08 August 2008

ಗ್ರಂಥಾಲಯದ ಆರೋಗ್ಯಕ್ಕೊಂದಿಷ್ಟು ಕಷಾಯಪೀಠಿಕೆ : ಹಾಡಿದ್ದೇ ಹಾಡು

ಕನ್ನಡ ಪುಸ್ತಕೋದ್ಯಮದ ಸರಕಾರೀಕರಣವನ್ನು ಸದಾ ಕಟುವಾಗಿ ಟೀಕಿಸುತ್ತಾ ಬಂದವನು ನಾನು. ಸೇವೆಗಿಂತ ಸಾರ್ವಜನಿಕ ಹಣದ ಸ್ವಾಹಾ ಹೆಚ್ಚಾದ ವಿವಿಧ ವಿವಿನಿಲಯಗಳ, ಅಕಾಡೆಮಿಗಳ, ಪ್ರಾಧಿಕಾರಗಳ, ಇಲಾಖೆಗಳ, ಕನ್ನಡ ಸಾಹಿತ್ಯ ಪರಿಷತ್ತಿನಂತ ಸ್ವಾಯತ್ತ ಸಂಸ್ಥೆಗಳ ಪ್ರಕಟಣಾಂಗಗಳನ್ನಾದರೂ ಬರ್ಖಾಸ್ತುಗೊಳಿಸಿ ಎನ್ನುತ್ತಲೇ ಬಂದೆ. ಅದು ಸಾಧ್ಯವಿಲ್ಲದಿದ್ದರೆ ಅಲ್ಲಿನ ಸಿಬ್ಬಂದಿಗಳ ಸಂಬಳ ಸವಲತ್ತುಗಳನ್ನಾದರೂ ಅವರು ಮಾಡುವ ವಹಿವಾಟಿಗೆ ಅನುಬಂಧಿಸಿ ಎಂಬ ಕನಿಷ್ಠ ಕಾರ್ಯಕ್ರಮವನ್ನು  ಸೂಚಿಸಿ ನೋಡಿದೆ. `ಮಾರು ಇಲ್ಲವೇ ಮಡಿ' ಎನ್ನುವುದು ಯಾವುದೇ ಉದ್ಯಮಕ್ಕೆ ಸಹಜವಾಗಬೇಕು. ಅದು ಬಿಟ್ಟು, ಉದ್ದೇಶ ಸತ್ತರೂ ವ್ಯವಸ್ಥೆ ಉಳಿಯುವ ಸರಕಾರೀ ಪುಸ್ತಕೋದ್ಯಮ ನಿಜದಲ್ಲಿ ರಾಜಕೀಯ ನಿರಾಶ್ರಿತರ ಗಂಜಿಕೇಂದ್ರ. ಮನೆ ಮಾರಿ, ಸದಾ ಜೀವಜಲಕ್ಕೆ ಅಂದರೆ ಹೊಸಾ ಅನುದಾನಕ್ಕೆ ಚಾತಕಗಳಾಗುವ ಈ ಸಂಸ್ಥೆಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಲೇಬೇಕು. (ಇವೆಲ್ಲದರ ಸೋದಾಹರಣ ವಿಸ್ತರಣೆ ಮಾಡಬಲ್ಲೆ, ಆದರೆ ಕ್ಷಮಿಸಿ, ಅದಕ್ಕಿದು ವೇದಿಕೆಯಲ್ಲ.) ನನ್ನೀ ವಾದದ ವಿವಿಧ ಮಗ್ಗುಲುಗಳನ್ನು ಹಲವು ವೇದಿಕೆಗಳ ಪ್ರಬಂಧಗಳಲ್ಲಿ, ವಿವಿಧ ಪತ್ರಿಕಾ ಲೇಖನಗಳಲ್ಲಿ ಮತ್ತು ನನ್ನದೇ ಪುಸ್ತಕ ಮಾರಾಟ ಹೋರಾಟ ಪುಸ್ತಕದಲ್ಲೂ ಸ್ಪಷ್ಟಪಡಿಸಿದ್ದೇನೆ.


ನನ್ನೀ ಅಭಿಪ್ರಾಯಗಳನ್ನು ಆಂಶಿಕವಾಗಿ ಗ್ರಹಿಸಿದ ಇನ್ನೋರ್ವ ಪುಸ್ತಕೋದ್ಯಮೀ ಮಿತ್ರ ಒಮ್ಮೆ ನನ್ನನ್ನು ಗ್ರಂಥಾಲಯ ವ್ಯವಸ್ಥೆಯ ವಿರೋಧಿ ಎಂದು ತಪ್ಪುಗ್ರಹಿಸಿ, ಪ್ರಶ್ನಿಸಿದ್ದೂ ಉಂಟು. ಇಲ್ಲ, ಹಾಗಿಲ್ಲ. ಯಾವುದೇ ನಾಗರಿಕತೆಯ ಮೂಲಭೂತ ಆವಶ್ಯಕತೆಗಳಲ್ಲಿ ಆರೋಗ್ಯಪೂರ್ಣ, ವೈವಿಧ್ಯಮಯ ಗ್ರಂಥಾಲಯ ತುಂಬಾ ಮುಖ್ಯವಾದುದು. ಪುಸ್ತಕೋದ್ಯಮದ ದೊಡ್ಡ ವೃತ್ತದಲ್ಲಿ ಗ್ರಂಥಾಲಯ ಒಂದು ಅಂಗವಾಗಿ ಕಾಣಬಹುದು. ಆದರೆ ಶಿಕ್ಷಣವೇ ಮೊದಲಾಗಿ ಪುಸ್ತಕಾಧಾರಿತ ಹಲವು ವ್ಯವಸ್ಥೆಗಳಂತೆ ಗ್ರಂಥಾಲಯ ಒಂದು ಸ್ವಾಯತ್ತ ವ್ಯವಸ್ಥೆಯಾಗಬೇಕಿತ್ತು. ಆದರೇನು ಮಾಡೋಣ, ಸರಕಾರೀ ಪುಸ್ತಕೋದ್ಯಮಕ್ಕೆ ಈ ವಿವೇಚನೆ ಎಂದೂ ಬಂದದ್ದಿಲ್ಲ. ಪಕ್ಷಾಡಳಿತದ ಇಷ್ಟಾನಿಷ್ಟ ಹುಟ್ಟಿಸಿದ ಮತ್ತು ಕುಲಗೆಡಿಸಿದ ಅಕಾಡೆಮಿ, ಪ್ರಾಧಿಕಾರಗಳ ಸಾಲಿನಲ್ಲಿ ಇಂದು ಗ್ರಂಥಾಲಯವೂ ಸೇರಿಹೋಗಿದೆ. ಇಂದು ಮಂಗಳೂರಿನ ಓರ್ವ ಪುಸ್ತಕ ವ್ಯಾಪಾರಿಯಾಗಿ ಮತ್ತು ನಲ್ವತ್ತಕ್ಕೂ ಮಿಕ್ಕು ಗಂಭೀರ ಪುಸ್ತಕಗಳ ಪ್ರಕಾಶಕನಾಗಿ ನನಗೆ ಮೂವತ್ತಕ್ಕೂ ಮಿಕ್ಕು ವರ್ಷಗಳ ಅನುಭವವಿದೆ. ಅದರ ಮುನ್ನೆಲೆಯಲ್ಲಿ ಗ್ರಂಥಾಲಯ ವ್ಯವಸ್ಥೆಗೆ ನಾಲ್ಕು ಗುಟುಕು ಕಹಿಕಷಾಯ ಕಾಯಿಸಿ ತಂದಿದ್ದೇನೆ. ಉಪಪರಿಣಾಮಗಳನ್ನು, ಅಂದರೆ side effects ಅರಿತುಕೊಂಡು ಬಳಸುವ ಸ್ವಾತಂತ್ರ್ಯವನ್ನು ಪ್ರಧಾನ ಶುಶ್ರೂಷಕ - Head Nurse, ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಬಿಡುತ್ತೇನೆ.

