27 October 2010

ಅಜ್ಜಿಯೋ ಅಮ್ಮನೋ!

ಹೌದು, ಇಂದು ಸಂಜೆ ಏಳು ಗಂಟೆಗೆ ತೀರಿಹೋದ (ಪ್ರಾಯ ತೊಂಬತ್ತೊಂದು) ಸಂಬಂಧದಲ್ಲಿ ನನ್ನ ಚಿಕ್ಕಜ್ಜಿ (ತಂದೆಯ ಚಿಕ್ಕಪ್ಪ, ಮಡಿಕೇರಿಯ ವೈದ್ಯ ಶ್ರೀಶ್ರೀ ಜಿ.ಎನ್.ರಾಮಚಂದ್ರ ರಾಯರ ಹೆಂಡತಿ, ಶ್ರೀಮತಿ ವಿರಿಜಾಭವಾನಿ) ಭಾವನಾತ್ಮಕವಾಗಿ ನನಗೆ ಸದಾ ಅಜ್ಜಿಯಾದಷ್ಟೇ ‘ಸಾಕುತಾಯಿ’ಯ ಸ್ಥಾನದಲ್ಲೂ ಕಾಣುತ್ತಿದ್ದವರು. ನಾನಿನ್ನೂ ಆರೇಳು ತಿಂಗಳ ಶಿಶುವಾಗಿದ್ದಾಗ ನನ್ನಮ್ಮನಿಗೆ ಹಾಲು ಕಡಿಮೆಯಿತ್ತಂತೆ. ಈ ಅಜ್ಜಿ (ನನ್ನಮ್ಮನಿಗಿಂತ ಸುಮಾರು ಎಂಟು ವರ್ಷಗಳಿಗೆ ಹಿರಿಯರು) ಅದೇ ತಾನೇ ಕೊನೆಯ ಮಗ ಸದಾಶಿವನನ್ನು ಹೆತ್ತ ಹೊಸತು. ಸಹಜವಾಗಿ ಅವರು ನನಗೂ ಹಾಲೂಡಿದ್ದರಂತೆ. ನನ್ನ ತಂದೆಗೆ ಸಂಬಂಧದಲ್ಲಿ ಚಿಕ್ಕಮ್ಮನಾದರೂ ತಂದೆ ತನ್ನ ಆತ್ಮಕಥೆ - ಮುಗಿಯದ ಪಯಣದಲ್ಲಿ “ನನ್ನ ಮಟ್ಟಿಗೊಬ್ಬ ಹಿರಿಯಕ್ಕ ಮತ್ತು ನನ್ನ ಅಸಂಖ್ಯ ಪ್ರಯೋಗಗಳಿಗೊಬ್ಬ ಶ್ರೋತೃ ಮತ್ತು ವಿಮರ್ಶಕಿಯಾಗಿ ದೊರೆತದ್ದು ನನ್ನ ಭಾಗ್ಯ” ಎಂದೇ ಬರೆಯುತ್ತಾರೆ. ನನಗಾದರೂ ಇದೇ ತೆರನ ಕೌಟುಂಬಿಕ ಸಮೀಕರಣಗಳ ಸಂಬಂಧಕ್ಕಿಂತ ಭಾವಸಂಬಂಧದ ನೆನಪುಗಳೇ ಜಾಸ್ತಿಯಾಗಿ ಯಾವತ್ತೂ ಅವರಲ್ಲಿಗೆ ಹೋಗುವುದೆಂದರೆ ಏನೋ ಸಂಭ್ರಮ, ಹೇಳಲಾಗದ ಸಂತೋಷ.

