07 June 2009

ಕರ್ನಾಟಕದ ಶಿಕ್ಷಣ ಸಚಿವ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೊಂದು ಬಹಿರಂಗ ಪತ್ರ

ಮಾನ್ಯರೇ

ನಾನು ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸ್ನಾತಕೋತ್ತರ ಪದವೀಧರನಾಗಿ ಹೊರಬಂದರೂ (೧೯೭೪) ತಾಬೇದಾರಿಯನ್ನು ಬಯಸದೆ ಮಂಗಳೂರಿನಲ್ಲಿ ಈ ಪುಸ್ತಕದ ಅಂಗಡಿಯನ್ನು ತೆರೆದು (೧೯೭೫) ನಿಂತೆ. ಈ ಮೂವತ್ನಾಲ್ಕು ವರ್ಷಗಳ ನನ್ನನುಭವದ ಲಾಭ ನಿಮ್ಮ ಖಾತಾನಿರ್ವಹಣೆಯಲ್ಲಿ ಬಳಕೆಗೆ ಬಂದು ಸಾಮಾಜಿಕ ಹಿತ ಹೆಚ್ಚುವುದಾದರೆ ಯಾಕೆ ಬೇಡ ಎಂಬ ನೆಲೆಯಲ್ಲಿ ನನ್ನ ಈಚಿನ ಒಂದು ಪತ್ರದ ಪರಿಷ್ಕೃತ ಪ್ರತಿಯನ್ನು ಕೆಳಗೆ ಕೊಡುತ್ತಿದ್ದೇನೆ. ಗಮನಿಸಿ - ಈ ಪತ್ರದ ವಿಳಾಸದಾರರನ್ನು ‘ಸಿಕ್ಕಿಸಿ ಹಾಕುವುದು’ ನನ್ನ ಉದ್ದೇಶವಲ್ಲ. ಹಾಗಾಗಿ ಅವರ ಉಲ್ಲೇಖಗಳನ್ನು ಮರೆಸಿದ್ದೇನೆ. ಇದು ಒಟ್ಟಾರೆ ನಮ್ಮ ಶಾಲೆಗಳು ನಡೆದುಕೊಳ್ಳುವ ಕ್ರಮ ಮತ್ತಿದನ್ನು ನಿವಾರಿಸಲು ನಿಮಗೆ ವಿಷಯ ತಿಳಿಸುವುದಷ್ಟೆ ನನಗಿರುವ ಆಸಕ್ತಿ. ಪರ್ಯಾಯ ವ್ಯವಸ್ಥೆಗಳ ಬಗ್ಗೆ ನನ್ನ ಒಂದೆರಡು ಸಲಹೆಗಳನ್ನು ಕೊನೆಯಲ್ಲಿ ಸೇರಿಸಿದ್ದೇನೆ.
ಪತ್ರದ ಪ್ರತಿ:
ಮುಖ್ಯೋಪಾಧ್ಯಾಯರಿಗೆ                                                              ೪-೬-೨೦೦೯
ಸರಕಾರೀ ಪ್ರೌಢ ಶಾಲೆ. xxxxxxxxxxxxx

ಮಾನ್ಯರೇ

ನಿನ್ನೆ ನಿಮ್ಮ ಅಧ್ಯಾಪಕ ಪ್ರತಿನಿಧಿಗಳು ನನ್ನ ಅಂಗಡಿಗೆ ಬಂದು ಪುಸ್ತಕಗಳನ್ನು ನಗದು ಕೊಟ್ಟು ಖರೀದಿಸಿಕೊಂಡು ಹೋದದ್ದಕ್ಕೆ ಮೊದಲಿಗೆ ಕೃತಜ್ಞತೆಗಳು. ಶಾಲಾ ಗ್ರಂಥಾಲಯದ ಪುಸ್ತಕ ಖರೀದಿಗೆ ಇರುವ ಸರಕಾರೀ ನಿಯಮಗಳು ಮತ್ತು ಅವುಗಳ ಅನುಷ್ಠಾನದಲ್ಲಿ ಮೂಡುವ ಗೊಂದಲಕ್ಕೆ ಈ ವ್ಯವಾಹಾರವೂ ಒಂದು ಉದಾಹರಣೆ. ನನ್ನ ಮೂವತ್ನಾಲ್ಕು ವರ್ಷಗಳ ಪುಸ್ತಕ ವ್ಯಾಪಾರೀ ಅನುಭವದಲ್ಲಿ ನಾನು ಪುಸ್ತಕೋದ್ಯಮದ ಹಲವು ವಿಚಾರಗಳ ಕುರಿತು ಕಾಲಕಾಲಕ್ಕೆ ಪತ್ರಿಕಾ ಲೇಖನ, ಈಚೆಗೆ ಬ್ಲಾಗ್ ಬರಹ (ನೋಡಿ: www.athree.wordpress.com), ಭಾಷಣ ಕೊನೆಗೆ ‘ಪುಸ್ತಕ ಮಾರಾಟ ಹೋರಾಟ’ ಎಂಬ ಪುಸ್ತಕ ಪ್ರಕಟಿಸುವವರೆಗೆ ಚಿಂತಿಸಿದ್ದೇನೆ, ಸಾರ್ವಜನಿಕ ಜಾಗೃತಿಗೆ ದುಡಿದಿದ್ದೇನೆ. ಹಾಗಾಗಿ ನಿಮ್ಮ ಶಾಲೆಯಿಂದೊದಗಿದ ಪ್ರಸ್ತುತ ಅನುಭವವನ್ನು ನನ್ನ ದೃಷ್ಟಿಯಿಂದ ವಿಶ್ಲೇಷಿಸುತ್ತೇನೆ. ದಯವಿಟ್ಟು ತಾಳ್ಮೆಯಿಂದ ಓದಿ, ಮನನ ಮಾಡಿಕೊಂಡು ಉತ್ತರಿಸುವಿರಾಗಿ ಭಾವಿಸುತ್ತೇನೆ.

“ಬಿಲ್ಲು xxxxxx ಸಾವಿರಕ್ಕೆ, ರಿಯಾಯಿತಿ ಕೊಡುವುದೇನಿದ್ದರೂ ಬಿಲ್ಲಿನಲ್ಲಿ ಕಾಣಿಸದೆ ನಮ್ಮ ಓಡಾಟ ಮತ್ತು ಪುಸ್ತಕ ಸಾಗಣೆ ಖರ್ಚಿಗೆ ಕೊಡಬೇಕು” ಇದು ನಿಮ್ಮ ಪ್ರತಿನಿಧಿಗಳ ತಂಡದ ನಾಯಕನ ಮೊದಲ ಮಾತು. (ಸರಕಾರ ಪುಸ್ತಕಕ್ಕೆ ಅನುದಾನ ಕೊಡುತ್ತದಾದರೂ ಅದನ್ನು ಹಳ್ಳಿಮೂಲೆಗಳಲ್ಲಿ ಬಳಸಿಕೊಳ್ಳಲು ತಗಲುವ ಖರ್ಚಿಗೆ ವ್ಯವಸ್ಥೆ ಮಾಡುವುದಿಲ್ಲ ಎಂದು ಕೇಳಿದ್ದೇನೆ. ಹಾಗಾಗಿ ಆ ಬೇಡಿಕೆ ಬಂದದ್ದೇ ಸಹಜವೆನ್ನುವಂತೆ) ನಾನು ಒಪ್ಪಿದೆ. ಬಂದಷ್ಟೂ ಜನ ವಿವಿಧ ವಿಷಯಗಳ ಕಪಾಟುಗಳಿಗೆ ಹಂಚಿಹೋಗಿ ಪುಸ್ತಕ ಆರಿಸತೊಡಗಿದರು. ಒಂದು ಹಂತದಲ್ಲಿ ನನಗೆ ಬಿಲ್ಲು ಶುರು ಮಾಡಲು ಹೇಳುವುದರೊಡನೆ ತಮ್ಮನ್ನು  ಮಧ್ಯಾಹ್ನಕ್ಕೆ ವಾಪಾಸು ಹೋಗಲು ಬಿಟ್ಟುಕೊಡಬೇಕೆಂದೂ ವಿನಂತಿಸಿದರು. ನನ್ನ ಮಧ್ಯಾಹ್ನದ ಬಿಡುವಿನ ಬಗ್ಗೆ (ಒಂದರಿಂದ ಎರಡೂವರೆ ಗಂಟೆಯವರೆಗೆ) ಅವರಿಗೆ ತಿಳಿಸಿ, ಇತರ ಗಿರಾಕಿಗಳನ್ನು ಸುಧಾರಿಸುತ್ತಾ “ನಿಮ್ಮ ಬಿಲ್ಲು ಮಾಡುತ್ತಾ ಹೋಗುತ್ತೇನೆ. ಅನಿವಾರ್ಯವಾದರೆ ಅಪರಾಹ್ನವೂ ನೀವು ಕಾಯಬೇಕಾಗುತ್ತದೆ” ಎಂದು ಸೂಚಿಸಿ ಬಿಲ್ಲಿಗಿಳಿದೆ. ಅಧ್ಯಾಪಕಿಯೊಬ್ಬರು ತಮಗೆ ಕೆಲವೆಲ್ಲ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಬೇಕಿರುವುದರಿಂದ ಎರಡೆರಡು ಪ್ರತಿಗಳಿದ್ದರೆ ತೆಗೆಯಬೇಡಿ ಎಂದೂ ಸೂಚಿಸಿದಂತೆ ಮುಂದುವರಿದೆ. ಕೇವಲ ಎರಡು ವಿಜ್ಞಾನದ ಪುಸ್ತಕಗಳನ್ನು ಎರಡು ಪ್ರತಿಗಳಲ್ಲಿ ಬಿಲ್ಲು ಮಾಡಿಯಾಗುವುದರೊಳಗೆ ಒಟ್ಟಾರೆ ನಿಮ್ಮ ಪ್ರತಿನಿಧಿಗಳ ಆಸಕ್ತಿಯ ವೈವಿಧ್ಯ ಮತ್ತು ತಾವೇ ಹೆಕ್ಕಿದ ಪುಸ್ತಕಗಳ ಬೆಲೆಯನ್ನು ತಮ್ಮ ಅನುದಾನದ ಮಿತಿಯೊಡನೆ ಹೊಂದಿಸಿಕೊಳ್ಳುವ ಬುದ್ಧಿವಂತಿಕೆ ಇಲ್ಲ ಎಂಬುದು ನನಗೆ ತಿಳಿಯಿತು. ಹಾಗಾಗಿ ಮತ್ತೆ ಒಂದಕ್ಕಿಂತ ಹೆಚ್ಚು ಪ್ರತಿಗಳು ಬಂದವನ್ನು ಅವರಿಗೆ ತಿಳಿಸದೆ ಬಿಡುತ್ತಾ ಬಿಲ್ಲು ಮುಂದುವರಿಸಿದೆ. ಮಧ್ಯಾಹ್ನಕ್ಕೆ ಬಿಲ್ಲು ಮುಗಿಯುವಂತೆ ಕಾಣಲಿಲ್ಲ. ಹಾಗಾಗಿ ನಿಮ್ಮವರೆಲ್ಲರೂ ಒಟ್ಟಾಗಿ, ಆರಿಸಿಟ್ಟ ರಾಶಿಯಲ್ಲಿ ಅತ್ಯವಶ್ಯ ಎಂದನ್ನಿಸಿದ ಪುಸ್ತಕಗಳನ್ನು ಮುಂದಾಗಿ ತೆಗೆದುಕೊಟ್ಟರು. ನಾನು ಅಪರಾಹ್ನ ಬಾಗಿಲು ತೆರೆದಮೇಲೆ ಅವರನ್ನು ಕಾಯದೇ ನಿಗದಿತ ಮೊತ್ತಕ್ಕೆ ಬಿಲ್ಲು ಮುಗಿಸಿ ಪುಸ್ತಕಗಳನ್ನು ಕಟ್ಟಿಡಲು ಕೇಳಿಕೊಂಡು ಎಲ್ಲರೂ ಜಾಗ ಖಾಲಿ ಮಾಡಿದರು.

