(ತಾತಾರ್ ಶಿಖರವನ್ನು ಭೂತಕಾಲದಲ್ಲಿ ಹತ್ತುವ ಮುನ್ನ ವರ್ತಮಾನದ ಒಂದು ಜರೂರು, ಒಂದು ಅನುಭವ ಹೇಳಿಬಿಡುತ್ತೇನೆ. ನಿಮ್ಮುತ್ಸಾಹದ ಚಿಲುಮೆ ವಾರಕಾಲ ಬಾಳಲಿ!)![[Click the images to view it clearly.]](http://lh3.ggpht.com/_XLLsV3Btn2I/S09AD-XgcaI/AAAAAAAACYs/KVzPGftrIyY/s512/Gangadi%20%2806%29.JPG)
ಕುದುರೆಮುಖ ರಾಷ್ಟೀಯ ಉದ್ಯಾನವನದೊಳಗೆ ಹಾಯುವ ಸುಲಭ ಏರಿನ, ಅಂದದ ಬಳುಕಿನ ನುಣ್ಣನೆ ದಾರಿ ಅದರದ್ದಲ್ಲ; ಗಣಿಗಾರಿಕೆಯವರದ್ದು. ಕಬ್ಬಿಣ ಗಣಿಗಾರಿಕೆಯವರಿಗೆ ಅದು ಅವಶ್ಯವೇ ಸರಿ. ಆದರೆ ಮತ್ತೆ ಹುಟ್ಟಿದ ವನ್ಯ ಇಲಾಖೆಗೆ, ಇಂದು ಬದಲಾದ ಪರಿಸ್ಥಿತಿಗೆ ಅದು ಶಾಪವೇ ಆಗಿದೆ. ಮೇಲಿನ ಸೌಕರ್ಯಗಳಲ್ಲದೆ ವಿರಳ ವಾಹನ ಸಂಚಾರವೂ ಕುಮ್ಮಕ್ಕು ಕೊಡುವುದರಿಂದ ಇಲ್ಲಿ ಮಿತಿಮೀರಿದ ವೇಗದಲ್ಲಿ ಧಾವಿಸುವ ಖಾಸಗಿ ವಾಹನಗಳು (ಈ ದಾರಿಯಲ್ಲಿ ಕೆಂಬಸ್ಸು, ಗಣಿಲಾರಿ, ಸಹಸ್ರಪಾದಿ ಎಣ್ಣೆಲಾರಿಗಳು ಇಲ್ಲ. ಇತರ ಸರಕು ಸಾಗಣೆ ಲಾರಿಗಳು, ಸಾರ್ವಜನಿಕ ಬಸ್ಸುಗಳೂ ತುಂಬಾ ಕಡಿಮೆ.) ಅಪಘಾತಕ್ಕೊಳಗಾಗುವುದು, ಜೀವ ಹಾನಿಯಾಗುವುದು ನಿತ್ಯ ಸಂಗತಿ. ಕರಾವಳಿ ವಲಯದಿಂದೇರುವವರಿಗೆ ಮಾಳದವರೆಗಿನ ಬಿಸಿಯೋ ಘಟ್ಟದ ಮೇಲಿನಿಂದ ಬರುವವರಿಗೆ ಕಳಸದವರೆಗಿನ ಅವೈಜ್ಞಾನಿಕ ಏರಿಳಿವಿನ ಹರಕು ದಾರಿಯೋ ಈ ಕಾಡಿನ ನದುವೆ ಕಾಡುವುದಿಲ್ಲ. ಕಣ್ಣು ತುಂಬುವ ಹಸಿರು, ಮೈ ತೀಡುವ ತಣ್ಪು, ತೆರೆದು ಬಿದ್ದ ಬೆಟ್ಟದಲೆಯಲೆಯ ನಡುವೆ ನಾನು/ ನಾವು ಮಾತ್ರ ವಿಹಾರಿಗಳು ಎಂಬ ಭಾವ ತಂದುಬಿಡುತ್ತದೆ. ಸೌಮ್ಯದಿಂದ ಬಿಸಿಯೇರಿಸುವವರೆಗಿನ ಪಾನೀಯಗಳನ್ನು ಸೇವಿಸುತ್ತ, ಹಾಳಮೂಳಗಳನ್ನು ಕುರುಕುತ್ತ, ವಾಹನದಲ್ಲೇ ಇರುವ ಸಂಗೀತವನ್ನು ಗರಿಷ್ಠ ಅರಚಿಸುತ್ತಾ ಕಡಿಮೆಯಾದರೆ ತಾವೂ ಬೊಬ್ಬೆ-ಸಂಗೀತದಲ್ಲಿ ಕಡಿಮೆಯಿಲ್ಲ ಎಂದು ಪ್ರಚುರಿಸುತ್ತ, ಸಿಗರೇಟು ಮೋಟು, ಕಸ, ಡಬ್ಬಿ, ಬಾಟಲುಗಳನ್ನು ಹೊರಗೆ ತೂರುತ್ತ ಅಪಾಯಕಾರೀ ವೇಗ ತಲಪಿಬಿಡುತ್ತಾರೆ. ಸ್ಥಳನಾಮ ಹೇಳುವ, ವನ್ಯರಕ್ಷಣೆಯ ನೂರೆಂಟು ಸಂದೇಶಗಳನ್ನು ಜಾಹೀರುಪಡಿಸುವ ಬರಹಗಳ ವೈವಿಧ್ಯ (ವಿವಿಧ ಸ್ಕೀಮುಗಳ ಕಡತ ಬಲಪಡಿಸಿದಷ್ಟು) ಪರಿಸರಕ್ಕೆ ಏನೂ ಮಾಡಿದಂತೆ ಕಾಣುವುದಿಲ್ಲ. ಇಲ್ಲಿ ಅವಘಡಗಳಿಗೆ ಸಿಕ್ಕು ಸಾಯುವ ಅಸಂಖ್ಯರಲ್ಲಿ ವನ್ಯ ಜೀವಿಗಳೇ ಬಹುಸಂಖ್ಯಾತರು. ಸಾಮಾನ್ಯ ದೃಷ್ಟಿಗೆ ನಗಣ್ಯವಾಗಬಹುದಾದ ಹಾವು ಮಂಗಗಳಷ್ಟೇ ಅಲ್ಲ, ಕಡವೆ ಕಾಟಿಯಷ್ಟು ದೊಡ್ಡ ಮೃಗಗಳೂ ಇವೆ ಎನ್ನುವುದು ನಿಜಕ್ಕೂ ಆತಂಕಕಾರಿ. ಹಾಗಾಗಿ ನಿಲ್ಲಿ! ನಡೆದು ಬನ್ನಿ.
![[Click the images to view it clearly.]](http://lh3.ggpht.com/_XLLsV3Btn2I/S09AJjsBcUI/AAAAAAAACZA/5wlwiVv6m_4/s576/Gangadi%20%2811%29.jpg)
ಮೊನ್ನೆ ಆದಿತ್ಯವಾರ ಬೆಳಿಗ್ಗೆ ನಾವು ಹನ್ನೊಂದು ಮಂದಿ ಗಂಗಡಿಕಲ್ಲಿನ ತಪ್ಪಲಿನಲ್ಲಿ ಸೇರಿದ್ದು ಹೀಗೆ ನಡೆದು ನೋಡುವುದಕ್ಕೇ. [ಮಂಗಳೂರಿನಿಂದ ಜೀಪಿನಲ್ಲಿ ಕುದುರೆಮುಖ ಪಟ್ಟಣಕ್ಕೆ ಹೋಗಿ ಇಲಾಖೆಯ ಅನುಮತಿ ಪತ್ರ ಹಾಗೂ ಓರ್ವ ರಕ್ಷಕನನ್ನು ಜೊತೆ ಮಾಡಿಕೊಂಡಿದ್ದೆವು. ದಾರಿಹೋಕರಿಂದ ನಮ್ಮ ವಾಹನವನ್ನು ಮರೆಮಾಡುವಷ್ಟು ಮೊದಲೊಂದು ಕಿಮೀ ತೀರಾ ಕಚ್ಚಾ ಕಾಡುದಾರಿಯಲ್ಲಿ ಜೀಪು ನುಗ್ಗಿಸಿದೆವು. ಮೂಲದಲ್ಲಿ ಅದು ಆ ವಲಯದ ಅದಿರಿನ ಮಾದರಿ ಸಂಗ್ರಹಿಸಲು ಗಣಿಗಾರಿಕೆಯವರು ಮಾಡಿದ ದಾರಿ. ಮತ್ತೆ ಅದನ್ನು ಊರ್ಜಿತದಲ್ಲಿಡುವುದರೊಡನೆ ಮತ್ತಷ್ಟು ಕಚ್ಚಾ ದಾರಿಗಳನ್ನೂ ಶ್ರೇಣಿಯ ತಪ್ಪಲಿನಲ್ಲಿ ಹರಿಯಬಿಟ್ಟದ್ದು ವನ್ಯ ಇಲಾಖೆ. ನೆಪ ವನ್ಯದ ಉಸ್ತುವಾರಿ; ಕಾಡಕುದುರೆಯ ರಕ್ಷಣೆಗೆ ಜೀನು ಬಿಗಿದಂತೆ. ಅನಂತರ] ಪೂರ್ವಾಭಿಮುಖರಾಗಿ ನಡಿಗೆಗಿಳಿದೆವು. ಕಾಲಬುಡದಿಂದ ದಿಗಂತದವರೆಗೂ ನಮ್ಮ ದಿಟ್ಟಿಯಾಡುತ್ತಲೇ ಇತ್ತು, ಕಿವಿ ನಾಗರಿಕ ಶಬ್ದಗಳನ್ನು (ಮುಖ್ಯವಾಗಿ ದಾರಿಯಲ್ಲೋಡುವ ವಾಹನಗಳ ಸದ್ದು) ಮೀರಿ ಗಾಳಿ ಹೊತ್ತು ತರುವ ವನ್ಯ ತರಂಗಾಂತರಕ್ಕೆ ಹೊಂದಿಕೊಳ್ಳುತ್ತಲಿತ್ತು. ವಿವಿಧ ವಾಸನೆಗಳ ಗ್ರಹಣದಲ್ಲಿ ನಾವು ದುರ್ಬಲರಿದ್ದರೂ ಸ್ವಲ್ಪ ಕುತೂಹಲ, ಬಹುತೇಕ ಪ್ರದರ್ಶನಕ್ಕಾಗಿ ವಾಚಾಳಿಗಳಾಗಿಬಿಡುತ್ತೇವೆ. ಚಾಪಲ್ಯಗಳಿಗೆ ಬಾಯಿಯಾಗುವುದು ಇಲ್ಲಿ ನಿಷಿದ್ಧ. ದೂರದ ಕಾಡಿನಿಂದ ಹನುಮಾನ್ ಲಂಗೂರಿನ ಘೂಕ್ ಮತ್ತು ಕೆಂಜಳಿಲಿನ ಚೊಳಚೊಳ ಕರೆಗಳು ಬಿಟ್ಟು ಬಿಟ್ಟು ಕೇಳುತ್ತಿತ್ತು. ನಿಂತು ನಮ್ಮುಸಿರಿನ ಹೊಯ್ದಾಟ ಕಡಿಮೆ ಮಾಡಿದರೆ ನಸುಗಾಳಿಯ ಸುಳಿವು, ಎಲ್ಲೆಲ್ಲಿನ ತೊರೆಝರಿಗಳ ಶ್ರುತಿಗೆ ಎಲೆಲೆಯ ಮರ್ಮರ, ಹಕ್ಕಿಗಳುಲಿ. ಕೆಲವು ಋತುಮಾನಗಳ ಅದರಲ್ಲೂ ಮುಖ್ಯವಾಗಿ ಮಳೆಗಾಲದಲ್ಲಿ ಭೋರ್ಗರೆಯುವ ಮಾರುತಪ್ರತಾಪ, ವಿವಿಧ ಲಯಗಳಲ್ಲಿ ಬಾಗುಬಳುಕಿನಲ್ಲಿ ಆಕಾಶ ಭೂಮಿಯನ್ನು ಬೆಸೆಯುವ ನೀರಧಾರೆಯ ಆಟೋಪ, ತಾರಕ್ಕೇರುವ ಬಿಬ್ಬಿರಿಗಳ ಸ್ಪರ್ಧಾ ಗಾನಮೇಳಕ್ಕೆಲ್ಲಾ ಅಂದು ರಜೆ. ಆದರೂ ಆ ದಿವ್ಯ ಮೌನದೊಳಗೆ ಎಷ್ಟೊಂದು ಸದ್ದು!
![[Click the images to view it clearly.]](http://lh5.ggpht.com/_XLLsV3Btn2I/S09AEo4Xk_I/AAAAAAAACY8/qdU37QyttXI/Gangadi%20%2810%29.JPG)
ನಾವು ನೇರ ಗಂಗಡಿಕಲ್ಲು ಶಿಖರದ ಬುಡಕ್ಕೇ ಹೋಗುವ ದಾರಿ ಅನುಸರಿಸಿದೆವು. ಅನತಿ ದೂರದಲ್ಲಿ ಅದು ಪಕ್ಕಾ ಏರುಮೈ ಹಿಡಿಯುವಲ್ಲಿ ಕೇವಲ ಕಾಲುದಾರಿಯಷ್ಟೇ ಉಳಿದಿತ್ತು. ವನ್ಯ ಇಲಾಖೆಯವರು ಕೆಲವು ಹುಲ್ಲುಗಡ್ಡೆಗಳನ್ನು ಒಕ್ಕಿ ತೆಗೆದು, ಅಲ್ಲಲ್ಲಿ ಪುಟ್ಟ ಮೆಟ್ಟಿಲು ಕಡಿದು ಜಾಡು ಸ್ಪಷ್ಟಗೊಳಿಸಿದ್ದರು. ಮತ್ತೂ ಮುಚ್ಚಿಬರುವ ಹುಲ್ಲಿನ ಎಡೆಯಲ್ಲಿ ಜಾಡು ಗುರುತಿಸಿಕೊಳ್ಳಲು ಅಲ್ಲಲ್ಲಿ ಬದಿಯಲ್ಲಿ ಕಾಡಕಲ್ಲು ಗುಪ್ಪೆಗಳನ್ನೂ ಒಟ್ಟಿದ್ದರು. ನಮ್ಮೊಳಗಿನ ಟೀಕಾಕಾರತನವನ್ನು ಅದುಮಿ ವನ್ಯದಲ್ಲಷ್ಟೇ ತೊಡಗಿಕೊಂಡೆವು.
