ಅಮೆರಿಕಾದಲ್ಲಿರುವ ನನ್ನೊಬ್ಬ ತಮ್ಮ ಆನಂದವರ್ಧನ (ಐದು ವರ್ಷ ಕಿರಿಯನಾದರೂ) ನನ್ನ `ಬಹುಹುಚ್ಚುಗಳ’ ನಿಕಟ ಅನುಯಾಯಿ. ಹತ್ತತ್ತಿರ ಎರಡು ವರ್ಷದ ಹಿಂದಿನ ಅನುಭವವಿದಾದರೂ ಪುರುಸೊತ್ತಿದ್ದಾಗ ಉದ್ದಕ್ಕೂ ನಿಧಾನಕ್ಕೆ ಬರಹಕ್ಕಿಳಿಯುತ್ತಲೇ ಇತ್ತು. ಆನಂದನಿಗೂ ಬ್ಲಾಗಿಗರಿಗೂ ಅದನ್ನು ಒಮ್ಮೆಗೇ ಉಣಬಡಿಸುವ ಉಮೇದು ನನ್ನದು. ಆದರೆ ಯಾಕೋ ಮೂರನೇ ಕಂತು ಬ್ಲಾಗಿಗೇರಿಸಿ ವಾರ ಕಳೆದರೂ ಪ್ರತಿಕ್ರಿಯೆ ಒಂದೂ ಕಾಣಲಿಲ್ಲ! ದಯವಿಟ್ಟು ಮರೀಬೇಡಿ, ನಿಮ್ಮೆಲ್ಲರ ಸಹೃದಯೀ ಪತ್ರಪ್ರತಿಕ್ರಿಯೆಗಳ ಕುಮ್ಮಕ್ಕಿಲ್ಲದಿದ್ದರೆ ಮುಂದಿನ ಕಂತುಗಳು ನನ್ನಲ್ಲೇ ಕಂತಿಹೋದಾವು. ಬರೀತೀರಲ್ಲಾ? - ಅಶೋಕವರ್ಧನ
ಪ್ರಿಯಾನಂದಾ,
ಇಕೋ ಇದು ಉಡುಪಿ ಕುಂದಾಪುರಗಳಿಂದಲೂ ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿಯ ಅಂಚಿಗೇ ಇರುವ ಸಾಕ್ಷಾತ್ ಅರಬ್ಬೀ ಸಮುದ್ರದಿಂದಲೇ ಅಕ್ಷರಶಃ ಪಾದ ತೊಳೆಸಿಕೊಳ್ಳುತ್ತಿರುವ ಒತ್ತಿನೆಣೆ. ಇಲ್ಲೇ ಈಚೆಗೆ ಕನ್ನಡದ ಒಬ್ಬ ಸಿನಿ-ನಿರ್ಮಾಪಕನಿಗೆ ತನ್ನೊಂದು ಸಿನಿಮಾಕ್ಕೆ ಬೃಹತ್ ಚಾರ್ಲೀ ಚಾಪ್ಲಿನ್ ವಿಗ್ರಹ ನಿಲ್ಲಿಸಬೇಕೆಂದು ಮನಸ್ಸಾಯ್ತು. ಅದನ್ನು ಖಾಯಂ ನೆಲೆಯಲ್ಲಿ ರಚಿಸಿ, ನಿಲ್ಲಿಸಿ, ತನ್ನ ಕೆಲಸ ಮುಗಿದಮೇಲೆ ಪ್ರವಾಸೋದ್ಯಮದ ಹೆಚ್ಚಳಕ್ಕೆ ಉಚಿತವಾಗಿ ಸಾರ್ವಜನಿಕಕ್ಕೆ ಬಿಟ್ಟುಕೊಡುವುದಾಗಿಯೂ ಹೇಳಿಕೊಂಡ. ಆದರೆ ದುರುದ್ದೇಶಪೂರಿತವಾಗಿಯೋ (ಪೋಲಿಸ್ ಪೆಟ್ಟು ತಿಂದಾದರೂ ಪತ್ರಿಕೆಯ ಪ್ರಥಮಪುಟದ ಪ್ರಚಾರಗಿಟ್ಟಿಸುವವರಂತೆ?) ಅಪ್ಪಟ ಮೌಢ್ಯವೋ ಈ ಯೋಜನೆ ೧. ಕರಾವಳಿಯಲ್ಲಿ ಜಲರೇಖೆಯಿಂದಿಷ್ಟು ದೂರದವರೆಗೆ ಯಾವುದೇ ಖಾಯಂ ಮನುಷ್ಯ ರಚನೆಗಳು ಕೂಡದು ಎಂಬ ನಿಯಮವನ್ನು ಉಲ್ಲಂಘಿಸುತ್ತಿತ್ತು. ೨. ಅರಣ್ಯ ಇಲಾಖೆಗೆ ಸೇರಿದ ಜಾಗಕ್ಕೆ ಅನಧಿಕಾರಿಯಾದ ಗ್ರಾಮಪಂಚಾಯ್ತಿನ ಅನುಮತಿ ಪತ್ರ ಪಡೆದು ಕೆಲಸ ಶುರುಮಾಡಿತ್ತು. ೩. ಇರುವ ನೂರೆಂಟು ಗಣ್ಯರ (ಗಾಂಧಿ, ಅಂಬೇಡ್ಕರ್ ಮುಂತಾದವು) ಸಾವಿರಾರು ದೇವಾನುದೇವತೆಗಳ ವಿಗ್ರಹ, ಪ್ರಾತಿನಿಧಿಕ ರಚನೆಗಳನ್ನು (ಪ್ರಾಕೃತಿಕಕ್ಕಿಂತ ಗಂಭೀರವಾಗಿ ಮನುಷ್ಯ ವಿಕೃತಿಗಳಿಂದ) ಕಾಪಾಡುವುದೇ ಎಂದೂ ಮುಗಿಯದ ತಲೆನೋವಾಗಿರುವಾಗ ಹೊಸದೊಂದು ವಿಗ್ರಹ ಬೇಕೇ ಎಂಬ ವಿವೇಚನೆಯಂತೂ ಕೆಲಸ ಮಾಡಲೇ ಇಲ್ಲ. ಇವೆಲ್ಲಕ್ಕೆ ಕಲಶಪ್ರಾಯವಾಗಿ ಮಠೀಯವಾದಿಗಳು, ಭಾಸಾ ಹಭಿಮಾನಿಗಳು ಚಾಪ್ಲಿನ್ ಕ್ರಿಶ್ಚಿಯನ್ ಮತ್ತು ಅಕನ್ನಡಿಗ ಎಂದೂ ಗುರುತಿಸಿಬಿಟ್ಟರು. (ಕೊನೆಯ ವಿಭಾಗದವರ ಮಾತು, ಅದಕ್ಕೂ ಮಿಗಿಲಾಗಿ ಅವರ ರಟ್ಟೇ ಬಲವೂ ಪರಿಣಾಮಕಾರಿಯಾದ್ದರಿಂದ ಅಂತಿಮವಾಗಿ ಮೂರ್ತಿಸ್ಥಾಪನೆಯಾಗುತ್ತಿಲ್ಲ.)
ಚಾಪ್ಲಿನ್ ವಿಗ್ರಹದಂಥ ಯಾವ ಆವುಟಗಳಿಲ್ಲದೇ ಹ್ಯಾವ್ಲಾಕಿನಲ್ಲಿ ಹೆಚ್ಚು ಜನಪ್ರಿಯವಾದ ಬೇರೊಂದೇ ಕಡಲ-ಕಿನಾರೆ, ರಾಧಾಬೀಚ್ ಇತ್ತು. ಆದರೆ ಎಲ್ಲ ಒಳ್ಳೆಯದನ್ನೂ ಒಂದೇ ಮುಷ್ಟಿಯಲ್ಲಿ ತೆಗೆಯಹೊರಟ ಕಪಿಯ ಕಥೆ ನಮಗೆ ಗೊತ್ತಿಲ್ಲದ್ದೇನೂ ಅಲ್ಲ. ಮತ್ತೆ ನಮ್ಮ ಕಾರ್ಯಕ್ರಮಪಟ್ಟಿಯಂತೆ ನಾವು ಅಂದೇ ಬ್ಲೇರ್ ದ್ವೀಪಕ್ಕೆ ಮರಳುವ ತುರ್ತೂ ಇತ್ತು. ಹಾಗಾಗಿ ಒಂದು ಕಣ್ಣನ್ನು ಬ್ಲೇರ್ ದ್ವೀಪಕ್ಕೆ ಹೋಗುವ ದಿನದ ಕೊನೆಯ ನಾವೆಯ ಸಮಯಕ್ಕೆ ಕೀಲಿಸಿ ನಮ್ಮ ಅರಮನೆಗೆ (ಮರೀಲಿಲ್ಲವಲ್ಲಾ ತೆಂಗಿನತೋಪಿನೊಳಗಿನ ಮರದಬೊಡ್ಡೆಯ ಮೇಲಿನ ವಸತಿಗೃಹ?) ಸೇರಿದೆವು. ನಮಗೆ ವಿದಾಯ ಹೇಳಲು ಸಾಗರ ಅರಮನೆಯ ಅಂಚಿನವರೆಗೆ ತುಂಬಿ ಬಂದಿತ್ತು. ಮೈಗೆ ಹತ್ತಿದ ಸಮುದ್ರದ ಉಪ್ಪನ್ನು ಒಬ್ಬೊಬ್ಬರೆ ಅರಮನೆಯ ಶವರಿನಡಿಯಲ್ಲಿ ತೊಳೆದುಕೊಳ್ಳುವಷ್ಟು ಹೊತ್ತು ಇತರರು ಅಕ್ಷರಶಃ ಹೊಸ್ತಿಲಲ್ಲೇ ಸಮುದ್ರ ಸ್ನಾನ ಮಾಡುತ್ತಿದ್ದದ್ದು ಅವಿಸ್ಮರಣೀಯ. ಶುದ್ಧ ಅಕಡೆಮಿಕ್ ಇಂಟರೆಸ್ಟಿನಲ್ಲಿ `ಬಂಗಾಳಿ ಸೋದರರ ಅಂಗಿ, ಪ್ಯಾಂಟು ಇಂದಿಗಿಂತ ನಿನ್ನೆ ಚೊಕ್ಕಟವಿತ್ತು’ ಎಂಬೊಂದು ಚರ್ಚೆ ನಮ್ಮೊಳಗೆ ತೊಡಗಿತ್ತು. ಆದರೂ ಅವರಿಂದೇನೋ ಒಂದಷ್ಟು ಮಾಡಿಸಿಕೊಂಡು ಹೊಟ್ಟೆಗೆ ಹಾಕುವುದನ್ನು ಮರೆಯಲಿಲ್ಲ. ಮಹಾಬ್ರಾಹ್ಮಣ ವಿಶ್ವಾಮಿತ್ರನೇ ಆಪದ್ಧರ್ಮವೆಂದು ನಾಯಿ ಮಾಂಸ ತಿಂದಷ್ಟು ಖಂಡಿತಾ ಇದು ಕೆಟ್ಟದ್ದಿರಲಿಲ್ಲ. ಮನೆ ಖಾಲಿ ಮಾಡಿ ಹಡಗುಕಟ್ಟೆಗೆ ಧಾವಿಸಿದೆವು. ಹಡಗು ಇನ್ನೂ ಬಂದಿರಲಿಲ್ಲ. ನಮ್ಮ ಎಲ್ಲಾ ಬಸ್ಸು ನಿಲ್ದಾಣಗಳ ಕೊಳಕೂ ಹಡಗುಕಟ್ಟೆಯ ಹೊರಗೆ ಒಮ್ಮೆಗೆ ಬಂದು ರಾಶಿ ಬಿದ್ದಂತಿತ್ತು. ನಮ್ಮ ಅಭಿವೃದ್ಧಿಯ ದೈತ್ಯನಿಗೆ ಸದಾ ಒಕ್ಕಣ್ಣು. ಕೆಲವೇ ದಶಕಗಳ ಹಿಂದೆ ಮನುಷ್ಯರನ್ನೇ ಕಂಡರಿಯದ ನೆಲವಿದು. ಅದರ ಶುದ್ಧ ಪ್ರಾಕೃತಿಕ ಸ್ಥಿತಿಯ (ಮಾಲಿನ್ಯರಹಿತ) ನೆಲವನ್ನು ಕುರಿದೊಡ್ಡಿ ಮಾಡಿದ್ದರು. ತಂಗುದಾಣ, ದಾರಿ, ಕಟ್ಟಡಗಳು, ಚರಂಡಿ ವ್ಯವಸ್ಥೆ, ಆಶ್ಚರ್ಯಕರವಾಗಿ ಬೀಡಾಡಿ ದನ, ಆಡು, ನಾಯಿ ಐದು ಮಿನಿಟಿನ ವಿರಾಮಕ್ಕೂ ನಾಲಾಯಕ್ಕು! ಹತ್ತು ಮಿನಿಟು ಆಚೆ ಈಚೆ ಹಡಗು ಬಂತು, ಸೇರಿಕೊಂಡೆವು, ಅದೃಷ್ಟಕ್ಕೆ ಪೇಟೆಯ ಕೊಳಕು ಇನ್ನೂ ಅಲ್ಲಿನ ಸಮುದ್ರಕ್ಕೆ ವಿಸ್ತರಿಸಿಲ್ಲ. ಒಂದು ಹೆಜ್ಜೆಯಾಚಿನ ಕೊಳಚೆ, ವಿಷದ ಯಾವ ಸೋಂಕೂ ಇಲ್ಲದೆ ನೀಲಮಣಿಯಂತೆ ಕಂಗೊಳಿಸುತ್ತಿದ್ದ ಆ ನೀರಿನಲ್ಲಿ ಅದ್ಯಾವುದೋ ನೂರಾರು ಕಿರುಮೀನುಗಳ ಬಟಾಲಿಯನ್ ಕವಾಯತು ನಡೆಸಿತ್ತು. ಎಂಟೋ ಹತ್ತೋ ಯುದ್ಧ ವಿಮಾನಗಳ ಕಿವಿಗಡಚಿಕ್ಕುವ ಸದ್ದಿನ ಕಸರತ್ತಿಗೆ ಅರ್ಧ ಜೀವಭಯದಲ್ಲೇ ಮರವಟ್ಟದ್ದುಂಟು. ಆದರಿದು, ನೋಡುವ ಕಣ್ಣು, ಗ್ರಹಿಸುವ ಮನಸ್ಸು ಇರುವವರಿಗೆ ಎಂದೂ ಮರೆಯಲಾಗದ ಪ್ರಕೃತಿಯ ಮೌನಪಾಠ, ಅವಿಸ್ಮರಣೀಯ ನೋಟ.
ದೋಣಿಸಾಗಲಿ ದೂರ ಹೋಗಲಿ ಪಲ್ಲವಿಸಿತು. ಅಖಂಡ ನೀಲಿಮೆಯಲ್ಲೊಂದು ಜಿಪ್ಪಿನ ರನ್ನರ್ ಓಡಿ ಎರಡು ಎಳೆಗಳನ್ನು ಬಿಡಿಸಿಟ್ಟಂತೆ ಸಾಗಿತು ನೌಕೆ. ನೊರೆಯಾಗಿ, ನಿರಂತರ ವಿಸ್ತರಿಸುವ ಹುರಿಯಾಗಿ `ನೀರ ಮೇಲಣಗುಳ್ಳೆ ಸ್ಥಿರವಲ್ಲಾ ಹರಿಯೇ’ ಎಂಬುದನ್ನು ಚಿತ್ರವತ್ತಾಗಿಸುತ್ತಿದ್ದಂತೆ ಹ್ಯಾವ್ಲಾಕ್ ಮಸಕಾಯಿತು, ಬ್ಲೇರ್ ಬೆಳಗತೊಡಗಿತು. ಮೂರು ಗಂಟೆಯುದ್ದಕ್ಕೆ ನಾವು ನೀರಳೆದು ಮುಗಿಸುವಾಗ ಇಳೆ ಕತ್ತಲ ಸೆರಗು ಹೊದ್ದು ಕುಳಿತಿತ್ತು. ಆದರೇನು ಸಣ್ಣಪುಟ್ಟ ದೀಪಸ್ತಂಭಗಳು, ಮಾರ್ಗಸೂಚಕ ದೀಪ ಮಾಲಾಲಂಕೃತ ಬ್ಲೇರ್ ಬಂದರು ನಾವು ಊಹಿಸದ ಹಬ್ಬದ ವಾತಾವರಣವನ್ನೇ ಕಲ್ಪಿಸಿತ್ತು! ವಾಸ್ತವದಲ್ಲಿ ಅಲ್ಲಿನ ನೀರತಳದ ಪ್ರಾಕೃತಿಕ ಉಬ್ಬು, ಕೊರಕಲು ರಚನೆಗಳನ್ನು ಸ್ಪಷ್ಟವಾಗಿ ತಪ್ಪಿಸಲು ಮತ್ತು ಎಂದೂ ಮುಸುಕಬಹುದಾದ ಮೋಡ ಮಳೆಯ ವಾತಾವರಣದಲ್ಲಿ ನಾವಿಕರಿಗೆ ದಿಕ್ಕು ತಪ್ಪದಂತೆ ಮಾಡಲು ದೀಪ ಸಾಲು ಅವಶ್ಯವೇ ಇರಬೇಕು. ಪರೋಕ್ಷವಾಗಿ ಆ ಅಪಾಯವನ್ನು ಸೂಚಿಸುವಂತೆ ನಮ್ಮ ಹಡಗು ಮಾರ್ಗಕ್ರಮಣದ ವೇಗವನ್ನು ಪೂರ್ತಿ ಇಳಿಸಿ ಬಲು ನಿಧಾನವಾಗಿ ನಾವು ಹಿಂದಿನ ದಿನ ಹೊರಟ ಹಡಗುಕಟ್ಟೆಯಲ್ಲೇ ಇಳಿಸಿತು.

ತೀರಾ ಸಣ್ಣ ಔಪಚಾರಿಕತೆಯೊಡನೆ ದಿನಕ್ಕೆ (ಬೈಕ್ ಪಡೆದಲ್ಲಿಂದ ಇಪ್ಪತ್ತನಾಲ್ಕು ಗಂಟೆ) ಮುನ್ನೂರು ರೂಪಾಯಿ ಬಾಡಿಗೆಯಲ್ಲಿ ಮೂರು ಬೈಕ್ ಪಡೆದೆವು. ಅವುಗಳಲ್ಲಿದ್ದ ಕನಿಷ್ಠ ಪೆಟ್ರೋಲಿನೊಡನೆ ಸಮೀಪದ ಬಂಕಿಗೆ ಧಾವಿಸಿ ಟ್ಯಾಂಕ್ ಭರ್ತಿ ಮಾಡಿ, ನಮ್ಮ ಹೊಟ್ಟೆಪಾಡೂ ಮುಗಿಸಿ, ರಾತ್ರಿಯ ನೆಲೆ - ವಂಡೂರ್ ದಾರಿ ಹಿಡಿದೆವು. ಹಾಂ ತಡಿ, ತಡೀ - ವಾಸ್ತವ ಅಷ್ಟು ಸರಳವಿರಲಿಲ್ಲ. ನಮಗೆ ಈ ದ್ವೀಪ ಸಮೂಹ ಅಪರಿಚಿತ ನೆಲ. ಇಲ್ಲಿರುವ ದಾರಿ ಜಾಲವೂ ಊರುಗಳ ಕಲ್ಪನೆಯೂ ಅಮೂರ್ತ. ಸಾಲದ್ದಕ್ಕೆ ಇದ್ದದ್ದರಲ್ಲೂ ಜನ, ವಾಹನ ಸಂಚಾರ ವಿರಳವಾಗುವ ರಾತ್ರಿಯ ವೇಳೆ ಮತ್ತು ಹೆಚ್ಚಿನ ಊರುಗಳಲ್ಲಿ ಬೀದಿ ದೀಪದ ವೈಭವವೂ ಇಲ್ಲದ ಗಾಢಾಂಧಕಾರ. ಈ ದ್ವೀಪ ಸಮೂಹದ ಏಕೈಕ ಘೋಷಿತ ಹೆದ್ದಾರಿ ಅಂದರೆ ನಾವು ಅಲ್ಲಿ ಕಂಡ ವಿಮಾನ ನಿಲ್ದಾಣದ ದಾರಿಯದ್ದೇ ಮುಂದುವರಿಕೆ. ಅದು ಬ್ಲೇರ್ ಪೇಟೆಯಿಂದಾಚೆಗೆ ನಮ್ಮ ಯಾವುದೇ ಹಳ್ಳಿ ದಾರಿಗಿಂತ ಉತ್ತಮವಿರಲಿಲ್ಲ. ಗೊಂದಲಿಸುವ ಕವಲು, ಹೊಂಡ, ಅನಿಯತ ಮತ್ತು ಸೂಚನೆ, ಬಣ್ಣಗಳಿಲ್ಲದ ವೇಗತಡೆ ಉಬ್ಬುಗಳಲ್ಲಿ ತಡಬಡಾಯಿಸುತ್ತಾ ಸಾಗಿದೆವು. ವಂಡೂರ್ ಸುಮಾರು ಮೂವತ್ತು ಕಿಮೀ ದೂರದ ತೀರಾ ಹಳ್ಳಿಮೂಲೆ. ನಮ್ಮ ಬೈಕ್ಗಳಾದರೋ ಹಾರನ್ ಬಿಟ್ಟು ಬೇರೆಲ್ಲಾ ಸದ್ದುಮಾಡುವ ಗುಜರಿ ಗಾಡಿಗಳು. ಆದರೂ ಸಣ್ಣ ಕಿರಿಕ್ಕುಗಳನ್ನು ಬಿಟ್ಟರೆ ಸಾಮಾನ್ಯ ಓಟಕ್ಕೆ ಮೋಸವಿರಲಿಲ್ಲ. ನಮ್ಮ ಅದೃಷ್ಟಕ್ಕೋ ದ್ವೀಪಸ್ತೋಮದ ತಾಕತ್ತೇ ಅಷ್ಟೋ ಒಟ್ಟಾರೆ ವಾಹನ (ಸಂಖ್ಯೆಯೂ) ಸಂಚಾರ ಕಡಿಮೆಯಿತ್ತು. ಮತ್ತೆ ಆಯಕಟ್ಟಿನ ಜಾಗಗಳಲ್ಲಿ ಸರಿದಾರಿ ತೋರಲು ಜನಗಳು ಸಿಕ್ಕಿದ್ದರಿಂದಲೂ ಸುಮಾರು ಒಂದೂವರೆ ಗಂಟೆಯ ಅವಧಿಯಲ್ಲಿ ನಾವು ಉದ್ದೇಶಿಸಿದ್ದ ಬೋರ್ಡು ಕಾಣಿಸಿತು - ನಿಕೋಬಾರ್ ಸಂಶೋಧನಾ ಸಂಸ್ಥೆ.
