05 March 2010

ಮೌಲ್ಯಗಳ ಪುಡಾರೀಕರಣ

ಗತಕಥನದ ಲಹರಿಯಲ್ಲಿ ವರ್ತಮಾನ ಕಳೆದುಹೋಗದಂತೆ ಈ ವಾರ ಮತ್ತೆ ತಾತಾರ್ ತಡೆದಿದ್ದೇನೆ. ಹಸಿವು ಹೆಚ್ಚಿಸಿ ತಿನಿಸು ಮೆಚ್ಚಿಸುವ ರೀತಿಯಲ್ಲಿ ಇಲ್ಲೊಂದು ಕಟುಕರೋಹಿಣಿ ಕಷಾಯ ಕಾಯಿಸಿ ಇಟ್ಟಿದ್ದೇನೆ. ನಿಧಾನಕ್ಕೆ ತಗೊಳಿ,  ಸೆರೆ ಸಿಕ್ಕೀತು, ಹುಶಾರ್!

ನನ್ನ ಪುಸ್ತಕೋದ್ಯಮದ (ಖರೀದಿ, ಮಾರಾಟ ಮತ್ತು ಪ್ರಕಟಣೆ) ಅನುಭವಗಳಲ್ಲಿ ‘ಅಪೂರ್ವ ಸ್ವಾದ’ ಕಂಡದ್ದೂ ಇದೆ, ‘ತುತ್ತಿನ ಕಲ್ಲು’ ಉಗುಳಿದ್ದೂ ಇದೆ. ಆದರೆ ಇವುಗಳಲ್ಲಿ ವೈಯಕ್ತಿಕತೆಯನ್ನು ಮೀರಿ, ಸಾಮಾಜಿಕ ಕುಶಿ ಅಥವಾ ಚಿಂತನೆಯ ಭಾಗಗಳಾಗುವಂತವನ್ನು ಎಚ್ಚರದಿಂದ ಸಾರ್ವಜನಿಕದಲ್ಲಿ ಹಂಚಿಕೊಂಡಿದ್ದೇನೆ. ಹಾಲಾಹಲವಾದರೆ ನೀಲಕಂಠನಾದರೂ ಸರಿ, ಅಮೃತ ಮೂಡಿದರೆ ಮೋಹಿನಿಯಾಗಲೇಬೇಕು (ಅನ್ಯಾರ್ಥಗಳನ್ನು ಮರೆತುಬಿಡಿ). ಈ ಮರೆಯಬಾರದ ಸಂಕೇತಗಳ ಪ್ರೇರಣೆಯಲ್ಲಿ ಫೆಬ್ರುವರಿ ೨೩ಕ್ಕೆ ನಾನು ಕೆಳಗೆ ಕಾಣಿಸಿದ ಲೇಖನ ಬರೆದೆ. ಮಿಂಚಂಚೆಯಲ್ಲಿ ಉದಯವಾಣಿಯ ಗೆಳೆಯ ಸತ್ಯಗಣಪತಿಗೆ ಕಳಿಸಿ “ಬೇಕೇ” ಕೇಳಿದೆ. ನನ್ನ ಕಾತರಕ್ಕೆ ಆತ ಉತ್ತರಿಸಲಿಲ್ಲ; ನಿರೀಕ್ಷೆ ಮೀರಿದ ಚುರುಕಿನಲ್ಲಿ ಮರುದಿನವೇ ಪ್ರಕಟಿಸಿಬಿಟ್ಟರು!

ಇಂದು ಮಾಧ್ಯಮಗಳ ವೈವಿಧ್ಯಕ್ಕೆ ತಕ್ಕಂತೆ ಸಂಪರ್ಕ ಸಾಧ್ಯತೆಗಳೂ ವಿಭಿನ್ನ. ಹಾಗಾಗಿ ಮೇ ಫ್ಲವರ್ ಮೀಡಿಯಾ ಹೌಸಿನ ಗೆಳೆಯ ಜಿ.ಎನ್. ಮೋಹನ್ನರಿಗೂ ಇದೇ ಲೇಖನವನ್ನು ದೂಡಿ (ಫಾರ್ವರ್ಡಿಸಿ), ಸೂಚಿಸಿದೆ, ‘ಇದು ಇಂದಿನ ಉದಯವಾಣಿಯಲ್ಲಿ ಪ್ರಕಟವಾಗಿದೆ. ನಿಮಗೆ ಬೇಕಾದಂತೆ ಬಳಸಿಕೊಳ್ಳಿ. ಅವರೂ ಮರುಕ್ಷಣದಲ್ಲಿ ತಮ್ಮ ‘ಅವಧಿ’ಯಲ್ಲಿ ಪ್ರಕಟಿಸಿದರು. ಈಗ ಮೊದಲು ಲೇಖನ ನೋಡಿ:ಪುಸ್ತಕ ಖರೀದಿಯಲ್ಲಿ ಪಕ್ಷ ರಾಜಕೀಯ