![[Click the images to view it clearly.]](http://lh5.ggpht.com/_XLLsV3Btn2I/S08_jtoHFzI/AAAAAAAACYM/3DAxASb_Azs/Gangadi%20%2801%29.JPG)
ಸವಕಲು ಜಾಡಿನ ನಡುವೆ ಸಣ್ಣ ಹುಲ್ಲಹಾಸಿನ ಮೇಲೆ ಒಂದಷ್ಟು ಬಿಳಿಯ ಗುಪ್ಪೆಯಿತ್ತು. ಪಿಸುಮಾತಿನಲ್ಲಿ ನಿರೇನ್ ಸವಾಲಿಕ್ಕಿದರು, “ಇದು ಯಾವ ಪ್ರಾಣಿಯ ಮಲ?” ಉತ್ತರ ಯಾರಲ್ಲೂ ಇರಲಿಲ್ಲ, ಥಟ್ಟಂತ options ಕೇಳಿ ಇದನ್ನೂ ಒಂದು ಜನಪ್ರಿಯ ಹಾಸ್ಯಗೋಷ್ಠಿ ಮಾಡುವ ಮನಸ್ಸೂ ಬರಲಿಲ್ಲ. ಕಾಡುಕಡ್ಡಿಯೊಂದನ್ನು ಹಿಡಿದು ಆ (ಹಳತಾದ್ದರಿಂದ) ಒಣಗುಪ್ಪೆಯನ್ನು ಹಿಸಿದು ಜೀರ್ಣವಾಗದ ರೋಮಗುಚ್ಚ, ಮೂಳೆಚೂರುಗಳನ್ನು ತೋರಿಸಿ, ಸಾಧಾರ ‘ಚಿರತೆಯದ್ದೇ’ ಎಂದು ನಿರೇನ್ ತೋರಿಸಿಕೊಟ್ಟರು. “ತೆರೆಮೈಯಲ್ಲೂ ಹೀಗೆ ಹುಲ್ಲ ಹಾಸನ್ನು ಆಯ್ದು ಮಲವಿಸರ್ಜನೆ ಮಾಡಿ ಮತ್ತೆ ಸುತ್ತಮುತ್ತ ತನ್ನ ಮುಂಗೈ ಉಜ್ಜಿ, ವೈಯಕ್ತಿಕ ವಾಸನೆಯ ಗುರುತನ್ನು ಬಿಟ್ಟುಹೋಗುವುದು ಚಿರತೆಗಳ ವಾಡಿಕೆ. ಹುಲಿ, ಚಿರತೆಯಾದಿ ಪ್ರಾಣಿಗಳ ಕುರುಣೆಯ ಗಾತ್ರದ ಮತ್ತು ಮೊತ್ತದ ಮೇಲೆ ಪ್ರಾಣಿಯ ಗಾತ್ರವನ್ನು ಅಂದಾಜಿಸುವುದು ಸಾಧ್ಯ. ಆದರಿಲ್ಲಿ ಇದು ಹಳತಾಗಿ, ಮಳೆಗೋ ಇಬ್ಬನಿ ಸುರಿವಿನಲ್ಲೋ ನಿರಾಕಾರವೂ ಸವಕಳಿಯಿಂದ ಸಣ್ಣ ಮೊತ್ತದ್ದೂ ಆಗಿರಬಹುದು” ಎಂದೂ ಬಂತು ಅವರ ವಿವರಣೆ. ಹಾಗಾದರೆ ಮಾರ್ಜಾಲ ಕುಲದ ಕಿರಿಯ ಸದಸ್ಯ, ನಮ್ಮ ಹಿತ್ತಿಲ ಬೆಕ್ಕು ತನ್ನ ಮಲಮುಚ್ಚುವ ಮಡಿವಂತ ಎಂದು ಭ್ರಮಿಸಬೇಕಾಗಿಲ್ಲ. ಬದಲು ಈ ಒಂದೊಂದೂ ಯಃಕಶ್ಚಿತ್ ಮಲಗುಪ್ಪೆ ಒಂದೊಂದು ‘ಸಾಮ್ರಾಜ್ಯಶಾಹಿ’ಯ ಗಡಿಕಲ್ಲು ಎಂಬ ವಿಚಾರದ ಬೆರಗಿನಿಂದ ನಾನಿನ್ನೂ ಹೊರಬಂದಿಲ್ಲ!
![[Click the images to view it clearly.]](http://lh5.ggpht.com/_XLLsV3Btn2I/S08_jh4ruAI/AAAAAAAACYQ/gO_FUTc8zjo/Gangadi%20%2802%29.JPG)
ಇಮ್ಮಡಿಸಿದ ನಮ್ಮ ಕುತೂಹಲಕ್ಕೆ ಮತ್ತೆ ಕೆಲವೇ ಹೆಜ್ಜೆಗಳಲ್ಲಿ ಇನ್ನೊಂದೇ ಕುರುಹು ಕಾಣಿಸಿತು. ಇದೂ ಇನ್ಯಾವುದೋ ಪ್ರಾಣಿಯ ಮಲ ಎನ್ನುವುದು ಸ್ಪಷ್ಟವಿತ್ತು. ಬಣ್ಣ ಕಪ್ಪು. ಕಾಡ ಕಡ್ಡಿಯಲ್ಲಿ ಒಕ್ಕಿದಾಗ ಮಾಂಸಾಹಾರಿ ಪ್ರಾಣಿಗಳಿಗೆ ಸಹಜವಾದ ರೋಮಗಳ ಮುದ್ದೆಯೋ, ಮೂಳೆ ಚೂರುಗಳೋ ಇರಲಿಲ್ಲ. ಬದಲು ಸಾಸಿವೆ ಗಾತ್ರದ ಅದೇನೋ ಮಿರಿಮಿರಿ ಹೊಳೆತದ ಕಣಗಳು ಧಾರಾಳವಿತ್ತು. ಸೆಗಣಿಯ ಹಾಗೆ ಕಾಣಿಸುತ್ತದೆ ಆದರೆ ಮೊತ್ತ ಸಾಧಾರಣವಾದ್ದರಿಂದ ಕಾಟಿ ಇರಲಾರದು. ಕಡವೆ? ಬರಿಂಕ? ಹಂದಿ? ಅದೇನೇ ಇರಲಿ, ಆ ಹೊಳೆತದ ಕಣಗಳು ಏನು ಎಂಬಲ್ಲಿ ಮತ್ತೆ ನಮ್ಮ ತಲೆ ಕರಡಾಯ್ತು. ಹುಲ್ಲಿನೊಡನೆ ಹೊಟ್ಟೆ ಸೇರಿರಬಹುದಾದ ಮರಳು? ದಾರಿಹೋಕರು ಎಸೆದ ನಾಗರಿಕ-ಕಸದ ಅವಶೇಷ? ನಿರೇನ್ ಮತ್ತೆ ಪ್ರವೇಶಿಸಬೇಕಾಯ್ತು, ಅದು ಸರ್ವಭಕ್ಷಕ ಕರಡಿಯದ್ದು. ಹಣ್ಣೋ ಗೆಡ್ಡೆಯೋ ಮುಕ್ಕುವಷ್ಟೇ ಸಹಜವಾಗಿ ಗೆದ್ದಲು, ಹುಳಹುಪ್ಪಟೆಗಳನ್ನು ಆಹಾರ ಮಾಡಿಕೊಳ್ಳುವ ಅದರ ಉಚ್ಚಿಷ್ಟದಲ್ಲಿ ಜೀರ್ಣವಾಗದ ಚಿಪ್ಪಿನ ಚೂರುಗಳು ಹೀಗೆ ಕಾಣುವುದು ಮಾಮೂಲಂತೆ. ಹೀಗೇ ಮೊಲ, ಕಾಡು ಹಂದಿ, ಕಡವೆ, ಕಾಟಿಗಳ ಮತ್ತು ಅಸಂಖ್ಯ ಪಕ್ಷಿಗಳ ಪರೋಕ್ಷ ಪರಿಚಯ ಲಾಭ ನಮಗಾಯ್ತು.
