22 November 2010

ಕಾಸರವಳ್ಳಿ ಮನೆ

(ತೀರ್ಥಯಾತ್ರೆ ಭಾಗ-೪ ಮಂಗಳ)

ಕಾಸರವಳ್ಳಿ ಮನೆ ಕಾಷ್ಠ ವೈಭವಕ್ಕೆ, ವಾಸ್ತು ಸುಸಂಬದ್ಧತೆಗೆ, ಶತಮಾನಕ್ಕು ಮಿಕ್ಕು ಹಳಗಾಲದ ರಚನೆಯೇ ಆದರೂ ಮುಂದುವರಿದ ವಾಸಯೋಗ್ಯತೆಗೆ ನಾನು ಬಹು ಮೂಲಗಳಿಂದ ತಿಳಿದಿದ್ದೆ, ಪತ್ರಿಕಾ ಲೇಖನಗಳಲ್ಲೂ ಓದಿದ್ದೆ. ಮಣಿಪಾಲದ ವಿಜಯನಾಥ ಶೆಣೈಯವರು ತನ್ನ ಹಸ್ತಶಿಲ್ಪ ಕಟ್ಟುತ್ತಿದ್ದ ಕಾಲಕ್ಕೆ ಕಾಸರವಳ್ಳಿ ಮನೆ ಗುರುತಿಸಿದ್ದರು. ಅದು ಇದ್ದಲ್ಲೇ ಚೆನ್ನಾಗಿ ಉಳಿದು ಮುಂದುವರಿಯಲು ಅವರು ಈಚೆಗೂ ಮಾಡಿದ ಪ್ರಯತ್ನಗಳ ಬಗ್ಗೆ ಅವರದೇ ಉದಯವಾಣಿ ಅಂಕಣದಲ್ಲಿ ಓದಿದ್ದಂತೂ ನನ್ನ ನೆನಪಿನಂಕಣದಲ್ಲಿ ಹೊಸದಾಗಿತ್ತು. ಗಿರೀಶ ಕಾಸರವಳ್ಳಿಯವರ ಘಟಶ್ರಾದ್ಧದ ಬಹುಭಾಗ ಇಲ್ಲೇ ಚಿತ್ರೀಕರಣಗೊಂಡದ್ದೂ ತಿಳಿದಿದ್ದೆ. ಈ ಎಲ್ಲ ದುರ್ಬಲ ಹಂದರದ ಮೇಲೆ ಪ್ರತ್ಯಕ್ಷದರ್ಶನದ ಅವಕಾಶದ ಬಳ್ಳಿ ದಾಂಗುಡಿ ಸುರುಮಾಡಿದ್ದು ರತ್ನಾಕರರ ಯಜಮಾನಿ ವಾಣಿಯವರ ಪ್ರಸ್ತಾಪದಿಂದ. ವಾಣಿ ಇದೇ ಕಾಸರವಳ್ಳಿ ಮನೆತನದ ಮೂಲಪುರುಷ ಶೇಷಪ್ಪಯ್ಯ(ಕಾರಂತ)ರ, ಮೂರನೇ ಮಗ - ರಾಮಕೃಷ್ಣರಾಯರ ಐದನೇ ಸಂತತಿ. (ಗಿರೀಶ ಕಾಸರವಳ್ಳಿ ನಾಲ್ಕನೇ ಮಗ ಗಣೇಶರಾಯರ ಮಗ, ಅಂದರೆ ವಾಣಿಗೆ ಚಿಕ್ಕಪ್ಪನ ಮಗ - ಅಣ್ಣ) ಇವರಪ್ಪನಿಗೆ ಪಾಲಿನಲ್ಲಿ ಒದಗಿದ ಜಾಗ (ವಾಣಿಯವರ ತವರ್ಮನೆ) ಪಕ್ಕದ ಹಳ್ಳಿಯೇ ಆದ ರಾಮಕೃಷ್ಣಪುರವಾದರೂ  ದೊಡ್ಡಪ್ಪ ನಾಗಭೂಷಣರಾಯರ ಹಿರಿಯ ಮಗ, ಇಂದಿನ ಕಾಸರವಳ್ಳಿ ಮೂಲಮನೆಯ ಹಕ್ಕುದಾರ ರಾಮಸ್ವಾಮಿ ಮತ್ತು ಸಂಬಂಧದಲ್ಲಿ ತಮ್ಮನಾಗುವ ಆದರ್ಶ ಮತ್ತು ಆ ಮನೆಯ ಭಾವನಾತ್ಮಕ ಆಗುಹೋಗುಗಳಲ್ಲಿ ಹೊಕ್ಕು ಬಳಕೆ ಚೆನ್ನಾಗಿಯೇ ಇದೆ. ಸಹಜವಾಗಿ ಆ ಮನೆಯನ್ನು ನೋಡುವ ಉತ್ಸಾಹ ನಮಗೆ ಹೊಸದಾಗಿ ಹುಟ್ಟಿಕೊಂಡಿತ್ತು. ಆದರೆ ಅಲ್ಲಿ ವಾಸವಿರುವವರ ಅನುಕೂ ತಿಳಿಯದೆ ಮತ್ತು ಅನುಮತಿ ಪಡೆಯದೆ ಹೋಗಲು ಮನಸ್ಸು ಬರಲಿಲ್ಲ. ಈ ಔಪಚಾರಿಕತೆಯನ್ನು ರತ್ನಾಕರ್ ದೂರವಾಣಿಸಿ ಸುಲಭದಲ್ಲಿ ಪರಿಹರಿಸಿಕೊಟ್ಟಿದ್ದರು.

ಬಾಳಿಗಾರುಶ್ರೀಗಳಿಂದ ಬೀಳ್ಕೊಂಡವರಿಗೆ ಜವಳಿಯವರ ಮನೆಯಲ್ಲಿ ಚಾ ವಿರಾಮ. ಶ್ರೀಮತಿ ಜವಳಿಯವರ ತವರ್ಮನೆ ಮಹಾನಗರಿ ಚೆನ್ನೈ. ವಿವಾಹಾನಂತರ ಬೆಸೆಂಟ್ ಕಾಲೇಜಿನಲ್ಲಿ ಇಂಗ್ಲಿಶ್ ಪ್ರಾಧ್ಯಾಪಿಕೆಯಾಗಿದ್ದುಕೊಂಡು, ಕೆನರಾ ಬಳಗದ ಸ್ವಂತ ಮನೆ ವ್ಯವಸ್ಥೆಯ ಭಾಗವಾಗಿ ನೆಲೆಸಿದ್ದು ಮಂಗಳೂರು ಮಹಾನಗರದೊಳಗೇ. ಆದರೂ (ಪತಿಯ) ಇಚ್ಚೆಯನರಿತ ಸತಿ, (ಪ್ರಾಧ್ಯಾಪಿಕೆ) ಪಾರ್ವತಿ ಸ್ವಯಂ ನಿವೃತ್ತಿ ಪಡೆದು ತೀರ್ಥಳ್ಳಿಯೆಂಬ ಕೊಂಪೆಯನ್ನಪ್ಪಿಕೊಂಡದ್ದು ಸಾಮಾನ್ಯ ವಿಷಯವಲ್ಲ. ಅವರು ಮತ್ತಿವರ ಏಕೈಕ ಮಗ - ಅರ್ಜುನ (ಅಭಯನ ಸಹಪಾಠಿ, ಗೆಳೆಯ, ಎಂಜಿನೇರು), ಮತ್ತವರ ಮನೆಯನ್ನು ನೋಡಿ ಮಂಗಳೂರು ದಾರಿ ಹಿಡಿದೆವು.