ನಾನೊಬ್ಬ ಬಿಡಿ ಪುಸ್ತಕ ವ್ಯಾಪಾರಿ. ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣ ಅಧಿಕಾರಿ, ಪುತ್ತೂರು ಇವರಿಂದ, ಸ್ಥಳೀಯ ಶಾಸಕರ ‘ಶಾಸಕನಿಧಿ’ಯ ಬಲದಲ್ಲಿ, ಸುಮಾರು ಎರಡು ಲಕ್ಷ ಮೌಲ್ಯದ ಕನ್ನಡ ಭಾರತ ಭಾರತಿ ಪುಸ್ತಕಗಳ ಖರೀದಿಗೆ ‘ದರಪಟ್ಟಿ’ ಕೇಳಿ ನನಗೊಂದು ಪತ್ರ ಬಂತು. ಸಾರ್ವಜನಿಕ ಸಂಸ್ಥೆಗಳು ಯಾವುದೇ ಖರೀದಿಯಲ್ಲಿ ತಮ್ಮ ಗರಿಷ್ಠ ಹಿತ (ಹಣ ಮತ್ತು ಗುಣಗಳಲ್ಲಿ) ಕಾಯುವ ಕ್ರಮವಾಗಿ ಮತ್ತು ಅವು ತಳೆಯಲೇಬೇಕಾದ ನಿಷ್ಪಕ್ಷ ನಿಲುವಿಗೆ ಬದ್ಧವಾಗಿ ಕನಿಷ್ಠ ಮೂರು ಮಳಿಗೆಗಳಿಂದ ಈ ದರಪಟ್ಟಿ ಕೇಳುವ ಕ್ರಮ ಅನುಸರಿಸಲಾಗುತ್ತದೆ. ಆದರೆ ಇಲ್ಲಿ ಈ ಕ್ರಮವನ್ನು ತಪ್ಪು ಸಂಗತಿಗೆ ಅನ್ವಯಿಸಿ, ತಪ್ಪನ್ನು ಒಪ್ಪಾಗಿಸುವ ದುರುದ್ದೇಶ ಎದ್ದು ಕಾಣುತ್ತದೆ! ಪತ್ರವೇ ಹೇಳಿಕೊಂಡಂತೆ, ಎರಡು ಲಕ್ಷ ರೂಪಾಯಿ ಮೌಲ್ಯದವರೆಗೆ ಇಲಾಖೆ ಕೊಳ್ಳಲುದ್ದೇಶಿಸಿರುವುದು ಒಟ್ಟಾರೆ ಮಕ್ಕಳ ಪುಸ್ತಕಗಳಲ್ಲ, ಕೇವಲ ಕನ್ನಡ ಭಾರತ ಭಾರತಿ ಪುಸ್ತಕಗಳು ಮಾತ್ರ. ಕನ್ನಡದಲ್ಲಿ, ಮಕ್ಕಳ ಮಟ್ಟದಲ್ಲಿ, ಜೀವನ ಚರಿತ್ರೆಗಳನ್ನೇ ಹುಡುಕಹೋದರೂ ವಾಸನ್ ಪಬ್ಲಿಕೇಶನ್ಸ್, ಸಪ್ನಾ ಬುಕ್ ಹೌಸ್, ನವಕರ್ನಾಟಕ ಪಬ್ಲಿಕೇಶನ್ಸ್ ಮೊದಲಾಗಿ ಹಲವು ಪ್ರಕಾಶಕರು ಉದ್ದುದ್ದ ಮಾಲೆಗಳನ್ನೇ ಕೊಟ್ಟಿರುವುದು ಕಾಣುತ್ತೇವೆ. ಬೆಲೆ, ಗಾತ್ರ, ಗುಣಮಟ್ಟಗಳಲ್ಲೂ ಅಪಾರ ವೈವಿಧ್ಯ ಸಿಗುತ್ತವೆ. ಹೀಗೆ ವಿವಿಧ ಪ್ರಕಾಶನ ಮಾಲೆಗಳ ನಡುವೆ ನಡೆಯಬಹುದಾಗಿದ್ದ ತುಲನೆ, ಒಂದೇ ಮಾಲೆಯ ಅದೂ ಬರಿಯ ಬೆಲೆ ಚೌಕಾಸಿಯ ಮಟ್ಟಕ್ಕೆ ಸೀಮಿತಗೊಳಿಸಲ್ಪಟ್ಟಿದೆ. (ಹಣಕಾಸಿನ ವ್ಯವಸ್ಥೆ ನೋಡಿಕೊಳ್ಳುವವರು ಗುಣಮಟ್ಟದಲ್ಲಿ ಹಸ್ತಕ್ಷೇಪಿಸುತ್ತಿರುವುದು ಇದು ಮೊದಲೇನಲ್ಲ!)

ಭಾರತ ಭಾರತಿ ಪುಸ್ತಕ ಮಾಲೆ ಸುಮಾರು ಮೂವತ್ತು ವರ್ಷಗಳ ಹಿಂದೆ ರಾಷ್ಟ್ರೋತ್ಥಾನ ಪರಿಷತ್ತು (ಬೆಂಗಳೂರು), ತನ್ನ ‘ಹಿಂದೂದೇಶದ’ ಪರಿಕಲ್ಪನೆಗೆ ಪೂರಕವಾಗುವಂತೆ, ವಿವಿಧ ಲೇಖಕರಿಂದ ಬರೆಯಿಸಿದ ಸುಮಾರು ಐದುನೂರು ವ್ಯಕ್ತಿಗಳ ಜೀವನ ಚರಿತ್ರಾ ಮಾಲಿಕೆ. ಸೀಮಿತ ಪುಟ ಸಂಖ್ಯೆ ಮತ್ತು ವಿಷಯ ನಿರ್ವಹಣೆಯೊಡನೆ ಇವು ಮೊದಲು ಪುಟ್ಟ ಮಗ್ಗಿ ಪುಸ್ತಕಗಳಂತೆಯೂ ಈಚಿನ ಮರುಮುದ್ರಣಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪ್ರಚಾರಪುಸ್ತಕ ಮಾಲೆಗಳ ಆಕಾರದಲ್ಲೂ ಬರುತ್ತಿವೆ. (ಕಾಲಾನುಕ್ರಮದಲ್ಲಿ ಇವುಗಳ ಇಂಗ್ಲಿಷ್ ಅನುವಾದಗಳೂ ಬಂದುದರಿಂದ ಇಲ್ಲಿ ‘ಕನ್ನಡ’ ಎಂದಿದ್ದಾರೆ. ಅವು ತಲಾ ಎಪ್ಪತ್ತೈದು ಪೈಸೆ ಬೆಲೆಯಿಂದ ತೊಡಗಿದ್ದರೂ ಸದ್ಯ ರೂ ಎಂಟರ ಮುದ್ರಿತ ಬೆಲೆ ತಲಪಿರುವುದು ಎಲ್ಲರಿಗೂ ತಿಳಿದಿದೆ.) ಇವು ಏಕಸ್ವಾಮ್ಯದ, ಏಕ ಗುಣಮಟ್ಟದ, ಏಕ ಬೆಲೆಯ ಪ್ರಕಟಣೆಗಳು. ಅವು ಅಸಂಖ್ಯ ಮರುಮುದ್ರಣಗಳನ್ನು ಕಂಡಿವೆ, ಕಾಲಕ್ಕನುಗುಣವಾಗಿ ಬೆಲೆ ಏರಿದ್ದೂ ನ್ಯಾಯವೇ. ಆದರೆ ವಸ್ತು, ನಿರ್ವಹಣೆ ಮತ್ತು ಪರಿಷ್ಕರಣೆಗಳ ಸ್ತರದಲ್ಲಿ ವೈವಿಧ್ಯತೆ ಇಲ್ಲದ ಮಾಲು. ಅವನ್ನು ಮೂರಲ್ಲ ನೂರು (ನನ್ನಂಥ) ಬಿಡಿ ಮಾರಾಟಗಾರರಲ್ಲಿ ದರಪಟ್ಟಿ ಕೇಳಿಸಿದರೂ ಒಪ್ಪಂದ ಅಂತಿಮಗೊಳ್ಳುವುದು ರಾಷ್ಟ್ರೋತ್ಥಾನ ಪರಿಷತ್ತಿನ ನಿಯಮದಂತೇ ಮತ್ತವರು ಮುದ್ರಿಸಿದ ಬೆಲೆಯ ಒಳಗೇ ಆಗಬೇಕು. (ಬಿಡಿ ಮಾರಾಟಗಾರರ ಮಟ್ಟದಲ್ಲಿ ರಾಷ್ಟ್ರೋತ್ಥಾನಕ್ಕೆ ಸಾಹಿತ್ಯ ಸಿಂಧುವೆಂಬ ಮಳಿಗೆಯೂ ಇದೆ ಎಂಬುದು ಗಮನಾರ್ಹ.)

