23 August 2010

ನಾನ್ಯಾಕೆ ಚೀಲ ಕೊಡುತ್ತಿಲ್ಲ?

‘ಕ್ಷಮಿಸಿ, ನಾವು ಚೀಲ ಕೊಡುವುದಿಲ್ಲ. ಪರಿಸರದ ಉಳಿವಿಗಾಗಿ ಪ್ಲ್ಯಾಸ್ಟಿಕ್ ಬೇಡ ಎನ್ನಿ. ಕಾಡಿನ ರಕ್ಷಣೆಗಾಗಿ ಕಾಗದ ಮಿತವಾಗಿ ಬಳಸಿ. ನಿಮ್ಮ ಪುಸ್ತಕಕ್ಕಾಗಿ ನೀವೇ ಚೀಲ ತನ್ನಿ!’ ಇದನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ, ದೊಡ್ಡ ಮತ್ತು ದಪ್ಪ ಅಕ್ಷರಗಳಲ್ಲಿ ಮುದ್ರಿಸಿ ನನ್ನ ಅಂಗಡಿಯ ಮೇಜಿನ ಮೇಲೆ ಹಲವು ವರ್ಷಗಳಿಂದ ಹಾಕಿಕೊಂಡೇ ಇದ್ದೇನೆ, ಆಚರಿಸುತ್ತಲೂ ಇದ್ದೇನೆ. ದುರ್ದಾನ ಪಡೆದವರಂತೆ ಮುಖಭಾವ, ಅವಹೇಳನಕಾರಿ ನಡೆ, ಖರೀದಿಸಿದ್ದನ್ನೇ ತಿರಸ್ಕರಿಸಿ ಹೋಗುವ ಕ್ರಮಗಳೂ ಇಲ್ಲದಿಲ್ಲ! ತಮ್ಮ ಪರಿಸರಪ್ರೇಮದ ಬಗ್ಗೆ ಕೊರೆದು, “ನನಗೆ ಬೇಡಾ ಆದರೇ...” ಎಂದು ಮತ್ತೆ ನನಗೆ ಏನೇನೂ ಹೊಸದಲ್ಲದ, ಸರಕಾರ ಪ್ಲ್ಯಾಸ್ಟಿಕ್ ಕುರಿತು ನಿಗದಿಪಡಿಸಿದ ಬಣ್ಣ ಮತ್ತು ದಪ್ಪದ ಬಗ್ಗೆ ವಿವರಣೆ (ಇದೂ ಪ್ರಕೃತಿಪರವೇನೂ ಅಲ್ಲ, ಸಮಾಜಕ್ಕೊಂದು ರಿಯಾಯ್ತಿ), ಮರುಬಳಕೆಗೆ ಪ್ರೇರಿಸುವ ದಪ್ಪದ ಮತ್ತು ಅಂದದ ಪ್ಲ್ಯಾಸ್ಟಿಕ್, ಬಯೋ ಡಿಗ್ರೇಡಬಲ್ ಪ್ಲ್ಯಾಸ್ಟಿಕ್, ಹತ್ತಿಯದೋ ಸೆಣಬಿನದೋ ಚೀಲಗಳು, ಹಳೆಂii ಪತ್ರಿಕೆಗಳನ್ನೇ ಸಾಕಷ್ಟು ಅಂಟು, ಬಲಯುತವಾದ ಹಿಡಿಕೆಗಳನ್ನೊದಗಿಸಿ ಮಾಡಿದ ‘ಪರಿಸರಪ್ರೇಮಿ’ ಚೀಲ ಇತ್ಯಾದಿ ನೂರೆಂಟು ಸಲಹೆ ಕೊಡುವ ಜನಗಳಿಗೆ (ನಮ್ಮೊಡನಿದ್ದೂ ನಮ್ಮಂತಾಗದವರು) ಕೊರತೆ (ಕೊರೆತ?) ಎಂದೂ ಆದದ್ದಿಲ್ಲ (ಮುಗಿದದ್ದಿಲ್ಲ!). ಅಂಗಡಿ ಮತ್ತು ಪರಿಸರಪ್ರೇಮವನ್ನು ಜಾಹೀರುಗೊಳಿಸುವ ಚೀಲಗಳನ್ನು “ಕ್ರಯಕ್ಕೇ ಕೊಡಿ” ಎಂದು ಸಜೆಸ್ಟುವವರಿಗೂ ಕೊರತೆಯಿಲ್ಲ. ಇವೆಲ್ಲ ನನಗೆ ತಿಳಿಯದ್ದೇನೂ ಅಲ್ಲ. ನಾನು ಕೇವಲ ನಕ್ಕು ಸುಮ್ಮನಿರುತ್ತೇನೆ.


ಜಿಪುಣತನವೋ ಸೇವೆಯಲ್ಲಿ ಅಸೌಜನ್ಯವನ್ನೋ ಆರೋಪಿಸುವವರು ಈಗಲೂ ಇದ್ದಾರೆ (ಆದರೆ ಮೊದಲಿನಷ್ಟುಹೆಚ್ಚಲ್ಲ). ಅಂಥಲ್ಲಿ ತಡೆಯದೆ ನಾನು “ಪ್ಲ್ಯಾಸ್ಟಿಕ್ ಪ್ರಸಾರದ ಒಂದು ಮೂಲವನ್ನು ಕಡಿಮೆ ಮಾಡಿಕೊಳ್ಳುವಲ್ಲಿ ನಿಮ್ಮ ಪಾಲೇನು (ಬಳಕೆದಾರ ಸಮಾಜದ ಪಾಲುಗಾರಿಕೆ)” ಎಂದು ಒಮ್ಮೊಮ್ಮೆ ಕೇಳಿಬಿಡುವುದು ಅನೇಕರಿಗೆ ಉದ್ಧಟತನವೆಂದೇ ಅನಿಸುತ್ತದೆ. ಕೆಲವರು “ಎಲ್ಲ ಕೊಡ್ತಾರೆ, ನಿಮ್ಮದೊಂದು ಏನು ಮಹಾ” ಎಂಬ ಪ್ರಶ್ನೆಗೆ (ಹನಿಗೂಡಿದರೆ ಹಳ್ಳ - ಗಾದೆ. ಸವಲತ್ತುಗಳನ್ನು ಕೊಟ್ಟವರಿಗೆ ಹಿಂದೆ ತೆಗೆದುಕೊಳ್ಳುವ ಸ್ವಾತಂತ್ರ್ಯ ಎಂದು ಹರಣವಾಯ್ತು?), “ಇದೇ ನನ್ನ ಕೊನೆಯ ಭೇಟಿ” ಎಂದು ಕಾಲು ಝಾಡಿಸಿ ಹೋಗುವವರಿಗೆ (ಅವರೇ ಇನ್ನೊಮ್ಮೆ ಬಂದರೆ, ನಾನು ಜ್ಞಾಪಕವಿಟ್ಟು ಖಂಡಿತಾ ತಳ್ಳುವವನಲ್ಲ), “ದೊಡ್ಡದಾಗಿ ಹೊರಗೆ ಬೋರ್ಡು ಹಾಕಿ” ಎನ್ನುವವರಿಗೆ ನನ್ನದು ಮತ್ತೆ ಮೌನವೇ ಉತ್ತರ. ಇಲ್ಲದ್ದರ ಬಗ್ಗೆ ಬೋರ್ಡು ಬರೆಸಿದವರುಂಟೇ? ಮತ್ತೆ ಒಳಗೆ ಬಂದವರಿಗೆಲ್ಲಾ ಕಡ್ಡಾಯ ಪುಸ್ತಕ ಕೊಳ್ಳಬೇಕೆಂದು ನಾನು ಬಿಡಿ, ಯಾವ ಅಂಗಡೀಯಾತನೂ ಒತ್ತಾಯಿಸಲಾರ. ಹಾಗೆ ಬರೆಸಿ ಹಾಕಿದಾಗಲೂ ಜನ ಅರ್ಥೈಸಿಕೊಳ್ಳುವ ಪರಿಗೆ ನಾನು ಈಚೆಗೆ ಸ್ಕೂಲ್ ಬುಕ್ ಕಂಪನಿಯಲ್ಲಿ ಕಂಡದ್ದನ್ನು ಹೇಳಬೇಕು. ಅವರ ಪುಸ್ತಕ ವಿಭಾಗಕ್ಕೆ ಹವಾನಿಯಂತ್ರಣವನ್ನು ಜೋಡಿಸಿರುವುದರಿಂದ ಕನ್ನಡಿ ಬಾಗಿಲು ಮುಚ್ಚಿಕೊಂಡಿರುತ್ತದೆ. ಅದನ್ನು ನೂಕಿ ಒಳ ಬರುವ ಕೆಲವರು ಸಂಶಯಚಿತ್ತರಾಗಿ ಪಾದರಕ್ಷೆಗಳನ್ನು ಹೊರಬಿಟ್ಟು ಬರುತ್ತಿದ್ದರಂತೆ ಮತ್ತೆ ಕೆಲವರು ಅನಂತರ ಅವನ್ನು ಕಳೆದುಕೊಂಡು ದೂರಿದ್ದೂ ಇತ್ತಂತೆ. ಅವರೀಗ ಬಾಗಿಲ ಮೇಲೆ ದೊಡ್ಡದಾಗಿ ಬರೆಸಿದ್ದಾರೆ “ನಿಮ್ಮ ಪಾದರಕ್ಷೆಗಳನ್ನು ಬಿಡಬೇಡಿ, ಧರಿಸಿಕೊಂಡೇ ಬನ್ನಿ.”  ಈಗ ಚಪ್ಪಲಿ ಬಿಡುವವರ ಸಂಖ್ಯೆ ಹೆಚ್ಚಿದೆಯಂತೆ!


ಆಧುನಿಕ ಸರ್ವಸರಕುಗಳ ಬೃಹತ್ ಮಳಿಗೆಗಳಂತೂ ಮುಟ್ಟಿದ್ದಕ್ಕೆ, ಬಿಟ್ಟದ್ದಕ್ಕೆ ಪ್ಲ್ಯಾಸ್ಟಿಕ್ ಲಕೋಟೆಗಳ ಭಾರೀ ಸುರುಳಿಗಳನ್ನೇ ಬಿಡಿಸಿ, ಹಿಡಿಸುತ್ತದೆ; ನಿರಾಕರಿಸಿದವರು ಗಮಾರರು! ಸ್ಪಾರ್, ಮೋರಿನ ನೌಕರಂತೂ ಹಾಗೇ ಸಾಮಾನುಗಳನ್ನು ಒಯ್ಯುವ ಉತ್ಸಾಹಿಗಳು, ತಮ್ಮದೇ ಚೀಲ ತಂದು ಬಳಸುವ ಗಿರಾಕಿಗಳನ್ನು ತಮ್ಮ ಸುಲಭ ಕಾರ್ಯನಿರ್ವಹಣೆಗೆ ತೊಂದರೆ ಮಾಡುವವರೂ ಎಂದೇ ಕಾಣುತ್ತಾರೆ.