ಗುಟುಕು ಒಂದು: ಗಿಡವನ್ನು ತಲೆಕೆಳಗೆ ಬೇರು ಮೇಲೆ ನೆಟ್ಟ ಕಥೆ

ಹಲವು ವರ್ಷಗಳ ಹಿಂದೆ ದ.ಕ ಜಿಲ್ಲಾ ಕೇಂದ್ರ ಗ್ರಂಥಾಲಯದಿಂದ ಪುಸ್ತಕವ್ಯಾಪಾರಿಗಳಿಗಾಗಿ ಹೊರಟ ಒಂದು ಪ್ರಕಟಣೆ ನನಗೂ ಬಂತು. `ಇಂಥಾ ದಿನ ಪುಸ್ತಕ ಆಯ್ಕಾ ಸಮಿತಿ ಕೇಂದ್ರ ಗ್ರಂಥಾಲಯದಲ್ಲಿ ಸಭೆ ಸೇರುತ್ತಿದೆ. ನೀವು ಗ್ರಂಥಾಲಯಕ್ಕೆ ಒದಗಿಸಲು ಬಯಸುವ ಪುಸ್ತಕಗಳ ಮಾದರಿಯನ್ನು ತಂದು ಪ್ರದರ್ಶಿಸಬಹುದು.' ನನ್ನ ಮಳಿಗೆಯಲ್ಲೇ ಹತ್ತೆಂಟು ಭಾಷೆಯ ಸಾವಿರಾರು ಶೀರ್ಷಿಕೆಗಳು ಸದಾ ಆಯ್ಕೆಗಾಗಿಯೇ ಹರಡಿರುತ್ತವೆ. ಇಂಥಾ ಹತ್ತಾರು ಬೃಹತ್ ಮಳಿಗೆಗಳನ್ನು ಗ್ರಂಥಾಲಯದ ಕಿರು ಕೊಠಡಿಯಲ್ಲಿ ಪ್ರದರ್ಶಿಸುವುದು ಸಾಧ್ಯವೇ? ಮತ್ತೆ ಸಮಿತಿಯ ಒಂದೆರಡು ಗಂಟೆಯ ವೀಕ್ಷಣೆಗಾಗಿ ಇಷ್ಟೊಂದು ಭಾರೀ ವರ್ಗಾವಣೆ ಅಗತ್ಯವೇ? ಅದನ್ನು ನಾನು ಅಪ್ರಾಯೋಗಿಕ ಎಂದು ಪತ್ರ ಬರೆದು ತಿಳಿಸಿದೆ. ಕೇವಲ ಆರೇಳು ಸದಸ್ಯರಿರುವ ಸಮಿತಿಯೇ ಮಳಿಗೆಗಳಿಗೆ ಭೇಟಿ ಕೊಡಲಿ. ನಮ್ಮದು ಒಂದೆರಡು ಗಂಟೆಯ ಪ್ರದರ್ಶನವ, ಎಷ್ಟೋ ವರ್ಷಗಳಿಂದ ದಿನದ ಹನ್ನೊಂದು ಗಂಟೆಗೂ ಮಿಕ್ಕು ಪ್ರದರ್ಶನ ನಡೆದೇ ಇರುತ್ತದೆ ಎಂದು ಸ್ಪಷ್ಟಪಡಿಸಿದೆ. ನಮ್ಮಲ್ಲಿ ಯಾವುದೇ ಇಲಾಖೆಗೆ ಅದೇಶ ಕೊಟ್ಟು ಗೊತ್ತೇ ಹೊರತು ಚರ್ಚೆ, ಎದುರುತ್ತರ ತಿಳಿದೇ ಇಲ್ಲ. ನನ್ನ ಪತ್ರ ಎಲ್ಲಿ ಕಸವಾಯ್ತೋ ಏನೋ. ಸೂಚಿತ ದಿನದಂದು ಇಂಥವಕ್ಕೇ ಸಜ್ಜಾಗಿರುವ ಯಾವ್ಯಾವ ಊರಿನ ತಿರುಗೂಳಿಗಳು ಬಂದು, ಆಯ್ಕೆ ಪಡೆದು, ಗ್ರಂಥಾಲಯ ತುಂಬಿ ಕೃತಾರ್ಥರಾದರು. ಇವೆಲ್ಲವುಗಳ ಲೆಕ್ಕಪತ್ರಗಳೇನೋ ಶುದ್ಧವಾಗಿರಬಹುದು, ಆದರೆ ಪುಸ್ತಕಗಳ ಗುಣಮಟ್ಟವಂತೂ ಖಂಡಿತಾ ಅಲ್ಲ. ನೆಲದ ಸತ್ತ್ವ ಹೀರಿ ಬೆಳೆಯಬೇಕಾದ ಗ್ರಂಥಾಲಯ ತಲೆಕೆಳಗಾಗಿತ್ತು. ಮಂಗಳೂರಿಗನೊಬ್ಬ ಜಿಲ್ಲಾ ಗ್ರಂಥಾಲಯಕ್ಕೆ ಯಕ್ಷಗಾನ ಬಯಲಾಟ (ಇದು ಶಿವರಾಮ ಕಾರಂತರ ಪುಸ್ತಕದ ಹೆಸರೂ ಹೌದು) ಕೇಳಿ ಹೋದರೆ ರಾತ್ರಿ ಪುರಭವನದ ಯಕ್ಷಪ್ರದರ್ಶನದ ವಿವರಗಳನ್ನಷ್ಟೇ ಕೊಟ್ಟಾರು. ಕಾರಣ ಸರಳವಿದೆ - ಆ ಪುಸ್ತಕದ ಪ್ರಕಾಶಕ ಎಂದೂ ಆಯ್ಕಾ ಸಮಿತಿಯ ಮುಂದೆ ಬರಲೇ ಇಲ್ಲ!

ಸಾರಾಂಶ: ಊರಿಂದೂರಿಗೆ ಜನ, ಓದುವ ಸಂಸ್ಕಾರ, ಅದಕ್ಕೆ ತಕ್ಕಂತೆ ಒದಗಿಸುವ ಮಳಿಗೆಗಳು ವಿಭಿನ್ನ. ಗ್ರಂಥಾಲಯದ ಯಶಸ್ಸು, ಉಪಯುಕ್ತತೆ ಇರುವುದು ಈ ಪ್ರಾದೇಶಿಕತೆಯನ್ನು ಗುರುತಿಸಿ ಒಳಗೊಳ್ಳುವುದರಲ್ಲಿ.

ಗುಟುಕು ಎರಡು: ತಿಲಕಾಷ್ಠ ಮಹಿಷ ಬಂಧನದ ಸಂಗ್ರಹಾಲಯ!

ನನ್ನಂಗಡಿಯಲ್ಲಿ ಕೆಲವು ಗಿರಾಕಿಗಳು ಪುಸ್ತಕ ಬಯಸಿ ಬಂದರೂ ಅದರ ಭಾರೀ ಕ್ರಯಕ್ಕೆ ಬೆದರಿ ಮರಳುವುದುಂಟು. ಅಂಥ ಪುಸ್ತಕಗಳನ್ನು ಸಾರ್ವಜನಿಕ ಬೇಡಿಕೆಯ ಮೇರೆಗೆ ಕೊಂಡು ಒದಗಿಸುವ ಸ್ಥಿತಿ ನಮ್ಮ ಗ್ರಂಥಾಲಯಗಳಲ್ಲಿ ಇರಬೇಕಿತ್ತು, ಆದರೆ ಇಲ್ಲವೇ ಇಲ್ಲ. ಖ್ಯಾತ ಸಾಹಿತಿ, ಅದಕ್ಕೂ ಮಿಗಿಲಾಗಿ ದೊಡ್ಡ ಸಾಹಿತ್ಯ ಪರಿಚಾರಕ ದಿವಂಗತ ಕುಶಿ ಹರಿದಾಸ ಭಟ್ಟರು ಉಡುಪಿಯ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ದಿನಗಳು ನೆನಪಾಗುತ್ತದೆ. ಅವರು ಅಧೀನ ಅಧ್ಯಾಪಕರುಗಳಿಗೆಲ್ಲ ಪುಸ್ತಕ ಖರೀದಿಗೆ ಒಂದು ತೆರನ ಸಹಿ ಹಾಕಿದ ಖಾಲಿ ಚೆಕ್ಕು - ಬ್ಲ್ಯಾಂಕ್ ಚೆಕ್, ಕೊಟ್ಟಂತೆ ಇತ್ತ ಸೂಚನೆ ನೋಡಿ: "ನೀವು ಹೋದ ಪುಸ್ತಕ ಮಳಿಗೆಯಲ್ಲಿ ನಿಮಗೆ ಯಾವುದೇ ಪುಸ್ತಕ ಓದಿನ ಕುತೂಹಲ ಹುಟ್ಟಿಸಿದರೆ ಕಾಲೇಜು ಗ್ರಂಥಾಲಯದ ಹೆಸರಲ್ಲಿ ಕೊಂಡುಕೊಳ್ಳಿ. ಕಾಲೇಜು ನಿಮ್ಮ ಹಣವನ್ನು ಭರಿಸುತ್ತದೆ."  ಹೀಗೆ ಕಾಲೇಜು ಗ್ರಂಥಾಲಯ ಕನಿಷ್ಠ ಒಬ್ಬನಿಗಾದರೂ ಒದಗುವುದು ಅವರ ಕನಸು.  ಈಚಿನ ವರ್ಷಗಳಲ್ಲಿ ನಿಶ್ಚಿತ ಅನುದಾನದಲ್ಲಿ ಪುಸ್ತಕ ಖರೀದಿಸುವ ಹೆಚ್ಚಿನ ಯಾವುದೇ ಗ್ರಂಥಾಲಯಕ್ಕೆ ಕುಶಿಯವರ `ಕನಿಷ್ಠ ಒಬ್ಬ ಓದುಗನ' ಪರೀಕ್ಷೆ ಒಡ್ಡಿದರೆ ಬಹ್ವಂಶ ಪುಸ್ತಕಗಳಿಗೆ ಸೋಲು ಶತಸಿದ್ಧ. (ಕೆಲವು ವಿದೇಶೀ ಗ್ರಂಥಾಲಯಗಳಲ್ಲಿ ಯಃಕಶ್ಚಿತ್ ಓದುಗನೊಬ್ಬ ಅಲ್ಲಿಲ್ಲದ ಪುಸ್ತಕ ಕೇಳಿದರೆ ಕಾಲಮಿತಿ ಹೇಳಿ ಜಗತ್ತಿನ ಇನ್ನೊಂದು ಮೂಲೆಯಿಂದಾದರೂ ತರಿಸಿಕೊಡುತ್ತಾರಂತೆ, ಬಿಡಿ.) ಸಂಶೋಧನೆಗಳ ಬಿರುದಾಂಕಿತರೂ ಸೇರಿದಂತೆ ಬಹುತೇಕ ಕಾಲೇಜು ಅಧ್ಯಾಪಕರುಗಳೂ ಶಾಲಾ ಮಾಸ್ತರುಗಳೂ ಇಂದು ಇತರ ಓದು ಬಿಟ್ಟಿದ್ದಾರೆ. ಇದು ಸಾರ್ವಜನಿಕ ಗ್ರಂಥಾಲಯದ ಖರೀದಿ ಸಲಹಾ ಸಮಿತಿಗೂ ಅನ್ವಯಿಸುತ್ತದೆ. ಸಹಜವಾಗಿ ಓದು ಕೇಂದ್ರಿತವಾಗಿ ಬೆಳೆಯಬೇಕಿದ್ದ ಗ್ರಂಥಾಲಯಗಳು ಇಂದು ಕೇವಲ ಖರೀದಿ ಕೇಂದ್ರಗಳಾಗಿ ಬೆಳೆದಿವೆ. ಇದರಲ್ಲಿ ಸರಕಾರೀ ಪುಸ್ತಕೋದ್ಯಮದ ಪಾಲು ತುಂಬ ದೊಡ್ಡದು. ಲೇಖಕ ಪ್ರೋತ್ಸಾಹ, ಕನ್ನಡ ಪ್ರೀತಿ, ಪುಸ್ತಕ ಸಂಸ್ಕೃತಿ ಇತ್ಯಾದಿ ಉದಾತ್ತ ಮೌಲ್ಯಗಳನ್ನೆಲ್ಲ ಉದ್ಧರಿಸುವ ಸಗಟು ಖರೀದಿ ಮತ್ತು (ಕೇಂದ್ರೀಕೃತಗೊಂಡ) ಗ್ರಂಥಾಲಯ ಖರೀದಿಗಳೆಲ್ಲ ನಿಜಕನ್ನಡಕ್ಕೆ ಮಾರಕವಾಗಿವೆ.

