15 March 2009

ಸಂಶೋಧನಾ ಪ್ರಜ್ಞೆ ಮತ್ತು ಪದವಿ

[ವಿಜಯ ಕರ್ನಾಟಕ ಪತ್ರಿಕೆ ಡಾಕ್ಟರೇಟ್‌ಗಳ ಬಗ್ಗೆ ವಿಶೇಷ ಸರಣಿ ಸುರು ಮಾಡಿದಾಗ ನಾನು ಸ್ವಲ್ಪ ತಡವಾಗಿ ನಾಲ್ಕು ನನ್ನ ಮಾತುಗಳನ್ನು ಬರೆದು ಕಳಿಸುವವನಿದ್ದೆ. ಆ ದಿನವೇ ವಿಕ ತನ್ನ ಲೇಖನಮಾಲೆಯನ್ನು ಮುಗಿಸಿದ ಷರಾ ಪ್ರಕಟಿಸಿತು. ಅನಂತರ ಅದನ್ನು ವಿರಾಮದಲ್ಲಿ ಪರಿಷ್ಕರಿಸಿದ್ದೇನೆ. ಇದನ್ನು ಕೇವಲ ತನ್ನ ಪುಟದ ಹೊಂದಾಣಿಕೆಗಾಗಿ ಸಣ್ಣ ಕತ್ತರಿ ಪ್ರಯೋಗದೊಡನೆ `ಸಂಶೋಧನೆಯ ಸಂಶೋಧನೆ’ ಶೀರ್ಷಿಕೆಯೊಡನೆ ಕನ್ನಡಪ್ರಭ (೧೫-೩-೨೦೦೯ ಸಾಪ್ತಾಹಿಕಪ್ರಭ) ಪ್ರಕಟಿಸಿತು. ಬ್ಲಾಗಿಗರ ಪೂರ್ಣ ಓದು ಮತ್ತು ಮುಕ್ತ ಚರ್ಚೆಗೆ ಅದನ್ನಿಲ್ಲಿ ಒಡ್ಡಿಕೊಳ್ಳುತ್ತಿದ್ದೇನೆ - ಅಶೋಕವರ್ಧನ]

ನಾನೊಬ್ಬ ಪುಸ್ತಕ ವ್ಯಾಪಾರಿ. ವ್ಯಾಯಾಮ, ಸಾಹಸ, ಸಂಶೋಧನೆ ಮುಂತಾದವು ನನಗೆ ಕೇವಲ ನಿಘಂಟಿನ ಪದಗಳಾಗಿದ್ದ ಕಾಲವದು; ೧೯೭೦-೮೦ರ ದಶಕ. ವಾರದ ಆರು ದಿನ ಪೇಟೆಯ ಗದ್ದಲದ ಏಕತಾನತೆ ಮುರಿಯುವುದಕ್ಕೋ `ಅದು’ ಅಲ್ಲಿದೆ ಎಂಬ ಕುತೂಹಲಕ್ಕೋ ಕಾಡು, ಬೆಟ್ಟ, ಬಂಡೆ, ಗುಹೆ, ಝರಿ, ಜಲಪಾತ ಹುಡುಕಿಕೊಂಡು ಹೋದೆ. ಯಕ್ಷಗಾನ, ತಾಳಮದ್ದಳೆ, ನಾಟ್ಯ, ನಾಟಕ, ಸಂಗೀತ, ಸಿನಿಮಾ (ಆಯ್ದ ಮಾತುಭಾರೀ ಸಭೆಗಳನ್ನೂ) ಮುಂತಾದವುಗಳನ್ನು ಅನುಭವಿಸಿದೆ. ವೃತ್ತಿರಂಗದಲ್ಲಂತೂ ಮಾತು, ಕೃತಿಗೆ ಬೇಧವುಳಿಯದಂತೆ ದುಡಿದೆ, ಸಿದ್ಧಿಸಿದ್ದ ಸ್ವಲ್ಪ ಭಾಷಾಬಲದಲ್ಲಿ ಮುಗ್ಧವಾಗಿ ಆದರೆ ಅನುಭವಕ್ಕೆ ಪ್ರಾಮಾಣಿಕವಾಗಿ ಕೆಲವು ಲೇಖನಗಳನ್ನು ಬರೆದೆ, ಪ್ರಕಟಿಸಿದೆ (ಮೂರು ಪುಸ್ತಕಗಳೇ ಪ್ರಕಟವಾಗಿ ಮುಗಿದಿವೆ). ನಾನು ಬಯಸದೇ ಇದ್ದರೂ ಬೆಳೆದ `ಖ್ಯಾತಿ’ಯೊಡನೆ ಸವಾಲುಗಳು ಕಾಡತೊಡಗಿದವು. ಆಗ ಹೋದರೆ ಹೋದೆ, ನೋಡಿದರೆ ಆಯ್ತು, ಬರೆದರೆ ಮುಗೀತು ಎಂದು ಸುಮ್ಮನೆ ಕೂರುವಂತಿರಲಿಲ್ಲ. ಸಾಂಪ್ರದಾಯಿಕ ಮಡಿ ಮತ್ತು ಮುಹೂರ್ತವನ್ನು ಮೀರಿ `ಪವಿತ್ರ ಗುಹೆ’ಗೆ ನುಗ್ಗಿದರು ಎಂದು ಹೊಡೆಯಲು ಮುಂದಾದವರ ಬಳಿ ನಮ್ಮ ನಿಷ್ಠೆಯನ್ನು ಪ್ರಮಾಣಿಸಿದೆವು. ಯಕ್ಷಗಾನದ ಭಾಗವತನೋರ್ವ ಅಭಿಮಾನೀ ಸಂಘದ ಅಮಲಿನಲ್ಲಿ ಅವಹೇಳನಕಾರೀ ಪತ್ರಲೇಖನಕ್ಕಿಳಿದಾಗ, ಯೋಗ್ಯ ವಾಗ್ದಂಡನೆ ಕೊಡಿಸಿ ಅಳತೆಗಿಳಿಸಬೇಕಾಯ್ತು. `ನಂಬಿಕೆಗಳನ್ನು ಕೆಣಕಬೇಡಿ’ ಎಂದು ಎರಡೆರಡು ಲೇಖನಗಳಲ್ಲಿ ತಮ್ಮ ಮುದ್ದಿನ ನಂಬಿಕೆಗಳನ್ನು ಸಾರ್ವತ್ರೀಕರಿಸ ಹೊರಟವರಿಗೆ `ಇದು ಬರಿ ಕೆಣಕಲ್ಲೋ ಅಣ್ಣಾ’ ಎಂದು `ನಂಬಿಕೆ’ಯ ಉದ್ದಗಲವನ್ನು ಹೇಳುತ್ತಾ ನಮ್ಮದೂ ಸಾಚಾ ನಂಬಿಕೆಯೇ ಎಂದು ಗಟ್ಟಿಸಿ ಪರಿಚಯಿಸಿದ್ದೂ ಆಯ್ತು. ಪುಸ್ತಕೋದ್ಯಮದಲ್ಲಂತೂ ಸಾಂಸ್ಥಿಕ ಪ್ರತಿಷ್ಠೆ, ವ್ಯಕ್ತಿತ್ವದ ಹಿರಿತನಗಳ ಪ್ರಭಾವದಲ್ಲಿ ತಪ್ಪುತತ್ವಗಳನ್ನು ಪ್ರತಿಪಾದಿಸುವವರ ವಿರುದ್ಧದ ಹಲವು ಖಾಡಾಖಾಡಿಗಳು `ಪುಸ್ತಕ ಮಾರಾಟ ಹೋರಾಟ’ವೆಂಬ ಸಂಕಲಿತ ಪುಸ್ತಕವಾಗಿಯೂ ಪ್ರಕಟವಾಗಿತ್ತು. “ಆಯ್ತಾಯ್ತು! ಇಷ್ಟೆಲ್ಲಾ ಇಲ್ಲಿ ಯಾಕೇಂತ" ನೀವು ತಾಳ್ಮೆ ಹರಿದು, ಬೊಬ್ಬೆ ಹೊಡೆಯುವ ಮೊದಲು ಹೇಳಿಬಿಡುತ್ತೇನೆ...
ಪ್ರಾಮಾಣಿಕ, ಬುದ್ಧಿಪೂರ್ವಕ ಅನುಭವಗಳು ಸಂಶೋಧನಾತ್ಮಕ ಹದಕ್ಕೆ ನಮ್ಮನ್ನು ಬೆಳೆಸುತ್ತವೆ; ಅವು ಸಮಾಜದ ಅಭಿವೃದ್ಧಿಗೆ ಕೊಡುಗೆಗಳೂ ಆಗುತ್ತವೆ. ಅದನ್ನು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಪ್ರೋತ್ಸಾಹಿಸುವ ಸಲುವಾಗಿ ನಾಮಗೌರವ (ಡಾಕ್ಟರೇಟ್ ಅನ್ನಿ), ಪದೋನ್ನತಿ, ಸವಲತ್ತುಗಳ ಹೆಚ್ಚಳವೆಲ್ಲ ಸೇರಿಕೊಂಡಿವೆ. ನಿಜವಿಶ್ವವಿದ್ಯೆಗೆ ಹೋಲಿಸಿ ವಿವಿನಿಲಯದ ನಾಮಗೌರವದ ವ್ಯಾಪ್ತಿಯ ಕೊರತೆಯನ್ನು ಸ್ವಲ್ಪಮಟ್ಟಿಗಾದರೂ ನೀಗಿಕೊಳ್ಳುವ ಕ್ರಮವಾಗಿ ಎಲ್ಲಾ ವಿವಿನಿಲಯಗಳೂ ಹೊರಗಿನವರಿಗೆ ಗೌರವ ಡಾಕ್ಟರೇಟ್‌ಗಳನ್ನು ಕೊಡುವ ಸಂಪ್ರದಾಯ ನಡೆದಿದೆ. ಆದರೆ ದುರಂತ ಎಂದರೆ ಇಂದು ಅಧ್ಯಯನ, ಯೋಗ್ಯತೆಗಳನ್ನು ಮೀರಿ ಹಣ, ವಶೀಲಿ ನಡೆಯುತ್ತದೆ; ಎಲ್ಲಕ್ಕೂ ಖರೀದಿ ದರ ಇದೆ! ಸಂಶೋಧನಾ ಪಥಗಮನವನ್ನು ಉಡಾಫೆ ಮಾಡಿ, ಲಕ್ಷ್ಯ ಸಾಧನೆಯ (ಪೀಎಚ್‌ಡೀ) ಕಣ್ಕಟ್ಟು ತೋರಿ, ಪ್ರಯೋಜನಗಳನ್ನಷ್ಟೇ ಗಿಟ್ಟಿಸುವ ಕೆಲವರಿಂದಾಗಿ ಇಂದು, “ಡಾಕ್ಟರೇಟ್” ಎಂದ ಕೂಡಲೇ “ರೇಟ್ ಎಷ್ಟು” ಎಂದು ಕೇಳುವಂತಾಗಿದೆ. ಹೆಚ್ಚಿನ ವಿವರಗಳಿಗೆ ನನ್ನ ಹವ್ಯಾಸಿ ಆಸಕ್ತಿಯಿಂದ ಅಯಾಚಿತವಾಗಿ ನನಗೊದಗಿದ ಹಲವು ಅನುಭವಗಳಲ್ಲಿ ಐದನ್ನು ಗಮನಿಸಿ.

