29 July 2009

ಕುದುರೆಯ ನೆರಳಲ್ಲೊರಗಿದ ಆನೆ ೧. ಜಮಾಲಾಬಾದ್


2೧೯೬೬ರ ಸುಮಾರಿಗೆ ನಾನಿನ್ನೂ ಬೆಂಗಳೂರಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿ. ನನ್ನ ತಂದೆ, ತನ್ನ ಕಾಲೇಜಿನ ಎನ್‌ಸಿಸಿ ಶಿಷ್ಯರ ತಂಡದೊಡನೆ ಕುದುರೆಮುಖ ಶಿಖರಕ್ಕೆ ನಡೆಸಿದ ಸಾಹಸ ಯಾತ್ರೆ ನನ್ನ ಮನೋಭಿತ್ತಿಯಲ್ಲಿ ಎವರೆಸ್ಟ್ ಸಾಧನೆಯಂತೇ ದಾಖಲಾಯಿತು. ಆ ಸಾಹಸ ಯಾತ್ರೆಯ ಪ್ರಾಥಮಿಕ ಆಯ್ಕಾ ಪರೀಕ್ಷೆಗಳಲ್ಲಿ ಹೊರಗಿನವನಾಗಿಯೇ ನಾನು ಭಾಗವಹಿಸಿದ್ದೆ ಮತ್ತು ಅತ್ಯುತ್ತಮವಾಗಿಯೇ ತೇರ್ಗಡೆಯಾಗಿದ್ದೆ. ಆದರೆ ನಿಜ ಯಾತ್ರೆಗಾಗುವಾಗ ಎಸ್.ಎಸ್.ಎಲ್.ಸಿ ಪರೀಕ್ಷೆ ಹತ್ತಿರ ಬಂದ ಕಾರಣಕ್ಕೆ ತಂದೆ ನನ್ನನ್ನು ಹೊರಗಿಟ್ಟರು. ಅವರ ಸಾಹಸ ಯಾತ್ರೆ ಯಶಸ್ವಿಯಾಯ್ತು. ಆದರೆ ಅದಕ್ಕೆ ಹೆಚ್ಚಿನ ರಂಗು ಬಂದದ್ದು ನನ್ನ ತಂದೆಯೇ ಬರೆದ ‘ಕುದುರೆಮುಖದೆಡೆಗೆ’ ಎಂಬ ಹೆಸರಿನ ಪುಸ್ತಕದಿಂದ. ಇದು ಕನ್ನಡದಲ್ಲಿ ಸ್ವತಂತ್ರವಾಗಿ ಬಂದ ಪ್ರಥಮ ಸಾಹಸ ಪ್ರವಾಸ ಕಥನ. (ಸದ್ಯ ಇದು ‘ಎನ್‌ಸಿಸಿ ದಿನಗಳು’ ಮತ್ತು ‘ಸವಾಲನ್ನು ಎದುರಿಸುವ ಛಲ’ ಎಂಬ ಎರಡು ಪುಸ್ತಕಗಳ ಭಾಗವಾಗಿ ಸೇರಿಹೋಗಿದೆ). ಆ ಬರೆಹದ ಒಂದು ದೊಡ್ಡ ಅಧ್ಯಾಯದ ವಸ್ತು ಜಮಾಲಾಬಾದ್, ಸದಾ ನನಗೊಂದು ಕಾಡುವ ಕನಸಾಗಿ ಉಳಿದಿತ್ತು.


ನೆನಪಿನ ಭೂಪಟದೊಡನೆ: ನನ್ನ ವಿದ್ಯಾರ್ಥಿ ದಿನಗಳೆಲ್ಲ ದಕ ಜಿಲ್ಲೆಯಿಂದ ದೂರದೂರುಗಳಲ್ಲೇ ನಡೆಯಿತು. ಸ್ವೋದ್ಯೋಗ ನೆಚ್ಚಿ ಮಂಗಳೂರಿಗೆ ಬಂದ ತರುಣದಲ್ಲೇ ಕನಸು ನನಸಾಗಿಸುವ ಅವಸರದಲ್ಲಿ ಅದೊಂದು ಆದಿತ್ಯವಾರ ನಾನು ಜಮಾಲಾಬಾದಿಗೆ ಭೇಟಿ ನಿಶ್ಚೈಸಿಬಿಟ್ಟೆ. ನನಗೆ ಜೊತೆ ಮಿತ್ರ ಪಂಡಿತಾರಾಧ್ಯ -- ಮಂಗಳಗಂಗೋತ್ರಿಯ ಅಧ್ಯಾಪಕ, ಅಪ್ಪಟ ಮೈಸೂರಿಗ. ಜಮಾಲಾಬಾದಿನ ಪರಿಸರಕ್ಕೆ ನಾವಿಬ್ಬರೂ ಹೊಸಬರು. ಆದರೆ ದಾರಿ ವಿವರ, ಮಾರ್ಗದರ್ಶಿ, ಕಾಲಾಕಾಲಗಳ ಬಗ್ಗೆ ಮುಂದಾಗಿ ವಿಚಾರಿಸಿ, ವಿವೇಚಿಸುವಷ್ಟು ತಾಳ್ಮೆ ನನಗಿರಲಿಲ್ಲ. ಅಥವಾ ಆ ಸಂಗ್ರಹದ ಅಗತ್ಯ ಬಾರದಷ್ಟು ದಟ್ಟ ಚಿತ್ರ ನನ್ನ ಮನಸ್ಸಿನಲ್ಲೆ ಇತ್ತು.