ಆದರೆ ಮತ್ತೆ ಅಂಗಡಿ ತೆರೆಯುವಾಗ ತಂಡದ ನಾಯಕ ಮತ್ತೊಬ್ಬರೊಡನೆ ಮಾತ್ರ ಹಾಜರಾದರು. ಮಹಿಳಾ ಪ್ರತಿನಿಧಿಗಳನ್ನು ಇನ್ನೇನೋ ಖರೀದಿಗೆ ಇನ್ನೆಲ್ಲೋ ಬಿಟ್ಟು ಬಂದಿದ್ದರು. ಆಯ್ಕೆಯ ಪುಸ್ತಕಗಳು ಇನ್ನೂ ಸುಮಾರಿವೆ ಆದರೆ ನಿಗದಿತ ಮೊತ್ತ ಸ್ವಲ್ಪವೇ ಉಳಿದಿದೆ ಎನ್ನುವಾಗ ಸಮಸ್ಯೆ ಸುರುವಾಯ್ತು. ನಿಮ್ಮ ಪ್ರತಿನಿಧಿ ತಮ್ಮ ಒಲವಿಗನುಸಾರ ಆರಿಸಿದ್ದ ಪುಸ್ತಕಗಳಷ್ಟೇ ಯೋಗ್ಯವಾದವು ಉಳಿದವರು ಆರಿಸಿದ್ದೆಲ್ಲ ವ್ಯರ್ಥ ಎನ್ನುವ ಧೋರಣೆಯೊಂದಿಗೆ ಹಿಂದೆ ಬಿಲ್ಲು ಮಾಡಿಯಾಗಿದ್ದ ಇತಿಹಾಸ, ಇಂಗ್ಲಿಷ್ ಪುಸ್ತಕಗಳನ್ನೆಲ್ಲ ರದ್ದುಪಡಿಸಲು ಒತ್ತಾಯಿಸತೊಡಗಿದರು. ನಾನು ಈಗಾಗಲೇ ಬರೆದಾದ ಬಿಲ್ಲು ರದ್ದುಪಡಿಸಲು ಅಸಾಧ್ಯ (ನನಗೂ ಆಡಿಟ್ ಇದೆ) ಎಂದೆ. ತಿದ್ದುಪಡಿ ಹಾಕಿಕೊಟ್ಟರೆ ನಾಳೆ ನಿಮ್ಮ ಲೆಕ್ಕಾಚಾರ ತನಿಖೆಯವರು ಆಕ್ಷೇಪ ಹೇಳಿದರೆ ನಾನು ಜವಾಬ್ದಾರನಲ್ಲ ಎಂದೂ ವಿವರಿಸಿದೆ. “ತಿದ್ದುಪಡಿಯಾದರೆ ಅದು, ಮಾಡಿ” ಎಂದರು ನಿಮ್ಮ ತಂಡದ ನಾಯಕ. ಆ ಪ್ರಕಾರ ಹಳತರಲ್ಲಿ ಹಲವು ರದ್ದುಪಡಿಸಿ, ಇವರದ್ದಷ್ಟನ್ನು ಹಾಕಿ ಮುಗಿಸುತ್ತಾ ಇರುವಾಗ ಮೂರು ಕೊಟೇಶನ್ನಿನ ಪ್ರಸ್ತಾಪವೆತ್ತಿದರು. ೧. ನನ್ನಲ್ಲಿ ನನ್ನ ಒಂದೇ ಕೊಟೇಶನ್ನು ಲಭ್ಯ. ಇನ್ನೆರಡನ್ನು ಕಾನೂನು ರೀತ್ಯಾ ಮತ್ತು ವಾಸ್ತವದಲ್ಲೂ ಶಾಲೆಯೇ ಸಂಪಾದಿಸಬೇಕು ಎನ್ನುವುದೇ ಕೊಟೇಶನ್ನಿನ ಮೂಲ ಆಶಯ! ಆದರೆ ರೂಢಿಯಲ್ಲಿ ಸಾಮಾನ್ಯವಾಗಿ ಎಲ್ಲಾ ಪೂರೈಕೆದಾರರು ನೇರ ತಮ್ಮಲ್ಲಿ ಖರೀದಿಸುವವರಿಗೆ ತಮ್ಮದರೊಡನೆ ಇನ್ನೆರಡು ಕೊಟೇಷನ್ನು (ಬೇನಾಮಿ) ಕೊಡಲು ಸಿದ್ಧರಿರುತ್ತಾರೆ. ಮತ್ತೆ ಶಾಲೆಗಳ ತುರ್ತು ಅಗತ್ಯಗಳಿಗನುಕೂಲವಾಗುವಂತೆ ಒಮ್ಮೆಗೆ ರೂ ಐದುನೂರರವರೆಗಿನ ಖರೀದಿಗೆ ಕೊಟೇಶನ್ನು ಬೇಡ, ರಿಯಾಯ್ತಿ ಸಿಗದೆಯೂ ಇರಬಹುದು ಎನ್ನುವ ಉಪನಿಯಮವಿದೆಯಂತೆ. ಹಾಗಾಗಿ ಕೆಲವು ಜಾಣರು ಅನುದಾನ ಎಷ್ಟು ಸಾವಿರವಿದ್ದರೂ ಖರೀದಿಗೆ ಬಂದಾಗ ಐದುನೂರರ ಒಳಗಿನ, ತಾರೀಕು ರಹಿತ, ರಿಯಾಯಿತಿ ತೋರಿಸದ ಬಿಲ್ಲುಗಳನ್ನು ಕೇಳುತ್ತಾರೆ. ಒಮ್ಮೆಗೆ ಕೈಯಿಂದ ಹಣ ಹಾಕಿದರೂ ಬಿಲ್ಲುಗಳಲ್ಲಿ ಬೇರೆಬೇರೆಯ ತಾರೀಕುಗಳನ್ನು ಹಾಕಿಕೊಳ್ಳುತ್ತಾ ತಮ್ಮ ಹಣವನ್ನು ನಿಜದಲ್ಲಿ ದಕ್ಕಿದ ರಿಯಾಯಿತಿಯ ಲಾಭ ಸಹಿತ ಹಿಂದೆ ಪಡೆಯುತ್ತಾರೆ.
೨. ಮುದ್ರಿತ ಬೆಲೆಯಿಲ್ಲದ ಅಥವಾ ಗರಿಷ್ಠ ವ್ಯಾಪಾರೀ ಬೆಲೆ (maximum retail price - MRP) ಮಾತ್ರ ಕಾಣಿಸಿದ ಮಾಲುಗಳಂತೆ (ಆಟೋಟ ಸಾಮಾಗ್ರಿಗಳು, ಪ್ರಯೋಗಶಾಲೆಯ ಸಲಕರಣೆಗಳಂತೆ) ಪುಸ್ತಕಗಳು ಅಲ್ಲ. ಇವುಗಳಲ್ಲಿರುವ ಮುದ್ರಿತ ಬೆಲೆ ವಾಸ್ತವದ ಮಾರಾಟ ಬೆಲೆ. ಇದು ಅಂಗಡಿಯಿಂದ ಅಂಗಡಿಗೆ ಬದಲಾಗುವುದಿಲ್ಲ. (ಆ ಮುದ್ರಿತ ಬೆಲೆಯ ಮೇಲೆ ರಿಯಾಯ್ತಿ ಎನ್ನುವುದು ವ್ಯಾಪಾರಿಯ ನ್ಯಾಯಬದ್ಧವಾದ ಆದಾಯದ ಕಡಿತ. ರಿಯಾಯ್ತಿ ಕೇಳುವುದೆಂದರೆ ವ್ಯಾಪಾರಿಯ ಔದಾರ್ಯವನ್ನು ನಿರೀಕ್ಷಿಸುವುದಷ್ಟೇ ಸರಿ; ರಿಯಾಯ್ತಿ ಗಿರಾಕಿಯ ಹಕ್ಕಲ್ಲ) ಹಾಗಾಗಿ ಸಾಂಸ್ಥಿಕ ಖರೀದಿಯ ವೇಳೆ ದರಪಟ್ಟಿ ಕೇಳಿದವರಿಗೆ ನಾವು ಮುದ್ರಿತ ಬೆಲೆಯ ಮೇಲೆ ರಿಯಾಯಿತಿ ದರ ಮಾತ್ರ ಉಲ್ಲೇಖಿಸುವ ಪತ್ರ ಕೊಡುತ್ತೇವೆ. ಇತರ ಶಾಲಾ ಸಾಮಾನುಗಳ ವ್ಯಾಪಾರಿಗಳಂತೆ ಪುಸ್ತಕಗಳ ದರ ಪಟ್ಟಿಯನ್ನೂ ಕೊಡುವ ಅಗತ್ಯವಿಲ್ಲ. ನಿಮ್ಮವರು  ಮೊದಲಿಗೇ ಬಿಲ್ಲಿನಲ್ಲಿ ಏನೂ ರಿಯಾಯಿತಿ ಕಾಣಿಸಬಾರದೆಂದು ಸ್ಪಷ್ಟ ಕೇಳಿಕೊಂಡಿರುವಾಗ ನಾನೇನು ‘ಸೊನ್ನೆ ದರಪಟ್ಟಿ’ ಕೊಡುವುದೇ? ಇದನ್ನು ಬಹಳ ಕಷ್ಟಪಟ್ಟು ನಿಮ್ಮ ಪ್ರತಿನಿಧಿಗೆ ಅರ್ಥೈಸಿದೆ. ಆದರೂ ಅವರಿಗುಳಿದ ಸಂದೇಹವನ್ನು ಅವರೇ ನಿಮ್ಮನ್ನು ನನ್ನ ದೂರವಾಣಿಯಲ್ಲಿ ಸಂಪರ್ಕಿಸಿ ಕೊಟ್ಟಾಗ ನಿಮಗೂ ವಿವರಿಸಿದ್ದೆ. ಆಗ ನೀವೇ ಸೂಚಿಸಿದಂತೆ ಶೇಕಡಾ xxxxxರ ರಿಯಾಯ್ತಿ ದರದ ಪತ್ರ ಮತ್ತು ಆ ಪ್ರಕಾರ ಹೆಚ್ಚುವರಿ ಸ್ವಲ್ಪ ಪುಸ್ತಕಗಳನ್ನು ಸೇರಿಸಿ ಲೆಕ್ಕ ಮುಗಿಸಿದ್ದಾಯ್ತು.

