
ಗೋವಿಂದರಾಜ್ ಸುಜಾತರು ಮತ್ತೆ ಏನೆಲ್ಲಾ ಸರ್ಕಸ್ ಮಾಡಿ, ಅಲ್ಲಿ ಶೂಟಿಂಗ್ ನಿರತರಾಗಿದ್ದ ತಮಿಳು ಸಿನಿಮಾ ಮಂದಿಯನ್ನು ಒಲಿಸಿಕೊಂಡು, ಅವರ ಜೀಪ್ ಎರವಲು ಪಡೆದರು. ತೆಪ್ಪಕಾಡಿನಲ್ಲಿ ಗುಡ್ಡೆಬಿದ್ದ ಕಟ್ಟುಗಳಿಗೇನೋ ಅದು ಸಾಕಾಯ್ತು, ಸದಸ್ಯರಿಗೆ ನಡುಗೆಯೇ. ಹೇಳಿಕೇಳಿ ಸಾಹಸಯಾತ್ರೆಗೇ ಹೊರಟವರು. ಮತ್ತೆ ಆಹ್ಲಾದಕರ ವನವಿಹಾರ, ದಾರಿಬದಿಯ ಮರಗಳಲ್ಲಿ ಆಕರ್ಷಣೀಯ ನೆಲ್ಲಿಕಾಯಿ ಸಿಕ್ಕ ಮೇಲೆ ನಾಲ್ಕೂವರೆ ಮೈಲನ್ನು ನಡಿಗೆಯಲ್ಲಲ್ಲ, ಓಡಿಯೇ ಮುಗಿಸುತ್ತೇವೆ ಎಂದೂ ತೊಡಗಿದ್ದೆವು. ದಿನಪೂರ್ತಿ ಕಾದಾಗ ಬರದ ಖಾಲೀ ಲಾರಿಯೊಂದು ಆಗ ಬಂದು ಪರೋಕ್ಷವಾಗಿ ನಮ್ಮನ್ನು ಸೋಲಿಸಿತು. ಮತ್ತೆ ಎಲ್ಲಾ ಒಟ್ಟಾಗಿ, ಬಾಕಿ ಗುಡಾರಗಳು ತಲೆ ಎತ್ತಿ ಶಿಬಿರ ಸಮರ್ಪಕವಾಗಿತ್ತಾ ‘ಆಗ ಸಂಜಿಯಾಗಿತ್ತಾ.’

ಬಯಲಿನಲ್ಲಿ ದಾರಿಗೆ ಮುಖ ಹಾಕಿದಂತೆ U ಆಕಾರದಲ್ಲಿ ನಮ್ಮ ಎಂಟು ಗುಡಾರಗಳನ್ನು ಅರಳಿಸಿ, ಎದುರು ಸಂಸ್ಥೆಯ ಧ್ವಜ ಹಾರಿಸಿದೆವು. [ಬರವಣಿಗೆಯಲ್ಲಿ ಎಲ್ಲವೂ ರಮ್ಯ. ವಾಸ್ತವದಲ್ಲಿ ಹೆಚ್ಚಿನ ಗುಡಾರಗಳು ಮೂರಡಿ ಆರಡಿಯ ಎರಡು ಜಮಖಾನಗಳ ಸಂಯೋಜನೆ. ನನ್ನದಕ್ಕಂತೂ ಮೂರಡಿ ಎತ್ತರದ ಎರಡು ಬಿದಿರು ದೆಬ್ಬೆಗಳೇ ಆಧಾರ, ಆರು ಕಾಡುಕಲ್ಲುಗಳೇ ಮೂಲೆ ಕೀಲುಗಳು. ಇದಕ್ಕಪವಾದವಾಗಿ ಒಂದೆರಡು ಗುಡಾರಗಳು (ಮೀಡ್ ಮಾದರಿಯವು) ನಮ್ಮ ಶಿಬಿರದಲ್ಲಿತ್ತಾದರೂ ಇಂದು ಲಭ್ಯವಿರುವ ಗುಡಾರಗಳಲ್ಲಿನ ಸಾವಿರಾರು ಮಾದರಿಗಳು, ಸೌಕರ್ಯಗಳು ಮತ್ತು ವರ್ಣ ವೈವಿಧ್ಯಕ್ಕೆ ಹೋಲಿಸಿದರೆ ನಮ್ಮ ಶಿಬಿರ ಅಲೆಮಾರಿ ಜನಾಂಗಗಳ ‘ಅರೆಮನೆ’ಗಳೊಡನೆ ಸ್ಪರ್ಧಿಸುವಂತಿತ್ತು.] ಊರ ಕುಡಿನೀರ ಟಾಂಕಿಯಲ್ಲಿನ ನಲ್ಲಿಯಿಂದ ನೀರು ತರಲು ನಾನು ಮುಂದಾದೆ. ಆದರೆ ಅದು ದಿನಕ್ಕೊಮ್ಮೆ ಮಾತ್ರ ವಿತರಣಾ ನಿಯಮದಲ್ಲಿದ್ದುದರಿಂದ ಯಾವುದೋ ಮನೆಯವರ ಕೃಪೆಗೆ ಪಾತ್ರನಾದೆ. ಅಷ್ಟರಲ್ಲಿ ನನಗೂ ಮೊದಲೇ ಊರ ಹೊಳೆಗೇ ನೀರು ತರಲು ಹೋಗಿದ್ದ ನಮ್ಮ ಸ್ತ್ರೀ ಸದಸ್ಯರು ‘ಸಿನಿಮಾ ನಟಿಯರಾಗಿ’ ಊರ ‘ಅಭಿಮಾನೀ ಬಳಗ’ವನ್ನು ಆಕರ್ಷಿಸಿ, ಬಳಲುತ್ತ ಬರುವುದು ಕಾಣಿಸಿತು. ವಾಸ್ತವದಲ್ಲಿ ಪ್ಯಾಂಟು, ಶರಟು ತೊಟ್ಟ ಮಹಿಳೆಯರು ಅದರಲ್ಲೂ ಹೊಳೆ ದಂಡೆಯಲ್ಲಿ ಎಂದಾಗ ಮುಗ್ದ ಹಳ್ಳೀ ಮಂದಿಗೆ ನಿಲುಕಿದ ಕಲ್ಪನೆ (ಪ್ರೇಮ ಸಲ್ಲಾಪದೊಡನೆ ವಿಹರಿಸುವ) ಸಿನಿಮಾ ತಾರೆಯರದು ಮಾತ್ರವಾಗಿತ್ತು. ಅನಂತರ ‘ಎಲ್ಲರೂ ಹಂಚಿಕೊಂಡು ಶಿಬಿರ ಕಾರ್ಯಗಳು ನಡೆಯಬೇಕು’ ಎನ್ನುವ ನಿಯಮ ಸಾಂಪ್ರದಾಯಿಕ ನಿಯಮಗಳಿಗೆ ದಾರಿ ಮಾಡಿಕೊಟ್ಟಿತು; ಹೆಂಗಸರಿಗೆ ಅಡುಗೆ ಕೆಲಸವೇ ಗಟ್ಟಿ!