‘ಜ್ಯೋತಿ’ ಮನೆಯ ಭಾಗ್ಯ ದೇವತೆಯಂತೇ ಇದ್ದ ಇವರು ಸಂಪರ್ಕಕ್ಕೆ ಬಂದವರಿಗೆಲ್ಲ ಚಿತ್ತಭಿತ್ತಿಯಿಂದ ಅಳಿಸಲಾಗದ ‘ಚಿತ್ತಿ’ (ಚಿಕ್ಕಮ್ಮ) ಆಗಿಯೋ ‘ಭಾಂತೆಮ್ಮ’ (ಭವಾನಿ+ಅತ್ತೆಮ್ಮ) ಆಗಿಯೋ ಚಿರಂಜೀವಿ. ನನ್ನ ಬಾಲ್ಯದಲ್ಲೊಮ್ಮೆ ಮಡಿಕೇರಿಯಲ್ಲಿ ಭಾರೀ ಭೂಕಂಪವಾಗಿ ಮಂಗಳೂರು ದಾರಿ ಹಲವೆಡೆ ಜಗ್ಗಿದ, ಕುಸಿದದ್ದನ್ನು ಪ್ರತ್ಯಕ್ಷ ದರ್ಶಿಸಲು ಈ ಅಜ್ಜ ಅಜ್ಜಿಯರೊಡನೆ ಅವರ ಕಾರಿನಲ್ಲಿ ಹೋದ ನೆನಪು. ಅವರ ಅಪ್ಪಂಗಳದ ತೋಟಕ್ಕೆ ಮತ್ತವರದೇ ಜೊತೆ ಇನ್ಯಾವತ್ತೋ ಕಾರಿನಲ್ಲಿ ಹೋಗಿ, ಸದಾಶಿವನೊಡನೆ ಸಾಕಷ್ಟು ಸೊಕ್ಕಿ ಮರಳಿದ ನೆನಪು. ನನ್ನ ಹಾಲು ಹಲ್ಲು ಉದುರದೆ, ಹಿಂದೆ ಗಟ್ಟಿ ಹಲ್ಲು ನೂಕಿಕೊಂಡು ಬಂದಿತ್ತು. ಅಜ್ಜ ಕಣ್ಕಟ್ಟು ಮಾಡಿ, ಕಟಿಂಗ್ ಪ್ಲೇಯರಿನಲ್ಲಿ ಗೊಗ್ಗೆ ಹಲ್ಲು ಕಿತ್ತಾಗ ಈ ಅಜ್ಜಿ ಸಮಾಧಾನಿಸಿದ ನೆನಪು. ಭೀಕರ ಅಂಟು ಜಾಡ್ಯ ಸಿಡುಬು ಅಜ್ಜನನ್ನೂ (ಪುಂಡರೀಕನೆಂಬ) ದೊಡ್ಡ ಚಿಕ್ಕಪ್ಪನನ್ನೂ ಬಲಿತೆಗೆದುಕೊಂಡಾಗ ಅಳು ನಗುಗಳ ಸ್ಪಷ್ಟತೆ ಇಲ್ಲದ ನಾನು (ಪ್ರಾಯ ಐದಾರು ವರ್ಷವಿದ್ದಿರಬೇಕು) ಈ ಅಜ್ಜಿಯ ಬೊಚ್ಚು ಬಾಯಿಯನ್ನು ಕಂಡು ಪಟ್ಟ ಆಶ್ಚರ್ಯ. ಕಾಲೇಜು ಸಮೀಪವಿದ್ದ ನಮ್ಮನೆಗೆ ದೂರದ ಸರಕಾರೀ ಶಾಲೆಗೆ ಐದನೇ ತರಗತಿಗೆ ಸೇರಿದಾಗ ಎಷ್ಟೋ ಸಮಯ ಮಧ್ಯಾಹ್ನದ ಊಟಕ್ಕೆ ಸದಾಶಿವನೊಡನೆ ಜ್ಯೋತಿಗೆ ಓಡಿದಾಗ ಸಿಕ್ಕುತ್ತಿದ್ದ ಮಧುರ ಆತಿಥ್ಯ... ಯೋಚನಾ ಪರದೆಯ ಮೇಲೆ ಓಡುವ ಅಸಂಖ್ಯ ಸುಖಾಂತ ಚಿತ್ರಗಳಿಗೆ ದುಃಖಾಂತ ತರುವಂತೆ ಇನ್ನು ಆ ಅಜ್ಜಿ ಇಲ್ಲ. ಈ ಹಿಂದೆ ನನ್ನೊಬ್ಬ ಚಿಕ್ಕಪ್ಪನ ಸ್ಮರಣೆಯಲ್ಲಿ ನಾನು ಹೀಗೇ ನೆನಪು ಹಂಚಿಕೊಳ್ಳುವಾಗ ಹೇಳಿದ್ದಂತೆ (ನೋಡಿ: ಛಲದೊಳ್ ದುರ್ಯೋದನಂ) ಈ ಅಜ್ಜಿಯನ್ನು ಎಂದೂ ಎದುರಿನಲ್ಲಿ ನಾನೇನೂ ಸಂಬೋಧಿಸಿರಲಿಲ್ಲ. (ನನ್ನ ಖಾಸಾ ಪಿತಾಮಹಿ ಅಥವಾ ಮಾತಾಮಹಿ ಅಜ್ಜಿಯಂದಿರನ್ನು ನಾನು ಸ್ಪಷ್ಟವಾಗಿ “ಅಜ್ಜೀ” ಎಂದು ಕರೆದವನೇ) ಈಗ ಇದ್ದಿದ್ದರೆ “ಹೀಗೊಂದು ಲೇಖನದ ಸಂದರ್ಭದಲ್ಲಾದರೂ ನನ್ನನ್ನು ‘ಅಜ್ಜಿ’ ಎಂದು ಕಂಡ್ಯಲ್ಲ ಅಪ್ಪನೇ” ಎಂದು ನನ್ನ ಪ್ರಾಯದ ಹಿರಿತನವನ್ನೂ ಮರೆಯುವಂತೆ ಪ್ರೀತಿಯಿಂದ ಉದ್ಗರಿಸುತ್ತಿದ್ದರು ಖಂಡಿತ.