ಹಳಗಾಲದಲ್ಲಿ ದೋಣಿಸಾಗಲಿ ಹಾಡಿದರೆ ಆರೇ ಕಿಮೀ ಅಂತರದಲ್ಲಿ ಸಿಗುತ್ತಿದ್ದ ಕಾಸರವಳ್ಳಿಗೆ ಈಗ ಸುತ್ತು ಬಳಸಿನ ಮಾರ್ಗವಾಗಿದೆ. ಕಲ್ಮನೆಯ ಕೈಕಂಬ ನೋಡಿ, “ಅರೆ, ಇಲ್ಲೂ ಒಂದು ಹೆಗ್ಗೋಡು” ಎಂದು ಉದ್ಗರಿಸಿ, ಬಾಯ್ತುಂಬುವ ರಾಮಕೃಷ್ಣಪುರವನ್ನು ಆರ್ಕೆಪಿಯಲ್ಲಿ ಮರೆಸಿ, ದೇವಂಗಿಯತ್ತ ತಪ್ಪಿ ಮುಂದುವರಿದದ್ದನ್ನು ತಿದ್ದಿಕೊಂಡು ಕಾಸರವಳ್ಳಿ ಮನೆ ತಲಪುವಾಗ ಗಂಟೆ ಹನ್ನೆರಡೂವರೆ. ಮನೆಯವರಿಗೆ ಅಕಾಲದಲ್ಲಿ ಊಟಕ್ಕೆ ಎಲ್ಲಿ ಹೊರೆಯಾಗುತ್ತೇವೋ ಎಂಬ ಸಣ್ಣ ಅಪರಾಧೀ ಪ್ರಜ್ಞೆ ಕಾಡುತ್ತಿತ್ತು. ಮಳೆಗಾಲ ಸಹಜವಾದ ಕಳೆಬೆಳೆದ ವಿಸ್ತಾರ ಅಂಗಳ. ನಡುನಡುವೆ ಅವಶ್ಯವಿದ್ದರೆ ಚಪ್ಪರ ಏರಿಸಲು ಸಜ್ಜಾದ ಕಲ್ಲ ಕಂಬಗಳು. ಆಚೆ ಅಂಚಿನಲ್ಲಿ L ಆಕಾರ ತಿರುಗಿಬಿದ್ದಂತೆ ‘ಮನೆ’ ಚಾಚಿಕೊಂಡಿತ್ತು. ನೇರ ಎದುರಿನ ಸಣ್ಣ ಬಾಗಿಲಿನಲ್ಲಿದ್ದ ಮಂದಿ ನೌಕರ ವರ್ಗದವರಂತಿದ್ದರು. ಬಲದ ಬದಿಯ ಬಾಗಿಲಿನಲ್ಲಿ ಹಳಗಾಲದ ಯಜಮಾನರೂ (ಎಂಬತ್ತರ ಆಚೀಚಿನ ಹರಯದ ರಾಮಸ್ವಾಮಿಯವರೂ) ಇಂದಿನ ಆಡಳಿತ ನಡೆಸುವ ಅವರ ಮಗನೂ (ಪ್ರಾಯ ಮೂವತ್ತರ ಆಸುಪಾಸಿನ ಆದರ್ಶ) ನಮ್ಮ ನಿರೀಕ್ಷೆಯಲ್ಲೇ ಇದ್ದವರು, ಸ್ವಲ್ಪ ಉದಾಸ ಭಾವದಲ್ಲೇ ಸ್ವಾಗತಿಸಿದರು. (ಮರೆಯುವ ಮುನ್ನ: ವಾಸ್ತವವಾಗಿ ಅವರಿಬ್ಬರಿಗೂ ಮೊದಲು ನಮ್ಮನ್ನು ಹಾರ್ದಿಕವಾಗಿ ಸ್ವಾಗತಿಸಿದ್ದು ಇನ್ನೂ ಪುಟ್ಟವನು, ಎರಡೋ ಮೂರರ ಹರಯದ ಪೋರ, ಆದರ್ಶ ಪುತ್ರ!) ತೆಳು ಗಡ್ಡ, ಮುಕ್ಕಾಲು-ಚಡ್ದಿ ಮತ್ತು ಬನಿಯನ್ನುಗಳಲ್ಲಿದ್ದ ಆದರ್ಶ ನಾಲ್ಕು ಉಪಚಾರದ ಮಾತುಗಳಾಡಿ, ಕೀಲಿಕೈ ಮತ್ತು ಟಾರ್ಚ್ ಹಿಡಿದು, ಮನೆ ತೋರಿಸ ತೊಡಗಿದರು.

ವಾಸ್ತವವಾಗಿ ನಾವು ಕಾರಿಳಿದದ್ದು ಮನೆಯ ಹಿತ್ತಿಲು. ಎದುರಿನ ಮಹಾದ್ವಾರದಿಂದ ಐವತ್ತು ನೂರಡಿಯಾಚೆ ಪಾದ್ಯವಾಗಿ ವಿಸ್ತಾರ ಪಾತ್ರೆಯಲ್ಲಿ ಸಾಕ್ಷಾತ್ ತುಂಗೆಯೇ ಹರಿದಿದ್ದಳು. ಅದರ ಪಾವಟಿಗೆಗಳನ್ನೇರಿ ಬರುವವರಿಗೆ ಮೊದಲ ದರ್ಶನವೇ ಮನೆ ದೇವರು - ಸೋಮಶೇಖರನದ್ದು. ದೇವರಮನೆ ಎಂದಾಗ ಸಣ್ಣ ಗೂಡೋ ಪುಟ್ಟ ಕೋಣೆಯೋ ನೆನಪಿನ ಕೋಶದಲ್ಲಿದ್ದ ನನ್ನಂಥವರಿಗೆ ಇಲ್ಲಿ ಪ್ರದಕ್ಷಿಣಾಪಥ, ಗರ್ಭಗುಡಿಯೊಡನೆ ಸಣ್ಣ ಮತ್ತು ಸ್ವತಂತ್ರ ದೇವಾಲಯವೇ ಇದೆ ಎನ್ನುವುದು ಬಲುದೊಡ್ಡ ಅಚ್ಚರಿ. ಅದರ ಮರದ ದ್ವಾರ, ಮಾಡಿನ ಮುಚ್ಚಿಗೆ, ಉಪ್ಪರಿಗೆ, ಪ್ರತಿ ಬೋದಿಗೆ, ತೊಲೆ, ಅಡ್ಡ, ರೀಪು ಇಲ್ಲಿ ಸುಂದರ ಸಮರೂಪತೆಯನ್ನು ತೋರುತ್ತಾ ಶತಮಾನಗಳ ಉಪಯುಕ್ತತೆಯನ್ನು ಸಾರುತ್ತಾ ಈಗಲೂ ಸೂಕ್ತ ಸರಳ ಉಪಚಾರಗಳೊಡನೆ ಮುಂದಿನ ಶತಮಾನವನ್ನು ಎದುರಿಸುವ ದೃಢತೆ ಪ್ರದರ್ಶಿಸಿವುದು ನಮ್ಮ ಸಂತೋಷವನ್ನು ಹೆಚ್ಚಿಸುತ್ತದೆ. ಎಲ್ಲೆಡೆ ಮೆರೆಯುವ ಕೆತ್ತನೆಯ ವೈವಿಧ್ಯ ಮತ್ತೀ ಎಲ್ಲಕ್ಕೆ ಮೆರುಗು ಕೊಡುವಂತೆ ಈ ಕಾಲಕ್ಕೂ ಪೂರ್ಣ ಮನೆಯವರ ಶ್ರಮ ಮತ್ತು ವೆಚ್ಚದಲ್ಲೆ ಉಳಿದು ಬಂದ ನಿತ್ಯ ನೈಮಿತ್ತಿಕಗಳ ವಿವರ ತಿಳಿದಾಗ, ನಮ್ಮ ಕಣ್ಣಿನ ಭಾಗ್ಯ ಹೆಚ್ಚಿಸಿಕೊಳ್ಳಲು ಇನ್ನೊಮ್ಮೆ ಬರಬೇಕು ಎಂದೆನ್ನಿಸಿದ್ದು ನಿಜ.

ಪಿರಿಪಿರಿ ಮಳೆಯೊಡನೆ ವಾಸದ ಮನೆಯಿಂದ ಅಂಗಳಕ್ಕೆ ಒಯ್ದು, ನಡು ಬಾಗಿಲೊಂದರ ಬೀಗ ತೆರೆಯುವ ಮೂಲಕ ದೇವಳದ ವಠಾರಕ್ಕಾಗಿ (ದರ್ಶನ ಸಮಯ ಮೀರಿದ್ದದರಿಂದ ಗರ್ಭಗುಡಿ ಮುಚ್ಚಿತ್ತು) ಎದುರು ಹೊಳೆ ದಂಡೆಯವರೆಗೂ ಮತ್ತೆ ಉಪ್ಪರಿಗೆಯ ಮೊಗಸಾಲೆಗೂ ನಡೆದಾಡಿಸಿದರು. ಈ ಉದ್ದಕ್ಕೆ ನಮ್ಮೊಳಗಿನ ಮಾತುಕತೆ ಆದರ್ಶರ ನಿರ್ಲಿಪ್ತತೆಯನ್ನು ಸೌಹಾರ್ದಕ್ಕೆ ತಿರುಗಿಸಿತ್ತು. ಕರಾವಳಿವಲಯದಿಂದ (ಕುಂದಾಪುರ) ಘಟ್ಟದ ಮೇಲಿನ ಪೂಜಾ ಕಾರ್ಯಕ್ಕೆ ವಲಸೆ ಬಂದ (ಇಕ್ಕೇರಿ) ಇವರ ಕುಲದ ಹಿರಿಯರು ಮುಂದುವರಿದು ಈ ಮಲೆನಾಡಿನ ಕೊಂಪೆಯನ್ನೂ ಕೇವಲ ಕೃಷಿ ಮತ್ತು ಪೌರೋಹಿತ್ಯದ ಉದ್ದೇಶದಲ್ಲಿ ಸೇರಿಕೊಂಡರು. ಕೆಳದಿಯ ಅರಸರಿಂದ ನೆಲಕೊಂಡದ್ದು, ಬ್ರಿಟಿಶ್ ಸರಕಾರದ ವೇಳೆ ತಹಶೀಲ್ದಾರನಾದವ ಇವರ ಭೂಕಂದಾಯದ ಹೊರೆಯನ್ನು ವರ್ಷಕ್ಕೆರಡು ಕಂತಿನಲ್ಲಿ, ಖುದ್ದು ಭಾರೀ ಬಂದೋಬಸ್ತಿನೊಡನೆ ಬಂದು ಸಾಗಿಸುತ್ತಿದ್ದದ್ದು, ಭಾರೀ ದರೋಡೆಕಾರರ ಲೂಟಿಯನ್ನು ಅನುಭವಿಸಿಯೂ ಚೇತರಿಸಿಕೊಂಡದ್ದು, ಮೈಸೂರರಮನೆಗೆ ಬೆಂಕಿಬಿದ್ದ ಕಾಲದಲ್ಲಿ ಇವರು ರಾಜವಂಶದ ಮೇಲಿನ ಗೌರವದಲ್ಲಿ ಉದಾರವಾಗಿ ಕೊಟ್ಟ ದಾನವನ್ನು ಅರಸರು ಅವರ ಹಿರಿತನಕ್ಕೆ ಸರಿಯಾಗಿ ಸಾಲವಾಗಿ ಸ್ವೀಕರಿಸಿ ಮರುಪಾವತಿಸಿದ್ದು ಹೇಳುತ್ತಲೇ ಹೋದರು ಆದರ್ಶ. ಜೊತೆಜೊತೆಗೆ ತಾನೆಲ್ಲಿ ತಮ್ಮ ಕುಟುಂಬದ ಜಂಭದ ಡೋಲು ಬಾರಿಸಿದಂತಾಗುತ್ತದೋ ಎಂಬ ಸಂಕೋಚದ ನುಡಿಯೂ ಸೇರಿಕೊಳ್ಳುತ್ತಿತ್ತು! (ಅವನ್ನೆಲ್ಲ ಕೇಳಿ, ನೋಡಿ ಅನುಭವಿಸಲೇ ಹೋದ ನಮಗೆ ಹಾಗನ್ನಿಸಲೇ ಇಲ್ಲ) ಎ.ಎನ್ ಮೂರ್ತಿರಾಯರ ಮಾತು - ‘ಹಿಮಾಲಯವನ್ನು ನೋಡಿ ಬರುವುದು ನಿಸ್ಸಂದೇಹವಾಗಿ ಆನಂದದಾಯಕ. ಆದರೆ ಅಲ್ಲಿಯೇ ಜೀವನ ನಡೆಸುವುದು ಪ್ರತ್ಯೇಕ’ವನ್ನು ಮತ್ತೆಮತ್ತೆ ನೆನಪಿಸಿಕೊಳ್ಳುವಂತೆಯೇ ಇತ್ತು ಆದರ್ಶ ನಿರೂಪಣೆ.

