25 January 2010

ಈಶ್ವರ ದುರ್ಯೋಧನನಾದದ್ದು ಯಾಕೆ?


ಪ್ರಿಯರೇ,


ತಾತಾರ್ ಲೇಖನ ಮುಂದೊಂದು ವಾರಕ್ಕೆ ಮತ್ತೆ ದೂಡುತ್ತಿರುವುದಕ್ಕೆ ನಿಮ್ಮಿಂದ ಕ್ಷಮೆ ಕೇಳಲೇ ಮಗ ಅಭಯನಿಗೆ ಪ್ರಥಮ ಸಿನಿಮಾ - ಗುಬ್ಬಚ್ಚಿಗಳು, ಇದಕ್ಕೆ ಸ್ವರ್ಣಕಮಲ ಬಂದ ಸಂತೋಷದ ವಾರ್ತೆ (ನೋಡಿ: www.abhayatalkies.com) ಬಿತ್ತರಿಸಿ ನಾನದಕ್ಕೆ ಸಂಬಂಧಿಸಿದ ಓಡಾಟಗಳಲ್ಲಿ ವ್ಯಸ್ತನಾಗಿದ್ದೆ ಎನ್ನಲೇ! ಏನೇ ಇರಲಿ, ಸದ್ಯ ತಮ್ಮ ಅನಂತ ವರ್ಧನ (ಅ-ತೃತೀಯ) ನನ್ನ ಲೇಖನ ಛಲದೊಳ್ ದುರ್ಯೋಧನಕ್ಕೆ ಪೂರಕವಾಗಿ ಅವನ ನೆನಪುಗಳ ಒಂದಷ್ಟು ಹೊರೆ ಇಳಿಸಿದ್ದನ್ನು ಇಲ್ಲಿ ಕೊಡುತ್ತಿದ್ದೇನೆ. ಕೊನೆಯಲ್ಲಿ ಈ ತೀನಿ ನಿಮಗೆ ರುಚಿಸಿದ್ದಕ್ಕೆ ನಾಲ್ಕು ಸಾಲಾದರೂ ಬರೆಯುವುದು ಮರೆಯಬೇಡಿ.ಈಶ್ವರ ದುರ್ಯೋಧನನಾದದ್ದು ಯಾಕೆ?
- ಲೇಖನ: ಜಿ.ಎನ್. ಅನಂತವರ್ಧನ


ಈಶ್ವರ ಎಂಬ ಪದ ಸುಂದರ. ಮಂಗಳ ತತ್ಸಮಾನ ಅರ್ಥ ಕೊಡುತ್ತದೆ. ತ್ರಿಮೂರ್ತಿಗಳ ಪೈಕಿ ಕೊನೆಯವನಾದ ಈಶ್ವರ ಜೀವಿಗಳೆಲ್ಲದರ ನಾಶಕಾರಕ, ಭಯಾನಕನಾಗಬೇಕಾದವನು ಸುಂದರ, ಮಂಗಳಪ್ರದಾಯಕನಾಗುವುದು ಹ್ಯಾಗೆ? ಜೀವಿಗಳು ಜೀವನದಿಂದ ಜರ್ಝರಿತರಾಗಿ, ದೇಹದ ಸಕಲ ಅಂಗಗಳೂ ಚೇತನರಹಿತಗೊಂಡಾಗ  ಮುಕ್ತಗೊಳಿಸುವವ ಈಶ್ವರನಾದ್ದರಿಂದ ಆತ ಸುಂದರನೂ ಮಂಗಳಪ್ರದಾಯಕನೂ ಆಗಿದ್ದಾನೆ. ಆದರೆ ನಾನು ಈಗ ಹೇಳ ಹೊರಟಿರುವ ಈಶ್ವರ, ನನ್ನ ತಂದೆಯ ತಮ್ಮ,, ಈಶ್ವರ ಚಿಕ್ಕಯ್ಯ. ಈತ ಲೋಕರೂಢಿಗಳ ಪ್ರಕಾರ ಹೇಳುವುದಾದರೆ ಹೆಸರಿನ ಅರ್ಥಕ್ಕೆ ದೂರವಾಗಿ ಬದುಕಿದ್ದು ಯಾಕೆ ? ಅವನ ಮನೆಗೆ ‘ದುರ್ಯೋಧನ ನಿಲಯ’ ಎಂದು ಹೆಸರು ಕೊಟ್ಟುಕೊಂಡದ್ದು ಯಾಕೆ ಎಂದೆಲ್ಲಾ ಪ್ರಶ್ನೆಗಳು ಬಂದಾಗ ಅವನೇ ಕೊಟ್ಟ ಉತ್ತರ - "ಅನೇಕರಿಗೆ ಒಳ್ಳೆ ಒಳ್ಳೆಯ ಹೆಸರು ಇರುತ್ತದೆ, ಆದರೆ ಅವರು ಕೆಟ್ಟದ್ದನ್ನೇ ಮಾಡುತ್ತಾರೆ. ಆದರೂ ಅಂತಹ ಜನರನ್ನೇ ಸಮಾಜ ನಂಬುತ್ತದೆ. ನಾನು ಕೆಟ್ಟವನ ಹೆಸರನ್ನು ಇಟ್ಟುಕೊಂಡು ಒಳ್ಳೆಯ ಕೆಲಸ ಮಾಡ್ಬೇಕೆಂದಿದ್ದೇನೆ. ದುರ್ಯೋಧನ ಎಂಬ ಪದ ಮಹಾಭಾರತವನ್ನು ಓದಿದವರೆಲ್ಲರೂ ಒಕ್ಕೊರಲಿನಿಂದ ಅಬ್ಬಾ ಕೆಟ್ಟವ, ದುಷ್ಟ, ಹಠವಾದಿ ಹೇಳಿದ್ದಕ್ಕೆ ವಿರುದ್ಧವಾಗಿ ನನ್ನ ಒಳ್ಳೆಯ ಕೆಲಸದಿಂದಾದರೂ ದುರ್ಯೋಧನನಿಗೆ ಒಳ್ಳೆಯ ಹೆಸರು ಬರಲಿ".