ಈಚೆಗೆ, ಅಪೂರ್ವಕ್ಕೆ ನಮ್ಮ ಜಿಲ್ಲಾಗ್ರಂಥಾಲಯಕ್ಕೆ ಶ್ರೀಮಂತಿಕೆ ಬಂತು! ಅದೂ ಅಷ್ಟೇ ಆಶ್ಚರ್ಯಕರವಾಗಿ ತನ್ನ ವಲಯದಲ್ಲಿರುವ ಗ್ರಾಮಾಂತರ ಗ್ರಂಥಾಲಯಗಳಿಗೆ ಹಣವನ್ನೇ ಬಿಡುಗಡೆ ಮಾಡಿತು. (ಸಾಂಪ್ರದಾಯಿಕವಾಗಿ ಪುಸ್ತಕಗಳ ಆಯ್ಕೆ, ಹಣ ನಿರ್ವಹಣೆ ಕೆಳ ಅಧಿಕಾರಿಗಳಿಗೆ ಅಸಾಧ್ಯ ಎಂಬುದೇ ಪ್ರಚಲಿತ! ಸಹಜವಾಗಿ ಬೆಂಗಳೂರಿನಿಂದಲೇ ಇಲ್ಲಾ ಮಂಗಳೂರಿನಿಂದಾದರೂ ಲಾರಿ ತುಂಬಾ ತೆನ್ನಾಲಿರಾಮನ ಉದ್ಗ್ರಂಥಗಳು ಹೊರಡಬೇಕು. ಅಧೀನ ಸಂಸ್ಥೆಗಳು ಪೂರ್ವಜನ್ಮದ ಪುಣ್ಯ ಎನ್ನುವಂತೆ ತಂತಮ್ಮ ಕಪಾಟು ತುಂಬಿಕೊಳ್ಳಬೇಕು. ಅದಿರಲಿ) ಸಣ್ಣ ರಗಳೆಯೇನೋ ಇತ್ತು. ಒಂದು ಪುಸ್ತಕವೇ ಆಗಬಹುದಾದಷ್ಟು ದೊಡ್ಡ ಆಯ್ಕಾಪಟ್ಟಿ ಮತ್ತು ಖರೀದಿ ಎಲ್ಲೇ ಆಗಲಿ ಪಟ್ಟಿ ಮೀರದ ನಿರ್ಬಂಧ. ಆದರೆ ಸದ್ಯದ ಜಿಲ್ಲಾ ಗ್ರಂಥಪಾಲ ವಿವೇಚನಾವಂತ. ಕಾನೂನಿಗೆ ತಮ್ಮದೇ ವ್ಯಾಖ್ಯಾನ ಬರೆದು `ಪ್ರಾತಿನಿಧಿಕವಾಗಿ ಪಟ್ಟಿಯಲ್ಲಿ ಕೆಲವನ್ನಾದರೂ ಆರಿಸಿ, ಉಳಿದಂತೆ ನಿಮಗೆ ಉಪಯುಕ್ತವೆಂದು ಕಂಡವನ್ನೇ ಕೊಳ್ಳಿ. ಜತೆಗೇ ಅನುದಾನದ ಪೂರ್ಣ ವಿನಿಯೋಗ ಮಾಡಿಬಿಡಿ ಎನ್ನಲು ಮರೆಯಲಿಲ್ಲ. (ಇಲ್ಲವಾದರೆ ವರ್ಷದ ಕೊನೆಯಲ್ಲಿ ಉಳಿಕೆ ಹಣಕ್ಕೆ ಬೆಂಗಳೂರಿನಿಂದ ತೆನ್ನಾಲಿ ಸಾಹಿತ್ಯ ಬಂದು ಬಿದ್ದೀತು!) ಆ ಪವಿತ್ರ ಪಟ್ಟಿಯ ಮೇಲೆ ಕಣ್ಣಾಡಿಸುವ ಭಾಗ್ಯ ನನಗೆ ಒದಗಿತ್ತು. ಕಾರಂತ ಕುವೆಂಪಾದಿ ಹಿರಿಯರ, ಭೈರಪ್ಪ ತೇಜಸ್ವಿಯಂಥ ಎಲ್ಲ ವಲಯದವರ ಪ್ರೀತಿಪಾತ್ರರ, ವರ್ತಮಾನದ ಖ್ಯಾತ ಉದಯೋನ್ಮುಖರ ಒಂದೂ ಹೆಸರು ಅದರಲ್ಲಿ ನನಗೆ ಸಿಗಲಿಲ್ಲ! ಹೀಗ್ಯಾಕೆ ಎನ್ನುವುದನ್ನು ನಾನು ವಿವರಿಸಬೇಕೇ?

ಗುಟುಕು ಮೂರು: ಕಾಗದದ ಹೂವಿಗೆ ಒಂದಿಷ್ಟು ಗಂಧ

ಒಮ್ಮೊಮ್ಮೆ ನಮ್ಮೂರಿನ ಸರಕಾರೀ ಗ್ರಂಥಪಾಲರಿಗೆ ವಿಐಪಿ ಓದುಗರು ವಕ್ಕರಿಸಿ, ಹೊರಲೋಕಕ್ಕೆ ಕಣ್ಣುಬಿಡುವ ಅನಿವಾರ್ಯತೆ ಮೂಡಿಸಿಬಿಡುತ್ತಾರೆ. ವಿಚಾರಿಸಿದಾಗ ಜಿಲ್ಲಾಡಳಿತದಲ್ಲಿ ಗ್ರಂಥಪಾಲರಿಂದ ಮೇಲೆ ಯಾರೋ ಒಳ್ಳೆಯ ಓದು ಬಯಸುವ ಅಧಿಕಾರಿ ಬಂದದ್ದು, ಆತ ಅಂಥವನ್ನು ಬಯಸಿದ್ದು ತಿಳಿಯುತ್ತದೆ. ಸಾಹೇಬರ ಸಾಹೇಬ ಕೇಳಿದ್ದನ್ನು ಇವರು ಸ್ಯಾಂಕ್ಷನ್ನು, ಪ್ರೊಸೀಜರ್ರು ನೆಪಗಳಲ್ಲಿ ತಳ್ಳಿ ಹಾಕುವಂತಿಲ್ಲವಲ್ಲ! ಹಾಗಾಗಿ ಅಂಥ ಸಂದರ್ಭದಲ್ಲೆಲ್ಲ ಗ್ರಂಥಪಾಲರುಗಳು ನನಗೆ ಆದೇಶ ಕಳಿಸಿದ್ದುಂಟು. ಆದರೆ ನಾನು ಮಾತ್ರ ಅದನ್ನು ಎಂದೂ ಪೂರ್ಣ ಮನ್ನಿಸಿದ್ದಿಲ್ಲ! ನನ್ನದು ಸರಳ ಉತ್ತರ  ನಗದುಕೊಡಿ, ಪುಸ್ತಕ ಒಯ್ಯಿರಿ.

