06 February 2009

ಜಿಟಿ ನಾರಾಯಣರಾಯರಿಗೊಂದು ನುಡಿನಮನ

GTN 2004ಜಿಟಿನಾ ನನ್ನ ತಂದೆ. ಈಚಿನ ವರ್ಷಗಳಲ್ಲಿ ಅವರ ಮಾತಿನಲ್ಲಿ ಆಗಾಗ ನಮಗೆ (+ನನ್ನ ಹೆಂಡತಿ) ಆಪ್ತವಾಗಿ ಕೇಳುತ್ತಿದ್ದ ಹೆಸರು ಪ್ರೊ| ಶ್ರೀಕಂಠಕುಮಾರಸ್ವಾಮೀ. ಇವರು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಎಂಜಿನಿಯರಾಗಿ, ಮದ್ರಾಸಿನ ಐಐಟಿ ಸಂಸ್ಥೆಯಲ್ಲಿ ತಂತ್ರಜ್ಞಾನದ ಪ್ರಾಧ್ಯಾಪಕರಾಗಿ ದುಡಿದವರು. “ಜೊತೆಗೆ ವೈದಿಕರು. ಅಧ್ಯಯನ, ಅಧ್ಯಾಪನ ಮತ್ತು ಕರ್ಮಾನುಷ್ಠಾನಗಳಲ್ಲಿ ಇವರದು ಅಚಲ ನಿಷ್ಠೆ. ಇವರ ಧರ್ಮದರ್ಶನದಲ್ಲಿ ವಿದ್ಯಾಪ್ರೀತಿ, ಮಾನವೀಯ ಅನುಕಂಪ, ಲೋಕಕಾರುಣ್ಯ, ಹೃದಯವೈಶಾಲ್ಯಗಳಿವೆ” ಎನ್ನುತ್ತಾರೆ ಶ್ರೀಕಂಠಕುಮಾರಸ್ವಾಮಿಯವರ ಪುಸ್ತಕ `ಹೃದಯಸಂಪನ್ನತೆ’ಗೆ ಮೊದಲ ಮಾತು ಬರೆದ ಪ್ರಣತಾರ್ತಿಹರನ್. ಪುಸ್ತಕ ವ್ಯಾಪಾರಿಯಾಗಿ ನಾನೂ ಅವರನ್ನು ಸ್ವಲ್ಪ ತಿಳಿದುಕೊಂಡಿದ್ದೆ. ಅಕ್ಟೋಬರಿನಲ್ಲಿ ನಮ್ಮ ಮಗ ಅಭಯಸಿಂಹನ ಮದುವೆ ಎಂದು ನಿಶ್ಚಯವಾದಾಗಲಂತೂ ಅವರು ಸರಳ ವಿವಾಹದ ಕುರಿತು ಬರೆದ ಪುಸ್ತಕವನ್ನು ತುಂಬಾ ಬಳಸಿಕೊಂಡೆವು. ಕೆಲವು ದಿನಗಳ ಹಿಂದೆ ನನ್ನ ತಾಯಿ ಹೀಗೇ ನಮ್ಮನೆಗೆ ಬಂದವರು ಕುಮಾರಸ್ವಾಮೀಯವರು ಅವರಿಗೆ ೨೮-೬-೨೦೦೮ರಂದೇ ಬರೆದ ಪತ್ರವನ್ನು ಕೊಟ್ಟರು.

ಅದರ ಪೂರ್ಣಪಾಠ ನಿಮ್ಮ ಅವಗಾಹನೆಗೆ:                                                         ಲೇ: ಪ್ರೊ| ಶ್ರೀಕಂಠಕುಮಾರಸ್ವಾಮಿ

