07 October 2009

ಕೀಪಿಟಪ್ ನರಸಿಂಹನ್

Maragappeಋತುಮಾನದ ಹಾರೈಕೆಗಳನ್ನು ಹೊತ್ತು ಮತ್ತೆ ಬಂದಿದೆ ಅಂಚೆ. ವನ್ಯ ಸಂದೇಶದ ಕಳಕಳಿಯೊಡನೆ ವರ್ತಮಾನದ ಸಾಮಾಜಿಕ ಸ್ವಾಸ್ಥ್ಯದ ಮೇಲೂ ಸಾಮಯಿಕ ಬೆಳಕು ಚೆಲ್ಲುವ ಇಪ್ಪತ್ತಾರನೇ ವರ್ಷದ ಏಕವ್ಯಕ್ತಿ ಸಾಧನೆ. ಲಕೋಟೆ ಬಿಡಿಸಿ ನೋಡಿದೆ - ವಿವೇಚನಾಹೀನ ಅಭಿವೃದ್ಧಿಯ ಹುಳು ಕಡಿದವರಿಗೆ ಬೆನ್ನು ಹಾಕಿ ಕುಳಿತ ಕಠಿಣ ಲೆಕ್ಕ ಪರಿಶೋಧಕನದೇ ಮೊದಲ ಚಿತ್ರ. ಆತನ ಪ್ರಶ್ನೆಗಳೋ ನೇರ, ಮಾರ್ಮಿಕ “ಭೂಮಿಯ ಸಂಪನ್ಮೂಲಗಳನ್ನು ಎಷ್ಟು ಬಳಸಿದ್ದೀ? ಎಷ್ಟು ಬೆಳೆಸಿದ್ದೀ? ಎಷ್ಟು ಉಳಿಸಿದ್ದೀ?” ಹೆಚ್ಚಾಗಿ ಇಂಥ ವಿಚಾರಗಳ ಖಾತೆಯನ್ನೇ ಮರೆತು ಮೆರೆಯುವ, ಅತಿ-ಬಳಸುವ ಪ್ರವೃತ್ತಿಯಲ್ಲವೇ ನಮ್ಮದು!

ತನ್ನ ಉದ್ದದ ಹಿಂಗಾಲು ಚಾಚಿ, ಭಾವಪೂರ್ಣವಾಗಿ ಪುಟ್ಟ  ಕೈ ಎತ್ತಿ ನಮ್ಮ ಭ್ರಮೆಯ ಆವರಣಕ್ಕೆ ಲಗ್ಗೆಯಿಡುತ್ತಿರುವ ನಮ್ಮ ಇನ್ನೊಬ್ಬ ಸಹಜೀವಿಯದೇ ಎರಡನೇ ಚಿತ್ರ. ಇವನದ್ದು ತೋರಿಕೆಗೆ ಪ್ರಶ್ನೆ. ವಾಸ್ತವದಲ್ಲಿ ನಾವು (ಸಾಮಾನ್ಯ ಮನುಷ್ಯರು) ಮರೆತ ಜೀವಜಾಲದ, ವಿಶ್ವ ಬಾಂಧವ್ಯದ ನೆನಪು ಹುಟ್ಟಿಸುವ ಪ್ರಯತ್ನ. “ನೀವು ಕಾಲಿಡದೆಡೆ, ನಿಮ್ಮ ಕೈವಾಡವಿಲ್ಲದೆಡೆ ಎಲ್ಲವೂ ಎಷ್ಟು ಸುಸೂತ್ರವಾಗಿ, ನೆಮ್ಮದಿಯಿಂದ ಸಾಗುತ್ತಿದೆ! ಗಮನಿಸಿದ್ದೀರಾ?”

ವಾರದ ಆರೂ ದಿನ ನಗರದ ಹೃದಯದಲ್ಲಿ ಅಂದರೆ ಅಕ್ಷರಶಃ ಹೊಗೆ, ದೂಳು, ಗದ್ದಲಗಳ ಸಂತೆಯಲ್ಲಿ ಕುಳಿತಿರುವ ವೃತ್ತಿ ನನ್ನದು. ಕೇವಲ ಆದಿತ್ಯವಾರ ಮತ್ತು ವಿಶೇಷಪಟ್ಟ ರಜಾದಿನಗಳ ಪರ್ವತಾರೋಹಣ ಸಂಬಂಧೀ ಸಾಹಸೀ ಚಟುವಟಿಕೆಗಳು ನನ್ನ ನಿಜವಾದ ವಿಶ್ರಾಂತಿ. ಆ ಅನುಭವಗಳ ಸವಿಯನ್ನು ಸಮಾಜದೊಡನೆ ಹಂಚಿಕೊಳ್ಳಲು ಮತ್ತು ಪರೋಕ್ಷವಾಗಿ ಇತರರಿಗೂ ಪ್ರೇರಣೆ ಕೊಡಲು ನಾನು ಲೇಖನಗಳನ್ನು ಪ್ರಕಟಿಸಿದ್ದುಂಟು, ಸಂಕಲಿಸಿ ಪುಸ್ತಕ ಮಾಡಿದ್ದೂ ಉಂಟು, ಹೀಗೆ ಈಚೆಗೆ ಬ್ಲಾಗ್ ತುಂಬುವುದೂ ನಡೆಸಿದ್ದೇನೆ. ಬರವಣಿಗೆ ನಮ್ಮ ಕ್ರಿಯೆಗಳನ್ನು ನಮಗೇ ವಿಮರ್ಶಿಸಿಕೊಳ್ಳಲು ಮತ್ತು ಮುಂದಿನ ನಮ್ಮ ನಡೆಗೊಂದು ಖಾಚಿತ್ಯ ತರಲು ಬಲು ಸಹಕಾರಿ.

Narasimhanಹೀಗೆ ನಾನೇನೋ ನನ್ನ ಶೋಧದಲ್ಲೇ ಇರುವ ಯಾವುದೋ ಒಂದು ವರ್ಷ ಅನಿರೀಕ್ಷಿತವಾಗಿ ವಿರಾಜಪೇಟೆಯ ದೂರದಿಂದ ಅಪರಿಚಿತ ಡಾ|ನರಸಿಂಹನ್ ಎಂಬುವರಿಂದ ವನ್ಯಜೀವಿ ಚಿತ್ರ ಮತ್ತು ಸಂರಕ್ಷಣ ಸಂದೇಶಪತ್ರ ಬಂತು. ಇದು ಒಮ್ಮೆಗೆ ನನ್ನ ಆತ್ಮಪ್ರತಿಷ್ಠೆಗೆ ಸಂದ ಸಮ್ಮಾನದಂತೇ ಅನ್ನಿಸಿತು. ಆದರೆ ಮರುಕ್ಷಣದಲ್ಲಿ ಕೆಲವು ವರ್ಷಗಳಿಂದ ಇವರು ಇದನ್ನು ನಡೆಸಿರುವುದು ಕಾಣಿಸಿತು. ಸಾವಿರಾರು ಕಾರ್ಡುಗಳಲ್ಲಿ ವನ್ಯಸಂರಕ್ಷಣೆಯ ಚಿತ್ರ, ಉಕ್ತಿ ಮತ್ತು ಮಾಹಿತಿಯನ್ನು ಸ್ವಹಸ್ತದಲ್ಲಿ ಮಾಡುವುದಲ್ಲದೆ ಸ್ವಂತ ಖರ್ಚಿನಲ್ಲಿ ಸಾವಿರಾರು ಜನರಿಗೆ ರವಾನಿಸುತ್ತಲೂ ಇರುವುದು ಅರಿವಿಗೆ ಬಂತು. (ಪತ್ರದ ಕೊನೆಯಲ್ಲಿ ಇವರು ತನ್ನ ಪ್ರೋತ್ಸಾಹಕರಿಗೆ ಮಾಡುವ ಏಕೈಕ ಮನವಿ: “ದಯವಿಟ್ಟು ಹೆಚ್ಚು ಹೆಚ್ಚು ಅಂಚೆಚೀಟಿಗಳನ್ನು ಕಳುಹಿಸಿ. ನನ್ನ ಅಂಚೆ ವೆಚ್ಚವನ್ನು ತಗ್ಗಿಸಲು ಸಹಕರಿಸಿ. ವಿಳಾಸ: ಡಾ| ಎಸ್.ವಿ. ನರಸಿಂಹನ್, ವಿರಾಜಪೇಟೆ, ಕೊಡಗು - ೫೭೧೨೧೮)

