31 December 2009

ಛಲದೊಳ್ ದುರ್ಯೋದನಂ!

‘ಬ್ರಹ್ಮಚರ್ಯವೇ ಜೀವನ, ವೀರ್ಯನಾಶವೇ ಮೃತ್ಯು’ - ಸ್ವಾಮಿ ಶಿವಾನಂದರ ಉಕ್ತಿಯನ್ನು ಅಕ್ಷರಶಃ ನಂಬಿ, ಕೇಳುವ ಕಿವಿಗಳಿಗೆ ಧಾರಾಳ ಹೇಳುತ್ತಿದ್ದ ಮತ್ತೆ ತನ್ನ ಮುಕ್ಕಾಲು ಶತಮಾನದ ಬಾಳಿನುದ್ದಕ್ಕೂ ಯಾರೂ ಸಂದೇಹಪಡದಂತೆ ಹಾಗೇ ಬಾಳಿದ ಜಿ.ಟಿ. ಈಶ್ವರ ನನ್ನ ಚಿಕ್ಕಪ್ಪಂದಿರಲ್ಲಿ (ನಾಲ್ವರಲ್ಲಿ) ದೊಡ್ದವ, ನನ್ನ ತಂದೆಗಿಂತ ಎಂಟೇ ವರ್ಷ ಚಿಕ್ಕವ. [ನೀವು ತಪ್ಪು ತಿಳಿಯುವ ಮೊದಲು ಒಂದು ಸ್ಪಷ್ಟನೆ: ನಮ್ಮ ಕುಟುಂಬದಲ್ಲಿ ಅದೂ ಸಣ್ಣ ಕಕ್ಷೆಯೊಳಗೆ ಯಾವ ತರ್ಕಗಳೂ ಇಲ್ಲದೆ, ಪ್ರೀತಿ, ಗೌರವಗಳಿಗೆ ಕುಂದಿಲ್ಲದೆ ರೂಢಿಸಿರುವಂತೆ ಈತನೂ ನಮ್ಮಿಂದ ಏಕವಚನದ ಮತ್ತು ನೇರ ಹೆಸರಿನ ಸಂಬೋಧನೆಗೇ ಒಳಗಾದವ.] ಈಶ್ವರ ನೆಚ್ಚಿದ ಇನ್ನೊಂದು ಸ್ವಾಮಿ ವಿವೇಕಾನಂದ. ಅವರು ಹೇಳಿದ್ದನ್ನು ಸ್ವಲ್ಪ ಆಚೀಚೆ ಮಾಡಿ ‘ದೃಢ ಮನಸ್ಸಿಗೊಂದು ಉಕ್ಕಿನ ದೇಹ’ ರಚಿಸಿ, ಕಾಪಾಡುವುದರಲ್ಲಿ ಜೀವಮಾನವನ್ನೇ ಮೀಸಲಿಟ್ಟವನೂ ಈ ಈಶ್ವರ! ರಜೆಗೆ ಅಜ್ಜನಮನೆಗೆ (ಮಡಿಕೇರಿಯಿಂದ ಆರು ಮೈಲು ದೂರದ ಮೋದೂರು) ಹೋಗುವ ನನ್ನಂಥವರಿಗೆ (ಬಾಲರಿಗೆ) ಈಶ್ವರ ಬಲುದೊಡ್ಡ ಆಕರ್ಷಣೆ, ಆದರ್ಶ. ನನಗೆ ಬೆಳಗಾಗುವ ಎಷ್ಟೋ ಮೊದಲು (ನಾಲ್ಕೋ ಐದೋ ಗಂಟೆಗೆ) ಈತ ಎದ್ದು, ಕೊರೆಯುವ ಚಳಿಯಲ್ಲಿ ತಣ್ಣೀರು ಮಿಂದು, ಗಂಟೆಗಟ್ಟಳೆ ಯೋಗಾಸನ ಮಾಡಿ, ವಿಚಿತ್ರಪಾಕದ (ಉಪ್ಪು, ಕಾರ, ಹುಳಿಗಳ ಹಂಗಿಲ್ಲದ ಆದರೆ ಎಲ್ಲ ಜೀವಾತುಗಳ ಸಂಗಮವೆನಿಸಿದ ಮಡ್ಡಿ) ಬುತ್ತಿ ಕಟ್ಟಿಕೊಂಡು ಮಡಿಕೇರಿಯ ಪಾಲಿಟೆಕ್ನಿಕ್ಕಿಗೆ ವಿದ್ಯಾರ್ಥಿಯಾಗಿ ಓಡುತ್ತಿದ್ದ. ಅದಕ್ಕೂ ಮಿಗಿಲಾಗಿ  ಗಾಢಾಂಧಕಾರದಲ್ಲಿ ಮತ್ತೆ ಒಂಟಿಯಾಗಿ ಆತ ಮರಳುತ್ತಿದ್ದನಲ್ಲಾ ಅದು, ಇನ್ನಷ್ಟು ಪರಿಣಾಮ ಬೀರುತ್ತಿತ್ತು. ಅಂದ ಕಾಲತ್ತಿಲೆ ಮಡಿಕೇರಿಯೇ ಕತ್ತಲಮೂಟೆ. ಆ ಸಣ್ಣ ಪೇಟೆ ಕಳೆದದ್ದೇ ಸಿಗುವ ಕಾಫಿ, ಏಲಕ್ಕಿ ತೋಟಗಳೆಂದರೆ ರಾತ್ರಿಯಲ್ಲಿ ಗೊಂಡಾರಣ್ಯವೇ. ಅದರ ನಡುವೆ ನಡುಗುವ ದಾರಿಯಲ್ಲಿ ಇನ್ನಷ್ಟು ಭಯಹುಟ್ಟಿಸುವ ಹರಿಶ್ಚಂದ್ರ ಘಾಟ್ (ಬ್ರಾಹ್ಮಣರ ಶ್ಮಶಾನ) ದಾಟಿ ಬರಬೇಕು. ಇನ್ನು ಭೋರ್ಗರೆವ ಮಳೆಗಾಲದಲ್ಲಿ, ಸೊಂಯ್‌ಗುಟ್ಟುತ್ತ ಮೂಳೆಯಾಳಕ್ಕಿಳಿಯುವ ಚಳಿಗಾಳಿಗಳ ಇರಿಚಿಲಿನ ಹೊಡೆತದಲ್ಲಿ, ಇಂಬುಳ ಹಾವುಗಳಿಂದ ಹಿಡಿದು ಅಬ್ಬರಿಸುವ ಅರ್ಬುತನವರೆಗೆ ಏನೂ ಅಟಕಾಯಿಸಬಹುದಾದ ಪರಿಸರದಲ್ಲಿ ಕೂದಲೂ ಕೊಂಕದೆ ಬರುವ ಈಶ್ವರ ನನಗೆ ವಿವರಿಸಲಾಗದ ಅಚ್ಚರಿ. ಹಾಗೆ ಬರುವಲ್ಲಿ ಆತ ದಿನಕ್ಕೊಂದು ಭೂತಕ್ಕೆ ಹಾಕಿದ ಪಟ್ಟು, ಪಿಶಾಚಕ್ಕೆ ಕೊಟ್ಟ ಪೆಟ್ಟು ಕೇಳುತ್ತಾ ನನ್ನ ನಿದ್ರೆ ಚಟ್ಟು. ಈಶ್ವರ ಸಾವಿಲ್ಲದ ಸರದಾರ, ಅಲೆದಾಡುವ ಭೂತ, ಸಾಕ್ಷಾತ್ ಫ್ಯಾಂಟಮ್! ಉಳಿದ ವೇಳೆಯಲ್ಲೂ ಮಕ್ಕಳು ಅಟಕಾಯಿಸಿದಾಗೆಲ್ಲ ಆತ ಮತ್ತಷ್ಟು ರೋಚಕವಾಗಿ ಬಿತ್ತರಿಸುತ್ತಿದ್ದ ಸೈನ್ಯದ ಪ್ರಸಂಗಗಳು, ನೆನಪಿಸಿಕೊಳ್ಳುತ್ತಾ ತಾನೇ ಉಸಿರು ಸಿಕ್ಕಿಹೋಗುವಂತೆ ನಗುತ್ತಿದ್ದ ಜೋಕುಗಳು, ಅಲ್ಲಿ ಆತ ನೋಡಿದ ಜಗಜಟ್ಟಿ ಗಾಮಾ ದಾರಾಸಿಂಗ್ ಕಿಂಗ್ ಕಾಂಗ್ ಮುಂತಾದವರ ಮಲ್ಲಯುದ್ಧದ ಬಿಡಿಬಿಡಿ ಸನ್ನಿವೇಶಗಳು ಕೇಳಿದಷ್ಟೂ ಮುಗಿಯದು. (ಈಚೆಗೆ ಆತನ ಮನೆಗೆ ಹೋಗಿ ಬಂದ ಮಕ್ಕಳು ಕೇಳುವುದಿದೆ “ಈಶ್ವರಜ್ಜನ ಮನೆ ಅಡಿಗೆ ಮನೆ ಕಿಟಕಿಯಿಂದ ದೋಸೆ ಕೇಳುವ ಭೂತದ ಕೈ ಬಂದದ್ದು ನಿಜವಾ?”) ಈಶ್ವರ ಅಮರ ಕತೆಗಳ ಖಜಾನೆ.

ಓದು ಎಸ್ಸೆಸ್ಸೆಲ್ಸಿ ದಾಟುವಾಗ ಈಶ್ವರ ಯಾಕೋ ಏನೋ ಮನೆಯಲ್ಲಿ ತಿಳಿಸದೆ (ಓಡಿಹೋಗಿ) ಭಾರತೀಯ ಸೈನ್ಯ ಸೇರಿದ್ದ. ವರ್ಷ ಒಂದೋ ಎರಡೋ ಕಳೆಯುವಾಗ ಸೈನ್ಯದಲ್ಲಿ ಆದರ್ಶಕ್ಕೂ ವಾಸ್ತವಕ್ಕೂ ಇರುವ ಅಗಾಧ ಕಂದರವನ್ನು ಪಾರುಗಾಣಿಸಲಾಗದೆ ಈಶ್ವರ ನಾಗರಿಕ ಜೀವನಕ್ಕೆ ಮರಳುವ ಕೊರಗಿನಲ್ಲಿ ತನ್ನ ಇರವನ್ನೂ ಪ್ರಕಟಿಸಿದ, ಹಂಬಲವನ್ನೂ ತೋಡಿಕೊಂಡ. ಆದರೆ ಅವನೇ ಬರೆದುಕೊಟ್ಟ ಏಳೋ ಎಂಟೋ ವರ್ಷದ ದುಡಿಯುವ ಒಪ್ಪಂದ (ಬಾಂಡು) ಮೀರಲಾಗದೆ ಬಲುಬನ್ನ ಪಟ್ಟೇ ಹೊರಬಂದ. ಮತ್ತೆ ಮಡಿಕೇರಿ ಪಾಲಿಟೆಕ್ನಿಕ್ಕಿನಲ್ಲಿ ಶಾರ್ಟ್ ಹ್ಯಾಂಡ್ ಮತ್ತು ಟೈಪಿಂಗ್ ಕಲಿತದ್ದು. ಆ ಪದವಿ + ಮಾಜೀ ಸೈನಿಕ + (ಅಣ್ಣ) ಮೇಜರ್ ಜಿಟಿ ನಾರಾಯಣ ರಾವ್ ಶಿಫಾರಸಿನಲ್ಲಿ ಆತನಿಗೆ ಎನ್.ಸಿ.ಸಿ ಆಫೀಸಿನಲ್ಲಿ ಗುಮಾಸ್ತಗಿರಿ ಸಿಕ್ಕಿತು. ಅದರಲ್ಲಿ ಮೂರೂರು ಸುತ್ತಿ, ಮೈಸೂರಿನಲ್ಲಿ ನೆಲೆಸಿದ. ಆ ಹೊತ್ತಿಗೆ ಈಶ್ವರನ ನಿಜ ವ್ಯಕ್ತಿತ್ವವನ್ನು ಸ್ವಲ್ಪವಾದರೂ ತಿಳಿಯುವ ಹಂತಕ್ಕೆ ನಾನು ಬೆಳೆದಿದ್ದೆ.

ಸರಳ ಸಾತ್ವಿಕ ಜೀವನ, ಪ್ರಾಮಾಣಿಕತೆ, ಪರೋಪಕಾರಗಳೆಲ್ಲ ಈಶ್ವರನ ಉಸಿರುಸಿರಿನಲ್ಲೂ ಇತ್ತು. ಆದರೆ ಸ್ವಧರ್ಮ ರಕ್ಷಣೆಗಾಗಿ (ಖಂಡಿತವಾಗಿಯೂ ಇತರರನ್ನು ವಂಚಿಸಲು ಅಲ್ಲ) ಸುಳ್ಳು ಹೇಳುವುದನ್ನು ಆತ ನಮಗೆ ಬಾಲಾಪ್ಯದಲ್ಲಿ ಕಥೆ ಹೇಳಿದಷ್ಟೇ ಪರಿಣತಿಯಿಂದ ಹೇಳುತ್ತಿದ್ದ. ಇತರರಿಗೆ  ತೊಂದರೆ ಕೊಡದ ಸುಳ್ಳಿಗೊಂದೇ ಉದಾಹರಣೆ ಸಾಕು. ಈಶ್ವರ ಬೆಂಗಳೂರಿನಲ್ಲಿದ್ದಾಗ ಒಂದು ಮನೆಯ ಮಾಳಿಗೆಯ ಕೋಣೆಯೊಂದನ್ನು ಬಾಡಿಗೆಗೆ ಹಿಡಿದಿದ್ದ. ಕೆಳಗಿದ್ದ ವಾನರತಿ (ಮನೆಯ Ownerನ ಹೆಂಡತಿ) ಯಾವುದೋ ಹಬ್ಬಕ್ಕೆ ‘ಪಾಪ, ಒಂಟಿಜೀವ’ ಎಂದು ಪಾಯಸ ಕೊಡಲು ಬಂದರಂತೆ. ದಾರಾಸಿಂಗನನ್ನೂ ಒಂದು ಕೈ ನೋಡುವ ಹಾಗಿದ್ದ ಈಶ್ವರನಿಗೆ ಪಾಯಸ ಎಂದರೆ ಭಾರೀ ಇಷ್ಟವೂ ಹೌದು. ಆದರೆ ಸ್ವಾಭಿಮಾನ ಬಿಡಬೇಕಲ್ಲಾ “ಓ ಸಾರಿ, ನನಗೆ ಡಯಾಬಿಟಿಸ್” ಎಂದು ಬಿಟ್ಟ. ಇನ್ನೊಮ್ಮೆ ಆ ಕರುಣಾಮಯಿ ಈತನಿಗೆ ಶುದ್ಧ ತುಪ್ಪದನ್ನ ಕೊಡಬಂದಳು. ಈತ ವ್ಯಾಯಾಮದಂಗವಾಗಿ ತಾರಸಿಯ ಮೇಲೆ ಸ್ಕಿಪ್ಪಿಂಗ್ ಮಾಡಿದರೆ ಹಳೆ ಕಟ್ಟಡ ಜರಿದು ಬಿದ್ದೀತೆಂದು ಯಾವುದೋ ಪಾರ್ಕಿನಲ್ಲಿ ಭಾರೀ ‘ದಮ್ಮಾಸ್’ ಹಾಕಿದ್ದರಿಂದ ಬೆವರಿನಿಂದ ತೊಯ್ದಿದ್ದ. ತೆರೆದ ಬಾಯಿಗೆ ಘೋಷಿಸಿಬಿಟ್ಟ “ಅಯ್ಯೋ ಕೊಲೆಸ್ಟ್ರಾಲ್! ನಂಗೆ ಹಾರ್ಟ್ ಟ್ರಬಲ್ಲ್.” ಪಾಪ, ಆಕೆಗೆ ವಿಷ ಒಡ್ಡಿದಷ್ಟೇ ಸಂಕಟವಾಗಿರಬೇಕು. ಹೀಗೆ ಆಕೆಯ ಪ್ರತಿ ಉಪಚಾರಕ್ಕೆ ವಿರುದ್ಧವಾದ ಮರಣಾಂತಿಕ ಕಾಯಿಲೆ ಹೆಸರಿಸುವ ಕಷ್ಟಕ್ಕೆ ಹೆದರಿ ಈಶ್ವರ ಬೇಗನೆ ಮನೆಯನ್ನೇ ಬದಲಿಸಿಬಿಟ್ಟ!

