21 November 2008

ಕಾನನದೊಳಗಿಂದೆದ್ದು ಬಂದವನಾವನಿವಂ?

nilgiri-martenಘಟ್ಟ ಇಳಿಯುವವರಿಗೆ ಬಿಸಿಲೆ ಒಂದು ಸುಂದರ ಅನುಭವ. ಅದರಲ್ಲೂ ಮುಖ್ಯವಾಗಿ ಬಿಸಿಲೆ ಹಳ್ಳಿಯಿಂದ ಕುಳ್ಕುಂದ ಗೇಟಿನವರೆಗೆ ಸುಮಾರು ಇಪ್ಪತ್ಮೂರು ಕಿ.ಮೀ ಕಂಡಷ್ಟು ಮುಗಿಯದ ಪ್ರಾಕೃತಿಕ ಅನಾವರಣಗಳ ಸರಣಿ. ಎತ್ತೆತ್ತರದ ಮರಗಳ ನೆತ್ತಿಯಿಂದ ನಮ್ಮನ್ನು ಇಣುಕಿ ನೋಡುವ ಕಲ್ಲುಗುಡ್ಡ, ಪಶ್ಚಿಮದ ಧಾಳಿಗೆ ಎದೆಗೊಟ್ಟ ಕನ್ನಡಿಗಲ್ಲು, ಕುಮಾರಧಾರೆಯ ಬಲು ದೀರ್ಘ ಓಟದೊಂದು ವಿಹಂಗಮ ನೋಟ ಕೊಡುವ ಬಾಳೇಕಲ್ಲು, ಕಣಿವೆಯಾಚೆ ನಿಂತರೂ ಎಲ್ಲವನ್ನು ಆಳುವ ಔನ್ನತ್ಯ ಕುಮಾರಾದ್ರಿ. ಕಾಡೊಳಗೆ ನುಸಿಯುತ್ತ ಕಣಿವೆಯಂಚಿನಲ್ಲಿ ಇಣುಕುತ್ತಾ ಸಾಗುವ ದಾರಿಯೂ ದಟ್ಟ ಕಾಡು ಮತ್ತು ಹೊಳೆಯಂಚಿಗೆ ಎಂದೋ ಹಾಕಿದ ಓಡು-ಹೊಲಿಗೆ. ಬೆಂಗಳೂರು-ಮಂಗಳೂರು ಹೆದ್ದಾರಿ ಶಿರಾಡಿಯಲ್ಲಿ ಸತ್ತ ಮೇಲೆ, ಪಕ್ಷಾತೀತವಾಗಿ ಪುಡಾರಿಗಳ `ಧರ್ಮ ಜಾಗೃತಿ’ ಅತಿಯಾಗುತ್ತಿದ್ದಂತೆ, ಮಾಧ್ಯಮಗಳ ವಿಮರ್ಶೆಯಿಲ್ಲದ ವರದಿ ಉತ್ಸಾಹದಿಂದ ಸುಬ್ರಹ್ಮಣ್ಯದಲ್ಲಿ ಕುಮಾರಧಾರೆ ಸೊರಗಿ, ಚರಂಡಿಗಳಲ್ಲಿ ಪ್ರವಾಹ ಉಕ್ಕೇರಿತ್ತು. ಗೂಟದ ಕಾರು, ಚೇಲರ ಸಂಭ್ರಮ, ಕುರುಡುಭಕ್ತರ ಸಾರಿಗೆ ಸಾವಿರ, ಬಸ್ಸುಗಳಿಂದ ತೊಡಗಿ ಆರು ಚಕ್ರದ ಅಸಂಖ್ಯ ಲಾರಿಗಳೂ ಹರಿದದ್ದು ಬಿಸಿಲೆ ದಾರಿಗೆ. ಸಹಜವಾಗಿ  ಪ್ರಕೃತಿ ಸಂಸ್ಕೃತಿಯ ಸುಂದರ ಬೆಸುಗೆ, ಕಿಲುಬು ಹಿಡಿದಂತಾಗಿರುವುದು ದೊಡ್ಡ ದುರಂತ! ಅರಣ್ಯ ಇಲಾಖೆಯ (ಹಾಸನ ಜಿಲ್ಲೆ) ಅದಕ್ಷತೆ ಮತ್ತು ಎಲ್ಲಾ ಅಧಿಕಪ್ರಸಂಗಗಳ ನಡುವೆಯೂ ಈ ವಲಯದಲ್ಲಿ ಇನ್ನೂ ಮನುಷ್ಯ ವಸತಿ ಮತ್ತದರ ವ್ಯಾಪಕ ಹಾನಿಗಳು ಬರದಿರುವುದು ಅದೃಷ್ಟವೇ ಸರಿ. ಇದಕ್ಕೆ ಭಂಗ ತರಬಹುದಾಗಿದ್ದ ಒಂದಷ್ಟು ಖಾಸಗಿ ಕೃಷಿಭೂಮಿಯನ್ನು ನಾವು ಕೆಲವು ಮಿತ್ರರು ಕೊಂಡು, ವನ್ಯಸ್ಥಿಯಲ್ಲಿ ಏನೂ ಬದಲಾವಣೆ ಬಾರದಂತೆ ಕಾಪಾಡುತ್ತಿದ್ದೇವೆ (ಅಶೋಕವನ - ಅದರ ಹೆಸರು). ಅಲ್ಲಿನ ನಮ್ಮ ದರ್ಶನಗಳಲ್ಲಿ ಒಂದು ಈ ಮರನಾಯಿ.