ನನ್ನ ಅನುಭವದಲ್ಲಿ ದಾನ, ಅನುದಾನ, ಸಾಲ ಮುಂತಾದ ಪ್ರಾಯೋಜಕತೆಯ ವಿಭಿನ್ನ ರೂಪಗಳು ಹೆಚ್ಚಾಗಿ ಯಾವುದೇ ಸದುದ್ದೇಶಕ್ಕೆ ಸಹಕಾರದ ಹೆಸರಿನ ನೇಣುಗಂಬಗಳು. ಇದನ್ನೇ ಹೆಗ್ಗೋಡಿನ ಕೆ.ವಿ.ಅಕ್ಷರ ಒಂದು ಕಡೆ ರಂಗ ಕಲೆಗಳ ಕುರಿತು ಬರೆಯುತ್ತಾ ‘ವೈಚಾರಿಕ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹಿಂದೆ ಸೆನ್ಸಾರ್ ಇತ್ತು. ಇಂದು ಅದಕ್ಕೂ ಮಿಗಿಲಾದ  ಸ್ಪಾನ್ಸರ್ ಅಂದರೆ ಪ್ರಾಯೋಜಕತೆ ಇದೆ’ ಎಂದು ವ್ಯಂಗ್ಯವಾಡಿದ್ದು ಇಲ್ಲಿ ಅವಶ್ಯ ನೆನಪಿಸಿಕೊಳ್ಳಬಹುದು. ಎಲ್ಲವನ್ನೂ ಸ್ವಂತ ಬುದ್ಧಿ ಮತ್ತು ಖರ್ಚಿನಲ್ಲಿ ಸ್ವಂತ ಖುಶಿಗಾಗಿ ಆದರೆ ಸಾರ್ವಜನಿಕ ಹೃದಯ ಪರಿವರ್ತನೆಗಾಗಿ ಮಾಡುತ್ತಿರುವ ನರಸಿಂಹನ್ ಬಗ್ಗೆ ನನಗೆ ಅಪಾರ ಗೌರವ ಬಂತು. ಅವರ ಬಗ್ಗೆ ನನ್ನ ಕುತೂಹಲದ  ಕಣ್ಣು ಅರಳಿಸಿ ನೋಡಿದೆ. ಇವರ ಸಂದೇಶಪತ್ರಗಳನ್ನು ಪಡೆದ ಕೆಲವು ಪತ್ರಿಕೆಗಳು ಇವರ ಪ್ರಯತ್ನಕ್ಕೆ ಪೂರಕವಾಗಿ ಲೇಖನಗಳನ್ನು ಪ್ರಕಟಿಸಿದ್ದೂ ಕಂಡೆ. ಅಂದು ನಾನವರಿಗೆ ಕೃತಜ್ಞತೆ ತಿಳಿಸಿದ್ದೆನೋ ಬಿಟ್ಟೆನೋ ಮರೆತಿದ್ದೇನೆ. ಆದರೆ ಇವನ್ನು ಮತ್ತೆ ನನಗೆ ಕಳಿಸಬೇಡಿ ಎಂಬ ಷರಾ ಖಂಡಿತಾ ಹಾಕಿರಬೇಕು. ಅವರನ್ನು ನಿರುತ್ತೇಜನಗೊಳಿಸಲು ಅಂಚೆ ಚೀಟಂತೂ ಖಂಡಿತಾ ಕಳಿಸಲಿಲ್ಲ. ಕಾರಣ ಇಷ್ಟೇ - ನನಗೆ ಅಮೂಲ್ಯವಾದ ವಸ್ತುಗಳನ್ನು ಸಂಗ್ರಹಿಸಿಡುವ ಅಭ್ಯಾಸ ಇಲ್ಲ. ಮತ್ತವು ನೋಡಿ ಎಸೆಯುವ ಇತರ ಕಾರ್ಡುಗಳಂತಲ್ಲವಲ್ಲ! ಆದರೆ ಈ ಪುಣ್ಯಾತ್ಮ ಕಳಿಸುತ್ತಲೇ ಇದ್ದಾರೆ. ಹಾಗೆಂದು ಆ ಸುಂದರ ಸಂದೇಶಗಳನ್ನು ಹಾಳುಗೆಡವದೆ ನನಗೆ ತೋಚಿದ ಸಹೃದಯಿಗಳಿಗೆ ದಾಟಿಸುತ್ತಲೇ ಬಂದಿದ್ದೇನೆ. ಈಗ ನನ್ನ ಅರಿವಿಗೆ ಬಂದಿದೆ, ಇಲ್ಲಿ ಸಂದೇಶ ವನ್ಯದ್ದು ಮಾತ್ರವಲ್ಲ, ಸ್ನೇಹಾಚಾರದ್ದು ಬಹಳ ಗಾಢವಾಗಿದೆ. ಅಲ್ಲದೆ ಅವರ ಸಂದೇಶ ಪ್ರಸರಣದ ಆಶಯದಲ್ಲಿ ನನ್ನಂತವರ ವಿವೇಚನೆಯೂ ಸೇರಿರುವಂತಿದೆ.

ಕೈಯಾರೆ ಅವರು ಚಿತ್ರಿಸಿ, ಬಣ್ಣವನ್ನೂ ತುಂಬಿದ ಎರಡು ಕಾರ್ಡುಗಳಲ್ಲದೆ ಎರಡು ಮುದ್ರಿತ ಪತ್ರಗಳೂ ಜೊತೆಯಲ್ಲಿ ಬಂದಿವೆ. ಒಂದು ಅವರು ಈ ವರ್ಷ ವನ್ಯಜೀವಿ ಸಂದೇಶವಾಹಕರನ್ನಾಗಿಸಿದ ಕೀಟ, ಪ್ರಾಣಿ, ಪಕ್ಷಿಗಳ (ಹದಿನೆಂಟು. ಆದರೆ ಒಟ್ಟು ಪ್ರತಿಗಳು ಒಂದು ಸಾವಿರದ ಏಳ್ನೂರಾ ಎಂಬತ್ತು!) ಸಂಕ್ಷಿಪ್ತ ಪರಿಚಯ. ಗಮನಿಸಿ, ಇದು ಪುಸ್ತಕದ ಬದನೇಕಾಯಿಯಲ್ಲ. ಪ್ರತ್ಯಕ್ಷದರ್ಶಿಯ, ನಿಸ್ವಾರ್ಥ ಪ್ರಚಾರಕನ ಟಿಪ್ಪಣಿಗಳು. ಪಕ್ಷಿಗಳಿಗೆ ಸಂಬಂಧಪಟ್ಟಂತೆ ಇಂಥಾ ಟಿಪ್ಪಣಿಗಳ ವಿಸ್ತೃತ ಮತ್ತು ಸಚಿತ್ರ ರೂಪವೇ ಈಗ ಲಭ್ಯವಿರುವ ಅವರ ಪುಸ್ತಕ - ಕೊಡಗಿನ ಖಗರತ್ನಗಳು. ಇದು ಪಶ್ಚಿಮ ಘಟ್ಟಗಳ ಸುತ್ತಮುತ್ತ ಕಂಡುಬರುವ ಮುನ್ನೂರಾ ಹತ್ತು ಹಕ್ಕಿಗಳ ವರ್ಣಪೂರಿತ ಚಿತ್ರ ಸಹಿತ ಮಾಹಿತಿ ಪುಸ್ತಕ; ಅಕ್ಷರಶಃ ಅನ್ವೇಷಕನ ಕೈಪಿಡಿ. ಬೆಲೆ ಕೇವಲ ರೂ. ಇನ್ನೂರೈವತ್ತು. (ದೂರದೂರಿನವರು ನನಗೆ ಸ್ವವಿಳಾಸ ಸಹಿತ ರೂ. ೨೫೦-೦೦ + ಸಾದಾ ಅಂಚೆವೆಚ್ಚವಾದರೆ ಐದು, ನೋಂದಾಯಿತವಾದರೆ ರೂ ೨೫ ಮುಂಗಡ ಮನಿಯಾರ್ಡರ್ ಕಳಿಸಿ ಪುಸ್ತಕ ಪಡೆಯಬಹುದು.)

ಯಾವುದೇ ಶುದ್ಧ ವೃತ್ತಿಪರನನ್ನು ಪರಾಂಬರಿಸಿ ನೋಡಿದರೆ ಅಲ್ಲೊಬ್ಬ ಉತ್ಕೃಷ್ಟ ಸಮಾಜಸೇವಕನನ್ನೂ ನಾವು ಕಾಣಬಹುದು. ಅದಕ್ಕೆ ಉದಾಹರಣೆಯಾಗಿ ವನ್ಯಪ್ರೇಮಿ ನರಸಿಂಹನ್ ಅವರ ಡಾಕ್ಟರ್‌ಗಿರಿ ಈ ಸಲದ ಇನ್ನೊಂದು ಪತ್ರವನ್ನು ರೂಪಿಸಿದೆ. ನನ್ನ ವಗ್ಗರಣೆಯಿಲ್ಲದೆ ಡಾ| ನರಸಿಂಹನ್ ಪತ್ರ ಪಾಕವನ್ನು ನಿಮ್ಮ ಅನುಪಾನಕ್ಕೆ ಕೊಡುತ್ತಿದ್ದೇನೆ.
“ಇತ್ತೀಚೆಗೆ ಎಲ್ಲೆಡೆ ಕೇಳಿಬರುತ್ತಿರುವ ಹಂದಿಜ್ವರದ ಬಗ್ಗೆ ಈ ಸಾರಿ ನಿಮ್ಮ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತೇನೆ. ಹಂದಿಜ್ವರ ಎನ್ನುವುದು ಎಚ್೧ ಎನ್ ೧ ಎಂಬ ವೈರಸ್ಸಿನಿಂದ ಉಂಟಾಗುವ ರೋಗ. ವೈರಸ್‌ಗಳು ಇಂದು-ನೆನ್ನೆ ಹುಟ್ಟಿದ ಜೀವಿಗಳಲ್ಲ. ಭೂಮಿಯ ಮೇಲೆ ಮೊದಮೊದಲು ಅಂದರೆ ಸುಮಾರು ೪೦೦ ಕೋಟಿ ವರ್ಷಗಳ ಹಿಂದೆ ವಿಕಾಸ ಹೊಂದಿದ ಏಕಾಣುಜೀವಿಗಳು.

