25 December 2010

ನೆರೆಪರಿಹಾರದ ವರ್ಷಾಂತಿಕ

[ಉಂಡಬತ್ತಿ ಕೆರೆಯ ಸಾಮೂಹಿಕ ಕೊಲೆಯ ಬೊಜ್ಜದೂಟ ಮುಗಿಸಿದ ಮುಖ್ಯ ಮಂತ್ರಿಗಳ ಬಡಬಡಿಕೆಯ ಮುನ್ನೆಲೆಯಲ್ಲಿ ವರ್ಷದ ಹಿಂದೆ ಇಂಥದ್ದೇ ಇನ್ನೊಂದು ಸರಕಾರೀ ಪ್ರಾಯೋಜಿತ ದುರಂತದ ‘ಅಭಿವೃದ್ಧಿ ಕಲಾಪ’ದತ್ತ ಸ್ವಲ್ಪ ಕಣ್ಣು ಹಾಯಿಸುವ ಅವಕಾಶ ನನಗೊದಗಿತು. ಅದನ್ನು ಸಖೇದ ಸಾರ್ವಜನಿಕಗೊಳಿಸುತ್ತಿದ್ದೇನೆ.]

ಆಂಧ್ರಪ್ರದೇಶದ ಕರ್ನೂಲಿನ ಮಾಜೀ ಹೋಟೆಲಿಗ, ಹಾಜೀ ವಕೀಲ, ಎಲ್ಲಕ್ಕೂ ಮುಖ್ಯವಾಗಿ ಬಲು ದೊಡ್ಡ ಸಂಘಟಕ ಮತ್ತು ಸಾಮಾಜಿಕ ಕಾರ್ಯಕರ್ತ ಚಂದ್ರ ಶೇಖರ ಕಲ್ಕೂರರ ಅಪಾರ ಓದುವಣಿಗೆ ಮತ್ತು ಲೋಕಜ್ಞಾನದ ಮಾತುಗಳ ಪ್ರವಾಹ ನನ್ನ ಬಹುತೇಕ ಬ್ಲಾಗ್ ಬರಹಗಳಿಗೆ ಪ್ರತಿಕ್ರಿಯೆಯಾಗಿ ಬರುತ್ತಲೇ ಇರುತ್ತವೆ. ನಿಮಗೆ ನೆನಪಿರಬಹುದು, ಇಲ್ಲೇ ಅಕ್ಟೋಬರ್ ೨೪, ೨೦೦೯ ರ ನನ್ನ ಲೇಖನ ‘ಬರಗಾಲದಲ್ಲಿ ಮಸಾಲೆದೋಸೆ’ಯಲ್ಲಿ ಇತಿಹಾಸ ಕಂಡರಿಯದ ತುಂಗಾ ಪ್ರವಾಹದಲ್ಲಿ (ಮಾನವಕೃತ) ಇವರ ಊರು, ಮನೆ, ಅಮೂಲ್ಯ ಪುಸ್ತಕಾದಿ ಸಂಶೋಧನಾ ಸಾಹಿತ್ಯಗಳೆಲ್ಲ ವಾರಗಟ್ಟಳೆ ಜಲಾಧಿವಾಸಕ್ಕೀಡಾಗಿದ್ದವು. (ನೆನಪಿಲ್ಲವಾದರೆ ದಯವಿಟ್ಟು ಇಲ್ಲಿ ಚಿಟಿಕೆ ಹೊಡೆದು ಅವಶ್ಯ ಓದಿ ಬನ್ನಿ) ಹೆಚ್ಚುಕಡಿಮೆ ತಿಂಗಳೊಂದರ ಕಾಲ ಮಿತ್ರರ ಮನೆಯಲ್ಲಿದ್ದು, ಮುಂದೆ ವರ್ಷವೊಂದರ ಕಾಲ ‘ಸ್ವತಂತ್ರ’ವಾಗಿದ್ದು, ಭೌತಿಕವಾಗಿ ತನ್ನ ಮತ್ತು ತನ್ನವರ ಲೋಕವನ್ನು ಮರಳಿ ಕಟ್ಟುವ ಹೋರಾಟ ನಡೆಸಿಕೊಂಡೇ ಬಂದಿದ್ದಾರೆ. ಹಾಗೆಂದು ತನ್ನ ವೈವಿಧ್ಯಮಯ ಮಾನಸಿಕ ಅನುಸಂಧಾನಗಳನ್ನು ಒಂದಿಷ್ಟೂ ಕಳೆದುಕೊಳ್ಳಲಿಲ್ಲ ಎನ್ನುವುದಕ್ಕೆ ಓತಪ್ರೋತವಾಗಿ ಬರುತ್ತಲೇ ಇದ್ದ ಅವರ ಪ್ರತಿಕ್ರಿಯೆಗಳು ಬಲು ದೊಡ್ಡ ಸಾಕ್ಷಿ.