ಚಿಕ್ಕಯ್ಯನ ಬದುಕೇ ಪರೋಪಕಾರದ್ದು. ಅವನು ವಿಚಾರಕ್ಕಿಂತ ಆಚಾರವೇ ಪ್ರಧಾನ ಎಂದು ನಂಬಿ ಬಾಳಿದವ. ನಮ್ಮ ಅತ್ರಿ ಮನೆಯಿಂದ ಮೊದಲ್ಗೊಂಡು ಕೆ.ರಾಮಕೃಷ್ಣ ಉಡುಪ, ಪ್ರಜೀವ ಶಿವಕುಮಾರ್, ಗುಲಾಬಿ ಉಡುಪ ಮೊದಲಾದ ಮನೆಯವರು ಏನಾದರೂ ಕೆಲಸದಲ್ಲಿ ಊರು ಬಿಟ್ಟುಹೋಗುವಾಗ ನಿಶ್ಚಿಂತೆ ಅನುಭವಿಸುವುದು ಹೋಗುವುದು "ಈಶ್ವರ್ ಮನೆ ಪಾರ  ಕಾಯುತ್ತಾರೆ" ಎಂದು. ಪಾರ ಎಂದರೇನು? ತನ್ನ ಮನೆಯ ಎಲ್ಲಾ ಕೆಲಸ ಮುಗಿಸಿ ರಾತ್ರಿ ಊಟ ಮಾಡಿ ಬಳಿಕ ಪಾರದ ಅ ಮನೆಗೆ ಬಂದು ಮಲಗುವುದು. ಮತ್ತೆ ಮನೆಯವರೇ ಅಪ್ಪಿ ತಪ್ಪಿ ಬಂದರೂ ಬೆಳಗಿನವರೆಗೂ ಬಾಗಿಲು ತೆರೆಯದ ಕರ್ತವ್ಯ ನಿಷ್ಠೆ ಅವನದು. ಮೊದಲೇ ಹೇಳಿದ್ದರೆ ಪಟ್ಟಿನಲ್ಲಿ ಸಡಿಲ ಮಾಡುವುದಿತ್ತು. ಹೇಳದೇ ಬಂದರೆ (ಎಚ್ಚರವೇ ಆಗದಿದ್ದರೆ?) ಕಟ್ಟು ನಿಟ್ಟು. ರಾತ್ರೆ ಮಲಗಲು ಮಂಚ ಹಾಸಿಗೆ ಕಡ್ಡಾಯ ಕೊಡಲೇಬೇಕು. ಎದುರಿನ ಖಾಲಿ ಕೋಣೆ ಕೊಟ್ಟು ಮಲಗಿ ಎಂದರೆ ಆಗುವುದಿಲ್ಲ. ಮತ್ತೆ ಇದಕ್ಕೆಲ್ಲಾ ಸಂಬಳ, ಗೌರವಧನ, ಇನಾಮು ಕೊಟ್ಟರೆ ಈತ ಸಾಕ್ಷಾತ್ ರುದ್ರನೇ!

ಮನೆಯಲ್ಲೊಂದು ತೆಂಗಿನಕಾಯಿ ಸುಲಿಯುವ ಚಿಮಟ ಇಟ್ಟುಕೊಂಡು ಗುರ್ತ ಇರುವ ಹಿರಿಯ ನಾಗರಿಕರ ಮನೆಗೆ ಹೋಗಿ ತೆಂಗಿನಕಾಯಿ ಸುಲಿದುಕೊಡುವುದು ಮತ್ತೊಂದು ಗುಣ. ಕೈಲಾಗದವರಿಗೆ ಬ್ಯಾಂಕಿಗೆ ಚೆಕ್ ನಗದು ಹಾಕುವುದು, ವಿದ್ಯುತ್ ನೀರಿನ ಕಂದಾಯ ಕಟ್ಟುವುದು, ಯಾವುದೇ ದುರಸ್ತಿಗೆ ಜನ ಕರೆದು ತರುವುದು, ಸಾಮಾನು ತಂದುಕೊಡುವುದು, ಆರೋಗ್ಯಕ್ಕೆ ಉಪಯುಕ್ತ ಮಾಹಿತಿ ಹಾಗೂ ವೈದ್ಯರ ಭೇಟಿ ಮಾಡಿಸುವುದು, ವಧೂವರರ ಅನ್ವೇಷಣೆ, ಸಾರ್ವಜನಿಕರ ಪರವಾಗಿ ಅರ್ಜಿ ಬರೆದು ಸಹಿ ಹಾಕಿಸಿ ಸಂಬಂಧ ಪಟ್ಟ ಇಲಾಖೆಗೆ ರವಾನಿಸುವುದು ಒಂದೋ ಎರಡೋ ವಿವಿಧ ಬಗೆ.

ಪ್ರತಿ ಶುಕ್ರವಾರ ಬೆಳಗ್ಗೆ ಊಟ ಕಟ್ಟಿಕೊಂಡು ಚಾಮರಾಜಪುರಂನ (ದುರ್ಯೋಧನ ನಿಲಯದಿಂದ ೨ ಕಿ.ಮೀ) ನೇಸರ ಎಂಬ ಸಾವಯವ ಕೃಷಿಕರ ಮಾರಾಟ ಮಳಿಗೆಗೆ ಸ್ವಯಂ ಸೇವಕ ಮಾರಾಟಗಾರನಾಗಿ ಹೋಗುತ್ತಿದ್ದ. (ಅಲ್ಲೇ ತನ್ನ ಬುತ್ತಿಯೂಟ ಮಾಡಿ, ಮಲಗಿ, ಸಂಜೆವರೆಗಿದ್ದು ಬರುವುದೂ ಸೇವೆಯ ಪಟ್ಟಿಯಲ್ಲಿ ಸೇರಿತ್ತು) ಅಲ್ಲಿನ ವಸ್ತುಗಳ ವೈಶಿಷ್ಟ್ಯದ ಬಗ್ಗೆ ಚಿಕ್ಕಯ್ಯನದೇ ಕೆಲವು ನುಡಿಮುತ್ತುಗಳು:

 • ಕೆಂಪಕ್ಕಿ ತಿನ್ನಿ. ನಾನು ತಿನ್ನುವುದರಿಂದಲೇ ಈ ೭೫ನೇ ವಯಸ್ಸಿಗೂ ಸೈಕಲ್ ಬಿಡ್ತಿದ್ದೇನೆ. ನನ್ನಾರೋಗ್ಯದ ಗುಟ್ಟು ಕೆಂಪಕ್ಕಿ.

 • ತಿಮರೆ ಸೊಪ್ಪಿನ ಪುಡಿ - ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಹೆಚ್ಚೆಚ್ಚು ತಿಂದರೆ ಹಿಂದಿನ ಜನ್ಮದ್ದೂ ನೆನಪಿಗೆ ಬಂದೀತು!

 • ಶುದ್ಧ ಸೆಗಣಿಯಿಂದ ಬೆಳೆದ ತರಕಾರಿ ತಿಂದರೆ ನೇರ ರಕ್ತ, ಮೂಳೆಗಳಿಗೆ ಸೇರುತ್ತದೆ. ಜೀರ್ಣಾಂಗದ ಸಮಸ್ಯೆಯೇ ಇಲ್ಲ. ನನಗೆ ಮಲಗಿದ್ದೇ ಏನು ಕೂತಲ್ಲೂ ನಿದ್ದೆ ಬರುವ ಗುಟ್ಟೇ ಸಾವಯವ ತರಕಾರಿ.

 • ಸಾವಯವ ಕೃಷಿತೋಟದಲ್ಲಿನ ಜೇನು ಮಧುಮೇಹಿಗಳಿಗೂ ಮದ್ದು. ಜ್ವರ, ಶೀತ, ಕೆಮ್ಮು ಬಾಧೆಯಿಲ್ಲ. ರೋಗ ನಿರೋಧ ಶಕ್ತಿ ಅಪಾರ. ನನಗಂತೂ ಜ್ವರ ಬಂದ ನೆನಪೇ ಇಲ್ಲ.