ಈ ಸರಳ ಉತ್ತರ ಮತ್ತದರ ಹಿಂದಿನ ವಿಚಾರವನ್ನು ತುಸು ವಿವರಿಸುತ್ತೇನೆ. ಗ್ರಂಥಾಲಯದ ಆದೇಶ ಎಂದರೆ ಅವರು ಕೇಳಿದ ಪುಸ್ತಕಗಳ ಮೊತ್ತ ಗಣಿಸದೆ, ಇಲಾಖೆ ನಿಗದಿಸಿದ ರಿಯಾಯ್ತಿ ಸಹಿತ ಕಡಪಟ್ಟಿ (ಅಂದರೆ ಕ್ರೆಡಿಟ್ ಬಿಲ್) ಕೊಟ್ಟು, ಅನಿರ್ದಿಷ್ಟ ಕಾಲ ಪಾವತಿಯ ದಾರಿ ನೋಡಬೇಕು. ನಮಗೆ ಬರುವ ರಿಯಾಯ್ತಿಯನ್ನು ಅಲ್ಪಜ್ನಾನಿಗಳು ಲಾಭಾಂಶ ಎನ್ನುತ್ತಾರೆ. ಅಲ್ಲ, ನಿಜದಲ್ಲಿ ಅದು ನಮ್ಮ ಸಂಬಳ, ನಮ್ಮ ನ್ಯಾಯಯುತ ಆದಾಯ. ಇದರಲ್ಲಿ ಲಕ್ಷಾಂತರ ರೂಪಾಯಿಯ ನಮ್ಮ ದಾಸ್ತಾನಿನ ಬಡ್ಡಿಯಿಂದ ತೊಡಗಿ ಮಳಿಗೆ ಬಾಡಿಗೆ, ವಿದ್ಯುತ್, ನೀರು, ಸಾಗಣೆ, ಸಿಬ್ಬಂದಿ ಸಂಬಳ ಇತ್ಯಾದಿ ಪಾಲುಪಡೆಯುತ್ತವೆ. ವ್ಯಕ್ತಿಯಾಗಲೀ ಸರಕಾರದ ಗ್ರಂಥಾಲಯವೇ ಆಗಲಿ ಇದರಲ್ಲಿ ಸ್ವಲ್ಪ ಅಂಶ ಅವರಿಗೆ ಬಿಟ್ಟುಕೊಡಲು ಕೇಳಬಹುದು; ಸಂಬಳದವನಲ್ಲಿ ದಾನ ಕೇಳಿದ ಹಾಗೆ! ಅವರು ಕೇಳುವುದು ಸರಿ, ನಾವು ಕೊಡುವುದು ಬಿಡುವುದು ಪ್ರತ್ಯೇಕ. ಬಹುಮುಖದಲ್ಲಿ ಮತ್ತು ದೊಡ್ಡಮೊತ್ತದಲ್ಲಿ ಪುಸ್ತಕ ಕೊಳ್ಳುವ ಸರಕಾರ ತನ್ನಂಗಗಳಿಗೆ ಅಂದರೆ ಶಾಲೆ, ಕಾಲೇಜು, ಗ್ರಂಥಾಲಯಾದಿ ವಿವಿಧ ಇಲಾಖೆಗಳಿಗೆ ಪುಸ್ತಕ ಖರೀದಿಯಲ್ಲಿ ರಿಯಾಯ್ತಿ ಪಡೆಯಲು ಫರ್ಮಾನು ಹೊರಡಿಸಬಹುದು. ಮತ್ತು ಹಾಗೆ ಪಡೆಯದವರನ್ನು ವಿಚಾರಣೆಗೊಳಪಡಿಸುವುದು, ಕೊನೆಗೆ ದಂಡ ಹಾಕುವುದೂ ಸರಿಯೇ ಇರಬಹುದು. (ಇದನ್ನೇ ಆಡಿಟ್ ಆಬ್ಜೆಕ್ಷನ್ ಎಂಬ ಹೆಸರಿನಲ್ಲಿ ನಮ್ಮನ್ನು ಬೆದರಿಸುವ ಅಸ್ತ್ರವಾಗಿ ಪ್ರಯೋಗಿಸುವವರನ್ನೂ ಸಾಕಷ್ಟು ಕಂಡಿದ್ದೇನೆ.)  ಇದೆಲ್ಲ ಇಲಾಖೆಯ ಆಂತರಿಕ ವ್ಯವಸ್ಥೆ. ಅದನ್ನು ನಮ್ಮಲ್ಲಿಗೆ ವಿಸ್ತರಿಸುವುದು ಅಸಾಧ್ಯ. ಅವರಿಗೆ ಕಡಿಮೆ ಬೆಲೆಯಲ್ಲಿ ಪುಸ್ತಕಖರೀದಿಯನ್ನು ಸೂಚಿಸುವ ಸಂವಿಧಾನವೇ ನಮ್ಮಂಥವರಿಗೆ ಪ್ರತ್ಯೇಕ ನಿಲುವು ತಳೆಯುವ ಸ್ವಾತಂತ್ರ್ಯವನ್ನೂ ಕೊಟ್ಟಿದೆ. ರಿಯಾಯ್ತಿ ಮತ್ತು ಸಾಲದಲ್ಲಿ ಪಡೆಯುವುದು ಕೊಳ್ಳುಗರ ಹಕ್ಕಲ್ಲ, ವ್ಯಾಪಾರಿಯ ಔದಾರ್ಯ ಮಾತ್ರ.

ಸಾಮಾಜಿಕ ನ್ಯಾಯವಾಗಿ ಯಾವುದೇ ಆವಶ್ಯಕ ವಸ್ತುಗಳ ಮಾರಾಟಬೆಲೆ ಮತ್ತು ಗುಣಮಟ್ಟವನ್ನು ನಿಯಂತ್ರಿಸಬೇಕಾದ ಸರಕಾರವೇ ಪುಸ್ತಕಕ್ಕಾಗುವಾಗ ಕೇವಲ ಖಾತೆ, ಕಿರ್ದಿಯ ಚೌಕಾಶಿಗೆ ನಿಲ್ಲುವುದು ನಾಚಿಕೆಗೇಡು. ಸಹಜವಾಗಿ ಇಂದು ಮುದ್ರಿತಬೆಲೆ ಮತ್ತು ರಿಯಾಯ್ತಿ ದರ ಎನ್ನುವುದು ಅನೈತಿಕ ವ್ಯಾಪಾರೀ ಕ್ರಮವಾಗಿ ಅಂದರೆ unfair trade practice ಆಗಿಯೇ ಬಳಕೆಯಲ್ಲಿದೆ. ಒಂದಕ್ಕೆ ಹತ್ತು ಬೆಲೆ ಇಟ್ಟು ಎಲ್ಲಾ ಸರಕಾರೀ ಯೋಜನೆಗಳಿಗೆ ಆದಿಯೂ ಅಂತ್ಯವೂ ಆಗುವ ತಿಮಿಂಗಿಲಗಳ ಮಾತು ಬಿಡಿ. ಊರೂರಿನಲ್ಲಿರುವ ಹೆಚ್ಚಿನ ಸಣ್ಣ ಪುಸ್ತಕ ಮಳಿಗೆಗಳೂ ಇಂದು ಮೂರು ದರಪಟ್ಟಿ ಕೊಡಲು ಪೂರ್ಣ ಸಜ್ಜಾಗಿರುತ್ತವೆ. ಅಲ್ಲವಾದರೆ ಸಣ್ಣ ಖರೀದಿಯ ಕಾನೂನಿನಡಿಯಲ್ಲಿ ತೂರಲು ತಾರೀಕು ರಹಿತ ಅನೇಕ ಸಣ್ಣ ಬಿಲ್ಲುಗಳನ್ನು ತಯಾರಿಸುವುದು, ರಿಯಾಯ್ತಿಯನ್ನು ಬಿಲ್ಲಿನಲ್ಲಿ ತೋರಿಸದೆ ಇಲಾಖೆಯ ಅಧಿಕಾರಿಗೆ ಮೇಲುಸಂಪಾದನೆಯಾಗಿ ಕೊಡುವುದು ಸಹಜವೇ ಆಗಿದೆ. ಇನ್ನು ಕ್ಲಪ್ತ ಕಾಲಕ್ಕೆ ನಿಶ್ಚಿತ ಹಣ ಮುಟ್ಟಿಸುವ ವಿಶ್ವಾಸಾರ್ಹತೆಯನ್ನು ಎಲ್ಲಾ ಸರಕಾರೀ ಇಲಾಖೆಗಳು ಎಂದೋ ಕಳೆದುಕೊಂಡಿವೆ.
ನನ್ನ ಇಷ್ಟೆಲ್ಲ ಪಾಠ ಮತ್ತು ಮೇಲಿನವರ ಒತ್ತಡಗಳ ನಡುವೆ ಸ್ವಂತದ್ದೋ ಇಲಾಖೆಯದ್ದೋ ನಗದು ಹೊಂದಿಸಿಕೊಂಡು ಹಲವು ಬಾರಿ ನನ್ನಲ್ಲಿ ಪುಸ್ತಕ ಖರೀದಿಸಿದ ಗ್ರಂಥಪಾಲಕರನ್ನು ನಾನು ಸದಾ ಕೃತಜ್ನತೆಯೊಡನೆ ಸ್ಮರಿಸದಿರಲಾರೆ!