ಹುಲ್ಲು ಕೆತ್ತಿ ಜಾಡು ಸ್ಪಷ್ಟಗೊಳಿಸಿದಲ್ಲೆಲ್ಲಾ ದಬ್ಬಳ ಚುಚ್ಚಿ ತೆಗೆದಂತಿನ ಚೊಕ್ಕ, ಯಾವುದೋ ಹುಳಗಳು ಕೊರೆದ ಅಸಂಖ್ಯ ತೂತುಗಳು ತೋರುತ್ತಿತ್ತು. ಇವು, ನಾವು ಕಾಣದ ಹುಲ್ಲಿನ ಮರೆ, ಬಂಡೆಯ ಸೆರೆಯೆಂದಿತ್ಯಾದಿ ಬ್ರಹ್ಮಾಂಡ ವ್ಯಾಪಿಸಿದ ಗಾತ್ರ ವೈವಿಧ್ಯಗಳ ಮಾಟೆ, ಬಿಲ - ಮಳೆನೀರಿಗೆ ಎಷ್ಟೊಂದು ಇಂಗುಗುಂಡಿಗಳು! ಅವುಗಳಾಳದಲ್ಲಿ, ಹಿನ್ನೆಲೆಯಲ್ಲಿ ಇರಬಹುದಾದ ಒಕ್ಕಲು ಎಂಥವೋ ಎಂಬ ಬೆರಗಿನ ಮೆಲೆ ಬೆರಗು ಸವಾರಿ ಮಾಡಿ ನಾವು ಸುಸ್ತು. ಘಟ್ಟಗಳ ಹುಲ್ಲ ಹರಹುಗಳು ಶುದ್ಧ ಬೋಳಲ್ಲ, ಅಲ್ಲಿ ಬಿದ್ದ ಮಳೆನೀರು ಬರಿದೆ ಓಡುವುದಿಲ್ಲ. ಈ ನಿಶ್ಶುಲ್ಕ ಕಾಮಗಾರಿಯ ನೌಕರ ಕೋಟಿಯನ್ನು ಕಲ್ಪಿಸುವ ಯೋಗ್ಯತೆ ಇಲ್ಲದ ‘ನದಿ ತಿರುಗಿಸುವ’ ಭೋಳೆಗಳಿಗೆ, ಗಣಿ ಶಿಫಾರಿಸುವ ನಿರ್-ಜೀವವಿಜ್ಞಾನಿಗಳಿಗೆ, ‘ವ್ಯರ್ಥ ಹುಲ್ಲು’ ಹೆರೆದು ಬರಪೀಡಿತ ಪ್ರದೇಶಕ್ಕೆ ರವಾನೆಯ ಮಾತಾಡುವ ಪುಡಾರಿಗಳಿಗೆ, ದಾರಿ ಸವೆಸುವ ಪ್ರವಾಸೀ ಯೋಜಕರಿಗೆ ಸಾವಿರ ಧಿಕ್ಕಾರ.
![[Click the images to view it clearly.]](http://lh6.ggpht.com/_XLLsV3Btn2I/S08_j0cvtRI/AAAAAAAACYU/xXKquQaiQ5Q/s512/Gangadi%20%2803%29.JPG)
ಹಗುರಕ್ಕೆ ತೊಡಗಿದ್ದ ಏರು ಕೊನೆಯ ಹಂತದಲ್ಲಿ ವಿಪರೀತಕ್ಕೆ ಬಂದಿತ್ತು. ಕಾಲುದಾರಿ ನಮ್ಮನ್ನು ಎಷ್ಟು ಎಡಬಲಕ್ಕೆ ಲಂಬಿಸಿ, ಅಡ್ಡಾಡಿಸಿದರೂ ಒಂದೊಂದು ಹೆಜ್ಜೆಗೂ ದಮ್ಮು ಕಟ್ಟುತ್ತಿತ್ತು. ಆಚೀಚಿನ ಎತ್ತರದ ಹುಲ್ಲನ್ನು ಮುಷ್ಠಿಯಲ್ಲಿ ಬಾಚಿ ಎಳೆದೆಳೆದು, ಏನೂ ಸಿಗದಲ್ಲಿ ಮೊಣಕಾಲಿಗೆ ಅಂಗೈಯ ಒತ್ತುಕೊಟ್ಟು, ಮತ್ತೂ ಸಾಲದಲ್ಲಿ ನಾಲ್ಗಾಲರಾಗಿ ಗಂಗಡಿ ಕಲ್ಲಿನ ಶಿಖರ ತಲಪುವಾಗ ಗಂಟೆ ಹನ್ನೊಂದಾಗಿತ್ತು. ನಾವು ಜೀಪು ಬಿಟ್ಟು ಹೊರಡುವಾಗ ನಾಲ್ಕೆಂಟು ಜನರ ಗುಂಪೊಂದು, ಇನ್ನೋರ್ವ ಮಾರ್ಗದರ್ಶಿಯೊಡನೆ ಸಾಕಷ್ಟು ಮುಂದೆ ಸಾಗುತ್ತಿದ್ದದ್ದನ್ನು ಕಂಡಿದ್ದೆವು. ಹತ್ತೇ ಮಿನಿಟಿನಲ್ಲಿ ನಾವು ಆ ತರುಣ ತಂಡವನ್ನು ಸಮೀಪಿಸಿದಾಗ ಒಬ್ಬಿಬ್ಬರು ಸಿಗರೇಟು ಹಚ್ಚಿದ್ದು, ಧಾರಾಳ ಹಾಡೂ ಹರಟೆ ನಡೆಸಿದ್ದೂ ಕಾಣಿಸಿತು. ನಿರೇನ್ ಕಟುವಾಗದಂತೆ ಆದರೆ ಸ್ಪಷ್ಟ ಆಕ್ಷೇಪಣೆಯ ಧ್ವನಿ ತೆಗೆದರು. ಅದೃಷ್ಟವಶಾತ್ ಅವರು ತಮ್ಮ ಅಜ್ಞಾನಕ್ಕೆ ವಿಷಾದ ವ್ಯಕ್ತಪಡಿಸಿದರು (ಕ್ಷಮೆಯನ್ನೂ ಕೋರಿದರು). ಅನಂತರ ಆ ತರುಣರಿಗೆ ಬೆಟ್ಟದ ಏರನ್ನು ನಿಭಾಯಿಸಲು ಉಸಿರು ಉಳಿದಿರಲಿಲ್ಲವೋ ಶಿಖರಸಾಧನೆಯ ಸಂಭ್ರಮಕ್ಕೆ ಸಿಗರೇಟನ್ನು ಹಿಂಬಾಲಿಸಿ ಇನ್ನೇನೇನು ಯೋಜನೆ ಹಾಕಿದ್ದೆಲ್ಲಾ ನಮ್ಮ ಉಪಸ್ಥಿತಿಯಲ್ಲಿ ವ್ಯರ್ಥವಾಗುತ್ತದೆಂಬ ನಿರಾಶೆಯಲ್ಲೋ ನಿಂತೇ ಇದ್ದರು. ಈಗವರು ಅಲ್ಲಿಂದಲೇ ಹಿಂದೆ ನಡೆದು ಹೋಗುತ್ತಿದ್ದರು; ಬೆಟ್ಟದ ಬೈತಲೆಯಲ್ಲಿ ಸಾಲುಗಟ್ಟಿದ ಹೇನುಗಳು!