ಅರಸ ಶಿವಪ್ಪನಾಯಕರ ಮಗ ಸೋಮೇಶ್ವರ ನಾಯಕರ ಅನುಮತಿಯ ಮೇಲೆ ಕೇವಲ ಪೂಜಾ ವೃತ್ತಿಗೆ ಇಲ್ಲಿ ನೆಲೆಸಿದ ಶೇಷಪ್ಪಯ್ಯರ ಪ್ರಾಮಾಣಿಕ ದುಡಿಮೆ (ಸಾಹಸ) ಎರಡು ಸಾವಿರ ಎಕ್ರೆಯ ಭೂ ಮಾಲಕತ್ವಕ್ಕೆ ಬೆಳೆದದ್ದು, ಇಂದು ಹೆಸರಾಂತ ಕಾಸರವಳ್ಳಿ ಮನೆಯನ್ನೊಂದು ಆವಶ್ಯಕತೆಯಾಗಿ ಕಟ್ಟಿದ್ದು ಯಾವುದೇ ಸಾಮ್ರಾಜ್ಯ ಸ್ಥಾಪನೆಗೆ ಕಡಿಮೆಯದ್ದಲ್ಲ. ಇಷ್ಟಾಗಿಯೂ ಇವರ ಧರ್ಮ ಮತ್ತು ರಾಜನಿಷ್ಠೆ ಮೊದಲು ಇಕ್ಕೇರಿ ಸಂಸ್ಥಾನದಿಂದ, ಮುಂದುವರಿದ ಕಾಲದಲ್ಲಿ ಘನ ಮೈಸೂರು ರಾಜ್ಯ ಸರಕಾರದಿಂದ (ದೇವಾಲಯಕ್ಕೆ) ಅನುದಾನವನ್ನೂ ಮೈಸೂರರಸರಿಂದ ಎಲ್ಲ ವಿಶೇಷಗಳಿಗೂ ಖಾಯಂ ಆಮಂತ್ರಣವನ್ನೂ ತರಿಸುತ್ತಿತ್ತು. ಕುಟುಂಬ ವಿಸ್ತರಣೆ, ಕಾಲಧರ್ಮದ ಕಟ್ಟುಪಾಡುಗಳು (ಮುಖ್ಯವಾಗಿ ಭೂ ಮಸೂದೆ, ಈಗ ಕೃಷಿಕಾರ್ಮಿಕರ ಕೊರತೆ) ಇಂದು ಉಳಿದಷ್ಟು ಕೃಷಿಯನ್ನೂ ಮಹಾ ಮನೆಯನ್ನೂ ಊರ್ಜಿತದಲ್ಲಿಡುವಲ್ಲಿ ಇವರನ್ನು ಸಾಕಷ್ಟು ಬಳಲಿಸುತ್ತಿದೆ. ಅರಿತು ನಡೆಸಬೇಕಾದ ಸರಕಾರದ ಬಗ್ಗೆ ಆದರ್ಶ ಅಲ್ಲ, ಯಾರೇನು ಹೇಳಿದರೂ ಬೈಗುಳ ಪಲ್ಲವಿಸುತ್ತಲೇ ಇರಬೇಕಾಗುತ್ತದೆ! ಮೊದಲೇ ಹೇಳಿದಂತೆ, ವಿಜಯನಾಥ ಶೆಣೈಯವರ ಪ್ರಯತ್ನದಲ್ಲಿ ಕನಿಷ್ಠ ಮನೆಯನ್ನಾದರೂ ಸರಕಾರ ಗೌರವಪೂರ್ಣವಾಗಿ ಕೊಂಡು ಕಾದಿರಿಸಬೇಕೆಂಬ ಪ್ರಯತ್ನ ಇನ್ನಿಲ್ಲದ ಸೋಲು ಅನಿಭವಿಸಿದೆ (ಎಲ್ಲೋ ಕೇಳಿದ್ದೆ, ಸರಕಾರದ ಪ್ರತಿನಿಧಿ “ಮೂರು ಕೋಟಿ ಘೋಷಿಸುತ್ತೇವೆ, ಒಂದು ಕೋಟಿ ನಮಗೆ ಕೊಡಬೇಕು” ಎಂದದ್ದು ಸುಳ್ಳಿರಲಾರದು!). ಇನ್ನು ಬರುವ ಜನರಾದರೋ. . . . .

ವಾಸದ ಮನೆಯ ಉಪ್ಪರಿಗೆಯಲ್ಲಿ ತಾಳೆಗರಿ, ಕಡತ (ದಪ್ಪ ಬಟ್ಟೆಯ ಆರೆಂಟಿಂಚು ಅಗಲದ ಊದ್ದ ಲಾಡಿಗೆ ಮೇಣಮೆತ್ತಿ ಮತ್ತು ಮಸಿ ಮಾಡಿದ ಲೇಖನ ಸಾಮಗ್ರಿ) ಮತ್ತು ದಫ್ತರಗಳಲ್ಲಿ ಮನೆತನದ ಎಲ್ಲಾ ದಾಖಲೆಗಳನ್ನು ತಮಗೆ ಕೂಡಿತಾದಷ್ಟು ಎಚ್ಚರದಿಂದಲೇ ಉಳಿಸಿಕೊಂಡಿದ್ದಾರೆ. ಕೆಳದಿಯ ಖ್ಯಾತ ಪ್ರಾಚ್ಯ ಸಂಶೋಧಕ ಗುಂಡಾ ಜೋಯಿಸರು ವಾರಗಟ್ಟಲೆ ಇವರಲ್ಲಿ ಮೊಕ್ಕಾಂ ಮಾಡಿ, ಪ್ರೀತಿಯಿಂದ ಎಲ್ಲವನ್ನೂ ಅರ್ಥಬದ್ಧವಾಗಿ ವಿಂಗಡಿಸಿ, ಜೋಡಿಸಿ ಕೊಟ್ಟಿದ್ದರಂತೆ. ಹಿಂಬಾಲಿಸಿ ಬಂದ ಇನ್ಯಾರೋ ಪ್ರಾಚ್ಯ ವಿದ್ಯಾರ್ಥಿಗಳು ಜೋಯಿಸರ ಕೆಲಸವನ್ನು ವ್ಯರ್ಥಗೊಳಿಸಿದ್ದಲ್ಲದೆ ತಮ್ಮನುಕೂಲಕ್ಕೆ ಕೆಲವು ದಾಖಲೆಗಳನ್ನು ಕದ್ದದ್ದೂ ಮನೆಯವರ ಅರಿವಿಗೆ ಬಂದ ಮೇಲೆ, ನೋಡಲು ಬರುವ ಎಲ್ಲರಲ್ಲೂ ಕಳ್ಳರನ್ನು ಕಾಣುವ ಸಂಕಟಕ್ಕೆ ಬಿದ್ದಿದ್ದಾರೆ. ಇನ್ನು ಯಾವುದೇ ಆಳವಾದ ಕಾಳಜಿಗಳು ಆಸಕ್ತಿಗಳೂ ಇಲ್ಲದ ಹಲವರು ಹೀಗೇ ಅಥವಾ ‘ದಾರಿತಪ್ಪಿ’ ಬರುವುದು ಉಂಟಂತೆ. ಅಂಥವರ ಪೈಕಿ, ಅಂಗಳದ ಅಂಚಿಗೆ ಕಾರಿನಲ್ಲಿ ಬಂದು ಹಾರನ್ ಬಜಾಯಿಸಿ, ಕುತೂಹಲಕ್ಕೆ ತಲೆ ಹೊರಹಾಕಿದ ಮನೆಯವರನ್ನು ಮ್ಯೂಸಿಯಂ ಒಂದರ ನಾಲ್ಕಾಣೇ ನೌಕರರಂತೆ ನಡೆಸಿಕೊಂಡವರ ಕ್ರಮ ಕೇಳಿದಾಗಲಂತೂ  ನಮಗೇ ಮೈ ಉರಿದುಹೋಯ್ತು. ಜೊತೆಗೇ ಅಂದು ಬಾರದ ದಿನಗೂಲಿಯವ ಬಾಕಿಯುಳಿಸಿದ ಕೊಟ್ಟಿಗೆ ಶುದ್ಧಿ, ತೋಟದ್ದೇನೇನೋ ಓಡಾಟ, ಮನೆಯದ್ದೇ ಹತ್ತೆಂಟು ಚಾಕರಿಗಳು (ದೇವಸ್ಥಾನದ ಉಪ್ಪರಿಗೆ ಒಂದೆಡೆ ಮಳೆಗೆ ಸೋರುವುದನ್ನು ನಮ್ಮ ಭೇಟಿಯ ಕಾಲದಲ್ಲಿ ಆದರ್ಶ ಗುರುತಿಸಿದ್ದರು) ಊಟ, ವಿಶ್ರಾಂತಿ ಎಲ್ಲಾ ಆದರ್ಶ ನಮ್ಮಿಂದ ಕಳಚಿಕೊಳ್ಳುವುದನ್ನು ಕಾಯುತ್ತಿವೆ ಎನ್ನುವ ಪಾಪಪ್ರಜ್ಞೆ ನಮ್ಮನ್ನು ಕಾಡಿತು. ನಾವು ಹೊರಡಲು ಆತುರ ತೋರಿದರೂ ಅವರ ಸಂಸ್ಕಾರ ನಮ್ಮನ್ನು ಕೂರಿಸಿ, ಒಳ್ಳೆಯ ಕಾಫಿ ಕೊಟ್ಟು ಹೆಚ್ಚಿನ ನಾಲ್ಕು ಮಾತಾಡಿಸಿತು. ನಾವು ಮನಸಾರೆ ಕೃತಜ್ಞತೆ ಹೇಳಿ ಮತ್ತೆ ದಾರಿಗೆ ಬಂದೆವು.