ಗುಟುಕು ನಾಲ್ಕು: ಗ್ರಂಥಾಲಯ ವಿಕೇಂದ್ರೀಕರಣದ ಎರಡು ವಿಭಿನ್ನ ಚಿತ್ರಗಳು

ಮಂಗಳೂರು ವಿವಿ ನಿಲಯದ ಒಂದು ಶಾಖೆ ಮಡಿಕೇರಿಯಲ್ಲಿದೆ. ಅಲ್ಲಿನ ಒಬ್ಬ ಪರಿಚಿತ ಅಧ್ಯಾಪಕ ನನ್ನಲ್ಲಿಗೆ ಬಂದು, ತಮ್ಮ ಗ್ರಂಥಾಲಯಕ್ಕೆ ಪುಸ್ತಕ ಆರಿಸಿದರು. ಮುಂದಿನ ಕೆಲವೇ ದಿನಗಳಲ್ಲಿ ಅವರ ಆಯ್ಕೆಗೆ ಪ್ರಾಂಶುಪಾಲರ ಅಧಿಕೃತ ಸಮ್ಮತಿ ಬಂತು. ನಾನು ಬಿಲ್ಲು ಸಹಿತ ಮಡೀಕೇರಿಗೆ ಪುಸ್ತಕ ಕಳಿಸಿದ್ದೂ ಆಯ್ತು. ಮುಂದೆ ನಿಗದಿತ ಕಾಲದಲ್ಲಿ ಪಾವತಿ ಬರದಿದ್ದಾಗ ನೆನಪಿನೋಲೆ ಹಾಕಿದೆ. ಅದಕ್ಕೆ ಅನಿರೀಕ್ಷಿತವಾಗಿ ಅಪಸ್ವರ ಬಂತು. ಸಾರಾಂಶ ಇಷ್ಟು: `ಗ್ರಂಥಾಲಯ ಆಯ್ಕೆಗೆ ಅಧ್ಯಾಪಕ ಅಧಿಕಾರಿಯಲ್ಲ. ಮತ್ತೆ ಆಯ್ಕೆಯೆಲ್ಲ ಕನ್ನಡವೇ ಆಗಿದೆ; ವಿವಿಧ ವಿಷಯಕ ಪ್ರಾತಿನಿಧ್ಯ ಇಲ್ಲ. ಹಾಗಾಗಿ ಪಾವತಿ ಕೊಡಲಾಗುವುದಿಲ್ಲ, ಪುಸ್ತಕಗಳನ್ನು ವಾಪಾಸು ತರಿಸಿಕೊಳ್ಳಿ.' ನನ್ನ ಅಹವಾಲು ಮಂಗಳೂರಿನ ಕುಲಪತಿ ಕಛೇರಿಗೇರಿತು. ವಿಕ್ಷಿಪ್ತತೆಯಲ್ಲಿ ಕುಲಪತಿ ಪ್ರಾಂಶುಪಾಲರಿಗೆ ಕಡಿಮೆಯಿರಲಿಲ್ಲ! ತನಿಖಾ ಆಯೋಗ ಹೊರಡಿಸಿದರು. ಅದು ಮಡಿಕೇರಿ ಪ್ರವಾಸ ಮುಗಿಸಿ, ನನ್ನನ್ನು ದೂರವಾಣಿಯಲ್ಲೇ ವಿಚಾರಿಸಿ ಕೊಟ್ಟ ವರದಿಯಲ್ಲಿ ಮೊದಲನೆಯದಾಗಿ, ಆಯ್ಕೆಯನ್ನು ಪ್ರಾಂಶುಪಾಲರೇ ಒಪ್ಪಿದ ಮೇಲೆ ಅಧ್ಯಾಪಕನ ಅಧಿಕೃತತೆ ಕೇವಲ ಕಾಲೇಜಿನ ಆಂತರಿಕ ಸಮಸ್ಯೆ ಎಂದು ತಳ್ಳಿಹಾಕಿತು. ಕೊನೆಯಲ್ಲಿ, ಅಧ್ಯಾಪಕನ ಆಯ್ಕೆಯಲ್ಲಿ ಕನ್ನಡ ಎಂಬುದು ಭಾಷೆ ಮಾತ್ರ. ಇಲ್ಲಿ ಸಾಹಿತ್ಯ, ವಿಜ್ಞಾನ, ಸಮಾಜಶಾಸ್ತ್ರ, ಕ್ರೀಡೆಯೇ ಮೊದಲಾದ ವಿಭಾಗೀಯ ವೈವಿಧ್ಯವಿದೆ ಎಂದೂ ಸ್ಪಷ್ಟಪಡಿಸಿತು. ಆದರೂ ನಾನು ವಿವಿನಿಲಯದ ವಕೀಲರ ನೋಟೀಸಿಗೆ ಉತ್ತರ ಕೊಟ್ಟು, ಬಸರೂರು ಬಳಕೆದಾರರ ವೇದಿಕೆಯ ಬಾಗಿಲು ತಟ್ಟಿ ವಿವಿನಿಲಯದಿಂದ ಪಾವತಿ ಕಸಿದುಕೊಳ್ಳಬೇಕಾಯ್ತು. ಇಡಿಯ ವಿವಿನಿಲಯ ಅಥವಾ ಒಂದು ಶ್ರೇಣೀಕೃತ ವ್ಯವಸ್ಥೆ ವಿನಿಯೋಗಕ್ಕೆ ಹಣದ ಕೊರತೆಯಿಲ್ಲದಿದ್ದರೂ ಬಂದ ಪುಸ್ತಕಗಳಿಗೆ ಯೋಗ್ಯತೆ ಸ್ಪಷ್ಟವಿದ್ದರೂ ಕೇವಲ ವ್ಯಕ್ತಿಪ್ರತಿಷ್ಠೆಗೆ ದುಡಿದದ್ದು ನಿಜಕ್ಕೂ ವಿಷಾದಕರ. ಇದಕ್ಕೆ ವ್ಯತಿರಿಕ್ತ ಚಿತ್ರ ಬೇರೊಂದು ಕಾಲದಲ್ಲಿ, ಇನ್ನೋರ್ವ ಕುಲಪತಿಯ ಕಾಲದಲ್ಲಿ ಆಯ್ತು. ಆಗ ವಿವಿನಿಲಯದ ಮಂಗಳೂರು ನಗರ ಶಾಖೆ ಸ್ವಂತ ಜವಾಬ್ದಾರಿಯ ಮೇಲೆ ಹದಿನೈದು ದಿನಗಳೊಳಗೆ ಪಾವತಿಯ ಭರವಸೆ ಕೊಟ್ಟು ಪುಸ್ತಕ ಒಯ್ದಿತ್ತು.  ತಿಂಗಳೊಂದಾದರೂ ಪಾವತಿ ಬಾರದಾಗ, ಪ್ರಾಂಶುಪಾಲ ವಿವಿನಿಲಯದ ಮೇಲೆ ಹೊಣೆಜಾರಿಸಿಕೊಂಡರು. ನಾನು ಕುಲಪತಿಗೆ ದೂರವಾಣಿಸಿದೆ. ಅವರೇ ಹೇಳಿದಂತೆ ಮುಂದಿನ ಇಪ್ಪತ್ನಾಲ್ಕು ಗಂಟೆಯೊಳಗೆ ಪೂರ್ಣ ಪಾವತಿ ನನ್ನ ಕೈ ಸೇರಿತು.