ಗಂಗಡಿಕಲ್ಲಿನ ಉನ್ನತಿ ಮಾಮೂಲೀ ಶಿಖರಗಳಂತೆ ಪೀನಾಕಾರದಲ್ಲಿಲ್ಲ. ಉತ್ತರಕ್ಕೆ ವಾಲಿಕುಂಜದಿಂದ (೩೪೦೮ ಅಡಿ) ಬರುವ ಪಶ್ಚಿಮ ಘಟ್ಟದ ಮುಖ್ಯ ಶ್ರೇಣಿ ಕುರಿಯಂಗಲ್ಲಿನನಂತರ (೩೮೧೩ ಅಡಿ) ಪೂರ್ವದ ಒಳನಾಡಿನತ್ತ ಸರಿಯುತ್ತ ಗಡಿಕಲ್ಲು ಗುಡ್ಡ (೩೯೦೬ ಅಡಿ), ಕಡಮಡಿ ಕಲ್ಲು (೪೯೦೦ ಅಡಿ), ಕಡಕೇಜ ಗುಡ್ಡಕ್ಕಾಗಿ (೫೪೦೬ ಅಡಿ) ಏರೇರುತ್ತಾ ಕುದುರೆಮುಖ ಶಿಖರದಲ್ಲಿ (೬೨೦೭ ಅಡಿ) ಅತ್ಯುನ್ನತಿಯನ್ನು ಕಾಣುತ್ತದೆ. ಇದರ ಪೂರ್ವ ಇಳುಕಲಿನ ತಳದಲ್ಲಿ ಭದ್ರಾ ಹೊಳೆ ಮತ್ತೆ ಒತ್ತಡಕ್ಕೆದ್ದ ಸಿಬರಿನಂತೆ ನಮ್ಮ ಗಂಗಡಿಕಲ್ಲು (೪೭೭೪ ಅಡಿ). ಇದಕ್ಕೂ ಹಿಮ್ಮೈ ಕಣಿವೆಯ ಆಳದಲ್ಲಿ ಹುಟ್ಟಿಕೊಂಡ ಸಿಂಗ್ಸರ ಹಳ್ಳ, ಮತ್ತಾಚೆ ಹೆಚ್ಚುಕಡಿಮೆ ಸಮಾನಾಂತರದಲ್ಲಿ ಹಬ್ಬಿದ ಗುರಿಗೆಯ ಸಾಲುಬೆಟ್ಟ. ಅದಕ್ಕೂ ಆಚಿನ ಕಣಿವೆಯಲ್ಲಿ ಮೂಲೆಮೂಲೆಗಳಿಗೆ ವ್ಯಾಪಿಸಿದೆ ಲಖ್ಯಾ ಅಣೆಕಟ್ಟಿನ ಹಿನ್ನೀರು. ಗುರುತಕ್ಕೆ ಸಿಕ್ಕಿಯೂ ಸಿಗದೆಯೂ ಕಣ್ತುಂಬುವ ದೃಶ್ಯ ವೈಭವವನ್ನು ಎಷ್ಟು ಹೊಗಳಿ ಹಾಡಿದರೂ ಕಡಿಮೆಯೇ. ಈಚಿನ ಭದ್ರಾ ಆಚಿನ ಸಿಂಗ್ಸರ ಹಳ್ಳಗಳನ್ನು ಒಂದೇ ಪಾತ್ರೆಗೆ ಒಡ್ಡುವಂತೆ, ಅಂದರೆ ಗಂಗಡಿಕಲ್ಲು ಶ್ರೇಣಿಯನ್ನೆ ಅರೆದು, ಸೋಸಿ ಅರೆಕಾಸಿನ ಕಬ್ಬಿಣಚೂರ್ಣವಾಗಿಸುವ ಯೋಜನೆ ಮಾತ್ರವಲ್ಲ, ಇಂದು ಕೆಐಓಸಿಎಲ್ಲೇ (ಕುದುರೆಮುಖ ಗಣಿಗಾರಿಕಾ ಸಂಸ್ಥೆ) ಸೋಲಿನ ಕಡತ ಸೇರಿಯಾಗಿದೆ. ಅವರು, ಮತ್ತೆ ವನ್ಯ ಇಲಾಖೆ ಮಾಡಿದ ವಿಭಿನ್ನ ಪ್ರಯೋಗಗಳ ಅವಶೇಷಗಳು ಆ ಶಿಖರದಲ್ಲಿ ಧಾರಾಳ ಇತ್ತು. ಅಟ್ಟಳಿಗೆಯೋ, ಗಾಳಿಗುದುರೆಯೋ, ರೇಡಿಯೋ ಅಲೆಗಳ ಪ್ರೇಷಕವೋ ಅಲ್ಲಿನ ಪ್ರಚಂಡ ಗಾಳಿಗೆ ಚಿಂದಿಯಾಗಿ ಹರಡಿ ಬಿದ್ದಿದ್ದವು. ನಮ್ಮ ಯಾವುದೇ ಸಾರ್ವಜನಿಕ ಇಲಾಖೆಗಳಿಗೆ ಪ್ರಯೋಗಗಳನ್ನು ಹೇರುವಲ್ಲಿನ ಉತ್ಸಾಹ, ಸೋಲನ್ನು ಪಾರಿಸರಿಕ ಗೌರವದೊಡನೆ ಮುಗಿಸುವಲ್ಲಿ ಇರುವುದೇ ಇಲ್ಲ ಎನ್ನುವುದಕ್ಕೆ ಅಲ್ಲಿ ಸಾಕ್ಷ್ಯ ಎಷ್ಟೂ ಇತ್ತು!
![[Click the images to view it clearly.]](http://lh5.ggpht.com/_XLLsV3Btn2I/S09AECiBzjI/AAAAAAAACY0/-VqrQc8seJY/Gangadi%20%2808%29.JPG)
ಉರಿ ಬಿಸಿಲಿರಲಿಲ್ಲ, ಭೋರ್ಗಾಳಿಯೂ ವಿಶ್ರಾಂತಿಗೆ ಹೋದಂತಿತ್ತು. ಪ್ರಸನ್ನ ವಾತಾವರಣದಲ್ಲಿ ನಾವು ಶ್ರೇಣಿಯ ನೆತ್ತಿಯಲ್ಲೇ ದಕ್ಷಿಣಕ್ಕೆ ಪಾದ ಬೆಳೆಸಿದೆವು. ಆ ನಡಿಗೆಯ ಕುಶಿ, ಮತ್ತಷ್ಟು ಸಪುರಗೊಂಡ ಶಿಖರವಲಯದ ಚಂದ ವಿವರಿಸಲು ಕುಳಿತರೆ ಈಗಾಗಲೇ ನಿಮ್ಮ ಕುತೂಹಲದ ಮೇಲೆ (ಸದ್ಯ ಅದು ತಾತಾರ್ ಪ್ರಯಾಣಕ್ಕಲ್ಲವೇ ಮೀಸಲು) ನಾನು ಮಾಡಿದ ‘ಅಕ್ರಮಕೃಷಿ’ ಇನ್ನೊಂದೇ ವಾರಕ್ಕೆ ಎಳೆಯಬೇಕಾದೀತು; ಹಾಗೆ ಮಾಡಲಾರೆ. ಸುಮಾರು ಒಂದೂವರೆ ಗಂಟೆಯ ನಡಿಗೆಯ ಕೊನೆಯಲ್ಲಿ ಸಿಂಗ್ಸರ ಹಳ್ಳಿಯನ್ನು ಸಮೀಪಿಸಿದ್ದೆವು. ಮತ್ತೆ ನೇರ ಇಳಿದಿಳಿದು ಸಿಂಗ್ಸರ ಹಳ್ಳದ ದಂಡೆಯನ್ನೇ ಸೇರುವಾಗ ಗಂಟೆ ಒಂದೂವರೆಯಾಗಿತ್ತು. ತೋರಿಕೆ ಮತ್ತು ವಾಸ್ತವಗಳಲ್ಲಿ ಬೇಧವೇ ಇಲ್ಲದ ಸ್ಫಟಿಕ ನಿರ್ಮಲ ಸಿಂಗ್ಸರ ಹಳ್ಳಕ್ಕೇ ಬಾಯಿಹಚ್ಚಿ ದಾಹ ತೀರಿಸಿಕೊಂಡೆವು. ಮರಗಳ ತಂಪಿನಲ್ಲಿ, ಎಳೆಗಾಳಿಯ ಆರೈಕೆಯಲ್ಲಿ ಬುತ್ತಿಯೂಟ ಮುಗಿಸಿ ನವಚೇತನರಾದೆವು.