ಬ್ರಿಟಿಷ್ ಮೂಲದ ರೋಮುಲಸ್ ವ್ಹಿಟೇಕರ್ ಅಂದರೆ ಆಸಕ್ತಿ, ಅಧ್ಯಯನ ಮತ್ತು ಛಲಗಳ ಮುಪ್ಪುರಿಗೊಂಡ ವ್ಯಕ್ತಿತ್ವ. ಈತ ಭಾರತದಲ್ಲಿ ಹಾವು, ಮೊಸಳೆ, ಕಡಲಾಮೆಗಳ ರಕ್ಷಣೆಯ ಬಗ್ಗೆ ಮಾಡಿದ ಕೆಲಸ ಅಸಂಖ್ಯ, ಅನನ್ಯ. ಅದರ ಒಂದು ಗಟ್ಟಿ ಸಾಕ್ಷಿ ಈ ಸಂಸ್ಥೆಯೂ ಹೌದು. ಇದು ದ್ವೀಪಸ್ತೋಮದ ಆದಿವಾಸಿ ಜನರೂ ಸೇರಿದಂತೆ ಜೀವಿಗಳ (ಹಕ್ಕಿ, ಹಾವು, ಮೊಸಳೆ, ಕಡಲಾಮೆ ಇತ್ಯಾದಿ) ಅಧ್ಯಯನಕ್ಕೆ ಮೀಸಲಾದ ಸ್ವಯಂಸೇವಾ ಸಂಸ್ಥೆ. ವಂಡೂರಿನ ಕರಾವಳಿ ಸೇರಿದಂತೆ ಬರುವ ವಿಸ್ತಾರ ಜವುಗು ಪ್ರದೇಶ, ಕಾಂಡ್ಲವನವನ್ನು ಸರಕಾರ ಮೊಸಳೆಧಾಮವಾಗಿ ಮೀಸಲಿಟ್ಟಿದೆ. (ತಮಾಷೆ ಎಂದರೆ ಮೊಸಳೆಗಳು ಇಲ್ಲಿ ಅಳಿದಮೇಲೆ ಸರಕಾರದ ಘೋಷಣೆ ಹೊರಟಿತಂತೆ; ಕೋಟೆ ಸೂರೆಹೋದಮೇಲೆ ದಿಡ್ಡೀಬಾಗಿಲು ಹಾಕಿದ್ದರು! ಕನ್ನಡ ಶಾಲೆಗಳೆಲ್ಲಾ ನ್ಯೂನಪೋಷಣೆಯಿಂದ ಸಾಯುತ್ತಿರುವ ಕಾಲಕ್ಕೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಕ್ಕೆ ಬಾಯಿ ಬಡಿದ ಹಾಗೆ!) ಮೊಸಳೆಧಾಮದ ಹೊರ ಅಂಚಿನ ಸುಮಾರು ಒಂದೆಕರೆ ಪುಟ್ಟ ಗುಡ್ಡದ ಇಳುಕಲು ನೆಲ ಈ ಸರಕಾರೇತರ ಸ್ವಯಂಸೇವಾ ಸಂಸ್ಥೆಯದು. ವೇಣು - ಸುಮಾರು ನಲ್ವತ್ತರ ಪ್ರಾಯದ, ಸಂಸ್ಥೆಯ ಇಂದಿನ ಕಾರ್ಯದರ್ಶಿ (ಈಗ ವ್ಹಿಟೇಕರ್ ಇದರಿಂದ ದೂರ ಸರಿದಿದ್ದಾರಂತೆ), ನಮ್ಮನ್ನು ಸ್ವಾಗತಿಸಿದರು. (ಅವರಿಗೊಬ್ಬ `ಭಯ್ಯಾ’ ಅಡುಗೆಯಿಂದ ಎಲ್ಲಕ್ಕೂ ಅವನು `ಸೈ’ಯ್ಯಾ.) ಸಮಾನ ಗೆಳೆಯರಿಂದ ಈ ಮೊದಲೇ ವೇಣು ನಿರೇನ್ಗೆ ದೂರವಾಣಿ ಪರಿಚಯ ಬೆಳೆದಿದ್ದುದರಿಂದ ಔಪಚಾರಿಕತೆಗಳಿಗಿಂತ ಆತ್ಮೀಯ ಮಾತುಗಳೇ ಹೆಚ್ಚಿತ್ತು. ಸಹಜವಾಗಿ ಸ್ವಾಗತ ಕಛೇರಿಯ ಬಾಗಿಲು ತೆರೆಯದೆ, ಊಟದ ಜಗುಲಿಯಲ್ಲಿ ಕುಳಿತೇ ಮಾತುಕತೆ ನಡೆಸಿದೆವು. ಬೈಕುಗಳನ್ನು ಕಚೇರಿ ಬಳಿಯ ಮಾವಿನಮರದ ನೆರಳಿನಲ್ಲೇ ಬಿಟ್ಟು ಅವರು ಒದಗಿಸಿದ ಎರಡು ಕುಟೀರಗಳನ್ನು ಸೇರಿಕೊಂಡೆವು.

ಅಟ್ಟಳಿಗೆಯ ಕುಟೀರಗಳಿಗೆ ಹೆಚ್ಚು ಕಡಿಮೆ ನಾಲ್ಕೂ ದಿಕ್ಕಿಗೆ ವಿಸ್ತಾರ ಕಂಡಿಗಳಿವೆ. ಅವಕ್ಕೆಲ್ಲ ಗಾಳಿಮಳೆಗೆ ಮರೆ -- ಪರದೆಯಂತೆ ಮೇಲೆ ಸುತ್ತಿಟ್ಟ ಬಿದಿರ ಚಾಪೆ. ಕಾಂಕ್ರೀಟ್ ಗೋಡೆ, ಬಂದೋಬಸ್ತಿನ ಹೆಸರಿನಲ್ಲಿ ಕೋಟೆಯಂಥ ಮನೆಗಳಲ್ಲಿದ್ದು ಬಂದ ನಮಗೆ ಮೊದಲು ಹೊಳೆಯುವುದು “ಕಳ್ಳ ಬಂದರೇನು ಮಾಡುವೆ?” ಗಾಬರಿ ಬೇಡ, ಮೊದಲೇ ಹೇಳಿದ್ದೇನೆ, ದ್ವೀಪಸ್ತೋಮದಲ್ಲೇ (ಕನ್ನಡದ ಕಳ್ಳರು ಇದನ್ನು ಓದಲ್ಲಾಂತ ಭಾವಿಸುತ್ತೇನೆ) ಕಳ್ಳರಿಲ್ಲ! ಮತ್ತೆ ಮನುಷ್ಯನ ಮೇಲೆ ಎರಗಬಹುದಾದ ಯಾವ ದೊಡ್ಡ ಮೃಗಗಳೂ ಇಡಿಯ ದ್ವೀಪಸ್ತೋಮದಲ್ಲಿಲ್ಲ. ಕುಟೀರಗಳಿಗೆ ಸುತ್ತೂ ವಿಸ್ತಾರ ಜಗುಲಿಯೂ ಇದೆ. ಅನತಿ ದೂರದಲ್ಲಿ ಆದರೆ ಸ್ವತಂತ್ರವಾಗಿ ನೆ ಮಟ್ಟದ್ದೇ ರಚನೆ ಸ್ನಾನ ಶೌಚಗೃಹಗಳು. ಇಡೀ ವಠಾರದೊಳಗೆ ಓಡಾಟಕ್ಕೆ ಸಣ್ಣ ಒರಟು ಕಾಲುದಾರಿ ಬಿಟ್ಟರೆ ಉಳಿದೆಲ್ಲೆಡೆಯಲ್ಲೂ ಭಾರೀ ಮರಗಳೂ ಸೇರಿದಂತೆ ಬಳ್ಳಿ ಪೊದರುಗಳ ಜಾಲ ರಮ್ಯವಾಗಿದೆ. ಪ್ರಕೃತಿಯೊಂದಿಗಿದ್ದೂ ಬೆಚ್ಚನ್ನ ಅನುಭವ ಕೊಟ್ಟ ಆ ವಠಾರ ಸಂಶೋಧನೆಗೂ ವಿರಾಮಕ್ಕೂ ಆದರ್ಶ ಠಾವು.