ದೊಡ್ಡ ಹೆಸರಿನ ಕರ್ನೂಲೋ ಮಂತ್ರಾಲಯವೋ ಮುಳುಗಿದಂದೇ ಕರ್ನಾಟಕದ ಅಸಂಖ್ಯಾತ ಅನಾಮಧೇಯರ ಜೀವನವೂ ಮುಳುಗಿತ್ತು. ಮಾಧ್ಯಮಗಳ ಪ್ರಖರ ಬೆಳಕಿನಲ್ಲಿ ಘೋಷಣೆಗಳ ಮಹಲು ಕಟ್ಟುವವರು ಸರಕಾರ, ಜನಪ್ರತಿನಿಧಿಗಳು, ಸಮಾಜ ಸೇವಾಸಂಸ್ಥೆಗಳು (ಮತ್ತು ಅಸಂಖ್ಯ ವ್ಯಕ್ತಿಗಳೂ) ನಿಜದಲ್ಲಿ ಮಾಡುವುದು ಎಷ್ಟು ಎನ್ನುವುದು ಇಂದು ಹೆಚ್ಚಿನವರಿಗೆ ಗೊತ್ತಿಲ್ಲದ ಗುಟ್ಟೇನೂ ಅಲ್ಲ. ಆದರೂ ಕಲ್ಕೂರರ ಪ್ರತಿ ಪತ್ರ ಬಂದಾಗಲೂ ಮುಸುಕಿನೊಳಗಿನ ಕಷ್ಟಗಳೆಷ್ಟೋ ಎಂಬ ಭಾವ ನನ್ನನ್ನು ಕಾಡುತ್ತಿತ್ತು. ಆ ತುಡಿತದಲ್ಲಿ ಈಚಿನ ಪತ್ರದಲ್ಲಿ ನಾನೇನು ಕೇಳಿದ್ದೆನೋ ಮರೆತಿದ್ದೇನೆ. ಆದರೆ ಬಂದ ಕಲ್ಕೂರರ ಪತ್ರವನ್ನು ನನ್ನ ಮಿತಿಯಲ್ಲಿ ಸಾರ್ವಜನಿಕ ಗಮನಕ್ಕೆ ತರುವುದು ಅವಶ್ಯ ಎನ್ನಿಸಿತು. ಮುಂದಿದೆ ಚಂದ್ರಶೇಖರ ಕಲ್ಕೂರರದೇ ನುಡಿಗಳು:

ಪ್ರಿಯ ಶ್ರೀ ಅಶೋಕವರ್ಧನ ವಂದೇಮಾತರಂ.

ಕೆಲವು ದಿನಗಳ ಹಿಂದೆ ತುಂಗಭದ್ರಾ ನೆರೆಯ ಬಗ್ಗೆ ವಿಚಾರಿಸಿದ್ದೀರಿ. ವಕೀಲನಲ್ಲವೆ! ಮಾಹಿತಿ ನೀಡಲು ವಾಯಿದೆ ಕೇಳಿದ್ದೆ. ಹೆಚ್ಚು ಕಡಿಮೆ ಅದು ಮರೆತ ಅಂಕ. ಕಷ್ಟ ನಷ್ಟ ಗಳನ್ನೆಲ್ಲಾ ಈ ಹಿಂದೆ ಸ್ವಲ್ಪ ಮಟ್ಟಿಗೆ ತಿಳಿಸಿದ್ದೇನೆ.

