08 September 2010

ಬ್ಯಾಂಕ್ ಬ್ಯಾಂಕ್ ಭ್ಯಾಂಘ್!

ಚಲಾವಣೆಗೆ ಬಂದ ಖೋಟಾನೋಟು!

ತಿಂಗಳ ಹಿಂದೆ ಗೆಳೆಯ ಸುಂದರ ರಾವ್ ರಿಸರ್ವ್ ಬ್ಯಾಂಕ್ ಅಧಿಕೃತತೆ ಸಾರುವ ಪರಿಪತ್ರವೊಂದರ ಇ-ಪ್ರತಿಯನ್ನು (ಲಗತ್ತು) ನನ್ನ ಮಿಂಚಂಚೆ ವಿಳಾಸಕ್ಕೆ ನೂಕುತ್ತಾ ಎಚ್ಚರಿಸಿದ್ದರು. ಆ ಪತ್ರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬೀಐ) ಮಹೇಂದ್ರ ಕೊಟಕ್ ಬ್ಯಾಂಕಿನ ಯಾರದೋ ಪತ್ರವನ್ನು ಉದ್ದೇಶಿಸಿ ಕೊಟ್ಟ ಸ್ಪಷ್ಟೀಕರಣ. ಸಾರಾಂಶ - ಪಾಕಿಸ್ತಾನದ ಕೆಟ್ಟಬುದ್ಧಿಯಲ್ಲಿ ಅಸಂಖ್ಯ ಕಳ್ಳನೋಟುಗಳು ಭಾರತದಲ್ಲಿ ಚಲಾವಣೆಗೆ ಬಂದಿವೆ. ಅದರಲ್ಲೂ ಮುಖ್ಯವಾಗಿ ಸಾವಿರರೂಪಾಯಿ ನೋಟುಗಳಲ್ಲಿ 2AQ ಮತ್ತು 8AC ಸೀರೀಸಿನ ಬಗ್ಗೆ - ಎಚ್ಚರೆಚ್ಚರ!ಸಹಜವಾಗಿ ಅಂದು ನನ್ನಂಗಡಿಯಲ್ಲಿ ಸಂಗ್ರಹವಾದ ನೋಟುಗಳಲ್ಲಿ ಹುಡುಕಿದಾಗ ಒಂದು ‘ಸಂಶಯಿತ’ ಸಿಕ್ಕಿತು. ಆದರದು ಸೀರೀಸ್ ಸಂಖ್ಯೆ ಬಿಟ್ಟು ಉಳಿದಂತೆ ನನ್ನ ಪರೀಕ್ಷೆಗಳಲ್ಲಿ ಸಾಚಾ ಎಂದು ಉತ್ತೀರ್ಣಗೊಂಡು ‘ಇತರರೊಡನೆ’ ಎಂದಿನಂತೆ ಬ್ಯಾಂಕಿಗೆ ಹೋಯ್ತು. ಆದರೆ ಬ್ಯಾಂಕ್‌ನಲ್ಲಿ ಆಗಲೇ ‘ಕಳ್ಳಗೇಟ್’ ಹಾಕಿದ್ದರು. ನನಗೆ ಬಂದ ಪತ್ರದ ಪ್ರತಿಗಳೇ ಬ್ಯಾಂಕ್ ವಲಯದಲ್ಲೆಲ್ಲ ಸಂಚಲನ ಉಂಟು ಮಾಡಿಯಾಗಿತ್ತು. ನನ್ನ ಬ್ಯಾಂಕಿನ ಪ್ರಧಾನ ಕಛೇರಿಯೇ ಆ ಎರಡು ಸೀರೀಸಿನ ನೋಟುಗಳನ್ನು ತಿರಸ್ಕರಿಸಲು ಆದೇಶ ಹೊರಡಿಸಿತ್ತು!

“ಈ ನೋಟಿನ ಚಹರೆಗಳೆಲ್ಲಾ ಸಾಚಾ ಇದೆ. ಆದರೆ ಆದರೆ...” ಎಂದು ಶಾಖಾ ವರಿಷ್ಠ ತಡವರಿಸಿ “ನೋಟಿನಲ್ಲಿರುವ ಮುದ್ರಿತ ರುಜು ಮಾಡಿದಾತ ಈ ಶ್ರೇಣಿ ಹೊರಡುವಾಗ ಅಧಿಕಾರದಲ್ಲಿರಲಿಲ್ಲ” ಎಂಬ ವಿನೂತನ ಸತ್ಯ ಹೊರಗೆಡಹಿದರು. ಆ ವ್ಯಕ್ತಿ ಅಯೋಗ್ಯನಲ್ಲ, ಒಂದು ಕಾಲಘಟ್ಟದಲ್ಲಿ ರುಜುಮಾಡುವ ಅಧಿಕಾರಿಯಾಗಿದ್ದದ್ದೂ ಹೌದು. ಆದರೆ ಪಸ್ತುತ ನೋಟು ಜ್ಯಾರಿಗೊಳ್ಳುವ ಕಾಲಕ್ಕೆ ಅಧಿಕಾರಿಯಾಗಿರಲಿಲ್ಲ ಎನ್ನುವುದಷ್ಟೇ ನಮ್ಮ ಬ್ಯಾಂಕ್ ಶಾಖಾಧಿಕಾರಿಯ ಮಾತು! ಉಷ್, ನೋಟನ್ನು ಸವರಿ ನೋಡಿ, ಬೆಳ್ಳಿರೇಖೆ ನೋಡಿ, ಬೆಳಕಿಗೊಡ್ಡಿ ನೋಡಿ, ಅರೆ ಮಡಚಿ ಓರೆಯಲ್ಲಿ ನೋಡಿ, ಹಿಂದೊಂದು ಮುಂದೊಂದು ನೀರಕಲೆ ನೋಡಿ ಎನ್ನುವಲ್ಲಿಗೂ ಸಾಮಾನ್ಯನ ಜವಾಬ್ದಾರಿ ಮುಗಿಯಲಿಲ್ಲ; ಪ್ರತಿ ನೋಟು ರುಜು ಮಾಡಿದಾತನ (ರಿಸರ್ವ್ ಬ್ಯಾಂಕಿನ ಗವರ್ನರ್ ಅಥವಾ ಹಣಕಾಸು ವಿಭಾಗದ ಕಾರ್ಯದರ್ಶಿ) ಪ್ರವರವನ್ನೂ ಒರೆಗೆ ಹಚ್ಚಬೇಕು. ಈ ಕುರಿತು ರಿಸರ್ವ್ ಬ್ಯಾಂಕಿನ ಘೋಷಣೆ ಅಥವಾ ಪ್ರತಿ ಬ್ಯಾಂಕ್ ಸಾಮಾನ್ಯನಿಗೆ ಮಾಹಿತಿ ಮುಟ್ಟಿಸಿ ಎಚ್ಚರಿಸುವ ಕ್ರಮಗಳನ್ನೇನು ಮಾಡಿದೆ ಎಂದು ನಾನು ಪ್ರಶ್ನಿಸಿದೆ. “ಇಲ್ಲ, ಸ್ಥಳೀಯವಾಗಿ ನನಗೆ ಪ್ರಧಾನ ಕಛೇರಿಯ (ಸಾರ್ವಜನಿಕಕ್ಕೆ ಕೊಡಲಾಗದ ಗೌಪ್ಯ) ಆದೇಶವೊಂದೇ ಆಧಾರ. ವಾಸ್ತವದಲ್ಲಿ ನಾನು ಈ ನೋಟನ್ನು ನಿಮಗೆ ಮರಳಿಸುವುದಿದ್ದರೂ ಹರಿದೇ ಕೊಡಬೇಕು. ಹಾಗೆ ಮಾಡುತ್ತಿಲ್ಲ.” ಸಂಶಯಿತರೆಲ್ಲ ಅಪರಾಧಿಗಳಲ್ಲವಲ್ಲ ಎನ್ನುವ ನನ್ನ ವಾದಕ್ಕೆ ಮ್ಯಾನೇಜರರಿಂದ ಗೌರವವೇನೋ ಸಿಕ್ಕಿತು, ಆದರೆ ವಿಷಾದಪೂರ್ವಕವಾಗಿ ಸಂಶಯಿತ ನೋಟು ಮಾತ್ರ ನನಗೇ ವಾಪಾಸು ಬಂತು. ಸಾಲದ್ದಕ್ಕೆ “ನಿಮ್ಮ ಆಕ್ಷೇಪ, ಆರೋಪಗಳೇನಾದರೂ ಇದ್ದರೆ ದಯವಿಟ್ಟು ನಮ್ಮ ಶಾಖೆಯ ಉಲ್ಲೇಖ ಬೇಡ” ಮ್ಯಾನೇಜರರ ಪ್ರಾರ್ಥನೆ.