ಗ್ರಂಥಾಲಯದ ಗುಣಮಟ್ಟ ಅಥವಾ ಉಪಯುಕ್ತತೆಯ ಪ್ರಶ್ನೆ ಮತ್ತು ಆಡಳಿತದ ಸಮಸ್ಯೆಗಳನ್ನು ಹೀಗೆ ಗೋಜಲುಗೊಳಿಸದ ವ್ಯವಸ್ಥೆಯೊಂದು ನಮ್ಮ ನೆರೆ ರಾಜ್ಯ ಕೇರಳದಲ್ಲಿ ಆರು ದಶಕಗಳಿಗೂ ಮಿಕ್ಕು ಯಶಸ್ವೀ ಅಭಿಯಾನ ನಡೆಸಿರುವುದನ್ನು ಹೇಳಿ ನನ್ನ ಮಾತು ಮುಗಿಸುತ್ತೇನೆ. ಪುಸ್ತಕ ಪ್ರಕಾಶನ ಮತ್ತು ವಿತರಣೆ ಸಂದರ್ಭದಲ್ಲಿ ಕೇರಳದ ಲೇಖಕರ ಸಹಕಾರೀ ಸಂಘದ ಸಾಧನೆ ತುಂಬಾ ದೊಡ್ಡದು. ಅದು ಈಗ ಇತಿಹಾಸ! ಕಾರಣಗಳೇನೇ ಇರಲಿ, ಮಲೆಯಾಳಿಗಳ ಭಾಷಾಪ್ರೇಮ ಮಾತ್ರ ಅವಿಚ್ಛಿನ್ನ. ಹಾಗಾಗಿ ಮಲೆಯಾಳಿ ಪುಸ್ತಕೋದ್ಯಮವನ್ನು ಖಾಸಗಿ ವಲಯದಲ್ಲೇ ಸದಾ ಬೆಳವಣಿಗೆಯ ಹಾದಿಯಲ್ಲಿ ದೃಢವಾಗಿ ನಡೆದಿದೆ. ಮಲಯಾಳದಲ್ಲಿ ಇಂದೊಬ್ಬ ಉದಯೋನ್ಮುಖ ಕವಿ ತನ್ನ ಸಂಕಲನವೊಂದನ್ನು ಪ್ರಕಟಿಸುವುದಾದರೆ ಯಾವುದೇ ಅನುದಾನ, ಸಗಟುಖರೀದಿ ಆಶ್ವಾಸನೆ ಕಾಯದೆ ಕನಿಷ್ಠ ಸಾವಿರ ಪ್ರತಿ ಅಚ್ಚಿಸಿ, ಸುಲಭದಲ್ಲಿ ಜಯಿಸುತ್ತಾನೆ. ಸದ್ಯ ಅಂಥಾ ಕೇರಳದಲ್ಲಿ ಹಬ್ಬಿರುವ ಪೂರ್ಣ ವಿಕೇಂದ್ರೀಕೃತ ಗ್ರಂಥಾಲಯ ಜಾಲದತ್ತ ನಮ್ಮ ವಿಶೇಷ ಲಕ್ಷ್ಯ ಹರಿಸೋಣ.

ಸ್ವಾತಂತ್ರ್ಯಪೂರ್ವದಲ್ಲಿ ಅಂದರೆ ಸುಮಾರು ಅರುವತ್ತು ವರ್ಷಗಳ ಹಿಂದೆ, ಸ್ವಾತೀ ಮಹಾರಾಜರಿಂದ ತೊಡಗಿದ ಗ್ರಾಮೀಣ ಗ್ರಂಥಾಲಯ ಜಾಲಕ್ಕಿಂದು ಆರುಸಾವಿರದ ಆರ್ನೂರಕ್ಕೂ ಮಿಕ್ಕು ಸದಸ್ಯ ಕೂಟಗಳಿವೆ. ರಾಜಸತ್ತೆ ಅಳಿದ ಕಾಲದಲ್ಲಿ ಇವೆಲ್ಲವೂ ಪ್ರಜಾ-ಸರಕಾರದಲ್ಲಿ ನೋಂದಾಯಿತವಾದ ಖಾಸಗಿ ಗ್ರಂಥಾಲಯಗಳಾಗಿ ಮುಂದುವರಿದಿವೆ. ಇವುಗಳ ಸೇವಾಹಿರಿತನ, ಸಾಮಾಜಿಕ ಉಪಯುಕ್ತತೆ ಮತ್ತು ವಹಿವಾಟಿನ ಪಾರದರ್ಶಕತೆಯನ್ನು ಗಮನಿಸಿ ಅನುದಾನ ಕೊಡುವುದಷ್ಟೇ ಸರಕಾರದ ಕರ್ತವ್ಯ. ಕೇರಳದೊಳಗಿದ್ದರೂ ಕಾಸರಗೋಡು ವಲಯ ಎಲ್ಲರೂ ತಿಳಿದಂತೆ ಕನ್ನಡಮಯ. ಸಹಜವಾಗಿ ಅಲ್ಲಿನ ಶಾಖೆಗಳು ಖರೀದಿಸುವುದು ಕನ್ನಡ ಪುಸ್ತಕಗಳನ್ನೇ. ಅನುದಾನದ ಮೂಲ ಮರೆತರೆ ಪ್ರತಿ ಗ್ರಂಥಾಲಯವೂ ಒಂದು ಸ್ವಾಯತ್ತ ಸಂಸ್ಥೆ. ಅದರ ಪುಸ್ತಕ ಖರೀದಿ ಸದಸ್ಯರು ತಮ್ಮ ವಲಯದವರಿಗೆ ಅತ್ಯಂತ ಹೆಚ್ಚು ಉಪಯುಕ್ತವಾದ ಪುಸ್ತಕಗಳನ್ನೇ ಆರಿಸಲು ಸ್ವತಂತ್ರರು. ಜತೆಗೇ ಪುಸ್ತಕ ಮಳಿಗೆಗಳಿಂದ ಹೆಚ್ಚು ರಿಯಾಯ್ತಿಯನ್ನು ಪುಸ್ತಕ ರೂಪದಲ್ಲೇ ಪಡೆದು ತಮ್ಮ ಗ್ರಂಥಾಲಯದ ಹಿರಿತನವನ್ನು ಬೆಳೆಸುವುದರಲ್ಲೂ ಆಸಕ್ತರು. ಮೇಲುಸಂಪಾದನೆಯ ಮಾತು, ಬಂದು ಹೋಗುವ ಖರ್ಚು, ಊಟ ಓಡಾಟದ ವೆಚ್ಚಗಳ್ಯಾವವಕ್ಕೂ ಅವರು ನಮ್ಮೆದುರು ಹಲ್ಲು ಗಿಂಜಿದ್ದಿಲ್ಲ! ಇನ್ನೂ ತುಂಬಾ ಮುಖ್ಯವಾದ ಅಂಶ ಅಲ್ಲಿ ಗ್ರಂಥಾಲಯಗಳಿಗೆ ಅನುದಾನ ಕೊಟ್ಟು, ಮೇಲುಸ್ತುವಾರಿ ನೋಡಿಕೊಳ್ಳುವ ತಾಲೂಕು, ಜಿಲ್ಲಾ ಮತ್ತು ರಾಜ್ಯಕಛೇರಿಗಳು ಯಾವುದೇ ಭಾಷೆ, ಪುಸ್ತಕ, ಕೊನೆಗೆ ಶಿಫಾರಿಸುವ ಒಂದು ಪಟ್ಟಿಯನ್ನೂ ಈ ಗ್ರಂಥಾಲಯಗಳ ಮೇಲೆ ಹೇರುವುದಿಲ್ಲ. ಈ ಆದರ್ಶ ಕರ್ನಾಟಕದಲ್ಲೂ ವಿಕಸಿಸಿದಂದು ಬಹುಶಃ ಇಲ್ಲಿನ ಗ್ರಂಥಾಲಯ ಇಲಾಖೆಯ ಹುದ್ದೆಗಳು ರಾಜಕಾರಣ ಮುಕ್ತವಾಗಿ (ಕೆಳಧ್ವನಿಯಲ್ಲಿ ಹೇಳುತ್ತೇನೆ ಗ್ರಂಥಾಲಯ ಇಲಾಖೆಗೆ ಸಂಬಂಧಿಸಿದಂತೆ ಲೋಕಾಯುಕ್ತರು ನಿರುದ್ಯೋಗಿಗಳಾಗಿ) ನಿಜ ಕನ್ನಡ ಸೇವೆ ಸಂದೀತು.

4 comments:

 1. mrp ಬಗೆಗೆ ನಿನ್ನ ಪೂರ್ವಾಗ್ರಹ ನಾನು ಬಲ್ಲೆ, ನಿನ್ನ ಲೇಖನದಲ್ಲಿ ಅದೇ ಪೂರ್ವಾಗ್ರಹ ಇತ್ತೇ ಇಲ್ಲವೇ ಎ೦ದು ಖಚಿತಪಡಿಸಿಕೊಳ್ಳಲಷ್ಟೇ ನಾನು ಇ೦ದು ನನ್ನ ಸ೦ದೇಹ ಪರಿಹರಿಸಿಕೊ೦ಡೆ. ಈ ಕುರಿತು ಕೆಲವು ವಿಷಯಗಳು:

  ೧. ಯಾವುದೇ ವಸ್ತುವಿನ ಉತ್ಪಾದಕ / ಮಾರ್ಕೆಟರ್ mrp ನಿಗದಿಪಡಿಸಬೇಕು. ಉತ್ಪಾದನೆಯ ಆ ವರೆಗಿನ ಖರ್ಚು ಮತ್ತು ಮು೦ದಿನ ಹಲವು ಹ೦ತದ ಖರ್ಚು, ಹಲವು ಲಾಭಾ೦ಶಗಳು (margin) - ಇವುಗಳ ಅ೦ದಾಜು, ಮತ್ತು ಈಗ೦ತೂ ವಾಟ್, ಇವನ್ನೆಲ್ಲ ಸೇರಿಸಿ mrp ನಿಗದಿಯಾಗಬೇಕು. ಕಾನೂನು ರೀತ್ಯಾ mrp ದೇಶವ್ಯಾಪಿ ಬ೦ದುದು ಗ್ರಾಹಕರ ಹಿತದೃಷ್ಟಿಯಿ೦ದ ಬಹು ದೊಡ್ಡ ಗುಣ. ಈಗ
  ಕು೦ದುಗಳಿವೆ, ಅವು ಕ್ರಮೇಣ ನೀಗಬೇಕು.