ದಿವಂಗತ ನಾರಾಯಣರಾವ್‌ರವರ ಶ್ರೀಮತಿಯವರಿಗೆ ಮತ್ತು ಅವರ ಪ್ರಿಯ ಮಕ್ಕಳಿಗೆ ಕುಮಾರಸ್ವಾಮಿಯು ಮಾಡುವ ಅನಂತ ಆಶಿಷಃ ಪರಿಚಯವಾದ ಅಲ್ಪಕಾಲದಲ್ಲಿಯೇ ತಮ್ಮ ಸಹೃದಯತೆಯಿಂದ ಆತ್ಮೀಯರಾಗಿದ್ದ ಸನ್ಮಿತ್ರರ ಮರಣದ ಸುದ್ದಿ ನನಗೆ ಆಘಾತವನ್ನೇ ಉಂಟುಮಾಡಿತು. ನಾನು ಮೈಸೂರಿಗೆ ಫೆಬ್ರುವರಿಯಲ್ಲಿ ಬಂದಿದ್ದಾಗ ನೋಡಬೇಕೆಂಬ ಬಹಳ ಆಸೆಯಿತ್ತು. ಕೇವಲ ಫೋನಿನಲ್ಲಿಯೇ ನಮ್ಮ ಸಂಭಾಷಣೆ ಮುಗಿಯಿತು. ನೋಡಲು ಆಗಲೇ ಇಲ್ಲ. ಇಷ್ಟು ಬೇಗ ನಮ್ಮನ್ನು ಬಿಟ್ಟು ಅಗಲುತ್ತಾರೆಂದುಕೊಂಡಿರಲಿಲ್ಲ. (ನನಗಿಂತ ಒಂದೂವರೆ ವರ್ಷ ದೊಡ್ಡವರು ಅಷ್ಟೆ.) ನನ್ನ ಅವರ ಪರಿಚಯ, ಸ್ನೇಹಗಳು ಕೇವಲ ಹತ್ತು ವರ್ಷಗಳ ಹಿಂದಿನದು. ಆದರೂ ಅವರ ನಿಷ್ಕಪಟ ವಿಶ್ವಾಸಾಭಿಮಾನಗಳು, ಋಜುಸ್ವಭಾವ ನಮ್ಮಿಬ್ಬರನ್ನೂ ಬಹಳ ಹತ್ತಿರ ಬರುವಂತೆ ಮಾಡಿ, ಒಡಹುಟ್ಟಿದ ಬಂಧುಗಳಿಗಿಂತ ಹೆಚ್ಚಾಗಿದ್ದರು. ಅನೇಕರಿಗೆ ಅಸೂಯೆ, ಆಶ್ಚರ್ಯಗಳುಂಟಾಗುವಂತೆಯೇ ಇದ್ದೆವು. ಈಗ ಏನೋ ಒಂದು ಅನರ್ಘ್ಯವಾದದ್ದನ್ನು ಕಳೆದುಕೊಂಡಂತೆ ಆಗಿದೆ. ಅವರು ನನ್ನನ್ನು ಮೊದಲನೇ ಸಾರಿ ಭೇಟಿ ಮಾಡಿದ್ದನ್ನು ನೆನೆಸಿಕೊಂಡರೆ ಈಗ ಕಣ್ಣುಗಳು ತುಂಬಿಬರುತ್ತವೆ. ೧೯೯೮ನೇ ಡಿಸೆಂಬರ್ ಅಂತ ಕಾಣುತ್ತೆ. ಗೋವಾಕ್ಕೆ ನನ್ನ ಎರಡನೆ ಮಗಳ ಮನೆಗೆ ಹೋಗಿದ್ದೆ. ಮೈಸೂರಿನಲ್ಲಿ ನಿಮ್ಮ ಮನೆ ಎದುರು ರಸ್ತೆಯಲ್ಲಿರುವ ವೀಣಾ ರಮೇಶ್ ಎಂಬ ನನ್ನ ಶಿಷ್ಯೆಯು ಗೋವಾಕ್ಕೆ ಫೋನ್ ಮಾಡಿ, ಆಗ ತಾನೇ ಪ್ರಕಟವಾಗಿದ್ದ ನನ್ನ `ಹೃದಯ ಸಂಪನ್ನತೆ’ ಎಂಬ ಪುಸ್ತಕವನ್ನು ಜಿಟಿನಾಗೆ ಕೊಟ್ಟು ಬರಲೇ ಎಂದು ಕೇಳಿದಳು. “ನಾರಾಯಣರಾವ್ ಹೆಸರು ಕೇಳಿದ್ದೇನೆ, ಪರಿಚಯವಿಲ್ಲ, ಕೊಡು” ಎಂದು ಹೇಳಿದೆ. “ಅವರು ಇದ್ದದ್ದನ್ನ ಇದ್ದ ಹಾಗೇ ಕಟುವಾಗಿ ಹೇಳುತ್ತಾರೆ, ಪರವಾಯಿಲ್ಲವೇ” ಎಂದು ಕೇಳಿದಳು. “ಸಂತೋಷಾಮ್ಮಾ! ಕಟುವಾದ ಟೀಕೆಯೇ ಬರಲಿ, ತಿದ್ದಿಕೊಳ್ಳುತ್ತೇನೆ” ಎಂದೆ. ಪುಸ್ತಕ ತೆಗೆದುಕೊಂಡು ಹೋಗಿ ಎದುರಿಗೆ ಕೊಡುವ ಧೈರ್ಯವಿಲ್ಲದೆ ಗೇಟಿನಲ್ಲಿರುವ ಪೋಸ್ಟ್ ಬಾಕ್ಸ್ನಲ್ಲಿ ಒಂದು ಕಾಗದ ಬರೆದು ಹಾಕಿಬಿಟ್ಟಿದ್ದಾಳೆ. ಸಾಯಂಕಾಲ, ಜಿಟಿನಾರವರೇ ಅವರ ಶ್ರೀಮತಿಯವರನ್ನು ಕರೆದುಕೊಂಡು ವೀಣಾಳ ಮನೆಗೆ ಹೋದರಂತೆ. “ಏನಮ್ಮಾ, ಇಂಥಾ ಮಹನೀಯರ ಪುಸ್ತಕವನ್ನು ಎದುರಿಗೆ ಕಂಡು ಕೊಡದೆ ಪೋಸ್ಟ್ ಬಾಕ್ಸಿನಲ್ಲಿ ಹಾಕಿದ್ದೀಯಲ್ಲಮ್ಮಾ! ಬಹಳ ದೊಡ್ಡವರು. ಇದುವರೆಗೂ ನಾನು ಅವರನ್ನು ಭೇಟಿಯಾಗದೇ ಇರುವುದು ಹೇಗೆ ಎಂದೇ ಅರ್ಥವಾಗಿಲ್ಲ. ನಾನು ಅವರನ್ನು ನೋಡಬೇಕು, ಕರೆದುಕೊಂಡು ಹೋಗು” ಎಂದರಂತೆ. ನಾನು ಗೋವಾದಲ್ಲಿರುವ ವಿಷಯ ತಿಳಿದು ಯಾವತ್ತು ಬರುತ್ತಾರೆಂಬುದನ್ನು ತಿಳಿದುಕೊಂಡು ನಾನು ಟಿಪ್ಪು ಎಕ್ಸ್‌ಪ್ರೆಸ್‌ನಲ್ಲಿ ಬೆಂಗಳೂರಿನಿಂದ ಬಂದೊಡನೆಯೇ ಮನೆ ಹುಡುಕಿಕೊಂಡು ಬಂದಿದ್ದಾರೆ!! ನಾನು ಐದು ಗಂಟೆಗೆ ಮನೆ ತಲಪಿದೆ. ಆರು ಗಂಟೆಗೆ ಇವರು ಬೆಲ್ ಮಾಡಿದರು. ಯಾರೆಂದು ನೋಡಿದರೆ ಜಿಟಿನಾ. ತಮ್ಮ ಸ್ವಭಾವದಂತೆ “ನಾನು ಜಿ.ಟಿ.ನಾರಾಯಣ ರಾವ್” ಎಂದು ಅಸ್ಖಲಿತವಾದ ವಾಣಿಯಲ್ಲಿ ತಮ್ಮನ್ನು ಪರಿಚಯಿಸಿಕೊಂಡರು. ನಾನು ಮುಗ್ಧನಾಗಿಬಿಟ್ಟೆ. ಮನೆಯಿಂದ ನಡೆದುಕೊಂಡು ಬಂದು ಮೂರು ಮಹಡಿ ಹತ್ತಿ ಬಂದಿದ್ದಾರೆ!! ಆಮೇಲೆ ನಾವು ಬಹಳವೇ ಹತ್ತಿರವಾದೆವು. ಅವರ ಬಿಚ್ಚು ಹೃದಯದ ಮಾತುಗಳು ಇವತ್ತಿಗೂ ಕಿವಿಯಲ್ಲಿ ಗುಂಯ್‌ಗುಡುತ್ತಿವೆ. ಅಂಥವರನ್ನು ಕಳೆದುಕೊಂಡೆ ಎಂಬ ದುಃಖ ಇನ್ನೂ ಕಾಡುತ್ತಿದೆ. ನನಗೇ ಇಷ್ಟಾಗಿರುವಾಗ ನಿಮ್ಮ ಅಪಾರವಾದ ದುಃಖ ಊಹಿಸಿಕೊಳ್ಳಬಲ್ಲೆ. ಈ ಸಮಯದಲ್ಲಿ ನಾನೆ ಯಾವ ವೇದಾಂತವನ್ನೂ ಉಪದೇಶ ಮಾಡಲಾರೆ. ನಿಮ್ಮ ದುಃಖದಲ್ಲಿ ಪಾಲುಗೊಳ್ಳಲು ಇಲ್ಲೊಬ್ಬ ಬಂಧು ಇದ್ದಾನೆ ಎಂಬ ಆಶ್ವಾಸನೆಯನ್ನು ಕೊಡಬಲ್ಲೆ. ಅವರನ್ನು ನೆನೆಸಿಕೊಂಡು ಎರಡು ತೊಟ್ಟು ಕಣ್ಣೀರು ಬಿಡುವುದೇ ಅವರಿಗೆ ನನ್ನ ಶ್ರದ್ಧಾಂಜಲಿ.