ಆಗುಂಬೆ ಪೇಟೆಯಲ್ಲಿ ಊಟ. ಸೂರ್ಯಾಸ್ತ ಕಟ್ಟೆಯಲ್ಲಿ ಐದೇ ಮಿನಿಟಿನ ನೋಟಕ್ಕೆ ನಿಂತೆವು. ಹಳಗಾಲದಲ್ಲಿ ಯಾವುದೇ ಘಾಟಿ ಏರಿಳಿವ ಕಾಲದಲ್ಲಿ ಒಂದು ಹಂತದಲ್ಲಿ ಎಂಜಿನ್ ನೀರು ಬದಲಿಸಲೋ ಬಿರಿಯಂಡೆ (break drum) ತಣಿಸಲೋ ವಾಹನಗಳು ನಿಲ್ಲುವ ಕ್ರಮವಿರುತ್ತಿತು. ಆಗ ಪಂಚೆ ಮೇಲೆತ್ತಿ ಕಟ್ಟುತ್ತಾ (ನನ್ನಪ್ಪ ಹೇಳುವಂತೆ ಸುರುವಾಲಿನ, ಅರ್ಥಾತ್ ಇಜಾರದ, ಇನ್ನೂ ಸರಳೀಕರಿಸುವುದಾದರೆ ಪ್ಯಾಂಟಿನ ಗುಂಡಿ ತಪ್ಪಿಸುತ್ತಾ ಎನ್ನಲೂಬಹುದು) ಕುಕ್ಕುಟ ಓಟದಲ್ಲಿ ಪೊದರ ಮರೆಗೋಡುವವರು, ಗಂಭೀರವಾಗಿ ಪಾಸಿಂಗ್ ಶೋ ಪ್ಯಾಕ್ ತೆಗೆದು, ಒಂದು ಸಿಗರೇಟ್ ತುಟಿಗಂಟಿಸಿ ಹಗೂರಕ್ಕೆ ಹೊಗೆ ಎಳೆದು ಗಂಟಲ ಕಫ ಹಣ್ಣು ಮಾಡುವವರು ಮುಂತಾದವರನ್ನು ಬಿಟ್ಟರೂ ಸುತ್ತಣ ಬೆಟ್ಟ ಹಸಿರುಗಳಿಗೆ ಕಣ್ಣಾಗುವವರು, ಸ್ವಚ್ಚ ತಂಪಿಗೆ ಮನಸ್ಸು ಕೊಟ್ಟವರು ಧಾರಾಳ ಇರುತ್ತಿದ್ದರು. ಈಗ ಕಾಲಬದಲಿದೆ, ಆದ್ಯತೆಗಳು ಭಿನ್ನವಾದರೂ ಪ್ರಕೃತಿವೀಕ್ಷಣೆಗೆ ಅವಕಾಶ ತಪ್ಪಿಸದಂತೆ ಆಯಕಟ್ಟಿನ ತಾಣಗಳನ್ನು ಗುರುತಿಸಿಕೊಡುತ್ತಿರುವುದು ಸರಿಯಾಗಿಯೇ ಇದೆ. ಅಲ್ಲಿ ವಿರಮಿಸಿ, ಸಾಗರಪರ್ಯಂತ ಹಸಿರು ಹಾಸಿದ ಬಯಲು, ಕವುಚಿಬಿದ್ದ ನೀಲಬಾನಿಯಲ್ಲಿ ವಿಹರಿಸುವ ಮೋಡದ ಮರಿಗಳು, ಕೆಲಬಲಗಳಲ್ಲಿ ಕಣ್ಣೆಟಕುವವರೆಗೂ ಚಾಚಿಕೊಂಡ ಬೆಟ್ಟ, ಝರಿಜಲಪಾತಗಳ ಕುಸುರಿ ನೋಡುವುದು ಎಂದೂ ಹಳತಾಗುವುದಿಲ್ಲ. ಕಾಡು ಹೊರಡಿಸುವ ವಿಶಿಷ್ಟ ಮಂದ್ರ ಏಕನಾದದಲ್ಲಿ ಆಗೀಗ ಹೊರಡುವ ವಿಭಿನ್ನ ಹಕ್ಕಿಗಳ ಪಲುಕು ಖಂಡಿತಾ ಅರಸಿಕನಿಗೂ ಸಂಗೀತದ ಗುಂಗಿಹುಳ ಕಡಿಸುವಂತದ್ದೇ. ಆದರೆ ಸೌಕರ್ಯಗಳ ಹೆಸರಿನಲ್ಲಿ ಸಿಮೆಂಟು, ಕಬ್ಬಿಣಗಳ ಹಲವಾರು ರಚನೆಗಳನ್ನು ಹೇರಿ (ಇಲಾಖೆಗಳ ಭಾಷೆಯಲ್ಲಿ ಸಾರ್ವಜನಿಕ ಕಾಮಗಾರಿ ಎಂದರೆ ‘ಹಣಮಾಡಲು’ ಅರ್ಥಾತ್ ಕಳಪೆ ರಚನೆಗಳು ಅನಿವಾರ್ಯವಾಗುತ್ತವೆ), ಕನಿಷ್ಠ ಅಗತ್ಯಗಳ ಹೆಸರಿನಲ್ಲಿ ತಿನ್ನಬಾರದ್ದಕ್ಕೂ ಕುಡಿಯಬಾರದ್ದಕ್ಕೂ ಅವಕಾಶ ಕಲ್ಪಿಸಿ ಪರಿಸರ ಮಾಲಿನ್ಯವನ್ನು ಹೆಚ್ಚಿಸಿರುವುದು ನಿಜಕ್ಕೂ ದುರಂತ. ಪಾದಮೂಲದಲ್ಲಿ ಪ್ರವಾಸಿಗಳು ಮಾಡಿದ ನೂರೆಂಟು ಹೊಲಸು, ವಾಸನೆ ಮತ್ತು ವಾಹನ ಸಂಚಾರದ ಅನಿವಾರ್ಯ ಸದ್ದನ್ನು ಮೀರುವಂತೆ ಅವುಗಳೊಳಗಿಂದ ಮೊಳಗುತ್ತಿದ್ದ ಗದ್ದಲ (ಧಗ್ಗು ಧಗ್ಗು ಮೂಝಿಕ್ಕು, ಕಿವುಡರಿಗೆಂತ ಲಾಝಿಕ್ಕು) ನಮ್ಮನ್ನು ಮೂರೇ ಮಿನಿಟಿನಲ್ಲಿ ಮುಂದೋಡಿಸಿತು.

