15 November 2010

ಇಲಾಖೆ ಊರಿಗೆಳೆದರೆ ಸನ್ಯಾಸಿ ಕಾಡಿಗೆಳೆದರು!

(ತೀರ್ಥಯಾತ್ರೆ ಭಾಗ ಮೂರು)

[ನಾನೊಂದು ಎಣಿಸಿದರೆ ಗಣಕವಿನ್ನೊಂದೇ ಫಿತೂರಿಸಿತು! ಕಳೆದ ಆದಿತ್ಯವಾರ ಸಂಜೆ ಇನ್ನೇನು ನೆನಪಿನ ಹಂಡೆಯ ಕೊನೆಯ ಎರಡು ಚೊಂಬು ಮೊಗೆದು "ತೀರ್ಥಳ್ಳಿ ಗೋವಿಂದಾನೆ ಗೋವಿಂದಾ ಗೋsssssವಿಂದಾ" ಎಂದು ಕಥೆ ಮುಗಿಸುವುದರಲ್ಲಿದ್ದಾಗ ಗಣಕಕ್ಕೆ ಕಣ್ಣು ಕತ್ತಲಿಟ್ಟಿತು. ಯುಕ್ತ ಚಿಕಿತ್ಸೆ ಮುಗಿಯುವಾಗ ಕುಟ್ಟಿಟ್ಟದಷ್ಟೂ ಖಾಲಿಯಾಗಿ ಮತ್ತೆ ನಾಂದಿಗೀತೆಗೆ ಬಂದು ನಿಂತಿದ್ದೆ!! ಸಂಕಲ್ಪ ಸಿದ್ಧಿಗೆ ಮತ್ತೆ ಒಂದು ವಾರ ತಪಸ್ಸು ಮಾಡಿದ್ದೇನೆ. ಮರುರೂಪಣೆಯಲ್ಲಿ ಹೊಸಸಿದ್ಧಿಗಳು ಒದಗಿವೆ. ಪ್ರಸಿದ್ಧಿಗೆ ನಿಮ್ಮ ಸಮ-ಸಿದ್ಧಿಯೊಡನೆ ಓದಿನ ಕೊನೆಯಲ್ಲಿ ಮಾತಿನ ತೊಡವು ಕೊಡ್ತೀರಲ್ಲಾ?]
ಶಿವಮೊಗ್ಗದ ಒತ್ತಿನಲ್ಲಿ ತುಂಗೆಯಿದ್ದರೆ ಒಂದು ಪರ್ವತ ಶ್ರೇಣಿಯಾಚೆ ಭದ್ರೆ ಕಾದಿದ್ದಳು ಎಂದೆನಲ್ಲಾ. ಇಲ್ಲಿ ಗಾಜನೂರು ಕಟ್ಟೆಯಾದರೆ ಅಲ್ಲಿ ಶಂಕರಘಟ್ಟದ ಕಟ್ಟೆ (ಬಿಯಾರ್ ಪ್ರಾಜೆಕ್ಟ್). ಅಲ್ಲಿ ಆಚೀಚೆ ಎನ್ನುವಂತೆ ಕುವೆಂಪು ವಿಶ್ವವಿದ್ಯಾನಿಲಯ ಮತ್ತು ಕಟ್ಟೆಯ ಹಿನ್ನೀರಿನಲ್ಲಿ ರಿವರ್ ಟೆರ್ನ್ ಎಂಬ ವಿಹಾರಧಾಮ ನಮ್ಮ ಕುತೂಹಲಕ್ಕೆ ಕಟ್ಟೆ ಕಟ್ಟಿದ್ದವು. ಸಕ್ರೆಬೈಲಿನಿಂದ ಬಂದವರು ಡಾ| ರತ್ನಾಕರರನ್ನು ಬೀಳ್ಕೊಂಡು ಹೊರಟೇಬಿಟ್ಟೆವು. ದಾರಿ ವಿಸ್ತಾರವೇನೋ ಇತ್ತು, ನಡುವಣ ಹಂತದಲ್ಲೆಲ್ಲೋ ನೇರ ಮತ್ತು ನುಣ್ಣಗೂ ಇತ್ತು. ಆದರೆ ನೆನಪಲ್ಲುಳಿಯುವುದು, ಸಾಕಷ್ಟು ಆಟವಾಡಿಸಿದ ಭಾರೀ ಹೊಂಡಗಳು, ಜಲ್ಲಿ ಕಿತ್ತು ದೂಳು ಹಾರಿಸುವ ಬಹ್ವಂಶ ದಾರಿಯೆಂಬ ಬಯಲುಗಳು (ದಾರಿ ಎನ್ನಲೇನೂ ಉಳಿದಿರಲಿಲ್ಲ)! ರಸ್ತೆ ಅಭಿವೃದ್ಧಿಯ ರೋಚಕ ಕಥೆಗಳನ್ನು ನನಗಿಂತ ಚಂದಕ್ಕೆ ಇಂದು ಊರೂರಿನಲ್ಲಿ ಮಕ್ಕಳೂ ಹೇಳತೊಡಗಿರುವುದರಿಂದ ನಾವು ಸೀದಾ ಶಂಕರ ಘಟ್ಟವೆಂಬ ಹಳ್ಳಿ ಪ್ರವೇಶಿಸುವ ಮೊದಲು, ಮಾರ್ಗದ ಬಲಕ್ಕೆ ಎದ್ದು ತೋರುವ ಕುವೆಂಪು ವಿವಿನಿಲಯದ ಮಹಾದ್ವಾರಕ್ಕೊಂದು ನಮಸ್ಕಾರ ಹಾಕಿ ಮುಂದುವರಿಯೋಣ.

ನಗರಗಳಿಗೆ ಸ್ವಾಗತ ಬಯಸುವ ಅಥವಾ ವಿದಾಯ ಹೇಳುವ ಜೇಸೀ, ಲಯನ್ನು, ರೋಟರಿ ಗೋರಿಕಲ್ಲುಗಳಿಗೆ ಹೆಚ್ಚಿನ ಸ್ಪರ್ಧೆ ಕೊಡುವಂತೆ ಪುರಸಭೆಗಳೇ ಸ್ವಾಗತ ಕಮಾನು ನಿಲ್ಲಿಸುವುದು (ಸ್ವಂತ ಮನೆಗೆ ಅವಶ್ಯವಾದ ಗೇಟು ನಿಲ್ಲಿಸಲೂ ಜುಗ್ಗರಾದವರು ಇಂಥಲ್ಲಿ ಸಾರ್ವಜನಿಕ ಹಣವನ್ನು ಉಡೀಸ್ ಮಾಡುವ ಚಂದ ನೋಡಬೇಕು!) ಇಂದು ಹಳತಾಯ್ತು. ಕಟೀಲು ಪೊಳಲಿಯಂಥಾ ದೇವಳದ ಆಸುಪಾಸಿನಲ್ಲಿ ಸಾರ್ವಜನಿಕ ಸೌಲಭ್ಯಗಳನ್ನು ಹೆಚ್ಚಿಸಲು ಒದಗದ ಉದಾರ ಅನುದಾನಗಳು, ದಾನಗಳು ಕೆಲವು ಕಿಮೀ ಆಚೆ ಈಚೆ ಭಾರೀ ಮಹಾದ್ವಾರಗಳನ್ನು (ಶುನಕಾಭಿಷೇಕ ಕಟ್ಟೆ) ಕಟ್ಟಿಸಲು ಹರಿದು ಬರುವುದೂ ಕಾಣುತ್ತಲೇ ಇದ್ದೇವೆ. ಆದರೆ ಇವೆಲ್ಲವನ್ನು ಮೀರಿದ, ವಿಚಾರಪರರೇ ಇರಬೇಕಾದ ವಿವಿನಿಲಯಗಳೂ ಇಂದು ಸಂಪನ್ಮೂಲಗಳನ್ನು ವ್ಯರ್ಥ ಬಳಸಿ (ಸಣ್ಣಪುಟ್ಟದಲ್ಲ, ಮೊತ್ತ ಏಳಂಕಿ ದಾಟಿದರೆ ಆಶ್ಚರ್ಯಪಡಬೇಡಿ) ಕೇವಲ ತೋರಣ-ಸಿಂಗಾರಕ್ಕೆ ಮನಸ್ಸು ಮಾಡುತ್ತಿರುವುದು ಶೋಚನೀಯ. ಮಲೆನಾಡಿನ ಸಸ್ಯ ವೈಭವದ ಪ್ರತಿನಿಧಿಯಾಗಿ ಶೋಭಿಸಬೇಕಾಗಿದ್ದ ವಠಾರಕ್ಕೆ ಬೋಳು ಬಯಲಿನಲ್ಲಿಟ್ಟಂತೆ ಕಾಂಕ್ರೀಟ್ ದಿಡ್ಡೀ ಬಾಗಿಲು, ಮುಂದುವರಿದಂತೆ ದೈನಂದಿನ ಆರೈಕೆ ತಪ್ಪಿದರೆ ನಲುಗುವ ‘ಹಸಿರು’ (ಲಾನೂ ಗಾರ್ಡನ್ನೂ) ನಮ್ಮನ್ನು "ಬಾಗಿಲಲಿ ಕೈಮುಗಿದು ದೂರಸರಿ ಯಾತ್ರಿಕನೇ" ಎಂದಂತಾಯ್ತು!