ಚಿಕ್ಕಯ್ಯನ ಸ್ವಾಭಿಮಾನ ಅಸಾಧಾರಣ. ವೆರಿಕೋಸ್ ವೈನ್, ಪೈಲ್ಸ್, ಕಣ್ಣಿನ ಪೊರೆ, ಉಗುರುಸುತ್ತು ಇತ್ಯಾದಿ ಸಣ್ಣ ಶಸ್ತ್ರ ಚಿಕಿತ್ಸೆಗಳ ಅನಿವಾರ್ಯದಲ್ಲಿ ಈಗಾಗಲೇ (ನನ್ನಣ್ಣ) ಅಶೋಕ ಬರೆದಿರುವಂತೆ ನಮ್ಮಲ್ಲಿ ಯಾರಿಗೂ ತಿಳಿಸುತ್ತಿರಲಿಲ್ಲ, ವೈದ್ಯರೆಲ್ಲಾದರೂ ಸ್ವಪ್ರೇರಣೆಯಿಂದ ತಿಳಿಸಿಬಿಟ್ಟರೆ ಅವರ ಸಂಗ ಠೂ! ಅಲ್ಲೆಲ್ಲ ಊಟ ತಿಂಡಿ ಇತ್ಯಾದಿ ಒದಗಿಸುವ ಹುಡುಗರಿಗೆ ಹಣ ಕೊಡುತ್ತಿದ್ದ. ಮತ್ತೆ ಅಕಸ್ಮಾತ್ ತಾನು ಸತ್ತು ಹೋದರೆ ನೇತ್ರ, ದೇಹದಾನದ ವಿವರ ಹಾಗೂ ನಮ್ಮನೆಗೆ ಸುದ್ದಿ ಕೊಡಬೇಕೆಂದು ಹೇಳುವುದೂ ಮರೆಯುತ್ತಿರಲಿಲ್ಲ. ಆರೋಗ್ಯ ಕೆಟ್ಟು ತಾನು ಮಲಗಿದಲ್ಲೇ ಆಗಬಾರದೆಂದು (ಬೇರೆಯವರಿಗೆ ಹೊರೆಯಾಗಬಾರದೆಂದು) ಭಾರೀ ಮುಂಜಾಗ್ರತೆ ವಹಿಸುತ್ತಿದ್ದ. ವಾಯುವಿಹಾರ, ವ್ಯಾಯಾಮ ಕಟ್ಟು ನಿಟ್ಟಾಗಿ ಮಾಡಿ ವಯೋಧರ್ಮದ ಲೋಪಗಳು ಬಿಟ್ಟರೆ ಗಟ್ಟಿಮುಟ್ಟಾಗಿ ದೇಹ ಕಾಪಾಡಿಕೊಂಡಿದ್ದ. ಆಹಾರದಲ್ಲೂ ಅಷ್ಟೇ. ಹಸುವಿನ ಹಾಲು ಮನುಷ್ಯರಿಗಲ್ಲ ಎಂದು ಕಾಯಿ ಹಾಲು ಉಪಯೋಗಿಸುತ್ತಿದ್ದ. ಬೇಸಿಗೆಯಲ್ಲಿ ಮನೆಯೊಳಗೆ ಫ್ಯಾನ್ ಹಾಕಿ ಮಲಗಿದರೆ ಹಾಳೆಂದು ತಾರಸಿಯ ಮೇಲೆ ಮಲಗುತ್ತಿದ್ದ. ಅಲ್ಲಿಗೆ ಇವನದೇ ವ್ಯವಸ್ಥೆಯಲ್ಲಿ ಕಾಂಕ್ರೀಟ್ ಮಂಚ ಮಾಡಿಸಿದ್ದು, ಹಾಕಿಸಿದ್ದು ಹೇಳಲು ಹೋದರೆ ಅದೇ ದೊಡ್ದ ಕಥೆ, ಬಿಡಿ. ಅವನ ತಾರಸಿಯಲ್ಲಿನ ನಿದ್ದೆಯ ಕಥೆಗಳೂ ಅಷ್ಟೇ ರೋಚಕ! ಒಟ್ಟಾರೆ ನಿದ್ದೆ ಕತೆಗಳಲ್ಲಿ ಎರಡನ್ನಷ್ಟೇ ಹೇಳಿಬಿಡುತ್ತೇನೆ.
೧. ಈಶ್ವರ ಬೆಂಗಳೂರಿನಲ್ಲಿದ್ದಾಗ ಬೆಳಿಗ್ಗೆ ಎದ್ದು ಕಾರ್ಪೊರೇಷನ್ ಈಜುಕೊಳಕ್ಕೆ ಹೋಗುವುದಿತ್ತು. ಇವನಲ್ಲಿ ಗಡಿಯಾರ ವಾಚೇನೂ ಇರಲಿಲ್ಲ. ಒಂದು ದಿನ ಅಂದಾಜಿನಲ್ಲೇ ಎದ್ದು  ಕೆಂಪೇಗೌಡ ವೃತ್ತದ ಬಳಿ ಬಂದಾಗ ದಾರಿಬದಿಯ ಗಡಿಯಾರದಲ್ಲಿ ನಾಲ್ಕು ಗಂಟೆ ತೋರಿತಂತೆ. ಬೇಸಿಗೆ ದಿನಗಳಾದ್ದರಿಂದ ಇನ್ನೇನು ಮಾಡುವುದೆಂದು ಇವನು ಸಮಯ ಕಳೆಯಲು ಅಲ್ಲೇ ಇದ್ದ ಕಲ್ಲ ಬೆಂಚಿನ ಮೇಲೆ ಮೈ ಚಾಚಿದ. ಆದರೆ ಕೆಲವೇ ಕ್ಷಣಗಳಲ್ಲಿ ಭಾರೀ ಬ್ಯಾಂಡು ಬಜಂತ್ರಿಗಳೊಡನೆ, ಆನೆ ಕುದುರೆ ಮೊದಲಾದ ಸಕಲ ಸೈನಿಕ ಕವಾಯತಿನೊಡನೆ, ಸ್ವತಃ ಪುರದರಸು ಕೆಂಪೇಗೌಡನೇ ಮೆರವಣಿಗೆಯಲ್ಲಿ ಅಲ್ಲಿಗೆ ಬಂದನಂತೆ. ಮೆರವಣಿಗೆ ಕಲ್ಲ ಬೆಂಚನ್ನು ಸಮೀಪಿಸಿದಾಗ ಕೆಂಪೆಗೌಡ "ಇವನ್ಯಾಕೆ ಇಲ್ಲಿ" ಎಂದು ಬೊಬ್ಬಿಟ್ಟ. ಈಶ್ವರ ಹೆದರಿ, ಮುಖವೆಲ್ಲಾ ಬೆವೆತು ಚಂಡಿಯಾಗಿ ಗಡಬಡಿಸಿ ಎದ್ದು ನೋಡುತ್ತಾನೆ - ವಿಧಾನಸೌಧದ ಪಹರೆಯವನು, ನೀರು ಚಿಮುಕಿಸಿ, ಅಸಾಮಿ ಬದುಕಿದ್ಯೋ ಸತ್ತಿದ್ಯೋಂತ ನೋಡ್ತಾ ಇದ್ದ.
೨. ಇವನು ತನ್ನ ಮನೆಯಂಗಳದಲ್ಲಿ ಎರಡು ತೆಂಗಿನ ಮರ (ನೆಟ್ಟು) ಬೆಳೆಸಿದ್ದ. ಅದರ ಆರೈಕೆ ಮನೆಮಕ್ಕಳಿಗಿಂತಲೂ ಹೆಚ್ಚೇ ಮಾಡುತ್ತಿದ್ದ. ಮನೆಯ ಬಚ್ಚಲಿನ ಬೂದಿ, ಕೊಳೆಯುವ ಕಸ ಕಡ್ಡಿಗಳಲ್ಲದೆ ದಾರಿಯಲ್ಲಿನ ಸೆಗಣಿ ಬಾಚಿ ತಂದು ಹಾಕುವುದು ನಡೆದೇ ಇತ್ತು. ಜಾನುವಾರುಗಳದ್ದಾಗಬಹುದಾದರೆ ಮನುಷ್ಯರದ್ಯಾಕೆ ಕೊರತೆಯಾಗಬೇಕು ಎಂದು ಇವರು ಸ್ವಂತದ್ದನ್ನು ಸಾರ್ವಜನಿಕಕ್ಕೆ ತಿಳಿಸದೆ ತೆಂಗಿನ ಬುಡಕ್ಕೆ ಉಪಯೋಗಿಸುತ್ತಿದ್ದ. ಒಂದು ರಾತ್ರಿ ತಾರಸಿಯ ಮೇಲೆ, ತೆಂಗಿನ ನೆರಳಿನಲ್ಲಿ ಮಲಗಿದ್ದಾಗ ಮರವೇ ಇವನ ಮುಖಕ್ಕೆ ‘ಇವನದ್ದನ್ನೇ’ರಾಚಿದ ಅನುಭವವಾಯ್ತಂತೆ! ಅಲ್ಲಿಗೆ ಆ ಪ್ರಯೋಗ ಬಂದ್.

