29 October 2008

ಬಿಳಿಹುಲಿಗೆ ಬಂತು ಬಣ್ಣ

ಹುಲಿ ಬಂತು ಹುಲಿ
೨೦೦೮ರ ಏಪ್ರಿಲ್ ತಿಂಗಳ ಒಂದು ದಿನ ಈ ಬಿಳೀಹುಲಿ ನನ್ನಂಗಡಿ ಹೊಕ್ಕಿತು. ಬೆಂಗಳೂರಿನ ವಿನಾಯಕ ಬುಕ್ ಡಿಸ್ಟ್ರಿಬ್ಯೂಟರ್ಸ್ ಎಂದಿನಂತೆ ಹೊಸತುಗಳಲ್ಲಿ ಒಂದಾಗಿ The White Tiger ಒಂದು ಪ್ರತಿ ಕಳಿಸಿದ್ದರು. ನನ್ನ ವನ್ಯದ ಗುಂಗಿನಲ್ಲಿ ಇದೇನಾದರೂ ಮಧ್ಯಪ್ರದೇಶದಲ್ಲಿ ಸೆರೆಯಲ್ಲಿರುವ ಆಲ್ಬಿನೋ ಹುಲಿಗಳ ಕಥೆಯೋ ಎಂದು ಪುಸ್ತಕವನ್ನು ಹಿಂದೆ ಮುಂದೆ ತಿರುಗಿಸಿದೆ. ಗಟ್ಟಿ ರಟ್ಟಿನ ದಪ್ಪ ಪುಸ್ತಕ - ಎಂಥದೋ ಕಾದಂಬರಿ. ಹೀಗೇ ನೋಡಿದಾಗ ಅದರ ಮೋಡಿ ಲಿಪಿಯ ಮುಖಪುಟದಲ್ಲಿ ಯಾರೋ ಅರವಿಂದ ಎಂಬಾತನ ಚೊಚ್ಚಲ ಕೃತಿ ಎಂದಷ್ಟೇ ಕಂಡದ್ದು ನೆನಪು. ಮುನ್ಸೂಚನೆ, ಪೋಸ್ಟರ್, ನಾಮ ಅಥವಾ ಪ್ರಚಾರದ ಬಲ ಯಾವುದೂ ಇಲ್ಲದ ಆ ಪುಸ್ತಕವನ್ನು ಶೆಲ್ಫಿಗೆ ರವಾನಿಸಿದ್ದೆ. ಆ ದಿನಗಳಲ್ಲಿ ಅಂಗಡಿಗೆ ಭೇಟಿಕೊಟ್ಟ ನನಗೆ ಅಷ್ಟೇನೂ ಪರಿಚಿತನಲ್ಲದ ತರುಣ ವೈದ್ಯ ಡಾ| ಅನಿಲ್ ಶೆಟ್ಟಿ ಈ ಪುಸ್ತಕವನ್ನು ಕುರಿತು ಕೇಳಿದಾಗ ಗ್ರಂಥಾಲಯ ವಿಜ್ಞಾನ ಕತೃವಿನ ಖ್ಯಾತ ಉಕ್ತಿ, `ಪ್ರತಿಪುಸ್ತಕಕ್ಕೊಬ್ಬ ಓದುಗ’ ಮಾತ್ರ ನೆನಪಾಯ್ತು! ಅನಿಲ್ ಪುಸ್ತಕ ಒಯ್ಯುವ ಮುನ್ನ ಕೆಳಧ್ವನಿಯಲ್ಲಿ ಹೇಳಿದರು “ಈ ಲೇಖಕ, ಅರವಿಂದ ಅಡಿಗ ಊರಿನವನೇ. ಆರು ವರ್ಷ ನನ್ನ ಸಹಪಾಠಿ, ಆತ್ಮೀಯ ಮಿತ್ರ. ಆ ದಿನಗಳಲ್ಲೇ ಕಂಡಿದ್ದೇನೆ - ಇವನು, ಇವನಣ್ಣ ಆನಂದ ಅಡಿಗನೂ ಭಾರೀ ಬುದ್ಧಿವಂತರು. ಹೆಚ್ಚು ಪ್ರತಿ ತರಿಸಿಡಿ, ಚೆನ್ನಾಗಿ ಹೋದೀತು”. ಶಂಬಾ ಜೋಶಿಯ ಪುಸ್ತಕದಿಂದ ಹಿಡಿದು ಥರ್ಡ್ ಕ್ಲಾಸಿನ ಕನ್ನಡ ಮೀಡಿಯಂ ಸೋಶಿಯಲ್ ಗೈಡಿನವರೆಗೂ ಸಲ್ಮನ್ ರಶ್ದಿಯ Satanic Verseನ ಕಳ್ಳಮುದ್ರಣದಿಂದ ಹಿಡಿದು Nincomcoopನ ಬರೆಯದ ಪುಸ್ತಕದವರೆಗೂ ತರಿಸಿಡಲು ಶಿಫಾರಸು ಮಾಡುವವರನ್ನು ಸಾಕಷ್ಟು ಕಂಡಿರುವುದರಿಂದ ಬರಿದೆ ಗೋಣು ಹಾಕಿದ್ದೆ. ಆದರೂ...


ಪ್ರತಿಗಳು ನಿಧಾನಕ್ಕೆ ಒಂದು ಎರಡು ಮಾರಿ ಹೋಗುತ್ತಿತ್ತು ಹಾಗೇ ತರಿಸುತ್ತಲೂ ಇದ್ದೆ. ಈ ಹಂತದ ಕೊಳ್ಳುಗರಲ್ಲಿ ನಾನು ಮೂರು ಸ್ತರ ಗುರುತಿಸಿದ್ದೆ. ಅನಿಲ್‌ರ ಹಾಗೆ ಸಮಕಾಲೀನ ಪರಿಚಿತರು, ಲೇಖಕನ ಅಪ್ಪನ ಪರಿಚಿತರು ಮತ್ತೆ ಅಜ್ಜನ ಅಭಿಮಾನಿಗಳು! ಮೊದಲ ವರ್ಗ `ಕೆನರಾ ಪ್ರಾಥಮಿಕ ಶಾಲೆ, ಅಲೋಶಿಯಸ್ ಪ್ರೌಢ ಶಾಲೆಗಳ ಹಳೆಯ ವಿದ್ಯಾರ್ಥಿ’, `ಅರವಿಂದ ನನಗಿಂತ ಒಂದು ತರಗತಿ ಹಿಂದೆ’, `ಅರವಿಂದನ ಅಣ್ಣ ನನ್ನ ದೋಸ್ತ್’, `ಪ್ರಥಮ ರ್‍ಯಾಂಕ್ ವಿದ್ಯಾರ್ಥಿಯಾದರೂ ವೈದ್ಯ, ಎಂಜಿನಿಯರ್ ಪದವಿಗಳ ಮೋಹ ಬಿಟ್ಟವ’  `ಬರಿಯ ಪುಸ್ತಕ ಕೀಟವಾಗಿರಲಿಲ್ಲ - ಭಾಷಣ, ಪ್ರಬಂಧ, ಕ್ರೀಡೆ ಸರ್ವೋತ್ತಮ’ ಎಂದಿತ್ಯಾದಿ ನುಡಿ-ರೇಖೆಗಳು ನನ್ನ ಮನಸ್ಸಿನಲ್ಲಿ ಬಹುಮುಖೀ ಆಸಕ್ತಿಗಳ, ಪ್ರತಿಭಾವಂತ ಲೇಖಕನೊಬ್ಬನ ಸುಂದರ ಚಿತ್ರರೂಪಿಸಿತು. ಅಪ್ಪ - ಮಂಗಳೂರಲ್ಲೇ ಖ್ಯಾತ ವೈದ್ಯರಾಗಿದ್ದು ಸದ್ಯ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಡಾ| ಮಾಧವ ಅಡಿಗರ ಹಿಂದಿನ ಸಹೋದ್ಯೋಗಿಗಳಾಗಿದ್ದ ವೈದ್ಯ ವೃಂದ ಮತ್ತು ಅಜ್ಜ - ಕರ್ನಾಟಕ ಬ್ಯಾಂಕನ್ನು ಬಹುಕಾಲ ಪ್ರಭಾವೀ ಅಧ್ಯಕ್ಷರಾಗಿ ಆಳಿದ ದಿ| ಸೂರ್ಯನಾರಾಯಣ ಅಡಿಗರ ಅಭಿಮಾನಿಗಳು ಅರವಿಂದ ಚಿತ್ರಕ್ಕೆ ಸುಗಂಧ ಪೂಸಿದಂತಿತ್ತು.

