01 July 2009

ಅವರಿಲ್ಲದ ಚಾವಡಿ...

ಜೂನ್ ೨೦೦೯ರ ಚರ್ಚೆಗೊಂದು ಚಾವಡಿ ಬಂದ ಕ್ಷಣವೇ ಮಗುಚಿಹಾಕಿ ಮಿತ್ರ ನರೇಂದ್ರ ಪೈ ಅವರಿಗೆ ದೂರವಾಣಿಸಿ ಅಭಿನಂದಿಸಿದೆ; ‘ತಮ್ಮ ಹೆಸರು ಪತ್ರಿಕೆಗಳಲ್ಲಿ ಬರಲಿ ಎಂಬ ಕಾರಣಕ್ಕಾಗಿ ಪತ್ರಿಕೆಗಳಿಗೆ ಪತ್ರ ಬರೆಯುವವರ ಸಾಲಿನಲ್ಲಿ ಸೇರದವರು ನರೇಂದ್ರ ಎಂದೇ ಈ ಆಪ್ತ ಪತ್ರಿಕೆ ಗುರುತಿಸಿಬಿಟ್ಟಿತ್ತು. ಅಂಗೈ ಅಗಲದ ಕೇವಲ ನಾಲ್ಕು ಪುಟದ ಈ ಪತ್ರಿಕೆ ಹೀಗೇ ಹಲವರನ್ನು ಅತಿಪ್ರಚುರಿತರೇ ಇದ್ದರೂ ಅವರ ಅಪ್ರಚುರಿತ ಮಗ್ಗುಲುಗಳಿಗೆ ಬೆಳಕು ಚೆಲ್ಲುತ್ತ ಒಂಬತ್ತು ವರ್ಷಗಳುದ್ದಕ್ಕೆ ನಡೆದುಬಂದಿತ್ತು. ಇದರಲ್ಲಿ ನನ್ನ ತಂದೆಯ ಆತ್ಮಕಥೆ - ಮುಗಿಯದಪಯಣದ ಬಗ್ಗೆ ಆಪ್ತಪರಿಚಯ ಬಂತು. ಆ ಸುಮಾರಿಗೆ ನನಗೂ ಈ ಪತ್ರಿಕೆ ಬರತೊಡಗಿತು. ಎಂದೋ ನಾನಿದಕ್ಕೆ ಚಂದಾ ಕಟ್ಟಿಲ್ಲವಲ್ಲಾ ಎಂದು ಎಚ್ಚರವಾಗಿ ವಿಚಾರಿಸಿದ್ದೂ ಉಂಟು. ‘ಹಣ ಕಳಿಸುವ ಬಗ್ಗೆ ಯೋಚಿಸಬೇಡಿ, ಪತ್ರಿಕೆಗೊಬ್ಬ ಸಹೃದಯೀ ಓದುಗ ಸಿಕ್ಕಿದನೆಂಬುದೇ ಮುಖ್ಯ’ ಎಂಬ ಅರ್ಥದ ಇ-ಪತ್ರ ಬಂತು. (ಈಚೆಗೆ  ನರೇಂದ್ರ ಪೈಗೂ ಈ ಅನುಭವ ಆಗಿದೆ!) ನನ್ನ ತಂದೆ ತೀರಿಹೋದ ಮುನ್ನೆಲೆಯಲ್ಲಿ ಇದೇ ಬ್ಲಾಗಿನಲ್ಲಿ ನಾನು ದೇಹದಾನದ ಕುರಿತೊಂದು ಬರಹ ಪ್ರಕಟಿಸಿದೆ. ಅದಕ್ಕೆ ಪ್ರತಿಕ್ರಿಯಾರೂಪದಲ್ಲಿ ಚಾವಡಿಯ ಸಂಪಾದಕಿ ಹೀಗೆ ಬರೆದರು:

ಛಾವಡಿ ಶುರುವಿನಲ್ಲೆ ನಿಮ್ಮ ತಂದೆಯವರು ಅದರ ಬಗ್ಗೆ ಅಸಕ್ತಿ ತೊರಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರ ಅತ್ಮಕಥೆಯನ್ನು ನಾನು ಓದಿ ಅದರ ಬಗ್ಗೆ ಛಾವಡಿಯಲ್ಲೂ ಬರದಿದ್ದೆ ಕೂಡ. ನೀವು ಮಕ್ಕಳಾಗಿ ಅವರನ್ನು ಕಂಡಿದ್ದೀರಿ. ಇಂಥಾ ಖಾಸಗಿ ಚಿತ್ರಗಳು ಸಾರ್ವಜನಿಕರ ಕಣ್ಣಿಗೆ ಬೀಳದಿರೋ ಅನೇಕ ಸಂಗತಿಗಳನ್ನು ಜನರಿಗೆ ತಿಳಿಸಿಕೊಡುತ್ತದೆ. ನಾನು ಹಿಂದೆ ಮಯೂರಕ್ಕೆ ಪತ್ನಿಯರು ಕಂಡಂತೆ ಪ್ರಸಿದ್ಧರು ಅನ್ನೋ ಕಾಲಂ ಸುಮಾರು ಐದು ವರ್ಷಗಳ ಕಾಲ ಬರೆದೆ. ಮನೆಯವರನ್ನು ಮಾತನಾಡಿಸಿದಾಗ ಅವರ ಮಾತುಗಳಲ್ಲಿ ಸಿಂಸಿಯಾರಿಟಿ ಇರುತ್ತದೆ. ಎಷ್ಟೋ ಸಲ ಲೇಖಕರಂಥವರು ಹೇಳುವುದಕ್ಕಿಂತಲೂ ಪರಿಣಾಮಕಾರಿಯಾಗಿ ಇವರು ಮನಸ್ಸನ್ನು ಮುಟ್ಟುವಂತೆ ನಮ್ಮ ಮುಂದೆ ಪ್ರೀತಿಯಿಂದ ಎಲ್ಲವನ್ನೂ ಬಿಚ್ಚಿಡುತ್ತಾರೆ. ನಿಮ್ಮ ಪತ್ನಿ ಅಥವಾ ನಿಮ್ಮ ತಾಯಿಯವರ ಕೈಲಿ ನಿಮ್ಮ ತಂದೆಯವರ ಬಗ್ಗೆ ಮಾತನಾಡಿದರೆ, ಅವರ ಮತ್ತೊಂದು ಮಗ್ಗುಲೇ – ನಿಮಗೂ ತಿಳಿದಿರದಂಥಾ – ಜಿ.ಟಿ.ಎನ್ ಅನಾವರಣಗೊಳ್ಳಬಹುದು!

ಹೀಗೆ ಹಿನ್ನೆಲೆಯೂ ಮುನ್ನೋಟವೂ ಇದ್ದ ಪತ್ರಿಕೆ ನಿಜದಲ್ಲಿ ಏಕವ್ಯಕ್ತಿ ಪ್ರಯೋಗ! ಆ ವ್ಯಕ್ತಿ - ಬಿ.ಎಸ್. ವೆಂಕಟಲಕ್ಷ್ಮಿ. ಅವರ ಅನ್ಯ ಪರಿಚಯವಿಲ್ಲದೆ ಪತ್ರಿಕೆ ಮತ್ತು ಅಂಚೆಗಳಲ್ಲಷ್ಟೇ ಕಂಡವರು (ನಾನು, ನರೇಂದ್ರ ಪೈ) ಅವರ ಉತ್ಸಾಹ, ವಿನಯಗಳಿಂದ ಪ್ರಭಾವಿತರಾಗಿ ಎಲ್ಲೋ ನಲ್ವತ್ತರ ಆಸುಪಾಸಿನ ಪ್ರಾಯದ ತರುಣಿಯನ್ನು ಕಲ್ಪಿಸಿಕೊಳ್ಳುವುದು ಸಾಧ್ಯವಿತ್ತು. ಆದರೆ ಇಂದಿನ ಪ್ರಜಾವಾಣಿ ತನ್ನ ಅಂಕಣದಲ್ಲಿ ದಾಖಲಿಸಿದಂತೆ ಈಕೆ ಅರುವತ್ಮೂರರ ಹಿರಿಯೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಹದಿನೈದು ವರ್ಷಕಾಲ ವಾರ್ತಾ ಇಲಾಖೆಯಲ್ಲಿ ದುಡಿದು ಸ್ವಂತ ಆಸಕ್ತಿಯ ಬೆನ್ನು ಹಿಡಿದು ಚರ್ಚೆಗೊಂದು ಚಾವಡಿಯನ್ನು ಏಕವ್ಯಕ್ತಿ ಪ್ರಯೋಗವಾಗಿಯೇ ನಡೆಸಿಕೊಂಡು ಬಂದವರು.