ಪುನರಾವಾಸ ಕಾರ್ಯಕ್ರಮ ಸರಕಾರದಿಂದ ಏನೊಂದೂ ನಡೆದಿಲ್ಲ. ದಿನಕ್ಕೆ ಸುಮಾರು ೨೫೦ ಟನ್ ಕಸ ಕಡ್ಡಿ ಕರ್ನೂಲಿನಲ್ಲಿ ಇರುತ್ತದೆ. ಅಂದು ಸುಮಾರು ಒಂದು ಲಕ್ಸ ಟನ್ ಗೊಚ್ಚೆ ಉತ್ಪತ್ತಿಯಾಗಿತ್ತು. ಅಂತಹ ಊರನ್ನು ಚೊಕ್ಕ ಮಾಡುವುದರಲ್ಲಿ ಮಾತ್ರ ಆಡಳಿತ ಯಂತ್ರ ಸಫಲವಾಗಿತ್ತು. ಕೇವಲ ಹದಿನೈದು ದಿನಗಳಲ್ಲಿ ಇಲ್ಲೇನು ನಡೆದಿಲ್ಲ ಎನ್ನುವ ರೀತಿಯಲ್ಲಿ ಊರು ಶುಭ್ರವಾಗಿತ್ತು. ಆಂಧ್ರ ಪ್ರದೇಶದ.ದ ನಾಲ್ಕು ಮೂಲೆಗಳಿಂದಲೂ ನಗರ ಪಾಲಕ ಸಂಸ್ಥೆ ಗಳ ಕಾರ್ಮಿಕರು ಎಷ್ಟೊಂದು ಶ್ರಮಿಸಿದ್ದರೊ, ಅವರಿಗೆ ಪದ್ಮ ಪ್ರಶಸ್ತಿಗಳು ತೃಣಮಾತ್ರ. ಆದರೆ ಯಾರೂ ಕೊಟ್ಟವರಿಲ್ಲ. "ಪ್ರಭುವೆಕ್ಕಿನ ಪಲ್ಲಕಿ ಕಾದೊಯ್, ಮೊಶಿನ ಬೊಯಿಲೆವರು. ತಾಜ್ ಮಹಾಲ್ ನಿರ್ಮಾಣಾನಿಕಿ ರಾಳ್ಳೆತ್ತಿನ ಕೂಲಿಲೆವರು. ಶ್ರಮೈಕ್ಯ ಜೀವನ ಸಾರ್ಥಕ ಲೊಕಮ್, ಘರ್ಮ ಜಲಾನಿಕಿ ಖರೀದು ಕట్టె ಶರಾಬು ಲೇಡೊಯ್". (ಪ್ರಭುವು ಹತ್ತಿದ ಪಲ್ಲಕಿ ಅಲ್ಲವಯ್ಯಾ. ಹೊತ್ತ ಬೊಯಿಗಳು ಯಾರು? ತಾಜ್ ಮಹಲ್ ನಿರ್ಮಾಣಕ್ಕೆ ಕಲ್ಲು ಹೊತ್ತ ಕೂಲಿಗಳು ಯಾರು? ಶ್ರಮೈಕ ಜೀವನ ಸಾರ್ಥಕ ಲೋಕ. ಬೆವರಿಗೆ(ಘರ್ಮಜಲ) ಬೆಲೆ ಕಟ್ಟುವ ಶರಾಫನಿಲ್ಲವಯ್ಯಾ).