ಒಬ್ಬ ಪ್ರೊಫೆಸರರಿಗೆ ಕಡಲಾಮೆಗಳ ಸಂರಕ್ಷಣಾ ಯೋಜನೆಯಲ್ಲಿ ವಿದ್ಯಾರ್ಥಿಗಳೊಡನೆ ತೊಡಗಿಕೊಳ್ಳುವ ಅನಿವಾರ್ಯತೆ (ಅನುದಾನ) ಬಂತು. ತಿಂಗಳ ಬೆಳಕಿನಲ್ಲಿ, ನಿರ್ಜನ ಕಡಲಕಿನಾರೆಗಳಲ್ಲಿ ಮೊಟ್ಟೆಯಿಡಲು ಬರಬಹುದಾದ ಆಮೆಗಳನ್ನು ಗುರುತಿಸಿ, ಮೊಟ್ಟೆಗಳಿಗೆ ರಕ್ಷಣೆ ಒದಗಿಸುವ ಅವರ ಸಾಹಸಕ್ಕೆ ಹೊರಗಿನವನಾದ ನಾನೂ ಒಲಿದು ಸೇರಿದ್ದೆ. ಬೀಸುಗಾಳಿ, ಕಿರು ಅಲೆಗಳ ಸದ್ದಿನಲ್ಲಿ ನಮ್ಮ ಪಿಸುಮಾತುಗಳು ಹೂತು ಹೋಗುತ್ತಿದ್ದವು. ವ್ಯಾನಿನಲ್ಲಿ ಗೊರಕೆ ಹೊಡೆಯುತ್ತಿದ್ದ ಪ್ರೊಫೆಸರರನ್ನು ನಾನು ಎಬ್ಬಿಸಿ ಕೇಳಿಯೇ ಬಿಟ್ಟೆ “ನಮ್ಮ ಗಟ್ಟಿ ಮಾತು ಆಮೆಗಳನ್ನು ಹೆದರಿಸೀತೇ ಸಾರ್?” ಆಮೆ ಸಂಶೋಧನಾ ಯೋಜನೆಯ ಪ್ರೊಫೆಸರರ ಸಂಗ್ರಹ ಶೂನ್ಯ. ಸ್ವಂತ ಆಸಕ್ತಿಯಿಂದ ಆ ಯೋಜನೆಯನ್ನು ತರಿಸಿದ ಅವರ ಶಿಷ್ಯ ಸವಿನಯವಾಗಿ ಪ್ರೊಫೆಸರರನ್ನೂ ರಕ್ಷಿಸಿದ “ಆಮೆಗಳಿಗೆ ಶ್ರವಣಾಂಗವಿಲ್ಲ. ಭಾರೀ ಗದ್ದಲ, ನಮ್ಮ ಓಡಾಟದ ಕಂಪನಗಳನ್ನು ಗ್ರಹಿಸುವ ಸಾಧ್ಯತೆಯಷ್ಟೇ ಇದೆ.”ದೇವರ ಕಾಡುಗಳ ಅಧ್ಯಯನ ವಿವಿನಿಲಯದ ಇನ್ನೊಂದು ಮಹತ್ತರ ಅನುದಾನಿತ ಯೋಜನೆ. Field study ಅರ್ಥಾತ್ ಕ್ಷೇತ್ರ ಕಾರ್ಯಕ್ಕಾಗಿ ಆಗೀಗ ಪ್ರೊಫೆಸರರು ಸಕಲ ಗಾಂಭೀರ್ಯದಿಂದ ಎಲ್ಲಾ ಔಪಚಾರಿಕತೆಗಳನ್ನು ಪೂರೈಸಿಕೊಂಡು ಶಿಷ್ಯರ ಹಿಂಡಿನೊಡನೆ ಹೋಗಿ ಬರುವುದಿತ್ತು. ಕೆಟ್ಟ ಕುತೂಹಲದಲ್ಲಿ ಅಲ್ಲಿನ ಅವರ ವಾಸ್ತವದ ಕಲಾಪಗಳ ಬಗ್ಗೆ ಒಮ್ಮೆ ಇಣುಕುನೋಟ ಹಾಕಿದೆ. ಎಂಬತ್ತು ನೂರು ಕಿಮೀ ಪ್ರಯಾಣಿಸಿ (ಒಂದು ತೀರ್ಥ-) ಕ್ಷೇತ್ರಕ್ಕೆ ಇವರು ಭೇಟಿ ಕೊಡುತ್ತಿದ್ದದ್ದು ನಿಜ. ಹೇಗೂ ವ್ಯಾನ್ ಹೋಗುತ್ತಲ್ಲಾಂತ ಪ್ರೊಫೆಸರರ ಹೆಂಡತಿ ಮಕ್ಕಳು ಜೊತೆಗೊಡುತ್ತಿದ್ದರು. ಮತ್ತೆ ಅಲ್ಲಿಗೆ ಹೋಗಿಯೂ ದೇವದರ್ಶನ, ಕನಿಷ್ಠ ಹಣ್ಣುಕಾಯಿ ಮಾಡಿಸದಿದ್ದರೆ ಹೇಗೆ! ಪ್ರಯಾಣದ ಆಯಾಸ ಕಳೆಯಲು ತಿಂಡಿಕಾಫಿಯೋ ಊಟವೋ ಹಿಂಬಾಲಿಸಿದಂತೆ ಸಣ್ಣ ವಿಶ್ರಾಂತಿಗಳಿಗೆಲ್ಲ ಯಾವ ಆಡಿಟರ್ರೂ ಆಕ್ಷೇಪವೆತ್ತಲಾರ. ಅಷ್ಟರಲ್ಲಿ ಸಂಜೆಯಾಗುತ್ತಿತ್ತು. ಮತ್ತೆ ಅಲ್ಲೇ ಉಳಿದು ಇನ್ನೊಂದೇ ದಿನದಲ್ಲಿ ಕೆಲಸ ಮಾಡೋಣವೆಂದರೆ ಕಾಡುವ ವಿಧಿ, ನಿಷೇಧಗಳು ಪಾಪ ಇವರ ಅಧ್ಯಯನಾತ್ಮಕ ಉತ್ಸಾಹವನ್ನೇ ಉಡುಗಿಸಿಬಿಡುತ್ತಿದ್ದವು. ಕನಿಷ್ಠ ಅಂದಿನ (ತೀರ್ಥ) ಕ್ಷೇತ್ರಕಾರ್ಯದ ಬೆಳಕನ್ನು ಮಾರಣೇ ದಿನದ ಮಹತ್ವದ ಸೆಮಿನಾರಿಗೆ ಸಜ್ಜುಗೊಳಿಸಲಾದರೂ ಸಮಯಾಭಾವ ಉಂಟಾಗದಂತೆ ಊರಿಗೆ ತುರ್ತು ಮರಳುತ್ತಿದ್ದರು.

ಸುಮಾರು ಹತ್ತು ವರ್ಷದ ಹಿಂದೆ ನಾನೊಂದು ಎಕ್ರೆ ಪಾಳುಭೂಮಿಯನ್ನು ಕೊಂಡು (ಹೆಸರು - ಅಭಯಾರಣ್ಯ) ಸಸ್ಯ ಪುನರುತ್ಥಾನದ ಕನಸಿಗೆ ನನ್ನ ಹೆಂಡತಿಯೊಡಗೂಡಿ ಅರೆಬರೆ ಕೆಲಸಕ್ಕಿಳಿದೆ. ಅಂದಿನಿಂದಿಂದಿನವರೆಗೂ ಸಿಕ್ಕೆಲ್ಲ ಜೀವಶಾಸ್ತ್ರಾಧ್ಯಾಪಕ, ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಕೆಲಸಕ್ಕೂ ಅಧ್ಯಯನಕ್ಕೂ ಇದು ಮುಕ್ತವೆಂದು ಹೇಳುತ್ತಲೇ ಬಂದೆ. ಆದರೆ ಇತ್ತ ತಲೆಹಾಕಿ ಮಲಗಿದವರೂ ಇಲ್ಲ. ಆದರೂ ಇಲ್ಲಿ ಸಾಕಷ್ಟು ಜೀವ ಸಹಜವಾಗಿ ಕುದುರಿದೆ, ವಿದ್ಯಾ ದೇಗುಲಗಳಲ್ಲಿ ಸಂಪತ್ತು ಸವಲತ್ತುಗಳ ಮಹಾಪೂರದಲ್ಲಿ ಜೀವನಾಡಿ ದಿನೇ ದಿನೇ ಕ್ಷೀಣಿಸುತ್ತಾ ಬರುತ್ತಿದೆ!

ವನ್ಯ ರಕ್ಷಣೆಯ ಅಪೂರ್ವ ಹೆಜ್ಜೆಯಾಗಿ ನಾವಿಬ್ಬರು ಗೆಳೆಯರು ನೇರ ಪಶ್ಚಿಮ ಘಟ್ಟದಲ್ಲಿ ಎರಡು ವರ್ಷದ ಹಿಂದೆ ಹದಿನೈದು ಎಕ್ರೆ ಕಾಡನ್ನು ಖರೀದಿಸಿದೆವು (ಹೆಸರು - ಅಶೋಕವನ). ಇದನ್ನಂತೂ ವಿವಿನಿಲಯಕ್ಕೆ ಲಿಖಿತ ಮನವಿಯೊಡನೆ ಸಂಶೋಧನೆಗೆ ಮುಕ್ತಗೊಳಿಸಿಟ್ಟೆವು. ಜನ ಬಿಡಿ, ಮಾರೋಲೆಯೂ ಬರಲಿಲ್ಲ. ಅನ್ಯ ಕಾರ್ಯಾರ್ಥ ಭೇಟಿಯಾಗಿದ್ದ ಪ್ರೊಫೆಸರರೊಬ್ಬರನ್ನು ಕೆದಕಿ ನೋಡಿದೆ. ವೈಯಕ್ತಿಕವಾಗಿ ಮಾಸಿಕ ಅರ್ಧ ಲಕ್ಷದವರೆಗೂ ಆದಾಯವಿರುವ ಮಾನ್ಯರು ಕನಿಷ್ಠ ಪ್ರಯಾಣ ವ್ಯವಸ್ಥೆ (ನಾವು ನಾಲ್ಕೈದು ಮಂದಿ ಖರ್ಚು ಹಂಚಿಕೊಂಡು ಕಾರಿನಲ್ಲಿ ಹೋಗಿಬರುವಾಗ ರೂಪಾಯಿ ಇನ್ನೂರು ಆದರೆ ಹೆಚ್ಚು), ವಾಸ ವ್ಯವಸ್ಥೆ (ವನ್ಯ ಸಂಶೋಧನೆಗೆ ಪಂಚತಾರಾ ಹೋಟೆಲ್ ನಿರೀಕ್ಷೆಯೇ?) ಸಂಭಾಳಿಸಲು ಆನುದಾನ, ಯೋಜನೆಗಳು ಬೋಳು ಆಕಾಶದಿಂದ ಬಂದು ಬೀಳಲು ಕಾದಿದ್ದರು!