ಸೈನ್ಯದಲ್ಲಿ ಚೀನಾ ಯುದ್ಧ, ಗೋವಾ ವಿಮೋಚನೆಗಳಲ್ಲಿ ಮುಂಚೂಣಿಯ ಅನುಭವ ಈಶ್ವರನಿಗಾಗಿತ್ತು. ಅದರ ಜೊತೆಗೆ ಸಿಕ್ಕಿದ ತೀರಾ ಸೀಮಿತ ಅರ್ಥಗ್ರಹಣದ ಓದು (ಹಿಮಾಲಯನ್ ಬ್ಲಂಡರ್ - ಬ್ರಿಗೆಡಿಯರ್ ದಳ್ವಿ ಬರೆದ ಪುಸ್ತಕ ಈತನ ಬಲುಪ್ರಿಯ ಸಂಗ್ರಹದಲ್ಲೊಂದು) ಈಶ್ವರನನ್ನು ಉಗ್ರ ದೇಶಪ್ರೇಮಿ (ಹಾಗೂ ಬದ್ಧ ನೆಹರೂ ವೈರಿಯನ್ನಾಗಿಯೂ) ಹಾಗೂ ಆತನೇ ವ್ಯಾಖ್ಯಾನಿಸಬಹುದಾಗಿದ್ದ ‘ಸನಾತನ ಮೌಲ್ಯಗಳ’ ಪ್ರತಿಪಾದಕನನ್ನಾಗಿಯೂ ರೂಪಿಸಿತ್ತು. ಹೆಣ್ಣು/ ಮದುವೆ ಎಂಬ ಕಲ್ಪನೆಗಳೇ ಆತನ ಕೋಶದಲ್ಲಿರಲಿಲ್ಲ. ನನ್ನ ತಾಯಿ, ಆತನ ಸೋದರ ಮಾವನ ಮಗಳೇ ಆದ್ದರಿಂದ ಮತ್ತು ಬಾಲ್ಯದಿಂದ ಒಡನಾಟ ಇದ್ದುದರಿಂದ ಮೈಸೂರಿನ ನಮ್ಮ (ಅತ್ರಿ) ಮನೆಗೆ ಆತ ಧಾರಾಳ ಬರುವುದಿತ್ತು. ಮತ್ತೆ ನನ್ನ ತಂದೆಯ ಬಗ್ಗೆ ಆತನಿಗೆ ಲಕ್ಷ್ಮಣ ನಿಷ್ಠೆ. ಅವರು ಏನು ಹೇಳಿದರೂ ಈತನಿಗೆ ಶಿರೋಧಾರ್ಯ! ಆದರೆ ಸಾರ್ವಜನಿಕದಲ್ಲೆಲ್ಲೂ ಅಪರಿಚಿತರಿಗೆ ತಾನು ಇಂಥವರ ಸಂಬಂಧಿ ಎಂದು ಹೇಳಿಕೊಳ್ಳದ ವಿನಯಿ ಮತ್ತು ಸ್ವಾಭಿಮಾನಿ. (ಅವನ ಮಿತಿ ಗೊತ್ತಿದ್ದು ತಂದೆ ಅವನಿಗೆ ಕೆಲಸ ಹೇಳುತ್ತಿದ್ದದ್ದು ಕಡಿಮೆ) ತಂದೆಯನ್ನೊಮ್ಮೆ ತೀವ್ರ ಅನಾರೋಗ್ಯ ಕಾಡಿ, ವಾರಗಟ್ಟಳೆ ಆಸ್ಪತ್ರೆಯಲ್ಲಿರುವಂತಾಗಿದ್ದಾಗ ಅಕ್ಷರಶಃ ಅಣ್ಣನ ಚರಣಸೇವಕನಾಗಿದ್ದ ಈಶ್ವರ.

ಊರಿನಲ್ಲೇನಾದರೂ ವಿಶೇಷ ಸಮಾರಂಭಗಳಿದ್ದು ದಿನಗಟ್ಟಲೆ ಅತ್ರಿಗೆ ಬೀಗ ಜಡಿದು ಬರಬೇಕೆಂದಿದ್ದರೆ ಮನೆಯ ಇಪ್ಪತ್ನಾಲ್ಕು ಗಂಟೆ ಪಹರೆಗೆ ಈ ಮಾಜೀ ಸೈನಿಕ ಬಲು ಸಂತೋಷದಿಂದ ಹಾಜರ್. (ಆ ಸಮಾರಂಭಗಳಲ್ಲಿ ಆತ ಭಾಗಿಯಾಗುವ ಮಾತಂತೂ ಊಹಾತೀತ.) ಮತ್ತದನ್ನು ಒಟ್ಟಾರೆ ತನ್ನ ಭೋಳೇತನವನ್ನು ಎಲ್ಲೂ ಹೇಳಿಕೊಳ್ಳುವ, ಒಪ್ಪಿಕೊಳ್ಳುವ ಪ್ರಾಮಾಣಿಕತೆಯೂ ಆತನಲ್ಲಿತ್ತು. ಅತ್ರಿಗೆ ಸೊಸೆಯಂದಿರು, (ಹೆಣ್ಣು) ಮೊಮ್ಮಕ್ಕಳು ಬರತೊಡಗಿದೊಡನೆ (ಅಂದರೆ ನಮ್ಮ ಮೂವರಿಗೆ ಮದುವೆ, ಮಕ್ಕಳಾಗುತ್ತಿದ್ದಂತೆ) ಈತ ಅಷ್ಟಷ್ಟು ದೂರವಾಗುತ್ತಿದ್ದ. ನನ್ನ ಹೆಂಡತಿಯೋ (ದೇವಕಿ) ತಮ್ಮನ ಹೆಂಡತಿಯೋ (ರುಕ್ಮಿಣಿ) “ಈಶ್ವರ ಮಾವಾ”ಂತ, ತಮ್ಮನ ಮಗಳು ಅಕ್ಷರಿ “ಈಶ್ವರಜ್ಜಾ”ಂತ ಅವರ ಮನೆಗೆಲ್ಲಾದರೂ ಹೋಗಿಬಿಟ್ಟರೆ ಅವನ ಗಡಿಬಿಡಿ ನಿಜವಾಗಿಯೂ ನೋಡುವಂತದ್ದೇ. ತವರು ನೆಲವೆಂದೂ ನೈಸರ್ಗಿಕ ಆರೋಗ್ಯಧಾಮವೆಂದೂ ಮೋದೂರಿನ ಮೇಲೆ ಆತನಿಗೆ ವಿಶೇಷ ಮೋಹವೇನೋ ಇತ್ತು. ಆದರೆ ತಮ್ಮ, ದಿವಾಕರನ ಹೆಂಡತಿ ಅಲ್ಲಿರುವಾಗ ಈ ಋಷ್ಯಶೃಂಗ ಅಲ್ಲಿಗೆ ಹೋಗುವುದುಂಟೇ! ನಮ್ಮ ಮನೆಯೊಳಗೇ ಸಣ್ಣ ಪುಟ್ಟಪುಟ್ಟ ನೆಪಮಾಡಿ (ದೊಡ್ಡ ಕಾರ್ಯಕ್ರಮಗಳೆಂದು ಗೊತ್ತಾದರೆ ಆತ ಊರೇ ಬಿಟ್ಟೋಡಿಬಿಡುತ್ತಿದ್ದ!) ವಿಶೇಷ ಊಟಕ್ಕೆ ಆತನನ್ನು ಕರೆಸುವುದಿತ್ತು. ಸ್ವತಃ ಆತನ ಅಡುಗೆ ಉದ್ದೇಶಪೂರ್ವಕವಾಗಿ ಭಯಂಕರ! ಹಿಂದೆ ಪಾಲಿಟೆಕ್ನಿಕ್ಕಿಗೆ ಹೋಗುವಾಗ ಆತನೇ ಮಾಡಿಕೊಳ್ಳುತ್ತಿದ್ದ ವಿಚಿತ್ರಪಾಕವನ್ನೇ ಪರಿಷ್ಕರಿಸಿ ಬಳಸುತ್ತಿದ್ದ. (ಪ್ರಯೋಗಗಳು ಅಸಂಖ್ಯ, ಪರಿಣಾಮ ಶೂನ್ಯ!) ಆರೋಗ್ಯ, ದೇಹದಾರ್ಢ್ಯಕ್ಕೆ ವಿರೋಧವಾದ್ದೆಲ್ಲವೂ ಆತನಿಗೆ ಬುದ್ಧಿಪೂರ್ವಕವಾಗಿ ವರ್ಜ್ಯ. ಅನಿವಾರ್ಯವಾದಲ್ಲಿ ನಮ್ಮ ವಲಯದ ಸಾಂಪ್ರದಾಯಿಕ ರುಚಿಗಳು, ಮುಖ್ಯವಾಗಿ ಊಟ ಅವನೆಂದೂ (ಅವನೇ ಹೇಳಿಕೊಳ್ಳುತ್ತಿದ್ದಂತೆ, ತನ್ನ ನಾಲಗೆ ಚಪಲವನ್ನೂ) ತಿರಸ್ಕರಿಸಿದ್ದಿಲ್ಲ, ಅಷ್ಟೇಕೆ ಕಡಿಮೆ ತಿಂದದ್ದೂ ಇಲ್ಲ! ಪೊಗದಸ್ತು ಊಟದ ಕೊನೆಯಲ್ಲಿ (ನನ್ನ ತಮ್ಮ) ಅನಂತ ಎಂದಿನ ಆತ್ಮೀಯ ಶೈಲಿಯಲ್ಲಿ “ಈಶ್ವರಾ ಈ ಮುದ್ದೇಹುಳಿ ಉಳ್ದುಹೋಯ್ತಲ್ಲಾ. ಇನ್ನು ತೆಂಗಿನಗುಂಡಿಗೇ ಹಾಕಬೇಕು” ಎಂದೇನಾದರೂ ಹೇಳಿಬಿಟ್ರೆ ಈಶ್ವರ ಈಗಾಗಲೇ ಮೂಗಿನವರೆಗೆ ಊಟಮಾಡಿಯಾಗಿದ್ದರೂ ಅದನ್ನೂ ತಿಂದು ಖಾಲಿಮಾಡಿದ ಎಂದೇ ಅರ್ಥ. ಆತ ಸ್ವಂತ ಮನೆಯಲ್ಲಿ ಅಕ್ಕನ (ಅವನಮ್ಮ, ಅಂದರೆ ನನ್ನಜ್ಜಿಯನ್ನು ಮಕ್ಕಳೆಲ್ಲರೂ ಕರೆಯುತ್ತಿದ್ದದ್ದು ಹಾಗೇ) ನೆನಪಲ್ಲಿ ಒಮ್ಮೊಮ್ಮೆ ಯಾವುದೋ ಪಾಕ ಮಾಡಲು ಹೋಗಿ, ಅದು ಇನ್ನೇನೋ ಆಗುತ್ತಿತ್ತಂತೆ. ಆದರೆ ಅನ್ನಬ್ರಹ್ಮನನ್ನು ಅವಮಾನಿಸದ ಈಶ್ವರನ ನಿಲುವು, ಆ ಪಾಕದ ಒಂದಗಳೂ ವ್ಯರ್ಥವಾಗದಂತೆ ಇವನ ಹೊಟ್ಟೆ ಸೇರಿದ ಕಥೆ ಭೂತಪ್ರೇತಗಳ ಹೊಡೆದಾಟದಷ್ಟೇ ರಮ್ಯ.