ಇನ್ನು ಜನರು ಹೇಗೆ ಚೇತರಿಸಿಕೊಂಡರು? ದೇಶ ವಿದೇಶಗಳಿಂದ ಮಧ್ಯ ತರಗತಿಯ ಬಂಧು, ಹಿತ, ಮಿತ್ರರಿಂದ ಸಾಕಷ್ಟು ಸಹಾಯ ಸಹಕಾರಗಳು ಸಂತ್ರಸ್ಥರೆಲ್ಲರಿಗೂ ಬಂದಿವೆ. ಕೆಲವರಿಗೆ ನಷ್ಟಕ್ಕಿಂತಲೂ ಹೆಚ್ಚಿಗೆ ಸಂದಿದೆ. ಕೆಲವು ನಷ್ಟಗಳನ್ನು ತುಂಬಿಸಲು ಸಾಧ್ಯವೇ ಇಲ್ಲ. ಉದಾ. ನನ್ನ ಪುಸ್ತಕಗಳು. ನನಗೆ ವೈಯುಕ್ತಿಕವಾಗಿ ಕೂಡಾ ಔದರ್ಯದ ಕೊಡುಗೆ ಕಡಿಮೆಯಾಗಲಿಲ್ಲ. ಗಾಡಿಚರ್ಲ ಫೌಂಡೇಶನ್, ಹೋಟೇಲ್ಸ್ ಅಸ್ಸೊಸಿಯೇಶನ್, ಬ್ರಾಹ್ಮಣ ಸಂಘ, ಮಾಧ್ವ ಮಹಾಮಂಡಳಿ, ಇತ್ಯಾದಿಗಳ ಮುಖಾಂತರ  ವಸ್ತು ಮತ್ತು ನಗದು ರೂಪೇಣ ಬಂದ ಸಂಪನ್ಮೂಲಗಳ ವಿತರಣೆಯಿಂದಾಗಿ ಮನಸ್ಸಿಗೆ ತೃಪ್ತಿ ಯುಂಟಾಗಿದೆ. ಕರ್ನೂಲ್ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಸುಮಾರು ೧೫,೦೦೦ (ಹಳೆತು ಹೊಸತು ಸೇರಿ)ಪುಸ್ತಕಗಳನ್ನು ಸಂಗ್ರಹಿಸುವುದರಲ್ಲಿ ಕೃತ ಕೃತ್ಯನಾಗಿದ್ದೇನೆ. ಅದಕ್ಕಾಗಿ "ಪೊಟ್ಟಿ ಶ್ರೀರಾಮುಲು ತೆಲುಗು ವಿಶ್ವವಿದ್ಯಾಲಯ" ನನಗೆ "ಆಯ್ಯಂಕಿ ವೆಂಕಟರಮಣಯ್ಯ ಗ್ರಂಥಾಲಯ ಕರ್ತ, ಕೀರ್ತಿ ಪುರಸ್ಕಾರ"ವನ್ನು ಒಕ್ಟೊಬರು ೪ ರಂದು  ಕೊಟ್ಟಿದೆ. ಈ ವಿಷಯ ಆ ಸಂದರ್ಭದಲ್ಲಿ ನಿಮಗೆ ತಿಳಿಸಿದ್ದೆ. ನನ್ನ ತುಂಗಭದ್ರಾ ಅಧ್ಯಯನದ, ಕಂಪೂಟರ್ ಸಮೇತ ಹಲವು ಪುರಾವೆಗಳು ಕಳೆದು ಹೋಗಿವೆ/ನಾಶವಾಗಿವೆ. ಅವುಗಳನ್ನು ಸಾಧ್ಯವಾದಷ್ಟು ಪುನರ್ರಚನೆ ಮಾಡುತ್ತಿದ್ದೇನೆ.