“ವೈರಸ್‌ಗಳಿಗಿರುವ ಎರಡು ವಿಶಿಷ್ಟ ಗುಣಗಳಿಂದಾಗಿ ಅವು ಪ್ರಪಂಚದಲ್ಲಿ ಇಷ್ಟು ಸಮರ್ಥವಾಗಿ, ಯಾವುದೇ ಆತಂಕವಿಲ್ಲದೆ ವಿಕಾಸಹೊಂದಲು ಸಾಧ್ಯವಾಗಿದೆ. ಮೊದಲನೆಯದಾಗಿ, ಈ ಸೂಕ್ಷ್ಮಾಣುಜೀವಿಗಳಿಗೆ ತಮ್ಮ ಬೆಳವಣಿಗೆಗೆ ಅವಶ್ಯವಾದ ರಾಸಾಯನಿಕ ದ್ರವ್ಯಗಳನ್ನು ತಮ್ಮದೇ ದೇಹದಲ್ಲಿ ತಯಾರು ಮಾಡಿಕೊಳ್ಳುವ ಶಕ್ತಿಯಿಲ್ಲ. ಹೀಗಾಗಿ ಅವು ಬೆಳೆಯಲು ಒಂದು ಪ್ರಾಣಿ ಅಥವಾ ಸಸ್ಯವನ್ನು ಅವಲಂಬಿಸುತ್ತದೆ. ಮತ್ತೆ ಆ ಜೀವಿಯ ಯಾವ ಕೋಶದಲ್ಲಿ ತಮಗೆ ಆವಶ್ಯವಿರುವ ಜೀವದ್ರವ್ಯ ದೊರಕುತ್ತದೋ ಅದನ್ನು ಆಕ್ರಮಿಸಿ, ನಾಶಮಾಡಿ, ತಾವು ಬೆಳೆಯುತ್ತವೆ. ಆದ್ದರಿಂದಲೇ ಅತಿ ಸಾಮಾನ್ಯವಾದ ನೆಗಡಿ-ಶೀತ, ದಢಾರದಿಂದ ಹಿಡಿದು ಪೊಲಿಯೋ ಏಯ್ಡ್ಸ್ ಮತ್ತು ಎಚ್೧ ಎನ್೧ವರೆಗೆ ಹರಡುವ ಎಲ್ಲಾ ವೈರಸ್ ರೋಗಗಳೂ ನಮ್ಮ ದೇಹದ ಒಂದೊಂದು ವಿಶೇಷ ಜೀವಕೋಶಗಳಿಗೇ ಅಂಟುತ್ತವೆ.

“ಎರಡನೆಯದಾಗಿ, ವೈರಾಣುಗಳು ಆಗಿಂದಾಗ್ಗೆ ತಮ್ಮ ದೇಹದ ರೂಪವನ್ನು ಅಲ್ಪ್ಸ ಸ್ವಲ್ಪ ಬದಲಿಸಿಕೊಳ್ಳುವ ಗುಣವನ್ನು ಹೊಂದಿವೆ. ಇದರಿಂದಾಗಿ ಒಂದು ವೈರಸ್ ವೇಷ ಮರೆಸಿಕೊಂಡು ಪುನಃ ನಮ್ಮ ದೇಹವನ್ನು ಆಕ್ರಮಿಸಿದರೂ ನಮ್ಮ ದೇಹದಲ್ಲಿರುವ ರೋಗನಿರೋಧಕ ಶಕ್ತಿ ಸೋತುಹೋಗುತ್ತದೆ!

“ಇಂದು ಮಾನವನ ಹಸ್ತಕ್ಷೇಪದಿಂದ ಭೂಮಿಯ ಮೇಲೆ ಪ್ರತಿದಿನ ಒಂದೊಂದು ಪ್ರಭೇದದ ಸಸ್ಯ ಅಥವಾ ಪ್ರ್ರಾಣಿ ವಿನಾಶ ಹೊಂದುತ್ತಿದೆಯೆಂದು ವಿಜ್ಞಾನಿಗಳು ಹೇಳುತ್ತಾರೆ. ಈ ಒಂದೊಂದು ಜೀವಿಯ ಜೀವಕೋಶಗಳ ಮೇಲೆ ಅವಲಂಬಿತವಾದ ಒಂದೊಂದು ವೈರಾಣು ಅನಿವಾರ್ಯವಾಗಿ ಮಾನವ ದೇಹವನ್ನು ಗುರಿಯಾಗಿಟ್ಟುಕೊಂಡಿದೆಯೆಂದು ನನಗೆ ಅನಿಸುತ್ತದೆ. ಏಕೆಂದರೆ, ಈವತ್ತು ನಾವು ಜಗತ್ತಿನ ಎಲ್ಲೆಡೆ ಬಹು ತೀವ್ರವಾಗಿ ಬೆಳೆಯುತ್ತಿದ್ದೇವೆ. ಜಾಗತಿಕ ಅಭಿವೃದ್ಧಿಯೊಂದಿಗೆ ನಮ್ಮ ಓಡಾಟದ ವೇಗವೂ ಅಧಿಕವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಹೊಸ ಹೊಸ ವೈರಸ್‌ಗಳನ್ನು ತಡೆದುಕೊಳ್ಳುವ ಶಕ್ತಿಯೂ ಇಲ್ಲ. ಹೀಗಾಗಿ ಇಂದು ನಮ್ಮನ್ನು ಹೊಸ ಹೊಸ ವೈರಸ್ ರೋಗಗಳು ಕಾಡುತ್ತಿವೆ. ಇದು ನಾವೇ ನಮ್ಮ ಮೇಲೆ ಹೇರಿಕೊಂಡ ಗೋರಿಕಲ್ಲು!

“ಈವತ್ತು ಈ ವೈರಸ್‌ಗಳು ಮಾನವನ ಮೇಲೆ ಒಂದು ರೀತಿಯ ಯುದ್ಧವನ್ನೇ ಸಾರಿವೆಯೋ ಅನಿಸುತ್ತದೆ. ವಿಪರ್ಯಾಸವೆಂದರೆ, ಇದು ಭೂಮಿಯ ಮೇಲೆ ವಿಕಾಸ ಹೊಂದಿದ ಅತಿ ಪುರಾತನ ಮಾತ್ತು ಅತಿ ವಿಕಸಿತ ಜೀವಿಗಳ ನಡುವಣ ಯುದ್ಧವೇ ಆಗಿದೆ.”

ಸುಮಾರು ಹನ್ನೊಂದು ವರ್ಷಗಳ ಹಿಂದೆ ಮಂಗಳೂರಿನ ಸಮೀಪ ನಾನು ಒಂದು ಎಕ್ರೆ ಪಾಳು ಭೂಮಿ ಕೊಂಡದ್ದೂ ಅದನ್ನು ಪ್ರಾಕೃತಿಕ ಪುನರುಜ್ಜೀವನದ ಪ್ರಯೋಗಭೂಮಿಯಾಗಿಸುವ ಸಂಕಲ್ಪ ಹೊತ್ತು ‘ಅಭಯಾರಣ್ಯ’ವೆಂದೇ ಹೆಸರಿಸಿದ್ದೂ ನನ್ನ ಬ್ಲಾಗಿಗರಿಗೆ ಹೊಸ ವಿಚಾರವೇನೂ ಅಲ್ಲ. ಅಂದು ವನ್ಯದ ಆವಶ್ಯಕತೆಯನ್ನು ಪ್ರಚುರಿಸುವ ಉದ್ದೇಶದಿಂದ ಅದನ್ನು ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳೊಡನೆ ಉದ್ಘಾಟಿಸುವ ಕಾರ್ಯಕ್ರಮ ಹಾಕಿಕೊಂಡೆ. ಊರಿನ ಪರಿಚಿತರಿಗೆ, ಪರಿಸರ ಆಸಕ್ತ ಹೆಸರುಗಳಿಗೆ ಆಮಂತ್ರಣ ಪತ್ರ ಅಲ್ಲಲ್ಲ, ಸರಿಯಾಗಿ ಹೇಳಬೇಕಾದರೆ ನನ್ನ ಉದ್ದೇಶಗಳನ್ನು ಸ್ಪಷ್ಟಗೊಳಿಸುತ್ತಿದ್ದ ಎಂಟೋ ಹತ್ತು ಪುಟದ ಪುಸ್ತಿಕೆಯನ್ನೇ ಕಳಿಸಿದ್ದೆ. ನನ್ನ ಸುತ್ತಮುತ್ತಲಿನ ಸಾಮಾನ್ಯರಿಗೆ ಪ್ರತ್ಯಕ್ಷ ಪ್ರೇರಣೆಕೊಡುವುದು, ದೂರದ ಪರಿಣತರಿಗೆ ಕೇವಲ ಮಾಹಿತಿ ಕೊಡುವುದು ನನ್ನುದ್ದೇಶ. ಮಂಗಳೂರಿನವರೇ ಎಷ್ಟೋ ಮಂದಿ ನೆಪಗಳನ್ನೊಡ್ಡಿ ಜಾರಿಕೊಂಡರು. ಮತ್ತೆಷ್ಟೋ ಮಂದಿ ಟೇಪು ಕತ್ತರಿಸುವ ಔಪಚಾರಿಕ ಅಥವಾ ಗೃಹಪ್ರವೇಶದಂಥಾ ವೈದಿಕ ವಿಧಿ ನಿರೀಕ್ಷೆಯಲ್ಲಿ ಬಂದು, ಎರಡೂ ಇಲ್ಲದಿದ್ದರೂ ದೇಶಾವರಿ ನಗೆ ಕೊಟ್ಟು, ಕೈಕುಲುಕಿ, ವ್ಯವಸ್ಥೆ ಮಾಡಿದ್ದ ಕಾಫಿತಿಂಡಿ ಸದುಪಯೋಗಪಡಿಸಿ ಮರೆಯಾದರು. ಆದರೆ...