ವನರಾಜ

ಅರೆ ಮನಸ್ಸಿನಲ್ಲಿ `ಹುಲಿ’ ಕೊಂಡ ವೈದ್ಯ ಗೆಳೆಯ ಶ್ರೀನಿವಾಸ ಕಕ್ಕಿಲ್ಲಾಯ “ಕಾದಂಬರಿ ಚೆನ್ನಾಗುಂಟು. You can recommend.” ಅದೊಂದು ಗಾಳಿ ಜೋರಿನ, ಪಿರಿಪಿರಿ ಮಳೆಯ ಸಂಜೆ. ಮಾಮೂಲಿನಂತೆ ತೆರೆದಿರದ ಅಂಗಡಿಯ ಗಾಜಿನ ಬಾಗಿಲು ನೂಕಿ `ಹುಲಿ’ ಕೇಳಿ ಬಂದರು ಕರ್ನಾಟಕ ಬ್ಯಾಂಕಿನ ಹಾಜೀ ಅಧ್ಯಕ್ಷ ಅನಂತಕೃಷ್ಣ. ಸ್ವಲ್ಪ ಆಶ್ಚರ್ಯದಲ್ಲೇ ಕೇಳಿದೆ “ಅರೆ, ನೀವೇ ಬರಬೇಕಾಯ್ತಾ?” ಅವರದು ಸರಳ ಉತ್ತರ “ಕೆಲವನ್ನು ನಾವು ನಾವೇ ಮಾಡಿಕೊಳ್ಳುವುದು ಚಂದ.” ದಾರಿಬದಿಯಲ್ಲಿ ಕಾರೊಳಗೆ ಕುಳಿತು ಒಣಗಿದರೂ ಸರಿ, ಪುಸ್ತಕ ತರಲು ಚಾಲಕನೇ ಸರಿ, ಎನ್ನುವವರಿಗೇನೂ ಕೊರತೆಯಿಲ್ಲ. ಹೀಗೇ ಓದಿದವರಿಂದ, ಕುತೂಹಲಿಗಳಿಂದ ಬಾಯ್ದೆರೆ ಪ್ರಚಾರದಲ್ಲೇ ಗಿರಾಕಿ ಸಂಖ್ಯೆ ಏರುತ್ತ ಬಂತು. ಬೂಕರ್ ಪ್ರಶಸ್ತಿಯ ಸ್ಪರ್ಧೆಗೆ ಬಂದದ್ದು, ಕಡಿಮೆ ಯೋಗ್ಯತೆಯವನ್ನು ನಿವಾರಿಸುವಾಟದಲ್ಲಿ ತೇರ್ಗಡೆಗೊಂಡು ಅಂತಿಮ ಆರರಲ್ಲಿ ನಿಂತದ್ದು, ಅದೂ ಹಳಬ ಮತ್ತು ಖ್ಯಾತ ಭಾರತೀಯ ಲೇಖಕನೂ ಆದ ಅಮಿತಾವ್ ಘೋಷ್ ಜೊತೆ ಭುಜ ಒರೆಸುವಲ್ಲಿಯವರೆಗೆ ಬಂದದ್ದೂ ಆಯ್ತು. ಸುದ್ಧಿ, ವ್ಯಕ್ತಿ ಪರಿಚಯ, ಕೃತಿವಿಮರ್ಶೆ ಅಲ್ಲಿ ಇಲ್ಲಿ ಒದಗಿ ನನ್ನ ಬೇಡಿಕೆಯ ಸಂಖ್ಯೆ ಏರುತ್ತ ಹೋಯಿತು. ಸೆಪ್ಟೆಂಬರಿನ ಒಂದು ಸಂಜೆ ಯಾರೋ ಇದ್ದ ಒಂದು ಪ್ರತಿಯನ್ನು ಕೊಳ್ಳುತ್ತಾ ಪರೋಕ್ಷವಾಗಿ ಎಚ್ಚರಿಸಿದರು, “ಅರೆ, ಇದು ಕಡೇ ಪ್ರತಿಯೇ? (ಬಹುಶಃ) ನಾಳೆ ಬೂಕರ್ ಪ್ರಶಸ್ತಿ ಘೋಷಣೆಯ ದಿನ ಅಲ್ವಾ?!” ವ್ಯಾಪಾರಿಯಾಗಿ ನನಗೂ ಸೋತ ಭಾವ, ಕೂಡಲೇ ವಿನಾಯಕಕ್ಕೆ ದೂರವಾಣಿಸಿದೆ. ಗಂಟೆ ಐದು ಕಳೆದಿತ್ತು, ಉತ್ತರಿಸುವವರಿರಲಿಲ್ಲ. ನನ್ನ ಮಟ್ಟಿಗೆ ಯಾವುದೇ ಜಂಗಮವಾಣಿಗೆ (ಮೊಬೈಲಿಗೆ) ಕರೆ ಕೊಡುವುದೆಂದರೆ ವ್ಯಕ್ತಿಯೊಬ್ಬನ ಖಾಸಗಿತನಕ್ಕೆ ನುಗ್ಗಿದ ಹಾಗೆ! ಆದರೆ ಸನ್ನಿವೇಶದ ತುರ್ತು ನೋಡಿ ಅವರನ್ನು ಸಂಪರ್ಕಿಸಿಯೇ ಬಿಟ್ಟೆ. ದಿನದ ಕೆಲಸ ಮುಗಿಸಿ, ಬೆಂಗಳೂರಿನ ವಾಹನ ಸಮ್ಮರ್ದದಲ್ಲೆಲ್ಲೋ ಬಸವಳಿಯುತ್ತ ಮನೆಯ ದಾರಿ ಹಿಡಿದವರಿಗೆ ನನಗೂ ದಾರಿ ಹುಡುಕುವ ಹೆಚ್ಚಿನ ಹೊರೆ. ಬೇರೊಬ್ಬ ದಾಸ್ತಾನುಗಾರರಿಗೆ ಹೇಳಿ ಅಂದೇ ಇಪ್ಪತ್ತು ಪ್ರತಿ ಬಸ್ಸಿಗೇರಿಸಿಬಿಟ್ಟರು. ಆದರೆ ಅಂದು ನನ್ನ ದಾಸ್ತಾನು ಹೆಚ್ಚಿದ್ದಷ್ಟೇ ಬಂತು, ಬೂಕರ್ ಘೋಷಣೆ ಆಗಲೇ ಇಲ್ಲ.