ಅಶೋಕವನದಲ್ಲಿ ಅದೊಂದು ಎರಡು ರಾತ್ರಿಯ ಶಿಬಿರದ ಒಂದು (೨೭-೦೧-೨೦೦೭) ಸಂಜೆ. ವನ್ಯ ಜೀವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗೆ ಓದುತ್ತಿದ್ದ ನಾಲ್ಕು ಉತ್ಸಾಹದ ಚಿಲುಮೆಗಳು, ವನ್ಯ ಸಂರಕ್ಷಣೆಯ ಕಠಿಣ ವ್ರತಧಾರಿ ನಿರೇನ್ ಜೈನ್, ನಾನು ಮತ್ತು ನನ್ನ ಮಗ - ಅಭಯಸಿಂಹ (ಸಿನಿಮಾ ಮಾಡುವವ) ದಿನದ ಹತ್ತೆಂಟು ಕಲಾಪಕ್ಕೆ ತೆರೆಯೆಳೆಯುವಂತೆ ದಾರಿಗಿಳಿದಿದ್ದೆವು. ಬಿಸಿಲೆಗೇಟಿನಿಂದ ಸುಮಾರು ಮೂರು ಕಿಮೀ ಕೆಳಗಿನ ಮೊದಲ ಹಿಮ್ಮುರಿ ತಿರುವಿನವರೆಗೆ ನಿಧಾನಕ್ಕೆ ಹೋದೆವು. ಕೊಳ್ಳದ ಝರಿ, ಹೊಳೆಗಳ ಏಕನಾದಕ್ಕೆ ಪಲುಕು ಬೆಸೆಯುವವರನ್ನು (ಹೆಚ್ಚಾಗಿ ಹಕ್ಕಿಗಳು) ಮೂರ್ತಗೊಳಿಸಲು ಹೆಣಗುತ್ತ, ಕಂಡದ್ದಕ್ಕೆ ಹಕ್ಕಿಯಜ್ಜನ (ಸಲೀಂ ಆಲಿ) ಹೊತ್ತಗೆಯಲ್ಲೋ ಇನ್ನೂ ಹೊಸ ತಲೆಮಾರಿನ ಪಕ್ಷಿವೀಕ್ಷಕರ ಕೈಪಿಡಿಗಳಲ್ಲೋ ಸಾಮ್ಯ ಹುಡುಕಿ, ನೆನಪಿನ ಭಿತ್ತಿಯಲ್ಲಿ ಶಾಶ್ವತಗೊಳಿಸುತ್ತಿದ್ದೆವು. `ಪಾತರಗಿತ್ತಿ ಪಕ್ಕಾ ನೋಡೋದೆಷ್ಟೇ ಅಕ್ಕಾ’ ಎಂದು ಕುಣಿದದ್ದೇ ಕುಣಿದದ್ದು. ಪ್ರತಿ ಗಿಡ, ಮರ, ಬಳ್ಳಿ ಮತ್ತವುಗಳ ಎಲೆ, ಹೂ, ಕಾಯಿ ನಮಗೆ ಜೀವ ಇತಿಹಾಸದ ದಫ್ತರಗಳು. ನಮೂದುಗಳನ್ನು ಖಚಿತಗೊಳಿಸದೆ ನಮಗೆ ಮುಂದಡಿಯಿಲ್ಲ!