ಅವರು ತಮ್ಮ ದೇಹವನ್ನು ಆಸ್ಪತ್ರೆಗೆ ದಾನಮಾಡಿದ್ದಾರೆಂದು ಕೇಳಿದೆ. ಬಹಳ ಸಂತೋಷವಾಯ್ತು. ಸುಟ್ಟು ಬೂದಿಯಾಗುವ ನಮ್ಮ ದೇಹದಿಂದ ಯಾರಿಗಾದರೂ ಉಪಯೋಗವಾಗುವುದಿದ್ದರೆ ಅದರಷ್ಟು ಉತ್ತಮ ಕ್ರಿಯೆ ಬೇರೆ ಇಲ್ಲ. ಲೋಕಕ್ಷೇಮಕ್ಕೋಸ್ಕರ ದಧೀಚಿ ತನ್ನ ಪ್ರಾಣತ್ಯಾಗಮಾಡಿ, ಬೆನ್ನು ಮೂಳೆಯನ್ನು ಇಂದ್ರನಿಗೆ ಕೊಟ್ಟ. ಆ ರೀತಿ ದೇಹೋಪಯೋಗ ಮಾಡುವ ರೀತಿ ಗೊತ್ತಿಲ್ಲದುದರಿಂದ ಈ ಔರ್ಧ್ವದೇಹಿಕ ಕ್ರಿಯೆಗಳು ಹೊರಟಿವೆ. ಇಲ್ಲಿಯೂ ಶವವನ್ನೆ Dispose ಮಾಡುವುದೇ. ಆದರೆ ಅದೇ ಕ್ರಿಯೆಯಿಂದ ಇರುವವರು (ಮಕ್ಕಳು) ತಮ್ಮ ಕೃತಜ್ಞತೆ, ಗೌರವಗಳನ್ನು ಸತ್ತವರಿಗೆ ತೋರಿಸಲು ಸಾಧ್ಯವಾಗಲೆಂದು, ಕ್ರಿಯೆಗಳನ್ನು ಅಳವಡಿಸಿದ್ದಾರೆ. ಆದರೆ ಅವುಗಳನ್ನು ಮಾಡುವುದರಿಂದ ಮೃತರಿಗೆ ಸದ್ಗತಿ ಸಿಗುತ್ತದೆಂಬ ತಪ್ಪು ನಂಬಿಕೆ ಬೇರೂರಿದೆ. ಖಂಡಿತ ಇಲ್ಲ. ನಾವು ಇಲ್ಲಿ ಮಾಡುವ ಮಂತ್ರ ಮತ್ತು ಕ್ರಿಯೆಗಳಿಂದ ಮೃತರಿಗೆ ಸದ್ಗತಿ ಸಿಗುತ್ತದೆಯೆಂಬುದು ಅಸಂಭವ, ಅಸಾಧ್ಯ. ಆ ಕ್ರಿಯೆಗಳೆಲ್ಲವೂ ನಮ್ಮ ಅಂತಃಕರಣಕ್ಕೇ ಸಂಸ್ಕಾರ. ಸತ್ತಮೇಲೂ ನಮ್ಮ ತಂದೆತಾಯಿಗಳ ಉಪಕಾರವನ್ನು, ಪ್ರೀತಿಯನ್ನು ಮರೆತಿಲ್ಲ, ಮರೆಯಲು ಸಾಧ್ಯವೂ ಇಲ್ಲ ಎಂಬ ಸತ್ಯ ಸ್ಥಿತಿಯನ್ನು ಪುನಃ ಪುನಃ ನಮ್ಮ ಸ್ಮರಣೆಗೆ ತರುವುದಕ್ಕೇ ಅಷ್ಟೊಂದು ಕ್ರಿಯಾಕಲಾಪಗಳು. ಜಿಟಿನಾರವರು ಅವರ ಸ್ವಂತ ಸದ್ಗುಣಗಳಿಂದ, ಋಜುತ್ವದಿಂದ, ಸತ್ಯದ ನಿರ್ಭೀತಿಯಿಂದ ಖಂಡಿತವಾಗಿ ಸದ್ಗತಿಯನ್ನು (ಹಾಗೊಂದಿದ್ದರೆ) ಹೊಂದಿಯೇ ಹೊಂದುತ್ತಾರೆ. ನಾವು ಮಾಡುವ ಕ್ಷುಲ್ಲಕಕ್ರಿಯೆಗಳಿಂದಲ್ಲ. ಸದ್ಗತಿ ದೊರಕಲೆಂದು, ಮಕ್ಕಳಾಗಿ  ನಾವು ಪ್ರಾರ್ಥಿಸುವುದು ನಮ್ಮ ಕರ್ತವ್ಯ ಮಾಡೋಣ. ನಾನೂ ನಿಮ್ಮ ಜತೆಗೇ ಪ್ರಾರ್ಥಿಸುತ್ತೇನೆ.