  ೨. ಸ್ಪರ್ಧಾತ್ಮಕ ರ೦ಗದಲ್ಲಿ ತನ್ನ ಲಾಭದ ಆಕಾ೦ಕ್ಷೆ ಎಷ್ಟೇ ಅನಾರೋಗ್ಯಕರವಾಗಿದ್ದರೂ ಅದು ವ್ಯಾಪಾರಿಯ ನಿರ್ಧಾರ, ಅದಕ್ಕೆ ಅವನು ಜವಾಬ್ದಾರ. ಇದು ಮನುಷ್ಯ ಸಹಜವಾದ ಎ೦ಟರ್ ಪ್ರೈಸಿ೦ಗ್ ಸ್ಪಿರಿಟ್. ಹಸ್ತಕ್ಷೇಪ ಬೇಡ. ಇದು ಮತ್ತೆ ಮತ್ತೆ ಹಲವು ರ೦ಗಗಳಲ್ಲಿ ಕ೦ಡಿದೆ. ಸ್ಪರ್ಧಾತ್ಮಕತೆಯ ಹೆಚ್ಚಳವೇ ಗ್ರಾಹಕನಿಗೆ ಗುಣತರಬಲ್ಲ ಸುಸ್ಥಿರ ಪರಿಹಾರ.

  ೩. mrpಯಲ್ಲಿ ಅಥವಾ ಕಮ್ಮಿಯಲ್ಲಿ ಮಾರಾಟ, ಮಾರಾಟಗಾರನ ಸ್ವಾತ೦ತ್ರ್ಯ. ರಿಯಾಯಿತಿ (discount) ಕೊಡುವುದು ಎ೦ದರೆ mrpಗಿ೦ತ ಕಮ್ಮಿಯಲ್ಲಿ ಮಾರುವುದು. ರಿಯಾಯಿತಿ ಕೇಳಿ ಪಡಕೊಳ್ಳುವುದು ನಿನ್ನ ದೃಷ್ಟಿಯಲ್ಲಿ ಕೀಳು, ಅದು ಏನಿದ್ದರೂ ಮಾರಾಟಗಾರನ ಮರ್ಜಿಯಾಗಿರಬೇಕು, ನಿನ್ನ ವಾದ. mrpಯನ್ನೇರಿಸಿ ವಟ್ಟಾ ತೋರಿಸುವುದನ್ನು ನೀನು ಅನೈತಿಕ ಎನ್ನುತ್ತೀಯಾ. ಸರಿಯಷ್ಟೇ?
  ಸರಕಾರದ ಕರ್ತವ್ಯ ಏನಿದ್ದರೂ ದರ ಕಮ್ಮಿ ಇರುವ೦ತೆ ನೋಡಿಕೊಳ್ಳುವುದಕ್ಕೆ ಸೀಮಿತವಾಗಿರಬೇಕು, ಇದು ನಿನ್ನ ಅಣತಿ.ವ್ಯಾಪಾರ ವಹಿವಾಟು ಸ೦ಬ೦ಧಿಸಿ ಮೊನೋಪಲಿ ಮಿತಿಗೊಳಿಸಬೇಕು ಎ೦ಬುದು ಹಿ೦ದೆ ಇದ್ದ ದೃಷ್ಟಿಕೋನ, ಈಗಲಾದರೋ ಮಾರ್ಕೆಟ್ನಲ್ಲಿ ಉತ್ಪಾದನೆ ಮತ್ತು ಸ್ಪರ್ಧಾತ್ಮಕತೆ ಹೆಚ್ಚುವ೦ತೆ ಮಾಡುವುದು ಸರಕಾರದ ಅಪೇಕ್ಷಣೀಯ ಪಾತ್ರ ಎ೦ಬ ದೃಷ್ಟಿಕೋನ, ವ್ಯಾಪಾರ ಅಷ್ಟು ಪಾಲು ಹೆಚ್ಚಾಗಿದೆ, ಇನ್ನೂ ಹೆಚ್ಚಾಗಬೇಕು (ನಿನಗೆ ಆಗಿರಲೇಬೇಕು ಎ೦ದೇನಿಲ್ಲ). ಹಾಗಾಗಿ ಗ್ರಾಹಕ ಕಲ್ಯಾಣ ಸಾಧನೆ ಬೆಲೆಯೆಡೆಯಿ೦ದ ಮಾಡುವುದಕ್ಕಿ೦ತ ಸ್ಪರ್ಧಾತ್ಮಕತೆ ಏರಿಸಿ ಮಾಡುವುದು ಹಿತ ಎ೦ಬುದು ಈದಿನಗಳ approach. ಇದಕ್ಕೆ ಅನುಗುಣವಾಗಿ mrp ಅನಿವಾರ್ಯ. ಇ೦ತಹಾ ಹಲವು ಹಿತ ಸಾಧಿಸಿದ / ಸಾಧಿಸಬಹುದಾದ mrpಯ ಕೊರತೆಯೂ ಕೆಲವಿವೆ, ನೀನು ಬರೆದ ಅನೈತಿಕತೆ ಬಹುಶಃ ಅವುಗಳಲ್ಲೊ೦ದು. ಸ್ವೀಕರಿಸದೆ ವಿಧಿಯಿಲ್ಲ. ಬಹುಶಃ ಕ್ರಮೇಣ ಸರಿಯಾಗಬೇಕಷ್ಟೇ.

  ೪. mrp ಇಲ್ಲದೇ ಪುಸ್ತಕ ವ್ಯಾಪಾರ ಶುಧ್ಧವಾಗಿ (ನೀನು ವಿವರಿಸುವ೦ತೆ) ಮಾಡುವುದು, ಸ್ಪರ್ಧಾತ್ಮಕ ಮತ್ತು ಲಾಭದಾಯಕವಾಗಿರುವುದು, ಸಾಧ್ಯ ಎ೦ದು ನಿನ್ನ೦ತಹವರು ತೋರಿಸಿಕೊಟ್ಟುದೇ, ಈ mrp ವಿನಾಯಿತಿಗೆ ನೀನು ಕೊಡುವ ಸಮರ್ಥನೆ. ಆದರೆ ಇನ್ನು ಮು೦ದೆಯೂ ಇದು ನಡೆಯುವ ಕುರಿತು ಕಾನೂನಿಗೆ ಖಾತ್ರಿಯೇನು? ನಿಯ೦ತ್ರಣ ಕಾನೂನು ಅತಿ ಕೆಟ್ಟ ಸ೦ಭಾವ್ಯತೆಯನ್ನೂ ನಿರೀಕ್ಷಿಸಬೇಕು.

  ೫. ಪ್ರತಿ ಪುಸ್ತಕಕ್ಕೂ ಅದರದ್ದೇ ಆದ ನಿರ್ದಿಷ್ಟ ಬೆಲೆ ಇರುವುದರಿ೦ದಾಗಿ mrp ಅನಗತ್ಯ ಎನ್ನುತ್ತೀಯ, ಆದರೆ, ಹಾಗಾಗಿಯೇ, mrp ನಿಗದಿಪಡಿಸಿದುದರಿ೦ದ ಕನಿಷ್ಟ ರಗಳೆ.

  ೬. ಪುಸ್ತಕಕ್ಕೆ ಮದ್ರಿತ ಬೆಲೆಯೇ ಎಲ್ಲಾ ಉದ್ದೇಶಗಳಿಗೂ mrp, ಬಹುಶಃ ಬೇರೆ ಯಾವುದೇ ವಸ್ತುಗಳಿಗಿ೦ತ ಮೊದಲೇ ಪುಸ್ತಕದಲ್ಲೇ ಇದು ಆದರ್ಶ ಎನ್ನುವ೦ತೆ, ಬೆಳೆದುಬ೦ದ ವ್ಯಾಪಾರೀ ಕ್ರಮ ( trade practice). ಪುಸ್ತಕಗಳಿಗೆ mrp ಅಗತ್ಯವಿಲ್ಲ / ಸಲ್ಲದು ಎ೦ಬ ಕೋರಿಕೆ ಅನಾವಶ್ಯಕ, ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನ ಎ೦ಬುದಕ್ಕೆ ವಿನಾಯಿತಿ ಕೇಳಲು ಯಾವುದೇ ಗ್ರೌ೦ಡ್ ಇಲ್ಲ.