ಶಿಕ್ಷಕ ಮತ್ತು ಶಿಕ್ಷಣ ಎನ್ನುವುದು ಕೇವಲ ನಿಗದಿತ ಅವಧಿಯಲ್ಲಿ (ಪಿರಿಯಡ್), ನಾಲ್ಕು ಗೋಡೆಗಳ ನಡುವೆ ಕೊಡುವ ಭಾಷಣಕಾರ ಅಥವಾ ಭಾಷಣ ಅಲ್ಲ ಎನ್ನುವುದನ್ನು ನೆನಪಿಸಿಕೊಳ್ಳಿ. ಗ್ರಂಥಾಲಯದ ಪುಸ್ತಕಗಳು ಶಿಕ್ಷಕರಿಗೆ ಆಕರವಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ತಿಳುವಳಿಕೆಗೆ ಸಾಧನವಾಗಿ ಒದಗುವಂತಿರಬೇಕು. ಇವನ್ನು ಸಂಗ್ರಹಿಸುವ ಸಾಧನ ನಿಮ್ಮಲ್ಲಿ ಅಪರಿಮಿತವಾದರೆ ಯಾವುದೇ ಮಳಿಗೆಯ ಎಲ್ಲಾ ಪುಸ್ತಕಗಳೂ ಉಪಯುಕ್ತವೇ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಜ್ಞಾನಸಾಗರಕ್ಕೆ ಕಿರುಚೊಂಬು (ಕೆಲವು ಸಾವಿರ ರೂಪಾಯಿ ಮಾತ್ರ) ಹಿದಿದು ಹೋಗುವವರಿಗೆ ವಿವೇಚನೆಯೂ ಒಂದು ಸಾಧನವಾಗಬೇಕಿತ್ತು. ನಿಮ್ಮ ತಂಡದ ಮಹಿಳಾ ಉಪಾಧ್ಯಾಯರುಗಳಿಗೆ ತಾವು ಆರಿಸುವ ಪುಸ್ತಕಗಳ ಕುರಿತು ಸ್ಪಷ್ಟ ಆದ್ಯತೆಗಳು ಇತ್ತು. ಆದರೆ ತಂಡದ ನಾಯಕರಿಗದು ಇರಲಿಲ್ಲ. ಸನ್ನಿವೇಶಕ್ಕೆ ಅಪ್ರಸ್ತುತವಾದ ‘ಪ್ರಾತಿನಿಧ್ಯ’ ಎಂಬ ಮೌಲ್ಯಕ್ಕೆ ಅವರು ಒತ್ತುಕೊಟ್ಟಿದ್ದರು. ಉದಾಹರಣೆಗೆ ನನ್ನ ತಿಳುವಳಿಕೆಯಂತೆ ಶಬ್ದಮಣಿದರ್ಪಣ, ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ, ದಲಿತರು ಮತ್ತು ಚರಿತ್ರೆ, ಪಾಶ್ಚಾತ್ಯ ಕಾವ್ಯಮೀಮಾಂಸೆ ಮುಂತಾದ ಪುಸ್ತಕಗಳು ಸ್ನಾತಕ, ಸ್ನಾತಕೋತ್ತರ ಪದವಿ ಶಿಕ್ಷಣದ ಭಾಗಗಳಾಗಿ ಸರಿ. ಮತ್ತೆ ಒಂದೂ ಬಿಡದೆ ಗಿರೀಶ್ ಕಾರ್ನಾಡರ ನಾಟಕಗಳು, ಶೇಕ್ಸ್‌ಪಿಯರ್ ಅನುವಾದಗಳ ಬದಲು ಶಾಲೆಯ ಮಕ್ಕಳ ರಂಗಪ್ರಯೋಗಗಳಿಗೆ ಉಚಿತವಾದ ಎಷ್ಟೂ ನಾಟಕಗಳು, ತುಳು ನಾಟಕಗಳೂ ಇದ್ದವು. ಮಹಿಳಾ ಅಧ್ಯಾಪಕರು ಆರಿಸಿದ್ದ ಇತಿಹಾಸ ಪುಸ್ತಕಗಳು ನಿಜಕ್ಕೂ ಉಪಯುಕ್ತವಿದ್ದವು. ಕನ್ನಡ ವಿಜ್ಞಾನ ಪದವಿವರಣ ಕೋಶ, ವಿಶ್ವಕೋಶಗಳ ಮಹತ್ವವನ್ನು (ಮಹಿಳಾ ಉಪಾಧ್ಯಾಯಿನಿ ಅರಿತೇ ಆರಿಸಿಟ್ಟದ್ದನ್ನು) ಬಿಲ್ಲು ಮಾಡುವಾಗ ನಾನು ವಿವರಿಸಿ, ಬೆಲೆ ಕಡಮೆ ಇರುವುದನ್ನೂ ತೋರಿಸಿ, ಒತ್ತಾಯಿಸಿ ಸೇರಿಸಿ ಕೊಡಬೇಕಾಯ್ತು. ವೈದ್ಯರ ಅದಕ್ಷತೆ ಒಂದು ಜೀವದ ನಾಶದಲ್ಲಿ ಮುಗಿಯುತ್ತದೆ (ಆರಡಿ ಮೂರಡಿ ನೆಲದಡಿಯಲ್ಲಿ ಹುಗಿದುಹೋಗುತ್ತದೆ). ತಂತ್ರಜ್ಞನ ಸೋಲು ಒಂದು ಕಟ್ಟಡವೋ ಯಂತ್ರದ್ದೋ ವೈಫಲ್ಯದಲ್ಲಿ ಪರ್ಯವಸಾನಗೊಳ್ಳುತ್ತದೆ. ಆದರೆ ಶಿಕ್ಷಕನ ಅವನತಿ ತಲೆಮಾರುಗಳನ್ನೇ ಕಾಡುತ್ತದೆ ಎಂಬ ಲೋಕೋಕ್ತಿ ನೆನಪಿಸುವುದರೊಂದಿಗೆ ವಿರಮಿಸುತ್ತೇನೆ.
(ಪತ್ರ ಮುಗಿಯಿತು)