GTN and LAXಅಮ್ಮ! ನಿಮಗೆ ಹೇಗೆ ಸಮಾಧಾನ ಹೇಳುವುದೋ ತಿಳಿಯುತ್ತಿಲ್ಲ. ಅವರಂತೆಯೇ ನನ್ನ ಮೇಲೆ ಅವ್ಯಾಜವಾದ ಪ್ರೀತಿಯನ್ನು ಧಾರೆ ಎರೆದಿದ್ದೀರಿ. ನಾನು ನಿಮಗೆ ಅತ್ಯಂತ ಆಭಾರಿ. ನಿಮ್ಮ ದುಃಖವನ್ನು ಊಹಿಸಿಕೊಳ್ಳಬಲ್ಲೆ. ಪಾಲುಗೊಳ್ಳಲು ನಿಮ್ಮ ಅಣ್ಣ ಇಲ್ಲೊಬ್ಬನಿದ್ದಾನೆ ಎಂದು ತಿಳಿದುಕೊಳ್ಳಬೇಕೆಂದು ಪ್ರಾರ್ಥಿಸುತ್ತೇನೆ. ಸಮಾಜ ನಿಮಗೆ ವಿಧವೆ ಪಟ್ಟ ಕಟ್ಟುತ್ತದೆ, ನಿಜ. ಆದರೆ ನೀವು ವಿಧವೆಯಲ್ಲ, ಸಧವೆ (ಧವ ಎಂದರೆ ಕಾಪಾಡುವವನು ಎಂದರ್ಥ). ಮುತ್ತಿನಂಥ ಮೂರು ಮಕ್ಕಳನ್ನು ಪಡೆದು ಅವರ ಜತೆಯಲ್ಲಿ ಸಂತೋಷದಿಂದ ಇರುವ ನೀವು ವಿಧವೆ ಹೇಗಾದೀರಿ? ೫೦-೬೦ ವರ್ಷದ ಸಹವಾಸದ ಸ್ಮರಣೆಗಳನ್ನು ಮರೆಯಲು ಸಾಧ್ಯವಿಲ್ಲ. ಆದರೆ ಅದೇ ಸ್ಮರಣೆಯೇ ನಿಮಗೆ ಒಂದು ಜೀವಂತ ಶಕ್ತಿಯಾಗಿ, ನಿಮ್ಮನ್ನು ಮಕ್ಕಳ ಜತೆಯಲ್ಲಿ ಅವರ ಸ್ಮರಣ ಸಂತೋಷದಿಂದ ಜೀವನವನ್ನು ಕಳೆಯುವಂತಾಗಲಿ ಎಂದೆ ಭಗವಂತನನ್ನು ಪ್ರಾರ್ಥಿಸುತ್ತೇನೆ. ಅವರ ಸ್ಮರಣೆಯೇ ನಮ್ಮನ್ನು ಋಜು ಸ್ವಭಾವದವರನ್ನಾಗಿಯೂ ಸತ್ಯವನ್ನು ನಿರ್ಭೀತತೆಯಿಂದ ಎದುರಿಸುವ ಶಕ್ತಿವಂತರನ್ನಾಗಿಯೂ ಮಾಡುವುದರಲ್ಲಿ ಸಂದೇಹವಿಲ್ಲ. “ಜನ್ಮಮೃತ್ಯು ಜರಾತಪ್ತ ಜನ ವಿಶ್ರಾಂತಿ ದಾಯಿನೀ” ಎಂದು ಹೊಗಳಿಸಿಕೊಳ್ಳುವ ಆ ಲಲಿತೆಯೇ ನಿಮ್ಮ ತಪ್ತ ಮನಸ್ಸಿಗೆ ವಿಶ್ರಾಂತಿಯನ್ನು ಕೊಡಲಿ.