ಅಂತರ್ಜಾಲದಲ್ಲಿ ರಿಸರ್ವ್ ಬ್ಯಾಂಕಿನ ಪುಟಗಳನ್ನು ಜಾಲಾಡಿದರೂ ವಿಚಾರಿಸಲು ಯಾವುದೇ ಪರಿಣಾಮಕಾರಿ ಸಂಪರ್ಕಗಳು ಕಾಣಲಿಲ್ಲ. ಆಗ ಅದೃಷ್ಟವಶಾತ್ ನನಗೆ ನನ್ನ ಬ್ಯಾಂಕಿನ ವರಿಷ್ಠರ ಆತ್ಮೀಯ ಪರಿಚಯ ನೆನಪಿಗೆ ಬಂತು. ಕೂಡಲೇ ದೂರವಾಣಿಸಿದೆ. ಅವರು ನನ್ನ ಮಾತನ್ನು ಕಾಳಜಿಯಿಂದ ಕೇಳಿ, “ದಯವಿಟ್ಟು ಒಂದು ಮಿನಿಟು ಲೈನಿನಲ್ಲಿರಿ” ಎಂದು ಮರೆಯಲ್ಲಿಟ್ಟು, ಒಳ ಸಂಪರ್ಕದ ದೂರವಾಣಿಯಲ್ಲಿ ಸೂಕ್ತ ಸಹಾಯಕರಲ್ಲಿ ಜಿಜ್ಞಾಸೆ ನಡೆಸಿ, ಕೂಡಲೇ ಪರಿಹಾರ ಕೊಟ್ಟರು. “ಚಲಾವಣೆಯಲ್ಲಿರುವ ಆರ್ಬೀಐ ಪತ್ರ ಸ್ವಯಂ ಸ್ಪಷ್ಟವಿರುವಂತೆ ಆರ್ಬೀಐ ಆದೇಶ ಪತ್ರವಲ್ಲ. ಕೇವಲ ಒಂದು ಬ್ಯಾಂಕ್ ವಿಚಾರಿಸಿದ್ದಕ್ಕೆ ಕೊಟ್ಟ ಸಲಹೆ ಮಾತ್ರ. ಅದರ ಇ-ಪ್ರತಿಯನ್ನು ಆ ಬ್ಯಾಂಕ್‌ನ ಸಿಬ್ಬಂದಿಯೋರ್ವ ವೈಯಕ್ತಿಕ ನೆಲೆಯಲ್ಲಿ (ತನ್ನ ಯೂನಿಯನ್ನಿನ ಮಿತ್ರರ ಅವಗಾಹನೆಗೆಂದು) ಪ್ರಚಾರಕ್ಕೆ ಬಿಟ್ಟದ್ದು ಅನವಶ್ಯಕ ಉತ್ಸಾಹಿ ಅಧಿಕಾರಿಗಳಿಂದ ನಮ್ಮಲ್ಲೂ ಸೇರಿದಂತೆ ಕೆಲವು ಬ್ಯಾಂಕುಗಳಲ್ಲಿ ಆದೇಶವಾಗಿಯೇ ಹೊರಹೊಮ್ಮಿದೆ. ಕ್ಷಮಿಸಿ, ಈಗಾಗಲೇ ನಮ್ಮ ಅಕೌಂಟ್ಸ್ ವಿಭಾಗ ಯುಕ್ತ ಆದೇಶ ಹೊರಡಿಸಿದೆ. ನಿಮ್ಮದೂ ಸೇರಿದಂತೆ ಆ ಶ್ರೇಣಿಯ ಯಾವುದೇ (ಸಾಚಾ) ನೋಟುಗಳನ್ನು ಬ್ಯಾಂಕ್ ಹಿಂದಿನಂತೇ ಮನ್ನಿಸುತ್ತದೆ.” ಐದು ಮಿನಿಟು ಕಳೆದು ನನ್ನ ಶಾಖಾ ಮ್ಯಾನೇಜರ್ ನನಗೆ ದೂರವಾಣಿಸಿ, ಕ್ಷಮಾಕೋರಿಕೆಯೊಡನೆ ಆ ನೋಟನ್ನು ಮನ್ನಿಸಿದರು.

ಕಾರ್ಡುಜ್ಜುವ ಯಂತ್ರ ಅಥವಾ ತೆನ್ನಾಲಿಯ ಸುಟ್ಟ ಮುಸುಡಿನ ಬೆಕ್ಕು (ಅಥವಾ ಮೂರ್ಖನಿಗೆ ಮೂರು ಕಡೆ)

೧. ಹಣ ನಿಮ್ಮದು, ಸ್ವಾಮ್ಯ ನಮ್ಮದು:

ಕ್ರೆಡಿಟ್ ಕಾರ್ಡ್ ಅಥವಾ ನಗದು ಇಲ್ಲದ ವ್ಯಾಪಾರ ಎನ್ನುವ ಕಲ್ಪನೆ ಇನ್ನೂ ನನ್ನ ತಲೆಹೊಕ್ಕದ ದಿನಗಳಲ್ಲೇ (ಸುಮಾರು ಹತ್ತಿಪ್ಪತ್ತು ವರ್ಷಗಳ ಹಿಂದೆ) ಅಂತಾರಾಷ್ಟ್ರೀಯ ಖ್ಯಾತಿಯ ಸಿಟಿ ಬ್ಯಾಂಕಿನ ಏಜಂಟ್ ಒಬ್ಬ ಬಂದು ಭೈರಿಗೆ ಹಾಕಿದ. “ನಮ್ಮ ಯಂತ್ರ ಒಂದನ್ನು ನಮ್ಮದೇ ವ್ಯವಸ್ಥೆಯಲ್ಲಿ ನಿಮ್ಮಂಗಡಿಯಲ್ಲಿಡುತ್ತೇವೆ. ಅದಕ್ಕೆ ತಿಂಗಳಾ ಇನ್ನೂರು ಮುನ್ನೂರರ ಸಣ್ಣ ಬಾಡಿಗೆಯೋ ಅಥವಾ ಅದರ ಮೂಲಕವಾದ ವ್ಯಾಪಾರದಲ್ಲಿ ಶೇಕಡಾ ಹತ್ತರ ದರದಲ್ಲಿ ಪಾಲೋ ಕೊಟ್ಟರೆ ಸಾಕು” ಎಂದ. ಆ ಬ್ಯಾಂಕ್ ತನ್ನೆಲ್ಲಾ ಶಾಖೆಗಳ ಮತ್ತು ಗಿರಾಕಿಗಳ ಮೂಲಕ ನನ್ನಂಗಡಿಗೆ ಪ್ರಚಾರ ಕೊಡುತ್ತದೆ. ಮತ್ತೇನು, ಎಲ್ಲೆಲ್ಲಿನ ಪುಸ್ತಕಾಸಕ್ತರು, ಮುಖ್ಯವಾಗಿ ವಿದೇಶೀ ಗಿರಾಕಿಗಳೆಲ್ಲಾ ನನ್ನಂಗಡಿಗೇ ಮುಕುರುತ್ತಾರೆ ಎನ್ನುವ ಬಹುವರ್ಣ ಚಿತ್ರ ಕೊಟ್ಟ. “ನೀವವರಿಗೆ ಶೇಕಡಾ ಹತ್ತೋ ಹದಿನೈದೋ ರಿಯಾಯ್ತೀ ಕೊಡಬೇಕು. ಎಷ್ಟೂಂತ ತಿಳಿಸಿ, ಅದನ್ನೂ ನಾವು ಪ್ರಚಾರದಲ್ಲಿ ಹೇಳಿರುತ್ತೇವೆ. ಆಮೇಲೆ ಎಲ್ಲಾ ವಿದೇಶೀ ಪ್ರವಾಸಿಗರೂ ದೇಶೀ ಸ್ಟಾರ್ ಪ್ರವಾಸಿಗರೂ ನಿಮ್ಮಲ್ಲಿಗೆ ಬರುತ್ತಾರೆ. . . .” ಇತ್ಯಾದಿ ಕೊರೆದದ್ದೇ ಕೊರೆದದ್ದು. ಎಲಾ ಇವ್ನಾ, ಬರಿಯ ಆ ಬ್ಯಾಂಕಿನ ಯಂತ್ರಕ್ಕೆ ಗೌರವವಲ್ಲ, ನನ್ನಲ್ಲಿ ಯಂತ್ರ ಬಳಸಿದ ಗಿರಾಕಿಗಳ ಮಟ್ಟದಲ್ಲೂ ನನಗೇ ಕತ್ತರಿ (Discount). ಯಾರಿಗೆ ಪುಸ್ತಕ ಮಾರಬೇಕು, ಹೇಗೆ ವ್ಯಾಪಾರ ಹೆಚ್ಚಿಸಿಕೊಳ್ಳಬೇಕು ಎಂಬುದನ್ನು ಸ್ವಂತ ಕಾಲಮೇಲೆ ನಿಲ್ಲಲಾಗದ, ಕೇವಲ ಕಮಿಶನ್ ಮೇಲೆ ಬದುಕಿದವನಿಂದ ಕೇಳಬೇಕೇ (ಉಪದೇಶ ಪಾಂಡಿತ್ಯಕ್ಕೆ ಸೋಲುವುದಿದ್ದರೆ ನಾನಾಗಲೇ ಹತ್ತು ಮಠಗಳಿಗೆ ನಾ ನಿನ್ನ ದಾಸನೋ ದಯಾ ಸಾಗರಾ ಎಂದು ಶರಣುಹೊಕ್ಕಿಯಾಗುತ್ತಿತ್ತು!) ಎಂಬ ಕೋಪ ಸಿಡಿದು, ನಾನವನಿಗೆ ಬಾಗಿಲು ತೋರಿಸಿದ್ದೆ.