ಇದೇ ಜೂನ್ ತಿಂಗಳ ಸಂಚಿಕೆಯ ಕೊನೆಯಲ್ಲಿ ಅವರು ಚಾವಡಿ ವಿತರಣೆಯ ಕುರಿತು ವಿಶೇಷ ಟಿಪ್ಪಣಿ ಸೇರಿಸುತ್ತಾ ಸಂಚಿಕೆಯನ್ನು ತಾರೀಕು ತಪ್ಪಿ ಕಳಿಸುವಂತಾದರೆ ಎದುರಾಗುವ ದುಬಾರಿ ಅಂಚೆವೆಚ್ಚದ ಕುರಿತು ದಿಗಿಲು ಹೇಳಿಕೊಂಡಿದ್ದಾರೆ. ಆದರಿಂತಾ ಆತಂಕಗಳನ್ನು ಮೀರುವಂತೆ, ಚಾವಡಿಯನ್ನು ಬಯಲುಗೊಳಿಸಿ ವೆಂಕಟಲಕ್ಷ್ಮಿಯವರು ನಮ್ಮನ್ನು ಅಗಲಿದ್ದಾರೆ. ಅಲ್ಲೂ ನೇತ್ರದಾನದಿಂದ ತೊಡಗಿ ದೇಹದಾನದಂಥಾ ಆದರ್ಶವನ್ನು ಮೆರೆದಿದ್ದಾರೆ.

6 comments:

 1. ಶ್ರೀಪಡ್ರೆ02 July, 2009 07:29

  ಸುದ್ದಿ ಆಘಾತಕರ.
  ನನ್ನ ಹೃದಯಪೂರ್ವಕ ಸಂತಾಪಗಳು.
  ನುಡಿ ನಮನ ಸಲ್ಲಿಸಿದ ನಿಮಗೆ ಆಭಾರಿ.
  - ಶ್ರೀ