ಈಶ್ವರ ಅತಿ ಎಚ್ಚರದಲ್ಲಿ ಕೆಲವೊಮ್ಮೆ ಕೆಲಸಗಳನ್ನು ಒಂದಕ್ಕೆರಡು ಮಾಡುವುದಿತ್ತು. ಇವನು ಸೈನ್ಯದಲ್ಲಿದ್ದಾಗ (ಫಿರಂಗಿದಳ) ಒಮ್ಮೆ ಗಾರ್ಡ್ ಡ್ಯೂಟಿಯಲ್ಲಿದ್ದಾಗ ಸೇನಾ ವರಿಷ್ಠ ತನಿಖೆಗೆ ಬರುತ್ತಾರೆ ಎಂಬ ಸುದ್ದಿ ಬಂತು. ಜೊತೆಗೆ ಇವನ ಅಧಿಕಾರಿ "ಅವರು ಮೂರು ಪ್ರಶ್ನೆ ಕೇಳುತ್ತಾರೆ - ಮೊದಲು, ನಿನ್ನ ವಯಸ್ಸು ಎಷ್ಟು? ಉತ್ತರ ಹದಿನೆಂಟು ಹೇಳಬೇಕು. ಮತ್ತೆ ನಿನ್ನ ಸೇವಾವಧಿ ಎಷ್ಟು? ಉತ್ತರ ಐದು ಹೇಳಬೇಕು. ಕೊನೆಯದಾಗಿ ನಿನಗೆ ದೇಶಪ್ರೇಮ ಹೆಚ್ಚೋ ಸೈನ್ಯ ಪ್ರೇಮ ಹೆಚ್ಚೋ? ಉತ್ತರ (ಎರಡೂ ಎನ್ನುವ ಅರ್ಥದಲ್ಲಿ) BOTH ಎನ್ನಬೇಕು". ಈಶ್ವರನ ಮನದಲ್ಲಿ ಪ್ರಶ್ನೋತ್ತರ ಮರುಜಪವಾಗುತ್ತಿದ್ದಂತೆ ವರಿಷ್ಠ ಬಂದೇ ಬಂದ. ಕಟ್ಟುಮಸ್ತಿನ, ಶಿಸ್ತಿನ ಮೂರ್ತಿ ಲ್ಯಾನ್ಸ್ ನಾಯಕ್ ಜಿ.ಟಿ ಈಶ್ವರ್ ಲಟ್ಟೆಂದು ಸಲ್ಯೂಟ್ ಕೊಟ್ಟಾಗ ಅದೇ ಮರುಸುಟಿಯಲ್ಲಿ ಚಟ್ಟೆಂದು ಪ್ರಶ್ನೆ ಬಂತು "ಎಷ್ಟು ಸಮಯವಾಯ್ತು, ಸೈನ್ಯ ಸೇರಿ?" ವರಿಷ್ಠ ತಪ್ಪಿರಬಹುದು, ನಮ್ಮ ಚಿಕ್ಕಯ್ಯನ ನೆನಪಿನ ಕ್ರಮ ತಪ್ಪುವುದುಂಟೇ "ಹದಿನೆಂಟು ವರ್ಷಾ ಸಾರ್." ವರಿಷ್ಠನ ಹುಬ್ಬು ಮೇಲೇರಿತು, "ಅಂದ್ರೆ ನಿನ್ನ ಪ್ರಾಯ?" ಬಡಿದ ಚೆಂಡಿನ ಮರುಪುಟಿತದ ವೇಗದಲ್ಲಿ ಬಂತು "ಐದು ವರ್ಷಾ ಸಾರ್." ವರಿಷ್ಠ ಕಕ್ಕಾಬಿಕ್ಕಿಯಾಗಿ ತಾರದಲ್ಲಿ ಒದರಿದ "between us, who is MAD?" ಬೆರಗಿನ ಸರಣಿಗೆ ತಾರ್ಕಿಕ ಕೊನೆ ಕಾಣಿಸುವಂತೆ ಈಶ್ವರಪ್ಪಚ್ಚಿ (ಚಿಕ್ಕಪ್ಪ) ಚಚ್ಚಿಯೇ ಬಿಟ್ಟರಂತೆ "BOTH."

೧೯೫೫ರ ಗೋವಾ ವಿಮೋಚನೆಗೆ ಈಶ್ವರನ ಸೇನಾ ತುಕಡಿಯೂ ಹೋಗಿತ್ತು. ಪೋರ್ಚುಗೀಸರು ಬಿಟ್ಟೋಡಿದ ನೆಲವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವಾಗ ಸೈನಿಕರು ಬೆಲೆಬಾಳುವ ವಸ್ತುಗಳನ್ನು ದೋಚುವುದು ಸಹಜವಾಗಿ ನಡೆದಿತ್ತಂತೆ. ಆದರೆ ಪರಸ್ತ್ರೀಯಷ್ಟೇ ಪರಧನವನ್ನೂ ಕಣ್ಣೆತ್ತಿಯೂ ನೋಡದ ನೈತಿಕ ಛಲವಂತ ಈಶ್ವರ. ಆತನಿಗೆ ದಿನಗಟ್ಟಳೆಯ ಆತಂಕ, ಶ್ರಮ, ಅಪರಿಪೂರ್ಣ ಪೋಷಕ ಸಾಮಾಗ್ರಿಗಳ ಪೂರೈಕೆಯ ಕೊನೆಯಲ್ಲಿ ಬರಿದೇ ಹಾಳಾಗಿ ಹೋಗಲಿದ್ದ ಆಹಾರ ಸಾಮಾಗ್ರಿಗಳ ಕೋಠಿಯೇ ಕಾಣಿಸಿತಂತೆ. ಸುಮಾರು ಎರಡು ಗಂಟೆಯ ‘ಧಾಳಿಯ’ ಕೊನೆಯಲ್ಲಿ ಈಶ್ವರ ತಿಂದು ಎಸೆದ sealed Jamಗಳ ಖಾಲೀ ಡಬ್ಬಿಗಳ ರಾಶಿ ಲಾರಿ ಲೋಡಿನಷ್ಟಿತ್ತಂತೆ! ಮಾಡಿದ ಪಾಪ, ತಿಂದು ಪರಿಹಾರ?