ಈ ವಹಿವಾಟಿನಲ್ಲಿ ‘ಶಾಸಕರ ನಿಧಿ’ ಎಂಬ ಉಲ್ಲೇಖವಿರುವುದನ್ನು ವಿಶೇಷವಾಗಿ ಗಮನಿಸಬೇಕು. ಪ್ರಜಾಸತ್ತೆಯಲ್ಲಿ ಪ್ರತಿನಿಧಿಗಳಿಗೆ ಶಾಸನಗಳ ಕಟ್ಟುಪಾಡು ಇದ್ದಂತೆ, ವಿವೇಚನೆಯ ಅಧಿಕಾರ ಮತ್ತು ಸವಲತ್ತುಗಳು ಅನೇಕವಿರುವುದು ನಮಗೆಲ್ಲ (ಪೂರ್ಣ ಅರಿವಿದೆ ಎನ್ನಲಾರೆ) ಅಂದಾಜಿದೆ. ಅದರಲ್ಲಿ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಸಂಸದ, ಶಾಸಕರೇ ಮುಂತಾದವರಿಗೆ ತಮ್ಮತಮ್ಮ ವಿವೇಚನೆಯ ವಿನಿಯೋಗಕ್ಕೆ ಸೀಮಿತ ನಿಧಿ ಇರುವುದೂ ಹೌದು. ಇಲ್ಲಿ ಅದರ ಅಂಶವನ್ನು ಓರ್ವ ಶಾಸಕ ಶಾಲಾ ಗ್ರಂಥಾಲಯಕ್ಕೆ ನಿರ್ದೇಶಿಸಿದ್ದೂ ಸರಿ. ಅಂದ ಮಾತ್ರಕ್ಕೆ ಅಂಥ ನಿರ್ದೇಶನಗಳು ಸೂಕ್ಷ್ಮಗಳಲ್ಲಿ (ಶಾಸಕನ) ವೈಯಕ್ತಿಕವಾಗುವುದು ನೈತಿಕವಾಗಿ ತಪ್ಪು. ಆಡಳಿತದಲ್ಲಿ ಕೆಲಸದ ವಿಭಾಗೀಕರಣದೊಡನೆ ಜವಾಬ್ದಾರಿಗಳ ಹಂಚಿಕೆಯೂ ಆಗಿರುತ್ತದೆ ಎಂಬ ತಿಳುವಳಿಕೆ ಜನಪ್ರತಿನಿಧಿಗಳಿಗೆ ಇರಲೇ ಬೇಕು. ಗ್ರಂಥಾಲಯ ಬಲಪಡಿಸಬೇಕು ಎಂಬ ವಿವೇಚನೆ ಸರಿ. ‘ಯಾವುದರಿಂದ’ ಎನ್ನುವ ವಿವರ ಹೇಳಲು ವಿದ್ಯಾರ್ಥಿ, ಶಿಕ್ಷಕರು ಸಮರ್ಥರಿಲ್ಲವೇ? ‘ಎಷ್ಟು, ಹೇಗೆ’ ಎಂದು ನೋಡಿಕೊಳ್ಳಲು ಇಲಾಖೆಯ ಸಿಬ್ಬಂದಿಗಳಿಲ್ಲವೇ? ‘ಕನ್ನಡ ಭಾರತ ಭಾರತಿ’ ಪುಸ್ತಕಗಳನ್ನೇ ಕೊಳ್ಳಬೇಕು ಎಂದವರು ನಾಳೆ ‘ಇಂಥದ್ದೇ ಮಳಿಗೆಯಲಿ’, ‘ಇಷ್ಟೇ ಮೊತ್ತಕೊಟ್ಟು’ ಎಂದೆಲ್ಲಾ ಹೇಳಲೂಬಹುದಲ್ಲವೇ? ಇದು ವಿವೇಚನೆಯ ಹೆಸರಿನಲ್ಲಿ ಹಾಜರಾದ ಮದುವೆಗಳಲ್ಲಿ ವರನೂ (ಅಥವಾ ವಧುವೂ) ಮರಣಗಳಲ್ಲಿ ಹೆಣವೂ ಆಗಲು ಹೊರಟಷ್ಟೇ ಹಾಸ್ಯಾಸ್ಪದ. ಕನ್ನಡ ಭಾರತಭಾರತಿ ಖರೀದಿಗೆ ಆಜ್ಞಾಪಿಸಿರುವುದು ತೀರಾ ಪ್ರಾಥಮಿಕ ಮಟ್ಟದ ಪಕ್ಷಪಾತ (ಪಕ್ಷವಾತ)! ಚುನಾವಣೆಯವರೆಗೆ ತಾನು ಪಕ್ಷದ ಪ್ರತಿನಿಧಿ ಅನಂತರ (ಚುನಾಯಿತನಾದ ಎಂದಿಟ್ಟುಕೊಳ್ಳಿ) ಸಮಗ್ರ ಸಮಾಜದ ಸೇವಕ ಎಂಬ ಉನ್ನತ ಆದರ್ಶಕ್ಕೆ ಇಂದು ಆಚರಣೆಯಲ್ಲಿ ಬಿಡಿ, ಕಡತಗಳಲ್ಲೂ ಅಡ್ಡಗೀಟು ಬಿದ್ದಿರುವುದು ಪ್ರಜಾಸತ್ತೆಯ ದುರಂತ.

