25 December 2009

ತೆರೆಮರೆಯ ಕುಣಿತ

ನಿದ್ದೆಗೇಡಿ ನಾನು ಮೂರು ಗಂಟೆಗೇ ಎದ್ದರೂ (೨೮-೧೨-೨೦೦೯ರಂದು) ನಮ್ಮ ಮನೆಗೆ ಬೆಳಿಗ್ಗೆ ಐದು ಗಂಟೆಗೆ ಆಯ್ತು. ಮನೆಯಲ್ಲಿ ನಾವು ನಾಲ್ಕೇ ಜನವಿದ್ದರೂ ಬೆಂಗಳೂರಿನಿಂದ ಬರಲಿದ್ದ ಕ್ಯಾಮರಾ ತಂಡದ ನಿರೀಕ್ಷೆಯಲ್ಲಿ ಬಾಯ್ಲರ್ ಕುದಿಸಿದೆವು. ಮದುಮನೆಯ ಸಂಭ್ರಮದಲ್ಲಿ ನಮ್ಮ ಪೂರ್ವರಂಗಗಳನ್ನೆಲ್ಲ ಮುಗಿಸಿ, ಆರು ಗಂಟೆಗೆಲ್ಲಾ ಇನ್ನೇನು, ಮುಂದೇನು ಎನ್ನುವ ಸ್ಥಿತಿ. ಕುತೂಹಲಕ್ಕೆ ಅಭಯ ಚರವಾಣಿಯಲ್ಲಿ ಕ್ಯಾಮರಾ ತಂಡದ ನಾಯಕ ಧರ್ಮೇಂದ್ರರನ್ನು ವಿಚಾರಿಸಿಕೊಂಡ. “ಅಯ್ಯೋ ಬಿಡಿ ಸಾರ್, ಇನ್ನಾ ಒನ್ನೆಂಡಾಫ್ ಅವರ್ನಲ್ಲಿ ಮಂಗ್ಲೂರ್ ರೀಚಾಗ್ತೀವಿ.” ನಂಬಿದೆವು, ನನ್ನ ಕಾರು ಅಂಗಳಕ್ಕೆ ಇಳಿಯಿತು, ಹೋಟೆಲಿನ ಇಡ್ಲಿ ಒಡೆ ತಂತು, ತಿಂತು (ಏಯ್! ಕಾರ್ ತಿನ್ಲಿಲ್ಲಾ ಬಿಡಿ). ಡಾ| ಮನೋಹರ ಉಪಾಧ್ಯರ ದೊಡ್ಡ ಕಾರನ್ನು ಚಾಲಕ ತಂದ, ಅದಕ್ಕೂ ನನ್ನದಕ್ಕೂ ಒಂದೊಂದು ಜನರೇಟರ್ ಅಲ್ಲದೆ ಏನೇನೆಲ್ಲಾ ತುಂಬಿ ಸಜ್ಜುಗೊಳಿಸಿದೆವು. ಉಪಾಯ್ದರೂ (ಕೋಟದ ಆಡುನುಡಿಯಲ್ಲಿ ಉಪಾಧ್ಯರು>ಉಪಾಯ್ದರೂಂತ ಹಿಂದೆಯೇ ಹೇಳಿದ್ದು ಇಷ್ಟು ಬೇಗ ಮರೆತಿರಲಾರಿರಿ.) ಬಂದರು, ಆದರೆ ಕ್ಯಾಮರಾ ಟೀಮ್ ಬರಲಿಲ್ಲ! ಬಾಯ್ಲರ್, ಇಡ್ಲಿ ಸಾಂಬಾರ್ ತಣಿದಿತ್ತು, ಅಭಯ ಕುದಿಯುತ್ತಿದ್ದ. “ಒನ್ನೆಂಡಾಫ್ ಅಂತೆ, ಟೂ ಆಯ್ತು. ಮೊಬೈಲ್ ನೋಡಿದರೆ ‘ಸ್ವಿಚ್ಡಾಫ್’ ಬರ್ತಾ ಇದೆ...” ಶತಪಥ ಹಾಕುವುದಷ್ಟೇ ಉಳಿಯಿತು.ಕ್ಯಾಮರಾ ತಂಡಕ್ಕೆ ಮಂಗಳೂರೇನು ಘಟ್ಟದೀಚಿನ ನೆಲವೇ ಹೊಸ ಪರಿಚಯ. ಅಷ್ಟೂ ದಾರಿ ತಪ್ಪಿರಬಹುದೇ ಆಕಸ್ಮಿಕಗಳಿಗೆ ಒಳಗಾಗಿರಬಹುದೇ “ಬೆಂಗಳೂರು ಬಿಟ್ಟಿದ್ದೇವೆ” ಎಂದದ್ದೇ ಸುಳ್ಳಿರಬಹುದೇ ಎನ್ನುವವರೆಗೂ ಸಂಶಯಗಳು ಕಾಡತೊಡಗಿದವು. ತಂಡದ ಏಕೈಕ ಸಂಪರ್ಕ ಸಾಧ್ಯತೆ (ಧರ್ಮೇಂದ್ರ) ಮೌನವಾಗಬೇಕಾದರೆ ಬ್ಯಾಟರಿ ಲೋ ಇರಬೇಕು. ಆ ಆರು ಜನರ ತಂಡದಲ್ಲಿ ಬೇರೊಬ್ಬರ ಸೆಟ್, ದಾರಿ ಬದಿಯ ಬೂತಿನಿಂದ ಮಾಡಬಾರದೇ? ಆದರೆ ಹೊಸತಲೆಮಾರಿನ ಅನಕ್ಷರಸ್ಥರ ನೆನಪೆಲ್ಲ ಮೊಬೈಲ್ ಒಳಗೆ ಲೀನವಾಗಿ, ಅಭಯನ ಸಂಪರ್ಕ ಸಂಖ್ಯೆ ಧರ್ಮೇಂದ್ರನ ಸೆಟ್‌ನಲ್ಲಿದ್ದು ಒಟ್ಟಾರೆ ತಂಡ ಸಂತ್ರಸ್ತವಿರಬೇಕು ಎನ್ನುವಲ್ಲಿಗೆ ನಮ್ಮ ಯೋಚನಾಪಥ ಕುರುಡು ಕೊನೆ ತಲಪಿತ್ತು. ಅಭಯನಿಗೆ ತಂಡದ ಇನ್ನೊಬ್ಬನೇ ಪೂರ್ವ ಪರಿಚಿತ ಸದಸ್ಯ - ಸೆಲ್ವ. ಆದರೆ ಆತನ ಸಂಪರ್ಕ ಸಂಖ್ಯೆ ಅಭಯನಲ್ಲಿರಲಿಲ್ಲ. ಅನಿವಾರ್ಯವಾಗಿ ಬೆಂಗಳೂರಿನ ಸಮ-ಮಿತ್ರನೊಬ್ಬನಿಗೆ ಬೆಳ್ಬೆಳಗೆ ತೊಂದರೆ ಕೊಟ್ಟು, ಸೆಲ್ವನ ಚರವಾಣಿ ಸಂಖ್ಯೆ ಹುಡುಕಿಸಿ ಮತ್ತೆ ತಂಡದೊಡನೆ ಸಂಪರ್ಕ ಸಾಧಿಸುವಾಗ ಗಂಟೆ ಒಂಬತ್ತೂವರೆಯೇ ಕಳೆದಿತ್ತು. (ಅಭಯ ಜೊತೆಜೊತೆಗೆ ತನ್ನ ಕ್ಯಾಮರಾಕ್ಕೆ ಜೊತೆಗೊಡಲು ಸ್ಥಳೀಯವಾಗಿ ಇನ್ನೊಂದು ಕ್ಯಾಮರಾ ಹುಡುಕಿ, ಅಂತಿಮ ಆದೇಶ ಕೊಡುವುದೊಂದು ಬಾಕಿ!) ತಂಡ ಸಮಸ್ಯೆ, ಸುಳ್ಳು, ನಿದ್ರೆ, ಅವ್ಯವಸ್ಥೆಗಳದ್ದೆಲ್ಲ ಒಂದೊಂದಂಶ ಕಟ್ಟಿಕೊಂಡು ಆಗಷ್ಟೇ ಪುತ್ತೂರು ದಾಟಿ ಬರುತ್ತಿರುವುದು ಖಾತ್ರಿಯಾಯ್ತು. ಅಂದರೆ ಮಂಗಳೂರಿಗೇ ಬರುವುದಾದರೆ ಮತ್ತೂ ‘ಒನ್ನೆಂಡಾಫ್ ಅವರ್ರು.’ ಆ ಯೋಜನೆ ರದ್ದುಪಡಿಸಿ, ಅವರನ್ನು ಅಭಯಾರಣ್ಯದಲ್ಲೇ ಎದುರುಗೊಳ್ಳುವಂತೆ ಸೂಚನೆಗಳನ್ನು ಕೊಟ್ಟು ನಾವೂ ಅತ್ತ ಧಾವಿಸಿದೆವು.

ದೇವಕಿಯ ಸಿದ್ಧತೆಗಳು ಮೊದಲ ನಡೆಯಲ್ಲೇ ಪೂರ್ಣ ಸಮರ್ಥನೀಯವಾದವು. ಇವಳ ಕೆಲಸಗಳಿಗೆ ಪೂರಕವಾಗಿ, ಸೂಚನೆಗಳಿಗೆ ಕಾರ್ಯರೂಪವಾಗಿ ರಶ್ಮಿ (ಸೊಸೆ, ಅಭಯನ ಹೆಂಡತಿ) ಇದ್ದೇ ಇದ್ದಳು. ಉಸ್ತುವಾರಿಯ ಮಟ್ಟದಲ್ಲಿ ಕಂಗೊಳಿಸುವ ನಮಗೆ ಯಾವುದೇ ಕೆಲಸಕ್ಕೆ  ಸಮರ್ಥ ಕಾರ್ಯಶೀಲರಾಗಿ ಒದಗಿದವರು ಮೂವರು. ಉಪಾಯ್ದರ ಸಹಾಯಕ ರಾಜೇಶ ಮತ್ತು ನನ್ನಂಗಡಿಯ ಸಹಾಯಕರಾದ ಶಾಂತಾರಾಮ ಮತ್ತು ಅಫ್ಜಲ್  ನಲ್ವತ್ತಡಿ ಆಳದ ಬಾವಿಯಿಂದ ಕೊಡ ಕೊಡ ನೀರು ಸೇದಿ, ಹತ್ತೆಂಟು (ಹದಿನೆಂಟರ ಗಂಟುಹಾಕಬೇಡಿ ಸ್ವಾಮಿಯೇ!) ಮೆಟ್ಟಿಲು ಹತ್ತಿ ಡ್ರಂ, ಕಡಾಯ ಸಕಾಲಕ್ಕೆ ತುಂಬಿಕೊಟ್ಟರು. (ಕಾಡ್ಮನೆಯದ್ದು ಮಾತ್ರವಲ್ಲ ನಾನೂರು ಮೀಟರ್ ಆಚಿನ ದಿನದ ಕಲಾಪಗಳ ಕೇಂದ್ರದಲ್ಲೂ ಕುಡಿಯುವ ನೀರಿನ ಅವಶ್ಯಕತೆಯನ್ನು ಇವರು ಪ್ರದರ್ಶನ ಮುಗಿಯುವವರೆಗೂ ನಿಷ್ಠೆಯಿಂದ ಪೂರೈಸಿದರು.) ಅನಿರೀಕ್ಷಿತವಾಗಿ ಬಂದ ಆರೂ ಜನರ ಸ್ನಾನಪಾನಾದಿಗಳಿಗೆ ಕಾಡ್ಮನೆಯಲ್ಲಿ ಯಾವುದೇ ಕೊರತೆ ಬರಲಿಲ್ಲ. ಮಂಗಳೂರಿನಿಂದ ಹೋಟೆಲ್ ತಿಂಡಿಯೇನೋ ಒಯ್ದಿದ್ದೆವು ಆದರೆ ಚಾ ಕಾಫಿ? ಆಗ ಅವರಿಗೇಂತೇನು ರಾತ್ರಿ ಎರಡೂವರೆಗೆ ಎಲ್ಲ ಚದರುವ ವೇಳೆ ಸಮೀಪಿಸುತ್ತಿದ್ದಾಗಲೂ “ಭಾಗವತರಿಗೆ ಚಪ್ಪೆ, ಉಳಿದಂತೆ ಐದು ಚೀಪೆ ಚಾ” ಎಂದವರಿದ್ದರು. ಯಾರನ್ನೋ ಜೊತೆಮಾಡಿಕೊಂಡು, ಕೈಕೊಟ್ಟ ಟಾರ್ಚಿಗೆ ಬದಲಿಯಾಗಿ ಇಣುಕುವ ಬೆಳದಿಂಗಳನ್ನೇ ನೆಚ್ಚಿ ಕಾಡುತುಳಿದು, ಸೀಮೆಣ್ಣೆ ದೀಪದ ಮಿಣುಕಿನ ಕಾಡ್ಮನೆ ಸೇರಿ ದೇವಕಿ ಸಹಜವಾಗಿ ಸುಧಾರಿಸಿದಳು. ಆಟ ಮುಗಿದು ಉಳಿದ ರಾತ್ರಿಗೆ ಅಲ್ಲೇ ಮಲಗಿ ಮರುಬೆಳಿಗ್ಗೆ ಎದ್ದವರಿಗೂ ಚಾ-ಲನ ಶಕ್ತಿ ರಿಲೀಜಾ ಮಾಡಿದ್ದು ದೇವಕಿ-ರಶ್ಮಿ ಕಂಬೈನ್ಸ್!