ಕಾಫಿ, ಟೀಗಳನ್ನೇ ಕುಡಿಯದ ಈಶ್ವರನಿಗೆ ಮದ್ಯವಂತೂ ಹರದಾರಿ ದೂರ. ಇವನ ಕಮಾಂಡರ್ ಒಮ್ಮೆ ಸಸಾರದಲ್ಲಿ ಉದ್ಗರಿಸಿದನಂತೆ "ಹೆಂಡ ಕುಡಿಯಲು ಬಾರದ ನೀನು ಸೈನ್ಯಕ್ಕೆ ನಾಲಾಯಕ್." ಈತ ಸಾಮಾನ್ಯ ಸೈನಿಕನೇ ಇರಬಹುದು ಆದರೆ ನೈತಿಕ ಸ್ತರ ಎಂದೂ ಉಚ್ಚ ಮಟ್ಟದ್ದೇ ಇದ್ದುದಕ್ಕೆ ಸಾಕ್ಷಿಯಾಗಿ ಕೂಡಲೇ ಉತ್ತರಿಸಿದನಂತೆ "ಸಾಬ್, ಹೆಂಡ ಕುಡಿದ ಮೇಲೆ ಹೆಂಡತಿಗೂ ಮಗಳಿಗೂ ವ್ಯತ್ಯಾಸವೇ ಗೊತ್ತಾಗಲಾರದು."ಅಧಿಕಾರಿ ದೊಡ್ಡವನೇ ಇರಬಹುದು ಆದರೆ ಅಂದೂ ಮುಂದೆಯೂ ಈ ವಿಚಾರ ಮತ್ತೆ ಪ್ರಸ್ತಾಪಿಸುವ ಧೈರ್ಯ ಮಾಡಲಿಲ್ಲವಂತೆ.

ಅಂಬಾಲ ಸೈನ್ಯ ಶಿಬಿರದಲ್ಲಿ ಈಶ್ವರ ಇದ್ದಾಗ ಮೇಲಧಿಕಾರಿಯೊಬ್ಬ ಎಲ್ಲರಿಗೂ ಅವರವರ ಕರ್ತವ್ಯದಾಚೆ ವೈಯಕ್ತಿಕ ಬಿಟ್ಟಿ ಚಾಕರಿಗಳ ಹೊರೆ ಹೊರಿಸಿ ಕಿರುಕುಳ ಕೊಡುತ್ತಿದ್ದನಂತೆ. ಈಶ್ವರ ವಾರದ ಬಿಡುವಿನ ದಿನ ಪೇಟೆಗೆ ಹೋದಾಗ ಯಾವುದೋ job typist  ಬಳಿ ಅಹವಾಲುಗಳ ಪಟ್ಟಿ ಮಾಡಿ, ಹತ್ತೆಂಟು ಸಹೋದ್ಯೋಗಿಗಳ ನಕಲಿ ರುಜು ಮಾಡಿ ಮೇಲಕ್ಕೆ ಅಂಚಿಸಿಬಿಟ್ಟ. ಒಂದೇ ವಾರದಲ್ಲಿ ಮೇಲಿನಿಂದ ವಿಚಾರಣೆಯ ದಂಡ ಇವರ ಶಿಬಿರಕ್ಕೆ ಅಪ್ಪಳಿಸಿದಾಗ ಅಧಿಕಾರಿ ಕೆಂಡಾಮಂಡಲ. ಇಡಿಯ ತುಕ್ಕಡಿಯನ್ನು ಮೈದಾನದಲ್ಲಿ ಸೇರಿಸಿ ಒಬ್ಬೊಬ್ಬರನ್ನೂ ವಿಚಾರಣೆ ಮಾಡಿ, ವಾಚಾಮಗೋಚರ ಬಯ್ದರೂ ‘ಕಳ್ಳ’ ಪತ್ತೆಯಾಗಲೇ ಇಲ್ಲವಂತೆ. ಆದರೆ ಇವರ ಶೋಷಣೆ ಮಾತ್ರ ನಿಂತದ್ದು ಒಂದು ಸಾಧನೆಯೇ.

ಈಶ್ವರನ ವಿಚಾರಗಳು ಎಷ್ಟು ಶುದ್ಧವಿದ್ದರೂ ಸಹಜ ಪ್ರವೃತ್ತಿಗಳು ಅವನ್ನು ಮೀರಿ ನಿಲ್ಲುತ್ತಿದ್ದದ್ದನ್ನು ಅವನು ಎಷ್ಟೋ ಬಾರಿ ಅನಾವಶ್ಯಕ ಪ್ರಾಮಾಣಿಕವಾಗಿ ಹೇಳಿಕೊಳ್ಳುತ್ತಿದ್ದ. ಅರ್ಧ ಶತಮಾನದ ಹಿಂದೆಲ್ಲಾ ಕಾಫಿ ತೋಟದಲ್ಲಿ ಏಲಕ್ಕಿ ಗಿಡ ಸುಲಿದು ಎಳೆ ಸುಳಿ ತಿನ್ನುವಲ್ಲಿ ಕಾಡಕಪಿಗಳು ಉಪದ್ರ ಹೇಳತೀರದು. ಪ್ರತಿ ತೋಟದವರೂ ಕಪಿಪಾರಕ್ಕೆ ಜನ ಇಡುವುದು, ಆತ ದಿನವಿಡೀ ಬೊಬ್ಬೆ ಹೊಡೆದುಕೊಂಡು ತೋಟ ಸುತ್ತುವುದು, ಅನಿವಾರ್ಯವಾದರೆ ಆಗಾಗ ಯಜಮಾನರ ಮನೆಯ ಗನ್ ಒಯ್ದು ಒಂದೆರಡು ಮಂಗ ಬಲಿ ಹಾಕುವುದು ಇಂದು ಜಿರಳೆ, ಇಲಿ ಹೊಡೆದಷ್ಟೇ ಸಹಜವಿತ್ತು. ಆ ಕಾಲದಲ್ಲಿ, ಈಶ್ವರ ಸೈನ್ಯ ಸೇರಿ ಮೊದಲ ರಜಾ ಅವಧಿಯಲ್ಲಿ ಊರಿಗೆ ಬಂದಾಗ ಕಪಿ-ಪಾರದವನು ರಜೆಯಲ್ಲಿ ಹೋಗಿದ್ದಿರಬೇಕು. ಈಶ್ವರ ಭಾರೀ ಉಮೇದಿನಿಂದ ಅಲ್ಲಿನ .೨೨ ಗನ್ ಹಿಡಿದು ಹಾಡೇ ಹಗಲು ಬೇಟೆಗೆ ಹೊರಟ. ಚತುರ ಸಿಪಾಯಿಗೆ ಒಮ್ಮೆಲೇ ದೂರದಲ್ಲಿ ಕಾಫಿ ಏಲಕ್ಕಿ ಪೊದರುಗಳ ಮರೆಯಲ್ಲಿ ಏನೋ ಸಂಚಲನ ಕಾಣಿಸಿತು. Position, Load, two rounds FIRE! ‘ನಿಷ್ಣಾತ ಗುರಿ’ ಏನಾಯ್ತೋ ಕೇಳಬೇಡಿ, ಅಲ್ಲಿ ಕಾಫಿಹಣ್ಣುಗಳನ್ನು ಬಿಡಿಸುತ್ತಿದ್ದ ಇವರ ಕೆಲಸದವ ಬೇಟೆಯಾಯ್ತೇ ಎಂದು ನೋಡಲು ಮುಗ್ಧವಾಗಿ, ಕೂದಲೂ ಕೊಂಕದೆ ಪೊದರ ಮರೆಯಿಂದ ಪ್ರಕಟವಾದಾಗ ಈಶ್ವರನ ಜೀವ ಬಾಯಿಗೆ ಬಂದಿತ್ತಂತೆ!