ಸೋಮೇಶ್ವರದಿಂದ ಒಂದು ಸಣ್ಣ ಅಡ್ಡ ಪಯಣ ನಡೆಸಿ ಗೆಳೆಯನೋರ್ವನ ತೋಟದ ದರ್ಶನ ಮಾಡಿ, ವರಂಗದ ಸರಸಿಯ ಅಂಚಿನಲ್ಲಿ ನಿಂತು ಕಮ್ಮಿತು ಕೋಮಳೆಯನ್ನು ಐದು ಮಿನಿಟು ಆನಂದಿಸಿ ಕತ್ತಲೆಯ ಪರದೆ ಜಾರುತ್ತಿದ್ದಂತೆ ಮಂಗಳೂರು ಸೇರಿಕೊಂಡೆವು. ತೀರ್ಥಳ್ಳಿಯನ್ನು ಕೇಂದ್ರವಾಗಿಟ್ಟುಕೊಂಡು ನಡೆದ ಯಾತ್ರೆಯೆಂದೇ (ತೀರ್ಥಯಾತ್ರೆ) ಕಥನಕ್ಕಿಳಿದಿದ್ದೆ. “ಅಶೋಕನಿಗೆ ಪ್ರಾಯ ಅರುವತ್ತಕ್ಕೆ ಹತ್ತಿರ ಬಂತು. ಈಗಾದರೂ ಪುಣ್ಯಕ್ಷೇತ್ರಗಳ ಸಂದರ್ಶನ ಬುದ್ಧಿ ಬಂತಲ್ಲಾ” ಎಂದು ಸಂತೋಷಿಸಿ ಅನುಸರಿಸಿದ ಹಿರಿಯರಲ್ಲಿ ಕ್ಷಮೆಯಾಚಿಸುತ್ತೇನೆ. ಕದ್ದುಮುಚ್ಚಿ ಹಿಡಿಸಿಕೊಂಡ ಚಟಕ್ಕೆ (ಬಾಟಲಿಪುತ್ರರು) ಅಪರಿಚಿತ ವಲಯಗಳಲ್ಲಿ ಮುಕ್ತಾವಕಾಶ ಕಲ್ಪಿಸಲು “ನಾವೂ ಟೂರ್ ಹೋಗಿದ್ವೂ” ಎನ್ನುವವರು “ಎಲಾ ಇವ್ನಾ! ಇವ್ನ್ಗೂ ತೀರ್ಥದ ರುಚಿ ಹಿಡಿದ್ಬಿಡ್ತಾ” ಎಂದು ನಾಲ್ಕು ಕಂತುಗಳ ಉದ್ದಕ್ಕೆ ಬೆನ್ನುಬಿದ್ದು, ಸೋತದ್ದಕ್ಕೆ ಕಭೀ ಕುಶ್ ಕಭೀ ಗಂ! ಆದರೆ ನನಗೆ ಗೊತ್ತು, ‘ಪ್ರಜಾಪ್ರಭುತ್ವದಲ್ಲಿ’ (ನಿಜಕ್ಕೂ ಇದು ನಡೆಯುತ್ತಿದೆಯೇ?) ಇದೇ ಬಹುಮತೀಯರು ಎಲ್ಲವನ್ನೂ ಬಂದಂತೆ ಅನುಭವಿಸುತ್ತಾರೇಂತ! ಆ ಬಹುಮತೀಯರೇ ಆದ ನಿಮ್ಮಲ್ಲಿ ವಿನಂತಿ: ದಯವಿಟ್ಟು ಈ ಬಾರಿಯೂ ನೀವು ಮತಚಲಾಯಿಸದೇ ಕೂತರೆ ಅಕ್ಷಮ್ಯ ಅಪರಾಧವಾಗುತ್ತದೆ. ಕೆಳಗಿದೆ ಮತಪೆಟ್ಟಿಗೆ. ಹೋಲಿಕೆಯನ್ನು ಅಲ್ಲಿಗೇ ಬಿಟ್ಟು, ಸವಿವರ ಅಭಿ-ಮತ ಕೊಡುತ್ತೀರಾಗಿ ನಂಬಿದ್ದೇನೆ.

(ತೀರ್ಥಯಾತ್ರೆ ಮುಗಿದುದು)

23 comments:

 1. ASHOK MAMA...
  odisikondu hoyithu.... chennaagide..

  ReplyDelete
 2. ಕಾಸರವಳ್ಳಿ ಮನೆಯನ್ನು ತಮ್ಮ ಲೇಖನ ಮುಖಾಂತರ ನೋಡಿದೆ.
  ಧನ್ಯವಾದಗಳು. - ಪೆಜತ್ತಾಯ

  ReplyDelete
 3. ಮನೆ ನಿಜವಾಗಿ ಹೇಗಿದೆಯೋ ಗೊತ್ತಿಲ್ಲ. ವರ್ಣನೆ ಚೆನ್ನಾಗಿದೆ.

  ReplyDelete
 4. ನಿನ್ನ ತೀರ್ಥಯಾತ್ರೆಯ ತೀರ್ಥವನ್ನು ನಿಧಾನವಾಗಿ ಸವಿದೆ. ಬರವಣಿಗೆಯ ಲವಲವಿಕೆ - ಅಯ್ಯೋ ನಾವೂ ಸೇರಿಕೊಳ್ಳಬಹುದಾಗಿತ್ತು ನಿನ್ನೊಡನೆ ಯಾತ್ರೆಗೆ ಅಂತ ಅನ್ನಿಸಿದ್ದು ಸುಳ್ಳಲ್ಲ. ಓದುತ್ತ ಹೋದಂತೆ -ಇಪ್ಪತ್ತಮೂರು ವರ್ಷಗಳ ಹಿಂದೊಡಿತು ನೆನಪು. ಕಾಲ ಸರಿದು ಹೋದರೂ ನಿನ್ನೆ ಹೋದಂತೆ ಇನ್ನೂ ನೆನಪು ಗಾಢವಾಗಿದ್ದರೆ - ಅದು ನನ್ನ ನೆನಪಿನ ಶಕ್ತಿಯ ತಾಕತ್ತಿಗಿಂತ ಆ ಪಯಣ ಷ್ಟೊಂದು ಪ್ರಭಾವಿಸಿದ್ದು ಕಾರಣ. ಹೊಸ ಯಮಾಹಾ - ನೂರು ಸಿಸಿ ಬೈಕಿನಲ್ಲಿ ನಾನು - ಜಿಂಕೆ ಸುಬ್ಬಣ್ಣ ನಿಮ್ಮ ತಂಡದೊಡನೆ ಜತೆಯಾದೆವು - ಸ್ವಾತಂತ್ರೋತ್ಸವ ದಿನ. ಮಂಗಳೂರಿಂದ ಆಗುಂಬೆಯಾಗಿ - ಲಿಂಗನಮಕ್ಕಿ ಹಿನ್ನೀರಿನ ವಿಸ್ತಾರ ಹರವಿನಲ್ಲಿ ಲಾಂಚಿನಲ್ಲಿ ದಾಟಿ - ಹೆಗ್ಗೋಡಿಗೆ ಸಾಗಿ - ಅಲ್ಲಿಂದ ಕರಿಕಾನಮ್ಮನನ್ನು ನೋಡಿ ಬಂದ ಆ ಪಯಣ ನೆನಪಾಯಿತು.ಅಂದು ನಾವು ನಿನ್ನ ತಂಡದೊಡನೆ ಸೇರಿಕೊಳ್ಳದೇ ಹೋಗಿದ್ದರೆ ಅಷ್ಟರ ಮಟ್ಟಿಗೆ ನಮ್ಮ ಅನುಭವ ಖಂಡಿತ ಕಡಿಮೆಯಾಗುತ್ತಿತ್ತು.
  ಕೆಳದಿಯ ಗುಂಡಾಜೋಯಿಸರ ಬಗ್ಗೆ ಬಾಲಚಂದ್ರ ಕರಣಿಕರು ತುಂಬ ಅಭಿಮಾನದಿಂದ ಹೇಳುತ್ತಿದ್ದರು. ನಮ್ಮ ಪೂರ್ವೀಕರ ಬಗ್ಗೆ - ಅಡಮನೆಯ ಬಗ್ಗೆ - ಕರಣಿಕರು ಮತ್ತು ಅವರು ತುಂಬ ಮಾಹಿತಿ ಕೆದಕಿ ಅಗದಿದ್ದಾರ್ರೆ.
  ಕಾಸರವಳ್ಳಿ ಮನೆಯ ಹಾಗೆ ಇನ್ನೂ ಕೆಲವು ಸಾಗರದ ಸುತ್ತುಮುತ್ತ ಮನೆಗಳುಂಟಂತೆ. ಇನ್ನೂ ಅವೆಲ್ಲವನ್ನು ಜತನವಾಗಿ ಉಳಿಸಿಕೊಂಡು ಬರುತ್ತಿರುವುದೇ ಅವರ ಗರಿಮೆ. ಹೀಗೆ ತೀರ್ಥಯಾತ್ರೆಗೆ ನಮ್ಮನ್ನು ಕರೆದುಕೊಂಡು ಹೋಗಬೇಕು - ನಾವೇನಿದ್ದರೂ ಅಂಗಣಕ್ಕಿಳಿಯುವ ಬದಲಿಗೆ ಟಿವಿಯಲ್ಲಿ ಆಟ ನೋಡಿ ಚಪ್ಪಾಳೆ ತಟ್ಟುವ ಮಂದಿಯ ಹಾಗೆ !