ಕತ್ತಲಿನೊಡನೆ ಚಳಿ ಅಮರಿಕೊಂಡಿತು. ನಮ್ಮ ಬಡಕಲು ಸೌದೆ ಸಂಗ್ರಹ ಇಡೀ ರಾತ್ರಿಗೆ ಸಾಕಾಗದೆಂದು ಅರಿವಾದದ್ದೇ ಸಮೀಪದಲ್ಲಿ ಚದುರಿದಂತೆ ಬಿದ್ದಿದ್ದ ಕೆಲವು ಒಣ ಮರಗಳನ್ನೂ ದಾಸ್ತಾನು ಮಾಡಿ, ಕೆಲವನ್ನು ಶಿಬಿರಾಗ್ನಿ ಎಂದು ಉರಿಸಲೂ ತೊಡಗಿ “ಶ್ಲೀಈಈ ಅಹಹ ಉಹುಹು” ಮಂತ್ರೋಚ್ಚಾರಣೆಗೂ ಸುರು ಮಾಡಿದ್ದೆವು. ನಮ್ಮ ಸಂಕಲ್ಪದ ಪ್ರಭಾವವೋ ಮಂತ್ರದ ಶಕ್ತಿಯೋ ‘ಯಜ್ಞ’ ಪರಿಮಳಿಸತೊಡಗಿತು. ಆದರೆ ವಿಘ್ನಕಾರಕರಾದ ರಾಕ್ಷಸ ಪಾತ್ರದಲ್ಲಿ ಬಂದವರು ಕೆಲವು ಊರ ಹಿರಿಯರು ಮತ್ತು ಅರಣ್ಯ ಇಲಾಖೆಯ ಗಾರ್ಡು. ವಾಸ್ತವದಲ್ಲಿ ನಾವು ಅರಿವಿಲ್ಲದೆ ಅಲ್ಲಿ ಸಹಜವಾಗಿ ಲಭ್ಯವಿದ್ದ ಗಂಧದ ಕೊರಡುಗಳನ್ನೇ ಉರಿಗೆ ಒಡ್ಡಿದ್ದೆವು. ತಿಂಗಳ ಹಿಂದೆ ಸಾಹಸ ಯಾತ್ರೆಯನ್ನು ಆಯೋಜಿಸಿದಂದಿನಿಂದಲೇ ನಾವು ಇಲಾಖೆಯ ಸಹಾಯ ಮತ್ತು ಸಹಕಾರವನ್ನು ಗಳಿಸಿಯೇ ಇದ್ದೆವು. ಹಾಗಾಗಿ ಅವರು ತಪ್ಪು ತಿಳಿಯದೆ ಗಂಧದ ಕೊರಡುಗಳನ್ನು ಒಯ್ದು, ಅನ್ಯ ಸೌದೆ ಒದಗಿಸಿದರು. ಹೆಚ್ಚೇನು ಶಿಬಿರಾಗ್ನಿಯ ಔಪಚಾರಿಕ ಉದ್ಘಾಟನೆಯನ್ನು ಆ ವಲಯದ ಅರಣ್ಯಾಧಿಕಾರಿ - ಜಾನ್ ಆಂಬ್ರೋಸ್ ಎನ್ನುವವರೇ ಬಂದು ಸಂತೋಷದಿಂದ ನಡೆಸಿಕೊಟ್ಟರು. ನಾವು ಎದುರಿಸಬಹುದಾದ ವನ್ಯಮೃಗಗಳಾದಿ ಎಲ್ಲ ಸವಾಲುಗಳಿಗೂ ಅವರೊಡನೆಯ ಅನೌಪಚಾರಿಕ ಮಾತುಕತೆಗಳಲ್ಲಿ ಪರಿಹಾರವನ್ನೂ ನಾವು ಕಂಡುಕೊಂಡೆವು. ಮೊದಲೇ ನಿಶ್ಚಯಿಸಿದ್ದಂತೆ ಮಾರಣೇ ದಿನ ಬೆಳಿಗ್ಗೆ ಇಬ್ಬರು ಮಾರ್ಗದರ್ಶಿಗಳ ಬಗ್ಗೆಯೂ ಭರವಸೆ ಕೊಟ್ಟು ಹೋದರು.
ಮಳೆನಾಡ ಮಳೆಯದುವು ಗೋಳು ಕರೆಯುತ್ತಿತ್ತು
ಸುಳಿಗಾಳಿ ಸುಯ್ ಸುಯ್ದು ಅನುಮೋದಿಸುತ್ತಿತ್ತು.