ಒಳ್ಳೆಯ ಪುಸ್ತಕ ಕೇಳುವುದಕ್ಕಿಂತಲೂ ಮಿಗಿಲಾಗಿ ನಾನು ಕೊಡುವ ಪುಸ್ತಕವನ್ನು ಹೇಗೆ ಕೊಡುತ್ತೇನೆ, ಕೊಡಬೇಕು ಎಂಬುದನ್ನು ನಿರ್ಧರಿಸುವ ಬಾಹ್ಯ ಶಕ್ತಿಗಳು ಹೆಚ್ಚಿದಂತೆಲ್ಲ ನನ್ನ ಹಠ ಹೆಚ್ಚಿತು.  “ನಾನು ಬೈಕಿನಲ್ಲಿ ಬಂದೆ, ಪುಸ್ತಕವನ್ನು ಹಿಡಿದುಕೊಳ್ಳುವುದು ಹೇಗೆ”, “ನಾನು ಹೀಗೇ ಬಂದವ ಪುಸ್ತಕ ಕೊಂಡೆ, ಈಗ ಒಯ್ಯುವುದು ಹೇಗೆ” ಎಂದಿತ್ಯಾದಿ ಕೇಳುವವರಿಗೆ ಕೊರತೆಯಿಲ್ಲ. ಯಾವುದೇ ವಾಹನ ವಿನ್ಯಾಸದಲ್ಲೂ ವ್ಯಕ್ತಿ ಮತ್ತಾತನ ಕನಿಷ್ಠ ಆವಶ್ಯಕ ಸಾಮಗ್ರಿ ಸಾಗಿಸಲೊಂದು ವ್ಯವಸ್ಥೆ ಇದ್ದೇ ಇರುತ್ತದೆ. ಬೈಕುಗಳಲ್ಲಿನ ಟ್ಯಾಂಕಿನ-ಚೀಲ, ಕೆಲಬಲಗಳ ಸಂಚಿ (saddle bag), ಆಸನದ ಕೊನೆಯಲ್ಲಿ ಹೊರೆಗಾಗಿಯೇ  ಇರುವ ಕ್ಯಾರಿಯರ್ರು, ಲೋಹ/ ಫೈಬರ್ಗಳ ಬಹು ನಮೂನೆಯ, ವರ್ಣದ ಡಬ್ಬಿ, ತನ್ನದೇ ಬೆನ್ನಿಗೋ ಬಗಲಿಗೋ ನೇತಾಡಿಸಿಕೊಳ್ಳಬಹುದಾದ ಸಾವಿರಾರು ನಮೂನೆಯ ಚೀಲಗಳೆಲ್ಲ ಇಂಥವರ ಕಣ್ಣು ತಪ್ಪಿದ್ದಿರಬಹುದೇ? ಸ್ಕೂಟರ್ ಜಾತಿಯ ವಾಹನಗಳಲ್ಲಂತೂ ಮಿನಿ ಲಾರಿಯ ಹೊರೆಯನ್ನೇ ಹೇರಿ ನಿರುಮ್ಮಳವಾಗಿ ಸಾಗುವ ಸೌಕರ್ಯವಿರುವಾಗ ಒಂದೋ ನಾಲ್ಕೋ ಪುಸ್ತಕಕ್ಕೆ ಅವಕಾಶವಿಲ್ಲದೇ ಹೋಯ್ತೇ? ಅದು ಬಿಡಿ, ಇವರು ಹೇಗೆ ಬಂದರು, ಹೇಗೆ ಒಯ್ದರು ಎನ್ನುವುದನ್ನೇ ಮುಂದುವರಿಸಿದರೆ ಮತ್ತದನ್ನು ಏನು ಮಾಡಿದರು ಎನ್ನುವುದೆಲ್ಲ ‘ನನ್ನ (ವ್ಯಾಪಾರಿಯ) ಕಾಳಜಿ ಯಾಕಾಗಬೇಕು’ ಎಂದು ಮರುಪ್ರಶ್ನಿಸಿದರೆ ಬಲು ಕುರುಡು (Crudeನ ತದ್ಭವ) ಪೆಟ್ಟಾಗದೇ?
ನಾನು ಅಂಗಡಿ ತೆರೆದ ಹೊಸತರಲ್ಲಿ (೧೯೭೫) ಹಳೆ ಪತ್ರಿಕೆಗಳಿಂದ ವಿವಿಧ ಗಾತ್ರದ ಲಕೋಟೆಗಳನ್ನು ಮಾಡಿ (ಗೃಹ ಕೈಗಾರಿಕೆಗಳು ಎನ್ನಿ), ಮುಕ್ತ ಮಾರುಕಟ್ಟೆಯಲ್ಲಿ ಒದಗಿಸುವ ವ್ಯವಸ್ಥೆ ಇತ್ತು, ಆಗ ನಾನು ವರ್ಷಕ್ಕೊಮ್ಮೆಯಾದರೂ ಎರಡು ಗಾತ್ರಗಳಲ್ಲಿ ಸಾವಿರಾರು ಲಕೋಟೆಗಳನ್ನು ಕೊಳ್ಳುವುದು ನಡೆದೇ ಇತ್ತು. ಆ ಪತ್ರಿಕೆಗಳ ಮಸಿ ಕೈ ಮತ್ತು ತೊಟ್ಟ ಬಟ್ಟೆಗಳಿಗೆ  ಹತ್ತುತ್ತಿತ್ತು. ಬೇಸಗೆಯ ದಿನಗಳಲ್ಲಿ ಬೆವರಿಗೆ ಮಳೆಯ ದಿನಗಳಲ್ಲಿ ನೀರಿಗೆ ಲಕೋಟೆ ಪಿಸಿದು ‘ಪುಸ್ತಕಗಳು ಬೆತ್ತಲೆಯಾಗುತ್ತಿದ್ದದ್ದು’ (ತಮಾಷೆ ಅಲ್ಲ ಸ್ವಾಮಿ, ಹಲವರಿಗೆ ‘ಪುಸ್ತಕವನ್ನು ಹೀಗೇ ಹಿಡಿದುಕೊಂಡು ಹೋಗುವುದೇ’ ಪ್ರಾಮಾಣಿಕವಾಗಿ ಸಂಕೋಚದ ಸಂಗತಿ, ಬಗೆಹರಿಯದ ಪ್ರಶ್ನೆ!) ನನ್ನನ್ನು ಮತ್ತೆ ಮೊದಲು ಹೇಳಿದ ಪರಿಸ್ಥಿತಿಗೇ ತಳ್ಳುತ್ತಿತ್ತು. ಜಿಪುಣತನ ಮತ್ತು ಸೇವೆಯಲ್ಲಿ ಅಸೌಜನ್ಯದ ಆರೋಪ ಪಟ್ಟಿ...  “ನನಗೆ ಬೇಡಾ ಆದರೇ...” ಗಳು, ವಾಸ್ತವವಾಗಿ ಎಲ್ಲಾ ಯುಗಕ್ಕೂ ಪಲ್ಲವಿಯಾಗುವಂತೆ ನಾನು ಕೇಳಲು ತೊಡಗಿದ್ದೇ ಅಂದು. Possiblity (ಸಾಧ್ಯತೆ) + facility (ಸೌಕರ್ಯ, ಅನುಕೂಲಗಳು) ಅಥವಾ ability (ಸಾಮರ್ಥ್ಯ) = feasibility (ಸಂಭವನೀಯ? ಕಾರ್ಯಸಾಧ್ಯ?) ಎಂದೇ ಉದ್ಭವಿಸಿರಬಹುದಾದ ಶಬ್ದಕ್ಕೆ ಅರ್ಥ ನನ್ನ ಕೆಲಸದಲ್ಲಿ ಹುಡುಕುತ್ತಿದ್ದೆ. ನನ್ನ ಪೂರೈಕೆದಾರತನಕ್ಕೆ ಗಡಿರೇಖೆಯನ್ನು ಸಾರ್ವಜನಿಕ ಆವಶ್ಯಕತೆ ಮತ್ತು ನನ್ನ ಆರ್ಥಿಕತೆಗಳ ಸಮತೋಲನದಲ್ಲಷ್ಟೇ ಕಂಡುಕೊಂಡಿದ್ದೆ. ಆ ಸಮಯದಲ್ಲಿ ನನಗೆ ಬಿಲ್ಲು ಪುಸ್ತಕಗಳನ್ನೆಲ್ಲ ಮುದ್ರಿಸಿ ಕೊಡುತ್ತಿದ್ದ ಸಲ್ಲಕ್ ಪ್ರಿಂಟರ್ಸಿನ ಮಾಲಿಕ, ವಿಚಾರವಂತ ಲೇಖಕ, ಹಿರಿಯ ಗೆಳೆಯ ವೇಗಸ್ (ಈಚೆಗೆ ಇನ್ನಿಲ್ಲವಾದರು) ಕೊಟ್ಟ ಸಲಹೆ ಅಪ್ಯಾಯಮಾನವಾಯ್ತು. ಸಗಟಿನಲ್ಲಿ ನಾಲ್ಕೈದು ಪೈಸೆಗೊಂದು ಬರುತ್ತಿದ್ದ ದುರ್ಬಲ, ಕೊಳಕು, ಜಾಹೀರಾತುರಹಿತ ಕಾಗದದ ಲಕೋಟೆಗಳಿಗಿಂತ ಎರಡು ಮೂರು ಪೈಸೆ ಕಡಿಮೆಗೇ ದಕ್ಕುತ್ತಿದ್ದ ತೆಳು, ಅಚ್ಚಬಿಳುಪಿನ ಮೇಲೆ ನನಗೆ ಬೇಕಾದಂತೆ ‘ಅತ್ರಿ’ ಸಾರುವ, ದೀರ್ಘ ಬಾಳ್ತನವಿರುವ ಪ್ಲ್ಯಾಸ್ಟಿಕ್ ಲಕೋಟೆಗಳನ್ನು ಒಮ್ಮೆಗೆ ಅಪ್ಪಿಕೊಂಡೆ (ನಿಖರ ಬೆಲೆಗಳಲ್ಲಿ ನಾನು ತಪ್ಪಿರಬಹುದು).