ಮಕ್ಕಳು ಮತ್ತು ಶಾಲಾ ಶಿಕ್ಷಕರಷ್ಟೇ ನಿರ್ಧರಿಸಬಹುದಾದ ವಿಷಯವನ್ನು ಇಲಾಖೆಯ ಮಟ್ಟದಲ್ಲೇ ನಿಗದಿಗೊಳಿಸಿ ‘ಕನ್ನಡ ಭಾರತ ಭಾರತಿ ಪುಸ್ತಕಗಳು’ ಎಂದು ಹೆಸರಿಸಿರುವುದು ಶಿಕ್ಷಕರ ವಿಚಾರ ಸ್ವಾತಂತ್ರ್ಯವನ್ನು ನಗಣ್ಯ ಮಾಡಿದಂತೆಯೂ ಆಗಿದೆ. ಶಾಲೆಗಳಿಗೆ ಮತ್ತು ವ್ಯಾಪಾರಿಗಳಿಗೆ ಎರಡು ಲಕ್ಷ ಮೌಲ್ಯದ ಪುಸ್ತಕ ಕೊಡಿಸುವ ಕೃಪಾಹಸ್ತವನ್ನೂ ಮೇಲಿನ ಲೆಕ್ಕಾಧಿಕಾರಿಗಳಿಗೆ ‘ನಿಯಮಪ್ರಕಾರ’ ಶುದ್ಧಹಸ್ತವನ್ನೂ ತೋರುವ ಈ ಕ್ರಮ ಪಕ್ಷ ರಾಜಕೀಯದ ಕೆಟ್ಟಮುಖ. ಇಲ್ಲಿ ದರಪಟ್ಟಿಯನ್ನು ಕೇಳುವುದು ನಿಯಮಗಳ ಪಾಲನೆಯ ಕಣ್ಕಟ್ಟು ಮತ್ತು ಅಪ್ರಾಮಾಣಿಕವಾದ ವ್ಯವಾಹಾರ ನೀತಿ ಎನ್ನುವುದು ಸ್ಪಷ್ಟ. ಎತ್ತಿಹಿಡಿದಂತೆ ತೋರುವ ನ್ಯಾಯತಕ್ಕಡಿ, ನಿಜದಲ್ಲಿ ಸಾರ್ವಜನಿಕರನ್ನು ಮಾಡುತ್ತಿದೆ ಬೆಪ್ಪುತಕ್ಕಡಿ!

(ಲೇಖನ ಮುಗಿಯಿತು)

ಈ ಕುರಿತು ಪುತ್ತೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗೆ ನಾನು ಮೊದಲೇ ನೇರ ಪತ್ರವನ್ನೇ ಬರೆದಿದ್ದೆ. ಅದಕ್ಕೂ ಈ ಪತ್ರಿಕಾ ಲೇಖನಕ್ಕೂ ಅವರಿಂದ ಇದುವರೆಗೆ ಉತ್ತರ, ಪ್ರತಿಕ್ರಿಯೆ ಬಂದಿಲ್ಲ.

ವೃತ್ತಿಜೀವನ ಕಾಲದಲ್ಲಿ ಓರ್ವ ಪ್ರೌಢಶಾಲಾ ಶಿಕ್ಷಕನಷ್ಟೇ ಆಗಿದ್ದ, ಆದರೆ ಆಗಲೂ ಈಗಲೂ (ನಿವೃತ್ತಿಯ ದಿನಗಳು) ಉನ್ನತಮಟ್ಟದ, ಕ್ರಿಯಾಶೀಲ ಶಿಕ್ಷಣತಜ್ಞನಾಗಿ ದುಡಿಯುತ್ತಿರುವ ಸಿ.ಎಚ್ ಕೃಷ್ಣ ಶಾಸ್ತ್ರಿಗಳು ಉದಯವಾಣಿ ನೋಡಿದ ಕೂಡಲೇ ದೂರವಾಣಿಸಿ, ಸ್ಪಷ್ಟನುಡಿಗಳೊಡನೆ ನನ್ನನ್ನು ಬೆಂಬಲಿಸಿದರು. ಮಂಗಳೂರಿಗೆ ಬರುವ ಮೊದಲ ಅವಕಾಶದಲ್ಲಿ ನನ್ನನ್ನು ಭೇಟಿಯಾಗಿ, ಸರಕಾರೀ ಯೋಜನೆಗಳು ಆರ್ಥಿಕ ವಹಿವಾಟಿನಲ್ಲಿ ಕಾಣಿಸುವ ಯಶಸ್ಸನ್ನು ಕಾರ್ಯರಂಗದಲ್ಲಿ ಕಾಣಿಸುತ್ತಿಲ್ಲವೇಕೆ ಎನ್ನುವುದಕ್ಕೆ ಅವರು ಸ್ವಾನುಭವದ ಉದಾಹರಣೆಯೊಡನೆ ವಿವರವಾಗಿ ಮಾತಾಡಿದರು. (ಅನ್ಯಾತಿಕ್ರಮಣದ ಎಚ್ಚರದಲ್ಲಿ ಅವರು ಕೊಟ್ಟ ಉದಾಹರಣೆಯನ್ನು ನಾನಿಲ್ಲಿ ಉದ್ಧರಿಸಿಲ್ಲ.)