ಈಶ್ವರ ತನ್ನ ನಿಧಾನಕ್ಕೆ, ಅದಕ್ಷತೆಗೆ ಎಂದೂ ಸುಳ್ಳನ್ನು ಆಧಾರವಾಗಿ ಇಟ್ಟುಕೊಂಡದ್ದಿಲ್ಲ. ಈಶ್ವರನಿಗೆ ಪ್ರಾಯದಲ್ಲಿ ಸಾಮಾನ್ಯವಾಗಿ ಯಾವುದೇ ಅನಾರೋಗ್ಯ ಕಾಡಿದ್ದಿಲ್ಲ. ಮತ್ತೆ ಆರೋಗ್ಯದ ಬಗ್ಗೆ ಸುಳ್ಳು ಹೇಳಿದರೆ ನಿಜ ಆಗಿಬಿಡುತ್ತದೆ ಎಂಬ ಸಣ್ಣ ಭಯವೂ ಆತನಿಗಿತ್ತು. ಆದರೆ ಎಳೆಪ್ರಾಯದ ಭ್ರಾಮಕ ಕಲ್ಪನೆಗಳು ಸೈನ್ಯ ಜೀವನದಲ್ಲಿ ಹುಸಿಯಾದಾಗ ಆರೇಳು ವರ್ಷದುದ್ದಕ್ಕೆ ಮಾನಸಿಕವಾಗಿ ಬಳಲಿ, ಕೊನೆಗೆ ಆರೋಗ್ಯದ ಕುರಿತೇ ಸುಳ್ಳು ಹೇಳಿ ನಿವೃತ್ತಿಪಡೆದಿದ್ದ. ಇದು ಆತನಲ್ಲಿ ಕೊನೆಗಾಲದವರೆಗೂ ಅಪರಾಧೀ ಪ್ರಜ್ಞೆ ಉಳಿಸಿತ್ತು. ಹಾಗಾಗಿಯೋ ಏನೋ ನನ್ನ ಅನುಭವಕ್ಕೆ ಬಂದ ಮುಂದಿನ ಕಾಲಗಳಲ್ಲಿ ಆತ ನಮಗೆ ಮುಜುಗರವಾಗುವಷ್ಟು ತನ್ನನ್ನು ನಿಂದಿಸಿಕೊಂಡದ್ದಿತ್ತು ಆದರೆ ಸುಳ್ಳಾಡಿದ್ದಿಲ್ಲ. ಎನ್.ಸಿಸಿ ಆಫೀಸಿನಲ್ಲಿ ಗುಮಾಸ್ತಗಿರಿಯಲ್ಲಿ ಕೆಳಸ್ತರದ Despatch clerk ಈತನ ಹುದ್ದೆ. ಬಡ್ತಿಗಾಗಿ ಹಲವು ಇಲಾಖಾ ಪರೀಕ್ಷೆಗಳಿಗೆ ಈತ ಹೋದದ್ದಿತ್ತು. ಆದರೆ ಅಲ್ಲೆಲ್ಲಾ ಸಜವಾಗಿ ನಡೆಯುವ ನಕಲು ಹೊಡೆಯುವ ಕೆಲಸ ಈತ ಎಂದೂ ಮಾಡಲಿಲ್ಲ. ಸಹಜವಾಗಿ ವೃತ್ತಿಯಿಂದಲೇ despatch (ನಿವೃತ್ತಿ) ಆಗುವವಗೂ ಈತ despatch clerkಏ. ಈತ ಬೆಳಿಗ್ಗೆ ಏಳುವುದೇನೋ ನಾಲ್ಕು ಗಂಟೆಗೇ ಆದರೂ ಎಂಟು ಗಂಟೆಗಾರಂಭವಾಗುತ್ತಿದ್ದ ಕಛೇರಿ ತಲಪುವಲ್ಲಿ ತಡವಾಗುತ್ತಿದ್ದದ್ದು, ಎಷ್ಟೋ ಬಾರಿ ವಾಗ್ದಂಡನೆಗೆ ಗುರಿಯಾಗುತ್ತಿದ್ದದ್ದಕ್ಕೆ (ಈಶ್ವರ ಹಿಂದೆಬಿಟ್ಟು ಮೇಲಧಿಕಾರಿಯನ್ನು ತಮಾಷೆಗೆ ಕಾಲಪುರುಷ, ಯಮಧರ್ಮರಾಯ ಎಂದೇ ಕರೆಯುತ್ತಿದ್ದ) ಈತನ ಗೊಂದಲಗಳೇ ಕಾರಣ; ಸೋಮಾರಿತನವಲ್ಲ.

ಕೊನೆಗಾಲಕ್ಕೆ ಹತ್ತೋ ಹನ್ನೆರಡೋ ದಿನ ಮೊದಲು ಈತ ನನ್ನ ಮಗಳು - ಅಕ್ಷರಿಯ ಮದುವೆಯ ಸನ್ನಿವೇಶದಲ್ಲಿ ಸಿಕ್ಕಿಕೊಳ್ಳುವುದನ್ನು ತಪ್ಪಿಸಲು ಮೋದೂರಿಗೆ ಕಾವಲುಗಾರನಾಗಿ ಓಡಿ ಹೋದದ್ದು ಅಶೋಕನ ಬ್ಲಾಗ್ (ಛಲದೊಳ್ ದುರ್ಯೋದನಂ) ಓದಿದ ನಿಮಗೆ ಗೊತ್ತೇ ಇದೆ. ಅಲ್ಲಿಂದ ವಾಪಾಸು ಮೈಸೂರಿಗೆ ಹೊರಟವನು ‘ಚಿತ್ತಿ’ಯನ್ನು ನೋಡಬೇಕೆಂದು ಸಣ್ಣ ಮರುಪಯಣ ಮಾಡಿದ್ದ. [ಚಿತ್ತಿ ಅಂದರೆ ಸದ್ಯ ನಮ್ಮ ಕುಟುಂಬದಲ್ಲಿ ಅತ್ಯಂತ ಹಿರಿಯರೂ (ತೊಂಬತ್ತು ಮೀರಿದ ಪ್ರಾಯ) ಎಲ್ಲರ ಪ್ರೀತಿ ಗೌರವಗಳಿಗೆ ಯೋಗ್ಯವಾಗಿಯೇ ಪಾತ್ರರಾದವರೂ ನೆನಪು ವಿಚಾರಗಳಲ್ಲಿ ಏನೇನೂ ಗೊಂದಲವಿಲ್ಲದವರೂ ಆಗಿ ಸಂಬಂಧದಲ್ಲಿ ನಮ್ಮ ಮೂವರಿಗೆ ಅಜ್ಜಿಯೂ ನನ್ನಪ್ಪ ಚಿಕ್ಕಪ್ಪಂದಿರಿಗೆ ಚಿಕ್ಕಪ್ಪನ ಹೆಂಡತಿ ಎಂದು ಚಿಕ್ಕಮ್ಮನೂ (ಅಪಭ್ರಂಶದಲ್ಲಿ ಚಿತ್ತಿ) ಆದ, ನನ್ನಮ್ಮನಿಗೆ (ಭವಾನಿ+ಅತ್ತೆಮ್ಮ=) ಭಾಂತೆಮ್ಮನೂ ಆದ ಮಡಿಕೇರಿಯ ಜ್ಯೋತಿ ಮನೆಯ ವಿರಿಜಾ ಭವಾನಿಯಮ್ಮ]. ಅವರು ಆಗ ಮಡಿಕೇರಿಯಲ್ಲೇ ಎರಡನೇ ಮಗನ ಮನೆ - ಅಶೋಕನಿಲಯದಲ್ಲಿದ್ದರು. ಈಶ್ವರ "ಚಿತ್ತೀ ನನಗೆ ಮೈ ಮಾಲುತ್ತದೆ, ಅಡ್ಡಡ್ಡ ನಡೆದುಕೊಂಡೇ ಬಂದೆ" ಎಂದು ಬಾಲ್ಯದ ಸದರದಲ್ಲೇ ತಮಾಷೆ ಮಾಡಿಕೊಂಡೇ ಭೇಟಿಯಾಗಿದ್ದನಂತೆ. ಇವರೂ ಅದೇ ಲಹರಿಯಲ್ಲಿ "ಗೊತ್ತು ಅಪ್ಪನೇ, ನೀನೀಗ ಸಣ್ಣ ಹುಡುಗನಲ್ಲಾ" ಅಂದದ್ದೇ ಕೊನೇ ಸಂಭಾಷಣೆ ಎನ್ನುವಾಗ ಚಿಕ್ಕಜ್ಜಿಯ ಗದ್ಗದ ಕಂಠಕ್ಕೆ ನನ್ನ ಈ ಕೆಲವು ಮತ್ತು ಬರಹಕ್ಕಿಳಿಯದ ಸಾವಿರಾರು ನೆನಪುಗಳ ಭಾರವೂ ಸೇರುತ್ತದೆ.