ಅದಾಗಿ ಎಷ್ಟೋ ವರ್ಷಗಳ ಮೇಲೆ “Do you accept cards? Can I swipe the card?” ಎಂಬಿತ್ಯಾದಿ ಬೇಡಿಕೆಗಳು ಹೆಚ್ಚುತ್ತಾ ಇದ್ದ ದಿನಗಳಲ್ಲಿ ಎಚ್.ಡಿ.ಎಫ಼್.ಸಿ ಬ್ಯಾಂಕಿನ ಏಜಂಟನೊಬ್ಬ ನನಗೆ ತಗುಲಿಕೊಂಡ. ಇವನದು ಸರಳ ಸೂತ್ರ. “ಕಾರ್ಡು ಉಜ್ಜುವ ಯಂತ್ರ ನಮ್ಮದು. ನಮ್ಮ ಶಾಖೆಯಲ್ಲಿ ರೂ ಐದೋ ಹತ್ತೋ (ನನಗೀಗ ನೆನಪಿಲ್ಲ) ಸಾವಿರದ ಕನಿಷ್ಠ ಶಿಲ್ಕು ಇರುವಂತೆ ನೀವೊಂದು ಚಾಲ್ತಿ ಖಾತೆ ತೆರೆದಿರಬೇಕು. ಮತ್ತೆ ನೀವು ಕಾರ್ಡುಜ್ಜಿ ಪಡೆಯುವ ವ್ಯಾಪಾರದಲ್ಲಿ ಶೇಕಡಾ ಎರಡೂವರೆ ದರದಲ್ಲಿ ಕಮಿಶನ್ ವಜಾ ಮಾಡಿ ನಿಮ್ಮ ಖಾತೆಗೆ ಜಮಾ ಮಾಡುತ್ತೇವೆ.” ಕಾಲದ ಮಹಿಮೆಯನ್ನು ಸ್ವಲ್ಪವಾದರೂ ಮನ್ನಿಸುವ ಒಳ್ಳೆ ಬುದ್ಧಿಯಿಂದ ಒಪ್ಪಿದೆ. ಅವರ ಸ್ಥಳೀಯ ಶಾಖೆಯಲ್ಲಿ ಒಂದೇ ವಾರದಲ್ಲಿ ನನ್ನ ಚಾಲ್ತಿ ಖಾತೆಯೇನೋ ಶುರುವಾಯ್ತು. ಆದರೆ ಎರಡು ಮೂರು ನೆನಪಿನ ಕರೆಗಳ ಮೇಲಷ್ಟೇ ಅಂದರೆ ಸುಮಾರು ಮೂರು ತಿಂಗಳ ವಿಳಂಬದಲ್ಲಿ ಉಜ್ಜುವ ಯಂತ್ರ (card swiping machine ಅಥವಾ EDC machine) ನನ್ನ ಮೇಜನ್ನು ಅಲಂಕರಿಸಿತು. ಅಂಗಡಿಯಲ್ಲಿ ಎಲ್ಲರ ಗಮನ ಸೆಳೆಯುವಂತೆ ಬ್ಯಾಂಕಿನವರೇ ಧಾರಾಳ ಕೊಟ್ಟ ‘We accept cards’ ಅಂಟುಚೀಟಿ ಹಚ್ಚಿದ್ದಾಯ್ತು. ನನ್ನಲ್ಲಿ ಕಾರ್ಡು ಬಳಕೆ ಪರಿಚಯದ ದಿನಗಳಾದ್ದರಿಂದ ಏನೋ ಚಿಲ್ಲರೆ ವಹಿವಾಟು ಆಗುತ್ತಿತ್ತು.

ಸುಮಾರು ಮೂರು ತಿಂಗಳು ಕಳೆಯುತ್ತಿದ್ದಂತೆ ಬ್ಯಾಂಕಿನ ವಲಯ ಕಛೇರಿಯಿಂದ (ಬೆಂಗಳೂರು) ಒಂದು ಪ್ರೇಮ ಪತ್ರ ಬಂತು. ‘ಆರು ತಿಂಗಳ ಸರಾಸರಿಯಲ್ಲಿ ನಿಮ್ಮ ಮಾಸಿಕ ವಹಿವಾಟು ನಮ್ಮ ನಿರೀಕ್ಷೆಯ ಮಟ್ಟಕ್ಕೆ ಬಂದಿಲ್ಲ. ಹಾಗಾಗಿ ಮಾಸಿಕ ಬಾಡಿಗೆ ದರ ನಿಗದಿಸಿದ್ದೇವೆ, ಸಹಕರಿಸಿ.’ ನಾನು ಕೂಡಲೇ ಬೆಂಗಳೂರಿಗೆ ಉತ್ತರಿಸಿ ಯಥಾಪ್ರತಿಯನ್ನು ಮಂಗಳೂರು ಶಾಖೆಗೂ ರವಾನಿಸಿದೆ. ಸಾರಾಂಶ ‘೧. ಒಪ್ಪಂದದ ದಾಖಲೆಗಳಿಗೆ ಆರು ತಿಂಗಳಾಗಿರಬಹುದಾದರೂ ಯಂತ್ರ ಚಾಲನೆಗೆ ಬಂದು ಕೇವಲ ಮೂರೇ ತಿಂಗಳಾಗಿದೆ

೨. ನಿಮ್ಮ ಮಾಸಿಕ ವಹಿವಾಟಿನ ‘ನಿರೀಕ್ಷೆ’ಯನ್ನು ನನಗೆ ಮೊದಲು ತಿಳಿಸಿರಲಿಲ್ಲ ಮತ್ತು ಈಗಲೂ ತಿಳಿಸಿಲ್ಲ (ಸಾಲದು ಎಂದರೆ ಎಷ್ಟಾಗಬೇಕಿತ್ತು ಎಂದು ತಿಳಿಸಬೇಡವೇ?) ೩. ಮಾಸಿಕ ಬಾಡಿಗೆ ೨.೫% ಕಮಿಶನ್ನಿನ ಜೊತೆಗೋ ಅಥವಾ ಅದೊಂದೆಯೋ? ನಿಮ್ಮ ‘ನಿರೀಕ್ಷೆ’ ಎಷ್ಟಾದರೂ ಇರಲಿ, ನಾನು ಆ ಮಿತಿ ದಾಟಿದಂದು ಬಾಡಿಗೆ ರದ್ದುಪಡಿಸುತ್ತೀರೋ? ೪. ಇದು ಪರಸ್ಪರ ವಿಶ್ವಾಸದ ಮೇಲೆ ನಡೆಯುವ ವಹಿವಾಟು ಅಲ್ಲ ಎಂದಾದರೆ ನೀವು ನಿಮ್ಮ ಯಂತ್ರವನ್ನು ವಾಪಾಸು ತರಿಸಿಕೊಳ್ಳಬಹುದು.’ ಮೂರನೇ ದಿನವೇ ಯಂತ್ರ ಅಳವಡಿಸಿದ್ದ ಬ್ಯಾಂಕ್ ಪ್ರತಿನಿಧಿಯೇ ಬಂದು ಯಂತ್ರ ವಾಪಾಸೊಯ್ದ. ಒಂದು ಸ್ಪಷ್ಟೀಕರಣ, ಒಂದು ಸೌಜನ್ಯದ ಮಾತಿಗೂ ಬರಬಂದ ಎಚ್.ಡಿ.ಎಫ್.ಸಿ ಶಾಖೆಗೆ ನಾನು ಕೂಡಲೇ ಧಾವಿಸಿ ಪೂರ್ತಿ ಹಣ ತೆಗೆದು ಖಾತೆ ಮುಚ್ಚಿದೆ. ಅಲ್ಲೇ ತಾರಸಿ ಮೂಲೆಯಲ್ಲಿದ್ದ ಹಲ್ಲಿ ಮಾತ್ರ ಲೊಚಗುಟ್ಟಿತು.

ಮಾತು ಕೃತಿಗಳ ನಡುವಣ ಕಂದರ!:

ಎಚ್ಡೀಎಫ಼್ಸೀ ಬ್ಯಾಂಕಿಗೆ ಅರ್ಜಿ ಕೊಟ್ಟು ಯಂತ್ರಕ್ಕೆ ಕಾಯುತ್ತಿದ್ದ ದಿನಗಳಲ್ಲೇ ಯು.ಟಿ.ಐ ಬ್ಯಾಂಕಿನ ಶಾಖಾಧಿಕಾರಿ ಮತ್ತು ಅಲ್ಲಿನ ಕಾರ್ಡುಜ್ಜುವ ಯಂತ್ರದ ವಿಸ್ತರಣಾಧಿಕಾರಿ ಅಂಗಡಿ ಅಂಗಡಿ ಸುತ್ತುತ್ತ ನನ್ನಲ್ಲಿಗೂ ಬಂದಿದ್ದರು. ಶೇಕಡಾ ೧.೫ ಯಲ್ಲಿ ತಾವು ಕೊಡುವುದಾಗಿ, ಶೂನ್ಯ ಶಿಲ್ಕಿನ (zero balance) ಚಾಲ್ತಿ ಖಾತೆ ತೆರೆದರೆ ಸಾಕೆಂದೂ ಹೇಳಿದರು. “ಎರಡು ತಿಂಗಳು ಮೊದಲು ಬರಬಾರದಿತ್ತೇ” ಎಂದು ರಾಗ ತೆಗೆದು ಅವರನ್ನು ಸಾಗಹಾಕಿದ್ದೆ. ಆದರೀಗ ಅನಿರೀಕ್ಷಿತವಾಗಿ ತಯಾರಿದ್ದೇನೆಂದು ನಾನು ಯುಟಿಐ ಶಾಖೆಗೆ ಹೋಗಿ ಒಪ್ಪಿಸಿಕೊಂಡೆ. ಮೂರು ಮೇಜು ಸುತ್ತಿಸಿ, ಚೀಟಿಯ ಮೇಲೆ ನನ್ನ ಹೆಸರು, ವಿಳಾಸವನ್ನಷ್ಟೇ ತೆಗೆದುಕೊಂಡು “ಸೂಕ್ತ ಅಧಿಕಾರಿಯನ್ನು ನಿಮ್ಮಲ್ಲಿಗೇ ಕಳಿಸುತ್ತೇವೆ” ಎಂದು ನನ್ನನ್ನು ಸಾಗಹಾಕಿದರು! ಎರಡು ವಾರಕ್ಕೂ ಮಿಕ್ಕು ಕಾದದ್ದೇ ಬಂತು, ಯುಟಿಐ ಪ್ರತಿನಿಧಿ ಬರಲೇ ಇಲ್ಲ. ಖಾಯಂ ಬರಲೇ ಇಲ್ಲ ಎಂದಲ್ಲ, ನಾಲ್ಕೋ ಐದೋ ತಿಂಗಳ ಮೇಲೊಂದು ದಿನ ಬಂದ.  ಆದರೆ ಆ ವೇಳೆಗೆ ಏನಾಗಿತ್ತೆಂದರೇ...