‘ಅವಧಿ’ಯಲ್ಲಿ ‘ಶಿವ’ ಹೆಸರಿನ ಅಪರಿಚಿತರೊಬ್ಬರು ಕೂಡಲೇ ಪ್ರತಿಕ್ರಿಯಿಸಿದರು. “ನಾವೂ ಸಾರ್ವಜನಿಕರೇ. ಇಲ್ಲಿ ನಮಗೇನೂ ಬೆಪ್ಪುತಕ್ಕಡಿ ಆಗಿದ್ದೇವೆ ಅನ್ನಿಸುತ್ತಿಲ್ಲ ಅಂದಮೇಲೆ ಭಾರತ ಭಾರತಿ ಪುಸ್ತಕಗಳು ಹಿಂದೂದೇಶದ’ ಪರಿಕಲ್ಪನೆಗೆ ಪೂರಕವಾಗುವಂತೆ ಇವೆ ಎಂಬುದು ಲೇಖಕರ ಪೂರ್ವಗ್ರಹವಿರಬಹುದು.” ನನ್ನ ಪ್ರತಿ ಟಿಪ್ಪಣಿ, “ಶಿವಣ್ಣಾ ನಾನು ಕನ್ನಡ ಭಾರತ ಭಾರತಿ ಪುಸ್ತಕಗಳ ವಿಮರ್ಶೆ ಬರೆದದ್ದಲ್ಲ. ಸಾರ್ವಜನಿಕ ವ್ಯವಸ್ಥೆಗಳು ಪಕ್ಷ ರಾಜಕೀಯಕ್ಕೆ ಬಲಿಯಾಗುತ್ತಿರುವುದನ್ನು ಹೇಳ್ತಾ ಇದ್ದೇನೆ.” ಜೊತೆಯಲ್ಲೇ ಎರಡು ಗೆಳೆಯರ ಗಮನಾರ್ಹ ಟಿಪ್ಪಣಿಗಳೂ ಪ್ರಕಟವಾಗಿವೆ. ಪಂಡಿತಾರಾಧ್ಯ ಬರೆಯುತ್ತಾರೆ “ನಾವು ತಕ್ಕಡಿಯ ಯಾವ ತಟ್ಟೆಯಲ್ಲಿದ್ದೇವೆ ಎನ್ನುವುದು ನಮ್ಮ ಬಗ್ಗೆ ತಿಳಿಸುತ್ತದೆ. ಮಾನ್ಯ ಶಿವ ಅವರಿಗೆ ಇಡಿ ವ್ಯವಹಾರದಲ್ಲಿ ಯಾವ ಬೆಪ್ಪು ಗೋಚರಿಸದಿರುವುದು ಸ್ವಯಂ ವೇದ್ಯವಾಗಿದೆ.” ಡಿ.ಎಸ್ ನಾಗಭೂಷಣ ಬರೆಯುತ್ತಾರೆ, “ಪುಸ್ತಕ ಮಾರಾಟ ಬರೀ ಮಾರಾಟ ವ್ಯವಹಾರವಲ್ಲ; ಅದೊಂದು ನೈತಿಕ ಜವಾಬ್ದಾರಿಯ ಕೆಲಸ ಎಂಬುದನ್ನು ಪ್ರಿಯ ಅಶೋಕವರ್ಧನ ಅವರು ಈ ಲೇಖನದ ಮೂಲಕ ವಿಷದೀಕರಿಸಿದ್ದಾರೆ. ಹಿಂದೂ ದೇಶದ ಪರಿಕಲ್ಪನೆಯನ್ನು ಒಪ್ಪುವುದು ಬಿಡುವುದು ಬೇರೆ ವಿಷಯ. ಆದರೆ ಸಾರ್ವಜನಿಕರ ಹಣವನ್ನು ತಮಗೆ ಬೇಕಾದ ಒಂದು ಪ್ರಕಾಶನವನ್ನೂ, ಒಂದು ಸಿದ್ಧಾಂತವನ್ನೂ ಬೆಳಸಲು ಬಳಸುವುದು ಅನೈತಿಕ ಮತ್ತು ಖಂಡನಾರ್ಹ.”

ಹಂಪಿಯಲ್ಲಿ ಕೃಷ್ಣದೇವರಾಯನ ನೆಪದಲ್ಲಿ ಸಾರ್ವಜನಿಕ ಹಣದ ಭರ್ಜರಿ ವಿನಿಯೋಗ (ಒಂದು ಪತ್ರಿಕಾ ವರದಿಯ ಪ್ರಕಾರ ಎಪ್ಪತ್ತೈದು ಕೋಟಿ ರೂಪಾಯಿಗಳು) ನಡೆದದ್ದು ನಿಮಗೆಲ್ಲಾ ತಿಳಿದೇ ಇದೆ. ಹಿಂಬಾಲಿಸಿದಂತೆ (ಹಿಂಬಾಗಿಲ ಮೂಲಕ?) ಕನ್ನಡ ವಿಶ್ವವಿದ್ಯಾಲಯದ ಎಂಬತ್ತು ಎಕ್ರೆಗೆ ಪದಾರ್ಪಣೆ, ಅದೇನೋ ಉದಾತ್ತ ಹೆಸರಿನ ಸಂಸ್ಥೆಯ ಅವತರಣ ಎಲ್ಲಾ ನಡೆದುಹೋಗಿದೆ. ಇದರ ಲಕ್ಷಣ, ವ್ಯಾಪ್ತಿ ಪ್ರಜಾಪ್ರಭುಗಳಿಗೆ ತಿಳಿಯುವ ಮುನ್ನವೇ ಅದಕ್ಕೆಷ್ಟೋ ಕೋಟಿಯ ಅನುದಾನವೂ ಸರಕಾರದಿಂದ ಒದಗಿದ್ದೂ ಆಗಿದೆ. ಮತ್ತಿದು ರಾಜ್ಯಕೋಶಕ್ಕೆ ಒಮ್ಮೆ ಬಡಿದ ಸುನಾಮಿಯಾಗಬಾರದು. ನಿರಂತರ ಹಿಂಡುವ ಏಡಿಗಂತಿಯಾಗಬೇಕು ಎಂಬ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಸ್ಪಷ್ಟವಾಗುತ್ತಿದೆ.