ಅಕ್ಟೋಬರಿನ ಒಂದು ಬೆಳಗ್ಗಿನ ವಾರ್ತಾಪ್ರಸಾರದಲ್ಲಿ `ಅರವಿಂದ-ಬೂಕರ್’ ಬಿತ್ತರವಾಯ್ತು. ಅಂದು ಅಂಗಡಿಯಲ್ಲಿ ನಮ್ಮಲ್ಲಿದ್ದ ಅಷ್ಟೂ ಪ್ರತಿಗಳನ್ನು ಗಲ್ಲಾದ ಮೇಲೇ ಜೋಡಿಸಿಟ್ಟುಕೊಂಡೆವು. ವಿಶೇಷ ಸಂಚಲನ ಕಾಣಿಸಲಿಲ್ಲ. ಆದರೂ (ಮಾಮೂಲಿನಂತೆ) ಮಾರಣೇದಿನದ ಪಾರ್ಸೆಲ್ಲಿಗಾಗಿ ನಿತ್ಯ ಅಪರಾಹ್ನ ವಿನಾಯಕಕ್ಕೆ ಸಲ್ಲಿಸುವ ದೂರವಾಣಿ ಆದೇಶದಲ್ಲಿ ಅರೆಮನಸ್ಸಿನಲ್ಲೇ ಇಪ್ಪತ್ತು ಬಿಳಿಹುಲಿ ಕೇಳಿ ಹೋಯ್ತು. ಪತ್ರಿಕಾ ಮಾಧ್ಯಮದ ಮೂಲಕ ಸುದ್ಧಿಯ ವಿಸ್ತೃತ ಸ್ಫೋಟದ ದಿನ ಬಂತು. ಇಲ್ಲಿ ಸುಮಾರು ಒಂದು ವರ್ಷದ ಹಿಂದೆ ಹ್ಯಾರೀ ಪಾಟರಿನ ಸಾಹಸ ಸರಣಿಯ ಕೊನೆಯ ಪುಸ್ತಕ ಬಹಳ ಮುಂಚಿತವಾಗಿ ಮತ್ತು ಯೋಜಿತವಾಗಿ ಜಗತ್ತಿನಾದ್ಯಂತ ಒಂದೇ ದಿನ ಬಿಡುಗಡೆಯಾದ್ದನ್ನು ಸ್ಮರಿಸದೆ ಹೇಗೆ ಮುಂದುವರಿಯಲಿ!

ಹ್ಯಾರೀ ಪಾಟರಿನ ಬೆಳಕಿನಲ್ಲಿ

ಪುರಾಣಪುರುಷ ಕಂಸನಿಗೆ ಕೇಳಿದ ಅಶರೀರವಾಣಿಯ ಋಣಾತ್ಮಕತೆಯನ್ನು ಕಳಚಿಕೊಂಡು ಬಂದಂತೇ ಇತ್ತು ಈ ಹ್ಯಾರೀ ಪಾಟರನ ಸರಣಿ. ಲೇಖಕಿ ಜೆ.ಕೆ. ರೌಲಿಂಗ್‌ಳ ಲಕ್ಷ್ಯ ಆ ದೇವಕಿಗಿಂತಲೂ ಒಂದಂಕಿ ಕಡಿಮೆ; ಏಳಕ್ಕೆ ಮುಕ್ತಾಯ. ಕಂಸ ಏಳನೆಯ ಗರ್ಭಕ್ಕೇ ಹೆಚ್ಚಿನ ಜಾಗೃತಿ ತಳದಂತೆ ಇಲ್ಲೂ ಆರನೆಯ ಪುಸ್ತಕಕ್ಕೇ ಪುಸ್ತಕಲೋಕ ಹುರಿಗೊಂಡಿತ್ತು. ತಿಂಗಳೊಂದಕ್ಕೂ ಮೊದಲೇ ನಾನು ಪೋಸ್ಟರ್ ಹಚ್ಚಿ ಮುಂಗಡ ಕಾಯ್ದಿರಿಸುವಿಕೆ ಸುರು ಮಾಡಿದ್ದೆ. ಭಾರತದ ಮಹಾನಗರಗಳಲ್ಲಿ ಮಾತ್ರ (ಅದೂ ಹೆಚ್ಚಾಗಿ ರಾಜ್ಯ ರಾಜಧಾನಿಗಳಲ್ಲಿ) ಜಾಗತಿಕವಾಗಿ ನಿಗದಿಗೊಂಡ ದಿನದ ಹಿಂದಿನ ರಾತ್ರಿ ಸುಮಾರು ಹತ್ತುಗಂಟೆಯ ಮೇಲೆ ವಿತರಕರು ಮತ್ತು ದೊಡ್ಡ ಪುಸ್ತಕ ವ್ಯಾಪಾರಿಗಳಿಗೆ ಮೊದಲೇ ಕೇಳಿದಷ್ಟು ಪ್ರತಿಗಳನ್ನು ಹಂಚಿದ್ದರು. ಸಹಜವಾಗಿ ಬೆಂಗಳೂರಿನ ನನ್ನ ವಿತರಕರಿಗೆ ರಾತ್ರಿ ಬಸ್ಸಿಗೆ ನನ್ನಗತ್ಯಗಳನ್ನು ತುಂಬಲು ಸಾಧ್ಯವಾಗುತ್ತಿರಲಿಲ್ಲ. ಆದರೇನು ಮೊದಲೇ ಮಾತಾಡಿ ನಿಶ್ಚೈಸಿದ್ದಂತೆ ಬೆಳಗ್ಗಿನ ಮೊದಲ ಬಸ್ಸೇರಿದ ನನ್ನ ಮೂವತ್ತೋ ನಲ್ವತ್ತೋ ಪ್ರತಿಗಳು ಅಂದೇ ಸಂಜೆಗೆ ಮಂಗಳೂರಿನಲ್ಲೂ ಓದುಗರ ಕೈ ಸೇರಿತ್ತು.

ದೇವಕಿಯ ಎಂಟನೆಯ ಶಿಶು ಅಲ್ಲಲ್ಲ, ರೌಲಿಂಗಳ ಏಳನೆಯ ಕಲ್ಪನೆಯ ಕೂಸಿಗೂ ಎಷ್ಟೋ (ಒಂಬತ್ತು?) ತಿಂಗಳ ಮೊದಲೇ ಜೂನ್ ತಿಂಗಳ ಒಂದು ದಿನ ನಿಗದಿಯಾಗಿತ್ತು. ಈ ಬಾರಿ ಮಂಗಳೂರಿನಂಥ ಊರುಗಳಿಗೂ ಅದೇ `ಮುಹೂರ್ತ’ದಲ್ಲಿ ಪ್ರತಿಗಳನ್ನು ಮುಟ್ಟಿಸುವ ವ್ಯವಸ್ಥೆ ಸಮರ್ಪಕವಾಗಿ ಮಾಡಿದ್ದರು. ತಮಾಷೆ ಎಂದರೆ ಆ ದಿನವೂ (ದೇವಕಿಯ ಎಂಟನೇ ಶಿಶು ಹುಟ್ಟಿದ ದಿನದಂತೆ!) ಭಾರೀ ಮಳೆ ಬರುತ್ತಿತ್ತು. ಸೂರ್ಯನಿರಲಿ, ಹಗಲಿನ ಬೆಳಕೂ ತೊಡಗುವ ಮುನ್ನ (ಬೆಳಿಗ್ಗೆ ಗಂಟೆ ಐದುಐವತ್ತಕ್ಕೆ) ಅಂಗಡಿ ಬಾಗಿಲು ತೆರೆದೆವು. ಆರಕ್ಕೆ ಸರಿಯಾಗಿ ಡೆಲಿವರಿ ವ್ಯಾನ್ ಬಂದು ನಾನು ಕೇಳಿದ್ದಂತೆ ನೂರಕ್ಕೂ ಮಿಕ್ಕು ಪ್ರತಿಗಳ ಸೀಲ್ಡ್  ಡಬ್ಬಿ ಕೊಟ್ಟು ಹೋಯ್ತು. ಮುಂಗಡ ಕೊಟ್ಟವರಲ್ಲಿ ಇಬ್ಬರು ಕಾದೇ ಇದ್ದರು. ಟೀವೀ ಚಾನೆಲ್ಲೊಂದರ ಪ್ರತಿನಿಧಿಗಳೂ ಇದ್ದರು. ಮತ್ತೆ ಜನ, ಜನ, ಜನ! ದೈನಂದಿನ ಕೆಲಸದ ಸಮಯ ಸುರುವಾಗುವ ವೇಳೆಗೆ (ಬೆಳಿಗ್ಗೆ ೮.೩೦) ನಮ್ಮ ಬಹುತೇಕ ವಿತರಣೆ ಮುಗಿದು ಹೋಗಿತ್ತು. ಆ ದಿನದ ವ್ಯವಹಾರ ಹಣಕಾಸಿನ ವಹಿವಾಟಿಗಿಂತಲೂ ಆಚಿನ ಏನೋ ಸಾಧನೆಯಂತೆ ಎಂದೂ ನೆನಪಲ್ಲುಳಿಯುವಂತೆ ನಡೆದು ಹೋಯ್ತು.