  ReplyDelete
 5. ಗೋವಿಂದ ನೇಲ್ಯಾರು22 November, 2010 18:00

  ಹಳ್ಳಿ ಪರಿಸರದಲ್ಲಿ ಒಂದೆಡೆ ಹಣ ಮಾಡುವ ಹೋಮ್ ಸ್ಟೇ ತಕ್ಕ ಮಟ್ಟಿಗೆ ನಡೆಯುತ್ತಿದ್ದರೆ ಮತ್ತೊಂದೆಡೆ ಈ ಪ್ರಾಚೀನ ಸಂಪತ್ತನ್ನು ಉಳಿಸಲು ಮಾಡುವ ಪ್ರಯತ್ನಕ್ಕೆ ಕೈಗೂಡಿಸದ ಸಮಾಜ ಮತ್ತು ಸಿಕ್ಕಿದ್ದನ್ನು ಕದ್ದು ಕೊಂಡೊಯ್ಯುವ ಜನರ ದ್ರೋಹ ಎಲ್ಲವನ್ನೂ ಕೇಳುವಾಗ ಬೇಸರವಾಗುತ್ತದೆ.

  ReplyDelete
 6. ishTavaayithu. mane noduva kuthuhala huttisidaru hogadanthe salahe maadiddiri. maneyavarige upadra annodu sari. makkaleduru nIvu tndu mugisida mithaayiyannu varnisidanthaagide.!! he he he -girisha

  ReplyDelete
 7. ಶಶಿಧರ ಹಾಲಾಡಿ22 November, 2010 19:49

  ಕಾಸರವಳ್ಳಿ ಮನೆಯ ಕುರಿತು ನೀವು ಬರೆದದ್ದು ಚೆನ್ನಾಗಿದೆ ಎಂದರೆ ಸಾಕೆ? ಇಪ್ಪತ್ತೆನೇ ಶತಮಾನದ ಬಹುಭಾಗ ಆರು ಕಿ.ಮೀ. ಯಷ್ಟು ಹತ್ತಿರದಲ್ಲಿದ್ದ ಆ ಮಹಾಮನೆ, ಕಳೆದ ಎರಡು ದಶಕಗಳಿಂದ ಇಪ್ಪತ್ತೊಂದು ಕಿ.ಮೀ ದೂರವಾಗಿದ್ದು, ಇಪ್ಪತ್ತೊಂದನೆಯ ಶತಮಾನದಲ್ಲಿ ಮತ್ತಷ್ಟು ದೂರವಾಗುವಂತಿದೆ - ಅಲ್ಲಿನ ದಿನಚರಿಯನ್ನು ನೀವು ಗಮನಿಸಿದ್ದನ್ನು ನೋಡಿದರೆ, ಆ ದೂರ ಮತ್ತಷ್ಟು ದೂರವಾಗುವಂತೆಯೂ, ವಿಶಾದವನ್ನು ಹುಟ್ಟಿಸಿದರೂ ಹುಟ್ಟಿಸೀತು - ಮಲೆನಾಡು ಮತ್ತು ಕರಾವಳಿಯ ಅಂತಹ ಇತರ ಹಳ್ಳಿಗಳಲ್ಲಿ, ಇಂದು ಕೊಟ್ಟಿಗೆ ಕೆಲಸ ಮಾಡಲು, ತೆಂಗಿನ ಕಾಯಿ ಬೀಳಿಸಲೂ ಸಹಾ ಜನ ಸಿಗುತ್ತಿಲ್ಲ, ಮನೆಯವರು ಆ ಕೆಲಸ ಮಾಡಲಾರರು. ಕಾಡಿನ ಮಧ್ಯದಲ್ಲಿರುವ ನದೀತೀರದ ಆ ಮನೆಯು ಹತ್ತೊಂಬತ್ತೆನೇ ಶತಮಾನ ಮತ್ತು ಇಪ್ಪತ್ತೊಂದನೇ ಶತಮಾನದ ಕೊಂಡಿಯಂತಿದೆ ಎಂದು ನಾನೆಂದರೆ, ಅದು ಕ್ಲೀಶೆಯೆ? - ಶಶಿಧರ ಹಾಲಾಡಿ.

  ReplyDelete
 8. kasaravalli manetanada kopparige bagge theerthahalli parisaradalli aneka rochaka kathegalu hridaduttive. nimma baraha odida balika nanu 12 varshada hinde p.u. oduthiddaga kasaravallige bheti needidda nenapu marukalisitu
  dhanyavada

  ReplyDelete
 9. Laxminarayana Bhat P23 November, 2010 07:21

  ತೀರ್ಥಯಾತ್ರಾ ಸಂಕಥಾ ಕಾಲಕ್ಷೇಪ ಸಂಪೂರ್ಣ ಫಲ ಪ್ರಾಪ್ತವಾಗಿ ಧನ್ಯವಾಯಿತು ಅಕ್ಷರರೂಪೀ ಸಹ-ಪಯಣ! ಹಿಂದೊಮ್ಮೆ ಕಾಸರವಳ್ಳಿ ಮನೆಯ ಹಿತ್ತಿಲಿಂದ ತುಂಗೆಯ ದಡಕ್ಕೆ ನಡೆದ ನೆನಪು ಮತ್ತೆ ಹಸಿರಾಯಿತು. [ಮನೆಯ ಒಳಪ್ರವೇಶ ಮಾಡಿರಲಿಲ್ಲ.]
  ಕಾಲನ ತುಳಿತಕ್ಕೆ ಸಿಲುಕದ ಗತವೈಭವ ಇಲ್ಲವೇ ಇಲ್ಲ! ಸರಕಾರ ಕೈ ಹಾಕಿದರೆ ಕುಪ್ಪಳ್ಳಿ ಮನೆಯನ್ತೆಯೋ, ವರ್ಷಾವಧಿ ನಡೆಯುವ 'ಪ್ರಾಣಿ ಹಿಂಸಾರತಿ' ಪ್ರಯೋಗದ ಮೈಸೂರ್ ದಸರಾವೋ ಆಗಿಬಿಡುತ್ತದೆ! ನಮಸ್ಕಾರ.

  ReplyDelete
 10. Gopalakrishna BHAT S.K.23 November, 2010 07:47

  Olleya lekhana. maneya olagina vinyasavannu innoo vivarisabekitthu.

  ReplyDelete
 11. ಮೂರ್ತಿ ನಾಯಿಕಾಪು23 November, 2010 09:05

  ಕಾಸರವಳ್ಳಿಯ ಅದ್ಭುತ ಮನೆಯ ದರ್ಶನ ಮಾಡಿಸಿಕೊಟ್ಟಿದ್ದೀರಿ. ಅರುವತ್ತರ ತರುಣನಾಗಿ ಇನ್ನೂ ಇಂತಹ ಹಲವಾರು ಸಾಹಸಗಳು ನಿಮ್ಮಿಂದ ನಡೆಯುವಂತಾಗಲಿ. ಬಿಡುವಿಲ್ಲದ ಕೆಲಸಗಳ ನಡುವೆಯೂ ನೀವು ಮಾಡುತ್ತಿರುವ ಪ್ರಪಂಚ ದರ್ಶನದ ಕೆಲಸ ಹಾಡಿ ಹೊಗಳಲೇ ಬೇಕಾದುದು. ನಮ್ಮ ಸ್ಕೌಟು ಚಳವಳಿಯ ಹರಿಕಾರ ಬೇಡನ್ ಪವೆಲರು ಹೇಳಿದ A BUSY MAN ONLY CAN FIND LEISURE ಎಂಬುದಕ್ಕೆ ನೀವು ನಿದರ್ಶನವಾಗಿ ನಿಂತಿದ್ದೀರಿ. ಮತ್ತೊಮ್ಮೆ ಅಭಿನಂದನೆಗಳು.

  ReplyDelete
 12. Kasaravalli mane ithihasa indu yeshtu aprasthuta vaagide embudakke ondu nidarshana. Sarkaradavaru intaha gatha kuruhugalannu rakshisabekennuva nambikeyannu jana bittashtu jangaligoo, ithihasakkoo shreyaskara. Intaha manegalannu guruthisi, adarabagge janarige thilisuvudu praayasha namma ithihasa prajneyannu jaagrathagolisuvalli hechchu sahaayakagagabahudu.

  ReplyDelete
 13. ಎ.ಎನ್ ಮೂರ್ತಿರಾಯರ ಮಾತು – ‘ಹಿಮಾಲಯವನ್ನು ನೋಡಿ ಬರುವುದು ನಿಸ್ಸಂದೇಹವಾಗಿ ಆನಂದದಾಯಕ. ಆದರೆ ಅಲ್ಲಿಯೇ ಜೀವನ ನಡೆಸುವುದು ಪ್ರತ್ಯೇಕ'
  yes this is true to any place or any situation where in we feel things could have been......
  excellent narration thanks
  Harsha

  ReplyDelete
 14. theerthayathreya konege panchamruthavanne kotri

  mathe mathe odide........
  vadi

  ReplyDelete
 15. tumbaa ishta aaytu.......... :)

  ReplyDelete
 16. The concern to save the (monument - for us) ancestor's home is really great. This shows the flow of our culture from ancestor's.
  The process of maintain, survive the ancestor's home & pass-on to the next generation must be respected.