ಎರಡೂ ತಂಡಗಳು ಮಧ್ಯಾಹ್ನದ ಊಟದ ಸುಮಾರಿಗೆ ಹಾಜರಾಗುವ ಸೂಚನೆ ಕೊಟ್ಟಿದ್ದವು. ಕ್ಯಾಮರಾ ತಂಡದವರು ಹೀಗೇ ರಂಗದ ಮೇಲೊಂದು ಕಣ್ಣಾಡಿಸಿ ನಿದ್ರೆಗೆ ಜಾರಿದರು. ಹೊತ್ತೇರುತ್ತಿದ್ದಂತೆ ಸಹಾಯಕ್ಕೊದಗುವ ನಮ್ಮ ಆತ್ಮೀಯರ ಕೂಟ ಬೆಳೆಯುತ್ತ ಹೋಯಿತು. ರಶ್ಮಿಯ ತಂದೆ - ಭಾಸ್ಕರ ಉಪಾಧ್ಯಾಯ (ಅನ್ವರ್ಥಕವಾಗಿ ಇವರು ಶಾಲಾ ಉಪಾಧ್ಯಾಯರೂ ಹೌದು), ಪತ್ನಿ ಪರಮೇಶ್ವರಿ (ಇವರೂ ಮನೆಯಲ್ಲೂ ಶಾಲೆಯಲ್ಲೂ ಉಪಾಧ್ಯಾಯಿನಿ!) ಹಾಗೂ ಕಿರಿಮಗಳು ಶ್ರದ್ಧಾಳೊಡನೆ  ಹಾಜರಿ ಪುಸ್ತಕದಲ್ಲಿ ಮೊದಲ ದಾಖಲು ಎನ್ನಬಹುದು. ದೇವಕಿಯ ಅಣ್ಣನ ಹೆಂಡತಿ - ವಿಶ್ವೇಶ್ವರಿ, ಮಗ ಆದಿತ್ಯ ಮತ್ತು ದೇವಕಿಯ ತಂಗಿಯ ಮಗ ಅಕ್ಷರನನ್ನು ಜೊತೆಮಾಡಿಕೊಂಡು ಪಾಣಾಜೆಯ ದೂರದಿಂದ ಸ್ವತಂತ್ರವಾಗಿ ಬಂದರು. ನನ್ನ ತಮ್ಮ ಅನಂತವರ್ಧನ, ಆತನ ಪತ್ನಿ ರುಕ್ಮಿಣಿ ಮತ್ತು ಮಗಾಳು ಅಕ್ಷರಿಯರು ಮೈಸೂರಿನಿಂದ ಹಿಂದಿನ ದಿನವೇ ಸಂಪಾಜೆ ಘಾಟಿ ಇಳಿದಿದ್ದರೂ ಅಂದು ಒಡಿಯೂರಿನಿಂದ ಬಂದು ಸೇರಿಕೊಂಡರು.

ಮನೋಹರ ಉಪಾಧ್ಯರ ಒಬ್ಬ ಅಣ್ಣ - ಶಿವಮೊಗ್ಗದ ಡಾ| (ಮನುಷ್ಯರ!) ರತ್ನಾಕರ ‘ಆಹೋ ರಾತ್ರಿ’ (ನನಗ ತಿಳಿದಂತೆ ಎರಡು ಬಾರಿ ಆಹೋರಾತ್ರಿ, ಅಂದ್ರೆ ಇಪ್ಪತ್ನಾಲ್ಕು ಗಂಟೆ ಯಕ್ಷಗಾನ ಆಯೋಜಿಸಿದ ಖ್ಯಾತಿ ಇವರದು) ಪಯಣಿಸಿ ಬಂದು ಸೇರಿಕೊಂಡರು. [ರತ್ನಾಕರರಿಗೆ ಹಿಂದೆ ‘ಮಂಟಪ’ ಇಲ್ಲ, ಮುಂದೆ ‘ಉಪಾಧ್ಯ’ವೂ ಇಲ್ಲ! ಯಾಕೇಂದ್ರೆ ಅವರ ಮಾತಲ್ಲೇ ಕೇಳಿ, “ನಮ್ಮಪ್ಪೈನಿಗೆ ಮಗ ಶಾಲಿಗ್ ಸೇರ್ಕಂದ್ರಾಯ್ತ್. ಶಾಲಿಗೆ ಸೇರ್ಸುವಾಗ ಬರ್ಸಿದ್ ಹೆಸ್ರ್ ಕೊನೇವರ್ಗ್ ಮುಂದರಿತ್ತ್ ಅಂತ ಆವಾಗೆಲ್ಲ ಗೊತ್ತಿರ್ಲಿಲ್ಲೆ. ನಮ್ಮಲ್ಲಿ ಪ್ರಭಾಕರಣ್ಣ ಮತ್ತೀ ಮನೋಹರನಿಗೆ ಮಾತ್ರ ಹೇಗೋ ಮನೆ ಹೆಸರು ‘ಪಿ’ (=ಪಾರಂಪಳ್ಳಿ), ಚಾಲ್ತಿ ಹೆಸರು ‘ಮಂಟಪ’ (ಇವರ ಕುಟುಂಬ ಹಿಂದೆಲ್ಲಾ ಮದುವೆ ಮಂಟಪ ಸಜ್ಜುಗೊಳಿಸುವಲ್ಲಿ ಪರಿಣತಿ ತೋರಿಸಿದ್ದಕ್ಕೆ ಸಿಕ್ಕ ವೃತ್ತಿನಾಮ), ಬಾಲಂಗೋಚಿ ‘ಉಪಾಧ್ಯ’ ಸೇರಿತ್ತ್.”] ಕೋಟೆಕಾರಿನ ಕಲಾಗಂಗೋತ್ರಿ ಎಂಬ ಹವ್ಯಾಸಿ ತೆಂಕು ತಿಟ್ಟು ಯಕ್ಷಗಾನ ಸಂಘದ ನಿಜ ಚಾಲನಾಶಕ್ತಿ - ಪರಿಚಿತ ವಲಯಗಳಲ್ಲಿ ‘ಸದಾಶಿವ ಮಾಸ್ಟ್ರು’ ಅಥವಾ ಕುಂಬಳೆ ಸದಾಶಿವ ಬಂದರು. ಯಕ್ಷಗಾನದ ರುಚಿಶುದ್ಧ ಪುನರುತ್ಥಾನಕ್ಕೆ ಹಲವು ಪ್ರಯೋಗ-ಪ್ರದರ್ಶನಗಳನ್ನು, ಕಮ್ಮಟ-ಗೋಷ್ಠಿಗಳನ್ನು ನಡೆಸುವಲ್ಲಿ, ಪುಸ್ತಕಗಳನ್ನೂ ತರುವಲ್ಲಿ ರಾಮಚಂದ್ರ ಉಚ್ಚಿಲ, ಅಮೃತಸೋಮೇಶ್ವರ ಮುಂತಾದ ಘನ ಹೆಸರುಗಳು ಸರಿಯಾಗಿಯೇ ಮೆರೆದಿವೆ. ಆದರೆ ಹಿನ್ನೆಲೆಯಲ್ಲಿ ಸ್ವತಂತ್ರ ವಿಚಾರ ಶುದ್ಧಿಯಿಂದಲೂ ಪ್ರೀತಿಯಿಂದಲೂ ಕತ್ತೆ ಚಾಕರಿ ಮಾಡಿದರೂ ಮೌನವಾಗಿ ಹಿಂದೆಯೇ ನಿಲ್ಲಲು ಬಯಸುವ ಏಕೈಕ ವ್ಯಕ್ತಿ ಈ ಸದಾಶಿವ ಮಾಸ್ಟ್ರು. ತಯಾರಿಗಳ ಚಂದ ಕಣ್ಣು ತುಂಬುವ ಮುನ್ನವೇ ನಮ್ಮ ಸ್ವಯಂ ಸೇವಕರ ತಂಡ ಇಂಥ ಅನೇಕರಿಂದ ಬಲವಾಯ್ತು. ಸರ್ವಂತರ್ಯಾಮಿ ಸತ್ಯ, ಗುಪ್ತಗಾಮಿನಿಯಂತೆ ಅವನಪ್ಪ, ಸಣ್ಣಣ್ಣ ಪ್ರಕಾಶ, ಬೆಂಗಳೂರಿನಿಂದ “ಆಟ ಬಿಟ್ಟಿರಲಾರೆ” ಎಂದೋಡಿ ಬಂದ ದೊಡ್ಡಣ್ಣ ಶಿವಶಂಕರ ಮುಂತಾದವರ ಮೇಳದಲ್ಲಿ ಪ್ರದರ್ಶನದ ವಠಾರಕ್ಕೆ ಹೋದೆವು.