ಸುಲಭದಲ್ಲಿ ಹರಿಯದ, ಪುಸ್ತಕಕ್ಕೆ ನೀರು, ಬೆವರುಗಳ ರಕ್ಷಣೆ ಕೊಡುವುದರೊಡನೆ ಹಗುರವಾಗಿಯೂ ಇರುವ ಪ್ಲ್ಯಾಸ್ಟಿಕ್ ಚೀಲಗಳು ಬಂದು ಗಿರಾಕಿಗಳ ಪಲ್ಲವಿ ಬದಲಿಂದು ತಿಳಿದಿರಾ? ಇಲ್ಲ - ಅಸಹನೆ, ಗೊಣಗುವಿಕೆ, ಜಗಳಕಾಯುವುದು ಎಷ್ಟೋ ಬಾರಿ ವ್ಯಕ್ತಿಗಳ ಮನಃಸ್ಥಿತಿಯೇ ಹೊರತು ಒದಗುವ ಸೌಕರ್ಯಗಳ ಕೊರತೆಯಲ್ಲ. ಬನಿಯನ್ ಬ್ಯಾಗ್, ಗಿಫ್ಟ್ ಪ್ಯಾಕಿಂಕ್, ಅದೂ ಸಣ್ಣ ಮಕ್ಕಳ ಬರ್ತ್ ಡೇ ಪಾರ್ಟಿ ಅಂದರಂತೂ ಅತಿಥಿಗಳಾಗಿ ಬರುವ ಎಲ್ಲ ಪುಟಾಣಿಗಳಿಗೂ ಕೊಡುವ ಸಂಕಟಕ್ಕೆ, ಚಿಲ್ಲರೆ ಚಿಲ್ಲರೆ ಪುಸ್ತಕಗಳಿಗೂ ಸೆಪ್-ಸೆಪ್ರೇಟ್ ಕನಿಷ್ಠ ಕಲರ್ ಪೇಪರ್ ರ‍್ಯಾಪಿಂಗ್ ಎನ್ನುವುದೆಲ್ಲಾ ಹಕ್ಕೊತ್ತಾಯಗಳೇ! ಭರ್ಜರಿ ಯೂನಿಫಾರ್ಮ್-ಮಕ್ಕಳ ಶಾಲೆಯಲ್ಲಿ ಹತ್ತೋ ನೂರೋ ಮಂದಿಯನ್ನು ಪುರಸ್ಕಾರ ಯೋಗ್ಯರೆಂದು ಆರಿಸುತ್ತಾರೆ. ಆದರೆ “ನಮ್ಮ ಬಜೆಟ್ಟು (ಚೀಪಾಗಬೇಕು) ಹತ್ತು ರೂಪಾಯಿಯ ರತ್ನ ಕೋಶ, ಹದಿನೈದು ರೂಪಾಯಿಯ ಜನರಲ್ ನಾಲೆಜ್, ಇಪ್ಪತ್ತು ರೂಪಾಯಿಯ ಪಾಕೆಟ್ ಕೋಶಗಳು.” ಈ ಯೂನಿಫಾರ್ಮ್ ಬಹುಮಾನಗಳನ್ನು ಆಯ್ದುಕೊಳ್ಳುವ ಚೀಟರುಗಳು (ಇವರು ಟೀಚರುಗಳಿರಬಹುದೇ?) ಎಲ್ಲದರ ಬೆಲೆ ನಮೂದನ್ನು ಅಳಿಸಿ, ಫಸ್ಟೂ ಸೆಕೆಂಡೂ ಥರ್ಡೂಂತ ಕನಿಷ್ಠ ಮೂರು ವರ್ಣದ ಲಕ್ಕೋಟೆಗಳಿಗೆ (ಉಚಿತವಾಗಿ) ಹಕ್ಕೊತ್ತಾಯ ಮಂಡಿಸುವುದನ್ನೂ ಸಾಕಷ್ಟು ಕಂಡಿದ್ದೇನೆ. ಮುದ್ರಿತ ಪುಟಗಳನ್ನು ಒಟ್ಟು ಹಿಡಿದಿಟ್ಟುಕೊಳ್ಳಲು, ರಕ್ಷಿಸಿಕೊಡಲು, ಪುಸ್ತಕದ ಭಾಗವಾಗಿಯೇ ಮುದ್ರಣಗೊಂಡು, ಬಂಧದಲ್ಲಿ ಒಂದಾಗಿ ಬರುವ ಗಟ್ಟಿ, ಸುಂದರ ಹೊದಿಕೆ ಇಂದು ಅರ್ಥವನ್ನೇ ಕಳೆದುಕೊಂಡಿರುವುದು ಈ ಯೂನಿಫಾರ್ಮ್‌ಗಳಿಂದ; ಬ್ರಹ್ಮಾಸ್ತ್ರದ ಕಟ್ಟಿನ ಮೇಲೆ ಬಡಕಲು ಹಗ್ಗ ಬಿಗಿಯುವ ಮೂರ್ಖಮತಿಗಳಿಂದ. ಈಚೆಗೆ ನಮ್ಮ ವಸುಧೇಂದ್ರ ತಮ್ಮ ಪುಸ್ತಕ - ನಮ್ಮಮ್ಮ ಎಂದರೆ ನನಗಿಷ್ಟ, ಇದರ ಸಂಗ್ರಾಹಕ ಪ್ರತಿಯನ್ನು ಪ್ರಕಟಿಸಿದರು. ಈ ರೀತಿಯಲ್ಲಿ ವಿದೇಶೀ ಪ್ರಕಟಣೆಗಳು ಬಹಳ ಮೊದಲೇ ಬರುತ್ತಿತ್ತು. ಈಚೆಗೆ ಭಾರತೀಯ ಇಂಗ್ಲಿಶ್ ಪ್ರಕಾಶಕರಂತೂ ಪುಸ್ತಕದ ಹೊದಿಕೆಗೆ ಲ್ಯಾಮಿನೇಶನ್ (ಪ್ಲ್ಯಾಸ್ಟಿಕ್ ಹಾಳೆ ಅಂಟಿಸುವುದು) ಇದ್ದರೂ ಸಾಲದೆಂಬಂತೆ ಪ್ರತಿ ಪುಸ್ತಕವನ್ನೂ ಬಿಗಿ ಪ್ಲ್ಯಾಸ್ಟಿಕ್ ಕವರಿನಲ್ಲಿ ತುಂಬಿ ಸೀಲು ಮಾಡಿಯೇ ಕಳಿಸುತ್ತಾರೆ. ಕೆಲವು ಸಂಪುಟಗಳ ಒಂದು ಕಟ್ಟು ಇದ್ದರಂತೂ ಗಟ್ಟಿ ರಟ್ಟಿನ ಡಬ್ಬಿಯಲ್ಲಿ ಒಟ್ಟು ತುಂಬಿ ಕೊಡುವುದೂ ಸಾಕಷ್ಟು ಹಿಂದಿನಿಂದ ಚಾಲ್ತಿಯಲ್ಲಿದೆ. ಕನ್ನಡ ವಾಲ್ಮೀಕಿ ರಾಮಾಯಣದ ಎರಡು ಸಂಪುಟಗಳನ್ನು ೧೯೭೨ಕ್ಕೂ ಹಿಂದೆಯೇ ಡಿವಿಕೆ ಮೂರ್ತಿಯವರು ಅಂದವಾಗಿ ಮುದ್ರಿಸಿ, ಬಿಗುವಾಗಿ ಹಿಡಿದಿಟ್ಟುಕೊಳ್ಳುವ ರಟ್ಟಿನ ಡಬ್ಬಿಯಲ್ಲಿ ಕೊಡಲು ಸುರು ಮಾಡಿದ್ದು ಈಗಲೂ (ನಾಲ್ಕನೇ ಮರುಮುದ್ರಣದಲ್ಲೂ) ಮುಂದುವರಿದಿದೆ. ಆದರೆ ಅತಿ ಬುದ್ಧಿಯವರು ಹೊದಿಕೆಯ ಮೇಲಿನ ಈ ಹೊದಿಕೆಗೂ ಒಂದು ಪ್ಯಾಕಿಂಗ್, ಒಂದು ಪ್ಲ್ಯಾಸ್ಟಿಕ್ ಕ್ಯಾರೀ ಬ್ಯಾಗ್ ಕೇಳುವಾಗ ನನಗಂತೂ ಮೈ ಉರಿದೇ ಹೋಗುತ್ತದೆ!
ಮಿಜಾರು ಸದಾನಂದ ಪೈ - (ನಗರದ ಹಿರಿಯ ಉದ್ಯಮಿ, ಚಿಂತಕ, ಕೆನರಾ ವಿದ್ಯಾ ಸಂಸ್ಥೆಗಳ ಸದಸ್ಯ, ಎಲ್ಲಕ್ಕೂ ಮಿಗಿಲಾಗಿ) ಭಾರೀ ಪುಸ್ತಕ ಪ್ರೇಮಿ, ಸ್ಟೇಪ್ಲರ್ ಪಿನ್ನು ಬಳಸುವುದನ್ನು ವಿರೋಧಿಸುತ್ತಿದ್ದರು! “ಲಕೋಟೆಗೆ ಅಂಟು ಬಳಸಿ, ಹಗ್ಗದಲ್ಲಿ ಕಟ್ಟಿ, ಕೊನೆಗೆ ಹಾಗೇ ಬಿಡಿ ಆದರೆ ಪಿನ್ನು ಮಾತ್ರ ಕೂಡದು” ಅವರ ವಾದ. ಎರಡಕ್ಕೂ ಮಿಕ್ಕ ಹಾಳೆಗಳನ್ನು ಒಟ್ಟು ಹಿಡಿಯುವ ಗುಂಡುಸೂಜಿಯ ಜಾಗದಲ್ಲಿ ಈ ಪಿನ್ನು ಕಂಡರಂತೂ ಮರುಬಳಕೆಯನ್ನು ನಿರಾಕರಿಸುವ ವ್ಯವಸ್ಥೆಯ ವಿರುದ್ಧ ಅವರು ಕೆಂಡಾಮಂಡಲವಾಗುತ್ತಿದ್ದರು. ಕಾಗದದ ಲಕ್ಕೋಟೆಯಿರಲಿ, ಪ್ಲ್ಯಾಸ್ಟಿಕ್ಕಿನದ್ದೇ ಬರಲಿ “ಇದಕ್ಕೊಂದು ಪಿನ್ನು ಹೊಡೀರೀ” ಎನ್ನುವವರಿಗೆ ಕೊರತೆಯಿಲ್ಲ. ಮಾಲ್, ದೊಡ್ಡ ಬಝಾರ್‌ಗಳಲ್ಲಂತೂ ಪುಟ್ಟ ಹೆಬ್ಬೆರಳು ಗಾತ್ರದಿಂದ ಮಾರುದ್ದದವರೆಗಿನ ತರಹೇವಾರಿ ಸ್ಟೇಪ್ಲರುಗಳಲ್ಲಿ ಪಿನ್ನು ಒಂದೇನು ಡಜನ್ನ್ ಒತ್ತುವ ಧಾರಾಳಿಗಳಿದ್ದಾರೆ. ಯಾವುದೇ ಕೊರಿಯರ್ ಕವರ್ ಗಮನಿಸಿ, ಕನಿಷ್ಠ ಮೂರು ಪಿನ್ನು ಹೊಡೆದಿರುತ್ತಾರೆ. ಉದಾಸೀನದಲ್ಲೋ ಕೆಲಸದ ಒತ್ತಡದಲ್ಲೋ ಅವನ್ನು ಕ್ರಮವಾಗಿ ಬಿಡಿಸಲು ತಪ್ಪಿ ಉಗುರು ಸಂದಿನಲ್ಲಿ ಗಾಯ ಮಾಡಿಕೊಳ್ಳುವುದು, ಬಂದ ಸಾಮಾನ್ಯ ಪತ್ರವಿರಲಿ ಎಷ್ಟೋ ಬಾರಿ ಅಮೂಲ್ಯ ದಾಖಲೆ, ಬ್ಯಾಂಕ್ ಡ್ರಾಫ್ಟ್ ಅಂಥವುಗಳನ್ನೇ ಹರಿದುಕೊಳ್ಳುವುದು ನಡೆದೇ ಇರುತ್ತದೆ. ಅವೆಲ್ಲವನ್ನು ಅವಗಣಿಸಿಯೂ ಕೇವಲ ಕಳಚಿ ಎಸೆಯುವ (ಎಲ್ಲಿಗೆ, ಎಷ್ಟು ಎಂದು ಬಹುಶಃ ಯಾರೂ ಲೆಕ್ಕ ಇಟ್ಟದ್ದಿಲ್ಲ) ಪಿನ್ನು ಪಿನ್ನುಗಳ ಲೆಕ್ಕ ತೆಗೆದರೆ ಎಷ್ಟೊಂದು ಪುನಃ ಸೃಷ್ಟಿ ಸಾಧ್ಯವಿಲ್ಲದ ಲೋಹಸಂಪತ್ತು ವ್ಯರ್ಥವಾಗುತ್ತಿದೆ ಎಂದು ಭಯವಾಗುತ್ತದೆ. ಸುಮ್ಮನೆ ನಗಾಡಬೇಡಿ, ಗಮನವಿಟ್ಟು ನೋಡಿ. ನಿಮ್ಮಲ್ಲಿರುವ ಸ್ಟೇಪ್ಲರ್ ಪಿನ್ನು ಪ್ಯಾಕೇಟ್ ಉತ್ತಮ ದರ್ಜೆ ಹಾಗೂ ಕಡಿಮೆ ಬೆಲೆಯದೇ ಆಗಿದ್ದರೆ ಅದು ಮೇಡಿನ್ ಜಪಾನ್! ಕರ್ನಾಟಕ ರಾಜ್ಯದಷ್ಟೂ ಭೂಭಾಗವಿಲ್ಲದ ಆದರೆ ಜಗತ್ತಿನ ಮುಂಚೂಣಿಯ ರಾಷ್ಟ್ರಗಳಲ್ಲಿ ಒಂದಾದ ಜಪಾನ್ ಇದನ್ನು ದಾನಕ್ಕೆ ಕೊಟ್ಟದ್ದಲ್ಲ ಎನ್ನುವುದನ್ನು ಮನಸ್ಸಿಗೆ ತಂದುಕೊಳ್ಳಿ. ಮನೆ, ಅಂಗಡಿಗಳಲ್ಲಿ ಬಿಡಿ, ರಾಜ್ಯ ದೇಶಗಳಲ್ಲಿ ಸಗಟಾಗಿ ವಾರ್ಷಿಕ ಸ್ಟೇಪ್ಲರ್ ಪಿನ್ನಿನ ಲೆಕ್ಕ (ಜಾಣ ಜಾಲಿಗರು ತೆಗೆದು ಹೇಳಬಹುದೋ ಏನೋ) ತೆಗೆದರೆ ಖಂಡಿತವಾಗಿ ನಾವು ಅರಿವಿಲ್ಲದೇ ಮಾಡುತ್ತಿರುವ ಪ್ರಾಕೃತಿಕ ಸಂಪತ್ತಿನ ಅವಹೇಳನ ಅಗಾಧವಿರುತ್ತದೆ. (ಇನ್ನೂ ಮುಂದುವರಿದು ಯೋಚಿಸಿದ್ದೇ ಆದರೆ ನಮ್ಮದೇ ಕುದುರೆಮುಖ ವಲಯದಲ್ಲೋ ಬಳ್ಳಾರಿಯಲ್ಲೋ ನಾವೇ ಕಾಡು ತಿಂದು, ಪರಿಸರಕ್ಕೆ ಹೂಳು, ಮಣ್ಣು ತುಂಬಿ, ಒಕ್ಕಿ ಕಳಿಸಿದ ಖನಿಜವೇ ಪರಿಷ್ಕಾರಗೊಂಡು ಮರಳಿ ಮಣ್ಣಿಗೆ ಸೇರಲು ಬಂದದ್ದೂ ಇರಬಹುದು!) ಈ ಕ್ಷುದ್ರಕ್ಕೆ ಹೋಲಿಸಿದರೆ ಎಷ್ಟೋ ಮೇಲಿನ ಪ್ಲ್ಯಾಸ್ಟಿಕ್ ಪ್ಯಾಕಿಂಗ್ ಅದಿನ್ನೆಷ್ಟು ಪರಿಸರ ಕೆಡಿಸುತ್ತಿದೆ ಎಂದು ಯೋಚಿಸುವ ವಿವೇಚನೆ ಇಂದು ಬೆಳೆಯಬೇಡವೇ?

