ಸುಮಾರು ನಲ್ವತ್ತು ವರ್ಷಗಳ ಹಿಂದಿನ ನನ್ನ ಅನುಭವ ಕಥನ - ತಾತಾರ್ ಶಿಖರಾರೋಹಣವನ್ನು ಮರುಕಥನಕ್ಕಿಳಿದು ನಾಲ್ಕು ಕಂತು ಕಳೆದಿದೆ. ಮೈಸೂರಿನ ದಖ್ಖಣ ಪರ್ವತಾರೋಹಣ ಸಂಸ್ಥೆಯ ತಂಡ, ಉದಕಮಂಡಲ ಶ್ರೇಣಿಯ, ಮುದುಮಲೈ ವನಧಾಮಾಂತರ್ಗತ ತಾತಾರ್ ಬೆಟ್ಟವನ್ನು ವಾತಾವರಣದ ವಿಪರೀತದಲ್ಲೂ ಏರುತ್ತೇರುತ್ತೇರುತ್ತಾ ಒತ್ತರಿಸಿ ಬಂದ ರಾತ್ರಿಗೆ ಆಕಸ್ಮಿಕವಾಗಿ ಒದಗಿದ ಬಂಡೆಮರೆಯಲ್ಲಿ ಶಿಬಿರ ಹೂಡಿದ್ದಾಗಿದೆ. ಅತ್ತ ಪೂರ್ವ ಪಾಕಿಸ್ತಾನದಲ್ಲಿ ಬಾಂಗ್ಲಾ ವಿಮೋಚನೆಯ ಸಮರದಲ್ಲಿ ತೊಡಗಿದ ಭಾರತೀಯ ಸೇನೆಯ ವೀರಗಾಥೆಯನ್ನು ತುಣುಕು ರೆಡಿಯೋ ವರದಿಗಳಲ್ಲಿ ಸ್ಫೂರ್ತಿಪೇಯದಂತೆ ಹೀರುತ್ತಾ ಸಾಗಿದ ಪ್ರಾಕೃತಿಕ ಸಾಹಸಯಾನಕ್ಕಿಲ್ಲಿ ಶಿಖರಯೋಗ ಕಾಣಿಸುವ ಹಂತ ಬಂದಿದೆ. ನಿನ್ನೆಯ ಅನ್ನಕ್ಕೆ ಇಂದಿನ ವಗ್ಗರಣೆ ಎಂಬ ತಾತ್ಸಾರ ಕಳೆದು, ಹಿಂದಿನ ಸಾಧನೆ ಮುಂದಕ್ಕೆ ಪ್ರೇರಣೆ ಎಂಬ ಉತ್ಸಾಹ ತಳೆದು ಬನ್ನಿ, ಹೊರಡೋಣ ಸವಾರಿ...
(ತಾತಾರ್ ೫)
ರಾಜು, ಮಾರ್ಗದರ್ಶಿಗಳ ನಾಯಕನಿಗೆ ನಮ್ಮ ಮೇಲೆ ಸಿಟ್ಟು! ಹಿಂದಿನ ಸಂಜೆ ಜಾವೀದನ ಬಳಿ ಆತ ಕಾಫಿಗೆ ಬೇಡಿಕೆ ಸಲ್ಲಿಸಿದ್ದನಂತೆ. ಅದು ಬರಲಿಲ್ಲ. ಮುಂದೆ ಆತ ಕೇಳಿದ್ದ ಊಟವೂ ದಕ್ಕಲಿಲ್ಲ ಯಾಕೇಂತ ನಿಮಗೆ ಗೊತ್ತಿದೆ. ಆದರೆ ಅವನು, ತಮ್ಮ ಕನಿಷ್ಠಾವಶ್ಯಕತೆಗಳನ್ನೂ ಪೂರೈಸದ ತಂಡದೊಡನೆ ತಾವು ಸಾಯಲು ಬಂದದ್ದಲ್ಲವೆಂದು ಹಾರಾಡುತ್ತಿದ್ದ. ಅವನ ಲೆಕ್ಕಕ್ಕೆ ಗೋವಿಂದರಾಜ್ ಮುಖ್ಯ ಅಪರಾಧಿ. ಗೋವಿಂದ ರಾಜರೇ ಅವರ ಬಿಡಾರದ ಬಳಿ ಹೋಗಿ ವಿವರಿಸಿದರು. ಜಾವೀದ್ ಬಿದ್ದದ್ದು, ಚೇತರಿಸಿಕೊಂಡ ಮೇಲೆ ರಾಜೂ ಬೇಡಿಕೆ ತಿಳಿಸಲು ಮರೆತದ್ದು, ಎಲ್ಲಕ್ಕೂ ಮುಖ್ಯವಾಗಿ ಹಿಂದಿನ ಬೆಳಿಗ್ಗೆ ಮಸಣಿಗುಡಿ ಬಿಡುವಾಗಲೇ ಅದೇ ರಾಜು ‘ನಮ್ಮ ಊಟ, ಕಾಫಿ ಎಲ್ಲ ನಾವೇ ನೋಡಿಕೊಳ್ತೇವೆ’ ಎಂದದ್ದೆಲ್ಲ ನೆನಪಿಸುವುದರೊಡನೆ, ರಾತ್ರಿ ಆಮಂತ್ರಣ ಕೊಟ್ಟದ್ದನ್ನೂ ಜ್ಞಾಪಿಸಿದರು. “ಕತ್ತಲೆ iಳೆಯಲ್ಲಿ ಕಾಡಿನ ಮಕ್ಕಳು ನೀವೇ ಊಟಕ್ಕೆ ಬರಲು ಹಿಂದೇಟು ಹೊಡೆಯುವಾಗ ಈ ಪೇಟೆಯ ಮಕ್ಕಳನ್ನು ಊಟದ ಹೊರೆಯೊಡನೆ ನಿಮ್ಮಲ್ಲಿಗೆ ಹೇಗೆ ಕಳಿಸಬಹುದಿತ್ತು” ಎಂದು ಮರುಸವಾಲು ಹಾಕಿದ ಮೇಲೆ ಆತ ಪೂರ್ಣ ಶರಣಾದ. ಮೂವರೂ ನಮ್ಮ ಶಿಬಿರದ ಬಂಡೆಗೆ ಬಂದು ಉಪಾಹಾರ ಸ್ವೀಕರಿಸುವುದರೊಡನೆ ಎರಡನೇ ಹಗಲಿಗೆ ಒಳ್ಳೆಯ ನಾಂದಿ ಸಿಕ್ಕಿತು ಎನ್ನಬಹುದು.