![[Click the images to view it clearly.]](http://lh4.ggpht.com/_XLLsV3Btn2I/S09AEGy8DNI/AAAAAAAACY4/1I8lc0NNcTQ/Gangadi%20%2809%29.JPG)
ಸುಮಾರು ಐವತ್ತು ವರ್ಷಗಳ ಹಿಂದಿನಿಂದ ತೊಡಗಿದಂತೆ ಈ ವಲಯದಲ್ಲಿ ಚದುರಿದಂತೆ ಸಣ್ಣ ಕೃಷಿಕಾರ್ಯ, ಜಾನುವಾರು ಸಾಕಣೆ ಮತ್ತು ಜನವಸತಿ ಹೆಚ್ಚಿನಂಶ ಸಕ್ರಮದ ನಿರೀಕ್ಷೆಯಲ್ಲಿ ಅಕ್ರಮವಾಗಿ ರೂಢಿಸುತ್ತಲೇ ಇತ್ತು. ಗಣಿಗಾರಿಕೆ ಇವರಿಗೆ ನಾಗರಿಕ ಸವಲತ್ತುಗಳನ್ನು ಹತ್ತಿರ ತಂದಿತ್ತು. ಆದರೆ ಗಣಿಗಾರಿಕೆಯ ಎತ್ತಂಗಡಿ, ರಾಷ್ಟ್ರೀಯ ಉದ್ಯಾನವನದ ಘೋಷಣೆ ಇವರ ಭವಿಷ್ಯವನ್ನು ಮಸುಕಾಗಿಸಿತು. ಆದರೂ ನೆಲಕಚ್ಚಿ ನಿಲ್ಲುವ ಇವರ ಛಲವಂತಿಕೆಗೆ ನಕ್ಸಲ್ ಪ್ರವೇಶ ಕೊನೆಯ ಅಂಕವೇ ಆದದ್ದು ಒಂದು ವಿಪರ್ಯಾಸವೇ ಸರಿ. ಅತ್ತ ನಕ್ಸಲ ಇತ್ತ ಪೋಲೀಸ! ಅಂಥಲ್ಲಿ ಮುಖ್ಯವಾಗಿ ನಿರೇನ್, ಬೆಂಬಲಿಸಿದ Wildilfe Conservation Society and Kudremukh Wildlife Foundation ಬಳಗ ಮಾಡಿದ ಘನಕಾರ್ಯ ನಿಜಕ್ಕೂ ಸ್ಮರಣಾರ್ಹ. ಅಷ್ಟೂ ಮಂದಿಗೆ ಅಂದರೆ ಪಟ್ಟಾ ಇದ್ದ, ಇಲ್ಲದವರಿಗೂ (ಆದರೆ ನಿಜವಾಸಿಗಳಿಗೆ) ಮೊದಲು ಅವರಿಷ್ಟದಂತೆ ರಾಷ್ಟ್ರೀಯ ಉದ್ಯಾನದ ಹೊರಗೆ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟಿತು. ಮತ್ತೆ ಅವರ ಮನೆ, ಜಾನುವಾರುಗಳಾದಿಯಾಗಿ ಇಚ್ಚಿಸಿದ್ದೆಲ್ಲವನ್ನೂ ಉಚಿತ ಸಾಗಣೆಯ ಸೌಕರ್ಯ ಕೊಟ್ಟು ಇಷ್ಟ ಬಂದಂತೆ (ಹೊಸ ವಠಾರಕ್ಕೆ ಒಯ್ಯಬಹುದು ಅಥವಾ ಮಾರಿಕೊಳ್ಳಬಹುದು) ಬಳಸಿಕೊಳ್ಳಲೂ ಅವಕಾಶ ಒದಗಿಸಿದೆವು. ಹೀಗೆ ಅವರು ಹಲವು ವರ್ಷಗಳ ಶ್ರಮ, ಹಲವು ವಿಪರೀತಗಳ ಮುಖಾಮುಖಿಯೊಡನೆಯೂ ಉಳಿಸಿ ಬೆಳೆಸಿದ್ದ ಮನೆ ತೋಟವನ್ನು ಅವರೇ ಕೈಯಾರೆ ಕುಟ್ಟಿ ಬೀಳಿಸುವ, ಕಡಿದೊಗೆಯುವ ಹೃದಯ ಕಲಕುವ ದೃಶ್ಯಕ್ಕೆ ಎಂಟೇ ತಿಂಗಳ ಹಿಂದೆ ನಾನೂ ಸಾಕ್ಷಿಯಾಗಿದ್ದೆ.
![[Click the images to view it clearly.]](http://lh6.ggpht.com/_XLLsV3Btn2I/S09AD_hjC8I/AAAAAAAACYw/xEUcAmRfvHo/Gangadi%20%2807%29.JPG)
ಸಣ್ಣ ವಿಶ್ರಾಂತಿಯನಂತರ ನಾವು ಮರಳಿ ಪ್ರಕೃತಿಗೆ ಸೇರುತ್ತಿರುವ ಸಿಂಗ್ಸರ ಹಳ್ಳಿಯ ಸಣ್ಣ ದರ್ಶನ ಮಾಡಿಕೊಳ್ಳುತ್ತಾ ಬೆಟ್ಟದ ಸುಲಭ ಸಂದಿನಲ್ಲಿ ನುಸಿದು ಮತ್ತೆ ಪಶ್ಚಿಮಾಭಿಮುಖಿಗಳಾದೆವು. ಸಿಂಗ್ಸರ ಹಳ್ಳಕ್ಕೆ ಹಳ್ಳಿಗರು ಹಾಕಿದ್ದ ಪಾಲಗಳು (ಅಡಿಕೆ ಮರದ ಸೇತುವೆ ಎನ್ನಿ) ಕಣ್ಮರೆಯಾಗಿದ್ದವು. ಆಸುಪಾಸಿನ ಬೆಟ್ಟಗುಡ್ಡಗಳ ಮೇಲೆ ಅವರ ಜಾನುವಾರುಗಳು ಓಡಾಡಿ ಮೂಡಿಸಿದ ಅಸಂಖ್ಯ ಜಾಡುಗಳು ಮಾಸುವಂತೆ ಹುಲ್ಲು ಬೆಳೆದಿತ್ತು. [ಅದಕ್ಕೆ ಅಟ್ಟೆ, ಪಟ್ಟಿ ಕಿತ್ತ ನಮ್ಮವರ ಪಾದರಕ್ಷೆಗಳೂ ಕುಸಿದು ಕುಕ್ಕರಿಸಿದ ವಿನೋದಗಳೂ (ಅಪಘಾತಗಳಾಗದ ಎಚ್ಚರ ವಹಿಸಿದ್ದೆವು) ಸಾಕ್ಷಿ.] ಇತಿಹಾಸ ಸೇರುವ ಮನೆಯಂಗಳದಲ್ಲಿ ಬಿದ್ದಿದ್ದ ಕಾಟಿಯ ಭಾರೀ ಸೆಗಣಿಗುಪ್ಪೆ ರಾಷ್ಟ್ರೀಯ ಉದ್ಯಾನವನದ ಇನ್ನೊಂದೇ ಅಧ್ಯಾಯದ ನಾಂದಿ. ನಾವು ಹಿಂದುಳಿಸಿ ಬಂದಿದ್ದ ಜೀಪಿಗಿದ್ದ ಅಂತರ, ದಿನದ ಬೆಳಕಿಗುಳಿದಿದ್ದ ಅವಕಾಶಗಳನ್ನು ಸರಿದೂಗಿಸುವ ಧಾವಂತದಲ್ಲೂ ಕಾಣಲು ಸಿಕ್ಕಿದ ಕಡವೆಗಳು ವನ್ಯಪುನರುಜ್ಜೀವನದ ಭರವಸೆಗಳು.