Huliಬೆಳಿಗ್ಗೆಯೇ ಬಂದ ನನ್ನ ಮಡಿಕೇರಿಯ ಸಂಬಂಧಿಗಳೊಡನೆ ಅನಿರೀಕ್ಷಿತವಾಗಿಯೇ ಆದರೂ ಸಮಾನಾಸಕ್ತಿಯ ಬಂಧುವಂತೆ ಬಂದು ಮೊದಲ ಬಾರಿಗೆ ನನಗೆ ಮುಖ ಪರಿಚಯಲಾಭವನ್ನೂ ಕೊಟ್ಟವರಲ್ಲಿ ಡಾ|ನರಸಿಂಹನ್ ಪ್ರಮುಖರು. ಸಭಾಕಲಾಪಗಳು ಅಪರಾಹ್ನದಲ್ಲಿತ್ತು. ಆದರಿವರು ಕಾಡು ಹರಟೆಗಳಿಗೆ, ಯಾವ ಔಪಚಾರಿಕತೆಗಳಿಗೆ ಕಾಯದೇ ಸ್ಥಳಪರಿಚಯದ ಹುಡುಗನೊಬ್ಬನನ್ನು ಹಿಡಿದುಕೊಂಡು ಆಸುಪಾಸಿನ ತೋಟ, ಗುಡ್ಡ ಸುತ್ತಿದರು. ತಮ್ಮ ಪಕ್ಷಿವೀಕ್ಷಣೆಯ ಹವ್ಯಾಸಕ್ಕೆ ಹೊಸ ಪರಿಸರವನ್ನು ತೆರೆದುಕೊಂಡರು. ಸಂಜೆಯ ಕಲಾಪಗಳಲ್ಲಿ ಎಲ್ಲರೊಡನೆ ಒಂದಾಗಿ ಬಂದಷ್ಟೇ ಅನೌಪಚಾರಿಕವಾಗಿ ಮರಳಿದರು. ಇಂದು ಶುದ್ಧ ವೃತ್ತಿಪರರಾದವರಿಗೂ ಪ್ರತ್ಯೇಕ ಸ್ವಾಗತ ಮಾತುಗಳು, ವಿಶೇಷ ಉಪಚಾರಗಳು, ಕೃತಜ್ಞತಾ ಹೇಳಿಕೆಗಳು ಸಂಘಟಕರಿಂದ ಹೊರಡದಿದ್ದರೆ ಅಪಖ್ಯಾತಿಯ ಅಲೆ ಏಳುವುದು ಖಚಿತ. ಕೆಲಸದ ಮುಂದೆ ವ್ಯಕ್ತಿಪ್ರತಿಷ್ಠೆಯನ್ನು ಮೆರೆಯದ ಡಾ| ನರಸಿಂಹನ್ ಅವರ ನಡವಳಿಕೆ ಇಂದು ಸಾರ್ವಜನಿಕರಂಗದಲ್ಲಿ ಹೆಚ್ಚುಕಡಿಮೆ ಇಲ್ಲವೇ ಆದ ದೊಡ್ಡ ಗುಣ.

ಸುಮಾರು ಎಂಟು ವರ್ಷದ ಹಿಂದೆ ನನ್ನ ದೊಡ್ಡ ಮಿತ್ರ ಬಳಗವನ್ನು ಸಂಯೋಜಿಸಿಕೊಂಡು ನಾವೇ ಮನೆಯವರು ‘ಅಭಯಾರಣ್ಯ’ದಲ್ಲಿ ಒಂದು ‘ವೈಜ್ಞಾನಿಕ ತಳಹದಿಯ ವ್ಯಕ್ತಿತ್ವ ವಿಕಸನ ಶಿಬಿರ’ ನಡೆಸಿದೆವು. ಅಲ್ಲಿ ಆಯ್ದ ಇಪ್ಪತ್ತೈದು ಕಾಲೇಜು ವಿದ್ಯಾರ್ಥಿಗಳಿಗೆ ಮೂರು ದಿನ ಶಿಕ್ಷಣ, ಊಟ, ವಾಸ ಉಚಿತ. ಬೆಳಿಗ್ಗೆ ಐದರಿಂದ ತೊಡಗಿ ರಾತ್ರಿ ಹನ್ನೊಂದರವರೆಗೆ ಒಂದು ಮಿನಿಟೂ ಸೋರಿಹೋಗದಂತೆ ಕಾರ್ಯಕಲಾಪಗಳ ಸರಣಿಯೇ ಇತ್ತು. ಚಾರಣ, ಪಕ್ಷಿವೀಕ್ಷಣೆ, ಕೀಟಪರಿಚಯ, ಸಸ್ಯ ಪರಿಚಯ, ಜಲಸಂಚಯನ, ನಕ್ಷತ್ರವೀಕ್ಷಣೆ, ಹ್ಯಾಂ ಮುಂತಾದವು ಹೊರಾಂಗಣದ ಕಲಾಪಗಳು.  ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ, ನಾಟಕ, ಸಂಗೀತ, ಯಕ್ಷಗಾನ, ಸಾಹಿತ್ಯ, ಕಾವ್ಯ, ಆಕಾಶವಾಣಿ, ಕಾನೂನು, ಜನಪದ, ವನ್ಯ ಸಂರಕ್ಷಣೆ, ಸಾವಯವ ಕೃಷಿ, ಕಸದಿಂದ ರಸ, ಪವಾಡ ತನಿಖೆ, ಬಳಕೆದಾರರ ಹೋರಾಟ ಮಾಹಿತಿ, ವೈಜ್ಞಾನಿಕ ಮನೋಭಾವ ಇತ್ಯಾದಿ ಒಳಾಂಗಣದವು.

ಮಂಗಳೂರು ಆಸುಪಾಸಿನ ನನ್ನ ಹಲವು ಆತ್ಮೀಯ ಆದರೆ ಅಸಾಮಾನ್ಯ ಸಂಪನ್ಮೂಲ ವ್ಯಕ್ತಿಗಳು ತಮ್ಮ ಸೇವೆಯನ್ನು ಈ ಶಿಬಿರಕ್ಕೆ ಪೂರ್ಣ ಉಚಿತವಾಗಿ ಅಂದರೆ ಕನಿಷ್ಠ ಪ್ರಯಾಣಭತ್ತೆಯೂ ಪಡೆಯದೆ ಧಾರೆ ಎರೆಯುವವರಿದ್ದರು. ಆದರೂ ದೂರದೂರಿನ ಪರಿಚಿತ ಕೆಲವರಿಗೆ ಕೇವಲ ಸುದ್ದಿಯ ಮಟ್ಟದಲ್ಲಿ ಪತ್ರ ಕಳಿಸಿದಂತೆ ಡಾ| ನರಸಿಂಹನ್ ಅವರಿಗೂ ಕಳಿಸಿದ್ದೆ. ನನ್ನ ನಿರೀಕ್ಷೆಯಲ್ಲಿ ದೂರದೂರಿನವರು ಸ್ವಂತ ಖರ್ಚು ಹಾಕಿಕೊಂಡು ನಮ್ಮ ಶಿಬಿರಕ್ಕೆ ಬರುವಷ್ಟು ಅದ್ಭುತವನ್ನೇನೂ ನಾವು ಸಂಘಟಿಸಿರಲಿಲ್ಲ. ಆ ಸಂಪನ್ಮೂಲ ವ್ಯಕ್ತಿಗಳು ಅನ್ಯ ಕಾರ್ಯ ನಿಮಿತ್ತ ಮಂಗಳೂರಿನತ್ತ ಬರುವವರಿದ್ದರೆ, ಬಿಡುವುಮಾಡಿಕೊಳ್ಳುವುದು ಸಾಧ್ಯವಿದ್ದರೆ, ಶಿಬಿರಾರ್ಥಿಗಳಿಗೆ ಲಾಭವಾದೀತೆಂಬ ದೂ(ದು?)ರಾಲೋಚನೆಯಲ್ಲಿ ಪತ್ರ ಹೋಗಿತ್ತು. ಆದರೆ ನರಸಿಂಹನ್ನರ ವಿಶ್ವಾಸ ದೊಡ್ಡದು. ಅಕಾಲಿಕವಾಗಿ ಸುರಿಯುತ್ತಿದ್ದ ಕುಂಭದ್ರೋಣ ಮಳೆಯಲ್ಲೂ ತನ್ನ ಹೆಂಡತಿ ಮಕ್ಕಳನ್ನು ಕೂಡಿಕೊಂಡು ಶಿಬಿರದ ಒಂದು ದಿನ ಬೆಳಿಗ್ಗೆ ಸ್ವಂತ ಕಾರಿನಲ್ಲಿ ಬಂದರು. ಜೊತೆಗೆ ಅಭಯಾರಣ್ಯ ಕೇಂದ್ರವಾಗಿರುವಂತೆ ಆ ಋತುವಿನ ರಾತ್ರಿಯಾಕಾಶದ ನಕ್ಷೆಗಳನ್ನು ಸಂಗ್ರಹಿಸಿ ಅಷ್ಟೂ ಶಿಬಿರಾರ್ಥಿಗಳಿಗೆ ಸಾಲುವಷ್ಟು ಪ್ರತಿ ಮಾಡಿಸಿ ತಂದಿದ್ದರು. ತನ್ನ ಹೆಚ್ಚುಗಾರಿಕೆಯನ್ನು ನಮ್ಮ ವ್ಯವಸ್ಥೆಯ ಮೇಲೆ ಹೇರದಂತೆ, ವಿಚಾರಿಸಿಕೊಂಡು ಪಕ್ಷಿವೀಕ್ಷಕರಿಗೆ ಕಿವಿಮಾತುಗಳನ್ನಷ್ಟೇ ಹೇಳಿದರು. ತಾವು ದೊಡ್ಡದಾಗಿ ಬಿಡಿಸಿಟ್ಟಿದ್ದ ಹಲವು ಹಕ್ಕಿ ಚಿತ್ರಗಳನ್ನು ಊಟದ ವಿರಾಮದಲ್ಲಿ ಎಲ್ಲರೂ ನೋಡುವಂತೆ ಪ್ರದರ್ಶಿಸಿದರು. ನಮ್ಮ ಕಾಡಿನ ಕಲ್ಪನೆಗೆ ಪೂರಕವಾಗಿ ಅಂದು ಅವರು ತಂದಿತ್ತ ಐದೂ ಗಿಡಗಳು ಇಂದು ಬೆಳೆದು ನಳನಳಿಸುತ್ತಾ ನಮ್ಮಲ್ಲವರ ನೆನಪನ್ನೂ ಹಸಿರಾಗಿಟ್ಟಿದೆ.