ಈಚೆಗೆ ಮಂಗಳೂರು ವಿವಿನಿಲಯ ಹೀಗೇ ತನ್ನೊಂದು ತೀರಾ ಕಡಿಮೆ ಬಳಕೆಯ ಒಳ ದಾರಿಯನ್ನು (ದಾರಿಗಾಗಿ ದಾರಿ - art for art sake) ‘ಅಭಿವೃದ್ಧಿಗೊಳಪಡಿಸಿದ್ದು’ ಇಲ್ಲಿ ಹೇಳದಿದ್ದರೆ ಅನ್ಯಾಯವಾದೀತು. ಪೂರ್ವಸೂರಿಗಳು ಇದನ್ನು ಜೋಡುದಾರಿ ಮಾಡಿದಲ್ಲಿಗೇ ಬೆಳೆಯುವ ಸಿರಿ ಕಾಣಿಸಿದ್ದರು. ಈಚೆಗೆ ಅಲ್ಲಿ ಕಾಂಕ್ರೀಟೀಕರಣ, ಮೋರೀಕರಣ, ಇಂಟರ್ ಲಾಕಿಂಗ್ ಬ್ಲಾಕ್ಸ್ ಸಹಿತ ಪುಟ್ಟಪಥೀಕರಣ, ಭಾವೀ ವಿಶ್ವೇಶ್ವರಯ್ಯನವರುಗಳಿಗೆ ಹೆಚ್ಚಿನ ಅನುಕೂಲವಾಗುವಂತೆ ಹೆಜ್ಜೆಹೆಜ್ಜೆಗೆ ದ್ವಿಮುಖೀ ಬೀದಿ ದೀಪ ಎಲ್ಲ ಹಚ್ಚಿ, ಕಳಶವಿಟ್ಟಂತೆ ಪರಮಾದ್ಭುತ ಮಹಾದ್ವಾರ ನಿಲ್ಲಿಸಿದೆ. ಮೂತ್ರ ದೊಡ್ಡಿಯ ಗೋಡೆಗಳಿಗಷ್ಟೇ ಸೀಮಿತವಾಗಿದ್ದ ನಗರ ಜನಪದದ ಬೆಳವಣಿಗೆಗೆ (dikku loves akku!) ಇಂಬಾಗುವ, ಯಾವುದೇ ಪ್ರಚಾರ ಸಾಹಿತ್ಯ (ಜಾಲಿ ಮಲೋಶನ) ಹಚ್ಚಲು ಆಸರೆಯಾಗುವ, ಮುಷ್ಕರ ಕಾಲದಲ್ಲಿ ಮುರಿದಿಕ್ಕಲು ಧಾರಾಳ ಒದಗುವ, ಏನಲ್ಲದಿದ್ದರೂ ವಾಘಾ ಗಡಿಯಂತೆ ಪ್ರವಾಸೀ ವೀಕ್ಷಣೆಯ ಪಟ್ಟಿಯಲ್ಲಿ ಸೇರಬಹುದಾದ ಈ ರಚನೆಗಳಿಗೆ ನನ್ನದು ದೂರದ ನಮಸ್ಕಾರ! [ಪ್ರೊ| ಸುರೇಂದ್ರರಾಯರು ಹೇಳಿದ ಒಂದು ಕಥೆ ಇಲ್ಲಿ ಅಪ್ರಸ್ತುತವಾಗದು: ಕೆಲವು ವರ್ಷಗಳ ಹಿಂದೆಯೇ ಮಂವಿವಿ ನಿಲಯ ಸುಮಾರು ಇಪ್ಪತ್ತು ಕಿಮೀ ದೂರದ ಮೇಲ್ಕಾರಿನಲ್ಲೊಂದು ‘ಮಂವಿವಿನಿಲಯಕ್ಕೆ ಸ್ವಾಗತ’ ಕಮಾನು ನಿಲ್ಲಿಸಿದರು. ಆ ಸುಮಾರಿಗೆ ಮೈಸೂರು ಕಡೆಯಿಂದ ರಾತ್ರಿಯ ಬಸ್ಸೇರಿ ಮೊದಲ ಬಾರಿಗೆ ಈ ಕರಾವಳಿ ವಿವಿನಿಲಯಕ್ಕೆ ಬರುತ್ತಿದ್ದ ವಿದ್ವಾಂಸರೊಬ್ಬರು ಈ ‘Come On’ ನೋಡಿದವರೇ "ಬಂತೈ ಬಂತೈ" ಎಂದು ಹಾಡುತ್ತಾ ಇಳಿದೇ ಬಿಟ್ಟರಂತೆ! ಮತ್ತೆ ಜಿಬರುಗಣ್ಣು ಉಜ್ಜಿಕೊಂಡು, ಸುಟ್ಟಕೇಸು ಹೊತ್ತುಕೊಂಡು ಇಪ್ಪತ್ತು ಕಿಮೀ ನಡೆದರೇಂತ ನಾನು ಕೇಳಲಿಲ್ಲ ಬಿಡಿ.]

ಶಂಕರಘಟ್ಟ ಹಳ್ಳಿಯ ಹಿನ್ನೆಲೆಯಲ್ಲಿ ಕಾಣಿಸುವ ಘಟ್ಟ ಸಾಲಿನ ಎರಡು ಹೆಗಲನ್ನು ಜೋಡಿಸಿದಂತೆ ಭದ್ರಾ ಅಣೆಕಟ್ಟು ಶೋಭಿಸಿತು. ಕೆಳಹರಿವಿನ ಭದ್ರೆಯನ್ನು ಸಾಮಾನ್ಯ ಸೇತುವೆಯಲ್ಲಿ ದಾಟಿ, ಲಕ್ಕವಳ್ಳಿ ಹಳ್ಳಿಗಾಗಿ ಮುಂದುವರಿಯಲಿದ್ದ ದಾರಿಯಿಂದ ಬಲಕ್ಕೆ ಕವಲೊಡೆದೆವು. ಕಟ್ಟೆಯಿಂದ ಬರುತ್ತಿದ್ದ ಕಾಲುವೆಯೊಂದನ್ನು ಅಡ್ಡ ಹಾಯ್ದು, ಸಣ್ಣ ಗುಡ್ಡದ ದಾರಿಯಲ್ಲಾಗಿ ರಿವರ್ ಟೆರ್ನ್ ವಿಹಾರಧಾಮದ ಸ್ವಾಗತ ಕಛೇರಿ ತಲಪಿದೆವು. ಅಣೆಕಟ್ಟೆಯ ಹಿನ್ನೀರಿನ ಭವ್ಯ ದೃಶ್ಯಾವಳಿ ಸೂರೆಗೊಳ್ಳುವಂತೆ ಗುಡ್ಡೆಯ ಮೈಯಲ್ಲಿ ಚದುರಿದಂತೆ ಸುಮಾರು ಇಪತ್ತೈದು ಬಿಡಾರಗಳನ್ನು ಕಟ್ಟಿಹಾಕಿದ್ದರು. ನಿಯಂತ್ರಿತ ಕುರುಚಲು ಕಾಡು, ಓಡಾಡಲು ಮೋಟು ಬೇಲಿಯ ನಡುವೆ ಒಂದೋ ಮೆಟ್ಟಿಲ ಸಾಲು ಇಲ್ಲವೇ ಇಂಟರ್ಲಾಕ್ ಜಾಡು. ಒಂದು ಸಣ್ಣ ಹಿನ್ನೀರ ಸೆರಗಿನ ಮೇಲೆ ಮರದ ಕಂಬ, ಹಲಿಗೆ ಧಾರಾಳ ಬಳಸಿ ಪುರಾತನದಂತೆ ಮಾಡಿದ್ದ ಕಾಲು ಸೇತುವೆ added attraction! ಮನೆಗಳಾದರೋ ಅಸಮ ನೆಲದ ಮೇಲೆ ನಾಲ್ನಾಲ್ಕು ಕಾಂಕ್ರೀಟು ಕಂಬಗಳ ಮೇಲೆ ಪುಟ್ಟದಾಗಿ ಕುಳಿತ ಹಾಲೋ ಬ್ಲಾಕ್ ರಚನೆಗಳಾದರೂ a/c attached. ಮುಖ್ಯ ಗುಡ್ಡೆಗೆ ಕೇಂದ್ರದಲ್ಲಿ ಒದಗುವಂತೆ ಊಟ ಹಾಗೂ ಮನರಂಜನಾ ಚಪ್ಪರ, ನೀರ ದಂಡೆಯಲ್ಲಿ ಅಸಂಖ್ಯ ಜಲಕ್ರೀಡಾ ವ್ಯವಸ್ಥೆಗಳು, ದೋಣಿ ಸವಾರಿಯಂತೂ ಉಂಟೇ ಉಂಟು. ನಾವು ನೋಡ ನೋಡುತ್ತಿದ್ದಂತೆ ನೀರಹರಹಿನಲ್ಲಿ ತಾರ ಏಕನಾದ ಹೊರಡಿಸುತ್ತಾ ಯಂತ್ರಚಾಲಿತ ದೋಣಿಯೊಂದು ಬಂದು ಹತ್ತೆಂಟು ಬೊಬ್ಬೆ, ಕಲರವಗಳನ್ನು ಇಳಿಸಿದ್ದೂ ಆಯ್ತು. ಒಟ್ಟಾರೆ ವ್ಯವಸ್ಥೆ ನಗರದ ಒತ್ತಡಗಳಿಂದ ಬಳಲಿದ ಸಾಮಾನ್ಯರನ್ನು ಮರುಳುಗಟ್ಟಿಸುವುದು ನಿಜ. ಆದರೆ ದಿನವೊಂದಕ್ಕೆ ತಲೆಗೆ (ನೆನಪಿರಲಿ, ಒಂದು ಬಿಡಾರಕ್ಕಲ್ಲ, ತಲೆಯೊಂದಕ್ಕೆ) ಮೂರು ಸಾವಿರಕ್ಕೆ ಕಡಿಮೆಯಿಲ್ಲದ ಬಾಡಿಗೆಯ ದರ ಕೇಳಿ ನಮಗೆ ಬಡತನ ಬಂತು. ಬಿಡುಬೀಸು ಜಲಕ್ರೀಡೆಯನ್ನೇ ಹಿಡಿಯೋಣವೆಂದರೂ ಅನ್ಯ ಆಕರ್ಷಣೆಗಳೇನೂ ಇಲ್ಲದ ಕರಿನೀರ ಮೇಲೆ ನಾನೂರು ಐನೂರು ರೂಪಾಯಿ ಚಲ್ಲಬೇಕಿತ್ತು. ಅಂಡಮಾನ್, ಲಕ್ಷದ್ವೀಪಗಳ ಸ್ಫಟಿಕ ನಿರ್ಮಲ ನೀರು, ಲಗೂನ್‌ಗಳ ಜೀವವೈವಿಧ್ಯವೆಲ್ಲ ‘ಉಚಿತ’ವಾಗಿ ಅನುಭವಿಸಿದ ನೆನಪಿಗಿದು (ಅಲ್ಲಿ ಪ್ರವಾಸಕ್ಕೆ ಮಾತ್ರ ಬಾಡಿಗೆ, ಹೆಚ್ಚಿನ ಜಲಕ್ರೀಡೆಗಳೆಲ್ಲ ಉಚಿತ, ದೋಣಿಸವಾರಿ ಅನಿವಾರ್ಯ!) ನಾವು ಇವನ್ನೂ ತಿರಸ್ಕರಿಸಿದೆವು. ಗಂಟೆ ಒಂದೂವರೆಯಾಗಿದ್ದುದರಿಂದ ಬಂದ ತಪ್ಪಿಗೆ ಊಟವಾದರೂ ಕೈಗೆ ಹತ್ತೀತೇ ಎಂದು ವಿಚಾರಿಸಿದೆವು. ಇಲ್ಲ, ಕನಿಷ್ಠ ಒಂದೂವರೆ ಗಂಟೆ ಕಾದ ಮೇಲೂ ಊಟದ ತಟ್ಟೆಯೊಂದಕ್ಕೆ ಇನ್ನೂರಾ ನಲವತ್ತೆಂಟು ರೂಪಾಯಿ ತೆರಬೇಕೆಂದು ತಿಳಿದಾಗ ಕೃಷ್ಣ ಮಾಯೆಯಲ್ಲಿ ದೂರ್ವಾಸರ ಬಳಗಕ್ಕಾದಂತೆ ನಮ್ಮ ಹಸಿವು ಹಿಂಗಿಹೋಯ್ತು. ಶಂಕರಘಟ್ಟದ ಖಾನಾವಳಿಯೋ ವಿಶ್ವವಿದ್ಯಾನಿಲಯದ ಕ್ಯಾಂಟೀನೋ ಹುಡುಕಿಕೊಂಡು ಹೊರಟೇ ಬಿಟ್ಟೆವು.