ಕೆಲವು ವರ್ಷಗಳ ಹಿಂದೆ, ನನ್ನಜ್ಜನ ಮನೆಯ ಬಳಿಯಲ್ಲಿ ಬ್ರೆಡ್ ಕಾರ್ಖಾನೆಯೊಂದು ಎಸೆದ ಹಳೇ ಬ್ರೆಡ್ಡಿನ ಪರಿಮಳದಿಂದ ಆಕರ್ಶಿತವಾಗಿ ನಾಲ್ಕು ಹಸುಗಳು ಬಲಿಯಾದವು. ಮರಣೋತ್ತರ ಪರೀಕ್ಷೆಯಲ್ಲಿ ಎಲ್ಲಕ್ಕೂ ಹೊಟ್ಟೆಯಲ್ಲಿ ಗಡ್ಡೆ ಕಟ್ಟಿದ ಬ್ರೆಡ್ ಸುತ್ತಿದ್ದ ಪ್ಲ್ಯಾಸ್ಟಿಕ್ ಕಾರಣವೆಂದು ತಿಳಿದು ಬಂತು. ಮುಂಬೈಯಲ್ಲಿ ಮೇಘಸ್ಫೋಟವಾದದ್ದು ನಿಜ. ಆದರೆ ಅಂದು ಅಷ್ಟೂ ನೀರಿನ ಸಹಜ ಓಟಕ್ಕೆ ಭಂಗ ತಂದು ಸಾಮಾಜಿಕ ಅತಂತ್ರ ಮೂಡಿಸಿದ್ದು ಚರಂಡಿ ಚರಂಡಿಯಲ್ಲಿ ಕಟ್ಟಿದ ‘ನಾವೇ ಎಸೆದ’ ಪ್ಲ್ಯಾಸ್ಟಿಕ್! ಅವೆಲ್ಲಾ ಪ್ರಕಟವಾಗುವ ಕಾಲಕ್ಕೆ ನನಗೆ ಅಂಗಡಿಯಲ್ಲಿ ಒಟ್ಟಾರೆ ಔಪಚಾರಿಕ ‘ಪ್ಯಾಕಿಂಗ್’ ಬಗ್ಗೆಯೇ ಹೇವರಿಕೆ ಬಂದಿತ್ತು. ನಾನೇ ಮಾಡಿಸಿದ್ದ ಎರಡು ಗಾತ್ರದ ಪ್ಲ್ಯಾಸ್ಟಿಕ್ ಲಕೋಟೆಗಳೇನೋ ಮತ್ತೂ ಕೆಲವು ತಿಂಗಳು ವಿತರಣೆಗೆ ಬರುತ್ತಿದ್ದರೂ ಎಲ್ಲರೂ ಮಲಗಿರಲು ಧಿಗ್ಗನೆದ್ದ ಬುದ್ಧನಂತಲ್ಲದಿದ್ದರೂ ಘೋಷಿಸಿಬಿಟ್ಟೆ “ನಾನು ಚೀಲ ಕೊಡುವುದಿಲ್ಲ. Sorry, No Packing.” ಉಳಿದಷ್ಟೂ ಲಕೋಟೆಗಳನ್ನು ಉತ್ಪಾದಕರಿಗೇ ಮರಳಿಸಲು (ರಿಯಾಯ್ತೀ ದರದಲ್ಲಿ, ಕೊನೆಗೆ ಉಚಿತವಾಗಿಯೂ!) ಪ್ರಯತ್ನಿಸಿ ಸೋತೆ. ಕೊನೆಗೆ ಗುಜರಿಯವನಿಗೆ ತೂಕಕ್ಕೆ ಕೊಟ್ಟು ಮುಗಿಸಿದೆ. ಎಲ್ಲ ವಿವರಿಸಿ ಆ ಕಾಲಕ್ಕೇ ಉದಯವಾಣಿಯಲ್ಲಿ ನಾನೊಂದು ಲೇಖನವನ್ನೂ ಬರೆದೆ. (ಈ ಸಲ ಬ್ಲಾಗಿಗೆ ಅದನ್ನು ಉದ್ಧರಿಸಿ, ಕಾಲಕ್ಕೆ ತಕ್ಕಂತೆ ಪರಿಷ್ಕರಿಸಿ, ವಿಸ್ತರಿಸಬೇಕೆಂದೇ ಹೊರಟವನಿಗೆ ಹಳೇ ಕತ್ತರಿಕೆ ಸಿಕ್ಕದೇ ಹೋಯ್ತು)

ಓದುವ ಪುಸ್ತಕಕ್ಕೆ ಕರ ಭಾರವಿಲ್ಲ, ಚೀಲಕ್ಕಿದೆ. ಚೀಲದ ಸೌಲಭ್ಯವೋ ಪರಿಸರ ಪ್ರೀತಿಯ ಪ್ರಸಾರದ ನೆಪದಲ್ಲೋ ಎಂದೂ ವಾಣಿಜ್ಯ ಕರ ಕೊಡದ ನಾನು ಅದರಲ್ಲಿ ಸಿಕ್ಕಿಕೊಳ್ಳಲು ಸಿದ್ಧನಿಲ್ಲ. ಅದೇ ಸಾರ್ವಜನಿಕರು ಅಯಾಚಿತವಾಗಿ ಅನ್ಯ ಮೂಲಗಳಿಂದ ಸಂಗ್ರಹವಾದ ಚೀಲಗಳನ್ನು ಮರುಬಳಸಲು ಇಲ್ಲೊಂದು ಅವಕಾಶವಿದೆ ಎಂದು ಉತ್ತೇಜಿತರಾಗುವುದು ಮೊದಮೊದಲು ಇರಲೇ ಇಲ್ಲ. ಆದರೆ ಈಚಿನ ದಿನಗಳಲ್ಲಿ ಮಾತ್ರ ಜಾಗೃತಿ ಹೆಚ್ಚಿದೆ. ಶಾನಾಡಿ ಅಜಿತ್ ಕುಮಾರ್ ಹೆಗ್ಡೆಯವರು ಮಂಗಳೂರು ಮಹಾನರಕ ಪಾಲಿಕೆಂ ಕಮಿಶನರ್ ಆಗಿದ್ದ ವೇಳೆಯಲ್ಲಂತೂ (ಸ್ವರ್ಗ ಮಾಡುವ ಕ್ರಮದಲ್ಲಿ) ನನ್ನಿಂದ ಯಾವ ಸೂಚನೆಯೂ ಇಲ್ಲದೆ ತಮ್ಮ ಪ್ಲ್ಯಾಸ್ಟಿಕ್ ನಿಯಂತ್ರಣ ಸಭೆಗಳಲ್ಲಿ ಆದರ್ಶಕ್ಕೆ ನನ್ನ ಅಂಗಡಿಯನ್ನು ಹೆಸರಿಸಿ, ಪರೋಕ್ಷ ಸಮ್ಮಾನವನ್ನೇ ಮಾಡಿದ್ದನ್ನು ಕೃತಜ್ಞತೆಯಿಂದ ಸ್ಮರಿಸಲೇ ಬೇಕು. ನಾನು ಬಿಲ್ಲು ಮಾಡುತ್ತಿರುವಾಗಲೇ ತಾವು ಮಡಿಚಿ ತಂದ ಪ್ಲ್ಯಾಸ್ಟಿಕ್ ಚೀಲಗಳನ್ನು ಬಿಡಿಸಿ ಒಡ್ಡುವವರು ಸಾರ್ವಜನಿಕರಲ್ಲಿ ಹೆಚ್ಚಿದ ಪ್ರಜ್ಞಾವಂತಿಕೆಗೆ ಸಾಕ್ಷಿಗಳು. ಇನ್ನೂ ಕೆಲವರು ಬಟ್ಟೆಯ, ಹೆಚ್ಚಿನ ಭದ್ರತೆಯ ಚೀಲಗಳನ್ನು ತರುವುದಲ್ಲದೆ, “ನಿಮ್ಮ ಪ್ರೇರಣೆಯಲ್ಲಿ...” ಎಂದು ಹೇಳುವ ಮಾತುಗಳು ನನಗೆ ಧನ್ಯತೆಯಿಂದ ಎದೆದುಂಬುವ ಕ್ಷಣಗಳು!