ಬೆಳ್ತಂಗಡಿ, ನಡ, ಮಂಜೊಟ್ಟಿಯವರೆಗೆ ಮಾವ ಗೌರೀಶಂಕರರಿಂದ ಕಡ ಪಡೆದ ಸ್ಕೂಟರ್ ಸವಾರಿ. ಮುಂದೆ ಜಲ್ಲಿ ಕಿತ್ತ ರಸ್ತೆಯಲ್ಲಿ ನಡೆದು, ಬೀಳಲಿನ ಸೇತುವೆಯಲ್ಲಿ ‘ಏರುಮಲೆ ಹೊಳೆ’ (ನೇತ್ರಾವತಿ ನದಿಯ ಪೂರ್ವಾಶ್ರಮದ ಹೆಸರುಗಳಲ್ಲಿ ಇದೂ ಒಂದು) ದಾಟಿದ್ದೇ ಸಿಕ್ಕಿದ ಐತಿಹಾಸಿಕ ರಚನೆ -- ಜಮಾಲಾಬಾದ್‌ಗಢದ ಮಹಾ ದ್ವಾರ. ಅದರ ಐತಿಹಾಸಿಕ ಮಹತ್ವವನ್ನು ಪರೋಕ್ಷವಾಗಿ ಸಾರುವ ಪ್ರಾಚ್ಯ ಇಲಾಖೆಯ ಬೋರ್ಡೂ ಬಹುಶಃ ಅಷ್ಟೇ ಹಳೆಗಾಲದ್ದಿರಬೇಕು! ನಾಲ್ಕೆಂಟು ಅಗಾಧ ಶಿಲಾತೊಲೆಗಳ ಸರಳ ಬಾಗಿಲ ಚೌಕಟ್ಟು ಮತ್ತು ಎರಡೂ ಪಕ್ಕಗಳಲ್ಲಿ ಶಾಸ್ತ್ರಕ್ಕಷ್ಟೇ ಉಳಿದ ಮೋಟು ಗೋಡೆ. ಅದರ ಹೊಸ್ತಿಲು ದಾಟಿದರೆ ಮತ್ತೆ ವರ್ತಮಾನದ ಗೊಂದಲ. ಗದ್ದೆಯ ಹುಣಿಗಳಲ್ಲಿ ಸುತ್ತಿ, ಜೋಪಡಿಯಂತಿದ್ದ ಪಳ್ಳಿಯನ್ನು ಬಳಸಿ, ಒಂದೆರಡು ತೋಡು ಕುಪ್ಪಳಿಸಿ, ಅಲ್ಲಿ ಇಲ್ಲಿ ಬೇಲಿ ಜಿಗಿದು, ಮುಳ್ಳ ಪೊದರುಗಳ ಎಡೆಯಲ್ಲಿ ಜಾಡು ಬಿಡಿಸಿಕೊಂಡು ಹೋಗಿ ಬಂಡೆ ಮುಟ್ಟಿದೆವು.

1ಜಾಡೋ ಮೆಟ್ಟಿಲೋ ಎಂದು ಹುಡುಕದೆ ಸಾಮಾನ್ಯ ಏರಿನ ಬಂಡೆಯನ್ನು ಸುಲಭದಲ್ಲೇ ಹತ್ತತೊಡಗಿದೆವು. ಏರು ಹೆಚ್ಚಿದಂತೆ ನಾಲ್ಗಾಲರಾದೆವು. ಮತ್ತಷ್ಟು ಕಠಿಣವಾಗತೊಡಗಿದಾಗ ಶಿಲಾರೋಹಣದ ಕನಿಷ್ಠ ರಕ್ಷಣಾ ಸಲಕರಣೆಯಾದ ಹಗ್ಗವೂ ಇಲ್ಲದೆ ಮುಂದುವರಿಯುವುದು ಸರಿಯಲ್ಲವೆನಿಸಿತು. ಅಕ್ಕ ಪಕ್ಕಗಳಲ್ಲಿ ದೃಷ್ಟಿ ಹಾಯಿಸಿದೆವು. ಎಡ ಭಾಗದಲ್ಲಿ ಬಂಡೆ ಮತ್ತಷ್ಟು ಬೋಳೂ ಉಬ್ಬಿದಂತೆಯೂ ಕಾಣಿಸಿತು. ಆದರೆ ಬಲಬದಿಗೆ ಪೊದರು, ಮರಗಳ ‘ಅವ್ಯವಸ್ಥೆ’ ಕಾಣಿಸಿತು. ಅತ್ತ ಸರಿದೆವು. ಅಲ್ಲಿ ಹಸಿರಿನ ಮರೆಯಲ್ಲಿ ಶಿಖರದತ್ತ ಏರೇರಿಸಿ ಕಟ್ಟಿದ ಮಹಾಗೋಡೆ ಎದುರಾಯ್ತು. ಅದರ ಗುಂಟ ಇಳಿಯಲೊಪ್ಪದ ಮನಸ್ಸು ನಮ್ಮದು. ಹಾಗೇಂತ ಶಿಖರದತ್ತ ಏರಲೂ ಆಗದ ಪ್ರಾಕೃತಿಕ ಕಡಿದು. ದಾರಿ ತೋರಿದ್ದು ಗೋಡೆಯೇ! ಅದರ ಎತ್ತರವೇನೋ ಹನ್ನೆರಡಡಿಗೆ ಮಿಕ್ಕು ಇದ್ದರೂ ಶೈಥಿಲ್ಯ ಅಡರಿ, ಸಂದು ಕಲ್ಲುಗಳು ಜಾರಿ, ಗಿಡಗಂಟೆಗಳು ಬೆಳೆದು ಅಪಾರ ಏರವಕಾಶ ಕಾಣಿಸಿತು. ಎಚ್ಚರಿಕೆಯಿಂದ ಸರಣಿಯೊಂದನ್ನು ಆಯ್ದು ಅಕ್ಷರಶಃ ಹೆಜ್ಜೆಯ ಮೇಲೇ ಹೆಜ್ಜೆಯನ್ನಿಟ್ಟು ಗೋಡೆ ಏರಿದೆವು.