7 comments:

 1. ಜಯಲಕ್ಷ್ಮಿ27 October, 2010 14:23

  ಮೋದೂರಲ್ಲಿಯೇ ಆಗಲಿ,ಜ್ಯೋತಿಯಲ್ಲಿಯೇ ಆಗಲಿ,ಅಥವಾ ದ್ವಾರಕದಲ್ಲಿ ಆಗಲಿ ನಮ್ಮ ಮೋದೂರಜ್ಜಿ ಮತ್ತು ಈ ಚಿತ್ತಿ ಮಾತನಾಡಲು ಕುಳಿತರೆಂದರೆ ಅದನ್ನು ಕೇಳುವುದೆಷ್ಟು ಖುಶಿಯಾಗುತ್ತಿತ್ತು,ನನ್ನ ಮುಖ,ದನಿ,ನಡೆ-ನುಡಿಯಲ್ಲಿ ಇನ್ಯಾರದ್ದೋ ಛಾಯೆಯನ್ನು ಕಾಣುತ್ತಾ ಅದನ್ನು ವಿಮರ್ಶಿಸುತ್ತಿದ್ದರೆ ನನ್ನ ಬಗ್ಗೆಯೇ ಹೆಮ್ಮೆಯೆನಿಸಿ ಬೀಗುತ್ತಿದ್ದೆ.ಗುಟ್ಟಿನ ಮಾತುಗಳಿದ್ದರೆ ಮುಲಾಜಿಲ್ಲದೆ ನಮ್ಮನ್ನು ಆಚೆ ಅಟ್ಟುತ್ತಿದ್ದರು ಈ ಇಬ್ಬರು ಅಜ್ಜಿಯರು.ಅಜ್ಜಿಗಂತೂ ತನ್ನ ಕಷ್ಟದ ದಿನಗಳಲ್ಲಿ ತನಗೆ ಆಸರೆಯಾಗಿದ್ದ ಈ ತಂಗಿಯ ಕುರಿತು ಮಾತಾಡುವುದೆಂದರೆ ಭಾವಾವೇಶವೇ ಬರುತ್ತಿತ್ತು.‘ಜ್ಯೋತಿ’ ಯ ಒಳ ಅಡುಗೆಮನೆಯಲ್ಲಿ ಪ್ರತೀದಿನ ಬೆಳಿಗ್ಗೆ ಅಕ್ಕಿರೊಟ್ಟಿಯನ್ನು ತಟ್ಟುತ್ತಿದ್ದ ಭವಾನಿ ಅತ್ತೆಗೆ ನಮಗೆಲ್ಲ ರೊಟ್ಟಿ ನೀಡುವುದೆಂದರೆ ಭಾರೀ ಖುಷಿ.ಹೂವಿನಂತೆ ಹಗುರಾದ ರೊಟ್ಟಿ,ಅದರೊಂದಿಗೆ ನೀಡುತ್ತಿದ್ದ ಗಜನಿಂಬೆ ಗಾತ್ರದ ಬೆಣ್ಣೆ,ಜೇನು ರಸವೃಷ್ಟಿಯನ್ನೇ ಸೃಷ್ಟಿಸುತ್ತಿದ್ದವು.ಅಂಜನೇಯ ಗುಡಿಯಲ್ಲಿ ನಡೆಯುತ್ತಿದ್ದ ರಾಮೋತ್ಸವಕ್ಕೆ ಇವರಿದ್ದರೆ ಅದರ ಕಳೆಯೇ ಬೇರೆ ಇರುತ್ತಿತ್ತು. ಜ್ಯೋತಿಗೆ ಹೋದಾಗೆಲ್ಲ ಹಾಡು ಮಗುವೇ ಅಂತ ಹಾಡಿಸದೆ ಬಿಡುತ್ತಿರಲಿಲ್ಲ....ಏನು ಹಾಡಿದರೂ ನಮ್ಮ ಮಗುವಲ್ವ ಅಂತ ಮೆಚ್ಚಿ ತಲೆದೂಗುತ್ತಿದ್ದ ನಾನಿ ಯ ಎದುರಿಗೆ ಹಾಡಲು ಯಾವುದೇ ಅಳುಕಾಗುತ್ತಿರಲಿಲ್ಲ.ಸಂಗೀತದಲ್ಲಿ ಆಳವಾದ ಕೇಳ್ಮೆಯ ಪರಿಶ್ರಮ ಇದ್ದ ಅಜ್ಜಿ ನನಗೆ ಎಮ್.ಎಸ್.ಸುಬ್ಬುಲಕ್ಷ್ಮಿಯಂತೆಯೇ ಕಳೆಕಳೆಯಾಗಿ ಕಾಣುತ್ತಿದ್ದರು.ಇವರ ಜೀವನಪ್ರೀತಿ,ಶ್ರಧ್ಧೆ ಎಂದೆಂದಿಗೂ ಮಾದರಿಯಾಗಿ ನಿಲ್ಲುವಂಥದ್ದು.ಮತ್ತೂರು ಕೃಷ್ಣಮೂರ್ತಿ ಮತ್ತು ಹೊಸಹಳ್ಳಿ ಕೇಶವಮೂರ್ತಿಯವರ ಗಮಕ ವಾಚನ-ವ್ಯಾಖ್ಯಾನದ ಅಷ್ಟೂ ಸಂಗ್ರಹವನ್ನು ಕೇಳಿ ಆನಂದಿಸಿ ವಿಮರ್ಶಿಸುತ್ತಿದ್ದುದಲ್ಲದೆ ನನಗೂ ಅದರ ರುಚಿ ಹಿಡಿಸಿಬಿಟ್ಟಿದ್ದರು.೧೧/೨ ತಿಂಗಳ ಹಿಂದೆ ಹೋಗಿದ್ದಾಗ ನಮ್ಮ ಗುರುತು ಹತ್ತಿರದಿದ್ದರೂ ಅದು ಹೇಗೋ ಹೊರಡುತ್ತೇವೆ ಎಂದಾಗ ಬಿಡದೆ ಲಲಿತ,ಸರಸ್ವತಿ ಅತ್ತೆ,ಮತ್ತು ನನ್ನಿಂದ ಹಾಡಿಸಬೇಕೆಂಬುದನ್ನು ಮಾತ್ರ ಮರೆತಿರಲಿಲ್ಲ!!!!ಹಾಡಿದ ಮೇಲೆ ಅವರ ಮುಖದ ಮೇಲೆ ಮುಗ್ಧ ನಗು ನೋಡುವಾಗ ನಮ್ಮ ಕಣ್ಣು ಪಸೆಯಾಗಿತ್ತು.ಈಗ ಹದಿನೈದು ದಿನಗಳ ಹಿಂದೆ ಹೋಗಿದ್ದಾಗ ಮಾತ್ರ ಬೆನ್ನು ಹಾಕಿ ಮಲಗಿದ್ದವರನ್ನು ಎಬ್ಬಿಸುವ ಮನಸ್ಸಾಗಿರಲಿಲ್ಲ.ಬಾಗಿ ನೋಡಿ ನಮಸ್ಕರಿಸಿ ಬಂದಿದ್ದೆ.ಚಿತ್ತಿ,ಭವಾನಿಅತ್ತೆ,ನಾನಿ ಅಂತೆಲ್ಲ ಕರೆಯುತ್ತಿದ್ದೆನೇ ವಿನಃ ನಾನೂ ಅಜ್ಜಿ ಎನ್ನಲಿಲ್ಲ ಇವರನ್ನು!!

