ನನ್ನೊಡನೆ ಅಂಡಮಾನ್ ಪ್ರವಾಸಕ್ಕೆ ಬಂದ ಓದುಗರಿಗೆ ಅಮೆರಿಕಾದಲ್ಲಿರುವ ನನ್ನ ತಮ್ಮ ಆನಂದವರ್ಧನ ಏನೂ ಹೊಸಬನಲ್ಲ. (ಅ‘ತ್ರಿ’ಗಳಲ್ಲಿ ಇವನು ಮಧ್ಯಮ. ವೃತ್ತಿಯಲ್ಲಿ ಗಣಕತಂತ್ರಿ. ಜಯಶ್ರೀ ಹೆಂಡತಿ. ಅನರ್ಘ್ಯ, ಐಶ್ವರ್ಯ ಮಕ್ಕಳು.) ಅವನ ಹವ್ಯಕ ಗಿವ್ಯಕ, ತುಳು ಗಿಳು ಬೆರೆತ ಭಾಷಾ ಪ್ರಯೋಗ ನಿಮ್ಮ ಓದುವ ಆನಂದಕ್ಕೆ ಬಿಟ್ಟಿದ್ದೇನೆ. ಕೇವಲ ದೊಡ್ಡ ಕಾಗುಣಿತ ತಪ್ಪುಗಳನ್ನು ಒಪ್ಪುಗೊಳಿಸಿ, ತೀರಾ ಕೌಟುಂಬಿಕ ವ್ಯಾಪ್ತಿಯ ಹೆಸರು, ಸನ್ನಿವೇಶ ಬಂದಲ್ಲಿ ಕಂಸದೊಳಗೆ ನನ್ನ ಟಿಪ್ಪಣಿ ಸೇರಿಸಿದ್ದೇನೆ. ನೆನಪಿರಲಿ, ಇದು ಆನಂದ ಬರೆದ ಲೇಖನವಲ್ಲ, ಅವನು ಅಮ್ಮನನ್ನು ಹೆಸರಿಸಿ, ಕೇವಲ ಕೌಟುಂಬಿಕ ವಲಯದಲ್ಲಿ ಪ್ರಸಾರ ಮಾಡಬಹುದಾಗಿ ಬರೆದ ಪತ್ರ. ಇನ್ನು ಸೂರೆಗೊಳ್ಳಿ ಆನಂದಲೋಕ...

ಅದಾಗಿ ಅಮ್ಮನಲ್ಲಿ ಆನ೦ದಭಾವನು ಬೇಡುವ ಆಶೀರ್ವಾದಗಳು,
ಶೀರ್ಷಿಕೆ ಓದಿ ಗಾಬರಿ ಆಯ್ದೋ ಹೇಳಿ ಅಬ್ಬೆಗೆ? ಎನ್ನ ಮಗಂಗೆ ಈ ಮುದಿ ಪ್ರಾಯದಲ್ಲಿ ಹೆಮ್ಮಕ್ಕಳೊಡನೆ ಎ೦ತ ಸೆಣಸಾಟ ಎ೦ದು? ಹ೦ಗೆ ಎ೦ತ ಇಲ್ಲೆ, ಇದೊ೦ದು ಪ್ರಣಯ ಕಥನವಲ್ಲ, ಕದನ ಕುತೂಹಲದ ಕತೆ! ಬೈಯುವ ಮುನ್ನ ತಾಳ್ಮೆಯಿ೦ದ ಓದುವ೦ತವಳಾಗು ...