ಮಳೆಚಳಿಗೆ ಕಾಲಪುರುಷಂಗೂ ಜಡಂಗಡ. ತೆವಳುತ್ತ ಬಂದ ನಾಲ್ಕು ಗಂಟೆಗೆ ಸುಜಾತ ಹೊರಬಿದ್ದು, ಶಿಬಿರಕಾರ್ಯ ವಹಿಸಿಕೊಂಡರು. ಮಳೆ ನಿಂತಿತ್ತು. ಗೋವಿಂದರಾಜ್ ದಕ್ಕಿದಷ್ಟು ವಿಶ್ರಾಂತಿ ಎಂದು ಗುಡಾರ ಸೇರಿಕೊಂಡರು. ಕರ್ತವ್ಯ ಪ್ರಜ್ಞೆ ಮರೆಯದೆ ರಮೇಶನೂ ಕಛೇರಿ ಜಗುಲಿ ಬಿಟ್ಟು ಬಂದು ಕಾಫಿ ತಿಂಡಿಗಳ ತಯಾರಿಗೆ ಸೇರಿಕೊಂಡ. ಮಳೆ ನೀರೇನೋ ಧಾರಾಳ ವ್ಯಾಪಿಸಿತ್ತು. ಆದರೆ ಪರಂಗಿ ಕವಿಯೊಬ್ಬನ ಕ್ಷಮೆ ಕೋರಿ:
ನೀರು ನೀರು ಎಲ್ಲೆಲ್ಲು ನೀರು
ಶಿಬಿರವೋ ಚಂಡಿಪಿಂಡಿ
ನೀರು ನೀರು ಎಲ್ಲೆಲ್ಲು ನೀರು
ಕುಡಿಯೆ ಇಲ್ಲ ಅರೆಗಿಂಡಿ
ಸೂರ್ಯ ಮಳೆಕೋಟು, ಮಫ್ಲರ್ ಎಲ್ಲಾ ಹಾಕಿಕೊಂಡು ನಿಧಾನಕ್ಕೆ ಬಂದ. ಬಿಸುಪಿಲ್ಲ, ಬರಿಯ ಮಂದ ಬೆಳಕು. ವಿಶ್ರಾಂತಿ, ಹವೆ, ಪೂರೈಕೆ ಮುಂತಾದವೆಲ್ಲ ಆದರ್ಶಯುತವಾಗಿದ್ದಾಗ ಬೆಟ್ಟ ಹತ್ತುವುದು ಸಾಹಸ ಎಂಬ ಅಪಕಲ್ಪನೆ ನಮ್ಮದಲ್ಲ. ಎಲ್ಲವನ್ನೂ ಸುಧಾರಿಸಿಕೊಂಡು ಕಾಫಿ ತಿಂಡಿ ಮಾಡಿ ಮುಗಿಸಿ, ಮಧ್ಯಾಹ್ನಕ್ಕೆ ಬುತ್ತಿ ತಯಾರಿಸಿ ಕಟ್ಟಿಕೊಂಡದ್ದಾಯ್ತು. ನಿದ್ದೆ ಒದ್ದೆಗಳ ಪ್ರಭಾವದಲ್ಲಿ ದೈಹಿಕವಾಗಿ ಹಿಂದುಳಿಯ ಬಯಸುವವರಿಗೆ ನಾಯಕರು ವ್ಯರ್ಥ ಅವಕಾಶವನ್ನೂ ಕೊಟ್ಟದ್ದಾಯ್ತು. ಅರಣ್ಯ ಇಲಾಖೆಯ ಮಾರ್ಗದರ್ಶಿಗಳು ಬರುವಾಗ ನಮ್ಮ ಪೂರ್ಣ ತಂಡ on the mark ಇತ್ತು. ಒದ್ದೆ ಗುಡಾರವೇ ಮುಂತಾದ ಹಲವು ಸಾಮಾನುಗಳನ್ನು ಅಲ್ಲೇ ಅರಣ್ಯ ಇಲಾಖೆಯ ವಶದಲ್ಲಿ ಬಿಟ್ಟು ಊರು ಬಿಡುವಾಗ ಗಂಟೆ ಹನ್ನೊಂದು. ಮೂವರು ಮಾರ್ಗದರ್ಶಿಗಳು, ಅಯಾಚಿತವಾಗಿ ಜೊತೆಗೊಟ್ಟ ಊರಿನ ಒಂದು ಬೀಡಾಡಿ ನಾಯಿ (ಟೈಗರ್) ಸೇರಿ ಇಪ್ಪತ್ನಾಲ್ಕು ಮಂದಿ ಮನದ, ದಿನದ, ಭವಿಷ್ಯದ ಮಂಕು ಹರಿಯುವಂತೆ ಜೈಕಾರ ಹಾಕಿ ಶಿಂಗಾರಂ ದಾರಿ ತುಳಿದೆವು.
ಡಾಮರು ದಾರಿ ತುಳಿಯುತ್ತಿದ್ದಂತೆ ಆರಂಭಿಕ ಉತ್ಸಾಹದಲ್ಲಿ ನಮ್ಮದು ಗದ್ದಲ ತುಸು ಜಾಸ್ತಿಯೇ ಇತ್ತು. ದಾರಿ ಹೊಳೆಯೊಂದರ ಅಂಚಿಗೆ ಇಳಿಯುತ್ತಿದ್ದಂತೆ ಕಣಿವೆಯಿಂದ ಆನೆಯ ಘೀಳು ಕೇಳಿಸಿದ್ದೇ ಎಲ್ಲರ ಬಡಿವಾರ ಬಂದ್. ಒಂದೇ ಗಂಟೆಯಲ್ಲಿ ಡಾಮರು ದಾರಿಯನ್ನು ಬಲಕ್ಕೆ ಬಿಟ್ಟು ನಾವು ಬಿದಿರು ಕಾಡಿನೊಳಗಿನ ಕಾಲು ದಾರಿ ಹಿಡಿದೆವು. ಆಗಿಂದಾಗ್ಗೆ ಆನೆ ಲದ್ದಿಯ ದರ್ಶನ; ಹಲವು ಹಳತು, ನಮ್ಮೆದೆ ತಲ್ಲಣಕ್ಕೆ ಕೆಲವು ಬಿಸಿಬಿಸಿ. ಒಂದೊಂದು ಅಕರಾಳ ವಿಕರಾಳ ಸಿಗಿದು ಬಿದಿರುಗಳ ಹಿಂಡ್ಲಿನಾಚೆ, ಪ್ರತಿ ತಿರುವಿನಾಚೆ ಗಜ ದರ್ಶನದ ನಿರೀಕ್ಷೆಯಲ್ಲಿ ನಮ್ಮ ಹೆಜ್ಜೆ ತಡವರಿಸುತ್ತಿದ್ದರೂ ಚುರುಕಾಗಿಯೇ ಇತ್ತು.

