bandaddu sir...aadaroo mumbaruva varshagaLalli ee bagge soochanegaLannu prarambhadalle needabeku antha VandanaaLige heLuttene...dhanyavadagaLu sir

  ReplyDelete
 6. Hoi
  Olle sahasa marayre. U-tube vedio nodi nimma jate nanoo doniyalli iddante annisitu. Monne oorige bandaga summane bengarege launch hatti ondu round hodedu bandaddoo nenapaytu.
  B.M.Haneef, Bangalore

  ReplyDelete
 7. Laxminarayana Bhat P11 December, 2010 17:02

  ಓಹೋಹೋ! ಹೌದಯ್ಯಾ ಹೌದು, ಸೈಕಲ್ ಸವಾರಿ ಮಜಾ ಅನುಭವಿಸಿದವರಿಗಷ್ಟೇ ಗೊತ್ತು! ವಿಟ್ಲದಿಂದ ಪುಣಚಕ್ಕೆ, ಸಾಲೆತ್ತೂರಿಗೆ, ಮಜಿ, ಕೋದಪದವು, ಮತ್ತೆ ಪುತ್ತೂರಿನ ನವರಂಗ ತಾಕಿಸಿನ ಸೆಕೆಂಡ್ ಷೋ ಸಿನೆಮಕ್ಕೆ ತ್ರಿಬ್ಬಲ್ ರೈಡ್ನಲ್ಲಿ ಎಡತಾಕಿದ್ದು ಇತ್ಯಾದಿ, ಇತ್ಯಾದಿ ... ನೆನಪಿನ ಕಚಗುಳಿ. ನಮಸ್ಕಾರ.

  ReplyDelete
 8. ಗೋವಿಂದ ನೇಲ್ಯಾರು11 December, 2010 19:05

  ಹೇಳುವುವಂತದೆಲ್ಲ ಅಶೋಕವರ್ಧನರು ಹೇಳಿದ ಕಾರಣ ನನಗೆ ಅನುಮೋದಿಸುವ ಕೆಲಸ ಮಾತ್ರ ಉಳಿದಿರೋದು. ಹದಿನೆಂಟು ಇಪ್ಪತ್ತೆಂಟರ ಪ್ರಾಯದ ಹುಡುಗರ ಬಹು ಸಣ್ಣ ಸಂಖ್ಯೆಯಲ್ಲಿ ಪಾಲ್ಗೊಳ್ಳುವಿಕೆ ನನಗೆ ಸ್ವಲ್ಪ ನಿರಾಶೆಯಾಯಿತು. ಹಳೆ ಬಂದರಿನಲ್ಲಿ ದೋಣಿಯಿಂದ ಸೈಕಲುಗಳನ್ನು ಇಳಿಸುವುದ ಕಂಡು ಕುಶಿಯಾಯಿತು. ನನ್ನ ಕೆಮರ ಸೆರೆ ಹಿಡಿದ ಪುಟ್ಟ ಚಿತ್ರಣ ನೋಡಲು - http://ow.ly/3l3uB ಈ ರೀತಿ ಹಲವರು ಕೈ ಜೋಡಿಸಿ ನಮ್ಮ ಸವಾರಿ ಸುಗಮವಾಗಿ ಸಾಗಿತು. ಅವರಿಗೆಲ್ಲ ಕೃತಜ್ನತೆಗಳು.

  ReplyDelete
 9. ಮಜಬೂತಾಗಿದೆ ನಿಮ್ಮ ಸೈಕಲ್ ಗಾಥೆ. ಓದುತ್ತ ಓದುತ್ತ ನಾನೂ ಸೈಕಲ್ ಯಾತ್ರೆಯಲ್ಲಿ ಒಂದಾಗಿಬಿಟ್ಟೆ. ಮೂರ್ನಾಲ್ಕು ಮೈಲಿ ಕಾಡುಹಾದಿ ಸವೆಸಿ ಪ್ರೈಮರಿ ಶಾಲೆಗೆ ಹೋಗಬೇಕಿದ್ದಾಗಲೆಲ್ಲ ಆ ದೇವರೇ ಇಳಿದು ಬಂದು ನನಗೊಂದು ಸೈಕಲ್ ದಯಪಾಲಿಸಿದ್ದರೆ ಎಂತಹ ಮಜವಿತ್ತು ಎಂದು ಹಗಲುಗನಸು ಕಾಣುತ್ತಿದ್ದುದೂ ನೆನಪಾಯಿತು. ಮಂಗಳೂರಿನಲ್ಲಿ ನಡೆದ ಸೈಕಲ್ ಜಾಥಾ ತುಮಕೂರಿನಲ್ಲಿ ನಡೆದಿದ್ದರೆ ಕಡೆ ಪಕ್ಷ ಐದು ಸಾವಿರ ಸೈಕಲ್ಗಳಾದರೂ ಸಮಾವೇಶಗೊಳ್ಳುತ್ತಿದ್ದವು ಎನಿಸುತ್ತದೆ. ಆ ಪರಿಯಿದೆ ಇಲ್ಲಿನವರ ಸೈಕಲ್ ಪ್ರೇಮ , ಅಥವಾ ಅನಿವಾರ್ಯತೆ.