ಇತಿ ನಿಮ್ಮೆಲ್ಲರ ಸಮೀಪ ಬಂಧು - ಶ್ರೀಕಂಠ ಕುಮಾರಸ್ವಾಮೀ

*****

ಮೇಲೆ ಕಾಣಿಸಿದ ಪತ್ರವನ್ನು ಹೀಗೆ ಸಾರ್ವಜನಿಕಕ್ಕೆ ಹಾಕಲು ಅನುಮತಿ ಕೋರಿ ಪ್ರೊ| ಶ್ರೀಕಂಠಕುಮಾರಸ್ವಾಮೀಯವರಿಗೆ ಪತ್ರಿಸಿದ್ದೆ. ಅದಕ್ಕೆ ಪೂರಕ ಓದಿಗೆ ಅನುಕೂಲವಾಗುವಂತೆ `ದೇಹದಾನ’ದ ಪತ್ರವನ್ನೂ ಲಗತ್ತಿಸಿದ್ದೆ. ಅದಕ್ಕೆ ಸಂತೋಷದಿಂದ ಅನುಮತಿ, ತಿದ್ದಿಕೊಳ್ಳುವ ಸ್ವಾತಂತ್ರ್ಯವನ್ನೂ (ಅಗತ್ಯ ಬೀಳಲಿಲ್ಲ!) ಕೊಡುವುದರೊಡನೆ ಅದೇ ಪತ್ರದಲ್ಲಿ ತಮ್ಮ ಜಿಟಿನಾ ಸ್ಮರಣೆಯ ಇನ್ನೊಂದೆರಡು ಆಖ್ಯಾಯಿಕೆಗಳನ್ನು ಬರೆದದ್ದೂ ಇಲ್ಲಿ ಉಲ್ಲೇಖನಾರ್ಹವಾಗಿದೆ.
 • ಮೈಸೂರಿಗೆ ಯಾರು ಬಂದು ಅವರನ್ನು (ಜಿ.ಟಿ.ನಾ) ಏನಾದರೂ ವೇದಗಳ ಶಾಸ್ತ್ರಗಳ ವಿಷಯದಲ್ಲಿ ಪ್ರಶ್ನೆ ಕೇಳಿದರೆ ತಕ್ಷಣ “ಇಲ್ಲೊಬ್ಬರು ನಮ್ಮ ಸಮಾಜಕ್ಕೇ ಅನರ್ಘ್ಯರತ್ನದಂತೆ ಇದ್ದಾರೆ. ಅವರ ಹತ್ತಿರ ಹೋಗಿ” ಎಂದು (ನನ್ನಲ್ಲಿಗೆ) ಕಳಿಸಿಬಿಡುತ್ತಿದ್ದರು. ಅಷ್ಟು ನಿಷ್ಕಪಟ ಹೃದಯದ ವಿಶ್ವಾಸಿಯನ್ನು ಎಲ್ಲಿ ತರುವುದು!

 • ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ಅವರನ್ನು ಅವರ ಪರಿಚಿತರು (ಕಾರ್ಯದರ್ಶಿಗಳೋ ಏನೋ ಇರಬೇಕು) “ಇನ್ಯಾರಿಗೆ ಪ್ರಶಸ್ತಿ ಕೊಡಬಹುದು” ಎಂದು ಕೇಳಿದ್ದರಂತೆ. ಜಿಟಿನಾ ನನ್ನ ಹೆಸರನ್ನು ಹೇಳಿ ಬಹಳ ಆಗ್ರಹಪೂರ್ವಕವಾಗಿಯೇ ಕೊಡಬೇಕೆಂದೇ ಹೇಳಿದ್ದರಂತೆ. ಆದರೆ (ಪ್ರಶಸ್ತಿ ಪಟ್ಟಿ ಬಿಡುಗಡೆಯಾದಂದು) ನನ್ನ ಹೆಸರು ಬರಲಿಲ್ಲ. ಅವತ್ತೆಲ್ಲ ಮನೆಯಲ್ಲಿ “ಕುಮಾರಸ್ವಾಮಿಗಳಿಗೆ ಪ್ರಶಸ್ತಿ ಕೊಡಲಿಲ್ಲವಲ್ಲಾ” ಎಂದು ಚಡಪಡಿಸುತ್ತಿದ್ದದ್ದನ್ನು ನಿಮ್ಮ ತಾಯಿಯವರೇ ನನಗೆ ಹೇಳಿದ್ದರು. ರಾಮಾಯಣದಲ್ಲಿ ಹನುಮಂತ (ಬಿಕ್ಷು ರೂಪದಲ್ಲಿ) ಬಂದು ರಾಮಲಕ್ಷ್ಮಣರನ್ನು ಮಾತನಾಡಿಸುವಾಗ ರಾಮ ಲಕ್ಷ್ಮಣನಿಗೆ ಹೇಳಿದ್ದು ಜ್ಞಾಪಕ ಬಂತು.
ನಾನೃಗ್ವೇದ ವಿನೀತಸ್ಯನಾಯಜುರ್ವೇದ ಧಾರಿಣ
ನಾಸಾಮವೇದ ವಿದುಷ ಶಕ್ಯಮೇವಂ ಪ್ರಭಾಶಿಕುಂ
ಬಹೃವ್ಯಾಹರತಾನೇನ ನಕಿಂಚಿದಪಶಬ್ದಿತಮ್