ಶಂಕರಘಟ್ಟದಲ್ಲಿ ಯೋಗ್ಯ ಖಾನಾವಳಿಗಳೇನೂ ಕಾಣಿಸಲಿಲ್ಲ. ವಿವಿನಿಲಯದ ಮಹಾದ್ವಾರಪಾಲಕರು "ಹಬ್ಬಾ ಹಲ್ವಾ ಸಾರ್, ಕ್ಯಾಂಪಸ್ನಾಗ ಯಾರಿರ್ತಾರೇ? ಡಿಬಾರ್ಮೆಂಟೂ ಕ್ಯಾಂಟೀನೂ ಎಲ್ಲ ಕ್ಲೋಸೇ" ಎಂದು ಬಿಟ್ಟರು. ನಿಯತ ಕೆಲಸದ ಅವಧಿ ಮತ್ತೆ ಕಾನ್ವಕೇಶನ್ ಕಾಲದಲ್ಲಿ ಒಂದಷ್ಟು ಪದವಿ ಇಷ್ಟೆಯಾ ವಿವಿನಿಲಯ? ಶಿವಮೊಗ್ಗದ ಗಲ್ಲಿಗಲ್ಲಿಗಳು ಹಬ್ಬದ ನೆಪದಲ್ಲಿ ಅದದರ ಮಟ್ಟದಲ್ಲಿ ಸಂಭ್ರಮಿಸುತ್ತಿರುವಾಗ ವಿಶ್ವವಿದ್ಯಾಲಯಕ್ಕೂ ಒಂದು ಸಾಂಸ್ಕೃತಿಕ ಚಹರೆ ಇದೆ ಎನ್ನಲು ಒಂದೂ ಜನ ಉಳಿದಿಲ್ಲವೇ ಎಂದು ನನಗ್ಯಾಕೋ ತೀವ್ರ ನಿರಾಸೆ ಮೂಡಿತು. ಹಸಿಹೊಟ್ಟೆಯಲ್ಲಿ ಶಿವಮೊಗ್ಗದತ್ತ ಕಾರೋಡಿಸುತ್ತಿದ್ದಂತೆ ವಾರದ ಆರು ದಿನಗಳನ್ನು ನಿಯತ ಕೆಲಸಕ್ಕೆ ಪೂರ್ಣ ಶ್ರದ್ಧೆಯೊಡನೆ ಬಳಸಿಯೂ ಸಂಜೆ-ರಾತ್ರಿಯನ್ನು, ಏಳನೇ ದಿನವನ್ನು, ಹಬ್ಬಹರಿದಿನಗಳ ಸಾಮಾನ್ಯ ರಜಾದಿನಗಳನ್ನು ಹೆಚ್ಚಿನ ಸಾರ್ವಜನಿಕ ಕೆಲಸಕ್ಕೆ ಒದಗಿದ ಅವಕಾಶವೆಂಬಂತೆಯೂ ಕಂಡು ಎನ್ಸಿಸಿ, ಸಹಕಾರ ಸಂಘ, ವಿಜ್ಞಾನ ಕಮ್ಮಟ, ಸಂಗೀತ ಶಿಬಿರವೆಂದೆಲ್ಲಾ ಓಡಾಡುತ್ತಿದ್ದ ನನ್ನ ತಂದೆ ನೆನಪಾದರು. ಅವರ ಓರಗೆಯವರಾದ ಕುಶಿ ಹರಿದಾಸ ಭಟ್ಟರಂತೂ ಕೇವಲ ಸ್ನಾತಕ ಪದವಿ ಕಾಲೇಜಾದ ಎಂಜಿಎಂನ್ನು ಕೇಂದ್ರವಾಗಿಟ್ಟುಕೊಂಡು ಇಡಿಯ ಉಡುಪಿಗೇ ಕೊಟ್ಟ ಸಾಂಸ್ಕೃತಿಕ ಚಾಲನ ಇಂದೂ ನಿಲ್ಲದೇ ನಡೆಯುತ್ತಿರುವುದನ್ನು ನೆನೆದಾಗಲಂತೂ ಮನಸ್ಸು ತುಂಬಿಬಂತು.

ಶಿವಮೊಗ್ಗದಲ್ಲಿ ಊಟಿಸಿ, ಸಮೀಪದ ಸಿಂಹಧಾಮವೆಂದೇ ಹೆಸರಾಂತ ತಾವರೆಕೊಪ್ಪಕ್ಕೆ ಹೋದೆವು. ಸುಮಾರು ಹತ್ತು ವರ್ಷಗಳ ಹಿಂದೆಯೇ ನಾನು ಓಮ್ನಿ ಕಾರು ಕೊಂಡ ಹೊಸದರಲ್ಲಿ ಉದ್ದಕ್ಕೆ ಸವಾರಿ ಹೋಗುವ ಬಯಕೆಗೆ ನನ್ನ ಪ್ರಕಟಣೆಗಳ ವಿತರಣೆ ಹೆಚ್ಚಿಸುವ ನೆಪ ಹಚ್ಚಿಕೊಂಡೆ. ಅಂಗಡಿಯನ್ನು ದೇವಕಿಗೆ ಬಿಟ್ಟು ನಾನೂ ಅಭಯನೂ ಶಿವಮೊಗ್ಗಕ್ಕೆ ಮೊದಲಬಾರಿಗೆ ಹೋಗಿದ್ದೆವು. ತಮಾಷೆ ಎಂದರೆ ನಮ್ಮ ಶಿವಮೊಗ್ಗ ಪಟ್ಟಿಯ ಅಗ್ರ ಸ್ಥಾನದಲ್ಲಿದ್ದ ಹೆಸರು ಯಾವುದೇ ಪುಸ್ತಕ ಮಳಿಗೆಯದ್ದಲ್ಲ, ತಾವರೆಕೊಪ್ಪ. ವನ್ಯಜೀವ ಸಂಕುಲ ಮುಂಜಾನೆ ಮತ್ತು ಸಂಜೆ ಹೆಚ್ಚು ಚಟುವಟಿಕೆ ತೋರುತ್ತವೆ ಎಂದು ನಾವು ಅಂದಾಜಿಸಿ ಬೆಳಿಗ್ಗೆ ಆರೂವರೆ ಏಳು ಗಂಟೆಯ ಸುಮಾರಿಗೆ ನಾವಲ್ಲಿದ್ದೆವು. ಆದರೆ ಗೇಟು ಸರಕಾರೀ ವ್ಯವಸ್ಥೆಯ ಅಧೀನದಲ್ಲಿದೆಯೆಂದು ಅಂದಾಜಿಸದಿದ್ದುದಕ್ಕೆ ನಮ್ಮನ್ನೇ ಶಪಿಸಿಕೊಂಡು ವಾಪಾಸಾದೆವು. ಅಭಯನಿಗೆ ರಾಷ್ಟ್ರಪ್ರಶಸ್ತಿ ಬಂದ ಹೊಸದರಲ್ಲಿ ಶಿವಮೊಗ್ಗ ರಾಜ್ಯದ ಎಲ್ಲ ಪ್ರಶಸ್ತಿ ವಿಜೇತರಿಗೆ ಒಂದು ಭರ್ಜರಿ ಸಮ್ಮಾನ ಏರ್ಪಡಿಸಿತ್ತು. ಆ ನೆಪದಲ್ಲಿ ದೇವಕಿ ರಶ್ಮಿಯರೂ ಅಲ್ಲಿಗೆ ಹೋಗಿದ್ದವರು ಇದೇ ಡಾ| ರತ್ನಾಕರರ ಉಮೇದು ಮತ್ತು ಸಹಕಾರದಲ್ಲಿ ತಾವರೆಕೊಪ್ಪ ನೋಡಿದ್ದರು. ಈಗ ನನ್ನೊಬ್ಬನದೇ ಪ್ರಥಮ ದರ್ಶನವರದಿಯನ್ನು ಇಲ್ಲಿ ವಿಸ್ತರಿಸಿ ಬೋರುವುದಿಲ್ಲ. ಬದಲು, ಈ ಪ್ರವಾಸ ಕಳೆದು ಸುಮಾರು ಎರಡು ವಾರಕ್ಕೆ ಬಂದ ದಸರಾ ರಜೆಯಲ್ಲಿ ನಾವೆಲ್ಲ ಮತ್ತೆ ಬೆಂಗಳೂರಿನಲ್ಲಿ ಸೇರಿದ್ದೆವು. ಆಗ ಅಲ್ಲಿನ ಸಿಂಹುಲಿ ಧಾಮ - ಬನ್ನೇರುಘಟ್ಟಕ್ಕೆ ಹೋಗಿದ್ದೆವು. ಈ ಎರಡು ಧಾಮಗಳ ಸಂಕ್ಷಿಪ್ತ ಪರಿಚಯದೊಡನೆ ಒಂದು ತೆರನ ಸಮೀಕ್ಷೆಯನ್ನಷ್ಟೇ ಮಾಡಲು ಪ್ರಯತ್ನಿಸುತ್ತೇನೆ.