ಅಂಥದ್ದೇ ನಿರೀಕ್ಷೆ `ವೈಟ್ ಟೈಗರಿಗೆ ಬೂಕರ್ ಪ್ರಶಸ್ತಿ’ಯ ಸುದ್ದಿ ಪತ್ರಿಕೆಗಳಲ್ಲಿ ಸ್ಫೋಟವಾಗುವ ದಿನ ನನಗಿತ್ತು. ಆದರೆ ವ್ಯವಸ್ಥೆ (ಮುಖ್ಯವಾಗಿ ಪ್ರಕಾಶಕ, ವಿತರಕ, ಸಾಗಣೆದಾರ) ಸಜ್ಜುಗೊಳ್ಳಲು ಅಸಾಧ್ಯವಾದ ಸ್ಪರ್ಧಾಕಣ ಇಲ್ಲಿದ್ದುದರಿಂದ ವಹಿವಾಟು ಎಲ್ಲೂ ಬಿರುಸಾಗಲೇ ಇಲ್ಲ. ಸಂಜೆಗೆ ಇದ್ದ ಪ್ರತಿಗಳೇನೋ ಮುಗಿದವು. ಒಟ್ಟಾರೆ ಬೆಂಗಳೂರಿನಲ್ಲೂ ದಾಸ್ತಾನು ಕರಗಿತ್ತು. ಅಲ್ಲಿನ ನನ್ನ ವಿತರಕರಲ್ಲಿ ಉಳಿದಿದ್ದ ಕೇವಲ ಹತ್ತಿಪ್ಪತ್ತು ಪ್ರತಿಗಳು ಮಾರಣೇ ದಿನಕ್ಕೆ ನನಗೆ ಒದಗಿ ಬಂತು. ಇಷ್ಟಾದರೂ ಎಲ್ಲ ಕೇವಲ ವ್ಯಾವಾಹಾರಿಕ ಸಂಚಲನಗಳಷ್ಟೇ ಆದದ್ದು ಆಶ್ಚರ್ಯ. ಆದರೆ ಇಂದು ವಿರಾಮದಲ್ಲಿ ಯೋಚಿಸುವಾಗ ಇದು ಜಾಗತಿಕ ವಿದ್ಯಮಾನವಲ್ಲ - ಕೇವಲ ಕಾಮನ್‌ವೆಲ್ತ್ ರಾಷ್ಟ್ರಗಳ ವಲಯದ್ದು. ಭಾರತಕ್ಕೆ ಇದು ಹೆಮ್ಮೆಯದ್ದೇ ಆದರೂ ಕರ್ನಾಟಕದ ಹೆಚ್ಚುಗಾರಿಕೆ ಮತ್ತೂ ಸೂಕ್ಷ್ಮಗೊಳ್ಳುವುದಾದರೆ ಮಂಗಳೂರಿಗೇ ಸೀಮಿತಗೊಂಡಂತಿತ್ತು! ಪಾಟರಿನಲ್ಲಿ ಸಾಹಿತ್ಯ ಪ್ರೀತಿ, ಇಲ್ಲಿ ಸಾಹಿತಿಯ ಅಭಿಮಾನ. ಅಲ್ಲಿ ಸ್ವಾಂತ ಸುಖಾಯ ಮಾತ್ರವಾದರೆ ಇಲ್ಲಿ ಮೆರೆದದ್ದು ಸ್ವ-ಪ್ರಚಾರವೇ ಹೆಚ್ಚು!

ವೇಷ ಕಟ್ಟುವವರೊಡನೆ
ಕರಾವಳಿಯ ಹಿರಿಯ ಜನಪ್ರಿಯ ಪತ್ರಿಕೆ ತನ್ನ ಮಾತಾಳಿ ಪ್ರತಿನಿಧಿ - `ಮ.ಪ್ರ’ ಎಂದಿಟ್ಟುಕೊಳ್ಳಿ, ಲೇಖನವನ್ನೇ ಪ್ರಕಟಿಸಿತು. ಕಾದಂಬರಿಯ ಸಂಕ್ಷಿಪ್ತ ಪರಿಚಯವೇನೋ ಇತ್ತು. ಆದರೆ ಪ್ರಶಸ್ತಿವಿಜೇತನ ಪರಿಚಯದಲ್ಲಿ `ಅಡಿಗ’ನಿಗಿಂತ ಹೆಚ್ಚು `ನಾನು’ ಇದ್ದದ್ದು ತಮಾಷೆಯಾಗಿತ್ತು. ಅಂಗಡಿಯಲ್ಲಿ `ಹುಲಿ’ ಕೊಳ್ಳುವವರು, ಆ ಈ ಮಾಧ್ಯಮಗಳ ಪ್ರತಿನಿಧಿಗಳಿಂದ ಪುಸ್ತಕ ಮತ್ತು ಲೇಖಕನ ಬಗ್ಗೆ ಹೆಚ್ಚಿನ ಮಾಹಿತಿ ಕೋರಿಕೆಗಳು ಬರುತ್ತಿತ್ತು, ನನ್ನ ಮಿತಿಯಲ್ಲಿ ಏನಿದೆಯೋ ಕೊಡುತ್ತಲೂ ಇದ್ದೆ. ಹಾಗೇ ಎಷ್ಟೋ ಹೊತ್ತಿಗೆ ಮ.ಪ್ರ ದೂರವಾಣಿ ಕರೆ ಬಂತು. “ಸಾರ್, ಈ ಅಡಿಗರ ಪುಸ್ತಕಾ...” ನಾನು ಅತ್ಯುತ್ಸಾಹದಲ್ಲಿ “ಓ ಚೆನ್ನಾಗಿ ಹೋಗುತ್ತಿದೆ” ಎಂದೆ. “ಅರೆ, ಪುಸ್ತಕ ಬಂದಿದ್ಯಾ” ಮ.ಪ್ರ ಉದ್ಗಾರ ಕೇಳಿ ನನಗೆ ಆಶ್ಚರ್ಯ. “ಏನು ಹೀಗೆ ಕೇಳ್ತೀರಿ. ಮೂರ್ನಾಲ್ಕು ತಿಂಗಳ ಹಿಂದೆಯೇ ಬಂದಿದೆ, ಮಾರಿಹೋಗುತ್ತಲೂ ಇದೆ. ಸ್ಪರ್ಧಾಕಣದ ಸುದ್ದಿಗಳು ಬರುತ್ತಿದ್ದಂತೆ ಹೆಚ್ಚಾಗಿದೆ. ಇಂದು ಜನ, ಟೀವೀ ಚಾನೆಲ್ಲುಗಳು, ಪತ್ರಿಕಾ ಪ್ರತಿನಿಧಿಗಳೂ ಬಂದು ಪುಸ್ತಕ, ವಿಚಾರ, ಚಿತ್ರ ಸಂಗ್ರಹಗಳನ್ನೂ ಮಾಡಿಕೊಂಡೂ ಹೋಗುತ್ತಿದ್ದಾರೆ...”  ನಾನು ಉದ್ದೇಶಪಡದಿದ್ದರೂ ಸಹಜವಾಗಿ ಛೇಡನೆಯ ಧ್ವನಿ ಇದ್ದದ್ದಂತೂ ನಿಜ. ಆತ ಸಾವರಿಸಿಕೊಂಡು “ಅಂದ್ರೇ ನನಗೆರಡು ಪ್ರತಿ ಸಿಕ್ಕಬಹುದಾ? ಒಂದು ನನಗೇ ಇನ್ನೊಂದು ಬಾಸಿಗೆ.”  ದಿನದ ಬಿಸಿಯನ್ನು ದಾಖಲಿಸುವಲ್ಲಿ ತಾನು ಸೋಲಬಾರದೆಂಬಂತೆ, “ಮತ್ತೆ ನಮ್ಮ ಫೊಟೋಗ್ರಾಫರ್ ಒಂದೆರಡು ಚಿತ್ರ ತೆಗೆಯಲು ಕಳಿಸಲೇ?” ಆ ಸಮಯಕ್ಕೆ ನನ್ನ ಬಳಿ ಕೇವಲ ಏಳೆಂಟು ಪ್ರತಿಗಳಷ್ಟೇ ಉಳಿದಿದ್ದವು. ಹಾಗಾಗಿ “ಕೂಡಲೇ ಕಳಿಸಿ. ಅವರು ಬರುವ ವೇಳೆಯಲ್ಲಿ ಪ್ರತಿಗಳು ಉಳಿಯದೇ ಹೋದರೆ...” ಎಂದು ಎಚ್ಚರಿಸಿಬಿಟ್ಟೆ.