ಸುಮಾರು ನಾಲ್ಕನೇ ಕಿಲೋ ಕಲ್ಲಿನ ಬಳಿ, ದಾರಿ ಕಾಡಿನ ಟೊಪ್ಪಿ ಹರಿದು ಕುಮಾರಾದ್ರಿಯ ದರ್ಶನ ಕೊಡುವಲ್ಲಿ ಎಡದ ದಂಡೆ ಹತ್ತಿ ನಿಂತೆವು. ಬೆಟ್ಟದ ಏಣನ್ನು ಬಳಸುತ್ತಾ ಐವತ್ತಡಿ ಮುಂದುವರಿದ ದಾರಿ ಕನ್ನಡಿಕಲ್ಲಿನ ಕಣಿವೆ ಮೂಲೆಯಲ್ಲಿ ಎಡಕ್ಕೆ ಹಿಮ್ಮುರಿ ತಿರುಗಿತ್ತು. ಮತ್ತೆ ನಮ್ಮತ್ತಲೇ ಬಂದು, ನಮ್ಮಿಂದ ಸುಮಾರು ಐವತ್ತಡಿ ಕೆಳಗೆ ಬಲಕ್ಕೆ ಇನ್ನೊಂದು ಹಿಮ್ಮುರಿ ತಿರುವು ತೆಗೆದು ಕಾಡು ಸೇರಿ ಮರೆಯಾಯ್ತು. ಆ ಕೊನೆಯಲ್ಲಿ ಕೆಲವು ಹೊತ್ತು ನೀರವ, ನಿಶ್ಚಲ ಕುಳಿತು ಎಲ್ಲವನ್ನೂ ನಮ್ಮದನ್ನಾಗಿಸುವ ಪ್ರಯತ್ನ ನಡೆಸಿದೆವು. ರಸಭಂಗ ಮಾಡುವಂತೆ ಚಿಂದಿ ತೊಟ್ಟು, ಹಳೇ ಡಬ್ಬಿ ಹರಕು ಗೋಣಿ ಹೊತ್ತು, ದೂಳೆಬ್ಬಿಸುತ್ತ, ಕೆಮ್ಮುತ್ತ, ಬುಸುಬುಸು ಬೀಡಿಸುತ್ತ ಸಾವಕಾಶ ಹೋಯ್ತು ಸರಕಾರೀ ಬಸ್ಸು. ದ್ವಿಪಾದಿಗಳ ಸೋಲಿಗೂ ಮಿತಿಗೂ ಕನಿಕರಿಸಿ ಸಹಸ್ರಪಾದಿ - ಸೂರ್ಯ, ಸುದೂರ ದಿಗಂತದಲ್ಲಿ ಮರೆಯಾದ. ನಾವು ಮರಳಿ ಶಿಬಿರಮುಖಿಗಳಾದೆವು. ಆಗೊಮ್ಮೆ ಈಗೊಮ್ಮೆ ಎಲ್ಲೋ ಕೆಳಕಣಿವೆಯ ತಿರುವುಗಳಲ್ಲಿ ಬಸ್ಸಿನ ಕ್ಷೀಣಿಸುತ್ತ ಸಾಗಿದ್ದ ಗೂರಲ ಸದ್ದು ಬಿಟ್ಟರೆ ಅದು ಎಬ್ಬಿಸಿದ ದೂಳು, ಹೊಗೆವಾಸನೆ ತಂಗಿತ್ತು. ಆಶ್ಚರ್ಯಕರವಾಗಿ ವನ್ಯ ವಾತಾವರಣ ಪೂರ್ಣ ನಮ್ಮನ್ನು ಆವರಿಸಿದ ಕ್ಷಣ. ಕಾಡು ಕತ್ತಲನ್ನು ಸ್ವಾಗತಿಸುವ ಪರಿಯನ್ನು ಕಣ್ಣು ಕಿವಿಗಳಲ್ಲಿ ತುಂಬಿಕೊಳ್ಳುತ್ತ ನಿಧಾನಕ್ಕೆ ನಡೆದಿದ್ದೆವು. ಪಕ್ಷಿ, ಕೀಟ, ಸಸ್ಯಗಳೆಲ್ಲ ಆಗೊಮ್ಮೆ ಈಗೊಮ್ಮೆ ಬರಿಯ ಧ್ವನಿಗಳಾಗುವ ಹೊತ್ತು. ನಾಲ್ಕೂ ಹುಡುಗಿಯರು ಮುಂದಿನ ಸಾಲಿನಲ್ಲಿ ನಡೆಯುತ್ತ ತೀರಾ ಅವಶ್ಯವಿದ್ದಾಗ ಪಿಸುನುಡಿಗಳಾಗಿದ್ದರು. ಸ್ವಲ್ಪ ಹಿಂದೆ ನಿರೇನ್ ಮತ್ತೆ ನಾಲ್ಕು ಹೆಜ್ಜೆ ಬಿಟ್ಟು ನಾನು. ಕೊನೆಯಲ್ಲಿ ಅಭಯ. ಹಗಲೆಲ್ಲ ಆಯ್ದ ದೃಶ್ಯಗಳ ಮೇಲೆ ಮಾಯದ ಕಣ್ಣು ತೆರೆದಿದ್ದ ಅವನ ವಿಡಿಯೋ ಕ್ಯಾಮರಾ ಬಗಲಲ್ಲಿ ನಿದ್ರಿಸಿದ್ದಂತೆ ಅವನೂ ಪ್ರಕೃತಿಯಲ್ಲಿ ತಲ್ಲೀನನಾಗಿ, ನಿಶ್ಶಬ್ದನಾಗಿ ಹಿಂಬಾಲಿಸಿದ್ದ. ಆಗ.