ಈ ಸಫಾರೀ ಪಾರ್ಕ್ ಎನ್ನುವುದು ಜೂ ಅಥವಾ ಪ್ರಾಣಿಸಂಗ್ರಹಾಲಯದಿಂದ ಸ್ವಲ್ಪ ಮೇಲೆ ಆದರೆ ವನಧಾಮದಿಂದ ತುಂಬ ಕೆಳಗಿನ ಒಂದು ವ್ಯವಸ್ಥೆ. ವನಧಾಮ ಹಾಗೂ ಸಫಾರೀ ಪಾರ್ಕ್‌ಗಳಲ್ಲಿ ನಾವು ಭದ್ರ ವಾಹನಗಳಲ್ಲಿ ಕುಳಿತು ಹೆಚ್ಚು ಕಡಿಮೆ ಮುಕ್ತ ಅಥವಾ ವನ್ಯ ಸ್ಥಿತಿಯಲ್ಲಿರುವ ಪ್ರಾಣಿಗಳ ನಡುವೆ ಓಡಾಡಿ ಅವುಗಳನ್ನು ವೀಕ್ಷಿಸುತ್ತೇವೆ. (ಜ಼ೂನಲ್ಲಾದರೋ ಅವು ಸ್ಪಷ್ಟ ಆವರಣಗಳ ಒಳಗಿರುತ್ತವೆ, ನಾವು ಮುಕ್ತರು) ಸಫಾರಿಯಲ್ಲಿ ಹೆಚ್ಚಿನ ಪ್ರಾಣಿಗಳಿಗೆ ಕಾಲಾಡಿಸಲು ವನಧಾಮದಂತೆ ಒಂದಷ್ಟು ಮುಕ್ತ ನೆಲವಿರುತ್ತದಾದರೂ ಜೀವವೈವಿಧ್ಯಗಳ ನೈಜ ಮಿಶ್ರಣ ಇರುವುದಿಲ್ಲ. ಎಲ್ಲಕ್ಕೂ ಮುಖ್ಯವಾಗಿ ಮಾಂಸಾಹಾರಿಗಳಿಗೆ ಬೇಟೆಯಾಡಿ ಸ್ವಂತ ಆಹಾರ ಸಂಪಾದಿಸುವ ಅವಕಾಶ ಇಲ್ಲವೇ ಇಲ್ಲ. ಸಹಜವಾಗಿ ಎಲ್ಲಾ ಕಡೆಗಳಲ್ಲಿ ಹೆಚ್ಚಿನ ಪ್ರಾಣಿಗಳು ಕಾಲಕಾಲಕ್ಕೆ ಇಲಾಖೆ ಆಹಾರ ಒದಗಿಸುವ ಕಟ್ಟಡಗಳ ಆಸುಪಾಸಿನಲ್ಲೇ ಠಳಾಯಿಸುತ್ತಿರುತ್ತವೆ. ತಾವರೆಕೊಪ್ಪದ ಜಾನುವಾರು ಸಂಖ್ಯೆಗೆ ಹೋಲಿಸಿದರೆ ಬನ್ನೇರುಘಟ್ಟದ್ದು ಅತಿ ಸಂದಣಿ. ಅದರಲ್ಲೂ ಕರಡಿಗಳು ಗುಡ್ಡೆಬಿದ್ದದ್ದು ನೋಡಿದಾಗ, ನಿನ್ನೆ ಮೊನ್ನೆಯಷ್ಟೇ ಪತ್ರಿಕೆಗಳಲ್ಲಿ ಕೊಲ್ಕತ್ತಾದಿಂದ ಇನ್ನೂ ‘ಇಪ್ಪತ್ತೆರಡು ಕರಡಿಗಳು ಬನ್ನೇರುಘಟ್ಟಕ್ಕೆ’ ಗ್ರಹಿಸಿದಾಗ ನಮ್ಮದು ‘ವಿಹಾರ’ವಾಗಿ ಉಳಿಯುವುದಿಲ್ಲ, ವಿಕೃತಕ್ಕೆ ಸಾಕ್ಷಿಯೇ ಸರಿ. ಬನ್ನೇರುಘಟ್ಟದಲ್ಲಿ ಹುಲಿಯೊಂದು ಯಾರೋ ಪ್ರವಾಸಿಗಳು ಉದಾರವಾಗಿ ಎಸೆದ ಪರ್ಲ್ಪೆಟ್ ಬಾಟಲಿಯೊಂದನ್ನು ಹರಿದು ನೆಕ್ಕಲು ಪ್ರಯಾಸ ಪಡುತ್ತಿತ್ತು. ತಾವರೆಕೊಪ್ಪದಲ್ಲಿ ಪಂಜರದೊಳಗಿದ್ದ ಚಿಂಪಾಂಜಿಗೆ "ಏನಾದರೂ ಕೊಡೀ ಸಾರ್, ಇಸ್ಕೊಳ್ತಾನೆ! ಇಲ್ದೇ ಹೋದ್ರೆ ನಾಲಕ್ಕ್ ಕಾಸ್ ಕೊಡೀ ಇಲ್ಲೇ ಕ್ಯಾಂಟೀನ್ನಿಂದ ಬಿಸ್ಕೆಟ್ ನಾ ತಂದ್ಕೊಡ್ತೀನಿ" ಎಂದ ಕಾವಲುಗಾರ. ಯಾವುದೇ ಚಿತ್ರ, ವಿಡಿಯೋಗ್ರಹಣಗಳಿಗೆ ಇಲಾಖೆ ಶುಲ್ಕ ವಿಧಿಸುವುದು ಇದ್ದದ್ದೇ. ಅದರಲ್ಲಿ ಉಳಿತಾಯ ಮಾಡಿದವರಿಗೆ "ಇನ್ನೇನ್ ಮಾಡ್ತೀರಾ ಪಾಪ. ಈ ಕಿಟ್ಕೀಗ್ಬನ್ನಿ ಚೆನ್ನಾಗಿ ಪಟ ತಗಳಿ, ಕೊನೆಗೆ ನಮ್ನೂ ಸ್ವಲ್ಪ ನೋಡ್ಕಳಿ" ಎನ್ನುವ ಸಹಕಾರ ವ್ಯಾನ್ ಸಿಬ್ಬಂದಿಗಳಿಂದ ಧಾರಾಳ ಬರುತ್ತದೆ. ಹಾಳು ಬಿದ್ದ ಕಟ್ಟಡಗಳು, ಹುಚ್ಚುಗಟ್ಟುವ ಜನಸಂದಣಿಯನ್ನು ಏನೇನೂ ನಿರ್ವಹಿಸಲಾರದ ಕಳಪೆ ರಚನೆಗಳು ಮತ್ತು ಸಿಬ್ಬಂದಿಗಳು ವನ್ಯದ ಕುರಿತ ನೈಜ ಕಾಳಜಿಗಳಿಗೆ ಬಲು ದೊಡ್ಡ ಅವಮಾನ. (ಎರಡು ಉದಾಹರಣೆಗಳು: ತಾವರೆಕೊಪ್ಪದಲ್ಲಿ ಮಕ್ಕಳಿಗಾಗಿ ಒಂದಷ್ಟು ಉಯ್ಯಾಲೆ ಕಟ್ಟಿದ್ದರಲ್ಲಿ ಹತ್ತೆಂಟು ಪಡ್ಡೆಗಳು ನೇತುಬಿದ್ದು ಎಬ್ಬಿಸಿದ ಗದ್ದಲಕ್ಕೆ ವನಪಾಲಕರು ಪೊಲಿಸ್ ಕೆಲಸ (ಲಾಠೀ ಚಾರ್ಜ್) ಮಾಡಬೇಕಾಯ್ತು. ಬನ್ನೇರುಘಟ್ಟದಲ್ಲಿ ನಮ್ಮ ವ್ಯಾನಿನೊಳಗಿನ ಹಿಂದಿನ ಎಂಟು ಸೀಟನ್ನು ಹಣ ಎಸೆದು ಖರೀದಿಸಿದ್ದ ಎಂಟು ನರಪ್ರಾಣಿಗಳು ಎಬ್ಬಿಸಿದ ಗದ್ದಲಕ್ಕೆ ಕ್ರೂರ ಹುಲಿಗಳು ಹೆದರಿ ಮೂಲೆ ಸೇರಿದ್ದವು. ಇಂಥ ಅಸಂಖ್ಯ ಅನುಭವಗಳೊಡನೆ, ವನಧಾಮದ ಮೂಲವಾಸಿಗಳ ಪುನರ್ವಸತಿಗೆ ಕೈಖಾಲಿ ಎನ್ನುವ ಇಲಾಖೆ ಕುಶಾಲನಗರದ ಬಳಿಯ ಕಾವೇರಿಧಾಮವನ್ನು ವನ್ಯದಂತೆ ಕಾಣಿಸಲು ಹಣಚೆಲ್ಲುವ ಪರಿ, ಕುದುರೆಮುಖ ರಾಷ್ಟ್ರೀಯ ಉದ್ಯಾನದ ಮೂಲವಾಸಿಗಳನ್ನು ‘ಹುಕ್ ಆರ್ ಕ್ರುಕ್’ ಎಬ್ಬಿಸುವ ಇಲಾಖೆ, ಇಂದು ಭಗವತಿ ನೇಚರ್ ಕ್ಯಾಂಪ್ ಹೆಸರಿನಲ್ಲಿ ತರಲು ಹೊರಟಿರುವ ಪ್ರವಾಸಿ ವಸತಿ ಸಂಕೀರ್ಣಗಳ ಯೋಚನೆಗಳೆಲ್ಲಾ ಸಾಲು ಸಾಲು ಬಂದು ನಾವು ತಾವರೆಕೊಪ್ಪದಿಂದ (ಬನ್ನೇರುಘಟ್ಟದಲ್ಲೂ)  ವಿಷಣ್ಣರಾಗಿಯೇ ಮರಳಿದೆವು.