`ಬೆಳಗ್ಗೆ ಬೇಗ ಎದ್ದು’ ಎಂಬ ಪ್ರಯೋಗಕ್ಕೆ ಅವಕಾಶವೇ ಇಲ್ಲದ `ಲೋಕ’ ಇದು. ನಾಲ್ಕಕ್ಕೇ ಹಕ್ಕಿ ಕೂಗಿ ಐದಕ್ಕೆ ಬೆಳ್ಳಂಬೆಳಕಾಗುವಲ್ಲಿ ಎಂಟೂವರೆಗಷ್ಟೇ ಕಾರ್ಯಭಾರವಿದ್ದ ನಾವೇನು ಮಾಡಬಹುದು. ವಠಾರ ಸುತ್ತಿದೆವು. ಸಮುದ್ರದತ್ತ ಚೂಪುಗೊಳ್ಳುವ ಬಲ ಕೊನೆಯಲ್ಲಿ ಮಣ್ಣು ಕಲ್ಲು ತುಂಬಿ ಒಂದು ಸಣ್ಣ ದೋಣಿ ಕಟ್ಟೆ ಮಾಡಿಕೊಂಡಿದ್ದರು. ಸಮುದ್ರದ ಭರತದ ವೇಳೆಯಲ್ಲಿ ಇಂದು ಅಲ್ಲಿ ಹಾಳಾಗಿ ಬಿದ್ದಿರುವ ಯಾಂತ್ರಿಕ ದೋಣಿ ಹಗ್ಗ ಜಗ್ಗುತ್ತದೆ ಮತ್ತೆ ನೆಲಕಚ್ಚುತ್ತದೆ. ಅದೇ ಕೊನೆಂii ಎಡ ಅಂಚಿನಲ್ಲಿ ನೊಜೆ ಹುಲ್ಲಿನ ನೇಯ್ಗೆಯೇ ದಂಡೆಯಂತಿರುವ ಒಂದು ಪುಟ್ಟ ಕೆರೆ ಈ ವಠಾರದ ಏಕೈಕ ಸಿಹಿ ನೀರ ಸಂಗ್ರಹ. ಇದು ಒಟ್ಟಾರೆ ದ್ವೀಪಸ್ತೋಮದ ಕುಡಿ ನೀರ ವ್ಯವಸ್ಥೆಯನ್ನೇ ಕುರಿತು ಯೋಚಿಸಲು ನಮಗೆ ಪ್ರೇರೇಪಿಸಿತು ಎಂದರೆ ತಪ್ಪಿಲ್ಲ. ಕೆರೆಯಲ್ಲಿ ಎಂದೂ ನೀರು ಖಾಲಿಯಾಗುವುದೆಂದಿಲ್ಲವಂತೆ. ಅದು ಒಂದು ಮಿತಿಯಲ್ಲಿ ಸಿಹಿ ನೀರು ಕೊಟ್ಟರೂ ಅತಿಯಲ್ಲಿ ಅಥವಾ ಕೊರತೆಯಾದಲ್ಲಿ ಸಮುದ್ರದ ಉಪ್ಪುನೀರನ್ನೇ ಸೆಳೆದುಕೊಂಡು `ಶಿಕ್ಷಿಸುತ್ತದೆ’. ಕೆರೆಯಿಂದ ಸ್ವಲ್ಪ ಮೇಲೆ ಕೇಂದ್ರೀಕೃತ ಅಡುಗೆಮನೆ, ಮತ್ತದಕ್ಕೆ ತಗುಲಿದಂತೆ ತೆರೆದ ಊಟದ ಜಗುಲಿ. ಮತ್ತೂ ಮೇಲೆ ಮೇಲೆ ಹೋದಂತೆ ದಾರಿ ಬದಿಯಲ್ಲಿ ಮೊದಲುಸಿಗುವಂತೆ ಇರುವ ದೊಡ್ಡ ರಚನೆಯಲ್ಲಿ ತನ್ನ ಕಛೇರಿ, ಅಧ್ಯಯನ ಕಮ್ಮಟ/ಶಿಬಿರ ನಡೆಸಲು ಅನುಕೂಲವಾಗುವ ಗ್ರಂಥಾಲಯ ಮತ್ತು ಸಂವಹನ ಸಾಧನಗಳ ಸಹಿತ ಸಜ್ಜಾದ ಪುಟ್ಟ ಸಭಾಭವನ ಹೊಂದಿದೆ. ಒಳ ವಠಾರದಲ್ಲಿ ಹರಡಿದಂತೆ ಆರೆಂಟು ಕುಟೀರಗಳು, ಸಹರಚನೆಗಳು.
ಭಯ್ಯಾ ಕೊಟ್ಟಾ ಅವಲಕ್ಕಿ ಚಾದಿಂದ ಹೊಟ್ಟೆ ಗಟ್ಟಿ ಮಾಡಿಕೊಂಡೆವು. ಆ ವೇಳೆಗೆ ಸಮುದ್ರದಲ್ಲಿ ಇಳಿತದ ಕಾಲ. ವೇಣು ಸಲಹೆ ಮೇರೆಗೆ ಭಯ್ಯಾನ ಜತೆಯಲ್ಲಿ ವಠಾರದ ಧಕ್ಕೆಯಾಚಿನ ಕಾಂಡ್ಲವನ `ಶೋಧ’ನೆಗೆ (ಮ್ಯಾನ್ಗ್ರೋವ್) ನಡೆದೆವು. ಹ್ಯಾವ್ಲಾಕ್ನಲ್ಲಿ ನಾವು ಕಂಡ ಇಳಿತದ ನೆಲಕ್ಕೂ ಇದಕ್ಕೂ ವ್ಯತ್ಯಾಸವಿತ್ತು. ಇಲ್ಲಿ ನೆಲದ ಪಾತಳಿ ತುಸುವೇ ಎತ್ತರದ್ದು. ಸಹಜವಾಗಿ ಜನ ಅರೆಬರೆ ಕಾಂಡ್ಲ ಕಳೆದು ತೆಂಗಿನ ಕೃಷಿ ನಡೆಸಿದ್ದರು. ಆದರೆ ಸುನಾಮಿ ಬಡಿದಾಗ ಸಾಕಷ್ಟು ತೆಂಗು ಕೊಚ್ಚಿಹೋಗಿದ್ದರೂ ಉಳಿದಷ್ಟೂ ಮರ ಮತ್ತು ನೆಲ ತೆಗೆಯದುಳಿದ ಕಾಂಡ್ಲಾವನಕ್ಕೆ ಕೃತಜ್ಞವಾಗಿರಬೇಕು! ಹಲವು ತೆಂಗು ಅಡಿ ಮಗುಚಿದ್ದವು, ತಲೆಕೆಟ್ಟು ಅನಾಥವಾಗಿ ಕಾಣುತ್ತಲೂ ಇದ್ದವು. ಕೃಷಿ ಮತ್ತು ಓಡಾಟಕ್ಕೆ ಮಾಡಿಕೊಂಡಂತೇ ಕಾಣುತ್ತಿದ್ದ ಕಾಲ್ದಾರಿಯಂತ ತೆರವುಗಳಾಚೆ ಸಮುದ್ರ ಕಾಣದಂತೆ ಕಾಂಡ್ಲಾ ಪೊದರುಗಳು ಸಾಕಷ್ಟಿತ್ತು. ಬಿಲದೊಳಗಿಂದ ಮಣ್ಣಗೋಲಿ ತಂದು `ಅಂಗಳ’ ಶೃಂಗಾರ ಮಾಡುವ ಏಡಿ ಇಲ್ಲಿ ಭೀಮಗೋತ್ರದ್ದೇ ಇರಬೇಕು. ಹ್ಯಾವ್ಲಾಕ್ ದ್ವೀಪದ ಗೋಲಿಗಳು ಕಡಲೆ ಗಾತ್ರದವಾದರೆ ಇಲ್ಲಿನವು ನೆಲ್ಲಿ ಗಾತ್ರದವು! ನೆಲದ ಹಸಿ, ಅಲ್ಲಿ ಇಲ್ಲಿ ಪುಟ್ಟ ಕೆರೆಗಳಂತೆ ನೀರು ಮಡುಗಟ್ಟಿದ್ದು ನೋಡುವಾಗ ಇದು ಪೂರ್ತಿ `ನಮ್ಮದಲ್ಲ’ ಎಂದು ಎಚ್ಚರ ದಟ್ಟವಾಗುತ್ತಿತ್ತು. ಹೀಗೆ ನೂರಿನ್ನೂರು ಮೀಟರ್ ನಡೆಯುವುದರೊಳಗೆ ಕಡಲ ಕಿನಾರೆಯೇ ಬಂತು. ಬುಡಮೇಲಾದ ಹತ್ತೆಂಟು ಭಾರೀ ಮರಗಳು ಕಿನಾರೆಯುದ್ದಕ್ಕೂ ಸುನಾಮಿಯ ಸ್ಪಷ್ಟ ನೆನಪಿನ ಕಾಣಿಕೆಗಳಾಗಿ ಬಿದ್ದುಕೊಂಡಿದ್ದವು. ಮರಳಿನುದ್ದಕ್ಕೆ ಸ್ವಲ್ಪ ನಡೆದದ್ದೇ ನಾವು ಸಂಸ್ಥೆಯೊಳಗೆ ಪ್ರವೇಶಿಸುವಲ್ಲಿ ಬಿಟ್ಟ ದಾರಿಯ ಮುಂದುವರಿಕೆ ಮತ್ತದರ ಮುಕ್ತಾಯ ಕಾಣಿಸಿತು. ಅಕ್ಕೋ ಹಕ್ಕಿ, ಇಕ್ಕೋ ಚಿಪ್ಪೀ, ವ್ಹಾಯ್ ಏಡಿ ಎಂಬ ಉದ್ಗಾರಗಳ ಸರಣಿಯಲ್ಲಿ ಮತ್ತೆ ಬಂದ ದಾರಿಯಲ್ಲೇ ಮರಳಿದೆವು. ಮತ್ತೆ ಬೈಕೇರಿ ಯೋಜನೆಯಂತೆ ವಂಡೂರಿನದೇ ಇನ್ನೊಂದು ಕಿನಾರೆಗೆ ಧಾವಿಸಿದೆವು.