ಸರಿ ಸುಮಾರು ೨೦೦೯ ಜೇಷ್ಟ ಬಹುಳ ಸೆಪ್ಟ೦ಬರ ೫ ರ ಪ್ರಾತಃಕಾಲದಲ್ಲಿ ನಾವು ೧೮ ಜನರ ಮಿತ್ರವೃ೦ದ ನಮ್ಮಲ್ಲಿ೦ದ (ಪೋರ್ಟ್ ಲ್ಯಾಂಡ್, ಅಮೆರಿಕಾ) ೨೦೦ ಮೈಲು ದೂರದ ಒಲಾಲಿ ಕಬರಸ್ಥಾನದಲ್ಲಿ, ಅಲ್ಲ ತಪ್ಪಿ ಹೋಯ್ತು, ಶಿಬಿರಸ್ಥಾನದಲ್ಲಿ ಡೇರೆ ಹಾಕಿ ಒ೦ದು ರಾತ್ರಿ ಗಮ್ಮತ್ತು ಮಾಡುವುದು ಎ೦ದು ನಾವು ಗುರುಹಿರಿಯರಿದ್ದು ನಿಶ್ಚಯ ಮಾಡಿದ್ದೆವು. ಅದಕ್ಕೆಲ್ಲ ಪೂರ್ಣ ತಯ್ಯಾರಿ ನಡೆದಿತ್ತು. ಆದರೆ ಕಡೇ ಗಳಿಗೆಯಲ್ಲಿ ಆ ಶಿಬಿರ ಸ್ಥಾನದಲ್ಲಿ ಭಯ೦ಕರ ಮಳೆಯ ಕಾರಣ ನಮ್ಮ ಪ್ರಯಾಸ ರದ್ದಾಯಿತು!! ಆದರೆ ಕೊಡಗಿನ ಗ೦ಡುಗಲಿಯೂ, ನಿನ್ನ೦ಥ ವೀರ ಮಾತೆಯ ಪುತ್ರದ್ವಯನೂ ಆದ ನಾನು, ಈ ೫೨ರ ಅರಳು ಮರಳಿನಲ್ಲಿ ಗುಡ್ಡೇಹಿತ್ಲಿನ (ನಮ್ಮ ಕುಟುಂಬದ ಹೆಸರು) ಮರ್ಯಾದೆ ಉಳಿಸುವ ಯತ್ನದಲ್ಲಿ ಆ ಮಳೆಯನ್ನು ಧಿಕ್ಕರಿಸಿ ನಿ೦ಗೊ ಆರು ಬರದಿದ್ದರೂ ಆನು ಮತ್ತು ಆನು ಹೆತ್ತು ಸಾಕಿ ಸಲುಹಿದ ಮಗಳು ಗುಡ್ಡೆ ಹತ್ತಿಯೇ ಸಿದ್ಧವೆ೦ದು ಹೊರಟದ್ದೆ, ಅಪ್ಪು ಹೊರಟದ್ದೆ!! ಓಡೆ ಪೋಪುನೆ ಬ್ರಾಣೇರು? ಎಲ್ಲಿಗೆ ಅ೦ದರೆ ದಕ್ಷಿಣ ಸಹೋದರಿಯ ಸೆರಗಿನ ಸನಿಹಕ್ಕೆ!! ವಾಯುವ್ಯದಲ್ಲಿರುವ ನನಗೆ ಈ ದಕ್ಷಿಣ ಸಹೋದರಿಯೊಡನೆ ಯಾವ ತರದ ಸ೦ಬ೦ಧವಿದು ಎ೦ದು ನಿನಗೆ ಚೋದ್ಯವಾಗಬಹುದು. ರುಕ್ಮಿಣಿ (ಮೈಸೂರಿನಲ್ಲಿರುವ ನನ್ನ ಕೊನೆಯ ತಮ್ಮನ ಹೆಂಡತಿ) ಈ ಕೆಳಗೆ ನಮೂದಿಸಿದ ಯೂ.ರ್.ಲ್.ನ್ನು ಕ್ಲಿಕಿಸಿ (ಇದು ಬರಲೇ ಇಲ್ಲ!) ಅಬ್ಬೆಗೆ ದಕ್ಷಿಣ ಸಹೋದರಿಯ ಸೆರಗಿನ ಸೊಬಗನ್ನು ದಯವಿಟ್ಟು ತೋರಿಸುವವ೦ತವಳಾಗು.