ಮೊದಲೇ ಯೋಜಿಸಿದ್ದಂತೆ ರಶ್ಮಿಯನ್ನು ರಾತ್ರಿಯ ಬಸ್ಸಿನಲ್ಲಿ ಬೆಂಗಳೂರಿಗೆ ಕಳಿಸಿ, ನಾವಿಬ್ಬರು ಮಾರಣೇ ದಿನ ಬೆಳಿಗ್ಗೆ ಮರಳಿ ಮಂಗಳೂರ ದಾರಿ ಹಿಡಿದೆವು. ಮೊದಲೇ ಹೇಳಿದಂತೆ ನನಗೆ ಯಾವುದೇ ದಾರಿ ಯಾಂತ್ರಿಕವಾಗಿ ಸುತ್ತಿ ಮುಗಿಸುವ ಜಾಡಲ್ಲ. ಹಾಗಾಗಿ ಹೋಗುವ ದಾರಿಯಲ್ಲಿ ಉಪೇಕ್ಷಿಸಿದ್ದ ನೆನಪಿನ ಗಂಟೊಂದನ್ನು ಬಿಚ್ಚುವಂತೆ, ತೀರ್ಥಳ್ಳಿ ಇನ್ನೂ ಸುಮಾರು ಎಂಟು ಕಿಮೀ ದಾರಿಯಿದ್ದಂತೆ ಎಡಕ್ಕೆ ಕವಲೊಡೆದೆವು. ಕೇವಲ ಒಂದು ಕಿಮೀ ಅಂತರದಲ್ಲಿ ಹೋಗಿ ನಿಂತದ್ದು ಅಧೋಕ್ಷಜ ಮಠದ ಶಾಖಾಮಠ - ಬಾಳಿಗಾರು ಮಠ. ಎಡಕ್ಕೆ ಎದುರುಬದರಾಗಿ ಎರಡು ಮಾಳಿಗೆಯ ಹೊಸ ವಸತಿ ಸೌಕರ್ಯಗಳು, ಬಲಕ್ಕೆ ಎತ್ತರಿಸಿದ ಅಡಿಪಾಯದ ಮೇಲೆ ಹಳಗಾಲದ ಮನೆಯಂತೇ ತೋರುತ್ತಿದ್ದ ಮಠ. ಚಪ್ಪಲಿ ಕಳಚಿಟ್ಟು ಮಠದ ಮೆಟ್ಟಿಲೇರಿ ಹಾರು ಹೊಡೆದಿದ್ದ ಬಾಗಿಲ ಬಳಿ ನಿಂತು, ಹಾಳು ಸುರಿಯುತ್ತಿದ್ದ ಎದುರು ಕೋಣೆಯೊಳಗೆ ಇಣುಕಿದೆವು. ಕೂಗಿ ಕರೆದರೂ ಓ ಎನ್ನುವವರು  ಇರಲಿಲ್ಲ. ನುಗ್ಗಿ, ಒಳ ಬಾಗಿಲಿನಿಂದಾಚೆ ನೋಡಿದರೆ, ಈಚೆಗೆ ಕಗ್ಗಲ್ಲಿನಿಂದ ನವೀಕೃತಗೊಂಡ ಪುಟ್ಟ ಗರ್ಭಗುಡಿ, ಮೂರೂ ಸುತ್ತು ಭಕ್ತಾದಿಗಳು ಹರಡಿಕೊಳ್ಳುವಂತೆ (ಸದ್ಯ ಖಾಲೀ) ಜಗುಲಿ ಕಾಣಿಸಿತು. ಒಳಗೆ ನಿತ್ಯದ ಪೂಜೆ ನಡೆದಂತಿತ್ತು. ಸಹಾಯಕ ನಮ್ಮನ್ನು ವಿಚಾರಿಸಿಕೊಂಡ. ಮಂಗಳಾರತಿಯ ಉದ್ದಕ್ಕೆ ನಿಂತಕೊಂಡೇ ಇದ್ದೆವು. ಸಣ್ಣ ಬಿಡುವಿನಲ್ಲಿ ಸ್ವತಃ ಪೂಜೆ ನಡೆಸುತ್ತಿದ್ದ ಸ್ವಾಮಿಗಳೂ ಇಣುಕಿ ವಿಚಾರಿಸಿಕೊಂಡರು. "ಮಂಗಳೂರಿನ ಅತ್ರಿ ಬುಕ್ ಸೆಂಟರಿನ ಅಶೋಕವರ್ಧನಾಂತ . . . ." ಎಂದು ನನ್ನನ್ನು ಪರಿಚಯಿಸಿಕೊಳ್ಳುತ್ತಿದ್ದಂತೆ ಅವರು, "ನೀವು ನಾರಾಯಣ ರಾಯರ ಮಗ, ಗೊತ್ತು, ನಾನು ನಿಮ್ಮಂಗಡಿಗೂ ಬಂದಿದ್ದೇನೆ. ದಯವಿಟ್ಟು ಐದು ಮಿನಿಟು ಅಲ್ಲಿ ಜಗಲಿಯಲ್ಲಿ ಕುರ್ಚಿಗಳಿವೆ, ಕುಳಿತಿರಿ, ಪೂಜೆ ಮುಗಿಸಿ ಬರುತ್ತೇನೆ."

೧೯೮೦ರ ದಶಕದಲ್ಲೆಲ್ಲೋ ಜಾಗತಿಕ ಮಟ್ಟದಲ್ಲಿ ಹುಲಿಗಳ ಅಳಿವು ಉಳಿವಿನ ಬಿಕ್ಕಟ್ಟು ತಲೆದೋರಿತ್ತು. ಆ ಸುಮಾರಿಗೆ ನಾನು ಮತ್ತು ಗೆಳೆಯ ಕೃಷ್ಣಮೋಹನ್ ಪ್ರಥಮಬಾರಿಗೆ ನಾಗರಹೊಳೆಯಲ್ಲಿ ಉಲ್ಲಾಸ ಕಾರಂತರ ಬಳಗ ನಡೆಸುತ್ತಿದ್ದ ಪ್ರಾಣಿಗಣತಿಯಲ್ಲಿ ಪಾಲ್ಗೊಂಡು ಬಂದು ಉತ್ತೇಜಿತರಾಗಿದ್ದೆವು. ಅಲ್ಲಿ ಉದ್ದಕ್ಕೂ ಸಾಂಗತ್ಯ ಕೊಟ್ಟ ಆಧುನಿಕ ನಾಗರಹೊಳೆ ವನಧಾಮದ ರೂವಾರಿ ಚಿಣ್ಣಪ್ಪನವರ ವನ್ಯ ರಕ್ಷಿಸುವ ಜೋಷ್ ಅಂತೂ ಅಕ್ಷರಶಃ ನಮ್ಮ ಮೇಲೇ ಆವಾಹಿಸಿಕೊಂಡಿದ್ದೆವು. ಆಗ ಒದಗಿದ, ಹುಲಿ ಬಿಕ್ಕಟ್ಟನ್ನು ಪ್ರತಿನಿಧಿಸುವ Tiger crisis ಎಂಬ ವಿಡಿಯೋ ಚಿತ್ರ ಹಿಡಿದುಕೊಂಡು ನಾವು ದಕ್ಷಿಣ ಕನ್ನಡದ ಹುಲಿ ವಲಯಗಳಲ್ಲಿ ಜನಜಾಗೃತಿ ಮಾಡುವ ಪ್ರಚಾರಕ್ಕೆ ಧುಮುಕಿದೆವು. ಹಳ್ಳಿಮೂಲೆಗಳಲ್ಲಿ ವೀಸಿಪಿ ಇರುವ ಯಾವುದೇ ಆಸಕ್ತ ಗುಂಪು ನಮ್ಮನ್ನು ಕರೆದರೆ ನಮ್ಮದೇ ವೆಚ್ಚದಲ್ಲಿ ಅಲ್ಲಿಗೆ ಹೋಗಿ ಹುಲಿ ಬಿಕ್ಕಟ್ಟಿನ ಪೀಠಿಕೆ ಹೊಡೆದು, ಚಿತ್ರ ತೋರಿಸಿ, ಪ್ರಶ್ನೋತ್ತರ ನಡೆಸುತ್ತಿದ್ದೆವು. ಆಗ ತೀರಾ ಅನಿರೀಕ್ಷಿತವಾಗಿ ಸುಬ್ರಹ್ಮಣ್ಯ ಮಠಾಧೀಶರಿಂದ (ಇಂದಿನ ವಿದ್ಯಾಭೂಷಣರಿಂದ) ಕರೆ ಬಂತು. ಅಲ್ಲಿ ಚಾತುರ್ಮಾಸ್ಯದಲ್ಲಿದ್ದ ಸ್ವಾಮಿಗಳಿಗೆ ಬಾಳಿಗಾರು ಮಠಾಧೀಶರೂ ಜೊತೆಗೊಟ್ಟಿದ್ದರು. ಒಟ್ಟಾರೆ ಸಭಿಕರೋ ದನದ ಪೂಜ್ಯತೆಯನ್ನು, ಆರಾಧನೆಯನ್ನು ನಂಬಿ ನಡೆಯುವವರು, ‘ದುಷ್ಟವ್ಯಾಘ್ರ’ನಿಗೊಂದು ವಾದವಿದೆಯೆಂದು ಅರಿವೇ ಇಲ್ಲದವರು. ನಾವು ಹೋದೆವು, ಚಿತ್ರ ತೋರಿಸಿದೆವು, ಚರ್ಚೆ ನಡೆಸಿದೆವು, ನೀವು ನಂಬಲೇಬೇಕು ಸ್ವಾಮಿಗಳು ಮುಕ್ತವಾಗಿ ಹೇಳಿದರು "ನಮ್ಮ ಪರಿವೇಷಕ್ಕೆ ಪ್ರವೇಶವೇ ಇಲ್ಲದ ಸಂಗತಿಗಳನ್ನು ವಸ್ತುನಿಷ್ಠವಾಗಿ, ತುಂಬ ಚೆನ್ನಾಗಿ ಒಪ್ಪಿಸಿದ್ದಕ್ಕೆ ಕೃತಜ್ಞತೆಗಳು."

ಎರಡು ದಿನದ ಹಿಂದೆ ಕುಪ್ಪಳ್ಳಿಗೆ ಹೋಗುವ ದಾರಿಯಲ್ಲಿ ಜವಳಿ ಹೇಳಿದ್ದರು "ಅಶೋಕ, ಶಿವಮೊಗ್ಗ ದಾರಿಯಲ್ಲಿ ಸಾಧ್ಯವಾದರೆ ಬಾಳಿಗಾರು ಮಠದ ಸ್ವಾಮಿಗಳನ್ನೊಮ್ಮೆ ನೋಡಿ. ಮಠಕ್ಕೆ ಪರಂಪರೆಯಿಂದ ಬಂದ ಸ್ವಲ್ಪ ತೋಟ ಗದ್ದೆಯಿದೆ, ವಿಶೇಷ ಹಣಕಾಸು ಇಲ್ಲ. ಎಲ್ಲರಂತಲ್ಲ ಈ ಸ್ವಾಮಿ." ಗೆದ್ದಲು ಹಿಡಿದ ಹಜಾರದಲ್ಲಿದ್ದ ಒಂದೆರಡು ಮಾಸಲು ಚಿತ್ರಗಳನ್ನು ನೋಡುತ್ತಿದ್ದವರಿಗೆ, ಪುರಪುರನೆ ಬಂದ ಸ್ವಾಮಿಗಳು, "ಅಯ್ಯೋ ನಿಂತೇ ಇದ್ದೀರಲ್ಲ" ಎಂದು ಎರಡು ಕುರ್ಚಿ ಎಳೆದು ಕೊಟ್ಟದ್ದಲ್ಲದೆ ತಾನೂ ಒಂದು ಎಳೆದುಕೊಂಡು ಮಾತಿಗೆ ಕುಳಿತಾಗ ನಮಗೂ ಅನಿಸಿತು - ಎಲ್ಲರಂತಲ್ಲ ಈ ಸ್ವಾಮಿ. ವಹಿಸಿಕೊಂಡ ಪೀಠಕ್ಕೆ ಏನೂ ಊನಬಾರದಂತೆ ಪೂಜೆಪುನಸ್ಕಾರಾದಿಗಳನ್ನು ಚಿಕ್ಕದರಲ್ಲಿ ಚೊಕ್ಕವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅದಕ್ಕೆ ಆರ್ಥಿಕ ಪೂರೈಕೆಗಳನ್ನು ಇರುವ ಗದ್ದೆ ತೋಟಗಳಲ್ಲಿ ಸ್ವತಃ ಕೈಕೆಸರು ಮಾಡಿ ಸಾಧಿಸುತ್ತಿದ್ದಾರೆ. "ಸರಿ, ಮಠದ ಹೆಸರಿನಲ್ಲಿ ಹೊಟ್ಟೆಹೊರೆದುಕೊಳ್ಳುತ್ತಿದ್ದಾರೆ" ಎಂದು ಹಗುರ ಮಾಡುವಂತಿಲ್ಲ. ಸಾಹಿತ್ಯ, ಸಂಗೀತ, ಯಕ್ಷಗಾನ, ಪರಿಸರಗಳ ಕಡುಮೋಹಿ ಈ ಸನ್ಯಾಸಿ! ವಿದ್ಯಾಭೂಷಣರ ಸಂಸರ್ಗದಲ್ಲಿ ಗಳಿಸಿದ್ದ ಸಂಗೀತಸುಖವನ್ನು ಪರಿಸರದಲ್ಲಿ ಪ್ರಚುರಿಸಲು ಹೆಣಗುತ್ತಲೇ ಇದ್ದಾರೆ. ಇಂದು ಅಂತಾರಾಷ್ಟ್ರೀಯ ಕಲಾವಿದನೇ ಆಗಿರುವ ಕದ್ರಿ ಗೋಪಾಲನಾಥರ ಕಛೇರಿಯೊಂದನ್ನು ಮಠದಲ್ಲಿ ಇವರು ಏರ್ಪಡಿಸಿದಾಗ ಮೈಕ್ ಕಟ್ತಿದ ಆಟೋರಿಕ್ಷಾದಲ್ಲಿ ಸ್ವತಃ ಸ್ವಾಮಿಗಳೇ ತೀರ್ಥಳ್ಳಿಯ ಗಲ್ಲಿಗಲ್ಲಿಯನ್ನೂ ಸುತ್ತಿ ಪ್ರಚಾರ ನಡೆಸಿದ್ದರಂತೆ (ಜನ ಸ್ವೀಕರಿಸಲಿಲ್ಲ ಎನ್ನುವ ವಿಷಾದವಷ್ಟೇ ಇವರಿಗುಳಿಯಿತು). "ಆಸುಪಾಸಿನಲ್ಲಿ ಎಲ್ಲೇ ನಮ್ಮ ಮೇಳದ ಆಟವಿದ್ದರೆ ಬಾಳಿಗಾರು ಶ್ರೀಗಳು ಮಂಗಳದವರೆಗೂ ಹಾಜರ್" ಎನ್ನುತ್ತಾರೆ ಧರ್ಮಸ್ಥಳ ಮೇಳದ ಕಲಾವಿದ ತಾರಾನಾಥ ವರ್ಕಾಡಿ.