ವಿವಿಧ ಸಾರ್ವಜನಿಕ ಹುದ್ದೆಗಳಲ್ಲಿ ಮೆರೆದು, ಪ್ರಾಯದೋಷದಿಂದ ಮರೆ (ನಿವೃತ್ತಿ) ಆಗಲೇ ಬೇಕಾದವರು ಸೃಷ್ಟಿಸಿಕೊಂಡ ಹತ್ತು ಹಲವು ಉದಾತ್ತನಾಮದ ಅನುದಾರ ಸಂಸ್ಥೆಗಳನ್ನು ‘ನಾವು’ ಸಹಿಸಿಕೊಳ್ಳುತ್ತಲೇ ಬಂದಿದ್ದೇವೆ. ನಿಜ ಮೌಲ್ಯ ಮಾಪನದಲ್ಲಿ ಈ ಅಕಾಡೆಮಿಗಳು (ಹೀಗೇ ಹೆಸರಿಸುವುದಾದರೆ ಕೊಡವ, ಉರ್ದು, ಬ್ಯಾರಿ, ಶಿಲ್ಪ, ಜನಪದ, ಯಕ್ಷಗಾನ ಇತ್ಯಾದಿ), ಪ್ರಾಧಿಕಾರಗಳು (ಪುಸ್ತಕ, ಅಭಿವೃದ್ಧಿ, ಅನುವಾದ, ನದಿ ತಿರುಗಿಸು, ಪಶ್ಚಿಮ ಘಟ್ಟ ಇತ್ಯಾದಿ) ಹೆಚ್ಚೇಕೆ ಹಲವು ವಿಷ-ವಿದ್ಯಾನಿಲಯಗಳು (ಸಂಗೀತ, ಮಹಿಳಾ, ಆರೋಗ್ಯ, ಸಂಸ್ಕೃತ ಇತ್ಯಾದಿ) ಎಲ್ಲಾ ಒಂದು ಇಲಾಖೆಯ ಸಮರ್ಥ ಗುಮಾಸ್ತ ನಿರ್ವಹಿಸಬಹುದಾದ ಕೆಲಸಕ್ಕಿಂಥ ಘನವಾದ್ದೇನನ್ನೂ ಸಾಧಿಸಿಲ್ಲ. ಅಂಥ ಸಂಸ್ಥೆಗಳನ್ನು ಹುಟ್ಟಿಸಿದವರ ‘ವಿಷಯ ತಜ್ಞ’ತೆಯ ಸೋಗನ್ನು ಈಗ ಜನಪ್ರತಿನಿಧಿಗಳು ಎನ್ನುವವರು ಅನಾಮತ್ತಾಗಿ ನಕಲಿಸಿದ್ದಾರೆ. ಎಲ್ಲಾ ಸರಿಯಿದ್ದರೆ ಐದು ವರ್ಷ ಬಾಳ್ತನವಷ್ಟೇ ಇರಬಹುದಾದ ಈ ಖಾಲೀ ಬಾಜಣಗಳು ಇರುವ ಅಲ್ಪಕಾಲದಲ್ಲಿ ತಮ್ಮಳವಿಗೆ ದಕ್ಕಿದ್ದೆಲ್ಲವನ್ನೂ ಕೆಡಿಸಿ, ಹೊಸ ವ್ಯಾಖ್ಯಾನವನ್ನು ಬರೆಸುತ್ತಿರುವುದಕ್ಕೆ ಇವೆರಡು ಸಣ್ಣ ಉದಾಹರಣೆಗಳು. ಹಂಪಿಯದು ಭಾರೀ ಪ್ರಮಾಣದ ಸಂಸ್ಕೃತಿಯ ಪುಡಾರೀಕರಣವಾದರೆ  ಪುತ್ತೂರಿನದು ಸಣ್ಣ ಪ್ರಮಾಣದ ಶಿಕ್ಷಣ ಪುಡಾರೀಕರಣ!

ನಮ್ಮ ಘೋಷಿತ ಜಾತ್ಯಾತೀತ ರಾಷ್ಠ್ರ ಈಗಾಗಲೇ ಅನುಭವಿಸುತ್ತಿರುವ ಮತೀಯ-ಖಂಡಾಂತರ ಚಲನೆಯ ನಡುಕಗಳನ್ನು ಇಂಥ ಪ್ರಕರಣಗಳು ಇನ್ನಷ್ಟು ಚುರುಕುಗೊಳಿಸುತ್ತವೆ. ನಾಳೆ ಇತರ ಶಾಸಕರೂ ಕನ್ನಡ ಭಾರತಭಾರತಿ ಪ್ರಕರಣವನ್ನು ಪ್ರೇರಣೆ ಮತ್ತು ಪೂರ್ವನಿದರ್ಶನಗಳನ್ನಾಗಿ ಸ್ವೀಕರಿಸಿ ತಮ್ಮ ಜಾತಿಗಳಿಗೆ ‘ನ್ಯಾಯ’ ಕೊಡಿಸಿದರೆ ಪ್ರಶ್ನಿಸಲು ನಾಲಗೆ ಏಳದು. ಮತ್ತವರ ವಿನಿಯೋಗಗಳು ಓದುವ ಪುಸ್ತಕಕ್ಕೇ ಸೀಮಿತಗೊಳ್ಳಬೇಕೆಂದು ಯಾರೂ ಹೇಳುವಂತೆಯೂ ಇಲ್ಲ. ಈಗಾಗಲೇ ಮುಖ್ಯಮಂತ್ರಿಗಳು ದೇವಮಾನವರಿಗೆ, ಮಠ, ದೇವಳಗಳಿಗೂ ನೇರ ನೆಲ, ಅನುದಾನ ಕೊಡುವ ಆದರ್ಶ ಹಾಕಿಕೊಟ್ಟಿದ್ದಾರೆ. (ಕನ್ನಡ ವಿವಿಯ ನೆಲನುಂಗಿದ ಯೋಜನೆಯ ಗುಪ್ತಕಲಾಪ ಪಟ್ಟಿಯೆಂದೇ ಪ್ರಚಾರದಲ್ಲಿರುವ ‘ಅಕ್ಷರಧಾಮದಂತ ದೇವಾಲಯ’ ಬಂದದ್ದೇ ಆದರೆ ಬಹುಶಃ ದೇಶದಲ್ಲಿ ಪ್ರಪ್ರಪ್ರಥಮ ದೇವಾಲಯ ಜನಕ ಸರಕಾರವೆಂಬ ಖ್ಯಾತಿ ರಾಜ್ಯಕ್ಕೆ ದಕ್ಕಲಿದೆ!) ಇನ್ನು ಮುಂದೆ ಸಾರ್ವಜನಿಕರು ಸಾಮಾಜಿಕ ಕಾರ್ಯಗಳಿಗೆ ವಿಧಾನಸೌಧ ಅಥವಾ ಸಂಸತ್ ಭವನದತ್ತ ಮುಖಮಾಡುವ ಬದಲು ಮಠ ಮಂದಿರಗಳ ಕೆಳಜಗುಲಿಯಲ್ಲಿ ಮಡಿಯುಟ್ಟು ನಿಂತರೆ ಸಾಕು!

ನಿಮ್ಮ ವಿಷಾದಕ್ಕೆ ಕನಿಷ್ಠ ಅಕ್ಷರರೂಪದ ಬಿಡುಗಡೆಯನ್ನಾದರೂ ಕೊಟ್ಟು ಪ್ರತಿಕ್ರಿಯಾ ಅಂಕಣದಲ್ಲಿ ತುಂಬಿ ಹಗುರಾಗುವಿರಾಗಿ ನಂಬಿದ್ದೇನೆ.