ನನ್ನ ಮೈಸೂರು ವಾಸದ ಕಾಲದಲ್ಲೇ (೧೯೬೯-೭೪) ಈಶ್ವರ ಮೈಸೂರಿಗೆ ವರ್ಗವಾಗಿ ಬಂದಿದ್ದ. ಮೊದಲ ಕೆಲವು ಕಾಲ ನಮ್ಮ ಮನೆಯಲ್ಲೇ ಇದ್ದ. ನನ್ನ ಅಪ್ಪಮ್ಮರ ಸ್ಪಷ್ಟ ಸೂಚನೆಗೆ ಮಣಿದು, ಅನಂತನ ಪೂರ್ಣ ಸಹಕಾರದಲ್ಲಿ ಇವನೊಂದು ಸಣ್ಣ ಮನೆ ಖರೀದಿಸಿದ್ದ. ನನ್ನಮ್ಮನೊಡನೆ (ಬಾಲ್ಯದಿಂದ ಕಂಡ ಸೋದರಮಾವನ ಮಗಳೇ) ಆತನಿಗೆ ಸದರವಿತ್ತಾದರೂ ಕೆಲವೊಮ್ಮೆ ಸಲಹೆಗಳು ಅಪಥ್ಯವಾಗುವುದಿತ್ತು. ಆದರೂ ಆಕೆಯ ವರ್ತಮಾನದ ‘ಅತ್ತಿಗೆ’ ಅಂತಸ್ತಿನ ಗೌರವಕ್ಕೆಂದೂ ಈಶ್ವರ ಚ್ಯುತಿ ತಂದದ್ದಿಲ್ಲ. ಆತನಿಗೆ ಸ್ಟ್ರಾಂಗ್ ಕಾಫಿ ರುಚಿಸುತ್ತಿತ್ತು ಆದರೆ ತತ್ವತಃ ಕುಡಿಯುವಂತಿಲ್ಲವಲ್ಲಾ! ಇದು ಅಮ್ಮನಿಗೆ ಗೊತ್ತಿದ್ದೇ ಕಾಫಿ ಕೊಟ್ಟು ಒಂದು ಒತ್ತಾಯದ ಮಾತು ಸೇರಿಸಿದರೆ ಸಾಕು, ಕುಡಿದುಬಿಡುತ್ತಿದ್ದ - (ನಾಲಿಗೆ) ಸುಖಕ್ಕಾಯ್ತು. ಆದರೆ ಹಿಂದೆಯೇ ಚೊಂಬು ತುಂಬಾ ನೀರು ಕುಡಿದು ನಗೆ ಬೀರುತ್ತಿದ್ದ - ಶಾಸ್ತ್ರಕ್ಕೂ ಆಯ್ತು (ಜೀರ್ಣಾಂಗಕ್ಕೆ ಕಾಫಿಯ ಪರಿಣಾಮ dilute ಮಾಡುವುದಂತೆ). ಹೀಗೆ ನನ್ನಮ್ಮ ದಕ್ಕಿಸಿಕೊಂಡಳೆಂದು ಇನ್ಯಾರಾದರೂ ಸದರ ತೆಕ್ಕೊಂಡ್ರೆ ಈಶ್ವರ ಸಾಕ್ಷಾತ್ ದೂರ್ವಾಸ. ಈ ಹಠಮಾರಿತನವನ್ನೇ ಈತ ಗುಣವಾಗಿ ಸ್ವೀಕರಿಸಿದ್ದಕ್ಕೆ ಸಾಕ್ಷಿಯಾಗಿ ತನ್ನ ಮನೆಗೆ ‘ದುರ್ಯೋದನ ನಿಲಯ’ ಎಂದೇ ಹೆಸರಿಸಿದ್ದ!

ಕೆಳಸ್ತರದ ವೃತ್ತಿ (ಕೀಳಲ್ಲ, low profile ಅಂತಾರಲ್ಲಾ ಅದು) ಕೊಡುತ್ತಿದ್ದ ಮರೆ, ತೀರಾ ಗೊಂದಲಿತ ಆದರೆ ಅಷ್ಟೇ ಖಚಿತ ನಿಲುವುಗಳು ಮತ್ತು ಕೌಟುಂಬಿಕವಾಗಿ ಸಿದ್ಧಿಸಿದ ಹಾಸ್ಯಪ್ರಜ್ಞೆಗಳೆಲ್ಲಾ ಸೇರಿ ರೂಪುಗೊಂಡ ಈಶ್ವರನನ್ನು ಸಾಮಾಜಿಕವಾಗಿ (ಹತ್ತಿರದ ಸಂಬಂಧಿಗಳು ಸೇರಿ) ಏಕಕಾಲಕ್ಕೆ ಪ್ರೀತಿ (ಕನಿಕರ) ಮತ್ತು ತಿರಸ್ಕಾರಗಳ ಸಮತೂಕದಲ್ಲಿ ಅಳೆಯುವಂತಾಗುತ್ತಿತ್ತು. ನಿಧಾನ, ಅವ್ಯವಸ್ಥೆ, ಕೊಳಕು ಎನ್ನುವ ಮಟ್ಟದ ಸರಳತನ ಈತನನ್ನು ಸದಾ ಹಿಂದೆಬಿಟ್ಟು ಗೇಲಿ ಮಾಡಲು ವಿಷಯವಾಗುತ್ತಿತ್ತು. ಆದರೆ ಅವುಗಳಲ್ಲೇ ಪ್ರಚೋದನೆಯನ್ನು ಪಡೆದು ತೀವ್ರ ಉಗ್ರ ನಿಲುವು, ಮತ್ತದರ ಪ್ರತಿಪಾದನೆಗೆ ಆತ್ಮೀಯರಲ್ಲಿ ಮುಖಾವಲೋಕನ ನಿಷೇಧಿಸಿಕೊಳ್ಳುವುದು, ಕೈಸಾಗದಲ್ಲಿ ಉಗ್ರ ಮೂಕರ್ಜಿ ಬರೆಯುವುದು ಈಶ್ವರನ ಪ್ರಿಯ ಹವ್ಯಾಸಗಳು! ಇವನೊಮ್ಮೆ ನಮ್ಮನೆಯಲ್ಲಿ ಊಟ ಮಾಡುತ್ತಿದ್ದಾಗ ಬೆಂಗಳೂರಿನಿಂದ ಹತ್ತಿರದ ತಮ್ಮ ಕೃಷ್ಣಮೂರ್ತಿ ಎದುರು ಬಾಗಿಲಿನಲ್ಲಿ ಬಂದ ಸುದ್ಧಿ ಸಿಕ್ಕಿತು. ಎಂಥದ್ದೋ ಚಿಲ್ಲರೆ ಪ್ರಸಂಗದಲ್ಲಿ ಈಶ್ವರ “ಮೂರ್ತಿಯ ಮುಖ ನೋಡೆ” ಎಂದು ಶಪಥ ಮಾಡಿದ್ದು ಆಗ ಜ್ಯಾರಿಯಲ್ಲಿತ್ತು. ಅಮ್ಮ ಮೂರ್ತಿಯಲ್ಲಿ ಎರಡು ಉಪಚಾರದ ಮಾತಾಡಿ, ಊಟಕ್ಕೆ ಕರೆತರುವಾಗ ಈಶ್ವರ ಮಂಗಮಾಯ. ಅವಸರವಸರವಾಗಿ ಕೈ ತೊಳೆದೋ ತೊಳೆಯದೆಯೋ ಬಟ್ಟೆ ಹಾಕಿಯೋ ಎಳೆದುಕೊಂಡೋ ಹಿಂದಿನ ಬಾಗಿಲಿನಲ್ಲಿ ಓಡಿಹೋಗಿಯಾಗಿತ್ತು! ಕೊನೆಯ ತಮ್ಮ ದಿವಾಕರನಿಗೆ, ಸೋದರ ಮಾವನ ಮಗ - ಬಾಲ್ಯದ ಚಡ್ಡಿ ದೋಸ್ತ ಎ.ಪಿ ಗೋವಿಂದನಿಗೆ ಇನ್ನೆಷ್ಟೋ ಸಂಬಂಧಿಕರಿಗೆ ಈತ ಅನಾವಶ್ಯಕ ವಾಚಾಮಗೋಚರ ಪತ್ರ ಬರೆಯುತ್ತಿದ್ದದ್ದು, ಭೇಟಿ ಬಹಿಷ್ಕರಿಸುತ್ತಿದ್ದದ್ದು ಎಲ್ಲಾ ನಮ್ಮ ವಲಯಗಳಲ್ಲಿ ಕೇವಲ ಹಾಸ್ಯ ಪ್ರಸಂಗಗಳಾಗಿ, ಕಟ್ಟೇಪುರಾಣಗಳಾಗಿಯೇ ಚಾಲ್ತಿಯಲ್ಲಿದ್ದವು.

ಈಶ್ವರ ಕಚೇರಿಯಲ್ಲಿ, ನಿವೃತ್ತಿಯಾದಮೇಲೆ ಹೋದಲ್ಲಿ ಬಂದಲ್ಲಿ ಭೀಕರ ನಿದ್ರೆಗೆ (ಕಾಯಿಲೆ ಏನೂ ಅಲ್ಲ) ಜಾರುವುದಿತ್ತು. ಪೇಪರ್ ಓದುವ ನೆಪದಲ್ಲಿ ಹೋದ ಸಾರ್ವಜನಿಕ ಗ್ರಂಥಾಲಯಗಳಲ್ಲಿ, ಪಾರ್ಕುಗಳ ಸಿಮೆಂಟ್ ಬೆಂಚಿನಲ್ಲಿ, ಹೆಚ್ಚೇಕೆ ಜೀವದ ಸಂಗಾತಿಯಾಗಿದ್ದ ಸೈಕಲ್ (ಸವಾರಿ ಮಾಡಿದ್ದು ಕಡಿಮೆಯೇ ಇರಬೇಕು!) ನೂಕುತ್ತ ನಡೆಯುತ್ತಿದ್ದಂತೆ ಒಮ್ಮೆಗೆ ನಿಲ್ಲಿಸಿ, ದಾರಿ ಬದಿಯ ಮೋರಿಕಟ್ಟೆಯಲ್ಲೂ ಈತ ಗಂಟೆಗಟ್ಟಳೆ ನಿದ್ರೆ ತೆಗೆದದ್ದಿತ್ತು. ಆಸ್ಪತ್ರೆಯಲ್ಲಿದ್ದ ಏಕಮಾತ್ರ ಅಣ್ಣನ ಕಾವಲಿನ ಸಮಯದ ಕಥೆ, ನಂಬಿದರೆ ನಂಬಿ, ರೋಗಿಯ ಪಕ್ಕದ ಮಂಚದ ಮೇಲೆ ಕೆಡೆದುಬಿದ್ದ (ಮಲಗಿದ್ದ ಎನ್ನುವುದು ತುಂಬಾ ಸೌಮ್ಯ ಶಬ್ದ) ಈತನನ್ನು ವೈದ್ಯರು ಮಹಾರೋಗಿಯೆಂದೇ ಭ್ರಮಿಸಿ ಕಾರ್ಯಾಚರಣೆಗಿಳಿದಿದ್ದರಂತೆ! ಆತನ ಭಾಷೆಯಲ್ಲಿ ಅದು ನಿದ್ರೆಯಲ್ಲ, ‘ಸಮಾಧಿ ಸ್ಥಿತಿ.’ ಗುಮಾಸ್ತನ ಭಾಷೆಯಲ್ಲೂ ಆತನೇ ಅಸಾಧ್ಯ ನಗೆಯೊಡನೆ ಹೇಳುತ್ತಿದ್ದ “ನಿದ್ರೆ ಕಂಡಾಬಟ್ಟೆ ಕ್ರೆಡಿಟ್ ಬ್ಯಾಲೆನ್ಸ್ ಇತ್ತು. ಎಲ್ಲ ಡೆಬಿಟ್ ಮಾಡಿಬಿಟ್ಟೆ.” ಹೀಗೇ ಆತ ಕಬ್ಬನ್ ಪಾರ್ಕಿನ ಮುರುಕು ಬೆಂಚಿನ ಮೇಲೆ ಒರಗಿರುತ್ತಲೊಂದು ಕಂಡ ಕನಸು, ಅಪರಾತ್ರಿಯಲ್ಲಿ ನಿರ್ಜನ ನಗರ ವಿಸ್ತರಣ ಜಾಗದ ಮೋರಿ ಕಟ್ಟೆಯ ಮೇಲೆ ಧ್ಯಾನಸ್ಥನಾದ ಪರಿ ಮುಂತಾದವು ಬಾಯಿಂii ಸೆಟ್ಟ್ ಹಲ್ಲು ಹಾರಿಹೋಗುವಂಥ ಅವನ ನಗುವಿನ ಸಹಿತ  ಅವನ ಬಾಯಲ್ಲೇ ಕೇಳಬೇಕು, ಇಲ್ಲ, ಕೇಳಬೇಕಿತ್ತು.

ಹೌದು, “ಈಶ್ವರಮಾವ ಹೋಗಿಬಿಟ್ರು” ಎಂದು ೨೭ರ (ಇದೇ ಡಿಸೆಂಬರ್, ೨೦೦೯) ಬೆಳಿಗ್ಗೆ ರುಕ್ಮಿಣಿ ಮೈಸೂರಿನಿಂದ ದೂರವಾಣಿಸಿದಾಗ ಇನ್ನೂ ಎಷ್ಟೆಷ್ಟೋ ಹಾಸ್ಯ, ರಸಪ್ರಸಂಗಗಳು ಈಶ್ವರನ ಬಾಯಲ್ಲೇ ‘ಕೇಳಬೇಕಿತ್ತು’ ಎನ್ನುವ ಮಾತು ಉಳಿದೇ ಹೋಯ್ತು. ಸಣ್ಣಪುಟ್ಟ ವೃದ್ಧಾಪ್ಯದ ತೊಂದರೆಗಳು (ಪ್ರಾಯ ಎಪ್ಪತ್ತೈದು) ಆತನನ್ನು ಕಾಡುತ್ತಿದ್ದಾಗಲೂ ಇನ್ನೊಬ್ಬರಿಗೆ ತಾನು ಹೊರೆಯಾಗಬಾರದೆಂದು ತಿಂಗಳಾನುಗಟ್ಟಳೆ ಅತ್ರಿಗೆ ಬರುತ್ತಿರಲಿಲ್ಲ. ಆ ದೈಹಿಕ ಚಿಕಿತ್ಸೆಗಳಿಗೆ ಎಲ್ಲೋ ಆಸ್ಪತ್ರೆಗೆ ಅಜ್ಞಾತವಾಗಿ ಸೇರಲು ಹೋಗಿ, “ಅರೆ, ನೀವು ಜಿಟಿಎನ್ ಬ್ರದರ್ ಅಲ್ವೇನ್ರೀ” ಎಂದು ಗುರುತು ಹಿಡಿದಾಗ ಚಿಕಿತ್ಸೆ ನಿರಾಕರಿಸಿ ಹೋದದ್ದು, ಇನ್ನೆಲ್ಲೋ ಹೀಗೇ ಸೇರಿ ಪರಿಸ್ಥಿತಿ ಬಿಗಡಾಯಿಸಿದಾಗ ಅನಂತನಿಗೆ ಹೇಗೋ ತಿಳಿದು ಅವನ ಅಭಿಮಾನ ಭಂಗ ಮಾಡದೆ ಸಹಾಯ ಒದಗಿಸಿದ್ದು, ಇನ್ನೆಲ್ಲೋ “Oh, brother of GTN!” ಯಾರೋ ಅಂದದ್ದಕ್ಕೆ “Yes, infamous brother of famous GTN” ಎಂದು ಈತನೇ ವಗ್ಗರಿಸಿದ್ದು ಎಷ್ಟೂ ಇವೆ. ಆದರೆ ಅನಂತ-ರುಕ್ಮಿಣಿಯರು, ಅವನ ಮನೆಯ ಹತ್ತಿರದಲ್ಲೇ ಇದ್ದ ಕುಸುಮ-ಸದಾಶಿವರು (ನನ್ನ ಒಬ್ಬ ಸೋದರಮಾವ ಎ.ಪಿ. ರಮಾನಾಥ ರಾವ್ ಅವರ ಮಗಳು, ಅಳಿಯ) ಏನೇನೋ ನೆಪ ಮಾಡಿಕೊಂಡು ಅವನನ್ನು ವಿಚಾರಿಸಿಕೊಳ್ಳುತ್ತಲೇ ಇದ್ದರು.