ಬೆಟ್ಟದ ಏಣುಗಳನ್ನು ಓರೆಯಲ್ಲಿ ದಾಟುತ್ತಾ ಅಂದರೆ ಬಲಬದಿಗೆ ಸರಿಯುತ್ತಾ ನಡೆದವರಿಗೆ ಅಡ್ಡ ಸಿಕ್ಕಿತೊಂದು ಝರಿ - ಬೂದಿಪರೆಹಳ್ಳ. ತನ್ನ ಹಲವು ಶತಮಾನಗಳ ಸಾಹಸದಲ್ಲಿ ಅದು ಆಳವಾದ ಕೊರಕಲನ್ನೇ ಸಾಧಿಸಿತ್ತು. ಮೇಲಿನ ಪೊದೆಗಳಿಂದ ಸೋಸಲ್ಪಟ್ಟು, ಬೇರು ಬಂಡೆಗಳ ತಾಕಲಾಟದಲ್ಲಿ ನೊರೆಯುಕ್ಕಿಸಿ ‘ಸಾಹಸಿಗಳಷ್ಟೇ ದಾಟಬಹುದು’ ಎಂಬ ಸವಾಲಿಕ್ಕಿ ಕೆಳಗಿನ ಕಣಿವೆಯತ್ತ ಮರೆಯಾಗುತ್ತಿತ್ತು. ಹಿಂದೆ ಯಾರೋ ಒಂದೆರಡು ಸಣ್ಣ ಬಂಡೆಗುಂಡುಗಳನ್ನು ಆಯಕಟ್ಟಿನ ಜಾಗದಲ್ಲಿ ಉರುಳಿಸಿ ಕಷ್ಟಸಾಧ್ಯ ಸೇತುವನ್ನೇನೋ ಮಾಡಿದ್ದರು. ಆದರೆ ತೊರೆ ಅದನ್ನೂ ಆಗಿಂದಾಗ್ಗೆ ತೊಯ್ಯಿಸಿ, ಅಲ್ಲಿ ಹಾವಸೆ ಬೆಳೆದು ಬೆದರಿಸುತ್ತಿತ್ತು. ಕೊರಕಲಿಗಿಳಿಯುವಲ್ಲೂ ಕರಿಮಣ್ಣು ಕುಸಿಯುತ್ತಿತ್ತು, ಜಾರುತ್ತಿತ್ತು. ಕೋಲೂರಿ, ಕೈ ಕೈ ಮಿಲಾಯಿಸಿ, ಬಂಡೆಯಿಂದ ಬಂಡೆಗೆ ಹುಶಾರಿನಿಂದ ಹಾರಿ ಎಲ್ಲ ಅತ್ತ ದಾಟಿದೆವೆನ್ನುವಾಗ ಹಿಂದಿನಿಂದ ಕುಂಯ್ ಕುಂಯಿ. ಅತಿಥಿ ಟೈಗರ್ ನೀರಿನಬ್ಬರಕ್ಕೆ ಬೆದರಿ ಕೊರಕಲಿನಾಚೆ ಥರಗುಟ್ಟುತ್ತ ನಿಂತಿತ್ತು! ಮತ್ತೆ ನಮ್ಮ ಮಾರ್ಗದರ್ಶಿ - ಸುಬ್ಬಯ್ಯನ್, ಹೋಗಿ ಸುಲಭವಾಗಿ ಸಿಕ್ಕದ ನಾಯಿಯನ್ನು ಬೆರೆಸಿ ಹಿಡಿದು, ಎತ್ತಿಕೊಂಡು ಈಚೆ ದಡ ಕಾಣಿಸಿದ.
