11 April 2010

ಸಾವಿರಕಂಬದ ಊರಿನಲ್ಲಿ ಸಾವಿರದ ಸಂಭ್ರಮ

[ಪ್ರಿಯರಾದ ಶತಾವಧಾನಿ ಗಣೇಶ್ ಮತ್ತು ಮಂಟಪ ಪ್ರಭಾಕರ ಉಪಾಧ್ಯರಿಗೆ ಒಂದು ತೆರೆದ ಪತ್ರ.]

ಪೂರ್ವರಂಗ: ಮಂಗಳೂರಿನ ಪ್ರಥಮ ಅಷ್ಟಾವಧಾನ (೪-೮-೧೯೯೧) ಕಾಲದಿಂದ, ‘ಭಾಮಿನಿ’ ಬರಲಿದ್ದಾಳೆ ಎಂದು ಖಾಸಗಿಯಾಗಿ ಕೈರಂಗಳದಲ್ಲಿ ನನಗೆ ಅದರ ಕರಪತ್ರದ ಮಾದರಿ ತೋರಿಸಿದಂದಿನಿಂದ ನಿಮ್ಮನ್ನು ಬುದ್ಧಿ ಭಾವಗಳೊಡನೆ ಅನುಸರಿಸುವ ಅಸಂಖ್ಯರಲ್ಲಿ ನಾನು ಒಬ್ಬನಾಗಿಯೇ ಇದ್ದೇನೆ. ಭಾರತೀಯ ವಿದ್ಯಾಭವನದಲ್ಲಿ, ಮನೋಹರ ಉಪಾಧ್ಯರ ಮನೆಯಲ್ಲಿ, ಶಿವಮೊಗ್ಗದ ಅಹೋರಾತ್ರಿಯಲ್ಲಿ, ಎಂಜಿಎಂನಲ್ಲಿ, ಸನಾತನ ನಾಟ್ಯಾಲಯದಲ್ಲಿ ಎಲ್ಲೆಂದರಲ್ಲಿ ಏಕವ್ಯಕ್ತಿಯ ವಿವಿಧ ಪ್ರಸಂಗಗಳನ್ನು ನೋಡಿದ್ದು ಮಾತ್ರವಲ್ಲ, ಇಷ್ಟ ಮಿತ್ರರಲ್ಲಿ ಹಂಚಿಕೊಂಡಿದ್ದೇನೆ, ನನ್ನ ತಂದೆಯ ಆತ್ಮಕಥೆ ಬಿಡುಗಡೆಯ ಸಭೆಯಲ್ಲಿ ‘ಆಡಿಸಿ’ಯೂ ಸಂತೋಷಪಟ್ಟಿದ್ದೇನೆ. ಯಕ್ಷ-ಚಿತ್ರ-ಕಾವ್ಯಾವಧಾನವೆಂಬ ಸರ್ಕಸ್ಸಿನಲ್ಲಿ (ನನಗೆ ಸರ್ಕಸ್ಸಿನ ಬಗ್ಗೆ ತಿರಸ್ಕಾರವಿಲ್ಲ), ಕೊಂಡದಕುಳಿಯವರೊಡನೆ ಯುಗಳ ಪ್ರದರ್ಶನದಲ್ಲಿ, ಶ್ಯಾಮಭಟ್ಟರ ದಾಕ್ಷಿಣ್ಯಕ್ಕೆ ಬಲಿಬಿದ್ದ ತೆಂಕಿನ ವೇದಿಕೆಯಲ್ಲಿ, ಜನಪ್ರೀssssಯ ಬೇಡಿಕೆಯ ಮೇರೆಗೆ ಮತ್ತೆ ಜೊಲ್ಲು ಸುರಿಸುವ ಚಿಟ್ಟಾಣಿಗೆ ಮೋಹಿನಿಯಾಗುವಲ್ಲಿಯೂ ನಾನು ಪ್ರೇಕ್ಷಕನಾಗಿ (ಕಭಿ ಕುಷ್, ಕಭಿ ಗಂ!) ನಿಮ್ಮ ಪ್ರದರ್ಶನಗಳನ್ನು ಅನುಭವಿಸಿದ್ದೇನೆ. ಅಂದಂದಿನ ನನ್ನ ಗ್ರಹಿಕೆಯ ಏರಿಳಿತಗಳೇನಿದ್ದರೂ ನಿಮ್ಮ ಒಟ್ಟು ಸಂಕಲ್ಪ, ಯೋಗ್ಯತೆ ಮತ್ತು ದುಡಿಮೆಗಳ ಬಗ್ಗೆ ಎರಡಿಲ್ಲದ ವಿಶ್ವಾಸದಲ್ಲಿ ಮತ್ತೆ ಮತ್ತೆ ನಿಮ್ಮೆದುರು ನನ್ನನ್ನು (!) ಕಾಣಿಸಿಕೊಳ್ಳುತ್ತಲೇ ಬಂದಿದ್ದೇನೆ. ಅದೇ ಪ್ರೀತಿಯಿಂದ, ಅಂಗಡಿಯಲ್ಲಿ ಆರ್ಥಿಕ ವರ್ಷದ ಕೊನೆಯ ಒತ್ತಡಗಳು ಉಳಿದಿದ್ದರೂ ದೃಢ ಮನಸ್ಸು ಮಾಡಿ ಸಾವಿರದ ಸಂಭ್ರಮದಲ್ಲಿ ಭಾಗಿಯಾದೆ.

ಶೋಭಾವನ, ವಿದ್ಯಾಗಿರಿ, ಸಾಹಿತ್ಯ ಸಮ್ಮೇಳನ, ನುಡಿಸಿರಿ, ವಿರಾಸತ್ ಮುಂತಾದವನ್ನು ಇನ್ನೆಲ್ಲೂ ನೋಡಸಿಗದ ವ್ಯವಸ್ಥೆ ಮತ್ತು ವೈಭವದಲ್ಲಿ ಕಾಣಿಸುತ್ತ ಬಂದು, ಇನ್ನಷ್ಟು ಮತ್ತಷ್ಟಕ್ಕೆ ನುಗ್ಗುವ ಮೋಹನ್ ಆಳ್ವ ಬೃಹತ್ ಶಬ್ದಕ್ಕೇ ಪರ್ಯಾಯನಾಮ. ಇವರು ನಿಮ್ಮ ಏಕವ್ಯಕ್ತಿ ಪ್ರದರ್ಶನದ ಹಿಂದಿನ ಯಾವುದೋ ಶತಕವನ್ನೋ ಸಪ್ತಾಹವನ್ನೋ ಚಂದಗಾಣಿಸಿದ ಕಥೆ ಕೇಳಿ ಅನುಭವಿಸಲು ನಾನಲ್ಲಿರಲಿಲ್ಲವಲ್ಲಾ ಎಂದು ಕರುಬಿದ್ದೆ. ಸಾವಿರನೇ ಪ್ರದರ್ಶನವನ್ನು ಆಳ್ವರು ವಹಿಸಿಕೊಂಡಿದ್ದಾರೆ ಎಂದ ಮೇಲೆ ಸಮಾಧಾನ ತಂದುಕೊಂಡು, ನಿತ್ಯ ಉದಯವಾಣಿ ನೋಡಿ ಇಳಿಯೆಣಿಕೆ ಮಾಡುತ್ತಿದ್ದೆ. ಆದರೆ ಉಬ್ಬರದಲೆಗಳ ಮುನ್ನಣ ಶಾಂತಿಯಂತೆ (lull before the storm) ಒಮ್ಮೆಲೇ ಒಂಬೈನೂರಾ ತೊಂಬತ್ತರ ದಶಕದಲ್ಲೆಲ್ಲೋ ನಿಮ್ಮ ಜಾಹೀರಾತು ನಿಂತಾಗ ಆತಂಕಿತನಾದೆ. ಗಣೇಶರ ತಾಯಿಯ ಅನಾರೋಗ್ಯ ಹೆಚ್ಚಿತೇ ಇಲ್ಲಾ ಪ್ರಭಾಕರರಿಗೇ ಸಮಸ್ಯೆಯೇ ಮನೋಹರರಲ್ಲಿ ವಿಚಾರಿಸಿದ ಮೇಲೆ ನಿರುಮ್ಮಳನಾದೆ. ಶಿವಮೊಗ್ಗದಿಂದ ಮೂರಂಕಿಯ ಕೊನೆಯ ಪ್ರದರ್ಶನದ ಕರೆ ಬಂದಾಗ “ಹಾಗಾದ್ರೆ ಆಳ್ವರಲ್ಲಿ ಯಾವಾಗ” ಎಂದೂ ವಿಚಾರಿಸಿಟ್ಟುಕೊಂಡೆ. ಜೊತೆಜೊತೆಗೇ ಪ್ರದರ್ಶನ ಕಲೆಯೊಡನೆ ಸಾರ್ವಜನಿಕಕ್ಕೇ ತೆತ್ತುಕೊಂಡರೂ ವ್ಯಕ್ತಿಪ್ರತಿಷ್ಠೆ ಮೆರೆಯುವಲ್ಲಿ, ಸಂಪತ್ತು ಸಂಗ್ರಹಿಸುವಲ್ಲಿ ತೀರಾ ಹಿಂದಿನ ಸಾಲಿನವರಾದ ನೀವು ಆಳ್ವರ ಮಹಾ ಬೀಸಿನಲ್ಲಿ ಹೇಗೆ ಹೊಂದಿಕೊಳ್ಳುತ್ತೀರೋ ಎಂಬ ಕುತೂಹಲ ಒಂದು ಕಡೆ. ಪ್ರತಿಬಾರಿಯೂ ಔನ್ನತ್ಯದ ಹೊಸ ಮಜಲುಗಳನ್ನಷ್ಟೇ ಕಾಣಿಸುವ ಆಳ್ವರು ನಿಮಗೇನು ಸಮ್ಮಾನದ ಹೊಳಹು ಹಾಕಿದ್ದಾರೋ ಎಂದು ತಿಳಿಯುವ ಸಂಭ್ರಮ ಇನ್ನೊಂದೆಡೆ.