ಅದೊಂದು ಮಟ್ಟಸ ಜಾಗ; ಶಿಲಾದುರ್ಗದ ಮೈಯಲ್ಲಿ ಸ್ಪಷ್ಟವಾಗಿ ಮಾನವ ನಿರ್ಮಿತ ಶಿಬಿರಸ್ಥಾನ. ನೂರಿನ್ನೂರಡಿ ಉದ್ದಗಲದ ನೆಲ ಶಿಖರದತ್ತ ಮುಕ್ತವಾಗಿಯೂ ಕೊಳ್ಳದತ್ತ ಬಲವಾದ ಗೋಡೆಯಿಂದ ಆವೃತವಾಗಿಯೂ ಇತ್ತು. ಪೊದರು, ದೈತ್ಯ ವೃಕ್ಷಗಳು, ಅಂತರಿಕ್ಷದಲ್ಲೂ ಬೆಸೆದು ಜೋತುಬಿದ್ದ ಬಳ್ಳಿಮಾಡಗಳಿಂದ ಪರಿಸರ ತಂಪಾಗಿತ್ತು. ಆವರಣದ ಕೆಳ ಅಂಚಿನಲ್ಲೊಂದು ತಿರುವು ಮರಸಿನ ಬಾಗಿಲಿನ ತೆರವು, ಹಲವು ಪಾಳುಬಿದ್ದ ರಚನೆ (ಫಿರಂಗಿ ತುಂಡೂ) ಗುರುತಿಸಿದೆವು. ದ್ವಾರದಿಂದಾಚೆಗೆ ಇಳಿಜಾಡಿನ ಮೆಟ್ಟಿಲಸಾಲು ಗುರುತಿಸಿಕೊಂಡರೂ ಸದ್ಯ ಶಿಖರದತ್ತ ಮುಖ ಮಾಡಿದೆವು. ನಾವು ಲಗ್ಗೆ ಹಾಕಿದ್ದ ಗೋಡೆಯ ನೆತ್ತಿ ಶಿಖರಗಾಮಿ ಮೆಟ್ಟಿಲ ಸಾಲೂ ಹೌದು. ಅವುಗಳಲ್ಲಿ ಧಾವಂತ ಅಸಾಧ್ಯ -- ಅಷ್ಟೂ ಎತ್ತೆತ್ತರದ ರಚನೆ. ಮೊಣಕಾಲಿಗೆ ಕೈಯಾಧಾರ ಕೊಟ್ಟು ನಿಧಾನವಾಗಿ ಏರಿದೆವು. ಒಂದು ಹಂತದಲ್ಲಿ ಗೋಡೆ ಎಡ ಮುರಿಯುವಲ್ಲಿ ಒಳಮೈ ಸ್ವಲ್ಪ ಜರಿದೂ ಇತ್ತು. ಇದರಿಂದ ಮುಂದಿನ ಹಂತಕ್ಕೆ ಮೆಟ್ಟಿಲ ಭಾಗ್ಯ ನಮಗಿರಲಿಲ್ಲ. ಮತ್ತೊಂದು ಮೋಟು ಗೋಡೆ ಏರಿ, ಎತ್ತರದ ಹುಲ್ಲು, ಪೊದರು ನುಗ್ಗಿನುರಿ ಮಾಡಿ ಸವಕಲು ಜಾಡನ್ನು ಸ್ಪಷ್ಟಪಡಿಸಿಕೊಂಡೆವು. ಬಲಮಗ್ಗುಲಲ್ಲೊಂದು ನೀರಿಲ್ಲದ ಆದರೆ ಆಳವಾದ ಕೆರೆಯಂಥ ರಚನೆ ಕಾಣಿಸಿತು. ಬಹುಶಃ ಮಳೆಗಾಲದ ನೀರು ಹಿಡಿದಿಟ್ಟು, ಉಳಿಗಾಲದಲ್ಲಿ ಕೆಳಗಿನ ಶಿಬಿರಸ್ಥಾನಕ್ಕೆ ಊಡುವ ವ್ಯವಸ್ಥೆಯಿದ್ದಿರಬೇಕು. ಅದರ ಶೈಥಿಲ್ಯ ಇಂದು ಗೊಸರನ್ನಷ್ಟೇ ಉಳಿಸಿತ್ತು.