ಗೌರವ ಮರ್ಯಾದೆಗಳನ್ನಿಟ್ಟುಕೊಂಡ ವ್ಯಾಪಾರಸ್ತರಿಗೆ ಸಾಲ ಸಿಕ್ಕಿತು. ನೌಕರರಿಗೆ ಸರಕಾರ ಸಂಬಳ ಮುಂಗಡ ನೀಡಿತ್ತು. ರೈತರ ಗೋಳನ್ನು ಕೇಳಿದವರು ಯಾರೂ ಇಲ್ಲ. ನೆರೆ ಇಳಿದ ಕೆಲವು ದಿನಗಳ ನಂತರ ಒಬ್ಬ ಕುರುಬ ರೈತ ಬಂದಿದ್ದ. "ಸ್ವಾಮೀ ನನಗೆ ಏಳು ಎಕ್ರೆ ನೀರಾವರಿ ಅನುಕೂಲವಿದ್ದ  ಎರಡು ಬೆಳೆ ಬೆಳೆಯುವ  ಹೊಲಇತ್ತು. ಎಕ್ರೆಗೆ ೪೦-೫೦ ಮೂಟೆ ಬತ್ತ ಒಂದು ಬೆಳೆಗೆ ಬರುತ್ತಿತ್ತು. ಎಕ್ರೆಗೆ ಹದಿನೈದು ಲಕ್ಸಗಳಂತೆ ಒಂದು ತಿಂಗಳ ಹಿಂದೆ ಕೇಳಿದ್ದರು. ಅದು ಕಾಲುವೆ ಮತ್ತು ನದಿಯ ಮಧ್ಯೆ ಇದ್ದ ಹೊಲ. ನೀರಿನ ವೇಗಕ್ಕೆ ಕಾಲುವೆ ಒಡೆದು ಹೋಯಿತು. ಕೊಚ್ಚಿ ಹೋದ ಹೊಲ ನದಿಯೊಂದಿಗೆ ಸೇರಿ ಹೋಯಿತು. ಉಳಿದದ್ದು ಬರೆ ಬಂಡೆ ಕಲ್ಲು. ನನ್ನ ಹೊಲ ಎನ್ನಲು ಗುರ್ತುಗಳು ಏನೂ ಕಾಣಿಸುವುದಿಲ್ಲ. ಕುರುಡು ಗುರುತುಗಳಿಂದ ಕಂಡು ಹುಡುಕಿದಲ್ಲಿ ಬಳ್ಳಾರಿ ಘಣಿ ಧಣಿಗಳು ಬಂದು ನನ್ನನ್ನು ಆದಿರಿಸಿಯಾರೊ? ಎನ್ನುವ ಆಸೆಯೊಂದೆಗೆ ಬದುಕಿದ್ದೇನೆ". ಎಂಬ ಚಟಾಕಿ ಹಾರಿಸಿದ. ಬಳ್ಳಾರಿ ಧನಿಗಳ ಮೇಲೆ ಕೂಡಾ ಆಸೆ ಇಟ್ಟು ಕೊಂಡವರು ಇದ್ದಾರೆ. ಅವರು ಇಂತಹ ಜಾಗಗಳಲ್ಲಿ ಸನ್ಮಾರ್ಗದಲ್ಲಿ ಘನಿಗಾರಿಕೆ ನಡೆಸಿದಲ್ಲಿ ಯಾರೂ ಅಭ್ಯಂತರ ಹೇಳಲಿಕ್ಕಲ್ಲವಲ್ಲವೇ? ಇನ್ನು ಕೆಲವು ಕಡೆ ಮಣ್ಣು ಹೊಯಿಗೆ ಸೇರಿ ಹೊಲವೆಲ್ಲಾ ಕಾಂಕ್ರೀಟಿಗಿಂತಲೂ ಗಟ್ಟಿಯಾಗಿ ಹೋಗಿದೆ. ಆ ಹೊಲಗಳೀಗ ಉಳಲೂ ಬರುತ್ತಿಲ್ಲ. ನನ್ನ ಒಂದು ಮೂರು ಎಕ್ರೆ ಗದ್ದೆ ಕೂಡಾ ಹಾಗೆ ಆಗಿದೆ. ಅದನ್ನು ಊಳಲು ಟ್ರಾಕ್ಟರ್ ಚಲಿಸಲು ಹೋದಾಗ ಅದರ ಅಂಚು ಮುಳ್ಳುಗಳು ತುಂಡಾಗಿ ಹೊಗಿದ್ದಾವೆ. ಇಲ್ಲಿ ಒಂದು ತಂತ್ರಜ್ನಾನ ಇದೆ. ಪುರಾತನ ನಿರ್ಮಾಣಗಳು ಹೊಯಿಗೆ, ಮುಣ್ಣು ಮತ್ತು ಹುಲ್ಲು ಸೇರಿಸಿ ಕಟ್ಟುತ್ತಿದ್ದರು. ಸಾವಿರ ವರ್ಷಕ್ಕಿಂತಲೂ ಹಿಂದಿನ ಕಟ್ಟಡಗಳು ಇನ್ನೂ ಇವೆ. ಈ ಹೊಲಗಳಲ್ಲಿ ಬತ್ತದ ಬೆಳೆ ಇತ್ತು. ಅದಕ್ಕೆ ಹೊಯಿಗೆ ಮತ್ತು ಮರಳು ಸೇರಿತು. ಬಡ ರೈತ ನನ್ನು ಬಿಳ್ಕೊಟ್ಟು ಈ ಓಲೆಯನ್ನು ಮುಗಿಸುತ್ತೇನೆ. ಆತ "ಅಮ್ಮ ಮಾಡಿದ ಚಾ ಚೆನ್ನಾಗಿತ್ತು. ಇನ್ನೊಂದರ್ಧ ಕಪ್ಪು ಕೊಡ್ಸಿ ಸ್ವಾಮಿ" ಎಂದು, ಕೇಳೀ ಚಾ ಕುಡಿದು ಒಂದು ಹನಿ ಕೂಡಾ ಬಾರದಷ್ಟು ಒಣೆದ ಕಣ್ಣನ್ನು ಅಗಲವಾಗಿ ಬಿಚ್ಚುವ ಪ್ರಯತ್ನ ಮಾಡುತ್ತಾ ಹೊರನಡೆದ. "ಹೂವು ಕಟ್ಟಿದ ಕೈಯಲ್ಲಿ ಕಟ್ಟಿಗೆ ಕಲ್ಲುಗಳನ್ನು ಕೂಡಾ ಒಡೆಯಬೇಕಾದೀತು."

