17 September 2009

ಸವಾಲಿನ ಬೆಂಬತ್ತಿ ಕೌಂಡಿಕಾನ

“ಹೌದಯ್ಯಾ ನೀವು ಆ ಕಾಡಿಗೆ ಹೋಗುವುದೇ ಆದರೆ ಈ ರೇಸಿಗೆ ಹೋಗುವ ಬೈಕಿನವರು ಹಾಕಿಕೊಳ್ಳುವ, ಸರೀ ಕಿವಿ ಮುಚ್ಚುವ ಶಿರಸ್ತ್ರಾಣ ಉಂಟಲ್ಲಾ, ಅದೇ ನಿಮ್ಮ ಹೆಲ್ಮೇಟು ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಅಲ್ಲಿ ಮುಷ್ಠಿ ಗಾತ್ರದ ವಜ್ರ ದುಂಬಿಗಳು ಆಕ್ರಮಣ ಮಾಡಿ ನಿಮ್ಮ ಈ ಕಿವಿಯಿಂದ ಹೊಕ್ಕು ಆಚೆ ಕಿವಿಯಿಂದ ಹೊರಬರುತ್ತವೆ. ಮತ್ತೆ ಹಳೇ ಲಾರೀ ಟಯರಿನ ದಪ್ಪ ಅಟ್ಟೆಯ ಮೆಟ್ಟು ಹಾಕಲೇಬೇಕು. ಅಲ್ಲೆಲ್ಲ ಸಂಕವಾಳದ ಮೂಳೆಗಳು ಹರಡಿಕೊಂಡಿರುತ್ತವೆ. (ಸಾಮಾನ್ಯ ಮೆಟ್ಟುಗಳನ್ನು ಅವು ಬೇಧಿಸಿ ನಿಮ್ಮ ಕಾಲೇನು) ಆನೆಗೂ ಅದರ ನಂಜು ಏರಿದರೆ ಉಳಿಗಾಲವಿಲ್ಲ! ನಾನು ಅದರ ಆಸ್ಪಾಸಿನ ಕಾಡುಗಳಲ್ಲಿ ಬೇಟೆಗೇ . . . . .” ಎಂದಿತ್ಯಾದಿ ಅದೊಂದು ದಿನ ಅಂಗಡಿಗೆ ಬಂದಿದ್ದ ಮೃಗಯಾ ಸಾಹಿತಿ ಕೆದಂಬಾಡಿ ಜತ್ತಪ್ಪ ರೈಗಳು ಎಚ್ಚರಿಸಿದ್ದರು. ಅಲೌಕಿಕಕ್ಕೆ ನಾನು ಸದಾ ಕಿವಿಕೊಡುತ್ತೇನೆ, ಅದರ ಕಲ್ಪನಾ ಸೌಂದರ್ಯಕ್ಕಾಗಿ ಮತ್ತೆ ಕೆಲವೊಮ್ಮೆ ಕಥನಕಾರರ ಮೇಲಿನ ಗೌರವಕ್ಕಾಗಿ! ಜಾಂಬ್ರಿಯಿಂದ ತೊಡಗಿದ ಪತ್ರಿಕಾ ಗುಲ್ಲಿನ ನಡುವೆ ನುಸುಳಿದ ಈ ಪ್ರಾಕೃತಿಕ ಚೋದ್ಯ, ಅಂದರೆ ಎಲ್ಲೋ ದಕ್ಷಿಣ ಅಮೆರಿಕಾದ ನರಹುಳು ನುಗ್ಗದ ಭೀಕರ ಕಣಿವೆಗಳ ಸಮದಂಡಿ ಪ್ರಚಾರ ಗಿಟ್ಟಿಸಿದ ಕೌಂಡಿಕಾನದ ರಹಸ್ಯ ನಿಜಕ್ಕೂ ನನಗೆ ಕುತೂಹಲದ ಸಂಗತಿಯೇ ಆಗಿತ್ತು. ಯಾರದೋ ಸವಾಲಿಗೆ ಅವಸರದಲ್ಲಿ ಪ್ರತಿಸೆಡ್ಡು ಹೊಡೆಯುವುದು ಅಥವಾ ಎಲ್ಲಕ್ಕೂ ಮೂಗು (ಮೀಶೆ?) ತೂರುವ ಜಾಯಮಾನ ನನ್ನದಲ್ಲ. ಆದರೆ ಪ್ರಕೃತಿ ದರ್ಶನವನ್ನೇ ನಿರುತ್ತೇಜನಗೊಳಿಸುವ ಕ್ಷುದ್ರ ಸವಾಲುಗಳನ್ನು, ಹುಸಿ ಹೇಳಿಕೆಗಳನ್ನೂ ಇಕ್ಕಡಿಗೈಯುವ ಹಠ ಕಡಿಮೆಯಿರಲೂ ಇಲ್ಲ.

ಕೌಂಡಿಕಾನದ ಸಂಕದಬಿಂಕ ಮುರಿಯಲು ಪರಿಚಿತರಲ್ಲೆಲ್ಲಾ ದಾರಿ ಕೇಳಿದೆ, ಭೂಪಟ ಅರಸಿದೆ, ಬ್ಲಾಗಿನ ನನ್ನ ಗುಹಾ ಸರಣಿ ಅನುಸರಿಸುತ್ತಿರುವ ನಿಮಗೆ ತಿಳಿದಂತೆ ‘ಅಸ್ಪಷ್ಟತೆ ನಿವಾರಿಸಿ’ ಎಂದೂ ಪತ್ರಿಕಾ ಬರಹದಲ್ಲೂ ಕೇಳಿಕೊಂಡೆ - ವಿವರ ಸಿಗಲಿಲ್ಲ. ಪತ್ರಿಕೆಯಲ್ಲಿ ‘ಹಾರಿಕೆಯ ಉತ್ತರ’, ‘ಜಾರಿಕೆಯ ಪ್ರಯತ್ನ’ ಎಂದೆಲ್ಲಾ ಚುಚ್ಚಿದರೇ ವಿನಾ ಭೌಗೋಳಿಕ ವಿವರಗಳು ಯಾರೂ ಕೊಡಲಿಲ್ಲ. ಆ ಹಂತದಲ್ಲಿ ಮಂಗಳೂರಿನ ಹಿರಿಯರೊಬ್ಬರು ನನ್ನ ನೆರವಿಗೆ ಬಂದರು. ಅವರು ಪರಿಚಯಿಸಿಕೊಟ್ಟ ಆದೂರಿನ ಉಪಾಧ್ಯಾಯರೊಬ್ಬರು ‘ಸಂಕ’ಕ್ಕೆ ಮಾರ್ಗಸೂಚನೆಯ ‘ಪಾಪು’ಇಟ್ಟರು (ಹೆಚ್ಚಾಗಿ ಅಡಿಕೆ ಕಂಬಗಳನ್ನು ಕಂದರದ ಅಡ್ಡಲಾಗಿ ಜೋಡಿಸಿ ಕಟ್ತುವ ಸೇತುವೆ), ವಿಮರ್ಶೆಯ ‘ಕೈತಾಂಗೂ’ (Hand rest) ಕೊಟ್ಟರು. ಸ್ವತಃ ತಾನೇ ಜೊತೆಗೊಡುವುದಾಗಿ ಹೇಳಿದರೂ ಕೊನೆಯ ಗಳಿಗೆಯ ಅನ್ಯ ಕಾರ್ಯಾವಸರದಲ್ಲಿ ಬರಲಿಲ್ಲ. ಆದರೆ ನನ್ನಂಗಡಿಯ ‘ಕಟ್ಟೇಪುರಾಣದಲ್ಲಿ’ ಕುತೂಹಲ ಕೆರಳಿ ಮೂಲತಃ ಭಾರತೀಯನೇ ಆದ ಇಂಗ್ಲೆಂಡಿನ ವೈದ್ಯನೂ ಸೇರಿದಂತೆ ಹನ್ನೊಂದು ಮಂದಿಯ ಭಾರೀ ತಂಡವೇ ಅದೊಂದು ಆದಿತ್ಯವಾರ ಶೋಧಯಾನಕ್ಕೆ ಹೊರಟಿತು.