ಈಚೆಗೆ ಅಶೋಕವನದಲ್ಲಿ ಈ ವಲಯಗಳಲ್ಲಿ ಅಳಿದೇ ಹೋಗಿದೆ ಎಂದು ನಂಬಲಾಗಿದ್ದ ಮರನಾಯಿಯ (Nilgiri Marten) ಪತ್ತೆಯಾಯ್ತು. ಅದರ ಕುರಿತು ವಿಡಿಯೋ, ಲೇಖನ, ಅಂತರ್ಜಾಲ ಪ್ರಚಾರಗಳೂ (ಇದೇ ಬ್ಲಾಗಿನಲ್ಲಿ ವನ್ಯ ವಿಭಾಗದಲ್ಲಿ ಲೇಖನ ಓದಿ) ನಡೆದವು. ಆದರೆ ಯಾವುದೇ ವಿದ್ಯಾಸಂಸ್ಥೆಗಳ ಒಂದು ಹುಳವೂ ಸ್ಪಂದಿಸಲಿಲ್ಲ. ಅದೆ ಅದೇ ಯೋಜನೆ, ಅನುದಾನ, ಪ್ರಾಯೋಜಕತ್ವ, ತಜ್ಞವರದಿ, ಸೆಮಿನಾರು, ವಿದೇಶಗಮನ, ಸಲಕರಣೆ ಸವಲತ್ತು ಸಂಗ್ರಹಗಳ ಗೊಂಡಾರಣ್ಯದಲ್ಲಿ ಕಳೆದುಹೋಗಿದ್ದಾರೆ. ಬಹುಶಃ ಇವರಿಗೆ Nilgiri Martenಗೂ Wren & Martenಗೂ ವ್ಯತ್ಯಾಸವೇ ತಿಳಿದಿಲ್ಲ. ಪೀಎಚ್‌ಡೀಗಳನ್ನು ಆ ಕಾಲಕ್ಕೇ ಶಿವರಾಮ ಕಾರಂತರು ಪಚ್ಚಡಿಗಳು (ಕಚ್ಚಾಕಲಸು) ಎಂದು ಗೇಲಿ ಮಾಡಿದ್ದು ನೆನಪಿಗೆ ಬರುತ್ತದೆ. ಇಂಥವರ (ಎಲ್ಲಾ ಭಾಷಾ ಮತ್ತು ವಿಷಯಕ ವಿಭಾಗಗಳನ್ನು ಸೇರಿಸಿ ಹೇಳುವ ಮಾತಿದು) ಕೃಪಾಪೋಷಣೆಯ ತಗಣೆ, ಹೇನುಗಳ ಸಂಪ್ರಬಂಧಗಳ ಭಾರಕ್ಕೆ ನಮ್ಮ ವಿದ್ಯಾವ್ಯವಸ್ಥೆಯೇ ಕುಸಿದುಬೀಳುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ಅಮೆರಿಕಾದಲ್ಲಿ ಗೌರವ ಡಾಕ್ಟರೇಟ್ ಪಡೆದು ಮರಳುವ ಮೊದಲು ತನ್ನ ಮನೆಯ ನಾಮಫಲಕದಲ್ಲಿ `ಡಾ|’ ಸೇರುವಂತೆ ನೋಡಿಕೊಂಡ ಜನನಾಯಕರಂಥವರನ್ನು ಊಹಿಸಿಯೇ ಖ್ಯಾತ ಸಂಶೋಧಕರೂ ಪ್ರೊಫೆಸರ್‌ಗಳೂ ಆದ ಸುಬ್ರಹ್ಮಣ್ಯನ್ ಚಂದ್ರಶೇಖರ್ (ನೊಬೆಲ್ ಪುರಸ್ಕೃತ ಭೌತಶಾಸ್ತ್ರದ ವಿಜ್ಞಾನಿ), ಸಿ.ಎನ್.ರಾಮಚಂದ್ರನ್ (ಆಂಗ್ಲ ಅಧ್ಯಾಪಕ, ಖ್ಯಾತ ಕನ್ನಡ ವಿಮರ್ಶಕ) ತಮ್ಮ ಅಂಕಿತನಾಮದ ಆದಿಯಲ್ಲಿ `ಡಾ|’ಗಿಂತ ಯೋಗ್ಯತೆ ಸೂಚಕವಾದ `ಪ್ರೊ|’ ಬಯಸುತ್ತಿದ್ದದ್ದು ಇರಬಹುದೋ ಏನೋ! ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆಯೇ ಹೈದ್ರಾಬಾದಿನ ಒಬ್ಬ ರೆಡ್ಡಿ, ಆಗಿನ್ನೂ ಬಾಲ್ಯಾವಸ್ಥೆಯಲ್ಲಿದ್ದ ಮಂಗಳೂರು ವಿವಿನಿಲಯಕ್ಕೆ ಐದು ಲಕ್ಷ ದಾನದ ಆಶ್ವಾಸನೆ ನೀಡಿ ಗೌರವ ಡಾಕ್ಟರೇಟ್ ಪಡೆದು ಮಾತು ತಪ್ಪಿಸಿದ್ದೂ ಈ ಪದವಿಯ ನಿಜಮೌಲ್ಯ ತಿಳಿದದ್ದಕ್ಕೇ ಇರಬಹುದೇ?

ನಾನು ಪಶ್ಚಿಮ ಘಟ್ಟದ `ಅಲೆದಾಟ’ ಶುರು ಮಾಡಿದ್ದ ಹೊಸತರಲ್ಲೇ ಒಮ್ಮೆ ಕುಶಿ ಹರಿದಾಸ ಭಟ್ಟರು ಆತ್ಮೀಯ ಗೆಳೆಯ ಬಾಗಲೋಡಿ ದೇವರಾಯರನ್ನು ನನ್ನಂಗಡಿಗೆ ಕರೆತಂದಿದ್ದರು. ಬಾಗಲೋಡಿ ನನ್ನ ತಂದೆಗೂ ಕಾಲೇಜು ವಿದ್ಯಾರ್ಥಿ ದಿನಗಳಿಂದ ಬಲು ಆಪ್ತರು. ಬಾಗಲೋಡಿಯವರ ಅಪ್ರತಿಮ ಬುದ್ಧಿಮತ್ತೆ ಅವರಿಗೆ ಭಾರತ ಸರಕಾರದ ವಿದೇಶೀ ಸೇವೆಯಲ್ಲಿ ಬಲು ದಕ್ಷ ರಾಯಭಾರಿ ಎಂದೇ ಖ್ಯಾತಿ ತಂದಿತ್ತು. ಆದರೆ ಕನ್ನಡಿಗರಿಗೆ ಇವರು ಸುಂದರ ಸಣ್ಣಕತೆಗಳ ಜನಕ ಎಂದೂ ಪರಿಚಿತ. ಕುಶಿಯವರ ಮಾತಿನ ಓಘದಲ್ಲಿ ನನ್ನ ಪರ್ವತಾರೋಹಣದ ಹವ್ಯಾಸ ತಿಳಿದಕೂಡಲೇ ಬಾಗಲೋಡಿ ಗಂಭೀರರಾದರು. ತಡೆಯಲಾಗದ ಒಳತೋಟಿಯ ಅಭಿವ್ಯಕ್ತಿಯಾಗಿ ನನಗೆ ನಾಲ್ಕು ಮಾತು ಹೇಳಿದರು. `ನೀನು ಕಂಡ ಜೀವವೈವಿಧ್ಯ, ಪ್ರಾಕೃತಿಕ ವಿವರಗಳ ವ್ಯವಸ್ಥಿತ ಪಟ್ಟಿ ಮಾಡು. ಕಾರಣ ಏನೇ ಇರಲಿ, ಬ್ರಿಟಿಷರು ಮಾಡಿದ ನಮ್ಮ ನೆಲದ ಮೂಲ ದ್ರವ್ಯಗಳನ್ನು ದಾಖಲಿಸುವ ಮತ್ತು ಕಾಲಕಾಲಕ್ಕೆ ಪರಿಷ್ಕರಿಸುವ ಕಾರ್ಯ ಈಗ ಶೋಚನೀಯವಾಗಿ ನಿಂತೇ ಹೋಗಿದೆ. ನೀನು ಆ ನಿಟ್ಟಿನಲ್ಲಿ ಶಿಕ್ಷಿತನಲ್ಲದಿರಬಹುದು. ಆದರೂ ನಿನ್ನ ಪಟ್ಟಿ (ಕಂಡದ್ದರ ದಾಖಲೆ) ಎಷ್ಟು ಕನಿಷ್ಠವಿದ್ದರೂ ನಿಜ ದೇಶಸೇವೆಯೇ ಇರುತ್ತದೆ’. ನಮಗೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕು ಆರು ದಶಕ ಕಳೆದಿದ್ದರೂ ಅಂದಿನ ಹೋರಾಟದ ನೆನಪುಗಳು ಇಂದಿನ ಸೋಮಾರಿತನಕ್ಕೆ ಅಥವಾ ಕಳ್ಳಕೆಲಸಕ್ಕೆ ನೆಪಗಳಾಗಿ ಉಳಿದಿವೆ. ಮತ್ತವು ಬೆಳೆಯುತ್ತಲೂ ಇವೆ! ಅವುಗಳ ವೈಭವೀಕರಣದ ಭರದಲ್ಲಿ ಅನುತ್ಪಾದಕ ದಿನಗಳು, ವಿನಿಕೆಗಳು ದಿನೇ ದಿನೇ ವೃದ್ಧಿಸುತ್ತಿವೆ. ಆರಾಧನೆ ಬೆಳೆದಲ್ಲಿ ವಿಚಾರ ಸೊರಗುತ್ತದೆ.