  ReplyDelete
 2. ಜಯಂತರ ಎಸ್ಸೆಮ್ಮೆಸ್ ಬಂದಾಗ ದುರಂತವೊಂದು ತೀರ ಹತ್ತಿರದಲ್ಲೇ ಸಂಭವಿಸಿದ ದುಗುಡ, ಆತಂಕದಿಂದ ಕ್ಷಣಕಾಲ ತತ್ತರಿಸಿದೆ. ನೀವು ಹೇಳಿದಂತೆ ನಲವತ್ತರ ಆಸುಪಾಸಿನವರೆಂದೇ ನನ್ನ ಕಲ್ಪನೆ. ‘ಎಂಟು ವರ್ಷಗಳಾದವು ಚಾವಡಿ ಸುರುಮಾಡಿ, ಬೇರೇನೋ ಯೋಜನೆ ಇದೆ ನನಗೆ, ಸದ್ಯ ಚಂದಾ ಕಳಿಸುವುದಕ್ಕೆಲ್ಲ ಹೋಗಬೇಡಿ’ ಎಂದ ಈ ಸಹೃದಯಿ ಮರೆಯಾಗಿದ್ದು ಹೇಗಿತ್ತೆಂದರೆ ಅಪೂರ್ಣ ವಾಕ್ಯವೊಂದು ಕೊನೆಗೂ ತಾನು ಹೇಳುವುದೇನಿತ್ತೆಂಬ ಹೊಳಹು ಕೂಡ ಕೊಡದೆ ಇದ್ದಕ್ಕಿದ್ದ ಹಾಗೆ ಕೊನೆಯಾದ ಹಾಗೆ... ಇಲ್ಲ, ಸ್ವಲ್ಪ ನಿಲ್ಲಿ, ಅದೇನೋ ಹೇಳಿದ್ದರಲ್ಲ, ದಯವಿಟ್ಟು ಪೂರ್ತಿಗೊಳಿಸಿ ಹೋಗಿ ಎನ್ನುವ ಧಾವಂತ. ಆದರೆ ಅವರಿಲ್ಲ ಎಂಬುದು ವಾಸ್ತವ!

  ಕೈ ಸೇರಿದ ಕೊನೆಯ ಸಂಚಿಕೆಯಲ್ಲಿ ನನ್ನ ಬಗ್ಗೆ ಬರೆದಿದ್ದು, ನೀವು ಅದಕ್ಕೂ ಸಂಭ್ರಮಿಸಿ ತಕ್ಷಣವೇ ನನಗೆ ಫೋನ್ ಮಾಡಿದ್ದು, ಮತ್ತೆ ಈ ಬಾರಿಯ ಸಂಚಿಕೆ ಬರುವ ಮೊದಲೇ ಅವರಿಲ್ಲವಾಗಿದ್ದು ನನ್ನಲ್ಲಿ ವಿಚಿತ್ರ ತಲ್ಲಣಗಳನ್ನೆಬ್ಬಿಸುತ್ತಿತ್ತು. ಚಾವಡಿಯ ಇನ್ನೊಬ್ಬರು ಓದುಗರಿಗೆ ಎಸ್ಸೆಮ್ಮೆಸ್ ಮಾಡಿದೆ. ಚಾವಡಿಯನ್ನು, ವೆಂಕಟಲಕ್ಷ್ಮಿಯವರನ್ನು ನನಗೆ ಪರಿಚಯಿಸಿದ ಸತ್ಯನಾರಾಯಣರಿಗೆ ಫೋನ್ ಮಾಡಿದೆ. ಅವರ ಎರಡು ಮೂರು ನಂಬರುಗಳಿಗೆ ಪ್ರಯತ್ನಿಸಿದರೂ ಅವರು ತಕ್ಷಣಕ್ಕೆ ಸಿಗಲಿಲ್ಲ. ಕೊನೆಗೂ ಸಿಕ್ಕಿದಾಗ ಅವರಿಗೆ ವಿಷಯವೇ ಇನ್ನೂ ತಿಳಿದಿರಲಿಲ್ಲ. ಆಗಷ್ಟೇ ಬೆಂಗಳೂರು ತಲುಪಿದ್ದರಷ್ಟೇ ಅವರು. ಕೆಲವು ನೆನಪುಗಳನ್ನು ಹಂಚಿಕೊಂಡರು. ವಯಸ್ಸು ತಿಳಿಸಿ, ಸಾವಿಗೇನು ಇಷ್ಟೇ ವಯಸ್ಸು ಅಂತಿಲ್ಲವಲ್ಲ ಸ್ವಾಮೀ, ಯಾವಾಗ ಬೇಕಾದರೂ ಬರಬಹುದು ಅದು ಎಂದು ಮಾರ್ಮಿಕವಾಗಿ ಹೇಳಿದಾಗ ಮನಸ್ಸು ತುಂಬಿಕೊಂಡಿದ್ದ ದುಗುಡಕ್ಕೆ ಭಾಷೆ ಕೊಟ್ಟ ಪುಣ್ಯ!