kodagina khagaratnaನರಸಿಂಹನ್ ಅವರ ವನ್ಯಸಂರಕ್ಷಣೆಯ ಸಂದೇಶಪ್ರಸಾರದ ಮುಂದುವರಿಕೆ, ಪಕ್ಷಿಕೈಪಿಡಿಯ ಪ್ರಕಟಣೆ, ನಕ್ಷತ್ರವೀಕ್ಷಣೆ ಮೊದಲಾದ ವೃತ್ತಿಯ ಮಿತಿಯಿಂದ ಹೊರಗಿನ ಚಟುವಟಿಕೆಗಳನ್ನು ಸಮಾಜಸೇವೆ, ಪರಿಸರವಾದಿ ಎಂಬಿತ್ಯಾದಿ ಸವಕಲು ಮತ್ತು ಅತ್ಯಂತ ಅಪಮೌಲ್ಯಗೊಂಡ ವಿಶೇಷಣದೊಡನೆ ಹೊಗಳಲು ನನಗೆ ಮನಸ್ಸು ಬರುವುದಿಲ್ಲ. ಇದವರ ಆರೋಗ್ಯಪೂರ್ಣ ಜೀವನಕ್ರಮ. ಜೀವನರಂಗದ ಇವರ ಭಾರೀ ಆಟವನ್ನು ಮೈದಾನದ ಅಂಚಿನಲ್ಲಿ ನಿಂತು ನೋಡುತ್ತಾ ಪ್ರೋತ್ಸಾಹ ಕೊಡುತ್ತಿರುವ (೨೫ ವರ್ಷಗಳಲ್ಲಿ ಅವರಿಂದ ಸಂದೇಶವಾಹಕ ಅಂಚೆ ಸ್ವೀಕರಿಸಿದವರ ಸಂಖ್ಯೆ ೭೦೪೦. ವಿತರಣೆಯಾದ ಕಾರ್ಡುಗಳ ಸಂಖ್ಯೆ ೫೧,೮೨೦. ಮತ್ತೆ ಆ ಕಾರ್ಡುಗಳು, ಪತ್ರಗಳು ಕೈಬದಲಿಸಿ ಮುಟ್ಟಿದವರು, ಬಾಯ್ದೆರೆ, ಪತ್ರಿಕೆಯೇ ಮೊದಲಾದ ವಿವಿಧ ಮಾಧ್ಯಮಗಳ ಅಯಾಚಿತ ಪ್ರಚಾರದಲ್ಲಿ ತಿಳಿದು ಮೆಚ್ಚಿಕೊಂಡವರು ಅಸಂಖ್ಯ) ಇಷ್ಟೊಂದು ಜನಗಳೊಡನೆ ನನ್ನ ಧ್ವನಿ ಸೇರಿಸಿ "ಕೀಪಿಟಪ್ಪ್ ನರಸಿಂಹನ್, ದಯವಿಟ್ಟು ಮುಂದುವರಿಸಿ" ಎಂದಷ್ಟೇ ಹೇಳಬಲ್ಲೆ. ಇದನ್ನೋದಿದ ನೀವೂ ನರಸಿಂಹನ್ ಕುರಿತ ನಿಮ್ಮ ಅನುಭವದ ಅಥವಾ ಕನಿಷ್ಠ ಮೆಚ್ಚುಗೆಯ ನಾಲ್ಕು ಮಾತುಗಳನ್ನು ಇಲ್ಲೇ ಪ್ರತಿಕ್ರಿಯಾ ಅಂಕಣದಲ್ಲಿ ತುಂಬಲು ಮರೆಯುವುದೂ ಇಲ್ಲ ಎಂದು ನಂಬಿದ್ದೇನೆ.

11 comments:

 1. ನರಸಿಂಹನ್ ಅಪರೂಪಾತಿ ಅಪರೂಪ - ಅನುಸರಣೀಯ.
  ಅಂದದ ಶೀರ್ಷಿಕೆ, ಚಿತ್ರ ಹೊತ್ತ ಹೊತ್ತಗೆಯ ಚಿತ್ರ ಕೊಂಡು ಓದುವ ಆಸಕ್ತಿ ಹುಟ್ಟಿಸಿದೆ.
  ಇವರ ಬಗ್ಗೆ ಮತ್ತು ಪುಸ್ತಕದ ಬಗ್ಗೆ ನಿನ್ನ ಲೇಖನ ಪತ್ರಿಕೆಗಳಲ್ಲಿ - ಉದಯವಾಣಿ/ಪ್ರಜಾವಾಣಿಗಳಲ್ಲಿ - ಬರಬೇಕಾದದ್ದು ಅವಶ್ಯ. ಬ್ಲಾಗಿಗೊಂದು ಈ ಬರಹ ಹೊಸ ಮೆರುಗು ತಂದಿದೆ.
  ರಾಧಾಕೃಷ್ಣ

  ReplyDelete
 2. ಪ್ರೀತಿಯ ಅಶೋಕರಿಗೆ ನಮಸ್ಕಾರಗಳು.
  ಡಾ ನರಸಿಂಹನ್ ಅವರ ಕೊಡಗಿನ ಖಗರತ್ನಗಳು ಪುಸ್ತಕದ ಬಗ್ಗೆ ಜಿಟಿ ನಾರಾಯಣರಾಯರು ತುಂಬ ಮೆಚ್ಚುಗೆಯಿಂದ ಮಾತನಾಡಿದ್ದನ್ನು ಕೇಳಿದ್ದೆ.
  ಆ ಪುಸ್ತಕ ಪಡೆಯಲು ಸಾಧ್ಯ್ಯವಾಗಿರಲಿಲ್ಲ.
  ಕೊಡಗಿನ ಪರಿಸರ ರತ್ನವನ್ನು ನಾರಾಯಣರಾಯರಿಗಿಂತ ಹೆಚ್ಚು ಮೆಚ್ಚಲು ನನಗೆ ಸಾಧ್ಯವೆ!
  ಅವರ ಪುಸ್ತಕವನ್ನು ನನಗೆ ಕಳುಹಿಸಿ.

  ನರಸಿಂಹನ್ ಅವರೆ, ಮೇಲೆ ಮಡಗಿ!