ಏರಿಕೆ ವಾರೆಯಲ್ಲೂ ತೀವ್ರವಾಗಿತ್ತು. ಸವಕಲು ಕಾಲುದಾರಿಗಳೇನೂ ಇರಲಿಲ್ಲ. ಅಲ್ಲಲ್ಲಿ ಹತ್ತಿಯೇ ಮುಂದುವರಿಯಬೇಕಾದ ಭಾರೀ ಬಂಡೆ ಗುಂಡುಗಳು. ಊರೆಗೋಲಾಗಿ ಒಯ್ದಿದ್ದ ದೊಣ್ಣೆಗಳಂತೂ ವೃಥಾ ಭಾರಗಳು. ಸೂರ್ಯ ಮತ್ತೆ ಮರೆಯಾಗಿ ಸುರಿಯುತ್ತಿದ್ದ ಮಂಜೋ ಮುತ್ತುತ್ತಿದ್ದ ಮೋಡಗಳ ಪ್ರಭಾವದಲ್ಲಿ ಕಾಲಿಟ್ಟ ನೆಲ, ಆಧಾರಕ್ಕೆ ಜಗ್ಗಿದ ಹುಲ್ಲು ಎಲ್ಲವೂ ಜಾರುತ್ತಿತ್ತು, ಬೆನ್ನಿನ ಅಸಾಮಾನ್ಯ ಹೊರೆ ತೊನೆದು ಜಗ್ಗುತ್ತಿತ್ತು. ಒಂದೆಡೆ, ಕಾಡು ಪೂರ್ಣ ಹರಿದಲ್ಲಿ ಬಲು ದೀರ್ಘ ಮತ್ತು ಹೆಚ್ಚು ಕಡಿದಾದ ಬಂಡೆಯ ಹಾಸಿನ ಸವಾಲು. ನಮ್ಮಲ್ಲಿನ ರೋಪ್ಗಳು ಜಾಗೃತವಾದವು. ಹೊರೆ ಇಳುಹಿ, ಕೆಲವು ಗಟ್ಟಿ ಕುಳಗಳು ಬಂಡೆಯ ಹಾಸಿನುದ್ದಕ್ಕೂ ಆಯಕಟ್ಟಿನ ಜಾಗಗಳಲ್ಲಿ ಹರಡಿ ನಿಂತೆವು. ಮತ್ತೆ ಹೊರೆಗಳನ್ನು, ಇತರ ಸದಸ್ಯರನ್ನು, ಕೊನೆಯಲ್ಲಿ ಟೈಗರನ್ನೂ ಕೈ ಕೈ ಬದಲಾಯಿಸಿ ಮೇಲೇರಿದೆವು. ಇಲ್ಲಿ, ಅದುವರೆಗೆ ಕಾಣಿಸದಿದ್ದ ಕೊಳ್ಳದಾಳದ ದೃಶ್ಯ ಮುಕ್ತವಾಗಿತ್ತು. ತಪ್ಪಲಿನ ಕಾಡು, ಮಸಣಿಗುಡಿ ಬೆಚ್ಚನೆಯ ಬಿಸಿಲಿನಲ್ಲಿ ಮಿಂದಿದ್ದರೆ ಶಿಖರ ವಲಯ ಮಳೆಯನ್ನೇ ಹೊತ್ತು ನಿಂತಂತಿತ್ತು! ಆ ಎತ್ತರದ ಬೆಟ್ಟದ ಸೀಳೊಂದರಿಂದ ನುಸಿದ ಮೋಡ ಸಂದೋಹ ಹಸೆಗಾರ ಬಿಲ್ಲು ಹೊಡೆದು ಹಿಂಜಿದ ಹತ್ತಿಯಂತೆ ಹರಡುತ್ತಿದ್ದ ದೃಶ್ಯ ಚಿರಸ್ಮರಣೀಯ.
ವಿಸ್ತಾರ ಬಂಡೆ ಹರಹಿನ ಮೇಲಂಚಿನ ಮಟ್ಟಸ ಜಾಗದಲ್ಲಿ ನಿಂತಿದ್ದೆವು. ಸಹಜವಾಗಿ ಆನೆಗಳ ಭಯ ದೂರವಾಗಿ ಮಾತು, ಹಾಸ್ಯ ಧಾರಾಳವಾಗಿತ್ತು. ಆದರೆ ಸ್ವಲ್ಪೇ ಮುಂದೆ ನಮ್ಮ ಅಂದಾಜುಗಳನ್ನು ಹುಸಿಮಾಡುವಂತೆ ಆನೆಯ ಲದ್ದಿ ಗುಪ್ಪೆ ಕಾಣಿಸಿದಾಗ ಉಳಿದದ್ದು ಕೇವಲ ಬೆರಗು. ನಮ್ಮ ದೈನಂದಿನ ಮಾತುಗಳಲ್ಲಿ ಮಹಾಕಾಯರನ್ನೆಲ್ಲಾ ಆನೆಗೆ ಸಮೀಕರಿಸಿ ನಗುವ ನಮ್ಮ ಮಂದಬುದ್ಧಿಗೆ ಆ ಮಂದಚರ್ಮಿ ಮಂದಸ್ಮಿತ ಕೊಟ್ಟಂತಿತ್ತು. ಬೆಟ್ಟದ ತಪ್ಪಲಿನೆಡೆಗೆ ದೃಷ್ಟಿ ಹರಿದಂತೆ ಹುಲ್ಲು ಹಾಸು, ಹಸಿರು ಅರಣ್ಯಗಂಬಳಿಗಳಾಚೆ ನೇರ ತಪ್ಪಲಿನಲ್ಲಿ ಸಿಂಗಾರಂ ಪವರ್ ಹೌಸ್ ಅಸ್ಪಷ್ಟವಾಗಿ ಕಾಣಿಸುತ್ತಿತ್ತು. ಅದರ ಓಂಕಾರದಂಥ ಏಕನಾದ ಮಾತ್ರ ಕಣಿವೆಯುದ್ದಕ್ಕೂ ಅನುರಣಿಸುತ್ತಿತ್ತು. ಅಲ್ಲಿ ತಯಾರಾದ ಶಕ್ತಿ ಸಾಗಣೆಯ ಭಾರೀ ಕಂಬ, ತಂತಿಗಳ ಸರಣಿ ಮಸಣಿಗುಡಿ ದಾಟಿ ದಿಗಂತದಲ್ಲಿ ಲೀನವಾಗಿತ್ತು. ಅದು ಬಳಸಿಬಿಟ್ಟ (ಚಪ್ಪೆ!) ನೀರು ಕಾಲುವೆಯಲ್ಲಿ ಕಾಡಲೆಯುತ್ತಿದ್ದದ್ದು ಒಂದು ಕಲಾತ್ಮಕ ರೇಖೆ.