5 comments:

 1. ನರೇಂದ್ರ05 March, 2010 10:58

  ಹೈಸ್ಕೂಲಿನ ಎಂಟು-ಒಂಭತ್ತರ ವರೆಗಿನ ತರಗತಿಗಳಲ್ಲಿ (1980ರ ಆಸುಪಾಸು) ನಮಗೆಲ್ಲ ಲೈಬ್ರರಿ ಪಿರಿಯಡ್ ಅಂತ ಏನೂ ಇರುತ್ತಿರಲಿಲ್ಲ. ಯಾವುದಾದರೂ ಮಾಸ್ತರರು ರಜೆ ಹಾಕಿದ್ದರೆ, ಪಾಠ ಮಾಡುವ ಸ್ಥಿತಿಯಲ್ಲಿ ಇಲ್ಲದಿದ್ದರೆ ಆಗ ನಮಗೆಲ್ಲ ಈ ಭಾರತ-ಭಾರತಿ ಪುಸ್ತಕಗಳು ಓದಲು ಸಿಗುತ್ತಿದ್ದವು. ಅವು ಕಪಾಟಿನಿಂದ ಬಿಡುಗಡೆ ಪಡೆದು ನಮಗೆ ನೀಡುವ ಬಲುಅಪರೂಪದ ದರ್ಶನದಿಂದಲೇ ನಮಗೆಲ್ಲ ಒಂದು ಅಪೂರ್ವ ಆಕರ್ಷಣೆ ಈ ಪುಸ್ತಕಗಳ ಮೇಲೆ ಇದ್ದೇ ಇತ್ತು. ಹಾಗಾಗಿಯೇ ಐದಾರು ವರ್ಷಗಳ ಹಿಂದೆ ಇಂಗ್ಲೀಷ್ ಮಾಧ್ಯಮದ ನಮ್ಮ ಆಸುಪಾಸಿನ ಮಕ್ಕಳಿಗೆ ಕೊಡಬಹುದಾದ ಕನ್ನಡ ಪುಸ್ತಕಗಳು ಎಂದು ನಾನೇ ಇವುಗಳನ್ನು ತಲಾ ಐದು ರೂಪಾಯಿ ಬೆಲೆಗೆ ಖರೀದಿಸಿದ್ದೆ. ಅವು ತೀರಾ ಚಿಕ್ಕವಾಗಿದ್ದು, ದಂತಕಥೆ, ಕಲ್ಪನೆ ಎಲ್ಲ ಅಷ್ಟಿಷ್ಟು ಸೇರಿ ಇರುತ್ತಿದ್ದರಿಂದ ಓದುವುದಕ್ಕೆ- ಅಂಥ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸುವುದಕ್ಕೆ ಚೆನ್ನಾಗಿವೆ. ಬಹುಷಃ ಆಗ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕವೂ ಸೇರಿ ಹೈಸ್ಕೂಲುಗಳಲ್ಲಿ ಲಭ್ಯವಿದ್ದ ಪುಸ್ತಕಗಳು ಅವು ಮಾತ್ರ ಆಗಿದ್ದವೋ ಏನೊ! ಮತ್ತು ಆಗ ಈ ಹಿಂದೂ - ಅಹಿಂದ ಎಲ್ಲ ಮನಸ್ಸಿನಲ್ಲಿ ಕೂರುತ್ತಿರಲಿಲ್ಲ, ಒಳ್ಳೆಯ ದಿನಗಳು ಬಿಡಿ. ಆದರೆ ಇವತ್ತು ಮಕ್ಕಳ ಪುಸ್ತಕಗಳ ಜಗತ್ತು, ವೈವಿಧ್ಯ ಎಲ್ಲ ಎಷ್ಟೊಂದು ಹಿಗ್ಗಿದೆ ಎಂದರೆ ಬಲ್ಲವರೇ ಬಲ್ಲರು. ಆದರೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ, ಶಾಸಕರಿಗೆ ಮತ್ತು ಇಂಥವೇ ಸರಕಾರೀ ಯಂತ್ರಗಳಿಗೆ ಇಂಥ updation ಮಾಹಿತಿಗಳೆಲ್ಲ ಇರುತ್ತವೆ ಎಂದು ಎಂದಾದರೂ ಯಾರಾದರೂ ನಿರೀಕ್ಷಿಸಬಾರದೇನೊ! ಕಾರಂತರು, ನಿರಂಜನ ಮುಂತಾದವರು ತಯಾರಿಸಿದ ವಿಶ್ವಕೋಶದಂಥ ಕೃತಿಗಳೇ ನಮಗೆ ಯಾವತ್ತೂ ಶಾಲೆಗಳಲ್ಲಿ, ಕನಿಷ್ಠ ನೋಡುವುದಕ್ಕೂ, ಸಿಗಲಿಲ್ಲ. ಹಾಗಿರುತ್ತ ಇವತ್ತು ಪರಿಸ್ಥಿತಿ ಬದಲಾಗಿದೆ ಎಂದು ಹೇಗೆ ನಿರೀಕ್ಷಿಸೋಣ? ತೇಜಸ್ವಿಯವರ ಮಾಲಿಕೆ, ನವಕರ್ನಾಟಕ ಪ್ರಕಾಶನ ತಾನಾಗಿಯೇ ರೂಪಿಸಿ ಹೊರತಂದಿರುವ ಕೆಲವು ಮಾಲಿಕೆಗಳು - ಇವೆಲ್ಲದರ ಬಗ್ಗೆ ನಮ್ಮ ಶಿಕ್ಷಕರಲ್ಲೇ ಅಜ್ಞಾನ ತುಂಬಿ ತುಳುಕುತ್ತಿದೆ. ವಿವೇಕ್ ಶಾನಭಾಗ ಒಮ್ಮೆ ತಮ್ಮ ಲೇಖನದಲ್ಲಿ ಬರೆದಿದ್ದರು, ವಿದೇಶದಲ್ಲಿ ಈ ಹಂತದ ಕಲಿಕೆಯಲ್ಲಿಯೇ ಶಿಕ್ಷಣದ ಒಂದು ಭಾಗವಾಗಿ ಪಠ್ಯೇತರ ಓದಿನ ಬಗ್ಗೆ ಮಕ್ಕಳು ತರಗತಿಯಲ್ಲಿ ನಿಯಮಿತವಾಗಿ ವರದಿ ನೀಡಬೇಕಾಗುತ್ತದಂತೆ. ಪೋಷಕರು-ಶಿಕ್ಷಕರು ಇದನ್ನು ನಿರ್ದೇಶಿಸುತ್ತಾರಂತೆ. ನಮ್ಮಲ್ಲಿ ಮೊದಲು ಇದನ್ನು ಶಿಕ್ಷಕರಿಗೆ, ಶಿಕ್ಷಣ ಇಲಾಖೆಯ ವರಿಷ್ಟರಿಗೆ ಖಡ್ಡಾಯ ಮಾಡಬೇಕಾದೀತು. ಅಲ್ಲಿಯ ವರೆಗೆ ಇನ್ನು ಐವತ್ತು ವರ್ಷಗಳು ಕಳೆದರೂ ಭಾರತ-ಭಾರತಿಯೇ ಗತಿ ಮತ್ತು ಅವು ಮಕ್ಕಳ ಕೈಗೆ ಸಿಗುವುದು ಮಾಡಲು ಬೇರೇನೂ ಇಲ್ಲದ ತರಗತಿಯ ಅವಧಿಯಲ್ಲಿ ಮಾತ್ರ! ಮತ್ತೆ, ವಿಪರ್ಯಾಸವೆಂದರೆ ಇದು ಕೂಡ ಪುಢಾರೀಕರಣದ ಕೃಪೆ ಆಗಿರುವುದು!