ಆಳ್ವರ ಸಮಯಪಾಲನೆಯ ಶಿಸ್ತು ನನಗೆ ತಿಳಿದದ್ದೇ. ಆದರೂ ನಾನು ಯಾರೂ ಕಾದು ಕೂರದ ಒಬ್ಬಾನೊಬ್ಬ ಪ್ರೇಕ್ಷಕ ಎಂಬ ಬೇಜವಾಬ್ದಾರಿಯಿಂದ (ತಡವಾದವರೆಲ್ಲರಲ್ಲೂ ಕಾರಣಗಳಿರುತ್ತದೆ, ಇಲ್ಲಿ ಬೇಡ ಬಿಡಿ), ಸಭಾಂಗಣಕ್ಕೆ ಬರುವಾಗ ಜೋಶಿಯವರ ಶುಭಾಶಂಸನೆ ನಡೆದಿತ್ತು. ಅದಕ್ಕೂ ಮಿಗಿಲಾಗಿ ನನ್ನನ್ನು ಸೇರಿಸಿಕೊಂಡು ಸ್ವಲ್ಪ ಬೇಗವೇ ಸ್ಠಳದಲ್ಲಿರಬೇಕೆಂದು ಹೊರಟಿದ್ದ ಮನೋಹರ ಉಪಾಧ್ಯರಿಗೂ ಜೊತೆಗೊಟ್ಟ ಇತರ ಮಿತ್ರರಾದ ಪಾ.ನ ಮಯ್ಯ, ಕೆ.ಎಲ್ ರೆಡ್ಡಿ ಮತ್ತು ಜಾನಕಿಯವರಿಗೂ ಅವನ್ನೆಲ್ಲಾ ತಪ್ಪಿಸಿಬಿಟ್ಟ ಅಪರಾಧಿ ನಾನು. ಉದ್ಘಾಟನೆಯ ಚಂದ ನೋಡಲು ತಪ್ಪಿಹೋಯ್ತು. ಉದ್ಘಾಟಕ ಶ್ಯಾಮ ಭಟ್ಟರು ಭಾರೀ ವಾಗ್ಮಿಯೇನೂ ಅಲ್ಲ. ಆದರೆ ಯಕ್ಷಗಾನ ಮತ್ತದರ ಕಲಾವಿದರ ಬಗೆಗಿನ ಅವರ ಪ್ರೀತಿ ಆಳ್ವರಿಗೆ ಸಮತೂಕದ್ದೇ. ಕ್ರಿಯಾಶೀಲರು ಭಾರೀ ಮಾತಾಡದಿದ್ದರೇನು ಅವರ ಕೆಲಸ ಅವರು ಆಡುವ ನುಡಿಗೆ ಹೊಸ ಅರ್ಥ ಕೊಟ್ಟೇಕೊಡುತ್ತದೆ ಎಂಬ ನಂಬಿಕೆ ನನಗಿದ್ದರೂ ಶ್ಯಾಮ ಭಟ್ಟರ ಮಾತು ನಾನು ತಪ್ಪಿಸಿಕೊಂಡಿದ್ದೆ.

ಪ್ರಭಾಕರ ಜೋಷಿಯವರನ್ನು ವಿವಿಧ ವೇದಿಕೆಗಳಲ್ಲಿ ಹಲವು ನೂರು ಸಲ ಕೇಳಿದ್ದರೂ ಮತ್ತೆ ಕೇಳಲು ಕಾತರಿಸುವಂತಿರುತ್ತದೆ ಅವರ ವಿಷಯ ನಿರ್ವಹಣೆ, ವಿದ್ವತ್ತಿನ ಆಳ, ಹಾಸ್ಯಪ್ರಜ್ಞೆ ಮತ್ತು ಪ್ರಸ್ತುತಪಡಿಸುವ ಶೈಲಿ. ಅನಂತರ ಮಾತಾಡಿದ ರಾಜೀವ ಶೆಟ್ಟಿಯವರಿಗೆ ಮಂಟಪರೊಡನೆ ಇದ್ದ ಸ್ನೇಹಾಚಾರವೊಂದೇ ಬಂಡವಾಳವಾದ್ದರಿಂದ ಔಪಚಾರಿಕತೆಯ ಮಿತಿಯೊಳಗೇ ಮುಗಿಸಿದ್ದು ಸರಿಯಾಗಿತ್ತು. ಅಂಬಾತನಯರ ವಿದ್ವತ್ತು, ಒಡನಾಟದ ಅನುಭವ ಮತ್ತು ವಾಗ್ಮಿತೆ ಸಣ್ಣದಲ್ಲ. ಆದರೆ ಸನ್ನಿವೇಶದ ಗಾಂಭೀರ್ಯಕ್ಕೆ ಉಚಿತವಾದ ನಾಲ್ಕೇ ನುಡಿಹನಿಗಳ ತಂಪು ಕೊಟ್ಟರು. (ಹೆಚ್ಚಾದರೆ ಅದು ಎಲ್ಲ ಕೊರೆಯುವ ಬಿರುಮಳೆಯಾಗದೇ!) “ಯಕ್ಷಗಾನ ಎಂದರೆ ಬರಿಯ ನಾಲ್ಕು ಕಂಬಗಳ ನಡುವಣ ಕಲಾಪವಲ್ಲ. ಶಿವರಾಮ ಕಾರಂತರಿಂದ ಹರಕು ಗೋಣಿ ಹಾಸಿ ಸೋಜಿ ಮಾರುವವರವರೆಗೆ ಎಲ್ಲವನ್ನೂ...” ಎನ್ನುವ ಪ್ರಭಾಕರ ಜೋಷಿಯವರ ಮಾತಿಗೆ ಪೂರಕವಾಗಿ ಮಾರುಕಟ್ಟೆಗೆ ‘ಭಾಮಿನಿ’ಯ ಪ್ರತಿಕೃತಿಗಳನ್ನು, ಕಿರು ವಿಡಿಯೋ ಚಿತ್ರವನ್ನು ಸ್ವತಃ ಮಂಟಪರ ಮಗಳು ಅಳಿಯ ತಯಾರಿಸಿ ಬಿಟ್ಟದ್ದು ಕುಶಿಕೊಟ್ಟಿತು, ತುಂಬ ಸರಿಯಾದ ಕ್ರಮ. (ಈ ವಿಚಾರದಲ್ಲಿ ನನಗೆ ತುಂಬಾ ಹೇಳಲಿದ್ದರೂ ವಿಷಯಾಂತರವಾಗುವುದೆಂದು ಇಲ್ಲಿ ವಿಸ್ತರಿಸುತ್ತಿಲ್ಲ)