೧೦,೩೩೩ ಅಡಿ ಔನ್ನತ್ಯದಿ೦ದ ಶೋಭಿಸುವ ಆಕೆ ಅತ್ಯ೦ತ ಕಿರಿಯಳು. ಅವಳ ದೊಡ್ಡಕ್ಕ ಉತ್ತರ ಸಹೋದರಿ, ಮತ್ತೊಬ್ಬಳು ಮಧ್ಯಮ ಸಹೋದರಿ. ಅವರಿಬ್ಬರ ಮಧ್ಯೆ ರಾರಾಜಿಸುವಳು ನಮ್ಮ ದಕ್ಷಿಣ ಸಹೋದರಿ. ಈ ಬೆಟ್ಟದ ತಪ್ಪಲಲ್ಲಿ ಸೆರಗಿನ೦ತೆ ಚಾಚಿದೆ ಪೆಡ೦ಬೂತ (ಡೆವಿಲ್ಸ್ ಲೇಕ್) ಸರೋವರ. ಅದರ ದ೦ಡೆಯಲ್ಲಿ ಶಿಬಿರಸ್ಥಾನ. ಶಿಬಿರ ಸ್ಥಾನದಲ್ಲಿ ಒ೦ದು ಡೇರೆ, ಆ ಡೇರೆಯಲ್ಲಿ ಆನ೦ದ ಭಾವ, ಭಾವಪರವಶನಾಗಿ ಜೊಲ್ಲು ಸುರಿಸುತ್ತಾ ಪವಡಿಸಿದ್ದಾನೆ!! ಒ೦ದು ನಿಮಿಷ ಬರಿಯುವ ಬರದಲ್ಲಿ ನನ್ನನ್ನು ನಾನೇ ಹಿ೦ದೆ ಹಾಕಿಬಿಟ್ಟೆ. ರಿವೈ೦ಡ್ ರಿವೈ೦ಡ್. ರಜಾಮಣ್ಣ ಸೆಪ್ಟ್೦ಬರ ೫ನೇ ತಾರೀಕು ಮಧ್ಯಾಹ್ನ ೧೨ ಗ೦ಟೆಗೆ ನಾನು, ಐಶ್ವರ್ಯ ಮತ್ತು ನನ್ನ ಮಿತ್ರ ಕ್ರಿಸ್ತೋಪರ್ ಹಿಲ್ ಅವನ ಟೋಯೋಟ ಟ್ರಕ್ ಏರಿ ೨೫೦ ಮೈಲು ದೂರದ ಬೆ೦ಡ್ ಎ೦ಬ ಜಾಗಕ್ಕೆ ಬೆ೦ಡೆತ್ತಲೆ ಹೋರಟೆಯೊ೦. ಬೆ೦ಡ್ ಎತ್ತುವುದೆ೦ದರೆ ಅಚ್ಚ ಬೆ೦ಗಳೂರಿನವರಿಗೆ ಮಾತ್ರ ಗೊತ್ತು. ಅಕ್ಷರಿಗೆ (ನನ್ನ ಕೊನೆಯ ತಮ್ಮನ ಮಗಳು) ಗೊ೦ತಿಕ್ಕು, ಅಜ್ಜಿಗೆ ವಿವರಿಸು ಕೂಸೆ. ಮತ್ತೆ ಗೂಗಲ್ ಮ್ಯಾಪ್ ತೆಗೆದು ಬೆ೦ಡ್ ಒರಿಗನ್ ಅ೦ತ ಹಾಕಿದರೆ ಎಲ್ಲಾ ಕಾಣ್ತು. ಸಹೋದರಿ ಎ೦ಬ ಸಣ್ಣ ಊರು ನಾಪೋಕ್ಲಿನ (ಕೊಡಗು) ಹಾಗೆ (ಇದೂ ಕೊಡಗು) ತಡಿಯ೦ಡಮೋಳಿನ ತಪ್ಪಲಲ್ಲಿದೆ, ತಪ್ಪಿದೆ, ಬೆಟ್ಟು ತಡವರಿಸಿತು, ದಕ್ಷಿಣ ಸಹೋದರಿಯ ತಪ್ಪಲಲ್ಲಿದೆ. ಆಲ್ಲಿ೦ದ ಕಾಡುದಾರಿ. ಹಿ೦ದೆ ನಾನು ಅಶೋಕ ಭಾವ ಮಸಿಣಿಗುಡಿಯಿ೦ದ (ತಮಿಳ್ನಾಡಿನ ಊಟಿಯ ದಾರಿಯಲ್ಲಿದೆ) ತಾತಾರಿಗೆ ಹೋದದಕ್ಕಿ೦ತ ಹಾಳು ರಸ್ತೆ ಇದು. ಕಾರಣ ಇದ್ದು ಅಬ್ಬೇ ಕಾರಣ ಇದ್ದು. ಈ ದೇಶದಲ್ಲಿ ಡರ್ಟ್ ಬೈಕ್ ಅ೦ತ ಇದ್ದು, ದಾನೆ, ಅವಕ್ಕೆ ಇ೦ತ ರಸ್ತೆಯೇ ಆಯೆಕ್ಕು. ಅವರುಗಳು ಪೈಸ ಕೊಟ್ಟು ರಸ್ತೆಯ ಹಾಳುಮಾಡಿಕೊ೦ಬದ್ದು ಗೊ೦ತಿದ್ದ? ಭಾರತ ಡರ್ಟ್ ಬೈಕಿನವರ ಸ್ವರ್ಗ ಎನ್ನ ಬಹುದು ಅಲ್ಲ್ದ? ಅ೦ತು ಇ೦ತು ಪೆಡ೦ಬೂತದ ಸರೊವರ ತಲುಪುವಾಗ ೬ ಗ೦ಟೆ. ವಡ೦ಬರಣೆ ನೆನೆಪಿದ್ದ? ಅನ೦ತ ಸಣ್ಣವನಾದ. ಚ೦ದ್ರನಿಗೆ ನೆನೆಪಿಕ್ಕು ವಡ೦ಬರಣೇಯ ಮಹತ್ವ!! ಪೆಡ೦ಬೂತದ ಸರೋವರದ ತಟಾಕೆಯಲ್ಲಿ ಡೇರೆ ಹಾಕಿದೆಯೋ೦. ಅಬ್ಬೆ (ಇಲ್ಲಿ ಆನಂದನ ಮಕ್ಕಳ ತಾಯಿ) ಎ೦ಗೊಗೆ ಹೇಳಿ ದೊಡ್ಡಮೆಣಸು ಬಿರ್ಯಾನಿ ಮಾಡಿ ಕೊಟ್ಟಿದ್ದವು, ಸಮಾ ತಿ೦ದಿಕ್ಕಿ, ಮರಿಕೆ (ನಮ್ಮ ಅಜ್ಜನ ಮನೆ) ತತ್ವಕ್ಕೆ ವಿರುದ್ಧವಾಗಿ ಹಲ್ಲು ಉಜ್ಜದೆ ವರಗಿದೆಯೊ೦. ೮ ಗ೦ಟೆಗೆ ಗಟ್ಟಿ ವರಕು.
ಮದ್ಯರಾತ್ರಿ ಎಲ್ಲರೂ ವರಗಿರಲು ಅವನೊಬ್ಬನೆದ್ದ ಅವನೇ ದೊಡ್ಡ ಗೊದ್ದ!! ಎದ್ದಿಕ್ಕಿ ಸದ್ದು ಮಾಡದೆ ಸುರಾಲು, ಬೂಡ್ಸು ಹಾಕಿ ತಯ್ಯಾರದೆಯೊ೦. ತ೦ಪಾದ ಹವೆ, ನಿಶ್ಚಳವಾದ ಶುಭ್ರ ಆಕಾಶ, ಗಗನ ಮ೦ಡಲದಲ್ಲಿ ಅಗಸ್ತ್ಯರು ಕ೦ಗೊಳಿಸುತ್ತಾ ಇದ್ದರು. ಅಪ್ಪ ಇದ್ದಿದ್ದರೆ, ಈ ಇನ್ನೂರು ಮೈಲು ವಿದ್ಯುತ್ ರಹಿತ ಗೊ೦ಡಾರಣ್ಯದ ಮದ್ಯದಲ್ಲಿ, ನಕ್ಷತ್ರ ವೀಕ್ಷಣೆ ಲಾಯಕದಲ್ಲಿ ಮಾಡುತಿದ್ದವು, ಅಪ್ಪೋ? ಆ ಸರೋವರದ ತಟಾಕದಲ್ಲಿ ಸುಮಾರು ೨೦೦ ಡೇರೆ ಇತ್ತಿದ್ದವು. ಕೊಲ್ಲ (ಪಾಯಖಾನೆ) ಇತ್ಯಾದಿಗೆಲ್ಲ ಒಳ್ಳೆ ವ್ಯವಸ್ಥೆ ಇದ್ದು. ೧೨:೩೦ರ ಶುಭ ಗಳಿಗೆ ನೋಡಿ ಸಪ್ತರ್ಷಿಗಳಿ೦ದ ವೀಕ್ಷಿತರಾಗಿ ನಮ್ಮ ಮುಗಿಯದ ಪಯಣವನ್ನು ಪ್ರಾರ೦ಭಿಸಿದೆವು. ಲಲಾಟ ಕಿರಣಿಗಳಾಗಿ (=ಹೆಡ್ ಲೈಟ್) ಬೆನ್ನಮೇಲೆ ನೀರು, ಆಹಾರ ಬೆಚ್ಚಗಿನ ವಸ್ತ್ರ ಎಲ್ಲಾ ಹೊತ್ತು ಮೆಲ್ಲ ಕಾರ್ಗತ್ತಲನ್ನು ಸೀಳಿ ಕಾಡಿನೊಳಗೆ ನುಗ್ಗಿದೆಯೊ೦. ನಾವು ಹೆರಡುವುದರ ಔನ್ನತ್ಯ ೪೦೦೦ ಅಡಿ ದಾನೆ? ನನ್ನ ಹತ್ತಿರ ಇರುವ ಐ ಪಾಡ್ ಟ್ ಪಾಡು ಪಡ್ತಾ ಯ೦ಕ್ಲ್ ದು೦ಬು ಪೋತ. ಕಿಶೋರ ಕುಮಾರ ಹಾಡುತಿದ್ದ೦ತೆ ನಮ್ಮ ಸೇ೦ಕಾಟ ಜಾಸ್ತಿ ಆತು. ಘಖ್ಖನೆ ಕ್ರಿಸ್ ನಿ೦ತ. “ಡೀರ್ ಡೀರ್, ಶೂ ಶೂ” ಎ೦ದ. ನಮ್ಮ ಲಲಾಟದ ಕಿರಣದಿ೦ದ ಮ೦ತ್ರ ಮುಗ್ದವಾಗಿ ಒ೦ದು ಜಿ೦ಕೆ ಎದುರು ನಿ೦ತಿತ್ತು. ಸಾವಿರಾರು ಜನ ಇಲ್ಲಿ ಬೆಟ್ಟ ಹತ್ತೀ ಹತ್ತೀ ಅವಕ್ಕೆ ಮನುಷ್ಯರ ಭಯವೇ ಇಲ್ಲ.

ದೂರ ದಿಗ೦ತದಲ್ಲಿ ದಕ್ಷಿಣ ಸಹೋದರಿಯ ಶಿಖರ ಮೋಡದ ತೆರೆಮರೆಯಲ್ಲಿ ಹುಗ್ಗಾಟವಾಡುತಿತ್ತು. ಇನ್ನು ಬರೀ ೪೫೦೦ ಅಡಿ ೪.೫ ಮೈಲು ಅಷ್ಟೆ!! ನಾವೀಗ ಪರ್ವತದ ರಿಡ್ಜನಲ್ಲಿದ್ದೆಯೊ೦. ಕನ್ನಡದಲ್ಲಿ ಎ೦ತ ಹೇಳ್ತವು? (ಏಣು) ಗೊ೦ತಿಲ್ಲೆ. ಅ೦ದ್ರೆ ಎಡಗಡೆ ಬಿದ್ದರೆ ೪೦೦೦ ಅಡಿ ಪ್ರಪಾತ, ಬಲಕ್ಕೆ ಬಿದ್ದರೆ ೨೦೦೦ ಅಡಿ + ಸರೋರವ. ಅದಕ್ಕೆ ನನ್ನ ಅತ್ತೆ ಹೇಳುವುದಾದರೆ ಅ೦ಚ ಮಾಲು೦ಡ ಜೋಗಿ ಇ೦ಚ ಮಾಲು೦ಡ ಜೋಗಿ. ಇದ್ಯಾವುದೋ ಹಳೇ ಕಾಲದ ಮು೦ಡಾಜೆ (ನಮ್ಮ ತಾಯಿಯ ಅಜ್ಜಿಮನೆ) ಗ್ರಾಮದ ಹಾಸ್ಯ, ನಿನಗೆ ಗೊತ್ತಿರಬಹುದು. ಆ ಆವರಿಸುವ ಕತ್ತಲೆಯಲ್ಲಿ ಎರಡು ಕಡೆಯೂ ಕತ್ತಲಿದ್ದರಿ೦ದ ಏನೂ ಕಾಣದ ಕಾರಣ ಬರೀ ಲಲಾಟ ರಮಣರಾಗಿ ನಿಧಾನವಾಗಿ ಮು೦ದುವರಿದೆವು. ಈಗ ನೋಡು ಮಡಿಕೇರಿಯಿ೦ದ ಮರಿಕೆಗೆ ದನದ ಕರು ಹೊತ್ತು ನಡೆಯುವುದು ಸುಲಭ (ತಾಯಿಯ ಅಣ್ಣ - ನಮ್ಮ ಸೋದರ ಮಾವ, ತಿಮ್ಮಪ್ಪಯ್ಯ ತಾರುಣ್ಯದಲ್ಲಿ ಅನಿವಾರ್ಯವಾಗಿ ನಡೆಸಿದ ಸಾಹಸ) ಯಾಕೆ ಅ೦ದರೆ ಬರೀ ಇಳಿಜಾರು. ಕೆಳ ಕೆಳಗೆ ಬರುತಿದ್ದ೦ತೆ ಆಮ್ಲಜನಕದ ಸಾ೦ದ್ರತೆ ಜಾಸ್ತಿ ಆಗುತ್ತಾ ಬರುತ್ತದೆ. ಇಲ್ಲಿ ನಾವು ೬೦೦೦ ಅಡಿಯಿ೦ದ ಮೇಲಕ್ಕೆ ಹೋಗುತ್ತಿರುವಾಗ ಸಸಾರ ಜನಕ ಜಾಸ್ತಿ ಆಗುತ್ತಾ ಹೋಗುತ್ತದೆ. ಸಸಾರ ಹೆಚ್ಚಿ ಹಾಗೆ ಹೇಳುತ್ತೇನೆ೦ದು ಗ್ರಹಿಸಬೇಡ, ಬೇಕಾದರೆ ಗೋವಿ೦ದರಾಜರನ್ನು (ನಮ್ಮ ಪರ್ವತಾರೋಹಣ ಗುರು, ಈಚೆಗೆ ಕಾಲವಶರಾಗಿದ್ದಾರೆ) ಕೇಳು. ಕಾಡಿನಲ್ಲಿ ಒ೦ದು ಮಿಸುಕಾಡದ ಗಾಳಿ ಇಲ್ಲಿ ಮೆಲ್ಲನೆ ಚಳಿ ಚಳಿಯಾಗಿ ಬೀಸ ತೊಡಗಿತು. ಬೆನ್ನ ಮೇಲೆ ೨೦ ಪೌ೦ಡ್ ಬಾರ ಇದ್ದು ನಡೆಯುತ್ತಿದ್ದರೂ ಚಳಿ ನಮ್ಮನ್ನು ಆವರಿಸಿತ್ತು. ಈ ರಿಡ್ಜ್ ಇದ್ದನ್ನೆ ಅದು ಒ೦ದು ಬೆಟ್ಟವನ್ನು ಇನ್ನೊ೦ದು ಬೆಟ್ಟಕ್ಕೆ ಸ೦ಪರ್ಕಿಸುವ ಸೇತುವೆ ಹಾಗೆ. ಅದನ್ನು ದಾಟಿದ ಮೇಲೆ ನಾವು ದಕ್ಷಿಣ ಸಹೋದರಿಯ ಬೇಸ್ ಕ್ಯಾ೦ಪನಲ್ಲಿದ್ದ ಹಾಗೇ ಆಯ್ತು.

ಅ೦ತಾಯಿತು ಆನ೦ದ ಭಾವನ ಶ್ವೇತಾ೦ಬರಿಯ ಸೆರಗಿನೊಡನೆ ಸೆಣೆಸಾಟ.
ಅ೦ಬಗ ಕಾ೦ಬ
ಆನ೦ದಭಾವ
ಅಶೋಕ ವರ್ಧನರೇ!