ಜಾಲಿಬಾಯ್ - ಸ್ತೋಮದೊಳಗಿನದೇ ಒಂದು ಪುಟ್ಟ ದ್ವೀಪ. ಅದರ ಸುತ್ತ ಮುತ್ತಣ ನೀರತಳ ಆಳ ಕಡಿಮೆಯಿದ್ದು ವೈವಿಧ್ಯಮಯ ಹವಳದರ್ಶನಕ್ಕೆ ಮತ್ತು ನೀರಾಟಕ್ಕೆ ಅವಕಾಶ ಕಲ್ಪಿಸುತ್ತದೆ. ವಂಡೂರಿನಿಂಡ ಸುಮಾರು ಒಂದು ಗಂಟೆಂii ದೋಣಿ ಸವಾರಿಯ ದೂರದಲ್ಲಿರುವ ಅದಕ್ಕೆ ವನ್ಯ ಇಲಾಖೆ (ಹೌದು, ಇಂಗ್ಲಿಶಿನ wildlifeಗೆ ಇರುವ ವ್ಯಾಪಕ ಅರ್ಥದಲ್ಲಿ ಇಲ್ಲಿ ಜಲಸಂಬಂಧೀ ಕಾಪಿಟ್ಟ ವಲಯವನ್ನೂ ವನ್ಯವೆಂದೇ ಪರಿಗಣಿಸುತ್ತಾರೆ) ವಂಡೂರಿನಿಂದ ತನ್ನದೇ ವ್ಯವಸ್ಥೆಯಲ್ಲಿ ಮತ್ತು ಶಿಸ್ತಿನಲ್ಲಿ ಪ್ರವಾಸಿಗರನ್ನು ಒಯ್ಯುತ್ತದೆ. ನಮ್ಮ ವಾಸ್ತವ್ಯದಿಂದ ಸುಮಾರು ನಾಲ್ಕು ಕಿಮೀ ದೂರದ ಆ ಜಾಗವನ್ನು ನಾವು ಸಾಕಷ್ಟು ಮುಂಚಿತವಾಗಿಯೇ ತಲಪಿಕೊಂಡೆವು. ಆಧುನಿಕ ಭಾರತದ ಸತ್ಸಂಪ್ರದಾಯವೆಂದರೆ ಇಲ್ಲಿನ ಪ್ರಜಾಪ್ರತಿನಿಧಿಗಳು ಬಿಡಿ, ಸಾರ್ವಜನಿಕ ಅಧಿಕಾರಿಗಳೂ ಸಂದ ರಾಜಸತ್ತೆಯ ಉತ್ತರಾಧಿಕಾರಿಗಳಂತೇ ವರ್ತಿಸುವುದು!! ಅದಕ್ಕೆ ಸರಿಯಾಗಿ ಅಲ್ಲೇ ದಾರಿ ಪಕ್ಕದಲ್ಲಿದ್ದ ಪುಟ್ಟ ಗುಡ್ಡದ ಮೇಲೊಂದು ಇಲಾಖಾ ವಸತಿಗೃಹ, ಅದರ ಉಸ್ತುವಾರಿಗೊಂದಷ್ಟು ಸಿಬ್ಬಂದಿಗಳು. ಮತ್ತೆ ದಾರಿ ಪಕ್ಕದಲ್ಲಿ ಮ್ಯೂಸಿಯಮ್ಮೇ ಮುಂತಾದ ಉದಾತ್ತ ಹೆಸರಿನ ವ್ಯರ್ಥ ರಚನೆಗಳು ಧಾರಾಳ ಇದ್ದವು. ಸಮಯ ಇದ್ದುದರಿಂದ ಅವನ್ನೆಲ್ಲ ಒಂದು ಸುತ್ತು ಹಾಕುವುದರೊಳಗೆ ಇಲಾಖೆಯ ಬೋಟುಗಳು ಬಂದವು. ಆ ಪ್ರವಾಸ ಬಯಸುವವರಿಗೆ ಬ್ಲೇರ್ನಲ್ಲೇ ಸ್ಥಳ ಕಾಯ್ದಿರಿಸುವ ವ್ಯವಸ್ಥೆಯಿದ್ದದ್ದನ್ನು ನಾವು ಬಳಸಿಕೊಂಡೇ ಬಂದಿದ್ದೆವು. ಆದರೆ ಇಲಾಖೆಗಳ ಒಳ ರಾಜಕೀಯದಲ್ಲಿ ಸ್ವಲ್ಪ ತಡವರಿಸಬೇಕಾಯ್ತು. ಅದೃಷ್ಟವಶಾತ್ ನಮ್ಮ ಯಾತ್ರಾವಕಾಶವನ್ನು ಮಾತ್ರ ವಂಚಿಸಲಿಲ್ಲ.
ಅಂಡಮಾನ್ ದ್ವೀಪಸ್ತೋಮದಲ್ಲಿ ದಾಖಲೆಗೊಂದು ಪುಟ್ಟ ಸಿಹಿನೀರ ತೊರೆ ಇದ್ದರೂ ನಿಜದಲ್ಲಿ ಹರಿಯುವ ನೀರಿನ ಪರಿಣಾಮಗಳು ಕಾಣಸಿಗುವುದಿಲ್ಲ. ಇರುವುದೆಲ್ಲ ಸಮುದ್ರದ ಉಪ್ಪುನೀರ ಏರಿಳಿತಕ್ಕೆ ಒಡ್ಡಿಕೊಳ್ಳುವ ತಗ್ಗುಗಳು. ಭರತದಲ್ಲಿ ನೀರಿನ ಮಿತಿಮೀರಿದವು ದ್ವೀಪಗಳು, ಸುತ್ತುವರಿದ ನೀರು ತೋಡು ತೊರೆಗಳ ಹಾಗೆ. ಇವು ಒಟ್ಟು ದ್ವೀಪಸ್ತೋಮದ ಒಳ ವಲಯಗಳಲ್ಲಿರುವುದರಿಂದ ನಮಗೆ ಮುಕ್ತ ಸಾಗರದ ದೃಶ್ಯ ಮಾತ್ರ ಇರುವುದಿಲ್ಲ ಎನ್ನುವುದನ್ನು ಮರೆಯಬಾರದು. ನಾವು ವಂಡೂರಿನಲ್ಲಿ ಯಾವುದೋ ಸರೋವರದಂಚಿನಲ್ಲಿದ್ದೇವೆ ಅನಿಸುತ್ತಿತ್ತು. ದೋಣಿ ಎದುರಿಗೇ ಕಾಣುವ ದಂಡೆ ಬಿಟ್ಟು ಓರೆಯಲ್ಲಿ ಸಾಗಿದಂತೆ ಅನಾವರಣಗೊಳ್ಳುತ್ತಾ ಹೋದ ನೀರಹರಹು ಯಾವುದೋ ಮಹಾನದಿಯ ನೆನಪೇ ತರುತ್ತಿತ್ತು. ಪಶ್ಚಿಮ ಬಂಗಾಳದ ಸುಂದರಬನ್ಸ್ ವ್ಯಾಘ್ರಧಾಮ ಇಂಥದ್ದೇ ಪ್ರಾಕೃತಿಕ ವ್ಯವಸ್ಥೆಯಲ್ಲಿ ಹರಡಿಕೊಂಡಿದೆ. ಅದು ಗಂಗೆಯ ಸಾಗರಸಂಗಮ ಕ್ಷೇತ್ರ. ನಾವು ಅಂಡಮಾನಿನಲ್ಲಿ ಒಳನೀರು ಎಂದು ಗುರುತಿಸುವ ಅಂಶ ಅಲ್ಲಿ ಹಿನ್ನೀರು. ಅಲ್ಲಿನ ಕುದ್ರುಗಳ (ನದಿನೀರಿನ ನಡುಗಡ್ಡೆಗಳಿಗೆ ಕರಾವಳಿ ವಲಯದಲ್ಲಿ ಕುದ್ರು ಎನ್ನುತ್ತಾರೆ) ನಡುವಣ ನೀರ ಹರಹುಗಳು ಖಾರಿಗಳೆಂದೇ ಖ್ಯಾತ. ಸುಂದರ್ಬನ್ಸ್ ನದಿ (ಸಿಹಿನೀರು) ಮುಖಜಭೂಮಿಯಲ್ಲಿದೆ, ಇಲ್ಲಿ ಎಲ್ಲ ಉಪ್ಪು. ಇಲ್ಲಿನ ನೀರಿಗೆ ನದಿಯ ಸೆಳವಿಲ್ಲ. ಹಾಗೆಂದು ನಮ್ಮ ದೋಣಿ ಅವಸರಿಸುವಂತೆಯೂ ಇಲ್ಲ! ನದಿಪಾತ್ರೆಯಲ್ಲಿ ಶತಶತಮಾನಗಳಿಂದ ಏಕಮುಖ ಹರಿವಿನ ಸವಕಳಿ ಸ್ಪಷ್ಟ ಜಾಡು ಮಾಡಿರುವುದರಿಂದ ಸಾಮಾನ್ಯವಾಗಿ ನಡುವೆ ಆಳ ಜಾಸ್ತಿಯಿರುತ್ತದೆ. ಇಲ್ಲಿ ಎಲ್ಲೂ ಆಳವಿರಬಹುದು, ತೋರಿಕೆಗೆ ನೀರಿನ ನಡುಬಿಂದು ಎಂಬಲ್ಲೂ ನೆಲ ಎದ್ದು (ಹವಳದಗಡ್ಡೆ ಬೆಳೆಯುತ್ತಿರಬಹುದು) ದೋಣಿಯನ್ನು ಒದೆಯಬಹುದು. ನೀರಪಾತ್ರೆ ವಿಸ್ತಾರವಿದ್ದರೂ ಖಾರಿಜಾಲಗಳು ಪ್ರತಿ ತಿರುವಿನಲ್ಲೂ ಅಸಂಖ್ಯವಾಗಿ ಸ್ವಾಗತಿಸುವಂತೆ ಕಾಣುತ್ತಿದ್ದರೂ ಚುಕ್ಕಾಣಿ ಹಿಡಿದವನು ಮೈಯೆಲ್ಲಾ ಕಣ್ಣಾಗಿ ನೀರನ್ನು ದೃಷ್ಟಿಸುತ್ತಾ ವಿಚಿತ್ರ ಜಾಡುಗಳಲ್ಲಿ ಅದೂ ಬಲು ನಿಧಾನವಾಗಿ ದೋಣಿ ಚಲಾಯಿಸುತ್ತಾನೆ. ಅವನಿಗೆ ಹೆಚ್ಚಿನ ಕಣ್ಣಾಗಿ ಎದುರು ಮೂಕಿಯ ಮೇಲೂ ಒಬ್ಬ ನಿಂತು ಅವಶ್ಯ ಬಂದಾಗ ನಿರ್ದೇಶನ ಕೊಡುತ್ತಿದ್ದದ್ದು ಪರಿಸ್ಥಿತಿಯ ಗಭೀರತೆಯನ್ನು ಬಿಂಬಿಸುವಂತಿತ್ತು. ತಮಾಷೆಗೆ ಹೇಳುತ್ತೇನೆ, ಉಡುಪಿ ಎಕ್ಸ್ಪ್ರೆಸ್ನ ಎದುರು ಬಾಗಿಲ ಅಂಚಿನಲ್ಲಿ ನೇತುಬಿದ್ದ ಹುಡುಗ ಒಂದೊಂದು ಲಾರಿ ಬಸ್ಸುಗಳನ್ನು ಹಿಂದಿಕ್ಕುತ್ತಿರುವಾಗ “ರೈರೈಟ್” ಕೊಟ್ಟಹಾಗೆ!
ದಿಬ್ಬ, ದಿಬ್ಬಗಳಲ್ಲೂ ಎಷ್ಟೊಂದು ವೈವಿಧ್ಯ. ಶುದ್ಧ ಬಂಡೆಯಲ್ಲದಲ್ಲಿ ಪ್ರತಿ ನಡುಗಡ್ಡೆಗೂ ದಟ್ಟ ಕಾಂಡ್ಲಾಪೊದರುಗಳ ಪೌಳಿ, ಹಿನ್ನೆಲೆಯಲ್ಲಿ ಆಕಾಶ ಎತ್ತಿ ಹಿಡಿದ ಮರಗಳು. ಹೊರ ನೋಟಕ್ಕೆ ಎಲ್ಲವೂ ದಟ್ಟ ಹಸಿರಂಗಿ ತೊಟ್ಟಿದ್ದರೂ ಕೆಲವಕ್ಕೆ ಸಮತಳದ ನೆಲ, ಕೆಲವು ಕಡಿದಾದ ಗುಡ್ಡೆ, ಅಲ್ಲಿ ಇಲ್ಲಿ ಹಸಿರು ಹರಿದು ಮಲೆತು ನಿಲ್ಲುವ ಕಲ್ಲಮೊನಚುಗಳು. ತೀರಾ ವಿರಳವಾಗಿ ಕಾಣುತ್ತಿದ್ದ ಹದ್ದು, ನೀರಕಾಗೆಗಳನ್ನು ಬಿಟ್ಟರೆ ಬೇರಿನ್ಯಾವ ಚಲನಶೀಲ ಜೀವವೈವಿಧ್ಯವನ್ನು ಅವು ಬಿಟ್ಟುಕೊಡುತ್ತಿರಲಿಲ್ಲ. ಅಥವಾ ನಮ್ಮ ದೋಣಿಯ ಡೀಸಲ್ ಇಂಜಿನ್ನಿನ ಗೊಟ ಗೊಟ ಶಬ್ದ ಇರುವವನ್ನು ಪ್ರಕಟವಾಗಲು ಬಿಡುತ್ತಿರಲಿಲ್ಲ ಎನ್ನಬಹುದೇನೋ! ಸುಮಾರು ಒಂದು ಗಂಟೆಯ `ವಿಹಾರ’ದ ಕೊನೆಯಲ್ಲಿ ನಾವು ಬಲು ವಿಸ್ತಾರದ ನೀರಹರಹಿನ ನಡುವಣ ಪುಟ್ಟ ದ್ವೀಪ - ಜಾಲಿಬಾಯ್, ಸಮೀಪಿಸಿದೆವು. ನಮ್ಮ ದೊಡ್ಡ ದೋಣಿಗಳು ತುಸು ದೂರದಲ್ಲೇ ಲಂಗರು ಇಳಿಸುತ್ತಿದ್ದಂತೆ ಅದುವರೆಗೆ ನಮ್ಮ ಬೋಟುಗಳ ಬಾಲಂಗೋಚಿಗಳಂತಿದ್ದ ಪುಟ್ಟ ಎರಡು (ಔಟ್ಬೋರ್ಡ್ ಎಂಜಿನ್ ಇದ್ದವು) ದೋಣಿಗಳು ಬಂಧನ ಕಳಚಿಕೊಂಡು, ಜೀವದಳೆದವು. ಪುಟ್ಟದೋಣಿಯ ತಳದ ನಡುವಿನ ಅಂಶ ಪಾರದರ್ಶಕವಾಗಿತ್ತು. ಆ ಕಂಡಿಯನ್ನು ಸುತ್ತುವರಿದಂತೆ ಆರೆಂಟು ಜನರನ್ನಷ್ಟೇ ಕೂರಿಸಿಕೊಂಡು ಅದು ಸವಾರಿ ಹೊರಡುತ್ತಿತ್ತು. ತುಸುವೇ ಸುತ್ತು ಬಳಸಿನ ದಾರಿಯಲ್ಲಿ ನೀರ ಆಳದ ಜೀವಾಜೀವಲೋಕವನ್ನು ತೋರಿಸುತ್ತಾ ಸಾಗಿತು. ಒಂದೆರಡು ಕಡೆಯಂತೂ ಹವಳದ ವಿಶಿಷ್ಟ ರಚನೆಯ ವಿವರ ವೀಕ್ಷಣೆಗಾಗಿ ನಿಂತು ಸಹಕರಿಸಿತು. ದೋಣಿಚಾಲಕ ಸಾಕಷ್ಟು ಮಾಹಿತಿದಾರನೂ ಇದ್ದ. ಯಾವುದೇ ರೀತಿಯಲ್ಲಿ ನೇರ ನೀರಿಗಿಳಿದು ಪರಿಸರದ ಪರಿಚಯ ಮಾಡಿಕೊಳ್ಳಲಾಗದವರಿಗೆ, ಗುಂಪಿನಲ್ಲಿ ಅಭಿಪ್ರಾಯಗಳ ವಿನಿಮಯ ಮಾಡುತ್ತ ಸಾಗರತಳ ಶೋಧಿಸಬಯಸುವವರಿಗೆ ಇದು ಬಲು ಸಹಕಾರಿ. ಐದು ಮಿನಿಟಿನ ಸವಾರಿಯ ಕೊನೆಯಲ್ಲಿ ದೋಣಿ ನೇರ ಪುಳಿನತೀರಕ್ಕೇ ಮೂತಿ ತೂರಿ ನಮ್ಮನ್ನು ಇಳಿಸಿತು.

ಇಲಾಖೆಯ ಕುರಿತಾಡುವಾಗ ಮೊದಲಲ್ಲೇ `ಶಿಸ್ತಿನಿಂದ’ ಅಂತ ಹೇಳಿದ್ನಲ್ಲಾ? ಹೌದು, ಆಶ್ಚರ್ಯಕರವಾಗಿ ಇಲಾಖೆ ಇಲ್ಲಿ ಪರಿಸರ ಸಂರಕ್ಷಣೆಯ ನಿಯಮವನ್ನು ಕಟ್ಟುನಿಟ್ಟಾಗಿ ಆಚರಣೆಗೆ ತರುತ್ತಿತ್ತು. ಜಾಲಿಬಾಯ್ಗೆ ಹೋಗುವ ಎಲ್ಲಾ ಪ್ರವಾಸಿಗರ ಚೀಲ, ಬಾಟಲಿ ಮುಂತಾದ ತಿನ್ನು-ಕುಡಿ ಸಾಮಾನು ಸಾಗಣೆ ಪರಿಕರಗಳು ಪರಿಸರ ಸ್ನೇಹಿಗಳಾಗಿರಲೇಬೇಕಿತ್ತು. ಇದರ ಅರಿವಿಲ್ಲದೇ ಬಂದವರಿಗೆ ಬಳಕೆಗೆ ಬದಲಿ ವ್ಯವಸ್ಥೆಯಾಗಿ ಇಲಾಖೆಯೇ ಸೆಣಬಿನ ಚೀಲಗಳನ್ನು ಕೊಡುತ್ತಿತ್ತು. ಅನಿವಾರ್ಯವಾದಲ್ಲಿ ಬಳಸಿ ಎಸೆದುಬಿಡಬಹುದಾದ ಪ್ರತಿ ಪ್ಲ್ಯಾಸ್ಟಿಕ್ ಬಾಟಲಿಗೂ ತಲಾ ರೂ ಹತ್ತರ ಠೇವಣಿ ಇಡುವುದೂ ಕಡ್ಡಾಯ ಮಾಡಿದ್ದರು. ಸಹಜವಾಗಿ ಪ್ರತಿ ತಂಡವೂ ಮರಳಿ ದಕ್ಕೆ ಸೇರುವಲ್ಲಿಯವರೆಗೆ ತಮ್ಮ ಪಾನೀಯಗಳಿಗಿಂತಲೂ ಜತನವಾಗಿ ಚೀಲ, ಬಾಟಲಿಗಳನ್ನು ಕಾಪಾಡಿಕೊಳ್ಳುತ್ತಿದ್ದುದನ್ನು ನಾವು ಕಂಡೆವು! ಜಾಲಿಬಾಯಲ್ಲಿದ್ದ ಏಕೈಕ ಮಾನವರಚನೆ ಸ್ತ್ರೀ ಪುರುಷರಿಗೆ ಪ್ರತ್ಯೇಕ ಶೌಚಗೃಹಗಳು. ಉದ್ದೇಶ ಒಳ್ಳೆಯದೇ ಆದರೂ ಸೂಕ್ಷ್ಮ ಕಳೆದುಕೊಂಡಂತೆ ಅವೆರಡನ್ನು ಪರಸ್ಪರ ಸುಮಾರು ಐವತ್ತಡಿ ದೂರದಲ್ಲಿ ಮಾಡಿ, ಕೇಂದ್ರದಲ್ಲಿ ಎತ್ತರದ ನೀರ ಟ್ಯಾಂಕ್ ಮಾಡಿ, ಇನ್ನೊಂದಷ್ಟು ಜಾಗದಲ್ಲಿ ಟ್ಯಾಂಕಿಗೆ ಸಮುದ್ರ ನೀರನ್ನು ತುಂಬಲು ಡೀಸೆಲ್ ಪಂಪ್ ತತ್ಸಂಬಂಧಿ ಕೊಳಾಯಿಜಾಲ ಎಲ್ಲ ಹರಡಿ ಪುಟ್ಟ ದ್ವೀಪಕ್ಕೆ ಶೌಚ ಒಂದು ಕಣ್ಣಕಿಸರಾಗಿ ನಿಂತಿತ್ತು. ಸಾಲದ್ದಕ್ಕೆ ಅವು ಸುನಾಮಿಗೆ ಸಿಕ್ಕು ಇಂದು ತೀರಾ ಜೀರ್ಣಾವಸ್ಥೆಯಲ್ಲೂ ಇತ್ತು. ರಿಪೇರಿ ಕೆಲಸ ಯಾರೂ ಯೋಚಿಸಿದಂತೆ ಕಾಣಲಿಲ್ಲ. ನಾವು ತಿಳಿದ `ಸರಕಾರೀ ಬುದ್ಧಿ’ ಖಂಡಿತವಾಗಿಯೂ ಇನ್ನೂ ದೊಡ್ಡ ಅಭಿವೃದ್ಧಿ ಯೋಜನೆಯನ್ನು ಜಾಲಿ ಬಾಯ್ಗೆ ಹೊಸೆದಿರುತ್ತದೆ. ಸದ್ಯದ ತುರ್ತಿಗೆ ಬಡ ದಿನಗೂಲಿಯೊಬ್ಬ ತಲೆಹೊರೆಯಲ್ಲಿ ಆಗೊಮ್ಮೆ ಈಗೊಮ್ಮೆ ಸಮುದ್ರದ ನೀರನ್ನು ಬಾಲ್ದಿಯಲ್ಲಿ ಹೊತ್ತು ಶೌಚಶುದ್ಧಿ ಮಾಡಿ ಜನಬಳಕೆಗೆ ಒದಗಿಸುತ್ತಿದ್ದ. ಇತರ ಸಮಯದಲ್ಲಿ ಪಾಪ, ಅದೇ ಕೂಲಿ, ನಿರ್ಬಂಧಗಳ ನಡುವೆಯೂ ಜನ ಕಾವಲು-ಕಣ್ಣು ತಪ್ಪಿಸಿ ಕಸ ಎಸೆಯುವುದರ ವಿರುದ್ಧ ಪೊಲಿಸ್ ಕೆಲಸವನ್ನು ಹಾಗೂ ಎಸೆದ ಕಸ ಹೆಕ್ಕುವುದನ್ನೂ ಮಾಡುತ್ತಿದ್ದ! ಸಂಜೆ ನಾವು ಮರಳುವ ವೇಳೆಗೆ ದೋಣಿಗೇರುವಲ್ಲಿ ಆತನ ದೊಡ್ಡ ಕಸದ ಗೋಣಿ ನಮ್ಮ ನಾಗರಿಕತೆಯನ್ನು ಅಣಕಿಸುವಂತೆ ಜೊತೆಕೊಟ್ಟಿತು.