ಗಂಟೆ ಮೂರಾದರೂ ಶಿಖರ ಇನ್ನೂ ಅಗೋಚರ ಎತ್ತರಗಳಲ್ಲೇ ಇತ್ತು. ಮಾರ್ಗದರ್ಶಿಗಳ ಮುಖ್ಯಸ್ಥ ರಾಜು ಹೊರಡುವಾಗ ಹಾಕಿದ ಅಂದಾಜು ಸರಿಯಾಗಿದ್ದರೆ ನಾವಾಗಲೇ ಶಿಖರ ಸೇರಿ ಒಂದೂವರೆ ಗಂಟೆಯೇ ಕಳೆದಿರುತ್ತಿತ್ತು! ಊಟ ವಿಶ್ರಾಂತಿಗಳೇನಿದ್ದರೂ ಅಲ್ಲೇ ಎಂದುಕೊಂಡಿದ್ದ ಛಲವಂತರ ಕಾಲುಗಳು ಎಳೆಯುತ್ತಿತ್ತು. ನೀರಲ್ಲಿ ನೆನೆದ ಶೂಗಳ ಹಿಂಸೆ ತಡೆಯಲಾರದೆ ಕೆಲವರು ಅವನ್ನು ಕಂಠಾಭರಣ ಮಾಡಿಕೊಂಡಿದ್ದರು. ಆಧಾರಕ್ಕೆ ಬಲಿತ ಹುಲ್ಲನ್ನು ಹಿಡಿದು ಹಿಡಿದು ಕೈಯಲ್ಲಿ ಅಸಂಖ್ಯ ಗೀಚು ಗಾಯಗಳ ಉರಿ. ಚಪಲಕ್ಕೆ ಚಪ್ಪರಿಸಿದ ಚಾಕಲೇಟಿನಂತ ಚಿಲ್ಲರೆಗಳು ಆಕರ್ಷಣೆ ಕಳೆದುಕೊಂಡಿದ್ದವು. ವಾತಾವರಣದಲ್ಲಿ ಶೀತವಿದ್ದರೇನು ತೀವ್ರ ದೈಹಿಕ ಶ್ರಮದಲ್ಲಿ ದೇಹದ ದ್ರವಪದಾರ್ಥಗಳು ಕಳೆದು ಆರೋಗ್ಯದ ಸಮಸ್ಯೆಯಾಗುವುದು ನಮಗೆ ತಿಳಿದೇ ಇತ್ತು. ವಾಟರ್ ಬಾಟಲುಗಳಲ್ಲಿ ಹೊತ್ತ ನೀರು ಸಾಲದಾಗುತ್ತ ಬಂತು. ಅಕ್ಕಿ ಬೇಳೆಗಳ ಡಬ್ಬಿ ಹೊರುವವರಿಗೆ ಹೆಣಭಾರ. ಪಾತ್ರೆ ಪರಡಿಗಳ ಡಬ್ಬಿ ಒಬ್ಬನಿಂದಾಗದು, ಇಬ್ಬರಿಗೆ ಕಡಿಮೆ. ಸ್ಟೌಗಳ ಡಬ್ಬಿ ನೆಟ್ಟಗಿರಬೇಕು, ತರಕಾರಿಯ ಚೀಲ ಜಜ್ಜಿ ಹೋಗಬಾರದು. ಉಳಿದವರಿಗೂ ಬೆನ್ನುಚೀಲಗಳೇನೂ ಹಗುರದ ಮಾತಾಗಿರಲಿಲ್ಲ. ಸಹಜವಾಗಿ ಸಾಲಿನಲ್ಲಿ ಹಿಂದು ಮುಂದಿನವರ ಅಂತರ ಹೆಚ್ಚುವುದು, ಅಸಹನೆ ಗೊಣಗಾಟ ಬೆಳೆಯುವ ಮುನ್ನ ಸುಮಾರು ನಾಲ್ಕು ಗಂಟೆಯ ಅಂದಾಜಿಗೆ ತಂಗುದಾಣದ ಅನ್ವೇಷಣೆಗಿಳಿದೆವು.
ಮಸಣಿಗುಡಿಯ ನಿದ್ದೆಗೇಡಿಗಳು, ದಿನಪೂರ್ತಿಯ ಆರೋಹಿಗಳು ಶಿಬಿರ ಹೂಡಿದ ಪರಿ, ರಾತ್ರಿ ಕಳೆದ ವಿವರಗಳು ಮತ್ತೂ ಶಿಖರ ಸಾಧಿಸಿದ ವೈಭವಗಳೊಡನೆ ಮುಂದಿನ ವಾರ ಸಿಗುತ್ತೇನೆ. ಹಿಂದಿನ ಕಥಾನಕದ ಪ್ರತಿಕ್ರಿಯೆ ಬಾಕೀದಾರರು ಇದರ ಲೆಕ್ಕವನ್ನೂ ಸೇರಿಸಿ ಅಕ್ಷರಸ್ಥರಾಗುತ್ತೀರಿ ಎಂದು ನಂಬುತ್ತೇನೆ.
Halavu ollolleya vasthu vishayagala Ashoka paakakkagi abhinandne.
ReplyDeletempjoshy.
ಪ್ರಿಯರೆ
ReplyDeleteಲೇಖನ ಓದಿ ಸಂತೋಷಪಟ್ಟಿದ್ದೇನೆ.
ನಿಮ್ಮ
ಎಚ್ ಎಸ್ ವಿ
ಪರ್ವತ ವರ್ಧನರೇ!
ReplyDeleteಪರ್ವತ ಶಿಖರಗಳನ್ನು ಮೆಟ್ಟುವ ಛಾತಿ ನಿಮ್ಮಲ್ಲಿತ್ತು.
ಸರಿಯಾದ ಉಡುಪು, ಆಹಾರ, ಬ್ಯಾಕ್ ಪ್ಯಾಕ್, ಕ್ಲೈಂಬಿಂಗ್ ರೋಪ್, ಹ್ಯಾಂಡ್ ಗ್ಲೋವ್, ಕ್ಲೈಂಬಿಂಗ್ ಮ್ಯಾಪ್, ಟೆಂಟ್, ಬ್ಯೂಟೀನ್ ಸ್ಟವ್, ವಿಂಡ್ ಚೀಟರ್ ಮೊದಲಾದುವು ಹೆಚ್ಚಿನಂಶ ಆಗ ದೂರದ ಪಾಶ್ಚಾತ್ಯ ದೇಶಗಳಲ್ಲಿ ಮಾತ್ರ ಇದ್ದುವು!
ತಮ್ಮಲ್ಲಿ ಇದ್ದುದು ಗೋಣಿಯ ಹೋಮ್ ಮೇಡ್ ಬ್ಯಾಕ್ ಪ್ಯಾಕ್, ಕಾಲಿಗೆ ಹಂಟರ್ ಶೂ! ಕೈಯ್ಯಲ್ಲಿ ಗಾಂಧಿಯವರ ಊರುಗೋಲು!