ನನ್ನ ಮನೋವ್ಯಾಪಾರ ತಿಳಿದಿದ್ದ ಸ್ವಾಮಿಗಳು ತೀರ್ಥಪ್ರಸಾದ ಕೊಡುವ ಗೋಜಿಗೆ ಹೋಗಲಿಲ್ಲ. ಸಹಾಯಕನಿಗೆ ಹೇಳಿ ಒಳ್ಳೆಯ ಕಾಫಿ ತರಿಸಿಕೊಟ್ಟರು. ಮಾತಿನ ನಡುವೆ ಯಾರೋ ತರುಣಭಕ್ತ ಅವರ ಪಾದನಮಸ್ಕಾರಕ್ಕೆ ಬಂದಾಗ, ಮುಜುಗರಗೊಂಡು, "ಹೋಗು, ಹೋಗು ಆಮೇಲೆ ಬಾ" ಎಂದು ಓಡಿಸಿದ್ದೂ ಆಯ್ತು! "ದಯವಿಟ್ಟು ನನ್ನ ಸಾಹಿತ್ಯ ಸಂಗ್ರಹ ನೋಡಲು ಬನ್ನಿ" ಎಂದು ಅವರ ಖಾಸಗಿ ಕೊಠಡಿಗೇ ನಮ್ಮನ್ನು ಕರೆದೊಯ್ದರು. ಒಂದು ಬದಿಯ ವಿಸ್ತಾರ ಕಪಾಟುಗಳತ್ತ ಕೈಮಾಡಿ "ಅದು ಬಿಡಿ, ವೇದ ಶಾಸ್ತ್ರ ಗ್ರಂಥಗಳು, ನನ್ನ ಪ್ರವಚನಗಳಿಗೆ ಮತ್ತು ವಹಿಸಿಕೊಂಡ ಪೀಠಕ್ಕೆ ಅಗತ್ಯವಾದ ಸಂಗ್ರಹ. ಆದರೆ ಎಲ್ಲರಿಗೂ ನಾನು ತೋರಿಸದ ಇದು ನೋಡಿ. ಕುಶಾಲಿಗೆ ನಾನಿದನ್ನು ಶೂದ್ರ ಸಾಹಿತ್ಯ ಎನ್ನುವುದೂ ಇದೆ." ಶಿವರಾಮ ಕಾರಂತ, ಕುವೆಂಪು, ಡಿವಿಜಿ, ಮಾಸ್ತಿ, ತೇಜಸ್ವಿ, ಭೈರಪ್ಪ, ಬಿಜಿಎಲ್ ಸ್ವಾಮಿ ಯಾರುಂಟು ಯಾರಿಲ್ಲ ಎನ್ನುವ ಸಂಗ್ರಹ. ನನ್ನ ತಂದೆಯ ವಿಜ್ಞಾನ, ವೈಚಾರಿಕ ಸಾಹಿತ್ಯ ಸೇರಿದಂತೆ ಹೆಚ್ಚುಕಡಿಮೆ ಎಲ್ಲಾ ಪುಸ್ತಕಗಳು ಅಲ್ಲಿದ್ದರೂ ‘ಶ್ರುತಗಾನ’ (ಸಂಗೀತದ ಕುರಿತ ಬರಹಗಳ ಸಂಕಲನ) ಸಿಗದ ಕೊರಗು ತೋಡಿಕೊಂಡರು. (ಈಚೆಗೆ ಪ್ರಕಟವಾದ ತಂದೆಯ ‘ಸಂಗೀತ ರಸನಿಮಿಷಗಳು’ ತಿಳಿಸಿದೆ, ತರಿಸಿಕೊಂಡರು). ಮಾತುಮಾತುಮಾತಿನ ಕೊನೆಯಲ್ಲಿ "ಅಂದ ಹಾಗೇ ಮಠಕ್ಕೆ ಸ್ವಲ್ಪ ದೂರದಲ್ಲಿ ‘ನಮ್ಮದೇ’ ಹದಿನೈದು ಎಕ್ರೆ ಹಾಳುಬಿದ್ದ ಜಮೀನಿದೆ. ಅದನ್ನು ಶುದ್ಧ ಕಾಡು ಮಾಡಿಕೊಡುವವರು ನಿಮ್ಮಲ್ಲೆ ಯಾರಾದರೂ ಇದ್ದರೆ ತಿಳಿಸ್ತೀರಾ? ನಿಶ್ಶರ್ತವಾಗಿ ಬಿಟ್ಟುಕೊದುತ್ತೇವೆ" ಎಂದಾಗಲಂತೂ ನನ್ನ ಆಶ್ಚರ್ಯಕ್ಕೆ ಪಾರವಿಲ್ಲ. ಪುರಾಣಕಾಲದಲ್ಲಿ ಒಬ್ಬ ಕಾಡಬೇಡ ವಾಲ್ಮೀಕಿಯಾದ ಕಥೆ ಕೇಳಿದ್ದೇನೆ. ನಗರಾರಣ್ಯ ವಿಸ್ತರಿಸುತ್ತಿರುವ ಕಾಲಕ್ಕೆ ಸರಿಯಾಗಿ ಇಲ್ಲೊಬ್ಬ ಋಷಿ ಸದೃಶ ನಿಜ ಕಾಡು ಮೋಹಿಸುವುದೇ! ಎಲ್ಲರಂತಲ್ಲ ಈ ಸ್ವಾಮಿ!!

(ಮುಂದುವರಿಯಲಿದೆ)

19 comments:

 1. mast head chennaagilla

  ReplyDelete
 2. ಅಶೋಕ ವರ್ಧನರೇ!
  ದಯವಿಟ್ಟು ಬ್ರಾಕೆಟ್ ಒಳಗಣ ಫಾಂಟ್‍ಗಳನ್ನು ಸರಿಪಡಿಸಿರಿ.
  ನನ್ನ ಗಣಕ ಆ ಫಾಂಟ್‍ಗಳನ್ನು ಓದಲು ಕೊಡಲು ಬಿರಾಕರಿಸುತ್ತಾ ಇದೆ.
  "ಶ್ವಾನಾಭಿಶೇಕ ಕಟ್ಟೆ " ಎಂಬ ಶಬ್ದ ನನಗೆ ಅತೀ ಇಷ್ಟ ಆಯಿತು.
  ಆ ಮೇಲೆ ಪುನಃ ಬರೆಯುವೆ.
  ನಮಸ್ಕಾರಗಳು
  ಕೇಸರಿ ಪೆಜತ್ತಾಯ

  ReplyDelete
 3. nanna kannada software sadyakke sattide, sorry, ninneyashte b.r.project jaladhaare nodidde ,kuvempu vi.vi.ge hogiddavanu. mangaluru vi.vi. joduraste bagge nivu heliddu sari, nanagu haage annisitu.

  ReplyDelete
 4. ನಮ್ಮ ಉಡುಪಿಯ ಹುಲಿ ವೇಷ ಸ್ವಾಮಿಯನ್ನು ನೋಡಿ.

  ReplyDelete
 5. ನಿಜವಾಗಿಯು ಎಲ್ಲರಂತಲ್ಲ ಈ ಸ್ವಾಮಿ. ಮನುಷ್ಯರಲ್ಲಿಯೂ ಎಷ್ಟೊಂದು ಜೀವ ವೈವಿಧ್ಯ!

  ReplyDelete
 6. ಎನ್.ಎ ಮಧ್ಯಸ್ಥ15 November, 2010 21:44

  ಅರ್ಥ ಪೂರ್ಣ ಬರಹ, ಆದರೆ ಎಷ್ಟು ಜನಕ್ಕೆ ತಲುಪುವುದು? ನಮ್ಮ ವಿ. ವಿ. ಗಳು ಅವೈಜ್ಞಾನಿಕ ಚಿಂತನೆಯ ಕೇಂದ್ರಗಳು. ಇದು ಭಾರತ!
  ಮಧ್ಯಸ್ಥ ಏನ್. ಎ.

  ReplyDelete
 7. I always like your humour which is subtle and with a lot of language orientation :-)

  ReplyDelete
 8. priya atree nanna p .c.ya mother boardkettu tumba divsa aagide nimma blogige uttarisuva tavaka ittu ivattu magana p.c. yinda uttarisuttiddene nimma jote kutacaadrige hoda anubhav innu maasilla niivu nanage kittilehannukodalu satayisiddu naanu bendre padya udurisiddu aamele niivu lekka maadi tole kottaddu iiga bari nenapina melaku usiru kantuvudarolage nima jote innomme aarohanada hejje haakuva bayake ide

  ReplyDelete
 9. Laxminarayana Bhat P16 November, 2010 07:33

  ಬನ್ನೇರು ಘಟ್ಟಕ್ಕೆ ಹೋಗಿ ಬಂದ ಮೇಲೆ ನನಗನಿಸಿದ್ದು: ಅನಿವಾರ್ಯವಾಗಿ ಮಕ್ಕಳೊಂದಿಗೆ ಹೋಗಬೇಕಾದ ಸಂದರ್ಭ ಬಿಟ್ಟರೆ ಯಾವುದೇ ಪ್ರಾಣಿಧಾಮಕ್ಕೆ ಹೋಗಲೇಬಾರದು!!! 'ಎಲ್ಲರನ್ಥವರಲ್ಲ ಈ ಸ್ವಾಮಿ' ಖುಷಿ ಆಯಿತು. ನಮಸ್ಕಾರ.