(ಋಗ್ವೇದ, ಯಜುರ್ವೇದ ಸಾಮವೇದಗಳನ್ನು ಪೂರ್ತಿ ತಿಳಿದವರಿಂದ ಹೀಗೆ ಮಾತನಾಡಲು ಸಾಧ್ಯವಿಲ್ಲ ಲಕ್ಷ್ಮಣ! ನೋಡು! ಅಷ್ಟು ಮಾತುಗಳನ್ನಾಡಿದರೂ ಅವನ ಬಾಯಲ್ಲಿ ಒಂದು ಅಪಶಬ್ದ ಬಂದಿಲ್ಲ). ಮರ್ಯಾದಾ ಪುರುಷೋತ್ತಮನಾದ, ಅನಸೂಯಾ ಗುಣಸಂಪನ್ನನಾದ ಶ್ರೀರಾಮಚಂದ್ರನ ಗುಣ ಅದೇ. ಅದನ್ನೇ ನಿಮ್ಮ ತಂದೆಯವರು ತೋರಿಸಿದ್ದಾರೆ.

8 comments:

 1. ಕೆ. ಚಂದ್ರಶೇಖರ ಕಲ್ಕೂರ08 February, 2009 08:45

  Mithra Ashoka Vardhanarige, Namaskaragalu.
  Nanu thwaritha ancheya balayavastheyalliddene. Addrinda innu Kannadadalli bareyuva parijnana hondilla.Kshamisiri. Roman lipi Kannada bashe bareyuvarrigu oduvavarigu sikshe.
  We. me and my wife read in Chicago, USA through the internet, the demise of your father, G.T.Narayana Rao. I was staying with Shanthi Aihtal, daughter of Gundmi Ramakrishna Aihtal. That day she had invited some guests and hosted a dinner in our honour. Most of the guests know your father. I do not know whether he knew them or not. He was remembered by all. On my return to India, in Aug.,2008 I addressed a condolence letter to your mother. I have glanced at the Blog. I will write in detail in a few days time. I also read about his will; donating the mortal remains to the JSS Medical College, Mysore. As long as there is life there may arise a need to visit a hospital. I have been a hospital bird. Incidentally I was a member of the Kurnool Medical College and the Government General Hospital Development Socieities for about fifteen years. Most of the time I visit the hopsitals for some other living beings. Sometimes it is for those who have breathed their last. Moertuary is maintained by the Anatomy department of the J.S.S..Medical College, Mysore. There is a wonderful slogan at the entrance. "Dead teach the living". It needs no explanation. Inspired by the slogan, I bequeathed my mortal remains to the Kurnool Medical College. I announced my decision at the time of my SASHTIPOORTHI in 2001. I emulate your father.
  I added a rider to my WILL. Darwin WILLED "The body serves no purpose as long as it breathes. Once it stops breathing, the body is a good food for a plant for a full one hundred years." Hence Darwin willed that a sapling might be planted on his burial. Imagine the pollution when a body is cremated. The temperature that is required to burn human body is 800* C. All the toxic elements in the body will mingle in the atmosphere. Hence my WILL says " If for any reason the mortal can not be trasported to the Kurnool Medical college or the nearest Medical College of my death, it may be buried in my agricultural land at Panchalingala at the outskirts of Kurnool, on the Bank of the Tungabhadra and a fruit bearing sapling may be planted." It is 11.43 P.M. on 7thFeb.,2009. I am getting tired. I will send you a copy of the WILL in a few days.
  Today the local Government Sarada Sangeetha Kalasala celebrated the Thyagaraja Aradhana. I was the Cheif Guest. I was extended the courtesy of the mike. I started the message with ENDARAO MAHANUBHAVULU. ANDARIKI VANDANALU. Then I quoted G.T.Narayana Rao who mentioned the lines in his enlightening biography of Albert Einstien.
  Bhavadeeya, Kalkura , Kurnool.

  ReplyDelete
 2. ರಾಧಾಕೃಷ್ಣ13 February, 2009 22:33

  ಮಾವ ಫೋನಿನಲ್ಲಿ ಮಾತನಾಡುತ್ತಿರುವ ಫೋಟೋ - ಒಮ್ಮೆಲೇ ಎಲ್ಲ ನೆನಪುಗಳನ್ನು ಹೊತ್ತು ತಂದಿತು - ನಮಸ್ಕಾರ ಜಿಟಿ.....
  ಅವರನ್ನು ಹುಡುಕಲು ಕೆಲವರು ಬಹುಬೇಗನೆ ಹೊರಟಿದ್ದಾರೋ ಎನ್ನುವ ಗುಮಾನಿ ಈಗೀಗ ಬರತೊಡಗಿದೆ. ಸ್ವಾಮಿಗಳ ಪತ್ರ ತುಂಬ ಆರ್ದ್ರವಾಗಿದೆ. ಮಾವ ಎಷ್ಟು ಜನರಿಗೆ ಯಾವ್ಯಾವುದೋ ಬಗೆಯಲ್ಲಿ ಪ್ರೇರಣೆ ನೀಡಿದ್ದಾರೆನ್ನುವುದಕ್ಕೆ ಒಂದು ಚಿಕ್ಕ ಸಾಕ್ಷಿ - ಹಿರಿಯರಾದ ಕಲ್ಕೂರರ ಪ್ರತಿಕ್ರಿಯೆ. ನಿನ್ನ ಸಂಗ್ರಹದಲ್ಲಿ ಇಂಥ ಹೊಳವು ಕೊಡುವ ಇನ್ನೂ ಕಲವು ಇರಬಹುದು. ಕೆಲವನ್ನು ಆಯ್ದು ಹಾಕಬಹುದು.
  ರಾಧಾಕೃಷ್ಣ