  ReplyDelete
 17. ನಾನು ಕಾಸರವಳ್ಳಿ ಮನೆ ನೋಡಿದೆ ಮನೆಯಷ್ಟೇ ನಿಮ್ಮ ವರ್ಣನೆ ಅಪ್ಪಿ ಮಿಡಿ ಉಪ್ಪಿನಕಾಯಿಯಷ್ಟು ರುಚಿಕರವಾಗಿದೆ .
  ಒಳ್ಳೆಯ ಘಾಟು , ಒಳ್ಳೆಯ ರಸ ,ಮೆಲುಕಿನ ಪಲುಕೆ ಸವಿ ಸವಿ .ನೋಟ ಅನೂಹ್ಯ .

  ಡಾ .ಪಾ ನ ಮೈಯ

  ReplyDelete
 18. ಚಂದ್ರಶೇಖರ ಕಲ್ಕೂರ24 November, 2010 06:03

  ಅಶೋಕವರ್ಧನರಿಗೆ, ವಂದೇಮಾತರಮ್
  ಶಿರ್ನಾಳಿ, ಕಾಸರವಳ್ಳಿ ಮತ್ತು ಮೇಳಿಗೆ ತೀರ್ಥಹಳ್ಳಿ ತಾಲೂಕಿನ ಪ್ರಸಿದ್ಧ ಬ್ರಾಹ್ಮಣ ಕುಟುಂಬಗಳು. ದಿ. ಶ್ರೀ. ಶಿವರಾಮ ಕಾರಂತರು ಹೇಳುತ್ತಿದ್ದರಂತೆ. "ಶೀರ್ನಾಳಿ ಮನೆಯಲ್ಲಿ ಒಂದು ದಿನಕ್ಕೆ ಸುಡುವ ಸೌದೆ ನಮ್ಮ ಜಿಲ್ಲೆಯಲ್ಲಿ (ದ.ಕ.) ಒಂದು ಸಾಮನ್ಯ ಕುಟುಂಬಕ್ಕೆ ಒಂದು ವರ್ಷಕ್ಕೆ ಸಾಕು."
  ಶಾಂತವೇರಿ ಗೋಪಾಲ ಗೌಡರ ಕಾಗೋಡು ಸತ್ಯಾಗ್ರಹದ ಪ್ರಭಾವ ಈ ಕುಟುಂಬಗಳ ಮೇಲೂ ಬಿದ್ದಿತ್ತು. ಆ ಸತ್ಯಾಗ್ರಹ ಕೇವಲ ಲಿಂಗಾಯತರ ಮೇಲೆ ಎದ್ದ ದಂಗೆ ಎಂಬುದಾಗಿ ನಷ್ಟಕ್ಕೀಡಾದ ಒಡೆಯರ್ ಕುಟುಂಬಗಳ ವಾದ. ನಾನು ಕೆ.ಜಿ. ಒಡೆಯರ್ ರವರ ಮಗ ಜಗದೀಶ್ ಒಡೆಯರರನ್ನು ಕಳೆದ ತಿಂಗಳು ೨೦ ರಂದು ಸಾಗರದ ಅವರ ಮನೆಯಲ್ಲಿ ಭೇಟಿಯಾಗಿದ್ದೆ. "ನಮ್ಮಪ್ಪ ಸತ್ಯಾಗ್ರಹಕ್ಕೆ ಮುಂಚೆಯೇ ಗೇಣಿದಾರರಿಗೆ ಜಮೀನು ಬಿಟ್ಟಿದ್ದರು" ಎನ್ನುವುದಕ್ಕೆ ಅಂಕೆ ಸಂಖ್ಯೆಗಳೊಂದಿಗೆ ಪುರಾವೆಗಳನ್ನು ಕೂಡಾ ತೋರಿಸುತ್ತಾರೆ. ಚರಿತ್ರೆ ಬೇರೆಯೆ ರೀತಿಯಲ್ಲಿ ಚಿತ್ರಿಸುತ್ತಿದೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಒಂದು ಚರ್ಚಾಗೋಷ್ಟಿಯಲ್ಲಿ ಅವರು ಮಂಡಿಸಿದ ಪತ್ರದ ನಕಲನ್ನೂ ನನಗೆ ಕೊಟ್ಟರು. ಅದೀಗ ಕಾಣುತ್ತಿಲ್ಲ. ಕೆ.ಜಿ.ಒಡೆಯರ್ ಸ್ವಾತಂತ್ರ ಹೋರಾಟಗಾರರು ಮತ್ತು ಪ್ರಧಮ ಮತ್ತು ದ್ವಿತೀಯ ಲೊಕ ಸಭೆಗಳಲ್ಲಿ (೧೯೫೨ ರಿಂದ ೧೯೬೨ ರ ತನಕ) ಭಾರಿತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಪರವಾಗಿ ಶಿವಮೊಗ್ಗದ ಸದಸ್ಯರಾಗಿದ್ದರು. ಅವರು ಅಷ್ಟೊಂದು ಕ್ರೂರಿಯಾಗಿದ್ದಲ್ಲಿ ಎರಡು ಬಾರಿ ಚುನಾಯಿತರಾಗುತ್ತಿರಲಿಲ್ಲ. ಧನ, ಅಂಗ ಮತ್ತು ಖಂಡಗಳ ಬಲ ಆಗಿನ್ನೂ ಇಷ್ಟು ಜೋರಾಗಿರಲಿಲ್ಲ. ಜನಬಲಕ್ಕೇ ಪ್ರಧಾನ್ಯತೆ ಇದ್ದ ಕಾಲಾ. ಮೂರನೇ ಬಾರಿ ಅವರು ಸ್ಪರ್ಧಿಸಲಿಲ್ಲ. ಪ್ರಾಯಶಃ ಅವರು ಜನನಾಡಿಯನ್ನು ಅರಿತುಕೊಂಡಿರಬೇಕು.
  ನಮ್ಮ ಉಡುಪಿ ಕುಂದಾಪುರ ತಾಲೂಕುಗಳಲ್ಲಿ ಕಲ್ಮಾಡಿ, ಕಕ್ಕುಂಜೆ ಮುಂತಾದ ಕುಟುಂಬಗಳಿದ್ದುವು. ಇವುಗಳ ಮೇಲೆಲ್ಲಾ ಒಕ್ಕಲ ಮಸೂದೆಯ ಪ್ರಭಾವವನ್ನು ನೀವು ಮನಗಂಡಿದ್ದೀರಿ.
  ಇದೆಲ್ಲಾ ಸುದ್ದಿ ನಿಮಗೆ ಬೇಕೊ ಬೇಡವೋ! ಶೀರ್ನಾಳಿ ಹರಿಹರಪುರದ ಜೊಯಿಸರ ತಂಗಿಯ ಮನೆ. ಅದೀಗ ವಾರಾಹಿ ಅಣೆಕಟ್ಟಿನಲ್ಲಿ ಮುಳುಗಿದೆ. ಮನೆಯ ಮೇಲೆ ಹೊದಿಸಿದ ತಾಮ್ರದ ತಗಡಿನಿಂದ ಕೆಲವು ಲಕ್ಸ ರುಪಾಯಿಗಳು ಸಿಕ್ಕಿವೆಯಂತೆ. ಪರಿಹಾರ ದ್ರವ್ಯ ಕೂಡಾ ತುಂಬಾ ಸಿಕ್ಕಿದಂತೆ ವಾರ್ತೆ. ನಾನದನ್ನು ಮುಳುಗಡಯಾಗುವುದಕ್ಕೆ ಕೆಲವು ತಿಂಗಳುಗಳ ಮುಂಚೆ ನೋಡಿದ್ದೆ. ಸುಮಾರು ಒಂದು ಎಕ್ರೆ ಜಾಗದಲ್ಲಿ ಎಂಬತ್ತು ಕೊಠಡಿಗಳ ಮನೆ. ಚಿನ್ನಕ್ಕೆ ಕತ್ತಲೆ ಕೋಣೆ. ಹಾಲು ಮಜ್ಜಿಗೆ ಬೆಣ್ಣೆ, ತುಪ್ಪಕ್ಕೊಂದು, ತಿಂಡಿಗೊಂದು, ಗಂಜಿಗೊಂದು, ದಿನದ ಊಟಕ್ಕೊಂದು, ಶ್ರಾಧ್ಹ ಮಹಾಲಯಕ್ಕೊಂದು, ಶ್ರೀರಾಮನವಮಿ ನವರಾತ್ರಿಗೊಂದು, ಮದುವೆ ಮುಂಜಿ ಸಮಾರಂಭಗಳಿಗೊಂದು, ಹೀಗೆ ಹತ್ತಕ್ಕಿಂತಲು ಹೆಚ್ಚಿಗೆ ಅಡಿಗೆ ಮನೆಗಳೇ.
  ಫನಿಯಮ್ಮ ಸಿನೇಮಾದ ಪ್ರಾರಂಭದಲ್ಲಿ ಆ ಮನೆ ತೋರಿಸುತ್ತಾರೆ. ನಾನು ಫಣಿಯಮ್ಮ ಕಾದಂಬರಿ ಓದಿದ್ದೇನೆ. ಸಿನೇಮಾ ದೂರದರ್ಶನದಲ್ಲಿ ನೋಡಿದ್ದೇನೆ.