‘ಏಕವ್ಯಕ್ತಿ’ ಮೋಹಿನಿಯಾಟ್ಟಂ ಮತ್ತು ಕಥಕಳಿ: ಯಕ್ಷಗಾನದ ಸೋದರ ಕಲೆಗಳೇ ಆದ ಮೋಹಿನಿಯಾಟ್ಟಂನ್ನು ಪೂರ್ವಾಹ್ನವೂ ಕಥಕಳಿಯನ್ನು ಅಪರಾಹ್ನವೂ ಇಟ್ಟುಕೊಂಡದ್ದು ‘ಸಂಭ್ರಮ’ದ ಸೌಂದರ್ಯಕ್ಕೆ ತಿಳುವಳಿಕೆಯ ಗಂಧ ಪೂಸಿದಂತಾಯ್ತು. ನೀವಿಬ್ಬರೂ ಬಗೆತರದಲ್ಲಿ ‘ಅಭಿಮಾನೀ’ತನವನ್ನು ನಿರಾಕರಿಸಿದರೂ ನಮ್ಮಲ್ಲಿ ಒಂದು ಸಾಮಾಜಿಕ ದೌರ್ಬಲ್ಯವೋ ಎನ್ನುವಂತೆ ವ್ಯಕ್ತಿಪೂಜೆ ನಡೆದೇ ನಡೆಯುತ್ತದೆ. ಇದರಿಂದ ಬಂದವರೆಲ್ಲ ಕೊಟ್ಟದ್ದನ್ನೆಲ್ಲ ಆಸಕ್ತಿಯಿಂದ ಸ್ವೀಕರಿಸುತ್ತಾರೆ ಎಂದು ನಂಬುವಂತಿಲ್ಲ. ಇಲ್ಲೊಂದು ಚಿಲ್ಲರೆ ಪ್ರಸಂಗವನ್ನು ನಾನು ಹೇಳದಿರಲಾರೆ. ಮೊದಲು ನಿರ್ವಾಹಕನಿಂದ ಮೋಹಿನಿಯಾಟ್ಟಂ ಬಗ್ಗೆ ಕನ್ನಡದಲ್ಲಿ ಪರಿಚಯದ ಮಾತುಗಳು ಬಂದವು. ಮತ್ತೆ ಕಲಾವಿದೆ ಇಂಗ್ಲಿಷ್ನಲ್ಲಿ ಮುದ್ರಿಸಿ ತಂದ ಸವಿವರ ಕಾರ್ಯಕ್ರಮ ವಿವರಣೆಯ ಕರಪತ್ರವನ್ನು ಹಂಚಿಸಿದರು. ಕೊನೆಗೆ ಮುದ್ರಿತ ಸಾಹಿತ್ಯವಷ್ಟನ್ನೂ ಚೊಕ್ಕವಾಗಿ (ದ್ವನಿಮುದ್ರಿಕೆಯೇ ಆದರೂ) ಕೇಳಿಸಿದ ಮೇಲೆ ನೃತ್ಯ ಸುರುವಾಯ್ತು. ಆಗ ನನ್ನ ಹಿಂದಿನ ಸಾಲಿನಲ್ಲಿ ಕುಳಿತ, ದೂರದಿಂದ ನಿಮ್ಮ ಮೇಲಿನ ಅಭಿಮಾನದಲ್ಲೇ ಬಂದ ಇಬ್ಬರು ಕನ್ನಡ ಪ್ರೊಫೆಸರರುಗಳಿಗೆ promotion, project, incrementಗಳೆಲ್ಲಾ ಕಾಡತೊಡಗಿದವು. (ಆಚೆ ಈಚೆ ಹರಿಕಥೆಗೆ ಬಂದ ಸಾಂಪ್ರದಾಯಿಕ ಮಹಿಳಾಮಣಿಗಳಂತೆ ವಿವಿಧ ಶ್ರುತಿ, ಲಯಗಳಲ್ಲಿ ಹರಟುವವರು, ಚರವಾಣಿಯಲ್ಲಿ ಚರಚರಗುಟ್ಟುವವರೂ ಸಾಕಷ್ಟಿದ್ದರು, ಬಿಡಿ.) ಐದು ಮಿನಿಟು ಸಹಿಸಿಕೊಂಡೆ, ರಂಗದ ಮೇಲಿನ ಮಂದಾನಿಲ ಸಂಚಾರ, ಹನಿಹನಿಗಳ ಅದ್ಭುತವೆಲ್ಲ ಮಸುಕಾಗುವಂತೆ ಯುಜಿಸಿ ಗ್ರಾಂಟ್ಸ್, ನ್ಯಾಕ್ ನನ್ನನ್ನು ಆವರಿಸಿಕೊಳ್ಳತೊಡಗಿತು. ಠಪ್ಪನೆ ಹಿಂದೆ ತಿರುಗಿ “ದಯವಿಟ್ಟು ಬಾಯ್ಮುಚ್ಚಿ” ಎಂದ ಮೇಲಷ್ಟೇ ವರ್ಷಮೋಹಿನಿ ದಕ್ಕಿದಳು. (ಚಾ ವಿರಾಮದಲ್ಲಿ ಅವರಲ್ಲೊಬ್ಬರು “ನಾನಲ್ಲ, ನಾನಲ್ಲ” ಎಂದು ರಾಗ ತೆಗೆದರು. ಇನ್ನೊಬ್ಬರು ಮುಖವೇ ತೋರಿಸಲಿಲ್ಲ)

ಯಕ್ಷಗಾನ ಏಕವ್ಯಕ್ತಿಯ (ಅನ್ಯ ಭಾಷಿಕರ ಎದುರು) ಭಾಷಾರಹಿತ ಸಂವಹನದ ಬಗ್ಗೆ ಪ್ರಶ್ನೆ ಬಂದಾಗ ನೀವು (ಅನಂತರ ನಡೆದ ಸಂವಾದದಲ್ಲಿ) ವರ್ಷಮೋಹಿನಿಯನ್ನು (ಮೋಹಿನಿಯಾಟ್ಟಂನ್ನು) ಉದಾಹರಣೆಯಾಗಿ ಹೇಳಿದ್ದು ಸರಿಯಾದ ಮಾತು. ಭಾಮಿನಿಯಲ್ಲಿ ಅಷ್ಟನಾಯಕಿಯ ವಸ್ತು ಕೊಟ್ಟು ವಿವರಗಳನ್ನು ಬೆಳೆಸಲು (ಹಿಮ್ಮೇಳ ಸೇರಿದಂತೆ) ಕಲಾವಿದರಿಗೆ ಅವಕಾಶವಿದೆ. ಆದರೆ ವರ್ಷಮೋಹಿನಿಯಲ್ಲಿ ಕಲಾವಿದೆ ವಿವರಗಳಿಗೆ ನಿಶ್ಚಿತ ಅಭಿನಯ ಮಾತ್ರ ಸುಂದರವಾಗಿ ಕೊಡುತ್ತಿದ್ದಳು (ಧ್ವನಿಮುದ್ರಿತ ಹಿಮ್ಮೇಳದ ಮಿತಿ?). ಹಿಮ್ಮೇಳ ಮತ್ತು ಅಭಿನಯದ ವಿವರಗಳು ಮನೋಜ್ಞವಾಗಿಯೇನೋ ಇತ್ತು. ಆದರೆ ನನ್ನ ಸಂಸ್ಕಾರ ವಿಪರೀತ ಉಕ್ತ ಸಾಹಿತ್ಯಾವಲಂಬಿಯೇ ಆದ್ದರಿಂದಲೋ ಏನೋ ಕೊನೆಕೊನೆಗಾಗುವಾಗ ಪರಿಣಾಮ ಗಾಢವಾಗಿ ಉಳಿಯಲಿಲ್ಲ. ಅಪರಾಹ್ನದ ಕಥಕಳಿಯಲ್ಲಿ ‘ಭಾಗವತಿಕೆ’ ಆ ಕೊರತೆಯನ್ನು ತುಂಬಿ ಕೊಡುತ್ತಿತ್ತು ನಿಜ. ಪೂರ್ಣ ಮಲೆಯಾಳ ಅಥವಾ ಅವರ ಉಚ್ಚಾರ ಅರ್ಥವಾಗದಿದ್ದರೂ ಗ್ರಾಹ್ಯವಾದ ತುಣುಕುಗಳು ಕತ್ತಲ ನಡಿಗೆಯಲ್ಲಿ ಆಗೀಗ ಮಿಂಚಿದರೂ ದಾರಿ ತೋರುವ ಟಾರ್ಚ್ ಬೆಳಕಿನಂತೆ ಸಹಕರಿಸಿತು. ಆದರೆ ಕಥಕಳಿಯ ಸಮಸ್ಯೆ (ಎಲ್ಲೋ ಕೇಳಿದ ಮಾತೂ ಹೌದು, ಸ್ವಾನುಭವವೂ ಹೌದು) ವಿಪರೀತ ಶೈಲೀಕರಣದ್ದು. ಮೊದಲು ಸುಮಾರು ಇಪ್ಪತ್ತು ಮಿನಿಟು (ಸರಳ ಉಡುಗೆಯ ಕಲಾವಿದನೋರ್ವನ ಪ್ರಾತ್ಯಕ್ಷಿಕೆಯೊಡನೆ), ಬರಲಿರುವ ಪ್ರಸಂಗವನ್ನೇ ಕುರಿತು ಕೊಟ್ಟ ಮಾತು-ಕೃತಿಗಳ ವಿವರಣೆ ತುಂಬಾ ಸಹಕಾರಿಯಾಗಿತ್ತು. ನಾನು ಕಂಡ ಅಥವಾ ಕೇಳಿದ ಕಥಕಳಿ ‘ಭಾಗವತಿಕೆ’ಗಳು ನಮ್ಮ ಬಹುತೇಕ ಯಕ್ಷ-ಭಾಗವತರನ್ನು ಏನೂ ಅಲ್ಲ ಮಾಡುತ್ತದೆ. (ಅದಕ್ಕೆ ವ್ಯತಿರಿಕ್ತವಾಗಿ ಕಥಕಳಿಯ ಚಂಡೆ ಕೊರಡುಕುಟ್ಟಿದಂತೆಯೂ ಮದ್ದಳೆ ಅದಕ್ಕೆ ಗುಂಜನವನ್ನು ತುಂಬುವಲ್ಲಿ ಅಸಹಕಾರ ಹೂಡಿದಂತೆಯೂ ಕೇಳಿಸುತ್ತದೆ) ಆದರೂ ಹಿಂದೆ ಹಲವು ಬಾರಿ ಕಥಕಳಿಯೊಡನೆ ಬಂದ ಭಾವ - ರಂಗುರಂಗಾಗಿ, ಸ್ವಚ್ಛ ರಾಗರಂಜನೆಯೊಡನೆ, ಅಪಾರ ಸಾಧನೆಯ ಜೊತೆಗೆ ಕೇವಲ ವ್ಯಾಕರಣ ಕಲಿಸುತ್ತಿದ್ದಾರೆಂಬ ಒಗ್ಗದಿಕೆ (allergy) ಕಾಡಿದ್ದು ನಿಜ.