ಒಮ್ಮೆಗೆ ಹುಡುಗಿಯರಿಂದ ಸುಮಾರು ಮೂವತ್ತು ಅಡಿ ಮುಂದೆ ಬಲದ ಕೊಳ್ಳದ ಪೊದರುಗಳೆಡೆಯಿಂದ ಈ ವಿಚಿತ್ರ ತೂರಿ ಬಂತು. ನಾಯಿಯ ಮುಖ, ಗಿಡ್ಡ ಮುಂಗಾಲುಗಳು, ಕೆಂಜಳಿಲ ತೋರ ಬಾಲ, ಕಡುಗಂದು ಮೈಗೆ ಬಿಳಿಯ ಪಟ್ಟಿ, ಕಾಂಗರೂ ಕುಪ್ಪಳಿಕೆಯ ಅಣಕ - “ಒಂದು, ಎರಡು, ಮೂರು...” ಎಣಿಸುತ್ತಿದ್ದಂತೆ ಎಡದ ದರೆಯ ಪೊದರುಗಳೆಡೆಯಲ್ಲಿ ಮಾಯ! ಗಾಳಿಯೇ ಸುಯ್ದಂತೆ ಹುಡುಗಿಯರ ಉದ್ಗಾರ “ಹೇಯ್! ಮಾರ್ಟೆನ್, ನೀಲ್ಗಿರಿ ಮಾರ್ಟೆನ್” ಎಲ್ಲ ಸ್ತಬ್ದ, ಅಭಯ ಮಾತ್ರ ತುದಿಗಾಲಲ್ಲಿ ಮುಂದೌಡು. ಜೊತೆಜೊತೆಗೇ ಕ್ಯಾಮರಾ ಸಜ್ಜುಗೊಳಿಸುತ್ತಿದ್ದಂತೆ ಅಷ್ಟೇ ಅನಿರೀಕ್ಷಿತವಾಗಿ ಎರಡನೇದು ಹೀಗೇ ಬಂತು, ಕರಗಿಹೋಯ್ತು! ಆದರೇನು ನಮ್ಮೆಲ್ಲರ ತಪಸ್ಸಿಗೆ ಮೂರನೆಯ ವರವಿತ್ತು; ಇನ್ನೊಂದೂ ಬಂತು, ಪೂರ್ಣ ಮಿಂಚು ವಿಡಿಯೋಕ್ಕೂ ಒಲಿಯಿತು. ಹುಡುಗಿಯರ ಮತ್ತು ನಿರೇನ್ ಬಳಿಯಿದ್ದ ಕ್ಯಾಮರಾಗಳು ಜೀವ ತಳೆಯುವುದರೊಳಗೆ ಅಂದಿನ ಪ್ರದರ್ಶನ ಮುಗಿದಿತ್ತು.
[ಮರನಾಯಿಗಳೆಂದೇ ಸ್ಥಳೀಯವಾಗಿ ಹೆಸರಿದ್ದರೂ ಸ್ಪಷ್ಟ ಚಹರೆ ಹಿಡಿದು ಕಂಡುಕೊಂಡವರು ಕಡಿಮೆ. ಹೆಸರೇ ಸೂಚಿಸುವಂತೆ ಇದರ ಹೆಚ್ಚಿನ ಚಲನವಲನವೆಲ್ಲ ಮರಗಳ ಮೇಲೇ ಎಂದು ಅಂದಾಜಿಸಿದೆ. ಸ್ತನಿ ವರ್ಗದ, ಮುಸ್ಟೆಲಿಡೆ (Mustelidae) ಕುಟುಂಬದ, ಭಾರತದ ಮೂರು ವೈವಿಧ್ಯಗಳಲ್ಲಿ ದಕ್ಷಿಣ ಭಾರತದ ಏಕೈಕ ಸದಸ್ಯ ಈ ನೀಲಗಿರಿ ಮಾರ್ಟೆನ್ (ವೈಜ್ಞಾನಿಕ ಹೆಸರು Martes gwatkinsii horsfield) ಅಥವಾ ಮರನಾಯಿ. ಉಳಿದವು, ಇದಕ್ಕೂ ಸ್ವಲ್ಪ ಸಣ್ಣ ಹಳದಿ ಕತ್ತಿನ ಮಾರ್ಟೆನ್. ಮತ್ತೂ ಸಣ್ಣದು ಬೀಚ್ ಮಾರ್ಟೆನ್. ಇವು ಬಣ್ಣಗಳಲ್ಲೂ ಭಿನ್ನ ಮತ್ತೆ ಪೂರ್ಣ ಉತ್ತರ ಭಾರತೀಯ. ಹಳದಿ ಕತ್ತಿನದು ಉತ್ತರಾಂಚಲ, ಹಿಮಾಚಲಪ್ರದೇಶ, ಜಮ್ಮು ಕಾಶ್ಮೀರ ಮುಂತಾದ ವಲಯದ ಹಿಮಾಲಯದ ಬೆಟ್ಟಗಳ ಮರಗಳಿರುವ ವಲಯದಲ್ಲಿ (ಸ.ಮಟ್ಟದಿಂದ ಸುಮಾರು ೧೬೦ರಿಂದ ೨೫೦೦ ಮೀಟರ್‌ವರೆಗೂ) ಕಾಣಸಿಗುತ್ತವೆ. ಬೀಚ್ (ಗಮನಿಸಿ ಇದು Beach ಅಲ್ಲ, Beech - ಶೀತವಲಯದ ಒಂದು ಮರ) ಮಾದರಿ ಮತ್ತೂ ಔನ್ನತ್ಯಗಳಲ್ಲಿ (೧೫೦೦ರಿಂದ ೪೦೦೦ ಮೀಟರ್) ಅಂದರೆ ಜಮ್ಮು ಕಾಶ್ಮೀರ ಮತ್ತು ಲಢಾಕ್ ವಲಯಗಳಲ್ಲಿ ಕಾಣಸಿಗುತ್ತವೆ. ಮೂಗಿನ ತುದಿಯಿಂದ ಬಾಲದ ಕೊಡಿಗೆ ಸುಮಾರು ಒಂದು ಮೀಟರ್ ಬೆಳೆದರೂ ತೂಗಿದರೆ ಸುಮಾರು ಎರಡು ಕೆ.ಜಿಯಷ್ಟೇ ಇರುವ ನಮ್ಮ ಮರನಾಯಿಯ ಮೂರ್ತಿ ಚಿಕ್ಕದು. ಆದರೆ ಕೀರ್ತಿಯಲ್ಲಿ ಈ ವರ್ಗವೇ ಅಪೂರ್ವ ಧೈರ್ಯದ, ಆಕ್ರಮಣಕಾರೀ ಬೇಟೇಗಾರರೆಂದೇ ಖ್ಯಾತ. ಇವು ಹಗಲು ಇರುಳು, ಮರಗಳ ಮೇಲೂ ನೆಲದ ಮೇಲೂ ಪೌರುಷ ಮೆರೆಯಬಲ್ಲದು. ತಾಯಿ ಮತ್ತು ಮಗು ಅಥವಾ ಗಂಡು ಹೆಣ್ಣಿನ ಜೋಡಿ ಬೇಟೆಗಿಳಿಯುವುದಿದೆಯಂತೆ. ಆದರೆ ಒಂಟಿತನವೇ ಇದರ ಬಲ, ಸಂಘಜೀವನ ಅಲ್ಲ ಎಂದೂ ಅಂದಾಜಿಸಲಾಗಿದೆ. ಇಲಿ, ಹಕ್ಕಿ, ಹುಳ, ಹಣ್ಣು, ಹೂಗಳ ಮಕರಂದ, ಅನ್ಯ ಬೇಟೆಗಾರರ ಉಳಿಕೆ, ಕೊಳೆತದ್ದಕ್ಕೂ ಇದರ ಆಹಾರ ವೈವಿಧ್ಯ ವ್ಯಾಪಿಸಿದೆ. ಸಾಮಾನ್ಯವಾಗಿ ನಾಗರಿಕತೆಯಿಂದ ದೂರವಿರುವ ಮರನಾಯಿಗಳು ಲಢಾಕ್‌ನಂತ ಆಹಾರ ವಿರಳತೆಯಿರುವ ಸ್ಥಳಗಳಲ್ಲಿ, ನಾಗರಿಕ ವಲಯಗಳಲ್ಲೂ ಸಂಪರ್ಕಕ್ಕೆ ಸಿಗುತ್ತವೆ; ಬೀಚ್ ಮಾದರಿಯವು ಹಳ್ಳಿಗರ ಕೋಳಿಗೂಡಿಗೆ ಧಾಳಿ ನಡೆಸಿದ್ದುಂಟು.