ಅಖಂಡ ಬಂಡೆಯ ಅಸಾಧ್ಯ ಕಡಿದಿನ ನೇರ ಬುಡ ಮುಟ್ಟಿದ್ದೆವು. ಆ ಅಗಾಧತೆಯಲ್ಲಿ ಸಿಬರೆದ್ದಂತೆ ಮತ್ತು ನಮ್ಮ ದೃಷ್ಟಿಗೆ ದೈತ್ಯ ಹೆಬ್ಬೆರಳಿನಂತೇ ತೋರುತ್ತಿದ್ದ ಬಂಡೆ ಸೀಳೊಂದರ ನೆರಳಿನಲ್ಲಿ ಹಾಯ್ದೆವು. ಮುಂದೆ ಬಂಡೆಯ ಉಬ್ಬನ್ನು ಓರೆಯಲ್ಲಿ ಏರಲೆಂದೇ ಮನುಷ್ಯ ಕಡಿದು ರಚಿಸಿದ ಓಣಿ ಮೆಟ್ಟಿಲ ಸಾಲು. ಎಡಕ್ಕೆ ಐದಾರಡಿ ಎತ್ತರಕ್ಕುಳಿಸಿದ ಕಲ್ಲ ದಿಬ್ಬ ರಕ್ಷಣಾಗೋಡೆಯೇ ಆಗಿತ್ತು. ಮೆಟ್ಟಿಲುಗಳೋ ತೀರಾ ಒರಟು ಮತ್ತು ಎತ್ತೆತ್ತರ. ಶಿಖರದ ಚಿಂತೆಯೊಂದೇ ಕಟ್ಟಿಕೊಂಡು ಏರುವವರಿಗೆ ಅದು ಕಣ್ಗಾಪು ಕಟ್ಟಿದ ಅನುಭವ. ಹೆಜ್ಜೆಯ ಮೇಲೆ ಹೆಜ್ಜೆ ಪೇರಿಸುತ್ತ ದಮ್ಮು ಕಟ್ಟುತ್ತಿತ್ತು. ತೇಕುತ್ತ ನಿಂತರೆ ರಣಗುಡುವ ಬಿಸಿಲು, ಕೆಂಪನೆ ಕಾವಲಿಯಂಥ ಸುತ್ತಣ ಬಂಡೆ ಬಾಯಾರಿಸಿ, ಜೀವ ಹುರಿಯುತ್ತಿತ್ತು. ಬದಲಾವಣೆಗೆ ಪಕ್ಕದ ಮೋಟುಗೋಡೆ ಏರಿದರೆ ತೀಡುವ ಗಾಳಿ, ಹರಡಿ ಬಿದ್ದ ದೃಶ್ಯ ನಿಜಕ್ಕು ಚೇತೋಹಾರಿ. ಮತ್ತದನ್ನೇ ರೂಢಿಸಿಕೊಂಡು ಅಲ್ಲಿ ಇಲ್ಲಿ ಪಕ್ಕದ ಮೋಟು ಗೋಡೆ ಏರಿ ದಮ್ಮು ದಕ್ಕಿಸಿಕೊಳ್ಳುತ್ತಾ ದೃಶ್ಯ ವೀಕ್ಷಿಸುತ್ತಾ ಸಾಗಿದರೂ ಬಿಸಿಲ ಝಳ ನಮ್ಮನ್ನು ತೀರಾ ನಿಧಾನಿಸದಂತೆ ನೋಡಿಕೊಂಡಿತು. ನೆತ್ತಿಯ ಪ್ರವೇಶ ದ್ವಾರ ತಲಪಿದಾಗ ಬಂದ ಉದ್ಗಾರದಲ್ಲಿ ಗಢದ ದುರ್ಗಮತೆಯ ಮೆಚ್ಚುಗೆಗಿಂಥ ನಮ್ಮ ಸಾಧನೆಯ ಮೆಚ್ಚುಗೆಯೇ ಹೆಚ್ಚಿದ್ದಿದ್ದರೆ ಆಶ್ಚರ್ಯವಿಲ್ಲ!