ಒದ್ದೆಮುದ್ದೆಯಾದ ಸಾಮಾನು ಸರಂಜಾಮುಗಳನ್ನು ಕಟ್ಟಿ, ಗರಿಗರಿಯಾದ ಅನುಭವ ಸಾಮ್ರಾಜ್ಯಕ್ಕೆ ಹೊಸ ಲಗ್ಗೆ ಹಾಕುವಾಗ ಗಂಟೆಯೇನೋ ಹತ್ತಾಗಿತ್ತು. ಆದರೆ ಹವಾಮಾನದ ವೈಪರೀತ್ಯ - ಮಂಜೇ ಹನಿಗಟ್ಟಿ ಬೀಳುತ್ತಿತ್ತೋ ಭೋರ್ಗಾಳಿಯೇ ಬೆವರುತ್ತಿತ್ತೋ ಎನ್ನುವ ಗೊಂದಲ ಮುಂದುವರಿದೇ ಇತ್ತು. ಹಿಂದಿನ ದಿನ ಕೊನೆಯವರಿಗಿಂತ ಒಂದು ಸ್ಥಾನ ಮುಂದಿರಬೇಕಿದ್ದ ನಾನು ಇಂದು ಮಧ್ಯವರ್ತಿಯಾಗಿದ್ದೆ. ಹೊರೆಯಲ್ಲೂ ನನಗೆ ಬದಲಾವಣೆ ಸಿಕ್ಕಿತ್ತು. ಟೈಗರ್ ಮರೆತಿರಾ - ಮಸಣಿಗುಡಿಯಿಂದ ಸೇರಿಕೊಂಡ ಬೀಡಾಡಿ ನಾಯಿ, ರಾತ್ರಿ ಎಲ್ಲೋ ಒದ್ದೆ ಹುಲ್ಲ ಮೇಲೇ ಮೈ ಮುದುರಿಕೊಂಡ ಜೀವ, ನಮ್ಮ ಉಪ್ಪಿಟ್ಟಲ್ಲೇ ಪಾಲು ಪಡೆದು ಹೊಸ ಹುರುಪಿನಲ್ಲಿ ಜೊತೆಗೊಟ್ಟಿತ್ತು.
ಮಾರ್ಗದರ್ಶಿಗಳಿಗೆ ಈ ಜಾಡು, ಶಿಖರ ಮತ್ತಾಚಿನ ಸಾಧ್ಯತೆಗಳ ಅಂದಾಜು ಮಾತ್ರವಿತ್ತು. ಹಾಗಾಗಿ ಶಿಖರವನ್ನು ಸಾಧಿಸಿ, ಇನ್ನೊಂದೇ ಕತ್ತಲು ಬರುವುದರೊಳಗೆ ಕನಿಷ್ಠ ಇದೇ ಬಂಡೆ ಶಿಬಿರವನ್ನಾದರೂ ತಲುಪಲೇಬೇಕೆಂಬ ಅಂದಾಜು ಹಾಕಿದ್ದೆವು. ಹಾಗಾಗಿ ವಿಶ್ರಾಂತಿರಹಿತ, ಒಂದೇ ಉಸುರಿನ ಏರಿಕೆ. ಬಂಡೆ, ಜಾರುನೆಲ, ಕುರುಚಲು ಪೊದೆ ಮೊದಮೊದಲು. ಅನಂತರ ಬಂಡೆಗಳು ವಿರಳವಾಗಿ ಬರಿಯ ಹುಲ್ಲು, ಹುಲ್ಲು. ಎಡೆ ಸಿಕ್ಕರೂ ಜಾರುನೆಲ, ಕಾಲಿಟ್ಟಲ್ಲೆಲ್ಲ ಜಾರಿ ಮುಗ್ಗರಿಸುವ ಸ್ಥಿತಿ. ಸವಾಲು ಹಿಂದಿನ ದಿನದ ಏರಿಕೆಗಿಂತ (ಸುಮಾರು ೫೦-೬೦ ಡಿಗ್ರಿ) ಕಠಿಣವಾದಂತಿತ್ತು (ಸುಮಾರು ೭೦-೭೫ ಡಿಗ್ರಿ). ನೇರವಾಗಿ ಹತ್ತತೊಡಗಿದರೆ ನಾಲ್ಕೇ ಹೆಜ್ಜೆಯಲ್ಲಿ ಉಸಿರಿನ ಸೊಲ್ಲೇ ಅಡಗಿಹೋಗಬಹುದಿತ್ತು. ವಾರೆಕೋರೆಯ ಜಾಡು ಮೂಡಿಸುತ್ತಾ ಕೆಲವೆಡೆಗಳಲ್ಲಂತೂ ತುದಿಗಾಲು ಊರಲು ಪುಟ್ಟ ಮೆಟ್ಟಿಲನ್ನೇ ಕಡಿಯುತ್ತಾ ಹುಲ್ಲನ್ನು ಸೀಳುತ್ತಾ ಸಾಗಿದ್ದಂತೆ ಮುಂದಿನವರಿಂದ ಶುಭ ಸಮಾಚಾರ ತೇಲಿ ಬಂತು. ನೆತ್ತಿಯ ಮಂಜು ಹರಿದಿತ್ತು, ಇನ್ನೇನು ನೂರಡಿಯಲ್ಲಿ ಶಿಖರ! ಅಲ್ಲಿ ಕೆಲವು ಮರಗಿಡಗಳೂ ಕಾಣಿಸುತ್ತಿತ್ತು. ಇನ್ನೇನು ಬಂತೇ ಬಂತು ಎಂಬ ಉತ್ಸಾಹದಲ್ಲಿ ಜಾರುಗುಪ್ಪೆಯಂತಿದ್ದ ಬಂಡೆ ದಾಟಿದ್ದೂ ತಿಳಿಯಲಿಲ್ಲ. ಅದು ಕಳೆದು ಕೆಸರು ನೆಲದಲ್ಲಿ ಅವರಿವರು ನೆಲಕಚ್ಚಿದ್ದೂ ಗೌಣವಾಯ್ತು. ಚಳಿ, ಸತತ ನೀರಿನಲ್ಲಿ ನೆನೆದು ಕೈಗಳು ಬಿಳಿಚಿ, ಚಿರಿಟಿದ್ದರೂ ಆಧಾರಕ್ಕೆ ಹುಲ್ಲಗುಪ್ಪೆಗಳನ್ನು ಎಳೆದೆಳೆದು ಉಂಟಾದ ಅಸಂಖ್ಯ ಗೀರು ಗಾಯಗಳೂ ಮರೆತೇಹೋದವು.
ಮರಗಳ ಎತ್ತರವನ್ನು ತಲಪಿದೆವು. ಅಲ್ಲಿ ಮರ, ಪೊದರುಗಳನ್ನು ದಟ್ಟ ಬಳ್ಳಿ ಹೆಣೆದು ಬಲವತ್ತರವಾದ ತಡೆಗೋಡೆಯನ್ನೇ ಮಾಡಿತ್ತು. ಅದರ ಮರೆಯಲ್ಲಿ ದಿಣ್ಣೆ, ಅಂದರೆ ಶಿಖರ ಇನ್ನೂ ಆಚೆಗಿತ್ತು. ಮಾರ್ಗದರ್ಶಿಗಳು ತುಳಿದು, ಕೆಲವೆಡೆಗಳಲ್ಲಿ ಕತ್ತಿಯಲ್ಲಿ ಕಡಿದೇ ದಾರಿ ಬಿಡಿಸಬೇಕಾಯ್ತು. ಮಣ್ಣು ತೀರಾ ನುಸುಲು, ತಪ್ಪಡಿಯಿಟ್ಟರೆ ಅನಿಶ್ಚಿತ ಕುಸಿತ ಖಾತ್ರಿ! ಪಕ್ಕಕ್ಕೆ ಸರಿಯುತ್ತ ಏರುವ ಸಂಕಟಕ್ಕೆ ಅಡ್ಡಿಪಡಿಸುವಂತೆ ಸುಮಾರು ಇಪ್ಪತ್ತೈದು ಅಡಿ ಎತ್ತರಕ್ಕೆ ಮತ್ತೆ ಬಂಡೆಮೈ. ಬುಡದಲ್ಲೇನೋ ತುಸು ಹರಡಿಕೊಂಡಿದ್ದು, ಏರಿಕೆಯಲ್ಲಿ ತೊಡಗುವವರಿಗೆ ಗಟ್ಟಿ ನೆಲೆ ಕಾಣಿಸಿತ್ತು. ಆದರೆ ಅದರ ಇನ್ನೊಂದು ಅಂಚಿನಲ್ಲಿ ಮಂಜು ಮುಸುಕಿದ ನಿಗೂಢ ಪ್ರಪಾತ. ಮಳೆಗಾಳಿಗಳ ದ್ವಂದ್ವ ನಡೆದೇ ಇತ್ತು. ಹಿಂದೆ ಒಂದೆರಡು ಬಾರಿ ಮಾಡಿದಂತೇ ಆಯಕಟ್ಟಿನ ಎತ್ತರಗಳಲ್ಲಿ ಒಬ್ಬೊಬ್ಬರು ನಿಂತು, ಗಂಟು ಗದಡಿಗಳನ್ನು ಕೊನೆಗೆ ಟೈಗರನ್ನೂ ಕೈಕೈ ದಾಟಿಸಿಯೇ ಬಿಟ್ಟೆವು. ಇನ್ನೇನು ನೂರಡಿ, ಶಿಖರಕ್ಕೆ ನಾ ಮುಂದು ನೀ ಮುಂದು ಧಾವಂತ.