  ನಾವು ನೋಡದಿದ್ದರೂ, ಮಾತನಾಡದಿದ್ದರೂ, ಕೆಲವರ ಬರೇ ಅಸ್ತಿತ್ವವೇ ನಮ್ಮ ಬದುಕಿಗೆ ಎಂಥ ಅರ್ಥ, ಅಗತ್ಯ, ಸಾಂತ್ವನ ಎಲ್ಲ ಆಗಿರುತ್ತದೆ ಎಂಬುದನ್ನು ನೆನೆದರೇ ಆಶ್ಚರ್ಯವಾಗುತ್ತದೆ. ಕೆಲವೇ ಕಾಲದ ಮಟ್ಟಿಗಾದರೂ ಅವರಿಲ್ಲ ಎಂಬ ಭಾವವೇ (ಎಷ್ಟೋ ಬಾರಿ ಇದು ಕೇವಲ ಭಾವವೇ ಅಲ್ಲವೆ ಅನಿಸುವುದೂ ಇದೆ ನನಗೆ.) ಎಷ್ಟು ನಿತ್ರಾಣರನ್ನಾಗಿಸುತ್ತದೆ, ಅತಂತ್ರರನ್ನಾಗಿಸುತ್ತದೆ, ಕುಗ್ಗಿಸುತ್ತದೆ ನಮ್ಮನ್ನೆಲ್ಲ! ಮತ್ತೆ ಅವರನ್ನು ಹೇಗೆಲ್ಲ ಜೀವಂತವಾಗಿಸಿಕೊಳ್ಳಬಹುದು ಎಂಬ ಕುರಿತೇ ಯೋಚಿಸುತ್ತೇವೆ. ಅವರ ಬಗ್ಗೆ ಬರೆದು, ಅವರ ಬರವಣಿಗೆಯನ್ನು ಹೊರತೆಗೆದು, ಅವರ ಬಗ್ಗೆ ಅವರಿವರ ಬಳಿ ಮಾತನಾಡಿ....

  ಆದರೆ ನಿಜಕ್ಕೂ ಇದು ಕೇವಲ ಭಾವವಷ್ಟೇ. ಇವರು, ಕಾರಂತರು, ಜಿಟಿಎನ್.....ಇವರೆಲ್ಲ ಯಾವತ್ತಾದರೂ ಇಲ್ಲವಾಗುವುದು ಸಾಧ್ಯವೇ? ನನಗೆಂದೂ ಈ ಭಾವ ನಿರಂತರವಾಗಿ ಕಾಡಿದ್ದಿಲ್ಲ. ಎಲ್ಲೋ ಅನ್ಯಾಯವಾದಾಗ ಕಾರಂತರು ಇದ್ದಿದ್ದರೆ ಅನಿಸುವುದಿದೆ. ಇನ್ನೆಲ್ಲೋ ಬಾನಂಗಳದ ಅದ್ಭುತದ ಬಗ್ಗೆ ಓದಿದಾಗ, ಕುವೆಂಪು, ಡಿವಿಜಿ, ಬೇಂದ್ರೆಯವರ ಕವನಗಳು ಎದುರಾದಾಗ, ಬುಕ್ ಮಾರ್ಕ್ ಆಗಿ ನಾನು ಉಪಯೋಗಿಸುವ ಅತ್ರಿಸೂನು ಕವನಗಳ ಪಟ್ಟಿಯೊಂದು ಪುಸ್ತಕದ ನಡುವೆ ಕಣ್ಣಿಗೆ ಬಿದ್ದಾಗ ಜಿಟಿಎನ್ ಇದ್ದು ಬರೆಯುತ್ತಿದ್ದರೆ ಅನಿಸುವುದಿದೆ. ಆದರೆ ಅವರಿಲ್ಲ ಎಂಬ ನೋವಿಲ್ಲ, ಯಾಕೆಂದರೆ ಅವರೆಲ್ಲ ಇದ್ದೇ ಇದ್ದಾರೆ ಎಂಬ ಭಾವ ನನ್ನಲ್ಲಿ ಗಟ್ಟಿಯಾಗಿದೆ, ಅವರನ್ನು ಓದುವುದು ಸಾಧ್ಯವಿರುವವರೆಗೆ ಅದೇ ಭಾವ ಗಟ್ಟಿಯಾಗಿರುತ್ತದೆ ಕೂಡ.