3ಅದೊಂದು ಕಾವಲು ಕೋಣೆಯ ಸಹಿತವಿದ್ದ ಭದ್ರ ದ್ವಾರ. ಒಳಾಂಗಣದಲ್ಲಿ ಕಾಲುದಾರಿ ಎಡಕ್ಕೆ ತಿರುಗಿ ಶಿಖರವಲಯ ಸುತ್ತುತ್ತಿತ್ತು. ಒಳ ನುಗ್ಗುತ್ತಿದ್ದಂತೆ ನೇರ ಎದುರು ನೈಜ ಬಂಡೆಯಲ್ಲೊಂದು ಸಣ್ಣ ಕೊರಕಲು ತೆರೆದುಕೊಂಡಿತ್ತು. ಅದರ ಸೀಳುಗಳಲ್ಲಿ ತನ್ನ ಅಸಂಖ್ಯ ಬೇರುಗಾಲುಗಳನ್ನು ಊರಿ ಪರಿಸರವನ್ನೆಲ್ಲ ತನ್ನ ನೆರಳ ಹಂಗಿನಲ್ಲಿ ಕೆಡೆದು ನಿಂತಿತ್ತೊಂದು ಗೋಳಿಮರ. ಮಾನವರಚನೆಗಳನ್ನು ಪ್ರಕೃತಿ ಪಳಗಿಸಿ ಹೆಚ್ಚು ಸಾರ್ವಕಾಲಿಕವಾಗಿಸುವ ಕ್ರಿಯೆ ಅಲ್ಲಿತ್ತು. ಶಿಖರವಲಯದ ಮಣ್ಣ ಟೊಪ್ಪಿಗೆಗೆ ಆನೆಹುಲ್ಲಿನ ಬೇರ ನೇಯ್ಗೆ. ಅವು ಮಳೆಗಾಲದ ಹೊಡೆತಕ್ಕೆ ಕೊಚ್ಚಿಹೋಗದಂತೆ ಪರಸ್ಪರಾವಲಂಬಿಗಳು. ಸಾಲದ್ದಕ್ಕೆ ಬಿಸಿಲ ದಿನಗಳಿಗೆ ತೇವ ಹಿಡಿದಿಡುವ ಪ್ರಾಕೃತಿಕ ಚೋದ್ಯವೂ ಹೌದು. ಆ ಸಂಗ್ರಹದ ಒಸರು ಇಲ್ಲಿ ಗೋಳಿಮರದ ಬೇರಗುಂಟ ಜಿನುಗಿ ಸಣ್ಣ ಪುಟ್ಟ ಧಾರೆಗಳಲ್ಲಿ ಬಿದ್ದು ಗಂಗಾಧರ ಕಲ್ಪನೆಗೆ ಅರ್ಥ ಕೊಟ್ಟಂತಿತ್ತು. ಈ ಆಂಶಿಕ ಗಂಗೆಯನ್ನು ನಾವೂ ಪರಿಗ್ರಹಿಸಿ ಪುನೀತರಾದೆವು. ಬುತ್ತಿಯೂಟವನ್ನೂ ಮುಗಿಸಿದೆವು.

ಶಿಖರ ವಲಯದ ತುಂಬ ಆರಡಿ ಮಿಕ್ಕೆತ್ತರದ ಹೊಂಬಣ್ಣದ ಹುಲ್ಲು ಹಬ್ಬಿ ಜಾಡಳಿದಿತ್ತು. ಅದರ ಸೊಕ್ಕಿನ ಸೊಂಟ ಮುರಿದು, ದಾರಿ ಬಗಿದು ಅಂದಾಜಿನ ಆದರೆ ಎಚ್ಚರಿಕೆಯ ಹೆಜ್ಜೆಯಿಟ್ಟು ಸುಮಾರು ನೂರು ಮೀಟರ್ ನಡೆದದ್ದೇ ಶಿಖರದ ತೆರೆಮೈ ಪ್ರತ್ಯಕ್ಷ. ಒಂದಷ್ಟು ಬೋಳು ಬಂಡೆ, ಸ್ವಲ್ಪ ದೂರದಲ್ಲಿ ಎಂಬಂತೆ ಎಡಬಲದಲ್ಲಿ ಎರಡು ದಿಣ್ಣೆ. ಎಡದ್ದು ಅಲ್ಲಿನ ಉನ್ನತ ಕೇಂದ್ರ. ಇದರತ್ತ ಸಾಗಲು ನಡುವೆ ಕಾಲುದಾರಿಯಿರುವಂತೆ ಕಟ್ಟೆ ಕಟ್ಟಿ ಎರಡೂ ಬದಿಗಳಿಗೆ ದೊಡ್ಡ ಕೆರೆಯಂಥ ಹೊಂಡ ರಚಿಸಿದ್ದಾರೆ. ಎರಡೂ ನೀರು ಹಿಡಿದಿಡುವ ವ್ಯವಸ್ಥೆಗಳೇ ಇದ್ದಿರಬೇಕು; ಇಂದು ಎಡದ್ದು ಮಾತ್ರ ಊರ್ಜಿತದಲ್ಲಿದೆ. ಆ ಕೊಳಕು ಹೊಂಡವೇ ‘ಎನ್‌ಸಿಸಿ ದಿನಗಳ’ ಮಾನಸ ಸರೋವರ! ಶುದ್ಧಾಶುದ್ಧಗಳ ಪರಿವೆಯಳಿದ ದಾಹಕ್ಕೆ ಅಚ್ಛೋದ, ಪರಿಸರ ಪ್ರಜ್ಞೆ ಅಳಿದವರ ಸ್ವಾರ್ಥೋಚ್ಛಿಷ್ಟ, ಹುಡುಗಾಟದವರ ಈಜುಕೊಳ, ಪವಾಡಪ್ರಿಯರ ಪಾತಾಳ ತೀರ್ಥ!