A field guide to Indian mammals - Vivek Menon (DK) (ಪ್ರಥಮ ಮುದ್ರಣ ೨೦೦೩) ಮೈಸೂರಿನ ಮದುಸೂದನ ಅವರು ತೆಗೆದ ಮರನಾಯಿಯ ಆಂಶಿಕ ದರ್ಶನದ ಛಾಯಾ ಚಿತ್ರ ಕೊಟ್ಟಿದೆ. ೧೯೪೮ರಲ್ಲಿ ಮೊದಲ ಮುದ್ರಣ ಕಂಡು ಕಾಲಕಾಲಕ್ಕೆ ಪರಿಷ್ಕರಣೆಗೊಳ್ಳುತ್ತಾ ಬಲು ಉಪಯುಕ್ತವೂ ಆಗಿ ಉಳಿದಿರುವ Indian Animals - Prater (BNHS) ತನ್ನ ಹನ್ನೆರಡನೇ ಪರಿಷ್ಕೃತ ಆವೃತ್ತಿಯಲ್ಲೂ (೨೦೦೫) ಕೇವಲ ೧೯೨೩ರ ಚಿತ್ರದ ಅಪಭ್ರಂಶವನ್ನೇ ಅವಲಂಬಿಸಿದೆ. ಮತ್ತೆ ಇವೆಲ್ಲ ಸೂಚಿಸಿದ ಒಂಟಿ ಅಥವಾ ಜೋಡಿ ದರ್ಶನಕ್ಕೆ ವ್ಯತಿರಿಕ್ತವಾಗಿ ನಮಗೆ ಕಾಣಸಿಕ್ಕಿದ್ದು ಮೂರು ಎಂಬುದು ಗಮನಾರ್ಹ. ಅವು ಬಂದ ದಿಕ್ಕು ದಟ್ಟ ಮರಗಳ ಕುಮಾರಧಾರೆಯ ಕಣಿವೆ (ಸ. ಮಟ್ಟದಿಂದ ಸುಮಾರು ನೂರು ಮೀ). ಹಿಡಿದ ದಿಕ್ಕು ತೆರೆಮೈಯ್ಯ ಹುಲ್ಲ ಹರವು (ಸ.ಮ ಸುಮಾರು ಒಂದು ಸಾವಿರ ಮೀ). ಮಂಗಳೂರು ಮೂಲದ, ಬೆಂಗಳೂರು ನಿವಾಸಿ ದೇವಚರಣ್ ಜತ್ತನ್ನ, ವನ್ಯ ವಿಜ್ಞಾನಿ ನಾಲ್ಕೈದು ವರ್ಷಗಳ ಹಿಂದೆ ಮರನಾಯಿ ಬಗ್ಗೆ ವಿಶೇಷ ಸಂಶೋಧನಾಸಕ್ತಿಯಿಂದ ಮಾಹಿತಿ ಸಂಗ್ರಹಕ್ಕಿಳಿದಾಗ ಸಂಗ್ರಹಿಸಿದ ಕೆಲವು ಕುತೂಹಲಕಾರಿ ಅಂಶಗಳು: * ೧೯೨೩ರಲ್ಲಿ ಹಾಲೆಂಡ್ ದೇಶದ Tuinman & Tuinman Ezrs ಪ್ರಕಟಿಸಿದ ಪುಸ್ತಕದಲ್ಲಿ ಮರನಾಯಿಯ ಸರ್ವ ಪ್ರಥಮ ಛಾಯಾಚಿತ್ರ ದಾಖಲೆ ಸಿಗುತ್ತದೆ. ಎರಡನೆಯದು ಮೈಸೂರಿನ ಮದುಸೂದನರಿಗೆ ದಕ್ಕಿದ್ದು. * ಅಸ್ಪಷ್ಟ ಮಾಹಿತಿ ಮೂಲಗಳ ಪ್ರಕಾರ ಉತ್ತರಕ್ಕೆ ಕರ್ನಾಟಕದ ಕುದುರೆಮುಖ ರಾಷ್ತ್ರೀಯ ಉದ್ಯಾನವನ, ದಕ್ಷಿಣದಲ್ಲಿ ಕೇರಳದ ಎರುವಿಕುಲಂ ರಾ.ಉ ಮತ್ತು ಒಳನಾಡಿನಲ್ಲಿ ಉದಕಮಂಡಲದವರೆಗೆ ಮರನಾಯಿಗಳು ವ್ಯಾಪಿಸಿರಬೇಕು ಎಂದು ನಂಬಲಾಗಿದೆ. ಆದರೆ ಇದನ್ನು ಖಚಿತಪಡಿಸಲು ಜೀವ ವಿಜ್ಞಾನಿಗಳು ದಕ್ಷಿಣದ ನಾಲ್ಕು ರಾಜ್ಯಗಳಲ್ಲಿ ನಡೆಸಿದ ತೀವ್ರ ಸರ್ವೇಕ್ಷಣೆಯಲ್ಲಿ, ಸುಮಾರು ೭೩೦ ಕಿಮೀ ಸುತ್ತಿಯೂ ಮರನಾಯಿಯ ದರ್ಶನ ಲಾಭವಾದದ್ದು ಒಂದೇ ಬಾರಿಯಂತೆ. ಅದೂ ಕೇರಳದಲ್ಲಿ. *ಮರನಾಯಿಗೆ ಭಾರತೀಯ ವನ್ಯಜೀವಿ ಶಾಸನ ೧೯೭೨ರ ಪ್ರಕಾರ ಶೆಡ್ಯೂಲ್ ಎರಡು, ಪಾರ್ಟ್ ಎರಡರ ಪ್ರಕಾರ ಪೂರ್ಣ ರಕ್ಷಣೆ ಇದೆ.
೨. ಮರನಾಯಿ ಚಿತ್ರ ದಾಖಲಿಸಿದ ವನ್ಯ ಸಂಶೋಧಕ, ಮೈಸೂರಿನ ಮದುಸೂದನ್ ತನ್ನನುಭವವನ್ನು ಹೀಗೆ ದಾಖಲಿಸುತ್ತಾರೆ, “೧೯೯೫ರ ಫೆಬ್ರುವರಿಯ ಒಂದು ಮುಂಜಾನೆ. ಕೇರಳದ ಎರುವಿಕುಲಂ ರಾ. ಉದ್ಯಾನವದ ಶೋಲಾಕಾಡಿನೊಳಗೆ ಒಂದು ನೀಲಗಿರಿ ಲಂಗೂರಿನ ಚಿತ್ರಗ್ರಹಣದಲ್ಲಿ ನಿರತನಾಗಿದ್ದೆ. ಸ್ವಲ್ಪ ಸಮಯದಲ್ಲಿ ಮಂಗ ಮರೆಯಾಯ್ತು. ಆಗ ಅಲ್ಲೇ ಮರದ ಕಿಬ್ಬಿಯಲ್ಲಿ ಅಂದರೆ ನೆಲದಿಂದ ಸುಮಾರು ಹತ್ತು ಮೀಟರ್ ಎತ್ತರದಲ್ಲಿ ಈ ಕಡುಗಂದು ರೂಪ ಕಾಣಿಸಿತು. ಅದು ನನ್ನನ್ನು ಗಮನಿಸಿಯೂ ಆತಂಕಿತವಾಗದೆ ಕೆಲವು ಬಾರಿ ಕತ್ತೆತ್ತಿ ನೋಡಿ ವಿಶ್ರಾಂತಿ ಮುಂದುವರಿಸಿತ್ತು. ಸುಮಾರು ತೊಂಬತ್ತು ಮಿನಿಟುಗಳ ಬಳಿಕ ಹಾಗೆ ಎದ್ದು ಮರಗಳ ತಲೆಯಲ್ಲೇ ಕಣ್ಮರೆಯಾಯ್ತು.”]