ಅಂದಿನ ದಿನಗಳಲ್ಲಿ ಈ ವಲಯದ ಕಾರುಗಳಿಗೆ ಸಹಜವೆನ್ನುವಂತೆ ನಾವು ಒಂಬತ್ತು ಮಂದಿ ಆ ಪರದೇಶೀ ವೈದ್ಯರ ಕಾರಿನಲ್ಲೂ ಇಬ್ಬರು ಬೈಕಿನಲ್ಲೂ ಕುಂಬ್ಳೆ, ಬದಿಯಡ್ಕ, ಮುಳ್ಳೇರಿಯಾ ಮಾರ್ಗವಾಗಿ ಕೊಟ್ಯಾಡಿ-ಪರಪ್ಪದಲ್ಲಾಗಿ ಸಾಗಿ, ಪಯಸ್ವಿನಿ ದಂಡೆಯಲ್ಲಿಳಿಯುವಾಗ ಸೂರ್ಯ ಆಗಷ್ಟೇ ಸುತ್ತುವರಿದ ಕಾಡಿನ ಸೆರೆಯಿಂದ ಮೇಲೆ ಬಂದಿದ್ದ. ಮಳೆಗಾಲ ದೂರವಾಗಿ, ಕಾಡು ಜಿಗಣೆ ಮುಕ್ತವಾಗುವುದರೊಡನೆ ಪಯಸ್ವಿನಿ ಹೊಳೆ ಸಾಕಷ್ಟು ತಗ್ಗಿದ ದಿನವದು. (ಹೊಳೆಗೆ ಅಂದು ಸೇತುವೆಯಿರಲಿಲ್ಲ.) ಅಂತದ್ದರಲ್ಲೂ ತೊಡೆಯವರೆಗೆ ಬರುತ್ತಿದ್ದ, ಭಾರೀ ಸೆಳೆತದ, ಹೊಳೆಯ ವಿಸ್ತಾರ ಪಾತ್ರೆಗೆ ಊರಿನ ಸಾಮಾನ್ಯರೂ ಕಾರು ಬೈಕುಗಳನ್ನು ಇಳಿಸುತ್ತಿರಲಿಲ್ಲ. ನಾವು ಶಿಸ್ತಿನಲ್ಲಿ ಪ್ಯಾಂಟ್ ಕಾಲುಗಳನ್ನು ಮೇಲೆ ಮೇಲೆ ಸುತ್ತಿದರೂ ಸೊಂಟದವರೆಗೆ ಚಂಡಿಮಾಡಿಕೊಂಡು ಹೊಳೆ ದಾಟಿದೆವು. ಮುಂದಿನ ಸುಮಾರು ಒಂದು ಕಿಮೀ ದೂಳೀ ಸ್ನಾನ ಮಾಡಿಸುವ ದಾರಿಯಲ್ಲಿ ನಡೆದು ಖ್ಯಾತ (ಆದೂರು) ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿ ಸೇರಿದೆವು. ಅಲ್ಲಿ ದೇವರ ವರ್ಷಾವಧಿ ಜಾತ್ರೆಗೆ ನಿಧಾನದ ಸಿದ್ಧತೆಗಳು ನಡೆದಿದ್ದವು. ಆದರೇನು ನಮ್ಮದು ಆ ಪರಿಸರಕ್ಕೆ ಹೊಸ ಚಹರೆ, ವೇಷ ಭೂಷಣ ವಿಚಿತ್ರ ಮತ್ತೆ ಲಕ್ಷ್ಯ ಕಿವಿಯಿಂದ ಕಿವಿಗೆ ಹೋಗಿ ಸಣ್ಣ ಜಾತ್ರೆಯೇ ಕ್ಷಣಾರ್ಧದಲ್ಲಿ ನೆರೆಯಿತು. ನಮ್ಮೊಡನೆ ಬರಬೇಕಿದ್ದ ಊರ ಹಿರಿಯರ ಸಂಬಂಧಿ ಕಿರಣ್ ಕುಮಾರ್ ನಮ್ಮ ತಂಡದ ಸದಸ್ಯ. ಆತ ಹಿರಿಯರ ಹೆಸರು ಹೇಳಿ ಮಾರ್ಗದರ್ಶಿಯನ್ನು ಅರಸುತ್ತಿದ್ದಂತೆ ದೇವಾಲಯದ ಅಂಗಳಕ್ಕೆ ಚಪ್ಪರ ಕಟ್ಟುತ್ತಿದ್ದವರಲ್ಲಿ ಸ್ವಲ್ಪ ಹಿರಿಯ ಬುದ್ಧನಾಯ್ಕರತ್ತ ಎಲ್ಲರ ಬೆರಳೂ ಚಾಚಿದವು. ಆದರೆ ಗುಂಪಿನ ಗುಲ್ಲಿನಲ್ಲಿ ಮೆಲ್ಲನೆ ಅಪಸ್ವರಗಳೂ ಕೇಳಿಬರತೊಡಗಿದವು. “ನಮ್ಮ ದೇವರ ಸತ್ಯ ಪರೀಕ್ಷೆ ಮಾಡಲು ಇವರ್ಯಾರು? ಮತ್ತೆ ಅದಕ್ಕೆ ‘ಪ್ರಶ್ನೆ’, ವೈದಿಕ ವಿಧಿ ವಿಧಾನಗಳೆಲ್ಲ ಅನುಸರಿಸಬೇಡವೇ? ಎಲ್ಲ ಗೊತ್ತಿರುವ ನಾಯ್ಕರು ಏನೂ ತಿಳಿಯದವರನ್ನು (ನಾಸ್ತಿಕರನ್ನು?) ಅಲ್ಲಿಗೊಯ್ಯುವುದೇ?” ಇತ್ಯಾದಿ. ಆದರೆ ನಮ್ಮ ಆಶ್ಚರ್ಯಕ್ಕೆ ಬುದ್ಧ ನಾಯ್ಕ ಈ ಸಾಮಾಜಿಕ ‘ಅಪ್ರಾಮಾಣಿಕತೆ’ಯನ್ನು ಮೀರಿ ಅನ್ವರ್ಥನಾಮಕರೇ ಆಗಿದ್ದರು. ಗೊಣಗುವವರೆದುರು ಘಟ್ಟಿಸಿ ಮಾತಾಡಿ, “ಬೇಕಾದರೆ ನೀವೂ ಬನ್ನಿ” ಎಂದು ಕೆಲವು ಊರವರನ್ನೂ ಸೇರಿಸಿಕೊಂಡು ಸುಮಾರು ಹತ್ತೂವರೆ ಗಂಟೆಯ ಸುಮಾರಿಗೆ ನಮ್ಮ ತಂಡವನ್ನು ಊರು ಬಿಡಿಸಿ, ದೇವಳದ ಹಿಂದಿನ ಕಾಡಿನತ್ತ ನಡೆಸಿದರು.

ದೇವಸ್ಥಾನದ ಪೂರ್ವ-ದಕ್ಷಿಣಕ್ಕಿದ್ದ (ಆಗ್ನೇಯ) ಗದ್ದೆ, ತೋಟ ದಾಟಿದೆವು. ಮುಂದೆ ಕೃಷಿಕರು ತೋಟ, ಕೊಟ್ಟಿಗೆಗಳಿಗೆ ಸೊಪ್ಪು ಮಾಡುವ ಗುಡ್ಡೆಯನ್ನು ಸ್ಪಷ್ಟ ಕಾಲುದಾರಿಯಲ್ಲೇ ಏರುತ್ತ ಬೊಳ್ಳಕಾನವೆಂಬ ವನ್ಯವಿಭಾಗವನ್ನು ಅಂಚಿನಲ್ಲೇ ಬಳಸಿ ಆ ವಲಯದ ಅತ್ಯಂತ ಎತ್ತರದ ಜಾಗ ತಲಪಿದೆವು. ನನ್ನ ಭೂಪಟದ ಆಧಾರದಲ್ಲಿ ಅದು ಸಮುದ್ರ ಮಟ್ಟದಿಂದ ಸುಮಾರು ಮುನ್ನೂರೈವತ್ತು ಮೀಟರ್ ಎತ್ತರದಲ್ಲಿತ್ತು. ಒಂದು ಕಾಲದಲ್ಲಿ ಅಲ್ಲಿ ಪ್ರಾಕೃತಿಕವಾಗಿ ದಟ್ಟ ಕಾಡೇ ಇದ್ದಿರಬೇಕು. ಆದರೆ ಪ್ರಕೃತಿಯ ಸಹನಶೀಲತೆಯನ್ನು ಕೀಳಂದಾಜಿಸಿದವರಿಂದ ಸೊಪ್ಪಿನೊಡನೆ ಮರಗಳೂ ಕಳಚಿಹೋಗಿ ಭಣ ಭಣ ಎನ್ನಿಸುತ್ತಿತ್ತು. ನಮ್ಮೆದುರು ಅಂದರೆ ದಕ್ಷಿಣಕ್ಕೆ ಗುಡ್ಡಮಾಲೆಯಿಂದಾವೃತವಾದ ಪುಟ್ಟ ಕಣಿವೆಯೇ ಕೌಂಡಿಕಾನ.