ಇಲ್ಲಿ ಜಮಾಲಾಬಾದಿನ ಒಂದು ಐತಿಹ್ಯದ ಬಗ್ಗೆ ಹೇಳಿ ಸದ್ಯವಿರಾಮ ಹಾಕುತ್ತೇನೆ : ನನ್ನ ಹವ್ಯಾಸಗಳ ಬಗ್ಗೆ ಕಾಳಜಿಯಿದ್ದರೂ ತನ್ನ ಅನುಭವಗಳ ಬಗ್ಗೆ ಹೆಚ್ಚಿನ ಮೋಹ ಇದ್ದ ಪ್ರಾಯಸ್ಥರೊಬ್ಬರು ಒಂದು ದಿನ ಹೀಗೇ ಸಂಭಾಷಣೆಯಲ್ಲಿ "ಹೌದಯ್ಯ, ನೀವು ಜಮಾಲಾಬಾದಿನ ಕೆರೆ ನೋಡಿದ್ದೀರಾ?" ನನ್ನ ‘ಹೌದು’ ನೋಡಿ ಮುಂದುವರಿದರು, "ನೀವು ಒಂದು ಬದಿಗೆ ಗಟ್ಟಿ ಬಳೆ ಬೆಸುಗೆ ಹಾಕಿದ ತಾಮ್ರದ ಮುಷ್ಠಿ ಗಾತ್ರದ ಗುಂಡು ಹಾಗೂ ನೂರಾರು ಸಾವಿರಾರು ಅಡಿ ಉದ್ದದ ಗಟ್ಟಿ ಗೋಣಿದಾರ ಸಂಗ್ರಹಿಸಬೇಕು. ನಂತ್ರ ಆ ಕೆರೆಯ ಬದಿಗೆ ಹೋಗಿ ದಾರದ ಒಂದು ತುದಿಯನ್ನು ಗುಂಡಿಗೆ ಕಟ್ಟಿ, ಗುಂಡನ್ನು ಕೆರೆಯ ಒಳಕ್ಕೆ ಉರುಳಿ ಬಿಡಬೇಕು. ಮತ್ತೆ ತುಯ್ತ ನಿಲ್ಲುವವರೆಗೆ ದಾರ ಬಿಟ್ಟು ಕೆರೆಯ ಆಳ ಕಂಡು ಹಿಡಿಯುವ ಪ್ರಯತ್ನ ಮಾಡಬೇಕು! ವಿಧಾನದ ವೈಭವದಲ್ಲಿ ಸರಳ ಸತ್ಯವನ್ನು ಗ್ರಹಿಸದವರಿಗೆ ನಾನು ನೇರ ನುಡಿದೆ. "ತಂದೆಯ ಎನ್‌ಸಿಸಿ ದಿನಗಳಲ್ಲಿ ಜಮಾಲಾಬಾದ್ ಅಧ್ಯಾಯದಲ್ಲಿ ಈಜು ಬಯಸಿದ ಹುಡುಗರು ಇಂಥಾ ಐತಿಹ್ಯಗಳ ಸೋಂಕಿಲ್ಲದೆ, ಮುಳುಗು ಹಾಕಿ ಅಳೆದಿರುವುದು ನೀವು ಓದಿಲ್ಲವೇ? ಎಲ್ಲೂ ಐದಾರಡಿ ಮೀರದ ಆಳ, (ಪ್ರಾಗಿತಿಹಾಸದ್ದೂ ಇರಬಹುದು ಒಟ್ಟಾರೆ) ಗೊಸರು ತುಂಬಿದ ತಳ ಇದರ ಮಿತಿ.

ನನ್ನ ಮೊದಲ ಜಮಾಲಾಬಾದ್ ಭೇಟಿಯಲ್ಲಿ ಕಂಡ ಉಳಿದ ವಿವರಗಳು ಹಿಂಬಾಲಿಸುವ ನನ್ನ ಜಮಾಲಾಬಾದ್ ಒಡನಾಟಗಳ ಇತರ ಕಥನಗಳಲ್ಲಿ ಮರುಕಳಿಸುವುದರಿಂದ ಇಲ್ಲಿ ಅಕ್ಷರರೂಪ ಕೊಡುತ್ತಿಲ್ಲ. ಜಮಾಲಾಬಾದ್‌ನ ಇತರ ಕಥನಗಳ ನಿರೀಕ್ಷೆಯಲ್ಲಿರುತ್ತೀರಲ್ಲಾ?

5 comments:

 1. ಖುಷಿ ಕೊಟ್ಟ ಎಂದಿನ ಲವ್ ಲವಿಕೆಯ ಬರವಣಿಗೆ. ಅಲ್ಲಿ ತುಂಬಿದ ಚಿತ್ರಗಳು ಕಾಲವನ್ನು ಹಿಂದಕ್ಕೆ ಒಯ್ದವು.
  ಜಮಲಾಬಾದಿನ ಇಂದಿನ ಮುಂದಿನ ಇನ್ನಷ್ಟು ಕಥನಕ್ಕೆ ಕಾಯುತ್ತಿದ್ದೇವೆ.
  ರಾಧಾಕೃಷ್ಣ