ನಮ್ಮ ಅಲ್ಲಿವರೆಗಿನ ಆರೋಹಣದಲ್ಲಿ ಎಲ್ಲೂ ಗಿಡಗಳು ನಮಗೆ ಅಪಾಯಕಾರಿಗಳಾಗಿರಲಿಲ್ಲ. ಎಲೆಗಳು ವರ್ಣ ವೈವಿಧ್ಯ, ಆಕಾರ ವೈಚಿತ್ರ್ಯಗಳಲ್ಲಿ ಆಕರ್ಷಿಸಿದ್ದವು. ಕಾವೇರಿಯಮ್ಮನಿಗಂತೂ ಕಂಡದ್ದೆಲ್ಲ ತನ್ನ ಕೈದೋಟದಲ್ಲಿ ಮತ್ತೆ ಅರಳಿಸುವ ಹುಮ್ಮಸ್ಸು. ಕೀಳುತ್ತಿದ್ದರು, ಶಿಖರ ಸಾಧನೆಯ ಸಂಭ್ರಮಕ್ಕೆ ಅನುಕೂಲವಾಗಲು ಸುಜಾತ, ಭಾಸ್ಕರರ ಮೆಹನತ್ತಿನಲ್ಲಿ ವನಸುಮಗಳ ಅಂದದ ಜೋಡಣೆಯನ್ನೂ ಸುರುಮಾಡಿದ್ದರು. ಆದರಿಲ್ಲಿ ನಾವು ಮುಟ್ಟಲು ಹೆದರುವಂತ ಗಿಡಗಳ ಸರಣಿ. ಕತ್ತರಿ ಕತ್ತರಿ ಎಲೆ, ಮೈಮೇಲೆಲ್ಲ ಹಾಗಲ ಕಾಯಿಯಂತೆ ಕಡುಹಸಿರ ಕಜ್ಜಿಗಳು, ಮುಟ್ಟಿದರೆ ಉರಿಹಚ್ಚುವ ರೋಮಗಳು, ಸಜ್ಜಾದ ಪಾಕೀ ಯೋಧನಂತೆ ಮುಳ್ಳುಗಳು. ಕಡಿದು, ಬೂಟುಗಾಲಿನಲ್ಲೇ ಹೊಸಕಿ ಮುಂದುವರಿದೆವು. ಹಿಂದಿನ ದಿನವಿಡೀ ನೀರಿಲದೆ ಬಳಲಿದ್ದಕ್ಕೆ ವ್ಯತಿರಿಕ್ತವಾಗಿ ಇಂದು ಒಂದೊಂದು ಏಣಿನಲ್ಲೂ ಝರಿ, ತೊರೆ. ನೀರು ಶೀತಕ್ಕೆ ಹೆದರಿದಂತೆ ಕೆಲವೆಡೆ ನಮಗೆ ಗುರುತೂ ಸಿಗದಂತೆ ಬಂಡೆಗುಂಡುಗಳೂ ಪಾಚಿಯ ಕಂಬಳಿ ಹೊದ್ದು ಧ್ಯಾನಸ್ಥವಾಗಿದ್ದವು. ಮತ್ತೆ ತೆರೆಮೈಯ ಬಂಡೆ, ನಲವತ್ತಡಿ ಏರಿಕೆ. ಬಂತೇಬಂತು ಹಗುರ ಏರಿನ, ತುಸುವೇ ಹುಲ್ಲಿನ ಬೋಳುಮೈ. ನೂರೆಂದುಕೊಂಡವರು ಇನ್ನೂರಡಿಯನ್ನೇ ಕಳೆದದ್ದಿರಬೇಕು. ಆದರೆ ಈಗ ಶಿಖರ ಇನ್ನೂ ಐವತ್ತಡಿಗಳ ಅಂತರದಲ್ಲಿ ನಮ್ಮನ್ನು ಕರೆಯುತ್ತಲೇ ಇತ್ತು. ನಮ್ಮಲ್ಲಿ ಸಾಧನೆಯ ಅಮಲಿನಲ್ಲಿ ಜೈಕಾರಗಳು ತೊಡಗಿಯಾಗಿತ್ತು. ಭಾರತ ಮಾತೆ, ಡೀಎಮ್ಮೆಲ್ (ಡೆಕ್ಕನ್ ಮೌಂಟೆನೀರಿಂಗ್ ಲೀಗ್), ಗೋವಿಂದ್ರಾಜ್, ಸುಜಾತಗಳಿಗೆಲ್ಲಾ ‘ಕೀ’ ಹೊಡಕೊಂಡೆವು. ಬದುಕಿದರೇ ಇಲ್ಲಿ, ಸತ್ತರೂ ಇಲ್ಲೇ (ಜೀನಾ ಯಹಾಂ ಮರ್ನಾ ಯಹಾಂ) ಹಾಡಂತೂ ಸಮೂಹಗಾನವೇ ಆಗಿತ್ತು. ಗಂಟೆ ಎರಡಕ್ಕೆ ಐದು ಮಿನಿಟು, ಮಾರ್ಗದರ್ಶಿಗಳು ಕುಳಿತ ದಿಬ್ಬವೇ ಶಿಖರ ಎಂಬಂತೆ ತಲಪಿಬಿಟ್ಟೆವು.