ನಾಲ್ಕು ಬಿದಿರ ಕಂಬ ನಿರ್ದಿಷ್ಟ ಅಳತೆಯಲ್ಲಿ ಕಾಲೂರಿ ನಿಂತ ರಂಗದ ನೆಲಕ್ಕೆ ಹುಡಿ ಮಣ್ಣು ಪೆಟ್ಟಿಸಿ, ಸಗಣಿ ಸಾರಿಸಿಯಾಗಿತ್ತು. ಎರಡೂ ಪಕ್ಕದಲ್ಲಿ ದೀವಟಿಗೆಯ ಗೂಟಕ್ಕೆ ಗುಂಡಿ, ಗ್ಯಾಸ್ ನಳಿಕೆಯನ್ನು ಮರೆಮಾಡಲು ಸಪುರ ಚರಂಡಿ, ಅಂಡೆಯನ್ನು ಮರೆಮಾಡಲು ತಗ್ಗು ಮತ್ತು ಕಾಡುಕಲ್ಲುಗಳ ಒಟ್ಟಣೆ ಗಟ್ಟಿಯಾಗಲು ಯಕ್ಷ ಮತ್ತು ಸಿನಿ ನಿರ್ದೇಶಕರ ಓಕೆಗೆ ಕಾದಿತ್ತು. ಹಿಮ್ಮೇಳಕ್ಕೆ ಪಡಿಮಂಚ, ತೋರಣಕ್ಕೆ ಮಾವಿನ ಸೊಪ್ಪು, ದೀವಟಿಗೆ ಕಾಲು ಮರೆಮಾಡಲು ಬಾಳೆ ದಿಂಡು ಅಲ್ಲದೆ ಹೆಚ್ಚಿನ ಸೂಚನೆಗಳನ್ನು ಕಾರ್ಯರೂಪಕ್ಕೆ ತರಲು ಜನ ಸಾಮಾನುಗಳನ್ನೂ ಸತ್ಯ ಸಜ್ಜಾಗಿಟ್ಟಿದ್ದ. ಅಲ್ಲಿ ಸಹಜ ಕತ್ತಲಾವರಿಸಿ, ಯುಗಾಂತರಕ್ಕೆ ಪಯಣಿಸಲು ಕ್ಷಣಗಣನೆಯಷ್ಟೇ ಬಾಕಿ. ಚೌಕಿಯಿಂದ ರಂಗಕ್ಕೆ ಕಲಾವಿದರ ನಡೆಮಡಿ ಹಸನಾಗಿತ್ತು. ಜಿಂಕ್ ಶೀಟ್ ಮಾಡಿನ, ಶಾಮಿಯಾನ ಬಟ್ಟೆ ಮರೆಯ, ಕುರ್ಚಿ ಒಟ್ಟಣೆಯ ಪ್ರೇಕ್ಷಾಂಗಣ, ನಾಲ್ಕು ಮೇಜುಗಳ ತಿನಿಸುಗಟ್ಟೆ, ಶುದ್ಧ ನೀರಿನ ಡ್ರಂ, ಕಸ ಸೇರಿಸಲು ಡ್ರಂವರೆಗೆ ಎಲ್ಲವೂ ಆದರ್ಶಯುತವಾಗಿ ಸಜ್ಜಾಗಿತ್ತು.

ವಿದ್ಯುಜ್ಜನಕಗಳೆರಡನ್ನೂ ತಿನಿಸುಗಟ್ಟೆಯ ಬಳಿ ಇಳಿಸಿಟ್ಟೆವು. ಸೀಮೆಣ್ಣೆ, ಪೆಟ್ರೋಲ್ ತುಂಬಿದ್ದಲ್ಲದೆ ಹೆಚ್ಚುವರಿ ದಾಸ್ತಾನಿನ ಕ್ಯಾನ್ ಮತ್ತು ಅಂಡೆಗಳನ್ನು ಭದ್ರಗೊಳಿಸಿದ್ದೂ ಆಯ್ತು. ಹೋಲ್ಡರುಗಳ ಮಾಲೆಯಂತಿದ್ದ ವಯರುಗಳನ್ನು ಮರಗಳ ಮೇಲೆ ಹಾಯಿಸಿ, ಚೌಕಿಯಲ್ಲಿ ಮತ್ತು ರಂಗದ ಬಳಿ (ಪ್ಲಗ್ ಮಾತ್ರ) ವಿದ್ಯುತ್ ಪೂರೈಕೆಗೆ ಅಂತಿಮ ರೂಪ ಕೊಡುವುದೆಲ್ಲ ಶಾಂತಾರಾಮಾದಿಗಳು ಸಹಜವಾಗಿ ವಹಿಸಿಕೊಂಡರು (ಪ್ರದರ್ಶನದ ಕೊನೆಯವರೆಗೂ ನಿರ್ವಿಘ್ನವಾಗಿ ನಡೆಸಿಕೊಟ್ಟರು). ಉಳಿದ ನಾವೆಲ್ಲಾ ರಂಗಕ್ಕೆ ಕಟ್ಟಲು ಮಾವಿನ ತೋರಣದ ಪೋಣಿಕೆ ನಡೆಸಿ ಮುಗಿಸುತ್ತಿದ್ದಂತೆ ಕೇಟರಿಂಗ್‌ನ ರವಿ ನಲ್ಲೂರಾಯ ಬಳಗ “ಊಟ ರೆಡಿ” ಘೋಷಿಸಿದರು. ಬೆಂಗದಿರನ್ನು ವನದ ಹಸಿರು ಜಾಲರಿ ಸೋಸಿದ ನೆರಳಲ್ಲಿ, ನಗರದ ವಾಸನೆ ಗದ್ದಲಗಳ ಸೋಂಕಿರದ ಪರಿಸರದಲ್ಲಿ (ನನ್ನ ತಮ್ಮ ಅನಂತನ ಲಹರಿಯಲ್ಲಿ ಹೇಳುವುದಾದರೆ “ಇಲ್ಲಿ ಆಕ್ಸಿಜನ್ ಹೆಚ್ಚಾಗಿ ಸಂಕಟವಾಗುತ್ತಿದೆ”), ಧಾವಂತದ ಬದುಕಿನಲ್ಲೊಂದು ದೀರ್ಘ ಶ್ವಾಸ ಎಳೆದ ಸಂತೋಷದಲ್ಲಿ ಎಲ್ಲರೂ ಅತ್ತಿತ್ತ ಅಡ್ಡಾಡುತ್ತಾ ಕೆಂಪು ಕೆಂಪು ಕುರ್ಚಿಗಳಲ್ಲಿ ಹರಡಿ ಕುಳಿತು ಸಲ್ಲಪಿಸುತ್ತಾ ಬಿಸಿಯೂಟ ನಡೆಸಿದ್ದು ಸ್ಮರಣೀಯ ವನಭೋಜನವೇ ಆಯ್ತು.

ಒಂದೂವರೆ ಗಂಟೆಯ ಸುಮಾರಿಗೆ ಬಡಗು ತಿಟ್ಟಿನ ತಂಡ ಉಡುಪಿಯಿಂದ ತಮ್ಮದೇ ಬಸ್ಸಿನಲ್ಲಿ ಬಂದರು. ದೊಡ್ಡ ಬಸ್ಸು ಕಷ್ಟದಲ್ಲಿ ಮೊದಲ ಗೇಟನ್ನೇನೋ ದಾಟಿತಾದರೂ ಪ್ರದರ್ಶನ ವಠಾರದವರೆಗೆ ಬರುವುದಾಗಲಿಲ್ಲ. ಸ್ವತಃ ಗುರು ಸಂಜೀವರಿಂದ ಹಿಡಿದು ಎಲ್ಲ ಕಲಾವಿದರು ಯಾವುದೇ ಬಿಗುಮಾನಗಳಿಲ್ಲದೆ ಎಲ್ಲ ಸಾಮಾನುಗಳನ್ನು ತಲೆಹೊರೆಯಲ್ಲಿ ಹೊತ್ತು, ಚೌಕಿ ಮುಟ್ಟಿಸಿ ಊಟಕ್ಕೆ ಜೊತೆಯಾದರು. ಸ್ವಲ್ಪ ತಡವಾಗಿ ಕಿನ್ನಿಗೋಳಿಯಿಂದ ಬಂದ ತೆಂಕಿನವರ ಟೆಂಪೋ ಚೌಕಿಯಲ್ಲೇ ಸಾಮಾನು, ಕೆಲವು ಕಲಾವಿದರನ್ನೂ ಇಳಿಸಿತು. ತೆಂಕಿನದು ಆ ಸಂದರ್ಭಕ್ಕೆ ಸಂಯೋಜಿತ ತಂಡವಾದ್ದರಿಂದ ಸಂಜೆಯ ಒಳಗೆ ಉಳಿದ ಕಲಾವಿದರು ಎಲ್ಲೆಲ್ಲಿಂದಲೋ ಸ್ವಂತ ವ್ಯವಸ್ಥೆಯಲ್ಲಿ ಬಂದು ಸೇರಿಕೊಂಡರು. ಹೊತ್ತುಹೊತ್ತಿನ ಊಟ ಕಾಪಿ ಉಪಚಾರ, ಜನ ಮತ್ತು ಪರಿಸರದೊಡನೆ ಅನುಸಂಧಾನ ಎಲ್ಲರಿಗೂ ಯಕ್ಷ-ದಾಖಲೀಕರಣ ಸನ್ನಿವೇಶದ ಕಾಳಜಿ ಮತ್ತು ಗಾಂಭೀರ್ಯವನ್ನೂ ಮನದಟ್ಟು ಆದದ್ದಂತೂ ನಿಜ.

ಗುರು ಸಂಜೀವ ಸುವರ್ಣರಿಗೆ ರಂಗದ ಉದ್ದಗಲ ಅಳತೆ ಸಾಲದೆಂಬಂತೆ ಕಾಣಿಸಿತು. ಪಾಂಡವ ಒಡ್ಡೋಲಗದ ಕಲಾವಿದರನ್ನೇ ನಿಲ್ಲಿಸಿ, ಎರಡು ತೆರೆಹಿಡಿಯುವವರ ಲೆಕ್ಕ ಸೇರಿಸಿ ತಿದ್ದುಪಡಿ ಸೂಚಿಸಿದರು. ಸೂರಿಕುಮೇರು ಗೋವಿಂದ ಭಟ್ಟರೂ ಅವರ ಅರಿವಿನ ಸಾಂಪ್ರದಾಯಿಕ ಲೆಕ್ಕ ಹೇಳಿದರು.  (ರಾಘವ ನಂಬಿಯಾರ್ ಲೆಕ್ಕದಲ್ಲಿ ರಂಗದ ಉದ್ದಗಲ ಮತ್ತು ಜ್ವಾಲೆಯ ಎತ್ತರ ಇನ್ನೂ ಕಡಿಮೆಯದು) ಅದಕ್ಕೇನು, ಕ್ಷಣಾರ್ಧದಲ್ಲಿ ಮೂರೂ ಕಂಬಗಳನ್ನು ಎರಡಡಿ ದೂರಕ್ಕೆ (ಒಟ್ಟಾರೆ ಹನ್ನೆರಡು ಅಡಿ ಅಗಲ, ಹದಿನಾಲ್ಕಡಿ ಉದ್ದ) ಸ್ಥಳಾಂತರಿಸಿ, ಸೆಗಣಿ ಸಾರಿಸಿದ್ದಾಯ್ತು. ಐದಡಿ ಎತ್ತರದ ದೀವಟಿಗೆಯನ್ನು ಒಂದಡಿ ಕಡಿದು, ಮತ್ತೊಂದಡಿ ನೆಲದೊಳಕ್ಕಿಳಿಸಿ ತಗ್ಗಿಸಿದೆವು. ದೀವಟಿಗೆಗಳ ಪರಸ್ಪರ ಅಂತರ ಹಾಗೂ ರಂಗದಿಂದ ಅಂತರವೂ ಸಂಜೀವ ಸ್ಪರ್ಷ ಪಡೆಯಿತು. ಅನಿಲ ಜಾಡಿಗಳ ಸಂಪರ್ಕ, ಪರೀಕ್ಷಾ ಬೆಳಗುವಿಕೆ, ಮಾವಿನ ತೋರಣ, ಅಗತ್ಯವಿದ್ದಲ್ಲಿ ಎಲೆಗಳ ಕುಚ್ಚನ್ನೇ ಹೊಂದಿಸುವುದೆಲ್ಲ ದೊಡ್ಡ ಕೆಲಸವೇನಲ್ಲ.