  ReplyDelete
 2. ಖಂಡಿತ, ೭೯ ರಲ್ಲಿ ನಾನು ಒಮ್ಮೆ ಜಮಲಾಬಾದ್ ಕೋಟೆ ಹತ್ತಿದ್ದೆ, ಆದರೆ ನಿಮ್ಮಷ್ಟು ವಿವರವಾಗಿ ಜಮಲಾಬಾದ್ ನ್ನು ನೋಡಲು ಗೊತ್ತಿರಲಿಲ್ಲ. ನಮ್ಮದು ಏನಿದ್ದರು ಒಂದು ಬಗೆಯ ಓಟ. ನೆತ್ತಿಯೇರುವ ತವಕ. ನೆತ್ತಿಯೇರುತ್ತಿದ್ದಂತೆ ನಾವೆಷ್ಟು ಚಿಕ್ಕವರು ಅಂತನಿಸಿ, ಮತ್ತೆ ನಿಧಾನವಾಗಿ ಹಿಂದಕ್ಕೆ ಪಯಣ. ಟಿಪ್ಪುವಿನ ಸಾಹಸಗಳು ನಮ್ಮ ವರ್ತಮಾನದ ಜೊತೆಗೆ ಬೆಸೆದು ನಿಂತಾಗ ಏನೋ ತಲ್ಲಣ. ನಿಮ್ಮ ಮುಂದಿನ ಕಂತಿಗಾಗಿ ಕಾದು ಕುಳಿತಿರುವೆ.

  ReplyDelete
 3. ತೀರಾ ಆಪ್ತವೆನಿಸಿತು. ನಾವು ಕಾಲೇಜಿನ ದಿನಗಳಲ್ಲಿ ಎನ್.ಎಸ್.ಎಸ್. ತಂಡವಾಗಿ ಹೋಗಿ ತುತ್ತ ತುದಿಯೇರಿ ಹಿಮಾಲಯ ಹತ್ತಿದವರಂತೆ ಬೀಗಿದ್ದು ಇನ್ನೂ ಹಸಿರು.. ಕಂದರವೊಂದನ್ನು ಕಂಡು ಸುಳ್ಳೇ ಹೇಳದವರು ಮಾತ್ರ ಹಾರಬಹುದಂತೆ.. ಇಲ್ಲದಿದ್ದರೆ ಒಳಗೆ ಬಿಳೋದು ಗ್ಯಾರಂಟಿ ಎಂಬ ನಂಬಿಕೆಯಿಂದ ನಮ್ಮೊಳಗಿನ ಎಲ್ಲ ಸತ್ಯವನ್ತರೂ ಎಚ್ಚರಾಗಿ ಯಾರೂ ಹಾರಿರಲಿಲ್ಲ.. ನೆನೆಪಾದಾಗೆಲ್ಲ ನಗುವಿನ ಬುಗ್ಗೆಯನ್ನು ತುಂಬಿ ಕೊಡುವ ಅನುಭವಗಳವು... ನಿಮ್ಮದರ ಜತೆ ನನ್ನ ನೆನಪಿನ ಬುತ್ತಿಯನ್ನೂ ಬಿಚ್ಚಿ ನಗೆ ತುತ್ತು ಕೊಟ್ಟಿದ್ದೀರಿ.. ಥ್ಯಾಂಕ್ಸ್... ಮುಂದಿನ ಬುತ್ತಿ ರೆಡೀನಾ ?

  ReplyDelete
 4. ಪ್ರೀತಿಯ ಅಶೋಕರಿಗೆ ನಮಸ್ಕಾರಗಳು.
  ಜಮಾಲಾಬಾದ್ ಓದಿ ಮತ್ತೊಮ್ಮೆ ನೆನಪಿನ ಆರೋಹಣ ಮಾಡಿದೆ.
  ನಿಮಗೆ ಧನ್ಯವಾದಗಳು.
  ಪಂಡಿತಾರಾಧ್ಯ ಮೈಸೂರು

  ReplyDelete
 5. ಸಂಪಾದಕನ ಮೇಜಿನಿಂದ03 August, 2009 22:11

  ‘ಹಳ್ಳಿಯಿಂದ' ಗೆಳೆಯ ಗೋವಿಂದ ಅಪರಂಜಿ ಶಿವು ಅವರ ಎರಡು ಪುಟದ ಚಿಕ್ಕ ಚೊಕ್ಕ ಲೇಖನ ಅಂಟಿಸಿ ಮಿಂಚಂಚೆ ಕಳಿಸುತ್ತಾ ಬರೀತಾನೆ, ಅಶೋಕರೇ ಜಮಲಾಬಾದಿನ ಎತ್ತರ ಅದರಲ್ಲಿರುವ ಕೆರೆಯ ಆಳ ಎರಡಕ್ಕೂ ಪ್ರಸ್ತುತವೆನಿಸುವ ಅಪರಂಜಿ ಶಿವು ಅವರ ಎರಡು ಪುಟದ ಲೇಖನ ಜತೆಯಲ್ಲಿದೆ. ಇದು ನೇರ ನಿಮ್ಮ ಬ್ಲೋಗಿಗಂಟಿಸಲು ವಿಷಯಾಂತರ ಅನ್ನಿಸಿತು. ಆದರೂ ಇದರ ತಿರುಳು ಹಿಂಡಬಹುದು.