  ಪ್ರೀತಿಯಿಂದ
  ಪಂಡಿತಾರಾಧ್ಯ

  ReplyDelete
 3. Niranjana Vanalli08 October, 2009 13:44

  Priya Ashoka,
  Dr Narasimham avara kelasa nammanthavara sokkannu muriyuvudakke saaku.
  Great. Naanu avarannomme bhetiyagabeku

  ReplyDelete
 4. ನರೇಂದ್ರ08 October, 2009 13:50

  ಸದ್ದು-ಸುದ್ದಿ ಎರಡೂ ಇಲ್ಲದೆ ಹೀಗೆ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗುತ್ತಿರುವವರಿಂದಲೇ ಪರಿಸರಕ್ಕೆ ನಿಜವಾದ ಕೊಡುಗೆ ಸಂದಿದೆ. ನರಸಿಂಹನ್ ಚಿತ್ರಗಳು ಅತ್ಯಂತ ನಿಖರ ಗೆರೆಗಳಿಂದ ಕೊರೆದಂತೆ, ಕುಸುರಿಯಿಂದ ಶ್ರೀಮಂತಗೊಂಡಂತೆ ಕಣ್ಮನ ಸೆಳೆಯುವುದು ಮಾತ್ರವಲ್ಲ ಮಾಹಿತಿಯ ಕಣಜದಂತಿದೆ ಈ ಪುಸ್ತಕ. ಕ್ಯಾಮರಾದಲ್ಲೂ ಸಿಗಲಾರದ ವಿವರಗಳು ಇವರ ರೇಖೆಗಳಲ್ಲಿ ಮೂಡಿವೆ. ಅಷ್ಟಿದ್ದೂ ಆ ಹಕ್ಕಿಗಳಷ್ಟೇ ಈ ಚಿತ್ರಗಳ ಬಗ್ಗೆ ಅತ್ಯಂತ ಮುಕ್ತವಾಗಿರುವ ಇವರ ಮನೋಧರ್ಮ ಅಚ್ಚರಿ ಹುಟ್ಟಿಸುತ್ತದೆ. ನಿಮ್ಮ ಈ ಲೇಖನ ಇನ್ನಷ್ಟು ಉದ್ದವಿರಬಾರದಿತ್ತೆ ಅನಿಸುವಂತಿದೆ. ಇಬ್ಬರಿಗೂ ನಮನ.

  ReplyDelete
 5. abhayaranyada aa karyakramadalli sri narasimhan avarannu kanuva avakasha nanage labhisittu. avara saralathe, snehaparathe modalige nammannu tattuttave. bahala begane hiritanavannu galisikondavaru.

  Namaskara.

  devu hanehalli

  ReplyDelete
 6. matte nenapige banthu. narasimhan avarondige kaleda kshanagalu.avaralli eruve kaalaji namagella preraneyaagabeku . nanagondu santhosha, avaru needida koduge (pusthaka) nannallu yide.

  ReplyDelete
 7. S.Raghavendra Bhatta09 October, 2009 14:05

  Dear Sri Ashoka,
  The intimate and trasperantly sincere encomium you have showered on Dr Narasimhan was really touching and worth emulation by the present generation which has somehow lost taking care of the values that make our lives meaningful as well as focussed.
  I was introduced to Dr Narasimhan by your revered Appa and the humility coupled with simplicity of the person that too in the august presence of his mentor was in keeping with GTN's all pervasive magnanimity in projecting anybody with the minimum talent to blossom into a great in his/her own field of interest and expertise.
  This was further strengthened today when Sri K B Sadananda told me the circumstances under which he came across Dr Narasimhan's book through the good offices of Sri GTN. The review in The Hindu and the subsequent cordial relation between the two families all due to Sri GTN's paurohitya and blessings.Such was GTN's midas' touch !!
  Namaskaara
  S R Bhatta / 12 20 Noon / 09 10 2009

  ReplyDelete
 8. ನಾಗರಾಜ ರಾವ್ ಜವಳಿ09 October, 2009 20:00

  ಪ್ರಿಯ ಅಶೋಕ್,
  ಅಪರೂಪದ ವ್ಯಕ್ತಿತ್ವವನ್ನು ಪರಿಚಯಿಸಿದ್ದೀರಿ. ಇದಕ್ಕಾಗಿ ಧನ್ಯವಾದಗಳು. ಅವರ ಪುಸ್ತಕ ಬೇಕು , ಬಂದಾಗ ತೆಗೆದುಕೊಳ್ಳುತ್ತೇನೆ. ಮತ್ತು ಇನ್ನು ಮೇಲೆ ಪ್ರತಿ ತಿಂಗಳೂ ಅವರಿಗೆ ಪ್ರಯೋಜನವಾಗುವಂತೆ ಅಂಚೆ ಚೀಟಿಗಳನ್ನು ಕಳುಹಿಸಿಕೊಡುತ್ತೇನೆ. ಅವರು ತಪ್ಪು ತಿಳಿದುಕೊಳ್ಳಲಾರರು ಎಂಬ ಧೈರ್ಯದಿಂದ. ಅವರು ಮಾಡುತ್ತಿರುವ ಒಳ್ಳೆಯ ಕೆಲಸಗಳಿಗೆ ನೂರು ಕೈಗಳು ಒಟ್ಟಾಗಬೇಕಲ್ಲವೆ?-ಜವಳಿ.

  ReplyDelete
 9. ಎಸ್.ಎಂ ಪೆಜತ್ತಾಯ11 October, 2009 17:24

  ವೀರರಾಜ ಪೇಟೆಯ ಡಾಕ್ಟರರ ಹೆಜ್ಜೆಗುರುತನ್ನು ನಮ್ಮ ಯುವಜನರು ಪಾಲಿಸಲಿ.
  ಅವರು ಬರೆದ ಮರಕಪ್ಪೆ ಅದೆಷ್ಟು ಚಂದ!

  ಹುಲಿರಾಯರ ಸವಾಲು ಹುಲು ಮಾನವರಿಂದ ಉತ್ತರಿಸಲಾದೀತೇ?

  ನನ್ನ ಬಾಲ್ಯದಲ್ಲಿ ಕಡು ದಾರಿಯಲ್ಲಿ ಹುಲಿರಾಯರ ಹೆಜ್ಜೆ ಮತ್ತು ಲದ್ದಿ ನೋಡ ಸಿಗುತ್ತಾ ಇತ್ತು. ಅದು ನನ್ನ ಟೈಗರ್ ಟ್ರೈಲ್ ನೆನಪು!

  [‘ನರಸಿಂಹ’ದ (/ನ್ನರ) ಪ್ರೇರಣೆಯಲ್ಲಿ ‘ನರ ಕೇಸರಿ’ ಆತ್ಮಶೋಧಕ್ಕಿಳಿದಿದೆ(/ದ್ದಾರೆ - ಸಂ)

  ಪರಿಸರ ಪ್ರೇಮ ಬೆಳೆಸಿಕೊಳ್ಳಲು ಯಾರ ನಿರ್ಬಂಧವೂ ಇಲ್ಲ.

  ಇಂದಿನ ಯುವಜನರಿಗೆ ಪರಿಸರದ ಅರಿವು ಮೂಡಿಸಲು ಶಾಲಾಕಾಲೇಜುಗಳಲ್ಲಿ ಸ್ವಲ್ಪ ಪ್ರಯತ್ನ ಮಾಡಿದರೆ ಎಷ್ಟು ಚೆನ್ನಾಗಿರುತ್ತೆ!

  ಇಂದಿನ ಯುವ ಪೀಳಿಗೆಯ ಕೆಲ ಮಂದಿಗೆ ಪ್ರಕೃತಿ, ವನ ಭೋಜನ ಮುಂತಾದುವೆಲ್ಲಾ ಒಂದು ಮನೋರಂಜನೆ. ಕೆಲವರಿಗೆ ಪಿಕ್ನಿಕ್ ಮಾಡಿ, ಪೇಪರ್ ಪ್ಲೇಟ್, ನೀರಿನ ಬಾಟಲಿ ಎಸೆದು ಬರುವ ಜಾಗ,

  ಹಲವು ಜನರಿಗೆ ಫಾರಂ ಹೌಸ್ ಎಂದರೆ ಮೋಜಿನ ತಾಣ! ಇದು ಹೊಸಾ ಸಂಸ್ಕೃತಿ ಅಂತೆ!

  ಹಲವು ಜನ ನನ್ನ ಪರಿಚಯಸ್ಥರು " ನಿಮ್ಮ ತೋಟಕ್ಕೆ ಬರುತ್ತೇವೆ. ಶಿಕಾರಿ ಮಾಡಲು ಬಿಡುತ್ತೀರಾ? ಸ್ವಲ್ಪ ಕುಡಿದು ರಿಲ್ಯಾಕ್ಸ್ ಮಾಡಬಹುದೆ? ನಿಮ್ಮಲ್ಲಿ ಶಿಕಾರಿ ಮಾಂಸದ ಅಡುಗೆ ಮಾಡಿಸಿ ಹಾಕುತ್ತೀರಾ? ಕಾರ್ಡ್ಸ್ ಆಡಬಹುದೇ? ಸಾಯಂಕಾಲ ಕ್ಯಾಂಫ್ ಫೈರ್ ಮಾಡಿ ಅದರ ಸುತ್ತ ನರ್ತಿಸಬಹುದೇ? ನಿಮ್ಮಲ್ಲಿ ಹೈ ವ್ಯಾಟ್ಟೇಜ್ ಮ್ಯೂಸಿಕ್ ಸಿಸ್ಟಂ ಇದೆಯೇ? ಡ್ರಿಂಕ್ಸ್ ನಾವೇ ತರುತ್ತೇವೆ " ಅನ್ನುತ್ತಾರೆ.