ಅಭಯನ ಹಿನ್ನೆಲೆ ಮತ್ತು ಸೂಚನೆಗಳು ಎಷ್ಟು ಗಟ್ಟಿಯಿದ್ದರೂ ಮುಖ್ಯ ಕ್ಯಾಮರಾಮ್ಯಾನ್ ಧರ್ಮೇಂದ್ರರಿಗೆ ದಾಖಲಾತಿಯಲ್ಲಿ ದೀವಟಿಗೆ ಪ್ರಖರತೆ ಸಾಲದಾಗುವ ಭಯ ಇದ್ದೇ ಇತ್ತು. ಹಾಗಾಗಿ ನಮ್ಮ ಮೂಲ ಯೋಜನೆಯಲ್ಲಿ ಒಂದು ಜನರೇಟರ್ ಚೌಕಿಗೆ ಮತ್ತೊಂದು ಕಾಡ್ಮನೆಗೆ ಎಂದಿದ್ದದ್ದನ್ನು ತಿದ್ದಿಕೊಂಡಿದ್ದೆವು. ಮೂಲದಲ್ಲಿ ಕ್ಯಾಮರಾ, ಧ್ವನಿಗ್ರಹಣ ಉಪವೀಕ್ಷಣೆಯ ಟೀವೀ ಪರದೆಗಳೆಲ್ಲ ಬ್ಯಾಟರಿ ಚಾಲಿತವೆಂದಿದ್ದರೂ ಒಂದು ಜನರೇಟರ್ ಶಕ್ತಿಯನ್ನು (ಊಟದ ಜಾಗದೊಡನೆ) ದಾಖಲೀಕರಣ ಕಾರ್ಯಕ್ಕೇ ಮೀಸಲಿಟ್ಟುಕೊಂಡೆವು. ಬರಿಗಣ್ಣಿನ ವೀಕ್ಷಣೆಯಲ್ಲಿ ದೀವಟಿಗೆಯ ಮಂದ ಬೆಳಕಿನ ಒಲೆತವನ್ನೇನೂ ಪ್ರಭಾವಿಸದಂತೆ ಮೂರು ಫಿಲ್ಟರ್ ಬಳಸಿದ ಒಂದು ಸ್ಥಿರ ವಿದ್ಯುತ್ ಬೆಳಕನ್ನು ವೇದಿಕೆಗೆ ಇಟ್ಟುಕೊಂಡು ಎರಡು ಕ್ಯಾಮರಾಗಳು ಸಜ್ಜಾದವು. ಅವೆರಡರನ್ನೂ ಅಗತ್ಯಕ್ಕೆ ತಕ್ಕಂತೆ ಮೇಲುಸ್ತುವಾರಿ ಮಾಡಲು ಟೀವೀ ಪರದೆಗೆ ಸಂಪರ್ಕಿಸಲಾಯ್ತು. ಮೂರನೇ ಕ್ಯಾಮರಾ (ಅಭಯನ ಸ್ವಂತದ್ದು) ಸರ್ವಂತರ್ಯಾಮಿ; ಚೌಕಿಯಿಂದ ಪ್ರೇಕ್ಷಕರ ಮುಖಭಾವದವರೆಗೆ, ಸಂಪನ್ಮೂಲ ವ್ಯಕ್ತಿಗಳ ಸಂದರ್ಶನದಿಂದ ತಿಂಗಳ ಹಿಂದೆಯೇ ತೊಡಗಿದ್ದ ಆ ಜಾಗದ ಸಜ್ಜುಗೊಳಿಸುವಿಕೆಯವರೆಗೆ ಮುಖ್ಯಾಮುಖ್ಯಗಳ ವಿಶೇಷ ನಿಷ್ಕರ್ಷೆಯಿಟ್ಟುಕೊಳ್ಳದೆ ಎಲ್ಲವನ್ನು ದಾಖಲಿಸುತ್ತಿತ್ತು. ನಾವು ಹಿಂದೆ ಬಡಗು ತಿಟ್ಟಿನ ಪೂರ್ವರಂಗದ ದಾಖಲಾತಿ ವೇಳೆ ಮಿತವ್ಯಯದ ದೃಷ್ಟಿಯಲ್ಲಿ ರಂಗಕ್ರಿಯೆ ಗ್ರಹಿಸಲು ಎರಡು ಕ್ಯಾಮರಾಗಳನ್ನು ಬಳಸಿದ್ದರೂ ಸ್ಥಳೀಯವಾಗಿ ಸಂಕಲನ ವ್ಯವಸ್ಥೆಯಿಟ್ಟುಕೊಂಡು ಒಂದೇ ಟೇಪನ್ನು ತುಂಬಿದ್ದೆವು. ಆದರಿಲ್ಲಿ ಒಟ್ಟಾರೆ ದಾಖಲಾತಿಯ ಗರಿಷ್ಠ ಅವಧಿ ಆರು ಗಂಟೆ ಎಂದೇ ಇದ್ದರು ಎಲ್ಲಾ ಕ್ಯಾಮರಾಗಳಿಗೂ ಪ್ರತ್ಯೇಕ ಟೇಪುಗಳನ್ನು ಬಳಸಿದ್ದೆವು.

ಸಾಂಪ್ರದಾಯಿಕ ರಂಗದಲ್ಲಿ ಧ್ವನಿವರ್ಧಕಗಳಿರಲೇ ಇಲ್ಲ. ಆ ಕಾಲದಲ್ಲಿ ಭಾಗವತನಾದಿಯಾಗಿ ಪಾತ್ರಧಾರಿಗಳೆಲ್ಲಾ ಉಚ್ಚಕಂಠತ್ರಾಣಿಗಳೇ ಇದ್ದರಂತೆ. ಆದರೆ ಇಲ್ಲಿ ಇಂದಿನ ವ್ಯವಸ್ಥೆಗೆ (ಅವಸ್ಥೆ?) ಒಗ್ಗಿ ಹೋದ ಕಲಾವಿದರನ್ನು ದುಡಿಸಿಕೊಳ್ಳುತ್ತಿದ್ದೆವು. [ಭಾಗವತನ ಕಳ್ಳಧ್ವನಿ ಮರೆಯಿಸುವ, ಅಸ್ಥಿರ ಮತ್ತು ದುರ್ಬಲ ಪಲುಕುಗಳನ್ನು ‘ಚಂದಗಾಣಿಸುವ’ ವಿಶೇಷ ಮೈಕ್ ವ್ಯವಸ್ಥೆಯನ್ನು ಬಯಸುವ (ಕಳ್ಳವಿದರು?) ಕಲಾವಿದರನ್ನು ನಾವು ಆರಿಸಿರಲಿಲ್ಲ!] ಇದು ಧ್ವನಿಗ್ರಹಣದ ದಾಖಲಾತಿಯಲ್ಲಿ ಏರುಪೇರು ಉಂಟುಮಾಡುವುದು ಖಾತ್ರಿಯಿತ್ತು. ಹಾಗಾಗಿ ಮೈಕನ್ನು ರಂಗದ ಮೇಲಿನ ಮಾವಿನ ತೋರಣದೊಳಗೆ, ಭಾಗವತರ ಅಂಗಿಯ ಒಳಗೆ, ಪಾತ್ರಗಳು ಪ್ರವೇಶಿಸುವ ಭಾಗದ ಕಂಬದ ಮರೆಗೆಲ್ಲಾ ಹೊಂದಿಸಿದ್ದಾಯ್ತು. ತಮಾಷೆ ಅನ್ನಿ, ಪ್ರಾಯೋಗಿಕ ಸಮಸ್ಯೆ ಅನ್ನಿ ಅಂತೂ ಇಲ್ಲೊಂದೆರಡು ಉದಾಹರಣೆಗಳನ್ನು ಹೇಳದಿರಲಿ ಹೇಗೆ!

ರಂಗದಲ್ಲಿ ಲೀಲಾವತಿ ಬೈಪಡಿತ್ತಾಯರು ಪೂರ್ವರಂಗ ನಡೆಸಿದ್ದರು. ಹಿಂಬಾಲಿಸಲಿದ್ದ ಬಲಿಪರು ಮೈಕ್ ಸಿಕ್ಕಿಸಿಕೊಂಡು ಚೌಕಿಯಲ್ಲಿ ಕುಳಿತಿದ್ದರು. ದಾಖಲಾತಿಯ ನಿರ್ದೇಶಕ ಅಭಯ ಕಿವಿಗಿಟ್ಟುಕೊಂಡ ಗ್ರಾಹಕದಲ್ಲಿ ಬೈಪಡಿತ್ತಾಯರ “ಮುದದಿಂದ ಕೊಂಡಾಡುವೆನು” ರಾಗದೊಂದಿಗೆ ಕೆಳ ಧ್ವನಿಯಲ್ಲಿ “ನಿನ್ನೆ ರಾತ್ರಿ ಬಜಪೆಯಲ್ಲಿ ದೇವಿ ಮಹಾತ್ಮೆಯಿತ್ತು...” ಬಲಿಪವಾಣಿ ಕೇಳ ತೊಡಗಿತ್ತು! ಬಡಗುತಿಟ್ಟಿನ ಭಾಗವತ ಸತೀಶ ಕೆದಿಲಾಯರು ತಾಳ ಕುಟ್ಟುವಾಗ ಕೈಗಳೆರಡು ಮೇಲೆ ಬಾಯಿಯ ಬಳಿ ತರುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಅದು ಸಹಜವಾಗಿ ಅಲ್ಲೇ ಶರಟಿನ ಒಳಗೆ ಹುದುಗಿದ್ದ ಕಾಲರ್ ಮೈಕಿನ ವಿಭಿನ್ನ ತಾಕತ್ತಿನಲ್ಲಿ ದಾಖಲಾತಿಯಲ್ಲಿ ಕಿವಿಹರಿಯುವ ಅನುರಣನ ಉಂಟುಮಾಡುತ್ತಿತ್ತು. ಮೊದಲಲ್ಲೇ ತಿದ್ದುಪಡಿ ಸೂಚಿಸಿದ್ದಲ್ಲದೇ ಪ್ರಸಂಗದ ನಡುವೆಯೂ ಒಂದೆರಡು ಬಾರಿ ಕೈಕರಣದಲ್ಲೇ ‘ಅಭ್ಯಾಸ’ಕ್ಕೆ ಶಿಕ್ಷಣದ ಕಡಿವಾಣ ಹಾಕಬೇಕಾಯ್ತು! ಹನುಮಂತ ರಂಗಪ್ರವೇಶಕ್ಕೂ ಮುನ್ನ ಚೌಕಿಯಿಂದ, ಮತ್ತೆ ದಾರಿಯಿಂದ ಕೊಟ್ಟ ಅರಬ್ಬಾಯಿ ಪ್ರೇಕ್ಷಕರಿಗೇನೋ ಕುಶಿಕೊಟ್ಟಿತು. ಆದರೆ ಕಂಬದ ಮರೆಯಲ್ಲಿದ್ದ ಮೈಕಿನ ತಾಕತ್ತೇ ಅಷ್ಟೋ ಚಕ್ರತಾಳದವನ ‘ತಡೆ’ ಉಂಟಾಯ್ತೋ ಅಂತೂ ಟೇಪಿನಲ್ಲಿ ಪರಿಣಾಮ ಶೂನ್ಯ! ಅಭಯ ಕ್ಷಮಾಯಾಚನೆಯೊಡನೆ ಪ್ರದರ್ಶನ ನಿಲ್ಲಿಸಿ, ಮತ್ತೆರಡೆರಡು ಬಾರಿ ಆ ಕಲಾವಿದನನ್ನು ಮೈಕ್ ವಲಯದಲ್ಲಿ ನಿಲ್ಲಿಸಿ ಬರಿದೇ ಅರಬ್ಬಾಯಿ ಕೊಡುವಂತೆ ಮಾಡಿದ್ದು ಕೆಲವರಿಗೆ ಕ್ಷಣಿಕ ಅಸಮಾಧಾನ ಉಂಟುಮಾಡಿತ್ತು.