ಸಲಹೆಗಳು: ೧. ಪುಸ್ತಕಗಳಿಗೆ ಮುದ್ರಿತ ಬೆಲೆಯಿರುವುದರಿಂದ ಮೂರು ಕೊಟೇಶನ್ನುಗಳ ನಿಯಮವನ್ನು ತೆಗೆದು ಹಾಕಿ. ಈಗಿನ ಪುಸ್ತಕಗಳ ಬೆಲೆಯಲ್ಲಿ ಕನಿಷ್ಠ ಒಮ್ಮೆಗೆ ಐವತ್ತು ಅರವತ್ತು ಪುಸ್ತಕಗಳಾದರೂ ದಕ್ಕುವಷ್ಟು ಅನುದಾನವನ್ನು ಪರಿಷ್ಕರಿಸಿ. ಹೀಗೆ ಒದಗುವ ಘನ ಖರೀದಿಗೆ ಯಾವುದೇ ವ್ಯಾಪಾರಿ ರಿಯಾಯ್ತಿ ಕೊಡದಿರಲಾರ.
೨. ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗ (ಯೂಜೀಸಿ) ತನ್ನ ಅನುದಾನದಲ್ಲಿ ಕೊಳ್ಳುವ (ಕಾಲೇಜು ಗ್ರಂಥಾಲಯದ) ಪುಸ್ತಕಗಳಿಗೆಲ್ಲ ಕನಿಷ್ಠ ರಿಯಾಯ್ತಿ ೧೦% ಪಡೆಯುವುದನ್ನು ವಿದ್ಯಾಸಂಸ್ಥೆಗಳಿಗೆ ಕಡ್ಡಾಯ ಮಾಡಿದೆ. ಕೇರಳ (ಖಾಸಗಿ) ಗ್ರಂಥಾಲಯ ಅನುದಾನ ನಿಯಮದಲ್ಲಿ ಕನ್ನಡ ಪುಸ್ತಕಗಳಿಗೆ ಕನಿಷ್ಠ ೧೫% ರಿಯಾಯಿತಿ ಪಡೆಯುವುದನ್ನು ಕಡ್ಡಾಯ ಮಾಡಿದೆ. ಮುದ್ರಿತ ಬೆಲೆ ನಿಯಂತ್ರಣದ ವ್ಯವಸ್ಥೆ ಮಾಡಿಕೊಂಡು ನೀವೂ ಕನಿಷ್ಠ ರಿಯಾಯ್ತಿ ದರವನ್ನು ಕಡ್ಡಾಯಗೊಳಿಸುವುದು ಉತ್ತಮ.
೩. ಗ್ರಂಥಾಲಯ, ಪ್ರಯೋಗಶಾಲೆ, ಕ್ರೀಡಾಸಾಮಾಗ್ರಿಗಳೆಲ್ಲದರ ಖರೀದಿಗೆ ವರ್ಷಕ್ಕೊಮ್ಮೆ ಸಮೀಪದ ನಗರಕ್ಕೆ ಹೋಗಿಬರಲು ವಾಹನ ವ್ಯವಸ್ಥೆಯ ವೆಚ್ಚವನ್ನೂ ಅನುದಾನದಲ್ಲಿ ಸೇರಿಸಬೇಕು. ಇದು ವಾಸ್ತವಿಕ ನೆಲೆಯಲ್ಲಿ ಶಾಲೆಯಿಂದ ಶಾಲೆಗೆ (ದೂರವನ್ನು ಹೊಂದಿಕೊಂಡು) ಹೆಚ್ಚುಕಡಿಮೆಯಾಗಬೇಕು. (ನಗರದಲ್ಲೇ ಇರುವ ಶಾಲೆಗಳಿಗೂ ಐವತ್ತು ಕಿಮೀ ದೂರದ ಹಳ್ಳಿ ಮೂಲೆಯವರಿಗೂ ಒಂದೇ ಆಗಬಾರದು).
೪. ಪಠ್ಯೇತರ ಓದುವಣಿಗೆಗೆ ಶಾಲಾವಧಿಯಲ್ಲಿ ಅವಕಾಶ ಒದಗಿಸುವುದು, ಮನೆಗೆ ಪುಸ್ತಕ ಎರವಲು ಕೊಡುವ ವ್ಯವಸ್ಥೆ ಸರಿಪಡಿಸುವುದು ಮತ್ತು  ಅಂಕಗಣನೆಯಲ್ಲಿ ಇತರ ಓದಿನ ಫಲಿತಾಂಶ ಕಾಣಿಸುವುದು ಅವಶ್ಯ ಆಗಬೇಕು. ಈಗ ಶಾಲೆಗಳಲ್ಲಿರುವ ಪಠ್ಯೇತರ ‘ಪ್ರಾಜೆಕ್ಟು’ಗಳ ಹಾಗೆ ‘ಪುಸ್ತಕದ ಓದು’ ಹಣ ಎಸೆದು ಮಾರ್ಕು ಗಿಟ್ಟಿಸುವ ಆವುಟವಾಗದ ಎಚ್ಚರ ವಹಿಸಬೇಕು.
೫. ಅಧ್ಯಾಪಕರುಗಳಿಗೆಲ್ಲ ಬೋಧನೇತರ ಶಾಲಾ ವ್ಯವಾಹಾರಜ್ಞಾನವನ್ನು ರೂಢಿಸಬೇಕು. ಆಗ ಈ ಕನಿಷ್ಠ ದರಪಟ್ಟಿ (ಕೊಟೇಶನ್ನು), ತುಲನಾತ್ಮಕ ನಿಷ್ಕರ್ಷೆ (ಕಂಪ್ಯಾರಟೀವ್ ಸ್ಟೇಟ್‌ಮೆಂಟ್) ಇತ್ಯಾದಿ ಆವಶ್ಯಕ ತಂತ್ರಗಳು ಅರ್ಥಹೀನ ಮಂತ್ರಗಳಾಗಿ ಉಳಿಯುವುದಿಲ್ಲ.

ಈ ವಿಚಾರದಲ್ಲಿ ಜನಜಾಗೃತಿಯನ್ನು ಹೆಚ್ಚಿಸುವ ಸಲುವಾಗಿ ಈ ಪತ್ರವನ್ನು ನನ್ನ ಬ್ಲಾಗ್: www.athree.wordpress.comನಲ್ಲೂ
ಪ್ರಕಟಿಸಲಿದ್ದೇನೆ, ಪತ್ರಿಕೆಗಳಿಗೂ ಮುಕ್ತಗೊಳಿಸುತ್ತಿದ್ದೇನೆ. ನಿಮ್ಮ ಪ್ರತ್ಯುತ್ತರ, ಅದಕ್ಕೂ ಮಿಗಿಲಾಗಿ ಕಾರ್ಯರಂಗದಲ್ಲಿ ಅನುಷ್ಠಾನದ ಛಾಯೆ ಕಾಣಿಸಿದರೂ ಕೃತಜ್ಞತಾಪೂರ್ವಕವಾಗಿ ಅಲ್ಲೆಲ್ಲ ದಾಖಲಿಸುವ ಭರವಸೆ ಕೊಡುತ್ತೇನೆ.

ಇಂತು ವಿಶ್ವಾಸಿ
ಜಿ.ಎನ್.ಅಶೋಕವರ್ಧನ
ಮಾಲಿಕ
ಅತ್ರಿ ಬುಕ್ ಸೆಂಟರ್, ೪ ಶರಾವತಿ ಕಟ್ಟಡ, ಬಲ್ಮಠ, ಮಂಗಳೂರು ೫೭೫೦೦೧ ದೂರವಾಣಿ ೨೪೨೫೧೬೧ ತಾ: ೮-೬-೨೦೦೯

20 comments:

 1. ಎಲ್ಲಕ್ಕಿಂತಲೂ ಮುಖ್ಯವಾಗಿ ನೀವು ಸೂಚಿಸಿದ
  ಕ್ರಮಾಂಕ ಮೂರರಂತೆ ಶಾಲೆ ಬಗೆಗಿನ ಇತರ ಓಡಾಟಕ್ಕೆ ಹಣ ಸರಕಾರ ಒದಗಿಸಬೇಕು. ಇಲ್ಲವಾದರೆ ಶಿಕ್ಷಕರು ರಂಗೋಲಿ ಅಡಿಯಲ್ಲಿ ತೂರುವುದು ಹೆಚ್ಚು ಅನಿವಾರ್ಯವಾಗುತ್ತದೆ.

  ಈ ವರ್ಷವೂ ಕಂಗ್ಲೀಷ್ ಒತ್ತಡದಲ್ಲಿ ಮಕ್ಕಳು ಕನ್ನಡ ಮತ್ತು ಇಂಗ್ಲೀಷ್ ಎರಡೂ ಮಾದ್ಯಮಗಳ ಪುಸ್ತಕ ಖರೀದಿಸುದು ಅನಿವಾರ್ಯ ಆಗುವ ಲಕ್ಷಣ ಕಾಣುತ್ತದೆ. ಇದೊಂದು ಅನಾರೋಗ್ಯಕರವಾದ ಮಕ್ಕಳ ಮೇಲಿರುವ ಒತ್ತಡ.

  ReplyDelete
 2. Jai Ho! Our Teachers are GENIUS! No comments. Pity the publisher and seller, that's all.
  Bedre

  ReplyDelete
 3. S Raghavendra Bhatta07 June, 2009 15:02

  Having worked in a central govt., institute whose proclaimed method of library purchase was guided by the saying " sky is the limit", let me narrate an episode which may be more relevant.
  Our organization had an American consultant in '60's who called a meeting of various HOD's.
  He asked them " If I give you 1 lakh each what are the items you are going to have? List them. You have 15 minutes."