ಐಸಿಐಸಿಐ ಬ್ಯಾಂಕ್ ಪ್ರತಿನಿಧಿ ರಂಗ ಪ್ರವೇಶಿಸಿದ್ದ! ಈ ಬ್ಯಾಂಕಿನ ಸಹಜ ಸ್ತರ ಏನೋ ನನಗೆ ತಿಳಿಯಲೇ ಇಲ್ಲ. ಈ ಪ್ರತಿನಿಧಿಗೆ ನನ್ನಲ್ಲಿದ್ದ ಎಚ್.ಡಿ.ಎಫ್.ಸಿ ಕಟು ಅನುಭವ ಮೀರುವ ಅನಿವಾರ್ಯತೆ ಇತ್ತು. ನನ್ನ ಯೂಟಿಐ ಕನಸು ಸುಳ್ಳು ಮಾಡುವ ತುರ್ತೂ ಇತ್ತು. ಚೌಕಾಸಿಯಲ್ಲಿ (ಇದಕ್ಕೆ ಇಂಗ್ಲಿಶಿನಲ್ಲಿ ಸುಂದರ ಪದಪುಂಜ - competitive terms) ಯೂಟಿಐ ನಿಯಮಗಳನ್ನೇ ತಾನು ಕೊಡುವುದಾಗಿಯೂ ಅವರಿಗಿಂತ ಚುರುಕಾಗಿ ಸಂಪರ್ಕ ಕಲ್ಪಿಸುವುದಾಗಿಯೂ ಪ್ರಾಮಿಸಿದ (ಪ್ರಮಾಣ ಮತ್ತು  primiseಗಳ ಕಸಿಪದ)! ಒಂದೇ ವಾರದಲ್ಲಿ ನಾನು ಐಸಿಐಸಿಐನ ಘನ ಖಾತೇದಾರ (ಶಿಲ್ಕು ಸಾಂಕೇತಿಕ ಒಂದು ಸಾವಿರ ರೂಪಾಯಿ). ಸುಮಾರು ಎರಡು ದಶಕಗಳಿಗೂ ಮಿಕ್ಕು ಖಾಸಗಿ ಬ್ಯಾಂಕಿನ ಚಾಲ್ತಿ ಖಾತಾದಾರನಾದ ನನಗೆ ಸಂಸ್ಥೆಯ, ಮಾಲಿಕನ ಹೆಸರು ಮುದ್ರಣಗೊಂಡೇ ಬಂದ ಚೆಕ್ ಬುಕ್. ರಟ್ಟು ಮಾಸಿ, ಬೈಂಡು ಕಿತ್ತುಹೋದರೂ ಒಳಗೆ ಕಾಟು ಹೊಡೆದು, ಇಂಕಿನಚಿತ್ತು ಮೂಡಿ, ದಿನಕ್ಕೊಂದು ಕಾರಕೂನನ ಕೋಳಿಕಾಲಕ್ಕರದ ನಮೂದುಗಳು ತುಂಬಿದ ಪಾಸ್ ಪುಸ್ತಕ ನೋಡಿ ಬೇಸತ್ತವನಿಗೆ ಎಲ್ಲ ಗರಿಗರಿ ಕಂಪ್ಯೂಟರ್ ಕರಾಮತ್ತಿನ ಪಾಸ್ ಪುಸ್ತಕ. ನಾನು “ಜೈಹೋ” ಘೋಷಣೆ ಹಾಕುವುದಷ್ಟೇ ಬಾಕಿ; ಯಂತ್ರ ಬರಲಿಲ್ಲ. ಮುಂದೆ ‘ಒಂದೇ ವಾರದಲ್ಲಿ’ ಎಂದ ಮಾತಿಗೆ ಬ್ಯಾಂಕ್ ಸಿಬ್ಬಂದಿ ಕೊಟ್ಟ ಅರ್ಥ ವೈವಿಧ್ಯ ಶೇಣಿ ಗೋಪಾಲಕೃಷ್ಣ ಭಟ್ಟರನ್ನೂ ನಿಸ್ಸಂದೇಹವಾಗಿ ಸೋಲಿಸುತ್ತಿತ್ತು. ತಿಂಗಳು ಎರಡಾದರೂ ಯಂತ್ರ ಬರಲಿಲ್ಲ. ಬದಲು ಪ್ರತ್ಯಕ್ಷನಾದ ಇನ್ನೊಬ್ಬ ಮಾಯಗಾರ, ಬಾಬ್ ಕಾರ್ಡ್ಸ್ ಪ್ರತಿನಿಧಿ. ಆ ಪುಣ್ಯ ಕಥೆಗೂ ಮೊದಲು ಐಸಿಐಸಿಐ ಚುಟುಕದಲ್ಲಿ ಮುಗಿಸಿಬಿಡುತ್ತೇನೆ. ಸಾವಿರ ರೂಪಾಯಿಗೆ ಒಂದು ಸ್ವಪಾವತಿ ಚೆಕ್ ಜೊತೆಗೊಂದು ಖಾತೆ ಮುಚ್ಚಲು ಪತ್ರ ಹಿಡಿದುಕೊಂಡು ಹೋದೆ. ಮೊದಲು ಹಣ ತೆಗೆದೆ. ಅನಂತರ ಮ್ಯಾನೇಜರ್ ಎನ್ನುವವರನ್ನು (ಅವರ ಹೊಸ ನಮೂನೆಯ ವ್ಯವಸ್ಥೆಯಲ್ಲಿ ಸಂಸ್ಥೆಯ ವರಿಷ್ಠನೂ ಕನಿಷ್ಠನೂ ಬಯಲಲ್ಲೆ ಇದ್ದು, ಅವರಿವರನ್ನು ಕೇಳಿ ತಿಳಿದುಕೊಳ್ಳಬೇಕಾಯ್ತು) ಭೇಟಿಯಾಗಿ ಪತ್ರ, ಚೆಕ್ ಪುಸ್ತಕ ಕೊಟ್ಟು, ರಸೀದಿ ಪಡೆದು ಬಂದೆ. ಆ ಸಂಸ್ಥೆ ಎಷ್ಟು ದೊಡ್ಡದೆಂದರೆ, ತಿಂಗಳು ಒಂದೋ ಎರಡೋ ಕಳೆದ ಮೇಲೆ ನನ್ನ ಪತ್ರದ ಪರಿಣಾಮ ಸ್ವಲ್ಪ ಆಗಿರಬೇಕು. ಯಾರೋ ದೂರವಾಣಿಸಿ, “ನೀವು ಖಾತೆ ಮುಚ್ಚಿದ್ದು ಸರಿ. ಆದರೆ ಅದಕ್ಕೆ ಸೇವಾಶುಲ್ಕ ಕೊಟ್ಟಿಲ್ಲವಲ್ಲಾ.” ನಾನು ಸ್ವಲ್ಪ ಏರಿಸಿದ ಧ್ವನಿಯಲ್ಲೇ “ನಾನು ಒಂದೇ ವಾರದಲ್ಲಿ ನೀವು ಕೊಡುವ ಕಾರ್ಡುಜ್ಜುವ ಯಂತ್ರಕ್ಕಾಗಿ ಖಾತೇದಾರನಾದವ. ತಿಂಗಳು ಎರಡು ಕಳೆದರೂ ನಿಮ್ಮ ಯಂತ್ರ ಬರಲಿಲ್ಲ ಎನ್ನುವ ಕಾರಣ ಕೊಟ್ಟದ್ದು ಇನ್ನೊಮ್ಮೆ ಓದಿಕೊಳ್ಳಿ” ಎಂದು ಹೇಳಿ ಕುಕ್ಕಿದೆ. ಇನ್ನೂ ದೊಡ್ಡ ತಮಾಷೆ ಕೇಳಿ. ಏಳೆಂಟು ತಿಂಗಳು ಕಳೆದ ಮೇಲೆ (ವರ್ಷ ಎರಡು ಕಳೆದ ಮೇಲೂ ಮತ್ತೊಮ್ಮೆ) ಐಸಿಐಸಿಐನ ಕಾರ್ಡ್ ವಿಭಾಗದಿಂದ ದೂರವಾಣಿಯಲ್ಲಿ “ನಮ್ಮ ಕಾರ್ಡುಜ್ಜುವ ಯಂತ್ರ ಹೇಗಿದೆ” ಎಂಬ ವಿಚಾರಣೆ ಬಂದದ್ದಂತೂ ಬ್ಯಾಂಕಿನ ಕಾರ್ಯಕ್ಷಮತೆಗೆ ಹಿಡಿದ ನಿಮ್ನ ದರ್ಪಣ ಎನ್ನಲೇಬೇಕು!