೨೦-೧೨-೨೦೦೯ರಂದು ಅಕ್ಷರಿಯ ಮದುವೆ ನಿಶ್ಚಯವಾದೊಡನೇ ಅನಂತ “ಚಿಕ್ಕಯ್ಯಾ (ಅನಂತ ಈಚೆಗೆ ಹಾಸ್ಯಕ್ಕೆಂದು ಈ ಸಾಂಪ್ರದಾಯಿಕ ಸಂಬೋಧನೆಯನ್ನು ರೂಢಿಸಿಕೊಂಡಿದ್ದ) ಬಂದುಬಿಡೋ” ಎಂದು ಆಮಂತ್ರಣ ಕೊಟ್ಟೇ ಹೇಳಿದ್ದ. ಮೈಸೂರಿನಲ್ಲೇ ನಡೆಯಲಿದ್ದ ಮದುವೆಯಲ್ಲಿ ತಾನು ಭಾಗಿಯಾಗುವುದನ್ನು ತಪ್ಪಿಸುವುದು ಹೇಗೆ ಎಂದು ಈಶ್ವರನ ಚಡಪಡಿಕೆ ಸುರುವಾಗಿರಬೇಕು. ಹಳ್ಳಿಮನೆ “ಮೋದೂರಿಗೆ ಬೀಗ ಹಾಕಿ ಬರುವುದು ಕಷ್ಟ. Watch & Ward ಕೆಲ್ಸಕ್ಕೆ ಬರ್ತಿಯಾ” ಎಂದು ದಿವಾಕರ ಕೇಳಿದ ನೆಪ ಸಾಕಾಗಿ ಈತ ಮೈಸೂರಿನಲ್ಲಿ ಸುದ್ಧಿ ಕೊಡದೆ ಹೋಗಿಬಿಟ್ಟಿದ್ದ. ಅದರರಿವಿಲ್ಲದೆ ಮದುವೆಯ ಹಿಂದಿನ ಬೆಳಿಗ್ಗೆ ಮೈಸೂರು ತಲಪಿದ್ದ ನಾನು ಹೀಗೇ ಅವನ ಮನೆಗೆ ಹೋದಾಗ ಗೇಟಿಗೆ ಬೀಗ. ವೈಶಂಪಾಯನ ಸರೋವರದಲ್ಲಿ ಮುಳುಗುವ ಮೊದಲು ದುರ್ಯೋದನ ಹಿಂದೆ ಹಿಂದೆ ಹೆಜ್ಜೆಯಿಟ್ಟುಕೊಂಡು ಹೋಗಿದ್ದನಂತೆ. ಹಾಗೇ ಈ ಅಭಿನವ ದುರ್ಯೋದನ ಗೇಟಿಗೆ ಮತ್ತು ಎದುರು ಬಾಗಿಲಿಗೆ ಬೀಗ ಹಾಕಿ ಹಿಂದಿನ ಬಾಗಿಲಿನಿಂದ ಒಳಸೇರಿ ಭೇಟಿಗೆ ಬಂದವರನ್ನು ಸೋಲಿಸುವುದುಂಟೆಂದು ರುಕ್ಮಿಣಿ ಹೇಳಿದ್ದಳು. ಹಾಗಾಗಿ ನಾಲ್ಕೈದು ಬಾರಿ ಕೂಗಿ ಕರೆದೂ (ಭೀಮ ಗರ್ಜನೆ?) ವಿಫಲನಾಗಿದ್ದೆ. ಅನಂತರ ತಿಳಿಯಿತು, ಆತ ನಿಜಕ್ಕೂ ಮನೆಯಲ್ಲಿರಲಿಲ್ಲ; ಮೋದೂರಿನಲ್ಲಿದ್ದ. ಇಂದು ಯೋಚಿಸುವಾಗ, ‘ಕೊನೆಯ ಭೇಟಿ’ ಎಂಬ ಔಪಚಾರಿಕತೆಯನ್ನೂ ಆತ ನನಗೆ ನಿರಾಕರಿಸಿದ್ದ.

ನನ್ನ ತಂದೆಗೆ ಕೊನೆಯ ದಿನಗಳವರೆಗೆ ಸಂಗೀತಕ್ಕೋ ನಾಟಕಕ್ಕೋ ಹೋಗೆಂದ ಕಡೆಗೆ ಜೊತೆಗೊಡುವುದರೊಡನೆ ಬೌದ್ಧಿಕ ಸಾಹಚರ್ಯವನ್ನೂ ಒದಗಿಸಿದವರು ಪ್ರೊ| ರಾಘವೇಂದ್ರ ಭಟ್ಟರು. ಅವರು ಮೊನ್ನೆ ಬೆಳಿಗ್ಗೆ ಹೀಗೇ ವಾಯುಸೇವನೆಗೆ ನಡೆದು ಹೊರಟಿದ್ದ ಈಶ್ವರನಿಗೆ ಸಿಕ್ಕಿದರಂತೆ. ಮತ್ತೆ ಪಟ್ಟಾಂಗ ಹೊಡೆಯುತ್ತ ದಾರಿಯಲ್ಲಿ ರೈಲ್ವೇ ಬುಕ್ಕಿಂಗ್ ಕಛೇರಿಗೆ, ಯಾವುದೋ ಮುಂಗಡ ಟಿಕೆಟ್ ಖರೀದಿಸುವುದಕ್ಕೆಂದು ಒಳನುಗ್ಗಿದರು. ಹಾಗೆ ಹೋಗಿ ಹೀಗೆ ಬರುವಾಗ, ಹೊರಗೆ ಮೆಟ್ಟಿಲ ಸಾಲ ಬಳಿ ಇವರನ್ನು ಕಾದು ನಿಂತಿದ್ದ ಈಶ್ವರ ಕುಸಿದು ಬಿದ್ದಿದ್ದ. ಭಟ್ಟರು ಕೂಡಲೇ ಆಂಬುಲೆನ್ಸ್ ತರಿಸಿದರೂ ಆ ಸ್ವಾಭಿಮಾನೀ ಜೀವ ಚಿಕಿತ್ಸೆ ಕಾದು ಕುಳಿತಿರಲಿಲ್ಲ.

ಸಹಜವಾಗಿ ಮತ್ತು ಸಮರ್ಥವಾಗಿ ಅನಂತ ಉತ್ತರಾಧಿಕಾರವನ್ನು ನಡೆಸಿದ್ದಾನೆ. ನನ್ನಪ್ಪ ದೇಹದಾನದ ಒಪ್ಪಂದವನ್ನು ಜೆ.ಎಸ್.ಎಸ್. ವೈದ್ಯಕೀಯ ಕಾಲೇಜಿನೊಡನೆ ಮಾಡಿಕೊಂಡಂದೇ ಈಶ್ವರನೂ ಅನುಸರಿಸಿದ್ದ. ಹಾಗಾಗಿ ಸಕಾಲಕ್ಕೆ ಕಣ್ಣು ಮತ್ತೆ (ಮಡಿಕೇರಿ, ಬೆಳ್ಳಾರೆಗಳಿಂದ ಈಶ್ವರನ ತಮ್ಮ ತಂಗಿಯರು, ನೆರೆಕರೆಯವರು) ‘ಅಂತಿಮದರ್ಶನ’ದ ಔಪಚಾರಿಕತೆ ಮುಗಿಸಿದ ಬೆನ್ನಿಗೆ ದೇಹವನ್ನೂ ಕಾಲೇಜಿನವರು ಗೌರವಯುತವಾಗಿ ಪಡೆದುಕೊಂಡರು. ಮಡಿಕೇರಿಯ ಹರಿಶ್ಚಂದ್ರ ಘಾಟಿನ ಪ್ರೇತಾತ್ಮಗಳಿಗೆ ಇನ್ನು ಪೆಟ್ಟು ಹಾಕುವವರು ಯಾರು?

[slideshow id=3386706919823252238&w=426&h=320]

38 comments:

 1. ಎಸ್.ಎಂ ಪೆಜತ್ತಾಯ31 December, 2009 22:24

  ತನ್ನ ನಂಬಿಕೆಗಳನ್ನು ಸದಾ ಗೌರವಿಸಿ ನಡೆದ ಜಿ. ಟಿ. ಈಶ್ವರ ರಾವ್ ಅವರಿಗೆ ತಾವು ಸಲ್ಲಿಸಿದ ನುಡಿನಮನ ನನ್ನ ಮನ ಮುಟ್ಟಿತು.

  ಕೇಸರಿ ಪೆಜತ್ತಾಯ

  ReplyDelete
 2. ವೈದೇಹಿ31 December, 2009 22:56

  ತುಂಬ ಚೆನ್ನಾಗಿದೆ ಅಶೋಕವರ್ಧನ. ಓದಿ ವಿಚಿತ್ರ ತಳಮಳ.
  ವೈದೇಹಿ

  ReplyDelete
 3. ರಾಧಾಕೃಷ್ಣ31 December, 2009 23:04

  ಈಶ್ವರ ಮಾವ ಹೋದರಂತೆ. ಸುದ್ದಿಯನ್ನು ನಂಬುವ ಸ್ಥಿತಿಯಲ್ಲಿ ನಾವಿರಲಿಲ್ಲ.

  ಮರಿಕೆಯ ಮಕ್ಕಳಾದ ನಮ್ಮೆಲ್ಲರನ್ನು ಅವರದೇ ಆದ ಬಗೆಯಲ್ಲಿ ಪ್ರಭಾವಿಸಿದವರು ಅವರು. ಆಗ ಅವರು ಪ್ರತಿವರ್ಷವೂ ತಪ್ಪದೇ ಬರುತ್ತಿದ್ದರು. ಅವರು ಬಂದಿದ್ದಾರೆಂದರೆ ಎನೋ ಹರುಷ, ಉಲ್ಲಾಸ ನಮಗೆ. ಹಾಗೆಲ್ಲ ಕೆರೆಗೆ ಹೋಗಲು ನಮಗೆ ಪರವಾನಿಗೆ ಇರಲಿಲ್ಲ. ಈಜು ತಜ್ಞ ಈಶವರ ಮಾವ ಇದ್ದರೆ ಮತ್ತೆ ಕೇಳುವುದೇನು? ಒಡ್ಡೊಡ್ಡಾಗಿ ಈಜುತ್ತಿದ್ದ ನಮಗೆ ಸರಿ ಬಗೆಯ (free style) ಈಜು ಕಲಿಸಿದವರು ಅವರು. ಕ್ರಿಕೇಟ್ ಆಟದ ಮೂಲಭೂತ ಪಾಠಗಳನ್ನು ಹೇಳಿಕೊಟ್ಟವರು ಅವರು. ಎಲ್ಲದಕ್ಕಿಂತ ಹೆಚ್ಚಾಗಿ ಸೇನೆಯ ಅನುಭವಗಗಳ ರಮ್ಯ ಕಥೆಗಳ ಖುಷಿ ಹಂಚಿದವರು ಅವರು.

  ಮಕ್ಕಳೊಂದಿಗೆ ಮಕ್ಕಳಿಗಿಂತ ಸರಳವಾಗಿರುತ್ತ ಎಲ್ಲವನ್ನೂ ಬೆರಗಿನಿಂದ ನೋಡುತ್ತ ಇದ್ದವರು ಈಶ್ವರ ಮಾವ. . ಹಾಗಾಗಿಯೇ ಅವರನ್ನು ಕಂಡರೆ ನಮಗೆ ಏನೋ ಪ್ರೀತಿ, ಖುಷಿ.

  ಮೈಸೂರಿನ ಅವರ ಧುರ್ಯೋಧನ ನಿಲಯಕ್ಕೆ ಹೋದರೆ ಸಾಕು - ಅಲ್ಲಿ ಅವರ ಗಡಿಬಿಡಿ - ತಟ್ಟೆ ತುಂಬ ಇದ್ದೆಲ್ಲ ಹಣ್ಣು ತುಂಬಿ ಉಪಚರಿಸುತ್ತಿದ್ದ ಬಗೆ ವರ್ಣನೆಗೆ ನಿಲುಕದು.

  ಮೊನ್ನೆ ಮೊನ್ನೆ ಮಡಿಕೇರಿಯಿಂದ ಮೋದೂರಿಗೆ ಹಳೆಯ ದಾರಿ- ಊರು ಹೇಗಿದೆ ಎಂದು ನೋಡುವುದಕ್ಕೆ ನಡೆದೇ ಹೋದರಂತೆ. ಕಾಲಿನ ನರಗಳ ಸಿಕ್ಕಿನ ತೊಂದರೆಗೆ ಸಿಲುಕಿ ಒಂದಿಷ್ಟು ಅಡ್ಡಾ ದಿಡ್ಡಿ ನಡೆಯುತ್ತಿದ್ದ ಮಾವ ಗಟ್ಟಿಯ ಪ್ರತೀಕವಾಗಿದ್ದವರು.

  ಅದ್ಯಾಕೋ ಏನೋ ಇತ್ತೀಚೆಗಿನ ವರ್ಷಗಳಲ್ಲಿ ಒಂಟಿತನವನ್ನು ಹೆಚ್ಚು ಹೆಚ್ಚು ನೆಚ್ಚಿಕೊಂಡವರು. ತಮ್ಮದೆ ಆದ ಕೋಶಾವಸ್ಥೆಯ ಧುರ್ಯೋಧನ ನಿಲಯದಲ್ಲಿರುತ್ತಿದ್ದ ಅವರನ್ನು ನಾವೆಲ್ಲ ಸಂದರ್ಭ ಸಿಕ್ಕಾಗಲೆಲ್ಲ್ಲ ವಿಚಾರಿಸುತ್ತಿದ್ದೆವು. ನಮ್ಮ ಬಾಲ್ಯದ ದಿನಗಳ ಈಶ್ವರ ಮಾವನಿಗಾಗಿ ನಾವೆಲ್ಲ ಕಾತರಿಸುತ್ತಿದ್ದುದು ಸುಳ್ಲಲ್ಲ.