ಹತ್ತೇ ಮಿನಿಟಿನಲ್ಲಿ ನನ್ನಂಗಡಿ ಎದುರು ಕಾರೊಂದು ಬಂದು ನಿಂತಿತು. ಒಂದು ಕಾಲದಲ್ಲಿ ರಾಜ್ಯ ಮಟ್ಟದಲ್ಲಿ ಮುಖ್ಯವಾಗಿ ಸಾಹಿತ್ಯ ವೇದಿಕೆಗಳಲ್ಲಿ ಮೆರೆದದ್ದು ಸಾಲದೆಂಬಂತೆ, `ಮಾಜೀ’ ಅಂಟಿಸಿಕೊಂಡು ಪ್ರದರ್ಶನ ಕೂಟಗಳಿಗಾಗಿ ಪುನಃಪುನಃ ಊರು ತಿರುಗುವ `ನಿತ್ಯಗಣ್ಯ’ರೊಬ್ಬರು ಇಳಿದರು. ಜೊತೆಗೆರಡು ಪರಾವಲಂಬಿಗಳು. ಒಬ್ಬರು ಜಂಗಮವಾಣಿಯನ್ನು ಕಿವಿಗೆ ಹಚ್ಚಿಕೊಂಡೇ “ಹಾಂ, ಎಂಕ್ಳು ಮೂಳು ಎತ್ಯಾ” (=ನಾವಿಲ್ಲಿಗೆ ಬಂದಿದ್ದೇವೆ) ಎಂದು ಮುಗಿಸುತ್ತ ಪುನಃಪುನಃ ಊರು ಸುತ್ತುವವರಿಗೆ “ಆರ್ ಬತ್ತೊಂದುಲ್ಲೇರಿಗೆ” (=ಅವರು ಬರ್ತಾ ಇದ್ದಾರಂತೆ) ಎಂದು ಸಮಾಧಾನಿಸಿದರು. `ಎಂದೂ ಬಾರದ ಮಹರಾಯ ಇಂದ್ಯಾಕ ಬಂದಾನೋ’ ಎಂದು ನಾನು ಗುಣುಗುಣಿಸುತ್ತಿದ್ದಂತೆ ಚಿತ್ರಗ್ರಾಹಿ ಬಂದ. ಆತ ಕ್ಯಾಮರಾ ಸಜ್ಜುಗೊಳಿಸುತ್ತಿದ್ದಂತೆ ನಿತ್ಯಗಣ್ಯರು ಕೇಶಸೌಂದರ್ಯ, ಅಂಗಿ, ಪಂಚೆ ನೇರ್ಪುಗೊಳಿಸಿ, ಮುಖಕ್ಕೊಂದು ನಗೆ ಪೂಸಿ ನನ್ನೆದುರು ಬಂದು “ಸಾಹಿತ್ಯವನ್ನು ಕೊಂಡು ಆಡಬೇಕು” ಎಂದರು. `ಕನ್ನಡವೇ ಸತ್ಯ. ಇಂಗ್ಲಿಷ್ ನಿತ್ಯ. ಶಾಲಾದಿನಗಳಲ್ಲಿ ಕಾಡಿದ ಟೈಫಾಯಿಡ್ ತನ್ನನ್ನು ಹೇಗೆ ಇಂಗ್ಲಿಷ್-ದೂರನನ್ನಾಗಿಸಿತು’ ಎಂಬರ್ಥದಲ್ಲಿ ಬೆಳಕು ಚೆಲ್ಲಿ, ಹಣ ಕೊಟ್ಟು ವೈಟ್ ಟೈಗರ್ ಕೊಂಡರು. ಜೊತೆಗೊಟ್ಟವರು ಕೇವಲ `ಅಲಂಕಾರಕ್ಕೆ’ ಒಂದೊಂದು ಪುಸ್ತಕವನ್ನು ಹಿಡಿದು ಪುಟಮಗುಚುತ್ತಿದ್ದರು (ಅದರಲ್ಲೂ ಒಬ್ಬರು ಪುಸ್ತಕವನ್ನು ತಲೆಕೆಳಗಾಗಿ ಹಿಡಿದಿದ್ದರೆಂಬುದು ನನ್ನ ಸಹಾಯಕ ಶಾಂತಾರಾಮನ ಜೋಕ್ ಅಷ್ಟೆ). ಮಾರಣೇ ದಿನ ಆ ಚಿತ್ರ ಜನಪ್ರಿಯ ಪತ್ರಿಕೆಯಲ್ಲಿ ಚೆನ್ನಾಗಿಯೇ ಬಂತು. ಹೂವಿನೊಡನೆ ನಾರು ಎಂಬಂತೆ ನನಗೂ ಅದು ಪ್ರಚಾರ ಕೊಟ್ಟದ್ದನ್ನು ನಾನು ಸ್ಮರಿಸಲೇಬೇಕು.