  ಆಗ ನಾನು " ಕ್ಷಮಿಸಿ. ನಮ್ಮ ಹಳ್ಳಿಯ ಮನೆ ನಮ್ಮ ಕಾರ್ಯ ಕ್ಷೇತ್ರ. ನಾವು ಸಸ್ಯಾಹಾರಿಗಳು. ಶಿಕಾರಿ, ಕಾರ್ಡ್ಸ್ ಮತ್ತು ಡ್ರಿಂಕ್ಸ್ ನಮ್ಮಲ್ಲಿ ನಿಶಿದ್ಧ. ಕುಡಿದು ಕುಣಿಯುವ ಸಂಸ್ಕೃತಿ ನಮ್ಮಲ್ಲಿ ಇಲ್ಲ. ಸೂರ್ಯ ಹುಟ್ಟಿದಾಗ ಏಳುತ್ತೇವೆ. ಕೆಲಸ ಮಾಡುತ್ತೇವೆ. ಸೂರ್ಯ ಮುಳುಗಿದ ಮೇಲೆ ಮನೆಗೆ ಬಂದು ದಿನದ ಪೇಪರ್ ಓದಿ ಬೇಗನೇ ಸಸ್ಯಾಹಾರೀ ಊಟ ಮಾಡಿ ಮಲಗುತ್ತೇವೆ. ಬೆಳಗ್ಗೆ ಬೇಗಲೇ ಏಳುತ್ತೇವೆ. ತೋಟದಲ್ಲಿ ನನ್ನ ಪುಸ್ತಕ ಸಂಗ್ರಹ ಇದೆ. ನನ್ನಲ್ಲಿ ಒಳ್ಳೆಯ ಬೈನಾಕುಲರ್ ಇದೆ. ಪಕ್ಷಿವೀಕ್ಷಣೆ ಮಾಡಿ. ಚಾರಣ ಮಾಡಿ. ಎಲ್ಲಾ ಮರಗಳ ಗಿಡಗಳ ಹಕ್ಕಿಗಳ ಕನ್ನಡ ಮತ್ತು ತುಳು ಹೆಸರುಗಳನ್ನು ಬಲ್ಲ ಆಳು ಒಬ್ಬನನ್ನು ಜತೆಗೆ ಕಳುಹಿಸುವೆ. ಕೆಮೆರಾ ತನ್ನಿ. ಫೋಟೋ ತೆಗೆದುಕೊಳ್ಳಿ. ನದಿಯಲ್ಲಿ ಈಜು ಹೊಡೆಯಲು ಅಥವಾ ಮೀನುಗಾರಿಕೆ ಮಾಡಲು ನಮ್ಮಲ್ಲಿ ಅನುಮತಿ ಕೊಡುವುದಿಲ್ಲ. ಒಳ್ಳೆಯ ಜಮಖಾನ ಒಂದನ್ನು ಕೊಡುತ್ತೇವೆ. ಒಳ್ಳೆಯ ಮರಗಳ ನೆರಳಲ್ಲಿ ವಿಶ್ರಮಿಸಿ. ಅಲೇ ನಿದ್ರೆ ಕೂಡಾ ಮಾಡಬಹುದು. ಊಟ ತಿಂಡಿಯ ಸಮಯಕ್ಕೆ ಸರಿಯಾಗಿ ನಮ್ಮ ಮನೆಯಲ್ಲಿ ಹಾಜರಾಗಿ. ನಮ್ಮ ಸಸ್ಯ ಕ್ಷೇತ್ರ ನಮಗೆ ಒಂದು ಪವಿತ್ರವಾದ ಜಾಗ. ನಮ್ಮ ಮನೆ ಮತ್ತು ಮನಗಳನ್ನು ಒಂದು ಮಂದಿರ ಎಂದು ತಿಳಿದು ನಾವು ಹಳ್ಳಿಯಲ್ಲಿ ಬಾಳುತ್ತೇವೆ. ಪುಷ್ಕಳ ಊಟ, ತಿಂಡಿ, ಕಾಪಿ ಚಹಾ ಕೊಡುತ್ತೇವೆ. ನಮ್ಮ ಜೀವನ ರೀತಿ ಗಮನಿಸಿ. ನಮ್ಮ ಹಾಗೇ ನಮ್ಮ ಜತೆ ಬಾಳಿ. ಯಾವ ಕೆಲಸವನ್ನೂ ಮಾಡದೇ ಆರಾಮವಾಗಿ ನಮ್ಮ ಅಥಿತಿಗಳಾಗಿ ಬೇಕಷ್ಟು ದಿನ ನಮ್ಮಲ್ಲಿ ಇರಿ. ಕಾರ್ಮಿಕರ ಮತ್ತು ನೌಕರರ ಪರಿಚಯ ಮಾಡಿಕೊಳ್ಳಿ ಅವರಲ್ಲಿ ವಿಚಾರ ವಿನಿಮಯ ಮಾಡಿ. ನಮ್ಮ ಕೃಷಿ ಪದ್ಧತಿ ಮತ್ತು ನಮ್ಮ ಗ್ರಾಮೀಣ ಕೃಷಿ ಸಂಸ್ಕೃತಿಯನ್ನು ಅರಿಯಿರಿ. ನಮ್ಮ ಸಾಂಪ್ರದಾಯಿಕ ಕೃಷಿ ಜೀವನ ವಿಧಾನವನ್ನು ನಾವು ಬಿಟ್ಟಿಲ್ಲ. ಕರೆಂಟು ಇದ್ದಾಗ ಟೀವಿ ಅಥವಾ ಫ್ಯಾನ್ ಉಪಯೋಗಿಸಬಹುದು. ನಮ್ಮಲ್ಲಿ ರೇಡಿಯೋ ಇದೆ. ವಿ. ಸಿ. ಡಿ. ಪ್ಲೇಯರ್ ಇನ್ನೂ ಇಟ್ಟಿಲ್ಲ. ಕರೆಂಟು ಹೋದಾಗ ನಾವು ಸೋಲಾರ್ ಲೈಟ್ ಉಪಯೋಗಿಸುತ್ತೇವೆ. ಸೀಮೆ ಎಣ್ಣೆ ದೀಪದ ಕಷ್ಟ ಇಲ್ಲ. ಸ್ನಾನಕ್ಕೆ ಸದಾ ಕಟ್ಟಿಗೆ ಒಲೆಯ ಬಿಸಿನೀರು ಸಿಗುತ್ತೆ. ಹೆಚ್ಚಿನ ಅಡುಗೆ ಕಟ್ಟಿಗೆಯ ಒಲೆಯಲ್ಲೇ ಮಾಡುತ್ತೇವೆ, ನೆಲದಲ್ಲೇ ಕುಳಿತು ಬಾಳೆ ಎಲೆಯಲ್ಲಿ ಉಣ್ಣುತ್ತೇವೆ. ಊಟ ತಿಂಡಿಗಳ ಬಗ್ಗೆ ದಾಕ್ಷಿಣ್ಯ ಬೇಡ. ಸಾಯಂಕಾಲ ಬ್ಯಾಡ್ಮಿಂಟನ್, ಕ್ಯಾರಂ, ಚೆನ್ನೆಮಣೆ, ಚೆಸ್ಸ್, ಪಗಡೇ ಆಟ, ಹಾವು ಏಣಿ ಆಟ ಅಥವಾ ವಾಲಿಬಾಲ್ ಆಡಬಹುದು. ಬೆಳಗ್ಗೆ ಮತ್ತು ಸಂಜೆ ಹೊತ್ತು ಪಕ್ಷಿಗಳ ಕಲರವ ಕೇಳಬಹುದು. ಮನೆಯಲ್ಲಿ ದನ ಕರು ಇವೆ. ನಾಯಿಗಳು ಇವೆ. ಅವುಗಳನ್ನು ನೋಡಿ ಸಂತಸ ಪಡಬಹುದು. ಹೆಚ್ಚಿನಂಶ ನಮ್ಮಲ್ಲಿ ಈಗ ಟೆಲಿಫೋನ್ ಕೆಡುವುದಿಲ್ಲ. ಡಯಲ್ ಅಪ್ ಉಪಯೋಗಿಸಿ ಲ್ಯಾಪ್ ಟಾಪ್ ಬಳಸ ಬಹುದು. ನಿಮಗೆ ಸ್ವಾಗತ!" ಅನ್ನುತ್ತಾ ಇದ್ದೆ.

  ನಮ್ಮ ಜತೆ ವಾಸ ಮಾಡಲು ಕಳೆದ ೩೮ ವರುಷಗಳಲ್ಲಿ ಬೆರಳ ಎಣಿಕೆಯ ಮಂದಿ ಮಾತ್ರ ಬಂದರು. ಎರಡು ದಿನಗಳಲ್ಲೇ ವಾಪಸ್ ಹೊರಟರು. ಅವರಿಗೆ ನಮ್ಮಲ್ಲಿ " ಬೋರ್" ಆಗುತ್ತಂತೆ!