  All of them had drawn their individual lists.
  Then he said " Alrighrt, suppose I give you 50000 rupees each draw individual list of essential items you need."
  You can imagine what they did? Just cut it half !!
  After 2 more such scaling down he made them realize the difference between the need and the hazy greed !!
  If the teacher is aware of the shoestring budget he/she has to adhere to, then it will be a saner choice. Otherwise, as in the case of according classical language status conferred on Kannada ,any book like " Jalashilpi halli shakuna" in thousands will land in our state library !! Only qualification that is observed is they are all bound volumes !!
  God save the reader by necessity !!
  S R Bhatta / 3 P M / 07 June 2009

  ReplyDelete
 4. ನರೇಂದ್ರ08 June, 2009 10:25

  ಒಮ್ಮೆ ನಮ್ಮ ಉದ್ಯೋಗಕ್ಕೆ ಅಗತ್ಯವಾದ ಶೈಕ್ಷಣಿಕ ಅರ್ಹತೆ ಪಡೆದ ನಂತರ ಮತ್ತೆ ಅದರತ್ತ ತಿರುಗಿ ನೋಡುವುದಾಗಲೀ, ಅಪ್‌ಡೇಟ್ ಮಾಡಿಕೊಳ್ಳುವುದಾಗಲೀ ನಮ್ಮಲ್ಲಿ ಇಲ್ಲ. ಹೀಗಾಗಿಯೇ ಸಿಎ, ಮೆಡಿಕಲ್ ಮುಂತಾದ ವೃತ್ತಿಪರರ ರಾಷ್ಟ್ರೀಯ ಸಂಘಟನೆ/ಸಂಸ್ಥೆಗಳು ನಿರಂತರ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದು ವೃತ್ತಿಯಲ್ಲಿ ತೊಡಗಿರುವವರಿಗೆ ಇಂಥ ಉದ್ದೇಶದ ಸೆಮಿನಾರು/ತರಗತಿಗಳ ಕನಿಷ್ಠ ಹಾಜರಾತಿಯನ್ನು ಕೂಡ ನಿಗದಿಪಡಿಸಿವೆ.

  ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕೂಡ ಪ್ರತಿ ಬೇಸಗೆ ರಜೆ, ದಸರಾ ರಜೆಗಳಲ್ಲಿ ತರಬೇತಿ ನಡೆಯುತ್ತಿದೆ, ಕಂಪ್ಯೂಟರ್ ಇತ್ಯಾದಿ ಕುರಿತಂತೆ. ಆದರೆ, ನನಗೆ ಗೊತ್ತಿರುವಂತೆ ಎಷ್ಟೋ ಶಾಲೆಗಳಲ್ಲಿ ಇರುವ ಟೀವಿ ಸೆಟ್ಟನ್ನು ಕೂಡ ನಿಗದಿತವಾಗಿ ಬಳಸುತ್ತಲೇ ಇಲ್ಲ. ಕೆಲವೊಂದು ಕಡೆ ಅದು ಮಧ್ಯಾಹ್ನ ಊಟದ ಬಿಡುವಿನಲ್ಲಿ ಧಾರಾವಾಹಿ ನೋಡಲು ಬಳಕೆಯಾದರೆ ಹೆಚ್ಚಿನ ಕಡೆ ಅದಕ್ಕೂ ಪಾಪ ಮುಖ್ಯೋಪಾಧ್ಯಾಯರ ಅನುಮತಿ ಇಲ್ಲ! ತರಬೇತಿ ನೀಡಿದರೂ ಸರಕಾರ ಕಂಪ್ಯೂಟರ್ ಒದಗಿಸಿಲ್ಲ. ಕಂಪ್ಯೂಟರ್ ಇದ್ದರೆ ಎಲ್.ಸಿ.ಡಿ ಪ್ರೊಜೆಕ್ಟರ್ ಇಲ್ಲ. ಮಕ್ಕಳಿಗೆ ಇವರು ಸಾಮೂಹಿಕವಾಗಿ ಕಂಪ್ಯೂಟರ್ ಬಳಸುವ ಕಲೆಯನ್ನು ಕಲಿಸುವುದಾಗಲೀ, ಸೀಮಿತ ಅವಧಿಯಲ್ಲಿ ಅದರ ಉಪಯೋಗ ಎಲ್ಲರಿಗೂ ದಕ್ಕುವಂತೆ ಮಾಡುವುದಾಗಲೀ ಸಾಧ್ಯವಾಗುತ್ತಿಲ್ಲ. ಕೆಲವೊಂದು ಶಾಲೆಗಳು ಸ್ಥಳೀಯರ ಆರ್ಥಿಕ ಸಹಾಯವನ್ನು ಪಡೆದು ಕಂಪ್ಯೂಟರ್ ಪಡೆದಿದ್ದರೂ ಒಬ್ಬಿಬ್ಬ ಶಿಕ್ಷಕರನ್ನು ಹೊರತು ಪಡಿಸಿದರೆ ಉಳಿದವರಿಗೆ ಅದರಲ್ಲಿ ಆಸಕ್ತಿಯೂ ಇಲ್ಲ, ತರಬೇತಿಯೂ ಇಲ್ಲ. ಅವರ ವರ್ಗಾವರ್ಗಿಯಲ್ಲಿ ಆ ಕನಿಷ್ಠ ಬಳಕೆಯೂ ನಿಲ್ಲುತ್ತದೆ. ಇತರ ಎಷ್ಟೋ ಪರಿಕರಗಳ ಸ್ಥಿತಿಯೂ ಇದೇ.

  ಇನ್ನು ನಮ್ಮ ಶಾಲಾ ಶಿಕ್ಷಕರ ಶಿಕ್ಷಣೇತರ ಓದಿನ ಹವ್ಯಾಸ, ಅಭಿರುಚಿ, ಪುಸ್ತಕಗಳ ಕುರಿತ ಆಸಕ್ತಿ-ಜ್ಞಾನ ಬಲ್ಲವರೇ ಬಲ್ಲರು. ಮಾರುಕಟ್ಟೆಯಲ್ಲಿ ಸಿಗುತ್ತಿರುವ ಶೈಕ್ಷಣಿಕ ವಿಚಾರಗಳ ಕಂಪ್ಯೂಟರ್ ಸಿಡಿಗಳ ವಿಚಾರ ಕೂಡಾ ನಮ್ಮ ಶಿಕ್ಷಕರಿಗೆ ಗೊತ್ತಿಲ್ಲ. ಡಿಸ್ಕವರಿ, ನ್ಯಾಶನಲ್ ಜಿಯಾಗ್ರಫಿ ಮುಂತಾದ ವೆಬ್ ಸೈಟ್‌ಗಳ ಬಗ್ಗೆ, ಅವರು ಹೊರತಂದಿರುವ ಪುಸ್ತಕಗಳು, ಮ್ಯಾಗಝೀನ್, ಸಿಡಿಗಳ ಬಗ್ಗೆ ಅರಿವಿಲ್ಲ. ಇನ್ನು ಇವರಿಗೆ ಗೂಗಲ್‌ನಂಥ ಸರ್ಚ್ ಸೈಟ್ ಬಗ್ಗೆ ಹೇಳಿದರೆ ಅದು ಎಲ್ಲಿ ಸಿಗುತ್ತೆ ಸರ್, ಅತ್ರಿಯಲ್ಲಿ ಸಿಗಬಹುದಾ ಎನ್ನುತ್ತಾರೆ. ಇವನ್ನೆಲ್ಲ ಗೊತ್ತು ಮಾಡಿಕೊಳ್ಳುವುದಕ್ಕೆ ಅಗತ್ಯವಾದ ಸಮಯ-ಅವಕಾಶ-ಪರಿಸರ ಕೂಡಾ ಅವರಿಗಿಲ್ಲ. ಇದೊಂದು ದುರಂತ.

  ಎಲ್ಲ ಸರಿಯಿದ್ದರೂ ಶಾಲೆಗಳಲ್ಲಿ ಇಂಥ ಚಟುವಟಿಕೆಗಳಿಗೆ ನಿಗದಿತ ಅವಧಿ ಮೀಸಲಿಡುವ ಕ್ರಮವಿಲ್ಲದೆ ಸಮಯಾವಕಾಶದ ಕೊರತೆ ಬೇರೆ. ಹೆಚ್ಚಿನ ಶಾಲೆಗಳಲ್ಲಿ ಏನಾದರೂ ಹೊಸತನ್ನು ಮಾಡುವುದಕ್ಕೆ ಪ್ರಯತ್ನಿಸಿದರೇ ಇಲ್ಲದ ಪ್ರತಿರೋಧಗಳೆಲ್ಲ ತೊಡಗುತ್ತವೆ! ಇವರೆಲ್ಲ ಪ್ರಾಜೆಕ್ಟ್‌ಗಾಗಿ ಏನೇನೋ ಹುಡುಕಿಕೊಂಡು ಅಂಗಡಿ ಅಂಗಡಿ ಅಲೆಯುವಾಗ ಇವರ ಅಜ್ಞಾನ ಪ್ರದರ್ಶನವಾಗುವುದಲ್ಲದೆ ಇನ್ನೇನೂ ಇಲ್ಲ, ಮತ್ತಿದು ನಿಮಗೂ ಚೆನ್ನಾಗಿ ಗೊತ್ತು. (ಅಡಿಗ ಪ್ರಕರಣ ಗಮನಿಸಿದರೆ ಸಾಕು).