ನಾವು ದ್ವೀಪದ ಹಿಮ್ಮೈಗೆ ಹೋಗಿ ಸುನಾಮಿ ಅವಶೇಷದ ಮರದ ಬೊಡ್ಡೆಯೊಂದರ ಮೇಲೆ ವಿಶ್ರಮಿಸಿದೆವು. ನಾವು ಒಯ್ದಿದ್ದ ಎಮ್.ಟಿ.ಆರ್ ಸಿದ್ಧ ತಿನಿಸುಗಳ ಪ್ಯಾಕೇಟ್ ಖಾಲಿ ಮಾಡಿ (ದಿನಗೂಲಿಗೆ ಕೆಲಸ ಕೊಡಲಿಲ್ಲ!), ಹರಡಿಬಿದ್ದ ಒಂದೇ ಸಮುದ್ರದ ವೈವಿಧ್ಯಮಯಧಾರೆಗಳನ್ನು ನೋಡುತ್ತಾ ಮೈಮರೆತೆವು. ಪಾತ್ರೆಯ ಆಳ, ಕೊರಕಲುಗಳಿಗನುಗುಣವಾಗಿ ಸಮುದ್ರದ `ನಿಂತ ನೀರಿನಲ್ಲೂ’ ಇದ್ದ ಅಸಂಖ್ಯ ಹರಿವುಗಳು ಕಾಣುತ್ತಿದ್ದವು. ನೀರನೀಲಿಮೆಯಲ್ಲಿ ಆಸಂಖ್ಯ ಛಾಯೆಗಳು, ಕೆಲವೊಮ್ಮೆ ಉಬ್ಬು ಚಿತ್ರದ ಭಾಸಗಳು. ಎದುರು ದ್ವೀಪದ ಮಳಲತೀರದ ಬಿಳಿ, ಕಾಡಹಸಿರು, ಬೀಸುವ ಗಾಳಿ, ಹೆಚ್ಚಾಗಿ ಉರುಳುವ ಅಲ್ಲೊಮ್ಮೆ ಇಲ್ಲೊಮ್ಮೆ ಮಗುಚುವ ಅಲೆ ಪೂರ್ಣ ಕಣ್ಣು ತೆರೆದೂ ನಮ್ಮನ್ನು ಧ್ಯಾನಸ್ಥ ಸ್ಥಿತಿಗೆ ಒಯ್ಯುತ್ತಿತ್ತು ಎಂದರೆ ಅತಿಶಯೋಕ್ತಿಯಲ್ಲ. ನಮ್ಮೆಲ್ಲ ಭೌತಿಕ ಚಟುವಟಿಕೆಗಳ ಸಾಮಾನ್ಯ ತಳ ಸಮುದ್ರಮಟ್ಟ. ನಮ್ಮ ಅರಿವಿಗೆ ಬರುವ ಎಲ್ಲವೂ ಅಲ್ಲಿಂದ ಸೇರುತ್ತ ಹೋಗುತ್ತದೆ. ಉದಾಹರಣೆಗೆ ಸಮುದ್ರ ತಟದಿಂದ ಒಂದೂವರೆ ಗಂಟೆ ಒಳನಾಡಿನತ್ತ ಪ್ರಯಾಣಿಸಿ ಅರವತ್ತು ಕಿಮೀ ದೂರದ ಬೆಳ್ತಂಗಡಿ ತಲಪಿದರೂ ಸ್ಮರಣೆ ಸಮುದ್ರದ್ದೇ; ಬೆಳ್ತಂಗಡಿಯ ಎತ್ತರ ಸಮುದ್ರ ಮಟ್ಟದಿಂದ ಸುಮಾರು ಮುನ್ನೂರು ಅಡಿ. ಆದರೆ ಅದೇ ನಾವು ಸಮುದ್ರಕ್ಕಿಳಿದರೆ ಎಲ್ಲಾ ಋಣಾತ್ಮಕ! ನೀರೊಳಗೆ ನಾವು ಶಿಖರದಿಂದ ತೊಡಗುತ್ತೇವೆ. ನಮ್ಮ ವಿಜಯದ ಲಕ್ಷ್ಯ ಕಣಿವೆಯ ಆಳ. ಸಣ್ಣ ಪುಟ್ಟ ಮುಳುಗಿಗೆ ನಮ್ಮ ಶ್ವಾಸಬಂಧ ಸಾಕು. ಹೆಚ್ಚಿನದಕ್ಕೆ ಬೇಕೇ ಬೇಕು ಪ್ರಾಣವಾಯುವಿನ ಬೆನ್ನ-ಬಲ. ನಮ್ಮ ಅದ್ವಿತೀಯ ಶಿಖರ ಎವರೆಸ್ಟನ್ನೂ ಮುಳುಗಿಸುವ ಆಳ ಸಾಗರದಲ್ಲಿದೆ. ಭೂಮಿಯ ಹೊರಮೈಯ ಮೂರನೇ ಎರಡಂಶವನ್ನು ಆವರಿಸಿರುವ ಈ ನೀರಿನ ಆಳ, ಹರಹು, ಊಹಾತೀತ ಜೀವಾಜೀವ ವೈವಿಧ್ಯಗಳ ಕಲ್ಪನೆಯ ಕಡಲಲ್ಲಿ ಕಳೆದುಹೋದವರನ್ನು ವಾಪಾಸು ಹೋಗಲೇ ಬೇಕಾದ ಬೋಟಿನ ಕರೆ ಎಚ್ಚರಿಸಿತು!
ಮತ್ತೊಮ್ಮೆ ಪುಟ್ಟ ದೋಣಿಯಲ್ಲಿ ಇನ್ನೊಂದಷ್ಟು ಹವಳದ ರಚನೆಗಳನ್ನು ನೋಡಿ, ದೊಡ್ಡ ದೋಣಿಗೇರಿದೆವು. ಬಂದ ನಡೆಯಲ್ಲೇ ಮರಳುತ್ತಿದ್ದಂತೆ ಮೋಡದ ಎಲ್ಲೆಲ್ಲಿನ ಸೆಳಕುಗಳು ಒಗ್ಗೂಡಿ, ತೆಳುವಾಗಿ ಬಣ್ಣ ಬದಲಿಸಿ ಸಣ್ಣದಾಗಿ ಹನಿಯತೊಡಗಿತು. ಹೋಗುವಾಗಿನ ನಮ್ಮ ನಾಗರಿಕ ವೇಷಭೂಷಣಗಳು ಮರಳುವಾಗ (ಹ್ಯಾವ್ಲಾಕಿನ ಹಾಗೇ) ಹೆಚ್ಚು ಸಹಜತೆಗೆ ಪರಿವರ್ತನೆಗೊಂಡಿತ್ತು. ಬದಲಿ ಬಟ್ಟೆ ಮುಂತಾದ ವ್ಯವಸ್ಥೆಗಳನ್ನು ಮಾಡಿಕೊಳ್ಳದೇ ಹೋಗಿದ್ದರಿಂದ ಹಾಗೇ ಚಂಡಿ ಬಟ್ಟೆಯಲ್ಲೇ ಇದ್ದೆವು. ವಾತಾವರಣದ ಬಿಸಿ ಇನ್ನೇನು ನಮ್ಮನ್ನು ಸಚೇಲ ಒಣಗಿಸಿಬಿಡುತ್ತದೆ ಎನ್ನುವಾಗ ಬಂದ ಪಿರಿಪಿರಿ ಮಳೆ ನಮಗೆ ಹೊಸ ಅನಾನುಕೂಲವನ್ನೇನೂ ತರಲಿಲ್ಲ. ಹಾಗೇ ನೆನೆದುಕೊಂಡು ಬೈಕ್ ಸೇರಿದೆವು. ಬೈಕೇರಿ ಕುಟೀರಕ್ಕೆ ಮರಳಿ ಶುದ್ಧವಾದೆವು.