ಜಿ.ಎನ್. ಅನಂತ ವರ್ಧನ

14 comments:

 1. ಈಶ್ವರ ದೊಡ್ಡಪ್ಪನದು ಒಂದು ರೀತಿಯ ಬಂಡಾಯ ಮನೋಭಾವನೆಯೇ ಇರಬೇಕು.
  ಅವರು ಹೇಳುತ್ತಿದ್ಡುದು ಯಾಕೋ ಕ್ಷೌರಕ್ಕೆ ಹೋಗುತ್ತೀಯ? ಶೇವಿಂಗ್ ಬ್ಲೇಡಿನಲ್ಲಿ ಮಾಡು, ಪಷ್ಟ್ ಕ್ಲಾಸಾಗುತ್ತದೆ.
  ಅವರ ಅಂತಿಮ ದರ್ಶನದ ವೇಳೆಯಲ್ಲಿ ಕಾಲು ಮುಟ್ಟಿ ನಮಸ್ಕರಿಸುವಾಗ ಕಂಡದ್ದು ಓಂದೊಂದು ಕಾಲಿಗೆ ಓಂದೊಂದು ಬಣ್ಣದ ಉಗುರು ಕಾಣಿಸುತ್ತಿದ್ದ ಸಾಕ್ಸ್.!

  ReplyDelete
 2. ನೆಲ್ಯಾರು ಗೋವಿಂದ26 January, 2010 06:31

  ಪ್ರಿಯ ಅಶೋಕರೇ
  ಅಭಯನ ಗುಬ್ಬಚ್ಚಿಗಳು ಪ್ರಶಸ್ತಿ ಪಡಕೊಂದದ್ದು ತಿಳಿದು ತುಂಬಾ ಕುಶಿಯಾಯಿತು. ವಿಜಯ ಕರ್ನಾಟಕ ಕನ್ನಡ ಪ್ರಭದಲ್ಲಿನ ವರದಿಗಳನ್ನೂ ಓದಿದೆ.
  ಈಶ್ವರರ ಬಗೆಗಿನ ಅನಂತವರ್ಧನರ ಬರಹ ಚೆನ್ನಾಗಿ ಮೂಡಿಬಂದಿದೆ. ನಿರೂಪಣೆ ಚೆನ್ನಾಗಿತ್ತು. ಹಿರಿಯ ಅಧಿಕಾರಿಯ ಎದುರು ಉರುಹೊಡೆದ ವಾಕ್ಯಗಳನ್ನು ಒಪ್ಪಿಸಿದ್ದು ನಾವಿಬ್ಬರೂ ಹುಚ್ಚರು ಎಂದದ್ದೂ ತುಂಬಾ ನಗು ಬರಿಸಿತು. ಹಾಗೆ ಹಿರಿಯ ಅಧಿಕಾರಿಯ ಸಸಾರಕ್ಕೆ “ಸಾಬ್, ಹೆಂಡ ಕುಡಿದ ಮೇಲೆ ಹೆಂಡತಿಗೂ ಮಗಳಿಗೂ ವ್ಯತ್ಯಾಸವೇ ಗೊತ್ತಾಗಲಾರದು.” ಮಾತುಗಳು ಅರ್ಥಪೂರ್ಣ. ಹಿಂದೆ ದೆಹಲಿಯಲ್ಲಿ ಯುವಜನ ಇಲಾಖೆಯ ನೌಕರರು ನಿನಗೆಷ್ಟು ಬಾಷೆ ಬರುತ್ತದೆ ಎಂದಾಗ ನಾನು ಉಚ್ಚ ಸ್ವರದಲ್ಲಿ ಎಷ್ಟೋ ಬಾಷೆಗಳಿವೆ. ನನಗೆ ಕಿವುಡ ಮೂಗರ ಬಾಷೆ ಬರುತ್ತದೆ ಅಂದದ್ದು ನೆನಪಿಸಿತು.
  ಹಾಗೆಯೇ ಈಶ್ವರರ ಸ್ವಾವಲಂಬನೆಗೆ ಸ್ವಾಬಿಮಾನಕ್ಕೆ ಕೊರತೆ ಕೊನೆ ವರೆಗೂ ಬಾರದೆ ಇದ್ದದ್ದು ಸಂತಸದ ವಿಚಾರ. ಈಗ ಜಾರ್ಜ್ ಫೆರ್ನಾಂಡಿಸರ ಸ್ಥಿತಿ ಗ್ರಹಿಸುವಾಗ ಬೇಸರವಾಗುತ್ತದೆ.
  ಪ್ರೀತಿಯಿಂದ
  ಗೋವಿಂದ

  ReplyDelete
 3. ವ್ಯಕ್ತಿತ್ವಕ್ಕೆ ಕೊ೦ಚವೂ ಕು೦ದಾಗದ೦ತೆ, ನೆನಪು ಸೊಗಸಾಗಿ ಬ೦ದಿದೆ, ಶುಭಾಶಯಗಳು. ವ೦ದನೆಗಳು, ಸುಬ್ಬಣ್ಣ, ಪುತ್ತೂರು.

  ReplyDelete
 4. Ananthanna,neenu Eshwara doddappana bagge barediruvudu hrdayasparshiyaagide.

  ReplyDelete
 5. Moduru,Jyothi,Chitti-mooru chitragaLiguu enthaa avinaabhaava sambandha ide! anta yochistaa iddene.