  ನನಗೆ ನನ್ನ ಕೃಷಿ ಜೀವನದಲ್ಲಿ ಎಂದೂ ಬೋರ್ ಆಗಿಲ್ಲ. ಸಂತೋಷವಾಗೇ ಇದ್ದೆ. ಇಂದು ನಿವೃತ್ತನಾಗಿ ಪೇಟೆಯ ಕಾಂಕ್ರಿಟ್ ಗೂಡಿನಲ್ಲಿ ಕಷ್ಟದಿಂದ ವಾಸಿಸುತ್ತಾ ಇದ್ದೇನೆ. ನನಗೆ ಇಂದು ಡಾಕ್ಯ್ಟರು ಹತ್ತಿರ, ಕಾಫಿಯ ಕಾಡು ದೂರ!

  ಕೃಷಿಕ್ಷೇತ್ರದ ನೆನಪುಗಳೊಂದಿಗೆ ಇಂದು ಕೂಡಾ ಸಂತಸವಾಗಿ ಕಾಲ ಕಳೆಯುತ್ತಾ ಇದ್ದೇನೆ.
  ಕೇಸರಿ ಪೆಜತ್ತಾಯ

  ReplyDelete
 10. ಅಶೋಕ ವರ್ಧನ11 October, 2009 17:34

  ನನ್ನ ಬ್ಲಾಗಿನ ಕುರಿತಂತೆ, ಎಸ್.ವಿ.ಪಿಯವರ ಮಾತು : ನಿಮ್ಮ ವಿಶ್ವಾಸವೆ ನನ್ನ ಶ್ವಾಸ. ಕೃತಜ್ಞತೆಗಳು (ಹೆಚ್ಚೇನೂ ಹೇಳಲು ನನಗೆ ತೋಚುವುದಿಲ್ಲ)

  ಕರ್ನೂಲಿನಿಂದ ಹಿರಿಯ ಗೆಳೆಯ ಚಂದ್ರಶೇಖರ ಕಲ್ಕೂರ‍ರ ಪತ್ರ ಬಂದಿದೆ. ಇನ್ನೂ ಅವರು ಮಿತ್ರರ ಮನೆಯಲ್ಲಿ (ನಿರ್ವಸಿತ) ಉಳಿದುಕೊಂಡು ಎರವಲು ಗಣಕದಲ್ಲಿ ಈಗಷ್ಟೇ ಅರೆಬರೆ ರಿಪೇರಿ ಕಂಡ ಸಂಪರ್ಕ ಜಾಲದಲ್ಲಿ ಬರೆದಿದ್ದಾರೆ. ‘ಮೂವತ್ತೆರಡು ಗಂಟೆಗಿಂತಲೂ ಹೆಚ್ಚು ನಮ್ಮೆಲ್ಲ ಮನೆ, ಸೊತ್ತು ತುಂಗಭದ್ರಮ್ಮನ ಹೊಟ್ಟೇಯೊಳಗಿತ್ತು. ಈಗ ಒಂದೂವರೆ ಅಡಿ ದಪ್ಪದ ಕೆಸರು, ಕಳೆದು ಮುಗಿಯದ ರದ್ದಿ, ಜಂಕು ನಮ್ಮ ಮನೆ, ದಾರಿ ಇತ್ಯಾದಿ......’

  ನಿನ್ನೆ ರಾತ್ರಿ ಅವರು ಕೊಟ್ಟ ದೂರವಾಣಿ ಸಂಖ್ಯೆ ಮೂಲಕ ಸಂಪರ್ಕಿಸಿ ಪತ್ರಕ್ಕೂ ಮಿಕ್ಕ ‘ಕಥೆ’ ಕೇಳಿಕೊಂಡೆ (ಸಮಾಧಾನಿಸಿದೆ ಎನ್ನುವುದು ತಪ್ಪು). "ಸುಮಾರು ಏಳು ದಿನ ಮುಂಚಿತವಾಗಿ ಕ್ರಮದಂತೆ ಅಣೆಕಟ್ಟಿನ ಅಧಿಕಾರಿಗಳು ಎಚ್ಚರಿಕೆಯ ಸೂಚನೆ ಕಳಿಸಿದ್ದರೆ, ನಾಗರಿಕ ಅಧಿಕಾರಿಗಳು ಉಡಾಫೆ ಮಾಡಿದರು. ಫಲವಾಗಿ ಅಂದು ಮಧ್ಯಾಹ್ನ ನಮ್ಮ ವಠಾರದಲ್ಲಿ ಅಂದರೆ ಬಲು ಹಿಂದೆ ಅತ್ಯಂತ ಹೆಚ್ಚು ನೆರೆ ಬಂದಾಗಲೂ ನಮ್ಮಿಂದ ಸುಮಾರು ಇಪ್ಪತ್ತೈದು ಅಡಿ ಕೆಳಮಟ್ಟದವರೆಗಷ್ಟೆ (ಸಮುದ್ರ ಮಟ್ಟದಿಂದ) ಬಂದಿದ್ದ ನೀರು ಒಮ್ಮೆಗೆ ಕಾಣಿಸಿತು. ತೊಟ್ಟ ಬಟ್ಟೆಯಲ್ಲದೆ ಒಂದು ಕರವಸ್ತ್ರವನ್ನೂ ಹಿಡಿದುಕೊಳ್ಳಲಾಗದ ತುರ್ತಿನಲ್ಲಿ ಇದ್ದ ಎರಡು ಸ್ಕೂಟರುಗಳಲ್ಲಿ ನಾನು, ಸೊಸೆ, ಎರಡು ಮೊಮ್ಮಕ್ಕಳು ಎತ್ತರದ ಪ್ರದೇಶದೆಡೆಗೆ ಧಾವಿಸಿದೆವು. ದಾರಿಯಲ್ಲಾಗಲೇ ಎರಡಡಿ ಎತ್ತರಕ್ಕೆ ನೀರು ಬಂದಾಗಿತ್ತು...........’

  ಪ್ರಾಕೃತಿಕ ವಿಕೋಪಗಳು ಸುಳ್ಳು, ಹಾಗೊಂದು ಹೆಸರಿಸುವ ಬುದ್ಧಿವಂತಿಕೆ ಮಾತ್ರ ನಮ್ಮದು ಎನ್ನುವಂತೆ ಊರೂರಿನಲ್ಲೂ ಇಂದು ‘ಅಭಿವೃದ್ಧಿ ಕಾಮಗಾರಿ’ಗಳು ನಡೆಯುತ್ತಿವೆ. ಇದುವರೆಗೆ ಕರ್ನೂಲಿನ (ಒಟ್ಟಾರೆ ಸಂತ್ರಸ್ತ ಆಂಧ್ರ, ಉತ್ತರ ಕರ್ನಾಟಕ ಪ್ರದೇಶಗಳ) ಹಾಗೆ ವಿಪರೀತಗಳ ಕಟ್ಟೊಡೆಯದ ಅದೃಷ್ಟಶಾಲಿಗಳಷ್ಟೇ ನಾವು ಎಂದು ನೆನಪಿಸಿಕೊಳ್ಳುತ್ತ, ನಮ್ಮ ಮಿತಿಯಲ್ಲಿ ಅದು ಬಾರದಂತೆ ಕ್ರಮ ಕೈಗೊಳ್ಳುವ ಛಲ ನಾವು ಬೆಳೆಸಿಕೊಳ್ಳೋಣ. ಡಾ| ನರಸಿಂಹನ್ನರಂತೆ ಇದಕ್ಕೆ ಪ್ರೇರಣೆ ಪಡೆಯುವಲ್ಲಿ ಗೆಳೆಯ ಗೋವಿಂದ ಭಟ್ಟರ ಹಳ್ಳಿಯಿಂದ ಬ್ಲಾಗಿನಲ್ಲಿ ( http://halliyimda.blogspot.com/2009/10/blog-post_09.html) ಕೊಟ್ಟ ಲೇಖನವನ್ನು ಅವಶ್ಯ ನೋಡಬಹುದು.
  ಅಶೋಕವರ್ಧನ

  ReplyDelete
 11. Dear friends,

  I am overwhelmed by the responses. After reading Sri S M Pejattaya's letter, I urge you to visit my blog site at the above address and read the wildlife message of 2008.

  regards,

  Narasimhan, 9480730884

  http://drsvnarasimhan.blogspot.com/

  ಮಾನ್ಯರೆ,

  ನಿಮ್ಮೆಲ್ಲರ ಪ್ರತಿಕ್ರಿಯೆ ನನಗೆ ಇನ್ನೂ ಹೆಚ್ಚಿನ ಸ್ಫೂರ್ತಿ ತಂದಿದೆ.

  ಶ್ರೀ ಎಸ್. ಎಂ. ಪೆಜತ್ತಾಯರವರ ಪತ್ರ ಓದಿದ ನಂತರ, ಅದಕ್ಕೆ ಪೂರಕವಾಗಿ, ನಾನು ಕಳೆದ ವರ್ಷ ಕಳುಹಿಸಿದ ವನ್ಯಜೀವಿ ಸಂದೇಶ ಪತ್ರದ ಬಗ್ಗೆ ನಿಮ್ಮ ಗಮನವನ್ನು ಸೆಳೆಯ ಬಯಸುತ್ತೇನೆ. ದಯವಿಟ್ಟು ಕೆಳಗಿನ ವಿಳಾಸವನ್ನು ಜಾಲಾಡಿ.

  ನಿಮ್ಮವ,

  ನರಸಿಂಹನ್.

  http://drsvnarasimhan.blogspot.com/

  ReplyDelete