ನಾವು ಬೆಳಿಗ್ಗೆ ನಡೆದು ಹೋಗಿ ನೋಡಿದ್ದ ಕಿನಾರೆಯನ್ನು ಇನ್ನಷ್ಟು ವಿವರಗಳಲ್ಲಿ ನೋಡಲು ಬೈಕೇರಿ ಮಾರ್ಗದಲ್ಲೇ ಹೋದೆವು. ಕಿನಾರೆಗೂ ಸ್ವಲ್ಪ ಮೊದಲು ದ್ವೀಪಸ್ತೋಮದ ಕುಡಿನೀರಿನ ವ್ಯವಸ್ಥೆಯ ಒಂದು ಸಣ್ಣ ಅಂಗವನ್ನು ಕಂಡೆವು. ಆ ದರ್ಶನದೊಡನೆ ರಹಮತ್ ತರೀಕೆರೆಯವರದೋ ಕೆಟಿ ಗಟ್ಟಿಯವರದೋ ಅಂಡಮಾನಿನ ಪುಸ್ತಕಗಳ ನೆನಪು ಸ್ವಲ್ಪ ತಿಳಿಯಾಯ್ತು. ಇಡಿಯ ದ್ವೀಪ ಸ್ತೋಮ ಹವಳದ ರಚನೆಗಳೇ ಆದ್ದರಿಂದ ಮುಖ್ಯ ಭೂಮಿಯ ಸ್ತರಗಳ ಲೆಕ್ಕ ಇಲ್ಲಿಲ್ಲ. ಸಹಜವಾಗಿ ಮಳೆನೀರು ಹಿಡಿದಿಡುವ, ಒರತೆ ಮೂಡುವ, ಸಿಹಿನೀರ ತೊರೆ ಎಲ್ಲಾ ಇಲ್ಲಿ ತೀರಾ ಆಶ್ಚರ್ಯದ ಸಂಗತಿಗಳು! (ಇಡೀ ದ್ವೀಪ ಸ್ತೋಮಕ್ಕೆ ಎಲ್ಲೋ ಒಂದು ಸಿಹಿನೀರ, ಪುಟ್ಟ ತೋಡು ಇದೆಯೆಂದು ಆಗಲೇ ಹೇಳಿದ್ದೇನೆ. ಉಳಿದಂತೆ ಸ್ವಾಭಾವಿಕ ಹೊಂಡ, ತೋಡಿದ ಭಾವಿಗಳು ಕೊಡುವುದೇನಿದ್ದರೂ ಸವಳು ನೀರು (= hard water) ಅಥವಾ ಉಪ್ಪು ನೀರು. ಮುಖ್ಯ ಭೂಮಿಯಲ್ಲಿ ಮಾಡಿದಂತೆ ಇಲ್ಲಿ ಆಡಳಿತ ನೆಲ ಕಂಡಲ್ಲೆಲ್ಲ ಬಿಡಾರ ಹೂಡುವ ಕಲ್ಪನೆ ಕಟ್ಟಿಕೊಳ್ಳುವಂತಿಲ್ಲ. ಪ್ರತಿ ನೆಲವನ್ನು ಮೊದಲು ಜಲ-ಸ್ವತಂತ್ರವನ್ನಾಗಿಸುವ ಕೆಲಸ ಮಾಡಿದರಷ್ಟೇ ವಿಸ್ತರಣೆ ಸಾಧ್ಯ. (ಕೊಳಾಯಿ ಸಾಲೆಳೆಯಲು ಕಾವೇರಿ ಇಲ್ಲ, ತಿರುಗಿಸಲು ನೇತ್ರಾವತಿ ಇಲ್ಲ!) ಈಚಿನ ದಿನಗಳಲ್ಲಿ ಶ್ರೀಪಡ್ರೆಯವರು ತಮ್ಮ ಅವಿರತ ಶೋಧನೆ, ನಿರೂಪಣೆಗಳಿಂದ ನಮ್ಮಲ್ಲಿ ಮೂಡಿಸಿದ ಜಲಜಾಗೃತಿಯನ್ನು ಇಲ್ಲಿನ ಆದಿವಾಸಿಗಳು ಬಹಳ ಹಿಂದೆಯೇ ಸಹಜವಾಗಿ ಆದರೆ ಆಂಶಿಕವಾಗಿ ಕಂಡುಕೊಂಡಿದ್ದರಂತೆ. ಆದರೆ ಆ ಸೂಕ್ಷ್ಮಗಳನ್ನು ಗಮನಿಸುವ, ದಾಖಲಿಸುವ, ಬೆಳೆಸುವ ಸಮಾಜಶಾಸ್ತ್ರಿಗಳ ತಾಳ್ಮೆ ಆಧುನಿಕತೆ ಹೇರುವ ಆಡಳಿತಕ್ಕೆ ಇದ್ದಂತಿಲ್ಲ. ಈ ಪತ್ರದ ಮೊದಲಲ್ಲಿ ನಾನು ಪ್ರಸ್ತಾಪಿಸಿದ ಒತ್ತಿನೆಣೆಯ ಪ್ರಸಂಗ ನೆನಪಿಸಿಕೋ. ವಿಗ್ರಹ ಸ್ಥಾಪನೆ ಚಾರ್ಲೀಚಾಪ್ಲಿನ್ಗೆ ಗೌರವ ಅಲ್ಲ, ಸಮಾಜದ ಬಯಕೆ ಅಲ್ಲ, ಪರಿಸರದ ಅಗತ್ಯವಲ್ಲ, ಸರಕಾರದ ಹೇರಿಕೆ ಅಲ್ಲ, ಕನಿಷ್ಠ ಕಾನೂನಿನ ಮಾನ್ಯತೆಯನ್ನೂ ಮೀರಿದ ಅಸಾಂಗತ್ಯ ಅಲ್ಲಿತ್ತು. ಮನುಷ್ಯ ಕಾಲೂರದ ದ್ವೀಪಗಳು ಅಂದರೆ ನೆಲ ಇಲ್ಲಿ ಇನ್ನೂ ಎಷ್ಟೋ ಇದೆ ಮತ್ತವಕ್ಕೆಲ್ಲ ಹರಡಿಕೊಳ್ಳಲು ನಮ್ಮಲ್ಲಿ ಎಷ್ಟೂ ಜನಸಂಖ್ಯೆ ಇದೆ ಎಂಬ ಭ್ರಮೆ ಬೇಡ. ಲಕ್ಷಾಂತರ ವರ್ಷಗಳ ಪ್ರಾಕೃತಿಕ ರೂಢಿಯನ್ನು ಕೇವಲ (ಸ್ವಾತಂತ್ರ್ಯ ಬಂದು) ಅರವತ್ತೆರಡರ ಎಳಸಿನ ಕೇವಲ ಸಾಮಾಜಿಕ ಆಡಳಿತ ಅವಸರದಲ್ಲಿ ನಾಗರಿಕಗೊಳಿಸುವ ಹುಚ್ಚು ಸಾಹಸಕ್ಕೆ ತೊಡಗದಿರಲಿ. ನಮ್ಮಲ್ಲೇ ಕಾಣುತ್ತಿದೆ - ಜೀವಾಜೀವಗಳ ಪ್ರಾಮಾಣಿಕ ಸರ್ವೇಕ್ಷಣೆಯೇ ಆಗದೆ ನೀರಾವರಿ, ಜಲವಿದ್ಯುತ್, ಗಣಿಗಾರಿಕೆಯೇ ಮೊದಲಾದ ಪ್ರಾಕೃತಿಕ ಅನಾಚಾರಗಳು ಸಾರೋದ್ಧಾರ. ಪರಮಾಣು, ಉಷ್ಣ ವಿದ್ಯುತ್ ಸ್ಥಾವರಗಳು, ಪೆಟ್ರೋದಿಂದ ತೊಡಗಿ ಅನೇಕಾನೇಕ ರಾಸಾಯನಿಕ ವಿಷೋತ್ಪನ್ನಗಳ ಹೇರಿಕೆ ಅವಿಚ್ಛಿನ್ನ. ಅಂಡಮಾನ್ ನಿಕೋಬಾರ್ ದ್ವೀಪಸ್ತೋಮವಾದರೂ ಇಂಥ ಗೊಂದಲದ ಬೀಡಾಗದಿರಲಿ ಎಂದು ಹಾರೈಸುತ್ತೇನೆ - ಶಾಂತಿ, ಶಾಂತಿ, ಶಾಂತಿಃ
ಪ್ರಿಯ ಅಶೋಕ್ ನಮಸ್ತೆ.
ReplyDeleteನಿಮ್ಮ ಲೇಖನಗಳು ವಿಭಿನ್ನವಾಗಿರುತ್ತವೆ. ಅಲ್ಲಿ ವ್ಯಂಗ್ಯ, ಹಾಸ್ಯ, ಆಡುನುಡಿ, ಸತ್ಯ ಎಲ್ಲವೂ ಇರುತ್ತದೆ. ನಿಮ್ಮ ಬರಹಕ್ಕೆ ಒಂದು ತೂಕವಿರುತ್ತದೆ. ನಿಮ್ಮ ಅಭಿಪ್ರಾಯಕ್ಕೂ ಒಂದು ಬೆಲೆಯಿದೆ. ನಾನಂತೂ ಅದನ್ನು ಗೌರವಿಸುತ್ತೇನೆ. ಈ ಬಾರಿಯ ನಿಮ್ಮ ಲೇಖನದಲ್ಲಿನ ಚಾಪ್ಲಿನ್ ಪ್ರತಿಮೆಯ ಕುರಿತು ಓದಿ ಬೇಸರವಾಯಿತು. ಇವೆಲ್ಲವೂ ಪ್ರಚಾರಕ್ಕಲ್ಲದೇ ಬೇರೆ ಕಾರಣಗಳು ಇದ್ದಿರಲಾರದು. ನಲವತ್ತು ವರ್ಷದ ಕಾಲ ದಕ್ಷಿಣ ಕನ್ನಡದಲ್ಲಿದ್ದು, ಅಲ್ಲಿಯವನೇ ಆಗಿದ್ದ ನನಗೆ ಈಗ ಅಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದಾಗ ಮೊದಲು ಹೀಗಿರಲಿಲ್ಲ. ಅಸಹನೆಯನ್ನು ಬೆಳೆಸಿಕೊಳ್ಳುತ್ತಿದ್ದೇವೆ ಎಂದೆನಿಸುತ್ತದೆ.
ಜವಳಿ
ತುಂಬ ಚೆನ್ನಾಗಿದೆ. ನಿಮ್ಮ ಜೊತೆ ಕೂತು ಮಾತನಾಡಿದ ಹಾಗೆ ಆಗುತ್ತದೆ. ವಿವರಗಳು, ಅನಿಸಿಕೆಗಳು, ನಿಮ್ಮದೇ ಶೈಲಿಯ ಜೋಕುಗಳು...ವಾಹ್ ತುಂಬ ಖುಶಿಯಾಗುತ್ತದೆ ಓದುವುದಕ್ಕೆ. ಪುಸ್ತಕವಾಗಿ ಕೂಡ ಇದು ಬರಬೇಕು. ಪತ್ರದ ಶೈಲಿಯಲ್ಲಿರುವುದರಿಂದ ನಿಮ್ಮ ಲೇಖನಕ್ಕೆ ವಿಶೇಷ ಹೊಳಪು, ಆತ್ಮೀಯತೆ ಬಂದುಬಿಟ್ಟಿದೆ. ಒಳ್ಳೆಯ ಯೋಜನೆ.
ReplyDeletefirst time reading the blog. good writing. sorry i do not have kannada fonts. so writing in english.
ReplyDelete