  ReplyDelete
 2. ನಾನಂತೂ ಅವರನ್ನು ಬಾಯಿತುಂಬ ಬಾಂತೆಮ್ಮಜ್ಜಿ ಎನ್ನುತ್ತಿದ್ದೆ. ಆದರೆ ಅವರೆದುರಲ್ಲ!

  ReplyDelete
 3. Laxminarayana Bhat P27 October, 2010 17:58

  ಭಾನ್ತೆಮ್ಮ ಮತ್ತು ಅವರಂಥವರು ಸಂದು ಹೋದ ಯುಗಕ್ಕೊಂದು ಭಾಷ್ಯ!! ಅವರೊಡನಾಟದ ಭಾಗ್ಯ ಪಡೆದವರೆಲ್ಲಾ ಪುಣ್ಯಶಾಲಿಗಳು. ನೆನಪಿನ ಶ್ರದ್ಧಾಂಜಲಿ ಹೀಗಿರಬೇಕು.

  ReplyDelete
 4. ನಮಗೆಲ್ಲ ಇವರು ಬಾಂತ್ಯೆಮ್ಮ. ಮಡಿಕೇರಿ ಅಂದರೆ - ಜ್ಯೋತಿ ಮತ್ತು ಧ್ವಾರಕಾ. ಜ್ಯೋತಿಗೆ ಹೋದರೆ ಸಾಕು ಇವರ ಪ್ರೀತಿಯ ಹೊನಲು ಹರಿಯುತ್ತಿತ್ತು - ಮತ್ತೆ ಮತ್ತೆ ಅಲ್ಲಿಗೆ ಕರೆಸುವಂತೆ. ಎಷ್ಟು ಬಾರಿ ಇವರ ಕೈಯ ರೊಟ್ಟಿ ತಿಂದಿಲ್ಲ.
  ಜೀವನದಲ್ಲಿ ಅವರು ಕಂಡ ಕಷ್ಟಗಳನ್ನು ಕೇಳಿ ಬಲ್ಲೆ. ಸಿಡುಬಿನಂಥ ಮಾರಕ ರೋಗಕ್ಕೆ ಕೈಹಿಡಿದವರನ್ನು ಮತ್ತು ಮಗನನ್ನೇ ಬಲಿತೆಗೆದುಕೊಂಡ ನೋವಿನ ನಡುವೆ ತಮ್ಮ ಸುತ್ತ ನೆಮ್ಮದಿಯ ಸಂತೋಷ ಹಂಚಿದವರು ಅವರು. ನನ್ನ ತಂದೆ, ಚಿಕ್ಕಪ್ಪ, ದೊಡ್ದಪ್ಪ, ಎಲ್ಲ ಅತ್ತೆಯರ ಗಡಣದಿಂದ - ಹೆಚ್ಚೇಕೆ ಮಾವ ಜಿಟಿಎನ್ ಅವರಿಂದ - ಜ್ಯೋತಿಯ ಈ "ಭಾಗ್ಯ ದೇವತೆ" ಬಾಂತ್ಯಮ್ಮನವರ ಗುಣಗಾನವನ್ನು ಕೇಳಿದಾಗಲೆಲ್ಲ ಅಜ್ಜಿ ಅಂದರೆ ಹೀಗಿರಬೇಕು ಅನಿಸುತ್ತಿತ್ತು.