ಐದು ಮಿನಿಟು ಮರವಟ್ಟ ನಮ್ಮ ತಂಡ ಇನ್ನು ಪ್ರದರ್ಶನವಿಲ್ಲ ಎಂದು ಖಾತ್ರಿಯಾದಮೇಲೆ ಆ ಜಾಗಕ್ಕೆ ಧಾವಿಸಿದೆವು. ಅವು ಏರಿಬಂದ ಕಣಿವೆಯಾಳ ಅಥವಾ ಕಣ್ಮರೆಯಾದ ದರೆಯ ಎತ್ತರ ನಮಗೆ ಅನುಸರಣ ಸುಲಭವಿರಲಿಲ್ಲ. ಕಥೆ ಹೇಳುವ ಯಾವ ಕುರುಹೂ ದಕ್ಕಲಿಲ್ಲ. ನಮ್ಮದೇನು ಮಹಾ, ಪ್ರಾಣಿ ವಿಜ್ಞಾನದ ಪರಿಣತ ಪತ್ತೇದಾರಿಗಳೂ ಇವುಗಳ ಬಗ್ಗೆ ಹೆಚ್ಚು ತಿಳಿದಿಲ್ಲ. ಪರೋಕ್ಷ ಕುರುಹುಗಳಿಂದ ಕಣಿಯುವವರು ಪಶ್ಚಿಮ ಘಟ್ಟದುದ್ದಕ್ಕೂ ನೀಲ್ಗಿರಿ ಮಾರ್ಟೆನ್ ವಾಸಸ್ಥಾನವೆಂದು ಹೇಳಿಕೊಂಡರೂ ಸ್ಪಷ್ಟ ಸಾಕ್ಷ್ಯ ಒದಗಿಸುವ ಭಾಗ್ಯ ಬಂದದ್ದು ಅಶೋಕವನಕ್ಕೇ.


ಅಶೋಕವನದಿಂದ ಸ್ವಲ್ಪ ಮೇಲಿನ ಕಣಿವೆ - ಹೊಂಗಡಳ್ಳ ಕೇಂದ್ರವಾಗಿಟ್ಟುಕೊಂಡು ಕೆ.ಪಿ.ಸಿ.ಎಲ್ ಪ್ರಥಮ ಹಂತದ ಗುಂಡ್ಯ ಜಲವಿದ್ಯುತ್ ಯೋಜನೆ (೨೦೦ ಮೆಗಾವಾಟ್ಸ್) ರೂಪಿಸಿದೆ. ಇಂಥಾ ಭಾರೀ ಯೋಜನೆಗೆ ಕಾನೂನಿನ ಸ್ಪಷ್ಟ ನಿರ್ದೇಶನ ಹೇಳುತ್ತದೆ, `ಆ ಪ್ರಾಕೃತಿಕ ಪರಿಸರದ ವ್ಯಾಪಕ ಅಧ್ಯಯನ ಪರಿಣತರಿಂದ ನಡೆಸಬೇಕು. ಜೊತೆಗೆ ಯೋಜನೆಯ ಅನುಷ್ಠಾನದಿಂದಾಗುವ ಪರಿಣಾಮಗಳನ್ನು, ಅದಕ್ಕೆ ಪರಿಹಾರಗಳನ್ನು ಅಂದಾಜಿಸಿ ಸ್ಥಳದಲ್ಲೇ ಮತ್ತು ಬಹಿರಂಗವಾಗಿ ಸ್ಥಳೀಯರ ಸಮಕ್ಷಮದಲ್ಲೇ ತೀರ್ಮಾನಕ್ಕೆ ಒಡ್ಡಿಕೊಳ್ಳಬೇಕು (EIA- Environmental impact assessment)’. ಊರವರ ಮತ್ತು ನಮ್ಮ ತಿಳುವಳಿಕೆಗಳ ಪ್ರಕಾರ ಈ ವಲಯದಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ತೀರಾ ಸೀಮಿತವಾಗಿ (ಕೇವಲ ಕಾಳಿಂಗ ಸರ್ಪವನ್ನು ಗಮನದಲ್ಲಿಟ್ಟುಕೊಂಡು) ಸಣ್ಣ ಅಧ್ಯಯನ ಕೆಲಸ ನಡೆದಿತ್ತು (ಬಿ.ಕೆ.ಶರತ್, ಮೈ.ವಿ.ವಿ ನಿಲಯ). ಉಳಿದಂತೆ ಯಾವ ಸಂಶೋಧನೆಯೂ ವ್ಯಾಪಕ ಜೀವವೈವಿಧ್ಯ ದಾಖಲೆಯ ಪ್ರಯತ್ನವೂ ನಡೆದಿಲ್ಲ.

ಕೆಪಿಸಿಎಲ್ ಯಾರೋ ಎಲ್ಲಿಗೋ ತಯಾರಿಸಿದ ಎಲ್ಲಿಯದೋ ಪರಿಸರ ವರದಿಯನ್ನು ಈ ಪರಿಸರದ್ದೆಂಬಂತೆ ತನ್ನ ಯೋಜನಾವರದಿಗೆ ಲಗತ್ತಿಸಿಕೊಂಡು, ತನ್ನ ಯೋಜನಾ ವರದಿಯನ್ನು ಸಾರ್ವಜನಿಕ ತನಿಖೆಗೆ ಹೊಂಗಡಳ್ಳದಲ್ಲಿ ಒಡ್ಡಿಕೊಂಡಿತ್ತು. (ವಿವರಗಳಿಗೆ ನೋಡಿ: ಬ್ಲಾಗ್ www.athreebook.comನಲ್ಲಿ ಗುಂಡ್ಯಕ್ಕೆ ಗುಮ್ಮ ಬರುತಿದೆ) ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸುಮಾರು ಐದು ಗಂಟೆಗಳ ಉದ್ದಕ್ಕೆ ನಡೆದ ಭಾರೀ ಸಭೆಯಲ್ಲಿ ಹಲವು ತಜ್ಞರು ದಾಖಲೆ ಮತ್ತು ಲಿಖಿತ ವಿಮರ್ಶೆಗಳೊಡನೆಯೂ ಬಹುತೇಕ ಸ್ಥಳೀಯರು ಲೋಕಾನುಭವದ ಆಧಾರದಲ್ಲೂ ವಿರೋಧವನ್ನು ಸ್ಪಷ್ಟಪಡಿಸಿದ್ದರು. ಆದರೆ ಮಾಹಿತಿ ಹಕ್ಕಿನ ಆಧಾರದಲ್ಲಿ ಈಗ ಬಹಿರಂಗವಾಗಿರುವ ಜಿಲ್ಲಾಧಿಕಾರಿ ವರದಿ ಪೂರ್ಣ ತಪ್ಪು ಚಿತ್ರವನ್ನು ದಾಖಲಿಸಿದೆ. ವಿಶ್ವ ಪರಂಪರಾ ರಕ್ಷಣಾ ಯೋಜನೆ ಘೋಷಿಸಿರುವ ಜೀವ ವೈವಿಧ್ಯದ ಕುದಿ ಕೇಂದ್ರಗಳಲ್ಲಿ (bio-diversity hot spot) ಒಂದಾದ ಬಿಸಿಲೆ ವಲಯದ ಘಟ್ಟಕ್ಕೆ, ಅರಣ್ಯಸಂಪತ್ತಿಗೆ ಮರನಾಯಿ ಕಾವಲು ನಾಯಿಯಾಗಲಿ ಎಂದು ಪರಿಸರ ಪ್ರೇಮಿಗಳ, ವಿಚಾರವಂತರ ಒಕ್ಕೊರಲ ಹಾರೈಕೆ.

6 comments:

 1. Dear Ashok
  great work I read the same in Sudha Magazine too, I think if you can write the same in English and provide a Bookmark we can share this with lots of people around the world
  It is very sad to see blind folded Govt officials soon we may have have forest within the city (Abhayarnya) get the all possible animals and keep them , They will be more safer here!!!
  having new projects are more important than running existing provisions efficiently people are made to feel such a way that environmentalists are wrong rather officials who are not running our existing setup like, all those power projects already built utilizing it in-efficiently are doing better work because we see only that there is no power, no water inside our home....