ಮೂರಕ್ಕೆ ಮುಕ್ತಾಯ ಅಥವಾ ಮೀಸೆ ಮಣ್ಣಾಯ್ತು: ಬ್ಯಾಂಕ್ ಆಫ್ ಬರೋಡಾ ರಾಷ್ಟ್ರೀಕೃತ ಬ್ಯಾಂಕ್. ಇದು ತನ್ನ ಕಾರ್ಡ್ ವಹಿವಾಟುಗಳನ್ನು ಸ್ವಾಯತ್ತಗೊಳಿಸಿ ಬಾಬ್ ಕಾರ್ಡ್ಸ್ ಎಂಬ ಸಹಸಂಸ್ಥೆಯನ್ನೇ ನಡೆಸುತ್ತಿದೆ. ಅದರ ಮಂಗಳೂರ ಸ್ಥಾನಿಕ ಪ್ರತಿನಿಧಿ (ಅಂದರೆ ಬೆಂಗಳೂರಿನ ಕಛೇರಿಯ ಮಂಗಳೂರು ಕಾರುಭಾರಿ) “ಯಂತ್ರ ಬೇಕೇ ಯಂತ್ರಾಆಆಆ” ಎಂದು ಅದೊಂದು ದಿನ ನನ್ನೆದುರು ಹಾಜರಾದ. ನಾನು ಎಚ್.ಡಿ.ಎಫ್.ಸಿಯ ವ್ಯಥೆ, ಯೂಟೀಐಯ ಭ್ರಮೆ, ಐಸಿಐಸಿಐ ಕಥೆ ಹೇಳಿದೆ. ಈತ ಹೆಚ್ಚು ನಂಬಿಕೆಗೆ ಅರ್ಹನಂತಿದ್ದ. ನಿಯಮಗಳು ಮತ್ತಷ್ಟು ಉದಾರ. ಖಾತೆಯ ಕ್ಯಾತೆಯೇ ಇಲ್ಲ. ಅರ್ಜಿಗೆ ರುಜು ಮಾಡಿ ವಾರದಲ್ಲಿ ಯಂತ್ರ ಹಾಜರ್. ಯಾವುದೇ ಅನ್ಯ ಶುಲ್ಕಗಳಿಲ್ಲದೆ ಕೇವಲ ಶೇಕಡಾ ಒಂದೂವರೆ (೧.೫%) ದರದ ಕಮಿಶನ್ ಹಿಡಿದು, ಪ್ರತಿ ದಿನದ ಕಾರ್ಡ್ ವಹಿವಾಟಿನ ಮೊತ್ತ ಮರು ದಿನದ ಕೊರಿಯರಿನಲ್ಲಿ ಡ್ರಾಫ್ಟ್ ಮೂಲಕ ಪಾವತಿ. ಖಾತ್ರಿಪಡಿಸಿಕೊಂಡೆ - ಡ್ರಾಫ್ಟ್ ಮತ್ತು ಕೊರಿಯರ್ ವೆಚ್ಚವೂ ಅವರದೇ. ಹೇಗೂ ಐಸಿಐಸಿಐ ಸಂಬಂಧ ಕುದುರಿರಲಿಲ್ಲ, ಮೊದಲೇ ಹೇಳಿದಂತೆ ಮುಚ್ಚಿ ಬಂದೆ. ಬಾಬ್ ಕಾರ್ಡ್ಸ್ ಜೊತೆಗೆ ಒಪ್ಪಂದಕ್ಕೆ ರುಜು ಮಾಡಿದೆ.

ವಾರವೇನು, ಮೂರೇ ದಿನದಲ್ಲಿ ಯಂತ್ರ ಬಂತು. ಸುಮಾರು ಒಂದು ತಿಂಗಳ ಕಾಲ, ಏನೇ ಚಿಲ್ಲರೆ ವಹಿವಾಟು ನಡೆದಿರಲಿ ಮರುದಿನ ಕೊರಿಯರಿನಲ್ಲಿ ಡ್ರಾಫ್ಟ್ ಕರಾರುವಾಕ್ಕಾಗಿ ಹಾಜರ್. ಅದೊಂದು ದಿನ ಆ ಪ್ರತಿನಿಧಿ ಬಂದವನು ಮೊದಲು ನನ್ನೆಲ್ಲಾ ಅನುಕೂಲಗಳನ್ನು ವಿಚಾರಿಸಿಕೊಂಡ. ಅನಂತರ ತಮಗೆ ಬೀಳುವ ಅನಾವಶ್ಯಕ ವೆಚ್ಚ ನಿವಾರಿಸಲು ಬ್ಯಾಂಕ್ ಆಫ್ ಬರೋಡಾದಲ್ಲಿ ಒಂದು ಚಾಲ್ತಿ ಖಾತೆ ತೆರೆಯಬಹುದೇ ಎಂದು ಮನವಿ ಮಾಡಿಕೊಂಡ. ನಾನು ಸಂತೋಷದಲ್ಲೇ ನಡೆಸಿಕೊಟ್ಟೆ, ಸಂಬಂಧ ಗಟ್ಟಿಯಾಯ್ತು. ಬ್ಯಾಂಕಿನಲ್ಲಿ ನಾನು ಎಂದೂ ಖಾತಾ ವಿವರ ತಿಳಿಸುವ ಪತ್ರ ಕೇಳಿ ಪಡೆಯಬಹುದಿತ್ತಾದರೂ ತಿಂಗಳಿಗೊಮ್ಮೆ ಎಂಬ ಶಿಸ್ತು ಬೆಳೆಸಿಕೊಂಡೆ. ಹಾಗೆ ಬಂದ ಪತ್ರವನ್ನು ಕೂಲಂಕಷವಾಗಿ ತನಿಖೆಗೂ ಒಳಪಡಿಸುತ್ತಿದ್ದೆ. ತೀರಾ ಅಪರೂಪಕ್ಕೆ ಒಂದೆರಡು ತಪ್ಪಾದದ್ದಿತ್ತು. ಆದರೆ ನಾನು (ಬ್ಯಾಂಕ್ ಮೂಲಕ) ಅದನ್ನು ತೋರಿಸಿಕೊಟ್ಟಾಗ ಒಂದೆರಡೇ ದಿನಗಳಲ್ಲಿ ಕಾರ್ಡ್ಸ್ ವಿಭಾಗ ಕ್ಷಮಾಪೂರ್ವಕವಾಗಿ ತಿದ್ದಿಕೊಂಡದ್ದೂ ಆಗಿತ್ತು. ಸುಮಾರು ಎಂಟು ತಿಂಗಳನಂತರ, ಎಲ್ಲರಿಗೂ ತಿಳಿದಂತೆ ಕೇಂದ್ರ ಸರಕಾರದ ವಿತ್ತ ಸಚಿವಾಲಯ ಬ್ಯಾಂಕ್ ಸೇವಾಶುಲ್ಕಗಳ ಮೇಲೊಂದು ಕರ ಹೇರಿತು. ಸಹಜವಾಗಿ ಬಾಬ್ ಕಾರ್ಡ್ಸ್ ಅದನ್ನು ಗಿರಾಕಿಗಳ ಮೇಲೆ ವರ್ಗಾಯಿಸುವ ಅನಿವಾರ್ಯತೆಯನ್ನು ಪತ್ರ ಮೂಲಕ ನಿವೇದಿಸಿಕೊಂಡಿತು. ಅದರಿಂದ ನನ್ನ ಶೇಕಡಾ ಒಂದೂವರೆಯ ದರ ಸುಮಾರು ಒಂದೂ ಮುಕ್ಕಾಲಕ್ಕೆ ಏರುವುದಿತ್ತು. ಅದನ್ನೂ ನಾನು ಸಹಜವಾಗಿಯೇ ಒಪ್ಪಿ ಅನುಮತಿ ಪತ್ರ ರುಜುಮಾಡಿಕೊಟ್ಟೆ. ಎಲ್ಲಾ ಸುಮಾರು ಎರಡು ವರ್ಷಕಾಲ ಮಧುರವಾಗಿಯೇ ನಡೆದಿತ್ತು. ಆದರೆ. . .

ಅದೊಂದು ತಿಂಗಳ ಖಾತಾ ವಿವರದಲ್ಲಿ ಸುಮಾರು ಒಂದು ಸಾವಿರದ ಆರ್ನೂರಾ ಐವತ್ನಾಲ್ಕು ರೂಪಾಯಿಯಷ್ಟು ಹೆಚ್ಚುವರಿ ಕಡಿತವಾಗಿತ್ತು. ಬ್ಯಾಂಕ್ ಮೂಲಕ ನನ್ನ ವಿಚಾರಣೆಗೆ ಪ್ರತಿಕ್ರಿಯೆ ಬರಲಿಲ್ಲ. ಆ ವೇಳೆಗೆ ಮಂಗಳೂರು ಸ್ಥಾನಿಕ ಪ್ರತಿನಿಧಿ ಹುದ್ದೆಯನ್ನೇ ಕಾರ್ಡ್ಸ್ ವಿಭಾಗ ವಜಾ ಮಾಡಿರುವುದೂ ನನಗೆ ತಿಳಿಯಿತು. ಹಿಂದೆಲ್ಲಾ ನನ್ನ ಮಿಂಚಂಚೆಗೆ ಸ್ಪಂದಿಸುತ್ತಿದ್ದ ಬೆಂಗಳೂರು ವಿಭಾಗ ಈಗ ಯಾಕೋ ಜಡವಾಗಿದೆ ಎಂದನ್ನಿಸಿತು. ವಿ(ದ್ಯುನ್ಮಾನ) ಅಂಚೆಯಾದ್ದರಿಂದ ವಿಳಂಬ, ಅನಿಶ್ಚಿತತೆ ಮತ್ತು ಪ್ರತ್ಯೇಕ ವೆಚ್ಚದ ಭಯವಿಲ್ಲದೆ ನಾನು ವಾರ, ಎಂಟು ದಿನಕ್ಕೊಮ್ಮಯಂತೆ ಮೂರು ನೆನಪಿನೋಲೆಗಳನ್ನು ಬರೆಯುತ್ತಾ ಹೋದೆ. ಪತ್ರದಿಂದ ಪತ್ರಕ್ಕೆ (ಸುಸಂಸ್ಕೃತ ಚೌಕಟ್ಟಿನೊಳಗೇ) ಭಾಷೆಯನ್ನು ಕಟುಗೊಳಿಸುತ್ತಾ ಹೋದೆ. ನಾಲ್ಕೋ ಐದನೆಯದೋ ಪತ್ರದ ವೇಳೆಗೆ ಬಾಬ್ ಕಾರ್ಡ್ಸ್, ಬೆಂಗಳೂರಿನಿಂದ ಒಂದು ಹೆಣ್ಣು ಧ್ವನಿ ದೂರವಾಣಿ ಕರೆ ಮಾಡಿತು. ಅದು ಸರಳವಾಗಿ ‘ನಮ್ಮ ಲೆಕ್ಕ ತಪ್ಪಿಲ್ಲ. ಅದು ಪರಿಷ್ಕೃತ ಕಮಿಶನ್ ದರದ ಪ್ರಕಾರ ನಿಮ್ಮ ಹಳೆಬಾಕಿ ವಸೂಲಿ’ ಎಂದಿತು. ನಾನು “ಹಾಗಾದ್ರೆ ಆ ದರ ಎಷ್ಟು? ನನಗೆ ಮೊದಲೇ ತಿಳುವಳಿಕೆ ನೀಡಿಲ್ಲ ಯಾಕೆ? ನನ್ನ ಪತ್ರ ಮತ್ತು ಮೂರು ನೆನಪಿನೋಲೆಗಳಷ್ಟು ದೀರ್ಘ ವಿಳಂಬ ಯಾಕೆ?” ಇತ್ಯಾದಿ ಪ್ರಶ್ನಾಪ್ರವಾಹಕ್ಕೆ ಆಕೆ ಕೊಚ್ಚಿ ಹೋದಳು. “ದಯವಿಟ್ಟು ನಿಮ್ಮ ದೂರಿನ ಮುದ್ರಿತ ಪ್ರತಿ ಕಳಿಸಿಕೊಡಿ” ಎಂದು ತಲೆ ಉಳಿಸಿಕೊಂಡಳು.