ಹಾಳುಬಿದ್ದ ನೆಲದ ರಕ್ಷಣೆಗೆ ಯುಪಟೋರಿಯಂ ಅಥವಾ ಕಮ್ಯುನಿಸ್ಟ್ ಕಳೆ ಕೋಟೆ ಕಟ್ಟಿ ಬೆಳೆದಿತ್ತು. ಅವನ್ನು ಕೈಯಲ್ಲಿ ಬಿಡಿಸಿಕೊಳ್ಳುತ್ತ, ಕಾಲಲ್ಲಿ ಮೆಟ್ಟಿ ದಾರಿಮಾಡಿಕೊಳ್ಳುತ್ತ ಮುಂದುವರಿದಂತೆ ದಟ್ಟ ಕಾಡೇ ಸೇರಿದೆವು. ತರಗೆಲೆ ಹಾಸಿನ ತೀವ್ರ ಇಳುಕಲಿನಲ್ಲಿ ಜಾರುತ್ತ ಹತ್ತೇ ಮಿನಿಟಿನಲ್ಲಿ ಕಣಿವೆಯ ತಳ ತಲಪಿದೆವು. ಬೇರುಗಟ್ಟೆಗಳ ತಡಮೆ, ಬೆತ್ತ ಬೀಳಲುಗಳ ಪರದೆ, ಕಾಡೇ ಕಂಬಳಿಹೊದ್ದಂತೆ ಎಲ್ಲೆಲ್ಲು ಜೋಲುವ ಹಾವಸೆ, ಸೂರ್ಯನಿಗೆ ಪೂರ್ಣ ಗ್ರಹಣ ಬಡಿದಂತ ಮಂಕು, ನೆಲದ ಹಸಿ ವಾತಾವರಣಕ್ಕೆ ವ್ಯಾಪಿಸಿದ ತೇವ, ಎಲ್ಲ ಒತ್ತರಿಸಿ ಕವಿದಂತೆ ಕೀಟ ಸಮ್ಮೇಳನದ ಶ್ರುತಿ, ನಿಗೂಢವನ್ನು ಹೆಚ್ಚಿಸುವಂತೆ ಆಗೊಮ್ಮೆ ಈಗೊಮ್ಮೆ ಒಂಟಿ ಹಕ್ಕಿಯ ಉಲಿ, ಎಲ್ಲೋ ಎಲೆಚೊರಗುಟ್ಟಿದ ಕಡ್ಡಿಲಟಕಾಯಿಸಿದ ಸದ್ದು, ಅನಿರೀಕ್ಷಿತ ಜೀವಿಯ ಮಿಂಚಿನ ಸಂಚಾರ ಹೀಗೆ ಏನೆಲ್ಲ ಅಮೆಜಾನಿನ ಕೊಳ್ಳದ ಬಗ್ಗೆ ಕೇಳಿದ್ದೆವೋ, ಚಲನಚಿತ್ರಗಳಲ್ಲಿ ನೋಡಿದ್ದೆವೋ ಅವೆಲ್ಲ ಇಲ್ಲಿ ಸುಳ್ಳೋ ಸುಳ್ಳು! ಅಲ್ಲೊಂದು ಪುಟ್ಟ ತೊರೆ. ಗುಂಡುಕಲ್ಲುಗಳೆಡೆಯಲ್ಲಿ ಚೊಳಚೊಳಾಯಿಸುವ ಆ ಪಶ್ಚಿಮಮುಖಿಯ ಪಕ್ಕದಲ್ಲಿ ಎರಡು ಮಿನಿಟಿನ ನಡಿಗೆ. ಅದರ ಎದುರು ದಂಡೆ (ದಕ್ಷಿಣ ದಂಡೆ) ಸುಮಾರು ಇಪ್ಪತ್ತಡಿ ಎತ್ತರದ ಪ್ರಾಕೃತಿಕ ಕರಿಕಲ್ಲ ಗೋಡೆ. ಅದು ನೂರಾರು ವರ್ಷಗಳ ಸವಕಳಿಗೆ ಸಿಕ್ಕು ಒಡೆದು, ಬಿರಿದು ಬಳ್ಳಿಬೀಳಲುಗಳ ಮುಸುಕಿನಲ್ಲಿ ತುಸುವೇ ನಿಗೂಢತೆಯನ್ನು ಉಂಟುಮಾಡುತ್ತಿತ್ತು. ಅಷ್ಟರಲ್ಲೆ ಅದರ ಪಶ್ಚಿಮ ಕೊನೆ ಬಂದಂತೆ, ನಮ್ಮ ದಂಡೆಗೆ ಸಮನಾಗುವಂತೆ ಒಂದು ಭಾರೀ ಶಿಲಾಫಲಕ ಈಚೆಗೆ ಮಗುಚಿಬಿದ್ದಿರುವುದು ಕಾಣಿಸಿತು. ಅದು, ಅದೇ ಕಳೆದ ಎರಡು ಮೂರು ಶತಮಾನಗಳಲ್ಲಿ ಜನ ಅಡ್ಡ ಹಾಯದ ಅಥವಾ ಬರಿದೆ ಹಾಯಲಾಗದ (ಪೂಜೆ, ಅಸಂಖ್ಯ ರಕ್ತಬಲಿ ಇತ್ಯಾದಿ ಬೇಕಂತೆ) ಕಥೆಯ ವಸ್ತು - ಕೌಂಡಿಕಾನದ ಸಂಕ. ಸೂಕ್ತ ವೈದಿಕಗಳೋ ಬಲಿ ಮುಂತಾದ ಜಾನಪದೀಯ ಆಚರಣೆಗಳೋ ಇಲ್ಲದೆ ಅದನ್ನು ಅಡ್ಡಹಾಯ್ದವರಿಗೆ ಅಡರುವ ಕೆಪ್ಪತನ, ಒದಗುವ ಅಂಧತ್ವ, ದಾಳಿಯಿಕ್ಕುವ ವಜ್ರದುಂಬಿ ಸಂದೋಹ ಮುಂತಾದ ಕತೆಗಳನ್ನೂ ಮೆಟ್ಟಿಕೊಂಡು ನಾವು ಸಂಕ ದಾಟಿದೆವು. ಬುದ್ಧನಾಯಕ ಮತ್ತು ನಮಗೆ ಅಯಾಚಿತವಾಗಿ ಜೊತೆಗೊಟ್ಟಿದ್ದ ಆದೂರಿನ ಕೆಲವರೂ ಮನದಾಳದಲ್ಲಿ ಪೇರಿಸಿದ್ದ ದಂತಕಥೆಗಳ ಫಲವಾದ ಭಯವನ್ನು ನಮ್ಮ ಮುಖ ನೋಡಿ, ಮರೆತು ಸಂಕದ ಬಿಂಕ ಮುರಿದರು! ವಾಸ್ತವದಲ್ಲಿ ಈ ಸಂಕ ಹಾಯುವಿಕೆ ಅತ್ಯಂತ ನೀರಸ ಘಟನೆ; ದೊಡ್ಡ anticlimax.