  ReplyDelete
 2. ಪ್ರೊ|ಎಚ್.ಎಸ್. ವೆಂಕಟೇಶಮೂರ್ತಿ25 November, 2008 21:54

  ತುಂಬಾ ಒಳ್ಳೆಯ ಲೇಖನ. ಜೊತೆಗೆ ಫೋಟೋಗಳನ್ನು ಹಾಕಿರುವುದರಿಂದ ಲೇಖನಕ್ಕೆ ಅಧಿಕೃತತೆ ತಂದಿದೆ. ಇಂಥ ಲೇಖನಗಳ ಪುಸ್ತಕವೊಂದು ಬೇಗ ನಿಮ್ಮಿಂದ ಬರಲಿ
  ಎಚ್.ಎಸ್.ವಿ

  ReplyDelete
 3. ಡಾ| ಸಿ.ಪಿ. ಕೃಷ್ಣ ಕುಮಾರ್25 November, 2008 21:57

  ಮರನಾಯಿ ಎಂಬ ವಿಸ್ಮಯವನ್ನು ಪರಿಚಯಿಸಿದ್ದೀರಿ. ಒಳ್ಳೆಯ ಲೇಖನ. ಬರಹಗಳಲ್ಲಿ (ವ್ಯಂಗ್ಯದ)ಚೂಪು, ಕಾವ್ಯದ ಮಿಂಚು ಎರಡೂ ಇರುತ್ತವೆ. ಮಾಹಿತಿಯಂತೂ ಸರಿಯೆ. ಅಭಿನಂದನೆಗಳು.

  ReplyDelete
 4. Nimma link DrKrishi avara blog ninda siktu. Nimma bagge nanna snehitarinda kelidde. Vanya jeevi , section oodi tumba khushiyaytu. Nimma anubhava dinda nanu kaliyuva prayatna madabeku ..

  ReplyDelete
 5. ಎಸ್.ಎಂ ಪೆಜತ್ತಾಯ20 September, 2009 09:01

  ಅಶೋಕ ವರ್ಧನರೇ!
  ನೀಲಗಿರಿ ಮಾರ್ಟೆನ್ ಬಗ್ಗೆ ಮೊದಲ ಮಾಹಿತಿ ತಮ್ಮಿಂದ ದಕ್ಕಿತು. ಅದರ ಬಗ್ಗೆ ಗೂಗಲಿಸಿ ತಿಳಿದುಕೊಂಡೆ. ಆ ಪ್ರಾಣಿಗಳು ಮುಂದಿನ ಜನಾಂಗಕ್ಕೆ ನೋಡಲು ಸಿಗಲಿ!
  ನಮ್ಮ ಘಟ್ಟದ ಊರಿನಲ್ಲಿ ಮೌಸ್ ಡೀಯರ್ ( ಬರ್ಕ ), ಬಾರ್ಕಿಂಗ್ ಡೀಯರ್ ( ಕಾನುಕುರಿ, ಕೆಮ್ಮ) , ಮುಳ್ಳ ಹಂದಿ, ಕೆಂಚಣಿಲು, ನೀರೊಳ್ಳೆ ಹಾವು. ಪಗೇಲ ಹಾವು, ದಾಸರ ಹಾವು, ಹಸಿರು ಹಾವು. ಹಸಿರು ಪಾರಿವಾಳ, ಹಸಿರು ಗಿಣಿ, ಗುಬ್ಬಚ್ಚಿ ಮುಂತಾದುವು ಮಾಯವಾಗಿವೆ. ಇಂದು ನಮ್ಮ ತೋಟದ ಮನೆಯ ಅಂಗಳದಲ್ಲಿ ಅಪರೂಪಕ್ಕೆ ಭಾರದ್ವಾಜ ಹಕ್ಕಿ (ಕೆಂಬತ್ತು) ಕಂಡರೆ ಬಹು ಸಂತಸ ಪಡುತ್ತೇನೆ.
  ಮನೆಯ ಯಜಮಾನಿಯ ಹತ್ತಿರ "ಪಾಯಸ ಮಾಡಿ ಹಾಕು!" ಅನ್ನುತ್ತೇನೆ.
  ನಾನು ಚಿಕ್ಕ ಹುಡುಗ ಆಗಿದ್ದಾಗಲೇ ಕುಪ್ಪುಳು ಹಕ್ಕಿ ( ಕೆಂಬತ್ತು) ಅಪರೂಪ ಆಗಿತ್ತು! ಆಗಲೇ "ಕುಪ್ಪುಳು ಕಂಡರೆ ಪಾಯಸ!" ಅನ್ನುತ್ತಾ ಇದ್ದರು. ಸದ್ಯಕ್ಕೆ ಈಗ ಅಪರೂಪಕ್ಕೆ ನವಿಲುಗಳು ಮಾತ್ರ ಕಾಣಸಿಗುತ್ತಿವೆ. ಅದೇ ಒಂದು ಸಂತೋಷ!
  ನಮ್ಮ ಲ್ಲಿ ಐದು ದಶಕದ ಹಿಂದೆ ಕಾಣುತ್ತಿದ್ದ ಆ ಪರಿಸರ ಎಲ್ಲಿಗೆ ಹೋಯಿತು? ಅಂತ ದುಃಖಿಸುತ್ತಾ ಇದ್ದೇನೆ.
  ವಂದನೆಗಳು
  ಕೇಸರಿ ಪೆಜತ್ತಾಯ

  ReplyDelete
 6. http://www.frontline.in/environment/wild-life/marten-up-close/article4755661.ece?homepage=true

  ReplyDelete