ದಿ ಹಿಂದೂ ಪತ್ರಿಕೆಯ ಚಿತ್ರಗ್ರಾಹಿ ಬಂದಾಗ ಪೋಸು ಪ್ರವೀಣರ್‍ಯಾರಿಗೂ ತಿಳಿಸದೇ ಬಂದುಬಿಟ್ಟಿದ್ದರಿಂದ ಹತ್ತು ಮಿನಿಟು ಕಾಯಬೇಕಾಯ್ತು. ಸಹಜವಾಗಿ ತರುಣನೊಬ್ಬ ಬಂದು, ಪುಸ್ತಕ ಹಿಡಿದು, ದುಡ್ದು ಕೊಡಬೇಕೆನ್ನುವಷ್ಟರಲ್ಲಿ ಸೂಚನೆ ಇಲ್ಲದೆ ಚಿತ್ರ ಕ್ಲಿಕ್ಕಿಸಿಬಿಟ್ಟ. ಮತ್ತೆ ಆತನನ್ನು ಸಮಾಧಾನಿಸಿ ಬೇರೊಂದೆರಡು ಕೋನಗಳಿಂದ ಚಿತ್ರ ತೆಗೆದರೂ ಮೊದಲ ಬೆರಗಿನ ಚಿತ್ರವೇ ಪ್ರಕಟವಾದ್ದು ಹೆಚ್ಚು ಸಹಜವಿತ್ತು! ಸಂಜೆ ಯಾವುದೋ ಟೀವೀ ಚಾನೆಲ್ಲಿನವರು ಬರುವಾಗ ಪ್ರತಿಗಳೆಲ್ಲ ಮುಗಿದು ಹೋಗಿದ್ದವು. 
ಹುಲಿಯ ಹೆಜ್ಜೆಗಳು


ಎಲ್ಲಾ ಮಾಧ್ಯಮಗಳೂ ಸಾಕಷ್ಟು ಮಹತ್ವ ಕೊಟ್ಟೇ ವರದಿ ಮಾಡಿದವು. ಆದರೂ ಎರಡು ವ್ಯಂಗ್ಯ ಚಿತ್ರಗಳ ಬಗ್ಗೆ ನಾನು ಉಲ್ಲೇಖಿಸದಿರುವುದು ಅಸಾಧ್ಯ. ನಾನು ಖಾಯಂ ಪ್ರಜಾವಾಣಿ ಓದುಗನಲ್ಲ. ಹಾಗಾಗಿ ಅಂದು ಬೆಳಿಗ್ಗೆ ಬೆಂಗಳೂರಿನಿಂದ, ಮೈಸೂರಿನಿಂದ, ಹುಬ್ಬಳ್ಳಿಯಿಂದೆಲ್ಲಾ ನನ್ನ ಪರಿಚಿತ ಪ್ರಜಾವಾಣಿ ಓದುಗರು ದೂರವಾಣಿಸಿ “ನಿಮ್ಮ ಚಿತ್ರ ಬಂದಿದೇರೀ! ಚೆನ್ನಾಗಿದೆ” ಎಂದಾಗ  ಅಂದಿನ ಪತ್ರಿಕೆ ತರಿಸಲೇಬೇಕಾಯ್ತು. ಪಿ. ಮಹಮ್ಮದರ ಕರಾಮತ್ತು ನೀವೂ ನೋಡಿ ಸಂತೋಷಿಸಿ. ನನಗೆ ಫೋಟೋಜಿನಿಕ್ (ಚಿತ್ರದಲ್ಲಿ ಸುಂದರವಾಗಿ ಕಾಣುವುದು) ರೂಪವಿಲ್ಲದಿದ್ದರೇನು ಕಾರ್ಟೂನಿಕ್ ಚಹರೆಯನ್ನು ಸ್ಪಷ್ಟವಾಗಿ ಕಾಣಿಸಿದ ಮಹಮ್ಮದರಿಗೆ ನಾನು ಕಾರ್ಡು ಬರೆದು ಕೃತಜ್ಞತೆ ಸಲ್ಲಿಸಲು ಮರೆಯಲಿಲ್ಲ.

ಇನ್ನೊಂದು Times of Indiaದ್ದೂ ನಿಮ್ಮ ಸಂತೋಷಕ್ಕೆ. ಇದರ ಅಂಕಣ, ರೇಖೆಗಳು ವ್ಯಂಗ್ಯದ್ದೇ ಆದರೂ ಇದನ್ನು ಕಟು ವಾಸ್ತವ ಎನ್ನುವ ವರದಿ ನಾನು ಈಚೆಗೆ ನೋಡಿದ್ದೇನೆ. ಪ್ರಕಾಶಕರ ಮಾರಾಟ ಬೆಲೆ ರೂ ೩೯೫-೦೦. ಇದನ್ನು ಹಿಗ್ಗಾ ಮುಗ್ಗಾ ಹೊಡೆಯುವಂತೆ ಮುಂಬೈ ಬಿಡಿ, ಬೆಂಗಳೂರಿಗೂ ಇದರ ಕಳ್ಳ ಮುದ್ರಣ ರೂ ೧೨೫ರಲ್ಲಿ, ಮೂವತ್ತು ಸಾವಿರದ ಸಂಖ್ಯೆಯಲ್ಲಿ ದಾಳಿ ಇಟ್ಟಿದೆಯಂತೆ. ನನ್ನಲ್ಲಿ ಪ್ರತಿಗಳ ಬೇಡಿಕೆ ವಿಪರೀತವಾಗಿ ನಾನು ಮುಂಗಡ ಸಂಗ್ರಹಿಸಿ ನಾಲ್ಕೈದು ದಿನಗಳ ಅವಧಿಯಲ್ಲಿ ಹೆಚ್ಚುವರಿ ಪ್ರತಿಗಳನ್ನು ತರಿಸಿ ಕೊಡುವುದಾಗಿ  ತೊಡಗಿಕೊಂಡೆ. ಆದರೆ ಪುಸ್ತಕದ ಪ್ರಕಾಶಕನೋ ಅರವಿಂದ ಅಡಿಗರ ಸಾರ್ವಜನಿಕ ಸಂಪರ್ಕಾಧಿಕಾರೀ ಸಂಸ್ಥೆಯೋ ಬರ್ಖಾಸ್ತು ಆಗಿರುವ ಸುದ್ದಿಯೊಡನೆ ಪ್ರತಿಗಳು ನಿರೀಕ್ಷಿಸಿದ ವೇಗದಲ್ಲಿ ಬರದೇ ನನ್ನ ಪ್ರಾಮಾಣಿಕ ಆಶ್ವಾಸನೆಗಳು ಕೆಲವರಿಗಾದರೂ ವ್ಯಾಪಾರೀ ತಂತ್ರವಾಗಿ ಕಾಣಿಸಿದರೆ ಆಶ್ಚರ್ಯವಿಲ್ಲ.

ಪುಸ್ತಕ ಬಿಡುಗಡೆಯಾದಂದೇ (ನಾಲ್ಕೈದು ತಿಂಗಳ ಹಿಂದೆ) ಯಾವುದೇ ರಾಗದ್ವೇಷಗಳಿಲ್ಲದೆ ಔಟ್ಲುಕ್ ಮ್ಯಾಗಜೀನ್ ಮಾಡಿದ ವಿಮರ್ಶೆ ಈಗ ಬೂಕರ್ ಬೆಳಕಿನಲ್ಲಿ ಯಾಕೋ ಮಸಿಯಂತೆ ಕಾಣುತ್ತದೆ. ಮತ್ತೆ ಈಚೆಗೆ ಬಂದ ವಿಜಯ ಕರ್ನಾಟಕದ ಅಂಕಣ ಪಕ್ಷನಿಷ್ಠೆಯ ಭರದಲ್ಲಿ ಪ್ರಶಸ್ತಿಯ ಮೂಲೋತ್ಪಾಟನೆಗೆ ಹೊರಟು ಕಾದಂಬರಿಗೆ ನ್ಯಾಯ ಕೊಟ್ಟಿಲ್ಲ ಎಂದೇ ಅನ್ನಿಸುತ್ತದೆ. ಉಳಿದಂತೆ ನಾನು ಕಂಡ ಈ ಪುಸ್ತಕದ ಮೇಲಿನ  ಸಾಕಷ್ಟು ಬರಹಗಳು ಬೂಕರ್ ಪ್ರಶಸ್ತಿ ಪತ್ರಕ್ಕೆ ಪೂರಕ ಕೆಲಸ ಮಾಡಿವೆ. `ಕನ್ನಡಿಗ’, `ಮಂಗಳೂರಿನ ಹುಡುಗ’ `ಅಪ್ರತಿಮ ಪ್ರತಿಭಾವಂತ’ ಮುಂತಾದ ವಿಶೇಷಣಗಳು, ಸಂದರ್ಶನಕ್ಕೆ ಸಿಕ್ಕ ಸಂಬಂಧಿಕರು, ಓರಗೆಯವರು ಮತ್ತು ವಿದ್ಯಾಸಂಸ್ಥೆಗಳು ಕೊಟ್ಟ ಒಳ್ನುಡಿಗಳ ರಕ್ಷೆ ಬಿಳಿಹುಲಿಗೆ ಖಂಡಿತವಾಗಿಯೂ ಚಿರಕಾಲ ಗೆಲುವಿನ ಬಣ್ಣ ತುಂಬುತ್ತದೆ.