  M.K. Indira's novella 'Phaniyamma' is a true story. It is the story of a relative of the author. 'Phaniyamma' was awarded the State Sahitya Akademi prize in 1976-77. In 1982 it was made into a movie by Mrs. Prema Karanth starring L. V. Sharada Rao in the title role, and winning the National Award for Best Kannada Film as well as the Fipresci Award, and was shown at the Mannheim International Film Festival. (Source: http://www.nfdcindia.com/mipcom2.html) The book was published by Kali for Women in 1990 with Tejaswini Niranjana as the translator. I was surprised to find the book mentioned in the list of books dealing with 'Feminism in India'.

  ನಾನು ಮೆಗರವಳ್ಳಿ ಮನೆ ಕೂಡಾ ನೋಡಿದ್ದೇನೆ. ಅದ್ಯಾಕೋ ಕಾಸರವಳ್ಳಿ ಒಂದು ಬಿಟ್ಟಿದ್ದೇನೆ. ಅದರ ಸುತ್ತು ಮುತ್ತಲಿನ ತೀರ್ಥಮುತ್ತೂರು, ಬಂಡಿಗಡಿ, ಭೀಮನಕಟ್ಟೆ, ಕುಂದಾದ್ರಿ, ಕಮ್ಮರಡಿ, ಮುಳ್ಬಾಗಿಲು, ಇತ್ಯಾದಿ ಊರುಗಳನ್ನೆಲ್ಲಾ ಸುತ್ತಾಡಿದ್ದೇನೆ.

  ಮಲೆನಾಡ ಸಿರಿಯನ್ನು ಮುದ್ದಣ ವಿವರಿಸಿದ್ದಾನೆ. ಮಲೆನಾಡ ಹೆಣ್ಣ ಮೈಬಣ್ಣಕ್ಕೆ ಮನಸೋತವ ನಾನು. ನನ್ನ ಮಾವನ ಮನೆಯ ವಿವರ ಈ ಹಿಂದಿನ ತಪಾಲಿನಲ್ಲಿ ತಿಳಿಸಿದ್ದೇನೆ. ಅಲ್ಲಿಯ ಊಟೋಪಚಾರಗಳ ಸವಿಯನ್ನು ೪೨ ವರ್ಷಗಳಿಂದ ಮನಸಾರೆ ಅನುಭವಿಸಿದ್ದೇನೆ. ಹೈದರಾಬಾದಿನ National Institute of Nutrition ನ ಡಾ. ರಮೇಶ್ ಭಟ್ಟರ (ಅವರಿಗೆ ನಿಮ್ಮ ಪರಿಚಯ ಇದೆ. ನಿಮಗೂ ಅವರ ಪರಿಚಯ ಇರಬಹುದು.) ಅಭಿಪ್ರಾಯ ಪ್ರಕಾರ ಮಲೆನಾಡಿನ ಆತಿಧ್ಯ ಬಹಳ ವಿಶಿಷ್ಟವಾದದ್ದು.

  ಕೂಡು ಕುಟುಂಬಗಳ ಅವಸಾನ, ಕೆಲಸಗಾರರ ಕೊರತೆ, ವೈಯುಕ್ತಿಕತೆ, ಇತ್ಯಾದಿ ಸಾಮಾಜಿಕ ಆರ್ಥಿಕ ಬದಲಾವಣೆಗಳಿಂದಾಗಿ ಅಲ್ಲಿ ಕೂಡಾ ವಾತಾವರಣ ತುಂಬಾ ಬದಲಾಗಿದೆ. ನೀವು ಕೂಡಾ ಗಮನಿಸಿದ್ದೀರಿ.

  ನಿಮ್ಮ ಕೊಂಡಿಯಲ್ಲಿ ಕೆಲವು ಛಾಯಾಚಿತ್ರಗಳನ್ನು ಇರಿಸಿದ್ದೀರಿ. ನದಿ ಮೆಟ್ಟಲುಗಳನ್ನು ಕೆಲವು ಶತಮಾನಗಳ ಹಿಂದೆ ಕಟ್ಟಿಸಿರುತ್ತಾರೆ. ಅವುಗಳು ಇಂದಿಗೂ ಹಾಗೆ ಇವೆ. ತೀರ್ಥಮುತ್ತೂರು, ತೀರ್ಥಹಳ್ಳೀ, ಶೃಂಗೇರಿ, ಚಿಬ್ಬಾಲಗುಡ್ಡೆ, ಮಹಿಶಿ/ಅಶ್ವತ್ಥಪುರ, ಕೂಡಲಿ, ಕುರ್ನೂಲ್ ಇತ್ಯಾದಿ ಊರುಗಳಲ್ಲಿ ಇಂದಿಗು ಉಳಿದಿವೆ. ಇಂದು development ಆಗಿದೆ. ಇಂದು ಕಟ್ಟಿದ್ದು ಎಂದಾದರೂ ಒಡೆಯಬಹುದು. ಭದ್ರಾವತಿ ಸೇತುವೆಗಳ ಬಗ್ಗೆ ನಾನು ಈ ಹಿಂದೆ ನಿಮಗೆ ತಿಳಿಸಿದ್ದೇನೆ.
  KC Kalukura
  Advocate

  ReplyDelete
 19. ಅಶೋಕವರ್ಧನ24 November, 2010 06:26

  ಪ್ರಿಯ ಕಲ್ಕೂರರೇ
  ಮನುಷ್ಯಕೃತ ಪ್ರವಾಹದಲ್ಲಿ ನಲುಗಿದ ಕರ್ನೂಲಿನ ಜೀರ್ಣೋದ್ಧಾರ, ಮುಖ್ಯವಾಗಿ ನಿಮ್ಮ ಮನೆ ಮತ್ತು ಗ್ರಂಥಭಂಡಾರದ ಸ್ಥಿತಿ ಎಲ್ಲ ಈಗಿನ ಸ್ವಾರ್ಥ ರಾಜಕಾರಣದಲ್ಲಿ ಎಲ್ಲಿ ಕುಂಟುತ್ತುಂಟೋ ಎಂದು ನಿಮ್ಮ ಪತ್ರ ಬಂದಾಗೆಲ್ಲಾ ನಮ್ಮನ್ನು ಕಾಡುತ್ತಿರುತ್ತದೆ. ಏನೂ ಮಾಡಲಾರದ ನಾವು ಕೇವಲ ಬಾಯುಪಚಾರಕ್ಕೆ ಕೇಳಿದಂತಾಗಿ ನಿಮಗೆಲ್ಲಿ ರಗಳೆಯಾಗುತ್ತದೋ ಎಂದೂ ಕಾಣುವುದರಿಂದ ಸುಮ್ಮನಾಗುತ್ತಲೂ ಇರುತ್ತೇವೆ. ನಿಮಗೆಲ್ಲ ನಮ್ಮ ಶುಭಾಶಯಗಳು.

  ಕಾಸರವಳ್ಳಿ ಮನೆಯಾಚಿನ ಹೊಳೆದಂಡೆ ಮೆಟ್ಟಿಲುಗಳನ್ನು ಯಾವುದೋ ಸಿನಿಮಾದವರು ಜೀರ್ಣೋದ್ಧಾರ ಮಾಡಿದ್ದಾರಂತೆ (ಮೂಲ ರಚನೆ ಶಿಥಿಲವಾಗಿತ್ತಂತೆ).
  ಅಶೋಕವರ್ಧನ

  ನಿಮಗೆಲ್ಲಾ ನಮ್ಮ ಶುಭ ಹಾರೈಕೆಗಳು
  ಇಂತು ವಿಶ್ವಾಸಿ

  ReplyDelete
 20. kasaravalliyalli hinde chinnada halegalalli ramayana bareda pusthaka itthanthe. innu apoorva vasthugalu idda vishayagalu keli gotthu. ene adaru matthe kattisalagada vishesha rachanegalulla vasthu. thunga nadige eduragiruva malige srigandhddu annuvudu nambalikkagadu.nimma lekhanadalli namma hesaru nodi vanigu kushiyaythu.

  ReplyDelete
 21. ಹಳೆ ಮನೆಯ ಜೊತೆ ಅದರ ಮಂದಿಯ ನೆನಪುಗಳು ಮನವನ್ನು ಕಲಕಿದವು. ಜವಳಿ ಕುಟುಂಬ,. ಪಾ ನಾ ಮಯ್ಯ .

  ReplyDelete
 22. ಹಳೆ ಮನೆಯ ಜೊತೆ ಅದರ ಮಂದಿಯ ನೆನಪುಗಳು ಮನವನ್ನು ಕಲಕಿದವು. ಜವಳಿ ಕುಟುಂಬ,. ಪಾ ನಾ ಮಯ್ಯ .

  ReplyDelete
 23. ಇಷ್ಟು ಹೊತ್ತು ನೀವು ತೋರಿದ ವಾಸ್ತು ವೈಭವದ, ಪೂರ್ವೇತಿಹಾಸದ, ಗುಂಡಾ ಜೋಯಿಸರ, ಆ ಲೋಕದಲ್ಲೇ ಮುಳುಗಿದ್ದೆ ಜೊತೆಗೆ ಡಾ.ರತ್ನಾಕರರ ವಿವರವಾದ ಒಕ್ಕಣೆಗೂ ಮಾರು ಹೋದೆ.
  ಥ್ಯಾಂಕ್ಯೂ ಅಶೋಕ.

  ReplyDelete