ಅದೊಂದು ಹುಲ್ಲುಗಾವಲು ಎಂದರೂ ತಪ್ಪಿಲ್ಲ. ಬಲಬದಿಗೆ ಸ್ವಲ್ಪ ಇಳಿಜಾರು. ಅದರ ಕೊನೆಯಲ್ಲಿ ಸಣ್ಣ ದಿಣ್ಣೆ, ಮೇಲೊಂದು ಕಾಡುಕಲ್ಲುಗಳ ಗುಪ್ಪೆ - ನಮ್ಮ ಮಟ್ಟಿಗೆ ಶಿಖರದ ಕೇಂದ್ರ ಸೂಚಿ. ಆ ಪುಟ್ಟ ಮೈದಾನದಲ್ಲಿ ಚದುರಿದಂತೆ ಸಣ್ಣ ಪುm ಬಂಡೆಗಳು ಹರಡಿದ್ದವನ್ನು ಸಣ್ಣದಾಗಿ ಸುತ್ತಿ ನೋಡಿದೆವು. ಒಂದು ಬಂಡೆಯ ಮೇಲೆ ಯಾರೋ ನಿಲ್ಲಿಸಿದ್ದ ಒರಟು ಶಿಲುಬೆಯೊಂದು, ಅಡ್ಡಪಟ್ಟಿ ಕಳಚಿಕೊಂಡು ನಿಂತದ್ದೂ ಕಾಣಿಸಿತು. ಬೆಟ್ಟದ ಮೈ ಎಡಕ್ಕೆ ಸ್ವಲ್ಪ ಏರಿ ಮಂಜಿನ ಹಿನ್ನೆಲೆಯಲ್ಲಿ, ಪೊದೆಗಳ ಗುಂಪಿನಲ್ಲಿ ಅಸ್ಪಷ್ಟವಾಗಿತ್ತು. ನಾವು ಹೆಚ್ಚಿನ ಯೋಚನೆ ಬಿಟ್ಟು ಆ ಈ ಪುಡಿ ಬಂಡೆಗಳ ಮೇಲೆ ವಿರಮಿಸಿದೆವು. ತಾಪತ್ರಯಗಳು - ಮಳೆ, ಗಾಳಿ, ಮಂಜು ತಮ್ಮ ಅವಿರತ ದಾಳಿಯನ್ನು ಮುಂದುವರಿಸಿಯೇ ಇದ್ದವು. ಪರಿಸರದ ಎಲ್ಲ ಜೀವಾಜೀವಗಳು, ನಮ್ಮ ನಖಶಿಖಾಂತ ನೀರು ಸುರಿಯುತ್ತಲೇ ಇತ್ತು. ತಲೆ ಮುಂದೆ ಬಾಗಿಸಿದರೆ ಹ್ಯಾಟಿನ ಅಂಚಿನಿಂದ ಮನೆಸೂರಿನ ಧಾರೆಯದೇ ಚಿತ್ರ. ಮುಕ್ತಿವಾಹಿನಿಯ ತುಪಾಕೀ ದಾಳಿಗೀಡಾದ ಪಾಕೀಪಾತಕಿಗಳಂತೆ ಅಂಗೈಗಳೆರಡೂ ಅಸಂಖ್ಯ ಗೀರುಗಾಯವಡೆದು, ಮರಗಟ್ಟಿ, ಸ್ಪರ್ಷಜ್ಞಾನವನ್ನೇ ಕಳೆದುಕೊಂಡಂತಿತ್ತು. ನಿರಂತರ ನಡಿಗೆಯಿಂದ ಬೂಟುಗಳೊಳಗೆ ಪಾದಗಳೇನೋ ಬೆಚ್ಚಗಿದ್ದರೂ ಆಕ್ರಮಣಕ್ಕೊಳಗಾದ ಜೆಸ್ಸೂರಿನಂತಿತ್ತು. ಜೆಸ್ಸೂರಿನಲ್ಲಿ ಊಟ ತಯಾರಿದ್ದರೂ ಸೈನಿಕರಿಗೆ ತಿನ್ನಲು ಪುರುಸೊತ್ತಿರಲಿಲ್ಲವಂತೆ. [ಬಾಂಗ್ಲಾ ಯುದ್ಧದ ಪ್ರಭಾವ] ಹಾಗೇ ಇತ್ತು ನಮ್ಮ ಪಾದಗಳ ಸ್ಥಿತಿ. ಶೂಗಳು ಚಳಿಗೆ ಕುಗ್ಗಿ ಕಾಲನ್ನು ಹಿಸುಕಿದರೆ, ಹೊರೆ ಸಹಿತ ದೇಹದ ಭಾರ, ಅಸಡ್ಡಾಳ ನಡಿಗೆ ಉಜ್ಜಿ ಉಜ್ಜಿ ಹಣ್ಣುಗಾಯಿ ನೀರುಗಾಯಿ ಮಾಡಿತ್ತು. ಉಗುರು ಸುಲಿದ ಅನುಭವ, ಬೆರಳುಗಳ ತುದಿಗಳಲ್ಲೆಲ್ಲ ನೀರಗುಳ್ಳೆಗಳ ಸಾಲು. ಆದರೆ ಇವನ್ನೆಲ್ಲ ಮೀರಿಸುವ ಸಂತೋಷದ ಸಮಯವದು. ನಾಲ್ಕು ಗಂಟೆಗಳ ಅವಿರತ ಏರಿಕೆ ಕೊನೆ ಮುಟ್ಟಿತ್ತು. ಎರಡು ದಿನಗಳ ಶ್ರಮ, ಹಲವು ದಿನಗಳ ಕನಸು ನನಸಾಗಿತ್ತು. ನಾವು ಯಶಸ್ವಿಗಳಾಗುವಂತೆ ತಾತಾರ್ ನಮ್ಮನ್ನು ತಲೆಯ ಮೇಲೆ ಹೊತ್ತಿದ್ದ.
ಆಲೀಸಳ ಅದ್ಭುತ ಲೋಕ
ಶಿಖರ ತಲುಪಿದ ಸಂತೋಷವೋ ಒಂದು ಘಟ್ಟ ಮುಗಿದದ್ದಕ್ಕೆ ನಿಟ್ಟುಸಿರೋ ಎನ್ನುವ ಸ್ಥಿತಿಯಲ್ಲಿ ನಾವಿದ್ದರೂ ನಾಯಕರುಗಳಿಗೆ ಏನೋ ಗುಮಾನಿ. ಬಲದಿ ಸ್ಪಷ್ಟವಾಗಿ ನಾವಿದ್ದ ದಿಣ್ಣೆಯೆತ್ತರಕ್ಕೆ ಮುಗಿದಿದ್ದರೂ ಎಡಬದಿಯ ಇನ್ನೂ ಎತ್ತರವಿದೆಯೋ ಎಂದು ಪರೀಕ್ಷಿಸಿಯೇ ಬಿಡಲು ಮಾರ್ಗದರ್ಶಿ ಸುಬ್ಬಯ್ಯನ್ ಜೊತೆ ಗೋವಿಂದರಾಜ್, ಸುಜಾತ, ಕಾವೇರಿ, ಅಚ್ಯುತರಾವ್ ಮಂಜಿನಲ್ಲಿ ಮರೆಯಾದರು. ಕೆಲವೇ ಕ್ಷಣಗಳಲ್ಲಿ ಶಿಳ್ಳೆ ಕೇಳಿತು, ಹಿಂಬಾಲಿಸಿ ತಂತಮ್ಮ ಹೊರೆ ಬಿಟ್ಟು ಅತ್ತ ಬರಲು ಸೂಚನೆಯೂ ಸಿಕ್ಕಿತು. ಹಿಂದುಳಿದ ಇಬ್ಬರು ಮಾರ್ಗದರ್ಶಿಗಳು ಅತ್ತ ಸರಿಯುವ ಉತ್ಸಾಹ ತೋರಲಿಲ್ಲ. ರಾಶಿ ಬಿದ್ದ ನಮ್ಮೆಲ್ಲ ಚೀಲಗಳೊಡನೆ ಅವರನ್ನು ಬಿಡಲು ಒಪ್ಪದ ಮನಸ್ಸಿನಲ್ಲಿ ರಮೇಶ್ ಜಸವಂತರು ಹಿಂದುಳಿದಂತೆ ನಾವೆಲ್ಲ ಸೂಚನೆ ಬಂದತ್ತ ಹಗುರವಾಗಿ ಧಾವಿಸಿದೆವು.