  ReplyDelete
 10. ಅಶೋಕ ವರ್ಧನರೇ!
  ಈಗ ಕಂಸದೊಳಗಿನ ಮಾತು ಓದಲು ಆಯಿತು! ಈ ಮಾತುಗಳು ನಮಗೆ ಊಟಕ್ಕೆ ಉಪ್ಪಿನ ಕಾಯಿ ಇದ್ದಂತೆ! ಧನ್ಯವಾದಗಳು.
  ಆಟೋದಲ್ಲಿ ಮೈಕ್ ಹಿಡಿದು ಕದ್ರಿ ಗೋಪಾಲನಾಥರ ಕಛೇರಿಗೆ ಪ್ರಚಾರ ಕೊಟ್ಟ ಯಕ್ಷಗಾನ ಮೋಹಿ ಬಾಳೆಗಾರು ಸ್ವಾಮಿಗಳು ತೀರ್ಥಹಳ್ಳಿಯಂಥಹಾ ಮಲೆನಾಡಿನಲ್ಲಿಯೂ "ಇಂದು ಕಾಣೆಯಾಗುತ್ತಿರುವ ನೈಸರ್ಗಿಕ ಕಾಡನ್ನು " ಬೆಳಸಲು ಆಸಕ್ತರಾದ ವಿಚಾರ ತಿಳಿದು ಅವರ ಬಗ್ಗೆ ಅಪಾರ ಗೌರವ ಮೂಡಿತು.

  ನಾನು ಚಿಕ್ಕವನಿದ್ದಾಗಲೇ ಕಾಡುಗಳು ರಾತೋರಾತ್ರಿ ಮಾಯ ಆಗುತ್ತಾ ಇದ್ದುವು.
  ಹುಲಿ ಚಿರತೆಗಳಿಗೆ ಆಹಾರದ ಕೊರತೆ ಉಂಟಾದಾಗ ಅವು ಭಟ್ಟರ ಹೋಟಲಿಗೆ ಬಂದು ಉಂಡಾವೇ?
  ನಾಡಿನ ದನಕರುಗಳನ್ನು ಅವು ಅನಿವಾರ್ಯವಾಗಿ ಫಲಾಹಾರ ಮಾಡಲು ಶುರು ಮಾಡಿದುವು.
  ಬುದ್ಧಿವಂತರು! - ಅನ್ನಿಸಿಕೊಂಡ ಕುಯುಕ್ತಿಯ ಕೆಲವು ಜನರು ಅವುಗಳಿಗೆ ವಿಷ ಇಕ್ಕುವ ಹುನ್ನಾರ ಮಾಡಿದರು. ಹುಲಿ ಚಿರತೆಗಳು ಹಿಡಿದ ದನ ಕರುಗಳನ್ನು ಹುಲಿಗಳು ಸ್ವಲ್ಪ ಮಟ್ಟಿಗೆ ತಿಂದು, ತಮ್ಮ ಬೇಟೆಯನ್ನು 'ಆ ಮೇಲೆ ತಿನ್ನಲು' ಎಂದು ಮುಚ್ಚಿಟ್ಟು , ಮರುದಿನದ ಹಗಲು ಹೊತ್ತು ಮರೆಯಾಗುತ್ತಾ ಇದ್ದುವು. ಅವುಗಳ ಬೇಟೆಯ ಮೇಲೆ ನಮ್ಮ ಧೀರಾಧಿ ಧೀರರು ಎನ್ನಿಸಿಕೊಂಡ ವಿಷ ಮನಸ್ಸಿನ ಮಾನವರು ಎಂಡ್ರಿನ್ ಅಥವಾ ಎಂಡ್ರೆಕ್ಸ್ ಎಂಬ ಕಾಲಕೂಟ ವಿಷಗಳನ್ನು ಸುರಿದು, ಹುಲಿಗಳ ಎಡ್ರಸ್ ಇಲ್ಲದಂತೆ ಮಾಡಿದರು.
  ಇದು ನನ್ನ ಹುಲಿಗಳ ಬಗೆಗಿನ ವ್ಯಥೆ.
  ವಂದನೆಗಳು
  ಪೆಜತ್ತಾಯ

  ReplyDelete
 11. ee bariya chithragalu hidisalilla(nanna vayyakthika abiprayavu, photo haagoo camera field nalli naniruvudhu adakke karanavirabahudu)

  quote udharanegalu odhugana continue process annu nillisuthade..

  obba samanya ancheyannanage bahalastu vilasagala pathehachi thilisidhiri. thnx.

  nimma camera yavudu? adara shutterspeed estu?
  vadiraj dravid


  ನನ್ನ ಕೈಮರಾ Sony cyber shot 12.1 Megapixels optical zoom 4* wide angle les 30 mm optical steady shot ಇತ್ಯಾದಿ ಇತ್ಯಾದಿ ಬಿರುದಾಂಕಿತವಿರುತ್ತದೆ. ಆದರೆ ಅದರ ಹಿಂದಿನ ವ್ಯಕ್ತಿ ಅದ್ಯಾವುದರ ಪರಿವೆಯೂ ಇಲ್ಲದೆ ಹೆಚ್ಚಾಗಿ Easy Shot ಅವಕಾಶದಲ್ಲಿ ಗುರಿ ನೋಡು, ಹೊಡಿ ಎನ್ನುವ ಸಿದ್ಧಾಂತದವನು! ಅವುಗಳು ವೀಕ್ಷಕರಿಗೆ ಕುಶಿ ತಂದರೆ ನಾ ಧನ್ಯ. ಇಲ್ಲಾಂದ್ರೆ ನಾನೇನೂ ಮಾಡಲಾರೆ (ವಿಷಾದವಂತೂ ಇಲ್ಲ), ನೋಡಿ ಸ್ವಾಮೀ ನಾನಿರೋದೇ ಹೀಗೆ.
  ಸಾಮಾನ್ಯ ಅಂಚೆಯಣ್ಣನ ಹಾಗೆ ಎಂದದ್ದರ ಅರ್ಥ ನನಗೆ ಸ್ಪಷ್ಟವಾಗಲಿಲ್ಲ.
  ಅಶೋಕ ವರ್ಧನ

  a.....ha............  nimma camera olle camerave. neev haage abyasa maadi . aadare scenary photo tegeyo hothige aasupasina belakannu nodikondare sahaja chithra sigalu sadhya..embudhu nanna abiprayavu. nannagoo kandadhannu haage heluva swabhava(nodi swamy naavirodhe heege.........ha..)

  samanya ancheyanna= pramanika ,, nera (embarthadalli balasidhe)
  kuvempu avara haage rudra attahasamam jalamadhathu.....modaladha shabdhika virat darshana madisadhe( adoo onthara chandave) nera maathu , bhashe thane . adakke hagande
  vadiraj dravid

  ReplyDelete
 12. Dear sri Atri Ashok, Swamiji kanditha ellaranthalla! Medical collehe,deekshe snskara, ityadhi vyavahara illada swamigala 15 acre ithara swamigalige bekadithu. sADASHIV.m.B sULLIA

  ReplyDelete
 13. Dear sir,

  prachaaradinda bahudoora viruva ee swamiji namage paramaaptharu. shrama jeeviyaad evaru matha kattiddu, nele ninthaddu krishiyindale.maathanaadade maadi thorisuva swamijiyavarannu web jagatthige parichayisiddu tumba santhosha -srinivas deshpande

  ReplyDelete
 14. ಪ್ರೀತಿಯ ಅಶೋಕರಿಗೆ ನಮಸ್ಕಾರಗಳು.
  ನಾಯಿಗಳ ಬಗ್ಗೆ ನಿಮಗೆ ಏಕೆ ಹೊಟ್ಟೆಕಿಚ್ಚು?!
  ವಿಶ್ವವಿದ್ಯಾನಿಲಯಗಳ ಸ್ವಾಗತ ಸಂಭ್ರಮ ಕಂಬಗಳ ಮಟ್ಟಿಗೆ ಆದರೂ ಇರಬಾರದೆ?
  ಕುಶಿ ಹರಿದಾಸಭಟ್ಟರನ್ನು ನೆನಪಿಸಿದ್ದು ಸಂತೋಷನೀಡಿತು.
  ಮಯ್ಯರಂತೆ ನನಗೂ ನಿಮ್ಮೊಂದಿಗೆ ಕೊಡಚಾದ್ರಿಗೆ ಹೋಗಿ ಅಲ್ಲಿ ಸಂಕ್ಲಾಚಾರ್ಯರ ಸರ್ವಜ್ಞಪೀಠವನ್ನು ನೋಡಿ ಅಲ್ಲಿ ಊಟ ಮಾಡಿದ ನೆನಪಾಯಿತು! ಆದರೆ ಅದಕ್ಕೆ ನಿಮ್ಮಷ್ಟು ಹಣ ಖರ್ಚಾಗಿರಲಿಲ್ಲ, ಬಿಡಿ.
  ಪಂಡಿತಪುಟದಲ್ಲಿ 'ಗೋಹತ್ಯೆ ನಿಷೇಧ ಮತ್ತು ಸಾವರ್ಕರ್' ಬಗ್ಗೆ ಪ್ರತಿಕ್ರಿಯಿಸಿದಾಗ ನೀವು ವಿದ್ಯಾಭೂಷಣರು ಮತ್ತು ಬಾಳಿಗಾರು ಮಠಾಧೀಶರ ಪ್ರಾಂಜಲ ಮನಸ್ಸಿನ ಬಗ್ಗೆ ತಿಳಿಸಿದ್ದಿರಿ. ಅವರನ್ನು ನೀವು ಇನ್ನೊಮ್ಮೆ ಭೇಟಿಮಾಡಿದ್ದು ತಿಳಿದು ಸಂತೋಷವಾಯಿತು. ಆಸ್ತಿಕ ಸಂಸಾರಿಗಳಂತೆ ಈ ಸನ್ಯಾಸಿಗಳು ತಮ್ಮ ನಂಬಿಕೆಯ ಆಚೆಗೂ ಮಾನವೀಯ ಸಂವೇದನೆ, ಸ್ಪಂದನಗಳನ್ನು ಉಳಿಸಿಕೊಂಡಿರುವುದು ಸಂತೋಷದ ಸಂಗತಿ. ನನಗೆ ಯಾವುದೇ ಧಾರ್ಮಿಕ ಭಾವನೆಗಳಿಲ್ಲ. ಆದರೆ ತೋರಿಕೆ ಮಾಡದೆ ಪ್ರಾಮಾಣಿಕವಾಗಿ ಬದುಕುವ ಎಲ್ಲರ ಬಗ್ಗೆ ಗೌರವವಿದೆ. 'ಬಿಸಿ ಬಿಸಿ ಐಸ್ ಕ್ರೀಮಿ'ನಂಥ, 'ವೈಚಾರಿಕ ಸ್ವಾಮಿ'(!)ಗಳು, ಮತ್ತು ಸ್ವಯಂಘೋಷಿತ 'ದಿವ್ಯ ಸನ್ನಿ'ಗೊಳಗಾದವರ ಬಗ್ಗೆ ಇಲ್ಲ.
  ಬಾಳಿಗಾರು ಮಠಾಧೀಶರು ೧೫ ಎಕರೆ ಕಾಡನ್ನು ಬೆಳಸಲು ಯೋಚಿಸಿರುವುದು ಅವರು ಮಠದ ಕೃತಕ ತೆಯಿಂದ ಪ್ರಕೃತಿಗೆ ಮರಳುವ ಸೂಚನೆಯಂತಿದೆ.
  ಎಲ್ಲ ಮಠಾಧೀಶರು ಪ್ರಕೃತಿಗೆ ಸಹಜವಾಗಿ ಮರಳಿ ಕೇವಲ ಮನುಷ್ಯರಾಗಿ ಬಾಳುವಂತಾಗಲಿ ಎಂದೇ ನನ್ನ ಹಾರೈಕೆ.
  ಪ್ರೀತಿಯಿಂದ
  ಪಂಡಿತಾರಾಧ್ಯ