ನೆರಿಯ ಮಲೆಯ ಕಣ್ಕಟ್ಟುವ ಕಾಡಿನಲ್ಲಿ, ಉಸಿರುಸಿಕ್ಕುವ ಏರಿನಲ್ಲಿ ನಾನೊಬ್ಬ ಗೆಳೆಯನ ಜತೆ ಅಮೆದಿಕ್ಕೆಲ್ ಶಿಖರದೆಡೆಗೆ ಪಾದಬೆಳೆಸಿದ್ದೆ (೧೯೭೭ರ ಸುಮಾರಿನಲ್ಲಿ). ನಮಗಿದ್ದ ಒಂದೇ ಆಧಾರ ಸರ್ವೆ ಆಫ್ ಇಂಡಿಯಾದ ವಿವರವಾದ ನಕ್ಷೆ. ೧೯೭೬ರ ಸುಮಾರಿಗೆ ನಾನದನ್ನು ಬಲು ಪ್ರಯಾಸದಿಂದ ಇಲಾಖೆಯ ಅರ್ಥಹೀನ ಕಾನೂನು ಜಿಡುಕು ಬಿಡಿಸಿ ಖರೀದಿಸಿದ್ದರೂ ಅದರಲ್ಲಿ ನಮೂದಾಗಿದ್ದಂತೆ ಮೂಲ ಸರ್ವೇಕ್ಷಣೆ ನಡೆಸಿದ ವರ್ಷ ೧೯೧೦-೧೧. ಬೆಳ್ತಂಗಡಿಯಿಂದ ಚಾರ್ಮಾಡಿಯತ್ತ ಸಾಗುವ ದಾರಿಯಲ್ಲಿ ಕಕ್ಕಿಂಜೆಯಿಂದ ಕವಲಾದ ಮಣ್ಣುದಾರಿ ನೆರಿಯಾದವರೆಗೆ ಸಾರ್ವಕಾಲಿಕದಂತೆ ಕಾಣುತ್ತಿತ್ತು. ನೆರಿಯ ಏಲಕ್ಕಿ ತೋಟಗಳತ್ತ ಮುಂದುವರಿದಂತೆ ಕಾಡು ತೋಟಗಳ ಅನುಪಾತ ತಿರುಗಾಮುರುಗಾವಾದ್ದು ಸ್ಪಷ್ಟವಾಗಿ ನಕ್ಷೆಯಲ್ಲಿ ನಮೂದಾಗಿತ್ತು. ನಕ್ಷೆಯಲ್ಲಿನ ಮಣ್ಣ ದಾರಿ ನೆರಿಯಾ ಏಲಕ್ಕಿಮಲೆಯಿಂದಾಚೆ ಕಾಲ್ದಾರಿಯಾಗಿ ಮುಂದುವರಿದು ಶಿಖರವನ್ನು ಸ್ಪಷ್ಟವಾಗಿ ತಲಪಿದ್ದೇ ನಮ್ಮ ಆಶಾದೀಪ. ಏಲಕ್ಕಿಮಲೆಯವರೆಗೂ ನೆರಿಯಾದವರ ಸ್ಪಷ್ಟ ಮಾರ್ಗದರ್ಶೀ ಸೂತ್ರಗಳು ಒದಗಿತ್ತು. ಮುಂದೆ ನಡೆನಡೆದಂತೆ ಕಾಡುಕಲ್ಲುಗಳನ್ನು ಒತ್ತೊತ್ತಾಗಿ ಜೋಡಿಸಿ ಹಗುರ ತಿರುವುಮುರುವುಗಳಲ್ಲಿ ಸಾಗುತ್ತಿದ್ದದ್ದು ಬರಿಯ ಸವಕಲು ಜಾಡಲ್ಲ, ಕನಿಷ್ಠ ಗಾಡಿದಾರಿಯಾದರೂ ಹೌದು ಎನ್ನುವಂತಿತ್ತು. ಆದರೆ ನಿರ್ವಹಣೆಯ ಕೊರತೆಯಲ್ಲಿ ಮಾರ್ಗಗುರುತಿನ (ವಾಸ್ತವದಲ್ಲಿ ಮೊದಲು ಮೈಸೂರು ಹಾಗೂ ಮದ್ರಾಸು ಪ್ರಾಂತ್ಯಗಳ ಈಗ ದ.ಕ ಮತ್ತು ಚಿಕ್ಕಮಗಳೂರು ಜಿಲ್ಲಾಗಡಿರೇಖೆ) ಗುಪ್ಪೆಗಳು ಕುಸಿದು, ನೆಲಹಾಸಿನೆಡೆಯಲ್ಲಿ ನಿಷ್ಪಾಪಿಯಂತೆ ಮೊಳೆತ ಕಾಡು-ಬೀಜಗಳು ನೆಲಹಾಸನ್ನೇ ಮಗುಚುವ ಮಹಾವೃಕ್ಷಗಳಾದ್ದು ಕಾಣುತ್ತಿತ್ತು. ಮೊದಲು ಈ ದಾರಿ ಯಾಕಿತ್ತು, ಈಗ ಯಾಕೆ ಉಪೇಕ್ಷೆ?

ನೆರಿಯದ ಹಿರಿಯ ಶ್ರೀ ರಾಘವ ಹೆಬ್ಬಾರ್ ಹೇಳುವಂತೆ ಅಮೆದಿಕ್ಕೆಲ್ ಶಿಖರದ ಮೇಲಿನದು ಬ್ರಿಟಿಷರ ಕಾಲದಲ್ಲಿ ಔನ್ನತ್ಯ ಮಾಪಕ ಸಲಕರಣೆ ಒಯ್ದು ಇದರ ಎತ್ತರದ ಖಾಚಿತ್ಯದೊಡನೆ ಆಸುಪಾಸಿನ ಎಲ್ಲಾ ಶಿಖರ ತೆಮರುಗಳ ನಕ್ಷೆ ತಯಾರಿಸಿದ್ದರಂತೆ. ಮತ್ತೆ ಎರಡು ವರ್ಷಕ್ಕೊಮ್ಮೆ ಸ್ಥಳೀಯ ತಹಸೀಲ್ದಾರ್ ಈ ಗಡಿಕಲ್ಲಿನ ಸಾಲಿನಗುಂಟ ತನ್ನ ಅಧಿಕೃತ ವೀಕ್ಷಣೆ ನಡೆಸಿ, ಶಿಖರದ ಗುಪ್ಪೆಯ ಬಂದೋಬಸ್ತನ್ನು ಖಾತ್ರಿಪಡಿಸಲೇ ಬೇಕಿತ್ತಂತೆ. ಆ ಭೇಟಿಗೆ ಮುನ್ನ ಸ್ಥಳದ ಮಾಲೀಕರ ನೆಲೆಯಲ್ಲಿ ಹೆಬ್ಬಾರ ಬಂಧುಗಳಿಗೆ ಸ್ಥಳೀಯ ವ್ಯವಸ್ಥೆಗೆ ಸೂಚನೆ ಬರುತ್ತಿತ್ತಂತೆ. ಸಹಜವಾಗಿ ಜಮೀನ್ದಾರರು ಕಾಡುಸವರಿ, `ಸಾಹೇಬರ ಸಾರೋಟು’ ಸಾಂಗವಾಗಿ ಸಾಗಲು ದಿಬ್ಬ ಸವರಿ, ತೆಮರು ತುಂಬಿಕೊಡುತ್ತಿದ್ದರಂತೆ. ಭೇಟಿ ಒಂದು ದಿನದ ಔಪಚಾರಿಕತೆಯಲ್ಲ, ಸಾಹೇಬರಾದಿ ಸಿಬ್ಬಂದಿಗಳಿಗೆ ಅಲ್ಲಲ್ಲಿ ಊಟವಸತಿಯ ವ್ಯವಸ್ಥೆಯೊಡನೆ ದಿನಗಟ್ಟಳೆ ಒಂದು ಉತ್ಸವವೇ ಆಗಿಬಿಡುತ್ತಿತ್ತಂತೆ. ಆದರೆ ಸ್ವಾತಂತ್ರ್ಯೋತ್ತರ ಕಾಲದಲ್ಲಿ ದಾರಿ, ಸೌಕರ್ಯಗಳು ಏರುತ್ತಾ ಬಂದರೂ ಈ ಭೇಟಿ ವಿರಳವಾಗುತ್ತಾ ಹೋಗಿದೆ. ಮೊದಲಿನಂತೆಯೂ ಇಲ್ಲದ ಜಮೀನ್ದಾರರಿಗೆ `ದಾಕ್ಷಿಣ್ಯದ ಬಂಧ’ದಿಂದ ಮುಕ್ತಿ ಸಿಕ್ಕಿದ್ದೇನೋ ಸರಿ. ಆದರೆ ಆ ನೆಪದಲ್ಲಾದರೂ ಆಡಳಿತಕ್ಕೆ ಕನಿಷ್ಠ ಎರಡು ವರ್ಷಕ್ಕೊಮ್ಮೆಯಾದರೂ ಪ್ರತಿ ಹಳ್ಳಿಮೂಲೆಯನ್ನು ಪ್ರತ್ಯಕ್ಷ ನೋಡಿ ತಿಳಿಯುವ ಅವಕಾಶ ತಪ್ಪಿಯೇ ಹೋದಂತಾದ್ದು ಅನ್ಯಾಯ. ಈಗಲೂ ಸರಕಾರ ಅಪರೂಪಕ್ಕೆ ಗಡಿರೇಖೆಯುದ್ದಕ್ಕೆ ಪೊದರು ಸವರಿ, ಗುಪ್ಪೆಗಳನ್ನು ನೇರ್ಪುಗೊಳಿಸುವ ಕೆಲಸಗಳನ್ನು ಕೂಲಿಗಳಿಂದ ನಡೆಸುವುದುಂಟು. ಮತ್ತೆ ಸರ್ವೇಕ್ಷಣೆಯ ತಂತ್ರ ಉಪಗ್ರಹದ ಎತ್ತರಕ್ಕೆ ಏರಿದಮೇಲೆ ವಸ್ತುತಃ ರೇಖೆ ಮತ್ತು ಕಲ್ಲಗುಪ್ಪೆಗಳು ಅರ್ಥ ಕಳೆದುಕೊಂಡಿರಲೂಬಹುದು. ಆದರೆ ಆಕಾಶದಲ್ಲಿ ಕುಳಿತ ಕ್ಯಾಮರಾಕಣ್ಣು ತಪ್ಪಿಸುವ ನೂರೆಂಟು ಕಲಾಪಗಳನ್ನು ದಾಖಲಿಸುವುದು ವೈಯಕ್ತಿಕ ಭೇಟಿಯಿಂದಲಷ್ಟೇ ಸಾಧ್ಯ.

ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ವಿಜ್ಞಾನಿಯೊಬ್ಬರು ಪಶ್ಚಿಮ ಘಟ್ಟದ ಒಂದು ವಲಯಕ್ಕೆ ಹೀಗೇ ಮೂರುದಿನದ ಭೇಟಿ ಕೊಟ್ಟಾಗ ಇದುವರೆಗೆ ಗುರುತಿಸದಿದ್ದ ಹದಿಮೂರು ಕಪ್ಪೆ ಪ್ರಬೇಧಗಳನ್ನು ದಾಖಲಿಸಿದ್ದು ಸಣ್ಣದೇ? ಸುಬ್ರಹ್ಮಣ್ಯದಿಂದ ಗಂಟೆ ದೂರದಲ್ಲಿ ಸುಮಾರು ಮೂವತ್ತು ವರ್ಷದಿಂದೀಚೆಗೆ ಕೃಷಿಕರಾಗಿ ನಿಂತ ಗಿರಿಗದ್ದೆ ಭಟ್ಟರ ಸಾಹಸವನ್ನು ಹೊಗಳಿ ಹಾಡುವ ಮಂದಿ ನೆರಿಯ ಮಲೆಯಲ್ಲಿ ಅಂದರೆ ಜನವಸತಿಯಿಂದ ಗಂಟೆಗಟ್ಟಳೆ ದೂರದಲ್ಲಿ ಅದೂ ಐವತ್ತಕ್ಕೂ ವರ್ಷ ಮೊದಲು ನೆಲೆನಿಂತ ಗೋವಿಂದಭಟ್ಟರ ಮನೆಯ ಅವಶೇಷಗಳನ್ನು ವೀರಗಲ್ಲಿಗೆ ಸಮನಾಗಿ ಕಾಣಬಹುದಲ್ಲವೇ? `ಪೂರ್ಣ ಪರಿಸರ ಸ್ನೇಹೀ’ ಹೆಸರಿನಲ್ಲಿ ಈ ವಲಯದ ಮಲೆ ಸೀಳಿ ಸಾಗಿದ ಪೆಟ್ರೋ-ಕೊಳವೆ ಸಾಲು ಮೊದಮೊದಲು ನೆರಿಯ ಹೊಳೆಯನ್ನು ನೆರೆಯ ಹೊಳೆಯಾಗಿಸಿ ಅಪೂರ್ವ ಪ್ರವಾಹವನ್ನು ಕಾಣಿಸಿತ್ತು. ಸದ್ಯ ಪರ್ವತ ಶ್ರೇಣಿಗೇ ಅಂತಃ ಕುಸಿತ ಒದಗಿಸಿದ್ದು ಸಣ್ಣ ಸೇವೆಯೇ!! ನೆರಿಯ ಮನೆಯಿಂದ ಏಲಕ್ಕಿ ಮಲೆಯೊಳಗಿನ ಬಿದಿರು ಬಂಗ್ಲೆಗೆ ಹೋಗಬೇಕಾದರೆ ಎಂದೂ ದರ್ಶನ ಕೊಡಬಹುದಾಗಿದ್ದ ಕಾಡಾನೆಗಳು, ಕಾಳಿಂಗ ಸರ್ಪಗಳು ಇಂದು ಘಟ್ಟದಾಚಿನ ತೋಟಮನೆಗಳಲ್ಲಿ ಠಿಕಾಣಿ ಹೂಡಿದ್ದರ ಹಿಂದೆ ಯಾವೆಲ್ಲಾ ಮಿನಿ-ವಿದ್ಯುದಾಗಾರಗಳ ವಿಕಸನದ ಕಥೆಯಿರಬಹುದು? ಹಿಂದೆಲ್ಲ ಮಲೆಗಳ ದುರ್ಗಮತೆಯ ಪ್ರಚಾರದ ಮುಸುಕಿನಲ್ಲಿ ನೆಲಗಳ್ಳತನವಿರುತ್ತಿತ್ತು, ಕಳ್ಳ ಗಾಂಜಾ ಬೆಳೆಯಿರುತ್ತಿತ್ತು. ಇಂದು ನಕ್ಸಲೈಟ್‌ನಿಂದ ತೊಡಗಿ ಕಳ್ಳಬೇಟೆ, ಕಳ್ಳನಾಟಾ, ಕುರಂದಾ ಗಣಿಗಾರಿಕೆ, ಅಕ್ಷರಶಃ ಕೊಲೆ ದರೋಡೆಗಳೂ ಸಹಜವಾಗುತ್ತಿವೆ. ಆಡಳಿತ ಅನುಸರಿಸುತ್ತಿರುವುದು ಕ್ಷಣಿಕ `ಉಪಶಮನ ವೈದ್ಯಕೀಯ’! “ಹಾಗಲ್ಲ” ಎಂದು ಘಟ್ಟಿಸಿ ಹೇಳಬೇಕಾದ ಸಾಮಾಜಿಕ ಅಧ್ಯಯನ, ಪಾರಿಸರಿಕ ಸಂಶೋಧನೆ, ಅಭಿವೃದ್ಧಿ ಪತ್ರಿಕೋದ್ಯಮವೇ ಮುಂತಾದ ಮೌಲ್ಯಗಳು ಕೇವಲ ಕಾಲೇಜು ವಿಶ್ವವಿದ್ಯಾನಿಲಯಗಳ ತೋಟಶೃಂಗಾರದ ಸರಕುಗಳಾಗಿ ಉಳಿದಿವೆ.

13 comments:

 1. ಶ್ರೀನಿವಾಸ ಕಕ್ಕಿಲ್ಲಾಯ15 March, 2009 18:23

  ಡಾಕ್ಟ-ರೇಟು! ಎಲ್ಲಕ್ಕೂ 'ರೇಟು'! ಅಸಲಿ ಡಾಕ್ಟರಗಿರಿಯೂ ಮಾರಾಟದ ಸರಕಾಗಿರುವಾಗ 'ಗೌರವ ಡಾಕ್ಟರೇಟ'ನ್ನು ವಿವಿಗಳು ಮಾರಾಟಕ್ಕಿಡುವುದರಲ್ಲಿ ಆಶ್ಚರ್ಯವೇನಿಲ್ಲ. ಮೊದಲು ಅಪರೂಪವಾಗಿದ್ದದ್ದು ಈಗ ವ್ಯವಸ್ಥಿತವಾಗಿದೆ. ಸರಕಾರಗಳು ನೀಡುವ ಪುರಸ್ಕಾರಗಳ ಗತಿಯೂ ಬಹುತೇಕ ಇದೇ. ನೀವಂದಂತೆ ನಿಜವಾಗಿ ಅರ್ಹರಿರುವವರಿಗೆ ಈ ಪುರಸ್ಕಾರಗಳು ಸಂದಾಗ ಅದನ್ನೂ ಸಂಶಯಿಸುವಂತಾಗಿಬಿಟ್ಟಿದೆ. ಮರ್ಯಾದೆಯಿದ್ದವರು ಇವನ್ನು ತಿರಸ್ಕರಿಸುವುದೇ ಒಳ್ಳೆಯದು!

  ReplyDelete
  Replies
  1. ಪ್ರಶಸ್ತಿ ಮತ್ತು ಸನ್ಮಾನಗಳನ್ನು ಸ್ವೀಕರಿಸುವುದೇ ಅವಮಾನದ ಸಂಗತಿಯಾಗಿರುವುದು ಈ ಕಾಲದ ದುರಂತ ಸರ್.

   Delete
 2. ಮಾನ್ಯ ಆಕ್ರೋಶವರ್ಜನರು ಚಾಟಿ ಹಿಡಿದು ಸಮಾ ಏಟು ಕೊಟ್ಟಿದ್ದೀರಿ. ಗೊರಕೆಮಲ್ಲ ತಜ್ಞರು ಇನ್ನಾದರೂ ಎಚ್ಚರಗೊಂಡು ಒಂದಷ್ಟು ನಾಚಿಕೆ ಪಟ್ಟುಕೊಳ್ಳುವ ನಾಟಕವಾದರೂ ಆಡಬೇಕಷ್ಟೇ! 'ನಾನು ಪಚಡಿ (ಪಿ ಎಚ್ ಡಿ) ಮಾಡುವಾಗ ಎಲ್ಲಾ ಓದಿ ಮುಗಿಸಿಬಿಟ್ಟದ್ದೇನೆ. ಇನ್ನೇನೂ ಓದುವುದಕ್ಕಿಲ್ಲ' ಎಂದೊಬ್ಬಾಕೆ ಕನ್ನಡ ಪ್ರಭೃತಿ ಗಳಹಿದಾಗ ಅನ್ನಿಸಿದ್ದು ಚಟ್ಟಕಟ್ಟುವವರೆಗೂ ಕಲಿಕೆ ಬಾಕಿ ಉಳಿಯುವಾಗ ಇವರು ಮುಗಿಸಿದ್ದು ಏನನ್ನು ಅಂತ! ದಿನ ದಿನವೂ ಮಾರುಕಟ್ಟೆಗೆ ಹೊಸ ಸರಕು, ಹೊರ ರುಚಿ ಬರುತ್ತಲೇ ಇದೆ. ಹೊಸ ಹುಡುಗರು ಹೊಸ ಹುರುಪಿನಲ್ಲಿ ಒಂದಷ್ಟು ಏನೇನೇನನ್ನೋ ಕೆತ್ತುತ್ತಲೇ ಇದ್ದಾರೆ. ಕಳೆದ ಒಂದು ಜನರೇಷನ್‍ನ ದಂಡಪಿಂಡಗಳಿಂದ ಈ ಕೆಟ್ಟ ಹೆಸರು. ಹೋಗಲಿ ಬಿಡಿ ಸ್ವಾಮಿ. ಅವರೆಲ್ಲರೂ ಗಳಿಸುವ ಪಾಪದ ಹಣ ಡಯಾಲಿಸಿಸ್ ಗೆ ಹೋಗುತ್ತದೆ ಇಲ್ಲ ಬಾರ್ ಬಾರ್ ನಲ್ಲಿ ಹರಿಯುತ್ತದೆ. ಇಂಥವರ ಮುಖವಾಡಗಳನ್ನು ಎಳೆಯ ಗೆಳೆಯರು ಕಿತ್ತೊಗೆಯಲು ಸಿದ್ಧರೇ ಆಗಿದ್ದಾರೆ. ಜಗತ್ತಿನ ಮಾಹಿತಿ ಮಹಾಪೂರ ಪ್ರತಿ ಸೆಕೆಂಡಿಗೂ ಹೊಸತಾಗಿ ಕಂಪ್ಯೂಟರ್ ಕಿಟಕಿಯ ಮೂಲಕ ಹರಿದು ಬರುತ್ತಿರುವಾಗ ಹಳೆಯ ಪಕಳೆಯ ಗೊಡ್ಡುಗಳನ್ನು ಗುಡಿಸಿ ಹಾಕುತ್ತಾರೆ ಅಷ್ಟೆ! ಗುಡ್ ಲಕ್ ಯಂಗ್ ಸ್ಟರ್ಸ್!
  ಬೇದ್ರೆ ಮಂಜುನಾಥ

  ReplyDelete
 3. ಕೆ.ಸಿ. ಕಲ್ಕೂರಾ16 March, 2009 21:06

  Dear Ashkavardhana, Good wishes to you.
  With interest I read your article in the blog on Research. The legendary Journalist and a famous Telugu writer ( Kendra Saiths academy award winner) Late Sri Narla Venkteswara had the last laugh on the Doctorates. "What all that is required for a research scholar for writing thesis and earning a P.Hd. is a 'gum bottle and a blade". he said long ago. It is said Sardar K.M.Panikkar, as soon as he became the V.Chancellor of the Mysore University, interviewed the professors. Barring a few, many of them could formulate a definition of their own on their subjects.
  Now and them I am invited to participate in some seminars in some universities in A.P.In Nov.2008, Sre Raghavendra Swamy Muth, Manthralaya and the Potti Sreeramulu Telugu University organized a seminar on Thungabhasdra basin. It is the first attempt on the subject. Muth arranged food and accommodation and the University paid the T.A. Many professors turned down the request, for they were offered only a Second class Sleeper or Super Luxury (Rajahamsa). fair. Only a few took it as a challenge to prsent a paper on the subject. I too participated in the seminar and had to spend more than a thousand rupees from my pocket, as I took the initiative in organizing the seminar and persuaded the Muth to host the same. Memento's, folder bags, Parimala prasad of the Muth and a VIP Shawl was presented to each of the participants.
  During the course of my study tour of the Thungabhara I met some Professors of the Kuvempu, Kannada,Mysore and Bengluru Universities. To my shocking surprise many of them are not aware of the Mysore Gazetteer and Coorg by Benjamin Lewis Rice, first published in 1876
  Bavadeeya
  KC Kalkura

  ReplyDelete
 4. ರಾಧಾಕೃಷ್ಣ17 March, 2009 19:57

  ಡಾಕ್ಟರೇಟ್ ಪದವಿದಧರರಿಗೆ ಎಚ್ಚರಿಕೆ ಮಾತುಗಳ ಲೇಖನ ಚೆನ್ನಾಗಿದೆ. ಹುಂಬತನಕ್ಕೆ ಒಂದು ಕಿರೀಟವಾಗಿ ಈ ಪದವಿ ಪರ್ಯಾಯವಾಗುತ್ತಿರುವುದು ನೋವಿನ ವಿಷಯ.
  ಡಾಕ್ಟರೇಟ್ ಪದವಿ ಒಂದು ವಿಷಯದ ಬಗ್ಗೆ ಮೂಲಭೂತ ತಜ್ಞತೆ ಒದಗಿಸುತ್ತ, ಇನ್ನಷ್ಟು ಸಂಶೋಧನೆಗೆ, ಓದಿಗೆ ಉತ್ಸಾಹ ತುಂಬಬೇಕು. ಅದು ಆಗದೇ ಹೋದರೆ ಅದು ದುರಂತ - ಸಂಶಯವಿಲ್ಲ.