  ಆರು ತಿಂಗಳ ಹಿಂದೆ ಮಡಿಕೇರಿಗೆ ಹೋಗಿದ್ದಾಗ ಅವರಿದ್ದುದು ತಮ್ಮ ಕಿರಿಯ ಮಗ ಸದಾಸಿವನ ಮನೆಯಲ್ಲಿ. ಮಲಗಿದ್ದರೂ ನೆನಪು ಚುರುಕಾಗಿತ್ತು. ನೋಡಿದ್ದು ಕಡಿಮೆ - ಆದರೂ ನನ್ನ ಮಗ-ಮಗಳ ಹೆಸರು ಸ್ಪಷ್ಟವಾಗಿ ಅವರಿಗೆ ಗೊತ್ತಿತ್ತು ಮಾತ್ರವಲ್ಲ - ಅವರು ಯಾವ್ಯಾವ ಕ್ಲಾಸಿನಲ್ಲಿ ಕಲಿಯುತ್ತಿದ್ದಾರೆಂದು ಹೇಳಿದಾಗ ನನಗೇ ಅಚ್ಚರಿ. ಅವರಿಗಾಗಿ ಮನೆಗೆ ಬಂತು Wold Space. ಅದಅಂರಲ್ಲಿ ಬರುತ್ತಿದ್ದ ಸಂಗೀತವನ್ನು ಅವರು ಸವಿಯುತ್ತಿದ್ದರು. ಅಂದು ನಾನು ಮಡಿಕೇರಿಗೆ ಹೋದಾಗ Wold Space ನಿಂತು ಹೋದ ಬಗ್ಗೆ ಹೇಳುತ್ತ ಇನ್ನು ಸಂಗೀತ ಸಿಗುವುದಿಲ್ಲ ಅನ್ನುವಾಗ ನೋವು ಇತ್ತು ಆ ದನಿಯಲ್ಲಿ. ನನ್ನಪ್ಪ ವಾರದ ಹಿಂದೆ ಅವರನ್ನು ಒಮ್ಮೆ ನೋಡಿ ಬರಬೇಕು ಅನ್ನುತ್ತಿದ್ದರು. ಬಾಂತ್ಯಮ್ಮ ಇನ್ನಿಲ್ಲ ಅನ್ನುವ ಸುದ್ದಿ ಬಂದಾಗ ಸುಮ್ಮನೆ ಕುಳಿತದ್ದು ಎಲ್ಲ ಹೇಳಿತು.
  ಪ್ರೀತಿಯ ನಾರಾಯಣ, ಮೂರ್ತಿ, ಈಶ್ವರ, ಇವರೆಲ್ಲ ತೀರ ಇತ್ತೀಚೆಗೆ ಅದೇನೋ ತುರ್ತು ಕೆಲಸಗಳಿರುವಂತೆ ಮತ್ತೆ ಬಾರದ ಲೋಕದೆಡೆಗೆ ಪಯಣಿಸಿದಾಗ ಈ ಹಿರಿ ಜೀವ ಅದೆಷ್ಟು ನೋವು ಉಂಡಿರಬೇಡ. ನಮ್ಮೆದುರು ನಮಗಿಂತ ಕಿರಿಯರು ಹೀಗೆಲ್ಲ ಓಡಿದರೆ ಹೇಗೆ - ಎಂದನ್ನಿಸದಿರದೇ? ಇಂದು ಅವರೇ ಆ ದಾರಿಯಲ್ಲಿ ಸಾಗಿದ್ದಾರೆ - ಬಂಧು ಬಾಂಧವರಿಗೆ ಅಸಂಖ್ಯ ನೆನಪುಗಳನ್ನೆಲ್ಲ ಇಲ್ಲಿ ಬಿಟ್ಟು.
  ರಾಧಾಕೃಷ್ಣ