  ReplyDelete
 3. lekhana comment eradakkoo competition..

  thanks to both ashok & narendra..

  ReplyDelete
 4. ಅಶೋಕವರ್ಧನ04 July, 2009 21:31

  ಪೂರಕ ಟಿಪ್ಪಣಿ: ಅನಿರೀಕ್ಷಿತವಾಗಿ ಇಂದು (೪-೭-೨೦೦೯) ಚರ್ಚೆಗೊಂದು ಚಾವಡಿಯ ಜುಲೈ ಸಂಚಿಕೆ ಬಂತು. ಮೊದಲ ಪುಟದ ಕೆಳ ಅಂಚಿನಲ್ಲೇನೋ ಬಿಎಸ್ವಿಯವರದೇ ರುಜು ಇತ್ತು. ಆದರೆ ಒಳಗೆ ಸೇರಿಸಿದ್ದ (insertion) ಕರಪತ್ರ ‘ಇನ್ನು ಮುಂದೆ ಚರ್ಚೆ ಮೂಕ.......’ ಎನ್ನುವ ಶೀರ್ಷಿಕೆಯೊಡನೇ ಶೋಕವಾರ್ತೆಯನ್ನು ಬಿತ್ತರಿಸಿತ್ತು. ನಮ್ಮೆಲ್ಲರ ಧ್ವನಿಯೇ ಆದ ಆ ಕರಪತ್ರದ ಮೊದಲ ಪ್ಯಾರಾದ ಕೊನೆಯ ಸಾಲುಗಳನ್ನಷ್ಟೇ ಉದ್ಧರಿಸುತ್ತೇನೆ - ಈ ಸಂಚಿಕೆ ನಿಮ್ಮ ಕೈ ಸೇರುವ ವೇಳೆಗೆ ಚಾವಡಿಯ ಅಗಳಿ ಹಾಕಿರುತ್ತದೆ. ಡಿಸೆಂಬರ್ ೨೦೦೯ರ ತನಕ ತೆಗೆದಿರುತ್ತೇನೆ ಎಂದು ಹೇಳಿದವರಿಗೆ ಏನು ಅವಸರವಾಗಿತ್ತೋ!
  ಅಶೋಕವರ್ಧನ

  ReplyDelete
 5. S Raghavendra Bhatta05 July, 2009 19:37

  Dear Sri Ashok,
  Yesterday I had met your mother who was gradually adjusting to the Mysore weather sans monsoon. The cold wind did herald the late mungaaru but where is the promised kaaru!!
  Man is in the dock to answer these querries.
  While emulating netradaan and dehadaan of GTN Smt BSV has reminded the society that practice is more valuable than precept which as a successful member of the teaching profession I had talked about more glorifyingly.
  Here are my sincere condolences to the departed soul which will remain eternally through its work as well as life of disciplined dedication.
  S R Bhatta /7 35 P M / 5 July 2009

  ReplyDelete
 6. Dinesh K. Shetty Tekkatte16 June, 2010 19:14

  An occasion to remember BS Venkatalakhmi : Her weekly 'Charchegondu Chaavadi' is coming out as a book. The release of the book (along with her another book -'baduku bavane bharavase') is scheduled on 27, Jun 2010 at NMKRV College, Jayanagar Bangalore. Dr. GS Shivarudrappa will be doing the honour.

  ReplyDelete