![[Click the images to view it clearly.]](http://lh6.ggpht.com/_XLLsV3Btn2I/S08_jw_bjNI/AAAAAAAACYc/uklRjE2ho3o/Gangadi%20%2805%29.JPG)
ಪೂರ್ವಾಹ್ನದ ಬಿಳಿನೀಲ ಚಿತ್ತಾರದ ಮೋಡಗಳು ಕರಿಛಾಯೆ ಪಡೆದು, ಆಕಾಶಬಿರಿದಂತೆ ಗುಡುಗಿ ಹನಿದರೂ ಮಳೆಯಾಗದಿದ್ದದ್ದು ನಮ್ಮ ಅದೃಷ್ಟ. ಬಲು ದೀರ್ಘ, ಏರುಜಾರಿನ, ಆರೆಂಟು ಬಾರಿ ತೊರೆಹೊಳೆಗಳಲ್ಲಿ ತಳಬುಳುಂಕಿಸಿ ನಡೆದು ನಡೆದೂ ಎಲ್ಲಾ ಕಥೆಗಳಂತೆ ಕೊನೆಗೆ ಜೀಪು ತಲಪಿದೆವು. ಮಾರ್ಗದರ್ಶಿಯನ್ನು ಬೀಳ್ಕೊಂಡು ಮನೆಗೆ ಮರಳಿದೆವು.
[Click the images to view it clearly.]
ವಿ.ಸೂ: ವನ್ಯ ಜೀವಿಗಳ ಬಗೆಗಿನ ನಿಮ್ಮ ಕುತೂಹಲಕ್ಕೆ ಪ್ರಾಯೋಗಿಕ ಉಣಿಸು ಬೇಕಿದ್ದರೆ, ಅದು ನಿಮ್ಮ ತುತ್ತಲ್ಲವಾದರೂ ಪರಿಚಯದಲ್ಲಿನ ತರುಣರಿಗೆ ದಾಟಿಸುವ ಉಮೇದು ನಿಮ್ಮಲ್ಲಿದ್ದರೆ ಪ್ರತಿಕ್ರಿಯೆ ಅಂಕಣವನ್ನು ಅರ್ಜಿಪೆಟ್ಟಿಗೆ ಮಾಡಿ. ಪ್ರಾಮಾಣಿಕ ವನ್ಯ ಚಟುವಟಿಕೆಗಳಿಗೆ ನನ್ನ ಪರಿಚಯದ ಬಳಗದಲ್ಲಿ ಅಸಂಖ್ಯ ಅವಕಾಶಗಳಿವೆ. ಒಟ್ಟು ಲೇಖನದ ಆಶಯಕ್ಕೆ ಪೂರಕವಾದ ಅಥವಾ ಚರ್ಚಾಯೋಗ್ಯವಾದ ಅನುಭವಗಳು ನಿಮ್ಮಲ್ಲಿದ್ದರೆ ಪೆಟ್ಟಿಗೆಯನ್ನೇ ಆಖಾಡ ಮಾಡಿ, ಏರಿಸಿ ನಿಮ್ಮ ಹುದ್ದರಿಯನ್ನ! ಮತ್ತೆ ಬರುವ ವಾರದ ತಾತಾರ್ ಸಾಹಸಯಾತ್ರೆ ಮರೆಯಬೇಡಿ!
[Click the images to view it clearly.]
[polldaddy poll=2529649]
"ಘಟ್ಟಗಳ ಹುಲ್ಲ ಹರಹುಗಳು ಶುದ್ಧ ಬೋಳಲ್ಲ, ಅಲ್ಲಿ ಬಿದ್ದ ಮಳೆನೀರು ಬರಿದೆ ಓಡುವುದಿಲ್ಲ. ಈ ನಿಶ್ಶುಲ್ಕ ಕಾಮಗಾರಿಯ ನೌಕರ ಕೋಟಿಯನ್ನು ಕಲ್ಪಿಸುವ ಯೋಗ್ಯತೆ ಇಲ್ಲದ ‘ನದಿ ತಿರುಗಿಸುವ’ ಭೋಳೆಗಳಿಗೆ, ಗಣಿ ಶಿಫಾರಿಸುವ ನಿರ್-ಜೀವವಿಜ್ಞಾನಿಗಳಿಗೆ, ‘ವ್ಯರ್ಥ ಹುಲ್ಲು’ ಹೆರೆದು ಬರಪೀಡಿತ ಪ್ರದೇಶಕ್ಕೆ ರವಾನೆಯ ಮಾತಾಡುವ ಪುಡಾರಿಗಳಿಗೆ, ದಾರಿ ಸವೆಸುವ ಪ್ರವಾಸೀ ಯೋಜಕರಿಗೆ ಸಾವಿರ ಧಿಕ್ಕಾರ"
ReplyDelete-----------------------
ಅಶೋಕ್,
ತಲೆಯೂ ಬೋಳಾಗಿ ತಲೆಯ ಒಳಗೂ ಬೋಳಾಗಿರುವ,
ಅಭಿವೃದ್ಧಿ ಎನ್ನುವ ಒಂದೇ ಶಬ್ದ ಹೊರಡಿಸುವ ಮಾಸಿದ ಹಳೆ ಸಿಡಿ ಪ್ಲೇಯರ್ ಹಿಡಿದು, ಇಡೀ ಪ್ರಪಂಚವನ್ನೇ ತಮ್ಮ ತಲೆಯಂತೆ ಬೋಳಾಗಿಸಲು ಹೊರಟವರ ಮುಖಕ್ಕೆ ಉಗುಳಿದಂತೆ ಇದೆ ನಿಮ್ಮ ಮೇಲಿನ ಮಾತುಗಳು.
ನಿಮ್ಮ ಅನುಭವ, ಬರಹ ಎರಡೂ ಮೆಚ್ಚಿಗೆಯಾಯಿತು.
ನದಿ ತಿರುಗಿಸಲು ಜಿಲ್ಲೆಯ ಜನರ ವಿರೋಧ ಇಲ್ಲ ಅಂದವರನ್ನು ಒಮ್ಮೆ ಇಲ್ಲಿ ತಿರುಗಾಡಿಸ ಬೇಕು..
ReplyDeleteVery nice article. You are back on track. What happened to your travelogue of Easter India Biking?
ReplyDeleteBedre Manjunath
well nice write up.. sir... I lost a good opportunity... trekking baralalagaddakke ennu arda dukha!!!