  ಡಾಕ್ಟರೇಟ್ ಪದವಿಗಾಗಿ ನಡೆಸಬೇಕಾದ (ನಡೆಸಿದರೆ) ಶಿಸ್ತಿನ ಅಧ್ಯಯನ ಅಧ್ಯಾಪನಕ್ಕೆ , ಮತ್ತಿನ ಸಂಶೋಧನೆಗೆ ಹೊಸ ಆಯಾಮವನ್ನು ಕೊಡಬಲ್ಲದೆಂದು ನನಗೆ ಅನಿಸುತ್ತದೆ. ಭವಿಷ್ಯದ ಕುಡಿಗಳಿಗೆ ಯಾವ ದಾರಿಯಲ್ಲಿ ಸಾಗಬಹುದೆನ್ನುವ ಹಾದಿಯನ್ನು ತೋರುವುದಕ್ಕೆ, ಸಂಶೋಧನೆಯ ವಿವರಗಳನ್ನು ಹೇಳುವುದಕ್ಕೆ ಇಂಥ ನಿಜ ಅನುಭವ ಹೆಚ್ಹಿನ ಆತ್ಮವಿಶ್ವಾಸ ತಂದುಕೊಡಬಲ್ಲದು. ಇದು ನನ್ನ ಸೀಮಿತ ಅದ್ಯಾಪನದ ಅನುಭವ. ಸದಾ ಹೆಚ್ಚಿನ ಅಧ್ಯಯನಕ್ಕೆ ಈ ಪದವಿ ನೂಕುಬಲ ಒದಗಿಸಿದರೆ ಆಗ ಅದಕ್ಕೊಂದು ಶೋಭೆ.

  ಸಮಾಜ ಏನನ್ನು ನಿರೀಕ್ಷಿಸುತ್ತದೆಂದು ಡಾಕ್ಟರೇಟ್ ಮಹಾಮಹಿಮರೆಲ್ಲರೂ ಅತ್ಮ ನಿರೀಕ್ಷಣೆ ಮಾಡಿಕೊಂಡರೆ ತುಸು ಪರಿಸ್ಥಿತಿ ಸುಧಾರಿಸೀತು. ಹಾಗೆ ನೋಡಿದರೆ - ಇದು ಇವರಿಗೆ ಮಾತ್ರ ಸೀಮಿತವಲ್ಲ - ಎಲ್ಲರಿಗೂ - ಉಪಾಧ್ಯಾಯ, ಸಾಹಿತಿ , ವರ್ತಕ, ರಾಜಕಾರಣಿ, ನೇತಾರ, ಕೃಷಿಕ .. ಪ್ರತಿಯೊಬ್ಬನಿಗೂ.

  - ಎ.ಪಿ.ರಾಧಾಕೃಷ್ಣ

  ReplyDelete
 5. ಚಂದ್ರಶೇಖರ ದಾಮ್ಲೆ17 March, 2009 20:55

  ಸಂಶೋಧನೆಯ ಮೇಲಿನ ಸಂಶೋಧನೆ ಬಹಳ ಮಾರ್ಮಿಕವಾಗಿದೆ. ಇನ್ನೊಂದಿಷ್ಟು ಆಳದ ವಿಚಾರಗಳಿವೆ. ಬರೆದರೆ ಪ್ರಕಟಿಸಲು ಪತ್ರಿಕೆಗಳಿಗೆ ಪುಟ ಸಾಲವು.
  ಅಭಿನಂದನೆ. ಇಂತೀ
  ಚಂದ್ರಶೇಖರ ದಾಮ್ಲೆ

  ReplyDelete
 6. ಶ್ರೀನಿವಾಸ ಕಕ್ಕಿಲ್ಲಾಯರು ಹೇಳಿದಂತೆ, ಮರ್ಯಾದೆಯಿದ್ದವರು ಇವನ್ನು ತಿರಸ್ಕರಿಸುವುದೇ ಒಳ್ಳೆಯದು!

  ReplyDelete
 7. ಅಯ್ಯೋ ಹೇಳಿ ಸುಖ ಇಲ್ಲ ಸರ್,
  ನಾನು ಇದೇ ಮಂಗಳೂರು ವಿ ವಿಗೆ ಮಣ್ಣು ಹೊತ್ತಿದ್ದೇನೆ. ಸಾಕು ಸಾಕಾಗಿ ಹೋಗಿದೆ.. ರಿಜಿಸ್ಟರ್ ಮಾಡಿಸೋದಕ್ಕೆ ಏನೇನೋ ಹುಚ್ಚು ರೂಲ್ಸ್. ಡಾಕ್ಟರೇಟ್ ಕಥೆಗಳನ್ನು ಹೇಳುವುದಕ್ಕೆ ಹೊರಟರೆ ದಿನ ರಾತ್ರಿ ಕಳೆದರೂ ಮುಗಿಯುವುದಿಲ್ಲ. ಅಲ್ಲಿರುವುದು ಒಣ ಪ್ರತಿಷ್ಠೆ ಮಾತ್ರ. ಆದರೂ ಅಕಾಡೆಮಿಕ್ ಭವಿಷ್ಯಕ್ಕೆ ಡಾಕ್ಟರೇಟ್ ಅನಿವಾರ್ಯ ಆಗಿ ಹೋಗಿದೆ. ಏನು ಮಾಡೋಣ. ಹೇಳಿ?

  ReplyDelete
 8. ಅಜ್ಞಾತಮಿತ್ರ25 March, 2009 21:55

  ಲೇಖನ ಮುಟ್ಟಿನೋಡಿಕೊಳ್ಳುವಂತಿತ್ತು. ವೃತ್ತಿನಿಷ್ಠೆ, ಪರಿಣತಿ ಇವೆಲ್ಲ ಕೋಶದ ಪದಗಳಾಗಿರುವ ಹೊತ್ತು ಇದು.

  ReplyDelete
 9. "ಡಾಕ್ಟ-ರೇಟು! ಎಲ್ಲಕ್ಕೂ ‘ರೇಟು’! ಅಸಲಿ ಡಾಕ್ಟರಗಿರಿಯೂ ಮಾರಾಟದ ಸರಕಾಗಿರುವಾಗ ‘ಗೌರವ ಡಾಕ್ಟರೇಟ’ನ್ನು ವಿವಿಗಳು ಮಾರಾಟಕ್ಕಿಡುವುದರಲ್ಲಿ ಆಶ್ಚರ್ಯವೇನಿಲ್ಲ. ಮೊದಲು ಅಪರೂಪವಾಗಿದ್ದದ್ದು ಈಗ ವ್ಯವಸ್ಥಿತವಾಗಿದೆ. "


  ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ . ಮಂಗಳೂರು ವಿಶ್ವವಿದ್ಯಾನಿಲಯದಿಂದ ೮ ಲಕ್ಷ ರೂಪಾಯಿಗಳನ್ನು ಕೊಟ್ಟು ಪಿ.ಎಚ್. ಡಿ. ಪಡೆದು ಸದ್ಯ ವಿಭಾಗ ಮುಖ್ಯಸ್ಥರಾಗಿ ಕೆಲಸ ?! ಮಾಡುತ್ತಿರುವ ಓರ್ವ ಪ್ರೊಪೆಸರ್ ರನ್ನು ಕಣ್ಣಾರೆ ನಾನು ಕಂಡಿದ್ದೇನೆ. ಇವರು ಕಂಪ್ಯೂಟರ್ ಸಯನ್ಸ್ ವಿಷಯದಲ್ಲಿ ಪಿ.ಎಚ್. ಡಿ. ಖರೀದಿಸಿದ್ದು ಅದೇ ವಿಭಾಗದಲ್ಲಿ ಈಗ ಮುಖ್ಯಸ್ಥರಾಗಿ ರಾರಾಜಿಸುತ್ತಿದ್ದಾರೆ !!!

  ಎಲ್ಲವೂ ಬಿಸಿನೆಸ್ ಸ್ವಾಮಿ .... ಇವತ್ತು ೮ ಕೊಟ್ಟಿದ್ದೇನೆ ಇನ್ನು ೪ ವರ್ಷದಲ್ಲಿ ಅಸಲಿಗೆ ಬಡ್ಡಿ ಸಮೇತ ಸಿಗ್ತದೆ . ಮತ್ತೆ ಇನ್ಯಾಕೆ ಯೋಚನೆ.? ಅಷ್ಟಕ್ಕೂ ದೊಡ್ಡವರು ಹೇಳಿದಂತೆ "ವ್ಯಾಪಾರಂ ದ್ರೋಹ ಚಿಂತನಂ " ಅಲ್ವೇ ?

  ಈಗ ಎಲ್ಲವೂ ವ್ಯಾಪಾರೀಕರಣ ಆಗಿಬಿಟ್ಟಿದೆ . ಇನ್ನು ಮೈಮುರಿದು ಪಿ.ಎಚ್. ಡಿ. ಪಡೆಯುವುದೆಂದರೆ ತಾಲೂಕ್ ಅಪೀಸ್ ಗೆ ಹೋಗಿ

  ಲಂಚ ಕೊಡದೆ ಕೆಲಸ ಮಾಡಿಸಿಕೊಂಡು ಬಂದ ಹಾಗೆಯೆ !!

  ReplyDelete
 10. ಎಸ್.ಎಂ ಪೆಜತ್ತಾಯ19 September, 2009 21:04

  ಅಶೋಕ ವರ್ಧನರೇ!
  ನಿಮ್ಮ ಪಚ್ಚಡಿ ಬ್ಕಾಗ್ ಓದಿದೆ.
  ಮಾಯವಾಗುತ್ತಾ ಇರುವ ಪಚ್ಚಡಿಗಳ ಕರ್ತವ್ಯ ಪ್ರೀತಿ, ಅವರ ಆಧರಿತ ವಿಚಾರಗಳ ಮೇಲೆಯೇ ಸಮಗ್ರ ಜ್ಞಾನ ಇರದ 'ಅವರ ಅಜ್ಞಾನ' - ಇವುಗಳ ಬಗ್ಗೆ ಓದಿ ವೈರಾಗ್ಯ ಆವರಿಸುತ್ತಾ ಇದೆ. ಇದು ಅಸಹಾಯಕನೊಬ್ಬ ತಾಳಲೇ ಬೇಕಾದ ಮೌನ ವೈರಾಗ್ಯ.

  ಹೆಚ್ಚಿನವರದು : ಉದರನಿಮಿತ್ತಂ ಡಾಕ್ಟರ ವೇಷಂ!