ಅನ್ಯ ಭಾಷಿಕರೆದುರು ಮತ್ತು ದಾಖಲೀಕರಣ: ಮೋಹಿನಿಯಾಟ್ಟಂ ಮತ್ತು ಕಥಕ್ಕಳಿಗಳು (ಅಪ್ಪಟ ಕನ್ನಡ ವಾತಾವರಣದಲ್ಲಿ) ಅನ್ಯ ಭಾಷಿಕ ಮತ್ತು ಅನ್ಯ ಕಲಾ ಸಂಸ್ಕಾರದ ವರ್ಗದ ಎದುರು ಬರುತ್ತಿದ್ದೇವೆ ಎಂಬ ಪೂರ್ಣ ಎಚ್ಚರದಲ್ಲಿ ಬಂದಿದ್ದವು. ಅ-ಕನ್ನಡ ವಲಯದಲ್ಲಿ ನಿಮ್ಮದು ಹೇಗೆ, ಎಂಬ ಅರ್ಥದ ಮಾತುಗಳು ಸಂವಾದದಲ್ಲಿ ಬಂದವು. ಶಿವರಾಮ ಕಾರಂತರ ಬ್ಯಾಲೆಗಳು ಸ್ವಲ್ಪ ಈ ನಿಟ್ಟಿನಲ್ಲಿ ಕೆಲಸ ಮಾಡಿತ್ತು ಎಂದು ನೆನಪು. ಹಾಗೇ ಹಿಂದಿ ವಲಯಗಳಿಗೆ ವಿಸ್ತರಿಸಿಕೊಳ್ಳುವ ಉದ್ದೇಶದಿಂದ ಹೊರಟ ವಿದ್ಯಾಕೊಳ್ಯೂರರ ಯಕ್ಷ-ಪ್ರದರ್ಶನಗಳೂ ಉಲ್ಲೇಖನಾರ್ಹ. ಬಹುಶಃ ಇವೆಲ್ಲ ನಿಮ್ಮ ಏಕವ್ಯಕ್ತಿಗೂ ಬೇರೇ ಸ್ತರದಲ್ಲಿ ಅವಶ್ಯವಾಗುವ ದಿನಗಳು ದೂರವಿಲ್ಲ ಎಂಬ ಯೋಚನೆಯೂ ನನಗೆ ಬರದಿರಲಿಲ್ಲ. ದೊಡ್ಡ ವೇದಿಕೆ, ಭಾರೀ ಸಭೆ ನಿಮ್ಮ ಲಕ್ಷ್ಯವಲ್ಲ. ನಿಮ್ಮ ಭಾವದ ಸಾರ್ಥಕ ಪುನಃಸೃಷ್ಟಿ ಸಾಧ್ಯವಿರುವಲ್ಲಿ ದಿ| ಬೆಳ್ಳೆಯಂತಹ ಏಕಪ್ರೇಕ್ಷಕನೂ ನಿಮಗೆ ಸಾಕು, ಭಾವಲಹರಿಯಲ್ಲಿ ಮುಳುಗಿ ಚಪ್ಪಾಳೆ ಮರೆತ ಹತ್ತು ಮಂದಿಯೂ ನಿಮಗಾದೀತು. (ನೂರರ ಮಂದೆಯಿಂದ ಒಟ್ಟಾರೆ ಚಪ್ಪಾಳೆ ಗಿಟ್ಟಿಸುವುದಕ್ಕೆ ತಿಣುಕುವವರು ನೀವಲ್ಲ.) ಆದರೆ ಬಯಸಿ ಕರೆಸಿಕೊಳ್ಳುವ ಈ ಹತ್ತು ಮಂದಿಯ ಕೂಟಕ್ಕೇ ನೀವು ಕಟ್ಟಿ ಕೊಡುವ ವಿವರಗಳು ಅನುಭವಕೋಶದ ಹೊರಗಿನದ್ದಾದರೆ ಏನು ಗತಿ?

ಈಚಿನ ‘ಮಾತುಕತೆ’ಯಲ್ಲಿ (ನೀನಾಸಂ ಪ್ರಕಟಿಸುವ ಮಾಸಿಕ) ಕೆವಿ ಅಕ್ಷರ ‘ಭಾಷಾಂತರ, ಅನುವಾದ, ತರ್ಜುಮೆ’ ಇತ್ಯಾದಿ ಕ್ರಿಯೆಗಳ ಕುರಿತು ನಡೆಸಿದ ಜಿಜ್ಞಾಸೆಯಲ್ಲಿ ಅಂತಿಮವಾಗಿ ಎಲ್ಲವೂ (ಸೀಮೆಯ) ‘ಉಲ್ಲಂಘನೆ’ ಎಂದು ತರ್ಕಿಸುತ್ತಾರೆ. ಇದನ್ನು ವಿವಿಧ ಭಾಷಾ, ಪಾರಿಸರಿಕ, ಸಾಮಾಜಿಕ ವಲಯಗಳ ಗಡಿದಾಟುವ ಸಾಹಸವಾಗಿ ಕಾಣುತ್ತಾರೆ. ನಿಮ್ಮ ಯಕ್ಷಗಾನ ಏಕವ್ಯಕ್ತಿಯೂ ಆ ನಿಟ್ಟಿನಲ್ಲಿ ನಡೆಸಿದ ತಯಾರಿ, ಪ್ರಯತ್ನ, ಯಶಸ್ಸುಗಳ ವಿವರ ತಿಳಿಯುವ ಕುತೂಹಲ ನನ್ನಲ್ಲೂ ಬಲಿಯಿತು. ಉದಾಹರಣೆಗೆ ಹೂ ಕೊಯ್ದು ಮಾಲೆ ಮಾಡುವ, ಕಸ ಉಡುಗಿ ನೀರು ತಳಿಯುವ ವಿವರಗಳೆಲ್ಲ ಇಂದು ಶಾಸ್ತ್ರೋಕ್ತ ಮುದ್ರೆಗಳಷ್ಟೇ ಸ್ಥಿರಗೊಂಡ ಚಿತ್ರಗಳಿರಬಹುದು. ಆದರೆ ನೀರು ಸೇದುವ, ಹಾಲು ಕರೆಯುವ, ಮೊಸರು ಕಡೆದು ಬೆಣ್ಣೆ ಕೂಡುವ ತೆರನ ವಿವರಗಳು ನಮ್ಮಲ್ಲೇ “ಏನೋ ಚಂದಕ್ಕೆ ಮಾಡ್ತಾರೆ” ಎಂಬ ಬೆರಗಿನ ಭಾಗ ಮಾತ್ರ ಆಗಿಬಿಡುತ್ತವೆ. (ಝರ್ ಭುರ್ ಬೊಮ್ಮಕ್ಕಾ, ಮೊಸರ್ ಕಡ್ಯೇ ತಿಮ್ಮಕ್ಕಾ, ಅತ್ತೇ ಮಕ್ಳ್ ಕಾಡ್ಯಾವೂ ಮಾವನ್ ಮಕ್ಳ್ ಬೇಡ್ಯಾವೂ, ಮುಚ್ಕೊಂಡ್ ತಿನ್ನೇ ಮರಿಮೊಟ್ಟೇ... - ಇಂದಿನ ಜನಪದದಲ್ಲಿ ಕಳೆದೇ ಹೋಗಿದೆ. ಅದು ಬೇಡ, ಸುಮಾರು ನಾಲ್ಕಡಿ ಎತ್ತರದ ದಪ್ಪ ಬಿದಿರಿನ ಅಥವಾ ಹಿತ್ತಾಳೆಯ ಹಂಡೆಯೊಳಗೆ ಮೊಸರು ಸುರಿದು, ಕೆಳಕೊನೆಯಲ್ಲಿ ಕರಟದ ತುಣುಕು ಸಿಕ್ಕಿಸಿದ ಕೋಲಿನಲ್ಲಿ (ಜೊಳಕುಂ ಬೊಳಕುಂ ಶಬ್ದದೊಡನೆ) ಕಡೆಯುವ ಕ್ರಮ ನಿಮಗೇ ಗೊತ್ತಿತ್ತಾ? ಇತ್ತು ಎಂದರೂ ಅಭಿನಯದಲ್ಲಿ ತಂದರೆ ಎಷ್ಟು ಜನಕ್ಕೆ ಅರ್ಥವಾದೀತು?) ಮನೆಮನೆಗಳಲ್ಲಿ ಆಪ್ತವಾಗಿ ಕಾಣಿಸಿಕೊಳ್ಳುವಲ್ಲೇ ಪ್ರದರ್ಶನಕ್ಕೂ ಮೊದಲು lec-dem ಬೇಕಾದೀತು. ಕಾಲಪ್ರಭಾವದ ‘ಉಲ್ಲಂಘನೆ’ಯ ಅಗತ್ಯ ಮತ್ತು ಅನ್ಯ ಭಾಷಿಕರ ಎದುರು, ಎಂದೆಲ್ಲಾ ಲೆಕ್ಕ ಹಾಕುತ್ತ ಹೋದರೆ ಹಿಮ್ಮೇಳದಿಂದ ಸಾಹಿತ್ಯ ಕಳಚುವುದಕ್ಕಿಂತ ಬೇರೆ ಭಾಷೆಯೊಡನೆ ಇನ್ನಷ್ಟು ಸಾಹಿತ್ಯ (ಜಾಳು ಜಾಳಾಗಿ ಬಜಾರ್ ಗೈಡಿನ ಹಾಗೆ!) ಸೇರಿಸುವ ಆವಶ್ಯಕತೆ ಬರಬಹುದು. ಇದು ನಿಮಗೆ ಸಲಹೆಯಲ್ಲ, ನನ್ನ ಭಯದ ನಿರೂಪಣೆ ಮಾತ್ರ. (೨-೧೨-೨೦೦೬ರ ನಮ್ಮ ಸಭೆಗೆ ನೀವು ಕೊಟ್ಟ ವೇಣು ವಿಸರ್ಜನದಲ್ಲಿ ಪ್ರತಿ ಹಂತದಲ್ಲೂ ನೀವು ಕುಣಿದು ತೋರಿದ್ದನ್ನು ಗದ್ಯದಲ್ಲೂ ನುಡಿದು ವಿಷದಪಡಿಸಿದ್ದೀರಿ. ಅದೇ ಇಲ್ಲಿ, ಸಾವಿರನೇ ಪ್ರದರ್ಶನದಲ್ಲಿ ಕೇವಲ ಉದ್ಗಾರದ ಮಟ್ಟದಲ್ಲಿ ಒಮ್ಮೆ ಮಾತ್ರ ಮಾತಾಡಿದ್ದೀರಿ.)