ಸೂರ್ಯ ಬಾಡುತ್ತಿದ್ದಂತೆ ತೆಂಕು ತಿಟ್ಟಿನ ಹಿಮ್ಮೇಳ ಸಮೀಪದ ಗುಡ್ಡೆಯ ನೆತ್ತಿಯಲ್ಲಿ ‘ಕೇಳಿ’ ಬಡಿದರು. (ಸುಮಾರು ಕಾಲು ಗಂಟೆಯ ತಾಳವಾದ್ಯಗೋಷ್ಠಿ ಎನ್ನಿ. ಹಿಂದೆ ಹೀಗೆ ಊರ ಕೇಂದ್ರದಲ್ಲಿ ಹೊಡೆದು ಬರುವುದು ಊರವರಿಗೆ ರಾತ್ರಿ ಆಟ ಇದೆ ಎಂಬುದರ ಸ್ಪಷ್ಟ ಸೂಚನೆಯಂತೆ) ಚೌಕಿಯಲ್ಲಿ ತೆಂಕಿನವರು ಬಣ್ಣಕ್ಕೆ ಕುಳಿತಾಗಿತ್ತು. ಸಂಚಾರಿ ಕ್ಯಾಮರಾ ಸಂಜೀವರಿಂದ ತೊಡಗಿ ಬಲಿಪ ಭಾಗವತರು, ಪ್ರಭಾಕರ ಜೋಶಿ, ಗೋವಿಂದ ಭಟ್ ಮುಂತಾದವರ ಸಂದರ್ಶನಗಳ ಬೇಟೆಯನ್ನೂ ನಡೆಸಿತ್ತು.  ಮತ್ತೆರಡು ಕ್ಯಾಮರಾಗಳು ಉತ್ತಮ ಪ್ರೇಕ್ಷಕನ ದೃಷ್ಟಿಕೋನಕ್ಕೆ ಬದ್ಧವಿರುವಂತೆ ಮೂರುಕಾಲು ಊರಿ ನಿಂತಿದ್ದವು. ಅಲ್ಲಿಂದಲೇ ರಂಗಕ್ರಿಯೆಗೆ ಪೂರಕವಾಗಿ ಚೌಕಿಯಿಂದ ಬರುವ ಪಾತ್ರಗಳನ್ನೂ ಗ್ರಹಿಸಲು ಅನುಕೂಲವಾಗುವಷ್ಟು ವಿಸ್ತೃತ ಕೋನದಲ್ಲಿ ಅನ್ಯರ ಪ್ರವೇಶವಾಗದ ಎಚ್ಚರಿಕೆ ಸಹಿತ ಎದುರು ನೆಲದಲ್ಲಿ ತಾಡಪಾಲು ಮತ್ತೆ ಹಿಂದೆ ಎಲ್ಲೆಂದರಲ್ಲಿ ಕುರ್ಚಿಗಳನ್ನು ಹರಡಿದ್ದೆವು. ನಾವು ತೀರಾ ಅನೌಪಚಾರಿಕವಾಗಿ ಕೆಲವರಿಗೆ (ಯಕ್ಷಗಾನದ ಉನ್ನತಿಕೆಗೆ, ಅಧ್ಯಯನಕ್ಕೆ ತೊಡಗಿಕೊಂಡವರು) ಹೇಳಿಕೆ ಮಾಡಿದ್ದೆವು. ಆದರೆ ಹಲವರು ಎಲ್ಲೆಲ್ಲಿಂದಲೋ ಸುದ್ದಿಯ ಎಳೆಗಳನ್ನು ಹಿಡಿದು ಆಟ ನಡೆಯುತ್ತಿದ್ದಾಗಲೂ ಪರಡಿಕೊಂಡು, ಸ್ವಂತ ವಾಹನಗಳಲ್ಲಿ ಬರುತ್ತಲೇ ಇದ್ದರು. ಡಾಂಬರು ಮಾರ್ಗ ಬಿಟ್ಟು ವಠಾರಕ್ಕೆ ಪ್ರವೇಶಿಸುವಲ್ಲೇ ಸತ್ಯನ ದೂತನೊಬ್ಬ ಟಾರ್ಚು ಸಹಿತ ಸಜ್ಜಾಗಿದ್ದು, ವಾಹನಗಳನ್ನು ತಡೆದು ನಿಲ್ಲಿಸುತ್ತಿದ್ದ. ಮತ್ತೆ ನಡೆದು ಹೋಗುವವರಿಗೂ ಬೆಳಕು, ಗದ್ದಲಗಳ ಬಗ್ಗೆ ಎಚ್ಚರಿಕೆ ಕೊಡುತ್ತಿದ್ದಿರಬೇಕು. ಉಳಿದಂತೆ ಸ್ಥಳೀಯರಾದಿ ದೊಡ್ಡ ಪ್ರೇಕ್ಷಕವರ್ಗವೇನಾದರೂ ಬಂದರೆ ಪ್ರವೇಶ ನಿರಾಕರಿಸುವ ಅಧಿಕಾರವನ್ನೂ ಸತ್ಯನ ದೂತನಿಗೆ ನಾವು ಕೊಟ್ಟಿದ್ದೆವು.

ಆರೂವರೆಗೆ ತೆಂಕುತಿಟ್ಟಿನ ಚೌಕಿಪೂಜೆಯನ್ನು ಭಾಗವತರು ಸುರುಮಾಡುತ್ತಿದ್ದಂತೆ ರಂಗದಲ್ಲಿ (ಯಾವ ಶ್ಯಾಳೆಗಳೂ ಇಲ್ಲದೆ) ದೀವಟಿಗೆಯನ್ನು ಬೆಳಗಿದೆವು. ಬಲಬದಿಯ ಎರಡು ನಿರೀಕ್ಷೆಯಂತೇ ನಸು ಹಳದಿ ಕೆಂಪು ಮಿಶ್ರಿತ, (ಪರಿಸರದಲ್ಲಿದ್ದ ತುಸುವೇ ವಾಯು ಸಂಚಲನಕ್ಕನುಗುಣವಾಗಿ) ಚಂದದ ಬಳುಕಿನ ಜ್ವಾಲೆಯನ್ನೇ ಕೊಟ್ಟವು. ಆದರೆ ಎಡ ಪಕ್ಷ ಯಾಕೋ ಎಡವಟ್ಟಾಗತೊಡಗಿದಾಗಲೇ ನನಗೆ ವಿಪರೀತಗಳ ಯೋಚನೆ ಕಾಡತೊಡಗಿತು. ಅಂಡೆಯೊಳಗಿನ ಒತ್ತಡವನ್ನು ಸಶಬ್ದ ಜ್ವಾಲೆ ಕಾರತೊಡಗಿತು. ಬರುತ್ತಿದ್ದ ನೇರ ಮತ್ತು ನೀಲಜ್ವಾಲೆ ಅಡುಗೆ ಮುಂತಾದ ಬಿಸಿಯೇರಿಸುವ ಕ್ರಿಯೆಗಳಿಗೆ ಸರಿ, ನಮಗಲ್ಲ. ಅವಸರದಲ್ಲಿ ಅದನ್ನಾರಿಸಿ ಮೇಲಿನ ಹೊದಿಕೆಗೆ ಕೈಹಾಕಿ ಬೆರಳು ಚುರುಗುಟ್ಟಿಸಿಕೊಂಡೆ. ಬರ್ನರಿಗೆ ವಾತಾವರಣದ ಆಮ್ಲಜನಕ ಸೇರಿಕೊಳ್ಳದಂತೆ ಮಾಡಿದ್ದ ವ್ಯವಸ್ಥೆ ಹೊಂದಿಸಿದ ಮೇಲೆ ಏನೋ ಸರಿಯಾಯ್ತು. ಆದರೆ ಇದು ಪ್ರದರ್ಶನದುದ್ದಕ್ಕೂ ಸಣ್ಣ ಕೊರತೆಯನ್ನೂ ನನ್ನ ಮನಸ್ಸಿನ ಮೇಲೆ ಅಪಾರ ಒತ್ತಡವನ್ನೂ ಉಳಿಸಿದ್ದಂತೂ ನಿಜ. ದೀವಟಿಗೆ ಮಾಡಿಕೊಟ್ಟಾತ ಪ್ರದರ್ಶನಕ್ಕೆ (ಯಕ್ಷಗಾನ ಪ್ರೀತಿಯಿಂದ) ಹಾಜರಿದ್ದು ಆಕಸ್ಮಿಕಗಳೇನಾದರೂ ಬಂದರೆ ಅಲ್ಲೇ ಸರಿಪಡಿಸುವುದಾಗಿ ಹೇಳಿದ್ದನ್ನು ಸುಳ್ಳುಮಾಡಿದ್ದ.