  ಪಚ್ಚಡಿ ಪಡೆದಮೇಲೆ ಅವರ ಪ್ರಕಾರ ಓದು ಸಂಪೂರ್ಣವಾಗಿ ಮುಗಿಸಿದಂತೆ! ಆ ಮೇಲೆ ಉದರಮ್ ಭರಣಂ - ಮಾತ್ರ. ಪದವಿ ಪಡೆದ ಮೇಲೆ ತಮ್ಮ ಸಬ್ಜೆಕ್ಟ್ ಓದಿದರೆ ಈ ಬೃಹಸ್ಪತಿಗಳಲ್ಲಿ ಹೆಚ್ಚಿನವರಿಗೆ ಅವಮಾನ! ಅಧಿಕಾರ ಯುತವಾಗಿ ತಮ್ಮ ಸಬ್ಜೆಕ್ಟ್ ಮೇಲೆ ಮಾತನಾಡಲು ಅವರಿಗೆ ಸಂಪೂರ್ಣ ಅಧಿಕಾರ ಸಿಗುತ್ತದಂತೆ! ಇಂದಿನ ವಿದ್ಯಮಾನದಲ್ಲಿ ಪಚ್ಚಡಿಯ ಪದವಿ ಇದ್ದವರು ಏನು ಕೊರೆದರೂ ನಾವು ನಂಬಲೇ ಬೇಕು! ಅದನ್ನು ಪರಮ ಸತ್ಯ ಎಂಬಂತೆ ನಮ್ಮ ಮಾಧ್ಯಮಗಳು ಮತ್ತು ಪ್ರಾಚಾರ್ಯ ಬಳಗಗಳು ಅನುಮೋದಿಸುತ್ತವೆ.

  ಪಂಚತಾರಾ ಹೋಟೆಲುಗಳಲ್ಲಿ ಕುಳಿತು ಕಟ್ ಅಂಡ್ ಪೇಸ್ಟ್ ಮಾಡುವ ವಿದ್ಯೆಯಲ್ಲಿ ಪಳಗಿದರೆ ಕೆಲವರಿಗೆ ಪಚ್ಚಡಿ ಸಿಗಬಹುದು.

  ಅಂತಹ ಪಂಚತಾರಾ ಜಾಗಗಳಲ್ಲೇ ಪರಿಸರದ ಪ್ರೀತಿ ಎದ್ದು ಕಾಣುವ ಕಾಲ ಇದು.

  ಹೀಗೆ ಮಾಡದಿದ್ದರೆ ಮಾಧ್ಯಮಗಳ ಛಾಯಾ ಗ್ರಾಹಕರು ಮತ್ತು ವರದಿಗಾರರ ಸಂದಣಿ ಅಲ್ಲಿ ಇರಲಾದು.

  ಆತ್ಮ ಗೌರವ ಇಲ್ಲದವರು ಹಣಕೊಟ್ಟು ಪಚ್ಚಡಿ ಕೊಳ್ಳುತ್ತಾರೆ. ಆಗ ಅವರ ಹೆಸರಿಗೆ ಒಂದು ಗೌರವ ಬರುತ್ತೆ. ಇಲ್ಲದ್ದನ್ನು ಸಂಪಾದಿಸಿ ಪಡೆದುಕೊಳ್ಳುವುದೇ ಜೀವನದ ಗುರಿ ಅಲ್ಲವೆ?

  ಕೆಲವು ಸಲ ತಾವು ಬರೆದ ಈ ಮಾತು ಸರಿ ಅನ್ನಿಸುತ್ತೆ: ಪುಣ್ಯಕ್ಕೆ ಜೀವದ ಇತಿಹಾಸದಲ್ಲಿ ನಮ್ಮ ವೈಯಕ್ತಿಕ ಬದುಕು ತೀರಾ ತೀರಾ ಸಣ್ಣದು.
  ಕೇಸರಿ ಪೆಜತ್ತಾಯ

  ReplyDelete
 11. ಎಸ್.ಎಂ ಪೆಜತ್ತಾಯ20 September, 2009 08:38

  ಅಶೋಕವರ್ಧನರೆ
  ನನ್ನಲ್ಲಿ ಆಶಾ ಭಾವನೆ ಇನ್ನೂ ಇದೆ. ನನ್ನ ಬಳಿ ಸಿನಿಕತನ ಇಲ್ಲ. ಆದರೆ ....ಹತಾಶ ಭಾವನೆ ಮಾತ್ರ ಆಗಾಗ ನನ್ನನ್ನು ಕಾಡುತ್ತಾ ಇದೆ.
  ಆಳವಾದ ಜ್ಞಾನವು ಇಂದು ಯಾರ ಸ್ವಂತ ಸ್ವತ್ತೂ ಅಲ್ಲ. ಅಭ್ಯಾಸ ಮಾಡಿ ಜ್ಞಾನವನ್ನು ಅರಸಿ ಹೋದರೆ ಜ್ಞಾನ ಜನ ಸಾಮಾನ್ಯನಿಗೂ ದಕ್ಕುವ ಕಾಲ ಇದು. ಅಂತರ್ಜಾಲ ಜ್ಞಾನ ಲೋಕ ಜ್ಞಾನವನ್ನು ಅರುಸುವವಗೆ ಒಂದು ನಿಜಕ್ಕೂ ಒಳ್ಳೆಯ ದಪ್ತರ. ಇಂದು ವಿದ್ಯೆ ಮತ್ತು ಜ್ಞಾನ ಸಂಪಾದನೆ ಎಲ್ಲರ ಹಕ್ಕು. ನಾನು ಕೆಲವೊಮ್ಮೆ ಕಲಿಯುತ್ತಾ ಇರುವ ಇಂದಿನ ಮಕ್ಕಳ ಜ್ಞಾನ ಕಂಡು ದಂಗಾಗುತ್ತೇನೆ. ಅವರ ಜ್ಞಾನ ಪುಸ್ತಕಗಳಿಗೆ ಮಾತ್ರ ಸೀಮಿತವಲ್ಲ. ಹೆಚ್ಚಿನ ಮಕ್ಕಳು ಈಗ ಒಂದು ಚಿಕ್ಕ ಕ್ಲಾಸ್ ಟೆಸ್ಟ್‌ನಲ್ಲಿ ಒಪ್ಪಿಸಬೇಕಾದ ಪ್ರಬಂಧ ಬರೆಯಲು ಕೂಡಾ ಅಂತರ್‍ಜಾಲ ಜಾಲಾಡುತ್ತಾರೆ. ಇಂದಿನ ಮಕ್ಕಳ ಬಗ್ಗೆ ನನಗೆ ಬಹು ಹೆಮ್ಮೆ ಹಾಗೂ ಭರವಸೆ ಇದೆ. ನಮ್ಮ ಡಾ. ಕಲಾಂ ಸಾಹೇಬರ ಕನಸು ನನಸಾಗಲಿ!
  ಚಿಕ್ಕ ಉದಾಹರಣೆ:
  ನನ್ನ ಅಮೇರಿಕನ್ ಮಿತ್ರನ ಮಗಳು ತನ್ನ ಎಂಟನೇ ತರಗತಿಯ ಕ್ಲಾಸ್ ಅಸೈನ್ಮೆಂಟ್‌ಗೆ ಪ್ರಬಂಧ. ಆ ಮಗು ಕರ್ನಾಟಕದಲ್ಲಿ ನಶಿಸುತ್ತಾ ಇರುವ ಶ್ರೀ ಗಂಧದ ಮರದ ಉತ್ಪಾದನೆ ಹೇಗೆ ಹೆಚ್ಚಿಸ ಬಹುದು? ಹೇಗೆ ಕಾಪಾಡ ಬಹುದು? ಗಂಧದ ಮರದ ವ್ಯಾಪಕ ಕಳ್ಳತನ ಹೇಗೆ ಇತ್ತೀಚೆಗೆ ಬೆಳೆಯಿತು? ಈ ವ್ಯಾಪಕ ಕಳ್ಳತನದ ಬಗ್ಗೆ ಆಕೆಗೆ ಸಿಕ್ಕ ಮಾಹಿತಿ ಮತ್ತು ಆಕೆಗೆ ಸಿಕ್ಕ ಪೂರಕವಾದ ಪುರಾವೆಗಳ ಬಗ್ಗೆ ಕೂಡಾ ಆಕೆ ನಮೂದಿಸಿದ್ದಾಳೆ. ಕರ್ನಾಟಕದ ಗಂಧದ ಬೆಳೆಯ ಪುನರುತ್ಥಾನವನ್ನು ಹೇಗೆ ಮಾಡಬಹುದು? - ಎಂಬ ಬಗ್ಗೆ ಇನ್ನೂರು ಪುಟಗಳ ಪ್ರಬಂಧ ಬರೆದಿದ್ದಾಳೆ. ಆ ಮಗು ಇದುವರೆಗೆ ಗಂಧದ ಮರವನ್ನು ಅಥವಾ ಭಾರತವನ್ನು ನೋಡಿಲ್ಲ. ಇದಕ್ಕೆಲ್ಲಾ ಸ್ಪೂರ್ತಿ? ಅವಳ ಅನ್ವೇಷಣಾ ಕುತೂಹಲ. ಸದಾ ಹೊಸತನ್ನು ಹುಡುಕುವ ಆಕೆಯ ಗೂಗಲ್ ಮೈಂಡ್ !
  ಕ್ಯಾಲಿಫೋರ್ನಿಯಾದಲ್ಲಿ ಕುಳಿತ ಆ ಬಿಳಿಯ ಮಗುವಿಗೆ "ಆಕೆಯ ತಂದೆ ಭಾರತದಿಂದ ಕೊಂಡುಹೋದ ಎರಡಿಂಚು ಎತ್ತರದ ಗಂಧದ ಗಣಪನ ಮೂರ್ತಿ " ಈ ಬಗ್ಗೆ ಕಾಳಜಿ ಹುಟ್ಟಿಸಿತಂತೆ!
  ಆ ಪ್ರಬಂಧವನ್ನು ಆಕೆಯ ತಂದೆ ನನಗೆ ಓದಲು ಕಳುಹಿಸಿದ. ಓದಿ ಶಹಬಾಸ್‌ಗಿರಿ ಕೊಟ್ಟು ಪ್ರಬಂಧವನ್ನು ಹಿಂತಿರುಗಿಸಿದೆ. ಆ ಮಗುವಿನ ಸಂಶೋಧನಾ ಪ್ರವೃತ್ತಿ ಅನುಕರಣೀಯ ಅಲ್ಲವೆ?
  ಇಲ್ಲಿ ನನ್ನ ಅಸಹಾಯಕತೆ ನೋಡಿ:
  ನಮ್ಮ ತೋಟದಲ್ಲಿ ಇದ್ದ ಎಲ್ಲಾ ಗಂಧದ ಮರಗಳು ಇಪ್ಪತ್ತು ವರುಷಗಳ ಹಿಂದೆಯೇ ಕಳುವಾಗಿ ಹೋದವು. ನಮ್ಮ ಊರಿನಿಂದ ಗಂಧದ ತಳಿಯೇ ಮಾಯ ಆಗಿದೆ. ಈ ಬಗ್ಗೆ ಹೇಳಲು ನನಗೆ ನಾಚಿಕೆ ಆಗುತ್ತದೆ. ಈ ಬಗ್ಗೆ ನಾನು ಏನೂ ಮಾಡದೇ ಕೈ ಚೆಲ್ಲಿ ಕುಳಿತಿದ್ದೇನೆ. ಹತಾಶನಾಗಿದ್ದೇನೆ. ನಮ್ಮ ಊರಿನಲ್ಲಿ ಈಗ ಗಂಧದ ಕಂಪಿಲ್ಲ. ಈಗ ಎಲ್ಲೆಲ್ಲೂ ಸರಾಯಿಯ ಕಂಪು ಮಾತ್ರ!
  ನಮಸ್ಕಾರಗಳು
  ಕೇಸರಿ ಪೆಜತ್ತಾಯ