ಸರಿ, ಎಲ್ಲವನ್ನೂ ಕ್ರೋಢೀಕರಿಸಿ ಪತ್ರ ಬರೆದು, ಕೊರ್ಯರಿನಲ್ಲಿ ಕಳಿಸಿಕೊಟ್ಟೆ. ಬೆನ್ನಿಗೆ ಕಾಲಕಾಲಕ್ಕೆ ಎರಡು ವಿ-ಅಂಚೆಯ ನೆನಪಿನೋಲೆಯನ್ನೂ ಕಳಿಸಿದ ಮೇಲೆ ಒಂದು ದಾಖಲೆ ಎನ್ನಿಸಿಕೊಳ್ಳಲು ಯೋಗ್ಯವಾಗದ ಸ್ಥಿತಿಯ ಒಂದು ಪತ್ರ ಬಂತು. ಅದರಲ್ಲಿನ ಸಾರಾಂಶ - ನನ್ನಿಂದ ‘ಕನಿಷ್ಠ ಲಾಭದಾಯಕ ವಹಿವಾಟು’ (MPT = minimum profitable transaction) ಆಗುತ್ತಿಲ್ಲವಾದ್ದರಿಂದ ತಿಂಗಳ ಬಾಡಿಗೆ ವಿಧಿಸಿದ್ದಾರೆ. ಈ ಕ.ಲಾ.ವದ ಪ್ರಸ್ತಾಪವೇ ನನಗೆ ಹೊಸತು. ಇದರ ದರ ಎಷ್ಟು? ನನಗೆ ಮೊದಲೇ ತಿಳುವಳಿಕೆ ನೀಡಿಲ್ಲ ಯಾಕೆ? ನನ್ನ ಪತ್ರ ಮತ್ತು ಮೂರು ನೆನಪಿನೋಲೆಗಳಷ್ಟು ದೀರ್ಘ ವಿಳಂಬ ಯಾಕೆ? ಇತ್ಯಾದಿ ಮುದ್ರಿತ ಪತ್ರವನ್ನೂ ಜೊತೆಗೆ ವಿ-ಪ್ರತಿಯನ್ನೂ ಕೂಡಲೇ ರವಾನಿಸಿದೆ. ಅವರಿಂದ ವಿ-ಪತ್ರ ಮೂಲಕ ಅ-ಸ್ಪಷ್ಟನೆ ಬಂತು. ‘ಮಾಸಿಕ ಬಾಡಿಗೆ ಅಥವಾ ಏರಿದ ಕಮಿಶನ್ ದರದಲ್ಲಿ ಆಯ್ಕೆ ನಿಮ್ಮದು.’ ನಾನು ಉತ್ತರದಲ್ಲಿ, ಪ್ರಸ್ತುತ ಸಮಸ್ಯೆಯನ್ನು ಬಗೆಹರಿಸದೆ ಮುಂದಿನ ಯೋಜನೆಯನ್ನು ನನ್ನೆದುರು ಒಡ್ಡುವುದು ನ್ಯಾಯವಲ್ಲ. ನನಗೆ ತಿಳುವಳಿಕೆ ನೀಡದೆ ವಸೂಲು ಮಾಡಿದ್ದರಿಂದ ವಾಪಾಸು ಬರಬೇಕಾದ ರೂ ೧೬೫೪, ಅದಕ್ಕೆ ಇಷ್ಟು ಕಾಲದ ಸರಳ ಬಡ್ಡಿ, ಪತ್ರ ವ್ಯವಹಾರದ ಖರ್ಚು ಮತ್ತು ವ್ಯಾಪಾರ ನಷ್ಟಗಳಿಗೆ ಹಕ್ಕೊತ್ತಾಯ ಮಂಡಿಸಿದೆ. ಇಲ್ಲವಾದರೆ ಯಂತ್ರ ಮರಳಿಸಿ, ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದೂ ಸೇರಿಸಿದೆ. ಇದರ ಯಥಾ ಪ್ರತಿಯನ್ನು ಮುಂಬೈ ಪ್ರಧಾನ ಕಛೇರಿಗೂ ಕಳಿಸಿದೆ.

ಬಾಬ್ ಕಾರ್ಡ್ಸ್ ಪರವಾಗಿ ಯಂತ್ರ ಒದಗಿಸಿ, ನಿರ್ವಹಣೆ ಮಾಡುತ್ತಿದ್ದ ಏಜನ್ಸಿ (ಎಚ್.ಡಿ.ಎಫ಼್.ಸಿಗೂ ಇವರೇ!) ಒಮ್ಮೆಲೇ ಬಂದು ಯಂತ್ರ ಕಳಚಿಕೊಂಡು ಒಯ್ದರು. ಈ ವ್ಯಾಜ್ಯ ಸುರುವಾದಂದಿನಿಂದ ನಾನದರ ಬಳಕೆ ನಿಲ್ಲಿಸಿದ್ದೆ. ಆ ಯಂತ್ರದಿಂದ ನನಗೆ ಬೇರೇನೂ ಉಪಯೋಗವಿಲ್ಲದಿದ್ದರೂ ನನಗೆ ಬರಬೇಕಾದ ಮೊತ್ತಕ್ಕೆ ಅಡವಿಟ್ಟುಕೊಳ್ಳಬಹುದು ಎಂದು ಯೋಚಿಸಿದರೋ ಏನೋ! ಮತ್ತೆ, ಮತ್ತೆ ಮೌನ.

ಬ್ಯಾಂಕ್ ಬಳಕೆದಾರರ ಹಿತರಕ್ಷಣೆಗಾಗಿರುವ ಸಂಸ್ಥೆ - ಬ್ಯಾಂಕರ್ಸ್ ಓಂಬುಡ್ಸ್‌ಮನ್ ವಿಳಾಸ ಗೆಳೆಯ ಅಡ್ಡೂರು ಕೃಷ್ಣರಾವ್ ಮೂಲಕ ಪತ್ತೆ ಮಾಡಿ ಬರೆದೆ. ನನ್ನ ಹತಾಶೆಗೆ ಗಡಿಯಿಲ್ಲದಂತೆ ಓಂಬುಡ್ಸ್‌ಮನ್ನಿಂದ ಉತ್ತರ ತರಿಸಲು ಮತ್ತೆ ಕೆಲವು ನೆನಪಿನೋಲೆಗಳು ಹೋಗಬೇಕಾಯ್ತು. ಹಾಗೂ ಬಂದದ್ದೇನು? ಬೇಕೋ ಬೇಡವೋ ಎಂಬಂತೆ ಸಾದಾ ಅಂಚೆಯಲ್ಲಿ ಒಂದು ಚುಟುಕು - ಓಂಬುಡ್ಸ್‌ಮನ್ ಸಂವಿಧಾನದ (ಅದು ಎಲ್ಲಾ ಬ್ಯಾಂಕ್ ಬಳಕೆದಾರರೂ ತಿಳಿದಿರತಕ್ಕದ್ದು ಎಂಬ ಧ್ವನಿಯಿತ್ತು) ಯಾವುದೋ ಪರಿಚ್ಛೇದದ ಎಷ್ಟನೆಯದೋ ಕಲಮಿನಂತೆ ನನ್ನ ಮನವಿ ತಿರಸ್ಕೃತವಾಗಿತ್ತು! ನಾನು ಮತ್ತೆ ಕೆಲವು ಬ್ಯಾಂಕ್ ಮಿತ್ರರನ್ನು ಒಗಟು ಬಿಡಿಸಲು ಕೇಳಿಕೊಂಡೆ - ಅವರೆಲ್ಲ ಪ್ರಾಮಾಣಿಕವಾಗಿ ಅಸಹಾಯಕರು. ನಾನು ಮುಂದೇನು ಮಾಡಬೇಕೆಂಬ ಅರಿವೇ ಇಲ್ಲದೆ ಕುಳಿತಿದ್ದೆ. ಓಂಬುಡ್ಸ್‌ಮನ್ನಿನಿಂದ ಬಹಳ ನಿಧಾನವಾಗಿ ಇನ್ನೊಂದೇ ಸ್ವಲ್ಪ ಉದ್ದದ ಪತ್ರ ಬಂತು. ಸಾರಾಂಶ - ಪೂರ್ವ ನಿದರ್ಶನಗಳು ಇಲ್ಲದ ವ್ಯಾಜ್ಯವನ್ನು ಓಂಬುಡ್ಸ್‌ಮನ್ ತಿರಸ್ಕರಿಸಬಹುದು. ಸ್ವಾಯತ್ತ ಸಂಸ್ಥೆ ಬಾಬ್ ಕಾರ್ಡ್ಸ್ ಬ್ಯಾಂಕ್ ಪರಿಮಿತಿಯಲ್ಲಿ ಬರುವುದೂ ಇಲ್ಲ ಎನ್ನುವುದನ್ನು ನನಗಿನ್ಯಾರೋ ತಿಳಿಸಿದ ಮೇಲೆ (ಇದರ ನಿಜಾನಿಜಗಳನ್ನು ನಾನು ಶ್ರುತಪಡಿಸಿಕೊಂಡಿಲ್ಲ) ನನಗುಳಿದದ್ದು ಒಂದೇ ದಾರಿ - ನ್ಯಾಯಾಲಯ. ಆದರೆ ಇದಕ್ಕೆ ಬೇಕಾದ ಸಮಯ, ಹಣ (೧೬೫೪ಕ್ಕೂ ಎಷ್ಟೋ ಪಟ್ಟು ಮಿಗಿಲು) ಮತ್ತು ಎಲ್ಲಕ್ಕೂ ಮುಖ್ಯವಾಗಿ ತಾಳ್ಮೆ ನನಗಿಲ್ಲವಾದ್ದರಿಂದ ಕೈಚೆಲ್ಲಿದ್ದೇನೆ. ಜನತಾ ನ್ಯಾಯಾಲಯವೆಂದು ಬ್ಲಾಗಿಗೇರಿಸಿದ್ದೇನೆ. ಇಲ್ಲಿ ವೈಯಕ್ತಿಕವಾಗಿ ನನ್ನ ಅಹವಾಲಿಗೆ ತೀರ್ಮಾನ, ಪರಿಹಾರ ಕೇಳುತ್ತಿಲ್ಲ. ಅನ್ವಯಿಸಿಕೊಳ್ಳಬಲ್ಲರಿಗೆ ನನ್ನ ಸೋಲು ಯಶಸ್ಸಿನ ದಾರಿಯಲ್ಲಿ ‘ಪೂರ್ವ ನಿದರ್ಶನ’ವಾಗಿ ದಕ್ಕುವುದಿದ್ದರೆ ನಾನು ಧನ್ಯ; ಇದೂ ಒಂದು ಲೆಕ್ಕದಲ್ಲಿ ಸಾಮಾಜಿಕ ನ್ಯಾಯವೇ.