ತಲಾ ಎರಡು ಬರ್ನರಿನ ಉರಿ ಪೂರೈಸುವ ಒಂದೊಂದು ಅನಿಲ ಜಾಡಿಯೂ ಕನಿಷ್ಠ ಐದು ಗಂಟೆ ತಾಳುತ್ತದೆ ಎನ್ನುವುದು ಸಾಮಾನ್ಯ ಲೆಕ್ಕಾಚಾರ. ಆದರೂ ಎರಡು ತಿಟ್ಟಿನ ಪ್ರದರ್ಶನದ ಮಧ್ಯೆ ಆತಂಕ ನಿವಾರಿಸಲು ಹೊಸ ಜಾಡಿ ವ್ಯವಸ್ಥೆ ಮಾಡಿಕೊಂಡಿದ್ದೆವು. ಎರಡಲ್ಲ ನಾಲ್ಕು ಜಾಡಿಗಳವರೆಗೆ ಪೂರೈಕೆಯ ಧಾರಾಳತನವೂ ನಮ್ಮಲ್ಲಿತ್ತು. ಆತಂಕ ಇದ್ದದ್ದು ಅದರಲ್ಲಲ್ಲ, ಯಾವುದೇ ಕಾರಣಕ್ಕೆ ದೀವಟಿಗೆಯ ಬೆಳಕು ಸೋತರೇನು ಗತಿ? ಪ್ರದರ್ಶನ ಮುಂದುವರಿಸುವ ಪರ್ಯಾಯ ಬೆಳಕಿನ (ವಿದ್ಯುತ್, ಎಣ್ಣೆ ದೀವಟಿಗೆ) ವ್ಯವಸ್ಥೆ ನಾವು ಯೋಚಿಸಿಯೇ ಇರಲಿಲ್ಲ! ವಾಸ್ತವವಾಗಿ ದೀವಟಿಗೆಯ ತಂತ್ರಜ್ಞ ಮತ್ತು ರಂಗ ತಂತ್ರಜ್ಞ ವಿರಾಮದಲ್ಲಿ ಕಲೆತು, ಪ್ರಯೋಗಗಳಿಂದ ಇನ್ನಷ್ಟೂ ಪರಿಷ್ಕರಿಸಿ ಮುಂದುವರಿದಿದ್ದರೆ ದಾಖಲಾತಿ ಮಾತ್ರವಲ್ಲ, ಪ್ರದರ್ಶನದ ಏಕಸ್ರೋತಕ್ಕೂ ಭಂಗ ಬರುತ್ತಿರಲಿಲ್ಲ.

ತೆಂಕು ತಿಟ್ಟಿನ ಪ್ರದರ್ಶನ ಮುಗಿದ ಬೆನ್ನಿಗೆ ದೀವಟಿಗೆಗಳಿಗೆ ಸುಮಾರು ಒಂದು ಗಂಟೆಯ ವಿಶ್ರಾಂತಿ ದೊರಕಿತ್ತು. ಮೊದಲಿನ ಅನಿಲ ಜಾಡಿಗಳು ಅರೆವಾಸಿಯೂ ಮುಗಿದಿಲ್ಲ ಎಂದನ್ನಿಸಿದರೂ (ತೂಕದ ಅಂದಾಜು ಅಷ್ಟೆ) ಯೋಜನೆಯಂತೇ ಹೊಸ ಜಾಡಿ ಸಂಪರ್ಕ ಕೊಟ್ಟೆವು. ಬರ್ನರ್ರೋ ಮೇಲಿನ ಹೊದಿಕೆಯೋ ವಾತಾವರಣದ ಮಂಜಿನ ಪಸೆ ಹಿಡಿದಿಟ್ಟುಕೊಂಡು ಸುಮಾರು ಹತ್ತು ಮಿನಿಟುಗಳವರೆಗೆ ವಿಚಿತ್ರವಾಗಿ ವರ್ತಿಸಿ ಎಲ್ಲರನ್ನೂ ಗಾಬರಿಗೊಳಿಸಿತ್ತು. ರಾಮನ ಒಡ್ಡೋಲಗದ ಭಾಗಿಗಳು ರಂಗ ಹಂಚಿಕೊಳ್ಳುವ ಭರದಲ್ಲಿ ದೀವಟಿಗೆಗೆ ಬೆನ್ನು ಹಾಕಿ ಸಮೀಪಿಸಿದಾಗ, ಕುಂಭಕರ್ಣ ಕೈದೀವಟಿಗೆಗೆ ರಾಳ ಹೊಡಿಯುವಾಗ, ಘೋರಹಿಡಿಂಬೆಯ ಅಬ್ಬರದ ನಲಿಕೆ ರಂಗದ ಅಂಚಿನವರೆಗೂ ವಿಸ್ತರಿಸುತ್ತಿದ್ದಾಗೆಲ್ಲಾ ನನಗಂತೂ ಒಲೆಯುವ ಜ್ವಾಲೆಯ ಸೌಂದರ್ಯಕ್ಕಿಂತ ಬೆಂಕಿ ಅನಿಯಂತ್ರಿತವಾಗಿ ವಿಸ್ತರಿಸುವ, ಜಾಡಿ ಸ್ಫೋಟಿಸುವ ಭಯ ಕಾಡುತ್ತಿತ್ತು. ಅರಗಿನ ಮನೆ ಹೊತ್ತಿ ಉರಿಯುವ ದೃಶ್ಯವನ್ನು ಪೂರ್ವಯೋಜನೆಯಂತೆ ಪ್ರದರ್ಶನದ ಏಕಧಾರೆ ಕಡಿದೇ ನಡೆಸಿದೆವು. ಆಗಂತೂ ಕ್ಯಾಮರ ವಲಯದ ಹೊರಗೆ ನೀರು, ಸೊಪ್ಪಿನ ಕಟ್ಟು, ಅನಿಲಜಾಡಿ ಮತ್ತು ನಳಿಕೆಗಳನ್ನು ಕಾಪಾಡಲು ಸ್ವಯಂ ಸೇವಕರ ದಂಡೇ ಸಜ್ಜಾಗಿ ನಿಂತಿತ್ತು!

ಒಟ್ಟಾರೆ ಕಾರ್ಯಕ್ರಮ ಯಕ್ಷಗಾನದ ಔಪಚಾರಿಕತೆಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ಚೊಕ್ಕವಾಗಿ ಮುಗಿಯಿತು. (ಉದ್ಘಾಟನೆ, ದೀಪೋಜ್ವಲನ, ಸ್ವಾಗತವೇ ಮುಂತಾದ ಭಾಷಣ ಸರಣಿ, ಕೊನೆಗೆ ವಂದನಾರ್ಪಣೆಯೂ  ಇಲ್ಲ, ಇಲ್ಲ, ಇಲ್ಲ) ಸಂಘಟನೆಯ ನೆಲೆಯಿಂದ ನಾನು ಲೆಕ್ಕ ಹಾಕಿ ಮೂರು ಬಾರಿ ಪ್ರೇಕ್ಷಕರನ್ನುದ್ದೇಶಿಸಿ ಸಣ್ಣ ಸೂಚನೆಗಳನ್ನು ಕೊಟ್ಟಿದ್ದೆ. ಎರಡೂ ಪ್ರದರ್ಶನದ ಮೊದಲಲ್ಲಿ ಒಮ್ಮೊಮ್ಮೆ ಚರವಾಣಿ ಮತ್ತು ಕ್ಯಾಮರಾ ಬಳಸುವವರಿಗೆ ಫ್ಲ್ಯಾಶ್ ನಿಷೇಧವನ್ನು ಗಟ್ಟಿಯಾಗಿ ಹೇಳಿದ್ದೆ. ಮೂರನೆಯ ಘೋಷಣೆ, ಮಧ್ಯಂತರದಲ್ಲಿ ಎಲ್ಲರಿಗೂ ಊಟದ್ದು. ದಾಖಲಾತಿಯ ವಲಯದಲ್ಲೆಲ್ಲೂ ಚರವಾಣಿ ರಿಂಗಣ ಕೇಳಲಿಲ್ಲ. ಆದರೆ ಸ್ವತಃ ಡಾ| ರತ್ನಾಕರರನ್ನೇ ವಂಚಿಸಿ ಅವರ ಕ್ಯಾಮರಾ ಒಮ್ಮೆ ಫ್ಲ್ಯಾಶ್ ಜಗಮಗಿಸಿದ್ದು ನಮಗೆಲ್ಲ ಎಷ್ಟು ನಗೆ ತರಿಸಿತೋ ಅವರನ್ನು ಅಷ್ಟೇ ಕಂಗೆಡಿಸಿದ್ದು ನಿಜ! ಪುಣ್ಯಾತ್ಮ, ಅಲ್ಲಿ ಅವರಿವರ ಅಭಯನ ಕ್ಷಮೆ ಕೇಳಿದ್ದು ಸಾಲದೆಂಬಂತೆ ಮರುದಿನ ಶಿವಮೊಗ್ಗ ತಲಪಿದ ಮೇಲೂ ಚರವಾಣಿ ಸುದ್ದಿ ಸಂಚಯದಲ್ಲಿ, ತಾನೇ ಬರೆದ ಲೇಖನದಲ್ಲೂ ‘ಆಕಸ್ಮಿಕಕ್ಕೆ ಸಂತಾಪ’ ಸೂಚಿಸಿದ್ದರು. ಮತ್ತಿವನ್ನೆಲ್ಲ ಮೀರಿದಂತೆ ಎರಡು ಬಾರಿ ಪ್ರೇಕ್ಷಕ ವೃಂದದಲ್ಲಿ ಭಾರೀ ಸದ್ದು; ಅಸಮ ನೆಲದಲ್ಲಿ ದುರ್ಬಲ ಕುರ್ಚಿಗಳೆರಡು ಕಾಲು ಕಿಸಿದೋ ಮುರಿದೋ ಬಿತ್ತು. ದುರದೃಷ್ಟವಶಾತ್ ಅದರ ಮೇಲೆ ಆಸೀನರಾಗಿದ್ದವರೂ ನೆಲಕಚ್ಚಿದರು. ಆದರೆ ಅದೃಷ್ಟವಶಾತ್ ಅವರಿಗೆ ಆಘಾತವೂ ಆಗಲಿಲ್ಲ, ಪ್ರದರ್ಶನದ ದಾಖಲಾತಿಗೂ ಭಂಗ ಬರಲಿಲ್ಲ. ಉಳಿದಂತೆ ಇನ್ನೂರರ ಆಸುಪಾಸಿನ ಸಂಖ್ಯಾಬಲದ ಪ್ರೇಕ್ಷಕ ವೃಂದ ಹೇಗೆ ಹೇಗೆ ಬಂದರು, ಏನೆಲ್ಲಾ ಅನುಭವಿಸಿದರು, ಎಲ್ಲಾ ಮುಗಿದಮೇಲೆ ಎಲ್ಲಿ ಚದುರಿದರು ಎನ್ನುವುದು ನಮಗೆ ದೀವಟಿಗೆಯಾಚಿನ ಕತ್ತಲಷ್ಟೇ ನಿಗೂಢ. ರಾತ್ರಿ ಎರಡೂವರೆ ಗಂಟೆಯ ಸುಮಾರಿಗೆ ಸಾಮಾನ್ಯ ಲೆಕ್ಕದ ಕಲಾಪಗಳೆಲ್ಲ ಮುಗಿದವು. ಜನ ಸಾಮಾನುಗಳು ಸ್ವಸ್ಥಾನ ಸೇರುವ ನೀರಸ ಕಥನವನ್ನು  ಇಲ್ಲಿ ವಿಸ್ತರಿಸದೆ ನಿಮ್ಮ ತಾಳ್ಮೆಯನ್ನು ಇಷ್ಟರಲ್ಲೇ ಬರಲಿರುವ ಎರಡು ಡಿವೀಡಿಗಳಿಗೆ ಮೀಸಲಿರಿಸಿಕೊಳ್ಳುತ್ತೇನೆ.

ಹಾಂ! ಅಂದ ಹಾಗೆ ಈ ಆಟದ ಇನ್ನಷ್ಟು ಚಿತ್ರಗಳನ್ನು ಉಪಾಧ್ಯರು ತೆಗೆದು ವೆಬ್ಬಿಗೇರಿಸಿದ್ದಾರೆ. ನೋಡಲು ಇಲ್ಲಿ ಕ್ಲಿಕ್ ಮಾಡಿ ಮಾರ್ರೆ...