  ಗಾಢ ನಿದ್ದೆಯ ಸವಿಯನ್ನು ಸದಾ ಸವಿಯುತ್ತ, ಅದನ್ನು ವರ್ಣಿಸುತ್ತಿದ್ದ ಈಶ್ವರ ಮಾವ ಇನ್ನು ಎಂದಿಗೂ ಏಳದ ಚಿರನಿದ್ದೆಗೆ ಒರಗಿಗಿದ ಚಿತ್ರ ಕಂಡಾಗ ಮನ ಭಾರವಾಯಿತು.
  ಈಶ್ವರ ಮಾವ ಇನ್ನು "ಎಂದೂ ಮಾಸದ ನೆನಪು".

  ReplyDelete
 4. ಈಶ್ವರ ಅವರನ್ನು ಹಲವು ಬಾರಿ ಭೇಟಿಯಾಗಿದ್ದರೂ ಅವರು ತುಂಬ ದಾಕ್ಷಿಣ್ಯಪರರು ಎನ್ನುವುದು ಸ್ವಲ್ಪದರಲ್ಲೇ ಗೊತ್ತಾದರೂ ನನಗೆ ಅವರ ವರ್ಣರಂಜಿತ ವ್ಯಕ್ತಿತ್ವದ ಇಷ್ಟು ವಿವರಗಳು ಗೊತ್ತಿರಲಿಲ್ಲ. ತಮ್ಮ ನಂಬಿಕೆಯಂತೆ ಬಾಳಿದ ಅವರ ಬಗ್ಗೆ ನನಗೆ ಸದಾ ಗೌರವ ಮತ್ತು ನೀವು ಹೇಳಿರಬಹುದಾದ ಕೆಲವು ಹಾಸ್ಯದ ವಿವರಗಳ ನೆನಪಾಗಿ ಸಂತೋಷವೇ ಆಗುತ್ತಿತ್ತು.
  ಅವರಿಗೆ ನನ್ನ ನಮನ
  ಪ್ರೀತಿಯಿಂದ
  ಪಂಡಿತಾರಾಧ್ಯ

  ReplyDelete
 5. ನರೇಂದ್ರ01 January, 2010 10:52

  ಸಂಕೀರ್ಣ ವ್ಯಕ್ತಿತ್ವದ ಘನಜೀವ. ಕಣ್ಮರೆಯ ನೋವು ನಮ್ಮದೂ...

  ReplyDelete
 6. ನಿಶಾನೆ ಮೊಟ್ಟೆಯಿ೦ದಾಗಿ ರಾತ್ರಿ ಮನೆಗೆ ಬರುತ್ತಿದ್ದಾಗ ನಾರಾಯಣಮಾವನಿಗೆ ಸಿಕ್ಕಿದ ಶ೦ಭಯ್ಯನ ಭೂತದ ಬಗ್ಗೆ ಈಶ್ವರಮಾವ, ಹೇಳಿದ ಕಥೆಯ ನಿಗೂಢ ರಮ್ಯ ಲೋಕ ನೆನಪಿಗೆ ಬರುತ್ತಿದೆ. ಸೈನಿಕರು ಜೀವದ ಹ೦ಗು ತೊರೆದು ಹೋರಾಡಿ ಗಳಿಸಿದ ಭೂಭಾಗಗಳನ್ನು ಪುಢಾರಿಗಳು ಬಿಟ್ಟುಕೊಡಬಹುದು, ಇದಕ್ಕೆ ಅವಕಾಶ ಸಲ್ಲದು ಎ೦ದು ಅ೦ದು ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಕೃಷ್ಣ ರಾವ್ ಅವರಿಗೆ ಈಶ್ವರಮಾವ ಬರೆದ ಪತ್ರವನ್ನು, ಕೃಷ್ಣ ರಾವ್ ಸುದ್ದಿಗೋಷ್ಟಿಯಲ್ಲಿ ಪ್ರಸ್ತಾವಿಸಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದರ೦ತೆ. ಮುಗ್ಧತೆ, ಸರಳತೆ, ಪ್ರತೀಕವಾಗಿದ್ದವರು ಬದುಕಿದ೦ತೆ, ಮರಣದಲ್ಲೂ ಯಾರಿಗೂ ಹೊರೆಯಾಗಲಿಲ್ಲ,

  ReplyDelete
 7. S Raghavendra Bhatta01 January, 2010 12:20

  Dear Sri Ashok,
  As I am yet trying to gather my thoughts about your dear uncle -Sri Eshwar- and pay my tributes at the memorial function on 6th instant,
  it will suffice to say that as I was in USA when your father - Sri GTN - breathed his last, I honestly feel that Providence provided me an opportunity --on 27th Dec between 7-40 and 8 10 A M --to accompany your dear uncle -
  Sri G T Eshwar, a matchless Samaritan, a confirmed Brahmachari and above all an illustrious brother of my most revered GTN !!
  S Raghavendra Bhatta
  12 20 P M / 01 01 2010

  ReplyDelete
 8. Niranjana Vanalli01 January, 2010 14:56

  Priya Ashoka
  Nimma aatmiya baraha odi hiriya jivakke namiside. Naanu istu varsha Mysore nalli iddaagalu avarannu bhetiyaagada bagge iga vishaadavaaguttade

  ReplyDelete
 9. Ajithkumar Hegde Shanady01 January, 2010 15:06

  Dear Mr.Vardhana,
  It was interesting know about the details of your uncle. You have highlighted the rare quality of your relative in your beautiful language. Real obitury.
  Ajithkumar Hegde

  ReplyDelete
 10. ನಾಗರಾಜ ರಾವ್ ಜವಲಿ01 January, 2010 16:00

  ಪ್ರಿಯ ಅಶೋಕ್,
  ನಿಮ್ಮ ಚಿಕ್ಕಪ್ಪನವರ ಕುರಿತು ಬರೆದ ಲೇಖನ ಓದಿ ಕಣ್ತುಂಬಿ ಬಂದಿತು. ಹೀಗೂ ಇರುತ್ತಾರೆಯೇ ಎಂದು ಆಶ್ಚರ್ಯ ಪಟ್ಟೆ. ಮತ್ತು ಅವರ ಕಣ್ಣು ಮತ್ತು ದೇಹ ದಾನ ಮಾಡಿದ ಪರಿಯಂತೂ ಅನುಕರಣೀಯ. ಬದುಕಿದರೆ ಹೀಗೆ ಬದುಕಬೇಕೆಂಬ ರೀತಿ.ಬಹುಕಾಲ ನೆನಪಿನಲ್ಲಿ ಉಳಿಯವ ಲೇಖನ.
  -ಜವಳಿ

  ReplyDelete
 11. shailaja s bhat01 January, 2010 18:21

  ಈಶ್ವರ ಮಾವನ ಕಥೆಗಳು(ಸೈನಿಕನಾಗಿ ಗೋವದಲ್ಲಿ ಹೋರಾಡಿದವು) ಕೇಳಿದವು ನೆನಪಿನಲ್ಲಿವೆ.ಅವರ ದಾಕ್ಷಿಣ್ಯದ ಸ್ವಭಾವದಿಂದಾಗಿ ನಂತರದ ದಿನಗಳಲ್ಲಿ ನಮಗೆ ಅವರ ಸಂಪರ್ಕ
  ಕಮ್ಮಿಯಾಗಿ ಕ್ರಮೇಣ ಇಲ್ಲದಂತಾಯಿತು.ಈ ಒಂದು ವರ್ಷದೊಳಗಾಗಿ ಅವರು ಮೂರು ಮಂದಿ ಅಣ್ಣ ತಮ್ಮಂದಿರು ನಮ್ಮಿಂದ (ಈ ಲೋಕದಿಂದ) ದೂರವಾದರು.
  ಶೈಲಜ

  ReplyDelete
 12. ರೊಟ್ಟಿ ತಿನ್ನುವಾಗ ಪಿಶಾಚಿಯೊಂದು ಕೈ ಒಡ್ಡುತ್ತಿದ್ದ ಕಥೆಯನ್ನೇ ಮೊನ್ನೆ ಅವರು ಅಲ್ಲಿ ತಣ್ಣಗೆ ಮಲಗಿದ್ದಾಗ ನನ್ನ ತಲೆಮಾರಿನವರು ನೆನಪಿಸಿಕೊಳ್ಳುತ್ತಿದ್ದೆವು,ವಾರದ ಹಿಂದೆ ಫೋನ್ ನಲ್ಲಿ ಹರಟಿದ್ದೆ,ದಿವಾಕರ ಚಿಕ್ಕಪ್ಪ ‘ಇಕೋ,ಇಲ್ಲಿ ಒಬ್ಬರ ಜೊತೆ ಮಾತಾಡು’ ಅಂತ ಕೊಟ್ಟಿದ್ದರು,‘ನಾನು ಯಾರು ಹೇಳಿ ನೋಡುವಾ’ ಅಂತ ಸವಾಲೆಸೆದಿದ್ದೆ...‘ವೀಣ,ಲಲಿತ....’ ಅಂದರೇ ವಿನಃ ನನ್ನನ್ನು ಅಪ್ಪಿ ತಪ್ಪಿಯೂ ಜ್ಞಾಪಿಸಿಕೊಳ್ಳಲಿಲ್ಲ....ನನ್ನ ಹೆಸರು ನಾನೇ ಹೇಳಿದೆ...‘ಓ,ಜಯನಾ...ನಿನ್ನ ಧ್ವನಿ ಯಾವಾಗಲೂ ಸೌಮ್ಯ,ಈ ಸವಾಲೆಸೆಯುವ ದನಿ ನಿನ್ನದು ಅಂತ ತಿಳಿಯಲಿಲ್ಲ’ ಅಂತ ನಕ್ಕಿದ್ದರು,ಮದುವೆ ಆದಾಗಿನಿಂದ ನಮ್ಮ ಮನೆಗೆ ಕರೆಯುತ್ತಲೇ ಇದ್ದೇನೆ,ಬರಲೇ ಇಲ್ಲ...ಇನ್ನು ಬರುವುದೆಲ್ಲಿ?೨ ವರ್ಷಗಳ ಅವಧಿಯಲ್ಲಿ ಮೂವರು ದೊಡ್ಡಪ್ಪಂದಿರು ಹೋದರು,ಒಬ್ಬೊಬ್ಬರದೂ ಮೊಗೆದಷ್ಟೂ ಮುಗಿಯದ ನೆನಪುಗಳು.

  ReplyDelete
 13. Bedre Manjunath01 January, 2010 20:57

  May his soul rest in peace.
  No, it was instantaneous. Aatma yava kula? Avara Sadhaneya moolakave avaru badukiddare. Nammallu avara chaitanya uliyali.
  Yours,
  Bedre

  ReplyDelete
 14. ೧೦ ಜನರಿಗಿಂತ ಜಾಸ್ತಿ ಜನ ಸೇರಿದಲ್ಲಿ ನಾನಿರುವುದಿಲ್ಲ ಅಂತ ಅವರು ಹೇಳಿದ್ದರಿಂದ ಮೊನ್ನೆ ನಾವೆಲ್ಲ ಬಂದಿರುವುದು ತಿಳಿದು ತಣ್ಣಗೆ ಮಲಗಿದ್ದವರೆಲ್ಲಿ ಎದ್ದು ಓಡುತ್ತಾರೋ ಅಂತ ನಮ್ಮ ಕಾಳಜಿಯಾಗಿತ್ತು;)

  ReplyDelete
 15. Dear Ashok,
  I have read your interesting verbal portrait of your uncle, written in a typical style of yours.Perhaps our life is more enjoyable in the recollection of such persons,who always prefer to live in incognito.Don't we also laugh at some people who move heaven and earth to draw public attention unduly! NAMASTE. ML SAMAGA

  ReplyDelete
 16. ಸದಾಶಿವ02 January, 2010 14:40

  ಈಶ್ವರ ನವರ ವ್ಯಕ್ತಿತ್ವವನ್ನು ನೀವು ಪರಿಚಯಿಸಿದ್ದು ಒಳ್ಳೇದಾಯ್ತು.ನನ್ನ ಮಟ್ಟಿಗೆ ಅವರದ್ದು ಆಕರ್ಷಕ ವ್ಯಕ್ತಿತ್ವ. ಇತರರಿಗಿಂತ ಭಿನ್ನ ರೀತಿಯಲ್ಲಿರುವುದೂ ಒಂದು ಸಾಹಸವೇ. ತನ್ನ ಬದುಕು,ತನ್ನ ನಂಬಿಕೆ ಮತ್ತು ತನ್ನ ಯೋಚನೆಗಳ ಪ್ರಕಾರವೇ ನಡೆಯಬೇಕೆಂದು ನಿರ್ಧರಿಸಿ,ಅದಕ್ಕೆ ಬದ್ಧರಾಗಿದ್ದ ಅವರು ನಿಜಕ್ಕೂ ಓರ್ವ ಮಹಾನ್ ವ್ಯಕ್ತಿ.