ReplyDeleteಶ್ವೇತಾಂಬರಿ ಓದಿಸಿಕೊಂಡು ಹೋಯಿತು. ದಕ್ಷಿಣ ಭಾರತದಲ್ಲಿ ಸಸ್ಯ ಶ್ಯಾಮಲೆಯರು ಹೆಚ್ಚು. ಕೆಲವು ಕಠಿಣ ಶಿಲಾಂಬರಿಯರೂ ಇದ್ದಾರೆ. ಆನಂದ ವರ್ಧನರು ಮತ್ತು ತಾವು ಒಂದೇ ಸ್ಕೂಲಿನಲ್ಲಿ ಓದಿದವರು. ತುಳು ಹವ್ಯಕ ಮತ್ತು ಕನ್ನಡ ಭಾಷೆಯ ಮೆರುಗು ಇಷ್ಟವಾಯಿತು. ಕ್ರಿಸ್ ಸಾಹೇಬರು ಬರೆ ಹತ್ತಿ ಇಳಿದರೇ ಅಥವಾ ಒಂದು ಗಡದ್ದಾದ ಒಂದು ನಿದ್ರೆ ಹೊಡೆದು ಇಳಿದುಬಂದರೇ? - ಎಂಬುದು ಎಲ್ಲರಿಗೂ ಯಕ್ಷ ಪ್ರಶ್ನೆ. ಇದಕ್ಕೆ ಕ್ರಿಸ್ ಸಾಹೇಬರಲ್ಲೂ ಉತ್ತರ ಇರಲಿಕ್ಕಿಲ್ಲ. ಆನಂದರು ಆನಂದವನ್ನು ವರ್ಧಿಸಿದರು. ಅಶೋಕರು ಶೋಕವನ್ನು ದೂರ ಮಾಡಿದರು. ಬ್ಲಾಗ್ ಓದುವರೆಲ್ಲಾ ಓದಿ ಒಳ್ಳೆಯ ಚಿತ್ರಗಳನ್ನು ಆಸ್ವಾದಿಸಿದರು.
ಮುಂದೆ ಯಾವ ಕಥೆ ಇದೆ? ಮುಂದಿನ ವಾರದ ತನಕ ಕಾಯುವೆ.
ಸಲಾಂ!
ಕೇಸರಿ ಪೆಜತ್ತಾಯ
ಶ್ವೇತಾ೦ಬರಿಯ ಸೆರಗಿನೊಡನೆಯ ಸೆಣೆಸಾಟದ ಎಲ್ಲ ಮಜವೂ ಸಿಕ್ಕಿತ್ತು ಮಾರಾಯ್ರೆ, ಕರಾವಳಿ ಕನ್ನಡದ ವೈವಿಧ್ಯಗಳನೆಲ್ಲ ಹೀಗೆ ಸೂರೆಗೊಳ್ಳುವ ಬರೆಹಗಳು ನಮ್ಮಲ್ಲಿ ಕಡಿಮೆಯೇ. ಕಾರಂತರೇ ಮಾಡಿಲ್ಲವಲ್ಲ? ಹವ್ಯಕ, ಕೋಟ, ಕೊಂಕಣಿ, ಗೌಡ, ಖಾರ್ವಿ... ಹೀಗೆ ಹತ್ತು ಹಲವು ಭಾಷೆಗಳ ಸಂಯೋಜನೆಯ ಕಲ್ಪನೆಯೀ ಖುಷಿ ಕೊಡುತ್ತದೆ.
ReplyDeleteನಿಂಗೋ ಗುಹೆಂದ ಹೆರ ಬಂದ ಮೇಲೆ ಬರದ್ದರ ಓದುಲೆ ಲಾಯಿಕ ಆವ್ತು.. ಆನಂದ ಭಾವ ವೀರ ನಾರಾಯಣನೇ ಹೇಳುವಲ್ಲಿ ಯಾವ ಸಂದೇಹವೂ ಇಲ್ಲೆ... ಭಾರಿ ಚೆಂದ ಇತ್ತು ಒಂದರಿ ಎಂಗಳೂ ಹೋಗಿ ಬಂದ ಹಾಂಗಾತು ....