ವೇದಿಕೆಯ ಹಿಂಬರಹಗಳು (ಹರಹು ಕೂಡಾ) ಯಾವುದೇ ಸಭಾ ಕಾರ್ಯಕ್ರಮಕ್ಕೆ ಭವ್ಯತೆ ಮತ್ತು ಅಧಿಕೃತತೆ ಕೊಡುವುದು ಸರಿ. ಆದರೆ ಅವೇ ಕಲಾ ವೀಕ್ಷಣೆ ಮತ್ತು ಕಲಾ ದಾಖಲೀಕರಣಕ್ಕೆ ಕೊರತೆಯಾಗಿ ಕಾಡುತ್ತವೆ ಎನ್ನುವುದು ವೇಣುವಿಸರ್ಜನದೊಡನೆ ಬಂದ ಮೋಹಿನಿಯಾಟ್ಟಂ ಮತ್ತು ಕಥಕ್ಕಳಿ ಪ್ರದರ್ಶನದಲ್ಲೂ ಕಾಡಿತು. ಇದನ್ನು ಹೆಚ್ಚಿನ ವಿವರಗಳಲ್ಲಿ (ಇಲ್ಲಿ ಚಿಟಿಕೆ ಹೊಡೆಯಿರಿ) ಗೆಳೆಯ ಡಾ| ಕೃಷ್ಣಮೋಹನ್ ತಮ್ಮ ಬ್ಲಾಗಿನಲ್ಲಿ ಕೊಟ್ಟ ಚಿತ್ರಗಳಲ್ಲಿ ನೀವು ಕಾಣಬಹುದು. ಇದನ್ನೇ ಹಿಂದೊಬ್ಬ ವಿಮರ್ಶಕರು “ಹಿಮಖಂಡದಲ್ಲಿ ಧ್ಯಾನಸ್ಥನಾಗಿದ್ದ ಶಿವ ದಾಕ್ಷಾಯಿಣಿಗಾದ ಅವಮಾನ ಕೇಳಿ ಕನಲಿ ಕೆಂಡವಾಗಿ ಪೀಠದ ಮೇಲೇ ಧಿಗ್ಗನೇಳುವಾಗ ಅಲ್ಲೇ ಒಂದು ಪುಟ್ಟ ಬಲ್ಬು ಉರಿಸಿಕೊಂಡು ಮಾಲೆ ಹಾಕಿಸಿಕೊಂಡ ಮೇಳದ ದಿ| ಹಳೆ ಯಜಮಾನರ ಚಿತ್ರ ನಮ್ಮ ದೃಷ್ಟಿಗೆ ಹೆಟ್ಟುತ್ತದೆ” ಎಂದು ಗೇಲಿ ಮಾಡಿದ್ದು ನೆನಪಾಯ್ತು. ಜೊತೆಗೇ ಕೆರೆಮನೆ ಶಂಭು ಹೆಗಡೆ ತನ್ನ ರಂಗಮಂಚದಲ್ಲಿ ಮೇಳದ ಹೆಸರಿನಿಂದ ತೊಡಗಿ ಯಾವುದೇ ಬರಹ, ಸಂಕೇತ ಬಳಸದ ಎಚ್ಚರವಹಿಸಿದ್ದು, ಸಾಭಿಮಾನ ನೆನಪಿಗೆ ಬಂತು. ಸ್ವತಃ ನೀವೇ ನಿಮ್ಮ ನಿಯಂತ್ರಣದಲ್ಲಿರುವ ಎಲ್ಲಾ ಪ್ರದರ್ಶನಗಳಲ್ಲಿ ಸ್ತ್ರೀ ಪ್ರಾಧಾನ್ಯವನ್ನು (ಕೇಶಕ್ಕೆ ಸಂಬಂಧಪಟ್ಟದ್ದೆಂದು ಕೈಶಿಕೀ) ಸಂಕೇತಿಸುವಂತೆ ಸಾಲಂಕೃತ ಮುಡಿಯ ಪ್ರತಿಕೃತಿಯನ್ನಷ್ಟೇ ಹಿಂದಿನ ಪರದೆಗೆ ನೇಲಿಸಿಬಿಡುವುದು, ‘ಮಾಡುವುದಾದರೂ ಹೀಗಿರಬೇಕು’ ಎಂದು ಸೂಚಿಸುವ ಪ್ರಯತ್ನವೇ ಸೈ. (ಅದೇ ನಾನು ತಂದೆಯ ಪುಸ್ತಕ ಬಿಡುಗಡೆಯಂದು ಇದೇ ವೇಣುವಿಸರ್ಜನವನ್ನು ಇಟ್ಟುಕೊಂಡಿದ್ದಾಗ ನಮ್ಮ ಬ್ಯಾನರು ತೆಗೆಸಲು ತಪ್ಪಿದ್ದೇನೆ ಎಂದು ಈಗ ದಾಖಲೆ ನೋಡಿ ಪಶ್ಚಾತ್ತಾಪವನ್ನೂ ಪಡುವಂತಾಗಿದೆ) ನಿಮ್ಮ ಶುಚಿರುಚಿಯ ಕಲಾಪ್ರದರ್ಶನದ ನೋಟದೊಡನೆ ಡಾ| ಆಳ್ವರೂ ಮತ್ತೆ ಅವರ ಪ್ರೇರಣೆಯಲ್ಲಿ ಅನುಸರಿಸಬಹುದಾದ ಕೆಲವಾದರೂ ರಸಿಕ-ಪ್ರಾಯೋಜಕರು ಮುಂದೆ ಯುಕ್ತ ತಿದ್ದುಪಡಿಗಳನ್ನು ಮಾಡಿಕೊಳ್ಳಲಿ ಎಂದು ಹಾರೈಸುವುದಷ್ಟೇ ಉಳಿಯಿತು.