  ReplyDelete
 15. ಪ್ರೀಯರೆ,
  ನಿಮ್ಮ ಜಾಲತಾಣದ ಹೆಸರು ಚಿತ್ರದೊಳಗೆ ಅಡಗಿರಬಹುದೆ?
  ಬಣ್ಣಗುರುಡನ್ನು ಗುರುತಿಸಲು ಬಣ್ಣದ ಅಕ್ಷರಗಳನ್ನು ಬಣ್ಣದ ವಸ್ತುಗಳ ನಡುವೆ ಹುದುಗಿಸಿರುವಂತೆ?!
  ನಾನು ಕುರುಡನಿರಲೂ ಬಹುದು ಎಂದು ಆಶ್ಚರ್ಯವಾಯಿತು

  ReplyDelete
 16. ASHOKA MAMA,
  BARAHA KAI KOTTIDE...
  YELLARANTALLA EE SWAAMI TUMBAA ISTAVAAYTHU...

  INNU PRAVAASIGALINDA ARTHA LOOTI MAADUVUDARALLI KHASAGI HAAGOO SARAKAARI VYAVASTHE SAMAREETHIYALLI KELASA MAADUTTIDE...
  Along with Rohit Rao, me and two of my friends were been to Top-Slip near koimbattore...
  you may be surprised to here that we had to pay Rs500/= for a group of 4 to just walk in that national park for 2 hours!
  Its of greater sorrow to see the money looted from us is streamed to build luxurious concrete structures in the national park under the banner of development....

  ReplyDelete
 17. ಅಶೋಕವರ್ಧನ19 November, 2010 06:39

  ಪ್ರಿಯ ವಿನಾಯಕಾ
  ವನಧಾಮದೊಳಗೆ ಅನಾವಶ್ಯಕ ಜನ ಸೇರುವುದನ್ನು ಅದರಲ್ಲೂ ಅಶಿಕ್ಷಿತ ಸಂದಣಿ ಹೆಚ್ಚುವುದನ್ನು ನಿಯಂತ್ರಣದಲ್ಲಿಡಲು ಪರೋಕ್ಷವಾಗಿ ಈ ದುಬಾರಿ ಪ್ರವೇಶಧನ ಇಡುವುದು ಸರಿ ಎಂದು ಒಂದು ಕಾಲದಲ್ಲಿ ನಾನು ನಂಬಿದ್ದೆ. ಆದರೆ ಯೋಗ್ಯತೆ ಇಲ್ಲದವರಲ್ಲೇ ಈ ಹಣ ಹೆಚ್ಚಿರುವುದು ಮತ್ತು ಹಾಗೆ ಹಣ ಚೆಲ್ಲಿ ಬಂದವರಿಗೆ ತಾವು ಅದನ್ನು ‘ಖರೀದಿಸಿದ್ದೇವೆ’ ಎಂಬ ಹಕ್ಕಿನ ಪ್ರಜ್ಞೆ ವಿಪರೀತವಿರುತ್ತದೆ. ಅದಕ್ಕೆ ಸರಿಯಾಗಿ ಈ ಅರಣ್ಯ ಅಥವಾ ಪ್ರವಾಸೋದ್ಯಮ ಇಲಾಖೆಗಳು ತಾವು ಈ ಪ್ರಾಕೃತಿಕ ತಾಣಗಳ ‘ಯಜಮಾನ’ರೆಂದೂ (ಸರಕಾರ ಯಜಮಾನನಲ್ಲ, ಸಾರ್ವಜನಿಕರ ಸೇವಕ) ಹಣ ಎಸೆದವರು ‘ಗಣ್ಯ ಅತಿಥಿಗಳೆಂದೂ’ (ನಿಜವಾದ ದೇವಸ್ಥಾನದೊಳಗೆ ಬಿಂಬವೊಂದೇ ಗಣ್ಯ, ಉಳಿದ ಸಂಗತಿ ಮತ್ತು ಜನಕ್ಕೆ ಭಕ್ತಿ ಮಾತ್ರ ಇರತಕ್ಕದ್ದು) ಸವಲತ್ತುಗಳನ್ನು ಏರಿಸುತ್ತಾ ಬಂದವರ ಸಣ್ಣತನಗಳನ್ನು ಮರೆಯುತ್ತಾ ಒಟ್ಟಾರೆ ನಾಗರಿಕತೆಯ ಉಸಿರಕಿಂಡಿಯನ್ನು ಕಿರಿದುಗೊಳಿಸುತ್ತಾ ಬಂದಿದ್ದಾರೆ; ವನಧಾಮಗಳೆಲ್ಲಾ ವಿಹಾರಧಾಮಗಳೆಂಬ ಅಪಕಲ್ಪನೆ ಬೆಳೆಯುತ್ತಾ ಬಂದಿದೆ! ಘೋಷಿತ ವನಧಾಮದೊಳಗೆ ಹಿಂದಿನಿಂದ ರೂಢಿಸಿದ್ದ (ವನ್ಯಕ್ಕೆ ಸಹ್ಯವಾಗದ) ಕೃಷಿ, ಮನುಷ್ಯವಾಸ, ಜಾನುವಾರು ಸಾಕಣೆಗಳನ್ನು ಆದರ್ಶದ ಮಾತಾಡುತ್ತಾ ಒಂದು ಬಾಗಿಲಿನಿಂದ ಹೊರ ನೂಕುತ್ತಾ ಇನ್ನೊಂದು ಬಾಗಿಲಿನಲ್ಲಿ ಹೆಚ್ಚು ಅಪಾಯಕಾರಿಯಾದ ಪ್ರವಾಸೋದ್ಯಮವನ್ನು ಬರಮಾಡಿಕೊಳ್ಳುತ್ತಿರುವುದು ಮತ್ತದಕ್ಕೆ ಪೂರೈಸಲು ದುಬಾರಿ ಪ್ರವೇಶಧನ ಸಂಗ್ರಹಿಸುವುದು ನಿಜಕ್ಕೂ ಮೂರ್ಖತನ.

  ಪ್ರಜ್ಞಾವಂತರಿಗೆ ಮೂಲವಾಸಿಗಳ ಮನ ಒಲಿಕೆಯೊಡನೆ ಮರುವಸತಿಗೆ ಹೆಣಗಿ ಮುಗಿಯುವ ಮೊದಲು ಉಸ್ತುವಾರಿಗಳ ವಿಪರೀತಗಳನ್ನೂ ಖಂಡಿಸಿ, ತಿದ್ದಿಕೊಡುವ ಹೊರೆ ಹೆಚ್ಚುತ್ತಿದೆ.
  ಅಶೋಕವರ್ಧನ

  ReplyDelete
 18. ಚಂದ್ರಶೇಖರ ಕಲ್ಕೂರ19 November, 2010 06:48

  ಅಶೋಕವರ್ಧನರಿಗೆ, ವಂದೇಮಾತರಮ್.
  ತುಂಗಾ ತೀರದಲ್ಲಿರುವ ಬಾಳೆಗಾರು ಮಠದ ಪೂಜ್ಯ ಶ್ರೀ ಶ್ರೀ ಶ್ರೀ ನೃಸಿಂಹ ತೀರ್ಥ ಸ್ವಾಮಿಗಳ ಬಗ್ಗೆ ಬರೆದಿದ್ದೀರಿ. ನನಗೂ ಅವರ ಪರಿಚಯವಿದೆ. ನನ್ನ ತುಂಗಭದ್ರಾ ಅಧ್ಯಯನದ ಸಂದರ್ಭದಲ್ಲಿ ಅವರಲ್ಲಿಗೆ ಹೋಗಿದ್ದೆ. ಇನ್ನೂ ಹಲವು ಸಾರಿ ಹೋಗಿದ್ದೆ. ಅವರು ನಂದ್ಯಾಲಕ್ಕೆ ಯಾವಾಗಲೂ ಬರುತ್ತಾರೆ. ಅಲ್ಲಿಯೂ ಭೇಟಿಯಾಗಿದ್ದೆ. ಅವರೊಂದಿಗೆ ಸಂಭಾಷಣೆ ನಡೆಸಿದ್ದೆ. ಆಸಕ್ತಿಕರ ವ್ಯೆವಿದ್ಯಮಯ ವ್ಯಕ್ತಿತ್ವ. ನಿಮ್ಮ ಶೀರ್ಷಿಕೆ ಒಪ್ಪುವಂತಾದ್ದಾಗಿದೆ.
  ಚಂದ್ರಶೇಖರ ಕಲ್ಕೂರ

  ReplyDelete
 19. ಚಂದ್ರಶೇಖರ ಕಲ್ಕೂರ21 November, 2010 05:59

  ಅಶೊಕವರ್ಧನರಿಗೆ, ವಂದೇಮಾತರಮ್.
  ಬಾಲೆಗಾರು ಮಠದ ಸ್ವಾಮಿಗಳ ಹೆಸರು ರಘುಭೂಷಣ ತೀರ್ಥ ಸ್ವಾಮಿಗಳವರು. ನಾನು ನಿನ್ನೆ ಮಿಂಚಂಚೆಯಲ್ಲಿ ಕಳುಹಿಸಿದ ನರಸಿಂಹ ತೀರ್ಥರಲ್ಲ.
  ಚಂದ್ರಶೇಖರ ಕಲ್ಕೂರ

  ReplyDelete