ತೊರೆಯ ದಕ್ಷಿಣದ ಏಣನ್ನು ದಾಟಿ ಹತ್ತೇ ಹೆಜ್ಜೆಗೆ ಒಂದು ಭೀಮಗಾತ್ರದ ಬಂಡೆ ಪೂರ್ವದ ಗುಡ್ಡೆಯ ಇಳುಕಲಿನಿಂದ ಹೊರಕ್ಕೆದ್ದು ನಿಂತಿತ್ತು. ಫಕ್ಕನೆ ಆನೆಯಂತೇ ತೋರುವ ಇದೂ ಸ್ಥಳಪುರಾಣದ ಭಾಗ - ಚೌಡಿಪಾರೆ ಅಥವಾ ರಕ್ತೇಶ್ವರಿ ಪಾದೆಯಂತೆ. ಸಂಕದಂತೆ ಇದಕ್ಕೂ ಅದಮ್ಯ ರಕ್ತದಾಹದ ಕಥೆಗಳಿವೆ. ಆದರೆ ನಮ್ಮ ಮಟ್ಟಿಗೆ ಹೇಳುವುದಾದರೆ ಅದು ಶಿಲಾರೋಹಣ ಅಭ್ಯಾಸಕ್ಕೆ ಒಂದು ಪ್ರಾಥಮಿಕ ಬಂಡೆ. ನಮ್ಮಲ್ಲಿ ಕೆಲವರು ಪೂರವದ ‘ಬೆನ್ನು’ ಹಿಡಿದು ‘ಆನೆಯ’ ನೆತ್ತಿಗಡರಿದರು. ಒಂದಿಬ್ಬರು ‘ಸೊಂಡಿಲ’ಗುಂಟ ಇಳಿದೂ ನೋಡಿದರು. ‘ಮಸ್ತಕ’ (ಒಂದು ಬದಿಯ ಪೊಳ್ಳು) ಚಪ್ಪರಿಸ ಹೋದವರಿಗೆ ಮದಜಲವೂ (ಒಂದು ಕುಪ್ಪಿ ಭರ್ತಿ ಹುಳಿಹೆಂಡ!) ಸಿಕ್ಕಿದ್ದು ಊರವರ ಕಣ್ಣು ತೆರೆಸುವಂತಿತ್ತು. ಆಚಿನಿಂದ ಬರುವಂತಿದ್ದ ಸವಕಲು ಜಾಡು, ಹೊಸದಾಗಿ ಸವರಿದಂತಿದ್ದ ಸಣ್ಣ ಪುಟ್ಟ ಮರಗಳ ಮೋಟು ಎಲ್ಲಕ್ಕೂ ಮಿಗಿಲಾಗಿ ಆ ಹೆಂಡದಬುಂಡೆ ಜಾಗದ ಜನಪ್ರಿಯತೆಯನ್ನೂ ಸವಾಲೆಸೆದವರ ಅಜ್ಞಾನವನ್ನೂ ಏಕಕಾಲಕ್ಕೆ ಸಾರುತ್ತಿತ್ತು. ಭಯೋತ್ಪಾದಕ ಕಥೆಕಟ್ಟಿ ಸಾಮಾನ್ಯರನ್ನು ದೂರವಿರಿಸಿ ಅಲ್ಲಿ ನಡೆದಿರಬಹುದಾದ ಅಸಂಖ್ಯ ಅವ್ಯವಾಹಾರಗಳನ್ನು ಕಲ್ಪಿಸಿಕೊಳ್ಳುವಾಗಲಂತೂ ಸಂಶಯದ ಗೋಡೆಯ ಎರಡೂ ಬದಿಗೆ ಕಾಲಿಳಿಬಿಟ್ಟು ಕೂತಿದ್ದ ನನ್ನೊಬ್ಬ ಮಿತ್ರನ ನಿರಾಶೆಯಂತೂ ವಿವರಿಸಲಸಾಧ್ಯ.

ಚೌಡಿಪಾರೆಯ ಮೇಲೆ ಸುತ್ತಮುತ್ತ ಹರಡಿಕೊಂಡು ನಾವು ಬುತ್ತಿಯೂಟ ಮುಗಿಸಿ, ಶುದ್ಧ ತೊರೆಯನ್ನೇ ಮನಸಾರೆ ಕುಡಿದು ಹಿಂದೆ ಹೊರಟೆವು. ಹೀಗೇ ಒಂದು ಬಿದಿರ ಹಳು ದಾಟುವಾಗ ನಮ್ಮ ಉರಗಮಿತ್ರ ಸೂರ್ಯ ಇದುವರೆಗೆ ನೋಡದ ಕೆಂಪು ಕಂದಡಿ ಹಾವನ್ನು (Bamboo pit viper ಅಥವಾ ವೈಜ್ಞಾನಿಕ ಹೆಸರು Trimereorus gramineus) ಕಂಡದ್ದು ಅವನ ಮಟ್ಟಿಗೆ ಐನಾತಿ ಲಾಭ (Nett profit) ಎನ್ನಲೇಬೇಕು. ಅವಸರವಸರವಾಗಿ ಎಲ್ಲಿಂದಲೋ ಒಂದು ಕಾಡು ಕವೆಕೋಲನ್ನು ಸಂಪಾದಿಸಿ ಮೊದಲು ಹಾವಿನ ತಲೆಯನ್ನು ನೆಲಕ್ಕೆ ಒತ್ತಿಹಿಡಿದ. ಮತ್ತೆ ಜಾಗ್ರತೆಯಲ್ಲಿ ಕೈ ಹಾಕಿ ಎರಡು ಬೆರಳಿನ ನಡುವೆ ಅದರ ತಲೆಯನ್ನು ಹಿಡಿದು, ಕವೆಕೋಲನ್ನು ಬಿಟ್ಟು ಪೂರ್ತಿ ಹಾವನ್ನು ನೆಲದಿಂದ ಮೇಲಕ್ಕೆ ಎತ್ತಿಕೊಂಡ. (ಹಾವುಗಳನ್ನು ವೈಜ್ಞಾನಿಕ ಅಧ್ಯಯನ ಮಾಡುವವರೆಲ್ಲ ಹೀಗೇ ಮಾಡುತ್ತಾರೆ. ಆ ಉದ್ದೇಶಕ್ಕೇ ಹೊರಡುವಾಗ ಅವರ ಬಳಿ ಹಗುರಲೋಹದ ಆದರೆ ಗಟ್ಟಿಯಾದ ಕವೆಕೋಲು, ಹಾವನ್ನು ತುಂಬಿ ತರಲು ಸೂಕ್ತ ಚೀಲವೆಲ್ಲ ಇರುತ್ತದೆ. ಆದರಿಲ್ಲಿ ಪರಿಸ್ಥಿತಿ, ಸಿದ್ಧತೆ ಹಾಗಿರಲಿಲ್ಲ; ನಿರ್ಯೋಚನೆಯಿಂದ ಚಾರಣಕ್ಕೆ ಬಂದಾಗ ಕವೆಗೋಲು, ಚೀಲ ಎಲ್ಲಿಂದ ಬರಬೇಕು. ಅದೆಲ್ಲ ಯೋಚಿಸುತ್ತ ಕುಳಿತರೆ ಭಾರೀ ಅಪರೂಪದ ಮಾದರಿಯೊಂದು ಕ್ಷಣ ಮಾತ್ರದಲ್ಲಿ ಕಣ್ಮರೆಯಾಗಿಬಿಡುವುದಿಲ್ಲವೇ)