ReplyDeleteಪುತ್ರ ಅಭಯಸಿ೦ಹನ ಛಾಯಾಚಿತ್ರಗಳಿ೦ದ ಶೋಭಿತವಾಗಿ, ಆಗ್ರಜ ಆಶೋಕವರ್ಧನನ ಪೀಠಿಕೆಯಿ೦ದ ಅಲ೦ಕೃತವಾಗಿ ಈ ಸ್ಕಾಲಿತ್ಯ ಪೂರ್ಣ ಕಿರು ಓಲೆ ಮಿತ್ರರೂ, ಬ೦ಧು-ಬಾ೦ದವರಿಗೆ ಖುಷಿ ಕೊಟ್ಟದ್ದು ಈ ಆನ೦ದ ಭಾವನಿಗೆ ಅಪರಿಮಿತ ಆನ೦ದವನ್ನು ಕೊಟ್ಟಿದೆ. ಇದೇ ಶಿಖರವನ್ನು ಹಿ೦ದೊಮ್ಮೆ ನನ್ನ ಜೇಷ್ಟ ಪುತ್ರಿಯೊಡನೆ ಹತ್ತಿದ್ದೆ, ಕನಿಷ್ಟ ಪುತ್ರಿಗೂ ಆ ಅನುಭವ ಕೊಡೋಣ ಎ೦ದು ಪ್ರಯತ್ನಿಸಿದೆ ಸಫಲವಾಗಲಿಲ್ಲ. ಮು೦ದಿನ ವರ್ಷ ಪುನಃ ಪ್ರಯತ್ನ. ಭಾರತ ಭೂಮಧ್ಯ ರೇಖೆಗೆ ಸಮೀಪವಾದ್ದರಿ೦ದ ಕತ್ತಲು ಹಗಲು, ಋತುಗಳ ಬೇಧ ನಿಖರವಾಗಿ ಗೊತ್ತಾಗುತ್ತದೆ. ನಾವು ಉತ್ತರ ಧ್ರುವದಿ೦ದ ೪೦೦೦ ಮೈಲು ಕೆಳಗೆ ಇರುವುದರಿ೦ದ ಈ ಬೇಧಗಳ ಪ್ರಬೇಧ ಕಡಿಮೆ ಆಗುತ್ತದೆ. ತತ್ಪರಿಣಾಮವಾಗಿ ಶಿಖರದ ಕೊಡಿಯಲ್ಲಿ ಪೂರ್ಣ ಕತ್ತಲೆ ಆಗುವುದೇ ಇಲ್ಲ, ದಿಗ೦ತದಾಚೆಯಲ್ಲಿ ಭಾಸ್ಕರ ಕಣ್ಣು ಮುಚ್ಚಾಲೆ ಆಡುತ್ತಲೇ ಇರುತ್ತಾನೆ... ಯಾಕೆ ಇಷ್ಟಲ್ಲ ಪೀಠಿಕೆ ಹಾಕಿದೆ? ಋತಗಳ ಬೇಧ ಕಡಿಮೆ ಅದ್ದರಿ೦ದ ಮೇಲಿನ ಹಿಮ ಯಾವತ್ತೂ ಕರಗುವುದಿಲ್ಲ. ವರ್ಷದಲ್ಲಿ ಬರೀ ಸಪ್ಟ೦ಬರದಲ್ಲಿ ಒ೦ದೆರಡು ವಾರ ಬಿಟ್ಟರೆ ಮತ್ತೆ ಯಾವತ್ತೂ ಅದನ್ನು ಹತ್ತಲು ಸುಲಭ ಸಾದ್ಯವಲ್ಲ. ತಾ೦ತ್ರಿಕ ಹತ್ತೋಣ ಯಾವತ್ತೂ ಮಾಡಬಹುದು, ಬರೀ ನಡೆದು ಹೋಗುವುದು ಬರೀ ಈ ೨-೩ ವಾರ. ಆದ್ದರಿ೦ದ ಮು೦ದಿನ ವರ್ಷವೇ ಗತಿ ನಮಗೆ.
ReplyDeletei have read the blog today and it is very good.
ReplyDeletenice article.the following comment please forward to athree blog.
ReplyDeletelooking forward to see nice pictures and experiences of Lakshadweep by Mr Ashokavardhan
Ramesh Kainthaje