  ವಿಶ್ವಖ್ಯಾತ ವಿಜ್ಞಾನಿ ನೀಲ್ಸ್ ಬೋರ್ ಬಾಲಲೀಲೆಯ ಒಂದು ಘಟನೆ ಅದು. ಬೌತವಿಜ್ಞಾನ ತರಗತಿಯ ಬ್ಯಾರೋ ಮೀಟರಿನ ಪಾಠದ ಕೊನೆಯಲ್ಲಿ ಮುಗ್ದ ಬಾಲಕನಿಗೆ ಕಟ್ಟಡ ಒಂದರ ಎತ್ತರ ಅಳೆಯುವ ಸವಾಲನ್ನು ಅಧ್ಯಾಪಕರು ಒಡ್ಡುತ್ತಾರೆ. ಮೊದಲಿಗೆ ಬಾಲಕ (ನಾನು ಲೇಖನದಲ್ಲಿ ಪ್ರಸ್ತಾಪಿಸಿದ ಹಿರಿಯರು ಹೇಳಿದಂತೇ) ಕಟ್ಟಡದ ತಲೆಯಿಂದ ಬ್ಯಾರೋಮೀಟರಿಗೆ ಹಗ್ಗ ಕಟ್ಟಿ ಕೆಳಕ್ಕೆ ಬಿಟ್ಟು ಹಗ್ಗದ ಉದ್ದ ಅಳತೆ ಮಾಡುತ್ತೇನೆ ಎಂದು ಸರಳ ಪರಿಹಾರವನ್ನೇ (ವ್ಯಂಗ್ಯವಿಲ್ಲದೆ) ಹೇಳಿ ಅಧ್ಯಾಪಕರ ಅವಕೃಪೆಗೆ ಬೀಳುತ್ತಾನೆ. ಸಮಸ್ಯೆ ಮುಖ್ಯೋಪಾಧ್ಯಾಯರಲ್ಲಿಗೆ ಮುಂದುವರಿದಾಗ ಬಾಲಕ ಕೊಟ್ಟ ಬಗೆ ತರದ ಸಮಾಧಾನಗಳು ನನ್ನ ಲೇಖನದ ಸಂದರ್ಭದಲ್ಲಿ ಅಪ್ರಸ್ತುತವೇ ಇರಬಹುದಾದರೂ ಅವಶ್ಯ ಗಮನಾರ್ಹ. ೧.‘ಮೊದಲಿಗೆ ಕಟ್ಟಡದ ಮೇಲಕ್ಕೆ ಹತ್ತಿ ಅಲ್ಲಿಂದ ಬ್ಯಾರೋಮೀಟರ್ ನೆಲಕ್ಕೆ ಬೀಳಿಸಿ ಒಂದು ಸ್ಟಾಪ್ ವಾಚ್‌ನಿಂದ ಆ ಉಪಕರಣ ನೆಲಕ್ಕೆ ಬೀಳಲು ತಗಲುವ ಸಮಯಾನ ಗುರುತಿಸಿಕೊಂಡರೆ ಆಯ್ತು. ಗುರುತ್ವಾಕರ್ಷಣ ಸಂಖ್ಯೆಯ ಸಹಾಯದಿಂದ ಕಟ್ಟಡದ ಎತ್ತರ ಲೆಕ್ಕ ಹಾಕಬಹುದು. ೨. ಇಲ್ಲಾ ಅಂದ್ರೆ ಬ್ಯಾರೋಮೀಟರನ್ನು ನೆಲದ ಮೇಲಿಟ್ಟು ಅದರ ನೆರಳಿನ ಉದ್ದ ಅಳೆದು ಕಟ್ಟಡದ ನೆರಳಿನ ಉದ್ದವನ್ನೂ ಅಳೆದುಬಿಟ್ಟರೆ ಮುಗೀತು, ಮತ್ತೆ ಕಟ್ಟಡದ ಎತ್ತರ ಲೆಕ್ಕಿಸುವುದು ತುಂಬಾ ಸುಲಭದ ಕೆಲಸ. ೩. ಇನ್ನೂ ಒಂದು ಸುಲಭದ ವಿಧಾನ ಎಂದರೆ ಬ್ಯಾರೋಮೀಟರಿಗೆ ದಾರ ಕಟ್ಟಿ ಒಂದು ಪೆಂಡುಲಮ್ ತರಾ ಅದನ್ನು ತೂಗಾಡುಕ್ಕೆ ಬಿಟ್ಟು ತೂಗಾಟದ ಸಮಯ ಅಳೆದು ಆಮೇಲೆ ಕಟ್ಟಡದ ಮೇಲೆ ಹೋಗಿ ತೂಗಾಟ ಅಳೆಯೋದ್ರಿಂದ ಕಟ್ಟಡದ ಎತ್ತರ ಅಳೆಯಬಹುದು. ೪. ಇದ್ಯಾವುದೂ ಬೇಡಾಂದ್ರೆ ಆ ಕಟ್ಟಡದ ಮ್ಯಾನೇಜರ್ ಹತ್ರ ಹೋಗಿ ‘ಈ ಕಟ್ಟಡದ ಎತ್ತರ ಹೇಳಿದ್ರೆ ನಿಮಗೊಂದು ಬ್ಯಾರೋಮೀಟರ್ ಕೊಡ್ತೇನೇಂತ ಪುಸಲಾಯಿಸಿ ತಿಳಿದುಕೊಳ್ಳಬಹುದು . . . . . . .

  (ಅಪರಂಜಿ) ಶಿವಾಯ ನಮ: ಗೋವಿಂದಾಯ ನಮ:
  ಅಶೋಕವರ್ಧನ

  ReplyDelete