ಸೂರ್ಯ ಹಾವು ಹಿಡಿದಾಗಿತ್ತು. ಇದರ ಸ್ಥಳೀಯ ಹೆಸರಿನಲ್ಲಿ ‘ಕೆಂಪು’ ಇದ್ದರೂ ವಾಸ್ತವದಲ್ಲಿ ಮಳೆಗಾಲದ ತಂಪಿನ ದಿನಗಳಲ್ಲಿ ಬೇಲಿ, ಪೊದರುಗಳ ಮೇಲೆ ಸರಿದಾಡುವ, ಬಳ್ಳಿಯಂತೇ ತೋರುವ (ನಿರ್ವಿಷ) ಹಸಿರು ಹಾವಿನದೇ ಭ್ರಮೆ ಮೂಡಿಸುತ್ತಿತ್ತು ಈ ವಿಷಕಾರಿ ಕನ್ನಡಿ ಹಾವು. ಕತ್ತಿನಿಂದ ಬೇರ್ಪಟ್ಟಂತೆ ತೋರುವ ಸ್ಪಷ್ಟ ತ್ರಿಕೋನಾಕೃತಿಯ ತಲೆ ಸೂರ್ಯನ ಹಿಡಿತದಲ್ಲಿದ್ದರೂ ಸುಮಾರು ಒಂಬತ್ತು ಹತ್ತು ಇಂಚಿನಷ್ಟು ಉದ್ದವಿದ್ದ ಬಳಕು ಬಳ್ಳಿಯ ದೇಹವನ್ನು ನುಲಿಸುತ್ತ ಪಾರುಗಾಣಲು ಅದು ಪ್ರಯತ್ನ ನಡೆಸಿಯೇ ಇತ್ತು. ಈಗ ತಂಡದವರೆಲ್ಲರ ಚೀಲಗಳ ತಲಾಷೆ ನಡೆಯಿತು, ಆದರೆ ಒಂದೂ ಹಾವನ್ನು ಹಿಡಿದಿಟ್ಟುಕೊಳ್ಳಲು ಯೋಗ್ಯವಾಗಿರಲಿಲ್ಲ. ಒಂದು ತೂತ, ದುರ್ಬಲ ನೇಯ್ಗೆ ಇಲ್ಲದ, ಬಿಗಿಯಾಗಿ ಬಾಯಿ ಕಟ್ಟಲು ಬರುವ ಚೀಲ ಸಿಗಲಿಲ್ಲ. ಕೊನೆಗೆ ಆತನೇ ಬುತ್ತಿಯೂಟ ತಂಡಿದ್ದ ಶಾಲಾ ಟಿಫಿನ್ ಬಾಕ್ಸೇ ಸರಿ ಎಂದ. ಕತ್ತಿಯ ಮೊನೆಯಲ್ಲಿ ಅದರ ಮುಚ್ಚಳದಲ್ಲೊಂದೆರಡು ಗಾಳಿಯಾಡುವಷ್ಟೇ ಸಣ್ಣ ತೂತು ಮಾಡಿದ್ದಾಯ್ತು. ಆದರೆ ಆ ಹಾವನ್ನು ಡಬ್ಬಿಯೊಳಕ್ಕೆಂದು ಬಿಟ್ಟ ಕ್ಷಣಕ್ಕೆ ಸ್ಪ್ರಿಂಗಿನಂತೆ ಜಿಗಿದು ಟಿಫಿನ್ ಬಾಕ್ಸ್ ಹಿಡಿದ ಅಥವಾ ಮುಚ್ಚಳ ಹಾಕಲು ಹೊರಟ ಕೈಯನ್ನೇ ಕಡಿಯಬಹುದಾದ, ಏನಲ್ಲದಿದ್ದರೂ ನೆಲಕ್ಕೆ ಬಿದ್ದು ಮತ್ತೆ ಓಡಿಹೋಗಬಹುದಾದ ಅಪಾಯಗಳಿದ್ದವು. (ಅದೇ ಚೀಲದಲ್ಲಾದರೆ ಇಂಥ ಅವಕಾಶಗಳೇ ಇಲ್ಲ. ಅಲ್ಲಿ ಮೊದಲು ಹಾವಿನ ಪೂರ್ಣ ದೇಹವನ್ನು ಉದ್ದಕ್ಕೆ ನೇತು ಹಿಡಿದ ಚೀಲದೊಳಗೆ ತುರುಕಿ, ಕೊನೆಯಲ್ಲಿ ಅದರ ತಲೆಯನ್ನು ಸಣ್ಣದಾಗಿ ಚೀಲದೊಳಕ್ಕೆ ತಳ್ಳಿ ಚೀಲದ ಬಾಯಿ ಬಿಗಿಯುತ್ತಾರೆ. ಚೀಲ ಅಥವಾ ಅದರ ತಳದಾಳ ಹಾವಿಗೆ ಚಿಮ್ಮಲು ದೃಢತೆ ನೀಡುವುದಿಲ್ಲ.) ಬರಿಯ ಒಂದೂವರೆ ಇಂಚು ಅಂಚಿನ ಲೋಹದ ಡಬ್ಬಿಗೆ ಹಾವನ್ನು ಬಿಟ್ಟು ಮರುಕ್ಷಣದಲ್ಲಿ ಪ್ರತ್ಯೇಕ ತುಂಡೇ ಆಗಿರುವ ಮುಚ್ಚಳವನ್ನು ಇನ್ನೊಬ್ಬರು ಸರಿಯಾಗಿ ಮುಚ್ಚುವ ವಿಧಾನ ನಮಗ್ಯಾರಿಗೂ ಒಪ್ಪಿಗೆಯಾಗಲಿಲ್ಲ. ಆದರೆ ಇಲ್ಲೂ ಸೂರ್ಯನ ಆತುರ ಮತ್ತು ಅದೃಷ್ಟ ನಮ್ಮ ಆತಂಕಗಳನ್ನು ಮೀರಿ ಹಾವಿಗೆ ಬಂಧನ ತಂದಿತು.

ವಿಖ್ಯಾತ ಪ್ರಾಣಿ ವಿಜ್ಞಾನಿ ರೊಮುಲಸ್ ವಿಟೇಕರ್ ಈಚೆಗೆ ಪ್ರಕಟಿಸಿದ ತನ್ನ ಪುಸ್ತಕದಲ್ಲಿ (Snakes of India, the field guide) ಈ ಹಾವು ಸಮುದ್ರ ಮಟ್ಟದಿಂದ ಸುಮಾರು ೧೪೮೦ ಅಡಿಗೂ ಮಿಕ್ಕ ಘಟ್ಟವಲಯದ ಜೀವಿ ಎಂದೇ ಗುರುತಿಸಿದ್ದಾರೆ. ಮುಂದುವರಿದು ಸಮುದ್ರ ಮಟ್ಟದವರೆಗೂ ವ್ಯಾಪಿಸಿರಬೇಕು ಎಂದು ಅಭಿಪ್ರಾಯ ಪಡುತ್ತಾ ತಮಿಳ್ನಾಡಿನ ಒಂದು ಕಡಲಕಿನಾರೆಯಲ್ಲಿ ಇನ್ಯಾರೋ ಇದನ್ನು ಗುರುತಿಸಿದ್ದನ್ನೂ ದಾಖಲಿಸಿದ್ದಾರೆ. ಇಪ್ಪತ್ತೇಳು ವರ್ಷಗಳ ಹಿಂದೆಯೇ ನಮ್ಮ ತಂಡ ಅದರ ಒಂದು ಮಾದರಿಯನ್ನೇ ಸಂಗ್ರಹಿಸಿದ್ದೆವು ಎನ್ನುವುದಕ್ಕೆ ಈ ಪ್ರಸಂಗವನ್ನು ಇಷ್ಟು ಬೆಳೆಸಿದೆ.

ಚೌಡಿಪಾರೆಯಿಂದ ಚೌಡಿಕಾನ ಮತ್ತೆ ಕೌಂಡಿಕಾನವಾಗಿರಬಹುದೇ ಎಂದು ವಾಪಾಸಾಗುವ ದಾರಿಯಲ್ಲಿ ಒಂದು ಚಿಕ್ಕ ಗುಂಪಿನೊಳಗೆ ತರ್ಕ ಬೆಳೆದಿತ್ತು. ಆದೂರು ಮಹಾಲಿಂಗೇಶ್ವರ ಭಕ್ತಜನ ಪರಿವೇಷ್ಟಿತನಾಗಿರುತ್ತಾ ಆತನ ಪ್ರಿಯಸತಿ (ಚೌಡಿ) ಮಾತ್ರ ಯಾಕೆ ಈ ವನವಾಸವನ್ನು ಬಯಸಿದಳು ಅಥವಾ ಪಡೆದಳು ಎಂದು ನಮ್ಮೊಳಗಿನ ಕೆಲವು ಪುರಾಣಿಕರು ತಲೆಕೆರೆಯುತ್ತಿದ್ದರು. ತಲೆತಲಾಂತರದಿಂದ ದಾಟಿಬಂದ ಈ ಕಥೆ, ಅವಕ್ಕೆ ತಗುಲಿದ ನಂಬಿಕೆಗಳು ಯಾವೆಲ್ಲಾ ಘಟನಾ ಪರಂಪರೆಯ ಕೂಸಿರಬಹುದು. ಮತ್ತವನ್ನು ಕಾಲಕಾಲದಲ್ಲಿ ಕೆಣಕಿದವರು ಯಾವೆಲ್ಲಾ ಢಾಂಬಿಕತೆಗಳನ್ನು ಎದುರಿಸಿದರಬಹುದೆಂಬ ನನ್ನ ಯೋಚನಾಸರಣ ಮತ್ತಿಂಥವನ್ನು ಹತ್ತಿಕ್ಕಿದರೆ ಕೌಂಡಿಕಾನದಲ್ಲಿ ಯಾವ ಸವಾಲುಗಳೂ ಉಳಿದಿರಲಿಲ್ಲ. ಸಾಹಸದ ಅಗತ್ಯವಂತೂ ಇಲ್ಲವೇ ಇಲ್ಲ.