  ReplyDelete
 6. ರಾಜ, ಅರುಣ, ಭಂಡಾರ28 January, 2010 14:16

  ಹುರಿ ಮಾದಿರುವ ಮೀಸೆ ಇನ್ನೂ ಹುರಿಯಾಗುತ್ತಿರಬಹುದು, ಆಗಬೇಕಾದದ್ದೇ. (ಹುಡಿ ಅಲ್ಲ ಸ್ವಾಮೀ!)
  ಸಂತಸವಾಯಿತು, ಅಭಿನಂದನೆಗಳು, ನಿಮಗೂ

  ReplyDelete
 7. Shrihari Rao GN29 January, 2010 09:01

  Nijavaagiyu Eshwara doddapa kaliyugada ekayka 'Dhuryodhana' (avara uddeshadante)......

  ReplyDelete
 8. ಎಸ್.ಎಂ ಪೆಜತ್ತಾಯ29 January, 2010 21:13

  ಅಶೋಕ ವರ್ಧನರೇ!
  ಇಂದು ಸುದಿನ! ಕಾರಣ : ಚಿ. ಅಭಯ ಸಿಂಹರ ಲೇಖನ ಇಂದಿನ ಕೆಂಡಸಂಪಿಗೆಯಲ್ಲಿ ಓದಲು ಸಿಕ್ಕಿತು. Ref: http://kendasampige.com/article.php?id=3004
  ನನ್ನ ಮಾನ್ಯ N C C ಗುರುಗಳಾದ ಮೇ. ಜಿ ಟಿ ಎನ್. ಅವರ ಮಗ ಶ್ರೀ ಅಶೋಕ ವರ್ಧನ ಮತ್ತು ಮೊಮ್ಮಗ ಚಿ. ಅಭಯ ಸಿಂಹರ ಲೇಖನಗಳನ್ನು ಇಂದು ಓದುವ ಅವಕಾಶ ನನಗೆ ಸಿಕ್ಕಿದ್ದು ತುಂಬಾ ಸಂತಸ ತಂದಿದೆ.
  ಅಜ್ಜ, ಮಗ ಮತ್ತು ಮೊಮ್ಮ್ಗಗ - ಈ ಮೂವರಲ್ಲೂ ಒಂದು ಗುಣ ಸಾಮ್ಯ ಕಂಡೆ!
  ಹೌದು! ಮೂವರಲ್ಲೂ ಪ್ರಾಮಾಣಿಕ ಸತ್ಯ ನಿರೂಪಣೆಯ ನಿಜ ಗುಣವನ್ನು ಕಂಡೆ.
  ಮಾನ್ಯ ಮೇ. ಜಿ ಟಿ ಎನ್ ಸಾಹೇಬರಿಗೆ ನನ್ನ ಸುಟಿಯಾದ Salute!
  ಮಾನ್ಯ ಪ್ರೊಫೆಸರ್ ಅವರು ತಮಗೆ ಮತ್ತು ಚಿ. ಅಭಯರಿಗೆ ಪ್ರಾಮಾಣಿಕತೆಯ ದೊಡ್ಡ ಬಳುವಳಿಯನ್ನೇ ಕೊಟ್ಟಿದ್ದಾರೆ.
  ಪ್ರಾಮಾಣಿಕ ಬರಹಗಾರ ಮತ್ತು ಸ್ವರ್ಣ ಕಮಲ ಪ್ರಶಸ್ತಿಗೆ ಪಾತ್ರರಾದ ಚಿ. ಅಭಯರಿಗೆ ಅಭಿನಂದನೆಗಳು.
  ನಮಸ್ಕಾರಗಳು
  ಪೆಜತ್ತಾಯ ಎಸ್. ಎಮ್.

  ReplyDelete
 9. ಪುಂಡಿಕಾಯ್ ನಾರಾಯಣ ಭಟ್30 January, 2010 06:55

  ಮಾನ್ಯ ಮಿತ್ರರೇ
  ಅಭಯನಿಗೆ ಅಭಿನಂದನೆಗಳು.
  ನಿಮ್ಮ ಈಶ್ವರಪ್ಪಚ್ಚಿ ಎರಡೂ ಓದಿದೆ. ನನಗೆ ದಿವಾಕರರ ಪರಿಚಯವಿದೆ. ನಿಮ್ಮಜ್ಜ ಜಿ.ಎನ್. ತಿಮ್ಮಪ್ಪಯ್ಯರ ಮಡಿಕೇರಿ ಬಾಳೇಹಣ್ಣು storeನಿಂದ ನಾನು ಹಣ್ಣು ತಿಂದದ್ದೂ ನೆನಪಿದೆ. ನಾನಾಗ ಆರನೇ ಕ್ಲಾಸು, ಮಡಿಕೇರಿಯಲ್ಲೇ ವಿದ್ಯಾರ್ಥಿ.
  ಪಿ.ಎನ್. ಭಟ್

  ReplyDelete
 10. ಪ್ರವೀಣ ಕಾವೂರ್30 January, 2010 10:53

  ತುಂಬಾ ವಿಶಿಷ್ಟವಾದ ವ್ಯಕ್ತಿತ್ವ ಈ ಕಲಿಯುಗದ ಧುರ್ಯೋಧನ , ಹೀಗೆಯೂ ಬದಕುಲ ಸಾಧ್ಯವೇ ಎಂದು ಆಶ್ಚರ್ಯವಾಯಿತು ,ಓದಿ ಖುಷಿಪಟ್ಟೆ ,ಚೆನ್ನಾಗಿತ್ತು

  ReplyDelete
 11. ಅನಂತ,
  ಈಶ್ವರಮಾವನ ಮೇಲಿನ ನಿನ್ನ ಬರಹ ಚೆನ್ನಾಗಿ ಮೂಡಿ ಬಂದಿದೆ. ಓದುತ್ತ ಹೋದಂತೆ ಅವರನ್ನೇ ಕಣ್ಣಿಗೆ ಕಟ್ಟಿದಂತಾಯಿತು.ಅವರು ಸೈನ್ಯದಲ್ಲಿ ಮಾಡಿದ ಸಾಹಸಗಳು ನನಗೆ ಹೊಸದು. ಅವರನ್ನು ಸ್ಮರಿಸುವಂತೆ ಮಾಡಿದ್ದಕ್ಕೆ ನಿನಗೆ ಧನ್ಯವಾದಗಳು.
  ಶೈಲಜ

  ReplyDelete
 12. niranjana vanalli05 February, 2010 11:35

  Naavu maneyavarella kulitu nimma baraha odidevu. Namagu kannu manjaaguvastu baraha aatmiya vaagide.

  ReplyDelete
 13. mookanahalli rangaswamy10 February, 2010 16:56

  sir, namaskara,bidivina samayadalli kannada aksharagala hudukata web nalli sada,paristitya kaigombeyagi desha basheyinda bahudura vasa.
  indu nimma blog nodide, tumba kushi aaytu., channagide devaru nimage inastu shakti hagu samaya kodali nimmage olleyadagali.

  ReplyDelete
 14. ಸರ್,

  ನಿಮ್ಮ ದೊಡ್ದಪ್ಪ ನಿಜಕ್ಕೂ ಅಪರೂಪದ ವ್ಯಕ್ತಿ. ಅವರನ್ನು ಪರಿಚಯಿಸಿದ್ದಕ್ಕಾಗಿ ನಿಮಗೂ ಹಾಗೂ ಅನಂತರವರಿಗೂ ವಂದನೆಗಳು.

  ರಾಮಕೃಷ್ಣ

  ReplyDelete