ReplyDeleteಪ್ರಿಯರೇ
ReplyDeleteCentre for Wildlife Studies, Bangalore ಸದ್ಯ ವನ್ಯಜೀವಿ ಅಂದಾಜು ಗಣತಿಯನ್ನು (ಮುಖ್ಯವಾಗಿ ಹುಲಿಗೆ ಆಹಾರವಾಗುವ ಜಾತಿಗಳು) ಪರೋಕ್ಷ ವಿಧಾನಗಳಲ್ಲಿ, ಅಂದರೆ ಹೆಜ್ಜೆ ಗುರುತು, ಮಲ ಸಂಗ್ರಹ ಇತ್ಯಾದಿಗಳ ಮೂಲಕ, ಕುದುರೆಮುಖ ವಲಯದಲ್ಲಿ ನಡೆಸುತ್ತಿದೆ. ಇದು ಅಕ್ಷರಶಃ ಇಡಿಯ ಕಾಡನ್ನು ನಡೆದೇ ಮಾಡಬೇಕಾದ ಕೆಲಸ (ತನಿಖೆಯ ವೈಜ್ಞಾನಿಕ ವಿವರಗಳನ್ನು ಸ್ಥಳದಲ್ಲೇ ಕಲಿಸಿಕೊಡಲಾಗುತ್ತದೆ). ಇದಕ್ಕೆ ಸ್ವಯಂ ಸೇವಕರಾಗಲಿಚ್ಚಿಸುವ ಉತ್ಸಾಹಿಗಳು ನಿಮ್ಮ ಸಂಪರ್ಕ ವಿವರಗಳು ಮತ್ತು ಬಿಡುವಿನ ದಿನಗಳ ವಿವರ ಸಹಿತ ಅಶೋಕರನ್ನು ಮಿಂಚಂಚೆ ಮೂಲಕ ಸಂಪರ್ಕಿಸಿ (athreebook@gmail.com). ದಯವಿಟ್ಟು ಗಮನಿಸಿ, ಇಲ್ಲಿ ದಿನಕ್ಕೆ ಹತ್ತರಿಂದ ಹದಿನೈದು ಕಿಮೀ ಕಡಿದಾದ ಬೆಟ್ಟ, ದಟ್ಟ ಕಾಡಿನ ಪರಿಸರದಲ್ಲಿ ಚಾರಣವಿದ್ದು ನಿಮ್ಮ ಗರಿಷ್ಠ ದೈಹಿಕಶ್ರಮದ ಅಗತ್ಯವಿರುತ್ತದೆ. ಒಟ್ಟಾರೆ ಗಣತಿ ಕೆಲವು ತಿಂಗಳ ಕಾಲ ನಡೆಯುತ್ತದಾದರೂ ಒಮ್ಮೆಗೆ, ಒಂದು ಜಾಡಿಗೆ ಗರಿಷ್ಠ ಮೂರು ಅಥವಾ ನಾಲ್ಕು ಮಂದಿಯನ್ನಷ್ಟೇ ಬಿಡುವಂಥದ್ದಾಗಿರುತ್ತದೆ. ಹಾಗಾಗಿ ನೀವು ಆದಷ್ಟು ಬೇಗನೆ ನಿಮ್ಮ ಅನುಕೂಲದ ದಿನಗಳನ್ನು ನೋಂದಾಯಿಸಿದರೆ ನಿಮಗೆ ಭಾಗವಹಿಸುವ ಅವಕಾಶ ಹೆಚ್ಚಿರುತ್ತದೆ. ನಾವು ವನ್ಯ ಇಲಾಖೆಗೆ ಭಾಗಿಗಳ ಪಟ್ಟಿ ಸಹಿತ ತಿಳಿಸುವ ಅವಶ್ಯಕತೆಯಿರುವುದರಿಂಡ ಆದಷ್ಟು ಬೇಗನೆ ನೋಂದಾಯಿಸಿಕೊಳ್ಳಿ. ಗಣತಿಯಲ್ಲಿ ಮೊದಲ ಬಾರಿಗೆ ಭಾಗವಹಿಸುವವರು ಕನಿಷ್ಠ ಒಂದು ವಾರವಾದರೂ ಮೂಲಶಿಬಿರದಲ್ಲಿ ನಿಂತು ಗಣತಿಯ ವೈಜ್ಞಾನಿಕತೆ ಮತ್ತು ಪ್ರಾಣಿಗಳನ್ನು ಗುರುತಿಸುವ ಕ್ರಮಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಅನಂತರ ಪರಸ್ಪರ ಅನುಕೂಲದ ದಿನ, ಜಾಡುಗಳನ್ನು ಆಯ್ದುಕೊಂಡು ಕೆಲಸ ಮುಂದುವರಿಸಲು ಅವಕಾಶವಿರುತ್ತದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನವನ್ನು ಶೋಧಿಸುವ ಉತ್ಸಾಹಿಗಳಿಗಂತೂ ಇದು ನಿಜಕ್ಕೂ ಸುವರ್ಣಾವಕಾಶ.
ನಿರೇನ್
ಆತ್ಮೀಯರೇ,
ReplyDeleteಪರಿಸರ ಕಾಳಜಿಯುಳ್ಳ ನಿಮ್ಮ ಬರಹ ಓದಿ ಸಂತೋಷವಾಯಿತು. ಚಿತ್ರದಲ್ಲಿ ಸುಂದರ ರಾಯರನ್ನು ನೋಡಿ ಖುಷಿಯಾಯಿತು. ನಿಮ್ಮ ತಂಡದ ಸದಸ್ಯರ ಹೆಸರುಗಳನ್ನು ಬರೆಯಬಹುದೇನೋ (ಸುಮ್ಮನೆ ದಾಖಲೀಕರಣಕ್ಕಾಗಿ).
ವಂದನೆಗಳು
Going through the contents of your blog. Rhey are coming very nicely. I would like join your party in future which will help me in my efforts on the photography of birds & butterflies. Thanks a lot.
ReplyDeleteಸಾರ್ವಜನಿಕಕ್ಕೆ ಘಟನೆಗಳು ಮುಖ್ಯ. ವ್ಯಕ್ತಿ ಪ್ರಯತ್ನ ಮತ್ತು ದಾಖಲೆಯಲ್ಲಿ ಅವುಗಳ ನೋಂದಣೆ ಅವಶ್ಯ ಮಾಡುತ್ತೇವೆ. ಇಂದಿನ ಮಾಧ್ಯಮಗಳ ಅತಿಬಳಕೆಯಲ್ಲಿ ವ್ಯಕ್ತಿನಾಮಗಳು ನಮ್ಮನ್ನು ಒಗ್ಗದಿಕೆಯ ಅತಿರೇಕಕ್ಕೆ ಮುಟ್ಟುವಷ್ಟೂ ಕಾಡುತ್ತವೆ. ಹಾಗಾಗಿ ತೀರಾ ಅನಿವಾರ್ಯವಾದಲ್ಲಿ ಮಾತ್ರ ನಾನು ಹೆಸರ ಉಲ್ಲೇಖ (ನಿರೇನ್) ಮಾಡಿದ್ದೇನೆ ಅಷ್ಟೆ. ಸದ್ಯ ವಸಂತಕಜೆಯವರ ಕುತೂಹಲಕ್ಕಾಗಿ (ಗುಟ್ಟೇನೂ ಇಲ್ಲದ) ಪಟ್ಟಿ ಲಗತ್ತು : ನಿರೇನ್ ಜೈನ್, ಆಶೋಕವರ್ಧನ, ಸುಂದರ ರಾವ್, ಕೃಷ್ಣ ಗಟ್ಟಿ, ಮನೋರಮಾ, ರವಿ ಹೊಳ್ಳ, ರೋಶನ್ ಬೆಟ್ಕೇರಿ, ಅನಿಲ್, ಮಹೇಶ ಮಯ್ಯ, ರಕ್ಷಾ, ಹರೀಶ್.
ReplyDeleteಹಣ ಸಂಪಾದನೆ ಮತ್ತು ಮಜಾಮಾಡಲಿಕ್ಕೆಂದೇ ಇರುವ ಒಂದು ವರ್ಗದ ನೀಚ ಮಾನವರಿಗೆ ಮನುಷ್ಯ ಜೀವವೇ ಲೆಕ್ಕಕ್ಕಿಲ್ಲ. ಇನ್ನು ನಾವೆಲ್ಲ ಅಮೂಲ್ಯವೆಂದು ತಿಳಿದಿರುವ ಪ್ರಾಣಿ ಸಂಕುಲ ಮತ್ತು ಪರಿಸರ ಅವರಿಗ್ಯಾವ ಲೆಕ್ಕ?
ReplyDeletenimma blogannu oduvudee ondu divyanubhava.
ReplyDeletehecchenu bareyalaare.
Raghu Narkla
ಬೆಟ್ಟದ ಬೈತಲೆಯಲ್ಲಿ ಸಾಲುಗಟ್ಟಿದ ಹೇನುಗಳು...
ReplyDeleteಈ ವರ್ಣನೆ ಸಲ್ಲುವಂಥದ್ದು :) ಹಿಡಿದಿಡುವ ಚಾರಣಗಾಥೆ..