  ಇವನ್ನೆಲ್ಲ ನಾನು ಪ್ರಸ್ತಾಪಿಸಿದ್ದು, ನಿನ್ನ ಲೇಖನದ ಉದ್ದೇಶವನ್ನು ಖ೦ಡಿಸಿ ಅಲ್ಲ, ಬದಲಿಗೆ, ಹಿ೦ದೋಳದ ನಡುವೆ ಶ೦ಕರಾಭರಣ ಬ೦ದರೆ ಆಗುವ೦ತಾ ಆಭಾಸ ನಿನ್ನ mrp ಕುರಿತ ಅನಾವಶ್ಯಕವಾಗಿ, ಮಾಡಿದ (ತಿಳಿಯದೇ?) ಧಾಳಿಯಿ೦ದ ಆಗಿದೆ. ಅಷ್ಟು ಪ್ರಬುಧ್ಧ prisc-ription ನಲ್ಲಿ ಸಣ್ಣ ಕು೦ದು ಪ್ರಜ್ನಾವ೦ತರ ಗಮನಕ್ಕೆ ಖ೦ಡಿತ ಬ೦ದಿದೆ.

  globalisation ಪರಿಣಾಮವಾಗಿ ನಮ್ಮಲ್ಲಿ ಪುಕುಳಿ ಬಾಯಿ ಇಲ್ಲದೇ ಹೆಚ್ಚಾಗಿರುವ ವ್ಯಾಪಾರ ವ್ಯವಹಾರಗಳ ನಿಯ೦ತ್ರಣಕ್ಕೆ, ನಮ್ಮಲ್ಲಿಗೆ ಪೂರ್ತಿ ಹೊ೦ದದಿದ್ದರೂ, ಇ೦ತಹವುಗಳ ಅಳವಡಿಕೆ ಕ್ರಮೇಣ ಹಿತ ಮಾಡೀತು.

  ReplyDelete
 2. ಜಿ.ಎನ್. ಅಶೋಕವರ್ಧನ10 August, 2008 23:40

  ಪ್ರಿಯ ಸುಬ್ರಹ್ಮಣ್ಯ
  ಕನ್ನಡದಲ್ಲಿ ಹಿಂದೆ (ಏನು, ಹೆಚ್ಚು ಕಡಮೆ ಈಗಲೂ) ಪ್ರತಿ ಪುಸ್ತಕ (ಆವರಣ) ಒಬ್ಬ ಲೇಖಕ (ಎಸ್.ಎಲ್.ಭೈರಪ್ಪ), ಒಬ್ಬ ಪ್ರಕಾಶಕ (ಸಾಹಿತ್ಯ ಭಂಡಾರ), ಒಬ್ಬ ಓದುಗ (ನೀನೇಂತಿಟ್ಟುಕೋ) ಎಂಬ ನೆಲೆಯಲ್ಲೇ ಹೊರಬರುತ್ತಿತ್ತು. ಬಹುಶಃ ಈ ಪುಸ್ತಕ ಮಧ್ಯವರ್ತಿಗಳಿಂದ ಓದುಗನಿಗೆ ತಲಪುವಾಗ ಶೋಷಣೆಯ ಮಾಲಾಗಬಾರದೆಂಬ ಘನತೆಯೊಡನೇ ಮುದ್ರಿತ ಬೆಲೆ (ರೂ ೧೬೫), ವ್ಯಾಪಾರೀ ವಟ್ಟಾ (x%) ನಡೆದು ಬಂತು. ಅನ್ಯ ಮಾಲುಗಳಲ್ಲೂ (ಅಕ್ಕಿ ಚೀಲವಿರಬಹುದು, ಪೆನ್ನಿನ ಪ್ಯಾಕೇಟ್ ಇರಬಹುದು) ಈ ನೀತಿಯನ್ನು ಅನುಸರಿಸಿದವರಿದ್ದಾರೆ. ಆದರೆ ಅಲ್ಲಿ ಪರ್ಯಾಯ ಮಾಲುಗಳು, ಸಹಜವಾಗಿ ಗುಣಮಟ್ಟಗಳ ವ್ಯತ್ಯಾಸಗಳು ಸಾಕಷ್ಟಿರುವುದರಿಂದ ಸ್ಪರ್ಧಾತ್ಮಕತೆಯಲ್ಲಿ ಬೆಲೆ ಪ್ರದರ್ಶನ ಕೇವಲ mrp - maximum retail price, ಆಗಿರುವ ಸಾಧ್ಯತೆಗಳಿತ್ತು. (ಈಚೆಗೆ ಹಾಗೆ ಕಾಣಿಸಬೇಕಾದ್ದು ಶಾಸನಾತ್ಮಕವಾಗಿಯೂ ಅನಿವಾರ್ಯ ಆಗಿದೆ ಅಷ್ಟೆ.) ಪುಸ್ತಕಗಳಲ್ಲಿ ಸಾದಾ ಮತ್ತು ಉತ್ತಮ ಪ್ರತಿ ಎಂದು ತೀರಾ ಕೆಲವರು ಮಾಡುವುದಿದೆ. ಆದರೆ ಒಂದು ಪುಸ್ತಕ ಎಂಬರ್ಥದಲ್ಲಿ ಹೇಳುವುದಾದರೆ ಪರ್ಯಾಯವಿಲ್ಲ. ಉದಾಹರಣೆಗೆ ‘ಆವರಣ’ ಕೊಂಡೋದಬೇಕೆಂಬವನಿಗೆ ‘ಚೋಮನದುಡಿ’ ಪರ್ಯಾಪ್ತವಾಗುವುದಿಲ್ಲ. ಆದ್ದರಿಂದ ಬೆಲೆ ನಿಷ್ಕರ್ಷೆಗೆ ಪ್ರಕಾಶಕ ಸ್ವಯಂ ಹೇರಿಕೊಂಡ ಶಿಸ್ತನ್ನು ಸರಕಾರದ ಕ್ರಮ ಭಂಗಗೊಳಿಸುತ್ತಿದೆ ಎನ್ನುವುದು ನನ್ನ ಧ್ವನಿ.
  ಮೊದಲೆಲ್ಲ ಒಂದು ಪುಸ್ತಕ ಹೊರತರಲು ತಗಲುವ ವಾಸ್ತವ ವೆಚ್ಚದ (ಲೇಖಕ ಸಂಭಾವನೆ, ಕಾಗದ ಮತ್ತು ಮುದ್ರಣ ವೆಚ್ಚ) ಸುಮಾರು ಮೂರು ಪಾಲು ಮುದ್ರಿತ ಬೆಲೆ ಎಂಬ ಸಾಮಾನ್ಯ ತಿಳುವಳಿಕೆ ಇತ್ತು. ಆದರೆ ಇಂದು ಸರಕಾರದ ಹಿರಿಮೊತ್ತದ ಆಮಿಷಕ್ಕೆ ಬಲಿಬಿದ್ದವರು ವಾಸ್ತವದ ಖರ್ಚಿನ ಮೇಲೆ ಸರಕಾರೀ ರಿಯಾಯ್ತಿದರದಿಂದಾಗುವ ಕಡಿತವನ್ನೂ ವಶೀಕರಿಸಲು ತಗಲುವ ವೆಚ್ಚವನ್ನೂ ಸರಿದೂಗಿಸಲು ಮುದ್ರಿತ ಬೆಲೆಯನ್ನು ಭಾರೀ ಏರಿಸಿಡುತ್ತಾರೆ. ಅವುಗಳ ಮುನ್ನೆಲೆಯಲ್ಲಿ ನಾನು ‘ಮುದ್ರಿತಬೆಲೆ ಮತ್ತು ರಿಯಾಯ್ತಿ ದರ ಎನ್ನುವುದು ಅನೈತಿಕ ವ್ಯಾಪಾರೀ ಕ್ರಮ ಅಂದರೆ unfair trade practice ಎಂದು ಹೇಳಿದೆ. mrp ಎಂದು ಕಾಣಿಸುವುದೋ ಕಾಣಿಸದಿರುವುದೋ ಇಲ್ಲಿ ಮುಖ್ಯ ವಿಚಾರವೇ ಅಲ್ಲ! ಇನ್ನು ಜಾಗತೀಕರಣದ ಅನಿವಾರ್ಯತೆಗಳನ್ನು ಚರ್ಚಿಸುವ ವೇದಿಕೆ ಇದಲ್ಲ.

  ReplyDelete
 3. yes I read your reply, sorry it doesnt answers my doubts fully.

  ReplyDelete
 4. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇವತ್ತಿನ ಲೇಖಕ Cum ಪ್ರಕಾಶಕರು ಸಾ.ಗ್ರ.ಇ ಯಲ್ಲಿ ಆಯ್ಕೆ ಗೊಂಡ ತಮ್ಮಪುಸ್ತಕದ ಆದೇಶಪ್ರತಿಯನ್ನು ಫೇಸ್‌ಬುಕ್‌ ನಲ್ಲಿ ಹಾಕಿ ಪುರಸ್ಕಾರ ಎಂಬಂತೆ ಸಂತೋಷಿಸುವುದೂ ಇದೆ. ಇದೆಲ್ಲಾ ಅವಸ್ಥೆಗಳಿಗೆ ಕೊನೆಯೇ ಇಲ್ಲದಂತೆ ತೋರುತ್ತಿದೆ.

  ReplyDelete