‘ಅಭಯಾರಣ್ಯ’ ಮಾಡಿದ ಹೊಸತರಲ್ಲಿ ಕೇವಲ ಒಂದೆಕ್ರೆ ಜಾಗವಾದರೂ ಹಲವು ವಾರಾಂತ್ಯಗಳನ್ನು ಅಲ್ಲಿನ ನೆಲದಿಂದ ಗುಟ್ಕಾ ಚೀಟಿ, ತೊಟ್ಟೆ, ಒಡಕು ಬಾಲ್ದಿಯೋ ಡಬ್ಬಿಗಳದೋ ಚೂರು ಹೆಕ್ಕುವ ಕೆಲಸ ಮಾಡಿದ್ದೇವೆ. ‘ಅಶೋಕವನ’ದ ಪರಿಸರ ಇಷ್ಟು ಕೆಟ್ಟು ಹೋಗಿಲ್ಲ. ಆದರೂ ಕುಕ್ಕೇ ಸುಬ್ಬನನ್ನು ನೋಡಲು ಹೋಗಿ ಬರುವ ಭಕ್ತರು ಕ್ವಚಿತ್ತಾಗಿ ‘ವನವಿಹಾರಕ್ಕೆ’ ನುಗ್ಗಿ ಎಸೆದ ಬಿರ್ಯಾಣಿ ಪಾರ್ಸೆಲ್ಲಿನ ತೊಟ್ಟೆ, ಟೈಗರ್ ಬಿಸ್ಕತ್ತಿನ ಪಾಲಿಪ್ಯಾಕ್, ಅಂತಾರಾಷ್ಟ್ರೀಯ ಮಟ್ಟದ ಪರಿಶುದ್ಧ ಮಿನರಲ್ ವಾಟರ್ರೋ ಶಕ್ತಿಪೇಯಗಳನ್ನೋ ದುಡ್ಡೆಸೆದವರಿಗೆ ಕೊಟ್ಟು ಉಳಿದ ಶತಾಯುಷ್ಯವನ್ನು ಕಳೆಯಲು ಬಿದ್ದ ಪರ್ಲ್‌ಪೆಟ್ ಬಾಟಲುಗಳೋ ನಮಗೆ ಹೆಕ್ಕಲು ಧಾರಾಳ ಸಿಕ್ಕುತ್ತಲೇ ಇರುತ್ತವೆ! ಅಲ್ಲಿನ ನಮ್ಮ ಅಸಂಖ್ಯ ಪ್ರಕೃತಿ ಶೋಧದ ಚಾರಣಗಳಲ್ಲಿ ಜೊತೆಗೊಡುವ ಸ್ಥಳಿಯ ಮಾರ್ಗದರ್ಶಿಗಳಿಗೆ ನಾವು ಆಹಾರ ಸೇವಿಸಿದ ಮೇಲೆ ತೊಟ್ಟೇ ಬಾಟಲು ಎಸೆಯುವುದಿರಲಿ, ಯಾರೋ ಯಾವಾಗಲೋ ಎಸೆದದ್ದು ಕಂಡರೂ ಹೆಕ್ಕಿ ತರುವುದು ಭಾರೀ ತಮಾಷೆ. ಇಷ್ಟುದ್ದಕ್ಕೆ ತೂಕಡಿಸದೆ ಓದಿದ ನಿಮಗೂ ಹಾಗನ್ನಿಸುತ್ತದೆಯೇ? ನಿಮ್ಮನುಭವ ಕೋಶ ಸೂರೆಗೊಳ್ಳಲು ಕೆಳಗೆ ಪ್ರತಿಕ್ರಿಯಾ ಅಂಕಣ ತೆರೆದಿಟ್ಟಿದ್ದೇನೆ - ಜಾಗ್ರತೆ! ಹತ್ತೆಣಿಸುವುದರೊಳಗೆ ತುಂಬಲು ಸುರು ಮಾಡಬೇಕು ರೆಡೇ, ಒನ್, ಟೂ, ಥ್ರೀ...

23 comments:

 1. Laxminarayana Bhat P24 August, 2010 07:35

  ಪ್ರಿಯ ಅಶೋಕವರ್ಧನರಿಗೆ ನಮಸ್ಕಾರ. ಈ ಪ್ರಪಂಚದಲ್ಲಿ 'ನೋಡಿ ಸ್ವಾಮೀ ನಾನಿರುವುದೆ ಹೀಗೆ' ಎಂದಷ್ಟೇ ಹೇಳಬಹುದಲ್ಲದೆ 'ನೀವೂ ಹೀಗೆ ಇರಿ' ಎಂದರೆ 'ತೊಂದರೆ' ತಪ್ಪಿದ್ದಲ್ಲ! ಇದು ಸ್ವಾನುಭವದ ಮಾತು. ವೃಥಾ ಕಂಠ ಶೋಷಣೆ ಮಾಡಿಕೊಳ್ಳುವುದರ ಜೊತೆಗೆ ಏನೇನೋ ಹಣೆಪಟ್ಟಿ ಹಚ್ಚಿ ನಮ್ಮನ್ನು 'ಲೇಬಲ್' ಮಾಡಿಬಿಡುತ್ತಾರೆ ಈ ಮಂದಿ. ಹಾಗಂತ ನಾವು ಲೋಕ ಹೇಳಿದ್ದನ್ನೆಲ್ಲ 'ಜೀ ಹುಜೂರ್' ಎಂದು ಒಪ್ಪಬೇಕಿಲ್ಲ. ನಮ್ಮ, ನಿಮ್ಮಂಥವರು ಯಾವತ್ತಿಗೂ [ಯಾವುದೇ ವಿಶೇಷ ಸವಲತ್ತುಗಳಿಲ್ಲದ!!] ಅಲ್ಪಸಂಖ್ಯಾತರೇ ಸರಿ!

  ReplyDelete
 2. ನಾವು ಚಿಕ್ಕವರಿದ್ದಾಗ ಬಟ್ಟೆಯ ಕೈಚೀಲ ಒಯ್ದು ಸಾಮಾನು ತರುವುದು 'ಔಟ್ ಡೇಟೆಡ್ ಅಥವ ಔಟ್ ಆಫ್ ಫ್ಯಾಷನ್' ಆಗಿರಲಿಲ್ಲ. ಈಗ ಹಾಗಾಗಿರುವುದಷ್ಟೇ ಅಲ್ಲ, ಬಟ್ಟೆಯ ಕೈಚೀಲ ಒಯ್ಯುವವನನ್ನು 'ಯಾವುದೋ ಹಳ್ಳಿಗಮಾರ ಅಥವ ಆಧುನಿಕತೆಯ ಗಂಧಗಾಳಿ ತಾಗದವ----' ಎಂಬಂತೆ ನೋಡುತ್ತಾರೆ. ನಿನ್ನಂಥ ಅಲ್ಪಸಂಖ್ಯಾತರ ಕೂಗು ಶ್ರೀ ಲಕ್ಷ್ಮೀನಾರಾಯಣರು ಹೇಳಿದಂತೆ 'ಅರಣ್ಯರೋಧನ'. ಇತ್ತೀಚೆಗೆ ಬೇರೆ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಬಲು ಕಠಿಣ ನಿಲುವನ್ನು ನಾನು ತಳೆದುದಕ್ಕೆ 'ಆ ಮನುಷ್ಯ ಒಂಥರಾ ಸಾರ್. ನಮ್ಯತೆ, ಮಾತಿನಲ್ಲಿ ನಯನಾಜೂಕು ಎಂಬುದು ಅವರ ಜಾಯಮಾನದಲ್ಲೇ ಇಲ್ಲ. ಅವರ ತಂಟೆಗೆ ಹೋಗದಿರುವುದೇ ಕ್ಷೇಮ' ಹಾಗೆಂದು ನನ್ನ ಬೆನ್ನಹಿಂದೆ ಆಡಿಕೊಳ್ಳುವುದನ್ನೂ ಕೇಳಿದ್ದೇನೆ. ಇಂಥ ಅನುಭವ ನಿನಗೂ ಆಗಿರಬಹುದು. ಆದರೂ ಇಂಥ 'ಅರಣ್ಯ ರೋಧನ' ನಿಲ್ಲಿಸಬೇಡ. ೦.೧% ಪ್ರಭಾವ ಬೀರಿದರೂಸಾಕು.

  ReplyDelete
 3. ಪ್ರೀತಿಯ ಅಶೋಕ ವರ್ಧನರೇ
  ನಮಸ್ಕಾರಗಳು

  ನಾವು ಬೆಳೆಸಿಕೊಳ್ಳು ತ್ತಿರುವ ವಿನಾಕಾರಣ ಪ್ಲಾಸ್ಟಿ ಕ್ ವ್ಯಾಮೋಹದ ಬಗ್ಗೆ ತಾವು ಬರೆದದ್ದು ಪರಮ ಸತ್ಯ.

  ತಮ್ಮ ಮಿಂಚಂಚೆಯಲ್ಲಿ ನಮ್ಮ ನೇಲ್ಯಾರು ಗುರು ಗೋವಿಂದ್ ಬಗ್ಗೆ ಬರೆದ ಒಳ್ಳೆಯ ಮಾತುಗಳು ನನಗೆ ಸಂತಸ ಮತ್ತು ಹೆಮ್ಮೆ ತಂದುವು.

  ಇಂದು ಮುಂಜಾನೆ ತಮ್ಮ ಬ್ಲಾಗ್ ಓದಿದಾಗ ನನ್ನ ಮನಸ್ಸಿಗೆ ಹಿತ ಅನ್ನಿಸಿತು.

  ವಂದನೆಗಳು

  ಕೇಸರಿ ಪೆಜತ್ತಾಯ

  ReplyDelete
 4. ನಾನು ಬಹಳ ದಿನಗಳಿಂದ ಯಾವತ್ತು ನನ್ನ ಜೊತೆ ಕೈ ಚೀಲ /ಚೀಲ ತೆಗೆದುಕೊಂಡು ಹೋಗುತ್ತಿರುತ್ತೇನೆ. ಆದಷ್ಟು ಎಲ್ಲ ಸಾಮಾನುಗಳನ್ನ ಆ ಚೀಲದಲ್ಲೆ ತರುತ್ತೇನೆ.
  ಈಗ ಬಂದಿರುವ ಸೂಪರ್ ಮಾರ್ಕೆಟ್ ಮತ್ತು ಮಾಲ್ ಗಳು 50 ಪೈಸೆಯ ಚೊಕೋಲೆಟಿಗೂ ಒಂದು ಪ್ಲಾಸ್ಟಿಕ್ ಕವರ್ ಕೊಡುತ್ತಾರೆ. ಜನ ಈ ಕವರ್ ಗಳನ್ನ ಮುಗಿಬಿದ್ದು ತೆಗೆದುಕೊಳ್ಳುತ್ತಾರೆ.ಎಲ್ಲದಕ್ಕಿಂತ ಬೇಜಾರಿನ ವಿಷಯ ಅಂದರೆ, so called educated people ಪ್ಲಾಸ್ಟಿಕ್ ಕವರ್ ಬಗ್ಗೆ ಬೇರೆಯವರಿಗಿಂತ ಹೆಚ್ಚು ignorant.

  ReplyDelete
 5. Dear Ashok,
  I have struggled many times in your shop to carry books home, I've heard lot of my own friends grumbling about you for not providing Cover at your shop. I need not mention about their suggestions because you already must have heard it!!. I have been trying to carry a Cover after I have realized.
  Implementing this in any of the shop is almost impossible in today's competitive world. You might have lost many customers just because your policies of not giving plastic and Discount!!. I dont think most of the business people wouldn't like to loose which dos'nt make much of difference for you. I my self have tried costing of paper bags which works out much more costlier than plastic bags , where not giving carry bag is out of question!!?. I believe not providing a Plastic carry bag or any other packing material may not be good option at the moment for people like me who are not willing to join hands , at the same time look at other side of it My dad collects carry bag or plastic at any given chance (shopping, at home, neighbors) just for the sake of reuse of it!!