ಪೊದರ ಹಿಂಡು ದಟ್ಟಗೋಡೆಯಂತೆ ವ್ಯಾಪಿಸಿಕೊಂಡು, ನಿಧಾನಕ್ಕೆ ಏರುಮೈಯಲ್ಲಿ ಮಂಜಿನಲ್ಲಿ ಕರಗಿದಂತಿತ್ತು. ಅಲ್ಲಿನ ಹವಾ ವೈಪರೀತ್ಯಕ್ಕೆ ಕುದುರಿದ ಆ ಗಟ್ಟಿ ಜೀವರಾಶಿಯನ್ನು ಕಡಿದು, ಮೆಟ್ಟಿ ದಾರಿ ಬಿಡಿಸಿಕೊಳ್ಳುವುದು ಹೊಸದೇ ಸಾಹಸವಾಗಬಹುದಿತ್ತು. ಬದಲು ಅವಕ್ಕೆ ಶರಣಾದಂತೆ ಬಗ್ಗಿ, ಕಾಂಡಗಳ ನಡುವೆ ಜಾಡು ಮೂಡಿಸಿದೆವು. ಎತ್ತರಕ್ಕೆ ಹೋಗುವ ಚಿಗುರು ಚಿವುಟಿದ ಕಾಫಿ, ಚಾ ಗಿಡಗಳದ್ದೇ ರೂಪ, ಎಲೆಗಳ ಹರಹು ಅಷ್ಟಗಲವಿದ್ದರೂ ಮೋಟು ಗಟ್ಟಿ ಕಾಂಡಗಳು ವಿರಳ ವಿರಳ. ನಾವು ಗೂನು ಬೆನ್ನರಾಗಿ, ಕೆಲವೆಡೆ ನಾಲ್ಗಾಲರಾಗಿ ನುಗ್ಗಿ ಸಾಗಿದೆವು. ಆಲಿಸ್ ಮೊಲದ ಬಿಲವೊಂದಕ್ಕೆ ಹೀಗೇ ನುಗ್ಗಿದ್ದಲ್ಲವೇ ಎಂದು ಯೋಚಿಸುತ್ತಾ ಬರಲಿರುವ ಮಾಯಾಲೋಕದ ರಮ್ಯಕಲ್ಪನೆಯಲ್ಲಿ ಮುಂದುವರಿದೆವು. ಪೊದರೆಲ್ಲ ಏಕಜಾತಿಯವೇನಲ್ಲ. ವಾಟೆ, ಮುಳ್ಳುಗಿಡಗಳೂ ಹಲವು ಕುಸುಮಾಂಗಿಯರೂ ಶೋಭಿಸಿದ್ದರು. ಹೂಗಳ ನರುಗಂಪು ನಮಗೆ ನವಚೇತನ ಕೊಟ್ಟಿತು. ಓರೆಕೋರೆಯಾಗಿ ನಿಧಾನವಾಗಿ ಏರುತ್ತಲೇ ಸಾಗಿದ ಜಾಡು, ಸೊಂಟನೋವು ಬರಿಸಿ, ಸುಮಾರು ನೂರು ಮೀಟರಾಚೆ ಬಯಲಾಯ್ತು. ಎದುರು ಮತ್ತೊಂದು ಸಣ್ಣ ಬೋಳು ಗುಡ್ಡ!
ಮಹತ್ತರ ಕಲ್ಪನೆಯಲ್ಲಿ ಮರಳುವ ದಾರಿ ಮರೆಯದಂತೆ ದಾರಿ ಗುರುತಿಸಲೆಂದೇ ತಂದಿದ್ದ ಸಣ್ಣ ಕೆಂಪು ಬಟ್ಟೆಗಳನ್ನು ಜಾಡಿನುದ್ದಕ್ಕೆ ಕಟ್ಟುತ್ತ ಹೋಗಿದ್ದೆವು. ಇಲ್ಲಿ ಅಸ್ಪಷ್ಟತೆ ಇಲ್ಲ, ಇದು ತಾತಾರನ ನಿಜ ನೆತ್ತಿ. ಮಂಜು ಸರಿಸಿ ನೋಡುವುದಾಗಿದ್ದರೆ ಬಹುಶಃ ಸುಮಾರು ಐವತ್ತಡಿ ತಗ್ಗಿನಲ್ಲಿ ನಮ್ಮ ಮಾರ್ಗದರ್ಶಿಗಳನ್ನೂ ಬಿಟ್ಟು ಮಿತ್ರರು ಹಾಗೂ ನಮ್ಮ ಹೊರೆಗಳು ಕಾಣಬಹುದಿತ್ತು. ಇಲ್ಲೂ ಒಂದು ಕಾಡಕಲ್ಲ ಗುಪ್ಪೆ, ನಡುವೆ ಊರಿದ ಕಂಬ, ಅಂತರ ಕೇವಲ ಐವತ್ತಡಿ ಎನ್ನುವಾಗ ನಾಯಕರಲ್ಲಿ ಔಪಚಾರಿಕತೆ ಜಾಗೃತವಾಯ್ತು. ಎಲ್ಲರೂ ಅರ್ಧ ವೃತ್ತಾಕಾರದಲ್ಲಿ ನಿಂತೆವು. ಗೋವಿಂದರಾಜ್, ಸುಜಾತ ಎರಡೆರಡು ಭಾವುಕ ಮಾತಾಡಿದರು. ಯಾವುದೇ ಶಿಖರದ ಅಗ್ರಭಾಗ ಪರ್ವತಾರೋಹಿಗೆ ಪವಿತ್ರ. ಅಲ್ಲಿ ಸ್ಪರ್ಧೆ ಕೂಡದು, ನೆಲೆ ನಿಲ್ಲುವುದು ತಪ್ಪು. ನಮ್ಮ ಪರ್ವತಾರೋಹಣ ಸಂಸ್ಥೆ ಮತ್ತು ಜಾವಾ ಕಾರ್ಖಾನೆಯ ಬ್ಯಾನರುಗಳನ್ನು ಅರಳಿಸಿ, ರಾಷ್ಟ್ರಧ್ವಜವನ್ನು ಎತ್ತಿಹಿಡಿದ ಹಿಮಗೊಡಲಿಯ ತುದಿಗೇರಿಸಿ, ಹಾಗೇ ವೃತ್ತಾಕಾರದಲ್ಲಿ ಎಲ್ಲರೂ (ವಾಸ್ತವದಲ್ಲಿ ಅಲ್ಲಿರದ ರಮೇಶ್ ಜಸವಂತರೂ ನಮ್ಮೊಡನಿದ್ದಾರೆಂಬ ಭಾವದಲ್ಲಿ) ಮುಂದುವರಿದು ಏಕಕಾಲಕ್ಕೆ ತಾತಾರ್ ವಿಜಯಿಗಳಾದೆವು. ಟೈಗರ್ ಸಂತೋಷದಿಂದ ಕುಂಯ್ಗುಟ್ಟುತ್ತ ಎಲ್ಲರ ಅಕ್ಕಪಕ್ಕಗಳಲ್ಲಿ ಸುಳಿದಾಡುತ್ತ ಸಂಭ್ರಮಿಸುತ್ತಿದ್ದದ್ದು ಆಶ್ಚರ್ಯ ಆದರೂ ನಿಜ! ಸ್ವಲ್ಪ ವಿರಮಿಸಿದ್ದ ತಂಪುತ್ರಯ (ಮಳೆ, ಮಂಜು, ಗಾಳಿ; ತಾಪತ್ರಯದ ವಿರುದ್ಧಪದ) ಮತ್ತೆ ತೊಡಗಿದರೂ ನಮ್ಮನ್ನು ಹರಸಲು ಬಂದದ್ದಿರಬೇಕು ಎಂದು ನಾವು ಭಾವುಕರಾದೆವು! ಬಹುಶಃ ಈ ವಿಶ್ವಾಸವೇ ಮುಂದೆ ನಮ್ಮನ್ನು ಅನಾರೋಗ್ಯದಿಂದಲೂ ಕಾಪಾಡಿರಬೇಕು. ನಾನಾ ಕೋನಗಳಿಂದ ಚಿತ್ರಗ್ರಹಣ, ಮಣ್ಣೋ ಕಲ್ಲೋ ಎಲೆಯೋ ಸ್ಮರಣಿಕೆಗಳ ಸಂಗ್ರಹಗಳೆಲ್ಲಾ ಏನೋ ವೈದಿಕ ವಿಧಿಯ ಗಾಂಭೀರ್ಯದಲ್ಲಿ ನಡೆಯಿತು. ಹಾಗೇ ಮುಂಬರುವ ಸಾಹಸಿಗಳಿಗೆ ಕಾಲಕೋಶದಂತೆ ಒದಗಲು ದೇಶ, ಕಾಲ, ನಾಮಗಳ ಪಟ್ಟಿ ಮಾಡಿ (ಸ್ವಸ್ತಿಶ್ರೀ ವಿರೋಧಿಕೃತ್ ನಾಮ ಸಂವತ್ಸರದ ಪುಷ್ಯ ಮಾಸ, ಎಳ್ಳಮಾವಾಸ್ಯೆಯ ಶುಭದಿನ, ಶುಕ್ರವಾರ ಅಂದರೆ ಕ್ರಿಸ್ತಶಕ ಸನ್ ಸಾವಿರದ ಒಂಬೈನೂರಾ ಎಪ್ಪತ್ತ ಒಂದನೆಯ ಇಸವಿ, ಡಿಸೆಂಬರ್ ಹದಿನೇಳನೆಯ ದಿನಾಂಕ, ಅಪರಾಹ್ನ ಎರಡು ಗಂಟೆ ಮೂವತ್ತು ಮಿನಿಟಿಗೆ, ದಖ್ಖಣ ಪರ್ವತಾರೋಹಣ ಸಂಸ್ಥೆ, ಮೈಸೂರಿನ ಹದಿನಾರು ಪ್ರುರುಷರು, ನಾಲ್ವರು ಮಹಿಳೆಯರು, ಮೂವರು ಮಾರ್ಗದರ್ಶಿಗಳು ಮತ್ತು ಒಂದು ನಾಯಿ, ಎಡೆಬಿಡದ ಮಂಜು ಮಳೆಸುಳಿಗಾಳಿಗಳೊಡನೆ ಒಂದೂವರೆ ದಿನದ ಹೋರಾಟದ ಕೊನೆಯಲ್ಲಿ, ಮಸಣಿಗುಡಿ ನಾಮದ ಊರಿನತ್ತಣಿಂದ, ದಟ್ಟ ಕಾನನವನ್ನು ದಿಟ್ಟ ಬೆಟ್ಟವನ್ನು ಉತ್ತರಿಸಿ, ಉದಕಮಂಡಲ ಶ್ರೇಣಿಸ್ಥಿತ, ಸಮುದ್ರ ಮಟ್ಟದಿಂದ ಏಳು ಸಾವಿರದ ನಾನೂರ ನಲವತ್ತೇಳು ಅಡಿ ಔನ್ನತ್ಯದ, ತಾತಾರ್ ಗಿರಿಶಿಖರವನ್ನು ಜಯಿಸಿದೆವು), ಕೆಲವರು ಅವರ ಒಂದೊಂದು ಪ್ರಿಯ ವಸ್ತುಗಳನ್ನು ಸೇರಿಸಿ (ಗೋವಿಂದರಾಜ್ ಅವರ ಒಂದು ಕೈಗವುಸು, ಗಿರೀಶ ಒಂದು ಪುಸ್ತಕ, ಕಾವೇರಿಯಮ್ಮ ಹೂ ಕುಂಕುಮ, ನಾನು ಅದುವರೆಗೆ ಬಳಸಿದ್ದ ಕಾಡು ಊರುಗೋಲು ಇತ್ಯಾದಿ), ಮುಖ್ಯ ಗುಪ್ಪೆಯ ಕಲ್ಲ ಸಂದಿನಲ್ಲಿ ಭದ್ರಪಡಿಸಿದೆವು. ಕೆಲವರ ಇಷ್ಟದೇವತಾ ಸ್ತೋತ್ರ, ಮನೆಮಂದಿಗಳ ಸ್ಮರಣೆ, ಸವೆಯಿಸಿದ ದಾರಿಯ ರೋಚಕ ನೆನಪು, ಒಟ್ಟಾರೆ ಗಾಳಿಮಳೆಯ ಗದ್ದಲ ಮೀರುವ ಘೋಷಗಳೊಡನೆ ಸಿಹಿ ಹಂಚಿ ಮುಗಿಸಿದೆವು.