  ಇರುವ ಬಜೆಟನ್ನು ಕೂಡ ಸಮರ್ಥವಾಗಿ ಬಳಸಿಕೊಳ್ಳದ, ಕಲಿಸುವ - ಕಲಿಯುವ ಅಭಿರುಚಿ ಇಲ್ಲದ, ಬರೇ ಸಂಬಳ ಮತ್ತು ಸರಕಾರೀ ನೌಕರಿಗಾಗಿ ಶಿಕ್ಷಕರಾದ ಬಹುಪಾಲು ಶಿಕ್ಷಕರಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವುದು ತಪ್ಪಾಗುತ್ತದೇನೊ!

  ಶಿಕ್ಷಕರಿಗೆ ನಿಗದಿತ ಅವಧಿಗೊಮ್ಮೆ ಸಾಮಾನ್ಯ ಜ್ಞಾನ, ಭಾಷೆ, ಸಾಹಿತ್ಯ, ವಿಜ್ಞಾನ, ಚರಿತ್ರೆ ಎಲ್ಲದರ ಕುರಿತು ಪರೀಕ್ಷೆ ನಡೆಸಿ ಅವರವರ ನಿರ್ವಹಣೆಗೆ ತಕ್ಕಂತೆ ಪ್ರೋತ್ಸಾಹ ನೀಡುವ ಒಂದು ಕ್ರಮವನ್ನು ಕೂಡಾ ಸರಕಾರ ಯೋಚಿಸಬಹುದೇನೋ.

  ReplyDelete
 5. Government should act quickly to rectify such problems in schools and public libraries, Regards- Bilimale

  ReplyDelete
 6. ಮಾನ್ಯರೇ,

  ನಿಮ್ಮ ಪತ್ರವು ಸರಕಾರೀ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಇದು ಕೇವಲ ಶಿಕ್ಷಣ ಇಲಾಖೆಯೊಂದರ ಕಥೆ ಮಾತ್ರವಲ್ಲ, ಸಾಧಾರಣ ಎಲ್ಲ ಸರಕಾರೀ ವ್ಯವಸ್ಥೆಯೂ ಇದೇ ರೀತಿಯಿಂದಲೇ ನಡೆಯುತ್ತಿದೆ/ನಡೆಯುತ್ತಿರಬಹುದು (ನನಗೆ ಕೇವಲ ೨/೩ ಇಲಾಖೆಗಳಲ್ಲಿ ವ್ಯವಹರಿಸಿ ಅನುಭವ). ಈ ನಿಯಮಗಳ ಹಿಂದಿರುವ ಉದ್ದೇಶವೇನೋ ಸರಿಯೇ ಆದರೂ, ಈ ವ್ಯವಹಾರಿಕ ಯುಗದಲ್ಲಿ ನಿಯಮಗಳೆಲ್ಲವನ್ನೂ ಕೆಲವೊಮ್ಮೆ (ಅಥವಾ ಎಲ್ಲಾ ಕಡೆಯೂ), ನೋಡುವವರಿಗೆ ಪಾರದರ್ಶಕ ವ್ಯವಹಾರವೆಂದು ಕಾಣಲು, ನಿಯಮ ರೂಪಿಸಿದವರೇ/ಅನುಷ್ಠಾನಗೊಳಿಸುವವರೇ ಅದನ್ನು ಗಾಳಿಗೆ ತೂರುವ ಕ್ರಮವನ್ನು ನಮಗೆ ಭೋಧಿಸುತ್ತಾರೆಂದರೆ ಆಶ್ಚರ್ಯವೇನೂ ಇಲ್ಲ. ನಿಮ್ಮ ಇನ್ನೂ ಇಂತಹ ಸ್ವಾನುಭವಗಳು ಬ್ಲಾಗಿಗೇರಲ್ಪಡಲಿ ಮತ್ತು ಸಂಬಂಧಪಟ್ಟವರ ಕಣ್ತೆರೆಸಲಿ ಎಂದು ಹಾರೈಸುತ್ತೇನೆ.

  ಇಂತು ನಿಮ್ಮವನೇ,
  ರಾಧೇಶ್ಯಾಮ

  ReplyDelete
 7. ಅಶೋಕವರ್ಧನ08 June, 2009 14:01

  ಪ್ರೊ| ರಾಘವೇಂದ್ರ ಭಟ್ಟರ ಕಥೆ ಕೊಡಲಿ ಕಳೆದುಕೊಂಡ ಸೌದೆಯವನ ಕಥೆ ನೆನಪಿಗೆ ತಂದಿತು. ದೇವರಲ್ಲಿ ಚಿನ್ನ ಬೆಳ್ಳಿಯದನ್ನು ನಿರಾಕರಿಸಿ ಕಬ್ಬಿಣದ್ದನ್ನು ಒಪ್ಪಿಕೊಂಡ ಆ ದೀನನ ಪ್ರಾಮಾಣಿಕತೆ, ವಿವೇಚನೆಯೂ ನಮ್ಮ ಅಧಿಕಾರ ಸೊಕ್ಕಿದ ಮೇಷ್ಟ್ರುಗಳಿಗಿಲ್ಲದೇ ಹೋಗಿದೆಯಲ್ಲಾ ಎನ್ನುವುದು ಈ ಮೇಷ್ಟ್ರ ಮಗನ (ನನ್ನ) ದುಃಖ.

  ReplyDelete
 8. ಎಚ್. ಸುಂದರ ರಾವ್, ಬಿ.ಸಿ.ರೋಡು

  ಪ್ರಿಯ ಅಶೋಕ್,
  ನೀವು ಈ ಪತ್ರ ಬರೆದದ್ದು ಒಳ್ಳೆಯದಾಯಿತು. ಪ್ರಜಾಪ್ರಭುತ್ವ ಓಟು ಕೊಡುವಷ್ಟಕ್ಕೆ ಮುಗಿಯುವುದಿಲ್ಲ. ಅದು ನಿಜವಾಗಿ ಇರುವುದು ಇಂಥಲ್ಲಿ ಎಂದು ತಿಳಿದವನು ನಾನು.
  ೧. ಪತ್ರ ದೀರ್ಘವಾಯಿತು. ಮಂತ್ರಿಗಳಿಗೆ ಓದುವಷ್ಟು ಪುರುಸೊತ್ತಿರುವುದಿಲ್ಲ. ಆದ್ದರಿಂದ ಸಮಸ್ಯೆಯ ವಿವರಣೆ ಕಡಿಮೆ ಮಾಡಬಹುದು.
  ೨. ಪರಿಹಾರ ಸೂಚಿಸಿದ್ದೀರಿ. ಇದು ಸರಿಯಾದ ಕ್ರಮ.
  ೩. ಹೆಚ್ಚಿನ ಸಮಸ್ಯೆಗಳು ಆಧಿಕಾರಿಗಳ ಮಟ್ಟದಲ್ಲೇ ಪರಿಹಾರವಾಗುವಂಥವು. ಹಾಗಾಗಿ ಮೊದಲು ಆಧಿಕಾರಿಗೆ ಬರೆದು, ಉತ್ತರ ಬರದಿದ್ದರೆ ಮೇಲಿನವರಿಗೆ ಬರೆಯುವುದಾಗಿ ಎಚ್ಚರಿಸಿ, ನಂತರ ಮೇಲಿನವರಿಗೆ ಬರೆಯುವುದು ಒಳ್ಳೆಯದು. (ಸಾರಿ ಕೊಂದರೆ ದೋಷವಿಲ್ಲ!). ಆನೇಕ ಇಲಾಖೆಗಳಲ್ಲಿ ಸಾರ್ವಜನಿಕರ ದೂರುಗಳಿಗಾಗಿ ಪ್ರತ್ಯೇಕ ವಿಭಾಗಗಳೇ ಇವೆ.
  ೪. ನನ್ನ ಮಟ್ಟಿಗೆ ಹೇಳುವುದಾದರೆ, ಸಮಸ್ಯೆಯನ್ನು ಪತ್ರಿಕೆಗಳಲ್ಲಿ ಪ್ರಕಟಿಸುವುದು ಅದನ್ನು ಗಂಟು ಮಾಡಿಹಾಕುವ ಶ್ರೇಷ್ಠ ವಿಧಾನ. ತೀರಾ ಅನಿವಾರ್ಯವಲ್ಲದಿದ್ದರೆ ಸಮಸ್ಯೆಯನ್ನು ಪತ್ರಿಕೆಗಳಿಗೆ ಒಯ್ಯಬಾರದು. ಪ್ರತಿದಿನವೂ ಹೊಸ ಸುದ್ದಿ ಪ್ರಕಟಿಸುವುದು ಪತ್ರಿಕೆಗಳು ಬದುಕಲು ಅನಿವಾರ್ಯ. ನಾವು ಸಮಸ್ಯೆಯ ಪರಿಹಾರಕ್ಕೆ ಗಮನ ಕೊಡಬೇಕಾಗುತ್ತದೆ. ಒಂದು ಸಮಸ್ಯೆ ಪರಿಹಾರ ಕಂಡ ಮೇಲೆ ಪ್ರಕಟಿಸುವುದು ಸರಿಯಾಗಬಹುದು.
  ಬ್ಲಾಗಿನಲ್ಲಿ ಪ್ರಕಟಿಸುವುದು ಸಹ ಅಗತ್ಯವೇ ಎಂದು ಯೋಚಿಸಿ ನಿರ್ಧರಿಸಬಹುದು.
  ೫. ಇಂಥ ಪತ್ರಶರಗಳು ಪುಂಖಾನುಪುಂಖವಾಗಿ ನಿಮ್ಮ ಬಿಲ್ಲಿನಿಂದ ಚಿಮ್ಮಲಿ ಎಂದು ಹಾರೈಸುತ್ತೇನೆ.