  ReplyDelete
 12. ಅಶೋಕವರ್ಧನ ಜಿ.ಎನ್20 September, 2009 08:52

  ಪ್ರಿಯರೇ
  ನಿಮ್ಮಪತ್ರದಲ್ಲಿ ಉಲ್ಲೇಖಿಸಿದಂತೆ ಮಕ್ಕಳ ಬುದ್ಧಿವಂತಿಕೆಯ ಬಗ್ಗೆ ಯಾರಿಗೂ ಭಿನ್ನ ಅಭಿಪ್ರಾಯವಿರಲು ಸಾಧ್ಯವಿಲ್ಲ. ಆದರೆ ಅಂತರ್ಜಾಲ ಆಧಾರಿತ ಅಥವಾ ಈ ಕೃತಕ ಮಾಹಿತಿ ಮೂಲಗಳನ್ನು ಬಳಸುವ ‘ಜಾಣತನ’ ಕಲಿಸುವ ಸಮಾಜ ಅವರನ್ನು ಅದೂ ಮುಖ್ಯವಾಗಿ ಇಂದಿನ ಭಾರತೀಯ ಶಿಕ್ಷಣಕ್ರಮ ತೀರಾ ತೀರಾ ಹಾಳುಮಾದುತ್ತಿದೆ. ಅಮೆರಿಕಾ ಬ್ರಿಟಿಷ್ ದ್ವೀಪಗಳಿಂದ ಬರುವವರು ಬಿಡಿ, ಗುಲಾಮಗಿರಿಯನ್ನೇ ಒಪ್ಪಿಕೊಂಡಿರುವ ನಮ್ಮ ಗಲ್ಫಿನವರ ಮಕ್ಕಳೂ ಪುಸ್ತಕಗಳಿಗೆ, ನಿಜ ಜ್ಞಾನಮೂಲಗಳಿಗೆ ತೋರುವ ಆಸಕ್ತಿಯನ್ನು ಇಲ್ಲಿನ ಮಕ್ಕಳು ತೋರದಂತಹ ವ್ಯವಸ್ಥೆಯಿದೆ. ಮುಖ್ಯವಾಗಿ ಶಿಕ್ಷಕ ವರ್ಗ ಇಂದು ತೀರಾ ಕಳಪೆಯಾಗಿದೆ. ಇಷ್ಟೆಲ್ಲಾ ಖಚಿತವಾಗಿ ಹೇಳುವಲ್ಲಿ ನನಗೆ ನನ್ನಂಗಡಿಯ ಅನುಭವವೇ ಮಾರ್ಗದರ್ಶಿ. ಇಲ್ಲಿನ ಪಚ್ಚಡಿಯ ಕಥೆ ನೋಡಿದಿರಿ, ಅದೇ ತರ ಇಲ್ಲಿನ ಶಾಲೆಗಳಲ್ಲೂ ‘ಯೋಜನೆಗಳು’ (ಮಕ್ಕಳ projectಊ) ನಡೆಯುತ್ತಿವೆ. ಯಾವುದೇ ವಿಷಯ ಟೀಚರ್ ಹೇಳಲಿ ಅದಕ್ಕೆ ಇಷ್ಟು ಬರಹ, ಇಷ್ಟು ಚಿತ್ರ ಸಂಗ್ರಹಣೆ ಕಡ್ಡಾಯ. ಅನುಭವಕ್ಕೆ, ಅವುಗಳ ಹಿಂದಿನ ಪ್ರಯತ್ನಕ್ಕೆ ಬೆಲೆಯಿಲ್ಲ, getupಗೇ ಮಾರ್ಕು! ಹಾಗಾಗಿ ಪ್ರಾಜೆಕ್ಟು ಸಿಕ್ಕ ಕೂಡಲೇ ಮಕ್ಕಳ ತಂದೆತಾಯಂದಿರು ಬೇಟೆ ಸುರು ಮಾಡುತ್ತಾರೆ. "ನೋಡಿ, ಹಿಂದಿಯಲ್ಲಿ ಕುವೆಂಪು ಬಗ್ಗೆ ನಾಲ್ಕು ಪುಟ ನಿಮ್ಮಲ್ಲೇನಿದೆ? ದಕ್ಷಿಣ ಆಫ್ರಿಕಾದ ಟಿಂಬಕ್ಟೂ ನಿವಾಸಿಗಳ ಬಟ್ಟೇಬರೆಯ ಚಿತ್ರ ನಿಮ್ಮಲ್ಲಿದೆಯೇ?" ಇತ್ಯಾದಿ. ಕನ್ನಡದಲ್ಲಿ ಕುವೆಂಪು ಬಗ್ಗೆ ಎಷ್ಟೂ ಇದೆ, ಅನುವಾದ ಮಾಡಿಕೊಳ್ಳಿ ಎಂದರೆ ಒಬ್ಬರೂ ತಯಾರಿಲ್ಲ. ದಕ್ಷಿಣ ಆಫ್ರಿಕಾ ಬೇಡ ನಮ್ಮ ಕೊರಗರ ದೀನ ಬದುಕಿನ ಚಿತ್ರ ಯಾಕೆ ಕೇಳಬಾರದು? ಕುವೆಂಪುವನ್ನು ಕನ್ನಡದಲ್ಲೇ ಯಾಕೆ ಹೇಳಬಾರದು? ಯಾವುದೋ ಶಾಲೆಯ ತಲೆಹರಟೆ ಅಧ್ಯಾಪಕ ತುಂಬೆ ಹೂವಿನ ಬಗ್ಗೆ ಪ್ರಾಜೆಕ್ಟ್ ಕೊಟ್ಟುಬಿಟ್ಟಿದ್ದ. ಆ ಮಗುವಿನ ತಾಯಿ ನನ್ನಲ್ಲಿಗೆ ಬಂದು ದೂರಿದ್ದು ನೋಡಬೇಕು. "ರೋಡೋ ಡೆಂಡ್ರಾನ್ಸ್, ಟುಲಿಪ್ಸೂ, ರೋಸಸ್ಸೂ, ಕ್ರಿಸಾಂತಮಮ್ಸೂ ಎಷ್ಟೊಂದಿದೆ ಬರವಣಿಗೆ, ಚಿತ್ರ., ಅಂತರ್ಜಾಲ ಮಾಹಿತಿ (ಆರಿಸು, ನಕಲಿಸು, ಅಂಟಿಸು ಮಾಡಿದರೆ ಮಾರ್ಕು ಕೊಡದಿದ್ದರೆ ಮಾಶ್ತ್ರ ಜಾತಕ ನಾವು ಶುದ್ಧ ಮಾಡುವುದಿಲ್ಲವೇ?) ಆದರೆ ಈ ಮೂರ್ಖ ಮಾಷ್ಟ್ರು ತುಂಬೆ ಹೂವು ಕೇಳಿ ಉಪದ್ರ ಮಾಡಿದ್ದಾರೆ. ನೀವೇ ಹೇಳಿ ಎಲ್ಲಿ ಅದರ ಚಿತ್ರ ಸಿಕ್ಕುತ್ತದೆ? ನೀವೇ ಹೇಳಿ ಅದರ ಬಗ್ಗೆ ಬರವಣಿಗೆ ಯಾರು ಮಾಡಿದ್ದಾರೆ?..........." ನನಗೆ ಬೇಡದ ಕೆಲಸ, ಸಲಹೆ ಕೊಟ್ಟೆ "ಒಂದು ಮೊಬೈಲ್ ಫೋನಿನ ಕ್ಯಾಮರವಾದರೂ ಹಿಡಿದುಕೊಂಡು ನಾಲ್ಕು ಹಡಿಲು ಬಿಟ್ಟ ಗದ್ದೆ ಏರಿಗಳಲ್ಲಿ ನಡೆಯಿರಿ, ಬೇಕಾದಷ್ಟು ಚಿತ್ರ ಸಂಗ್ರಹಿಸಬಹುದು. ಅಲ್ಲೇ ನಾಲ್ಕು ಹಳೇ ತಲೆಯವರನ್ನು ಸಂದರ್ಶನ ಮಾಡಿ, ತುಂಬೇ ಮಹಾತ್ಮೆ ಏನು ಚಗತೆ, ತಿಮರೆ, ನೆಲನೆಕ್ಕರೆ, ಕುದನೆ, ನಾಯಿಕಬ್ಬು ಇತ್ಯಾದಿ ಸಾವಿರ ಬಗೆಗಳ ಬಗ್ಗೆ ಸಾವಿರ ಮಾಹಿತಿ ನಿಮಗೆ ಬೇಡಾಂದ್ರೂ ಸಿಗುತ್ತದೆ.........." ನನ್ನ ಲಹರಿ ಮುಗಿಸಿ ತಲೆ ಎತ್ತುತ್ತೇನೆ, ಆ ತಾಯಿ ಮಂಗ ಮಾಯ! ನಾಲ್ಕು ಪುಟ ಬರಹ, ನಾಲ್ಕು ಚಿತ್ರ ನಾಳೆ ಬೆಳಿಗ್ಗೆ ಒಳಗೆ ಸಂಗ್ರಹಿಸಬೇಕೂಂತಿದ್ರೆ ಇವೆನೇನು ಹೇಳ್ತಾನೆ ಎಂಬ ತಿರಸ್ಕಾರದಲ್ಲೇ ಹೋಗಿ ಐದು ಮಿನಿಟಾಯ್ತು ಎಂದ ಸಹಾಯಕ! ಉಪ್ಪಿನಂಗಡಿಯ ಶಾಲೆಯೊಂದರ ಗ್ರಂಥಾಲಯ ಖರೀದಿಗೆ ನನ್ನಲ್ಲಿಗೆ ಬಂದವರ ಕಥೆ ಅವರಲ್ಲಿ ಮುಖ್ಯ ಮೇಶ್ಟ್ರ ಆಸಕ್ತಿಯ ಕುರಿತು ನೀವು ಇಲ್ಲೇ ನನ್ನ ಕಾಗೇರಿಗೊಂದು ಪತ್ರ ದಲ್ಲಿ ನೋಡಿ ತಿಳಿಯಬಹುದು. ಈ ಪತ್ರ ಆ ಶಾಲೆಯ ವರಿಷ್ಠನಿಗೂ ಮಂತ್ರಿ ಕಾಗೇರಿಗೂ ಅವಶ್ಯ ತಲಪುವಂತೆ ನೋಡಿಕೊಂಡೆ. ಆದರೆ ಇಂದಿನವರೆಗೆ ಅವರಿಬ್ಬರ ಪ್ರತಿಕ್ರಿಯೆ ಶೂನ್ಯ.
  ಆತ್ಮಕಥೆ ಹೆಚ್ಚಾಯ್ತು, ಕ್ಷಮಿಸಿ
  ಅಶೋಕವರ್ಧನ

  ReplyDelete