  ReplyDelete
 6. ಪ್ಲಾಸ್ಟಿಕ್ ಬ್ಯಾಗ್ ಬೇಡಾ ಅನ್ನುವುದು ಬೆಂಗಳೂರಿನ ಸೂಪರ್ ಮಾರ್ಕೆಟ್ ಗಳು ಮತ್ತು ಮಾಲ್ ಗಳಲ್ಲಿ ಎಷ್ಟು ಕಷ್ಟ ಅನ್ನುವುದು ಅನುಭವಿಸಿದವರಿಗೇ ಗೊತ್ತು. ಕೆಲವರು ಇತ್ತೀಚೆಗೆ ಸುಧಾರಿಸಿಕೊಳ್ಳುತ್ತಿದ್ದಾರಷ್ಟೇ. ಸ್ಟ್ರಾಂಡ್ ಬುಕ್ ಸ್ಟಾಲ್ ನಲ್ಲಿ ಪ್ಲಾಸ್ಟಿಕ್ ಬ್ಯಾಗ್ ಮಾಮೂಲಾಗಿತ್ತು. ನನ್ನಂಥ ಕೆಲವರ ಒತ್ತಾಯಕ್ಕೆ ಮಣಿದೋ ಅಥವಾ 'ಗಿರಾಕಿಯೇ ದೇವರು' ಎಂದೋ ಈಗ ಪೇಪರ್ ಬ್ಯಾಗ್ ಸವಲತ್ತಿದೆ. ಇತ್ತೀಚೆಗೆ ನಾನು ಊರಿಗೆ ಹೋಗಿದ್ದಾಗ ಮತ್ತೊಂದು ವಿಷಯ ಗಮನಿಸಿದೆ. ನಮ್ಮೂರಿನ ಸಮೀಪವೇ ಮಗ್ಗೆ ಎಂಬ ಸ್ವಲ್ಪ ದೊಡ್ಡ ಊರಿದೆ. ಜೋಸ್ಲಿನ್ ಎಂಬವರ ಸಕಲ ಸರಕಿನ ಮಳಿಗೆಯೊಂದಿದೆ. ಅವರಂತೂ ಪೇಪರ್, ಸೆಣಬು ಮತ್ತು ಬಟ್ಟೆಯ ಚೀಲಗಳನ್ನಷ್ಟೇ ವ್ರತ ತೊಟ್ಟವರಂತೆ ಬಳಸುತ್ತಾರೆ. ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ವಸ್ತುಗಳನ್ನು ಖರೀದಿಸುವವರಿಗೆ ಉಚಿತ ಚೀಲ ಸಿಕ್ಕರೆ ಕಡಿಮೆ ಖರೀದಿಸುವವರು ಚೀಲ ಕೊಂಡಕೊಳ್ಳಬೇಕು ಇಲ್ಲವೇ ಅವರೇ ಚೀಲ ತರಬೇಕು. ಇದನ್ನೆಲ್ಲಾ ನೋಡುವಾಗ ನೀವು ಹೇಳುವ ಹನಿ ಹನಿಗೂಡುವ ರೂಪಕ ಮತ್ತೊಂದು ಧನಾತ್ಮಕವಾಗಿಯೂ ಸಾಧ್ಯವಾಗುತ್ತಿದೆ ಅನಿಸುತ್ತಿದೆ. ಆದರೂ ಪ್ಲಾಸ್ಟಿಕ್ ಹರಡುವ ವೇಗಕ್ಕೆ ಇದು ಸಾಟಿಯಲ್ಲ ಎಂಬುದು ಭಯ ಹುಟ್ಟಿಸುತ್ತದೆ.
  -ಇಸ್ಮಾಯಿಲ್

  ReplyDelete
 7. ಬಯೋ ಡಿಗ್ರೇಡೇಬಲ್ ಪ್ಲಾಸ್ಟಿಕ್ ಬಗ್ಗೆ ಆಕರ್ಷಿತರಾಗುತ್ತಿರುವವರಿಗೆ ಕೆಲವು ಕಿವಿಮಾತುಗಳು:
  ೧. ನಾನಾ ವಿಧದ ಬಯೋ ಡಿಗ್ರೇಡೇಬಲ್ ಪ್ಲಾಸ್ಟಿಕ್‍ಗಳಿವೆ, ಒಂದಲ್ಲ, ಎರಡಲ್ಲ
  ೨. ಪ್ರತಿಯೊಂದು ವಿಧಕ್ಕೂ ಅದರದ್ದೇ ಆದ ಲೋಪ-ದೋಷಗಳಿವೆ, ಸರ್ವ ಕಳಂಕಮುಕ್ತ ಸದ್ಯಕ್ಕೆ ಯಾವುದೂ ಇಲ್ಲ
  ೩. ಪ್ರತಿಯೊಂದು ಥರದ ಬಯೋ ಡಿಗ್ರೇಡೇಬಲ್ ಪ್ಲಾಸ್ಟಿಕ್ ಮರಳಿ ಮಣ್ಣಿಗೆ ಸೇರುವುದು controlled conditionsಗಳಲ್ಲಿ ಮಾತ್ರ, ಇಲ್ಲವಾದರೆ ಎಷ್ಟೋ ಹೆಚ್ಚು ಸಮಯ ಬೇಕಾಗುತ್ತದೆ
  ೪. ಕೆಲವು ವಿಧಗಳಲ್ಲಿ ತಯಾರಿಗೊಳ್ಳುವ ಪ್ರಕ್ರಿಯೆಯಲ್ಲಿ ಪ್ರಕೃತಿಗೆ ಸಾಕಷ್ಟು ಪೆಟ್ಟು ಬಿದ್ದಾಗಿರುತ್ತದೆ, ಆಮೇಲೆ ಬಯೋ ಡಿಗ್ರೇಡೇಬಲ್ ಎನಿಸಿ ಹೆಚ್ಚೇನೂ ಸಾಧಿಸಿದಂತಾಗುವುದಿಲ್ಲ
  ೫. ಹೇಗಿದ್ದರೂ ಬಯೋ ಡಿಗ್ರೇಡೇಬಲ್ ಅನ್ನುವ ಕಾರಣದಿಂದ ಲಂಗುಲಗಾಮಿಲ್ಲದೆ, ಇರುವ ಸ್ವಲ್ಪ ಅಪರಾಧೀ ಮನೋಭಾವವನ್ನೂ ಗಾಳಿಗೆ ತೂರಿ ಜನರು ಉಪಯೋಗಿಸತೊಡಗುತ್ತಾರೆ ಹಾಗೂ ಇದರ ಪರಿಣಾಮಗಳನ್ನು ವಿಶ್ಲೇಷಿಸಿ ನೋಡಿದರೆ ಸಾಮಾನ್ಯ ಪ್ಲಾಸ್ಟಿಕ್ ಬಳಕೆಗಿಂತ ಕಳವಳಕಾರಿ

  ಅಂತರ್ಜಾಲದಲ್ಲಿ ಹುಡುಕಿ ನೋಡಿ, ಮೇಲೆ ಹೇಳಿದ ಅಂಶಗಳ ಬಗ್ಗೆ ಜಾಸ್ತಿ ವಿವವರಗಳು ಸಿಗುತ್ತವೆ. ವಿಜ್ಞಾನ ತುಂಬಾ ವೇಗದಲ್ಲಿ ಮುಂದುವರೆಯುತ್ತದೆ, ಈಗಾಗಲೇ ಇದಕ್ಕೆಲ್ಲಾ ಪರಿಹಾರ ಕಂಡುಹಿಡಿಯಲಾಗಿ ಬಯೋ ಡಿಗ್ರೇಡೇಬಲ್ ಪ್ಲಾಸ್ಟಿಕ್ ಬಗ್ಗೆ ಈ ಕಳವಳ ಅನಗತ್ಯ ಎಂದು ನಿಮಗೆ ಕಂಡುಬಂದಲ್ಲಿ, ದಯವಿಟ್ಟೂ ನನಗೂ ತಿಳಿಸಿ!

  ಒಟ್ಟಿನಲ್ಲಿ ಪುನಃ ಪುನಃ ವರುಷಗಟ್ಟಲೆ ಬಳಕೆ ಮಾಡುವಂತಹ ಗಟ್ಟಿಮುಟ್ಟಾದ ಚೀಲಗಳೇ ಈ ಸಮಸ್ಯೆಗೆ ಅತ್ಯುತ್ತಮ ಪರಿಹಾರ ಎನ್ನುವುದರಲ್ಲಿ ಸಂಶಯವಿಲ್ಲ.

  ಇತಿ,
  ಕೃಷ್ಣ ಶಾಸ್ತ್ರಿ

  ReplyDelete
 8. ಲೇಖನ ಅತೀ ಸೂಕ್ಷ್ಮ ವಿಚಾರಗಳನ್ನು ಸರಳವಾಗಿ ಅಭಿವ್ಯಕ್ತೀಕರಿಸಿದೆ. ತ್ಯಾಜ್ಯವನ್ನೆ ಸೃಷ್ಟಿಸುವ ಇಂದಿನ ಜೀವನ ಶೈಲಿ ತಾವೇ ತ್ಯಾಜ್ಯವಾಗುವ ದುರಂತವನ್ನು ಊಹಿಸಿದರು ಅದರ ಬಗ್ಗೆ ಕಾಳಜಿ ಇಲ್ಲದೆ ವರ್ತಿಸುತ್ತದೆ.ಲೇಖನಕ್ಕೆ ಧನ್ಯವಾದಗಳು

  ReplyDelete
 9. Krishnamohan Bhat24 August, 2010 19:06

  ee lekhanakke pratikriyisabekaadare ondu dodda lekhanavanne bareya bekagutteno.sadya hechhina pratikriye ella.kelavu sala Krishna shastrigalu helida vishaya aaloochisale bekaadu anistasde nanyakke eradu mukha ede allave?eradu namuneya aalochane sandigdategalu parisarapremigalige saamaanya.Khada khandita plastic upayoga tiraskarisuvudakkintalu upayoga kadime maaduva bagye hejje tegedukolluvudu olleyadeno.anivaarya avasyakategalli plasticannu sampuurna tiraskarisalu saadyavilla endu nanna abhipraaya.

  ReplyDelete
 10. DEAR ASHOKMAMA,
  I remember about 2 years back when i approached your shop in search of some books. Finalli to my surprise, I found out the book ( Jesus lived in india). More than the surprise of finding it out, i was surprised to see that the treditional packing was not there..

  It was later i realised that you dont give the books packed...
  Then was the unanswered question 'WHY?' always troubling me when i entered the palace of knowledge...
  But hesitation kept me quiet...

  Now the trouble is no more...

  ReplyDelete
 11. ಕಳೆದ ಆರು ವರ್ಷಗಳಿಂದ ನಾನು ನಮ್ಮ ಮನೆ ಆವರಣದಲ್ಲಿರುವ ಸುಮಾರು ೧೪ ತೆಂಗಿನ ಮರಗಳ ಅಡಿಯಲ್ಲಿ ಇದ್ದ ಗುಟ್ಕಾ , ಮಧು, ಮತ್ತು ಆಗರಬತ್ತಿಗಳ ಪ್ಲಾಸ್ಟಿಕ್ ನ್ನು ಹೆಕ್ಕಿ ಹೆಕ್ಕಿ ಒತ್ತರೆ ಮಾಡಲು ಯತ್ನಿಸುದ್ದೆನೆ. ಇನ್ನೂ ಮುಗಿದಿಲ್ಲ.