  ReplyDelete
 17. ಎ.ಪಿ. ಗೌರಿ ಶಂಕರ02 January, 2010 22:15

  ಈಶ್ವರನ ಹಲವು ನೆನಪುಗಳಲ್ಲಿ ನನಗೆ ಮೊದಲು ನೆನಪಿಗೆ ಬರುವುದು ಬೇಸಗೆ ರಜಾಕಾಲದಲ್ಲಿ ಮರಿಕೆಗೆ ಬಂದು ಅವನು ನಮ್ಮೊಡನಿರುತ್ತಿದ್ದ ಕಾಲ. ಕಾಡಿನಲ್ಲಿ ಬೇಟೆಗೆಂದು ಸುತ್ತಾಡಿದ ದಿನಗಳು, (ತಮ್ಮ) ಮೂರ್ತಿಗೂ ಅವನಿಗೂ ಆಗುತ್ತಿದ್ದ ಜಟಾಪಟಿಗಳು, (ಅಜ್ಜಿ) ಅಮ್ಮಯ್ಯ ಮಧ್ಯ ಬಂದು ಅವರನ್ನು ಬಿಡಿಸುತ್ತಿದ್ದದ್ದು ಇಂದಿಗೂ ನನ್ನ ಕಣ್ಣೆದುರಿಗೆ ಬರುತ್ತದೆ. ಅನಂತ್ರದ ದಿನಗಳಲ್ಲಿ ಅವರೆಲ್ಲ ಮರಿಕೆಗೆ ಬರುವುದು ಕಡಿಮೆಯಾಯ್ತು. ಆದರೆ ಅಪರೂಪಕ್ಕೆ ಕಾಣಲಿಕ್ಕೆ ಸಿಕ್ಕಾಗೆಲ್ಲಾ ನಾವಿಬ್ಬರೂ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಿದ್ದೆವು. ಗೋವಾ ವಿಮೋಚನಾ ಕಾಲದಲ್ಲಿ ಸೈನಿಕರೆಲ್ಲಾ ಮನೆ ಮನೆಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನೆಲ್ಲ ದೋಚಿಕೊಂಡು ಹೋಗುತ್ತಿದ್ದಾಗ ಇವನು ಮಾತ್ರ ಏನನ್ನೂ ಮುಟ್ಟದೆ ಅಡಿಗೆ ಮನೆಗೆ ನುಗ್ಗಿ ಅಲ್ಲಿರುತ್ತಿದ ಬ್ರೆಡ್ ಜ್ಯಾಮ್ ಬೆಣ್ಣೆ ಮಾತ್ರ ಸವಿದು ಬಂದದ್ದು, ಅದಕ್ಕೂ ರುಚಿಕರವಾಗಿ ಆ ವಿಚಾರ ಅವನು ವಿವರಿಸುತ್ತಿದ್ದದ್ದು ಇಂದಿಗೂ ಕಾಡುತ್ತದೆ. ಈಶ್ವರನ ವಿಚಾರ ನೀನು ಬರೆದ ಲೇಖನದಲ್ಲಿ ಅವನ ವ್ಯಕ್ತಿತ್ವದ ಸ್ಪಷ್ಟ ಚಿತ್ರ ಕಾಣಸಿಗುತ್ತದೆ. ತನ್ನಿಂದಾಗಿ ಯಾರಿಗೂ ಕಷ್ಟ, ತೊಂದರೆ ಆಗಬಾರದು ಎಂದು ಬಹಳ ಪ್ರಯತ್ನ ಪಟ್ಟು ಜೀವಿಸುತ್ತಿದ್ದವನು ಅವನು. ಎಷ್ಟೋ ಸಲ ಅವನ ಹರ್ನಿಯಾದ ಆಪರೇಷನ್ನಿಗಾಗಿ ಮಂಗಳೂರಿಗೆ ಬರಲು ಅವನನ್ನು ಕೇಳಿಕೊಂಡಿದ್ದರು ಬರಲೊಪ್ಪದೆ ಮೈಸೂರಿನಲ್ಲೇ ಉಳ್ದಿಉಕೊಂಡಿದ್ದ. ಹೀಗೇ ನೆನಪ್ಸಿಕೊಂಡಷ್ಟೂ ಮುಗಿಯದು ಈಶ್ವರ ಸ್ಮೃತಿ.
  ಎ.ಪಿ. ಗೌರಿಶಂಕರ

  ReplyDelete
 18. ಎ.ಪಿ. ದೇವಕಿ03 January, 2010 07:11

  ನಾವು ಮಂಗಳೂರಿನಲ್ಲಿ ಮನೆ ಮಾಡಿದ ಮೊದಲಲ್ಲಿ ಈಶ್ವರ ಭಾವ ಕೆಲವು ಸಲ ನಮ್ಮಲ್ಲಿಗೆ ಬಂದದ್ದಿತ್ತು. ಅದರಲ್ಲಿ ನಮ್ಮಿಬ್ಬರು ಮತ್ತು ಊರಿನಿಂದ ಬಂದ ಇತರ ಮಕ್ಕಳ ಸೈನ್ಯವನ್ನು ಈ ಮಾಜೀ ಯೋಧ ಬೀಚಿಗೆ ಒಯ್ಯಲು ವಹಿಸಿಕೊಂಡದ್ದು ಭಾರೀ ತಮಾಷೆಯಿತ್ತು. ಬಸ್ಸಿನಲ್ಲಿ ಜೊತೆಗೆ ನಾವಿದ್ದರೂ ಟಿಕೆಟ್ ತಾನೇ ತೆಗೆಯುವ ಉತ್ಸಾಹದಲ್ಲಿ ಇವರು ನೋಟು ನೂಕುತ್ತಾ "ಮರೀನ್ ಡ್ರೈವ್, ಮರೀನ್ ಡ್ರೈವ್ " ಎಂದದ್ದು ಸೋಮೇಶ್ವರದ ಕಂಡಕ್ಟರಿಗೆ ಬಿಡಿಸಲಾಗದ ಒಗಟಾಗಿ ಕೇಳಿಸಿ, ನಮಗೆಲ್ಲಾ ನಗುವೋ ನಗು.

  ReplyDelete
 19. Raviraja Baikampady03 January, 2010 10:34

  Udatta jeevada lavalavikeya chitrana muda needitu. Ishwara chikkappa matra idannu mis maadikondaralla anta besaravaytu!

  ReplyDelete
 20. ಜಿ.ಎ. ದೇವಕಿ03 January, 2010 15:30

  ಸುಮಾರು ಇಪ್ಪತ್ತು ವರ್ಷದ ಹಿಂದೆ ಈಶ್ವರ ಮಾವ ಬೆಂಗಳೂರಿನ ಆನಂದ ಭಾವನ ಮನೆಗೆ ಹೋಗಿಬಂದ ಸುದ್ದಿ ನನಗೆ ತಿಳಿಯಿತು. ಮುಂದೊಂದು ದಿನ ನಾವು ಮೈಸೂರಿಗೆ ಹೋದಂದು ಅವರು ಸಿಕ್ಕಾಗ ನಾನು ತಮಾಷೆ ಮಾಡಿದೆ, "ನಮಗಿಂತಾ ತಡವಾಗಿ ಮದುವೆಯಾದವರ ಮನೆಗೆ ನೀವು ಹೋಗಿದ್ದೀರಿ. ನಮ್ಮನೆಗೆ ಬರಲೇ ಇಲ್ಲ." ಅವರು ಪಾಪ, ಪ್ರಯಾಣದ ಕಷ್ಟ ಅದಕ್ಕೂ ಮಿಗಿಲಾಗಿ ದಕ ಜಿಲ್ಲೆಯ ಸೆಕೆ ಎಲ್ಲಾ ಸಹಿಸಿಕೊಂಡು ಕೆಲವೇ ಸಮಯದಲ್ಲಿ ಮಂಗಳೂರಿನ ನಮ್ಮನೆಗೆ ಬಂದಿದ್ದರು. ಅವರ ತೋರಿಕೆಯ ಭೋಳೇತನದೊಳಗೂ ಇದ್ದ ಸೂಕ್ಷ್ಮ ಸ್ಪಂದನ ಅಥವಾ ನಾವು ಸಮಾಜಕ್ಕಾಗಿ ಎಂದು ರೂಢಿಸಿಕೊಂಡ ಕೃತಕತೆಯ ಮಬ್ಬಿಲ್ಲದೆ ಕಾಣುವ ಅವರ ನೋಟಕ್ಕಾಗಿಯೇ ನಮ್ಮೆಲ್ಲರಿಗೂ ಇಂದು ಪ್ರಿಯವಾಗಿ ಕಾಣುತ್ತಾರೋ ಏನೋ
  ದೇವಕಿ

  ReplyDelete
 21. na.damodara shetty03 January, 2010 18:46

  nimma shankara chikkappa nanna chikkapaanuu aagibittaralla!

  ReplyDelete
 22. Shri Ashokavardhna-ji
  Nimma chikkappanavara kurithu neevu breda deerghavada blogu nijavgiyoo udaattavaagitthu, nimma chikkappanavara jeevandante. Nimma ellaa blogugaloo odisikondu hoguva vishishta shailiyallide. Munde endaadaroo ee nimma blogugalu pustaka roopodalli horabarli.
  Gauravagalondige
  Raghu Narkala

  ReplyDelete
 23. Dear Shri Ashok
  I read the article on your uncle GT Eshwar; very interesting to know the person who sacrificed all his life for a cause; selfless service.
  May his soul rest in peace.
  Thank you for including me in your Blog.

  ReplyDelete
 24. ashoka bhava ,neenu baredaddu nannade manassina bhaavanegalanthide. 21 varshada hinde namma raichur manegu bandiddaru. adaada nanthara 2009 may yalli mysorenalli nesaradalli betiyagiddu. nanna guruthu sikkiralilla.naavu avarannu huduki betiyaadaddu avarige thumbaa kushiyaagiththu. beti madisida credit rukminige salluththade.avara odanaata namage bekiththu. naavu avaranna yavaththu thamaashe madiralilla. illi banda mele samparka tappi hoitu. aadare ondu sala avara beti madi avarottige kaala kaleyuva aase aaseyaagiye uliithu.nanna baalyada odanaadi nanna preethiya veeshwara( e helalu baruththiralilla) mavanige neenu bareda nenapina lekhanakke vandane abinandane.nanige bega typisalu baruvudilla. hagaagi eshte baredaddu. veena

  ReplyDelete
 25. ಜಿ. ಟಿ. ಈಶ್ವರರಾವ್‌ರವರ ಬಗ್ಗೆ ನಿಮ್ಮ ಬ್ಲಾಗ್ ಓದಿದ ನಂತರ ಈ ಮೊದಲೇ ನನ್ನ ತಲೆಯಲ್ಲಿದ್ದ ಒಂದು ವಿಚಾರ ಸ್ಥಿರವಾಯಿತು. GTA, GTB, GTCನಿಂದ ಹಿಡಿದು GTN, GTE, GTK, GTR, GTD, ಹಾಗೇ GTX, GTY, GTZವರೆಗೆ ಎಲ್ಲರೂ ಜ್ಞೇಯನಿಷ್ಠತೆ, ಅನಸೂಯೆ, ಹಠವಾದಿತನ, ಸ್ವಪ್ರತಿಷ್ಠೆ, ಧರ್ಮಧಾರ್ಷ್ಠ್ಯಕ್ಕೆ ಪ್ರಸಿದ್ಧರಾದವರು. ‘ನಿನ್ನದು ನಿನಗೆ, ನನ್ನದು ನನಗೆ. ನಿನ್ನದನ್ನು ನಾನು ಒಪ್ಪಬೇಕಿಲ್ಲ, ಹಾಗೆಯೇ ನನ್ನದನ್ನು ನೀನು ಒಪ್ಪಬೇಕೆಂಬ ಛಲವೂ ನನಗಿಲ್ಲ’ ಎನ್ನುವ ನಿರ್ಲಿಪ್ತಭಾವ. ಇವು ಒಬ್ಬ ಸ್ವಾಭಿಮಾನಿ ಮನುಷ್ಯನ ಗುಣಲಕ್ಷಣಗಳೆಂದು ನಾವು ಅಂದುಕೊಂಡಿರುವುದರಿಂದ ಇವರೆಲ್ಲರೂ ನಮಗೆ ಆದರ್ಶಪ್ರಾಯರಾಗಿದ್ದಾರೆ. ಅನುವಂಶಿಕವಾಗಿ ಹರಿದು ಬರುತ್ತಿರುವ ಜೀನ್‌ಗಳ ಯಾವುದೋ ಎರಡು ಕೊಂಡಿಗಳ ನಡುವೆ ಈ ಗುಣಗಳೆಲ್ಲ ಗಿಡಿದುಕೊಂಡಿದೆ ಅನ್ನಿಸುವುದಿಲ್ಲವೇ ಮಿ. ಅಶೋಕವರ್ಧನ?

  ReplyDelete
 26. ಆನಂದ ವರ್ಧನ, ಅಮೆರಿಕಾದಿಂದ05 January, 2010 21:57

  ಜರ್ಮನಿಯ ಕನಸು ಕಂಡ ಚಿಕ್ಕಯ್ಯ!
  *******************************************************
  ನನ್ನ ಸ್ಮೃತಿ ಪಟಲದ ಪುಟಗಳನ್ನು ಹಿ೦ದಕ್ಕೆ ತಿರುವಿಹಾಕಿದರೆ ಪೂಜ್ಯ ಚಿಕ್ಕಯ್ಯನ ಪ್ರಥಮ ನೆನಪು ಬರುವುದು ಮಡಿಕೇರಿಯದಲ್ಲ ಬೆ೦ಗಳೂರಿನ ನರಸಿ೦ಹರಾಜ ಕಾಲೋನಿಯ ಅವರ ಒ೦ಟಿ ಕೋಣೆಯದ್ದು. ಇದು ನನ್ನ ಇನ್ನೊಬ್ಬ (ಗತಿಸಿದ) ಚಿಕ್ಕಯ್ಯ (ಕೃಷ್ಣ)ಮೂರ್ತಿಯವರ ರಸ್ತೆಯ ಪಕ್ಕದ ರಸ್ತೆ. ನಾವು ಆಗ ಬೆ೦ಗಳೂರು ಬಿಟ್ಟು ಮೈಸೂರಿಗೆ ಬ೦ದಾಗಿತ್ತು. ಆಗ ನಾನು ಎನ್.ಸಿ.ಸಿ. ಶಿಬಿರಕ್ಕೆಂದು ಬೆ೦ಗಳೂರಿಗೆ ಹೋದವನು ವಾರಾ೦ತ್ಯದಲ್ಲಿ ಚಿಕ್ಕಯ್ಯನ ಕೋಣೆಗೆ ಹೋಗುತ್ತಿದ್ದೆ. ನನ್ನ ವಾರದ ಕೊಳಕು ಬಟ್ಟೆಯನ್ನು ಅವರಿಗೆ ಒಪ್ಪಿಸಿ, ಅವರು ಮಾಡಿದ ಅವಲಕ್ಕಿಯನ್ನು ಕಬಳಿಸಿ ಮತ್ತೆ ವಾಪಾಸು ಶಿಬಿರಕ್ಕೆ ಜಾರಿಕೊಳ್ಳುತ್ತಿದ್ದೆ!! ಮು೦ದಿನವಾರ ವಾಪಾಸಾಗಿ ಹೊಸ ಕೊಳಕು ಬಟ್ಟೆಗಳನ್ನು ಅವರು ಮಡಿಮಾಡಿಟ್ಟ ಬಟ್ಟೆಗೆ ಬದಲಿಸಿಕೊಂಡು ಮತ್ತೆ ಅವಲಕ್ಕಿ ಮುಕ್ಕಿ ಪದರಾಡು!!