13 comments:

 1. ಎಸ್.ಎಂ ಪೆಜತ್ತಾಯ25 December, 2009 21:07

  ಅಶೋಕ ವರ್ಧನರೇ!
  ತಾವು ಮತ್ತು ತಮ್ಮ ತಂಡದವರು ಗುಡ್ಡದ ತುದಿಯಲ್ಲಿ ಬಾರಿಸಿದ ಚೆಂಡೆ, ಚಕ್ರತಾಳ, ಜಾಗಟೆ ಮತ್ತು ಮದ್ದಲೆಗಳ ಸಾಂಪ್ರದಾಯಿಕ 'ಕೇಳಿ'ಯ ಶಬ್ದವು ಅಂತರ್ಜಾಲದ ಕೃಪೆಯಿಂದ ಜಗದ ಯಕ್ಷಗಾನ ಪ್ರಿಯರನ್ನು ಅಭಯಾರಣ್ಯಕ್ಕೆ ಕೈಬೀಸಿ ಕರೆಯುತ್ತಾ ಇದೆ.

  ಜಂಗಮ ದೂರವಾಣಿ, ಜನರೇಟರ್, ಗ್ಯಾಸ್ ಮತ್ತು ಮೈಕುಗಳ ಸುದ್ದಿ ಗಳನ್ನು ಬದಿಗೆ ಇರಿಸಿದರೆ 'ನಮ್ಮ ತಾತನ ಕಾಲದ' ದೀವಟಿಗೆಯ ಯಕ್ಷಗಾನದ ಪ್ರದರ್ಶನವನ್ನೇ ಈ ಕಾಲದ ಪ್ರೇಕ್ಷಕರಿಗೆ ತಮ್ಮ ಈ 'ತೆರೆಮರೆಯ ಕುಣಿತದಲ್ಲಿ' ಕುಣಿದು ತೋರಿಸಿದ್ದೀರಿ.

  ಅಭಿನಂದನೆಗಳು.

  ಯಕ್ಷಗಾನದ ಗುಂಗೆ ಹುಳವು ಒಮ್ಮೆ ನಮ್ಮ ತಲೆ ಬುರುಡೆಗಳನ್ನು ಕೊರೆಯಲು ಶುರುಮಾಡಿದರೆ ಮುಂದಕ್ಕೆ ನಮ್ಮನು ಸುಮ್ಮನೆ ಕುಳಿತುಕೊಳ್ಳಲು ಬಿಡುವುದಿಲ್ಲ.

  ಅಂದಹಾಗೆ ಮುಂದಿನ ಪ್ರದರ್ಶನ ಯಾವಾಗ ಇದೆ?
  ತಿಳಿಸಿ.

  ನಮಗೆ ದೀವಟಿಗೆಯ ಆಟ ನೋಡುವಲ್ಲಿ ಚರ್ಮುರಿ ಉಪ್ಪುಕರಿ ಮತ್ತು ಚೀಪೆ ಚಾ ಬೇಕೇ ಬೇಕು.
  ಊಟಕ್ಕೆ ನೀವಾಗಿಯೇ ಕರೆಯುವವರೆಗೆ ನಾವು ಖಂಡಿತವಾಗಿ ಕಾಯುವುದಿಲ್ಲ.

  ಅಶೋಕ ವರ್ಧನರು 'ಕೇಳಿ' ಹೊಡೆಸಿದ ಮೇಲೆ ಅಭಯಾರಣ್ಯದಲ್ಲಿ ಊಟ ಸಿಕ್ಕೇ ಸಿಗುತ್ತೆ ಅಂತ ನಮಗೆ ಗೊತ್ತು!
  ವಂದನೆಗಳು

  ಕೇಸರಿ ಪೆಜತ್ತಾಯ

  ReplyDelete
 2. ಉಪಾಧ್ಯರ ಚಿತ್ರಗಳು ಮನೋಹರವಾಗಿವೆ.
  ನಿಮ್ಮ ಡಿವಿಡಿಗಾಗಿ ಕಾಯುತ್ತಿರುವೆ
  ಪಂಡಿತಾರಾಧ್ಯ

  ReplyDelete
 3. Deevatige Aatakke nimma preperation bahala interesting aagide.Camera Team na mobile sikkadaaga aatanka agiddabagge oohisaballe.

  Next kanthigaagi kayuttene.

  Photos chennagi moodibandive.Hanumantana mukhavarnike bagge ondu sandeha .Kelidare elli
  vishayaanthara vaaguttado emba Bhaya.

  ReplyDelete
 4. Ee saraniyalli mundina kanthigaagi tudi gaalalli nilluvanthaagide.

  ReplyDelete
 5. ಆಡು ಬಾಷೆಯ ಸೊಗಡು....
  ಮಣಿ ಅಕ್ಕನ"ಬಾಜಿರ ಕ೦ಬ"ನೆನಪಾಯಿತು.
  ಚೆ೦ದ ಇದ್ದು.ಲೆಖನ..ಆಟ..ನೋಡಿಲ್ಲವಲ್ಲ!

  ReplyDelete
 6. ಅಶೋಕವರ್ಧನ ಜಿ.ಎನ್28 December, 2009 21:07

  ಪ್ರಿಯ ರಾಮರಾಜ್
  ಬ್ಲಾಗ್ ನನ್ನದೇ ಆದ್ದರಿಂದ ಎಲ್ಲಿ ಬರಿಯ ನನ್ನ ಶಂಖ ಊದಿದಂತಾಗುತ್ತದೋ ಎಂಬ ಆತಂಕದಲ್ಲಿ ನಾನಿರುವಾಗ ನೀವು ದಾಕ್ಷಿಣ್ಯ ಮಾದುವುದ್ಯಾಕೆ? ಈ ಸಲದ ದಾಖಲೀಕರಣದ ಕುರಿತು ನಾನು ಓರ್ವ ನಿರ್ಮಾಪಕನ ನೆಲೆಯಲ್ಲಿ, ಅಂದರೆ ತಪ್ಪು ಸರಿಯೇನಿದ್ದರೂ ನಮ್ಮದೇ ‘ಕರ್ಮ’ ಎಂದು ನುಂಗಿಕೊಂಡು ಕೇವಲ ವರದಿ ಮಾಡಿದ್ದೇನೆ. ಆದರೆ ಕಳೆದುಹೋದದ್ದರ ಬಗ್ಗೆ (ಬಡಗಿನ ಪೂರ್ವರಂಗ, ಕರ್ಕಿ) ಹೇಳುವಾಗ ವಿಮರ್ಶಕನ ನೆಲೆಯಲ್ಲೂ ಬರೆದಿರುವುದು ನಿಮ್ಮ ಗಮನಕ್ಕೆ ಬಂದಿರಬೇಕು. ಈ ಸಲದ ಡೀವೀಡಿ ಬಂದು ಒಮ್ಮೆಯ ವಿಲೇವಾರಿ ಮುಗಿದ ಮೇಲೆ ನನಗೆ ‘ಮೋಹ’ ಹರಿದು, ಕಲಾನಿಷ್ಠವಾಗಿ ಬರೆದುಕೊಳ್ಳಲು ಸಾಧ್ಯವಾಗಬೇಕು. ಅಷ್ಟರಲ್ಲಿ ನಿಮ್ಮಂಥವರು ನಿರ್ದಾಕ್ಷಿಣ್ಯವಾಗಿ ಕಂಡದ್ದನ್ನು ಹೇಳಿದರೆ ತುಂಬಾ ತುಂಬಾ ಸಹಾಯವಾಗುತ್ತದೆ. ಹೊಗಳಿಕೆ ಖಂಡಿತವಾಗಿಯೂ ಕುಶಿ ಕೊಡುತ್ತದೆ ಆದರೆ ವಿಮರ್ಶೆ ಹೆಚ್ಚಿನ ಕೆಲಸಕ್ಕೆ ಪ್ರೇರಣೆ ಕೊಡುತ್ತದೆ.

  ಹನುಮಂತನ ವೇಷ ಹಾಕಿದವರು ಅಮ್ಮುಂಜೆ ಮೋಹನ್ ಕುಮಾರ್, ವಿಚಾರವಂತ ತರುಣ ಕಲಾವಿದ. ನಿಮ್ಮ ಟೀಕೆ ಅವರ ಬೆಳವಣಿಗೆಗೆ ಠಾನಿಕ್ಕಾಗಿ ಬರಲಿ.

  ReplyDelete
 7. ಡಾ| ರತ್ನಾಕರ್28 December, 2009 22:35

  ಸುಮಾರು ಐವತ್ತು ವರ್ಷಗಳ ಹಿಂದೆ, ವಿದ್ಯುಚ್ಚಕ್ತಿ ಸಂಪರ್ಕ ಯಕ್ಷಗಾನಲೋಕದ ದಕ್ಷಿಣೋತ್ತರ ಜಿಲ್ಲೆಗಳಲ್ಲಿ ಬರುವ ಮೊದಲು ಕೇವಲ ಬಯಲಾಟಗಳೇ ನಡೆಯುತ್ತಿದ್ದವು. ನನ್ನ ವಯಸ್ಸಿನವರು ಯಕ್ಷಗಾನ ನೋಡಲು ಪ್ರಾರಂಭಿಸಿದ ದಿನಗಳಲ್ಲಿ ಆಗಲೇ ‘ದೊಂದಿ’ಯೊಂದಿಗೆ ‘ಪೆಟ್ರೊಮಾಕ್ಸ್’ ಬಂದಾಗಿತ್ತು. ದೊಂದಿ ಆಟ ನೋಡಿದ ಪುಣ್ಯ ಪುರುಷರು ನೂರು ವರ್ಷಗಳ ವಯಸ್ಸಿಗೆ ಸಮೀಪಿಸಿದಾವರಾದ್ದರಿಂದ ನೆನಪಿನ ರಸಕ್ಷಣಗಳನ್ನು ಹೇಳಲು ಶಕ್ತರಾಗಿಲ್ಲ. ಅಂಥಹ ದಾಖಲೀಕರವೂ ಇಲ್ಲ. ಆ ಹಳತನ್ನು ಈಚೆಗೆ ಮರುರೂಪಿಸಿ ದಾಖಲೀಕರಕ್ಕೊಳಪಡಿಸಿದ್ದನ್ನು ನೋಡಿದ ಅದೃಷ್ಟಶಾಲಿ ನಾನು. ಅವಕಾಶ ಒದಗಿಸಿದ ಅಶೋಕ, ಅಭಯ, ಮನೋಹರರಿಗೆ ಕೃತಜ್ಞತೆಗಳು. ಸ್ಪಷ್ಟ ಯೋಜನೆ ಅಥವಾ ಕಾರಣಗಳೇನೂ ಇಲ್ಲದೆ ಬಡಾಬಡಗು (ಕರ್ಕಿ), ಬಡಗು (ಯಕ್ಷಗಾನ ಕೇಂದ್ರ) ಮತ್ತು ತೆಂಕುತಿಟ್ಟಿನ, ಒಟ್ಟಾರೆ ಈ ವಲಯದಲ್ಲಿ ಚಾಲ್ತಿಯಲ್ಲಿರುವ ಮೂರೂ ಪ್ರಕಾರಗಳ ಯಕ್ಷ-ದಾಖಲಾತಿ ನಡೆಸಿದ್ದಕ್ಕೆ ಅಭಿನಂದನೆಗಳು.
  ಡಾ| ರತ್ನಾಕರ್

  ReplyDelete
 8. enjoyed every bit of witty writing from ashok.yes i was really shocked when my camera flashed during the documentry capturing.any way abhay sent a message that accidents do happen.once dvd is released to market,yakshagana lovers will be jealous about the people who witnessed this wonderful programme.ashokavardhana and prathvi were there at shimoga for both 24 hours nonstop yakshagana and ashok had written frank openion on all troups he is a true critic, i admire.