ಅಯ್ಯೋ! ತಮ್ಮಲ್ಲಿ ಸರಿಯಾದ ಸ್ವೆಟರ್ ಕೂಡಾ ಇರಲಿಲ್ಲ.
ತಮ್ಮ ಟೀಮಿನ ಟೆಂಟ್ ಜಮಖಾನಗಳು, ಅಡುಗೆ ಪಾತ್ರೆ, ಸೀಮೆ ಎಣ್ಣೆಯ ಸ್ಟವ್, ರೇಶನ್ ಇವುಗಳ ಹೆಣ ಭಾರ ಹೊತ್ತು ಅದು ಹೇಗೆ ತಾತಾರ್ ಶಿಖರ ಮುಟ್ಟಿದಿರಿ? - ಎಂತ ಆಶ್ಚರ್ಯ ಆಗುತ್ತೆ.
ತಮ್ಮ ಪರ್ವತ ಆರೋಹಣದ ಲೇಖನವನ್ನು ಯಾವುದಾರರೂ ವಿದೇಶೀಯರು ಓದಿದರೆ ಇದೊಂದು "ಸುಸೈಡ್ ಮಿಷನ್" ಅಂತ ಸರ್ಟಿಫಿಕೇಟ್ ಕೊಟ್ಟಾರು!
ಹಳೆಯ ಕಪ್ಪು ಬಿಳುಪು ಪಟಗಳು ನೀಡಿದ ವಿವರ ನೋಡಿದರೆ "ತಮ್ಮದು ಯಾವುದೋ ನಿರಾಶ್ರಿತರ ಶಿಬಿರ"ದ ತರಹ ಕಾಣುತ್ತದೆ.
ಇಂದಿನ ಪರ್ವತಾರೋಹಣಕ್ಕೂ
'ತಮ್ಮ ತಾತಾರ್ ಶಿಖರ ಆರೋಹಣಕ್ಕೂ ತಾಳೆ ಹಾಕಲು' ನನ್ನಂತಹಾ ಅಲ್ಪ ಆರೋಹಣ ಜ್ಞಾನಿಗೆ ಇಂದು ಸಾದ್ಯ ಆಗುತ್ತಾ ಇಲ್ಲ.
ರಾಬಿನ್ಸನ್ ಕ್ರೂಸೋವಿನ ಕಥೆ ಓದಿದ ಹಾಗೆ ನನಗೆ ಅನಿಸುತ್ತಿದೆ.
ಆದರೆ, ಅತ್ರಿ ಅವರು ಎಂದೂ ಸುಳ್ಳು ಹೇಳರು. ಅವರೂ ಅವರ ಜತೆಯವರೂ ಶಿಖರ ಮೆಟ್ಟಿ ವಾಪಸ್ ಬಂದಿದ್ದಾರೆ!॒ ಇನ್ನೂ ಬದುಕಿದ್ದಾರೆ! ಎಂಬುದೇ ದೊಡ್ಡ ಸಮಾಧಾನ!
ತಮಗೂ ತಮ್ಮ ರೋಪ್ ಅಥವಾ ಹಗ್ಗಗಳ ಪ್ರತೀ ಟೀಮಿಗೂ ನನ್ನ ಸಲಾಮ್!
- ಪೆಜತ್ತಾಯ ಎಸ್. ಎಮ್.
ಪ್ರಿಯ ಪೆಜತ್ತಾಯರೇ
ReplyDeleteನಮಗೂ ಎಷ್ಟೋ ಹಿಂದೆ ಶಿವರಾಮ ಕಾರಂತರಂತವರು ಕಾಡು ಬೆಟ್ಟಕ್ಕೆ (ನಮ್ಮಷ್ಟೂ ಪೂರ್ವ ತಯಾರಿಯ ಪರಿಜ್ಞಾನವಿಲ್ಲದೆ) ಹೋಗಿ ಬಂದಿಲ್ಲವೇ? ನನಗಂತೂ ಎಲ್ಲಾ ಕೆಲಸಗಳಲ್ಲೂ ತಂದೆ ಪ್ರೇರಣೆಯೂ ನಿಕಷವೂ ಆಗಿದ್ದರು. ನೆರಿಯ ರಾಘವ ಹೆಬ್ಬಾರರು (ನಿಮಗ್ಗೊತ್ತಿರಬಹುದು) ಅಮೆದಿಕಲ್ಲು ಶಿಖರಕ್ಕೆ ಆಳಿನ ಜೊತೆ ಬಾಳೆಗೊನೆ, ಬೊಂಡದ ಗೋಣಿ ಹೊರಿಸಿಕೊಂಡು ಕೆಲವು ಮಿತ್ರರೊಡನೆ ತಾರುಣ್ಯದಲ್ಲಿ ಹೋಗಿದ್ದರಂತೆ. ಸೂರ್ಯಾಸ್ತದವರೆಗೆ ಎಲ್ಲ ಮಜಾ. ಮತ್ತೆ ತಗೊಳಿ ಚಳಿಗಾಳಿ ಹೊಡೆತದಲ್ಲಿ ಇವರೆಲ್ಲ ಬಂಡೆಯೊಂದರ ಮಾಟೆಯಲ್ಲಿ ಬೊಂಡ ತಂದ ಗೋಣಿಯೊಳಗೆ ತೂರಿಕೊಂಡು ರಾತ್ರಿ ಕಳೆದರಂತೆ. ನಮ್ಮದು ಅಷ್ಟೇನೂ ಕೆಟ್ಟದ್ದಾಗಿರಲಿಲ್ಲವಲ್ಲಾ! ನಮ್ಮ ಇಷ್ಟವನ್ನು ನಮ್ಮ ಆರ್ಥಿಕ ಮಿತಿಯೊಡನೆ (ಬಡ ಮೇಷ್ಟ್ರ ಮಗ ಸ್ವಾಮೀ. ಕಾರು, ಬೈಕ್, ಎರಡೆರಡು ಕಾಡು ಇಟ್ಟುಕೊಂಡ ಪುಸ್ತಕ ವ್ಯಾಪಾರಿಯ ಮಗ ಅಲ್ಲ!) ಸರಿದೂಗಿಸಿಕೊಂಡು ಹೋಗುವಲ್ಲಿ ನಮಗೆ ಆ ಪೂರ್ವಸೂರಿಗಳ ಆದರ್ಶವಿತ್ತು.