  ReplyDelete
 5. S Raghavendra Bhatta29 October, 2010 17:26

  aatmeyaroo poojyaroo aada smaraNeeya Virijaa Bhavaani ammanavarannu kuritu GTN aaDuttiddada ondu maatantoo endigoo mareyalaare --" Kunti " emba ondE padadinda avara baaLina ella bavaNe bEgudiyannoo baNNisuttidda GTNavarannu nenedu kaNNeeriTTaddu eecheechege Bhavaaniammanavarannu kanDaaga, GTN nenapina MaDikEriya samaarambhakke hOdaaga.
  Nanna maDadiyinda tappade ondaadaroo haaDannu aalisuvaru, aake ivara magaLu Seethe akkana sahapaaThiyaagi samgeeta kaliyuva kaaraNa idaralli beretittu.
  Intha puNyajeeviya kaDeya dinagaLu aSHTEnoo hitavilladaayitaadaroo avara makkaLu mari avara sEve maaDida pari shlaaghaneeya.
  Innu aa jyothi maneyalli ee kunti illa emba satya araglu saakaSHTu kaala hiDideetu, aSHTe.
  Nondu bendu haNNaada haNNu maNNiguduritu;
  nenapina samchi bicchi melluvudondE namma paaliguLiyitu;
  lOkada oLitannEllaa tannalli kooDiTTidda intha jeevigallade mOksha innaarige meesalu !!
  Om shaantih !!
  S Raghavendra Bhatta

  ReplyDelete
 6. ಪ್ರೀತಿಯ ಅಶೋಕ ವರ್ಧನರಿಗೆ ನಮಸ್ಕಾರಗಳು.
  ಬಾಲ್ಯದಿಂದ ನಮ್ಮನ್ನು ಪ್ರೀತಿಮಾಡಿದ್ದವರನ್ನು ಕಳೆದುಕೊಂಡಾಗ ಅವರ ನೆನಪುಗಳನ್ನು ಹಂಚಿಕೊಳ್ಳುವುದು ಅವರ ಪ್ರೀತಿಯ ಮಹತ್ವವನ್ನು ನಾವು ಮತ್ತೆ ಅನುಭವಿಸುವ ಒಂದು ವಿಧಾನ.
  ಅಜ್ಜಿಯೂ ಅಮ್ಮನೂ ಆಗಿದ್ದವರ ಅಗಲಿಕೆಯ ನೆನಪಿನ ಮಹತ್ವ ಈ ಬಗೆಯದು.
  ಬಹುಶಃ ನಾನು ಅವರನ್ನು ನಿಮ್ಮ ಮನೆಗಳಲ್ಲಿ (ಮೈಸೂರು /ಮರಿಕೆ) ನೋಡಿದ್ದೆನೊ ಇಲ್ಲವೊ ತಿಳಿಯದು. ಅವರಿಗೆ ನನ್ನ ಶ್ರದ್ಧಾಂಜಲಿ.

  ಪ್ರೀತಿಯಿಂದ
  ಪಂಡಿತಾರಾಧ್ಯ

  ReplyDelete
 7. ನಮಸ್ಕಾರ,

  ನಿಮ್ಮ ಲೇಖನದ ಒಂದೆರೆಡು ಪದಗಳನ್ನು ಓದುತ್ತಿದ್ದಂತೆಯೇ ಎನ್ ಸಿ ಸಿ ದಿನಗಳು ಪುಸ್ತಕದ ಆ ಪುಟಗಳು ನೆನಪಿಗೆ ಬಂದವು. ಧೀಮಂತ ಬದುಕು.

  ಅವರ ಬಗ್ಗ ೆಮತ್ತಷ್ಟು ತಿಳಿಸಿದ್ದಕ್ಕಾಗಿ ಧನ್ಯವಾದಗಳು

  ವಿಶ್ವಾಶದ,
  ಕೆ ಎಸ ನನೀನ್

  ReplyDelete