  ReplyDelete
 10. ಜಯಲಕ್ಷ್ಮಿ12 December, 2010 15:12

  wow!!gammatthundu

  ReplyDelete
 11. --- romanchithanaadhe.
  namma ooralli(uppinangadi sameepadha" uli ") dhoddappana magala madhuvege maneyindha petege samaanu tharalu dhoddappana dhodda cycle nalli 8 sala hogidhe.( avaru aa cycle yarigoo muttalu biduthiralilla....aadharindha nannadhu sadhaneye).
  ella nenapugalu bichikondithu.

  hoge uguluva vahanagala dhruthapadha sancharadha naduve cycle thuliyuvudhu kastave. adharoo madhura anubhoothi manassige koduva cycle yaana ........nijakko.......a1.... mathe mathe odide...
  -Vadi

  ReplyDelete
 12. ನಮಸ್ತೆ,
  ನಿಮ್ಮ ಆಗ್ರಹದ ಮೇರೆಗೆ ನನ್ನ ಪ್ರತಿಕ್ರಿಯೆಯನ್ನು ಸಾರ್ವಜನಿಕಗೊಳಿಸಬೇಕಾಗಿದೆ :)

  ಸೈಕಲ್ ವಿಷಯದಲ್ಲಿ ನಾನು ನಿಮ್ಮೊಂದಿಗೆ ಸಮಾನ ಸುಖಿ. ಸದ್ಯಕ್ಕೆ ನನ್ನದು ಹೆಚ್ಚುಕಮ್ಮಿ ನಿತ್ಯ ಆಫಿಸಿಗೆ ಸೈಕ್ಲಿಂಗ್. ಒಟ್ಟು ಸುಮಾರು ೧೦ ಕಿಮಿ ದೂರ ದಿನಕ್ಕೆ. ನನ್ನ ಅನುಭವವನ್ನು ಈ ರೀತಿ ದಾಖಲಿಸಿದ್ದೇನೆ.

  ಎರಡು ಚಕ್ರ, ಒಂದು ಗೆರೆಯಷ್ಟೇ ದಾರಿ,
  ಇನ್ಯಾರ ಹಂಗಿಲ್ಲದ ನನ್ನ ಸವಾರಿ
  ನನ್ನ ತೋಳು, ನನ್ನ ಕಸುವು,
  ನಾ ನೆಚ್ಚಿ ತುಳಿದರಷ್ಟೆ ಹಾದಿಯ ಹರಿವು

  ಏರು ದಾರಿಯಲಿ ದೂಡುವವರಿಲ್ಲ
  ಇಳಿಕೆಯಲಿ ಜಾರಿದರೆ ಹಿಡಿವವರಿಲ್ಲ
  ನನ್ನ ತಲೆಯ ಮೇಲೆ ನನ್ನದೇ ಕೈ
  ನನ್ನ ಪೆಡಲಿನ ಮೇಲೆ ನನ್ನ ಕಾಲು

  ಆದರೇನು,
  ಕಷ್ಟದ ಬಳಿಕ ಸುಖ , ಸುಖದ ಬಳಿಕ ಕಷ್ಟ
  ಎರನೇರಿದರೆ ಇಳಿವು, ಇಳಿವ ದಾಟಿದರೆ ಏರು
  ಅವುಡುಗಚ್ಚಿ , ಬೆವರೊಸರುವ ಮೈಕೈಗಳಲಿ
  ಬೆಂಕಿಯೆಬ್ಬಿಸಿ, ಬಾಳ ದಾರಿಯ ತುಳಿದರೆ
  ಕಷ್ಟ ಸುಖಗಳಾಚೆಯ ಬಯಲು !
  ಬೆವರ ಸೋಕಿ ಮುದವನೀವ ತಂಪು ಗಾಳಿ!!

  ReplyDelete
 13. ಸೈಕಲ್ ಸವಾರಿ ಹೀಗೆ ವರ್ಷಕ್ಕೆ ಒಂದೊಂದು ಸಲ ಮಾಡಿದರೆ ‘ಹಸುರಿನ ನವೋದಯಕ್ಕೆ ಸೈಕಲ್ ತುಳಿಯಿರಿ’ಗೆ ಏನೇನೂ ಪ್ರಯೋಜನ ಇಲ್ಲ! ಪ್ರತೀದಿನ ಸೈಕಲ್ ಉಪಯೋಗಿಸಿದರೆ ಮಾತ್ರ ಅನ್ವರ್ಥವಾಗಬಹುದು.

  ReplyDelete
 14. Namaste Athree sir,
  nimma lekhana vannu savisthara vaagi odidey,thumba vishayavannu grahisiddiri, mecchuge aithu.ondu thinhgala namma shrama sarthaka enisitu. hiriyaradha neevu kotta salaheyu oppita . utsahigallannu ondu kudisuvudaralli nimmanthavare madari.karyakrama yasshaswi sahakarisida yellarigu kratagnategalu.
  Vandana Nayak

  ReplyDelete
 15. Hoi Olle sahasa marayre. U-tube vedio nodi nimma jate nanoo doniyalli iddante annisitu. Monne oorige bandaga summane bengarege launch hatti ondu round hodedu bandaddoo nenapaytu. B.M.Haneef, Bangalore

  ReplyDelete