  ReplyDelete
 9. ಎಂ.ಎಲ್. ಸಾಮಗ29 December, 2009 13:48

  Dear Ashok
  I have read your blog on preparations for DEEVATIGE AATA. It is like an interesting report with the personal touch of fiction.The style of narraion is quite lively.I congratulate you,your family and your entire team for your efforts to retrieve the prestine beauty of Yakshagana, with the aid of modern technology.Think of the methods of educating the "common public" to refine their taste so that they learn to appreciate such a type of Yakshagana!!!
  With regards,
  ML SAAMAGA.

  ReplyDelete
 10. ಕೇಳಲು ಅವಕಾಶ ಕೊಟ್ಟದ್ದಕ್ಕೆ ಧನ್ಯವಾದಗಳು.
  ಉಪಾದ್ಯರು ಕ್ಲಿಕ್ಕಿಸಿದ ಹನುಮನ್ತನ ಫೊಟೊದಲ್ಲಿ ಕಲಾವಿದನ ಪ್ರತಿಭೆ ಎದ್ದು ಕಾಣುತ್ತದೆ .[ಅಮ್ಮುನ್ಜೆ ಮೋಹನನ ಬಗ್ಗೆ ಪ್ರಶಮ್ಸೆ ,ಟೀಕೆ ಅಲ್ಲ].೧೨ ಸುಳಿಗಳು [೬ ಬಲಕ್ಕೆ ,೬ ಎಡಕ್ಕೆ ]ಕಾಣುತ್ತವೆ.ವ್ಯವಸಾಯಿ/ಬಯಲಾಟಗಳ ಪ್ರದರ‍್ಶನಗಳಲ್ಲಿ ಕಲಾವಿದರು ಹೆಚ್ಚಾಗಿ ೬-೮ ಸುಳಿಗಳಲ್ಲೆ ಮುಗಿಸುತ್ತಾರೆ.ನನ್ನ ಒನ್ದು ಕುತೂಹಲ-ಯಕ್ಶಗಾನ ದಲ್ಲಿ ಮುಖ್ಹವರ್ಣಿಕೆಗೆ ಇದಮಿತ್ಥಮ್ ಎಮ್ಬ ನಿಯಮ ಇದೆಯೆ ?ಅಥವಾ ಕಲಾವಿದ ತನ್ನ ಮುಖದ ಗಾತ್ರಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಳ್ಳಬಹುದೆ ?ಆಕರ ಗ್ರನ್ಥ ಇದೆಯೆ ಅಥವಾ ಕೇವಲ ಬಳಕೆಯಲ್ಲಿ ಸಮ್ಪ್ರದಾಯ ಮುನ್ದುವರಿದುದೇ ?ಕಲಾವಿದನ ಫ್ರೀಡಮ್ ಎಸ್ಟರ ಮಟ್ಟಿನದು ?ಆದನ್ನು ಮಿಸ್ ಯೂಸ್ ಮಾಡಿಕೊನ್ಡರೆ ಬಡಪಾಯಿ ಪ್ರೆಕ್ಶಕನ ಗತಿ ?
  ನಮಸ್ಕಾರ.

  ReplyDelete
 11. Atakke baralagaddakke, A bejaru hothu hothigu kaduthiruva nannthavarige............! Manglorinda Abhayaranyadavarege, Rangasthaladinda..pakashalevaregina varegina kathe...thayari, rasanimishagala bagge heliddiri... dhanyavadagalu.. I enjoyed... a lot..

  ReplyDelete
 12. ಗೋವಿಂದ ನೆಲ್ಯಾರು31 December, 2009 22:46

  ಪ್ರಿಯ ಅಶೋಕಣ್ಣಾ
  ಕಳೆದ ದೀವಟಿಗೆ ಕೂಟದ ವರದಿ ಓದಿ ಮನಸಿನಲ್ಲಿ ಮೂಡಿದ ಚಿತ್ರಕ್ಕೂ ಬಂದ ಕೂಡಲೇ ಅಲ್ಲಿ ಕಂಡದ್ದಕ್ಕೂ ಎರಡು ವ್ಯತ್ಯಾಸ. ಒಂದು ಅಲ್ಲಿರುವುದು ಬರೇ ಚಾಪೆ ಕ್ಲಾಸ್ ಎಂದೂ ನನಗೊಂದು ಕುರ್ಚಿ ಒದಗಿಸುವ ತೊಂದರೆ ನಿಮಗೇಕೆ ? ನಾನೆ ತಂದರೆ ಎಂದು ಒಮ್ಮೆ ತರ್ಕಿಸಿದ್ದೆ. ಕೋಲ ಕಾರಂತರು ಕಾಲೇಜಿನಲ್ಲಿ ಸೀಟಿಲ್ಲ ಎಂದ principal ಹತ್ತಿರ i will bring my own ಅಂತ ಹೇಳಿದ್ದೂ ನೆನಪಾಯಿತು. ಎರಡನೆಯದು ಶಾಂತಾರಾಮ ಪುಸ್ತಕ ಅಂಗಡಿ ಇರುತ್ತದೆಂದು ಬಾವಿಸಿದ್ದೆ. ಅವರಲ್ಲಿ ಕೇಳಿದ್ದೆ - ಎಲ್ಲಿ ಪುಸ್ತಕದ ಅಂಗಡಿ ?
  ಊಟ ತಡವಾಗಬಹುದೆಂದು ಬರುವಾಗಲೇ ಕಲ್ಲಡ್ಕ ಹೋಟೇಲಿನಲ್ಲಿ ಮಕ್ಕಳ ಹೊಟ್ಟೆ ತುಂಬಿಸುವ ನಿರ್ದಾರ ಮಾಡಿದ್ದೆ. ನಮಗೆ ತೀರಾ ಅನಿರೀಕ್ಷಿತವಾದ ನಿಮ್ಮ ಟಿಫಿನ್ ವ್ಯವಸ್ಥೆ ಅದುದರಿಂದ ಹೆಚ್ಚು ಕುಶಿಯಾಯಿತು.
  ವಾರದಿಂದ ಮೈಕೈನೋವು ಎರಡು ದಿನದಿಂದ ಶೀತ. ನಿಮ್ಮ ತೆರೆಮರೆಯ ಕುಣಿತ ನಿನ್ನೆ ಸಂಜೆಯಿಂದ ನನ್ನ ಪರದೆಯ ಮೇಲಿದೆ. ಮನಸಿಟ್ಟು ಪೂರ್ತಿ ಇನ್ನೂ ಓದಲಾಗಲಿಲ್ಲ. ಮೇಲಿನ ವಿಚಾರ ಮನಸಿನಲ್ಲಿದ್ದುದು ಬರೆದೆ.
  ಮೊನ್ನೆ ಸುನಿಲನ ಸ್ಕೂಲ್ ಡೇಗೆ ಹೋಗಿದ್ದೆ. ಯಕ್ಷಗಾನ ರಂಗಸ್ಥಳ ವಿಪರೀತ ಬೆಳಕು. ಅಭಯ ಬರೆದಂತೆ ಅಲ್ಲೊಂದು ನಿಗೂಡ ಬಾವನೆ ಮೂಡಿದರೆ ಅದರ ಮಜವೇ ಬೇರೆ. ಇಲ್ಲಿ ಕಥೆ ಹೇಳುವಾತನ ಮೇಲಿನ ಗಮನಕ್ಕಿಂತ ಇತರ ಬದಿಯ ಗಮನವೇ ಹೆಚ್ಚಾಗಿತ್ತು. ಕಥಾ ವಸ್ತು ಮನದಾಳಕ್ಕೆ ಇಳಿಯುವುದೇ ಇಲ್ಲ.
  ಪ್ರೀತಿಯಿಂದ
  ಗೋವಿಂದ

  ReplyDelete
 13. ಡಾ.ರಾಮರಾಜರು ಬಹಳ ಹಿಂದೆ ಹನುಮಂತನ ವೇಷದ ಸುಳಿಗಳ ಬಗ್ಗೆ ಕುತೂಹಲ ತೋರಿಸಿದ್ದರು. ಕಲಾವಿದರೇ ನಿಖರವಾಗಿ ಹೇಳಬಲ್ಲರೇ?
  ಒಂದು ಕಲೆ - ಮೂರು ಪ್ರಭೇಧ - ಇಪ್ಪತ್ತೊಂದು ಪಾತ್ರಧಾರಿಗಳ ಹನುಮಂತನ ವೇಷವು 3 ವಿಧ ಆಗಿರಬೇಕೇ? 21 ವಿಧ ಆಗಿದ್ದರೆ ಸಾಕೇ ?.
  ನವರಾತ್ರಿ ಹನುಮ, ರಾಮಲೀಲಾ ಹನುಮ, ಕ್ಯಾಲೆಂಡರ್ ಹನುಮ, ನಾಟ್ಕದ ಹನುಮ, ಸಿಣಿಮಾ ಹಣುಮ... ಇವರೆಲ್ಲ ಬಂದು ಹೋದ್ರು, ಯಕ್ಷಗಾನದ ರಂಗಸ್ಥಳದಲ್ಲಿ. ರಾತ್ರಿಯೆಲ್ಲ ನಿದ್ದೆ ಬಿಟ್ಟು ಇದು ನಮ್ಮ ಕಲೆ ಎಂದು ನಿದ್ದೆ ಕಣ್ಣಲ್ಲೂ ಬಡಬಡಿಸಿ ಹೇಳುವ ನಾವು, ನಾಳೆ ಎಂದಿರನ್ [ROBOT] ಹನುಮ ಬಂದ್ರೆ ಏನಾದ್ರೂ ಹೇಳ್ಬೇಕಾ? ಹೇಳುದಿದ್ರೂ ಯಾರಿಗೆ ?
  ಇಲ್ಲಿರುವ 21 ಕಲಾವಿದರು ನಿಮ್ಮ ನಮ್ಮೆಲ್ಲರ ಸನ್ಮಿತ್ರರೂ ಹಿತೈಷಿಗಳೂ ಆಗಿರುವವರೇ. ಅವರಲ್ಲಿ ಯಾವ ವೇಷ ಶ್ರೇಷ್ಟ - ಕನಿಷ್ಟ ಎಂಬ ಮಾನದಂಡಕ್ಕೆ ಅವರನ್ನು ಬಲಿಕೊಡದೆ, ಸುಮ್ಮನೆ ಕಲೆ ಮತ್ತು ಸಂಬಂಧಿಸಿದ[ನಾವೆಲ್ಲ]ವರಿಗೆಲ್ಲ ಸಿಕ್ಕ ಸ್ವೇಚ್ಹೆಯ ಚಿತ್ರಣವೋ ಎಂಬಂತೆ ದಂಡ[ಪ್ರಯೋಜನ ಇಲ್ಲದೇ]ಕ್ಕೆ ಕೊಳತು ಹೋಗಬಹುದಾದ ಚಿತ್ರಗಳನ್ನು ಹರಡಿದ್ದೇನೆ. ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ.
  http://www.flickr.com/photos/yakshagana/sets/72157625274294822/

  ReplyDelete