ಸಂವಾದದಲ್ಲಿ ‘ವಿಮರ್ಶೆ’: ಸಂವಾದದಲ್ಲಿ ಏಕವ್ಯಕ್ತಿಯ ವಿಮರ್ಶೆಯ ವಿಚಾರ ಬಂದಾಗ ಗಣೇಶ್ ದೇವು ಹನೆಹಳ್ಳಿ ಹೆಸರನ್ನು ಎತ್ತಿಯೇ ಆ(ಝಾ)ಡಿಸಿದ್ದರಿಂದ ಮತ್ತೆ ಸ್ವಲ್ಪ ಆತ್ಮಕಥನವನ್ನು ನೀವು ಸಹಿಸಿಕೊಳ್ಳಬೇಕಾಗುತ್ತದೆ. ಅಂದ ಕಾಲತ್ತಿಲೆ, ನಾನು ಮುಕ್ತ ಮನಸ್ಸಿನಿಂದ ಭಾಮಿನಿ ನೋಡಿ ಮೆಚ್ಚಿ ಬರೆದೆ. ಪ್ರತಿಕ್ರಿಯೆಯಾಗಿ ಗೆಳೆಯ ದೇವು ಮಡಿವಂತಿಕೆಯ ನಿಲುವಿನೊಡನೆ ಭಾಮಿನಿಯನ್ನು ಖಂಡಿಸಿ ಅದೇ ಪತ್ರಿಕೆಗೆ ಬರೆದರು. ಪ್ರಯೋಗದ ಔಚಿತ್ಯವನ್ನು ದೇವು ಗಮನಿಸಲಿಲ್ಲ ಎಂಬ ಕಳವಳ ನನ್ನದು, ಯಕ್ಷಗಾನ ಕುಲಗೆಟ್ಟು ಹೋಗುತ್ತದೆಂಬ ಕಾಳಜಿ ಅವರದು - ಖಂಡನೆ, ಮಂಡನೆ ಮುಂದುವರಿಯಿತು. ಅತ್ತ ವೃತ್ತಿರಂಗ ಎಂದಿನಂತೆ ಯಕ್ಷಗಾನದಲ್ಲಿ ‘ಜನಪರ’ವಾದ್ದನ್ನು ತಾನು ಮಾತ್ರ ಕೊಡುವ ದುರಹಂಕಾರದಲ್ಲಿತ್ತು. ವಿಚಾರಪೂರ್ಣವಾದ್ದನ್ನು ಅರ್ಧ ಅಸೂಯೆಯಲ್ಲಿ, ಅರ್ಧ ಉಡಾಫೆಯಲ್ಲಿ ನೋಡುತ್ತಾ “ನಂಗೊತ್ತಿತ್ತು” ಭಾವದಲ್ಲಿತ್ತು. ಒಂದು ಹಂತದಲ್ಲಿ ನನಗನಿಸಿತು, ಪತ್ರಿಕೆ ಓದುವ ಅಲ್ಪ ಸಂಖ್ಯಾತರಲ್ಲೂ ವಿಚಾರಪೂರ್ಣವಾದ್ದರ ಬಗ್ಗೆ ಕಾಳಜಿಯುಳ್ಳ ಅತ್ಯಲ್ಪ ಮಂದಿಯೊಳಗೆ ಇಂಥಾ ವಿರಸ ಮುಂದುವರಿಯಬೇಕೇ? ನಾನು ಸಂಧಾನದ ಪ್ರಯತ್ನ ಮಾಡಿದೆ. ನನ್ನ ಮನೆಯಲ್ಲೇ ಆ ಒಂದು ರಾತ್ರಿ (ನವೆಂಬರ್ ೨೦೦೨) ಸುಮಾರು ಹತ್ತು ಗಂಟೆಯಿಂದ ಹನ್ನೆರಡು ಗಂಟೆಯವರೆಗೆ ನಡೆದ ವಿಚಾರವಿನಿಮಯದಲ್ಲಿ ಈ ಆ ಪಕ್ಷಗಳಲ್ಲದೆ ಗೋಡೆಯ ಮೇಲಿದ್ದವರೂ ಭಾಗಿಗಳಾಗಿದ್ದರು. ದೇವು ಹನೆಹಳ್ಳಿ ಮುಖ್ಯ ಪ್ರತಿವಾದಿ. ನೀವಿಬ್ಬರು ಮತ್ತು ಪಾಠಕರು ಮುಖ್ಯ ವಾದಿಗಳು. ಸ್ಥಳೀಯ ವಿಚಾರವಂತರಾಗಿ ಪ್ರಭಾಕರ ಜೋಷಿ, ಕುಂಬಳೆ ಸುಂದರ ರಾವ್, ಸಿ.ಎನ್ ರಾಮಚಂದ್ರನ್, ಸದಾಶಿವ ಮಾಸ್ಟ್ರು, ಮನೋಹರ ಉಪಾಧ್ಯ, ಮುರಳೀ ಪ್ರಭು ಮೊದಲಾದವರಿದ್ದರು. ಉಡುಪಿಯಿಂದ ಇದಕ್ಕೋಸ್ಕರ ಕಾರು ಮಾಡಿ ಮುರಳೀ ಕಡೇಕಾರ್ ರಾಘವ ನಂಬಿಯಾರ್, ಬನ್ನಂಜೆ ಸಂಜೀವ ಸುವರ್ಣ, ಉದ್ಯಾವರ ಮಾಧವಾಚಾರ್ಯರಾದಿಗಳನ್ನು ಕರೆತಂದಿದ್ದರು. ನಿಮ್ಮಲ್ಲಿ ಸಾತ್ವಿಕ ಆಕ್ರೋಶ ಇತ್ತು, ದೇವು ಹೆಡ್ಡುನಗೆಯೊಂದಿಗೆ ವಿಚಾರರಹಿತ ಹಠ ಮಾತ್ರ ಉಳಿಸಿಕೊಂಡರು. ಗೋಡೆಯ ಮೇಲಿದ್ದವರೂ ನಿಮ್ಮತ್ತ ಒಲಿದು ಬಂದರು. ಯಕ್ಷಗಾನದ ಯಾವ ಒಳಹೊರಗುಗಳೂ ತಿಳಿಯದಿದ್ದರೂ ವಸ್ತುನಿಷ್ಠ ವಿಮರ್ಶಕನಾಗಿ, ದೇವುಗೆ ಒಂದು ಕಾಲದ ಪ್ರೊಫೆಸರ್ ಆಗಿದ್ದ ಪ್ರೀತಿಯಲ್ಲೂ ಬಂದಿದ್ದ ರಾಮಚಂದ್ರನ್ ಸಭೆಯಲ್ಲಿ ವಿಶೇಷ ಮಾತಾಡದಿದ್ದರೂ ಮನೆಗೆ ಮರಳುವ ದಾರಿಯಲ್ಲಿ ಆಪ್ತವಾಗಿ ದೇವುಗೆ “ನಿಮ್ಮದು fundamentalism ಆಗೋಲ್ವೇ” ಎಂದದ್ದು ಕಾರು ಚಾಲಕನಾಗಿದ್ದ ನನಗೆ ಸ್ಪಷ್ಟವಾಗಿ ಇನ್ನೂ ಕಿವಿಯಲ್ಲೇ ಇದೆ. ಒಟ್ಟಾರೆ ಚರ್ಚೆ ಗೊಡ್ಡಾದರೂ ಏಕವ್ಯಕ್ತಿ ಪ್ರಯೋಗಕ್ಕೆ (ನನ್ನ ಲೆಕ್ಕದಲ್ಲಿ) ಹೆಚ್ಚಿನ ಬಲಸಂಚಯ ಇಲ್ಲಾದದ್ದಂತೂ ನಿಶ್ಚಯ.