  ReplyDelete
 3. ಜಿ.ಟಿ.ನಾ. ಅವರ ಪುಸ್ತಕಗಳು ಚಿತ್ರದುರ್ಗದಲ್ಲಿ ನಡೆದ ಸಮ್ಮೇಳನದಲ್ಲಿ ಚೆನ್ನಾಗಿ ಖರ್ಚಾಗಿವೆ. ವಿಜ್ಞಾನದ ವಿದ್ಯಾರ್ಥಿಗಳು ಅವರ ಬರಹಗಳನ್ನು ಹುಡುಕಿ ಓದುತ್ತಿರುವುದು ಹೊಸ ವಿಷಯವೇನಲ್ಲ.
  ಪತ್ರ ನೋಡಿದರೆ ನಮ್ಮೆಲ್ಲರ ಬದುಕು ಸಾರ್ಥಕಗೊಳ್ಳುವಂತೆ ಏನಾದರೂ ಮಾಡಿ ಎನ್ನುತ್ತಿದೆ.
  ರತ್ನಂ ಸಮಾಗಚ್ಛತಿ ಕಾಂಚನೇನ/
  ಉಕ್ತಿಯಂತೆ ಉನ್ನತ ಸ್ತರದ ವ್ಯಕ್ತಿತ್ವಗಳೆಲ್ಲವೂ ಔನ್ನತ್ಯ ಸಾಧಿಸಲು ಇತರರಿಗೂ ಪ್ರೇರೇಪಿಸುವವರೇ. ಶ್ರೀಕಂಠಕುಮಾರ ಸ್ವಾಮಿ ಅವರ ಹೃದಯ ಸಂಪನ್ನತೆ ಮತ್ತು ಸರಳ ವಿವಾಹ ಪುಸ್ತಕಗಳು ನಿಮ್ಮಲ್ಲಿ ಸಿಗಬಹುದೇ? ತರಿಸಿಕೊಳ್ಳುವ ವಿಧಾನ ಹೇಗೆ? ತಿಳಿಸಿರಿ. ಯುವಜನರಿಗೆ ಮಾರ್ಗದರ್ಶನ ಮಾಡುವ ಜಿ.ಟಿ.ನಾ. ಅವರ ಬರಹಗಳನ್ನು ಸ್ವಲ್ಪ ಅಲ್ಲಲ್ಲಿ ಉದ್ಧರಿಸಬಾರದೇ?

  ಬೇದ್ರೆ ಮಂಜುನಾಥ

  ReplyDelete
 4. ವೆಂಕಟಲಕ್ಷ್ಮಿ14 February, 2009 21:50

  ಛಾವಡಿ ಶುರುವಿನಲ್ಲೆ ನಿಮ್ಮ ತಂದೆಯವರು ಅದರ ಬಗ್ಗೆ ಅಸಕ್ತಿ ತೊರಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರ ಅತ್ಮಕಥೆಯನ್ನು ನಾನು ಓದಿ ಅಧರ ಬಗ್ಗೆ ಛಾವಡಿಯಲ್ಲೂ ಬರದಿದ್ದೆ ಕೂಡ. ನೀವು ಮಕ್ಕಳಾಗಿ ಅವರನ್ನು ಕಂಡಿದ್ದೀರಿ. ಇಂಥಾ ಖಾಸಗಿ ಚಿತ್ರಗಳು ಸಾರ್ವಜನಿಕರ ಕಣ್ಣಿಗೆ ಬೀಳದಿರೋ ಅನೇಕ ಸಂಗತಿಗಳನ್ನು ಜನರಿಗೆ ತಿಳಿಸಿಕೊಡುತ್ತದೆ. ನಾನು ಹಿಂದೆ ಮಯೂರಕ್ಕೆ ಪತ್ನಿಯರು ಕಂಡಂತೆ ಪ್ರಸಿದ್ಧರು ಅನ್ನೋ ಕಾಲಂ ಸುಮಾರು ಐದು ವರ್ಷಗಳ ಕಾಲ ಬರೆದೆ. ಮನೆಯವರನ್ನು ಮಾತನಾಡಿಸಿದಾಗ ಅವರ ಮಾತುಗಳಲ್ಲಿ ಸಿಂಸಿಯಾರಿಟಿ ಇರುತ್ತದೆ. ಎಷ್ಟೋ ಸಲ ಲೇಖಕರಂಥವರು ಹೇಳುವುದಕ್ಕಿಂತಲೂ ಪರಿಣಾಮಕಾರಿಯಾಗಿ ಇವರು ಮನಸ್ಸನ್ನು ಮುಟ್ಟುವಂತೆ ನಮ್ಮ ಮುಂದೆ ಪ್ರೀತಿಯಿಂದ ಎಲ್ಲವನ್ನೂ ಬಿಚ್ಚಿಡುತ್ತಾರೆ. ನಿಮ್ಮ ಪತ್ನಿ ಅಥವಾ ನಿಮ್ಮ ತಾಯಿಯವರ ಕೈಲಿ ನಿಮ್ಮ ತಂದೆಯವರ ಬಗ್ಗೆ ಮಾತನಾಡಿದರೆ, ಅವರ ಮತ್ತೊಂದು ಮಗ್ಗುಲೇ - ನಿಮಗೂ ತಿಳಿದಿರದಂಥಾ - ಜಿ.ಟಿ.ಎನ್ ಅನಾವರಣಗೊಳ್ಳಬಹುದು!