  ReplyDelete
 12. ಅಶೋಕವರ್ಧನ25 August, 2010 07:25

  ಪ್ರಿಯ ಕೃಷ್ಣ ಶಾಸ್ತ್ರಿಗಳೇ
  ನಿಮ್ಮ ಮುಕ್ತ ಚಿಂತನೆಗೆ ಕೃತಜ್ಞತೆಗಳು.
  ನನ್ನ ಪ್ರಕಾಶನ ಮುಚ್ಚಿದಲ್ಲೂ ಇಲ್ಲೂ ಇನ್ನೂ ಎಷ್ಟೋ ಜನರಿಂದಲೂ ಇಂದು ಮಾತ್ರವಲ್ಲ ಬಹಳ ಹಿಂದಿನಿಂದಲೂ ನಾನು ‘ಹಠ ಕಡಿಮೆ ಮಾಡಿಕೊಂಡರೆ ಒಳ್ಳೆಯದು’ ಎಂಬ ಸಲಹೆ ಬರುತ್ತಲೇ ಇದೆ. ಆದರೆ ಹಾಗೆ ಸಲಹೆ ಕೊಡುವ ಹೆಚ್ಚಿನವರಿಗೆ ಆ ಕ್ಷಣದಲ್ಲಿ ತಮ್ಮ ಅನಾನುಕೂಲ, (ತಮ್ಮ ಗರ್ವಭಂಗವೂ ಇರಬಹುದು) ‘ವ್ಯಾಪಾರ ಸೇವೆಯ ಕೊರತೆ’ ಮುಖ್ಯವಾಗಿ ಕಾಣುತ್ತದೆ. ನನ್ನ ವಿವರಣೆ, ‘ಉಪದೇಶ’ಕೇಳುವ ಮನೋಸ್ಥಿತಿ ಇರುವುದಿಲ್ಲ. ಮಾಲು ಕಳಚಿಕೊಂಡು ಹಣ ಮಾಡುವ ವ್ಯಕ್ತಿಗೊಂದು ಹಿನ್ನೆಲೆಯಿರಬಹುದು, ಭಿನ್ನ ತರ್ಕಸರಣಿಯಿರಬಹುದು ಎಂದು ಯೋಚಿಸುವ ತಾಳ್ಮೆಯಿರುವುದಿಲ್ಲ. ಇಲ್ಲಿ ಆದರ್ಶಗಳು ಪ್ರಾಯೋಗಿಕತೆಯ ಒರೆಗಲ್ಲಿಗೆ ಉಜ್ಜುಜ್ಜಿಯೇ ರೂಪುಗೊಂಡಿವೆ ಎನ್ನುವುದನ್ನು ಹೀಗಾದರೂ ತೋಡಿಕೊಳ್ಳುವ ಪ್ರಯತ್ನವಾಗಿಯೇ ಸಣ್ಣ ಲೇಖನವನ್ನು ಬಹಳ ಹಿಂದೆಯೇ ಬರೆದು ಉದಯವಾಣಿಯಲ್ಲಿ ಪ್ರಕಟಿಸಿದ್ದೆ. ಅಲೆ ಬಂದಂತೆ ತೂರಿಹೋಗದ ನನ್ನ ಹಠವನ್ನು ಕಾಲಕಾಲಕ್ಕೆ ಸೀಮಿತವಾಗಿಯೇ ಆದರೂ ಜನರ ಮುಂದೆ ನೀವೇದಿಸಬೇಕೆಂದೇ ಈಗ ಇನ್ನಷ್ಟು ವಿವರಗಳೊಂದಿಗೆ ಬರೆದುಕೊಂಡಿದ್ದೇನೆ. ಬಟ್ಟೆಚೀಲ, ಕಾಗದದ ಲಕೋಟೆ ಇತ್ಯಾದಿಗಳ ಬಗ್ಗೆ ನಾನಾಗಲೇ ವಿವರಣೆ ಕೊಟ್ಟಿದ್ದೇನೆ ಅಲ್ಲವೇ? (ಇತರ ಖರ್ಚಿನ ಹೆಚ್ಚಳ, ಮಾರಾಟಕ್ಕಿಳಿದರೆ ಕರಭಾರ ಇತ್ಯಾದಿ) ಪ್ಲ್ಯಾಸ್ಟಿಕ್ ಪೂರ್ಣ ನಿರಾಕರಣೆ ನನ್ನಿಂದ ಬಿಡಿ, ಇಂದು ಯಾರಿಂದಲೂ ಸಾಧ್ಯವಿಲ್ಲ. ಅದರ ಕಡಿಮೆ ಬಳಕೆ, ಪ್ರಾಕೃತಿಕ ಸಂಪತ್ತಿನ ಬಳಕೆಯಲ್ಲೂ ಮಿತವ್ಯಯ (ಕಾಗದ, ಸೆಣಬಿತ್ಯಾದಿಗಳ ಚೀಲ), ಎಲ್ಲಕ್ಕೂ ಮಿಗಿಲಾಗಿ ಮರುಬಳಕೆಯನ್ನು ಮತ್ತು ಸಾರ್ವಜನಿಕ ಪಾಲುಗಾರಿಕೆಯನ್ನು ಎಚ್ಚರಿಸುವ ವಿನಯಪೂರ್ವಕ ಸೂಚನೆ ‘ನಾವು ಚೀಲ ಕೊಡುವುದಿಲ್ಲ. ಪ್ಲ್ಯಾಸ್ಟಿಕ್ ಮಿತವಾಗಿ ಬಳಸಿ. ನಿಮ್ಮ ಪುಸ್ತಕಕ್ಕೆ ನೀವೇ ಚೀಲ ತನ್ನಿ.’

  ನಾನು ಮೂಲತಃ ಜೀವನ ನಿರ್ವಹಣೆಗಾಗಿ ಪುಸ್ತಕ ವ್ಯಾಪಾರಿ. ಹೇಗಾದರೂ ಅಷ್ಟು ಜನಕ್ಕೆ ಓದಲು ನಾನು ಪುಸ್ತಕ ಒದಗಿಸಬೇಕು, ಏನಾದರೂ ಮಾಡಿ ಗಿರಾಕಿಗಳಿಗೆ ಪುಸ್ತಕ ಒಯ್ಯಲು ಸೌಕರ್ಯ ಕಲ್ಪಿಸಬೇಕು ಎನ್ನುವುದನ್ನು ಅಳವಡಿಸಿಕೊಳ್ಳುವಷ್ಟು ಸ್ಥಿತಿವಂತನಲ್ಲವಾದ್ದರಿಂದಲೇ ಪ್ರಕಾಶನವನ್ನು ಮುಚ್ಚಿದೆ (ಒಳದಾರಿ ಹಿಡಿದು ಸಮಜಾಯಿಷಿ ಕೊಡಲಿಲ್ಲ), ಪ್ಯಾಕಿಂಗ್ ನಿರಾಕರಿಸಿದೆ (ಪ್ರಾಕೃತಿಕ ಅವಹೇಳನ ಕಡಿಮೆ ಮಾಡಿದೆ). ಆದರೆ ಇವನ್ನು ನಿರ್ವಹಿಸಲೇ ಬೇಕಾದ ಸಾರ್ವಜನಿಕ ಸಂಸ್ಥೆಗಳಿಗೆ ನಾನು ಬಳಕೆದಾರನಾಗಿ, ಜಾಗೃತ ನಾಗರಿಕನಾಗಿ, ಪುಸ್ತಕೋದ್ಯಮಿಯಾಗಿ ಕೇಳಿಯೂ ಕೇಳದೆಯೂ ಬರೆದುಕೊಂಡಿದ್ದೇನೆ, ವೇದಿಕೆ ಸಿಕ್ಕಿದಲ್ಲಿ ಭಾಷಣಿಸಿದ್ದೇನೆ, ಮುಕ್ತವಾಗಿ ಚರ್ಚೆಗೂ ಒಡ್ಡಿಕೊಂಡಿದ್ದೇನೆ. (ಮಂಗಳೂರು ವಿವಿನಿಲಯದ ಗ್ರಂಥಾಲಯ ಒಂದು ಕಾಲದಲ್ಲಿ ಅತ್ರಿಯನ್ನು ಬಹಿಷ್ಕರಿಸಲು ಹೊರಟು ಸೋತಿತ್ತು! ಅರಣ್ಯ ಇಲಾಖೆ ನನ್ನ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಉನ್ನತ ನ್ಯಾಯಾಲಯದವರೆಗೂ ಹೋಗಿ ಕೈಚೆಲ್ಲಬೇಕಾಯ್ತು) ಬಹುಶಃ ಈ ಕುರಿತು ನಾನು ಹೆಚ್ಚು ವಿವರಣೆ ಕೊಡಲು ಹೋದರೆ ಮತ್ತೆ ಗರ್ವೋನ್ನತಿ ದೋಷ ಕಾಣಿಸೀತು :-)
  ಇನ್ನೊಮ್ಮೆ ಕೃತಜ್ಞ.
  ಅಶೋಕವರ್ಧನ

  ReplyDelete
 13. ರಾಧಾಕೃಷ್ಣ25 August, 2010 22:00

  ಅಶೋಕ ಬಾವ
  ಕೆಲವೊಂದು ಆದರ್ಶಗಳು ಕಟು ಕಹಿ ಮಾತ್ರೆಯಂತೆ. ಆದರೆ ಅವುಗಳು ಅಗತ್ಯ ಸಮಾಜದ ಸ್ವಾಸ್ಥ್ಯಕ್ಕಾಗಿ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕೆನ್ನುವ ಬಗ್ಗೆ ತಕರಾರು ಇಲ್ಲ - ಅಂದ ಮೇಲೆ ನಾವು ತರಬಹುದಾದ ಸಾಮಾನು ಸರಂಜಾಮುಗಳಿಗೆ ಮನೆಯಿಂದ ಹೊರಡುವಾಗಲೇ ಬಟ್ಟೆಯ ಚೀಲಗಳನ್ನು ಒಯ್ದರೆ ಸಮಸ್ಯೆ ಕಡಿಮೆಮಾಡುವಲ್ಲಿ ನಮ್ಮದೂ ಕಿರು ಕಾಣಿಕೆಯಾಗಬಹುದು. ನಿನ್ನ ಪ್ರಯತ್ನ ಇನ್ನು ಕೆಲವರಿಗೆ ಪ್ರೇರಣೆ ಕೊಟ್ಟಿರಬಹುದು.
  ಸೀತ - ನನ್ನ ಹಂಡತಿ - ಅಂಗಡಿಗೆ ಹೋದಾಗಲೆಲ್ಲ ಪ್ಲಾಸ್ಟಿಕ್ ಬೇಡ ಎಂದು ಹಠ ಹಿಡಿಯುವುದು ಈಗ ಪುತ್ತೂರಿನ ಹೆಚ್ಚಿನ ಅಂಗಡಿಗಳಿಗೆ ಗೊತ್ತಾಗಿ ಪ್ಲಾಸ್ಟಿಕ್ ಚೀಲ ತೆಗೆಯುವುದಿಲ್ಲ. ಸಂಗ ದೋಷ ನನಗೂ ತಟ್ಟಿದೆ - ನಿಧಾನವಾಗಿ!