ಸಾಹಿತ್ಯ, ಸಂಗೀತ: ನಿಮಗೆ ತಿಳಿದಿರಬಹುದು, ನಾನು ಶುದ್ಧಾರ್ಥದ ವಿಮರ್ಶಕನಲ್ಲ. ಆದರೆ ಮನಸ್ಸನ್ನು ಮುಕ್ತವಾಗಿಟ್ಟುಕೊಂಡು ಆರೋಗ್ಯಕರವಾದ ಎಲ್ಲವನ್ನೂ ಅನುಭವಿಸಲು ಪ್ರಯತ್ನ ಮಾಡುವವನು. ಮತ್ತೆ ಅಲ್ಲಿಗೇ ನಿಲ್ಲದೆ, ಯಾವ ಭ್ರಮೆ ಅಥವಾ ದ್ವೇಷಗಳನ್ನು ಇಟ್ಟುಕೊಳ್ಳದೆ ನನಗೆ ಕಂಡ ಒಳಿತು, ಕೆಡುಕುಗಳನ್ನು ಪಾರಿಭಾಷಿಕ ಶಬ್ದಗಳ ಹೊರೆಯಿಲ್ಲದೆ (ಬಳಸಲು ನನ್ನ ಕೃಷಿ ಸಾಲದು), ಹತ್ತು ಜನರಲ್ಲಿ ಪ್ರಚುರಿಸುವವನು. ಇಲ್ಲಿ ನನ್ನನ್ನು ಸ್ವಲ್ಪ ಸೋಲಿಸುತ್ತಿದ್ದದ್ದು ಮುಖ್ಯವಾಗಿ ಎರಡು ಬಿರುದುಗಳು.  ಯಕ್ಷ-ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಗಣೇಶ್ ಅವಧಾನಿಯಾದದ್ದು ಮತ್ತು ಯಕ್ಷ-ಸಂಗೀತಕ್ಕೆ ಸಂಬಂಧಪಟ್ಟಂತೆ ಗಣಪತಿ ಭಟ್ಟರು ವಿದ್ವಾನ್ ಅನಿಸಿಕೊಂಡದ್ದು! ಜನಪದರ ಎತ್ತಿನ ಗಾಡಿಗೆ ಆನೆ ಕಟ್ಟಿದಂತೆ, ಕಿನ್ನರಿ ಬಳಸುವಲ್ಲಿ ಶತತಂತಿ ಬಾರಿಸಿದಂತೆ ಎಂದು ವ್ಯಂಗ್ಯ ಮಾಡುವವರನ್ನು ಎದುರಿಸುವಲ್ಲಿ ತುಸು ಬಳಲುತ್ತಿದ್ದೆ. ಪ್ರತಿಷ್ಠಿತ ಸಾಹಿತ್ಯಲೋಕ ಮರವೆಗೆ ಬಿಟ್ಟಿದ್ದ ಯಕ್ಷ-ಸಾಹಿತ್ಯದ ಯೋಗ್ಯತೆಯನ್ನು ಸಾರಿ ಹೇಳಲು ಕುಕ್ಕಿಲ ಕೃಷ್ಣ ಭಟ್ಟರು ಅತ್ಯಂತ ಸಮರ್ಥವಾಗಿ ಸಂಪಾದಿಸಿಕೊಟ್ಟ ‘ಪಾರ್ತಿಸುಬ್ಬನ ಯಕ್ಷಗಾನಗಳು’ ಮುಂಚೂಣಿಯಲ್ಲಿದ್ದರೆ, ಈಗ ಬಂದ ನಿಮ್ಮ ಪ್ರಸಂಗಗಳ ಸಂಕಲನ (ಅನನ್ಯವ್ಯಕ್ತಿ - ಏಕವ್ಯಕ್ತಿ ಯಕ್ಷಗಾನ ಗೌರವ ಗ್ರಂಥ, ಬೆಲೆ ರೂ ಮುನ್ನೂರು) ಹೆಚ್ಚಿನ ಬಲಕೊಡುವುದರಲ್ಲಿ ಸಂಶಯವಿಲ್ಲ. ಅವನ್ನು ಅಧ್ಯಯನ ಮಾಡಿ ಸನ್ನಿವೇಶ, ಸಾಹಿತ್ಯದ ವಿಶ್ಲೇಷಣೆಗಿಳಿಯಿರಿ ಎಂಬ ನಿಮ್ಮ ಮನವಿ ಅದರ ಹಿಂದಿನ ಅಧ್ಯಯನ ಮತ್ತು ಶ್ರಮವನ್ನು ಸಾರಿ ಹೇಳುತ್ತಿತ್ತು. ವಿದ್ಯುತ್ ಹಾಯಿಸಿಕೊಂಡು ಉತ್ತಮ ಬೆಳಕು ಕೊಡಬಲ್ಲ ಅಜ್ಞಾತ ಲೋಹದ ಹಿಂದೆ ಬಿದ್ದ ಎಡಿಸನ್ನನ ಸಾಧನೆ ಕಾಣಿಸುತ್ತಿತ್ತು. ವರ್ತಮಾನದ ಅರೆಬೆಂದ ಕಾಳುಗಳು ಗ್ರಹಿಸಿದಂತೆ ಹತ್ತೆಂಟು ರಾಗಛಾಯೆಗಳ ಹೆಸರನ್ನು ಹಿಂದಿನ ಪ್ರಸಂಗಕರ್ತರು ಸ್ಪಷ್ಟ ಸೂಚಿಸಿರುವುದು ಕಲ್ಪನಾ ವೈಭವವಲ್ಲ. ಅವನ್ನು ಮತ್ತೆ ಬಳಸಿ (‘ಅಸ್ಪೃಶ್ಯ’ ಶಾಸ್ತ್ರೀಯ ಸಂಗೀತದ ಹೇರಿಕೆಯಲ್ಲ) ರಂಗಕ್ರಿಯೆಯನ್ನು ಶ್ರೀಮಂತಗೊಳಿಸುವ ಪ್ರಯತ್ನ ಅದು ಹೇಗೆ ಅ-ಯಕ್ಷಗಾನೀಯವಾಗುತ್ತದೆ ಎಂಬ ನಿಮ್ಮ ಸವಾಲು ಎಂದೂ ಉತ್ತರ ಕಾಣದು. (ಆದರೆ ನೆನಪಿರಲಿ, ಲೋಕನಾಟಕದಲ್ಲಿ ಸೀತೆ ಮತ್ತೆ ಮತ್ತೆ ಅಗ್ನಿಪರಿಪೂತೆಯಾಗುತ್ತಲೇ ಇರಬೇಕು. ತೀರಾ ಚಿಲ್ಲರೆ ಉದಾಹರಣೆ ಕೊಡುವುದಾದರೆ ಅಂಗಡಿಯಲ್ಲಿ ನಾನು ಯಾಕೆ ಪ್ಲ್ಯಾಸ್ಟಿಕ್ ಕೊಡುವುದಿಲ್ಲ ಎಂದು ಈಗಲೂ ದಿನಕ್ಕೆ ಹತ್ತು ಬಾರಿಯಾದರೂ ವಿವರಿಸಬೇಕಾಗುತ್ತದೆ!)

ವಾಸ್ತವದಲ್ಲಿ ನಿಮ್ಮಿಬ್ಬರೊಡನೆ ಸಂವಾದ (ಮಹೇಶ ಅಡ್ಕೋಳಿ ಮತ್ತು ಶ್ರೀಧರ ಹಂದೆಯವರು ತುಂಬಾ ಚೆನ್ನಾಗಿ ನಡೆಸಿಕೊಟ್ಟರು) ಮತ್ತು ಸಾಹಿತ್ಯ ಸಂಗೀತದ ಪ್ರಾತ್ಯಕ್ಷಿಕೆಗೆ ಸಮಯಾವಕಾಶ ಏನೇನೂ ಸಾಕಾಗಲಿಲ್ಲ. ಬಲು ಹಿಂದೆ ಜೋಡು ಮಾರ್ಗದಲ್ಲಿ ಮಂಡೆಚ್ಚ ಭಾಗವತರ ಸಂಸ್ಮರಣ ಕಾರ್ಯಕ್ರಮದ ಅಂಗವಾಗಿ ತೆಂಕು ತಿಟ್ಟಿನ ಕುರಿತು ಪದ್ಯಾಣ ಗಣಪತಿ ಭಟ್ಟರೂ ಬಡಗು ತಿಟ್ಟಿನ ಬಗ್ಗೆ ಮಹಾಬಲ ಹೆಗಡೆಯವರೂ ನಡೆಸಿಕೊಟ್ಟ ಪ್ರಾತ್ಯಕ್ಷಿಕೆ (ಕ್ಷಮಿಸಿ, ವಿವರಗಳನ್ನು ನಾನು ನೆನಪಿಸಿಕೊಳ್ಳಲಾರೆ) ತುಂಬಾ ಅರ್ಥಪೂರ್ಣವಾಗಿ ನಡೆದಿತ್ತು. ಇಲ್ಲೂ ಅದು ಇನ್ನೋರ್ವ ಗಣಪತಿ ಭಟ್ಟರ ಸಾಮರ್ಥ್ಯದಲ್ಲಿ ವಿಸ್ತರಿಸುತ್ತದೆ ಎಂದುಕೊಳ್ಳುವಾಗಲೇ ಕಾಲಪುರುಷಂಗೆ ಗುಣಮಣಮಿಲ್ಲವಾಯ್ತೇ.

ಅಭಿಮಾನ, ಸಮ್ಮಾನ: ಎಲ್ಲೆಲ್ಲಿನ ಕಲಾವಿದರು ಮತ್ತು ಕಲಾಸಕ್ತರನ್ನು ದಿನವಿಡೀ (ಶುಚಿರುಚಿಯ ಮತ್ತು ಸಮೃದ್ಧ ತಿಂಡಿ, ಊಟದೊಡನೆ) ಮೂಡಬಿದ್ರೆಯ ವಿದ್ಯಾಗಿರಿಯ ಮೂಲೆಯಲ್ಲಿ ವಿವಿಧ ಕಲಾಪಗಳೊಡನೆ ಹಿಡಿದಿಟ್ಟು ಕೇವಲ ವೈಯಕ್ತಿಕ ಸಾಧನೆ ಎಂದು ತಳ್ಳಿಹಾಕಬಹುದಾದ ಸಾವಿರ ಸಂಖ್ಯೆಯನ್ನು ಅಮರಗೊಳಿಸಿದ ಸಂಘಟನಾ ಚಾತುರ್ಯ (ಆಳ್ವಾಸ್), ನಮ್ಮವನು ಎಂಬ ಪ್ರೀತಿ (ಮಯ್ಯಾಸ್), ಯಕ್ಷಗಾನದ್ದು ಎಂಬ ಹೆಮ್ಮೆಗಾಗಿ (ಕಲಾರಂಗ) ಸಹಯೋಗ ಕೊಟ್ಟು ತನುಮನಧನ ಕೊಟ್ಟು ದುಡಿದ ಸಂಸ್ಥೆಗಳ ಉತ್ಸಾಹದ ನಡುವೆಯೂ ಹೊಡೆದು ಕಾಣುವುದು ಡಾ| ಮೋಹನ ಆಳ್ವರ ಸಂಕಲ್ಪ. ವಠಾರ ಪ್ರವೇಶಿಸಿದಾಗಿನಿಂದ ಎಲ್ಲ ಮುಗಿದ ಮೇಲೆ ಅವರವರ ಊರು ಮುಟ್ಟುವವರೆಗೆ ಪ್ರತಿ ಪ್ರೇಕ್ಷಕನ ಬಗ್ಗೆಯೂ ಕಾಳಜಿ ವಹಿಸಿದ ಆಳ್ವ ಮಹಾರಥಿಯೇ ಸರಿ! ಗೋಷ್ಠಿ ೧,೨,೩,೪ ಅಥವಾ ತಿಂಡಿ, ಚಾ, ಊಟ, ಕಾಫಿ ಎಂದು ಗಡಿಯಾರದ ಮುಳ್ಳಿಗೆ ಕಲಾಪಗಳನ್ನು ತಗಲು ಹಾಕಿ ತನ್ನನ್ನು ಮೆರೆಸಿಕೊಂಡು ಕುಳಿತವರಲ್ಲ ಇವರು. ಪ್ರತಿ ವಿವರಗಳಲ್ಲೂ ಆಳ್ವ ಜೀವಂತ ಇದ್ದರು. ಅವು ಯಾವವೂ ಹಿಂದೆ ಹೀಗೇ ನಡೆದದ್ದರ ನಕಲಲ್ಲ, ಉತ್ತಮಿಕೆ. ಹಾಗಾಗಿ ಮಂಗಳೂರಿಗೆ ಸಾರ್ವಜನಿಕ ಬಸ್ಸು ಸೌಕರ್ಯ ತಪ್ಪಿಹೋಗಬಹುದೆಂಬ ಭಯವಿದ್ದರೂ ನಾನು ಕನಿಷ್ಠ ಸಮ್ಮಾನವನ್ನು ನೋಡಿಯೇ ಮರಳಬೇಕೆಂದು ಉಳಿದೆ.