  (ಕೊಟೇಶನ್ನಿನ ಒಂದು ಸಣ್ಣ ಕತೆ. ನಾನು ಮುದ್ರಕ. ನಮ್ಮಲ್ಲೂ ಕೊಟೇಶನ್ ಕೇಳುತ್ತಾರೆ. ವ್ಯಾಪಾರಿಯ ಪಾಲಿಗೆ ಕೊಟೇಶನ್ ಎನ್ನುವುದು "ನೀವು ನೀವು ತಲೆ ಹೊಡೆದುಕೊಂಡು ಸಾಯಿರಿ, ನಾವು ತಮಾಷೆ ನೋಡುತ್ತೇವೆ" ಎನ್ನುವುದೇ. ನನ್ನೊಬ್ಬ ಬುದ್ಧಿವಂತ ಸಹೋದ್ಯೋಗಿ ಮಿತ್ರರು ಇದಕ್ಕೊಂದು ಮದ್ದು ಅರೆದರು: ಸ್ಥಳೀಯ ಸರಕಾರಿ ಕಚೇರಿಯೊಂದು ಕೊಟೇಶನ್ ಕರೆದಿತ್ತು. ನನ್ನ ಮಿತ್ರರು ಕೊಟೇಶನ್ ಕೇಳಿ ಯಾವ ಯಾವ ಪ್ರೆಸ್ಸುಗಳಿಗೆ ಪತ್ರ ಹೋಗಿದೆ ಎಂದು ತಿಳಿದುಕೊಂಡರು. ಆ ಎಲ್ಲರನ್ನೂ ಫೋನಿನಲ್ಲಿ ಸಂಪರ್ಕಿಸಿದರು. ಸ್ವಲ್ಪ ಆಚೆ ಈಚೆ ಸಂಧಾನ ನಡೆಸಿದರು. ಹತ್ತು ರೂಪಾಯಿ ಕೆಲಸಕ್ಕೆ ಒಂದು ಪ್ರೆಸ್ಸಿನವರು ಇಪ್ಪತ್ತು ರೂ. ಕೋಟ್ ಮಾಡುವುದೆಂದೂ, ಉಳಿದವರೆಲ್ಲ ಕಡಿಮೆ ಕೋಟ್ ಮಾಡಿ, ಇಪ್ಪತ್ತರಲ್ಲಿ ಉಳಿದ ಹತ್ತನ್ನು ತಮ್ಮೊಳಗೆ ಹಂಚಿಕೊಳ್ಳುವುದೆಂದೂ ಒಪ್ಪಂದ ಮಾಡಿಕೊಂಡರು! ಹೀಗೆ ತಲೆ ಒಡೆಯಲು ಹೊರಟವರ ತಲೆಯನ್ನೇ ಒಡೆದರು!)
  ೯-೬-೨೦೦೯

  ReplyDelete
 9. ajakkala girisha09 June, 2009 17:48

  priya Ashokavardhanare,
  sarakari yanthrave haage.hegendare revenue stamp sikkada kaalaavadhiyondiddaagaloo sambalada batavaade pusthakakke yaake antisalillavendu audit aakshepavaaguthale ithu.
  bhrashtachara kadimeyagade sarakaarakke noukarara mele nambike barodilla.nambike idade brashtachaara kadime agollaveno annisuthe.
  mathe commission billindaachege needolla antha heli vyapara kalakollalu vyapaarigaloo
  thayaarillavalla.nimmanthe vyapaara kalakondaroo yaaru hegiddaroo naanu heege
  antha heluva vyaparigalu eshtiddaare?thotte
  kodolla antha heli neevu eshtu vyapaara kalakondirabahudu antha naanu nimma angadige bandaagella chinthe[?] maadoduntu.
  sarakaari kharidi commissionnalli vyaparigala spardhamanobhavada kodugeyoo doddadu.
  neevu needida salahegalu yogyavaagive.
  nanna englikannadava sahisiddakke thanks.
  ithi, Girisha.

  ReplyDelete
 10. ಅಶೋಕವರ್ಧನ09 June, 2009 22:10

  ಪ್ರಿಯ ನರೇಂದ್ರಾ
  ನೀವು ಹೇಳಿದ ಮಾತನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ‘ವೃತ್ತಿ ಭದ್ರತೆ’ ಎನ್ನುವ ಕಲ್ಪನೆಯನ್ನೇ ಇಂದು ಕೈಬಿಡಬೇಕು. ಮುಖ್ಯ ಹುದ್ದೆಗೊಂದು ಸಂಬಳ, ಸವಲತ್ತು ನಡೆಯುತ್ತಿದ್ದಂತೆ ಅದರ ಉಪವೃತ್ತಿಗಳೇ ಆದ ಮೌಲ್ಯಮಾಪನ, ಪಠ್ಯೇತರ ಚಟುವಟಿಕೆಗಳನ್ನು ನಡೆದುವುದಿತ್ಯಾದಿ ಹೆಚ್ಚಿನ ಆದಾಯ ತರತೊಡಗಿದ್ದು ಬಹುಶಃ ಅಧ್ಯಯನ, ಗ್ರಂಥ ಸಂಗ್ರಹವೇ ಮುಂತಾದ ಕೆಲಸಗಳನ್ನೂ ಕೆಟ್ಟದಾಗಿ ಪ್ರಭಾವಿಸಿರಬೇಕು. ಕಳ್ಳನನ್ನು ಹಿಡಿದದ್ದಕ್ಕೆ ಪೊಲಿಸರಿಗೆ ಇನಾಮು ಕೊಟ್ಟಂತೆ, ನಗದು ಸಹಿತ ಪ್ರಶಸ್ತಿ ಗೆದ್ದು ಬಂದ ಕ್ರೀಡಾಳಿಗೆ ಸರಕಾರ ಜಹಗೀರು ಬರೆದುಕೊಟ್ಟಂತೆ ಪುಸ್ತಕ ಆರಿಸಿದ್ದಕ್ಕಿಷ್ಟು, ಓದಿದ್ದಕ್ಕಿಷ್ಟು ಮತ್ತೆ ನಾಳೆ ಅದನ್ನು ತರಗತಿಯಲ್ಲಿ ಬಳಸಿದ್ದಕ್ಕಿಷ್ಟು ರುಸುಮು ತಯಾರಾದರೆ ನಾಳಿನ ಗುರುಬ್ರಹ್ಮರು ಪ್ರಸನ್ನರಾದಾರೋ ಏನೋ!

  ReplyDelete
 11. ಡಿ. ಎಸ್. ನಾಗಭೂಷಣ09 June, 2009 22:17

  ಪ್ರಿಯ ಅಶೋಕವರ್ಧನ,
  ನಿಮ್ಮ ಉತ್ಸಾಹ ಮತ್ತು ಬದ್ಧತೆ ಕಂಡು ಮತ್ತೆ ಸಂತೋಷವಾಯಿತು.ಶ್ರೀ ಕಾಗೇರಿ ಈಗಿನ ಸಂಪುಟದಲ್ಲಿ ಬದ್ಧತೆ ಮತ್ತು ಪ್ರಾಮಾಣಿಕತೆ ಇರುವ ಏಕೈಕ ಸಚಿವರಂತೆ ಕಾಣುತ್ತಾರೆ. ಹಾಗಾಗಿ ನಿಮಗೆ ಜಯ ಸಿಕ್ಕರೂ ಸಿಗಬಹುದು. ನಿಮಗೆ ಜಯವಾಗಲಿ!
  -ಡಿಎಸ್ಸೆನ್

  ReplyDelete
 12. ಪ್ರೊ| ಸಿ.ಎನ್. ರಾಮಚಂದ್ರನ್10 June, 2009 07:34

  priya ashOkavardhan avarige:
  namaskaara.
  I have gone through your blog and have read your experience with teachers buying books for schools and colleges, the amusing comments on Aravind Adiga, and responses to your letter from others including Bilimale. Your blog is really amusing, new and instrctive. I shall certainly make it a habit to visit your blog, at least once in a week.
  prItipUrvaka vaMdanegaLu. matte bareyuttEne.
  vandanegaLu,
  nimma,
  raamachandran

  ReplyDelete
 13. ಅಶೋಕವರ್ಧನ13 June, 2009 07:45

  ಪ್ರಿಯ ಕಲ್ಕೂರರ ಅಪಾರ ಕಾಳಜಿಗೆ ಅನಂತ ವಂದನೆಗಳು.
  ಹೌದು, ನನ್ನ ತಂದೆಯೂ ಕ್ರಿಶ್ಚಿಯನ್ ಕಾಲೇಜಿನ ಉತ್ಪನ್ನ.
  ಅಶೋಕವರ್ಧನ

  ReplyDelete
 14. ಚಂದ್ರಶೇಖರ ಕಲ್ಕೂರ15 June, 2009 07:33

  Gaddehithluravarige, Vandematharam.Namaskara.
  One of my paternal uncles Late Sr. K.Vasudeva Kalkura had a fancy to write to the great people, including the President and Prime Minister of the country and the Chief Minister of the state. He was getting res poses from the P.As/P.Sa. not only acknowledging the receipt, but 'forwarded to so so officer for necessary action with a direction to report compliance within ....days.'
  Those were the days of Prasad, Nehru and Rajaji. Gandhiji lived in them. Mohandas Karamchand Gandhi became "Mahthma" only for his talent to respond to any subject that came to his notice. You are a book seller. No other individual in the world has attracted more attention from the writers and scholars, than Gandhi. Many Nobel Laureates acknowledged their debt to Gandhi. He was replying to every communication. If it was not possible for him, his secretaries Mahadeva Desai and Pyarelal were replying. If it exceeded their stamina Sarojini Naidu and Rajkumari Amrut Kaur were assisting them. One night on a cold winter in London it is said that he had addressed about 351 letters before going to bed at 2.00 a.m. and again he was ready for his morning prayer by 4.00.a.m. Gandhiji's bitter critic Gurudeve Tagore addressed him as "Mahathma".
  Sivarama karantha publicly acknowledged that he cultivated habit from gandhiji. Late Gaddihithlu Thimmappayyanavara Narayana Raogaru was another person who was punctual in 'post card culture'. The Hindu, Chennai returns all the unpublished articles. However Letters are not returned. Press is only a blaming agency. It is no more a transparent reflection of the society. It has no time for introspection.
  Jai Hind. Bhavadeeya.
  K.C.Kalkura, Kurnool