  ಮತ್ತಿನ ನೆನೆಪೆಲ್ಲ ಮೈಸೂರಿನಲ್ಲಿ ಅವರು ನಮ್ಮ ಮನೆಯಲ್ಲಿ ಸಹವಾಸಿಯಾಗಿ, ಅದೂ ನನ್ನ ಕೋಣೆಯಲ್ಲೆ ಕಳೆದ ಹಲವಾರು ವರ್ಷಗಳು. ಅ೦ಬಾಲದ ಭೀಕರ ಚಳಿಯ ಸಾಹಸಗಳಿ೦ದ ಹಿಡಿದು ಚಿಕ್ಕಯ್ಯನ್ನ ಸುಪ್ರಸಿದ್ದ ಭೂತದ ಕತೆಗಳವರೆಗೆ ಶೋತೃ ನಾನಾದೆ. ಅದರಲ್ಲಿ ಒ೦ದನ್ನು ಇಲ್ಲಿ ಉಲ್ಲೇಖಿಸುತ್ತೇನೆ:
  "ನಾವೆಲ್ಲ ಸೈನಿಕರು ನಮ್ಮ ವೃತ್ತಿಯ ತರಪೇತಿನ ಅ೦ಶವಾಗಿ ದಾರಿ ಕರೆಯಲ್ಲಿ "ಟ್ರೆ೦ಚ್" ತೋಡುತ್ತಾ ಇದ್ದೆವು. ಆಗ ಅಲ್ಲಿಗೆ ನಮ್ಮ ಆಫೀಸರನ ಮಕ್ಕಳು ಬ೦ದರು. ದರ್ಪದಿ೦ದ ‘ಏನ್ರೋ? ಏನು ತೋಡುತಿದ್ದೀರಿ,’ ಎ೦ದು ಕೇಳಿದರು". ಅವಮಾನ ಸಹಿಸಲಾರದ ಚಿಕ್ಕಯ್ಯನ ಉತ್ತರ "ನಿಮ್ಮ ಅಪ್ಪನ ಗೋರಿ!!"

  ಹೀಗೆ ಅನೇಕ ಸೈನಿಕ ವೃತ್ತಿಯ ಅನುಭವ ತುಣುಕುಗಳು ನನ್ನ ಪಾಲಿನದ್ದಾಯಿತು. ನಾನು ನನ್ನ ಪಾಠ ಪ್ರವಚನ ಎಲ್ಲಾ ಅವರತ್ತಿರ ಮಾತನಾಡುತ್ತಿದ್ದೆ. ನನ್ನ ಡಿಕ್ಟೇಶನ್, ಕ್ವಿಜ್ ಮಾಡುವುದು, ಬಾಯಿಪಾಠ ಪರೀಕ್ಷೆ ಎಲ್ಲಾ ಅವರಿಗೆ ತು೦ಬಾ ಸ೦ತಸವನ್ನು ಕೊಡುತ್ತಿತ್ತು ಮತ್ತು ತನ್ನ ಉಪಯುಕ್ತತೆ ಬಗ್ಗೆ ವಿಶ್ವಾಸ ಮೂಡಿಸುತಿತ್ತು. ಅವರಿಗೆ ನನ್ನ ಭವಿಷ್ಯತ್ತಿನ ಬಗ್ಗೆ ಅಪಾರ ಭರವಸೆ ಇತ್ತು. "ಆನ೦ದ ನೀನು ಸಮಾ ಓದಿ ಓದಿ ಜರ್ಮನಿಗೆ ಹೋಗಿ ಕೆಲಸ ಮಾಡಬೇಕು"! ಜರ್ಮನಿ, ಜರ್ಮನಿ, ಜರ್ಮನಿ ಎ೦ದು ಅವರು ಬೆಳಿಗ್ಗೆ ರಾತ್ರಿ ಜಪ ಮಾಡುತಿದ್ದರು, ನನ್ನನ್ನು ಹರಸುತ್ತಿದ್ದರು...... ಅವರ ಅ೦ದಿನ ಆಶೀರ್ವಾದ ನನ್ನಲ್ಲಿ ಫಲಿಸದಿದ್ದರೂ ನನ್ನ ಮು೦ದಿನ ಪೀಳಿಗೆಯಾದ ಅಭಯಸಿ೦ಹನಲ್ಲಿ ಫಲಿಸಿತು.

  ವರ್ಷ ಉರುಳಿತು. ಅಸ್ಸಾ೦ನಲ್ಲಿ ನಮ್ಮ ಪ್ರಥಮ ಅತಿಥಿಯಾಗಿ ಚಿಕ್ಕಯ್ಯ ಬ೦ದಾಗ ನನಗೂ ನನ್ನ ಬಾರ್ಯೆ ಜಯಶ್ರೀಗೂ ಅತೀವ ಆನ೦ದ. ಅವರನ್ನು ಅಸ್ಸಾ೦ ತೋರಿಸಲೆ೦ದು ಸುತ್ತಿಸಿದರೆ ಚಿಕ್ಕಯ್ಯನ ಅಭಿಪ್ರಾಯ "ನಿಮ್ಮ ಕಾರಲ್ಲಿ ಒಳ್ಳೆ ನಿದ್ರೆ ಬರ್ತದೆ ಮಾರಾಯ". ಬೆಕ್ಕು ಚಿಲಿ ಪಿಲಿ ಇಲಿಯೊ೦ದನ್ನು ಅರಮನೆಯಲ್ಲಿ ಕ೦ಡ೦ತೆ ಚಿಕ್ಕಯ್ಯ ಇಡೀ ಅಸ್ಸಾ೦ನಲ್ಲಿ ಗಮನಿಸಿದ್ದು, ನನ್ನ ಕಾರಲ್ಲಿ ಲಾಯಕದಲ್ಲಿ ಮಲಗಲು ಆಗುತ್ತದೆ ಎ೦ದು!!

  ಮತ್ತೆ ನನ್ನ ಚಿಕ್ಕಯ್ಯ ಸ೦ಪರ್ಕ ೨-೩ ವರ್ಷಕ್ಕೊಮ್ಮೆ , ನಾನು ಭಾರತಕ್ಕೆ ಬ೦ದಾಗ. ನನ್ನ ಮಕ್ಕಳಿಗೆ ಈಶ್ವರಜ್ಜನ ಭೂತದ ಕತೆಗಳು ಮರೆಯಲಾರದ ಭಾರತದ ಅನುಭವಗಳಾದವು!! ಮದುವೆಯಾಗದೆ, ಭಾರತದ ಅತಿ-ಸ೦ತಾನ ಸಾಗರಕ್ಕೆ ತಮ್ಮ ಕಾಣಿಕೆ ಈಯದೆ ತಾನು ಅತಿದೊಡ್ಡ ಸೇವೆ ಮಾಡಿದ್ದೇನೆ ಎ೦ದು ಯಾವತ್ತೂ ಹೆಮ್ಮೆಯಿ೦ದ ಹೇಳಿಕೊಳ್ಳುತ್ತಿದ್ದರು!! ಅಪರಿಚಿತರು ಕೇಳಿದರೆ ಹೆ೦ಡತಿ ಮಕ್ಕಳು ಮಡಿಕೇರಿಯಲ್ಲಿದ್ದಾರೆ, ೬ ಮಕ್ಕಳು ಎ೦ದೆಲ್ಲ ಹೇಳಿ ಕೇಳಿದವರನ್ನು ಮ೦ಗ ಮಾಡುವುದರಲ್ಲಿ ಚಿಕ್ಕಯ್ಯ ತು೦ಬಾ ಸ೦ತೋಷ ಪಡುತಿದ್ದರು. ಹೀಗೆ ಏಕಾ೦ಗ ವೀರನಾಗಿ ಯಾರ ಹ೦ಗಿಲ್ಲದೆ, ಯಾರಿಗೂ ತೊ೦ದರೆ ಕೊಡದೆ, ಕಡಲ ತೀರದ ಮರಳಿನಲ್ಲಿ ತಮ್ಮ ಜೀವನ ಚರಿತ್ರೆಯನ್ನು ಬರೆದು ಕಣ್ಮರೆಯಾದ ನಮ್ಮ ಚಿಕ್ಕಯ್ಯನ ಕುಟೀರವನ್ನು ಜನಸೇವೆಗೆ ಮೀಸಲಿಡುವುದರೊಡನೆ ಅನಂತ ರುಕ್ಮಿಣಿಯರು ಪರೋಕ್ಷವಾಗಿ ಅವರ ಹೆಸರನ್ನು ಅಮರಗೊಳಿಸಿದ್ದಾರೆ, ಬದುಕನ್ನು ಸಾರ್ಥಕ ಎಂದೂ ಸಾರಿದ್ದಾರೆ.
  ಆನ೦ದ ವರ್ಧನ

  ReplyDelete
 27. ಅಪರೂಪದ ವ್ಯಕ್ತಿತ್ವವೊಂದನ್ನು ನಮ್ಮ ಮುಂದೆ ತೆರೆದು ಇಟ್ಟಿದ್ದೀರಿ.ಓದಿ ಮನಸ್ಸು ಭಾರವಾಯಿತು.ವಿಶಾದದ ಮಧ್ಯೆಯೂ ಅಲ್ಲಲ್ಲಿ ಇಣುಕಿದ ವಿನೋದ [ಕೆಲೆವು ಘಟನೆಗಳು ಹಾಗೂ ನಿಮ್ಮ ಶೈಲಿ ]ದಿಂದ ಸ್ವಲ್ಪ ಮಟ್ಟಿಗೆ ಹಗುರಾದ ಅನುಭವ.ಇತರರಿಗಿಂತ ’ಭಿನ್ನ’ವಾಗಿ ಬದುಕಿದಂತೆ ಕಂಡ ವ್ಯಕ್ತಿಗೆ ನಿಮ್ಮ ಶ್ರದ್ದಾಂಜಲಿ ಬಹಳ ಕಾಲ ಮನಸ್ಸಿನಲ್ಲಿ ಉಳಿಯುವುದು ಖಂಡಿತಾ.

  ReplyDelete
 28. ISHVARA MAAVANA BHOOTADA KATHE NIDDE KATHE THINNUVA KATHE KeLALU MARIKE MAKKALELLA AVARA AAGAMANAVANNU SAMBHRAMISUTTIDDEVU.AVARA BAAYALLI ESTUSALAVUU KELABAHUDU.DURYODHANACHALA ULISIKONDA MAAVA KANMUNDE BARUTTARE
  NALINI

  ReplyDelete
 29. ರುಕ್ಮಿಣಿಮಾಲಾ10 January, 2010 22:11

  ಈಶ್ವರ ಮಾವನ ಮನೆಗೆ ಅಕ್ಷರಿ ಮದುವೆ ನಿಶ್ಚಯ ಆದ ಸುದ್ದಿ ತಿಳಿಸಲು ಆಂದು ಹೋಗಿದ್ದಾಗ ಅವರು `ಅಕ್ಷರಿಗೆ ಮದುವೆಯಾ? ಏಕೆ ಅವಳನ್ನು ಸಾಕಲು ಆಗುತ್ತಿಲ್ಲವೆ? ಅಷ್ಟು ಸಣ್ಣ ಹುಡುಗಿಗೆ ಮದುವೆ ಮಾಡುವುದಾ? ನಾನು ನಿನ್ನೆ ಮೊನ್ನೆ ಕೇಳಿದ್ದು ರೇಡಿಯೋನಲ್ಲಿ ಅವಳು ಹಾಡಿದ ಪದ್ಯ. ಪುಟ್ಟ ಹುಡುಗಿ' ಇಲ್ಲ ಅವಳೀಗ ಸಣ್ಣ ಹುಡುಗಿಯಲ್ಲ. ಪದವೀಧರೆ ಅಂದೆ. `ಓ ಹೌದಾ? ನಂಬಲೇ ಆಗುವುದಿಲ್ಲ. ಹುಡುಗ ಹೇಗಿದ್ದಾನೆ? ಚೆನ್ನಾಗಿರಬಹುದು. ಎಂದು ನುಡಿದು ಆದರೆ ನಾನು ಮದುವೆಗೆ ಬರಲ್ಲ' ಅಂದರು.
  ಅವರ ಬಗ್ಗೆ ಬರೆದರೆ ಒಂದು ಪುಸ್ತಕವೇ ಬರೆಯಬಹುದು. ಅಷ್ಟು ವಿಷಯಗಳಿವೆ. ಅವರು ತೀರಿಹೋಗಿ ನಾಳೆಗೆ (೬-೧-೨೦೧೦) ಹನ್ನೊಂದನೇ ದಿನ. ಅದೇ ದಿನ ವಿವೇಕಾನಂದರ ಜಯಂತಿ. ಅವರಿಗೆ ವಿವೇಕಾನಂದರು ಪರಮಹಂಸರು ಅಂದರೆ ಬಹಳ ಪ್ರೀತಿ. ಕನ್ಯಾಕುಮಾರಿಯ ವಿವೇಕಾನಂದ ಚಾರಿಟೇಬಲ್ಗೆ ಪ್ರತೀವರ್ಷ ಅವರ ಕೈಲಾದ ಮೊತ್ತ ಕಳುಹಿಸುತ್ತಿದ್ದರು.
  ಜನವರಿ ೬ನೇ ತಾರೀಕು ಅವರ ಮನೆಯನ್ನು ಆರ್ ಎಸ್. ಎಸ್ ನ ವನವಾಸಿ ಕೇಂದ್ರದವರೀಗೆ ಉಚಿತವಾಗಿ ನೀಡುವ ಕಾರ್ಯಕ್ರಮ. ದೀಪ ಹಚ್ಚಿ ಉದ್ಘಾಟನೆ ಮಾಡುವವರು ಅವರ ಕೊನೇಗಳಿಗೆಯಲ್ಲಿ ಜೊತೆಗಿದ್ದ ರಾಘವೇಂದ್ರ ಭಟ್ಟರು.