  ReplyDelete
 2. ಎ ವಿ ಗೋವಿಂದ ರಾವ್05 March, 2010 14:26

  ’ಆಡಳಿತಾರೂಢ ವರ್ಗ ತನ್ನ ಪಟ್ಟಭದ್ರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲೋಸುಗ ಸೃಷ್ಟಿಸಿದ ಹತಾರವೇ ಸರ್ಕಾರೀ ಮಾನ್ಯತೆ ಪಡೆದ ಶಿಕ್ಷಣ ವ್ಯವಸ್ಥೆ’ - ಯಾರೋ ಒಬ್ಬ ಕಮ್ಯೂನಿಸ್ಥ್ ಚಿಂತಕನ ಈ ಉಕ್ತಿ ಸರಿ ಅನ್ನುವುದನ್ನು ಈ ಅನುಭವ ಸಾಬೀತು ಪಡಿಸುತ್ತದೆ.

  ReplyDelete
 3. ಸಾರ್ವಜನಿಕರ ಹಣವನ್ನು ತಮಗೆ ಬೇಕಾದ ಒಂದು ಪ್ರಕಾಶನವನ್ನೂ, ಒಂದು ಸಿದ್ಧಾಂತವನ್ನೂ ಬೆಳಸಲು ಬಳಸುವುದು ಅನೈತಿಕ ಮತ್ತು ಖಂಡನಾರ್ಹ.
  ವೈಯಕ್ತಿಕ ಭ್ರಷ್ಟಾಚಾರದಸ್ಟೇ ಕೊಳಕಾದದ್ದು,ಸಂಘಟನೆಯ ಹೆಸರಲ್ಲಿ ಸಾರ್ವಜನಿಕ ಹಣವನ್ನು ದುರುಪಯೊಗ ಪಡಿಸುವ ಇಂಥಹ ಕಾರ್ಯಗಳು.

  ReplyDelete
 4. ಸದಾಶಿವ05 March, 2010 15:06

  ಕರ್ನಾಟಕದ ಪ್ರೌಢಶಾಲೆಗಳಲ್ಲಿ ಗ್ರಂಥಾಲಯದ ಬಳಕೆ ಹೇಗೆ ನಡೆಯುತ್ತಿದೆ, ಎಂಬ ವಿಷಯದ ಬಗ್ಗೆ ಒಂದು ಸರಿಯಾದ ಅಧ್ಯಯನ ನಡೆಸಿದರೆ, ಬೆಚ್ಚಿ ಬೀಳುವ ಸಂಗತಿಗಳು ಖಂಡಿತಾ ಹೊರಬರುತ್ತವೆ. ಶಾಲೆಗಳಲ್ಲಿ ಲಭ್ಯವಿರುವ ಅನುದಾನಗಳನ್ನು ಬಳಸಿ ಸಾಕಷ್ಟು ಗ್ರಂಥಗಳನ್ನು ಖರೀದಿಸಲು ಅವಕಾಶವಿದೆ. ಅದಲ್ಲದೆಯೂ ಸರಕಾರ ಬೇರೆ ಬೇರೆ ಯೋಜನೆಗಳ ಅಡಿಯಲ್ಲಿ ಅನೇಕ ಉಪಯುಕ್ತ ಗ್ರಂಥಗಳನ್ನು ಶಾಲೆಗಳಿಗೆ ನೇರವಾಗಿ ಸರಬರಾಜು ಮಾಡುವುದೂ ಇದೆ. ಇವುಗಳನ್ನು ವಿದ್ಯಾರ್ಥಿಗಳಿಗೆ ಓದಲು ಒದಗಿಸುವುದು ಬಿಡಿ, ಶಿಕ್ಷಕರು ಕೂಡ ಬಳಸುವುದಿಲ್ಲ. ತಮ್ಮ ದೈನಂದಿನ ಪಾಠ ಪ್ರವಚನಗಳಿಗೆ ನೆರವಾಗುವ ಎಷ್ಟೋ ವಿಷಯಗಳು ಅವುಗಳಲ್ಲಿರುತ್ತವೆಂಬ ಕಲ್ಪನೆ ಕೂಡ ಅನೇಕರಿಗಿಲ್ಲ. ಗ್ರಂಥಾಲಯದ ಸಮರ್ಪಕ ಬಳಕೆಯ ಬಗ್ಗೆ ಅನೇಕ ಶಿಕ್ಷಕರಿಗಿರುವ ನಿಸ್ಸೀಮ ನಿರ್ಲಕ್ಷ್ಯ, ಖರೀದಿ ಗೋಲ್ ಮಾಲ್ ಗಳಿಗಿಂತ ಕಡಿಮೆ ಮಟ್ಟದ ಅಪರಾಧವೇನಲ್ಲ. ತಮ್ಮ ತಮ್ಮ ಶಾಲೆಗಳಲ್ಲಿರುವ ಗ್ರಂಥಾಲಯದ ಪ್ರಯೋಜನವನ್ನು ಗರಿಷ್ಠ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಒದಗಿಸುವ ಮನೋಭಾವ ನಮ್ಮ ಶಿಕ್ಷಕರಿಗಿರುತ್ತಿದ್ದರೆ, ಅಂಥಹ ಶಿಕ್ಷಕರು ಖಂಡಿತವಾಗಿಯೂ ಖರೀದಿ ಅವ್ಯವಹಾರಗಳ ವಿರುದ್ಧ ತಮ್ಮ ಧ್ವನಿಯೆತ್ತುತ್ತಿದ್ದರು.

  ReplyDelete
 5. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
  ಮಂಡ್ಯ ಜಿಲ್ಲೆ

  ReplyDelete