  ReplyDelete
 15. ಡಿ.ಕೆ. ಶ್ಯಾಮಸುಂದರ ರಾವ್20 June, 2009 14:01

  ಪ್ರಿಯ ಶ್ರೀ ಅಶೋಕವರ್ಧನರಿಗೆ ನಮಸ್ಕಾರ

  ಸಾರ್, ಖಂಡಿತವಾದಿ ಲೋಕವಿರೋಧಿ - ಗಾದೆ ಗೊತ್ತಲ್ಲ. ಇದು ನಿಮ್ಮನ್ನೇ ನೋಡಿ ಹುಟ್ಟಿದಂತಿದೆ. ಒಂದು ವಹಿವಾಟಿಗೆ ಸಂಬಂಧಿಸಿದ ಸಂಗತಿ, ಈ ಕುರಿತು ಸರ್ಕಾರಕ್ಕೆ ಬರೆದ ಪತ್ರ - ನೋಡಿದೆ. ನೀವಿಲ್ಲಿ ಸೂಚಿಸಿರುವುದು ಒಂದು ಸಣ್ಣ ಸ್ಯಾಂಪಲ್ಲು ಮಾತ್ರ.

  ಪುಸ್ತಕರೂಪದ ಒಂದು ಲೋಡು ಗೊಬ್ಬರ ಸರಬರಾಜು ಮಾಡಿ ಎಂದು ಆದೇಶ ಸಲ್ಲಿಸುವುದು ಇಂಥ ಆದೇಶಗಳಿಗೇ ತಯಾರಾಗಿ ಸ್ಪಂದಿಸುವ ‘ಮಾರಾಟಗಾರ’ ವ್ಯವಸ್ಥೆಯಲ್ಲಿ ದೊಡ್ಡಪ್ರಮಾಣದಲ್ಲಿ ಅವ್ಯಾಹತವಾಗಿ ಬೇರೂರಿದೆ. ವಿಲಕ್ಷಣವಾದರೂ ವಾಸ್ತವ ಇದು. ಇದಕ್ಕೆ ಹೊರತಾದ ಒಂಟಿದನಿ ಅರಣ್ಯರೋಧನ. ಈ ಕುರಿತು ಹೆಚ್ಚು ಪ್ರಸ್ತಾಪಿಸುವುದು ನನಗೆ ಹಿತಕಾರಿಯಾಗಿ ತೋರುವುದಿಲ್ಲ. ಕೊಟೇಶನ್ನುಗಳ ನಿಯಮ ತೆಗೆಯುವುದೂ ಅವ್ಯವಹಾರಕ್ಕೆ ಪರಿಹಾರವಾದೀತೆಂಬ ಗ್ಯಾರೆಂಟಿ ಕೊಟ್ಟೀತೇನು? ‘ಇತರೆ ವೆಚ್ಚ’ಗಳನ್ನು ಕಂಟಿಂಜೆನ್ಸಿ ಲೆಕ್ಕದ ಬಾಬ್ತಿನಲ್ಲಿ ಭರಿಸಲು ಕಾನೂನಿನಲ್ಲಿ ಅವಕಾಶ ಇದ್ದೇ ಇದೆ. ನಿಮ್ಮ ಕಳಕಳಿ ಮೆಚ್ಚತಕ್ಕದ್ದು.

  ನಮಸ್ಕಾರ
  ಡಿ.ಕೆ. ಶ್ಯಾಮ ಸುಂದರ್

  ReplyDelete
 16. ಅಶೋಕವರ್ಧನ20 June, 2009 21:04

  ಮಾನ್ಯ ಶ್ರೀ ಶ್ಯಾಮಸುಂದರರಾಯರ ನಿರಾಶೆ ಸಹಜ. ಆದರೆ ವ್ಯವಹಾರಗಳನ್ನು ಸರಳಗೊಳಿಸುವುದು, ಹೆಚ್ಚು ವಾಸ್ತವಿಕಗೊಳಿಸುವುದು ಅಂತಿಮವಾಗಿ ಜನರ ಒಳ್ಳೆತನಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ (ಕಳ್ಳರನ್ನು ಹಿಡಿಯುವ ನಿಟ್ಟಿನಲ್ಲಿ ಅಲ್ಲ) ನಿಯಮಗಳನ್ನು ಕೈಗೊಳ್ಳುವುದು ಸಾಧ್ಯವಾಗಲಿ ಎನ್ನುವುದು ನನ್ನ ಆಶಯ.
  ಅಶೋಕವರ್ಧನ

  ReplyDelete
 17. ಮಾನ್ಯರೆ, ಟೆಂಡರ್ ಅಂದಕೂಡಲೇ ನನಗೆ ನೆನಪಿಗೆ ಬಂದದ್ದು ಚಿತ್ರದುರ್ಗದ ವಯಸ್ಕರ ಶಿಕ್ಷಣದ ಅಂಗ ಅಕ್ಷರವಾಣಿ ನಾಲ್ಕು ವರ್ಷಗಳ ಹಿಂದೆ ಪುಸ್ತಕಗಳ ಖರೀದಿಗೆ ಆಸಕ್ತ ಪ್ರಕಾಶಕರಿಂದ ಐದೈದು ಪ್ರತಿಗಳನ್ನು ಆಹ್ವಾನಿಸಿತ್ತು. ಹಾಗೆ ಸ್ಯಾಂಪಲ್ ಬಂದದ್ದೇ ಸುಮಾರು 5 ಸಾವಿರ ಪ್ರತಿ ಅಂತೆ! ಮುಂದೆ ಪುಸ್ತಕ ಆಯ್ಕೆ ಮಾಡಿದ್ದಾಯ್ತು. ಖರೀದಿಗೆ ಮುನ್ನ ಟೆಂಡರ್ ಮೂಲಕ ಸಪ್ಲೈ ಮಾಡಿ ಅಂತ ಠರಾವು ಡಿ.ಸಿ.ಯವರಿಂದ. ಮುದ್ರಿತ ಪುಸ್ತಕ ಆಯ್ಕೆ ಆದ ಮೇಲೆ ಟೆಂಡರ್ ಕರೆಯುವುದು ಅಂದರೆ ಏನು? ಪುಟಕ್ಕೆ ಇಷ್ಟು ಪೈಸೆ ಅಂತ ತಿಳಿಸಿ ಕೋಟ್ ಮಾಡಬೇಕಂತೆ. ಆ ಕಂತೆ ಇದೀಗ ನಾಲ್ಕು ವರ್ಷವಾದರೂ ಕಳಚಿಲ್ಲ. ಖರೀದಿ ಆಗಿಲ್ಲ. ಪ್ರಕಾಶಕರು ತಲೆ ಮೇಲೆ ಕೈ ಹೊತ್ತಿದ್ದಾರೆ. ಟೆಂಡರ್ ಮಹಾತ್ಮೆಗೆ ಜಯವಾಗಲಿ! ಪುಸ್ತಕಗಳನ್ನು ಟೆಂಡರ್ ಕರೆಯುವುದು ಎಂದರೆ ಅದೇನು ನೋಟುಪುಸ್ತಕದ ಕಂತೆಯ ಹರಾಜೇ? ಜೈ ಡಿ.ಸಿ., ಜೈ ಅಕ್ಷರವಾಣಿ!
  ಬೇದ್ರೆ ಮಂಜುನಾಥ

  ReplyDelete
 18. ಎಸ್.ಎಂ ಪೆಜತ್ತಾಯ20 September, 2009 08:55

  ಅಶೋಕ ವರ್ಧನರೇ!
  ಪುಸ್ತಕ ಖರೀದಿಯ ಪ್ರಸಂಗ ಓದಿ ಸ್ವಲ್ಪ ಕಸಿವಿಸಿ ಆಯಿತು.
  ಜಗತ್ತು ಇರುವುದೇ ಹೀಗೆ! ರೂಲ್ಸ್‍ಗಳಿಗೆ ಕಣ್ಣಿಲ್ಲ.
  ರಂಗೋಲಿ ಕೆಳಗೆ ತೂರಿ ಬದುಕುವುದೇ ಇಂದಿನ ಜೀವನ ರೀತಿ.
  ಕೇಸರಿ ಪೆಜತ್ತಾಯ

  ReplyDelete
 19. Sir,

  As a librarian in Govt college. I am now learning the trade. In out college Principal won't allow librarian to take part in the book purchase. If we raise our voice they take it as personal and look at us in a different way. Very hard sir.

  ReplyDelete
 20. Dear sir, i have gone through your article. being as a book seller, i have same experiences regarding discount and quoatations.
  iam running book shop in small town Karkala. if im strict in discount and quoation, i will loose my business...so in future i will try to avoid such policies..
  plese give me some ideas how to over come from this problem....

  ReplyDelete