- ಚಂದ್ರಶೇಖರ ಕಲ್ಕೂರ

4 comments:

 1. ಸರಕಾರದ ಯಾವುದೇ ಕಾರ್ಯಕ್ರಮ ಯಶಸ್ವಿ ಆಗಿದ್ದರೆ ಅದು ಸುದ್ದಿ, ಸೋಲು ಮಾಮೂಲಾದ್ದರಿಂದ ಅದು ಸುದ್ದಿಯಲ್ಲ - ಇದು ನನ್ನ ಅಭಿಪ್ರಾಯ. ಅಂದ ಹಾಗೇ, ಈ ಲೇಖನದಲ್ಲಿ ಇರುವಂಥದ್ದನ್ನೇ ಓದುತ್ತಿದ್ದರೆ ನಮ್ಮಲ್ಲಿ ಇನ್ನೂ ಉಳಿದಿರಬಹುದಾದ 'ಒಳ್ಳೆಯತನ' ಸಂಪೂರ್ಣವಾಗಿ ಅಳಿದು ಹೋದೀತು. ಪ್ರಕೃತಿ ವಿಕೋಪ, ಮಾನವ ಸೃಷ್ಟಿಸಿದ ದುರಂತ ಸನ್ನಿವೇಶ -ಇವೇ ಮೊದಲಾದ ಸನ್ನಿವೇಶಗಳಲ್ಲಿ ಅನೇಕ ಮಂದಿ ಅನುಕರಣಯೋಗ್ಯ ಮಾನವೀಯತೆ ತೋರಿರುತ್ತಾರೆ. ಅಂಥವರ ಕುರಿತು ಮಾಹಿತಿ ಸಂಗ್ರಹಿಸಿ ಬರೆದರೆ ಸರಕಾರದ ಸಹಾಯವಿಲ್ದದೆಯೇ ನಾವೂ ಮಾಡಬಲ್ಲೆವು ಎಂಬ ವಿಶ್ವಾಸ ಎಲ್ಲರಲ್ಲಿಯೂ ಬೆಳೆದೀತು.

  ReplyDelete
 2. I know Kalkura personally and his interests. In spite of his varied activities, he is man of social concern. I am his one of the admirers.

  ReplyDelete
 3. Anger,frustration,sympathy,optimism,helplessness-- mixed feelings like these. surge up as you read such reports.I wish Mr.Kalkura all success in his efforts of social concern.NAMASTE

  ReplyDelete
 4. I remember reading the first article , when a disaster happens everyone talks about it all papers reports it, later on no one knows but people living there . It was a great share its like a complete picture of place where disaster happens , thanks a lot Its worth knowing

  ReplyDelete