ಲೇಖನ ಪ್ರಕಟವಾದ ನಾಲ್ಕನೇ ದಿನದಲ್ಲೇ ಚಿದಂಬರ ಬೈಕಂಪಾಡಿಯವರ ಅಭಿನಂದನಾ ಪತ್ರ ಪ್ರಕಟವಾಯ್ತು. “ಪ್ರಕೃತಿ ವೈಭವದ ಪ್ರತ್ಯಕ್ಷ ದರ್ಶನಕ್ಕೆ ಅಡ್ಡಿ ಉಂಟುಮಾಡುವಂತಹ ಕ್ಷುದ್ರ ಹೇಳಿಕೆ ಕೊಟ್ಟಂತಹ ಮಹನೀಯರುಗಳ ಒಳಕಣ್ಣು ತೆರೆಯುವಲ್ಲಿ ಅಶೋಕರು ತೋರಿದ ಸಾಹಸ ಮೆಚ್ಚಲರ್ಹ. ಯಾರಿಂದಲೋ ಕೇಳಿ ತಿಳಿದಂತಹ ಮೂಢ ನಂಬಿಕೆಗಳನ್ನು ಪೋಷಿಸಿ ಬೆಳೆಸುವಂತಹ ಮೌಢ್ಯರು ಇನ್ನು ಮುಂದಾದರೂ ಕೌಂಡಿಕಾನದ ಬಗೆಗಿನ ‘ರಹಸ್ಯ’ವನ್ನು ಸ್ವಾಗತಿಸಿಯಾರೇ? ತಮ್ಮ ಜೀವನದ ಹೆಚ್ಚಿನ ಸಮಯವನ್ನು ಇತರರ ಕಾರ್ಯ ಸಾಧನೆಗಳನ್ನು ಟೀಕೆ ಮಾಡುವುದರಲ್ಲಿಯೇ ಕಳೆಯುವ ತಿಳಿಗೇಡಿಗಳು ಇನು ಮುಂದೆ ಹೊಣೆಯರಿತು ನಡೆಯುವಂತಾದರೆ ಕೌಂಡಿಕಾನಕ್ಕೆ ಲಗ್ಗೆಯಿಟ್ಟ ಮಿತ್ರರ ಸಾಹಸಕ್ಕೆ ಸಾರ್ಥಕತೆ ಲಭಿಸೀತು! ಬಾಲಿಶ ಪ್ರತಿಕ್ರಿಯೆಗಳಿಂದ ಮನನೊಂದರೂ ತಮ್ಮ ತಂಡಕ್ಕೆ ಹೊಸಚೇತನ ನೀಡಿ ರಹಸ್ಯ ಬಯಲು ಮಾಡಿದವರನ್ನು ಅಭಿನಂದಿಸುತ್ತಾ ಮುಂದೆಯೂ ಸಾಹಸ ಕಾರ್ಯಗಳು ಯಶಸ್ವಿಯಾಗಲಿ ಎಂದು ತುಂಬು ಹೃದಯದಿಂದ” ಹಾರೈಸಿದರು.

ಆದರೆ ಹನ್ನೆರಡನೇ ದಿನಕ್ಕೆ ಆದೂರಿನವರೇ ಆದ ನಾ. ಅಡಿಗ ಎನ್ನುವವರು ‘ಸವಾಲನ್ನು ಬೆಂಬತ್ತಿರುವರೇ’ ಎಂಬ ಶೀರ್ಷಿಕೆಯೊಡನೆ ಉದಯವಾಣಿಯಲ್ಲಿ ಪತ್ರಿಸಿ ಹೊಸ ಅಪಸ್ವರ ತೆಗೆದರು, ಕಾಲೆಳೆಯುವ ಕೆಲಸ ನಡೆಸಿದರು. ‘ಮಾರ್ಗದರ್ಶಿ ಎಲ್ಲ ಹಳ್ಳಿಗರೂ ಹೋಗುವವರೆಗೆ ಮಾತ್ರ ಇವರನ್ನು ಒಯ್ದಿದ್ದ. ಚೌಡಿಪಾರೆಯ ಮುಂದೆಯೇ ನಿಜವಾದ ಸವಾಲಿತ್ತು.’ ಸಾಹಸ ಪೂರ್ಣ ಪ್ರಮಾಣದಲ್ಲಿ ಆಗಲಿಲ್ಲ ಎನ್ನುವುದು ಅವರ ಪತ್ರ ಸಾರಾಂಶ.

‘ಸವಾಲು ಸಂಕಕ್ಕೆ ಸೀಮಿತ’ ಎನ್ನುವ ಹೆಸರಿನಲ್ಲಿ ನಾನು ಬರೆದೆ: ನನಗೆ ಬಂದ ಸವಾಲು ಅಗಮ್ಯ ಸಂಕಕ್ಕೆ ಸೀಮಿತ. ನಾವು ಅದನ್ನು ಸಾಧಿಸಿದೆವು, ಅಲ್ಲೇ ಒದಗಿದ ಚೌಡಿಪಾರೆಯನ್ನೂ ಬಿಟ್ಟಿಲ್ಲ. ಫಲಿಸಿದ ತೀರ್ಮಾನ - ಸಾಹಸಕ್ಕೆ ಈಡಲ್ಲ ಕೌಂಡಿಕಾನ. ಭಾರತೀಯ ಸರ್ವೆ ಇಲಾಖೆಯ ಭೂಪಟದ ಪ್ರಕಾರ ಆ ಆಸುಪಾಸಿನಲ್ಲೆಲ್ಲೂ ಅಗಮ್ಯ ಭೂಮಿ ಇಲ್ಲ. (ಸರ್ವೆ ಭೂಪಟವನ್ನು ಪ್ರಾಯೋಗಿಕವಾಗಿ ಭೂಮಿಗಿಳಿಸಿದಲ್ಲಿ ನನಗಿಲ್ಲಿವರೆಗೆ ಎಲ್ಲೂ ಮೋಸವೂ ಆಗಿಲ್ಲ)

ಸುಳ್ಯದ ಪೂಮಲೆ, ಕೊಲ್ಲೂರಿನ ಅಂಬಾವನ, ಕೊಡಚಾದ್ರಿಯ ಚಿತ್ರಮೂಲದಿಂದ ಕೆಳಗಿನ ಗುಹೆಗಳು ಇನ್ನೂ ಜನಪದದಲ್ಲಿ ದುರ್ಗಮವಾಗಿ ಉಳಿದರೂ ನಮಗೆ ಒಲಿದಿವೆ ಮತ್ತು ಕಾಲಕಾಲಕ್ಕೆ ಅದನ್ನು ನಾನು ಸಾರ್ವಜನಿಕಕ್ಕೆ ಪ್ರಸ್ತುತಪಡಿಸಿದ್ದೇನೆ. ಅಷ್ಟೆ ಏಕೆ, ನಮ್ಮ ಸಾಧನೆಗಳ ಹಿನ್ನೆಲೆಯಲ್ಲಿರುವ ಭೂಪಟಕಾರರಾದರೋ ಬೆಟ್ಟ ತೊರೆ ಜಲಪಾತಗಳ ಏಳುಬೀಳುಗಳನ್ನು ಕನಸಿನಲ್ಲಿ ಕಂಡದ್ದಲ್ಲ. ಇಷ್ಟಾದರೂ ತರ್ಕಕ್ಕೆ ಹುಟ್ಟಿದವರು ಬಿಡದೆ ತೀಡುತ್ತಿದ್ದಾರೆ. ಪ್ರಕೃತಿ ವಿರೋಧಿ ನಿಲುವುಗಳನ್ನು ಹೇಡಿ ಕಥೆಗಳಿಂದ ಪೋಷಿಸುತ್ತಿದ್ದಾರೆ. ಅವರಲ್ಲಿ ನನ್ನ ಮನವಿ ಇಷ್ಟೇ:

ಮೇಜಿನೆದುರು ಕೂತ ಮೋಜುಗಾರರೇ, ಸ್ಥಳಪುರಾಣಕ್ಕೆ ಬರಿದೆ ಅಕ್ಷರ ಕೊಡಬೇಡಿ, ನಿಮ್ಮನ್ನೇ ಕೊಟ್ಟು ಹೊಸ ಭಾಷ್ಯ ಬರೆಯಿರಿ. ಸಾಧ್ಯವಿಲ್ಲದಿದ್ದರೆ ಧರ್ಮದ ಹೆಸರಿನಲ್ಲಿ ಮುಗ್ಧರು ಕೆರಳೇಳುವಂತೆ ಸಾಹಿತ್ಯ-ರಾಜಕೀಯ ಬೆಳೆಸಬೇಡಿ. ಕಥೆಕಟ್ಟಿ ಊರಿನ ಹುಚ್ಚರನ್ನು ನಮಗಂಟು ಹಾಕಬೇಡಿ. ನಿಮ್ಮ ವೈಯಕ್ತಿಕ ದ್ವೇಷಾಸೂಯೆ ದೌರ್ಬಲ್ಯಗಳಿಗೆ ನಮ್ಮನ್ನು ಕೈಗೊಂಬೆ ಮಾಡಿಕೊಳ್ಳಲು ಪ್ರಯತ್ನ ಮಾಡಬೇಡಿ. ‘ಸಾಹಸಿಗಳಿಗೆ’ ಅನುಕೂಲಕರವಾದ ಸಾಮಾಜಿಕ ವಾತಾವರಣ ಬೆಳೆಸಿ.
ಧರ್ಮಜಾಗೃತಿಯ ಸುನಾಮಿ ನಮ್ಮ ಅತಿ ಸನಿಹದಲ್ಲೇ ಮೊರೆಯುತ್ತಿರುವ ಕಾಲಕ್ಕೆ ಬೇಸತ್ತು ಹಿಂದಿನ ನೆನಪುಗಳ ಪುನಃಪರಿಶೀಲನೆಗಿಳಿದೆ. ನಿಮ್ಮನ್ನೆಲ್ಲ ಜಮಾಲಾಬಾದಿನ ಆಸುಪಾಸು ಸುತ್ತಾಡಿಸಿ, ಗುಹಾಲೋಕದ ‘ಕಾಣದ’ ಜಿಡುಕುಗಳಲ್ಲಿ ವಾರಗಟ್ಟಳೆ ಸತಾಯಿಸಿಬಿಟ್ಟೆ. ಇಲ್ಲ, ಹೊರಬಂದು ಮುಂದಿನವಾರ ನಾನು ಹೊಸ ಜಾಡು ಹಿಡಿಯುತ್ತೇನೆ. ಆದರೆ ಸದ್ಯ ಅದನ್ನು ಊಹಿಸುತ್ತ ಕೂರುವ ಬದಲು ಕೌಂಡಿಕಾನಕ್ಕೆ, ಒಟ್ಟಾರೆ ಗುಹಾಶೋಧದ ಸರಣಿಗೆ ನಿಮ್ಮ ಅಭಿಪ್ರಾಯ, ಪೂರಕ ಟಿಪ್ಪಣಿ, ವಿರೋಧಗಳೇನಾದರೂ ಇದ್ದರೆ ಬರೆಯಲು ಸಂಕೋಚಪಡಬೇಡಿ. ಕಾದಿರುತ್ತೇನೆ.

4 comments:

 1. ಎಸ್.ಎಂ ಪೆಜತ್ತಾಯ18 September, 2009 07:51

  ಅಶೋಕ ವರ್ಧನರೇ!
  ಗುಹಾಶೋದಕರಾದ ತಮಗೆ ನಾನು ಖಂಡಿತವಾಗಿ ಬಿರುದು ಬಾವಲಿ ಕೊಡಲು ಶಕ್ತನಲ್ಲ.
  ತಾವುಗಳು ನುಗ್ಗಿದ ಗುಹಾಂತರ್ಯಗಳಲ್ಲಿ ಅಡಗಿದ್ದ ಬಾವಲಿಗಳನ್ನು ತಾವು ಹಿಡಿದು ತರಬಹುದಾಗಿದ್ದ ೧೯೮೨ನೇ ಇಸವಿಯ ಆ ಕಾಲದಲ್ಲೂ - ತಾವು ಅವುಗಳಿಗೆ ಹಿಂಸೆ ಆಗುತ್ತೆ ಅಂತ ಅವನ್ನು ಹಿಡಿದು "ಟ್ರಾಫಿ " ಆಗಿ ಉಳಿಸಿಕೊಂಡಿಲ್ಲ.
  ಇನ್ನು ಅಡಿಕೆ ಮರದ ಪಾಪು ದಾಟಿದ ನಿಮಗೆ ಯಾವ ಬಿದಿರಿನ ಆಸೆಯೂ ಇಲ್ಲ ! - ಅಂತ ಭಾವಿಸಿದ್ದೇನೆ.
  ನನ್ನಲ್ಲಿ ಕೆಲವು ಪ್ರಶ್ನೆಗಳು ಇವೆ : ಉತ್ತರಿಸುವಿರಾ ???
  ೧. ನಿಮ್ಮ ಮಿತ್ರ ಆ ಕೆಂಪು ಕಂದೋಡಿ ಹಾವನ್ನು ಏನು ಮಾಡಿದಿರು?
  ೨. ನಿಮಗೆ ಟ್ರಾಫಿ ಆಗಿ ದಕ್ಕಿದ ಹುಳಿಹೆಂಡದ ಬಾಟಲನ್ನು ಯಾರೂ ಖಾಲಿಮಾಡಲಿಲ್ಲವೆ?
  ಮಾನ್ಯ ಕೆದಂಬಾಡಿಯವರು ವಜ್ರ ದುಂಬಿ, ಸಂಕಪಾಳನ ಎಲುಬು ಮುಂತಾದುವುಗಳ ಇವುಗಳ ಕಥೆ ಹೇಳಿ .... ನೀವು ಹುಡುಗರೆಂದು ನಿಮ್ಮನ್ನೆಲ್ಲಾ "ಮಂಗಟ್ಟಿಸಿ ಹಾಸ್ಯ " ಮಾಡಿದರೆ?

  ಹಾಗಾದರೆ. ನಾನು ಶಿರೂರಿನ ನೀರ್ಮಾರ್ಪಿನ ಗುಂಡಿಯಲ್ಲಿ "ನೆಗಳೆ" ಎಂಬ ಭಯಂಕರ ಕಾಲ್ಪನಿಕ ಜಲಚರವನ್ನು ಕಣ್ಣಾರೆ ಕಂಡಂತೆ "ಒಂದು ಬಂಡಲ್ ಕಥೆ " ಹೇಳಿ ನಿಮ್ಮೆದುರು ನನ್ನ ಬೆಲೆ ಕಳೆದುಕೊಳ್ಳಲೇ?

  ನಾನು ಯಾವ ಗುಜರಿಗೆ ನನ್ನ ವ್ಯಕ್ತಿತ್ವವನ್ನು ಮಾರಿ ಹೋಗಲು ತಯಾರಿಲ್ಲ. ಹಾಗಾಗಲು ಬಿಡಲಾರೆ.

  ಅಂತೂ ಎಂಬತ್ತ ಎರಡನೇ ಇಸವಿಯ "ಗುಹೆಯ ಪುರಾಣ" ಮುಗಿಸಿ ಕೃತಕೃತ್ಯರಾಗುತ್ತಾ ಇದ್ದೀರಿ.