16 comments:

 1. shrii ashokavardhana avarige,
  namaskara.
  sorry!..thanks...!!!
  p mahamud
  prajavani
  bangalore

  ReplyDelete
 2. ವಿವೇಕ ಶಾನಭಾಗ29 October, 2008 13:46

  ಕನ್ನಡದಲ್ಲಿ ಪುಸ್ತಕ ಮಾರಾಟಗಾರರ ದೃಷ್ಟಿಕೋನದಿಂದ ಬರೆದ ಲೇಖನಗಳು ಬಹು ವಿರಳ. ೀ ಲೇಖನ ಮಾತ್ರವಲ್ಲ ಇಡೀ ಬ್ಲಾಗಿನಲ್ಲಿ ಅಶೋಕವರ್ಧನರ ಉತ್ಸಾಹ, ಶ್ರದ್ಧೆ ಮತ್ತು ಮಾತಿನ ಸ್ಪಷ್ಟತೆ ಕಾಣುತ್ತದೆ. ಕನ್ನಡ ಪುಸ್ತಕಪ್ರಿಯರಿಗೆ , ಪುಸ್ತಕೋದ್ಯಮದ ಬಗ್ಗೆ ಚಿಂತಿಸುವವರಿಗೆ ಇಂಥ ತಾಣದ ಅಗತ್ಯವಿತ್ತು. ಅಭಿನಂದನೆಗಳು. ವಿವೇಕ ಶಾನಭಾಗ

  ReplyDelete
 3. ಲೇಖನ ಇಷ್ಟವಾಯಿತು. ಬುಕರ್ ಬೂಕುಗಳಿಂದ ಸ್ವಲ್ಪ ದೂರವೇ ಇರುವ ನಾನಿನ್ನೂ ಬಿಳಿ ಹುಲಿಯನ್ನು ಓದಿಲ್ಲ. ಹಾಗಾಗಿ ಅದರ ಬಗ್ಗೆ ಏನೂ ಹೇಳಲಾರೆ. ಆದರೆ ಅಶೋಕರ ಲೇಖನದ ಬಗ್ಗೆ ಒಂದು ಅಂಶವನ್ನು ಇಲ್ಲಿ ದಾಖಲಿಸಲೇಬೇಕು. ವಿಮರ್ಶೆಯ ಪರಿಭಾಷೆಯಲ್ಲಿ ಮಾತನಾಡಿದಂತೆ ಆಗುತ್ತದೆಂಬ ಭಯವಿದ್ದರೂ ಅದನ್ನಿಲ್ಲಿ ಹೇಳಿಯೇ ಬಿಡುತ್ತೇನೆ. ಅಶೋಕರು ಪುಸ್ತಕ ವ್ಯಾಪಾರಿಯೆಂಬ ನೆಲೆಯಲ್ಲಿ ಬರೆಯುತ್ತಲೇ ಅವರು ಆಂತ್ರೋಪಾಲಜಿಸ್ಟ್ ಆಗಿಬಿಟ್ಟಿರುತ್ತಾರೆ. ಕರ್ನಾಟಕದ ಪುಸ್ತಕದಂಗಡಿಯ ವ್ಯವಹಾರದ ಅಂತ್ರೊಪಾಲಜಿಕಲ್ ಡಾಕ್ಯುಮೆಂಟೇಷನ್ ಏನಾದರೂ ಇದ್ದರೆ ಅದು ಅಶೋಕರ ಬರೆಹದಲ್ಲಷ್ಟೇ ಅನಿಸುತ್ತದೆ.

  ReplyDelete
 4. [...] ಸಂಪೂರ್ಣ ಓದಿಗೆ ಭೇಟಿ ಕೊಡಿ: ಅತ್ರಿ ಬುಕ್ ಸೆಂಟರ್ [...]

  ReplyDelete
 5. ಮಾನ್ಯ ಅಶೋಕವರ್ಧನ್ ಅವರಿಗೆ

  ನಿಮ್ಮ ಜೊತೆ ಮಾತನಾಡಿ ಈ ಎಲ್ಲವನ್ನೂ ನಿಮ್ಮ ಎಂದಿನ ಶೈಲಿಯಲ್ಲಿಯೇ ಕೇಳಿದ್ದ ನನಗೆ ಬರಹ ಓದುವಾಗ ನಿಮ್ಮ ಜೊತೆ ಇನ್ನೊಮ್ಮೆ ಮಾತನಾಡಿದಂತಾಯಿತು.

  ನೀವು ಬರೆದ ಅನೇಕ ಲೇಖನಗಳನ್ನು ಓದಿದ್ದೇನೆ. ಆದರೆ ಈ ಬರಹ ಆ ಎಲ್ಲಕ್ಕಿಂತ ಭಿನ್ನವಾಗಿದೆ. ಇವತ್ತಿನ ಪುಸ್ತಕೊಧ್ಯಮ, ಮಾಧ್ಯಮ, ಓದುಗ, ಲೇಖಕ, ಮಾರಾಟಗಾರರ ಒಂದು ಮಿನಿ ಅನಾವರಣವನ್ನು ಈ ಲೇಖನದಲ್ಲಿ ನಡೆಸಿದ್ದೀರಿ. ಇಂತಹ ಬ್ಲಾಗ್ ಬೇಕಿತ್ತು. ಅದರಲ್ಲೂ ಶುದ್ಧ ಕೈ ನವರು ಆರಂಭಿಸುವುದು ಬೇಕಿತ್ತು. ಹೆಚ್ಚು ಬರೆಯಿರಿ

  ವಂದನೆಗಳೊಂದಿಗೆ
  ಜಿ ಎನ್ ಮೋಹನ್

  ReplyDelete
 6. ಒಂದು ಪುಸ್ತಕದ ನೆಪದಲ್ಲಿ ಎಷ್ಟೆಲ್ಲ ಸಂಗತಿ, ಎಷ್ಟೆಲ್ಲ ಕಸರತ್ತು, ಎಷ್ಟೆಲ್ಲ ಕರಾಮತ್ತು. ನಿಮ್ಮ ಬರಹ ಕೂಡ ನಿಮ್ಮ ಮಾತಿನಂತೆ ನೇರ ಮತ್ತು ತಟ್ಟುವಂತಿರುತ್ತದೆ. ಜೊತೆಗೇ ನಿಮ್ಮ ಅಪ್ಪಟ ಪ್ರಾಮಾಣಿಕ ಅನುಭವಗಳ ಬೆಂಬಲ ಬೇರೆ. ಅಡಿಗೋತ್ತರ ಸಾಹಿತ್ಯದಲ್ಲೂ ಅಡಿಗರ ಛಾಯೆ.