ಏನೇ ಇರಲಿ, ನಿಮ್ಮ ಓದುವ ಮತ್ತೆ ಬೆನ್ನು (ಕಪಾಲಕ್ಕಲ್ಲ) ತಟ್ಟುವ ಉತ್ಸಾಹಕ್ಕೆ ನನ್ನ ಸಾವಿರ ಶರಣು
ಅಶೋಕವರ್ಧನ
ಪರ್ವತ ವರ್ಧನರೇ!
ReplyDeleteಪರ್ವತ ಶಿಖರಗಳನ್ನು ಮೆಟ್ಟುವ ಛಾತಿ ನಿಮ್ಮಲ್ಲಿತ್ತು.
ಸರಿಯಾದ ಉಡುಪು, ಆಹಾರ, ಬ್ಯಾಕ್ ಪ್ಯಾಕ್, ಕ್ಲೈಂಬಿಂಗ್ ರೋಪ್, ಹ್ಯಾಂಡ್ ಗ್ಲೋವ್, ಕ್ಲೈಂಬಿಂಗ್ ಮ್ಯಾಪ್, ಟೆಂಟ್, ಬ್ಯೂಟೀನ್ ಸ್ಟವ್, ವಿಂಡ್ ಚೀಟರ್ ಮೊದಲಾದುವು ಹೆಚ್ಚಿನಂಶ ಆಗ ದೂರದ ಪಾಶ್ಚಾತ್ಯ ದೇಶಗಳಲ್ಲಿ ಮಾತ್ರ ಇದ್ದುವು!
ತಮ್ಮಲ್ಲಿ ಇದ್ದುದು ಗೋಣಿಯ ಹೋಮ್ ಮೇಡ್ ಬ್ಯಾಕ್ ಪ್ಯಾಕ್, ಕಾಲಿಗೆ ಹಂಟರ್ ಶೂ! ಕೈಯ್ಯಲ್ಲಿ ಗಾಂಧಿಯವರ ಊರುಗೋಲು!
ಅಯ್ಯೋ! ತಮ್ಮಲ್ಲಿ ಸರಿಯಾದ ಸ್ವೆಟರ್ ಕೂಡಾ ಇರಲಿಲ್ಲ.
ತಮ್ಮ ಟೀಮಿನ ಟೆಂಟ್ ಜಮಖಾನಗಳು, ಅಡುಗೆ ಪಾತ್ರೆ, ಸೀಮೆ ಎಣ್ಣೆಯ ಸ್ಟವ್, ರೇಶನ್ ಇವುಗಳ ಹೆಣ ಭಾರ ಹೊತ್ತು ಅದು ಹೇಗೆ ತಾತಾರ್ ಶಿಖರ ಮುಟ್ಟಿದಿರಿ? - ಎಂತ ಆಶ್ಚರ್ಯ ಆಗುತ್ತೆ.
ತಮ್ಮ ಪರ್ವತ ಆರೋಹಣದ ಲೇಖನವನ್ನು ಯಾವುದಾರರೂ ವಿದೇಶೀಯರು ಓದಿದರೆ ಇದೊಂದು "ಸುಸೈಡ್ ಮಿಷನ್" ಅಂತ ಸರ್ಟಿಫಿಕೇಟ್ ಕೊಟ್ಟಾರು!
ಹಳೆಯ ಕಪ್ಪು ಬಿಳುಪು ಪಟಗಳು ನೀಡಿದ ವಿವರ ನೋಡಿದರೆ "ತಮ್ಮದು ಯಾವುದೋ ನಿರಾಶ್ರಿತರ ಶಿಬಿರ"ದ ತರಹ ಕಾಣುತ್ತದೆ.
ಇಂದಿನ ಪರ್ವತಾರೋಹಣಕ್ಕೂ
'ತಮ್ಮ ತಾತಾರ್ ಶಿಖರ ಆರೋಹಣಕ್ಕೂ ತಾಳೆ ಹಾಕಲು' ನನ್ನಂತಹಾ ಅಲ್ಪ ಆರೋಹಣ ಜ್ಞಾನಿಗೆ ಇಂದು ಸಾದ್ಯ ಆಗುತ್ತಾ ಇಲ್ಲ.
ರಾಬಿನ್ಸನ್ ಕ್ರೂಸೋವಿನ ಕಥೆ ಓದಿದ ಹಾಗೆ ನನಗೆ ಅನಿಸುತ್ತಿದೆ.
ಆದರೆ, ಅತ್ರಿ ಅವರು ಎಂದೂ ಸುಳ್ಳು ಹೇಳರು. ಅವರೂ ಅವರ ಜತೆಯವರೂ ಶಿಖರ ಮೆಟ್ಟಿ ವಾಪಸ್ ಬಂದಿದ್ದಾರೆ!॒ ಇನ್ನೂ ಬದುಕಿದ್ದಾರೆ! ಎಂಬುದೇ ದೊಡ್ಡ ಸಮಾಧಾನ!
ತಮಗೂ ತಮ್ಮ ರೋಪ್ ಅಥವಾ ಹಗ್ಗಗಳ ಪ್ರತೀ ಟೀಮಿಗೂ ನನ್ನ ಸಲಾಮ್!
Shri Ashoka Vardhana-ji
ReplyDeleteNimma vivarane tumbaa chennagide.
Tenku tittu Yakshaganada DVD yendu hora bruttado kaadu nodutta iddene.
Iti Gauravagalondige
Nimma viswasi
Raghu Narkala