  ಅಭಿನಂದನೆಗಳು.

  ತಮಗೆ ಬಿರುದು ಬಾವಲಿ ಬೇಕಿಲ್ಲ.

  ಬಿರುದು ನಿಮಗೆ ಬೇಡ! ಆದರೆ.... ಬಾವಲಿ ಬಿಟ್ಟು ಬಂದದ್ದು ನಿಮ್ಮ ತಪ್ಪು! ಅಲ್ಲವೇ?

  ನಮಸ್ಕಾರಗಳು

  ಕೇಸರಿ ಪೆಜತ್ತಾಯ

  ReplyDelete
 2. S Raghavendra Bhatta18 September, 2009 12:13

  Aathmeeya Sri Ashok,
  While reading your narration I was amused to feel that all these exposures must have handicapped all those anti-social and present anti-national outfits whose safe hideouts are no more that dependable and they have to look for more mysterious pastures.
  Anyway, coming to the word ChowDi.
  Look, we have differently graded our deities and this reflects our cultural bias.
  ChaamuNDee is the Sanskrit name whose tatsama is ChaamuNDi meaning the same God who is the presiding deity of Mysore and the kula daiva of the Mysore royal family.
  The word ChouDi is the tadbhava of ChaamuNdi but because of this distorted form She is a kshudra devata and so to be worshipped by the people of lower strata of society. What a fall?
  The same is the case with Beera which is the corrupt ( apabhraShTa ) form of Veera bhadra, the army commander of Shiva's GaNas who butchers Daksha brahma ( you know the rest as well )
  I am sure that such mysteries circulated in the society by the vested interests to enjoy themselves by exploiting the gullible believers. I think this number is dwindling fast even in Dakshina kannada and your articles must have been instrumental in eliminating such beliefs which had their sway in the earlier decades.
  So, my wish to you is -- as very much liked and
  recited by Prof CDN, your Guru -- charaiveti, chariveti ( move on, move on )
  S R Bhatta / 12 10 Noon /

  ReplyDelete
 3. ಅಶೋಕ ವರ್ಧನ20 September, 2009 09:23

  ಚಿತ್ರ ಸೂಚಿ: ೧. ಗುಹಾಶೋಧನ ಸರಣಿಗೆ ಸಂಬಂಧಿಸಿದಂತೆ ತಡವಾಗಿ ದಕ್ಕಿದ ಒಂದು ಚಿತ್ರ. ಮಂಚಿ ಬಳಿಯ ಮನೆಯೊಂದರ ಅಂಗಳದಲ್ಲಿ ತೋಡುತ್ತಿದ್ದ ನೀರಬಾವಿ ತಳ ಕುಸಿದು, ಪ್ರಾಕೃತಿಕ ಗುಹೆ ತೆರೆದುಕೊಂಡದ್ದನ್ನು ಶೋಧಿಸಲು ತೊಡಗಿದ ದೃಶ್ಯ. ಇದು ಬಾವಿಯಂತೂ ನಿಷ್ಪ್ರಯೋಜಕ. ಸಾಲದ್ದಕ್ಕೆ ಗುಹೆ ಅಕ್ಕಪಕ್ಕದ ಮನೆ, ಕೊಟ್ಟಿಗೆ ಅಡಿಯಲ್ಲೆಲ್ಲ ವ್ಯಾಪಿಸಿರುವುದು ತಿಳಿದದ್ದು ಹೆಚ್ಚಿನ ಆತಂಕಕಾರೀ ಬೆಳವಣಿಗೆ.
  ೨. ಇದು ಕೇವಲ ಸೂರ್ಯನ ಮುಖಪರಿಚಯಕ್ಕೆ ಬಳಸಿದ ಚಿತ್ರ. ಉಚ್ಚಿಲದಿಂದ ಕಡಲ ಮೀನುಗಾರಿಕೆ ನೋಡಲು ಹೋಗಿ ಬಂದಾಗಿನ ಚಿತ್ರವಿದು. ಮೀನುಗಾರನೊಬ್ಬ ಗರಗಸ ಮೀನು ಪ್ರದರ್ಶಿಸುತ್ತಿದ್ದಾನೆ. ಜೊತೆಯಲ್ಲಿ ನಿಂತು ಪ್ಲ್ಯಾಸ್ಟಿಕ್ ಚೀಲದಲ್ಲಿ ಕಡಲನೀರಿನ ಜೊತೆ ಕಡಲ ವಿಷದ ಹಾವೊಂದನ್ನು ಹಿಡಿದುಕೊಂಡಿರುವವ ಸೂರ್ಯ,
  ೩. ಅಂತರ್ಜಾಲದಿಂದ ಉದ್ಧರಿಸಿರುವ Bamboo Pit viper ಚಿತ್ರ.

  ReplyDelete
 4. "ಬೇರುಗಟ್ಟೆಗಳ ತಡಮೆ, ಬೆತ್ತ ಬೀಳಲುಗಳ ಪರದೆ, ಕಾಡೇ ಕಂಬಳಿಹೊದ್ದಂತೆ ಎಲ್ಲೆಲ್ಲು ಜೋಲುವ ಹಾವಸೆ, ಸೂರ್ಯನಿಗೆ ಪೂರ್ಣ ಗ್ರಹಣ ಬಡಿದಂತ ಮಂಕು, ನೆಲದ ಹಸಿ ವಾತಾವರಣಕ್ಕೆ ವ್ಯಾಪಿಸಿದ ತೇವ, ಎಲ್ಲ ಒತ್ತರಿಸಿ ಕವಿದಂತೆ ಕೀಟ ಸಮ್ಮೇಳನದ ಶ್ರುತಿ, ನಿಗೂಢವನ್ನು ಹೆಚ್ಚಿಸುವಂತೆ ಆಗೊಮ್ಮೆ ಈಗೊಮ್ಮೆ ಒಂಟಿ ಹಕ್ಕಿಯ ಉಲಿ, ಎಲ್ಲೋ ಎಲೆಚೊರಗುಟ್ಟಿದ ಕಡ್ಡಿಲಟಕಾಯಿಸಿದ ಸದ್ದು, ಅನಿರೀಕ್ಷಿತ ಜೀವಿಯ ಮಿಂಚಿನ ಸಂಚಾರ"

  ಒಮ್ಮೆಗೆ ರೋಚಕತೆ ಪಡೆದುಕೊಂಡದ್ದು ಕೂಡಲೇ ಪೇಲವ anitclimax ಓದಿ ಪಿಚ್ಚೆನಿಸಿತು. ಆದರೂ, ಆ ಸಂಕ, ಪಾದೆ ನನ್ನ ಆಸಕ್ತಿ ಕೆರಳಿಸಿದೆ. ನಿಮ್ಮ ಬರಹವನ್ನನುಸರಿಸಿ ಗೂಗಲ್ ಮ್ಯಾಪ್ನಲ್ಲಿ ಕೈಯಾಡಿಸಿದಾಗ ಸಿಕ್ಕಿದ ಕಾಡು ಇದು:https://goo.gl/WWuYUo.

  ನನ್ನಂದಾಜಿನಂತೆ ಇದರ ಸರಿ ಮದ್ಯದಲ್ಲೇ ಸಂಕ ಇರಬೇಕು. ಸಾಧ್ಯವಾದಲ್ಲಿ ನನಗೂ ಅದನ್ನು ನೋಡುವಾಸೆ. ನೋಡೋಣ....

  ಅಂದಹಾಗೆ ಮ್ಯಾಪು ನೋಡುವಾಗ https://goo.gl/maps/DmzGisM69Sr ಇದನ್ನು ನೋಡಿದೆ.. ಸಂಕ, ಬಂಡೆ ಹಾಗೂ ಈ Bolugallu ಬೇರೆಬೇರೆ ಅಂದುಕೊಳ್ಳುತ್ತೇನೆ.

  ಇದರ ಬಗ್ಗೆ ಯಾರಾದರೂ ಆಸಕ್ತರು ನಿಮ್ಮನ್ನು ವಿಚಾರಿಸಿದಲ್ಲಿ ನನಗೊಂದು ಮಿಂಚಂಚೆ(giri.mlr@gmail.com) ಅವಶ್ಯ ಹಾರಿಸಿ..

  ReplyDelete