  ReplyDelete
 5. ಚಂದ್ರಶೇಖರ ಕಲ್ಕೂರ, ಕರ್ನೂಲು15 February, 2009 17:18

  Ashoka Vardhanarige, Namaskaragalu.
  I address about 1,000 letters per year; 99 % of them through the Indian Postal Service. In A.P. invariably I write the address in Telugu and to Karnataka in Kannada. Pincode is the pass-word to Karnataka!
  I have been a Gandhian Criminal; responding to every invitation and correspondence that I receive. I respond with my cunieform handwriting in Kannada. There ends the similarity between me and Gandhi. I punish my 1975 (Emergency period) model Halda typewriter to address in English. I am a recent covert to E.mailing. I emulated, apart from Gandhi, Dr. Sivarama Karanth, Dr. H.M.Nayak, Sri K.Vijayabhaskar Reddy and Late Sri G.T.N.
  Late GTN, till the end used to ride a bicycle. Your brother Anantha (?) rides a car. " I am the son of a co-operative inspector. To keep up the dignity of my father, I ride a cycle. My son is the son of a professor. To maintain the status of his father he rides a car." That was GTN's classic humour at his own cost.
  Bhavadeeya, Kalkura, Kurnool

  ReplyDelete
 6. ಆತ್ಮೀಯರೇ,
  ಈಗ ಮಾರುಕಟ್ಟೆಗೆ ಬಂದಿರುವ ಮಾರ್ಚ್ ತಿಂಗಳ "ಕಸ್ತೂರಿ" ಸಂಚಿಕೆಯಲ್ಲಿ ಶ್ರೀಕಂಠಕುಮಾರಸ್ವಾಮಿಯವರ "ವೈಜ್ಞಾನಿಕ ಮನೋಭಾವ" ಕುರಿತ ಲೇಖನ, ಶ್ರೀ ಜಿ.ಟಿ.ಎನ್. ಕುರಿತು ನೆರೆಮನೆಯವರಾದ ಶ್ರೀಮತಿ ಜಯಂತಿ ಅಮೃತೇಶ್ ಅವರ ಲೇಖನ ಪ್ರಕಟವಾಗಿವೆ. ಶ್ರೀಕಂಠಕುಮಾರಸ್ವಾಮಿಯವರ ಬರಹದ ಶೈಲಿ ನಿಜಕ್ಕೂ ಸರಳ, ನೇರ ಮತ್ತು ವಸ್ತುನಿಷ್ಠ. ಯುವಜನರಿಗಾಗಿ ಅವರು ಇನ್ನಷ್ಟು ಬರೆಯಬೇಕಿದೆ. ನನಗೆ ಅವರ ಪುಸ್ತಕಗಳು ಬೇಕಿವೆ. ಎಂ.ಒ. ಕಳಿಸುತ್ತೇನೆ. ದಯಮಾಡಿ ಕಳಿಸಿಕೊಡುವ ಏರ್ಪಾಡು ಮಾಡಿರಿ.
  ವಂದನೆಗಳೊಂದಿಗೆ,
  ತಮ್ಮವ
  ಬೇದ್ರೆ ಮಂಜುನಾಥ

  ReplyDelete
 7. ಅಶೋಕವರ್ಧನ01 March, 2009 09:06

  ಪ್ರೊ|ಶ್ರೀಕಂಠಕುಮಾರಸ್ವಾಮಿಯವರ ವೇದ ವಿಜ್ಞಾನಗಳ ಸಮನ್ವಯ ದೃಷ್ಟಿಗೆ ಮತ್ತೊಂದು ಬಲವತ್ತರವಾದ ಸಾಕ್ಷಿ (ಬೇದ್ರೆ ಮಂಜುನಾಥ ಅವರು ಉಲ್ಲೇಖಿಸಿದ,) ೨೦೦೯ರ ಮಾರ್ಚ್ ತಿಂಗಳ ಕಸ್ತೂರಿ ಮಾಸಿಕದ `ಏನಿದು ವೈಜ್ಞಾನಿಕ ಮನೋಧರ್ಮ?' ಎಂಬ ಅವರದೇ ಲೇಖನ. ವಿಷ್ಣುಸಹಸ್ರನಾಮದ ಪುರಶ್ಚರಣೆಗೆ ಕಡಲಕೊರೆತ ನಿಲ್ಲಿಸುವ, ಸುನಾಮಿ ತಡೆಯುವ, ವಿಗ್ರಹಾರಾಧನೆಯ ಅತಿರೇಕಗಳನ್ನು ಪ್ರಚುರಿಸುವ ಧರ್ಮೋದ್ಯಮಿಗಳೇ ಮುಂತಾದವರಿಗೆ (ನನ್ನ ತಂದೆಯ ಪುಸ್ತಕ - `ವೈಜ್ಞಾನಿಕ ಮನೋಧರ್ಮ'ದಂತೆ ಆವೇಶ ತಾರದೆ) ಸರಿದಾರಿ ತೋರುವ ಬರೆಹವಿದು. ಇದನ್ನು ಎಲ್ಲರೂ ಅವಶ್ಯ ಓದಿ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುವುದು ತಾವು ನಡೆದಂತೆ ಬರೆದ ಕುಮಾರಸ್ವಾಮಿಯವರಿಗೆ ಸಲ್ಲಿಸುವ ಅಭಿನಂದನೆಗಳೇ ಆಗುತ್ತವೆ.
  ಅಶೋಕವರ್ಧನ

  ReplyDelete
 8. S Raghavendra Bhatta24 March, 2009 20:40

  Preethiya Sri Ashoka,
  Even today like the water drops from a tree after a heavy rain people in Mysore remember GTN for all the things he did for the society to be a hospitable one !!

  Such was GTN; when comes another?
  S R Bhatta

  ReplyDelete