10 comments:

 1. ಕಾರ್ಡ್ ಉಜ್ಜುವ ಸೌಲಭ್ಯ ಒದಗಿಸುವ ಅಂಗಡಿಗಳವರ ಫಜೀತಿಗಳು ತಿಳಿದಿರಲಿಲ್ಲ. ಲೇಖನ ಓದಿದ ಮೇಲೆ ಅವರಿಗೆ 'ಛೆ, ಅಯ್ಯೋ ಪಾಪ' ಎಂದಷ್ಟೇ ಹೇಳಬಲ್ಲೆ. ನಾನೂ ಒಬ್ಬ ಕಾರ್ಡ್ ಬಳಕೆದಾರ (1993ರಿಂದ). ಹೆಚ್ಚುಕಮ್ಮಿ ಪ್ರತೀ ತಿಂಗಳೂಆದರೆ ಅವರ ದುಬಾರಿ ಬಡ್ಡಿ 2 ಬಾರಿ ಮಾತ್ರ ಅನಿವಾರ್ಯವಾದ್ದರಿಂದ ಕಟ್ಟಿದ್ದೇನೆ. ಸೇವಾನ್ಯೂನತೆಗಳಿಗೆ ಕುರಿತಾದ ದೂರುಗಳಿಗೆ ಸ್ಪಂದಿಸುವ ವಿಷಯದಲ್ಲಿ 'ಕ್ಷಿಪ್ರ' ಅಂದರೆ 3 ವರ್ಷ ಎಂದು ಯಾರೋ ಹೇಳಿದ್ದನ್ನು ಕೇಳಿದ್ದೇನೆ

  ReplyDelete
 2. I knew first part of this story I enjoyed 3/4 of story as most of it was Happy ending, But BOB card is very scary and sad part. I always thought Banking Ombudsman is good and efficient (as I dint had any first hand experience). now I think most of these authorities are formed to provide employment rather than to help consumer.
  Recently I started fighting in air against a Reliance Gen. Insurance company , which increased premium from 3728 to 14319 after 3 years for my Medeclaim. I wanted to complain IRDA, as I was watching lot of Advertisement of it on TV. I was dreaming that IRDA will start helping within few hours. When I searched on Internet found their web site found Toll Free No. too, happily dialed 155255 and it was not existing.,Then I searched for email Id , to my surprise they had different categories Life, Gen.... etc I was happy sad part is I found out for everything they had same email id !! Now I am waiting for reply..........

  ReplyDelete
 3. Sir really nice article
  we will have some lesson about money
  thanks sir

  ReplyDelete
 4. ಪ್ರೀತಿಯ ಅಶೋಕ್,
  ನನಗೆ ಮೊದಲು ಅಚ್ಚರಿ ಹುಟ್ಟಿಸಿದ್ದು ನಿಮ್ಮ ಔದಾರ್ಯ! ಯಾವತ್ತೂ ಈ ಒಳ ಖರ್ಚಿನ ಬಗ್ಗೆ (ಶೇಕಡಾ ವಾರು ಕಮಿಶನ್) ಕೇಳಿದರೂ ನೀವು ಹೇಳಿರಲಿಲ್ಲ. ಮತ್ತು ನಿಮಗೆ ಇದೆಲ್ಲ ಅಷ್ಟು ಇಷ್ಟವಿಲ್ಲದಿದ್ದರೂ ನನ್ನಂಥ ಕೆಲವೇ ಕೆಲವು ಗಿರಾಕಿಗಳಿಗಾಗಿ ನೀವು ಮತ್ತೆ ಮತ್ತೆ ಈ ಬ್ಯಾಂಕುಗಳಿಗೆ ಎಡತಾಕಿದ್ದೂ ನನಗೆ ಆಶ್ಚರ್ಯ ಹುಟ್ಟಿಸಿತು. ವಿಚಿತ್ರವೆಂದರೆ ಖಡಕ್ ನಿಷ್ಠುರವಾದಿ (ಮೀಸೆಯ ಪಾಲಿದೆ ಇದರಲ್ಲಿ) ಮತ್ತು ಹಠವಾದಿ ಎಂದೆಲ್ಲ ನಿಮ್ಮನ್ನು ತಪ್ಪು ತಿಳಿದುಕೊಂಡಿರುವ ಹಲವರಿಗೆ ನೀವು ಕೂಡಾ ಪುಸ್ತಕ ಕಟ್ಟಿ ಕೊಡುತ್ತಿರುವುದು, ಡಿಸ್ಕೌಂಟು ಕೂಡ ಕೊಟ್ಟಿರುವುದು, ಹೀಗೆ ವೈಯಕ್ತಿಕವಾಗಿ ನಿಮಗೆ ಕ್ರೆಡಿಟ್ ಕಾರ್ಡ್ ಬಗ್ಗೆ ಅಂಥ ಸಮಾಧಾನವಿಲ್ಲದಿದ್ದರೂ ಪುಸ್ತಕ ಪ್ರೇಮಿಗಳ ಅನುಕೂಲಕ್ಕಾಗಿ ನಿಮ್ಮ ಹಠ ಬಿಟ್ಟುಕೊಟ್ಟು ಪ್ರಯತ್ನಿಸಿರುವುದು ಮುಂತಾಗಿ ಗೊತ್ತೇ ಇಲ್ಲ! ನಿಮ್ಮ ಎದುರು ಚೀಲವಿಲ್ಲದೇ ಬಂದು ಪುಸ್ತಕ ಕೊಳ್ಳುತ್ತಿರುವ ನಾವೇ ಹಠ‘ಮಾರಿ’ಗಳು!

  ನಿಜ ಹೇಳಬೇಕೆಂದರೆ ನೀವು ಕ್ರೆಡಿಟ್ ಕಾರ್ಡ್ ವ್ಯವಹಾರಕ್ಕೆ ನಿಲುಗಡೆ ಹಾಕಿದಾಗ ನನಗೆ ಸ್ವಲ್ಪ ಬೇಸರವಾಗಿತ್ತು....ಒಳ್ಳೆಯ ಪುಸ್ತಕಗಳು ಕಣ್ಣಿಗೆ ಬಿದ್ದಾಗ ಕೈಯಲ್ಲಿ ದುಡ್ಡಿಲ್ಲದಿದ್ದರೂ ತಡೆದುಕೊಳ್ಳುವುದು ನನಗೆ ಕಷ್ಟ! ಅದಕ್ಕಿಂತ ಮುಖ್ಯವಾಗಿ ಆಗಾಗ ಅತ್ರಿಗೆ ಬರುತ್ತಾ ಇರುವುದು ಸಾಧ್ಯವಾಗುತ್ತಿತ್ತು ಈ ಕ್ರೆಡಿಟ್ ಕಾರ್ಡಿನಿಂದ. ತಿಂಗಳಿಗೊಮ್ಮೆ ಬರುತ್ತಿದ್ದರೆ ಒಳ್ಳೆಯ ಪುಸ್ತಕಗಳು ಬಂದಿದ್ದೂ ಹೋಗಿದ್ದೂ ಎರಡೂ ಗೊತ್ತಾಗುವುದಿಲ್ಲ ಎನ್ನುವ ನೋವು ಇನ್ನೊಂದೆಡೆ.