ಸಂಸ್ಥೆಯ ಮುಖಮಂಟಪದಿಂದ ಕೊಂಬು, ಚಂಡೆ, ಮಂಗಳ ವಾದ್ಯಗಳ ಮೆರವಣಿಗೆಯಲ್ಲಿ ಸಮ್ಮಾನಿತ ಮತ್ತು ಗಣ್ಯರನ್ನು ವೇದಿಕೆಗೆ ತರುವಲ್ಲಿಂದ ತೊಡಗಿ, ಮಂಟಪರ ಮಂಗಳ ನೃತ್ಯದವರೆಗೆ ಎಲ್ಲವೂ ನನಗಂತೂ ಮರೆಯಲಾಗದ ಅನುಭವ. (ಎಲ್ಲೋ ಮನದ ಮೂಲೆಯಲ್ಲಿ (ಶಿವರಾಮ) ‘ಕಾರಂತ-೬೦’ಕ್ಕೆ ಕುಶಿ ಹರಿದಾಸ ಭಟ್ಟರು ನಡೆಸಿದ (ಮೂರು ಕಮ್ಮಟ+ಎರಡು ಸಮ್ಮಾನ ದಿನಗಳು) ಐದು ದಿನದ ಹಬ್ಬ ಮಾತ್ರ ‘ನಭೂತೋ’ ಎನ್ನಲಾಗದಂತೆ ಕುಳಿತಿತ್ತು!) ಅದರಲ್ಲೂ ಎರಡೂ ತಿಟ್ಟುಗಳ ಸುಮಾರು ಇಪ್ಪತ್ತಕ್ಕೂ ಮಿಕ್ಕು ವೇಷಗಳು ಸೂಕ್ತ ಹಿಮ್ಮೇಳದೊಡನೆ ಸರದಿಯಲ್ಲಿ ‘ರಂಗ ಪ್ರವೇಶ’ ನಡೆಸಿ ವಿವಿಧ ವಿನ್ಯಾಸಗಳನ್ನೂ ತೋರಿದ್ದು ಒಟ್ಟು ಸಂಭ್ರಮದ ಶಿಖರಕ್ಕೆ ಮುಗುಳಿ ಇಟ್ಟಹಾಗಾಯ್ತು. ವೃತ್ತಿಪರ ಕಲಾವಿದರನ್ನು ಬಳಸಿಕೊಂಡೇ ನಿತ್ಯದ ಪ್ರಸಂಗವೊಂದನ್ನೇ ಶುದ್ಧರೂಪದಲ್ಲಿ ದಾಖಲೀಕರಣಕ್ಕೊಳಪಡಿಸಲು ನಾವು (ಮನೋಹರ ಉಪಾಧ್ಯರು ಸೇರಿದಂತೆ) ಹೊರಟಾಗ ಎಲ್ಲ ನಿರೀಕ್ಷೆಯಂತಾಗಲಿಲ್ಲ ಎನ್ನುವ ಕಹಿ ಉಳಿಸಿಕೊಂಡ ನಮಗೆ ಇಷ್ಟನ್ನು ಸಂಯೋಜಿಸಿದ್ದು ಎಷ್ಟು ದೊಡ್ಡ ಸಾಹಸ ಎಂದು ಅರ್ಥವಾಗುತ್ತದೆ. ಕನಿಷ್ಠ ಜೀವನ ನಿರ್ವಹಣೆಯಷ್ಟೂ ಹಣದ ಹಿಂದೆ ಬೀಳದೆ (ಹಮ್ಮಿಣಿಯನ್ನು ಯಕ್ಷ ಶಿಕ್ಷಣ ಟ್ರಸ್ಟಿಗೆ ಕೊಟ್ಟದ್ದು ತಿಳಿಯಿತು.), ಕೀರ್ತಿಶನಿಯ ಗಂಧ ಎಲ್ಲೂ ಪೂಸಿಕೊಳ್ಳದೆ (“ನನಗೆ ಅಭಿಮಾನಿಗಳಿಲ್ಲ, ಪ್ರೀತಿಪಾತ್ರರಿದ್ದಾರೆ. ಅಭಿಮಾನ ಕಲೆಯ ಮೇಲೆ ಮಾತ್ರವಿರಲಿ” ಎಂಬ ಮಂಟಪರ ಮಾತಿನಲ್ಲಿ ನನಗೆ ಕಪಟ ಕಂಡದ್ದಿಲ್ಲ) ನಡೆದು ಬಂದ ಕೂಟಕ್ಕೆ, ಅದು ಪ್ರತಿನಿಧಿಸುವ ಕಲೆಗೆ ಆಳ್ವರ ಈ ವೇದಿಕೆ, ಈ ಸಾಹಸ ನೂರ್ಕಾಲ ನೆನಪಿಡುವ ಕೊಡುಗೆ.

ಇಷ್ಟುದ್ದಕ್ಕೆ ಓದಿ ಬಂದ ನಿಮಗೂ ತೆರೆದ ಪತ್ರದ ಹೆಸರಿನಲ್ಲಿ ಬ್ಲಾಗಿನ ಮೂಲಕ ಓದಬಹುದಾದ ಅಸಂಖ್ಯರಿಗೂ ಇನ್ನು ಸಮಯ ಸಹನೆ ಪರೀಕ್ಷೆ ಮಾಡದೆ ವಿರಮಿಸುತ್ತೇನೆ.

ಇಂತು ವಿಶ್ವಾಸಿ
ಅಶೋಕವರ್ಧನ

5 comments:

 1. Chandrashekhara Damle, Sulya12 April, 2010 17:35

  The whole report is fair, frank, transparent and touching. I am to share several viewpoints regarding the total conduct of the programme. Yet it will be respectable to us to allow Sri Devu Hanehalli to hold his viewpoint. No need of conversion of any body though some of those on the wall sided with Mantapa on that day of Mukha-mukhi. I dont think Prof. Ramachandra Rao made a good comment just because he shifted his stand. In my personal opinion this must become famous and ducumented as Ganesha-Mantapa Mattu as they are founders of this style of Yakshagaana. The term Ekavyakti is not only abstract and recently misused by some in order to become popular.
  Chandrashekhara Damle Sulya

  ReplyDelete
 2. ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಯಕ್ಷಗಾನದ ಸಾವಿರದ ಸಂಭ್ರಮ ಸಮಾರಂಭದ ಚಿತ್ರಗಳ ಮೂರೂ ಭಾಗಗಳನ್ನು ನನ್ನ ಬ್ಲಾಗಿನಲ್ಲಿ ನೋಡಲು ಇಲ್ಲಿ ಚಿಟಿಕೆ ಹೊಡೆಯಿರಿ.

  http://www.drkrishi.com/navarasas-of-the-rain
  http://www.drkrishi.com/kathakali
  http://www.drkrishi.com/mantapa-1000

  ಇಂತೀ
  ಕೃಷ್ಣಮೋಹನ

  ReplyDelete
 3. Thanks Ashoka Vardhanre.You have shown so much interest to recount all the details in such a vivid and exhaustive manner.Even I attended and nearly agree with you.But Mohini attam withought live music looked pale.
  Dr.Mohana Alva is indeed already Karnataka Ratna, according to me!
  Thank you
  Shivaprakash

  ReplyDelete
 4. vardhanara baravanigege kayutha iddavanige manoharana msg banda thakshana odi mugiside.idondu yakshagana kalavidana bhagya.savillada kaleya ondu land mark agiddu alvaru howdu.ekavyakthi thandada ella kalavidaru dakhleya thale kedisikondavaralla.vardhanara vimarhege nanu yavagalu full support!

  ReplyDelete
 5. Praveen Kavoor30 April, 2010 18:39

  Dear Ashok
  I always enjoy your writing and your association , you always accept anything new with open mindedness and readily appreciate it when it is good which was special quality if GTN also I believe, I still remember when first time when this was started and I was opposing with the sharing same thought process as Devu!! , you made me realize how important it is to accept new , even I dont enjoy it I really appreciate his efforts and its good write-up in honor of all the people involved , we always lag behind professionalism of Kathakali otherwise than Mr Manatapa who shows lots of professionalism in his Art hats of to Mr Mantapa and Mr Mohan Alva who has become God father of Art in our region

  ReplyDelete