  ReplyDelete
 30. Mrityunjaya Hegde13 January, 2010 12:27

  ಗೆಳೆಯ ಹರಿ ಈಗಷ್ಟೇ ತನ್ನ ದೊಡ್ಡಪ್ಪನ ಬಗ್ಗೆ ಬಂದ ಲೇಖನ ತೋರಿಸಿದ. ಪೂರ್ಣ ಓದಿದೆ; ಒಂದು ಕ್ಷಣ ತಲೆ ತುಂಬಾ ಅವರ ವ್ಯಕ್ತಿತ್ವ ಆವರಿಸಿಕೊಂಡಿತು. ಕ್ಷಣ ಮೌನವಾದೆ. ನನಗನ್ನಿಸಿತು ಅವರು ಋಷಿ ಮನಸ್ಸನ್ನು ಸಾದಿಸಿದ್ದಿರಬಹುದೆ? ತನ್ನ ಸಾದಕ ಪ್ರವ್ರತ್ತಿಯನ್ನು ತ್ಯಜಿಸದೇ, ಮಮಕಾರಗಳೆಡೆಗೆ ಮುಖ ಮಾಡದೇ, ತನ್ನ ಮನಸಿಗೆ ಸರಿ ಅನ್ನಿಸಿದ ದಾರಿಯಲ್ಲಿ ನಡೆದವರು. ಲೌಕಿಕದಲ್ಲಿ ತೊಡಗಿಕೊಂಡೇಅಲೌಕಿಕದತ್ತ ಮುಖ ಮಾಡಿದಂತಿದ್ದರು. ಯಾವುದು ಮನಸ್ಸಿಗೆ ಹಿಡಿಸುವುದಿಲ್ಲವೋ ಅದನ್ನು ಹಳೆಯ ಅಂಗಿಯನ್ನು ತೆಗೆದಂತೆ ತೆಗೆದು ಹಾಕಿ, ಯಾವುದಕ್ಕೆ ಮನಸ್ಸು ಹಾತೊರೆಯುತ್ತಿತ್ತೋ ಅದನ್ನು ವ್ರತದಂತೆ ಹಿಡಿದವ. ಸೋಲೋ-ಗೆಲುವೋ ತನ್ನ ಮನಸ್ಸಿಗೆ ಈ ದಾರಿ ಸರಿ ಕಂಡಿದೆ ಹೋಗುವುದು ತಪ್ಪಲ್ಲ ಅನ್ನಿಸಿದೆ ಹಾಗಾಗಿ ಹಾಗೆ ನಡೆದರು. ಸುತ್ತಲಿನ ಸಮಾಜದ ಈ 'ದೊಂಬಿದಾಸರ' ಪಾಳಯದಿಂದ ಪಾರಾಗಿ ಈ ಎಲ್ಲದರ ನಡುವೆ ತನ್ನನ್ನು ತಾನು ಒಂಟಿಯಾಗಿಸಿಕೊಳ್ಳುವುದು ಅನಿವಾರ್ಯವೆನ್ನಿಸಿತೇನೋ, ಹಾಗಾಗಿ ಏಕಾಂಗಿಯಾಗಿ ಉಳಿದುಬಿಟ್ಟರೇನೋ? ಕಾಲವೇ ಉತ್ತರಿಸಬೇಕು.

  ReplyDelete
 31. It is touching and interesting to read about Eashwarannaiah. To add to the memory Bank..
  We grew up together in our joint family. He would announce that he was going away to join the Army. For me thatwas scary. I would run to the elders with the news. But they were resigned to the outcome. After getting rejected a couple of times he managed to enlist.
  Often E. annaiah had to perform the Pooja at home. He would touch the Shivalinga to the floor and ask me to find out whether there was any earthquake - He was laughing at our superstition.
  Once he bragged that with the help of his newly acquired Janiwara and Gayatri mantra, he could make a team lose in our school match. As luck would have it, that team lost. The boys were furious and they wanted to burn the young vatu up! Of course, there were elders who saw the funny side of the whole affair!
  Way back in fifties, E Annaiah used to eat sprouts and fresh vegetables! Was he way ahead of his times!

  ReplyDelete
 32. ಅಶೋಕವರ್ಧನ ಜಿ.ಎನ್16 January, 2010 06:34

  ಜಿ.ಟಿ. ಈಶ್ವರ ಮರಣಾನಂತರದ ಕ್ರಿಯೆಗಳ ಝಲಕ್ ಕೊದುವ ಸ್ಲೈಡ್ ಪ್ರದರ್ಶನವೊಂದನ್ನು ಈಚೆಗೆ ಇಲ್ಲಿ ಕೊನೆಯಲ್ಲಿ ಸೇರಿಸಿದ್ದೇನೆ. ಆ ಕಾರ್ಯಗಳ ವಿವರಣೆಯನ್ನು ಸ್ವತಃ ನನ್ನ ತಮ್ಮ ಅನಂತ ವರ್ಧನ ಮತ್ತವನ ಹೆಂಡತಿ ರುಕ್ಮಿಣಿಮಾಲಾ, ಪುಡಾರಿಗಳು ಹೇಳುವಂತೆ ತಮ್ಮ ಬಿಡುವಿರದ ಕೆಲಸಗಳ ನಡುವೆಯೂ ಒಂದೆರಡು ದಿನಗಳಲ್ಲಿ ಬರೆದೂ ಬ್ಲಾಗಿಗರಿಗೆ ತಿಳಿಸುವುದಾಗಿ ಹೇಳಿದ್ದಾರೆ. ಆದರೆ ಪುಡಾರಿಗಳ ಹಾಗೆ ಮಾತು ತಪ್ಪುವ, ಹೇಳಿ ಮರೆಯುವ ಕೆಟ್ಟ ಬುದ್ಧಿ ಇವರದಲ್ಲ ಎನ್ನುವುದನ್ನು ನಂಬಿ ಅದನ್ನೂ ನೀವು ಕಾದು ಓದಬಹುದು.

  ಬ್ಲಾಗ್ ಬರಹಗಳು ಅರೆಖಾಸಗಿ ಆದರೆ ಪೂರ್ಣ ಸಾರ್ವಜನಿಕ ಜವಾಬ್ದಾರಿಯುತವಾಗಿ ನಡೆಸಬೇಕಾದ ಸಂವಹನ ಮಾಧ್ಯಮ ಎಂದೇ ನಂಬಿ ನಾನು ನಡೆಸುತ್ತಿದ್ದೇನೆ. ಇಲ್ಲಿ ಅನಿವಾರ್ಯವಾಗಿ ನಾನು, ನನ್ನಪ್ಪ, ನನ್ನ ಹೆಂಡತಿ, ನನ್ನ ಚಿಕ್ಕಪ್ಪ ಇತ್ಯಾದಿ ಬಂದರೂ ‘ಅದನ್ನು ಕಟ್ಟಿಕೊಂಡು ನಮಗೇನು’ ಎನ್ನುವ ಭಾವ ಇದರ ಓದುಗರಿಗೆ ಬರಲೇಬಾರದ ಜಾಗೃತಿ ಸದಾ ಉಳಿಸಿಕೊಳ್ಳಲು ಪ್ರಯತ್ನಿಸಿದ್ದೇನೆ. ಹಾಗಾಗಿ ದಯವಿಟ್ಟು ಪ್ರತಿಕ್ರಿಯೆಯಲ್ಲಿ ಔಪಚಾರಿಕ ಹೊಗಳಿಕೆಯ ಹೊರೆ ನನ್ನ ಮೇಲೆ ಹಾಕಬೇಡಿ. ಆದರೆ ನಿಮ್ಮನುಭವದ, ಸಹ-ಭಾವದ ಪ್ರತಿಕ್ರಿಯೆಗಳನ್ನು ತಿಳಿಸುತ್ತಿರುವುದು ಅಷ್ಟೇ ಅಷ್ಟೇ ಅವಶ್ಯ. ಇಲ್ಲಿ ಹಲವರು ‘ಭಾಷೆ ದೊಡ್ಡ ಸಮಸ್ಯೆ’ (ಗಣಕದಲ್ಲಿ ಕನ್ನಡ ಬರೆಯಲು ಬರುವುದಿಲ್ಲ ಇತ್ಯಾದಿ) ಎಂಬಂತೆ ಕಷ್ಟಪಡುವುದು ಅನಾವಶ್ಯಕ. ಕನ್ನಡ ಚಂದ, ಇಂಗ್ಲಿಷ್ ಲಿಪಿಯ ಕನ್ನಡವಿರಲಿ, ಶುದ್ಧ ಇಂಗ್ಲೀಷೇ ಇರಲಿ - ನಮ್ಮ ವಲಯದ ಬ್ಲಾಗ್ ಲೋಕಕ್ಕೆ ನುಗ್ಗುವವರಿಗೆ ಅರ್ಥವಾಗದ್ದೇನೂ ಅಲ್ಲ. ಸಂಕೋಚ ಬಿಟ್ಟು, ಮುದ್ರಣ ಮಾಧ್ಯಮಗಳಂತೆ ಶಬ್ದ ಸಂಖ್ಯೆಯ ಮಿತಿ ಹರಿದು ಬರೆಯುವಿರಾಗಿ ನಂಬಿದ್ದೇನೆ. ನಾನೂ ಎಲ್ಲ ವಹಿಸಿಕೊಂಡವನಂತೆ ಹಾಗೆ ಬರೆದ ಪ್ರತಿಯೊಬ್ಬರಿಗೆ ವೈಯಕ್ತಿಕ ಕೃತಜ್ಞತೆಗಳನ್ನು ಪ್ರಕಟಿಸದಿರಬಹುದು ಆದರೆ ಖಂಡಿತವಾಗಿಯೂ ಗಮನಿಸಿಯೇ ಮುಂದುವರಿಯುತ್ತೇನೆ.
  ಇಂತು ವಿಶ್ವಾಸಿ
  ಅಶೋಕವರ್ಧನ

  ReplyDelete
 33. ಪಂಡಿತಾರಾಧ್ಯ16 January, 2010 06:38

  ಪ್ರಿಯರೆ,
  ನಿಮ್ಮ ನಿಲುವು ಸರಿ ಇದೆ. ನಿಮ್ಮ ಬರಹಗಳಿಗೆ ಪ್ರತಿಕ್ರಿಯಿಸುವವರು ತಮಗೆ ಗಣಕದಲ್ಲಿ ಸಮರ್ಪಕವಾಗಿ ಭಾಷೆ ಬರೆಯಲು ಬರುವುದಿಲ್ಲವಲ್ಲ ಎನ್ನುವ ಸಂಕೋಚದಿಂದ ಸುಮ್ಮನಿರುವುದು ಬೇಡ. ಅವರ ಬರಹವನ್ನು ಒಮ್ಮೆ ಪರಿಶೀಲಿಸಿ ಪ್ರಕಟಿಸುವ ಸೌಲಭ್ಯವನ್ನು ನಾವು ಒದಗಿಸಿದರೆ ಅದು ಪರಿಹಾರವಾಗುತ್ತದೆ. ಅಂದರೆ ಪ್ರತಿಕ್ರಿಯಿಸುವವರು ಹೇಗೇ ಪ್ರತಿಕ್ರಿಯಿಸಿರಲಿ*(ಕನ್ನಡ/ ಇಂಗ್ಲಿಷ್ ಮಿಶ್ರಿತ ಕನ್ನಡ/ ಇಂಗ್ಲಿಷ್) ಅದನ್ನು ಅಲ್ಲಲ್ಲಿ ಸರಿಪಡಿಸಿ/ಅನುವಾದಿಸಿ ಪೂರ್ತಿ ಕನ್ನಡವಾಗಿಯೇ ಪರಿವರ್ತಿಸಿ ಪ್ರಕಟಿಸುವುದು ಅಪೇಕ್ಷಣೀಯ. ಕೆಂಡ ಸಂಪಿಗೆ ಆರಂಭದಲ್ಲಿ ರಶೀದರಿಗೂ ಇದನ್ನು ಹೇಳಿದ್ದೆ. ಅವರಿಗೆ ಸಹಾಯಕರು ಇರಬಹುದು. ನಿಮಗೆ ಎಷ್ಟು ಸಾಧ್ಯವಿದೆಯೊ ತಿಳಿಯದು. ದೇವಕಿಯವರು ಸಂಪಾದಕತ್ವದ ಹೊಣೆ(ರೆ) ಹೊರಬಲ್ಲರಾದರೆ ಆಗಬಹುದು.
  --------
  *ನರಹಳ್ಳಿ ಬಾಲಸುಹ್ರಹ್ಮಣ್ಯ ಅವರಿಗೆ ಅರ್ಪಿಸಿದ `ಕನ್ನಡ ವಿಮರ್ಶಾ ವಿವೇಕ'ದಲ್ಲಿರುವ ಅವರ ಮಗಳ `ಮೈ ಡ್ಯಾಡ್' ಇಂಗ್ಲಿಷ್ ಲೇಖನವನ್ನು ಕನ್ನಡದಲ್ಲಿ ಅನುವಾದಿಸಿ ಪ್ರಕಟಿಸಿದ್ದರೆ ಚೆನ್ನಾಗಿರುತ್ತಿತ್ತು. ಅದನ್ನು ಓದುವಾಗ ಮಹಾತ್ಮಾ ಗಾಂಧಿಯವರ ಮಾತು: `ಭಾರತೀಯ ಮಗು ತನ್ನ ತಂದೆ ತಾಯಿಗಳಿಗೆ ಇಂಗ್ಲಿಷಿನಲ್ಲಿ ಪತ್ರ ಬರೆಯುವುದನ್ನು ನೋಡಿದಾಗ ನನ್ನ ಕಣ್ಣಲ್ಲಿ ರಕ್ತ ಬರುತ್ತದೆ' ನೆನಪಾಯಿತು.

  ಪ್ರೀತಿಯಿಂದ
  ಪಂಡಿತ

  ReplyDelete
 34. Dear Sri Ashoka Vardhana-ji
  After reading about your dear uncle I could guage your seniors by drawing a comparison with Karanth brothers ! What an illustrious career growth of youe departed uncle !

  ReplyDelete
 35. ಜಿ.ಟಿ. ಈಶ್ವರರ ಆತ್ಮಕ್ಕೆ ಆ ಭಗವಂತನು ಶಾಂತಿ ನೀಡಲಿ.

  ಒಂದು ಉತ್ತಮ ಬದುಕನ್ನು ಮತ್ತು ಹಾಗೆ ಬದುಕಿದವರನ್ನು ಪರಿಚಯಿಸಿದ ನಿಮಗೆ ಧನ್ಯವಾದಗಳು

  -ಶೆಟ್ಟರು

  ReplyDelete
 36. ಚಂದ್ರ ಶೇಖರ ಬೆಂಗಳೂರು25 January, 2010 23:45

  ಸ್ವಯಂಪ್ರೇರಿತ ಕರಿನೀರಶಿಕ್ಷೆಯ ವಸ್ತುನಿಷ್ಠ ನಿರೂಪಣೆ ಹುಟ್ಟುಹಾಕಿದ್ದು ಗಾಢ ವಿಷಾಧ. ಈಶ್ವರ ದೊಡ್ದಪ್ಪ ಇದಕ್ಕಿಂತ ಉತ್ತಮ ಬದುಕಿಗೆ ಖಂಡಿತಾ ಅರ್ಹರಾಗಿದ್ದರು.

  ReplyDelete
 37. Laxminarayana Bhat P27 October, 2010 18:15

  ಪ್ರೀತಿಯನ್ನು ಆತ್ಮೀಯವಾಗಿ ನವಿರು ಹಾಸ್ಯದೊಂದಿಗೆ ಹಂಚಿಕೊಳ್ಳುವುದು ಹೀಗಲ್ಲವೇ! ಓದಿ ಖುಷಿಯಾಯಿತು - ಜೊತೆಗೆ ಒಂಥರಾ ಕಸಿವಿಸಿಯೂ ಕೂಡಾ. ನಮಸ್ಕಾರ.

  ReplyDelete
 38. thank you dear Ashoka Vardhana, for posting this beautiful description ofb your chikkayya.

  ReplyDelete