ಚಳಿ ತಡೆಯಲಾರದೆ ಸೂರ್ಯ ಆಗಲೇ ಗೃಹಾಭಿಮುಖನಾಗಿದ್ದ. ಸುಬ್ಬಯ್ಯನ್ ಅಲ್ಲಿದ್ದ ಊರ ದನಗಳು ಬಿಟ್ಟುಹೋದ ಜಾಡು ನೋಡಿ, ನಮಗೆ ಹಿಂದಿರುಗಲು ಹೆಚ್ಚು ನಾಗರಿಕ ಜಾಡು ಸೂಚಿಸಿದ. ಮತ್ತದು ನಮ್ಮವರಿಗೂ ಒಪ್ಪಿಗೆಯಾದ್ದರಿಂದ ನಾವು ಹಿಂದೆ ಬಿಟ್ಟ ಜನ, ಸಾಮಾನನ್ನು ತರಲು ಧಾವಿಸಿದೆವು. ಪೊದರ ಗುಹಾಮಾರ್ಗದ ಉದ್ದಕ್ಕೆ ಅಕ್ಷರಶಃ ಹಿಮಜಾರಾಟವನ್ನೇ ಅನುಕರಿಸಿದೆವು. ರಾಜು ರಮೇಶಾದಿಗಳಿಗೆ ವಿಜಯವಾರ್ತೆಯೊಡನೆ ದಾರಿ ಬದಲಾವಣೆಯನ್ನೂ ತಿಳಿಸಿ, ಸಮಯಾಭಾವವನ್ನು ಗಮನದಲ್ಲಿಟ್ಟುಕೊಂಡು ಗಂಟು ಮೂಟೆಗಳನ್ನು ಬೆನ್ನಿಗೇರಿಸಿ ಮತ್ತೆ ಶಿಖರಕ್ಕೆ ಮರಳಿ... ನಿಲ್ಲಿ, ನಿಲ್ಲಿ. ಗುಹಾಮಾರ್ಗ ಮೊದಲ ಶೋಧದಲ್ಲೇ ಕೆಸರೆದ್ದಿತ್ತು. ಮತ್ತಿಳಿಯುವಾಗ ಎಲ್ಲರೂ ನಿರ್ಯೋಚನೆಯಿಂದ ಜಾರಿ ಈಗ ಅದು ಅಕ್ಷರಶಃ ಜಾರುಗುಪ್ಪೆ. ಸಾಲದ್ದಕ್ಕೆ ಬೆನ್ನ ಮೇಲೆ ಸಿಂದಬಾದನ ಮುದುಕ! ಎಷ್ಟೇ ಎಚ್ಚರಿಕೆಯಿಂದ ಎರಡೂ ಬದಿಯ ಗಿಡಗಳ ಬುಡ ಹಿಡಿದು, ಮತ್ತೊಂದೆರಡು ಬುಡ ತುಳಿದು ಮುಂದುವರಿಯ ತೊಡಗಿದರೆ ಬೆನ್ನ ಗಂಟನ್ನು ಪೊದರ ಚಪ್ಪರ ಹೆಟ್ಟಿಯೂ ಮಲಗಿಸುತ್ತಿತ್ತು. ಅಂತೂ ಇಂತೂ ಅದರಿಂದ ಪಾರಾಗುವುದರೊಳಗೆ ಕನಿಷ್ಠ ಎರಡು ಬಾರಿಯಾದರೂ ನೆಲಕಚ್ಚದ ವ್ಯಕ್ತಿಯಿರಲಿಲ್ಲ! ಮೊದಲೇ ಬಳಲಿದವರು ಈಗ ಅಡಿಯಿಂದ ಮುಡಿವರೆಗೆ ಕೆಸರ ಮುದ್ರೆ ಹೊಡೆದುಕೊಂಡು ಶಿಖರ ಸೇರುವಾಗ ಸಾಕೋ ಸಾಕು. ಹೆಚ್ಚಿದ ಮಂಜು ಚಳಿಯ ಹೊಡೆತದಲ್ಲಿ (ಇಪ್ಪತ್ತಡಿ ಆಚೆಗೆ ಎಲ್ಲವೂ ಮಾಯ) ಎಲ್ಲರೂ ಚಡಪಡಿಸುತ್ತ, ಒಂದಷ್ಟು ಗ್ಲುಕೋಸ್, ನೀರು ಮಾತ್ರ ಸೇವಿಸಿ, ಜನಗಣಮನ ಹಾಡಿ, ಶಿಖರ ಬಿಟ್ಟೆವು. ಗಂಟೆ ಮೂರು ಮುವತ್ತೈದು.
[ಚಿತ್ರ ಸೂಚನೆ: ೧. ನನ್ನ ಆ ಕಾಲದ ಬೆನ್ನುಚೀಲ, ಮೇಲೆ ಮಲಗಿದ ನೀರ ಅಂಡೆ, ಚೀಲಕ್ಕೆ ಕತ್ತರಿಯಾಕಾರದಲ್ಲಿ ಕುತ್ತಿದ ಗುಡಾರದ ಗೂಟ, ತಲೆಗೆ ಕಾಡುಟೊಪ್ಪಿ ಇತ್ಯಾದಿಗಳಿಗೆ ರೂಪದರ್ಶಿ - ತಮ್ಮ ಆನಂದವರ್ಧನ, ಬೇರೊಂದು ಸಾಹಸಯಾತ್ರೆ ಮುಗಿಸಿ ಬರುವಾಗ ಬೂಟು ಕಚ್ಚಿದ ಪರಿಣಾಮವಾಗಿ ಚಪ್ಪಲಿಧಾರಿ, ಬೂಟು ಕಂಠಾಭರಣ! ೨. ನನ್ನಲ್ಲಿ ಲಭ್ಯವಿರುವ, ತಂಡದ ಇತರ ಗೆಳೆಯರ ಆ ಕಾಲದ ಚಿತ್ರಗಳು - ಕಾವೇರಿಯಮ್ಮ, ನಿರ್ಮಲಾ ಪ್ಯಾಟ್ರಿಕ್.]
ಕರಡಿ ಬೆಟಕೆ ಹೋಯಿತು (ರಾಗದಲ್ಲಿ ಮೂರು ಬಾರಿ ಹೇಳತಕ್ಕದ್ದು. ಮತ್ತೆ), ನೋಡಿತೇನನೂಊಊಊಊಊಊ? ವಾರಕಾಲ ಜಪಿಸಿ ಬನ್ನಿ, ಸಿದ್ಧಿಯೋ ಸುದ್ಧಿಯೋ ಮುಂದಿನ ಕಂತಿನಲ್ಲಿ! ತಾತಾರ್ ವಿಜಯ ವಾರ್ತೆ ಕೇಳಿಸಿದ್ದಕ್ಕೆ ಮನ್ ಪಸಂದ್ ಮಾಡಲಿಕ್ಕೆ ನ ಭೂಲಿಯೇ. ಮಳೆನೀರು ಹಿಂಡಿ, ಅಂಗಾತ ಇಟ್ಟ ನನ್ನ ಜಂಗಲ್ ಹ್ಯಾಟೆಂದೇ ಭಾವಿಸಿ ಪ್ರತಿಕ್ರಿಯಾ ಅಂಕಣವನ್ನು ತುಂಬಿ...
ಆ ಕಾಲವೊಂದಿತ್ತು ,ದಿವ್ಯ ತಾನಾಗಿತ್ತು .ಅಕ್ಷರ ಮತ್ತು ದೃಶ್ಯಗಳ ದಾಖಲೀಕರಣ ನಮ್ಮನ್ನು ವಾಸ್ತವ ಜಗತ್ತಿನಲ್ಲೇ ಅದ್ಭುತ ಲೋಕಕ್ಕೆ ಕೊಂಡೊಯ್ಯುತ್ತದೆ.ಈ ಕಥನ -ಸಂಕಥನ .ಅಂತಹ ಒಂದು ಅಕ್ಷರಾರೋಹಣ. ವಿವೇಕ ರೈ
ReplyDeleteಪುಸ್ತಕ ಪರ್ವತ ರಾಯರೇ!
ReplyDeleteಲೇಖನ ದ ಚಿತ್ರಗಳನ್ನು ಮೊದಲು ನೋಡಿದೆ!
ಕಣ್ಣೀರು ಬಂದು ಮುಂದೆ ಓದಲು ಆಗಲಿಲ್ಲ!
ಸ್ವಲ್ಪ ಹೊತ್ತು ಬಿಟ್ಟು ತಮ್ಮ ತಾತಾರ್ - ೫ ಓದುತ್ತೇನೆ.
ಮೊದಲು ನಿಮ್ಮ ಪರ್ವತಾರೋಹಿಯ ಚಿತ್ರಕಂಡು ಕಣ್ಣಿಗೆ ಬಿತ್ತು!