  ಪುಸ್ತಕದಂಗಡಿಗೂ ಟೀವಿ, ಫ್ರಿಜ್, ಬಟ್ಟೆಬರೆ ಮಾರುವವರಿಗೂ ಈ ಕನಿಷ್ಠ ಲಾಭದಾಯಕ ವ್ಯವಹಾರದ ಮಿತಿಯನ್ನು ಒಂದೇ ಮಾನದಂಡದಿಂದ ನಿಗದಿಪಡಿಸಿದ್ದಾರೆ ಅನಿಸುತ್ತದೆ ನೋಡಿದರೆ. ನಾನೂ ಯಾವತ್ತೂ ಕ್ರೆಡಿಟ್ ಕಾರ್ಡ್ ವ್ಯವಹಾರಕ್ಕೆ ಬಡ್ಡಿ ಕೊಟ್ಟವನಲ್ಲ. ದೂರು ದಾಖಲಿಸಿ ಅವರ ತಲೆತಿಂದ ಉದಾಹರಣೆಗಳು ಹತ್ತಾರಿವೆ. ಪ್ರತೀ ಬಾರಿ ನಾನೇ ಗೆದ್ದಿದ್ದೇನೆ ಎನ್ನುವುದು ಅಹಂಕಾರವಲ್ಲ, ನನ್ನ ತಪ್ಪಿರಲಿಲ್ಲ ಅಷ್ಟೇ. ನಿಮ್ಮ ವಿಷಯದಲ್ಲಿ ತಪ್ಪು ನಿಮ್ಮದಲ್ಲದಿದ್ದರೂ ನೀವು ದಂಡ ಕೊಡುವಂತಾಗಿದ್ದು ಗೊತ್ತು. ಇದು ವ್ಯವಸ್ಥೆಯ ಸಮರ್ಥ ನಿರ್ವಹಣೆಯಲ್ಲಿನ ದೋಷವೇ ಹೊರತು ಕ್ರೆಡಿಟ್ ಕಾರ್ಡ್ ಎಂಬ ವ್ಯವಸ್ಥೆಯದ್ದಲ್ಲ ಎನ್ನುವುದು ನನ್ನ ನಂಬಿಕೆ. ಯಾಕೆಂದರೆ, ನಾನು ಈ ವ್ಯವಸ್ಥೆಯ ಗರಿಷ್ಠ ಉಪಯೋಗ ಮಾಡುತ್ತ ಬಂದಿದ್ದು ನನ್ನೆಲ್ಲಾ ಆನ್‌ಲೈನ್ ಖರೀದಿಗೆ ಇದು ನೀಡಿದ ಒತ್ತಾಸೆ ಅಷ್ಟಿಷ್ಟಲ್ಲ.

  ನಿಮಗೆ ಅನಗತ್ಯ ಹೊರೆ ಹೊರಿಸಿದ ಬ್ಯಾಂಕ್ ತನ್ನ ತಪ್ಪು ಅರಿಯುವಂತಾಗಲು ನನ್ನಂಥ ಬಳಕೆದಾರರು ಏನಾದರೂ ಮಾಡಲು ಸಾಧ್ಯವಿದೆಯೇ ಎನ್ನುವುದನ್ನು ತಿಳಿಸುತ್ತೀರಾ?
  ನಿಮ್ಮ
  ನರೇಂದ್ರ.

  ReplyDelete
 5. ಸುಮಾರು ಅಂಗಡಿಯವರು ನಮ್ಮನ್ನು A T M ಗೆ ಕಳಿಸುವುದುಂಟು.ಅದು ಯಾಕೆಂದು ಈಗ ಗೊತ್ತಾಯ್ತು .

  ReplyDelete
 6. ಬರಹದ ಶೈಲಿ ಮೋಜೆನಿಸಿದರೂ ಬ್ಯಾಂಕುಗಳ ಅವಸ್ಥೆ ನೋಡಿ ಬೇಸರವಾಯಿತು. ಸಿಟ್ಟೂ ಬಂತು.

  ReplyDelete
 7. Years ago Andhra Bank went on asking for a payment for a purchase made thro' their card, without bothering to see the proof I was sending. The reminders ceased when legal action was mentioned.

  ReplyDelete
 8. DEAR SIR,
  I NEVER KNEW THE DARK SIDE OF THESE CARDS TILL NOW...
  REALLY SAD TO HEAR YOUR BITTER EXPERIENCES OF BANKING WITH THE CARDS...

  ReplyDelete
 9. ಉತ್ತಮ ಸರ್ವಕಾಲಿಕ ಲೇಖನ. ಈ ಬ್ಯಾಂಕ್ ವಿಷಯಗಳಲ್ಲಿ ತಮಗೆ ತಿಳಿಯದೆ ಹಲವು ತೊಂದರೆ ಸಿಲುಕಿ ಹಾಕಿಕೊಂಡವರ ಅನುಭವ ಕೇಳಿದರೆ ಹಲವು ಇರುತ್ತದೆ. ಹೆಚ್ಚಿನ ನಿಯಮಾವಳಿಗಳು ಅನುಭವಿಸಿದನಂತರವೇ ತಿಳಿವ ಅಪಾರದರ್ಶಕ ನಿಯಮಗಳು.
  ಕೆಲವು ವರ್ಷಗಳ ಮೊದಲು ಸಿಟಿ ಭ್ಯಾಂಕ್ ಉಳಿತಾಯ ಖಾತೆ ನನ್ನಲ್ಲಿತ್ತು. ಯಾವುದೋ ಏಜಂಟ್ ಓರ್ವನ ಮೂಲಕ ಗಂಟು ಬಿದ್ದ ಖಾತೆಯದು. ಏನೊ, ಈ ಏಜಂಟ್ ಗಳು ಹೇಳುವಾಗ ಬಹು ಆಕರ್ಷಕವಾಗಿ ಕಾಣುವ ಯೋಜನೆಗಳು ಅನುಭವಿಸಿದಾಗ ತುಂಬ ಆಧ್ವಾನವಾಗಿಬಿಡುತ್ತವೆ. ಕನಿಷ್ತ ಉಳಿತಾಯ ಮೊತ್ತದ ನಿಯಮಾವಳಿ ಇಲ್ಲ. ವರ್ಷಕ್ಕೊಮ್ಮೇ ರೂ. ೫೦೦ ಜಮೆ ಮಾಡಿದರಾಯಿತು.ಉಚಿತ ಡೆಬಿಟ್ ಕಾರ್ಡು. ಸೇರಿದ ಕೆಲವೇ ದಿನಗಳಲ್ಲಿ ನಮ್ಮ ಹೆಸರು ಹೊಂದಿ ಚೆಕ್ ಪುಸ್ತಕ, ಬಣ್ಣಬಣ್ಣದ ಡೆಬಿಟ್ ಕಾರ್ಡು ..

  ತೊಂದರೆ ಶುರು ಆದದ್ದೇ ಅಲ್ಲಿಂದ. ನಮ್ಮ ಮೊಬೈಲ್ ದೂರವಾಣಿ ಸಿಕ್ಕಿದ ಕಾರಣಕ್ಕೆ ದಿನದಲ್ಲಿ ಹಲವು ಬಾರಿ ಇವರ ಮಧುರ ಸ್ವರದಲ್ಲಿ ಹಲವು ಬಗೆಯ ಕರೆಗಳು. ಬ್ಯಾಂಕ್ ನ ವಿವಿಧ ಯೋಜನೆಯ ಪೋನ್ ಜಾಹಿರಾತುಗಳು. ಅದು ಕನ್ನಡ ದಲ್ಲಿದ್ದರೂ, ಇಂಗ್ಲೀಷ್ನ್ ನಲ್ಲಿ ಇದ್ದರೂ ಅರ್ಥವಾಗುವುದು ತುಂಬ ಕಷ್ತ್ಟ ಮೂಲ ಭಾಷೆಯಿಂದ ಭಿನ್ನವಾದ ಭಾಷೆ. ನಾವು ವಾಹನ ಚಲಾಯಿಸಿಕೊಂಡೊ ಅಥವಾ ಇನ್ನಾವೂದೊ ತೊಂದರೆಯಲ್ಲಿ ಇವರ ಕರೆ ಬಂದು ಇಲ್ಲದ ತೊಂದರೆ ಸಿಲುಕಿ ಹಾಕಿಕೊಳ್ಳುವುದು ಹೆಚ್ಚು.

  ನಾನು ವಾಹನ ಚಲಾಯಿಸುತ್ತ ಇದ್ದ ಹಾಗೆ ಇದೇ ಬ್ಯಾಂಕ್ ನಿಂದ ಕರೆ ಬಂದು ಕರೆ ಮಾಡಿದವಳು ಡೆಬಿಟ್ ಕಾರ್ಡ್ ಬಗ್ಗೆ ಎನೋ ಮಾಹಿತಿ ಕೊಟ್ಟಳು ವಾಹನದ ಸದ್ದುಗದ್ದಲದ ನಡುವೆ ಏನೆಂದೆ ಅರ್ಥವಾಗದೆ ಹಾಂ ಹೂಂ ಎಂದು ಮತ್ತೆ ಮಾಡಿ ಎಂದು ಕರೆ ನಿಲ್ಲಿಸಿದೆ. ಒಂದು ವಾರದ ಬಳಿಕ ಯಾವುದೇ ಪೂರ್ವ ಮಾಹಿತಿಯಿಲ್ಲದೆ ಬಣ್ಣದ ಕಾರ್ಡ್ ಒಂದು ನನ್ನ ವಿಳಾಸಕ್ಕೆ ಬಂದಾಗಲೆ ತಿಳಿದದ್ದು ಆಕೆ ಮಾಡಿದ ಕರೆ ಈ ಹೊಸ ಯೊಜನೆಯಬಗ್ಗೆ ಯಾಗಿತ್ತು. ಇಷ್ನೇ ಆಗಿದ್ದರೆ ತೊಂದರೆ ಇಲ್ಲ ಆದರೆ ನನ್ನ ಬ್ಯಾಲೆನ್ಸ್ ನಿಂದ ರೂ. ೩೫೦/- ಕಡಿತಗೊಂಡಾಗ ಗಾಬರಿಯಲ್ಲಿ ಗ್ರಾಹಕ ಸಂಪರ್ಕಕ್ಕೆ ಕರೆ ಮಾಡಿದಾಗ ತಿಳಿದದ್ದು ಆ ಹೊಸ ಡೆಬಿಟ್ ಕಾರ್ಡ್ ನ ಬಗ್ಗೆ ಸೇವಾದರ ಮತ್ತು ಸೇವಾ ತೆರಿಗೆ ಸೇರಿ ಕಡಿತ ವಾಗಿತ್ತು...!!!

  ReplyDelete
 10. I experienced this many times too and I closed n number of credit cards.
  As you mentioned, credit card monopoly is so much coming in blood, without one, the daily tasks like paying gas bill or booking a railway ticket becomes complicated and makes me have one silly card.

  I join you in raising the voice agaist, for keeping the customer in dark and trapped in the non transparent billing

  ReplyDelete