  -ಜೋಗಿ

  ReplyDelete
 7. ನಿಜ ಹುಲಿ ವಿನಾಶದ ಅಂಚಿನಲ್ಲಿರುವ ಈ ಕಾಲದಲ್ಲಿ, ಈ ಬಿಳಿ ಹುಲಿ ಬೂಕರ್ ಪ್ರಶಸ್ತಿಯ ಬಲದಲ್ಲಿ ಅಥವಾ ಅಡಿಗರ ಹೆಸರಿನ ಬಲದಲ್ಲಿ ಪ್ರಸಿದ್ದಿ ಪಡೆದದ್ದನ್ನು ಸ್ವಾರಸ್ಯವಾಗಿ ಹೇಳಿದ್ದಿರಿ. ಪ್ರಚಾರಪ್ರಿಯರಲ್ಲದಿದ್ದರೂ ಈ ಹುಲಿ ನಿಮಗೆ ಕರಾವಳಿಯ ಹಿರಿಯ ಜನಪ್ರಿಯ(?) ಪತ್ರಿಕೆಯಲ್ಲಿ ಪ್ರಚಾರ ಕೊಟ್ಟದ್ದು ತಮಾಷೆಯಾಗಿತ್ತು. ಪಿ. ಮಹಮದ್ದ್ ರ ಅಶೋಕವರ್ದನ ನಿಮಗಿಂತ ಚೆನ್ನಾಗಿ ಕಾಣುತ್ತಾರೆ ;)

  ReplyDelete
 8. ಶ್ರೀನಿವಾಸ ಕಕ್ಕಿಲ್ಲಾಯ02 November, 2008 08:07

  ಪ್ರಿಯ ಅಶೋಕರೆ, ನಿಮ್ಮ ಬ್ಲಾಗು ಚೆನ್ನಾಗಿದೆ. ನಿಮ್ಮಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಪುಸ್ತಕಗಳ ಬಗ್ಗೆ ಟಾಪ್ 10 ಪಟ್ಟಿಯನ್ನೂ ಪ್ರಕಟಿಸಿ

  ವೈಟ್ ಟೈಗರ್ ಬುಕರ್ ಪಡೆದಾಗ ಕೆಲಕವರ ವಿಮರ್ಷೆ ಹಾಸ್ಯಾಸ್ಪದವಾಗಿತ್ತು: ಭಾರತದ ಬಗ್ಗೆ ಬೈದು ಬರೆದದ್ದಕ್ಕೆಲ್ಲಾ ಬುಕರ್ ಒಲಿಯುತ್ತದೆ ಎಂದು ಬಹಳಷ್ಟು ಮಂದಿ ಬರೆದರು. ಆದರೆ ಇವರಾರೂ ವೈಟ್ ಟೈಗರ್ ಓದಲೇ ಇಲ್ಲವೇನೋ ಅಥವಾ ಅವರಿಗದು ಅರ್ಥವಾಗಲಿಲ್ಲವೇನೋ ಎಂದೇ ಅನಿಸುತ್ತದೆ. ಎಲ್ಲಾ ವಲಯಗಳಲ್ಲಿ ಅವಕಾಶವಂಚಿತನಾದ ಹುಡುಗನೊಬ್ಬ ತನ್ನ ಸ್ವಂತ ಬುದ್ದಿಯಿಂದ ದೊಡ್ದ ವ್ಯವಹಾರಸ್ಥನಾಗಿ ಬೆಳೆಯುವುದಕ್ಕೆ ಭಾರತದಲ್ಲಿ ಅದು ಹೇಗೆ ಸಾಧ್ಯ ಎನ್ನುವುದನ್ನು ಬರೆದರೆ ಅದು ನಮ್ಮ ದೇಶದ ಅವಹೇಳನ ಹೇಗಾಗುತ್ತುದೆ ಎನ್ನುವುದು ನನಗಂತೂ ಅರ್ಥವಾಗದ ಸಂಗತಿ!

  ReplyDelete
 9. ಮಾತನ್ನು ಬರಹರೂಪಕ್ಕೆ ಇಳಿಸುವಾಗ ಅದೇ ಮೊನಚನ್ನು ಉಳಿಸಿಕೊಳ್ಳುವಲ್ಲಿ ಹಲವಾರು ಮುಲಾಜುಗಳು ಕಾಡುವುದಿದೆ; ಯಾಕೆಂದರೆ ಮಾತು ಬರಹವಾದಾಗ ಇತಿಹಾಸವಾಗುತ್ತದೆ. (ಮುಲಾಜುಗಳಿಲ್ಲದೇ ಹೋದರೂ ಕೆಲವೊಮ್ಮೆ ಹಾಗೆ ಬರೆಯಲಾಗುವುದಿಲ್ಲ). ನಿಮ್ಮ ಹೆಚ್ಚಿನ ಬರಹಗಳನ್ನು ಓದಿದವನಾಗಿ ಈ ವಿಚಾರದಲ್ಲಿ ನನಗೆ ನಿಮ್ಮ ಬಗ್ಗೆ ಅಚ್ಹರಿಯು ಅಭಿಮಾನವೂ ಇದೆ. ಹಾಗೇ ಕೊಂಚ ಮತ್ಸರವೂ...! ಈ ಲೇಖನ ಮೆಚ್ಹುಗೆ ಯಾಯಿತು -ಸಿಬಂತಿ

  ReplyDelete
 10. ಅಶೋಕ ಬಾವ, ಬರಹ ತುಂಬ ಚೆನ್ನಾಗಿದೆ. ಪತ್ರಿಕೆಗೆ ಕಳುಹಿಸಬಹುದಿತ್ತು. ವ್ಯಂಗ್ಯ ಚಿತ್ರ ನೋಡಿ ನಗೆ ಉಕ್ಕೇರಿ ಬಂತು. ಮೊನ್ನೆ ಉದಯವಾಣಿಯಲ್ಲೂ ನಿನ್ನ ಚಿತ್ರ ಬಂದಿದೆ! ಬಿಳಿ ಹುಲಿ ಈಗ ಉಂಟೇ? ಹಿಂದೂ ಪತ್ರಿಕೆಯಲ್ಲಿ ಕಳೆದ ವಾರ ಕಟು ವಿಮರ್ಶ್ ಬಂದಿತ್ತು. ನೀನು ಓದಿರಬಹುದು.

  ReplyDelete
 11. Dear Ashokvardhan,

  Nice! Your comment on in and around "Bili Huligalu" quite obvious. The White Tiger is one of the best subject for the bollywood film makers. We need authors like Raja Rao & R.K. Decause I still beleive the soul of India has not dormant, may be inactive

  Thank you
  Narayan Yaji

  ReplyDelete
 12. ಪಂಡಿತಾರಾಧ್ಯ13 November, 2008 07:33

  ಶ್ರೀ ಜಿ ಎನ್ ಅಶೋಕವರ್ಧನರಿಗೆ ನಮಸ್ಕಾರಗಳು.
  ಬಿಳಿ ಹುಲಿ ಪ್ರಸಂಗವನ್ನು ನಿಮ್ಮ ಬಾಯಲ್ಲೇ ಕೇಳಿದಹಾಗಿದೆ!

  ಪಂಡಿತಾರಾಧ್ಯ

  ReplyDelete
 13. rakshith p.shetty13 November, 2008 12:58

  Dear Ashokvardan sir,

  ur blog on the white tiger was an exellent one. more so because it was written from the point of view of a book lover who runs a book shop and a book shop owner who sells books for economic gain.for many white tiger may be a great work vaugely becuase it was written by a manglorean further a kanndiga...further a indian..but for me n many more laymen booklovers like me it is at par with many a contemprory works...adiga may not have the story telling charm of salman rushdie or witty humour of kushwant singh..his language may not be impeccble as r.k. narayan...but his potrayal of dark side of india is on that really commands a great appluse...many people especially our politicians may not like the bili hulli cuse it definetly touches a raw nerve.....thank you ashokvardan sir for recommanding such a great book to me...

  ReplyDelete
 14. Varadaraja Chandragiri24 November, 2008 22:16

  Priya Ashokavardhanarige,
  Bili huliya kathe ishtavayithu

  ReplyDelete
 15. Dear sir your story about in kannada balli hulli writen is very good, those people who reads understans the common things of tale every day going on life.how to communicate or download article in net please mail, I am planning write one kannada article

  ReplyDelete