ಶಿಲಾಯುಗದ ಬ್ಯಾಕ್ ಪ್ಯಾಕ್! ಕಾಲಿಗೆ ಚಪ್ಪಲಿ! ಬೆನ್ನಿಗೆ ಗೋಣಿ ಚೀಲ! ತಲೆಗೆ ಬೀದಿ ಬದಿಯ ಹ್ಯಾಟ್! ಕುತ್ತಿಗೆ ಮುರಿದುಕೊಳ್ಳಲು ಹೊರಟವನ ಚಿತ್ರದಂತೆ ಅದು ನನಗೆ ಭಾಸ ಆಯಿತು!
ಆದರೂ ತಾತಾರ್ ಏನು? ಅದರ ತಾತನನ್ನೂ ಜಯಿಸುವ ತಾಕತ್ ಮತ್ತು ಕೆಚ್ಚು ತಮ್ಮಲ್ಲಿ ಇತ್ತು!
ನಿಮ್ಮ ಆ ರೋಪುಗಳಲ್ಲಿ ಇದ್ದ ಉಮೇದು ಇಂದಿನ ಸುವ್ಯವಸ್ಥಿತ ಆರೋಹಿಗಳಿಗೆ ಇದ್ದಿದ್ದರೆ!
ಕಥನ ಮುಂದುವರೆಸಿ. ಮಂಜಾದ ಕಣ್ಣುಗಳನ್ನು ತಿಳಿಯಾಗಿಸಿ. ಆ ಮೇಲೆ ಓದಿ ತಮಗೆ ಬರೆವೆ.
ಸಲಾಮ್
ಪೆಜತ್ತಾಯ ಎಸ್. ಎಮ್.
ಒಂದು ಯಕ್ಷಪ್ರಶ್ನೆ: ತಮ್ಮ ಜತೆಗಾರ = ಧರ್ಮರಾಯನ ಜತೆಯ ನಾಯಿ = ತಮ್ಮ ಗ್ರಾಮಸಿಂಹ ಜತೆಗಾರ ಅಲಿಯಾಸ್ The "ಟೈಗರ್" Great - ತಮ್ಮ ಲಿಕ್ವಿಡ್ ಉಪ್ಪಿಟ್ಟು ಮತ್ತು ಪಾಚಿಯ ಕಾಫಿಯ ಪವರ್ ಡಯಟ್ ಸೇವಿಸಿ ಅದು ಹೇಗೆ ಬದುಕಿ ಶಿಖರ ತಲುಪಿತು?
ReplyDeleteಉತ್ತರಿಸದಿದ್ದರೆ ತಮ್ಮ ಹ್ಯಾಟ್ ಗಾಳಿಗೆ ಹಾರಿ ಹೋದೀತು!
ಪೆಜತ್ತಾಯ ಎಸ್. ಎಮ್.
ತಾತಾರ್ ಸಾಹಸ ಯಾತ್ರೆಯನ್ನು ತುಂಬ ನಿಧಾನವಾಗಿ ಅಸ್ವಾದಿಸುತ್ತ ಓದಿದೆವು. ನಿಮ್ಮ ಅನ್ವೇಷಣ ಪ್ರವೃತ್ತಿಯ ಬಗ್ಗೆ ರಾಮಕೃಷ್ಣರಾಯರಿಂದ ಕೇಳಿ ತಿಳಿದಿತ್ತು. ನೀವು ಆ ಪರಿಸರದ ಚಿತ್ರಣ ಕೊಡುತ್ತಿದ್ದರೆ ಅಲ್ಲೇ ಇದ್ದಂತೆ ಕಣ್ಣಿಗೆ ಕಟ್ಟುತ್ತದೆ. ಇಂತಹ ಪ್ರವಾಸ ಕಥನಗಳು ಹಸಿರಿನ ತಾಜಾತನವನ್ನು ಕಟ್ಟಿಕೊಡುತ್ತವೆ. ನಮ್ಮ ಮಗನು ಆಸಕ್ತಿಯಿಂದ ಓದುತ್ತಿದ್ದಾನೆ.
ReplyDeleteವಂದನೆಗಳು
ಅನುಪಮಾ ಪ್ರಸಾದರ ಒಳ್ಳೆಯ ಮಾತುಗಳಿಗೆ ಕೃತಜ್ಞ. ಇದಕ್ಕೆ ಸಮನಾದ ಅನುಭವದ ತುಣುಕು ನಿಮ್ಮಲ್ಲೂ ಇರಬಹುದಲ್ಲಾ? ಅಂಥವುಗಳ ಬೆಳಕಿನಲ್ಲೇ ನೀವು ಅಥವಾ ಪ್ರತಿಕ್ರಿಯಿಸುವವರು ಹೆಚ್ಚಾಗಿ ಬರೆಯುತ್ತಾರೆ ಎಂದು ನನ್ನ ಅಂದಾಜು. ಆ ಅನುಭವದ ತುಣುಕನ್ನು ನೀವು ಪ್ರಕಟಿಸಿದರೆ ಪರೋಕ್ಷವಾಗಿ ನನ್ನನ್ನು ಹೊಗಳಿದಂತೆಯೂ ಬ್ಲಾಗ್ ಓದುಗರನ್ನು ಹೆಚ್ಚು ಸಮೃದ್ಧರನ್ನಾಗಿಸಿದಂತೆಯೂ ಆಗುತ್ತದೆ ಎಂಬುದು ನನ್ನ ಕೇಳಿಕೆ. ಬ್ಲಾಗ್ ನನ್ನದೇ ಹಾಗಾಗಿ ಪ್ರಧಾನ ಬರವಣಿಗೆಯೂ ನನ್ನದೇ ಇರುವುದು ಅನಿವಾರ್ಯ. ಮತ್ತಲ್ಲಿ ಬೇಡ ಬೇಡವೆಂದರೂ ಆತ್ಮ ಪ್ರತ್ಯಯದ ಅಂಶಗಳು ಸೇರಿಯೇ ಸೇರುತ್ತವೆ (ಅಥವಾ ಓದುಗರಿಗೆ ಕಾಣುತ್ತದೆ). ಈ ಜಂಭದ ಕೋಡುಗಳು ಬೆಳೆಯಂದತೆ ಕಾಲಕಾಲಕ್ಕೆ ಅರ ಉಜ್ಜುವ ಕೆಲಸ ಈ ಸಮ-ಅನುಭವಗಳ ನಿರೂಪಣೆಯಿಂದಾಗುತ್ತದೆ. ಹಾಗಾಗಿ ಬ್ಲಾಗಿನಲ್ಲಿ ನಾನು ಹೆಚ್ಚಾಗಿ ಮೆಚ್ಚಿ ಬರೆದವರಿಗೆಲ್ಲ ಉತ್ತರಿಸಲು ಹೋಗುವುದಿಲ್ಲ. (ಯಾರಾದರೂ ಬೈದರೆ ಸುಮ್ಮನಿದ್ದುಬಿಡಿ, ಅದು ನಿಮ್ಮದಾಗುವುದಿಲ್ಲ, ಬೈದವನನ್ನೇ ಸೇರಿಕೊಂಡು ಹಿಂಸಿಸುತ್ತವೆ! ಇದೇ ಮಾತಿನ ಪೂರ್ವಾರ್ಧವನ್ನು ಮಾತ್ರ ನಾನು ಹೊಗಳಿಕೆಗೆ ಬಳಸುತ್ತೇನೆ.) ಉತ್ತರಿಸದಿರಲು ಅವಿನಯ ಕಾರಣವಲ್ಲ.
ReplyDeleteಅಶೋಕರ್ಧನ