  ReplyDelete
 14. PRAVEEN PADIGAR26 August, 2010 00:17

  ಕೃತಜ್ಞ.
  ‘ಸರಿ ದಾರಿ’ಗೆ ಬರುವ ಯತ್ನ ಮಾಡುತ್ತೇನೆ.
  ಧನ್ಯವಾದಗಳು

  ReplyDelete
 15. ಜಯಲಕ್ಷ್ಮಿ26 August, 2010 12:39

  ಅಂಗಡಿಗಳಿಗೆ ಹೋಗುವಾಗ ನನ್ನದೇ ಚೀಲವನ್ನು ಒಯ್ಯುತ್ತೇನೆ,ಆದರೆ ದಿನಸಿ ವಸ್ತುಗಳು ಪ್ಲಾಸ್ಟಿಕ್ ಚೀಲದಲ್ಲಿ ಪ್ಯಾಕ್ ಆಗಿಯೇ ಸಿಗುತ್ತವೆ!ನಮಗೆ ಬೇಕೋ ಬೇಡವೋ ಅಂಗಡಿಯವರಿಗೆ ನಮ್ಮ ಸಾಮಾನು ಕೊಳ್ಳುವಿಕೆ ಮುಗಿದ ತಕ್ಷಣ ಕೈ ಯಾಂತ್ರಿಕವಾಗಿ ಪ್ಲಾಸ್ಟಿಕ್ ಚೀಲವನ್ನು ಅಟ್ಟಿಯಿಂದೆಳೆಯಲು ಹೋಗುತ್ತದೆ.
  ಕೆಲವು ಅಂಗಡಿಯವರು ತಮ್ಮ ಹುಡುಗರಿಗೆ ‘ಏ,ಮೇಡಂ ಅವ್ರಿಗೆ ಚೀಲ ಬೇಡ ಕಣೋ’ ಅಂದರೆ ಕೆಲವು ಅಂಗಡಿಯವರು ಎಷ್ಟೇ ಪರಿಚಿತರೇ ಆಗಿದ್ದರೂ ಪ್ರತೀ ಬಾರಿಯೂ ಉದಾರವಾಗಿ ಕವರ್ ಕೊಡಲು ತೊಡಗುತ್ತಾರೆ,ಪ್ರತೀ ಬಾರಿಯೂ ಸಹನೆಯಿಂದಲೇ ಅವರಿಗೆ ಜ್ಞಾಪಿಸಬೇಕಾಗುತ್ತದೆ.ಚೀಲ ಕೊಡಬೇಡಿ ಅಂತ ಮೆಲುವಾಗಿಯೇ ಅವರಿಗೆ ಹೇಳತೊಡಗಿದರೆ ‘ಅಯ್ಯೋ...ಜನ ಕೇಳ್ತಾರೆ ಮೇಡಂ’ ಎನ್ನುತ್ತಾರೆ,ತರಕಾರಿ ಗಾಡಿಯವರೂ ‘ಇಲ್ಲಾ ಅಕ್ಕ.....ಕವರ್ ಕೊಟ್ಟಿಲ್ಲ ಅಂದ್ರೆ ನಿನ್ ತರ್ಕಾರಿ ಬೇಡ ವೋಗ್ ಅಂತಾರೆ ಜನ’ ಅಂತ ಹೇಳ್ತಾರೆ.ಮನೆಯವರೇ ನಿನ್ನದೆಲ್ಲ ಅತಿ ಅಂದರೆ ಏನು ಮಾಡುವುದು!

  ReplyDelete
 16. ದಿನಕ್ಕೆ ಕಡಿಮೆಯಲ್ಲಿ ನೂರು ಜನಕ್ಕಾದರೂ "ಇಲ್ಲ, ಪ್ಲಾಸ್ಟಿಕ್ ಇಲ್ಲ" ಎಂದು ನಿರ್ಭಾವುಕವಾಗಿ ಹೇಳುವ ನಿಮ್ಮ (ಮತ್ತು ಶಾಂತಾರಾಮರ) ಹಟ ಮತ್ತು ಸಹನೆ ನನಗೆ ಆಶ್ಚರ್ಯ, ಪರಮಾಶ್ಚರ್ಯ! ಸಾಗಲಿ ನಿಮ್ಮ ಸಾಧನೆ! "ಸಾಧಿಸಿದರೆ ಸಬಳ ನುಂಗಬಹುದು".

  ReplyDelete
 17. ಆನಂದತೀರ್ಥ ಪ್ಯಾಟಿ27 August, 2010 14:01

  ಪ್ಲಾಸ್ಟಿಕ್ ರಕ್ಕಸನ ಹಾವಳಿ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ..!
  ಎರಡು ವಾರಗಳ ಹಿಂದೆ ಗುಲ್ಬರ್ಗದಲ್ಲಿ ಬಿಜೆಪಿಯ ಜಾಗೃತಿ ಸಮಾವೇಶ ನಡೆಯಿತು. ಎರಡು ಲಕ್ಷ ಕಾರ್ಯಕರ್ತರು ‘ಉತ್ಸಾಹ’ದಿಂದ ಭಾಗವಹಿಸಿ, ಊಟ ಮಾಡಿ ಪ್ಲಾಸ್ಟಿಕ್ ಲೋಟ, ಕ್ಯಾರಿ ಬ್ಯಾಗ್ ಎಲ್ಲೆಂದರಲ್ಲಿ ಎಸೆದರು.
  ಇವುಗಳನ್ನು ತಿಂದ ಇಪ್ಪತ್ತೈದಕ್ಕೂ ಹೆಚ್ಚು ಕುರಿ, ಹತ್ತಾರು ಅಕಳು ಹೊಟ್ಟೆ ಊದಿಸಿಕೊಂಡು ಸತ್ತೇ ಹೋದವು. ನೆಪಮಾತ್ರಕ್ಕೂ ಒಬ್ಬ ಮುಖಂಡನೂ ಈ ಕುರಿತು ವಿಷಾದ ವ್ಯಕ್ತಪಡಿಸಲಿಲ್ಲ. ಯಾರಿಗೂ ನೋವಾಗಲಿಲ್ಲ..! ಏಕೆಂದರೆ ಆ ಪ್ರಾಣಿಗಳು ಓಟು ಹಾಕುವುದಿಲ್ಲವಲ್ಲ?
  ನಾನು ಅಂಗಡಿಗೆ ಏನಾದರು ಪದಾರ್ಥ ತರಲು ಹೋದಾಗ, ಕಟ್ಟಿ ಕೊಟ್ಟ ಪೊಟ್ಟಣ ಹಾಕಲು ಮತ್ತೊಂದು ಪ್ಲಾಸ್ಟಿಕ್ ಚೀಲ ಕೊಡುತ್ತಾರೆ. ನಾನು ‘ಬೇಡ’ ಎಂದಾಗ ಸುತ್ತಲಿನವರು ತುಸು ವಿಚಿತ್ರವಾಗಿ ನೋಡುತ್ತಾರೆ..!
  ಇದೇ ಅನುಭವ ಇನ್ನೊಂದು ರೀತಿ ಹೀಗೆ: ಸಣ್ಣ ಲಕೋಟೆ ಹಾಗೂ ದೊಡ್ಡ ಪತ್ರಿಕೆಗಳನ್ನು ಹೊತ್ತು ತರುವ ಕವರ್’ಗಳನ್ನು ಹಾಗೇ ಇಟ್ಟಿರುತ್ತೇನೆ. ಯಾಗಾದರೂ ಏನನ್ನಾದರೂ ಕಳಿಸಬೇಕೆಂದಾಗ, ನನ್ನ ವಿಳಾಸದ ಮೇಲಿರುವ ‘TO’ ಎಂಬ ಅಕ್ಷರ ಹೊಡೆದು ಹಾಕಿ ‘From’ ಎಂದು ಬರೆದರೆ ಆಯ್ತು. ಉಳಿದ ಇನ್ನೊಂದು ಬದಿ ಮೇಲೆ ಬಿಳಿ ಹಾಳೆ ಅಂಟಿಸಿ ವಿಳಾಸ ಬರೆದರೆ ಸಾಕು. ಆದರೆ, ಕೋರಿಯರ್ ಸಿಬ್ಬಂದಿ ನಿಮ್ಮನ್ನು ವಿಚಿತ್ರವಾಗಿ ನೋಡಿದರೂ ‘ಡೋಂಟ್ ಕೇರ್’ ಮಾಡಿ..!
  ಇಂಥ ಅನುಭವಗಳಲ್ಲೇ ಒಂಥರಾ ಮಜಾ ಇರುತ್ತೆ…!!
  - ಆನಂದತೀರ್ಥ ಪ್ಯಾಟಿ, ಗುಲ್ಬರ್ಗ (ಕೃಪೆ: ಅವಧಿ)

  ReplyDelete
 18. M.Ishwara Bhat29 August, 2010 19:10

  Dear Sri Ashokavardhana,

  In Kodagu, Madikeri City Municipality and some other municipal committees have banned the usage of plastic. The shops in Madikeri have discontinued giving plastic bags.

  It is, in a way disciplining the community to carry their own non plastic bags whenever they go for shopping.

  In fact, I have practiced to keep few jute bags and cloth bags in my car. If I bring things home in that it will be again kept in the car after emptying the contents at home.
  Legislation alone will not fetch the required results. People have to practice the compliance of the law in word and spirit. Then only the purpose will be served.
  Thanks,
  M. Ishwara Bhat

  ReplyDelete
 19. Dear Ashok, Vandemataram.
  So said Carlyle; Mend yourself. There is one rascal less in the world.
  "We cannot survive without plastic". is the slogan.
  Ii appears naive to argue. 'Ashok has no other avocation. He goes on telling. His belly is full. (Hotte tumbidava). So he is headstrong, haughty and arrogant' Without repetition the allegations after allegations, with selective adjectives you are an accused before the people's court. When I was in the USA, my relatives, well wishers and the friends were telling that the garbage in the US would be exported to China. There is segregated. Biodegradable material is the natural manure for the rich paddy field in China. Non degradable material material would be recycled and the finished products would be exported back to US. Both the countries stand to gain. You know the prosperity of the US is on account of the chief labour from China and Africa; coloured Americans. We too can undertake the segregation. Non degradable material can either be crushed or pressed and spread for earth filling along the road margins. So also the debris. We can save lacks of tons of red gravel and thus thousands of acres of hillocks.
  K C Kalkura B.A, B.L
  Advocate

  ReplyDelete
 20. ನಿಮ್ಮಂಗಡಿಯಲ್ಲಿ ಪ್ಲಾಸ್ಟಿಕ್ ಕೊಡುವುದಿಲ್ಲ ಎಂಬ ಕಾರಣಕ್ಕೇ ನಾನು ಪುಸ್ತಕ ಖರೀದಿಗೆ ನಿಮ್ಮಲ್ಲಿಗೇ ಬರುತ್ತಿದ್ದುದು...!! ಹ್ಯಾಟ್ಸಾಫ್ ಟು ಯು...

  ReplyDelete
 21. Very useful and timely action, in preserving environment.

  Hemamala, Mysore

  ReplyDelete
 22. ಸ್ಪರ್ಧಾತ್ಮಕ ಯುಗ... ಗ್ರಾಹಕ ಸೇವೆ... ಎಲ್ಲ ನಿಜವೇ ಇರಬಹುದು. ಆದರೆ ಬದುಕು ಇವೆಲ್ಲಕ್ಕಿಂತ ತುಂಬಾ ದೊಡ್ಡದು. ಪ್ಲಾಸ್ಟಿಕ್ ವಿಷಯದಲ್ಲಿ ಇಂತಹುದೊಂದು ಕಠಿಣ ನಿಲುವು ತಳೆಯುವುದಕ್ಕೆ ನನ್ನ ಸಂಪೂರ್ಣ ಮೆಚ್ಚುಗೆ ಇದೆ. ಕಲ್ಪನೆಗೆ ಕಾಲುಗಳಿದ್ದರೆ ಆದರ್ಶಕ್ಕೆ ರೆಕ್ಕೆಗಳಿರುತ್ತವಂತೆ. ಆದರ್ಶ ಎಂದಾಕ್ಷಣ ಜೋಕು ಕೇಳಿಸಿಕೊಂಡವರಂತೆ ನಗುವವರಿಗೇನೂ ಈ ಕಾಲದಲ್ಲಿ ಕಮ್ಮಿ ಇಲ್ಲ. ಆದರೆ ಅಂತಹುದಕ್ಕೆಲ್ಲ ತಲೆಕೆಡಿಸಿಕೊಳ್ಳುವವರು ನೀವಲ್ಲ ಎಂದು ಗೊತ್ತಿದೆ. ಪ್ಲಾಸ್ಟಿಕ್-ಪ್ಯಾಕಿಂಗ್ ಕೇಳಬೇಡಿ ಅಂತ ನೀವು ಹಾಕಿರುವ ಬೋರ್ಡಿನಿಂದ ನಾನಂತೂ ಸ್ಫೂರ್ತಿಗೊಂಡಿರುವುದು ನಿಜ.

  ReplyDelete
 23. Gopalakrishna BHAT S.K.01 November, 2010 08:09

  A very good decision .

  ReplyDelete